Friday, August 28, 2026
Home Blog Page 374

ಬಪ್ಪನಾಡು ಮೇಳ ಮತ್ತು ಅತಿಥಿ ಕಲಾವಿದರಿಂದ ‘ಬನತ ಬಂಗಾರ್’ – ತುಳು ಹಾಸ್ಯ ಯಕ್ಷಗಾನ

ದೀಪಾವಳಿ ಹಬ್ಬದ ಪ್ರಯುಕ್ತ ಬಪ್ಪನಾಡು ಮೇಳದವರಿಂದ ಕಾವೂರು ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ದಿನಾಂಕ 14. 11. 2020ನೇ ಶನಿವಾರದಂದು ಸಂಜೆ ಘಂಟೆ 4ರಿಂದ ರಾತ್ರಿ ಘಂಟೆ 9ರ ವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಪ್ಪನಾಡು ಮೇಳದಲ್ಲಿ ಯಶಸ್ವಿಯಾದ  ‘ಬನತ ಬಂಗಾರ್’ ಎಂಬ ತುಳು ಹಾಸ್ಯ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಲಾಗಿದೆ. 

‘ಅಂಬರೀಶ – ಪಾರಿಜಾತ – ನರಕಾಸುರ’ ಯಕ್ಷಗಾನ ಪ್ರದರ್ಶನ

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ  ದೀಪಾವಳಿ ಹಬ್ಬದ ಪ್ರಯುಕ್ತ ದಿನಾಂಕ 15.11.2020 ಆದಿತ್ಯವಾರ ಸಂಜೆ 6.00 ಗಂಟೆಗೆ ಸರಿಯಾಗಿ ‘ಅಂಬರೀಶ – ಪಾರಿಜಾತ – ನರಕಾಸುರ’ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿರುವುದು.

ಈ ಯಕ್ಷಗಾನ ಪ್ರದರ್ಶನದ ನೇರ ಪ್ರಸಾರ ಯೂಟ್ಯೂಬ್ ನಲ್ಲಿ ಲಭ್ಯವಿದೆ.

ದಿವಾಕರ ರೈ ಸಂಪಾಜೆ – ಯಕ್ಷಗಾನದ ಸಿಡಿಲಮರಿ 

ಪೂರ್ವ ರಂಗದಲ್ಲಿ ವೇಷಗಳನ್ನು ಮಾಡಿ, ನಾಟ್ಯದಲ್ಲಿ ಲಯಸಿದ್ಧಿಯನ್ನು ಪಡೆದು, ಬಳಿಕ ಪ್ರಹ್ಲಾದ, ಲೀಲೆಯ ಕೃಷ್ಣ ಮೊದಲಾದ ಬಾಲಪುಂಡುವೇಷಗಳನ್ನು ಮಾಡಿ ಮಾತುಗಾರಿಕೆಯಲ್ಲೂ ಬೆಳೆದರೆ ಮತ್ತೆ  ಅಭಿಮನ್ಯು, ಬಭ್ರುವಾಹನ, ಭಾರ್ಗವ, ಅಶ್ವತ್ಥಾಮ, ಲಕ್ಷ್ಮಣ, ಚಂಡ-ಮುಂಡರು, ಷಣ್ಮುಖ ಇಂತಹ ಪಾತ್ರಗಳನ್ನು ಮಾಡುವುದಕ್ಕೆ ಅನುಕೂಲವಾಗುತ್ತದೆ.

ಕಲಾವಿದರು ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರೆ ಪಾತ್ರಗಳನ್ನು ನಿರ್ವಹಿಸುವಾಗ ಎಲ್ಲೂ ಸೋಲದೆ ಪ್ರೌಢತೆಯು ಪ್ರಕಟವಾಗುತ್ತದೆ. ಕುಡಾಣ ಗೋಪಾಲಕೃಷ್ಣ ಭಟ್ (ಗೋಪಿ ಅಣ್ಣ) ಕ್ರಿಶ್ಚನ್ ಬಾಬು ಮೊದಲಾದವರು ಇಂದು ನಮ್ಮ ಜತೆ ಇಲ್ಲವಾದರೂ ಪುಂಡುವೇಷಧಾರಿಗಳಿಗೆ ಅವರು ಆದರ್ಶರು. ದೈಹಿಕ ಬಲವೊಂದಿದ್ದರೆ ಸಾಲದು. ಮಾನಸಿಕವಾಗಿಯೂ ಬಲಿಷ್ಠನಾಗಿರಬೇಕು. ಇವೆರಡೂ ಇಲ್ಲದೆ ಬರಿದೆ ಸಾಹಸವನ್ನು ತೋರಿದರೆ ಕಲಾವಿದರು ಗೆಲ್ಲಲಾರರು. ಪ್ರದರ್ಶನವೂ ಗೆಲ್ಲಲಾರದು.

ಯಕ್ಷಗಾನದಲ್ಲಿ ಪ್ರಸ್ತುತ ಪುಂಡುವೇಷಧಾರಿಗಳಾಗಿ ಅಭಿನಯಿಸುತ್ತಾ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿರುವ ಕಲಾವಿದರನೇಕರು. ಅವರಲ್ಲೊಬ್ಬರು ಶ್ರೀ ದಿವಾಕರ ರೈ ಸಂಪಾಜೆ. ಪೂರ್ವರಂಗದಿಂದ ತೊಡಗಿ ಎಲ್ಲಾ ಹಂತಗಳನ್ನೂ ದಾಟಿ ಬೆಳೆದವರು.  ಹನುಮಗಿರಿ ಮೇಳದ ಕಲಾವಿದನಾದರೂ ಧರ್ಮಸ್ಥಳ, ಎಡನೀರು ಮೇಳಗಳಲ್ಲೂ ತಿರುಗಾಟ ಮಾಡಿದವರು.

(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )

ಇವರು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ 1977ನೇ ಇಸವಿ ಎಪ್ರಿಲ್ 15ರಂದು ಶ್ರೀ ಕೆ. ವಾಸು ರೈ ಮತ್ತು ಶ್ರೀಮತಿ ಇಂದಿರಾ ರೈ ದಂಪತಿಗಳಿಗೆ ಮಗನಾಗಿ ಜನಿಸಿದವರು.  ದಿವಾಕರ ರೈಗಳು ಓದಿದ್ದು ಕಲ್ಲುಗುಂಡಿ ಸರಕಾರೀ ಶಾಲೆಯಲ್ಲಿ. 7ನೇ ತರಗತಿಯ ವರೆಗೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ಕಲ್ಲುಗುಂಡಿ ಪರಿಸರದಲ್ಲಿ ಧರ್ಮಸ್ಥಳ, ಸುರತ್ಕಲ್, ಕರ್ನಾಟಕ, ಕದ್ರಿ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಆಟ ನೋಡುವ ಅವಕಾಶಗಳು ಸಿಕ್ಕಿತ್ತು. 

(ಇದನ್ನೂ ಓದಿ: ಮಹಿಷಾಸುರ ಪಾತ್ರ ಮೊದಲು ಮಾಡಿದ್ದು ಯಾರು ? (Mahishasura in Yakshagana))

ಪ್ರದರ್ಶನಗಳನ್ನು ನೋಡುತ್ತಿದ್ದಂತೆಯೇ ದಿವಾಕರ ರೈಗಳಿಗೆ ತಾನೂ ಕಲಾವಿದನಾಗಬೇಕೆಂಬ ಬಯಕೆಯಾಗಿತ್ತು. ಹವ್ಯಾಸೀ ವೇಷಧಾರಿ ಶ್ರೀ ಲೋಕೇಶ್ ರಿಂದ ನಾಟ್ಯ ಕಲಿತರು.  ಗಜಾನನ ಯಕ್ಷಗಾನ ಸಂಘದ ಆಶ್ರಯದಲ್ಲಿ ನಾಟ್ಯ ತರಬೇತಿ ಮತ್ತು ಬಣ್ಣಗಾರಿಕಾ ಶಿಬಿರಗಳೂ ನಡೆಯುತ್ತಿತ್ತು. ಉತ್ತಮ ವೇಷಧಾರಿಯಾಗಿದ್ದ ಶ್ರೀ ಪರಮೇಶ್ವರ ಆಚಾರ್ಯರಿಂದಲೂ ನಾಟ್ಯ ಕಲಿತರು. ಹೆಚ್ಚಿನ ಕಲಿಕೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ತೆರಳಿದರು. ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಸ್ತ್ರೀಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ನಾಟ್ಯಾಭ್ಯಾಸ. 

ದಿವಾಕರ ರೈಗಳ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ (1991-92). ನಿರಂತರ 10 ವರ್ಷ ಸದ್ರಿ ಮೇಳದಲ್ಲಿ ಕಲಾಸೇವೆ. ಪೂರ್ವರಂಗದಲ್ಲಿ ಬಾಲಗೋಪಾಲರು, ಮುಖ್ಯ ಸ್ತ್ರೀವೇಷ ನಂತರ ಪ್ರಸಂಗದಲ್ಲಿ ದೇವೇಂದ್ರ ಬಲ ಮೊದಲಾದ ಸಣ್ಣಪುಟ್ಟ ಪಾತ್ರಗಳು. ಹೆಚ್ಚು ಸ್ತ್ರೀಪಾತ್ರಗಳನ್ನೇ ಮಾಡಬೇಕಾಗಿತ್ತು.  ಕಡತೋಕಾ ಮಂಜುನಾಥ ಭಾಗವತರು  ‘ನೀನು ಸ್ತ್ರೀವೇಷ ಮಾಡುವುದು ಬೇಡ. ಪುಂಡುವೇಷವನ್ನೇ ಮಾಡು’ ಎಂಬ ಸಲಹೆಯನ್ನೂ ನೀಡಿದ್ದರು. ಪುಂಡುವೇಷಧಾರಿಯಾಗಿ ಭಡ್ತಿ ಸಿಕ್ಕಿತ್ತು.  ಕಲಾವಿದನಾಗಿ ಬೆಳೆಯಲು ಧರ್ಮಸ್ಥಳ ಮೇಳದ ಹತ್ತು ತಿರುಗಾಟಗಳೇ ಭದ್ರ ಅಡಿಪಾಯವಾಗಿತ್ತು. 

ಧರ್ಮಸ್ಥಳ ಮೇಳದಲ್ಲಿ 10 ವರ್ಷಗಳ ಕಲಾಸೇವೆಯನ್ನು ಮಾಡಿ ತಿರುಗಾಟ ನಿಲ್ಲಿಸಿದ್ದರು.  ಮನೆಯಲ್ಲೇ ಕೃಷಿಕಾರ್ಯಗಳಲ್ಲಿ ನಿರತನಾಗಿದ್ದಾಗ ಕಲಾಪೋಷಕ ಡಾ. ಟಿ. ಶ್ಯಾಮ ಭಟ್ಟರ  ಸಲಹೆಯಂತೆ ಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದ ಕುಂಟಾರು ಮೇಳಕ್ಕೆ ಸೇರಿದರು.ಮುಖ್ಯ ಪುಂಡುವೇಷಧಾರಿಯಾಗಿ ಕುಂಟಾರು ಮೇಳದಲ್ಲಿ 2 ವರ್ಷ ತಿರುಗಾಟ. ಮತ್ತೆ 2 ವರ್ಷ ಎಡನೀರು ಮೇಳದಲ್ಲಿ ಕಲಾಸೇವೆ. ಎಡನೀರು ಮೇಳದಲ್ಲಿ ಎರಡು ವರ್ಷ ತಿರುಗಾಟ. ನಂತರ ಹೊಸನಗರ ಮೇಳದಲ್ಲಿ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ವ್ಯವಸಾಯ.

 (ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)

“ಧರ್ಮಸ್ಥಳ ಮೇಳದ ತಿರುಗಾಟದ ಸಂದರ್ಭದಲ್ಲಿ ಅನಿವಾರ್ಯಕ್ಕೆ ಅಭಿಮನ್ಯು ಪಾತ್ರವನ್ನು ನಿರ್ವಹಿಸಬೇಕಾಗಿತ್ತು. ನಾನು ಹೆದರಿಕೊಂಡಿದ್ದೆ. ಆದರೆ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರು ಧೈರ್ಯ ತುಂಬಿದರು. ಅವರೇ ಮೊದಲು ಪದ್ಯ ಹೇಳಿ ಪ್ರೋತ್ಸಾಹಿಸಿದ್ದರು.

ಇದನ್ನೂ ಓದಿ: ಆರ್.ಕೆ.ಭಟ್ ಕೊಂಗೋಟ್ ಮತ್ತು ಉಮಾ ಆರ್.ಕೆ.ಭಟ್ ದಂಪತಿಗಳ ನಿಸ್ವಾರ್ಥ ಕಲಾಸೇವೆ (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಷ್ – ಭಾಗ 1)

ನಾನು ಅಭಿಮನ್ಯು ಮಾಡಿದೆ ಎನ್ನುವುದಕ್ಕಿಂತ ಅವರು ನನ್ನಿಂದ ಮಾಡಿಸಿದರು ಎಂದು ಹೇಳುವುದೇ ಸರಿ. ಅಂದು ಉದ್ಯಾವರ ಜಯಕುಮಾರರು ಸುಭದ್ರೆಯಾಗಿ ಅಭಿನಯಿಸಿದ್ದರು.’’ ಹೀಗೆ ಅಂದಿನ ದಿನವನ್ನು ದಿವಾಕರ ರೈಗಳು ನೆನಪಿಸುತ್ತಾರೆ.  

“ಯಕ್ಷಗಾನವು ಏಕಪಾತ್ರಾಭಿನಯ ಅಲ್ಲ. ಸಹಕಲಾವಿದರ ಸಹಕಾರವಿಲ್ಲದೆ ಯಾವ ಕಲಾವಿದನೂ ಮೆರೆಯಲಾರ. ಕಲಾಭಿಮಾನೀ ಬಂಧುಗಳೂ ಪ್ರೋತ್ಸಾಹಿಸಿದ್ದಾರೆ. ಸರ್ವರ ಸಹಕಾರದಿಂದ ಇನ್ನಷ್ಟು ಕಲಾಸೇವೆ ಮಾಡುವ ಆಸೆಯಿದೆ’’ ಎನ್ನುವ ಶ್ರೀ ದಿವಾಕರ ರೈಗಳು  ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಮತ್ತು ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುತ್ತೂರು ಈ ತಂಡಗಳ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. 

ಇದನ್ನೂ ಓದಿ: ಸುಣ್ಣಂಬಳ ವಿಶ್ವೇಶ್ವರ ಭಟ್ – ಮಿತಭಾಷಿಯ ಸಹೃದಯತೆ (ಶೇಣಿ, ಸುಣ್ಣಂಬಳ ತಾಳಮದ್ದಳೆ ವೀಡಿಯೋ)  

2011ನೇ ಇಸವಿ ದಶಂಬರ 28ರಂದು ಆರತಿ ಕೆ. ರೈ ಜತೆ ವಿವಾಹ. ಆರತಿ ರೈ ಅವರು ಕಾಸರಗೋಡು ಕೂಡ್ಲು ಶ್ರೀ ವಿಠಲ ಶೆಟ್ಟಿ ಮತ್ತು ಶ್ರೀಮತಿ ಚಂದ್ರಾವತಿ ದಂಪತಿಗಳ ಪುತ್ರಿ. ಶ್ರೀ ದಿವಾಕರ ರೈ ಮತ್ತು ಶ್ರೀಮತಿ ಆರತಿ ದಿವಾಕರ ರೈ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಮಾ| ಸಮೃದ್ಧ ಡಿ. ರೈ 2ನೇ ತರಗತಿಯ ವಿದ್ಯಾರ್ಥಿ. ಪುತ್ರಿ ಕು| ವಿಭಾ ಡಿ. ರೈ (5 ವರ್ಷ ಪ್ರಾಯ).   

(ಇದನ್ನೂ ಓದಿ: ಮಹಿಷಾಸುರ ಪಾತ್ರ ಮೊದಲು ಮಾಡಿದ್ದು ಯಾರು ? (Mahishasura in Yakshagana))

ಲೇಖಕ: ರವಿಶಂಕರ್ ವಳಕ್ಕುಂಜ                  

ರಂಗವಿಚಿಕಿತ್ಸೆ – ಡಾ.ಕೆ.ಎಂ.ರಾಘವ ನಂಬಿಯಾರ್

‘ರಂಗವಿಚಿಕಿತ್ಸೆ’ ಎಂಬ ಈ ಕೃತಿಯು ವಿದ್ವಾಂಸರಾದ ಡಾ. ಕೆ.ಎಂ. ರಾಘವ ನಂಬಿಯಾರರು ಯಕ್ಷಗಾನ ಸಾಹಿತ್ಯ ಲೋಕಕ್ಕೆ ನೀಡಿದ ಒಂದು ಅಪೂರ್ವ ಕೊಡುಗೆ. ಈ ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 2018ರಲ್ಲಿ. ಪ್ರಕಾಶಕರು ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ) ಉಡುಪಿ, ಬೆಂಗಳೂರು.

ಶ್ರೀ ರಾಘವ ನಂಬಿಯಾರರನ್ನು ಸಂದರ್ಶಿಸಿ ಅವರ ರಂಗವಿಚಾರಗಳನ್ನು ನಿರೂಪಿಸಿದವರು ಕಟೀಲು ಶ್ರೀ ಸಿತ್ಲ ರಂಗನಾಥ ರಾವ್ ಅವರು. ಈ ಕೃತಿಯ ಬಗೆಗೆ ಹಿಂದೆ ಮದ್ದಳೆಗಾರರಾದ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರು ಲೇಖನವನ್ನು ಬರೆದಿರುತ್ತಾರೆ. ಇದು ಒಟ್ಟು ತೊಂಭತ್ತು ಪುಟಗಳುಳ್ಳ ಹೊತ್ತಗೆಯು.

ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…

ಶುಭಾಕಾಂಕ್ಷೆ ಎಂಬ ಬರಹದಡಿ ಶ್ರೀ ಸಿತ್ಲ ರಂಗನಾಥ ರಾಯರೂ ‘ಅರಿಕೆ’ ಎಂಬ ಬರಹದಡಿ ಡಾ. ಕೆ.ಎಂ.ರಾಘವ ನಂಬಿಯಾರರೂ ತಮ್ಮ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ಮುನ್ನುಡಿ ಲೇಖನವನ್ನು ಬರೆದವರು ಖ್ಯಾತ ಹಿರಿಯ ಸ್ತ್ರೀ ಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು.

ಜಾಹೀರಾತು

‘ರಂಗವಿಚಿಕಿತ್ಸೆ’ ಎಂಬ ಕೃತಿಯು ಎರಡು ವಿಭಾಗಗಳಿಂದ ಕೂಡಿದ್ದು ಈ ಉಭಯ ವಿಭಾಗಗಳಲ್ಲಿ ಡಾ.ಕೆ.ಎಂ.ರಾಘವ ನಂಬಿಯಾರರ ರಂಗವಿಚಾರಗಳನ್ನು ನಿರೂಪಿಸಿ ಸಿತ್ಲ ರಂಗನಾಥ ರಾವ್ ಅವರು ಓದುಗರಿಗೆ ನೀಡಿರುತ್ತಾರೆ. ಬಳಿಕ ಅನುಬಂಧ ಒಂದರ ಅಡಿ ಸಿತ್ಲ ರಂಗನಾಥ ರಾವ್ ಅವರು ಬರೆದ “ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ಮಾಡುವುದೇಕೆ?” ಎಂಬ ಲೇಖನವಿದೆ.

ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು?

ಅನುಬಂಧ ಎರಡರಲ್ಲಿ ಶ್ರೀ ಶ್ರೀಧರ ಡಿ.ಎಸ್, ಶ್ರೀ ರಾಜಕುಮಾರ ಪೈವಳಿಕೆ, ಶ್ರೀ ಧನಂಜಯ ನೆಲ್ಯಾಡಿ, ಶ್ರೀ ಸಮೀರ್ ದಾಮ್ಲೆ ಸುಳ್ಯ, ಇವರುಗಳು ಬರೆದ ಲೇಖನಗಳನ್ನು ನೀಡಲಾಗಿದೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಎಂ. ಆರ್. ವಾಸುದೇವ ಸಾಮಗರಿಗೆ ಶ್ರದ್ಧಾಂಜಲಿ – ಯಕ್ಷಗಾನ ಕಲಾರಂಗದಿಂದ

ನವೆಂಬರ್ 7, 2020 ರಂದು ನಮ್ಮನ್ನಗಲಿದ ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ, ಸಂಘಟಕ ಮಲ್ಪೆ ವಾಸುದೇವ ಸಾಮಗರಿಗೆ ಶ್ರದ್ಧಾಂಜಲಿ ಸಭೆ ಉಡುಪಿಯ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ನಡೆಯಿತು.

ಸಾಮಗರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಸರಳ ಉದಾರ ವ್ಯಕ್ತಿತ್ವ ಮತ್ತು ಕಲಾ ಶ್ರೀಮಂತಿಕೆಯ ಕುರಿತು ಎಸ್. ವಿ. ಭಟ್, ಪಿ.ಕಿಶನ್ ಹೆಗ್ಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ರಂಗಾ ಭಟ್, ನಾರಾಯಣ ಎಂ. ಹೆಗಡೆ ತಮ್ಮ ಅನುಭವ ಹಂಚಿಕೊಂಡರು.

ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯೊಂದಿಗೆ ಅವರಿಗಿದ್ದ ಗಾಢ ಸಂಬಂಧವನ್ನು ನೆನಪಿಸಿಕೊಂಡರು ಕಾರ್ಯಕ್ರಮ ನಿರೂಪಿಸಿದರು

ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? 

ಮಲ್ಪೆ ವಾಸುದೇವ ಸಾಮಗರಿಗೆ ಯಕ್ಷಾಂಗಣದ ನುಡಿ ನಮನ

”ಎಂ.ಆರ್. ವಾಸುದೇವ ಸಾಮಗರು ಯಕ್ಷಗಾನ ಆಟ – ಕೂಟಗಳ ಅತ್ಯದ್ಭುತ ಕಲಾಕಾರ. ಅವರು ತಮ್ಮ ಅಪಾರ ಕಲ್ಪನಾ ಸಾಮರ್ಥ್ಯದಿಂದ ಚಿತ್ರಿಸಿದ ಯಾವತ್ತೂ ಪಾತ್ರಗಳು ಇತರರ ಅಳವಿಗೆ ನಿಲುಕದ್ದು. ವಾ.ಸಾಮಗರಿಗೆ  ಅವರೇ ಸಾಟಿ.  ಅವರ ಸ್ಥಾನವನ್ನು ತುಂಬಬಲ್ಲ ವಿಕ್ಷಿಪ್ತ ಪ್ರತಿಭೆಗಳು ಬೇರೆಡೆ ಇಲ್ಲ ಎನ್ನಬಹುದು. ಯಕ್ಷರಂಗದಲ್ಲಿ ಬಹುದೊಡ್ಡ ನಿರ್ವಾತವನ್ನು ನಿರ್ಮಿಸಿ ಅವರು ನಿರ್ಗಮಿಸಿದ್ದಾರೆ” ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.       

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಇತ್ತೀಚೆಗೆ ನಿಧನರಾದ ಪ್ರಸಿದ್ಧ ಯಕ್ಷಗಾನ ಕಲಾವಿದ ಮಲ್ಪೆ ವಾಸುದೇವ ಸಾಮಗರ ಸ್ಮರಣಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.

ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…

‘ತೆಂಕು – ಬಡಗು ಉಭಯ ತಿಟ್ಟುಗಳ ಅಸಾಮಾನ್ಯ ವೇಷಧಾರಿಯಾಗಿ, ವಿಶಿಷ್ಟ ಶೈಲಿಯ ಅರ್ಥಧಾರಿಯಾಗಿ, ಹಲವು ಪ್ರಸಂಗಗಳ ಸಂಗ್ರಾಹಕರಾಗಿ ಮತ್ತು ಸಂಯಮಮ್ ಸಂಚಾರಿ ತಾಳಮದ್ದಳೆ ಮೇಳದ ಸಂಘಟಕರಾಗಿ ವಾಸುದೇವ ಸಾಮಗರು ಕಲಾಭಿಮಾನಿಗಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತಾರೆ’ ಎಂದು ಅವರು ನುಡಿದರು.

ಯಕ್ಷಗಾನ ಸಂಘಟಕ ಮತ್ತು ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರು ಅವರು ಮಾತನಾಡಿ ದಿ.ಕಾಳಿಂಗ ನಾವಡ ಮತ್ತು ವಾಸುದೇವ ಸಾಮಗರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿ ಶ್ರದ್ಧಾಂಜಲಿ ಸಮರ್ಪಿಸಿದರು. ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸಂತಾಪಸೂಚಕ ಠರಾವು ಮಂಡಿಸಿದರು.     ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು?         

ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಉಪಾಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ, ಕಾರ್ಯದರ್ಶಿಗಳಾದ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಉಮೇಶ ಆಚಾರ್ಯ ಗೇರುಕಟ್ಟೆ ಮೌನ ಪ್ರಾರ್ಥನೆ ಸಲ್ಲಿಸಿ ಅಗಲಿದ ಯಕ್ಷ ಚೇತನಕ್ಕೆ ಸದ್ಗತಿ ಕೋರಿದರು.

ರಾಜ್ಯೋತ್ಸವ ಕಲಾ ಸಂಭ್ರಮ: ನಗರದ ಕದ್ರಿಕಂಬಳ ಗ್ರಹ ಕಚೇರಿಯಲ್ಲಿ ಜರಗಿದ ಯಕ್ಷಾಂಗಣ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆಯನ್ನು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವಹಿಸಿದ್ದರು. ಕಳೆದ ಎಂಟು ವರ್ಷಗಳಿಂದ ಯಕ್ಷಾಂಗಣ ಆಯೋಜಿಸುತ್ತಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಲೆ ಸಪ್ತಾಹ’ ವನ್ನು ಈ ಬಾರಿ ಕೋವಿಡ್ – 19 ಹಿನ್ನೆಲೆಯಲ್ಲಿ ರದ್ದುಪಡಿಸಿದ್ದು, ಸರಕಾರದ ನಿಯಮಾವಳಿಗೊಳಪಟ್ಟು ಒಂದು ದಿನದ ಸಾಂಕೇತಿಕ ಕಲಾ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.   

   

ಇದೇ ನವೆಂಬರ್ 29ರಂದು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಸಭಾಂಗಣದಲ್ಲಿ ಜರಗುವ ‘ರಾಜ್ಯೋತ್ಸವ ಕಲಾ ಸಂಭ್ರಮ – 2020’ ಕಾರ್ಯಕ್ರಮದಲ್ಲಿ ಯಕ್ಷಾಂಗಣ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು  ‘ಶ್ರೀಕೃಷ್ಣ ತಂತ್ರ’ ಯಕ್ಷಗಾನ  ತಾಳಮದ್ದಳೆಯನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? 

ಕೊಲ್ಲಂಗಾನದಲ್ಲಿ ಬಣ್ಣದ ವೇಷದ ಕಮ್ಮಟ ಮತ್ತು ದಾಖಲೀಕರಣ

ನಿನ್ನೆ ದಿನಾಂಕ 09. 11. 2020 ಸೋಮವಾರದಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಮತ್ತು ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಹಕಾರದೊದಿಗೆ ಕೊಲ್ಲಂಗಾನ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿ, ಶ್ರೀನಿಲಯದಲ್ಲಿ, ಕೊಲ್ಲಂಗಾನ ಮೇಳದ ಸಹಕಾರದೊಂದಿಗೆ ತೆಂಕುತಿಟ್ಟು ಯಕ್ಷಗಾನದ  ಬಣ್ಣದ ವೇಷದ ಕಮ್ಮಟವನ್ನು ಏರ್ಪಡಿಸಿತ್ತು.

ಈ ಕಮ್ಮಟವು ತೆಂಕುತಿಟ್ಟು ಬಣ್ಣದ ವೇಷದ ಮಾದರಿಗಳನ್ನು ದಾಖಲೀಕರಣಗೊಳಿಸುವ ಮತ್ತು ಅದನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ದಾಟಿಸಿ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವವನ್ನು ಪಡೆದಿತ್ತು.

ಬಹಳ ಪರಿಣಾಮಕಾರಿಯಾಗಿ ಮತ್ತು ಮನೋಜ್ಞವಾಗಿ ಮೂಡಿಬಂದ ಈ ಬಣ್ಣದ ವೇಷದ ಕಮ್ಮಟದಲ್ಲಿ ತೆಂಕುತಿಟ್ಟಿನ ವಿವಿಧ ಬಣ್ಣದ ವೇಷದ ವೇಷಗಾರಿಕೆ, ಬಣ್ಣಗಾರಿಕೆ ಮತ್ತು ನೃತ್ಯ ಪ್ರಾತ್ಯಕ್ಷಿಕೆ ಮತ್ತು ವಿವರಣೆಗಳನ್ನು ನೀಡಲಾಯಿತು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಪಧಾಧಿಕಾರಿಗಳು,  ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿಯ ಪ್ರತಿನಿಧಿಗಳು, ಕೊಲ್ಲಂಗಾನ ಮೇಳದ ಸಂಚಾಲಕರು ಮತ್ತು ತೆಂಕುತಿಟ್ಟು ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರಸಿದ್ಧ ಕಲಾವಿದರು ಉಪಸ್ಥಿತರಿದ್ದರು 

ಯಾವ ಪಾತ್ರವನ್ನಾದರೂ ಮಾಡಬಲ್ಲ ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ಪೂರ್ವರಂಗದಿಂದ ತೊಡಗಿ ಹಂತ ಹಂತವಾಗಿ ಎಲ್ಲಾ ವೇಷಗಳನ್ನು  ಮಾಡಿದವನು ಯಾವ ಪಾತ್ರವನ್ನು ನೀಡಿದರೂ ನಿರ್ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಆದರೂ ತನ್ನ ವೃತ್ತಿಯಲ್ಲಿ ಸ್ಥಾನದ ಸ್ಥಿರತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ತೊಡಕುಂಟಾದೀತೆಂಬ ಭಯದಿಂದ ಕೆಲವು ಕಲಾವಿದರು ಎಲ್ಲಾ ವೇಷಗಳನ್ನು ಮಾಡಲು ಹಿಂಜರಿಯುತ್ತಾರೆ.  ಕೆಲವೊಮ್ಮೆ ಯಾವುದೇ ವೇಷಗಳನ್ನು ಮಾಡಲು ಸಿದ್ಧರಾಗಿ ಆಪದ್ಭಾಂಧವರೆನಿಸಿಕೊಳ್ಳುವ  ಕಲಾವಿದರು ಯಕ್ಷಗಾನಕ್ಕೆ ಅನಿವಾರ್ಯ. ಭಾಗವತರಿಗಿರುವ ಒತ್ತಡವನ್ನು ಇಂತಹ ಕಲಾವಿದರು ಹಗುರಗೊಳಿಸುತ್ತಾರೆ.  ಅಂತಹ ಕಲಾವಿದರಲ್ಲೊಬ್ಬರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ. 

ಬೇಬಿ ಶೆಟ್ಟಿ ಮತ್ತು ಸಂಪಾವತೀ ದಂಪತಿಗಳ ಪುತ್ರನಾಗಿ  ಬೆಳ್ತಂಗಡಿ ತಾಲೂಕು ಗುರುವಾಯನಕೆರೆಯಲ್ಲಿ   ಪ್ರಜ್ವಲ್ ಕುಮಾರ್ ಅವರು ಜನಿಸಿದರು. ಗುರುವಾಯನಕೆರೆ ಸರಕಾರೀ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ  ಮಾಡಿದರೂ ಮನೆಯಲ್ಲಿ ಕಡುಬಡತನವಿದ್ದುದರಿಂದ ಓದನ್ನು ನಿಲ್ಲಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ಸೇರಿ ಯಕ್ಷಗಾನ ನಾಟ್ಯವನ್ನು ಅಭ್ಯಸಿಸಿ, ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿದರು. 

ಮೊದಲ ವರುಷ ಬಾಲಗೋಪಾಲನಾಗಿ ಮತ್ತು ಪ್ರಸಂಗಗಳಲ್ಲಿ ಬರುವ ಇನ್ನಿತರ ವೇಷಗಳನ್ನು ನಿರ್ವಹಿಸಿದರು.  ಆಮೇಲೆ ಮುಂದಿನ ವರ್ಷಗಳಲ್ಲಿ ಮುಖ್ಯ ಸ್ತ್ರೀ ವೇಷ.  ಅಲ್ಲದೆ ನಿರಂತರ 5 ವರ್ಷಗಳ ಕಾಲ ಲಲಿತ ಕಲಾ ಕೇಂದ್ರಕ್ಕೆ ಹೋಗಿ ಅಭ್ಯಾಸಿಗಳ ಜತೆ ಕುಣಿಯುವುದರ ಜತೆಗೆ ಹೇಳಿಕೊಡುವ ಕೆಲಸವನ್ನೂ ಮಾಡುತ್ತಿದ್ದರು. ಇದರ ಪರಿಣಾಮವನ್ನು ಅವರು ಅನುಭವಿಸಿದ್ದಾರೆ. ತಾಳಜ್ಞಾನ, ಲಯಸಿದ್ಧಿ ಇರುವ ಕಲಾವಿದನೆನಿಸಿಕೊಂಡುದು ಈ ಕಾರಣದಿಂದಲೇ ಆಗಿರಬೇಕು.  5 ವರ್ಷಗಳ ಧರ್ಮಸ್ಥಳ ಮೇಳದ ತಿರುಗಾಟದ ನಂತರ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳಕ್ಕೆ ಸೇರಿದ್ದರು.  ‘ರಂಗನಾಯಕ’ ಖ್ಯಾತಿಯ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಡಿ ಕಟೀಲು ಮೇಳದಲ್ಲಿ 1 ವರ್ಷ.

ಫೋಟೋ: ಅನಿಲ್ ಎಸ್. ಕರ್ಕೇರ 

ಬಳಿಕ ಕುಂಟಾರು ರವೀಶ ತಂತ್ರಿಗಳ ನೇತೃತ್ವದ ಕುಂಟಾರು ಮೇಳದಲ್ಲಿ 2 ವರ್ಷ. ಈ ಸಂದರ್ಭದಲ್ಲಿ ಅನೇಕ ತುಳು ಪ್ರಸಂಗಗಳಲ್ಲಿ ವೇಷ ಮಾಡಿದ್ದರು.  ಬಳಿಕ ‘ರಂಗದರಾಜ’ ಶ್ರೀ ರಾಧಾಕೃಷ್ಣ ನಾವಡರು ಪ್ರಜ್ವಲ್ ಅವರನ್ನು ಎಡನೀರು ಶ್ರೀಗಳ ಬಳಿಗೆ ಕರೆದುಕೊಂಡು ಹೋಗಿದ್ದರು. ಎಡನೀರು ಮೇಳದಲ್ಲಿ ಪ್ರಜ್ವಲ್ ಅವರು 2 ವರ್ಷ ತಿರುಗಾಟ ನಡೆಸಿದ್ದರು. ತದನಂತರ 12 ವರ್ಷಗಳ ಕಾಲ ಹೊಸನಗರ ಮೇಳದಲ್ಲಿ. ಮತ್ತೆ 1 ವರ್ಷ ಎಡನೀರು ಮೇಳ. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. 

ಹಾಸ್ಯಪಾತ್ರಗಳನ್ನೂ ಚೆನ್ನಾಗಿ ಮಾಡಬಲ್ಲ ಪ್ರಜ್ವಲ್ ಅವರು ಧರ್ಮಸ್ಥಳ ಮೇಳದಲ್ಲಿ ಹಾಸ್ಯರತ್ನ ನಯನಕುಮಾರರು ಚೆನ್ನಾಗಿ ಹೇಳಿಕೊಡುತ್ತಿದ್ದರು. ಅಲ್ಲದೆ ಎಲ್ಲಾ ಕಲಾವಿದರಿಂದ ಉತ್ತೇಜನ ಸಿಕ್ಕಿದೆ ಎನ್ನುತ್ತಾರೆ. ‘ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ಕಾಣಬಹುದು’ ಎಂಬಂತೆ ಧರ್ಮಸ್ಥಳ ಮೇಳದಲ್ಲಿ ಬಾಲಕಲಾವಿದನಾಗಿದ್ದಾಗಲೇ ಇವರ ಪ್ರತಿಭೆಯನ್ನು ಎಲ್ಲರೂ ಗುರುತಿಸಿದ್ದರು. ನಂತರ ತಿರುಗಾಟ ನಡೆಸಿದ ಎಲ್ಲಾ ಮೇಳಗಳಲ್ಲೂ (ಕಟೀಲು, ಎಡನೀರು, ಕುಂಟಾರು, ಹೊಸನಗರ, ಹನುಮಗಿರಿ ಮೇಳ) ಒಳ್ಳೆಯ ಅವಕಾಶಗಳೂ ಸಿಕ್ಕಿತ್ತು.

ತನ್ನ ಸ್ವಯಂ ಪ್ರತಿಭೆ ಮತ್ತು ಸಿಕ್ಕ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡು ಬೆಳೆದ ಕಲಾವಿದ ಪ್ರಜ್ವಲ್ ಕುಮಾರ್.  ಪ್ರತ್ಯುತ್ಪನ್ನಮತಿಯಾದ ಇವರು ವಿಷಯಗಳನ್ನು ಬಲುಬೇಗನೇ ಗ್ರಹಿಸಬಲ್ಲರು. ಪ್ರಸಂಗಜ್ಞಾನ, ರಂಗನಡೆ, ಪಾತ್ರದ ಸ್ವಭಾವ ಇವುಗಳನ್ನು ಅರಿತು ವೇಷಗಳನ್ನು ನಿರ್ವಹಿಸಬಲ್ಲ ಸಮರ್ಥ ಮಾತುಗಾರಿಕೆಯೂ ಶುದ್ಧ ಮತ್ತು ಬಲುಚೊಕ್ಕ. ಎಲ್ಲಾ ವೇಷಗಳಿಗೂ ಬೇಕಾದಂತಹ ಆಳಂಗ ಹೊಂದಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಬಣ್ಣದ ವೇಷಗಳನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ.  ಮಾತುಗಾರಿಕೆಯಲ್ಲಿ ಪ್ರಭುತ್ವ ಹೊಂದಿರುವುದರಿಂದ ಮತ್ತು ಪಾತ್ರದ ಸ್ವಭಾವವರಿತು ಅಭಿನಯಿಸಬಲ್ಲ ಸಾಮರ್ಥ್ಯ ಇರುವುದರಿಂದ ಧರ್ಮರಾಯ ಮೊದಲಾದ ಒಡ್ಡೋಲಗ ವೇಷಗಳನ್ನೂ, ನಾರದ, ಅಕ್ರೂರ ಮೊದಲಾದ ಸಾತ್ವಿಕ ಪಾತ್ರಗಳನ್ನೂ ಕೊರತೆಯಾಗದಂತೆ ತುಂಬುತ್ತಾರೆ.

ಫೋಟೋ: ಅನಿಲ್ ಎಸ್. ಕರ್ಕೇರ 

ಕಳೆದ ಮೂರ್ನಾಲ್ಕು ವರ್ಷಗಳಿಂದ ತಾಳಮದ್ದಳೆ ವೇದಿಕೆಯಲ್ಲೂ ಅಪರೂಪಕ್ಕೆ ಕಾಣಿಸಿಕೊಂಡಿದ್ದಾರೆ. ಪ್ರತಿಭೆ ಮತ್ತು ಸಾಮರ್ಥ್ಯ ಇವೆರಡೂ ಸರಿಯಾದ ದಿಕ್ಕಿನಲ್ಲಿಯೇ ಸಾಗಿದರೆ ಇವರೊಬ್ಬ ಗ್ರೇಟ್ ಆಲೌರೌಂಡರ್ ಕಲಾವಿದರಾಗಿ ಮೆರೆಯಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.  “ಯಕ್ಷಗಾನವೆಂಬ ಶ್ರೇಷ್ಠ ಕಲೆಯ ಒಂದು ಅಂಗವಾಗಿ ಅಭಿನಯಿಸಲು ಸಿಕ್ಕಿದ್ದು ನನ್ನ ಭಾಗ್ಯ. ಈ ವಿಚಾರದಲ್ಲಿ ನನಗೆ ಸಂತೋಷವಿದೆ. ನಾನು ಕಲಾವಿದನಾಗುತ್ತೇನೆ ಎಂದಾಗ ಪ್ರೋತ್ಸಾಹಿಸಿದವಳು ನನ್ನ ಅಕ್ಕ. ಕಲಾವಿದನಾಗಲು ನನಗೆ ಅವಳೇ ಪ್ರೇರಕ ಶಕ್ತಿ. ವಿವಾಹಿತೆಯಾಗಿ ದೂರದ ಬಹ್ರೈನ್‍ನಲ್ಲಿ ಉದ್ಯೋಗಿಯಾಗಿದ್ದರೂ ಅವಳು ಸದಾ ಪ್ರೋತ್ಸಾಹಿಸುತ್ತಾಳೆ” ಎಂದು ಪ್ರಜ್ವಲ್ ಹೇಳುತ್ತಾರೆ. 

ಪ್ರಜ್ವಲ್ ಅವರು ಒಟ್ಟು 23 ವರ್ಷಗಳ ಕಾಲ ತಿರುಗಾಟ ನಡೆಸಿದ ಅನುಭವಿ. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಪ್ರತಿಭಾನ್ವಿತ ಕಲಾವಿದ.  “ಪೆರ್ಲ ಜಗನ್ನಾಥ ಶೆಟ್ಟರು ಮತ್ತು ಪ್ರಜ್ವಲ್ ಇದ್ದರೆ ಯಾವ ಪ್ರಸಂಗವನ್ನಾದರೂ ಆಡಬಹುದು’’. ಖ್ಯಾತ ಕಲಾವಿದ ಉಜಿರೆ ಅಶೋಕ ಭಟ್ಟರ ಮಾತುಗಳು ಇವರ ಪ್ರತಿಭೆಗೆ ಸಿಕ್ಕ ಪುರಸ್ಕಾರ.  ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲೇಬೇಕು. ಆ ನಿಟ್ಟಿನಲ್ಲಿ ಪ್ರಜ್ವಲ್ ಅವರೂ ಯೋಚಿಸಬೇಕು. ಭವಿಷ್ಯದಲ್ಲಿ ತಾನೊಬ್ಬ Star ಕಲಾವಿದನಾಗುವ ಎಲ್ಲ ಸಾಧ್ಯತೆಗಳೂ ತೆರೆದೇ ಇರುವಾಗ ಅನ್ಯ ಯೋಚನೆಗಳ ಅಗತ್ಯವೇ ಇಲ್ಲ. ಗುರಿಯತ್ತ ಸಾಗುವಲ್ಲಿ ತೊಡಗಿಸಿಕೊಳ್ಳಬೇಕು.   ಪ್ರಜ್ವಲ್ ಅವರು ಪ್ರಸ್ತುತ ತನ್ನ ತಾಯಿ ಮತ್ತು ಸೊಸೆ   ಕು| ಕುಶಿ (೬ನೇ ತರಗತಿ) ಅವರೊಂದಿಗೆ ಗುರುವಾಯನಕೆರೆಯಲ್ಲಿ ನೆಲೆಸಿರುತ್ತಾರೆ. 

ಲೇಖಕ: ರವಿಶಂಕರ್ ವಳಕ್ಕುಂಜ  

ಕಲಾವಿದ, ಸಂಚಾಲಕ ನಿಡ್ಲೆ ಗೋವಿಂದ ಭಟ್ (Nidle Govinda Bhat)

ನಿಡ್ಲೆ ಗೋವಿಂದ ಭಟ್ 1958 ಅಕ್ಟೋಬರ್ 2ರಂದು ಈಶ್ವರ ಭಟ್ಟ ಮತ್ತು ಶಂಕರಿ ದಂಪತಿಗಳ ಪುತ್ರರಾಗಿ ನಿಡ್ಲೆಯಲ್ಲಿ ಜನಿಸಿದರು.  ತನ್ನ ವಿದ್ಯಾಭ್ಯಾಸವನ್ನು ಏಳನೆಯ ತರಗತಿಗೆ ಮೊಟಕುಗೊಳಿಸಿ ಯಕ್ಷಗಾನ ಕಲೆಯತ್ತ ಆಕರ್ಷಿತರಾದರು. 1971ರಲ್ಲಿ ಧರ್ಮಸ್ಥಳ ಯಕ್ಷಗಾನ ಕೇಂದ್ರ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಯಕ್ಷಗಾನದ ಶಿಕ್ಷಣ ಪಡೆದರು.

ಆಗ ಕೇಂದ್ರದಲ್ಲಿ ನಾಟ್ಯ ಶಿಕ್ಷಕರಾಗಿದ್ದ ಶ್ರೀ ಕುರಿಯ ವಿಠಲ ಶಾಸ್ತ್ರಿ ಮತ್ತು ಶ್ರೀ ಪಡ್ರೆ ಚಂದುರವರಿಂದ ಯಕ್ಷಗಾನ ನಾಟ್ಯವನ್ನು ಕಲಿತರು.  ಅವರೀರ್ವರ ಗರಡಿಯಲ್ಲಿ ಪಳಗಿದ ನಿಡ್ಲೆ ಗೋವಿಂದ ಭಟ್ ಮುಂದೆ ಯಕ್ಷಗಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯಾಗಿ ಪರಿಗಣಿಸಲ್ಪಟ್ಟರು.   ಯಕ್ಷಗಾನ ಕಲಿಕೆಯ ನಂತರ ವೇಣೂರು ಮೇಳದಲ್ಲಿ ಸುಮಾರು 12 ವರ್ಷಗಳ ಕಾಲ ತಿರುಗಾಟ ನಡೆಸಿದರು.  ಕೋಡಂಗಿ ವೇಷಧಾರಿಯಾಗಿ ರಂಗ ಪ್ರವೇಶಿಸಿದ ಗೋವಿಂದ ಭಟ್ಟರು ಮುಂದಕ್ಕೆ ನಿತ್ಯವೇಷಗಳನ್ನು ಮಾಡಿ ಬಳಿಕ ಸುಬ್ರಹ್ಮಣ್ಯ, ಕರ್ನಾಟಕ, ಪುತ್ತೂರು, ಗೀತಾಂಬಿಕಾ ಯಕ್ಷಗಾನ ಮಂಡಳಿ, ಮುಂಬಯಿ, ಬಪ್ಪನಾಡು ಮೇಳಗಳಲ್ಲಿ ಕೂಡಾ ಕಲಾವಿದನಾಗಿ ತಿರುಗಾಟ ನಡೆಸಿದ್ದರು. 

ತಮ್ಮ ಕಲಾಜೀವನದಲ್ಲಿ ಸ್ತ್ರೀಪಾತ್ರಗಳನ್ನು ಹೊರತುಪಡಿಸಿ ಹೆಚ್ಚಿನೆಲ್ಲಾ ಪಾತ್ರಗಳನ್ನು ನಿರ್ವಹಿಸಿದ ಕೀರ್ತಿ ಶ್ರೀಯುತ ನಿಡ್ಲೆಯವರಿಗೆ ಸಲ್ಲುತ್ತದೆ. ಅವರ ಶರೀರ, ಶಾರೀರಗಳು ಸ್ತ್ರೀಪಾತ್ರಕ್ಕೆ ಹೊಂದುವುದಿಲ್ಲವೆಂದು ತಾನು ಸ್ತ್ರೀಪಾತ್ರವನ್ನು ಇಷ್ಟಪಡುತ್ತಿರಲಿಲ್ಲವೆಂದು ಗೋವಿಂದ ಭಟ್ಟರು ಹೇಳುತ್ತಾರೆ. ಆ ನಂತರ ಧರ್ಮಸ್ಥಳ ಮೇಳವೊಂದರಲ್ಲೇ ಸುದೀರ್ಘ ಸಮಯದ ಕಾಲ ತಿರುಗಾಟ ನಡೆಸಿ ಮೇಳದಿಂದ ಸ್ವಯಂ ನಿವೃತ್ತಿ ಬಯಸಿ ಕೃಷಿ ಹಾಗೂ ಯಕ್ಷಗಾನ ಎರಡನ್ನೂ ಸಮನ್ವಯತೆಯಿಂದ ಮುಂದುವರಿಸಿಕೊಂಡು ಹೋಗುತ್ತಾ ಇದ್ದಾರೆ. 

ಪ್ರಮುಖ ಪಾತ್ರಧಾರಿಯಾಗಿ ಗುರುತಿಸಲ್ಪಟ್ಟು ಸುಮಾರು 23 ವರ್ಷಗಳಷ್ಟು ಕಾಲ ಧರ್ಮಸ್ಥಳ ಮೇಳವೊಂದರಲ್ಲೇ ಕಲಾಸೇವೆ ಮಾಡಿದ್ದರು.  ಇಂದ್ರಜಿತು, ದಕ್ಷ, ವಿಶ್ವಾಮಿತ್ರ,  ಕೌಂಡ್ಲಿಕ, ರಾವಣ, ಕೌರವ, ಕಂಸ, ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಮುಸಲ್ಮಾನ ವ್ಯಾಪಾರಿ, ಕರ್ಣ ಮೊದಲಾದ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಪ್ರಸಿದ್ಧಿಯಾದರು.  ಇಂತಹ ವೇಷಗಳಲ್ಲಿ ಹೆಸರು ಮಾಡಿದರೂ ನಿಡ್ಲೆಯವರು ನಿರ್ವಹಿಸದ ಪಾತ್ರಗಳಿಲ್ಲ. ಮಹಿಷಾಸುರನೇ ಮೊದಲಾದ ಹಲವಾರು ಬಣ್ಣದ ವೇಷಗಳಲ್ಲೂ  ವಲಲ ಭೀಮ, ಘಟೋತ್ಕಜ ಪಾತ್ರಗಳಲ್ಲೂ ಮಿಂಚಿದವರು.  ಅವರು ಎಲ್ಲ ಬಗೆಯ ಪಾತ್ರಗಳಿಗೂ ಸೈ ಎನ್ನುವವರು. 

ಜಾಹೀರಾತು

ಪ್ರಚಾರಪ್ರಿಯರಾಗದೆ ತನ್ನ ಕೆಲಸ ತಾನು ಮಾಡಿಕೊಂಡು ಹೋಗುವ ಕಲಾವಿದ. ಆದರೂ  ಹಲವಾರು ಸಂಘ-ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನ, ಪ್ರಶಸ್ತಿಗಳನ್ನೂ ನೀಡಿ ಗೌರವಿಸಿದೆ. ಮಳೆಗಾಲದಲ್ಲಿ ಪರವೂರುಗಳಲ್ಲಿ ತಿರುಗಾಟ ನಡೆಸುತ್ತಿದ್ದ ತನ್ನದೇ ಪ್ರವಾಸೀ ತಂಡವಾದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ’ಯನ್ನು ಸ್ಥಾಪಿಸಿದ್ದರು. ಇಷ್ಟರವರೆಗೆ ಸುಮಾರು 33 ವರ್ಷಗಳ ಕಾಲ ಮಳೆಗಾಲದ ತಿರುಗಾಟವನ್ನೂ ಅವರ ಈ ಯಕ್ಷಗಾನ ಮಂಡಳಿಯು ಯಶಸ್ವಿಯಾಗಿ ಪೂರೈಸಿತ್ತು.

ಮಂಡಳಿ ಪ್ರಾರಂಭಿಸಿದ ವರ್ಷದಲ್ಲಿ ಕೇವಲ 15 ಆಟಗಳು ಮಾತ್ರ ಸಿಕ್ಕಿತ್ತು. ಆಮೇಲೆ ಹೆಚ್ಚಾಗುತ್ತಾ ಹೋಗಿ ಬೆಳೆಯುತ್ತಾ ಬೆಳೆಯುತ್ತಾ ತನ್ನ ಕಾರ್ಯ ವ್ಯಾಪ್ತಿ ವಿಸ್ತಾರಗೊಳಿಸಿ ಮಳೆಗಾಲದ ಅವಧಿಯಲ್ಲಿ 122 ಯಕ್ಷಗಾನ ಪ್ರದರ್ಶನಗಳನ್ನು ಮಾಡಿದ್ದು ನಿಡ್ಲೆಯವರ ಯಕ್ಷಗಾನ ಮಂಡಳಿಯ ಸಾಧನೆ. ಮೈಸೂರು, ಬೆಂಗಳೂರು, ಚೆನ್ನೈ, ಕೊಯಂಬತ್ತೂರು, ಹೈದರಾಬಾದ್, ಮಂತ್ರಾಲಯ, ವಿಜಯವಾಡ, ವಿಶಾಖಪಟ್ಟಣ, ಕಲ್ಕತ್ತಾ, ಬೀದರ್, ಗುಲ್ಬರ್ಗಾ, ಹಂಪೆ ಕನ್ನಡ ವಿ.ವಿ., ಹಾವೇರಿ ಗೊಟಗೋಡಿ ಜನಪದ ವಿ.ವಿ., ಪೂನಾ, ಬಾಗಲಕೋಟೆ, ಅಥಣಿ, ನೀಲೇಶ್ವರ, ಶ್ರೀಶೈಲಂ ಮೊದಲಾದ ಕಡೆಗಳಲ್ಲಿ ನಿಡ್ಲೆ ಗೋವಿಂದ ಭಟ್ಟರ ತಂಡವು ಯಶಸ್ವೀ ಪ್ರದರ್ಶನಗಳನ್ನು ನೀಡಿತ್ತು.

ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಈ ಸಂಸ್ಥೆಗೆ 34ರ ಹರೆಯ. ಮೇಳದ ತಿರುಗಾಟವನ್ನು ಮುಗಿಸಿದ ನಂತರ ಮಳೆಗಾಲದಲ್ಲಿ ಕೆಲಸವಿಲ್ಲದೆ ಇರುತ್ತಿದ್ದ ಅನೇಕ ಕಲಾವಿದರಿದ್ದರು. ಅದೂ ಅಲ್ಲದೆ ತನ್ನ ಆರ್ಥಿಕ ಪರಿಸ್ಥಿತಿಯೂ ಆಗ ಅಷ್ಟೇನೂ ಉತ್ತಮವಾಗಿರಲಿಲ್ಲ ಎಂದು ಗೋವಿಂದ ಭಟ್ಟರು ಹೇಳುತ್ತಾರೆ. ಆ ಸಂದರ್ಭದಲ್ಲಿ ಅವರಿಗೆ ಆಲೋಚನೆಯೊಂದು ಹೊಳೆಯಿತು. ಮನದಲ್ಲಿ ರೂಪುರೇಷೆ ಸಿದ್ಧವಾಯಿತು. ಯೋಚಿಸಿದ ಕೆಲಸಕ್ಕೆ ಸಹೋದರ ಶ್ರೀ ನಾರಾಯಣ ಭಟ್ಟರ ಸಹಕಾರವೂ ಸಿಕ್ಕಿತು. ಆ ಆಲೋಚನೆಗಳ ಕಾರ್ಯರೂಪವೋ ಎಂಬಂತೆ ‘ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ’ಯು ಜನ್ಮ ತಾಳಿತು.

ಮೊದಲೇ ಹೇಳಿದಂತೆ ಪ್ರಥಮ ವರ್ಷದಲ್ಲಿ ಕೇವಲ 15 ಆಟಗಳು ನಿಗದಿಯಾದುವು (ಅದರಲ್ಲಿ ಕೆಲವು ರದ್ದಾಗಿವೆ). ಆಮೇಲೆ ಬೆಳೆಯುತ್ತಾ ಹೋಗಿ ವರ್ಷಕ್ಕೆ 125 ಆಟಗಳಷ್ಟು ನಿಗದಿಯಾದದ್ದೂ ಇದೆ ಎಂದು ನಿಡ್ಲೆಯವರು ಹೇಳುತ್ತಾರೆ. ಪ್ರಯತ್ನಪಟ್ಟರೆ ಇನ್ನೂ ಹೆಚ್ಚು ಆಟಗಳನ್ನು ಪ್ರದರ್ಶಿಸಲು ಸಾಧ್ಯವಿದೆ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ. ಆದರೆ ಮನೆಯ, ಕೃಷಿಯ ಕೆಲಸಗಳಿಂದಾಗಿ ಆ ಕಡೆಗೂ ಗಮನ ಕೊಡಬೇಕಾಗುತ್ತದೆಯಂತೆ. ಹೆಚ್ಚಿನೆಲ್ಲಾ ಹಿರಿಯ, ಕಿರಿಯ ಕಲಾವಿದರು ನಿಡ್ಲೆಯವರ ತಂಡದಲ್ಲಿ ತಿರುಗಾಟ ನಡೆಸಿದ್ದಾರೆ. 

ಫೋಟೋ: ಮಧುಸೂದನ ಅಲೆವೂರಾಯ 

ಪ್ರಸ್ತುತ ಧರ್ಮಸ್ಥಳ ಸಮೀಪ ನಿಡ್ಲೆಯಲ್ಲಿ ವಾಸವಾಗಿರುವ ಗೋವಿಂದ ಭಟ್ಟರದು ಕೃಷಿಕ ಕುಟುಂಬ. ಚಿಕ್ಕ ಸಂಸಾರ, ಚೊಕ್ಕ ಸಂಸಾರ. ಮಗ ಈಶ್ವರಚಂದ್ರ ನಿಡ್ಲೆ ಮತ್ತು ಮಗಳು ವಿದ್ಯಾಶಂಕರಿ. ಪತ್ನಿ ವಸಂತಿ ಪತಿಯ ಕಾರ್ಯಗಳಿಗೆ ಸಹಕಾರಿಯಾಗಿ ಸಂಸಾರ ತೂಗಿಸುವ ಆದರ್ಶ ಗೃಹಿಣಿ. 

ಲೇಖನ: ಮನಮೋಹನ್ ವಿ.ಎಸ್

ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? 

2015ರಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಂಪಾಜೆ ಯಕ್ಷೋತ್ಸವದ ಕಿರೀಟಕ್ಕೆ ರಜತ ಸಂಭ್ರಮದ ಗರಿ. ಆ ಹೆಮ್ಮೆಯ ರಜತ ಮಹೋತ್ಸವದ ಸಂಭ್ರಮದ ಪ್ರಯುಕ್ತ ಅಪೂರ್ವವೂ ಅವರ್ಣನೀಯವೂ ಆದ ಪ್ರದರ್ಶನವೊಂದನ್ನು ಸಂಯೋಜಿಸಿ ಆಯೋಜಿಸಿದ್ದು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಹೆಗ್ಗಳಿಕೆಯೆಂದೇ ಹೇಳಬಹುದು.

ಅದುವೇ ಅಪೂರ್ವ ಸ್ಪರ್ಧೆಯ ಮೂರಾಟ. ಬಹುಶಃ ಜೋಡಾಟವನ್ನೂ ನೋಡದ ಯಕ್ಷಗಾನದ ಅಭಿಮಾನಿಗಳು ನಮ್ಮ ನಡುವೆ ಇರಬಹುದು. ಆದರೆ ಮೂರು ರಂಗಸ್ಥಳಗಳಲ್ಲಿ ಒಂದೇ ಪ್ರಸಂಗವನ್ನು ಪ್ರದರ್ಶಿಸುವ ಅತೀ ಅಪರೂಪದ ‘ಮೂರಾಟ’ವನ್ನು ಈ ಮೊದಲು ಕಂಡವರು ಯಾರಾದರೂ ಇರಬಹುದೋ ಅಥವಾ ಮೊದಲು ಕಂಡ ಹಿರಿಯರು ಈಗ ನಮ್ಮ ನಡುವೆ ಇದ್ದಾರೆಯೇ ಅಥವಾ ಇಲ್ಲವೋ ಎಂದು ಗೊತ್ತಿಲ್ಲ.

ನೋಡದವರಿಗಂತೂ 07. 11. 2015ರ ಶನಿವಾರ ನಡೆದ ಈ ಪ್ರದರ್ಶನ ಅಂತಹಾ ಅಪೂರ್ವ ಕ್ಷಣಗಳನ್ನು ಕಂಡು ಆನಂದಿಸುವ ಸುಯೋಗ ಒದಗಿ ಬಂದದ್ದಂತೂ ಸುಳ್ಳಲ್ಲ. ಮೂರೂ ರಂಗಸ್ಥಳಗಳನ್ನು ತುಂಬಾ ವ್ಯವಸ್ಥಿತವಾಗಿ ವಿನ್ಯಾಸಗೊಳಿಸಿ ಸಿದ್ಧಪಡಿಸಲಾಗಿತ್ತು. ಸಭೆಯಲ್ಲಿ ಬಂದು ರಂಗವೇರುವ ಪಾತ್ರಗಳಿಗಾಗಿ ರಂಗಸ್ಥಳದ ಎದುರು ಸಭೆಯ ಮಧ್ಯೆ ಮೂರು ಅಗಲವಾದ ದಾರಿಗಳನ್ನು (ಮಾರ್ಗ) ಬಿಡಲಾಗಿತ್ತು. ಸಾಧಾರಣವಾಗಿ ಜೋಡಾಟಗಳಲ್ಲಿ ಯಕ್ಷಗಾನದ ನೈಜ ಆಸ್ವಾಧನೆಗೆ ಭಂಗವಾಗುತ್ತಿದ್ದರೂ ಮೂರಾಟದ ಅಪರೂಪದ ಪ್ರಯೋಗವನ್ನು ಪ್ರೇಕ್ಷಕರು ಬಹಳಷ್ಟು ಆಸ್ವಾದಿಸಿ ಆನಂದಿಸಿದರು. ಅದಕ್ಕೆ ಅಂದು ಸಂಪಾಜೆಯ ವಠಾರದಲ್ಲಿ ಕಿಕ್ಕಿರಿದು ತುಂಬಿ ತುಳುಕುತ್ತಿದ್ದ ಜನಸಂದಣಿಯೇ ಸಾಕ್ಷಿ. 

‘ದೇವಿ ಮಹಾತ್ಮೆ’ ಪ್ರಸಂಗವು ಮೂರಾಟಕ್ಕೆ ಹೇಳಿ ಮಾಡಿಸಿದ ಪ್ರಸಂಗವಾದ್ದರಿಂದಲೋ ಅಥವಾ ಈ ಪ್ರಸಂಗದ ಬಗ್ಗೆ ಹೆಚ್ಚಿನ ಪ್ರೇಕ್ಷಕರು ತಿಳಿದವರಾದ್ದರಿಂದಲೋ ಏನೋ ಸದ್ದುಗಳ ನಡುವೆಯೂ ಪ್ರೇಕ್ಷಕರು ಯಕ್ಷಗಾನವನ್ನು ಆಸ್ವಾದಿಸಿದ ರೀತಿ ಗಮನಾರ್ಹವಾಗಿತ್ತು. ಮೂರು ರಂಗಸ್ಥಳಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ಚೌಕಿಗಳ ವ್ಯವಸ್ಥೆ, ರಂಗಸ್ಥಳದ ಹಿಂಭಾಗದಲ್ಲಿ ವೇಷ ಧರಿಸಿದ ನಂತರ ಕಲಾವಿದರಿಗೆ  ಕುಳಿತುಕೊಳ್ಳುವ ವ್ಯವಸ್ಥೆ ಹಾಗೂ ಒಟ್ಟು ವ್ಯವಸ್ಥೆಯಲ್ಲಿ ಪ್ರತಿಷ್ಠಾನದ ಕಾಳಜಿ ಎದ್ದು ಕಾಣುತ್ತಿತ್ತು.

ಸಂಪಾಜೆ ಯಕ್ಷೋತ್ಸವದ ರಜತ ಸಂಭ್ರಮದ ಪ್ರಯುಕ್ತ ನಡೆದ ಮೂರಾಟವು ಹಲವು ಅತ್ಯಪೂರ್ವ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಇಂತಹಾ ಪ್ರದರ್ಶನಗಳನ್ನು ಸಂಘಟಿಸುವುದು ಅತಿ ಕಷ್ಟಕರ. ಅದೂ ಇಂತಹಾ ಅತ್ಯದ್ಭುತ ವ್ಯವಸ್ಥೆ, ಅನುಕೂಲಗಳನ್ನು ಕಲ್ಪಿಸುತ್ತಾ ಕಷ್ಟದ ಕೆಲಸಗಳನ್ನು ಅತಿ ಸುಲಭವಾಗಿ ನಿರ್ವಹಿಸುವುದು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದಿಂದ ಮಾತ್ರ ಸಾಧ್ಯ. ಮೂರೂ ರಂಗಸ್ಥಳಗಳಲ್ಲಿ ಮಧು ಕೈಟಭರು ಸಭೆಯಿಂದ ಪ್ರವೇಶಿಸಿದ್ದು, ವಿದ್ಯುನ್ಮಾಲಿಯ ಮದುವೆಯ ಸಂದರ್ಭದಲ್ಲಿ ಸಭೆಯಲ್ಲಿ ಸಂಚರಿಸಿದ್ದು, ಮಹಿಸಾಸುರ, ಚಂಡ-ಮುಂಡರು ಸಭೆಯಿಂದ ಆಗಮಿಸಿದ್ದು ಗಮನಾರ್ಹವಾಗಿತ್ತು. ಒಟ್ಟಾರೆ ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗಬಹುದಾದ ಈ ಮೂರಾಟದ ಪ್ರದರ್ಶನವು ಚರಿತ್ರೆಯನ್ನೇ ಸೃಷ್ಟಿಸುವುದರ ಜೊತೆಗೆ ಪ್ರತಿಯೊಬ್ಬ ಪ್ರೇಕ್ಷಕರೂ ಈ ಎಲ್ಲಾ ಕ್ಷಣಗಳನ್ನು ಅನುಭವಿಸಿ ಆನಂದಿಸಿದರು.

ಹಾಗಾದರೆ ಈ ಮೂರಾಟ ಎಂಬುದು ಸಂಪಾಜೆಯಲ್ಲೇ ಪ್ರಥಮ ಬಾರಿಗೆ ನಡೆದಿತ್ತೇ? ಇದು ಪ್ರಥಮ ಪ್ರಯೋಗವೇ? ಎಂಬ ಪ್ರಶ್ನೆಗಳಿಗೆ ‘ಅಲ್ಲ’ ಎಂಬುದೇ ಉತ್ತರ. ಇದು ಮೂರಾಟದ ಪ್ರಥಮ ಪ್ರಯೋಗವಲ್ಲ. ಈ ಹಿಂದೆಯೂ ಮೂರಾಟದ ಪ್ರಯೋಗ ಆಗಿತ್ತು ಎನ್ನುವುದನ್ನು ನಾವು ಕೇಳಿದ್ದೇವೆ. ಮನೆಯಲ್ಲಿ ಹಿರಿಯರೂ, ವಯೋವೃದ್ಧರೂ ಈ ಬಗ್ಗೆ ಸ್ವಾರಸ್ಯಕರವಾಗಿ ವಿವರಿಸುವುದನ್ನು ಕೇಳಿದ್ದೇವೆ. ನಾವು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗದಿದ್ದರೂ ಹಲವರಿಗೆ ಹಿಂದೆ ನಡೆದ ಮೂರಾಟದ ಬಗ್ಗೆ ಕೇಳಿ ಗೊತ್ತಿರಬಹುದು.

ಬಹಳ ವರ್ಷಗಳ ಹಿಂದೆ ಕೂಡ್ಲು ಮೇಳ,  ಧರ್ಮಸ್ಥಳ ಮೇಳ ಮತ್ತು ಕುಂಡಾವು ಮೇಳಗಳು ಬೆಳ್ತಂಗಡಿಯಲ್ಲಿ ಇಂತಹಾ ಒಂದು ಜೋಡಾಟವನ್ನು ಪ್ರದರ್ಶಿಸಿದ್ದುವಂತೆ. ಅದು ಮೂರು ಮೇಳಗಳ ನಡುವಿನ ಸ್ಪರ್ಧೆಯ ಆಟವಾದರೂ ಆಗೆಲ್ಲಾ ಇದನ್ನು ಜೋಡಾಟವೆಂದೇ ಕೆರೆಯುತ್ತಿದರು. ಮೂರಾಟ ಎಂಬ ಹೆಸರು ಆಗ ಬಳಕೆಯಲ್ಲಿ ಇದ್ದಿರಲಿಲ್ಲ ಎಂದು ಕಾಣುತ್ತದೆ. ಆಗೆಲ್ಲಾ ಜೋಡಾಟಗಳೆಂದರೆ ಅದೊಂದು ಯುದ್ಧ ಗೆಲ್ಲುವ ಸ್ಪರ್ಧೆಯಂತೆಯೇ ಎಂದು ಕಲಾವಿದರು, ಸಂಘಟಕರು, ಮೇಳಗಳ ಸಂಚಾಲಕರು ಮತ್ತು ಮೇಳಗಳ ಅಭಿಮಾನೀ ಪ್ರೇಕ್ಷಕರು ತಿಳಿದುಕೊಳ್ಳುತ್ತಿದ್ದರಂತೆ.

ಆಗ ಅತಿಕಾಯ, ಇಂದ್ರಜಿತು, ಮೈರಾವಣ ಕಾಳಗ ಎಂಬ ಪ್ರಸಂಗವನ್ನು ಮೂರು ರಂಗಸ್ಥಳಗಳಲ್ಲಿ ಬೆಳ್ತಂಗಡಿಯ ಜೋಡಾಟದಲ್ಲಿ ಪ್ರದರ್ಶಿಸಿದ್ದರಂತೆ. ಅದಕ್ಕಿಂತ ಹಿಂದೆಯೂ ಇಂತಹಾ ಮೂರಾಟಗಳು ಜೋಡಾಟ ಎಂಬ ಹೆಸರಿನಲ್ಲಿ ಪ್ರದರ್ಶನ ಆಗಿರಲೂ ಬಹುದು. ಅದರ ಬಗ್ಗೆ ತಿಳಿದವರು ತಮ್ಮ ಅನಿಸಿಕೆಗಳನ್ನು ಹೇಳಿದರೆ ಸ್ವಾಗತ.

ಆದರೆ ಇನ್ನು ಮುಂದಕ್ಕೆ ಇಂತಹಾ ವೈಭವದ ಮೂರಾಟದ ಪ್ರದರ್ಶನಗಳು ನಡೆಯಬಹುದೇ? ಸಂಪಾಜೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಮಾಡಿದ ಸಾಹಸವನ್ನು ಬೇರೆ ಯಾರಾದರೂ ಪುನರಾವರ್ತಿಸಲು ಯತ್ನಿಸಬಹುದೇ? ಎಂಬ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕಷ್ಟೆ. 

ಲೇಖನ: ಮನಮೋಹನ್ ವಿ.ಎಸ್.