Thursday, November 21, 2024
Homeಪುಸ್ತಕ ಮಳಿಗೆಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಅಂಬುರುಹ ಕುಶ ಮತ್ತು ಅಂಬುರುಹ ಲವ

ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಅಂಬುರುಹ ಕುಶ ಮತ್ತು ಅಂಬುರುಹ ಲವ

ಭಾಗವತರೂ ಪ್ರಸಂಗಕರ್ತರೂ ಆದ ಶ್ರೀ  ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ‘ಅಭಿನವ ವಾಲ್ಮೀಕಿ’ ಎಂದೇ ಪ್ರಸಿದ್ಧರು. ಯಕ್ಷಗಾನದ ಸರ್ವಾಂಗಗಳನ್ನೂ ಬಲ್ಲವರು. ಯಕ್ಷಗಾನದ ಓರ್ವ ಶ್ರೇಷ್ಠ ನಿರ್ದೇಶಕರೂ ಹೌದು. ಪದವೀಧರರಾದ ಇವರು ಆನೆಗುಂಡಿ ಗಣಪತಿ ಭಟ್ಟರ ಪ್ರಿಯ ಶಿಷ್ಯನಾಗಿ ಸತತ ಸಾಧನೆ ಮತ್ತು ಸ್ವಯಂ ಪ್ರತಿಭೆಯಿಂದ ಬೆಳೆದು ಕಾಣಿಸಿಕೊಂಡವರು. ಉದ್ಯೋಗಾರ್ಥಿಯಾಗಿ ವಾಣಿಜ್ಯ ನಗರಿ ಮಂಬೈಗೆ ತೆರಳಿದವರು. ಅಲ್ಲಿಯೂ ಯಕ್ಷಗಾನದ ನಂಟು ಇವರ ಜತೆಯಾಗಿಯೇ ಇತ್ತು. ವೇಷವನ್ನೂ ಮಾಡಿ ಅನುಭವವುಳ್ಳವರು. ತಾಳಮದ್ದಳೆ ಅರ್ಥಧಾರಿಯಾಗಿಯೂ ಕಾಣಿಸಿಕೊಂಡವರು. ಚೆಂಡೆ ಮದ್ದಲೆಗಳನ್ನು ನುಡಿಸಬಲ್ಲವರು.

ಮುಂಬಯಿಯಿಂದ ಮರಳಿದ ಬಳಿಕ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿ ಕಲಾಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ. ಭಾಗವತರಾಗಿ ಪುತ್ತೂರು, ಕರ್ನಾಟಕ ಮತ್ತು ಕಟೀಲು ಮೇಳಗಳಲ್ಲಿ ನಾಲ್ಕು ದಶಕಕ್ಕೂ ಮಿಕ್ಕಿದ ಕಲಾಸೇವೆ ಪೂಂಜರದ್ದು. ಮೇಳಕ್ಕೆ ಸೇರುವ ಮೊದಲೇ ಪೂಂಜರು ಪ್ರಸಂಗ ರಚನಾ ಕಾಯಕದಲ್ಲಿ ತೊಡಗಿದ್ದರು. ಮೇಳದ ತಿರುಗಾಟ ಮತ್ತು ಪ್ರಸಂಗ ರಚನೆಯು ಜತೆಯಾಗಿಯೇ ಸಾಗಿತ್ತು. ಅದರಲ್ಲಿ ಅತ್ಯಂತ ಯಶಸ್ವಿಯೂ ಆಗಿದ್ದರು. ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಪ್ರಸಂಗ ರಚನೆ ಮತ್ತು ಪದ್ಯ ರಚನಾ ಕೌಶಲವು ಪ್ರಶಂಶನೀಯವಾದುದು. ಅವರ ಪ್ರಸಂಗದ ಪದ್ಯಗಳಿಗೆ ಎಷ್ಟು ಚೆನ್ನಾಗಿ ಅರ್ಥ ಹೇಳಿದರೂ ಅದು ಕಡಿಮೆಯೇ ಆಗುತ್ತದೆ. ಸಾಲದು ಎಂದೇ ತೋರುತ್ತದೆ. ಪ್ರಸಿದ್ಧ ಕಲಾವಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರ ಈ ಮಾತುಗಳು ಪೂಂಜರ ಪದ್ಯ ರಚನಾ ಸಾಮರ್ಥ್ಯವೇನು ಎಂಬುದನ್ನು ಪ್ರಕಟಿಸುತ್ತದೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಪುರಾಣ, ಸಾಮಾಜಿಕ ಅನೇಕ ಪ್ರಸಂಗಗಳನ್ನು ಶ್ರೀ ಪೂಂಜರು ಬರೆದಿದ್ದರು. ಅನೇಕ ಪ್ರಸಂಗಗಳು ಮುದ್ರಣವಾಗದೆ ಉಳಿದದ್ದೂ ಇದೆ. ಮಾನಿಷಾದ ಪ್ರಸಂಗವು ಇವರಿಗೆ ಅಪಾರ ಕೀರ್ತಿಯನ್ನು ತಂದು ಕೊಟ್ಟಿತು. ಕರ್ನಾಟಕ ಮೇಳದಲ್ಲಿ ಜಯಭೇರಿ ಬಾರಿಸಿದ ಈ ಪ್ರಸಂಗ ಪೂಂಜರಿಗೆ ಅಭಿನವ ವಾಲ್ಮೀಕಿ ಎಂಬ ಬಿರುದನ್ನೇ ನೀಡಿತು. ಕಟೀಲು ಮೇಳದಲ್ಲಿ ಪೂಂಜರ ಜೊತೆಗೆ ನನ್ನ ಮೊದಲ ಮೂರು ತಿರುಗಾಟಗಳು ಮರೆಲಾಗದು. ಪ್ರೋತ್ಸಾಹಿಸಿ ಸಹಕರಿಸಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿರುವೆ. ಸಂಭಾಷಣೆಗಳು ಅತ್ಯಂತ ರುಚಿ ರುಚಿಯಾಗಿರಬೇಕೆಂದು ಬಯಸುವ ಇವರು ಅಂತಹ ಕಲಾವಿದರಿಗೆ ಸದಾ ಸಹಕರಿಸುತ್ತಾರೆ. ಸರಳ, ಸಜ್ಜನ,ನಿಗರ್ವಿಯಾದ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ವಿನೋದ ಪ್ರಿಯರೂ ಹೌದು. ಬಿಡುವಿನ ವೇಳೆಯಲ್ಲಿ ನಮಗದನ್ನು ಕಾಣಬಹುದು.

ಪೂಂಜರು ರಚಿಸಿದ ಪ್ರಸಂಗಗಳಲ್ಲಿ ೨೯ ಪ್ರಸಂಗಗಳು  ಅಂಬುರುಹ ಕುಶ ಮತ್ತು ಅಂಬುರುಹ ಲವ ಎಂಬ ಎರಡು ಸಂಪುಟಗಳಾಗಿ ಪ್ರಕಟವಾಗಿದ್ದು ಇದು ಯಕ್ಷಗಾನ ಕ್ಷೇತ್ರಕ್ಕೊಂದು ಶ್ರೇಷ್ಠ ಕೊಡುಗೆ. ಈ ಎರಡೂ ಸಂಪುಟಗಳ ಪ್ರಕಾಶಕರು ಖ್ಯಾತ ಭಾಗವತ ಶ್ರೀ ಪಟ್ಲ ಸತೀಶ ಶೆಟ್ಟಿಯವರ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ ) ಮಂಗಳೂರು ಎಂಬ ಸಂಸ್ಥೆ. ವಿದ್ವಾಂಸರೂ ಪ್ರಸಂಗಕರ್ತರೂ ಆಗಿರುವ ಡಾ. ಅಮೃತ ಸೋಮೇಶ್ವರ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಶ್ರೀ ಪೂಂಜರ ಪ್ರಸಂಗ ರಚನಾ ಸಾಮರ್ಥ್ಯ ಮತ್ತು ಅವರ ಪ್ರಸಂಗಗಳು ಯಶಸ್ವಿಯಾಗಲು ಅನುಕೂಲವಾಗಿರುವ ಕಾರಣಗಳನ್ನು ಅಮೃತ ಸೋಮೇಶ್ವರರು ವಿವರಿಸಿದ್ದಾರೆ.  ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾಗಿ  ಶ್ರೀ ಪಟ್ಲ ಸತೀಶ ಶೆಟ್ಟಿಯವರು ಪ್ರಕಾಶಕರ ನೆಲೆಯಲ್ಲಿ ಶುಭ ಹಾರೈಸಿದ್ದಾರೆ. ಸಿತ್ಲ ಫೌಂಡೇಶನ್ ಟ್ರಸ್ಟ್ ನ ರೂವಾರಿ ಕಟೀಲು ಸಿತ್ಲ ರಂಗನಾಥ ರಾಯರು ಕವಿಪರಿಚಯ ತಲೆಬರಹದಡಿಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ‘ಬರೆದವನ ಬಿನ್ನಹ’ ಶೀರ್ಷಿಕೆಯಡಿಯಲ್ಲಿ ಲೇಖಕರಾದ  ಶ್ರೀ  ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಕೃತಾರ್ಥರಾಗಿದ್ದಾರೆ. ಪೂಂಜರು ಈ ಎರಡೂ ಸಂಪುಟಗಳನ್ನು ವಿದ್ವಾಂಸರಾದ ಶಿಮಂತೂರು ಶ್ರೀ ನಾರಾಯಣ ಶೆಟ್ಟಿಯವರಿಗೆ ಗೌರವಪೂರ್ವಕ ಅರ್ಪಿಸಿದ್ದು ಪ್ರಶಂಶನೀಯ ವಿಚಾರ.

ಅಂಬುರುಹ ಕುಶ ಎಂಬ ಸಂಪುಟವು ಹದಿನೈದು ಪ್ರಸಂಗಗಳ ಗೊಂಚಲು. ವಧೂ ವೈಶಾಲಿನಿ, ನಳಿನಾಕ್ಷ ನಂದಿನಿ, ಗಂಡುಗಲಿ ಘಟೋತ್ಕಜ, ರಾಜಾ ದ್ರುಪದ, ಸತಿ ಉಲೂಪಿ,  ಲೋಕಾಭಿರಾಮ, ಸೋಮೇಶ್ವರ ಕ್ಷೇತ್ರ ಮಹಾತ್ಮೆ, ಬೋಪದೇವೋಪಾಖ್ಯಾನ, ದತ್ತ ಸಂಭವ, ಅಂಧಕ ನಿಧಾನ, ಸ್ವರ್ಣ ನೂಪುರ, ಮೇಘ ಮಾಣಿಕ್ಯ, ಕುಡಿಯನ ಕಣ್ಣ್ , ಕುಡಿಯನ ಕೊಂಬಿರೆಲ್, ದಳವಾಯಿ ಮುದ್ದಣ್ಣೆ  ಎಂಬ ಪ್ರಸಂಗಗಳು ಈ ಸಂಪುಟದಲ್ಲಿವೆ. ಅಂಬುರುಹ ಲವ  ಎಂಬ ಸಂಪುಟವು ಹದಿನಾಲ್ಕು ಪ್ರಸಂಗಗಳನ್ನು ಒಳಗೊಂಡಿದೆ. ಮನಿಷಾದ, ಉಭಯಕುಲ ಬಿಲ್ಲೋಜ, ಮನ್ಮಥೋಪಾಖ್ಯಾನ, ಮಾತಂಗ ಕನ್ಯೆ, ಕಲಿ, ಕೀಚಕ, ಅಮರ ಸಿಂದೂದ್ಭವ, ಕಾರ್ತಿಕೇಯ ಕಲ್ಯಾಣ, ಪಾಂಚಜನ್ಯ, ಭಕ್ತ ಕುಚೇಲ, ಭುವನಾಭಿರಾಮ, ಮೇಘ ಮಯೂರಿ, ಐಗುಳೆ ದಚ್ಚಿನೆ, ಜೇವು ಕೇದಗೆ, ಬಂಗಾರ್ದ ಗೆಜ್ಜೆ ಎಂಬ ಪ್ರಸಂಗಗಳು ಈ ಸಂಪುಟದಲ್ಲಿವೆ. ಈ ಎರಡೂ ಸಂಪುಟಗಳು ಯಕ್ಷಗಾನ ಕಲೆಗೊಂದು  ಶ್ರೀ  ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಅಮೂಲ್ಯ ಕೊಡುಗೆಯಾಗಿ ಪರಿಣಮಿಸಿದೆ. ಈ ಸಂಪುಟಗಳಲ್ಲಿ  ಶ್ರೀ  ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಬರೆದ ಕನ್ನಡ ಪೌರಾಣಿಕ ಯಕ್ಷಗಾನ ಪ್ರಸಂಗಗಳ, ಕನ್ನಡ ಕಾಲ್ಪನಿಕ ಯಕ್ಷಗಾನ ಪ್ರಸಂಗಗಳ , ತುಳು  ಪೌರಾಣಿಕ ಮತ್ತು ಕಾಲ್ಪನಿಕ ಯಕ್ಷಗಾನ ಪ್ರಸಂಗಗಳ, ನಾಟಕಗಳ, ನೃತ್ಯರೂಪಕಗಳ ಮತ್ತು ಇತರ ಕೃತಿಗಳ ವಿವರಗಳನ್ನೂ ನೀಡಲಾಗಿದೆ. ಪತ್ನಿ ಶೋಭಾ ಮತ್ತು ಮಕ್ಕಳಾದ ಜೀವಿತೇಶ ಮತ್ತು ಪರೀಕ್ಷಿತ ಇವರುಗಳ ಸಹಕಾರ ಪ್ರೋತ್ಸಾಹವೂ ಪೂಂಜರ ಯಶಸ್ಷಿನೊಳಗೆ ಅಡಗಿದ್ದು ಪ್ರಸ್ತುತ ಮಂಗಳೂರು ಮಂಜನಾಡಿಯ ಅಂಬುರುಹ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಕ್ಕಳಿಬ್ಬರೂ ವಿದ್ಯಾವಂತರಾಗಿದ್ದು ಯಕ್ಷಗಾನ ಕಲೆಯ ಸಂಬಂಧವಿರಿಸಿಕೊಂಡೇ ಬದುಕುತ್ತಿರುವುದು ಸಂತೋಷದ ವಿಚಾರ. 

ಲೇಖನ:ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments