ಯಕ್ಷಮೇನಕಾ ಮೂಡಬಿದಿರೆ, ರಂಗಸ್ಥಳ ಮಂಗಳೂರು (ರಿ), ಯಕ್ಷಚೈತನ್ಯ (ರಿ) ಅಶ್ವತ್ಥಪುರ ಎಂಬ ಮೂರು ಯಕ್ಷಸಂಘಟನೆಗಳಿಂದ ಕುರಿಯ ಗಣಪತಿ ಶಾಸ್ತ್ರಿ ದಂಪತಿಗೆ ಕುರಿಯ ಮನೆಯಂಗಳದಲ್ಲಿ ಸಮ್ಮಾನ
ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಸಭೆ
ಇತ್ತೀಚಿಗೆ ಪರಮೈಕ್ಯರಾದ ಹಿರಿಯ ವಿದ್ವಾಂಸರೂ ಯಕ್ಷಗಾನ ಕಲಾವಿದರೂ ಆದ ಉಡುಪುಮೂಲೆ ಶ್ರೀ ಗೋಪಾಲಕೃಷ್ಣ ಭಟ್, ಹಿರಿಯ ಯಕ್ಷಗಾನ ಭಾಗವತರಾದ ತೆಂಕಬಯಲು ತಿರುಮಲೇಶ್ವರ ಶಾಸ್ತ್ರಿ , ಪ್ರಸಿದ್ಧ ಯಕ್ಷಗಾನ ಕಲಾವಿದರಾದ ರಘುರಾಮ ಗೋಳಿಯಡ್ಕ ಅವರಿಗೆ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ ಸಮರ್ಪಿಸಿ ಅವರ ದಿವ್ಯಾತ್ಮಕ್ಕೆ ಚಿರ ಶಾಂತಿ ದೊರೆಯುವಂತೆ ಪ್ರಾರ್ಥಿಸಲಾಯಿತು.ಕೋವಿದ್ 19 ರ ಮಾನದಂಡಗಳನ್ನು ಪಾಲಿಸಿಕೊಂಡು ಸಭೆ ಜರಗಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಕಾರ್ಯಕ್ರಮ ಜರಗಿತು. ಅಗಲಿದ ಚೇತನಗಳಿಗೆ ಶ್ರದ್ಧಾಂಜಲಿ ಹೇಳುತ್ತಾ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರು ನುಡಿ ನಮನದ ಮಾತುಗಳನ್ನಾಡಿದರು. ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಮೆನೇಜರ್ ಶ್ರೀ ಸೀತಾರಾಮ ಬಳ್ಳುಳ್ಳಾಯ , ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ, ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ , ಸಹಕಾರ್ಯದರ್ಶಿ ಡಾ. ಶಿವಕುಮಾರ್ ಅಡ್ಕ ನುಡಿನಮನಗಳನ್ನು ಅರ್ಪಿಸಿದರು.ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಸ್ವಾಗತಿಸಿ ಕೋಶಾಧಿಕಾರಿ ಕೃಷ್ಣ ಭಟ್ ಅಡ್ಕ ಧನ್ಯವಾದ ಸಮರ್ಪಿಸಿದರು.
ವಿಶೇಷ ಚೇತನ ಮಕ್ಕಳ ಬಗ್ಗೆ ಅರಿವು ಮೂಡಿಸಲು ಸಿರಿಬಾಗಿಲು ಪ್ರತಿಷ್ಠಾನದಿಂದ ‘ಜಡಭರತ’ ಯಕ್ಷಗಾನ
ನಮ್ಮ ನಡುವೆ ಇರುವ ಹಾಗೂ ಆಕಸ್ಮಿಕವಾಗಿ ಹುಟ್ಟುವ ವಿಶೇಷ ಚೇತನ ಮಕ್ಕಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಾಗೂ ಅವರ ಬಗ್ಗೆ ಕುತ್ಸಿತ ಭಾವನೆ ತಾಳದೆ ಸಮಾಜದಲ್ಲಿ ಅವರಿಗೂ ಬದುಕಲು ಹಕ್ಕಿದೆ ಎಂಬುದನ್ನು ತಿಳಿ ಹೇಳುವ ಪ್ರಯತ್ನವೆಂಬಂತೆ ಕುತೂಹಲಕಾರೀ ಕಥಾ ಹಂದರವುಳ್ಳ “ಜಡಭರತ” ಎಂಬ ಯಕ್ಷಗಾನ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ. ಬುದ್ದಿಮಾಂದ್ಯ ಮಕ್ಕಳ ಶಾಲೆಯಾದ ಅಮರ ಸೌಂದರ್ಯ ಫೌಂಡೇಶನ್ ಬೆಂಗಳೂರು ಇವರ ಸಹಕಾರದೊಂದಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಈ ವಿಶಿಷ್ಟ ರೀತಿಯ ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮ 11. 10. 2020 ರ ಆದಿತ್ಯವಾರ ರಾತ್ರಿ 8.30 ಘಂಟೆಗೆ ಯು ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಆಗಲಿದೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ.
ಭಾಗವತರು- ಸಿರಿಬಾಗಿಲು ರಾಮಕೃಷ್ಣ ಮಯ್ಯ, ತಲ್ಪಣಾಜೆ ವೆಂಕಟ್ರಮಣ ಭಟ್ ಚೆಂಡೆ- ಲಕ್ಮೀನಾರಾಯಣ ರಾವ್ ಅಡೂರು
ಮದ್ದಳೆ- ಲಕ್ಮೀಶ ಬೆಂಗ್ರೊಡಿ, ಉದಯ ಕಂಬಾರ್
ಚಕ್ರತಾಳ- ರವಿಶಂಕರ ಶೆಟ್ಟಿ
ಜಡಭರತ- ಸುಣ್ಣಂಬಳ ವಿಶ್ವೇಶ್ವರ ಭಟ್
ವೃಷಲ- ರಾಧಾಕೃಷ್ಣ ನಾವಡ.ಮಧೂರು
ರಹೂಗಣ- ರವಿರಾಜ ಪನೆಯಾಲ
ದೂತ- ಪೆರುವೊಡಿ ಸುಬ್ರಹ್ಮಣ್ಯ ಭಟ್
ಚಂಡಿ- ಬಾಲಕೃಷ್ಣ ಸೀತಾಂಗೊಳಿ
ಭರತ ಸಹೊದರರು- ಪ್ರಕಾಶ್ ನಾಯಕ್ ನೀರ್ಚಾಲ್, ಶಿವಾನಂದ ಪೆರ್ಲ,
ಬೊವಿಗಳು- ಪ್ರಕಾಶ್ ನಾಯಕ್ ನೀರ್ಚಾಲ್, ಶಿವಾನಂದ ಪೆರ್ಲ, ಶ್ರೀಗಿರಿ ಅನಂತಪುರ.
ವೇಷಭೂಷಣ- ಕೊಲ್ಲಂಗಾನ ಮೇಳ
ವಿಡಿಯೋ ಚಿತ್ರೀಕರಣ- ಉದಯ ಕಂಬಾರ್, ವರ್ಣ ಸ್ಟಡಿಯೋ, ನೀರ್ಚಾಲ್ ಮತ್ತು
ಶ್ರೀವತ್ಸ ಕುಂಚಿನಡ್ಕ
ಛಾಯಾಗ್ರಹಣ- ಶ್ಯಾಮ್ ಕುಂಚಿನಡ್ಕ
ಇಂಗ್ಲಿಷ್ ಸಬ್ ಟೈಟಲ್- ಸುಮನ್ ರಾಜ್ ನೀಲಂಗಳ
ಎಡಿಟಿಂಗ್- ಶ್ರೀಮುಖ ಯಸ್. ಆರ್.ಮಯ್ಯ, ಸಿರಿಬಾಗಿಲು
ಈ ಕಾರ್ಯಕ್ರಮದ ಯು ಟ್ಯೂಬ್ ಲಿಂಕ್ ಈ ಕೆಳಗಡೆ ಕೊಡಲಾಗಿದೆ.
Channel Link
youtube.com/c/svvision
‘ಕರ್ಣ ಪರ್ವ’ ಯಕ್ಷಗಾನ ತಾಳಮದ್ದಳೆ ನೇರ ಪ್ರಸಾರ
ಯಕ್ಷಮೇನಕಾ ಮೂಡಬಿದಿರೆ, ರಂಗಸ್ಥಳ ಮಂಗಳೂರು (ರಿ), ಯಕ್ಷಚೈತನ್ಯ (ರಿ) ಅಶ್ವತ್ಥಪುರ ಎಂಬ ಮೂರು ಯಕ್ಷಸಂಘಟನೆಗಳಿಂದ ಕುರಿಯ ಗಣಪತಿ ಶಾಸ್ತ್ರಿ ದಂಪತಿಗಳಿಗೆ ಸಮ್ಮಾನ ಮತ್ತು ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಕರ್ಣ ಪರ್ವ’ ಎಂಬ ಯಕ್ಷಗಾನ ತಾಳಮದ್ದಳೆ ಇಂದು 10.10.2020ರಂದು ಅಪರಾಹ್ನ 4 ಘಂಟೆಗೆ ಆರಂಭವಾಗಲಿದೆ. ಕಾರ್ಯಕ್ರಮದ ನೇರ ಪ್ರಸಾರದ ಲಿಂಕ್ ಇಲ್ಲಿದೆ.
ನೆನಪಿನಂಗಳದಲ್ಲಿ ಸದಾ – ಶ್ರೀ ಸತ್ಯಮೂರ್ತಿ ದೇರಾಜೆ (Sri Sathyamoorthy Deraje)
ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ದೊಡ್ಡ ವಿಚಾರವಲ್ಲ. ಅವರೆಷ್ಟು ಯಶಸ್ವಿಯಾಗಿದ್ದಾರೆ ಎಂಬುದರಲ್ಲಿ ತೊಡಗಿಸಿಕೊಳ್ಳುವಿಕೆಯ ಮೌಲ್ಯವು ನಿರ್ಣಯಿಸಲ್ಪಡುತ್ತದೆ. ಸಾಹಸ ಪ್ರಿಯರು ಈ ರೀತಿಯಲ್ಲಿ ಸಾಗುವುದಿದೆ. ಎಳೆಯ ಪ್ರಾಯದಲ್ಲಿ ಹೊಣೆಗಾರಿಕೆಯು ಹೆಗಲ ಮೇಲೆ ಬಿದ್ದು, ಅಥವಾ ತಾನೇ ಹೆಗಲಲ್ಲಿ ಹೊತ್ತು, ಸಾಧಕರಾಗಿ ಹಲವು ಕ್ಷೇತ್ರಗಳಲ್ಲಿ ಮಿಂಚಿದವರು ಅನೇಕರು. ಆಸಕ್ತಿ, ಮಾನಸಿಕ ದೃಢತೆ, ನಿಷ್ಠೆ, ಅರ್ಪಣಾ ಭಾವ, ಸಾಹಸೀ ಪ್ರವೃತ್ತಿ ಎಂಬ ಗುಣಗಳಿದ್ದವರಿಗೆ ಮಾತ್ರ ಇದು ಸಾಧ್ಯ. ಅಂತಹಾ ಗುಣಗಳನ್ನು ಹೊಂದಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸೇವಾನಿರತರಾಗಿ ಸಾಧಕರಾಗಿ ಮೆರೆದ ಅನೇಕರನ್ನು ನಾವು ಕಾಣಬಹುದು. ಅಂತವರ ಸಾಲಿಗೆ ಸೇರಿದವರು ಶ್ರೀ ದಿ| ಸತ್ಯಮೂರ್ತಿ ದೇರಾಜೆ. ಸರಳ ಸಜ್ಜನ ಸಹೃದಯಿಯಾಗಿ ವ್ಯವಹರಿಸುತ್ತಾ ಎಲ್ಲರ ಪ್ರೀತಿ ಗೌರವಗಳನ್ನೂ ಸಂಪಾದಿಸಿ ಕೀರ್ತಿವಂತರಾಗಿದ್ದರು. ಅವರು ತಾನು ತೊಡಗಿಸಿಕೊಂಡ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿದರು. ಆದರೆ ಮರೆಯಾದುದು ಮಾತ್ರ ಅತ್ಯಂತ ನೋವನ್ನು ನೀಡಿದ ವಿಚಾರ. ಆದರೂ ನಮ್ಮ ನೆನಪಿನಂಗಳದಲ್ಲಿ ಇವರು ಸದಾ ವಿಹರಿಸುತ್ತಾ ಇರುತ್ತಾರೆ. ಮರೆಯಲಾಗದ, ಮರೆಯಬಾರದ ವ್ಯಕ್ತಿತ್ವ ಇವರದು. ಅವರ ನೆನಪು, ಸಾಧನೆ, ಕೊಡುಗೆ ಎಲ್ಲವೂ ಶಾಶ್ವತವಾಗಿ ಇರುತ್ತದೆ. ದೇರಾಜೆ ಎಂ. ಕೃಷ್ಣಯ್ಯ ಮತ್ತು ಎಂ.ಕೆ. ತಿರುಮಲೇಶ್ವರೀ ದಂಪತಿಗಳ ಪುತ್ರನಾಗಿ 1952 ಜೂನ್ 21ರಂದು ಶ್ರೀ ಸತ್ಯಮೂರ್ತಿ ಅವರ ಜನನ. ಸುಳ್ಯ ತಾಲೂಕು ಐವರ್ನಾಡು ಸಮೀಪದ ದೇರಾಜೆಯಲ್ಲಿ. ಓದಿದ್ದು ಪಿಯುಸಿ ವರೆಗೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶೇಣಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ, ವಿಠಲ ಹೈಸ್ಕೂಲ್ ವಿಟ್ಲ ಮತ್ತು ಪುತ್ತೂರು ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಜನೆ ಮಾಡಿದ ಸಂಸ್ಥೆಗಳು. ತೀರ್ಥರೂಪರ ಅನಾರೋಗ್ಯದಿಂದಾಗಿ ವಿದ್ಯಾರ್ಜನೆಯನ್ನು ನಿಲ್ಲಿಸಿ ಮನೆಯ ಹೊಣೆಗಾರಿಕೆಯನ್ನು ವಹಿಸಬೇಕಾಗಿ ಬಂದಿತ್ತು. ಪರಿಸರವು ವ್ಯಕ್ತಿನಿರ್ಮಾಣವನ್ನು ಮಾಡದೇ ಇರದು. ಪುರಾಣ, ಸಾಹಿತ್ಯ, ಕಲಾ ಆವರಣದಲ್ಲೇ ಬೆಳೆದವರು ಶ್ರೀ ಸತ್ಯಮೂರ್ತಿ ಅವರು. ಅಲ್ಲದೆ ಈ ವಿಚಾರಗಳು ರಕ್ತಗತವಾಗಿಯೇ ಬಂದಿತ್ತು. ಸಹಜವಾಗಿ ಸಾಹಿತ್ಯಾಸಕ್ತಿ, ಕಲಾಸಕ್ತಿಯು ಹುಟ್ಟಿಕೊಂಡು ಬೆಳೆಯುತ್ತಾ ಹೋಗಿತ್ತು. ತನ್ನ ಹದಿನೆಂಟನೇ ವಯಸ್ಸಿನಲ್ಲಿ ಅಂದರೆ 1970ರಲ್ಲಿ ಕಾರ್ತೀಕ ಪ್ರಕಾಶನದ ಸಹ ಸಂಪಾದಕರಾಗಿದ್ದರು. ಕೃಷಿಕಾರ್ಯಗಳ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಲು ಆರಂಭಿಸಿದ್ದರು. ತನ್ನ 21ನೇ ವಯಸ್ಸಿನಲ್ಲಿ ಐವರ್ನಾಡು ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿ ಬಳಿಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 22ನೇ ವಯಸ್ಸಿನಲ್ಲಿ ಸುಮನಸಾ ವಿಚಾರ ವೇದಿಕೆ ಚೊಕ್ಕಾಡಿ ಇದರ ಸದಸ್ಯರಾಗಿ ಕಾರ್ಯ ನಿರ್ವಹಣೆ. 1974ರಲ್ಲಿ ತನ್ನ 22ನೆಯ ವಯಸ್ಸಿನಲ್ಲಿ ತೀರ್ಥರೂಪರನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು. ೧೯೭೫ರಲ್ಲಿ ಶ್ರೀ ಕಾರ್ತಿಕೇಯ ಯಕ್ಷಗಾನ ಕಲಾಸಂಘ ನಾರ್ಣಕಜೆ ಇದರ ಸದಸ್ಯರಾಗಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರವನ್ನು ಪ್ರವೇಶಿಸಿದ್ದರು. ಬಳಿಕ ನಿರಂತರ ಭಾಗವಹಿಸುತ್ತಾ ಬೆಳೆಯುತ್ತ ಉತ್ತಮ ಅರ್ಥಧಾರಿಯಾಗಿ ಕಾಣಿಸಿಕೊಂಡರು. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲವರಾಗಿದ್ದರೂ ಸಾತ್ವಿಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. ಹೊಂದಾಣಿಕೆಯ ಸ್ವಭಾವ, ಸಂಭಾಷಣೆಯಲ್ಲಿ ಪಾತ್ರಗಳನ್ನೂ ಚಿತ್ರಿಸುವಲ್ಲಿ ಸೃಜನಶೀಲತೆ, ಹೊಸ ಕಲ್ಪನೆಗಳು, ಚಿಕ್ಕ, ಚೊಕ್ಕ ವಾಕ್ಯಗಳಿಂದ ಪಾತ್ರ ಕಟ್ಟುವಿಕೆ, ಪ್ರತ್ಯುತ್ಪನ್ನಮತಿತ್ವ,ಇವು ಸತ್ಯಮೂರ್ತಿ ದೇರಾಜೆಯವರ ಅರ್ಥಗಾರಿಕೆಯಲ್ಲಿ ಕಾಣುವ ಅಂಶಗಳು. ಲೇಖಕರಾಗಿಯೂ ಕಾಣಿಸಿಕೊಂಡ ಶ್ರೀ ಸತ್ಯಮೂರ್ತಿ ದೇರಾಜೆ ಅವರು 1975ರಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆಗ ಅವರ ವಯಸ್ಸು 23. ಅಲ್ಲದೆ ಅದೇ ವರ್ಷ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಆಗಿಯೂ, ಶ್ರೀರಾಮ ಸೇವಾ ಸಮಿತಿ ಚೊಕ್ಕಾಡಿ ಇದರ ಸದಸ್ಯರಾಗಿ, ಉಪಾಧ್ಯಕ್ಷರಾಗಿಯೂ ನಿಯುಕ್ತರಾದರು. 1980ರಲ್ಲಿ ಜಯಂತಿ ಅವರೊಂದಿಗೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಸತ್ಯಮೂರ್ತಿಯವರು 1987ರಲ್ಲಿ ಐವರ್ನಾಡು ಮಂಡಲ ಪಂಚಾಯತ್ ಸದಸ್ಯರಾಗಿ ಮತ್ತು ಸುಳ್ಯ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.
1999ರಲ್ಲಿ ದೇರಾಜೆ ಸೀತಾರಾಮಯ್ಯ ಸಂಸ್ಕೃತಿ ರಂಗ ಚೊಕ್ಕಾಡಿ ಎಂಬ ಸಂಸ್ಥೆಯನ್ನು ಹಿರಿಯರ, ಬಂಧುಮಿತ್ರರ ಸಹಕಾರದಿಂದ ಹುಟ್ಟುಹಾಕಿ ಸದ್ರಿ ಸಂಸ್ಥೆಯ ರೂವಾರಿ ಎನಿಸಿಕೊಂಡರು. 1999ರಲ್ಲಿ ಸಂಸ್ಕೃತಿರಂಗವನ್ನು ದೇರಾಜೆಯವರ ಶಿಷ್ಯರಾದ ಉಡುವೆಕೋಡಿ ಶ್ರೀ ಸುಬ್ಬಪ್ಪಯ್ಯನವರು ಉದ್ಘಾಟಿಸಿದ್ದರು. ಪ್ರತಿ ತಿಂಗಳ ಕೊನೆಯ ಆದಿತ್ಯವಾರ ನಿರಂತರವಾಗಿ ತಾಳಮದ್ದಳೆ ಅಲ್ಲದೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಶ್ರೀ ಸತ್ಯಮೂರ್ತಿ ದೇರಾಜೆ ಅವರ ನೇತೃತ್ವದಲ್ಲಿ ಚೊಕ್ಕಾಡಿಯ ಶ್ರೀರಾಮ ದೇವಾಲಯದಲ್ಲಿ ನಡೆಯುತ್ತಾ ಬರುತ್ತಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಸದ್ದು ಗದ್ದಲವಿಲ್ಲದ ಸೇವೆ ಇವರದು. ತಾನು ಕಾಣಿಸಿಕೊಳ್ಳಬೇಕೆಂಬ ಆಕಾಂಕ್ಷೆಗಳು ಅವರಿಗಿರಲಿಲ್ಲ. ಕರ್ತವ್ಯ ಎಂಬ ನೆಲೆಯಲ್ಲಿ ತೊಡಗಿಸಿಕೊಂಡಿದ್ದರು. ಅದರ ಪರಿಣಾಮವನ್ನು ಪರಿಸರವು ಅನುಭವಿಸಿತ್ತು. ಸಮಾಜದ ಸ್ವಾಸ್ಥ್ಯವನ್ನು ಕಾಪಿಡಲು ಅವರ ಸೇವಾಕಾರ್ಯಗಳು ಸಹಕಾರಿಯಾಗಿದ್ದುವು. ಐವರ್ನಾಡು ಚೊಕ್ಕಾಡಿ ಪರಿಸರವು ಸಾಮಾಜಿಕ ಸಾಮರಸ್ಯಗಳಿಂದ ಸ್ವಚ್ಛ, ಚೊಕ್ಕ, ಸುಂದರವಾಗಿ ಕಂಗೊಳಿಸಿತ್ತಿತ್ತು. ಸಮಾಜಕ್ಕಾಗಿ, ಕಲೆಗಾಗಿಯೇ ತನ್ನ ಬದುಕನ್ನು ಸವೆಸಿದ್ದ ಶ್ರೀ ಸತ್ಯಮೂರ್ತಿ ದೇರಾಜೆ ಅವರು 2005ನೇ ಇಸವಿ ಡಿಸೆಂಬರ್ ಹದಿನಾರರಂದು ಗಳಿಸಿದ ಕೀರ್ತಿಯನ್ನು ಉಳಿಸಿ ಮತ್ತೆ ಬಾರದ ಲೋಕಕ್ಕೆ ಪಯಣಿಸಿದ್ದರು. ಶ್ರೀ ಸತ್ಯಮೂರ್ತಿ ದೇರಾಜೆ ಅವರ ಸಹೋದರರು ಸತ್ಯನ್ ದೇರಾಜೆ ಮತ್ತು ಬಾಲಸುಬ್ರಹ್ಮಣ್ಯ ದೇರಾಜೆ. ಶ್ರೀ ಸತ್ಯನ್ ದೇರಾಜೆ ತಾಳಮದ್ದಳೆಯ ಉತ್ತಮ ಅರ್ಥಧಾರಿಗಳು. ಶ್ರೀ ಸತ್ಯಮೂರ್ತಿ ದೇರಾಜೆಯವರ ಪತ್ನಿ ಶ್ರೀಮತಿ ಜಯಂತಿ ದೇರಾಜೆ. ಇವರಿಗೆ ಈರ್ವರು ಪುತ್ರರು. ಸುಧನ್ವ ದೇರಾಜೆ ಮತ್ತು ಸುಧೇಷ್ಣ ದೇರಾಜೆ. ‘ಯಕ್ಷಲೋಕದ ರಸದೃಷ್ಟಾರ – ಶ್ರೀ ದಿ| ದೇರಾಜೆ ಸೀತಾರಾಮಯ್ಯನವರು ಸತ್ಯಮೂರ್ತಿ ದೇರಾಜೆ ಅವರ ಸಣ್ಣಜ್ಜ. ಸಾಧಕ ದಿ| ಶ್ರೀ ಸತ್ಯಮೂರ್ತಿ ದೇರಾಜೆ ಅವರಿಗೆ ನುಡಿನಮನಗಳು.
ಲೇಖಕ: ರವಿಶಂಕರ ವಳಕ್ಕುಂಜ
ಗಣೇಶ ಕೊಲೆಕಾಡಿಗೆ ‘ರಂಗ ಭಾಸ್ಕರ ಪ್ರಶಸ್ತಿ’
ದಿ| ಭಾಸ್ಕರ ನೆಲ್ಲಿತೀರ್ಥ ಅವರ ಸವಿ ನೆನಪಿಗಾಗಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇವರು ನೀಡುತ್ತಾ ಬರುತ್ತಿರುವ ‘ರಂಗ ಭಾಸ್ಕರ ಪ್ರಶಸ್ತಿ’ಗೆ ಈ ಬಾರಿ ಖ್ಯಾತ ಯಕ್ಷಗಾನ ಛಂದಸ್ಸು ವಿದ್ವಾಂಸ ಗಣೇಶ ಕೊಲೆಕಾಡಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ಮತ್ತು ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಅಕ್ಟೊಬರ್ 17ರಂದು ಕೊಲೆಕಾಡಿಯಲ್ಲಿರುವ ಗಣೇಶ ಕೊಲೆಕಾಡಿಯವರ ಸ್ವಗೃಹದಲ್ಲಿ ನೀಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ಆಯ್ಕೆ ಸಮಿತಿಯಲ್ಲಿದ್ದ ಡಾ. ನಾ. ದಾಮೋದರ ಶೆಟ್ಟಿ, ಮೀನಾಕ್ಷಿ ರಾಮಚಂದ್ರ ಮತ್ತು ಜಾದೂಗಾರ್ ಕುದ್ರೋಳಿ ಗಣೇಶ್ ಅವರು ಪ್ರಶಸ್ತಿ ಪುಸ್ಕೃತರ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ಕುರಿಯ ಗಣಪತಿ ಶಾಸ್ತ್ರಿಗಳಿಗೆ ಸನ್ಮಾನ ಮತ್ತು ‘ಕರ್ಣ ಪರ್ವ’ ತಾಳಮದ್ದಳೆ
ಯಕ್ಷಮೇನಕಾ ಮೂಡಬಿದಿರೆ, ರಂಗಸ್ಥಳ ಮಂಗಳೂರು (ರಿ), ಯಕ್ಷಚೈತನ್ಯ (ರಿ) ಅಶ್ವತ್ಥಪುರ ಎಂಬ ಮೂರು ಯಕ್ಷಸಂಘಟನೆಗಳಿಂದ ಕುರಿಯ ಗಣಪತಿ ಶಾಸ್ತ್ರಿ ದಂಪತಿಗಳಿಗೆ ಸಮ್ಮಾನ ಮತ್ತು ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಕರ್ಣ ಪರ್ವ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ವಿವರ ಲಗ್ತೀಕರಿಸಲಾಗಿದೆ.