ತೆಲುಗು ಸಿನಿಮಾ ರಂಗದ ಜನಪ್ರಿಯ ನಟ ಜಯಪ್ರಕಾಶ ರೆಡ್ಡಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೊಳಗಾದ ಅವರು ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರ ಸಾವಿನ ಸುದ್ದಿ ತೆಲುಗು ಚಿತ್ರರಂಗ ಮತ್ತು ಅಭಿಮಾನಿಗಳಿಗೆ ತೀವ್ರ ಶೋಕವನ್ನುಂಟುಮಾಡಿದೆ. ಬ್ರಹ್ಮ ಪುತ್ರುಡು ಎಂಬ ಸಿನಿಮಾದಿಂದ ವೃತ್ತಿಜೀವನ ಆರಂಭಿಸಿದ ಅವರ ಈ ವರ್ಷದ ‘ಸರಿಲೇರು ನೀಕೆವ್ವಾರು’ ಕೊನೆಯ ಚಿತ್ರವಾಗಿತ್ತು.
Breaking News… ನಟಿ ಸಂಜನಾ ಮನೆಗೆ ಸಿಸಿಬಿ ಅಧಿಕಾರಿಗಳ ದಾಳಿ, ಬಂಧನದ ಭೀತಿ?
ಕನ್ನಡ ಚಿತ್ರರಂಗಕ್ಕೆ ಕಾಡುತ್ತಿರುವ ಡ್ರಗ್ಸ್ ಭೂತ ಸದ್ಯಕ್ಕೆ ಬಿಡುವ ಹಾಗೆ ಗೋಚರಿಸುತ್ತಿಲ್ಲ. ನಿರ್ದೇಶಕ ಇಂದ್ರಜಿತ್ ಹಾಕಿದ ಬಾಂಬ್ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿರುವ ಹಾಗೆ ಕಾಣುತ್ತಿದೆ. ಒಂದರ ಹಿಂದೆ ಒಂದರಂತೆ ಪ್ರಕರಣಗಳು ವರದಿಯಾಗುತ್ತಾ ಇವೆ. ನಟಿ ರಾಗಿಣಿ ಪ್ರಕರಣದ ನಂತರ ಮತ್ತೊಂದು ಪ್ರಕರಣ ಬೆಳಕಿಗೆ ಬರುತ್ತಾ ಉಂಟು.

ಇಂದು ಮುಂಜಾನೆಯೇ ಸಿಸಿಬಿ ಅಧಿಕಾರಿಗಳು ಸ್ಯಾಂಡಲ್ ವುಡ್ ನಟಿ ಸಂಜನಾ ಗಿಲ್ರಾನಿ ಮನೆಗೆ ದಾಳಿ ನಡೆಸಿದ್ದಾರೆ. ಇಂದು ಬೆಳಕು ಹರಿಯುವ ಮುನ್ನವೇ ಆರು ಅಧಿಕಾರಿಗಳ ತಂಡ ಮೂರು ಕಾರುಗಳಲ್ಲಿ ಸಂಜನಾ ವಾಸಿಸುತ್ತಿರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಸಂಜನಾ ಆಪ್ತ ಎನ್ನಲಾದ ರಾಹುಲ್ ಎಂಬಾತ ಈಗಾಗಲೇ ಸಿಸಿಬಿ ವಶದಲ್ಲಿದ್ದು ಅವನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಅವನ ಹೇಳಿಕೆಯ ಆಧಾರದ ಮೇಲೆಯೇ ನಟಿ ಸಂಜನಾ ನಿವಾಸಕ್ಕೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಸಂಜನಾ ನಿವಾಸದಲ್ಲಿ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳು ಲಭ್ಯವಾದಲ್ಲಿ ನಟಿ ಸಂಜನಾ ಮೇಲೆ ಇದರ ಪರಿಣಾಮ ಆಗಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಾ ಇವೆ. ಏನೇ ಆಗಲಿ ಅಂತೂ ನಟಿ ಸಂಜನಾ ಅವರು ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆಯೇ ಎಂಬುದು ಈಗ ನಟಿಯ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.
ಬಾಹುಕನ ಪಾತ್ರದ ಹಳೆಯ ವೀಡಿಯೋ – ಇದರಲ್ಲಿ ಬಾಹುಕನ ಪಾತ್ರ ಮಾಡಿದ್ದು ಯಾರು ಗೊತ್ತೇ?
ಚಿಕ್ಕಂದಿನಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಕೆಲವು ಮೈಲುಗಳಷ್ಟು ನಡೆದುಕೊಂಡು ಹೋಗುವ ಉತ್ಸಾಹವಿತ್ತು. ಆದರೆ ಈಗ ಆ ಉತ್ಸಾಹ ಕಡಿಮೆ ಆಗುತ್ತಾ ಬಂದಿದೆ.
ಕೆಲವೊಂದು ಪಾತ್ರಗಳು ಮತ್ತು ಕಲಾವಿದರು ನಮ್ಮಲ್ಲಿ ಗಾಢ ಪ್ರಭಾವ ಬೀರಿದ್ದರು. ಅದರಲ್ಲಿ ನಯನ ಕುಮಾರ್ ಅವರ ಬಾಹುಕ ಪಾತ್ರವೂ ಒಂದು. ಸಾಟಿ ಇಲ್ಲದ ಬಾಹುಕನ ಪಾತ್ರವಾಗಿತ್ತದು.

ಈಗೆಲ್ಲಾ ಎಲ್ಲ ಪಾತ್ರಗಳೂ ಅದರ ದೃಶ್ಯಾವಳಿಗಳೂ ಅಂತರ್ಜಾಲದಲ್ಲಿ ರಾರಾಜಿಸುತ್ತಿವೆ. ಆದರೆ ನಯನ ಕುಮಾರರ ಯಾವುದೇ ಪಾತ್ರಗಳ ವೀಡಿಯೋಗಳು ನಮಗೆಲ್ಲೂ ಕಾಣಸಿಕ್ಕುವುದಿಲ್ಲ. ಅವರ ಬಾಹುಕನ ಪಾತ್ರದ ವೀಡಿಯೊ ಅಂತರ್ಜಾಲದಲ್ಲಿ ಸಿಗುವುದೋ ಎಂದು ಒಂದೆರಡು ವರ್ಷಗಳ ಹಿಂದೆಯೇ ಹುಡುಕಾಡಿದ್ದೆ.
ನಾನು ತಿಳಿದ ಮಟ್ಟಿಗೆ ನಯನಕುಮಾರರ ಬಾಹುಕನ ಪಾತ್ರವನ್ನು ಮೀರಿಸುವ ಮತ್ತೊಬ್ಬ ಪಾತ್ರಧಾರಿ ಇಲ್ಲ ಎಂದೇ ನನ್ನ ಅನಿಸಿಕೆ. ಆದರೆ ನಾನು ಬಹಳ ಹಿಂದಕ್ಕೆ ಹೋಗಲಾರೆ. ಅದು ನನ್ನ ಅರಿವಿನ ವ್ಯಾಪ್ತಿಗೆ ಮೀರಿದ್ದು.
ಈಚೆಗೆ ಒಂದು ವರ್ಷ ಅವರ ಬಾಹುಕ ಪಾತ್ರದ ಸಣ್ಣ ದೃಶ್ಯಾವಳಿಯೊಂದು ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆಗಿತ್ತು. ಅಪ್ರಯತ್ನವಾಗಿ ಅದು ನನ್ನ ಅರಿವಿಗೆ ಬಂದಿತ್ತು. ನಯನ ಕುಮಾರರ ಅಳಿಯ ಶಿವಕೃಷ್ಣ ನೀಡುವಜೆ ಅಪ್ಲೋಡ್ ಮಾಡಿದ ದೃಶ್ಯ ಅದು. ಸುಮಾರು ಮೂರು ನಿಮಿಷಗಳ ವೀಡಿಯೊ ಅದಾದರೂ ಅವರಲ್ಲಿ ಇದರ ಮುಂದುವರಿದ ಭಾಗವೂ ಇರಬಹುದು ಎಂದು ಭಾವಿಸುತ್ತೇನೆ.
ಬಾಹುಕನ ವಕ್ರತೆಯನ್ನು ಮುಖದಲ್ಲಿ ಕೇವಲ ಬಣ್ಣಗಳಿಂದಲೇ ಚಿತ್ರಿಸುವ ಪರಿ ಅನನ್ಯವಾದುದು. ಈಗಿನ ವ್ಯವಸ್ಥೆಯಂತೆ ಮುಖಕ್ಕೆ ಕೃತಕ ಜೋಡಣೆಗಳನ್ನು(Extra Fittings) ಹೆಚ್ಚಾಗಿ ಅಂಟಿಸದೆ ಕೇವಲ ಬಣ್ಣಗಾರಿಕೆಯಿಂದಲೇ ಅದನ್ನು ಪ್ರಕಟಪಡಿಸುವ ಅವರ ಕುಶಲತೆಗೆ ಯಾರಾದರೂ ಮಾರುಹೋಗಲೇಬೇಕು. ಶಿವಕೃಷ್ಣ ನೀಡುವಜೆ ಅವರ ವೀಡಿಯೋ ಲಿಂಕ್ ಕೆಳಗಡೆ ಇದೆ. ನೋಡಿ ಆನಂದಿಸಿ.
ಎಡನೀರು ಮಠಾಧೀಶರಿಗೆ ಕಲೆಯೇ ಉಸಿರಾಗಿತ್ತು
ನಿನ್ನೆ ರಾತ್ರಿ ಭಗವಂತನಲ್ಲಿ ಐಕ್ಯಗೊಂಡ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳ ಸಮಾಜಮುಖಿ ಕಾರ್ಯಗಳನ್ನು ಎಷ್ಟು ಸ್ಮರಿಸಿದರೂ ಅದು ಕಡಿಮೆಯೇ.
ಕಲೆಗೆ ಅವರ ಪ್ರೋತ್ಸಾಹ. ಶ್ರೀ ಮಠದಲ್ಲಿ ಸದಾಕಾಲವೂ ನಡೆಯುತ್ತಿದ್ದ ಸಂಗೀತ, ನೃತ್ಯ, ಯಕ್ಷಗಾನವೇ ಮೊದಲಾದ ಕಲಾಗೋಷ್ಠಿಗಳು, ಇವುಗಳೆಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚಹಸಿರಾಗಿ ಸದಾಕಾಲವೂ ನೆನಪಿನಲ್ಲುಳಿಯುತ್ತವೆ.
ಯಕ್ಷಗಾನಕ್ಕೆ ಅವರ ನಿರಂತರ ಪ್ರೋತ್ಸಾಹವಿತ್ತು. ಸದಾ ಮನಸ್ಸಿನಲ್ಲಿ ಯಕ್ಷಗಾನ ಕಲೆಯ ಏಳಿಗೆಗಾಗಿಯೇ ಯೋಚಿಸುತ್ತಿದ್ದ ಸ್ವಾಮೀಜಿಗಳು ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು.
ಶ್ರೀ ದೇವರ ಸನ್ನಿಧಿಯಲ್ಲಿ ಸೇವಾ ಪ್ರಯುಕ್ತ ಅವರ ಒಂದು ಹಾಡುಗಾರಿಕೆಯ ಯು ಟ್ಯೂಬ್ ವೀಡಿಯೋ ಇಲ್ಲಿದೆ. ವೀಡಿಯೋ ಚಿತ್ರೀಕರಿಸಿ ಯು ಟ್ಯೂಬ್ ಗೆ ಅಪ್ಲೋಡ್ ಮಾಡಿದವರು ಉಮಾ ಆರ್.ಕೆ ಭಟ್ ಚಿತ್ರಮೂಲ
ಎಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ಭಗವಂತನಲ್ಲಿ ಐಕ್ಯ
ಶ್ರೀ ಎಡನೀರು ಮಠಾಧೀಶರಾದ ಶ್ರೀ ಮದ್ ಶಂಕರಾಚಾರ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳು ತಮ್ಮ ಅಪಾರ ಶಿಷ್ಯಕೋಟಿ ವೃಂದ ಮತ್ತು ಅಭಿಮಾನೀ ಭಕ್ತರನ್ನು ಆಗಲಿ ಭಗವಂತನ ಸಾನ್ನಿಧ್ಯದಲ್ಲಿ ಐಕ್ಯಗೊಂಡರು.
ಅವರು ಇಂದು ಮಧ್ಯರಾತ್ರಿಯ ಸುಮಾರು 12. 45 ರ ಹೊತ್ತಿಗೆ ತಾನು ಆರಾಧಿಸುವ ಎಡನೀರಿನ ಶ್ರೀ ಗೋಪಾಲಕೃಷ್ಣನ ದೇವರ ಸಾನ್ನಿಧ್ಯದಲ್ಲಿಯೇ ಶ್ರೀ ದೇವರ ಪಾದಕಮಲಗಳಲ್ಲಿ ಐಕ್ಯಗೊಂಡರು.

ಎಡನೀರು ಶ್ರೀ ಮಠದ ಪರಂಪರೆ ಮತ್ತು ಭಕ್ತರ ಜೊತೆಗೆ ಸ್ವಾಮೀಜಿಗಳ ಸಂಬಂಧ ಅನನ್ಯವಾದುದು. ಈಗ ತಮ್ಮ ಅಸಂಖ್ಯ ಭಕ್ತಕೋಟಿಯನ್ನು ಬಿಟ್ಟು ಶ್ರೀಗಳು ತಾವು ಅನಾವರತವೂ ನಂಬಿ ಪೂಜಿಸಿಕೊಂಡು ಬಂದಿರುವ ತಮ್ಮ ಆರಾಧ್ಯ ದೇವರಾದ ಶ್ರೀ ದಕ್ಷಿಣಾಮೂರ್ತಿ ಗೋಪಾಲಕೃಷ್ಣನ ದಿವ್ಯ ಸಾನ್ನಿಧ್ಯವನ್ನು ಸೇರಿ ಅವನಲ್ಲಿ ಲೀನವಾಗಿದ್ದಾರೆ.

ಅಲ್ಲದೆ ಸ್ವಾಮೀಜಿಗಳು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡವರು. ಅವರು ನಡೆಸುತ್ತಿದ್ದ ಶಿಕ್ಷಣಸಂಸ್ಥೆಗಳು, ಕಲೆಗೆ ಅವರ ಪ್ರೋತ್ಸಾಹ. ಶ್ರೀ ಮಠದಲ್ಲಿ ಸದಾಕಾಲವೂ ನಡೆಯುತ್ತಿದ್ದ ಸಂಗೀತ, ನೃತ್ಯ, ಯಕ್ಷಗಾನವೇ ಮೊದಲಾದ ಕಲಾಗೋಷ್ಠಿಗಳು, ಇವುಗಳೆಲ್ಲಾ ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚಹಸಿರಾಗಿ ಸದಾಕಾಲವೂ ನೆನಪಿನಲ್ಲುಳಿಯುತ್ತವೆ.

ಇಳಿವಯಸ್ಸಿನಲ್ಲಿಯೂ ಸ್ವಾಮೀಜಿಗಳ ಕ್ರಿಯಾಶೀಲತೆ ಅದ್ಭುತ. ಯಕ್ಷಗಾನಕ್ಕೆ ಅವರ ನಿರಂತರ ಪ್ರೋತ್ಸಾಹವಿತ್ತು. ಅದಕ್ಕೆ ಶ್ರೀ ಮಠದ ಆವರಣದಲ್ಲಿ ನಡೆಯುತ್ತಿದ್ದ ನಿರಂತರ ಯಕ್ಷಗಾನ ಪ್ರದರ್ಶನಗಳೇ ನಡೆಯುತ್ತಿದ್ದುವು.
ಯಕ್ಷಗಾನ ಕಲಾವಿದರಿಗೆ ಅವರು ಆಶ್ರಯದಾತರಾಗಿದ್ದರು. ಎಡನೀರು ಮೇಳವನ್ನು ಮಠದ ವತಿಯಿಂದ ಮುನ್ನಡೆಸುತ್ತಾ ಕಲಾವಿದರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದರು.

ಅದೂ ಅಲ್ಲದೆ ಶ್ರೀಗಳ ಕಾಲದಲ್ಲಿ ಶ್ರೀ ಮಠವು ಶಿಕ್ಷಣ ಸೇವೆಯನ್ನು ನೀಡುವುದರಲ್ಲಿಯೂ ಮುಂಚೂಣಿಯಲ್ಲಿತ್ತು. ಎಡನೀರು ಸ್ವಾಮೀಜೀಸ್ ಹೈಯರ್ ಸೆಕಂಡರಿ ಸ್ಕೂಲ್ ಇದಕ್ಕೆ ಸಾಕ್ಷಿ. ವಿದ್ಯಾರ್ಥಿಗಳು ಪದವಿಪೂರ್ವ ತರಗತಿಯ ವರೆಗೆ ಇಲ್ಲಿ ವಿದ್ಯಾಭ್ಯಾಸ ನಡೆಸಬಹುದಿತ್ತು.
ತಮ್ಮ ಸಮಾಜಸೇವೆ ಮತ್ತು ಕಲಾಸೇವೆಗಳಿಂದ ಅಸಂಖ್ಯ ಭಕ್ತರು ಮತ್ತು ಅಭಿಮಾನೀ ಶಿಷ್ಯವರ್ಗವನ್ನು ಹೊಂದಿದ್ದ ಶ್ರೀಗಳ ಅಗಲುವಿಕೆ ಎಲ್ಲರನ್ನೂ ಶೋಕಸಾಗರಲ್ಲಿ ಮುಳುಗಿಸಿದೆ.

ಯಕ್ಷಗಾನ ವೇಷಧಾರಿಗಳಾದ ಶ್ರೀ ವಸಂತ ಗೌಡ ಕಾಯರ್ತಡ್ಕ ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 7ನೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 4ರಂದು ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ವಸಂತ ಗೌಡ ಕಾಯರ್ತಡ್ಕ ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 04 ಶುಕ್ರವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಮಾತಿನ ಮಂಟಪ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ.