Friday, August 28, 2026
Home Blog Page 371

ಕೋವಿಡ್ ಲಸಿಕೆಯ ಆಗಮನವನ್ನು ವಿಜ್ಞಾನಿಗಳು ನಿರ್ಧರಿಸಬಹುದೇ ಹೊರತು ರಾಜಕಾರಣಿಗಳಲ್ಲ – ಮೋದಿ

ಕೋವಿಡ್- 19 ಲಸಿಕೆಯ ಆಗಮನವು ಕೇವಲ ವಿಜ್ಞಾನಿಗಳ ಕೈಯಲ್ಲಿದೆ ಎಂದು ಪಿಎಂ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ಈ ವಿಷಯವನ್ನು ರಾಜಕೀಯಗೊಳಿಸುತ್ತಿದ್ದ ರಾಜಕೀಯ  ನೇತಾರರಿಗೆ ಪರೋಕ್ಷವಾಗಿ ಮಾತಿನಲ್ಲಿಯೇ ಎದಿರೇಟು ನೀಡಿದರು. 

ವಿಡಿಯೋಕಾನ್ಫರೆನ್ಸಿಂಗ್ ಮೂಲಕ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕೆಲವು ರಾಜಕಾರಣಿಗಳು ಕೋವಿಡ್-19 ಲಸಿಕೆ ಮತ್ತು ಅದರ ವಿತರಣೆಯ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ಆದರೆ ಅಂತಹವರ ಈ ರೀತಿಯ ವರ್ತನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದೂ ಶ್ರೀ ನರೇಂದ್ರ ಮೋದಿಯವರು ಈ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. 

8 ಕೋವಿಡ್ ಬಾಧಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನ ಮಂತ್ರಿ ಮೋದಿ ಕೋವಿಡ್ ವಿಡಿಯೋ ಕಾನ್ಫರೆನ್ಸ್ ಸಭೆ 

ಕೋವಿಡ್-19 ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ್ದಾರೆ   ಕೋವಿಡ್-19  
 ವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

ಗೃಹ ಸಚಿವ ಅಮಿತ್ ಶಾ, ಎನ್‌ಐಟಿಐ ಆಯೋಗ್‌ನ ಡಾ.ವಿ.ಕೆ.ಪಾಲ್, ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಾಂಕ್ರಾಮಿಕ ರೋಗದ ಬಗ್ಗೆ ಕಳೆದ ಆರು ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದರು. 

ಲಸಿಕೆ ವಿತರಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಪ್ರಧಾನಿ ಮಧ್ಯಾಹ್ನ 12 ರ ಸುಮಾರಿಗೆ ರಾಜ್ಯಗಳು ಮತ್ತು ಯುಟಿಗಳೊಂದಿಗೆ ಮತ್ತೊಂದು ಸಭೆ ನಡೆಸಲಿದ್ದಾರೆ. ಮೊದಲ ಸಭೆಯಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ಛತ್ತೀಸ್ ಗಡ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.  

ಗೋಡೆ ಶ್ರೀ ನಾರಾಯಣ ಹೆಗಡೆ- ಪಾತ್ರೋಚಿತ ಅಭಿನಯಕ್ಕೆ ಇನ್ನೊಂದು ಹೆಸರು

ಪ್ರಚಾರಕ್ಕಾಗಿ, ಪ್ರಸಿದ್ಧಿಗಾಗಿ ಬಾಗದೆ, ಪಾತ್ರಕ್ಕೆ ಬೇಕಾದಂತೆ ಬಾಗಿ ಅಭಿನಯಿಸಿದ ಹಿರಿಯ ಶ್ರೇಷ್ಠ ಕಲಾವಿದರು  ಗೋಡೆ ಶ್ರೀ ನಾರಾಯಣ ಹೆಗಡೆಯವರು.  ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊರ್ಲಕೈ ಎಂಬ ಹಳ್ಳಿ ಗೋಡೆ ನಾರಾಯಣ ಹೆಗಡೆಯವರ ಹುಟ್ಟೂರು. 1940 ಫೆಬ್ರವರಿ ಹದಿನೈದನೇ ತಾರೀಕಿನಂದು ಶ್ರೀ ತಿಮ್ಮಯ್ಯ ಹೆಗಡೆ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳ ಪುತ್ರನಾಗಿ ಜನನ.

ಇವರ ಹಿರಿಯರು ನಿರ್ಮಿಸಿದ ಹಳೇಕಾಲದ ಮನೆ. ಉದ್ದಗಲವನ್ನು ಹೊಂದಿ, ಬಹಳ ಗಟ್ಟಿಯಾದ ಗೋಡೆಯನ್ನು ಹೊಂದಿದ ಮನೆ ಅದು. ಅಂತಹ ಗೋಡೆಯನ್ನು ಹೊಂದಿದ ಮನೆಯು ಆ ಕಾಲದಲ್ಲಿ ಬೇರೆ ಇರಲಿಲ್ಲ. ಆದಕಾರಣ ಬಹಳ ಹಿಂದೆಯೇ ಗೋಡೆ ಮನೆ ಎಂದೇ ಎಲ್ಲರೂ ಕರೆಯುತ್ತಿದ್ದರಂತೆ. ಹಿರಿಯರು ಮಾಡಿಟ್ಟ ಜಮೀನು ಇರಲಿಲ್ಲ. ಕಡುಬಡತನ. ಬದುಕಿಗಾಗಿ ಹಿರಿಯರು ಹಲವಾರು ಕಡೆ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು. ಹಾಗಾಗಿ ಗೋಡೆಯವರು ಕೆಲವು ಶಾಲೆಗಳಲ್ಲಿ 4ನೇ ತರಗತಿ ವರೆಗೆ ಮಾತ್ರ ಓದಿದ್ದರು.

ಮುತ್ತಜ್ಜನಾದ ಮರಿಯಪ್ಪ ಹೆಗಡೆಯವರು ಕಲಾವಿದರಾಗಿದ್ದರು. ತಂದೆಯೂ ವೇಷ ಮಾಡಿ ಅನುಭವ ಉಳ್ಳವರು. ಸೋದರಮಾವ ನಾರಾಯಣ ಹೆಗಡೆಯವರೂ ಯಕ್ಷಗಾನ ಕಲಾವಿದರಾಗಿದ್ದರು. ಹಾಗಾಗಿ ಯಕ್ಷಗಾನವು ರಕ್ತಗತವಾಗಿ ಬಂದಿತ್ತು. ಶಾಲೆ ಬೇಡ ಅನಿಸಿ ಯಕ್ಷಗಾನ ಕಲಿಯಲು ಮನಮಾಡಿದ್ದರು. ಇವರ ಅಜ್ಜನ ಮನೆ ಶಿರಳಗಿಯಲ್ಲಿ. ಸಮೀಪದ ಊರು ಕೊಳಗಿ. ಕೊಳಗಿ ಸೀತಾರಾಮ ಭಾಗವತರು ಯಕ್ಷಗಾನದ ಎಲ್ಲಾ ವಿಭಾಗಗಳಲ್ಲೂ ಪರಿಣತರಾಗಿ ನಾಟ್ಯ ಹೇಳಿಕೊಡುತ್ತಿದ್ದರು.

ಕುಣಿತ ಹೇಳಿಕೊಡುವುದನ್ನು ನೋಡಲೆಂದು ಗೋಡೆಯವರು ಅಲ್ಲಿಗೆ ಹೋಗಿದ್ದರು. ಅದನ್ನು ಗಮನಿಸಿದ ಸೀತಾರಾಮ ಭಾಗವತರು ಗೋಡೆಯವರನ್ನು ಕರೆದು, ನಿನ್ನ ದೇಹವು ಯಕ್ಷಗಾನಕ್ಕೆ ಬೇಕಾದಂತೆ ಇದೆ. ಕಲಿಯುವುದಿದ್ದರೆ ಹೇಳಿಕೊಡುತ್ತೇನೆ ಎಂದಿದ್ದರು. ಅವರಿಂದಲೇ ಆರು ತಿಂಗಳ ಕಾಲ ನಾಟ್ಯಾಭ್ಯಾಸ. 1955ರಲ್ಲಿ ಹಣಜೀಬೈಲು ಸೀತಾರಾಮ ಯಕ್ಷಗಾನ ಮಂಡಳಿಯ ಆಟ. ಪ್ರಸಂಗ ವಾಲಿಮೋಕ್ಷ. ಶಿರಳಗಿಯಲ್ಲಿ ನಡೆದ ಈ ಆಟದಲ್ಲಿ ತಾರೆಯಾಗಿ ರಂಗಪ್ರವೇಶ. ವ್ಯವಸ್ಥಾಪಕರಾದ ಅಣ್ಣಪ್ಪ ಹೆಗಡೆಯವರು ತಂಡದ ಖಾಯಂ ಕಲಾವಿದನಾಗಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು.

ಹಾರ್ಸಿಕಟ್ಟಾ ಎಂಬಲ್ಲಿ ಹದಿನೈದು ದಿನಗಳಿಗೊಮ್ಮೆ ತಾಳಮದ್ದಳೆಯೂ ನಡೆಯುತ್ತಿತ್ತು. ಸುಧನ್ವಮೋಕ್ಷ ಪ್ರಸಂಗದಲ್ಲಿ ಪ್ರಭಾವತಿಯಾಗಿ ಮೊತ್ತಮೊದಲು ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದರು. ಕೊಳಗಿ ಅನಂತ ಹೆಗಡೆಯವರಿಂದ ಪ್ರೋತ್ಸಾಹವೂ ಸಿಕ್ಕಿತ್ತು. ನಿರಂತರವಾಗಿ ಆಟ-ಕೂಟಗಳಲ್ಲಿ ಭಾಗವಹಿಸಲು ಆರಂಭಿಸಿದರು. ಆ ಕಾಲಕ್ಕೆ ಸ್ತ್ರೀಪಾತ್ರಧಾರಿಗಳ ಕೊರತೆಯಿದ್ದುದರಿಂದ ಗೋಡೆಯವರು ಸ್ತ್ರೀಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಕರಾವಳೀ ಪ್ರದೇಶಕ್ಕೂ ಹೋಗಿ ವೇಷ ಮಾಡಲಾರಂಭಿಸಿದ್ದರು.

ಹದಿನೈದು ಕಲಾವಿದರಿದ್ದ ಕೊಳಗಿಯ ಹೊಸತಂಡ ಮೂರು ಗಂಟೆಯ ಪ್ರದರ್ಶನಗಳನ್ನು ನೀಡುತ್ತಿತ್ತು. ವರ್ಷಕ್ಕೆ ನಲುವತ್ತು ಪ್ರದರ್ಶನಗಳು ನಡೆದರೂ ಸರಿಯಾಗಿ ವೀಳ್ಯ ಸಿಗುತ್ತಿರಲಿಲ್ಲ. ಕೊಟ್ಟ ಸಂಭಾವನೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಒಂದು ಕಡೆ ಹದಿನೈದು ರೂಪಾಯಿ ವೀಳ್ಯ ಸಿಕ್ಕಿದಾಗ ಉತ್ಸಾಹಿತರಾಗಿ ದೊಡ್ಡ ಮೇಳ ಕಟ್ಟುವ ನಿರ್ಧಾರವನ್ನೂ ಮಾಡಿದ್ದರು. ಗೋಡೆಯವರು ಸ್ತ್ರೀಪಾತ್ರಧಾರಿಯಾಗಿ ಆಗ ಮಿಂಚತೊಡಗಿದ್ದರು. 1955ನೇ ಇಸವಿ, ತನ್ನ ಹದಿನೈದನೇ ವಯಸ್ಸಿನಲ್ಲಿ ಯಕ್ಷಗಾನ ಕಲಾವಿದನಾಗಿ ರಂಗಪ್ರವೇಶ ಮಾಡಿದ ಗೋಡೆಯವರು ಈ ಕ್ಷೇತ್ರದಲ್ಲಿ ಅರುವತ್ತಮೂರು ವರ್ಷಗಳ ಅನುಭವಿಗಳು. 

ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ಮೊದಲಾದವರ ಸಮಕಾಲೀನರಾಗಿ ವ್ಯವಸಾಯವನ್ನು ಮಾಡಿದವರು.  ಹೊಸತನಗಳ ಆವಿಷ್ಕಾರಗಳಿಂದ ದೂರ ಉಳಿದು, ಪರಂಪರೆಯ ಹಾದಿಯನ್ನೇ ಕ್ರಮಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾದರು.   ಇವರು ಕೆರೆಮನೆ ಶಿವರಾಮ ಹೆಗಡೆಯವರ ಜತೆಯಲ್ಲೂ ಪಾತ್ರಗಳನ್ನು ನಿರ್ವಹಿಸಿದ್ದರು.  ಶಂಭುಹೆಗಡೆ ಮತ್ತು ಚಿಟ್ಟಾಣಿಯವರ ಜತೆ, ಸಮಾನವಾಗಿ ಅತ್ಯಧಿಕ ವೇಷಗಳನ್ನು ಮಾಡಿದ ಹಿರಿಮೆ ಇವರಿಗಿದೆ. ಹಳೆಯ ಮತ್ತು ಹೊಸ ಪೀಳಿಗೆಯ ಹೆಚ್ಚಿನ ಕಲಾವಿದರೊಂದಿಗೂ ಪಾತ್ರಗಳನ್ನು ನಿರ್ವಹಿಸಿದ ಒಬ್ಬ ಅನುಭವೀ ಕಲಾವಿದ.

ಕೆರೆಮನೆ ಶಿವರಾಮ ಹೆಗಡೆಯವರ ನೇತೃತ್ವದ ಮೇಳವು ಪ್ರದರ್ಶನ ನೀಡುವುದಕ್ಕಾಗಿ ಸಿದ್ಧಾಪುರಕ್ಕೆ ಬಂದಿತ್ತು. ಪ್ರಸಂಗ ಮೀನಾಕ್ಷಿ ಕಲ್ಯಾಣ. ಗೋಡೆಯವರಿಗೆ ವೇಷ ಮಾಡಲು ಅವಕಾಶವಿತ್ತಿದ್ದರು. ಇವರ ಪಾತ್ರನಿರ್ವಹಣೆಯನ್ನು ನೋಡಿ ಮೆಚ್ಚಿದ ಶಿವರಾಮ ಹೆಗಡೆಯವರು ಮೇಳಕ್ಕೆ ಸೇರಲು ಆಹ್ವಾನ ನೀಡಿದ್ದರು. ಮರುದಿನ ಶಿರಸಿಯಲ್ಲಿ ಸದ್ರಿ ಮೇಳದ ಪ್ರದರ್ಶನ. ಪ್ರಸಂಗ ಕೀಚಕ ವಧೆ. ಸೈರಂಧ್ರಿಯಾಗಿ ಗೋಡೆಯವರ ಅಭಿನಯವನ್ನು ಶಿವರಾಮ ಹೆಗಡೆಯವರು ಮೆಚ್ಚಿ, ಚೆನ್ನಾಗಿ ಆಯ್ತು ಎಂದಿದ್ದರಂತೆ. ಊರಲ್ಲಿಯೂ ಆಟಗಳನ್ನು ನಡೆಸಿ ಗೋಡೆಯವರು ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿಯೂ ಆಗಿತ್ತು.

ಶಂಭು ಹೆಗಡೆಯವರು ಮೇಳವನ್ನು ನಡೆಸಲು ನಿರ್ಧರಿಸಿದಾಗ ಕೆರೆಮನೆ ಗಜಾನನ ಹೆಗಡೆಯವರು ಗೋಡೆಯವರನ್ನು ಸಂಪರ್ಕಿಸಿದ್ದರು. ಮೇಳಕ್ಕೆ ಬರಲು ಹೇಳಿದಾಗ ನಿರಾಕರಿಸಿದ್ದರೂ, ಕೊನೆಗೆ ಒಪ್ಪಿದ್ದರು. ಹೀಗೆ 1973ರಲ್ಲಿ ಟೆಂಟಿನ ಮೇಳದ ಕಲಾಬದುಕು ಆರಂಭವಾಗಿತ್ತು. ಆ ಹೊತ್ತಿಗೆ ಗೋಡೆಯವರು ಪುರುಷ ಪಾತ್ರಗಳನ್ನು ಮಾಡಲು ಆರಂಭಿಸಿಯಾಗಿತ್ತು. ಚಂದ್ರಹಾಸ, ಶ್ರೀಕೃಷ್ಣ ಮೊದಲಾದ ಪಾತ್ರಗಳನ್ನು ಮಾಡಿದ್ದರು. ಎರಡು ವರ್ಷ ಶಂಭು ಹೆಗಡೆಯವರ ಜತೆ ತಿರುಗಾಟ. ನೆಬ್ಬೂರು ಭಾಗವತರು, ಕೆರೆಮನೆಯ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆಯವರ ಒಡನಾಟವು ಸಿಕ್ಕಿತ್ತು.

1975ರಲ್ಲಿ ಅಮೃತೇಶ್ವರೀ ಮೇಳಕ್ಕೆ ಉಪ್ಪೂರರ ಭಾಗವತಿಕೆ. 1979ರಲ್ಲಿ ಶಂಭು ಹೆಗಡೆಯವರ ಕೋರಿಕೆಯಂತೆ ಇಡಗುಂಜಿ ಮೇಳಕ್ಕೆ. ಆಗ ಶಿವರಾಮ ಹೆಗಡೆಯವರು ನಿವೃತ್ತರಾಗಿದ್ದರು. ಆರು ವರ್ಷಗಳ ವ್ಯವಸಾಯ ಇಡಗುಂಜಿ ಮೇಳದಲ್ಲಿ. ಬಳಿಕ ಒಂದು ವರ್ಷ ಪೆರ್ಡೂರು ಮೇಳದಲ್ಲಿ. ಮತ್ತೆ ಒಂದು ವರ್ಷ ಮುಲ್ಕಿ ಮೇಳದಲ್ಲಿ (ಬಡಗು ಮೇಳ). ಬಳಿಕ ಮೂರು ವರ್ಷ ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ವ್ಯವಸಾಯ. ಮತ್ತೆ ನಾಲ್ಕು ವರ್ಷ ಶಿರಿಯಾರ ಮುದ್ದಣ್ಣ ಶೆಟ್ರ ನೇತೃತ್ವದ ಶಿರಸಿ ಮಾರಿಕಾಂಬಾ ತಂಡದಲ್ಲಿ ಕಲಾಸೇವೆ.

ಶಂಭು ಹೆಗಡೆ ಮತ್ತು ಚಿಟ್ಟಾಣಿಯವರ ಜತೆ ಗೋಡೆ ಅವರ ವೇಷಗಳನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಸುಮಾರು ಇಪ್ಪತ್ತೈದು ಪ್ರಶಸ್ತಿಗಳನ್ನು ಪಡೆದ ಗೋಡೆ ನಾರಾಯಣ ಹೆಗಡೆಯವರು ಮುನ್ನೂರಕ್ಕೂ ಮಿಕ್ಕಿದ ಸನ್ಮಾನಗಳನ್ನೂ ಸ್ವೀಕರಿಸಿರುತ್ತಾರೆ. 2012ರಲ್ಲಿ ರಾಜ್ಯ ಪ್ರಶಸ್ತಿಯೂ ಒಲಿದು ಬಂದಿದೆ. ಕಲಾಬದುಕಿನ ಸಂದರ್ಭ ಸುಮಾರು ಐವತ್ತು ಮಂದಿಗೆ ತರಬೇತಿಯನ್ನೂ ನೀಡಿದ್ದಾರೆ. ಡಿ.ಜಿ. ಹೆಗಡೆ, ಶಿರಳಗಿ ಭಾಸ್ಕರ ಜೋಷಿ, ಶಿರಳಗಿ ತಿಮ್ಮಪ್ಪ ಹೆಗಡೆ ಇವರಲ್ಲಿ ಪ್ರಮುಖರು.

ದೀರ್ಘಕಾಲದ ತನ್ನ ಯಕ್ಷಗಾನದ ಬದುಕಿನಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಕೌರವ, ಋತುಪರ್ಣ, ಬ್ರಹ್ಮಕಪಾಲ ಪ್ರಸಂಗದ ಬ್ರಹ್ಮ, ಕಾರ್ತವೀರ್ಯಾರ್ಜುನ ಕಾಳಗ ಪ್ರಸಂಗದ ರಾವಣ, ಶ್ರೀರಾಮ ನಿರ್ಯಾಣ ಪ್ರಸಂಗದ ಲಕ್ಷ್ಮಣ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ನೀಡಿತ್ತು. ಈ ಪಾತ್ರಗಳನ್ನು ತನ್ನದೇ ಶೈಲಿಯಲ್ಲಿ ಅಭಿನಯಿಸುತ್ತಾ ಅವುಗಳಿಗೊಂದು ನೂತನ ಚಿತ್ರಣವನ್ನೇ ಒದಗಿಸಿದ್ದರು. ಪರಂಪರೆಯನ್ನು ಇಷ್ಟಪಡುವ ಉದಯೋನ್ಮುಖ ಕಲಾವಿದರಿಗೆ ಗೋಡೆಯವರು ಆದರ್ಶರು.

ಅವರ ಪಾತ್ರಗಳನ್ನು ನೋಡಿದ ಹೊಸ ಕಲಾವಿದರು ‘ಗೋಡೆ ಶೈಲಿ’ಯನ್ನು ಅನುಸರಿಸಿದ್ದೂ ಇದೆ. ಬ್ರಹ್ಮಕಪಾಲ ಪ್ರಸಂಗದ ಬ್ರಹ್ಮನಾಗಿ ಗೋಡೆಯವರದ್ದು ಅಮೋಘ ಅಭಿನಯ. ತೆಂಕಣ ಯಕ್ಷಗಾನ ಕಲಾವಿದರಾದ ಶೇಣಿ, ಕೆ. ಗೋವಿಂದ ಭಟ್, ಕುಂಬಳೆ ಸುಂದರ ರಾವ್ ಮೊದಲಾದವರ ಜತೆಯೂ ವೇಷ ಮಾಡಿದ್ದಿದೆ. 1984ನೇ ಇಸವಿ ಶೇಣಿ ಗೋಪಾಲಕೃಷ್ಣ ಭಟ್ಟರ ಭೀಷ್ಮನಿಗೆ ಅರ್ಜುನನಾಗಿ ಅಭಿನಯಿಸಿದ್ದರು.

ಲೇಖಕ: ರವಿಶಂಕರ್ ವಳಕ್ಕುಂಜ 

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನ

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಇಂದು ಸಂಜೆ ನಿಧನರಾದರು. ಅವರಿಗೆ 84 ವರ್ಷ 8 ತಿಂಗಳು ವಯಸ್ಸಾಗಿತ್ತು.  ಅವರನ್ನು ಈ ಮೊದಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಸೋಮವಾರ ಸಂಜೆ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಕೊನೆಯುಸಿರೆಳೆದರು. ಅವರ ಪರಿಸ್ಥಿತಿ ಈಗಾಗಲೇ ದುರ್ಬಲವಾಗುತ್ತಿದೆ ಎಂದು ತಿಳಿದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಪ್ರವಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಗುವಾಹಟಿಗೆ ಮರಳಿದರು. ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಜಿಎಂಸಿಎಚ್ ತಲುಪಿದ್ದಾರೆ.

 ಅಸ್ಸಾಂನ ಮಾಜಿ ಸಿಎಂ ಅವರ ನಿಧನದ ಬಗ್ಗೆ ದೇಶದ ಎಲ್ಲ ರಾಜಕಾರಣಿಗಳು ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ತರುಣ್ ಗೊಗೊಯ್ ಜಿ ಅವರು ಅಸ್ಸಾಂ ಮತ್ತು ಕೇಂದ್ರದಲ್ಲಿ ರಾಜಕೀಯ ಅನುಭವ ಹೊಂದಿದ್ದ ಜನಪ್ರಿಯ ನಾಯಕ ಮತ್ತು ಅನುಭವಿ ಆಡಳಿತಗಾರರಾಗಿದ್ದರು. ಅವರ ನಿಧನಕ್ಕೆ ನಾನು ದುಃಖಿತನಾಗಿದ್ದೇನೆ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. 

ಕೊರೋನಾ ಲಸಿಕೆ – ಆಕ್ಸ್‌ಫರ್ಡ್‌ನ COVID-19 ಲಸಿಕೆ 70%ಕ್ಕಿಂತಲೂ  ಹೆಚ್ಚು ದಕ್ಷತೆ ಮತ್ತು ಪರಿಣಾಮಕಾರಿ 

ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ತನ್ನ COVID-19 ಲಸಿಕೆಯು ವ್ಯಕ್ತಿಯ ರೋಗದ ವಿರುದ್ಧ 70.4% ಪರಿಣಾಮಕಾರಿ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿದೆ.  ಸಾಂಕ್ರಾಮಿಕ ರೋಗದ ವಿರುದ್ಧದ ವಿಶ್ವದ ಇತ್ತೀಚಿನ “ಪ್ರಮುಖ ಮೈಲಿಗಲ್ಲು” ಎಂದು ಬಣ್ಣಿಸಲ್ಪಟ್ಟ ಹಾಗೂ ನವೆಂಬರ್ 23 ರಂದು ಅಸ್ಟ್ರಾಜೆನೆಕಾ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ತನ್ನ COVID-19 ಲಸಿಕೆಯು ಸಾಂಕ್ರಾಮಿಕ ರೋಗದ ವಿರುದ್ಧ 70.4%ಕ್ಕೂ  ಹೆಚ್ಚು ಪರಿಣಾಮಕಾರಿ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಘೋಷಿಸಿದೆ.

  ಇದು ವಿಜಯೋತ್ಸವ ಆದರೂ ನಿರಾಶೆಯ ವಿಷಯವಾಗಿದೆ.  ಏಕೆಂದರೆ ಫಿಜರ್-ಬಯೋಟೆಕ್ ಮತ್ತು ಮಾಡರ್ನಾ ಈಗಾಗಲೇ ತಮ್ಮ ಲಸಿಕೆ  95% ಮತ್ತು 94% ಪ್ರತಿಶತದಷ್ಟು COVID-19 ವಿರುದ್ಧ ದಕ್ಷ ಎಂದು ಘೋಷಿಸಿದ್ದಾರೆ. ಆದರೆ ಆಕ್ಸ್‌ಫರ್ಡ್ ಮತ್ತು ಅಸ್ಟ್ರಾಜೆನೆಕಾದ ಲಸಿಕೆ ತುಂಬಾ ಅಗ್ಗವಾಗಿದೆ ಮತ್ತು ವಿಶ್ವದ ದೂರದ ಪ್ರದೇಶಗಳಿಗೆ ಸಂಗ್ರಹಿಸಲು ಮತ್ತು ಸಾಗಿಸಲು ತುಲನಾತ್ಮಕವಾಗಿ ಸುಲಭವಾಗಿದೆ ಎಂದು ವರದಿಯಾಗಿದೆ. 

ತನ್ನ 3 ನೇ ಹಂತದ ಪ್ರಯೋಗಗಳಿಂದ ಮಧ್ಯಂತರ ಪ್ರಯೋಗ ದತ್ತಾಂಶವನ್ನು ಪ್ರಕಟಿಸಿದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ತನ್ನ ಲಸಿಕೆ ಅಭ್ಯರ್ಥಿ(Vaccin Candidate) ChAdOx1 nCoV-2019 ವಿಶ್ಲೇಷಣೆಯಲ್ಲಿ 131 COVID-19 ಪ್ರಕರಣಗಳನ್ನು ಒಳಗೊಂಡ ನಂತರ ಶೇಕಡಾ 70 ಕ್ಕಿಂತ ಹೆಚ್ಚು ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಹೇಳಿದೆ. ಎರಡು ವಿಭಿನ್ನ ಪರೀಕ್ಷೆಯನ್ನು ನಡೆಸಿದ ನಂತರ ಲಸಿಕೆ ಒಂದರಲ್ಲಿ 90% ದಕ್ಷತೆ ಮತ್ತು ಇನ್ನೊಂದರಲ್ಲಿ 62% ಪರಿಣಾಮಕಾರಿ ಚೇತರಿಕೆಯು ಕಂಡುಬಂದಿದೆ.

“ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ COVID-19 ಲಸಿಕೆ ಶೈತ್ಯೀಕರಣಕ್ಕೆ ಸುಲಭ ಹಾಗೂ  ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. SARS-CoV-2 ನಿಂದ ಉಂಟಾದ ವಿನಾಶವನ್ನು ಕೊನೆಗೊಳಿಸಲು ನಾವು ಲಸಿಕೆಗಳನ್ನು ಬಳಸುವ ಸಮಯಕ್ಕೆ ಇಂದು ಪ್ರಕಟಣೆಯು ಮತ್ತೊಂದು ಹೆಜ್ಜೆ ಹತ್ತಿರದಲ್ಲಿದೆ. ನಿಯಂತ್ರಕರಿಗೆ ವಿವರವಾದ ಮಾಹಿತಿಯನ್ನು ಒದಗಿಸುವ ಕೆಲಸವನ್ನು ನಾವು ಮುಂದುವರಿಸುತ್ತೇವೆ. ಇಡೀ ಜಗತ್ತಿಗೆ ಲಾಭವನ್ನು ತರುವ ಈ ಬಹುರಾಷ್ಟ್ರೀಯ ಪ್ರಯತ್ನದ ಭಾಗವಾಗಲು ಇದು ಒಂದು ಭಾಗ್ಯವಾಗಿದೆ ”ಎಂದು ಲಸಿಕೆಯ ವಾಸ್ತುಶಿಲ್ಪಿ ಪ್ರೊಫೆಸರ್ ಸಾರಾ ಗಿಲ್ಬರ್ಟ್ ಹೇಳಿದರು.

ಸ್ವಪ್ರಯತ್ನದ ಧೀಮಂತ ಲೇಖಕ – ಅಂಬಾತನಯ ಮುದ್ರಾಡಿ 

ಶೀರ್ಷಿಕೆಯೇ ಸೂಚಿಸುವಂತೆ ಇದು ಲೇಖಕ ಶ್ರೀ ಅಂಬಾತನಯ ಮುದ್ರಾಡಿ ಅವರ ಕುರಿತಾದ ಹೊತ್ತಗೆಯು. ಲೇಖಕರು ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು. ಪ್ರಧಾನ ಸಂಪಾದಕರು ಡಾ. ನಾ.ಮೊಗಸಾಲೆ ಅವರು. ಸಂಪಾದಕರು ಡಾ. ಬಿ.ಜನಾರ್ದನ ಭಟ್ ಅವರು. ಪ್ರಕಾಶಕರು ಕನ್ನಡ ಸಂಘ ಕಾಂತಾವರ.

ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ ಈ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು. ಇದು ಒಟ್ಟು ನಲುವತ್ತನಾಲ್ಕು ಪುಟಗಳಿಂದ ಕೂಡಿದೆ. ಅಂಬಾತನಯ ಮುದ್ರಾಡಿ ಎಂಬುದು ಲೇಖಕ ಶ್ರೀ ಕೇಶವ ಶೆಟ್ಟಿಗಾರರ ಕಾವ್ಯನಾಮ. ಊರ ಪರಿಸರದಲ್ಲಿ ಶ್ರೀಯುತರು ಕೇಶವ ಶೆಟ್ಟಿಗಾರರೆಂದೂ ಕೇಶವ ಮಾಸ್ಟರರೆಂದೂ ಗುರುತಿಸಲ್ಪಟ್ಟರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅಂಬಾತನಯ ಮುದ್ರಾಡಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು.

ಕಾರ್ಕಳ ತಾಲೂಕಿನ ಮುದ್ರಾಡಿ ಎಂಬಲ್ಲಿ 1935ರಂದು ಶ್ರೀ ಬೂಬ ಶೆಟ್ಟಿಗಾರ್ ಮತ್ತು ಪುಟ್ಟಮ್ಮ ದಂಪತಿಗಳ ಮಗನಾಗಿ ಜನನ. ಶ್ರೀಯುತರು ಯಕ್ಷಗಾನಾಸಕ್ತರಾಗಿ ವೇಷಧಾರಿಯೂ  ತಾಳಮದ್ದಳೆ  ಅರ್ಥಧಾರಿಯಾಗಿಯೂ ಗುರುತಿಸಿಕೊಂಡವರು. ಅಂಬಾತನಯ ಮುದ್ರಾಡಿ ಅವರ ಹುಟ್ಟು, ಬಾಲ್ಯ, ಕಲಾವಿದನಾಗಿ ಸೇವೆ, ಲೇಖಕನಾಗಿ ಅವರು ಬೆಳೆದು ಬಂದ ರೀತಿ ಇತ್ಯಾದಿ ವಿಚಾರಗಳ ಬಗೆಗೆ ಈ ಪುಸ್ತಕದಲ್ಲಿ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮಾಹಿತಿಗಳನ್ನು ನೀಡಿರುತ್ತಾರೆ.

ಮಾರ್ಗದಲ್ಲಿ ಹುಲಿ, ಕಾವ್ಯನಾಮದ ಕಾರಣ, ದನ ಕಾಯುವಲ್ಲಿಂದ ಶಾಲೆಗೆ, ಗುರುವೃಂದ, ಜೂನಿಯರ್ ಬೇಸಿಕ್ ಅಧ್ಯಾಪಕ, ಕವಿಯ ಸೆಳೆತ-ಹಿರಿಯ ಕವಿಗಳ ಸೆಳೆತ, ಯಕ್ಷಗಾನಾಸಕ್ತಿ-ಅರ್ಥಗಾರಿಕೆ, ಪ್ರಸಂಗ ಸಾಹಿತ್ಯ, ನಾಟಕಗಳು, ವಿಡಂಬನ ಸಾಹಿತ್ಯ, ಚಿಂತನ-ಅಮೃತವಚನ, ಭಜನೆಯ ಕವಿ, ಹರಿಕಥೆ-ಜಿನಕಥೆಗಳ ಕಡೆಗೆ, ಶಿಕ್ಷಕ ಸಂಘಟನೆ-ಸಂಪನ್ಮೂಲ ವ್ಯಕ್ತಿ, ತಾಯ್ನುಡಿ ತುಳು, ರವೀಂದ್ರ ಹೆಗ್ಗಡೆಯವರ ಆಪ್ತ,

ಸಾಹಿತ್ಯ ಪರಿಷತ್ತು-ಸಾಹಿತ್ಯ ಅಕಾಡೆಮಿ ಸಂಪರ್ಕ, ಸಮ್ಮೇಳನಾಧ್ಯಕ್ಷತೆ, ಸನ್ಮಾನ-ಪ್ರಶಸ್ತಿ, ಶಿಷ್ಯವೃಂದ, ಸಂಸಾರ, ಬ್ರಹ್ಮರಥ ಎಂಬ ವಿಚಾರಗಳಡಿ ವಿವರಗಳನ್ನು ಡಾ. ಪಾದೇಕಲ್ಲು ವಿಷ್ಣು ಭಟ್ಟರು ನೀಡಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಸಂಪಾದಕ ಡಾ. ಬಿ. ಜನಾರ್ದನ ಭಟ್ಟರು ಡಾ. ಪಾದೆಕಲ್ಲು ವಿಷ್ಣು ಭಟ್ಟರ ಬಗೆಗೆ ಬರೆದ ಲೇಖನವನ್ನು ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ

ಕಲಾವಿದ ಕೆ.ಎಚ್. ದಾಸಪ್ಪ ರೈ – ಯಕ್ಷಾಂಗಣ ಗೌರವ ಪ್ರಶಸ್ತಿ

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಹಿರಿಯ ಕಲಾವಿದರಿಗೆ ನೀಡಲಾಗುವ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಗೆ 2019 – 20ನೇ ಸಾಲಿನಲ್ಲಿ  ಕನ್ನಡ – ತುಳು ಪ್ರಸಂಗಗಳ ಪ್ರಸಿದ್ದ ವೇಷಧಾರಿ, ಮೇಳದ ಸಂಚಾಲಕ  ಕೆ.ಎಚ್. ದಾಸಪ್ಪ ರೈ ಆಯ್ಕೆಯಾಗಿದ್ದಾರೆ. ಯಕ್ಷಾಂಗಣ ಮಂಗಳೂರು ಹಾಗೂ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ‌ ಪ್ರತಿಷ್ಠಾನಗಳನ್ನೊಳಗೊಂಡ  ಜಂಟಿ ಸಮಿತಿಯು ದಾಸಪ್ಪ ರೈಯವರನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ. 

ಕೆ.ಎಚ್. ದಾಸಪ್ಪ ರೈ ಪುತ್ತೂರು: ಕುತ್ಯಾಳ ಹೊಸಮನೆ ದಿ. ಬೈಂಕಿ ರೈ ಮತ್ತು ಕುಂಞಕ್ಕೆ ದಂಪತಿಗೆ ಮೇ 10, 1950 ರಲ್ಲಿ ಜನಿಸಿದ ಕೆ.ಎಚ್.ದಾಸಪ್ಪ ರೈ ತಮ್ಮ 15ನೇ ವಯಸ್ಸಿನಲ್ಲಿ ಕರ್ನಾಟಕ ಯಕ್ಷಗಾನ ಸಭಾದ ಮೂಲಕ ವೇಷಧಾರಿಯಾಗಿ ರಂಗಪ್ರವೇಶ ಮಾಡಿದರು. ಗುರು ದಿ.ಕೆ.ಯನ್.ಬಾಬು ರೈಯವರು ಅವರಿಗೆ ಯಕ್ಷಗಾನದ ಹೆಜ್ಜೆಗಾರಿಕೆ ಮಾತು, ಮುಖವರ್ಣಿಕೆಗಳನ್ನು ಕಲಿಸಿದರು.

ಕರ್ನಾಟಕ, ಕದ್ರಿ, ಕುಂಬಳೆ,  ಮಂಗಳಾದೇವಿ, ಸರಪಾಡಿ, ಬಾಚಕೆರೆ ಮೇಳಗಳಲ್ಲಿ ಸುಮಾರು ನಾಲ್ಕೂವರೆ ದಶಕಗಳ ತಿರುಗಾಟ ಮಾಡಿರುವ ಅವರು ಕಣಿಪುರ ಶ್ರೀ ಗೋಪಾಲಕೃಷ್ಣ ಪ್ರಸಾದಿತ ಯಕ್ಷಗಾನ ಮಂಡಳಿ ಕುಂಬಳೆ ಮೇಳವನ್ನು ಕಟ್ಟಿ ಆರು ವರ್ಷ ನಡೆಸಿದರು. ಪೌರಾಣಿಕ ಪ್ರಸಂಗಗಳಲ್ಲಿ ರಾವಣ, ಕಂಸ, ಮಹಿಷಾಸುರ, ಯಮಧರ್ಮ, ಹಿರಣ್ಯಕಶಿಪು, ಭೀಮ, ಕೌರವ, ಕೀಚಕ, ವಾಲಿ, ಇಂದ್ರಜಿತು, ಜರಾಸಂಧ ಇತ್ಯಾದಿ ಪಾತ್ರಗಳಲ್ಲಿ ದಾಸಪ್ಪ ರೈ ಹೆಚ್ಚು ಜನಪ್ರಿಯರು.

ಕೋಟಿ, ಕೋಡ್ದಬ್ಬು, ಕೊಡ್ಸರಾಳ್ವ, ದೇವುಪೂಂಜ, ಕಾಂತಬಾರೆ, ಮೈಂದ ಗುರಿಕಾರ, ಶಾಂತ ಕುಮಾರ ಮುಂತಾದ ಪಾತ್ರಗಳು ಅವರಿಗೆ ಕೀರ್ತಿ ತಂದುಕೊಟ್ಟಿವೆ. ಮುಂಬೈ, ಚೆನ್ನೈ ದೆಹಲಿ, ಬೆಹರಿನ್, ಕತಾರ್, ದುಬೈ, ಮಸ್ಕತ್ ಹೀಗೆ ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡಿರುವ ಅವರು ನೂರಾರು ಸನ್ಮಾನಗಳನ್ನು ಪಡೆದಿದ್ದಾರೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಳಿಕೆ – ಬೋಳಾರ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವುದಲ್ಲದೆ ತುಳುನಾಡ ತುಳುಶ್ರೀ, ಯಕ್ಷರಂಗ ನಟನಾ ಚತುರ, ಯಕ್ಷ ಭಾರ್ಗವ, ರಂಗಸ್ಥಳದ ಗುರಿಕಾರ ಇತ್ಯಾದಿ ಬಿರುದುಗಳಿಂದ ಸಮ್ಮಾನಿತರಾಗಿದ್ದಾರೆ.       

ಪತ್ನಿ ಚಿತ್ರವತಿ , ಮಗ ದೇವಿ ಪ್ರಸಾದ್ ಮತ್ತು ಮೊಮ್ಮಕ್ಕಳೊಂದಿಗೆ ಪುತ್ತೂರಿನ ಬಪ್ಪಳಿಗೆ ‘ಯಕ್ಷಧಾ’ ನಿವಾಸದಲ್ಲಿ ನಿವೃತ್ತ ಜೀವನ ಸಾಗಿಸುತ್ತಿರುವ ಕೆ.ಎಚ್.ದಾಸಪ್ಪ ರೈ ತಮ್ಮ ವೃತ್ತಿ ಮತ್ತು ಬದುಕಿನಲ್ಲಿ ಸಾಕಷ್ಟು ಕಷ್ಟ, ನಷ್ಟ ಕಂಡವರು. ಪ್ರಸ್ತುತ 70 ರ ಇಳಿ ವಯಸ್ಸಿನಲ್ಲೂ ಆಗೊಮ್ಮೆ ಈಗೊಮ್ಮೆ ಬಣ್ಣ ಹಚ್ಚಿ ರಂಗವೇರುವುದನ್ನು ಅವರು ನಿಲ್ಲಿಸದಿರುವುದು ವಿಶೇಷ.       

ನವೆಂಬರ್ 29, 2020 ರಂದು ಭಾನುವಾರ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ‘ಪಾರಿಜಾತ’ ಸಭಾಗೃಹದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ಆಯೋಜಿಸಿರುವ 8ನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಪರ್ವ’ದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗುವುದೆಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ.

ಓ ಫೆವಿಕಾಲ್… ಇದೇನು ಅವಾಂತರ?

ಜನರ ಶ್ರದ್ಧೆ, ನಂಬಿಕೆಗಳೇ ಹಾಗೆ. ಭಾರತ ದೇಶದ ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳು ಪರಿಸರ ಪ್ರದೇಶಗಳಿಗೆ ಹೊಂದಿಕೊಂಡು ಭಿನ್ನವಾಗಿದ್ದರೂ ಜನರ ಆಚರಣೆ, ನಂಬಿಕೆ, ಶ್ರದ್ಧೆಗಳ ವಿಚಾರಕ್ಕೆ ಬಂದಾಗ ಮತ್ತು ದೇಶದಲ್ಲಿ ಧರ್ಮ, ಸಂಸ್ಕೃತಿ, ಕಲೆಗಳಿಗೆ ಧಕ್ಕೆ ಉಂಟಾದಾಗ ಒಂದೇ ರೀತಿಯ ಅನುಸರಣೆ ಎದ್ದು ಕಾಣುವುದು ಈ ದೇಶದ ವಿಶೇಷತೆ ಹಾಗೂ ಹೆಮ್ಮೆ ಎಂದೇ ಹೇಳಬಹುದು. 

ಅದರಲ್ಲೂ ಯಕ್ಷಗಾನ ಎಂಬುದು ನಮ್ಮ ಕರ್ನಾಟಕದ ಹಲವು ಪ್ರದೇಶಗಳ ಜನರ ಉಸಿರಿನಲ್ಲಿಯೂ ಪ್ರಾಣವಾಯುವಿನಂತೆ ಸಂಚರಿಸುವ ಜೀವಗುಟುಕು. ಯಕ್ಷಗಾನ ಇಲ್ಲಿಯ ಜನರ ಜೀವನದ ಅವಿಭಾಜ್ಯ ಅಂಗ. ಯಕ್ಷಗಾನ ಇಲ್ಲದೆ ನಮ್ಮ ದಿನದ ದೈನಂದಿನ ಚಟುವಟಿಕೆ ಅಪೂರ್ಣ. ಜನರು ಯಕ್ಷಗಾನವನ್ನು ಅಷ್ಟು ಹೆಚ್ಚಾಗಿ ಪ್ರೀತಿಸುವಾಗ ಅಂತಹಾ ಜಾಹೀರಾತುಗಳನ್ನು ನಿರ್ಮಿಸುವಾಗ ಅವರಾದರೂ ಸ್ವಲ್ಪ ಯೋಚಿಸಬೇಕೇ ಬೇಡವೇ? ಜನರ ನಂಬಿಕೆಗಳಿಗೆ, ಭಾವನೆಗಳಿಗೆ ನೋವನ್ನುಂಟುಮಾಡುವುದು ಸರಿಯಲ್ಲ. 

(ಇದನ್ನೂ ಓದಿ: ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯಲಿದ್ದಾರೆಯೇ ತ್ರಿಮೂರ್ತಿಗಳು?)

ಇತ್ತೀಚಿಗೆ ಫೆವಿಕಾಲ್ ಜಾಹೀರಾತನ್ನು ಎಲ್ಲರೂ ನೋಡಿರಬಹುದು. ಈ ಜಾಹೀರಾತು ಈಗ ಎಲ್ಲ ಯಕ್ಷಗಾನಪ್ರಿಯರ ಚರ್ಚೆಯ ವಸ್ತುವಾಗಿದೆ. ಆ ಜಾಹೀರಾತಿನಲ್ಲಿ ಯಕ್ಷಗಾನವನ್ನು ಹಾಸ್ಯದ ದೃಷ್ಟಿಯಿಂದ ಚಿತ್ರಿಸಲಾಗಿದೆ ಎಂದು ಜನರು ಹೇಳುತ್ತಿದ್ದಾರೆ.  

“ಅಲ್ಲದಿದ್ದರೆ ಫೆವಿಕಾಲ್ ಇಲ್ಲದೆ ಸಿಂಹಾಸನ ಬೀಳುವುದೆಂದರೇನು? ಇಡೀ ರಂಗಸ್ಥಳವೇ ಫೆವಿಕಾಲ್ ಇಲ್ಲದೆ ಕುಸಿದು ಬೀಳುವ ದೃಶ್ಯ, ವೇಷಧಾರಿ ರಂಗಸ್ಥಳದಲ್ಲಿಯೇ ಓಡಾಡುತ್ತಾ ಎಲ್ಲರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುವುದು ಮೊದಲಾದ ದೃಶ್ಯಗಳೆಲ್ಲಾ ಕಲೆಗೆ ಅಭಾಸ ಮತ್ತು ಅಪಚಾರ ಎಂದು ಜನರು ಭಾವಿಸುವುದರಲ್ಲಿ ತಪ್ಪೇನೂ ಇಲ್ಲ. ಫೆವಿಕಾಲ್ ಹಾಕದಿದ್ದರೆ ಸಿಂಹಾಸನ ಕುಸಿದು ಬೀಳುವುದು ಎಲ್ಲಿಯಾದರೂ ಉಂಟೆ? ಫೆವಿಕಾಲ್ ಹಾಕದಿದ್ದರೆ ರಂಗಸ್ಥಳವೇ ಭೂಕಂಪ ಬಂದಂತೆ ಅಡಿ ಮೇಲಾಗುವುದು ಸಾಧ್ಯವೇ? ಇದನ್ನೆಲ್ಲಾ ಕಂಡು ಜನರಿಗೆ ಸಿಟ್ಟು ಬಂದದ್ದರಲ್ಲಿ ತಪ್ಪೇನೂ ಕಾಣುವುದಿಲ್ಲ” ಎಂದು ಹಲವಾರು ಆಡಿಕೊಳುತ್ತಿರುವ ಮಾತು.  

(ಇದನ್ನೂ ಓದಿ: ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯಲಿದ್ದಾರೆಯೇ ತ್ರಿಮೂರ್ತಿಗಳು?)

ಮೊದಲೇ ಹೇಳಿದಂತೆ ಯಕ್ಷಗಾನ ಇಲ್ಲಿಯ ಜನರಿಗೆ ಆರಾಧನಾ ಕಲೆ. ಜನರು ಯಕ್ಷಗಾನವನ್ನು ಪೂಜ್ಯ ಭಾವದಿಂದ ನೋಡುತ್ತಾರೆ. ಅಂತಹಾ ಪೂಜನೀಯವಾದ ಕಲೆಯ ಬಗ್ಗೆ ಶ್ರದ್ಧಾಭಕ್ತಿಯನ್ನು ಇರಿಸಿಕೊಂಡವರ ಮನಸ್ಸಿಗೆ ಸಹಜವಾಗಿಯೇ ಇದರಿಂದ ನೋವಾಗಿದೆ. ಆದುದರಿಂದ ಇಂತಹಾ ಜಾಹೀರಾತುಗಳನ್ನು ನಿರ್ಮಿಸುವ ಮೊದಲು ಸಾವಿರ ಬಾರಿ ಯೋಚಿಸಬೇಕು.  

ಇನ್ನು ಕೆಲವರು “ಇಲ್ಲಿಯೂ ಪರ ವಿರೋಧ ಅಭಿಪ್ರಾಯಗಳಿರಬಹುದು. ಆದರೆ ಇದು ನಮ್ಮೊಳಗೆಯೇ ಚರ್ಚೆ ಮಾಡುವ ವಿಷಯವಲ್ಲ. ಯಕ್ಷಗಾನದವರಾದ ನಮ್ಮಲ್ಲೇ ಕೆಲವರು ಕಲೆಯನ್ನು ವಿರೂಪಗೊಳಿಸುತ್ತಾರೆ. ಆದುದರಿಂದ ಇನ್ನೊಬ್ಬರೂ ಮಾಡಲಿ ಎಂಬ ವಾದವು ಸರಿಯಲ್ಲ. ನಾವು ತಪ್ಪು ಮಾಡಿದರೆ ಆಗಲೂ ಆಕ್ಷೇಪಿಸೋಣ. ಇನ್ನೊಬ್ಬರು ತಪ್ಪಿದರೆ ಆಗಲೂ ಎಚ್ಚರಿಸೋಣ.  ಇಂತಹದಕ್ಕೆಲ್ಲಾ ಕಡಿವಾಣ ಬೇಕು. ಇಲ್ಲದಿದ್ದರೆ ಆನೆ ನಡೆದದ್ದೇ ಹಾದಿ ಎಂಬಂತೆ ಆಗುತ್ತದೆ”. ಎಂದು ಅಭಿಪ್ರಾಯ ಪಡುತ್ತಾರೆ.

‘ವಾರ್ಷಿಕೋತ್ಸವ’ –  ಯಕ್ಷಮಿತ್ರರು(ರಿ) ಪೊರ್ಕೋಡಿ ಪೇಜಾವರ

ಯಕ್ಷಮಿತ್ರರು (ರಿ) ಪೊರ್ಕೋಡಿ ಪೇಜಾವರ ಇದರ ಷಷ್ಠಮ ವಾರ್ಷಿಕೋತ್ಸವವು ಇಂದು ಅಂದರೆ 22. 11. 2020ನೇ ಭಾನುವಾರ ಸಂಜೆ ಘಂಟೆ 4ರಿಂದ ನಡೆಯಲಿದೆ.

ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.  ಈ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಪ್ರದರ್ಶನವೂ ನಡೆಯಲಿದೆ. ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಡುವ ಈ ಯಕ್ಷಗಾನದಲ್ಲಿ ‘ಪೂರ್ವರಂಗ-ಕುಶಲವ-ಮಾಯಾಪೂತನಿ-ರತಿಕಲ್ಯಾಣ’ ಎಂಬ ಪ್ರಸಂಗಗಳು ಪ್ರದರ್ಶಿತವಾಗಲಿದೆ. (ಇದನ್ನೂ ಓದಿ: ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯಲಿದ್ದಾರೆಯೇ ತ್ರಿಮೂರ್ತಿಗಳು?)

ಸರಕಾರದ ಕೋವಿಡ್-19 ನಿಯಮಾನುಸಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ. 

ಶ್ರೀ ಧರ್ಮಸ್ಥಳ ಮೇಳ – ಇಂದಿನ ಸೇವೆಯಾಟ ‘ನರಕಾಸುರ ಮೋಕ್ಷ – ಮೈಂದ-ದ್ವಿವಿದ ಕಾಳಗ’

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸೇವೆಯಾಟ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ನಡೆಯುತ್ತಿದೆ. 

ಈ ಪ್ರದರ್ಶನದ ನೇರಪ್ರಸಾರ ಕ್ಷೇತ್ರದ ಯೂಟ್ಯೂಬ್ ಚಾನೆಲಿನಲ್ಲಿ ಲಭ್ಯವಿದೆ. ಇಂದಿನ ಪ್ರಸಂಗ ‘ನರಕಾಸುರ ಮೋಕ್ಷ – ಮೈಂದ-ದ್ವಿವಿದ ಕಾಳಗ’.