Friday, August 28, 2026
Home Blog Page 382

ಚೆಂಡೆಯ ಮೆಲುನುಡಿ – ಶ್ರೀ ನೆಡ್ಲೆ ನರಸಿಂಹ ಭಟ್ಟರ ಆತ್ಮ ಕಥನ

ಚೆಂಡೆಯ ಮೆಲುನುಡಿ – ಇದು ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರರೂ ಹಿಮ್ಮೇಳ ಗುರುಗಳೂ ಆಗಿದ್ದ ನೆಡ್ಲೆ ಶ್ರೀ ನರಸಿಂಹ ಭಟ್ಟರ ಆತ್ಮಕಥನವು. ಪ್ರಾಧ್ಯಾಪಕ ಲೇಖಕ, ಕಲಾವಿದ, ತಾಳಮದ್ದಳೆ ಅರ್ಥಧಾರಿ  ಶ್ರೀ ಸರ್ಪಂಗಳ ಈಶ್ವರ ಭಟ್ಟರ ನಿರೂಪಣೆಯಲ್ಲಿ ಈ ಕೃತಿಯು ಸಿದ್ಧವಾಗಿತ್ತು. ಪ್ರಕಾಶಕರು – ನೆಡ್ಲೆ ನರಸಿಂಹ ಭಟ್ಟ  ಯಕ್ಷಗಾನ ಪ್ರ್ರತಿಷ್ಠಾನ – ಯೆಯ್ಯಾಡಿ ಮಂಗಳೂರು.

ಈ ಆತ್ಮಕಥನವು 2003ರಲ್ಲಿ ಪ್ರಕಟವಾಗಿತ್ತು. ಮುನ್ನುಡಿಯನ್ನು ಬರೆದವರು ವಿದ್ವಾಂಸ, ವಿಮರ್ಶಕ, ಖ್ಯಾತ ಅರ್ಥಧಾರಿಗಳೂ ಆದ ಡಾ. ಎಂ. ಪ್ರಭಾಕರ ಜೋಶಿ ಅವರು. ನಿರೂಪಕ ಶ್ರೀ ಸರ್ಪಂಗಳ ಈಶ್ವರ ಭಟ್ಟರು ‘ಬರೆದವನ ಬಿನ್ನಹ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ವಿಚಾರಗಳನ್ನು ಸಂಗ್ರಹಿಸಿ, ಮತ್ತೆ ನಿರೂಪಿಸಿ, ಪುಸ್ತಕದ ರೂಪಕ್ಕೆ ತರುವುದು ಅಷ್ಟು ಸುಲಭದ ಕೆಲಸವಲ್ಲ. ಅದೊಂದು ಸಾಧನೆಯೇ ಹೌದು. ನಿರೂಪಕರಾದ ಸರ್ಪಂಗಳ ಈಶ್ವರ ಭಟ್ಟರು ಅಭಿನಂದನೀಯರು. ನೆಡ್ಲೆ ನರಸಿಂಹ ಭಟ್ಟ ಯಕ್ಷಗಾನ ಪ್ರತಿಷ್ಠಾನದ ಸಂಚಾಲಕ ಶ್ರೀ ನೆಡ್ಲೆ ರಾಮ ಭಟ್ಟರು ‘ಪ್ರಕಾಶನದ ಕುರಿತು’ ಎಂಬ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಆತ್ಮಕಥನವನ್ನು ಹಗಲು ನಿದ್ದೆ, ನೆಡ್ಲೆಯ ನೆಲೆ, ಟಮ್ಕಿಯಿಂದ ಮದ್ದಳೆಗೆ, ಮಕ್ಕಳ ರಾಜ್ಯ, ಮನೆಯಲ್ಲೇ ಸಂಪಾದನೆ, ಶಾಲೆಯ ಆಸೆ ಕಮರಿತು, ಸಂಗೀತ ಕಲಿತದ್ದು, ಭಾಗವತನಾಗುವ ಬಯಕೆ, ಮದ್ದಳೆಗಾರನಾದದ್ದು, ದೂರವಾದ ಸೈಕಲು, ಮೊದಲ ತಿರುಗಾಟ, ಕಲಿಕೆಯೇ ಆಟವಾಯಿತು, ನಿರ್ಣಯದ ನಡೆ, ಮೇಳದ ಕಸುಬೇ ಕಾಯಮ್ಮಾಯಿತು, ನೇವಸ ಅಟ್ಟಿದ ಆಡಿನ ಹಾಲು, ನೆಡ್ಲೆಯಿಂದ ನೆಕ್ಕರೆಕಾಡಿಗೆ, ಎರಡು ಹೊರೆ, ಜೋಡು ಸಾಟಿ ಯಾರಿಗೆ?, ಮತ್ತೆ ನೆಕ್ಕರೆಕಾಡಿಗೆ, ನಿಯಮ ನಿಷ್ಠೆಗೆ ಚ್ಯುತಿ ಇಲ್ಲ, ಹುಲಿಯ ಹೆದರಿಕೆ, ಮದುವೆಯ ಅನುಬಂಧ, ಎಲ್ಲ್ಲಿ ಋಣವಿತ್ತೋ ಬಲ್ಲವರಾರು!, ಆಪದ್ಬಂಧುವಾದ ಚೆಂಡೆ, ಮೇಳ: ಹೊಸ ಬದುಕು!, ಬಸ್ಸಿನ ಸುಖ, ಇತಿ-ಮಿತಿ, ಕಲೆಯೆಂದರೆ ನಿರಂತರ ಕಲಿಕೆ, ಬಲಿಪರ ಬಲಿಪತನ, ಚೆಂಡೆಯೇ ಇಲ್ಲದ ಜೋಡಾಟ, ತಾಸುದ್ದದ ಪೀಠಿಕೆ, ಚೆಂಡೆ ಮದ್ದಳೆಯ ಕೆಲಸ, ಅಬ್ರಾಂಗಾಯಿ ಕೋಲು, ಆಟದ ಟೂರುಗಳು, ನನ್ನ ಶಿಷ್ಯರು, ಹಳತು-ಹೊಸತು, ಖಚಿತತೆ ಬೇಕು, ಸೋಲಿಸಿ ಏನಾಗಬೇಕು?, ನಾನೇ ಮಾಡಿದ ಭಾಗವತ, ವೇಷವೂ ಮಾಡಿದ್ದೇನೆ, ಗಣಪತಿಗೆ ಪಾಯಸ, ಹುಲಿ ಹಿಡಿದ ದನ, ವಿಠಲ ಶಾಸ್ತ್ರಿಗಳ ತಾಂಡವ, ಭಾವ-ಭಾವ, ದುರ್ಗೆಯ ದಯೆ, ನಾನು ಕಟೀಲಿನವನು, ಭ್ರಾಮರೀ ಯಕ್ಷಗಾನ ಮಂಡಳಿ, ನನ್ನ ಯಜಮಾನರು, ಬಹುಜನ ಭಾಗವತರು, ಉಪಕಾರ ಸ್ಮರಣೆ ಎಂಬ ವಿಚಾರಗಳಡಿಯಲ್ಲಿ ಶ್ರೀ ಸರ್ಪಂಗಳ ಈಶ್ವರ ಭಟ್ಟರು ಸುಂದರವಾಗಿ, ಸರಳವಾಗಿ ನಿರೂಪಿಸಿ ಓದುಗರಿಗೆ ನೀಡಿರುತ್ತಾರೆ. ಕೊನೆಯಲ್ಲಿ ಅನುಬಂಧಗಳು ಎಂಬ ಭಾಗವಿದ್ದು ಇಲ್ಲಿ – ಚೆಂಡೆಯ ಗುರಿಕಾರ ನೆಡ್ಲೆ ನರಸಿಂಹ ಭಟ್ಟರು ಎಂಬ ಲೇಖನವನ್ನೂ, ನೆಡ್ಲೆಯವರು ಬರೆದ ಮೂರು ಲೇಖನಗಳನ್ನೂ ನೀಡಲಾಗಿದೆ. ಅಲ್ಲದೆ ಶ್ರೀಯುತರಿಗೆ ಸಂದ ಪ್ರಶಸ್ತಿಗಳು – ಸನ್ಮಾನಗಳ ವಿವರಗಳಿವೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ  

ಮೇಳಗಳ ತಿರುಗಾಟ ಆರಂಭ – ಮುಂದಿರುವ ಸವಾಲುಗಳು

ಯಕ್ಷಗಾನ ರಂಗಕ್ಕೆ ಒಳ್ಳೆಯ ಸುದ್ದಿ. ಕಲಾಸಕ್ತರಿಗೆ ಮಾತ್ರವಲ್ಲ. ಕಲಾವಿದರಿಗೂ ಕೂಡಾ. ಇಷ್ಟು ಸಮಯದಿಂದ ಕೆಲಸವಿಲ್ಲದೇ ಕಷ್ಟಪಡುತ್ತಿದ್ದ ಹಲವಾರು ಕಲಾವಿದರ ಮನೆಯಲ್ಲಿ, ಮನಸಿನಲ್ಲಿ ಸಂತೋಷ ಮನೆ ಮಾಡಬಹುದು. ನವೆಂಬರ್ ನಲ್ಲಿ ಯಕ್ಷಗಾನ ಆರಂಭ ಮಾಡಲು ಯಾವುದೇ ತೊಡಕುಗಳಿಲ್ಲ ಎಂಬ ಸುದ್ದಿ ಸರಕಾರದ ಕಡೆಯಿಂದ ಬಂದಿದೆ. ಜಿಲ್ಲಾ ಉಸ್ತುವಾರಿ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರೇ ಸ್ಪಷ್ಟಪಡಿಸಿದಂತೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಿ ಯಕ್ಷಗಾನ ಪ್ರಾರಂಭವಾಗುವುದಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ ಎಂದು ತಿಳಿಸಲಾಗಿತ್ತು. 

ಆದರೆ ಅದರಂತೆ ಯಕ್ಷಗಾನ ಪ್ರದರ್ಶನಗಳನ್ನು ನೀಡುವ ನಿಟ್ಟಿನಲ್ಲಿ ಮೇಳಗಳು ತಿರುಗಾಟಕ್ಕೆ ಹೊರಟರೆ ಯಾವೆಲ್ಲಾ ಮಾನದಂಡಗಳ ಮೂಲಕ ಎಚ್ಚರಿಕೆ ವಹಿಸಬೇಕು? ಅಥವಾ ಪ್ರದರ್ಶನಗಳಿಂದ ಉಂಟಾಗುವ ಪರಿಣಾಮಗಳನ್ನು ಹೇಗೆ ಎದುರಿಸಬೇಕು? ಇವುಗಳೇ ಯಕ್ಷಗಾನ ಮೇಳಗಳ ಸಂಚಾಲಕರು ಮತ್ತು ಆಟ ಆಡಿಸುವವರ ಮುಂದಿರುವ ದೊಡ್ಡ ಸವಾಲು. 

1. ಕೋವಿದ್  19 ಮಾನದಂಡದ ಪ್ರಕಾರ ಸರಕಾರದ ಕೆಲವು ನಿರ್ದೇಶನಗಳನ್ನು ಅನುಸರಿಸಿ ಪ್ರದರ್ಶನ ಏರ್ಪಡಿಸಬೇಕಾಗುತ್ತದೆ. ಆಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮವನ್ನು ಪಾಲಿಸಬೇಕಾಗುತ್ತದೆ. ಪ್ರೇಕ್ಷಕರ ಆಸನಗಳನ್ನು ನಿಗದಿತ ಅಂತರದಲ್ಲಿ ದೂರ ದೂರ ಇರಿಸಬೇಕಾಗುತ್ತದೆ. ಒಂದು ಪ್ರದರ್ಶನಕ್ಕೆ 200 ಜನಕ್ಕಿಂತ ಹೆಚ್ಚು ಸೇರಬಾರದು ಎಂಬ ನಿಯಮವಿದ್ದರೆ ಒಂದು ವೇಳೆ ಕೆಲವು ಅಪರೂಪದ ಪ್ರಸಂಗಗಳಿಗೆ 200ಕ್ಕಿಂತ ಹೆಚ್ಚು ಜನ ಸೇರಿದರೆ ಆಗ ಏನು ಮಾಡುವುದು ಎಂಬ ಪ್ರಶ್ನೆ ನಮ್ಮ ಮುಂದೆ ಬರುತ್ತದೆ. ಬಂದ ಜನರನ್ನು ವಾಪಾಸ್ ಕಳುಹಿಸುವುದೇ? ಹಾಗಾದರೆ ಯಕ್ಷಗಾನ ಪ್ರದರ್ಶನ ನಡೆಯುವಲ್ಲಿ ಪೊಲೀಸ್ ವ್ಯವಸ್ಥೆ ಮಾಡಬೇಕಾಗಿ ಬರಬಹುದೇ? ಎಂಬೆಲ್ಲ ಪ್ರಶ್ನೆಗಳು ಮೂಡುವುದು ಸಹಜ. 

2. ಮೇಲಿನ ವಿಷಯಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವೂ ಕೇಳಿ ಬರುತ್ತಿದೆ. ಅದೇನೆಂದರೆ ಜನರಲ್ಲಿಯೂ ಕೋವಿಡ್ ಸಂಬಂಧಿತ ಜಾಗೃತಿ, ಕಳಕಳಿಗಳು ಮೂಡುತ್ತಿರುವುದರಿಂದ ಖಂಡಿತಾ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಇರಲಾರರು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಾ ಉಂಟು. ಇದು ಧನಾತ್ಮಕವಾದ ವಿಚಾರ. ಪ್ರೇಕ್ಷಕರೇ ತಮ್ಮೊಳಗೆ ಮಿತಿಯನ್ನು ಹಾಕಿಕೊಂಡರೆ ಅದಕ್ಕಿಂತ ಮಿಗಿಲಾದ ವಿಚಾರವೇನಿದೆ? 

3. ಟಿಕೆಟ್ ಪ್ರದರ್ಶನಗಳ ಮೇಳಗಳಿಗೆ ಈ ಕಾಲ ಸಂತೋಷದಾಯಕವಲ್ಲ. ಟಿಕೆಟ್ ಆಟಗಳಲ್ಲಿ ಪ್ರೇಕ್ಷಕರ ಹಾಜರಾತಿ ಕಡಿಮೆ ಇರಬಹುದು. ಟಿಕೆಟ್ ಆಧಾರಿತ ಪ್ರದರ್ಶನಗಳು ಆರಂಭವಾಗುವುದು ಸಂಶಯ. 

4. ಚೌಕಿಯಲ್ಲಿಯೂ ಕಲಾವಿದರು ಮತ್ತು ನೇಪಥ್ಯ ಕಲಾವಿದರು ಬಹಳಷ್ಟು ಎಚ್ಚರದಿಂದಿರಬೇಕಾದದ್ದು ಅನಿವಾರ್ಯ. ಕಲಾವಿದರು ಕೂಡ ಸ್ವಯಂ ನಿರ್ಬಂಧ ಹೇರಬೇಕಾದ ಪರಿಸ್ಥಿತಿ ಇದೆ. ಯಾಕೆಂದರೆ ಕಲಾವಿದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲೇ ಬೇಕಾಗುತ್ತದೆ. ಈಗಾಗಲೇ ಸರಕಾರ ಸೂಚಿಸಿದಂತೆ ಮೇಳ ಹೊರಡುವ ಮೊದಲು ಮತ್ತು ತಿರುಗಾಟ ಆರಂಭವಾದ ನಂತರ ಪ್ರತಿ ವಾರಕ್ಕೊಮ್ಮೆ ಕೊರೋನಾ ಪರೀಕ್ಷೆ ಕಡ್ಡಾಯ ಎಂದು ತಿಳಿಸಲಾಗಿದೆ. ಪರೀಕ್ಷೆ ಉಚಿತವಾಗಿಯೇ ಇದ್ದರೂ ಕೊರೋನಾ ಭಾದಿಸದಂತೆ ಕಲಾವಿದರು ಅತೀವ ಎಚ್ಚರಿಕೆಯಿಂದ ಇರಬೇಕಾಗುತ್ತದೆ. 

5. ಕಲಾವಿದರಿಗೆ ಸಾಮಾಜಿಕ ಅಂತರದ ನಿಯಮವನ್ನು ಪಾಲಿಸಲು ಚೌಕಿಯಲ್ಲಿ ಕಷ್ಟಸಾಧ್ಯ. ಯಾಕೆಂದರೆ ವೇಷ ಧರಿಸಲು ಇನ್ನೊಬ್ಬರ ಅವಲಂಬನ ಅಗತ್ಯ. ಮಾತ್ರವಲ್ಲದೇ ಅಗತ್ಯ ವಿಚಾರಗಳನ್ನು, ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಒಟ್ಟಾಗಿ ಸೇರಲೇ ಬೇಕಾಗುತ್ತದೆ. ಅದೂ ಅಲ್ಲದೆ ಆಟ ಮುಗಿದ ನಂತರ ಮನೆಗೆ ಪ್ರಯಾಣಿಸುವ ವ್ಯವಸ್ಥೆಯ ಬಗ್ಗೆಯೂ ಅನುಮಾನಗಳು ಉದ್ಭವಿಸುತ್ತವೆ. ಸ್ವಂತ ವಾಹನಗಳಿರುವ ಕಲಾವಿದರಿಗೆ ಅಷ್ಟಾಗಿ ಸಮಸ್ಯೆ ಇಲ್ಲ. ಆದರೆ ಎಷ್ಟೋ ಕಲಾವಿದರು ಬಸ್ಸಿನಲ್ಲಿಯೇ ಪ್ರಯಾಣಿಸುವುದು ಕಾಣುತ್ತೇವೆ. ಈ ವಿಚಾರದ ಬಗ್ಗೆ ಮೇಳದ ಸಂಚಾಲಕರು ಮತ್ತು ಕಲಾವಿದರು ಒಟ್ಟಾಗಿ ಕುಳಿತು ಸಮಾಲೋಚಿಸಬೇಕು. ವಾಹನ ಇರುವ ಕಲಾವಿದರು ಮತ್ತೊಬ್ಬ ಸಹಕಲಾವಿದನನ್ನು ಡ್ರಾಪ್ ಮಾಡಬೇಕಾಗಬಹುದು.(ಈಗಾಗಲೇ ಹೀಗೆ ಡ್ರಾಪ್ ಮಾಡುವ ಕ್ರಮ ಚಾಲ್ತಿಯಲ್ಲಿದೆ) ಅಥವಾ 50 ವರ್ಷಗಳಷ್ಟು ಹಿಂದೆ ಇದ್ದ ಕ್ರಮದಂತೆ ಮೇಳದ ಬಿಡಾರಗಳಲ್ಲಿಯೇ ವಾರಗಳ ಕಾಲ ಉಳಿಯಬೇಕಾಗಿ ಬರಬಹುದು. 

5. ಪ್ರತಿ ವಾರದ ಕೊರೋನಾ ಪರೀಕ್ಷೆಯಲ್ಲಿ ಕಲಾವಿದರಿಗಾರಿಗೂ ಕೊರೋನಾ ಬಾಧಿಸುವುದು ಬೇಡ ಎಂದು ದೇವರಲ್ಲಿ ಕಳಕಳಿಯ ಪ್ರಾರ್ಥನೆ. ಆದರೆ ಪರಿಸ್ಥಿತಿ ಕೈಮೀರಿ ಕೋವಿಡ್ ಪರೀಕ್ಷೆಯಲ್ಲಿ ಪೊಸಿಟಿವ್ ಬಂತು ಎಂದಾದರೆ ಮುಂದಿನ ಕ್ರಮ ಏನು ಎಂಬ ಪ್ರಶ್ನೆಯೂ ಮೂಡುತ್ತದೆ. ಆಗ ಮೇಳದ ಪ್ರದರ್ಶನಗಳನ್ನೇ ಕೆಲವು ದಿನಗಳ ಮಟ್ಟಿಗೆ ನಿಲ್ಲಿಸಬೇಕೇ ಬೇಡವೇ ಎಂಬ ಪ್ರಶ್ನೆಯೂ ನಮ್ಮ ಮುಂದೆ ಬರುತ್ತದೆ.    

ಆದುದರಿಂದ ಮೇಳಗಳನ್ನು ಆರಂಭಿಸುವುದು ಎಷ್ಟು ಮುಖ್ಯವೋ ಕಲಾವಿದರ ಮೇಲಿನ ಕಾಳಜಿಯೂ ಅಷ್ಟೇ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಮೇಳದ ತಿರುಗಾಟ ಆರಂಭಿಸಿದ ಮುಖ್ಯ ಉದ್ದೇಶಗಳಿಗೇ ಕೊಡಲಿ ಏಟು ಬೀಳುತ್ತದೆ. ತಿರುಗಾಟ ಆರಂಭಿಸಿದ ಮೇಳಗಳು ಅರ್ಧದಲ್ಲಿ  ಆಗಾಗ ಕೆಲವು ದಿನಗಳ ಮಟ್ಟಿಗೆ ತಿರುಗಾಟ ನಿಲ್ಲಿಸುವ ಪರಿಸ್ಥಿತಿ ಬರಬಾರದು ಎನ್ನುವುದೇ ನಮ್ಮ ಸಧಭಿರುಚಿಯ ಆಶಯ. 

ಗುಂಡ್ಮಿ ವೆಂಕಟರಮಣ ನಾವುಡ ನಿಧನ

ಹೋಟೆಲ್ ಉದ್ಯೋಗಿಯಾಗಿ ಬಳಿಕ ಮಾಬುಕಳ ಮೂಡು ಗಣಪತಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆಗೈದ ಗುಂಡ್ಮಿ ವೆಂಕಟರಮಣ ನಾವುಡ (88ವರ್ಷ) ಇವರು 18-10-2020ರಂದು ನಿಧನರಾದರು. ಯಕ್ಷಗಾನ ಪ್ರಿಯರಾಗಿದ್ದ ಇವರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇವರ ಪುತ್ರ ರಾಜೇಶ್ ನಾವುಡ ಯಕ್ಷಗಾನ ಕಲಾರಂಗದ ಸಕ್ರೀಯ ಸದಸ್ಯರಾಗಿದ್ದು, ಮಾಹೆಯಲ್ಲಿ ಫಿಸಿಯೋಥೆರಪಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಿರಿಯಡ್ಕ ಗೋಪಾಲ ರಾಯರಿಗೆ ನುಡಿನಮನ

ನಾಳೆ 20-10-2020 ರಂದು ಮಂಗಳವಾರ ಸಂಜೆ 5.30 ಗಂಟೆಗೆ ಉಡುಪಿ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ (ರಿ.),ಅಂಬಲಪಾಡಿ ಇದರ ಸಹಯೋಗದೊಂದಿಗೆ ನಮ್ಮನ್ನಗಲಿದ ಗುರು ಹಿರಿಯಡ್ಕ ಗೋಪಾಲ ರಾಯರಿಗೆ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ. ಅವರ ಶಿಷ್ಯರಿಗೆ ಮತ್ತು ಅಭಿಮಾನಿಗಳಿಗೆ ಸ್ವಾಗತ ಎಂಬುದಾಗಿ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಕ್ಷಗಾನ ಕಲಾವಿದ ಲಕ್ಷ್ಮಣ ಕಾಂಚನ್ ನಿಧನ

ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಲಕ್ಷ್ಮಣ ಕಾಂಚನ್ ಇಂದು(19-10-2020) ನಿಧನ ಹೊಂದಿದರು.ಅವರಿಗೆ 70 ವರ್ಷ ವಯಸ್ಸಾಗಿತ್ತು.ಉಡುಪಿ ಜಿಲ್ಲೆಯ ಮಣೂರಿನವರಾದ ಇವರು ತಮ್ಮ 15ನೇ ವಯಸ್ಸಿಗೆ ಅಮೃತೇಶ್ವರೀ ಮೇಳದಲ್ಲಿ ಕಲಾವಿದರಾಗಿ ಸೇರಿಕೊಂಡು ವೃತ್ತಿ ಬದುಕು ಆರಂಭಿಸಿದರು.

ಸಾಲಿಗ್ರಾಮ, ಕಮಲಶಿಲೆ, ಸೌಕೂರು, ಗೋಳಿಗರಡಿ, ಕಳವಾಡಿ, ಪೆರ್ಡೂರು, ಹಾಲಾಡಿ, ಮಡಾಮಕ್ಕಿ ಬಗ್ವಾಡಿಮೇಗರವಳ್ಳಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.ಒಟ್ಟು ಸುದೀರ್ಘ 51 ವರ್ಷಗಳ ಕಲಾಸೇವೆಗೈದ ಹಿರಿಮೆಗೆ ಪಾತ್ರರು. ಕಳೆದ 25 ವರ್ಷಗಳಿಂದ ಮಳೆಗಾಲದಲ್ಲಿ ಅಮೃತೇಶ್ವರೀ ಪ್ರವಾಸಿ ಯಕ್ಷಗಾನ ಮಂಡಳಿಯ ಖಾಯಂ ಕಲಾವಿದರಾಗಿ ಕರ್ನಾಟಕ ಮತ್ತು ಹೊರಾಜ್ಯಗಳಲ್ಲಿ ಕಲಾಪ್ರದರ್ಶನ ನೀಡಿದ್ದಾರೆ. ಪೌರಾಣಿಕ ಪ್ರಸಂಗಗಳಲ್ಲಿ ಲವ-ಕುಶ, ಜಮದಗ್ನಿ, ಅರ್ಜುನ, ವೀರಮಣಿ, ಜಾಂಬವ, ಕೃಷ್ಣ, ಕಮಲಭೂಪ, ಕೌಂಡ್ಲಿಕ, ಸಾಲ್ವನ ಪಾತ್ರಗಳು ಕಲಾರಸಿಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಯಕ್ಷಗಾನ ಕಲಾರಂಗವು ಮೂರು ವರ್ಷಗಳ ಹಿಂದೆ ‘ಯಕ್ಷಗಾನಕಲಾರಂಗ ಪ್ರಶಸ್ತಿ’ ನೀಡಿ ಗೌರವಿಸಿತ್ತು.ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಇವರಿಗೆ ಸಂಸ್ಥೆ ಐದು ತಿಂಗಳ ಹಿಂದೆ 25000/- ನೆರವು ನೀಡಿರುವುದನ್ನು ಸ್ಮರಿಸಿಕೊಂಡ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರರಾವ್‍ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್‍ ಲಕ್ಷ್ಮಣ್‍ ಕಾಂಚನ್‍ರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಪಾವಂಜೆ ಮೇಳದಲ್ಲಿ ಪ್ರಸಿದ್ಧ ಕಲಾವಿದರ ದಂಡು 

ನವೆಂಬರ್ ತಿಂಗಳು 27ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ಹೆಸರಿನಿಂದ ತಿರುಗಾಟ ಮಾಡಲಿರುವ ಪಾವಂಜೆ ಮೇಳದ ಸಂಪೂರ್ಣ ಆಡಳಿತ ಶ್ರೀ ಕ್ಷೇತ್ರ ಪಾವಂಜೆಯದ್ದೆ ಆಗಿರುತ್ತದೆ ಮತ್ತು ಯಕ್ಷಗಾನ ಪ್ರದರ್ಶನ, ಕಲಾವಿದರ ಆಯ್ಕೆ, ರಂಗ ಪ್ರಸ್ತುತಿ ಮುಂತಾದ ಪ್ರದರ್ಶನಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳಲ್ಲಿ ಮೇಳದ ಪ್ರಧಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತದೆ ಎಂದು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಪಾವಂಜೆಯ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ಅವರು ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ಮತ್ತು ಪಾವಂಜೆ ದೇವಳದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ನೂತನ ಮೇಳದ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ಮೇಳದ ಕಲಾವಿದರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ನೂತನ ಪಾವಂಜೆ ಮೇಳದಲ್ಲಿ ಪ್ರಸಿದ್ಧ ಕಲಾವಿದರ ದಂಡೇ ಇದೆ. ಹಾಗಾದರೆ ಅವರ್ಯಾರೆಲ್ಲಾ ಅಂತ ನೋಡೋಣ. 

ಭಾಗವತರು:  ಪಟ್ಲ ಸತೀಶ್ ಶೆಟ್ಟಿ,  ಪ್ರಫುಲ್ಲಚಂದ್ರ ನೆಲ್ಯಾಡಿ ಹಿಮ್ಮೇಳ:  ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ
ವಿಧೂಷಕರು: ಉಜಿರೆ ನಾರಾಯಣ, ಸಂದೇಶ್ ಮಂದಾರ.   ಸ್ತ್ರೀ ಪಾತ್ರದಲ್ಲಿ: ಅಕ್ಷಯ್ ಕುಮಾರ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು  
ಪುರುಷ ಪಾತ್ರಗಳಲ್ಲಿ:  ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್, ಸಂತೋಷ್ ಕುಮಾರ್ ಮಾನ್ಯ, ಅಡ್ಕ ರಾಕೇಶ್ ರೈ, ಸತೀಶ್ ನೈನಾಡು, ಮಾಧವ ಕೊಳ್ತಮಜಲು, ಮೋಹನ್ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷಣ, ಮಧುರಾಜ್, ಭುವನ್ ಮೊದಲಾದವರು.

ಬಡಗು ತಿಟ್ಟಿನ ಕಲಾ ತಪಸ್ವಿ ಕೊಳಗಿ ಅನಂತ ಹೆಗಡೆ (Kolagi Anantha Hegade)

ಬಡಗು ತಿಟ್ಟಿನ ಹಿರಿಯ ಕಲಾಭಿಮಾನೀ ಪ್ರೇಕ್ಷಕರಿಂದ ಪ್ರೀತಿ ಗೌರವಗಳ ಸಂಕೇತವಾಗಿ ‘ಅನಂತಣ್ಣಾ’ ಎಂದೇ ಕರೆಸಿಕೊಂಡವರು ಕೊಳಗಿ ಅನಂತ ಹೆಗಡೆಯವರು. ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕ್ಷೇತ್ರದ ಶ್ರೇಷ್ಠ ಕಲಾವಿದರಾಗಿ ಮೆರೆದವರಿವರು. ಮಾಧ್ಯಮಗಳೂ ವಾಹನಗಳೂ ಇಲ್ಲದ ಕಾಲ ಅದು. ಯಕ್ಷಗಾನ ಪ್ರದರ್ಶನಗಳಿಗೆ  ನಡೆದೇ ಸಾಗಬೇಕಾಗಿತ್ತು. ಆದರೂ ಅನೇಕ ಕಲಾವಿದರು ರಂಗದಲ್ಲಿ ಚೆನ್ನಾಗಿ ಅಭಿನಯಿಸಿ, ರಂಗವನ್ನೇ ಮಾಧ್ಯಮವಾಗಿ ತಮ್ಮ ಪ್ರತಿಭೆಯನ್ನು ಮೆರೆಸಿ ಪ್ರೇಕ್ಷಕರ ಮನವನ್ನು ಗೆದ್ದಿದ್ದರು.

ಅಂತಹಾ ಶ್ರೇಷ್ಠ ಕಲಾವಿದರಲ್ಲೊಬ್ಬರು ಕೊಳಗಿ ಅನಂತ ಹೆಗಡೆಯವರು. ಯಾವ ಪಾತ್ರಗಳನ್ನೂ ಮಾಡಬಲ್ಲ ಸಾಹಸಿಯಾಗಿದ್ದರು. ಆದರೂ ಪೋಷಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಯಕ್ಷಗಾನದಲ್ಲಿ ಅನಗತ್ಯ ಎನಿಸುವಷ್ಟು ಸಪ್ಪೆ ಆಗಿರುತ್ತಿದ್ದ ಪೋಷಕ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದು ಇವರ ಹೆಚ್ಚುಗಾರಿಕೆ. ಸಾಧನೆಯೂ ಹೌದು. ಅನಂತಣ್ಣ ಮಾಡುವುದಾದರೆ ಆ ಪಾತ್ರ ಬೇಕೇ ಬೇಕು ಎಂದು ಮುಖ್ಯ ಪಾತ್ರವನ್ನು ನಿರ್ವಹಿಸುವ ಕಲಾವಿದರು ಹೇಳುತ್ತಿದ್ದರು ಎಂದಾದರೆ ಕೊಳಗಿ ಅವರ ಪ್ರತಿಭೆ ಅದೆಷ್ಟು ಅಗಾಧವಾದುದು ಎಂಬುದನ್ನು ನಾವು ಊಹಿಸಬಹುದು. ಕೊಳಗಿ ಅನಂತ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊಳಗಿ ಎಂಬಲ್ಲಿ ಪರಮೇಶ್ವರ ಹೆಗಡೆ ಮತ್ತು ಜಾನಕಿ ದಂಪತಿಗಳಿಗೆ ಮಗನಾಗಿ 1938 ಜುಲೈ 7ರಂದು ಜನಿಸಿದರು. ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬಸವಳಿದರು. ವಿದ್ಯಾರ್ಜನೆಗೂ ಹೆಚ್ಚಿನ ಅವಕಾಶ ಇರಲಿಲ್ಲ. ವಿಶ್ವವಿದ್ಯಾನಿಲಯದಲ್ಲಿ ಓದದಿದ್ದರೂ ಕೊಳಗಿ ಅನಂತ ಹೆಗಡೆಯವರು ವಿಶ್ವವೆಂಬ ವಿದ್ಯಾನಿಲಯದಲ್ಲಿ ಚೆನ್ನಾಗಿಯೇ ಓದಿ ಅತ್ಯುನ್ನತ ಪದವಿಯನ್ನು ಪಡೆದಿದ್ದರು. ಇವರಿಗೆ ದಿ| ಕೊಳಗಿ ಸೀತಾರಾಮ ಭಾಗವತರೇ ಗುರುಗಳಾಗಿ ಒದಗಿ ಬಂದಿದ್ದರು. ಅವರಿಂದ ನಾಟ್ಯ ಮಾತುಗಾರಿಕೆ ಕಲಿತು ತನ್ನ 16ನೆಯ ವಯಸ್ಸಿನಲ್ಲಿ 1954ನೇ ಇಸವಿಯಲ್ಲಿ ರಂಗ ಪ್ರವೇಶ ಮಾಡಿದರು.

1958ರಲ್ಲಿ ಬಾಲ್ಯ ಸ್ನೇಹಿತ, ಒಡನಾಡಿ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರ ಜತೆ ಸೇರಿ ಕೊಳಗಿ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಕಲಾ ಸಂಘ, ಶಿರಳಗಿ ಎಂಬ ತಂಡವನ್ನೇ ಕಟ್ಟಿದ್ದರು. ಎಳವೆಯಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡರೂ ಧೈರ್ಯಗುಂದದೆ, ಮಾನಸಿಕ ದೃಢತೆಯನ್ನು ಹೊಂದಿ ಕಲಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಕೊಳಗಿ ಅನಂತ ಹೆಗಡೆಯವರು ಯಕ್ಷಗಾನ ಕ್ಷೇತ್ರದಲ್ಲಿ ಬಹಳಷ್ಟು ಸಾಧಿಸಿ ಮೆರೆದವರು. ಪಾತ್ರದ ಚೌಕಟ್ಟು, ಔಚಿತ್ಯಗಳನ್ನು ಮೀರಿ ವ್ಯವಹರಿಸಿದವರಲ್ಲ. ಎಂತಹ ಶ್ರೇಷ್ಠ ಕಲಾವಿದನಾದರೂ ಒಮ್ಮೊಮ್ಮೆ ಮೇರೆ ಮೀರಿ ವ್ಯವಹರಿಸಿದ್ದುಂಟು. ಅದಕ್ಕೆ ಕಾರಣಗಳು ಹಲವಿರಬಹುದು. ಉತ್ಸಾಹದಲ್ಲಿ ನಟಿಸುವ ಭರದಲ್ಲಿ  ತಮಗೆ ಅರಿಯದೇ ಪಾತ್ರದ ಮೇರೆ ಮೀರಿ ಅಭಿನಯಿಸುವುದೂ ಇದೆ. ಮತ್ತೆ ಅದು ಅವರ ಅರಿವಿಗೆ ಬಂದು ಎಚ್ಚರ ವಹಿಸುತ್ತಾರೆ. ಕೆಲವೊಮ್ಮೆ ಪ್ರೇಕ್ಷಕರನ್ನು ಸೆಳೆಯುವ ಕಾರಣದಿಂದಲೂ ಹೀಗಾಗುತ್ತದೆ. ಬಹುಬೇಗನೆ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೂ ಪಾತ್ರದ ಸ್ವಭಾವವನ್ನು ಮೀರಿ ಅಭಿನಯಿಸುವ ಕಲಾವಿದರಿರುತ್ತಾರೆ. ಆದರೆ ಕೊಳಗಿ ಅನಂತ ಹೆಗಡೆಯವರು ಅಪ್ಪಿತಪ್ಪಿ ಒಂದು ಬಾರಿಯೂ ಪಾತ್ರದ ಔಚಿತ್ಯವನ್ನು ಮೀರಿ ಅಭಿನಯಿಸಿದವರಲ್ಲ ಎಂಬುದು ಅವರ ವೇಷಗಳನ್ನು ನೋಡಿದ ಹಿರಿಯ ಪ್ರೇಕ್ಷಕರ ಅನುಭವದ ಮಾತುಗಳು.

ಸಂದರ್ಭಕ್ಕೆ ತಕ್ಕ ಮಾತುಗಳನ್ನು ಆಡುವ ತನ್ನ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರ ಮನಸ್ಸನ್ನು ಬಹುಬೇಗನೆ ಗೆದ್ದಿದ್ದರು. ಗದಾಯುದ್ಧದಲ್ಲಿ ಕೌರವ ಮತ್ತು ಭೀಮನ ಪಾತ್ರಗಳೇ ರಂಜಿಸುವುದು. ಕೊಳಗಿ ಅನಂತ ಹೆಗಡೆಯವರು ಧರ್ಮರಾಯನ ಪಾತ್ರವೂ ಹೊಳೆದು ಕಾಣಿಸಿಕೊಳ್ಳುವುದಕ್ಕಾಗುತ್ತದೆ ಎಂದು ತೋರಿಸಿಕೊಟ್ಟವರು. ಗದಾಯುದ್ಧ ಪ್ರಸಂಗದ ಸಂಜಯ, ಕಂಸವಧೆ ಪ್ರಸಂಗದ ಅಕ್ರೂರ ಮೊದಲಾದ ಪಾತ್ರಗಳಿಗೆ ಜೀವ ತುಂಬಿದ್ದರು. ಕೊಳಗಿ ಅನಂತ ಹೆಗಡೆಯವರು ಇದ್ದಷ್ಟು ಸಮಯ ಆ ಪಾತ್ರ ಬೇರೆ ಕಲಾವಿದರ ಪಾಲಾಗುತ್ತಿರಲಿಲ್ಲ. ಅಂದರೆ ಆ ಪಾತ್ರಗಳನ್ನೂ ಅವರೆಷ್ಟು ಸೊಗಸಾಗಿ ನಿರ್ವಹಿಸುತ್ತಿದ್ದಿರಬಹುದು?! ಕೃಶವಾದ ಶರೀರ, ನಿರಾಡಂಬರ ಬದುಕು, ಶುಭ್ರವಾದ ಉಡುಗೆ, ಸರಳ  ಜೀವನ, ಸೌಜನ್ಯಶೀಲ ಗುಣಗಳಿಂದ ಅವರು ಎಲ್ಲರಿಗೂ ಬೇಕಾದವರಾಗಿದ್ದರು. ಕೊಳಗಿ ಅನಂತ ಹೆಗಡೆಯವರು ಗುಂಡಬಾಳಾ ಮೇಳದಲ್ಲಿ ಮೊದಲು ತಿರುಗಾಟ ನಡೆಸಿದ್ದು. ಬಳಿಕ ಇಡಗುಂಜಿ, ಅಮೃತೇಶ್ವರೀ, ಮುಲ್ಕಿ, ಪೆರ್ಡೂರು, ಸಾಲಿಗ್ರಾಮ, ಬಚ್ಚಗಾರು, ಶಿರಸಿ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು. ಒಟ್ಟು 24 ವರ್ಷಗಳ ಕಾಲ ತಿರುಗಾಟ. ಬಳಿಕ ತಾವೇ ಸ್ಥಾಪಿಸಿದ ಕೊಳಗಿ ಶಿರಳಗಿ ಮೇಳದಲ್ಲಿ ಅಭಿನಯಿಸುತ್ತಿದ್ದರು. ಶ್ರೀರಾಮ, ಸಂಜಯ, ವಿದುರ, ಅಕ್ರೂರ, ಕನಕಾಂಗಿ ಕಲ್ಯಾಣದ ಬಲರಾಮ, ಋತುಪರ್ಣ, ನಾರದ, ಧರ್ಮರಾಯ, ಶಲ್ಯ, ಯೌಗಂಧರಾಯಣ ಮೊದಲಾದ ಪಾತ್ರಗಳು ಇವರಿಗೆ ಅಪಾರ ಖ್ಯಾತಿಯನ್ನು ತಂದು ಕೊಟ್ಟಿತ್ತು.

ಊರ ಪರವೂರ ತಾಳಮದ್ದಳೆಗಳಲ್ಲಿ ಭಾಗವಹಿಸಿದರು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಲಾವಿದರೊಂದಿಗೆ ಆ ಕಾಲದಲ್ಲಿ ಅರ್ಥ ಹೇಳಿದ್ದರು. ಇವರು ನಿರ್ವಹಿಸಿದ ಪಾತ್ರಗಳು ಇನ್ನೂ ಪ್ರೇಕ್ಷಕರ ಮನಸ್ಸಿನಲ್ಲಿ ಮಾಸದೆ ಉಳಿದಿದೆ. ಕೆರೆಮನೆ ಮೇಳದಲ್ಲಿ ಶಂಭು ಹೆಗಡೆಯವರ ಎಲ್ಲಾ ಪಾತ್ರಗಳಿಗೂ ಪೋಷಕ ಪಾತ್ರಧಾರಿಯಾಗಿ ಅಭಿನಯಿಸಿ ಪ್ರದರ್ಶನದ ಗೆಲುವಿಗೆ ಕಾರಣರಾಗಿದ್ದರು. ಶಂಭು ಹೆಗಡೆ ಅವರ ಕರ್ಣ, ಕೊಳಗಿ ಅನಂತ ಹೆಗಡೆ ಅವರ ಶಲ್ಯ. ಈ ಜೋಡಿಯನ್ನು ಕಲಾಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡಿದ್ದರು. ಇನ್ನೂ ಅನೇಕ ಪ್ರಸಂಗಗಳಲ್ಲಿ ಇವರೀರ್ವರೂ ಜತೆಯಾಗಿ ಅಭಿನಯಿಸಿ ಪ್ರದರ್ಶನದ ಗೆಲುವಿಗೆ ಕಾರಣರಾಗಿದ್ದರು. ಕೆರೆಮನೆ ಮೇಳದ ಪ್ರದರ್ಶನದ ಸಂದರ್ಭ ಬಹುಶಃ ಸಿದ್ಧಾಪುರದಲ್ಲೇ ಆಗಿರಬೇಕು. ಕೊಳಗಿ ಅನಂತ ಹೆಗಡೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭದಲ್ಲಿ ಮಾತನಾಡುತ್ತಾ ಕೆರೆಮನೆ ಶಂಭು ಹೆಗಡೆಯವರು “ಓರ್ವ ನಟನಾಗಿ ಕೆರೆಮನೆ ಮೇಳದಲ್ಲಿ ದುಡಿದ ಅನಂತ ಹೆಗಡೆ ನನ್ನ ಕಷ್ಟ ಕಾಲದಲ್ಲಿ, ಅಣ್ಣ ಮರಣ ಹೊಂದಿದ ದುಃಖದ ಸಮಯದಲ್ಲಿ ಮಾನಸಿಕ ಬಲ ಕೊಟ್ಟವರು. ಕೇವಲ ಕಲಾವಿದನಾಗಿರದೆ ಕುಟುಂಬ ಮಿತ್ರನಂತಿದ್ದರು. ಚಾರಿತ್ರ್ಯ ಶುದ್ಧತೆ ಇವರ ಪ್ರಮುಖ ಅಂಶ. ನಮ್ಮ ಮೇಳದ ಕಲಾವಿದ ಕೊಳಗಿ ಅನಂತ ಹೆಗಡೆಯವರಿಗೆ ಇಂದು ಸನ್ಮಾನ ನಡೆಯುತ್ತಿರುವುದಕ್ಕೆ ಹೃದಯ ತುಂಬಿದೆ. ನನ್ನ ಜೊತೆ ಪಾತ್ರಗಳಲ್ಲಿ ಕರ್ಣನ ಪಾತ್ರಕ್ಕೆ ಅನಂತ ಹೆಗಡೆಯವರಷ್ಟು ಒಳ್ಳೆಯ ಪಾತ್ರಧಾರಿ ಬೇರಾರೂ ಸಿಕ್ಕಿಲ್ಲ” ಎಂದು ಹೇಳಿದ್ದರು.

ಹಿತಮಿತ ಮಾತುಗಾರಿಕೆ, ಅತ್ಯುತ್ತಮ ವೇಷಗಾರಿಕೆ, ಉತ್ತಮ ನಾಟ್ಯ ಅಭಿನಯಗಳಿಂದಲೇ ಕಲಾರಸಿಕರ ಮನಗೆದ್ದವರು ಕೊಳಗಿ ಅನಂತ ಹೆಗಡೆಯವರು. ಇವರು ಅಭಿನಯಿಸಿದ ದಕ್ಷಯಜ್ಞ, ಸುಧನ್ವಾರ್ಜುನ ಪ್ರಸಂಗಗಳು ಹೈದರಾಬಾದ್ ಮತ್ತು ಬೆಂಗಳೂರು ದೂರದರ್ಶನಗಳಲ್ಲಿ ಅನೇಕ ಬಾರಿ ಪ್ರಸಾರಗೊಂಡಿವೆ. ಸುಮಾರು ಹದಿನೈದಕ್ಕೂ ಅಧಿಕ ಧ್ವನಿಸುರುಳಿಗಳಲ್ಲೂ ಇವರ ಅರ್ಥಗಾರಿಕೆ ಮುದ್ರಿಸಲ್ಪಟ್ಟಿತ್ತು. ಸಂಗ್ರಹಕಾರರಲ್ಲಿ ಇದು ಈಗಲೂ ಇರಲೂ ಬಹುದು. ಕೊಳಗಿ ಅನಂತ ಹೆಗಡೆ ಅವರು ಈಗ ನಮ್ಮೊಡನೆ ಇಲ್ಲದಿದ್ದರೂ ಅವರ ನೆನಪುಗಳು ಶಾಶ್ವತ. ಅವರ ಪುತ್ರ ಕೊಳಗಿ ಕೇಶವ ಹೆಗಡೆ ಅವರು ಬಡಗು ತಿಟ್ಟಿನ ಖ್ಯಾತ ಭಾಗವತರಾಗಿ ಜನಪ್ರಿಯರಾಗಿರುವುದು ನಮಗೆಲ್ಲಾ ಸಂತಸ ತರುವ ವಿಚಾರ. ಬಡಗು ತಿಟ್ಟಿನ ಕಲಾತಪಸ್ವಿ ಕೊಳಗಿ ಅನಂತ ಹೆಗಡೆ ಅವರಿಗೆ ನುಡಿ ನಮನಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

ಕಾರಂತ ಕಿರಣ – ರಜತೋತ್ಸವ ಗ್ರಂಥಮಾಲೆ 

‘ಕಾರಂತ ಕಿರಣ’ ಎಂಬ ಈ ಕೃತಿಯು ಕೋಟ ಶಿವರಾಮ ಕಾರಂತರ ಕುರಿತಾದ ವಿಚಾರಗಳನ್ನು ತುಂಬಿಕೊಂಡಿರುವ ಪುಸ್ತಕವು. ಈ ಹೊತ್ತಗೆಯು ಪ್ರಕಟವಾದುದು 2004ರಲ್ಲಿ. ಪ್ರಕಾಶಕರು ಬಿ.ಎಂ. ಶ್ರೀಕಂಠಯ್ಯ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು. ಈ ಪ್ರತಿಷ್ಠಿತ ಪ್ರತಿಷ್ಠಾನವನ್ನು ಎಂ.ವಿ ಸೀತಾರಾಮಯ್ಯನವರು ತಮ್ಮ ಆಪ್ತರ ಸಹಕಾರದಿಂದ ಸ್ಥಾಪಿಸಿದರೆಂದೂ, 1979ರಲ್ಲಿ ಬಿ.ಎಂ.ಶ್ರೀ ಅವರ ಶಿಷ್ಯರಾದ ರಾಷ್ಟ್ರಕವಿ ಕುವೆಂಪು ಅವರು ಉದ್ಘಾಟಿಸಿದರೆಂದೂ ಪ್ರಧಾನ ಸಂಪಾದಕೀಯ ಬರಹದಲ್ಲಿ ಶ್ರೀ ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ತಿಳಿಸಿರುತ್ತಾರೆ.

ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ರಜತೋತ್ಸವ ಗ್ರಂಥಮಾಲೆಯಾಗಿ ‘ಕಾರಂತ ಕಿರಣ’ ಎಂಬ ಈ ಕೃತಿಯು ಓದುಗರ ಕೈ ಸೇರಿತ್ತು. ಈ ಗ್ರಂಥಮಾಲೆಯ ಸಂಪಾದಕರು ಚಿ ಶ್ರೀನಿವಾಸ ರಾಜು, ನಾ. ಗೀತಾಚಾರ್ಯ, ಎಸ್. ಶಿವಲಿಂಗಯ್ಯ ಅವರುಗಳು. ನಾ. ಗೀತಾಚಾರ್ಯರು ಸಂಪಾದಕರ ಪರವಾಗಿ ಸಂಪಾದಕೀಯ ಲೇಖನವನ್ನು ಬರೆದಿರುತ್ತಾರೆ. ಅಲ್ಲದೆ ಕಾರಂತರ ಬಗೆಗೆ ‘ಕಡಲ ತೀರದ ಭಾರ್ಗವ’ ಎಂಬ ಕವನವನ್ನೂ ಬರೆದಿರುತ್ತಾರೆ.

ಗ್ರಂಥಮಾಲೆಯು ಆರು ಲೇಖನಗಳನ್ನು ಹೊಂದಿದ್ದು ಅವುಗಳು ಕೋಟ ಶಿವರಾಮ ಕಾರಂತ (ಜೀವನ ಪಥ), ಡಾ. ಕಾರಂತರು ಮತ್ತು ಯಕ್ಷಗಾನ, ಕಾರಂತರ ವಿಜ್ಞಾನ ಪ್ರಪಂಚ, ಪತ್ರಿಕೋದ್ಯಮ ರಾಜಕಾರಣ ಸಾಮಾಜಿಕ ಚಟುವಟಿಕೆಗಳಲ್ಲಿ ಶಿವರಾಮ ಕಾರಂತರು, ಕಾರಂತರ ಸಿರಿಗನ್ನಡ ಅರ್ಥಕೋಶ, ಕಾರಂತರು ಮತ್ತು ಸಿನಿಮಾ.

ಲೇಖನಗಳನ್ನು ಬರೆದವರು ಕ್ರಮವಾಗಿ ಎಸ್. ವಿ. ಶ್ರೀನಿವಾಸ ರಾವ್, ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್, ಟಿ.ಆರ್. ಅನಂತರಾಮು, ಈಶ್ವರ ದೈತೋಟ, ಪ್ರೊ| ಜಿ. ಅಶ್ವತ್ಥನಾರಾಯಣ, ಗಿರೀಶ್ ಕಾಸರವಳ್ಳಿ, ಬಳಿಕ ಅನುಬಂಧ ಎಂಬ ವಿಭಾಗದಲ್ಲಿ ‘ಕಾರಂತರ ಕಿರಣ’ – ಕಾರ್ಯಕ್ರಮ ವಿವರ, ನಿಧನಾ ನಂತರ ಲೇಖನ ಸೂಚಿ ಮತ್ತು ಲೇಖಕರ ವಿಳಾಸಗಳನ್ನು ನೀಡಲಾಗಿದೆ.

ಬರಹ: ರವಿಶಂಕರ್ ವಳಕ್ಕುಂಜ 

ಕೃಷ್ಣ ಸ್ಮರಣ – ದಿ| ಕೆರೇಕೈ ಕೃಷ್ಣ ಭಟ್ಟರ ಸಂಸ್ಮರಣ ಗೌರವ ಗ್ರಂಥ

‘ಕೃಷ್ಣ ಸ್ಮರಣ’ ಎಂಬ ಈ ಕೃತಿಯು  ದಿ| ಕೆರೇಕೈ ಕೃಷ್ಣ ಭಟ್ಟರ ಸಂಸ್ಮರಣ ಗೌರವ ಗ್ರಂಥವು. ಈ ಗ್ರಂಥವು 2009ರಲ್ಲಿ ಪ್ರಕಟವಾಗಿತ್ತು. ಪ್ರಕಾಶಕರು  ದಿ| ಕೆರೇಕೈ ಕೃಷ್ಣ ಭಟ್ಟ ಸಂಸ್ಮರಣ ಸಮಿತಿ, ಶಿರಸಿ. ಸಂಪಾದಕರು ಶ್ರೀ ಎಸ್. ಪಿ. ಶೆಟ್ಟಿ.  ದಿ| ಕೆರೇಕೈ ಕೃಷ್ಣ ಭಟ್ಟರು ಹಿರಿಯ ಖ್ಯಾತ ತಾಳಮದ್ದಳೆ ಅರ್ಥಧಾರಿಗಳು. ಅಲ್ಲದೆ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಶ್ರೀಯುತರ ಕುರಿತಾಗಿ ಹೀಗೊಂದು ಸಂಸ್ಮರಣಾ ಗೌರವ ಗ್ರಂಥವು ಪ್ರಕಟವಾದುದು ಅತ್ಯಂತ ಸಂತೋಷದ ವಿಚಾರವು.

ಸಂಪಾದಕ ಶ್ರೀ ಎಸ್.ಪಿ. ಶೆಟ್ಟರು  ಬರಹದಲ್ಲಿ ಕೆರೇಕೈ ಅವರು ಕಲಾ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡಿದ ಮಹನೀಯರೆಂಬುದನ್ನು ತಿಳಿಸಿರುತ್ತಾರೆ. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ರಾಮಚಂದ್ರಾಪುರ ಮಠ, ಶ್ರೀ ಮದೆಡನೀರು ಮಠ, ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗಡೆ, ಶ್ರೀ ಕ್ಷೇತ್ರ ಹೊರನಾಡಿನ ಜಿ. ಭೀಮೇಶ್ವರ ಜೋಶಿ, ಇವರುಗಳ ಅನುಗ್ರಹ ಸಂದೇಶಗಳನ್ನು ನೀಡಲಾಗಿದ್ದು ಬಳಿಕ ಇಪ್ಪತ್ಮೂರು ಛಾಯಾಚಿತ್ರಗಳನ್ನು ನೀಡಿರುತ್ತಾರೆ.

ಈ ಸಂಸ್ಮರಣಾ ಗೌರವ ಗ್ರಂಥವು ಮೂರು ಭಾಗಗಳಿಂದ ಕೂಡಿದೆ. ಭಾಗ ಒಂದು – ಒಲವು. ಅರ್ಥಗಾರಿಕೆ ಅಂದು-ಇಂದು. ಇಲ್ಲಿ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ, ಕಬ್ಬಿನಾಲೆ ವಸಂತ ಭಾರದ್ವಾಜ, ಕೆ.ಎಂ.ರಾಘವ ನಂಬಿಯಾರ್, ಲಕ್ಷ್ಮೀಶ ತೋಳ್ಪಾಡಿ, ಎಂ. ಪ್ರಭಾಕರ ಜೋಶಿ, ಕಾಶ್ಯಪ ಪರ್ಣಕುಟಿ, ತೆಕ್ಕಟ್ಟೆ ಆನಂದ ಮಾಸ್ತರ್, ಕೃಷ್ಣ ಗಣಪತಿ ಭಟ್ಟ ಇವರುಗಳ ಲೇಖನಗಳಿವೆ. ಭಾಗ ಎರಡು – ಬದುಕು. ಇಲ್ಲಿ ಕೆರೇಕೈ ಉಮಾಕಾಂತ ಭಟ್ಟ, ಮತ್ತು ಎಂ.ಎ. ಹೆಗಡೆ ಸಿದ್ದಾಪುರ ಇವರ ಲೇಖನಗಳಿವೆ.

ಭಾಗ ಮೂರು – ನೆನಪು – ಇಲ್ಲಿ ಅಂಬಾತನಯ ಮುದ್ರಾಡಿ, ಮಹಾಬಲ ಹೆಗಡೆ ಕೆರೆಮನೆ, ಹರಿದಾಸ ರಾಮದಾಸ ಸಾಮಗ, ಕೆರೆಮನೆ ಶಂಭು ಹೆಗಡೆ, ಹೊಸಬಾಳೆ ಸೀತಾರಾಮ ರಾವ್, ವಿ. ತಿ. ಶೀಗೇಹಳ್ಳಿ, ಹೊಸ್ತೋಟ ಮಂಜುನಾಥ ಭಾಗವತ, ರಾಮಕೃಷ್ಣ ಜೋಶಿ ಮೈಸೂರು, ಅನಂತ ಶಿವರಾಮ ಹೆಗಡೆ ಕಾಗೇರಿ, ಮೊಣಕಾಲ್ಮೂರು ಶ್ರೀನಿವಾಸ ಮೂರ್ತಿ, ಶಾ. ಮಂ. ಕೃಷ್ಣರಾಯ, ಲಕ್ಷ್ಮೀನಾರಾಯಣ ಹೆಗಡೆ, ,ಜಯರಾಮ ಹೆಗಡೆ, ಎನ್. ಪಿ. ಗಾಂವಕರ, ಎಸ್.ಆರ್.ದೇಸಾಯಿ, ಎಸ್.ಪಿ.ಶೆಟ್ಟಿ, ಸವಿತಾ ಭಟ್ಟ  ಉಡುಪಿ, ಶೈಲಜಾ ಹೆಗಡೆ, ಹರಿದಾಸ ನಿವಣೆ ಗಣೇಶ ಭಟ್ಟ, ರಮಾನಂದ ಬನಾರಿ, ಅನಂತ ಶರ್ಮ ಭುವನಗಿರಿ, ಕಡತೋಕ ಮಂಜುನಾಥ ಭಾಗವತ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ  ನೆಬ್ಬೂರು ನಾರಾಯಣ ಭಾಗವತ, ಗೋಪಾಲಕೃಷ್ಣ ನಾಯಕ ಹುಬ್ಬಳ್ಳಿ, ದಿವಾಕರ ಹೆಗಡೆ, ಎ. ಜಿ. ಗೋಪಾಲಕೃಷ್ಣ, ಮೋಹನ ಭಾಸ್ಕರ ಹೆಗಡೆ, ಟಿ.ಎಂ. ಸುಬ್ಬರಾಯ, ಜಬ್ಬಾರ್ ಸಮೋ, ನಾರಾಯಣ ಯಾಜಿ ಸಾಲೇಬೈಲು, ಕದ್ರಿ ನವನೀತ ಶೆಟ್ಟಿ, ಎಂ. ಎನ್. ಹೆಗಡೆ ಹಳವಳ್ಳಿ, ಕೆ.ಜಿ. ಭಟ್ಟ ದಮನಬೈಲ್, ಎಚ್.ಬಿ.ಎಲ್.ರಾವ್ ಮುಂಬಯಿ ಇವರುಗಳ ಲೇಖನಗಳನ್ನು ನೀಡಲಾಗಿದೆ. 

ದಿ| ಕೆರೇಕೈ ಕೃಷ್ಣ ಭಟ್ಟರ ಸುಪುತ್ರ ವಿದ್ವಾನ್ ಶ್ರೀ ಕೆರೇಕೈ ಉಮಾಕಾಂತ ಭಟ್ಟರು ವಾಗ್ಮಿಗಳಾಗಿ, ಸಂಸ್ಕೃತ ಭಾಷಾ ಕೋವಿದರಾಗಿ, ಲೇಖಕರಾಗಿ, ಶ್ರೇಷ್ಠ ಅರ್ಥಧಾರಿಯಾಗಿ, ಸರಳ ಸಜ್ಜನರಾಗಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ನಮಗೆಲ್ಲಾ ಸಂತಸವನ್ನು ಕೊಡುವ ವಿಚಾರವು.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ