Friday, August 28, 2026
Home Blog Page 366

ಯಕ್ಷಗಾನದಲ್ಲಿ ಕರುಣಾರಸದ ಭಾವ ಪ್ರಕಟಣೆ – ಮಾನಸಿಕ ಒತ್ತಡಕ್ಕೆ ಹಾಸ್ಯ ಮಾತ್ರ ಔಷಧಿಯಲ್ಲ. ಮನಸಿನ ಕೊಳೆ ತೊಳೆದು ಹೋಗಲು ದುಃಖ ಸನ್ನಿವೇಶಗಳೂ ಪರಿಣಾಮಕಾರಿ 

ಹರಿಶ್ಚಂದ್ರನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ (ಫೋಟೋ: ನವೀನ ಕೃಷ್ಣ ಭಟ್ )

ಈಗಿನ ಸ್ಪರ್ಧಾತ್ಮಕ, ಒತ್ತಡದ ಜಗತ್ತಿನಿಂದ ಹೊರಬಂದು ಸ್ವಲ್ಪ ಮಟ್ಟಿಗಾದರೂ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲು ಜನರು ಹಾಸ್ಯಭರಿತ ಕಲಾ ಪ್ರಾಕಾರಗಳ ಪ್ರದರ್ಶನಗಳನ್ನು ವೀಕ್ಷಿಸಿ ಆನಂದ, ನೆಮ್ಮದಿಯನ್ನು ಕಂಡುಕೊಳ್ಳಲು ಯತ್ನಿಸುವುದು ಕಂಡುಬರುತ್ತದೆ. ಆದರೆ ಜನರ ಈ ಮನೋಭಾವನೆಯನ್ನು ಹಲವಾರು ಕಲಾ ಪ್ರಕಾರಗಳು ನಗದೀಕರಿಸುತ್ತಿರುವುದು ಕಂಡುಬರುತ್ತದೆ. ಯಕ್ಷಗಾನವೂ ಇದಕ್ಕೆ ಹೊರತಾಗಿಲ್ಲ. ಕೀಳು ಮಟ್ಟದ ಹಾಸ್ಯದ ದೃಶ್ಯಗಳನ್ನು ಅಳವಡಿಸಿ ಜನರನ್ನು ನಗಿಸುವುದೇ ಇವರ ಉದ್ದೇಶವಾಗಿರುವಂತೆ ಕಂಡುಬರುತ್ತದೆ. ಆದರೆ ಮನಸ್ಸಿನ ಕೊಳೆ ತೊಳೆದುಹೋಗಲು ಕೇವಲ ಹಾಸ್ಯ ರಸದ ಆಸ್ವಾದನೆಯೊಂದೇ ಇರುವುದಲ್ಲ. ಕರುಣ ರಸವು ಮಾನವನ ಮನಸ್ಸಿನಲ್ಲಿ ಪರಿಣಾಮಕಾರಿ ಬದಲಾವಣೆಯನ್ನುಂಟುಮಾಡಬಹುದು. 

ವಿದ್ಯಾರ್ಥಿಯಾಗಿರುವಾಗ ಹೆಚ್ಚಿನವರೂ ಕೇಳಿರುವ, ಓದಿರುವ ಪದ್ಯ ‘ಗೋವಿನ ಹಾಡು’. ಈ ಹಾಡಿನಲ್ಲೇ ತಲ್ಲೀನತೆಯನ್ನು ಹೊಂದಿ ಅದೆಷ್ಟೋ ಜನರು ಎಷ್ಟೋ ಬಾರಿ ಕಣ್ಣೀರು ಹರಿಸಿರಬಹುದು ಎನ್ನುವುದನ್ನು ಊಹಿಸಲಸಾಧ್ಯ. ಹಾಡಿನಲ್ಲಿ ಅತ್ಯುತ್ತಮ ಸಂದೇಶವಿದೆ. ಶೋಕವೇ ಸ್ಥಾಯಿಭಾವವಾದ ಕರುಣೆಯ ಹೊನಲೇ ಇದೆ. ಎಲ್ಲರೂ ತಿಳಿಯಲೇಬೇಕಾದ ಜೀವನ ಸಂದೇಶಗಳಿವೆ.

ಅದಕ್ಕೇ ಈ ಹಾಡಿನ ಜನಪ್ರಿಯತೆ ಈಗಲೂ ಹೆಚ್ಚಾಗುತ್ತಲೇ ಇರುವುದು. ಈ ಹಾಡನ್ನು ಬಳಸಿಕೊಂಡವರೆಷ್ಟೋ ಮಂದಿ. ನಾಟಕಗಳಲ್ಲಿ, ನೃತ್ಯರೂಪಕಗಳಲ್ಲಿ, ಶಾಲಾ ಕಾಲೇಜುಗಳ ಮಕ್ಕಳ ನೃತ್ಯ ಕಾರ್ಯಕ್ರಮಗಳೇ ಮುಂತಾದ ಅಸಂಖ್ಯ ಕನ್ನಡಾಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಈ ಹಾಡಿನಿಂದ ಪ್ರೇರಿತರಾದವರೇ.
ಯಕ್ಷಗಾನವೂ ಇದಕ್ಕೆ ಹೊರತಲ್ಲ. ಈ ಹಾಡಿನ ಕಥೆಯನ್ನು ಯಕ್ಷಗಾನದಲ್ಲೂ ಪ್ರಯೋಗ ಮಾಡಿದವರಿದ್ದಾರೆ. ಈ ಕಥೆಯ ಒಂದು ಯಕ್ಷಗಾನ ಧ್ವನಿಸುರುಳಿಯನ್ನೂ ಹೊರತರಲಾಗಿದೆ.


                       ಕೊನೆಗೆ ಸತ್ಯವೇ ಗೆಲ್ಲುವುದು ಎಂಬ ಸಂದೇಶದೊಂದಿಗೆ ಮುಕ್ತಾಯವಾಗುವ ಈ ಕಥೆಯಲ್ಲಿ ತಾಯಿ ಮಗುವಿನ ಮುಗ್ಧ ಪ್ರೇಮವಿದೆ. ತಬ್ಬಲಿಯನ್ನು ಓರಗೆಯವರು ಹೇಗೆ ನೋಡಿಕೊಳ್ಳಬೇಕೆಂಬ ಪಾಠವಿದೆ. ಅದೂ ಅಲ್ಲದೆ ನಮ್ಮ ಸಂಸ್ಕೃತಿಯ ಹಾಗೂ ಜೀವನದ ಅವಿಭಾಜ್ಯ ಅಂಗವಾದ ಗೋವಿನ ಪ್ರಾಮುಖ್ಯತೆಯನ್ನು ನಮಗೆ ತಿಳಿಹೇಳುವಂತಹ ಕಥೆ.

ಭೀಮ ದ್ರೌಪದಿಯರಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಶಶಿಕಾಂತ ಶೆಟ್ಟಿ ಕಾರ್ಕಳ (ಫೋಟೋ: ಮಂಜುನಾಥ್ ಬಾಯಿರಿ)


                       ನಮ್ಮ ಮನಸ್ಸನ್ನು ಇನ್ನಿಲ್ಲದಂತೆ ಕಾಡುವ ‘ಕರುಣ ರಸ’ದ ಬಗ್ಗೆ ಬರೆಯುವಾಗ ಈ ಕಥೆಯನ್ನು ಉಲ್ಲೇಖಿಸದೆ ಇರಲು ಸಾಧ್ಯವಿಲ್ಲವೆಂದೆನಿಸುತ್ತದೆ. ಅಳು ಅಥವಾ ಕಣ್ಣೀರು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಾನವನಿಗೆ ‘ನಗು’ ಹೇಗೆ ಶಕ್ತಿವರ್ಧಕ ಔಷಧಿಯೋ ಹಾಗೆಯೇ ಅಳು ಕೂಡಾ. ‘‘ಕಣ್ಣೀರು ಎಂಬುದು ಮನಸ್ಸಿನ ಕೊಳೆ, ಧೂಳು ತೆಗೆಯುವ ಸಾಧನ’’ ಎಂಬುದಾಗಿ ಜ್ಞಾನಿಗಳ ಮಾತು ಸತ್ಯವಾದದ್ದು.   ಈ ಎಲ್ಲಾ ಮಾತುಗಳ ಹಿನ್ನೆಲೆಯಲ್ಲಿ ಯಾವುದೇ ರಂಗಪ್ರದರ್ಶನಗಳಲ್ಲಿ ಕರುಣರಸವೆಂಬುದು ಅತೀವವಾದ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ನಾವೆಷ್ಟೋ ಬಾರಿ ಶ್ರೇಷ್ಠ ನಟರ ಕರುಣರಸದ ಅಭಿನಯಕ್ಕೆ ಕಣ್ಣೀರು ಸುರಿಸಿರಬಹುದು. (ಟಿ. ವಿ.ಯ ಎದುರು ಧಾರಾವಾಹಿ ನೋಡುತ್ತಾ ಕಣ್ಣೊರೆಸುವವರ ಸಹಿತ) ಸಿನಿಮಾ, ನಾಟಕಗಳನ್ನೊಳಗೊಂಡಂತೆ ರಂಗಕಲೆಗಳ ಅಭಿಮಾನಿಗಳಿಗೆ ಇವೆಲ್ಲವೂ ಅನುಭವ.

ಸಣ್ಣವನಿದ್ದಾಗ ಯಕ್ಷಗಾನ ನೋಡುತ್ತಾ ‘ನಳದಮಯಂತಿ’ ಪ್ರಸಂಗದಲ್ಲಿ ನಯನ ಕುಮಾರ್ ಅವರ ಬಾಹುಕ ಮತ್ತು ಕುಂಬಳೆ ಶ್ರೀಧರ ರಾವ್ ಅವರ ದಮಯಂತಿಯ ಸಂಭಾಷಣೆಯ ದೃಶ್ಯವನ್ನು ನೋಡುತ್ತಾ ಕಣ್ಣೀರು ಒರೆಸಿಕೊಳ್ಳುತ್ತಿದ್ದುದು ಈಗಲೂ ಹಚ್ಚಹಸಿರಾಗಿಯೇ ಇದೆ. ಪ್ರೇಕ್ಷಕರ ದೃಷ್ಟಿಕೋನದಿಂದ ಈ ರೀತಿಯಾದರೆ ನಟರ ಅಥವಾ ಕಲಾವಿದರ ನೆಲೆಯಲ್ಲಿ ನಿಂತು ನೋಡಿದರೆ, ಈ ಕರುಣರಸದ ಅಭಿನಯ ಹೇಗೆ? ಅನುಭವೀ ನಟರೊಬ್ಬರ ಪ್ರಕಾರ ಉಳಿದೆಲ್ಲಾ ರಸಗಳಿಂದ ಕರುಣರಸದ ಅಭಿನಯ ಕಷ್ಟವಂತೆ.
ಕಣ್ಣೀರಿನ ಅಭಿನಯ ಅಥವಾ ಅಳುವ ನಟನೆಯನ್ನು ಮಾಡಲು ಹಲವು ವಿಧಾನಗಳಿವೆಯಂತೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ಕಣ್ಣೀರು ಸುರಿಸುವುದು ಹೇಗೆ ಎಂಬುದಕ್ಕೆ ಅನುಭವಿಗಳು ಕೆಲವು ವಿಧಾನಗಳನ್ನು ಉದಾಹರಣೆಯಾಗಿ ಕೊಡುತ್ತಾರೆ.


ಮೊದಲನೆಯದು ಆ ಪಾತ್ರದಲ್ಲಿ, ಸನ್ನಿವೇಶದಲ್ಲಿ ಸಂಪೂರ್ಣ ತನ್ಮಯತೆಯನ್ನು ಹೊಂದುವುದು. ಆ ಪಾತ್ರವೇ ತಾನಾಗುತ್ತೇನೋ ಎಂಬಂತೆ ಭಾವಿಸುವುದು. ಇದರಿಂದ ಮನಸ್ಸಿನಲ್ಲಿ ದುಃಖ, ನೋವುಗಳು ಮನೆಮಾಡಿ ಆ ಪಾತ್ರದಲ್ಲಿ ತಾನೇ ಒಳಗೊಳ್ಳುವ ಸಾಧ್ಯತೆಯಾದರೂ ಪ್ರತಿಬಾರಿ ಇದು ಕಷ್ಟಸಾಧ್ಯ.
                        ಎರಡನೆಯದು ನಟಿಸುವ ಸಂದರ್ಭದಲ್ಲಿ ನಿಮ್ಮ ಜೀವನದ ದುರ್ಘಟನೆಗಳ ಅಥವಾ ಅತಿ ನೋವಿನ ಸನ್ನಿವೇಶವನ್ನು ನೆನಪಿಸಿಕೊಳ್ಳುವುದು. ಅಥವಾ ನೀವು ನೋಡಿದ ನಿಮ್ಮ ಸಮೀಪದ ಬಂಧುಗಳ, ಸ್ನೇಹಿತರ ಜೀವನದಲ್ಲಿ ನಡೆದ ನೋವು, ದುರ್ಘಟನೆಗಳನ್ನು ಮೆಲುಕು ಹಾಕುವುದು.

ರಾಮ ಭಾರತರಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಸುಬ್ರಾಯ ಹೊಳ್ಳ ಕಾಸರಗೋಡು (ಫೋಟೋ: ಮಧುಸೂದನ ಅಲೆವೂರಾಯ) 


                    ಕರುಣಾಜನಕ, ಕಣ್ಣೀರನ್ನೂ ತರಿಸುವ ಕಥೆಗಳನ್ನು ನೆನಪಿಸಿಕೊಳ್ಳುವುದು, ದುಃಖದ ಹಾಡುಗಳನ್ನು ಕೇಳುವುದು ಇತ್ಯಾದಿಗಳು. ಇವುಗಳಲ್ಲದೆ ‘ನಗುವಂತೆ ನಟಿಸಿ ಕೃತಕ ವಸ್ತುಗಳ ಸಹಾಯದಿಂದ ಕಣ್ಣೀರು ಸುರಿಸಿದರೂ ‘ಅದು ಪ್ರೇಕ್ಷಕರಿಗೆ ಅಳುವಂತೆ ಭಾಸವಾಗುತ್ತದೆ. ಕಣ್ಣೀರು ತರಿಸುವ ಕೆಲವು ಸ್ಪ್ರೇಗಳ ಸಹಾಯ, ನೀರುಳ್ಳಿ ಮುಂತಾದುವುಗಳನ್ನು ಉಪಯೋಗಿಸಿಯೂ ಅಳುವ ದೃಶ್ಯಗಳಲ್ಲಿ ನಟಿಸಲಾಗುತ್ತದೆ. ಕೆಲವು ನಟರು ಈ ಸಂದರ್ಭದಲ್ಲಿ ಎಡೆಬಿಡದೆ ಆಕಳಿಸುವ ವಿಧಾನವನ್ನು ಅನುಸರಿಸುತ್ತಾರಂತೆ. ಈ ರೀತಿ ಮಾಡಿದಾಗ ಅವರ ಮುಖದಲ್ಲಿ ವ್ಯಥೆಯ ಭಾವ ಮೂಡುತ್ತದೆ ಎಂದು ಹೇಳುತ್ತಾರೆ.


                           ಈ ಮೇಲಿನ ಯಾವುದೇ ವಿಧಾನಗಳಿದ್ದರೂ ಯಕ್ಷಗಾನ ರಂಗದ ಕಲಾವಿದರಲ್ಲಿ ಇದಕ್ಕಿಂತ ಭಿನ್ನವಾದ ರೀತಿಯನ್ನು ಗಮನಿಸಬಹುದು. ತಾನೇ ಪಾತ್ರದಲ್ಲಿ ಲೀನವಾಗುವುದು ಅಥವಾ ಪಾತ್ರದಲ್ಲೇ ತಲ್ಲೀನತೆಯನ್ನು ಹೊಂದುವುದು ಮಾತ್ರವಲ್ಲದೆ ತನ್ನ ಸ್ವರಗಳ ಏರಿಳಿತ, ದುಃಖದ ಭಾವನೆಗಳ ಸಮ್ಮಿಶ್ರಣದ ಜೊತೆಗೆ ಮಾತುಗಳಿಂದಲೂ ಆರ್ದ್ರತೆ, ಆಂಗಿಕ ಅಭಿನಯಗಳಿಂದಲೂ ಕರುಣರಸವನ್ನು ಶ್ರೇಷ್ಠ ಮಟ್ಟದಲ್ಲಿ ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಹಲವಾರು ಯಕ್ಷಗಾನ ಕಲಾವಿದರಿಗಿದೆ. ಅಭಿಮನ್ಯು ಕಾಳಗದ ಸುಭದ್ರೆ, ಸತ್ಯಹರಿಶ್ಚಂದ್ರದ ಚಂದ್ರಮತಿ, ಲೋಹಿತಾಶ್ವ, ನಳದಮಯಂತಿಯ ಬಾಹುಕ, ದಮಯಂತಿ ಪಾತ್ರಗಳು, ಗುರುದಕ್ಷಿಣೆಯ ‘ಸಾಂದೀಪನಿ ಮಹರ್ಷಿ’, ಇಂತಹ ಕೆಲವು ಪಾತ್ರಗಳಲ್ಲಿ ಕರುಣರಸದ ಉತ್ತಮ ಅಭಿನಯ ಸಾಧ್ಯ. ಇವುಗಳೆಲ್ಲಾ ಕಣ್ಣೀರು ತರಿಸುವ ಪಾತ್ರಗಳು.


              ಇವುಗಳಲ್ಲದೆ ಕೃಷ್ಣಸಂಧಾನದ ಕರ್ಣನ ಮಾತುಗಳು, ಪಟ್ಟಾಭಿಷೇಕದ ದಶರಥನ ಪಾತ್ರ, ಸೀತಾಪರಿತ್ಯಾಗದ ದೃಶ್ಯಗಳು, ಇಂತಹ ಹಲವಾರು ಪಾತ್ರಗಳು ಕಲಾವಿದರ ಉತ್ತಮ ಅಭಿನಯದೊಂದಿಗೆ ಸಮ್ಮಿಳಿತವಾದರೆ ಪ್ರೇಕ್ಷಕರ ಹೃದಯದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆಯುತ್ತದೆ.
                    ನಟನೆಯಲ್ಲಿ ಕಣ್ಣೀರು ಹರಿಸಲು ಎಷ್ಟೋ ವಿಧಾನಗಳಿರಬಹುದು. ಮಾನಸಿಕ ನೋವು, ದೈಹಿಕ ನೋವುಗಳನ್ನು ಅನುಭವಿಸುತ್ತಾ ಕಲಾವಿದರು ಕಣ್ಣೀರು ಹರಿಸಿರುವರೋ ಅಥವಾ ಇಲ್ಲವೇ ಎನ್ನುವುದು ಮುಖ್ಯವಲ್ಲ, ಬದಲಾಗಿ ಪ್ರೇಕ್ಷಕರನ್ನು ಕಣ್ಣೀರಿನ ಕಡಲಿನಲ್ಲಿ ತೇಲಾಡಿಸಿ ಅಳುವಂತೆ ಮಾಡುವುದೇ ಮುಖ್ಯವಾಗುತ್ತದೆ.

ಲೇಖನ: ಮನಮೋಹನ್ ವಿ.ಎಸ್ 

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (11-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (11-12-2020)
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ11-12-2020ಶ್ರೀ ಕ್ಷೇತ್ರದಲ್ಲಿ 
ಕಟೀಲು ಒಂದನೇ ಮೇಳ11-12-2020ಕಟೀಲು ಕ್ಷೇತ್ರದಲ್ಲಿ  
ಕಟೀಲು ಎರಡನೇ ಮೇಳ 11-12-2020ಕದ್ರಿ ಕ್ಷೇತ್ರದ ರಾಜಾಂಗಣ  
ಕಟೀಲು ಮೂರನೇ ಮೇಳ11-12-2020ಕಟ್ಟದಪಡ್ಪು, ಬಡಕೊಟ್ಟು, ಬಂಟ್ವಾಳ 
ಕಟೀಲು ನಾಲ್ಕನೇ ಮೇಳ 11-12-2020ದುರ್ಗಾ ಕಾಂಪ್ಲೆಕ್ಸ್ ಬಳಿ, ಪಾವೂರು 
ಕಟೀಲು ಐದನೇ ಮೇಳ 11-12-2020ಕೊಡೆತ್ತೂರು ದೇವಸ್ಯಗುತ್ತು ಸೇವೆ    
ಕಟೀಲು ಆರನೇ ಮೇಳ11-12-2020ಸೂರಿಂಜೆ 
ಶ್ರೀ ಮಾರಣಕಟ್ಟೆ ಮೇಳ ‘ಎ’11-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’11-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’11-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 11-12-2020ಶ್ರೀ ಕ್ಷೇತ್ರದಲ್ಲಿಶಿವಪ್ರಭಾ ಪರಿಣಯ
ಶ್ರೀ ಹಟ್ಟಿಯಂಗಡಿ ಮೇಳ11-12-2020ಮಲ್ಯಾಡಿಯಲ್ಲಿ ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’11-12-2020ಕಾರೇಬೈಲುಎರಡೂ ಮೇಳದ ಕೂಡಾಟ
ಕಮಲಶಿಲೆ ಮೇಳ ‘ಬಿ’11-12-2020ಕಾರೇಬೈಲುಎರಡೂ ಮೇಳದ ಕೂಡಾಟ

ಗೋಡೆ ನಾರಾಯಣ ಹೆಗಡೆ ಇವರ ‘ಸಾಕ್ಷ್ಯಚಿತ್ರ ಬಿಡುಗಡೆ’, ‘ವಿಚಾರಸಂಕಿರಣ’ ‘ಪ್ರಾತ್ಯಕ್ಷಿಕೆ’ ಹಾಗೂ ‘ಯಕ್ಷಗಾನ ಕಾರ್ಯಕ್ರಮ’ – 12-12-2020ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಕಾರ್ಯಕ್ರಮ ವೈವಿಧ್ಯ  

ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಿನಾಂಕ 12 ಡಿಸೆಂಬರ್ 2020ರಂದು ಗೋಡೆ ನಾರಾಯಣ ಹೆಗಡೆ ಇವರ ‘ಸಾಕ್ಷ್ಯಚಿತ್ರ ಬಿಡುಗಡೆ’, ‘ವಿಚಾರಸಂಕಿರಣ’, ‘ಪ್ರಾತ್ಯಕ್ಷಿಕೆ’ ಹಾಗೂ ‘ಯಕ್ಷಗಾನ ಕಾರ್ಯಕ್ರಮ’ವನ್ನು ಶ್ರೀ ಶಾರದಾಂಬ ದೇವಸ್ಥಾನ, ನಾಯ್ಕನಕೆರೆ, ಯಲ್ಲಾಪುರ  ಇಲ್ಲಿ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮವು ಡಿಸೆಂಬರ್ 12 ಶನಿವಾರದಂದು ಬೆಳಿಗ್ಗೆ 10 ಘಂಟೆಗೆ ಆರಂಭವಾಗಲಿದೆ. ಸಚಿವರಾದ ಶ್ರೀ ಶಿವರಾಮ ಹೆಬ್ಬಾರರಿಂದ ಬೆಳಿಗ್ಗೆ 10 ಘಂಟೆಗೆ ಉದ್ಘಾಟನೆ ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ. 

ಈ ಕಾರ್ಯಕ್ರಮದ ನಂತರ ಶ್ರೀ ಗೋಡೆ ನಾರಾಯಣ ಹೆಗಡೆಯವರ ಬಗ್ಗೆ ವಿಚಾರ ಸಂಕಿರಣ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಇದರ ನಂತರದ ಕಾರ್ಯಕ್ರಮವಾಗಿ ‘ಮಹಿಳಾ ಹಿಮ್ಮೇಳ’ದ  ಬಗ್ಗೆ ತೆಂಕು ಬಡಗಿನ ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಕೊನೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.  

ಜಾಹೀರಾತು 

ಕೆರೆಗಳೂ ಕಥೆ ಹೇಳುತ್ತವೆ (ಸಣ್ಣಕಥೆ)

0


ಮಿತ ನಿಲುಗಡೆಯ ವೇಗದೂತ ಬಸ್ ವೇಗವಾಗಿ ಧಾವಿಸುತ್ತಿತ್ತು. ನಾನು ಕಿಟಿಕಿಯ ಪಕ್ಕ ಕುಳಿತಿದ್ದೆ. ಯಾವಾಗಲೂ ಪ್ರಯಾಣದ ಜೊತೆ ಪ್ರಕೃತಿಯ ಆಸ್ವಾದನೆಯೂ ನನಗಿಷ್ಟವಾದುದರಿಂದ ಕಿಟಿಕಿಯ ಪಕ್ಕದ ಆಸನವೇ ನನ್ನ ಮೊದಲ ಆಯ್ಕೆಯಾಗಿರುತ್ತಿತ್ತು. ಬಸ್ ಹೋಗುತ್ತಿದ್ದಂತೆ ರಸ್ತೆಯ ಬದಿಯಲ್ಲಿ ಕಾಣಸಿಗುತ್ತಿದ್ದ ಗುಡ್ಡ ಬೆಟ್ಟಗಳು , ಫಲವತ್ತಾದ ಕೃಷಿ ಭೂಮಿ, ತೋಟಗಳು ಅಪರೂಪಕ್ಕೆ ಮಿಂಚಿ ಮರೆಯಾಗುತ್ತಿದ್ದ ಕಾಡು ಪ್ರದೇಶ ಇವುಗಳನ್ನು ನೋಡುತ್ತಿರುವಾಗ ಒಂದು ಬಗೆಯ ಆತ್ಮತೃಪ್ತಿ ಮತ್ತು ಆನಂದ ಸಿಗುತ್ತಿತ್ತು. ಅದರಲ್ಲೂ ಹಚ್ಚ ಹಸುರಿನ ಕೃಷಿ ಭೂಮಿಯನ್ನು ನೋಡುವುದೇ ಮಹದಾನಂದ.

ಕೃಷಿ ಕ್ಷೇತ್ರದಲ್ಲಿ ಪರಿಣಿತನಾದುದರಿಂದ ಮತ್ತು ಓರ್ವ ಪ್ರಗತಿಪರ ಕೃಷಿಕನಾದುದರಿಂದ ತೋಟ, ಹೊಲಗದ್ದೆಗಳನ್ನು ಅವಲೋಕಿಸುವುದು ನನಗೆ ರೂಢಿಯಾಗಿತ್ತು. ಆ ದಿನ ಕೂಡ ಬಸ್ಸು ಸಾಗುತ್ತಿದ್ದಂತೆ ರಸ್ತೆ ಬದಿಯ ದೃಶ್ಯಗಳನ್ನೇ ಗಮನಿಸುತ್ತಿದ್ದೆ. ಆ ವರೆಗೆ ನಿರಾತಂಕವಾಗಿ ಪ್ರಯಾಣಿಸುತ್ತಿದ್ದ ನನಗೆ ಒಮ್ಮೆಲೇ ಕಿರಿಕಿರಿಯಾದ ಅನುಭವವಾಯಿತು. ನನ್ನ ಆಸನದ ಪಕ್ಕದಲ್ಲಿ ಕುಳಿತಿದ್ದವನ ತಲೆ ನನ್ನ ಭುಜದ ಮೇಲೆ ಕುಳಿತಿತ್ತು. ಬಹುಶ ಆ ಮಹಾನುಭಾವ ಮನೆಯಲ್ಲಿ ನಿದ್ದೆ ಮಾಡಿಲ್ಲವೇನೋ ಎಂದು ತೋರುತ್ತದೆ. ಇವರೂ ಒಂದು ತರಹದ ಭಯೋತ್ಪಾದಕರೇ. ಇನ್ನೊಬ್ಬರನ್ನು ನೆಮ್ಮದಿಯಾಗಿ ಪ್ರಯಾಣಿಸಲೂ ಬಿಡಲಾರರು. ಇವರಿಗೆ ಮಾತ್ರ ಗಾಢ ನಿದ್ದೆ. ಬೆಳದಂತೆ ಆಸರೆಯಾಗಲು ಇಂತಹವರಿಗೆ ಇನ್ನೊಬ್ಬರು ಬೇಕು. ಅವನನ್ನು ನಿರ್ದಯೆಯಿಂದ ಎಬ್ಬಿಸಿದೆ.


ನಾನು ಮತ್ತೆ ಕಿಟಿಕಿಯ ಹೊರಗೆ ದೃಷ್ಟಿ ಹಾಯಿಸಿದೆ. ಬಸ್ ಸ್ವಲ್ಪ ದೀರ್ಘವೇ ಅನ್ನಿಸಬಹುದಾದ ತಿರುವಿನಲ್ಲಿ ಸಂಚರಿಸುವಾಗ ಒಂದು ಅಡಿಕೆಯ ತೋಟ ನನ್ನನ್ನು ಬಹುವಾಗಿ ಆಕರ್ಷಿಸಿತು. ಬಹಳ ಸಮೃದ್ಧವಾದ ತೋಟ ಅದು. ನನ್ನ ತೋಟವೂ ಕೂಡಾ ಹೀಗೆಯೇ ಇದೆ ಎಂದು ಯೋಚಿಸಿದೆ. ತೋಟದ ಬದಿಯಲ್ಲಿ ರಸ್ತೆಗೆ ತಾಗಿಕೊಂಡಂತೆ ದೊಡ್ಡದಾದ ಕೆರೆಯೊಂದಿತ್ತು. ಈ ಕೆರೆಯನ್ನು ಮತ್ತು ತೋಟವನ್ನು ನಾನು ಆಗಾಗ ಗಮನಿಸುತ್ತಿದರೂ ಯಾಕೋ ಏನೋ ಇಂದು ಆ ಕೆರೆ ಮತ್ತು ತೋಟವನ್ನು ನೋಡುವುದರಲ್ಲಿ ಹೆಚ್ಚಿನ ಕುತೂಹಲವಿತ್ತು. ಇತ್ತೀಚಿಗೆ ದ್ವಿಚಕ್ರ ವಾಹನ ಸವಾರರಿಬ್ಬರೂ ವಾಹನ ಸಮೇತರಾಗಿ ಆ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದರು. ಆದ್ದರಿಂದ ಬಸ್ಸಿನಲ್ಲಿದ್ದ ಎಲ್ಲರೂ ಆ ತಿರುವಿನಲ್ಲಿ ಎದ್ದು ನಿಂತು ಆ ಕೆರೆಯನ್ನು ಬಗ್ಗಿ ಬಗ್ಗಿ ನೋಡತೊಡಗಿದರು. ಬಹುಶಃ ಬಸ್ಸಿನ ಚಾಲಕ ಕೂಡ ವೇಗವನ್ನು ತಗ್ಗಿಸಿ ಅತ್ತ ದೃಷ್ಟಿ ಹಾಯಿಸಿದ. ಆ ಕೆರೆಯನ್ನು ನೋಡುತ್ತಿದ್ದಂತೆ ನನಗೆ ಯಾಕೋ ಮನಸ್ಸಿನಲ್ಲಿ ವಿಷಾದದ ಅಲೆಯೊಂದು ತೇಲಿ ಹೋದಂತಾಯಿತು. ಈ ಕೆರೆಯಲ್ಲಿ ಆಗಾಗ ಅವಘಡಗಳಾಗುತ್ತಿದ್ದರೂ ಕೆರೆಯನ್ನು ಇನ್ನೂ ಮುಚ್ಚಿರಲಿಲ್ಲ. ಬದಲಾಗಿ ಇತ್ತೀಚಿಗೆ ತಡೆಗೋಡೆಯನ್ನು ನಿರ್ಮಿಸಿದ್ದರು.


ಇಂತಹಾ ಬಾಯಿ ತೆರೆದ ಪ್ರತಿಯೊಂದು ಕೆರೆಗಳಿಗೂ ಒಂದೊಂದು ಕತೆಯಿರಬಹುದೇನೋ ಎಂದು ಅನಿಸಿತು. ನಮ್ಮ ತೋಟದ ಮಧ್ಯೆ ಇರುವ ನೀರು ತುಂಬಿ ತುಳುಕುತ್ತಿರುವ ‘ದೊಡ್ಡ ಕೆರೆ’ಯ ನೆನಪಾಯಿತು. ಕೂಡಲೇ ಘಟಿಸಬಾರದ ಘಟನೆಯೊಂದರ ಚಿತ್ರಣ ಮನದಲ್ಲಿ ಮೂಡಿ ಮನಸ್ಸು ಮುದುಡಿತು. ‘ಹಾಗಾಗಬಾರದಿತ್ತು ಎಂದು ನಾವು ಅಂದುಕೊಂಡರೂ ನಮ್ಮ ಮನುಷ್ಯ ಬಲವೊಂದನ್ನು ಮೀರಿದ ಶಕ್ತಿಯೊಂದರ ಸೆಳೆತಕ್ಕೆ ನಾವು ಒಳಗಾಗಲೇ ಬೇಕಲ್ಲ’ ಎಂದು ಸಮಾಧಾನಪಟ್ಟುಕೊಂಡೆ . ಕೆಲವೊಮ್ಮೆ ಅಗೋಚರ ಶಕ್ತಿಯೊಂದು ನಮ್ಮನ್ನು ಕಾಯುತ್ತದೆ ಎಂಬ ವಿಚಾರ ನಿಜವಿರಬಹುದೇನೋ ಎಂದು ಚಿಂತಿಸುತ್ತೇನೆ. ಇಲ್ಲದಿದ್ದರೆ ನಾವು ಬಾಲ್ಯದಲ್ಲಿ ಬಗ್ಗಿ ನೋಡಿದ ಬಾಯ್ದೆರೆದ, ಕಟ್ಟೆಗಳಿಲ್ಲದ ಬಾವಿಗಳೆಷ್ಟು ಇದ್ದುವು. ಆಗೆಲ್ಲಾ ಗುಡ್ಡಗಳಲ್ಲಿಯೂ ಬಾವಿಗಳಿತ್ತು. ಕೆಲವೊಂದು ಪಾಳು ಬಾವಿಗಳಾಗಿದ್ದರೂ ಅದಕ್ಕೆ ಯಾವುದೇ ತಡೆಗೋಡೆಗಳಿರಲಿಲ್ಲ.

ಪ್ರತಿಯೊಂದು ತೋಟಗಳಲ್ಲಿಯೂ ನೀರು ತುಂಬಿದ ಕೆರೆಗಳು ಈಗಲೂ ಇವೆ. ಚಿಕ್ಕಂದಿನಲ್ಲಿ ಹುಡುಗಾಟಿಕೆಯಿಂದ ಎಲ್ಲಾ ಕೆರೆ ಬಾವಿಗಳಿಗೂ ಬಗ್ಗಿ ನೋಡುವುದು ಅಭ್ಯಾಸವಾಗಿತ್ತು. ‘ಎಲ್ಲಿಯಾದರೂ ಕಾಲು ಜಾರಿ ಬಿದ್ದಿದ್ದರೆ’ ಎಂದು ಆಲೋಚಿಸಿದಾಗ ಈಗ ಮೈ ಜುಂ ಎನ್ನುತ್ತದೆ. ಆದರೆ ಆಗ ಏನೂ ಆಗಿರಲಿಲ್ಲ. ಈಗ ಮಾತ್ರ ನಮ್ಮ ಮಕ್ಕಳನ್ನು ಕೆರೆ ಬಾವಿಗಳ ಸಮೀಪಕ್ಕೆ ಹೋಗಲೂ ಬಿಡುವುದಿಲ್ಲ. ಆಗ ನಮಗಿಲ್ಲದ ಭಯ ಈಗ ಆವರಿಸುತ್ತದೆ. ನನಗೆ ಪ್ರಯಾಣದುದ್ದಕ್ಕೂ ಕೆರೆಗಳದ್ದೇ ನೆನಪು. ಮನೆಗೆ ತಲುಪಲು ಇನ್ನೂ ಒಂದು ಘಂಟೆಯ ಪ್ರಯಾಣವಿತ್ತು. ಯೋಚನೆಗಳ ಭಾರದಿಂದ ಮನಸ್ಸು ಬಾಗಿತ್ತು.


ಆ ಗ್ರಾಮದಲ್ಲಿ ಆಗ ದೊಡ್ಡ ತೋಟ ಎಂದರೆ ನಮ್ಮದೇ. ತೋಟದ ಮಧ್ಯೆ ದೊಡ್ಡದಾದ ಒಂದು ಕೆರೆಯಿತ್ತು. ದೊಡ್ಡದು ಎಂದರೆ ಅದು ಈಜುಕೊಳಕ್ಕಿಂತಲೂ ವಿಸ್ತಾರವಾದ ಕೆರೆಯಾಗಿತ್ತು. ತುಂಬು ನೀರಿನ
ಒರತೆಯಿರುವ ಕಾರಣದಿಂದ ನಮ್ಮ ಇಡಿಯ ತೋಟಕ್ಕಾಗುವಷ್ಟು ನೀರಿನ ಆಶ್ರಯ ಅದರಲ್ಲಿರುವ ವಿಶೇಷತೆ. ಮಳೆಗಾಲದಲ್ಲಿ ಕೆರೆಯಿಂದ ನೀರು ಉಕ್ಕಿ ಹೊರಹೋಗುತ್ತಿತ್ತು. ನಾನು ಮತ್ತು ಸುತ್ತುಮುತ್ತಲಿನ ಒಂದೆರಡು ಮನೆಯವರು ಬಿಡುವಿನ ಸಮಯದಲ್ಲಿ ಆ ಕೆರೆಯಲ್ಲಿ ಈಜಾಡುತ್ತಿದ್ದೆವು. ಹಳ್ಳಿಯವರೆಂದರೆ ಹಾಗೆಯೇ. ಈಜು ಮತ್ತು ಮರ ಹತ್ತುವ ಕಲೆ ರಕ್ತಗತವಾಗಿ ಬಂದಿರುತ್ತದೆ. ನಾನು ಮತ್ತು ನಮ್ಮ ನೆರೆಮನೆಯವನಾದ ರಮಣ ಇಬ್ಬರೂ ಈಜುವುದರಲ್ಲಿ ಎತ್ತಿದ ಕೈ. ಕೆರೆಯ ಈ ಬದಿಯಲ್ಲಿ ಮುಳುಗಿ ಆ ಬದಿಯಲ್ಲಿ ನೀರಿನಿಂದ ಏಳುತ್ತಿದ್ದೆವು. ಸಬ್ ಮೆರೀನ್ ಗಳಂತೆ ನೀರಿನ ಅಡಿಯಲ್ಲಿ ಸಂಚರಿಸುತ್ತಿದೆವು. ಆ ಕಾಲದಲ್ಲಿ ಎಷ್ಟೋ ಮುಳುಗುತ್ತಿದ್ದ ಜೀವಗಳನ್ನು ರಕ್ಷಿಸಿದ ಕೀರ್ತಿ ನಮ್ಮಿಬ್ಬರಿಗಿತ್ತು. ಊರಿಗೆ ಆಪತ್ಕಾಲಕ್ಕೆ ಒದಗಿದವರಾಗಿದ್ದರೂ ಕೊನೆಗೆ ಮಾತ್ರ ಒಂದು ವಿಷಾದ, ಒಂದು ಖೇದ ಶೇಷವಾಗಿಯೇ ಉಳಿಯಿತು.

ರಮಣ ಸಣ್ಣ ಮಟ್ಟಿನ ಕೃಷಿಕನಾದರೂ ಶ್ರೀಮಂತ, ಬಡವ ಎಂಬ ಭಿನ್ನತೆಯ ಅಂತರ ನಮ್ಮ ನಡುವೆ ಇರಲಿಲ್ಲ. ಒಂದೇ ರೀತಿಯ ವಿಚಾರಶೀಲತೆ, ಯೋಚನೆಗಳು ನಮ್ಮ ನಡುವೆ ಗಾಢವಾದ ಸ್ನೇಹವನ್ನು ಬೆಸೆದಿದ್ದುವು. ಚಿಕ್ಕಂದಿನಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದ ರಮಣನಿಗೆ ಚೆಲುವೆಯಾದ ಹುಡುಗಿಯೊಬ್ಬಳೊಂದಿಗೆ ಮದುವೆಯಾಗಿತ್ತು. ರಮಣ ಮತ್ತು ಅವನ ಹೆಂಡತಿಗೆ ನಾನು ಮತ್ತು ನನ್ನ ಹೆಂಡತಿ ಅಣ್ಣ ಮತ್ತು ಅಕ್ಕನಾಗಿದ್ದೆವು. ಎರಡು ಮನೆಯವರೂ ಎಷ್ಟು ಆತ್ಮೀಯರಾಗಿದ್ದೆವು ಎಂದರೆ ನಾವಿಬ್ಬರೂ ಅಂದರೆ ನಾನು ಮತ್ತು ರಮಣ ಈಜಾಡುತ್ತಿದ್ದಾಗ ಅಕ್ಕ ತಂಗಿಯರಂತಿದ್ದ ಅವರಿಬ್ಬರೂ ಅದೇ ಕೆರೆಯ ಬದಿಯಲ್ಲಿ ಬಟ್ಟೆ ತೊಳೆಯುತ್ತಿದ್ದರು. ಆರ್ಥಿಕವಾಗಿ ಅನುಕೂಲತೆಯಿದ್ದರೂ ನಾವಾಗ ಬಟ್ಟೆ ತೊಳೆಯಲು ಕೆರೆಯ ಬದಿಯನ್ನೇ ಆಶ್ರಯಿಸುತ್ತಿದ್ದೆವು.

ನನ್ನ ಹೆಂಡತಿಗೆ ಈಜು ಬರುತ್ತಿತ್ತು. ಮದುವೆಯಾದ ಹೊಸತರಲ್ಲಿ ನನ್ನ ಒತ್ತಾಯಕ್ಕೆ ಕಲಿತಿದ್ದಳು. ಆದರೆ ರಮಣನ ಹೆಂಡತಿಗೆ ಈಜು ಬರುತ್ತಿರಲಿಲ್ಲ. ರಮಣ ಎಷ್ಟೋ ಬಾರಿ ಅವಳನ್ನು ನೀರಿಗೆಳೆದು ಈಜು ಕಲಿಸಲು ಪ್ರಯತ್ನಪಟ್ಟಿದ್ದ. ಆದರೆ ಹರೆಯದ ತರುಣಿಯಾಗಿದ್ದ ಅವಳು ತೆರೆದ ಪ್ರದೇಶದಲ್ಲಿ ನೀರಿಗಿಳಿಯಲು ನಾಚಿಕೊಳ್ಳುತ್ತಿದ್ದಳು. ‘ನೀವಿಬ್ಬರೇ ಇರುವಾಗ ಕಲಿಸಿಕೊಡು’ ಎಂದು ನಾನೇ ರಮಣನಿಗೆ ಸಲಹೆ ನೀಡಿದ್ದೆ.
ಆ ದಿನ ಶನಿವಾರವಾಗಿತ್ತು. ನನ್ನ ಹೆಂಡತಿ ತವರು ಮನೆಗೆ ಹೋಗಿದ್ದಳು. ಮನೆಯಲ್ಲಿ ನಾನೊಬ್ಬನೇ ಇದ್ದೆ. ಎಂದಿನಂತೆ ಅಂದು ಕೂಡ ರಮಣನ ಪತ್ನಿ ಬಟ್ಟೆ ತೊಳೆಯಲು ಬಂದಿದ್ದಳು. ರಮಣನೂ ಈಜಾಡುತ್ತಿರುವ ಶಬ್ದ ಕೇಳಿಸುತ್ತಿತ್ತು. ನಾನು ಅಂದು ತೋಟಕ್ಕೆ ಇಳಿದಿರಲಿಲ್ಲ. ಮನೆಯ ಅಂಗಳದಲ್ಲಿಯೇ ಏನೋ ಕೆಲಸವಿದ್ದರಿಂದ ಮತ್ತು ಅವರಿಬ್ಬರ ಸರಸ ಸಲ್ಲಾಪಕ್ಕೆ, ನೀರಾಟಕ್ಕೆ ಭಂಗ ತರಬಾರದೆಂಬ ಉದ್ದೇಶದಿಂದ ನಾನು ಮನೆಯಲ್ಲಿಯೇ ಉಳಿದುಕೊಂಡಿದ್ದೆ.

ಸ್ವಲ್ಪ ಹೊತ್ತಿನಲ್ಲಿ ಕೆರೆಯ ಭಾಗದಿಂದ ಏನೋ ಗಡಿಬಿಡಿ, ಸದ್ದು ಕೇಳಿಸಿತು. ಏನೆಂದು ನೋಡುತ್ತಾ ಇರುವಾಗ ತೋಟದಲ್ಲಿದ್ದ ಕೆಲಸದ ವ್ಯಕ್ತಿ ಬೊಬ್ಬೆ ಹೊಡೆಯುತ್ತಾ ನನ್ನನ್ನು ಕರೆದ. ‘ಬೇಗ ಬನ್ನಿ, ಅಕ್ಕ ನೀರಿಗೆ ಬಿದ್ದಿದ್ದಾರೆ’ ಎಂದು ಹೇಳಿದವನ ಮಾತಿಗೆ ಬೆಚ್ಚಿ ಬಿದ್ದು ಒಮ್ಮೆಲೇ ಕೆರೆಯತ್ತ ಧಾವಿಸಿದೆ. ಆಗಲೇ ಅಲ್ಲಿ ನಮ್ಮ ಎರಡು ಕೆಲಸದವರೂ ತಲುಪಿ ನೀರಿಗೆ ಹಾರಿದ್ದರು. ರಮಣನೂ ನೀರಿಗೆ ಹಾರಿದ್ದ. ಅತೀವ ಭಯಗೊಂಡಿದ್ದ ಆತನನ್ನು ನಾನು ಮೇಲಕ್ಕೆಳೆದು ಕುಳಿತುಕೊಳ್ಳಲು ಹೇಳಿ ನಾನು ನೀರಿಗೆ ಹಾರಿ ಮುಳುಗಿ ಹುಡುಕಾಡಿದೆ. ಅದರ ಮೊದಲು ಇನ್ನೊಬ್ಬ ಕೆಲಸದವನಲ್ಲಿ ಪಕ್ಕದ ಮನೆಯವರನ್ನೆಲ್ಲ ಕೂಗಲು ಹೇಳಿದೆ. ಇಷ್ಟೆಲ್ಲಾ ಕ್ಷಣಾರ್ಧದಲ್ಲಿ ನಡೆದು ಹೋಯಿತು. ಅವನು ಬೊಬ್ಬೆ ಹೊಡೆಯುತ್ತಾ ಆ ಕಡೆಗೆ ಹೋದ. ರಮಣನೂ ನನ್ನೊಡನೆ ಮತ್ತೊಮ್ಮೆ ನೀರಿಗೆ ಜಿಗಿದ. ಅಷ್ಟರಲ್ಲಿ ಅಕ್ಕ ಪಕ್ಕದವರು ಹತ್ತಾರು ಜನರು ಅಲ್ಲಿ ಸೇರಿದ್ದರು. ನುರಿತ ಈಜುಗಾರರೆಲ್ಲರೂ ಸೇರಿ ಹುಡುಕಾಡಿದೆವು.

ಸುಸ್ತಾಗಿ ಭಯಬೀತನಾಗಿದ್ದ ರಮಣನನ್ನು ಇಬ್ಬರು ಹಿಡಿದುಕೊಂಡು ಕುಳ್ಳಿರಿಸಿದರು. ಅರ್ಧ ಘಂಟೆ ಕಳೆದರೂ ರಮಣನ ಪತ್ನಿಯನ್ನೂ ನೀರಿನೊಳಗಿನಿಂದ ಹೊರ ತೆಗೆಯಲಾಗಲಿಲ್ಲ. ಎಲ್ಲರೂ ಸುಸ್ತಾಗಿದ್ದರು. ನಾನು ಕೊನೆಯ ಪ್ರಯತ್ನವೆಂಬಂತೆ ಸರ್ವ ಶಕ್ತಿಯನ್ನೂ ಉಪಯೋಗಿಸಿ ನೀರಿನ ಆಳಕ್ಕೆ ಹೋದೆ. ಅಲ್ಲಿ ಕೆಸರಿನಲ್ಲಿ ಹುದುಗಿದ್ದ ಅವಳ ದೇಹ ಕೈಗೆ ತಾಗಿತು. ಕೂಡಲೇ ಎಳೆದು ಮೇಲೆ ತಂದೆ. ಅಷ್ಟರಲ್ಲಿ ಮತ್ತಿಬ್ಬರು ಸಹಾಯ ಮಾಡಿದರು. ಎಲ್ಲರೂ ಸೇರಿ ದೇಹವನ್ನು ಮೇಲೆ ತಂದು ಮಲಗಿಸಿದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ. ಅವಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ಅರ್ಧ ಘಂಟೆಗೂ ಹೆಚ್ಚು ನೀರಿನೊಳಗೆ ಮುಳುಗಿದ್ದವಳು ಬದುಕಿರುವುದಕ್ಕೆ ಹೇಗೆ ಸಾಧ್ಯ? ಅವಳ ಮೃತ ದೇಹವನ್ನು ಕಂಡೊಡನೆ ರಮಣನ ರೋದನ, ಪ್ರತಿಕ್ರಿಯೆಗಳನ್ನು ನೋಡುವುದಕ್ಕೆ ಅಸಾಧ್ಯವಾಗಿತ್ತು.

ನಾನು ಕೂಡ ದಿಗ್ಭ್ರಾಂತನಾಗಿ ಒಂದರೆಕ್ಷಣ ಕೆರೆಯ ಬದಿಯಲ್ಲೇ ಬಿದ್ದಿದ್ದೆನಾದರೂ ನನ್ನನ್ನು ಕರ್ತವ್ಯ ಕೈ ಬೀಸಿ ಕರೆಯುತ್ತಿತ್ತು. ಧೃತಿಗುಂದಿ ಸೋತು ರೋದಿಸುತ್ತಿದ್ದ ಸ್ನೇಹಿತನನ್ನು ಸಂತೈಸಿ ಸಮಾಧಾನಪಡಿಸಬೇಕಾಗಿತ್ತು. ಎಲ್ಲವನ್ನೂ ಅಣ್ಣನ ಸ್ಥಾನದಲ್ಲಿ ನಿಂತು ಮಾಡಿದೆ. ನನ್ನ ಶಕ್ತಿಮೀರಿ ಎಲ್ಲವನ್ನೂ ಮಾಡಿದೆನಾದರೂ ಸಾಂಸಾರಿಕ ಜೀವನದಲ್ಲಿ ನೋವನ್ನುಂಡು ಜುಗುಪ್ಸೆಗೊಂಡಿದ್ದ ರಮಣನ ಮನೋಸ್ಥಿತಿಯನ್ನು ತಿಳಿಯಾಗಿಸಲು ನಾನು ಶಕ್ತನಾಗಲಿಲ್ಲ. ನಾವಿಬ್ಬರೂ ಈಜಿನಲ್ಲಿ ನಿಸ್ಸೀಮರಾಗಿದ್ದರೂ ನಮ್ಮದೇ ಮನೆಯವರನ್ನೇ ಕಾಪಾಡಿ ಗೆಲುವು ಸಾಧಿಸಲಾಗಲಿಲ್ಲ.


ರಮಣ ಮಂಕಾಗಿದ್ದ. ಏನೋ ಆಲೋಚನೆ, ಎತ್ತಲೋ ನೋಟ, ಅನಿಯಮಿತ ಆಹಾರ ಸೇವನೆ ಹೀಗೆ ಅವನ ಜೀವನ ಅತಂತ್ರತೆಯತ್ತ ಸಾಗುವ ಲಕ್ಷಣಗಳು ಕಂಡುಬಂದುವು. ನಾನು ಬಲವಂತದಿಂದ ಅವನನ್ನು ನಮ್ಮ ಮನೆಗೆ ಊಟ, ತಿಂಡಿಗೆ ಕರೆದುಕೊಂಡು ಬರುತ್ತಿದ್ದೆ. ಯಾವಾಗಲೂ ಸಮಾಧಾನದ, ಬುದ್ಧಿಯ ಮಾತುಗಳನ್ನು ಹೇಳುತ್ತಿದ್ದೆ. ಆದರೆ ರಮಣ ಅವನ ಮನದನ್ನೆಯ ನೆನಪಲ್ಲಿ ಕೊರಗಿ ಕೃಶವಾಗತೊಡಗಿದ್ದ. ಅವಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಕೆಲವೊಮ್ಮೆ ಮುಖ ಮುಚ್ಚಿಕೊಂಡು ಹತಾಶೆಯಿಂದ ರೋಧಿಸುತ್ತಿದ್ದ.


ಇದಾದ ಕೆಲವು ದಿನಗಳ ನಂತರ ರಮಣ ತಾನಿದ್ದ ಮನೆ ತೋಟವನ್ನು ಸ್ವಲ್ಪ ಸಮಯ ನನ್ನಲ್ಲಿ ನೋಡಿಕೊಳ್ಳಲು ಹೇಳಿ ಮನಶಾಂತಿಗಾಗಿ ತಾನು ಮೊದಲು ವಾಸಿಸುತ್ತಿದ್ದ ಊರಿಗೆ ಹೋಗುತ್ತೇನೆಂದು ಹೇಳಿ ಹೋದವನು ಮತ್ತೆ ಸಂಪರ್ಕಕ್ಕೆ ಸಿಗಲಿಲ್ಲ. ಎಲ್ಲಿ ಹೋಗಿರಬಹುದು ಎಂದು ಚಿಂತಿಸಿದೆ. ಕೊನೆಗೆ ಆತನ ಹುಟ್ಟೂರಿನಲ್ಲೇ ವಿಚಾರಿಸುವುದು ಸೂಕ್ತ ಎಂದು ಆ ದಿಸೆಯಲ್ಲಿ ಪ್ರಯತ್ನಿಸಿದೆ. ಆಮೇಲೆ ಆ ಊರಿನಲ್ಲಿ ವಿಚಾರಿಸಿದಾಗ ಅವನು ಅಲ್ಲಿಗೆ ಹೋಗದೆ ಬೇರೆಲ್ಲೋ ತೆರಳಿದ್ದಾನೆ ಎಂದು ತಿಳಿಯಿತು. ಆದರೆ ಎಲ್ಲಿದ್ದಾನೆ ಎಂದು ಗೊತ್ತಾಗಲಿಲ್ಲ. ಅವನ ಇರವನ್ನು ತಿಳಿಯಲು ಬಹಳಷ್ಟು ಪ್ರಯತ್ನಿಸಿದ್ದೆ. ಪ್ರಯೋಜನವಾಗಲಿಲ್ಲ.

ಹೀಗೆ ಹಲವಾರು ಯೋಚನೆಗಳ ಗುಂಗಿನಲ್ಲಿದ್ದ ನನಗೆ ಇಳಿಯುವ ನಿಲ್ದಾಣ ಬಂದದ್ದು ಅರಿವಾಗಲಿಲ್ಲ. ಬಸ್ ನಿರ್ವಾಹಕ ಕೂಗಿದಾಗ ಬೇಗನೆ ಎದ್ದು ಇಳಿದೆ. ಇಳಿದು ತೋಟ ದಾಟಿ ಮನೆಯತ್ತ ಬರುತ್ತಿರುವಾಗ ಅಚ್ಚರಿಯೊಂದು ಕಾದಿತ್ತು. ದೊಡ್ಡ ಕೆರೆಯ ಸಮೀಪ ಯಾರೋ ಕಾವಿ ವಸ್ತ್ರಧಾರಿಯೊಬ್ಬರು ಕುಳಿತಂತೆ ಅನಿಸಿತು. ಯಾರೆಂದು ತಿಳಿಯಲು ಹತ್ತಿರಕ್ಕೆ ಹೋದೆ. ಗಡ್ಡ ಬಿಟ್ಟ ಸನ್ಯಾಸಿ ಯಾರೆಂದು ತಿಳಿಯಿತು. ಆಶ್ಚರ್ಯ ದಿಗ್ಭ್ರಮೆಗಳಾದರೂ ತೋರಿಸಿಕೊಳ್ಳಲಿಲ್ಲ . ರಮಣ ವಿರಾಗಿಯಾಗಿದ್ದ. ಅವನನ್ನು ಅಪ್ಪಿಕೊಂಡು ಕಣ್ಣೀರಿಟ್ಟು ಮನೆಗೆ ಕರೆದುಕೊಂಡು ಬಂದೆ. ಇಬ್ಬರೂ ಸಂತೋಷದಿಂದ ಮಾತನಾಡುತ್ತ ಹೊಟ್ಟೆ ತುಂಬಾ ಉಂಡೆವು. ಅವನ ಮನೆಯ ಬೀಗದ ಕೈಯನ್ನು ಮರಳಿ ಅವನಿಗಿತ್ತೆ.

ಮರುದಿನ ನಾನು ನನ್ನ ಎಂದಿನ ಕಾಯಕದಂತೆ ಬೆಳಿಗ್ಗೆ ಅಡಿಕೆ ಹೆಕ್ಕಲು ತೋಟಕ್ಕೆ ಹೋದೆ. ಅಡಿಕೆಯನ್ನು ಬುಟ್ಟಿಗಳಲ್ಲಿ ತುಂಬಿಸುತ್ತಾ ಆ ದೊಡ್ಡ ಕೆರೆಯ ಬಳಿ ಬಂದವನೇ ಬೆಚ್ಚಿಬಿದ್ದೆ. ಆ ಕೆರೆಯ ಮೆಟ್ಟಿಲುಗಳಲ್ಲಿ ರಮಣ ಕುಳಿತಿದ್ದ. ಕಾಲನ್ನು ನೀರಿನಲ್ಲಿ ಇಳಿಬಿಟ್ಟು ಕಣ್ಣುಮುಚ್ಚಿ ಏನನ್ನೋ ಧ್ಯಾನಿಸುತ್ತಿರುವಂತೆ ಕಾಣಿಸಿದ. ನಾನು ಆವಾಕ್ಕಾಗಿ ನಿಂತೆ. ನನ್ನ ಬರವು ಹಾಗೂ ಇರುವಿಕೆಯ ಸುಳಿವು ಒಂದಿನಿತೂ ಅವನಿಗೆ ಸಿಕ್ಕಿದ ಹಾಗೆ ತೋರಲಿಲ್ಲ. ನಾನು ಅವನ ತೀರಾ ಸಮೀಪಕ್ಕೆ ಬಂದು ಅವನ ಹೆಗಲ ಮೇಲೆ ಕೈ ಇಟ್ಟೆ. ಅಸ್ಪಷ್ಟವಾಗಿ ಅವನ ಹೆಂಡತಿಯ ಹೆಸರನ್ನು ಹೇಳುತ್ತಿದ್ದವನು ನನ್ನ ಸ್ಪರ್ಷದಿಂದ ಬೆಚ್ಚಿಬೀಳಲಿಲ್ಲ. ನಿಧಾನವಾಗಿ ತಿರುಗಿ ನನ್ನ ಮುಖವನ್ನು ದಿಟ್ಟಿಸಿದ. ಆ ನೋಟದಲ್ಲಿ ಒಂದು ರೀತಿಯ ನಿರ್ಲಿಪ್ತತೆಯಿತ್ತು.

ಅವನ ಸಮಾಧಿ ಸ್ಥಿತಿಗೆ ನಾನು ಭಂಗ ತಂದೆನೋ ಎಂಬ ಆತಂಕ ನನಗಾಯಿತು. ಆದರೆ ರಮಣ ಮಾತ್ರ ನನ್ನ ಮುಖವನ್ನೇ ನೋಡುತ್ತಿದ್ದ. ರಮಣ ಭಾವನೆಗಳ, ರಾಗ ದ್ವೇಷಗಳಿಂದ ದೂರ ಸರಿದು ವೈರಾಗ್ಯ ಸ್ಥಿತಿಯನ್ನು ತಲುಪಿದ್ದರೂ ಈಗ ಮಾತ್ರ ಯಾಕೋ ಏನೋ ಅವನ ಕಣ್ಣುಗಳಲ್ಲಿ ಕರುಣೆ ತುಂಬಿ ತುಳುಕಿದಂತೆ ಕಂಡಿತು. ಮೆಲ್ಲನೆ ಅವನನ್ನು ಎಬ್ಬಿಸಿದೆ. ರಮಣ ತನ್ನ ಪತ್ನಿ ಬಿದ್ದ ಜಾಗವನ್ನು ತೋರಿಸುತ್ತಾ ‘ಅವಳು ಈಗಲೂ ಅಲ್ಲಿಯೇ ಇದ್ದಾಳೆಯೇನೋ ಎಂದು ಅನಿಸುತ್ತದೆ. ಈ ನೀರನ್ನು ಮುಟ್ಟುವಾಗ ಅವಳು ಪಿಸುಗುಟ್ಟಿದಂತೆ ಭಾಸವಾಗುತ್ತದೆ.’ ಎಂದು ಹುಚ್ಚುಹುಚ್ಚಾಗಿ ಬಡಬಡಿಸತೊಡಗಿದ. ನಾನು ಅವನನ್ನು ಸಮಾಧಾನಪಡಿಸುತ್ತಾ ಬಲವಂತದಿಂದ ಅವನನ್ನು ಮನೆಗೆ ಕರೆದುಕೊಂಡು ಬಂದೆ.

ಅವನಿದ್ದಷ್ಟು ದಿನಗಳೂ ಯಾವಾಗಲೂ ಕೆರೆಯ ಬಳಿಯೇ ಕುಳಿತಿರುತ್ತಿದ್ದ. ಕೆರೆಯ ನೀರಲ್ಲಿ ಕಾಲಾಡಿಸುತ್ತ ಆನಂದವನ್ನು ಅನುಭವಿಸುವಂತೆ ಕಾಣುತ್ತಿದ್ದ. ಹುಚ್ಚು ಹುಚ್ಚಾಗಿ ಮಾತನಾಡುತಿದ್ದ. ಕೆರೆಯ ನೀರನ್ನು ಮುಟ್ಟಿದಾಗ ಅವಳೇ ಬಂದು ಪ್ರೀತಿಯಿಂದ ಮಾತನಾಡಿಸಿದಂತೆ ಆಗುತ್ತದೆ ಎಂದು ಕನವರಿಸುತ್ತಿದ್ದ. ಅವನ ಈ ರೀತಿಯ ಚರ್ಯೆಯನ್ನು ಕಂಡು ನನಗೆ ಭಯವಾಯಿತು. ರಮಣನ ಈ ರೀತಿಯ ವರ್ತನೆಗಳನ್ನೆಲ್ಲಾ ಕಂಡು ನನ್ನ ಮನಸ್ಸು ಬಹಳಷ್ಟು ದಿಗಿಲುಗೊಂಡಿತು. ಇವನು ಆಗಾಗ ಬಂದು ಈ ಕೆರೆಯ ಬದಿಯಲ್ಲಿ ಕುಳಿತು ಯೊಚಿಸುತ್ತಾ ತನ್ನನ್ನೇ ಮರೆತು ಅಪಾಯವನ್ನು ಆಹ್ವಾನಿಸಿಕೊಂಡರೆ? ಅಥವಾ ಪತ್ನಿಯ ಬಗ್ಗೆಯೇ ಯೋಚಿಸುತ್ತಾ ಇನ್ನೊಂದು ಆಕಸ್ಮಿಕ ಘಟನೆಗೆ ತನ್ನನ್ನು ಒಡ್ಡಿಕೊಂಡರೆ ಎಂಬ ಯೋಚನೆ ಬಂತು. ಈ ಒಂದು ಯೋಚನೆಯೇ ನನ್ನಲ್ಲಿ ನಡುಕವನ್ನು ಹುಟ್ಟಿಸಿತು.

ಪತ್ನಿಯ ಜೊತೆ ಇದನ್ನೇ ಹೇಳಿದಾಗ ಅವಳು ಈ ಕೆರೆಯನ್ನು ಮುಚ್ಚಿಸಿ ಬೇರೆ ಕೊಳವೆ ಬಾವಿಯನ್ನು ನಿರ್ಮಿಸೋಣ ಎಂದಳು. ಅವಳು ಕೊಟ್ಟ ಸಲಹೆಯಂತೆ ಈ ದೊಡ್ಡ ಕೆರೆಯನ್ನು ಮುಚ್ಚಿಸುವ ನಿರ್ಧಾರಕ್ಕೆ ಬಂದೆ. ಆದರೆ ಸ್ವಲ್ಪ ಹೊತ್ತು ಆಲೋಚಿಸಿದಾಗ ಈ ನಿರ್ಧಾರ ಎಷ್ಟು ಮೂರ್ಖತನದ್ದು ಎಂದು ಆಮೇಲೆ ಅರಿವಾಯಿತು. ನೀರಿನ ನಿಧಿಯಾಗಿದ್ದ ಈ ಕೆರೆ ನಮ್ಮ ತೋಟಕ್ಕೆ ಜೀವಾಳವಾಗಿತ್ತು. ಅದನ್ನು ಮುಚ್ಚಿಸಿದರೆ ನಮ್ಮ ಒಟ್ಟಾರೆ ಕೃಷಿಭೂಮಿಯ ಬೆಲೆ ಹಾಗೂ ಬೆಳೆ ಕುಸಿತವನ್ನು ಕಾಣಬಹುದು.

ಆಮೇಲೆ ನಾವಿಬ್ಬರೂ ನಮ್ಮ ನಿರ್ಧಾರವನ್ನು ಬದಲಾಯಿಸಿ ‘ಸಾಕಪ್ಪಾ ಈ ಕೆರೆಗಳ ಸಹವಾಸ’ ಎಂದು ತೀರ್ಮಾನವೊಂದಕ್ಕೆ ಬಂದೆವು. ನಮ್ಮ ಈ ನಿರ್ಧಾರಕ್ಕೆ ಪೂರಕವಾಗಿಯೋ ಎಂಬಂತೆ ಅದಕ್ಕೂ ಮೊದಲೇ ಒಂದೆರಡು ತಿಂಗಳಿನಲ್ಲಿಯೇ ರಮಣ ತನ್ನ ತೋಟ ಮತ್ತು ಮನೆಯನ್ನು ಮಾರಿ ‘ಆಗಾಗ ಬರುತ್ತೇನೆ’ ಎಂದು ನನ್ನಲ್ಲಿ ಹೇಳಿ ದೇಶ ಸಂಚಾರಕ್ಕೆ ಹೊರಟ. ಈಗಂತೂ ನನ್ನ ನಿರ್ಧಾರ ಗಟ್ಟಿಯಾಯಿತು. ಒಂದೆರಡು ದಿನಗಳಲ್ಲಿಯೇ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದ್ದ ನನ್ನ ತೋಟದ ರಸ್ತೆ ಬದಿಯಲ್ಲಿ “ಜಾಗ ಮಾರಾಟಕ್ಕಿದೆ’‘ ಎಂಬ ನಾನು ಹಾಕಿದ ಫಲಕ ತೂಗಾಡತೊಡಗಿತು.

ಕಥೆ: ಮನಮೋಹನ್ ವಿ.ಎಸ್

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (10-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (10-12-2020)
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ10-12-2020ಶ್ರೀ ಕ್ಷೇತ್ರದಲ್ಲಿ ಸುಲೋಚನ-ವಿರೋಚನ
ಕಟೀಲು ಒಂದನೇ ಮೇಳ10-12-2020ಶಾಂತಿ ಭವನ, ಬಜಪೆ ಬಸ್ ಸ್ಟಾಂಡ್ ಬಳಿ  
ಕಟೀಲು ಎರಡನೇ ಮೇಳ 10-12-2020ಶಿಬರೂರು 
ಕಟೀಲು ಮೂರನೇ ಮೇಳ10-12-2020ಕದ್ರಿ ಕ್ಷೇತ್ರದ ರಾಜಾಂಗಣ ಸಂಪೂರ್ಣ ರಾಮಾಯಣ
ಕಟೀಲು ನಾಲ್ಕನೇ ಮೇಳ 10-12-2020ಕೊಪ್ಪಲಮನೆ, ಪಂಜ, ಹಳೆಯಂಗಡಿ  
ಕಟೀಲು ಐದನೇ ಮೇಳ 10-12-2020ಕೆಮ್ರಾಲ್, ಕಿಲೆಂಜೂರು 
ಕಟೀಲು ಆರನೇ ಮೇಳ10-12-2020ಶ್ರೀ ಕ್ಷೇತ್ರ ಪೊಳಲಿ 
ಶ್ರೀ ಸುಂಕದಕಟ್ಟೆ ಮೇಳ 10-12-2020ಮರಕಡ, ಕೊರಂಟಾಡಿಶ್ರೀ ದೇವಿ ಮಹಾತ್ಮೆ
ಶ್ರೀ ಮಾರಣಕಟ್ಟೆ ಮೇಳ ‘ಎ’10-12-2020ಕೊಡೇರಿ ಗಂಗೆಬೈಲು  
ಶ್ರೀ ಮಾರಣಕಟ್ಟೆ ಮೇಳ ‘ಬಿ’10-12-2020ಆಲೂರು ಹಳ್ಳಿ, ಹಡಗಿನಮುಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’10-12-2020ಆಲೂರು ತಾರಿಬೇರು, ಯಕ್ಷಿಬೆಟ್ಟು 
ಶ್ರೀ ಪಾವಂಜೆ ಮೇಳ 10-12-2020ಶ್ರೀಮಠ, ಬಾಳೆಕುದ್ರು, ಹಂಗಾರಕಟ್ಟೆ  ತ್ರಿಪುರ ಮಥನ
ಶ್ರೀ ಹಟ್ಟಿಯಂಗಡಿ ಮೇಳ10-12-2020ಶಿರೂರುದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’10-12-2020ತೆಂಕಬೈಲು ಯಡಮೊಗೆ  ಗಿರಿಜಾ ಕಲ್ಯಾಣ 
ಕಮಲಶಿಲೆ ಮೇಳ ‘ಬಿ’10-12-2020ಕರಿಮನೆ ಶಾಲಾ ವಠಾರ  

ನಿಷ್ಠಾವಂತ ಬಣ್ಣದ ವೇಷಧಾರಿ – ಪಕಳಕುಂಜ ಕೃಷ್ಣ ನಾಯ್ಕ 

ತೆಂಕುತಿಟ್ಟಿನ ಯಕ್ಷಗಾನದ ಬಣ್ಣದ ವೇಷಧಾರಿಗಳಿಗೆ ನೇಪಥ್ಯದಲ್ಲಿ ಮುಖವರ್ಣಿಕೆ, ವೇಷಭೂಷಣಗಳನ್ನು ಧರಿಸಿ ಸಿದ್ಧವಾಗಲು ಹೆಚ್ಚಿನ ಸಮಯವು ಬೇಕಾಗುತ್ತದೆ. ರಂಗಸ್ಥಳದಲ್ಲಿ ಇವರಿಗೆ ಕಡಿಮೆ ಅವಕಾಶಗಳು ಎಂದು ಇದರ ಅರ್ಥವಲ್ಲ. ಬಣ್ಣದ ವೇಷಗಳ ಕ್ರಮವೇ ಹಾಗೆ. ಕಡಿಮೆ ಅವಧಿಯಲ್ಲಿ ರಂಗದಲ್ಲಿ ವಿಜೃಂಭಿಸುವ ಅವಕಾಶಗಳು ಬಣ್ಣಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳಿಗೂ ಇವೆ.

ಪರಂಪರೆಯ, ಸಂಪ್ರದಾಯ ಬದ್ಧತೆಯ ಮುಖವರ್ಣಿಕೆಯೊಂದಿಗೆ ಸಿದ್ಧವಾಗಲು ಕಲಾವಿದನಿಗೆ ಹೆಚ್ಚಿನ ಸಮಯವು ಬೇಕಾಗುತ್ತದೆ. ಬೆಳಗಿನ ಹೊತ್ತು ರಂಗವನ್ನು ಪ್ರವೇಶಿಸುವ ಪಾತ್ರಗಳಾದರೂ, ಕಲಾವಿದರು ಪ್ರಸಂಗದ ಆರಂಭಕ್ಕೇ ಮುಖವರ್ಣಿಕೆಗೆ ತೊಡಗುವುದನ್ನು ನಾವು ಕಾಣುತ್ತೇವೆ. ನಿಷ್ಠೆ ಮತ್ತು ಅರ್ಪಣಾ ಭಾವವುಳ್ಳ ಕಲಾವಿದರು ಈ ತೆರನಾಗಿಯೇ ಸಾಗಿ ಪ್ರಸಿದ್ಧರಾಗುತ್ತಾರೆ.

ಈಗೀಗ ಬಣ್ಣದ ವೇಷಗಳಿಗೆ ರಂಗದಲ್ಲಿ ಸರಿಯಾದ ಅವಕಾಶಗಳು ಸಿಗುತ್ತಿಲ್ಲವೆಂಬ ಕೂಗೂ ಇದೆ. ಇದಕ್ಕೆ ಕಾರಣಗಳು ಹಲವಿರಬಹುದು. ಇದು ವೇಗದ ಯುಗ. ಕಾಲಮಿತಿಯ ಪ್ರದರ್ಶನ ಎಂಬ ಒಂದು ಕಾರಣವೂ ಇರಬಹುದು. ಏನೇ ಇರಲಿ. ಯಕ್ಷಗಾನದಲ್ಲಿ ಬಣ್ಣದ ವೇಷಗಳಿಗೆ, ಪಾತ್ರಧಾರಿಗಳಿಗೆ ಸಿಗಬೇಕಾದ ಅವಕಾಶಗಳು ಸಿಗಲೇ ಬೇಕು. ಆ ವೇಷಗಳಿಗೆ ತನ್ನದೇ ಆದ ನಡೆ, ಗಾಂಭೀರ್ಯ, ರೀತಿಗಳಿವೆ. ಹಾಗಿದ್ದಲ್ಲಿ ಮಾತ್ರ ಬಣ್ಣದ ವೇಷಗಳ ನಿರ್ವಹಣೆಯನ್ನು ಪ್ರೇಕ್ಷಕರಿಗೆ ಸರಿಯಾಗಿ ಆಸ್ವಾದಿಸಲು ಸಾಧ್ಯ.

ಇಲ್ಲವಾದರೆ ಇದು ಚಂಡಮುಂಡರೋ? ಅಭಿಮನ್ಯುವೊ? ಎಂದು ಕಲಾಭಿಮಾನಿಗಳು ಪ್ರಶ್ನಿಸುವಂತಾದೀತು. ಹಾಗಾಗಬಾರದು. ಹಾಗಾಗಲಾರದು ಎಂದು ವಿಶ್ವಾಸವಿರಿಸೋಣ. ನಿಷ್ಠೆಯಿಂದ, ಸಂಪ್ರದಾಯಬದ್ಧವಾಗಿ ಸಿದ್ಧರಾಗಿ ರಂಗವೇರಿ ಅಭಿನಯಿಸಿ ಬಣ್ಣದ ವೇಷ ಎಂಬ ವಿಭಾಗವನ್ನು ಶ್ರೀಮಂತಗೊಳಿಸಿದ ಕಲಾವಿದರನೇಕರಿದ್ದಾರೆ. ಅಂತವರಲ್ಲಿ ಪಕಳಕುಂಜ ಶ್ರೀ ಕೃಷ್ಣ ನಾಯ್ಕರೂ ಒಬ್ಬರಾಗಿದ್ದರು. ಅನೇಕ ವರ್ಷಗಳ ಕಾಲ ತೆಂಕುತಿಟ್ಟು ಯಕ್ಷರಂಗದಲ್ಲಿ ಮೆರೆದು ಪ್ರಸ್ತುತ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದಾರೆ. 

ಬಣ್ಣದ ವೇಷಧಾರಿ ಶ್ರೀ ಪಕಳಕುಂಜ ಕೃಷ್ಣ ನಾಯ್ಕರ ಹುಟ್ಟೂರು ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಪಕಳಕುಂಜ.1935ರಲ್ಲಿ ಪಕಳಕುಂಜ ಶ್ರೀ ಚೋಮ ನಾಯ್ಕ ಮತ್ತು ಕಾವೇರಿ ದಂಪತಿಗಳ ಮಗನಾಗಿ ಜನನ. ಓದಿದ್ದು ಏಳನೇ ತರಗತಿ ವರೆಗೆ. ಅಡ್ಯನಡ್ಕ ಶಾಲೆಯಲ್ಲಿ. ಹೆಚ್ಚಿನ ವಿದ್ಯಾರ್ಜನೆಗೆ ಅವಕಾಶವಿರಲಿಲ್ಲ. ಬಡತನದ ಜತೆ ಬಹಳ ದೂರ ನಡೆದೇ ಶಾಲೆಗೆ ತೆರಳಬೇಕಿದ್ದ ಕಾಲವದು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು.

ಪರಿಸರದಲ್ಲಿ ನಡೆಯುತ್ತಿದ್ದ ತಾಳಮದ್ದಲೆಗಳಿಗೆ ಇವರು ಖಾಯಂ ಪ್ರೇಕ್ಷಕ. ಇದರಿಂದ ಕೃಷ್ಣ ನಾಯ್ಕರಿಗೆ ಅನುಕೂಲವೇ ಆಗಿತ್ತು. ಶಾಲೆ ಬಿಟ್ಟ ನಂತರ ತಾನೂ ಯಕ್ಷಗಾನ ಕಲಾವಿದನಾಗಬೇಕೆಂದು ಆಸೆಯಾಗಿತ್ತು. ಇವರ ಆಸೆಗೆ ಆಸರೆಯಾದವರು ತಲೆಂಗಳ ಶ್ರೀ ಶಂಭಟ್ಟರು. ಅವರ ಸೂಚನೆಯಂತೆ ಶ್ರೀ ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಬಳ್ಳಂಬೆಟ್ಟು ಮೇಳದಲ್ಲಿ ತಿರುಗಾಟ  ಆರಂಭಿಸಿದ್ದರು. ಕೋಡಂಗಿ, ಬಾಲಗೋಪಾಲರಾಗಿ ಅಭಿನಯ. ಕಲಿಯದೇ ಮೇಳ ಸೇರಿದ ಕೃಷ್ಣ ನಾಯ್ಕರು ಕಲಿತರು. ಕಲಿತು ಬೆಳೆಯುತ್ತಾ ಸಾಗಿದರು.

ಖ್ಯಾತ ಕಲಾವಿದರಾದ ಅಳಿಕೆ ಮೋನು ಶೆಟ್ಟರು ಮತ್ತು ಅಳಿಕೆ ರಾಮಯ್ಯ ರೈಗಳಿಂದ ಹೆಜ್ಜೆಗಾರಿಕೆಯನ್ನು ಕಲಿತಿದ್ದರು. ಒಂದು ತಿಂಗಳು ಕೂಡ್ಲು ಮೇಳದಲ್ಲಿ ಕಲಾಸೇವೆ. ಬಳಿಕ ಕಟೀಲು ಮೇಳದಲ್ಲಿ ಕಲಾಸೇವೆ. ನಾಲ್ಕೈದು ವರ್ಷಗಳಲ್ಲಿ ಪೂರ್ವರಂಗ, ಪುಂಡುವೇಷ, ಹಂತಗಳನ್ನು ದಾಟಿ ಕಿರೀಟ ವೇಷಗಳನ್ನು ನಿರ್ವಹಿಸುವಷ್ಟು ಬೆಳೆದಿದ್ದರು. ಮೇಳದಲ್ಲಿ ಚಂದ್ರಗಿರಿ ಅಂಬು ಅವರ ಒಡನಾಟವು ಸಿಕ್ಕಿದ್ದು ಬಣ್ಣದ ವೇಷಗಳತ್ತ ಒಲವು ಮೂಡಲು ಕಾರಣವಾಗಿತ್ತು.

ಬಳಿಕ ಕೂಡ್ಲು ಮೇಳದಲ್ಲಿ ತಿರುಗಾಟ. ಈ ಸಂದರ್ಭದಲ್ಲಿ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಸಲಹೆ, ಪ್ರೋತ್ಸಾಹದಂತೆ ಬಣ್ಣದ ವೇಷಗಳತ್ತ ಗಮನ ಹರಿಸಿ ನಿರ್ವಹಿಸಲಾರಂಭಿಸಿದ್ದರು. ಮುಲ್ಕಿ ಮೇಳದಲ್ಲಿ ತಿರುಗಾಟ ನಡೆಸಿ ಬಳಿಕ ಶ್ರೀ ಧರ್ಮಸ್ಥಳ ಮೇಳಕ್ಕೆ ಎರಡನೇ ಬಣ್ಣದ ವೇಷಧಾರಿಯಾಗಿ ಸೇರ್ಪಡೆ. ಅಲ್ಲಿ ಒಂದನೇ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಮಾಲಿಂಗನವರ ಒಡನಾಟವೂ ಸಿಕ್ಕಿತ್ತು. ಬಳಿಕ ಧರ್ಮಸ್ಥಳ ಮೇಳದಲ್ಲಿ ಒಂದನೇ ಬಣ್ಣದ ವೇಷಧಾರಿಯಾಗಿ ವ್ಯವಸಾಯ ಮಾಡಿದ್ದರು. ಬಣ್ಣದ ಕುಟ್ಯಪ್ಪು ಅವರಿಂದಲೂ ತರಬೇತಿಯನ್ನು ಪಡೆದಿದ್ದರು.

ತನ್ನ ಕಲಾ ಬದುಕಿನುದ್ದಕ್ಕೂ ತಾನು ಧರಿಸಿದ ಪಾತ್ರಕ್ಕೆ ಕುಂದುಂಟಾಗದಂತೆ ಪಾತ್ರೋಚಿತವಾಗಿಯೇ ಅಭಿನಯಿಸಿದ್ದರು. ಮಳೆಗಾಲದಲ್ಲಿ ಮುಂಬಯಿ ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು. ಗಲ್ಫ್ ರಾಜ್ಯ ಬಹರೈನ್ ನಲ್ಲಿ ನಡೆದ ಪ್ರದರ್ಶನಗಳಲ್ಲೂ ಅಭಿನಯಿಸಲು ಅವಕಾಶವಾಗಿತ್ತು.  ಶ್ರೀ ಧರ್ಮಸ್ಥಳ ಮೇಳದಲ್ಲಿ ಹಲವು ವರ್ಷ ತಿರುಗಾಟ ನಡೆಸಿದ ಪಕಳಕುಂಜ ಕೃಷ್ಣ ನಾಯ್ಕರು ಹೃದಯ ಸಂಬಂಧೀ ಖಾಯಿಲೆಯಿಂದಾಗಿ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಚೇತರಿಸಿಕೊಂಡ ಬಳಿಕ ಅನುಕೂಲವಾದಾಗ ಮತ್ತೆ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಕಲಾ ಬದುಕಿನುದ್ದಕ್ಕೂ ತಾರಕಾಸುರ, ಶೂರಪದ್ಮ, ಶುಂಭಾಸುರ, ರಾವಣ, ಎಲ್ಲ ಹೆಣ್ಣು ಬಣ್ಣಗಳು ಅಲ್ಲದೆ ಹಲವು ಪ್ರಸಂಗಗಳಲ್ಲಿ ಬರುವ ಕಿರಾತನ ವೇಷಗಳನ್ನೂ ನಿರ್ವಹಿಸಿ ಖ್ಯಾತಿಯನ್ನು ಗಳಿಸಿದರು. ಅನಿವಾರ್ಯವಾದರೆ ಮಾತುಗಾರಿಕೆಗೆ ಸಂಬಂಧಪಟ್ಟ ಕಿರೀಟ ವೇಷಗಳನ್ನು ಧರಿಸಲೂ ಕೃಷ್ಣ ನಾಯ್ಕರು ಹಿಂದೇಟು ಹಾಕಿದವರಲ್ಲ. ತೆಂಕುತಿಟ್ಟಿನ ಹೆಸರಾಂತ ಬಣ್ಣದ ವೇಷಧಾರಿಗಳಾದ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಡೋಗ್ರ ಪೂಜಾರಿ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಶೇಣಿ ಪ್ರಶಸ್ತಿಗಳನ್ನು ಪಡೆದುದರ ಜೊತೆಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುತ್ತಾರೆ.

ಶ್ರೀಯುತರ ಪತ್ನಿ ಶ್ರೀಮತಿ ಯಮುನಾ. ಪಕಳಕುಂಜ ಕೃಷ್ಣ ನಾಯ್ಕ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. (ಮೂರು ಗಂಡು, ಐದು ಹೆಣ್ಣು) ಉಡುಪಿಯಲ್ಲಿ ನಡೆದ ಯಕ್ಷಗಾನ ಕಮ್ಮಟದಲ್ಲಿ ಇವರ ಬಣ್ಣದ ವೇಷಗಳನ್ನು ದಾಖಲಿಸಿ ಸಂಗ್ರಹಿಸಿಡಲಾಗಿದೆ.  ಒಟ್ಟು 48 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಸೇವೆ ಸಲ್ಲಿಸಿದ ಪಕಳಕುಂಜ ಕೃಷ್ಣ ನಾಯ್ಕರು ಸೆಪ್ಟೆಂಬರ್ 12, 2013ರಂದು ಇಹಲೋಕವನ್ನು ತ್ಯಜಿಸಿದ್ದರು.

ಲೇಖಕ: ರವಿಶಂಕರ ವಳಕ್ಕುಂಜ 

ಮೌನ ಜಗತ್ತಿಗೆ ಮತ್ತೆ ಚೆಂಡೆಯ ಪೆಟ್ಟು – ಕಟೀಲು ಮೇಳಗಳ ತಿರುಗಾಟ ಇಂದು ಆರಂಭ 

ಅದೇಕೋ ಇಂದು ಈ ಸುದ್ದಿ ಅತಿ ಹೆಚ್ಚಾಗಿ ಅಂತರ್ಜಾಲದ ತಾಣಗಳಲ್ಲಿ ಮತ್ತು ಜನರ ಬಾಯಿಯಲ್ಲಿ ಇದೇ ಮಾತು. “ಇವತ್ತು ಕಟೀಲು ಮೇಳಗಳ ಆಟ ಸುರುವಂತೆ” ಎಂದು ಮಾತಾಡಿಕೊಳ್ಳುವವರು ಅನೇಕರು. ಇಂದಿನ ವರೆಗೆ ಕೇವಲ ನೇರ ಪ್ರಸಾರಗಳ ಮೂಲಕ ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದ ಜನರಿಗೆ ಇನ್ನು ತಮ್ಮ ತಮ್ಮ ಊರುಗಳಲ್ಲಿಯೋ ಅಥವಾ ಪಕ್ಕದ ಊರುಗಳಲ್ಲಿಯೋ ಪ್ರತ್ಯಕ್ಷವಾಗಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಆಟ ನೋಡುವ ಅವಕಾಶ ಇದೀಗ ಒದಗಿ ಬಂದಿದೆ. 

ಕಟೀಲು ಮೇಳಗಳ ಆಟವೆಂದರೆ ಜನರಿಗೆ ಒಂದು ರೀತಿಯ ಹಬ್ಬದ ಸಂಭ್ರಮ. ಅಲ್ಲಿ ಉತ್ಸವದ ವಾತಾವರಣವಿರುತ್ತದೆ. ತಮ್ಮೂರಿನ ಜಾತ್ರೆಯ ಹಾಗೆ. ಸ್ವತಃ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಸಾನ್ನಿಧ್ಯವೇ ತಮ್ಮ ಊರಿಗೆ ಆಗಮಿಸುತ್ತಿರುವ ಹಾಗೆ ಪುಳಕವನ್ನು ಅನುಭವಿಸುತ್ತಾರೆ. 

ಸಮಾಜದ ಎಲ್ಲಾ ವರ್ಗದ ಭಕ್ತ, ಬಾಂಧವ ಮಹನೀಯರಿಗೂ, ಕಟೀಲಿನ ಶ್ರೀ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಬೆಳೆದು ಬಂದಿದೆ. ಆದುದರಿಂದ ಕಟೀಲು ಮೇಳದ ಆಟ ನಡೆಯುವ ಸ್ಥಳಕ್ಕೆ ಆ ಊರಿನ ಪ್ರತಿಯೊಬ್ಬ ಆಸ್ತಿಕ ಬಂಧುಗಳ ಮನೆಯ ಸದಸ್ಯರೂ ತಪ್ಪದೆ ಭೇಟಿ ನೀಡಿ ಕಟೀಲು ದೇವಿಯ ಪ್ರಸಾದ ಸ್ವೀಕರಿಸಿ ಸ್ವಲ್ಪ ಹೊತ್ತಾದರೂ ಯಕ್ಷಗಾನ ಪ್ರದರ್ಶನ ನೋಡಿ ಆಮೇಲೆ ಮನೆಗೆ ಹಿಂತಿರುಗುತ್ತಾರೆ. 

ಜಾಹೀರಾತು 

ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಯಕ್ಷಗಾನ ಪ್ರದರ್ಶನಗಳ ದಿನಗಳಲ್ಲಿ ಹಬ್ಬದ ಸಂಭ್ರಮದಂತೆ ಮೈ ಮರೆಯುವ ಹಾಗಿಲ್ಲ. ಸ್ವಲ್ಪ ಮಟ್ಟಿಗಾದರೂ ತಮಗೆ ತಾವೇ ಕಡಿವಾಣ ಹಾಕಿಕೊಂಡು ಸರಕಾರದ ನೀತಿ ನಿಯಮಗಳನ್ನು ಪಾಲಿಸಿಕೊಂಡು ಯಕ್ಷಗಾನ ಪ್ರದರ್ಶನಗಳನ್ನು ನೋಡುವುದು ಕ್ಷೇಮ. ಆಟ ನೋಡುವ ಉತ್ಸಾಹದ ಭರದಲ್ಲಿ ಅಪರಿಚಿತರೊಂದಿಗೆ ಮುಕ್ತವಾಗಿ ಬೆರೆಯುವುದು, ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಅಸಡ್ಡೆಯಿಂದ ವರ್ತಿಸುವುದು ಮೊದಲಾದುವುಗಳನ್ನು ಮಾಡುವುದು ಅಷ್ಟೇನೂ ಸಮಂಜಸವಾಗಿ ಕಾಣುವುದಿಲ್ಲ.

ಎಲ್ಲಕ್ಕಿಂತಲೂ ಮುಖ್ಯವಾಗಿ ಚೌಕಿಗೆ ಅಥವಾ ಬಣ್ಣದ ಮನೆಗೆ ಅನಗತ್ಯ ಭೇಟಿ ಕೊಡುವುದನ್ನು ತಪ್ಪಿಸಬೇಕಾದ ಅಗತ್ಯವಿದೆ. ತಮ್ಮ ಇಷ್ಟದ ವೇಷಧಾರಿಯನ್ನು ಮಾತನಾಡಿಸುವ ಬಯಕೆ ತಪ್ಪೇನೂ ಅಲ್ಲ. ಆದರೆ ಅದಕ್ಕೆ ಈ ದಿನಗಳು ಅಷ್ಟು ಸೂಕ್ತವಲ್ಲ. ಬಹುಶಃ ಸಾರ್ವಜನಿಕರಿಗೆ ಚೌಕಿಯ ಪ್ರವೇಶ ಇರಲಾರದು ಎಂದು ಕಾಣುತ್ತದೆ. 

ಏನೇ ಇರಲಿ, ಅಂತೂ ಕಲಾಭಿಮಾನಿಗಳು ಸಂಭ್ರಮದಿಂದ ಕಾಯಿತ್ತಿದ್ದ ದಿನಗಳು ಬಂದಾಗಿದೆ. ಧರ್ಮಸ್ಥಳ ಸಹಿತ ಇತರ ಕೆಲವು ಮೇಳಗಳು ಪ್ರದರ್ಶನಗಳನ್ನು ಈಗಾಗಲೇ ಆರಂಭಿಸಿವೆ. ಕಟೀಲು ಮೇಳಗಳು ತಿರುಗಾಟಕ್ಕೆ ಹೊರತು ನಿಂತಿವೆ. ಬಹಳ ದಿನಗಳಿಂದ ದೂರ ಉಳಿದಿದ್ದ ಆಟದ ಸಂಭ್ರಮದ ವಾತಾವರಣದ ಆಸ್ವಾದನೆಗೆ ಸಮಯ ಒದಗಿ ಬಂದಿದೆ.

ಯಕ್ಷಗಾನದ ಕಲೆಯ ನಿನಾದ ಮತ್ತು ಅಬ್ಬರದ ಸದ್ದುಗಳಿಲ್ಲದೆ ಮೌನವಾಗಿದ್ದ ಜಗತ್ತು ಮತ್ತೆ ಚೆಂಡೆಯ ಸದ್ದಿನಿಂದ ಎಚ್ಛೆತ್ತುಕೊಳ್ಳಲಿದೆ. ಮಣ್ಣಿನ ಮಕ್ಕಳ ಸಂಭ್ರಮದ ನಿಶೆಯ ಓಡಾಟದಿಂದ ಪುಳಕಿತವಾಗುತ್ತಿದ್ದ ಮೈದಾನಗಳು ಮತ್ತು ಗದ್ದೆಗಳಲ್ಲಿ ಮತ್ತೆ ಕಲೆಯ ಕಂಪು ಪಸರಿಸಲಿದೆ. ರಂಗಸ್ಥಳಗಳು ಕಲಾವಿದರ ಹುಮ್ಮಸ್ಸಿನಿಂದ ದೂಳೆಬ್ಬಿಸಲಿದೆ. ಈ ತಿರುಗಾಟವು ಎಚ್ಚರಿಕೆಯ ಜೊತೆ ಉತ್ಸಾಹ, ಸಂಭ್ರಮಗಳಿಂದ ಎಲ್ಲ ಮೇಳಗಳಿಗೂ, ಎಲ್ಲ ಕಲಾವಿದರಿಗೂ, ಎಲ್ಲಾ ಜನರಿಗೂ ಸ್ಮರಣೀಯವಾಗಲಿ. 

ನೆನಪಿನಂಗಳದಲ್ಲಿ ಮಾರ್ಧ್ವನಿಸುತ್ತಿದೆ ಮದ್ದಲೆಯ ಝೇಂಕಾರ – ಕೀರ್ತಿಶೇಷ ಬೇಳಂಜೆ ತಿಮ್ಮಪ್ಪ ನಾಯ್ಕ

ಶೃತಿ ಲಯ ತಾಳಗಳಿಲ್ಲದೆ ಸಪ್ತ ಸ್ವರಗಳ ನಿನಾದವು ಕರ್ಣಾನಂದಕರವಾಗುವುದಿಲ್ಲ. ಚಂಡೆ ಮದ್ದಲೆಯು ಝೇಂಕರಿಸದೆ ಇದ್ದರೆ, ಸಂಗೀತದ ಆಲಾಪನೆ ಇಂಪಾಗುವುದಿಲ್ಲ. ಮದ್ದಲೆಯೊಂದಿಗೆ ಮಾತಾಡುವ ಶಕ್ತಿ ದಿವಂಗತ ತಿಮ್ಮಪ್ಪ ನಾಯ್ಕ ಬೇಳಂಜೆಯವರಿಗೆ ಇತ್ತಂತೆ. ಪ್ರಾಚಾರ್ಯ ನಾರಾಯಣ ಉಪ್ಪೂರರ ಒಡನಾಡಿಯಾಗಿ ಸುಮಾರು 13 ವರುಷಗಳ ಕಾಲ ತಿರುಗಾಟ ಮಾಡಿದ ಕೀರ್ತಿ ಶ್ರೀಯುತ  ಬೇಳಂಜೆ ತಿಮ್ಮಪ್ಪ ನಾಯ್ಕರಿಗೆ ಇತ್ತು. 


ಕಲೆಯ ನೆಲೆ ಬೀಡಾದ ಕರಾವಳಿ ಜಿಲ್ಲೆ ಉಡುಪಿಯ ಸಮೀಪದ ಆಗುಂಬೆಯ ತಗ್ಗು ಪ್ರದೇಶ ಹೆಬ್ರಿ ತಾಲೂಕಿನ  ಬೇಳೆಂಜೆ ಎಂಬ ಪುಟ್ಟ ಊರಿನ ಕುರಿಯ ನಾಯ್ಕ ಹಾಗು ಕಾಶಿ ಬಾಯಿಯವರ ಗರ್ಭಸಂಜಾತರಾಗಿ 29-02-1928ರಂದು ಬೇಳಂಜೆ ತಿಮ್ಮಪ್ಪ ನಾಯ್ಕರು ಜನಿಸಿದರು. ಬಡತನದ ನೆರಳಲ್ಲಿ ಬೆಳೆದು ಪೆರ್ಡೂರಿನಲ್ಲಿ 5ನೇ ತರಗತಿಯ ವರೆಗೆ ಕಲಿತು ಆಮೇಲೆ ವಿಧ್ಯಾಭ್ಯಾಸಕ್ಕೆ ತೀಲಾಂಜಲಿ ಇತ್ತು ನಂತರ ಕನ್ನಾರು ಗುರು ರಾಮಚಂದ್ರ ಸಮಾಂತರಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತು ತನ್ನ15ನೇ ವಯಸ್ಸಿನಲ್ಲಿ ಪೆರ್ಡೂರು ಮೇಳಕ್ಕೆ “ಹರೇ ರಮಣ ಗೋವಿಂದ…. ”  ಬಾಲಗೋಪಾಲ  ವೇಷಧಾರಿಯಾಗಿ ಸೇರ್ಪಡೆಗೊಂಡರು. 

ನಂತರ ಮಾರಣಕಟ್ಟೆ ಮೇಳಕ್ಕೆ ಒತ್ತು ಮದ್ದಲೆಗಾರರಾಗಿ ಸೇರ್ಪಡೆಗೊಂಡರು. ವೀರಭಧ್ರ ನಾಯ್ಕ, ಮರವಂತೆ ನರಸಿಂಹ ಭಾಗವತರ  ಹಿರಿಯಡ್ಕ ಗೋಪಾಲರಾಯರು, ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ ಮೊದಲಾದವರ ಒಡನಾಟದಿಂದ ಎರಡು ವರುಷ ತಿರುಗಾಟ ಮಾಡಿದರು. ವೀರಭದ್ರ ನಾಯಕರ ಯಜಮಾನಿಕೆಯಲ್ಲಿ ಕೊಲ್ಲೂರು ಮೇಳಕ್ಕೆ ಸೇರ್ಪಡೆಗೊಂಡಾಗ ಕುಂಜಾಲು ರಾಮಕೃಷ್ಣ,  ಹೇರಂಜಾಲು ವೆಂಕಟರಮಣ ಗಾಣಿಗ, ತಿಮ್ಮಪ್ಪ ನಾಯ್ಕರ ಶಿಷ್ಯರಾದರು. ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಿದರು. ನಂತರ ತೆಂಕು-ಬಡಗು ತಿಟ್ಟಿನ ರಾಜರಾಜೇಶ್ವರೀ ಮೇಳದಲ್ಲಿ ಇದ್ದಾಗ ಮರವಂತೆ ನರಸಿಂಹ ಭಾಗವತರ ಒಡನಾಟದಿಂದ ಮೇಲೆ ಬಂದರು. ನಂತರ  ಅಲ್ಲಿ ಆ ಸಮಯದಲ್ಲಿ ಪ್ರಾಚಾರ್ಯ ನಾರಾಯಣ ಉಪ್ಪೂರರೊಂದಿಗೆ ಬೆರೆತರು. 


ಡಾ. ಶಿವರಾಮ ಕಾರಂತರ ಬ್ಯಾಲೆ 1959ರಲ್ಲಿ ಪುತ್ತೂರಿನಲ್ಲಿ ಪ್ರಾರಂಭವಾಯಿತು. ಅದರಲ್ಲಿ ಮದ್ದಲೆ ವಾದಕರಾಗಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ ಅವರ ಸಮ್ಮುಖದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಜವಾಹರ್ ನೆಹರು ಪ್ರಧಾನಿಯಾದ ಸಂದರ್ಭದಲ್ಲೂ ಸಹ ಎಚ್. ಅನಂತಕೃಷ್ಣ ಹಂದೆಯವರ ಮುಂದಾಳುತ್ವದಲ್ಲಿ ದೆಹಲಿಯಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.

ನಂತರ ಪಳ್ಳಿ ಶ್ರೀನಿವಾಸ ಹೆಗ್ಡೆಯವರ ಸಾರಥ್ಯದ ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಮದ್ದಲೆಗಾರನಾಗಿ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ್, ಕೆಮ್ಮಣ್ಣು ಆನಂದರ ಸಾಥ್ ದೊರಕಿತು. ಮುಮ್ಮೇಳದಲ್ಲಿ ಕೆರೆಮನೆ ಶಂಭು ಹೆಗ್ಡೆ, ಕೆರೆಮನೆ ಮಹಾಬಲ ಹೆಗ್ಡೆ, ಗಜಾನನ ಹೆಗ್ಡೆ, ಹಾಗು ಶಿರಿಯಾರ ಮಂಜುನಾಯ್ಕರ ಒಡನಾಟದಲ್ಲಿ ಉತ್ತಮ ಮೇಳವಾಗಿ ಹೊರಹೊಮ್ಮಿತು. ಆಗ ಉಪ್ಪೂರರ ಒಡನಾಡಿಯಾಗಿ ಸುಮಾರು ವರುಷ ತಿರುಗಾಟ ಮಾಡಿದರು. ನಂತರ ಶ್ರೀಧರ ಹಂದೆಯವರ ಸಾರಥ್ಯದಲ್ಲಿ ಅಮೃತೇಶ್ವರಿ ಮೇಳ ಪ್ರಾರಂಭವಾಯಿತು. ಆಗ ನಾರಾಯಣ ಉಪ್ಪೂರ್,  ಜೊತೆಯಾಗಿ, ಚಿಟ್ಟಾಣಿ, ಕೋಟ ವೈಕುಂಠ, ಎಂ.ಎ. ನಾಯಕ್, ಏಕ್ಟರ್ ಜೋಶಿ ಇಂತಹ ಘಟಾನುಘಟಿ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಶ್ರೀಯುತ ತಿಮ್ಮಪ್ಪ ನಾಯ್ಕರಿಗೆ ಸಲ್ಲುತ್ತದೆ. 

ಜಾಹೀರಾತು 


 ಅಮೃತ್ತೇಶ್ವರೀ ಮೇಳದಲ್ಲಿ ಪ್ರಾಚಾರ್ಯ ನಾರಾಯಣ ಉಪ್ಪೂರರೊಂದಿಗೆ ಸುಮಾರು ಹದಿಮೂರು ವರುಷಗಳ ಕಾಲ ಮದ್ದಳೆಗಾರರಾಗಿ ಸೇವೆ ಸಲ್ಲಿಸಿದರು. ಮದ್ದಲೆಯೊಂದಿಗೆ ಮಾತನಾಡುವ ತಿಮ್ಮಪ್ಪ ನಾಯ್ಕರು ಒಂದೊಂದು ಪೆಟ್ಟು ಅಷ್ಟು ಸೂಕ್ಷ್ಮ.  ಒಮ್ಮೊಮ್ಮೆ ತಿಮ್ಮಪ್ಪ ನಾಯ್ಕರು ಬಂದು ರಂಗದಲ್ಲಿ ಭಾಗವತರಾಗಿ ಕುಳಿತು ಕೊಳ್ಳುತ್ತಿದ್ದರಂತೆ ಹಾಗು ಉಪ್ಪೂರರು ಮದ್ದಲೆ ನುಡಿಸುತ್ತಿದ್ದರಂತೆ.  ಹೀಗೆ ರಂಗದಲ್ಲಿ ಏಕಲವ್ಯನಂತೆ, ತಾಳಮದ್ದಲೆ ಕ್ಷೇತ್ರದಲ್ಲಿಯೂ ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ. 1972ರಲ್ಲಿ ಐರೋಡಿ ಸದಾನಂದ ಹೆಬ್ಬಾರ್ ರ ನೇತೃತ್ವದಲ್ಲಿ ಹಂಗಾರಕಟ್ಟೆ ತರಬೇತಿ ಕೇಂದ್ರವನ್ನು ಸ್ಥಾಪಿಸಿದಾಗ ಕೀರ್ತಿಶೇಷ ಕಾಳಿಂಗ ನಾವುಡರು, ಶಂಕರ ಭಾಗವತ ಯಲ್ಲಾಪುರ, ಕರ್ಕಿ ಪರಮೇಶ್ವರ ಭಂಡಾರಿ, ರಾಮಕೃಷ್ಣ ಮಂದಾರ್ತಿ, ಹಳ್ಳಾಡಿ ಸುಬ್ರಯ್ಯ ಮಲ್ಯ,  ಸುಬ್ರಮಣ್ಯ ಧಾರೇಶ್ವರ, ಮುಂತಾದ ಶಿಷ್ಯರನ್ನು ತಯಾರು ಮಾಡಿದ ಕೀರ್ತಿ ದಿವಂಗತ ತಿಮ್ಮಪ್ಪ ನಾಯ್ಕರಿಗೆ ಸಲ್ಲುತ್ತದೆ. 

ಹಗಲಿರುಳೆನ್ನದೆ ಯಕ್ಷಗಾನ ಕ್ಷೇತ್ರದಲ್ಲಿ ಮುಂದುವರಿದ ಶ್ರೀಯುತರನ್ನು ಸರಕಾರವು ಗುರುತಿಸಲೇ ಇಲ್ಲ. ಯಾವ ಸನ್ಮಾನ, ಸವಲತ್ತುಗಳೂ, ಪ್ರಶಸ್ತಿಗಳೂ ಸಹ  ಕೊಡಲ್ಪಡಲಿಲ್ಲ. “ಜಾತಸ್ಯ ಮರಣಂ ದ್ರುವಂ” ಎಂಬ ವೇದ ವಾಕ್ಯದಂತೆ  ಕಾಲನ ಕರೆಗೆ ಹೋಗಲೇ ಬೇಕು. ಅಂತೆಯೇ 16-04-1976ರಲ್ಲಿ ಅಮೃತೇಶ್ವರೀ ಮೇಳದಲ್ಲಿ ಇರುವಾಗಲೇ ಭದ್ರಾವತಿಯಲ್ಲಿ  ಹೃದಯಾಘಾತದಿಂದ ತನ್ನ 46ನೇ ವಯಸ್ಸಿನಲ್ಲಿ ವಿಷ್ಣುವಿನ ಪಾದ ಸೇರಿದರು. 

ಕೀರ್ತಿಶೇಷರಾದ ಬೇಳಂಜೆ ತಿಮ್ಮಪ್ಪ ನಾಯ್ಕರ ಮಡದಿ ವೇದಾವತಿ. ಹಾಗು ಮಕ್ಕಳಾದ ಭಾಗವತರಾದ ಶ್ರೀನಿವಾಸ ನಾಯ್ಕ, ಮಹಾಬಲ ನಾಯ್ಕ ಪುಂಡುವೇಷದಾರಿಯಾಗಿ, ಜಯಂತ ನಾಯ್ಕರವರು ಎಲೆಮರೆಯ  ಸ್ತ್ರೀವೇಷಧಾರಿಯಾಗಿ  ಯಕ್ಪಗಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ. ಇಂತಹ ಮಹಾನ್ ಚೇತನನನ್ನು ಕಳೆದುಕೊಂಡು ಯಕ್ಷಗಾನ ರಂಗ ಬಡವಾಗಿದೆ. ಇವರಿಗೆ ಸಲ್ಲಬೇಕಾದ ಗೌರವ ಸನ್ಮಾನಗಳು ಬಗ್ಗೆ ಹಾಗೂ ಇವರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ, ಕರ್ನಾಟಕ ಜಾನಪದ ಪರಿಷತ್ತು, ಗುರುತಿಸಲಿಲ್ಲ ಎಂಬುದು ನೋವಿನ ಸಂಗತಿಯಾಗಿದೆ. ಇಂತಹ ಈ ಮಹಾನ್ ಚೇತನನನ್ನು ಗುರುತಿಸಿ ಮರಣೋತ್ತರ ಪ್ರಶಸ್ತಿ ಸಿಗಲಿ ಎಂದು ಹಾರೈಸುತ್ತೇನೆ.   

ಲೇಖಕ: ಚಾರ ಪ್ರದೀಪ ಹೆಬ್ಬಾರ್

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (08-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ (08-12-2020)
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಪಾವಂಜೆ ಮೇಳ 08-12-2020ಪಾವಂಜೆ ಕ್ಷೇತ್ರದಲ್ಲಿಶ್ರೀ ದೇವಿ ಮಹಾತ್ಮೆ
ಕಮಲಶಿಲೆ ಮೇಳ ‘ಎ’08-12-2020ಹೆನ್ನಾಬೈಲ್ ಚಂದ್ರಶೇಖರ ಶೆಟ್ಟಿ  
ಕಮಲಶಿಲೆ ಮೇಳ ‘ಬಿ’08-12-2020ಬರೆಗುಂಡಿ ಶ್ರೀನಿವಾಸ ಛತ್ರ ಮತ್ತು ಮಕ್ಕಳು 
ಶ್ರೀ ಮಾರಣಕಟ್ಟೆ ಮೇಳ ‘ಎ’08-12-2020ಹಳ್ಳಿ ಹೆಬ್ಬಾಗಿಲು ಮನೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’08-12-2020ಹರ್ಕೂರು ನಾಲ್ಕು ಮನೆಯವರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’08-12-2020ಹೇರೂರು  

ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ (79) ನಿಧನ

ಉದ್ಯಾವರ ಮಾಧವ ಆಚಾರ್ಯ ರಂಗ ನಿರ್ದೇಶಕ, ಕಥೆಗಾರ, ಕವಿ, ನಟ, ಪ್ರಸಿದ್ಧ ಗುಡ್ಡೆದ ಭೂತ ಧಾರಾವಾಹಿಯ ನಟ, ಉಡುಪಿಯ ಸಮೂಹ ಸಂಸ್ಥೆಯ ಸಂಸ್ಥಾಪಕ, ನಾಟಕ, ನೃತ್ಯರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ ಸಾಧಕ.

ನಾಡಿನಾದ್ಯಂತ 50ಕ್ಕೂ ಹೆಚ್ಚು ನಾಟಕ, ನೃತ್ಯರೂಪಕಗಳಿಗೆ ನಿರ್ದೇಶನಗೈದ ಇವರು ರಾಜ್ಯ ರಾಜ್ಯೋತ್ಸವ, ರಂಗ ವಿಶಾರದ ಪ್ರಶಸ್ತಿಗೆ ಭಾಜನರಾಗಿದ್ದರು. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಉಪನ್ಯಾಸಕರಾಗಿದ್ದ ಇವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಇಂದು (07-12-2020) ಮಧ್ಯಾಹ್ನ ನಿಧನರಾದರು.ಇವರು ಪತ್ನಿ, ಓರ್ವ ಪುತ್ರ,ಮೂವರು ಪುತ್ರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.


ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರು ಯಕ್ಷಗಾನ ವೃತ್ತಿಕಲಾವಿದರಿಗಾಗಿ ಆರಂಭಗೊಂಡ ‘ಪ್ರೊ. ಬಿ. ವಿ. ಆಚಾರ್ಯ ಯಕ್ಷನಿಧಿ’ಯ ಆರಂಭ ಕಾಲದಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಇವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗದ ತಂಡ ಅಮೇರಿಕಾದಲ್ಲಿ ಜರುಗಿದ‘ಅಕ್ಕ ಸಮ್ಮೇಳನ’ದಲ್ಲಿ ಭಾಗವಹಿಸಿ ಅಮೇರಿಕದಾದ್ಯಂತ 11 ಕಡೆಗಳಲ್ಲಿ ಪ್ರದರ್ಶನ ನೀಡಿತ್ತು.

ಜಾಹೀರಾತು 

ಆಚಾರ್ಯರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್‍ ತೀವ್ರ ಸಂತಾಪ ಸೂಚಿಸಿದ್ದಾರೆ.