Friday, August 28, 2026
Home Blog Page 372

ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯಲಿದ್ದಾರೆಯೇ ತ್ರಿಮೂರ್ತಿಗಳು?

ಯಕ್ಷಗಾನ ಮತ್ತೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸರಕಾರದಿಂದ ಕೆಲವೊಂದು ನೀತಿ ಸಂಹಿತೆ, ನಿಯಮಾವಳಿಗಳ ಷರತ್ತು ಬದ್ಧ ಅನುಮತಿಯೂ ದೊರಕಿದೆ. ಆದರೆ ಕೆಲವೊಂದು ಮೂಲಗಳ ಪ್ರಕಾರ 60 ವರ್ಷ ಮೇಲ್ಪಟ್ಟ ಕಲಾವಿದರಿಗೆ ಈ ಬಾರಿ ತಿರುಗಾಟ ನಡೆಸಲು ಕೆಲವೊಂದು ತೊಡಕುಗಳಿವೆ ಎಂದು ಹೇಳಲಾಗುತ್ತಿತ್ತು.

ನೀತಿ ನಿಯಮಾವಳಿಗಳ ಹೊರತಾಗಿಯೂ ಕೆಲವು ಹಿರಿಯ ಕಲಾವಿದರು ತಿರುಗಾಟಕ್ಕೆ ಸ್ವಯಂ ನಿರ್ಬಂಧ ವಿಧಿಸಿಕೊಂಡ ಬಗ್ಗೆ ಮಾಹಿತಿಗಳು ಬರುತ್ತಿವೆ. ಅದರಲ್ಲೂ ಒಂದು ಕಾಲದಲ್ಲಿ ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆಯಲ್ಲಿ ವಿಜೃಂಬಿಸುತ್ತಿದ್ದ ಹಾಡುಗಾರಿಕೆಯ ತ್ರಿಮೂರ್ತಿಗಳೆಂದೇ ಪ್ರಸಿದ್ಧರಾಗಿದ್ದ ಭಾಗವತರುಗಳಾದ ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯ ಮತ್ತು ಪುತ್ತಿಗೆ ರಘುರಾಮ ಹೊಳ್ಳರು ಈ ಬಾರಿಯ ತಿರುಗಾಟಕ್ಕೆ ಲಭ್ಯರಾಗುವುದು ಸಂಶಯ ಎಂದೇ ಭಾವಿಸಲಾಗಿದೆ.

ದಿನೇಶ ಅಮ್ಮಣ್ಣಾಯ

ಎಡನೀರು ಮೇಳವು ತನ್ನ ತಿರುಗಾಟವನ್ನು ಕಳೆದ ವರ್ಷವೇ ಕೆಲವೊಂದು ಕಾರಣಗಳಿಂದ ನಿಲ್ಲಿಸಿತ್ತು. ಈ ಕಾರಣದಿಂದ ದಿನೇಶ ಅಮ್ಮಣ್ಣಾಯರು ಮೇಳದ ಖಾಯಂ ಭಾಗವತರಾಗಿ ಮತ್ತೆ ಕಾಣಿಸಿಕೊಳ್ಳುವುದು ಅಸಂಭವ. ಅದೂ ಅಲ್ಲದೆ ಕೃಷಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡ ಅಮ್ಮಣ್ಣಾಯರು ಒಂದೆರಡು ವರ್ಷಗಳ ಮೊದಲೇ ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯುವ ಸೂಚನೆಯನ್ನು ನೀಡಿದ್ದರು.

ಪದ್ಯಾಣ ಗಣಪತಿ ಭಟ್ಟರೂ ವಯಸ್ಸಿನ ಕಾರಣದಿಂದ ಈ ಬಾರಿಯ ತಿರುಗಾಟದಿಂದ ಹಿಂದೆ ಉಳಿಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳ ಬೇಡಿಕೆಯ ಮೇರೆಗೆ ಕೆಲವೊಂದು ಪ್ರದರ್ಶನಗಳಲ್ಲಿ ಮೇಳದ ಭಾಗವತರಾಗಿ ಕಾಣಿಸಿಕೊಂಡರೂ ಪ್ರತಿಯೊಂದು ಪ್ರದರ್ಶನಗಳಲ್ಲಿ ಅವರ ಲಭ್ಯತೆ ಇರಲಾರದು. 

ಪದ್ಯಾಣ ಗಣಪತಿ ಭಟ್

ಪುತ್ತಿಗೆ ರಘುರಾಮ ಹೊಳ್ಳರಿಗೂ ಅದೇ ವಯಸ್ಸಿನ ತೊಡಕು. ಆದರೆ ಅವರಿಗೆ ತಿರುಗಾಟಕ್ಕೆ ವಿದಾಯ ಹೇಳಲು ಬೇರೇನೂ ಅನಾನುಕೂಲತೆಗಳಿಲ್ಲ ಎಂದು ತೋರುತ್ತದೆ. ಆದರೂ ಅವರು ಮೇಳದ ತಿರುಗಾಟಕ್ಕೆ ಈಗಾಗಲೇ ವಿದಾಯ ಹೇಳಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅದು ಅಧಿಕೃತ ಸುದ್ದಿಯೋ ಅಥವಾ ಅನಧಿಕೃತವೋ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ. 

ಪುತ್ತಿಗೆ ರಘುರಾಮ ಹೊಳ್ಳ

ಏನೇ ಆದರೂ ಒಂದು ಕಾಲದಲ್ಲಿ ಈ ತ್ರಿಮೂರ್ತಿಗಳು ಯಕ್ಷಗಾನ ಪ್ರಿಯರಲ್ಲಿ ಯಕ್ಷಗಾನದ ಕಿಚ್ಚು ಹಬ್ಬಿಸಿದ್ದಂತೂ ಸುಳ್ಳಲ್ಲ. ನಿಜವಾಗಿ ಆ ಕಾಲದಲ್ಲಿ ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಮಂದಿಯನ್ನು ತಮ್ಮ ಗಾನ ಸುಧೆಯಿಂದ ಸನ್ಮೋಹಗೊಳಿಸಿ ಯಕ್ಷಗಾನದತ್ತ ಮತ್ತೆ ಕೊರಳು ತಿರುಗಿಸುವಂತೆ ಮಾಡಿದುದರಲ್ಲಿ ಈ ಮೂವರ ಕೊಡುಗೆ ಬಹಳಷ್ಟಿದೆ. ಆದ್ದರಿಂದ ಈ ಮೂವರು ಭಾಗವತರ ನಿವೃತ್ತಿಯು ಯಕ್ಷಗಾನದ ಹಲವಾರು ಹಿರಿಯ ಪ್ರೇಕ್ಷಕರನ್ನು ಮತ್ತೆ ಪ್ರದರ್ಶನಗಳಿಂದ ವಿಮುಖರಾಗುವಂತೆ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ತೀರ್ಥಹಳ್ಳಿ ಗೋಪಾಲ ಆಚಾರ್ಯ – ಯಕ್ಷವೇದಿಕೆಯ ಅಭಿಮನ್ಯು

ತೀರ್ಥಹಳ್ಳಿ ಗೋಪಾಲ ಆಚಾರ್ಯರು ಬಡಗುತಿಟ್ಟು ಯಕ್ಷಗಾನ ರಂಗ ಕಂಡ ಪ್ರಖ್ಯಾತ ಪುಂಡುವೇಷಧಾರಿಗಳಲ್ಲಿ ಒಬ್ಬರು. ಒಂದು ಕಾಲದಲ್ಲಿ ಅಂದರೆ ಸುಮಾರು 20 ವರ್ಷಗಳ ಕಾಲದಷ್ಟು ಹಿಂದಕ್ಕೆ ಹೋದರೆ ಆ ಕಾಲದಲ್ಲಿ ಬಡಗು ತಿಟ್ಟಿನಲ್ಲಿ ಅಭಿಮನ್ಯು ಮತ್ತು ಬಬ್ರುವಾಹನ, ಸುಧನ್ವ, ಚಂದ್ರಹಾಸ, ದೇವವ್ರತ ಮೊದಲಾದ ಪುಂಡುವೇಷಗಳಲ್ಲಿ ಯಕ್ಷಗಾನ ವೇದಿಕೆಗಳಲ್ಲಿ ತನ್ನ ಪ್ರದರ್ಶನದಿಂದಲೇ ದೂಳೆಬ್ಬಿಸಿದವರು.

ಈಚೆಗೆ ನಾಲ್ಕೈದು ವರ್ಷಗಳ ಹಿಂದೆ ಅವರಿಗೆ 60 ವರ್ಷಗಳು ತುಂಬಿತ್ತು. ಆಗ ಅವರ 60ರ ಸಂಭ್ರಮವನ್ನೂ ಆಚರಿಸಲಾಗಿತ್ತು. ಅಂತಹಾ 60ರ ವಯಸ್ಸಿನಲ್ಲಿಯೂ ಪುಂಡುವೇಷಗಳನ್ನು ವಯಸ್ಸಿನ ತೊಡಕುಗಳಿಲ್ಲದೆ ಸುಲಲಿತವಾಗಿ ನಿರ್ವಹಿಸುತ್ತಿದ್ದ ಅವರಿಗೆ ಅರುವತ್ತರ ಅಭಿಮನ್ಯು ಎಂಬ ಹೆಸರು ಸಾರ್ಥಕವಾಗಿ ಒಪ್ಪುತ್ತದೆ. ತನ್ನ 60ನೆಯ ವಯಸ್ಸಿನಲ್ಲಿಯೂ 30ರ ಯುವಕನಷ್ಟು ರಂಗದಲ್ಲಿ ಕ್ರಿಯಾಶೀಲರಾಗಿದ್ದ ಬೆರಳೆಣಿಕೆಯ ಕಲಾವಿದರಲ್ಲಿ ಗೋಪಾಲ ಆಚಾರ್ಯರೂ ಒಬ್ಬರು.

60 ವರ್ಷ ಎನ್ನುವುದು  ಕಲಾವಿದರಿಗೆ  ಪ್ರಾಯವೇನಲ್ಲ ಹೆಚ್ಚಿನ ಕಲಾವಿದರು ತಮ್ಮ ಕಲಾಜೀವನದ ಉತ್ತುಂಗದ ಸ್ಥಿತಿಯಲ್ಲಿ ವಿರಾಜಮಾನರಾಗುವುದು ಈ ವಯಸ್ಸಿನಲ್ಲಿಯೇ ಆಗಿರುತ್ತದೆ. ಆದರೆ  ಬೇಡಿಕೆಯಲ್ಲಿರುವಾಗಲೇ ವೃತ್ತಿ ಬದುಕಿಗೆ ವಿದಾಯ ಹೇಳಬೇಕೆಂಬ ಬಯಕೆ ತೀರ್ಥಹಳ್ಳಿ ಗೋಪಾಲ ಆಚಾರ್ಯರದ್ದಾಗಿತ್ತು. ಅದರಂತೆ  ತಮ್ಮ ಕಲಾಬದುಕಿನ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗಲೇ ಯಕ್ಷಗಾನ ವೃತ್ತಿಗೆ ನಿವೃತ್ತಿ ಘೋಷಿಸಿದರು. 

ತೀರ್ಥಹಳ್ಳಿ ಗೋಪಾಲ ಆಚಾರ್ಯರು  ಹುಟ್ಟಿದ್ದು ಮಲೆನಾಡಿನ ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ. ವಾಸುದೇವ ಆಚಾರ್ಯ ಮತ್ತು ಸುಲೋಚನಾ ದಂಪತಿಯ ಎರಡನೇ ಮಗನಾಗಿ 1955ರಲ್ಲಿ ಜನಿಸಿದರು. ಹಿರಿಯರ ಮೂಲ ಕುಲಕಸುಬನ್ನು ಬಿಟ್ಟು ಯಕ್ಷಗಾನವನ್ನು ವೃತ್ತಿ ಮತ್ತು ಆಸಕ್ತಿಯ  ಕ್ಷೇತ್ರವನ್ನಾಗಿ ಆರಿಸಿಕೊಂಡರು. ಅವರ ಆಯ್ಕೆ ತಪ್ಪಾಗಲೇ  ಇಲ್ಲ. ಅವರ ಈ ನಿರ್ಧಾರವು ಮುಂದೊಂದು ದಿನ ಯಕ್ಷಗಾನಕ್ಕೊಂದು ಅಮೂಲ್ಯ ರತ್ನವನ್ನು ಸಂಪಾದಿಸಿಕೊಟ್ಟಿತು.

ತೀರ್ಥಹಳ್ಳಿ ಗೋಪಾಲ ಆಚಾರ್ಯ ಎನ್ನುವ  ಯಕ್ಷಗಾನ ಕಲಾವಿದ ಇಂದು ಜನಮಾನಸದಲ್ಲಿ ಅಮೂಲ್ಯ ಸ್ಥಾನವನ್ನು ಪಡೆದಿದ್ದಾರೆ.  ಬಡಗುತಿಟ್ಟು ಯಕ್ಷಗಾನ ರಂಗದ ಈ ಕಲಾವಿದ ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ರಂಗದ ಅನಭಿಷಿಕ್ತ ದೊರೆಯಾಗಿ ಮೆರೆದರು. ಮಲೆನಾಡಿನ ತೀರ್ಥಹಳ್ಳಿಯಿಂದ ಬಂದು ಯಕ್ಷಗಾನದ ಆಡು ಅಂಗಳವಾದ ಕುಂದಾಪುರ ತಾಲೂಕಿನ  ಸಮೀಪದ ನಾಯಕನಕಟ್ಟೆಯಲ್ಲಿ ನೆಲೆಸಿದರು.  ಓದಿದ್ದು ಮೂರನೆಯ ತರಗತಿಯ ವರೆಗೆ. ಆದರೆ ಯಕ್ಷಗಾನದಿಂದ ಗಳಿಸಿಕೊಂಡ ಜ್ಞಾನ ವಿದ್ವಾಂಸರಿಗಿಂತ ಕಡಿಮೆಯೇನಲ್ಲ.

ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಕೃಷ್ಣೋಜಿರಾಯರಿಂದ ಪೂರೈಸಿದರು. ಆಮೇಲೆ ಮೇಳದ ತಿರುಗಾಟಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ತಾನು ಸ್ವತಃ ಕಂಡು, ಅನುಭವಗಳಿಂದ ಕಲಿತರು. ಆಚಾರ್ಯರ ಈ ತೆರನಾದ ಪ್ರಸಿದ್ಧಿಯು ಅವರಿಗೆ ದಿಢೀರ್ ಉಂಟಾದುದಲ್ಲ. ತನ್ನ 14ನೇ ವಯಸ್ಸಿನಲ್ಲಿ ಮಲೆನಾಡಿನ ರಂಜದಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆಕಟ್ಟಿದ ಆಚಾರ್ಯರು ಬಾಲಗೋಪಾಲ, ಪೀಠೀಕಾ ಸ್ತ್ರೀವೇಷ, ಒಡ್ಡೋಲಗ ಪುಂಡುವೇಷ, ಪುರುಷವೇಷಗಳನ್ನೂ ಮಾಡಿ ಎರಡನೇ ವೇಷದ ಸ್ಥಾನಕ್ಕೇರಿದರು. 

1970ರಲ್ಲಿ ತನ್ನ ತಿರುಗಾಟವನ್ನು ಆರಂಭಿಸಿದ ತೀರ್ಥಹಳ್ಳಿಯವರು ನಾಗರಕೊಡುಗೆ, ಶಿರಸಿಯ ಪಂಚಲಿಂಗೇಶ್ವರ, ಗೋಳಿಗರಡಿ ಮತ್ತು ಸಾಲಿಗ್ರಾಮ ಮೇಳಗಳಲ್ಲಿ ಸೇವೆ ಸಲ್ಲಿಸಿದ ನಂತರ ಪೆರ್ಡೂರು ಮೇಳದಲ್ಲಿ 31 ವರ್ಷಗಳ ಸುದೀರ್ಘಾವಧಿಯ ಕಲಾಸೇವೆ ಸಲ್ಲಿಸಿದ್ದಾರೆ. ಯಕ್ಷರಂಗದ ಸಿಡಿಲಮರಿ, ಅರುವತ್ತರ ಅಭಿಮನ್ಯು ಹೀಗೆ ಬಹು ಬಿರುದಾಂಕಿತ ತೀರ್ಥಹಳ್ಳಿಯವರ ನಿವೃತ್ತಿಯ ನಿರ್ಧಾರದಿಂದ ಸ್ವತಃ ಅವರ ಅಭಿಮಾನಿಗಳೂ ಮತ್ತು ಯಕ್ಷಗಾನ ಕಲಾಭಿಮಾನಿಗಳೂ ಅತೀವ ಬೇಸರಗೊಂಡಿದ್ದರು.

ಅವರಿಂದ ಇನ್ನೂ ಹೆಚ್ಚಿನ ಕಲಾಸೇವೆಯನ್ನು  ನಿರೀಕ್ಷಿಸಿದ್ದರೂ ತೀರ್ಥಹಳ್ಳಿಯವರು ತನ್ನ ನಿವೃತ್ತಿಗೆ ಇದೇ ಸಕಾಲ ಎಂದು ನಿರ್ಧರಿಸಿದಂತಿತ್ತು. ಶ್ರುತಿಬದ್ದ ಮಾತುಗಳು ಮತ್ತು ಪಾತ್ರಕ್ಕೆ ನ್ಯಾಯ ಒದಗಿಸುವಿಕೆ ಮತ್ತು ಪಾತ್ರ ನಿರ್ವಹಣೆಯಲ್ಲಿ ಶಿಸ್ತು ಮತ್ತು ಅಚ್ಚುಕಟ್ಟುತನ ಇವುಗಳು ಗೋಪಾಲ ಆಚಾರ್ಯರ ವಿಶೇಷತೆಗಳು. ರಂಜದಕಟ್ಟೆ ಮೇಳದ ಪ್ರಥಮ ತಿರುಗಾಟದ ನಂತರ ನಾಗರಕೊಡಗೆ ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿದ್ದ ಗೋಪಾಲ ಆಚಾರ್ಯರು ಆಮೇಲೆ  ಗೋಳಿಗರಡಿ ಮೇಳದಲ್ಲಿ ತಿರುಗಾಟ  ನಡೆಸಿದ್ದರು.

ಆಮೇಲೆ ಸಾಲಿಗ್ರಾಮ ಮೇಳಕ್ಕೆ ಸೇರಿದರು.  ಸಾಲಿಗ್ರಾಮ ಮೇಳದ ತಿರುಗಾಟವು  ಕಲಾಜೀವನಕ್ಕೆ  ದೊಡ್ಡ ತಿರುವು ಎಂದೇ ಹೇಳಬಹುದು. ಪ್ರಸಿದ್ಧ ಕಲಾವಿದರ ಒಡನಾಟದಿಂದ ಬಹಳಷ್ಟು ಕಲಿಯುವುದಕ್ಕೆ ಅವಕಾಶವಾಯಿತು.  ಗುಂಡ್ಮಿ ಕಾಳಿಂಗ ನಾವಡ,  ಅರಾಟೆ ಮಂಜುನಾಥ, ಮುಖ್ಯಪ್ರಾಣ ಕಿನ್ನಿಗೋಳಿ,  ರಾಮನಾಯರಿ, ಭಾಸ್ಕರ ಜೋಶಿ, ಬಳ್ಕೂರು ಕೃಷ್ಣಯಾಜಿ, ಐರೋಡಿ ಗೋವಿಂದಪ್ಪ, ನೆಲ್ಲೂರು ಮರಿಯಪ್ಪಾಚಾರ್, ಜಲವಳ್ಳಿ ವೆಂಕಟೇಶ ರಾವ್, ಶಿರಿಯಾರ್ ಮಂಜುನಾಯ್ಕ್, ಅರಾಟೆ ಮಂಜುನಾಥ,  ಮೊದಲಾದ ದಿಗ್ಗಜರ ಒಡನಾಟವೂ ದೊರೆಯಿತು.

ಬಹು ಬೇಗನೆ ಪುಂಡುವೇಷದ ಪಟ್ಟ ಅರಸಿಕೊಂಡು ಬಂತು. ಕಾಳಿಂಗ ನಾವಡರ ನಾಗಶ್ರೀ ಪ್ರಸಂಗದ ಶೈಥಿಲ್ಯನಾಗಿ  ಜನಮನ್ನಣೆ ಗಳಿಸಿದರು. ಕಾಲ್ಪನಿಕ ಮತ್ತು ಸಾಮಾಜಿಕ ಪ್ರಸಂಗಗಳಲ್ಲಿ ಅಲ್ಲದೆ ಪೌರಾಣಿಕ ಪ್ರಸಂಗಗಳ ಪಾತ್ರಗಳಾದ ಅಭಿಮನ್ಯು, ಧರ್ಮಂಗದ, ರುಕ್ಮಾಂಗ, ಶುಭಾಂಗ, ಬಬ್ರುವಾಹನ, ಚಿತ್ರಕೇತ, ಕುಶ, ಲವ ಮೊದಲಾದ ಪಾತ್ರಗಳಲ್ಲಿ ಅಭೂತಪೂರ್ವ ಜನಮನ್ನಣೆಯನ್ನು ಗಳಿಸಿದರು. ಸಾಲಿಗ್ರಾಮ ಮೇಳದಲ್ಲಿ ಹತ್ತು ವರ್ಷ ತಿರುಗಾಟ ಮಾಡಿದ್ದರು. ಆಮೇಲೆ  ಶಿರಸಿಯ ಪಂಚಲಿಂಗೇಶ್ವರ ಮೇಳದಲ್ಲಿ ಸೇವೆ ಸಲ್ಲಿಸಿದರು.

1986ರಲ್ಲಿ ಡೇರೆ  ಪುನರಾರಂಭಗೊಂಡ ಪೆರ್ಡೂರು ಮೇಳಕ್ಕೆ  ತೀರ್ಥಹಳ್ಳಿ ಗೋಪಾಲ ಆಚಾರ್ಯರು ಸೇರ್ಪಡೆಗೊಂಡರು. ಆಮೇಲೆ  ನಿರಂತರ 31 ವರ್ಷಗಳ ಕಾಲ ಪೆರ್ಡೂರು ಮೇಳದ ಅವಿಭಾಜ್ಯ ಅಂಗವಾದರು.  ಪೆರ್ಡೂರು ಮೇಳದಲ್ಲಿ ಅವರಿಗೆ ಸುಬ್ರಮಣ್ಯ ಧಾರೇಶ್ವರ, ಸುರೇಶ ಶೆಟ್ಟಿ, ದುರ್ಗಪ್ಪ ಗುಡಿಗಾರ್, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆ, ಆರ್ಗೋಡು ಮೋಹನದಾಸ ಶೆಣೈ ಮೊದಲಾದ ಪ್ರಸಿದ್ಧ ಕಲಾವಿದರ ಒಡನಾಟ ಸಿಕ್ಕಿತು. ಅಲ್ಲಿ ಆಚಾರ್ಯರು ಖ್ಯಾತಿಯ ಉತ್ತುಂಗಕ್ಕೇರತೊಡಗಿದರು.

ಅವರಿಗೆ ಅಪಾರ ಪ್ರಸಿದ್ಧಿ ತಂದುಕೊಟ್ಟ ಪಾತ್ರ ಅಭಿಮನ್ಯು. ಆ ಪಾತ್ರ ಎಷ್ಟು ಪ್ರಸಿದ್ಧಿ ತಂದು ಕೊಟ್ಟಿತು ಎಂದರೆ ಅಭಿಮನ್ಯುವಿನ ಹೆಸರು ಗೋಪಾಲ ಆಚಾರ್ಯರ ಹೆಸರಿನೊಂದಿಗೆ ಜೋಡಿಸಲ್ಪಟ್ಟಿತು. ಅದೇ ರೀತಿ ಕೃಷ್ಣನ ಪಾತ್ರವೂ ಇವರನ್ನೇ ಅರಸಿ ಬರುತ್ತಿತ್ತು. ಯಾವುದೇ ಪ್ರಸಂಗದಲ್ಲಿ ಕೃಷ್ಣನ ಪಾತ್ರವು ಇವರಿಗೆ ಮೀಸಲಾಗಿರುತ್ತಿತ್ತು.

ಬಡಗು ಮತ್ತು ಬಡಾ ಬಡಗು ಈ  ಎರಡೂ ಶೈಲಿಗಳ ನೃತ್ಯವನ್ನು ಕರಗತ ಮಾಡಿಕೊಂಡಿದ್ದ ಗೋಪಾಲ ಆಚಾರ್ಯರು ಈ ಎರಡೂ ನೃತ್ಯ ಶೈಲಿಗಳನ್ನು ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶಿಸುತ್ತಿದ್ದರು. ಇವರ ವೇಷಗಾರಿಕೆಯಲ್ಲಿ ನಗರ ಜಗನ್ನಾಥ ಶೆಟ್ಟಿ ಮತ್ತು ಶಿರಿಯಾರ ಮಂಜು ನಾಯ್ಕರ ಪ್ರಭಾವವಿದೆ ಎಂದು ಹೇಳಲಾಗುತ್ತದೆ.  ಹೀಗೆ 1970ರಿಂದ ತೊಡಗಿ ಒಟ್ಟು 46 ವರ್ಷಗಳ ಕಾಲ ತೀರ್ಥಹಳ್ಳಿ ಗೋಪಾಲ ಆಚಾರ್ಯರು ಬಡಗುತಿಟ್ಟು ಯಕ್ಷಗಾನದಲ್ಲಿ ಬೆಳೆದು ಬಂದು ಪ್ರಸಿದ್ಧಿಯ ಪಥದಲ್ಲಿ ಹೆಜ್ಜೆ ಹಾಕಿದ್ದು ಈಗ ಇತಿಹಾಸ. 

ಯಕ್ಷಾಂಗಣದಿಂದ ರಾಜ್ಯೋತ್ಸವ ಕಲಾ ಸಂಭ್ರಮ: ಶಕ್ತಿನಗರದಲ್ಲಿ ಯಕ್ಷಗಾನ ತಾಳಮದ್ದಳೆ ಪರ್ವ

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಕಳೆದ ಎಂಟು ವರ್ಷಗಳಿಂದ ಆಯೋಜಿಸುತ್ತಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ವನ್ನು ಕೋವಿಡ್ – 19 ಹಿನ್ನೆಲೆಯಲ್ಲಿ ರದ್ದುಪಡಿಸಿದ್ದು, ಈ ಬಾರಿ ಸರಕಾರದ ನಿಯಮಾವಳಿಗೊಳಪಟ್ಟು ಒಂದು ದಿನದ ‘ಯಕ್ಷಗಾನ ತಾಳಮದ್ದಳೆ ಪರ್ವ’ವನ್ನು  ನಡೆಸಲು ತೀರ್ಮಾನಿಸಲಾಗಿದೆ. 

     

ಇದೇ 2020 ನವೆಂಬರ್ 29 ರಂದು ಆದಿತ್ಯವಾರ ಅಪರಾಹ್ನ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ‘ಪಾರಿಜಾತ’   ಸಭಾಂಗಣದಲ್ಲಿ  ‘ರಾಜ್ಯೋತ್ಸವ ಕಲಾ ಸಂಭ್ರಮ – 2020’ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರ ಸಂಸ್ಮರಣೆ, ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಮತ್ತು ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ.       

 

ಈ ಸಂದರ್ಭದಲ್ಲಿ ಕನ್ನಡ ನುಡಿ ಹಬ್ಬವಾಗಿ ನಡೆಯುವ ಯಕ್ಷಗಾನ ತಾಳಮದ್ದಳೆ ಪರ್ವದಲ್ಲಿ ಜಿಲ್ಲೆಯ ಹೆಸರಾಂತ ಕಲಾವಿದರಿಂದ ‘ಶ್ರೀಕೃಷ್ಣ ತಂತ್ರ – ಮಾರುತಿ ಪ್ರತಾಪ’ ತಾಳಮದ್ದಳೆ ಕೂಟವನ್ನು ಏರ್ಪಡಿಸಲಾಗಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಕ್ಷಗಾನ ವೇಷಭೂಷಣ, ರಂಗಭೂಮಿ ಪ್ರವೀಣ ಶ್ರೀ ಮಹಾಬಲ ಕಲ್ಮಡ್ಕ 

ಯಕ್ಷಗಾನವಾಗಲೀ, ನಾಟಕವಾಗಲೀ ಯುವುದೇ ಒಂದು ಕಲೆಯ ರಂಗಪ್ರದರ್ಶನಕ್ಕೆ ಬೇಕಾದ ವೇಷಭೂಷಣಗಳನ್ನು ತಯಾರಿಸಿ, ಅದನ್ನು ನಿರ್ವಹಿಸುತ್ತಾ ಮುನ್ನೆಡೆಯುವುದು ಅಷ್ಟು ಸುಲಭವಲ್ಲ. ಅದೊಂದು ಕಲೆಯೇ ಹೌದು. ಆಸಕ್ತಿ, ಅರ್ಪಣಾ ಭಾವ, ಸಹನೆ, ಎಚ್ಚರಗಳೆಂಬ ಗುಣಗಳಿದ್ದವರಿಗೆ ಮಾತ್ರ ಇದು ಸಾಧ್ಯ.

ರಂಗದಲ್ಲಿ ಪ್ರದರ್ಶನಗಳು ಯಶಸ್ವಿಯಾಗಿ ರಂಜಿಸಲು ಇವರೂ ಕಾರಣರಾಗುತ್ತಾರೆ. ಅನೇಕ ಪ್ರಸಾಧನ ತಜ್ಞರು ಇಂದು ಯಕ್ಷಗಾನ ಪ್ರದರ್ಶನಗಳಿಗೆ ವೇಷ ಭೂಷಣಗಳನ್ನು ತಯಾರಿಸಿ ಒದಗಿಸುತ್ತಿದ್ದಾರೆ. ಅಂತಹಾ ಪ್ರಸಾಧನ ತಜ್ಞರಲ್ಲಿ ಶ್ರೀ ಮಹಾಬಲ ಕಲ್ಮಡ್ಕ ಅವರೂ ಒಬ್ಬರು. ಬಹುಮುಖ ಪ್ರತಿಭೆಯ ಕಲಾವಿದರಿವರು. ಯಕ್ಷಗಾನ, ನಾಟಕ ಕಲಾವಿದರಾಗಿ, ವೇಷಭೂಷಣ ತಯಾರಕರಾಗಿ ಪ್ರಸಾಧನ ತಂಡದ ನಾಯಕನಾಗಿ, ಕಲಾ ಪ್ರದರ್ಶನಗಳ ಸಂಘಟಕರಾಗಿ, ನಿರ್ದೇಶಕರಾಗಿ, ಕಾಷ್ಠಶಿಲ್ಪ ತಯಾರಕರಾಗಿ ಗುರುತಿಸಿಕೊಂಡಿದ್ದಾರೆ.

ಶ್ರೀಯುತರು ಕಲ್ಮಡ್ಕದ ‘ರಂಗ ಸುರಭಿ’ ಪ್ರಸಾಧನ ಸಂಸ್ಥೆಯ ರೂವಾರಿಗಳು. ಶ್ರೀ ಮಹಾಬಲ ಭಟ್ ಅವರು ಸುಳ್ಯ ತಾಲೂಕು ಕಲ್ಮಡ್ಕದ ಕೆರೆಕೋಡಿ ಎಂಬಲ್ಲಿ 1962 ಜನವರಿ 6ರಂದು ಕೆರೆಕೋಡಿ ಪಂಡಿತ ಗಣಪತಿ ಭಟ್ ಮತ್ತು ಪಾರ್ವತೀ ಅಮ್ಮ ದಂಪತಿಗಳ ಪುತ್ರನಾಗಿ ಈ ಲೋಕದ ಬೆಳಕನ್ನು ಕಂಡವರು. ಕೆರೆಕೋಡಿ ಗಣಪತಿ ಭಟ್ಟರು ಆಯುರ್ವೇದ ವೈದ್ಯರಾಗಿ ಕಲಾವಿದರಾಗಿ, ಸಂಘಟಕರಾಗಿ ಪ್ರಸಿದ್ಧರು. ಕಲ್ಮಡ್ಕದ ‘ಸಂಗಮ ಕಲಾ ಸಂಘ’ ಎಂಬ ಸಂಸ್ಥೆಯನ್ನು ಊರ ಮಿತ್ರರ ಸಹಕಾರದಿಂದ ಹುಟ್ಟಿ ಹಾಕಿ ನಿರಂತರ ಕಲಾ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇವರ ಮೂಲ ಮನೆ ಕಾಸರಗೋಡು ತಾಲೂಕಿನ ಪಳ್ಳತ್ತಡ್ಕ ಎಂಬಲ್ಲಿ. ಇವರು ಸಮಾಜ ಸೇವಕರೂ ಆಗಿದ್ದರು.

ಮಹಾಬಲ ಕಲ್ಮಡ್ಕ ಅವರಿಗೆ ಕಲಾಸಕ್ತಿ ಹಿರಿಯರಿಂದಲೇ ಬಂದ ಬಳುವಳಿ. ಇವರು ಪದವೀಧರರು. ಓದಿದ್ದು ಕಲ್ಮಡ್ಕ ಶಾಲೆ, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ, ಬೆಳ್ಳಾರೆ ಪದವಿ ಪೂರ್ವ ಕಾಲೇಜು, ಪುತ್ತೂರು ವಿವೇಕಾನಂದ ಕಾಲೇಜುಗಳಲ್ಲಿ. ಬಾಲ್ಯದಲ್ಲೇ ಯಕ್ಷಗಾನ, ನಾಟಕ, ತಾಳಮದ್ದಲೆಗಳನ್ನು ನೋಡುತ್ತಾ ಬೆಳೆದವರು. ಕುಡ್ಪ ಶ್ರೀ ರಾಮಚಂದ್ರ ಹೆಗಡೆ ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತು 7ನೇ ಕ್ಲಾಸಿನಲ್ಲಿರುವಾಗ ರಂಗ ಪ್ರವೇಶ ಮಾಡಿದ್ದರು.

ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಶಾಲಾ ವಾರ್ಷಿಕೋತ್ಸವದ ಪ್ರದರ್ಶನಗಳಲ್ಲಿ ಮತ್ತು ಕಲ್ಮಡ್ಕ ಸಂಗಮ ಕಲಾ ಸಂಘದ ಪ್ರದರ್ಶನಗಳಲ್ಲಿ ವೇಷ ಮಾಡಿದ್ದರು. ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ಸಂಗಮ ಕಲಾ ಸಂಘದ ಆಶ್ರಯದಲ್ಲಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿರುವಾಗ ಪ್ರಸಂಗಕರ್ತ, ವಿದ್ವಾಂಸ, ಉಪನ್ಯಾಸಕ, ಶ್ರೀ ಅಮೃತ ಸೋಮೇಶ್ವರರ ಪ್ರೋತ್ಸಾಹವೂ ದೊರಕಿತ್ತು. ಅವರೊಂದಿಗೆ ಯಕ್ಷಗಾನದ ಅನೇಕ ಶಿಬಿರ, ಕಮ್ಮಟಗಳಿಗೆ ತೆರಳಿ ಮುಖವರ್ಣಿಕೆ, ವೇಷ ಧರಿಸುವ ಕ್ರಮವನ್ನು ಅಭ್ಯಸಿಸಿದ್ದರು.

ಕಲಾಗಂಗೋತ್ರಿ ಕೋಟೆಕಾರು, ಕಟೀಲು, ಉಡುಪಿ ಯಕ್ಷಗಾನ ಅಧ್ಯಯನ ಕೇಂದ್ರ, ಸುಳ್ಯ ತೆಂಕುತಿಟ್ಟು ಹಿತರಕ್ಷಣಾ ವೇದಿಕೆ, ಮೊದಲಾದೆಡೆ ನಡೆದ ಶಿಬಿರಗಳಲ್ಲಿ ಭಾಗಿಯಾಗಿ ಅಧ್ಯಯನ ನಡೆಸಿದ್ದರು. ಕೇರಳದಲ್ಲಿ ಕಥಕ್ಕಳಿ ಎಂಬ ಕಲಾ ಪ್ರಕಾರದ ಶಿಬಿರಗಳಲ್ಲೂ ಪಾಲುಗೊಂಡಿದ್ದರು. ಈ ಅನುಭವದ ಆಧಾರದಿಂದಲೇ ಸಂಗಮ ಕಲಾ ಸಂಘದಲ್ಲಿ ಸಕ್ರಿಯರಾಗಿ ಅದರ ಬೆಳವಣಿಗೆಗೆ ಕಾರಣರಾಗಿದ್ದರು. ಪದವಿ ಶಿಕ್ಷಣದ ನಂತರ ತಂದೆ ಕೆರೆಕೋಡಿ ಗಣಪತಿ ಭಟ್ಟರಿಂದಲೂ ಯಕ್ಷಗಾನ ವೇಷಭೂಷಣ ತಯಾರಿಕೆಯನ್ನು ಕಲಿತಿದ್ದರು.

ಹೀಗೆ ಯಕ್ಷಗಾನದ ಪ್ರತಿಯೊಂದು ವೇಷ- ಭೂಷಣಗಳ ಆಯ, ಆಕಾರ, ಬಣ್ಣದ ಹೊಂದಾಣಿಕೆ ಮೊದಲಾದ ವಿಚಾರಗಳ ಜ್ಞಾನವನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸಾಗರ ಹೆಗ್ಗೋಡಿನ ‘ನೀನಾಸಂ’ ತಂಡದ ಶಿಬಿರವು ಬಾಳಿಲದಲ್ಲಿ ನಡೆದಿತ್ತು. ಶಿಬಿರದ ಕೊನೆಯಲ್ಲಿ ರಂಗಪ್ರದರ್ಶನವೂ ನಡೆದಿತ್ತು. ಇದರಿಂದ ಪ್ರಭಾವಿತರಾಗಿ ಮಹಾಬಲ ಕಲ್ಮಡ್ಕ ಅವರು ಹೆಗ್ಗೋಡಿಗೆ ತೆರಳಿ ‘ನೀನಾಸಂ’ ಸಂಸ್ಥೆಯಲ್ಲಿ ತರಬೇತಿ ಪಡೆದರು.(1988ರಲ್ಲಿ, ಒಂದು ವರ್ಷದ ಡಿಪ್ಲೊಮಾ).’ನೀನಾಸಂ’ನಲ್ಲಿ ತರಬೇತಿ ಪಡೆದು ಮರಳಿದ ಬಳಿಕ ಊರಿನಲ್ಲಿ ಮಹಾಬಲ ಕಲ್ಮಡ್ಕ ಅವರು ಕಲಿಕಾಸಕ್ತರಿಗೆ ವೇಷಭೂಷಣ ತಯಾರಿಕೆ, ಮುಖವರ್ಣಿಕೆಯ ಬಗೆಗೆ ತರಬೇತಿಯನ್ನು ನೀಡಿದರು.

ಅಲ್ಲದೆ ಸಂಗಮ ಕಲಾಸಂಘದ ಪ್ರದರ್ಶನಗಳ ಮತ್ತು ವೇಷಭೂಷಣಗಳ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ಸದ್ರಿ ಸಂಘವು ವೇಷಭೂಷಣಗಳ ನಿರ್ವಹಣೆಯನ್ನು ನಿಲ್ಲಿಸಿದಾಗ ಮಹಾಬಲ ಕಲ್ಮಡ್ಕ ಅವರು ಅದನ್ನು ಮುಂದುವರಿಸುವ ಯೋಚನೆಯನ್ನು ಮಾಡಿ ‘ರಂಗ ಸುರಭಿ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು.(2001ರಲ್ಲಿ). ಈ ಸಂಸ್ಥೆಯಡಿಯಲ್ಲಿ ವೇಷಭೂಷಣಗಳ ತಯಾರಿಕೆ,ನಿರ್ವಹಣೆ, ಪ್ರದರ್ಶನಗಳಿಗೆ ಅದನ್ನು ಒದಗಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾ ಈ ವರೆಗೂ ಮುನ್ನಡೆದು ಸಾಗಿ ಬಂದಿದ್ದಾರೆ. ಅನೇಕ ಶಿಬಿರಗಳನ್ನು ನಡೆಸಿ ತರಬೇತಿಯನ್ನೂ ನೀಡಿರುತ್ತಾರೆ.

ರಂಗಸುರಭಿ ಮಕ್ಕಳ ತಂಡವನ್ನು ಸ್ಥಾಪಿಸಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ತರಬೇತಿ ಕೊಡಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ವರ್ಷಕ್ಕೆ ಸುಮಾರು ನೂರು ಪ್ರದರ್ಶನಗಳಿಗೆ ಇವರು ರಂಗ ಸುರಭಿ ತಂಡದ ವೇಷಭೂಷಣಗಳನ್ನು ಒದಗಿಸುತ್ತಾರೆ. ಸುಮಾರು ಐವತ್ತಕ್ಕೂ ಹೆಚ್ಚು ಶಿಬಿರ, ಕಮ್ಮಟಗಳಿಗೆ ಇವರು ವೇಷ ಭೂಷಣಗಳನ್ನು ಒದಗಿಸಿರುತ್ತಾರೆ. ಇವರು ಉತ್ತಮ ಕಾಷ್ಠ ಶಿಲ್ಪಕಾರರೂ ಹೌದು. ಡಾ. ಪುರುಷೋತ್ತಮ ಬಿಳಿಮಲೆ ಅವರ ಅಪೇಕ್ಷೆಯಂತೆ ಹಂಪಿ ವಿಶ್ವವಿದ್ಯಾನಿಲಯಕ್ಕೆ ಮರದಿಂದ ಕೆತ್ತಿ ನಿರ್ಮಿಸಿದ ರಾಜವೇಷದ ಪ್ರತಿಕೃತಿಯನ್ನು ನೀಡಿದ್ದಾರೆ.

ಜಪಾನಿನ ವಿದ್ವಾಂಸರಾದ ಶ್ರೀ ಸುಮಿಯೋ ಮೊರಿಜೆರಿ ಅವರ ಅಪೇಕ್ಷೆಯಂತೆ ಜಪಾನಿನ ವಸೇಡಾ ವಿಶ್ವವಿದ್ಯಾನಿಲಯದ ಜಾಗತಿಕ ರಂಗಭೂಮಿ ಪ್ರದರ್ಶನಾಂಗಣಕ್ಕೆ ಯಕ್ಷಗಾನದ ವಿವಿಧ ವೇಷಗಳ ಐದು ಪ್ರತಿಕೃತಿಗಳನ್ನು ಮತ್ತು ಇತರ ವೇಷ ಭೂಷಣಗಳನ್ನು ನೀಡಿರುತ್ತಾರೆ. ಪ್ರಾಂಶುಪಾಲ ಪ್ರೊ| ಶ್ರೀ ಪದ್ಮನಾಭ ಗೌಡರ ಸಲಹೆಯಂತೆ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರದರ್ಶನಾಂಗಣಕ್ಕೆ ತೆಂಕುತಿಟ್ಟಿನ ವಿವಿಧ ವೇಷಗಳ ಪ್ರತಿಕೃತಿಗಳನ್ನು ನೀಡಿದ್ದಾರೆ. ಅಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನಾಗಾರಕ್ಕೆ ಆಡಳಿತ ಮಂಡಳಿಯ ಅಪೇಕ್ಷೆಯಂತೆ ವಿವಿಧ ಪ್ರತಿಕೃತಿಗಳನ್ನು ನೀಡಿರುತ್ತಾರೆ.

ಹಲವಾರು ಮೇಳಗಳಿಗೂ ಸಂಘ ಸಂಸ್ಥೆಗಳಿಗೂ, ಕಲಾವಿದರಿಗೂ ವೇಷಭೂಷಣಗಳನ್ನು ತಯಾರಿಸಿ ನೀಡಿದವರು ಶ್ರೀ ಮಹಾಬಲ ಕಲ್ಮಡ್ಕ ಅವರು. ಪ್ರಸಾಧನ ಕಲೆಗಾರಿಕೆಯಲ್ಲಿ ಇವರಿಗೆ, ಗುರು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಮಾರ್ಗದರ್ಶನವೂ ದೊರಕಿತ್ತು. 1985ರಲ್ಲಿ ಶ್ರೀ ದಿವಾಣ ಭೀಮ ಭಟ್ಟರಿಂದ ಹಿಮ್ಮೇಳ ವಿದ್ಯೆಯನ್ನೂ ಕಲಿತಿದ್ದ ಶ್ರೀ ಮಹಾಬಲ ಕಲ್ಮಡ್ಕ ಅವರು ಹಲವಾರು ಪ್ರದರ್ಶನಗಳಲ್ಲಿ ಭಾಗವತರಾಗಿಯೂ, ಚೆಂಡೆ ಮದ್ದಳೆ ವಾದಕರಾಗಿಯೂ ಸಹಕರಿಸಿರುತ್ತಾರೆ.

1991ರಲ್ಲಿ ಸುಭಾಷಿನಿ ಅವರ ಜತೆ ವಿವಾಹ. ಶ್ರೀ ಮಹಾಬಲ ಕಲ್ಮಡ್ಕ ಮತ್ತು ಶ್ರೀಮತಿ ಸುಭಾಷಿನಿ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಕು| ಶಿಲ್ಪ. ಎಂ. ಫಾರ್ಮ ಓದಿರುತ್ತಾಳೆ. ಯಕ್ಷಗಾನ ಕಲಾವಿದೆ. ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತು ಸುಮಾರು 75ಕ್ಕೂ ಮಿಕ್ಕಿದ ಪ್ರದರ್ಶನಗಳಲ್ಲಿ ಭಾಗಿಯಾಗಿರುತ್ತಾಳೆ. ಅನೇಕ ಪ್ರತಿಭಾ ಪುರಸ್ಕಾರಗಳನ್ನೂ ಪಡೆದ ಈಕೆ ಸಂಗೀತ, ಭರತನಾಟ್ಯ ಕಲಾವಿದೆಯೂ ಹೌದು. ಪ್ರಸ್ತುತ ಬೆಂಗಳೂರಿನ ಬಯೋ- ಕಾನ್ ಲಿಮಿಟೆಡ್ ಸಂಸ್ಥೆಯಲ್ಲಿ ಉದ್ಯೋಗಸ್ಥೆ.

ಕಿರಿಯ ಪುತ್ರಿ ಕು|ಶ್ರದ್ಧಾ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಜೋಗಿಬೆಟ್ಟು ಶ್ರೀನಿವಾಸ ಭಟ್ಟರಿಂದ ನಾಟ್ಯ ಕಲಿತು ಶಾಲಾ ಕಾಲೇಜಿನ ಯಕ್ಷಗಾನ ಪ್ರದರ್ಶನಗಳಲ್ಲಿ ವೇಷ ಮಾಡಿರುತ್ತಾಳೆ. ಬಹುಮುಖ ಪ್ರತಿಭೆಯ ಶ್ರೀ ಮಹಾಬಲ ಕಲ್ಮಡ್ಕ ಅವರ ಕಲಾ ಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

ಶ್ರೀ ಧರ್ಮಸ್ಥಳ ಮೇಳ – ಪ್ರಥಮ ಸೇವೆಯಾಟ ಇಂದು 

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಥಮ ಸೇವೆಯಾಟ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ನಡೆಯುತ್ತಿದೆ.

ಈ ಪ್ರದರ್ಶನದ ನೇರಪ್ರಸಾರ ಕ್ಷೇತ್ರದ ಯೂಟ್ಯೂಬ್ ಚಾನೆಲಿನಲ್ಲಿ ಲಭ್ಯವಿದೆ. ಇಂದಿನ ಪ್ರಸಂಗ ‘ಅಶ್ವಮೇಧ’ (ಕುಶಲವ-ಬಬ್ರುವಾಹನ- ತಾಮ್ರದ್ವಜ).

ಮೇನಕೆಯ ವೇಷ ಮಾಡಿದ ಮೇಲೆ ಪ್ರೇಮ ಕಲಹ

ಸಾಂದರ್ಭಿಕ ಚಿತ್ರ

ಯಕ್ಷಗಾನವು ಒಂದು ದೈವೀಕಲೆ. ಕಲಾವಿದನಾಗಲಂತೂ ಭಾಗ್ಯ ಬೇಕು. ಎಲ್ಲರಿಗೂ ಅದು ಸಿದ್ಧಿಸುವುದಿಲ್ಲ.  ದೇವರ ಅನುಗ್ರಹದ ಜತೆ ಅವಿರತ ಪರಿಶ್ರಮವೂ ಬೇಕು. ನಾನು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಭಾರತದ ನಾನಾ ಕಡೆ ಕೆಲಸ ಮಾಡಿದ್ದೇನೆ. ಹೊರದೇಶದಲ್ಲೂ ವೃತ್ತಿಜೀವನದ ಕೆಲಸಮಯಗಳನ್ನು ಕಳೆದಿದ್ದೇನೆ. ಸದ್ಯ ಬಾಗಲಕೋಟೆಯ ಸಮೀಪ ಉದ್ಯೋಗಿ. ವಾಸ್ತವ್ಯ ಕಾಸರಗೋಡು ಜಿಲ್ಲೆ ಪೆರಡಾಲ ಗ್ರಾಮ ನೀರ್ಚಾಲ್ ಎಂಬಲ್ಲಿ. ಹುಟ್ಟೂರು ಕಾಸರಗೋಡು ಜಿಲ್ಲೆಯ ಕುಡಾಲ್ ಮೇರ್ಕಳ ಗ್ರಾಮದ ಎಡಕ್ಕಾನ.

ಶಾಸ್ತ್ರೀಯವಾಗಿ ನಾಟ್ಯ ಕಲಿತವನಲ್ಲ. ಆದರೂ ಶಾಲಾ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನದಲ್ಲಿ ವೇಷಗಳನ್ನು ಮಾಡಿದ್ದೆ. ಇಂಜಿನಿಯರ್ ಆಗಿ ಉದ್ಯೋಗ ಸಿಕ್ಕಿದ ಕೆಲಸಮಯಗಳ ಬಳಿಕ ಕಲ್ಲಡ್ಕದ ಸಮೀಪ ಪಂಜಿಗದ್ದೆಯ ಹೇಮಾ ಎಂಬವಳನ್ನು ವಿವಾಹವಾದೆ. ಕೆಲಸಮಯದ ಬಳಿಕ ಪುತ್ತೂರಿನಲ್ಲಿ ಅನಿವಾರ್ಯವಾಗಿ ವೇಷ ಮಾಡುವ ಹಾಗಾಯಿತು. ಮನಸ್ಸಿದ್ದು ಅಲ್ಲ. ಸಂಘಟಕರಿಗೆ ತೊಂದರೆಯಾಗಬಾರದು. ಪ್ರೇಕ್ಷಕರಿಗೆ ರಸಭಂಗವಾಗಬಾರದು ಎಂಬ ಉದ್ದೇಶದಿಂದ ಮಾತ್ರ. ಆ ವಿಶಿಷ್ಟ ಸಂದರ್ಭವನ್ನು ವೇಷ ಮಾಡಿದ ಕಾರಣ ಉಂಟಾದ ಪರಿಣಾಮವನ್ನು ಓದುಗರಲ್ಲಿ ಹಂಚಿಕೊಳ್ಳೋಣ ಎನಿಸಿತು.

1990ರ ಸುಮಾರಿಗೆ ಪುತ್ತೂರಿನಲ್ಲಿ ಚೌತಿಹಬ್ಬದ ಸಂದರ್ಭ. ಪ್ರದರ್ಶನವೊಂದು ಏರ್ಪಾಡಾಗಿತ್ತು. ಸಂಘಟಕರು ಪ್ರಸಿದ್ಧ ಕಲಾವಿದರಾದ ಹಾಸ್ಯರತ್ನ ನಯನಕುಮಾರರು. ಪ್ರಸಂಗ ಪ್ರಚಂಡ ಕೌಶಿಕ. ಹಿಮ್ಮೇಳಕ್ಕೆ ಪುತ್ತಿಗೆ ರಘುರಾಮ ಹೊಳ್ಳರು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು. ವೇಷಕ್ಕೆ ಪುತ್ತೂರು ಚಂದ್ರಶೇಖರ ಹೆಗ್ಡೆಯವರು. ಕೆ. ಗೋವಿಂದ ಭಟ್ಟರು. ಉದ್ಯಾವರ ಜಯಕುಮಾರರು. ಎಲ್ಲರೂ ಘಟಾನುಘಟಿಗಳು. ಪ್ರಸಂಗ ಆರಂಭವಾಗುವ ಸಮಯ ಸಮೀಪಿಸಿದರೂ ಮೇನಕೆ ಪಾತ್ರಧಾರಿ ಉದ್ಯಾವರ ಜಯಕುಮಾರರು ಬಂದಿರಲಿಲ್ಲ.

ಅವರಿಗೆ ಬಹಳ ದೂರದಿಂದ ಬರಬೇಕಿತ್ತು. ಅಲ್ಲದೆ ನಾನು ಇಲ್ಲಿಗೆ ತಲುಪಿದ್ದೇನೆ ಎಂದು ಹೇಳಲು ಆಗ ಮೊಬೈಲ್ ವ್ಯವಸ್ಥೆಯೂ ಇರಲಿಲ್ಲ. ಸಂಪರ್ಕಕ್ಕೆ ಮಾಧ್ಯಮಗಳು ಈಗಿನಂತೆ ಇಲ್ಲದ ಕಾಲ ಅದು. ಅವರು ಸರಿಯಾದ ಸಮಯಕ್ಕೆ ಹೊರಟಿದ್ದರು. ಆದರೆ ಹಬ್ಬದ ದಿನ ಆಗಿದ್ದ ಕಾರಣ ಎಲ್ಲಾ ಕಡೆಗಳಲ್ಲೂ ಮೆರವಣಿಗೆ ಜನಸಾಗರ. ಟ್ರಾಫಿಕ್ ಜಾಮ್ ಆಗಿದ್ದ ಕಾರಣ ಅವರಿಗೆ ಸಕಾಲಕ್ಕೆ ಬರಲಾಗಲಿಲ್ಲ. ಕಲಾವಿದರೆಲ್ಲರಿಗೂ ಗೊಂದಲ. ನಾನೂ ಚೌಕಿಯಲ್ಲಿದ್ದೆ. ಶ್ರೀ ಕೆ. ಗೋವಿಂದ ಭಟ್ಟರು ನನ್ನನ್ನು ಕರೆದರು. ನಾನು ಹೋದೆ. “ನೀನು ಮೀಸೆ ತೆಗೆ” ಎಂದರು.

ಮೇನಕೆ ಮಾಡು ಎಂದು ಹೇಳಿದಾಗ ನಾನು ಭಯಗೊಂಡೆ. ಧರ್ಮಸ್ಥಳ ಮೇಳದ ಮೇರು ಕಲಾವಿದರುಗಳ ತಂಡ. ನನ್ನಿಂದ ಆಗದು ಎಂದೆ. ಆಗ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ನನ್ನ ಬಳಿ ಬಂದು, “ಹೆದರೆಡಿ ಶ್ರೇಷ್ಠ ಕಲಾವಿದರ, ವೃತ್ತಿಕಲಾವಿದರ ಜತೆ ವೇಷ ಮಾಡುವುದು ಬಹಳ ಸುಲಭ. ಎಂಗೊ ಎಲ್ಲಾ ಇಪ್ಪಗ ಹೆದರುಲಾಗ. ನಿಂಗೊ ಧೈರ್ಯಲ್ಲಿ ವೇಷ ಮಾಡಿ” ಎಂದರು. ನಾನು ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ. ಮೇಕಪ್ ಮಾಡಿದರು. ನನಗಾಗುವ ರವಿಕೆಯೂ ಇರಲಿಲ್ಲ. ಅಂತೂ ಒಂದನ್ನು ಹಾಕಿಕೊಂಡು ವೇಷ ಸಿದ್ಧವಾಯಿತು.

ಸ್ವರ್ಗದ ಅಪ್ಸರೆ ಮೇನಕೆ… ಕನ್ನಡಿ ನೋಡಿದಾಗ ಭೂಲೋಕದ ಸಾಮಾನ್ಯ ಹೆಣ್ಣಿನಂತೆ ಕಾಣಿಸುತ್ತಿದ್ದೇನೋ ಎಂದು ಅನಿಸಿತು. ಮೇಕಪ್ ಮಾಡುವಾಗ ಭಾಗವತರು, ಮದ್ದಳೆಗಾರರು, ಕಲಾವಿದರೆಲ್ಲಾ ಪದ್ಯ, ಪ್ರಸಂಗನಡೆಯನ್ನು ಹೇಳಿಕೊಟ್ಟಿದ್ದರು. ಕೆ. ಗೋವಿಂದ ಭಟ್ಟರೂ ಧೈರ್ಯ ತುಂಬಿದರು. ಆಗ ಉದ್ಯಾವರ ಜಯಕುಮಾರರು ಬಂದರು. ಸಮಯವಿರಲಿಲ್ಲ. ಮೇಕಪ್ ಮಾಡಿ ವೇಷ ಮಾಡುವಷ್ಟು. ನೀವೇ ಮಾಡಿ ಎಂದು ನನ್ನನ್ನು ಹುರಿದುಂಬಿಸಿ ಕ್ರಮಗಳನ್ನು ಚಂದವಾಗಿ ಹೇಳಿಕೊಟ್ಟರು.

ಅಂತೂ ಪ್ರಸಂಗದುದ್ದಕ್ಕೂ ಪುತ್ತಿಗೆ ರಘುರಾಮ ಹೊಳ್ಳರೂ ಬಲ್ಲಾಳರೂ ನಗುತ್ತಾ ನನ್ನನ್ನು ಪ್ರೋತ್ಸಾಹಿಸಿದರು. ಕೆ. ಗೋವಿಂದ ಭಟ್ಟರೂ ನಾನು ಸೋಲದಂತೆ ನೋಡಿಕೊಂಡರು. ಪ್ರದರ್ಶನ ಮುಗಿದಾಗ ಮನಸ್ಸು ಹಗುರವಾಗಿತ್ತು. ಕಲಾವಿದರನ್ನು ವಿಮರ್ಶಿಸುವುದು ಬಹಳ ಸುಲಭ. ಅನುಭವಿಸಿದಾಗ ಕಷ್ಟ ಎಷ್ಟು ಎಂಬ ಅರಿವಾಗುತ್ತದೆ. ಅಂತೂ ಬಣ್ಣ ತೆಗೆದು ಮನೆ ಸೇರಿದೆ. ಬಾಗಿಲು ಬಡಿದು ಕರೆದೆ. ಕಿಟಕಿ ತೆರೆದು ನೋಡಿದ ನನ್ನವಳು ಚೀರಿ ಬೊಬ್ಬಿಟ್ಟಳು. ಯಾಕೆ ಹೀಗೆ? ಮತ್ತೆ ತಿಳಿಯಿತು. ಹೋಗುವಾಗ ಮೀಸೆ ಇತ್ತು. ವೇಷ ಮಾಡಲು ಮೀಸೆ ಬೋಳಿಸಿದ್ದು ನೆನಪಾಯಿತು.

ನನ್ನವಳು ಕಿಟಿಕಿ ಮುಚ್ಚಿ ಒಳಕೋಣೆ ಸೇರಿಕೊಂಡಿದ್ದಳು. ಕೂಗಿ ಕರೆದೆ. ವಿಚಾರಗಳನ್ನು ಹೇಳಿದೆ. ಒಳಕೋಣೆಯಿಂದ ಹೊರಬಂದು ಕಿಟಿಕಿಯ ಮೂಲಕ ಮತ್ತೆ ನೋಡಿದಳು. ಮಾತನಾಡಿಸಿ ಮತ್ತೊಮ್ಮೆ ನಡೆದುದನ್ನು ವಿವರಿಸಿದೆ. ನಾನೆಂದು ನಿಜವಾದ ಬಳಿಕ ಬಾಗಿಲು ತೆರೆದಳು. ಮುನಿಸಿಕೊಂಡಿದ್ದಳು. ಆಗಾಗ ನನ್ನನ್ನೇ ನೋಡುತ್ತಿದ್ದಳು. ಬೇಸರದ ಜತೆ ನಗುವೂ ಇಣುಕುತ್ತಿತ್ತು. ಯಾವಾಗಲೂ ಪ್ರೀತಿಯಿಂದ ಊಟ ಬಡಿಸುವವಳು ಅಂದು ಸುಮ್ಮನಿದ್ದಳು. ನಾನು ಉಂಡು ಬಂದೆ. ವೇಷ ಮಾಡಿದ್ದೇಕೆಂದು ಆಕ್ಷೇಪಿಸಿ ಮತ್ತೆ ಮೌನಕ್ಕೆ ಶರಣಾದಳು. ಬೆಳಗ್ಗೆ ಎದ್ದು ನಾನು ತವರುಮನೆಗೆ ಹೋಗುತ್ತೇನೆ ಎಂದಳು. ನಾನು ನಗಾಡಿದೆ.

ಅವಳು ಸಿದ್ಧಳಾಗಿ ನಡೆದೇಬಿಟ್ಟಳು. ಸಂಜೆ ಹೋಗಿ ಸಮಾಧಾನ ಪಡಿಸೋಣ ಎಂದು ಸುಮ್ಮನಾದೆ. ಸಂಜೆ ಲ್ಯಾಂಡ್ ಲೈನ್‍ಗೆ ಕರೆ ಮಾಡಿದೆ. ನೀವು   ಬಂದರೂ ನಾನು ಬರುವುದಿಲ್ಲ ಎಂದಳು. ನಾನು ಸುಮ್ಮನಾದೆ. ಮರುದಿನ ಸಂಜೆ ಅವಳೇ ಫೋನ್ ಮಾಡಿ ‘ನನ್ನನ್ನು ಕರೆದುಕೊಂಡು ಹೋಗಲು ಯಾವಾಗ ಬರುತ್ತೀರಿ’ ಎಂದಳು. ಹೋಗಿ ಕರೆದುಕೊಂಡು ಬಂದೆ. ಈಗಲೂ ಆ ಘಟನೆಯನ್ನು ನೆನಪಿಸಿ ನಗುತ್ತಾ ಕೆಲವೊಮ್ಮೆ ಹುಸಿಕೋಪವನ್ನು ತೋರುತ್ತಾಳೆ ನನ್ನವಳು. ವೇಷ ಮಾಡಿದ ಕಾರಣದಿಂದ ಮಡದಿಯೊಡನೆ ಹೀಗೊಂದು ಪ್ರಣಯ ಕಲಹ ನಡೆಯಿತು.

ಲೇಖನ: ಈ. ವಿ. ಕೇಶವ ಭಟ್ ನೀರ್ಚಾಲು

ಸ್ತ್ರೀ ವೇಷಧಾರಿ ಸುದೀಪ ಶೆಟ್ಟಿ ನಿಧನ

ಮಂದಾರ್ತಿ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ಕಲಾ ಸೇವೆಗೈಯುತ್ತಿದ್ದ ಅಮಾಸೆಬೈಲಿನ ಕೆಲ ಗ್ರಾಮದ ನಿವಾಸಿ ಸುದೀಪ ಶೆಟ್ಟಿ(28ವರ್ಷ) ಆಕಸ್ಮಿಕವಾಗಿ ಕೆರೆಗೆ ಬಿದ್ದು ನಿನ್ನೆ 16-11-2020ರಂದು ನಿಧನರಾದರು.

ಮೇಗರವಳ್ಳಿ, ಸಿಗಂಧೂರು ಹಾಗೂ ಮಂದಾರ್ತಿ ಮೇಳಗಳಲ್ಲಿ 1 ದಶಕದಿಂದ ವೇಷಧಾರಿಯಾಗಿದ್ದರು. ಅವಿವಾಹಿತರಾಗಿರುವ ಇವರು ತಂದೆ, ತಾಯಿ ಹಾಗೂ ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ.

ಸುದೀಪ ಶೆಟ್ಟಿ ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಶತಮಾನದ ಕಲಾಸೃಷ್ಟಿ – ಕೆರೆಮನೆ ಶಂಭು ಹೆಗಡೆ 

ಅವರ ಬಗ್ಗೆ ಬರೆಯಬೇಕಾದರೆ ಒಂದೆರಡು ಪುಟಗಳಲ್ಲಿ ಮುಗಿಸುವುದು ಬಹಳ ಕಷ್ಟ. ಅವರ ಬಗ್ಗೆ ಹೆಚ್ಚಿನವರಿಗೂ ತಿಳಿದಿದೆಯಾದರೂ ಅಂತಹಾ ಮಹಾನ್ ಚೇತನದ ಬಗ್ಗೆ ಆಗಾಗ ಒಂದು ಸಣ್ಣ ಸಣ್ಣ ಮೆಲುಕು ಹಾಕುವುದು ಯಕ್ಷಗಾನ ರಂಗಕ್ಕೂ ಒಳ್ಳೆಯದು ಮತ್ತು ಅದು ನಾವು ಅವರಿಗೆ ಸಲ್ಲಿಸುವ ಒಂದು ಸಣ್ಣ ಗೌರವವೂ ಆದೀತು ಎಂದು ಭಾವಿಸುತ್ತೇನೆ.


ರಂಗದಲ್ಲಿ ತಾನು ಮಾಡುವ ಬಗೆ ಬಗೆಯ ಪಾತ್ರಗಳನ್ನು ಹೊರತುಪಡಿಸಿ ನಿಜಜೀವನದಲ್ಲಿಯೂ ತನ್ನ ಬಹುಮುಖೀ ಸಾಧನೆಗಳಿಂದ ಹೇಗೆ ವಿಭಿನ್ನ ರೀತಿಯಾಗಿ ಗೋಚರಿಸಬಹುದು ಎಂಬುದಕ್ಕೆ ದಿ| ಕೆರೆಮನೆ ಶಂಭು ಹೆಗಡೆಯವರು ಒಂದು ಜ್ವಲಂತ ಸಾಕ್ಷಿಯಾಗಿ ಉಳಿದುಬಿಡುತ್ತಾರೆ. ಕಲಾವಿದನೊಬ್ಬ ಗಂಡನಾಗಿ, ತಂದೆಯಾಗಿ, ಮಗನಾಗಿ ತನ್ನ ಸಾಂಸಾರಿಕ ಕರ್ತವ್ಯಗಳನ್ನು ನಿಭಾಯಿಸುವುದು ಬೇರೆ ರೀತಿ. ಹಾಗೆಂದು ಎಲ್ಲ ಕಲಾವಿದರೂ ಇಂತಹಾ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಲಾಗುವುದಿಲ್ಲ.

ಆದರೆ ಇವೆಲ್ಲವುಗಳ ಜೊತೆಗೆ ಕಲಾವಿದನೊಬ್ಬ ಸಂಘಟಕನಾಗಿ, ಮೇಳದ ಯಜಮಾನನಾಗಿ, ವ್ಯವಸ್ಥಾಪಕನಾಗಿ ಹಾಗೂ ಇವೆಲ್ಲವುಗಳ ಜೊತೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿ ಎಲ್ಲವನ್ನೂ ಜೊತೆ ಜೊತೆಗೆ ಸುಲಲಿತವಾಗಿ ನಡೆಸಿಕೊಂಡು ಹೋದ ರೀತಿಯಿದೆಯಲ್ಲ. ಅದಕ್ಕೆ ಬೆರಗಾಗಲೇ ಬೇಕು.


ಖಂಡಿತ ಹುಟ್ಟಿನಿಂದಲೇ ಅವರೊಳಗೊಬ್ಬ MBA ಪದವೀಧರ ಅಡಗಿ ಕುಳಿತಿದ್ದಿರಬಹುದು. ನಿರ್ವಹಣೆ ಅಷ್ಟು ಸುಲಭವಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಕಲಿತವರೆಲ್ಲ ಜೀವನದಲ್ಲಿ ಯಶಸ್ವಿಯಾಗಬೇಕೆಂದೇನಿಲ್ಲ. ಆದರೆ ಶಂಭು ಹೆಗಡೆಯವರು ತನ್ನ ಸ್ವಸಾಮರ್ಥ್ಯದಿಂದ ಸಾಧಿಸಿದುದೇ ಅವರ ಜೀವನದ ಯಶೋಗಾಥೆಯಾಗಿ ಉಳಿದಿದೆ.
ಯಕ್ಷಗಾನ ಕಲಾವಿದನಾಗಿ ಹೇಗೆ ಔನ್ನತ್ಯವನ್ನು ಸಂಪಾದಿಸಬಹುದು ಎಂಬುದಕ್ಕೆ ಅವರೇ ಸಾಕ್ಷಿ. ವೈಯುಕ್ತಿಕ ನೆಲೆಯಲ್ಲಿ ಶಂಭು ಹೆಗಡೆಯವರ ಜೀವನ ಮತ್ತು ಇಡಗುಂಜಿ ಮೇಳದ ಬಗ್ಗೆ ಸಂಶೋಧನಾ ಗ್ರಂಥಗಳೆರಡನ್ನೂ ಬರೆದು ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಇದು ಶಂಭು ಹೆಗಡೆಯವರಿಗೂ ಪರೋಕ್ಷವಾಗಿ ಯಕ್ಷಗಾನ ರಂಗಕ್ಕೂ ಸಂದ ಅತಿ ದೊಡ್ಡ ಗೌರವ.


ಉತ್ತರ ಕನ್ನಡದ ಶ್ರೀಮಂತ ಬಡಾಬಡಗು ತಿಟ್ಟಿನ ಯಕ್ಷಗಾನದ ಕೊಡುಗೆಯಾಗಿ ಶಂಭು ಹೆಗಡೆಯವರು ಮೆರೆದದ್ದು ಈಗ ಇತಿಹಾಸ. ಸರ್ವ ಕಾಲಕ್ಕೂ ಸಲ್ಲುವ ಯಕ್ಷಗಾನದ ಪ್ರತಿನಿಧಿ ಎಂದೇ ಕರೆಯುವ ಕೆರೆಮನೆ    ಶಿವರಾಮ ಹೆಗಡೆಯವರು 1934ರಲ್ಲಿಯೇ ಕೆರೆಮನೆ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿದ್ದರು. ಪ್ರಥಮ ಬಾರಿಗೆ ಯಕ್ಷಗಾನ ಕಲಾವಿದನೊಬ್ಬ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕೆರೆಮನೆ ಶಂಭು ಹೆಗಡೆ


ತಂದೆಯಿಂದ ಪಾರಂಪರಿಕವಾಗಿ ಯಕ್ಷಗಾನವನ್ನು ಬಳುವಳಿಯಾಗಿ ಪಡೆದರೂ ತನ್ನ ಸ್ವಸಾಮರ್ಥ್ಯದಿಂದ ಬೆಳೆದು ಯಕ್ಷಗಾನಕ್ಕೊಂದು ಹೊಸ ಹೊಳಪನ್ನು ಕೊಟ್ಟು ಹೊಸ ರೀತಿಯ ಪ್ರಯೋಗಗಳನ್ನು ಯಕ್ಷಗಾನದ ಚೌಕಟ್ಟಿನಲ್ಲಿಯೇ ಬೆಳಕಿಗೆ ತಂದು ತನ್ನದೇ ಛಾಪನ್ನು ಮೂಡಿಸಿದರು.
ಯಕ್ಷಗಾನದ ಆಡುಂಬೊಲವಾಗಿದ್ದ ಕುಟುಂಬದಲ್ಲಿ ಶಂಭು ಹೆಗಡೆಯವರು ಜನಿಸಿದ್ದು 1938ರಲ್ಲಿ. 
ಮಗ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸದಂತೆ ತಂದೆ ಶಿವರಾಮ ಹೆಗಡೆಯವರ ನಿರ್ಬಂಧವಿತ್ತು. ಆದುದರಿಂದ ಮನೆಯಲ್ಲಿ ಯಕ್ಷಗಾನದ ಯಾವುದೇ ಪರಿಕರ, ಸಾಮಗ್ರಿಗಳಿರಲಿಲ್ಲ. ಯಕ್ಷಗಾನದಿಂದ ಮಕ್ಕಳನ್ನು ದೂರವಿಡಬೇಕೆಂಬ ತಂದೆಯ ಬಯಕೆಯಿಂದ ಶಂಭು ಹೆಗಡೆಯವರು ಆಸಕ್ತಿಯಿದ್ದರೂ ಗೆಜ್ಜೆ ಕಟ್ಟುವ ಸಂದರ್ಭ ಎದುರಾಗಲಿಲ್ಲ. ಅವಕಾಶ ಸಿಗಲಿಲ್ಲ.


ತೀರ್ಥರೂಪರಾದ ಶಿವರಾಮ ಹೆಗಡೆಯವರು ಕರ್ಣನಾಗಿ ಪಾತ್ರವಹಿಸಿದ್ದ ‘ಕರ್ಣಪರ್ವ’ ಪ್ರಸಂಗದ ಪ್ರದರ್ಶನದಲ್ಲಿ 1960 ರಲ್ಲಿ ಕೃಷ್ಣನಾಗಿ ಶಂಭು ಹೆಗಡೆಯವರು ರಂಗಸ್ಥಳ ಪ್ರವೇಶಿಸಿದ್ದೇ ಒಂದು ಪವಾಡ ಎಂದು ಹೇಳಬಹುದು. ಶಿವರಾಮ ಹೆಗಡೆಯವರಿಗೆ ಮನಸಿಲ್ಲದಿದ್ದರೂ ಹಿತಚಿಂತಕರ ಒತ್ತಾಯದಿಂದ ಅವರು ಶಿವರಾಮ ಹೆಗಡೆಯವರ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗೆ ಯಕ್ಷಗಾನ ಶಿಕ್ಷಣ, ತರಗತಿಗಳಿಲ್ಲದಿದ್ದ ಆ ಕಾಲದಲ್ಲಿ ಶಂಭು ಹೆಗಡೆಯವರು ಸಿಕ್ಕಿದ ಸಣ್ಣಪುಟ್ಟ ಪಾತ್ರಗಳನ್ನು  ಮಾಡುತ್ತಾ ನೋಡಿ, ಕೇಳಿ ಯಕ್ಷಗಾನವನ್ನು ಕಲಿತವರು. ತಂದೆಯವರಾದ ಶಿವರಾಮ ಹೆಗಡೆ ಮತ್ತು ಅಣ್ಣ ಕೆರೆಮನೆ ಮಹಾಬಲ ಹೆಗಡೆಯವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಇವರ ಯಕ್ಷಗಾನ ಜೀವನ ಆರಂಭವಾಯಿತು. ವೇಷ ಮಾಡುತ್ತಾ ಕಲಿತರು.

ಒಂದೆರಡು ವರ್ಷಗಳ ನಂತರ ಕರ್ನಾಟಕ ರಾಜ್ಯದ ಸಂಗೀತ ಮತ್ತು ನಾಟಕ ಅಕಾಡೆಮಿಯ ಶಿಷ್ಯವೇತನದಿಂದ ದೆಹಲಿ ಯಲ್ಲಿರುವ ಕೊರಿಯೋಗ್ರಫಿ ನಾಟ್ಯ ಸಂಸ್ಥೆಯ ಮೂರು ವರ್ಷ ಅವಧಿಯ ನಾಟ್ಯ ತರಬೇತಿಯ ಕೊರಿಯೋಗ್ರಫಿ ಡಿಪ್ಲೋಮಾ ಪದವಿಯನ್ನು ಪಡೆದರು. ಕಥಕ್ ಅಭಿನೇತ್ರಿ ಮಾಯಾರಾವ್ ಅವರು ಈ ಸಂಸ್ಥೆಯಲ್ಲಿ ಶಂಭು ಹೆಗಡೆಯವರಿಗೆ ನೃತ್ಯ ಹೇಳಿಕೊಟ್ಟವರು. ಈ ತರಬೇತಿಯ ನಂತರ ಶಂಭು ಹೆಗಡೆಯವರು ಸಾಲಿಗ್ರಾಮ ಮೇಳದಲ್ಲಿ ಕಲಾವಿದನಾಗಿ ತಿರುಗಾಟ ಆರಂಭಿಸಿದರು. ತನ್ನ ಸೃಜನಶೀಲತೆಯಿಂದ ಮದನ, ಸಾಲ್ವ ಮೊದಲಾದ ಪಾತ್ರಗಳಿಗೆ ಹೊಸ ದೃಷ್ಟಿಕೋನ, ರೂಪಗಳಿಂದ ಜೀವ ತುಂಬಿದರು. ಸಾಂಪ್ರದಾಯಿಕ, ಪರಂಪರೆಯ ಪೌರಾಣಿಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಕೆರೆಮನೆ ಶಂಭು ಹೆಗಡೆಯವರು ಅನಿವಾರ್ಯವಾಗಿ ಸಾಲಿಗ್ರಾಮ ಮೇಳವನ್ನು ಬಿಡಬೇಕಾಯಿತು.


ಕೆಲವೊಂದು ಪಾತ್ರಗಳು ಹೆಸರು ತಂದು ಕೊಟ್ಟಿದ್ದರ ಹೊರತಾಗಿಯೂ ಕಾಲ್ಪನಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಲು ಇಷ್ಟಪಡದ ಹೆಗಡೆಯವರು ಸಾಲಿಗ್ರಾಮ ಮೇಳಕ್ಕೆ ವಿದಾಯ ಹೇಳಿದರು. ತನ್ನ ತಂದೆಯವರು ಸ್ಥಾಪಿಸಿದ್ದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು 1973ರಲ್ಲಿ ಪುನಃ ಪ್ರಾರಂಭಿಸಿದರು. ಪ್ರಾರಂಭದಲ್ಲಿ ಡೇರೆಮೇಳವಾಗಿ ತಿರುಗಾಟಕ್ಕೆ ಹೊರಟ ಈ ಮೇಳ ಇಡಗುಂಜಿ ಮೇಳ ಎಂದು ಮನೆಮಾತಾಯಿತು. ಒಂದು ಡೇರೆ ಮೇಳ ಸಂಘಟನೆ ಎಂದರೆ ಅದೊಂದು ಸಾಹಸವೇ. ಡೇರೆ, ವೇಷಭೂಷಣಗಳು, ಕುರ್ಚಿಗಳು, ಜನರೇಟರ್, ಮೈಕ್‍ಸೆಟ್, ವಿದ್ಯುತ್ ದೀಪಗಳು, ರಂಗಸ್ಥಳ, ಲಾರಿ, ಕಲಾವಿದರ ವಾಹನ ಮೊದಲಾದ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ಅಧಿಕ ಬಂಡವಾಳವೇ ಬೇಕು.

ಶಂಭು ಹೆಗಡೆಯವರಿಗೆ ಸಂಘಟಕನಾಗಿ ತಂದೆಯವರ ಕಾಲದಿಂದಲೇ ಅನುಭವವಿದ್ದ ಕಾರಣ ಅವರು ಇದಕ್ಕೆಲ್ಲಾ ಎದೆಗುಂದಲಿಲ್ಲ. ಕಲಾವಿದ, ಸಂಘಟಕ, ವ್ಯವಸ್ಥಾಪಕ- ಹೀಗೆ ಎಲ್ಲಾ ಪಾತ್ರಗಳನ್ನು ತಾವೇ ನಿರ್ವಹಿಸಿ ಇಡಗುಂಜಿ ಮೇಳವನ್ನು ಮನೆ ಮಾತಾಗಿಸಿದರು. ವ್ಯವಸ್ಥೆ, ಪರಂಪರೆ, ಸಂಪ್ರದಾಯಗಳೊಂದಿಗೆ ರಾಜಿಯಾಗದೆ ಪ್ರದರ್ಶನಗಳನ್ನು ನೀಡಿದ ಕೀರ್ತಿ ಇಡಗುಂಜಿ ಮೇಳಕ್ಕೆ ಸಲ್ಲುತ್ತದೆ. ಕೆ. ಶಂಭು ಹೆಗಡೆಯವರು ಕೊನೆಯವರೆಗೂ ಯಕ್ಷಗಾನದ ಮೌಲ್ಯಗಳನ್ನು ಎತ್ತಿಹಿಡಿದು ಕಲೆಯ ಜೊತೆಗೆ ತಾನೂ ಔನ್ನತ್ಯವನ್ನು ಕಂಡವರು.
ವಿಶೇಷ ಆಕರ್ಷಣೆಯೋ ಅಥವಾ ಅತಿಥಿ ಕಲಾವಿದರ ಆಕರ್ಷಣೆಯೋ ಇವೆರಡನ್ನೂ ಶಂಭು ಹೆಗಡೆಯವರು ಕೊನೆಯವರೆಗೆ ವಿರೋಧಿಸಿದ್ದರು. ಇಂತಹಾ ವಿಷಯಗಳಿಗೆ ಅವರು ತಮ್ಮ ಇಡಗುಂಜಿ ಮೇಳದಲ್ಲಿ ಆಸ್ಪದ ಕೊಡುತ್ತಿರಲಿಲ್ಲ.


ಕೆರೆಮನೆ ಶಂಭು ಹೆಗಡೆ

80ರ ದಶಕದ ಸುಮಾರಿಗೆ ಅಂದರೆ 1980ರ ನಂತರ ಶಂಭು ಹೆಗಡೆಯವರ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳು ನಡೆದುವು. ಗೋವಾ, ಹೈದರಾಬಾದ್, ಯು.ಎ.ಇ., ಬೆಹ್ರೈನ್, ಫ್ರಾನ್ಸ್, ನೇಪಾಳ, ಬಾಂಗ್ಲಾ, ಸ್ಪೇನ್, ಇಂಗ್ಲೆಂಡ್, ಚೀನಾ, ಮಲೇಷಿಯಾ, ಬರ್ಮಾ, ಲಾವೋಸ್, ಪಿಲಿಪೈನ್ಸ್, ಅಮೇರಿಕಾ ಮೊದಲಾದ ದೇಶಗಳಲ್ಲಿ ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ನೀಡಿದ ಕೀರ್ತಿ ಶಂಭು ಹೆಗಡೆಯವರಿಗೆ ಸಲ್ಲುತ್ತದೆ.
ಸರಕಾರದ ನೆರವಿನಿಂದ 1986ರಲ್ಲಿ ಯಕ್ಷಗಾನ ರಂಗಶಿಕ್ಷಣ ಕೇಂದ್ರವನ್ನು ಗುಣವಂತೆಯಲ್ಲಿ ಆರಂಭಿಸಿದರು. ಹಿಮ್ಮೇಳ, ಮುಮ್ಮೇಳ ಎರಡನ್ನೂ ಇಲ್ಲಿ ಕಲಿಸುವ ವ್ಯವಸ್ಥೆ ಆರಂಭವಾಗಿತ್ತು. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಅನೇಕ ಮೇಳಗಳಲ್ಲಿ ವೇಷಧಾರಿಗಳಾಗಿ ರಂಜಿಸುತ್ತಿದ್ದಾರೆ.


ಅಕಾಲ ಮೃತ್ಯುವಿಗೀಡಾದ ಕಿರಿಯ ಸಹೋದರ ಪ್ರಸಿದ್ಧ ಕಲಾವಿದ ದಿ| ಗಜಾನನ ಹೆಗಡೆಯವರ ಬಗ್ಗೆ ನೆನಪಿನ ಸಂಚಿಕೆಯನ್ನು ಪ್ರಕಟಿಸಿದ್ದಾರೆ. ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಗುಣವಂತೆಯಲ್ಲಿ ರಂಗಮಂದಿರವನ್ನು ಸ್ಥಾಪಿಸಲಾಗಿದೆ. ತಂದೆಯವರ ಹೆಸರಿನಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನೂ ನೀಡುತ್ತಿದ್ದರು. ಇಡಗುಂಜಿ ಮೇಳದ ಸಂಚಾಲಕರಾಗಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ ಸದಸ್ಯರಾಗಿ, ಯಕ್ಷಗಾನ ರಂಗಶಿಕ್ಷಣ ಕೇಂದ್ರದ ಸ್ಥಾಪಕರಾಗಿ, ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ, ಬೆಂಗಳೂರಿನ ಕೊರಿಯೋಗ್ರಫಿ ಸಂಸ್ಥೆಯ ಸದಸ್ಯರಾಗಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಕಾರ್ಯಕ್ರಮ ಸಮಿತಿಯ ಸದಸ್ಯರಾಗಿ, ಸ್ಟಿಕ್ ಮೆಕೆಯ ಗುರುವಾಗಿ ಬಹುಮುಖೀ ವ್ಯಕ್ತಿತ್ವದ ಶಂಭು ಹೆಗಡೆಯವರ ಸಾಧನೆಗಳನ್ನು ಬರೆಯುತ್ತಾ ಹೋದರೆ ಪುಟಗಳು ಸಾಲದು.


ಇನ್ನು ಸನ್ಮಾನ ಪ್ರಶಸ್ತಿಗಳ ಬಗ್ಗೆ ಹೇಳುವುದೇ ಬೇಡ. ಸನ್ಮಾನಗಳು ಲೆಕ್ಕವಿಲ್ಲದಷ್ಟು ಬಂದಿವೆ. 1993ರಲ್ಲಿ ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಒಲಿಯಿತು. ಕೆರೆಮನೆ ಕುಟುಂಬವೊಂದರಲ್ಲಿಯೇ ಮೂರು ರಾಷ್ಟ್ರಪ್ರಶಸ್ತಿ ವಿಜೇತರು! ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸನ್ಮಾನ ಪ್ರಶಸ್ತಿಗಳು ಬಂದಿವೆ. ‘ಪರ್ವ’ ಚಲನಚಿತ್ರದ ಅಭಿನಯಕ್ಕೆ ಅತ್ಯುತ್ತಮ ‘ಪೋಷಕ ನಟ’ ಪ್ರಶಸ್ತಿಯ ಗರಿಯೂ ಮುಕುಟಕ್ಕೇರಿತ್ತು.
2009 ಫೆಬ್ರವರಿ 3, ಇಡಗುಂಜಿ ಶ್ರೀ ಕ್ಷೇತ್ರದಲ್ಲಿ ಜಾತ್ರೆ. ಆ ದಿನ ಪ್ರತಿವರ್ಷದಂತೆ ಇಡಗುಂಜಿ ಮೇಳದ ಸೇವೆಯಾಟ. ಸೀತಾವಿಯೋಗ ಪ್ರಸಂಗದ ರಾಮನಾಗಿ ಅಭಿನಯಿಸುತ್ತಿದ್ದ ಶಂಭು ಹೆಗಡೆಯವರು ರಂಗದಲ್ಲಿ ಅಭಿನಯಿಸುತ್ತಿದ್ದಂತೆ ಆಯಾಸಗೊಂಡು ಭಾಗವತರಿಗೆ ಸೂಚನೆ ನೀಡಿ ನೇಪಥ್ಯಕ್ಕೆ ಬರುತ್ತಾ ಕುಸಿದು ಬಿದ್ದರು. ಧಾವಿಸಿ ಆದರಿಸಿದ ಪುತ್ರ ಶಿವಾನಂದ ಹೆಗಡೆ ಮತ್ತಿತರರು ಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಪ್ರಯೋಜನವಾಗಿರಲಿಲ್ಲ. ಆ ದಿನ ಬೆಳಗಿನಜಾವ ಸುಮಾರು ಐದು ಘಂಟೆಯ ಹೊತ್ತಿಗೆ ಯಕ್ಷರಂಗದ ಅನಘ್ರ್ಯರತ್ನ, ಅದಮ್ಯ ಚೇತನವೊಂದು ಕಣ್ಮರೆಯಾಗಿತ್ತು.
ಶಂಭು ಹೆಗಡೆಯವರ ಪತ್ನಿ ಶ್ರೀಮತಿ ಗೌರಿ, ಪುತ್ರ ಖ್ಯಾತ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಪುತ್ರಿ ಶಾರದಾ ಹೀಗೆ ನೆಮ್ಮದಿಯ ಸಂಸಾರವಾಗಿತ್ತು.


ನಾಟಕದ ಅನುಭವಗಳು ಅವರನ್ನು ನಟರನ್ನಾಗಿ ರೂಪಿಸುವಲ್ಲಿ ಸ್ವಲ್ಪಮಟ್ಟಿಗೆ ಸಹಾಯಕವಾದರೂ ಶಂಭು ಹೆಗಡೆಯವರು ಹುಟ್ಟು ಕಲಾವಿದರು ಮಾತ್ರವಲ್ಲ ಅನೇಕ ಪ್ರಯೋಗಶೀಲ ಮನೋಭಾವನೆಯನ್ನು ಹೊಂದಿದ ಕಲಾವಿದ. ಪಾತ್ರದ ಅಭಿನಯಗಳಲ್ಲಿ ಸೃಜನಶೀಲತೆಯನ್ನು ಸೃಷ್ಟಿಸಿದ ಕಲಾವಿದ. ಕೊರಿಯೋಗ್ರಫಿ ನೃತ್ಯದ ಡಿಪ್ಲೋಮಾ ಅವರಿಗೆ ಯಕ್ಷಗಾನದಲ್ಲಿ ಆವಿಷ್ಕಾರಗಳನ್ನು ಮಾಡುವುದಕ್ಕೆ ಸಹಾಯಕವಾಯಿತು.
ಹೀಗೆ ಯಕ್ಷಗಾನದ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಮುಂದಿನ ಪೀಳಿಗೆಗೆ ಅಗ್ರಪಂಕ್ತಿಯಲ್ಲಿ ಕಾಣಿಸುವ ಹೆಸರುಗಳಲ್ಲೊಂದು ‘ಕೆರೆಮನೆ ಶಂಭು ಹೆಗಡೆ’ಯ ಹೆಸರು. ಆ ಹೆಸರು ಸೂರ್ಯಚಂದ್ರರಿರುವ ವರೆಗೆ ಅಜರಾಮರವಾಗಿ ಉಳಿಯುತ್ತದೆ ಎಂಬುದು ಯಕ್ಷಪ್ರೇಮಿಗಳೆಲ್ಲರೂ ನಿರ್ವಂಚನೆಯಿಂದ ಒಪ್ಪಿಕೊಳ್ಳುವ ಸತ್ಯ.

ಶಿವರಾಮ ಹೆಗಡೆ, ಶಂಭು ಹೆಗಡೆ, ಶಿವಾನಂದ ಹೆಗಡೆ, ಶ್ರೀಧರ ಹೆಗಡೆ ಹೀಗೆ  ಕೆರೆಮನೆ ವಂಶದ  ಕುಡಿಗಳು ಬೆಳೆಯುತ್ತಾ ಹೋಗಲಿ. ಶಿವಾನಂದ ಹೆಗಡೆಯವರೂ ತಂದೆ ತೋರಿಕೊಟ್ಟ ದಾರಿಯಲ್ಲಿ ಸಾಗುತ್ತಾ ಪ್ರಸಿದ್ಧಿಯ ಪಥದಲ್ಲಿದ್ದಾರೆ. ಇವರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. 

– ಮನಮೋಹನ್ ವಿ. ಎಸ್.

‘ಯಕ್ಷಗಾನ’ ಚಾಲು ಕುಣಿತ – ಬೇತಾಳನ ಕಥೆಗಳು(ಕಾಲ್ಪನಿಕ ಹಾಸ್ಯ ಕಥೆ)

ಎಂದಿನಂತೆಯೇ ಅಂದೂ ಕೂಡ ರಾಜಾ ವಿಕ್ರಮಾದಿತ್ಯನು ವೇಗವಾಗಿ ನಡೆಯುತ್ತಾ ತನ್ನ ಗಮ್ಯ ಸ್ಥಳವಾದ ನಿಬಿಡಾರಣ್ಯ ಪ್ರದೇಶವನ್ನು ತಲುಪಿದನು. ತಾನು ಬರಬೇಕಾದ ಜಾಗ ಇದೇ ಇರಬಹುದೇ ಎಂದು ಸಂಶಯ ದೃಷ್ಟಿಯಿಂದ ಅತ್ತಿತ್ತ ನೋಡುತ್ತಾ ಸ್ಥಂಭೀಭೂತನಾಗಿ ಒಂದೆಡೆಯಲ್ಲಿ ನಿಂತನು.

‘ಅರೇ .. ಯಾವಾಗಲೂ ಬರುತ್ತಿದ್ದ ಜಾಗವಿದು ಅಲ್ಲವೇ’ ಎಂದು ವಿಸ್ಮಯಭರಿತ ಕಣ್ಣುಗಳನ್ನು ಸುತ್ತಲೂ ತಿರುಗಿಸುತ್ತಾ ದೃಷ್ಟಿ ಹಾಯಿಸಿದವನಿಗೆ ದೂರದಲ್ಲಿದ್ದ ಬೃಹದಾಕಾರದಲ್ಲಿದ್ದ ಮರವೊಂದು ಕಾಣಿಸಿತು. ತಲೆಗೆ ತಾಗುವಂತೆ ದೊಡ್ಡದಾದ ರಣಹದ್ದೊಂದು ಹಾರುತ್ತ ಹೋದಾಗ ವಿಕ್ರಮಾದಿತ್ಯ ಬೆಚ್ಚಿದರೂ ವಿಚಲಿತನಾಗಲಿಲ್ಲ. ಆಕ್ರಮಣಕ್ಕೆ ಬರುತ್ತಿದ್ದ ಅವುಗಳನ್ನು ತನ್ನ ಹರಿತವಾದ ಕತ್ತಿಯಿಂದ ನಿವಾರಿಸುತ್ತಾ ಭೂತದಂತೆ ನಿಂತಿದ್ದ ಆ ದೊಡ್ಡ ಮರದ ಸಮೀಪ ಬಂದವನೇ ಕತ್ತೆತ್ತಿ ಮೇಲಕ್ಕೆ ನೋಡಿದ.

ಎತ್ತರವಾದ ಕೊಂಬೆಯಲ್ಲಿ ಆ ಶವವು ನೇತಾಡುತ್ತಿತ್ತು. ಅವನು ನಿರೀಕ್ಷಿಸುತ್ತಿದ್ದ ಶವ ಅದೇ ಆಗಿತ್ತು. ಅತೀ ಕುಶಲಿಗನಂತೆ ಸರಾಗವಾಗಿ ಚಕಚಕನೆ ಮರವನ್ನೇರುತ್ತಾ ಆ ಶವವನ್ನು ಕೆಳಗಿಳಿಸಿದ. ಭಾರವಾಗಿದ್ದ ಆ ಶವವನ್ನು ತನ್ನ ಹೆಗಲಿಗೇರಿಸಿ ಕಾಡಿನಿಂದ ನಾಡಿನ ದಾರಿಯಾಗಿ ಮೌನವಾಗಿ ನಡೆಯತೊಡಗಿದ. ಶವವನ್ನು ಹೊತ್ತುಕೊಂಡು ರಾಜಾ ವಿಕ್ರಮಾದಿತ್ಯನು ಸ್ವಲ್ಪ ದೂರ ಬಂದಿರಬಹುದು. ಅಷ್ಟರಲ್ಲಿ ಆ ಶವದೊಳಗಿದ್ದ ಬೇತಾಳವು ಮಾತಾಡತೊಡಗಿತು.

“ಎಲೈ ರಾಜಾ ವಿಕ್ರಮಾದಿತ್ಯನೇ, ಎಷ್ಟು ಬಾರಿ ನಿನ್ನ ಪ್ರಯತ್ನದಲ್ಲಿ ಸೋತು ಹೋದರೂ ಮತ್ತೆ ಮತ್ತೆ ಬಂದು ನನ್ನನ್ನು ಹೆಗಲಿಗೇರಿಸಿ ನಡೆಯುವ ನಿನ್ನ ಕರ್ತೃತ್ವ ಶಕ್ತಿ, ಬದ್ಧತೆಗಳನ್ನು ಮೆಚ್ಚಲೇ ಬೇಕು. ಒಂದು ದೇಶದ ರಾಜನಾಗಿದ್ದೂ ಶವವೊಂದನ್ನು ಹೊತ್ತುಕೊಂಡು ನೀನು ಮಾಡುತ್ತಿರುವ ಈ ಕೆಲಸವನ್ನು ಕಂಡು ನನಗೆ ನಗೆಯೂ ಬರುತ್ತದೆ, ಮರುಕವೂ ಉಂಟಾಗುತ್ತಿದೆ. ನಿನ್ನ ಕೆಲಸ ಸಾಧಿಸುವಲ್ಲಿ ನೀನು ಮಾಡುತ್ತಿರುವ ಬಗೆ ಬಗೆಯ ಪಟ್ಟುಗಳನ್ನು ಹಾಗೂ ಕಸರತ್ತುಗಳನ್ನು ಕಂಡು ನನಗೆ ಯಕ್ಷಗಾನದ ಚಾಲು ಕುಣಿತಗಳ ನೆನಪು ಬರುತ್ತಿದೆ. ದಾರಿಯುದ್ದಕ್ಕೂ ನನ್ನನ್ನು ಹೊತ್ತುಕೊಂಡು ಹೋಗುತ್ತಿರುವ ಶ್ರಮ ನಿನ್ನ ಅರಿವಿಗೆ ಬಾರದಂತೆ ಅಂತಹಾ ಸ್ವಾರಸ್ಯಕರವಾದ ಕಥೆಯೊಂದನ್ನು ಹೇಳುತ್ತೇನೆ. ಕೇಳು. 

“ಪರಶುರಾಮ ಸೃಷ್ಟಿ ಎಂದು ಕರೆಯಲ್ಪಡುತ್ತಿದ್ದ ನಾಡಿನಲ್ಲಿ ಹಾಗೂ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಬಹಳ ಪ್ರಸಿದ್ಧಿಪಡೆದ ಕಲೆಯೊಂದಿತ್ತು. ಯಕ್ಷಗಾನ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಕಲೆಯು ಗಾಯನ, ವಾದನ, ನರ್ತನ, ಅಭಿನಯಗಳೇ ಮೊದಲಾದ ವಿಭಿನ್ನ ರೀತಿಯ ವಿಭಾಗಗಳಿಂದ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಹೆಚ್ಚಿನ ವಿಭಾಗಗಳನ್ನು ಗುರುತಿಸಬಹುದಾಗಿದ್ದರೂ ಸಾಧಾರಣವಾಗಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಎಂಬ ಎರಡು ವಿಭಾಗಗಳೇ ಇದರಲ್ಲಿ ಪ್ರಮುಖವಾದುವು. ಈ ಕಲೆಯ ತೆಂಕು ಮತ್ತು ಬಡಗು ತಿಟ್ಟಿನಲ್ಲಿ ಸಮಾನಾಸಕ್ತಿಯನ್ನು ಬೆಳೆಸಿಕೊಂಡ ಹುಡುಗನೊಬ್ಬ ಎರಡೂ ವಿಭಾಗಗಳ ನಾಟ್ಯವನ್ನು ಕರಗತ ಮಾಡಿಕೊಳ್ಳುವೆಂದು ಹೊರಟ.

ತೆಂಕು ಮತ್ತು ಬಡಗು ಎಂಬ ಈ ತಾರತಮ್ಯ ಯಾಕೆ? ಎರಡನ್ನೂ ಕಲಿತು ಅವೆರಡನ್ನೂ ಸಮನ್ವಯಗೊಳಿಸಬಾರದೇಕೆ ಎಂಬ  ಆಲೋಚನೆಯೂ ಆ ಹುಡುಗನಿಗೆ ಬಂತು. ಮೊದಲೇ ಹುಡುಗಾಟಿಕೆಯ ಬಿಸಿರಕ್ತ. ಅವೆರಡೂ ಯಕ್ಷಗಾನವೇ ಆದರೂ ಒಂದೊಕ್ಕೊಂದು ವಿಭಿನ್ನವಾದ ರಂಗಕ್ರಮಗಳು ಎಂಬ ಸಾಮಾನ್ಯ ವಿಷಯವನ್ನೂ ಅರ್ಥ ಮಾಡಿಕೊಳ್ಳಲಾರದೆ ಹೋದ ಹುಡುಗನ ತಲೆಯಲ್ಲಿ ಚಿತ್ರ ವಿಚಿತ್ರವಾದ ಆಲೋಚನೆಗಳು ಮನೆಮಾಡಿತ್ತು. ಯಕ್ಷಗಾನದ ಎರಡೂ ಪ್ರಾಕಾರಗಳನ್ನು ಒಂದು ಮಾಡಿದ ಕೀರ್ತಿ ಯಶಸ್ಸುಗಳು ಮುಂದಕ್ಕೆ ನನಗೆ ಬರಬಹುದು. ಯಕ್ಷಗಾನದ ಚರಿತ್ರೆಯಲ್ಲಿ ನನ್ನ ಹೆಸರು ಮುಂದಿನ ಪೀಳಿಗೆಯವರಿಗೆ ಆದರ್ಶವಾಗಿ ನಿಲ್ಲಬಹುದು ಎಂಬಂತಹಾ ಹುಚ್ಚು ಹುಚ್ಚಾದ ಆಲೋಚನೆಗಳು. 

ಎರಡೂ ವಿಭಾಗಕ್ಕೂ ಬೇರೆ ಬೇರೆ ಗುರುಗಳಂತೂ ಸಿಕ್ಕಿದರು. “ಮೊದಲು ಯಾವುದಾದರೊಂದನ್ನು ಕಲಿಯುವಿಯಂತೆ, ಎರಡನ್ನೂ ಒಟ್ಟಿಗೆ ಬೇಡ, ಆಮೇಲೆ ಮತ್ತೊಂದನ್ನು ಕಲಿತರಾಯಿತು” ಎಂದು ತೆಂಕು ಹಾಗೂ ಬಡಗಿನ ಗುರುಗಳಿಬ್ಬರೂ ಅವನಿಗೆ ಸಲಹೆ ನೀಡಿದರು. ಆದರೆ ಹುಡುಗನಿಗೆ ಎರಡನ್ನೂ ಕಲಿಯುವೆನೆಂಬ ಹಠ. ಸರಿ. ಪಾಠ ಆರಂಭವಾಯಿತು. ಹುಡುಗ ಬಹಳ ಚುರುಕಾಗಿದ್ದ. ಆಸಕ್ತಿಯೂ ಅತೀವವಾಗಿದ್ದುದರಿಂದ ಬಹಳ ಬೇಗನೆ ಕಲಿತ. ಗುರುಗಳಿಬ್ಬರಿಗೂ ಹುಡುಗನ ಪ್ರತಿಭೆ ಮತ್ತು ಕಲಿಕಾ ಸಾಮರ್ಥ್ಯವನ್ನು ಕಂಡು ಆಶ್ಚರ್ಯವಾಯಿತು. ಅದರಲ್ಲೂ ವಿಶೇಷವಾಗಿ ಬಡಗು ತಿಟ್ಟಿನ ಚಾಲು ಕುಣಿತದಲ್ಲಿ ಅವನ ಪ್ರತಿಭೆಯನ್ನು ಕಂಡು ಗುರುಗಳು ದಂಗಾಗಿದ್ದರು. ನೂರಕ್ಕಿಂತಲೂ ಹೆಚ್ಚು ಸುತ್ತು ಹಾರುವ ಆತನ ಶಕ್ತಿಯನ್ನು ಕಂಡು ತೆಂಕುತಿಟ್ಟಿನ ಗುರುಗಳೂ ಮೂಗಿನ ಮೇಲೆ ಬೆರಳಿಟ್ಟಿದ್ದರು.

ಆದರೆ ಇಷ್ಟೆಲ್ಲಾ ಸಾಧಿಸಲು ಆ ಹುಡುಗ ಬಹಳಷ್ಟು ಸಾಧನೆಯ ಶ್ರಮ ವಹಿಸಿದ್ದ. ಕ್ರಮೇಣ ವೇಷಧಾರಿಯಾಗಿ ರಂಗಪ್ರವೇಶ ಮಾಡಿದ ಆತ ಅತ್ಯಲ್ಪ ಸಮಯದಲ್ಲೇ ಎರಡೂ ತಿಟ್ಟುಗಳಲ್ಲಿಯೂ ಹೆಸರು ಮಾಡಿದ್ದ. ಎರಡೂ ತಿಟ್ಟುಗಳ ಗುರುಗಳು ಸಾರಿ ಸಾರಿ ಹೇಳಿದ ಕಾರಣದಿಂದ ಪ್ರಾರಂಭದಲ್ಲಿ ಆತ ಸಮನ್ವಯತೆಯ ಹೆಸರಿನಲ್ಲಿ ಒಂದಕ್ಕೊಂದು ಬೆರಕೆ ಮಾಡಲು ಹೋಗಲಿಲ್ಲ. ಹುಡುಗನು ಯುವಕನಾದ. ಒಳ್ಳೆಯ ಹೆಸರು ಬಂತು. ಪ್ರಸಿದ್ಧಿಗೆ ಬರುತ್ತಿದ್ದಂತೆ ಆ ಯುವ ಕಲಾವಿದ ಎರಡೂ ತಿಟ್ಟುಗಳಲ್ಲಿ ಬಗೆ ಬಗೆಯ ಪ್ರಯೋಗಗಳನ್ನು ರಂಗದಲ್ಲಿ ಮಾಡುವುದಕ್ಕೆ ಮುಂದಾದ.

ತೆಂಕು ತಿಟ್ಟಿನ ಪ್ರದರ್ಶನಗಳಲ್ಲಿ ಬಗೆ ಬಗೆಯ ಚಾಲು ಕುಣಿತಗಳನ್ನು ಪ್ರದರ್ಶನ ಮಾಡುವುದು ಮಾತ್ರವಲ್ಲದೆ ನೆಲದಲ್ಲಿ ಮಂಡಿಯೂರಿ ಸುತ್ತು ತಿರುಗುವ ರೀತಿಯನ್ನೂ ಪ್ರದರ್ಶಿಸುತ್ತಿದ್ದ. ಬಡಗುತಿಟ್ಟಿನ ಪ್ರದರ್ಶನದಲ್ಲಿ ನೂರಕ್ಕೂ ಹೆಚ್ಚು ಧಿಗಿಣಗಳನ್ನು ಹಾರಲು ಪ್ರಾರಂಭಿಸಿದ. ಪ್ರಾರಂಭದಲ್ಲಿ ಸೀಟಿ, ಚಪ್ಪಾಳೆಗಳು ಬಿದ್ದುವು. ಕೆಲವೊಂದು ವರ್ಗದ ಜನರು ಹೊಗಳಲು ಪ್ರಾರಂಭಿಸಿದರು. ಇದರಿಂದ ಉತ್ಸಾಹಗೊಂಡ ಆ ಯುವ ಕಲಾವಿದ ಇದನ್ನೇ ಎಲ್ಲಾ ಪ್ರದರ್ಶನಗಳಲ್ಲೂ ಮುಂದುವರಿಸತೊಡಗಿದ. ಆದರೆ ಕ್ರಮೇಣ ಇದರಿಂದ ವ್ಯತಿರಿಕ್ತ ಪರಿಣಾಮವೇ ಆಯಿತು.

ಎರಡೂ ತಿಟ್ಟಿನ ಹಿಮ್ಮೇಳದವರು ತಮ್ಮದಲ್ಲದ ಈ ಶೈಲಿಗೆ ಒಗ್ಗಿಕೊಳ್ಳಲಾರದೆ ಮುಜುಗರವನ್ನು ಅನುಭವಿಸಿದರು. ವಿದ್ವಾಂಸರ ಕಣ್ಣು ಕೆಂಪಗಾಯಿತು. ಪಜ್ಞಾವಂತ ಪ್ರೇಕ್ಷಕರು ಆಕ್ಷೇಪಿಸಿದರು. ಎಲ್ಲರೂ ಸಂಘಟಕರಿಗೆ ಒತ್ತಡ ತಂದರು. ಕ್ರಮೇಣ ಆತನನ್ನು ಪ್ರದರ್ಶನದಲ್ಲಿ ಭಾಗವಹಿಸುವುದನ್ನು ವಿರೋಧಿಸತೊಡಗಿದರು. ಎರಡೂ ತಿಟ್ಟುಗಳಲ್ಲಿ ಪ್ರವೀಣನಾಗಿದ್ದ ಆತನಿಗೆ ಈಗ ಕಲಾವಿದನಾಗಿ ಅವಕಾಶಗಳು ಕಡಿಮೆಯಾಗತೊಡಗಿದುವು. ಒಂದೆರಡು ವರ್ಷಗಳ ನಂತರ ಆತನ ಹೆಸರು ಕಲಾಭಿಮಾನಿಗಳ ಮನಸ್ಸಿನಿಂದ ಮರೆಯಾಗಿ ಹೋಯಿತು”. 

ಇಷ್ಟು ಹೇಳಿ ಬೇತಾಳವು ಕಥೆಯನ್ನು ನಿಲ್ಲಿಸಿತು. ಆಮೇಲೆ ಮುಂದುವರಿಸುತ್ತಾ “ಎಲೈ ರಾಜನೇ, ಈ ಕಲಾವಿದನ ಕಥೆಯೂ ನಿನ್ನಂತೆಯೇ ಇರಬಹುದೇನೋ ಎಂದು ಅನಿಸುತ್ತದೆ. ನಿನಗೂ ರಾಜ್ಯಭಾರದ ಹಾಗೂ ಪ್ರಜಾಜನರನ್ನು ಪಾಲಿಸುವ ಹೊಣೆಗಾರಿಕೆಯಿದೆ. ಈಗ ಎಷ್ಟೋ ದಿನಗಳಿಂದ ನನ್ನ ಹಿಂದೆ ಬಿದ್ದು ರಾಜ್ಯ ಪರಿಪಾಲನೆಯ ಕರ್ತವ್ಯವನ್ನು ಮರೆತುಬಿಡುವೆಯೋ ಎಂಬ ಶಂಕೆ ನನ್ನನ್ನು ಕಾಡುತ್ತಿದೆ. ಅದಿರಲಿ. ಯಕ್ಷಗಾನದ ಎರಡೂ ತಿಟ್ಟುಗಳಲ್ಲಿ ಪ್ರಭುತ್ವ ಸಾಧಿಸಿದ್ದು ಆ ಹುಡಗನ ತಪ್ಪೇ? ಹುಡುಗನ ಕಲಾಸಕ್ತಿಗೆ ನೀರೆರೆದು ಪೋಷಿಸಿದ ಗುರುಗಳು ಮಾಡಿದ್ದು ಸರಿಯೇ? ಎರಡನ್ನೂ ಸಮನ್ವಯಗೊಳಿಸುವೆನೆಂಬ ಆಕಾಂಕ್ಷೆಯನ್ನು ಹೊಂದಿದ್ದ ಆ ಯುವ ಕಲಾವಿದನು ಎಡವಿದ್ದು ಎಲ್ಲಿ? ಪ್ರಾರಂಭದಲ್ಲಿ ಪ್ರೋತ್ಸಾಹಿಸಿದ ಪ್ರೇಕ್ಷಕರು ಆಮೇಲೆ ಕೈ ಬಿಡಲು ಕಾರಣವೇನು? ಈ ಎಲ್ಲಾ ಪ್ರಶ್ನೆಗಳಗೆ ಗೊತ್ತಿದ್ದೂ ಉತ್ತರ ಹೇಳದಿದ್ದರೆ ನಿನ್ನ ತಲೆಯು ಯಕ್ಷಗಾನ ಪ್ರದರ್ಶನ ನಡೆಯುವಾಗ ಸಿಡಿಯುವ ಸುಡುಮದ್ದುಗಳಂತೆ ಸಾವಿರ ಹೋಳಾದೀತು! ಹುಷಾರ್ ” ಎಂದಿತು. 

ರಾಜಾ ವಿಕ್ರಮಾದಿತ್ಯನು ನಗುತ್ತಾ “ಎಲೈ ಬೇತಾಳನೇ, ಹುಡುಗನ ಉಭಯ ತಿಟ್ಟುಗಳ ಪ್ರಾವೀಣ್ಯತೆಯನ್ನು ಮೆಚ್ಚಬೇಕಾದ್ದೇ. ಪ್ರತಿಭೆ ಇದ್ದರೇನೂ ಪ್ರಯೋಜನವಿಲ್ಲ. ಅದನ್ನು ಪ್ರಯೋಗಿಸುವ ರೀತಿ ತಿಳಿದಿರಬೇಕು. ಅದನ್ನೇ ಮಾಡದೇ ಇದ್ದದ್ದು ಹುಡುಗನ ತಪ್ಪು. ಉಭಯ ತಿಟ್ಟುಗಳ ಗುರುಗಳೂ ಪ್ರಾಂಭದಲ್ಲಿಯೇ ಎಚ್ಚರಿಸಿದ್ದಾರೆ ಎಂದ ಮೇಲೆ ಗುರುಗಳದೇನೂ ತಪ್ಪಿಲ್ಲ ಎಂದೇ ತೋರುತ್ತದೆ. ಮತ್ತೊಂದುಂಟು. ಪಾತ್ರಾಪಾತ್ರದ ವಿವೇಚನೆಯೂ ಗುರುಗಳಾದವರಿಗೆ ತಿಳಿದಿರಬೇಕು ಎಂಬ ಮಾತಿದೆ. ಆದ್ದರಿಂದ ಅಪಾತ್ರರಿಗೆ ವಿದ್ಯಾದಾನ ಮಾಡಿದರು ಎಂಬ ನೆಲೆಯಲ್ಲಿ ಅವರನ್ನು ಆರೋಪಿಗಳನ್ನಾಗಿ ಮಾಡಬಹುದೇ ಹೊರತು ತಪ್ಪಿತಸ್ಥರನ್ನಾಗಿ ಅಲ್ಲ.

ಹುಡುಗ ಈ ಕಥೆಯ ಪ್ರಾರಂಭದಿಂದ ಕೊನೆಯ ವರೆಗೂ ಎಡವಿದ್ದಾನೆ. ಅವನ ಆಲೋಚನೆಗಳು, ನಿರ್ಧಾರ, ಕಲಿಕೆ ಮತ್ತು ಪ್ರಯೋಗ ಹೀಗೆ ಹೆಜ್ಜೆ ಹೆಜ್ಜೆಗೂ ಎಡವಿದ ಆತ ಎರಡೂ ತಿಟ್ಟುಗಳು ಯಕ್ಷಗಾನದ್ದೇ ಆದರೂ ಎರಡೂ ವಿಭಿನ್ನವಾದ ರಂಗ ಪ್ರಯೋಗಗಳನ್ನು ಹೊಂದಿದೆ ಎಂಬುದನ್ನು ತಿಳಿದುಕೊಳ್ಳಲಾರದೆ ಹೋದ. ನಾಟ್ಯಗಾರಿಕೆ, ವೇಷಭೂಷಣ, ಹಿಮ್ಮೇಳ ವಾದ್ಯಗಳು ಎಲ್ಲವೂ ಪ್ರತ್ಯೇಕವಾಗಿ ಎದ್ದು ಕಾಣುವಂತೆ ಇರುವಾಗ ಸಮನ್ವಯತೆ ಸಾಧ್ಯವೇ ಇಲ್ಲ. ಎರಡೂ ವೇಷಗಳು ಒಂದೇ ವೇದಿಕೆಯಲ್ಲಿ ಕಂಡರೆ ಅದೊಂದು ಅಭಾಸವೇ ಹೊರತು ಮತ್ತೇನಲ್ಲ.

ಇನ್ನು ಪ್ರೇಕ್ಷಕರ ಮನಸ್ಥಿತಿಯೂ ಭಾಷೆ ಅಥವಾ ಪ್ರದೇಶಗಳಿಗನುಗುಣವಾಗಿ ಇರುತ್ತದೆ. ತೆಂಕಿನ  ಪ್ರೇಕ್ಷಕರು ಅದನ್ನೇ ಬಯಸಿ ಬಂದಿರುತ್ತಾರೆ. ಬಡಗಿನವರು ಅದನ್ನೇ ಇಷ್ಟಪಡುತ್ತಾರೆ. ಆದ್ದರಿಂದ ಪ್ರಾರಂಭದಲ್ಲಿ ಕೆಲವರು ಪ್ರೋತ್ಸಾಹಿಸಿದಂತೆ ಕಂಡರೂ ಪ್ರಜ್ಞಾವಂತರಾದ ಪ್ರೇಕ್ಷಕರು ಅವನನ್ನು ತಿರಸ್ಕರಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ”. ರಾಜಾ ವಿಕ್ರಮಾದಿತ್ಯನ ಉತ್ತರದಿಂದ ತೃಪ್ತಿಗೊಂಡ ಬೇತಾಳವು ಆತನು ಮೌನವನ್ನು ಮುರಿದನೆಂದು ತಿಳಿದ ಕೂಡಲೇ ಮತ್ತೆ ಶವವಾಗಿ ಆ ಬೃಹತ್ ಮರದ ಕೊಂಬೆಯಲ್ಲಿ ನೇತಾಡತೊಡಗಿತು. 

ಕಲಾವಿದ, ಪ್ರಸಂಗಕರ್ತ, ಸಮಾಜಸೇವಕ, ವೈದ್ಯ ಪಟ್ಟಾಜೆ ಗಣೇಶ ಭಟ್ 

ಕಲಾವಿದ, ಪ್ರಸಂಗಕರ್ತ, ಸಮಾಜಸೇವಕ ಹಾಗೂ ಉತ್ತಮ ಕೃಷಿಕ, ವೈದ್ಯ ಶ್ರೀ ಪಟ್ಟಾಜೆ ಗಣೇಶ ಭಟ್ಟರ ಜೀವಿತಾವಧಿ 1943-2020. ಪುತ್ತೂರು ತಾಲೂಕಿನ ಕಾವು ಸಮೀಪದ ಪಟ್ಟಾಜೆ ಎಂಬಲ್ಲಿ ಸರ್ಪಂಗಳ  ಶ್ರೀ ನಾರಾಯಣ ಭಟ್ಟ  ಮತ್ತು ಶ್ರೀಮತಿ ಗೌರಿ ಅಮ್ಮ ದಂಪತಿಗಳ ಪುತ್ರನಾಗಿ 1943 ಜೂನ್ 12ರಂದು ಜನನ.

ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಆಸಕ್ತಿ ಹುಟ್ಟಿಕೊಂಡಿತ್ತು. ಯಕ್ಷಗಾನ ಮತ್ತು ವೈದ್ಯಕೀಯವು ಪಟ್ಟಾಜೆ ಗಣೇಶ ಭಟ್ಟರಿಗೆ ಅಜ್ಜನ ಮನೆಯಿಂದ ಬಳುವಳಿಯಾಗಿ ಬಂದಿತ್ತು. ಶಾಲಾ ಕಲಿಕೆಯನ್ನು ನಿಲ್ಲಿಸಿ ಎಳವೆಯಲ್ಲೇ ಸೋದರ ಮಾವ ಕೆರೆಕೋಡಿ ಶ್ರೀ ಗಣಪತಿ ಭಟ್ಟರೊಂದಿಗೆ ಅಜ್ಜನ ಮನೆಗೆ ತೆರಳಿದ್ದರು (ಕಲ್ಮಡ್ಕ ಸಮೀಪದ ಕೆರೆಕೋಡಿ).

ವೈದ್ಯಕೀಯ ಮತ್ತು ಯಕ್ಷಗಾನವನ್ನು ಕಲಿಯಲು ತಾಯಿಯ ಪ್ರೋತ್ಸಾಹ, ಆಶೀರ್ವಾದವೂ ಇತ್ತು. ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಅಜ್ಜನ ಮನೆ ಸೇರಿಕೊಂಡ ಪಟ್ಟಾಜೆ ಶ್ರೀ ಗಣೇಶ ಭಟ್ಟರು ಚಕ್ರಕೋಡಿ ಈಶ್ವರ ಶಾಸ್ತ್ರಿಗಳಿಂದ ಸಂಸ್ಕೃತ ಅಭ್ಯಾಸದ ಜತೆಗೆ  ಸೋದರ ಮಾವ ಕೆರೆಕೋಡಿ ಗಣಪತಿ ಭಟ್ಟರಿಂದ ಆಯುರ್ವೇದ ಉದ್ಗ್ರಂಥವಾದ ಚರಕ ಸಂಹಿತೆಯ ಅಭ್ಯಾಸವನ್ನೂ ಮಾಡಿದರು. ಸಂಸ್ಕೃತ ಭಾಷೆಯ ಅಭ್ಯಾಸದಿಂದ ಛಂದಸ್ಸಿನ ಜ್ಞಾನವನ್ನೂ ಗಳಿಸಿಕೊಂಡಿದ್ದರು.

ಕಲ್ಮಡ್ಕ ಪರಿಸರವು ಯಕ್ಷಗಾನ, ಸಂಗೀತ, ಸಾಹಿತ್ಯಗಳ ಒಂದು ಕೇಂದ್ರವೇ ಆಗಿತ್ತು. ಊರಿನ ಜನರೆಲ್ಲಾ ಕಲಾಭಿಮಾನಿಗಳೂ ಕಲಾವಿದರೂ ಆಗಿದ್ದರು. ವಾರಕ್ಕೊಂದು ರಾತ್ರಿಯಿಡೀ ತಾಳಮದ್ದಳೆ ನಡೆಯುತ್ತಿತ್ತು. ಅಲ್ಲದೆ ಯಕ್ಷಗಾನ ಪ್ರದರ್ಶನಗಳೂ ಆಗಾಗ ನಡೆಯುತ್ತಿದ್ದುವು. ಪಟ್ಟಾಜೆ ಶ್ರೀ ಗಣೇಶ ಭಟ್ಟರ ಯಕ್ಷಗಾನಾಸಕ್ತಿಗೆ ನೀರು ಸಾರವೆರೆದು ಪೋಷಿಸಿದವರು ಸೋದರ ಮಾವ ಕೆರೆಕೋಡಿ ಗಣಪತಿ ಭಟ್ಟರು. ಅವರೇ ಮೊದಲ ಗುರು. ಶ್ರೀಯುತರು ಆಯುರ್ವೇದ ವೈದ್ಯರೂ, ಸಾಹಿತಿಗಳೂ, ಯಕ್ಷಗಾನ ಕಲಾವಿದರೂ ಆಗಿದ್ದರು. ಕಲ್ಮಡ್ಕದ ‘ಸಂಗಮ ಕಲಾ ಸಂಘ’ದ ರೂವಾರಿ.

ಬರೆಕೆರೆಯ ನಾರಾಯಣೀಯಮ್ ಮನೆಯಲ್ಲಿ ಕಟೀಲು ಮೇಳದ ಬಯಲಾಟದ ಸಂದರ್ಭದಲ್ಲಿ ಪಟ್ಟಾಜೆ ಗಣೇಶ ಭಟ್ಟರ ಕೃತಿ ‘ಯಕ್ಷ ದ್ವಾದಶಾಮೃತಮ್’ ಬಿಡುಗಡೆ ಸಮಾರಂಭ

ಸೋದರ ಮಾವನ ನಿರ್ದೇಶನ, ಪ್ರೋತ್ಸಾಹದಿಂದ ಪಟ್ಟಾಜೆ ಗಣೇಶ ಭಟ್ಟರು ತನ್ನ ಹದಿನಾರನೆಯ ವಯಸ್ಸಿನಲ್ಲಿ ತಾಳಮದ್ದಳೆ ಅರ್ಥಧಾರಿಯಾಗಿ ಯಕ್ಷಗಾನ ಬದುಕನ್ನು ಆರಂಭಿಸಿದ್ದರು. ಉಡುವೆಕೋಡಿ ಶ್ರೀ ಸುಬ್ಬಪ್ಪಯ್ಯ, ಕೆ.ವಿ.ಗಣಪಯ್ಯ, ಕಂಜರ್ಪಣೆ ಶಂಭಯ್ಯ, ಭೀಮಗುಳಿ ಪುಟ್ಟಪ್ಪಯ್ಯ, ಮೊದಲಾದವರೊಂದಿಗೆ ಅರ್ಥ ಹೇಳುತ್ತಾ ಬೆಳೆದರು. ಬಳಿಕ ಬಂಧುಗಳೇ ಆದ ಕೀರಿಕ್ಕಾಡು ಮಾಸ್ತರರ ಮಾರ್ಗದರ್ಶನವೂ ದೊರಕಿತ್ತು. ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತು ವೇಷ ಮಾಡಲೂ ಆರಂಭಿಸಿದರು. ಹೀಗೆ ಕೆರೆಕೋಡಿ ಗಣಪತಿ ಭಟ್ಟರ ಗರಡಿಯಲ್ಲಿ ಪಳಗಿ ಶ್ರೀ ಗಣೇಶ ಭಟ್ಟರು ಹವ್ಯಾಸೀ ವೇಷಧಾರಿಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಮೇಳದ ವೃತ್ತಿ ಕಲಾವಿದರೊಂದಿಗೂ ವೇಷ ಮಾಡಿ ಅನುಭವಗಳನ್ನು ಗಳಿಸಿಕೊಂಡರು.

ಜತೆಗೆ ಮಾವ ಕೆರೆಕೋಡಿ ಗಣಪತಿ ಭಟ್ಟರ ಒಡನಾಟದಲ್ಲಿ ಆಯುರ್ವೇದ ವೈದ್ಯಕೀಯ ವೃತ್ತಿಯಲ್ಲೂ ಅನುಭವಗಳನ್ನು ಗಳಿಸಿಕೊಂಡರು. ಆಯುರ್ವೇದ ವೈದ್ಯನಾಗಿ, ಕಲಾವಿದನಾಗಿ ಗುರುತಿಸಿಕೊಂಡ ಪಟ್ಟಾಜೆ ಗಣೇಶ ಭಟ್ಟರು ಪ್ರಸಂಗ ರಚನಾ ಕಾಯಕದಲ್ಲೂ ತೊಡಗಿಸಿಕೊಂಡರು. ಮೊತ್ತಮೊದಲು ರಚಿಸಿದ ಪ್ರಸಂಗ ‘ಗಂಧರ್ವ ನಂದನೆ’. ಬ್ರಹ್ಮೋತ್ತರ ಖಂಡದ ಶನಿ ಪ್ರದೋಷ ಮಹಾತ್ಮೆ ಎಂಬ ಕಥೆಯನ್ನು ಆಧರಿಸಿ ಬರೆದ ಪ್ರಸಂಗವಿದು. ಬಂದುಗಳಾದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರೂ ಪೆರ್ನಾಜೆ ಸೀತಾರಾಘವ ಪ್ರೌಢಶಾಲಾ ಕನ್ನಡ ಪಂಡಿತರಾದ ಶ್ರೀ ಡಿ.ಮಹಾಲಿಂಗ ಭಟ್ಟರೂ ಮಾರ್ಗದರ್ಶನವನ್ನು ನೀಡಿ ಪ್ರೋತ್ಸಾಹಿಸಿದ್ದರು.

ಇದರಿಂದ ಉತ್ಸಾಹಿತರಾದ ಗಣೇಶ ಭಟ್ಟರು ಪ್ರಸಂಗಗಳನ್ನು ಬರೆಯುವ ಮನ ಮಾಡಿದ್ದರು. ಇವರು ಬರೆದ ಮೊದಲ ಪ್ರಸಂಗ ‘ಗಂಧರ್ವ ನಂದನೆ’ ಯು ದಾಸರಬೈಲು ಚನಿಯ ನಾಯ್ಕರ ಭಾಗವತಿಕೆಯಲ್ಲಿ ಮೊದಲು ಪ್ರದರ್ಶನಗೊಂಡಿತ್ತು. ಕಾವು ಪಂಚಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದ ಸಂದರ್ಭ ಆಡಳಿತ ಮಂಡಳಿಯ ಅಪೇಕ್ಷೆಯಂತೆ ‘ಕಾವು ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ರಚಿಸಿದರು. ಕುಂಟಾರು ಮೇಳದವರು ಈ ಪ್ರಸಂಗವನ್ನು ಪ್ರದರ್ಶಿಸಿದ್ದರು. ಮುಂದಿನ ವರ್ಷ ಇದೇ ಪ್ರಸಂಗವು ಮದ್ಲ ಶ್ರೀ ಸುಬ್ರಾಯ ಬಲ್ಯಾಯರ ಅಪೇಕ್ಷೆಯಂತೆ ಮತ್ತೆ ಪ್ರದರ್ಶನಗೊಂಡಿತ್ತು.

ಪಟ್ಟಾಜೆ ಶ್ರೀ ವೈದ್ಯ ಗಣೇಶ ಭಟ್ಟರು ಬರೆದ ಒಟ್ಟು ಪ್ರಸಂಗಗಳು ಹನ್ನೆರಡು. ಅವುಗಳು ಗಂಧರ್ವ ನಂದನೆ, ಪಾಂಚಜನ್ಯ, ನೈಮಿಷಾರಣ್ಯ, ಜರಾಸಂಧ ಗರ್ವಭಂಗ, ಶತ್ರುದಮನ, ಪಾರ್ವತೀ ಪ್ರತಿಜ್ಞೆ, ಕಾವು ಕ್ಷೇತ್ರ ಮಹಾತ್ಮೆ, ನಾಗಮಣಿ ಮಾಣಿಕ್ಯ, ಹಂಸಡಿಬಿಕೋಪಾಖ್ಯಾನ, ಉದಯ ಚಂದ್ರಿಕೆ, ವರಸಿದ್ಧಿ ಮತ್ತು ಶಲ್ಯಾಗಮನ. ಇವುಗಳಲ್ಲಿ ಗಂಧರ್ವ ನಂದನೆ, ಪಾಂಚಜನ್ಯ, ಶತ್ರುದಮನ ಎಂಬ ಪ್ರಸಂಗಗಳು ಕಟೀಲು ಮೇಳದಲ್ಲಿ ಪ್ರದರ್ಶಿಸಲ್ಪಟ್ಟಿತ್ತು.

ಕಳೆದ ವರ್ಷ ಡಿಸೆಂಬರಿನಲ್ಲಿ (2019) ವೈದ್ಯ ಶ್ರೀ ಪಟ್ಟಾಜೆ ಗಣೇಶ ಭಟ್ಟರು ತಮ್ಮ ಬರೆಕೆರೆಯ ನಾರಾಯಣೀಯಮ್ ಮನೆಯಲ್ಲಿ ಕಟೀಲು ಮೇಳದ ಬಯಲಾಟವನ್ನು ಸೇವಾರೂಪವಾಗಿ ಆಡಿಸಿದ್ದರು. ಅದೇ ದಿನ ಅವರು ಬರೆದ ಹನ್ನೆರಡು ಪ್ರಸಂಗಗಳ ಗುಚ್ಛ ‘ಯಕ್ಷ ದ್ವಾದಶಾಮೃತಮ್’ ಕೃತಿಯೂ ಪ್ರಕಟವಾಗಿತ್ತು. ಇವರು ಯಕ್ಷಗಾನ ಸಂಘಟಕರಾಗಿಯೂ ಕಲಾಸೇವೆಯನ್ನು ಮಾಡಿದವರು. ‘ಕಲಾರಾಧನಾ ಪ್ರತಿಷ್ಠಾನ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದರು.

ವೈದ್ಯ ಶ್ರೀ ಪಟ್ಟಾಜೆ ಗಣೇಶ ಭಟ್ಟರ ಪತ್ನಿ ಶ್ರೀಮತಿ ಅದಿತಿ. ಇವರಿಗೆ ನಾಲ್ಕು ಮಂದಿ ಮಕ್ಕಳು. ಇಬ್ಬರು ಪುತ್ರಿಯರು. ವಿಜಯಗೌರಿ ಮತ್ತು ಸತ್ಯಭಾಮಾ ವಿವಾಹಿತೆಯರು, ಗೃಹಣಿಯರು. ಹಿರಿಯ ಪುತ್ರ ಶಿವನಾರಾಯಣ ಕೃಷಿಕರು. ಕಿರಿಯ ಪುತ್ರ ವಸಂತಕೃಷ್ಣ ಬೆಂಗಳೂರಿನಲ್ಲಿ ಉದ್ಯೋಗಿ. ಮಕ್ಕಳೆಲ್ಲರೂ ಕಲಾಸಕ್ತರಾಗಿದ್ದಾರೆ. 30. 10. 2020 ರಂದು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡ ಪ್ರಸಂಗಕರ್ತ, ಕಲಾವಿದ, ಸಂಘಟಕ, ವೈದ್ಯ ಪಟ್ಟಾಜೆ ಶ್ರೀ ಗಣೇಶ ಭಟ್ಟರಿಗೆ ನುಡಿನಮನಗಳು.

ಲೇಖಕ: ರವಿಶಂಕರ್ ವಳಕ್ಕುಂಜ