Friday, August 28, 2026
Home Blog Page 378

ಯಕ್ಷಗಾನ ಪ್ರಸಂಗಕರ್ತ, ಕಲಾವಿದ ಹಾಗೂ ವೈದ್ಯ ಡಾ. ಪಟ್ಟಾಜೆ ಗಣೇಶ ಭಟ್ ನಿಧನ

ಯಕ್ಷಗಾನ ಪ್ರಸಂಗಕರ್ತ, ಕಲಾವಿದ ಹಾಗೂ ವೈದ್ಯ ಡಾ. ಪಟ್ಟಾಜೆ ಗಣೇಶ ಭಟ್ ಇಂದು ನಿಧನರಾಗಿದ್ದಾರೆ. ಅವರು ಕಾವು ಸಮೀಪದ ಪಟ್ಟಾಜೆಯ ತಮ್ಮ ಸ್ವಗೃಹದಲ್ಲಿ ಇಂದು ಅಸ್ತಂಗತರಾದರು.

 
 ಹವ್ಯಾಸಿ ವೇಷಧಾರಿಯಾಗಿಯೂ ತಾಳಮದ್ದಳೆ ಅರ್ಥಧಾರಿಯಾಗಿಯೂ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಯಕ್ಷಗಾನ ಪ್ರಸಂಗಗಳನ್ನು ಬರೆಯುವಲ್ಲಿ ತೊಡಗಿಸಿಕೊಂಡಿದ್ದ ಡಾ. ಪಟ್ಟಾಜೆ ಗಣೇಶ ಭಟ್ಟರು ಹಲವಾರು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದರು.

ಅವರು ರಚಿಸಿದ್ದ  ಹನ್ನೆರಡು ಪ್ರಸಂಗಗಳನ್ನು ಒಳಗೊಂಡ ಸಂಪುಟವೇ ‘ ಯಕ್ಷ ದ್ವಾದಶಾಮೃತಮ್ ಪ್ರಸಂಗಮಾಲಿಕಾ’ ಎಂಬ ಪುಸ್ತಕವು ಕಳೆದ ವರ್ಷ  ಬಿಡುಗಡೆಗೊಂಡಿದ್ದುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. 

ಒಳ್ಳೆಯ ವೈದ್ಯರಾಗಿಯೂ ಹೆಸರು ಗಳಿಸಿದ್ದ  ಶ್ರೀಯುತರು  ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.  ಜನಾನುರಾಗಿಯಾಗಿದ್ದ ಶ್ರೀ ಪಟ್ಟಾಜೆ ಗಣೇಶ ಭಟ್ಟರು ತಮ್ಮ ಪತ್ನಿ, ಮಕ್ಕಳು, ಅಪಾರ ಸ್ನೇಹಿತ, ಬಂಧುವರ್ಗದವರನ್ನೂ ಕಲಾಭಿಮಾನಿಗಳನ್ನೂ ಅಗಲಿದ್ದಾರೆ.

‘ಶ್ರೀ ತಲೆಂಗಳ’ – ವಿದ್ವಾನ್ ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ

 ವಿದ್ವಾನ್ ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ ‘ಶ್ರೀ ತಲೆಂಗಳ’ ಪ್ರಕಟವಾಗಿ ಓದುಗರ ಕೈ ಸೇರಿದ್ದು 2006ರಲ್ಲಿ. ಶ್ರೀಯುತರು ಬಹುಮುಖ ಪ್ರತಿಭೆಯ ವಿದ್ವಾಂಸರಾಗಿದ್ದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.

ಜತೆಗೆ ಲೇಖಕರಾಗಿ, ಪ್ರಸಂಗಕರ್ತರಾಗಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ, ಯಕ್ಷಗಾನ ಕ್ಷೇತ್ರಕ್ಕೆ ಇವರ ಕೊಡುಗೆಯು ಅಭಿನಂದನೀಯವಾದುದು. ಯಕ್ಷಗಾನ ಪ್ರಸಂಗ, ಕಾದಂಬರಿ, ಕವನ, ಖಂಡಕಾವ್ಯ, ನಾಟಕ, ಲೇಖನ ಇತ್ಯಾದಿ ವಿಭಾಗಗಳಲ್ಲಿ ಕೃತಿಗಳನ್ನು ರಚಿಸಿರುತ್ತಾರೆ. ಇವರು ರಚಿಸಿದ ಪ್ರಸಂಗಗಳಲ್ಲಿ ವಾಸವದತ್ತಾ-ರತ್ನಾವಳಿ, ಚಂದ್ರಾಭ್ಯುದಯ, ಶ್ರೀದೇವೀ ಶಾಕಂಬರೀ ವಿಲಾಸ, ಛಲದಂಕ ಅಂಬೆ ಪ್ರಮುಖವಾದುವುಗಳು.

ಶ್ರೀಯುತರು ರಚಿಸಿದ ಎಲ್ಲಾ ಕೃತಿಗಳ ವಿವರಗಳನ್ನು ಈ ಸಂಸ್ಮರಣ ಗ್ರಂಥದಲ್ಲಿ ನೀಡಲಾಗಿದೆ. ಶ್ರೀಯುತರ ಪುತ್ರ ಶ್ರೀ ಅನಂತಕೃಷ್ಣ ಅವರ ಆಶಯದಂತೆ ಈ ಗ್ರಂಥವನ್ನು ಹೊರ ತರುವರೇ ನಿರ್ಣಯಿಸಲಾಗಿತ್ತು. ಸಂಪಾದಕರು ಶ್ರೀ ಉದಯಶಂಕರ್ ನೀರ್ಪಾಜೆ. ಸಹಸಂಪಾದಕರು ಕೆ.ವಿ. ರಾಜಗೋಪಾಲ ಕನ್ಯಾನ. ಸಂಚಾಲಕರು ಅನಂತಕೃಷ್ಣ ಟಿ.

ಪ್ರಕಾಶಕರು ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಸಮಿತಿ. ಶ್ರೀ ಉದಯಶಂಕರ ನೀರ್ಪಾಜೆ ಅವರು ಸಂಪಾದಕೀಯ ಲೇಖನದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಈ ಸಂಸ್ಮರಣ ಗ್ರಂಥವು ವಿದ್ವಾನ್ ರಾಮಕೃಷ್ಣ ಭಟ್ಟರ ಕೃತಿ ದರ್ಶನ-ಖ್ಯಾತ ಸಾಹಿತಿಗಳಿಂದ, ಪ್ರತ್ಯೇಕ ಲೇಖನ, ವಿದ್ವಾನ್  ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸ್ನೇಹಿತರು, ಬಂದುಗಳು, ಅಪ್ರಕಟಿತ ಲೇಖನಗಳು, ಎಂಬ ಐದು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

ಒಟ್ಟು ಇಪ್ಪತ್ತಾರು ಲೇಖನಗಳಿಂದ ಕೂಡಿದೆ. ಲೇಖನಗಳನ್ನು ಬರೆದವರು ಕ್ರಮವಾಗಿ ಶ್ರೀ ಅಮೃತ ಸೋಮೇಶ್ವರ, ಸುಬ್ರಾಯ ಚೊಕ್ಕಾಡಿ, ಡಾ. ನಾ. ದಾಮೋದರ ಶೆಟ್ಟಿ, ಶ್ರೀಮತಿ ಗಂಗಾ ಪಾದೇಕಲ್, ಡಾ. ಎಂ. ಪ್ರಭಾಕರ ಜೋಷಿ, ಪ್ರೊ| ಟಿ ಕೇಶವ ಭಟ್ಟ, ಶಂ.ನಾ. ಖಂಡಿಗೆ, ಡಾ.ಸರಸ್ವತಿ.ಕೆ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ವಿ.ಬಿ. ಹೊಸಮನೆ, ಯು. ಗಂಗಾಧರ ಭಟ್, ಕೆ.ಪಿ. ರಾಜಗೋಪಾಲ ಕನ್ಯಾನ,

ಬಿ.ಎಸ್.ಆರ್. ಪದಕಣ್ಣಾಯ, ಶಂಕರಿ ಎಂ.ಭಟ್, ಮು. ಕೃಷ್ಣಪ್ಪ, ಕಳಂದೂರು ರಾಮ ಶರ್ಮ, ಸಾವಿತ್ರಿ ರಾಮ ಶರ್ಮ, ಸುಭಾಷಿಣಿ ಹಿರಣ್ಯ, ತಿರುಮಲೇಶ್ವರಿ ಆರ್.ಕೆ.ಭಟ್, ಅನಂತಕೃಷ್ಣ ಟಿ. ಇವರುಗಳು. ಕೊನೆಯಲ್ಲಿ ಅವರು ಬರೆದ ಲೇಖನಗಳ, ಪ್ರಸಂಗಗಳ, ಇವರ ಕೃತಿಗಳ, ಪಡೆದ ಸನ್ಮಾನಗಳ ವಿವರಗಳನ್ನು ನೀಡಲಾಗಿದೆ.

2006 ಅಕ್ಟೋಬರ್ 10 ರಂದು ಶ್ರೀಯುತರ ಪ್ರಥಮಾಬ್ಧಿಕ ಶ್ರಾದ್ಧದ ದಿನದಂದು ನಡೆದ ಸಂಸ್ಮರಣಾ ಸಮಾರಂಭದಲ್ಲಿ ಈ ಸಂಸ್ಮರಣ ಗ್ರಂಥವು ಬಿಡುಗಡೆಗೊಂಡಿತ್ತು.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಜನ್ನತ್ ಮಿರ್ಜಾಗಾಗಿ ಟಿಕ್ ಟಾಕ್ ನಿಷೇಧವನ್ನು ಪಾಕಿಸ್ತಾನ ಹಿಂತೆಗೆದುಕೊಂಡಿತೇ? (Pakistan Tik Tok star Jannath Mirza)

ಪಾಕಿಸ್ತಾನದ ಟಿಕ್ ಟಾಕ್ ತಾರೆ ಜನ್ನತ್ ಮಿರ್ಜಾ ಬಗೆಗೆ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ. ಟಿಕ್ ಟಾಕ್ ಕಾರಣದಿಂದ ಪಾಕಿಸ್ತಾನದಲ್ಲಿ ಅಶ್ಲೀಲತೆ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದುವು.

ಹಾಗೆ ನೋಡಿದರೆ ಪಾಕಿಸ್ತಾನವೇ ಒಂದು ಅಪರಾಧೀ ರಾಷ್ಟ್ರ.  ಪಾಕಿಸ್ತಾನಕ್ಕೂ ಅಪರಾಧಿಗಳಿಗೂ ಒಂದು ರೀತಿಯ ಅಕ್ಕರೆಯ ನಂಟು ಮೊದಲಿನಿಂದಲೂ ಉಂಟು.  ಆದರೂ ಟಿಕ್ ಟಾಕ್ ನಿಷೇಧಿಸುವ ನಿರ್ಣಯವನ್ನು ಪಾಕಿಸ್ತಾನ ಕೈಗೊಂಡಿತು.

ಇದರಿಂದ ಹೆಚ್ಚು ಬೇಸರವಾದುದು ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್ ಆದ ಜನ್ನತ್ ಮಿರ್ಜಾ ಎಂಬ ರೂಪಸಿಗೆ. ಮೂಲತಃ ಮಾಡೆಲ್ ಆಗಿದ್ದ ಜನ್ನತ್ ಮಿರ್ಜಾ ಟಿಕ್ ಟಾಕ್ ನ ಜನಪ್ರಿಯ ತಾರೆ. 

ಪಾಕಿಸ್ತಾನದಲ್ಲಿ ನಂಬರ್ ಓನ್ ಟಿಕ್‍ ಟಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದಳು. ಟಿಕ್‍ಟಾಕ್ ಮೂಲಕವೇ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದ್ದ ಜನ್ನತ್ ಮಿರ್ಜಾ, ತನ್ನ ಮುದ್ದು ಮುದ್ದಾದ ವಿಡಿಯೋಗಳ ಮೂಲಕ ಟಿಕ್ ಟಾಕ್ ಅಪ್ಲಿಕೇಶನ್ ನಲ್ಲಿ  ಒಂದು ಕೋಟಿಗೂ ಅಧಿಕವಾದ ಅಭಿಮಾನಿಗಳು ಮತ್ತು ಹಿಂಬಾಲಕರನ್ನು ಹೊಂದಿದ್ದಳು.

ಟಿಕ್ ಟಾಕ್ ಪಾಕಿಸ್ತಾನದಲ್ಲಿ ಬ್ಯಾನ್ ಆದ ಸುದ್ದಿ  ಕೇಳಿ  ಟಿಕ್‍ ಟಾಕ್ ಸ್ಟಾರ್ ಜನ್ನತ್ ಮಿರ್ಜಾ ದೇಶವನ್ನೆ ತೊರೆಯುವ ನಿರ್ಧಾರ ಮಾಡಿದ್ದಳು ಎಂಬ ಕುತೂಹಲಕಾರಿ ಅಂಶ ಹೊರಬಿದ್ದಿದೆ. ಟಿಕ್ ಟಾಕ್ ಮೂಲಕ ಕೋಟಿಗಟ್ಟಲೆ ಆದಾಯ ಗಳಿಸಿದ್ದ ಆಕೆಗೆ ಟಿಕ್ ಟಾಕ್ ನಿಷೇಧ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಜನ್ನತ್ ಮಿರ್ಜಾ ದೇಶ ಬಿಡುವ ಸುದ್ದಿ ಮಾತನಾಡುತ್ತಿದ್ದಂತೆ ಪಾಕಿಸ್ತಾನ ಟೆಲಿಕಮ್ಯುನಿಕೇಷನ್ ವಕ್ತಾರ ಕೆಲವೊಂದು ನಿಯಮಗಳಿಗೆ ಮತ್ತು ಷರತ್ತುಗಳಿಗೆ ಬದ್ಧವಾಗಿ ಟಿಕ್ ಟಾಕ್ ಪಾಕಿಸ್ತಾನ ದೇಶದಲ್ಲಿ ಮುಂದುವರಿಯುವುದಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.

ಇದರಿಂದ ಜನ್ನತ್ ಮಿರ್ಜಾ ದೇಶ ಬಿಡುವ ಭಯದಿಂದ ಪಾಕಿಸ್ತಾನ ಟಿಕ್ ಟಾಕ್ ನಿಷೇಧವನ್ನು ರದ್ದುಗೊಳಿಸಿತೇ ಎಂದು ಅಲ್ಲಿಯ ಜನರು ವ್ಯಂಗ್ಯದಿಂದ ಪ್ರಶ್ನಿಸುತ್ತಿದ್ದಾರೆ. 

ಕೊರೋನಾ ಮತ್ತೆ ದಾಳಿ ಸಾಧ್ಯತೆ – ಜರ್ಮನಿ, ಫ್ರಾನ್ಸ್ ಮತ್ತೆ ಲಾಕ್ ಡೌನ್ ನತ್ತ… (Corona Second Wave, Lock down in Germany and France)

ಈ ಚಳಿಗಾಲದಲ್ಲಿ ಕೊರೋನಾ ವೈರಲ್ ಹೆಚ್ಚಾಗಲಿದೆಯೇ? ಕೊರೋನಾ ಎರಡನೆಯ ಅಲೆ ಇಡೀ ವಿಶ್ವವನ್ನೇ ಭಾದಿಸಲಿದೆಯೇ?  ಎಂಬ ಪ್ರಶ್ನೆಗಳು ಈಗ ಎಲ್ಲಾ ದೇಶಗಳನ್ನು ಕಾಡಲಾರಂಭಿಸಿದೆ.

ಕೊರೋನಾ ಎರಡನೆಯ ಅಲೆಯು ಇಡೀ ವಿಶ್ವವನ್ನೇ ಭಾದಿಸದಿದ್ದರೂ ಚಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಇರುವ ರಾಷ್ಟ್ರಗಳಲ್ಲಿ ಕೊರೋನಾ ಮತ್ತೆ ಹೆಚ್ಚಾಗುವ ಸಾಧ್ಯತೆಗಳಿವೆಯೆಂದು ಅಂದಾಜಿಸಲಾಗಿದೆ. ಅಂತಹಾ ಶೀತೋಷ್ಣ ಪ್ರದೇಶಗಳಲ್ಲಿರುವ ದೇಶಗಳು ಕೊರೋನಾ ಇನ್ನೊಮ್ಮೆ ಮಾಡುವ ದಾಳಿಯನ್ನು ಎದುರಿಸಲು ಈಗಾಗಲೇ ಸಮರ ಸನ್ನದ್ಧವಾಗಿವೆ.

ಈಗಾಗಲೇ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಜರ್ಮನಿ ಮತ್ತು ಫ್ರಾನ್ಸ್ ದೇಶದಲ್ಲಿ ಮತ್ತೆ ಲಾಕ್ ಡೌನ್ ಘೋಷಿಸಲಾಗಿದೆ.  ಜರ್ಮನ್ ಚಾನ್ಸಲರ್ ಏಂಜೆಲಾ ಮೆರ್ಕೆಲ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ತಮ್ಮ ತಮ್ಮ ದೇಶಗಳಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡುವಂತೆ ಬುಧವಾರ ಆದೇಶ ಹೊರಡಿಸಿದ್ದಾರೆ.

ಚಳಿಗಾಲದಲ್ಲಿ ಕೊರೊನಾ ವೈರಸ್ ಅಥವಾ ಸೋಂಕು ಹರಡುವಿಕೆ ಅತಿ ಹೆಚ್ಚಿನ ವೇಗವನ್ನು ಪಡೆದುಕೊಳ್ಳುವ ಆತಂಕದಿಂದ ಜರ್ಮನಿ ಮತ್ತು ಫ್ರಾನ್ಸ್ ಸರ್ಕಾರಗಳು ಈ ಒಂದು ನಿರ್ಧಾರವನ್ನು ಕೈಗೊಂಡಿವೆ. ಫ್ರಾನ್ಸ್ ಇಡೀ ದೇಶವೇ ಲಾಕ್ ಆಗಲಿದೆ. ಆದರೆ ಜರ್ಮನಿ ನಾಲ್ಕು ವಾರದ ಅವಧಿಗೆ ಲಾಕ್‍ಡೌನ್ ಘೋಷಿಸಿದೆ. 

ಒಂದು ವಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಅನಿರೀಕ್ಷಿತವಾಗಿ  ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ರಾಷ್ಟ್ರಗಳು ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗುತ್ತಿದೆ.

ಯುರೋಪ್ ರಾಷ್ಟ್ರಗಳು, ಬ್ರಿಟನ್, ನಾರ್ವೆ, ಸ್ವಿಟ್ಜರ್‍ಲ್ಯಾಂಡ್ ದೇಶಗಳಲ್ಲಿ ಏಳು ದಿನಗಳಲ್ಲಿ ಸುಮಾರು 10 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನವೆಂಬರ್ ಅಂತ್ಯದ ವರೆಗೂ ಜರ್ಮನಿಯಲ್ಲಿ ಲಾಕ್ ಡೌನ್ ಇರಲಿದೆ.

ಯಕ್ಷ ಸ್ತ್ರೀ – ಸ್ತ್ರೀ ವೇಷ,ಸ್ತ್ರೀ ಪಾತ್ರ ಮತ್ತು ಮಹಿಳಾ ಯಕ್ಷಗಾನ ವಿವೇಚನೆ

‘ಯಕ್ಷ ಸ್ತ್ರೀ’ ಇದು ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳು, ಸ್ತ್ರೀ ಪಾತ್ರಧಾರಿಗಳು, ಮಹಿಳಾ ಯಕ್ಷಗಾನ ಈ ವಿಚಾರಗಳ ಬಗೆಗಿನ ಸಂಶೋಧನಾ ಕೃತಿಯಾಗಿ ಪ್ರಕಟವಾಗಿತ್ತು. ಲೇಖಕಿ, ಪ್ರಾಧ್ಯಾಪಿಕೆ ಡಾ. ನಾಗವೇಣಿ ಎನ್. ಅವರ  ಕೊಡುಗೆ ಇದು.

ಈ ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 2012ರಲ್ಲಿ. ಪ್ರಕಾಶಕರು ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ. ಪ್ರಧಾನ ಸಂಪಾದಕರು ಡಾ. ಕೆ. ಚಿನ್ನಪ್ಪ ಗೌಡ ಅವರು. ಮೊದಲಾಗಿ ಮಂಗಳೂರು ವಿ.ವಿ. ಕುಲಪತಿ ಪ್ರೊ| ಟಿ.ಸಿ. ಶಿವಶಂಕರಮೂರ್ತಿ ಅವರು ಬರೆದ ‘ಯಕ್ಷ ವಾಙ್ಮಯಕ್ಕೆ ಅಪೂರ್ವ ಕೊಡುಗೆ’ ಎಂಬ ಲೇಖನವನ್ನು ನೀಡಲಾಗಿದೆ.

ಬಳಿಕ ಪ್ರೊ| ಕೆ. ಚಿನ್ನಪ್ಪ ಗೌಡ ಅವರು ‘ಚಂದಭಾಮೆಯಿಂದ ಸತ್ಯನಾಪುರದ ಸಿರಿಯ ವರೆಗೆ’ ಎಂಬ ಶೀರ್ಷಿಕೆಯಡಿ ಬರೆದ ಲೇಖನವಿದೆ. ಬಳಿಕ ‘ಮಾರ್ಗದರ್ಶಕರ ಮಾತು’ ಎಂಬ ಶೀರ್ಷಿಕೆಯಡಿ ಡಾ. ಸಬಿಹಾ, ಡಾ. ಕೇಶವ ಶರ್ಮಾ, ಡಾ. ಮಹೇಶ್ವರಿ. ಯು. ಅವರುಗಳ ಲೇಖನಗಳನ್ನು ನೀಡಲಾಗಿದೆ. ಅಲ್ಲದೆ ಪ್ರೊ| ತಾಳ್ತಜೆ ವಸಂತಕುಮಾರ ಮತ್ತು ಪ್ರೊ| ಎಂ.ಎಲ್.ಸಾಮಗ ಅವರ ಅನಿಸಿಕೆಗಳನ್ನೂ ನೀಡಲಾಗಿದೆ. ‘ಕೃತಜ್ಞತೆ’ ಎಂಬ ಶೀರ್ಷಿಕೆಯಡಿ ಲೇಖಕಿ ಸಂಶೋಧಕಿ ಡಾ. ನಾಗವೇಣಿ ಎನ್. ಅವರು ತಮ್ಮ ಮನದ ಮಾತುಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ.

ಜಾಹೀರಾತು 

ಈ ಕೃತಿಯಲ್ಲಿ ಒಟ್ಟು ಒಂಬತ್ತು ಅಧ್ಯಾಯಗಳಿವೆ. ಅಧ್ಯಾಯ ಒಂದರಲ್ಲಿ ಪ್ರಸ್ತಾವನೆ, ಅಧ್ಯಯನದ ಉದ್ದೇಶ, ಸ್ವರೂಪ, ವ್ಯಾಪ್ತಿ, ಈ ವರೆಗಿನ ಅಧ್ಯಯನ ಸಮೀಕ್ಷೆ ಎಂಬ ವಿಚಾರಗಳಿವೆ. ಅಧ್ಯಾಯ ಎರಡರಲ್ಲಿ ‘ಪೂರ್ವರಂಗದ ಸ್ತ್ರೀ ವೇಷಗಳು’, ಅಧ್ಯಾಯ ಮೂರರಲ್ಲಿ ‘ಸ್ತ್ರೀ ವೇಷಗಳು’, ಅಧ್ಯಾಯ ನಾಲ್ಕರಡಿ ‘ಸ್ತ್ರೀವೇಷ ಮತ್ತು ವೇಷಧಾರಿ’, ‘ಚೌಕಿಯ ಒಳಗೆ ಮತ್ತು ಹೊರಗೆ’, ಅಧ್ಯಾಯ ಐದರಲ್ಲಿ ‘ಸ್ತ್ರೀ ಪಾತ್ರಗಳು’,

ಅಧ್ಯಾಯ ಆರರಲ್ಲಿ ‘ಹೆಣ್ಣು ಬಣ್ಣ’, ಅಧ್ಯಾಯ ಏಳರಲ್ಲಿ ‘ಸ್ತ್ರೀ ಪಾತ್ರಧಾರಿಗಳ ಇತಿಹಾಸ ಮತ್ತು ಕೊಡುಗೆ’, ಅಧ್ಯಾಯ ಎಂಟರಲ್ಲಿ ‘ಮಹಿಳಾ ಯಕ್ಷಗಾನ’ ಈ ವಿಚಾರಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಅಧ್ಯಾಯ ಒಂಭತ್ತು ‘ಉಪಸಂಹಾರ ಎಂಬ ವಿಭಾಗವು.

ಪುಸ್ತಕ ಪರಿಚಯ: ರವಿಶಂಕರ್  ವಳಕ್ಕುಂಜ 

ನಗ್ರಿ ಮಹಾಬಲ ರೈ – ಮಹಿಷಾಸುರ ಖ್ಯಾತಿಯ ಹಿರಿಯ ಬಣ್ಣದ ವೇಷಧಾರಿ(Nagri Mahabala Rai)

ಪ್ರಸ್ತುತ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡುತ್ತಿರುವ ಹಿರಿಯ ಬಣ್ಣದ ವೇಷಧಾರಿಗಳಲ್ಲಿ ನಗ್ರಿ ಮಹಾಬಲ ರೈಗಳೂ ಒಬ್ಬರು. ಈಗ ತಿರುಗಾಟ ನಡೆಸುತ್ತಿರುವ ಬಣ್ಣದ ಕಲಾವಿದರುಗಳ ಪೈಕಿ ಇವರೇ ಅತ್ಯಂತ ಹಿರಿಯರು ಎಂದು ಹೇಳಿದರೆ ತಪ್ಪಾಗಲಾರದು. ಬಣ್ಣದ ವೇಷಕ್ಕೆ ಬೇಕಾದ ಅಗತ್ಯ ಆಳಂಗ, ಸ್ವರವನ್ನು ಹೊಂದಿದ ಕಾರಣ ಇವರು ಧರಿಸಿದ ಪಾತ್ರಗಳು ರಂಗದಲ್ಲಿ ಮೊದಲ ನೋಟಕ್ಕೇ ಪ್ರೇಕ್ಷಕರನ್ನು ರಂಜಿಸುತ್ತವೆ. ಮುಖವರ್ಣಿಕೆ, ಬಣ್ಣದ ನಡೆ, ನಿತವಾದ ಮಾತುಗಳಿಂದ ಇವರು ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುತ್ತಾರೆ.

ಪ್ರಸ್ತುತ ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ ನಡೆಸುತ್ತಿದ್ದಾರೆ. ಮಹಿಷಾಸುರ ಪಾತ್ರ ಇವರಿಗೆ ಹೆಸರನ್ನು ತಂದುಕೊಟ್ಟಿದೆ. ನಗ್ರಿ ಮಹಾಬಲ ರೈಗಳು ಬಂಟ್ವಾಳ ತಾಲೂಕು ಸಜೀಪ ಮೂಡ ಗ್ರಾಮದ ನಗ್ರಿ ಎಂಬಲ್ಲಿ ನಗ್ರಿ ನಾರಾಯಣ ರೈ ಮತ್ತು ಶ್ರೀಮತಿ ರಾಜೀವಿ ರೈ ದಂಪತಿಗಳ ಮಗನಾಗಿ 1959 ಡಿಸೆಂಬರ್ 10ರಂದು ಜನಿಸಿದರು. ನಗ್ರಿ ಶಾಲೆಯಲ್ಲಿ 5ನೆಯ ತರಗತಿ ವರೆಗೆ ಓದಿದ್ದರು.

ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಆಟ ನೋಡುವ ಗೀಳು ಇತ್ತು. ಪರಿಸರದಲ್ಲಿ ಕರ್ನಾಟಕ, ಸುರತ್ಕಲ್, ಧರ್ಮಸ್ಥಳ, ಸುಬ್ರಹ್ಮಣ್ಯ ಮೇಳಗಳ ಆಟಗಳು ನಡೆಯುತ್ತಿತ್ತು. ಗೆಳೆಯರ ಜತೆ ಆಟ ವೀಕ್ಷಣೆ. ಹಗಲು ನಿದ್ದೆ ಮಾಡುವ ಮುನ್ನ ಗೆಳೆಯರ ಜತೆ ಮನೆಯ ಬಳಿ ಅಭಿನಯ. ಹೀಗೆ ಯಕ್ಷಗಾನಾಸಕ್ತಿ ಬೆಳೆದಿತ್ತು. ತಾನೂ ಕಲಾವಿದನಾಗಬೇಕೆಂಬ ಆಸೆಯು ಮನದೊಳಗೆ ಹುಟ್ಟಿಕೊಂಡಿತ್ತು. ಮನೆಯಲ್ಲಿ ಬಡತನವಿತ್ತು. ತಂದೆ ತಾಯಿಯರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ನಗ್ರಿ ಮಹಾಬಲ ರೈಗಳು ಮಿತ್ರರ ಜತೆ ಮಾಯಾನಗರಿ ಮುಂಬೈಗೆ ತೆರಳಿ ಹೋಟೆಲ್ ಕೆಲಸಕ್ಕೆ ಸೇರಿದ್ದರು.  6 ವರ್ಷಗಳ ಕಾಲ ಮುಂಬೈಯಲ್ಲಿದ್ದು ಬಳಿಕ ಮಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡಿದ್ದರು.  ಈ ಸಂದರ್ಭದಲ್ಲಿ ಆಟ ನೋಡುತ್ತಿದ್ದರು. ಇವರ ಯಕ್ಷಗಾನಾಸಕ್ತಿಯನ್ನು ಗಮನಿಸಿದ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳು ತಮ್ಮ ಸುಬ್ರಹ್ಮಣ್ಯ ಮೇಳಕ್ಕೆ ಸೇರಿಸಿದರು. ಶೀನಪ್ಪ ಭಂಡಾರಿಗಳ ಸಂಚಾಲಕತ್ವದಲ್ಲಿ ಸುಬ್ರಹ್ಮಣ್ಯ ಮೇಳವು ಆಗ ತಿರುಗಾಟ ನಡೆಸುತ್ತಿತ್ತು. ಅವರು ನಗ್ರಿ ಮಹಾಬಲ ರೈಗಳ ಬಂಧುಗಳೂ ಆಗಿದ್ದರು. 5 ತಿರುಗಾಟ ಸುಬ್ರಹ್ಮಣ್ಯ ಮೇಳದಲ್ಲಿ. ಬಾಲಗೋಪಾಲ, ಸಣ್ಣಪುಟ್ಟ ವೇಷಗಳನ್ನು ಮಾಡಿ ನೇಪಥ್ಯ ಸಹಾಯಕನಾಗಿಯೂ ದುಡಿದಿದ್ದರು. ಹಗಲು ಯಕ್ಷಗಾನಾಭ್ಯಾಸವೂ ನಡೆದಿತ್ತು.

ಸುಬ್ರಹ್ಮಣ್ಯ ಮೇಳದಲ್ಲಿ 5 ತಿರುಗಾಟ ನಡೆಸಿದ ನಂತರ ಸುಗುಣ ಅವರ ಜತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮತ್ತೆ 5 ವರ್ಷಗಳ ತಿರುಗಾಟ. ಹೀಗೆ 10 ವರ್ಷಗಳ ವ್ಯವಸಾಯ ಸುಬ್ರಹ್ಮಣ್ಯ ಮೇಳದಲ್ಲಿ. ಬಳಿಕ 1 ವರ್ಷ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆ. ಬಳಿಕ ಗುಬ್ಯ ಶ್ರೀ ರಾಮಯ್ಯ ರೈಗಳು ನಗ್ರಿ ಮಹಾಬಲ ರೈಗಳನ್ನು ಕಟೀಲು ಮೇಳಕ್ಕೆ  ಸೇರಿಸಿದ್ದರು. 3ನೇ ಮೇಳದಲ್ಲಿ ತಿರುಗಾಟ ಹಲವು ವರ್ಷಗಳ ಕಾಲ. ಕುರಿಯದವರ ಮಾರ್ಗದರ್ಶನ. ಗಂಗಯ್ಯ ಶೆಟ್ರ ಒಡನಾಟ. ಬಣ್ಣದ ವೇಷಧಾರಿಯಾಗಿ ಬೆಳೆಯುವುದಕ್ಕೆ ಅನುಕೂಲವಾಗಿತ್ತು. ಗಂಗಯ್ಯ ಶೆಟ್ರ ವೇಷಗಳನ್ನು ನೋಡಿಯೇ ಅಭ್ಯಾಸ ಮಾಡುತ್ತಿದ್ದರು. ಕುರಿಯ ಗಣಪತಿ ಶಾಸ್ತ್ರಿಗಳು, ಪದ್ಯಾಣ ಶಂಕರನಾರಾಯಣ ಭಟ್, ಗಂಗಯ್ಯ ಶೆಟ್ರು ಮೊದಲಾದವರು ನನಗೆ ಮಾರ್ಗದರ್ಶನ ಮಾಡಿದ್ದರು ಎಂದು ನಗ್ರಿ ಮಹಾಬಲ ರೈಗಳು ನೆನಪಿಸುತ್ತಾರೆ.

ಬಳಿಕ 6 ವರ್ಷ 1ನೇ ಮೇಳದಲ್ಲಿ ತಿರುಗಾಟ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಭಾಗವತಿಕೆ. ಕೊಳ್ಯೂರು ರಾಮಚಂದ್ರ ರಾವ್, ಸುಣ್ಣಂಬಳ ವಿಶ್ವೇಶ್ವರ ಭಟ್, ಸುಬ್ರಾಯ ಹೊಳ್ಳ, ಮುಂಡ್ಕೂರು ಜಯರಾಮ ಶೆಟ್ಟಿ(ಹಾಸ್ಯಗಾರ) ಮೊದಲಾದವರ ಒಡನಾಟವೂ ಸಿಕ್ಕಿತ್ತು. ಬಳಿಕ ಮೂರನೇ ಮೇಳಕ್ಕೆ ಮರು ಸೇರ್ಪಡೆ. ಕುರಿಯ ಗಣಪತಿ ಶಾಸ್ತ್ರಿಗಳ ಹಾಡುಗಾರಿಕೆಯಲ್ಲಿ ನಗ್ರಿ ಮಹಾಬಲರ ಮಹಿಷಾಸುರ ಪಾತ್ರವು ರಂಜಿಸಿತ್ತು. ಕುರಿಯ ಭಾಗವತರೇ ಮಹಿಷಾಸುರ ಪಾತ್ರಕ್ಕೆ ಇವರನ್ನು ನಿರ್ದೇಶಿಸಿ ಸಿದ್ಧಗೊಳಿಸಿದ್ದರು. 5ನೇ ಮೇಳ ಆರಂಭವಾದ ಮೇಲೆ ಪಟ್ಲ ಸತೀಶ ಶೆಟ್ಟಿಯವರ ಭಾಗವತಿಕೆಯಲ್ಲಿ 7 ವರ್ಷ ತಿರುಗಾಟ. ಬಳಿಕ ಪ್ರಸಾದ ಬಲಿಪರ ಭಾಗವತಿಕೆಯಲ್ಲಿ 3ನೇ ಮೇಳದಲ್ಲಿ 1 ವರ್ಷ ಕಲಾಸೇವೆ.

ಪ್ರಸ್ತುತ ಬಳ್ಳಮಂಜ ಶ್ರೀನಿವಾಸರ ಭಾಗವತಿಕೆಯಲ್ಲಿ 4ನೆಯ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಮಹಿಷಾಸುರ, ಶುಂಭ,  ನಿಶುಂಭ, ರಾವಣ, ಕಾಲಜಂಘ, ಕಾಲನೇಮಿ, ಶೂರಪದ್ಮ, ಶತ್ರುಪ್ರಸೂಧನ, ಮತ್ಸ್ಯ, ವರಾಹ, ಸಿಂಹ, ಭೀಮ, ದುಶ್ಶಾಸನ, ತಾಟಕಿ, ಪೂತನಿ, ಲಂಕಿಣಿ, ಶೂರ್ಪನಖಿ, ಮೇಘಸ್ತನಿ, ಕರಾಳನೇತ್ರೆ, ಭಂಡಾಸುರ, ಗೋತ್ರಸ್ತನೆ, ತಾರಕಾಸುರ, ವೀರಭದ್ರ ಮೊದಲಾದ ಪಾತ್ರಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ. ವಯಸ್ಸು 60 ದಾಟಿದರೂ ಯುವಕರಂತೆ ರಂಗದಲ್ಲಿ ಅಭಿನಯಿಸುತ್ತಾರೆ. ರಂಗದಲ್ಲಿ ಔದಾಸೀನ್ಯ ಇಲ್ಲದ ಕಲಾವಿದ ನಗ್ರಿ ಮಹಾಬಲ ರೈ. ಒಳ್ಳೆಯ ಕಸುಬುದಾರಿ.

ಕಷ್ಟಕಾಲದಲ್ಲಿ, ಮಗಳ ವಿವಾಹದ ಸಂದರ್ಭದಲ್ಲಿ ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರೂ, ಪಟ್ಲ ಸತೀಶ ಶೆಟ್ಟರೂ, ಕಲಾಭಿಮಾನಿಗಳೂ ಸಹಕರಿಸಿದ್ದನ್ನು ನೆನಪಿಸಿಕೊಂಡು ಕೃತಜ್ಞರಾಗುತ್ತಾರೆ. ಸಂಸಾರಿಕವಾಗಿಯೂ ತೃಪ್ತರು. ಪತ್ನಿ ಸುಗುಣ. ನಗ್ರಿ ಮಹಾಬಲ ರೈ, ಸುಗುಣ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ನಗ್ರಿ ಶ್ರೀಕಾಂತ್ ರೈ ಮುಂಬೈಯಲ್ಲಿ ಹೋಟೆಲ್ ಮ್ಯಾನೇಜರ್. ಪುತ್ರಿ ಯಶೋದಾ ರೈ  ವಿವಾಹಿತೆ. ಅಳಿಯ ನವೀನ ರೈ  ಬೊಂಡಾಲ, ಹೊಸಮನೆ. ಮೊಮ್ಮಗಳು ಕು| ಈಶಿತಾ. ಕಿರಿಯ ಪುತ್ರ ಕಿರಣ್ ರೈ  ಪದವೀಧರ.

ಹಿರಿಯ ಬಣ್ಣದ ವೇಷಧಾರಿ ಮಹಿಷಾಸುರ ಖ್ಯಾತಿಯ ನಗ್ರಿ ಮಹಾಬಲ ರೈಗಳಿಂದ ಇನ್ನಷ್ಟು ಕಲಾಸೇವೆ ನಡೆಯಲಿ. ಆರೋಗ್ಯಾದಿ ಭಾಗ್ಯಗಳು ಸಿದ್ಧಿಸಲಿ. ದೇವರು ಅವರ ಮನದ ಆಸೆಗಳನ್ನೆಲ್ಲಾ ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

ಎಂ.ಕೆ. ರಮೇಶ ಆಚಾರ್ಯ ಮತ್ತು ಬಂಗಾರ್ ಆಚಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ – 2020

2020ನೇ  ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಒಟ್ಟು 65 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಇಬ್ಬರು ಯಕ್ಷಗಾನ ಕಲಾವಿದರಿಗೆ ಸ್ಥಾನ ದೊರಕಿದೆ.

ಜಾಹೀರಾತು

ಖ್ಯಾತ ಸ್ತ್ರೀ ವೇಷಧಾರಿಗಳಾದ  ಎಂ.ಕೆ. ರಮೇಶ ಆಚಾರ್ಯ ಮತ್ತು ಮೂಡಲಪಾಯ ಯಕ್ಷಗಾನದ ಭಾಗವತರಾದ ಬಂಗಾರ್ ಆಚಾರಿ ಅವರು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದರು.

ಪ್ರಶಸ್ತಿ ಪ್ರಧಾನ ಸಮಾರಂಭ ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ನಡೆಯಲಿದೆ. 

ಬಾಲಗೋಪಾಲ – ಸಾಲಿಗ್ರಾಮ ಮಕ್ಕಳ ಮೇಳ (ರಿ)

ಶೀರ್ಷಿಕೆಯೇ ಸೂಚಿಸುವಂತೆ ಈ ಹೊತ್ತಗೆಯು ಸಾಲಿಗ್ರಾಮ ಮಕ್ಕಳ ಮೇಳದ ರಜತ ಸಂಚಿಕೆಯಾಗಿ 2002ರಲ್ಲಿ ಪ್ರಕಟವಾಗಿತ್ತು. ‘ಬಾಲಗೋಪಾಲ’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಈ ರಜತ ಸಂಚಿಕೆಯು ನೂರಾ ಅರುವತ್ತನಾಲ್ಕು ಪುಟಗಳಿಂದ ಕೂಡಿದೆ.

ಈ ಕೃತಿಯ ಪ್ರಕಾಶಕರು ಸಾಲಿಗ್ರಾಮ ಮಕ್ಕಳ ಮೇಳ (ರಿ), ಪಟೇಲರ ಮನೆ, ಕೋಟ. ಪ್ರಧಾನ ಸಂಪಾದಕರು ಪ್ರೊ| ಸಿ. ಉಪೇಂದ್ರ ಸೋಮಯಾಜಿ. ಗೌರವ ಸಂಪಾದಕರು ಶ್ರೀ ಕೆ.ಎಂ.ಉಡುಪ,ಮಂದಾರ್ತಿ. ಈ ರಜತ ಸಂಚಿಕೆಯನ್ನು ಮಕ್ಕಳ ಮೇಳದ ಪ್ರಧಾನ ರೂವಾರಿ, ರಾಜ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದ ಕಾರ್ಕಡ ಶ್ರೀನಿವಾಸ ಉಡುಪರಿಗೆ ಅರ್ಪಿಸಲಾಗಿದೆ.

ಸಂಪಾದಕ ಪ್ರೊ| ಸಿ. ಉಪೇಂದ್ರ ಸೋಮಯಾಜಿ ಅವರು ‘ಮೊದಲ ಮಾತು’ ಎಂಬ ತಮ್ಮ ಲೇಖನದಲ್ಲಿ ಅನಿಸಿಕೆಗಳನ್ನು ತಿಳಿಸಿ, ಸಹಕರಿಸಿದವರಿಗೆಲ್ಲಾ ಕೃತಜ್ಞತೆಗಳನ್ನು ತಿಳಿಸಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಗಡೆ, ಶ್ರೀ ಕೆ.ಕೆ.ಪೈ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕೆ.ಜಯಪ್ರಕಾಶ ಹೆಗ್ಡೆ ಅವರುಗಳ ಶುಭಸಂದೇಶಗಳನ್ನೂ ನೀಡಲಾಗಿದೆ.

ಬಳಿಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಶ್ರೀಧರ ಉಪ್ಪೂರು, ಡಾ. ಸಿ.ಆನಂದರಾಮ ಉಪಾಧ್ಯ, ಕಂದಾವರ ರಘುರಾಮ ಶೆಟ್ಟಿ, ಎಚ್.ಸುಬ್ಬಣ್ಣ ಭಟ್ಟ, ಪ್ರೊ| ಉದ್ಯಾವರ ಮಾಧವ ಆಚಾರ್ಯ, ಕೆ. ಮೋಹನ್, ಎಂ. ಸುಧೀಂದ್ರ ಹೊಳ್ಳ, ಕಾರ್ಕಡ ರಾಮಚಂದ್ರ ಉಡುಪ, ಪಿ.ವಿ.ಐತಾಳ, ಮಣೂರು ನರಸಿಂಹ ಮಧ್ಯಸ್ಥ, ಡಾ.ಎಂ.ಪ್ರಭಾಕರ ಜೋಶಿ, ಎಚ್. ಸುಜಯಿಂದ್ರ ಹಂದೆ, ಅಂಬಾತನಯ ಮುದ್ರಾಡಿ, ಡಾ. ಆರ್. ಗಣೇಶ್ ಶತಾವಧಾನಿ, ಕೆ.ಎಂ.ರಾಘವ ನಂಬಿಯಾರ್, ಪ್ರೊ| ಸಿ. ಉಪೇಂದ್ರ ಸೋಮಯಾಜಿ,

ಸ್ವಾಮಿ ಪುರುಷೋತ್ತಮಾನಂದ, ಗಿರೀಶ ಕಾಸರವಳ್ಳಿ, ಡಾ| ಎಚ್.ಕೆ.ರಂಗನಾಥ್, ಡಾ| ಭಾನುಮತಿ, ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಜಾನ್ ಆರ್. ಮರ್, ಕೂರಾಡಿ ಸದಾಶಿವ ಕಲ್ಕೂರ, ದಯಾನಂದ ಬಳ್ಕೂರು, ಬಿ. ರಮೇಶ್ ಭಟ್, ಕೆ.ಎಂ. ಉಡುಪ, ಎಚ್.ಶ್ರೀಧರ ಹಂದೆ, ಇವರುಗಳ ಲೇಖನಗಳನ್ನು ನೀಡಲಾಗಿದೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಧರ್ಮಾಂಗದ ದಿಗ್ವಿಜಯ, ಮೋಹಿನಿ ಏಕಾದಶಿ – ಮಲ್ಲ ದೇವಸ್ಥಾನದಲ್ಲಿ ತಾಳಮದ್ದಳೆ

(ಸಾಂದರ್ಭಿಕ ಚಿತ್ರ) ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಲ್ಲ ಇಲ್ಲಿ ದಿನಾಂಕ- 01-11-2020 ನೇ ಆದಿತ್ಯವಾರ ಅಪರಾಹ್ನ ಗಂಟೆ 2-00 ಕ್ಕೆ ಸರಿಯಾಗಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಸೇವಾರೂಪದ ತಾಳಮದ್ದಳೆ ನಡೆಯಲಿದೆ. 

   ಪ್ರಸಂಗ : ಧರ್ಮಾಂಗದ ದಿಗ್ವಿಜಯ – ಮೋಹಿನಿ ಏಕಾದಶಿ  (ಕವಿ : ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ) ಹಿಮ್ಮೇಳದಲ್ಲಿ ಭಾಗವತರು: ಬಲಿಪ ಪ್ರಸಾದ್ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಸತೀಶ್ ಭಟ್ ಪಳ್ಳಿ. ಚೆಂಡೆ, ಮದ್ದಳೆ: ಮುರಾರಿ ಕಡಂಬಳಿತ್ತಾಯ, ಪುಂಡಿಕಾಯಿ ರಾಜೇಂದ್ರ ಪ್ರಸಾದ್. ಮುಮ್ಮೇಳ: ರಾಧಾಕೃಷ್ಣ ಕಲ್ಚಾರ್, ರಾಮ ಭಟ್ ಕೋಟೆ, ವಿಷ್ಣು ಶರ್ಮ ಪಣಕಜೆ, ಹರೀಶ್ ಭಟ್ ಬಳಂತಿಮೊಗರು , ರವಿರಾಜ್ ಭಟ್ ಪನೆಯಾಲ.

ಭಕ್ತಾಭಿಮಾನಿಗಳಿಗೆ ಹಾಗೂ ಕಲಾಭಿಮಾನಿಗಳಿಗೆ ಆದರದ ಸ್ವಾಗತ ಬಯಸುವ, ಬಲಿಪ ಪ್ರಸಾದ್ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಪುಂಡಿಕಾಯಿ ರಾಜೇಂದ್ರ ಪ್ರಸಾದ್ ಭಟ್.

ಮೂರೂರು ವಿಷ್ಣು ಭಟ್ಟರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ, ಅಜಿತ್‍ಕುಮಾರ್ ಅಂಬಲಪಾಡಿ ಅವರಿಗೆ ಟಿ.ವಿ.ರಾವ್ ಪ್ರಶಸ್ತಿ

ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ಕಳೆದ ಏಳು ವರ್ಷಗಳಿಂದ ನೀಡುತ್ತಾ ಬಂದ ಮೇಲಿನ ಎರಡು ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ನವಂಬರ್ 7 ರಂದು ಸಂಜೆ 5.15 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.

ಜಾಹೀರಾತು 

ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಲಿದ್ದಾರೆ.

ಮೂರೂರು ವಿಷ್ಣು ಭಟ್ಟ

ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಹಿರಿಯ ಸ್ತ್ರೀವೇಷಧಾರಿ ಮೂರೂರು ವಿಷ್ಣು ಭಟ್ಟರಿಗೂ, ಅಭಿಮಾನಿ ಬಳಗದ ಗೌರವಾಧ್ಯಕ್ಷರಾಗಿದ್ದ ಟಿ. ವಿ.ರಾವ್ ಪ್ರಶಸ್ತಿಯನ್ನು

ಅಜಿತ್‍ಕುಮಾರ್ ಅಂಬಲಪಾಡಿ

ಹವ್ಯಾಸಿ ಹಿಮ್ಮೇಳ ವಾದಕ, ವೇಷಧಾರಿ ಅಜಿತ್‍ಕುಮಾರ್ ಅಂಬಲಪಾಡಿ ಇವರಿಗೂ ಪ್ರದಾನ ಮಾಡಲಾಗುವುದೆಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮತ್ತು ಕಾರ್ಯದರ್ಶಿ ಶ್ರೀ ಎಂ. ಗೋಪಿಕೃಷ್ಣ ರಾವ್‍ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.