ಕಡಬ ನಾರಾಯಣ ಆಚಾರ್ಯರದು ತೆಂಕುತಿಟ್ಟಿನ ಹಿಮ್ಮೇಳದ ಒಂದು ಪ್ರಖ್ಯಾತ ಹೆಸರು. ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಖ್ಯಾತ ಮದ್ದಳೆಗಾರರಾಗಿ ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸಿದವರು.
ಅವರು ಅಸ್ತಂಗತರಾದ ನಂತರ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಅವರ ಸುಪುತ್ರರಾದ ಕಡಬ ವಿನಯ ಆಚಾರ್ಯ. ಆದರೆ ವಿಧಿಲಿಖಿತವನ್ನು ತಪ್ಪಿಸುವವರಾರು? ಕಡಬ ವಿನಯ ಆಚಾರ್ಯರೂ ಯಕ್ಷರಂಗದ ಮದ್ದಳೆಗಾರರಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ ಸಣ್ಣ ವಯಸ್ಸಿನಲ್ಲಿಯೇ ಈ ಲೋಕದ ಯಾತ್ರೆಯನ್ನು ಮುಗಿಸಿದರು.
ಡಬ ನಾರಾಯಣ ಆಚಾರ್ಯ ಮತ್ತು ಕಡಬ ವಿನಯ ಆಚಾರ್ಯರು ಯಕ್ಷಗಾನಕ್ಕೆ ಸಲ್ಲಿಸಿದ ಅಪೂರ್ವ ಸೇವೆಯನ್ನು ಮತ್ತು ಗಳಿಸಿದ ಕೀರ್ತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಇವರಿಬ್ಬರ ಸ್ಮರಣಾರ್ಥ ಪ್ರತಿ ವರ್ಷವೂ ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ಮಾಡಿದ ಕಲಾವಿದರನ್ನು ಗುರುತಿಸಿ ಅವರನ್ನು ಪ್ರಶಸ್ತಿಯ ಮೂಲಕ ಗೌರವಿಸಲಾಗುವುದೆಂದು ಕಡಬ ಸಂಸ್ಮರಣಾ ಸಮಿತಿಯು ತಿಳಿಸಿದೆ.
ಜಾಹೀರಾತು
ಈ ಬಾರಿಯ ಕಡಬ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಹಿರಿಯ ಮದ್ದಳೆಗಾರರಾದ ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ ನೀಡಿ ಗೌರವಿಸಲಾಗುವುದು. ಕಡಬ ಸಂಸ್ಮರಣಾ ಸಮಿತಿಯ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 06.12.2020ರ ಆದಿತ್ಯವಾರ ಅಪರಾಹ್ನ ಸಮಯ 2.30ರಿಂದ ಸಂಜೆ ಘಂಟೆ 5.30ರ ವರೆಗೆ ನಡೆಯಲಿದೆ.
ಅಗಲಿದ ಯಕ್ಷಗಾನ ಕಲಾವಿದ , ಸಂಘಟಕ, ಖ್ಯಾತ ಅರ್ಥಧಾರಿ, ಸಂಯಮಂ ತಂಡದ ರೂವಾರಿ ಮಲ್ಪೆ ವಾಸುದೇವ ಸಾಮಗರಿಗೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಈ ಶ್ರದ್ಧಾಂಜಲಿ ಕಾರ್ಯಕ್ರಮ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ಜರಗಿತು.
ಕೈಗೊಂದಿಷ್ಟು ಬಿಳಿಯ ಬಣ್ಣದ ಹುಡಿ, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಹಿತವಾಗಿ ಕಲಸತೊಡಗಿದ ಯೋಗಾನಾಂದ. ಅದಕ್ಕೆ ಮಿತವಾಗಿ ಹಳದಿ, ಕೆಂಪು ಬಣ್ಣಗಳನ್ನೂ ಮಿಶ್ರ ಮಾಡಿ ನಿಧಾನವಾಗಿ ಅಂಗೈಯಲ್ಲಿ ತಿಕ್ಕತೊಡಗಿದ. ಕೈ ಕೆಲಸ ಮಾಡುತ್ತಿದ್ದರೂ ಮನದಲ್ಲಿ ನೂರೆಂಟು ಯೋಚನೆಗಳು. ಹುಚ್ಚು ಕುದುರೆಯಂತಿದ್ದ ಮನದ ಕಲ್ಪನೆಯ ವಿಹಾರಗಳಿಗೆ ಕಡಿವಾಣ ಹಾಕುವ ಯತ್ನದಲ್ಲಿ ಯಶಸ್ವಿಯಾಗಲಾರದೆ ಹೋದ.
ಮತ್ತೆ ಮತ್ತೆ ಅದೇ ಅಲೋಚನೆ. ಕಾಡುವ ನೆನಪುಗಳು. ಮನಸ್ಸಿನಲ್ಲಿಯ ನಾಗಾಲೋಟದ ತುಡಿತ, ಮಿಡಿತಗಳಿಗೆ ಕೊನೆಯಿಲ್ಲವೇನೋ… “ಈ ಬಣ್ಣಗಳು ಒಂದನ್ನೊಂದು ಸೇರುವಂತೆ ಎರಡು ಹೃದಯಗಳು, ಮನಸುಗಳು ಬೆಸೆಯುವಂತಿದ್ದರೆ…” ಎಂದುಕೊಂಡ ಯೋಗಾನಂದ ಮನಸ್ಸಿನಲ್ಲಿಯೇ. ತಕ್ಷಣವೇ ತನ್ನ ಆಲೋಚನೆಗೆ ತಾನೆ ನಗುತ್ತಾ ಕನ್ನಡಿಯನ್ನು ತನ್ನೆದುರಿಗೆ ಸರಿಯಾದ ಕೋನದಲ್ಲಿ ಇರಿಸಿಕೊಂಡ. ಕೈಯಲ್ಲಿದ್ದ ಬಣ್ಣಗಳ ಮಿಶ್ರಣವನ್ನು ಎರಡೂ ಕೈಗಳಿಗೆ ಸಮವಾಗಿ ಮೆತ್ತಿ ಮುಖದ ತುಂಬೆಲ್ಲಾ ಮೆತ್ತತೊಡಗಿದ. ಕೈಗಳಲ್ಲಿದ್ದ ಬಣ್ಣದ ಚಿತ್ತಾರ ಮುಖದ ಮೇಲೇರಿತ್ತು.
ಮುಖವನ್ನು ನೋಡುತ್ತಿದ್ದಂತೆ ಆತನಿಗೆ ಯಾಕೋ ಹಿಂದಿನ ದಿನದ ಸಂಜೆಯ ನೆನಪು ಕಾಡತೊಡಗಿತು. ಆಗಸದಂಚಿನಲ್ಲಿ ರವಿಯ ನಿರ್ಗಮನದ ವೇಳೆಯ ಚಿತ್ತಾರದ ವರ್ಣಾಲಂಕಾರ. ತನ್ನ ಮುಖದ ಬಣ್ಣವೂ ಅದೇ ರೀತಿಯಿದೆಯೆಂದು ಭಾವಿಸಿದ. ಏನೋ ಆ ದಿನದ ನೆನಪಾದೊಡನೆ ಆತನು ತನ್ನ ನಸುನಗೆಯನ್ನು ತಡೆದುಕೊಳ್ಳದಾದ. ಪಕ್ಕನೆ ತಾನಿರುವ ಜಾಗದ ನೆನಪಾಗಿ ನಗೆಯನ್ನು ಬಲವಂತವಾಗಿ ತಡೆದುಕೊಂಡ. ಮೆಲ್ಲಗೆ ಸುತ್ತಲೂ ನೋಡಿದ. ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನರಾಗಿದ್ದರು.
ಕಲಾವಿದರೆಲ್ಲರು ಚೌಕಿಗೆ ಇನ್ನೂ ಬಂದಿರಲಿಲ್ಲ. ಕೆಲವರು ಯೋಗಾನಂದನಂತೆಯೇ ಬಣ್ಣ ಹಚ್ಚುವುದರಲ್ಲಿಯೇ ನಿರತರಾಗಿದ್ದರು. ಇನ್ನುಳಿದ ಕಲಾವಿದರಲ್ಲಿ ಕೆಲವರು ವೇಷಭೂಷಣಗಳನ್ನು ಕಟ್ಟಿಕೊಳ್ಳುತ್ತಿದ್ದರು. ಚೌಕಿ ಮನೆಯ ಸಹಾಯಕರು ಅವರಿಗೆ ಆ ಕಾರ್ಯದಲ್ಲಿ ನೆರವಾಗುತ್ತಿದ್ದರು. ಒಂದೆರಡು ಜನರು ವೀಳ್ಯ ಹಾಕುವುದರಲ್ಲಿಯೋ ಮಿಕ್ಕುಳಿದವರಲ್ಲಿ ಕೆಲವರು ತಮ್ಮ ಅಭಿಮಾನೀ ವರ್ಗದವರಲ್ಲಿಯೋ, ಸ್ನೇಹಿತ ಬಂಧುವರ್ಗದಲ್ಲಿಯೋ ಸಲ್ಲಾಪದಲ್ಲಿ ಮಗ್ನರಾಗಿದ್ದರು. ಆದ್ದರಿಂದ ತನ್ನ ಭಾವನೆಗಳನ್ನು ಯಾರೂ ಗಮನಿಸಿರಲಿಕ್ಕಿಲ್ಲ ಎಂದು ಸಮಾಧಾನಪಟ್ಟುಕೊಂಡ.
ಯೋಗಾನಂದ ಕನ್ನಡಿಯಲ್ಲೊಮ್ಮೆ ತನ್ನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದ. ಯಾಕೋ ಬಣ್ಣಗಳ ಮಿಶ್ರಣ ಪರಿಪೂರ್ಣವಾಗಿಲ್ಲ ಎಂದೆನಿಸಿತು. ಏನೋ ಎಂದು ಕೊರತೆ ಅವನ ಸೂಕ್ಷ್ಮ ದೃಷ್ಟಿಗೆ ಗೋಚರಿಸಿತು. ಬಣ್ಣಗಳೂ ಮನಸಿನಂತೆಯೇ ಇರಬಹುದೇ ಎಂದು ಅಲೋಚಿಸಿದ. “ಹೂಂ.. ಇರಲಿ..” ಎಂದುಕೊಂಡು ಕಾಡಿಗೆಯನ್ನು ಸಣ್ಣ ಕಡ್ಡಿಯಿಂದ ತೆಗೆದು ಹೆಬ್ಬೆರೆಳಿನ ಬುಡದ ಸಮೀಪ ಸಂಗ್ರಹಿಸಿ ನಿಧಾನವಾಗಿ ಹುಬ್ಬಿನ ಚಿತ್ರವನ್ನು ಬರೆಯತೊಡಗಿದ. ಅಷ್ಟರಲ್ಲಿ ಚೌಕಿಪೂಜೆ ಪ್ರಾರಂಭವಾಯಿತು. ಎಲ್ಲರೂ ಎದ್ದು ನಿಂತುಕೊಂಡರು. ಯೋಗಾನಂದ ಕೂಡಾ. “ಗಜಮುಖದವಗೆ ಗಣಪಗೆ… “ ಭಾಗವತರು ಗಣಪತಿಯ ಸ್ತುತಿಯ ಪದ್ಯವನ್ನು ಹಾಡುತ್ತಿದ್ದರು. ಪರಮ ದೈವಭಕ್ತನಾದ ಆತನಿಗೆ ಇಂದೇಕೋ ಚೌಕಿಪೂಜೆಯ ಸಮಯದಲ್ಲಿಯೂ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ಏಕಾಗ್ರತೆಯಿಲ್ಲದ ಮನಸ್ಸು ದೇವರ ಪೂಜೆಯ ಮೇಲಿರದೆ ಬೇರೆಲ್ಲಿಯೋ ಓಡಾಡುತ್ತಿತ್ತು.
ಚೌಕಿಪೂಜೆ ಮುಗಿದ ನಂತರ ಮತ್ತೆ ತನ್ನ ಮುಖವರ್ಣಿಕೆಯ ಚಿತ್ರವನ್ನು ಬರೆಯತೊಡಗಿದ ಆತ. ಅವನದು ಪ್ರಧಾನ ಸ್ತ್ರೀ ಪಾತ್ರವಾದುದರಿಂದ ಬಹಳ ಶ್ರದ್ಧೆಯಿಂದ ಶೃಂಗರಿಸುತ್ತಿದ್ದ. ಅದರಲ್ಲೂ ಸ್ತ್ರೀ ಪಾತ್ರದ ಮೇಕಪ್ ಅಂದರೆ ಕೇಳಬೇಕೆ ? ಸ್ತ್ರೀಯರ ರೂಪದ ಬೆಡಗು ಬಿನ್ನಾಣಗಳನ್ನು ಬರಿಯ ಭಾವನೆಯಲ್ಲಿ ತೋರಿಸಿದರೆ ಸಾಕಾಗುತ್ತಿರಲಿಲ್ಲ. ಅಲಂಕಾರದಲ್ಲಿಯೂ ವಿಶೇಷ ಆಸ್ಥೆಯನ್ನು ವಹಿಸಬೇಕಾಗುತ್ತಿತ್ತು. ಆದ್ದರಿಂದ ತನ್ನ ಮನಸಿನ ತುಮುಲಗಳಿಗೆ ಕಡಿವಾಣ ಹಾಕಿ ಹುಬ್ಬಿನ ಚಿತ್ರವನ್ನು ಬರೆಯತೊಡಗಿದ.
ಕವಿಗಳು ಕಾವ್ಯಮಯವಾಗಿ ಹೆಣ್ಣನ್ನು ವರ್ಣಿಸುವಾಗ ಹುಬ್ಬನ್ನು ಕಾಮನಬಿಲ್ಲಿಗೆ ಹೋಲಿಸುತ್ತಾರೆ. ತಾನು ಬರೆದ ಹುಬ್ಬು ಕಾಮನಬಿಲ್ಲಿನ ಹಾಗಿತ್ತು ಎಂದು ಅವಳೊಮ್ಮೆ ಹೇಳಿದ್ದು ಆತನಿಗೆ ನೆನಪಾಗಿ ಮುಖದಲ್ಲಿ ಅತೀವ ಸಂತಸದ ಕ್ಷಣವೊಂದು ಮಿಂಚಿ ಮರೆಯಾಯಿತು. ಆದರೂ ಅವಳ ಹುಬ್ಬಿನಂತೆ ತಾನು ಹುಬ್ಬಿನ ಚಿತ್ರವನ್ನು ಬರೆಯಲಾರೆ ಎಂದು ಭಾವಿಸಿದ. ಹುಬ್ಬಿನ ಚಿತ್ರದ ತಲ್ಲೀನತೆಯಲ್ಲಿರುವಾಗ ಕಾಡುತ್ತಿರುವ ಬೆಂಬಿಡದ ಆಲೋಚನೆಗಳು ಆತನ ಕಾರ್ಯದಲ್ಲಿ ಭಗ್ನವನ್ನುಂಟುಮಾಡಿತು. ಬರೆದ ಹುಬ್ಬಿನ ಚಿತ್ರ ಕಾಮನಬಿಲ್ಲಿನ ಬದಲು ವಕ್ರರೇಖೆಯಾಯಿತು. ಅದನ್ನು ಪಕ್ಕದಲ್ಲಿದ್ದ ಹಳೆಯ ವಸ್ತ್ರದ ತುಂಡಿನಿಂದ ಒರೆಸಿ ಪುನಃ ಕಾಮನಬಿಲ್ಲಿನ ಚಿತ್ರದ ತಯಾರಿಯಲ್ಲಿ ತೊಡಗಿದ.
ರಂಗಸ್ಥಳದಲ್ಲಿ ಪೂರ್ವರಂಗದ ಪದ್ಯಗಳು ಚೌಕಿಯಲ್ಲಿರುವವರ ಕಿವಿಗೆ ಅಪ್ಪಳಿಸುತ್ತಿದ್ದುವು. ಪೀಠಿಕೆ ವೇಷಧಾರಿಗಳು ಲಗುಬಗನೆ ತಮ್ಮ ಬಣ್ಣಗಾರಿಕೆ, ಉಡುಪು, ವೇಷಗಳನ್ನು ಕಟ್ಟುವುದರಲ್ಲಿ ನಿರತರಾಗಿದ್ದರು. ಯೋಗಾನಂದನದು ಪೀಠಿಕೆ ಒಡ್ಡೋಲಗದ ನಂತರದ ಪಾತ್ರವಾದ್ದರಿಂದ ಆತನೇನೂ ಅವಸರಿಸುವುದಕ್ಕೆ ಹೋಗಲಿಲ್ಲ. ಅವಸರಿಸುವುದಕ್ಕೆ ಉಕ್ಕಿ ಹರಿಯುತ್ತಿರುವ ಅಲೋಚನೆಗಳು ಬಿಡಲೂ ಇಲ್ಲ. ಅಂತೂ ಇಂತೂ ಹುಬ್ಬಿನ ಚಿತ್ರ ಪೂರ್ತಿಯಾಯಿತು. ಚಿತ್ರ ಪೂರ್ಣ ತೃಪ್ತಿ ತಂದಿರದಿದ್ದರೂ ಮತ್ತೆ ಅದನ್ನು ತಿದ್ದುವುದಕ್ಕೆ ಮನಮಾಡಲಿಲ್ಲ ಆತ.
(ಸಾಂದರ್ಭಿಕ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಾರ್ನಾಡ್, ಫೋಟೋ: ರಾಮ್ ನರೇಶ್ ಮಂಚಿ)
ಮುಖದ ಮೇಕಪ್‍ನ ಅಂತಿಮ ಘಟ್ಟಕ್ಕೆ ತಲುಪಿದ. ಕಡುಗೆಂಪು ಬಣ್ಣವನ್ನು ತುಟಿಗೆ ಹಚ್ಚಲು ತಯಾರಿ ನಡೆಸಿದ. ಅದಕ್ಕಿಂತ ಮೊದಲು ಹುಡುಗಿಯರ ತುಟಿಗಳ ಆಕಾರವನ್ನು ರೇಖೆಯಲ್ಲಿ ಮೂಡಿಸಿದ. ಬಣ್ಣಗಳ ಕಂಪು ತುಟಿಗಳ ಕೆಂಪಿನಲ್ಲಿ ಪಸರತೊಡಗಿತು. ಅಷ್ಟರಲ್ಲಿ ಭಾಗವತರು “ ಚಿಕ್ಕ ಪ್ರಾಯದ ಬಾಲೆ ಚದುರೆ ನಿನ್ನಂಗವ ಒರೆಯಲೇನೆ… “ ಎಂದು ಹಾಡತೊಡಗಿದರು. ತನ್ನನ್ನೇ ಉದ್ದೇಶಿಸಿ ವ್ಯಂಗ್ಯವಾಗಿ ಭಾಗವತರು ಹಾಡುತ್ತಿರಬಹುದು ಎಂದು ಆಲೋಚಿಸಿ, ಛೇ.. ತಾನೇಕೆ ಇಂದು ಏನೇನೋ ಅಂದುಕೊಳ್ಳುತ್ತಿದ್ದೇನೆ ಎಂದು ತನ್ನನ್ನು ತಾನೇ ಶಪಿಸಿಕೊಂಡ.
ಆದರೂ ನೆನಪುಗಳ ಸರಮಾಲೆ ಹಿಂಬಾಲಿಸುವುದನ್ನು ಬಿಡಲಿಲ್ಲ. “ಅವಳು ಇಂದಾದರೂ ಬಂದಿರಬಹುದೆ ? ಎಂದಿನಂತೆ ಇಂದೂ ಕೂಡಾ ಮುಂದಿನ ಸಾಲಿನಲ್ಲೇ ಕುಳಿತುಕೊಂಡಿರಬಹುದೆ ? “ ಎಂದು ಆಲೋಚಿಸಿದ. ಬಹುಶಃ ಬಂದಿರಲಿಕ್ಕಿಲ್ಲ. ಬಂದರೆ ಚೌಕಿಗೆ ಬರದಿರುವಳೇ? ಬಂದು ತನ್ನ ವೇಷದ ಪೆಟ್ಟಿಗೆಯಲ್ಲಿ ಕುಳಿತು ನಿರರ್ಗಳವಾಗಿ ಹರಟದಿರುವಳೇ? ಖಂಡಿತಾ ಬಂದಿರಲಿಕ್ಕಿಲ್ಲ. ನಿನ್ನೆ ಕೂಡಾ ಬಂದಿರಲಿಲ್ಲ. ಅವಳ ಮುನಿಸನ್ನು ತಣಿಸುವ ಬಗೆ ಹೇಗೆ ? ಜೀವಕ್ಕೆ ಜೀವದಂತಿರುವ ಅವಳ ಮುನಿಸನ್ನು ಅವನಿಂದ ಅರಗಿಸಿಕೊಳ್ಳಲಾಗಲಿಲ್ಲ. ಸಾಧಾರಣವಾಗಿ ಮನೆಯ ಸಮೀಪ ಎಲ್ಲಿ ಇವನ ಮೇಳದ ಆಟವಿದ್ದರೂ ಅವಳು ತಪ್ಪದೇ ಹಾಜರಾಗುತ್ತಿದ್ದಳು. ಅದು ಕೂಡಾ ಮುಂದಿನ ಸಾಲಿನಲ್ಲೇ ಆಸೀನಳಾಗುತ್ತಿದ್ದಳು.
ಇವನದು ಯಾವಾಗಲೂ ಸ್ತ್ರೀಪಾತ್ರವಾದುದರಿಂದ ಇವನ ಪಾತ್ರದ ಒಳ್ಳೆಯ ವಿಮರ್ಶಕಿಯಾಗಿದ್ದಳು ಆತ. ಸ್ತ್ರೀ ಸಹಜವಾದ ಒನಪು ವಯ್ಯಾರಗಳು ಹಾಗೂ ಸ್ತ್ರೀಯ ಆಂಗಿಕ ಅಭಿನಯ ಹೇಗಿರಬೇಕು ಎಂಬುದರ ಬಗ್ಗೆ ಆತನಿಗೆ ಹಲವು ಮಾಹಿತಿಯನ್ನು ಕೊಡುವ ಗುರುವೂ ಆಗಿದ್ದಳವಳು. ಅಂತಹ ಅವಳು ಇಂದು ಯಾಕಿಲ್ಲ, ಮತ್ರವಲ್ಲ ನಿನ್ನೆ ಯಾಕೆ ಬರಲಿಲ್ಲ. ಈಚೆಗೆ ಎರಡು ಮೂರು ದಿನಗಳಿಂದ ಮನೆಯ ಹತ್ತಿರದ ಊರುಗಳಲ್ಲೇ ಬಯಲಾಟ ನಡೆಯುತ್ತಿದ್ದುದರಿಂದ ಆಕೆ ಬರಲೇ ಬೇಕಿತ್ತು. ಅದರೆ ಬರಲಿಲ್ಲ. ಮೊನ್ನೆಯ ಹುಸಿಮುನಿಸೇ ಕಾರಣವಾಗಿತ್ತೇ. ಛೇ. ಎಂತಹ ಅಭಾಸವಾಯ್ತು ಎಂದುಕೊಂಡ ಯೋಗಾನಂದ. ಹೃದಯಕ್ಕೆ ಹತ್ತಿರಳಾದವಳನ್ನು ತಾನು ಮೊನ್ನೆ ತಮಾಷೆಗಾಗಿ ರೇಗಿಸಲು ಹೋಗಬಾರದಿತ್ತು. ಆದರೂ ಅದನ್ನು ಆಕೆ ಇಷ್ಟು ಗಂಭೀರವಾಗಿ ತೆಗೆದುಕೊಳ್ಳುವಳೆಂದು ಎಣಿಸಿರಲಿಲ್ಲ. ಮನಸ್ಸು ಮೊನ್ನೆ ನಡೆದ ಘಟನೆಯ ಬಗ್ಗೆ ಮೆಲುಕು ಹಾಕತೊಡಗಿತು.
* * * “ನಿನ್ನೆಯ ನನ್ನ ವೇಷ ಹೇಗಿತ್ತು.” ಎಂದ ಯೋಗಾನಂದ. “ಪರವಾಗಿಲ್ಲ.. ಚೆನ್ನಾಗಿತ್ತು” ಆಕೆಯೆಂದಳು. “ಆದರೂ ಇನ್ನೂ ಚೆನ್ನಾಗಿ ಮಾಡಬಹುದಿತ್ತೇನೋ, ಅಲ್ವಾ?” “ಅದು ಹೌದು, ಅಭಿನಯ ಚೆನ್ನಾಗಿತ್ತು… ನಿನಗೆ ಹಾಗನಿಸುವುದು ಸಹಜ, ಕಲಾವಿದ ಯವತ್ತೂ ಪರಿಪೂರ್ಣ ಆಗುವುದಿಲ್ಲ, ಹಾಗೆ ಭಾವಿಸಲೂ ಬಾರದು ಅಂತ ನೀನು ಹೇಳುತ್ತಿದ್ದೆಯಲ್ಲ, ಅದಕ್ಕೆ ಈ ಮಾತು ಅಲ್ವಾ?” “ಮೇಕಪ್ ಹೇಗಿತ್ತು?” “ಸುಪರ್.. ನಾನು ಹೇಳಿಕೊಟ್ಟದ್ದಲ್ವಾ… ಚೆನ್ನಾಗಿಲ್ಲದೆ ಇದ್ದೀತೇ ?” “ಯಾವುದು ನೀನು ಹೇಳಿಕೊಟ್ಟದ್ದು?” “ಅದೇ, ಮುಖದ ಹುಬ್ಬಿನ ಚಿತ್ರ, ಮುಖದ ಭಾವ, ಚಲನೆ ಇತ್ಯಾದಿ..” ಯೋಗಾನಂದನಿಗೆ ಅವಳನ್ನು ರೇಗಿಸುವ ಮನಸ್ಸಾಯಿತು. ಅದಕ್ಕಾಗಿ ಕೋಪವನ್ನು ನಟಿಸುತ್ತಾ, “ಏ ಹೋಗೇ.. ನಾನು ಅಭಿನಯ ಮತ್ತು ಬಣ್ಣಗಾರಿಕೆಯನ್ನು ನಮ್ಮ ಗುರುಗಳಲ್ಲಿ ಕಲಿತದ್ದು.. ನೀನೆಂತದ್ದು ಕಲಿಸುವುದು, ಯಕ್ಷಗಾನದ ಗಂಧ, ಗಾಳಿ ಗೊತ್ತಿಲ್ಲದವಳು..” ಎಂದ.
ಅವಳು ಪೆಚ್ಚಾದಳು. ಅವನು ಗಂಭೀರವಾಗಿ ಹೇಳಿದ್ದು ಎಂದು ಭಾವಿಸಿದಳು. ಯಾಕೆಂದರೆ ಈ ವರೆಗೆ ಆತನು ಅವಳನ್ನು ಹೀಗೆ ರೇಗಿಸಿದವನೇ ಅಲ್ಲ. “ಆಯ್ತು ಬಿಡೋ, ನೀನೇ ಹೇಳ್ತಿದ್ದೆಯಲ್ಲ, ರಂಗಸ್ಥಳದಲ್ಲಿ… ನಾವು ಹತ್ತಿದ ಏಣಿಯನ್ನು ಯವತ್ತೂ ಮರೆಯಬಾರದು, ಹತ್ತಿದ ಏಣಿಯನ್ನು ಕಾಲಿಂದ ಒದ್ದರೆ ಮತ್ತೆ ಇಳಿಯುವುದಕ್ಕೆ ಬೇಕಾಗುತ್ತದೆ… ಹಾಗೆ, ಹೀಗೆ ಅಂತ. ಈಗ ನೋಡಿದರೆ ಅದಕ್ಕೆ ತದ್ವಿರುದ್ಧ.” “ನಾವು ರಂಗಸ್ಥಳದಲ್ಲಿ ಬಹಳಷ್ಟು ಹೇಳ್ತೇವೆ , ಅದನ್ನೆಲ್ಲಾ ನಿಜ ಜೀವನದಲ್ಲಿ ಮಾಡೋಕೆ ಆಗೋಲ್ಲಮ್ಮಾ…” “ಇರಬಹುದು.. ಆದರೆ ಈಗ ಹೇಳಿದಂತಹ ವಿಷಯಗಳು ನಿಜ ಜೀವನದಲ್ಲಿಯೂ ಅನ್ವಯವಾಗುತ್ತದೆ. ಅದನ್ನೂ ಪಾಲಿಸುವ ಹೊಣೆಗಾರಿಕೆ ನಿಮ್ಮಂತಹಾ ಕಲಾವಿದರಿಗಿದೆ..” ಎಂದು ಕೋಪದಿಂದ ಬಿರಬಿರನೆ ನಡೆದವಳು ಮತ್ತೆ ಕಾಣಸಿಗಲಿಲ್ಲ.
ಯೋಗಾನಂದ ಪೆಚ್ಚಾದ. ಏನೋ ತಮಾಷೆ ಮಾಡಲು ಹೋಗಿ ಅವಳು ಇಷ್ಟು ಬೇಗ ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ ಎಂದು ಭಾವಿಸಿರಲಿಲ್ಲ. ಅವಳು ಹೇಳಿದುದು ನಿಜವಾಗಿತ್ತು. ಯೋಗಾನಂದ ಅವಳಿಂದ ಬಹಳಷ್ಟು ಕಲಿತಿದ್ದ. ತನ್ನ ವೃತ್ತಿಜೀವನಕ್ಕೆ ಉಪಯೋಗವಾಗುವಂತಹಾ ಹಲವು ವಿಷಯಗಳು ಅವಳಿಂದ ಅವನಿಗೆ ದೊರಕಿತ್ತು. ತನ್ನಿಂದ ಕಿರಿಯವಳಾದರೂ ವಿದ್ಯಾವಂತೆ, ಹಾಗೂ ಬಹಳಷ್ಟು ಸೂಕ್ಷ್ಮಗ್ರಾಹಿಯಾಗಿದ್ದಳವಳು. ಏನೋ ಅವಳನ್ನು ಕೆಣಕುವ ಆಸೆಯಿಂದ ಅವಳ ಕೋಪಕ್ಕೆ ಗುರಿಯಾದೆನಲ್ಲ ಎಂದು ಹಪಹಪಿಸಿದ.
* * * “ಧರಣಿಪಾಲಕ ಕೇಳು……” ಭಾಗವತರು ನಿಧಾನ ಝಂಪೆ ತಾಳದಲ್ಲಿ ಹಾಡಲು ಪ್ರಾರಂಭಿಸಿದ್ದರು. ಫಕ್ಕನೆ ಯೊಗಾನಂದನ ಯೋಚನಾಸರಣಿ ತುಂಡಾಯಿತು. ಹೋ.. ತನ್ನ ಪ್ರವೇಶಕ್ಕೆ ಸಮಯವಾಯಿತು. ಲಗುಬಗನೆ ಎದ್ದು ಸೀರೆ ಅಭರಣಗಳನ್ನು ತೆಗೆದು ಒಂದೊಂದಾಗಿ ಧರಿಸಲು ಆರಂಭಿಸಿದ. ಯಾಕೋ ಎಂದಿನ ಉಲ್ಲಾಸ ಇಂದಿರಲಿಲ್ಲ. ಯಾಂತ್ರಿಕವಾಗಿ ತನ್ನ ವೇಷಭೂಷಣಗಳನ್ನು ಧರಿಸಿಕೊಂಡ ಆತ ಪ್ರವೇಶಕ್ಕೆ ತಯಾರಾಗಿ ರಂಗಸ್ಥಳದ ಹಿಂಭಾಗದಲ್ಲಿ ನಿಂತ. ರಂಗದಲ್ಲಿದ್ದ ಪಾತ್ರಗಳೆಲ್ಲಾ ತಮ್ಮ ಪಾತ್ರದ ಒಂದು ಭಾಗವನ್ನು ಮುಗಿಸಿ ಪುನಃ ಚೌಕಿಗೆ ಮರಳಿದರು. ಭಾಗವತರ ಸೂಚನೆಯಂತೆ ಚಕ್ರತಾಳ ವಾದಕರು ರಂಗಸ್ಥಳದ ಪರದೆಯನ್ನು ಸರಿಸಿ ಮುಂದಿನ ಪಾತ್ರಧಾರಿ ಪ್ರವೇಶಕ್ಕೆ ಅನುವಾಗಿದ್ದಾರೆಯೇ ಎಂದು ಯೋಗಾನಂದ ನಿಂತುರುವುದನ್ನು ಖಚಿತಪಡಿಸಿಕೋಡರು.
ಭಾಗವತರು ಮುಂದಿನ ಪದ್ಯ ತೆಗೆದರು.. ತಮ್ಮ ಜಾಗಟೆಗೆ ಒಂದೆರಡು ಬಾರಿ ಟಕ.. ಟಕ ಎಂದು ಬಡಿದರು. ಅದು ಯೋಗಾನಂದನ ಪ್ರವೇಶಕ್ಕೆ ಸೂಚನೆ. ಎಂದಿನ ಲವಲವಿಕೆಯಿಂದ ಕೂಡಿರದ ಯೋಗಾನಂದನ ಅಂದಿನ ಪ್ರವೇಶ ಸ್ವತಃ ಆತನಿಗೆ ಅಭಾಸವೆಂದು ಅನಿಸಿತು. ಇವನೇಕೆ ಇಂದು ಹೀಗೆ ಎಂದು ಭಾಗವತರು ಪ್ರಶ್ನಾರ್ಥಕವಾಗಿ ಚೆಂಡೆ ಮದ್ದಳೆಗಾರರ ಮುಖ ನೋಡಿದರು. ಅವರು ಗೊತ್ತಿಲ್ಲವೆಂದು ತಲೆಯಾಡಿಸಿದರು. ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಯೋಗಾನಂದನ ದೃಷ್ಟಿ ಮಾತ್ರ ಸಭಿಕರ ಮುಂದಿನ ಸಾಲಿನಲ್ಲಿತ್ತು.
ಇಂದಾದರೂ ಅವಳು ಬಂದಿರಬಹುದು ಎಂಬ ಅಶಾಭಾವನೆ ಅವನಲ್ಲಿತ್ತು. ಅದರೆ ಅದು ಸುಳ್ಳಾಯಿತು. ಅವಳು ಇಂದೂ ಬಂದಿರಲಿಲ್ಲ. ಯಾಕೋ ರಂಗದಲ್ಲಿ ನರ್ತಿಸುವ ಉತ್ಸಾಹ ಚೈತನ್ಯಗಳಿರಲಿಲ್ಲ. ತನ್ನ ಪ್ರಾಣವಗಿದ್ದಳವಳು. ತನ್ನ ಜೀವದ ಜೀವವಾಗಿದ್ದಳು. ತನ್ನ ಮಾತುಗಳಿಗೆ ಕೋಪಿಸಿ ಬರದೆ ಉಳಿದಳಲ್ಲ. ಯಾಂತ್ರಿಕವಾಗಿ ಪಾತ್ರ ನಿರ್ವಹಿಸುತ್ತಿದ್ದವನನ್ನು ಭಾಗವತರು ಹಲವಾರು ಬಾರಿ ಎಚ್ಚರಿಸಬೇಕಾಯಿತು.
ಅಂತೂ ಇಂತೂ ತನ್ನ ಪಾತ್ರದ ಪ್ರಥಮ ಭಾಗವನ್ನು ನಿರ್ವಹಿಸಿ ಚೌಕಿಗೆ ಬಂದು ತನ್ನ ಸ್ಥಾನದತ್ತ ನಡೆಯುತ್ತಿದ್ದವನಿಗೆ ಅಚ್ಚರಿಯೋ ಅಚ್ಚರಿ..! ಅವಳಲ್ಲಿ… ನನ್ನ ಮನೋವ್ಯಾಕುಲಕ್ಕೆ ಕಾರಣಳಾದವಳು… ತನ್ನ ಪೆಟ್ಟಿಗೆಯ ಮೇಲೆ ಕುಳಿತು ಮಂದಹಾಸ ಬೀರುತ್ತಿದ್ದಳು. ಅವಳ ಮುಖದಲ್ಲಿ ತುಂಟ ನಸುನಗೆ. ಅವನಿಗೆ ಸಂತೋಷವೇ ಸಂತೋಷ. ಎಲ್ಲವೂ ಮರೆತುಹೋಯಿತು. ನಿನ್ನೆ ಯಾಕೆ ಬರಲಿಲ್ಲ ಎಂದು ಅಕ್ಕರೆಯಿಂದ ವಿಚಾರಿಸಿದ. ಅವಳು ಕಾರಣ ಹೇಳಿದಳು. ‘ಹೋ.. ಹಾಗಾ..’ ಎಂದುಕೊಂಡ. ಅವಳಿಗೂ ಮುನಿಸೆಲ್ಲವೂ ದೂರವಾಯಿತು. ಇಬ್ಬರೂ ನಕ್ಕರು. ಆ ಕಡೆಯಿಂದ ಬರುತ್ತಿದ್ದ ಮದ್ದಳೆಗಾರರು “ಏನು ಅಣ್ಣ ತಂಗಿ ಇಬ್ಬರೂ ನಗುತ್ತಿದ್ದೀರಿ…? ಏನು ವಿಶೇಷ ?” ಎಂದರು ಅವರೂ ನಗುವಿನಲ್ಲಿ ಭಾಗಿಯಾಗುತ್ತಾ. ಅವರ ಮಾತು ಕೇಳಿ ಅಣ್ಣ ಮತ್ತು ತಂಗಿ ಇಬ್ಬರೂ ಮತ್ತೊಮ್ಮೆ ಜೋರಾಗಿ ನಕ್ಕರು. ಮದ್ದಳೆಗಾರರೂ ನಕ್ಕರು.
ಉತ್ತಮ ನಾಟ್ಯ, ಗಿರಕಿ ಹೊಡೆಯುವ ಕಲೆ, ಹಿತಮಿತವಾದ ಮಾತಿನ ಜತೆ, ರೂಪ ಮತ್ತು ವೇಷಕ್ಕೆ ಬೇಕಾದಂತೆ ದೇಹವೂ ಇದ್ದರೆ ತೆಂಕು ತಿಟ್ಟು ಯಕ್ಷಗಾನದ ಪುಂಡುವೇಷಗಳಲ್ಲಿ ಕಲಾವಿದ ರಂಜಿಸುತ್ತಾನೆ ಎಂಬುದು ನಿಸ್ಸಂಶಯ. ಮಾತುಗಾರಿಕೆಯತ್ತ ಗಮನಹರಿಸಿ ಅಭ್ಯಸಿಸಿದರೆ ಒಂದನೇ ಪುಂಡುವೇಷಧಾರಿಯಾಗಲು ಅವಕಾಶಗಳೂ ಒದಗುತ್ತದೆ.
ತೆಂಕುತಿಟ್ಟಿನಲ್ಲಿ ಪ್ರಸಕ್ತ ಪುಂಡುವೇಷಧಾರಿಗಳಾಗಿ ಮಿಂಚುತ್ತಿರುವ ಅನೇಕ ಕಲಾವಿದರಲ್ಲಿ ಧರ್ಮಸ್ಥಳ ಮೇಳದ ಕಲಾವಿದ ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರೂ ಒಬ್ಬರು. ಸಾಧನೆಯ ಮೂಲಕ ಬಹುಬೇಡಿಕೆಯ ಪುಂಡುವೇಷಧಾರಿಯಾಗಿ ಬೆಳೆದು ಕಾಣಿಸಿಕೊಂಡವರು. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 1975ನೇ ಇಸವಿ ಸೆಪ್ಟಂಬರ್ 22ನೇ ತಾರೀಕಿನಂದು ಶ್ರೀ ಗುರುವಪ್ಪ ಪೂಜಾರಿ ಮತ್ತು ಶ್ರೀಮತಿ ನೀಲಮ್ಮ ದಂಪತಿಗಳ ಪುತ್ರನಾಗಿ ಜನನ. ಓದಿದ್ದು 5ನೇ ತರಗತಿ ವರೇಗೆ.
ಬಾಲಕನಾಗಿದ್ದಾಗ ತಂದೆಯವರ ಜತೆ ಚಂದ್ರಶೇಖರ ಅವರೂ ಒಂದು ವರ್ಷ ಕುಲಕಸುಬನ್ನು ಮಾಡಿ ಆಮೇಲೆ 2 ವರ್ಷಗಳ ಕಾಲ ಹೋಟೆಲ್‍ನಲ್ಲಿ ಕೆಲಸ ಮಾಡಿದ್ದರು. ಮಿತ್ರರೊಬ್ಬರು ಅಂಗಡಿ ಕೆಲಸ ಬಿಟ್ಟು ಯಕ್ಷಗಾನ ಸೇರುತ್ತೇನೆ ಎಂದಾಗ ಇವರಿಗೂ ಆಸಕ್ತಿ ಹುಟ್ಟಿ ನಾಟ್ಯ ಕಲಿಯಲು ನಿರ್ಧರಿಸಿದರು. 1990-91ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ಸೇರಿ ಕೋಳ್ಯೂರು ರಾಮಚಂದ್ರ ರಾವ್ ಮತ್ತು ತಾರಾನಾಥ ಬಲ್ಯಾಯ ವರ್ಕಾಡಿಯವರಿಂದ ನಾಟ್ಯ ಕಲಿತರು. ನಾಟ್ಯ ಕಲಿತು ಬಪ್ಪನಾಡು ಮೇಳಕ್ಕೆ ಸೇರಿ ಮೊದಲ ತಿರುಗಾಟ ಮಾಡಿದರು.
ಯಾಕೋ ಆಟ ಬೇಡ ಎಂದು ತೀರ್ಮಾನಿಸಿ ಮತ್ತೆ 2 ತಿಂಗಳು ಹೋಟೆಲ್ ಕೆಲಸ ಮಾಡಿದ್ದರು. ಆಗ ಕರ್ನಾಟಕ ಮೇಳದಿಂದ ಕರೆಬಂದಾಗ ನಿರಂತರ 11 ವರ್ಷಗಳ ಕಾಲ ಕರ್ನಾಟಕ ಮೇಳದಲ್ಲಿ ತಿರುಗಾಟ ಮಾಡಿದರು. ಮಳೆಗಾಲದ ಮುಂಬಯಿ ಪ್ರದರ್ಶನಗಳಲ್ಲೂ ಭಾಗವಹಿಸಿದರು. ಕೋಟಿ ಚೆನ್ನಯ ಪ್ರಸಂಗದಲ್ಲಿ ಬಾಲಕೋಟಿ ಮತ್ತು ಚೆನ್ನಯ್ಯರಾಗಿ, ದೇವಪೂಂಜ ಪ್ರತಾಪದಲ್ಲಿ ದೇವಪೂಂಜನಾಗಿ, ಕೋರ್ದಬ್ಬು ಬಾರಗ ಪ್ರಸಂಗದಲ್ಲಿ ಬಬ್ಬು ಪಾತ್ರದಲ್ಲಿ, ಮಹಾಂಕಾಳಿ ಅಪ್ಪೆ ಪ್ರಸಂಗದಲ್ಲಿ ಮಹಾಂಕಾಳಿ ಪಾತ್ರ, ಕಚ್ಚೂರ ಮಾಲ್ದಿ ಪ್ರಸಂಗದ ನಾಗರತಿ (ರಾಜಕುಮಾರಿ) ಪಾತ್ರ ಇವರಿಗೆ ಹೆಸರನ್ನು ತಂದುಕೊಟ್ಟಿತ್ತು.
ಕರ್ನಾಟಕ ಮೇಳವು ತಿರುಗಾಟವನ್ನು ನಿಲ್ಲಿಸಿದ ನಂತರ ಕಿಶನ್ ಹೆಗ್ಡೆಯವರ ಸಂಚಾಲಕತ್ವದ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ. ಬಳಿಕ ಪುತ್ತೂರು ಮೇಳದಲ್ಲಿ 1 ವರ್ಷ ತಿರುಗಾಟ ಮಾಡಿದರು. ಮುಂದೆ ಎಡನೀರು ಮೇಳದ ತಿರುಗಾಟದಲ್ಲಿ ಚಂದ್ರಶೇಖರರ ವೇಷವನ್ನು ಧರ್ಮಸ್ಥಳದ ಖಾವಂದರು ನೋಡಿ ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದ್ದರು.
2008ರಿಂದ ತೊಡಗಿ ಇಂದಿನವರೆಗೂ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಧರ್ಮಸ್ಥಳ ಮೇಳದ ಕಲಾವಿದ ಎಂದು ಹೇಳಿಕೊಳ್ಳುವಾಗ ಹೆಮ್ಮೆಯಾಗುತ್ತದೆ ಎನ್ನುವ ಚಂದ್ರಶೇಖರರಿಗೆ ಅಭಿಮನ್ಯು, ಸುದರ್ಶನ, ಅಶ್ವತ್ಥಾಮ, ಭಾರ್ಗವ, ಲಕ್ಷ್ಮಣ, ಚಂಡಮುಂಡರು, ಬಭ್ರುವಾಹನ ಮೊದಲಾದ ಪಾತ್ರಗಳು ಮತ್ತು ಕಿರೀಟ ವೇಷಗಳಲ್ಲಿ ಹಿರಣ್ಯಾಕ್ಷ, ಇಂದ್ರಜಿತು, ಶಿಶುಪಾಲ ಮೊದಲಾದ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲವರಾದರೂ ಇವರಿಗೆ ಪುಂಡುವೇಷಗಳಲ್ಲಿ ಹೆಚ್ಚು ಆಸಕ್ತಿ.
ತನ್ನ 25ನೇ ತಿರುಗಾಟದ ಸಂಭ್ರಮವನ್ನು ಮಂಗಳೂರು ಸರಕಾರೀ ಕಾಲೇಜು ಮೈದಾನದಲ್ಲಿ ‘ರಜತಚಂದ್ರ’ ಎಂಬ ಕಾರ್ಯಕ್ರಮ ಮಾಡಿ ಆಚರಿಸಿದ್ದರು. ಕಲಾಭಿಮಾನಿಗಳೆಲ್ಲರೂ ಸಹಕರಿಸಿ ಸ್ಪಂದಿಸಿದ್ದಾರೆ ಎನ್ನುವ ಚಂದ್ರಶೇಖರರಿಗೆ ಮನೆಯವರ ಸಹಕಾರದಿಂದ ಇನ್ನಷ್ಟು ಕಾಲ ಯಕ್ಷಗಾನದಲ್ಲಿ ಮುಂದುವರಿಯುವ ಆಸೆ ಇದೆ.
ಶ್ರೀ ಚಂದ್ರಶೇಖರ ಧರ್ಮಸ್ಥಳ ಅವರು ಅನೇಕ ಸಂಘ-ಸಂಸ್ಥೆಗಳಿಂದ ಸನ್ಮಾನಿತರೂ ಆಗಿದ್ದಾರೆ. ಭಾರತದ ನಾನಾ ಕಡೆ ಅಲ್ಲದೆ ಬಹ್ರೈನ್, ಮಸ್ಕತ್, ಕುವೈಟ್, ದುಬಾಯಿ, ಲಂಡನ್, ಅಮೇರಿಕಾದಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸಿದ್ದಾರೆ.
(ಡಾ. ಶೇಣಿ ಗೋಪಾಲಕೃಷ್ಣ ಭಟ್ – ‘ಯಕ್ಷಗಾನ ಮತ್ತು ನಾನು’ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ – 1981) ಯಕ್ಷಗಾನದಲ್ಲಿ ಬಯಲಾಟ ಮತ್ತು ತಾಳಮದ್ದಳೆ ಎಂಬ ಎರಡು ಪ್ರಾಕಾರಗಳು ಮೊದಲಿನಿಂದಲೂ ರೂಡಿಯಲ್ಲಿ ಬೆಳೆದು ಬಂದದ್ದವಾದರೂ ‘ಯಕ್ಷಗಾನ ನಾಟಕ’ ಎಂಬ ಮೂರನೆಯದೊಂದು ಪ್ರಾಕಾರವನ್ನು ಸೃಷ್ಟಿಸಿದವರು ಕುರಿಯ ವೆಂಕಟರಮಣ ಶಾಸ್ತ್ರಿ ಎಂಬವರು.
ಮುಂದಿನ ದಿನಗಳಲ್ಲಿ ಯಕ್ಷಗಾನ ವ್ಯವಸಾಯದಿಂದ ತನ್ನನ್ನೂ ರಂಗವನ್ನೂ ಮೆರೆಸಿದ ವಿಠಲ ಶಾಸ್ತ್ರಿಗಳ ತಂದೆಯವರಾದ ಅವರು ಅಭಿಜಾತ ಕಲಾವಿದರಿದ್ದುದರಿಂದ ರಂಗ ವೈಭವಗಳೊಂದಿಗೆ, ದೊಡ್ಡ ನಾಟಕ ಕಂಪೆನಿಯವರಂತೆ ವಿವಿಧ ಪರಿಕರಗಳ ಸಂಗ್ರಹಣದಿಂದ, ಬೇರೆ ಬೇರೆ ಕಡೆಗಳಲ್ಲಿ ಹಂಗಾಮಿ ಥಿಯೇಟರುಗಳನ್ನು ರಚಿಸಿ, ಕಲಾವಿದರ ದೊಡ್ಡ ಗುಂಪೊಂದನ್ನು ಕಟ್ಟಿಕೊಂಡು ಯಕ್ಷಗಾನ ನಾಟಕಗಳನ್ನಾಡುತ್ತಿದ್ದರು. ಒಮ್ಮೆ ಕಾಸರಗೋಡಿನಲ್ಲಿಯೂ ‘ಮೊಕ್ಕಾಂ’ ಮಾಡಿಕೊಂಡು ತಮ್ಮ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾಗ ಪ್ರಹ್ಲಾದ ಚರಿತ್ರೆಯನ್ನು ಅಭಿನಯಿಸಿದ್ದರು.
ಕಿಕ್ಕಿರಿದ ಪ್ರೇಕ್ಷಕರ ಸಮೂಹದಲ್ಲಿ ಒಬ್ಬನಾಗಿ ಕುಳಿತ ನಾನು ವಿಶೇಷ ಕುತೂಹಲದಿಂದ ಆ ಪ್ರಸಂಗವನ್ನು ನೋಡಿದೆ. ಹಿರಿಯ ಶಾಸ್ತ್ರಿಗಳ ಹಿರಣ್ಯಕಶ್ಯಪು, ಕಿರಿಯ ಶಾಸ್ತ್ರಿಗಳ ಪ್ರಹ್ಲಾದನೂ, ಕಾಡೂರು ರಾಮ ಭಟ್ಟರ ಹಿರಣ್ಯಾಕ್ಷನ ಪಾತ್ರವೂ ನನ್ನಲ್ಲಿ ಅದ್ಭುತ ಪರಿಣಾಮವನ್ನುಂಟುಮಾಡಿದುವು. ಯಕ್ಷಗಾನ ವೇಷಧಾರಿಗಳಲ್ಲಿ ಆಗ ದೊಡ್ಡ ಹೆಸರಾಗಿದ್ದ ಹೊಸಹಿತ್ತಿಲು ಗಣಪತಿ ಭಟ್ಟರು ದೇವೇಂದ್ರನಾಗಿಯೂ ಇತರ ಕೆಲವು ಹೊಸ ಮುಖಗಳು ವಿವಿಧ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು.
ಬಲಿಪ ನಾರಾಯಣ ಭಾಗವತರು(ಹಿರಿಯ) ಹಾಡುಗಾರರಾಗಿಯೂ, ಕುದ್ರೆಕೋಡ್ಲು ರಾಮ ಭಟ್ಟರು ಮದ್ದಳೆಗಾರರಾಗಿಯೂ ಇದ್ದುದರಿಂದ ಹಿಮ್ಮೇಳಕ್ಕೆ ಪೂರ್ಣ ಕಳೆ ತುಂಬಿ ಕರ್ಣಾನಂದಕರವಾಗಿತ್ತು. ಯಕ್ಷಗಾನದ ಈ ಪ್ರಕಾರವೂ ಜನಪ್ರಿಯವಾಗಬಲ್ಲುದೆಂಬುದನ್ನು ಅನುಭವದಿಂದ ನಾನಂದು ಕಂಡುಕೊಂಡೆ. ಹೀಗೆ ಜನಪ್ರಿಯನಾಗಿ ಮುಂದೆಯೂ ಈ ಪ್ರಕಾರವು ಬೆಳೆದು ಬರಬಹುದಾಗಿತ್ತಾದರೂ ಏಕೋ ವೆಂಕಟರಮಣ ಶಾಸ್ತ್ರಿಯವರು ತಮ್ಮ ಕಂಪೆನಿಯನ್ನು ಮುಚ್ಚಿದರು.
ಆದರೆ ಅವರ ಸ್ಪೂರ್ತಿಯು ಸ್ವಲ್ಪ ಸಮಯದಲ್ಲೇ ವಿಠಲ ಶಾಸ್ತ್ರಿಗಳನ್ನು ಯಕ್ಷಗಾನದ ಬಯಲಾಟದ ರಂಗಸ್ಥಳಕ್ಕೆ ಬರುವಂತೆ ಮಾಡಿತು. ಇದಕ್ಕಿಂತಲೂ ಪ್ರಾಮುಖ್ಯವಾದ ಕೊಡುಗೆಯೊಂದು ಈ ನಾಟಕ ಪ್ರಾಕಾರದಿಂದ ಯಕ್ಷಗಾನ ಮೇಳದ ಸಂಚಾಲಕರಿಗೆ ದೊರೆಯಿತೆಂದು ಹೇಳಬೇಕು.
ಬಯಲಾಟಗಳಿಗೆ ಡೇರೆಯನ್ನು ರಚಿಸಿ, ಪ್ರೇಕ್ಷಕರು ಟಿಕೇಟಿನ ಮೂಲಕ ಪ್ರವೇಶಿಸಿ, ಆರಾಮವಾಗಿ ತಂತಮ್ಮ ಆಸನಗಳಲ್ಲಿ ಕುಳಿತು ನೋಡುವ ಸೌಲಭ್ಯವನ್ನೊದಗಿಸಿದರೆ ಆಡುವವರಿಗೂ, ನೋಡುವವರಿಗೂ ಅನುಕೂಲತೆ ಹೆಚ್ಚಬಹುದೆಂಬ ವಿಶ್ವಾಸವಿಟ್ಟು, ಬಹು ಕಾಲದಿಂದಲೂ ಯಕ್ಷಗಾನ ಮೇಳದ ಸಂಚಾಲಕರಾಗಿದ್ದ ಕಲ್ಲಾಡಿ ಕೊರಗ ಶೆಟ್ಟರು ಮೊದಲಿಗೆ ಇದನ್ನು ಬಳಕೆಗೆ ತಂದರು. ಇತಿಮಿತಿಯ ರಂಗಶೃಂಗಾರದಿಂದ ಅವರು ತೊಡಗಿದ ಈ ಪದ್ಧತಿಯು ಈ ದಿನಗಳಲ್ಲಿ ಎಲ್ಲ ಮೇಳದ ಸಂಚಾಲಕರಿಗೂ ದೊಡ್ಡ ದೇಣಿಗೆಯಾಗಿ ಬೆಳೆದಿದೆ.
ಅಲ್ಲದೆ ಹೋದರೆ ದಿನಕ್ಕೊಬ್ಬನಂತೆ ಬಯಲಾಟದ ಖರ್ಚು ವೆಚ್ಚಗಳನ್ನು ವಹಿಸಿ ಆಟದ ವೀಳ್ಯದ ಮೊತ್ತವನ್ನು ಕೊಡುವ ದಾತೃಗಳನ್ನು ಹುಡುಕಿ, ಅವರ ಕೈಯಳತೆಗನುಸರಿಸಿ, ಸಂಚಾಲಕನೂ ತನ್ನ ಕೈಗಳನ್ನು ಚಾಚಬೇಕಾಗಿದ್ದ ಪರಿಸ್ಥಿತಿಯು ಇಂದಿಗೂ ಉಳಿಯುತ್ತಿತ್ತು. ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದವನು ತನ್ನದೇ ಮನೆಯಲ್ಲಿ ಸ್ವಂತ ಸಂಪಾದನೆಯಿಂದ ಬದುಕುವಾಗ ಸಿಕ್ಕುವ ತೃಪ್ತಿಯಂತೆ ಎಲ್ಲ ಸಂಚಾಲಕರ ಸಹಿತ ಇಡೀ ಕೂಟದವರಿಗೆ ಈ ಮಾರ್ಗದರ್ಶನ ನೆಮ್ಮದಿಯನ್ನೂ ಭರವಸೆಯನ್ನೂ ತಂದಿದೆ.
ಯಕ್ಷಗಾನದ ಹಿರಿಯ ವೇಷಧಾರಿ, ಅರ್ಥಧಾರಿ, ಸಂಘಟಕ ಎಂ.ಆರ್.ವಾಸುದೇವ ಸಾಮಗ ಇಂದು (07-11-2020) ಬೆಳಗಿನ ಜಾವ 3.00 ಘಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮೀರಾ ಸಾಮಗ, ಪುತ್ರ ಪ್ರದೀಪ ಸಾಮಗ ಸಹಿತ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಮಲ್ಪೆ ರಾಮದಾಸ ಸಾಮಗ ನಾಗರತ್ನ ದಂಪತಿ ಸುಪುತ್ರರಾಗಿ ಜನಿಸಿದ ಅವರು 19ರ ಹರೆಯದಲ್ಲೆ ಯಕ್ಷಗಾನ ರಂಗ ಪ್ರವೇಶಿಸಿ ಐದು ದಶಕಗಳ ಕಾಲ ಅಮೃತೇಶ್ವರಿ, ಪೆರ್ಡೂರು, ಧರ್ಮಸ್ಥಳ, ಕದ್ರಿ, ಸಾಲಿಗ್ರಾಮ, ಶಿರಸಿ, ಸುರತ್ಕಲ್ ಮೇಳಗಳಲ್ಲಿ ಕಲಾಸೇವೆಗೈದಿದ್ದರು.
ತಾಳಮದ್ದಲೆ, ಅರ್ಥಧಾರಿಯಾಗಿ ಅಪಾರ ಸಿದ್ಧಿ-ಪ್ರಸಿದ್ಧಿ ಪಡೆದಿದ್ದರು.‘ಸಂಯಮಂ’ ಸಂಘಟನೆಯ ಮೂಲಕ ಕರ್ನಾಟಕದಾದ್ಯಂತ ತಾಳಮದ್ದಲೆ ಪರಿಚಯಿಸಿದ್ದರು. ತಾಳಮದ್ದಲೆಗೆ ಅನುಕೂಲವಾಗುವಂತೆ ತಾಳಮದ್ದಲೆಯ 80 ಪ್ರಸಂಗಗಳನ್ನು ಸಂಪಾದಿಸಿದ್ದರು. 30ಕ್ಕೂ ಹೆಚ್ಚು ಪ್ರಸಂಗಗಳಿಗೆ ಅರ್ಥ ಬರೆದು ಅದನ್ನು ಪ್ರಕಟಣೆಗೆ ಸಿದ್ಧಪಡಿಸುತ್ತಿದ್ದರು.
ಎರಡು ವರ್ಷದ ಹಿಂದೆ ಅವರ ಸುಪುತ್ರ ಡಾ.ಪ್ರದೀಪ್ ವಿ.ಸಾಮಗ ಅವರು ಸಪ್ತತಿ ಕಾರ್ಯಕ್ರಮವನ್ನು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ದಿನ ಪೂರ್ತಿ ಕಾರ್ಯಕ್ರಮ ನಡೆಸಿ ಸಾಮಗಾಥೆ ಅಭಿನಂದನಾ ಗ್ರಂಥ ಪ್ರಕಟಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕಿಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಉಡುಪಿಯ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಅವರು ಪ್ರತೀ ವರ್ಷ ‘ಸಂಯಮಂ’ ತಿರುಗಾಟದ ನಂತರ ಒಬ್ಬ ಕಲಾವಿದನನ್ನು ಸಮ್ಮಾನಿಸುವ, ಸಂಘ ಸಂಸ್ಥೆಗಳಿಗೆ ‘ನಿಧಿ’ ಸಮರ್ಪಿಸುವ ಸತ್ಸಂಪ್ರದಾಯ ನಡೆಸಿಕೊಂಡು ಬಂದಿದ್ದರು. ಅವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಯಕ್ಷಗಾನ ವೇಷಧಾರಿ, ಸಂಘಟಕ, ತಾಳಮದ್ದಳೆ ಅರ್ಥಧಾರಿ ಹೀಗೆ ಯಕ್ಷಗಾನದ ವಿವಿಧಂಗಗಳಲ್ಲಿ ತೊಡಗಿಸಿಕೊಂಡ ಎಂ.ಆರ್.ವಾಸುದೇವ ಸಾಮಗರು ಇಂದು ನಮ್ಮನ್ನಗಲಿದ್ದಾರೆ. ವಾಸುದೇವ ಸಾಮಗ ಎಂದ ಕೂಡಲೇ ನಮಗೆ ಫಕ್ಕನೆ ನೆನಪಾಗುವುದು ಅವರ ‘ಸಂಯಮಂ’ ಯಕ್ಷಗಾನ ತಾಳಮದ್ದಳೆ ತಂಡ. ಸಂಯಮಂ ಎಂದರೆ ‘ಸಂಚಾರಿ ಯಕ್ಷಗಾನ ಮಂಡಳಿ’.
ತನ್ನ ಅರ್ಥಗಾರಿಕೆಯಲ್ಲಿ ಸೃಜನಶೀಲತೆಯನ್ನು ಸೃಷ್ಟಿಸಿದ್ದ ವಾಸುದೇವ ಸಾಮಗರು ಸಂಯಮಂ ತಂಡ ಕಟ್ಟಿದ ಬಗ್ಗೆ ಅಂದೊಮ್ಮೆ ವಿವರಿಸಿದ್ದರು. ಕೆಲವೇ ಸಾವಿರಗಳನ್ನು ಸಂಪಾದಿಸಬೇಕಾದರೆ ಒಂದು ವರ್ಷದ ಕಾರ್ಪಣ್ಯದ ಬದುಕಿನ, ತಿರುಗಾಟ ಇವತ್ತಿನ ದಿನಗಳಲ್ಲಿ ಅಗತ್ಯವಿದೆಯೆ ಎಂಬ ಜಿಜ್ಞಾಸೆ ಅವರಿಗೆ ಕಾಡತೊಡಗಿತಂತೆ. ಇಷ್ಟು ಕಷ್ಟಪಡಬೇಕಾದ ಅಗತ್ಯವಿಲ್ಲ ಎಂಬ ಅವರ ಯೋಚನೆಯೇ ‘ಸಂಯಮಂ’ ಎಂಬ ತಂಡ ಪ್ರಾರಂಭವಾಗಲು ಕಾರಣವಾಯಿತು.
ಮೊದಲು ಪ್ರಾಯೋಗಿಕವಾಗಿ ಮೂವತ್ತು ವರ್ಷಗಳ ಹಿಂದೆಯೇ ಒಮ್ಮೆ ಈ ತಾಳಮದ್ದಳೆ ತಂಡವನ್ನು ಪ್ರಾರಂಭಿಸಿದ್ದರು. ಅನುಭವದ ಕೊರತೆಯಿಂದ ಆಗ ಯಶಸ್ವಿಯಾಗಿರಲಿಲ್ಲ. ಆದರೆ ಈ ‘ಸಂಯಮಂ’ ತಂಡದ ವ್ಯವಸ್ಥಿತ ನಿರಂತರ ತಿರುಗಾಟಕ್ಕೆ 15 ವರ್ಷಗಳ ಇತಿಹಾಸವಿದೆ. ಎಲ್ಲಿಯೂ ಎಡರುತೊಡರುಗಳಿಲ್ಲದ ಪಯಣ ಈ ತಂಡದ್ದು.
ವಾಸುದೇವ ಸಾಮಗರ ತಂಡದ ಕಾರ್ಯಕ್ರಮಗಳು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿತ್ತು ಎಂದರೆ ಕೇವಲ ದೂರವಾಣಿಯ ಮೂಲಕ 100ಕ್ಕೂ ಹೆಚ್ಚು ತಾಳಮದ್ದಳೆ ಕಾರ್ಯಕ್ರಮಗಳು ಮಳೆಗಾಲದಲ್ಲಿ ನಿಗದಿಯಾಗುತ್ತಿತ್ತು. ಅದರಲ್ಲೂ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಖಾಯಂ ನೆಲೆಯಲ್ಲಿ ಕಾಯ್ದಿರಿಸಲಾಗುತ್ತಿತ್ತು. ಅವರಿಗೆ ದಿನಾಂಕ ಮಾತ್ರ ನಿಗದಿ ಮಾಡುವ ಕೆಲಸ ಉಳಿದಿರುತ್ತಿತ್ತು.
ಯಕ್ಷಗಾನದ ವೈಭವೀಕರಣಕ್ಕಾಗಿ ಮಾತ್ರ ಇರುವ ತಂಡ ಇದು ಎಂದು ಸಾಮಗರು ಹೇಳುತ್ತಿದ್ದರು. ಅದಕ್ಕಾಗಿ ಸ್ಪಂದನಶೀಲ ಕಲಾವಿದರನ್ನು ಮಾತ್ರ ಸೇರಿಸಿ ‘ಸಂಯಮಂ’ ತಂಡದ ತಾಳಮದ್ದಳೆ ಕಾರ್ಯಕ್ರಮ ನಡೆಸುತ್ತಿದ್ದರು. ತಾಳಮದ್ದಳೆಯನ್ನು ಸ್ವಲ್ಪ Modify ಮಾಡಿ, ಶುಷ್ಕ ಪಾಂಡಿತ್ಯ ಪ್ರದರ್ಶನ ಮಾಡದೆ, Drama Sense ಇರುವ ಕಲಾವಿದರನ್ನು ಆರಿಸಿದ್ದರು.
ಸಂಯಮಂ ತಂಡದ ಕಾರ್ಯಕ್ರಮಗಳು ಎಷ್ಟು ಜನಪ್ರಿಯವಾಗಿದ್ದುವೆಂದರೆ ಕೇವಲ ಒಂದೊಂದು ಕಾರ್ಯಕ್ರಮಗಳಲ್ಲಿ ಅಷ್ಟಾಹ ಮತ್ತು ದಶಾಹಗಳು ಎಂದು ಕಾರ್ಯಕ್ರಮಗಳನ್ನು ಏರ್ಪಡಿಸುವವರು ಇದ್ದರು. (ಅಷ್ಟಾಹ = ಎಂಟು ದಿನಗಳ ನಿರಂತರ ಕಾರ್ಯಕ್ರಮ, ದಶಾಹ = ಹತ್ತು ದಿನಗಳ ನಿರಂತರ ಕಾರ್ಯಕ್ರಮ) . ಸಂಯಮಂ ತಂಡದಲ್ಲಿ ವಾಸುದೇವ ಸಾಮಗರ ಅರ್ಥಗಾರಿಕೆ ಭಾರೀ ಪ್ರಸಿದ್ಧಿಯನ್ನು ಪಡೆದಿತ್ತು. ಅವರದೇ ತಂಡದ ಕಾರ್ಯಕ್ರಮದಲ್ಲಿ ಅವರ ಉತ್ತರ ಕುಮಾರನ ಅರ್ಥಗಾರಿಕೆಯ ಒಂದು ಸಣ್ಣ ತುಣುಕಿನ ವೀಡಿಯೊ ನೋಡಿ.
ಈ ದಿನ ಪ್ರಶಸ್ತಿ ಸ್ವೀಕರಿಸುವವರು ಡಾ. ಆನಂದರಾಮ ಉಪಾಧ್ಯ, ಕೆ.ಸಿ.ನಾರಾಯಣ, ಡಾ. ಚಂದ್ರು ಕಾಳೇನಹಳ್ಳಿ(ಎಲ್ಲರೂ ಗೌರವ ಪ್ರಶಸ್ತಿ), ಬಿ. ರಾಜಣ್ಣ, ಎ.ಜಿ. ಅಶ್ವತ್ಥ ನಾರಾಯಣ(ಇಬ್ಬರೂ ಯಕ್ಷಸಿರಿ ಪ್ರಶಸ್ತಿ) ಮತ್ತು ಡಾ. ಚಿಕ್ಕಣ್ಣ ಯಣ್ಣೆಕಟ್ಟೆ (ಪುಸ್ತಕ ಬಹುಮಾನ).
ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಚಿವರಾದ ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಬಿ.ವೈ. ರಾಘವೇಂದ್ರ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಜ್ಯೋತಿ ಗಣೇಶ್, ಬಿ. ಎಂ. ಸುಕುಮಾರ ಶೆಟ್ಟಿಯವರಲ್ಲದೆ. ದಿವಾಕರ್ ಪಾಂಡೇಶ್ವರ್, ದಯಾನಂದ ಕತ್ತಲಸಾರ್, ರಾಜೇಶ್ ಜಿ, ಬಾ.ಹ.ರಮಾಕುಮಾರಿ, ನಿಜಲಿಂಗಪ್ಪ, ಹಾಗೂ ಎಂ.ಎ ಹೆಗಡೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.
ಮಂಗಳೂರು ಪಚ್ಚನಾಡಿ ಬೆಟ್ಟು ಮನೆಯ ಶ್ರೀಮತಿ ಲೋಲಮ್ಮಕ್ಕ ಅವರು ಕಲಾವಿದೆಯಲ್ಲ. ಆದರೂ ಆಟದ ಲೋಲಮ್ಮಕ್ಕ ಎಂದೇ ಕರೆಸಿಕೊಂಡಿದ್ದರು. ಕಟೀಲು ಕ್ಷೇತ್ರದ ಭಕ್ತೆಯಾಗಿ 1968ರಿಂದ ತೊಡಗಿ ನಿರಂತರವಾಗಿ ನಲುವತ್ತು ವರ್ಷಗಳ ಕಾಲ ಶ್ರೀ ಕಟೀಲು ಮೇಳದ ಹರಕೆ ಬಯಲಾಟವನ್ನು ನಡೆಸುತ್ತಾ ಬಂದಿದ್ದರು.
ಅಲ್ಲದೆ ಬಯಲಾಟದ ಸಂದರ್ಭದಲ್ಲಿ ಕಲಾಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸುತ್ತಾ ಬಂದವರು. ತಮ್ಮ ದುಡಿಮೆಯ ಒಂದಂಶವನ್ನು ಯಕ್ಷಗಾನಕ್ಕಾಗಿ ವಿನಿಯೋಗಿಸಿದವರು. ದಾನಿಗಳಿಂದ ಸಂಗ್ರಹಿಸಿದ ಧನವನ್ನು ಯಕ್ಷಗಾನ ಸಂಬಂಧೀ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದ್ದರು. ಹಾಗಾಗಿ ಎಲ್ಲರೂ ಇವರನ್ನು ಆಟದ ಲೋಲಮ್ಮಕ್ಕ ಎಂದು ಹೇಳಿ ಗೌರವಿಸುತ್ತಿದ್ದರು. 2008ರಲ್ಲಿ ಇವರು ಕೀರ್ತಿಶೇಷರಾಗಿದ್ದರು. ಪ್ರಸ್ತುತ ಇವರ ಸೇವಾ ಚಟುವಟಿಕೆಗಳನ್ನು ಮಕ್ಕಳೂ ಮೊಮ್ಮಕ್ಕಳೂ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತೋಷದ ವಿಚಾರ.
ಬಂಧುಗಳ, ಅಭಿಮಾನಿಗಳ ಸಹಕಾರದಿಂದ ಲೋಲಮ್ಮ ಅವರ ಪುತ್ರ ಶ್ರೀ ರಾಮ ಅಮೀನ್ ಅವರು ‘ಕೀರ್ತಿಶೇಷ ಲೋಲಮ್ಮ ಪಚ್ಚನಾಡಿ ಪ್ರತಿಷ್ಠಾನ’ವನ್ನೂ ಸ್ಥಾಪಿಸಿರುತ್ತಾರೆ. ಆಟದ ಲೋಲಮ್ಮಕ್ಕ ಅವರ ಬದುಕು, ಸಾಧನೆಗಳ ಕುರಿತಾದ ಪುಸ್ತಕ ಇದು. ಪ್ರಕಾಶಕರು ‘ಕೀರ್ತಿಶೇಷ ಲೋಲಮ್ಮ ಪಚ್ಚನಾಡಿ ಪ್ರತಿಷ್ಠಾನ’. ಸಂಪಾದಕರು ಡಾ. ದಿನಕರ ಎಸ್. ಪಚ್ಚನಾಡಿ ಅವರು. ಇದು 2016ರಲ್ಲಿ ಪ್ರಕಟವಾಗಿತ್ತು. ಮೊದಲಾಗಿ ಕೊಲ್ಯ ಶ್ರೀ ಶ್ರೀ ರಮಾನಂದ ಸ್ವಾಮೀಜಿ ಮತ್ತು ಶ್ರೀ ಕ್ಷೇತ್ರ ಕಟೀಲಿನ ಶ್ರೀ ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ ಇವರುಗಳ ಅನುಗ್ರಹ ಸಂದೇಶಗಳನ್ನು ನೀಡಲಾಗಿದೆ.
ಮುನ್ನುಡಿಯನ್ನು ಬರೆದವರು ಡಾ. ಪಿ. ಸಂಜೀವ ದಂಡಕೇರಿ ಅವರು. ಶ್ರೀ ಜಯಂತ ಅಮೀನ್ ಪಚ್ಚನಾಡಿ, ಶ್ರೀಮತಿ ದೇವಕಿ ಪಚ್ಚನಾಡಿ, ಶ್ರೀರಾಮ ಅಮೀನ್ ಪಚ್ಚನಾಡಿ ಅವರುಗಳ ಲೇಖನವನ್ನೂ ನೀಡಲಾಗಿದ್ದು ‘ಸಂಪಾದಕರ ನುಡಿ’ ಎಂಬ ಶೀರ್ಷಿಕೆಯಡಿ ಡಾ. ದಿನಕರ್ ಎಸ್. ಪಚ್ಚನಾಡಿ ಅವರು ಲೇಖನವನ್ನು ಬರೆದಿರುತ್ತಾರೆ. ಬಳಿಕ ಶ್ರೀಮತಿ ಅವರ ಲೋಲಮ್ಮ ಅವರ ಬದುಕು, ಸಾಧನೆ, ಕಲಾಸೇವೆಗಳ ಮಾಹಿತಿಗಳನ್ನು ನೀಡಲಾಗಿದೆ. (ಅನುಕ್ರಮಣಿಕೆ ಒಂದು)
ಬಳಿಕ ಅನುಕ್ರಮಣಿಕೆ ಎರಡರಲ್ಲಿ ಡಾ. ಎನ್. ನಾರಾಯಣ ಶೆಟ್ಟಿ, ಕುಂಬಳೆ ಸುಂದರ ರಾವ್, ಭಾಸ್ಕರ ರೈ ಕುಕ್ಕುವಳ್ಳಿ, ವಾಸುದೇವ ಕೊಟ್ಟಾರಿ, ನವನೀತ ಶೆಟ್ಟಿ ಕದ್ರಿ, ಚಂದ್ರಹಾಸ ಕೋಟೆಕಾರ್, ಕೆ. ಚಂದ್ರಶೇಖರ ಶೆಟ್ಟಿ, ವಿದ್ಯಾಧರ ಶೆಟ್ಟಿ ಪೊಸಕುರಾಲ್, ಶರತ್ ಕುಮಾರ್ ಕದ್ರಿ, ಜಿ. ಬಾಬಾ ಕಾಮತ್ ಪದವಿನಂಗಡಿ, ಪುರುಷೋತ್ತಮ ಕೊಟ್ಟಾರಿ, ಪ್ರಭಾಕರ ಕರ್ಕೇರ, ಶಿವಾನಂದ ಪೆರ್ಲಗುರಿ, ಶ್ರೀಮತಿ ತ್ರಿವೇಣಿ ಉದಯಪ್ರಕಾಶ್, ಶ್ರೀಮತಿ ಶೀಲಾಕ್ಷಿ ತಾರಾನಾಥ್ ಇವರುಗಳು ಆಟದ ಲೋಲಮ್ಮಕ್ಕನವರ ಬಗೆಗೆ ಬರೆದ ಲೇಖನಗಳಿವೆ. ಕಟೀಲು ಮೇಳದ ಸೇವಾಕರ್ತೆಯರಾಗಿದ್ದ ಶ್ರೀಮತಿ ಲೋಲಮ್ಮ (ಆಟದ ಲೋಲಮ್ಮಕ್ಕ) ಅವರ ಬದುಕಿನ ಕುರಿತಾದ ಪುಸ್ತಕವಿದು.