Sunday, September 20, 2026
Home Blog Page 357

ಕಂಸ – ಕಂಸ – ಕಂಸ : ಕದ್ರಿ ರಾಜಾಂಗಣದಲ್ಲಿ ಪೆರ್ಡೂರು ಮೇಳದವರಿಂದ ಯಕ್ಷಗಾನ ಪ್ರದರ್ಶನ

ರಂಗಸ್ಥಳ ಮಂಗಳೂರು ರಿ.  ಅರ್ಪಿಸುವ ಮತ್ತು ಪೆರ್ಡೂರು ಮೇಳದವರಿಂದ ದಿನಾಂಕ 30 – 1 – 21 ನೇ ಶನಿವಾರ  ರಾತ್ರಿ 7-00 ರಿಂದ (ಕಾಲ ಮಿತಿ) ಕದ್ರಿ ರಾಜಾಂಗಣದಲ್ಲಿ ಕಂಸ – ಕಂಸ  – ಕಂಸ ( ಕಂಸ ಜನನ –  ಕಂಸ ಧಿಗ್ವಿಜಯ –  ಕಂಸ ವಧೆ ) ಎಂಬ ಯಕ್ಷಗಾನ ಪ್ರದರ್ಶನ  ನಡೆಯಲಿದೆ. 

ರಂಗಸ್ಥಳ ಮಂಗಳೂರು (ರಿ) ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಈ ಕಾರ್ಯಕ್ರಮಕ್ಕೆ ಯಕ್ಷಗಾನ ಕಲಾಭಿಮಾನಿಗಳಿಗೆ ಸ್ವಾಗತ ಕೋರಿದ್ದಾರೆ. ಈ ಪ್ರದರ್ಶನಕ್ಕೆ ಉಚಿತ ಪ್ರವೇಶವಿರುವುದಾದರೂ ಸರಕಾರದ ನಿಯಮದಂತೆ ಸಾಮಾಜಿಕ ಅಂತರ ಮತ್ತು ಮಾಸ್ಕ್  ಕಡ್ಡಾಯ ಎಂದೂ ಸಂಘಟಕರು ತಿಳಿಸಿದ್ದಾರೆ. 


ಅನುಭವಿ ಕಲಾವಿದ – ಶ್ರೀ ಬಾಲಕೃಷ್ಣ ಶೆಟ್ಟಿ ತಾರಿಯಡ್ಕ

ಒಬ್ಬಳು ತಾಯಿ ಹೆತ್ತ ಎಲ್ಲಾ ಮಕ್ಕಳೂ ಒಂದೇ ತೆರನಿರುವುದಿಲ್ಲ. ಇರಬೇಕೆಂಬ ನಿಯಮವೂ ಇಲ್ಲ. ಕೆಲವರಿಗೆ ಅವಕಾಶಗಳು ಹೆಚ್ಚು. ಕೆಲವರು ಅವಕಾಶವಿಲ್ಲದ ಪ್ರತಿಭೆಗಳಾಗಿಯೇ ಉಳಿಯುವುದುಂಟು. ಕೆಲವರು ಶ್ರೇಷ್ಠ ಕಲಾವಿದನೆಂದು ಪ್ರಸಿದ್ಧಿಯನ್ನು ಪಡೆಯುತ್ತಾರೆ. ಕೆಲವರು ಎಲೆಮರೆಯ ಕಾಯಿಯಾಗಿ ಉಳಿಯುತ್ತಾರೆ. ತುಂಬಾ ಎತ್ತರಕ್ಕೇರದಿದ್ದರೂ ತನಗೆ ಬಂದ ಪಾತ್ರವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ತನ್ನ ಬೌದ್ಧಿಕ ಮಿತಿಯೊಳಗೆ ಆ ಪಾತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ಕಲಾವಿದನು ನೀಡಬಲ್ಲ. ಯಾವ ಪಾತ್ರ ಎನ್ನುವುದು ಮುಖ್ಯವಲ್ಲ ತಾನೆ? ಪಾತ್ರವನ್ನು ಹೇಗೆ ನಿರ್ವಹಿಸಿದ, ಎಷ್ಟು ಚೆನ್ನಾಗಿ ನಿರ್ವಹಿಸಿದ ಎಂಬುದು ನಿರ್ಣಯಕ್ಕಿರುವ ಮಾನದಂಡವಲ್ಲವೇ.
ಕಲಾವಿದರೆಲ್ಲರೂ ಕಲಾಮಾತೆಯ ಸುಪುತ್ರರು. ಕಲಾಸೇವೆಯನ್ನು ಮಾಡುವವರು. ಪ್ರಾಮಾಣಿಕವಾಗಿ ದುಡಿದಾಗ ಆ ಕಲಾವಿದನು ಖಂಡಿತಾ ಗೌರವಿಸಲ್ಪಡುತ್ತಾನೆ. ಪ್ರಚಾರವನ್ನು ಬಯಸದೆ ಮಾಧ್ಯಮಗಳಿಂದ ದೂರ ಉಳಿದು ಪ್ರಾಮಾಣಿಕ ವಾಗಿ ಕಲಾಕೈಂಕರ್ಯವನ್ನು ನಡೆಸುವ ಕಲಾವಿದರನೇಕರಿದ್ದಾರೆ. ಅಂತಹವರಲ್ಲೊಬ್ಬರು ಬಾಲಕೃಷ್ಣ ಶೆಟ್ಟಿ ತಾರಿಯಡ್ಕ. ಪ್ರಸ್ತುತ ಕಟೀಲು ಮೇಳದ ಕಲಾವಿದ.

ಬಾಲಕೃಷ್ಣ ಶೆಟ್ಟಿ ಇವರು ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ತಾರಿಯಡ್ಕ ಎಂಬಲ್ಲಿ ಕೊರಗಪ್ಪ ಶೆಟ್ಟಿ ಮತ್ತು ಮುತ್ತಕ್ಕ ದಂಪತಿಗಳಿಗೆ ಮಗನಾಗಿ 01-09-1963ರಲ್ಲಿ ಜನಿಸಿದರು. ಇವರದು ಬಡ ಕೃಷಿ ಕುಟುಂಬ. ಬಾಲಕೃಷ್ಣ ಶೆಟ್ಟರು ಕೊಡುಂಗಾಯಿ ಶಾಲೆಯಲ್ಲಿ 4ನೇ ತರಗತಿ ವರೇಗೆ ಓದಿದರು. ಬಡತನದಿಂದಾಗಿಯೆ ಶಾಲೆ ಬಿಡಬೇಕಾಯಿತು. ಓದನ್ನು ನಿಲ್ಲಿಸಿ ತಂದೆಗೆ ಕೃಷಿ ಕಾರ್ಯಗಳಲ್ಲಿ ಸಹಕರಿಸಿದರು. ಬಾಲಕೃಷ್ಣ ಶೆಟ್ಟರಿಗೆ ಯಕ್ಷಗಾನವೆಂದರೆ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಬಲು ಇಷ್ಟ. ವಿಟ್ಲ, ಮಂಚಿ ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾಳಮದ್ದಳೆಗೂ ಹೋಗುತ್ತಿದ್ದರಂತೆ. ಸಹಜವಾಗಿ ಕಲಾವಿದನಾಗಬೇಕೆಂಬ ಆಸೆ ಮೂಡಿತು. ನಾಟ್ಯ ಕಲಿಯಬೇಕೆಂಬ ತುಡಿತವೂ ಹೆಚ್ಚಿತು.

1981ನೇ ಇಸವಿ ಧರ್ಮಸ್ಥಳ ಲಲಿತಕಲಾ ಕೇಂದ್ರಕ್ಕೆ ತೆರಳಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತರು. ಆಗ ಹಿಮ್ಮೇಳಕ್ಕೆ ಗುರುಗಳಾಗಿದ್ದವರು ನೆಡ್ಲೆ ನರಸಿಂಹ ಭಟ್ಟರು. ಕಟೀಲು ಮೇಳ 2 ಇದ್ದ ಸಂದರ್ಭ. 2ನೇ ಮೇಳದಲ್ಲಿ 1 ವರ್ಷ ಕಲಾವಿದನಾಗಿಯೂ ಚೌಕಿಸಹಾಯಕನಾಗಿಯೂ ಕೆಲಸ ಮಾಡಿದರು. ಮುಂದಿನ ವರ್ಷ 3ನೇ ಮೇಳ ಪ್ರಾರಂಭವಾದಾಗ ವೇಷಧಾರಿಯಾಗಿ ಸೇರಿಕೊಂಡರು. ಆಗ ಭಾಗವತರಾಗಿದ್ದವರು ಸರಪಾಡಿ ಶ್ರೀ ಶಂಕರನಾರಾಯಣ ಕಾರಂತರು. ಗೇರುಕಟ್ಟೆ, ಗುಡ್ಡಪ್ಪ ಗೌಡ, ಸಂಜೀವ ಚೌಟರು, ಪೇಜಾವರ ಸತ್ಯಾನಂದ ರಾವ್, ಕೃಷ್ಣಮೂಲ್ಯ, ಉಮೇಶ್ ಹೆಬ್ಬಾರ್, ನಾರಾಯಣ ಮಣಿಯಾಣಿ, ಕುತ್ಯಾಳ ಬಾಬು ರೈಗಳ ಒಡನಾಟ ಇವರಿಗೆ ಸಿಕ್ಕಿತು.

3ನೇ ಮೇಳದಲ್ಲಿ 1 ವರ್ಷ ತಿರುಗಾಟ ನಡೆಸಿ ನಂತರ 9 ವರ್ಷ 1ನೇ ಮೇಳದಲ್ಲಿ ಕಲಾಸೇವೆಯನ್ನು ಮಾಡಿದರು. ಭಾಗವತರಾಗಿದ್ದವರು ಇರಾ ಗೋಪಾಲಕೃಷ್ಣ ಭಾಗವತರು. 1ನೇ ಮೇಳದಲ್ಲಿ ಕೊರಗಪ್ಪ ನಾಯ್ಕ ಕಾಟುಕುಕ್ಕೆ, ಕುಂಞಣ್ಣ ಶೆಟ್ಟಿ, ಸಂಪಾಜೆ ಶೀನಪ್ಪ ರೈ, ಕುಷ್ಠ ಗಾಣಿಗ, ಸುಣ್ಣಂಬಳ, ಬೆಳ್ಳಾರೆ ಮಂಜುನಾಥ ಭಟ್, ಗುಂಡಿಮಜಲು, ಕೇಶವ ಶೆಟ್ಟಿಗಾರ್, ಮುಚ್ಚೂರು ಉಮೇಶ ಶೆಟ್ರು ಮೊದಲಾದವರೊಂದಿಗೆ ತಿರುಗಾಟ ನಡೆಸಿದ ಶ್ರೀ ಬಾಲಕೃಷ್ಣ ಶೆಟ್ರು ಕಳೆದ 25 ವರುಷಗಳಿಂದ ಕಟೀಲು 4ನೇ ಮೇಳದಲ್ಲಿ ಕಲಾಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ.

ಸದ್ರಿ ಮೇಳದಲ್ಲಿ ಪೂಂಜರು, ಕುಬಣೂರು, ಜೋಗಿ, ಶೀನಪ್ಪ ರೈ, ತೊಡಿಕಾನ, ಸುಬ್ರಾಯ ಹೊಳ್ಳರು, ವಿಷ್ಣುಶರ್ಮರು, ಕಾವು ಗಿರೀಶ, ಪೆರುವಾಯಿ, ಪೆರ್ಮುದೆ, ಉಮಾ ಮಹೇಶ್ವರ ಮೊದಲಾದವರೊಂದಿಗೆ ಕೊಡುಂಗಾಯಿ ಬಾಲಕೃಷ್ಣ ಶೆಟ್ಟರು ಕಲಾವಿದರಾಗಿ ಎಲ್ಲರ ಪ್ರೀತಿಗೆ ಪಾತ್ರರಾದರು. ಕೋಡಂಗಿ, ಬಾಲಗೋಪಾಲರು, ಮುಖ್ಯ ಸ್ತ್ರೀವೇಷ, ಪೀಠಿಕಾ ಸ್ತ್ರೀವೇಷಗಳನ್ನು (ಪೂರ್ವರಂಗ) ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದು ಕಲಾವಿದರಾದರು.

ಪುರಾಣಪ್ರಸಂಗಗಳ ಮಾಹಿತಿ ಇವರಿಗೆ ಅದ್ಭುತವಾದುದು. ಪ್ರಸಂಗ ನಡೆಗಳ ಬಗ್ಗೆ ಉತ್ತಮ ಮಾಹಿತಿಯಿರುವ ಅನುಭವೀ ಕಲಾವಿದರಿವರು. ಸ್ತ್ರೀವೇಷ, ಪುಂಡುವೇಷಗಳನ್ನು ನಿರ್ವಹಿಸುತ್ತಿದ್ದ ಇವರು ಈಗ ಕಿರೀಟ ವೇಷಧಾರಿ. ತನಗೆ ಬಂದ ಪಾತ್ರಗಳನ್ನು ನಿರ್ವಂಚನೆಯಿಂದ ನಿರ್ವಹಿಸುವ ಪ್ರಾಮಾಣಿಕ ಕಲಾವಿದರು. ಪ್ರಚಾರಪ್ರಿಯರಲ್ಲ. ತೆರೆದುಕೊಳ್ಳುವ ಸ್ವಭಾವ ಅಲ್ಲ. ಯಾವಾಗಲೂ ಮುಚ್ಚಿಕೊಳ್ಳುವ ಸ್ವಭಾವ. ತಾನಾಯಿತು ತನ್ನ ಕೆಲಸವಾಯಿತು ಎಂದು ವ್ಯವಹರಿಸುವವರು.

ಪತ್ನಿ ಶ್ರೇಯಾ, 1993ರಲ್ಲಿ ವಿವಾಹವಾದ ಬಾಲಕೃಷ್ಣ ಶೆಟ್ಟರು ಇಬ್ಬರು ಮಕ್ಕಳ ತಂದೆ. ಪುತ್ರಿ ಮಶೀಶಾ ಶೆಟ್ಟಿ ಪದವೀಧರೆ, ವಿವಾಹಿತೆ. ಪುತ್ರ ಯತಿನ್ ಪದವೀಧರ. ವಾಮಂಜೂರು ಲಿಂಗಮಾರು ಶಿವಣ್ಣ ಶೆಟ್ರ 50ನೇ ವರುಷದ ಬಯಲಾಟದ ಸಂದರ್ಭ ಮತ್ತು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಸಂದರ್ಭ ಶ್ರೀ ಕಟೀಲು ಪದ್ಮನಾಭ ಇವರಿಂದ ಸನ್ಮಾನಿತರಾದ ಶ್ರೀ ಬಾಲಕೃಷ್ಣ ಶೆಟ್ಟಿ ಕೊಡುಂಗಾಯಿ ಇವರಿಗೆ ಕಲಾಮಾತೆಯ ಅನುಗ್ರಹ ಸದಾ ಇರಲೆಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆ.

ಲೇಖಕ : ರವಿಶಂಕರ್ ವಳಕ್ಕುಂಜ

ಮೇಳಗಳ ಇಂದಿನ (25.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (25.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕುಂಜ್ಞಾಡಿ ಶ್ರೀ ಯಕ್ಷೇಶ್ವರಿ ದೇವಸ್ಥಾನದ ಸಮೀಪ – ಕನಕಾಂಗಿ ಕಲ್ಯಾಣ, ಅಗ್ರಪೂಜೆ
ಕಟೀಲು ಒಂದನೇ ಮೇಳಮಂಚಿ, ಕುಕ್ಕಾಜೆ, ಬಂಟ್ವಾಳ 
ಕಟೀಲು ಎರಡನೇ ಮೇಳ ಶ್ರೀ ಮಂಗಳಾದೇವಿ ದೇವಸ್ಥಾನದ ವಠಾರ 
ಕಟೀಲು ಮೂರನೇ ಮೇಳತೋಕೂರು, ರಾಂಪಾಲ್ MSEZ ಕಾಲನಿ 
ಕಟೀಲು ನಾಲ್ಕನೇ ಮೇಳ ಕಿಲೆಂಜೂರು ನಡುಗೋಡು, ವಯಾ ಕಿನ್ನಿಗೋಳಿ 
ಕಟೀಲು ಐದನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಆರನೇ ಮೇಳಕರಂಬಾರುಗುತ್ತು, ಮಳವೂರು, ಮಂಗಳೂರು 

ಮಂದಾರ್ತಿ ಒಂದನೇ ಮೇಳ ಬರ್ಗಲ್ ಹ್ಯಾಗುಳಿ ದೇವಸ್ಥಾನ, ಶಿರೂರು, ಬೈಂದೂರು 
ಮಂದಾರ್ತಿ ಎರಡನೇ ಮೇಳ ಶಾಡಿಗುಂಡಿ, ಹುಯ್ಯಾರು 
ಮಂದಾರ್ತಿ ಮೂರನೇ ಮೇಳ ಬೀಸಿನಗದ್ದೆ, ಅಕ್ಲಾಪುರ, ತೀರ್ಥಳ್ಳಿ – ಕೂಡಾಟ 
ಮಂದಾರ್ತಿ ನಾಲ್ಕನೇ ಮೇಳ ಕಂಚಾರು, ಅಂಪಾರು 
ಮಂದಾರ್ತಿ ಐದನೇ ಮೇಳ ಬೀಸಿನಗದ್ದೆ, ಅಕ್ಲಾಪುರ, ತೀರ್ಥಳ್ಳಿ – ಕೂಡಾಟ   
ಶ್ರೀ ಹನುಮಗಿರಿ ಮೇಳ ಉಡುಪಿ ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ವೀರ ಮಾರುತಿ 
ಶ್ರೀ ಸಾಲಿಗ್ರಾಮ ಮೇಳಬೆಳ್ವೆ – ಚಂದ್ರಮುಖಿ ಸೂರ್ಯಸಖಿ  
ಶ್ರೀ ಪೆರ್ಡೂರು ಮೇಳಗರ್ತಿಕೆರೆ – ಅಹಂ ಬ್ರಹ್ಮಾಸ್ಮಿ 

ಶ್ರೀ ಸುಂಕದಕಟ್ಟೆ ಮೇಳ ಬಟ್ಟಾಜೆ – ಕೋರ್ದಬ್ಬು ತನ್ನಿಮಾನಿಗ 
ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ವೇದಾವತಿ ನಿಲಯ, ತೆಂಕಬೈಲು, ನಾಡ 
ಶ್ರೀ ಪಾವಂಜೆ ಮೇಳ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಆಲಂಗಾರು – ಶ್ರೀ ವಿಷ್ಣು ಮಹಾತ್ಮೆ (ಗರುಡೋದ್ಭವ)  
ಶ್ರೀ ಹಟ್ಟಿಯಂಗಡಿ ಮೇಳಮಲಯಾಳಿ ಬೊಬ್ಬರ್ಯ ಕೆಂಪಣ್ಣ ಹೈಗೂಳಿ ಪರಿವಾರ ದೇವಸ್ಥಾನ ಹೆರಗೋಡು 
ಕಮಲಶಿಲೆ ಮೇಳ ‘ಎ’ಶ್ರೀ ಕ್ಷೇತ್ರದಲ್ಲಿ – ಕೂಡಾಟ, ದೇವಿ ಮಹಾತ್ಮೆ 
ಕಮಲಶಿಲೆ ಮೇಳ ‘ಬಿ’ಶ್ರೀ ಕ್ಷೇತ್ರದಲ್ಲಿ – ಕೂಡಾಟ, ದೇವಿ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳಶ್ರೀ ಮಹಾತಾಯಿ ಭಜನಾ ಮಂಡಳಿ, ಕೆದಿಮೇಲು – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಉಪ್ಪೂರು ಸಾಲ್ಮರ ವಠಾರ – ನಾಗ ತಂಬಿಲ 
ಶ್ರೀ ಅಮೃತೇಶ್ವರೀ ಮೇಳಮೂಡುಗಿಳಿಯಾರು 
ಶ್ರೀ ಬೋಳಂಬಳ್ಳಿ ಮೇಳ ವಂಡಾರು ಮಾವಿನಕಟ್ಟೆ 
ಶ್ರೀ ಸೌಕೂರು ಮೇಳಗುಲ್ವಾಡಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಾಲಾಡಿ ಮೇಳತೌಡಗಲ್ಲು, ಕಲ್ಗದ್ದೆ, ಶಂಕರನಾರಾಯಣ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ
ಶ್ರೀ ಬೆಂಕಿನಾಥೇಶ್ವರ ಮೇಳ  ಬಾಳಿಕೆರೆ ಹೊಸಿ ಹೈಗುಳಿ ಚಿಕ್ಕು ಸಹಪರಿವಾರ ದೇವಸ್ಥಾನ (ದೇವಲ್ಕುಂದ ಗ್ರಾಮ)  – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಬಿದ್ಕಲ್ ಕಟ್ಟೆ ಮಣಗೇರಿ ಶಿಕ್ಕು ದೇವಸ್ಥಾನ – ಶ್ರೀ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉದ್ಯಾವರ ಸಂಪಿಗೆನಗರ ಆರೂರು ತೋಟ  
ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ ಶ್ರೀ ಆದಿನಾಥೇಶ್ವರ ದೇವಸ್ಥಾನದ ವಠಾರ – ಕಾರಿಂಜ ಕಾಂಜವೆ 
ಶ್ರೀ ಹಿರಿಯಡಕ ಮೇಳಹಾಲಕ್ಕಿ ಶಾಲಾ ವಠಾರ – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಶ್ರೀ ಈಶ್ವರ ದೇವಸ್ಥಾನ ಬೆಲ್ಕಲ್ 
ಶ್ರೀ ಸಿಗಂದೂರು ಮೇಳಕಾಲ್ತೋಡು, ಕೇರಿಜೆಡ್ಡು ಹಾಯ್ಗುಳಿ ದೇವಸ್ಥಾನ
ಶ್ರೀ ನೀಲಾವರ ಮೇಳ ಆರೂರು ಕ್ರಾಸ್

ಕಲಾವಿದರಿಗೆ, ಅಭ್ಯಾಸಿಗಳಿಗೆ ಸಂಪನ್ಮೂಲ ವ್ಯಕ್ತಿ – ಪ್ರಸಿದ್ಧ ಕಲಾವಿದ ಬೆಳ್ಳಾರೆ ಮಂಜುನಾಥ ಭಟ್ 

ಕೆ. ಜಿ. ಮಂಜುನಾಥ ಭಟ್ಟರು (ಬೆಳ್ಳಾರೆ ಮಂಜುನಾಥ ಭಟ್) ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಇದಿರು ವೇಷಧಾರಿ. ಕಲಾವಿದನಾಗಿ 44 ತಿರುಗಾಟಗಳನ್ನು ನಡೆಸಿದವರು. ಸುಳ್ಯ ತಾಲೂಕು ಬೆಳ್ಳಾರೆಯಲ್ಲಿ ಕುಂಞಹಿತ್ತಿಲು ಗೋವಿಂದ ಭಟ್ ಮತ್ತು ಸರಸ್ವತಿ ಅಮ್ಮ ದಂಪತಿಗಳಿಗೆ ಮಗನಾಗಿ 01-04-1960ರಲ್ಲಿ ಬೆಳ್ಳಾರೆ ಮಂಜುನಾಥ ಭಟ್ಟರು ಜನಿಸಿದರು. ಇವರದು ಪುರೋಹಿತ ಮನೆತನ. 8ನೇ ತರಗತಿಯ ವರೇಗೆ ಓದಿದ ಇವರು ಯಕ್ಷಗಾನದತ್ತ ಆಕರ್ಷಿತರಾದರು.   

ಪ್ರಸಿದ್ಧ ಕಲಾವಿದರಾದ ಮಾಣಂಗಾಯಿ ಕೃಷ್ಣ ಭಟ್ಟರು ಇವರ ಬಂಧುಗಳೇ ಆಗಿದ್ದರು (ಅಜ್ಜ). ತಂದೆಯವರೂ ಯಕ್ಷಗಾನ ಕಲಾವಿದರಾಗಿದ್ದರು. ಅಣ್ಣ ಬೆಳ್ಳಾರೆ ಸೂರ್ಯನಾರಾಯಣ ಭಟ್ ಉತ್ತಮ ಅರ್ಥಧಾರಿಗಳೂ, ಸಂಘಟಕರೂ, ಶ್ರೇಷ್ಠ ಲೇಖಕರೂ ಆಗಿರುತ್ತಾರೆ. ಬೆಳ್ಳಾರೆಯ ಮನೆಯಲ್ಲಿ ವಾರಕ್ಕೊಂದು ತಾಳಮದ್ದಳೆ ನಡೆಯುತ್ತಿತ್ತು.  ಬೆಳ್ಳಾರೆ ಆಸುಪಾಸಿನ ಮನೆಗಳಲ್ಲಿ ತಾಳಮದ್ದಳೆ ಕಾರ್ಯಕ್ರಮಗಳು ಆಗಾಗ ನಡೆಯುತ್ತಿತ್ತು. ಸಹಜವಾಗಿ ಮಂಜುನಾಥ ಭಟ್ಟರಿಗೆ ಕಲಾವಿದನಾಗಬೇಕೆಂಬ ಬಯಕೆ ಮೂಡಿತು. ತನ್ನ 14ನೇ ವಯಸ್ಸಿನಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕಲಾವಿದನಾಗಲು ಪ್ರೇರಣೆ ಸಿಕ್ಕಿದ್ದು ಹಿರಿಯರಿಂದ.

1974-75ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಲಿತ ಕಲಾ ತರಬೇತಿ ಕೇಂದ್ರದಲ್ಲಿ ಶ್ರೀ ಪಡ್ರೆ ಚಂದು ಅವರ ಶಿಷ್ಯನಾಗಿ ನಾಟ್ಯವನ್ನು ಕಲಿತರು.  ಮೊದಲು ಗೆಜ್ಜೆ ಕಟ್ಟಿ ವೇಷ ಮಾಡಿದ್ದು ಅಜ್ಜ ಮಾಣಂಗಾಯಿ ಕೃಷ್ಣ ಭಟ್ಟರ ನೇತೃತ್ವದಲ್ಲಿದ್ದ  ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಮೇಳದಲ್ಲಿ (ಕುತ್ಯಾಳ). ಇದು ನನ್ನ ಸುಯೋಗ ಎಂದು ಬೆಳ್ಳಾರೆ ಮಂಜುನಾಥ ಭಟ್ಟರು ಹೇಳುತ್ತಾ ಆ ದಿನವನ್ನು ಇಂದಿಗೂ ನೆನಪಿಸುತ್ತಾರೆ. ನಂತರ ತಿರುಗಾಟ ಕಟೀಲು ಮೇಳದಲ್ಲಿ. ಆಸ್ರಣ್ಣ ಬಂಧುಗಳ ಆಶೀರ್ವಾದ, ಕಲ್ಲಾಡಿ ವಿಠಲ ಶೆಟ್ಟರು, ಪ್ರಸ್ತುತ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟರ ಪ್ರೋತ್ಸಾಹ, ಸಹಕಲಾವಿದರ, ಕಲಾಭಿಮಾನಿ ಗಳ ಪ್ರೋತ್ಸಾಹ, ಎಲ್ಲಕ್ಕಿಂತ ಹೆಚ್ಚು ಕಲಾಮಾತೆಯ ಅನುಗ್ರಹದಿಂದ ನಿರಂತರ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದೇನೆ ಎಂಬುದು ಶ್ರೀ ಭಟ್ಟರ ಅಭಿಪ್ರಾಯ.

ಚಿತ್ರಕೃಪೆ: ಕೋಂಗೋಟ್ ರಾಧಾಕೃಷ್ಣ ಭಟ್ 

ಪೂರ್ವರಂಗದಲ್ಲಿ ಬಾಲಗೋಪಾಲರಾಗಿ, ಸ್ತ್ರೀವೇಷಧಾರಿಯಾಗಿ, ಪೀಠಿಕಾ ಸ್ತ್ರೀವೇಷ… ಹೀಗೆ ಎಲ್ಲಾ ವೇಷಗಳನ್ನೂ ಮಾಡಿರುತ್ತಾರೆ. ಪೂರ್ವರಂಗದ ಎಲ್ಲಾ ಪ್ರದರ್ಶನಗಳನ್ನೂ ಹೀಗೆಯೇ ಎಂದು ಹೇಳಬಲ್ಲ, ಮಾಡಬಲ್ಲ ಸಾಮರ್ಥ್ಯ ಇವರಿಗಿದೆ. ಹಂತ ಹಂತವಾಗಿ ಬೆಳೆಯುತ್ತಾ ಬಂದ ಬೆಳ್ಳಾರೆ ಮಂಜುನಾಥ ಭಟ್ಟರು ಈಗ ಮೇಳದ ಇದಿರು ವೇಷಧಾರಿ. ಎಲ್ಲಾ ವೇಷಗಳ ಮುಖವರ್ಣಿಕೆ ಹೀಗೆಯೇ ಇರಬೇಕು ಎಂದು ನಿಖರವಾಗಿ ಹೇಳಬಲ್ಲರು. ಅಲ್ಲದೆ ವೇಗವಾಗಿ ಮೇಕಪ್ ಮಾಡಿ ಗೆಜ್ಜೆ ಕಟ್ಟಿ ಸಿದ್ಧವಾಗುವ ಕಲೆ ಇವರಿಗೆ ಕರಗತವಾಗಿದೆ. ಪುರಾಣಜ್ಞಾನ, ಪ್ರಸಂಗಗಳ ನಡೆ ಬಗ್ಗೆ ಚೆನ್ನಾಗಿ ತಿಳಿದಿರುವ ಕಾರಣವೇ ಇವರೊಬ್ಬ ಸಂಪನ್ಮೂಲ ವ್ಯಕ್ತಿ.

ಮುದ್ದಿನ ಮಗಳು ಶ್ರೀಮತಿ ಸಾಯಿಸುಮಾ ಜೊತೆಯಲ್ಲಿ 

ಚೌಕಿಯಲ್ಲಿ ಇವರಿದ್ದರೆ ಎಲ್ಲರಿಗೂ ಸಂತಸ. ಇವರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಅನನುಭವಿಗಳಿಗೆ ಅರ್ಥವಾಗುವಂತೆ ಚೆನ್ನಾಗಿ ಹೇಳಿಕೊಡಬಲ್ಲರು. ಹಾಗಾಗಿಯೇ ಬೆಳ್ಳಾರೆ ಮಂಜುನಾಥ ಭಟ್ಟರು ಮೇಳಕ್ಕೆ ಸಹಕಲಾವಿದರಿಗೆ ಆಸ್ತಿಯಾಗಿದ್ದಾರೆ. ಜಾಂಬವ, ವಾಲಿ, ಹಿರಣ್ಯಕಶ್ಯಪ, ಕಾರ್ತವೀರ್ಯ, ಕರ್ಣ, ರಕ್ತಬೀಜ, ಮಧು, ಕೈಟಭ, ದೇವೇಂದ್ರ, ಅರ್ಜುನ, ಅತಿಕಾಯ, ಭೀಷ್ಮ, ಕೌರವ ಮೊದಲಾದ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. 

ಸನ್ಮಾನಿತರಾದ ಕ್ಷಣ

1992ರಲ್ಲಿ ಅದಿತಿಯವರನ್ನು ವಿವಾಹವಾದರು. ಇವರು ಪ್ರಸಿದ್ಧ ಕಲಾವಿದ ನಿಡ್ಲೆ ಗೋವಿಂದ ಭಟ್ಟರ ಸಹೋದರಿ. ಬೆಳ್ಳಾರೆ ಮಂಜುನಾಥ ಭಟ್ ದಂಪತಿಗಳಿಗೆ ಮೂವರು ಮಕ್ಕಳು. (ಒಂದು ಹೆಣ್ಣು ಮತ್ತು ಇಬ್ಬರು ಪುತ್ರರು). ಪುತ್ರಿ ಸಾಯಿಸುಮಾ ಸ್ನಾತಕೋತ್ತರ ಪದವೀಧರೆ. ಯಕ್ಷಗಾನ ಕಲಾವಿದೆ. ವಿವಾಹಿತೆ. ರಾಮಕುಂಜ ಕಾಲೇಜಿನಲ್ಲಿ ಉಪನ್ಯಾಸಕಿ. ಹಿರಿಯ ಪುತ್ರ ಶ್ರೀಹರಿಶರ್ಮ ಪದವೀಧರ. ಕಿರಿಯ ಪುತ್ರ ಶ್ರೀರಾಮ ಶರ್ಮ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ. ನಿಡ್ಲೆ ನರಸಿಂಹ ಭಟ್ ಮತ್ತು ಇರಾ ಗೋಪಾಲಕೃಷ್ಣ ಭಾಗವತರು ನನ್ನನ್ನು ತಿದ್ದಿ ತೀಡಿದರು ಎನ್ನುವ ಬೆಳ್ಳಾರೆ ಮಂಜುನಾಥ ಭಟ್ಟರು ಕದ್ರಿ ವಿಷ್ಣು ಸ್ಮಾರಕ ಎಳೆಯರ ಬಳಗ ಕದ್ರಿ, ಚೊಕ್ಕಾಡಿ, ಶೇಣಿ, ಮಲ್ಲೂರು, ಕುಪ್ಪೆಪದವು, ತಲಕಳ, ಬಜಪೆ, ಬಂಟ್ವಾಳ ಮೊದಲಾದ ಕಡೆಗಳಲ್ಲಿ ನಾಟ್ಯ ತರಬೇತಿಯನ್ನೂ ನೀಡಿರುತ್ತಾರೆ. ಬೆಳ್ಳಾರೆ ಮಂಜುನಾಥ ಭಟ್ಟರು ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. 

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (24.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (24.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಗುಜ್ಜಾಡಿ – ಕಂಸ ವಿವಾಹ – ಮೈಂದ ದ್ವಿವಿದ ಕಾಳಗ 
ಕಟೀಲು ಒಂದನೇ ಮೇಳಪೆರುವಾಜೆ ಶಾಲಾ ಬಳಿ, ವಯಾ ಬೆಳ್ಳಾರೆ 
ಕಟೀಲು ಎರಡನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಮೂರನೇ ಮೇಳಕುರ್ನಾಡು, ಮುಡಿಪು 
ಕಟೀಲು ನಾಲ್ಕನೇ ಮೇಳ ಸಾಣೂರು, ಕಾರ್ಕಳ 
ಕಟೀಲು ಐದನೇ ಮೇಳ ಚಾವಡಿದಡಿ, ಪೇಜಾವರ, ಪೋರ್ಕೋಡಿ 
ಕಟೀಲು ಆರನೇ ಮೇಳನೇತ್ರಾವತಿ ಕಡವಿನ ಬಳಿ, ಹರೇಕಳ, ಪಾವೂರು 
ಮಂದಾರ್ತಿ ಒಂದನೇ ಮೇಳ ಕೆಳಮನೆ, ಸೌಕೂರು, ಗುಳ್ವಾಡಿ 
ಮಂದಾರ್ತಿ ಎರಡನೇ ಮೇಳ ಹಸಿಕೊಡ್ಲು, ಚಾರ, ಹೆಬ್ರಿ 
ಮಂದಾರ್ತಿ ಮೂರನೇ ಮೇಳ ದೊಡ್ಡಿನಮನೆ, ಕರುಣಾಪುರ, ತೀರ್ಥಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಯಾಳಕ್ಲು, ವಡ್ಡರ್ಸೆ, ಬನ್ನಾಡಿ – ಅಮೃತೇಶ್ವರೀ ಮೇಳದೊಂದಿಗೆ ಕೂಡಾಟ 
ಮಂದಾರ್ತಿ ಐದನೇ ಮೇಳ ಶ್ರೀ ವೀರಕಲ್ಲುಕುಟ್ಟಿಗ ದೇವಸ್ಥಾನ, ಕರುಣಾಪುರ, ಮೇಗರವಳ್ಳಿ 

ಶ್ರೀ ಹನುಮಗಿರಿ ಮೇಳ ಕಾಡಬೆಟ್ಟು, ವಗ್ಗ – ಶ್ರೀ ದೇವಿ ಮಹಾತ್ಮೆ 
ಶ್ರೀ ಸಾಲಿಗ್ರಾಮ ಮೇಳಚೆಗ್ರಿಬೆಟ್ಟು (ಕೊಕ್ಕರ್ಣೆ) – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಸುಂಕದಕಟ್ಟೆ ಮೇಳ ಮುಂಡೂರು (ಗುರುವಾಯನಕೆರೆ, ಬದ್ಯಾರು) – ಸರ್ಪ ಸಂಬಂಧ 
ಶ್ರೀ ಮಾರಣಕಟ್ಟೆ ಮೇಳ ‘ಎ’ಹುಣ್ಸೆಮನೆ, ಹಿಲ್ಕೋಡ್, ನೇರಳಕಟ್ಟೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕಂಚಾರ್, ಅಂಪಾರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಜನ್ಮನೆ, ಆಲೂರು 
ಶ್ರೀ ಪಾವಂಜೆ ಮೇಳ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಆಲಂಗಾರು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳತ್ರಿಮೂರ್ತಿ ಸರ್ಕಲ್, ಬೀಜಾಡಿ 
ಕಮಲಶಿಲೆ ಮೇಳ ‘ಎ’ಹೊಸಬಾಳು, ಆಜ್ರಿ – ಸಿಗಂದೂರು ಮೇಳದೊಂದಿಗೆ ಕೂಡಾಟ
ಕಮಲಶಿಲೆ ಮೇಳ ‘ಬಿ’ಜಟ್ಟಿಗೇಶ್ವರ ದೇವಸ್ಥಾನ, ಹಟ್ಟಿಯಂಗಡಿ 

ಶ್ರೀ ಬಪ್ಪನಾಡು ಮೇಳಅರ್ಜುನಕೋಡಿ ಬಸ್ ತಂಗುದಾಣದ ಬಳಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಮುಂಡ್ಕಿನಜೆಡ್ಡು ಚೆರ್ಕಾಡಿ ಆರ್.ಕೆ ಪಾಟ್ಕರ್ ಶಾಲಾ ಮೈದಾನ – ಶ್ರೀ ಭಗವತಿ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳಯಾಳಕ್ಲು, ವಡ್ಡರ್ಸೆ, ಬನ್ನಾಡಿ – ಮಂದಾರ್ತಿ ಮೇಳದೊಂದಿಗೆ ಕೂಡಾಟ
ಶ್ರೀ ಬೋಳಂಬಳ್ಳಿ ಮೇಳ ಪೇತ್ರಿ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಸೌಕೂರು, ಕೆತ್ತೆಮಕ್ಕಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಾಲಾಡಿ ಮೇಳಯಕ್ಷಮಿತ್ರ ಬಳಗ, ಶಿರೂರು, ನೀರ್ಜೆಡ್ಡು, ಒಡೆಯನಕಲ್ಲು – ಕಾಲಮಿತಿ ರಾತ್ರಿ 8ರಿಂದ  
ಶ್ರೀ ಬೆಂಕಿನಾಥೇಶ್ವರ ಮೇಳ  ಮಂಗಳೂರು, ಕಾವೂರು ಸಹಕಾರ ಸೌಧದ ಮುಂಭಾಗದಲ್ಲಿ – ಸತ್ಯೊದ ಸ್ವಾಮಿ ಕೊರಗಜ್ಜ  
ಶ್ರೀ ಮಡಾಮಕ್ಕಿ ಮೇಳತೆಂಕು ಬೆಪ್ಡೆಗುಳಿಬೈಲು 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೆಮ್ಮಣ್ಣು ಹೂಡೆ ಕೆನರಾ ಬ್ಯಾಂಕ್ ಹತ್ತಿರ – ಸರ್ಪ ಶಪಥ 
ಶ್ರೀ ಹಿರಿಯಡಕ ಮೇಳಹಿರ್ಗಾನ, ಪಾಲಿಜೆ – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಕೈಕಂಬಳೇಶ್ವರ ದೇವಸ್ಥಾನ ವಠಾರ, ಬಾಂಡ್ಯ
ಶ್ರೀ ಸಿಗಂದೂರು ಮೇಳಆಜ್ರಿ ಹೊಸಬಾಳು – ಕಮಲಶಿಲೆ ಮೇಳದೊಂದಿಗೆ ಕೂಡಾಟ
ಶ್ರೀ ನೀಲಾವರ ಮೇಳ ಕೊಡವೂರು ಕಂಗಣಬೆಟ್ಟು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ, ಮೂಡಬೆಟ್ಟು 

ಒಂದು ಕಾಲದಲ್ಲಿ ಪುಂಡುವೇಷಧಾರಿಯಾಗಿ ಮೆರೆದಿದ್ದ ಉದಯ ನಾವಡ ಮಧೂರು

ಸ್ತ್ರೀವೇಷಗಳನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸಿದ ಶ್ರೀ ಉದಯ ನಾವಡ ಮಧೂರು ಇವರು ತೆಂಕುತಿಟ್ಟಿನ ಶ್ರೇಷ್ಠ ಪುಂಡುವೇಷಧಾರಿ. ಉದಯ ನಾವಡರು ಎಲ್ಲಾ ಹಂತಗಳನ್ನೂ ದಾಟಿಯೇ ಮುಂದೆ ಸಾಗಿದವರು. ಕಲಿಕೆಯಲ್ಲೂ ಅತೀವವಾದ ಆಸಕ್ತಿಯನ್ನು ತೋರಿದವರು. ನೃತ್ಯ, ಮಾತುಗಳೆಂಬ ಎರಡು ವಿಭಾಗಗಳಲ್ಲೂ ಹಿಡಿತವನ್ನು ಸಾಧಿಸಿ ಇನ್ನೇನು ಒಂದನೇ ಪುಂಡುವೇಷಧಾರಿಯಾಗಿ ಕಾಣಿಸಿ ಕೊಳ್ಳುತ್ತಾರೆ ಎನ್ನುವಾಗಲೇ ಉದಯ ನಾವಡರಿಗೆ ಅದೃಷ್ಟವು ಕೈಕೊಟ್ಟಿತ್ತು. ಆರೋಗ್ಯ ಸಮಸ್ಯೆಯು ಕಾಣಿಸಿಕೊಂಡು ಯಕ್ಷಗಾನದಿಂದ ದೂರವಾಗಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದರು. ಸ್ವಯಂನಿವೃತ್ತಿಯನ್ನು ಘೋಷಿಸಿ ಕಲಾಬದುಕಿಗೆ ವಿದಾಯವನ್ನು ಹೇಳಿದರು.

ಆದರೂ ರಂಗನಟರಾಗಿ ಇದ್ದಷ್ಟು ಸಮಯ ಇವರು ಉತ್ಕೃಷ್ಟವಾದ ನಿರ್ವಹಣೆಯನ್ನೇ ತೋರಿದ್ದರು. ಸಂಘಟಕರ, ಕಲಾಭಿಮಾನಿಗಳ, ಸಹಕಲಾವಿದರ ಮೆಚ್ಚುಗೆಗೆ ಪಾತ್ರರಾಗಿದ್ದರು. ಉದಯ ನಾವಡರ ಮೈಕಟ್ಟು ಪುಂಡುವೇಷಗಳಿಗೆ ಹೇಳಿ ಮಾಡಿಸಿದಂತಿತ್ತು. ಸುಂದರ ರೂಪವೂ ಅವರಿಗೆ ವರದಾನವಾಗಿತ್ತು. ಇವರ ವೇಷಗಳು ರಂಗಪ್ರವೇಶವಾದಾಗಲೇ ಪ್ರೇಕ್ಷಕರು ಸ್ವೀಕರಿಸುತ್ತಿದ್ದರು, ಒಪ್ಪಿಕೊಳ್ಳುತ್ತಿದ್ದರು. ಮೊದಲ ನೋಟದಲ್ಲೇ ವೇಷ ಗೆಲ್ಲುತ್ತಿತ್ತು.

ಬಣ್ಣಗಾರಿಕೆ, ವೇಷಕಟ್ಟುವ ರೀತಿಗಳು ಅತ್ಯಂತ ಸೊಗಸಾಗಿ ಶಿಸ್ತುಬದ್ಧವಾಗಿರುತ್ತಿತ್ತು. ಮೈಬಿಟ್ಟು ಮಾಡುವ ವೇಷಗಳು, ಪಗಡಿ, ಕಸೆ ಸ್ತ್ರೀವೇಷಗಳು ಉದಯ ನಾವಡರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಪಾತ್ರೋಚಿತವಾದ ನಾಟ್ಯ, ಮಾತುಗಳಿಂದ ಸರ್ವತ್ರ ಪ್ರಶಂಸೆಗೆ ಪಾತ್ರರಾಗಿದ್ದರು. ಕುಣಿತದಲ್ಲಿ ಅತೀವ ಆಸಕ್ತಿಯನ್ನು ತೋರಿದ್ದ ಉದಯ ನಾವಡರು ಲೆಕ್ಕಮಾಡಿ ಹಾರುತ್ತಾ ದಿನದಿನವೂ ಗಿರ್ಕಿ ಸಂಖ್ಯೆಯನ್ನು ಹೆಚ್ಚು ಮಾಡಲು ಪ್ರಯತ್ನಿಸುತ್ತಿದ್ದರಂತೆ. ಇವರು ಪದ್ಯಕ್ಕೆ ಕುಣಿಯಲು ಆರಂಭಿಸಿದಾಗ ಹೊರಗೆ ಹೋದ ಪ್ರೇಕ್ಷಕರು ಮರಳಿ ಬರುವಾಗಲೂ ಇವರು ಹಾರುತ್ತಿದ್ದುದನ್ನು ನೋಡಿ, ಮಾಣಿ ಇನ್ನೂ ಹಾರುತ್ತಾ ಇದ್ದಾನೆ! ಎನ್ನುತ್ತಿದ್ದರಂತೆ.

ಉದಯ ನಾವಡರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಧೂರು ಗ್ರಾಮದ ಬನ್ನೂರು ಎಂಬಲ್ಲಿ 1966ನೇ ಇಸವಿ ಮಾರ್ಚ್ 5ರಂದು ಬನ್ನೂರು ವಿಷ್ಣು ನಾವಡ ಮತ್ತು ಲೀಲಾವತಿ ದಂಪತಿಗಳಿಗೆ ಮಗನಾಗಿ ಜನಿಸಿದರು. ಕಲ್ಲಕಟ್ಟ ಶಾಲೆಯಲ್ಲಿ 6ನೇ ತರಗತಿವರೇಗೆ ಓದಿದ್ದರು. ವಿಷ್ಣು ನಾವಡರು ಯಕ್ಷಗಾನಪ್ರಿಯರು. ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು. ಇವರಿಗೆ 5 ಮಂದಿ ಮಕ್ಕಳು (4 ಗಂಡು, ಒಬ್ಬಳು ಹೆಣ್ಣು). ಮಕ್ಕಳು ಯಕ್ಷಗಾನಾಸಕ್ತರಾಗಲು ವಿಷ್ಣು ನಾವಡರೇ ಕಾರಣರು. ಶಾಲಾ ವಾರ್ಷಿಕೋತ್ಸವದ ಪ್ರದರ್ಶನಕ್ಕಾಗಿ ಮರ್ಧಂಬೈಲು ಚಂದ್ರಶೇಖರ ರಾಯರಿಂದ ನಾಟ್ಯ ಕಲಿತ ಉದಯ ನಾವಡರು ಸೀತಾಪಹಾರ ಪ್ರಸಂಗದಲ್ಲಿ ವೇಷ ಮಾಡಿದ್ದರು.

ಶಾಲೆ ಬಿಟ್ಟ ನಂತರ ಪುತ್ತೂರು ತಾಲೂಕಿನ ಗೋಳಿತೊಟ್ಟು ಎಂಬಲ್ಲಿ ತನ್ನ ಸಣ್ಣಜ್ಜಿಯ ಮನೆಯಲ್ಲಿ ವಾಸವಾಗಿದ್ದರು. ವರ್ಷದ ನಂತರ ಮರಳಿ ಮನೆಗೆ. ಯಕ್ಷಗಾನ ಕಲಿಯುವ ಆಸಕ್ತಿ ಉಂಟಾಯಿತು. ಆಗ ಕೂಡ್ಲು ದೇವಸ್ಥಾನದಲ್ಲಿ ಕೂಡ್ಲು ನಾರಾಯಣ ಬಲ್ಯಾಯರು ತರಬೇತಿ ನೀಡುತ್ತಿದ್ದರು. ನಾಲ್ಕು ಮಂದಿ ನಾವಡ ಸಹೋದರರೂ ಇವರ ಬಂಧುಗಳಾದ ಗೋಪಾಲಕೃಷ್ಣ ನಾವಡರೂ (ಪ್ರಸ್ತುತ ಮದ್ದಳೆಗಾರರು) ನಾರಾಯಣ ಬಲ್ಯಾಯರಿಂದ ನಾಟ್ಯ ಕಲಿತರು.
                 

ಉದಯ ನಾವಡರ ಅಣ್ಣ ರಾಧಾಕೃಷ್ಣ ನಾವಡರು ಎಲ್ಲರಿಗೂ ಪರಿಚಿತರು. ವಾಸುದೇವ ನಾವಡರು ಒಳ್ಳೆಯ ವೇಷಧಾರಿ ಯಾಗಿದ್ದರು. ಪ್ರಸ್ತುತ ಕಾಸರಗೋಡು ಮುಖ್ಯ ಅಂಚೆ ಕಛೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ನಾರಾಯಣ ನಾವಡರು ಕೇರಳದ ಮಲಪ್ಪುರಂ ಎಂಬಲ್ಲಿ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಟ್ಯ ಕಲಿತ ನಂತರ ಉದಯ ನಾವಡರು ಗುರುಗಳ ಜತೆ ವೇಷ ಮಾಡುತ್ತಾ ಬೆಳೆದವರು. ಉಳಿಯ, ಕೋಟೂರಿನ ಸಂಘಗಳಲ್ಲಿ, ಮಲ್ಲ, ಉಪ್ಪಳ ಮೇಳದ ಪ್ರದರ್ಶನಗಳಲ್ಲಿ ಕಲಾಸೇವೆಯನ್ನು ಮಾಡಿದ್ದರು. ಬಾಲ ಗೋಪಾಲರು, ದೇವೇಂದ್ರನ ಬಲ, ಮಾರ್ಕಂಡೇಯ, ಧ್ರುವ, ಶ್ರೀಕೃಷ್ಣ, ಪ್ರಹ್ಲಾದ, ಷಣ್ಮುಖ, ಪರಶುರಾಮ, ಲಕ್ಷ್ಮಣ, ಬಬ್ರುವಾಹನ, ಕುಶಲವರು, ಚಂಡಮುಂಡರು ಮೊದಲಾದ ವೇಷಗಳಲ್ಲಿ ಮಿಂಚಿದರು. ಮೇಳದ ತಿರುಗಾಟದಲ್ಲಿ ಉದಯ ನಾವಡರಿಗೆ ಆಸಕ್ತಿ ಇರಲಿಲ್ಲ.

ಆದರೆ ಮಕ್ಕಳಿಗೆ ಭವಿಷ್ಯವಿದೆ. ಮೇಳಕ್ಕೆ ಕಳುಹಿಸಿ ಎಂದು ಊರವರು ವಿಷ್ಣು ನಾವಡರನ್ನು ಒತ್ತಾಯಿಸುತ್ತಿದ್ದರು. ತೀರ್ಥರೂಪರ ಒತ್ತಾಯದಂತೆ ಕುಬಣೂರು ಶ್ರೀಧರ ರಾಯರ ಸಂಚಾಲಕತ್ವದ ಕೂಡ್ಲು ಮೇಳಕ್ಕೆ ರಾಧಾಕೃಷ್ಣ ನಾವಡರೂ, ಉದಯ ನಾವಡರೂ ಸೇರಿದರು. ಮುಂದಿನ ವರ್ಷ ಇಬ್ಬರನ್ನೂ ಮಧೂರು ಗಣಪತಿ ರಾಯರು ಸುರತ್ಕಲ್ಲು ನವರಾತ್ರಿ ಯಕ್ಷಗಾನ ಪ್ರದರ್ಶನಗಳಿಗೆ ಕರೆದೊಯ್ದಿದ್ದರು. ಆ ವರ್ಷ ನಾವಡ ಸಹೋದರರಿಬ್ಬರೂ ಸುರತ್ಕಲ್ಲು ಮೇಳದಲ್ಲಿ ತಿರುಗಾಟ ನಡೆಸಿದರು. ಅಗರಿ, ಶೇಣಿ, ತೆಕ್ಕಟ್ಟೆ, ಕೊಕ್ಕಡ ಈಶ್ವರ ಭಟ್, ಎಂ. ಕೆ. ರಮೇಶ ಆಚಾರ್ಯ, ಬಣ್ಣದ ಮಹಾಲಿಂಗ, ಪ್ರಕಾಶ್‍ಚಂದ್ರ ಬಾಯಾರು ಮೊದಲಾದವರ ಒಡನಾಟ ಸಿಕ್ಕಿತ್ತು. ರಂಗದಲ್ಲಿ ಉದಯ ನಾವಡರಿಗೆ ಕುಣಿತಕ್ಕೆ ಪ್ರೋತ್ಸಾಹ ನೀಡಿದವರು ಪದ್ಯಾಣ ಶಂಕರನಾರಾಯಣ ಭಟ್ಟರು. ನನ್ನನ್ನು ಚೆನ್ನಾಗಿ ಹುರಿದುಂಬಿಸಿದರು. ನಾನು ಕುಣಿತದಲ್ಲಿ ರಂಜಿಸಲು ಅವರೇ ಕಾರಣರು ಎಂದು ಉದಯ ನಾವಡರು ಹೇಳುತ್ತಾರೆ.

ಮುಂದಿನ ವರ್ಷ ರಾಧಾಕೃಷ್ಣ ನಾವಡರು ಅನಿವಾರ್ಯವಾಗಿ ಪುತ್ತೂರು ಮೇಳಕ್ಕೆ ಸೇರಿದ್ದರು. ಅಣ್ಣ ತಮ್ಮಂದಿರು ಜತೆಯಾಗಿರಬೇಕೆಂಬ ತಂದೆಯವರ ಅಪೇಕ್ಷೆಯಂತೆ ಉದಯ ನಾವಡರೂ ಪುತ್ತೂರು ಮೇಳಕ್ಕೆ ಸೇರಿದ್ದರು. ಆ ವರ್ಷ ಸುರತ್ಕಲ್ಲು ಮೇಳದ ಆಟ ನೋಡಿದವರೆಲ್ಲಾ ಮೊದಲಿದ್ದ ಮಾಣಿ (ಉದಯ ನಾವಡ) ಎಲ್ಲಿದ್ದಾನೆ? ಅವನು ಮೇಳಕ್ಕೆ ಬೇಕು ಎಂದು ಸುರತ್ಕಲ್ಲು ಮೇಳದ ಯಜಮಾನರಲ್ಲಿ ಹೇಳಿದ್ದರಂತೆ. ಯಜಮಾನರ ಅಪೇಕ್ಷೆಯಂತೆ ನಾವಡ ಸಹೋದರರಿಬ್ಬರೂ ಸುರತ್ಕಲ್ಲು ಮೇಳ ಸೇರಿದರು. 2 ವರ್ಷದ ತಿರುಗಾಟದ ನಂತರ ಮೇಳ ಬೇಡವೆಂಬ ತೀರ್ಮಾನಕ್ಕೂ ಬಂದಿದ್ದರು.

ಅದೇ ವರ್ಷ ಶೇಖರ್ ಶೆಟ್ಟಿ ಬೆಳ್ಮಣ್ಣು ಅವರ ನೇತೃತ್ವದಲ್ಲಿ ಬಪ್ಪನಾಡು ಮೇಳ ಆರಂಭವಾಗಿತ್ತು. ಇಬ್ಬರೂ ಸದ್ರಿ ಮೇಳ ಸೇರಿ ಮೂವರು ಯಜಮಾನರ ಸಂಚಾಲಕತ್ವದಲ್ಲಿ (ಶೇಖರ ಶೆಟ್ರು, ಧರ್ಮಸ್ಥಳ ನಾರಾಯಣ ಕಂಮ್ತಿ, ಅಡ್ಯಾರು  ಶಂಕರ ಆಳ್ವ) 6 ವರ್ಷಗಳ ಕಲಾಸೇವೆಯನ್ನು ಮಾಡಿದ್ದರು. ಟೆಂಟು, ಬಯಲಾಟ ಮೇಳಗಳಲ್ಲಿ ತುಳು, ಪೌರಾಣಿಕ ವೇಷಗಳನ್ನು ನಿರ್ವಹಿಸುತ್ತಿದ್ದರು. ನಂತರ ಉದಯ ನಾವಡರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ 1 ವರ್ಷ, ಗೋಣಿಬೀಡು ಸಂಜಯ ಕುಮಾರರ ಗಣೇಶಪುರ ಮೇಳದಲ್ಲಿ 1 ವರ್ಷ ತಿರುಗಾಟ ನಡೆಸಿದರು. ನಂತರ ಅಣ್ಣ ರಾಧಾಕೃಷ್ಣ ನಾವಡರ ಜತೆ ವೈ. ಕರುಣಾಕರ ಶೆಟ್ರ ಪೆರ್ಡೂರು ಮೇಳದಲ್ಲಿ ಕಲಸೇವೆ ಮಾಡಿದರು. ಆಗ ಧಾರೇಶ್ವರರು ಭಾಗವತರಾಗಿದ್ದರು.

ನಂತರ ನಾವಡ ಸಹೋದರರು ಕಿಶನ್ ಹೆಗ್ಡೆಯವರ ಸಾಲಿಗ್ರಾಮ ಮೇಳದಲ್ಲಿ ಶಬರಾಯರ ಭಾಗವತಿಕೆಯಲ್ಲಿ ಕಲಾಸೇವೆ ಮಾಡಿದರು. ಬಳಿಕ ಮಂಗಳಾದೇವಿ ಮೇಳದಲ್ಲಿ 3ನೇ ವರುಷದ ತಿರುಗಾಟ, ಮಾರ್ಚ್ ತಿಂಗಳಿನಲ್ಲಿ. ರಂಗದಲ್ಲಿ ಕುಣಿಯುತ್ತಿರುವಾಗ ತೀವ್ರ ಬೆನ್ನುನೋವು ಉದಯ ನಾವಡರನ್ನು ಕಾಡಿತು. ತಿರುಗಾಟ ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು. ಅದೇ ವರ್ಷ ಜನವರಿಯಲ್ಲಿ ಉದಯ ನಾವಡರು ವಿವಾಹವಾಗಿದ್ದರು. ಪತ್ನಿಯು ಸಾಂತ್ವನದ ನುಡಿಗಳಿಂದ ಆರೈಕೆ ಮಾಡಿದ್ದರು. ಅಣ್ಣಂದಿರು ಸಹಕರಿಸಿ, ಸಂತೈಸಿದ್ದರು. ಕಲಾವಿದರೂ, ಕಲಾಭಿಮಾನಿಗಳೂ ಉದಯ ನಾವಡರಿಗೆ ನೆರವಾಗಿದ್ದರು. ಮುಂದಿನ ಎರಡು ವರ್ಷಗಳ ಕಾಲ ಮನೆಯಲ್ಲಿದ್ದುಕೊಂಡು ಚಿಕಿತ್ಸೆ. ಮತ್ತೆ ಜೀವನೋಪಾಯಕ್ಕಾಗಿ ಮೇಳಕ್ಕೆ.

ಕುಣಿಯಲು ಅಸಾಧ್ಯವಾದ ಕಾರಣ ಸ್ತ್ರೀವೇಷ ಮಾತ್ರ ಮಾಡುತ್ತೇನೆಂಬ ಒಪ್ಪಂದದೊಂದಿಗೆ 4 ವರ್ಷಗಳ ತಿರುಗಾಟದ ನಂತರ, ಕುಂಟಾರು ಮೇಳದಲ್ಲಿ 1 ವರ್ಷ ವ್ಯವಸಾಯ. ಬೆನ್ನುನೋವಿನ ಸಮಸ್ಯೆಯಿಂದ ಇನ್ನು ತಿರುಗಾಟ ಅಸಾಧ್ಯ ಎಂಬ ನಿರ್ಧಾರಕ್ಕೆ ಉದಯ ನಾವಡರು ಬಂದಿದ್ದರು. ಮಾತ್ರವಲ್ಲ ಆ ನಿಟ್ಟಿನಲ್ಲಿ ದೃಢನಿರ್ಧಾರಕ್ಕೂ ಬಂದಿದ್ದರು. 2006ರಲ್ಲಿ ಕಲಾಬದುಕಿನಿಂದ ಸ್ವಯಂ ನಿವೃತ್ತಿಯನ್ನು ಹೊಂದಿ, ಬದುಕಿಗಾಗಿ ಬದಲಿ ಮಾರ್ಗವನ್ನರಸಿದರು. ಪ್ರಸ್ತುತ 12 ವರ್ಷಗಳಿಂದ ತನ್ನ ಭಾವ ಶ್ರೀ ಪಾರ್ಥಸಾರಥಿ ಹೊಳ್ಳರ ಜತೆ ಕಾಸರಗೋಡು, ಚಂದ್ರಗಿರಿ, ಕಾಂಞಂಗಾಡು ಭಾಗಗಳಲ್ಲಿ ಕೇಬಲ್ ನೆಟ್‍ವರ್ಕ್ ಉದ್ಯೋಗವನ್ನು ಮಾಡುತ್ತಿದ್ದಾರೆ.

ತನ್ನ ಕಷ್ಟಕಾಲಕ್ಕೆ ವಿವಿಧ ರೀತಿಗಳಲ್ಲಿ ಸ್ಪಂದಿಸಿ, ಸಹಕರಿಸಿದ ಕಲಾವಿದರು, ಕಲಾಭಿಮಾನಿಗಳು, ಸಂಘಟಕರು, ಸಂಘ-ಸಂಸ್ಥೆಗಳನ್ನೂ, ಸಹೋದರರನ್ನೂ, ಬಂಧುಗಳನ್ನೂ ಮರೆಯದೆ ಸದಾ ನೆನಪಿಸುತ್ತಾರೆ ಶ್ರೀ ಉದಯ ನಾವಡರು. ಉದಯ ನಾವಡರ ಪತ್ನಿ ಶ್ರೀಮತಿ ರಾಜೇಶ್ವರಿ ಗೃಹಿಣಿ. ಉದಯ ನಾವಡ ರಾಜೇಶ್ವರಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕು| ಸ್ವಾತಿ ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿನಿ. ಪುತ್ರ ಕೃಷ್ಣಪ್ರಕಾಶ ನಾವಡ ಕಾಸರಗೋಡು ಬಿ.ಇ.ಎಂ. ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿ. ಒಂದು ಕಾಲದಲ್ಲಿ ಉದಯ ನಾವಡರು ಶ್ರೇಷ್ಠ ಪುಂಡುವೇಷಧಾರಿಯಾಗಿ ಮೆರೆದಿದ್ದರು.

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (22.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (22.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕರ್ಕುಂಜೆ ಕುಂಟನೇರಳು  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳತಿಪ್ಪೆಕೋಡಿ ಮನೆ, ಬಿಳಿಯೂರು, ಪೆರ್ನೆ, ಬಂಟ್ವಾಳ 
ಕಟೀಲು ಎರಡನೇ ಮೇಳ ಕೊಡುಂಗಾಯಿ, ಸಾಲೆತ್ತೂರು ವಿಟ್ಲ 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ನಾಲ್ಕನೇ ಮೇಳ ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಬಡಗನ್ನೂರು, ಪುತ್ತೂರು 
ಕಟೀಲು ಐದನೇ ಮೇಳ ಕಾವೂರು ದೇವಸ್ಥಾನದ ವಠಾರದಲ್ಲಿ 
ಕಟೀಲು ಆರನೇ ಮೇಳಶ್ರೀ ಜಾರಂದಾಯ ಬಂಟ ದೇವಸ್ಥಾನದ ವಠಾರ, ಏಳಿಂಜೆ 

ಮಂದಾರ್ತಿ ಒಂದನೇ ಮೇಳ ಚನ್ನಿಜೆಡ್ಡುಗಾವಳಿ – ಕೂಡಾಟ
ಮಂದಾರ್ತಿ ಎರಡನೇ ಮೇಳ ಚನ್ನಿಜೆಡ್ಡುಗಾವಳಿ – ಕೂಡಾಟ  
ಮಂದಾರ್ತಿ ಮೂರನೇ ಮೇಳ ಸುಳುಗೋಡು, ಕ್ಯಾದಿಗೆರೆ, ಹೆದ್ದೂರು 
ಮಂದಾರ್ತಿ ನಾಲ್ಕನೇ ಮೇಳ ಮರ್ಬಿನಮನೆ, ತಂತ್ರಾಡಿ 
ಮಂದಾರ್ತಿ ಐದನೇ ಮೇಳ ತಲವಾನಿ, ದೂರ್ವಾಸಪುರ 
ಶ್ರೀ ಹನುಮಗಿರಿ ಮೇಳ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ವಠಾರ, ದೇಲಂಪುರಿ (ವೇಣೂರು) – ಶುಕ್ರನಂದನೆ 
ಶ್ರೀ ಸಾಲಿಗ್ರಾಮ ಮೇಳಬ್ರಹ್ಮಾವರ ಗಾಂಧಿ ಮೈದಾನ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಮಾರಣಕಟ್ಟೆ ಮೇಳ ‘ಎ’ಕಟ್ಕೇರಿ ಉಪ್ಪುಂದ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಜೋಗಿಬೆಟ್ಟು, ನೇರಳಕಟ್ಟೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಹೊಸ್ಮನೆ, ಅರಾಟೆ 
ಶ್ರೀ ಪಾವಂಜೆ ಮೇಳ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಆಲಂಗಾರು – ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಕಂಡ್ಲೂರು – ಕಲ್ಯಾಣ ಕುಂಕುಮ 
ಕಮಲಶಿಲೆ ಮೇಳ ‘ಎ’ಕಮಲಶಿಲೆ 
ಕಮಲಶಿಲೆ ಮೇಳ ‘ಬಿ’ಶ್ರೀ ಮಹಾಗಣಪತಿ ದೇವಸ್ಥಾನ, ಸೋಣು, ಸಿದ್ಧಾಪುರ 
ಶ್ರೀ ಬಪ್ಪನಾಡು ಮೇಳಅತ್ರಬೈಲ್, ಅಶ್ವತ್ಥಕಟ್ಟೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ  
ಶ್ರೀ ಬೋಳಂಬಳ್ಳಿ ಮೇಳ ಉಡುಪಿ ಸಂತೆಕಟ್ಟೆ – ನಾಗ ಸುನೇತ್ರೆ 

ಶ್ರೀ ಸೌಕೂರು ಮೇಳಕನ್ಯಾನ ಗುಬ್ಬುಗೋಣು – ಪುಷ್ಪಚಂದನ 
ಶ್ರೀ ಹಾಲಾಡಿ ಮೇಳಹೈಕಾಡಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಬ್ರಹ್ಮಾವರ ಹೇರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಬಂಟಕಲ್ – ಕಾರ್ತವೀರ್ಯಾರ್ಜುನ, ಕೃಷ್ಣಲೀಲೆ, ಕಂಸವಧೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕುದ್ರುಕೋಡ್ ಶ್ರೀ ಶಾಸ್ತರೇಶ್ವರ ದೇವಸ್ಥಾನದ ವಠಾರ – ಸುದರ್ಶನ, ಚಂದ್ರಾವಳಿ 
ಶ್ರೀ ಹಿರಿಯಡಕ ಮೇಳಪೆರ್ಡೂರು, ಕಲ್ಪಂಡೆ – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಶ್ರೀ ರಾಮ ಭಜನಾ ಮಣಿರ, ಪಡುಕೋಣೆ 
ಶ್ರೀ ಸಿಗಂದೂರು ಮೇಳಅರೆಹೊಳೆ,ಬಸ್ತಿಮಕ್ಕಿ ಜೈನ ಜೆಟ್ಟಿಗೇಶ್ವರ ದೇವಸ್ಥಾನ
ಶ್ರೀ ನೀಲಾವರ ಮೇಳ ಕೊಕ್ಕರ್ಣೆ ಬಸ್ ಸ್ಟಾಂಡ್ – ದೈವ ಮಂಟಪ 

ಯಕ್ಷಗಾನ ಕಲಾವಿದ ಸತೀಶ ಹೆಗಡೆ ನಿಧನ

ಬಡಗುತಿಟ್ಟು ಕಲಾವಿದ ಸತೀಶ ಹೆಗಡೆ (56) ಅಣೆಗದ್ದೆ ನಿನ್ನೆ (20-01-2021) ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪ ಹುಂಚದವರಾದ ಸತೀಶ ಹೆಗಡೆ ನಾಗರಕೋಡಿಗೆ, ಕಮಲಶಿಲೆ, ಸಿಗಂಧೂರು, ಹಾಲಾಡಿ, ಗುತ್ಯಮ್ಮ, ಸೀತೂರು ಮೇಳಗಳಲ್ಲಿ ಮೂರುವರೆ ದಶಕಗಳ ಕಲಾಸೇವೆ ಗೈದಿದ್ದಾರೆ.

ಕಳೆದ ತಿರುಗಾಟವನ್ನು ಕಾರಣಗಿರಿ ಮೇಳದಲ್ಲಿ ಮಾಡಿದ್ದರು.ಕೌರವ, ರಾವಣ ಮಹಿಷಾಸುರ ಮೊದಲಾದ ಖಳ ಪಾತ್ರಗಳನ್ನು ಮನೋಜ್ಞವಾಗಿ ಮಾಡುತ್ತಿದ್ದರು. ಅವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಳಮದ್ದಳೆ ಕ್ಷೇತ್ರದ ಹಳೆಯ ವಿಶಿಷ್ಟ, ಖ್ಯಾತ ಅರ್ಥಧಾರಿ, ಅಧ್ಯಾಪಕ – ಶ್ರೀ ಕೆ.ವಿ.ಗಣಪಯ್ಯ ಆಲಜೆ 

ಕೆ.ವಿ. ಗಣಪಯ್ಯ ತಾಳಮದ್ದಳೆಯ ಅಭಿಮಾನಿಗಳಿಗೆಲ್ಲಾ ಪರಿಚಿತ ಹೆಸರು. ತನ್ನ ವಿಶಿಷ್ಟ ಹಾಗೂ ಭಿನ್ನವಾದ ಅರ್ಥಗಾರಿಕೆಯಿಂದ ತಾಳಮದ್ದಳೆ ಅರ್ಥಧಾರಿಯಾಗಿ ಗುರುತಿಸಿಕೊಂಡವರು. ವೃತ್ತಿಯಲ್ಲಿ ಅಧ್ಯಾಪಕ. ತಾಳಮದ್ದಳೆಯಲ್ಲಿ ಅರ್ಥ ಹೇಳುವುದನ್ನು ಒಂದು ಹವ್ಯಾಸ ಹಾಗೂ ಆಸಕ್ತಿಯ ವಿಷಯವನ್ನಾಗಿ ಪರಿವರ್ತಿಸಿಕೊಂಡವರು. 1933ನೆಯ ಇಸವಿಯಲ್ಲಿ ಹುಟ್ಟಿದ ಇವರಿಗೆ ತನ್ನ 11ನೆಯ ವಯಸ್ಸಿನಿಂದಲೇ ಯಕ್ಷಗಾನದ ಪರಿಚಯ ಮತ್ತು ಅದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು.  

ಈಗಲೂ ತಾಳಮದ್ದಳೆಯ ಹಳೆಯ ಪ್ರೇಕ್ಷಕರು ಸಿಕ್ಕಿದಾಗ ಯಕ್ಷಗಾನದ ಆಗುಹೋಗುಗಳನ್ನು ಮಾತನಾಡುತ್ತಿರುವಾಗ ಕೆ.ವಿ. ಗಣಪಯ್ಯನವರ ಹೆಸರನ್ನು ಉಲ್ಲೇಖಿಸುವುದನ್ನು ಮರೆಯುವುದಿಲ್ಲ. ಅಂತಹಾ ವಿಶಿಷ್ಟ ಅರ್ಥಗಾರಿಕೆಯಿಂದ ಜನಮಾನಸದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಗಳಿಸಿಕೊಂಡ ಕಲಾವಿದರು ಆಲಜೆ ಶ್ರೀ ಕೆ.ವಿ. ಗಣಪಯ್ಯನವರು. ಇವರ ಕೌರವನೇ ಮೊದಲಾದ ಖಳ ಪಾತ್ರಗಳ ಅರ್ಥಗಾರಿಕೆ ಬಲು ಸೊಗಸು. ಶೇಣಿ ಗೋಪಾಲಕೃಷ್ಣ ಭಟ್ , ದೊಡ್ಡ ಸಾಮಗರು, ಸಣ್ಣ ಸಾಮಗರು, ಕೀರಿಕ್ಕಾಡು ವಿಷ್ಣು  ಮಾಸ್ತರರು, ಪುಟ್ಟಣ್ಣ ಗೌಡರು, ಪೆರ್ಲ ಕೃಷ್ಣ ಭಟ್ಟರು,  ದೇರಾಜೆ ಸೀತಾರಾಮಯ್ಯ, ಕಾಂತ ರೈಗಳು ,  ಮೂಡಂಬೈಲು, ಉಡುವೆಕೋಡಿ, ಪ್ರಭಾಕರ ಜೋಶಿ ಮೊದಲಾದವರ ಜೊತೆ ಅರ್ಥ ಹೇಳಿದ ಅನುಭವ ಗಣಪಯ್ಯನವರಿಗಿದೆ. 

ಯಕ್ಷಗಾನ ಪ್ರದರ್ಶನಗಳಲ್ಲಿ ವೇಷ ಹಾಕಿದ್ದೂ ಇದೆ. ಯಕ್ಷಗಾನ ನಾಟಕಗಳಲ್ಲೂ ವೇಷ ಮಾಡಿದ್ದರು. ಆದರೆ ದೈಹಿಕ ನಿಶ್ಯಕ್ತಿ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಆಟಗಳಲ್ಲಿ ಭಾಗವಹಿಸುವುದನ್ನು ಎಷ್ಟೋ ವರ್ಷಗಳ ಮೊದಲೇ ಬಿಟ್ಟಿದ್ದರು. ನಾಟ್ಯದ ಅನುಭವ ಇಲ್ಲದೇ ಇದ್ದುದರಿಂದ ಆಟಗಳಲ್ಲಿ ಭಾಗವಹಿಸುವುದು  ಸರಿಯಲ್ಲ ಎಂದು ಅವರ ಅಭಿಪ್ರಾಯ. ಅವರ ಸಂಪೂರ್ಣ ಕಲಾಜೀವನ ಹಲಾವಾರು ಅಡೆತಡೆಗಳಿಂದ ಕೂಡಿತ್ತು. ಆದುದರಿಂದ ಕಲಾವಿದನಾಗಿ ಸಂಪೂರ್ಣ ವೇಗದ ಓಟವನ್ನು ಮಾಡುವುದಕ್ಕೆ ಆಗಲಿಲ್ಲ ಎಂದು ಅವರು ಒಪ್ಪುತ್ತಾರೆ.

ಆಗಾಗ ಕಾಡುತ್ತಿದ್ದ ಗಂಭೀರ ಕಾಯಿಲೆಗಳು ಹಲವಾರು ಬಾರಿ ಅವರನ್ನು ಯಕ್ಷಗಾನ ರಂಗದಿಂದ ದೂರ ಉಳಿಯುವಂತೆ ಮಾಡಿತ್ತು. ಆದರೆ ಮತ್ತೆ ಮತ್ತೆ ಚೇತರಿಸಿಕೊಂಡು ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. ಈಗ ವಯೋಸಹಜ ಖಾಯಿಲೆ ನಿಶ್ಶಕ್ತಿಗಳು ಆವರಿಸಿರುವುದರಿಂದ ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನ ರಂಗದಿಂದ ದೂರ ಉಳಿದಿದ್ದಾರೆ. ಅವರಿಗೆ ಈಗ ವಯಸ್ಸು 88.  ಕೆ. ವಿ. ಗಣಪಯ್ಯನವರಲ್ಲಿ ಅವರ ಕಲಾ ಜೀವನದ ಅನುಭವಗಳನ್ನು ಕೇಳಿದಾಗ ಅವರು ಬಿಚ್ಚು ಮನಸ್ಸಿನಿಂದ  ಉತ್ತರಿಸುತ್ತಾರೆ. 

ಪ್ರಶ್ನೆ: ನಿಮ್ಮ ಆ ಕಾಲದ ಯಕ್ಷಗಾನದ ಕೆಲವು ಅನುಭವಗಳನ್ನು ತಿಳಿಸಬಹುದೇ?

ಉತ್ತರ: ನನಗೆ ವಯೋಸಹಜವಾಗಿ ಮರೆವು ಇರುವುದರಿಂದ ತೃಪ್ತಿಕರವಾಗಿ ಹೇಳಬಲ್ಲೆನೆಂಬ ಧೈರ್ಯವಿಲ್ಲ. ಆದರೂ ಮರೆಯದೆ ಉಳಿದ ಕೆಲವು ಸಂಗತಿಗಳನ್ನು ಹೇಳಬಹುದು.  ವಿದ್ಯಾರ್ಥಿ ದೆಸೆಯಲ್ಲಿಯೇ ನಾನು ತಾಳಮದ್ದಳೆಗಳಲ್ಲಿ ಅರ್ಥ ಹೇಳುತ್ತಿದ್ದೆ.  ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ‘ ಎಂದು ಕವಿರಾಜ ಮಾರ್ಗದಲ್ಲಿ ಹೇಳಿದ  ಕಂದ ಪದ್ಯದಂತೆ ರಾಮಾಯಣ, ಮಹಾಭಾರತ, ಭಾಗವತಗಳನ್ನು ಓದದ ಜನ ಅದರ ಕಥೆಯನ್ನು ಹಿರಿಯರಿಂದ ಕೇಳಿ, ಬಯಲಾಟಗಳನ್ನು ನೋಡಿ ತಿಳಿದಂತಹ ಜನ ಅದನ್ನು ತಮ್ಮಿಂದ ಕಿರಿಯರಿಗೆ ಹೇಳುತ್ತಿದ್ದರು. ಅದರಂತೆ ಪ್ರದರ್ಶನಗಳು ನಡೆಯುತ್ತಿದ್ದುವು. ಬಹಳ ಕಷ್ಟದ ದಿನಗಳು. ಕಲಾವಿದರಿಗೆ ಹೆಚ್ಚಿನ ಗೌರವ ಇರಲಿಲ್ಲ. ಏನೂ ಕೆಲಸ ಇಲ್ಲದವ ಆಟಕ್ಕೆ ಹೋಗತ್ತಾನೆ ಎನ್ನುವ ಮಾತು ಹಳ್ಳಿಗಳಲ್ಲಿ ಪ್ರಚಾರದಲ್ಲಿದ್ದಂತಹಾ ಕಾಲ.

ಅವರು ಕಲಾಭಿಮಾನದಿಂದ ಮಳೆಗಾಲದಲ್ಲಿ ಕೃಷಿಕರ್ಮಗಳನ್ನು ಮಾಡಿ ಮಳೆ ಹೋದ ಮೇಲೆ ವೇಷಗಳನ್ನು ಧರಿಸಿ ಪ್ರದರ್ಶನ ಮಾಡುತ್ತಿದ್ದರು.  ಅಂತಹಾ ವೇಷಗಳು ಕಲಾವಿದರ ಸಂಪೂರ್ಣ ತೊಡಗಿಸುವಿಕೆಯಿಂದ ಒಳ್ಳೆಯ ರೀತಿಯ ಪ್ರದರ್ಶನಗಳನ್ನು ಕಾಣುತ್ತಿದ್ದುವು. ಈಗಿನಂತೆ ರಂಗುರಂಗಿನ, ಝಗಝಗಿಸುವ ಪ್ರದರ್ಶನ ಅಲ್ಲ ಅದು.  ಕಲೆಯಲ್ಲಿ ಸಂಪೂರ್ಣ ತಾದಾತ್ಮ್ಯತೆಯನ್ನು ಹೊಂದಿದ ಕಲಾವಿದರು ಮನಃಪೂರ್ವಕವಾಗಿ ಮಾಡುತ್ತಿದ್ದ ಪ್ರದರ್ಶನಗಳವು. ಪೂರ್ಣ ರಾತ್ರಿ ಅಂದರೆ ಬೆಳಗಿನ ವರೆಗೆ ಇರುವಂತಹಾ ವೇಷ. ಇಂತಹಾ ಪ್ರದರ್ಶನ ಜನರಲ್ಲಿ ಭಕ್ತಿಯ ಭಾವವನ್ನೂ ತುಂಬುತ್ತಿತ್ತು. ಹಾಗೂ ಸಾಮಾಜಿಕ, ಸಾಂಸ್ಕೃತಿಕ, ನೈತಿಕ ವಿಷಯಗಳ ತಿಳಿವಳಿಕೆಯನ್ನೂ ನೀಡುತ್ತಿತ್ತು. ವೇಷವನ್ನು ನೋಡಿ ಅದರ ಪರಿಣಾಮ, ಭಾಷೆ ಅರ್ಥ ಆಗುವವರಿಗೆ ವಿಷಯಗಳ ನಿರೂಪಣೆಯ ಪರಿಣಾಮವೂ ಆಗುತ್ತಿತ್ತು.

ನಾನು ನೋಡಿದ ಮೇಳಗಳ ಪ್ರದರ್ಶನಗಳ ಆಧಾರದ ಮೇಲೆ ನನ್ನ ಅನುಭವವನ್ನು ಹೇಳುವುದಾದರೆ ಬಯಲಾಟದ ಮೇಳಗಳಲ್ಲಿ ಕುಂಬಳೆ ತಿಮ್ಮಪ್ಪು, ಸಣ್ಣ ತಿಮ್ಮಪ್ಪು, ಬಣ್ಣದ ಮಾಲಿಂಗ, ಕೋಲುಳಿ  ಸುಬ್ಬ ಹೀಗೆ ಹಲವಾರು ಕಲಾವಿದರು ಪ್ರಸಿದ್ದರಾಗಿದ್ದರು.  ಅವರ ವೇಷಗಳನ್ನೆಲ್ಲಾ ನೋಡಿದ್ದೇನೆ. ಅದು ಬಹಳ ಸಹಜವಾಗಿ ಪ್ರದರ್ಶಿಸಲ್ಪಡುತ್ತಿತ್ತು. ಸಣ್ಣ ತಿಮ್ಮಪ್ಪು ಅವರು ಮಯಾಸುರ ವೇಷ ಮಾಡಿದ ನಂತರ ರಾಜಸೂಯಾಧ್ವರದ ಶಿಶುಪಾಲ ಮಾಡಿದುದನ್ನೂ ಕಂಡಿದ್ದೇನೆ. ಆಗ ಪುಂಡುವೇಷಗಳ ಸಾಮರ್ಥ್ಯವನ್ನು ಗುರುತಿಸುವುದು ಹೇಗೆ ಅಂದರೆ ಯಾರು ಹೆಚ್ಚು ದಿಗಿನ ಹಾರಿದ ಎಂಬ ಲೆಕ್ಕಾಚಾರದಲ್ಲಿ. ಪುಂಡುವೇಷಧಾರಿಯು ತನ್ನ ಪಾತ್ರದ ಅಭಿವ್ಯಕ್ತಿಗೆ ಬೇಕಾದಂತೆ ನಾಟ್ಯ ಮಾಡಿದರೂ ಜನರು ಮೆಚ್ಚುವುದು ಹಾರಾಟವನ್ನು. ಯಕ್ಷಗಾನ ಎಂದರೆ ನಾಟ್ಯಪ್ರಧಾನವಾದ ಮಾಧ್ಯಮ ಎಂಬ ಭಾವನೆ ತಿಳಿದೋ ತಿಳಿಯದೆಯೋ  ಜನಸಾಮಾನ್ಯರಲ್ಲಿತ್ತು. 

ಸಂಗೀತ ಮತ್ತು ಸಾಹಿತ್ಯ ಸರಸ್ವತಿ ಮಾತೆಯ ಸ್ತನದ್ವಯಗಳು ಎಂದು ಹೇಳುತ್ತಾರೆ. ಹಿತ ಮಿತವಾದ ಮಾತುಗಾರಿಕೆಯಿಂದ ಪಾತ್ರದ ಮನೋಭಾವವನ್ನು ವಿಚಾರಗಳನ್ನು ಪ್ರತಿಬಿಂಬಿಸುವಂತಹ ಪ್ರಯತ್ನ ಆಗ ಇತ್ತು. ದೀರ್ಘ ಭಾಷಣ ಇರಲಿಲ್ಲ. ಅದು ಈ ಕಾಲಕ್ಕೂ ಆ ಕಾಲಕ್ಕೂ ಇರುವಂತಹಾ ವ್ಯತ್ಯಾಸ. ಆದರೆ ಆಗಿನ ಭಾಗವತರುಗಳಲ್ಲಿ  ಕೆಲವರು ಮಳೆಗಾಲದ ಸಂದರ್ಭಗಳಲ್ಲಿ ಹರಿಕತೆಯನ್ನೂ ಮಾಡುತ್ತಿದ್ದರು. ಸೂರಿಕುಮೇರಿ ಗೋವಿಂದ ಭಟ್ಟರು ಅವರ ಯೌವನದಲ್ಲಿ ಮಾಡಿದ ಪಾತ್ರಗಳನ್ನೂ ನೋಡಿದ್ದೇನೆ. ದ್ರೌಪದಿ ವಸ್ತ್ರಾಪಹಾರದ ದುರ್ಯೋಧನ. ಆ ಯುವಕ ದುರ್ಯೋಧನ ಎಂತಹಾ ರೋಷವನ್ನು ದ್ರೌಪದಿಯ ಬಗ್ಗೆ ಹೊಂದಿದ್ದ ಎನ್ನುವುದನ್ನು ಬಿಂಬಿಸುವ ಕ್ರಮ ಈಗ ಯಾವ ಮೇಳಗಳಲ್ಲಿಯೂ ಕಾಣುವುದಿಲ್ಲ. ಅದೇ ಗೋವಿಂದ ಭಟ್ಟರು ಆ ನಂತರದ ಕೌರವನ ಪತ್ರಗಳನ್ನು ಬಗೆ ಬಗೆಯ ರೀತಿಯಲ್ಲಿ ಚಿತ್ರಿಸಿದ್ದಾರೆ. ಹೀಗೆ ಸನ್ನಿವೇಶಕ್ಕೆ ತಕ್ಕಂತೆ ಪಾತ್ರಗಳನ್ನು ಚಿತ್ರಿಸುವ ಕೆಲಸವನ್ನು ಗೋವಿಂದ ಭಟ್ಟರು ಮಾಡಿದ್ದಾರೆ.

ಅದೇ ಕ್ರಮ ಹಿಂದೆ ಮಾಣಂಗಾಯಿ ಕೃಷ್ಣ ಭಟ್ಟರ ವೇಷಗಳಲ್ಲಿ ಇತ್ತು. ಇವರಂತೆ ಒಂದೇ ಪ್ರಸಂಗದ ವಿವಿಧ ಪಾತ್ರಗಳನ್ನು ನಿರ್ವಹಿಸುವ ಕೌಶಲ ಈಗಿನ ಕಲಾವಿದರಲ್ಲಿ ಯಾರಲ್ಲಿಯೂ ಇಲ್ಲ ಎಂದರೆ ಕಲಾವಿದರು ಕೋಪಿಸಿಕೊಳ್ಳಬಾರದು. ಪದ್ಯದ ಮಿತಿಯನ್ನು ಮೀರಿ ಪಾತ್ರಚಿತ್ರಣ ಆಗಬಾರದು ಎಂಬ ಎಚ್ಚರ ಆಗ ಇತ್ತು. ಕೆಲವೇ ವಾಕ್ಯಗಳಲ್ಲಿ ಆ ಪಾತ್ರದ ಸ್ವಭಾವದ ಚಿತ್ರಣವನ್ನು ನೀಡುವ ಕೌಶಲ ಆಗ ಇದ್ದಷ್ಟು ಈಗ ಇಲ್ಲ. ಆದರೆ ಈಗ ಯಕ್ಷಗಾನದಲ್ಲಿ ವಿದ್ವಾಂಸ ಕಲಾವಿದರು ತುಂಬಾ ಇದ್ದಾರೆ. ಆದರೆ ಆ ರೀತಿಯ ಕೌಶಲದ ಪಾತ್ರಧಾರಿಗಳು ಕಡಿಮೆ. ದೀರ್ಘ ಭಾಷಣ ಮಾಡಿದರೆ ಒಳ್ಳೆಯದು ಎಂಬ ಭಾವನೆ ಹೆಚ್ಚಿನ ಪ್ರೇಕ್ಷಕರು ಮತ್ತು ಕಲಾವಿದರಲ್ಲಿದ್ದರೆ ಅದು ಆರೋಗ್ಯಕರ ಲಕ್ಷಣ ಅಲ್ಲ. 

ಕೂಟಗಳ ಬಗ್ಗೆ ಹೇಳುವುದಾದರೆ ಆಗ ಎನ್.ಎಸ್. ಕಿಲ್ಲೆಯವರು ಕರ್ಣನ ಪಾತ್ರವನ್ನು ಬಹಳ ಮನೋಜ್ಞವಾಗಿ ಚಿತ್ರಿಸುತ್ತಿದ್ದರು. ಶೆಡ್ಡೆ ಕೃಷ್ಣ ಮಲ್ಯರು ಶಲ್ಯನ ಪಾತ್ರದಲ್ಲಿ ಚೆನ್ನಾಗಿ ಅರ್ಥ ಹೇಳುತ್ತಿದ್ದರು. ಕರ್ಣನ ಪತ್ರವನ್ನೂ ಹೇಳುತ್ತಿದ್ದರು. ಪೊಳಲಿ  ಶಾಸ್ತ್ರಿಗಳು, ಕವಿಭೂಷಣ ವೆಂಕಪ್ಪ ಶೆಟ್ಟಿ ಮೊದಲಾದವರು ಯಕ್ಷದಿಗ್ಗಜರು. ಇವರ ಪ್ರಭಾವಲಯದಿಂದ ಪ್ರಚೋದಿತರಾಗಿ ಅನೇಕ ಕಲಾವಿದರು ಬೆಳೆದು ಬಂದಿದ್ದಾರೆ” 

ಪ್ರಶ್ನೆ: ಅಧ್ಯಾಪಕ ವೃತ್ತಿ ಹಾಗೂ ತಾಳಮದ್ದಳೆ ಅರ್ಥಗಾರಿಕೆಯನ್ನು ಸರಿದೂಗಿಸಿಕೊಂಡು ಹೋದದ್ದು ಹೇಗೆ?ಉತ್ತರ:  ಯಾವುದಾದರೂ ಒಂದನ್ನೇ ಸರಿಯಾಗಿ ಮಾಡಬೇಕು ಎನ್ನುವ ವಿಷಯ ನಿಜ. “jack of all trades, master of none” ಎಂದು ಆಂಗ್ಲ ಭಾಷೆಯಲ್ಲಿ ನುಡಿಯೊಂದಿದೆ.  ಆದರೂ ನನ್ನಲ್ಲಿ ಬಹುಮುಖ ಪ್ರತಿಭೆಯಿತ್ತು. ನನಗೆ ಬಾಲ್ಯದಲ್ಲಿ ತಾಯಿ ಸರಸ್ವತಿ ಅಮ್ಮ ಪುರಾಣ ಪುಣ್ಯ ಕಥೆಗಳನ್ನು ಹೇಳುತ್ತಿದ್ದಳು. ನಾವು ಪ್ರತಿದಿನವೂ ರಾಮಾಯಣ ಅಥವಾ ಮಹಾಭಾರತ ಅಥವಾ ಭಾಗವತ, ಜೈಮಿನಿ ಭಾರತಗಳ ಒಂದೊಂದು ಸಂಧಿಯನ್ನು ಮನೆಯಲ್ಲಿ ಸಂಜೆಯ ವೇಳೆಗೆ ಓದಬೇಕಿತ್ತು. ಇದರಿಂದಾಗಿ ನಮ್ಮ ಅರಿವಿಲ್ಲದಂತೆ ಒಂದು ಸಂಸ್ಕಾರ, ಪುರಾಣಗಳ ಬಗ್ಗೆ ಒಂದು ಅಭಿಮಾನ ನಮ್ಮಲ್ಲಿ ಬೆಳೆಯತೊಡಗಿತು. ನನ್ನ ಹುಟ್ಟೂರು ಚೊಕ್ಕಾಡಿ. ಅಲ್ಲಿಯ ಯಕ್ಷಗಾನದ ವಾತಾವರಣ ಇತ್ತು. ನಿರಂತರವಾಗಿ ತಾಳಮದ್ದಳೆಗಳು ನಡೆಯುತ್ತಿತ್ತು. ಅವುಗಳಿಗೆ ನಾನು ಹೋಗುತ್ತಿದ್ದೆ. ಸಣ್ಣ ವಯಸ್ಸಿನಲ್ಲಿಯೇ ನನಗೂ ಅರ್ಥ ಹೇಳುವ ಅವಕಾಶಗಳನ್ನು ಕೊಟ್ಟಿದ್ದರು. ನಾನೊಬ್ಬ ಅರ್ಥಧಾರಿ ಅಂತ ಅಲ್ಲ. ಇವನೂ ಕಲಿಯಲಿ ಎಂಬ ಉದಾರತೆಯಿಂದ.

ಅಲ್ಲಿ ಪುಟ್ಟಣ್ಣ ಗೌಡರ ಅರ್ಥವನ್ನು ಕೇಳಿದ ಮೇಲೆ ನಾನು ತಾಳಮದ್ದಲೆಯಿಂದ ಪ್ರಭಾವಿತನಾದೆ. ಅವರ ಭಾಷೆಯೂ ಸೊಗಸು, ನಿರೂಪಣೆಯೂ ಸೊಗಸು.  ದೇರಾಜೆ ಸೀತಾರಾಮಯ್ಯನವರು ರಸ, ಭಾವಗಳಿಗೆ ಪುಷ್ಟಿ ಕೊಟ್ಟು ಮಾತನಾಡುತ್ತಿದ್ದರು. ಚುಟುಕು ಚುಟುಕಾಗಿ ಚಟಾಕಿಗಳನ್ನು ಹಾರಿಸಿ ಮಾತನಾಡುವುದರಲ್ಲಿ ಅವರು ನಿಸ್ಸೀಮರು. ಈ ಎಲ್ಲ ಕೇಳಿದ ಅನುಭವದಿಂದ ನಾನು ತಾಳಮದ್ದಳೆಯಲ್ಲಿ ಆಸಕ್ತಿ ಹೊಂದಿದೆ. ಶಾಲಾ ವಾರ್ಷಿಕೋತ್ಸವದ ದಿನ ನಡೆಯುತ್ತಿದ್ದ ತಾಳಮದ್ದಳೆಯಲ್ಲಿ ಭಾಗವಹಿಸುವ ಸಂದರ್ಭ ಬಂತು. ಆರನೆಯ ತರಗತಿಯಲ್ಲಿರುವಾಗ ಸೀತಾಪಹಾರದ ಪ್ರಸಂಗದಲ್ಲಿ ರಾವಣನ ಎದುರಾಗಿ ಜಟಾಯುವಾಗಿ ಅರ್ಥ ಹೇಳಿದೆ. ‘ಎಲ್ಲಿಗೆ ಒಯ್ಯುವೆ ಸೀತೆಯ’ ಪದ್ಯಕ್ಕೆ ನನ್ನ ಅರ್ಥದ ಓಘಕ್ಕೆ ನನ್ನ ಪ್ರತಿಪಾತ್ರಧಾರಿಯಾಗಿದ್ದ ಸಹಪಾಠಿ ಅರ್ಥ ಹೇಳಲಾಗದೆ ಹತಪ್ರಭನಾದ. ಮಾತು  ಬರಲಿಲ್ಲ. ಆಮೇಲೆ ಹೇಗೋ ಬೇರೆಯವರ ಸಹಾಯದಿಂದ ಮುಂದುವರಿಯಿತು.

ಅಂತೂ ನಾನೂ ಅರ್ಥ ಹೇಳಿಯೇನು ಎಂಬ ಧೈರ್ಯ ನನಗೆ ಬಂತು. ನಂತರದ ದಿನಗಳಲ್ಲಿ ನಾನು ಅರ್ಥ ಹೇಳಲೋಸುಗ ಪ್ರಸಂಗ ಪುಸ್ತಕಗಳನ್ನು ಓದುತ್ತಿದ್ದೆ. ಯಾವ ಪುಸ್ತಕ ಸಿಕ್ಕಿದರೂ ಓದುವಂತಹಾ ಒಂದು ಅಭ್ಯಾಸ ಇತ್ತು. ವಿರಾಮದ ಸಮಯದಲ್ಲಿ ಗ್ರಂಥಾಲಯಗಳಲ್ಲಿ ಕಾಲ ಕಳೆಯುತ್ತಿದ್ದೆ. ರಾಮಾಯಣ, ತೊರವೆ ರಾಮಾಯಣ, ಕುಮಾರವ್ಯಾಸ ಭಾರತ, ಲಕ್ಷ್ಮೀಶನ ಜೈಮಿನಿ ಭಾರತ ಇವುಗಳೆಲ್ಲ ನನಗೆ ಪ್ರಿಯವಾದ ಗ್ರಂಥಗಳು. ಅವುಗಳನ್ನೆಲ್ಲಾ ಓದುತ್ತಾ ಹೋದಂತೆ ಹಲವಾರು ಪದ್ಯಗಳು ಕಂಠಪಾಠವಾಗುತ್ತಿದ್ದುವು. ಉದ್ಯೋಗ ಪರ್ವದ ಭಾಗ ನನಗೆ ಇಷ್ಟವಾದ ಭಾಗ. ಅದರಲ್ಲೂ ಕೌರವನ ಪಾತ್ರವನ್ನು ಹೇಳುವುದಕ್ಕೆ ತುಂಬಾ ಇಷ್ಟ. ಕೌರವನು ದುಷ್ಟನೂ ಹೌದು. ಬುದ್ಧಿವಂತನೂ ಹೌದು. ದೈವಕೃಪೆಯನ್ನು ಕಳೆದುಕೊಂಡವನೂ ಹೌದು. ಛಲವಾದಿಯೂ ಹೌದು. ಛಲದೊಳ್ ದುರ್ಯೋಧನಂ ಎಂದು ಪಂಪ ಕವಿಯೇ ಹೇಳಿದ್ದಾನೆ. ಇಂತಹಾ ಪಾತ್ರಗಳ ಬಗ್ಗೆ ಆಸಕ್ತಿಯಿದ್ದ ನಾನು ಅವುಗಳನ್ನು ನೋಡುತ್ತಿದ್ದೆ. ಕೇಳುತ್ತಿದ್ದೆ.

ಹೀಗೆ ಆಟಗಳನ್ನು ನೋಡುತ್ತಾ ಸಂಸ್ಕಾರ ಮತ್ತು ಕಲಾಸಕ್ತಿ ಬೆಳೆಯಿತು. ನಾನು ಉದ್ಯೋಗ ರಂಗಕ್ಕೆ ಸೇರಿ ಅಧ್ಯಾಪಕನಾಗಿ ವೃತ್ತಿಯನ್ನು ಕೈಗೊಂಡ ಮೇಲೆ ವಿರಾಮದ ಸಮಯದಲ್ಲಿ ಕೂಟಗಳಿಗೆ ಹೋಗುತ್ತಿದ್ದೆ. ನನ್ನ ಕಲಾಪ್ರತಿಭೆಯನ್ನು ಕಂಡಂತಹ ಕಲಾಭಿಮಾನಿಗಳು ಕೂಟಗಳನ್ನು ಏರ್ಪಡಿಸುತ್ತಿದ್ದರು. ದೂರದ ಊರುಗಳಿಂದಲೂ ಆಮಂತ್ರಣಗಳು ಬರುತ್ತಿದ್ದುವು. ಕೆಲವೊಮ್ಮೆ ಅನಿವಾರ್ಯವಾಗಿ ರಜೆ ಹಾಕಿ ಹೋದದ್ದೂ ಉಂಟು. ಆ ರೀತಿ ನಾನು ವ್ಯವಸ್ಥೆ ಮಾಡಿಕೊಂಡು ಕಲೆಯಲ್ಲಿ ತೊಡಗಿಸಿಕೊಂಡಿದ್ದುದೇ ಹೊರತು ನನ್ನ ಉದ್ಯೋಗಕ್ಕೆ ನಾನು ವಂಚನೆಯನ್ನು ಮಾಡಲಿಲ್ಲ. ನಾನು ಶಿಕ್ಷೆಯಿಂದ ಶಿಕ್ಷಣ ಎನ್ನುವ ತತ್ವದವನಲ್ಲ. ಶಿಕ್ಷೆ ಎಂದರೆ ತಿದ್ದುವುದು ಮಾತ್ರ ಎಂದು ತಿಳಿದವನು.”

ಪ್ರಶ್ನೆ: ಅರ್ಥಗಾರಿಕೆಗೆ ಪೂರ್ವ ತಯಾರಿ ಮಾಡುವುದು ಹೇಗೆ?

ಉತ್ತರ: ಅದಕ್ಕೆ ಬೇಕಾದ ಸಾಕಷ್ಟು ತಯಾರಿ ನಮ್ಮಲ್ಲಿ ಇರಬೇಕಾಗುತ್ತದೆ. ಅದು ಸಹಜವಾಗಿಯೇ ಎಲ್ಲ ಕ್ಷೇತ್ರಗಳಲ್ಲಿಯೂ ಬೇಕಾಗುತ್ತದೆ. ಹಾಲನ್ನು ಕೊಡಬೇಕಾದರೆ ಹಸುಗಳು ಸಾಕಷ್ಟು ಮೇವನ್ನು ಮೇಯಬೇಕಾಗುತ್ತದೆ. ಅದೇ ರೀತಿ ಕಲಾಪ್ರದರ್ಶನ ಮಾಡಬೇಕಾದರೆ ಕಲಾವಿದ ಸಂಗ್ರಹ ಮಾಡಲೇ ಬೇಕಾಗುತ್ತದೆ. ಕೆಲವನ್ನು ಗ್ರಂಥಗಳಿಂದ, ಕೆಲವನ್ನು ಅನುಭವಿಗಳಿಂದ ಕೆಲವನ್ನು ಸ್ವಾನುಭವದಿಂದ ಆಸಕ್ತಿಯಿಂದ ಸಂಗ್ರಹಿಸಿಕೊಳ್ಳಬೇಕಾಗುತ್ತದೆ. ಹಾಗೆ ಪ್ರಯತ್ನಪಟ್ಟಾಗ ನನ್ನ ಭಾಷಾ ಪ್ರಭುತ್ವಕ್ಕೆ ಸಹಕಾರಿಯಾದ ಅಂಶಗಳು ಸಿಕ್ಕಿದುವು. ನಾನು ಕನ್ನಡ ಭಾಷಾ ವಿದ್ವಾನ್ ಆಗಬೇಕೆಂದು ಪರೀಕ್ಷೆಗೆ ಓದಿದವನು.  ಆ ರೀತಿ ಪುರಾಣ ಪುಣ್ಯ ಕಥೆಗಳನ್ನು ಓದಿದಾಗ ಸಿಕ್ಕಿದಂತಹಾ ಅನುಭವ ನನ್ನ ಪ್ರದರ್ಶನಗಳಲ್ಲಿ ಹೊಸ ರೂಪದಿಂದ ಪ್ರಕಟವಾಗುತ್ತಾ ಇತ್ತು. ಜನ ಅದನ್ನು ಮೆಚ್ಚಿದರು. 

ಪ್ರಶ್ನೆ: ನಿಮಗೆ ಆದರ್ಶ ಕಲಾವಿದರು ಯಾರು?

ಉತ್ತರ: ನನಗೆ ಇಂತಹವರೇ ಆದರ್ಶ ಎಂದು  ಯಾರೂ ಇಲ್ಲ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಅರ್ಥವನ್ನು ಕೇಳಿ ಅದರಿಂದ ಬಹಳಷ್ಟು ಪ್ರಭಾವಿತರಾದವನು. ಮಾತ್ರವಲ್ಲದೆ ಒಂದೆರಡು ಬಾರಿ ಅವರ ಜೊತೆ ತಾಳಮದ್ದಳೆ ವೇದಿಕೆಯನ್ನೂ ಹಂಚಿಕೊಂಡವನು. ಅವರೆಲ್ಲಾ ಕಿರಿಯ ಕಲಾವಿದರ ಬೆಳವಣಿಗೆಗೆ ಅವಕಾಶ ಕೊಡುತ್ತಿದ್ದವರು. ಆಮೇಲೆ ನಾನು ಪ್ರಭಾವಿತನಾದದ್ದು ಪುಟ್ಟಣ್ಣ ಗೌಡರ ಮತ್ತು ಶೇಣಿ ಗೋಪಾಲಕೃಷ್ಣ ಭಟ್ಟರ ಪಾತ್ರಚಿತ್ರಣಗಳಿಂದ ಮಾತ್ರ. ಶೇಣಿಯವರಿಗೆ ಕೂಡಾ ನಮ್ಮ ಈ ಕಡೆಯ ಕೂಟಗಳಲ್ಲಿ ಯಾರಾದರೂ ಆಮಂತ್ರಣ ಮಾಡಿದರೆ ಅವರು ‘ಗಣಪಯ್ಯನವರಿಗೆ ಹೇಳಿ’ ಹೇಳುವಂತಹ ಅಭ್ಯಾಸ ಇತ್ತು. ಯಾಕೆ ಎಂದು ಅವರು ವಿವರಿಸಿ ಹೇಳಿದರಂತೆ.

”ಪಾತ್ರಗಳ ಹೃದಯವನ್ನು ತಿಳಿದು ಅದಕ್ಕೆ ಸರಿಯಾಗಿ ಅರ್ಥ ಹೇಳುವವರು ಗಣಪಯ್ಯನವರು ಮತ್ತು ಪ್ರತಿ ಪಾತ್ರಧಾರಿ ಏನನ್ನು ಹೇಳುತ್ತಾನೆ ಎನ್ನುವುದನ್ನು ಗುರುತಿಸಿ ಅದಕ್ಕೆ ಪೂರಕವಾಗಿ ಮಾತನಾಡುವವರು. ವ್ಯರ್ಥ ವಾದವನ್ನು ಮಾಡುವವರಲ್ಲ. ಆ ರೀತಿ ಮಾದರಿ ಅರ್ಥವನ್ನು ಹೇಳುವುದರಿಂದ ಅವರನ್ನು ಬರಲಿಕ್ಕೆ ಹೇಳಬೇಕು. ಅವರ ಅನುಭವ ಪ್ರದರ್ಶನ, ಪ್ರತಿಭೆ ಪ್ರಯೋಜನಕ್ಕೆ ಸಿಗಬೇಕಾದರೆ ಕೂಟಗಳಲ್ಲಿ ಅದಕ್ಕೆ ವೇದಿಕೆ ಸಿಗಬೇಕು” ಎಂದು ಶೇಣಿಯವರು ಹೇಳಿದ್ದರಂತೆ. ಹಾಗೆಯೆ ಪ್ರಸಿದ್ಧ ಕೂಟಗಳಲ್ಲಿ ಭಾಗವಹಿಸಲು ಆಮಂತ್ರಣ ಬರುತ್ತಿತ್ತು. ನಾನು ಚಿಕ್ಕಪುಟ್ಟ ಪಾತ್ರಗಳಲ್ಲಿ ಅರ್ಥ ಹೇಳುವ ಬಯಕೆ ವ್ಯಕ್ತಪಡಿಸುತ್ತಿದ್ದೆ. ಕೆಲವರಿಗೆ ಪ್ರಮುಖ ಪಾತ್ರಗಳಲ್ಲಿ ಅರ್ಥ ಹೇಳಿದರೆ ಮಾತ್ರ ಅವನು ಅರ್ಥಧಾರಿ ಅಥವಾ ಕಲಾವಿದ ಏನು ಭಾವಿಸುವ ಕ್ರಮ ಉಂಟೋ ಏನೋ? ನನಗೆ ಅಂತಹಾ ಭಾವನೆಗಳಿಲ್ಲ. ಆದರೆ ಹಲವಾರು ಕೂಟಗಳಲ್ಲಿ ಪ್ರಮುಖ ಪಾತ್ರಗಳು ಸಿಗುತ್ತಿತ್ತು.

ಆದರೆ ನಾನು ಪೋಷಕ ಪಾತ್ರಗಳನ್ನೂ ಚೆನ್ನಾಗಿ ಹೇಳಲು ಹೇಗೆ ಸಾಧ್ಯ ಎಂದು ಯೋಚಿಸುವವನು. ಹಾಗೆಯೆ ಟಿಕೆಟ್ ತಾಳಮದ್ದಳೆ ಪ್ರದರ್ಶನಗಳಲ್ಲಿಯೂ ನಾನು ಪೋಷಕ ಪಾತ್ರಗಳನ್ನೇ ಬಯಸಿದೆ. ಅದಕ್ಕೆ ಶ್ರಮ ಸ್ವಲ್ಪ ಕಡಿಮೆಯೆಂದು ತೋರಿದರೂ ಚಿಂತನೆ ಅಧ್ಯಯನದ ಅಗತ್ಯ ಕಡಿಮೆಯೇನಲ್ಲ. ಅಧ್ಯನಶೀಲತೆ ಮೊದಲಿನಿಂದಲೂ ಇದ್ದುದರಿಂದ ಅದನ್ನು ಮಾಡಿದ್ದೇನೆ.  ಯಶಸ್ವಿಯೂ ಆಗಿದ್ದೇನೆ. ಇದು ಅಚ್ಚುಕಟ್ಟು ಎಂದು ಜನ ಒಪ್ಪಿದ್ದಾರೆ. ಹೀಗೂ ಉಂಟಲ್ಲ, ಈ ರೀತಿಯೂ ಹೇಳಬಹುದಲ್ಲಾ ಎಂದು ಆಶ್ಚರ್ಯಪಟ್ಟವರೂ ಇದ್ದರು. ಇದು ಹಾಳು ಎಂದು ಹೇಳುವುದನ್ನು ಕೇಳಿದವನಲ್ಲ. ಮುಖಸ್ತುತಿಯನ್ನು ಮಾಡುವುದು ನನಗೆ ಇಷ್ಟವಿಲ್ಲ. ಇದ್ದ ಹಾಗೆ ವಿಮರ್ಶೆ ಮಾಡುವುದನ್ನು ಮೆಚ್ಚುವವನು ಕೂಡಾ. 

ಪ್ರಶ್ನೆ: ಅನಾರೋಗ್ಯ ಕಾಡುತ್ತಿರುವಾಗಲೂ ನೀವು ಅರ್ಥ ಹೇಳಿದ್ದೀರೆಂದು ಕೇಳಿದ್ದೇನೆ. ಅದನ್ನು ತಿಳಿಸಬಹುದೇ?ಉತ್ತರ: ಖಂಡಿತಾ. ಅಗರಿ ಶ್ರೀನಿವಾಸ ಭಾಗವತರ ಹಾಡುಗಾರಿಕೆಯಲ್ಲಿ ಒಂದು ತಾಳಮದ್ದಳೆ ನಡೆದಿತ್ತು. ನಾನು ಆ ದಿನ ಆಮಂತ್ರಿತನಾದರೂ ಅನಾರೋಗ್ಯದಿಂದ ಕಂಗಾಲಾಗಿದ್ದರಿಂದ ಭಾಗವಹಿಸಲು ಆಗುವುದಿಲ್ಲ ಎಂದು ತಿಳಿಸಿದ್ದೆ. ಆದರೆ ಸಂಘಟಕರು ಬರಲೇಬೇಕು ಎಂದು ಒತ್ತಾಯಪೂರ್ವಕ ಹೇಳಿದ್ದರಿಂದ  ವೈದ್ಯರ ಅನುಮತಿಯನ್ನು ಪಡೆದು ಸಂಘಟಕರ ಒತ್ತಾಯದಿಂದ ಭಾಗವಹಿಸಿದ್ದೆ. ಆ ದಿನ ಭೀಷ್ಮಾರ್ಜುನ ‘ ಪ್ರಸಂಗ. ಶೇಣಿಯವರು ಆ ದಿನ ಬಂದಿದ್ದರು. ಕೂತುಕೊಂಡು ಕೈಲಾದಷ್ಟು ಅಂದರೆ ಎರಡು ಮಾತನಾಡಿ ಆಮೇಲೆ ಹೋಗಬಹುದು ಎಂದು ಶೇಣಿಯವರು ನನಗೆ ಸೂಚಿಸಿದ್ದರು.

ಭೀಷ್ಮನಿಗೆ ಸೇನಾಧಿಪತ್ಯ ವಹಿಸಿದ್ದರಿಂದ ಅಸಹನೆಯಿಂದ ಕೂಡಿದ ಕರ್ಣನು ‘ಹೊಂತಕಾರಿಗಳು ಇರುವಾಗ ಇಂತಹವರನ್ನು ಯುದ್ಧದ ಸೇನಾಧಿಪತಿಯನ್ನಾಗಿ ಮಾಡುವುದು ನಮಗೆ ಅವಮಾನ ಎಂದು ಹೇಳುವ ಒಂದು ಸನ್ನಿವೇಶ. ಇವರನ್ನು ಯುದ್ಧಕ್ಕೆ ಕಳಿಸಿ ಪಾಂಡವರಿಂದ ಕೊಲ್ಲಿಸುವುದು ನಮಗೆ ಮರ್ಯಾದೆಯೇ?’ ಎಂದು ಬಹಿರಂಗವಾಗಿ ಕರ್ಣ ಹೇಳುವುದು. ಇಲ್ಲಿ ಕರ್ಣನಿಗೆ ಕೆಲವು ಪದಗಳಿದ್ದರೂ ನಾನು ಅನಾರೋಗ್ಯದ ಕಾರಣದಿಂದ ಒಂದೇ ಪದ್ಯ ಸಾಕೆಂದು ಭಾಗವತರಲ್ಲಿ ಮೊದಲೇ ಬಿನ್ನವಿಸಿದ್ದೆ. ಅವರು ಆಗೇನೂ ಹೇಳಿರಲಿಲ್ಲ. ನಾನು ಮೊದಲನೇ ಪದ್ಯಕ್ಕೆ ಎಲ್ಲಾ ಅರ್ಥವನ್ನು ಹೇಳಿ ಮುಗಿಸಿದ್ದೆ. ಆದರೆ ನನ್ನ ಅರ್ಥವನ್ನು ಕೇಳಿದ ಅಗರಿಯವರು ಕರ್ಣನ ಪಾತ್ರಧಾರಿಯಾಗಿದ್ದ ನನಗೆ ಮೇಲೆ ಮೇಲೆ ಏಳು ಪದ್ಯಗಳನ್ನು ಕೊಟ್ಟರು. ಕೆಲವು ಪದ್ಯಗಳನ್ನು ರಚನೆ ಮಾಡಿ ಹೇಳಿದ್ದೂ ಇರಬಹುದು.

ಹೀಗೆ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸುವ ಸಾಮರ್ಥ್ಯ ಅಗರಿ ಭಾಗವತರಲ್ಲಿ ಇತರರಿಗಿಂತ ತುಂಬಾ ಹೆಚ್ಚಾಗಿತ್ತು. ನಾನು ಅರ್ಥ ಹೇಳದೆ ವಿಧಿಯಿರಲಿಲ್ಲ. ಹೇಳಿದೆ. ಆಮೇಲೆ ನನ್ನ ಅರ್ಥ ಮುಗಿದ ಕೂಡಲೇ ನಾನು ಮಲಗಿ ನಿದ್ರಿಸಿದೆ. ಬೆಳಗಿನ ಹೊತ್ತು ತಾಳಮದ್ದಳೆ ಮುಗಿದಾಗ ನಾನು ಅಗರಿ ಶ್ರೀನಿವಾಸ ಭಾಗವತರಲ್ಲಿ ಕೈ ಮುಗಿದು ಸೌಹಾರ್ದತೆಯಿಂದ “ಇಷ್ಟು ಪದ ಯಾಕೆ ಕೊಟ್ಟಿರಿ” ಎಂದು ನಗುತ್ತಾ ಕೇಳಿದೆ. ಅದಕ್ಕೆ ಅಗರಿಯವರು “ನಿಮ್ಮಂತಹಾ ಪ್ರತಿಭೆ, ಯೋಗ್ಯತೆ ಇರುವ ಅರ್ಥಧಾರಿಗಳಿಗೆ ಸರಿಯಾದ ಅವಕಾಶ ಮತ್ತು ಪದ್ಯಗಳನ್ನು ಹೇಳದಿದ್ದರೆ  ನಾವು ಭಾಗವತರಾಗಿ ಏನು ಪ್ರಯೋಜನ?” ಎಂದು ನಗುತ್ತಾ ಹೇಳಿದರು. ಆಮೇಲೆ ಹಲವಾರು ಕಡೆಗಳಲ್ಲಿ ಅಗರಿ ಶ್ರೀನಿವಾಸ ಭಾಗವತರ ಪದ್ಯಕ್ಕೆ ಅರ್ಥ ಹೇಳಿದ್ದೇನೆ.  

ಪ್ರಶ್ನೆ: ನಿಮ್ಮದು ಕಲೆಯ ಆಸಕ್ತಿ ಇರುವ ಕುಟುಂಬವೇ? 

ಉತ್ತರ: ಒಂದು ದೃಷ್ಟಿಯಲ್ಲಿ ನೋಡಿದರೆ ನಿಜವೇ.  ನಾನು ಶೇಣಿ ವೆಂಕಪ್ಪ ಭಟ್ಟ ಮತ್ತು ಸರಸ್ವತಿ ಅಮ್ಮ ಅವರ ಮಗ, ನನ್ನ ಅಜ್ಜನ ಮನೆ ಆನೆಕಾರ (ತಾಯಿಯ ತವರುಮನೆ). ನನ್ನ ಅಣ್ಣ ಕೆ.ವಿ. ಸುಬ್ರಾಯರು ತೆಂಕುತಿಟ್ಟಿನ ಉತ್ತಮ ವೇಷಧಾರಿಯಾಗಿ ಜನಪ್ರಿಯರಾದವರು.  ಚಿಕ್ಕಂದಿನಲ್ಲಿ ಅಣ್ಣ ಮತ್ತು ನಾನು ಆಟ ನೋಡಿ ಬಂದು ಹಾಳೆಯ ಆಯುಧ ಮತ್ತು ಕಿರೀಟಗಳನ್ನು ಮಾಡಿ ಕುಣಿಯುತ್ತಿದ್ದೆವು.  ಕೆ.ವಿ. ಸುಬ್ರಾಯರು ಪ್ರಬುದ್ಧ ವಯಸ್ಸಿಗೆ ಬಂದ ಮೇಲೆ ಖ್ಯಾತ ವೇಷಧಾರಿ ಕದ್ರಿ ವಿಷ್ಣು ಅವರಿಂದ ಅನುಭವ ಪಡೆದು ಆಮೇಲೆ ನಾಟ್ಯ ಕಲಿತು ಯಕ್ಷಗಾನ ಕಲಾವಿದರಾಗಿ ಪ್ರಸಿದ್ಧಿಯನ್ನು ಪಡೆದಿದ್ದರು. ನನ್ನ ತಂಗಿ ನಳಿನಾಕ್ಷಿಯ ಗಂಡ ಅಂದರೆ ನನ್ನ ಭಾವ ವಳಕ್ಕುಂಜ ನರಸಿಂಹ ಭಟ್ಟರು ಯಕ್ಷಗಾನ ಕಲಾವಿದರು. ನರಸಿಂಹ ಭಟ್ಟರ ಅಣ್ಣ ವಳಕ್ಕುಂಜ ಸುಬ್ರಹ್ಮಣ್ಯ ಭಟ್ಟರು ಕೂಡಾ ಯಕ್ಷಗಾನ ಕಲಾವಿದರು. ನಾನು ಕಲಾವಿದರ ಬಳಗದಲ್ಲೇ ಕಲಾವಿದರಾಗಿ ಬೆಳೆದವನು.  ಕಲಾವಿದ, ಉಪನ್ಯಾಸಕ ಗಣರಾಜ ಕುಂಬಳೆ ನನ್ನ ಸೋದರಳಿಯ ಅಂದರೆ ತಂಗಿಯ ಮಗ. ಶಾರದಾ, ನಳಿನಾಕ್ಷಿ, ವೆಂಕಟಲಕ್ಷ್ಮಿ ಮತ್ತು ಸಾವಿತ್ರಿ ಇವರು ನಾಲ್ವರು ನನ್ನ ಸಹೋದರಿಯರು. ನನ್ನ ಪತ್ನಿ  ಶ್ರೀಮತಿ ಸರಸ್ವತಿ ಸಂಗೀತ ಕಲಾವಿದೆ. ಮೊದಲು ಕಚೇರಿಯನ್ನೂ ನಡೆಸಿದ್ದಳು. ಆಮೇಲೆ ಗೃಹಕೃತ್ಯದ ಒತ್ತಡ ಇತರ ಕೆಲಸಗಳಿಂದ ಅವಳಿಗೆ ಸಂಗೀತದಲ್ಲಿ ಮುಂದುವರಿಯಲಾಗಲಿಲ್ಲ. 


ವಯೋಸಹಜ ಅನಾರೋಗ್ಯವಿದ್ದರೂ ಈಗಲೂ ಉತ್ಸಾಹಗಿಂದ ಮಾತನಾಡುವ ಕೆ.ವಿ. ಗಣಪಯ್ಯನವರು,  “ಎಷ್ಟೋ ಪ್ರಯೋಗಳನ್ನೂ ಯಕ್ಷಗಾನ ಕಂಡಿದೆ. ಆದರೆ ಈ ಪ್ರಯೋಗಗಳ ಅಲೆಯಲ್ಲಿ ಕಲೆ ತೇಲಿಕೊಂಡು ಬೇರೆ ಯಾವುದಾದರೂ ಕಡೆಗೆ ಹೋಗಿಬಿಡಬಹುದೋ ಎಂಬ ಭಯ ನನ್ನಂತಹಾ ವಯಸ್ಸಾದವರನ್ನು  ಕಾಡುತ್ತಿರುವುದು ಸುಳ್ಳಲ್ಲ. ಆದರೆ ಕಲಾಮಾತೆ ತನ್ನ ಅಕ್ಷಯ ಭಂಡಾರದಿಂದ ಒಂದೊಂದೇ ಮುತ್ತುಗಳನ್ನು ಹೊರಚೆಲ್ಲುತ್ತಾ ಕಲಾಪ್ರಪಂಚಕ್ಕೆ ನೀಡುತ್ತಾಳೆ. ಆದ ಕಾರಣ ಯಕ್ಷಗಾನ ಎನ್ನುವುದು ನಿರಂತರವಾಗಿ ಇರುತ್ತದೆ. ಜನಗಳಿಗೆ ಹೊಸತನ್ನು ಕೊಡಬೇಕೆಂಬ ಅಭಿಲಾಷೆಯಿದ್ದರೆ ಅದರ ಮೂಲ ಉದ್ದೇಶ ಏನು ಎಂಬ ಪ್ರಜ್ಞೆಯೂ ನಮ್ಮಲ್ಲಿ ಜಾಗೃತವಾಗಿರಬೇಕಾಗುತ್ತದೆ. ಸಂಸ್ಕಾರವನ್ನು ಸಮಾಜದಲ್ಲಿ ಸ್ಥಾಪನೆ ಮಾಡುವುದೇ ಈ ಕಲಾಪ್ರಾಕಾರದ ಮೂಲ ಉದ್ದೇಶ ಎಂದು ನಾನು ತಿಳಿದುಕೊಂಡಿದ್ದೇನೆ. ಆ ದೃಷ್ಟಿಯಿಂದಲೇ ನಾನು ಪ್ರದರ್ಶನವನ್ನು ಕೊಟ್ಟಿದ್ದೇನೆ. ಜನ ಅದನ್ನು ಒಪ್ಪಿದ್ದಾರೆ. ಮೆಚ್ಚಿ ಸ್ವೀಕರಿಸಿದ್ದಾರೆ. ಚಪ್ಪಾಳೆಗಾಗಿ ಎಂದು ಅರ್ಥ ಹೇಳಲಿಲ್ಲ. ಚಪ್ಪಾಳೆ ಅವರು ತಾನಾಗಿ ತಟ್ಟಿದ್ದಾರೆ. ಹೊಸತನ್ನು ಕೊಡಬೇಕೆಂಬ ತುಡಿತ ಕಲಾವಿದರಲ್ಲಿ ಉಂಟು. ಕಲೆಯು ಸ್ವಲ್ಪ ಮಟ್ಟಿಗೆ ವ್ಯಾಪಾರೀಕರಣವೂ ಆಗಿರುವುದರಿಂದ ಜನರಲ್ಲಿ ಆಕರ್ಷಣೆಯನ್ನು ಉಂಟುಮಾಡಲು ಹೊಸ ಹೊಸ ಪ್ರಯೋಗಗಳು ಆಗುತ್ತಿವೆ. ಆದರೆ ಎಲ್ಲವೂ ಹಿತ ಮಿತ ಆಗಿರಬೇಕು. ಅದೇ ಮುಖ್ಯ ಆಗಬಾರದು. ಹಿಂದೆ ಕಲೆಗೆ ಪ್ರೋತ್ಸಾಹ ಇತ್ತು. ಈಗ ಕಲೆಗಿಂತಲೂ ವ್ಯಕ್ತಿ ಪ್ರತಿಷ್ಠೆ ಎದ್ದು ಕಾಣುತ್ತಿದೆ. ಕಲಾವಿದ, ಶ್ರೋತೃ, ಸಂಘಟಕರು. ಹೀಗೆ ಎಲ್ಲರಿಂದಲೂ ಕಲೆಯ ಬೆಳವಣಿಗೆ ಆಗಬೇಕೇ ಹೊರತು ಕೇವಲ ಒಬ್ಬರು ಪ್ರಯತ್ನಿಸಿದರೆ ಸಾಧ್ಯವಿಲ್ಲ. ನಾವು ಹೇಳುವ ಅರ್ಥ ಕೇಳುವವರಿಗೆ ಹಿತವಾಗಿರಬೇಕು” ಎಂದು ಹೇಳುತ್ತಾರೆ. 

ಗಣಪಯ್ಯನವರ ಕೃಷ್ಣ ಸಂಧಾನದ ಕೌರವ, ಸಂಧಾನದ ಕೃಷ್ಣ, ರಾಜಸೂಯದ ಕೃಷ್ಣ, ಅಶ್ವಮೇಧದ ಕೃಷ್ಣ, ತಾಮ್ರಧ್ವಜ ಮೊದಲಾದ ಪಾತ್ರಗಳು ಆಗ ಜನಪ್ರಿಯ. ಪ್ರಶಸ್ತಿಗಳಿಗಾಗಿ ತಾನೇ ಸ್ವತಃ ಅರ್ಜಿ ಸಲ್ಲಿಸುವ ವಿಧಾನವು ಸರಿಯಲ್ಲ ಎಂದು ಪ್ರತಿಪಾದಿಸುವ ಕೆ. ವಿ. ಗಣಪಯ್ಯನವರು ಯಕ್ಷಗಾನ ಕಲಾರಂಗ, ಯಕ್ಷದೇವ ಬೆಳುವಾಯಿ ಸೇರಿದಂತೆ ಹಲವಾರು ಸನ್ಮಾನ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

ಲೇಖನ: ಮನಮೋಹನ್ ವಿ.ಎಸ್ 

ಮೇಳಗಳ ಇಂದಿನ (21.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (21.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕಾಲ್ತೋಡು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಶುಂಠಿಲಪದವು,ನಿಡ್ಡೋಡಿ 
ಕಟೀಲು ಎರಡನೇ ಮೇಳ ಕಕ್ಕೆಬೆಟ್ಟು, ಕುಲಶೇಖರ 
ಕಟೀಲು ಮೂರನೇ ಮೇಳಮೂಡಬಿದ್ರಿ, ಮಾಂಜ ಮುಚ್ಚೂರು 
ಕಟೀಲು ನಾಲ್ಕನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಐದನೇ ಮೇಳ ಕೊಯಿಕುಡೆ, ಪಂಜ ವಯಾ ಹಳೆಯಂಗಡಿ 
ಕಟೀಲು ಆರನೇ ಮೇಳಕೃಷ್ಣನಗರ, ಬೋಂದೆಲ್ 
ಮಂದಾರ್ತಿ ಒಂದನೇ ಮೇಳ ಬಡಾಬೆಟ್ಟು, ಉಪ್ಲಾಡಿ, ಬನ್ನಾಡಿ 
ಮಂದಾರ್ತಿ ಎರಡನೇ ಮೇಳ ಬಾರಾಳಿ ಗಣಪತಿ ದೇವಸ್ಥಾನ 
ಮಂದಾರ್ತಿ ಮೂರನೇ ಮೇಳ ಬೆಳಂದೂರು, ಹೊನ್ನವಳ್ಳಿ, ಶೃಂಗೇರಿ 
ಮಂದಾರ್ತಿ ನಾಲ್ಕನೇ ಮೇಳ ಹುಣ್ಸೆಯಾಡಿ ದೇವಸ್ಥಾನ 
ಮಂದಾರ್ತಿ ಐದನೇ ಮೇಳ ಉಂಟೂರುಕಟ್ಟೆ, ಕೈಮರ 
ಶ್ರೀ ಹನುಮಗಿರಿ ಮೇಳ ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ ರಥಬೀದಿ – ಶುಕ್ರನಂದನೆ 
ಶ್ರೀ ಸಾಲಿಗ್ರಾಮ ಮೇಳಹೆಬ್ರಿ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಪೆರ್ಡೂರು ಮೇಳಕದ್ರಿ, ರಾಜಾಂಗಣ – ಕಂಸ ಕಂಸ ಕಂಸ 
ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಹೊಸಮನೆ, ರಾಮೇಶ್ವರನಗರ, ಆಲೂರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ದೇವಲ್ಕುಂದ 
ಶ್ರೀ ಪಾವಂಜೆ ಮೇಳ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಆಲಂಗಾರು – ಶ್ರೀ ದೇವಿ ಲಲಿತೋಪಾಖ್ಯಾನ 
ಶ್ರೀ ಹಟ್ಟಿಯಂಗಡಿ ಮೇಳಯರಗೇಶ್ವರ ದೇವಸ್ಥಾನ ಶಿರೂರು, ನೀರ್ಗದ್ದೆ, ಮೇಲ್ಪಂಕ್ತಿ – ಕಲ್ಯಾಣ ಕುಂಕುಮ 
ಕಮಲಶಿಲೆ ಮೇಳ ‘ಎ’ಕೋಡಿಕನ್ಯಾನ 
ಕಮಲಶಿಲೆ ಮೇಳ ‘ಬಿ’ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಹರ್ಕೆಬಾಳು, ಸಿದ್ಧಾಪುರ 
ಶ್ರೀ ಬಪ್ಪನಾಡು ಮೇಳವಿಟ್ಲ ಶಾಲೆಯ ವಠಾರ – ಬಂಗಾರ್ ಬಾಲೆ (ತುಳು)
ಶ್ರೀ ಅಮೃತೇಶ್ವರೀ ಮೇಳಕಾಜಾರಗುತ್ತು ಶ್ರೀ ದೂಮಾವತಿ ದೇವಿ ಸನ್ನಿಧಿ – ಜ್ವಾಲಾಮುಖಿ 
ಶ್ರೀ ಬೋಳಂಬಳ್ಳಿ ಮೇಳ ಕಳ್ತೂರು ಸಂತೆಕಟ್ಟೆ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಎಡಮೊಗೆ ಶ್ರೀ ನಂದಿಕೇಶ್ವರ ಸಪರಿವಾರ ದೇವಸ್ಥಾನ – ಹಳನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಹಾಲಾಡಿ ಮೇಳಶ್ರೀ ಕ್ಷೇತ್ರ ಹಾಲಾಡಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಹಾವಂಜೆ ಮಂಜುನಾಥ ಸಭಾ ಭವನ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಬಂಟಕಲ್ – ಕಾರ್ತವೀರ್ಯಾರ್ಜುನ, ಕೃಷ್ಣಲೀಲೆ, ಕಂಸವಧೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳವಂಡ್ಸೆ ಹಕ್ಲುಮನೆ – ಸರ್ಪ ಶಪಥ 
ಶ್ರೀ ಹಿರಿಯಡಕ ಮೇಳಬುಕ್ಕಿಗುಡ್ಡೆ  – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಹೊಸಕೋಟೆ ಕೆಂಪನಕೆರೆ, ಶ್ರೀ ಮರ್ಲುಚಿಕ್ಕು ಸಪರಿವಾರ ದೇವಸ್ಥಾನ 
ಶ್ರೀ ಸಿಗಂದೂರು ಮೇಳನಂದಿಕೇಶ್ವರ ಸಹಪಾರಿವಾರ ದೇವಸ್ಥಾನ, ಹನಿಯಡಿ ಕನ್ಯಾನ ಗ್ರಾಮ 
ಶ್ರೀ ನೀಲಾವರ ಮೇಳ ಶಿರೂರು ಪೇಟೆ – ದೈವ ಮಂಟಪ