Saturday, August 29, 2026
Home Blog Page 353

ಕಾಟುಕುಕ್ಕೆ ಶ್ರೀ  ಸುಬ್ರಾಯ ದೇವಸ್ಥಾನದಲ್ಲಿ 13ನೇ ವರ್ಷದ ಶ್ರೀ ಪುರಂದರದಾಸ ಆರಾಧನೋತ್ಸವ  ಮತ್ತು ಶ್ರೀ ಮದ್ಭಾಗವತ ಸಪ್ತಾಹ ಜ್ಞಾನಯಜ್ಞ

ಶ್ರೀ  ಸುಬ್ರಾಯ ದೇವಸ್ಥಾನ ಕಾಟುಕುಕ್ಕೆ ಮತ್ತು ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ (ರಿ) ಕಾಟುಕುಕ್ಕೆಯ ಆಶ್ರಯದಲ್ಲಿ ಕಾಟುಕುಕ್ಕೆ ಶ್ರೀ  ಸುಬ್ರಾಯ ದೇವಸ್ಥಾನದಲ್ಲಿ 13ನೇ ವರ್ಷದ ಶ್ರೀ ಪುರಂದರದಾಸ ಆರಾಧನೋತ್ಸವ  ಮತ್ತು ಶ್ರೀ ಮದ್ಭಾಗವತ ಸಪ್ತಾಹ ಜ್ಞಾನಯಜ್ಞವು ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಹಾಗೂ ಟ್ರಸ್ಟ್ ಗೆ  ಒಳಪಟ್ಟ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಮಂಜೇಶ್ವರ, ಕಾಸರಗೋಡು ತಾಲೂಕುಗಳ ಭಜನಾ ಮಂಡಳಿಗಳ ಸಹಕಾರದೊಂದಿಗೆ ದಿನಾಂಕ 05.02.2021, ಶುಕ್ರವಾರದಿಂದ 11.02.2021 ಗುರುವಾರದ ವರೆಗೆ ನಡೆಯಲಿದೆ.

ಈ ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನವೂ ಭಾಗವತ ಪಾರಾಯಣ, ಪ್ರವಚನ ಮತ್ತು ಭಜನೆ ನಡೆಯಲಿದೆ. ದಿನಾಂಕ  11.02.2021, ಆರಾಧನೋತ್ಸವದ ದಿನ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಆ ದಿನ ದಾಸ ಸಂಕೀರ್ತನೆ, ಸಮೂಹ ಗಾಯನ, ಸಭಾ ಕಾರ್ಯಕ್ರಮ, ಸನ್ಮಾನ ಮತ್ತು ಕುಣಿತ ಭಜನಾ ಪ್ರಾತ್ಯಕ್ಷಿಕೆ ನಡೆಯಲಿದೆ. ಕಾರ್ಯಕ್ರಮದ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ. 

ಮೋಹಕ ಸ್ತ್ರೀ ಪಾತ್ರಧಾರಿಯಾಗಿ ಮೆರೆದ ಶ್ರೀ ಭಾಸ್ಕರ ಜೋಷಿ ಶಿರಳಗಿ

ಯಕ್ಷಗಾನದಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ನಿರ್ವಹಿಸುವುದು ಮೊದಲಿನಿಂದಲೂ ನಡೆದು ಬಂದ ರೀತಿ. ಅದಕ್ಕೆ ಕಾರಣಗಳು ಹಲವಿರಬಹುದು. ಆದರೆ ಒಂದಂತೂ ಸತ್ಯ. ಗಂಡಾಗಿ ಹುಟ್ಟಿ ಹೆಣ್ಣಾಗಿ ಅಭಿನಯಿಸುವುದು ಅಷ್ಟು ಸುಲಭವಲ್ಲ. ಹೆಣ್ಣಾಗಿ ಹುಟ್ಟಿ ಗಂಡಾಗಿ ಅಭಿನಯಿಸುವುದೂ ಕಷ್ಟದ ಕೆಲಸ. ಸತತ ಸಾಧನೆಯಿಂದ ಮಾತ್ರ ಇದು ಸಾಧ್ಯ. ಹೀಗೆ ಅವಿರತ ಪರಿಶ್ರಮದಿಂದ ಶ್ರೇಷ್ಠ ಸ್ತ್ರೀಪಾತ್ರಧಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಗಳಿಸಿದವರನೇಕರು. ಅಂತವರಲ್ಲೋರ್ವರು ಶಿರಳಗಿ ಶ್ರೀ ಭಾಸ್ಕರ ಜೋಷಿ. ಬಡುಗುತಿಟ್ಟು ಯಕ್ಷಾಗಸದಲ್ಲಿ ಮನಮೋಹಕ ತಾರೆಯಾಗಿ ಮಿನುಗಿದವರು. ದೈವದತ್ತವಾದ ರೂಪ, ಸತತ ಅಧ್ಯಯನದಿಂದ ಸಿದ್ಧಿಸಿದ ಮಾತುಗಾರಿಕೆ, ಅಭಿನಯ ಚಾತುರ್ಯಗಳಿಂದ ಬಡಗಿನ ಯಕ್ಷಬೆಡಗಿಯಾಗಿ ಕಲಾಭಿಮಾನಿಗಳನ್ನು ರಂಜಿಸಿದ ಕಲಾವಿದರಿವರು.

ಪದ್ಮಶ್ರೀ ಪ್ರಶಸ್ತಿ ವಿಜೇತ ಬಡಗುತಿಟ್ಟಿನ ಮೇರುಕಲಾವಿದ ಚಿಟ್ಟಾಣಿಯವರ ಪುರುಷಪಾತ್ರಗಳಿಗೆ, ಸ್ತ್ರೀಪಾತ್ರಧಾರಿಯಾಗಿ ಸುಮಾರು 15 ವರ್ಷಗಳ ಕಾಲ ಅಭಿನಯಿಸಿದ ಕೀರ್ತಿ ಶಿರಳಗಿ ಭಾಸ್ಕರ ಜೋಷಿಯವರಿಗಿದೆ. ಕಲಾಬದುಕಿನುದ್ದಕ್ಕೂ ಬಡಗುತಿಟ್ಟಿನ ಹೆಚ್ಚಿನ ಎಲ್ಲಾ ಹಿರಿಯ ಕಲಾವಿದರೊಂದಿಗೆ ಪಾತ್ರಗಳನ್ನು ನಿರ್ವಹಿಸುವ ಅವಕಾಶವೂ ಸಿಕ್ಕಿತ್ತು. ಮೋಹಿನಿ, ಮೇನಕೆ, ದಾಕ್ಷಾಯಿಣಿ, ಚಂದ್ರಮತಿ, ದಮಯಂತಿ, ಸುಭದ್ರೆ, ನಾಗಶ್ರೀ, ಚಿತ್ರಾವತಿ, ಸೈರಂಧ್ರಿ, ರುಚಿಮತಿ, ಚಿತ್ರಾಂಗದೆ, ವಿಷಯೆ, ಶಾರದೆ ಮೊದಲಾದ ಪಾತ್ರಗಳನ್ನು ಶಿರಳಗಿ ಭಾಸ್ಕರ ಜೋಷಿಯವರು ಜನಮೆಚ್ಚುವಂತೆ ಚಿತ್ರಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಶಿರಳಗಿ, ಭಾಸ್ಕರ ಜೋಷಿಯವರ ಹುಟ್ಟೂರು. 1956ನೇ ಇಸವಿ ಎಪ್ರಿಲ್ 30ರಂದು ಜನನ. ತಂದೆ ಶ್ರೀ ನಾರಾಯಣ ಜೋಷಿ, ತಾಯಿ ಶ್ರೀಮತಿ ಗಂಗಾ ನಾರಾಯಣ ಜೋಷಿ. ನಾರಾಯಣ ಜೋಷಿ, ಗಂಗಾ ದಂಪತಿಗಳ ಆರು ಮಂದಿ ಮಕ್ಕಳಲ್ಲಿ (4 ಹೆಣ್ಣು ಮತ್ತು 2 ಗಂಡು) ಭಾಸ್ಕರ ಜೋಷಿ ಅವರು ಹಿರಿಯರು. ಇವರದ್ದು ಪೌರೋಹಿತ್ಯ ಮನೆತನ. ನಾರಾಯಣ ಜೋಷಿಯವರು ಪುರೋಹಿತರಾಗಿದ್ದು ಕೃಷಿ ಚಟುವಟಿಕೆಗಳಲ್ಲೂ ಆಸಕ್ತರಾಗಿದ್ದರು. ಭಾಸ್ಕರ ಜೋಷಿಯವರು 7ನೇ ತರಗತಿ ವರೇಗೆ ಶಿರಳಗಿ ಶಾಲೆಯಲ್ಲೂ, 10ನೇ ತರಗತಿ ವರೇಗೆ ಸಿದ್ಧಾಪುರ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲೂ ಓದಿದ್ದರು. ಕುಟುಂಬದಲ್ಲಿ ಚಿಕ್ಕಪ್ಪನಾದ ಶಿವಾನಂದ ಹೆಗಡೆಯವರು ಯಕ್ಷಗಾನ ಕಲಾವಿದರಾಗಿದ್ದರು. ಹಳ್ಳಿಪ್ರದೇಶ. ಮನೋರಂಜನೆಗೆ ಯಕ್ಷಗಾನದ ಹೊರತಾಗಿ ಬೇರೆ ಮಾಧ್ಯಮಗಳಿಲ್ಲದ ಕಾಲ ಅದು. ಜೋಷಿಯವರಿಗೆ ಎಳವೆಯಲ್ಲೇ ಯಕ್ಷಗಾನ ಎಂದರೆ ಬಲುಪ್ರೀತಿ.

ಕೊಳಗಿ ಎಂಬುದು ಶಿರಳಗಿಯ ಹತ್ತಿರದ ಊರು. ಖ್ಯಾತ ಕಲಾವಿದರಾದ ಕೊಳಗಿ ಅನಂತ ಹೆಗಡೆಯವರು ಮತ್ತು ಗೋಡೆ ನಾರಾಯಣ ಹೆಗಡೆಯವರ ನೇತೃತ್ವದಲ್ಲಿ ಕೊಳಗಿ ಮೇಳದ ಪ್ರದರ್ಶನಗಳು ನಡೆಯುತ್ತಿತ್ತು. ಕೊಳಗಿ ಲಕ್ಷ್ಮೀನರಸಿಂಗ ದೇವರ ಹೆಸರಿನ ಮೇಳ ಅದು. ಭಾಸ್ಕರ ಜೋಷಿಯವರು ಪರಿಸರದಲ್ಲಿ ನಡೆಯುತ್ತಿದ್ದ ಆಟಗಳನ್ನು ನೋಡುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗ ನಾಟಕಗಳಲ್ಲಿ ಅಭಿನಯಿಸಿದ್ದರು. 10ನೇ ಕ್ಲಾಸ್ ಕಳೆದ ನಂತರ ಓದಿಗೆ ವಿದಾಯ ಹೇಳಿದ್ದರು. ನೆರೆಮನೆಯ ಹುಡುಗನಾದ ಭಾಸ್ಕರ ಜೋಷಿ ಅವರಲ್ಲಿರುವ ಕಲಾಸಕ್ತಿಯನ್ನು ಹುಲೀಮನೆ ಸೀತಾರಾಮ ಶಾಸ್ತ್ರಿಗಳು ಗಮನಿಸಿದ್ದರು. ಅವರು ನಾಟಕ ಕ್ಷೇತ್ರದ ಅಪ್ರತಿಮ ಸಾಧಕರು. ಪೌರಾಣಿಕ ನಾಟಕ ಕಲಾವಿದರೂ, ನಿರ್ದೇಶಕರೂ, ನಾಟಕ ತಂಡದ ನಾಯಕರೂ ಆಗಿದ್ದರು.

ಭಾಸ್ಕರ ಜೋಷಿ ಅವರ ಮನಮೋಹಕವಾದ ರೂಪವು ಕಲಾವಿದನಾಗಿ ಅವಕಾಶಗಳು ತಾನಾಗಿ ಒಲಿದು ಬರಲು ಕಾರಣವಾಗಿತ್ತು. ಸೀತಾರಾಮ ಶಾಸ್ತ್ರಿಗಳು ತಮ್ಮ ತಂಡದ ಐತಿಹಾಸಿಕ ನಾಟಕ ‘ಪನ್ನಾದಾಸಿ’ಯಲ್ಲಿ ಕಥಾನಾಯಕಿ ‘ಪನ್ನಾ’ ಪಾತ್ರವನ್ನೇ ನೀಡಿದ್ದರು. ರೂಪ ಮತ್ತು ಸ್ವಯಂ ಪ್ರತಿಭೆಯಿಂದಲೇ ಅಭಿನಯಿಸಿ ‘ಪನ್ನಾ’ ಪಾತ್ರವು ಮೆರೆಯುವಂತೆ ಮಾಡಿದ್ದರು ಜೋಷಿಯವರು. ಎಂ.ಜಿ.ಸಿ. ಕಾಲೇಜಿನ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನಕ್ಕೆ ಹೊಸ್ತೋಟ ಮಂಜುನಾಥ ಭಾಗವತರು ಆಗ ತರಬೇತಿಯನ್ನು ನೀಡುತ್ತಿದ್ದರು. ಸ್ತ್ರೀಪಾತ್ರಗಳನ್ನು ನಿರ್ವಹಿಸಲು ಆಗ ಕಲಾವಿದರ ಕೊರತೆ ಇತ್ತು. ಭಾಸ್ಕರ ಜೋಷಿಯವರಿಗೆ ಕರೆಬಂದಿತ್ತು. ಹೀಗೆ ಹೊಸ್ತೋಟ ಮಂಜುನಾಥ ಭಾಗವತರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿಯುವ ಅವಕಾಶವು ಬಂದಿತ್ತು. ಡಿ. ಜಿ. ಹೆಗಡೆ ಮತ್ತಿಗಾರು ಅವರೂ ಹೊಸ್ತೋಟದವರ ಜತೆ ತರಬೇತಿ ನೀಡುತ್ತಿದ್ದರು.

ಸುಧನ್ವಾರ್ಜುನ ಪ್ರಸಂಗದ ಪ್ರಭಾವತಿಯಾಗಿ ಭಾಸ್ಕರ ಜೋಷಿಯವರು ಮೊತ್ತಮೊದಲು ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡರು. ಅದೇ ವರುಷ ಇಡಗುಂಜಿ ಮೇಳದವರು ಸ್ತ್ರೀಪಾತ್ರಧಾರಿಗಳ ಅನ್ವೇಷಣೆಯಲ್ಲಿದ್ದರು. ಪನ್ನಾದಾಸಿ ನಾಟಕದ ಪನ್ನಾ ಪಾತ್ರದಲ್ಲಿ ಭಾಸ್ಕರ ಜೋಷಿ ಅವರ ಅಭಿನಯವನ್ನು ಕೆರೆಮನೆ ಗಜಾನನ ಹೆಗಡೆಯವರು ನೋಡಿ ಮೆಚ್ಚಿಕೊಂಡಿದ್ದರು. ಆ ಕಾರಣದಿಂದಲೇ ಇಡಗುಂಜಿ ಮೇಳಕ್ಕೆ ಕರೆಬಂದಿತ್ತು. ಮನೆಯವರ ಒಪ್ಪಿಗೆ ಇರಲಿಲ್ಲ. ಆದರೂ ಕೊಳಗಿ ಅನಂತ ಹೆಗಡೆ, ಗೋಡೆ ನಾರಾಯಣ ಹೆಗಡೆಯವರ ಕೇಳಿಕೆಯ ಮೇರೆಗೆ ಮನೆಯವರ ಸಮ್ಮತಿ ಸಿಕ್ಕಿತ್ತು. 1973ರಲ್ಲಿ ಕೆರೆಮನೆ ಇಡಗುಂಜಿ ಮೇಳಕ್ಕೆ ಸೇರಿದ್ದರು. ಗಜಾನನ ಹೆಗಡೆಯವರು ಸ್ತ್ರೀವೇಷ ಅಲ್ಲದೆ ಪುರುಷ ಪಾತ್ರಗಳನ್ನೂ ಮಾಡುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಜೋಷಿಯವರು ಮುಖ್ಯ ಸ್ತ್ರೀವೇಷಗಳನ್ನೂ ಮಾಡಲಾರಂಭಿಸಿದ್ದರು.

ರಂಗದ ಅಳುಕು ಇವರಿಗಿರಲಿಲ್ಲ. ಸಾಹಿತ್ಯ ಆಸಕ್ತಿಯೂ ಇದ್ದಿತ್ತು. ನೆರೆಮನೆಯವರೆಲ್ಲ ಪುಸ್ತಕಗಳನ್ನು ಕೊಂಡು ಪರಸ್ಪರ ವಿನಿಮಯ ಮಾಡಿಕೊಂಡು ಓದುತ್ತಿದ್ದರು. ನಿದ್ದೆ ಮಾಡದೆ ಆಟ ವೀಕ್ಷಣೆ. ಗಜಾನನ ಹೆಗಡೆಯವರ ನಿರ್ದೇಶನ. ನೆಬ್ಬೂರು, ಕಪ್ಪೆಕೆರೆ ಸುಬ್ರಾಯ ಭಾಗವತರ ನಿರ್ದೇಶನ ಸಹಕಾರ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭುಹೆಗಡೆ, ಗಜಾನನ ಹೆಗಡೆ, ಹಳದೀಪುರ ಗಜಾನನ ಭಂಡಾರಿ ಮೊದಲಾದವರ ಒಡನಾಟ, ಸಹಕಾರವೂ ಸಿಕ್ಕಿತ್ತು. ಭಾಸ್ಕರ ಜೋಷಿಯವರು ಕಲಾವಿದನಾಗಿ ಕ್ಷಿಪ್ರ ಬೆಳವಣಿಗೆಯನ್ನೇ ಕಂಡಿದ್ದರು. ಕೋಟದಲ್ಲಿ ನಡೆದ ಪ್ರದರ್ಶನವನ್ನು ನೋಡಿ ಕೋಟ ಶಿವರಾಮ ಕಾರಂತರೂ ಜೋಷಿಯವರ ಪಾತ್ರನಿರ್ವಹಣೆಯನ್ನು ಮೆಚ್ಚಿಕೊಂಡಿದ್ದರು. ಶಿವರಾಮ ಕಾರಂತರ ನಿರ್ದೇಶನದಲ್ಲಿ ಉಡುಪಿ ಯಕ್ಷಗಾನ ಕಲಿಕಾ ಕೇಂದ್ರವು ‘ಯಕ್ಷರಂಗ’ದ ಅಡಿ ಯಕ್ಷಗಾನ ಬ್ಯಾಲೆ ಕಾರ್ಯಕ್ರಮಗಳನ್ನು ನೀಡುತ್ತಿತ್ತು.

ಕಾರಂತರಿಂದ ಕರೆಯೂ ಬಂದಿತ್ತು. ಈ ತಂಡದ ಮುಖ್ಯ ಸ್ತ್ರೀವೇಷಧಾರಿಯಾಗಿ ಭಾರತದಾದ್ಯಂತ ನಡೆದ ಯಕ್ಷಗಾನ ಬ್ಯಾಲೆ ಪ್ರದರ್ಶನಗಳಲ್ಲಿ ಜೋಷಿಯವರು ಭಾಗವಹಿಸಿದ್ದರು. ಅಂಬೆ, ಚಿತ್ರಾಂಗದೆ, ಕನಕಾಂಗೀ ಕಲ್ಯಾಣ ಪ್ರಸಂಗದ ಸುಭದ್ರೆ ಮೊದಲಾದ ಪಾತ್ರಗಳನ್ನು ಈ ತಂಡದಲ್ಲಿ ನಿರ್ವಹಿಸಿದ್ದರು. ಅಭಿನಯ ಚಾತುರ್ಯವು ಸಿದ್ಧಿಸಿದ್ದು ಕಾರಂತರ ನಿರ್ದೇಶನದಲ್ಲಿ ಎಂದು ಜೋಷಿಯವರು ಸದಾ ಹೇಳುತ್ತಾರೆ. ಈ ತಂಡದ ಕಲಾವಿದನಾಗಿ ಜಪಾನ್, ರಷ್ಯಾ, ಇಟೆಲಿ, ಬಲ್ಗೇರಿಯಾ, ಹಂಗೇರಿ, ಬ್ಯಾಂಕಾಕ್, ಸಿಂಗಾಪುರ ಮೊದಲಾದ ದೇಶಗಳಲ್ಲೂ ಕಲಾಪ್ರದರ್ಶನವನ್ನು ನೀಡಿದ್ದರು. ಆರು ವರ್ಷಗಳ ಕಾಲ ಈ ತಂಡದ ಸದಸ್ಯನಾಗಿ ದೇಶ ವಿದೇಶಗಳನ್ನು ಸುತ್ತುವ ಸದವಕಾಶಗಳು ಸಿಕ್ಕಿತ್ತು.

ಇಡಗುಂಜಿ ಮೇಳದ ತಿರುಗಾಟದ ಬಳಿಕ ಭಾಸ್ಕರ ಜೋಷಿಯವರು ವ್ಯವಸಾಯ ಮಾಡಿದ್ದು ಸಾಲಿಗ್ರಾಮ ಮೇಳದಲ್ಲಿ. ಅದೇ ವರ್ಷ ಜಿ. ಆರ್. ಕಾಳಿಂಗ ನಾವಡರೂ ಸಾಲಿಗ್ರಾಮ ಮೇಳಕ್ಕೆ ಸೇರಿದ್ದರು. ಅದೇ ವರ್ಷ ಅವರ ಭಾಗವತಿಕೆಯಲ್ಲಿ ನಾಗಶ್ರೀ ಪ್ರಸಂಗವೂ ಜೋಷಿ ಅವರ ನಾಗಶ್ರೀ ಪಾತ್ರವೂ ರಂಜಿಸಿತ್ತು. ಮುಂದಿನ ವರುಷ ಚೆಲುವೆ ಚಿತ್ರಾವತಿ ಪ್ರಸಂಗದ ಚಿತ್ರಾವತಿ ಪಾತ್ರವೂ ಸಾಕಷ್ಟು ಪ್ರಸಿದ್ಧಿಯನ್ನು ನೀಡಿತ್ತು. ಅಲ್ಲದೆ ಪುರಾಣ ಪ್ರಸಂಗಗಳೂ ನಡೆಯುತ್ತಿದ್ದುದು ಅನುಕೂಲವೇ ಆಗಿತ್ತು. “ನಾರ್ಣಪ್ಪ ಉಪ್ಪೂರರಂತೆ ಜಿ. ಆರ್. ಕಾಳಿಂಗ ನಾವಡರೂ ಸಾಹಸಿಯಾಗಿದ್ದರು. ಸೂಕ್ಷ್ಮಭಾವಗಳನ್ನು ಅರ್ಥೈಸಿ ಹಾಡುತ್ತಿದ್ದರು. ಇದು ವೇಷಧಾರಿಯ ಭಾವಪ್ರಕಟಣೆಗೆ ಅನುಕೂಲವಾಗಿರುತ್ತಿತ್ತು. ಅವರ ಭಾಗವತಿಕೆಯಲ್ಲಿ ನಾನು ನಿರ್ವಹಿಸಿದ ಪಾತ್ರಗಳು ರಂಜಿಸಿತು” ಕಾಳಿಂಗ ನಾವಡರ ಬಗೆಗೆ ಜೋಷಿಯವರ ಅಭಿಪ್ರಾಯವಿದು. ಅವರ ಭಾಗವತಿಕೆಯಲ್ಲಿ ಚಂದ್ರಹಾಸ ಪ್ರಸಂಗದ ವಿಷಯೆ ಪಾತ್ರವೂ ಜೋಷಿ ಅವರಿಗೆ ಹೆಸರನ್ನು ಕೊಟ್ಟಿತ್ತು.

4 ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಕಟ್ಟಾ ಶ್ರೀನಿವಾಸ ಆಚಾರ್ಯ, ಶಂಕರ ಭಾಗವತ ಯಲ್ಲಾಪುರ, ಜಲವಳ್ಳಿ, ಬಳ್ಕೂರು ಕೃಷ್ಣಯಾಜಿ, ಅರಾಟೆ ಮಂಜುನಾಥ, ರಾಮನಾೈರಿ, ಮುಖ್ಯಪ್ರಾಣ ಕಿನ್ನಿಗೋಳಿ, ತೀರ್ಥಹಳ್ಳಿ ಗೋಪಾಲಾಚಾರಿ ಮೊದಲಾದವರು ಸಾಲಿಗ್ರಾಮ ಮೇಳದ ಒಡನಾಡಿಗಳಾಗಿದ್ದರು. ಬಳಿಕ 4 ವರ್ಷಗಳ ತಿರುಗಾಟ ಅಮೃತೇಶ್ವರೀ ಮೇಳದಲ್ಲಿ. ಉಪ್ಪೂರರ ಭಾಗವತಿಕೆ. ದುರ್ಗಪ್ಪ ಗುಡಿಗಾರ, ಹೊಳೆಗದ್ದೆ ಗಜಾನನ ಭಂಡಾರಿ, ಕೊಳಗಿ ಅನಂತ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸಾಲ್ಕೋಡು ಗಣಪತಿ ಹೆಗಡೆ, ನಗರ ಜಗನ್ನಾಥ ಶೆಟ್ಟಿ ಮೊದಲಾದವರು ಸಹಕಲಾವಿದರಾಗಿದ್ದರು. ಮುಖ್ಯ ಸ್ತ್ರೀಪಾತ್ರಧಾರಿಯಾಗಿ ಅಮೃತೇಶ್ವರೀ ಮೇಳದಲ್ಲಿ ಜೋಷಿಯವರದು ಅಮೋಘ ನಿರ್ವಹಣೆ. ಈ ಸಂದರ್ಭದಲ್ಲಿ ಚಿಟ್ಟಾಣಿ ಮತ್ತು ಭಾಸ್ಕರ ಜೋಷಿ ಜೋಡಿಯು ಪ್ರೇಕ್ಷಕರ ಮನಸೂರೆಗೊಂಡಿತ್ತು.

ಮಳೆಗಾಲದ ಪ್ರದರ್ಶನಗಳಲ್ಲಿ ಬಡಗಿನ ಹೆಚ್ಚಿನ ಕಲಾವಿದರ ಜತೆ ವೇಷ ಮಾಡುವ ಸಂದರ್ಭಗಳೂ ಸಿಕ್ಕಿತ್ತು. “ಪ್ರತಿಯೊಂದು ಪಾತ್ರಗಳನ್ನು ಬೇರೆ ಬೇರೆ ಕೋನಗಳಿಂದ ನೋಡಬೇಕು ಮತ್ತು ವಿಮರ್ಶಿಸಬೇಕು. ಆಗ ಹೊಸ ಹೊಳಹುಗಳು ಹುಟ್ಟಿಕೊಳ್ಳುತ್ತದೆ”. ಇದು ಜೋಷಿಯವರಿಗೆ ಕೆರೆಮನೆ ಮಹಾಬಲ ಹೆಗಡೆಯವರಿಂದ ಸಿಕ್ಕಿದ ಪಾಠ. ಪಾತ್ರನಿರ್ವಹಣೆಗೆ ಇದು ಅನುಕೂಲವಾಗಿತ್ತು. ಇವರ ಪಾತ್ರನಿರ್ವಹಣೆಯನ್ನು ತೆಂಕಿನ ಖ್ಯಾತ ಸ್ತ್ರೀಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ಟರೂ ಮೆಚ್ಚಿ ಪ್ರಶಂಸಿಸಿದ್ದರು. ಸಿಟ್ಟು ಬಂದಾಗ ಗಯ್ಯಾಳಿ ಹೆಂಗುಸು ಇಡೀ ಸೆರಗನ್ನು ಸುತ್ತಿ ಎಳೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾಳೆ. ಗರತಿ ಹೆಣ್ಣು ಸೆರಗಿನ ಒಂದು ತುದಿಯನ್ನು ಮಾತ್ರ ಸೆಳೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾಳೆ ಎಂಬ ಸೂಕ್ಷ್ಮವನ್ನೂ ಪಾತಾಳದವರು ಜೋಷಿಯವರಿಗೆ ತಿಳಿಸಿದ್ದರಂತೆ. ಕೇವಲ ಒಂದು ಕ್ರಿಯೆಯಲ್ಲಿ ಪಾತ್ರದ ಸ್ವಭಾವವನ್ನು ತಿಳಿಸುವ ಕಲೆಯನ್ನು ಕರಗತ ಮಾಡಿದ್ದ ಪಾತಾಳದವರ ಚಾತುರ್ಯಕ್ಕೆ ಜೋಷಿ ಅವರು ಮನಸೋತಿದ್ದರು.

ಅಮೃತೇಶ್ವರೀ ಮೇಳದ ಬಳಿಕ ಮತ್ತೆ ಸಾಲಿಗ್ರಾಮ ಮೇಳದ 2 ವರ್ಷ ತಿರುಗಾಟ. ಕಾಳಿಂಗ ನಾವಡ ಮತ್ತು ನೆಲ್ಲೂರು ಮರಿಯಪ್ಪ ಆಚಾರ್ಯರ ಭಾಗವತಿಕೆ. 2 ವರ್ಷ ಬಚ್ಚಗಾರು ಮೇಳದಲ್ಲಿ. ಪುನಃ ಸಾಲಿಗ್ರಾಮ ಮೇಳದಲ್ಲಿ ಒಂದು ವರ್ಷ. ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ 3 ವರ್ಷ. ಶಿರಸಿ ಮಾರಿಕಾಂಬ ಮೇಳದಲ್ಲಿ 3 ವರ್ಷ. ಕೆರೆಮನೆ ಶಂಭು ಹೆಗಡೆಯವರ ಕಾಲಮಿತಿ ಪ್ರದರ್ಶನ ಗಳಲ್ಲಿ 2 ವರ್ಷ. 3 ವರ್ಷ ಪೆರ್ಡೂರು ಮೇಳದ ತಿರುಗಾಟ. ಸುಬ್ರಹ್ಮಣ್ಯ ಧಾರೇಶ್ವರ ಭಾಗವತಿಕೆ. ಶಿವಾನಿ-ಭವಾನಿ ಪ್ರಸಂಗವು ರಂಜಿಸಿತ್ತು. ಜೋಷಿ ಅವರ ಶಿವಾನಿ ಪಾತ್ರವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ 2003ರಲ್ಲಿ ಸಿದ್ಧಾಪುರ ಶ್ರೀ ಭುವನಗಿರಿ ಮೇಳವನ್ನು ಹುಟ್ಟುಹಾಕಿ 2 ವರ್ಷ ನಡೆಸಿದ್ದರು. ಇದು ಕಾಲಮಿತಿಯ ಪ್ರದರ್ಶನದ ಮೇಳವಾಗಿತ್ತು. ಈ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಪ್ರದರ್ಶನಗಳಲ್ಲಿ ಅತಿಥಿ ಕಲಾವಿದರಾಗಿಯೂ ಭಾಗವಹಿಸುತ್ತಿದ್ದರು. 2ನೇ ವರ್ಷ ಪ್ರದರ್ಶನಕ್ಕೆ ತೆರಳುವಾಗ ಬೈಕ್ ಅಪಘಾತವಾಗಿ ಮೊಣಕಾಲ ಶಸ್ತ್ರಕ್ರಿಯೆಗೆ ಒಳಗಾಗಿದ್ದರು. ಖ್ಯಾತ ವೈದ್ಯರೂ, ಯಕ್ಷಗಾನ ಕಲಾವಿದರೂ ಆದ ಡಾ. ಭಾಸ್ಕರಾನಂದ ಕುಮಾರ್ ಅವರಿಂದ ಚಿಕಿತ್ಸೆ ಪಡೆದು 3 ತಿಂಗಳಿನಲ್ಲಿ ಚೇತರಿಸಿಕೊಂಡಿದ್ದರು. 2 ವರ್ಷ ರಂಗದಿಂದ ದೂರ ಉಳಿದು ಪೆರ್ಡೂರು ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ್ದರು. (2007). 2007ರಲ್ಲಿ ತೀರ್ಥರೂಪರ ನಿಧನದಿಂದಾಗಿ ಮೇಳದ ತಿರುಗಾಟವನ್ನು ನಿಲ್ಲಿಸಬೇಕಾಗಿ ಬಂದಿತ್ತು.

1986ರಲ್ಲಿ ಚಂಪಕಮಾಲಿನಿ ಅವರು ಭಾಸ್ಕರ ಜೋಷಿಯವರ ಬಾಳಸಂಗಾತಿಯಾಗಿ ಮನೆ ತುಂಬಿದ್ದರು. ಕೆರೆಮನೆ ಶಂಭು ಹೆಗಡೆಯವರ ಬಾಹುಕ ಪಾತ್ರಕ್ಕೆ ದಮಯಂತಿಯಾಗಿ, ಹರಿಶ್ಚಂದ್ರ ಪಾತ್ರಕ್ಕೆ ಚಂದ್ರಮತಿಯಾಗಿ, ಕೆರೆಮನೆ ಮಹಾಬಲ ಹೆಗಡೆಯವರ ಜಮದಗ್ನಿಗೆ ರೇಣುಕೆಯಾಗಿ, ಭೀಷ್ಮನಿಗೆ ಅಂಬೆಯಾಗಿ, ಕೃಷ್ಣಾರ್ಜುನ ಕಾಳಗದ ಅರ್ಜುನನಿಗೆ ಸುಭದ್ರೆಯಾಗಿ, ಈಶ್ವರನಿಗೆ ದಾಕ್ಷಾಯಿಣಿಯಾಗಿ, ಗೋಡೆ ನಾರಾಯಣ ಹೆಗಡೆಯವರ ಬ್ರಹ್ಮನಿಗೆ ಶಾರದೆಯಾಗಿ, ಚಿಟ್ಟಾಣಿಯವರ ಭಸ್ಮಾಸುರನಿಗೆ ಮೋಹಿನಿಯಾಗಿ, ಕೀಚಕನಿಗೆ ಸೈರಂಧ್ರಿಯಾಗಿ, ಉಗ್ರಸೇನನಿಗೆ ರುಚಿಮತಿಯಾಗಿ ಅಭಿನಯಿಸಿ ಕಲಾಭಿಮಾನಿಗಳ ಮನಸೂರೆಗೊಂಡಿದ್ದರು. ಸಾಲಿಗ್ರಾಮ ಮೇಳದಲ್ಲಿರುವಾಗ ಚಂದ್ರಹಾಸ ಪ್ರಸಂಗದಲ್ಲಿ ವಿಷಯೆ ಪಾತ್ರವೂ ರಂಜಿಸಿತ್ತು. ಆಗ ಜಲವಳ್ಳಿ ದುಷ್ಠಬುದ್ಧಿಯಾಗಿ, ಶಿರಿಯಾರ ಮಂಜು ನಾಯ್ಕರು ಚಂದ್ರಹಾಸನಾಗಿ, ಬಳ್ಕೂರು ಕೃಷ್ಣಯಾಜಿಯವರು ಮದನನಾಗಿಯೂ ಅಭಿನಯಿಸಿದ್ದರು. ಬಳಿಕ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಚಂದ್ರಹಾಸನ ಪಾತ್ರಕ್ಕೆ ಒದಗಿದ್ದರು.

ಬಳ್ಕೂರು ಕೃಷ್ಣಯಾಜಿಯವರ ಸುಧನ್ವ ಮತ್ತು ಜೋಷಿ ಅವರ ಪ್ರಭಾವತಿ ಪಾತ್ರಗಳು ಪ್ರೇಕ್ಷಕರ ಮನವನ್ನು ಗೆದ್ದಿತ್ತು. ಒಟ್ಟು 40 ವರ್ಷಗಳಿಗಿಂತಲೂ ಹೆಚ್ಚಿನ ಕಲಾಸೇವೆ. 8000ಕ್ಕೂ ಮಿಕ್ಕಿದ ರಂಗಪ್ರದರ್ಶನ. ಸ್ತ್ರೀವೇಷದವರಿಗೆ ಕೊಡಮಾಡುವ ಹೆಚ್ಚಿನ ಎಲ್ಲಾ ಪ್ರಶಸ್ತಿಗಳನ್ನೂ ಇವರು ಪಡೆದುಕೊಂಡಿದ್ದಾರೆ. ಇವರು ಮುನ್ನಡೆಸಿದ್ದ ಶ್ರೀ ಭುವನಗಿರಿ ಮೇಳವು ಯಕ್ಷಗಾನದ ಇತಿಹಾಸದಲ್ಲಿ ಮೊದಲ ಪೂರ್ಣಚಂದ್ರಾಕೃತಿಯ ರಂಗಸ್ಥಳವಾಗಿತ್ತು. ಅನೇಕ ಸಂಘ-ಸಂಸ್ಥೆಗಳು ಜೋಷಿ ಅವರನ್ನು ಸನ್ಮಾನಿಸಿ ಗೌರವಿಸಿವೆ. ಪ್ರಸ್ತುತ ಮನೆವಾರ್ತೆ, ಕೃಷಿಕಾರ್ಯಗಳನ್ನು ನಿಭಾಯಿಸುತ್ತಾ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವರು ಪುರುಷ ವೇಷಗಳನ್ನೂ ಮಾಡಬಲ್ಲವರು. ಕಾರ್ತವೀರ್ಯಾರ್ಜುನ ಕಾಳಗದ ರಾವಣ, ಗದಾಯುದ್ಧ ಪ್ರಸಂಗದ ಕೌರವ ಮೊದಲಾದ ಪಾತ್ರಗಳನ್ನು ಮಾಡಿದ್ದಾರೆ. ಪ್ರಸಂಗನಡೆ, ಮಾತುಗಾರಿಕೆಯ ಕಲೆ ತಿಳಿದವರಿಂದ ಮಾತ್ರ ಇದು ಸಾಧ್ಯ. ಶಿರಳಗಿ ಭಾಸ್ಕರ ಜೋಷಿ ಮತ್ತು ಚಂಪಕಮಾಲಿನಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಸ್ಫೂರ್ತಿ MBA ಕಲಿತು ಉದ್ಯೋಗಸ್ಥೆಯಾಗಿದ್ದಾರೆ. ವಿವಾಹಿತೆ. ಅಳಿಯ ಶ್ರೀ ಕೃಷ್ಣಮೂರ್ತಿ ಬೆಂಗಳೂರಿನಲ್ಲಿ ಉದ್ಯೋಗಿ. ಮೊಮ್ಮಗ ಧ್ರುವನಿಗೆ 4 ವರ್ಷ ಪ್ರಾಯ. ಪುತ್ರ ಶ್ರೀ ರಘುರಾಮ ಜೋಷಿ ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್. ವಿವಾಹಿತ. ಸೊಸೆ ಸುಶ್ಮಾ ರಘುರಾಮ ಜೋಷಿ ಗಾಯನಕಲೆಯಲ್ಲಿ ಆಸಕ್ತರು.

ಲೇಖಕ: ರವಿಶಂಕರ್ ವಳಕ್ಕುಂಜ 

ಕಲಾವಿದ, ಪ್ರಸಾಧನ ತಜ್ಞ ವೆಂಕಟೇಶ ಮಯ್ಯರ ‘ಶ್ರೀ ಗುರು ನೃಸಿಂಹ ಕಲಾಮಂಡಳಿ, ಆರ್ಯಾಪು ಪುತ್ತೂರು’

ಯಕ್ಷಗಾನ ಕಲೆಯ ಬಗ್ಗೆ ಜ್ಞಾನವನ್ನು ಹೊಂದಿದವರು ವೇಷಭೂಷಣ, ಮೇಕಪ್ ನೋಡಿದಾಗಲೇ ಇದು ಇಂತಹ ವೇಷ ಎಂದು ತೀರ್ಮಾನಿಸುತ್ತಾರೆ. ಪ್ರತಿಯೊಂದು ವೇಷಕ್ಕೂ ಬಣ್ಣಗಾರಿಕೆ, ವೇಷಭೂಷಣಗಳು, ಕಿರೀಟ ಹೀಗೆಯೇ ಇರಬೇಕು ಎಂಬ ನಿಯಮವಿದೆ. ಪದ್ಯಗಳ ಲಯ, ಕುಣಿತದ ಕ್ರಮವೂ ಹೀಗೆಯೇ ಇರಬೇಕೆಂಬ ನಿಯಮವೂ ಇದೆ. ಹೀಗೆ ಮೊಗೆದಷ್ಟೂ ಯಕ್ಷಗಾನದಲ್ಲಿ ವಿಚಾರಗಳು ಸಿಗುತ್ತವೆ. ಆದರೆ ನಮ್ಮ ಬೊಗಸೆ ಸಣ್ಣದು. ತುಂಬಿಸಲಿರುವ ಪಾತ್ರೆಯೂ ಚಿಕ್ಕದು. ಯಕ್ಷಗಾನವೆಂಬುದು ಅಕ್ಷಯ ಪಾತ್ರೆಯೇ ಹೌದು. ಒಂದು ವೇಷ ರಂಗವನ್ನು ಪ್ರವೇಶಿಸಿದ ಕೂಡಲೇ ಪ್ರೇಕ್ಷಕರು ಅದನ್ನು ಸ್ವೀಕರಿಸುವಂತಿರಬೇಕು. ಮೊದಲ ನೋಟದಲ್ಲೇ ಪ್ರೇಕ್ಷಕನ ಮನಸ್ಸು ಆ ವೇಷವನ್ನು ಒಪ್ಪಿಕೊಳ್ಳಬೇಕು. ಡ್ರೆಸ್ ಅಂದವಾಗಿದ್ದರೆ ಸಾಕೆ? ಅದನ್ನು ಧರಿಸುವ ಕಲೆಯೂ ಕಲಾವಿದನಿಗೆ ಕರಗತವಾಗಿರಬೇಕು. ಈ ಎಲ್ಲಾ ವಿಚಾರಗಳಲ್ಲಿ ಆರ್ಯಾಪು ಖಂಡಿಗೆ ಮನೆಯ ಶ್ರೀ ಕೆ. ವೆಂಕಟೇಶ ಮಯ್ಯರು ನಿಷ್ಣಾತರು. ಕಲಾವಿದನಾಗಿ, ವೇಷಭೂಷಣಗಳ ತಯಾರಿಕೆಯಲ್ಲೂ ಮೇಕಪ್ ಮಾಡುವ ಕಲೆಯಲ್ಲೂ ಪಳಗಿ ಶ್ರೀ ಗುರು ನೃಸಿಂಹ ಕಲಾಮಂಡಳಿ, ಆರ್ಯಾಪು ಪುತ್ತೂರು ಈ ಸಂಸ್ಥೆಯ ಮಾಲೀಕನಾಗಿ ಪ್ರಸಿದ್ಧರು. ಕಲಾವಿದರಿಗೆ, ಮಿತ್ರರಿಗೆಲ್ಲಾ ಇವರು ಪ್ರೀತಿಯ ‘ಮಯ್ಯಣ್ಣ’.

ಶ್ರೀ ವೆಂಕಟೇಶ ಮಯ್ಯರು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಖಂಡಿಗೆ ಎಂಬಲ್ಲಿ 1964ನೇ ಇಸವಿಯಲ್ಲಿ ಶ್ರೀ ಕೆ. ಶ್ರೀನಿವಾಸ ಮಯ್ಯ ಮತ್ತು ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಇವರ ಮೂಲಮನೆ ಮಂಗಳೂರು ತಾಲೂಕಿನ ಕೊಂರ್ಗಿಬೈಲು (ಮಯ್ಯರ ಮನೆ). ಅಜ್ಜನ ಮನೆಯಲ್ಲಿ ವಾಸ್ತವ್ಯವಿದ್ದು 2ನೇ ತರಗತಿಯ ವರೆಗೆ ನೆಟ್ಲ ಶಾಲೆಯಲ್ಲಿ ಓದಿದ್ದರು. ಮತ್ತೆ ಸಂಟ್ಯಾರು ಮತ್ತು ಸಂಪ್ಯ ಶಾಲೆಯಲ್ಲೂ 7ರಿಂದ 10ನೇ ತರಗತಿಯ ವರೆಗೆ ನವೋದಯ ಹೈಸ್ಕೂಲ್‍ನಲ್ಲಿಯೂ ಓದಿದ್ದರು. ನಂತರ ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೋಮ ಓದಿದ್ದರು. ಇವರಿಗೆ ಎಳವೆಯಲ್ಲಿಯೇ ಯಕ್ಷಗಾನಾಸಕ್ತಿ. ನೆಟ್ಲ ಶಾಲೆಯಲ್ಲಿ ಓದುತ್ತಿರುವಾಗ ಖ್ಯಾತ ಕಲಾವಿದ ಮೂಡಬಿದ್ರೆ ಮಾಧವ ಶೆಟ್ಟರು ಕಲ್ಲಡ್ಕದಲ್ಲಿ ನಾಟ್ಯ ತರಗತಿ ನಡೆಸುತ್ತಿದ್ದರು. ಅವರು ಮಕ್ಕಳಿಗೆ ತರಬೇತಿ ನೀಡುತ್ತಿದ್ದ ರೀತಿಯನ್ನು ನೋಡಿ ಮಯ್ಯರಿಗೆ ಕಲಿಯಬೇಕೆಂಬ ಆಸೆಯಾಯಿತು.

ರಜಾ ದಿನಗಳಲ್ಲಿ ನಾಟ್ಯ ಕಲಿತರು. ಮಾಧವ ಶೆಟ್ಟರು ತನ್ನ ವಾಸ್ತವ್ಯವನ್ನು ಕಬಕಕ್ಕೆ ಬದಲಾಯಿಸಿದಾಗ ಅವರ ಮನೆಗೆ ಹೋಗಿ ನಾಟ್ಯ ಕಲಿತಿದ್ದರು. ಅಧ್ಯಾಪಕ, ಕಲಾವಿದ ನುಳಿಯಾಲು ಸಂಜೀವ ರೈಗಳೂ ಪ್ರೋತ್ಸಾಹಿಸಿದರು. ಶಾಲಾ ವಾರ್ಷಿಕೋತ್ಸವದ ಪ್ರದರ್ಶನಗಳಲ್ಲೂ ಅವಕಾಶ ಸಿಕ್ಕಿತ್ತು. ನೆಟ್ಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ವೇತಕುಮಾರ ಚರಿತ್ರೆ ಪ್ರಸಂಗ. ಸಿತಕೇತನಾಗಿ ವೆಂಕಟೇಶ ಮಯ್ಯರು ರಂಗಪ್ರವೇಶ ಮಾಡಿದರು. ಯಕ್ಷಗಾನ ಕೃಷಿಯ ಜೊತೆ ಮಯ್ಯರು ಸುಮಾರು ಹದಿನೈದು ವರ್ಷಗಳ ಕಾಲ ಪುತ್ತೂರು ದರ್ಬೆಯಲ್ಲಿ ‘ವಿಜಯ ಇಲೆಕ್ಟ್ರಾನಿಕ್ಸ್’ ಎಂಬ ಸಂಸ್ಥೆಯನ್ನು ನಡೆಸಿದ್ದರು. ಈ ಸಂದಭದಲ್ಲಿ ಹವ್ಯಾಸೀ ಕಲಾವಿದನಾಗಿ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಅಪೇಕ್ಷೆಯಂತೆ ಸುಬ್ರಹ್ಮಣ್ಯ ಮೇಳದಲ್ಲೂ ಕಲಾಸೇವೆ ಮಾಡುತ್ತಿದ್ದರು. ಪುತ್ತಿಗೆ, ಪುತ್ತೂರು ಮಹಾಲಕ್ಷ್ಮಿ ಮೇಳಗಳಲ್ಲೂ ವೇಷ ಮಾಡಿದ್ದರು. ಕಲಾವಿದನಾಗಿ ಬೆಳೆಯುವುದಕ್ಕೆ ಅನುಕೂಲವಾಯಿತು.

ಮೊದಲು ಪುಂಡುವೇಷ, ಕಿರೀಟವೇಷಗಳನ್ನೂ ಮಾಡುತ್ತಿದ್ದರು. ಆಗ ಬಣ್ಣದ ವೇಷ ನಿರ್ವಹಿಸುವ ಕಲಾವಿದರ ಅನಿವಾರ್ಯತೆ ಇತ್ತು. ಮಯ್ಯರಿಗೆ ಆಸಕ್ತಿಯೂ ಇತ್ತು. ಅದನ್ನೇ ಆಯ್ಕೆ ಮಾಡಿ ಕೊಂಡರು. 1987-88ರ ಹನ್ನೆರಡು ತಿಂಗಳುಗಳಲ್ಲಿ ದೇವಿ ಮಹಾತ್ಮೆ ಪ್ರಸಂಗದಲ್ಲಿ ನೂರಕ್ಕೂ ಮಿಕ್ಕಿ ಶುಂಭಾಸುರ ಪಾತ್ರವನ್ನು ನಿರ್ವಹಿಸಿದ್ದರು. ಮೇಳಗಳಲ್ಲಿ ಹೆಸರಾಂತ ಬಣ್ಣದ ವೇಷಧಾರಿಗಳು ತಿರುಗಾಟ ಮಾಡುತ್ತಿದ್ದರು. ಹವ್ಯಾಸೀ ತಂಡಗಳಲ್ಲಿ ಆ ವಿಭಾಗ ದುರ್ಬಲವಾಗಿತ್ತು. ಬಣ್ಣದ ವೇಷಗಳನ್ನೇ ಆಯ್ಕೆ ಮಾಡಿ ಮಯ್ಯರು ಪರಿಸ್ಥಿತಿಯ ಲಾಭವನ್ನೆತ್ತಿ ಕಾಣಿಸಿಕೊಂಡು ಆ ವಿಭಾಗವನ್ನು ಪ್ರಬಲಗೊಳಿಸಿದರು. ಮೊತ್ತಮೊದಲು ವೀರಭದ್ರನಾಗಿ ಅಭಿನಯಿಸಿದರು. ಅಲ್ಲದೆ ಶುಂಭ, ನಿಶುಂಭ, ರಾವಣ, ಕುಂಭಕರ್ಣ, ಮೈರಾವಣ, ಮಹಿಷಾಸುರ, ತಾರಕಾಸುರ, ಶೂರಪದ್ಮ, ಭೀಮ, ಶತ್ರುಪ್ರಸೂಧನ, ಶೂರ್ಪನಖಿ, ಪೂತನಿ, ಕರಾಳನೇತ್ರೆ, ಮಹಿಷಿ, ಯಮ, ಮೃತ್ಯು ಮೊದಲಾದ ವೇಷಗಳನ್ನು ನಿರ್ವಹಿಸುತ್ತಿದ್ದರು. ಮಯ್ಯರು ನಾಟಕೀಯ ವೇಷಗಳನ್ನು ಚೆನ್ನಾಗಿ ಮಾಡುತ್ತಾರೆ. ಕಂಸ ಮತ್ತು ಶನಿ ಪಾತ್ರಗಳನ್ನು ಮಾಡಲೆಂದೇ ಅವರನ್ನು ಸಂಘಟಕರು ಕರೆಯುತ್ತಿದ್ದರು.
                               

ಹಿಂದಿನ ಕಾಲದಲ್ಲಿ ವೇಷಭೂಷಣಗಳ ವಿಚಾರದಲ್ಲಿ ಅಸಮತೋಲನವಿತ್ತು. ಕಲಾವಿದರು ಧರಿಸುವ ಎಲ್ಲಾ ಭೂಷಣಗಳೂ ಭಾರವಾಗಿದ್ದುವು. ಕಲಾವಿದರಿಗೆ ವೇಷ ಮಾಡಿ ಕುಣಿಯಲು ತೊಡಕಾಗುತ್ತಿತ್ತು. ಅಲ್ಲದೆ ಭೂಷಣ ಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿರಲಿಲ್ಲ. ಹಿಂದಿನ ಕಾಲದ ಸಂಪನ್ಮೂಲಗಳ ಕೊರತೆಯೂ ಇದಕ್ಕೆ ಕಾರಣವಿರಬಹುದು. ಭಾರವನ್ನು ಕಡಿಮೆಗೊಳಿಸಿ, ವೇಷಭೂಷಣಗಳಲ್ಲಿರುವ ಅಸಮತೋಲನವನ್ನು ಹೋಗಲಾಡಿಸಬೇಕೆಂದು ಮಯ್ಯರು ನಿರ್ಧರಿಸಿದರು. ಮೂಡಬಿದಿರೆ ಮಾಧವ ಶೆಟ್ಟರು ಮೇಕಪ್ ಅಂದವಾಗಿ ಹೇಳಿಕೊಟ್ಟಿದ್ದರು. ಡ್ರೆಸ್‍ನ ಬಗ್ಗೆಯೂ ಮಯ್ಯರಿಗೆ ಮಾಹಿತಿ ನೀಡಿದರು. ಅಲ್ಲದೆ ಮೇಳಗಳಿಗೆ ಭೇಟಿ ನೀಡಿ ಮೇಳದ ಯಜಮಾನರುಗಳಲ್ಲಿ, ಕಲಾವಿದರಲ್ಲಿ ಮಾಹಿತಿ ಸಂಗ್ರಹಿಸಿದರು. ತಾನು ನಿರ್ವಹಿಸುವ ವೇಷಕ್ಕೆ ಬೇಕಾದ ವೇಷಭೂಷಣಗಳನ್ನು ತಯಾರಿಸಿ ಧರಿಸಿ ತೃಪ್ತಿಪಟ್ಟರು. ಪ್ರಯೋಗಕ್ಕೆ ಮೊದಲು ತನ್ನನ್ನು ತಾನು ಬಳಸಿಕೊಂಡು ನಂತರ ತಂಡವೊಂದಕ್ಕೆ ಬೇಕಾಗುವಷ್ಟು ಸಿದ್ಧಪಡಿಸಿದರು.

ವೇಷಧಾರಿಯಾದ ಶ್ರೀ ವೆಂಕಟೇಶ ಮಯ್ಯರು 1996ರಲ್ಲಿ ಡ್ರೆಸ್‍ನ ಮಾಲೀಕರಾದರು. ಶ್ರೀ ಗುರು ನೃಸಿಂಹ ಕಲಾಮಂಡಳಿ, ಖಂಡಿಗೆ, ಆರ್ಯಾಪು ಎಂಬ ಸಂಸ್ಥೆಯನ್ನು ಆರಂಭಿಸಿ ಸಂಘದ ಆಟ, ಶಾಲಾ ಕಾಲೇಜುಗಳ ಕಾರ್ಯಕ್ರಮಕ್ಕೆ ಮೇಕಪ್ ಮತ್ತು ವೇಷಭೂಷಣಗಳ ವ್ಯವಸ್ಥೆಯನ್ನೂ ಮಾಡಿದರು. 2004ರಿಂದ 2006ರ ತನಕ ಡ್ರೆಸ್‍ನ ಪಾಲಿಗೆ ಸುವರ್ಣಯುಗವೆಂದೂ ಆರು ತಿಂಗಳುಗಳಲ್ಲಿ ಸರಿಯಾಗಿ ನಿದ್ದೆ ಮಾಡಿದ್ದು ಕೇವಲ ಬೆರಳೆಣಿಕೆಯ ದಿನಗಳೆಂದೂ ಮಯ್ಯರು ಹೇಳುತ್ತಾರೆ. 1997ರಲ್ಲಿ ಡ್ರೆಸ್ ಬಾಡಿಗೆ ನೀಡಲು, ಪ್ರಥಮ ವರ್ಷವೇ 58 ಕಾರ್ಯಕ್ರಮಗಳು ಸಿಕ್ಕಿತ್ತು. ಮೇಕಪ್ ವಿಚಾರದಲ್ಲಿ ಮಯ್ಯರು ಎತ್ತಿದ ಕೈ. ಸವ್ಯಸಾಚಿ. ಎರಡೂ ಕೈಗಳಲ್ಲಿ ಸರಾಗವಾಗಿ ಒಂದೇ ವೇಗದಲ್ಲಿ ಗೆರೆ ಎಳೆಯಬಲ್ಲರು.

ಆದರೆ ಇತ್ತೀಚಿನ ದಿನಗಳಲ್ಲಿ ಆ ವೇಗ ಇಲ್ಲವೆಂದೂ, ನಿರ್ವಹಣೆಯ ವೆಚ್ಚ ಹೆಚ್ಚುತ್ತಿದ್ದು ನೇಪಥ್ಯ ಕಲಾವಿದರು ಸಿದ್ಧರಾಗುತ್ತಿಲ್ಲ. ಕೃಷಿಯ ಜೊತೆ ಇದನ್ನೂ ನಿರ್ವಹಿಸಲು ಕಷ್ಟವಾಗುತ್ತಿದೆ. ಮೊದಲು ದಿನಕ್ಕೆ ಐದಾರು ಕಾರ್ಯಕ್ರಮಗಳನ್ನು ವಹಿಸಿಕೊಂಡದ್ದಿದೆ. ಆದರೆ ಈಗ ದಿನಕ್ಕೆ ಒಂದೇ ಕಾರ್ಯಕ್ರಮ. ತೀರಾ ಅನಿವಾರ್ಯವಾದರೆ, ಸಂಘಟಕರಿಗೆ ತೊಂದರೆಯಾಗಬಾರದು, ಪ್ರದರ್ಶನ ನಿಲ್ಲಬಾರದು ಎಂಬುದರಿಂದ ಎರಡು ಕಾರ್ಯಕ್ರಮ ಒಪ್ಪಿಕೊಳ್ಳುತ್ತೇನೆ ಎಂದು ಮಯ್ಯರು ಹೇಳುತ್ತಾರೆ. ವೇಷಭೂಷಣಗಳ ನಿರ್ವಹಣೆ, ರಿಪೇರಿ, ವಸ್ತ್ರಗಳನ್ನು ಹೊಲಿಯುವುದು, ಬೇಗಡೆ ಬದಲಿಸಿ ಹೊಳಪು ಮಾಡುವುದು ಈ ಎಲ್ಲಾ ವಿಚಾರಗಳಲ್ಲಿ ಮಯ್ಯರು ನಿಷ್ಣಾತರಾಗಿದ್ದಾರೆ. ವೇಷಭೂಷಣಗಳ ಮಾಲಕರಾದರೂ ಅದರಿಂದ ಇವರು ಶ್ರೀಮಂತರಾಗಿಲ್ಲ. ಹೊಂದಾಣಿಕೆ ಮತ್ತು ಕಷ್ಟಗಳಿಗೆ ಸ್ಪಂದಿಸುವ ಗುಣ ಮಯ್ಯರಿಗಿದೆ. ಕೆಲವು ಪ್ರದರ್ಶನಗಳಿಗೆ ಉಚಿತವಾಗಿ ಡ್ರೆಸ್ ನೀಡಿರುತ್ತಾರೆ.

ಮಕ್ಕಳ ಯಕ್ಷಗಾನ ತಂಡವನ್ನು ಕಟ್ಟಿ ಶ್ರೀ ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ನಾಟ್ಯ ತರಬೇತಿಯನ್ನು ಕೊಡಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಶ್ರೀ ವೆಂಕಟೇಶ ಮಯ್ಯರು ಸಾರಣೆ, ಮರದ ಕೆಲಸ, ಟಿವಿ ಮತ್ತು ರೇಡಿಯೋ ರಿಪೇರಿ, ಕೃಷಿ ವಾಹನ ರಿಪೇರಿ ಹೀಗೆ ಹಲವಾರು ಕೆಲಸಗಳನ್ನು ಮಾಡಬಲ್ಲ ಸಾಹಸಿ. ಕೆಲವು ದೇವಳದ ಗರ್ಭಗುಡಿಯ ಸಾರಣೆಯ ಕೆಲಸವನ್ನೂ ಮಾಡಿರುತ್ತಾರೆ. ಇತ್ತೀಚಿಗೆ ಪಾಣಾಜೆ ರಣಮಂಗಲದ ಶ್ರೀ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯ ಸಾರಣೆ ಕೆಲಸವನ್ನು ಮಾಡಿರುತ್ತಾರೆ. ‘‘ಯಕ್ಷಗಾನದಿಂದ ಆರ್ಥಿಕವಾಗಿ ಶ್ರೀಮಂತನಾಗದಿದ್ದರೂ ಅನೇಕ ಜನರ ಸಂಪರ್ಕವಾಗಿದೆ. ಹಿರಿಯ, ಕಿರಿಯ ಕಲಾವಿದರ, ಸಂಘಟಕ, ವಿದ್ವಾಂಸರ ಒಡನಾಟ ಸಿಕ್ಕಿದೆ. ಆ ವಿಚಾರದಲ್ಲಿ ಸಂತೋಷವಿದೆ’’ ಎನ್ನುವ ಶ್ರೀ ಮಯ್ಯರು ಸಾಂಸಾರಿಕವಾಗಿಯೂ ತೃಪ್ತರು. ಪತಿಯ ಇಚ್ಛೆಯನ್ನರಿತು ನಡೆಯುವ ಪತ್ನಿ ವಿಜಯಲಕ್ಷ್ಮಿ. ಶ್ರೀ ವೆಂಕಟೇಶ ಮಯ್ಯ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀಧರ M.Com ಆಗಿ CA ಮಾಡುತ್ತಿದ್ದಾರೆ. ಮೈಸೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿ. ಕಿರಿಯ ಪುತ್ರ ಸುದರ್ಶನ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ M.Com ಸ್ನಾತಕೋತ್ತರ ಪದವೀಧರ. ಇವರಿಬ್ಬರೂ ಯಕ್ಷಗಾನ ಕಲಾವಿದರು.

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (03.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (03.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕೋಡಪದವು ಶಾಲಾ ಮೈದಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಕೊಂಕಣಕೋಡಿ ಹೌಸ್, ಬಾಳ, ತೋಕೂರು 
ಕಟೀಲು ಎರಡನೇ ಮೇಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶಾರದಾನಗರ , ಮುಂಡಾಜೆ, ಬೆಳ್ತಂಗಡಿ 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರ ರಥಬೀದಿ 
ಕಟೀಲು ನಾಲ್ಕನೇ ಮೇಳ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರ, ಬ್ರಹ್ಮರಕೂಟ್ಲು 
ಕಟೀಲು ಐದನೇ ಮೇಳ ಉರ್ವಸ್ಟೋರ್-ಕಾಟಿಪಳ್ಳ ೩ನೇ ಬ್ಲಾಕ್ ಫ್ರೆಂಡ್ಸ್ ಸರ್ಕಲ್ ಬಳಿ 
ಕಟೀಲು ಆರನೇ ಮೇಳಗುರುಕೃಪಾ, ಪೆರ್ಮುದೆ, ಮೇಲೆಕ್ಕಾರು ರಸ್ತೆ 

ಮಂದಾರ್ತಿ ಒಂದನೇ ಮೇಳ ಯಕ್ಷಿಮಠ, ಗುಂಡ್ಮಿ, ಸಾಸ್ತಾನ
ಮಂದಾರ್ತಿ ಎರಡನೇ ಮೇಳ ತಳಲೆ, ಹೊಸನಗರ 
ಮಂದಾರ್ತಿ ಮೂರನೇ ಮೇಳ ರತ್ನವನ ನಿಲಯ, ಅಂಕದಕಟ್ಟೆ, ಕೋಟೇಶ್ವರ 
ಮಂದಾರ್ತಿ ನಾಲ್ಕನೇ ಮೇಳ ಅರಳಸುರುಳಿ 
ಮಂದಾರ್ತಿ ಐದನೇ ಮೇಳ ಹಡವು, ಪಡುಕೋಣೆ 
ಶ್ರೀ ಹನುಮಗಿರಿ ಮೇಳ ಶ್ರೀ ಮಲರಾಯಿ ಮಂಟಮೆ, ಬಾರೆಬೆಟ್ಟು – ಕನಕಾಂಗಿ ಕಲ್ಯಾಣ, ಮಾಯಾ ಮಾರುತೇಯ (ರಾತ್ರಿ 11 ರಿಂದ)
ಶ್ರೀ ಸಾಲಿಗ್ರಾಮ ಮೇಳಇಡಗುಂದಿ ಕ್ರೀಡಾಂಗಣ – ಭೀಷ್ಮ ವಿಜಯ, ಮಾಯಾಪುರಿ 
ಶ್ರೀ ಪೆರ್ಡೂರು ಮೇಳಪಂಜುರ್ಲಿ ಮಹಾಂಕಾಳಿ ಗರಡಿ ನಡುಮನೆ, ಹಟ್ಟಿಕುದ್ರು – ಶಪ್ತ ಭಾಮಿನಿ 
ಶ್ರೀ ಸುಂಕದಕಟ್ಟೆ ಮೇಳ ಕುದ್ಕೋಳಿ – ಬ್ರಹ್ಮ ಬಲಾಂಡಿ 
ಶ್ರೀ ಮಾರಣಕಟ್ಟೆ ಮೇಳ ‘ಎ’ಸೆಳಿಕೋಡು ಮೇಲ್ಮನೆ, ಹರ್ಕೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಮೇಲ್ ಬಾನಾಳಿ, ಹೆಮ್ಮಕ್ಕಿ, ಕೊಡ್ಲಾಡಿ ಬಾಂಡ್ಯ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಮೇಲ್ ಮಠ, ಕಬ್ಬಿನಾಲೆ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಕಾಳಾವರ – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’ಶ್ರೀ ನಂದಿಕೇಶ್ವರ ದೇವಸ್ಥಾನ, ಬಂಟ್ವಾಡಿ 
ಕಮಲಶಿಲೆ ಮೇಳ ‘ಬಿ’ಶ್ರೀ ಕಲ್ಲುಕುಟ್ಟಿಗ ದೈವಸ್ಥಾನ, ತಟ್ಟೆಗುಳಿ, ಕಮಲಶಿಲೆ 

ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರ ಬಪ್ಪನಾಡು – ಬನತ ಬಂಗಾರ್
ಶ್ರೀ ಅಮೃತೇಶ್ವರೀ ಮೇಳಕಾಜರಗುತ್ತು, ಹಿರಿಯಡ್ಕ   
ಶ್ರೀ ಬೋಳಂಬಳ್ಳಿ ಮೇಳ ಗಂಗೊಳ್ಳಿ 
ಶ್ರೀ ಸೌಕೂರು ಮೇಳಗುಲ್ವಾಡಿ ತಾತಯ್ಯನಮಠ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 
ಶ್ರೀ ಹಾಲಾಡಿ ಮೇಳಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹರ್ಳಾಡಿಕೆರೆ
ಶ್ರೀ ಬೆಂಕಿನಾಥೇಶ್ವರ ಮೇಳ  ಗೋಳಿಕಟ್ಟೆ ಕಲ್ಕುಡ ವರ್ತೆ ದೈವಸ್ಥಾನದ ಮುಂಭಾಗ – ಶ್ರೀ ನಾಗದೇವತೆ (ಕಾಲಮಿತಿ)
ಶ್ರೀ ಮಡಾಮಕ್ಕಿ ಮೇಳಮುದರಂಗಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೋಟ ಹರ್ತಟ್ಟು – ಅಬ್ಬರದ ಬೊಬ್ಬರ್ಯೆ 
ಶ್ರೀ ಹಿರಿಯಡಕ ಮೇಳಹುಣ್ಸೆಮಕ್ಕಿ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಇಡೂರು ಕುಂಜ್ಞಾಡಿ ಮುಖಮಂಟಪದ ಬಳಿ  
ಶ್ರೀ ಸಿಗಂದೂರು ಮೇಳಶಿಂಡ್ಲಿ, ಶಿವಮೊಗ್ಗ ಜಿಲ್ಲೆ 
ಶ್ರೀ ನೀಲಾವರ ಮೇಳ ನಂದಿಕೇಶ್ವರ ದೈವಸ್ಥಾನ ವಠಾರ, ಅರೆಹೊಳೆ ಕ್ರಾಸ್ 
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ಸಿರುಪತಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ರಿಪ್ಪನ್ ಪೇಟೆ 
ಶ್ರೀ ಮೇಗರವಳ್ಳಿ ಮೇಳ ರಾಮಕೃಷ್ಣಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಧುರ ಮನಸ್ವಿ 
ಶ್ರೀ ಕ್ಷೇತ್ರ ಕಾಂತಾವರ ಮೇಳ ಕಾರ್ಕಳ ಸಾಣೂರು ದೇಂದಬೆಟ್ಟು – ನರಕಾಸುರ, ಮೈಂದ ದ್ವಿವಿದ (ಸಂಜೆ 6ರಿಂದ)

‘ಶ್ರೀ ಮಾತಾ ಹವ್ಯಕ ಭಜನಾ ಸಂಘ’ ಬದಿಯಡ್ಕ, ಇದರ ಸದಸ್ಯೆಯರಿಂದ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಜನಾ ಸೇವೆ

ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಮತ್ತು ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಇವರ ವತಿಯಿಂದ ದಿನಾಂಕ 28.12.2020 ರಿಂದ 13.02.2021ರ ವರೆಗೆ ‘ನಿತ್ಯ ಭಜನಾ ಸೇವೆ’ಯು ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರತಿ ದಿನ ಬೆಳಗ್ಗೆ ಗಂಟೆ 6ರಿಂದ ಸಂಜೆ ಗಂಟೆ 7 ರ ವರೆಗೆ ನಡೆಯುತ್ತಿದೆ.

ಅದರಂತೆ ಇಂದು  ‘ಶ್ರೀ ಮಾತಾ ಹವ್ಯಕ ಭಜನಾ ಸಂಘ’ ಬದಿಯಡ್ಕ, ಇದರ ಸದಸ್ಯೆಯರಿಂದ ಭಜನಾ ಸೇವೆ ಬೆಳಗ್ಗೆ ಗಂಟೆ 10 ರಿಂದ ಮಧ್ಯಾಹ್ನ12 ಗಂಟೆಯ ವರೆಗೆ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಅಂಗಣದಲ್ಲಿ ನಡೆಯಿತು.

ಶ್ರೀ ಭಾರತೀ ಕಲಾ ಆರ್ಟ್ಸ್, ಮುಡಿಪು – ಕಲಾವಿದ, ರಂಗಪ್ರಸಾಧನತಜ್ಞ ಶ್ರೀ ರಾಘವದಾಸರ ಕನಸಿನ ಕೂಸು 

ಮೇಳಗಳು ತಮ್ಮದೇ ಆದ ವೇಷಭೂಷಣಗಳ ವ್ಯವಸ್ಥೆಯನ್ನು ಹೊಂದಿ ತಿರುಗಾಟ ನಡೆಸುತ್ತವೆ. ಆದರೆ ಸಂಘ, ಶಾಲಾ ಕಾಲೇಜುಗಳ ಪ್ರದರ್ಶನ, ಇನ್ನಿತರ ಸಮಾರಂಭಗಳ ಯಕ್ಷಗಾನ ಪ್ರದರ್ಶನಗಳ ಸಂಘಟಕರು ಬಾಡಿಗೆಗೆ ತರಿಸಿಕೊಳ್ಳಲೇಬೇಕಾಗುತ್ತದೆ. ಇಂದು ಹಲವಾರು ಸಂಘ ಸಂಸ್ಥೆಗಳು ವೇಷಭೂಷಣಗಳನ್ನು ಹೊಂದಿ ಅದನ್ನು ಸಂಘಟಕರಿಗೆ ಪೂರೈಸಿ ಪ್ರದರ್ಶನಗಳು ಯಶಸ್ವಿಯಾಗಿ ನಡೆಯುವುದಕ್ಕೆ ಕಾರಣ ಸ್ಥಾನದಲ್ಲಿವೆ. ಅಂತಹ ಸಂಸ್ಥೆಗಳಲ್ಲೊಂದು ಶ್ರೀ ಭಾರತೀ ಕಲಾ ಆರ್ಟ್ಸ್, ಮುಡಿಪು.   

ಈ ಸಂಸ್ಥೆಯು ಹೂ ಹಾಕುವ ಕಲ್ಲು (ಮುಡಿಪು), ಅಲ್ಲದೆ ಬಿ.ಸಿ. ರೋಡ್ ಬಸ್ ನಿಲ್ದಾಣದ ಸಮೀಪದ ಕಟ್ಟಡದಲ್ಲೂ ಕಾರ್ಯಾಚರಿಸುತ್ತಿದೆ. ಶ್ರೀ ರಾಘವದಾಸ್ ಬಜಪೆ ಅವರು ಶ್ರೀ ಭಾರತೀ ಕಲಾ ಆರ್ಟ್ಸ್ ನ ಮಾಲೀಕರು. ಇವರು ಕಲಾವಿದರೂ ಹೌದು. ನಗುಮೊಗದ ಇವರು ಶುಭ್ರ ವಸನಧಾರಿ. ಯಾವಾಗಲೂ ಬಿಳಿ ಅಂಗಿ ಮತ್ತು ಬಿಳಿ ಪಂಚೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಪ್ರಸ್ತುತ ಮುಡಿಪು ಸಮೀಪ ವಾಸವಿದ್ದರೂ ಹುಟ್ಟೂರು ಬಜಪೆ ಸಮೀಪವಾದ ಕಾರಣ ಬಜಪೆ ರಾಘವದಾಸ್ ಎಂದೇ ಪ್ರಸಿದ್ಧರಾಗಿದ್ದಾರೆ.

ಶ್ರೀ ರಾಘವದಾಸ್ ಅವರು ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ತಲಕಳ ಎಂಬಲ್ಲಿ ಬಜಪೆ ನಾರಾಯಣದಾಸ್ ಮತ್ತು ಸೀತಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಇವರದು ಬಡ ಕೃಷಿ ಕುಟುಂಬ. ಬಜಪೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದರು. ತಲಕಳ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ನಡೆಯುತ್ತಿದ್ದ ಆಟ, ಕೂಟ, ಭಜನಾ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಪ್ರೇಕ್ಷಕನಾಗಿ ಆಸ್ವಾದಿಸುತ್ತಿದ್ದರು. ಇವರ ತಂದೆ ನಾರಾಯಣದಾಸರು ಯಕ್ಷಗಾನ ಕಲಾವಿದರಾಗಿದ್ದರು. ಹವ್ಯಾಸೀ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಪರಿಸರದಲ್ಲಿ ನಡೆಯುತ್ತಿದ್ದ ಕಟೀಲು ಮೇಳದ ಪ್ರದರ್ಶನಗಳನ್ನು ರಾಘವದಾಸರು ನೋಡುತ್ತಿದ್ದರು.

ಸಹಜವಾಗಿ ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆ ಮೂಡಿತು. ತಲಕಳ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿಯ ವತಿಯಿಂದ ತರಗತಿಯೂ ನಡೆಯುತ್ತಿತ್ತು. ಶ್ರೀ ದೇರಣ್ಣ ದೇವಾಡಿಗರಿಂದ ನಾಟ್ಯ ಕಲಿತು ತಲಕಳ ದೇವಸ್ಥಾನದಲ್ಲಿ ನಡೆದ ಪ್ರದರ್ಶನ ಬ್ರಹ್ಮಕಪಾಲ ಪ್ರಸಂಗದಲ್ಲಿ ದಿಕ್ಪತಿಯಾಗಿ ರಂಗಪ್ರವೇಶ. ಕಟೀಲು ದೇವಳದಲ್ಲಿ ನವರಾತ್ರಿಯ ಪ್ರಯುಕ್ತ ನಡೆದ ಪ್ರದರ್ಶನ. ತಲಕಳ ವಿಶ್ವನಾಥೇಶ್ವರ ಯಕ್ಷಗಾನ ಸಂಘದ ಆಟ ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಷಣ್ಮುಖನಾಗಿ ಅಭಿನಯಿಸಿದಾಗ ಮೆಚ್ಚಿದ ಬಜಪೆ ರಾಮರಾಯರು ಮತ್ತು ಪಡ್ಡೋಡಿಗುತ್ತು ಸುಂದರ ಶೆಟ್ಟರು ರಾಘವದಾಸರನ್ನು ಸುಂಕದಕಟ್ಟೆ ಮೇಳಕ್ಕೆ  ಸೇರಿಸಿದರು. ಒಂದು ವರ್ಷ ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ನಡೆಸಿ ಮುಂದಿನ ವರ್ಷ ಕುಂಡಾವು ಮೇಳದಲ್ಲಿ ವ್ಯವಸಾಯ. ಶ್ರೀ ಕಲ್ಲಾಡಿ ನಾಗರಾಜ ಶೆಟ್ರ ಸಂಚಾಲಕತ್ವ. ಅಗರಿ ಶ್ರೀನಿವಾಸ ರಾಯರು ಭಾಗವತರಾಗಿದ್ದರು. ಹೊಸಹಿತ್ಲು ಮಹಾಲಿಂಗ ಭಟ್, ಗುಂಪೆ ರಾಮಯ್ಯ ರೈ, ಪುತ್ತೂರು ಕೃಷ್ಣ ಭಟ್, ಪೂಕಳ ಲಕ್ಷ್ಮೀನಾರಾಯಣ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಕೇಶವ ಬೈಪಡಿತ್ತಾಯ ಮೊದಲಾದವರ ಒಡನಾಟ ಕಲಿಕೆಗೆ ಅವಕಾಶವಾಯಿತು.

ಅಭ್ಯಾಸೀ ಕಲಾವಿದನಾಗಿರುವಾಗ ಸಮಯಾವಕಾಶ ಕಡಿಮೆಯಿದ್ದರೂ ಪ್ರದರ್ಶನವೊಂದು ನಡಯಲೇಬೇಕಾದ ಅನಿವಾರ್ಯ ಸಂದರ್ಭ ಬಂದಾಗ ಕಲ್ಲಾಡಿ ನಾಗರಾಜ ಶೆಟ್ಟರು ದೂರದೂರಿಂದ ಕಲಾವಿದರನ್ನೆಲ್ಲಾ ವಾಹನದಲ್ಲಿ ಕರೆದುಕೊಂಡು ಹೋಗಿದ್ದರಂತೆ. ಗಿರಿಜಾ ಕಲ್ಯಾಣ ಪ್ರಸಂಗ. ಸಿಕ್ಕ ಅತ್ಯಲ್ಪ ಸಮಯದಲ್ಲಿ ರಾಘವದಾಸರು ತಾರಕಾಸುರನಾಗಿ ರಂಗವೇರಿದ್ದರು. ಇದು ವಿಶೇಷ ಅನುಭವ. ಇಂತಹ ವಿಶೇಷ ಅನುಭವಗಳು ಜೀವನದಲ್ಲಿ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗುತ್ತವೆ ಎಂಬುದು ಅವರ ಅನಿಸಿಕೆ. ಕುಂಡಾವು ಮೇಳದಲ್ಲಿ ಒಂದು ವರ್ಷ ತಿರುಗಾಟ. ನಂತರ ಶ್ರೀ ಕುಬಣೂರು ಶ್ರೀಧರ ರಾಯರ ನೇತೃತ್ವದ ಕೂಡ್ಲು ಮೇಳದಲ್ಲಿ ಒಂದು ವರ್ಷ, ಮತ್ತೆ ಮೂರು ವರ್ಷಗಳ ಕಾಲ ಹವ್ಯಾಸಿಯಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದರು.

ಮುಡಿಪು ವಿಘ್ನೇಶ್ವರ ಭಟ್ಟರ ಸಂಚಾಲಕತ್ವದಲ್ಲಿ ನಂದಾವರ ಮೇಳ ಆರಂಭವಾದಾಗ ಸದ್ರಿ ಮೇಳದಲ್ಲಿ ಎರಡು ವರ್ಷಗಳ ಕಲಾಸೇವೆ ಮಾಡಿ ಬಳಿಕ ಅರುವ ನಾರಾಯಣ ಶೆಟ್ಟರ ನೇತೃತ್ವದ ಅರುವ ಮೇಳಕ್ಕೆ ಮುಖ್ಯ ವೇಷಧಾರಿಯಾಗಿ ಸೇರ್ಪಡೆಕೊಂಡರು. ಅರುವ ಮೇಳದಲ್ಲಿ ಎರಡು ತಿರುಗಾಟ. ತಿಮ್ಮಪ್ಪ ಗುಜರನ್ ಸಂಚಾಲಕತ್ವದ ತಲಕಳ ಮೇಳದಲ್ಲಿ ಎರಡು ವರ್ಷಗಳ ತಿರುಗಾಟ ನಡೆಸಿದರು. ಕಾವೂರು ಕೇಶವನವರು ಕೂಡ್ಲು ಮೇಳವನ್ನು ವಹಿಸಿಕೊಂಡಾಗ ಸದ್ರಿ ಮೇಳದಲ್ಲಿ ತಿರುಗಾಟ. ಕಾವೂರು ಕೇಶವನವರು ಮೇಳವನ್ನು ನಿಲ್ಲಿಸಿ ವೇಷಭೂಷಣಗಳನ್ನು ಖರೀದಿಸುವಂತೆ ರಾಘವದಾಸರಲ್ಲಿ ಕೇಳಿ ಕೊಂಡರಂತೆ. ಹಣ ಇಲ್ಲ ಎಂದಾಗ ಇದ್ದಷ್ಟು ಕೊಡಿ ಎಂದು ವಿಶ್ವಾಸದಿಂದ ಕೊಟ್ಟರಂತೆ. ವೇಷಭೂಷಣಗಳನ್ನು ಹೇಗೆ ನಿರ್ವಹಿಸುವುದು? ಕಾರ್ಯಕ್ರಮಗಳು ಸಿಗದಿದ್ದರೆ ಎಂಬ ಚಿಂತೆಯಲ್ಲಿರುವಾಗ ಪಟ್ಲಗುತ್ತು  ಶ್ರೀ ಮಹಾಬಲ ಶೆಟ್ರ ಸಂಚಾಲಕತ್ವದಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯು ಆರಂಭವಾಗಿತ್ತು. ಮಹಾಬಲ ಶೆಟ್ರು ರಾಘವದಾಸರ ಚಿಂತೆ ಯನ್ನು ದೂರ ಮಾಡಿದ್ದರು. ಮಲ್ಲ ಮೇಳಕ್ಕೆ ವೇಷಭೂಷಣಗಳನ್ನು ನೀಡಿದರು. ಅಲ್ಲದೆ ವೇಷಧಾರಿಯಾಗಿಯೂ ಭಾಗವತನಾಗಿಯೂ ಮಲ್ಲ ಮೇಳದಲ್ಲಿ ವ್ಯವಸಾಯ ಮಾಡಿದರು.
                         

ಶ್ರೀ ರಾಘವದಾಸರು ಶ್ರೀ ಕೊಡಕ್ಕಲ್ಲು ಗೋಪಾಲಕೃಷ್ಣ ಹಾಸ್ಯಗಾರರಿಂದ ಭಾಗವತಿಕೆಯ ಬಾಲಪಾಠ, ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರಿಂದ ಭಾಗವತಿಕೆಯನ್ನೂ ಅಭ್ಯಾಸ ಮಾಡಿದ್ದರು. ನಂದಾವರ, ಅರುವ ಮೇಳದಲ್ಲಿ ಸಂಗೀತಗಾರನಾಗಿ ಪದ್ಯ ಹೇಳಿದ್ದರು. ಮಲ್ಲ ಮೇಳದಲ್ಲಿ ಶ್ರೀ ರವಿಶಂಕರ್ ಮಧೂರು ಮತ್ತು ಇವರು ಭಾಗವತಿಕೆ ಮಾಡುತ್ತಿದ್ದರು. ಎರಡು ವರ್ಷಗಳ ಕಾಲ ಮಲ್ಲ ಮೇಳದ ತಿರುಗಾಟ, ನಂತರ ಅಡ್ಯಾರು ಶಂಕರ ಆಳ್ವರ ಸಂಚಾಲಕತ್ವದಲ್ಲಿ ಬಪ್ಪನಾಡು ಮೇಳದಲ್ಲಿ ವ್ಯವಸಾಯ. ನಂತರ ರಾಘವದಾಸರು ಕಲಾವಿದನಾಗಿ ವೃತ್ತಿಜೀವನದಿಂದ ನಿವೃತ್ತರಾಗಿ 1989ರಲ್ಲಿ ಶ್ರೀ ಭಾರತಿ ಕಲಾ ಆರ್ಟ್ಸ್ ‘ಹೂ ಹಾಕುವ ಕಲ್ಲು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ವೇಷಭೂಷಣಗಳ ನಿರ್ವಹಣೆಯತ್ತ ಗಮನ ಹರಿಸಿದರು. ಆಗ ಪ್ರಸಾಧನ ಸಂಸ್ಥೆಗಳು ಕಡಿಮೆ ಸಂಖ್ಯೆಯಲ್ಲಿತ್ತು. ಹಾಗಾಗಿ ಬೇಡಿಕೆಯೂ ಇತ್ತು. ರಾಘವದಾಸರು ದಿನವೊಂದಕ್ಕೆ ಮೂರು ಅಥವಾ ನಾಲ್ಕು ಪ್ರದರ್ಶನಗಳನ್ನೂ ಒಪ್ಪಿಕೊಂಡದ್ದೂ ಇದೆ. ಪ್ರತಿದಿನವೂ ಇವರ ತಂಡದಲ್ಲಿ ವೇಷಭೂಷಣಗಳ ತಯಾರಿ ಮತ್ತು ನಿರ್ವಹಣೆಗಾಗಿ ಐದಾರು ಮಂದಿ ದುಡಿಯುತ್ತಾರೆ. ಪ್ರದರ್ಶನಗಳ ಸಂಖ್ಯೆಯನ್ನು ಮತ್ತು ಪ್ರಸಂಗ ಮತ್ತು ಅದರಲ್ಲಿ ಬರುವ ವೇಷಗಳನ್ನು ಹೊಂದಿಕೊಂಡು ತಂಡದಲ್ಲಿ ಎಷ್ಟು ಜನ ಹೋಗಬೇಕು ಎಂದು ನಿರ್ಣಯಿಸುತ್ತಾರೆ. ಹವ್ಯಾಸೀ ತಂಡದವರಾದರೆ ಮೇಕಪ್‍ಗೂ ಕಲಾವಿದರನ್ನು ಕರೆದೊಯ್ಯಬೇಕು. ರಾಘವದಾಸರು ಮೇಕಪ್ ಮಾಡುವ ಕಲೆಯಲ್ಲೂ ನಿಷ್ಣಾತರು. 2004ರಲ್ಲಿ ಶ್ರೀ ಎಸ್. ಎನ್. ಪಂಜಾಜೆ ಅವರು ಜಪಾನ್‍ನಲ್ಲಿ ಏರ್ಪಡಿಸಿದ ಪ್ರದಶನಕ್ಕೆ ಶ್ರೀ ಭಾರತೀ ಕಲಾ ಆರ್ಟ್ಸ್ ನ ವೇಷಭೂಷಣಗಳನ್ನು ಕೊಂಡು ಹೋಗಲಾಗಿತ್ತು. ದೇಶ ವಿದೇಶಗಳ ಪ್ರದರ್ಶನಗಳಿಗೆ ವೇಷಭೂಷಣಗಳನ್ನು ಪೂರೈಸಿದ ಹಿರಿಮೆ ರಾಘವದಾಸರದ್ದು.
                       

ಯಕ್ಷಗಾನ ಅಲ್ಲದೆ ನಾಟಕ, ಭರತನಾಟ್ಯ, ಸಿನಿಮಾ ನೃತ್ಯಗಳು, ಮಕ್ಕಳ ವೇಷಗಳ ಸ್ಪರ್ಧೆ, ಕೋಲಾಟ ಮುಂತಾದ ಕಲೆಗಳಿಗೆ ಸಂಬಂಧಿಸಿದ ವೇಷಭೂಷಣಗಳನ್ನೂ ಶ್ರೀ ಭಾರತೀ ಕಲಾ ಆರ್ಟ್ಸ್ ಸಂಸ್ಥೆಯು ಹೊಂದಿದೆ. ರಾಘವದಾಸರ ಮನೆಯಲ್ಲಿ ಮತ್ತು ಬಿ.ಸಿ. ರೋಡ್ ಬಸ್ ನಿಲ್ದಾಣದ ಸಮೀಪ ಈ ಸಂಸ್ಥೆಯ ವ್ಯವಹಾರ ಕೇಂದ್ರಗಳಿವೆ. ನೇಪಥ್ಯ ಕಲಾವಿದರು ಸಿದ್ಧವಾಗುತ್ತಿಲ್ಲ ಎಂಬ ಬೇಸರವಿದ್ದರೂ ಇದ್ದವರು ಹೊಣೆಗಾರಿಕೆಯಿಂದ ಕೆಲಸ ಮಾಡುವುದರಿಂದ ಡ್ರೆಸ್ ನಿರ್ವಹಣೆ ಸುಲಭವಾಗಿ ಸಾಗುತ್ತಿದೆ ಎನ್ನುವ ರಾಘವದಾಸರು ಜವುಳಿ, ಮಣಿ, ವೆಲ್ವೆಟ್ ಮೊದಲಾದ ಪರಿಕರಗಳನ್ನು ದೂರದ ಮುಂಬಯಿ ನಗರದಿಂದ ತರಿಸುತ್ತಾರೆ. 1989ರಿಂದ ಇಂದಿನ ತನಕ ನಿರಂತರ 30 ವರ್ಷಗಳ ಕಾಲ ಶ್ರೀ ಭಾರತೀ ಕಲಾ ಆರ್ಟ್ಸ್ ನ ಮಾಲೀಕನಾಗಿ ಜನಪ್ರಿಯರಾಗಿದ್ದಾರೆ. ಅಲ್ಲದೆ ಸಂಸ್ಥೆಯು ಆರಂಭವಾಗಿ 15, 20, 25ನೇ ವರ್ಷಗಳಂದು ಧನಸಹಾಯ ಯಾಚಿಸದೇ ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. 15ನೇ ವರ್ಷದ ಕಾರ್ಯಕ್ರಮವು ಅಡಿಕೆ ಪತ್ರಿಕೆಯ ಸಂಪಾದಕ, ಲೇಖಕ, ಕಲಾವಿದ ಶ್ರೀ ನಾ. ಕಾರಂತರ ನಿರ್ದೇಶನದಲ್ಲಿ ನಡೆದಿತ್ತು. ಅಂದು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರನ್ನೂ, ಕುರ್ನಾಡು ಶಿವಣ್ಣ ಆಚಾರ್ಯರನ್ನೂ ಮತ್ತು ಕಾವೂರು ಕೇಶವರನ್ನು ಗೌರವಿಸಲಾಗಿತ್ತು. 20ನೇ ವರ್ಷ ಕಾಸರಗೋಡು ಸದಾನಂದ ರಾವ್, ಕೂಡ್ಲು (ಹಿಮ್ಮೇಳ ವಾದ್ಯಗಳ ತಯಾರಕರು), ಕಲಾವಿದ ಜೋಡುಕಲ್ಲು ಆನಂದ ಪುರುಷರನ್ನು ಸನ್ಮಾನಿಸಿದ್ದರು. 25ನೇ ವರ್ಷದ ಸಮಾರಂಭದಲ್ಲಿ ಶ್ರೀ ಲಲಿತ ಕಲಾ ಆರ್ಟ್ಸ್ ಸಂಸ್ಥೆಯ ಧನಪಾಲ ಶೆಟ್ಟಿಗಾರ್, ಹೊಳ್ಳ ಆರ್ಟ್ಸ್ ನ ಶಂಕರನಾರಾಯಣ ಹೊಳ್ಳ ಬಿ.ಸಿ ರೋಡ್, ಕಲಾವಿದ ಉಮೇಶ್ ಕೊಳಂಬೆ, ಶ್ರೀ ಭಾರತೀ ಕಲಾ ಆರ್ಟ್ಸ್ ನ ನೇಪಥ್ಯ ಕಲಾವಿದರಾದ ಗಂಗಾಧರ ಟೈಲರ್  ಮತ್ತು ರಾಘವ ಕುಲಾಲ್‍ರನ್ನು ಸನ್ಮಾನಿಸಿದ್ದರು.
                        ರಾಘವದಾಸರ ಪತ್ನಿ ಚಂದ್ರಾವತಿ ಸಂತುಷ್ಟ ಗೃಹಣಿ. ರಾಘವದಾಸ್ ದಂಪತಿಗಳಿಗೆ ಇಬ್ಬರು ಮಕ್ಕಳು. ಆರತಿಗೊಂದು, ಕೀರುತಿಗೊಂದು ಎಂಬಂತೆ. ಪುತ್ರಿ ಭಾರತಿ ಬಿ. ಎಡ್. ಓದಿರುತ್ತಾರೆ. ವಿವಾಹಿತೆ, ಗೃಹಣಿ. ಪುತ್ರ ಬಾಲಸುಬ್ರಹ್ಮಣ್ಯ ಪಿ ಯು ಸಿ ಓದಿ ಯಕ್ಷಗಾನ ವೇಷಭೂಷಣಗಳ ತಯಾರಿಕೆಯಲ್ಲಿ ಪಳಗಿ ಶ್ರೀ ಭಾರತೀ ಕಲಾ ಆರ್ಟ್ಸ್ ಸಂಸ್ಥೆಯ ಅಭಿವೃದ್ಧಿಯಲ್ಲಿ ತಂದೆಗೆ ನೆರವಾಗುತ್ತಿದ್ದಾರೆ. 

ಲೇಖಕ: ರವಿಶಂಕರ್ ವಳಕ್ಕುಂಜ

ಮೇಳಗಳ ಇಂದಿನ (02.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (02.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಮಾಣಿಲ ಶ್ರೀಧಾಮ – ಬ್ರಹ್ಮ ಕಪಾಲ, ಗಿರಿಜಾ ಕಲ್ಯಾಣ 
ಕಟೀಲು ಒಂದನೇ ಮೇಳಕಟೀಲು ಕ್ಷೇತ್ರ ರಥಬೀದಿ 
ಕಟೀಲು ಎರಡನೇ ಮೇಳ ಉಳಿ ಕಕ್ಕೆಪದವು ಬಂಟ್ವಾಳ 
ಕಟೀಲು ಮೂರನೇ ಮೇಳದಂಡೆಗೋಳಿ ಬಂಟ್ವಾಳ 
ಕಟೀಲು ನಾಲ್ಕನೇ ಮೇಳ ಕಕ್ಕೂರು, ಬೆಟ್ಟಂಪಾಡಿ ಪುತ್ತೂರು 
ಕಟೀಲು ಐದನೇ ಮೇಳ ಭ್ರಮರಾಂಭ, ಕೃಷ್ಣರಾಜರತ್ನಪುರ, ಕಿನ್ನಿಗೋಳಿ 
ಕಟೀಲು ಆರನೇ ಮೇಳಕಟೀಲು ಸಾನಿಧ್ಯ ಹಾಲ್ 

ಮಂದಾರ್ತಿ ಒಂದನೇ ಮೇಳ ಕಟ್ಟೆತನ ದೇವಸ್ಥಾನ 
ಮಂದಾರ್ತಿ ಎರಡನೇ ಮೇಳ ಇರಗೋಡು ಜಯನಗರ 
ಮಂದಾರ್ತಿ ಮೂರನೇ ಮೇಳ ಬಡಾಹೋಳಿ ಕಾರ್ಕಡ ಸಾಲಿಗ್ರಾಮ 
ಮಂದಾರ್ತಿ ನಾಲ್ಕನೇ ಮೇಳ ವಿಶ್ವಬ್ರಾಹ್ಮಣಪುರ ವಕ್ವಾಡಿ 
ಮಂದಾರ್ತಿ ಐದನೇ ಮೇಳ ಕಂಬಳಗದ್ದೆಮನೆ ದೇವಲ್ಕುಂದ
ಶ್ರೀ ಹನುಮಗಿರಿ ಮೇಳ ಛತ್ರದಗದ್ದೆ ಮೈದಾನ, ನಗರ – ವಿರೋಚನ, ಅಭಿಮನ್ಯು, ಗದಾಯುದ್ಧ 
ಶ್ರೀ ಸಾಲಿಗ್ರಾಮ ಮೇಳಆಮದಳ್ಳಿ (ಕಾರವಾರ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಮಾರಣಕಟ್ಟೆ ಮೇಳ ‘ಎ’ಹಿಜಾಣ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಸಿದ್ದುಕೋಣ್ ಕುಳ್ಳಂಬಳ್ಳಿ ಕೆರಾಡಿ – ಎರಡೂ ಮೇಳಗಳ ಕೂಡಾಟ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಸಿದ್ದುಕೋಣ್ ಕುಳ್ಳಂಬಳ್ಳಿ ಕೆರಾಡಿ – ಎರಡೂ ಮೇಳಗಳ ಕೂಡಾಟ 
ಶ್ರೀ ಪಾವಂಜೆ ಮೇಳ ಶ್ರೀ ಕ್ಷೇತ್ರ ಪಾವಂಜೆ – ಚತುರ್ಜನ್ಮ ಮೋಕ್ಷ 
ಶ್ರೀ ಹಟ್ಟಿಯಂಗಡಿ ಮೇಳಮಹಾಲಿಂಗೇಶ್ವರ ದೇವಸ್ಥಾನ ಕೆದೂರು – ಕಲ್ಯಾಣ ಕುಂಕುಮ 
ಕಮಲಶಿಲೆ ಮೇಳ ‘ಎ’ಪೆಟ್ರೋಲ್ ಬಂಕ್ ಹತ್ತಿರ, ನೆಂಪು 
ಕಮಲಶಿಲೆ ಮೇಳ ‘ಬಿ’ಜಟ್ಟಿಗೇಶ್ವರ ಸಂಘ, ಕೋಟೆಕಾರ್, ಬಿಜೂರು 
ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರ ಬಪ್ಪನಾಡು – ಓಂ ನಮಃ ಶಿವಾಯ 

ಶ್ರೀ ಅಮೃತೇಶ್ವರೀ ಮೇಳವಿನಾಯಕ ಭಜನಾ ಮಂಡಳಿ ಪ್ರಗತಿನಗರ ನೆಡೂರು 
ಶ್ರೀ ಬೋಳಂಬಳ್ಳಿ ಮೇಳ ಶ್ರೀ ಯಕ್ಷೇಶ್ವರಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಲಗೋಣು 
ಶ್ರೀ ಸೌಕೂರು ಮೇಳನೈಕಂಬ್ಳಿ ಹಳೆಯಮ್ಮ ದೇವಸ್ಥಾನ – ಪುಷ್ಪಚಂದನ 
ಶ್ರೀ ಹಾಲಾಡಿ ಮೇಳಕುಂದಲಬೈಲು ಕಾರಿಬೈಲು ಶಾಲಾ ವಠಾರ – ನೂತನ ಪ್ರಸಂಗ 
ಶ್ರೀ ಬೆಂಕಿನಾಥೇಶ್ವರ ಮೇಳ  ಪೆರ್ಡೂರು ಕೆಳಪೇಟೆ ಅನಂತ ಸೌರಭ ಮುಂಭಾಗ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಬೆಳ್ಮಣ್ಣು ಶ್ರೀಕೃಷ್ಣ ಕಾಂಪ್ಲೆಕ್ಸ್ – ದೇವಿ ಶ್ರೀದೇವಿ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬೈಂದೂರು ಶಿರೂರು, ಕಳಿಹಿತ್ಲ್ ಶ್ರೀ ಗರಡಿ ಮಾಸ್ತಿಯಮ್ಮ ದೇವಸ್ಥಾನ ವಠಾರ – ಶ್ರೀ ಮೂಡುತಾರಿಬೇರು ಆದಿಶಕ್ತಿ ಕ್ಷೇತ್ರ ಮಹಾತ್ಮೆ 
ಶ್ರೀ ಹಿರಿಯಡಕ ಮೇಳಹಲ್ತೂರು ಹೊಸಿಮನೆ – ಹಿರಿಯಡಕ ಕ್ಷೇತ್ರ ಮಹಾತ್ಮೆ 
ಶ್ರೀ ಶನೀಶ್ವರ ಮೇಳ ಅಂಬೇಡ್ಕರ ಭವನ ಜನ್ಸಾಲೆ 
ಶ್ರೀ ಸಿಗಂದೂರು ಮೇಳಗದ್ದೆಮನೆ, ಕೋಡಸರ 
ಶ್ರೀ ನೀಲಾವರ ಮೇಳ ಶ್ರೀ ಮರ್ಲುಚಿಕ್ಕು ಮೂಡೂರ ಹೈಗುಳಿ ದೇವಸ್ಥಾನ ಬೆಣ್ಣಗೇರಿ ರಾಗಿಹಕ್ಲು ಬೈಂದೂರು 
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ಹೊದ್ಲ – ಹಂಗಾರ ಕೂಡಿಗೆ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಗುಡ್ಡೆಕೊಪ್ಪ 
ಶ್ರೀ ಮೇಗರವಳ್ಳಿ ಮೇಳ ಶಿವರಾಜಪುರ ಗಣಪತಿ ದೇವಸ್ಥಾನ – ಮಧೂರ ಮನಸ್ವಿ 

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂಡ್ಸೆ ನಾರಾಯಣ ಗಾಣಿಗ ನಿಧನ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ವಂಡ್ಸೆ ನಾರಾಯಣ ಗಾಣಿಗ (84) ಇಂದು (01-02-2021) ನಿಧನರಾದರು. ಅವರು ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.
40 ವರ್ಷಗಳ ಕಾಲ ರಂಗಸ್ಥಳದಲ್ಲಿ ತಿಟ್ಟು ಬೇಧವಿಲ್ಲದೇ ಕಲಾ ವ್ಯವಸಾಯ ಮಾಡಿದ ಕಲಾ ‘ಕೃಷಿಕ’ ವಂಡ್ಸೆ ನಾರಾಯಣ ಗಾಣಿಗರ ಕಲಾ ಸಾಧನೆಯ ಕಿರೀಟಕ್ಕೆ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

ಸಂಸ್ಥೆ ತನ್ನ ರಜತ ಸಂಭ್ರಮದ ಸಂದರ್ಭದಲ್ಲಿ ಅವರನ್ನು ಗೌರವಿಸಿತ್ತು. ತನ್ನ12ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ನಾರಾಯಣ ಗಾಣಿಗರು ಬಹುಬೇಗ ಪ್ರಸಿದ್ಧಿಯ ಪಥವೇರಿದರು. ಸ್ತ್ರೀ ಭೂಮಿಕೆಯಲ್ಲಿ ಹಲವಾರು ಪೌರಾಣಿಕ ಪ್ರಸಂಗಗಳ ಪಾತ್ರಕ್ಕೆ ಸುಭದ್ರವಾದ ತಳಹದಿ ಒದಗಿಸಿದ ಕೀರ್ತಿ ಇವರದ್ದು. ಮಾರಣಕಟ್ಟೆ, ಮಂದಾರ್ತಿ, ಕೊಲ್ಲೂರು, ಧರ್ಮಸ್ಥಳ, ಕುಂಡಾವು, ಕೂಡ್ಲು, ಸುರತ್ಕಲ್, ಇಡಗುಂಜಿ ಮೊದಲಾದ ಮೇಳಗಳಲ್ಲಿ ನಾಲ್ಕೂವರೆ ದಶಕಗಳ ಕಾಲ ಕಲಾಸೇವೆಗೈದಿದ್ದಾರೆ.

ಸ್ವರದ ಮಾರ್ಧವತೆ ಮೂಲಕ ಹಾವ-ಭಾವ, ಒನಪು-ಒಯ್ಯಾರದ ಪ್ರಕಾಷ್ಠ ಪ್ರತಿಭೆ, ಶೃಂಗಾರ ಕರುಣಾ, ಭಕ್ತಿ ರಸಗಳಲ್ಲಿ ಇವರ ಅಭಿನಯ ಅನುಪಮ. ಮೋಹಿನಿ, ಶಿವೆ, ಸುಶೀಲೆ, ರೂಪರೇಖಾ, ಪ್ರಭಾವತಿ ಪಾತ್ರಗಳು ಹೆಣ್ಣನ್ನೇ ನಾಚಿಸಿವೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷಎಮ್.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಯಕ್ಷಗಾನ ಅರ್ಥಧಾರಿ, ಪ್ರಾಚಾರ್ಯ ತುಂಬೆ ಪೂವಪ್ಪ ಶೆಟ್ಟಿ ನಿಧನ

ಹಿರಿಯ ಯಕ್ಷಗಾನ ಅರ್ಥಧಾರಿ,ನಿವೃತ್ತ ಪ್ರಾಚಾರ್ಯ ಪಡ್ಯಾರಮನೆ ಪೂವಪ್ಪ ಶೆಟ್ಟಿ ತುಂಬೆ (83) ಅವರು ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಜನವರಿ 31, 2021ರಂದು ಭಾನುವಾರ ಸಾಯಂಕಾಲ ತುಂಬೆ ಪೇರ್ಲಬೈಲಿನ ಸ್ವಗ್ರಹ ಅನುಗ್ರಹದಲ್ಲಿ ನಿಧನರಾದರು. ಸೋಮವಾರ ಬೆಳಿಗ್ಗೆ 11.00 ಗಂಟೆಗೆ ತುಂಬೆಯಲ್ಲಿ ಅವರ ಅಂತ್ಯ ಕ್ರಿಯೆಯನ್ನು ನೆರವೇರಿಸಲಾಯಿತು.  

ಮೂಲತ: ಅಂಬ್ಲಮೊಗರು ಬಳಿಯ ಪ್ರತಿಷ್ಠಿತ ಪಡ್ಯಾರ ಮನೆ ಕುಟುಂಬದಲ್ಲಿ ಜನಿಸಿದ ಪ್ರೊ.ಪೂವಪ್ಪ ಶೆಟ್ಟಿ ಅವರು ಸುಮಾರು ನಾಲ್ಕು ದಶಕಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಅಪಾರ ಶಿಷ್ಯವರ್ಗವನ್ನು ಪಡೆದವರು. ಬೆಂಜನ ಪದವು  ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದ ಅವರು ಪದೋನ್ನತಿ ಹೊಂದಿ ಕಾವೂರು ಪ.ಪೂ.ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದರು.     

ಅತ್ಯುತ್ತಮ ವಾಗ್ಮಿಗಳಾಗಿದ್ದ ಪೂವಪ್ಪ ಶೆಟ್ಟರು ಎಳವೆಯಿಂದಲೇ ಯಕ್ಷಗಾನ ಕಲೆಯಲ್ಲಿ ಆಸಕ್ತರಾಗಿದ್ದರು. ತಮ್ಮ ವಿಶಿಷ್ಟ ಶೈಲಿಯ ಅರ್ಥಗಾರಿಕೆಯಿಂದ ಹವ್ಯಾಸಿ ಮತ್ತು ಹಿರಿಯರ ತಾಳಮದ್ದಳೆ ಕೂಟಗಳಲ್ಲಿ ಬಹು ಬೇಡಿಕೆಯ ಕಲಾವಿದರಾಗಿದ್ದರು. ಫರಂಗಿಪೇಟೆಯಲ್ಲಿ ದಿ.ಎಫ್.ಹೆಚ್.ಒಡೆಯರ್ ಅವರ ಶಿಷ್ಯ ಬಳಗದಲ್ಲಿ ಮುಂಚೂಣಿಯಲ್ಲಿದ್ದು ದಿ.ಎ.ಕೆ.ನಾರಾಯಣ ಶೆಟ್ಟಿ, ಎ.ಕೆ.ಮಹಾಬಲ ಶೆಟ್ಟಿ, ಧನಂಜಯ ಶೆಟ್ಟಿ ಹಾಗೂ ಶ್ರೀ ಮಹಾಬಲ ಆಳ್ವ, ಸಂಜೀವ ಶೆಟ್ಟಿ ಮೊದಲಾದವರೊಂದಿಗೆ ನೂರಾರು ಕೂಟಗಳಲ್ಲಿ ಭಾಗವಹಿಸಿದ್ದರು. ಶ್ರೀ ಜಗದಾಂಬಿಕಾ ಯಕ್ಷಗಾನ ಸಂಘದ ಸ್ಥಾಪಕ ಸದಸ್ಯರಲ್ಲೊಬ್ಬರು. ಭೀಷ್ಮ, ಕರ್ಣ, ವಾಲಿ, ಮಾಗಧ, ರಾವಣ, ಕಂಸ,ಅರ್ಜುನ,ಹನುಮಂತ ಇತ್ಯಾದಿ ಪಾತ್ರಗಳಲ್ಲಿ ಅವರಿಗೆ ಅಪಾರ ಹಿಡಿತವಿತ್ತು. ಫರಂಗಿಪೇಟೆ ಗಣೇಶೋತ್ಸವದಲ್ಲಿ ಹಾಗೂ ಪಡ್ಯಾರ ಮನೆ ಕುಟುಂಬದ ವರ್ಷಾವಧಿ ನೇಮೋತ್ಸವದಂದು ಸಂಜೆ ಮನೋರಂಜನೆಗಾಗಿ ನಡೆಯುವ ಯಕ್ಷಗಾನ ತಾಳಮದ್ದಳೆಗಳಲ್ಲೂ ಅರ್ಥದಾರಿಯಾಗಿ ಭಾಗವಹಿಸುತ್ತಿದ್ದರು. ಕೌಟುಂಬಿಕವಾಗಿಯೂ ಸಂತೃಪ್ತಿಯ ಜೀವನ ಸಾಗಿಸುತ್ತಿದ್ದ ಪೂವಪ್ಪ ಶೆಟ್ಟರು ಪತ್ನಿ ಶಾಂತಾ ಪಿ.ಶೆಟ್ಟಿ ತೋಕೂರು ಹಾಗೂ ಮಕ್ಕಳಾದ ರೇಖಾ ಬಾಬು ಆಳ್ವ, ಪ್ರಸಾದ್ ಪಿ.ಶೆಟ್ಟಿ, ಸರಿತಾ ಹರೀಶ್ ಮಲ್ಲಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಗಣ್ಯರ ಶೋಕ:     ಆದರ್ಶ ಶಿಕ್ಷಕ, ಯಕ್ಷಗಾನ ವಿದ್ವಾಂಸ ಪೂವಪ್ಪ ಶೆಟ್ಟರ ನಿಧನಕ್ಕೆ ಮಾಜಿ ಸಚಿವ ಬಿ. ರಮಾನಾಥ ರೈ, ಹಿರಿಯ ಅರ್ಥಧಾರಿ – ವಿಮರ್ಶಕ ಡಾ.ಎಂ. ಪ್ರಭಾಕರ ಜೋಶಿ, ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ, ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್, ಜತೆ ಕಾರ್ಯದರ್ಶಿ ಕೆ.ಲಕ್ಷ್ಮೀ ನಾರಾಯಣ ರೈ ಹರೇಕಳ, ಶ್ರೀಕೃಷ್ಣ ಯಕ್ಷಸಭಾದ ಸುಧಾಕರ ರಾವ್ ಪೇಜಾವರ, ಫರಂಗಿಪೇಟೆ ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ, ನರಸಿಂಹ ಶೆಟ್ಟಿ ತುಪ್ಪೆಕಲ್, ಕಲಾಗಂಗೋತ್ರಿಯ ಸದಾಶಿವ ಮಾಸ್ತರ್,ಕಮ್ಮಾಜೆ ಮಹಾಬಲ ಆಳ್ವ, ಸಂಜೀವ ಶೆಟ್ಟಿ  ಬಿ.ಸಿ.ರೋಡ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಾಂಸ್ಕೃತಿಕ ಭವನ ನಿರ್ಮಾಣ ಯೋಜನೆಯ ಸಮಾಲೋಚನಾ ಸಭೆ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರು ಸಿರಿಬಾಗಿಲಿನಲ್ಲಿ ನಿರ್ಮಿಸುತ್ತಿರುವ ಸಾಂಸ್ಕೃತಿಕ ಭವನ ನಿರ್ಮಾಣ ಯೋಜನೆಯ ಬಗ್ಗೆ ಸಮಾಲೋಚನಾ ಸಭೆಯು ಇಂದು (31.01.2021) ಸಮಾಜ ಮಂದಿರದಲ್ಲಿ ಜರುಗಿತು .

ಸಿರಿಬಾಗಿಲು ವೆಂಕಪ್ಪಯ್ಯರವರು ನಾಲ್ಕು ದಶಕಗಳ ಹಿಂದಿನ  ಗಡಿನಾಡಿನ ಶ್ರೇಷ್ಠ  ಕವಿ, ವಿಮರ್ಶಕ ಹಾಗೂ ಲೇಖಕರು . ಕನ್ನಡ ಭಾಷೆಗೆ ಹೊಸ ಕಸುವನ್ನು ಕೊಟ್ಟವರು . ವೆಂಕಪ್ಪಯ್ಯರವರು ಕುಂಬಳೆ ಅರಸೊತ್ತಿಗೆಯ ಬಗ್ಗೆ, ತುಳುನಾಡ ಕೇಸರಿ ಜಯಸಿಂಹನ ಬಗ್ಗೆ, ಯಕ್ಷಗಾನದ ವಾಲ್ಮೀಕಿ ಎನಿಸಿದ ಪಾರ್ತಿಸುಬ್ಬನ ಬಗ್ಗೆ, ಮಾಯಿಪ್ಪಾಡಿ ಅರಮನೆಯ ಜಟ್ಟಿ ಪುಳ್ಕೂರು ಬಾಚನ ಬಗ್ಗೆ  ಮೌಲ್ಯಯುತವಾದ ಲೇಖನ ಸಹಿತ ನೂರಾರು ಕೃತಿಗಳನ್ನು ಕುರಿತು ಬರೆದಿದ್ದಾರೆ . ಅವರ ಹೆಚ್ಚಿನ ಕೃತಿಗಳನ್ನು ಕೇರಳ ಸರಕಾರದ ಶಿಕ್ಷಣ ಇಲಾಖೆಯು ಉಪಪಠ್ಯವನ್ನಾಗಿಸಿದೆ .

ಇಂತಹ ಮಹಾನ್ ಕಲಾವಿದರ ಹೆಸರು ಚಿರಸ್ಥಾಯಿಯಾಗಿ ಉಳಿಯಲು “ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ” ನಿರ್ಮಾಣದ ಉದ್ದೇಶದಿಂದ ಸಮಿತಿಯನ್ನು ರಚಿಸಲಾಗಿದ್ದು ಈಗಾಗಲೇ ಭವನದ ಅರ್ಧದಷ್ಟು ಕಾಮಗಾರಿ ನಡೆದಿದೆ . ಮೂಡಬಿದಿರೆಯ ಅಭಿಮಾನಿಗಳ ಕೂಡುವಿಕೆಯಲ್ಲಿ ಇಂದು ನಡೆದ ಸಮಾಲೋಚನಾ ಸಭೆಯಲ್ಲಿ ಧರ್ಮದರ್ಶಿ ಹಾಗೂ ಕಸಾಪದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶ್ರೀಪತಿ ಭಟ್, ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸುಪ್ರಸಿದ್ಧ ಭಾಗವತರಾದ ರಾಮಕೃಷ್ಣ ಮಯ್ಯ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಧಾಕೃಷ್ಣ ಕಲ್ಚಾರ್ ಹಾಗೂ ಯೋಗೀಶ್ ರಾವ್ ಚಿಗುರುಪಾದೆ, ಎಂ.ಶಾಂತರಾಮ ಕುಡ್ವ, ಪ್ರೇಮನಾಥ ಮಾರ್ಲ, ದೇವಾನಂದ ಭಟ್, ಗೋವರ್ಧನ ಹೊಸಮನಿ,  ಸದಾಶಿವ ರಾವ್, ರಾಜಾರಾಮ ರಾವ್, ಸತೀಶ್ ಅಡಪ, ಕುಮಾರ ಶೆಟ್ಟಿ ಹಾಗೂ ಮೂಡಬಿದಿರೆಯ ವಿವಿಧ ಸಂಘಟನೆಗಳ ಮುಖ್ಯಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು.

ಮೂಡಬಿದಿರೆಯ ಕಲಾಭಿಮಾನಿಗಳು ಒಟ್ಟಾಗಿ ಗೌರವಯುತ ಮೊತ್ತವನ್ನು ಪ್ರತಿಷ್ಠಾನಕ್ಕೆ ನೀಡಲು ನಿರ್ಧಾರ ಕೈಗೊಂಡರು. ರಾಮಕೃಷ್ಣ ಮಯ್ಯರು ಸ್ವಾಗತಿಸಿದರು. ರಾಧಾಕೃಷ್ಣ ಕಲ್ಚಾರರು ಭವನದ ಕುರಿತಾದ ಮಾಹಿತಿ ಹಾಗೂ ರಾಜಾರಾಮ ರಾವ್ ವೆಂಕಪ್ಪಯ್ಯರವರ ಸಾಧನೆಯ ಬಗ್ಗೆ ಪರಿಚಯಿಸಿದರು‌. ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸತೀಶ ಅಡಪರು ಧನ್ಯವಾದ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ಸಮಾಲೋಚನಾ ಸಭೆ ನಡೆಸಲಾಗುವುದು ಎಂದು ರಾಮಕೃಷ್ಣ ಮಯ್ಯರು ತಿಳಿಸಿದರು.               ಸಮಾಲೋಚನಾ ಸಭೆಯ ನಂತರ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗೇರುಸೊಪ್ಪೆ ಶಾಂತಪ್ಪಯ್ಯ ವಿರಚಿತ “ಶಲ್ಯ ಸಾರಥ್ಯ” ತಾಳಮದ್ದಳೆ ಜರುಗಿತು.