Saturday, January 18, 2025
Homeಯಕ್ಷಗಾನಉಡುವೆಕೋಡಿ ಸುಬ್ಬಪ್ಪಯ್ಯನವರ ರಾವಣ - ನೋಡಲೇ ಬೇಕಾದ ವೀಡಿಯೋ

ಉಡುವೆಕೋಡಿ ಸುಬ್ಬಪ್ಪಯ್ಯನವರ ರಾವಣ – ನೋಡಲೇ ಬೇಕಾದ ವೀಡಿಯೋ

ಆಗ ಕ್ಯಾಸೆಟ್ ಗಳ ಯುಗ..  ನನ್ನ ಚಿಕ್ಕಂದಿನಲ್ಲಿ ಅಂದರೆ ಹಲವಾರು ವರ್ಷಗಳ ಮೊದಲು ಉಡುವೆಕೋಡಿಯವರ ಅರ್ಥವನ್ನು ಕ್ಯಾಸೆಟ್ ನಲ್ಲಿ ಕೇಳಿದ್ದೆ. ಕೌರವನ ಅರ್ಥವಾಗಿತ್ತು ಅದು. ಆ ಪ್ರಸಂಗದಲ್ಲಿ  ಕೌರವ ಪಾತ್ರಧಾರಿಗೆ ಒಂದೆರಡು ಪದ್ಯಗಳಿತ್ತೋ ಏನೋ ? ಆದರೆ ಆಗ ನನ್ನ ಮನಸ್ಸಿನಲ್ಲಿ  ತನ್ನ ಪ್ರಭುದ್ದತೆಯ ಅರ್ಥಗಾರಿಕೆಯಿಂದ ಬಹಳಷ್ಟು ಪ್ರಭಾವವನ್ನು ಉಡುವೆಕೋಡಿ ಸುಬ್ಬಪ್ಪಯ್ಯನವರು  ಬೀರಿದ್ದರು. ಆ ಪ್ರಭಾವ ಎಷ್ಟಿತ್ತೆಂದರೆ ಯಾವ ಪಾತ್ರಧಾರಿಯ ಕೌರವನ ಅರ್ಥ ಕೇಳಿದಾಗಲೂ ಉಡುವೆಕೋಡಿಯವರೇ ನೆನಪಾಗುತ್ತಿದ್ದರು. ಕೌರವ ಎಂದರೆ ಉಡುವೆಕೋಡಿ ಎಂದು ಭಾವಿಸುವಷ್ಟು ಪಾತ್ರದ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು.    ಆಮೇಲೆ ಅವರ ಅರ್ಥವನ್ನು ಕೇಳಬೇಕೆಂಬ ಬಯಕೆಯಿಂದ ಅಂತರ್ಜಾಲಗಳನ್ನು ಹುಡುಕಾಡಿದ್ದೆ. ಒಂದೆರಡು ಸಣ್ಣ ವೀಡಿಯೊ ತುಣುಕುಗಳು ಮಾತ್ರ ಗೋಚರಿಸಿತ್ತು. ಶೇಣಿ, ಸಾಮಗರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥಧಾರಿಗಳಲ್ಲಿ ಓರ್ವರಾಗಿದ್ದ ಹಾಗೂ ಅವರೊಡನೆ ತನ್ನ ಪ್ರಬುದ್ಧ ಮಾತುಗಾರಿಕೆಯಿಂದ ಗುರುತಿಸಿಕೊಂಡು ಅವರೊಡನೆ ವೇದಿಕೆ ಹಂಚಿಕೊಳ್ಳುತ್ತಿದ್ದ ಉಡುವೆಕೋಡಿಯವರು ಆಮೇಲೆ ಸ್ವಲ್ಪ ತಾಳಮದ್ದಳೆ ಅರ್ಥಧಾರಿಯಾಗಿ ಭಾಗವಹಿಸುವಲ್ಲಿ ಸ್ವಲ್ಪ ನಿರಾಸಕ್ತಿ ವಹಿಸಿದರೇನೋ ಎಂಬ ಸಂಶಯ ನನ್ನಲ್ಲಿ ಮನೆಮಾಡಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಅವರ ಅರ್ಥಗಾರಿಕೆಯು ಅಲ್ಲಲ್ಲಿ ಕೇಳಲು ಸಿಗತೊಡಗಿದ್ದು ತಾಳಮದ್ದಳೆಯ ರಸಿಕರ ಸೌಭಾಗ್ಯವೆಂದೇ ಹೇಳಬೇಕು. ಕೊರೋನಾ ಭಾದಿಸುವ ಕೆಲವೇ ದಿನಗಳ ಮೊದಲು ಅವರ ಮನೆಗೆ ಹೋಗಿ ಮಾತನಾಡಿಸಿದ್ದೆ. ಆಗ ಅವರಲ್ಲಿ ಇರುವ ಅರ್ಥಗಾರಿಕೆಯ ಧ್ವನಿಮುದ್ರಣಗಳ ಸಂಗ್ರಹವನ್ನು ಕೇಳಲು ಕೊಡುವುದಾಗಿ ಹೇಳಿದ್ದರು. ಆದರೆ ಅಷ್ಟರಲ್ಲೇ ಕೊರೋನಾ ಅವರಿಸತೊಡಗಿದ್ದುದರಿಂದ ಎಲ್ಲರೂ ಅವರವರ ವೃತ್ತಿ, ಕಾರ್ಯಕ್ಷೇತ್ರಗಳನ್ನು ಮರೆತು ಮನೆಯಲ್ಲಿಯೇ ಉಳಿಯುವಂತಾಯಿತು. ನಾನೂ ನಮ್ಮ ಬರವಣಿಗೆಯ ಕಾಯಕ ಮತ್ತು ಪತ್ರಿಕೆಯ ಕೆಲಸಗಳಿಗೆ ಒಂದು ಸಣ್ಣ ವಿರಾಮವನ್ನು ಘೋಷಿಸಿದ್ದೆ. ಆದರೆ ಇತ್ತೀಚೆಗೆ ಅವರ ರಾವಣನ ಅರ್ಥಗಾರಿಕೆಯ ವೀಡಿಯೊ ಒಂದನ್ನು ಯು ಟ್ಯೂಬ್ ಚಾನೆಲ್ ನಲ್ಲಿ ನೋಡುವ ಅವಕಾಶ ಒದಗಿ ಬಂತು. ಸೀತಾಪಹರದ ರಾವಣನಾಗಿ ಉಡುವೆಕೋಡಿಯವರು ಇಲ್ಲಿ ವಿಜೃಂಭಿಸಿದ್ದಾರೆ. ಇದು ಯಕ್ಷಗಾನ ಕಲಾವಿದ, ಛಾಯಾಗ್ರಾಹಕರೂ ಆದ ಶ್ರೀ ಮಧುಸೂದನ ಅಲೆವೂರಾಯರು ಅಪ್ಲೋಡ್ ಮಡಿದ ವೀಡಿಯೋ . ಇದಕ್ಕಾಗಿ ಮಧುಸೂದನ ಅಲೆವೂರಾಯರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ಅವರ ವೀಡಿಯೋದ ಕೊಂಡಿಯನ್ನು ಕೆಳಗೆ ಕೊಡಲಾಗಿದೆ.

ಸೀತಾಪಹಾರದ ರಾವಣನಾಗಿ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯ 

ಮಾತಿನ ಮಂಟಪವನ್ನು ಕಟ್ಟುವ ವೇಳೆಯಲ್ಲಿ ನಡುವೆ ನುಡಿಮುತ್ತುಗಳನ್ನು ಪೋಣಿಸುವುದು ಹಾಗೂ  ಅರ್ಥಗರ್ಭಿತ ಮಾತುಗಳನ್ನು ಎಸೆಯುವುದು ಉಡುವೆಕೋಡಿಯವರ ಶೈಲಿ. ಅದನ್ನು ಈ ರಾವಣನ ಅರ್ಥಗಾರಿಕೆಯಲ್ಲಿ ಅಲ್ಲಲ್ಲಿ ಕೇಳಬಹುದು. ಉದಾಹರಣೆಗೆ,  “ಹೋಮಕ್ಕೆ ತುಪ್ಪ ಹಾಕುವುದಕ್ಕೆ ಮುಂದಾದರೇ ಹೊರತು ನನ್ನ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಸಿದ್ಧರಾಗಲಿಲ್ಲ” “ಬಾಳೆ ಗೊನೆ ಹಾಕಿದ ಮೇಲೆ ಬಾಳೆಯ ಗೊನೆ. ಅದು ಬಾಳೆಗೆ ಗೊನೆ , ಬಾಳೆ ಕೊನೆ””ಆ ಎಸೆಯ ಓಲಗ .. ಅದು ಎಸೆಯಬೇಕಾದ ಓಲಗ “ಇಂತಹ ಹಲವು ಮಾತಿನ ಮುತ್ತುಗಳನ್ನು ಇದರಲ್ಲಿ ಕೇಳಬಹುದು. ಎಲ್ಲರೂ ನೋಡಲೇಬೇಕಾದ ಹಾಗೂ ಕೇಳಲೇ ಬೇಕಾದ ವೀಡಿಯೊ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments