ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರು ಕೇಳದವರಿಲ್ಲ. ಸಂಗೀತ ಎಲ್ಲಿಯ ವರೆಗೆ ಇರುತ್ತದೋ ಅಲ್ಲಿಯ ವರೆಗೆ ಎಸ್. ಪಿ.ಬಿ. ಹೆಸರು ಇದ್ದೇ ಇರುತ್ತದೆ. ಅವರೊಬ್ಬ ಗಾಯನ ಲೋಕದ ಜೀವಂತ ದಂತಕತೆ. ಅವರು ಭಾರತದ ಹೆಚ್ಚಿನ ಎಲ್ಲ ಭಾಷೆಗಳಲ್ಲಿ ಹಾಡಿ ಹಾಡುಗಳ ಸಂಖ್ಯೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದರೂ ಹಾಡುಗಳ ಸಂಖ್ಯೆಗಿಂತಲೂ ಅವರ ಮಧುರ ಸ್ವರದ ಇಂಪುಗಳ ಕಂಪನ್ನು ಹೊರಸೂಸುವ ಕಂಠಕ್ಕೆ ಶರಣುಹೋಗದ ಸಂಗೀತ ಪ್ರೇಮಿಯಿಲ್ಲ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ಎಸ್. ಜಾನಕಿ ಜೊತೆಯಲ್ಲಿ ಹಾಡಿದ ಅಪೂರ್ವ ಹಾಡುಗಳ ಸಂಗ್ರಹ ಸರಿಗಮ ಸೌತ್ ಯು ಟ್ಯೂಬ್ ಚಾನೆಲ್ ನವರ ವೀಡಿಯೋದಲ್ಲಿದೆ. ಈ ವೀಡಿಯೋದ ಲಿಂಕ್ ಕೆಳಗಡೆ ಇದೆ.
ಕನ್ನಡದಲ್ಲಂತೂ ಅವರು ಹಾಡಿದ ಅಸಂಖ್ಯಾತ ಮಧುರ ಹಾಡುಗಳು ಇಂದು ಎಲ್ಲರ ಬಾಯಿಯಲ್ಲೂ ಗುಣುಗುಟ್ಟುತ್ತಾ ಇರುತ್ತವೆ. ಅವರೆಂದರೆ ಜೀವವನ್ನೇ ಬಿಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅಂತಹಾ ಸಂಗೀತ ಸಾಮ್ರಾಜ್ಯದ ಅನಭಿಷಿಕ್ತ ದೊರೆ ಇಂದು ಕೊರೊನದಿಂದ ಅಸೌಖ್ಯಪೀಡಿತರಾಗಿ ಆಸ್ಪತ್ರೆ ಸೇರಿದ್ದಾರೆ. ಸುಮಾರು ದಿನಗಳಿಂದಲೂ ವೆಂಟಿಲೇಟರ್ ಅಳವಡಿಕೆಯೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಪರಿಸ್ಥಿತಿ ಒಮ್ಮೆ ಗಂಭೀರ ಹಾಗೂ ಚಿಂತಾಜನಕ ಸ್ಥಿತಿಗೆ ತಲುಪಿತ್ತು. ಆದರೆ ಆಶಾದಾಯಕ ಹಾಗೂ ಸಂತೋಷದ ಸುದ್ದಿಗಾಗಿ ಜನರೆಲ್ಲರೂ ಪ್ರತಿಕ್ಷಣವೂ ಪ್ರಾರ್ಥಿಸುತ್ತಿದ್ದಾರೆ.
ಹೌದು. ಎಸ್. ಪಿ. ಬಾಲಸುಬ್ರಹ್ಮಣ್ಯಂ ಕೊರೋನಾ ಪರೀಕ್ಷೆಯಲ್ಲಿ ಗೆದ್ದು ಬರಲಿ. ಶೀಘ್ರವೇ ಅವರು ಚೇತರಿಸಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸಲಿ. ಮತ್ತೆ ಸಂಗೀತ ಪ್ರೇಮಿಗಳು ಅವರು ಹಾಡುವುದನ್ನು ಶೀಘ್ರವಾಗಿ ಕಾಣುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.