ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ, ಕಲಾಕ್ಷೇತ್ರ ಕುಂದಾಪುರ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಲಾಮಂದಿರ, ಬೋರ್ಡ್ ಹೈಸ್ಕೂಲ್, ಕುಂದಾಪುರದಲ್ಲಿ ನಡೆಯುತ್ತಿರುವ ಈ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಇಂದು 30.01.2021 ಶನಿವಾರ 5 ಘಂಟೆಗೆ ‘ ಶ್ರೀರಾಮ ನಿರ್ಯಾಣ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯ ನೇರಪ್ರಸಾರ ಕಲಾಕ್ಷೇತ್ರ ಕುಂದಾಪುರದ ಫೇಸ್ಬುಕ್ ಮತ್ತು ಯೂ ಟ್ಯೂಬ್ ಚಾನೆಲಿನಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಯಕ್ಷಗಾನವು ಒಂದು ಸಮಷ್ಠಿ ಕಲೆ. ಶ್ರೇಷ್ಠ ಕಲಾಪ್ರಕಾರ. ಕಲಿಯುತ್ತಾ ಬೆಳೆದು ಒಂದೊಂದು ವಿಭಾಗದಲ್ಲಿ ಮಿಂಚಿ, ಹೆಸರುವಾಸಿಯಾದ ಕಲಾವಿದರು ಅನೇಕರು. ಆದರೂ ತನಗೆ ಕೊಟ್ಟ ಯಾವ ಪಾತ್ರಗಳನ್ನೂ ನಿರ್ವಹಿಸಬಲ್ಲ ಕಲಾವಿದರುಗಳೂ ಇದ್ದಾರೆ. ಅನಿವಾರ್ಯವಾದರೆ ತಾನು ಯಾವಾಗಲೂ ನಿರ್ವಹಿಸುವ ಪಾತ್ರಗಳ ಹೊರತಾಗಿ, ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರದರ್ಶನಕ್ಕೆ ತೊಂದರೆಯಾಗದಂತೆ ಸಹಕರಿಸುವ ಕಲಾವಿದರೂ ಇದ್ದಾರೆ. ಇದು ಒಂದು ಕಲೆ. ಸಾಧನೆ.
ಪ್ರತಿಯೊಂದು ಮೇಳದಲ್ಲೂ ಒಬ್ಬರೋ ಇಬ್ಬರೋ ಇಂತಹ ಸಾಮರ್ಥ್ಯ ಉಳ್ಳ ಕಲಾವಿದರಿದ್ದರೆ ಒಳ್ಳೆಯದು. ಪ್ರದರ್ಶನಕ್ಕೆ ಕೊರತೆಯಾಗದು. ಅವರನ್ನು ಗುರುತಿಸಬೇಕಾದುದು ನಮ್ಮ ಕರ್ತವ್ಯ ಅಷ್ಟೆ. ಯಾಕೆಂದರೆ ಎಲ್ಲರೂ ಆ ಸಾಹಸಕ್ಕೆ ಮನ ಮಾಡಲಾರರು. ಸ್ಥಾನ ಖಚಿತತೆ ಎಂಬುದು ನಷ್ಟವಾಗುವ ಭಯ ಇದ್ದೇ ಇರುತ್ತದೆ. ಸಾಧಕ ಬಾಧಕಗಳೆರಡೂ ಇವೆ. ಅದರಿಂದ ಉಂಟಾಗುವ ಪರಿಣಾಮಗಳೇನು? ಎಂಬುದನ್ನು ವೃತ್ತಿಕಲಾವಿದನಾಗಿ ನಾನು ತಿಳಿಯಬಲ್ಲೆ.
ಆದರೂ ಇಂತಹ ಕಲಾವಿದರು ಮೇಳಕ್ಕೆ ಅನಿವಾರ್ಯ. ‘ಆಪತ್ಬಾಂಧವ’ ಎನಿಸಿ ಮೆರೆಯುತ್ತಾರೆ. ಇಂತಹ ಕಲಾವಿದರು ಯಕ್ಷಗಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅವರಲ್ಲೊಬ್ಬರು ಎಚ್. ಉಮಾಮಹೇಶ್ವರ ಶರ್ಮ ಬಳ್ಳಮಂಜ. ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದ. ಶ್ರೀ ಎಚ್. ಉಮಾಮಹೇಶ್ವರ ಶರ್ಮ ಮೇಳದಲ್ಲಿ ಕಲಾವಿದರಿಗೆಲ್ಲಾ ಪ್ರೀತಿಯ ‘ಉಮಣ್ಣ’. ಇವರ ಮೂಲಮನೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬೇಕಲ. ಖ್ಯಾತ ಪ್ರವಾಸೀ ಕೇಂದ್ರ ಬೇಕಲಕೋಟೆಯ ಸಮೀಪದ ಹಾರ್ನಾಡು.
‘ಉಮಣ್ಣ’ ಕಾಸರಗೋಡು ಜಿಲ್ಲೆ ಬೆಳ್ಳೂರು ಪಂಚಾಯತ್ ನಾಟೆಕಲ್ಲು ಸಮೀಪದ ಕೋಳಿಕಾಲುಮೂಲೆ ಎಂಬಲ್ಲಿ ಶ್ರೀ ಎಚ್. ಗಣಪತಿ ಭಟ್ ಮತ್ತು ಲಕ್ಷ್ಮೀ ಅಮ್ಮ ದಂಪತಿಗಳಿಗೆ ಮಗನಾಗಿ 2-4-1968ರಂದು ಜನಿಸಿದರು. ಗಣಪತಿ ಭಟ್ ದಂಪತಿಗಳ ಮೂವರು ಮಕ್ಕಳಲ್ಲಿ (ಎರಡು ಹೆಣ್ಣು ಮತ್ತು ಒಂದು ಗಂಡು) ಇವರು ಕಿರಿಯವರು. ಬೆಳ್ಳೂರು ಸರಕಾರೀ ಹೈಸ್ಕೂಲಿನಲ್ಲಿ 9ನೇ ತರಗತಿ ವರೇಗೆ ಓದಿದರು.
ತಾನು ಯಕ್ಷಗಾನ ಕಲಾವಿದನಾಗಬೇಕೆಂದು ನಿರ್ಧರಿಸಿ ನಾಟ್ಯಾಭ್ಯಾಸಕ್ಕೆಂದು 1984ರಲ್ಲಿ ಶ್ರೀ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರಿದರು. ಶ್ರೀ ಕೆ. ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. 1985ನೇ ಇಸವಿ. ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಬಾಲ ಗೋಪಾಲರಾಗಿ ರಂಗಪ್ರವೇಶ. ‘ಪೂರ್ವರಂಗ’ದಲ್ಲಿ ಬರುವ ಎಲ್ಲಾ ವೇಷಗಳನ್ನು ಮಾಡಿ ಪ್ರಸಂಗದಲ್ಲೂ ತನಗೆ ಬಂದ ಪಾತ್ರಗಳನ್ನು ಮಾಡುತ್ತಿದ್ದರು. ಕೇಂದ್ರದಲ್ಲಿ ಕಲಿಯುತ್ತಿರುವಾಗ ಬಾಯಾರು ರಮೇಶ ಭಟ್, ಬಾಬು ಗೌಡ ಚಾರ್ಮಾಡಿ, ನಾರಾಯಣ ಸುವರ್ಣ, ಕಲ್ಲಗುಡ್ಡೆ ಲಕ್ಷ್ಮಣ, ದಾಮೋದರ ಪಾಟಾಳಿ ಮೊದಲಾದವರು ಇವರ ಸಹಪಾಠಿಗಳಾಗಿದ್ದರು.
ಸುಂಕದಕಟ್ಟೆ ಮೇಳದಲ್ಲಿ 7 ವರುಷಗಳ ತಿರುಗಾಟ. ಅಲ್ಲಿ ಭಾಗವತ ಪುತ್ತಿಗೆ ತಿಮ್ಮಪ್ಪ ರೈ, ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್, ತ್ರಿವಿಕ್ರಮ ಶೆಣೈ, ಕಟೀಲು ಶ್ರೀನಿವಾಸ ರಾವ್, ಬೇತ ಕುಂಞ ಕುಲಾಲ್, ವಾಟೆಪಡ್ಪು ವಿಷ್ಣುಶರ್ಮ, ಹಳುವಳ್ಳಿ ಗಣೇಶ ಭಟ್, ಚಿದಂಬರ ಬಾಬು ಮೊದಲಾದವರು ಸಹಕಲಾವಿದರಾಗಿದ್ದರು. ಹೀಗೆ ಶ್ರೇಷ್ಠ ಕಲಾವಿದರ ಒಡನಾಟದಿಂದ ನಿರಂತರ ಕಲಿಕೆಯಿಂದ ಉಮಾಮಹೇಶ್ವರ ಶರ್ಮ ಕಲಾವಿದನಾಗಿ ಬೆಳೆಯತೊಡಗಿದರು.
1992ರಿಂದ ಕಟೀಲು ಮೇಳದಲ್ಲಿ ವ್ಯವಸಾಯ. ನಿರಂತರ 25 ವರುಷಗಳಿಗೂ ಮಿಕ್ಕಿ ಕಟೀಲು 4ನೇ ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಬಹುಷಃ ದೇವೀಮಹಾತ್ಮ್ಯೆ ಪ್ರಸಂಗದಲ್ಲಿ ಹೆಚ್ಚಿನ ಎಲ್ಲಾ ವೇಷಗಳನ್ನೂ ನಿರ್ವಹಿಸಿರಬಹುದು. ಬ್ರಹ್ಮ, ವಿಷ್ಣು, ಮಧುಕೈಟಭ, ವಿದ್ಯುನ್ಮಾಲಿ, ಮಹಿಷಾಸುರ, ಸುಗ್ರೀವ, ಶ್ರೀದೇವಿ, ರಕ್ತಬೀಜ, ದೇವೇಂದ್ರ ಪಾತ್ರಗಳಲ್ಲಿ ಕಾಣಿಸಿಕೊಂಡದ್ದನ್ನು ಮೇಳದ ಸಹಕಲಾವಿದನಾಗಿ ನಾನು ನೋಡಿದ್ದೇನೆ. ಇವರು ಅನೇಕ ಸ್ತ್ರೀವೇಷಗಳಲ್ಲಿ ಅಭಿನಯಿಸಿದ್ದನ್ನು ಕಂಡಿದ್ದೇನೆ. ಬಣ್ಣದ, ನಾಟಕೀಯ ಕಿರೀಟ, ಪುಂಡುವೇಷಗಳ ನಿರ್ವಹಣೆಯನ್ನು ನೋಡಿದ್ದೇನೆ. ಗಿರಿಜಾ ಕಲ್ಯಾಣದ ತಾರಕನನ್ನು, ದೇವೇಂದ್ರನನ್ನೂ, ಮನ್ಮಥನನ್ನೂ ಹೀಗೆ ಎಲ್ಲಾ ಪ್ರಸಂಗಗಳಲ್ಲಿ ಯಾವ ಪಾತ್ರವನ್ನು ನೀಡಿದರೂ ಮಾಡಬಲ್ಲರು!
ಇಂತಹ ಕಲಾವಿದರು ಅಪರೂಪ. ಆದರೂ ಯಕ್ಷಗಾನಕ್ಕೆ ಅನಿವಾರ್ಯ. ಯಕ್ಷಗಾನ ವೇಷಭೂಷಣ ತಯಾರಿಕೆಯ ಜ್ಞಾನವೂ ಇವರಿಗಿದೆ. ಗಡ್ಡಮೀಸೆಗಳನ್ನು ಆಯಾ ವೇಷಕ್ಕೆ ತಕ್ಕಂತೆ ಸಿದ್ಧಗೊಳಿಸುತ್ತಾರೆ. ಇವರು ತಯಾರಿಸಿದ ಗಡ್ಡಮೀಸೆಗಳಿಗೆ ಉತ್ತಮ ಬೇಡಿಕೆಯಿದೆ. ಮೊದಲು ಎಂಪೆಕಟ್ಟೆ ರಾಮಯ್ಯ ರೈ, ಕಡಬ ಸಾಂತಪ್ಪನವರು ಈ ವಿಚಾರದಲ್ಲಿ ಪಳಗಿದ್ದರು. ಪ್ರಸ್ತುತ ವಸಂತ ಗೌಡರು, ವೇಣೂರು ಸದಾಶಿವ ಕುಲಾಲ್, ಸತೀಶ ನೈನಾಡು ಮೊದಲಾದವರೂ ಗಡ್ಡಮೀಸೆಗಳನ್ನು ತಯಾರಿಸುವ ವಿಚಾರ ನಮಗೆ ತಿಳಿದಿದೆ.
ಶ್ರೀ ಎಚ್. ಉಮಾಮಹೇಶ್ವರ ಶರ್ಮ ಅವರು ಕಳೆದ ಎರಡು ವರ್ಷಗಳಿಂದ, ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ ಸಂಚಾಲಕತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ.), ನಿಡ್ಲೆ ಈ ಸಂಸ್ಥೆಯ ಸದಸ್ಯರಾಗಿ ಹೊರರಾಜ್ಯದ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದಾರೆ. ಕಲಾವಿದನಾಗಿಯೂ, ಸಾಂಸಾರಿಕವಾಗಿಯೂ ಇವರು ತೃಪ್ತರು. ತಂದೆ-ತಾಯಿಯರು, ಮಡದಿ, ಮಕ್ಕಳೊಂದಿಗೆ ಪ್ರಸ್ತುತ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಬಳ್ಳಮಂಜದಲ್ಲಿ ವಾಸಿಸುತ್ತಿದ್ದಾರೆ. ಉಮಾಮಹೇಶ್ವರರ ಪತ್ನಿ ಶ್ರೀಮತಿ ಮಂಜುಳಾ ಶರ್ಮ ಗೃಹಿಣಿ. ಪುತ್ರಿ ಮನಸ್ವೀ ಶರ್ಮ ಹಾಗೂ ಒಬ್ಬ ಪುತ್ರ ಮನನ್. ಇವರ ತಂದೆ ಗಣಪತಿ ಭಟ್ಟರು ಉತ್ತಮ ಪಾಕತಜ್ಞ (ಅಡುಗೆ ಪ್ರವೀಣ). ಉಮಾಮಹೇಶ್ವರರಿಗೂ ಈ ಕಲೆ ಸಿದ್ಧಿಸಿದೆ.
ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು ಬೆಂಗಳೂರಿನಲ್ಲಿ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದ ತಂಡದಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರದ ಗುರುಗಳಾದ ಶ್ರೀಮತಿ ರೋಹಿಣಿ ಉದಯ್ ಅವರು ಈ ನೃತ್ಯ ತಂಡದ ನೇತೃತ್ವ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬೆಂಗಳೂರಿನಲ್ಲಿ ಆ ದಿನ ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ, ಕಲಾಕ್ಷೇತ್ರ ಕುಂದಾಪುರ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಲಾಮಂದಿರ, ಬೋರ್ಡ್ ಹೈಸ್ಕೂಲ್, ಕುಂದಾಪುರದಲ್ಲಿ ನಡೆಯುತ್ತಿರುವ ಈ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಇಂದು 29.01.2021 ಶುಕ್ರವಾರ 5 ಘಂಟೆಗೆ ‘ಸುಧನ್ವ ಮೋಕ್ಷ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯ ನೇರಪ್ರಸಾರ ಕಲಾಕ್ಷೇತ್ರ ಕುಂದಾಪುರದ ಫೇಸ್ಬುಕ್ ಮತ್ತು ಯೂ ಟ್ಯೂಬ್ ಚಾನೆಲಿನಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
31.01.2021ರ ಆದಿತ್ಯವಾರ ಬೆಳಗ್ಗೆ ೧೦ ಘಂಟೆಗೆ ಸರಿಯಾಗಿ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣದ ಸಮಾಲೋಚನಾ ಸಭೆ ಮತ್ತು ‘ಶಲ್ಯ ಸಾರಥ್ಯ’ ತಾಳಮದ್ದಳೆ ನಡೆಯಲಿದೆ. ಯಕ್ಷಗಾನ ಮತ್ತು ಇನ್ನಿತರ ಕಲಾ ಪ್ರಾಕಾರಗಳ ನಿರಂತರ ಅಧ್ಯಯನದ ಸದುದ್ದೇಶಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಈ ಬೃಹತ್ ಸಾಂಸ್ಕೃತಿಕ ಭವನಕ್ಕೆ ಎಲ್ಲಾ ಪ್ರದೇಶಗಳ ಸಹಭಾಗಿತ್ವವನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಸಮಾಲೋಚನಾ ಸಭೆ ನಡೆಯುತ್ತಿದೆ.
ಈ ಸಮಾಲೋಚನಾ ಸಭೆಯಲ್ಲಿ ಶ್ರೀ ಹರಿಕೃಷ್ಣ ಪುನರೂರು, ಡಾ. ಎಂ. ಮೋಹನ ಆಳ್ವ, ಶ್ರೀ ಶ್ರೀಪತಿ ಭಟ್, ಶ್ರೀ ಅಭಯಚಂದ್ರ ಜೈನ್, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀ ಎಂ. ಶಾಂತಾರಾಮ ಕುಡ್ವ, ಶ್ರೀ ಸುಬ್ರಹ್ಮಣ್ಯ ಭಟ್, ಶ್ರೀ ಪ್ರೇಮನಾಥ ಮಾರ್ಲ, ಪ್ರೊ| ಸದಾಶಿವ ಶೆಟ್ಟಿಗಾರ್, ಶ್ರೀ ಸದಾಶಿವ ರಾವ್ ಮೊದಲಾದ ಗಣ್ಯರು ಭಾಗವಹಿಸಲಿರುವರು. ಸಮಾಲೋಚನಾ ಸಭೆಯ ನಂತರ ಪ್ರಸಿದ್ಧ ಕಲಾವಿದರಿಂದ ‘ಶಲ್ಯ ಸಾರಥ್ಯ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಇಂದು, 30.01.2021ರ ಶನಿವಾರ, ರಾತ್ರಿ 9.30 ಘಂಟೆಗೆ ಸರಿಯಾಗಿ ಕಾವೂರು ಶಾಂತಿನಗರದ ಹಳೇ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ಈ ಕಾರ್ಯಕ್ರಮ ನಮ್ಮ ಕುಡ್ಲ ಚಾನೆಲಿನಲ್ಲಿ ನೇರ ಪ್ರಸಾರಗೊಳ್ಳಲಿದೆ. ಈ ಪ್ರದರ್ಶನದ ಸೇವಾಕರ್ತರು ಶ್ರೀಮತಿ ಶಾಂಭವಿ ಮತ್ತು ಶ್ರೀ ರಘುರಾಮ ಶೆಟ್ಟಿ ಮತ್ತು ಮಕ್ಕಳು.
ವೃತ್ತಿಕಲಾವಿದರಾಗಿ, ಹವ್ಯಾಸಿಗಳಾಗಿ ಅನೇಕ ಕಲಾವಿದರಿಂದು ಯಕ್ಷಗಾನದಲ್ಲಿ ಗುರುತಿಸಿಕೊಂಡಿದ್ದಾರೆ. ಸಾಧನೆಯ ಮೂಲಕ ಹಲವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹಲವರು ತೆರೆಮರೆಯ ಕಾಯಿಯಾಗಿ ಉಳಿದುಕೊಂಡಿದ್ದಾರೆ. ಪ್ರಸಿದ್ಧಿ, ಪ್ರತಿಫಲ ದೇವರು ನೀಡಬೇಕು. ನಾನು ಕರ್ತವ್ಯವನ್ನಷ್ಟೇ ಮಾಡುತ್ತಿದ್ದೇನೆ ಎಂದು ಭಾವಿಸಿ ವ್ಯವಹರಿಸುವ ಕಲಾವಿದರನೇಕರು. ಹೀಗೆ ಭಾವಿಸಿಕೊಂಡು ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಶ್ರೀ ಶಿವರಾಮ ಶೆಟ್ಟರೂ ಒಬ್ಬರು. ಇವರು ಕಟೀಲು ಮೇಳದ ಕಲಾವಿದ.
ಶ್ರೀ ಶಿವರಾಮ ಶೆಟ್ಟರ ಕುಟುಂಬಿಕರ ಮೂಲಮನೆ ಕಟೀಲು ಸಮೀಪದ ದೊಡ್ಡಿಕಟ್ಟೆ. 500 ವರ್ಷಗಳ ಹಿಂದೆ ಇಲ್ಲಿಂದ ಘಟ್ಟಪ್ರದೇಶಕ್ಕೆ ವಲಸೆ ಹೋಗಿದ್ದರಂತೆ. ಹಾಗಾಗಿ ಕಟೀಲು ಮೇಳದ ತಿರುಗಾಟದಲ್ಲಿ ನನಗೆ ನೆಮ್ಮದಿಯಿದೆ ಎಂಬುದು ಶಿವರಾಮ ಶೆಟ್ರ ಅಭಿಪ್ರಾಯ.
ಶ್ರೀ ಶಿವರಾಮ ಶೆಟ್ಟಿ ಜೋಗಿಮಕ್ಕಿ ಇವರು ಪ್ರಸ್ತುತ ಕಟೀಲು ಮೇಳದ ಕಲಾವಿದ. ಇವರು ಬಣ್ಣದ ವೇಷಧಾರಿ. ಇವರು ತಿಮ್ಮಪ್ಪ ಶೆಟ್ಟಿ, ಕಾವೇರಿ ದಂಪತಿಗಳಿಗೆ ಮಗನಾಗಿ ಹೊಸನಗರ ತಾಲೂಕು ನಾಗರಕೊಡಿಗೆ ಎಂಬಲ್ಲಿ ಜನಿಸಿದರು. (01-01-1952) ಎಳವೆಯಲ್ಲಿ ತಾಯಿಯನ್ನು ಕಳೆದುಕೊಂಡ ಶಿವರಾಮ ಶೆಟ್ರು ತಂದೆಯ ಆಸರೆಯಲ್ಲಿ ಬೆಳೆದವರು. ತಂದೆ ಮತ್ತು ತಮ್ಮ (ಶೇಖರ ಶೆಟ್ಟಿ)ನ ಜತೆ ಕೂಲಿಕೆಲಸವನ್ನು ಮಾಡುತ್ತಾ ಜೀವನ ಸಾಗಿಸಿದವರು.
ಹುಟ್ಟೂರು ನಾಗರಕೊಡಿಗೆಯನ್ನು ಬಿಟ್ಟು ಹಲವೂರುಗಳಲ್ಲಿ ಕೂಲಿನಾಲಿ ಮಾಡಿ ಬದುಕಿದ ಶಿವರಾಮ ಶೆಟ್ರಿಗೆ 20ನೇ ವಯಸ್ಸಿನಲ್ಲಿ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆ ಮೂಡಿತಂತೆ. ಮರಳಿ ನಾಗರಕೊಡಿಗೆಗೆ ಬಂದು ನಾಟ್ಯವನ್ನು ಕಲಿತರು. ನಾಗರಕೊಡಿಗೆ ಮೇಳದಲ್ಲಿ 2 ವರ್ಷ ತಿರುಗಾಟ. ಕೋಡಂಗಿ, ಬಾಲಗೋಪಾಲರ ವೇಷಗಳನ್ನು ಮಾಡುವಾಗ ಮೇಳದ ಯಜಮಾನರಾದ ಶ್ರೀ ರಾಮಕೃಷ್ಣಯ್ಯನವರು, ‘ನೀನು ಕಲಾವಿದನಾಗಲು ನಾಲಾಯಕ್’ ಎಂದು ಗದರಿಸಿದ್ದರಂತೆ.
‘ಅದು ಒಳಿತೇ ಆಯಿತು. ನನಗದು ಪಾಠ. ನಾನು ಛಲದಿಂದ ಕಲಿತೆ. ಅವರೇ ನನಗೆ ಪ್ರೇರಕರು. ನಾನು ಕಲಾವಿದನಾದುದನ್ನು ನೋಡಿ, ಗದರಿಸಿದ ಅವರೇ ಸಂತೋಷದಿಂದ ಅಭಿನಂದಿಸಿದ್ದಾರೆ’ ಎಂದು ಶಿವರಾಮ ಶೆಟ್ರು ಅಂದಿನ ದಿನಗಳನ್ನು ನೆನಪಿಸುತ್ತಾರೆ. 1974ರಲ್ಲಿ ಶಿವರಾಮ ಶೆಟ್ರು ಪೆರ್ಡೂರು ಮೇಳಕ್ಕೆ ಸೇರಿದರು. ಆ ಸಮಯದಲ್ಲಿ ಶಿವರಾಮ ಶೆಟ್ರ ತಂದೆಯವರೂ ತೀರಿಕೊಂಡರು. ಪೆರ್ಡೂರಿನಲ್ಲಿ 3 ತಿರುಗಾಟ ಅನಂತರ ಗೋಳಿಗರಡಿ ಮೇಳದಲ್ಲಿ 1 ತಿರುಗಾಟ ಮಾಡಿದ ಇವರು ಮತ್ತೆ ಕಮಲಶಿಲೆ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ಕಲಾಸೇವೆಯನ್ನು ಮಾಡಿದರು.
ಆಮೇಲೆ 1 ವರ್ಷ ಸಾಲಿಗ್ರಾಮ ಮೇಳದಲ್ಲಿ. ಅಲ್ಲಿಂದ 8 ವರ್ಷಗಳ ಕಾಲ ಕಟೀಲು ಮೇಳದಲ್ಲಿ. ಅನಂತರ ಬಡಗಿನ ಬಗ್ಪಾಡಿ ಮಂದಾರ್ತಿ ಅಮೃತೇಶ್ವರೀ ಮೇಳಗಳಲ್ಲಿ ದುಡಿದು ಕೆಲವು ವರ್ಷಗಳಿಂದ ಯಕ್ಷಗಾನದಿಂದ ಅನಿವಾರ್ಯ ಕಾರಣಗಳಿಂದ ದೂರ ಉಳಿದರು. ಜೀವನೋಪಾಯಕ್ಕಾಗಿ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸುವ, ಗೊನೆ ತೆಗೆಯುವ ಕೆಲಸವನ್ನೂ ಕೆಲವು ವರ್ಷಗಳ ಕಾಲ ಮಾಡಿದ್ದರು. ಅಡಿಕೆ ಮರದಿಂದ (ಕೊನೆ ತೆಗೆಯುವಾಗ) ಬಿದ್ದು ಕೈಗೆ ತಾಗಿದ ಕಾರಣ ಮರ ಏರಲು ಆಗದೆ ಆ ಕೆಲಸವನ್ನೂ ಬಿಡಬೇಕಾಯಿತು.
ಎಳವೆಯಲ್ಲೆ ತನಗಿಷ್ಟವಾದ ಯಕ್ಷಗಾನವನ್ನೇ ಅವಲಂಬಿಸಿದರು ಶಿವರಾಮ ಶೆಟ್ರು. ಪ್ರಸ್ತುತ ಕೆಲವು ವರ್ಷಗಳಿಂದ ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ವ್ಯವಸಾಯ ಮಾಡುತ್ತಿದ್ದಾರೆ. ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಸ್ತುತ ನರಸಿಂಹರಾಜಪುರ ತಾಲೂಕು ಜೋಗಿಮಕ್ಕಿಯಲ್ಲಿ ವಾಸಿಸುತ್ತಿದ್ದಾರೆ.
ವಿದುಷಿ ಕು| ಚಂದನ ಪ್ರಿಯಾ ಕಟೀಲು ಅವರು ಇತ್ತೀಚಿಗೆ ನಡೆದ ಭರತನಾಟ್ಯ ಪ್ರಾಕಾರದ ಅಂತಿಮ ವಿದ್ವತ್ ಪರೀಕ್ಷೆಯಲ್ಲಿ ಶೇಕಡಾ 84 ಅಂಕಗಳನ್ನು ಗಳಿಸುವುದರೊಂದಿಗೆ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆ ಮೂಲಕ ವಿದುಷಿ ಪದವಿಯನ್ನು ಪಡೆದ ಈ ದುಂಡು ಮೊಗದ ಚೆಲುವೆ ಚಂದನ ಪ್ರಿಯಾ ತನ್ನ 9ನೇ ವಯಸ್ಸಿನಲ್ಲಿಯೇ ಭರತನಾಟ್ಯ ಅಭ್ಯಾಸವನ್ನು ವಿದುಷಿ ಗೀತಾ ಸರಳಾಯರಲ್ಲಿ ಆರಂಭಿಸಿದ್ದರು. ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಎದುರಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿ ಮುಂದಿನ ಶಿಕ್ಷಣವನ್ನು (ಭರತನಾಟ್ಯ ಸೀನಿಯರ್) ‘ನಾಟ್ಯನಿಲಯಂ ಮಂಜೇಶ್ವರ’ ಇದರ ಸ್ಥಾಪಕರಾದ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಇವರಲ್ಲಿ ಪಡೆದುಕೊಂಡರು.
ಕು ಚಂದನ ಪ್ರಿಯಾ ಅವರು ತನ್ನ ಗುರುಗಳೊಂದಿಗೆ ಸುಮಾರು 500ಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನಾಡಿನ ಎಲ್ಲೆಡೆ ನೀಡಿದ್ದಾರೆ. ತನ್ನ ಸಾಧನೆಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಕೃಪೆ, ಗುರುಗಳ ಆಶೀರ್ವಾದ ಮತ್ತು ತಂದೆ ತಾಯಿಯವರ ನಿರಂತರ ಪ್ರೋತ್ಸಾಹವೇ ಕಾರಣವೆಂದು ಹೇಳುವ ಕು| ಚಂದನ, ಕಟೀಲಿನ ವೈದ್ಯ ದಂಪತಿಗಳಾದ ಡಾ| ಶಶಿಕುಮಾರ್ ಮತ್ತು ಡಾ| ಗೀತಾ ಅವರ ಪುತ್ರಿ. ಕು| ಚಂದನ ಪ್ರಿಯಾ ಪ್ರಸ್ತುತ ಮಂಗಳೂರಿನ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿದ್ದಾರೆ.