ಪಿ. ಮುರಲೀಧರ ಆಚಾರ್ಯ ನಿಧನ
ಸಿಂಡಿಕೇಟ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಮೆನೇಜರ್ ಆಗಿ ನಿವೃತ್ತರಾಗಿದ್ದ ಪುತ್ತೂರು ಮುರಲೀಧರ ಆಚಾರ್ಯ (77 ವರ್ಷ) ನಿನ್ನೆ 08.10.2020ರಂದು ನಿಧನರಾದರು. ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದ ಆಜೀವ ಪೋಷಕ ಸದಸ್ಯರಾಗಿದ್ದರು.ಕಲಾ ಪ್ರೇಮಿಯಾದ ಆಚಾರ್ಯರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷರಾದ ಎಂ.ಗಂಗಾಧರ ರಾವ್ ಹಾಗು ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಪಿ. ಮುರಲೀಧರ ಆಚಾರ್ಯ ನಿಧನ
ಅರುವ ಕೊರಗಪ್ಪ ಶೆಟ್ಟಿ (Aruva Koragappa Shetty)
ಅರುವ ಕೊರಗಪ್ಪ ಶೆಟ್ಟಿಯವರ ಜೀವನ ಚರಿತ್ರೆ
ಹೆಸರು: ಶ್ರೀ ಅರುವ ಕೊರಗಪ್ಪ ಶೆಟ್ಟಿ ತಂದೆ: ದಿ| ಸುಬ್ಬಯ್ಯ ಶೆಟ್ಟಿ ತಾಯಿ: ದಿ| ಶಾಂತಮ್ಮ ಶೆಟ್ಟಿ ಪತ್ನಿ: ಶ್ರೀಮತಿ ಮಹಾಲಕ್ಷ್ಮಿ ಮಕ್ಕಳು: ದೇವಿಪ್ರಸಾದ್ ಮತ್ತು ಅರ್ಚನಾ.
ಅರುವ ಕೊರಗಪ್ಪ ಶೆಟ್ಟಿಯವರಜನನ: 1940 ರಲ್ಲಿ ವಯಸ್ಸು: 80 ವರ್ಷಗಳು ವೃತ್ತಿ: ಯಕ್ಷಗಾನ ಕಲಾವಿದ ಮತ್ತು ಕೃಷಿ. ಕಲಾವಿದರಾಗಿ ಅನುಭವ : ಕಟೀಲು ಮೇಳದಲ್ಲಿ 3 ವರ್ಷಗಳು, ಕುತ್ಯಾಳ ಮೇಳ- 2ವರ್ಷಗಳು, ಕೂಡ್ಲು ಮೇಳ- 2 ವರ್ಷ, ಕುಂಡಾವು ಮೇಳ- 2 ವರ್ಷ, ಕರ್ನಾಟಕ ಮೇಳ- 31 ವರ್ಷ, ಮಂಗಳಾದೇವಿ ಮೇಳ- 12 ವರ್ಷ ಎಡನೀರು ಮೇಳ- 1 ವರ್ಷ, ಕದ್ರಿ ಮೇಳ- 2ವರ್ಷ, ಬಪ್ಪನಾಡು ಹಾಗೂ ಇತರ- 8 ವರ್ಷಗಳು
ಒಟ್ಟು ಕಲಾಸೇವೆ: 63 ವರ್ಷಗಳು. ಸನ್ಮಾನ ಪ್ರಶಸ್ತಿಗಳು: ಒಟ್ಟು 400ಕ್ಕಿಂತಲೂ ಅಧಿಕ ಸನ್ಮಾನಗಳನ್ನು ಪಡೆದ ಹೆಗ್ಗಳಿಕೆ ಇವರಿಗಿದೆ. ಕರ್ನಾಟಕ ರಾಜ್ಯ ಪ್ರಶಸ್ತಿ, ಪೇಜಾವರ ಪ್ರಶಸ್ತಿ, ಎಡನೀರು ಪ್ರಶಸ್ತಿ, ಒಡಿಯೂರು ಪ್ರಶಸ್ತಿ, ಮಣಿಲ ಪ್ರಶಸ್ತಿ, ರೋಟರಿ ಪ್ರಶಸ್ತಿ, ಲಯನ್ಸ್ ಪ್ರಶಸ್ತಿ ಮೊದಲಾದುವುಗಳು. ಬಿರುದು ಬಾವಲಿಗಳು: ರಂಗಸ್ಥಳದ ರಾಜ, ಅಭಿನಯ ಭಾರ್ಗವ, ರಂಗಶಿಲ್ಪಿ ಮೊದಲಾದುವುಗಳು. ನೆನಪಿಡುವ ಘಟನೆ ನಡೆದದ್ದು: ದೇರಳಕಟ್ಟೆಯಲ್ಲಿ ‘ದ್ರೌಪದೀ ವಸ್ತ್ರಾಪಹಾರ’ ಆಟದ ಸಂದರ್ಭದಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುವ ಸಂದರ್ಭದಲ್ಲಿ ಮುದುಕಿಯೊಬ್ಬಳು ಚೂರಿಯನ್ನು ತೆಗೆದು ರಂಗಸ್ಥಳದತ್ತ ಎಸೆದಳು. ಇದು ಅರುವ ಕೊರಗಪ್ಪ ಶೆಟ್ಟಿಯವರ ಪಾತ್ರಚಿತ್ರಣದ ನೈಜತೆಯನ್ನು ಪ್ರತಿಬಿಂಬಿಸಿದ ಘಟನೆ. ವಿಶಿಷ್ಟ ಕಾರ್ಯಕ್ರಮ: ಅರುವ ಕೊರಗಪ್ಪ ಶೆಟ್ಟಿಯವರ ದುಶ್ಶಾಸನ ಪಾತ್ರ ಅವರ ಮಾಸ್ಟರ್ ಪೀಸ್. ಅವರು ದುಶ್ಶಾಸನ ಪಾತ್ರ ಮಾಡುತ್ತಾ 50 ವರ್ಷಗಳನ್ನು ಪೂರೈಸಿದಾಗ ದುಶ್ಶಾಸನ – 50 ಎಂಬ ಕಾರ್ಯಕ್ರಮ ನಡೆಯಿತಂತೆ.
ಅರುವ ಕೊರಗಪ್ಪ ಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಸಮಾಜಸೇವೆ : ಪ್ರತಿಷ್ಠಾನದಿಂದ ತುಂಬಾ ಜನರು ಪ್ರಯೋಜನ ಪಡೆದಿದ್ದಾರೆ. ವಿವಾಹಯೋಗ್ಯರಾದ ಸುಮಾರು 75 ಹೆಣ್ಣುಮಕ್ಕಳ ವಿವಾಹಕ್ಕೆ ಧನಸಹಾಯ ಮಾಡಿದ್ದಾರೆ. ಸುಮಾರು 75 ಕಲಾವಿದರಿಗೆ ನಿಧಿಸಹಿತ ಸನ್ಮಾನ ಮಾಡಿದ್ದಾರೆ. ಸುಮಾರು ಆರೇಳು ಅಶಕ್ತ ಕಲಾವಿದರಿಗೆ ನಿಧಿ ಸಮರ್ಪಿಸಿದ್ದಾರೆ. ಹಲವಾರು ಮಕ್ಕಳಿಗೆ ವಿದ್ಯಾರ್ಥಿವೇತನವನ್ನೂ ನೀಡುತ್ತಿದ್ದಾರೆ.
ಪುತ್ತೂರು ನಾರಾಯಣ ಹೆಗ್ಡೆ (Puttur Narayana Hegde)
ಪುತ್ತೂರು ನಾರಾಯಣ ಹೆಗ್ಡೆಯವರ ಜೀವನ ಚರಿತ್ರೆ
ಹೆಸರು: ಪುತ್ತೂರು ನಾರಾಯಣ ಹೆಗ್ಡೆ
ವೃತ್ತಿ: ಯಕ್ಷಗಾನ ಕಲಾವಿದತಂದೆ : ಪುತ್ತೂರು ಸುಬ್ರಾಯ ಹೆಗಡೆ.
ತಾಯಿ : ಸೀತಮ್ಮ
ಒಡಹುಟ್ಟಿದವರು : ದಾಸಪ್ಪ ಹೆಗಡೆ (ಅಣ್ಣ) ಶೇಷಮ್ಮ (ಅಕ್ಕ).
ಪತ್ನಿ : ಸಂಜೀವಿನಿ.
ಮಕ್ಕಳು : ಮೂರು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು.
ಹುಟ್ಟಿದ್ದು : ಪುತ್ತೂರಿನ ಬಪ್ಪಳಿಗೆ ಎಂಬಲ್ಲಿ.
ವಿದ್ಯಾಭ್ಯಾಸ : ಮೂರನೇ ತರಗತಿ.
ಅನುಭವ : ಸ್ವಲ್ಪ ಸಮಯ ಅರಣ್ಯ ರಕ್ಷಕನಾಗಿ.
ಕಲಾವಿದನಾಗಿ : ಕೂಡ್ಲು ಮೇಳದಲ್ಲಿ ಸುಮಾರು ಏಳೆಂಟು ವರ್ಷ, ಸುರತ್ಕಲ್ ಮೇಳದಲ್ಲಿ ಒಂದು ವರ್ಷ. ಆಮೇಲೆ ಸುಮಾರು 35 ವರ್ಷಗಳು ಧರ್ಮಸ್ಥಳ ಮೇಳದಲ್ಲಿ. ನಿಧನ: 1992
ಗಂಡು ಮಕ್ಕಳಲ್ಲಿ ಮೊದಲನೆಯವರು ಖ್ಯಾತ ಯಕ್ಷಗಾನ ಕಲಾವಿದ ದಿ|ಚಂದ್ರಶೇಖರ ಹೆಗ್ಡೆ. ಶ್ರೀ ದೇವರಾಜ ಹೆಗ್ಡೆ, ಕಲಾವಿದರೂ ಹೌದು. ಧರ್ಮಸ್ಥಳ ಎಸ್.ಡಿ.ಎಂ. ಲಾ ಕಾಲೇಜು, ಮಂಗಳೂರು ಇಲ್ಲಿ ಉದ್ಯೋಗಿ. ಶ್ರೀ ಗಿರೀಶ್ ಹೆಗ್ಡೆ, ಕಲಾವಿದರು ಮತ್ತು ಶ್ರೀ ಧರ್ಮಸ್ಥಳ ಮೇಳದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪುತ್ತೂರು ನಾರಾಯಣ ಹೆಗ್ಡೆಯವರ ತಾಯಿ ಗರ್ಭಿಣಿಯಾಗಿರುವಾಗಲೇ ತಂದೆ ಸುಬ್ರಾಯ ಹೆಗಡೆಯವರು ತೀರಿ ಹೋಗಿದ್ದರು. ಇವರನ್ನು ಪ್ರಸವಿಸಿದ ನಂತರ ಮೂರೇ ತಿಂಗಳಲ್ಲಿ ತಾಯಿ ಕೂಡಾ ಇಹಲೋಕವನ್ನು ತ್ಯಜಿಸಿದ್ದರು. ಅಕ್ಕ ಶೇಷಮ್ಮನ ಆರೈಕೆಯಲ್ಲೇ ನಾರಾಯಣ ಬೆಳೆಯಬೇಕಾಯಿತು. ರಾಗಿಕುಮೇರಿ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಕಲಿಯುವಿಕೆಯನ್ನು ನಿಲ್ಲಿಸಬೇಕಾಗಿ ಬಂತು. ಆಮೇಲೆ ಆಟ ನೋಡುವ ಆಸಕ್ತಿ ಚಪಲಗಳಿತ್ತು. 13ನೇ ವಯಸ್ಸಿನಲ್ಲಿಯೇ ಮನೆಯವರೊಂದಿಗೆ ಮುನಿಸಿಕೊಂಡು ಮಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದರು. ಆಮೇಲೆ ಕೆಲವು ಕಡೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡಿದ್ದರು. ಶಿರಾಡಿ, ನಾರಾವಿ ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡಿದರು. ಆಟದ ಆಸಕ್ತಿಯಿಂದ ಆಟ-ಕೂಟಗಳನ್ನು ಬಿಡದೆ ನೋಡುತ್ತಿದ್ದರು.ಯಕ್ಷಗಾನದ ಆಸಕ್ತಿಯಿಂದಾಗಿ ಪೆರ್ಣಂಕಿಲ ಮೇಳದಲ್ಲಿ ಪೆಟ್ಟಿಗೆ ಹೊರುವ ಕೆಲಸಕ್ಕೆ ಚಿಕ್ಕಪ್ಪ ದೇವಪ್ಪ ಹೆಗಡೆಯವರು ಸೇರಿಸಿದರು. ಮೇಳದ ತಿರುಗಾಟದ ನಂತರ ಪುನಃ Guard ಆಗಿ ಕೆಲಸ ಇರುತ್ತಿತ್ತು. ನಂತರ ಮೂಲ್ಕಿ ಮೇಳಕ್ಕೆ ಸೇರಿದರು. ಸಣ್ಣ ತಿಮ್ಮಪ್ಪು ಎಂಬವರ ಮಾರ್ಗದರ್ಶನ ಅವರಿಗಾಗಿತ್ತು. ಅವರ ವೇಷಗಳಲ್ಲಿ ಸಣ್ಣ ತಿಮ್ಮಪ್ಪು ಅವರ ಛಾಯೆಯಿತ್ತಂತೆ. ಆದರೆ ಕ್ರಮೇಣ ಪುತ್ತೂರು ನಾರಾಯಣ ಹೆಗ್ಡೆಯವರು ತನ್ನದೇ ಸ್ವಂತ ಶೈಲಿಯನ್ನು ರೂಢಿಸಿಕೊಂಡು ಪ್ರಸಿದ್ಧಿಯನ್ನು ಪಡೆದರು.ಮೂಲ್ಕಿ ಮೇಳದಲ್ಲಿ ಸುಮಾರು ಏಳೆಂಟು ವರ್ಷ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಕೆಲವರು ಸಮಸ್ಯೆಗಳಿಂದ ಮೂಲ್ಕಿ ಮೇಳವನ್ನು ಬಿಡಬೇಕಾಗಿ ಬಂತು. ಆಮೇಲೆ ಕಸ್ತೂರಿ ಪೈಗಳ ಕರೆಯಂತೆ ಸುರತ್ಕಲ್ ಮೇಳವನ್ನು ಸೇರಿದರು. ಆಮೇಲೆ ಪೂಜ್ಯ ಹೆಗಡೆಯವರು ಅವರನ್ನು ಧರ್ಮಸ್ಥಳ ಮೇಳಕ್ಕೆ ಕರೆಸಿಕೊಂಡರು. ಆಮೇಲೆ ಸುಮಾರು 30 ಕ್ಕೂ ಹೆಚ್ಚು ವರ್ಷಗಳಷ್ಟು ಕಾಲ ಧರ್ಮಸ್ಥಳ ಮೇಳದಲ್ಲೇ ಕಲಾ ವ್ಯವಸಾಯ ಮಾಡಿದರು. ಪುತ್ತೂರು ನಾರಾಯಣ ಹೆಗ್ಡೆಯವರು 1992ರಲ್ಲಿ ನಿಧನ ಹೊಂದಿದರು.
ಸುದೀಪ್
‘ಸುದೀಪ್’ ಸಿನಿಮಾ ಪ್ರಿಯರೆಲ್ಲರೂ ಇಷ್ಟಪಡುವ ನಟ. ಕಿಚ್ಚ ಎಂಬ ಹೆಸರಿನಿಂದ ಖ್ಯಾತರಾಗಿ ಗುರುತಿಸಲ್ಪಟ್ಟ ಸುದೀಪ್ 1973ನೇ ಇಸವಿಯ ಸೆಪ್ಟೆಂಬರ್ 2ರಂದು ಜನಿಸಿದರು. ಪೂರ್ಣ ಹಸರು ಸುದೀಪ್ ಸಂಜೀವ್. ಇವರ ತಂದೆ ಶಿವಮೊಗ್ಗ ಜಿಲ್ಲೆಯ ಸಂಜೀವ್ ಮಂಜಪ್ಪ. ತಾಯಿ ಶ್ರೀಮತಿ ಸರೋಜ ಸಂಜೀವ್. ಅಭಿಮಾನಿಗಳ ಹಾಗೂ ಪ್ರತಿಯೊಬ್ಬರ ಬಾಯಿಯಲ್ಲಿಯೂ ಕಿಚ್ಚ ಸುದೀಪ್ ಎಂದೇ ಜನಜನಿತವಾಗಿದ್ದಾರೆ. ಸುದೀಪ್ ಪತ್ನಿ ಪ್ರಿಯಾ ರಾಧಾಕೃಷ್ಣನ್. 2001ರಲ್ಲಿ ವಿವಾಹವಾದ ಸುದೀಪ್-ಪ್ರಿಯಾ ದಂಪತಿಗೆ ಸಾನ್ವಿ ಎಂಬ ಮಗಳಿದ್ದಾಳೆ.

ಶಿವಮೊಗ್ಗದಲ್ಲಿ ಜನಿಸಿದ ಸುದೀಪ್ ಬೆಂಗಳೂರಿನ ದಯಾನಂದ್ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. ಕಾಲೇಜು ದಿನಗಳಲ್ಲೇ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ಆ ದಿನಗಳಲ್ಲೇ ನಟನಾ ಕೌಶಲ್ಯವನ್ನು ಹೊಂದಿದ್ದರು. ಆಮೇಲೆ ಮುಂಬಯಿ ನಗರದ ತನೇಜಾ ಸ್ಕೂಲ್ ಆಫ್ ಆಕ್ಟಿಂಗ್ ನಲ್ಲಿ ತಮ್ಮ ತರಬೇತಿ ಪೂರೈಸಿದರು. ತಮ್ಮ ಮೊದಲ ಪ್ರಯತ್ನದಲ್ಲಿ ಕಿರುತೆರೆಯ ಧಾರಾವಾಹಿ ‘ಪ್ರೇಮದ ಕಾದಂಬರಿ’ ಯಲ್ಲಿ ನಟಿಸಿದ ಸುದೀಪ್ ಆಮೇಲೆ ‘ತಾಯವ್ವ’ ಸಿನಿಮಾದ ಮೂಲಕ ರಜತಪರದೆಗೆ ಲಗ್ಗೆಯಿಟ್ಟರು. ಆಮೇಲೆ 2000 ದಲ್ಲಿ ಸುನಿಲ್ ಕುಮಾರ್ ದೇಸಾಯಿ ಅವರ ‘ಸ್ಪರ್ಶ’ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ಯಶಸ್ಸು ಕಂಡರು. 2001 ರಲ್ಲಿ ಅಭಿನಯಿಸಿದ ಹುಚ್ಚ ಎಂಬ ಸಿನಿಮಾ ಸುದೀಪ್ ಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಆಮೇಲೆ ಹುಚ್ಚ, ಕಿಚ್ಚ, ಪಾರ್ಥ, ಮೈ ಆಟೋಗ್ರಾಫ್ ಮೊದಲಾದ ಹಿಟ್ ಚಿತ್ರಗಳನ್ನು ಒಂದಾದ ಮೇಲೆ ಒಂದರಂತೆ ನೀಡುತ್ತಾ ಬಂದರು. ಅಲ್ಲಿಂದೆ ಈ ವರೆಗೆ ಸಿನಿಮಾ ಕ್ಷೇತ್ರದಲ್ಲಿ ಸುದೀಪ್ ಹಿಂತಿರುಗಿ ನೋಡಿದ್ದೇ ಇಲ್ಲ.

ಸುದೀಪ್ ಅಭಿನಯಿಸಿದ ಕನ್ನಡ ಚಿತ್ರಗಳು: ತಾಯವ್ವ, ಪ್ರತ್ಯರ್ಥ, ಸ್ಪರ್ಷ, ಹುಚ್ಚ, ಕಿಚ್ಚ, ಪಾರ್ಥ, ಧಮ್ ,ನಂದಿ, ಚಂದು, ರಂಗ – SSLC, ಸ್ವಾತಿಮುತ್ತು, ಮೈ ಆಟೋಗ್ರಾಫ್, ವಾಲಿ, ನಮ್ಮಣ್ಣ,ಗುನ್ನ, ತುಂಟಾಟ, ಕೇರ್ ಆಫ್ ಫುಟ್ ಪಾತ್, ಮಿ.ತೀರ್ಥ, ಜಸ್ಟ್ ಮಾತ್ ಮಾತಲ್ಲಿ, ಮಸ್ತ್ ಮಜಾ ಮಾಡಿ, ಸೈ, ನಲ್ಲ, ತಿರುಪತಿ , ಕಾಶಿ ಫ್ರಮ್ ವಿಲೇಜ್, ಮಹಾರಾಜ, ನಂ ೭೩ ಶಾಂತಿನಿವಾಸ, ಮಾತಾಡ್ ಮಾತಾಡ್ ಮಲ್ಲಿಗೆ, ಕಿಚ್ಚ ಹುಚ್ಚ, ವೀರ ಪರಂಪರೆ, ವರದನಾಯಕ, ಮುಕುಂದ ಮುರಾರಿ, ರಾಜು ಕನ್ನಡ ಮೀಡಿಯಮ್, ಕಿಚ್ಚು, ಗೂಳಿ, ಕಾಮಣ್ಣನ ಮಕ್ಕಳು, ದಿ ವಿಲನ್, ಪೈಲ್ವಾನ್, ಕೋಟಿಗೊಬ್ಬ 3, ಈ ಶತಮಾನದ, ವೀರ ಮದಕರಿ, ಮುಸ್ಸಂಜೆ ಮಾತು, ಕೆಂಪೇಗೌಡ, ವಿಷ್ಣುವರ್ಧನ, ಬಚ್ಚನ್, ಮಾಣಿಕ್ಯ, ರನ್ನ, ಕೋಟಿಗೊಬ್ಬ-2, ಹೆಬ್ಬುಲಿ.
ನಟಿಸಿದ ಪರಭಾಷಾ ಚಿತ್ರಗಳು: ಫೂಂಕ್, ಫೂಂಕ್ ೨, ರಣ್, ರಕ್ತ ಚರಿತ್ರ ೧, ರಕ್ತ ಚರಿತ್ರ ೨, ಮಕ್ಕಿ, ದಬಂಗ್ ೩ (ಎಲ್ಲವೂ ಹಿಂದಿ), ಈಗ(ತೆಲುಗು), ಪುಲಿ (ತಮಿಳು), ಸೈರಾ ನರಸಿಂಹ ರೆಡ್ಡಿ, ಬಾಹುಬಲಿ.

ಪ್ರಶಸ್ತಿಗಳು: ೨೦೦೧ರಿಂದ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. (ಚಿತ್ರಗಳು: ಹುಚ್ಚ, ನಂದಿ, ಸ್ವಾತಿಮುತ್ತು) 2001ರಲ್ಲಿ ಅತ್ತ್ಯುತ್ತಮ ನಾಯಕ – ಹುಚ್ಚ – ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ೨೦೦೨ರಲ್ಲಿ ಅತ್ತ್ಯುತ್ತಮ ನಾಯಕ – ನಂದಿ – ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ 2003ರಲ್ಲಿ ಅತ್ತ್ಯುತ್ತಮ ನಾಯಕ – ಸ್ವಾತಿಮುತ್ತು – ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ಆಮೇಲೆ ಅತ್ತ್ಯುತ್ತಮ ಪೋಷಕ ನಟ – ಈಗ (2003)
2002ರಲ್ಲಿ ಅತ್ಯುತ್ತಮ ನಾಯಕ ಎಂದು ರಾಜ್ಯ ಚಲನಚಿತ್ರ ಪ್ರಶಸ್ತಿ,ಅತ್ತ್ಯುತ್ತಮ ಖಳನಾಯಕ – ಈಗ (2012) ಎಂದು ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಸೈಮಾ),
ಅತ್ತ್ಯುತ್ತಮ ಖಳನಾಯಕ – ಈಗ (2012) – ತೆಲುಗಿನ ಮಾ tv ಚಾನೆಲ್ ನ ಸಿನಿಮಾ ಪ್ರಶಸ್ತಿ
ಅತ್ತ್ಯುಮ ಖಳನಾಯಕ – (ನಾಣಿ)ಈಗ ಚಿತ್ರದ ತಮಿಳು ಡಬ್ – ತಮಿಳಿನ ಸ್ಟಾರ್ ವಿಜಯ್ ಚಾನೆಲ್ ನ ವಿಜಯ್ ಪ್ರಶಸ್ತಿ

ಅತ್ಯುತ್ತಮ ಖಳನಾಯಕ ನಾಣಿ (ಈಗ) – ಎಡಿಸನ್ ಪ್ರಶಸ್ತಿ
ಅತ್ತ್ಯುತ್ತಮ ನಾಯಕ – (ವಿಷ್ಣುವರ್ಧನ) (2012) ಮತ್ತು ಅತ್ತ್ಯುತ್ತಮ ಖಳನಾಯಕ – (ಈಗ) – ಟೈಮ್ಸ್ ಫಿಲ್ಮ್ಸ್ ಪ್ರಶಸ್ತಿ,ಅತ್ತ್ಯುತ್ತಮ ನಾಯಕ (ಸೌತ್) – ರನ್ನ (2015)- IBN ಲೈವ್ ಮೂವಿ ಪ್ರಶಸ್ತಿ, ಎಂಟರ್ಟೈನರ್ ಆಫ್ ದಿ ಡಿಕೇಡ್ – ಜೀ ದಕ್ಷಿಣ ಸಂಭ್ರಮ , ವಿಡಿಯೋಕಾನ್ ಸುಪ್ರಭಾತ ಪ್ರಶಸ್ತಿ- ಸ್ಪರ್ಶ, ಹಲೋ ಗಾಂಧಿನಗರ ಪ್ರಶಸ್ತಿ – ಸ್ವಾತಿ ಮುತ್ತು ,
ಎಸಿಯಾನೆಟ್ ಕಾವೇರಿ ಪ್ರಶಸ್ತಿ – ಸ್ಪರ್ಶ,
ಟಿವಿ 9 ಸ್ಯಾಂಡಲವುಡ್ ಸ್ಟಾರ್ ಫ್ರಶಸ್ತಿ – ವಿಷ್ಣುವರ್ಧನ,
ಜೀ ಕನ್ನಡ ಇನ್ನೋವೇಟಿವ್ ಫಿಲ್ಮ ಪ್ರಶಸ್ತಿ -ವೀರ ಮದಕರಿ ,

ಅತ್ತ್ಯುತ್ತಮ ಖಳನಾಯಕ – ಈಗ (2012)-ತೆಲುಗು ಚಿತ್ರರಂಗದ ಪ್ರತಿಷ್ಠಿತ ನಂದಿ ಪ್ರಶಸ್ತಿ,
ನೆಚ್ಚಿನ ನಾಯಕ – ವೀರ ಮದಕರಿ (2009) – ಸುವರ್ಣ ಫಿಲ್ಮ್ ಪ್ರಶಸ್ತಿ
ಅತ್ತ್ಯುತ್ತಮ ನಾಯಕ – ವಿಷ್ಣುವರ್ಧನ (2011) – ಸುವರ್ಣ ಫಿಲ್ಮ್ ಪ್ರಶಸ್ತಿ
ಅತ್ತ್ಯುತ್ತಮ ಖಳನಾಯಕ – ಈಗ (2012) – ಟೊರೊಂಟೊ ಅಫ್ಟರ್ ಡಾರ್ಕ್ ಫಿಲ್ಮ್ ಫೆಸ್ಟಿವಲ್,
ಅತ್ತ್ಯುತ್ತಮ ಸಾಹಸ ದೃಶ್ಯ – ಈಗ (ಸುದೀಪ್ v/s ಈಗ ) – ಟೊರೊಂಟೊ ಅಫ್ಟರ್ ಡಾರ್ಕ್ ಫಿಲ್ಮ್ ಫೆಸ್ಟಿವಲ್, ಅತ್ತ್ಯುತ್ತಮ ಪೋಷಕ ನಟ – ಈಗ (2012) – ಮ್ಯಾಡ್ರಿಡ್ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ,
2013 ರಿಂದ, ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದಾರೆ.
ಯಕ್ಷಗಾನ ಕಲಾವಿದರಿಗೆ ಕೊರೋನಾ ಪರೀಕ್ಷೆ ಕಡ್ಡಾಯ – ಯಕ್ಷಗಾನ ಪ್ರದರ್ಶನಕ್ಕೆ ಹಸಿರು ನಿಶಾನೆ
ಯಕ್ಷಗಾನ ಆರಂಭಕ್ಕೆ ಈಗ ದಿನಗಣನೆ ಆರಂಭವಾಗಿದೆ. ಯಕ್ಷಪ್ರಿಯರಿಗೆ ಇದು ಸಂತೋಷದ ಸುದ್ದಿ. ನಿನ್ನೆ ಮಂಗಳೂರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೀಗೊಂದು ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಜರಾಯಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ನಡೆದ ನಿರ್ಣಯದ ಪ್ರಕಾರ ನವೆಂಬರ್ ಅಂತ್ಯಕ್ಕೆ ಕೆಲವೊಂದು ನೀತಿ ನಿಯಮಾವಳಿಗಳ ಪ್ರಕಾರ ಯಕ್ಷಗಾನ ಪ್ರದರ್ಶನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಮತಿ ನೀಡೆಯಲಾಗಿದೆ. ಮಾರ್ಚ್ 2020ರಲ್ಲಿ ಕೊರೋನಾ ಪ್ರಸಾರದ ಭೀತಿಯಲ್ಲಿ ಅನಿವಾರ್ಯವಾಗಿ ಪ್ರದರ್ಶನಗಳನ್ನು ನಿಲ್ಲಿಸಿದ್ದ ಯಕ್ಷಗಾನ ಮೇಳಗಳು ಒಂಭತ್ತು ತಿಂಗಳುಗಳ ನಂತರ ನವೆಂಬರ್ ಅಂತ್ಯಕ್ಕೆ ತಿರುಗಾಟಕ್ಕೆ ಹೊರಡುವುದು ಖಚಿತ ಎಂದು ಭಾವಿಸಲಾಗಿದೆ.

‘ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರು ತಮ್ಮ ಕೆಲಸವನ್ನು ಕಳೆದುಕೊಂಡು ಜೀವನ ನಡೆಸಲು ಕಷ್ಟಪಡಬಾರದು. ಆದುದರಿಂದ ಎಲ್ಲಾ ರೀತಿಯ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನವೆಂಬರ್ ಅಂತ್ಯಕ್ಕೆ ಯಕ್ಷಗಾನ ಪ್ರಾರಂಭಿಸಲು ಅನುಮತಿ ನೀಡಲಾಗುವುದು’ ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು. ಯಕ್ಷಗಾನ ಕಲಾವಿದರಿಗೆ ಕೊರೋನಾ ಪರೀಕ್ಷೆ ಇನ್ನು ಕಡ್ಡಾಯವಾಗಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆಯವರು ಕಲಾವಿದರೆಲ್ಲರ ಮಾಹಿತಿ ಪಡೆದು ದಾಖಲಿಸಬೇಕು. ಆರೋಗ್ಯ ಇಲಾಖೆಯವರ ವತಿಯಿಂದ ಸರಕಾರದ ಮಾರ್ಗಸೂಚಿಯಂತೆ ಎಲ್ಲ ಕಲಾವಿದರೂ ಯಕ್ಷಗಾನ ಆರಂಭಕ್ಕೆ ಮುನ್ನ ಕೋವಿದ್ -19 ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಯಕ್ಷಗಾನ ಪ್ರದರ್ಶನಗಳು ಆರಂಭವಾದ ನಂತರವೂ ಪ್ರತಿ ವಾರವೂ ಮೇಳಗಳಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಿದರು. ಬಯಲು ಪ್ರದೇಶಗಳಲ್ಲಿ ಯಕ್ಷಗಾನ ಆರಂಭವಾಗುವ ಮುನ್ನ ಅಥವಾ ಜನ ಸೇರುವ ಮುನ್ನ ಸ್ಯಾನಿಟೈಜ್ ಮಾಡಬೇಕು. 200 ಜನ ಪ್ರೇಕ್ಷಕರಿಗಿಂತ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಕಟೀಲು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡುತ್ತಾ, ಕಟೀಲಿನ ಎಲ್ಲಾ ಆರು ಮೇಳಗಳು ನಿಗದಿತ ಸಮಯಕ್ಕೆ ಪ್ರದರ್ಶನಕ್ಕೆ ಹೊರಡುತ್ತವೆ ಎಂದೂ ಆ ಬಗ್ಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆಯೆಂದೂ ತಿಳಿಸಿದರು. ಉಜಿರೆ ಅಶೋಕ ಭಟ್ಟರು ಮಾತನಾಡುತ್ತಾ ಕೊರೋನಾ ಕಾರಣದಿಂದ ಯಕ್ಷಗಾನ ಕಲಾವಿದರ ಸಂಕಷ್ಟ ಮತ್ತು ಸವಾಲುಗಳನ್ನು ವಿವರಿಸಿದರು. ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ವೆಂಕಟೇಶ್, ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ರಾಜೇಶ್, ಕಲಾವಿದರ ಪರವಾಗಿ ಪಟ್ಲ ಸತೀಶ್ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ ಹಾಗೂ ಸೀತಾರಾಮ್ ಕುಮಾರ್ ಉಪಸ್ಥಿತರಿದ್ದರು.
ಯಕ್ಷರಂಗ ಕಂಡ ವಿಸ್ಮಯ – ಎಂಪೆಕಟ್ಟೆ ರಾಮಯ್ಯ ರೈ (Empekatte Ramayya Rai)
ಯಾವುದೇ ಕಲಾಪ್ರಾಕಾರಗಳೇ ಇರಲಿ ಅಥವಾ ಒಂದು ಒಲಿಂಪಿಕ್ಸ್, ವಿಶ್ವಕಪ್ ಗಳಂತಹಾ ಆಟಗಳೇ ಇರಲಿ, ಅಥವಾ ಸಂಶೋಧನೆ, ಯುದ್ಧಗಳೇ ಇರಲಿ ಎಲ್ಲರೂ ಒಂದು ತಂಡವಾಗಿ (Team Work) ಕೆಲಸ ಮಾಡಿದಾಗ ಮಾತ್ರ ಅಲ್ಲಿ ಯಶಸ್ಸು ಬೇಗನೆ ಸಿಗಲು ಸಾಧ್ಯ.
ತನ್ನ ಸಾಮರ್ಥ್ಯವನ್ನು ಪ್ರಕಟಪಡಿಸುವುದರ ಜೊತೆಗೆ ಇನ್ನೊಬ್ಬರನ್ನು ಯಶಸ್ಸಿನತ್ತ ಪ್ರೇರೇಪಿಸುವ ಒಳ್ಳೆಯತನವೇ ಮುಖ್ಯವಾಗಿ ಗುರುತಿಸಲ್ಪಡುವ ವಿಚಾರ. ತಾನು ಸೋತು ಒಟ್ಟು ಸನ್ನಿವೇಶವನ್ನು ಗೆಲ್ಲಿಸುವ ಕೆಲವು ವ್ಯಕ್ತಿತ್ವಗಳನ್ನಾದರೂ ನಾವು ಗಮನಿಸಬಹುದು. ಅಂತಹವರಲ್ಲಿ ಯಕ್ಷಗಾನದ ವಿಶಿಷ್ಟ ಶೈಲಿಯ ಕಲಾವಿದ ಎಂಪೆಕಟ್ಟೆ ರಾಮಯ್ಯ ರೈಗಳು ಒಬ್ಬರು. ಎಂಪೆಕಟ್ಟೆ ರಾಮಯ್ಯ ರೈಗಳು ನಮಗೆ ಇಷ್ಟವಾಗುವುದು ಇದೇ ಕಾರಣಕ್ಕೆ.
ಇಂದಿನ ಕಲಾವಿದರು ಎಂಪೆಕಟ್ಟೆಯವರ ಈ ಆದರ್ಶಗಳನ್ನು ಗೌರವಿಸಬೇಕಾದ ಹಾಗೂ ಅನುಸರಿಸಬೇಕಾದ ಅವಶ್ಯಕತೆ ತುಂಬಾ ಇದೆ. ಎಂಪೆಕಟ್ಟೆ ರಾಮಯ್ಯ ರೈಗಳು ಇಂದು ನಮ್ಮೊಡನಿಲ್ಲದಿದ್ದರೂ ಕಲಾವಿದನಾಗಿ ಅವರು ಏರಿದ ಎತ್ತರ ಮತ್ತು ರಂಗದಲ್ಲಿ ಅವರ ಪ್ರದರ್ಶನ ಎಂದಿಗೂ ಮೌಲ್ಯಯುತವಾಗಿರುತ್ತದೆ ಹಾಗೂ ಗೌರವಿಸಲ್ಪಡುತ್ತದೆ.
ಯಕ್ಷಗಾನದ ಇತಿಹಾಸ, ಆಗುಹೋಗುಗಳ ಬಗ್ಗೆ ಮಾತಾಡುವಾಗ, ನಡುವೆ ಇವರ ಹೆಸರೊಂದು ಉಲ್ಲೇಖಿಸದಿದ್ದರೆ ಆ ಮಾತುಕತೆಗಳು ಅರ್ಥ ಕಳೆದುಕೊಳ್ಳುತ್ತವೆ. ಶೇಣಿ, ಸಾಮಗರಾದಿಯಾಗಿ ಹಲವಾರು ಕಲಾಕೋವಿದರ ಪಾಂಡಿತ್ಯಪೂರ್ಣ ಮಾತುಗಾರಿಕೆ ಹಾಗೂ ಧಿಗಿಣಗಳಿಂದೊಡಗೂಡಿದ ಮತ್ತು ಅಪೂರ್ವ ನೃತ್ಯಕೌಶಲದ ಕಲಾವಿದರ ಪಾಂಡಿತ್ಯ ಪ್ರದರ್ಶನ. ಇವರೆಲ್ಲರ ನಡುವೆ ಎಂಪೆಕಟ್ಟೆಯವರದು ಪ್ರತ್ಯೇಕವಾಗಿ ನಿಲ್ಲುವ ಪ್ರದರ್ಶನ .
ಕಲಾಜಗತ್ತಿನಲ್ಲಿ ಮುಂದಿನ ಪೀಳಿಗೆಯವರು ನೆನಪಿನಲ್ಲಿಡುವಂತೆ ಯಕ್ಷಗಾನ ಲೋಕದಲ್ಲಿ ತನ್ನತನದ ಬೀಜವನ್ನು ಬಿತ್ತಿದರು. ದೇವೇಂದ್ರ’’ನ ಪಾತ್ರದಲ್ಲಿ ಎಂಪೆಕಟ್ಟೆಯವರಷ್ಟು ಪ್ರಭಾವಶಾಲಿಯಾಗಿ ನಿರ್ವಹಿಸುವವರು ಮತ್ತೊಬ್ಬರಿಲ್ಲ. ಸಮುದ್ರಮಥನದ ದೇವೇಂದ್ರ ಎಂಪೆಕಟ್ಟೆ ರಾಮಯ್ಯ ರೈಗಳಿಗೆ ಹೆಸರು ತಂದುಕೊಟ್ಟ ಪಾತ್ರ. ಅದು ಅವರ ಮಾಸ್ಟರ್ ಪೀಸ್. ಅದರಂತೆಯೇ ತ್ರಿಪುರ ಮಥನದ ದೇವೇಂದ್ರ ಕೂಡಾ. ಒಡ್ಡೋಲಗದ ದೇವೇಂದ್ರನ ಪಾತ್ರವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸುವುದರಲ್ಲಿ ಎಂಪೆಕಟ್ಟೆಯವರದು ಎತ್ತಿದ ಕೈ.
ಎಂಪೆಕಟ್ಟೆಯವರು ಒಮ್ಮೆ ಮಾಡಿದ ಪಾತ್ರವನ್ನು ನೋಡಿದ ಪ್ರೇಕ್ಷಕರಿಗೆ ಅದೇ ಪಾತ್ರವನ್ನು ಬೇರೆ ಕಲಾವಿದರು ಮಾಡಿದಾಗ ಅಷ್ಟು ಪರಿಣಾಮಕಾರಿ ಎಂದೆನಿಸುತ್ತಿರಲಿಲ್ಲ. ಆದುದರಿಂದ ಆ ಕಾಲದಲ್ಲಿ ಅವರ ಅನುಪಸ್ಥಿತಿಯಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಮಾಡುವುದು ಬೇರೆಯವರಿಗೆ ದೊಡ್ಡ ಸವಾಲೇ ಆಗಿತ್ತು.
ಎಂಪೆಕಟ್ಟೆಯವರ ಮಾತುಗಾರಿಕೆ ಕೆಲವರಿಗೆ ಪಾತ್ರದ ಮತ್ತು ಸಂದರ್ಭದ ಔಚಿತ್ಯವನ್ನು ಮೀರಿದಂತೆ ಎಂದು ಅನಿಸಿದರೂ ಕೆಲವೊಮ್ಮೆ ಮಾತಿನ ಮಲ್ಲರ ನಡುವಿನ ಬಿಗು ಸನ್ನಿವೇಶದಲ್ಲಿ ಅವರ ವಿತಂಡ ವಾದವು ಪರಿಸ್ಥಿತಿಯನ್ನು ತಿಳಿಗೊಳಿಸಲು ಸಹಾಯಕವಾಗುತ್ತಿತ್ತು. ಶೇಣಿ, ಸಾಮಗ, ಸುಂದರ ರಾಯರೇ ಮೊದಲಾದವರು ರೈಗಳ ಮಾತಿಗೆ ನಕ್ಕು ಸುಮ್ಮನಾಗುತ್ತಾರೆ. ಎಂಪೆಕಟ್ಟೆ ಏರು ಪದ್ಯದ ಕುಣಿತದ ಶೈಲಿ ಬಹಳ ಆಕರ್ಷಕ. ಅಂತಹ ಆಕರ್ಷಕ ಶೈಲಿ ಈಗಿನ ಯಕ್ಷಗಾನದಲ್ಲಿ ಮಾಯವಾಗಿರುವುದು ಕಂಡುಬರುತ್ತದೆ.
ಆ ಶೈಲಿಯನ್ನು ಎಂಪೆಕಟ್ಟೆಯವರೇ ಹುಟ್ಟು ಹಾಕಿದರು ಎಂಬುದು ಈ ಮಾತಿನ ಅರ್ಥವಲ್ಲ. ವೀರ ರಸದ ಪದ್ಯಗಳಿಗೆ ಮೂರು ಕುತ್ತುಗಳನ್ನು ಹಾರಿ ಮತ್ತೆ ಒಂದು ಸುತ್ತು ಬರಲು ತೊಡಗುವ ಮುನ್ನ ಒಮ್ಮೆ ಕೆಳಗೆ ನೋಡಿ ಮುಖವನ್ನು ಮೇಲೆತ್ತುವ ಆ ಶೈಲಿ ಅಪೂರ್ವವೂ ಅನನ್ಯವೂ ಆಗಿತ್ತು. ಈಗಿನ ಕಲಾವಿದರು ಯಾಕೆ ಇಂತಹಾ ಶೈಲಿಗಳನ್ನು ತಮ್ಮ ನಾಟ್ಯದಲ್ಲಿ ಅಳವಡಿಸಿಕೊಳ್ಳುವುದಿಲ್ಲ ಎಂದು ಆಶ್ಚರ್ಯವಾಗುತ್ತದೆ. ದಡ ಬಡ ಹಾರಿ ದೇಹವನ್ನು ದಂಡಿಸಿಕೊಳ್ಳುವ ಬದಲು ನಿರಾಯಾಸವಾಗಿ ಆಕರ್ಷಕ ಶೈಲಿಯಿಂದ ನೃತ್ಯವನ್ನು ಪ್ರಸ್ತುತಪಡಿಸುವ ಕಲೆ ಅವರಿಗೆ ಕರಗತವಾಗಿತ್ತು.
ವೈಯುಕ್ತಿಕ ವಿಚಾರಗಳನ್ನು ಎಂದೂ ರಂಗದಲ್ಲಿ ಪ್ರತಿಫಲಿಸದೆ ತಾನು ಸೋತು ಸಹಪಾತ್ರಧಾರಿಗಳನ್ನು ಗೆಲ್ಲಿಸಿದ ಮಹಾನುಭಾವ ಅವರು. ಖಳ ಪಾತ್ರಗಳಲ್ಲಿ ಮಾತ್ರವಲ್ಲದೆ ಅರ್ಜುನ, ಅತಿಕಾಯನಂತಹಾ ಸಾತ್ವಿಕ ಪಾತ್ರಗಳಲ್ಲೂ ಮಿಂಚಿದ ಎಂಪೆಕಟ್ಟೆ ರಾಮಯ್ಯ ರೈಗಳು ಮಹಾಕಲಿ ಮಗಧೇಂದ್ರದಲ್ಲಿ ಮಾಗಧ, ಸಮುದ್ರಮಥನದ ಮತ್ತು ತ್ರಿಪುರಮಥನದ ದೇವೇಂದ್ರ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ವ್ಯಾಪಾರಿ ಶೆಟ್ಟಿ ಮತ್ತು ಕುಟ್ಟಿಮೂಸೆ, ಗದಾಯುದ್ಧದ ಭೀಮ, ದೇವಿ ಮಹಾತ್ಮೆಯಲ್ಲಿ ಮಧು, ಕೈಟಭ, ‘ಶಬರಿಮಲೆ ಅಯ್ಯಪ್ಪ’ದಲ್ಲಿ ವಾವರ, ವಂಶವಾಹಿನಿಯ ಯುಧಾಜಿತು, ಇಂದ್ರಜಿತು, ಅರ್ಜುನ, ಅತಿಕಾಯ, ಹಿರಣ್ಯಾಕ್ಷ, ಮೊದಲಾದುವು ಅವರ ಇಷ್ಟದ ಪಾತ್ರಗಳು.
ಖ್ಯಾತ ಹಾಸ್ಯ ಕಲಾವಿದ ನಯನ ಕುಮಾರ್ ಮತ್ತು ಎಂಪೆಕಟ್ಟೆಯವರದು ರಂಗದಲ್ಲಿ ಅವಿನಾಭಾವ ಸಂಬಂಧ. ಆ ದಿನಗಳಲ್ಲಿ ಈ ಜೋಡಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ‘ಪೌಂಡ್ರಕ ವಾಸುದೇವ’ ಪಾತ್ರವಹಿಸಿ ‘ಅಜಯ’ನಾಗಿ ಪಾತ್ರವಹಿಸಿದ ನಯನ ಕುಮಾರರ ಜೊತೆ ಹಾಸ್ಯದ ಹೊನಲನ್ನೇ ಹರಿಸುವ ಸನ್ನಿವೇಶ, ಕೃಷ್ಣನ ಪಾತ್ರವಹಿಸುವ ಕುಂಬಳೆ ಸುಂದರ ರಾವ್ ಜೊತೆಗಿನ ವಾಗ್ವಾದ ಇವೆಲ್ಲಾ ರಮಣೀಯವೂ ಮನರಂಜನೀಯವೂ ಆದ ಸನ್ನಿವೇಶಗಳು.
ಚಂದ್ರಾವಳಿ ವಿಲಾಸ ಚಂದಗೋಪ, ‘ಮಹಾರಥಿ ಕರ್ಣ’ ಪ್ರಸಂಗದ ಕರ್ಣನಿಗೆ ಶಾಪಗೈಯುವ ಪರಶುರಾಮ ಪಾತ್ರಗಳೂ ಇವರಿಗೆ ಹೆಸರು ತಂದು ಕೊಟ್ಟ ಪಾತ್ರಗಳು. ಏರುಪದ್ಯದಲ್ಲಿ ಎದೆಯ ಮೇಲೆ ಕೈಯಿಟ್ಟು ಸುತ್ತುಬರುವ ವಿಧಾನ, ನಾಟ್ಯಶೈಲಿ, ಕಣ್ಣನ್ನು ತಿರುಗಿಸುವ ರೀತಿ, ಗದೆಯನ್ನೊಮ್ಮೆ ಮೇಲೆತ್ತಿ ತಿರುಗಿಸುವ ಪರಿ, ಕುತ್ತು ಹಾರಿದ ನಂತರ ಒಮ್ಮೆ ಕೆಳಮುಖವಾಗಿ ನೋಡಿ ಮುಖ ಮೇಲೆತ್ತುವ ಶೈಲಿ ಇವುಗಳೆಲ್ಲಾ ಎಂಪೆಕಟ್ಟೆಯವರ ಮಾಸ್ಟರ್ ಪೀಸ್ ಗಳು.
ಖಳ ಪಾತ್ರಗಳಷ್ಟೇ ಅಲ್ಲದೆ ಪ್ರಣಯ ದೃಶ್ಯಗಳಲ್ಲೂ ಎಂಪೆಕಟ್ಟೆಯವರು ಉತ್ಕೃಷ್ಟವಾದ ಅಭಿನಯವನ್ನು ನೀಡುತ್ತಿದ್ದವರು. ಆ ದಿನಗಳಲ್ಲಿ ಉತ್ತಮ ಜೋಡಿಯೆಂದೇ ಗುರುತಿಸಲ್ಪಿಟ್ಟಿದ್ದ ಎಂಪೆಕಟ್ಟೆ-ನಯನಕುಮಾರ್ ಜೋಡಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಈಗ ಇಬ್ಬರೂ ಇಲ್ಲ. ಜನರು ಇಬ್ಬರ ಮೇಲೆ ಇನ್ನಷ್ಟು ನಿರೀಕ್ಷೆಗಳನ್ನು ಇರಿಸಿದ್ದರೂ ಎಲ್ಲರ ನಂಬಿಕೆಗಳನ್ನೂ ಹುಸಿಗೊಳಿಸಿ ಇಬ್ಬರೂ ಮರೆಯಾದದ್ದು ವಿಪರ್ಯಾಸವೆಂದೇ ಹೇಳಬೇಕು.
ಲೇಖನ : ಮನಮೋಹನ್ ವಿ. ಎಸ್.
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!
- ನೇಪಾಳದಲ್ಲಿ ಹಠಾತ್ ಪ್ರವಾಹ: 133 ಭಾರತೀಯರು ನಾಪತ್ತೆ, 55 ಮಂದಿ ಸಾವು; ಬಿಹಾರ, ಯುಪಿ ಗಡಿಗಳಲ್ಲಿ ಕಟ್ಟೆಚ್ಚರ
- “ಹಿಜಾಬ್ ಇಸ್ಲಾಂಗೆ ಅನಿವಾರ್ಯವಲ್ಲ”: ಉತ್ತರ ಪ್ರದೇಶ ವಿದ್ಯಾರ್ಥಿನಿಯ ಅರ್ಜಿಯನ್ನು ತಳ್ಳಿಹಾಕಿದ ಹೈಕೋರ್ಟ್.
- ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ, ಆದಿಸುಬ್ರಹ್ಮಣ್ಯ ದೇವಸ್ಥಾನದ ಅಂಗಣಕ್ಕೆ ನುಗ್ಗಿದ ನೀರು
- ಎಂಜಿನಿಯರ್ ಮತ್ತು ಅವರ ಕುಟುಂಬ ನದಿಗೆ ಹಾರಿ ಆತ್ಮಹತ್ಯೆ; ಡೆತ್ನೋಟ್ನಲ್ಲಿ ರೈಫಲ್ ಶೂಟಿಂಗ್ ಕೋಚ್ ವಿರುದ್ಧ ಆರೋಪ – ಲವ್ ಜಿಹಾದ್ ಶಂಕೆ







