Friday, August 28, 2026
Home Blog Page 387

ನೆನಪಿನಂಗಳದಲ್ಲಿ ಸದಾ – ಶ್ರೀ ಸತ್ಯಮೂರ್ತಿ ದೇರಾಜೆ (Sri Sathyamoorthy Deraje)

ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ದೊಡ್ಡ ವಿಚಾರವಲ್ಲ. ಅವರೆಷ್ಟು ಯಶಸ್ವಿಯಾಗಿದ್ದಾರೆ ಎಂಬುದರಲ್ಲಿ ತೊಡಗಿಸಿಕೊಳ್ಳುವಿಕೆಯ ಮೌಲ್ಯವು ನಿರ್ಣಯಿಸಲ್ಪಡುತ್ತದೆ. ಸಾಹಸ ಪ್ರಿಯರು ಈ ರೀತಿಯಲ್ಲಿ ಸಾಗುವುದಿದೆ. ಎಳೆಯ ಪ್ರಾಯದಲ್ಲಿ ಹೊಣೆಗಾರಿಕೆಯು ಹೆಗಲ ಮೇಲೆ ಬಿದ್ದು, ಅಥವಾ ತಾನೇ ಹೆಗಲಲ್ಲಿ ಹೊತ್ತು, ಸಾಧಕರಾಗಿ ಹಲವು ಕ್ಷೇತ್ರಗಳಲ್ಲಿ ಮಿಂಚಿದವರು ಅನೇಕರು. ಆಸಕ್ತಿ, ಮಾನಸಿಕ ದೃಢತೆ, ನಿಷ್ಠೆ, ಅರ್ಪಣಾ ಭಾವ, ಸಾಹಸೀ ಪ್ರವೃತ್ತಿ ಎಂಬ ಗುಣಗಳಿದ್ದವರಿಗೆ ಮಾತ್ರ ಇದು ಸಾಧ್ಯ. ಅಂತಹಾ ಗುಣಗಳನ್ನು ಹೊಂದಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸೇವಾನಿರತರಾಗಿ ಸಾಧಕರಾಗಿ ಮೆರೆದ ಅನೇಕರನ್ನು ನಾವು ಕಾಣಬಹುದು. ಅಂತವರ ಸಾಲಿಗೆ ಸೇರಿದವರು ಶ್ರೀ ದಿ| ಸತ್ಯಮೂರ್ತಿ ದೇರಾಜೆ. ಸರಳ ಸಜ್ಜನ ಸಹೃದಯಿಯಾಗಿ ವ್ಯವಹರಿಸುತ್ತಾ ಎಲ್ಲರ ಪ್ರೀತಿ ಗೌರವಗಳನ್ನೂ ಸಂಪಾದಿಸಿ ಕೀರ್ತಿವಂತರಾಗಿದ್ದರು. ಅವರು ತಾನು ತೊಡಗಿಸಿಕೊಂಡ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿದರು. ಆದರೆ ಮರೆಯಾದುದು ಮಾತ್ರ ಅತ್ಯಂತ ನೋವನ್ನು ನೀಡಿದ ವಿಚಾರ. ಆದರೂ ನಮ್ಮ ನೆನಪಿನಂಗಳದಲ್ಲಿ ಇವರು ಸದಾ ವಿಹರಿಸುತ್ತಾ ಇರುತ್ತಾರೆ. ಮರೆಯಲಾಗದ, ಮರೆಯಬಾರದ ವ್ಯಕ್ತಿತ್ವ ಇವರದು. ಅವರ ನೆನಪು, ಸಾಧನೆ, ಕೊಡುಗೆ ಎಲ್ಲವೂ ಶಾಶ್ವತವಾಗಿ ಇರುತ್ತದೆ. ದೇರಾಜೆ ಎಂ. ಕೃಷ್ಣಯ್ಯ ಮತ್ತು ಎಂ.ಕೆ. ತಿರುಮಲೇಶ್ವರೀ ದಂಪತಿಗಳ ಪುತ್ರನಾಗಿ 1952 ಜೂನ್ 21ರಂದು ಶ್ರೀ ಸತ್ಯಮೂರ್ತಿ ಅವರ ಜನನ. ಸುಳ್ಯ ತಾಲೂಕು ಐವರ್ನಾಡು ಸಮೀಪದ ದೇರಾಜೆಯಲ್ಲಿ. ಓದಿದ್ದು ಪಿಯುಸಿ ವರೆಗೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶೇಣಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ, ವಿಠಲ ಹೈಸ್ಕೂಲ್ ವಿಟ್ಲ ಮತ್ತು ಪುತ್ತೂರು ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಜನೆ ಮಾಡಿದ ಸಂಸ್ಥೆಗಳು. ತೀರ್ಥರೂಪರ ಅನಾರೋಗ್ಯದಿಂದಾಗಿ ವಿದ್ಯಾರ್ಜನೆಯನ್ನು ನಿಲ್ಲಿಸಿ ಮನೆಯ ಹೊಣೆಗಾರಿಕೆಯನ್ನು ವಹಿಸಬೇಕಾಗಿ ಬಂದಿತ್ತು. ಪರಿಸರವು ವ್ಯಕ್ತಿನಿರ್ಮಾಣವನ್ನು ಮಾಡದೇ ಇರದು. ಪುರಾಣ, ಸಾಹಿತ್ಯ, ಕಲಾ ಆವರಣದಲ್ಲೇ ಬೆಳೆದವರು ಶ್ರೀ ಸತ್ಯಮೂರ್ತಿ ಅವರು. ಅಲ್ಲದೆ ಈ ವಿಚಾರಗಳು ರಕ್ತಗತವಾಗಿಯೇ ಬಂದಿತ್ತು. ಸಹಜವಾಗಿ ಸಾಹಿತ್ಯಾಸಕ್ತಿ, ಕಲಾಸಕ್ತಿಯು ಹುಟ್ಟಿಕೊಂಡು ಬೆಳೆಯುತ್ತಾ ಹೋಗಿತ್ತು. ತನ್ನ ಹದಿನೆಂಟನೇ ವಯಸ್ಸಿನಲ್ಲಿ ಅಂದರೆ 1970ರಲ್ಲಿ ಕಾರ್ತೀಕ ಪ್ರಕಾಶನದ ಸಹ ಸಂಪಾದಕರಾಗಿದ್ದರು. ಕೃಷಿಕಾರ್ಯಗಳ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಲು ಆರಂಭಿಸಿದ್ದರು. ತನ್ನ 21ನೇ ವಯಸ್ಸಿನಲ್ಲಿ ಐವರ್ನಾಡು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ಬಳಿಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 22ನೇ ವಯಸ್ಸಿನಲ್ಲಿ ಸುಮನಸಾ ವಿಚಾರ ವೇದಿಕೆ ಚೊಕ್ಕಾಡಿ ಇದರ ಸದಸ್ಯರಾಗಿ ಕಾರ್ಯ ನಿರ್ವಹಣೆ. 1974ರಲ್ಲಿ ತನ್ನ 22ನೆಯ ವಯಸ್ಸಿನಲ್ಲಿ ತೀರ್ಥರೂಪರನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು. ೧೯೭೫ರಲ್ಲಿ ಶ್ರೀ ಕಾರ್ತಿಕೇಯ ಯಕ್ಷಗಾನ ಕಲಾಸಂಘ ನಾರ್ಣಕಜೆ ಇದರ ಸದಸ್ಯರಾಗಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರವನ್ನು ಪ್ರವೇಶಿಸಿದ್ದರು. ಬಳಿಕ ನಿರಂತರ ಭಾಗವಹಿಸುತ್ತಾ ಬೆಳೆಯುತ್ತ ಉತ್ತಮ ಅರ್ಥಧಾರಿಯಾಗಿ ಕಾಣಿಸಿಕೊಂಡರು. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲವರಾಗಿದ್ದರೂ ಸಾತ್ವಿಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. ಹೊಂದಾಣಿಕೆಯ ಸ್ವಭಾವ, ಸಂಭಾಷಣೆಯಲ್ಲಿ ಪಾತ್ರಗಳನ್ನೂ ಚಿತ್ರಿಸುವಲ್ಲಿ ಸೃಜನಶೀಲತೆ, ಹೊಸ ಕಲ್ಪನೆಗಳು, ಚಿಕ್ಕ, ಚೊಕ್ಕ ವಾಕ್ಯಗಳಿಂದ ಪಾತ್ರ ಕಟ್ಟುವಿಕೆ, ಪ್ರತ್ಯುತ್ಪನ್ನಮತಿತ್ವ,ಇವು ಸತ್ಯಮೂರ್ತಿ ದೇರಾಜೆಯವರ ಅರ್ಥಗಾರಿಕೆಯಲ್ಲಿ ಕಾಣುವ ಅಂಶಗಳು. ಲೇಖಕರಾಗಿಯೂ ಕಾಣಿಸಿಕೊಂಡ ಶ್ರೀ ಸತ್ಯಮೂರ್ತಿ ದೇರಾಜೆ ಅವರು 1975ರಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಗ ಅವರ ವಯಸ್ಸು 23. ಅಲ್ಲದೆ ಅದೇ ವರ್ಷ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಆಗಿಯೂ, ಶ್ರೀರಾಮ ಸೇವಾ ಸಮಿತಿ ಚೊಕ್ಕಾಡಿ ಇದರ ಸದಸ್ಯರಾಗಿ, ಉಪಾಧ್ಯಕ್ಷರಾಗಿಯೂ ನಿಯುಕ್ತರಾದರು. 1980ರಲ್ಲಿ ಜಯಂತಿ ಅವರೊಂದಿಗೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸತ್ಯಮೂರ್ತಿಯವರು 1987ರಲ್ಲಿ ಐವರ್ನಾಡು ಮಂಡಲ ಪಂಚಾಯತ್ ಸದಸ್ಯರಾಗಿ ಮತ್ತು ಸುಳ್ಯ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.

1999ರಲ್ಲಿ ದೇರಾಜೆ ಸೀತಾರಾಮಯ್ಯ ಸಂಸ್ಕೃತಿ ರಂಗ ಚೊಕ್ಕಾಡಿ ಎಂಬ ಸಂಸ್ಥೆಯನ್ನು ಹಿರಿಯರ, ಬಂಧುಮಿತ್ರರ ಸಹಕಾರದಿಂದ ಹುಟ್ಟುಹಾಕಿ ಸದ್ರಿ ಸಂಸ್ಥೆಯ ರೂವಾರಿ ಎನಿಸಿಕೊಂಡರು. 1999ರಲ್ಲಿ ಸಂಸ್ಕೃತಿರಂಗವನ್ನು ದೇರಾಜೆಯವರ ಶಿಷ್ಯರಾದ ಉಡುವೆಕೋಡಿ ಶ್ರೀ ಸುಬ್ಬಪ್ಪಯ್ಯನವರು ಉದ್ಘಾಟಿಸಿದ್ದರು. ಪ್ರತಿ ತಿಂಗಳ ಕೊನೆಯ ಆದಿತ್ಯವಾರ ನಿರಂತರವಾಗಿ ತಾಳಮದ್ದಳೆ ಅಲ್ಲದೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಶ್ರೀ ಸತ್ಯಮೂರ್ತಿ ದೇರಾಜೆ ಅವರ ನೇತೃತ್ವದಲ್ಲಿ ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ನಡೆಯುತ್ತಾ ಬರುತ್ತಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಸದ್ದು ಗದ್ದಲವಿಲ್ಲದ ಸೇವೆ ಇವರದು. ತಾನು ಕಾಣಿಸಿಕೊಳ್ಳಬೇಕೆಂಬ ಆಕಾಂಕ್ಷೆಗಳು ಅವರಿಗಿರಲಿಲ್ಲ. ಕರ್ತವ್ಯ ಎಂಬ ನೆಲೆಯಲ್ಲಿ ತೊಡಗಿಸಿಕೊಂಡಿದ್ದರು. ಅದರ ಪರಿಣಾಮವನ್ನು ಪರಿಸರವು ಅನುಭವಿಸಿತ್ತು. ಸಮಾಜದ ಸ್ವಾಸ್ಥ್ಯವನ್ನು ಕಾಪಿಡಲು ಅವರ ಸೇವಾಕಾರ್ಯಗಳು ಸಹಕಾರಿಯಾಗಿದ್ದುವು. ಐವರ್ನಾಡು ಚೊಕ್ಕಾಡಿ ಪರಿಸರವು ಸಾಮಾಜಿಕ ಸಾಮರಸ್ಯಗಳಿಂದ ಸ್ವಚ್ಛ, ಚೊಕ್ಕ, ಸುಂದರವಾಗಿ ಕಂಗೊಳಿಸಿತ್ತಿತ್ತು. ಸಮಾಜಕ್ಕಾಗಿ, ಕಲೆಗಾಗಿಯೇ ತನ್ನ ಬದುಕನ್ನು ಸವೆಸಿದ್ದ ಶ್ರೀ ಸತ್ಯಮೂರ್ತಿ ದೇರಾಜೆ ಅವರು 2005ನೇ ಇಸವಿ ಡಿಸೆಂಬರ್ ಹದಿನಾರರಂದು ಗಳಿಸಿದ ಕೀರ್ತಿಯನ್ನು ಉಳಿಸಿ ಮತ್ತೆ ಬಾರದ ಲೋಕಕ್ಕೆ ಪಯಣಿಸಿದ್ದರು. ಶ್ರೀ ಸತ್ಯಮೂರ್ತಿ ದೇರಾಜೆ ಅವರ ಸಹೋದರರು ಸತ್ಯನ್ ದೇರಾಜೆ ಮತ್ತು ಬಾಲಸುಬ್ರಹ್ಮಣ್ಯ ದೇರಾಜೆ. ಶ್ರೀ ಸತ್ಯನ್ ದೇರಾಜೆ ತಾಳಮದ್ದಳೆಯ ಉತ್ತಮ ಅರ್ಥಧಾರಿಗಳು. ಶ್ರೀ ಸತ್ಯಮೂರ್ತಿ ದೇರಾಜೆಯವರ ಪತ್ನಿ ಶ್ರೀಮತಿ ಜಯಂತಿ ದೇರಾಜೆ. ಇವರಿಗೆ ಈರ್ವರು ಪುತ್ರರು. ಸುಧನ್ವ ದೇರಾಜೆ ಮತ್ತು ಸುಧೇಷ್ಣ ದೇರಾಜೆ. ‘ಯಕ್ಷಲೋಕದ ರಸದೃಷ್ಟಾರ – ಶ್ರೀ ದಿ| ದೇರಾಜೆ ಸೀತಾರಾಮಯ್ಯನವರು ಸತ್ಯಮೂರ್ತಿ ದೇರಾಜೆ ಅವರ ಸಣ್ಣಜ್ಜ. ಸಾಧಕ ದಿ| ಶ್ರೀ ಸತ್ಯಮೂರ್ತಿ ದೇರಾಜೆ ಅವರಿಗೆ ನುಡಿನಮನಗಳು.

ಲೇಖಕ: ರವಿಶಂಕರ ವಳಕ್ಕುಂಜ 

‘ರಸಿಕರತ್ನ’ – ವಿಟ್ಲ ಗೋಪಾಲಕೃಷ್ಣ ಜೋಷಿ ಸಂಸ್ಮರಣ ಗ್ರಂಥ (Vitla Gopalakrishna Joshi)

ಶೀರ್ಷಿಕೆಯೇ ಸೂಚಿಸುವಂತೆ ಈ ಹೊತ್ತಗೆಯು ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಹಾಸ್ಯಗಾರರಾಗಿ ಮೆರೆದ ದಿ| ವಿಟ್ಲ ಗೋಪಾಲಕೃಷ್ಣ ಜೋಷಿ ಅವರ ಸಂಸ್ಮರಣ ಗ್ರಂಥವು. ಶ್ರೀಯುತರ ಜೀವಿತಾವಧಿ 1916-1991. ಈ ಸಂಸ್ಮರಣ ಗ್ರಂಥದ ಪ್ರಕಾಶಕರು ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ (ರಿ) ಪರ್ಕಳ.  ಸಂಪಾದಕರು ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ಟ. 2013ರಲ್ಲಿ ಈ ಸಂಸ್ಮರಣ ಗ್ರಂಥವು ಪ್ರಕಟವಾಗಿತ್ತು. ಇನ್ನೂರ ಎಂಬತ್ತಮೂರು ಪುಟಗಳಿಂದ ಕೂಡಿದ ಗ್ರಂಥವಿದು. ಮೊದಲಾಗಿ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಶ್ರೀಮದ್ ರಾಘವೇಶ್ವರ ಭಾರತಿ ಸ್ವಾಮಿಗಳು, ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಶ್ರೀ ರಾಜರ್ಷಿ ವೀರೇಂದ್ರ ಹೆಗಡೆಯವರು, ಪ್ರೊ ಎಂ.ಎಲ್.ಸಾಮಗ, ಶ್ರೀ ಟಿ. ಶ್ಯಾಮ್ ಭಟ್ ಇವರುಗಳ ಸಂದೇಶಗಳನ್ನು ನೀಡಲಾಗಿದೆ. ಸಂಪಾದಕ ಶ್ರೀ ಹಿರಣ್ಯ ವೆಂಕಟೇಶ್ವರ ಭಟ್ಟ ಅವರು ‘ಸಂಪಾದಕ ನುಡಿ’ ಎಂಬ ಲೇಖನದಡಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.

ಈ ಪುಸ್ತಕವು ನಾಲ್ಕು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಮೊದಲ ಭಾಗ ‘ಸಂಸಾರದಲ್ಲಿ ಜೋಯಿಸರು’ . ಇಲ್ಲಿ ಜೋಷಿ ಅವರ ಬಂಧುಗಳ ಹನ್ನೊಂದು ಲೇಖನಗಳಿವೆ. ಭಾಗ ಎರಡು ‘ಒಡನಾಡಿಗಳ, ಅಭಿಮಾನಿಗಳ ರತ್ನ’. ಇಲ್ಲಿ ಒಟ್ಟು ನಲುತ್ತಮೂರು ಮಂದಿ ಮಹನೀಯರು ರಸಿಕರತ್ನ ಜೋಷಿಯವರ ಬಗ್ಗೆ ಬರೆದ ಲೇಖನಗಳನ್ನು ನೀಡಲಾಗಿದೆ. ಭಾಗ ಮೂರು ‘ಜೋಯಿಸರು ನಾವು ಕಂಡಂತೆ’. ಇಲ್ಲಿ ಮೂರು ಪ್ರಕಟಿತ ಲೇಖನಗಳನ್ನು ನೀಡಲಾಗಿದೆ. ಭಾಗ ನಾಲ್ಕು ‘ಯಕ್ಷ ಹಾಸ್ಯ ರಂಗ’. ಇಲ್ಲಿ ಹತ್ತು ಮಂದಿ ಮಹನೀಯರುಗಳು ಬರೆದ ಲೇಖನಗಳಿವೆ. ಬಳಿಕ ಲೇಖನಗಳನ್ನು ಬರೆದ ಮಹನೀಯರುಗಳ ವಿಳಾಸಗಳನ್ನು ನೀಡಲಾಗಿದೆ. ಮೂವತ್ತಕ್ಕೂ ಮಿಕ್ಕಿದ ಬಣ್ಣದ ಚಿತ್ರಗಳನ್ನೂ ನೀಡಲಾಗಿದ್ದು ಪುಸ್ತಕದ ಹೊರ ಆವರಣದಲ್ಲಿ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರು, ಪೇಜಾವರ ಮಠ, ಉಡುಪಿ ಇವರ ಸಂದೇಶವನ್ನು ನೀಡಲಾಗಿದೆ. 

ಲೇಖಕ: ರವಿಶಂಕರ್ ವಳಕ್ಕುಂಜ

ಗಣೇಶ ಕೊಲೆಕಾಡಿಗೆ ‘ರಂಗ ಭಾಸ್ಕರ ಪ್ರಶಸ್ತಿ’

ದಿ| ಭಾಸ್ಕರ ನೆಲ್ಲಿತೀರ್ಥ ಅವರ ಸವಿ ನೆನಪಿಗಾಗಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇವರು ನೀಡುತ್ತಾ ಬರುತ್ತಿರುವ ‘ರಂಗ ಭಾಸ್ಕರ ಪ್ರಶಸ್ತಿ’ಗೆ ಈ ಬಾರಿ ಖ್ಯಾತ ಯಕ್ಷಗಾನ ಛಂದಸ್ಸು ವಿದ್ವಾಂಸ ಗಣೇಶ ಕೊಲೆಕಾಡಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ಮತ್ತು ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಅಕ್ಟೊಬರ್ 17ರಂದು ಕೊಲೆಕಾಡಿಯಲ್ಲಿರುವ ಗಣೇಶ ಕೊಲೆಕಾಡಿಯವರ ಸ್ವಗೃಹದಲ್ಲಿ ನೀಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ಆಯ್ಕೆ ಸಮಿತಿಯಲ್ಲಿದ್ದ ಡಾ. ನಾ. ದಾಮೋದರ ಶೆಟ್ಟಿ, ಮೀನಾಕ್ಷಿ ರಾಮಚಂದ್ರ ಮತ್ತು ಜಾದೂಗಾರ್ ಕುದ್ರೋಳಿ ಗಣೇಶ್ ಅವರು ಪ್ರಶಸ್ತಿ ಪುಸ್ಕೃತರ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ. 

ನಾದಶಂಕರ – ಪದ್ಯಾಣ ಶಂಕರನಾರಾಯಣ ಭಟ್ ಅಭಿನಂದನ ಗ್ರಂಥ

‘ನಾದಶಂಕರ’ ಎಂಬ ಈ ಕೃತಿಯು ತೆಂಕುತಿಟ್ಟಿನ ಹಿರಿಯ ಖ್ಯಾತ ಮದ್ದಳೆಗಾರರಾದ ಪದ್ಯಾಣ ಶ್ರೀ ಶಂಕರನಾರಾಯಣ ಭಟ್ ಅವರ ಅಭಿನಂದನ ಗ್ರಂಥವು. ಇದು ಪ್ರಕಟವಾಗಿ ಓದುಗರ ಕೈ ಸೇರಿದ್ದು 2012ರಲ್ಲಿ. ಈ ಅಭಿನಂದನ ಗ್ರಂಥದ ಸಂಪಾದಕರು ಖ್ಯಾತ ಅರ್ಥಧಾರಿ, ಸಂಘಟಕರಾದ ಉಜಿರೆ ಎನ್. ಅಶೋಕ ಭಟ್ ಅವರು. ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಎಂಬ ಸಂಸ್ಥೆಯು ಈ  ಪುಸ್ತಕದ ಪ್ರಕಾಶಕರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ಡಾ. ಡಿ. ವೀರೇಂದ್ರ ಹೆಗಡೆಯವರು ಅನುಗ್ರಹ ಸಂದೇಶವನ್ನು ನೀಡಿ ಶುಭ ಹಾರೈಸಿರುತ್ತಾರೆ. ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲಾಪೋಷಕ ಡಾ. ಟಿ. ಶ್ಯಾಮ್ ಭಟ್ ಅವರು ‘ರಂಗದ ಗೌರವ’ ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದು ಶುಭಾಶಯಗಳನ್ನು ತಿಳಿಸಿರುತ್ತಾರೆ. ಸಂಪಾದಕರಾದ ಉಜಿರೆ ಎನ್. ಅಶೋಕ ಭಟ್ಟರು ‘ಪ್ರತಿಷ್ಠಾನದ ಕುರಿತು’ ಎಂಬ ಬರಹದಲ್ಲಿ ಸಹಕರಿಸಿದವರಿಗೆಲ್ಲಾ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಬಳಿಕ ವಿದ್ವಾಂಸರು, ಕಲಾಭಿಮಾನಿಗಳು, ಕಲಾವಿದರುಗಳು ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರ ಬಗೆಗೆ ಬರೆದ ನೂರಾ ಇಪ್ಪತ್ತ ಮೂರು ಲೇಖನಗಳನ್ನು ನೀಡಲಾಗಿದೆ. ವಿದ್ವಾಂಸರೂ, ವಿಮರ್ಶಕರೂ ಆಗಿರುವ ಡಾ. ಎಂ. ಪ್ರಭಾಕರ ಜೋಶಿಯವರು ಬರೆದ ಸಂದರ್ಶನ ಲೇಖನವನ್ನು ನೀಡಿರುತ್ತಾರೆ.

ಬಳಿಕ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರು ಪಡೆದ ಪ್ರಮುಖ ಪ್ರಶಸ್ತಿಗಳು ಮತ್ತು ಸನ್ಮಾನಗಳ ವಿವರಗಳನ್ನು ನೀಡಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಡಾ. ಟಿ. ಶ್ಯಾಮ್ ಭಟ್, ಶೇಣಿ ಗೋಪಾಲಕೃಷ್ಣ ಭಟ್, ನೆಡ್ಲೆ ನರಸಿಂಹ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಡಾ. ಎಂ. ಪ್ರಭಾಕರ ಜೋಶಿ ಅವರುಗಳ ನಲ್ನುಡಿಗಳನ್ನು ನೀಡಲಾಗಿದ್ದು, ಈ ಅಭಿನಂದನಾ ಗ್ರಂಥದಲ್ಲಿ ಸುಮಾರು ಇಪ್ಪತ್ತೈದರಷ್ಟು ಬಣ್ಣದ ಮತ್ತು ಕಪ್ಪು ಬಿಳುಪಿನ ಛಾಯಾಚಿತ್ರಗಳಿವೆ. ತೆಂಕುತಿಟ್ಟಿನ ಹಿರಿಯ ಖ್ಯಾತ ಮದ್ದಳೆಗಾರರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಶ್ರೀಯುತರಿಂದ ಇನ್ನಷ್ಟು ಕಲಾಸೇವೆಯು ನಿರಂತರವಾಗಿ ನಡೆಯಲಿ ಎಂಬ ಆಶಯಗಳು. 

ಲೇಖಕ: ರವಿಶಂಕರ್ ವಳಕ್ಕುಂಜ

ಕುರಿಯ ಗಣಪತಿ ಶಾಸ್ತ್ರಿಗಳಿಗೆ ಸನ್ಮಾನ ಮತ್ತು ‘ಕರ್ಣ ಪರ್ವ’ ತಾಳಮದ್ದಳೆ

ಯಕ್ಷಮೇನಕಾ ಮೂಡಬಿದಿರೆ, ರಂಗಸ್ಥಳ ಮಂಗಳೂರು (ರಿ), ಯಕ್ಷಚೈತನ್ಯ (ರಿ) ಅಶ್ವತ್ಥಪುರ ಎಂಬ ಮೂರು ಯಕ್ಷಸಂಘಟನೆಗಳಿಂದ ಕುರಿಯ ಗಣಪತಿ ಶಾಸ್ತ್ರಿ ದಂಪತಿಗಳಿಗೆ ಸಮ್ಮಾನ ಮತ್ತು ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ  ‘ಕರ್ಣ ಪರ್ವ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.  ವಿವರ ಲಗ್ತೀಕರಿಸಲಾಗಿದೆ.

ಪುತ್ತೂರಿನ ಬಾಲವನದಲ್ಲಿ ತಾಳಮದ್ದಳೆ – ‘ಶ್ರೀಕೃಷ್ಣ ಸಂಧಾನ – ಭೀಷ್ಮ ಸೇನಾಧಿಪತ್ಯ’

ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ನಾಳೆ ದಿನಾಂಕ 10.10.2020 ನೇ ಶನಿವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಪುತ್ತೂರಿನ ಬಾಲವನದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ‘ಬಾಲವನ’ ಪ್ರಶಸ್ತಿಯನ್ನು ಪ್ರೊ| ಅಮೃತ ಸೋಮೇಶ್ವರ ಅವರಿಗೆ ನೀಡಲಾಗುವುದು.   ಪ್ರಶಸ್ತಿ ಪ್ರಧಾನ ಸಮಾರಂಭದ ಅನಂತರ ‘ಶ್ರೀಕೃಷ್ಣ ಸಂಧಾನ – ಭೀಷ್ಮ ಸೇನಾಧಿಪತ್ಯ’ ಎಂಬ ತಾಳಮದ್ದಳೆ ನಡೆಯಲಿದೆ. ತಾಳಮದ್ದಳೆಯಲ್ಲಿ ಪ್ರಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.  ಕಾರ್ಯಕ್ರಮದ ನೇರ ಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ.   

ಪ್ರೊ| ಅಮೃತ ಸೋಮೇಶ್ವರ ಅವರಿಗೆ ಬಾಲವನ ಪ್ರಶಸ್ತಿ 

ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆ ಪ್ರಯುಕ್ತ ನೀಡಲಾಗುವ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ – ೨೦೨೦ ನ್ನು ಈ ಬಾರಿ ಖ್ಯಾತ ಜಾನಪದ ಹಾಗೂ ಯಕ್ಷಗಾನ ವಿದ್ವಾಂಸ, ಪ್ರಸಂಗಕರ್ತ, ಸಾಹಿತಿ, ನಿವೃತ್ತ ಉಪನ್ಯಾಸಕರಾದ ಪ್ರೊ| ಅಮೃತ ಸೋಮೇಶ್ವರ ಅವರಿಗೆ  ನೀಡಲಾಗುವುದು. ನಾಳೆ ದಿನಾಂಕ 10.10.2020 ನೇ ಶನಿವಾರ ಮಧ್ಯಾಹ್ನ 2.30 ಕ್ಕೆ ಸರಿಯಾಗಿ ಬಾಲವನದಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರೊ| ಅಮೃತ ಸೋಮೇಶ್ವರ ಅವರಿಗೆ ನೀಡಲಾಗುವುದು.

ಕನ್ನಡ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡಾ. ಶಿವರಾಮ ಕಾರಂತರ ಬಾಲವನ ಪುತ್ತೂರು ಮತ್ತು ಸಹಾಯಕ ಆಯುಕ್ತರ ಕಚೇರಿ, ಪುತ್ತೂರು ಉಪವಿಭಾಗ ಇವರ ಜಂಟಿ ಸಂಯೋಜನೆಯಲ್ಲಿ ಈ ಪ್ರಶಸ್ತಿ ಪ್ರಧಾನ ನಡೆಯಲಿದೆ. ಪ್ರಶಸ್ತಿ ಪ್ರಧಾನ ಸಮಾರಂಭದ ಅನಂತರ ‘ಶ್ರೀಕೃಷ್ಣ ಸಂಧಾನ – ಭೀಷ್ಮ ಸೇನಾಧಿಪತ್ಯ’ ಎಂಬ ತಾಳಮದ್ದಳೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದ ನೇರ ಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ.  

ಚಿಟ್ಟಾಣಿ ರಾಮಚಂದ್ರ ಹೆಗಡೆ (Chittani Ramachandra Hegade)

ಚಿಟ್ಟಾಣಿ ರಾಮಚಂದ್ರ ಹೆಗಡೆಯವರ  ಜೀವನ ಚರಿತ್ರೆ
ಹೆಸರು:  ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ 
ಪತ್ನಿ: ಶ್ರೀಮತಿ  ಸುಶೀಲ (ಕಡತೋಕ ಮಳ್ಳಜ್ಜಿ ನಾರಾಯಣ ಹೆಗಡೆಯವರ ಕಿರಿಯ ಪುತ್ರಿ ಸುಶೀಲ)
ಜನನ:  1935ನೇ ಇಸವಿ ಆಗಸ್ಟ್ 18ರಂದು  
ಜನನ ಸ್ಥಳ:   ಉತ್ತರ ಕನ್ನಡ ಜಿಲ್ಲೆಯ ಹೊಸಾಕುಳಿ ಗ್ರಾಮದ ಒಂದು ಹಳ್ಳಿ ಚಿಟ್ಟಾಣಿ.   
ತಂದೆ ತಾಯಿ:  ತಂದೆ ಶ್ರೀ ಸುಬ್ರಾಯ ಹೆಗಡೆ. ತಾಯಿ ಶ್ರೀಮತಿ ಗಣಪಿ ಅಮ್ಮ.  
ಯಕ್ಷಗಾನ ಗುರುಗಳು:  ಸಂತೆಗುಳಿ ಬಾಳೆಗದ್ದೆ ರಾಮಕೃಷ್ಣ ಭಟ್ಟರು  
ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ: ೫೦ ವರ್ಷಕ್ಕೂ ಮೇಲ್ಪಟ್ಟು ಮೇಳದ ತಿರುಗಾಟ (ಬಾಳೆಗೆದ್ದೆ ಮೇಳ, ಮೂಡ್ಕಣಿ ಮೇಳ, ಮಾವಿನಕುರ್ವೆ ಮೇಳ, ಮೂರೂರು ಮೇಳ, ಗುಂಡಬಾಳಾ ಮೇಳ, ಸಂಯುಕ್ತ ಮೇಳ, ಕೊಳಗಿಬೀಸ್ ಮೇಳ, ಅಮೃತೇಶ್ವರೀ ಮೇಳ (ಅಮೃತೇಶ್ವರೀ ಮೇಳ-13 ವರ್ಷಗಳು), ಶಿರಸಿ ಪಂಚಲಿಂಗೇಶ್ವರ ಮೇಳ, ಸಾಲಿಗ್ರಾಮ ಮೇಳ-೧ ವರ್ಷ, ಬಚ್ಚಗಾರು ಮೇಳ, ಶಿರಸಿ ಮಾರಿಕಾಂಬಾ ಮೇಳ, ಪೆರ್ಡೂರು ಮೇಳ,  ನಂತರ ಮೇಳದ ತಿರುಗಾಟ ನಿಲ್ಲಿಸಿದ್ದರು. ಆದರೆ‘ಬಂಗಾರಮಕ್ಕಿ ವೀರಾಂಜನೇಯ ಯಕ್ಷಮಿತ್ರ ಮಂಡಳಿ ಎಂಬ ಬಯಲಾಟದ ತಂಡದಲ್ಲಿ ಭಾಗವಹಿಸುತ್ತಿದ್ದರು.  ಅಲ್ಲದೆ ಅತಿಥಿ ಕಲಾವಿದರಾಗಿ ವೇಷ ಮಾಡುತ್ತಿದ್ದರು.
ಮಕ್ಕಳು:  ಪುತ್ರರಾದ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಮತ್ತು ಶ್ರೀ ನರಸಿಂಹ ಚಿಟ್ಟಾಣಿ ಯಕ್ಷಗಾನ ಕ್ಷೇತ್ರದಲ್ಲಿ ಒಳ್ಳೆಯ ಕಲಾವಿದರಾಗಿ ಹೆಸರು ಗಳಿಸಿದ್ದಾರೆ. ಮೊಮ್ಮಗ ಶ್ರೀ ಕಾರ್ತಿಕ್ ಚಿಟ್ಟಾಣಿ ಅವರು ಉದಯೋನ್ಮುಖ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿಟ್ಟಾಣಿಯವರ ಮನಮೆಚ್ಚಿದ ಹಾಗೂ ಅವರಿಗೆ ಹೆಸರು ತಂದುಕೊಟ್ಟ ಪಾತ್ರಗಳು:  ಸಾಲ್ವ (ಭೀಷ್ಮವಿಜಯ) ಸುಧನ್ವ (ಸುಧನ್ವಾರ್ಜುನ) ಅರ್ಜುನ (ಕೃಷ್ಣಾರ್ಜುನಕಾಳಗ) ಅರ್ಜುನ (ಐರಾವತ) ಕೃಷ್ಣ (ಮಾರುತಿ ಪ್ರತಾಪ) ಹನೂಮಂತ (ಲಂಕಾದಹನ) ದಕ್ಷ (ದಕ್ಷಯಜ್ಞ) ಭರತ (ಧರ್ಮಾಂಗದ ದಿಗ್ವಿಜಯ)  ಕೌರವ (ಗದಾಪರ್ವ) ಭಸ್ಮಾಸುರ (ಭಸ್ಮಾಸುರ-ಮೋಹಿನಿ) ಕಲಾಧರ (ಕಾಳೀದಾಸ) ಕೃಷ್ಣ (ಚಂದ್ರಾವಳಿವಿಲಾಸ) ಕೀಚಕ (ಕೀಚಕವಧೆ) ದುಷ್ಟಬುದ್ಧಿ (ಚಂದ್ರಹಾಸಚರಿತ್ರೆ) ರುದ್ರಕೋಪ(ಚಿತ್ರಾಕ್ಷಿಕಲ್ಯಾಣ) ಕಂಸ (ಕಂಸವಧೆ) ಕಾರ್ತವೀರ್ಯ(ಕಾರ್ತವೀರ್ಯಾರ್ಜುನ ಕಾಳಗ) ಮಾಗಧ (ಮಾಗಧವಧೆ)  ಸುಂದರರಾವಣ (ಚೂಡಾಮಣಿ)
ಕೀಚಕ, ಭಸ್ಮಾಸುರ, ರುದ್ರಕೋಪ, ಕಾರ್ತವೀರ್ಯ, ಕೌರವ, ದುಷ್ಟಬುದ್ಧಿ, ಸಂಧಾನದ ಕೃಷ್ಣ ಇವೆಲ್ಲ ಅವರಿಗೆ ಹೆಸರು ತಂದುಕೊಟ್ಟ ಪಾತ್ರಗಳು.
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.  ಅದರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಅನೇಕ ಸಂಘ-ಸಂಸ್ಥೆಗಳು ‘ಕಲಾಧರ ಚಿಟ್ಟಾಣಿ’ ಅವರನ್ನು ಸನ್ಮಾನಿಸಿ ಗೌರವಿಸಿದೆ ಚಿಟ್ಟಾಣಿಯವರ ವಿಶೇಷ ಕೃತಜ್ಞತೆ: ಕಾಳಿದಾಸ ಪ್ರಸಂಗದಲ್ಲಿ ಕಲಾಧರನ ಪಾತ್ರ ಮಾಡಿಸಿ ಪ್ರೋತ್ಸಾಹಿಸಿದ ಕಡತೋಕಾ ಮಂಜುನಾಥ ಭಾಗವತರಿಗೆ  ನಿಧನ: 2017ನೇ ಇಸವಿ ಒಕ್ಟೋಬರ್ 3ರಂದು 

ಬಲಿಪ ನಾರಾಯಣ ಭಾಗವತ (Balipa Narayana Bhagavatha)

ಬಲಿಪ ನಾರಾಯಣ ಭಾಗವತರ ಜೀವನ ಚರಿತ್ರೆ (Biography of Balipa Narayana Bhagavatha)
ಹೆಸರು: ಬಲಿಪ ನಾರಾಯಣ ಭಾಗವತರು
ಪತ್ನಿ: ಶ್ರೀಮತಿ ಜಯಲಕ್ಷ್ಮಿ
ಜನನ: 19.03.1938
ಜನನ ಸ್ಥಳ: ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಎಂಬಲ್ಲಿ
ತಂದೆ ತಾಯಿ: ಶ್ರೀ ಬಲಿಪ ಮಾಧವ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ
ಯಕ್ಷಗಾನ ಗುರುಗಳು: ಅಜ್ಜ ಹಿರಿಯ ಬಲಿಪ ನಾರಾಯಣ ಭಟ್ಟ ಮತ್ತು ತಂದೆ ಬಲಿಪ ಮಾಧವ ಭಟ್ಟ
ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ಮದ್ದಳೆಗಾರರಾದ ದಿ| ಕುದ್ರೆಕೋಡ್ಲು ರಾಮ ಭಟ್ಟ, ವೇಷಧಾರಿಗಳಾದ ದಿ| ಕುಂಬಳೆ ತಿಮ್ಮಪ್ಪ ಮತ್ತು ದಿ| ಅಗಲ್ಪಾಡಿ ಕುಂಞಿ ಕೃಷ್ಣ ಮಣಿಯಾಣಿ
ಅನುಭವ: 55 ವರ್ಷಕ್ಕೂ ಮೇಲ್ಪಟ್ಟು (ಕೂಡ್ಲು, ಕುಂಡಾವು, ರೆಂಜಾಳ, ಮೂಲ್ಕಿ, ಭಗವತಿ ಮೇಳಗಳಲ್ಲಿ ಅಲ್ಲದೆ ಕಟೀಲು ಮೇಳವೊಂದರಲ್ಲೇ 25 ವರ್ಷಕ್ಕೂ ಮೇಲ್ಪಟ್ಟು ತಿರುಗಾಟ ನಡೆಸಿದ್ದಾರೆ.
ಮಕ್ಕಳು: ನಾಲ್ಕು ಜನ ಗಂಡುಮಕ್ಕಳು ( ಬಲಿಪ ಮಾಧವ ಭಟ್ಟ, ಹವ್ಯಾಸೀ ಭಾಗವತರಾದ ಬಲಿಪ ಶಿವಶಂಕರ ಭಟ್ಟ, ಬಲಿಪ ಶಶಿಧರ ಭಟ್ಟ, ಹಾಗೂ ಪ್ರಖ್ಯಾತ ಭಾಗವತರಾಗಿ ಪ್ರಸ್ತುತ ಕಟೀಲು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಬಲಿಪ ಪ್ರಸಾದ ಭಟ್ಟ)

ರಚಿಸಿದ ಪ್ರಸಂಗಗಳು: 35ಕ್ಕೂ ಮಿಕ್ಕಿ 
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಸುಮಾರು 200 ಕ್ಕೂ ಹೆಚ್ಚು.  ಅದರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2010, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ 2010, ಆಳ್ವಾಸ್ ನುಡಿಸಿರಿ 2010, ಕರ್ನಾಟಕ ಸಂಘ ದುಬೈ 1988, ಶ್ರೀ ಎಡನೀರು ಮಠ 1994, ಕರಾವಳಿ ಯಕ್ಷಗಾನ ಸಮ್ಮೇಳನ 2000, ಕರ್ನಾಟಕ ಜನಪದ ಪರಿಷತ್ತು ಬೆಂಗಳೂರು 2002, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, 2002, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು 2004, ಕೇರಳ ಸಂಗೀತ ನಾಟಕ ಅಕಾಡೆಮಿ ತಿರುವನಂತಪುರ 2007, ಕರ್ನಾಟಕ ಜಾನಪದ ಕಲಾ ಅಧ್ಯಯನ ಕೇಂದ್ರ ಉಡುಪಿ 2008, ಕಲ್ಕೂರ ಪ್ರತಿಷ್ಠಾನ 2015 ಮೊದಲಾದುವುಗಳು. 

ಸಹೃದಯೀ ಕಲಾವಿದ –  ‘ಕಿದೂರ್’ದ ಮುತ್ತು ಜಯೇಂದ್ರ ಕುಲಾಲ್ ಕಿದೂರ್

ಸಹೃದಯೀ ಕಲಾವಿದ ಶ್ರೀ  ಜಯೇಂದ್ರ ಕುಲಾಲ್ ಕಿದೂರ್ ಕನ್ನಡ ಮತ್ತು ತುಳು ಭಾಷೆಗಳ ಯಕ್ಷಗಾನ ಪ್ರದರ್ಶನಗಳಲ್ಲಿ ವೇಷ ಮಾಡಬಲ್ಲ ಸಮರ್ಥರು. ಸರಳ ಸಜ್ಜನ ವಿನಯವಂತ ಕಲಾವಿದರು. ತೆರೆದುಕೊಳ್ಳುವ ಸ್ವಭಾವವಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ. ತಾನು ಕಾಣಿಸಿಕೊಳ್ಳಬೇಕೆಂಬ ಬಯಕೆ ಇವರಿಗಿಲ್ಲ. ಯಕ್ಷಗಾನ ಕಲಾವಿದನಾಗಿ ರಂಗವೇರಬೇಕೆಂಬ ಬಯಕೆಯನ್ನು ಮಾತ್ರ ಇರಿಸಿಕೊಂಡವರು. ಕಳೆದ ಮೂವತ್ತಕ್ಕೂ ಹೆಚ್ಚು ವರುಷಗಳಿಂದ ವೃತ್ತಿ ಕಲಾವಿದರಾಗಿ ಅಭಿನಯಿಸುತ್ತಿದ್ದಾರೆ.  ಶ್ರೀ  ಜಯೇಂದ್ರ ಕುಲಾಲರು ಜನಿಸಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಿದೂರು ಗ್ರಾಮದ ತಂಜರಕಟ್ಟೆ ಎಂಬಲ್ಲಿ. ಇದು ಕುಂಬಳೆಯ ಸಮೀಪದಲ್ಲಿದೆ. ಶ್ರೀ ಫಕೀರ ಮೂಲ್ಯ ಮತ್ತು ಲಕ್ಷ್ಮಿ ದಂಪತಿಗಳ ಪುತ್ರನಾಗಿ 1972 ಏಪ್ರಿಲ್ 24ರಂದು ಜನನ. ಇಚ್ಲಂಪಾಡಿಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದ್ದರು.

ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. ಕಳತ್ತೂರು ಶಾಲೆಯ ಮೈದಾನದಲ್ಲಿ ಕರ್ನಾಟಕ, ಸುರತ್ಕಲ್, ಕದ್ರಿ ಮೊದಲಾದ ಮೇಳಗಳ ಆಟಗಳು ನಡೆಯುತ್ತಿತ್ತು. ಎಲ್ಲಾ ಆಟಗಳಿಗೂ ಜಯೇಂದ್ರರ ಉಪಸ್ಥಿತಿ ಇದ್ದೇ ಇರುತ್ತಿತ್ತು. ಮನೆಯವರು ಕಳುಹಿಸುವುದಿಲ್ಲ ಎಂಬ ಕಾರಣಕ್ಕೆ ಶಾಲೆಯಿಂದ ಮನೆಗೆ ಬಾರದೆ ಆಟ ನೋಡಿ ಮರುದಿನವೂ ಶಾಲೆಗೇ ಹೋಗಿ ಮತ್ತೆ ಮನೆಗೆ ಬಂದದ್ದೂ ಇದೆ. ತಂದೆ ತಾಯಿಯರು ಗದರಿಸಿ ಮನೆಗೆ ಕರೆದೊಯ್ದದ್ದೂ ಇದೆ. ಜಯೇಂದ್ರರಿಗೆ ಯಕ್ಷಗಾನಾಸಕ್ತಿ ಅಷ್ಟು ತೀವ್ರವಾಗಿತ್ತು. ಧರ್ಮಸ್ಥಳ ಮೇಳದ ಆಟಕ್ಕೆ ಮಾನ್ಯ, ನೀರ್ಚಾಲು ಎಂಬ ಸ್ಥಳಗಳಿಗೆ ಮನೆಯಿಂದ ನಡೆದೇ ಹೋಗುತ್ತಿದ್ದರು. ಎಳವೆಯಲ್ಲೇ ಇವರು ಅರುವ ಕೊರಗಪ್ಪ ಶೆಟ್ಟಿಯವರ ಅಭಿಮಾನಿಯಾಗಿದ್ದರು.

ಆಟ ನೋಡಿ ಬಂದ ಬಳಿಕ ಗೆಳೆಯರೊಂದಿಗೆ ಮನೆಯ ಸಮೀಪ ಅಣಕು ಯಕ್ಷಗಾನ ಪ್ರದರ್ಶನ. ಬೂದಿಯ ನಾಮ ಬಳಿದು, ಹಾಳೆಯಿಂದ ತಯಾರಿಸಿದ ಕಿರೀಟ, ಅಮ್ಮನ ಸೀರೆಯನ್ನೇ ವೇಷಭೂಷಣಗಳನ್ನಾಗಿ ಧರಿಸಿ ಎಲ್ಲರೂ ಕುಣಿದು ಸಂತೋಷಪಡುತ್ತಿದ್ದರು. ಮನೆಯಲ್ಲಿ ಹಿರಿಯರು ನಿದ್ರಿಸಿದ ನಂತರ ಗೆಳೆಯರೊಂದಿಗೆ ತೆರಳಿ ಆಟ  ನೋಡಿದ್ದೂ ಇದೆ. ಹೀಗೆ ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ  ಶ್ರೀ  ಜಯೇಂದ್ರ ಕುಲಾಲ್ ಅವರಿಗೆ ಹುಟ್ಟಿಕೊಂಡಿತ್ತು. ನಾನೂ ಒಬ್ಬ ಕಲಾವಿದನಾಗುವಂತೆ ಅನುಗ್ರಹಿಸು ಎಂದು ದೇವರಲ್ಲಿ ಪ್ರಾರ್ಥಿಸಿದ್ದರಂತೆ.

ಇಚ್ಲಂಪಾಡಿ ಶಾಲೆಯ ವಿದ್ಯಾರ್ಥಿಯಾಗಿರುವಾಗ ಶಾಲೆಯಲ್ಲಿ ಕೋಟಿ ಚೆನ್ನಯ ತುಳು ನಾಟಕದಲ್ಲಿ ಪಯ್ಯ ಬೈದ್ಯ ವೇಷ ಮಾಡುವ ಅವಕಾಶ ಸಿಕ್ಕಿತ್ತು. ಇದು 7 ನೇ ತರಗತಿಯಲ್ಲಿ ಓದುತ್ತಿರುವಾಗ. ಅಲ್ಲದೆ ಮತ್ತೆರಡು ನಾಟಕಗಳಲ್ಲಿ ವೇಷ ಮಾಡಿದ್ದರು. ತಂದೆಯವರ ಅಸೌಖ್ಯದ ಕಾರಣದಿಂದ ಶಾಲೆ ಬಿಡಬೇಕಾಗಿ ಬಂದಿತ್ತು. ಜೀವನ ನಿರ್ವಹಣೆಗಾಗಿ ಒಂದು ವರ್ಷ ಹೋಟೆಲ್ ಕೆಲಸವನ್ನೂ ಮಾಡಿದ್ದರು. ತಂದೆಯವರ ಮರಣಾ ನಂತರ ಮನೆಯ ಹೊಣೆಗಾರಿಕೆ ಜಯೇಂದ್ರರ ಹೆಗಲ ಮೇಲೆ ಬಿದ್ದಿತ್ತು. ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗಿ ಸಂಪಾದಿಸಿ ಮನೆವಾರ್ತೆ ನೋಡಿಕೊಳ್ಳುತ್ತಿದ್ದರು. ಈ ಸಂದರ್ಭಗಳಲ್ಲೂ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು.

ಕಲಾವಿದನಾಗಬೇಕೆಂಬ ಆಸೆಯೂ ಅಧಿಕವಾಗಿತ್ತು. ಚೌಕಿಗೆ ಹೋಗಿ ಕಲಾವಿದರು ಬಣ್ಣ ಹಾಕುವುದನ್ನೂ ವೇಷ ಧರಿಸಿ ಸಿದ್ಧವಾಗುವುದನ್ನೂ ಆಸಕ್ತಿಯಿಂದ ಗಮನಿಸುತ್ತಲೇ ಬೆಳೆದವರರು ಜಯೇಂದ್ರರು. ಇದೆ ಸಂದರ್ಭದಲ್ಲಿ ನಾಟ್ಯ ಕಲಿಯುವ ಅವಕಾಶವು ಒದಗಿ ಬಂದಿತ್ತು. ಕಿದೂರು ದೇವಸ್ಥಾನದಲ್ಲಿ ಶ್ರೀ ಉಂಡೆಮನೆ ಶ್ರೀಕೃಷ್ಣ ಭಟ್ಟರು ನಾಟ್ಯ ತರಬೇತಿಯನ್ನು ನೀಡುತ್ತಿದ್ದರು. ಜಯೇಂದ್ರರು ತರಬೇತಿಗೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಶ್ರೀಕೃಷ್ಣ ಭಟ್ಟರಿಂದ ಕಲಿತರು. ತರಬೇತಿಯ ನಂತರ ಕಿದೂರು ದೇವಸ್ಥಾನದಲ್ಲಿ ಮೊದಲ ಪ್ರದರ್ಶನ. ಅಗ್ರಪೂಜೆ ಪ್ರಸಂಗದಲ್ಲಿ ಸೋಮದತ್ತನಾಗಿ ರಂಗ ಪ್ರವೇಶ.

ಉಂಡೆಮನೆಯವರು ವೇಷ ಮಾಡಲು ನಿರಂತರ ಅವಕಾಶಗಳನ್ನಿತ್ತು ಪ್ರೋತ್ಸಾಹಿಸಿದ್ದರು. ಅಲ್ಲದೆ ನಿನಗೆ ಹಾಸ್ಯದ ವೇಷಗಳನ್ನು ಮಾಡಬಹುದು ಎಂಬ ಸೂಚನೆಯನ್ನೂ ನೀಡಿದರಂತೆ. ಬಳಿಕ ಕುಂಬಳೆ ಶ್ರೀ ಸೇಸಪ್ಪನವರ ಹೇಳಿಕೆಯ ಮೇರೆಗೆ ಉಪ್ಪಳ ಮೇಳಕ್ಕೆ. ಮೊದಲ ದಿನವೇ ಅನಿವಾರ್ಯವಾಗಿ ಹಾಸ್ಯ ಪಾತ್ರವನ್ನು ಮಾಡಬೇಕಾಗಿ ಬಂದಿತ್ತು. ಬಂಬ್ರಾಣ ಕಡಮಣ್ಣಾಯರ ಮನೆಯಲ್ಲಿ ನಡೆದ ಪ್ರದರ್ಶನ. ಶ್ರೀಕೃಷ್ಣ ಲೀಲೆ ಪ್ರಸಂಗದಲ್ಲಿ ವಿಜಯನಾಗಿ ಅಭಿನಯಿಸಿದ್ದರು. ಮೂರು ವರ್ಷಗಳ ಕಾಲ ಉಪ್ಪಳ ಮೇಳದಲ್ಲಿ ಕಲಾಸೇವೆ. ಜತೆಗೆ ಹಗಲು ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಬಳಿಕ ನೀರ್ಚಾಲು ಶ್ರೀ ಅಯ್ಯಪ್ಪ ಭಜನಾ ಮಂದಿರದ ಬಳಿ ನಡೆದ ಆಟದಲ್ಲಿ ಇವರ ವೇಷವನ್ನು ನೋಡಿ ಅಡ್ಯಾರು ಶ್ರೀ ಶಂಕರ ಆಳ್ವರು ಬಪ್ಪನಾಡು ಮೇಳಕ್ಕೆ ಆಹ್ವಾನಿಸಿದ್ದರು. ಕೊಕ್ಕಡ ಈಶ್ವರ ಭಟ್, ಕೊಳ್ಯೂರು ರಾಮಚಂದ್ರ ರಾವ್ ಮೊದಲಾದವರು ಸದ್ರಿ ಮೇಳಕ್ಕೆ ಅತಿಥಿ ಕಲಾವಿದರಾಗಿ ಬರುತ್ತಿದ್ದರು. ಸುಬ್ರಾಯ ಹೊಳ್ಳ, ಧರ್ಮೇಂದ್ರ ಆಚಾರ್ಯ, ತಿಂಬರೆ ತ್ಯಾಂಪಣ್ಣ,  ತಿಂಬರೆ ರಾಮ ಮೊದಲಾದವರ ಒಡನಾಟವೂ ದೊರಕಿತ್ತು. ಕನ್ಯಾನ ಸುಂದರ ಅವರು ಹಾಸ್ಯಗಾರರಾಗಿದ್ದರು. ಜಯೇಂದ್ರರು ಒತ್ತು ಹಾಸ್ಯಗಾರರಾಗಿ ಕಾಣಿಸಿಕೊಂಡರು.

ರಂಗಸ್ಥಳದ ಕೆಲಸ, ಲೈಟಿಂಗ್ಸ್, ವೇಷಗಾರಿಕೆ ಹೀಗೆ ಎಲ್ಲಾ ಕೆಲಸಗಳನ್ನೂ ಮೇಳದ ತಿರುಗಾಟದಲ್ಲಿ ಮಾಡಿದ್ದರು. ಬಪ್ಪನಾಡು ಮೇಳದಲ್ಲಿ 5 ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿ ತಿರುಗಾಟ ನಿಲ್ಲಿಸಿದ್ದರು. ಬಳಿಕ ಊರಲ್ಲಿ ವಿದ್ಯುತ್ ಲೈನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಮಳೆಗೆ ಕೆಲಸ ಮಾಡುತ್ತಿರುವಾಗ ಕಂಬದಿಂದ ಜಾರಿ ಎಡದ ಕೈಯ ನೋವನ್ನೂ ಒಂದು ವರ್ಷ ಅನುಭವಿಸಿದ್ದರು. ಬಳಿಕ ಕೂಡ್ಲು ಮೇಳ, ಹವ್ಯಾಸೀ ತಂಡಗಳಲ್ಲಿ ವೇಷ ಮಾಡುತ್ತಿದ್ದು, ಒಂದು ವರ್ಷ ದೇಂತಡ್ಕ ಮೇಳದಲ್ಲೂ ತಿರುಗಾಟ ನಡೆಸಿದ್ದರು. ಕಳೆದ ವರ್ಷ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಹಾಸ್ಯ ಅಲ್ಲದೆ ಖಳನಾಯಕ, ಪೋಷಕ ಪಾತ್ರಗಳನ್ನೂ ಜಯೇಂದ್ರ ಕುಲಾಲರು ಉತ್ತಮವಾಗಿ ನಿರ್ವಹಿಸುತ್ತಾರೆ. ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಪೂಕಳ, ನಾವಡರು, ನರಹರಿ ಮಾಸ್ತರ್, ಪಾಲೆಚ್ಚಾರು ಅವರುಗಳ ಬಪ್ಪ ಬ್ಯಾರಿಯ ಪಾತ್ರಕ್ಕೆ ಉಸ್ಮಾನ್ ಆಗಿ ಅಭಿನಯಿಸುವ ಅವಕಾಶ ಆಗಿತ್ತು. ಅರುವ ಕೊರಗಪ್ಪ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡ, ಜಪ್ಪು ದಯಾನಂದ ಶೆಟ್ಟಿ, ಸರಪಾಡಿ ಅಶೋಕ ಶೆಟ್ಟಿ ಮೊದಲಾದವರ ಜೊತೆಗೂ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಜಯೇಂದ್ರ ಕುಲಾಲರನ್ನು ಸನ್ಮಾನಿಸಿ ಗೌರವಿಸಿವೆ. ಕುಲಾಲ ಸಂಘದವರು ‘ಕುಲಾಲ ಮುತ್ತು’ ಎಂಬ ಬಿರುದನ್ನೂ ನೀಡಿರುತ್ತಾರೆ. ಮೂಡಬಿದಿರೆಯಲ್ಲಿ ನಡೆದ ಸನ್ಮಾನದಲ್ಲಿ ‘ಕಿದೂರ್ದ ಮುತ್ತು’ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.

ಪ್ರಸಂಗದಲ್ಲಿ ಬರುವ ಎಲ್ಲಾ ಪಾತ್ರಗಳೂ ರಂಗಕ್ಕೆ ಅನಿವಾರ್ಯ. ಯಾವ ಪಾತ್ರವನ್ನೂ ನಗಣ್ಯ ಮಾಡುವಂತಿಲ್ಲ. ಎಲ್ಲಾ ಪಾತ್ರಗಳೂ ಆ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದಾಗ ಮಾತ್ರ ಪ್ರದರ್ಶನವು ಗೆಲ್ಲುತ್ತದೆ. ಹಿರಿಯರನ್ನು ಗೌರವಿಸಿ ಕಿರಿಯರನ್ನು ಪ್ರೀತಿಸುವ ಗುಣವೂ ಕಲಾವಿದರಿಗೆ ಇದ್ದಾಗ ಮೇಳದಲ್ಲಿ ಒಂದು ಕೌಟುಂಬಿಕ ವಾತಾವರಣವು ನಿರ್ಮಾಣವಾಗುತ್ತದೆ. ಇದರಿಂದ ಪ್ರದರ್ಶನಗಳೂ ಯಶಸ್ವಿಯಾಗುತ್ತವೆ ಎಂಬ ಅಭಿಪ್ರಾಯವನ್ನು ಹೊಂದಿರುವ ಇವರು ಕಲಾಜೀವನದಲ್ಲಿಯೂ ಸಂಸಾರಿಕವಾಗಿಯೂ ತೃಪ್ತರು. ಪತ್ನಿ ಪ್ರೇಮಾ. ಜಯೇಂದ್ರ ಕುಲಾಲ್ ಮತ್ತು ಪ್ರೇಮಾ ದಂಪತಿಗಳಿಗೆ ಐವರು ಹೆಣ್ಣು ಮಕ್ಕಳು. ಹಿರಿಯ ಪುತ್ರಿ ವಿದ್ಯಾಲಕ್ಷ್ಮಿ ವಿವಾಹಿತೆ. ದ್ವಿತೀಯ ಪುತ್ರಿ ಅಶ್ವಿನಿ ವಿವಾಹಿತೆ. ನಾಟ್ಯ ಕಲಿತು ವೇಷ ಮಾಡುತ್ತಿದ್ದರು. ತೃತೀಯ ಪುತ್ರಿ ಕು| ಹರ್ಷಿತಾ. ಚತುರ್ಥ ಪುತ್ರಿ ಕು| ಹರ್ಷಿಣಿ ಪಿಯುಸಿ ವಿಧ್ಯಾಭ್ಯಾಸವನ್ನು ಪೂರೈಸಿರುತ್ತಾಳೆ. ಪಂಚಮ ಪುತ್ರಿ ಕು| ಪಂಚಮಿ ಎಸ್.ಎಸ್.ಎಲ್.ಸಿ ಯಲ್ಲಿ 92 ಶೇಕಡಾ ಅಂಕಗಳನ್ನು ಗಳಿಸಿರುತ್ತಾಳೆ. ಕಿದೂರ್ದ ಮುತ್ತು ಶ್ರೀ ಜಯೇಂದ್ರ ಕುಲಾಲರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ.ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅವರಿಗೆ ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ