Friday, August 28, 2026
Home Blog Page 365

ಗಣೇಶ ಕೊಲೆಕಾಡಿಯವರಿಗೆ ತಲ್ಲೂರು ಕನಕ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿ

ಉಡುಪಿಯ ಯಕ್ಷಗಾನ ಕಲಾರಂಗ ಯಕ್ಷ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕ-ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಛಾಂದಸ, ಪ್ರಸಂಗಕರ್ತ, ಕಲಾವಿದ ಶ್ರೀ ಗಣೇಶ ಕೊಲೆಕಾಡಿ ಆಯ್ಕೆಯಾಗಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 25, ಶುಕ್ರವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹಿಸಲಿದ್ದಾರೆ. ಪ್ರಶಸ್ತಿಯು ರೂಪಾಯಿ 40,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ.

ಯಕ್ಷಗಾನದ ನಡೆದಾಡುವ ವಿಶ್ವಕೋಶ – ಡಾ. ಕೆ. ಎಂ. ರಾಘವ ನಂಬಿಯಾರ್ (Dr. K.M. Raghava Nambiar)

ಇಂದು ಯಕ್ಷಗಾನಕ್ಕಾಗಿ, ಕಲೆಯ ಪಾರಂಪರಿಕತೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ, ನಿರ್ದೇಶನಗಳನ್ನು ಮಾಡುವ ಕೆಲವು ಮಹನೀಯರುಗಳ ಸಾಲಿನಲ್ಲಿ ಯಕ್ಷಗಾನದ ನಡೆದಾಡುವ ವಿಶ್ವಕೋಶ, ಡಾ. ಕೆ. ಎಂ. ರಾಘವ ನಂಬಿಯಾರ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. 

ಡಾ. ಕೆ. ಎಂ. ರಾಘವ ನಂಬಿಯಾರ್ ನಾಡಿನ ಒಬ್ಬ ಶ್ರೇಷ್ಠ ಚಿಂತಕ, ಯಕ್ಷಗಾನದ ಸರ್ವಾಂಗಗಳನ್ನೂ ಕರತಲಾಮಲಕ ಮಾಡಿಕೊಂಡ ಕಲಾ ಸವ್ಯಸಾಚಿ, ಜೊತೆಗೆ ಶ್ರೇಷ್ಠ ವಿಮರ್ಶಕ, ಹಲವಾರು ಸಂಶೋಧನೆಗಳನ್ನು ನಡೆಸಿದ ಕಲಾವಿಜ್ಞಾನಿ, ಮೌಲ್ಯಯುತ ಗ್ರಂಥಗಳನ್ನು ನೀಡಿದ ಲೇಖಕ, ಅವರ ಸಾಧನೆಗಳನ್ನು ಹೇಳಹೊರಟರೆ ಯಾವುದನ್ನು ಹೇಳುವುದು, ಯಾವುದನ್ನು ಬಿಡುವುದು ಎಂಬ ಜಿಜ್ಞಾಸೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಲು ಅವರಿಗೆ ಬಾಲ್ಯದ ಪರಿಸರ ಎರಡು ನೆಲೆಯಿಂದ ಪ್ರೇರಣೆ ಕೊಟ್ಟಿದೆ. ಒಂದನೆಯದಾಗಿ ಅವರ ತಂದೆಯವರು ಕಾರ್ಕಳ ತಾಲೂಕಿನ ಪ್ರಸಿದ್ಧ ವೈದ್ಯರು. ನೀರೇಬೈಲೂರಿನಲ್ಲಿ 30 ವರ್ಷ ಅನೇಕ ಗ್ರಾಮಗಳಿಗೆ ಅವರು ಮನೆ ವೈದ್ಯರಾಗಿ ಕೆಲಸ ಮಾಡಿದವರು. ಆಮೇಲೆ 1958ರಲ್ಲಿ ಅವರು ತಮ್ಮ ವೃತ್ತಿಯನ್ನು ಕಾರ್ಕಳ ಪೇಟೆಗೆ ವರ್ಗಾಯಿಸಿದರು. ಅವರ ಮನೆಯ ಪರಿಸರ ಹೇಗಿತ್ತು ಅಂದರೆ ಅದು ಒಂದು ಪೌರಾಣಿಕ ಆವರಣವನ್ನು ಹೊಂದಿತ್ತು. ಕುಟುಂಬದ ಹಿನ್ನೆಲೆಯಲ್ಲಿ ಪುರಾಣಗಳ ಸಂಬಂಧ ತುಂಬಾ ಇತ್ತು. ಪುರಾಣ ಕಾವ್ಯಗಳನ್ನು ಓದುವುದು, ಭಗವದ್ಗೀತೆಯ ಪಾರಾಯಣ ಮೊದಲಾದ ಪೌರಾಣಿಕ, ಆಧ್ಯಾತ್ಮಿಕ ಸಂಬಂಧ ಡಾ. ನಂಬಿಯಾರರಿಗೆ ಮನೆಯಿಂದಲೇ ಬಂದಿತ್ತು. ಜೊತೆಗೆ ತಂದೆಯವರು ಸ್ವತಃ ವೈದ್ಯರಾದುದರಿಂದ ಆಯುರ್ವೇದದ ಸಂಬಂಧವೂ ಇತ್ತು.

ಅದರಿಂದಲೂ ಮುಖ್ಯವಾಗಿ ಆ ಕಾಲದಲ್ಲಿ ಮನೋರಂಜನೆಯ ಮಾಧ್ಯಮವೂ ಯಕ್ಷಗಾನವೇ ಆಗಿತ್ತು. ಸಿನಿಮಾದ ಪರಿಚಯ ಆಗ ಅಷ್ಟಾಗಿ ಆಗಿರಲಿಲ್ಲ. ತಂದೆಯವರ ಜೊತೆಗೆ ಯಕ್ಷಗಾನ ಬಯಲಾಟಗಳಿಗೆ ಹೋಗುತ್ತಿದ್ದ ರಾಘವ ನಂಬಿಯಾರರಿಗೆ 8 ವರ್ಷಗಳಿದ್ದಾಗ ಮೂಲ್ಕಿ ಮೇಳದ ಆಟಗಳನ್ನು ನೋಡಿದ್ದ ನೆನಪು ಈಗಲೂ ಹಸಿರಾಗಿ ಕಣ್ಣಿಗೆ ಕಟ್ಟಿದಂತೆ ಆಗುತ್ತಿದೆಯಂತೆ. ಹೈಸ್ಕೂಲ್‍ಗೆ ಬಂದಾಗ ಆ ಅವಧಿಯಲ್ಲಿ ಅವರ ಶಾಲೆಯ ಹತ್ತಿರ ಕಾರ್ಕಳದ ವೆಂಕಟ್ರಮಣ ದೇವಸ್ಥಾನದ ಸಮೀಪ ಹವ್ಯಾಸೀ ಕಲಾವಿದರ ಸಂಘವಿತ್ತು. ಉತ್ತಮ ಕಲಾವಿದರಿದ್ದರು ಆ ಸಂಘದಲ್ಲಿ. ಹವ್ಯಾಸೀ ಕಲಾವಿದರಾಗಿದ್ದರೂ ಈಗಿನ ಕೆಲವು ವೃತ್ತಿಪರರಿಗಿಂತಲೂ ಉತ್ತಮ ಪ್ರದರ್ಶನ ನೀಡುತ್ತಿದ್ದರು. ತಾಳಮದ್ದಳೆಗಳನ್ನು ನೋಡುತ್ತಾ ಇರುವಾಗ ಒಮ್ಮೆ ಅವರ ಮಾಸ್ಟ್ರು ಶ್ರೀ ವಾಮನ ಪ್ರಭುಗಳು ಅರ್ಥ ಹೇಳುವಂತೆ ಪ್ರೇರೇಪಿಸಿದರು. ಅವರ ಪ್ರೋತ್ಸಾಹದಿಂದ ಆ ಸಂಘದ ಸದಸ್ಯನಾಗಿ ಸಕ್ರಿಯವಾಗಿ ಭಾಗವಹಿಸು ವುದಕ್ಕೆ ಪ್ರಾರಂಭಿಸಿದರು.

ಆಯುರ್ವೇದ ಕಲಿಯುವ ಉದ್ದೇಶದಿಂದ ಡಾ. ರಾಘವ ನಂಬಿಯಾರರು ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಕೆಲವು ಪ್ರತಿಕೂಲ ಕಾರಣಗಳಿಂದಾಗಿ ಅವರಿಗೆ ಆಯುರ್ವೇದ ಕಲಿಯಲಾಗಲಿಲ್ಲ. ಹೈಸ್ಕೂಲ್‍ನ ಅವಧಿಯಲ್ಲಿ ಯಕ್ಷಗಾನದ ಅರ್ಥಧಾರಿಯಾಗಿ ಅವರು ಗುರುತಿಸಿಕೊಂಡರು. ಕಾಲೇಜಿನಲ್ಲಿ ಪದವಿ ಶಿಕ್ಷಣ ಕಲಿಯುತ್ತಿರುವಾಗ ಕನ್ನಡ ಪಂಡಿತರು ಅವರಿಗೆ ನಾಟ್ಯಾಭ್ಯಾಸ ಮಾಡಿಸಿ ಮುದ್ದಣನ ‘ಕುಮಾರ ವಿಜಯ’ ಆಟ ಆಡಿಸಿದ್ದರಂತೆ. ಆ ಕಾಲದಲ್ಲಿ ಹರಿದಾಸರೆಲ್ಲಾ ಯಕ್ಷಗಾನ ರಂಗಕ್ಕೆ ಬಂದಿದ್ದುದ ರಿಂದ ಮಾತಿನ ಬಲದಿಂದ ರಂಗನಿರ್ಮಾಣ ಮಾಡುವ ಸೂಕ್ಷ್ಮತೆಯನ್ನು ತಿಳಿದುಕೊಳ್ಳಲು ಸಾಧ್ಯವಾಯಿತು ಎಂಬುದು ಡಾ. ನಂಬಿಯಾರರ ನಂಬಿಕೆ. ಇದೇ ಅವರ ‘ಕುಮಾರ ವಿಜಯ’ದ ತಂಡವನ್ನು ಮಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾಲಯಗಳು ಕರೆಸಿಕೊಂಡು ಪ್ರದರ್ಶನಗಳನ್ನು ಏರ್ಪಡಿಸಿದ್ದರು. ಈ ತಂಡಕ್ಕೆ ಕೆಲವು ಪ್ರಶಸ್ತಿಗಳೂ ಬಂದುವು.


ಹೀಗೆ ತನ್ನ ಶೈಕ್ಷಣಿಕ ಕಾಲದಲ್ಲಿಯೇ ಯಕ್ಷಗಾನದಲ್ಲಿ ಪಳಗತೊಡಗಿದ್ದ ಡಾ. ರಾಘವ ನಂಬಿಯಾರರು ತನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಹಿಮ್ಮೇಳದಲ್ಲಿಯೂ ಕೈಚಳಕ ತೋರತೊಡಗಿದ್ದರು. ಭಾಗವತಿಕೆಯನ್ನೂ ಮಾಡು ತ್ತಿದ್ದರು. ಚೆಂಡೆ, ಮದ್ದಳೆಗಳನ್ನು ಬಾರಿಸುತ್ತಿದ್ದರು. ಅರ್ಥ ಹೇಳುವುದರ ಜೊತೆಗೆ, ಹಿಮ್ಮೇಳವನ್ನೂ ಕಲಿತುಕೊಂಡ ನಂಬಿಯಾರರಿಗೆ ದೊಡ್ಡ ಕಲಾವಿದರ ಒಡನಾಟ ದೊರೆಯಿತು.
ಸಂಸ್ಕೃತ ಎಂ.ಎ. ಪದವೀಧರರಾದ ನಂಬಿಯಾರರು ಯಕ್ಷಗಾನಕ್ಕೆ ಅಮೂಲ್ಯ ಕೊಡುಗೆಯಾಗಿ ರಚಿಸಿದ ‘ಹಿಮ್ಮೇಳ’ ಎನ್ನುವ ಬೃಹತ್ ಸಂಶೋಧನಾ ಗ್ರಂಥಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ರಚಿಸಿದ ಪ್ರಸಂಗಗಳು : ಬಹು ಯಶಸ್ವೀ ಪ್ರಸಂಗಗಳಾದ ಚಕ್ರೇಶ್ವರ ಪರೀಕ್ಷಿತ, ಉತ್ತಮ ಸೌದಾಮಿನಿ, ವಜ್ರಧರ ವಿಲಾಸ, ಅಮರೇಂದ್ರ ಪದವಿಜಯಿ ಮೊದಲಾದವುಗಳು.

ಹಿಮ್ಮೇಳ’ ಸಂಶೋಧನಾ ಗ್ರಂಥ ಬಿಡುಗಡೆ ಸಮಾರಂಭ (ಎಡದಿಂದ ಬಲಕ್ಕೆ) ಡಾ. ಎಂ. ಪ್ರಭಾಕರ ಜೋಶಿ, ಹಿರಿಯಡಕ ಗೋಪಾಲ ರಾವ್, ಡಾ| ಬಸವರಾಜ ಮಲಿಶೆಟ್ಟಿ,ಕೆ. ಕೆ. ಪೈ, ಡಾ. ವಿವೇಕ್ ರೈ, ಕೆರೆಮನೆ ಶಂಭು ಹೆಗಡೆ, ಡಾ. ಯು. ಪಿ. ಉಪಾಧ್ಯಾಯ,ಇಡಗುಂಜಿ ಗಜಾನನ ಯಾಜಿ,ಡಾ. ಕೆ.ಎಂ.ರಾಘವ ನಂಬಿಯಾರ್,  ಹಿಂದೆ ರಂಗಕರ್ಮಿ ಗುರುರಾಜ ಮಾರ್ಪಳ್ಳಿ


ಯಕ್ಷಗಾನ ಕಲಿಕೆ : ಗುರುಗಳಾಗಿ ಶ್ರೀ ವಾಮನ ಪ್ರಭು, ಬಿ. ಗೋಪಾಲಕೃಷ್ಣ ಕುರುಪ್, ಅಲ್ಲದೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ನಿಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಕೋಟೆಕಾರು ದೇರಣ್ಣ ರೈ ಇವರೆಲ್ಲರ ಒಡನಾಟದಿಂದಾಗಿ ಬಡಗಿನಲ್ಲಿ ನೀಲಾವರ ರಾಮಕೃಷ್ಣಯ್ಯ, ಕೋಟ ಮಹಾಬಲ ಕಾರಂತ, ಹಿರಿಯಡಕ ಗೋಪಾಲ ರಾವ್ ಇವರ ಮಾರ್ಗದರ್ಶನದಲ್ಲಿ ಅಭ್ಯಾಸ. ಹಾಗೂ ಬಲಿಪ ನಾರಾಯಣ ಭಾಗವತರು, ಅಗರಿ ಶ್ರೀನಿವಾಸ ಭಾಗವತರು, ನಾರಣಪ್ಪ ಉಪ್ಪೂರು, ಜಾನುವಾರುಕಟ್ಟೆ ಗೋಪಾಲಕೃಷ್ಣ ಕಾಮತ್, ಮರವಂತೆ ನರಸಿಂಹದಾಸ ಭಾಗವತರು ಇವರೆಲ್ಲರ ಹಾಡುಗಾರಿಕೆಯ ಪ್ರಭಾವ.
                           

ಕಾರ್ಕಳ ಎಂಬ ತೆಂಕು-ಬಡಗುಗಳ ಸಂಗಮಸ್ಥಾನದಲ್ಲಿಯ ಪ್ರಯೋಜನವನ್ನು ಉಪಯೋಗಿಸಿಕೊಂಡ ಡಾ. ಕೆ. ಎಂ. ರಾಘವ ನಂಬಿಯಾರರು ತೆಂಕು-ಬಡಗುಗಳೆರಡರಲ್ಲೂ ಸಮಾನ ಆಸಕ್ತಿಯುಳ್ಳವರಾಗಿ ಸಂಶೋಧನೆ, ಕಲಾಕೃಷಿಯನ್ನು ಮಾಡಿದವರು. ಹಿರಿಯಡ್ಕ ಗೋಪಾಲ ರಾವ್, ನೀಲಾವರ ರಾಮಕೃಷ್ಣಯ್ಯ ಬಲಿಪರ ಹಾಗೂ ಅಗರಿ ಭಾಗವತರೇ ಮೊದಲಾದವರಿಂದ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಪ್ರಚೋದನೆಗೊಂಡವರು. ಅವರ ನಿಚ್ಚಳ ಪ್ರಭಾವ ಡಾ. ನಂಬಿಯಾರರ ಮೇಲಾದ ಪರಿಣಾಮವೋ ಏನೋ     ಡಾ. ನಂಬಿಯಾರರು ಬಲಿಪ, ಅಗರಿಯವರಂತೆ ಹಾಡುತ್ತಾರೆ. ಡಾ. ರಾಘವ ನಂಬಿಯಾರರೇ ಹೇಳುವಂತೆ ತೆಂಕಿನಲ್ಲಿ ಅಗರಿ, ಬಲಿಪರಂತೆ ಹಾಡುವ ಅವರು ಬಡಗಿನಲ್ಲಿ ಜಾನುವಾರುಕಟ್ಟೆ, ಉಪ್ಪೂರರಿಂದ ಪ್ರಭಾವಿತರಾದವರು.

ರಚಿಸಿದ ಗ್ರಂಥಗಳು : ಹಿಮ್ಮೇಳ, ದೀವಟಿಗೆ, ರಂಗಸ್ಥಳದ ಬೆಳಕು, ದ್ರಾವಿಡ ನಾಡು-ನುಡಿ, ಮದ್ದಳೆಯ ಮಾಯಾಲೋಕ, ಯಾಜಿ ಭಾಗವತರು, ಚಿನ್ನದ ತಾಳ, ಮುಂದಲೆ, ವಿಲೋಕನ, ಆಶುವೈಖರಿ ಮೊದಲಾದುವುಗಳು. ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದಿರುವ ಡಾ. ರಾಘವ ನಂಬಿಯಾರರೊಡನೆ ನಡೆಸಿದ ಸಣ್ಣ ಸಂದರ್ಶನ ಮತ್ತು ನಾವು ಅವರಿಗೆ ಕೇಳಿದ ಕೆಲವೇ ಪ್ರಶ್ನೆಗಳಿಗೆ ಅವರ ಉತ್ತರ.
ಪ್ರಶ್ನೆ : ಬಾಲ್ಯದಲ್ಲಿಯೇ ಯಕ್ಷಗಾನದಿಂದ ಆಕರ್ಷಿತರಾಗಿದ್ದ ನಿಮ್ಮ ಬದುಕಿನಲ್ಲಿ ಸಂಪೂರ್ಣವಾಗಿ ಯಕ್ಷಗಾನದತ್ತ ಆಸಕ್ತಿ ಹೊಂದಲು ಪ್ರೇರೇಪಣೆ ಎಲ್ಲಿಂದ ದೊರೆಯಿತು?
ಉತ್ತರ : ಮೊದಲಿಗೆ ನನ್ನ ಶಾಲಾದಿನಗಳಲ್ಲಿಯೇ ನನಗೆ ಯಕ್ಷಗಾನದ ಪ್ರಥಮ ಪಾಠವನ್ನು ಹೇಳಿದ ಶ್ರೀ ವಾಮನ ಪ್ರಭುಗಳು ಮೊದಲಾದವರಿಂದ ನನಗೆ ಇಲ್ಲಿ ಹೆಜ್ಜೆ ಊರಲು ಆಸಕ್ತಿಯುಂಟಾಯಿತು. ಹೈಸ್ಕೂಲ್ ದಿನಗಳಲ್ಲಿ ಡಾ. ಶಿವರಾಮ ಕಾರಂತರ ಯಕ್ಷಗಾನ ಬಯಲಾಟ ಪುಸ್ತಕವನ್ನು ಓದಿ ಆಕರ್ಷಿತರಾಗಿ ‘‘ಯಕ್ಷಗಾನ ಎಂದರೆ ಬರೀ ಟೈಮ್‍ಪಾಸ್ ಅಲ್ಲ, ಬಹಳ ಕಲಿಯಲಿಕ್ಕುಂಟು ಇದರಲ್ಲಿ’’ ಎಂಬ ಭಾವನೆ ಮೂಡಿತು. ಯಕ್ಷಗಾನವನ್ನು ಕಲಾದೃಷ್ಟಿಯಿಂದ ನೋಡಲು ಕಾರಂತರಿಂದ ಸಾಧ್ಯವಾಯಿತು. ಡಾ. ಶೇಣಿ ಗೋಪಾಲಕೃಷ್ಣ ಭಟ್ಟರು ನಮ್ಮನ್ನು ಬಹಳ ಆಕರ್ಷಿಸಿದ ಕಲಾವಿದರು. ಮಾತಿನಲ್ಲೇ ದೃಶ್ಯಗಳನ್ನು ಕಣ್ಣಮುಂದೆ ನಿಲ್ಲಿಸುವ ಮಹಾನ್ ಕಲಾವಿದ. ಆಮೇಲೆ ಅಳಿಕೆ ರಾಮಯ್ಯ ರೈಗಳ ಋತುಪರ್ಣ, ಬೋಳಾರರ ಕಂಸ, ಬೋಳಾರರ ಹಿರಣ್ಯಕಶಿಪು, ನಾಟಕರಂಗದ ರೀತಿಯಲ್ಲಿ ಮಾಡಿದರು. ಆದರೂ ಅದು ರಂಗದಲ್ಲಿ ಬಹಳ ಶಕ್ತಿಶಾಲಿಯಾಯಿತು. ಬರಿಯ ಯಕ್ಷಗಾನವಷ್ಟೇ ಅಲ್ಲ, ಇಡಿಯ ಕರ್ನಾಟಕದ ರಂಗಭೂಮಿಯನ್ನು ಹಾಗೂ ಸಿನಿಮಾವನ್ನು ನೋಡು ವಂತಹಾ ಆಸಕ್ತಿಯಿತ್ತು. ಆದರೆ ನಾನು ಯಕ್ಷಗಾನದ ಅರ್ಥಧಾರಿಯಾದ ಮೇಲೆ ಸಿನಿಮಾದ ಆಕರ್ಷಣೆಯೇ ಹೊರಟುಹೋಯ್ತು. ಸಿನಿಮಾದ ಹುಚ್ಚು ಬಿಡಿಸುವಷ್ಟು ಶಕ್ತಿ ಯಕ್ಷಗಾನಕ್ಕಿದೆ ಎಂದು ಇದರ ಅರ್ಥ. ಪದವಿ ಶಿಕ್ಷಣದ ಅನಂತರ ನಾನು 1971ರಲ್ಲಿ ‘ಉದಯವಾಣಿ’ಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡೆ. ಮುಂದಕ್ಕೆ ಯಕ್ಷಗಾನದ ಸಂಶೋಧನಾ ಬರಹಗಳೊಂದಿಗೆ ಸಂಸ್ಕೃತದಲ್ಲಿ ಎಂ.ಎ. ಪದವಿ, ಯಕ್ಷಗಾನದಲ್ಲಿ ಡಾಕ್ಟರೇಟ್ ಪದವಿ ಎಲ್ಲಾ ಬಂದುವು.


ಪ್ರಶ್ನೆ : ಪರಂಪರೆಯ ಯಕ್ಷಗಾನದಿಂದ ಈಗಿನ ಕೆಲವು ಪ್ರದರ್ಶನಗಳು ಭಿನ್ನವಾದ ಹಾದಿಯನ್ನು ತುಳಿದಿದೆಯೆಂದು ನಿಮಗನ್ನಿಸುತ್ತಿದೆಯೇ?
ಉತ್ತರ : ಯಕ್ಷಗಾನದ ಪರಂಪರೆಯೆಂಬುದು ಮುಖ್ಯವಾಗಿ ಯಕ್ಷಗಾನದ ವೇಷಗಳು, ವೇಷಗಳನ್ನು ಕುಣಿಸುವ ಹಾಡುಗಾರಿಕೆ, ಹಾಡುಗಾರಿಕೆಗೆ ಉತ್ತೇಜಕವಾಗಿ ಬಾರಿಸುವ ಹಿಮ್ಮೇಳ, ವಾಚಿಕಾಭಿನಯ ಈ ನಾಲ್ಕು ಕಂಬಗಳ ಮೇಲೆ ನಿಂತಿವೆ. ನಾನು ಯಕ್ಷಗಾನ ನೋಡಿದ ಮೊದಲನೇ ಆಟಕ್ಕೂ ಈಗಿನ ಕಾಲದ ಯಕ್ಷಗಾನಕ್ಕೂ ಬಹಳವಾದ ವ್ಯತ್ಯಾಸಗಳಿವೆ. ಆದರೆ ನಾನು ನೋಡಿದ ಮೊದಲನೇ ಆಟದ ಬಗ್ಗೆ ಹೇಳಬಾರದು. ಯಾಕೆಂದರೆ ಆಗಿನ ನಮ್ಮ ಯಕ್ಷಗಾನದ ಬಗೆಗಿನ ದೃಷ್ಟಿಕೋನಕ್ಕೂ ಈಗಿನ ದೃಷ್ಟಿಕೋನಕ್ಕೂ ವ್ಯತ್ಯಾಸವಿದೆ. ಆದರೆ ನೋಡಿದ ಮೊದಲನೇ ಆಟದ Impression, ಆ ಪ್ರದರ್ಶನ ನಮ್ಮ ಮೇಲೆ ಮಾಡಿದ ಪ್ರಭಾವ ಈಗಲೂ ಅಚ್ಚಳಿಯದೆ ಉಳಿದಿದೆ. ಉದಾಹರಣೆಗೆ ಕಾರ್ತವೀರ್ಯನು ಸಹಸ್ರಬಾಹುವಾಗಿನ ದೃಶ್ಯದ ಚಿತ್ರಣಗಳು ಅದ್ಭುತ, ಅಂತಹ ಚಿತ್ರಣಗಳು ಈಗೆಲ್ಲಿ? ಅಂತಹಾ ಅಮೋಘ ದೃಶ್ಯಾವಳಿ ಗಳೆಲ್ಲಾ ಮಾಯವಾಗಿ ಸಮತಲದಲ್ಲಿದ್ದ ರಂಗವು ಎತ್ತರದ ರಂಗಸ್ಥಳವಾಗಿ ಮಾರ್ಪಟ್ಟಿತು. ವೇದಿಕೆ ನಿರ್ಮಾಣವಾದ ನಂತರ ಹಿಮ್ಮೇಳಕ್ಕೆ ಮಂಚ ಅಥವಾ ಮೇಜು ಬಂತು. ಆಮೇಲೆ ಒಂದೊಂದಾಗಿ ಮಾರ್ಪಾಟಾಗಿ ಈಗ ಈ ಸ್ಥಿತಿಗೆ ಬಂದು ಮುಟ್ಟಿದ್ದೇವೆ. ದೀವಟಿಗೆ ಬೆಳಕಿನ ಆಟದ ವೀಕ್ಷಣೆ ನಿಯಮಿತ ಸಂಖ್ಯೆಯ ಜನರಿಗೆ ಮಾತ್ರ ಸಾಧ್ಯವಾದ್ದರಿಂದಲೋ ಏನೋ ಪೆಟ್ರೋಮ್ಯಾಕ್ಸ್ ಬಂತು. ಇನ್ನೂ ಮುಂದುವರಿದು ಮೈಕ್, ವಿದ್ಯುಚ್ಛಕ್ತಿಯ ವ್ಯವಸ್ಥೆ ಆಯಿತು. ಹೀಗೆ ದಶಕ ದಿಂದ ದಶಕಕ್ಕೆ ಈ ಕಲೆ ವಾಣಿಜ್ಯದ ದೃಷ್ಟಿಯಿಂದಲೂ ಬದಲಾವಣೆಗಳನ್ನು ಕಾಣುತ್ತಾ ಹೋಯಿತು. ಈ ಬದಲಾವಣೆಗಳು ವೇಷ ಭೂಷಣಗಳಲ್ಲಿಯೂ ನೃತ್ಯ, ಹಾಡುಗಾರಿಕೆಯಲ್ಲಿಯೂ ಆಯಿತು.
ಪ್ರಶ್ನೆ : ನಾಟಕೀಯ ವೇಷಗಳನ್ನು ನಾವು ಒಪ್ಪಿಕೊಂಡು ಆಗಿಹೋಗಿದೆ. ನಾಟಕೀಯ ವೇಷಗಳು ಯಕ್ಷಗಾನಕ್ಕೆ ಅನಿವಾರ್ಯವೇ?
ಉತ್ತರ : ನಾಟಕೀಯ ವೇಷ ಯಕ್ಷಗಾನಕ್ಕೆ ಅನಿವಾರ್ಯವೇನಲ್ಲ. ಯಕ್ಷಗಾನದ ಪ್ರತಿಯೊಂದು ವೇಷಕ್ಕೂ ನಿಗದಿತ ರೂಪ, ವೇಷಭೂಷಣಗಳಿವೆ. ಇದನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದರೆ ಅದಕ್ಕೆ ಬೇರೊಬ್ಬರು ಜವಾಬ್ದಾರರಾಗುವುದಿಲ್ಲ. ಕಲಿಯುವುದು ಧರ್ಮ. ‘ಚಂದ’ ಆಗುವುದಿಲ್ಲ ಎಂದು ಹೇಳುತ್ತಾರೆ. ಈ ‘ಚಂದ’ ಎಂಬ ಶಬ್ದದ ವ್ಯಾಖ್ಯಾನವೇ ಇಲ್ಲಿ ತಪ್ಪು. ‘ಚಂದ’ ಎನ್ನುವುದು ಕಲೆಯ ಮಟ್ಟಿಗೆ ಹೇಳುವುದಾದರೆ ಮಾಡುವ ಕೆಲಸದ ಮೂಲಕ ನಿರ್ಣಯವಾಗುತ್ತದೆ. ಹಿರಣ್ಯಕಶಿಪುವಿನ ಕೇಸರಿತಟ್ಟಿಯ ವೇಷವು, ಬೀರುವ ಘನತೆ, ಗಾಂಭೀರ್ಯದ ಪ್ರಭಾವ ಅದೇ ಹಿರಣ್ಯಕಶಿಪುವಿನ ನಾಟಕದ ವೇಷ ಬೀರಬಲ್ಲುದೆ? ಯಕ್ಷಗಾನದ ಹಿರಣ್ಯಕಶಿಪು ಕೇಸರಿತಟ್ಟಿಯಲ್ಲಿಯೇ ಬರಬೇಕು. ಬಹಳ ಮುಖ್ಯವಾದ ಅಂಶವೇನೆಂದರೆ ನಾಟಕೀಯ ವೇಷಗಳೆಂದರೆ ಹೆಚ್ಚು ಹೆಚ್ಚು ಸಹಜ ರೂಪಕ್ಕೆ ತಂದ ಬಿಂಬಗಳು. ಸ್ವಲ್ಪ ಹಿಂದಿನ ಕಾಲದ ವಾಸ್ತವಿಕ ಬಿಂಬಗಳು. ಯಕ್ಷಗಾನದ್ದು ವಾಸ್ತವಿಕ ಬಿಂಬ ಅಲ್ಲ. ಸಾಂಕೇತಿಕ ಬಿಂಬ. ಒಂದೊಂದು ವೇಷದ ಪರಿಕರಗಳೂ, ಬಣ್ಣಗಳೂ, ಒಂದೊಂದು ಸಂಕೇತವನ್ನು ಸೂಚಿಸುತ್ತದೆ. ಯಕ್ಷಗಾನಕ್ಕೆ ಅದರದ್ದೇ ಆದ ಪಾತ್ರೋಚಿತ ಮೀಸೆ, ಗಡ್ಡಗಳಿವೆ. ಚಂದ ಕಾಣಬೇಕು ಅಂತ ತಮಗೆ ಬೇಕಾದಂತಹಾ ಮೀಸೆಗಳನ್ನು ಕಟ್ಟಿಕೊಳ್ಳುವುದಲ್ಲ.


ಪ್ರಶ್ನೆ : ಯಕ್ಷಗಾನದ ಹಾಡುಗಳಲ್ಲಿ ಛಂದೋಬದ್ಧತೆ, ಸಾಹಿತ್ಯ ಬಹು ಮುಖ್ಯವೆ?
ಉತ್ತರ : ಪದ್ಯದಲ್ಲಿ ಹೇಗುಂಟೋ ಅಲ್ಲಿ ಇದ್ದ ಹಾಗೆ ಹೇಳಬೇಕು. ಪದ್ಯರಚನೆ ಮಾಡಿದ್ದು ತಾಳಕ್ಕೆ ಸರಿಯಾಗಿ. ಪದ್ಯದಲ್ಲಿ ಗೆರೆಹಾಕಿದ್ದು ತಾಳದ ಆವರ್ತನಕ್ಕೆ ಸರಿಯಾಗಿ. ತಾಳದ ಆವರ್ತನಕ್ಕೆ ಸರಿಯಾಗಿ ಏನೂ ತುಂಡಾಗದೆ ಹೇಳಲಿಕ್ಕೆ ಆಗುತ್ತದೆ. ಸ್ವಂತದ ರಾಗ ಸೇರಿಸಿ ಹೇಳಿ ಪದ್ಯದ ಶಬ್ದಗಳನ್ನು ತುಂಡು ಮಾಡುವುದೋ, ವ್ಯತ್ಯಾಸ ಮಾಡಿಯೋ ಹೇಳುವುದು ಸರಿಯಲ್ಲ. ಆದರೆ ಶಬ್ದಗಳ ಪ್ರತ್ಯಯವನ್ನು ಇಟ್ಟುಕೊಂಡು ತಾಳಕ್ಕೆ, ಆವರ್ತನಕ್ಕೆ ಅಪಚಾರ ಆಗದೆ ಹೇಳುವುದಾದರೆ ಬಿಡಿಸಿ ಹೇಳಬಹುದು. ವಿಭಕ್ತಿ ಪ್ರತ್ಯಯವನ್ನು ಬಿಡಿಸಿ ಹೇಳಬಾರದು. ಅಗರಿ ಭಾಗವತರ ಪದ್ಯದಲ್ಲಿ ಎಷ್ಟು ಸ್ಪಷ್ಟತೆಯಿತ್ತು ಅಂದರೆ ಅವರ ಪದ್ಯವನ್ನು ಕೇಳಿಯೇ ಕಲಿಯುವಷ್ಟು ಸ್ಪಷ್ಟವಾಗಿರುತ್ತಿತ್ತು.
ಪ್ರಶ್ನೆ : ಯಕ್ಷಗಾನ ಕಲಿಯುವ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಶೈಕ್ಷಣಿಕವಾಗಿ ಪ್ರಯೋಜನವನ್ನು ಕೊಡಬಲ್ಲ ಯಕ್ಷಗಾನದ ಎಲ್ಲ ವಿಭಾಗಗಳ ಸಮಗ್ರ ಗ್ರಂಥದ ಅವಶ್ಯಕತೆ ಇದೆಯೇ?
ಉತ್ತರ : ಈಗಾಗಲೇ ಯಕ್ಷಗಾನಕ್ಕೆ ಅನೇಕ ಗ್ರಂಥಗಳು ಇವೆ. ಅದರಲ್ಲಿ ಸುಸಂಬದ್ಧ ಹಾಗೂ ಸುಸಂಬದ್ಧವಲ್ಲದ ಗ್ರಂಥಗಳೂ ಇವೆ. ಈಗ ನಾವು ಮಾಡಬೇಕಾದ್ದು ಶೈಕ್ಷಣಿಕವಾಗಿ ಈಗಾಗಲೇ ಹೊರಬಂದಿರುವ ಗ್ರಂಥಗಳ ಹಾಗೂ ಎಲ್ಲ ವಿಚಾರಗಳ ಸಂಗ್ರಹ. ತಿಳಿದವರು ನಾಲ್ಕೈದು ಮಂದಿ ಸೇರಿಕೊಂಡು ಶಿವರಾಮ ಕಾರಂತ, ಮುಳಿಯ ತಿಮ್ಮಪ್ಪಯ್ಯನವರಿಂದ ತೊಡಗಿ ಇಲ್ಲಿಯ ವರೆಗೆ ಬಂದಿರುವ ಎಲ್ಲ ಸಾಹಿತ್ಯಗಳನ್ನು ಸಂಗ್ರಹಿಸಿ, ಪರಿಷ್ಕರಿಸಿದರೆ ಅದೇ ಒಂದು ಉತ್ತಮ ಶೈಕ್ಷಣಿಕ ಗ್ರಂಥವಾಗಬಲ್ಲದು. ಅದೇ ಶಾಸ್ತ್ರವಾಗಬಲ್ಲುದು. ಸುಸಂಬದ್ಧವನ್ನು ಸಂಗ್ರಹಿಸುವುದು ಮುಖ್ಯ. ಹಿಮ್ಮೇಳದ ಬಗ್ಗೆ ಗ್ರಂಥಗಳು ಬಂದಿವೆ. ನಾನೂ ಬರೆದಿದ್ದೇನೆ. ಆದರೆ ನಾಟ್ಯದ ಬಗ್ಗೆ ಬರೆದದ್ದು ವಿರಳ. ನಾಟ್ಯದ ಬಗ್ಗೆ ಅಷ್ಟು ಕೆಲಸ ಆಗಲಿಲ್ಲ. ಬರೆಯುವುದು ಸುಲಭವೂ ಅಲ್ಲ. ತೆಂಕು ಬಡಗಿನ ನಾಟ್ಯ ವ್ಯತ್ಯಾಸ ಯಾಕೆ? ವೇಷಭೂಷಣಗಳೇ ಕಾರಣ. ವೇಷಭೂಷಣಗಳ ವ್ಯತ್ಯಾಸದಿಂದಲೇ ನಾಟ್ಯಕ್ರಮ ಮತ್ತು ಹೆಜ್ಜೆಗಳಲ್ಲಿ ವ್ಯತ್ಯಾಸ ಎಂದು ತಿಳಿಯದೇ ಎರಡನ್ನೂ ಕಸಿ ಮಾಡಲು ಹೋಗಬಾರದು.


ಪ್ರಶ್ನೆ : ಯಕ್ಷಗಾನಕ್ಕೊಬ್ಬ ನಿರ್ದೇಶಕರು ಬೇಕು ಎಂಬ ಭಾವನೆ ಬರುವಂತಿದೆಯಲ್ಲ.
ಉತ್ತರ : ಯಕ್ಷಗಾನದ ಎರಡೂ ತಿಟ್ಟುಗಳ ಬಗ್ಗೆ ಹೇಳುವುದಾದರೆ ಎಲ್ಲರಿಗೂ ಪ್ರಭಾವಿಯಾದ ಅನುಭವಿಗಳ ನಿರ್ದೇಶನದ ಕಟ್ಟುಪಾಡು ಬೇಕು. ಪ್ರತಿಯೊಬ್ಬರೂ ಸ್ವತಂತ್ರರು ಎಂಬಂತೆ ವರ್ತಿಸುವುದು ಸರಿಯಲ್ಲ. ಕಲೆಯಲ್ಲಿ ಆ ರೀತಿ ಇಲ್ಲ. ಅಲಿಖಿತ ಶಿಷ್ಟಾಚಾರಗಳು, ನಿಬಂಧನೆಗಳು ರಂಗಭೂಮಿಯಲ್ಲಿದೆ. ತಮ್ಮನ್ನು ಪ್ರಶ್ನಿಸುವವರು ಯಾರೂ ಇಲ್ಲ ಎಂದು ಖುಷಿ ಬಂದ ಹಾಗೆ ಮಾಡುವುದಲ್ಲ. ಆ ನಿಬಂಧನೆಗಳನ್ನು ಪಾಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಯಾಕೆಂದರೆ ಅರಿವಿನ ಕೊರತೆ. ಎಲ್ಲವನ್ನೂ ಪ್ರೇಕ್ಷಕರ ತಲೆಗೆ ಹಾಕ್ತಾರೆ. ಪ್ರೇಕ್ಷಕರು ಏನು ತಾನೇ ಮಾಡಿಯಾರು. ‘‘ಈ ರೀತಿಯೇ ವೇಷಭೂಷಣ ಕಟ್ಟಿಕೋ’’ ಎಂದು ಪ್ರೇಕ್ಷಕರು ಯಾರಾದರೂ ಹೇಳು ತ್ತಾರೆಯೇ? ಮನೋರಂಜನೆಯನ್ನು, ಒಳ್ಳೆಯದನ್ನು ಸ್ವೀಕರಿಸುವುದು ಪ್ರೇಕ್ಷಕರ ಧರ್ಮ. ಪ್ರೇಕ್ಷಕರು ಚಪ್ಪಾಳೆ ತಟ್ಟಿದರು ಎಂದು ರಂಗದಲ್ಲಿ ತಾನು ಏನೂ ಮಾಡಬಹುದು ಎಂದು ಭಾವಿಸಿದರೆ ಹೇಗೆ? ತನ್ನನ್ನು ತಾನೇ ಶಿಸ್ತಿಗೆ ಒಳಪಡಿಸಿಕೊಳ್ಳಬೇಕು. ಆದ್ದರಿಂದ ನಿರ್ದೇಶಕರ/ಅನುಭವಿಗಳ ಮಾತನ್ನು ಕೇಳುವ ವಿನಯಶೀಲತೆ ಬೇಕು.
ಪ್ರಶ್ನೆ : ‘ಹಿಮ್ಮೇಳ’ ಎಂಬ ಅತ್ಯಮೂಲ್ಯವಾದ ಗ್ರಂಥ ಯಕ್ಷಗಾನ ಕ್ಷೇತ್ರಕ್ಕೆ ನಿಮ್ಮ ಕೊಡುಗೆ. ಈ ಗ್ರಂಥದ ರಚನೆಯ ಪರಿಕಲ್ಪನೆ ಹೇಗೆ ಮೂಡಿತು?
ಉತ್ತರ : ಯಕ್ಷಗಾನದ ಇತರ ವಿಷಯಗಳ ಬಗ್ಗೆ ಈಗಾಗಲೇ ಕೆಲವರು ಬರೆದಿದ್ದಾರೆ. ಆದರೆ ಹಿಮ್ಮೇಳದ ಬಗ್ಗೆ ಹಾಗೂ ಅದರ ಸ್ವರೂಪವನ್ನು ಗ್ರಹಿಸತಕ್ಕ ಅಂಶಗಳಿವೆ ಎಂಬ ಯೋಚನೆ ನನಗೆ ಬಂತು. ಅದುವರೆಗೆ ಹಿಮ್ಮೇಳದ ಬಗ್ಗೆ ಗ್ರಂಥ ರೂಪದಲ್ಲಿ ಕೆಲಸ ಮಾಡಿದವರಿಲ್ಲ. ಮುಖ್ಯವಾಗಿ ತಾಳ, ರಾಗ ಎಲ್ಲದರ ಬಗ್ಗೆ ಬರೆದಿದ್ದೇನೆ. ಹಿಮ್ಮೇಳ ಅಂದರೆ ಬರೀ ಹಿಮ್ಮೇಳದ ಕುರಿತು ಮಾತ್ರ ಅಲ್ಲ. ವಾದ್ಯಗಳ, ಸಲಕರಣೆಗಳ ರಚನೆ, ಸ್ವರೂಪಗಳ ವಿವರ ಕೂಡಾ ಇದೆ. ತಾಳ, ರಾಗಗಳ ವಿವರ, ಜಾಗಟೆ ಮಾಡಬೇಕಾದರೆ ಯಾವ ನಿಷ್ಪತ್ತಿಯಲ್ಲಿ ಲೋಹಗಳನ್ನು ಮಿಶ್ರ ಮಾಡಬೇಕು- ಮೊದಲಾದ ಸಮಗ್ರ ವಿವರಗಳಿವೆ.

ಪ್ರಶ್ನೆ: ನೀವು ತಾಳಮದ್ದಳೆ ಅರ್ಥಗಾರಿಕೆಯಲ್ಲೂ ಗುರುತಿಸಿಕೊಂಡವರು. ಆದರೆ ಅರ್ಥಧಾರಿಯಾಗಿ ಮುಂದುವರಿಯದಿರಲು ಕಾರಣವೇನು? 

ಉತ್ತರ : ಉದಯವಾಣಿ ಸೇರಿದ ಮೇಲೆ ನನ್ನ ‘‘ಬರವಣಿಗೆ ಮತ್ತು ಮಾತು’’ ಇವೆರಡೂ ಒಂದಕ್ಕೊಂದು ತದ್ವಿರುದ್ಧ ಧ್ರುವಗಳಂತೆ ಗೋಚರಿಸಿತು. ಪತ್ರಕರ್ತರಾಗಿರುವಾಗ ಬರಹವನ್ನು ತಿದ್ದಿ, ಬರೆಯುವಂತಹಾ ಅಭ್ಯಾಸ ಆಯ್ತು, ಆಲೋಚನೆ ಮಾಡಿ ಬರೆಯುವ ಕ್ರಮ ಮತ್ತು ಎಡೆಬಿಡದೆ ಮಾತನಾಡುವ ಅಂದರೆ ಹೇಳುತ್ತಾ ಹೋಗುವ ಕ್ರಮ ಇವುಗಳ ನಡುವೆ ನನಗೆ ಬೌದ್ಧಿಕವಾದ ತಡೆಯುಂಟಾಯಿತು ಎಂದು ತೋರುತ್ತದೆ. ಇದು ನನ್ನದೇ ವಿಶ್ಲೇಷಣೆ. ನನ್ನ ಮಾತಿನ ಓಘದಲ್ಲಿ ತಡೆಯುಂಟಾಯಿತು. ಅರ್ಥ ಹೇಳಲು ಕೂತಾಗ ಮಾತಿನ ವೇಗಕ್ಕೆ ತಡೆ ಉಂಟಾಯಿತು. ಇದನ್ನು ಸ್ವತಃ ಅರ್ಥಮಾಡಿ ಕೊಂಡ ನಾನು ತಾಳಮದ್ದಳೆ ರಂಗದಿಂದ ಹಿಂದೆ ಸರಿದೆ. ಆದರೆ ಭಾಗವತಿಕೆ, ಹಿಮ್ಮೇಳ, ನಿರ್ದೇಶನ ಇವುಗಳನ್ನು ಮುಂದುವರಿಸಿದೆ. ಆಗಾಗ ವೇಷವನ್ನು ಕೂಡಾ ಮಾಡಿದ್ದೇನೆ.
ಒಂದು ವಿಶೇಷವಾದ ಸಂದರ್ಭದಲ್ಲಿ ಸ್ಥಳದಲ್ಲೇ ಪದ್ಯ ಬರೆಯುವ ಸಂದರ್ಭ ಒದಗಿಬಂತು. ಇಲ್ಲಿಂದ ನನಗೆ ಪದ್ಯ  ಹಾಗೂ ಪ್ರಸಂಗ ಬರೆಯಲು ಪ್ರೇರೇಪಣೆ ಉಂಟಾಯಿತು. ಸಿನಿಮಾದಲ್ಲಿ ಬಂದ ಪೌರಾಣಿಕ ಕಥೆಯನ್ನು ನಾನು ಯಕ್ಷಗಾನ ಪ್ರಸಂಗ ಬರೆದೆ. ಅದುವೇ ಹಲವಾರು ಪ್ರದರ್ಶನಗಳನ್ನು ಕಂಡ ‘ಚಕ್ರೇಶ್ವರ ಪರೀಕ್ಷಿತ’.
ಪ್ರಶ್ನೆ : ಕೊನೆಯದಾಗಿ ಯಕ್ಷಗಾನದ ಒಳಿತಿನ ದೃಷ್ಟಿಯಿಂದ ನಿಮ್ಮ ಕಿವಿಮಾತುಗಳೇನು?
ಉತ್ತರ : ಮೊದಲಾಗಿ ಪಾತ್ರಾನುಸಾರೀ ಲಯ ಬೇಧಗಳನ್ನು ಅರ್ಥಮಾಡಿಕೊಳ್ಳಬೇಕು. ಯಕ್ಷಗಾನದ ನಾಟ್ಯಕ್ಕೆ ಅದರದ್ದೇ ಆದಂತಹಾ ಒಂದು ಕ್ರಮ ಇದೆ. ನಕುಲ, ಸಹದೇವ, ಅರ್ಜುನ, ಭೀಮ, ಧರ್ಮರಾಯರಿಗೆ ಬೇರೆ ಬೇರೆ ಕುಣಿತಗಳು, ದ್ರೌಪದಿ ಪ್ರಭಾವತಿಯಲ್ಲ, ಮಾಯಾ ಶೂರ್ಪನಖಿಯೂ ಅಲ್ಲ, ಪ್ರತಿಯೊಂದಕ್ಕೂ ಅದರದ್ದೇ ಆದ ಸ್ವರೂಪ ಇದೆ. ನೀವು ಪಾತಾಳ ವೆಂಕಟ್ರಮಣ ಭಟ್ಟರೋ ಅಥವಾ ಕೋಳ್ಯೂರು ರಾಮಚಂದ್ರ ರಾಯರತ್ರ ಕೇಳಿದ್ರೆ ವಿವರವಾಗಿ ಹೇಳ್ತಾರೆ. ಅವರೆಲ್ಲಾ ತಿಳಿದವರು. ಹಾಗಾಗಿ ಮೂಲ ಸಂಪ್ರದಾಯಗಳನ್ನು ಪುನಃ ತರುವುದು ಯಕ್ಷಗಾನವನ್ನು ಉಳಿಸುವಲ್ಲಿ ಮಾಡಬೇಕಾದ ಕೆಲಸ. ಕಲೆ ಸಂಪಾದನೆಗೋಸ್ಕರ ಇರುವುದಲ್ಲ. ಜೀವನೋಪಾಯಕ್ಕೆ ಬೇರೆ ದಾರಿ ನೋಡಬೇಕು. ಹಾಗೆಂದು ಯಕ್ಷಗಾನದಲ್ಲಿ ಮೊದಲಿನ ಪರಿಸ್ಥಿತಿ ಇಲ್ಲ. ಹಣ ಮಾಡುವುದೇ ಉದ್ದೇಶ ಅಲ್ಲ. ಆದ್ದರಿಂದ ಪ್ರತಿಯೊಬ್ಬರಲ್ಲೂ ಗಂಭೀರ ಕಲಿಕೆ ಆಗಬೇಕು. ಯಕ್ಷಗಾನದ ಶೈಕ್ಷಣಿಕ ಅರ್ಹತೆಯನ್ನು ರಂಗದಲ್ಲಿ ತೋರಿಸಬೇಕು.



                                     ಡಾ. ನಂಬಿಯಾರರು ಹಲವಾರು ವಿಚಾರಗಳನ್ನು ಹೇಳಿದರು. ಅವರ ಮಾತುಗಳಲ್ಲಿ ಒಟ್ಟಾರೆ ವ್ಯವಸ್ಥೆಯ ಅಧಃಪತನ, ವಿಷಾದ, ಕೋಪ, ಅಸಹಾಯಕತೆ, ದೂರದೃಷ್ಟಿತ್ವ, ಸಲಹೆ-ಸೂಚನೆಗಳು, ಕೆಲವೊಂದು ಮೆಚ್ಚುಗೆಗಳೆಲ್ಲಾ ಬಂದುಹೋದುವು.
ಹಾಗೆಂದು ತಾನೇನೂ ನಿರಾಶಾವಾದಿಯಲ್ಲ ಎಂದು ನಂಬಿಯಾರರು ಹೇಳುತ್ತಾರೆ. ‘‘ಯಾರು ಏನೇ ಹೇಳಲಿ, ನನ್ನ ಕೆಲಸ ನಾನು ಮಾಡುತ್ತಾ ಇರುತ್ತೇನೆ. ಅದರಿಂದ ರಂಗಕ್ಕೆ ಪ್ರಯೋಜನ ಆಗುವುದಾದರೆ ನನಗೆ ಅದರಿಂದ ದೊಡ್ಡ ಸಂತೋಷ ಬೇರೆ ಇಲ್ಲ. ದೀವಟಿಗೆ ಬೆಳಕಿನ ಆಟವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅಂತಹ ಪ್ರಯೋಗಗಳನ್ನು ಪುನರುಜ್ಜೀವನಗೊಳಿಸಲು ಯತ್ನಿಸಿದೆ. ದೀವಟಿಗೆ ಬೆಳಕಿನ ಆಟದ ಪ್ರಯೋಗ ಮಾಡಿದೆ. ಎಲ್ಲರೂ ಮೆಚ್ಚಿ ಕೊಂಡರು. ನಂತರ ಈಗ ಕೆಲವರು ಅಂತಹುದೇ ಪ್ರಯೋಗ ಮಾಡಿದರು. ನನ್ನ ಕೆಲಸ ಸಾರ್ಥಕ ಆಯ್ತಲ್ಲ’’. ಇದು ಅವರ ಮನದಾಳದ ಮಾತುಗಳು.

ಡಾ. ರಾಘವ ನಂಬಿಯಾರರ ಕಲ್ಪನೆ. ಪ್ರಾಚೀನ ರೂಪದ ದೀವಟಿಗೆ ಬೆಳಕಿನ ಆಟ. ಬೆಳಕು ರಂಗದತ್ತ ಮಾತ್ರವೇ ಪ್ರತಿಫಲನಗೊಳ್ಳುವುದರಿಂದ ಪ್ರೇಕ್ಷಕರು ಏಕಾಗ್ರತೆಯಿಂದ ರಂಗದತ್ತ ಮಾತ್ರವೇ ನೋಡುತ್ತಾರೆ. (ಭಾಗವತರಾಗಿ ಡಾ. ಕೆ. ಎಮ್. ರಾಘವ ನಂಬಿಯಾರರು, ರಾಮನಾಗಿ ಭಾಸ್ಕರ ಪಡುಬಿದ್ರಿ, ಮಾಯಾ ಶೂರ್ಪನಖಿಯಾಗಿ ಅಂಬಾಪ್ರಸಾದ ಪಾತಾಳ.)

ಲೇಖನ: ಮನಮೋಹನ್. ವಿ. ಎಸ್.
ಫೋಟೋ ಕೃಪೆ : ಡಾ. ರಾಘವ ನಂಬಿಯಾರ್

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (15-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (15-12-2020)
ಮೇಳಇಂದು/ದಿನಾಂಕಸ್ಥಳ
ಕಟೀಲು ಒಂದನೇ ಮೇಳ15-12-2020ಕಣಂಜಾರು, ಬೈಲೂರು, ಕಾರ್ಕಳ 
ಕಟೀಲು ಎರಡನೇ ಮೇಳ 15-12-2020ನಡಿಬೆಟ್ಟು, ಬೆಳ್ತಂಗಡಿ ಮಡಂತ್ಯಾರು 
ಕಟೀಲು ಮೂರನೇ ಮೇಳ15-12-2020ಮುಂಚೂರು ಶಾಲಾ ಬಳಿ, ವಯಾ ಸುರತ್ಕಲ್ 
ಕಟೀಲು ನಾಲ್ಕನೇ ಮೇಳ 15-12-2020ಕೆದಿಂಜೆ, ನಂದಳಿಕೆ 
ಕಟೀಲು ಐದನೇ ಮೇಳ 15-12-2020ಮಿಜಾರು, ಮರಕಡಕರೆ 
ಕಟೀಲು ಆರನೇ ಮೇಳ15-12-2020ಕೋಡಿಮನೆ ಮೂಡುಪೆರಾರ 
ಮಂದಾರ್ತಿ ಒಂದನೇ ಮೇಳ 15-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಎರಡನೇ ಮೇಳ 15-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 15-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 15-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 15-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ಮಾರಣಕಟ್ಟೆ ಮೇಳ ‘ಎ’15-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’15-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’15-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 15-12-2020ಉಡುಪಿ, ಅಮ್ಮಣ್ಣ ರಾಮಣ್ಣ ಹಾಲ್ ನಲ್ಲಿ – ಶ್ರೀ ದೇವಿ ಮಹಾತ್ಮೆ 
ಕಮಲಶಿಲೆ ಮೇಳ ‘ಎ’15-12-2020ಎಸ್. ಸಚ್ಚಿದಾನಂದ ಚಾತ್ರ
ಕಮಲಶಿಲೆ ಮೇಳ ‘ಬಿ’15-12-2020ಎಸ್. ಸಚ್ಚಿದಾನಂದ ಚಾತ್ರ
ಶ್ರೀ ಬಪ್ಪನಾಡು ಮೇಳ15-12-2020ಕಲ್ಲಮುಂಡ್ಕೂರು ದೈವಬೆಟ್ಟು ದೇವಸ್ಥಾನದ ವಠಾರ- ಬಂಗಾರ್ ಬಾಲೆ

ನಿಶೆಯನ್ನು ನಡುಗಿಸಿದ ಖ್ಯಾತ ಬಣ್ಣದ ವೇಷಧಾರಿ ಬಣ್ಣದ ಮಹಾಲಿಂಗ

ತೆಂಕುತಿಟ್ಟು ಯಕ್ಷಗಾನದಲ್ಲಿ ‘ಬಣ್ಣದ ವೇಷ’ ಎಂಬುದು ಒಂದು ಪ್ರಮುಖವಾದ ವಿಭಾಗವು. ಹಿರಿಯ ತಲೆಮಾರಿನ ಅನೇಕ ಕಲಾವಿದರು ಬಣ್ಣದ ವೇಷಧಾರಿಗಳಾಗಿ ರಂಗದಲ್ಲಿ ವಿಜೃಂಭಿಸಿ ಈ ವಿಭಾಗವನ್ನು ಬಲಿಷ್ಠಗೊಳಿಸಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿರುತ್ತಾರೆ.

ವಿದ್ವಾಂಸರೂ ಹಿರಿಯ ಕಲಾವಿದರೂ ಬರೆದ ಪುಸ್ತಕಗಳಿಂದಷ್ಟೇ ನಮಗೆ ಅಂತಹಾ ಕಲಾವಿದರ ವಿಚಾರಗಳನ್ನು ತಿಳಿಯಬಹುದು. ಕೋಲುಳಿ ಸುಬ್ಬ, ಬಣ್ಣದ ಕುಂಞ, ಒತ್ತೆಕಿವಿ ಸುಬ್ಬ, ಬಣ್ಣದ ನರಸಪ್ಪಯ್ಯ, ಅಯ್ಯಪ್ಪ ಕುಂಞಣ್ಣ ಅಡ್ಯಂತಾಯ, ಹಂದಿ ತಿಮ್ಮಪ್ಪು ಮೊದಲಾದ ಅನೇಕ ಬಣ್ಣದ ವೇಷಧಾರಿಗಳು ಬಹಳ ಹಿಂದಿನವರು. 

ಕಲಾವಿದರಾಗಿದ್ದ ಅಳಿಕೆ ರಾಮಯ್ಯ ರೈ ಅವರು ತಮ್ಮ ಆತ್ಮಕಥನದಲ್ಲಿ ಕೋಲುಳಿ ಸುಬ್ಬನವರ ಬಗ್ಗೆ ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. “ಬಣ್ಣದ ವೇಷದ ಸುಬ್ಬ ಕೋಲುಳಿ ಸುಬ್ಬನೆಂದೇ ಪ್ರಖ್ಯಾತ. ಇವನದು ಈಡು ಜೋಡಿಲ್ಲದ ಬಣ್ಣದ ವೇಷಗಾರಿಕೆ. ಅಪ್ರತಿಮ ವಾಗ್ವಾದ ನಿಪುಣ. ಇವನ ಮುಖದ ಚಿಟ್ಟಿ, ಬಣ್ಣದ ವೇಷದ ಅಟ್ಟಹಾಸಕ್ಕೆ ಹೆದರಿ ಮೂರ್ಛೆ ಹೋದವರೂ ಲೆಕ್ಕವಿಲ್ಲದಷ್ಟು ಮಂದಿ. ಕೆಲವೆಡೆಗಳಲ್ಲಿ ಮಕ್ಕಳೂ, ಹೆಂಗಸರೂ ಹೆದರಿಕೊಳ್ಳದಂತೆ ಸುಬ್ಬನ ವೇಷ ಬರುವುದೆಂದು ಮುನ್ನಚ್ಚರಿಕೆ ಕೊಡುವ ಸಂಪ್ರದಾಯವಿತ್ತು. ನನ್ನ ಜೀವಮಾನದಲ್ಲಿ ಇಂತಹಾ ಮನಸ್ಸಿನಿಂದ ಮಾಯದ ಬಣ್ಣದ ವೇಷವನ್ನು ನೋಡಿಲ್ಲವೆಂದು ಪ್ರಾಂಜಲವಾಗಿ ಹೇಳುವೆ”.

ಬಣ್ಣದ ವೇಷಗಳಲ್ಲಿ ಹಿಂದಿನ ಹಿಂದಿನ ತಲೆಮಾರಿನ ಕಲಾವಿದರು ಸಾಧಕರಾಗಿ ಮೆರೆದಿದ್ದರು ಎಂಬುದಕ್ಕೆ ಅಳಿಕೆ ರಾಮಯ್ಯ ರೈಗಳ ಈ ಮಾತುಗಳೇ ಸಾಕ್ಷಿ. ಅವರ ಮುಂದಿನ ತಲೆಮಾರಿನ ಅನೇಕ ಕಲಾವಿದರೂ ಬಣ್ಣದ ವೇಷಧಾರಿಗಳಾಗಿ ಮೆರೆದು ಖ್ಯಾತರಾದರು. ಅಂತಹವರಲ್ಲಿ ಶ್ರೀ ಬಣ್ಣದ ಮಹಾಲಿಂಗನವರೂ ಪ್ರಮುಖರು. ಪ್ರಸಿದ್ಧ ಬಣ್ಣದ ವೇಷಧಾರಿಯಾಗಿ ಮೆರೆದ ಬಣ್ಣದ ಮಾಲಿಂಗ ಅವರು ಕಾಸರಗೋಡು ತಾಲೂಕಿನ ಆದೂರು ಗ್ರಾಮದ ಚೆನ್ನಂಗೊಡು ಎಂಬಲ್ಲಿ ಶ್ರೀ ಮಾಲಿಂಗ ಪಾಟಾಳಿ ಮತ್ತು ಶ್ರೀಮತಿ ಸುಬ್ಬಮ್ಮ ದಂಪತಿಗಳ ಮಗನಾಗಿ 1913ರಲ್ಲಿ ಜನಿಸಿದರು.

ಬಾಲ್ಯದಲ್ಲಿ ಬಡತನವಿತ್ತು. ಓದಿದ್ದು ಕೇವಲ ಒಂದನೇ ತರಗತಿ ವರೆಗೆ ಮಾತ್ರ. ಯಕ್ಷಗಾನವು ಹಿರಿಯರಿಂದ ರಕ್ತಗತವಾಗಿ, ಬಳುವಳಿಯಾಗಿ ಬಂದಿತ್ತು. ಅಜ್ಜ ಚಲ್ಯ ಶಂಕರರು ಯಕ್ಷಗಾನ ಭಾಗವತರಾಗಿದ್ದರು. ಮೇಲೆ ತಿಳಿಸಿದ ಮಹಾನ್ ಬಣ್ಣದ ವೇಷಧಾರಿ ಕೋಲುಳಿ ಸುಬ್ಬ ಇವರ ಮಾವ. ಅಲ್ಲದೆ ಆ ಕಾಲದಲ್ಲಿ ಗಾಣಿಗ ಸಮಾಜದ ಅನೇಕ ಕಲಾವಿದರು ಯಕ್ಷಗಾನ ಬಣ್ಣದ ವಿಭಾಗದಲ್ಲಿ ಮೆರೆದವರೇ ಆಗಿದ್ದರು. ಬಣ್ಣದ ಕುಂಞ, ಒತ್ತೆಕಿವಿ ಸುಬ್ಬ, ದೊಡ್ಡ ತಿಮ್ಮಪ್ಪ ಇವರೆಲ್ಲಾ ಮಾಲಿಂಗ ಅವರ ಬಂಧುಗಳೇ ಆಗಿದ್ದರು. ಹಾಗಾಗಿ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿಯು ಮೊಳೆತು ಬೆಳೆದಿತ್ತು. ಕಲಿತು ಮೇಲಕ್ಕೆ ಹೋದುದಲ್ಲ. ಮೇಳಕ್ಕೆ ಹೋಗಿ ಕಲಿತವರು.

ತನ್ನ 9ನೇ ವಯಸ್ಸಿನಲ್ಲಿ ಕೊರಕ್ಕೋಡು ಮೇಳಕ್ಕೆ ಸೇರ್ಪಡೆ. ಸಣ್ಣ ಪುಟ್ಟ ಕೆಲಸಗಳನ್ನೂ, ಹಿರಿಯ ಕಲಾವಿದರ ಸೇವೆಯನ್ನೂ ಮಾಡುತ್ತಾ ಯಕ್ಷಗಾನವನ್ನು ಕಲಿತರು. ಮೇಳದ ಬದುಕಿಗೆ ಹೊಂದಿಕೊಂಡರು. ಕೋಡಂಗಿಯಿಂದ ತೊಡಗಿ, ಬಾಲಗೋಪಾಲ ಹೀಗೆ  ಪೂರ್ವರಂಗದ ಎಲ್ಲಾ ವೇಷಗಳನ್ನೂ ಮಾಡುತ್ತಿದ್ದರು. ಮಂಜಪ್ಪ ಹಾಸ್ಯಗಾರರಿಂದ ನಾಟ್ಯಾಭ್ಯಾಸ. ಅಲ್ಲದೆ ಕಾಸರಗೋಡು ಸುಬ್ಬಯ್ಯ ಶೆಟ್ಟರಿಂದಲೂ ಕಲಿತಿದ್ದರಂತೆ. ತನ್ನ ವೇಷವಾದ ಮೇಲೆ ನಿದ್ರಿಸದೆ ಬೆಳಗಿನ ವರೆಗೂ ಆಟ ನೋಡುತ್ತಾ ಕಲಿತರು. ಸ್ತ್ರೀ ಪಾತ್ರಗಳನ್ನೂ ತಿರುಗಾಟದಲ್ಲಿ ನಿರ್ವಹಿಸಿದ್ದರು.

ಎಲ್ಲಾ ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ವೇಷಗಳ ಮುಖವರ್ಣಿಕೆ ಬಗೆಗೆ ಅಪಾರವಾದ ಜ್ಞಾನವನ್ನು ಹೊಂದಿದ್ದರು. ಕೊರೊಕ್ಕೋಡು ಮೇಳದಲ್ಲಿ ಎರಡು ತಿರುಗಾಟ. ಬಳಿಕ ಕೂಡ್ಲು ಮೇಳದಲ್ಲಿ ಐದು ತಿರುಗಾಟ. ಭಾಗವತರಾದ ಪುತ್ತಿಗೆ ರಾಮಕೃಷ್ಣ ಜೋಯಿಸರ ನಿರ್ದೇಶನ, ಪ್ರೋತ್ಸಾಹ. ಒಂದನೇ ಬಣ್ಣದ ವೇಷಧಾರಿ ಸುಬ್ಬಯ್ಯ ಶೆಟ್ಟರಿಂದ ಕಲಿಕೆ. ಮೂರನೇ ಬಣ್ಣದ ವೇಷಧಾರಿಯಾಗಿ ತಿರುಗಾಟ ಆರಂಭಿಸಿ ಎರಡನೇ ಬಣ್ಣದ ವೇಷಧಾರಿಯಾಗಿ ಭಡ್ತಿ ಹೊಂದಿದ್ದರು.

ಮತ್ತೆ ಮುಲ್ಕಿ, ಕದ್ರಿ ಧರ್ಮಸ್ಥಳ, ಸುರತ್ಕಲ್, ನಿಟ್ಟೆ, ವೇಣೂರು ಮೇಳಗಳಲ್ಲಿ ವ್ಯವಸಾಯ. ಬಳಿಕ ಕಟೀಲು ಮೇಳದಲ್ಲಿ ಕೊನೆವರೆಗೂ ತಿರುಗಾಟ ನಡೆಸಿದ್ದರು. ತನ್ನ ಸುದೀರ್ಘ ಕಲಾ ಬದುಕಿನಲ್ಲಿ ಅಪಾರ ಅನುಭವಗಳನ್ನು ಗಳಿಸಿ, ಯಕ್ಷಗಾನ ಬಣ್ಣದ ವೇಷಗಳ ಬಗೆಗೆ ಓರ್ವ ಸಮರ್ಥ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಬಣ್ಣದ ವೇಷಗಳಿಗೆ ಬೇಕಾದ ಆಳಂಗವನ್ನು ಹೊಂದಿದ ಶ್ರೀ ಮಾಲಿಂಗ ಅವರ ಅಟ್ಟಹಾಸ, ತೆರೆಕ್ಲಾಸ್, ಒಡ್ಡೋಲಗ ವೈಭವ, ನಡೆ ಎಲ್ಲವೂ ಅಚ್ಚುಕಟ್ಟು ಮತ್ತು ಶಿಸ್ತಿನಿಂದ ಕೂಡಿರುತ್ತಿದ್ದುವು. ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ವೇಷಗಳಲ್ಲೂ ಮಾಲಿಂಗನವರು ಹೆಸರನ್ನು ಗಳಿಸಿದ್ದಾರೆ.

ಮಹಿಷಾಸುರ, ರುದ್ರ ಭೀಮ, ವೀರಭದ್ರ, ಪುರುಷಾಮೃಗ, ಕುಂಭಕರ್ಣ, ನರಕಾಸುರ, ಬಾಣಾಸುರ, ಮೈರಾವಣ, ಹಿಡಿಂಬ, ಶೂರ್ಪನಖಿ, ಪೂತನಿ ಮೊದಲಾದ ವೇಷಗಳು ಪ್ರಸಿದ್ಧಿಯನ್ನು ನೀಡಿದ್ದುವು. ಕುರಿಯ ವಿಠಲ ಶಾಸ್ತ್ರಿಗಳ ಈಶ್ವರನಿಗೆ ವೀರಭದ್ರ, ಶೇಣಿಯವರ ರಾವಣನಿಗೆ ಕುಂಭಕರ್ಣನಾಗಿ ಇವರ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಪಾತ್ರೋಚಿತವಾದ ಮಾತುಗಾರಿಕೆಯಲ್ಲಿ ಬಣ್ಣದ ಮಹಾಲಿಂಗನವರು ಪಳಗಿದ ಕಲಾವಿದ. ಶಶಿಪ್ರಭಾ ಪರಿಣಯ ಪ್ರಸಂಗದ ಘೋರರೂಪಿಯ ವೇಷವೂ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಬಣ್ಣದ ವೇಷಧಾರಿಗಳೇ ನಿರ್ವಹಿಸುವ ಕಿರಾತ, ವೀರವರ್ಮ ಮೊದಲಾದ ವೇಷಗಳನ್ನೂ ಮಾಲಿಂಗನವರು ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರು.

ಶ್ರೀಯುತರ ಹೆಸರಿನಲ್ಲಿ ‘ಬಣ್ಣದ ಮಹಾಲಿಂಗ ಪ್ರತಿಷ್ಠಾನ’ ಪುತ್ತೂರು ಎಂಬ ಸಂಸ್ಥೆಯು ಕಾರ್ಯಾಚರಿಸುತ್ತಿದ್ದು ಯಕ್ಷಗಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ವರ್ಷವೂ ಸಾಧಕರಿಗೆ ಬಣ್ಣದ ಮಹಾಲಿಂಗ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದಾರೆ. ಈ ಪ್ರಶಸ್ತಿಯನ್ನು ಮೊತ್ತ ಮೊದಲು ಪಡೆದವರು ಬಣ್ಣದ ಮಾಲಿಂಗ ಅವರ ಶಿಷ್ಯರೇ ಆದ ಸಿದ್ದಕಟ್ಟೆ ಶ್ರೀ ಸದಾಶಿವ ಶೆಟ್ಟಿಗಾರ್ ಅವರು. ಬಣ್ಣದ ಮಾಲಿಂಗ ಅವರ ಪುತ್ರ ಶ್ರೀ ಬಣ್ಣದ ಸುಬ್ರಾಯ ಅವರು ತೆಂಕುತಿಟ್ಟಿನ ಅನುಭವೀ ಬಣ್ಣದ ವೇಷಧಾರಿ. ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿರುವುದು ಸಂತೋಷದ ವಿಚಾರ.

ಲೇಖಕ: ರವಿಶಂಕರ್ ವಳಕ್ಕುಂಜ

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (14-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (14-12-2020)
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ14-12-2020ಶ್ರೀ ಕ್ಷೇತ್ರದಲ್ಲಿ
ಕಟೀಲು ಒಂದನೇ ಮೇಳ14-12-2020ಕಂದಾವರ ವಯಾ ಕಿನ್ನಿಕಂಬಳ.
ಕಟೀಲು ಎರಡನೇ ಮೇಳ 14-12-2020ನೀರ್ಕರೆ ವಯಾ ಅಶ್ವತ್ಥಪುರ.
ಕಟೀಲು ಮೂರನೇ ಮೇಳ14-12-2020ನಾರಳ ಸಂಕೇಶ ವಯಾ ಗಂಜಿಮಠ.
ಕಟೀಲು ನಾಲ್ಕನೇ ಮೇಳ 14-12-2020ದಾಡಬೆಟ್ಟು ಪಳ್ಳಿ ಬೈಲೂರು.
ಕಟೀಲು ಐದನೇ ಮೇಳ 14-12-2020ಕೋಡಿಕಲ್, ಮಂಗಳೂರು.
ಕಟೀಲು ಆರನೇ ಮೇಳ14-12-2020ಕಟೀಲು ಕ್ಷೇತ್ರದಲ್ಲಿ.
ಮಂದಾರ್ತಿ ಒಂದನೇ ಮೇಳ 14-12-2020ಪಟೇಲರ ಮನೆ, ಹೆಗ್ಗುಂಜೆ 
ಮಂದಾರ್ತಿ ಎರಡನೇ ಮೇಳ 14-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಮೂರನೇ ಮೇಳ 14-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 14-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 14-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ಮಾರಣಕಟ್ಟೆ ಮೇಳ ‘ಎ’14-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’14-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’14-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 14-12-2020ನಕ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ- ದಕ್ಷಯಜ್ಞ, ಗಿರಿಜಾ ಕಲ್ಯಾಣ 
ಶ್ರೀ ಹಟ್ಟಿಯಂಗಡಿ ಮೇಳ14-12-2020ಕುಂದಾಪುರ ಹಳೆ ಬಸ್ಸು ನಿಲ್ದಾಣ
ಕಮಲಶಿಲೆ ಮೇಳ ‘ಎ’14-12-2020ಶಂಕರನಾರಾಯಣ ಕಲ್ಲುಕುಟ್ಟಿಗ ದೇವಸ್ಥಾನ 
ಕಮಲಶಿಲೆ ಮೇಳ ‘ಬಿ’14-12-2020ಬ್ರಾಹ್ಮೀ ಭಕ್ತವೃಂದ, ಜಡ್ಕಲ್ 
ಶ್ರೀ ಬಪ್ಪನಾಡು ಮೇಳ14-12-2020ಶ್ರೀ ಕ್ಷೇತ್ರ ಕದ್ರಿಯಲ್ಲಿ – ಬಂಗಾರ್ ಬಾಲೆ 

ಸೂರಿಕುಮೇರಿ ಗೋವಿಂದ ಭಟ್ಟರ ‘ಯಕ್ಷೋಪಾಸನೆ’ ಮತ್ತು ‘ಸವ್ಯಸಾಚಿ’ – ತನ್ನ ವೇಷಭೂಷಣಕ್ಕೆ ಕೊರತೆ ಮಾಡಿಕೊಂಡು ಇನ್ನೊಬ್ಬರನ್ನು ಮೆರೆಯಿಸುವ ಗೋವಿಂದ ಭಟ್ಟರು

ಕೆ. ಗೋವಿಂದ ಭಟ್ (ಫೋಟೋ: ಶ್ರುತಿ ಭಟ್ ಬಂಡ್ಯಡ್ಕ, ಬೋಸ್ಟನ್,ಯು. ಎಸ್. ಎ.)

ಯಕ್ಷಗಾನವೆಂಬ ಥಳಕು ಬಳುಕಿನ ಬಣ್ಣದ ಲೋಕದಲ್ಲಿ ಸೂರಿಕುಮೇರಿ ಗೋವಿಂದ ಭಟ್ಟರು ಎಂಬ ಕೌತುಕ, ವೇಷ ಕಳಚಿ ಬಣ್ಣ ತೊಳೆದು ನಿಜ ವ್ಯಕ್ತಿಯಾದಾಗ ಎಲ್ಲರಿಗೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಲಾಗದ ವ್ಯಕ್ತಿರೂಪವಾಗಿ ಉಳಿಯುತ್ತಾರೆ. ಕೆಲವೊಮ್ಮೆ ಸ್ಥಿತಪ್ರಜ್ಞತೆ, ಇನ್ನು ಕೆಲವು ಸಂದರ್ಭಗಳಲ್ಲಿ ಕಾಡುವ ನಿರ್ಲಿಪ್ತತೆ ಮುಖದಲ್ಲಿ ಪ್ರತಿಫಲಿಸುವುದುಂಟು. ಕಾದ ಕಬ್ಬಿಣಕ್ಕೆ ಬಿದ್ದ ಪೆಟ್ಟುಗಳಂತೆ ಎಳವೆಯಲ್ಲಿ ನಲಿವಿಗಿಂತ ಹೆಚ್ಚಾಗಿ ಅನುಭವಿಸಿದ ಯಾತನೆಯ ಬದುಕನ್ನು ಸಹ್ಯವಾಗಿಸಿಕೊಂಡು ಪರಿಪಕ್ವವಾಗಿ ಹೇಗೆ ಬೇಕಾದರೂ ಉಪಯೋಗಿಸಬಲ್ಲ ಆಯುಧವಾಗಿದ್ದಾರೆ.

ಎಳವೆಯಲ್ಲಿ ಧರ್ಮಸ್ಥಳ ಮೇಳದ ಚೌಕಿಗೆ ಹೋಗಿದ್ದಾಗಲೆಲ್ಲಾ ವೇಷದ ಪೆಟ್ಟಿಗೆಯ ಮೇಲೆ ಕುಳಿತು ಕೆ. ಗೋವಿಂದ ಭಟ್ ಎಂಬ ಅದ್ಭುತವನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದೆ. ಆಗಲೇ ನಮ್ಮ ದೃಷ್ಟಿಯಲ್ಲಿ ‘ಹೀರೋ’ ಆಗಿದ್ದ ವ್ಯಕ್ತಿತ್ವ. ಚಿಣ್ಣರಾಗಿದ್ದಾಗ ಕೆ. ಗೋವಿಂದ ಭಟ್ ಮತ್ತು ಎಂಪೆಕಟ್ಟೆ ರಾಮಯ್ಯ ರೈಗಳ ಪಾತ್ರಗಳನ್ನು ಬಹುವಾಗಿ ಇಷ್ಟಪಟ್ಟಿದ್ದೆ. ನಿಜವಾಗಿಯೂ ಪಾತ್ರಧಾರಿಯಾಗಿ ಗೋವಿಂದ ಭಟ್ಟರು ಪ್ರೇಕ್ಷಕರ ಮೇಲೆ ಬೀರುವ ಪ್ರಭಾವ ಬಹಳ ಗಾಢವಾದದ್ದು. ಆ ಪ್ರಭಾವ ಎಷ್ಟಿರುತ್ತದೆಂದರೆ ಅವರು ನಿರ್ವಹಿಸುವ ಪಾತ್ರಗಳಿಂದಾಚೆಗೆ ಯಕ್ಷಗಾನವೇ ಇಲ್ಲ ಎನ್ನುವಷ್ಟು.


ಕೆ. ಗೋವಿಂದ ಭಟ್ಟರ ಕುರಿತಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಇವರು ಪ್ರಕಾಶಿಸಿದ ಎರಡು ಪುಸ್ತಕಗಳು ಬಿಡುಗಡೆಯಾಗಿವೆ. ಮೊದಲನೆಯದು  ಡಾ. ಬಿ. ಪ್ರಭಾಕರ ಶಿಶಿಲ ಅವರು ಬರೆದ ಗೋವಿಂದ ಭಟ್ಟರ ಆತ್ಮಕಥೆ ‘ಯಕ್ಷೋಪಾಸನೆ’ ಹಾಗೂ ಇನ್ನೊಂದು ಹಿರಣ್ಯ ವೆಂಕಟೇಶ್ವರ ಭಟ್ಟ ಸಂಪಾದಕತ್ವದಲ್ಲಿ ಬಿಡುಗಡೆಗೊಂಡ ಸೂರಿಕುಮೇರಿ ಅವರ ಅಭಿನಂದನಾ ಗ್ರಂಥ ‘ಸವ್ಯಸಾಚಿ’.
ಮೊದಲನೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ 2008ರಲ್ಲಿ ಹೊರತಂದ ಪುಸ್ತಕ ‘ಯಕ್ಷೋಪಾಸನೆ’  ಡಾ. ಬಿ. ಪ್ರಭಾಕರ ಶಿಶಿಲರ ಅದ್ಭುತ ನಿರೂಪಣೆಯಿಂದ ಕೂಡಿದ್ದು ಪ್ರಾರಂಭದಿಂದ ಕೊನೆಯ ವರೆಗೂ ಓದಿಸಿಕೊಂಡು ಹೋಗುತ್ತದೆ. ಗ್ರಂಥದಲ್ಲಿ ಗೋವಿಂದ ಭಟ್ಟರ ಬಾಲ್ಯದಿಂದ ತೊಡಗಿ ಆ ಪುಸ್ತಕ ಪ್ರಕಟವಾಗುವ ವರೆಗಿನ ಅವರ ಜೀವನದ ವಿವಿಧ ಮಜಲುಗಳು, ಏಳುಬೀಳುಗಳನ್ನು ಸಮರ್ಥವಾಗಿ ನಿರೂಪಿಸಲಾಗಿದೆ. ಮೊದಲ ಭಾಗವು ಕರುಣರಸದ ಭಾವಾಭಿವ್ಯಕ್ತಿಯ ಧಾರೆಯಲ್ಲಿ ಮಿಂದು ತೋಯಿಸಿದರೂ ಮುಂದುವರಿದಂತೆ ಅವರ ಸಾಧನೆಗಳ ಅಲೆಯಲ್ಲಿ ನಾವೂ ತೇಲಾಡುವಂತೆ ಅನಿಸುತ್ತದೆ.


‘‘ಪಾತ್ರ ಯಾವುದೇ ಇರಲಿ, ತಕರಾರಿಲ್ಲದೆ ಕಲಾವಿದ ಒಪ್ಪಿಕೊಂಡರೆ ಕಲಾವಿದ ಬೆಳೆಯುತ್ತಾನೆ ಮತ್ತು ಪ್ರಯೋಗ ಯಶಸ್ವಿಯಾಗುತ್ತದೆ. ನಮ್ಮನ್ನು ನಾವು ಒಂದೆರಡು ಪಾತ್ರಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡರೆ ಕಲಾಮಾಧ್ಯಮ ಸೊರಗುತ್ತದೆ. ಯಕ್ಷಗಾನವು ಒಂದು ಸಾಮುದಾಯಿಕ ಭಾವಾಭಿವ್ಯಕ್ತಿಯೇ ಹೊರತು ಏಕವ್ಯಕ್ತಿ ಪ್ರದರ್ಶನವಲ್ಲ. ಇಡೀ ತಂಡವಾಗಿ ಕಲಾವಿದರು ದುಡಿದರೆ ಎಂತಹ ಪ್ರಸಂಗವನ್ನಾದರೂ ಯಶಸ್ವಿಗೊಳಿಸಬಹುದು ಎಂಬುದು ನಾನು ಕಂಡುಕೊಂಡ ಸತ್ಯ.’’

ಗೋವಿಂದ ಭಟ್ಟರು ಈ ಮಾತಿನಂತೆಯೇ ನಡೆದುಕೊಂಡರು. ಅಗತ್ಯ ಬಿದ್ದಾಗ ಯಾವುದೇ ಪಾತ್ರವನ್ನು, ಎಷ್ಟೇ ಸಣ್ಣ ಪಾತ್ರವನ್ನಾದರೂ ನಿರ್ವಹಿಸಿದ ಉದಾಹರಣೆಗಳು ಕಣ್ಣಮುಂದೆ ಹೇರಳವಾಗಿವೆ.
ಇನ್ನೊಂದು ಪುಸ್ತಕ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದವರೇ ಹೊರತಂದ ಹಿರಣ್ಯ ವೆಂಕಟೇಶ್ವರ ಭಟ್ಟ ಸಂಪಾದಿತ ‘ಸವ್ಯಸಾಚಿ’. ಹೆಸರೇ ಹೇಳುವಂತೆ ಯಕ್ಷರಂಗದ ನಿಜ ಸವ್ಯಸಾಚಿಯ ಬಗ್ಗೆ ಕಲಾಪೋಷಕ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್‍ರಿಂದ ಮೊದಲ್ಗೊಂಡು ಅನೇಕ ಗಣ್ಯರು ಬರೆದ ಅನಿಸಿಕೆಗಳಿವೆ.
ಟಿ. ಶ್ಯಾಮ್ ಭಟ್ ಅವರು ಈ ಪುಸ್ತಕದಲ್ಲಿ ‘‘ಅವರ ವೇಷಗಳು ರಂಗಸ್ಥಳವನ್ನು ತುಂಬಿ ಕೊಳ್ಳುವ ಪರಿ ಅನುಪಮವಾದುದು. ಗೋವಿಂದ ಭಟ್ಟರಿಗೆ ಗೋವಿಂದ ಭಟ್ಟರೇ ಸರಿ. ಯಾರ ಅನುಕರಣೆಯೂ ಇಲ್ಲದೆ, ಯಾರನ್ನೂ ಅನುಸರಿಸದೆ ತಮ್ಮದೇ ಆದ ಶೈಲಿಯಿಂದ ಮೆರೆದವರು…. ಸಾಮಾಜಿಕವಾದ ಕೆಲವು ವಿವಾದಗಳನ್ನು ಅವರು ಬಗೆಹರಿಸಿದ್ದಿದೆ. ಹೀಗೆ ಸಾಮಾಜಿಕ ಸೇವೆಗಳನ್ನು ಬಹುಕಾಲ ನಡೆಸಿದ್ದಾರೆ’’ ಎಂದು ಬರೆದಿದ್ದಾರೆ.


ಹೀಗೆ ಸಮಾಜಮುಖಿಯಾದ ಗೋವಿಂದ ಭಟ್ಟರು ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬೆಂದು ಬಸವಳಿದಿದ್ದರೂ ಅದನ್ನೆಲ್ಲಾ ಮೆಟ್ಟಿ ನಿಂತು ಛಲದಿಂದ ಬದುಕಿ ಈಗ ಸುದೃಢವಾದ ಆರ್ಥಿಕ ಬದುಕನ್ನು ಕಂಡುಕೊಂಡವರು.
‘ಸವ್ಯಸಾಚಿ’ ಹೊತ್ತಗೆಯ ಒಂದು ಭಾಗದಲ್ಲಿ ಯಕ್ಷಗಾನ ಕಲಾವಿದ ಕೆ. ವಿಶ್ವೇಶ್ವರ ಭಟ್, ಸುಣ್ಣಂಬಳ ಅವರು ತಮ್ಮ ಗುರುಗಳ ಬಗ್ಗೆ ಹೀಗೆ ಹೇಳುತ್ತಾರೆ. ‘‘ಗುರುಗಳ ಗದಾಯುದ್ಧದ ಕೌರವನ ಪಾತ್ರ. ನನ್ನದು ಕರ್ಣಪರ್ವದ ಕರ್ಣ. ವೇಷಭೂಷಣ ಒದಗಿಸುವವರು ಒಂದು ಬಿಳಿ ಬಣ್ಣದ ಸೋಗೆವಲ್ಲಿಯನ್ನು ಮಾತ್ರ ತಂದಿದ್ದರು. ನಾನು ವೇಷಧರಿಸುವಾಗ ಅದನ್ನು ಅವರ ಕೌರವನ ಪಾತ್ರಕ್ಕಾಗಿ ತೆಗೆದಿಟ್ಟು ಬೇರೆ ಬಣ್ಣದ ಸೋಗೆವಲ್ಲಿ ಹಾಕಿದೆ. ಅದನ್ನು ನೋಡಿದ ಅವರು ಬಂದು ‘ನೀನು ಅದನ್ನು ಹಾಕು’ ಎಂದು ಹೇಳಿ ಮೊದಲು ನಾನು ಹಾಕಿದ ಸೋಗೆವಲ್ಲಿಯನ್ನು ತೆಗೆಸಿದ್ದು ಮಾತ್ರವಲ್ಲ ಅಂದು ಅವರು ಕೌರವನಿಗೆ ಬೇರೆ ಯಾವುದೋ ಒಂದು ಸೋಗೆವಲ್ಲಿ ಹಾಕಿದರು. ಹೀಗೆ ತನ್ನ ವೇಷಭೂಷಣಕ್ಕೆ  ಕೊರತೆ ಮಾಡಿಕೊಂಡು ಇನ್ನೊಬ್ಬರನ್ನು ಮೆರೆಯಿಸುವ ಎಷ್ಟು ಮಂದಿಗಳನ್ನು ನಾವಿಂದು ಕಾಣಬಹುದು?’’ ನಿಜವಾಗಿಯೂ ಅತಿಶಯೋಕ್ತಿಗಳಿಂದ ಕೂಡಿದ ಮಾತಲ್ಲ ಇದು. ಇಂತಹ ಎಷ್ಟೋ ಸಂದರ್ಭಗಳಲ್ಲಿ ಗೋವಿಂದ ಭಟ್ಟರನ್ನು ಹತ್ತಿರದಿಂದ ಬಲ್ಲವರು ಒಪ್ಪುವ ಮಾತೇ.


ಅವರು ರಂಗದಲ್ಲಿ ಪಾತ್ರವೇ ಆಗಿರುತ್ತಿದ್ದರು. ಪಾತ್ರ, ಸ್ವಭಾವಗಳನ್ನು ತನ್ನ ಮೇಲೆ ಆವಾಹಿಸಿಕೊಳ್ಳುತ್ತಿದ್ದ ರೀತಿ ಅನನ್ಯವಾದದ್ದು. ‘ಯಕ್ಷೋಪಾಸನೆ’ಯಲ್ಲಿ ಅವರೇ ಹೇಳುವಂತೆ ‘‘ದ್ರೌಪದಿ ವಸ್ತ್ರಾಪಹರಣದ ಉದ್ದೇಶ ಪ್ರತೀಕಾರ. ಆ ಪಾತ್ರವನ್ನು ನಾನು ನಿರ್ವಹಿಸುವಾಗ ಹಿಂದೆ ನನ್ನ ವೈಯುಕ್ತಿಕ ಜೀವನದಲ್ಲಾದ ಅಪಮಾನ ಗಳನ್ನು ನೆನಪಿಸಿಕೊಂಡು ಈಗ ಅದಕ್ಕೆ ಪರಿಮಾರ್ಜನೆ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಿದ್ದೆ. ಕೌರವನ ಪಾತ್ರ ಸಹಜವಾಗಿ ಅಭಿವ್ಯಕ್ತಿಗೊಳ್ಳುತ್ತಿದ್ದರೆ, ಅದಕ್ಕೆ ಈ ಭಾವ ಕಾರಣ ವಾಗಿರಬೇಕು.’’ ಎಂತಹಾ ಮಾರ್ಮಿಕವಾದ ಮಾತು. ಅಷ್ಟೇ ಸತ್ಯವೂ ಕೂಡ. ‘ಯಕ್ಷೋಪಾಸನೆ’ ಮತ್ತು ‘ಸವ್ಯಸಾಚಿ’ ಎಂಬ ಈ ಎರಡೂ ಪುಸ್ತಕಗಳು ಕೂಡಾ ಮುಂದಿನ ಪೀಳಿಗೆಗೆ ಅಧ್ಯಯನ ಯೋಗ್ಯವೂ ಸಂಗ್ರಹಯೋಗ್ಯವೂ ಆಗಿವೆ.

ಲೇಖನ: ಮನಮೋಹನ್ ವಿ.ಎಸ್.  

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (13-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (13-12-2020)
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ13-12-2020ಶ್ರೀ ಕ್ಷೇತ್ರದಲ್ಲಿ
ಕಟೀಲು ಒಂದನೇ ಮೇಳ13-12-2020ಅಡ್ಡೂರು
ಕಟೀಲು ಎರಡನೇ ಮೇಳ 13-12-2020 ಕಟೀಲು ಕ್ಷೇತ್ರದಲ್ಲಿ
ಕಟೀಲು ಮೂರನೇ ಮೇಳ13-12-2020ನಾರ್ಲ  ವಯಾ ಗಂಜಿಮಠ
ಕಟೀಲು ನಾಲ್ಕನೇ ಮೇಳ 13-12-2020ಕತ್ತಲ್ ಸಾರ್ ಶಾಲಾ ಬಳಿ 
ಕಟೀಲು ಐದನೇ ಮೇಳ 13-12-2020ಎಕ್ಕಾರು ಗುಡ್ಡೆಸಾನದ ಬಳಿ 
ಕಟೀಲು ಆರನೇ ಮೇಳ13-12-2020ಮೆಲ್ಕಾರ್  ಪಾಣೆಮಂಗಳೂರು
ಮಂದಾರ್ತಿ ಒಂದನೇ ಮೇಳ 13-12-2020ವಿನಾಯಕ ದೇವಸ್ಥಾನ,ಆನೆಗುಡ್ಡೆ,ಕುಂಭಾಶಿ 
ಮಂದಾರ್ತಿ ಎರಡನೇ ಮೇಳ 13-12-2020ಮಹಾಗಣಪತಿ ದೇವಸ್ಥಾನ, ಬಾರಾಳಿ 
ಮಂದಾರ್ತಿ ಮೂರನೇ ಮೇಳ 13-12-2020ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ನಾಲ್ಕನೇ ಮೇಳ 13-12-2020ಶ್ರೀ ಕ್ಷೇತ್ರದಲ್ಲಿ  
ಮಂದಾರ್ತಿ ಐದನೇ ಮೇಳ 13-12-2020ಶ್ರೀ ಕ್ಷೇತ್ರದಲ್ಲಿ  
ಶ್ರೀ ಸುಂಕದಕಟ್ಟೆ ಮೇಳ 13-12-2020ಉಬೆಟ್ಟು ಶಾಲಾ ಬಳಿ – ಕೋಟಿ ಚೆನ್ನಯ್ಯ
ಶ್ರೀ ಮಾರಣಕಟ್ಟೆ ಮೇಳ ‘ಎ’13-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’13-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’13-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 13-12-2020ಶ್ರೀ ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ13-12-2020ನಾಯ್ಕನಕಟ್ಟೆ – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’13-12-2020ಕಮಲಶಿಲೆ ಶಾಲಾ ವಠಾರದಲ್ಲಿ 
ಕಮಲಶಿಲೆ ಮೇಳ ‘ಬಿ’13-12-2020ಹೊಸಂಗಡಿ 
ಶ್ರೀ ಬಪ್ಪನಾಡು ಮೇಳ13-12-2020ಬಂಗಾರ್ ಬಾಲೆ

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (12-12-2020)

ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ12-12-2020ಶ್ರೀ ಕ್ಷೇತ್ರದಲ್ಲಿ – ‘ರಂಭಾ ರೂಪರೇಖಾ’
ಕಟೀಲು ಒಂದನೇ ಮೇಳ12-12-2020ಉರ್ವಸ್ಟೋರ್ ಮೈದಾನ
ಕಟೀಲು ಎರಡನೇ ಮೇಳ 12-12-2020ಕರಿಯಂಗಳ, ವಯಾ ಪೊಳಲಿ
ಕಟೀಲು ಮೂರನೇ ಮೇಳ12-12-2020ಗುರುಪುರ ಕುಕ್ಕುದಕಟ್ಟೆ 
ಕಟೀಲು ನಾಲ್ಕನೇ ಮೇಳ 12-12-2020ಕೊಂಡೇಲಗುತ್ತು ಸೇವೆ, ವಯಾ ಕಟೀಲು
ಕಟೀಲು ಐದನೇ ಮೇಳ 12-12-2020ಕಟ್ಲ, ಸುರತ್ಕಲ್    
ಕಟೀಲು ಆರನೇ ಮೇಳ12-12-2020ಕೃಷ್ಣಾಪುರ, ಕಾಟಿಪಳ್ಳ 
ಮಂದಾರ್ತಿ ಒಂದನೇ ಮೇಳ 12-12-2020ಹೆಗ್ಗುಂಜೇ ದೊಡ್ಮನೆ, ಮಂದಾರ್ತಿ 
ಮಂದಾರ್ತಿ ಎರಡನೇ ಮೇಳ 12-12-2020ತೆಂಕಾಮನೆ, ನಡೂರು 
ಮಂದಾರ್ತಿ ಮೂರನೇ ಮೇಳ 12-12-2020ವಿಷ್ಣುಮೂರ್ತಿ ದೇವಸ್ಥಾನ, ಆರೂರು 
ಮಂದಾರ್ತಿ ನಾಲ್ಕನೇ ಮೇಳ 12-12-2020ಇರ್ಮಾಡಿಮನೆ, ಹಾವಂಜೆ 
ಮಂದಾರ್ತಿ ಐದನೇ ಮೇಳ 12-12-2020ಕೊಳ್ಕೆಬೈಲು, ಶಿರಿಯಾರ 
ಶ್ರೀ ಮಾರಣಕಟ್ಟೆ ಮೇಳ ‘ಎ’12-12-2020ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಬಿ’12-12-2020ಶ್ರೀ ಕ್ಷೇತ್ರದಲ್ಲಿ
ಶ್ರೀ ಮಾರಣಕಟ್ಟೆ ಮೇಳ ‘ಸಿ’12-12-2020ಶ್ರೀ ಕ್ಷೇತ್ರದಲ್ಲಿ
ಶ್ರೀ ಪಾವಂಜೆ ಮೇಳ 12-12-2020ತೌಡುಗೋಳಿ – ‘ತ್ರಿಜನ್ಮ ಮೋಕ್ಷ’
ಶ್ರೀ ಹಟ್ಟಿಯಂಗಡಿ ಮೇಳ12-12-2020ಸಾಲಿಗ್ರಾಮ ಗೆಂಡಕೆರೆ
ಕಮಲಶಿಲೆ ಮೇಳ ‘ಎ’12-12-2020ಶೆಟ್ಟಿಪಾಲು 
ಕಮಲಶಿಲೆ ಮೇಳ ‘ಬಿ’12-12-2020ಬೇಳಂಜೆ, ಶಾನಡಿ 

ಜಾಹೀರಾತು

ದೈಹಿಕ ಹಾಗೂ ಮನೋವಿಕಾಸಕ್ಕಾಗಿ ಯಕ್ಷಗಾನ

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ದಿ-10/12/2020 ಗುರುವಾರದಂದು ನಾಟ್ಯ ಸಂಪದ (ರಿ.) ಸಂಸ್ಥೆಯ ಯಕ್ಷಗಾನ ತರಗತಿಗಳು ಪದ್ಮನಾಭ ನಗರದ ಶ್ರೀ ಪ್ರಸನ್ನಗಣಪತಿ ದೇವಾಲಯದಲ್ಲಿ ಉದ್ಘಾಟಿತಗೊಂಡವು.

ಗುರುಗಳಾದ ಶ್ರೀ ರವೀಶ ಹೆಗಡೆ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ಶ್ರೀನಿವಾಸ ಸಾಸ್ತಾನ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ಜೀವನದ ಉನ್ನತಿಗೆ ಕಲೆಯೆ ಆಧಾರ, ಹಾಗಾಗಿ ಯಾವುದಾದರು ಕಲೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕೆಂದು ನುಡಿದರು.

ಸೃಷ್ಠಿ ಕಲಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಛಾಯಾಪತಿ ಕಂಚೀಬೈಲ್‍ ಇವರು ಕಲಾಪೋಷಣೆ ನಮ್ಮ ನಿತ್ಯದ ಕಾಯಕವಾಗಬೇಕು, ಆಗ ಕಲೆಯೆ ನಮ್ಮನ್ನು ಪೋಷಿಸುತ್ತದೆ ಎಂಬ ಅಧ್ಯಕ್ಷ ನುಡಿಗಳೊಂದಿಗೆ ಹಾರೈಸಿದರು.

ಪೋಷಕರು ಮಕ್ಕಳ ಮಾನಸಿಕ ಹಾಗೂ ದೈಹಿಕ ದೃಢತೆಗೆ ಯಕ್ಷಗಾನ ಸಹಾಯಕಾರಿ ಎಂಬ ಮಾತುಗಳನ್ನಾಡಿದರು. ಶ್ರೀ ಕೃಷ್ಣಪ್ರಸಾದ್ ವಂದಿಸಿದರು. ಕುಮಾರಿ ಅನುಶ್ರೀ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಹೆಜ್ಜೆಯ ಆರಂಭದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ರಂಗನಿಷ್ಠೆ, ಅರ್ಪಣಾಭಾವದ ಕಲಾವಿದ ದಿ| ಅಳಿಕೆ ಲಕ್ಷ್ಮಣ ಶೆಟ್ಟಿ 

‘ಅಳಿಕೆ’ ಎಂಬ ಶಬ್ದವು ಕೇಳಿದ ತಕ್ಷಣ ನೆನಪಾಗುವುದು ಅಲ್ಲಿನ ಶ್ರೀ ಸತ್ಯಸಾಯಿ ಲೋಕ ಸೇವಾ ಆಯೋಗದ ಶಿಕ್ಷಣ ಸಂಸ್ಥೆಗಳು. ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ಮಾಡಿ ಭವ್ಯ ಭಾರತದ ಭಾವೀ ಪ್ರಜೆಗಳನ್ನಾಗಿ ರೂಪಿಸುತ್ತಿರುವ ಸಂಸ್ಥೆಯಿದು. ನೆನಪಾಗುವುದು ಸಹಜ.

ಕಲಾಭಿಮಾನಿಗಳೆಂದಾದರೆ ಅಳಿಕೆ ಎಂದು ಹೇಳಿದಾಕ್ಷಣ ಅಳಿಕೆ ಶ್ರೀ ರಾಮಯ್ಯ ರೈಗಳನ್ನೂ ಅಳಿಕೆ ಲಕ್ಶ್ಮಣ ಶೆಟ್ಟರನ್ನೂ ನೆನಪಾಗದೆ ಇರದು. ಈರ್ವರೂ ಖ್ಯಾತ ಕಲಾವಿದರಾಗಿ ತಾವು ಜನಿಸಿದ ಮಣ್ಣಿಗೆ ಕೀರ್ತಿಯನ್ನು ತಂದು ಕೊಟ್ಟವರು. ಉಭಯರೂ ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ಅಭಿನಯಿಸಿ ಶ್ರೇಷ್ಠ ಕಲಾವಿದರಾಗಿ ರಂಗಸ್ಥಳದಲ್ಲಿ ಮಿಂಚಿದವರು. ಸಾಧಕರಾಗಿದ್ದ ಇವರುಗಳು ಜನಮಾನಸದಲ್ಲಿ ಶಾಶ್ವತರಾಗಿ ಸದಾ ಉಳಿಯುತ್ತಾರೆ.

ಇವರು ಗುರು ಶಿಷ್ಯರೂ ಹೌದು. ಅಳಿಕೆ ಲಕ್ಷ್ಮಣ ಶೆಟ್ಟರು ತಮ್ಮ ನಿರ್ವಹಣೆಯಿಂದ ಗುರುಗಳಾದ ಅಳಿಕೆ ಶ್ರೀ ರಾಮಯ್ಯ ರೈಗಳ ಮೆಚ್ಚುಗೆಗೂ ಪಾತ್ರರಾಗಿದ್ದರು. ಅಲ್ಲದೆ ತಮ್ಮ ವೃತ್ತಿ ಜೀವನದುದ್ದಕ್ಕೂ ಅಸಂಖ್ಯ ಅಭಿಮಾನಿಗಳ ಪ್ರೀತಿಗೆ, ಮೆಚ್ಚುಗೆಗೆ ಪಾತ್ರರಾಗಿದ್ದರು. ಅಳಿಕೆ ಲಕ್ಷ್ಮಣ ಶೆಟ್ಟರದ್ದು ಕೊರತೆಗಳಿಲ್ಲದ ಪರಿಪೂರ್ಣ ವೇಷಗಾರಿಕೆ ಎಂದು ಹೇಳಿದರೆ ತಪ್ಪಾಗಲಾರದು. ಪ್ರಸಿದ್ಧಿಗಾಗಿ ಹಂಬಲಿಸದೆ ಸಿಕ್ಕ ಪಾತ್ರಗಳಿಗೆ ತನ್ನ ಪ್ರತಿಭಾ ವ್ಯಾಪಾರದಿಂದ ರೂಪ ಕೊಟ್ಟು ಅಭಿನಯಿಸಿ ಪ್ರಸಿದ್ಧಿಯನ್ನು ಪಡೆದುಕೊಂಡವರು.

ಶ್ರೀಯುತರ ಜೀವಿತಾವಧಿ 1947 – 2008. ಅಳಿಕೆ ಗ್ರಾಮದ ಪುಳಿಂಚಾರು ಎಂಬಲ್ಲಿ ಶ್ರೀ ದೂಮಣ್ಣ ಶೆಟ್ಟಿ ಮತ್ತು ಶ್ರೀಮತಿ ಪೂವಕ್ಕ ದಂಪತಿಗಳ ಮಗನಾಗಿ ಜನನ. ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿ ವರೆಗೆ ಓದಿದ್ದರು. ಬಾಲಕನಾಗಿದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ಶ್ರೀ ಅಳಿಕೆ ರಾಮಯ್ಯ ರೈಗಳವರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಕುಂಡಾವು ಮೇಳಕ್ಕೆ ಸೇರಿದ್ದರು. ಬಾಲಗೋಪಾಲರಿಂದ ತೊಡಗಿ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರಿವರು.

ದಿ| ಕಲ್ಲಾಡಿ ಕೊರಗ ಶೆಟ್ಟಿ, ದಿ| ಕಲ್ಲಾಡಿ ವಿಠಲ ಶೆಟ್ಟಿ, ಮತ್ತು ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಹೀಗೆ ಕಲ್ಲಾಡಿ ಮನೆತನದ ಮೂವರು ಯಜಮಾನರುಗಳ ನೇತೃತ್ವದ ಕರ್ನಾಟಕ ಯಕ್ಷಗಾನ ನಾಟಕ ಸಭಾ, ಇರಾ ಮೇಳದಲ್ಲಿ ಒಟ್ಟು ನಲುವತ್ತು ವರ್ಷಗಳ ಕಾಲ ತಿರುಗಾಟ ನಡೆಸಿದ್ದರು ಅಳಿಕೆ ಲಕ್ಷ್ಮಣ ಶೆಟ್ಟರು. ಖ್ಯಾತ ಕಲಾವಿದರಾದ ದಾಮೋದರ ಮಂಡೆಚ್ಚ, ದಿನೇಶ ಅಮ್ಮಣ್ಣಾಯರ ಮಾರ್ಗದರ್ಶನವೂ ದೊರಕಿತ್ತು. ಶ್ರೇಷ್ಠ ಕಲಾವಿದರಾದ ಶ್ರೀ ರಾಮದಾಸ ಸಾಮಗ, ಅಳಿಕೆ ರಾಮಯ್ಯ ರೈ, ಮಿಜಾರು ಅಣ್ಣಪ್ಪ, ಬೋಳಾರ ನಾರಾಯಣ ಶೆಟ್ಟಿ, ಪುಳಿಂಚ ರಾಮಯ್ಯ ರೈ, ಕೊಳ್ಯೂರು ರಾಮಚಂದ್ರ ರಾವ್, ಅರುವ ಕೊರಗಪ್ಪ ಶೆಟ್ಟಿ ಮೊದಲಾದವರ ಜೊತೆ ಕಲಾಸೇವೆಯನ್ನು ಮಾಡುವ ಭಾಗ್ಯವು ಒದಗಿ ಬಂದಿತ್ತು.

ಅಲ್ಲದೆ ಬೆಳ್ಳಾರೆ ವಿಶ್ವನಾಥ ರೈ, ಸಂಜಯ್ ಕುಮಾರ್, ತೊಡಿಕಾನ ವಿಶ್ವನಾಥ ಗೌಡ, ಮಾಡಾವು ಕೊರಗಪ್ಪ ರೈ, ಮುಂಡಾಜೆ ಬಾಲಕೃಷ್ಣ ಶೆಟ್ಟಿ ಮೊದಲಾದವರ ಒಡನಾಟವೂ ದೊರಕಿತ್ತು. ಪುರಾಣ, ಐತಿಹಾಸಿಕ, ಕನ್ನಡ ಹಾಗೂ ತುಳು ಪ್ರಸಂಗಗಳಲ್ಲಿ ಅಭಿನಯಿಸಿ ಹೆಸರು ಪಡೆದಿರುತ್ತಾರೆ. ಶ್ರೀರಾಮ, ಶ್ರೀಕೃಷ್ಣ, ಭೀಷ್ಮ, ದಶರಥ, ನಳ, ಧರ್ಮರಾಯ ಮೊದಲಾದ ಸಾತ್ವಿಕ ಪಾತ್ರಗಳಲ್ಲಿ ಅಳಿಕೆ ಲಕ್ಷ್ಮಣ ಶೆಟ್ಟರದು ಅಮೋಘ ನಿರ್ವಹಣೆ.

ಜಾಹೀರಾತು

ತುಳು ಪ್ರಸಂಗಗಳಲ್ಲಿ ಕಾಡಮಲ್ಲಿಗೆಯ ಶಾಂತಕುಮಾರ, ಕೋಟಿ ಚೆನ್ನಯ ಪ್ರಸಂಗದ ಪೆರುಮಳ ಬಲ್ಲಾಳ, ಪಟ್ಟದ ಪದ್ಮಲೆ ಪ್ರಸಂಗದ ಮಂತ್ರಿ ಪದ್ಮಣ್ಣ ಮೊದಲಾದ ಪಾತ್ರಗಳಲ್ಲೂ ಹೆಸರು ಗಳಿಸಿರುತ್ತಾರೆ. ಅನಾರೋಗ್ಯದಿಂದ ಮೇಳದ ತಿರುಗಾಟಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ ಶ್ರೀ ಅಳಿಕೆ ಲಕ್ಷ್ಮಣ ಶೆಟ್ಟರು 2008 ಜುಲೈ 27ರಂದು ಅವ್ಯಕ್ತ ಲೋಕವನ್ನು ಸೇರಿಕೊಂಡಿದ್ದರು.

“ಅಳಿಕೆ ಲಕ್ಷ್ಮಣ ಶೆಟ್ಟರು ಸದಾ ಅಧ್ಯಯನ ಶೀಲರು. ಪೂರ್ವಸಿದ್ಧತೆ ಮಾಡಿಯೇ ರಂಗವೇರುತ್ತಿದ್ದರು. ಅತ್ಯುತ್ತಮವಾಗಿ ಪಾತ್ರಗಳನ್ನು ಚಿತ್ರಿಸುತ್ತಿದ್ದರು”. ಇದು ಅವರ ಒಡನಾಡಿಗಳೂ ಕಲಾಭಿಮಾನಿಗಳೂ ಹೇಳುವ ಮಾತುಗಳು. ಇವರ ಕಲಾಸೇವೆಯನ್ನು ಗುರುತಿಸಿ ಬಂಟರ ಸಂಘ ಮುಂಬಯಿ, ದಿ| ಕಲ್ಲಾಡಿ ಕೊರಗ ಶೆಟ್ಟಿ ಮತ್ತು ದಿ| ಕಲ್ಲಾಡಿ ವಿಠಲ ಶೆಟ್ಟಿ ಯಕ್ಷ ಪ್ರತಿಷ್ಠಾನ ಇರಾ, ಪಡ್ರೆ ಚಂದು ಸ್ಮಾರಕ ಸಮಿತಿ ಪೆರ್ಲ, ಕರ್ನಾಟಕ ಮೇಳದ ಅಭಿಮಾನೀ ಬಳಗ ಮುಂಬೈ, ಲಿಯೋ ಕ್ಲಬ್ ಪುತ್ತೂರು, ರಾಗಸುಧಾ ಸಂಸ್ಥೆ ಪುತ್ತೂರು, ಅಳಿಕೆ ಯುವಕ ಮಂಡಲ, ಗೆಳೆಯರ ಬಳಗ ಬೈರಿಕಟ್ಟೆ ಮೊದಲಾದ ಸಂಸ್ಥೆಗಳು ಗೌರವಿಸಿವೆ.

ವೃತ್ತಿ ಜೀವನದಲ್ಲೂ, ಸಂಸಾರಿಕವಾಗಿಯೂ ಅಳಿಕೆ ಶ್ರೀ ಲಕ್ಷ್ಮಣ ಶೆಟ್ಟರು ತೃಪ್ತರಿದ್ದರು. ಪತ್ನಿ ಶ್ರೀಮತಿ ಲಕ್ಷ್ಮಿ. ಅಳಿಕೆ ಲಕ್ಷ್ಮಣ ಶೆಟ್ಟಿ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಶ್ರೀಧರ ಶೆಟ್ಟಿ ಅವರು ಮುಂಬಯಿಯಲ್ಲಿ ಉದ್ಯೋಗಿಯಾಗಿದ್ದರು. ಪುತ್ರಿ ಜಯಂತಿ ವಿವಾಹಿತೆ, ಗೃಹಣಿ. ಕಿರಿಯ ಪುತ್ರ ಶ್ರೀ ಹರೀಶ್ ಶೆಟ್ಟಿ ಅವರು ಕಳೆದ ಇಪ್ಪತ್ತೇಳು ವರ್ಷಗಳಿಂದ ಇತಿಹಾಸ ಪ್ರಸಿದ್ಧ ಸೀಮೆ ದೇವಸ್ಥಾನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಕಚೇರಿಯಲ್ಲಿ ಉದ್ಯೋಗಿ. ಪ್ರಸ್ತುತ ಆಳಿಕೆಯಲ್ಲಿ ವಾಸವಾಗಿರುತ್ತಾರೆ.

ಸ್ವಾಭಿಮಾನೀ ಶಿಸ್ತಿನ ಕಲಾವಿದರಾಗಿದ್ದ ಶ್ರೀ ಅಳಿಕೆ ಲಕ್ಷ್ಮಣ ಶೆಟ್ಟರಿಗೆ ನುಡಿ ನಮನಗಳು. ಅವರ ಮನೆಯವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ