ಜನಪ್ರಿಯ ಜನಪ್ರಿಯ ಪಿಟೀಲು (ವಯಲಿನ್) ವಾದಕ ಪದ್ಮಭೂಷಣ ಟಿ. ಎನ್. ಕೃಷ್ಣನ್ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
1928ರ ಅಕ್ಟೋಬರ್ 6ರಂದು ಕೇರಳದ ತ್ರಿಪುಣಿತ್ತರದಲ್ಲಿ ಜನಿಸಿದ್ದ ಟಿ. ಎನ್. ಕೃಷ್ಣನ್ ಅವರ ತಂದೆ ಪ್ರಸಿದ್ಧ ಸಂಗೀತಗಾರ ನಾರಾಯಣ ಅಯ್ಯರ್ ಮತ್ತು ತಾಯಿ ಅಮ್ಮಿಣಿ ಅಮ್ಮಾಳ್. ಸಂಗೀತದ ಆರಂಭಿಕ ಪಾಠವನ್ನು ತಂದೆಯಿಂದಲೇ ಅಭ್ಯಾಸ ಮಾಡಿದ್ದರು.
ಆಮೇಲೆ ಹೆಚ್ಚಿನ ಕಲಿಕೆಯನ್ನು ಕೆ. ಪಾರ್ಥಸಾರಥಿ ಅಲೆಪ್ಪಿ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್ ಮೊದಲಾದವರ ಬಳಿ ಮಾಡಿದ್ದರು. ಪದ್ಮಭೂಷಣ ಟಿ. ಎನ್. ಕೃಷ್ಣನ್ ಹಿಂದಿನ ತಲೆಮಾರುಗಳ ಕರ್ನಾಟಕ ಸಂಗೀತದ ದಂತಕಥೆಗಳಾಗಿದ್ದ ಹಲವಾರು ಸಂಗೀತಗಾರರೊಂದಿಗೆ ಪ್ರದರ್ಶನ ನೀಡಿದ್ದರು.
ಅರಿಯಕುಡಿ ರಾಮಾನುಜ ಅಯ್ಯಂಗಾರ್, ಅಲತೂರ್ ಬ್ರದರ್ಸ್, ಚೆಂಬೈ ವೈದ್ಯನಾಥ ಭಾಗವತರ್, ಎಂಡಿ ರಾಮನಾಥನ್ ಮತ್ತು ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರೊಂದಿಗೆ ಟಿ. ಎನ್. ಕೃಷ್ಣನ್ ಅವರು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದರು. ಅವರ ವಯಲಿನ್ ಕಚೇರಿಯ ವಿಡಿಯೋ ಕೆಳಗಡೆ ಇದೆ.
ಗಾಯನ ಲೋಕದ ದೊರೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಲಕ್ಷ್ಮಿ ಅವರು ಅಭಿನಯಿಸಿದ್ದ ಜನಪ್ರಿಯ ತೆಲುಗು ಚಿತ್ರ ‘ಮಿಥುನಂ’ ಕನ್ನಡಕ್ಕೆ ಶೀಘ್ರದಲ್ಲೇ ಡಬ್ ಆಗಲಿದೆ.
ತೆಲುಗು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದ ಸಿನಿಮಾ ಈಗಲೂ ಆಂಧ್ರದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಮನೆಮಾತಾಗಿತ್ತು. ವಯಸ್ಸಾದ ದಂಪತಿಗಳ ನಡುವಿನ ವಾತ್ಸಲ್ಯಭರಿತ ಪ್ರೇಮಕಥೆ ಇದಾಗಿದ್ದು ಎಸ್.ಪಿ.ಬಿ ಮತ್ತು ಲಕ್ಷ್ಮಿ ಅದ್ಭುತವಾಗಿ, ಲವಲವಿಕೆ ಹಾಗೂ ಮುಗ್ಧತೆಯಿಂದ ನಟಿಸಿದ್ದಾರೆ.
ಹೌದು. ಎಷ್ಟು ಬರೆದರೂ ಅದು ಅಷ್ಟೇ ಆದೀತು. ತೆಗೆದಷ್ಟೂ ತುಂಬುವ ಬಾವಿಯ ನೀರಿನಂತೆ ಅವರ ಬಗ್ಗೆ ಎಲ್ಲವನ್ನೂ ತಿಳಿಯುವುದು ಮತ್ತು ಹೇಳುವುದು ಅಸಾಧ್ಯವೇ ಸರಿ. ಅವರ ಬಗ್ಗೆ ಅಷ್ಟನ್ನೂ ಹೇಳಿ ಮುಗಿಸಿದೆ ಎಂದು ಹೆಮ್ಮೆ ಪಡುವವರು ಅವರೊಂದು ತೆಗೆದಷ್ಟೂ ಮತ್ತೆ ತುಂಬಿಕೊಳ್ಳುವ ಜ್ಞಾನದ ಒರತೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸಮುದ್ರದಿಂದ ಸ್ವಲ್ಪ ನೀರನ್ನು ತೆಗೆದರೆ, ತೆಗೆದಷ್ಟು ನೀರಿನ ಬಗ್ಗೆ ಮಾತ್ರ ತಿಳಿಯಬಹುದು. ಆದರೆ ಶರಧಿಯ ಗರ್ಭದಲ್ಲಿ ಏನು ಅಡಗಿದೆ ಎಂದು ಹೇಳಲಾರೆವು. ಅದರಂತೆಯೇ ಜೋಶಿಯವರನ್ನೂ ಕೂಡಾ.
ನನಗೆ ಗೊತ್ತು. ಡಾ. ಪ್ರಭಾಕರ ಜೋಶಿಯವರು ಹೊಗಳಿಕೆ ಮತ್ತು ವ್ಯಕ್ತಿತ್ವದ ವೈಭವೀಕರಣಗಳನ್ನು ಇಷ್ಟಪಡುವುದಿಲ್ಲ ಎಂದು. ಆದರೂ ಸಾಗರದಿಂದ ತೆಗೆದಷ್ಟು ನೀರಿನ ಗುಣಲಕ್ಷಣವನ್ನೂ ಹೇಳದೇ ಇದ್ದರೆ ಹೇಗೆ?
ನನಗೆ ಪ್ರಭಾಕರ ಜೋಶಿ ಎಂಬ ವ್ಯಕ್ತಿತ್ವದ ಮೊದಲ ಪರಿಚಯವಾದದ್ದು ತಾಳಮದ್ದಳೆ ಕೂಟಗಳಿಂದಲೇ. ಸಣ್ಣವನಿದ್ದಾಗ ಶೇಣಿ, ಸಾಮಗ, ಪೆರ್ಲ, ತೆಕ್ಕಟ್ಟೆಯವರ ಎಲ್ಲಾ ಕೂಟಗಳಲ್ಲಿಯೇ ಜೋಷಿಯವರ ಮುಖ ಮತ್ತು ಅರ್ಥಗಾರಿಕೆಯ ಪರಿಚಯವಾಗಿತ್ತು. ಆದುದರಿಂದ ಪ್ರಭಾಕರ ಜೋಶಿ ಎಂಬ ವ್ಯಕ್ತಿತ್ವದ ಅನಾವರಣವಾದದ್ದು ಯಕ್ಷಗಾನ, ವಿಮರ್ಶೆ, ಸಾಹಿತ್ಯಗಳಿಂದಲೇ ಹೊರತು ಅವರ ವೃತ್ತಿಯಿಂದಲ್ಲ. ಕಲೆಯ ಮತ್ತು ಸಾಹಿತ್ಯ ಕೃಷಿಗಳಲ್ಲಿ ಇಂತಹಾ ಉನ್ನತ ಮಟ್ಟದ ಸಾಧನೆಯಿಂದಲೇ ಇಂದು ಜಾಗರದ ಜೋಶಿಯವರ ಹೆಸರು ಸಾಗರದಾಚೆಯಲ್ಲೂ ಜನಜನಿತವಾಗಲು ಸಾಧ್ಯವಾಯಿತೋ ಏನೋ.
ಆದುದರಿಂದ ನಮಗೆ ಇಂದು ಯಕ್ಷಗಾನ ತಾಳಮದ್ದಳೆ ಅರ್ಥಧಾರಿ, ವಿಮರ್ಶಕ, ಸಾಹಿತಿ, ವಿದ್ವಾಂಸ ಜೋಶಿಯವರನ್ನು ಬಿಟ್ಟು ಬೇರೊಂದು ಸ್ಥಾನದಲ್ಲಿ ಜೋಶಿಯವರನ್ನು ಕಲ್ಪಿಸಲೂ ಅಸಾಧ್ಯ. ಕೆಲವೊಮ್ಮೆ ಅವಿಶ್ರಾಂತ ವ್ಯಕ್ತಿತ್ವಗಳನ್ನು ಕಂಡಾಗ ಆಶ್ಚರ್ಯ ಪಡುತ್ತೇವೆ. ಯಾಕೋ ಗೊತ್ತಿಲ್ಲ ಜೋಶಿಯವರದು ಕೂಡಾ ಅವಿಶ್ರಾಂತ ಜೀವನ ಎಂದೇ ನಾನು ಭಾವಿಸುತ್ತೇನೆ. ಇಲ್ಲದಿದ್ದರೆ ಇಷ್ಟೆಲ್ಲಾ ಮಾಡಲು ಅವರಿಗೆ ಸಮಯವೆಲ್ಲಿದೆ?! ಇದು ನನ್ನಂತಹಾ ಸಾಮಾನ್ಯರ ಆಲೋಚನೆ ಇರಬಹುದು.
ಒಬ್ಬ ಜವಾಬ್ದಾರಿಯುತ ಉಪಾನ್ಯಾಸಕನಾಗಿ, ಪ್ರಾಂಶುಪಾಲನಾಗಿ ಕಾಲೇಜಿನ ಕೆಲಸಗಳಲ್ಲೇ ಸೋತು ಸುಣ್ಣವಾಗುವ ಹಲವಾರು ವ್ಯಕ್ತಿತ್ವಗಳನ್ನು ನಾವು ಕಣ್ಣೆದುರಿಗೇ ಕಾಣುತ್ತೇವೆ. ಆದರೆ ಕಾಲೇಜಿನ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಅದಕ್ಕಿಂತಲೂ ಹೆಚ್ಚು ಸಾಹಿತ್ಯ ಸೇವೆ, ಕಲಾವಿದನಾಗಿ, ಭಾಷಣಕಾರನಾಗಿ, ವಿಮರ್ಶಕನಾಗಿ ಬರಹಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಜೋಶಿಯಂತಹವರಿಗೆ ದಿನವೊಂದರಲ್ಲಿರುವ ಇಪ್ಪತ್ತನಾಲ್ಕು ಘಂಟೆಗಳು ಹೇಗೆ ಸಾಕಾಗುತ್ತವೆ ಎಂದು ಬಹಳಷ್ಟು ಬಾರಿ ಆಶ್ಚರ್ಯಪಟ್ಟಿದ್ದೇನೆ.
ಜೋಶಿಯವರು ಮನಸ್ಸು ಮಾಡಿದ್ದರೆ ಅವರು ಕಾಲೇಜಿನಲ್ಲಿ ಭೋದಿಸುತ್ತಿದ್ದ ವಿಷಯಗಳ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಗಳಿಸಬಹುದಿತ್ತು. ಆದರೆ ಅವರು ತಾನು ಅತ್ಯಂತ ಪ್ರೀತಿಸುತ್ತಿದ್ದ ಯಕ್ಷಗಾನ ಕಲೆಯನ್ನು ಅದಕ್ಕೆ ಆರಿಸಿಕೊಂಡರು. ಅತ್ಯಂತ ಅಪರೂಪವಾದ ಆದರೆ ಅಷ್ಟೇ ಕ್ಲಿಷ್ಟಕರವಾದ ವಿಷಯವೊಂದನ್ನು ಆಯ್ದುಕೊಂಡು ಸಂಶೋಧನಾ ಪ್ರಬಂಧವನ್ನು ಸಿದ್ಧಪಡಿಸಿ ಅದರಿಂದ ಡಾಕ್ಟರೇಟ್ ಪದವಿ ಪಡೆಯುವುದು ಜೋಶಿಯಂತಹವರಿಂದ ಮಾತ್ರ ಸಾಧ್ಯ. ಅದರಲ್ಲೂ ತಾನು ಸಾಕಷ್ಟು ಬಾರಿ ಅರ್ಥ ಹೇಳಿದ ಕೃಷ್ಣ ಸಂಧಾನ ಪ್ರಸಂಗವನ್ನೇ ಆಯ್ದುಕೊಂಡರು. ‘ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ’ ಎಂಬ ಮಹಾಪ್ರಬಂಧವನ್ನು ಸಿದ್ಧಪಡಿಸಿ ಪಿ ಎಚ್ ಡಿ ಪದವಿಯನ್ನು ಪಡೆದರು.
ಯಕ್ಷಗಾನ ಲೋಕ ಈವರೆಗೆ ಕಂಡ ವಿದ್ವಾಂಸರಲ್ಲಿ ಡಾ. ಪ್ರಭಾಕರ ಜೋಶಿಯವರು ಅತಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತಾರೆ. ಯಕ್ಷಗಾನ ಮಾತ್ರವಲ್ಲ. ನೀವು ಯಾವುದೇ ವಿಷಯಗಳನ್ನು ಅವರಲ್ಲಿ ಕೇಳಿ. ಅದು ಹೀಗೆಯೇ ಎಂದು ಅವರು ಹೇಳಬಲ್ಲರು. ಯಕ್ಷಗಾನ, ಆಧುನಿಕ ಪ್ರಪಂಚದ ಆಗುಹೋಗುಗಳು, ವೇದ, ಪುರಾಣ, ತತ್ವಶಾಸ್ತ್ರ ಹೀಗೆ ಯಾವುದನ್ನೂ ಕೇಳಿದರೂ ಅದಕ್ಕೆ ಜೋಶಿಯವರ ಬಳಿ ಉತ್ತರವಿದೆ. ತಾನು ಭೋದಿಸುವ ವಾಣಿಜ್ಯಶಾಸ್ತ್ರದ ಉಪನ್ಯಾಸಕನಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಯಕ್ಷಗಾನ ವಿದ್ವಾಂಸನಾಗಿ, ಕಾಲೇಜಿನ ಆಡಳಿತಾತ್ಮಕ ಹುದ್ದೆಯ ಪ್ರಾಂಶುಪಾಲನಾಗಿ, ಪ್ರಬುದ್ಧ ಲೇಖಕನಾಗಿ, ವಿಮರ್ಶಕನಾಗಿ, ಶೋಧನೆಯ ದೃಷ್ಟಿಯುಳ್ಳ ಸಂಶೋಧಕನಾಗಿ, ಅಂಕಣಕಾರನಾಗಿ, ಕಲಾವಿದನಾಗಿ, ಭಾಷಣಕಾರನಾಗಿ, ಅಪ್ರತಿಮ ವಾಕ್ಪಟುವಾಗಿ, ತತ್ವಶಾಸ್ತ್ರಜ್ಞನಾಗಿ, ಕವಿಯಾಗಿ, ನೂರಾರು ಕೃತಿಗಳು ಪ್ರಕಟಗೊಳ್ಳಲು ಕಾರಣರಾದ ಸಂಪಾದಕನಾಗಿ ಹೀಗೆ ಜೋಶಿಯವರು ಕೈ ಆಡಿಸದ ಕ್ಷೇತ್ರವಿಲ್ಲ.
ಆದುದರಿಂದ ಯಕ್ಷಗಾನ ಕಲಾವಿದನೊಬ್ಬ ಇಷ್ಟೆಲ್ಲಾ ಸಾಧಿಸಿದ್ದು ನಮಗೆ ಕಾಣಸಿಗುವುದು ಅಪರೂಪ. ಅಥವಾ ಇಷ್ಟೆಲ್ಲಾ ಸಾಧಿಸಿದವನೊಬ್ಬ ಯಕ್ಷಗಾನದ ಕಲಾವಿದನಾದದ್ದೂ ಕಾಣಸಿಗುವುದು ಅಪರೂಪ. ಹೇಗೆ ಹೇಳಿದರೂ ಸರಿಯೇ. ಒಂದು ಕಾರ್ಯಕ್ರಮದಲ್ಲಿ ಹಿಂದೆ ಕುಳಿತು ಜೋಶಿಯವರ ಭಾಷಣ ಕೇಳುತ್ತಿದ್ದೆ. ಪರಿಚಿತರಲ್ಲಿ ಒಬ್ಬರು ಸೌಂಡ್ ಬಾಕ್ಸ್ ಹತ್ತಿರ ಕುಳಿತು ಅದನ್ನು ತಮ್ಮ ಮೊಬೈಲ್ ನಲ್ಲಿ ಧ್ವನಿಮುದ್ರಣ ಮಾಡುತ್ತಿದ್ದರು. ನಾನು ಯಾಕೆಂದು ಪ್ರಶ್ನಿಸಿದೆ. ‘ಇವರ ಒಂದು ಭಾಷಣ ಕೇಳಿದರೆ ಅದರಲ್ಲಿ ಹತ್ತು ಲೇಖನಗಳಿಗಿರುವ ವಸ್ತು ಸಿಗುತ್ತದೆ’ ಎಂದರು. ಅವರ ಮಾತು ನಿಜ ಎಂದು ಅನಿಸಿತು.
ಕೂಡ್ಲು ಸದಾಶಿವ ಶ್ಯಾನುಭಾಗರು ಬಹಳ ಸೌಮ್ಯದಿಂದ ‘ಕೃಷ್ಣಾ ನಾವು ಜಯಿಸಿ ಬಂದಿದ್ದೇವೆ. ಯಾಕೆ ಅಸಮಾಧಾನ?’ ಎಂದು ಹೇಳುವುದೇ ತಡ, ಒಮ್ಮೆಲೇ ಬಾಗಿಲು ತೆರೆಯಲ್ಪಟ್ಟಿತು. ಕೂಡ್ಲು ಮನೆತನದವರ ಧಾರ್ಮಿಕ ಶ್ರದ್ಧಾಭಕ್ತಿಗೆ ಇದೊಂದು ಉದಾಹರಣೆ”
(ಶ್ರೀ ಚಂದ್ರಗಿರಿ ಅಂಬು, ಖ್ಯಾತ ಬಣ್ಣದ ವೇಷಧಾರಿ,ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ ‘ಕುತ್ಯಾಳ ಸಂಪದ’ ಪುಸ್ತಕದಲ್ಲಿ)
ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಅಭಿನಂದನಾ ಪುರಸ್ಕಾರಕ್ಕೆ ಕಾಸರಗೋಡು ಜಿಲ್ಲೆಯಿಂದ ಇಬ್ಬರು ಆಯ್ಕೆಯಾಗಿದ್ದಾರೆ.
ಯಕ್ಷಗಾನದ ಉದಯೋನ್ಮುಖ ಪ್ರತಿಭೆ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಮತ್ತು ಯಕ್ಷಗಾನ, ಭರತನಾಟ್ಯ, ಸಾಹಿತ್ಯಗಳ ಬಹುಮುಖ ಪ್ರತಿಭೆ ಸೃಷ್ಟಿ ರೈ ಕಾಟುಕುಕ್ಕೆ. ಇಬ್ಬರೂ ಗಡಿನಾಡು ಕಾಸರಗೋಡಿನ ಉದಯೋನ್ಮುಖ ಪ್ರತಿಭೆಗಳೇ.
ಸೃಷ್ಟಿಕರ್ತನಾದ ಕನಕಗರ್ಭನ ಕಾರ್ಯವೈಖರಿ ಅದೆಷ್ಟು ಕೌತುಕಮಯವಾದುದು! ಸತ್ಯಲೋಕೇಶನಾದ ಅಂಚೆದೇರನ ಸೃಷ್ಟಿಯಲ್ಲಿ ವೈವಿಧ್ಯತೆಯನ್ನು ಗುರುತಿಸಬಹುದು. ರೂಪದಲ್ಲಿ ವಿವಿಧತೆ, ಆಕಾರದಲ್ಲಿ ವೈವಿಧ್ಯತೆ, ಬಣ್ಣದಲ್ಲಿ ವಿವಿಧತೆ, ವ್ಯವಹಾರದಲ್ಲಿ ವೈವಿಧ್ಯತೆ. ಆದುದರಿಂದಲೇ ಬ್ರಹ್ಮನು ಬೇಧಬಿಜ್ಜಗ ಎಂದು ಪ್ರಸಿದ್ಧನಾಗಿದ್ದಾನೆ.
ನಾವು ಮಾನವರು. ಯೋನಿಜರು. ನಮ್ಮಲ್ಲೂ ವೈವಿಧ್ಯಗಳಿವೆ. ಕೋಟಿ ಕೋಟಿ ಸಂಖ್ಯೆಯಲ್ಲಿದ್ದರೂ ಒಬ್ಬರಂತೆ ಮತ್ತೊಬ್ಬರಿಲ್ಲ. ಪ್ರತ್ಯೇಕ ಪ್ರತ್ಯೇಕವಾಗಿಯೇ ಗುರುತಿಸಲ್ಪಡುತ್ತೇವೆ. ಸ್ವಭಾವದಲ್ಲೂ ಅಷ್ಟೇ. ಒಂದೇ ತೆರನಾಗಿ ಎಲ್ಲರೂ ಕಾಣಿಸಿಕೊಳ್ಳಲಾರರು. ಒಬ್ಬೊಬ್ಬರದು ಒಂದೊಂದು ಸ್ವಭಾವ. ಕೆಲವರು ತೆರೆದುಕೊಳ್ಳುವ ಸ್ವಭಾವವನ್ನು ಹೊಂದಿರುವುದಿಲ್ಲ. ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ ವ್ಯವಹಾರ. ಇವರದು ಸದಾ ಮುಚ್ಚಿಕೊಳ್ಳುವ ಸ್ವಭಾವ.
ಇನ್ನು ಕೆಲವರಿಗೆ ತಾನೂ ಕಾಣಿಸಿಕೊಳ್ಳಬೇಕು, ತನ್ನ ಜತೆಗೆ ಉಳಿದವರೂ ಕಾಣಿಸಿಕೊಳ್ಳಬೇಕು ಎಂಬ ಒಳ್ಳೆಯ ಮನಸ್ಸು. ತಾನು ಕಷ್ಟವನ್ನನುಭವಿಸುತ್ತಾ ಪರರಿಗೆ ಒಳಿತನ್ನುಂಟುಮಾಡುವವರೂ ಇದ್ದಾರೆ. ಪರರ ಕಷ್ಟಕ್ಕೆ ನೆರವಾಗುವ ಕ್ರಿಯೆಯಲ್ಲಿ ಸಿಗುವ ಆನಂದವು ವರ್ಣನಾತೀತವಾದುದು. ಅಸಾಮಾನ್ಯ ಪ್ರತಿಭೆಯನ್ನು ತೆರೆದುಕೊಳ್ಳದೆ ಸದಾ ಮುದುಡಿಕೊಳ್ಳುವ ಸ್ವಭಾವವನ್ನು ಹೊಂದಿದ ಕಾರಣವೋ ಏನೋ? ಅನೇಕ ಕಲಾವಿದರು ಪ್ರಚಾರದಿಂದ ದೂರ ಉಳಿದರು.
ಆದರೂ ನಿಜ ವಿಚಾರಗಳು ಎಷ್ಟು ಮುಚ್ಚಿಟ್ಟರೂ ಹೊರ ಬಾರದಿರದು. ವಿದ್ವಾಂಸರು ಗುಹೆಯೊಳಡಗಿದರೂ ಹೊರ ಕರೆತಂದು ಗೌರವಿಸಿಯೇ ಗೌರವಿಸುತ್ತಾರೆ. ಯಾಕೆಂದರೆ ನಮ್ಮ ಸಮಾಜದಲ್ಲಿ ಒಳ್ಳೆಯದನ್ನು ಗುರುತಿಸುವ ಕಣ್ಣುಗಳಿವೆ. ಅವರನ್ನು ಗೌರವಿಸುವ ಸುಮನಸರಿದ್ದಾರೆ. ಹೀಗೆ ಸದ್ದಿಲ್ಲದೇ ಕಲಾಸೇವೆಯು ತನಗೆ ಕರ್ತವ್ಯ ಎಂದು ತಿಳಿದು ವ್ಯವಹರಿಸುತ್ತಿರುವ ಕಲಾವಿದರನೇಕರನ್ನು ಯಕ್ಷಗಾನ ಕ್ಷೇತ್ರದಲ್ಲಿ ನಾವು ಕಾಣಬಹುದು. ಅಂತಹ ಕಲಾವಿದರಲ್ಲೊಬ್ಬರು ಶ್ರೀ ಸತೀಶ ಉಪಾಧ್ಯ ಅಂಬಲಪಾಡಿ.
ಶ್ರೀಯುತರು ಹಿಮ್ಮೇಳ, ಮುಮ್ಮೇಳ ಕಲಾವಿದನಾಗಿಯೂ, ಶಿಕ್ಷಕನಾಗಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಶ್ರೇಷ್ಠ ಕಲಾವಿದ, ಯಕ್ಷಗಾನ ಶಿಕ್ಷಕರಾದ ಶ್ರೀ ಸತೀಶ ಉಪಾಧ್ಯ ಅವರು ಉಡುಪಿ ಸಮೀಪದ ಅಂಬಲಪಾಡಿಯಲ್ಲಿ ಶ್ರೀ ಎ. ರಾಘವೇಂದ್ರ ಉಪಾಧ್ಯಾಯ ಮತ್ತು ಶ್ರೀಮತಿ ಜಯಲಕ್ಷ್ಮಿ ಉಪಾಧ್ಯಾಯ ದಂಪತಿಗಳಿಗೆ ಮಗನಾಗಿ 1972ನೇ ಇಸವಿ ಮೇ 13ರಂದು ಜನಿಸಿದರು. ಅಂಬಲಪಾಡಿ ಶಾಲೆ, SMSP ಹೈಸ್ಕೂಲ್ ಮತ್ತು ಉಡುಪಿ ಬೋರ್ಡ್ ಶಾಲೆಗಳಲ್ಲಿ ವಿದ್ಯಾರ್ಜನೆ. ಪಿಯುಸಿ ವರೆಗೆ.
ಸತೀಶ ಉಪಾಧ್ಯರ ತಂದೆ ಶ್ರೀ ರಾಘವೇಂದ್ರ ಉಪಾಧ್ಯಾಯರು ಅಂಬಲಪಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಯಕ್ಷಗಾನ ವೇಷಧಾರಿಯೂ ಭರತನಾಟ್ಯ ಗುರುಗಳೂ ಆಗಿದ್ದರು. ಯಕ್ಷಗಾನ ನಾಟ್ಯ ಹಿರಿಯಡಕ ಗೋಪಾಲರಾಯರಿಂದಲೂ ಭರತನಾಟ್ಯವನ್ನು ಉಡುಪಿ ಶ್ರೀ ರಾಧಾಕೃಷ್ಣ ತಂತ್ರಿಗಳಿಂದಲೂ ಅಭ್ಯಸಿಸಿದ್ದರು. ಅಂಬಲಪಾಡಿ ಶಾಲೆಯ ಸ್ಥಾಪಕರು ದಿ| ಶ್ರೀ ಮುಖ್ಯಪ್ರಾಣ ಉಪಾಧ್ಯಾಯರು. ಶ್ರೀಯುತರು ಕವಿಗಳೂ ಆಗಿದ್ದರು. ಅನೇಕ ಕವಿತೆಗಳನ್ನೂ, ಮಕ್ಕಳ ನಾಟಕಗಳನ್ನೂ ಬರೆದಿದ್ದರು. ಮಾತ್ರವಲ್ಲ ಮುದ್ರಣಕ್ಕೊಳಪಟ್ಟಿದ್ದುವು.
ಊರ ಕಲಾಭಿಮಾನಿಗಳ ನೇತೃತ್ವದಲ್ಲಿ ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿ ಎಂಬ ಸಂಸ್ಥೆಯು ಆರಂಭಗೊಂಡಿತ್ತು. ಈ ಕಲಾಸಂಸ್ಥೆಯ ಸ್ಥಾಪಕ ಪ್ರಮುಖರಲ್ಲಿ ಸತೀಶ ಉಪಾಧ್ಯರ ತಂದೆ ಶ್ರೀ ರಾಘವೇಂದ್ರ ಉಪಾಧ್ಯಾಯರೂ ಒಬ್ಬರು. ವಾರಕ್ಕೊಂದು ತಾಳಮದ್ದಲೆಯೂ ನಡೆಯುತ್ತಿತ್ತು. ಶ್ರೀ ಮಲ್ಪೆ ರಾಮದಾಸ ಸಾಮಗ, ಶ್ರೀ ಕುಂಬಳೆ ಸುಂದರ ರಾವ್, ಮೊದಲಾದ ಅನೇಕ ಹಿರಿಯ ಕಲಾವಿದರೂ ಭಾಗವಹಿಸುತ್ತಿದ್ದರು.
ಶ್ರೀ ಸತೀಶ ಉಪಾಧ್ಯರಿಗೆ ತೀರ್ಥರೂಪರಿಂದಲೇ ಯಕ್ಷಗಾನವು ಬಳುವಳಿಯಾಗಿ ಬಂದಿತ್ತು. ಯಕ್ಷಗಾನಾಸಕ್ತಿಯೂ ಇತ್ತು. 6ನೇ ತರಗತಿಯ ವಿಧ್ಯಾರ್ಥಿಯಾಗಿರುವಾಗಲೇ ಶ್ರೀ ಬಾಬು ಶೆಟ್ಟಿಗಾರರಿಂದ ನಾಟ್ಯ ಕಲಿತರು. ಶ್ರೀ ಕೆಮ್ಮಣ್ಣು ಆನಂದ ಅವರಿಂದ ಹಿಮ್ಮೇಳ ಕಲಿಕೆ. ಅಂಬಲಪಾಡಿ ಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿಯಲ್ಲಿ ಹಿರಿಯಡಕ ಗೋಪಾಲ ರಾಯರೂ, ಗೋರ್ಪಾಡಿ ವಿಠ್ಠಲ ಪಾಟೀಲ್, ಐರೋಡಿ ರಾಮ ಗಾಣಿಗರು, ಹಳ್ಳಾಡಿ ಸುಬ್ರಾಯ ಮಲ್ಯ ಅವರುಗಳು ಗುರುಗಳಾಗಿ ಕಲಿಕಾಸಕ್ತರಿಗೆ ಯಕ್ಷಗಾನ ವಿದ್ಯೆಯನ್ನು ಧಾರೆಯೆರೆದಿದ್ದರು.
ಈ ಸಂಘದ ಪ್ರದರ್ಶನದಲ್ಲಿ ಸತೀಶ ಉಪಾಧ್ಯ ಅವರು ಬಾಲಗೋಪಾಲನಾಗಿ ರಂಗಪ್ರವೇಶ ಮಾಡಿದ್ದರು. ನಂತರ ಸಕ್ರಿಯನಾಗಿ ವೇಷ ಮಾಡಲು ಆರಂಭಿಸಿದರು. ಬನ್ನಂಜೆ ನಾರಾಯಣ ಅವರ ನಿರ್ದೇಶನದಲ್ಲಿ ರತ್ನಾವತೀ ಕಲ್ಯಾಣ ಪ್ರಸಂಗದ ಚಿತ್ರಧ್ವಜನ ಪಾತ್ರ ಮಾಡಿದ್ದರು. ಬನ್ನಂಜೆ ನಾರಾಯಣ ಅವರಲ್ಲಿ ಬರಹದಿಂದ ಸಿದ್ಧಪಡಿಸಿದ ಅನೇಕ ಪ್ರಸಂಗ ಪುಸ್ತಕಗಳ ಸಂಗ್ರವಿದೆ ಎಂದು ಸತೀಶ ಉಪಾಧ್ಯ ಅವರು ಹೇಳುತ್ತಾರೆ. ಮಥುರಾ ಮಹೇಂದ್ರ ಪ್ರಸಂಗದ ಡಂಗುರ ದೂತನ ಪಾತ್ರವನ್ನು ಈ ಸಂದರ್ಭದಲ್ಲಿ ಮಾಡಿದ್ದರು. ಬಳಿಕ ಪಿಯುಸಿ ತನಕ ಸಂಘದ ಪ್ರದರ್ಶನಗಳಲ್ಲಿ ಹಾಗೂ ಇತರ ಕಡೆ ವೇಷ ಮಾಡುತ್ತಿದ್ದು, ಪಿಯುಸಿ ಆದ ಮೇಲೆ ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸಬೇಕಾಯಿತು. ಇದು ಬದುಕಿನ ಒಂದು ಮಹತ್ತರ ತಿರುವು. ಕಲೆಯನ್ನೇ ವೃತ್ತಿಯನ್ನಾಗಿ ಸ್ವೀಕರಿಸುತ್ತೇನೆಂಬ ನಿರ್ಣಯವೇನೂ ಇರಲಿಲ್ಲ.
ಶ್ರೀ ಸತೀಶ ಉಪಾಧ್ಯ ಅವರು ಪಿಯುಸಿ ಶಿಕ್ಷಣದ ಬಳಿಕ ಚಿತ್ರಕಲೆಯಲ್ಲಿ ಡಿಪ್ಲೋಮ ಪಡೆಯಲು ಕಾರವಾರಕ್ಕೆ ತೆರಳಿದ್ದರು. ಒಂದೂವರೆ ವರ್ಷಗಳ ಕಾಲ ತರಬೇತಿ ಮುಗಿದಿತ್ತು. ಅಂತಿಮ ಪರೀಕ್ಷೆಯಿನ್ನೂ ಆಗಿರಲಿಲ್ಲ. ಆಗಲೇ ವಿದೇಶಕ್ಕೆ ಹಾರುವ ಅವಕಾಶವೊಂದು ಒದಗಿ ಬಂದಿತ್ತು. ಶ್ರೀ ಎಂ.ಎಲ್. ಸಾಮಗರ ನೇತೃತ್ವದ ತಂಡ. ಬಡಗು ಪ್ರದರ್ಶನ. ಕಡಿಮೆ ಅವಧಿಯಲ್ಲಿ ಪಾಸ್ ಪೋರ್ಟ್ ಮಾಡಿಸಿ ಪರೀಕ್ಷೆ ಬರೆಯದೆಯೇ ತಂಡದ ಜೊತೆ ವಿಮಾನವೇರಿ ಸಿಂಗಾಪುರಕ್ಕೆ ಹಾರಿದ್ದರು! ಹನ್ನೊಂದು ದಿನ ‘ನೃತ್ಯೋತ್ಸವ’ದಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿದ್ದರು.
ವೇಷಧಾರಿಯಾಗಲು ಉತ್ತೇಜನ ನೀಡಿದವರು ಪೂರ್ಣಪ್ರಜ್ಞ ಸಂಸ್ಕೃತ ಉಪಾನ್ಯಾಸಕರಾದ ಶ್ರೀ ಡಿ.ಜಿ.ಹೆಗಡೆ ಅವರು. ಅವರು ವೇಷಧಾರಿಯೂ ಆಗಿದ್ದರು. ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದರು. ಉಡುಪಿ ಸಮೂಹ ಸಂಸ್ಥೆಯ ಉದ್ಯಾವರ ಶ್ರೀ ಮಾಧವ ಆಚಾರ್ಯರೂ ಪ್ರೋತ್ಸಾಹಿಸಿದ್ದರು. ಕೇಂದ್ರ ಸರಕಾರದ ಸಾಂಸ್ಕೃತಿಕ ಸಂಘಗಳ ಅಡಿಯಲ್ಲಿ ಯಕ್ಷದೇಗುಲ ಬೆಂಗಳೂರು ಸಂಸ್ಥೆಯ ಪ್ರದರ್ಶನಗಳಲ್ಲಿ ಕರ್ನಾಟಕ ಹಳ್ಳಿ ಹಳ್ಳಿಗಳಲ್ಲಿ ವೇಷ ಮಾಡಿದ್ದರು. ಕರ್ನಾಟಕ ಕಲಾದರ್ಶಿನಿ, ಬೆಂಗಳೂರು ಈ ಸಂಸ್ಥೆಯ ಪ್ರದರ್ಶನಗಳಲ್ಲೂ ಕಲಾವಿದರಾಗಿ ಅಭಿನಯಿಸಿದ್ದರು.
ಶ್ರೀಮತಿ ರಶ್ಮಿ ಹೆಗ್ಡೆ ಗೋಪಿ ಇವರ ನೇತೃತ್ವದ ಶಂಕರ ಆರ್ಟ್ಸ್ ಫೌಂಡೇಶನ್, ಬೆಂಗಳೂರು ಸಂಸ್ಥೆಯ ಪ್ರದರ್ಶನಗಳಲ್ಲಿ ಅಮೆರಿಕಾದ ಹನ್ನೊಂದು ನಗರಗಳಲ್ಲಿ, ಯೂರೋಪಿನ ನಾಲ್ಕು ನಗರಗಳಲ್ಲಿ ಭಾಗವಹಿಸಿದ್ದರು. ಊರ ಪರವೂರ ಪ್ರದರ್ಶನಗಳಲ್ಲೂ ವೇಷಗಾರಿಕೆ. ಸ್ತ್ರೀ ವೇಷವನ್ನುಳಿದು ಉಳಿದ ಎಲ್ಲಾ ರೀತಿಯ ವೇಷಗಳನ್ನು ನಿರ್ವಹಿಸಿದ್ದರು. ಹಾಸ್ಯ ಪಾತ್ರಗಳನ್ನೂ ಮಾಡಿದ್ದರು. ರತ್ನಾವತೀ ಕಲ್ಯಾಣ ಪ್ರಸಂಗದ ಚಿತ್ರಧ್ವಜ, ಘೋಷಯಾತ್ರೆ ಪ್ರಸಂಗದ ಚಿತ್ರಸೇನ, ಬಬ್ರುವಾಹನ, ಕಂಸ ದಿಗ್ವಿಜಯ ಪ್ರಸಂಗದ ಕಂಸ, ಭಸ್ಮಾಸುರ ಮೊದಲಾದುವು ಹೆಸರು ಕೊಟ್ಟ ಪಾತ್ರಗಳು. ಶ್ರೀರಾಮ ಪಟ್ಟಾಭಿಷೇಕ ಮಂಥರೆ ಪಾತ್ರವನ್ನೂ ಮಾಡಿದ್ದರು. ಹೊಸ ಪಾತ್ರಗಳು ಬಂದಾಗ ಹಿರಿಯ ಅನುಭವೀ ಕಲಾವಿದರಿಂದ ಮಾಹಿತಿ ಸಂಗ್ರಹಿಸುತ್ತಿದ್ದರು.
ಕಳೆದ ಎಂಟು ವರ್ಷಗಳಿಂದ ಸತೀಶ ಉಪಾಧ್ಯ ಅವರು ವೇಷ ಮಾಡುವುದನ್ನು ನಿಲ್ಲಿಸಿ ತರಬೇತುದಾರರಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀ ಕೆ. ಮೋಹನ್ ಅವರ ಯಕ್ಷದೇಗುಲ ಬೆಂಗಳೂರು ಈ ತಂಡದಲ್ಲಿ ವೇಷ ಮಾಡುತ್ತಿರುವಾಗ ಅವರು ಮಕ್ಕಳಿಗೆ ತರಬೇತಿ ನೀಡುವುದಕ್ಕಾಗಿ ಸತೀಶ ಉಪಾಧ್ಯರನ್ನು ಶಾಲೆಗಳಿಗೆ ಕಳಿಸುತ್ತಿದ್ದರು. ಯಕ್ಷಗಾನ ಶಿಕ್ಷಕನಾಗಿ ಮುಂದುವರಿಯಲು ಸತೀಶ ಉಪಾಧ್ಯರಿಗೆ ಕೆ. ಮೋಹನ್ ಅವರೇ ಪ್ರೇರಕರು. ನಿನಗೆ ಆ ಸಾಮರ್ಥ್ಯ ಇದೆ ಎಂದು ಹೇಳಿ ಹುರಿದುಂಬಿಸಿದ್ದರು. ಮೊತ್ತ ಮೊದಲು ತರಬೇತಿ ಆರಂಭಿಸಿದ್ದು ಹೊಸ್ತೋಟ ಮಂಜುನಾಥ ಭಾಗವತರ ನಿರ್ದೇಶನದಲ್ಲಿ ಹಾರ್ಸಿಕಟ್ಟಾ ಎಂಬಲ್ಲಿ. ದಿವಾನ ಯಕ್ಷ ಸಮೂಹ ತಂಡದ ಪರವಾಗಿ. ಇವರನ್ನು ಅಲ್ಲಿಗೆ ಕರೆಸಿದವರು ಸತೀಶ ಹೆಗಡೆ ದಂಟಕಲ್. 2004ರಲ್ಲಿ. ಇಲ್ಲಿ ಶಿಬಿರದಡಿಯಲ್ಲಿ ನಿರಂತರ ಹತ್ತು ವರ್ಷ ನಾಟ್ಯ ತರಬೇತಿಯನ್ನು ನೀಡಿದ್ದರು.
ಬಳಿಕ ಶ್ರೀ ಡಿ.ಜಿ.ಭಟ್ಟರ ಮುಂದಾಳತ್ವದಲ್ಲಿ ಕೋಳಿಗಾರದಲ್ಲಿ, ತುಳ್ಗೇರಿ ಗಜಾನನ ಭಟ್ಟರ ನೇತೃತ್ವದಲ್ಲಿ ವಾನಳ್ಳಿಯಲ್ಲಿ, ಶ್ರೀ ಆರ್.ಟಿ.ಹೆಗಡೆ ಕಲಾವನ ಇವರ ನೇತೃತ್ವದಲ್ಲಿ ಮಂಚಿಕೇರಿಯಲ್ಲಿ ತರಬೇತಿ ನೀಡಿದ್ದರು. ಮಂಚಿಕೇರಿಯಲ್ಲಿ ಎಳೆಯರಲ್ಲದೆ ವಯಸ್ಸಾದವರೂ ನಾಟ್ಯ ಕಲಿತಿದ್ದರು. ಸಾಗರ ಕಾಲೇಜಿನಲ್ಲಿ ಆಡಳಿತ ಮಂಡಳಿಯ ಸಹಕಾರದಿಂದ ವಿದ್ಯಾರ್ಥಿಗಳಿಗೆ, ಉಡುಪಿ ಯಕ್ಷಗಾನ ಕಲಾರಂಗದ ಯಕ್ಷ ಶಿಕ್ಷಣ ಟ್ರಸ್ಟ್ ಯೋಜನೆಯಡಿಯಲ್ಲಿ ಹಲವಾರು ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ತರಬೇತಿಯನ್ನು ನೀಡಿದ್ದರು. ಉಡುಪಿಯ ಹಲವಾರು ಸಂಘ ಸಂಸ್ಥೆಗಳಡಿಯೂ ಕಲಿಕಾಸಕ್ತರಿಗೆ ನಾಟ್ಯ ಹೇಳಿ ಕೊಟ್ಟಿರುತ್ತಾರೆ. ಇವರ ಕೈಯಿಂದ ನಾಟ್ಯ ಕಲಿತ ಅನೇಕರು ಉನ್ನತ ಹುದ್ದೆಯಲ್ಲಿದ್ದು ಹವ್ಯಾಸೀ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ.
ಪ್ರದರ್ಶನಗಳಲ್ಲಿ ಚೆಂಡೆವಾದಕರಾಗಿಯೂ ಭಾಗವಹಿಸುತ್ತಿದ್ದಾರೆ. ಬಡಗಿನ ಪ್ರದರ್ಶನಗಳಿಗೆ ವೇಷಭೂಷಣಗಳನ್ನು ಒದಗಿಸಿ ಕೊಡುತ್ತಾರೆ. 2013ರಲ್ಲಿ ಪೂರ್ಣಪ್ರಜ್ಞ ಯಕ್ಷ ಕಲಾ ಕೇಂದ್ರವನ್ನು ಸ್ಥಾಪಿಸಿ ಈ ಸಂಸ್ಥೆಯಡಿ ಹಲವಾರು ಕಡೆ ನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾರೆ. ಭಾರತ ಸರಕಾರದ ಸಾಂಸ್ಕೃತಿಕ ಇಲಾಖೆಯು ಕೊಡಮಾಡುವ ವಿದ್ಯಾರ್ಥಿ ವೇತನಕ್ಕೂ ಇವರು ಆಯ್ಕೆಯಾಗಿದ್ದರು. ಹಿಮ್ಮೇಳ ಕಲಿತುದು ನಾಟ್ಯ ಕಲಿಸಲು ಅನುಕೂಲವಾಗಿತ್ತು. ಎಲ್ಲರಿಗೂ ಹೇಳಿ ಕೊಡುವ ಕಲೆಯು ಸಿದ್ಧಿಸದು. ಮಕ್ಕಳಿಗೆ ಸರಳವಾಗಿ ಹೇಳಿ ಕೊಡುವ ಕಲೆ ಸತೀಶ ಉಪಾಧ್ಯರಿಗೆ ಕರಗತವಾಗಿದೆ ಎಂದು ವೃತ್ತಿ ಕಲಾವಿದರೂ ಹೇಳುತ್ತಾರೆ.
ಇವರು ಮೇಳದ ತಿರುಗಾಟದಲ್ಲಿ ಆಸಕ್ತರಲ್ಲ. ಆದರೂ ಅನಿವಾರ್ಯಕ್ಕೆ ಕರೆದರೆ ಚೆಂಡೆ ಬಾರಿಸಲು ಹೋಗುತ್ತಾರೆ. ತಂದೆ ಶ್ರೀ ರಾಘವೇಂದ್ರ ಉಪಾಧ್ಯಾಯರು ನಿವೃತ್ತರಾದರೂ ಅಂಬಲಪಾಡಿ ಶಾಲೆಯ ಸಂಬಂಧವನ್ನು ಬಿಡದೆ ಇರಿಸಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಆಡಳಿತ ಮಂಡಳಿಗೆ ಸಹಕಾರಿಯಾಗಿದ್ದಾರೆ. “ಕಲಿಕಾಸಕ್ತರಿಗೆ ವಿದ್ಯಾದಾನ ಮಾಡುವಲ್ಲಿ ಆಸಕ್ತಿಯಿದೆ. ತೃಪ್ತಿಯಿದೆ. ಮಕ್ಕಳು ಕಲಾವಿದರಾಗಿ ಹೆಸರು ತಂದರೆ ನನಗದು ಸಂತೋಷ” ಇದು ಸದ್ದಿಲ್ಲದೇ ಕಲಾಸೇವೆಯನ್ನು ಮಾಡುವ, ಕಲಾವಿದ, ಕಲಾಶಿಕ್ಷಕ ಶ್ರೀ ಸತೀಶ ಉಪಾಧ್ಯ ಅವರ ಮನದ ಮಾತು.
ಶ್ರೀಯುತರು ಸಂಸಾರಿಕವಾಗಿಯೂ ಅತ್ಯಂತ ತೃಪ್ತರು. ಪತ್ನಿ ಶ್ರೀಮತಿ ಲತಾ ಸತೀಶ ಉಪಾಧ್ಯ. ಸತೀಶ ಉಪಾಧ್ಯ, ಲತಾ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಮಾ| ಮಾಣಿಕ್ಯ. 4ನೆಯ ತರಗತಿ ವಿದ್ಯಾರ್ಥಿ. ಕಿರಿಯ ಪುತ್ರ ಮಾ| ಮದನ 3ನೆಯ ತರಗತಿ ವಿದ್ಯಾರ್ಥಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಸತೀಶ ಉಪಾಧ್ಯರು ತರಬೇತಿಯನ್ನು ನೀಡುತ್ತಾ ಬಹಳಷ್ಟು ಕಲಾವಿದರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗಿಕ್ಕುವ ಸತ್ಕಾರ್ಯವನ್ನು ಮಾಡುವಂತಾಗಲಿ. ಶ್ರೀ ದೇವರು ಅವರಿಗೆ ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಹಾರೈಕೆಗಳು.
ವಿಟ್ಲ ಶಂಭು ಶರ್ಮ ಎಂಬ ಹೆಸರೇ ಒಂದು ಕಾಲದಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದ ಹೆಸರು. ತಾಳಮದ್ದಳೆ ಪ್ರಿಯ ಪ್ರೇಕ್ಷಕರ ದೈನಂದಿನ ಚರ್ಚೆಗಳಲ್ಲಿ ಆಗಾಗ ಪ್ರಸ್ತಾಪವಾಗುತ್ತಿದ್ದ ವ್ಯಕ್ತಿತ್ವ. ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿಯೂ ಮನೆಯಲ್ಲಿ, ಸಮಾರಂಭಗಳಲ್ಲಿ ಶಂಭು ಶರ್ಮ ಎಂಬ ತಾಳಮದ್ದಳೆಯ ಹೊಸ ಪ್ರತಿಭೆಯ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ಒಳ್ಳೆ ಅರ್ಥ ಹೇಳ್ತಾರಂತೆ, ವಾದದಲ್ಲಿ ಎತ್ತಿದ ಕೈ” ಹೀಗೆ ಮಾತನಾಡುವುದು ಕೇಳಿಬರುತ್ತಿತ್ತು.
ಆಮೇಲೆ ಅವರ ಅರ್ಥಗಾರಿಕೆಯನ್ನು ಹಲವಾರು ಬಾರಿ ಕೇಳುವ ಅವಕಾಶವೂ ಬಂತು. ವರ್ತಮಾನದ ಆಗುಹೋಗುಗಳ ಹೋಲಿಕೆ, ಹಾಸ್ಯಪ್ರವೃತ್ತಿ, ಶೃಂಗಾರ, ಹುಡುಗಾಟಿಕೆಯ ಮನೋಭಾವ, ಇವುಗಳನ್ನೆಲ್ಲಾ ತನ್ನ ಅರ್ಥಗಾರಿಕೆಯಲ್ಲಿ ಬಳಸುವ ಶಂಭು ಶರ್ಮರ ಅರ್ಥಗಾರಿಕೆಯ ಶೈಲಿ ಜನಪ್ರಿಯತೆಯನ್ನು ಸಾಧಿಸಿತು. ತಾಳಮದ್ದಳೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಹೆಸರು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ ಮತ್ತು ಪ್ರಸ್ತುತ ಕೂಟಗಳಲ್ಲಿ ಸಕ್ರಿಯರಾಗಿರುವ ಹಲವಾರು ಈಗಿನ ಕಿರಿಯ ಅರ್ಥಧಾರಿಗಳ ಜೊತೆಗೂ ಈಗಲೂ ಬಹುಬೇಡಿಕೆಯ ಅರ್ಥಧಾರಿ.
ಅವರು ಅತಿ ಕಿರಿಯ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಹೋಗಿದ್ದ ತಾಳಮದ್ದಳೆ ಕೂಟವೊಂದರಲ್ಲಿ ಅನಿವಾರ್ಯವಾಗಿ ಅರ್ಥಧಾರಿಯಾಗಿ ಭಾಗವಹಿಸಿದಾಗ ಎದುರು ಪಾತ್ರಧಾರಿಯಿಂದ ಆದ ಮಾತಿನ ದಾಳಿಯಲ್ಲಿ ಸೋತು ಕಣ್ಣೀರಿಳಿಸಿದ ಅವರು ಮುಂದೆ ಹಠದಿಂದ ತಾಳಮದ್ದಳೆ ಅರ್ಥಧಾರಿಯಾಗಿ ಸಾಧನೆಯನ್ನು ಮಾಡಿದರು.
ವಿಟ್ಲ ಶಂಭುಶರ್ಮ ಹುಟ್ಟಿದ್ದು 13-10-1951ರಲ್ಲಿ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ. ತಂದೆಯವರು ದಿ| ಕೃಷ್ಣ ಭಟ್ರು, ತಾಯಿ ಹೇಮಾವತಿ ಅಮ್ಮ. ತಂದೆಯವರು ಹೆಡ್‍ಮಾಸ್ಟ್ರು. ಓದಿದ್ದು ಬೇರೆ ಬೇರೆ ಕಾಲೇಜುಗಳಲ್ಲಿ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಓದಿ 35 ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದು ಎಲ್ಲಿಯೂ ಖಾಯಂ ಆಗದೆ ನಿವೃತ್ತಿ ಹೊಂದಿದರು.
ಮೊದಲೇ ಹೇಳಿದಂತೆ ಆಕಸ್ಮಿಕ ಸನ್ನಿವೇಶವೊಂದರಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವೊಂದರಲ್ಲಿ ಅರ್ಥ ಹೇಳಿದ ಶಂಭು ಶರ್ಮ ಮುಂದಕ್ಕೆ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮೊದಲ ಅನಿರೀಕ್ಷಿತ ಅವಕಾಶದಲ್ಲಿ ಆದ ಮುಖಭಂಗ ಅವರನ್ನು ಮುಂದೆ ಹಠವಾದಿಯನ್ನಾಗಿ ಬೆಳೆಸಿತು. ವಿಟ್ಲಕ್ಕೆ ಬಂದಿದ್ದ ಪ್ರಸಿದ್ಧ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರನ್ನು ಭೇಟಿಯಾಗಿ ಅರ್ಥಗಾರಿಕೆ ಕಲಿಸಿಕೊಡುವಂತೆ ಬಿನ್ನವಿಸಿದ್ದರು. ‘‘ಅರ್ಥಗಾರಿಕೆ ಎಂಬುದು ಕಲಿಸಿಕೊಡುವಂಥದ್ದಲ್ಲ. ತಾನಾಗಿ ಕಲಿತು ಸಿದ್ಧಿಸುವಂತದ್ದು’’ ಎಂದು ದೇರಾಜೆಯವರು ಹೇಳಿದರು. ಆದರೂ ಅವರೊಡನೆ ಸಂಭಾಷಣೆಯ ಮತ್ತು ಪಾತ್ರಗಳ ಸೂಕ್ಷ ಮರ್ಮಗಳನ್ನು ಕಲಿತರು.
ಅರ್ಥಧಾರಿಯಾಗಿ ಬೆಳೆಯಲು ಕರ್ಗಲ್ಲು ಸುಬ್ಬಣ್ಣ ಭಟ್ಟರು ಶಂಭು ಶರ್ಮರಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಅದರಂತೆ ವಿಟ್ಲದ ಹಲವಾರು ಕೂಟಗಳಲ್ಲಿ ಹಿರಿಯ ಕಲಾವಿದರಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪೆರುವೋಡಿ ನಾರಾಯಣ ಭಟ್ಟರೇ ಮೊದಲಾದವರು ಭಾಗವಹಿಸುತ್ತಿದ್ದುದರಿಂದ ಶಂಭು ಶರ್ಮರಿಗೆ ಅರ್ಥಧಾರಿಯಾಗಿ ಬೆಳೆಯಲು ಅನುಕೂಲವಾಯಿತು. ಆದರೆ ಶಂಭು ಶರ್ಮರಿಗೆ ಉದ್ಯೋಗದ ಕಾರಣದಿಂದ ಅರ್ಥಗಾರಿಕೆಯಲ್ಲಿ ಮತ್ತು ತಾಳಮದ್ದಳೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ಆಗುತ್ತಲೇ ಇರಲಿಲ್ಲ. ಅವರು ಉಪನ್ಯಾಸಕ ವೃತ್ತಿಯನ್ನು ಕೈಗೊಂಡಿದ್ದ ಕೆಲವು ಕಾಲೇಜಿನ ಪರಿಸರಗಳಲ್ಲಿ ಯಕ್ಷಗಾನ, ತಾಳಮದ್ದಳೆಗಳು ನಡೆಯುತ್ತಿರಲಿಲ್ಲ. ಹೀಗೆ ಆಗಾಗ ತನ್ನ ವೃತ್ತಿ ಬದುಕಿನ ನಡುವೆ ಯಕ್ಷಗಾನ ಕ್ಷೇತ್ರದಿಂದ ದೂರ ಉಳಿಯಬೇಕಾಗಿ ಬರುತ್ತಿತ್ತು.
ತುರ್ತುಪರಿಸ್ಥಿತಿಯ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು. ತುರ್ತುಪರಿಸ್ಥಿತಿಯ ನಂತರ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಆ ಸಂದರ್ಭದಲ್ಲಿ ಪುನಃ ಯಕ್ಷಗಾನದಲ್ಲಿ ಬೆಳೆಯುವುದಕ್ಕೆ ಅವಕಾಶ ಆಯಿತು. ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು- ಹೀಗೆ ಹಲವು ಕಾಲೇಜುಗಳಲ್ಲಿ ದುಡಿಯುತ್ತಾ ರಾತ್ರಿ ಶ್ರೀಧರ ರಾಯರ ನೇತೃತ್ವದ ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸುತ್ತಿದ್ದರು. ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು.
ಯೌವನದ ಪ್ರಾರಂಭದಲ್ಲಿ ಹೀಗೆ ಅವಿಶ್ರಾಂತಿಯಿಂದ ದುಡಿಯುತ್ತಿದ್ದರೂ ಮತ್ತೆ ಪುನಃ ಮೂರ್ನಾಡಿಗೆ ಉದ್ಯೋಗಕ್ಕಾಗಿ ತೆರಳಿದಾಗ ಯಕ್ಷಗಾನದ ಸಂಪರ್ಕ ಮುರಿಯಿತು. ಎರಡು ವರ್ಷದ ನಂತರ ಮೂರ್ನಾಡಿಂದ ಮಂಗಳೂರಿನ ಫಿಶರೀಸ್ ಕಾಲೇಜಿಗೆ ಬಂದಾಗ ಮತ್ತೆ ಯಕ್ಷಗಾನದ ಅವಕಾಶಗಳು ಕೈತುಂಬಾ ಬಂದು ಜನಪ್ರಿಯನಾಗಲು ಸಹಾಯಕವಾಯಿತು. ಆದರೆ ಯಾಕೋ ಮತ್ತೆ ತಡೆ ಬಂತು. ಮುಂದಿನ ಎಂಟು ವರ್ಷಗಳ ಕಾಲ ಸೋಮವಾರಪೇಟೆಯ ಕಾಲೇಜಿನಲ್ಲಿ ಕೆಲಸ ಮಾಡಬೇಕಾಗಿ ಬಂತು. ಹೀಗೆ ಯಕ್ಷಗಾನದ ಸಂಪರ್ಕ ಆಗಾಗ ಕಡಿಯುತ್ತಾ ಇದ್ದುದು ಶಂಭು ಶರ್ಮರ ಕಲಾ ಬದುಕಿನ ದುರಂತವೆಂದೇ ಹೇಳಬೇಕು. ಸೋಮವಾರಪೇಟೆಯಿಂದ ಬಂದ ನಂತರ ವಿಜಯಾ ಕಾಲೇಜು, ಮುಲ್ಕಿ, ಸುಂಕದಕಟ್ಟೆ ಕಾಲೇಜು ಇಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಥಮ ಹಂತದ ಅರ್ಥಧಾರಿಗಳ ಸಾಲಿಗೆ ಸೇರಿದ್ದರು.
ವಿಟ್ಲ ಶಂಭು ಶರ್ಮ ಕೇವಲ ತಾಳಮದ್ದಳೆ ಕ್ಷೇತ್ರದಲ್ಲಿ ಅರ್ಥಧಾರಿ ಎಂದು ಹಚ್ಚಿನವರು ಭಾವಿಸಿರಬಹುದು. ಆದರೆ ಅವರು ಯಕ್ಷಗಾನ ವೇಷಧಾರಿಯಾಗಿಯೂ ಕೆಲವು ವರ್ಷಗಳ ತಿರುಗಾಟ ಮಾಡಿದ್ದಾರೆ ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಶ್ರೀಧರ ರಾಯರ ತಂಡದಲ್ಲಿ ಹಾಗೂ ಕರ್ನೂರು ಕೊರಗಪ್ಪ ರೈಗಳ ತಂಡದಲ್ಲಿ ಖಾಯಂ ವೇಷಧಾರಿಯಾಗಿದ್ದರು. ಮಾತ್ರವಲ್ಲ ಫೆಬ್ರವರಿ 28ಕ್ಕೆ ಕಾಲೇಜಿನ ಪಾಠವನ್ನು ಮುಗಿಸಿದ ಮೇಲೆ, ಬೇರೆ ಬೇರೆ ಮೇಳಗಳಲ್ಲಿ ಅಂದರೆ, ಸುಬ್ರಹ್ಮಣ್ಯ, ಕದ್ರಿಮೇಳ ಮೊದಲಾದುವುಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸುತ್ತಿದ್ದರು. ಒಂದು ವರ್ಷ ಉದ್ಯೋಗಕ್ಕೆ ರಜೆ ಹಾಕಿ ಪೂರ್ಣಾವಧಿ ಕಲಾವಿದನಾಗಿ ನಾರಾಯಣ ಕಮ್ತಿಯವರ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ್ದರು.
ಆಮೇಲೆ ಅನಿರೀಕ್ಷಿತ ಅಪಘಾತವಾಗಿದ್ದರಿಂದ ಚಿಟ್ಟೆಪಟ್ಟಿ ಕಟ್ಟಲಿಕ್ಕೂ ಕಷ್ಟವಾಗಿ ಯಕ್ಷಗಾನ ತಿರುಗಾಟವನ್ನು ನಿಲ್ಲಿಸಿದ್ದರು. ಆದರೆ ಕೆಲವೊಮ್ಮೆ ಅತಿಥಿ ಕಲಾವಿದನಾಗಿ ಅಪರೂಪಕ್ಕೆ ಒಂದೊಂದು ವೇಷವನ್ನು ಆಗಾಗ ಮಾಡುತ್ತಿದ್ದರು. ಶಂಭು ಶರ್ಮ ತನ್ನ 14ನೆಯ ವಯಸ್ಸಿನಲ್ಲಿ ಸೂರಂಬೈಲಿನಲ್ಲಿ ನಡೆದ ‘ಭೀಷ್ಮಪರ್ವ’ ತಾಳಮದ್ದಳೆ ಕೂಟದಲ್ಲಿ ದೊಡ್ಡ ಸಾಮಗರ (ಮಲ್ಪೆ ಶಂಕರನಾರಾಯಣ ಸಾಮಗ) ಭೀಷ್ಮನ ಪಾತ್ರಕ್ಕೆದುರಾಗಿ ಅಭಿಮನ್ಯುವಾಗಿ ಅರ್ಥ ಹೇಳಿದ್ದರು. ದೊಡ್ಡ ಸಾಮಗರು ಇವರ ಅರ್ಥವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದರು.
ಯಕ್ಷಗಾನಕ್ಕೆ ಶೈಕ್ಷಣಿಕ ಶಿಸ್ತಿನ ಗ್ರಂಥವನ್ನು ಅವಶ್ಯಕತೆಯ ಬಗ್ಗೆ ಶಂಭು ಶರ್ಮರಲ್ಲಿ ಕೇಳಿದಾಗ “ಅದು ಸಾಧ್ಯ ಇಲ್ಲ ಎಂದೇ ನನ್ನ ಅಭಿಪ್ರಾಯ. ಯಕ್ಷಗಾನ ಎಂದರೆ ಚೌಕಟ್ಟಿನೊಳಗಿರುವ ಸ್ವಾತಂತ್ರ್ಯ. ಇದಕ್ಕೆ ಚೌಕಟ್ಟೂ ಇದೆ, ಸ್ವಾತಂತ್ರ್ಯವೂ ಇದೆ ಎಂದಾಗ ಒಂದು clean syllabus ಸಾಧ್ಯವಿಲ್ಲ. ಒಂದು ರೂಪುರೇಷೆಗಳ outline ಮಾಡಬಹುದೇ ಹೊರತು ಕಡ್ಡಾಯ ಕಾನೂನಿನಲ್ಲಿ ಯಕ್ಷಗಾನವನ್ನು ಒಳಪಡಿಸಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯ ಸ್ವಲ್ಪ ಇದ್ದರೂ ಅದು ದುರುಪಯೋಗ ಆಗಬಾರದು ಎಂದು ನಿರ್ದೇಶನಗಳನ್ನು ಕೊಡಬಹುದೇ ಹೊರತು ಕಟ್ಟುನಿಟ್ಟು ಎಂಬುದು ಯಕ್ಷಗಾನದಲ್ಲಿ ಕಷ್ಟ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಶಂಭು ಶರ್ಮರಿಗೆ ಸಂಕಷ್ಟದ ಕಾಲವೊಂದಿತ್ತು. ಅಪಘಾತವೊಂದರಲ್ಲಿ ದೈಹಿಕವಾಗಿ ಜರ್ಝರಿತರಾಗಿದ್ದ ಸಮಯದಲ್ಲಿ ಫ್ರಾಕ್ಚರ್ ಆಗಿ ಕೈಯೊಂದನ್ನು ರಾಡ್ ಹಾಕಿ ಕೊರಳಿಗೆ ನೇತಾಡಿಸಿದ್ದರು. ಈ ಸ್ಥಿತಿಯಲ್ಲೇ ಶಂಭು ಶರ್ಮರು ಸುಮಾರು 50 ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರು. ಎಲ್ಲರಿಂದಲೂ ಇದು ಸಾಧ್ಯವಾಗುವ ಕಾರ್ಯವಲ್ಲ. ಶಂಭು ಶರ್ಮ ಇವರು ಯಕ್ಷರಂಗ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆಯ ಪುರಸ್ಕಾರ, ವಿಟ್ಲ ಜೋಷಿ ಪ್ರಶಸ್ತಿ, ಮುಂಬಯಿ ಅಜೆಕಾರು ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿ, ಸನ್ಮಾನಗಳನ್ನು ಪಡೆದಿದ್ದಾರೆ. ಈಗ ಪತ್ನಿ ಲಕ್ಷ್ಮೀಶರ್ಮ, ಮಗ ಕೃಷ್ಣರಾಜ, ಸೊಸೆ ವಿದ್ಯಾ, ಮೊಮ್ಮಗ ನಿಶ್ಚಯರೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.
‘ಒಡಲಿನ ಮಡಿಲು-ಯಕ್ಷತಾರೆ’ ಇದು ಬಡಗು ತಿಟ್ಟಿನ ಶ್ರೇಷ್ಠ ಕಲಾವಿದ, ಪ್ರಸಂಗಕರ್ತ, ಗುರುವಾಗಿ ಮೆರೆದ ಶ್ರೀ ಹೊಸ್ತೋಟ ಮಂಜುನಾಥ ಭಾಗವತರ ಬದುಕಿನ ಕುರಿತಾಗಿ ತಿಳಿಸುವ ಕೃತಿಯು. ಶ್ರೀಯುತರ ಜೀವಿತಾವಧಿ 1940-2019.
ಈ ಕೃತಿಯ ಪ್ರಕಾಶಕರು ‘ಅನೇಕ’, ನಾರಾಯಣ ಜೋಶಿ ಚಾರಿಟೇಬಲ್ ಟ್ರಸ್ಟ್,ಬೆಂಗಳೂರು ಈ ಸಂಸ್ಥೆಯ ಪ್ರಕಾಶ್ ಎನ್. ಜೋಶಿ ಅವರು. ಪ್ರಧಾನ ಸಂಪಾದಕಿ ಮಮತಾ.ಜಿ ಅವರು. ಶ್ರೀಮತಿ ವಿಜಯಾ ನಳಿನಿ ರಮೇಶ್ ಶಿರಸಿ, ಶ್ರೀ ಜಿ.ಎಲ್.ಹೆಗಡೆ ಕುಮಟಾ, ಶ್ರೀ ಶಂಕರ ಶಾಸ್ತ್ರಿ ಕೋಟೆಗುಡ್ಡ ಇವರನ್ನೊಳಗೊಂಡ ಸಂಪಾದಕ ಮಂಡಳಿಯ ಪರಿಶ್ರಮದಲ್ಲಿ ಈ ಪುಸ್ತಕವು 2015ರಲ್ಲಿ ಪ್ರಕಟವಾಗಿತ್ತು.
ಈ ಕೃತಿಯನ್ನು ಯಕ್ಷಗಾನದ ಮೇರು ಕಲಾವಿದ ಶ್ರೀ ಕೆ.ಶಿವರಾಮ ಹೆಗಡೆಯವರ ದಿವ್ಯ ಸ್ಮರಣೆಗೆ ಸಮರ್ಪಿಸಲಾಗಿದೆ. ಇದು ಒಟ್ಟು ನೂರಾ ಎಪ್ಪತ್ತಾರು ಪುಟಗಳನ್ನು ಹೊಂದಿದೆ. ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಅನಿಸಿಕೆಗಳನ್ನು ‘ಅರಿಕೆ’ ಎಂಬ ಬರಹದಲ್ಲಿ ತಿಳಿಸಿರುತ್ತಾರೆ. ಪ್ರಧಾನ ಸಂಪಾದಕಿ ಮಮತಾ.ಜಿ ಅವರು ‘ಅಕ್ಷರ ಕಿರೀಟ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ.
ಇದು ಭಾಗವತರ ಸಮಗ್ರ ಜೀವನಾನುಭವವನ್ನು ಕಟ್ಟಿಕೊಡುವ ಕೃತಿಯಲ್ಲ. ಬದಲಿಗೆ ಅವರ ಕೆಲವು ವಿಚಾರ, ಅನುಭವ, ಅನಿಸಿಕೆಗಳನ್ನು ಪರಿಚಯಿಸುವ ಕೃತಿ ಎಂಬ ವಿಚಾರವನ್ನು ತಮ್ಮ ಬರಹದಲ್ಲಿ ಮಮತಾ.ಜಿ ಅವರು ತಿಳಿಸಿರುತ್ತಾರೆ. ಈ ಕೃತಿಯಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಕಲಾಬದುಕಿನ ಬಹಳಷ್ಟು ವಿಚಾರಗಳನ್ನು ತಿಳಿಸಿರುತ್ತಾರೆ.
ಶ್ರೀ ಬಣ್ಣದ ಮಹಾಲಿಂಗ, ಖ್ಯಾತ ಬಣ್ಣದ ವೇಷಧಾರಿ(ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ ‘ಕುತ್ಯಾಳ ಸಂಪದ’ ಪುಸ್ತಕದಲ್ಲಿ)
“ನಾನು ಮಂಜಪ್ಪ ಹಾಸ್ಯಗಾರರಿಂದ ನಾಟ್ಯಾದಿಗಳನ್ನು ಅಭ್ಯಾಸ ಮಾಡಿ ಮೊದಲು ಗೆಜ್ಜೆ ಕಟ್ಟಿದ್ದು ಕೊರಕ್ಕೋಡು ಕಾರ್ತ್ಯಾಯಿನಿ ಮೇಳದಲ್ಲಿ. ನಿತ್ಯವೇಷ ಮಾಡಲಾರಂಭಿಸಿದ್ದು ಕೂಡ್ಲು ಮೇಳದಲ್ಲಿ. ಅನಂತರ ಕೇವಲ ಮೂರೇ ವರ್ಷದಲ್ಲಿ ಬಣ್ಣದ ವೇಷಧಾರಿಯಾದೆ.
ಕೂಡ್ಲು ಶ್ಯಾನುಭಾಗ ಮನೆತನದವರು ಸ್ಥಾಪಿಸಿದ ಕೂಡ್ಲು ಮೇಳ ಪ್ರಸಿದ್ಧವಾದ ಮೇಳಗಳಲ್ಲೊಂದಾಗಿದ್ದು ತೆಂಕುತಿಟ್ಟಿನ ಯಕ್ಷಗಾನದ ಅತಿರಥ ಮಹಾರಥರಲ್ಲಿ ಹೆಚ್ಚಿನವರೂ ಕೂಡ್ಲು ಮೇಳದ ಮೂಲಕ ಬೆಳಕಿಗೆ ಬಂದವರು.
ಕೂಡ್ಲು ಮೇಳದಲ್ಲಿದ್ದಾಗ ನಾನು ಧರಿಸಿದ ಪಾತ್ರಗಳಿಂದ ನನಗೆ ಮನ್ನಣೆ ಲಭಿಸಿರುತ್ತದೆ. ಜನರು ಪ್ರೋತ್ಸಾಹಿಸಿದ್ದಾರೆ. ಗೌರವಿಸಿದ್ದಾರೆ. ನಾನು ಯಕ್ಷಗಾನ ವೇಷಧಾರಿ ಆದದ್ದೇ ಕೂಡ್ಲು ಮೇಳದಿಂದ ಎಂಬುದನ್ನು ಅಭಿಮಾನದಿಂದ ಹೇಳುತ್ತಿದ್ದೇನೆ. ಕೂಡ್ಲು ಮೇಳದಲ್ಲಿ ಭಾಗವತರಾಗಿದ್ದ ಪುತ್ತಿಗೆ ರಾಮಕೃಷ್ಣ ಜೋಯಿಸರ ಪ್ರೇರಣೆಯಿಂದ ಮೂರನೆಯ ಬಣ್ಣಕ್ಕೆ ಆರಂಭಿಸಿದ ನಾನು ಕೆಲವು ಕಾಲದ ನಂತರ ಎರಡನೆಯ ಬಣ್ಣವನ್ನು ನಿರ್ವಹಿಸಿದೆ.
ಆಗ ಕೂಡ್ಲು ಮೇಳದಲ್ಲಿ ಒಂದನೆಯ ಬಣ್ಣದ ವೇಷಧಾರಿಯಾಗಿದ್ದ ಸುಬ್ಬಣ್ಣ ಶೆಟ್ಟಿ ಎಂಬವರಿದ್ದರು. ಅವರು ಚೌಕಿಯಲ್ಲಿ ಬಣ್ಣದ ಬಗೆಗೆ ನನಗೆ ಮಾಹಿತಿಗಳನ್ನು ನೀಡುತ್ತಿದ್ದರು. ಮೇಳವನ್ನು ಸ್ಥಾಪಿಸಿ, ಕಲಾವಿದರನ್ನು ಸೃಷ್ಟಿಸಿ ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡಿದ ಕೂಡ್ಲು ಶ್ಯಾನುಭಾಗ ಮನೆತನದವರ ಸತ್ಕಾರ್ಯ ಚಿರಸ್ಮರಣೀಯವಾದುದು. ಅವರ ಬದುಕಿನ ಮಹತ್ವಗಳೆಲ್ಲ ನಮಗೆಲ್ಲಾ ದಾರಿದೀಪವಾಗಿದೆ”