Friday, August 28, 2026
Home Blog Page 373

ವಾಲಿಮೋಕ್ಷ – ಇಂದು ಯಕ್ಷಗಾನ ತಾಳಮದ್ದಳೆ

ಪುತ್ತೂರು ತಾಲೂಕು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್, ಪಾಲ್ತಾಡಿ ಇವರ ಪ್ರಾಯೋಜಕತ್ವದಲ್ಲಿ ಇಂದು ಅಂದರೆ ದಿನಾಂಕ 16. 11. 2020ರಂದು ‘ವಾಲಿಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಪಾಲ್ತಾಡಿಯಲ್ಲಿ ಈ ತಾಳಮದ್ದಳೆ ನಡೆಯಲಿದೆ ಎಂದು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಗುರುಕಿರಣ್ ಬೊಳಿಯಾಲ ಮತ್ತು ಕಾರ್ಯದರ್ಶಿಗಳಾದ ಪ್ರದೀಪ್ ಶೆಟ್ಟಿ ಪಾಲ್ತಾಡಿ ತಿಳಿಸಿದ್ದಾರೆ.

ದಿನಾಂಕ 16. 11. 2020 ಸೋಮವಾರ ಅಪರಾಹ್ನ 2 ಘಂಟೆಗೆ ಸರಿಯಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಆರಂಭವಾಗಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಲಾಗಿದೆ. 

ವೇಷಧಾರಿಯು ಮದ್ದಳೆಗಾರರಾದ ಅಚ್ಚರಿಯ ಬಗೆ – ಕೊಂಕಣಾಜೆ ಚಂದ್ರಶೇಖರ ಭಟ್

ಶ್ರೀ ಕೊಂಕಣಾಜೆ ಚಂದ್ರಶೇಖರ ಭಟ್ ಅವರು ತೆಂಕುತಿಟ್ಟಿನ ಯುವ, ಅನುಭವೀ ಮದ್ದಳೆಗಾರರಲ್ಲೊಬ್ಬರು. ಹೆಜ್ಜೆಗಾರಿಕೆಯನ್ನು ಕಲಿತು ವೇಷಧಾರಿಯಾಗಿ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಶ್ರೀಯುತರು, ಛಲದಿಂದ ಹಿಮ್ಮೇಳ ವಿದ್ಯೆಯನ್ನು ಕಲಿತು ಎಲ್ಲರೂ ಅಚ್ಚರಿ ಪಡುವಂತೆ ಇಂದು ಒಳ್ಳೆಯ ಮದ್ದಳೆಗಾರರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ.

ಉತ್ತಮ ಸಂಘಟಕರಾಗಿಯೂ, ಲೇಖಕರಾಗಿಯೂ ಇವರು ಎಲ್ಲರಿಗೂ ಪರಿಚಿತರು. ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕಂಬಳಿಮೂಲೆ ಉಪಾಧ್ಯಾಯ ಮನೆತನ. 1975 ಏಪ್ರಿಲ್ 18ರಂದು ಶ್ರೀ ಎಲ್.ಸುಬ್ರಾಯ ಭಟ್ ಮತ್ತು ಶ್ರೀಮತಿ ದುರ್ಗಾಪರಮೇಶ್ವರಿ ದಂಪತಿಗಳಿಗೆ ಮಗನಾಗಿ ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮದ ಕೊಂಕಣಾಜೆ ಎಂಬಲ್ಲಿ ಜನನ. ವಿದ್ಯಾಭ್ಯಾಸ ಪಿಯುಸಿ ವರೆಗೆ. ಏಳನೇ ತರಗತಿ ವರೆಗೆ ವೇಣೂರು ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಎಡನೀರು ಸ್ವಾಮೀಜೀಸ್ ಹೈಸ್ಕೂಲಿನಲ್ಲಿ. (ಬದಿಯಡ್ಕ ಸಮೀಪದ ಕಜೆಹಿತ್ತಿಲು ಎಂಬಲ್ಲಿ ಚಿಕ್ಕಮ್ಮನ ಮನೆಯಲ್ಲಿದ್ದು ಹೈಸ್ಕೂಲ್ ವಿದ್ಯಾರ್ಜನೆ ಪೂರೈಸಿದ್ದರು.)

ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಮನೆಯವರೆಲ್ಲರೂ ಕಲಾಸಕ್ತರಾಗಿದ್ದರು. ಅಲ್ಲದೆ ಖ್ಯಾತ ಹಾಸ್ಯಗಾರರಾದ ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಯಿಸರು ಬಂಧುಗಳೇ ಆಗಿದ್ದರು. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಪೆರ್ಲದಲ್ಲಿ ಶ್ರೀ ಸಬ್ಬಣಕೋಡಿ ರಾಮ ಭಟ್ಟರಿಂದ ನಾಟ್ಯ ಕಲಿತು ಕೊಂಕಣಾಜೆ ಚಂದ್ರಶೇಖರ ಭಟ್ಟರು ರಾಮಾಶ್ವಮೇಧ ಪ್ರಸಂಗದಲ್ಲಿ ಶತ್ರುಘ್ನನಾಗಿ ರಂಗಪ್ರವೇಶ ಮಾಡಿದ್ದರು (ಪೆರ್ಲದಲ್ಲಿ). ಬಳಿಕ ನಿರಂತರ ಐದಾರು ವರ್ಷಗಳ ಕಾಲ ವೇಷಗಳನ್ನು ಮಾಡಿದ್ದರು.

(ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಜನೆ. ಇಂಟರ್ ಕಾಲೇಜು ಸ್ಪರ್ಧೆಯಲ್ಲಿ ಕಿರೀಟ ವೇಷಧಾರಿಯಾಗಿ ಪ್ರಥಮ ಬಹುಮಾನ ಪಡೆದಿದ್ದರು (ವಿದ್ಯುನ್ಮತಿ ಕಲ್ಯಾಣ ಪ್ರಸಂಗದ ಕುಶ). ಯಕ್ಷಕೂಟ ಪುತ್ತೂರು ಅಲ್ಲದೆ ಹಲವಾರು ಸಂಘ ಸಂಸ್ಥೆಗಳ ಪ್ರದರ್ಶನಗಳಲ್ಲಿ ವಿದ್ಯಾರ್ಥಿಯಾಗಿರುವಾಗಲೇ ವೇಷ ಮಾಡುತ್ತಾ ಬಂದಿದ್ದರು. ಆಗಲೇ ಹಿಮ್ಮೇಳ ಕಲಿಯುವ ಆಸಕ್ತಿ ಇತ್ತು. ಆದರೆ ಅನುಕೂಲವಾಗಿರಲಿಲ್ಲ. ಪಿಯುಸಿ ವಿದ್ಯಾರ್ಜನೆಯ ಬಳಿಕ ಮುಳಿಯ ಜ್ಯುವೆಲ್ಸ್ ಸಂಸ್ಥೆಯಲ್ಲಿ ಒಂದು ವರ್ಷ ಉದ್ಯೋಗಿಯಾಗಿದ್ದರು. ಈ ಸಮಯದಲ್ಲಿ ಕೇಳ ಕಾಶಿಪಟ್ನದಲ್ಲಿ ನಾಟ್ಯ ತರಗತಿಯನ್ನೂ ನಡೆಸಿದ್ದರು.

ಹಿಮ್ಮೇಳ ಕಲಿಯಲೇ ಬೇಕೆಂಬ ನಿರ್ಣಯವನ್ನು ಮಾಡಿ 1996ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ತೆರಳಿದ್ದರು. ಧರ್ಮಸ್ಥಳ ತರಬೇತಿ ಕೇಂದ್ರದಲ್ಲಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ದಂಪತಿಗಳಿಂದ ಮದ್ದಳೆವಾದನದ ಅಭ್ಯಾಸ. ಕೇಂದ್ರದಲ್ಲಿ ಶ್ರೀ ರವಿಚಂದ್ರ  ಕನ್ನಡಿಕಟ್ಟೆ, ದಿನೇಶ ಕೋಡಪದವು, ಬಾಲಕೃಷ್ಣ ಮಿಜಾರು, ಕೂರಿಯಾಳ ಶ್ರೀನಿವಾಸ ಇವರು ಸಹಪಾಠಿಗಳಾಗಿದ್ದರು. ರವಿಚಂದ್ರ ಕನ್ನಡಿಕಟ್ಟೆ ಅವರು ನಾಟ್ಯ ಕಲಿತು ಮೇಳದಲ್ಲಿ ವೇಷ ಮಾಡುತ್ತಿದ್ದವರು ಅಚ್ಚರಿಯ ಬೆಳವಣಿಗೆಯಲ್ಲೇ ಭಾಗವತರಾದುದು.

(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )

ಲಲಿತ ಕಲಾ ಕೇಂದ್ರದಲ್ಲಿ ಶ್ರೀ ಹರಿನಾರಾಯಣ ಬೈಪಡಿತ್ತಾಯರಿಂದ ತರಬೇತಿ ಪಡೆದು ಕೊಂಕಣಾಜೆ ಚಂದ್ರಶೇಖರ ಭಟ್ಟರು 1996-97ರಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಯಾಗಿದ್ದರು. 1ನೇ ಮೇಳದಲ್ಲಿ 1 ವರ್ಷ ಮದ್ದಳೆಗಾರರಾಗಿ ತಿರುಗಾಟ (ಬೊಟ್ಟೆಕೆರೆ ಪುರುಷೋತ್ತಮ ಪೂಂಜರು ಪ್ರಧಾನ ಭಾಗವತರು). ಬಳಿಕ 8 ವರ್ಷ ಕಟೀಲು ನಾಲ್ಕನೇ ಮೇಳದಲ್ಲಿ ವ್ಯವಸಾಯ (ಕುಬಣೂರು ಶ್ರೀಧರ ರಾಯರ ಭಾಗವತಿಕೆಯಡಿ). ಬಳಿಕ ಪ್ರಧಾನ ಮದ್ದಳೆಗಾರರಾಗಿ ಭಡ್ತಿ ಹೊಂದಿ ಮತ್ತೆ ಒಂದನೇ ಮೇಳದಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಭಾಗವತಿಕೆಯಲ್ಲಿ ಮೂರು ವರ್ಷಗಳ ತಿರುಗಾಟ.

ಬಳಿಕ ವೈಯುಕ್ತಿಕ ಸಮಸ್ಯೆಗಳಿಂದಾಗಿ ಮೇಳದ ತಿರುಗಾಟ ನಿಲ್ಲಿಸಿದ್ದರು. ಆದರೂ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಅನಿವಾರ್ಯವಾದಾಗ ಮೇಳದ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಅಲ್ಲದೆ ಗಾನ ವೈಭವ, ನಾಟ್ಯ ವೈಭವಗಳಲ್ಲಿ ತಮ್ಮ ಕೈಚಳಕವನ್ನು ಪ್ರದರ್ಶಿಸಿರುತ್ತಾರೆ. ತನ್ಮಧ್ಯೆ ಪೂಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಟ್ಯ ತರಗತಿಯನ್ನೂ ಪೂಂಜ ಮತ್ತು ಮೂಡಬಿದಿರೆಗಳಲ್ಲಿ ಹಿಮ್ಮೇಳ ತರಗತಿಗಳನ್ನೂ ನಡೆಸಿದ್ದರು.

(ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)

ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರು ಉತ್ತಮ ಕೃಷಿಕರೂ ಆಗಿರುತ್ತಾರೆ. ಪ್ರಸ್ತುತ ಕೃಷಿಯ ಜತೆ ಕಾರಿಂಜ ಮತ್ತು ವಾಮದಪದವು ಎಂಬಲ್ಲಿ ಹಿಮ್ಮೇಳ ತರಗತಿಗಳನ್ನೂ ನಡೆಸುತ್ತಿದ್ದಾರೆ. ಅಲ್ಲದೆ ಕಲಿಕಾಸಕ್ತರು ಮನೆಗೆ ಬಂದರೆ ಪ್ರತಿಫಲಾಪೇಕ್ಷೆ ಇಲ್ಲದೆ ತರಬೇತಿ ನೀಡುತ್ತಾರೆ. ಕೊಂಕಣಾಜೆಯವರು ಪ್ರಸ್ತುತ ಬಹು ಬೇಡಿಕೆಯ ಯುವ ಮದ್ದಳೆಗಾರರು. ಪ್ರಸಂಗ ಜ್ಞಾನ, ರಂಗ ನಡೆ, ಮುಮ್ಮೇಳದ ಜ್ಞಾನವನ್ನೂ ಹೊಂದಿದ ಮದ್ದಳೆಗಾರರಿವರು.

ಯಕ್ಷಗಾನ ಪ್ರದರ್ಶನ, ತಾಳಮದ್ದಳೆ, ಗಾನ ವೈಭವ ಕಾರ್ಯಕ್ರಮಗಳ ಸಂಘಟಕರಾಗಿಯೂ ಕೊಂಕಣಾಜೆಯವರು ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಬಲಿಪ ಗಾನ-ಯಾನ, ಯಕ್ಷ ಪರಂಪರೆಯ ನಿರಂತರ ಪಯಣ’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಯಕ್ಷ ಪರಂಪರೆಯ ಹಾಡುಗಳನ್ನು ದಾಖಲೀಕರಿಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶವನ್ನು ಇದು ಹೊಂದಿದೆ.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಹಾಗೂ ಬೆಳ್ತಂಗಡಿಯ SDMC ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಕೊಂಕಣಾಜೆ ಚಂದ್ರಶೇಖರ ಭಟ್ಟರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಉತ್ತಮ ಲೇಖಕರೂ ಹೌದು. ಇವರ ಅಣ್ಣ ಕೊಂಕಣಾಜೆ ರಮೇಶ ಭಟ್ಟರು ಉತ್ತಮ ಕ್ರಷಿಕರು ಮತ್ತು ಕಾಷ್ಠ ಶಿಲ್ಪಿ ಕಲಾವಿದರು.

(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )

ಕೊಂಕಣಾಜೆ ಚಂದ್ರಶೇಖರ ಭಟ್ಟರ ಪತ್ನಿ ಶ್ರೀಮತಿ ಸರೋಜ (೨೦೦೯ರಲ್ಲಿ ವಿವಾಹ) ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ರಂಜಿನಿ ೫ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪುತ್ರ ಮಾ| ಸುಷೇಣ. ಯುವ ಮದ್ದಳೆಗಾರರಾದ ಶ್ರೀ ಕೊಂಕಣಾಜೆ ಚಂದ್ರಶೇಖರ ಭಟ್ಟರಿಂದ ಯಕ್ಷಗಾನ ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ ಎಂಬ ಶುಭ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ (ಫೋಟೋ: ರಾಮ್ ನರೇಶ್ ಮಂಚಿ, ಅಕ್ಷಯ್ ಕೃಷ್ಣ, ಚಂದ್ರಿಕಾ ಭಟ್ ಮವ್ವಾರು)

‘ಭೀಷ್ಮ ವಿಜಯ’ ಯಕ್ಷಗಾನ ತಾಳಮದ್ದಳೆ ಮತ್ತು ಎಂ.ಆರ್.ವಾಸುದೇವ ಸಾಮಗರಿಗೆ “ಭಾವಾಶ್ರುತರ್ಪಣ”

ದಿನಾಂಕ 18-11-2020 ನೇ ಬುಧವಾರ ಮಧ್ಯಾಹ್ನ 2-30 ಕ್ಕೆ ಸರಿಯಾಗಿ  ಶ್ರೀ ಮಹಾಮ್ಮಾಯಿ ದೇವಸ್ಥಾನ.ಮಾರಿಗುಡಿ, ಸುರತ್ಕಲ್ ಎಂಬಲ್ಲಿ ” ಭೀಷ್ಮ ವಿಜಯ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಭಾಗವಹಿಸುವ ಕಲಾವಿದರು ಪುತ್ತಿಗೆ, ಕಡಂಬಳಿತ್ತಾಯ, ಹೆಬ್ಬಾರ್, ಉಜಿರೆ, ರಂಗಭಟ್ ಮುಂತಾದವರು.

ಸಂಜೆ 5-30 ಕ್ಕೆ ಸರಿಯಾಗಿ ಯಕ್ಷಗಾನ ರಂಗನಿಪುಣ, ಸರಸ ಅರ್ಥಧಾರಿ, ಸಂಘಟನಾ ಚತುರ, “ಸಂಯಮಂ” ಸ್ಥಾಪಕ  ಕೀರ್ತಿಶೇಷ ಎಂ.ಆರ್.ವಾಸುದೇವ ಸಾಮಗರಿಗೆ “ಭಾವಾಶ್ರುತರ್ಪಣ” ಕಾರ್ಯಕ್ರಮ ನಡೆಯಲಿದೆ.  

ಸ್ಥಳ_ಶ್ರೀ ಮಹಾಮ್ಮಾಯಿ ದೇವಸ್ಥಾನ.ಮಾರಿಗುಡಿ, ಸುರತ್ಕಲ್.  ಕಾರ್ಯಕ್ರಮದ ವ್ಯವಸ್ಥಾಪಕರು ವಾಸುದೇವ ಸಾಮಗರ ಅಭಿಮಾನಿಗಳು, ಸುರತ್ಕಲ್

‘ಬಲಿಪ ಗಾನ-ಯಾನ’ ಎಂಬ ಯಕ್ಷ ಪಯಣ 

‘ಬಲಿಪ ಗಾನ-ಯಾನ’ ಎಂಬ ಯಕ್ಷ ಪಯಣವು ಒಂದು ವಿಶಿಷ್ಟ ವಿನೂತನ ಕಾರ್ಯಕ್ರಮ. ತೆಂಕುತಿಟ್ಟು ಯಕ್ಷಗಾನ ಹಾಡುಗಾರಿಕೆಯಲ್ಲಿ ಪರಂಪರೆಯ ಬಲಿಪ ಶೈಲಿಯು ಪ್ರಖ್ಯಾತವಾದುದು. ಈ ಶೈಲಿಯು ದಿ| ಹಿರಿಯ ಬಲಿಪ ನಾರಾಯಣ ಭಾಗವತರಿಂದ ತೊಡಗಿ ಕಿರಿಯ ಬಲಿಪ ನಾರಾಯಣ ಭಾಗವತರಿಗೆ ಬಂದಿತ್ತು.

ಕಿರಿಯ ಬಲಿಪರು ಅನೇಕ ವರ್ಷಗಳ ತಮ್ಮ ಕಲಾವ್ಯವಸಾಯದಲ್ಲಿ ಹಾಡುಗಾರಿಕೆಯಿಂದ ಬಲಿಪ ಶೈಲಿಯ ಖ್ಯಾತಿಗೆ ಕಾರಣರಾಗಿದ್ದರು. ಪ್ರಸ್ತುತ ಶ್ರೀಯುತರ ಮಕ್ಕಳಾದ ಬಲಿಪ ಶಿವಶಂಕರ ಭಟ್ ಮತ್ತು ಬಲಿಪ ಪ್ರಸಾದ ಭಟ್, ಅಳಿಯ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಬಲಿಪ ಶೈಲಿಯ ಹಾಡುಗಾರಿಕೆಯಲ್ಲಿ ಮುನ್ನಡೆಯುತ್ತಿದ್ದಾರೆ. ಅಲ್ಲದೆ ಹಲವು ಯುವ ಭಾಗವತರುಗಳು ಈ ಪರಂಪರೆಯ ಶೈಲಿಯನ್ನು ಅನುಸರಿಸಿ ಹಾಡುತ್ತಿದ್ದಾರೆ.

ಪರಂಪರೆಯ ಬಲಿಪ ಶೈಲಿಯ ಹಾಡುಗಳನ್ನು ದಾಖಲೀಕರಣಗೊಳಿಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ದಾಟಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವು ಆರಂಭಗೊಂಡಿತ್ತು. ಇದಕ್ಕಾಗಿ ಬಲಿಪ ಗಾನ-ಯಾನ ಎಂಬ ಯೂಟ್ಯೂಬ್ ಚಾನೆಲ್ ಕೂಡಾ ಇದೆ. ಮೊದಲೆಲ್ಲಾ ಯಕ್ಷಗಾನ ಪ್ರದರ್ಶನದಲ್ಲಿ ಪ್ರಸಂಗದ ಹೆಚ್ಚಿನ ಎಲ್ಲಾ ಪದ್ಯಗಳನ್ನೂ ಹಾಡಲಾಗುತ್ತಿತ್ತು. ಪ್ರಸ್ತುತ ಬದಲಾದ ಈ ಸನ್ನಿವೇಶದಲ್ಲಿ ಹಾಡುಗಳ ಸಂಖ್ಯೆಯು ಅನಿವಾರ್ಯವಾಗಿ ಕಡಿಮೆಯಾಗಿದೆ. ಹಾಗಾಗಿ ಪ್ರಸಂಗದ ಕೆಲವು ಒಳ್ಳೊಳ್ಳೆಯ ಪದ್ಯಗಳು ಹಾಡಲ್ಪಡದೆ ಎಲೆ ಮರೆಯ ಕಾಯಿಯಂತೆ ಉಳಿದಿದೆ. ಆ ಪದ್ಯಗಳನ್ನು ಹೊರತೆಗೆದು ಹಾಡಿ, ಕಲಾಭಿಮಾನಿಗಳಿಗೆ ತಲುಪಿಸುವ ಉದ್ದೇಶವೂ ಈ ಕಾರ್ಯಕ್ರಮಕ್ಕಿದೆ.

ಈ ಪ್ರಸ್ತುತಿಯು ತೆಂಕುತಿಟ್ಟಿನ ಯುವ ಮದ್ದಳೆಗಾರರಾದ ಕೊಂಕಣಾಜೆ ಶ್ರೀ ಚಂದ್ರಶೇಖರ ಭಟ್ಟರ ಕಲ್ಪನೆಯ ಕೂಸು. ಈ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿದ ತಂಡದಲ್ಲಿ ಬಲಿಪ ಪ್ರಸಾದ ಭಟ್, ಹರಿಪ್ರಸಾದ್ ರಾವ್ ರಾಯಿ(ಅಧ್ಯಾಪಕರು ಮತ್ತು ಯಕ್ಷಗಾನ ಸಂಘಟಕರು), ಕೊಂಕಣಾಜೆ ಚಂದ್ರಶೇಖರ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಮತ್ತು ಗಣರಾಜ ಭಟ್ ಅಳಕೆ ಇವರುಗಳು ತೊಡಗಿಸಿಕೊಂಡಿದ್ದಾರೆ. ಈ ಸರಣಿಯ ಮೊದಲ ಮೂರು ಕಾರ್ಯಕ್ರಮಗಳು ಪ್ರಾಯೋಜಕರಿಲ್ಲದೆ ಬಲಿಪ ಭಾಗವತರ ಮನೆ ಸಮೀಪದ ‘ಬಲಿಪ ಭವನ’ದಲ್ಲಿ ಸಂಪನ್ನಗೊಂಡಿತ್ತು.

ಬಳಿಕ ವಿಚಾರ ತಿಳಿದು ಬಲಿಪ ಶೈಲಿ ಹಾಡುಗಾರಿಕೆಯ ಅಭಿಮಾನಿಗಳು ಒಬ್ಬೊಬ್ಬರಾಗಿ ಈ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಒದಗಿ ಬಂದಿದ್ದರು. ಅವರುಗಳು ಶ್ರೀ ರಾಘವೇಂದ್ರ ಬಲ್ಲಾಳ್,ಕೊರಗಟ್ಟೆ, ವಾಮದಪದವು, ಶ್ರೀ ದಯಾನಂದ ಎಳಚಿತ್ತಾಯ ಗುರುವಾಯನಕೆರೆ, ಶ್ರೀ ವಾಸುದೇವ ರಾವ್ ತಡಂಬೈಲು, ಶ್ರೀ ಲಕ್ಷ್ಮೀನಾರಾಯಣ ಭಟ್ ಅಸೈಗೋಳಿ, ಶ್ರೀ ಅನಂತ ಉಪಾಧ್ಯಾಯ ಮತ್ತು ಸಹೋದರರು ವಾಮಂಜೂರು, ಶ್ರೀ ಶಬರೀಶ ಭಟ್ ಅಸೈಗೋಳಿ, ಪ್ರಜಾವಾಣಿ ಫೇಸ್ ಬುಕ್ ಲೈವ್,  ಶ್ರೀ ದಯಾನಂದ ಎಳಚಿತ್ತಾಯ ಗುರುವಾಯನಕೆರೆ, ಶ್ರೀ ದಯಾನಂದ ಶೆಟ್ಟಿ ಕಾರಮೊಗರು ಗುತ್ತು, ಗುರುಪುರ.

ಹೀಗೆ ಒಟ್ಟು ಹನ್ನೆರಡು ಸರಣಿ ಕಾರ್ಯಕ್ರಮಗಳು ಈ ವರೆಗೆ ನಡೆದಿದೆ. ಇದರಲ್ಲಿ 4ನೇ ಕಾರ್ಯಕ್ರಮವನ್ನು ಶ್ರೀ ಯಕ್ಷಧ್ರುವ ಸುಕುಮಾರ ಜೈನ್ ಅವರು ತಮ್ಮ ಚಾನೆಲ್ ನಲ್ಲಿ ಫೇಸ್ ಬುಕ್ ಲೈವ್ ನೀಡಿರುತ್ತಾರೆ. ಈ ಸರಣಿ ಕಾರ್ಯಕ್ರಮಗಳಲ್ಲಿ ಈ ವರೆಗೆ ಪಾರ್ತಿಸುಬ್ಬನ ಕೃತಿಯ ಪದ್ಯಗಳಿಗೆ ಪ್ರಾಶಸ್ತ್ಯ ನೀಡಲಾಗಿದ್ದು, ಪ್ರಾಯೋಜಕರ ಬೇಡಿಕೆಯ ಪದ್ಯಗಳನ್ನೂ ಹಾಡಲಾಗಿದೆ. ಈ ತಂಡದಲ್ಲಿ ಕಲಾವಿದರು ಒಂದೇ ತರದ ಸಮವಸ್ತ್ರಗಳನ್ನು ಧರಿಸಿ, ಪೇಟ ಧರಿಸಿ ಶಿಸ್ತುಬದ್ಧವಾಗಿ ಕಾಣಿಸಿಕೊಳ್ಳುತ್ತಾರೆ. ಹೊಸ ರೀತಿಯ ಆವಿಷ್ಕಾರಗಳಿಲ್ಲದೆ ಪದ್ಯಗಳಿಗೆ ಮಾತ್ರ ಹೆಚ್ಚು ಮಹತ್ವವನ್ನು ನೀಡಿ ಪರಂಪರೆಯ ಶೈಲಿಯಲ್ಲಿ ಈ ಬಲಿಪ ಗಾನ ಯಾನವು ಪ್ರಸ್ತುತಗೊಳ್ಳುತ್ತದೆ.

“ಹಾಡುಗಳ ಆಯ್ಕೆ ಪೂರ್ವ ನಿರ್ಧರಿತವಾಗಿರುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಹಾಡುಗಳನ್ನು ಕೇಳುಗರಿಗೆ ನೀಡಬೇಕೆಂಬುದು ನಮ್ಮ ಆಶಯ. ಇದನ್ನು ಇನ್ನಷ್ಟು ಸುಂದರವಾಗಿ ಅಚ್ಚುಕಟ್ಟಾಗಿ ನಡೆಸಲು ಪ್ರಾಯೋಜಕರ, ಕಲಾಭಿಮಾನಿಗಳ, ಬಲಿಪ ಶೈಲಿಯ ಅಭಿಮಾನಿಗಳ ಸಹಕಾರ ಬೇಕು” ಇದು ಈ ತಂಡದ ಸದಸ್ಯರೆಲ್ಲರ ಒಮ್ಮತದ ಅಭಿಪ್ರಾಯ.

‘ಬಲಿಪ ಗಾನ-ಯಾನ’ ಈ ಕಾರ್ಯಕ್ರಮದಲ್ಲಿ ಇದುವರೆಗೆ ಕಲಾವಿದರಾಗಿ ಬಲಿಪ ಶಿವಶಂಕರ ಭಟ್, ಬಲಿಪ ಪ್ರಸಾದ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಕೊಂಕಣಾಜೆ ಚಂದ್ರಶೇಖರ ಭಟ್, ಸೋಮಶೇಖರ ಭಟ್ ಕಾಶಿಪಟ್ನ, ಬೆಳ್ಳಾರೆ ಗಣೇಶ ಭಟ್ ಮತ್ತು ಸತ್ಯಜಿತ್ ರಾವ್ ರಾಯಿ ಇವರುಗಳು ಭಾಗವಹಿಸಿರುತ್ತಾರೆ. ‘ಬಲಿಪ ಗಾನ-ಯಾನ’ವು ಯಕ್ಷಪರಂಪರೆಯ ನಿರಂತರ ಪಯಣವಾಗಲಿ ಎಂಬ ಸದಾಶಯಗಳು. 

ಲೇಖಕ: ರವಿಶಂಕರ್ ವಳಕ್ಕುಂಜ

ಸೌಕೂರು ಮೇಳ ತಿರುಗಾಟ ಆರಂಭ – ದೇವರ ಸೇವೆ ಆಟ ದಿನ ನಿಗದಿ 

ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸೌಕೂರು ಇದರ 2020-21ನೇ ಸಾಲಿನ ತಿರುಗಾಟ ಶೀಘ್ರವೇ ಆರಂಭವಾಗಲಿದೆ.

ಇದನ್ನು ಮೇಳದ ಆಡಳಿತ ಮಂಡಳಿ ಪ್ರಕಟಿಸಿದೆ. ಮೇಳದ ಪ್ರಥಮ ಸೇವೆ ಆಟದ ದಿನವೂ ನಿಗದಿಯಾಗಿದೆ.

ದಿನಾಂಕ 18. 12. 2020ನೇ ಶುಕ್ರವಾರದಂದು ಶ್ರೀ ಕ್ಷೇತ್ರ ಸೌಕೂರಿನಲ್ಲಿ ದೇವರ ಪ್ರಥಮ ಸೇವೆ ಆಟವನ್ನು ಆಡಿ ಮೇಳವು ತಿರುಗಾಟಕ್ಕೆ ಹೊರಡಲಿದೆ. 

‘ಮಹಾಮಲ್ಲ ಕಂಸ’ – ಮಂಚಿಕೇರಿಯಲ್ಲಿ ಯಕ್ಷಗಾನ ಪ್ರದರ್ಶನ

 

ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಾಗೂ ಅಭಿನೇತ್ರಿ ಆರ್ಟ್ ಟ್ರಸ್ಟ್, ನೀಲ್ಕೋಡು ಇದರ ಸಹಯೋಗದಿಂದ ರಾಮಲಿಂಗೇಶ್ವರ ದೇವಾಲಯ ಕಂಚನಹಳ್ಳಿ, ಮಂಚಿಕೇರಿಯಲ್ಲಿ ನವೆಂಬರ್ 25, 2020ನೇ ಬುಧವಾರದಂದು ಸಂಜೆ ಘಂಟೆ  6ರಿಂದ ‘ಮಹಾಮಲ್ಲ ಕಂಸ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಡಗುತಿಟ್ಟಿನ ಹೆಸರಾಂತ ಕಲಾವಿದರು ಭಾಗವಹಿಸಲಿರುವರು. ಸರಕಾರದ ಕೋವಿಡ್-೧೯ ನಿಯಮಾನುಸಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ. 

ನೆಬ್ಬೂರು ನಾರಾಯಣ ಭಾಗವತ – ಪರಂಪರೆಯನ್ನು ಮುರಿಯದ ಬಡಗು ತಿಟ್ಟಿನ ಭಾಗವತ 

ಪ್ರಸಿದ್ಧಿಗಾಗಿ ಬಾಗದೆ ಪರಂಪರೆ ಸಂಪ್ರದಾಯವನ್ನು ಮುರಿಯದೆ ಭಾಗವತರಾಗಿ ಮೆರೆದ ನೆಬ್ಬೂರು ಶ್ರೀ ನಾರಾಯಣ ದೇವರು ಹೆಗಡೆಯವರ ಹಾಡುಗಾರಿಕೆಯು ಬಡಗುತಿಟ್ಟಿನ ಯಕ್ಷಗಾನಕ್ಕೆ ಒಂದು ವಿಶೇಷ ಕೊಡುಗೆ ಎಂದೇ ಗುರುತಿಸಲ್ಪಟ್ಟಿದೆ. ಕಲಾವಿದರ ಸಾಮರ್ಥ್ಯವನ್ನು ಹೊರಗೆಡಹುವಲ್ಲಿ ಮತ್ತು ಹೆಚ್ಚಿಸುವಲ್ಲಿ ಇವರ ಹಾಡುಗಾರಿಕೆಯು ಅತ್ಯಂತ ಸಹಕಾರಿಯಾಗಿರುತ್ತಿತ್ತು. 

ಘಟ್ಟದ ಮೇಲಿನಿಂದ ಭಾಗವತಿಕೆಯನ್ನು ಕಲಿಯಲೆಂದೇ ಕೆಳಗಿಳಿದು ಕೆರೆಮನೆಯತ್ತ ಸಾಗಿದವರು. ಪ್ರಸಿದ್ಧ ರಂಗನಟ ಶ್ರೀ ಇಡಗುಂಜಿ ಮೇಳದ ಸಂಸ್ಥಾಪಕ ಕೆರೆಮನೆ ಶ್ರೀ ಶಿವರಾಮ ಹೆಗಡೆಯವರಿಂದ ಅವರ ಮನೆಯಲ್ಲಿದ್ದುಕೊಂಡೇ ಕಲಿತರು.  ಭಾಗವತಿಕೆಯನ್ನು ಕಲಿಯಲು ಗುರುವಾಗಿ ರಂಗನಟರನ್ನು ಆಯ್ಕೆ ಮಾಡಿದ್ದು ಮತ್ತು ರಂಗನಟನೊಬ್ಬನು ಶ್ರೇಷ್ಠ ಭಾಗವತನನ್ನು ತಯಾರು ಮಾಡಿದ್ದು ನಿಜಕ್ಕೂ ಅಚ್ಚರಿಯನ್ನು ತರುವ ವಿಚಾರ.  

ಇಡಗುಂಜಿ ಮೇಳದ ಪ್ರದರ್ಶನಗಳನ್ನು ನೋಡಿದ ಹಳೆಯ ಪ್ರೇಕ್ಷಕರು ನೆಬ್ಬೂರರು ನಿಧಾನ ಲಯದಲ್ಲಿ ಹಾಡುವ ಪದ್ಯಗಳ ಸೊಗಸು ಅವರ್ಣನೀಯವಾದುದು ಎಂದು ಪ್ರಶಂಸಿಸುತ್ತಾರೆ.  “ನಾನು ವೇಗದ ಲಯದಲ್ಲೇ ಹಾಡಬಲ್ಲೆ ಮತ್ತು ಹಾಡಿದ್ದೇನೆ. ಆದರೆ ನಿಧಾನಲಯದಲ್ಲಿ ಯಕ್ಷಗಾನದ ನಿಜವಾದ ಸೌಂದರ್ಯವು ಸರಿಯಾಗಿ ಕಾಣಿಸಿಕೊಳ್ಳುತ್ತದೆ. ವೇಗದ ಹಾಡುಗಾರಿಕೆಯಲ್ಲಿ ಕತೆ ಓಡುತ್ತಿರುತ್ತದೆ ಆದರೆ ಸ್ಥಾಪನೆಯಾಗುವುದಿಲ್ಲ” ಎಂದು ನೆಬ್ಬೂರು ಭಾಗವತರು ಹೇಳುತ್ತಾರೆ. 

ಬಂಧುಗಳಾದ ಶ್ರೀ ಸುಬ್ಬು ಭಾವ ಮತ್ತು ಶ್ರೀ ರಮೇಶ ಹಳೇಕಾನಗೋಡ ಇವರ ಜೊತೆ ನೆಬ್ಬೂರರ ಮನೆಗೆ ಹೋಗಿದ್ದೆ. (ಶಿರಸಿಯ ಸಮೀಪದ ಹಣಗಾರು) ಹಳ್ಳಿಯ ಹಳೆಯ ಶೈಲಿಯ ಮನೆಯು ನಮ್ಮನ್ನು ಸ್ವಾಗತಿಸಿತ್ತು. ನೆಬ್ಬೂರು ದಂಪತಿಗಳು ನಮ್ಮನ್ನು ನಗುತ್ತಾ ಮಾತನಾಡಿಸಿ ಸತ್ಕರಿಸಿದ್ದರು. ಅವರ ಪ್ರೀತಿಯ ಮಾತುಗಳಿಂದಲೇ ಹಸಿವು ದೂರವಾಗಿತ್ತು. 

ನೆಬ್ಬೂರು ನಾರಾಯಣ ಭಾಗವತರು 1936ನೆಯ ಇಸವಿ ಡಿಸೆಂಬರ್ 16ರಂದು ನೆಬ್ಬೂರು ದೇವರು ಹೆಗಡೆ ಮತ್ತು ಗಣಪಿ ಅಮ್ಮ ದಂಪತಿಗಳಿಗೆ ಮಗನಾಗಿ ಹಣಗಾರು ಎಂಬಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಊರಿದು. ಇವರ ಮೂಲ ಮನೆ ನೆಬ್ಬೂರು. ನೆಬ್ಬೂರು ನಾರಾಯಣ ಭಾಗವತರ ತಂದೆ ದೇವರು ಹೆಗಡೆಯವರು ಮನೆ ಅಳಿಯನಾಗಿ ಹಣಗಾರಿನಲ್ಲಿ ವಾಸವಾಗಿದ್ದರು. ಹಣಗಾರು ನೆಬ್ಬೂರಿನ ಸಮೀಪದ ಊರು. ನಾರಾಯಣ ಹೆಗಡೆಯವರು ದೇವರು ಹೆಗಡೆ, ಗಣಪಿ ಅಮ್ಮ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಎರಡನೆಯವರು (ಮೂರು ಹೆಣ್ಣು ಮತ್ತು ಒಂದು ಗಂಡು). 

ನೆಬ್ಬೂರು ಭಾಗವತರು ಆಡಳ್ಳಿ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಓದಿದ್ದರು. ಆಡಳ್ಳಿಯು ಹಣಗಾರು ಮತ್ತು ನೆಬ್ಬೂರು ಮಧ್ಯೆ ಇರುವ ಹಳ್ಳಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕುಮಟಾ, ಶಿರಸಿ ಕಡೆಗೆ ಹೋಗಬೇಕಾಗಿತ್ತು. ಅದಕ್ಕೆ ಅನುಕೂಲಗಳಿರಲಿಲ್ಲ. ಸಾರಿಗೆ ಸಂಪರ್ಕವೂ ಇರಲಿಲ್ಲ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೆ ನೆಬ್ಬೂರರಿಗೆ ಯಕ್ಷಗಾನ ಆಸಕ್ತಿ ಹುಟ್ಟಿತು. 

ಆಡಳ್ಳಿ ಜಿಲ್ಲಾ ಬೋರ್ಡ್ ಶಾಲೆಗೆ  ಸುಬ್ರಾಯ ಬಸ್ತೀಕರ್ ಎಂಬವರು ಗೋಕರ್ಣದಿಂದ ಅಧ್ಯಾಪಕರಾಗಿ ಬಂದರು. ನೆಬ್ಬೂರರಿಗೆ ಯಕ್ಷಗಾನಾಸಕ್ತಿ ಹುಟ್ಟಲು ಇವರೆ ಕಾರಣರು. ಮಕ್ಕಳ ತಂಡವನ್ನು ಕಟ್ಟಿ ಅವರಿಗೆ ನಾಟಕ, ಆಟ, ತಾಳಮದ್ದಳೆ ವಿಚಾರದಲ್ಲಿ ತರಬೇತಿ ನೀಡಿ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟವರು ಬಸ್ತೀಕರ್ ಮಾಸ್ತರರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ತಾಳಮದ್ದಳೆಯಲ್ಲಿ ಶ್ರೀಕೃಷ್ಣ ಸಂಧಾನದ ವಿದುರ, ಅತಿಕಾಯ ಕಾಳಗದ ಸುಗ್ರೀವ, ಭೀಷ್ಮಪರ್ವದ ಧರ್ಮರಾಯ ಮೊದಲಾದ ಪಾತ್ರಗಳನ್ನು ನೆಬ್ಬೂರರು ನಿರ್ವಹಿಸಿದರು. ನಾಟಕಗಳಲ್ಲೂ ಅಭಿನಯಿಸಿದ್ದರು. ಬಸ್ತೀಕರ್ ಮಾಸ್ತರರು ಸಂಭಾಷಣೆಗಳನ್ನು ಬರೆದುಕೊಡುತ್ತಿದ್ದರು. ನೆಬ್ಬೂರರ ಅರ್ಥಗಾರಿಕೆಯಲ್ಲಿ ಶ್ರುತಿ ಜ್ಞಾನವಿದ್ದುದನ್ನ ಅಧ್ಯಾಪಕರು ಗುರುತಿಸಿದ್ದರು. ನೀನು ಭಾಗವತಿಕೆ ಕಲಿ ಎಂಬ ನಿರ್ದೇಶನವನ್ನೂ ನೀಡಿದ್ದರು. 

ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ಕೆರೆಮನೆ ಮೇಳ) ಕೆರೆಮನೆ ಶಿವರಾಮ ಹೆಗಡೆಯವರಿಂದ 1934ರಲ್ಲಿ ಸ್ಥಾಪಿತವಾಗಿತ್ತು. ಶ್ರೀ ವೆಂಕಟ್ರಮಣ ಯಾಜಿಯವರು ಅದರ ಸ್ಥಾಪಕ ಭಾಗವತರಾಗಿದ್ದರು. ಅವರಿಗೆ ವಯಸ್ಸಾಗಿತ್ತು. ಕೆರೆಮನೆ ಶಿವರಾಮ ಹೆಗಡೆಯವರು ಭಾಗವತಿಕೆ ಕಲಿಕಾ ಆಸಕ್ತಿಯುಳ್ಳವರಿಗಾಗಿ ಅರಸುತ್ತಿದ್ದರು. ಕಲಿತು ಭಾಗವತನಾಗುವೆನೆಂಬ ಆಸೆಯನ್ನು ಹೊತ್ತು ನೆಬ್ಬೂರರು ಗಣೇಶ ಚೌತಿಯ ಮರುದಿನದಂದು ಹುಟ್ಟೂರಿನಿಂದ ಕೆರೆಮನೆಯತ್ತ ಹೊರಟರು. 

ತಲುಪಿದ ಮಾರನೆಯ ದಿನ ಸಂಜೆ ನೆಬ್ಬೂರರಿಗೆ ಪ್ರಥಮ ಪರೀಕ್ಷೆ. ಮದ್ದಳೆಗಾರರನ್ನು ಕರೆಸಿ ಪದ್ಯ ಹೇಳಿಸಿದರು. ಅಂದು ಗೇರುಸೊಪ್ಪ ಹೈಗುಂದದಲ್ಲಿ ಆಯುರ್ವೇದ ವೈದ್ಯರಾಗಿದ್ದ ಡಾ. ಪದ್ಮನಾಭಯ್ಯನವರು ಬಂದಿದ್ದರು. ಇವರು ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದರು. ಕೆರೆಮನೆ ಶಿವರಾಮ ಹೆಗಡೆಯವರ ಆತ್ಮೀಯರು. ನೆಬ್ಬೂರರು ಪದ್ಯ ಹೇಳಿದರು. ಸ್ವರ ಇಬ್ಬರಿಗೂ ಇಷ್ಟವಾಯಿತು. ಆಗ ನೆಬ್ಬೂರರಿಗೆ ವಯಸ್ಸು 18. ಶಿವರಾಮ ಹೆಗಡೆಯವರು ನೆಬ್ಬೂರರನ್ನು ಮಗನೆಂದೇ ಸ್ವೀಕರಿಸಿದ್ದರು.

ಮನೆಯ ಸದಸ್ಯನಂತೆಯೇ ಇದ್ದುಕೊಂಡು ನೆಬ್ಬೂರರು ಅಲ್ಲಿ ಕಲಿತು ಸಾಧಕರಾದರು. ನೆಬ್ಬೂರರು ಶಿವರಾಮ ಹೆಗಡೆ ದಂಪತಿಗಳನ್ನು ಅಪ್ಪಯ್ಯ, ಅಮ್ಮ ಎಂದೆ ಕರೆಯುತ್ತಿದ್ದರು. ಕೆರೆಮನೆ ಮಹಾಬಲ ಹೆಗಡೆಯವರು ಕೂಡಾ ನೆಬ್ಬೂರರ ಜತೆ ಪದ್ಯ ಹೇಳುತ್ತಾ ಕುಣಿಯುತ್ತಿದ್ದರು. ಅವರಿಂದಲೂ ನಾನು ಬಹಳಷ್ಟನ್ನು ಕಲಿತಿದ್ದೇನೆ ಎಂದು ಹೇಳುವ ಮೂಲಕ ನೆಬ್ಬೂರರು ಮಹಾಬಲ ಹೆಗಡೆಯವರನ್ನು ಗೌರವಿಸುತ್ತಾರೆ. ಕೆರೆಮನೆ ಶಂಭು ಹೆಗ್ಗಡೆಯವರು ಆತ್ಮೀಯರಾದರು. ಜತೆಯಾಗಿಯೇ ಕಲಿತು ಇಬ್ಬರು ಪ್ರಸಿದ್ಧರಾದರು. ಅಣ್ಣತಮ್ಮಂದಿರಂತೆ ಮನೆಯಲ್ಲೂ ಕಲಾ ಬದುಕಿನುದ್ದಕ್ಕೂ ಬಾಳಿಬೆಳಗಿದರು. 

1959 ಮತ್ತು 1960ರಲ್ಲಿ ಕೆರೆಮನೆ ಮೇಳದಲ್ಲಿ ಸಂಗೀತಗಾರನಾಗಿ ತಿರುಗಾಟ. ಆಗ ಮಾರ್ವಿ ನಾರಣಪ್ಪ ಉಪ್ಪೂರರು ಪ್ರಧಾನ ಭಾಗವತರಾಗಿದ್ದರು. ನೆಬ್ಬೂರರ ಸ್ವರ, ವಿನಯತೆಗೆ ಉಪ್ಪೂರರು ಮಾರುಹೋಗಿದ್ದರು. ವಾತ್ಸಲ್ಯವನ್ನು ತೋರಿ ಪ್ರೋತ್ಸಾಹಿಸಿದರು. ಎಚ್ಚರಿಸುತ್ತಲೂ ಇದ್ದರು. ತನ್ನ ಹಾಡುಗಾರಿಕೆ ಮುಗಿದ ಮೇಲೆ ಉಪ್ಪೂರರ ಭಾಗವತಿಕೆಗೆ ಹಾರ್ಮೋನಿಯಂ ಬಾರಿಸುತ್ತಿದ್ದರು. ಇದರಿಂದ ರಂಗಾನುಭವ, ಪ್ರಸಂಗದ ನಡೆಗಳನ್ನು ತಿಳಿದುಕೊಳ್ಳುವ ಅವಕಾಶವಾಗಿತ್ತು. “ಉಪ್ಪೂರರಲ್ಲಿ ಬಹಳಷ್ಟು ಕಲಿತೆ, ಎರಡು ವರ್ಷ ಮೇಳದಲ್ಲಿ ಅವರೊಂದಿಗೆ ಒಡನಾಡುವ ಭಾಗ್ಯ ಸಿದ್ಧಿಸಿತ್ತು. ಅವರ ಒಡನಾಟ ನನ್ನ ಕಲಾಬದುಕಿನ ಉತ್ಕರ್ಷಕ್ಕೆ ಕಾರಣವಾಯಿತು” ಎಂದು ನೆಬ್ಬೂರರು ಉಪ್ಪೂರರನ್ನು ಗೌರವಿಸುತ್ತಾರೆ. 

ನೆಬ್ಬೂರರ ಜೊತೆಯಲ್ಲಿ ಲೇಖಕರು ಮತ್ತು ಪತ್ರಕರ್ತ ರಮೇಶ್ ಕಾನಗೋಡ್

1961ರಲ್ಲಿ ಉಪ್ಪೂರರು ಅಮೃತೇಶ್ವರಿ ಮೇಳಕ್ಕೆ ಹೋದಾಗ ನೆಬ್ಬೂರರು ಕೆರೆಮನೆ ಮೇಳದ ಪ್ರಧಾನ ಭಾಗವತರಾಗಿ ಆಯ್ಕೆ ಯಾದರು. 1969ರಿಂದ ಮೂರು ವರ್ಷಗಳ ಕಾಲ ಸದ್ರಿ ಮೇಳವು ತಿರುಗಾಟ ನಡೆಸಿರಲಿಲ್ಲ. 1969ರಲ್ಲಿ ನೆಬ್ಬೂರರು ಅಮೃತೇಶ್ವರಿ ಮೇಳದಲ್ಲೂ ಮುಂದಿನ ಎರಡು ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ನಡೆಸಿದ್ದರು. 1972ರಲ್ಲಿ ಕೆರೆಮನೆ ಮೇಳವನ್ನು ಶಂಭು ಹೆಗ್ಗಡೆಯವರು ಪುನರ್ ಸಂಘಟಿಸಿದ್ದರು. ಅಲ್ಲಿಂದ ತೊಡಗಿ 2009ರ ವರೆಗೆ ನೆಬ್ಬೂರರ ಭಾಗವತಿಕೆಯಲ್ಲಿ ಕೆರೆಮನೆ ಮೇಳದ ಪ್ರದರ್ಶನಗಳು ಎಲ್ಲೆಡೆ ರಂಜಿಸಿದವು. 

ಮೂಲ್ಕಿ, ಕೊಲ್ಲೂರು ಅಲ್ಲದೆ ಪುರ್ಲೆ ರಾಮಚಂದ್ರರಾಯರ ಶಿರಸಿ ಮೇಳ ದಲ್ಲೂ ಅಲ್ಪಕಾಲ ನೆಬ್ಬೂರರು ವ್ಯವಸಾಯ ಮಾಡಿದ್ದರು. ನೆಬ್ಬೂರರ ಭಾಗವತಿಕೆಯಲ್ಲಿ ಅನೇಕ ಪುರಾಣ ಪ್ರಸಂಗಗಳ ಪ್ರದರ್ಶನಗಳು ಪ್ರೇಕ್ಷಕರಿಗೆ ಮರೆಯಲಾಗದ ಅನುಭವವಾಗಿ ಉಳಿಯಿತು. ಶ್ರೀಕೃಷ್ಣ ಸಂಧಾನ, ಕೀಚಕವಧೆ, ಮಾಗಧವಧೆ, ಪಟ್ಟಾಭಿಷೇಕ, ಕರ್ಣಪರ್ವ, ಗದಾಯುದ್ಧ, ರತ್ನಾವತಿ ಕಲ್ಯಾಣ, ಚಂದ್ರಹಾಸ, ಸುಧನ್ವಾರ್ಜುನ, ಶ್ರೀರಾಮನಿರ್ಯಾಣ ಮೊದಲಾದ ಪ್ರಸಂಗಗಳ ಹಾಡುಗಳು ನೆಬ್ಬೂರರಿಗೆ ಜನಪ್ರಿಯತೆಯನ್ನು ನೀಡಿತು.

ದೂರದರ್ಶನ ಕಾರ್ಯಕ್ರಮಗಳಲ್ಲೂ ಹಲವು ಬಾರಿ ಕಾಣಿಸಿಕೊಂಡ ಮೊದಲಿಗರಿವರು. ಕೆರೆಮನೆ ತಂಡದೊಂದಿಗೆ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿದರು. 1984ರಲ್ಲಿ ಮೊದಲಿಗೆ ಬಹ್ರೈನ್‌ಗೆ, ಅಮೇರಿಕಾ ದೇಶಕ್ಕೆ ಎರಡು ಬಾರಿ ಹಾಗೂ ಅಲ್ಲಿನ ಹೆಚ್ಚಿನ ಎಲ್ಲಾ ನಗರಗಳಲ್ಲಿ ಪ್ರದರ್ಶನ ನೀಡಿದರು. ಲಂಡನ್, ನೇಪಾಳ, ಚೀನಾ, ಫ್ರಾನ್ಸ್, ಸ್ಪೇನ್, ಬಾಂಗ್ಲಾ, ಸಿಂಗಪೂರ್, ಬರ್ಮಾ, ಲಾವೋಸ್, ಮಲೇಶಿಯ, ಫಿಲಿಪ್ಪೀನ್ಸ್, (ಕೆರೆಮನೆ ಶಿವಾನಂದ ಹೆಗಡೆ ಅವರ ನೇತೃತ್ವದಲ್ಲಿ) ಮೊದಲಾದ ದೇಶಗಳ ಪ್ರೇಕ್ಷಕರನ್ನು ತಮ್ಮ ಗಾನಸುಧೆಯಲ್ಲಿ ತೇಲಾಡಿಸಿದರು.

1996ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿತ್ತು. 2002ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, 2006ರಲ್ಲಿ ಶೇಣಿ ಪ್ರಶಸ್ತಿ ಅಲ್ಲದೆ ನೆಬ್ಬೂರರಿಗೆ ರಾಜ್ಯ ಪ್ರಶಸ್ತಿಯೂ ಕರ್ನಾಟಕ ಸರಕಾರದಿಂದ ಕೊಡಲ್ಪಟ್ಟಿತ್ತು. ಭಾರತ ದೇಶದೆಲ್ಲೆಡೆ ಮತ್ತು ವಿದೇಶಗಳಲ್ಲೂ ಕಲಾಪ್ರಿಯರಿಗೆ ತಮ್ಮ ಗಾನಸುಧಾ ಅಮೃತವನ್ನು ಉಣಿಸಿದ ನೆಬ್ಬೂರು ನಾರಾಯಣ ಭಾಗವತರನ್ನು ಎಲ್ಲೆಡೆ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಯಕ್ಷಗಾನ ಪ್ರಪಂಚದಲ್ಲಿ ಖ್ಯಾತ ರಂಗನಟರಾಗಿ ರಂಜಿಸಿದ ಕೆರೆಮನೆ ಶಿವರಾಮ ಹೆಗಡೆಯವರ ಪ್ರಶಸ್ತಿ, ತಾಳಮದ್ದಳೆ ಕ್ಷೇತ್ರದಲ್ಲಿ ಬೆಳೆದು ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಶಸ್ತಿ ಇವೆರಡೂ ನನ್ನ ಬದುಕಿನ ಆಸ್ತಿಗಳು ಎಂದು ಹೇಳುವ ನೆಬ್ಬೂರರು ಕೆರೆಮನೆ ಕುಟುಂಬದ ನಾಲ್ವರು ಕಲಾವಿದರನ್ನು ರಂಗದಲ್ಲಿ ಕುಣಿಸಿದವರು. 

ಗುರು ಶಿವರಾಮ ಹೆಗಡೆಯವರನ್ನು ಭಯ ಮತ್ತು ಆತಂಕದಿಂದ ಕುಣಿಸಿದೆ. ಶಂಭು ಹೆಗಡೆಯವರನ್ನು ಪ್ರೀತಿ ವಿಶ್ವಾಸ ಆತ್ಮೀಯತೆಯಿಂದ ಕುಣಿಸಿದೆ. ಶಿವಾನಂದ ಹೆಗಡೆಯನ್ನು ವಾತ್ಸಲ್ಯಭಾವದಿಂದ ಕುಣಿಸಿದೆ. ಕೆರೆಮನೆ ಶಿವಾನಂದ ಹೆಗಡೆ ಅವರ ಪುತ್ರ ಶ್ರೀಧರನನ್ನು ಮೋಹದಿಂದ ಕುಣಿಸಿದ್ದೇನೆ. ಆದರೂ ಶಿವರಾಮ ಹೆಗಡೆಯವರ ನಿರೀಕ್ಷೆಯ ಮಟ್ಟವನ್ನು ಮುಟ್ಟಲು ಆಗಲಿಲ್ಲ ಎಂಬ ಬೇಸರವಿದೆ ಎಂಬ ನೆಬ್ಬೂರರ ಮಾತುಗಳಲ್ಲಿ ಯಕ್ಷಗಾನವೂ ಒಂದು ಮಹಾಸಿಂಧು, ಕಲಿತು ಮುಗಿಯುವಂಥದ್ದಲ್ಲ ಎಂಬ ಧ್ವನಿಯು ಅಡಗಿದೆ. 

ನೆಬ್ಬೂರು ನಾರಾಯಣ ಭಾಗವತರ ಆತ್ಮಕಥನವು ‘ನೆಬ್ಬೂರಿನ ನಿನಾದ’ ಎಂಬ ಶಿರೋನಾಮೆಯಡಿ 2007 ರಂದು ಪ್ರಕಟಿಸಲ್ಪಟ್ಟಿವೆ. ಬಡಗುತಿಟ್ಟು ಯಕ್ಷಗಾನ ಕಂಡ ಇಂತಹಾ ಮಹಾನ್ ಭಾಗವತರಾದ ಶ್ರೀ ನೆಬ್ಬೂರು ನಾರಾಯಣ ಭಾಗವತರು ಕಳೆದ ವರ್ಷ ಅಂದರೆ 2019ರ ಮೇ ತಿಂಗಳಿನಲ್ಲಿ ಅಸಂಖ್ಯ ಕಲಾಭಿಮಾನಿಗಳನ್ನು ಆಗಲಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡರು.  

ಲೇಖಕ: ರವಿಶಂಕರ್ ವಳಕ್ಕುಂಜ

ಪುತ್ತೂರು ಶ್ರೀಧರ ಭಂಡಾರಿ – ಯಕ್ಷರಂಗದ ಅಭಿಮನ್ಯು (Putturu Sridhara Bhandari)

ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ ಭಂಡಾರಿಯವರ ಹೆಸರು ಕೇಳದವರಿಲ್ಲ.  ಓದಿದ್ದು ಕೇವಲ 5ನೇ ತರಗತಿ. ಆದರೆ ಯಾರೂ ಊಹಿಸದೆ ಇದ್ದ ಎತ್ತರಕ್ಕೆ ಏರಿ ಗೌರವ ಡಾಕ್ಟರೇಟ್ ಪದವಿಯನ್ನು ತನ್ನದಾಗಿಸಿಕೊಂಡ ಸಾಧಕ. 

ಯಕ್ಷಗಾನದ ಅಗ್ರಪಂಕ್ತಿಯ ಕಲಾವಿದರಲ್ಲೊಬ್ಬರಾದ ಶ್ರೀ ಬಳ್ಳಂಬೆಟ್ಟು ಶೀನಪ್ಪ ಭಂಡಾರಿ, ಶ್ರೀಮತಿ ಸುಂದರಿ ದಂಪತಿಗಳ ಪುತ್ರನಾಗಿ 1945ರಲ್ಲಿ ಜನನ. ಮನೆಯ ಪರಿಸರ ತುಂಬೆಲ್ಲಾ ಯಕ್ಷಗಾನ ಪರಂಪರೆಯ ಸುವಾಸನೆ ಘಮಘಮಿಸುತ್ತಿತ್ತು. ಈ ಕಲಾ ಸುಗಂಧದಿಂದ ಪ್ರೇರಿತನಾದ ಬಾಲಕ ಶ್ರೀಧರ ಭಂಡಾರಿ ಇಷ್ಟು ಎತ್ತರಕ್ಕೆ ಏರಿದ್ದು ಈಗ ಇತಿಹಾಸ.   ಶ್ರೀಧರ ಭಂಡಾರಿಯವರ ಪರಂಪರೆಯೇ ಯಕ್ಷಗಾನದ್ದು. ಅಜ್ಜ ಅಂದರೆ ತಂದೆಯವರ ಮಾವ ಬಳ್ಳಂಬಟ್ಟಿನ ಸಮೀಪದ ಜತ್ತಪ್ಪ ರೈಗಳು ಆ ಕಾಲದಲ್ಲಿ ದೊಡ್ಡ ಭಾಗವತರು.

ಭಾಗವತರಾದ ಮೈಂದಪ್ಪ ರೈಗಳು ಶ್ರೀಧರ ಭಂಡಾರಿಯವರ ತಂದೆಯವರಾದ ಶೀನಪ್ಪ ಭಂಡಾರಿಗಳ  ಭಾವ,  ಹೀಗೆ ಯಕ್ಷಗಾನದ ದೊಡ್ಡ ಸಂಬಂಧವೇ ಇತ್ತು. ತಂದೆಯವರಾದ ದಿ| ಶೀನಪ್ಪ ಭಂಡಾರಿಗಳು ಪುತ್ತೂರಿಗೆ ಬಂದು ನೆಲಸಿದರು. ಪುತ್ತೂರಿನಲ್ಲಿ ಮೊದಲಿಗೆ ಬಳ್ಳಂಬೆಟ್ಟು ಮೇಳ ಎಂಬ ಹೆಸರಿನಲ್ಲಿ ಮೇಳ ಮಾಡಿದ್ದರು. ಆ ನಂತರ ಆದಿ ಸುಬ್ರಹ್ಮಣ್ಯ ಮೇಳ ಎಂದು ಪ್ರಾರಂಭಿಸಿದರು.

ತುಂಬಾ ಕಲಾವಿದರು, ಶಿಷ್ಯಂದಿರು ಶೀನಪ್ಪ ಭಂಡಾರಿಯವರ ಗರಡಿಯಲ್ಲಿ ಕಲಿತು ಪಳಗಿದವರು. ಇವರ ಅಣ್ಣನನ್ನು ತಂದೆಯವರೇ ನಾಟ್ಯ ಕಲಿಸಿ ತಯಾರಿ ಮಾಡಿ ಯಕ್ಷಗಾನದಲ್ಲೇ ತೊಡಗುವಂತೆ ಮಾಡಿದ್ದರು. ಆದರೆ ಶ್ರೀಧರ ಭಂಡಾರಿಯವರನ್ನುಮಾತ್ರ ಯಕ್ಷಗಾನ ಬೇಡವೆಂದು ಶಾಲೆಗೆ ಕಳಿಸಿ ವಿದ್ಯಾವಂತನನ್ನಾಗಿ ಮಾಡಬೇಕೆಂಬ ಅಭಿಲಾಷೆ ಶೀನಪ್ಪ ಭಂಡಾರಿಯವರಿಗಿತ್ತು. ಆದರೆ ಆಟದ ವ್ಯಾಮೋಹ, ಯಕ್ಷಗಾನದ ಆಸಕ್ತಿಯಿಂದಾಗಿ ಬಾಲ್ಯದಲ್ಲಿರುವಾಗಲೇ ಯಕ್ಷಗಾನದ ಪ್ರಸಂಗ ಪುಸ್ತಕದ ಪದ್ಯಗಳನ್ನು ಬಾಯಿಪಾಠ ಮಾಡಿ ಹೇಳುತ್ತಿದ್ದ ಬಾಲಕ ಶ್ರೀಧರನಿಗೆ ಶಾಲೆಗೆ ಹೋಗುವಾಗಲೇ ಅಭಿಮನ್ಯು, ಕರ್ಣಪರ್ವ, ಗದಾಪರ್ವ, ಶೂರ್ಪನಖಾ ಮಾನಭಂಗ, ಇಂದ್ರಜಿತು ಕಾಳಗವೇ ಮೊದಲಾದ ಪ್ರಸಂಗದ ಪದ್ಯಗಳು ಬಾಯಿಪಾಠ ಬರುತ್ತಿತ್ತು.

ಆಟಕ್ಕೆ ಬರದಂತೆ ನಿರ್ಬಂಧಿಸಿದರೂ ಆಗಾಗ ಕದ್ದುಮುಚ್ಚಿ ಆಟ ನೋಡಲು ಹೋಗುತ್ತಿದ್ದರು. ಮುಚ್ಚೂರು ಮೇಳ ಎಂಬ ಮೇಳವಿತ್ತು. ಶೀನಪ್ಪ ಭಂಡಾರಿಯವರ ಬಳ್ಳಂಬೆಟ್ಟು ಮೇಳಕ್ಕೂ ಮುಚ್ಚೂರು ಮೇಳಕ್ಕೂ ಪುತ್ತೂರಿನಲ್ಲಿ ಒಂದು ಜೋಡಾಟ ನಡೆಯಿತು. ಆ ಸಮಯದಲ್ಲಿ ಮುಚ್ಚೂರು ಮೇಳದಲ್ಲಿ ಕ್ರಿಶ್ಚಿಯನ್ ಬಾಬು ಎಂಬ ಕಲಾವಿದರಿದ್ದರು. ಪಾಂಡವಾಶ್ವಮೇಧ ಪ್ರಸಂಗದಲ್ಲಿ ಬಭ್ರುವಾಹನ ಪಾತ್ರವನ್ನು ಕ್ರಿಶ್ಚಿಯನ್ ಬಾಬು ಮಾಡಿದ್ದರು. ಕ್ರಿಶ್ಚಿಯನ್ ಬಾಬು ಅವರ ಅದ್ಭುತ ನಾಟ್ಯವನ್ನು ನೋಡಿ ಜನರು ಬೆರಗಾಗಿ ‘ಏನು ನಾಟ್ಯ’ ಎಂದು ಉದ್ಘರಿಸಿದಾಗ ಬಾಲಕ ಶ್ರೀಧರ ಭಂಡಾರಿಯವರಿಗೆ ‘ನನಗೇಕೆ ಈ ಸಾಧನೆ ಸಿದ್ಧಿಸಲಾರದು, ಅವರಂತೆ  ನನಗೇಕೆ ಸಾಧ್ಯವಿಲ್ಲ’ ಎಂಬ ಹಠ ಮೂಡಿತು.

ಇದನ್ನೂ ಓದಿ: ದಿವಾಕರ ರೈ ಸಂಪಾಜೆ – ಯಕ್ಷಗಾನದ ಸಿಡಿಲಮರಿ

(ಇದನ್ನೂ ಓದಿ: ಮಹಿಷಾಸುರ ಪಾತ್ರ ಮೊದಲು ಮಾಡಿದ್ದು ಯಾರು ? (Mahishasura in Yakshagana))

ಆದಕಾರಣ ಮನಸ್ಸಿನಲ್ಲೇ ಕಲ್ಪಿಸಿಕೊಂಡರೂ ತಂದೆಯವರೊಡನೆ ಹೇಳುವ ಧೈರ್ಯವಿರಲಿಲ್ಲ. ಆದರೆ ಮಗನ ಯಕ್ಷಗಾನದ ಆಸಕ್ತಿ, ಚರ್ಯೆಗಳನ್ನು ಗಮನಿಸಿದ ತಂದೆಯವರಾದ ಶೀನಪ್ಪ ಭಂಡಾರಿಯವರು, ‘ಏನು ಮಾಡುವುದು’ ಎಂದು ಆಲೋಚಿಸಿ ಪುತ್ತೂರಿನ ಭರತನಾಟ್ಯದ ಕಲಾವಿದ, ಗುರುಗಳಾಗಿದ್ದ ಕುದ್ಕಾಡಿ ವಿಶ್ವನಾಥ ರೈ ಅವರಲ್ಲಿ ಪ್ರಸ್ತಾಪಿಸಿದಾಗ ಅವರು ತಮ್ಮ ಮನೆಗೆ ಕಳುಹಿಸಿ ಕೊಡುವಂತೆ ಹೇಳಿದ್ದರು. 1960ರ ಸುಮಾರಿಗೆ ಆಗ ಪರ್ಲಡ್ಕದಲ್ಲಿದ್ದ ಕುದ್ಕಾಡಿ ವಿಶ್ವನಾಥ ರೈಗಳ ಮನೆಗೆ ಪ್ರತಿದಿನ ಬೆಳಿಗ್ಗೆ ಭರತನಾಟ್ಯ ಕಲಿಯಲು ಹೋಗುತ್ತಿದ್ದರು.

ಪ್ರತಿನಿತ್ಯವೂ ಪಾಠ ಆಗುತ್ತಿತ್ತು. ಭರತನಾಟ್ಯದ ತರಗತಿಗಳು ಮುಗಿದ ನಂತರ ಗುರುಗಳ ಜೊತೆಗೆ ಭರತನಾಟ್ಯ ಪ್ರದರ್ಶನ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಕಾಳಿಂಗಮರ್ದನದ ಕೃಷ್ಣನೇ ಮೊದಲಾದ ಹಲವಾರು ಪಾತ್ರಗಳ ಭರತನಾಟ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಮ್ಮೆ ಕೇರಳದ ಎರ್ನಾಕುಲಂನಲ್ಲಿ ಒಂದು ಯಕ್ಷಗಾನ ಕಾರ್ಯಕ್ರಮ ನಿಗದಿಯಾಗಿತ್ತು. ಆ ದಿನ ಭಂಡಾರಿಯವರು ತಮ್ಮ ತಂದೆಯವರ ಜೊತೆ ಎರ್ನಾಕುಲಂಗೆ ಹೋಗಿದ್ದರು. ಪ್ರಥಮವಾಗಿ ಅಲ್ಲಿ ಕೃಷ್ಣನ ಪಾತ್ರಮಾಡಿದರು. ಗೆಜ್ಜೆ ಕಟ್ಟಿದ ದಿನ ಎರ್ನಾಕುಲಂನಲ್ಲಿ ಆಗಿತ್ತು.

ಸುಮಾರು ಒಂದೆರಡು ವರ್ಷಗಳ ವರೆಗೆ ತಂದೆಯವರ ಜೊತೆಯೇ ವೇಷಗಳನ್ನು ಮಾಡುತ್ತಿದ್ದರು . ಹೀಗೆ ಯಕ್ಷಗಾನ ವೇಷಗಳನ್ನು ಮಾಡಿ ಅನುಭವವಾಗಿತ್ತು. ತುಂಬಾ ತಿಳುವಳಿಕೆ ಬೇಕಾದ ಪಾತ್ರಗಳಲ್ಲದಿದ್ದರೂ ಬಾಲ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ‘ತ್ರಿಜನ್ಮ ಮೋಕ್ಷ’ ಪ್ರಸಂಗದಲ್ಲಿ ಪ್ರಹ್ಲಾದನ ಪಾತ್ರಕ್ಕೆ ಸೂಕ್ತ ಹುಡುಕಾಟದಲ್ಲಿದ್ದ ಧರ್ಮಸ್ಥಳ ಮೇಳದ ಶೇಣಿ ಗೋಪಾಲಕೃಷ್ಣ ಭಟ್ಟರು, ವಿಟ್ಲ ಗೋಪಾಲಕೃಷ್ಣ ಜೋಷಿ, ಪಾತಾಳ ವೆಂಕಟ್ರಮಣ ಭಟ್ಟರೇ ಮೊದಲಾದವರು ಇವರ  ತಂದೆಯವರನ್ನು ಸಂಪರ್ಕಿಸಿ ಧರ್ಮಸ್ಥಳ ಮೇಳದ ಸುಳ್ಯದ ಜಾತ್ರೆಯ ಆಟಕ್ಕೆ ಶ್ರೀಧರ ಭಂಡಾರಿಯವರು ಆ ಮೇಳವನ್ನು ಸೇರಿಕೊಳ್ಳುವಂತೆ ಮಾಡಿದರು.

ಇದನ್ನೂ ಓದಿ: ಸುಣ್ಣಂಬಳ ವಿಶ್ವೇಶ್ವರ ಭಟ್ – ಮಿತಭಾಷಿಯ ಸಹೃದಯತೆ (ಶೇಣಿ, ಸುಣ್ಣಂಬಳ ತಾಳಮದ್ದಳೆ ವೀಡಿಯೋ)  

ಹೀಗೆ 1963ರಲ್ಲಿ ಧರ್ಮಸ್ಥಳ ಮೇಳ ಸೇರಿದರು. ಅಲ್ಲಿಂದ ಮೊದಲ್ಗೊಂಡು ದಿಗ್ಗಜರ ಜೊತೆ ಶ್ರೀಧರ ಭಂಡಾರಿಯವರ ತಿರುಗಾಟ ಪ್ರಾರಂಭವಾಯಿತು. ಶೇಣಿ, ಪಾತಾಳ, ವಿಟ್ಲ ಜೋಷಿ, ಹೊಸಹಿತ್ಲು ಮಹಾಲಿಂಗ ಭಟ್, ಕುಡಾನ ಗೋಪಾಲಕೃಷ್ಣ ಭಟ್ ಮೊದಲಾದವರ ಮಾರ್ಗದರ್ಶನದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಹೋದರು.  ಅದೇ ಸಮಯದಲ್ಲಿ ಭಂಡಾರಿಯವರ ತಂದೆಯವರ ಗುರುಗಳೂ ಆದ ಕುರಿಯ ವಿಠಲ ಶಾಸ್ತ್ರಿಗಳಲ್ಲಿಗೆ ಹೋಗಿ ಸುಮಾರು ಆರು ತಿಂಗಳುಗಳ ಕಾಲ ಅಲ್ಲಿದ್ದು ಅವರಿಂದ ಯಕ್ಷಗಾನದ ಹೆಚ್ಚಿನ ತರಬೇತಿಯನ್ನು ಪಡೆದರು.

ಭರತನಾಟ್ಯವನ್ನು ಕಲಿತವನಾಗಿದ್ದರೂ ಅದನ್ನು ಪ್ರದರ್ಶಿಸುವ ಹಾಗೂ ಪ್ರಯೋಗ ಮಾಡುವ ಅವಕಾಶ ಅಷ್ಟಾಗಿ ಆಗದಿದ್ದರೂ ಭರತನಾಟ್ಯದ ಕಲಿಕೆಯಿಂದ ಅನುಕೂಲ ತುಂಬಾ ಆಗಿತ್ತು. ಅಭಿನಯಕ್ಕೆ ಹಾಗೂ ಸಣ್ಣ ಸಣ್ಣ ಹೆಜ್ಜೆಗಾರಿಕೆಯನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಭಾರತನಾಟ್ಯದ ಕಲಿಕೆ ಶ್ರೀಧರ ಭಂಡಾರಿಯವರಿಗೆ ಸಹಾಯವಾಯಿತು.

ಶ್ರೀಧರ ಭಂಡಾರಿಯವರ ಮಳೆಗಾಲದ ತಿರುಗಾಟದ ಮೇಳವಾದ  ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯು  ಕರ್ನಾಟಕದಾದ್ಯಂತ ಹೆಚ್ಚಿನ ಎಲ್ಲಾ ಕಡೆಗಳಿಗೆ ಮಳೆಗಾಲದ ತಿರುಗಾಟವನ್ನು ವಿಸ್ತರಿಸಿದೆ. ಈ ಪ್ರವಾಸೀ ಮಂಡಳಿಯ ತಿರುಗಾಟ ಈಗ ತನ್ನ 29 ವರ್ಷವನ್ನು ಪೂರೈಸಿದೆ. ಅನುಭವೀ ಹಾಗೂ ಪ್ರಖ್ಯಾತ ಕಲಾವಿದರ ತಂಡ. ಸುದೃಢವಾದ, ಸುಲಲಿತವಾದ ತಂಡ. ಆರ್ಥಿಕವಾಗಿಯೂ ಸುದೃಢವಾಗಿದೆ. 

1980ರಲ್ಲಿ ಪುತ್ತೂರು ಮೇಳ ಮಾಡಿದ್ದರು. ಮೊದಲ ಎರಡು ಮೂರು ವರ್ಷಗಳು ಆರ್ಥಿಕವಾಗಿ ಮೇಳ ಮುನ್ನಡೆಯ ಹಾದಿಯಲ್ಲಿತ್ತು. ಆದರೆ ಕ್ರಮೇಣ ಕಲೆಕ್ಷನ್ ಕಡಿಮೆಯಾಗಿ ಆರ್ಥಿಕವಾಗಿ ಕೈಸುಟ್ಟುಕೊಂಡರು. ಕಲಾವಿದರ ಸಂಘಟನೆ ಒಳ್ಳೆಯದಿತ್ತು. ಒಳ್ಳೆಯ ಹೆಸರೂ ಇತ್ತು. ಆದರೆ ನಿರ್ವಹಣೆಗೆ ಆರ್ಥಿಕ ಬಲ ಇರಲಿಲ್ಲ. ಆಮೇಲೆ 1987ರಲ್ಲಿ ಕಾಂತಾವರ ಮೇಳ ಮಾಡಿದರು.

1990ರಲ್ಲಿ ಮೇಳದ ನಿರ್ವಹಣೆಯಿಂದ ನಷ್ಟವನ್ನನುಭವಿಸಿ ಬೇಸತ್ತು ಸ್ವಂತ ಮೇಳವನ್ನು ಕೈಬಿಟ್ಟು ಪುನಃ ಧರ್ಮಸ್ಥಳ ಮೇಳಕ್ಕೆ ಸೇರಿದರು. ಅಲ್ಲಲ್ಲಿ ನಾಟ್ಯ ತರಗತಿಗಳು, ಮಳೆಗಾಲದ ಪ್ರದರ್ಶನಗಳು ಮೊದಲಾದುವುಗಳು ಭಂಡಾರಿಯವರಿಗೆ ಹೆಸರು ತಂದುಕೊಟ್ಟಿತು. ಆರ್ಥಿಕವಾಗಿಯೂ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಂಡರು. ಈಗಂತೂ ಮಳೆಗಾಲದಲ್ಲಿ ಇವರ ಯಕ್ಷಗಾನ ತಂಡವನ್ನು ನೋಡಿಯೇ ಅನೇಕ ಕಾರ್ಯಕ್ರಮಗಳು ಸಿಗುತ್ತವೆ. ಸಮಯಾವಕಾಶವಿಲ್ಲದಷ್ಟು ಆಟಗಳು ಸಿಗುತ್ತವೆ. ಸಮಯ, ದಿನಗಳ ಹೊಂದಿಸುವಿಕೆ ಕಷ್ಟಸಾಧ್ಯವಾಗಿ ಕೆಲವನ್ನು ಬಿಟ್ಟದ್ದೂ ಉಂಟು ಎಂದು ಶ್ರೀಧರ ಭಂಡಾರಿಯವರು ಹೇಳುತ್ತಾರೆ. 

“ನನ್ನನ್ನು  ರಂಗದಲ್ಲಿ ಬೆಳೆಸಿದ್ದು ಹೊಸಹಿತ್ಲು ಮಹಾಲಿಂಗ ಭಟ್ಟರು” ಎಂದು ಅವರನ್ನು ನೆನಪಿಸಿಕೊಳ್ಳುವ ಶ್ರೀಧರ ಭಂಡಾರಿಯವರು ಪುತ್ತೂರಿನಲ್ಲಿ ಎರಡು ಮೂರು ಕಡೆ ನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾರೆ. ಮುಂಬಯಿಯಲ್ಲಿ ಹಲವಾರು ಕಡೆ ನಾಟ್ಯ ನಿರ್ದೇಶನ, ತರಗತಿಗಳನ್ನು ಮಾಡಿದ್ದಾರೆ. ನೆಚ್ಚಿನ ಮಡದಿ, ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಸಂತೃಪ್ತಿಯ ಜೀವನವನ್ನು ನಡೆಸುತ್ತಿರುವ  ಡಾ| ಶ್ರೀಧರ ಭಂಡಾರಿಯವರು ಪುತ್ತೂರಿನ ಬನ್ನೂರು ಎಂಬಲ್ಲಿರುವ ತಮ್ಮ ಮನೆ ‘ಯಕ್ಷದೇಗುಲ’ದಲ್ಲಿ ಪತ್ನಿ ಶ್ರೀಮತಿ ಉಷಾ ಅವರೊಂದಿಗೆ ವಾಸಿಸುತ್ತಿದ್ದಾರೆ. 

‘ರಾಜಾ ರುದ್ರಕೋಪ’ – ‘ಕಲ್ಲೇಶ್ವರ ದೇವಾಲಯ ಬಡಗಿ’ಯಲ್ಲಿ ಯಕ್ಷಗಾನ ಪ್ರದರ್ಶನ 

ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಾಗೂ ಅಭಿನೇತ್ರಿ ಆರ್ಟ್ ಟ್ರಸ್ಟ್, ನೀಲ್ಕೋಡು ಇದರ ಸಹಯೋಗದಿಂದ ಹೆರೂರು ಎಂಬಲ್ಲಿ ನವೆಂಬರ್ 20, 2020ನೇ ಶುಕ್ರವಾರದಂದು ಸಂಜೆ ಘಂಟೆ  7ರಿಂದ ‘ರಾಜಾ ರುದ್ರಕೋಪ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಡಗುತಿಟ್ಟಿನ ಹೆಸರಾಂತ ಕಲಾವಿದರು ಭಾಗವಹಿಸಲಿರುವರು. ಸರಕಾರದ ಕೋವಿಡ್-19 ನಿಯಮಾನುಸಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ. 

‘ಭಾಸವತಿ’ – ಹೆರೂರಿನಲ್ಲಿ ಯಕ್ಷಗಾನ ಪ್ರದರ್ಶನ 

ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಾಗೂ ಅಭಿನೇತ್ರಿ ಆರ್ಟ್ ಟ್ರಸ್ಟ್, ನೀಲ್ಕೋಡು ಇದರ ಸಹಯೋಗದಿಂದ ಹೆರೂರು ಎಂಬಲ್ಲಿ ನವೆಂಬರ್ 21, 2020ನೇ ಶನಿವಾರದಂದು ಸಂಜೆ ಘಂಟೆ 6.30ರಿಂದ ‘ಭಾಸವತಿ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಡಗುತಿಟ್ಟಿನ ಹೆಸರಾಂತ ಕಲಾವಿದರು ಭಾಗವಹಿಸಲಿರುವರು. ಸರಕಾರದ ಕೋವಿಡ್-19 ನಿಯಮಾನುಸಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ.