ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿ ಯಕ್ಷಗಾನ ಅಧ್ಯಯನ ಕೇಂದ್ರವು ಸಂಯೋಜಿಸಿದ ಸರಣಿ ತಾಳಮದ್ದಳೆ ಕಾರ್ಯಕ್ರಮದ ಉದ್ಘಾಟನೆಯು ಇಂದು ಅಂದರೆ 28.01.2021ನೇ ಗುರುವಾರ ಮಂಗಳ ಗಂಗೋತ್ರಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಸಂಜೆ 3.30 ಘಂಟೆಗೆ ನೆರವೇರಲಿದೆ.
ಉದ್ಘಾಟನಾ ಕಾರ್ಯಕ್ರಮದ ನಂತರ “ಶಲ್ಯ ಸಾರಥ್ಯ’ ಎಂಬ ತಾಳಮದ್ದಳೆ ಕೂಟವು ನಡೆಯಲಿರುವುದು. ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.
ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ, ಕಲಾಕ್ಷೇತ್ರ ಕುಂದಾಪುರ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಲಾಮಂದಿರ, ಬೋರ್ಡ್ ಹೈಸ್ಕೂಲ್, ಕುಂದಾಪುರದಲ್ಲಿ ನಡೆಯುತ್ತಿರುವ ಈ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಇಂದು ‘ಶ್ರೀ ಕೃಷ್ಣ ಪರಂಧಾಮ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯ ನೇರಪ್ರಸಾರ ಕಲಾಕ್ಷೇತ್ರ ಕುಂದಾಪುರದ ಫೇಸ್ಬುಕ್ ಮತ್ತು ಯೂ ಟ್ಯೂಬ್ ಚಾನೆಲಿನಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ದೇಶದ 72ನೇ ಗಣರಾಜ್ಯೋತ್ಸವದಂದು ದೇಶವೇ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಯಕ್ಷ ಕಲಾ ಅಕಾಡೆಮಿಯ ಕಲಾವಿದರು, “ಶ್ರೀರಾಮ ಪಟ್ಟಾಭಿಷೇಕ ” ಎನ್ನುವ ತಾಳಮದ್ದಳೆಯನ್ನು ನಡೆಸಿಕೊಟ್ಟರು. ಕರುಣಾರಸ ಪೂರಿತ ಕಥಾ ಹಂದರವುಳ್ಳ ” ಶ್ರೀರಾಮ ಪಟ್ಟಾಭಿಷೇಕ ” ಕಥಾವಸ್ತುವನ್ನು ಯಕ್ಷ ಕಲಾ ಅಕಾಡೆಮಿಯ ಯುವ ಕಲಾವಿದರು ಮನೋಜ್ಞವಾಗಿ ತಾಳಮದ್ದಳೆಯ ರೂಪದಲ್ಲಿ ಪ್ರಸ್ತುತಪಡಿಸಿದರು.
ಸೂರ್ಯ ವಂಶದ ಹೆಗ್ಗಳಿಕೆಯೊಂದಿಗೆ, ರಾಮ ಪಟ್ಟಾಭಿಷೇಕದ ಅನಿವಾರ್ಯತೆಯನ್ನೂ , ಕೈಕೇಯಿಯಲ್ಲಿ ಪ್ರಲಾಪಿಸುವ, ಮಗ ರಾಮನಲ್ಲಿ ಸಣ್ಣವನಾದ ನೀನು ಕಾನನಕ್ಕೆ ತೆರಳಬೇಡವೆಂದಂಗಲಾಚುವ ದಶರಥನ ಪಾತ್ರದಲ್ಲಿ , ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರವಿ ಮಡೋಡಿಯವರು ತಮ್ಮ ಸಾಹಿತ್ಯ ಪ್ರೌಢಿಮೆಯನ್ನೂ , ಭಾವ ಪರವಶತೆಯನ್ನೂ ಪ್ರದರ್ಶಿಸಿದರು. ಮುಗ್ಧತೆಯಿಂದ, ಕ್ರೌರ್ಯದತ್ತ ಹೊರಳುವ ಕೈಕೇಯಿಯ ಪಾತ್ರದಲ್ಲಿ ಮನೋಜ್ ಭಟ್, ತಮ್ಮ ಮಾತಿನ ವರಸೆಯಲ್ಲಿ ತಮ್ಮ ಕಲಾನುಭವವನ್ನು ಪ್ರಸ್ತುತಪಡಿಸಿದರು.
ತನ್ನ ಮಾತಿನ ಮೋಡಿಯಲ್ಲಿಯೇ ಕುಟಿಲ ತಂತ್ರದ ಬಲೆಯನ್ನು ಹೆಣೆದು, ತನ್ನ ಆ ಬಲೆಗೆ ” ಬಾಲೆ ಕೇಳ್ ಪೂ ಮಾಲೆ ” ಎನ್ನುತ್ತಲೇ ಸಾಮ್ರಾಜ್ಞಿ ಕೈಕೇಯಿಯನ್ನೂ , ಅವಳ ಮೂಲಕ ಚಕ್ರವರ್ತಿಯನ್ನೂ, ಅಯೋಧ್ಯೆಯ ಸಮಸ್ತ ಪರಿಜನರನ್ನೂ ತನ್ನ ಬಲೆಗೆ ಕೆಡಹಿ, ರಾಮನ ಪಟ್ಟಾಭಿಷೇಕವನ್ನ ತಪ್ಪಿಸಿ, ಕಾಡಿಗೆ ಹೋಗುವಂತೆ ಮಾತಿನ ಮೋಡಿಯ ಮಂಥರೆಯಾಗಿ ಯುವ ಅರ್ಥಧಾರಿ, ವೃತ್ತಿಯಲ್ಲಿ ಎನಿಮೇಷನ್ ಇಂಜಿನಿಯರ್ ಆಗಿರುವ ಆದಿತ್ಯ ಉಡುಪ ನೀಡಿದರು. ಭರತನೂ ರಾಜ್ಯವಾಳಲು ಸಮರ್ಥವಾಗಿರುವುದಲ್ಲದೇ, ಕಾಡಿಗೆ ತಾನು ಹೋಗಬೇಕಾಗಿರುವ ಅನಿವಾರ್ಯತೆಯನ್ನು ರಾಮನಾಗಿ ಪ್ರತಿಪಾದಿಸಿದವರು ಯುವಕನೇ ಆಗಿದ್ದರೂ, ಹಿರಿಯ ಅನುಭವವುಳ್ಳ ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಶಶಾಂಕ್ ಎಂ. ಕಾಶಿ .
ಅಣ್ಣನ ಮಾತನ್ನು ಪಾಲಿಸುವ, ಚಿಕ್ಕಮ್ಮನ ಮಾತಿನಿಂದಾಗಿ ಕ್ರೋಧಗೊಳ್ಳುವ ಲಕ್ಷ್ಮಣನಾಗಿ , ಸುಹಾಸ ಕರಬ (ಇಂಜಿನಿಯರಿಂಗ್ ವಿದ್ಯಾರ್ಥಿ) ಮಾತಿನಲ್ಲಿಯೂ ತಮ್ಮ ಪ್ರಬುದ್ಧತೆಯನ್ನು ತೋರಿಸಿದರು. ಸೌಮ್ಯತೆ, ಮುಗ್ಧತೆ ಮೂರ್ತಿವೆತ್ತ ಸೀತೆ , ತನ್ನನ್ನು ನೀ ಅಗಲಿ ಪೋದರೆ ವಿಷವನುಣ್ಣುತ್ತೇನೆಂದಾಗ, ಸೀತೆಯ ಪಾತ್ರದಲ್ಲಿ ತಲ್ಲೀನರಾಗಿದ್ದ ಪ್ರದೀಪ ಮಧ್ಯಸ್ಥ (ಮೆಕ್ಯಾನಿಕಲ್ ಇಂಜಿನಿಯರ್)ರ ಕಣ್ಣಾಲಿಗಳು ತೇವಗೊಂಡದ್ದು ಸುಳ್ಳಲ್ಲ. ವಸಿಷ್ಠನಾಗಿ ಸಂಸ್ಕೃತ ಭೂಯಿಷ್ಠ ಮಾತನ್ನಾಡಿದ ಆದಿತ್ಯ ಹೊಳ್ಳ (ಮೆಕ್ಯಾನಿಕಲ್ ಇಂಜಿನಿಯರ್) ಸುಮಿತ್ರೆಯಾಗಿ , ಲಕ್ಷ್ಮಣ ನಲ್ಲಿ, ಸೀತೆಯಲ್ಲಿ ನನ್ನನ್ನು ಕಾಣು, ಅಣ್ಣ ರಾಮನಲ್ಲಿ ತಂದೆ ದಶರಥ ಭೂಪತಿಯನ್ನು ಕಾಣು ಎನ್ನುವ ಮಾತು ಹೃದ್ಯವಾಗಿತ್ತು.
ಸಮರ್ಥವಾದ ಹಿಮ್ಮೇಳದಲ್ಲಿ, ಭಾಗವತಿಕೆಯಲ್ಲಿ ಚಿತ್ಕಲಾ ಕೆ. ತುಂಗ ಸಂಪ್ರದಾಯ ಬದ್ಧ ನಾಟಿ ರಾಗದಿಂದ ಕಾರ್ಯಕ್ರಮ ಆರಂಭಿಸಿ, ಮಧ್ಯಮಾವತಿ, ಭೈರವಿ, ಕಾಂಬೋಧಿ, ಕಲ್ಯಾಣಿ, ಹಿಂದೋಳ, ಮೋಹನ, ಸಾವೇರಿ ಮುಂತಾದ ರಾಗಗಳ ಬಳಕೆ ಸಂದರ್ಭೋಚಿತವಾಗಿಯೂ, ರಸಸ್ಯಂದಿಯೂ ಆಗಿತ್ತು. ಮದ್ದಳೆಯಲ್ಲಿ ಹೇಮಂತ್ ಮತ್ತೋಡ್ ಹಾಗೂ ರಾಘು ಶರ್ಮಾರವರು ತಮ್ಮ ಕೈಚಳಕವನ್ನು ತೋರಿಸಿದರು. ಕಾರ್ಯಕ್ರಮ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಗುರು ಕೃಷ್ಣಮೂರ್ತಿ ತುಂಗರ ನಿರ್ದೇಶನದಲ್ಲಿ ಔಚಿತ್ಯ ಪೂರ್ಣವಾಗಿ ಮೂಡಿಬಂದಿತು
ಪ್ರತಿಯೊಂದು ಪ್ರಸಂಗದಲ್ಲೂ ಬೇರೆ ಬೇರೆ ಸ್ವಭಾವದ ವೇಷಗಳನ್ನು ಹಾಸ್ಯಗಾರನು ನಿರ್ವಹಿಸಲೇಬೇಕು. ಇದು ಅಷ್ಟೊಂದು ಸುಲಭವಲ್ಲ. ಪಾತ್ರದ ಸ್ವಭಾವ, ಪ್ರಸಂಗಜ್ಞಾನವನ್ನು ತಿಳಿದವನಿಗೆ ಮಾತ್ರ ಸಾಧ್ಯ. ಆಲಸಿಯಾಗದೆ ದೈಹಿಕವಾಗಿಯೂ, ಮಾನಸಿಕವಾಗಿಯೂ ಚುರುಕಾಗಿದ್ದವನಿಗೆ ಮಾತ್ರ ಸಾಧ್ಯ. ವೇಗವಾಗಿ, ವೈವಿಧ್ಯಮಯವಾಗಿ, ಪಾತ್ರೋಚಿತವಾಗಿ ಬಣ್ಣ ಹಾಕಿ, ವೇಷ ಮಾಡಿಕೊಂಡು ರಂಗಪ್ರವೇಶ ಮಾಡುವ ಕಲೆಯೂ ಅವನಿಗೆ ಕರಗತವಾಗಿರಬೇಕು. ಹೀಗೆ ಸದಾ ಅಧ್ಯಯನಶೀಲರಾಗಿ, ಕಲಾಸೇವೆಯನ್ನು ಮಾಡುತ್ತಾ ಹಾಸ್ಯಗಾರರಾಗಿ ರಂಜಿಸಿದವರು ಅನೇಕರು. ಅವರಲ್ಲೊಬ್ಬರು ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು.
ಹಾಸ್ಯಗಾರ ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು ಪ್ರಸ್ತುತ ಶ್ರೀ ಹನುಮಗಿರಿ ಮೇಳದ ಕಲಾವಿದರು. ಸರಳ, ಸಜ್ಜನ, ನಿಗರ್ವಿ, ವಿನಯವಂತ ಹಾಸ್ಯಗಾರರು. ಇವರು ಜನಿಸಿದ್ದು 12-10-1957ರಂದು. ತಂದೆ ಬಂಟ್ವಾಳ ಗಣಪತಿ ಆಚಾರ್ಯ, ತಾಯಿ ಶ್ರೀಮತಿ ಭವಾನಿ ಅಮ್ಮ. ಗಣಪತಿ ಆಚಾರ್ಯರು ತನ್ನ ಕುಲವೃತ್ತಿಯಾದ ಚಿನ್ನದ ಕೆಲಸ ಮಾಡುವುದು ಮಾತ್ರವಲ್ಲದೆ ಆ ಕಾಲದ ಉತ್ತಮ ಕಲಾವಿದರಾಗಿದ್ದರು. ಹಾಸ್ಯಗಾರರಾಗಿ ಕಲಾಸೇವೆಯನ್ನು ಮಾಡುತ್ತಿದ್ದವರು. ಬಳ್ಳಂಬೆಟ್ಟು, ಹೆರ್ಗ, ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.
ವಿದೂಷಕ ಜಯರಾಮ ಆಚಾರ್ಯರು ಕಲಿತದ್ದು ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ). ಶಾಲಾ ದಿನಗಳಲ್ಲಿ ತೀರ್ಥರೂಪರಿಂದ ತನ್ನ ಕುಲಕಸುಬನ್ನು ಅಭ್ಯಾಸ ಮಾಡಿದ್ದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ. ಬಂಟ್ವಾಳ ಆಸುಪಾಸಿನಲ್ಲಿ ನಡೆಯುತ್ತಿದ್ದ ಆಟ ತಾಳಮದ್ದಳೆ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು.
ತಂದೆಯವರ ಜತೆಯೂ ಯಕ್ಷಗಾನ ಪ್ರದರ್ಶನಗಳಿಗೆ ಹೋಗುತ್ತಿದ್ದರು. ತಂದೆಯವರ ಜತೆಯಾಗಿಯೇ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟವನ್ನು ನಡೆಸಿ ವೇಷವನ್ನೂ ಮಾಡಿದರು.
ಹೀಗೆ ಯಕ್ಷಗಾನ ಪ್ರದರ್ಶನಗಳನ್ನು ಶ್ರದ್ಧೆಯಿಂದ ನೋಡಿದ ಪರಿಣಾಮದಿಂದ ನಾನಿಂದು ಕಲಾವಿದನಾದೆ. ಪ್ರಸಂಗ ಮಾಹಿತಿ, ವೇಷಗಳ ಸ್ವಭಾವವೇನು ಎಂಬುದನ್ನು ತಿಳಿಯಲು ನನಗೆ ಅನುಕೂಲವಾಯಿತು ಎಂದು ಜಯರಾಮ ಆಚಾರ್ಯರು ಹೇಳುತ್ತಾ ತನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತಾರೆ. ಶಾಸ್ತ್ರೀಯವಾಗಿ ನಾಟ್ಯಾಭ್ಯಾಸ ಮಾಡುವ ಮೊದಲೇ ಬಂಟ್ವಾಳ ಜಯರಾಮ ಆಚಾರ್ಯರು ಅಮ್ಟಾಡಿ, ಸೊರ್ನಾಡು, ಸುಂಕದಕಟ್ಟೆ, ಕಟೀಲು ಮೇಳಗಳಲ್ಲಿ 4 ತಿರುಗಾಟ ನಡೆಸಿದ್ದರು! ಇದು ಇವರ ಪ್ರತಿಭೆಗೆ ಸಾಕ್ಷಿ.
1974-75ನೇ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ದಲ್ಲಿ ನಾಟ್ಯಾರ್ಜನೆಗಾಗಿ ಸೇರಿಕೊಂಡರು. ಅಲ್ಲಿ ಗುರುಗಳಾಗಿದ್ದವರು ಖ್ಯಾತ ಕಲಾವಿದರೂ, ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ ಕೀರ್ತಿಗೆ ಪಾತ್ರರೂ ಆದ ಶ್ರೀ ಪಡ್ರೆ ಚಂದು.
ಸದ್ಯ ಖ್ಯಾತ ಕಲಾವಿದರಾದ ಕರ್ಗಲ್ಲು ವಿಶ್ವೇಶ್ವರ ಭಟ್, ಸಬ್ಬಣಕೋಡಿ ಕೃಷ್ಣ ಭಟ್, ಸಬ್ಬಣಕೋಡಿ ರಾಮ ಭಟ್, ವಸಂತ ಗೌಡ ಕಾಯರ್ತಡ್ಕ, ವೇಣೂರು ಸದಾಶಿವ ಕುಲಾಲ್, ಹಳುವಳ್ಳಿ ಗಣೇಶ ಭಟ್, ಕೆ. ಎಂ. ಕೃಷ್ಣ (ಬಣ್ಣದ ಮಹಾಲಿಂಗಜ್ಜನವರ ಮಗ) ಮೊದಲಾದವರು ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರ ಸಹಪಾಠಿಗಳಾಗಿದ್ದರು
ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ನಾಟ್ಯ ಕಲಿತ ಜಯರಾಮ ಆಚಾರ್ಯರು ಅದೇ ವರ್ಷ ಕಟೀಲು ಮೇಳಕ್ಕೆ ಕಲಾವಿದನಾಗಿ ಸೇರಿಕೊಂಡರು. ಬಲಿಪ ನಾರಾಯಣ ಭಾಗವತರು ಭಾಗವತರಾಗಿದ್ದ ಮೇಳದಲ್ಲಿ 4 ವರ್ಷಗಳ ಕಾಲ ತಿರುಗಾಟ ನಡೆಸಿದರು. ಕೋಡಂಗಿ, ಬಾಲ ಗೋಪಾಲರ ವೇಷಗಳನ್ನು ಪೂರ್ವರಂಗದಲ್ಲಿ ನಿರ್ವಹಿಸುತ್ತಾ, ಪ್ರಸಂಗದಲ್ಲೂ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಾ, ನಿದ್ದೆ ಮಾಡದೆ ಪ್ರದರ್ಶನಗಳನ್ನು ನೋಡುತ್ತಾ ಹಂತ ಹಂತವಾಗಿ ಬೆಳೆದು ಈಗ ಉತ್ತಮ ಹಾಸ್ಯಗಾರರಾಗಿ ಹೆಸರು ಗಳಿಸಿದ್ದಾರೆ. ಕಟೀಲು ಮೇಳದಲ್ಲಿ 4 ವರ್ಷ ತಿರುಗಾಟ ನಡೆಸಿದ
ನಂತರ ಡಾ. ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ತಿರುಗಾಟ. ಅಲ್ಲಿ ಶ್ರೇಷ್ಠ ಹಾಸ್ಯಗಾರರಾಗಿದ್ದ ವೀರಕಂಭ ತಿಮ್ಮಪ್ಪ ಕುಲಾಲರ ಒಡನಾಟವೂ ಇವರಿಗೆ ಸಿಕ್ಕಿತ್ತು. ಅವರ ಜತೆ ಹಾಸ್ಯಗಾರನಾಗಿಯೂ, ಮತ್ತೆ ಪ್ರಧಾನ ಹಾಸ್ಯಗಾರನಾಗಿಯೂ ಕಲಾಸೇವೆಯನ್ನು ನಡೆಸಿದರು. ನಂತರ ಸುಂಕದಕಟ್ಟೆ ಮೇಳದಲ್ಲಿ ಸುಜನ ಸುಳ್ಳ (ಖ್ಯಾತ ಹಾಸ್ಯಗಾರರು) ಅವರ ಜತೆ ಒಂದು ವರುಷ ತಿರುಗಾಟ ನಡೆಸಿದರು. ತರುವಾಯ ಮತ್ತೆ ಕಟೀಲು ಮೇಳದಲ್ಲಿ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಜತೆಯಲ್ಲಿ ಕಲಾಸೇವೆಯನ್ನು ಮಾಡಿದರು.
ಮುಂದಿನ 5 ವರ್ಷಗಳ ಕಾಲ ಮತ್ತೆ ಪುತ್ತೂರು ಮೇಳದಲ್ಲಿ ಹಾಸ್ಯಗಾರನಾಗಿ ಕಲಾಸೇವೆಯನ್ನು ಮಾಡಿದ ಬಂಟ್ವಾಳ ಜಯರಾಮ ಆಚಾರ್ಯರು ಮತ್ತು ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವದ ಕದ್ರಿ ಮೇಳವನ್ನು ಸೇರಿಕೊಂಡರು. ಅಲ್ಲಿ ಇವರಿಗೆ ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚನ್ ಬಾಬು, ಡಿ. ಮನೋಹರ ಕುಮಾರ್, ಮೂಡುಬಿದಿರೆ ಮಾಧವ ಶೆಟ್ರು, ಕುಡ್ತಡ್ಕ ಬಾಬು, ಸರಪಾಡಿ ಅಶೋಕ ಶೆಟ್ರು ಮೊದಲಾದವರ ಜತೆ ರಂಗದಲ್ಲಿ ಅಭಿನಯಿಸುವ ಅವಕಾಶ ಬಂತು. ನಂತರ ಕುಂಬಳೆ ಮೇಳದಲ್ಲಿ ತಿರುಗಾಟ. ಕುಂಬಳೆ ದಾಸಪ್ಪ ರೈಗಳ ನೇತೃತ್ವ. ಹರಿದಾಸ ಶ್ರೀ ರಾಮದಾಸ ಸಾಮಗ, ಪೆರುವಾಯಿ ನಾರಾಯಣ ಶೆಟ್ಟಿ, ಅರುವ ನಾರಾಯಣ ಶೆಟ್ಟಿ ಮೊದಲಾದವರೊಂದಿಗೆ ಅಭಿನಯಿಸುವ ಅವಕಾಶ.
ನಂತರ ಬಂಟ್ವಾಳ ಜಯರಾಮ ಆಚಾರ್ಯರು ಕಲಾಸೇವೆಯನ್ನು ಮಾಡಿದ್ದು ಸುರತ್ಕಲ್ಲು ಮೇಳದಲ್ಲಿ (2 ವರ್ಷ). ಅಗರಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಕೊಕ್ಕಡ ಈಶ್ವರ ಭಟ್, ಶಿವರಾಮ ಜೋಗಿ ಮೊದಲಾದವರ ಜತೆ. ತದನಂತರ ಖ್ಯಾತ ಕಲಾವಿದರಾದ ಶ್ರೀ ಡಿ. ಮನೋಹರ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 11 ವರುಷಗಳ ತಿರುಗಾಟ. ದಿನೇಶ ಅಮ್ಮಣ್ಣಾಯರ ಭಾಗವತಿಕೆ. ಅರುವ ಕೊರಗಪ್ಪ ಶೆಟ್ರು, ಪುಳಿಂಚ ರಾಮಯ್ಯ ಶೆಟ್ರು, ಮನೋಹರ ಕುಮಾರರೊಂದಿಗೆ ಹಾಸ್ಯಗಾರರಾಗಿ ಕಲಾಸೇವೆ.
ಬಳಿಕ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ, ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿದ್ದ ಕಟೀಲು 3ನೇ ಮೇಳದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರು ಹಾಸ್ಯಗಾರರಾಗಿ ರಂಜಿಸಿದರು. ಮತ್ತೆ 2 ವರುಷಗಳ ಕಾಲ ಎಡನೀರು ಮೇಳ, 9 ವರ್ಷಗಳ ಕಾಲ ಹೊಸನಗರ ಮೇಳ, ಪ್ರಸ್ತುತ 2017ರಿಂದ ಹನುಮಗಿರಿ ಮೇಳದಲ್ಲಿ. ಹೀಗೆ, 50 ವರುಷಗಳ ಕಲಾಸೇವೆ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರದ್ದು. ಕಲಾಪೋಷಕ, `ಸಂಪಾಜೆ ಯಕ್ಷೋತ್ಸವ’ದ ರೂವಾರಿ ಶ್ರೀ ಟಿ. ಶ್ಯಾಮ ಭಟ್ಟರನ್ನೂ, ಎಲ್ಲಾ ಕಲಾಪೋಷಕರನ್ನೂ, ಕಲಾಭಿಮಾನಿಗಳನ್ನೂ ಗೌರವಿಸುವ ಬಂಟ್ವಾಳ ಹಾಸ್ಯಗಾರರು ಕಲಾವಿದನಾಗಿ ನಾನು ಅತ್ಯಂತ ತೃಪ್ತನಿದ್ದೇನೆ ಎಂದು ಹೇಳುತ್ತಾರೆ.
ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪಡೆದ ಶ್ರೀಯುತರನ್ನು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಇವರ ಪತ್ನಿ ಶ್ಯಾಮಲಾ ಸಂತುಷ್ಟ ಗೃಹಿಣಿಯಾಗಿ ಮನೆಯನ್ನು ನಡೆಸುತ್ತಿದ್ದಾರೆ. ಬಂಟ್ವಾಳ ಜಯರಾಮ ಆಚಾರ್ಯ ದಂಪತಿಗಳಿಗೆ ಇಬ್ಬರು ಮಕ್ಕಳು. ಹಿರಿಯಾಕೆ ಕು| ವರ್ಷಾ. ಶಿವಮೊಗ್ಗದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಳೆ. ಕಿರಿಯವ ವರುಣ್ ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ (KPT) ಇಂಜಿನಿಯರಿಂಗ್ ಡಿಪ್ಲೊಮಾ ವಿದ್ಯಾರ್ಥಿ.
ದೆಹಲಿ ಕನ್ನಡಿಗ, ತುಳುವೆರ್ ಪತ್ರಿಕೆಗಳ ಸಂಪಾದಕ ಬಾ. ಸಾಮಗ ಅವರು ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾ ಸಂಘ ಜ.23 ರಂದು ಉಡುಪಿ ಕೆಳಾರ್ಕಳಬೆಟ್ಟಿನಲ್ಲಿ ಏರ್ಪಡಿಸಿದ 13ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರು ಬಡಾನಿಡಿಯೂರು ಕೇಶವ ರಾವ್ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಆನಂದ ಎಂ. ಅಮೀನ್ ಸಾಮಾಜಿಕ ಸೇವಾ ಕಾರ್ಯಕರ್ತ ಮಂಜುನಾಥ ಹೆಬ್ಬಾರ್, ದೇವಸ್ಥಾನದ ಅಧ್ಯಕ್ಷ ಸದಾನಂದ ನಾಯ್ಕ್, ಸಂಘದ ಅಧ್ಯಕ್ಷ ಶೇಷರಾಜ ರಾವ್ ಶುಭ ಹಾರೈಸಿದರು. ಉದ್ಯಮಿ ಕೆ. ಅನಂತ ಸಾಮಗ, ಸಂಘಟಕ ಎಸ್. ಜಯರಾಮಯ್ಯ, ವೇಷದಾರಿ ಎಂ.ಕೆ. ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು. ರವಿನಂದನ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಅಭಿಮನ್ಯು ಕಾಳಗ, ಸೈಂಧವ ವಧೆ, ರತಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನಡೆಯಿತು.
ಈ ತಲೆಬರಹ ಓದುವಾಗಲೇ ಇಲ್ಲಿ ಯಾವ ವಿಷಯದ ಬಗೆಗೆ ಬರೆದಿರಬಹುದು ಎಂಬುದನ್ನು ಎಲ್ಲರೂ ನಿಖರವಾಗಿ ಊಹಿಸಬಹುದು. 2014ನೇ ಇಸವಿಯಲ್ಲಿ ನಡೆದ ಕಲ್ಲುಗುಂಡಿ ಸಂಪಾಜೆ ಯಕ್ಷೋತ್ಸವವು ಒಂದು ಅಭೂತಪೂರ್ವ ಘಟನೆಗೆ ಸಾಕ್ಷಿಯಾಯಿತು.
ಪ್ರತಿ ವರ್ಷದಂತೆ ನಡೆಯುವ ಯಕ್ಷೋತ್ಸವ ಆ ಬಾರಿ ನಿಗದಿಯಾದದ್ದು 01. 11. 2014ರಂದು. ಅಪರಾಹ್ನ 2 ಘಂಟೆಗೆ ಸಂಪನ್ನಗೊಂಡ ಆ ದಿನದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರ, ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಎಡನೀರು, ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹಣ್ಯ ಇವರ ಘನ ಉಪಸ್ಥಿತಿಯಿತ್ತು. ಸಭಾ ಕಾರ್ಯಕ್ರಮದ ನಂತರ 5 ಘಂಟೆಯಿಂದ ಯಕ್ಷಗಾನ ಬಯಲಾಟ ಆರಂಭವಾಗಿತ್ತು. ಆ ಬಾರಿಯ ಯಕ್ಷೋತ್ಸವದಲ್ಲಿ ಆಡಲಾದ ಪ್ರಸಂಗಗಳು ನಾಲ್ಕು. ಶಿವಕಾರುಣ್ಯ, ಭೀಷ್ಮ ಪ್ರತಿಜ್ಞೆ, ವಂಶವಾಹಿನಿ ಮತ್ತು ಅಮೃತಕಲಶ ಎಂಬ ಪ್ರಸಂಗಗಳಲ್ಲಿ ಮೊದಲೆರಡು ಪ್ರಸಂಗಗಳು ಮುಗಿದ ನಂತರ ಸುಮಾರು ಮಧ್ಯರಾತ್ರಿಯ ಸಮಯದಲ್ಲಿ ವಂಶವಾಹಿನಿ ಪ್ರಸಂಗದ ಪ್ರದರ್ಶನ ಆರಂಭವಾಯಿತು.
ಈ ಪ್ರಸಂಗದ ಮುಖ್ಯ ಪಾತ್ರಗಳಾದ ಸುದರ್ಶನ ಮತ್ತು ಶತ್ರುಜಿತನ ಯುದ್ಧದ ಭಾಗದ ಸನ್ನಿವೇಶದಲ್ಲಿ ಅದ್ಭುತವೊಂದು ನಡೆದುಹೋಯಿತು. ಯಕ್ಷೋತ್ಸವ 01. 11. 2014 ರಂದು ಆಗಿದ್ದರೂ ಈ ದೃಶ್ಯ ರಂಗದಲ್ಲಿ ಬರುವಾಗ 02. 11. 2014ರ ಬೆಳಗಿನ ಜಾವದ ಸಮಯವಾಗಿತ್ತು. ಒಬ್ಬನೇ ರಾಜನ ಇಬ್ಬರು ಮಡದಿಯರ ಮಕ್ಕಳ ನಡುವೆ ನಡೆದ ಕಲಹದಲ್ಲಿ ಪಾತ್ರಧಾರಿಗಳಾಗಿ ಶ್ರೀ ಚಂದ್ರಶೇಖರ ಧರ್ಮಸ್ಥಳ (ಶತ್ರುಜಿತ) ಮತ್ತು ಶ್ರೀ ದಿವಾಕರ ರೈ ಸಂಪಾಜೆ (ಸುದರ್ಶನ) ಇವರುಗಳು ಭಾಗವಹಿಸಿದ್ದರು. ವೈಯುಕ್ತಿಕವಾಗಿ ಇಬ್ಬರು ಕಲಾವಿದರೂ ಸ್ನೇಹಿತರಾದರೂ ಆ ದಿನ ವೇದಿಕೆಯಲ್ಲಿ ಪಾತ್ರೋಚಿತ ಸನ್ನಿವೇಶ ಮತ್ತು ಕಥಾ ಸಾರದಂತೆ ಶತ್ರುಗಳಾಗಿದ್ದರು!
ಯುದ್ಧದ ಸನ್ನಿವೇಶದಲ್ಲಿ ಅಲ್ಲಿ ನೆರೆದಿದ್ದ ಅಸಂಖ್ಯಾತ ಪ್ರೇಕ್ಷಕರೆದುರು ಇಬ್ಬರಿಗೂ ಎಲ್ಲಿಲ್ಲದ ಹುರುಪು ಬಂದಿರಬೇಕು. ನಾಟ್ಯದ ವರಸೆ ವೈವಿಧ್ಯಗಳು ಇನ್ನಿಲ್ಲದಂತೆ ಮೂಡಿಬಂದುವು. ಇಬ್ಬರಿಗೂ ಸ್ಪರ್ಧೆಯ ಮನೋಭಾವ ಮೂಡತೊಡಗಿತು. ದಿಗಿಣಗಳು ರಂಗಸ್ಥಳದಲ್ಲಿ ದೂಳೆಬ್ಬಿಸಿದುವು. ಯುದ್ಧದ ಕೊನೆಯ ಸನ್ನಿವೇಶದಲ್ಲಂತೂ ಪ್ರೇಕ್ಷಕರು ಉಸಿರು ಬಿಗಿಹಿಡಿವ ಗಂಭೀರವಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದರೆ ಅದು ಅತಿಶಯೋಕ್ತಿಯಾಗಲಾರದು. ಯುದ್ಧದ ಕೊನೆಯ ಹಂತಕ್ಕೆ ಬಂದಾಗ ಒಂದು ಪದ್ಯಕ್ಕೆ ಇಬ್ಬರೂ ಸುಮಾರು ತಲಾ 50ರಷ್ಟು ದಿಗಿಣಗಳನ್ನು ಹಾರಿ ಗಿರಕಿ ತಿರುಗಲು ಸುರುಮಾಡಿದರು.
ಇಬ್ಬರಲ್ಲಿ ಒಬ್ಬರು ಗಿರಕಿ ತಿರುಗಲು ಪ್ರಾರಂಭಿಸಿದರು ಎಂದು ಊಹಿಸಿದರೆ ಅದು ತಪ್ಪು. ಬದಲಾಗಿ ಇಬ್ಬರೂ ಜೊತೆಯಾಗಿ ತಿರುಗಲು(ಗಿರಕಿ) ತೊಡಗಿದರು. ಹಾಗೆ ಪ್ರಾರಂಭಗೊಂಡ ಸುತ್ತು ತಿರುಗುವಿಕೆ ನಿಮಿಷ ಪೂರ್ತಿಯಾದರೂ ನಿಲ್ಲಲಿಲ್ಲ. ಅಂದು ಇಬ್ಬರಲ್ಲೂ ಯಾಕೋ ಸ್ಪರ್ಧಾ ಮನೋಭಾವ ಅಧಿಕವಾಗಿದ್ದಂತೆ ತೋರಿತು. ‘ನೀ ಬಿಟ್ಟರೂ ನಾ ಬಿಡೆ’ ಎಂಬ ಛಲವೋ ಅಥವಾ ಸ್ಪರ್ಧೆಯೋ ಎಂಬುದನ್ನು ತಿಳಿಯದಂತೆ ತೊಡಗಿದ ಈ ಸ್ಪರ್ಧೆ ನಿಮಿಷ ಹತ್ತಾದರೂ ನಿಲ್ಲುವ ಲಕ್ಷಣಗಳು ಗೋಚರಿಸಲಿಲ್ಲ. ಹತ್ತು ನಿಮಿಷಗಳ ನಂತರ ಮುಗಿಲು ಮುಟ್ಟಿದ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗಳ ಸದ್ದುಗಳ ನಡುವೆ ಚೆಂಡೆ ಮದ್ದಲೆಗಳ ನಿನಾದಗಳು ಅಡಗಿ ಹೋದಂತೆ ಭಾಸವಾಯಿತು. ಆದರೂ ಅವರ ತಿರುಗುವಿಕೆಯ ನಾಟ್ಯ ನಿಲ್ಲಲಿಲ್ಲ.
ಮತ್ತೂ ಮತ್ತೂ ಮುಂದುವರಿಯುತ್ತಾ 15 ನಿಮಿಷಗಳ ವರೆಗೆ ತಲುಪಿತು. ಪ್ರೇಕ್ಷಕರಾಗಿದ್ದವರಿಗೆ ಸಿಳ್ಳು, ಕೇಕೆ, ಚಪ್ಪಾಳೆ ಹೊಡೆದು ಆಯಾಸವಾದಂತೆ ಅನಿಸತೊಡಗಿತು. ಆದರೆ ರಂಗದಲ್ಲಿದ್ದ ಕುಣಿಯುತ್ತಿದ್ದ ಈರ್ವರಿಗೂ ಆಯಾಸವಾದಂತೆ ಕಾಣಿಸಲಿಲ್ಲ. ಚೆಂಡೆಯ ಬದಲಾದುದು ಮಾತ್ರವಲ್ಲ, ಹೆಚ್ಚಾಯಿತು. ಒಂದು ಚೆಂಡೆಯ ಬದಲು ಇಬ್ಬರು ವಾದಕರಿಂದ ಎರಡು ಚೆಂಡೆಗಳ ವಾದನ. ಆದರೂ ಶತ್ರುಜಿತ, ಸುದರ್ಶನರ ಗಿರಕಿ ನಿಲ್ಲಲಿಲ್ಲ. ಚೆಂಡೆವಾದಕರ ಸಂಖ್ಯೆ ಮೂರಕ್ಕೇರಿತು. ಆದರೂ ಏನೂ ವ್ಯತ್ಯಾಸವಾಗಲಿಲ್ಲ. ಚಂದ್ರಶೇಖರ ಧರ್ಮಸ್ಥಳ ಮತ್ತು ದಿವಾಕರ ರೈ ಸಂಪಾಜೆ ಇನ್ನೂ ತಿರುಗುತ್ತಲೇ ಇದ್ದರು. ನೋಡುತ್ತಿದ್ದ ಸಾವಿರಾರು ಪ್ರೇಕ್ಷಕರಿಗೆ ತಲೆ ತಿರುಗಿದ ಅನುಭವವಾದರೂ ಕಲಾವಿದರಿಗೇನೂ ಆಗಲಿಲ್ಲ.
ಯಾಕೋ ಏನೋ ಇದು ವಿಷಮಕ್ಕೆ ತಲುಪುವ ಮೊದಲೇ ಸಂಘಟಕರ, ಹಿರಿಯರ ಸೂಚನೆ ಭಾಗವತರಿಗೆ ಸಿಕ್ಕಿರಬಹುದು. ಭಾಗವತರಿಂದ ಮುಂದಿನ ಪದ್ಯಕ್ಕೆ ಎತ್ತುಗಡೆಯೂ ಆಯಿತು. ಆದರೆ ಅಷ್ಟರಲ್ಲಾಗಲೇ ಅತ್ಯಪೂರ್ವ ದಾಖಲೆಯೊಂದು ಸೃಷ್ಟಿಯಾಗಿಬಿಟ್ಟಿತ್ತು. ಇಬ್ಬರು ಕಲಾವಿದರೂ ಸಾವಿರಕ್ಕೂ ಮಿಕ್ಕಿದ ಗಿರಕಿಗಳನ್ನು (1000 ಸುತ್ತು) ಪೂರೈಸಿಯಾಗಿತ್ತು. ಗೌರವಪೂರ್ವಕವಾಗಿ ಅಲ್ಲಿ ತುಂಬಿ ತುಳುಕುತ್ತಿದ್ದ ಪ್ರೇಕ್ಷಕರ ಗಡಣವೇ ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿ ಕಲಾವಿದರನ್ನು ಪ್ರೋತ್ಸಾಹಿಸಿತು.
ಇದೊಂದು ಅತ್ಯಪೂರ್ವ ಅನುಭವ. ಸಂಪಾಜೆಯ ಯಕ್ಷೋತ್ಸವಗಳ ಇತಿಹಾಸದಲ್ಲಿ ದಾಖಲೆಯಾಗಿ ಉಳಿದುಬಿಡುತ್ತದೆ. ಸಂಪಾಜೆ ಯಕ್ಷೋತ್ಸವದಲ್ಲಿ ಮಾತ್ರವಲ್ಲದೆ ಈ ವರೆಗಿನ ಯಕ್ಷಗಾನದ ಸಮಗ್ರ ಇತಿಹಾಸದ ಪುಟಗಳನ್ನು ತೆರೆದು ನೋಡಿದರೂ ನಮಗೆ ಇಂತಹದೊಂದು ಘಟನೆ ಉಲ್ಲೇಖವಾದುದು ಕಂಡು ಬರುವುದಿಲ್ಲ. ಶ್ರೀ ರಾಧಾಕೃಷ್ಣ ಭಟ್, ಕೋಂಗೋಟ್ ಅವರು ಈ ವಿಡಿಯೋವನ್ನು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದನ್ನು ಮತ್ತೆ ಮತ್ತೆ ನೋಡುವಾಗಲೂ ಉಸಿರು ಬಿಗಿ ಹಿಡಿದು ನೋಡುವ ಸನ್ನಿವೇಶ ಎದುರಾಗುತ್ತದೆ.
ಈ ಪ್ರದರ್ಶನದ ಬಗ್ಗೆ ಎರಡಭಿಪ್ರಾಯಗಳಿರಬಹುದು. ಕಲಾವಿದರ ಆರೋಗ್ಯ ದೃಷ್ಟಿಯಿಂದಲೂ ಆಕ್ಷೇಪ ಅಥವಾ ಯಕ್ಷಗಾನದ ಸಾಂಪ್ರದಾಯಿಕತೆಗೆ ಪೂರಕವಾಗಿಲ್ಲ ಎಂಬ ವಾದ ಇವೆರಡೂ ಇರಬಹುದು. ಅವುಗಳೇನೇ ಇರಲಿ. ಕಲಾವಿದರೀರ್ವರೂ ಕಾಲು ನೋವಿನ ಸಮಸ್ಯೆ ಕಾಡುತ್ತಿದ್ದರೂ ಈ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ಇದು ಯಕ್ಷಗಾನ ಪ್ರೇಮಿಗಳು ಸದಾಕಾಲ ನೆನಪಿಡುವಂತೆ ಮಾಡಿದ ಪ್ರದರ್ಶನ ಎಂಬುದರಲ್ಲಿ ಎರಡು ಮಾತಿಲ್ಲ.
ಗಣರಾಜ್ಯೋತ್ಸವದ ಪ್ರಯುಕ್ತ, ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಯು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 72ನೇ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26ರಂದು ಯಕ್ಷ ಕಲಾ ಅಕಾಡೆಮಿಯ ಆವರಣದಲ್ಲಿ ” ಶ್ರೀ ರಾಮ ಪಟ್ಟಾಭಿಷೇಕ ” ಎಂಬ ಪೌರಾಣಿಕ ಪ್ರಸಂಗದ ತಾಳಮದ್ದಳೆಯನ್ನು ಸಂಸ್ಥೆಯ ಕಲಾವಿದರು ನಡೆಸಿಕೊಡಲಿದ್ದಾರೆ.
ಭಾಗವತಿಕೆಯಲ್ಲಿ, ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಗುರು ಕೋಟ ಕೃಷ್ಣ ಮೂರ್ತಿ ತುಂಗ, ಹಾಗೂ ಕುಮಾರಿ ಚಿತ್ಕಲಾ ಕೆ. ತುಂಗ, ಮದ್ದಳೆಯಲ್ಲಿ ಚಿನ್ಮಯ್ ಅಂಬರಗೊಡ್ಲು, ರಾಘು ಶರ್ಮಾ, ಮುಮ್ಮೇಳದಲ್ಲಿ, ರವಿ ಮಡೋಡಿ, ಮನೋಜ್ ಭಟ್, ಆದಿತ್ಯ ಉಡುಪ, ಶಶಾಂಕ್ ಕಾಶಿ, ಪ್ರದೀಪ ಮಧ್ಯಸ್ಥ,ಆದಿತ್ಯ ಹೊಳ್ಳ, ಸುಹಾಸ ಕರಬ, ಸದಾಶಿವ ತುಂಗ, ಶ್ರೀ ನಿಧಿ ಎಂ.ಎಸ್., ವಾಸುದೇವ, ಶ್ರೀಮತಿ ಅರ್ಚನಾ, ಶ್ರೀಮತಿ ಚೇತನಾರವರು ಭಾಗವಹಿಸಲಿದ್ದಾರೆ ಎಂದು ಯಕ್ಷ ಕಲಾ ಅಕಾಡೆಮಿಯ ಕಾರ್ಯದರ್ಶಿ ಕೆ.ಅನಸೂಯಾರವರು ತಿಳಿಸಿದ್ದಾರೆ. ಸರಕಾರದ ಕೋವಿಡ್ ನಿಯಮಗಳನ್ನು ಅನುಸರಿಸಿ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.