Friday, August 28, 2026
Home Blog Page 376

ಪ್ರಶಸ್ತಿ ಪುರಸ್ಕೃತರ ಪರಿಚಯ – ಶ್ರೀ ವಿಷ್ಣು ಗಜಾನನ ಭಟ್ ಮೂರೂರು, ಕೆ. ಅಜಿತ್‍ಕುಮಾರ್ ಅಂಬಲಪಾಡಿ

ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಕಳೆದ ಏಳು ವರ್ಷಗಳಿಂದ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್ತು ಟಿ. ವಿ.ರಾವ್ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ 7, ಶನಿವಾರ ಸಂಜೆ 5.15 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.ಪ್ರಶಸ್ತಿ ಸ್ವೀಕರಿಸಲಿರುವ ಈರ್ವರು ಕಲಾವಿದರ ಕಿರು ಪರಿಚಯ.


ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ – ಶ್ರೀ ವಿಷ್ಣು ಗಜಾನನ ಭಟ್ ಮೂರೂರು


ಇವರು ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ.ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಮೂರೂರಿನವರು. ಗಜಾನನ ಭಟ್-ಭಾಗೀರಥಿ ದಂಪತಿಯ ಸುಪುತ್ರರು.ಎಸ್. ಎಸ್. ಎಲ್.ಸಿ.ಅನಂತರ ಹದಿನಾರರ ಕಿರು ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿ ನಾಲ್ಕು ದಶಕಗಳ ಕಾಲ ಯಕ್ಷಲೋಕದ ಸ್ತ್ರೀ ಪಾತ್ರಗಳನ್ನು ಪರಿಣಾಮಕಾರಿಯಾಗಿ ಕಲಾ ರಸಿಕರಿಗೆ ದರ್ಶಿಸಿದವರು. ಯಕ್ಷಗಾನದ ಆರಂಭಿಕ ಪಾಠವನ್ನು ಮೂರೂರು ರಾಮ ಹೆಗಡೆಯವರಿಂದ ಪಡೆದರು. ಮುಂದೆ ಕರ್ಕಿ ಮೇಳದ ಪ್ರಸಿದ್ಧ ಕಲಾವಿದರಾದ ಪಿ. ವಿ. ಹಾಸ್ಯಗಾರರಲ್ಲಿ ಯಕ್ಷನಾಟ್ಯ ತರಬೇತಿ ಪಡೆದು ಶ್ರೇಷ್ಠ ಕಲಾವಿದರಾಗಿ ರೂಪುಗೊಂಡರು.


ಗುಂಡುಬಾಳ, ಅಮೃತೇಶ್ವರೀ, ಹಿರೆಮಹಾಲಿಂಗೇಶ್ವರ, ಶಿರಸಿ, ಪಂಚಲಿಂಗ, ಪೆರ್ಡೂರು, ಇಡಗುಂಜಿ, ಪೂರ್ಣಚಂದ್ರ ಮೇಳಗಳಲ್ಲಿ ಕಲಾಸೇವೆ ಗೈದಿರುತ್ತಾರೆ. ಪೌರಾಣಿಕ ಮತ್ತು ಕಾಲ್ಪನಿಕ ಪ್ರಸಂಗಗಳಲ್ಲಿ ಸ್ತ್ರೀ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿ ಕಲಾರಸಿಕರ ಪ್ರೀತ್ಯಾದರಕ್ಕೆ ಪಾತ್ರರು. ಪಾತ್ರದ ಮನೋಧರ್ಮ ಅರಿತು ಅಭಿವ್ಯಕ್ತಿಸುವ ಕಲೆಯನ್ನು ಕರಗತ ಮಾಡಿಕೊಂಡವರು. ಗರತಿಯ ಪಾತ್ರ ನಿರ್ವಹಣೆಯಲ್ಲಂತೂ ವಿಶೇಷ ಸಿದ್ಧಿ-ಪ್ರಸಿದ್ಧಿ ಪಡೆದವರು. ಕರುಣರಸ ಪ್ರತಿಪಾದನೆಯಲ್ಲಿ ಅಸಾಧಾರಣ ಪ್ರತಿಭೆ ಮೆರೆದವರು. ದಾಕ್ಷಾಯಿಣಿ, ಸೀತೆ, ಅಂಬೆ, ಮಂಡೋದರಿ, ಮೇನಕೆ, ಚಂದ್ರಮತಿ, ದಮಯಂತಿ, ಪ್ರಭಾವತಿ, ಸಾವಿತ್ರಿ, ಶಕುಂತಲೆ ಹೀಗೆ ಪೌರಾಣಿಕ ಸ್ತ್ರೀ ಪಾತ್ರಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಹದವರಿತ ಕುಣಿತ, ಭಾವಪೂರ್ಣ ಅಭಿನಯ, ಲಾಲಿತ್ಯಪೂರ್ಣ ಮಾತುಗಾರಿಕೆಯಿಂದ ಕಲಾರಸಿಕರ ಮನಗೆದ್ದಿದ್ದಾರೆ. ಪುರುಷ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ತಾಳಮದ್ದಲೆ ಅರ್ಥಧಾರಿಯಾಗಿ ಅನೇಕ ಕೂಟಗಳಲ್ಲಿ ಭಾಗವಹಿಸಿದ್ದಾರೆ. ಉಡುಪಿ ಯಕ್ಷಗಾನ ಕಲಾರಂಗದ ಕೋಟ ವೈಕುಂಟ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.


ಟಿ. ವಿ. ರಾವ್ ಪ್ರಶಸ್ತಿ – ಕೆ. ಅಜಿತ್‍ಕುಮಾರ್ ಅಂಬಲಪಾಡಿ

ವೇಷಧಾರಿ, ಹಿಮ್ಮೇಳ ವಾದಕ ಕಪ್ಪೆಟ್ಟು ಅಜಿತ್‍ಕುಮಾರ್ ಬಾಬು ಶೆಟ್ಟಿಗಾರ್ – ಭವಾನಿ ದಂಪತಿ ಸುಪುತ್ರರು. ಇವರಿಗೆ ಯಕ್ಷಗಾನ ತಂದೆಯಿಂದ ಬಂದ ಬಳುವಳಿ.ಬಾಬು ಶೆಟ್ಟಿಗಾರ್‍ ಯಕ್ಷಗಾನದ ಎಲ್ಲಾ ಅಂಗಗಳನ್ನು ಬಲ್ಲ ಕಲಾವಿದರಾಗಿದ್ದರು. ಅಜಿತರಿಗೆ ತಂದೆಯೇ ಯಕ್ಷಗಾನದ ಮೊದಲ ಗುರು. ಬಾಬು ಶೆಟ್ಟಿಗಾರ್ ಹಾಗೂ ಸಮಾನಾಸಕ್ತ ಸ್ನೇಹಿತರು ಸ್ಥಾಪಿಸಿ ಬೆಳೆಸಿದ ಅಂಬಲಪಾಡಿಯ ‘ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ’ ಅವರ ಕಲಿಕೆಗೂ ಕಲಿತ ಕಲೆಯನ್ನು ಪ್ರದರ್ಶಿಸುವುದಕ್ಕೂ ವೇದಿಕೆಯಾಯಿತು. ಅಲ್ಲಿ ಹಿರಿಯಡಕ ಗೋಪಾಲ ರಾಯರಿಂದ ಮದ್ದಳೆ ವಾದನ, ಕೆಮ್ಮಣ್ಣು ಆನಂದರಿಂದ ಚಂಡೆ ವಾದನ ತರಬೇತಿ ಪಡೆದರು. ಇವರ ಆಳಂಗ ಬಣ್ಣದ ವೇಷಕ್ಕೆ ತುಂಬಾ ಪೂರಕ. ಬಣ್ಣದ ವೇಷಗಳಲ್ಲದೆ ಮಂಡಳಿಯಲ್ಲಿ ಕಿರೀಟ, ಮುಂಡಾಸಿನ ವೇಷಗಳನ್ನೂ ನಿರ್ವಹಿಸಿದ್ದಾರೆ.


1997 ರಲ್ಲಿ ಪ್ರೊ.ಎಂ.ಎಲ್. ಸಾಮಗರ ನೇತೃತ್ವದ ತಂಡದೊಂದಿಗೆ ಕಲಾವಿದರಾಗಿ ಸಿಂಗಾಪುರ ಪ್ರವಾಸ ಮಾಡಿದ್ದಾರೆ. ಬೆಂಗಳೂರಿನ ‘ಶಂಕರ ಫೌಂಡೇಶನ್’ನ ಶ್ರೀಮತಿ ಲಕ್ಷ್ಮೀ ಹೆಗಡೆ ಗೋಪಿ ಮುಂದಾಳುತ್ವದ ನೃತ್ಯರೂಪಕ ತಂಡದೊಂದಿಗೆ ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಪ್ರವಾಸ ನಡೆಸಿ ತಮ್ಮ ಚಂಡೆಯ
ಅಬ್ಬರ ಮೊಳಗಿಸಿದ್ದಾರೆ.

ಪ್ರೊ.ಉದ್ಯಾವರ ಮಾಧವ ಆಚಾರ್ಯರ ‘ಸಮೂಹ ಉಡುಪಿ’ ಹಾಗೂ ಬೆಂಗಳೂರಿನ ‘ಯಕ್ಷದೇಗುಲ’, ‘ಕರ್ನಾಟಕ ಕಲಾದರ್ಶಿನಿ’ ತಂಡದ ಸದಸ್ಯರಾಗಿ ಹಲವು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನವೂ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಲಾಪ್ರದರ್ಶನ ನೀಡಿದ್ದಾರೆ.
ಉಡುಪಿಯ ಪ್ರತಿಷ್ಠಿತ ಸಾಂಸ್ಕøತಿಕ, ಸಾಮಾಜಿಕ ಸಂಘಟನೆಯಾದ ‘ಯಕ್ಷಗಾನಕಲಾರಂಗ’ದ ಸಕ್ರಿಯ ಸದಸ್ಯರು. ಅನೇಕ ಸಾಂಸ್ಕøತಿಕ ಕಲಾ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.


ಪ್ರೊ. ನಾರಾಯಣ ಎಂ. ಹೆಗಡೆ

ವಯಲಿನ್ ದಂತಕಥೆ ಪದ್ಮಭೂಷಣ ಟಿ. ಎನ್. ಕೃಷ್ಣನ್ ಮತ್ತು ಅವರ ಪುತ್ರಿ ದ್ವಂದ್ವ ಪಿಟೀಲು ವಾದನ (Violinist T.N. Krishnan and Viji Krishnan)

ಇತ್ತೀಚಿಗೆ ನಿಧನರಾದ ವಯಲಿನ್ ದಂತಕಥೆ ಪದ್ಮಭೂಷಣ ಟಿ. ಎನ್. ಕೃಷ್ಣನ್ ಮತ್ತು ಅವರ ಪುತ್ರಿ ವಿಜಿ ಕೃಷ್ಣನ್ ಅವರ ದ್ವಂದ್ವ ಪಿಟೀಲು ವಾದನ ಕಚೇರಿ ತುಂಬಾ ಪ್ರಸಿದ್ದಿಯನ್ನು ಪಡೆದಿತ್ತು.

ಅಪ್ಪ, ಮಗಳು ಇಬ್ಬರೂ ಜೊತೆಯಾಗಿ ದೇಶಾದ್ಯಂತ ಹಲವಾರು ದ್ವಂದ್ವ ನುಡಿಸುವಿಕೆಯ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದರು. ಮಗಳು ವಿಜಿ ಕೃಷ್ಣನ್ ಅವರಿಗೆ ತಂದೆ ಟಿ. ಎನ್. ಕೃಷ್ಣನ್ ಅವರೇ ಗುರುವಾಗಿದ್ದರು.

ತಂದೆ ಹಾಗೂ ಗುರು ಟಿ. ಎನ್. ಕೃಷ್ಣನ್ ಅವರೇ ನನ್ನ ಪಾಲಿಗೆ ಹೀರೋ ಆಗಿದ್ದರು ಎಂದು ಪುತ್ರಿ ವಿಜಿ ಕೃಷ್ಣನ್ ಭಾವುಕರಾಗಿ ನುಡಿಯುತ್ತಾರೆ. ಅವರು ಇಬ್ಬರೂ ಒಟ್ಟಿಗೆ ನಡೆಸಿದ್ದ ಪಿಟೀಲು ವಾದನ ಕಚೇರಿಯ ವೀಡೀಯೋ ಲಿಂಕ್ ಕೆಳಗಡೆ ಇದೆ. 

ಮಾತಿನಲ್ಲೇ ಪಾತ್ರಶಿಲ್ಪಗಳನ್ನು ನಿರ್ಮಿಸಿದ ಕುಂಬಳೆ ಸುಂದರ ರಾವ್ (Kumble Sundara Rao)

ಕೂರ್ಮಾವತಾರದಲ್ಲಿ ಇವನಾಗಿದ್ದ ನನ್ನ ಚಿಪ್ಪು. ನೀನು ಇದನ್ನು ಒಪ್ಪು. ನರಸಿಂಹಾವತಾರದಲ್ಲಿ ಅವನು ನನ್ನ ನಖ, ಈಗ ನನ್ನ ಸಖ, ಒಪ್ಪದಿದ್ದರೆ ನಿನಗಿಲ್ಲ ಸುಖ.  ಇಂತಹಾ ಪ್ರಾಸಬದ್ಧ ಮಾತುಗಳನ್ನು ಕೇಳಿದ ಯಕ್ಷರಸಿಕರು ಎಲ್ಲರೂ ಅವರು ಯಾರೆಂದು ಖಂಡಿತಾ ಊಹಿಸಬಹುದು.  

ಯಾವುದೇ ಒಬ್ಬ ಪಾತ್ರಧಾರಿಯು ಪಾತ್ರವೊಂದರಲ್ಲಿ ಆತನು ಮೂಡಿಸಿದ ಶೈಲಿ ಚಿತ್ರಣಗಳನ್ನು ಆತನ ನಿವೃತ್ತಿಯ ನಂತರವೂ ಇತರ ಪಾತ್ರಧಾರಿಗಳು ಅನುಸರಿಸಿಕೊಂಡು ಹೋಗುತ್ತಾರೆ ಎಂದಾದರೆ ಅದು ಆ ಪಾತ್ರಧಾರಿಯ ದೊಡ್ಡ ಗೆಲುವು ಎಂದೇ ಅರ್ಥ. ಉದಾಹರಣೆಯಾಗಿ ಸುದರ್ಶನ ವಿಜಯ ಪ್ರಸಂಗದ ವಿಷ್ಣುವಿನ ಪಾತ್ರವೇ ಜ್ವಲಂತ ಸಾಕ್ಷಿ. ವಿಷ್ಣುವಾಗಿ ಕುಂಬಳೆ ಸುಂದರ ರಾಯರು ಕಟ್ಟಿದ ಪಾತ್ರಚಿತ್ರಣ ಈಗಲೂ ಹಾಗೆಯೇ ಇದೆ. ಅಲ್ಲಿ ಕುಂಬಳೆ ಸುಂದರ ರಾಯರು ಹೇಳುತ್ತಿದ್ದ ಪ್ರಾಸಬದ್ಧ ಮಾತುಗಳನ್ನು ಬೇರೆ ಕಲಾವಿದರು ಈಗಲೂ ಉಪಯೋಗಿಸುತ್ತಿದ್ದಾರೆ. ಇದು ಕುಂಬಳೆಯವರ ದೊಡ್ಡ ಗೆಲುವು.

ಕುಂಬಳೆ ಸುಂದರ ರಾವ್ ಅವರ ಭರತಾಗಮನದ ಭರತ, ವಿರಾಟ ಪರ್ವದ ಉತ್ತರ ಕುಮಾರ ಮೊದಲಾದುವುಗಳೆಲ್ಲಾ ಅವರಿಗೇ ಹೇಳಿ ಮಾಡಿಸಿದ ಪಾತ್ರಗಳು. ಕೃಷ್ಣ ಸಂಧಾನದ ಕರ್ಣ, ಕರ್ಣಪರ್ವದ ಕರ್ಣ, ಮಹಾಬ್ರಾಹ್ಮಣದಲ್ಲಿ ವಿಶ್ವಾಮಿತ್ರ (ವಿಶ್ವಾಮಿತ್ರ-ಮೇನಕೆ) ಸಮುದ್ರಮಥನದ ವಿಷ್ಣು, ದಕ್ಷಯಜ್ಞದ ಈಶ್ವರ ವಿವಿಧ ಪ್ರಸಂಗಗಳಲ್ಲಿ, ಭೀಷ್ಮ, ಕೃಷ್ಣ, ರಾಮ, ವಿಷ್ಣು, ಚ್ಯವನ, ಪರೀಕ್ಷಿತ, ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಗೋವಿಂದ ದೀಕ್ಷಿತರ ಪಾತ್ರ ಇವರಿಗೆ ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ.   ತ್ರಿಪುರ ಮಥನದ ‘ಚಾರ್ವಾಕ’ ಪಾತ್ರ ನಿರ್ವಹಣೆಯಂತೂ ಅದ್ಭುತ. 

ಕುಂಬಳೆ ಸುಂದರ ರಾವ್ ಅವರ ಕುಟುಂಬದ ವೃತ್ತಿ ಮಗ್ಗ ನೇಯುವುದು ಮತ್ತು ಬಟ್ಟೆಯ ವ್ಯಾಪಾರ. ಮನೆಮಾತು ಮಲೆಯಾಳ. ಎಳವೆಯಲ್ಲೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ, ಯಕ್ಷಗಾನದ ಆಸಕ್ತಿ ಸೆಳೆಯಿತು. ಕೆಲಸಕ್ಕೆ ಬಾರದವನೆಂಬ ಭಾವನೆ ಅಪ್ಪನಲ್ಲಿದ್ದರೂ ಅಮ್ಮನ ಪ್ರೀತಿಯಿತ್ತು. ಶಾಲೆಯಲ್ಲಿ ಓದಿದ್ದು ಕಡಿಮೆಯಾದರೂ ಕುಂಬಳೆ ಸುಂದರ ರಾಯರು ಕನ್ನಡ, ಮಲಯಾಳ, ತುಳು, ಸಂಸ್ಕೃತ, ಹವ್ಯಕ, ತಮಿಳು ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು. 

ಜಾಹೀರಾತು 

ತಂದೆಯ ಬಟ್ಟೆ ಮಿಲ್ ಇರುವ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ  ನಡೆಯುತ್ತಿದ್ದ ತಾಳಮದ್ದಲೆಯನ್ನು ನೋಡಿ ಅರ್ಥ ಹೇಳುತ್ತಾ ಆಸಕ್ತಿ ಬೆಳೆಸಿಕೊಂಡ ಕುಂಬಳೆಯವರಿಗೆ ಚಿಕ್ಕಂದಿನಲ್ಲಿಯೇ ಯಕ್ಷಗಾನದ ಆಸಕ್ತಿ ಅತೀವವಾಗಿತ್ತು. ಕುಂಬಳೆ ಸುಂದರ ರಾಯರ  ತಂದೆಯ ಮಗ್ಗದ ಕೆಲಸ ಅಲ್ಲಿ ನಡೆಯುತ್ತಿತ್ತು. ಅಲ್ಲಿ ಪ್ರತಿ ವಾರವೂ ತಾಳಮದ್ದಳೆ ನಡೆಯುತ್ತಿತ್ತು. ಅವರು ಶಾಲೆ ಬಿಟ್ಟ ನಂತರ ಅಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಒಂದು ದಿನ ಅಲ್ಲಿದ್ದ ಬೋನಂತಾಯ ಶಂಭಟ್ಟರು ಎನ್ನುವವರು ‘‘ಒಂದು ಅರ್ಥ ಹೇಳೋ ಸುಂದರಾ’’ ಎಂದು ಕುಂಬಳೆಯವರಲ್ಲಿ ದೂತನ ಅರ್ಥ ಹೇಳಿಸಿದರು. 

ಆಮೇಲೆ ಸಂಬಂಧಿಕರೂ ನೆರೆಯವರೂ ಆದ ಬಣ್ಣದ ಕುಟ್ಯಪ್ಪು ಅವರ ಕಾಳಜಿಯಿಂದ ಮೇಳದಲ್ಲಿ ವೇಷ ಮಾಡತೊಡಗಿದರು. ಆಟಕ್ಕಿಂತ ತಾಳಮದ್ದಳೆಗೇ ಹೆಚ್ಚು ಒಗ್ಗುವವನು ಎಂದು ಭಾವಿಸಿದ ಸುಂದರ ರಾಯರು ಮಳೆಗಾಲದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಶೇಣಿಯವರು, ವೆಂಕಪ್ಪ ಶೆಟ್ಟಿಯವರು, ಸಾಮಗರೇ ಮೊದಲಾದವರಿದ್ದ ಕೂಟಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಅರ್ಥ ಹೇಳಲು ಪ್ರಾರಂಭಿಸಿ ತಾಳಮದ್ದಳೆ ಕೂಟಗಳಿಗೆ ಅನಿವಾರ್ಯ ಸದಸ್ಯರಾದರು. 

ರಾಜಕೀಯದಲ್ಲಿ ಕುಂಬಳೆಯವರಿಗೆ ಯಾವುದೇ ಆಕಾಂಕ್ಷೆಯಿರಲಿಲ್ಲ.  ಕೇವಲ ಭಾಷಣಗಾರನಾಗಿ ರಾಜಕೀಯದಲ್ಲಿದ್ದರು. ಪ್ರಚಾರ ಭಾಷಣಕ್ಕಾಗಿ ಕರೆಯುತ್ತಿದ್ದರು. ಆದರೆ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಲು ಒತ್ತಾಯದ ಕರೆಬಂತು. ಸ್ಪರ್ಧಿಸಿ ಗೆದ್ದು ಶಾಸಕರಾದರು. ಶಾಸಕನಾದ ಮೇಲೆಯೂ ಯಕ್ಷಗಾನದ ವೇಷ ಮಾಡಿದ್ದಾರೆ. ತಾಳಮದ್ದಳೆಯಲ್ಲೂ ಭಾಗವಹಿಸಿದ್ದಾರೆ. ಧರ್ಮಸ್ಥಳ ಮೇಳದಲ್ಲಿ ಚೌಕಿಯಲ್ಲಿ ಅವರ ವೇಷದ ಪೆಟ್ಟಿಗೆ ಶಾಸಕನಾದ ಮೇಲೂ ಹಾಗೆಯೇ ಇತ್ತಂತೆ. 

ಕುಂಬಳೆ ಸುಂದರರಾಯರು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಯಕ್ಷಗಾನಕ್ಕೆ ತೆಂಕು, ಬಡಗು ಮಾತ್ರವಲ್ಲ ಉಳಿದ ಜಾನಪದ ಕಲೆಗಳಿಗೆ ಎಲ್ಲಾ ಸೇರಿ ಕೇವಲ 12 ಲಕ್ಷ ವಾರ್ಷಿಕ ಅನುದಾನವಿತ್ತು.ಅಷ್ಟು ಸಣ್ಣ ಮೊತ್ತದಲ್ಲಿ ಯಕ್ಷಗಾನಕ್ಕೆ ಅಂತಹಾ ದೊಡ್ಡ ಕೊಡುಗೆಗಳನ್ನು ಕೊಡಲಾಗಲಿಲ್ಲ ಎಂದು ಕುಂಬಳೆಯವರು ಬೇಸರ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರೇಕ್ಷಕರಿಂದ ಸ್ವಚ್ಛತೆಗೆ ತೊಂದರೆಯಾಗುತ್ತದೆ ಎಂಬ ನೆಪವೊಡ್ಡಿ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ್ದರು.

ಇದರಿಂದ ಕೆರಳಿದ ಕುಂಬಳೆಯವರು ಸದನದ ಬಾವಿಗಿಳಿದು ಧರಣಿ ನಡೆಸಿ ಅನಂತರ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಮಧ್ಯಸ್ಥಿಕೆಯಲ್ಲಿ ಪುನಃ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ದೊರಕಿಸಿಕೊಟ್ಟಿದ್ದರು. 

“ಅವರಿಗೆ  ಪ್ರಾಸ ಬಿಟ್ಟು ಏನು ಗೊತ್ತಿದೆ” ಎಂಬ ಟೀಕೆಗಳಿಗೆ ಉತ್ತರವಾಗಿಯೋ ಎಂಬಂತೆ  ಹಠಕ್ಕೆ ಬಿದ್ದ ಅವರು ಒಂದು ಕೂಡಾ ಪ್ರಾಸವನ್ನು ಹೇಳದೆ ಎರಡು ವರ್ಷ ತಿರುಗಾಟ ಮಾಡಿದ್ದರು. ತನ್ನನ್ನು ಅನುಕರಿಸುವವರ ಬಗ್ಗೆ ಅವರು ಹೀಗೆ ಹೇಳುತ್ತಾರೆ. 

“ಒಬ್ಬರಂತೆ ಇನ್ನೊಬ್ಬ ಕಲಾವಿದರು ಮಾಡಬೇಕು ಅಂತೇನೂ ಇಲ್ಲ. ಮಾಡಬಾರದು ಅಂತ ಕೂಡಾ ಇಲ್ಲ. ನನಗೆ ಶೃಂಗಾರ ಕರುಣ  ಇಷ್ಟ. ವೀರರಸದ ಅಭಿನಯಕ್ಕೆ ನನ್ನ ನೃತ್ಯದ ಭಾಗದ ಕೊರತೆಯಿಂದಾಗಿ  ತೊಡಕುಂಟಾಗುತ್ತದೆ. ವಿವೇಕ ಇದ್ದರೆ ಸರಿಯಾದ ಅನುಕರಣೆ ಇರುತ್ತದೆ. ಸುಂದರ ರಾಯರು ಹಾಗೆ ಮಾಡ್ತಾರೆ ಅಂತ ಕೆಲವರು ಎಡಗೈಯನ್ನೇ ಮುಂದೆ ಮಾಡ್ತಾರೆ. ನನಗೆ ಎಡಗೈ ಅಭ್ಯಾಸಬಲ, ಎಡಗೈಯಲ್ಲಿ ಬರೆಯುವುದು.  

ಆದ್ದರಿಂದ ರಂಗದಲ್ಲೂ ಅಭ್ಯಾಸದಿಂದ ಎಡಗೈ ಮುಂದೆ ಬರುತ್ತದೆ. ಅದೂ ಒಂದು ಅಭಿನಯ ಎಂದು ತಿಳಿದುಕೊಂಡು ಅನುಕರಿಸುತ್ತಾರೆ. ಒಳ್ಳೆಯದಾದ್ರೆ ಅನುಕರಣೆ ಸರಿ. ಅವರು ಮಾಡ್ತಾರೆ, ನಾನೂ ಮಾಡಿಬಿಡ್ತೇನೆ ಅಂತ ಏನೇನೋ ಮಾಡುವುದಕ್ಕಿಂತ ಮಾಡದಿರುವುದೇ ಉತ್ತಮ” ಎಂದು ಕುಂಬಳೆ ಸುಂದರ ರಾಯರು ಮಾರ್ಮಿಕವಾಗಿ ನುಡಿದಿದ್ದರು. 

ಲೇಖನ: ಮನಮೋಹನ್ ವಿ.ಎಸ್ 

ಗುಂಡಿಮಜಲು ಗೋಪಾಲಕೃಷ್ಣ ಭಟ್ –  ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ ಕಾರ್ಯಕ್ರಮದಲ್ಲಿ ಇಂದು ಅಂದರೆ  ನವೆಂಬರ್ 3ರಂದು ಮಂಗಳವಾರ  ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಗುಂಡಿಮಜಲು ಗೋಪಾಲಕೃಷ್ಣ ಭಟ್ ಅವರೊಂದಿಗೆ ಮಾತುಕತೆ ನಡೆಯಲಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ  ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.  ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.

ಜಾಹೀರಾತು

2020ನೇ  ನವೆಂಬರ್ 3ರಂದು ಮಂಗಳವಾರ  ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. ಲಿಂಕ್ ಕೆಳಗಡೆ ಇದೆ.

ರಂಗಸ್ಥಳ ರಾಜ ಹಾರಾಡಿ ರಾಮ ಗಾಣಿಗ (Haradi Rama Ganiga)

ಶೀರ್ಷಿಕೆಯೇ ಸೂಚಿಸುವಂತೆ ಇದು ಬಡಗು ತಿಟ್ಟು ಶ್ರೇಷ್ಠ ಕಲಾವಿದರಾಗಿ ಮೆರೆದ ಹಾರಾಡಿ ಮನೆತನದ ಶ್ರೀ ಹಾರಾಡಿ ರಾಮ ಗಾಣಿಗರ ಕುರಿತಾಗಿ ಪ್ರಕಟವಾದ ಪುಸ್ತಕವು. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ಜಿಲ್ಲೆ. ಲೇಖಕರು ಶ್ರೀ ಎಚ್. ಶ್ರೀಧರ ಹಂದೆಯವರು.

ಶ್ರೀ ಹಾರಾಡಿ ರಾಮ ಗಾಣಿಗರ ಬದುಕಿನ ಅವಧಿ 1902-1968. ಹಾರಾಡಿ ಸುಬ್ಬು ಗಾಣಿಗ ಮತ್ತು ಶ್ರೀಮತಿ ಕೊಲ್ಲು ದಂಪತಿಗಳ ಪುತ್ರನಾಗಿ ಜನನ. ಹಿರಿಯರೆಲ್ಲಾ ಕಲಾವಿದರೇ ಆಗಿದ್ದರು. ರಕ್ತಗತವಾಗಿಯೇ ಇದ್ದುದರಿಂದ ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಹದಿನಾಲ್ಕನೇ ವಯಸ್ಸಿನಲ್ಲಿ ರಂಗಪ್ರವೇಶ. 1916ರಲ್ಲಿ ಮಾರಣಕಟ್ಟೆ ಮೇಳದ ಬಾಲಕಲಾವಿದನಾಗಿ. 45 ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ತಿರುಗಾಟ ನಡೆಸಿದ್ದರು.

ಅಲ್ಲದೆ ಸೌಕೂರು, ಅಮೃತೇಶ್ವರೀ, ವರಂಗ ಮೇಳಗಳಲ್ಲೂ ತಿರುಗಾಟ ಮಾಡಿದ್ದರು. ತನ್ನ ಶ್ರೇಷ್ಠ ಅಭಿನಯ, ಮಾತುಗಾರಿಕೆಯಿಂದ ಹಾರಾಡಿ ತಿಟ್ಟಿನ ಕೀರ್ತಿಯನ್ನು ಮೆರೆಸಿದ ಕಲಾವಿದರಿವರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಯೋಜನೆಯಂತೆ ಈ ಕಿರು ಪುಸ್ತಕವು ಓದುಗರ ಕೈ ಸೇರಿದೆ. ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ನೀಲಾವರ ಸುರೇಂದ್ರ  ಅಡಿಗ ಅವರು ‘ಓದುವ ಮುನ್ನ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ.

ಜಾಹೀರಾತು 

ಹಾರಾಡಿ ರಾಮ ಗಾಣಿಗರ ಹುಟ್ಟು, ಬದುಕು, ಕಲಾಜೀವನದ ಬಗೆಗೆ ಸಾಕಷ್ಟು ಮಾಹಿತಿಗಳನ್ನು ಈ ಪುಸ್ತಕದಲ್ಲಿ ಶ್ರೀ ಎಚ್. ಶ್ರೀಧರ ಹಂದೆಯವರು ನೀಡಿರುತ್ತಾರೆ. 1962ರಲ್ಲಿ ರಾಜ್ಯ ಪ್ರಶಸ್ತಿ, 1964ರಲ್ಲಿ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಹಾರಾಡಿ ರಾಮ ಗಾಣಿಗರ ಬಗೆಗೆ ಈ ಹಿಂದೆ ಎರಡು ಗ್ರಂಥಗಳು ಪ್ರಕಟವಾಗಿವೆ. ಅವುಗಳು 1) ಕೆ.ಮೋಹನ್ ರಾವ್ ನಿರ್ದೇಶಿತ ಯಕ್ಷದೇಗುಲವು ಹೊರತಂದ ‘ಯಕ್ಷಲೋಕದ ಕೋಲ್ಮಿಂಚು’ 2) ಕಂದಾವರ ರಘುರಾಮ ಶೆಟ್ಟಿ ಅವರ ಸಂಪಾದಕತ್ವದಲ್ಲಿ ಶ್ರೀ ಕ್ಷೇತ್ರ ಮಂದಾರ್ತಿ ಅವರು ಪ್ರಕಟಿಸಿದ ‘ಹಾರಾಡಿ ರಾಮ ಗಾಣಿಗರು’ ಎಂಬ ಪುಸ್ತಕಗಳು.

ಈ ವಿಚಾರವನ್ನು ಲೇಖಕರಾದ ಶ್ರೀ ಎಚ್. ಶ್ರೀಧರ ಹಂದೆಯವರು ತಮ್ಮ ಬರಹದಲ್ಲಿ ತಿಳಿಸಿರುತ್ತಾರೆ. ‘ರಂಗಸ್ಥಳ ರಾಜ ಹಾರಾಡಿ ರಾಮ ಗಾಣಿಗ’ ಎಂಬ ಈ ಪುಸ್ತಕವು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂಭ್ರಮದ ಸಂದರ್ಭ ಪ್ರಕಟವಾಗಿತ್ತು. ಉಡುಪಿ ಜಿಲ್ಲೆಯ ಹಿರಿಯ ಸಾಧಕರು ಎಂಬ ವಿಚಾರದಡಿ ಈ ಹೊತ್ತಗೆಯು ಪ್ರಕಟವಾಗಿತ್ತು.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ವಯಲಿನ್ ದಂತಕಥೆ  ಪದ್ಮಭೂಷಣ ಟಿ. ಎನ್. ಕೃಷ್ಣನ್ ಇನ್ನಿಲ್ಲ (Violinist T.N. Krishnan no more)

ಜನಪ್ರಿಯ ಜನಪ್ರಿಯ ಪಿಟೀಲು (ವಯಲಿನ್) ವಾದಕ ಪದ್ಮಭೂಷಣ ಟಿ. ಎನ್. ಕೃಷ್ಣನ್ ನಿಧನರಾಗಿದ್ದಾರೆ.  ಅವರಿಗೆ 92 ವರ್ಷ ವಯಸ್ಸಾಗಿತ್ತು.

1928ರ ಅಕ್ಟೋಬರ್ 6ರಂದು  ಕೇರಳದ ತ್ರಿಪುಣಿತ್ತರದಲ್ಲಿ ಜನಿಸಿದ್ದ ಟಿ. ಎನ್. ಕೃಷ್ಣನ್ ಅವರ ತಂದೆ ಪ್ರಸಿದ್ಧ ಸಂಗೀತಗಾರ  ನಾರಾಯಣ ಅಯ್ಯರ್ ಮತ್ತು ತಾಯಿ ಅಮ್ಮಿಣಿ ಅಮ್ಮಾಳ್. ಸಂಗೀತದ ಆರಂಭಿಕ ಪಾಠವನ್ನು ತಂದೆಯಿಂದಲೇ ಅಭ್ಯಾಸ ಮಾಡಿದ್ದರು.

ಆಮೇಲೆ ಹೆಚ್ಚಿನ ಕಲಿಕೆಯನ್ನು ಕೆ. ಪಾರ್ಥಸಾರಥಿ ಅಲೆಪ್ಪಿ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್ ಮೊದಲಾದವರ ಬಳಿ ಮಾಡಿದ್ದರು. ಪದ್ಮಭೂಷಣ ಟಿ. ಎನ್. ಕೃಷ್ಣನ್ ಹಿಂದಿನ ತಲೆಮಾರುಗಳ ಕರ್ನಾಟಕ ಸಂಗೀತದ ದಂತಕಥೆಗಳಾಗಿದ್ದ ಹಲವಾರು ಸಂಗೀತಗಾರರೊಂದಿಗೆ ಪ್ರದರ್ಶನ ನೀಡಿದ್ದರು.

ಜಾಹೀರಾತು 

ಅರಿಯಕುಡಿ ರಾಮಾನುಜ ಅಯ್ಯಂಗಾರ್, ಅಲತೂರ್ ಬ್ರದರ್ಸ್, ಚೆಂಬೈ ವೈದ್ಯನಾಥ ಭಾಗವತರ್, ಎಂಡಿ ರಾಮನಾಥನ್ ಮತ್ತು ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರೊಂದಿಗೆ ಟಿ. ಎನ್. ಕೃಷ್ಣನ್ ಅವರು ಅತ್ಯುತ್ತಮ  ಪ್ರದರ್ಶನಗಳನ್ನು ನೀಡಿದ್ದರು. ಅವರ ವಯಲಿನ್ ಕಚೇರಿಯ ವಿಡಿಯೋ ಕೆಳಗಡೆ ಇದೆ.

ಕನ್ನಡದಲ್ಲಿ ಎಸ್.ಪಿ.-ಲಕ್ಷ್ಮಿ ಅಭಿನಯದ ‘ಮಿಥುನ’ ಚಿತ್ರ ಶೀಘ್ರದಲ್ಲಿ ತೆರೆಗೆ

ಗಾಯನ ಲೋಕದ ದೊರೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ಲಕ್ಷ್ಮಿ ಅವರು ಅಭಿನಯಿಸಿದ್ದ ಜನಪ್ರಿಯ ತೆಲುಗು ಚಿತ್ರ ‘ಮಿಥುನಂ’ ಕನ್ನಡಕ್ಕೆ ಶೀಘ್ರದಲ್ಲೇ ಡಬ್ ಆಗಲಿದೆ.

ತೆಲುಗು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು  ನಿರ್ಮಿಸಿದ್ದ ಸಿನಿಮಾ ಈಗಲೂ ಆಂಧ್ರದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಮನೆಮಾತಾಗಿತ್ತು. ವಯಸ್ಸಾದ ದಂಪತಿಗಳ ನಡುವಿನ ವಾತ್ಸಲ್ಯಭರಿತ ಪ್ರೇಮಕಥೆ ಇದಾಗಿದ್ದು ಎಸ್.ಪಿ.ಬಿ ಮತ್ತು ಲಕ್ಷ್ಮಿ ಅದ್ಭುತವಾಗಿ, ಲವಲವಿಕೆ ಹಾಗೂ ಮುಗ್ಧತೆಯಿಂದ ನಟಿಸಿದ್ದಾರೆ.

2012ರಲ್ಲಿ ಈ ತೆಲುಗು ಚಿತ್ರ ತೆರೆಕಂಡು ಯಶಸ್ವಿ ಚಿತ್ರವಾಗಿ ಗುರುತಿಸಲ್ಪಟ್ಟಿತ್ತು. ಶ್ರೀರಮಣ ಅವರ ತೆಲುಗು ಕಾದಂಬರಿ ‘ಮಿಥುನಂ’ ಅದೇ ಹೆಸರಿನಲ್ಲಿ ಸಿನಿಮಾ ಆಗಿತ್ತು.

‘ಮಿಥುನಂ’ ಸಿನಿಮಾಕ್ಕೆ ನಾಲ್ಕು ರಾಜ್ಯಪ್ರಶಸ್ತಿಗಳೂ ದೊರಕಿತ್ತು. ಈ ಸಿನಿಮಾದ ಸುಂದರವಾದ ಹಾಡಿನ ವೀಡೀಯೋ ಲಿಂಕ್ ಕೆಳಗಡೆ ಇದೆ. 

‘ಜೋಶಿ’ಗಡಲಿನಿಂದ ನಾ ತೆಗೆದ ಬೊಗಸೆ ನೀರು

ಹೌದು. ಎಷ್ಟು ಬರೆದರೂ ಅದು ಅಷ್ಟೇ ಆದೀತು. ತೆಗೆದಷ್ಟೂ ತುಂಬುವ ಬಾವಿಯ ನೀರಿನಂತೆ ಅವರ ಬಗ್ಗೆ ಎಲ್ಲವನ್ನೂ ತಿಳಿಯುವುದು ಮತ್ತು ಹೇಳುವುದು ಅಸಾಧ್ಯವೇ ಸರಿ. ಅವರ ಬಗ್ಗೆ ಅಷ್ಟನ್ನೂ ಹೇಳಿ ಮುಗಿಸಿದೆ ಎಂದು ಹೆಮ್ಮೆ ಪಡುವವರು ಅವರೊಂದು ತೆಗೆದಷ್ಟೂ ಮತ್ತೆ ತುಂಬಿಕೊಳ್ಳುವ ಜ್ಞಾನದ ಒರತೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಸಮುದ್ರದಿಂದ ಸ್ವಲ್ಪ ನೀರನ್ನು ತೆಗೆದರೆ, ತೆಗೆದಷ್ಟು ನೀರಿನ ಬಗ್ಗೆ ಮಾತ್ರ ತಿಳಿಯಬಹುದು. ಆದರೆ ಶರಧಿಯ ಗರ್ಭದಲ್ಲಿ ಏನು ಅಡಗಿದೆ ಎಂದು ಹೇಳಲಾರೆವು. ಅದರಂತೆಯೇ ಜೋಶಿಯವರನ್ನೂ ಕೂಡಾ. 

ನನಗೆ ಗೊತ್ತು. ಡಾ. ಪ್ರಭಾಕರ ಜೋಶಿಯವರು ಹೊಗಳಿಕೆ ಮತ್ತು ವ್ಯಕ್ತಿತ್ವದ ವೈಭವೀಕರಣಗಳನ್ನು ಇಷ್ಟಪಡುವುದಿಲ್ಲ ಎಂದು. ಆದರೂ ಸಾಗರದಿಂದ ತೆಗೆದಷ್ಟು ನೀರಿನ ಗುಣಲಕ್ಷಣವನ್ನೂ ಹೇಳದೇ ಇದ್ದರೆ ಹೇಗೆ? 

ನನಗೆ ಪ್ರಭಾಕರ ಜೋಶಿ ಎಂಬ ವ್ಯಕ್ತಿತ್ವದ ಮೊದಲ ಪರಿಚಯವಾದದ್ದು ತಾಳಮದ್ದಳೆ ಕೂಟಗಳಿಂದಲೇ. ಸಣ್ಣವನಿದ್ದಾಗ ಶೇಣಿ, ಸಾಮಗ, ಪೆರ್ಲ, ತೆಕ್ಕಟ್ಟೆಯವರ ಎಲ್ಲಾ ಕೂಟಗಳಲ್ಲಿಯೇ ಜೋಷಿಯವರ ಮುಖ ಮತ್ತು ಅರ್ಥಗಾರಿಕೆಯ ಪರಿಚಯವಾಗಿತ್ತು. ಆದುದರಿಂದ ಪ್ರಭಾಕರ ಜೋಶಿ ಎಂಬ ವ್ಯಕ್ತಿತ್ವದ ಅನಾವರಣವಾದದ್ದು ಯಕ್ಷಗಾನ, ವಿಮರ್ಶೆ, ಸಾಹಿತ್ಯಗಳಿಂದಲೇ ಹೊರತು ಅವರ ವೃತ್ತಿಯಿಂದಲ್ಲ. ಕಲೆಯ ಮತ್ತು ಸಾಹಿತ್ಯ ಕೃಷಿಗಳಲ್ಲಿ ಇಂತಹಾ ಉನ್ನತ ಮಟ್ಟದ ಸಾಧನೆಯಿಂದಲೇ ಇಂದು ಜಾಗರದ ಜೋಶಿಯವರ ಹೆಸರು ಸಾಗರದಾಚೆಯಲ್ಲೂ ಜನಜನಿತವಾಗಲು ಸಾಧ್ಯವಾಯಿತೋ ಏನೋ.

ಜಾಹೀರಾತು

ಆದುದರಿಂದ ನಮಗೆ ಇಂದು ಯಕ್ಷಗಾನ ತಾಳಮದ್ದಳೆ ಅರ್ಥಧಾರಿ, ವಿಮರ್ಶಕ, ಸಾಹಿತಿ, ವಿದ್ವಾಂಸ ಜೋಶಿಯವರನ್ನು ಬಿಟ್ಟು ಬೇರೊಂದು ಸ್ಥಾನದಲ್ಲಿ ಜೋಶಿಯವರನ್ನು ಕಲ್ಪಿಸಲೂ ಅಸಾಧ್ಯ. ಕೆಲವೊಮ್ಮೆ ಅವಿಶ್ರಾಂತ ವ್ಯಕ್ತಿತ್ವಗಳನ್ನು ಕಂಡಾಗ ಆಶ್ಚರ್ಯ ಪಡುತ್ತೇವೆ. ಯಾಕೋ ಗೊತ್ತಿಲ್ಲ ಜೋಶಿಯವರದು ಕೂಡಾ ಅವಿಶ್ರಾಂತ ಜೀವನ ಎಂದೇ ನಾನು ಭಾವಿಸುತ್ತೇನೆ. ಇಲ್ಲದಿದ್ದರೆ ಇಷ್ಟೆಲ್ಲಾ ಮಾಡಲು ಅವರಿಗೆ ಸಮಯವೆಲ್ಲಿದೆ?! ಇದು ನನ್ನಂತಹಾ ಸಾಮಾನ್ಯರ ಆಲೋಚನೆ ಇರಬಹುದು.

ಒಬ್ಬ ಜವಾಬ್ದಾರಿಯುತ ಉಪಾನ್ಯಾಸಕನಾಗಿ, ಪ್ರಾಂಶುಪಾಲನಾಗಿ ಕಾಲೇಜಿನ ಕೆಲಸಗಳಲ್ಲೇ ಸೋತು ಸುಣ್ಣವಾಗುವ ಹಲವಾರು ವ್ಯಕ್ತಿತ್ವಗಳನ್ನು ನಾವು ಕಣ್ಣೆದುರಿಗೇ ಕಾಣುತ್ತೇವೆ. ಆದರೆ ಕಾಲೇಜಿನ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಅದಕ್ಕಿಂತಲೂ ಹೆಚ್ಚು ಸಾಹಿತ್ಯ ಸೇವೆ, ಕಲಾವಿದನಾಗಿ, ಭಾಷಣಕಾರನಾಗಿ, ವಿಮರ್ಶಕನಾಗಿ ಬರಹಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಜೋಶಿಯಂತಹವರಿಗೆ ದಿನವೊಂದರಲ್ಲಿರುವ ಇಪ್ಪತ್ತನಾಲ್ಕು ಘಂಟೆಗಳು ಹೇಗೆ ಸಾಕಾಗುತ್ತವೆ ಎಂದು ಬಹಳಷ್ಟು ಬಾರಿ ಆಶ್ಚರ್ಯಪಟ್ಟಿದ್ದೇನೆ. 

ಜೋಶಿಯವರು ತಾಳಮದ್ದಳೆಯೊಂದರಲ್ಲಿ  (ಫೋಟೋ: ಮಧುಸೂದನ ಅಲೆವೂರಾಯ) 

ಜೋಶಿಯವರು ಮನಸ್ಸು ಮಾಡಿದ್ದರೆ ಅವರು ಕಾಲೇಜಿನಲ್ಲಿ ಭೋದಿಸುತ್ತಿದ್ದ ವಿಷಯಗಳ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಗಳಿಸಬಹುದಿತ್ತು. ಆದರೆ ಅವರು ತಾನು ಅತ್ಯಂತ ಪ್ರೀತಿಸುತ್ತಿದ್ದ ಯಕ್ಷಗಾನ ಕಲೆಯನ್ನು ಅದಕ್ಕೆ ಆರಿಸಿಕೊಂಡರು. ಅತ್ಯಂತ ಅಪರೂಪವಾದ ಆದರೆ ಅಷ್ಟೇ ಕ್ಲಿಷ್ಟಕರವಾದ ವಿಷಯವೊಂದನ್ನು ಆಯ್ದುಕೊಂಡು ಸಂಶೋಧನಾ ಪ್ರಬಂಧವನ್ನು ಸಿದ್ಧಪಡಿಸಿ ಅದರಿಂದ ಡಾಕ್ಟರೇಟ್ ಪದವಿ ಪಡೆಯುವುದು ಜೋಶಿಯಂತಹವರಿಂದ ಮಾತ್ರ ಸಾಧ್ಯ. ಅದರಲ್ಲೂ ತಾನು ಸಾಕಷ್ಟು ಬಾರಿ ಅರ್ಥ ಹೇಳಿದ ಕೃಷ್ಣ ಸಂಧಾನ ಪ್ರಸಂಗವನ್ನೇ ಆಯ್ದುಕೊಂಡರು. ‘ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ’ ಎಂಬ ಮಹಾಪ್ರಬಂಧವನ್ನು ಸಿದ್ಧಪಡಿಸಿ ಪಿ ಎಚ್ ಡಿ ಪದವಿಯನ್ನು ಪಡೆದರು. 

ಯಕ್ಷಗಾನ ಲೋಕ ಈವರೆಗೆ ಕಂಡ ವಿದ್ವಾಂಸರಲ್ಲಿ ಡಾ. ಪ್ರಭಾಕರ ಜೋಶಿಯವರು ಅತಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತಾರೆ. ಯಕ್ಷಗಾನ ಮಾತ್ರವಲ್ಲ. ನೀವು ಯಾವುದೇ ವಿಷಯಗಳನ್ನು ಅವರಲ್ಲಿ ಕೇಳಿ. ಅದು ಹೀಗೆಯೇ ಎಂದು ಅವರು ಹೇಳಬಲ್ಲರು. ಯಕ್ಷಗಾನ, ಆಧುನಿಕ ಪ್ರಪಂಚದ ಆಗುಹೋಗುಗಳು, ವೇದ, ಪುರಾಣ, ತತ್ವಶಾಸ್ತ್ರ ಹೀಗೆ ಯಾವುದನ್ನೂ ಕೇಳಿದರೂ ಅದಕ್ಕೆ ಜೋಶಿಯವರ ಬಳಿ ಉತ್ತರವಿದೆ. ತಾನು ಭೋದಿಸುವ ವಾಣಿಜ್ಯಶಾಸ್ತ್ರದ ಉಪನ್ಯಾಸಕನಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಯಕ್ಷಗಾನ ವಿದ್ವಾಂಸನಾಗಿ, ಕಾಲೇಜಿನ ಆಡಳಿತಾತ್ಮಕ ಹುದ್ದೆಯ ಪ್ರಾಂಶುಪಾಲನಾಗಿ, ಪ್ರಬುದ್ಧ ಲೇಖಕನಾಗಿ, ವಿಮರ್ಶಕನಾಗಿ, ಶೋಧನೆಯ ದೃಷ್ಟಿಯುಳ್ಳ ಸಂಶೋಧಕನಾಗಿ, ಅಂಕಣಕಾರನಾಗಿ, ಕಲಾವಿದನಾಗಿ, ಭಾಷಣಕಾರನಾಗಿ, ಅಪ್ರತಿಮ ವಾಕ್ಪಟುವಾಗಿ, ತತ್ವಶಾಸ್ತ್ರಜ್ಞನಾಗಿ, ಕವಿಯಾಗಿ, ನೂರಾರು ಕೃತಿಗಳು ಪ್ರಕಟಗೊಳ್ಳಲು ಕಾರಣರಾದ ಸಂಪಾದಕನಾಗಿ ಹೀಗೆ ಜೋಶಿಯವರು ಕೈ ಆಡಿಸದ ಕ್ಷೇತ್ರವಿಲ್ಲ.

ಆದುದರಿಂದ ಯಕ್ಷಗಾನ ಕಲಾವಿದನೊಬ್ಬ ಇಷ್ಟೆಲ್ಲಾ ಸಾಧಿಸಿದ್ದು ನಮಗೆ ಕಾಣಸಿಗುವುದು ಅಪರೂಪ. ಅಥವಾ ಇಷ್ಟೆಲ್ಲಾ ಸಾಧಿಸಿದವನೊಬ್ಬ ಯಕ್ಷಗಾನದ ಕಲಾವಿದನಾದದ್ದೂ ಕಾಣಸಿಗುವುದು ಅಪರೂಪ.  ಹೇಗೆ ಹೇಳಿದರೂ ಸರಿಯೇ. ಒಂದು ಕಾರ್ಯಕ್ರಮದಲ್ಲಿ ಹಿಂದೆ ಕುಳಿತು ಜೋಶಿಯವರ ಭಾಷಣ ಕೇಳುತ್ತಿದ್ದೆ. ಪರಿಚಿತರಲ್ಲಿ ಒಬ್ಬರು ಸೌಂಡ್ ಬಾಕ್ಸ್ ಹತ್ತಿರ ಕುಳಿತು ಅದನ್ನು ತಮ್ಮ ಮೊಬೈಲ್ ನಲ್ಲಿ ಧ್ವನಿಮುದ್ರಣ ಮಾಡುತ್ತಿದ್ದರು. ನಾನು ಯಾಕೆಂದು ಪ್ರಶ್ನಿಸಿದೆ. ‘ಇವರ ಒಂದು ಭಾಷಣ ಕೇಳಿದರೆ ಅದರಲ್ಲಿ ಹತ್ತು ಲೇಖನಗಳಿಗಿರುವ ವಸ್ತು ಸಿಗುತ್ತದೆ’ ಎಂದರು. ಅವರ ಮಾತು ನಿಜ ಎಂದು ಅನಿಸಿತು. 

ಬರಹ: ಮನಮೋಹನ್ ವಿ.ಎಸ್. 

ಮಹನೀಯರ ಮಹಾ ನುಡಿ-ಭಾಗ 6 (ಶ್ರೀ ಚಂದ್ರಗಿರಿ ಅಂಬು) –  Chandragiri Ambu

“ನಾನು ಕೂಡ್ಲು ಮೇಳದಲ್ಲಿದ್ದ ಸಮಯದಲ್ಲಿ ಒಮ್ಮೆ ಜೋಡಾಟ ಕಳೆದು ಮೇಳದವರು ಕೂಡ್ಲಿಗೆ ಹಿಂತಿರುಗಿದಾಗ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಾಲಯದ ಗರ್ಭಗುಡಿ  ಮುಚ್ಚಿತ್ತು.

ಅರ್ಚಕರು ಎಷ್ಟು ಪ್ರಯತ್ನಿಸಿದರೂ ಬಾಗಿಲು ತೆರಯಲಾಗಲಿಲ್ಲ. ಮನೆಯ ಹಾಗೂ ಪರಿಸರದ ಹಿರಿಯರು ಸೇರಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಬಾಗಿಲು ತೆರೆಯಲೇ ಇಲ್ಲ.

ಕೂಡ್ಲು ಸದಾಶಿವ ಶ್ಯಾನುಭಾಗರು ಬಹಳ ಸೌಮ್ಯದಿಂದ ‘ಕೃಷ್ಣಾ ನಾವು ಜಯಿಸಿ ಬಂದಿದ್ದೇವೆ. ಯಾಕೆ ಅಸಮಾಧಾನ?’ ಎಂದು ಹೇಳುವುದೇ ತಡ, ಒಮ್ಮೆಲೇ ಬಾಗಿಲು ತೆರೆಯಲ್ಪಟ್ಟಿತು. ಕೂಡ್ಲು ಮನೆತನದವರ ಧಾರ್ಮಿಕ ಶ್ರದ್ಧಾಭಕ್ತಿಗೆ ಇದೊಂದು ಉದಾಹರಣೆ” 

(ಶ್ರೀ ಚಂದ್ರಗಿರಿ ಅಂಬು, ಖ್ಯಾತ ಬಣ್ಣದ ವೇಷಧಾರಿ,ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥ ‘ಕುತ್ಯಾಳ ಸಂಪದ’ ಪುಸ್ತಕದಲ್ಲಿ)

ಭವ್ಯಶ್ರೀ ಕುಲ್ಕುಂದ ಅವರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಸುಳ್ಯ ತಾಲೂಕು ರಾಜ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಯಕ್ಷಗಾನ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಭವ್ಯಶ್ರೀ ಕುಲ್ಕುಂದ ಅವರು ಯಕ್ಷಗಾನದ ಪ್ರಸಿದ್ಧ ಮಹಿಳಾ ಭಾಗವತರಾಗಿ ಗುರುತಿಸಿಕೊಂಡಿದ್ದಾರೆ. ಸಮಾರಂಭದಲ್ಲಿ ಸುಳ್ಯದ ಶಾಸಕರಾದ ಶ್ರೀ ಎಸ್. ಅಂಗರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.