ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸ್ತುತ ಶ್ರೀ ಜಯಾನಂದ ಸಂಪಾಜೆಯವರ ಯಕ್ಷಜೀವನದ ಯಶೋಗಾಥೆಯ ಬಗ್ಗೆ ಯಕ್ಷ ಮಂದಾರ ‘ಯು ಟ್ಯೂಬ್’ ಚಾನೆಲ್ ನಲ್ಲಿ ವೀಡಿಯೋ ಮಾಡಲಾಗಿದೆ. ಬರಹರೂಪದಲ್ಲಿಯೂ ದೃಶ್ಯರೂಪದಲ್ಲಿಯೂ ಅವರ ಬಗ್ಗೆ ಸವಿವರವಾದ ವಿವರಗಳನ್ನು ನೀಡಲಾಗಿದೆ. ನೋಡಿ ಆನಂದಿಸಿ
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಶ್ರೀ ಎಂ. ದಾಮೋದರ ಶೆಟ್ಟಿ ಮಜಿಬೈಲ್ ಆಯ್ಕೆ
ಕಾಸರಗೋಡು ಜಿಲ್ಲಾ ಬಂಟರ ಸಂಘದ ಗೌರವ ಕಾರ್ಯದರ್ಶಿಯಾಗಿ,ಬಂಟ್ಸ್ ಮಜಿಬೈಲ್ ನ ಸಲಹೆಗಾರರಾಗಿ ಗೌರವ ಮಾರ್ಗದರ್ಶಕರಾಗಿ,ಮಂಜೇಶ್ವರ ಜಯ-ವಿಜಯ ಜೋಡುಕರೆ ಕಂಬಳದ ಮಾಜಿ ಅಧ್ಯಕ್ಷರಾಗಿ,ಬಲ್ಲಂಗುಡೇಲ್ ಶ್ರೀ ಪಾಡಂಗರೇ ಭಗವತಿ ಕ್ಷೇತ್ರದ ಕಳಿಯಾಟ ಸಂದರ್ಭದಲ್ಲಿ ಸತತ ನಲ್ವತೈದು ವರ್ಷದಿಂದ ಸ್ವಂತ ವೆಚ್ಚದಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜನೆ ಹಾಗು ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ನ್ಯಾ. ಎಂ ದಾಮೋದರ ಶೆಟ್ಟಿಯವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಇವರನ್ನು ಹಾಗು ಆಯ್ಕೆ ಮಾಡಿದ ಕರ್ನಾಟಕ ಸರಕಾರದ ಸಚಿವರಾದ ಸಿಟಿ ರವಿ ಯವರನ್ನು ಬಂಟ್ಸ್ ಮಜಿಬೈಲ್ ಸಂಸ್ಥೆ ಅಭಿನಂದನೆ ಸಲ್ಲಿಸಿದೆ. ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಅವರಿಗೆ ಹುಟ್ಟೂರಲ್ಲಿ ವಿಶೇಷವಾಗಿ ಗೌರವ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಎಡನೀರು ಶ್ರೀಗಳವರಿಗೆ ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ
ಪರಮಾತ್ಮನಲ್ಲಿ ಐಕ್ಯರಾದ ಎಡನೀರು ಮಠಾಧೀಶರಾದ ಶ್ರೀಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರಿಗೆ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ ಸಮರ್ಪಿಸಿ ಅವರ ದಿವ್ಯಾತ್ಮಕ್ಕೆ ಚಿರ ಶಾಂತಿ ದೊರೆಯುವಂತೆ ಪ್ರಾರ್ಥಿಸಲಾಯಿತು.ಕೋವಿದ್ 19 ರ ಮಾನದಂಡಗಳನ್ನು ಪಾಲಿಸಿಕೊಂಡು ಸಭೆ ಜರಗಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಹಿರಿಯ ಯಕ್ಷಗಾನ ಭಾಗವತ ಶ್ರೀ ಹೊಸಮೂಲೆ ಗಣೇಶ ಭಟ್ ಅವರು ಪಾಲ್ಗೊಂಡರು. ಶ್ರೀ ಸ್ವಾಮೀಜಿಯವರ ಪೂರ್ವಾಶ್ರಮದಿಂದಲೇ ಅವರ ಒಡನಾಡಿಯಾಗಿದ್ದು ಶ್ರೀ ಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿದ್ದ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರು ಗುರುಗಳ ಒಡನಾಟವನ್ನು ನೆನಪಿಸುತ್ತಾ, ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ನುಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ, ಉಪಾಧ್ಯಕ್ಷ ರಾಘವೇಂದ್ರ ಭಟ್ ಉಡುಪುಮೂಲೆ, ಸಹಕಾರ್ಯದರ್ಶಿ ಡಾ. ಶಿವಕುಮಾರ್ ಅಡ್ಕ, ಅನುಪಮಾ ರಾಘವೇಂದ್ರ ಉಡುಪುಮೂಲೆ ನುಡಿನಮನಗಳನ್ನು ಅರ್ಪಿಸಿದರು.ಕೋಶಾಧಿಕಾರಿ ಕೃಷ್ಣ ಭಟ್ ಅಡ್ಕ ಸ್ವಾಗತಿಸಿ ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಸುಮತಿ ಗೋಪಾಲಕೃಷ್ಣ ಭಟ್ ಅಡ್ಕ, ಪ್ರೇಮಲತಾ ಕೃಷ್ಣ ಭಟ್ ಅಡ್ಕ, ಅನಿರುದ್ಧ ವಾಸಿಷ್ಠ ಶರ್ಮಾ ಉಡುಪುಮೂಲೆ, ಶ್ರೀರಾಮ ಅಡ್ಕ, ಕೃಷ್ಣಕುಮಾರ ಅಡ್ಕ ಉಪಸ್ಥಿತರಿದ್ದರು
- ಯಕ್ಷತೂಣೀರ ಸಂಪ್ರತಿಷ್ಠಾನ
ಯಕ್ಷಗಾನ ಪ್ರದರ್ಶನ – ಕರ್ಮಣ್ಯೇವಾಧಿಕಾರಸ್ತೇ
ಸದಾ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ರಾಮಕೃಷ್ಣ ಮಯ್ಯ ಸಾರಥ್ಯದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರು ಯಕ್ಷಕಲಾ ಪೋಷಕರ ಸಹಕಾರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ದಿನಾಂಕ 10.09.2020 ರ ಗುರುವಾರ ರಾತ್ರಿ ಘಂಟೆ 9ರಿಂದ ದೇವಿದಾಸ ಕವಿಯ ಕೃಷ್ಣಸಂಧಾನ ಪ್ರಸಂಗದ ಒಂದು ಭಾಗವನ್ನು ಸಂಯೋಜಿಸಿದ ‘ ಕರ್ಮಣ್ಯೇವಾಧಿಕಾರಸ್ತೇ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನವನ್ನು ನೀಡಲಿದ್ದಾರೆ.

ಏನಾದರೂ ಮಾಡುತ್ತಲೇ ಇರಬೇಕೆಂಬ ತುಡಿತವನ್ನು ಹೊಂದಿದ ಖ್ಯಾತ ಭಾಗವತರಾದ ರಾಮಕೃಷ್ಣ ಮಯ್ಯರ ನೇತೃತ್ವದ ಈ ಕಲಾವಿದರು ಈ ಪ್ರದರ್ಶನವನ್ನು ನೀಡಲಿದ್ದಾರೆ. ಈ ಪ್ರದರ್ಶನ sv vision ಯು ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.
ಮಾಗದ ವಧೆ, ಕೌಶಿಕ ಪ್ರತಿಜ್ಞೆ, ಜಾಬಾಲಿ ನಂದಿನಿ – ಮೂರು ತಾಳಮದ್ದಳೆಗಳು
ರೋಟರಿ ಕ್ಲಬ್ ಮಡಂತ್ಯಾರು ಇವರ ಪ್ರಾಯೋಜಕತ್ವದಲ್ಲಿ ಮತ್ತು ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘ ಪಾರೆಂಕಿ, ರೊ। ಪ್ರಕಾಶ್ ಕಾರಂತ್ , ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ , ರೋಟರಿ ಕ್ಲಬ್ ಬಂಟ್ವಾಳ ಇವರುಗಳ ಸಹ ಪ್ರಾಯೋಜಕತ್ವದಲ್ಲಿ ಮೂರು ದಿನದ ಯಕ್ಷ ಸಂವಾದ ತಾಳಮದ್ದಳೆ ಕೂಟ ಜರಗಲಿದೆ. ದಿನಾಂಕ 11.09.2020 ರಂದು ಮಾಗದ ವಧೆ ಎಂಬ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಕಾವ್ಯಶ್ರೀ ಅಜೇರು,ಗುರುಪ್ರಸಾದ್ ಬೊಳಿಂಜಡ್ಕ, ಚಂದ್ರಶೇಖರ ಆಚಾರ್ಯ ಹಾಗೂ ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ವಾಸುದೇವ ರಂಗಾ ಭಟ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಲಿರುವರು.
ದಿನಾಂಕ 12.09.2020 ರಂದು ಕೌಶಿಕ ಪ್ರತಿಜ್ಞೆ ಎಂಬ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಚೈತನ್ಯ ಕೃಷ್ಣ ಪದ್ಯಾಣ,ಚಂದ್ರಶೇಖರ ಆಚಾರ್ಯ ಮತ್ತು ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಉಜಿರೆ ಅಶೋಕ ಭಟ್ ಭಾಗವಹಿಸಲಿರುವರು. ದಿನಾಂಕ 13.09.2020 ರಂದು ಜಾಬಾಲಿ ನಂದಿನಿ ಎಂಬ ಪ್ರಸಂಗ ತಾಳಮದ್ದಳೆ ರೂಪದಲ್ಲಿ ನಿಮ್ಮ ಮುಂದಿರಲಿದೆ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಶ್ರೀನಿವಾಸ ಬಳ್ಳಮಂಜ, ಪದ್ಮನಾಭ ಉಪಾಧ್ಯಾಯ, ಚಂದ್ರಶೇಖರ ಆಚಾರ್ಯ ಮತ್ತು ಮುಮ್ಮೇಳದಲ್ಲಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ದಿನೇಶ ಶೆಟ್ಟಿ ಕಾವಳಕಟ್ಟೆ, ರಾಜೇಶ ಕೃಷ್ಣ ಮಚ್ಚಿನ ಭಾಗವಹಿಸರುವರು. ಸಮಯ ಪ್ರತಿದಿನ ಸಂಜೆ 6 ರಿಂದ ರಾತ್ರಿ 8.30. ಈ ಕಾರ್ಯಕ್ರಮ ಯೂ ಪ್ಲಸ್ ಟಿವಿ ಯಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಯು ಟ್ಯೂಬ್ ಮತ್ತು ಫೇಸ್ ಬುಕ್ ಗಳಲ್ಲೂ ನೇರಪ್ರಸಾರಗೊಳ್ಳಲಿದೆ.
ಡಾ. ಟಿ. ಶ್ಯಾಮ್ ಭಟ್ – ಕಲಾ ಜಗತ್ತಿನ ನಿರ್ದೇಶಕ
ಕಲೆಯ ಸೆಳೆತ ಎನ್ನುವುದು ಹಾಗೆಯೇ. ಅದೊಂದು ಭಾವದೊಳಗಿನ ತುಡಿತ. ಪಂಡಿತ, ಪಾಮರ ಅಥವಾ ಬಡವ, ಬಲ್ಲಿದನೆಂಬ ಭೇದಭಾವವನ್ನು ತೋರದೆ ಕಲೆಯು ಶ್ರದ್ಧೆಯನ್ನು ತೋರಿದವನಿಗೆ ಒಲಿಯುತ್ತದೆ. ಎಷ್ಟೇ ಕಲಿತು ವಿದ್ಯಾವಂತನಾಗಿ ಉನ್ನತ ಹುದ್ದೆಯಲ್ಲಿದ್ದವರಲ್ಲಿ ಇಂದ ಹಲವಾರು ಮಂದಿ ತಾನೊಂದು ಕಲೆಯ ಜೊತೆಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅಂತಹ ಸೆಳೆತ ಸಂಗೀತಾದಿ ಕಲೆಗಳಿವೆ. ಹೆಚ್ಚಿನ ಕಲೆಗಳಿಗೆ ಮೂಲ ಸಂಗೀತವಾದರೂ ಸಂಗೀತವಲ್ಲದ ಚಿತ್ರಕಲೆ, ಶಿಲ್ಪಕಲೆ ಮುಂತಾದ ಇತರ ಕಲೆಗಳೂ ಇವೆ. ಕಲೆಗಳ ಮೇಲಿನ ವ್ಯಾಮೋಹ ಹೀಗೇಕೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವುದು ಕಷ್ಟಕರ. ಅದು ಕೇವಲ ಮನರಂಜನೆಯೂ ಹವ್ಯಾಸವೋ ಜನಪ್ರಿಯತೆಯನ್ನು ಪಡೆಯುವ ಹಂಬಲವೋ ಎಂದು ಹೇಳುವ ಹಾಗಿಲ್ಲ. ಕಲೆಯ ತುಡಿತ ಮಿಡಿತಗಳು ಮನುಷ್ಯನ ರಕ್ತದ ಕಣಕಣದಲ್ಲಿಯೂ ಅಡಗಿರಬಹುದೇನೋ ಎಂಬ ಭಾವನೆಗಳು ಮೂಡಿದರೆ ಅಚ್ಚರಿಯೇನಿಲ್ಲ.
ಕಲೆ ಎಂಬುದು ಮಾನವನಿಗೆ ಅದರಲ್ಲೂ ಭಾರತೀಯರಿಗೆ ಮಾನಸಿಕ ನೆಮ್ಮದಿಯನ್ನು ಕೊಡುತ್ತದೆ. ದಿನನಿತ್ಯದ ಕರ್ತವ್ಯದ ನಿಬಿಡ ಜಂಜಾಟಗಳಿಂದ ಒಂದರೆಕ್ಷಣ ಬದಲಾವಣೆಯ ಶಾಂತಿಯನ್ನು ಕೊಡುತ್ತದೆ. ಆದ ಕಾರಣ ಎಷ್ಟೋ ಉನ್ನತ ಉದ್ಯೋಗಸ್ಥರು ಕಲಾಸೇವೆಯಲ್ಲಿ ನಿರತರಾಗಿದ್ದುದನ್ನು ನಾವು ಕಾಣುತ್ತೇವೆ. ರಾಜಕಾರಣಿಗಳು, ವಿಜ್ಞಾನಿಗಳು, ರಕ್ಷಣಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು, ಭಾರತೀಯ ಆಡಳಿತ ಸೇವೆಯ(ಇಂಡಿಯನ್ ಸಿವಿಲ್ ಸರ್ವಿಸ್) ಉನ್ನತ ಉದ್ಯೋಗಸ್ಥರು ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ ಕಲೆಯ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದುದು ಮಾತ್ರವಲ್ಲದೆ ಅಂತಹ ಕಲೆಗಳ ಏಳಿಗೆಗಾಗಿ ನಿರಂತರ ಪ್ರೋತ್ಸಾಹವನ್ನು ಕೊಡುತ್ತಾ ಜೊತೆಗೆ ಅದರ ಬಗ್ಗೆ ನಿರ್ದಿಷ್ಟವಾದ ನಿರ್ದೇಶನವನ್ನೂ ಕೊಡಬಲ್ಲ ಮಹಾನುಭಾವರುಗಳಿರುವುದು ಅಪರೂಪ. ಕೇವಲ ಬೆರಳೆಣಿಕೆಯಲ್ಲಿ ಮಾತ್ರವೇ ಅಂತಹವರು ಕಾಣಸಿಗಬಹುದಷ್ಟೆ. ಅವರೊಲ್ಲಬ್ಬರು ಡಾ. ಟಿ. ಶ್ಯಾಮ ಭಟ್.
ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ಕರ್ನಾಟಕ ಲೋಕಸೇವಾ ಆಯುಕ್ತರೇ ಮೊದಲಾದ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಶ್ಯಾಮ್ ಭಟ್ಟರ ಕಲಾಪ್ರೀತಿ ಅನನ್ಯವಾದದ್ದು. ಎಷ್ಟೋ ಕಲಾವಿದರಿಗೆ ಮತ್ತು ಕಲಾಪ್ರದರ್ಶನಗಳಿಗೆ ಸಹಾಯಹಸ್ತ ನೀಡಿದುದು ಇವರ ಹೆಚ್ಚುಗಾರಿಕೆ. ಹಾಗೆಂದು ಅದನ್ನು ಅವರು ಎಂದೂ ಹೇಳಿಕೊಂಡಿಲ್ಲ. ತನ್ನ ಕರ್ತವ್ಯದ ಒಂದು ಭಾಗವೆಂದೇ ಭಾವಿಸಿದ್ದಾರೆ. ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಮತ್ತು ಸಂಪಾಜೆ ಯಕ್ಷೋತ್ಸವದ ಮುಖಾಂತರ ಅವರು ನಡೆಸಿದ ಕಲಾಸೇವೆ ಕಲಾಭಿಮಾನಿಗಳು, ಪ್ರೇಕ್ಷಕರು ಮತ್ತು ಕಲಾವಿದರು ಅನಾವರತವೂ ನೆನಪಿನಲ್ಲಿಡಬೇಕಾದುದು. ಎಲ್ಲರಿಗೂ ತಿಳಿದ ವಿಚಾರವಾದ್ದರಿಂದ ಅದರ ಬಗ್ಗೆ ಮತ್ತೆ ಮತ್ತೆ ನಾನು ಇಲ್ಲಿ ಉಲ್ಲೇಖಿಸಲು ಹೋಗುವುದಿಲ್ಲ.

ಫೋಟೋ: ವರ್ಣ ಸ್ಟುಡಿಯೋ
ಆದರೆ ಎಲ್ಲರಿಗೂ ತಿಳಿದಿರದ ಅವರನ್ನು ಹತ್ತಿರದಿಂದ ಬಲ್ಲವರು ಮಾತ್ರ ತಿಳಿದಿರುವ ವಿಚಾರವನ್ನು ನಾನಿಲ್ಲಿ ಹೇಳಲೇಬೇಕು. ಡಾ. ಶ್ಯಾಮ ಭಟ್ಟರು ಕೇವಲ ಯಕ್ಷಗಾನದ ಪ್ರೋತ್ಸಾಹಕ ಅಥವಾ ಯಕ್ಷಗಾನದ ಪ್ರೇಕ್ಷಕ, ಆರಾಧಕ ಎಂದು ತಿಳಿದುಕೊಂಡರೆ ಅದು ನಮ್ಮ ಅಜ್ಞಾನ ಎಂದು ಹೇಳಬಹುದು. ಅವರೊಬ್ಬ ಯಕ್ಷಗಾನದ ಶ್ರೇಷ್ಠ ನಿರ್ದೇಶಕ ಎಂದು ತಿಳಿದರೆ ಹಲವರಿಗೆ ಆಶ್ಚರ್ಯವಾಗಬಹುದು. ಪ್ರದರ್ಶನಗಳಲ್ಲಿ ಕೆಲವೊಮ್ಮೆ ಕಲಾವಿದರಿಂದಲೋ ಅಥವಾ ಇತರರಿಂದಲೋ ತಪ್ಪುಗಳು ಘಟಿಸಿ ಹೋದಾಗ ಅವರೊಳಗಿನ ನಿರ್ದೇಶಕ ಜಾಗೃತನಾಗುತ್ತಾನೆ. ಹೀಗೆಯೇ ಪ್ರದರ್ಶನ ನಡೆಯಬೇಕೆಂದು ಅವರು ನಿರ್ದೇಶಿಸಬಲ್ಲರು. ಆಶ್ಚರ್ಯವೆಂದರೆ ಅವರಿಗೆ ಹೆಚ್ಚಿನ ಎಲ್ಲಾ ಪ್ರಸಂಗಗಳ ನಡೆ ಗೊತ್ತಿದೆ. ಯಾವ ದೃಶ್ಯದ ನಂತರ ಮುಂದಿನ ದೃಶ್ಯ ಎಂದು ಕರಾರುವಾಕ್ಕಾಗಿ ಹೇಳುತ್ತಾರೆ. ಮಾತ್ರವಲ್ಲದೆ ಸಮಯದ ಅಭಾವವಿದ್ದಾಗ ಯಾವ ದೃಶ್ಯವನ್ನು ಬಿಡಬಹುದು ಯಾವುದನ್ನೂ ಪ್ರದರ್ಶಿಸಬೇಕೆಂದು ಭಾಗವತರಿಗೆ ತಿಳಿಹೇಳಬಲ್ಲರು. ಅವರನ್ನು ಹತ್ತಿರದಿಂದ ಬಲ್ಲವರು ಹೇಳುವಂತೆ ಅವರಿಗೆ ಹೆಚ್ಚಿನೆಲ್ಲಾ ಯಕ್ಷಗಾನ ಪ್ರಸಂಗಗಳ ನಡೆ ಗೊತ್ತಿದೆ. ಇತ್ತೀಚಿಗೆ ಪ್ರದರ್ಶನಗಳನ್ನು ಕಾಣದೆ ಮೂಲೆಯಲ್ಲಿ ಬಿದ್ದ ಪ್ರಸಂಗಗಳ ನಡೆ ಹೇಗಿರಬೇಕೆಂದು ಅವರು ನಿರ್ದೇಶನ ಮಾಡಿದ್ದೂ ಇದೆಯಂತೆ. ಅಂತಹಾ ಚಾಲ್ತಿಯಲ್ಲಿಲ್ಲದ ಪ್ರಸಂಗಗಳೂ ಅದರ ಪದ್ಯಗಳೂ ಅವರಿಗೆ ಕಂಠಪಾಠ! ಇಂತಹ ಪ್ರಸಂಗಗಲ್ಲಿ ಇಂತದ್ದೇ ಪದ್ಯಗಳನ್ನು ಹೇಳಬೇಕೆಂದೂ ಇಂತಹುದೇ ಪದ್ಯಗಳನ್ನು ಬಿಡಬೇಕೆಂದೂ ಕರಾರುವಕ್ಕಾಗಿ ಅವರು ನಿರ್ದೇಶಿಸುತ್ತಾರೆ ಎಂದು ಹೇಳುವುದನ್ನೂ ಕೇಳಿದ್ದೇನೆ.

ಕಥೆಯಲ್ಲಿ ಲೋಪವಾದರೆ, ಮಾತಿನಲ್ಲಿ ಆಭಾಸಗಳು ಉಂಟಾದರೆ, ದೃಶ್ಯ ಸಂಯೋಜನೆಯಲ್ಲಿ ತಪ್ಪುಗಳು ಸಂಭವಿಸಿದರೆ ಅವರದನ್ನು ತಿದ್ದಿ ತಿಳಿಹೇಳಬಲ್ಲರು. ಆದುದರಿಂದ ಡಾ. ಶ್ಯಾಮ್ ಭಟ್ಟರು ಕೇವಲ ಒಬ್ಬ ಕಲಾಪೋಷಕ, ಕಲಾಪ್ರೇಮಿಯಲ್ಲ. ಬದಲಾಗಿ ಯಕ್ಷಗಾನದ ಶ್ರೇಷ್ಠ ನಿರ್ದೇಶಕರೂ ಹೌದು. ಆದುದರಿಂದ ಶ್ರೇಷ್ಠ ವಿದ್ವಾಂಸರೂ ಕಲಾ ನಿರ್ದೇಶಕರೂ ಆದ ಅವರಿಂದ ಈ ಕಲಾಜಗತ್ತು ಬಹಳಷ್ಟು ಶ್ರೀಮಂತವಾಗಿದೆ.









