Saturday, March 14, 2026
Home Blog Page 312

ಯಕ್ಷಜಗತ್ತು ಕಂಡ ಅಪೂರ್ವ ಜೋಡಿ – ಹರಿಲೀಲಾ

‘ಯಕ್ಷಗಾನ’ ಗಂಡುಮೆಟ್ಟಿನ ಕಲೆಯೆಂದೇ ಪ್ರಸಿದ್ಧ. ಈ ವಿಶಿಷ್ಟ ಜನಪದ ಕಲೆಯನ್ನು ಈವರೆಗೆ ಪುರುಷರೇ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಈಚಿನ ದಿನಗಳಲ್ಲಿ ಮಹಿಳೆಯರು ಸಹಾ ಯಕ್ಷಗಾನದ ಹಿಮ್ಮೇಳ, ಮುಮ್ಮೇಳದಲ್ಲಿಯೂ ಕಾಣಿಸಿಕೊಂಡು, ಪುರುಷರಂತೆ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಈ ಯಕ್ಷಕಲೆಯಲ್ಲಿ ದಂಪತಿಗಳಿಬ್ಬರು ತೊಡಗಿಕೊಂಡು ಸೇವೆ ಸಲ್ಲಿಸುವುದು ಬಹಳ ಅಪರೂಪವೇ!! ಅಂಥಹ ಅಸಾಮಾನ್ಯರಲ್ಲಿ ಕೆ. ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾ ಬೈಪಾಡಿತ್ತಾಯ ದಂಪತಿಗಳು ಸಹಾ ಒಬ್ಬರು.


ಪತಿ ಕೆ. ಹರಿನಾರಾಯಣ ಬೈಪಾಡಿತ್ತಾಯ
ಮದ್ದಲೆವಾದಕರು :

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದಲ್ಲಿ ಹುಟ್ಟಿ ಪ್ರಸ್ತುತ ಬಜ್ಪೆ ನಿವಾಸಿಯಾದ ಕೆ. ಹರಿನಾರಾಯಣ ಮದ್ದಲೆ ವಾದನದಲ್ಲಿ ತೊಡಗಿಕೊಂಡಿರುವ ಅದ್ಭುತ ಪ್ರತಿಭೆ. ರಾಮಕೃಷ್ಣ ಬೈಪಾಡಿತ್ತಾಯ ಮತ್ತು ಪದ್ಮಾವತಿ ದಂಪತಿಗಳ ಮಗನಾಗಿರುವ ಇವರು 1946 ನವೆಂಬರ್ 13ರಂದು ಜನಿಸಿದರು.


ಕೆ. ಹರಿನಾರಾಯಣ ಅವರು ಯಕ್ಷಗಾನ ಕುಟುಂಬದಲ್ಲಿಯೇ ಜನಿಸಿದವರು. ಇವರ ಸಹೋದರರಾದ ಮೋಹನ ಬೈಪಾಡಿತ್ತಾಯ, ಕೇಶವ ಬೈಪಾಡಿತ್ತಾಯ ಹಿಮ್ಮೇಳದ ವಾದಕರಾಗಿದ್ದರೆ, ಅನಂತ ಬೈಪಾಡಿತ್ತಾಯ ಮುಮ್ಮೇಳದಲ್ಲಿ ವೇಷಧಾರಿಯಾಗಿ ಹಿಮ್ಮೇಳದಲ್ಲಿ ಭಾಗವತಿಕೆಯಲ್ಲಿ ತೊಡಗಿಕೊಂಡಿದ್ದರೂ ಮನೆಯೊಳಗೆ ಯಕ್ಷಕಲೆಯ ಗಂಧ-ಗಾಳಿಯ ವಾತಾವರಣ ಇದ್ದಿದ್ದರಿಂದ ಯಕ್ಷಗಾನವು ಕೆ. ಹರಿನಾರಾಯಣ ಅವರನ್ನು ಆಕರ್ಷಿಸಿತು. ಯಕ್ಷಗಾನದ ಕಲೆಗೆ ಮರುಳಾದ ಇವರು 7ನೇ ತರಗತಿಯ ವಿದ್ಯಾಭ್ಯಾಸ ನಿಲ್ಲಿಸಿ, ಯಕ್ಷರಂಗಕ್ಕೆ ಧುಮುಕಿದರು. ಬಾಲ್ಯದಲ್ಲಿಯೇ ‘ಚೆಂಡೆಯ ಗುಡುಗು’ ಎಂದೇ ಹೆಸರಾದ ನೆಡ್ಲೆಯ ನರಸಿಂಹ ಭಟ್ ಅವರಿಂದ ಚೆಂಡೆ-ಮದ್ದಳೆಯ ಅಭ್ಯಾಸ ಪ್ರಾರಂಭಿಸಿದರು. ನಿರಂತರವಾದ ಪ್ರಯತ್ನ, ಛಲ, ಆತ್ಮವಿಶ್ವಾಸದಿಂದ ಆ ಕಲೆಯನ್ನು ರೂಢಿಸಿ ಕೊಂಡ ಕೆ. ಹರಿನಾರಾಯಣ ಅವರು ಹಿಮ್ಮೇಳದ ವಾದನ ಕಲೆಯಲ್ಲಿ ವಿಶಿಷ್ಟ ಛಾಪು ಮೂಡಿಸುವ ಮಟ್ಟಕ್ಕೆ ಬೆಳೆದು ನಿಂತರು.


ಅಲ್ಲದೇ, ಕಡಬದ ಪುರುಷಯ್ಯ ಆಚಾರ್ಯ ಅವರಿಂದ ಯಕ್ಷಗಾನದ ಬಾಲಪಾಠ ಪಡೆದಿರುವ ಇವರು, ವಿದ್ವಾನ್ ಕಾಂಚನ ಕೆ. ವಿ. ಮೂರ್ತಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗದ ನಡೆಗಳನ್ನು ಅಭ್ಯಾಸ ಮಾಡಿ, ಸಮಗ್ರವಾದ “ಮೃದಂಗ ಸಾಹಿತ್ಯ”ವನ್ನು ಆಳ ವಾಗಿ ಪ್ರಯೋಗಗಳ ಮೂಲಕವೇ ರೂಢಿಸಿಕೊಂಡರು. ಅತೀ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರಕ್ಕೆ ಧುಮುಕಿದ ಇವರು, ತಮ್ಮ 15ನೇ ವಯಸ್ಸಿನಲ್ಲಿಯೇ ತಿರುಗಾಟ ಮೇಳದ ಮೃದಂಗವಾದಕರಾಗಿ ಸೇವೆ ಸಲ್ಲಿಸಲು ಆರಂಭಿಸಿದರು.


ಕೆ. ಹರಿನಾರಾಯಣ ಅವರು ಕುಂಡಾವು, ಧರ್ಮಸ್ಥಳ, ಕೊಲ್ಲೂರು, ಕೂಡ್ಲು, ಕುಂಬಳೆ, ಅಳದಂಗಡಿ (12 ವರ್ಷ) ಬಪ್ಪನಾಡು, ತಲಕಳ… ಇತ್ಯಾದಿ ಟೆಂಟ್ ಮತ್ತು ಬಯಲಾಟ ಮೇಳಗಳಲ್ಲಿ ತಮ್ಮ ಕಲಾಸೇವೆಯನ್ನು ಸಲ್ಲಿಸಿದ್ದಾರೆ. ಇವರು ಪ್ರಮುಖ ಭಾಗವತರಾದ ದಾಮೋದರ ಮಂಡೆಚ್ಚರು, ಅಗರಿ ಭಾಗವತರು, ಬಲಿಪ ಭಾಗವತರು- ಮುಂತಾದ ಭಾಗವತರಿಗೆ ತಮ್ಮ ಕೈ-ಚಳಕದಿಂದ ಮೃದಂಗ ಸಾಥ್ ನೀಡಿದ ಹೆಗ್ಗಳಿಕೆ ಇವರದ್ದು. ಕೆ. ಹರಿನಾರಾಯಣ ಕೇವಲ ಮೃದಂಗವಾದಕರೂ ಒಂದೇ ಅಲ್ಲಾ, ಯಕ್ಷ ಪದ್ಯಗಳನ್ನು ತಾಳಗತಿ ಸಹಿತ ಹೇಳುತ್ತಾರೆ. ಮತ್ತು ಭಾಗವತಿಕೆ ಪಾಠ ಮಾಡುತ್ತಾರೆ.


ಕಳೆದ ಐದು ದಶಕಗಳಿಂದ ಯಕ್ಷಗಾನದ ಕಲೆಯಲ್ಲಿಯೇ ಇವರು ತೊಡಗಿಕೊಂಡಿರುವ ಇವರ ಸೇವೆ ಸಾರ್ಥಕವಾದುದು. ಇವರು ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಹಿಮ್ಮೇಳದ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಕೆ. ಹರಿನಾರಾಯಣ ಅವರ ಅನೇಕ ಶಿಷ್ಯರು ಈಗ ವಿವಿಧ ಮೇಳಗಳಲ್ಲಿ ಪ್ರಧಾನ ಪಾತ್ರವಹಿಸಿ ಪ್ರಸಿದ್ಧರಾಗಿದ್ದಾರೆ. ಅಲ್ಲದೇ, 150ಕ್ಕೂ ಹೆಚ್ಚು ಹಿಮ್ಮೇಳದ ವಾದಕರನ್ನು ರೂಪಿಸಿದ ಖ್ಯಾತಿ ಇವರದ್ದು. ಕರ್ನಾಟಕದ ವಿವಿಧ ಕಡೆಗಳಲ್ಲಿ ಅಲ್ಲದೇ, ಮುಂಬಯಿ, ಗುಜರಾತ್, ಚೆನ್ನೈ, ದೆಹಲಿ… ಮುಂತಾದ ಕಡೆಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ.


ತಮ್ಮ 75ರ ಇಳಿವಯಸ್ಸಿನಲ್ಲಿಯೂ ‘ಮೃದಂಗ’ ಸಾಥ್ ನೀಡುತ್ತಿರುವ ಕೆ. ಹರಿನಾರಾಯಣ ಅವರು ಕಟೀಲು, ಕೈಕಂಬ, ಕಾರ್ಕಳ, ಮೂಡಬಿದ್ರೆ ಮುಂತಾದ ಕಡೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಿರುವುದು ಗಮನಾರ್ಹ ಸಂಗತಿ. ಅಲ್ಲದೇ, ಸಂಗೀತ ಪ್ರವೀಣೆ ಆಗಿದ್ದ ಬಾಳಿನ ಸಂಗಾತಿಯೂ ಆದ ಲೀಲಾ ಅವರನ್ನು ಸೂಕ್ತ ತರಬೇತಿಯನ್ನು ನೀಡಿ ರಂಗಕ್ಕೆ ತಂದು, ಉತ್ತಮ ಭಾಗವತರಾಗಿ ರೂಪಿಸಿದ ಹೆಗ್ಗಳಿಕೆ ಇವರದ್ದು. ಇವರ ಕಲಾಸೇವೆಯನ್ನು ಅನೇಕ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿದೆ.


ಪತ್ನಿ ಲೀಲಾವತಿ ಬೈಪಾಡಿತ್ತಾಯ ಭಾಗವತಿಕೆ ಪ್ರವೀಣೆ
ಪ್ರಸಿದ್ಧ ಮದ್ದಲೆಗಾರರಾಗಿ ಗುರುತಿಸಿಕೊಂಡಿರುವ ಕೆ. ಹರಿನಾರಾಯಣ ಅವರ ಪತ್ನಿಯಾದ ಲೀಲಾ ಯಕ್ಷಗಾನದ ಭಾಗವತಿಕೆಯಲ್ಲಿ ತೊಡಗಿಸಿಕೊಂಡಿರುವ ಪ್ರವೀಣೆ. ಪತಿಯಂತೆ ಯಕ್ಷಸೇವೆಗೈಯುತ್ತಿರುವ ಅವರು ಈಗ ಪ್ರಸಿದ್ಧ ಭಾಗವತರಾಗಿ ಹೊರಹೊಮ್ಮಿದ್ದಾರೆ.
ಕಾಸರಗೋಡಿನ ಮಧೂರಿನ ಪುಂಡರೀಕಾಕ್ಷ ಹೆಬ್ಬಾರ ಮತ್ತು ಮಹಾಲಕ್ಷ್ಮಿ ದಂಪತಿಗಳ ಮಗಳಾದ ಲೀಲಾ ಅವರು 1947 ಮೇ 23 ರಂದು ಜನಿಸಿದರು. ಮನೆಯ ಬಡತನದಿಂದಾಗಿ ಶಾಲೆಯ ವಿದ್ಯಾಭ್ಯಾಸದಿಂದ ವಿಫಲರಾದ ಅವರು ಸಹೋದರ ಹಾಗೂ ನೆರೆಹೊರೆಯವರ ಸಹಾಯದಿಂದ ಅಕ್ಷರ ಅಭ್ಯಾಸವನ್ನು ಕಲಿತುಕೊಂಡರು. ಮಧೂರಿನ ಪದ್ಮನಾಭ ಸರಳಾಯರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಲು ಆರಂಭಿಸಿದ ಲೀಲಾ ಅವರು ಅಣ್ಣನ ಸಹಕಾರದಿಂದ “ಹಿಂದಿ ವಿಶಾರದ” ಪದವಿಯನ್ನು ಖಾಸಗಿಯಾಗಿ ಪೂರೈಸಿದರು. ಬಹಳ ಆಸಕ್ತಿ, ಶ್ರದ್ಧೆ, ನಿಷ್ಠೆಯಿಂದ ಸಂಗೀತಾಭ್ಯಾಸ ಮಾಡಿದ ಲೀಲಾ ಸ್ಥಳೀಯ ವೇದಿಕೆಯಲ್ಲಿಯೂ ಕಛೇರಿ ನೀಡತೊಡಗಿದರು. ಅದೇ ಸಂದರ್ಭದಲ್ಲಿ ಕಂಕಣಭಾಗ್ಯವೂ ಸಮ್ಮಿಲನವಾಗಿದ್ದರಿಂದ ಕೆ. ಹರಿನಾರಾಯಣ ಅವರನ್ನು ವಿವಾಹವಾದರು.


ಸ್ವತಃ ಪತಿಯೇ ಯಕ್ಷಗಾನದ ಹಿಮ್ಮೇಳದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರಿಂದ ಲೀಲಾ ಅವರ ಆಸೆ-ಆಕಾಂಕ್ಷೆಗೂ ಉತ್ತೇಜನ ಲಭಿಸಿತು. ಸಂಗೀತವನ್ನು ಅಭ್ಯಾಸ ಮಾಡಿದ್ದ ಅವರಿಗೆ ಪತಿ ಮನೆಯಲ್ಲಿಯೂ ಅದೇ ವಾತಾವರಣ ತುಂಬಿತ್ತು. ಯಕ್ಷಗಾನದ ಹಿಮ್ಮೇಳದ ವೈಭವವೇ ಅಲ್ಲಿ ತುಂಬಿಕೊಂಡಿದ್ದರಿಂದ ಸಹಜವಾಗಿಯೇ ಲೀಲಾ ಅವರನ್ನು ಯಕ್ಷಗಾನದ ಕ್ಷೇತ್ರ ಸೆಳೆದುಕೊಂಡಿತು. ಆಮೇಲೆ ಪತಿಯಿಂದಲೇ ಯಕ್ಷ ಪದ್ಯಗಳನ್ನು ಹೇಳಿಸಿಕೊಳ್ಳಲು ಆರಂಭಿಸಿದರು.


ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದ ಪತಿ ಕೆ. ಹರಿನಾರಾಯಣ ಪ್ರತಿನಿತ್ಯ ಊರಿಂದ ಊರಿಗೆ ಹೋಗಬೇಕಿತ್ತು. ಅವರೊಂದಿಗೆ ಲೀಲಾ ಸಹಾ ಅನಿವಾರ್ಯವಾಗಿ ತೆರಳಬೇಕಾಗಿತ್ತು. ಹೋದ ಸ್ಥಳದಲ್ಲಿಯೇ ಯಕ್ಷಪದ್ಯ ಹೇಳಿಸಿಕೊಂಡು, ರೂಢಿಸಿಕೊಳ್ಳಲು ಆರಂಭಿಸಿದರು. ಕಡಬದ ಪರಿಸರದಲ್ಲಿ ನಡೆಯುತ್ತಿದ್ದ ತಾಳಮದ್ದಲೆಯಲ್ಲಿ ಕೆಲವು ಪದ್ಯಗಳನ್ನು ಹೇಳಿದ ಲೀಲಾವತಿ ಅವರ ಸುಮಧುರ ಕಂಠವು ಟೆಂಟು ಮೇಳಗಳ ಒಡೆಯರ ಗಮನ ಸೆಳೆಯಿತು. ಆಮೇಲೆ “ಸುಬ್ರಹ್ಮಣ್ಯ ಮೇಳ”ದಲ್ಲಿ ಅತಿಥಿ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಯಕ್ಷಗಾನದ ವೃತ್ತಿ ಆರಂಭಿಸಿದರು.


ಪುರುಷ ಭಾಗವತರಂತೆ ಯಕ್ಷ ಪದ್ಯ ಹೇಳುವ ಲೀಲಾ ಅವರು, ಆ ಕಲೆಯಲ್ಲಿ ಸಾಕಷ್ಟು ಪ್ರಾವಿಣ್ಯತೆ ಪಡೆದುಕೊಂಡಿದ್ದಾರೆ. ಭಾಗವತಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿರುವ ಇವರು, ಏಕಾಂಗಿಯಾಗಿಯೇ ಇಡೀ ಆಟವನ್ನು (ರಾತ್ರಿ ಯಿಂದ ಬೆಳಗಿನ ತನಕ ನಡೆಯುವ ಯಕ್ಷಗಾನ ಪ್ರದರ್ಶನ) ನಡೆಸಿಕೊಡುವಷ್ಟರ ಮಟ್ಟಕ್ಕೆ ಬೆಳೆದು ನಿಂತ ಬಗೆ ಅಚ್ಚರಿಪಡುವಂತದ್ದು. “ಯುಕ್ಷಗಾನದ ಗಾನ ಕೋಗಿಲೆ” ಎಂದು ಯಕ್ಷಗಾನ ಅಭಿಮಾನಿಗಳಿಂದ ಕರೆಸಿಕೊಂಡಿರುವ ಲೀಲಾವತಿ ಬೈಪಾಡಿತ್ತಾಯ ಅವರು ಆಗ ರಾಜ್ಯದ ಏಕೈಕ ವೃತ್ತಿಪರ ಮಹಿಳಾ ಭಾಗವತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.


ಲೀಲಾ ಅವರು ಕದ್ರಿ, ಪುತ್ತೂರು, ಅಳದಂಗಡಿ, ಕುಂಬಳೆ, ಬಪ್ಪನಾಡು, ತಲಕಳ… ಮುಂತಾದ ವೃತ್ತಿ ಮೇಳಗಳಲ್ಲಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಪೂರ್ಣಪ್ರಮಾಣದ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಬಡಗುತಿಟ್ಟಿನ ಪ್ರಾಧಾನ್ಯತೆಯಿರುವ ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ತಮ್ಮ ಸುಮಧುರ ಕಂಠನಾದ ದಿಂದ ಪದ್ಯಗಳನ್ನು ಹೇಳಿ ಯಕ್ಷಪ್ರೇಮಿಗಳಿಂದ ಶಬ್ಬಾಸ್ ಎಂಬ ಪ್ರಶಂಸೆಯನ್ನು ಗಿಟ್ಟಿಸಿ ಕೊಂಡಿದ್ದಾರೆ. ಅಲ್ಲದೇ ಇವರು ಮುಂಬಯಿ, ಬೆಂಗಳೂರು, ಚೆನ್ನೈ, ಅಹಮದಾಬಾದ್, ದೆಹಲಿಯಲ್ಲಿಯೂ ಭಾಗವತಿಕೆಯ ಕಲೆಯನ್ನು ಪ್ರದರ್ಶಿಸಿದ್ದಾರೆ.


ಇವರು ತಮ್ಮ ಕಂಠನಾದದಿಂದ ಶೇಣಿ, ಕುಂಬಳೆ, ಬಣ್ಣದ ಮಾಲಿಂಗ, ಪಡ್ರೆ ಚಂದು, ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ಪುತ್ತೂರು ಕೃಷ್ಣ ಭಟ್, ಮಹಾಲಿಂಗ ಭಟ್ ಮುಂತಾದ ಘಟಾನುಘಟಿ ಹಿರಿಯ ಕಲಾವಿದರನ್ನು ಕುಣಿಸಿದ್ದಾರೆ.
ಇರುಳಿಡೀ ನಿದ್ದೆಗೆಟ್ಟು ಹಗಲು ನಿದ್ರಿಸುವ ಕಾಯಕದಲ್ಲಿಯೇ ಸಕ್ರಿಯವಾಗಿ ತೊಡಗಿಕೊಂಡಿರುವ ಲೀಲಾವತಿ ಬೈಪಾಡಿತ್ತಾಯ ಯಕ್ಷಗಾನದ ರಂಗದಲ್ಲಿ ಮಹಿಳೆಯರು ಹೇಗೆ ತೊಡಗಿಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಯಕ್ಷಗಾನ ರಂಗದಲ್ಲಿ ಹೊಸ ಭಾಷ್ಯವನ್ನು ಬರೆದಿರುವ ಅವರು, ನೆಡ್ಲೆ ನರಸಿಂಹ ಭಟ್, ದಿವಾಣ ಭೀಮ ಭಟ್, ಬಣ್ಣದ ಮಾಲಿಂಗ, ಶೇಣಿ ಗೋಪಾಲಕೃಷ್ಣ ಭಟ್, ಕುಂಬ್ಳೆ ಸುಂದರ ರಾವ್, ಪಾತಾಳ ವೆಂಕಟ್ರಮಣ ಭಟ್… ಮುಂತಾದ ಯಕ್ಷಗಾನ ರಂಗದ ಪ್ರಸಿದ್ಧ ಕಲಾವಿದರಿಂದಲೂ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ, ಪಾರಂಪರಿಕ ಕಲೆಯಾದ ಯಕ್ಷಗಾನಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ಅವರು ಸಲ್ಲಿಸಿದ್ದಾರೆ.


ಆರು ತಿಂಗಳ ತಿರುಗಾಟ, ಆರು ತಿಂಗಳ ಯಕ್ಷಗಾನ ಆಕಾಂಕ್ಷಿಗಳಿಗೆ ಪಾಠ ಹೇಳಿಕೊಡುವ ಕಾಯಕದಲ್ಲಿ ತಲ್ಲೀನರಾಗಿರುವ ಲೀಲಾ ಅವರು ಧರ್ಮಸ್ಥಳದ ಯಕ್ಷಗಾನ ಲಲಿತಾ ಕಲಾ ಕೇಂದ್ರದಲ್ಲಿ ಪತಿಯೊಂದಿಗೆ ಹತ್ತು ವರ್ಷಗಳ ಕಾಲ ಗುರುಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. 70ರ ಇಳಿವಯಸ್ಸಿನಲ್ಲಿಯೂ ಭಾಗವತಿಕೆಯಲ್ಲಿ ತೊಡಗಿಕೊಂಡಿರುವ ಲೀಲಾವತಿ ಬೈಪಾಡಿತ್ತಾಯ ಕೆಲವು ಕಡೆಗಳಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ.


ಇವರ ಯಕ್ಷ ಸೇವೆಯನ್ನು ಗುರುತಿಸಿ ರಾಜ್ಯದ ವಿವಿಧ ಸಂಘ-ಸಂಸ್ಥೆಗಳು ಗೌರವಿಸಿವೆ. ಉಳ್ಳಾಲ ರಾಣಿ ಅಬ್ಬಕ್ಕ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗದ ಕೆದ್ಲಾಮ ಪ್ರಶಸ್ತಿ, ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಯಕ್ಷಗಾನ ಸಮ್ಮೇಳನದ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಮುಂಬಯಿಯ ಅಭಿಮಾನಿ ಬಳಗ, ಕಿನ್ನಿಗೋಳಿ ಯಕ್ಷಲಹರಿ, ಯಕ್ಷಮಿತ್ರ ಪೆರ್ಲ, ಇಡಗುಂಜಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಸನ್ಮಾನ, ಶಿವಮೊಗ್ಗದ ಯಕ್ಷ ಸಂಪದದಿಂದ ಪುರಸ್ಕಾರವನ್ನು ಲೀಲಾ ಬೈಪಾಡಿತ್ತಾಯ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೇ, 2010ರಲ್ಲಿ ಕರ್ನಾಟಕ ಸರ್ಕಾರವು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಬೆಂಗಳೂರಿನಲ್ಲಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಕೂಡಾ ದೊರಕಿದೆ.


ಯಕ್ಷಗಾನದ ಹಿಮ್ಮೇಳದಲ್ಲಿ ತೊಡಗಿಕೊಂಡು ಕಲಾಸೇವೆ ಗೈಯುತ್ತಿರುವ ಈ ದಂಪತಿಗಳ ಸೇವೆ ಆದರ್ಶವಾದುದು. ದಂಪತಿಗಳಿಬ್ಬರು ಒಂದೇ ವೃತ್ತಿಯಲ್ಲಿದ್ದರು, ಅಕ್ಕಪಕ್ಕದಲ್ಲಿ ಕುಳಿತು ಸೇವೆ ಸಲ್ಲಿಸುವ ದಂಪತಿಗಳು ಬೇರೆಲ್ಲೂ ಕಾಣಲು ಸಿಗದು. ಆದರೆ ಕೆ. ಹರಿನಾರಾಯಣ ಮತ್ತು ಲೀಲಾ ದಂಪತಿ ಒಂದೇ ವೇದಿಕೆಯಲ್ಲಿ ಕುಳಿತು ತಮ್ಮ ಕಲಾಪ್ರತಿಭೆಯನ್ನು ಅಭಿವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ. ಹಿಮ್ಮೇಳದಲ್ಲಿ ಪಳಗಿದ ಈ ದಂಪತಿಗಳ ಯಕ್ಷಸೇವೆ ಗಂಡುಮೆಟ್ಟಿನ ಕಲೆಯ ಮೈಲುಗಲ್ಲು ಎಂದರೂ ಅತಿಶಯೋಕ್ತಿ ಆಗಲಾರದು. ು

ಲೇಖಕ: ಗಣಪತಿ ಹಾಸ್ಪುರ
ಅಂಚೆ : ಚವತ್ತಿ – 581 347
ತಾಲೂಕು : ಯಲ್ಲಾಪುರ (ಉ. ಕ.)

ಯಕ್ಷರಂಗದಲ್ಲಿ ಮಿಂಚಿ ಮರೆಯಾದ ಯಕ್ಷಕಲಾ ಕುಸುಮ ಪುತ್ತೂರು ಶ್ರೀ ಚಂದ್ರಶೇಖರ ಹೆಗ್ಡೆ

ಪುತ್ತೂರು ಶ್ರೀ ಚಂದ್ರಶೇಖರ ಹೆಗ್ಡೆಯವರು ತೆಂಕುತಿಟ್ಟು ಕಂಡ ಒಬ್ಬ ಶ್ರೇಷ್ಠ ಕಲಾವಿದ. ಖಳಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದವರು. ವೃತ್ತಿಕಲಾವಿದರಾಗಿ ಅನೇಕ ವರ್ಷಗಳ ಕಾಲ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಖ್ಯಾತ ಯಕ್ಷಗಾನ ಕಲಾವಿದರಾಗಿ ಪ್ರೇಕ್ಷಕರ ಮನಗೆದ್ದಿದ್ದ ಪುತ್ತೂರು ಶ್ರೀ ನಾರಾಯಣ ಹೆಗ್ಡೆಯವರ ಸುಪುತ್ರರು.

ಪುತ್ತೂರು ಶ್ರೀ ನಾರಾಯಣ ಹೆಗ್ಡೆ ಮತ್ತು ಶ್ರೀಮತಿ ಸಂಜೀವಿನಿ ಅಮ್ಮ ದಂಪತಿಗಳ ಮಗನಾಗಿ ಪುತ್ತೂರು ಸಮೀಪ ಬಪ್ಪಳಿಗೆ ಎಂಬಲ್ಲಿ 1960ರಲ್ಲಿ ಜನನ. ಶಾಲಾ ವಿದ್ಯಾರ್ಥಿಯಾಗಿ ದ್ದಾಗಲೇ ಯಕ್ಷಗಾನಾಸಕ್ತಿ ಇತ್ತು. ಅದು ರಕ್ತಗತವಾಗಿಯೇ ಸಿದ್ಧಿಸಿತ್ತು. ತಂದೆಯವರ ಜತೆ ಸಾಗಿ ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನು ಕಲಾವಿದನಾಗಬೇಕೆಂಬ ಬಯಕೆಯೂ ಮೂಡಿತ್ತು. ನಾರಾಯಣ ಹೆಗ್ಡೆಯವರು ಮಗನ ಆಸೆಗೆ ಅಡ್ಡಿಪಡಿಸಿರಲಿಲ್ಲ.

ಯಕ್ಷಗಾನ ನಾಟ್ಯ ಕಲಿಯುವ ಆಸೆಯಿಂದ ಚಂದ್ರಶೇಖರ ಹೆಗ್ಡೆಯವರು 1979ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಲಲಿತ ಕಲಾಕೇಂದ್ರವನ್ನು ಸೇರಿಕೊಂಡರು. ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಬಳಿಕ ಶ್ರೀ ಕ್ಷೇತ್ರ ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಮೇಳದಲ್ಲಿ ತಿರುಗಾಟ. ಪೂರ್ವರಂಗ ಮತ್ತು ಪ್ರಸಂಗಗಳಲ್ಲಿ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಬೆಳೆದವರು ಚಂದ್ರಶೇಖರ ಹೆಗ್ಡೆ. ಸುಂಕದಕಟ್ಟೆ ಮೇಳದಲ್ಲಿ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ವೇಷ ಮಾಡಿದ್ದರು. ಶ್ರೇಷ್ಠ ಕಲಾವಿದರ ಒಡನಾಟವೂ ಕಲಿಕೆಗೆ ಅವಕಾಶವಾಗಿತ್ತು.

ಪುಂಡುವೇಷಗಳಿಂದ ತೊಡಗಿ ಪೀಠಿಕೆ ವೇಷಗಳನ್ನು ಮಾಡಿ ಎದುರು ವೇಷಗಳನ್ನು ನಿರ್ವಹಿಸುವಷ್ಟು ಕ್ಷಿಪ್ರವಾಗಿ ಬೆಳೆದಿದ್ದರು. ತೀವ್ರವಾದ ಯಕ್ಷಗಾನಾಸಕ್ತಿ ಮತ್ತು ಸತತ ಅಧ್ಯಯನ ಇದಕ್ಕೆ ಕಾರಣವಿರಬಹುದು. ಖ್ಯಾತ ಕಲಾವಿದರ ಒಡನಾಟ, ಸಹಕಾರಗಳಿಂದ ನಾನು ಕಲಾವಿದನಾಗಿ ಕಾಣಿಸಿಕೊಂಡೆ ಎಂದು ಆತ್ಮೀಯರಲ್ಲಿ ಚಂದ್ರಶೇಖರ ಹೆಗ್ಡೆಯವರು ಹೇಳುತ್ತಿದ್ದರಂತೆ. ಸುಂಕದಕಟ್ಟೆ ಮೇಳದ ತಿರುಗಾಟದ ನಂತರ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆ. ತಂದೆ ಮಕ್ಕಳು (ಪುತ್ತೂರು ನಾರಾಯಣ ಹೆಗ್ಡೆ ಮತ್ತು ಪುತ್ತೂರು ಚಂದ್ರಶೇಖರ ಹೆಗ್ಡೆ). ಜತೆಯಾಗಿ ಅನೇಕ ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡಿದ್ದರು.

ಶ್ರೇಷ್ಠ ಕಲಾವಿದರಿಂದ ಶ್ರೀ ಧರ್ಮಸ್ಥಳ ಮೇಳದ ಪ್ರದರ್ಶನಗಳು ರಂಜಿಸುತ್ತಿದ್ದ ಕಾಲ. ಒಂದೆಡೆ ಸಮರ್ಥ ಹಿಮ್ಮೇಳ. ಇನ್ನೊಂದೆಡೆ ತಂದೆ ಜತೆಯಾಗಿ ತಿರುಗಾಟ. ಮತ್ತೊಂದೆಡೆ ನಾಟ್ಯ ಕಲಿಸಿದ ಗುರು ಕೆ. ಗೋವಿಂದ ಭಟ್ಟರು. ಮುಮ್ಮೇಳದ ಖ್ಯಾತ ಕಲಾವಿದರ ಒಡನಾಟ. ಪರುಷ ಶಿಲೆಗೆ ಯಾವ ಲೋಹ ಸೋಕಿದರೂ ಬಂಗಾರವಾಗುವಂತೆ ಚಂದ್ರಶೇಖರ ಹೆಗ್ಡೆಯವರು ಕಲಾವಿದನಾಗಿ ಕಾಣಿಸಿಕೊಂಡರು. ಹೆಚ್ಚಾಗಿ ಖಳಪಾತ್ರಗಳನ್ನು ನಿರ್ವಹಿಸುತ್ತಿದ್ದ ಇವರು ಎಲ್ಲಾ ತರದ ಪಾತ್ರಗಳನ್ನೂ ಮಾಡಬಲ್ಲವರಾಗಿದ್ದರು. ಇವರು ಪಾತ್ರಗಳನ್ನು ನಿರ್ವಹಿಸುವ ರೀತಿ ಪುತ್ತೂರು ಶ್ರೀ ನಾರಾಯಣ ಹೆಗ್ಡೆಯವರನ್ನು ನೆನಪಿಸುತ್ತಿತ್ತು.

ಬಹುಬೇಡಿಕೆಯ ಕಲಾವಿದನಾಗಿ ಬೆಳೆಯುತ್ತಿರುವಾಗಲೇ ಆರೋಗ್ಯ ಕೈಕೊಟ್ಟಿತ್ತು. ಕಾಡಿದ ಅನಾರೋಗ್ಯ ಸಮಸ್ಯೆಯಿಂದಾಗಿ (ಹೃದಯ ಸಂಬಂಧೀ ಕಾಯಿಲೆ) ವೃತ್ತಿಜೀವನಕ್ಕೆ ವಿದಾಯ ಹೇಳುವಂತಹ ಅನಿವಾರ್ಯತೆಗೆ ಒಳಗಾಗಿದ್ದರು. ಆದರೂ ಪುತ್ತೂರು ಚಂದ್ರಶೇಖರ ಹೆಗ್ಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದ ನಂಟನ್ನು ಬಿಟ್ಟವರಲ್ಲ. ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ಪಳಗಿದ್ದ ಇವರು ಶ್ರೀ ಕ್ಷೇತ್ರದ ಖಾವಂದರ ಆಶ್ರಯದಲ್ಲೇ ಬದುಕುತ್ತಿದ್ದರು. ಮೇಳದ ಕಲಾವಿದನಾಗಿರುವಾಗಲೇ ಮಳೆಗಾಲದಲ್ಲಿ ವೇಷಭೂಷಣಗಳ ತಯಾರಿಕೆಯ ಜ್ಞಾನವನ್ನು ಗಳಿಸಿದ್ದರು.

ಹಿರಿಯ ಶ್ರೇಷ್ಠ ಕಲಾವಿದ ದಿ| ಕಡಬ ಸಾಂತಪ್ಪ ಅವರೂ ಯಕ್ಷಗಾನ ವೇಷಭೂಷಣಗಳನ್ನು ಸಿದ್ಧಪಡಿಸುವುದರಲ್ಲಿ ನಿಷ್ಣಾತರಾಗಿದ್ದವರು. ಇವರು ಧರ್ಮಸ್ಥಳದಲ್ಲಿ ಅಲ್ಲದೆ ಶ್ರೀ ದೇವಕಾನ ಕೃಷ್ಣ ಭಟ್ಟರ ಆಶ್ರಯದಲ್ಲೂ ಕೆಲಸ ಮಾಡಿದವರು. ದಿ| ಕಡಬ ಸಾಂತಪ್ಪರಂತೆ ಶ್ರೀ ಚಂದ್ರಶೇಖರ ಹೆಗ್ಡೆಯವರು ಕಲಾವಿದನಾಗಿಯೂ, ವೇಷಭೂಷಣ ತಯಾರಿಕೆಯಲ್ಲೂ ಒಳ್ಳೆಯ ಹೆಸರು ಗಳಿಸಿದ್ದರು. ವೇಷಭೂಷಣಗಳನ್ನು ಧರಿಸುವಾಗ ಇವರಿಬ್ಬರನ್ನು ಕಲಾವಿದರಿಗೆ ನೆನಪಾಗದೆ ಇರದು. ಇವರಿಬ್ಬರ ಅಳಿವು ಯಕ್ಷಗಾನಕ್ಕೆ ತುಂಬಲಾರದ ನಷ್ಟ. 2019 ಸೆಪ್ಟಂಬರ್ 14ರಂದು ಶ್ರೀ ಚಂದ್ರಶೇಖರ ಹೆಗ್ಡೆಯವರು ಮೃತ್ಯುವಶರಾದಾಗ ಸಹಜವಾಗಿ ಕಲಾಭಿಮಾನಿಗಳೆಲ್ಲರಿಗೂ ನೋವಾಗಿತ್ತು.

ಯಕ್ಷಕಲಾ ಕುಸುಮವಾಗಿ ಅರಳಿ ಪರಿಮಳಿಸಿದ ಶ್ರೀ ಪುತ್ತೂರು ಚಂದ್ರಶೇಖರ ಹೆಗ್ಡೆಯವರು ಪತ್ನಿ ಶ್ರೀಮತಿ ಶ್ಯಾಮಲ ಹೆಗ್ಡೆ, ಪುತ್ರಿಯರಾದ ಪಲ್ಲವಿ ಹೆಗ್ಡೆ, ಪ್ರತಿಮಾ ಹೆಗ್ಡೆ, ಪುತ್ರ ಚಂದನ್ ಹೆಗ್ಡೆ, ಸಹೋದರರಾದ ಶ್ರೀ ದೇವರಾಜ ಹೆಗ್ಡೆ (ಉಪನ್ಯಾಸಕ ಮತ್ತು ಕಲಾವಿದ), ಶ್ರೀ ಗಿರೀಶ್ ಹೆಗ್ಡೆ (ಶ್ರೀ ಧರ್ಮಸ್ಥಳ ಮೇಳದ ಮೆನೇಜರ್, ಕಲಾವಿದ) ಇವರುಗಳನ್ನು ಅಗಲಿರುತ್ತಾರೆ. ಹುಟ್ಟು ಆಕಸ್ಮಿಕ, ಮರಣವು ನಿಶ್ಚಿತ. ಲೋಕನಿಯಮವನ್ನು ಅವರು ಅನುಸರಿಸಿದ್ದಾರೆ ಎಂದು ಸಮಾಧಾನಪಟ್ಟುಕೊಳ್ಳಬೇಕಷ್ಟೆ. ಅವ್ಯಕ್ತ ಪ್ರಪಂಚದಲ್ಲಿ ಅವರು ಸುಖವಾಗಿರಲಿ. ಅವರ ಮಕ್ಕಳಿಗೆ ಉಜ್ವಲವಾದ ಬದುಕು ದೊರೆಯಲಿ. ಮನೆಯವರಿಗೆಲ್ಲಾ ಸಕಲ ಭಾಗ್ಯಗಳನ್ನು ಕಲಾ ಮಾತೆ ಮತ್ತು ನಟರಾಜನಾದ ಶ್ರೀ ಮಂಜುನಾಥ ಸ್ವಾಮಿಯು ಅನುಗ್ರಹಿಸಲಿ.

ಲೇಖಕ: ರವಿಶಂಕರ್ ವಳಕ್ಕುಂಜ

ಕಲಾಪೋಷಕ, ಕಲಾವಿದ ಕುಳಮರ್ವ ಸುಬ್ರಹ್ಮಣ್ಯ ಭಟ್

ಯಕ್ಷಗಾನ ಕಲಾವಿದ, ಕಲಾ ಪ್ರೋತ್ಸಾಹಕ ಶ್ರೀ ಕುಳಮರ್ವ ಸುಬ್ರಹ್ಮಣ್ಯ ಭಟ್ಟರಿಗೆ ಇದೀಗ ಎಪ್ಪತ್ತನಾಲ್ಕರ ಹರೆಯ. ಎಪ್ಪತ್ತಾದರೂ ಇಪ್ಪತ್ತರಂತೆ ಲವಲವಿಕೆಯಿಂದ ತನ್ನೊಡನಾಡಿಗಳೊಂದಿಗೆ ವ್ಯವಹರಿಸುವ ತರುಣ.
ಓರ್ವ ಅಧ್ಯಾಪಕ ತನ್ನ ವಿದ್ಯಾರ್ಥಿಗಳನ್ನು ಉತ್ತಮ ಪಾಠ ಪಠ್ಯಗಳಿಂದ ತಿದ್ದಿ ತೀಡಿ ಸತ್ಪ್ರಜೆಯನ್ನಾಗಿ ಮಾಡುತ್ತಾನೆ. ಓರ್ವ ವೈದ್ಯ ತನ್ನಲ್ಲಿಗೆ ಬರುವ ರೋಗಿಯ ಕಾಯಿಲೆಗಳ ಗುಣದೋಷ ಗಳನ್ನು ಅಧ್ಯಯನ ಮಾಡಿ ಸೂಕ್ತ ಚಿಕಿತ್ಸೆ ಸಲಹೆ-ಸೂಚನೆಗಳನ್ನು ನೀಡಿ ಆತನನ್ನು ನಿರೋಗಿಯನ್ನಾಗಿಸಿ ಉತ್ತಮ ಪ್ರಜೆಯನ್ನಾಗಿಸುತ್ತಾನೆ.


ನಮ್ಮ ಸಂಪ್ರದಾಯದಂತೆ ಓರ್ವ ತಂದೆ-ತಾಯಿ ಅಥವಾ ಪೋಷಕರು ಹುಟ್ಟಿದ ಮಗುವಿನ ಸಮಯಕ್ಕನುಗುಣವಾಗಿ ಜಾತಕ ತಯಾರಿಸಲು ಜ್ಯೋತಿಷಿಗಳನ್ನು ಸಂಪರ್ಕಿಸುತ್ತಾರೆ. ಶತಮಾನಗಳ ಇತಿಹಾಸವಿರುವ ಜ್ಯೋತಿರ್ವಿಜ್ಞಾನ ಪಂಡಿತರುಗಳು ಸಮೂಲವಾಗಿ ನಕ್ಷತ್ರ ರಾಶಿಗಳನ್ನು ಅಧ್ಯಯನ ಮಾಡಿ ಹುಟ್ಟಿದ ಮಗುವಿನ ಸಮಗ್ರ ಜಾತಕ ಬರೆಯುವಲ್ಲಿ ಯಶಸ್ವಿಯಾಗುತ್ತಾರೆ. ಅಂತೆಯೇ ನನ್ನ ಈ ಲೇಖನದ ನಾಯಕರಾದ ಕುಳಮರ್ವ ಸುಬ್ರಹ್ಮಣ್ಯ ಭಟ್ಟರು ತಮ್ಮ ತಲೆಮಾರಿನಿಂದ ಅನೂಚಾನವಾಗಿ ಬಂದಂತಹ ಜ್ಯೋತಿರ್ವಿದ್ಯೆಯನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆ ಯಿಂದ ಅಭ್ಯಾಸ ಮಾಡಿ ವಿಟ್ಲದಲ್ಲಿ ಸುಮಾರು 48 ವರ್ಷಗಳಿಂದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಸರಳ ಸಜ್ಜನಿಕೆಯ ಸಾಕಾರಮೂರ್ತಿ ಶ್ರೀ ಭಟ್ಟರು ತಮ್ಮ ದೊಡ್ಡಪ್ಪ ದಿ| ಕುಳಮರ್ವ ವೆಂಕಪ್ಪ ಭಟ್ಟ ಸಾಹಿತ್ಯ ಶಿರೋಮಣಿಯವರಿಂದ ಜ್ಯೋತಿಷವನ್ನು ಅಭ್ಯಸಿಸಿ, ಮಂತ್ರವಾದವನ್ನು ವೇದಮೂರ್ತಿ ದಿ| ಕಲ್ಲುಕುಟ್ಟಿಮೂಲೆ ನಾರಾಯಣ ಭಟ್ಟರಿಂದ ದೀಕ್ಷೆ ಪಡೆದಿದ್ದಾರೆ.


ಈ ಎರಡು ವಿದ್ಯೆಗಳ ಜೊತೆ ಜೊತೆಯಲ್ಲಿ ದೈವದೇವರುಗಳ ಪ್ರತಿಷ್ಠೆ, ಹೋಮ ಹವನಾದಿ ಕಾರ್ಯಕ್ರಮಗಳು ಇವರಲ್ಲಿ ಬಿಡುವಿಲ್ಲದೇ ನಡೆಯುತ್ತಿರುತ್ತದೆ. ಬಂದಂತಹ ಜನರಿಗೆ ಸೂಕ್ತ ಸಲಹೆ ಸೂಚನೆಗಳನ್ನು ಕೊಡುತ್ತಾ ಬೇಕುಬೇಕಾದ ಪರಿಹಾರ ಕಾರ್ಯಗಳನ್ನು ಮಾಡುತ್ತಾ ಇವತ್ತಿಗೂ ಸಹ ಊರ ಪರವೂರ ಜನರಿಗೆ ಕುಳಮರ್ವ ಜೋಯಿಸರೇ ಬೇಕು.


ಶ್ರೀಯುತರು ಕೇವಲ ಜ್ಯೋತಿಷ್ಯರಾಗಿರದೇ ಯಕ್ಷಗಾನ ನಾಟಕ ಮುಂತಾದ ಕಲೆಗಳಲ್ಲೂ ಕೈಯಾಡಿಸಿದವರು. ಬಾಲ್ಯದಲ್ಲಿ ಕುಳಮರ್ವ-ಕುಂಟಿಕಾನ ಮಠದಲ್ಲಿ ರಾತ್ರಿಯಿಡೀ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಳೆಯಲ್ಲಿ ಚೆಂಡೆ-ಮದ್ದಳೆ ಕಲಾವಿದರಾಗಿ ಅರ್ಥಧಾರಿಯಾಗಿಯೂ ಮಿಂಚಿದರು. ಆ ಕಾಲಕ್ಕೆ ಅಂದರೆ ಅರುವತ್ತರ ದಶಕದಲ್ಲಿ ನಡೆಯುತ್ತಿದ್ದ ಯಕ್ಷಗಾನ ಕಾರ್ಯ ಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಉತ್ತಮ ಸಂಘಟಕರೂ ಆಗಿದ್ದರು. ಇಂದಿನ ಶ್ರೀ ಬಲಿಪ ನಾರಾಯಣ ಭಾಗವತರು, ದಿ| ಕುದ್ರೆಕೂಡ್ಲುರಾಮ ಭಟ್ಟರು, ದಿ| ಯೇರಿಕ್ಕಳ ಶ್ರೀನಿವಾಸ ರಾಯರೇ ಮೊದಲಾದ ಹಿರಿಯ ಕಲಾವಿದರು ಮಾತ್ರವಲ್ಲದೇ ಹಲವಾರು ಅರ್ಥಧಾರಿಗಳು ಭಾಗವಹಿಸುವಿಕೆಯ ತಾಳಮದ್ದಳೆ ಬಯಲಾಟಗಳ ರೂವಾರಿಯಾಗಿಯೂ ಆಗಿದ್ದವರು.


ಕಾರಣಾಂತರಗಳಿಂದ ಎಪ್ಪತ್ತರ ದಶಕದ ಆರಂಭದಲ್ಲಿ ವಿಟ್ಲಕ್ಕೆ ಶ್ರೀಯುತರು ಮತ್ತು ಅವರ ಕುಟುಂಬ ಬಂದು ವಿಟ್ಲದಲ್ಲಿ ವಾಸಿಸಲು ಆರಂಭಿಸಿದರು. ಇಲ್ಲಿಯೂ ಸಹ ಶ್ರೀ ಅನಂತೇಶ್ವರ ದೇವಾಲಯದ ಚಾವಡಿಯಲ್ಲಿ ನಡೆಯುತ್ತಿದ್ದ ತಾಳಮದ್ದಳೆಯಲ್ಲಿ ಭಾಗವಹಿಸುತ್ತಿದ್ದರು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ವಾರ್ಷಿಕ ಜಾತ್ರೆಯಲ್ಲಿ ನಾಟಕಕಾರರಾಗಿ ಮಿಂಚಿದರು. ಆ ಕಾಲದಲ್ಲಿ ದಿ| ಡಾ| ಎಂ. ರಾಮಮೋಹನ, ದಿ| ಡಾ| ಕೆ.ಎಸ್.ಕೆ. ಮೂರ್ತಿಯವರ ಸಂಯೋಜನೆಯಲ್ಲಿ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆಗೆಲ್ಲಾ ಪ್ರತಿ ವರ್ಷ ಶ್ರೀ ಭಟ್ಟರು ಪುರಾಣ ಕತೆಗಳ ಸಂಭಾಷಣೆಗಳನ್ನು ಬರೆದು ನಾಟಕಕ್ಕೆ ಅಳವಡಿಸಿ ನಿರ್ದೇಶಿಸುತ್ತಿದ್ದರು. ಬಹುಶಃ ಅವುಗಳು ಇಂದು ಮುದ್ರಣದಲ್ಲಿರುತ್ತಿದ್ದರೆ ಹಲವಾರು ಪ್ರದರ್ಶನಗಳ ಭಾಗ್ಯ ಕಾಣುತ್ತಿತ್ತೋ ಏನೋ?

ಹಾಗೆಯೇ ತನ್ನ ಮನೆಯಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಹೋಮ ಹವನ ದೇವತಾರಾಧನೆ ಕಾರ್ಯಕ್ರಮಗಳಲ್ಲಿ ಕಲಾರಾಧನೆಯೊಂದಿಗೆ ದೇವತಾರಾಧನೆಯೆಂಬಂತೆ ಯಕ್ಷಗಾನ ತಾಳಮದ್ದಳೆಯನ್ನು ಸಂಘಟಿಸುತ್ತಾರೆ. ಹಿರಿಯ ಕಿರಿಯ ಕಲಾವಿದರನ್ನೆಲ್ಲಾ ಬರಮಾಡಿ ಪ್ರತೀ ವರ್ಷ ಬೇರೆ ಬೇರೆ ಕಥಾನಕಗಳನ್ನು ಆಖ್ಯಾಯಿಸುತ್ತಾರೆ. ಉತ್ತಮ ಪ್ರಸಂಗ ಅನುಭವಿ ಕಲಾವಿದರ ಭಾಗವಹಿಸುವಿಕೆಯಿಂದ ಪ್ರೇಕ್ಷಕರು ಗಣನೀಯ ಸಂಖ್ಯೆಯಲ್ಲಿ ಸೇರುತ್ತಾರೆ ಎಂಬುದನ್ನು ನಾವು ಗಮನಿಸತಕ್ಕ ಅಂಶ. ಇತ್ತೀಚಿನ ವರ್ಷಗಳಲ್ಲಿ ಈ ಪರಿಪಾಠ ಬೆಳೆದು ಬಂದಿದ್ದು ಕಲಾವಿದರೂ ಆಸಕ್ತ ಪ್ರೇಕ್ಷಕರು ಆ ದಿನಕ್ಕಾಗಿ ಕಾಯುವಂತಾಗಿದೆ.


ತನ್ನ ಸಹಧರ್ಮಿಣಿ ಶ್ರೀಮತಿ ಜಯಲಕ್ಷ್ಮೀ ಎಸ್. ಭಟ್ಟ ಹಾಗೂ ನಾಲ್ವರು ಮಕ್ಕಳು, ಎಂಟು ಜನ ಮೊಮ್ಮಕ್ಕಳೊಂದಿಗೆ ಸಹೋದರಿ ಸಹೋದರರ ಒಡನಾಟದಲ್ಲಿ ಅವರ ಮಕ್ಕಳು ಮೊಮ್ಮಕ್ಕಳೊಂದಿಗೂ ಸುಖೀ ಸಂಸಾರವನ್ನು ನಿಭಾಯಿಸುತ್ತಿರುವ ಶ್ರೀ ಭಟ್ಟರು ವಿಟ್ಲ ಹಾಗೂ ಸುತ್ತಮುತ್ತಲಿನ ಎಲ್ಲಾ ಊರುಗಳ ಜಾತಿ-ಮತ-ಬೇಧವಿಲ್ಲದೇ ಜನರಿಗೆ ಬೇಕಾದವರಾಗಿ ಇನ್ನೂ ನೂರ್ಕಾಲ ಬಾಳಲಿ ಎಂದು ಮನದುಂಬಿ ಹಾರೈಸುತ್ತೇನೆ.

ಲೇಖಕ: ಶ್ರೀ ಶಂಕರ ಕುಳಮರ್ವ
(ಸದಭಿರುಚಿ ವಿಟ್ಲ)

ಮಾಯಾನಗರಿಯಲ್ಲೊಬ್ಬ ಕಲಾಸೇವಕ – ಅಜೆಕಾರು ಬಾಲಕೃಷ್ಣ ಶೆಟ್ಟಿ

ಮುಂಬೈ ಯಕ್ಷಗಾನ ಕಲಾವಲಯದಲ್ಲಿ ‘ಅಜೆಕಾರು ಬಾಲಣ್ಣ’ ಎಂದರೆ ಯಾರಿಗೆ ತಾನೇ ತಿಳಿದಿಲ್ಲ? ದೂರದ ಮುಂಬೈಯಲ್ಲಿ ಚೆಂಡೆ-ಮದ್ದಳೆಗಳ ನಿನಾದವನ್ನು ಅನುರಣಿಸುವ ಕ್ರಿಯೆಯನ್ನು ಅನವರತ ಒಂದು ತಪಸ್ಸಿನಂತೆ ನಡೆಸುತ್ತಾ ಬರುತ್ತಿರುವವರು ಶ್ರೀಯುತ ಅಜೆಕಾರು ಬಾಲಕೃಷ್ಣ ಶೆಟ್ಟಿ. ಬೆಡಗು-ಬಿನ್ನಾಣದ, ಧಾವಂತದ ಬದುಕಿನಲ್ಲಿ ಯಾಂತ್ರಿಕವಾಗಿ ಕಳೆದು ಹೋಗುತ್ತಿರುವ ಮಾಯಾನಗರಿಯ ಜನತೆಗೆ ಅಪರಿಚಿತವಾದ, ದುರ್ಲಭವಾದ ಯಕ್ಷಗಾನದ ರುಚಿ ಹತ್ತಿಸಿದವರು. ಮಹಾನಗರಿಯ ದಶದಿಕ್ಕುಗಳಲ್ಲಿ ಹರಡಿದ್ದ ತುಳು-ಕನ್ನಡಿಗರನ್ನು ಒಂದು ಕಲೆಯ ಮೂಲಕ ಹತ್ತಿರ ತಂದವರು ಬಾಂಧವ್ಯ ವೃದ್ಧಿಸಿದವರು. ಅರಳಿದ ಹೂವಿನ ಸುಗಂಧವನ್ನು ಹರಡಲು ಗಾಳಿಯು ಮಾಧ್ಯಮವಾಗುವಂತೆ ಕಲಾವಿದ ಮತ್ತು ಪ್ರೇಕ್ಷಕರ ನಡುವಿನ ಮಾಧ್ಯಮವಾದವರು, ಸೇತುವೆಯಾದವರು.


ಸದಾ ಹಸನ್ಮುಖಿ, ಸಹನಶೀಲ, ಸರಳ ಸ್ವಭಾವದ, ಮೃದುಮಾತಿನ ಕುಶಲ ಸಂಘಟಕ ಅಜೆಕಾರು ಬಾಲಕೃಷ್ಣ ಶೆಟ್ಟರು ಜನಿಸಿದ್ದು ಕಾರ್ಕಳ ತಾಲೂಕಿನ ಅಜೆಕಾರು ಮರ್ಣೆಯಲ್ಲಿ, ಸುಬ್ಬಯ್ಯ ಶೆಟ್ಟಿ ಮತ್ತು ಸಂಪಾ ಶೆಟ್ಟಿಯವರ ಸುಪುತ್ರನಾಗಿ ಎಳವೆಯಿಂದಲೇ ಯಕ್ಷಗಾನದ ಬಗ್ಗೆ ಅಪಾರವಾದ ಪ್ರೀತಿ ಹೊಂದಿದವರು. ಬಾಲ್ಯದಲ್ಲಿ ಹೆತ್ತವರಿಂದ ಪೆಟ್ಟು ತಿಂದರೂ ಸರಿಯೇ, ಯಕ್ಷಗಾನ ನೋಡುವುದರಿಂದ ತಪ್ಪಿಸಿಕೊಳ್ಳಲಾರರು. ಮರುದಿನ ಮನೆಗೆ ಬಂದು ಯಕ್ಷಗಾನದ ಆಟವನ್ನೇ ಆಡುತ್ತಿದ್ದರಂತೆ. ಶ್ರೀಯುತರ ರಕ್ತದ ಕಣಕಣದಲ್ಲೂ ಯಕ್ಷಗಾನ ಕಲೆಯ ಒಲವಿದೆ ಎನ್ನುವುದಕ್ಕೆ ಇದರಿಂದ ಹೆಚ್ಚಿನ ನಿದರ್ಶನ ಬೇಕೇ?


ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು | ಜಗದ ಬೀದಿಗಳೊಳು ನಿಜಾತ್ಮ ಯಾತ್ರೆಯನು || ಜಗದ ಜೀವಿತದಿ ನಿಜ ಜೀವಿತದ ಪೂರ್ತಿಯನು ಬಗೆಯಲರಿತವನೆ ಸುಖಿ ಮಂಕುತಿಮ್ಮ ||’’ ಎಂಬ ಡಿ.ವಿ.ಜಿ.ಯವರ ಕಗ್ಗ ಇಲ್ಲಿ ಸೂಕ್ತವೆನಿಸುತ್ತದೆ.

ಉದ್ಯೋಗ ನಿಮಿತ್ತವಾಗಿ ಮುಂಬೈ ಮಹಾನಗರಿಯನ್ನು ಸೇರಿದ ಬಾಲಣ್ಣ ಸ್ವತಃ ಯಕ್ಷಗಾನ ಕಲಾವಿದರಾಗಿ ರೂಪುಗೊಂಡರು. ಉತ್ತಮ ಸಂಘಟಕರಾಗಿರುವ ಇವರು ಉತ್ತಮ ಯಕ್ಷಗಾನ ವೇಷಧಾರಿಯೂ ಹೌದು. ಶ್ರೀಯುತ ಪುರುಷೋತ್ತಮ ಪೂಂಜರಿಂದ ಯಕ್ಷನಾಟ್ಯ ಕಲಿತಿದ್ದಾರೆ. ತಾನು ನಿರ್ವಹಿಸುವ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಇವರು ಪಾತ್ರಕ್ಕೆ ಜೀವ ತುಂಬಿ ಭಾವಪೂರ್ಣವಾಗಿ ಅಭಿನಯಿಸುತ್ತಾರೆ. ಚಂಡ-ಮುಂಡ, ಕೋಟಿ-ಚೆನ್ನಯ, ಭಾರ್ಗವ, ಅಭಿಮನ್ಯು,ಗುಳಿಗ, ಶಬರಿಮಲೈ ಸ್ವಾಮಿ ಅಯ್ಯಪ್ಪ, ಕೃಷ್ಣ, ವಿಷ್ಣು ಸೇರಿದಂತೆ ಇನ್ನೂ ಹಲವಾರು ಪಾತ್ರಗಳನ್ನು ರಂಗದಲ್ಲಿ ಸಾಕ್ಷಾತ್ಕರಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ‘ಚಿಣ್ಣರ ಬಿಂಬ ಮುಂಬಯಿ’ ಸೇರಿದಂತೆ ನೂರಾರು ಚಿಣ್ಣರಿಗೆ, ಯುವಕರಿಗೆ, ಮಹಿಳೆಯರಿಗೆ ನಾಟ್ಯಾಭಿನಯಗಳನ್ನು ಕಲಿಸಿ ಯಕ್ಷಗುರುವೆನಿಸಿದ್ದಾರೆ. ಹಲವಾರು ತಂಡಗಳನ್ನು ಕಟ್ಟಿ ನೂರಾರು ಪ್ರದರ್ಶನಗಳನ್ನು ನೀಡಿ ಗುರುವಾಗಿಯೂ ಸಾರ್ಥಕ್ಯ ಪಡೆದಿದ್ದಾರೆ. ಇವರ ಶಿಷ್ಯರನೇಕರು ಯಕ್ಷಗಾನದಲ್ಲಿ ತೊಡಗಿಸಿಕೊಂಡವರಿದ್ದಾರೆ. ಮೇಳದ ವ್ಯವಸಾಯವನ್ನು ಹಿಂದೊಮ್ಮೆ ಪಡೆದವರಾದ್ದರಿಂದ ಕಲಾವಿದರ ನೋವು-ನಲಿವುಗಳನ್ನು ಬಲ್ಲರು. ಔದ್ಯೋಗಿಕ ಕ್ಷೇತ್ರದಲ್ಲಿ ಏಳು-ಬೀಳುಗಳನ್ನು ಕಂಡರೂ ಯಕ್ಷಗಾನವನ್ನು ಬಿಟ್ಟವರಲ್ಲ. ತಾನು ಕಲಾವಿದನಾದರಷ್ಟೇ ಸಾಲದು, ಮುಂಬೈಯಲ್ಲಿ ಯಕ್ಷಗಾನದ ಸಂಸ್ಕೃತಿ ಉಳಿದು ಬೆಳೆಯಬೇಕೆನ್ನುವ ಉದ್ದೇಶದಿಂದ 2002ರಲ್ಲಿ ಸಮಾನಾಸಕ್ತರನ್ನು ಒಗ್ಗೂಡಿಸಿಕೊಂಡು ಅಜೆಕಾರು ಕಲಾಭಿಮಾನಿ ಬಳಗ (ರಿ.), ಮುಂಬಯಿ’’ನ್ನು ಸ್ಥಾಪಿಸಿದರು.

ಇದಕ್ಕೂ ಹಿಂದೆ ಯಕ್ಷಗಾನ ಪ್ರದರ್ಶನಗಳು, ತಾಳಮದ್ದಳೆಗಳು ನಡೆಯುತ್ತಿದ್ದರೂ 2002ರ ಹೊತ್ತಿಗೆ ಅವೆಲ್ಲವೂ ಜನಾಕರ್ಷಣೆ ಕಳೆದುಕೊಂಡಿದ್ದವು. ಸಮರ್ಥ ಸಂಘಟಕರಿಲ್ಲದೆ ಯಕ್ಷಗಾನ ಚರಮಗೀತೆ ಹಾಡುವ ಹಂತದಲ್ಲಿ ಅಜೆಕಾರು ಸಂಘಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಊರಿನಿಂದ ಪ್ರಸಿದ್ಧ ಕಲಾವಿದರನ್ನು ಕರೆಸಿ ಆಟ-ಕೂಟಗಳನ್ನು ಏರ್ಪಡಿಸಿದರು. ಮುಂಬೈಯಲ್ಲಿ ಪ್ರಪ್ರಥಮವಾಗಿ ಸರಣಿ ತಾಳಮದ್ದಳೆಗಳನ್ನು ನಡೆಸಿದ ಹೆಗ್ಗಳಿಕೆ ಬಾಲಕೃಷ್ಣ ಶೆಟ್ಟರದು. ಅಂದಿನಿಂದ ಇಂದಿನ ವರೆಗೂ ಸರಣಿ ತಾಳಮದ್ದಳೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಇದೊಂದು ಸುಲಭಸಾಧ್ಯವಾದ ಕೆಲಸವೇನಲ್ಲ. ಕಲಾವಿದರ ಸಂಯೋಜನೆ, ಅವರ ಪ್ರಯಾಣ, ವಸತಿ, ಊಟೋಪಚಾರಗಳ ವ್ಯವಸ್ಥೆಯು ಬೇಡುವ ಶ್ರಮ ಹಾಗೂ ವೆಚ್ಚವನ್ನು ಭರಿಸುವುದು ಸಾಹಸವೇ ಸರಿ. ಮಳೆಗಾಲದ ಆರಂಭವೆಂದರೆ ಮುಂಬೈಯಲ್ಲಿ ಯಕ್ಷಗಾನದ ರಸದೌತಣ.


ಹೀಗೆ ಕಾರ್ಯಕ್ರಮಗಳ ಆಯೋಜನೆಗಷ್ಟೇ ತೃಪ್ತರಾಗದ ಬಾಲಣ್ಣ 2004ರಿಂದ ‘ಅಜೆಕಾರು ಕಲಾಭಿಮಾನಿ ಬಳಗ’ದ ಮೂಲಕ ‘ಯಕ್ಷರಕ್ಷಾ’ ಪ್ರಶಸ್ತಿಯನ್ನು ಸಹಾಯಧನ ಸಹಿತವಾಗಿ ಮುಂಬೈಯ ಮತ್ತು ಊರಿನ ಕಲಾವಿದರಿಗೆ ನೀಡುತ್ತಾ ಬಂದಿದ್ದಾರೆ. ಶ್ರೀ ಮಾತಾ ಯಕ್ಷ-ರಕ್ಷಾ’’ ಪುರಸ್ಕಾರವನ್ನೂ ತಮ್ಮ ತಾಯಿಯವರ ಸ್ಮರಣಾರ್ಥವಾಗಿ ನೀಡುತ್ತಿದ್ದಾರೆ. ಇದೀಗ ಬಳಗಕ್ಕೆ ಹದಿನೆಂಟರ ಹರೆಯ. ಜುಲೈನಿಂದ ಅಕ್ಟೋಬರ್ 20ರ ವರೆಗೂ ವಿಶೇಷ ಯಕ್ಷಗಾನ ಸಂಬಂಧೀ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಈ ತನಕ ಹಲವು ಮಂದಿ ಕಲಾವಿದರು ಈ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಾಗೆಂದು ಅವರೇನೂ ಆಗರ್ಭ ಶ್ರೀಮಂತರಲ್ಲ. ಎಲ್ಲ ‘ಇಲ್ಲ’ಗಳ ನಡುವೆಯೂ ಯಕ್ಷಗಾನಕ್ಕಾಗಿ ವ್ಯಯ ಮಾಡಿ ಬರಿದಾದವರು, ಕೈಸುಟ್ಟುಕೊಂಡವರು. ವರುಷಗಳು ಕಳೆದಂತೆ ಜೋಡಿಸುವ ಕೈಗಳು ಹೆಚ್ಚಾಗಿವೆ, ಕಲಾಪ್ರೀತಿ ಹೆಚ್ಚಿದೆ. ಪ್ರೀತಿಯಿಂದ ನೀಡುವ ಕೊಡುಗೈ ದಾನಿಗಳನ್ನು ಸದಾ ಸ್ಮರಿಸುತ್ತಾರೆ, ಗೌರವಿಸುತ್ತಾರೆ. ಸ್ವತಃ ಕಲಾವಿದನಾಗಿ, ಕಲಾಸೇವಕನಾಗಿ, ಒಂದು ಕಲೆಯನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದಾರೆ.

ಈ ಮೂಲಕ ಮುಂಬೈಯಂತಹ ಮಾಯಾಲೋಕದಲ್ಲೂ ನಮ್ಮ ಸಂಸ್ಕೃತಿಯ ರಕ್ಷಣೆಯನ್ನಲ್ಲದೆ, ಕನ್ನಡ-ತುಳು ಭಾಷೆಗಳನ್ನು ಉಳಿಸಿ-ಬೆಳೆಸುವ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ. ಪುರಾಣದ ಕಥಾನಕಗಳ ಮೂಲಕ ಮಕ್ಕಳಿಗೆ ಸಂಸ್ಕಾರವನ್ನು, ನೈತಿಕ ಶಿಕ್ಷಣವನ್ನು ಪರೋಕ್ಷವಾಗಿ ನೀಡುತ್ತಾ ಬಂದಿರುವುದು ಸಾಧನೆಯೇ ಸರಿ. ಒಟ್ಟಿನಲ್ಲಿ ಒಂದು ಪಾರಿಭಾಷಿಕ ನಾಡಿನಲ್ಲಿ ಒಂದು ಸಾಂಸ್ಕೃತಿಕ ಪುನರುತ್ಥಾನವನ್ನು ಮಾಡುತ್ತಿರುವ ಶ್ರೀಯುತ ಬಾಲಕೃಷ್ಣ ಶೆಟ್ಟರು ಸ್ತುತ್ಯರ್ಹರು. ಎಲ್ಲಕ್ಕೂ ಮಿಗಿಲಾಗಿ ಪತಿಯ ಎಲ್ಲಾ ಸಾರ್ವಜನಿಕ ಸೇವಾ ಕೈಂಕರ್ಯಗಳಲ್ಲಿ ಸರ್ವವಿಧದಲ್ಲೂ ಸಹಕರಿಸುತ್ತಿರುವ ಪತ್ನಿ ಆಶಾ ಬಿ. ಶೆಟ್ಟಿಯವರ ಸಹೃದಯತೆ ಅಭಿನಂದನೀಯ, ಅನುಸರಣೀಯ. ಪತ್ನಿ, ಮಕ್ಕಳು ಅನಿಶಾ ಮತ್ತು ಅನುಷಾರೊಂದಿಗೆ ಸಂತೃಪ್ತ ಸಂಸಾರಿಯಾಗಿರುವ ‘ಬಾಲಣ್ಣ’ನಿಗೆ ಕಲಾಸೇವೆಯನ್ನು ಮಾಡುವ ಶಕ್ತಿ ಅನವರತವಿರಲಿ, ಆ ಕಲಾಮಾತೆ ಅವರನ್ನು ಸದಾ ಅನುಗ್ರಹಿಸಲಿ. ಯಕ್ಷಗಾನಂ ಗೆಲ್ಗೆ – ಯಕ್ಷಗಾನಂ ಬಾಳ್ಗೆ’’

ಲೇಖಕಿ: ಸುಮಾ ಹರೀಶ್, ಬಳಂತಿಮೊಗರು

ಸುಬ್ರಹ್ಮಣ್ಯ ಧಾರೇಶ್ವರರ ಜೊತೆಗೊಂದು ಆತ್ಮೀಯ ಸಂವಾದ

ಬಡಗುತಿಟ್ಟಿನ ಶ್ರೇಷ್ಠ, ಪ್ರಸಿದ್ಧ ಭಾಗವತರು ಸುಬ್ರಹ್ಮಣ್ಯ ಧಾರೇಶ್ವರ. ಈ ಹೆಸರು ಕೇಳಿದಾಕ್ಷಣವೇ ಇವರ ಇಂಪಾದ ದನಿ ನೆನಪಬುತ್ತಿಯಲ್ಲಿ ಹಾಡಲಾರಂಭಿಸುತ್ತದೆ. 1957 ಸೆಪ್ಟೆಂಬರ್ 5ರಂದು ಲಕ್ಷ್ಮೀನಾರಾಯಣ ಭಟ್ಟ- ಲಕ್ಷ್ಮೀ ದಂಪತಿಗಳ ಪುತ್ರರಾಗಿ ಗೋಕರ್ಣದಲ್ಲಿ ಜನಿಸಿದರು. ನಾಲ್ಕು ದಶಕಗಳಿಂದ ತನ್ನ ಇಂಪಾದ ಕಂಠದಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಾಧನೆಯ ಮೂಲಕ ಎತ್ತರೆತ್ತರಕ್ಕೆ ಬೆಳೆದರೂ ವಿನಯಸಂಪನ್ನರು. ಯಕ್ಷಗಾನದ ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದ ಸ್ವರಸಂಯೋಜಕ. ಪೌರಾಣಿಕ, ಸಾಮಾಜಿಕ ಎರಡೂ ಪ್ರಸಂಗಗಳನ್ನು ಬಹಳ ಚೆನ್ನಾಗಿ ಆಡಿಸಬಲ್ಲ ಕೆಲವೇ ಭಾಗವತರಲ್ಲಿ ಓರ್ವರು. ಗುರುಗಳಾದ ನಾರಣಪ್ಪ ಉಪ್ಪೂರರನ್ನು ಸದಾ ಸ್ಮರಿಸುವ ಆದರ್ಶ ವ್ಯಕ್ತಿತ್ವ. ಈ ಸಂದರ್ಶನದಲ್ಲಿ ಪ್ರತಿ ಪ್ರಶ್ನೋತ್ತರದಲ್ಲಿ ಉಪ್ಪೂರರ ನೆನಪು ಮಾಡಿಕೊಳ್ಳದೆ ಮುಗಿಸಿದ್ದಿಲ್ಲ. ಅಂತಹ ಮೇರುಕಲಾವಿದರೊಂದಿಗೆ ಒಂದು ಆತ್ಮೀಯ ಸಂವಾದ ಇಲ್ಲಿದೆ.


ಪ್ರಶ್ನೆ : ಯಕ್ಷಗಾನದತ್ತ ನಿಮ್ಮ ಆಸಕ್ತಿಗೆ ಕಾರಣ ಯಾವುದು?
ಧಾರೇಶ್ವರ – ಕಾಳಿಂಗ ನಾವಡರ ಪದ್ಯ ಕಾರಣ. ಮೊದಲು ಯಕ್ಷಗಾನವೆಂದರೆ ನನಗೆ ಆಗುತ್ತಲೇ ಇರಲಿಲ್ಲ. ನಾಟಕ, ಭಜನೆ, ಹಿಂದುಸ್ಥಾನಿ ಸಂಗೀತದಲ್ಲಿ ಆಸಕ್ತಿ, ಪರಿಶ್ರಮವಿತ್ತು. ಶಂ. ಸಾಮಗ, ರಾ. ಸಾಮಗ, ವಾ. ಸಾಮಗ, ಭಾ. ಸಾಮಗ, ಹೊನ್ನಪ್ಪ ಗೋಕರ್ಣ, ಮಂಟಪ, ಕಾಳಿಂಗ ನಾವಡ, ಕಡತೋಕ ಕೃಷ್ಣ ಭಾಗವತರು ಮೊದಲಾದ ಮಹಾಕಲಾವಿದರಿದ್ದ ಮೊದಲಿನ ಪೆರ್ಡೂರು ಮೇಳವದು. ಕ್ಯಾಂಪ್ ಖಾಲಿ ಇದ್ದುದರಿಂದ ವಾ. ಸಾಮಗರು ನಮ್ಮ ಎಲೆಕ್ಟ್ರಿಕಲ್ ಅಂಗಡಿಗೆ ಬಂದರು. ನಮ್ಮ ಸೋದರಮಾವ ನಾಗೇಶ ಮಧ್ಯಸ್ಥರಲ್ಲಿ ಆಟದ ವ್ಯವಸ್ಥೆ ಬಗ್ಗೆ ಮಾತನಾಡಿದರು. ಸಿದ್ಧತೆಯ ಜವಾಬ್ದಾರಿ ನನ್ನ ಪಾಲಿಗೆ ಬಂತು. ನಡುರಾತ್ರಿ ಆಟದವರಿಗೆ ಚಹಾ ವ್ಯವಸ್ಥೆ ಮಾಡಿ ಟೆಂಟಿನ ಹೊರಗೆ ನಿಂತಿದ್ದೆವು. ಆಗ ನಾವಡರ ಪದ್ಯ ಕೇಳಿತು. ಆ ಪದ್ಯಗಳು ನಮ್ಮನ್ನು ಬೆಳಗಿನವರೆಗೂ ಆಟ ನೋಡಿಸಿದವು.

ವಿಜಯಶ್ರೀ ಪ್ರಸಂಗ. ಬೆಳಗಿನ ಜಾವದ ಹಿತವಾಯ್ತೆ ಪ್ರಿಯನೆ ಎಂಬ ಪದ್ಯ ತಲೆಯಲ್ಲಿ ಅಚ್ಚಾಯಿತು. ಸಂಗೀತ ಮೊದಲೇ ಗೊತ್ತಿದ್ದರಿಂದ ನಾವಡರ ಪದ್ಯ ಕೇಳಿ ಮತ್ತಷ್ಟು ಆಸಕ್ತಿ ಬೆಳೆಯಿತು. ಕೆಲವು ಆಟ ನೋಡಲು ಆರಂಭಿಸಿದೆ. ಕೆಲವೇ ಸಮಯದಲ್ಲಿ ನಮ್ಮ ಬ್ಯುಸಿನೆಸ್ ಸಹ ಲಾಸ್ ಆಯಿತು. ಆಗ ನನ್ನ 21ನೇ ವಯಸ್ಸಿನಲ್ಲಿ 1977-78ರಲ್ಲಿ ನನ್ನ ಸೋದರಮಾವ ನನ್ನನ್ನು ಕರೆದುಕೊಂಡು ಹೋಗಿ ಕೋಟ ಕೇಂದ್ರಕ್ಕೆ ಸೇರಿಸಿದರು. ಪ್ರವೇಶ ಪರೀಕ್ಷೆಯಲ್ಲಿ ಮಾರುತಿ ಪ್ರತಾಪದ ‘‘ಬಾರನ್ಯಾಕೆ ಮಾರಜನಕ ಸಾರ ಸಾಕ್ಷಿಯೇ’’ ಪದ್ಯ ಹೇಳಿದೆ. ತಾಳ ರಾಗಗಳ ಅರಿವಿಲ್ಲದಿದ್ದರೂ ಕೆಲವು ಆಟ ನೋಡಿ ನನಗೆ ಆ ಪದ್ಯ ಬಾಯಿಪಾಠವಾಗಿತ್ತು. ಹೀಗೆ ಕೋಟ ಕೇಂದ್ರದ ವಿದ್ಯಾರ್ಥಿಯಾದೆ.


ಪ್ರಶ್ನೆ : ನಿಮ್ಮ ಗುರುಗಳಾದ ಉಪ್ಪೂರರ ಬಗ್ಗೆ?

ಧಾರೇಶ್ವರ – ಉಪ್ಪೂರು ಅಂದ್ರೆ ನನ್ನ ಪಾಲಿಗೆ ಸರ್ವಸ್ವ. A to Z. ನನಗೆ ಮತ್ತೊಂದು ಜನ್ಮಕೊಟ್ಟ ತಂದೆ, ಗುರು. ಗುರು ಎಂಬ ಶಬ್ದಕ್ಕೆ ಸರಿಯಾದ ಅರ್ಥವೇ ನನ್ನ ಜೀವನದಲ್ಲಿ ಉಪ್ಪೂರು. ಕೇಂದ್ರ ಆರಂಭವಾಗುವ ದಿನ ಅಲ್ಲಿ ಗಣಹೋಮ ಮಾಡುತ್ತಾರೆ. ಅದಕ್ಕೆ ಉಪ್ಪೂರರೇ ಕುಳಿತುಕೊಳ್ಳುವುದು. ನಾನು ಮೊದಲಿಗೆ ಹೋಗುವಾಗ ಕಂಡಿದ್ದು ಆ ದೃಶ್ಯವನ್ನು. ಅದು ಅನಂತರ ನನಗೆ ಅನ್ನಿಸುವುದು “ಪರಮ ಋಷಿಮಂಡಲದ ಮಧ್ಯದಿ ಮೆರೆವ ಯಜ್ಞೇಶ್ವರನ ಪ್ರಭೆಯೊಳು’’ ಆ ಪದ್ಯದ ಅರ್ಥ ನನಗೆ ಆವಾಗಲೇ ದೃಶ್ಯದಿಂದ ಆಗಿತ್ತು. ಅಂದು ಅವರನ್ನು ನೋಡುವಾಗಲೇ ತಾನಾಗಿಯೇ ಕೈಮುಗಿದು ಹೋಯಿತು, ತಲೆಬಾಗಿತು.


ಪ್ರಶ್ನೆ : ಭಾಗವತಿಕೆಯ ಆರಂಭದ ಹಂತಗಳು ಹೇಗಿದ್ದವು?
ಧಾರೇಶ್ವರ – ಆರಂಭದಲ್ಲಿ ಮೇಳಕ್ಕೆ ಅಧಿಕೃತ ಸಂಗೀತಗಾರನಾಗಿ ಸೇರುವ ಧೈರ್ಯವಿರಲಿಲ್ಲ. ನಾನು ಎಲೆಕ್ಟ್ರಿಷಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದೆ. ದೇವರ ಸೇವೆಯ ದಿನ ‘‘ಒಂದಾದರೂ ಪದ್ಯ ಹೇಳುಕ್ಕೆ ಅಕ್ಕ’’ ಅಂತ ಉಪ್ಪೂರು ಕೇಳಿದರು. ದುರ್ಗಪ್ಪ ಗುಡಿಗಾರರಲ್ಲಿ ಗುರುಗಳು ಹೀಗೆ ಹೇಳಿದರು ಎಂದಾಗ ಅವರೇ ಮದ್ದಲೆಗೆ ಬರ್ತೇನೆ ಎಂದು ಧೈರ್ಯ ತುಂಬಿದರು. ರಂಗಸ್ಥಳದಲ್ಲಿ ತೆರೆಬಿಟ್ಟಿದ್ದರಿಂದ ಮುದದಿಂದ ಪದ್ಯವನ್ನು ಹೇಗೋ ಧೈರ್ಯ ಮಾಡಿ ಹೇಳಿದೆ. ಚೌಕಿಯಲ್ಲಿ ಗಣಪತಿಪೂಜೆ ಸರಿಯಾಗಿ ಆಗಬೇಕಿದ್ದರಿಂದ ಆ ಧೈರ್ಯ ಇರಲಿಲ್ಲ. ಹೀಗೆ ಆರಂಭವಾಗಿ ಕೆಲವು ವರ್ಷ ಕಳೆಯಿತು. ಗುರುಗಳಿಂದ ಕೇಂದ್ರದಲ್ಲೂ ಮೇಳದಲ್ಲೂ ಪಾಠವಾಗುತ್ತಿತ್ತು. ಹೀಗೆ ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ, ಎಲೆಕ್ಟ್ರಿಷಿಯನ್ ಆಗಿ, ಹಗಲು ಮೈಕ್ ಅಡ್ವರ್ಟೈಸ್ ಮಾಡುತ್ತಿದ್ದೆ.


ಪ್ರಶ್ನೆ : ರಂಗತಂತ್ರಗಳನ್ನು ಪೌರಾಣಿಕ ಮತ್ತು ಸಾಮಾಜಿಕ ಪ್ರಸಂಗ ಗಳೆರಡರಲ್ಲೂ ಬಹಳ ಚೆನ್ನಾಗಿ ಅಳವಡಿಸುತ್ತೀರಿ? ಅದು ಹೇಗೆ ಸಾಧ್ಯ ವಾಯಿತು?
ಧಾರೇಶ್ವರ – ಮೊದಲು ನಮ್ಮ ಪದ್ಯ ಆದಮೇಲೆ ಆಟ ನೋಡಲೇ ಬೇಕಿತ್ತು. ಅಲ್ಲಿಯ ಸೂಕ್ಷ್ಮಗಳನ್ನು ಗಮನಿಸಿ ಬರೆದಿಟ್ಟುಕೊಳ್ಳುತ್ತಿದ್ದೆ. ಒಮ್ಮೆ ಅಲ್ಲಿಯೇ ಸ್ವಲ್ಪ ನಿದ್ರೆಗೆ ಜಾರಿದಾಗ ಗುರುಗಳು ತಾಳ ತೆಗೆದು ನನ್ನ ಕಡೆಗೆ ಎಸೆದರು. ಅದು ನನ್ನ ಹಣೆಗೆ ತಾಗಿ ಆದ ಗಾಯದ ಕಲೆ ಇನ್ನೂ ಇದೆ. ಅದಕ್ಕೆ ಕಾರಣ, ಅಂದಿನ ಕೀಚಕವಧೆಯ ಪ್ರಸಂಗದಲ್ಲಿ ದ್ರೌಪದಿ ಭೀಮನಲ್ಲಿ ಎರಡನೇ ಬಾರಿ ಬರುವ ದೃಶ್ಯವನ್ನು ಕೈಬಿಟ್ಟು ನೇರ ನಾಟ್ಯಶಾಲೆಗೆ ಕೀಚಕ ಬರುವ ದೃಶ್ಯವನ್ನೆ ತೆಗೆದುಕೊಂಡಿದ್ದರು. ಆ ರಂಗತಂತ್ರವನ್ನು ನಾನು ಗಮನಿಸಲಿಲ್ಲವೆಂದು ಗುರುಗಳು ಹಾಗೆ ಮಾಡಿದ್ದರು. ಆದರೆ ಅವರ ಶಿಷ್ಯವಾತ್ಸಲ್ಯ ಎಷ್ಟೆಂದರೆ ಮರುದಿನ ಬೆಳಿಗ್ಗೆ ಅವರೇ ಔಷಧ ನೀಡಿ ರಂಗತಂತ್ರದ ವಿಷಯವನ್ನು ಹೇಳಿ, ಭಾಗವತ ಸಮಯ ನೋಡಿಕೊಂಡು ಇಂತಹ ತಂತ್ರಗಳನ್ನು ಮಾಡಬೇಕಾಗುತ್ತದೆ ಎಂದರು. ಆ ಘಟನೆಯಿಂದ ಅದರ ಮಹತ್ತ್ವವರಿತು ಆ ಬಗ್ಗೆ ಗಮನಹರಿಸುವಂತಾಯಿತು. ನಾನು ಎಲೆಕ್ಟ್ರಿಷಿಯನ್ ಆದ ಕಾರಣ ಬೆಳಕನ್ನು ರಂಗದಲ್ಲಿ ಹೇಗೆ ಉಪಯೋಗಿಸಬೇಕೆಂಬ ತಂತ್ರಕ್ಕೆ ಸಹಕಾರಿಯಾಯಿತು.


ಪ್ರಶ್ನೆ : ಕಲಾವಿದನ ಸಾಮರ್ಥ್ಯ ಮತ್ತು ಮನವರಿತು ಕುಣಿಸುವುದರಲ್ಲಿ ನೀವು ಕುಶಲಮತಿಗಳು, ಅದರಿಂದ ಆದ ಅನ್ವೇಷಣೆಗಳನ್ನು ಉದಾಹರಿಸಬಹುದೇ?
ಧಾರೇಶ್ವರ – ಛಲದಂಕ ಚಕ್ರೇಶ್ವರ ಪ್ರಸಂಗದಲ್ಲಿ ಒಮ್ಮೆ ಚಿಟ್ಟಾಣಿಯವರು ಗದಾಪರ್ವದ ಅಂತಿಮಘಟ್ಟದ “ಕಪಟನಾಟಕ ರಂಗ ಗುಪಿತವೇನೋ ನಿನ್ನಂಗ” ಪದ್ಯಕ್ಕೆ ಅಭಿನಯಿಸುತ್ತಿದ್ದರು. ಅವರಿಗೆ ಒಂದು ಚಿಕ್ಕ ಗ್ಯಾಪ್ ಬೇಕು ಅಂತ ನನಗೂ ಅನಿಸಿತು. ಕೂಡಲೇ “ಎಲವೋ ಪಾತಕಿ” ಪದ್ಯವನ್ನು ಅದರಲ್ಲೇ ಜೋಡಿಸಿದೆ. ಕೃಷ್ಣನಾಗಿದ್ದ ಕಣ್ಣಿಯವರು ತಕ್ಷಣ ಹೆಜ್ಜೆ ಇಡುತ್ತಾ ರಂಗವನ್ನು ತುಂಬಿದರು. ಚಿಟ್ಟಾಣಿಯವರಿಗೂ ಸುಧಾರಿಸಿಕೊಳ್ಳಲು ಸಮಯ ಸಿಕ್ಕಿತು. ಸಂದರ್ಭಕ್ಕೆ ಸರಿಯಾದ ಒಂದು ಹೊಸ ಅನ್ವೇಷಣೆ ಹುಟ್ಟಿ ಅದನ್ನೇ ಅನುಸರಿಸುವಂತಾಯಿತು. ಹೀಗೆ ಅನೇಕ ಸನ್ನಿವೇಶಗಳು ಪ್ರೇಕ್ಷಕನ ಮನಮುಟ್ಟುವಲ್ಲಿ ಸಹಕಾರಿಯಾಗಿವೆ.


ಪ್ರಶ್ನೆ : ಕಾಳಿಂಗ ನಾವಡ ಎಂಬ ಪ್ರತಿಭೆ ಬಡಗಿನಲ್ಲಿ ಸರ್ವಾಂತರ್ಯಾಮಿಯಾದ ಸಂದರ್ಭದಲ್ಲಿಯೇ ನೀವು ಪ್ರಸಿದ್ಧರಾದವರು. ಹೇಗದು ಸಾಧ್ಯವಾಯಿತು?
ಧಾರೇಶ್ವರ – ಅದು ನನಗೇ ಆಶ್ಚರ್ಯ. ಅವರೊಂದು ಸಮುದ್ರ, ಅಸೂಯೆ, ದ್ವೇಷಗಳಾವುದೂ ಇಲ್ಲದ ವ್ಯಕ್ತಿತ್ವ. ನನ್ನ ಬೆಳವಣಿಗೆಗೆ ಅವರೂ ಕಾರಣರು. ಹೇಗೆಂದರೆ, ಮಳೆಗಾಲದ ಬಾಂಬೆಯ ಆಟಕ್ಕೆ ನನ್ನನ್ನು ಕರೆದುಕೊಂಡು ಹೋಗಲು ಕೋಟ ಕೇಂದ್ರಕ್ಕೆ ಬಂದರು. ಆಗ ನಾನು ಕೇಂದ್ರದ ವಿದ್ಯಾರ್ಥಿಯಾಗಿಯೇ ಇದ್ದೆ. ಅವರೊಂದಿಗೆ ಮುಂಬಯಿಯ ಸಾಧುಶೆಟ್ರು, ಮೊಗವೀರ ಸಮಾಜದ ಪ್ರಮುಖರಾದ ಪುಂಡಲೀಕರವರು, ಕುಂದನ್, ಪ್ರೊ. ಅಧಿಕಾರಿ ಮೊದಲಾದವರು ಬಂದರು. ಉಪ್ಪೂರರು ನನ್ನನ್ನು ಚಹಾ ತರಿಸಲು ಕಳಿಸಿದರು. ಆಗ ಈ ಬಗ್ಗೆ ಉಪ್ಪೂರರಲ್ಲಿ ಮಾತಾಡಿದ್ದಾರೆ. ಗುರುಗಳು ಅಲ್ಲಿಯ ವ್ಯವಸ್ಥೆಯ ಬಗ್ಗೆ, ಪ್ರಸಂಗದ ಬಗ್ಗೆ, ಕಲಾವಿದರ ಬಗ್ಗೆ ಎಲ್ಲಾ ಮಾತನಾಡಿ ನನ್ನ ಯೋಗಕ್ಷೇಮದ ಬಗ್ಗೆ ಎಲ್ಲವನ್ನು ಮಾತನಾಡಿಯೇ ಒಪ್ಪಿಗೆ ಕೊಟ್ಟರು. ಅವರು ಹೊರಟು ಹೋದಮೇಲೆ ನನಗೆ ವಿಷಯ ತಿಳಿಸಿದರು. ಅಂದರೆ ಅವರಿಗೆ ಶಿಷ್ಯನನ್ನು ಕಳಿಸುವಾಗಲೂ ತಂದೆಗಿರಬೇಕಾದ ಜವಾಬ್ದಾರಿ. ಬಾಂಬೆಗೆ ಹೋದರೆ ನನ್ನಲ್ಲಿ ಪ್ರಸಂಗ ಪುಸ್ತಕ ಇರಲಿಲ್ಲ. ನಾವಡರಲ್ಲಿ ಕೇಳಿದಾಗ ಪುಸ್ತಕ ತರಲಿಲ್ಲ ಅಂದರು. ಅವರಿಗೆ ಎಲ್ಲಾ ಪದ್ಯವೂ ಕಂಠಸ್ಥವಾಗಿತ್ತು. ಆಮೇಲೆ ಅವರೇ ಗೋಪಾಲಾಚಾರ್ಯರಿಗೆ ಹೇಳಿದರು. ಅವರಿಗೂ ಸಹ ಪದ್ಯ ಬಾಯಿಪಾಠ. ಮಾತ್ರವಲ್ಲ ಯಾವ ಸೀನ್ ಎಷ್ಟು ಗಂಟೆಗೆ ಎಂಬುದನ್ನು ಕರಾರುವಾಕ್ಕಾಗಿ ಹೇಳಿದರು. ಪದ್ಯಗಳನ್ನು ಬರೆದು ಕೊಟ್ಟರು. ಹೀಗೆ ನನ್ನ ಪ್ರಸಿದ್ಧಿಯಲ್ಲಿ ನಾವಡರ ಪಾತ್ರವೂ ತುಂಬಾ ಮುಖ್ಯವಾದುದು.


ಪ್ರಶ್ನೆ : ದುರ್ಗಪ್ಪ ಗುಡಿಗಾರರ ಬಗ್ಗೆ?

ಧಾರೇಶ್ವರ – ಗುಡಿಗಾರ್ ನನ್ನ ಉಸಿರು. ಅದೊಂದು ಶಬ್ದ ಸಾಕು ಎನಿಸುತ್ತದೆ. (ಒಮ್ಮೆ ನಿಟ್ಟುಸಿರು ಬಿಟ್ಟು) ಆ ಉಸಿರು ದೂರವಾದ ಮೇಲೆ ಸ್ವಲ್ಪ ಡೋಲಾಯಮಾನವಾಯಿತು. ನನ್ನೆಲ್ಲಾ ಪದ್ಯಕ್ಕೂ ಅವರ ಸಾಥ್ ಅವಿಸ್ಮರಣೀಯ. ಅನೇಕ ಪ್ರಸಂಗದ ಕೆಲವು ಸನ್ನಿವೇಶಗಳಿಗೆ ಅವರ ಸಲಹೆ ಸಹಕಾರವಾಯಿತು. ಇಲ್ಲಿಗೆ ಬೇರೆ ಯಾವುದೋ ಬೇಕು. ಇಲ್ಲಿಗೆ ಈ ರಾಗ ಬೇಡ ಹೀಗೆ ಸಲಹೆ ನೀಡುತ್ತಿದ್ದ ಗುರುಸಮಾನರು. ಅವರಂತವರು ಲಕ್ಷಕ್ಕೊಬ್ಬರು.


ಪ್ರಶ್ನೆ : ಆಟ, ತಾಳಮದ್ದಲೆ, ಗಾನವೈಭವಗಳಲ್ಲಿ ಭಾಗವತಿಕೆಯ ವ್ಯತ್ಯಾಸವೇನು?
ಧಾರೇಶ್ವರ – ಆಟದಲ್ಲಿ ವೇಷಧಾರಿಯನ್ನು ನೋಡಿ, ಪ್ರಸಂಗಾವಧಾನತೆಯನ್ನು ಮೀರದಂತೆ ಭಾಗವತಿಕೆ ಇರಬೇಕು. ಉದಾಹರಣೆಗೆ ಸುಧನ್ವನ ಸೃಷ್ಟಿಗರ್ಜುನ ಪದ್ಯಕ್ಕೂ, ಅರ್ಜುನನ ಹುಡುಗ ನೀನು ಪದ್ಯಕ್ಕೂ ವ್ಯತ್ಯಾಸವಿದೆ. ಕೆಲವು ಕಡೆ ಸನ್ನಿವೇಶ ಕಳೆಕಟ್ಟಲು ಆ ಪ್ರಸಂಗದಲ್ಲಿಲ್ಲದ ಕಿಸೆಪದ್ಯಗಳ ಅಗತ್ಯವಿದೆ.
ತಾಳಮದ್ದಲೆ ಮಾತಿನಮಂಟಪ, ಅಲ್ಲಿ ಪದ್ಯಗಳ ಪುನರಾವರ್ತನೆಯು ಬೇಡ. ಕೆಲವು ಕಡೆ ಆರಂಭದ ಮುಕ್ತಾಯವೂ ಬೇಡ. (ಸಂಧಾನದ ನೋಡಿದೆಯಾ ವಿದುರ ಪದ್ಯ ಹೇಳಿ ತೋರಿಸಿದರು) ಆ ಸಮಯವನ್ನು ಅರ್ಥಧಾರಿಗೆ ನೀಡಬಹುದು.
ಗಾನವೈಭವ ಓಡಾಡಲು ದೊಡ್ಡ ಮೈದಾನ ಕೊಟ್ಟಂತೆ. ಪದ್ಯವನ್ನು ವಿಸ್ತರಿಸಬಹುದು, ಅನೇಕ ರಾಗಗಳನ್ನು ಅಳವಡಿಸಬಹುದು. ಹಿಮ್ಮೇಳ ವಾದಕರಿಗೆ ಸಾಕಷ್ಟು ಅವಕಾಶ. ಆದರೆ ಹಿಂದಿನವರು ಮಾಡಿಟ್ಟ ಪದ್ಯದ ವ್ಯವಸ್ಥೆಗಳನ್ನು ಮೀರಬಾರದು.
(ಒಂದೇ ಪದ್ಯವನ್ನು ಮೂರೂ ಸಂದರ್ಭದಲ್ಲಿ ಹೇಗೆ ಬಳಸಬೇಕೆಂಬುದನ್ನು ಹೇಳಿ ತೋರಿಸಿದರು)


ಪ್ರಶ್ನೆ : ಚಿಟ್ಟಾಣಿ ಮತ್ತು ಶೇಣಿಯವರೊಂದಿಗಿನ ಒಡನಾಟದ ಬಗ್ಗೆ?
ಚಿಟ್ಟಾಣಿ ಮತ್ತು ಶೇಣಿಯವರಿಗೆ ಪದ್ಯ ಹೇಳಿದರೆ ಸುಮಾರಿಗೆ ಭಾಗವತ ಆದ ಹಾಗೆ ಅಂತ ಉಪ್ಪೂರು ಹಿಂದೊಮ್ಮೆ ಹೇಳಿದ ಮಾತು. ಚಿಟ್ಟಾಣಿಯವರ ಅಭಿನಯ, ಹೆಜ್ಜೆಗಾರಿಕೆಯ ವಿನ್ಯಾಸ, ಸೂಕ್ಷ್ಮಗಳನ್ನು ಅರಿತು ಪದ್ಯ ಹೇಳಲು ತುಂಬಾ ಜಾಗೃತ ಆಗಿರಬೇಕು. ಹಾಗೆಯೇ ಶೇಣಿಯವರ ತಾಳಮದ್ದಲೆಯಲ್ಲಿ ಪದ್ಯ ಹೇಳಲು ಸಹ. ಒಮ್ಮೆ ಕಾರ್ಕಳದಲ್ಲಿ ವಾಲಿವಧೆ ಪ್ರಸಂಗ. ಸಾಮಾನ್ಯವಾಗಿ “ಚಿತ್ತದಲ್ಲಿ ಶಂಕೆ ಬೇಡ” ಪದ್ಯವನ್ನು ವೀರರಸದಲ್ಲಿಯೇ ಹೇಳುವ ವಾಡಿಕೆ. ಆದರೆ ಆ ದಿನ ಶೇಣಿಯವರು ವಾಲಿಯಾಗಿ “ತಾರೆ! ಇನ್ನೂ ನಿನ್ನ ಪತಿಯ ವ್ಯಕ್ತಿತ್ವದ ಮೇಲೆ ಅನುಮಾನವೇನೇ? ಅಂತ ಕರುಣೆಯ ಛಾಯೆಯಲ್ಲಿ ಅರ್ಥವನ್ನು ಮುಂದಿನ ಪದ್ಯಕ್ಕಾಗಿ ನಿಲ್ಲಿಸಿದರು. ನನಗದು ಅನಿರೀಕ್ಷಿತ. ಯೋಚಿಸಲೂ ಅವಕಾಶ ಅಲ್ಲಿಲ್ಲ. ಅಂದು ಕರುಣಾರಸದಲ್ಲಿಯೇ ಆ ಪದ್ಯವನ್ನು ಹೇಳಿದೆ. ಅದಕ್ಕೆ ಅರ್ಥ ಹೇಳುವಾಗ ಶೇಣಿಯವರು ಇದು ವಾಲಿಯ ನಿಜವಾದ ಮನಸ್ಸು, ಅಷ್ಟು ಬೇಗ ನಿನಗೆ ಅರ್ಥವಾಯಿತಲ್ಲ. ಅಂತ ನನ್ನನ್ನು ತೋರಿಸಿದರು. ಮರುದಿನ ಕೇಂದ್ರಕ್ಕೆ ಉಪ್ಪೂರರಿಗೆ ಶೇಣಿಯವರ ಪತ್ರ. ಮತ್ತೊಂದು ಉತ್ತಮ ರತ್ನವನ್ನು ಕೊಡುತ್ತಿದ್ದೀರಿ, ಧನ್ಯವಾದಗಳು, ನಿಮ್ಮ ನಿಯಂತ್ರಣದಲ್ಲಿರಲಿ. ಹೀಗೆ ಇತ್ತು.


ಪ್ರಶ್ನೆ : ಕರ್ಣಾಟಕದಾದ್ಯಂತ ಯಕ್ಷಗಾನ ಕಲೆಯನ್ನು ಪಸರಿಸುವಲ್ಲಿ ಇರುವ ಸಾಧ್ಯತೆಗಳೇನು?
ಧಾರೇಶ್ವರ – ಕರ್ಣಾಟಕದ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಅಲ್ಲಿಯ ಕಾಲೇಜು ವಿದ್ಯಾರ್ಥಿಗಳಿಗೆ ನಮ್ಮ ಯಕ್ಷಗಾನವನ್ನು ಪ್ರದರ್ಶಿಸಿ, ವೇಷಭೂಷಣ, ಬಣ್ಣಗಾರಿಕೆ ಇದರ ಬಗ್ಗೆ ಪರಿಚಯಿಸಿ, ಅವರನ್ನು ಪ್ರೇಕ್ಷಕರನ್ನಾಗಿಸಿ ಶಿಬಿರ ಪ್ರಾತ್ಯಕ್ಷಿಕೆಗಳ ಮೂಲಕ ಅವರು ವೇಷ ಮಾಡುವಂತೆ ಮಾಡಿ ಈ ಕಲೆಯನ್ನು ನಾಡಿನ ಉಸಿರಾಗಿಸಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಚಾರಿಟೆಬಲ್ ಟ್ರಸ್ಟ್ ಒಂದಷ್ಟು ಪ್ರಯತ್ನ ಮಾಡುತ್ತಿದೆ. ಸಂಪೂರ್ಣ ಕರ್ಣಾಟಕವನ್ನು ಪಸರಿಸುವ ಶ್ರೀಮಂತಿಕೆ ಈ ಕಲೆಗಿದೆ. ಅದಕ್ಕೆ ಬೇಕಾದ ಪ್ರಯತ್ನ ಅಗತ್ಯ.


ಪ್ರಶ್ನೆ : ಮೂಡುಬಿದಿರೆಯ ಆಳ್ವಾಸ್‍ನ ಯಕ್ಷಗಾನ ಡಿಪ್ಲೊಮಾ ಕೋರ್ಸ್‍ನಲ್ಲಿ ಗುರುಗಳಾಗಿದ್ದೀರಿ. ಡಾ| ಮೋಹನ್ ಆಳ್ವರ ಈ ಯೋಜನೆಯು ಹೇಗೆ ಯಕ್ಷಗಾನದ ಪ್ರಸಾರದಲ್ಲಿ ಸಹಕಾರಿ?
ಧಾರೇಶ್ವರ – ಸಮಗ್ರ ತೆಂಕು ಬಡಗು ಯಕ್ಷಪ್ರಪಂಚ ಅಭಿನಂದಿಸಬೇಕಾದ ವ್ಯಕ್ತಿ ಡಾ| ಎಂ. ಮೋಹನ ಆಳ್ವರು. ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಭಾಜ್ಯ ಅಂಗವಾಗಿ ಯಕ್ಷಗಾನವನ್ನು ಬೆಳೆಸುವ ಯೋಜನೆ ಅವರದು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ವಿಸ್ತರಿಸುವಂತೆ ಮಾಡುವ ಯೋಜಿತ ಯೋಚನೆ ಅವರಲ್ಲಿದೆ. ಈ ಕೋರ್ಸ್‍ಗೆ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಬಂದಿದ್ದಾರೆ. ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಬಗ್ಗೆಯೂ ಸ್ಪಷ್ಟ ಪರಿಕಲ್ಪನೆ ಅವರಲ್ಲಿದೆ. ಇದೊಂದು ಅಭೂತಪೂರ್ವವಾದ ಯೋಜನೆಯಾಗಿದೆ.


ಪ್ರಶ್ನೆ : ಪೆರ್ಡೂರು ಮೇಳದೊಂದಿಗಿನ ನಿಮ್ಮ ನಂಟು?
ಧಾರೇಶ್ವರ – ಪೆರ್ಡೂರು ಮೇಳದಲ್ಲಿನ 26 ವರ್ಷದ ತಿರುಗಾಟ ಸದಾ ಸ್ಮರಣೀಯ. ನನ್ನೆಲ್ಲ ನವ್ಯತೆಯ ಪ್ರಯೋಗಗಳಿಗೂ ಮೇಳದ ಯಜಮಾನರಾದ ಕರುಣಾಕರ ಶೆಟ್ರು ಸಂಪೂರ್ಣ ಸಹಕಾರ ನೀಡುತ್ತಿದ್ದರು. ಸೌಂಡ್ ಸಿಸ್ಟಮ್, ಲೈಟಿಂಗ್ಸ್, ಜನರೇಟರ್, ರಂಗಸ್ಥಳ ಮುಂತಾದವುಗಳ ಬಗ್ಗೆ ಇದರ ಅವಶ್ಯಕತೆ ಇದೆ ಎಂದಾಗ ಕೂಡಲೇ ವ್ಯವಸ್ಥೆ ಮಾಡುತ್ತಿದ್ದರು. ಇದರಿಂದ ಮೇಳದ ಪ್ರದರ್ಶನಗಳು ಯಶಸ್ವಿಯಾಗಲು ಸಾಧ್ಯವಾಯಿತು.


ಪ್ರಶ್ನೆ : ಧಾರೇಶ್ವರ ಚಾರಿಟೇಬಲ್ ಟ್ರಸ್ಟಿನ ಕಾರ್ಯ ಯೋಜನೆಯ ಬಗ್ಗೆ ತಿಳಿಸಿ?
ಧಾರೇಶ್ವರ – ವರ್ಷಕ್ಕೆ ನಲ್ವತ್ತು ನಲ್ವತೈದು ಆಟ, ಉಡುಪಿಯಲ್ಲೊಂದು ಅಷ್ಟಾಹ, ತಾಳಮದ್ದಲೆ ಸಪ್ತಾಹ ಇವೆಲ್ಲ ನಡೆಯುತ್ತಿವೆ. ಯಕ್ಷಗಾನಕ್ಕಾಗಿ ಹಿಂದೆ ತುಂಬಾ ಶ್ರಮಿಸಿದ, ಕೊಡುಗೆ ನೀಡಿದ ಕಲಾವಿದರನ್ನು ಗುರುತಿಸುವ ಅವರ ಕೊಡುಗೆಯ ಮಹತ್ತ್ವವನ್ನು ಸಾದರಪಡಿಸುವ ಯೋಜನೆ ಇದೆ.


ಪ್ರಶ್ನೆ : ನಿಮ್ಮ ಸುಪುತ್ರ ಕಾರ್ತಿಕ್ ಧಾರೇಶ್ವರರು ಹೇಗೆ ಯಕ್ಷಗಾನದಲ್ಲಿ ಸಕ್ರಿಯರಾಗಿದ್ದಾರೆ? ನಿಮ್ಮನ್ನು ಅವರಲ್ಲಿ ನೋಡುವ ನಿರೀಕ್ಷೆಯ ಕಣ್ಣುಗಳಿರಬಹುದು.
ಧಾರೇಶ್ವರ – ಅವನಿಗೆ ಸ್ವರ ಚೆನ್ನಾಗಿತ್ತು. ಶ್ರುತಿಜ್ಞಾನವಿದೆ. ಆದರೆ ಅವನ ಆಸಕ್ತಿ ಚಂಡೆಯಲ್ಲಿ. ಹವ್ಯಾಸಿ ಯಕ್ಷಗಾನ ಕಲಾವಿದನಾಗಿದ್ದಾನೆ.


ಪ್ರಶ್ನೆ : ನಿಮ್ಮ ಸಾಧನೆಯಲ್ಲಿ ನಿಮ್ಮ ಪತ್ನಿಯ ಪಾತ್ರ?
ಧಾರೇಶ್ವರ – ನನ್ನ ಸಾಧನೆಗೆ ಕಾರಣಳಾದವಳು ಪತ್ನಿ. ಅವಳು ಭರತನಾಟ್ಯ ಕಲಾವಿದೆ. ಕೆಲವು ಹೊಸಪ್ರಸಂಗಗಳ ನೃತ್ಯದ ಸೆಟ್ಟಿಂಗ್, ಡೈಲಾಗ್ ಸೆಟ್ಟಿಂಗಿಗೆ ಸಹಕಾರ ಅವಳಿಂದಲೇ. ಅನೇಕ ರಾಗದ ಬಗ್ಗೆಯೂ ಅಲ್ಲಿಗೆ ಆ ರೀತಿ ಹೇಳಬೇಕು ಇತ್ಯಾದಿ ಸಲಹೆ ನೀಡುತ್ತಾಳೆ. ಮನೆಯ ಸಂಪೂರ್ಣ ಜವಾಬ್ದಾರಿ ಅವಳದೇ. ನನಗೆ ಮನೆಯ ಸಮಸ್ಯೆ ಗೊತ್ತಿಲ್ಲ. ಅಷ್ಟು ಜವಾಬ್ದಾರಿ ಹೊತ್ತು ಸಹಕರಿಸಿದ್ದಾಳೆ.


ಸುಮಾರು ಮೂರು ತಾಸು ಆತ್ಮೀಯತೆಯಿಂದ ಅನೇಕ ವಿಚಾರಗಳನ್ನು ಹಂಚಿಕೊಂಡರು ಧಾರೇಶ್ವರರು. ಅದರಲ್ಲಿ ಕೆಲವು ಅಂಶಗಳನ್ನಷ್ಟೆ ಲೇಖನದಲ್ಲಿ ಬರೆದಿದ್ದೇನೆ. ಅವರ ಸಂದರ್ಶನದ ಸಮಯದಲ್ಲಿ ಸಹಕರಿಸಿದ ವಿದ್ವಾನ್ ಗಾಳಿಮನೆ ವಿನಾಯಕ ಭಟ್ಟರಿಗೂ, ಸುನಿಲ್ ಕುಮಾರ್ ಹೊಲಾಡು ಇವರಿಗೂ ಧನ್ಯವಾದಗಳನ್ನರ್ಪಿಸುತ್ತ ಧಾರೇಶ್ವರರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ು

ಲೇಖಕ: ರಜನೀಶ ಹೊಳ್ಳ,
ಕೆಂಪಿನಮಕ್ಕಿ

ತೆಂಕುತಿಟ್ಟು-ಪುಂಡುವೇಷಕ್ಕೆ ಮಾದರಿ ‘ಲಿಂಗಣ್ಣ’ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್

ಯಕ್ಷಗಾನದಲ್ಲಿ ಪುಂಡುವೇಷಧಾರಿಯಾಗಿ ಪ್ರೇಕ್ಷಕರ ಮನಸೂರೆಗೊಂಡು ತಾನು ಕಾಣಿಸಿಕೊಳ್ಳಲು ಕಲಾವಿದರಿಗೆ ಅವಕಾಶಗಳು ಧಾರಾಳ ಇವೆ. ಪ್ರವೇಶದ ರೀತಿ, ಧೀಂಗಿಣ, ಅಭಿನಯ, ವನವಿಹಾರ, ಯುದ್ಧದ ಸಂದರ್ಭಗಳ ವೈವಿಧ್ಯತೆ ಹೀಗೆ ಅವಕಾಶಗಳು ಒದಗುತ್ತವೆ. ತೆಂಕುತಿಟ್ಟಿನಲ್ಲಿ ಉದಯೋನ್ಮುಖರನೇಕರು ಈಗ ಮಿಂಚುತ್ತಿದ್ದರೂ ಹಳೆಯ ಪ್ರೇಕ್ಷಕರು ಹೊಸಹಿತ್ತಿಲು ಮಹಾಲಿಂಗ ಭಟ್ (ಲಿಂಗಣ್ಣ), ಕ್ರಿಶ್ಚಿಯನ್ ಬಾಬು ಮೊದಲಾದವರನ್ನು ಇನ್ನೂ ಮರೆತಿಲ್ಲ. ಯಾಕೆಂದರೆ ಸಾಧಕರಾಗಿಯೇ ಅವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಹೊಸಹಿತ್ತಿಲು ಮಹಾಲಿಂಗ ಭಟ್ಟರಂತೂ ಪುತ್ತೂರು ಶ್ರೀಧರ ಭಂಡಾರಿ ಎಂಬ ಅಸಾಮಾನ್ಯ ಪ್ರತಿಭೆಯು ಬೆಳಗಲು ಕಾರಣರಾಗಿ ಧನ್ಯರೆನಿಸಿಕೊಂಡರು.

ತೆಂಕುತಿಟ್ಟಿನ ಪುಂಡುವೇಷಗಳಿಗೆ ಅನನ್ಯ ಮಾದರಿಯಾಗಿದ್ದ ಮಹಾಲಿಂಗ ಭಟ್ಟರು ಸದ್ರಿ ವಿಚಾರಕ್ಕೆ ಅರ್ಹ ಸಂಪನ್ಮೂಲ ವ್ಯಕ್ತಿಯಾಗಿದ್ದವರು. ಹೊಸಹಿತ್ತಿಲು ಮಹಾಲಿಂಗ ಭಟ್ಟರ ಆಪ್ತೇಷ್ಟರು, ಕಲಾಭಿಮಾನಿಗಳೆಲ್ಲಾ ‘ಲಿಂಗಣ್ಣ’ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು. 1950-1990ರ ಕಾಲದಲ್ಲಿ ಶ್ರೀಯುತರು ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿ ವಿಜೃಂಭಿಸಿದ್ದರು. ಆಳಂಗದ ಕೊರತೆಯನ್ನು ಬಿಟ್ಟರೆ (ಗಿಡ್ಡದೇಹ) ಬೇರೇನೂ ಕೊರತೆಗಳಿಲ್ಲದ ಅತ್ಯುತ್ತಮ ಪುಂಡುವೇಷಧಾರಿಯಾಗಿ ರಂಗವನ್ನಾಳಿದ್ದರು. ಬಾಲಗೋಪಾಲರಿಂದ ತೊಡಗಿ ಬೆಳೆಯುತ್ತಾ ಪುಂಡುವೇಷ, ಸ್ತ್ರೀವೇಷ, ಕಸೆ ಸ್ತ್ರೀವೇಷ, ಕಿರೀಟ ವೇಷ, ಹೆಣ್ಣುಬಣ್ಣ ಮೊದಲಾದ ವಿಭಾಗಗಳಲ್ಲಿ ಹೊಳೆದು ಕಾಣಿಸಿಕೊಂಡಿದ್ದರು.

ತರುಣವೀರರ ಪಾತ್ರಗಳಲ್ಲಿ ಇವರು ರಂಗಪ್ರವೇಶಿಸುವ ರೀತಿ ಪ್ರವೇಶದ ಮುಕ್ತಾಯಕ್ಕೆ ಹಾರಿ ರಥದಲ್ಲಿ ಕುಳಿತುಕೊಳ್ಳುವ ರೀತಿ, ರಥದ ಮೇಲೆಯೇ ಧೀಂಗಿಣ ಮತ್ತು ನಮೂನೆವಾರು ಕುಣಿಯುತ್ತಿದ್ದ ಇವರ ಅದ್ಭುತ ಸಾಹಸವನ್ನು ನೋಡಿದ ಹಳೆಯ ಪ್ರೇಕ್ಷಕರು ಅದನ್ನು ಈಗಲೂ ನೆನಪಿಸಿಕೊಂಡು ಸಂತೋಷಪಡುತ್ತಾರೆ. ಪುರಾಣಜ್ಞಾನ, ರಂಗನಡೆ, ಪ್ರಸಂಗ ಮಾಹಿತಿಗಳನ್ನು ತಿಳಿದು ಮತ್ತೊಬ್ಬರಿಗೆ ಹೇಳಬಲ್ಲ ಆ ಕಾಲದ ಕಲಾವಿದರಲ್ಲೊಬ್ಬರಾಗಿದ್ದರು ಲಿಂಗಣ್ಣ. ಅಭಿಮನ್ಯು, ಬಭ್ರುವಾಹನ, ಭಾರ್ಗವ, ಚಂಡಮುಂಡರು ಮೊದಲಾದ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಅಚ್ಛಳಿಯದೆ ಉಳಿಯುವಂತೆ ಅಭಿನಯಿಸಿದ ಹಿರಿಮೆ ಇವರದು.

ಲಿಂಗಣ್ಣನವರು ಕಲಾವಿದನಾಗಿ ತನ್ನ ಮಿತಿಯನ್ನು ತಿಳಿದಿದ್ದರೂ, ಯಕ್ಷಗಾನದ ಪ್ರತಿಯೊಂದು ವಿಚಾರವೂ ತಿಳಿಯಬೇಕೆಂಬ ಹಂಬಲದಿಂದ ಕಲಿತವರು. ಇಂತವರು ಬಹಳ ಅಪರೂಪ. ಇವರೊಳಗೊಬ್ಬ ಕವಿಯೂ ಅಡಗಿದ್ದ. ಪದ್ಯ ರಚನೆಯನ್ನೂ ಮಾಡುತ್ತಿದ್ದರು. ಹೀಗೆ ಯಕ್ಷಗಾನ ಕಲೆಯ ಸಮಗ್ರ ಜ್ಞಾನವನ್ನು ಹೊಂದಿ ಸಮರ್ಥ ಸಂಪನ್ಮೂಲ ವ್ಯಕ್ತಿಯೂ ಆಗಿದ್ದರು.


                    ಹೊಸಹೊತ್ತಿಲು ಶ್ರೀ ಮಹಾಲಿಂಗ ಭಟ್ಟರು (ಲಿಂಗಣ್ಣ) ಕಾಸರಗೋಡು ತಾಲೂಕು ಮೀಂಜ ಗ್ರಾಮದ ಹೊಸಹಿತ್ತಿಲಿನಲ್ಲಿ ಗಣಪತಿ ಭಟ್ಟ ವೆಂಕಮ್ಮ ದಂಪತಿಗಳಿಗೆ ಪುತ್ರನಾಗಿ 1936ನೇ ಇಸವಿ ಮೇ 1ರಂದು ಜನಿಸಿದರು. ಅಜ್ಜಿ ಸರಸ್ವತೀ ಅಮ್ಮ ಹಾಡುತ್ತಿದ್ದ ಭಜನೆಯ ಪದ್ಯಗಳನ್ನು ಕೇಳಿಯೇ ಬೆಳೆದವರು. ಲಿಂಗಣ್ಣನವರ ತಂದೆ ಹೊಸಹಿತ್ತಿಲು ಗಣಪತಿ ಭಟ್ಟರು ಆ ಕಾಲದ ಪ್ರಸಿದ್ಧ ಕಲಾವಿದರಾಗಿದ್ದರು. ಕಿರೀಟ ವೇಷಧಾರಿ. ಗದಾಯುದ್ಧದಲ್ಲಿ ಅವರ ಕೌರವನ ಪಾತ್ರ ಹೆಸರುವಾಸಿಯಾಗಿತ್ತು. ಅಲ್ಲದೆ ತಾಳಮದ್ದಳೆ ಅರ್ಥಧಾರಿಯೂ ಆಗಿದ್ದರು. ಹಾಗಾಗಿ ಲಿಂಗಣ್ಣನವರಿಗೆ ಯಕ್ಷಗಾನವು ರಕ್ತವಾಗಿಯೇ ಬಂದಿತ್ತು. ಮೀಯಪದವು ಶಾಲೆಯಲ್ಲಿ 5ನೇ ತರಗತಿಯ ವರೇಗೆ ಓದಿದ್ದರು. ತನ್ನ 11ನೆಯ ವಯಸ್ಸಿನಲ್ಲಿ ತೀರ್ಥರೂಪರನ್ನು ಕಳೆದುಕೊಂಡ ಕಾರಣ ಓದಿಗೆ ವಿದಾಯ ಹೇಳಬೇಕಾಯಿತು.

ಲಿಂಗಣ್ಣನವರ ತಂದೆ ಹೊಸಹಿತ್ತಿಲು ಗಣಪತಿ ಭಟ್ಟರು ಧರ್ಮಸ್ಥಳ ಮೇಳದ ಕಲಾವಿದರಾಗಿದ್ದರು. 1947ರಲ್ಲಿ ನ್ಯುಮೋನಿಯಾದಿಂದ ಮರಣ ಹೊಂದಿದ್ದರು. ಲಿಂಗಣ್ಣನವರನ್ನು ಯಕ್ಷಗಾನ ಕಲಾವಿದನಾಗೆಂದು ಪ್ರೋತ್ಸಾಹಿಸಿದ್ದು ಅವರ ಅಣ್ಣ ಹುಲಿಕುಂಞ ನಾರಾಯಣ ಭಟ್ಟರು (ದೊಡ್ಡಪ್ಪನ ಮಗ). ಮೀಯಪದವಿನಲ್ಲಿ ದಿನನಿತ್ಯವೆಂಬಂತೆ ಬಯಲಾಟ ನಡೆಯುತ್ತಿದ್ದ ಕಾಲ. ಒಮ್ಮೆ ಹಾಕಿದ ರಂಗಸ್ಥಳವನ್ನು ತೆಗೆಯುವುದು ತಿರುಗಾಟ ಮುಗಿದ ಮೇಲೆಯೇ. ಕದ್ರಿ ಮೇಳದವರು ಹೆಚ್ಚಾಗಿ ಬಂದು ಆಟವಾಡುತ್ತಿದ್ದರು. ಹಗಲು ಲಿಂಗಣ್ಣನವರು ಮತ್ತು ನೆರೆಕರೆಯ ಮಕ್ಕಳು ಈ ರಂಗಸ್ಥಳದಲ್ಲಿ ಕುಣಿಯುತ್ತಿದ್ದರಂತೆ.

ಅಡಿಕೆ ಮರದ ಹಾಳೆಗಳು ಕಿರೀಟಗಳಾಗಿ ಮತ್ತು ತೆಂಗಿನ ಕೊತ್ತಳಿಕೆಗಳನ್ನು ಆಯುಧಗಳಾಗಿ ಬಾಲಕರ ಯಕ್ಷಗಾನದ ಹುಚ್ಚಿಗೆ ಬಳಸಲ್ಪಡುತ್ತಿದ್ದವು. ಹೊಸಹಿತ್ತಿಲು ಗಣಪತಿ ಭಟ್ಟರ ಮೇಲಿನ ಗೌರವದಿಂದ ಮೇಳದ ಕಲಾವಿದರು ವಿಶ್ರಾಂತಿಗೆ ಮನೆಗೆ ಬರುತ್ತಿದ್ದರು. ಅವರು ಮನೆಯ ಕೊಟ್ಟಿಗೆಯಲ್ಲಿ ಮಕ್ಕಳಿಗೆ ನಾಟ್ಯವನ್ನೂ ಕಲಿಸುತ್ತಿದ್ದರಂತೆ. ರಾತ್ರಿ ಅವರ ಜತೆ ಚೌಕಿಗೆ. ಆಟ ನೋಡುವುದು ಹೀಗೆ ಕಲಾಸಕ್ತಿ ಬೆಳೆಯಿತು. 1948ರಲ್ಲಿ ಶ್ರೀಕೃಷ್ಣಾಷ್ಟಮಿಯ ದಿನದಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಲಿಂಗಣ್ಣನವರು ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು. (ಬಾಲ ಗೋಪಾಲನಾಗಿ 12ನೆಯ ವಯಸ್ಸಿನಲ್ಲಿ).

ಲಿಂಗಣ್ಣನವರು ಅದೇ ವರ್ಷ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಆಗ ಮೇಳವನ್ನು ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸರೂ, ಕುರಿಯ ವಿಠಲ ಶಾಸ್ತ್ರಿಗಳೂ ನಡೆಸುತ್ತಿದ್ದರು. ದೊಡ್ಡಪ್ಪನ ಮಗ ಹುಲಿಕುಂಞ ನಾರಾಯಣ ಭಟ್ಟರೂ ವೇಷಧಾರಿಗಳಾಗಿದ್ದರು. ಮುಂದಿನ ವರ್ಷ (1949) ಕಟೀಲು ಮೇಳದಲ್ಲಿ ತಿರುಗಾಟ. ಶಾಸ್ತ್ರೀಯವಾಗಿ ನಾಟ್ಯ ಕಲಿಯಬೇಕೆಂಬ ಛಲದಿಂದ ನಾಟ್ಯಾಚಾರ್ಯ ಕುರಿಯ ವಿಠಲ ಶಾಸ್ತ್ರಿಗಳ ಮನೆಗೆ ತೆರಳಿದರು. ಹೊಸ ಹಿತ್ತಿಲು ಗಣಪತಿ ಭಟ್ಟರ ಅಭಿಮಾನಿಯಾಗಿದ್ದ ವಿಠಲ ಶಾಸ್ತ್ರಿಗಳು ಲಿಂಗಣ್ಣನನ್ನು ಶಿಷ್ಯನಾಗಿ ಸ್ವೀಕರಿಸಿದರು.

ಮೇಳಕ್ಕೆ ಬಂದು ಹಿರಿಯ ಕಲಾವಿದರ ಮನಗೆದ್ದು ನಾಟ್ಯ ಕಲಿಯುವ ಕ್ರಮವಿದ್ದ ಕಾಲ ಅದು. ವಿಠಲ ಶಾಸ್ತ್ರಿಗಳು ತನ್ನ ಕೋಳ್ಯೂರು ಮನೆಯಲ್ಲಿ ಅನೇಕ ಶಿಷ್ಯಂದಿರಿಗೆ ನಾಟ್ಯ ಹೇಳಿಕೊಡಲು ಆರಂಭಿಸಿದ್ದರು. ಅದು ಯಕ್ಷಗಾನ ಕಲಿಕಾ ಕೇಂದ್ರವಾಗಿತ್ತು. ಕುರಿಯ ವಿಠಲ ಶಾಸ್ತ್ರಿಗಳೂ, ಅವರ ಶಿಷ್ಯರೂ ನಾಟ್ಯ, ಮಾತು, ಬಣ್ಣಗಾರಿಕೆಯನ್ನು ಅಲ್ಲಿ ಕಲಿಸುತ್ತಿದ್ದರು. ಲಿಂಗಣ್ಣನವರು ಶಾಸ್ತ್ರಿಗಳಿಂದಲೂ, ಅವರ ಶಿಷ್ಯ ಖ್ಯಾತ ಸ್ತ್ರೀಪಾತ್ರಧಾರಿ ಕೋಳ್ಯೂರು ರಾಮಚಂದ್ರ ರಾಯರಿಂದಲೂ ಯಕ್ಷಗಾನವನ್ನು ಕ್ರಮವತ್ತಾಗಿ ಅಭ್ಯಾಸ ಮಾಡಿದರು. ಆ ವರ್ಷ ಶಾಸ್ತ್ರಿಗಳ ಜತೆ ಧರ್ಮಸ್ಥಳ ಮೇಳಕ್ಕೆ. ಅಗರಿ ಭಾಗವತರು, ನೆಡ್ಲೆ, ಗೋಪಾಲಕೃಷ್ಣ ಕುರುಪ್, ಮಾಣಂಗಾಯಿ ಕೃಷ್ಣ ಭಟ್, ದೊಡ್ಡ ಸುಬ್ಬಯ್ಯ ಶೆಟ್ರು (ಕಾಸರಗೋಡು) ವಿಟ್ಲ ರಾಮಯ್ಯ ಶೆಟ್ರು, ಅಣ್ಣ ನಾರಾಯಣ ಭಟ್ಟರೊಂದಿಗೆ ತಿರುಗಾಟ ನಡೆಸಿದರು.

ಮುಂದಿನ ವರ್ಷ ಕುರಿಯ ರಾಮಶಾಸ್ತ್ರಿಗಳ ಯಾಜಮಾನ್ಯ. ಬಾಲಗೋಪಾಲ, ದೇವೇಂದ್ರನ ಬಲ ಮೊದಲಾದ ವೇಷಗಳನ್ನೂ ಮಾಡುತ್ತಾ ಎರಡನೆಯ ಪುಂಡುವೇಷಧಾರಿಯಾಗಿ ಆಯ್ಕೆಯಾದರು. ಲಿಂಗಣ್ಣನವರು ಸತತ ಅಭ್ಯಾಸಿ. ವೇಷವಿಲ್ಲದ ಸಮಯದಲ್ಲಿ ನಿದ್ರಿಸದೆ ಚಕ್ರತಾಳ ಬಾರಿಸುತ್ತಿದ್ದರು. ಇಲ್ಲವಾದರೆ ಭಾಗವತರ ಹಿಂದೆ ನಿಂತು ಆಟ ನೋಡುವುದು. ಹಾಗಾಗಿಯೇ ತನ್ನ ವೃತ್ತಿಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಂಡರು. ಅಲ್ಲದೆ ಬಣ್ಣದ ಮಹಾಲಿಂಗ, ಪಡ್ರೆ ಚಂದು, ಸಣ್ಣ ತಿಮ್ಮಪ್ಪು ಮೊದಲಾದವರ ಸಹಕಾರ, ಪ್ರೋತ್ಸಾಹವೂ ಸಿಕ್ಕಿತ್ತು. ಯಾವ ವೇಷವನ್ನೂ ಮಾಡಬಲ್ಲೆ ಎಂಬ ಧೈರ್ಯವೂ ಮೂಡ ತೊಡಗಿತ್ತು.

1953ರಲ್ಲಿ ಮೂಲ್ಕಿ ಮೇಳದ ತಿರುಗಾಟ. ಇದು ಕಲಾಬದುಕಿನ ಮಹತ್ವದ ತಿರುವು. ಮುಖವರ್ಣಿಕೆ, ವೇಷಗಳ ಕ್ರಮವನ್ನು ಕಲಿಯಲು ಇದು ವೇದಿಕೆಯೂ ಆಯಿತು. ಅಜ್ಜ ಬಲಿಪ ಭಾಗವತರ ಶಿಷ್ಯ ಈಶ್ವರಪ್ಪಯ್ಯ ಭಾಗವತರು. ಇವರು ಅಗರಿ ಅವರಂತೆ ರಂಗಮಾಹಿತಿಯನ್ನು ಹೊಂದಿದವರು. ಚೇವಾರು ರಾಮಕೃಷ್ಣ ಕಾಮತ್, ತೊಕ್ಕೊಟ್ಟು ಲೋಕಯ್ಯ ಗಟ್ಟಿ, ಹಾಸ್ಯಕ್ಕೆ ಪೆರುವಡಿ ನಾರಾಯಣ ಭಟ್, ಅಗಲ್ಪಾಡಿ ಮಹಾಲಿಂಗ (ಸ್ತ್ರೀವೇಷ), ಕುಂಬಳೆ ಶಂಕರ ಬಲ್ಯಾಯ, ಚವರಿಕಾಡು ಕೃಷ್ಣ ಭಂಡಾರಿ ಮೊದಲಾದವರೊಡನೆ ತಿರುಗಾಟ. ಬಣ್ಣಕ್ಕೆ ಸಣ್ಣ ತಿಮ್ಮಪ್ಪು (ಹಂದಿ ತಿಮ್ಮಪ್ಪು ಪಂಜಿ ತಿಮ್ಮಪ್ಪು ಎಂದು ಇವರನ್ನು ಕರೆಯುತ್ತಿದ್ದರು).

ಅಲ್ಲದೆ ಮೊದಲು ಕಲಾವಿದನಾಗಿದ್ದು ಮತ್ತೆ ಅರಣ್ಯ ರಕ್ಷಕ ಕೆಲಸಕ್ಕೆ ಹೋಗಿದ್ದ ಪುತ್ತೂರು ನಾರಾಯಣ ಹೆಗ್ಡೆಯವರೂ ಮುಲ್ಕಿ ಮೇಳಕ್ಕೆ ಬಂದಿದ್ದರು. ಲಿಂಗಣ್ಣನವರು ಒಂದನೇ ಪುಂಡುವೇಷಧಾರಿಯಾಗಿ ಕಾಣಿಸಿಕೊಂಡರು. ಮುಲ್ಕಿ ದೇವಸ್ಥಾನದ ಎದುರುಗಡೆ ಬಭ್ರುವಾಹನನಾಗಿ ಅಭಿನಯಿಸಿದರು (1953). ಆಗ ಲಿಂಗಣ್ಣನವರ ವಯಸ್ಸು ಕೇವಲ ಹದಿನೇಳು! ಹಿಂದಿನ ಕಾಲದ ತಿರುಗಾಟ. ನಡೆದೇ ಸಾಗಬೇಕಿತ್ತು. ಆಯಾಸವಾದಾಗ ಮರದಡಿ ವಿಶ್ರಾಂತಿ. ಅಲ್ಲಿಯೇ ಹಿರಿಯ ಕಲಾವಿದರಿಂದ ಅಭ್ಯಾಸಿಗಳಿಗೆ ಪಾಠ. ಚೆಂಡೆ ಮದ್ದಳೆ ಬಾರಿಸಿ ಕುಣಿಸುತ್ತಿದ್ದರಂತೆ. ಸಣ್ಣ ತಿಮ್ಮಪ್ಪುನವರು ಪ್ರೀತಿಯಿಂದ ಮುಖವರ್ಣಿಕೆ ಹೇಳಿಕೊಟ್ಟವರು. ರಂಗಮಾಹಿತಿಯನ್ನೂ ಹೇಳಿಕೊಟ್ಟಿದ್ದರಂತೆ.

ಪುಂಡುವೇಷದ ಜತೆಗೆ ಲಿಂಗಣ್ಣನವರು ಕಿರೀಟ ವೇಷಗಳನ್ನೂ ಅನಿವಾರ್ಯಕ್ಕೆ ಮಾಡುತ್ತಿದ್ದರು. ಸಣ್ಣ ತಿಮ್ಮಪ್ಪು ಅವರ ವರಾಹ ಪಾತ್ರಕ್ಕೆ ಹಿರಣ್ಯಾಕ್ಷನಾಗಿಯೂ ಅಭಿನಯಿಸಿದರು. ಹೆಜಮಾಡಿಯಲ್ಲಿ ಮುಲ್ಕಿ-ಕಟೀಲು ಮೇಳಗಳ ಜೋಡಾಟ. ಲಿಂಗಣ್ಣನವರ ಅಭಿಮನ್ಯು ಪಾತ್ರವನ್ನು ಮೆಚ್ಚಿದ ಪ್ರೇಕ್ಷಕರು ಬಂಗಾರ ಬಳೆಗಳನ್ನು ಬಹುಮಾನವಾಗಿ ನೀಡಿದ್ದರು. ಆ ಕಾಲದಲ್ಲಿ ಇವರ ಅಭಿಮನ್ಯುವಿನ ಪಾತ್ರಕ್ಕೆ ಸಾರಥಿಯಾಗಿ ಕೆ. ಗೋವಿಂದ ಭಟ್ಟರು ಅಭಿನಯಿಸುತ್ತಿದ್ದರಂತೆ. ಲಿಂಗಣ್ಣನವರು ಕುರುಕ್ಷೇತ್ರ ಪ್ರಸಂಗದಲ್ಲಿ ಅಭಿಮನ್ಯು ಮಾಡಿ, ಕೌರವ ಅಲ್ಲದೆ ಭೀಷ್ಮ ಮಾಡಿ ಕೌರವನ ಪಾತ್ರಗಳನ್ನೂ ನಿರ್ವಹಿಸಿದವರು. ದೈಹಿಕವಾಗಿಯೂ ಮಾನಸಿಕವಾಗಿಯೂ ಬಲಿಷ್ಠರಾದರೆ ಮಾತ್ರ ಇದು ಸಾಧ್ಯ. ವೃತ್ತಿನಿಷ್ಠೆ, ಮೇಳನಿಷ್ಠೆಯೂ ಜತೆಗಿರಬೇಕು. ಇಂತವರು ನಿಜಕ್ಕೂ ಸಾಧಕರೇ ಹೌದು.


               1954ರಲ್ಲಿ ಮತ್ತೆ ಗುರು ಕುರಿಯ ವಿಠಲ ಶಾಸ್ತ್ರಿಗಳ ಜತೆ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. 1967ರ ವರೇಗೆ ಸದ್ರಿ ಮೇಳದಲ್ಲಿ ವ್ಯವಸಾಯ. ಬಣ್ಣದ ಮಹಾಲಿಂಗ, ಕದ್ರಿ ವಿಷ್ಣು, ಕುಂಞಬಾಬು, ಕರುವೊಳು ದೇರಣ್ಣ ಶೆಟ್ಟಿ, ಮಾಣಂಗಾಯಿ ಕೃಷ್ಣ ಭಟ್ರು, ವಿಟ್ಲ ರಾಮಯ್ಯ ಶೆಟ್ರು, ಮುಳಿಯಾಲ ಭೀಮ ಭಟ್ಟ, ಕೋಳ್ಯೂರು, ಕರ್ಗಲ್ಲು ಸುಬ್ಬಣ್ಣ ಭಟ್, ಮುದುಕುಂಜ ವಾಸುದೇವ ಪ್ರಭು, ಮಿತ್ತನಡ್ಕ ರಾಮಕೃಷ್ಣ ಕಾಮತ್ ಮೊದಲಾದವರಿದ್ದರು. ಮೊದಲ ಸೇವೆ ಆಟದ ದಿನವೇ ಬಭ್ರುವಾಹನ. ಕರ್ಗಲ್ಲು ಸುಬ್ಬಣ್ಣ ಭಟ್ಟರು ಚಿತ್ರಾಂಗದೆಯಾಗಿಯೂ ಕುರಿಯ ವಿಠಲ ಶಾಸ್ತ್ರಿಗಳು ಶ್ರೀಕೃಷ್ಣನಾಗಿಯೂ ಅಭಿನಯಿಸಿದ್ದರು.

ಬಣ್ಣದ ಮಹಾಲಿಂಗನವರದ್ದೂ ಲಿಂಗಣ್ಣನವರದ್ದೂ ಕೊಡು-ಕೊಂಡುಕೊಳ್ಳುವಿಕೆಯ ವ್ಯವಹಾರ. ಬಣ್ಣದ ಮಹಾಲಿಂಗನವರು ಬಣ್ಣಗಾರಿಕೆ, ರಂಗನಡೆಗಳನ್ನು ಲಿಂಗಣ್ಣನವರಿಗೂ, ಲಿಂಗಣ್ಣನವರು ಮಾತುಗಾರಿಕೆ, ಪ್ರಸಂಗ ಮಾಹಿತಿಗಳನ್ನೂ ಮಹಾಲಿಂಗನವರಿಗೂ ಪರಸ್ಪರ ಹೇಳಿಕೊಡುತ್ತಿದ್ದರಂತೆ. ಬಣ್ಣದ ಮಹಾಲಿಂಗಜ್ಜನವರಿಗೆ ನನ್ನಲ್ಲಿ ಅತೀವ ಪ್ರೀತಿ ಎಂದು ಲಿಂಗಣ್ಣನವರು ಹೇಳಿಕೊಳ್ಳುತ್ತಿದ್ದರು.


                   ಹೊಸಹಿತ್ತಿಲು ಮಹಾಲಿಂಗ ಭಟ್ಟರು ಜೋಡಾಟದಲ್ಲೂ ಸೈ ಎನಿಸಿಕೊಂಡವರು. ಅಂದಿನ ಕಾಲ ಇವರೂ ಕ್ರಿಶ್ಚನ್‍ಬಾಬುರವರೂ ಜೋಡಾಟದ ಪ್ರತಿಸ್ಪರ್ಧಿಗಳಾಗಿದ್ದರು. ಅಭಿಮನ್ಯು, ಲಕ್ಷ್ಮಣ, ಚಂಡ, ಮುಂಡರು, ಬಭ್ರುವಾಹನ ಮೊದಲಾದ ಪಾತ್ರಗಳಲ್ಲಿ ಇಬ್ಬರೂ ಪರಸ್ಪರ ತಾವೇ ಮಿಗಿಲೆಂಬಂತೆ ಅಭಿನಯಿಸಿದರು. ಇವರಿಬ್ಬರೊಳಗೆ ಯಾರು ಹೆಚ್ಚೆಂದು ತೀರ್ಮಾನಕ್ಕೆ ಬರಲು ಪ್ರೇಕ್ಷಕರಿಗೂ ಕಷ್ಟವಾಗುತ್ತಿತ್ತು. ಬಾಲಲೀಲೆ ಬಿಲ್ಲಹಬ್ಬ ಪ್ರಸಂಗವಾದರೆ ಕೃಷ್ಣ ಕಂಸವಧೆಯಲ್ಲಿ ವಿಠಲ ಶಾಸ್ತ್ರಿಗಳು ಕಂಸ ಮಾಡುವಾಗ ಲಿಂಗಣ್ಣನವರದೇ ಕೃಷ್ಣ.
               ಧರ್ಮಸ್ಥಳ ಮೇಳದಲ್ಲಿ ಪುಂಡುವೇಷಧಾರಿಯಾಗಿಯೂ, ನಂತರ ಕಿರೀಟ ವೇಷಧಾರಿಯಾಗಿಯೂ ಲಿಂಗಣ್ಣನವರು ಪ್ರಸಿದ್ಧರಾದರು. ಅತಿಕಾಯ, ಕರ್ಣ, ಋತುಪರ್ಣ, ಕೌರವ, ಹಿರಣ್ಯಾಕ್ಷ, ರಕ್ತಬೀಜ ಮೊದಲಾದ ಪಾತ್ರಗಳನ್ನು ಮಾಡುತ್ತಿದ್ದರು. 1954-67ರ ಎಡೆಯಲ್ಲಿ ಎರಡು ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ ಅಗರಿಯವರ ಭಾಗವತಿಕೆಯಲ್ಲಿ ತಿರುಗಾಟ ಮಾಡಿದ್ದರು. 1965ರಲ್ಲಿ ಕುರಿಯ ವಿಠಲ ಶಾಸ್ತ್ರಿಗಳು ನಿವೃತ್ತರಾಗಿದ್ದರು. 1967ರ ವರೇಗೆ ಧರ್ಮಸ್ಥಳದಲ್ಲಿ ತಿರುಗಾಟ. ಸದ್ರಿ ಮೇಳದಲ್ಲಿದ್ದಾಗಲೇ ಶ್ರೀಧರ ಭಂಡಾರಿಯವರನ್ನು ಬಳ್ಳಂಬಟ್ಟು ಮೇಳದಿಂದ ಕರೆತಂದು ಪುಂಡುವೇಷದ ಮಾಹಿತಿಗಳನ್ನು ನೀಡಿದರು.

ಲಿಂಗಣ್ಣನವರ ಗರಡಿಯಲ್ಲಿ ಪಳಗಿದ ಶ್ರೀಧರ ಭಂಡಾರಿಯವರದ್ದು ಪುಂಡುವೇಷಗಳಲ್ಲಿ ಅಮೋಘ ನಿರ್ವಹಣೆಯೆಂದು ಗುರುತಿಸಲ್ಪಟ್ಟಿದೆ. 1968ರಲ್ಲಿ ಲಿಂಗಣ್ಣನವರು ಕೂಡ್ಲು ಮೇಳಕ್ಕೆ ಸೇರಿದ್ದರು. ಸಣ್ಣ ಬಲಿಪರು, ಶೇಣಿ, ಅಡ್ಕಸ್ಥಳ ನಾರಾಯಣ ಶೆಟ್ಟಿ, ಪುತ್ತೂರು ಕೃಷ್ಣ ಭಟ್ಟರ ಜತೆ ತಿರುಗಾಟ. ಮುಂದಿನ ವರುಷ ಅಗರಿ ಭಾಗವತರೂ, ಕುದ್ರೆಕೋಡ್ಲು ರಾಮ ಭಟ್ಟರೂ ಇದ್ದರು. ಕೂಡ್ಲು ಮೇಳ 1969ರಲ್ಲಿ ತಿರುಗಾಟ ನಿಲ್ಲಿಸಿದ ಮೇಲೆ ಕುಂಡಾವು ಮೇಳದಲ್ಲೂ, 1972ರಿಂದ ಎರಡು ವರ್ಷ ಶ್ರೀಧರ ಭಂಡಾರಿಯವರ ಪುತ್ತೂರು ಮೇಳದಲ್ಲೂ, ಅರುವ ಮೇಳದಲ್ಲೂ ಉಡುಪಿ (ಪೇಜಾವರ) ಮೇಳದಲ್ಲಿ ತಿರುಗಾಟ ನಡೆಸಿ, ಕೊನೆಗೆ 1995ರಲ್ಲಿ ಡಾ. ಎಂ. ಪ್ರಭಾಕರ ಜೋಷಿ ಅವರ ಪ್ರೇರಣೆಯಿಂದ ಬಪ್ಪನಾಡು ಮೇಳದಲ್ಲಿ ವ್ಯವಸಾಯ ಮಾಡಿದರು. ನಂತರ ತಿರುಗಾಟವನ್ನು ನಿಲ್ಲಿಸಿದ ಹೊಸಹಿತ್ತಿಲು ಮಹಾಲಿಂಗ ಭಟ್ಟರು 1997ರ ವರೇಗೆ ಅಭಿಮಾನಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಅಪರೂಪಕ್ಕೆ ವೇಷ ಮಾಡುತ್ತಿದ್ದರು.

ಯಕ್ಷಗಾನ ಕಮ್ಮಟ, ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಅನುಭವ, ವಿದ್ಯೆಗಳನ್ನು ಧಾರೆ ಎರೆದಿದ್ದಾರೆ. ತರಗತಿಗಳನ್ನು ನಡೆಸಿ ಶಿಷ್ಯ ಸಂಪತ್ತನ್ನೂ ಹೊಂದಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ ಪ್ರಸಂಗದ ಗೋವಿಂದ ದೀಕ್ಷಿತ ಪಾತ್ರವನ್ನೂ, ಶಬರಿಮಲೆ ಅಯ್ಯಪ್ಪ ಪ್ರಸಂಗದ ವಾವರನ ಪಾತ್ರವನ್ನೂ ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರು.
                      ವಿಷ್ಣು, ಶ್ರೀಕೃಷ್ಣ, ಅಭಿಮನ್ಯು, ಬಭ್ರುವಾಹನ, ಭಾರ್ಗವ, ಸುಧನ್ವ ಮೊದಲಾದ ಪುಂಡುವೇಷಗಳಲ್ಲೂ, ಅತಿಕಾಯ, ಭೀಷ್ಮ, ಮಕರಾಕ್ಷ, ಇಂದ್ರಜಿತು, ಋತುಪರ್ಣ, ರಕ್ತಬೀಜ, ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಕೌರವ ಮೊದಲಾದ ಕಿರೀಟ ವೇಷಗಳಲ್ಲೂ ಮೆರೆದ ಪರಂಪರೆಯ ವೇಷಧಾರಿಯಾಗಿದ್ದರು ಹೊಸಹಿತ್ತಿಲು ಮಹಾಲಿಂಗ ಭಟ್ಟರು. ಶ್ರೀಯುತರು ತುಳು, ಸಾಮಾಜಿಕ ಪ್ರಸಂಗಗಳಲ್ಲೂ ವೇಷ ಮಾಡಿದ್ದರು. ತೆಂಕುತಿಟ್ಟಿನ ರಂಗವೈಖರಿಗೆ ನಿಷ್ಠೆ ಉಳ್ಳವರಾಗಿ ಮೆರೆದ ಕಲಾವಿದ. ಯಕ್ಷಗಾನದ ಮೂಲ ಸ್ವರೂಪವೇನೆಂದು ತಿಳಿಯದೆ, ನೋಡದೆ ಅದನ್ನು ಇನ್ನಾವುದೋ ಆಗಿ ಬದಲಾಯಿಸಬಾರದು ಅವರು ಹೇಳುತ್ತಿದ್ದವರು.

ಸಾಧನೆ, ಅರ್ಹತೆಗಳಿದ್ದರೂ ಇವರಿಗೆ ತಾರಾಮೌಲ್ಯ ಪ್ರಾಪ್ತವಾಗಿರಲಿಲ್ಲ. ಈಗಿನಂತೆ ಮಾಧ್ಯಮಗಳಿಲ್ಲದ ಕಾರಣವೂ ಕಾರಣವಿರಬಹುದು. ಆದರೂ ವೇಷಗಳನ್ನು ನೋಡಿದ ಪ್ರೇಕ್ಷಕರ ಮನಸ್ಸಿನಲ್ಲಿ ಲಿಂಗಣ್ಣನವರೂ ಈಗಲೂ ಇದ್ದಾರೆ. ಇದುವೇ ನಿಜವಾದ ಪ್ರಶಸ್ತಿ. ಪೂರ್ವ ಸಂಪ್ರದಾಯ, ಪರಂಪರೆಯ ಕ್ರಮಗಳೇ ಯಕ್ಷಗಾನವನ್ನು ಶಾಶ್ವತವಾಗಿ ಉಳಿಸುತ್ತದೆ ಎನ್ನುವ ಹೊಸಹಿತ್ತಿಲು ಶ್ರೀ ಮಹಾಲಿಂಗ ಭಟ್ಟರು  ನಿಜಕ್ಕೂ ಆದರ್ಶ ಕಲಾವಿದ. ಎಲ್ಲರಿಗೂ ಮಾದರಿಯಾಗಬಲ್ಲರು.

ಫೋಟೋ ಕೃಪೆ: ‘ಲಿಂಗಣ್ಣ’ ಹೊಸಹಿತ್ಲು ಮಹಾಲಿಂಗ ಭಟ್ಟರ ಅನುಭವ ಕಥನ 

ಲೇಖಕ: ರವಿಶಂಕರ್ ವಳಕ್ಕುಂಜ

ತೆಂಕಿನ ಅಪ್ರತಿಮ ಪುಂಡುವೇಷಧಾರಿಯಾಗಿ ಮೆರೆದ ಕುಡಾನ ಗೋಪಾಲಕೃಷ್ಣ ಭಟ್

ಹಳೆಯ ಪ್ರೇಕ್ಷಕರಿಗೆಲ್ಲಾ ಕುಡಾನ ಗೋಪಾಲಕೃಷ್ಣ ಭಟ್ ಎಂಬ ಹೆಸರು ಚಿರಪರಿಚಿತವಾದುದು. ಆದರೆ ಹೆಚ್ಚಿನವರ ಬಾಯಲ್ಲೂ ಶ್ರೀಯುತರು ಕುಡಾನ ಗೋಪಿ ಅಣ್ಣ ಎಂದೇ ಪ್ರಸಿದ್ಧರು. ಕೇರಳ ಕರ್ನಾಟಕದ ಗಡಿಭಾಗದ ಊರು ಕುಡಾನದಲ್ಲಿ ಜನಿಸಿ ತೆಂಕುತಿಟ್ಟಿನ ಅಪ್ರತಿಮ ಪುಂಡುವೇಷಧಾರಿಯಾಗಿ ರಂಗವನ್ನಾಳಿ ಮೆರೆದವರು ಕುಡಾನ ಗೋಪಾಲಕೃಷ್ಣ ಭಟ್. 1950ರಿಂದ ತೊಡಗಿ 1990ರ ತನಕ ಒಟ್ಟು 40 ವರ್ಷಗಳ ಕಾಲ ಕಲಾಸೇವೆಯನ್ನು ಗೈದ ಶ್ರೇಷ್ಠ ಕಲಾವಿದರಿವರು.

ಇಂತಹ ಹಿರಿಯ ಕಲಾವಿದರನೇಕರ ಪರಿಶ್ರಮ, ತ್ಯಾಗಗಳಿಂದಲೇ ಯಕ್ಷಗಾನ ಎಂಬ ಗಂಡುಕಲೆಯು ಉಳಿದು ಬೆಳೆಯುತ್ತಾ ಸಾಗಿದೆ. ಕುಡಾಣ ಗೋಪಿ ಅಣ್ಣ ಅವರು ಯಕ್ಷಗಾನ ವೇಷಧಾರಿಯಾಗಿ ಬೆಳೆಯುತ್ತಾ ಕೀರ್ತಿಯನ್ನು ಗಳಿಸಿದ್ದು ಮಾತ್ರವಲ್ಲ ತನ್ನ ಹುಟ್ಟೂರು ಕುಡಾನ ಎಂಬ ಹೆಸರನ್ನು ಕೂಡಾ ಕಲಾಭಿಮಾನೀ ಜನಮಾನಸದಲ್ಲಿ ಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಶ್ರೀಯುತರ ವೇಷಗಳನ್ನು ನೋಡಿ ಆಸ್ವಾದಿಸಿದ ಹಿರಿಯ ಪ್ರೇಕ್ಷಕರು ಅವುಗಳೆಲ್ಲಾ ಮಾಸ್ಟರ್ ಪೀಸ್‍ಗಳೆಂದು ದೃಢವಾಗಿ ಹೇಳುತ್ತಾರೆ. ತಾನು ನಿರ್ವಹಿಸಿದ ಪ್ರತಿಯೊಂದು ವೇಷಗಳನ್ನೂ ಅತ್ಯುತ್ತಮವಾಗಿ ಚಿತ್ರಿಸಿ ಕಲಾಭಿಮಾನಿಗಳ ಮನಸೂರೆಗೊಂಡವರು ಕುಡಾನ ಗೋಪಿಯಣ್ಣನವರು.

ಶ್ರೀಯುತರು ಎರಡೂ ಕಾಲುಗಳನ್ನೆತ್ತಿ ಗಿರಕಿ ಹಾರುವುದನ್ನು ನೋಡುವುದು ಎಂದರೆ ಅದು ಕಣ್ಣಿಗೆ ಒಂದು ಹಬ್ಬವೇ ಸರಿ ಎಂದು ಹಳೆಯ ಪ್ರೇಕ್ಷಕರು ಹೇಳುತ್ತಾರೆ. ಅಂದಿನ ಕಾಲದಲ್ಲಿ ಕುಡಾನದವರು ಗಿರಕಿವೀರನೆಂದೇ ಖ್ಯಾತರಾಗಿದ್ದರು. ತಾನು ನಿರ್ವಹಿಸಿದ ಪ್ರತಿಯೊಂದು ಪಾತ್ರಗಳನ್ನೂ ತನ್ನ ಪ್ರತಿಭಾ ವ್ಯಾಪಾರದಿಂದ ಕೆತ್ತಿ ಚಿತ್ರಿಸಿದ್ದರು. ಕಿರಿಯ ಕಲಾವಿದರು ನೋಡಿ ಕಲಿಯಲೇಬೇಕಾದ ರೀತಿಯಲ್ಲಿ, ಪರಂಪರೆಗೆ ಒಂದಿನಿತೂ ಧಕ್ಕೆ ಬಾರದ ರೀತಿಯಲ್ಲಿ ಅಭಿನಯಿಸಿ, ಪಾತ್ರಗಳನ್ನು ಅದ್ಭುತವಾಗಿ ಚಿತ್ರಿಸುತ್ತಿದ್ದರಂತೆ ಕುಡಾನದವರು. ಅವರು ನಿರ್ವಹಿಸಿದ ಪಾತ್ರಗಳೆಲ್ಲಾ ದಾಖಲೀಕರಣಗೊಳ್ಳುತ್ತಿದ್ದರೆ ನಿಜವಾಗಿಯೂ ಕಲಿಕಾಸಕ್ತರಿಗೆ ಅದೊಂದು ಶ್ರೇಷ್ಠ ಕೊಡುಗೆಯಾಗಿ ಪರಿಣಮಿಸುತ್ತಿತ್ತು.


ಶ್ರೀ ಕೊಕ್ಕಡ ಈಶ್ವರ ಭಟ್, ಶ್ರೀ ಶಿವರಾಮ ಜೋಗಿ ಬಿ. ಸಿ. ರೋಡು, ರೆಂಜಾಳ ಶ್ರೀ ರಾಮಕೃಷ್ಣ ರಾವ್ ಇವರುಗಳು ಕುಡಾನ ಗೋಪಾಲಕೃಷ್ಣ ಭಟ್ಟರ ಶಿಷ್ಯಂದಿರು. ಕೊಕ್ಕಡ ಈಶ್ವರ ಭಟ್ ಮತ್ತು ಶಿವರಾಮ ಜೋಗಿಯವರು ಕುಡಾನ ಮನೆಯಲ್ಲಿದ್ದು ನಾಟ್ಯ ಕಲಿತಿದ್ದರು. ಪೆರುವಾಯಿ ನಾರಾಯಣ ಶೆಟ್ಟರೂ, ದೇವಕಾನ ಕೃಷ್ಣ ಭಟ್ಟರೂ ಕುಡಾನದವರ ಶಿಷ್ಯರು. ಕಲಾವಿದ, ಅಧ್ಯಾಪಕ, ಶ್ರೀ ದೇವಕಾನ ಕೃಷ್ಣ ಭಟ್ಟರಿಗೂ ಕುಡಾನ ಗೋಪಾಲಕೃಷ್ಣ ಭಟ್ಟರಿಗೂ ಒಳ್ಳೆಯ ಬಾಂಧವ್ಯವಿತ್ತು. ದೇವಕಾನದವರನ್ನು ಕುಡಾನ ಗೋಪಿಯಣ್ಣನವರು ಅತೀವವಾಗಿ ಪ್ರೀತಿಸುತ್ತಿದ್ದರು. ದೇವಕಾನದವರು ಕುಡಾನದವರನ್ನು ಗೌರವಭಾವದಿಂದ ಕಾಣುತ್ತಿದ್ದರು.


ಕಾಸರಗೋಡು ತಾಲೂಕು ಬಾಯಾರು ಗ್ರಾಮದ ಕುಡಾನ ಎಂಬಲ್ಲಿ ನಾರಾಯಣ ಭಟ್ಟ ಮತ್ತು ಗಂಗಮ್ಮ ದಂಪತಿಗಳ ಮಗನಾಗಿ ಗೋಪಿ ಅಣ್ಣನವರು ಈ ಲೋಕದ ಬೆಳಕನ್ನು ಕಂಡರು. ಓದಿದ್ದು 5ನೇ ತರಗತಿಯ ವರೇಗೆ ಪೆರುವಡಿ ಶಾಲೆಯಲ್ಲಿ (ಕುದ್ರೆಡ್ಕ ಶಾಲೆ). ಇವರದು ಕೃಷಿ ಕುಟುಂಬ. ಗೋಪಿ ಅಣ್ಣ ಅವರ ತೀರ್ಥರೂಪರು ಶ್ರೀ ನಾರಾಯಣ ಭಟ್ಟರು ಕೃಷಿಕರಾಗಿದ್ದರು. ಕಲಾವಿದರಲ್ಲದಿದ್ದರೂ ಯಕ್ಷಗಾನಾಸಕ್ತರಾಗಿದ್ದರು. ಬಾಯಾರು ಪರಿಸರದಲ್ಲಿ ನಡೆಯುತ್ತಿದ್ದ ಆಟ, ತಾಳಮದ್ದಳೆ, ಭಜನಾ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ತೀರ್ಥರೂಪರ ಜತೆ ಹೋಗುತ್ತಿದ್ದ ಗೋಪಿ ಅಣ್ಣನವರಿಗೂ ಕಲಾಸಕ್ತಿ ಚಿಗುರೊಡೆದು ಬೆಳೆಯತೊಡಗಿತು. ಯಕ್ಷಗಾನ ಕಲಾವಿದನಾಗಬೇಕೆಂಬ ನಿರ್ಧಾರವನ್ನೂ ಮಾಡಿದ್ದರು.

ಶ್ರೀ ಪೆರುವಡಿ ನಾರಾಯಣ ಹಾಸ್ಯಗಾರರಿಂದ ಅವರ ಮನೆಯಲ್ಲಿಯೇ ಪಾಠ ಆರಂಭವಾಯಿತು. ನಂತರ ಖ್ಯಾತ ಸ್ತ್ರೀಪಾತ್ರಧಾರಿ ಕೋಳ್ಯೂರು ಶ್ರೀ ರಾಮಚಂದ್ರರಾಯರಿಂದ ಮನೆಯಲ್ಲಿಯೇ ಪಾಠ. ಚುರುಕು ಮತ್ತು ತೀಕ್ಷ್ಣಮತಿಯಾಗಿದ್ದ ಕುಡಾನದವರು ಪಾಠಗಳನ್ನು ಬಹುಬೇಗನೇ ಗ್ರಹಿಸುತ್ತಿದ್ದರು. ತನ್ಮಧ್ಯೆ ಊರಲ್ಲಿ ನಡೆದ ಕೆಲವು ತಾಳಮದ್ದಳೆಗಳಲ್ಲಿ ಅನಿವಾರ್ಯಕ್ಕೆ, ಒತ್ತಾಯಕ್ಕೆ ಅರ್ಧವನ್ನೂ ಹೇಳಿದ್ದರು. ನಾಟ್ಯ ಕಲಿತ ಕುಡಾನದವರು ಮೇಳದ ತಿರುಗಾಟವನ್ನು ನಡೆಸುವ ಮನಮಾಡಿದರು.


ಕುಡಾನ ಗೋಪಾಲಕೃಷ್ಣ ಭಟ್ಟರು ತಿರುಗಾಟ ಆರಂಭಿಸಿದ್ದು 1950ನೇ ಇಸವಿ. ಶ್ರೀ ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳ ಜತೆ. ಅವರಿಂದಲೇ ಅರ್ಥಗಾರಿಕೆ, ರಂಗತಂತ್ರಗಳನ್ನು ಕಲಿತರು. ಇದಕ್ಕಿಂತಲೂ ಮೊದಲು ವೇಷ ಮಾಡಿದ ಅನುಭವಗಳು ಇತ್ತು. ಗೆಜ್ಜೆ ಕಟ್ಟಿದ್ದು ತನ್ನ 16ನೆಯ ವಯಸ್ಸಿನಲ್ಲಿ (1948). ಶ್ರೀ ಕ್ಷೇತ್ರ ಕಟೀಲಿನಲ್ಲಿ ನವರಾತ್ರಿ ಪ್ರಯುಕ್ತ ನಡೆದ ಪ್ರದರ್ಶನದಲ್ಲಿ. ಮೇಳದಲ್ಲಿ ಹಿರಿಯ ಕಲಾವಿದರ ಮಾರ್ಗದರ್ಶನ, ಸ್ವಂತ ಪರಿಶ್ರಮಗಳಿಂದ ಗೋಪಿಯಣ್ಣ ಬೆಳೆಯುತ್ತಾ ಸಾಗಿದರು. ಪುಂಡುವೇಷ, ಕಸೆವೇಷಗಳಲ್ಲಿ ಮಿಂಚಿದರು. ಮೊದ ಮೊದಲು ಇವರು ಸ್ತ್ರೀವೇಷಗಳನ್ನೂ ಮಾಡುತ್ತಿದ್ದರಂತೆ. ಆದರೂ ಇವರ ಆಯ್ಕೆ ಪುಂಡುವೇಷಗಳೇ ಆಗಿತ್ತು. ಅದಕ್ಕೆ ಅಗತ್ಯವಾದ ಚುರುಕಿನ ನಾಟ್ಯ, ವೀರರಸಾಭಿನಯ ಸಾಮರ್ಥ್ಯ ಕುಡಾನದವರಲ್ಲಿ ತುಂಬಿತ್ತು. ಹೀಗೆ ಧರ್ಮಸ್ಥಳ ಮೇಳದಲ್ಲಿ 7 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.

ಕುಡಾನ ಗೋಪಿಯಣ್ಣ ದಿಗಿಣವೀರ, ಗಿರಕಿವೀರನೆಂದೇ ಅಂದಿನ ಕಾಲದಲ್ಲಿ ಕರೆಸಿಕೊಂಡಿದ್ದರು. ಆದರೆ ಎಲ್ಲಾ ಪಾತ್ರಗಳಿಗೂ ಹಾಗೆ ಹಾರುತ್ತಿರಲಿಲ್ಲ. ಪಾತ್ರೋಚಿತವಾಗಿ ಗಿರಕಿ ಹಾರುತ್ತಿದ್ದರು. ಹಾಗಾಗಿ ನಿಜ ದಿಗಿಣವೀರ ಎನಿಸಿಕೊಂಡಿದ್ದರು. ಇವರು ಎರಡೂ ಕಾಲುಗಳನ್ನು ಎತ್ತಿ, ಮಡಚಿ ಗಿರಕಿ ಹೊಡೆಯುವುದು ಅದೆಷ್ಟು ಸೊಗಸು! ಎಂಬುದು ನೋಡುಗರ ಅಭಿಪ್ರಾಯ. ಪ್ರದರ್ಶನವೊಂದರಲ್ಲಿ ಗಿರಕಿ ಹಾರುತ್ತಾ ರಂಗಸ್ಥಳದಿಂದ ಹೊರಗೆ ಎಸೆಯಲ್ಪಟ್ಟರಂತೆ. ಆಗ ಹಿರಿಯ ಬಲಿಪರು- ‘ಎಂತಕೆ ಮಾರಾಯಾ ಹಾಂಗೆ ಹಾರುತ್ತೆ?’ ಎಂದು ಗದರಿಸಿದ್ದರೆಂಬ ಹೇಳಿಕೆಯಿದೆ.

ಖ್ಯಾತ ಕಲಾವಿದರಾಗಿದ್ದ ಹೊಸಹಿತ್ತಿಲು ಮಹಾಲಿಂಗ ಭಟ್ಟರೂ (ಲಿಂಗಣ್ಣ) ಕುಡಾನ ಗೋಪಿ ಅಣ್ಣನೂ ಬಂಧುಗಳು. ಲಿಂಗಣ್ಣನವರಿಗೆ ಕುಡಾನ ಅಜ್ಜನ ಮನೆ. ಧರ್ಮಸ್ಥಳ ಮೇಳದ ತಿರುಗಾಟದ ನಂತರ ಕುಡಾನದವರು ಮೂಲ್ಕಿ ಮೇಳವನ್ನು ಸೇರಿದ್ದರು. ಪೆರುವಡಿ ಸುಬ್ರಾಯ ಭಟ್ಟರು, ಪೆರುವಡಿ ನಾರಾಯಣ ಭಟ್ಟರು ಮೇಳವನ್ನು ನಡೆಸುತ್ತಿದ್ದರು. ಇವರುಗಳು ಕುಡಾನದವರ ನೆರೆಯ ಬಂಧುಗಳು. ನಿರಂತರ 13 ವರ್ಷಗಳ ತಿರುಗಾಟ ಮೂಲ್ಕಿ ಮೇಳದಲ್ಲಿ. ಧರ್ಮಸ್ಥಳ ಮತ್ತು ಮೂಲ್ಕಿ ಮೇಳಗಳಲ್ಲಿ ಗೋಪಿ ಅಣ್ಣ ಪ್ರಹ್ಲಾದ, ಧ್ರುವ, ಪರಶುರಾಮ, ಅಭಿಮನ್ಯು, ಬಭ್ರುವಾಹನ, ಶ್ರೀಕೃಷ್ಣ, ಲಕ್ಷ್ಮಣ, ಚಂಡಮುಂಡರು ಪ್ರಮೀಳೆ, ಶಶಿಪ್ರಭೆ, ಸ್ವಯಂಪ್ರಭೆ, ಮೀನಾಕ್ಷಿ ಮಾರ್ತಾಂಡತೇಜ, ಅಶ್ವತ್ಥಾಮ ಮೊದಲಾದ ಪಾತ್ರಗಳಲ್ಲಿ ಮಿಂಚಿದರು.

ಇವರ ಶ್ರೀಕೃಷ್ಣ ಮತ್ತು ಪೆರುವಡಿ ಹಾಸ್ಯಗಾರರ ವಿಜಯನ ಜೋಡಿ ಪಾತ್ರಗಳು ಅಂದಿನ ಕಾಲ ಜನಪ್ರಿಯವಾಗಿತ್ತು. ಕುರಿಯ ವಿಠಲ ಶಾಸ್ತ್ರಿಗಳ ಜಮದಗ್ನಿ ಕುಡಾನದವರ ಪರಶುರಾಮ ಬಹು ಪ್ರಸಿದ್ಧಿಯನ್ನು ಪಡೆದಿತ್ತು. ಅಲ್ಲದೆ ಕುರಿಯ ವಿಠಲ ಶಾಸ್ತ್ರಿಗಳ ಈಶ್ವರನಿಗೆ ದಾಕ್ಷಾಯಿಣಿಯಾಗಿಯೂ, ಭಸ್ಮಾಸುರನ ಪಾತ್ರಕ್ಕೆ ಮೋಹಿನಿಯಾಗಿಯೂ ಅಭಿನಯಿಸಿದ್ದರು. ರಂಗನಾಯಕರೆಂದೇ ಖ್ಯಾತರಾದ ಕುರಿಯ ಗಣಪತಿ ಶಾಸ್ತ್ರಿಗಳು ಭಾಗವತರಾಗಿಯೂ ಜತೆಗೆ ವೇಷಧಾರಿಯಾಗಿಯೂ ಕಲಾಸೇವೆಯನ್ನು ಮಾಡಿದವರು. ಭಾಗವತ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳ ಮಹಿಷಾಸುರನ ಪಾತ್ರಕ್ಕೆ ಅನೇಕ ಬಾರಿ ಕುಡಾನ ಗೋಪಿ ಅಣ್ಣ ಮಾಲಿನಿಯಾಗಿ ಅಭಿನಯಿಸಿದ್ದರು.


ಮೂಲ್ಕಿ ಮೇಳದ ನಂತರ ಇರಾ ಮೇಳದಲ್ಲಿ ತಿರುಗಾಟ 4 ವರ್ಷ. ಬಳಿಕ 4 ವರ್ಷ ಕೂಡ್ಲು ಮೇಳದಲ್ಲಿ. ತದನಂತರ 4 ವರ್ಷ ಸುಂಕದಕಟ್ಟೆ ಮೇಳದಲ್ಲಿ. ಕಟೀಲು ಮೇಳದ ಶ್ರೇಷ್ಠ ಕಲಾವಿದ ವಾಟೆಪಡ್ಪು ವಿಷ್ಣುಶರ್ಮರೂ ಕುಡಾನ ಮನೆಯವರೂ ಬಂಧುಗಳು. ಕುಡಾನ ಗೋಪಿಯಣ್ಣನವರು ವಿವಾಹವಾದುದು ವಿಷ್ಣುಶರ್ಮರ ಸೋದರ ಅತ್ತೆಯನ್ನು (ತಂದೆಯ ತಂಗಿ). ಸುಂಕದಕಟ್ಟೆ ಮೇಳದಲ್ಲಿ ಮಾವನೂ ಅಳಿಯನೂ ಜತೆಯಾಗಿ ಕಲಾಸೇವೆಯನ್ನು ಮಾಡಿದ್ದರು. ಕುಡಾನ ಗೋಪಾಲಕೃಷ್ಣ ಭಟ್ಟರು ಎಡನೀರು ಮಠ ಮತ್ತು ಮಠಾಧೀಶರಲ್ಲಿ ವಿಶೇಷ ಗೌರವವುಳ್ಳವರಾಗಿದ್ದರು. ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರಿಗೆ ಅಚ್ಚುಮೆಚ್ಚಿನ ಕಲಾವಿದರಾಗಿದ್ದರು ಕುಡಾನ ಗೋಪಿಯಣ್ಣ. ಮಳೆಗಾಲ ಶ್ರೀಮಠದಲ್ಲಿ ಕಳೆದ ದಿನಗಳನೇಕ.

ತನ್ನ 18ನೆಯ ವಯಸ್ಸಿನಲ್ಲಿ ತಿರುಗಾಟ ಆರಂಭಿಸಿದ ಕುಡಾನ ಗೋಪಿಯಣ್ಣ ಅವರಿಗೆ ಭರತನಾಟ್ಯ ಮತ್ತು ಶಿವತಾಂಡವ ನೃತ್ಯವನ್ನು ಅಭ್ಯಸಿಸುವ ಅವಕಾಶವೂ ಒದಗಿಬಂದಿತ್ತು. ಕೇರಳ ರಾಜ್ಯದ ಪಾಲಕ್ಕಾಡ್ ಸಮೀಪದ (ಪಾಲ್ಘಾಟ್) ಪಲ್ಲಶ್ಯನ ಶ್ರೀ ಭಗವತೀ ದೇವಸ್ಥಾನದಲ್ಲಿ ಕುಡಾನ ಗೋಪಿಯಣ್ಣನವರ ದೊಡ್ಡಪ್ಪ ಮತ್ತು ತಂದೆ ನಾರಾಯಣ ಭಟ್ಟರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈಗಲೂ ಕುಡಾನ ಮನೆಯವರು ಸದ್ರಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯವನ್ನು ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ತೀರ್ಥರೂಪರ ಜತೆಗೆ ಪಾಲ್ಘಾಟ್‍ಗೆ ತೆರಳಿ ಶ್ರೀ ನಾರಾಯಣನ್ ನಂಬೂದಿರಿ ಮತ್ತು ಶ್ರೀ ಕೆ. ಎಸ್. ಮೂರ್ತಿಯವರಿಂದ ಭರತನಾಟ್ಯ ಮತ್ತು ಶಿವತಾಂಡವ ನೃತ್ಯವನ್ನು ಕಲಿತಿದ್ದರು. ಯಕ್ಷಗಾನ ಹೆಜ್ಜೆಗಾರಿಕೆಗೆ ಇದರಿಂದ ಅನುಕೂಲವೇ ಆಗಿತ್ತು.

ಕುಡಾನರು ಜನಿಸಿದ್ದು 1932ರಲ್ಲಿ. ಇಳಿವಯಸ್ಸಿನಲ್ಲಿ ವಯೋಸಹಜವಾದ ಮರೆವು ಕಾಡಿತ್ತು. ಆದರೂ ನಾನು ಜನಿಸಿದ್ದು ಅಂಗೀರಸ ಸಂವತ್ಸರದಲ್ಲಿ ಎಂದು ಹೇಳುತ್ತಿದ್ದರಂತೆ. ತನ್ನ 22-24ರ ವಯಸ್ಸಿನಲ್ಲೇ ಯಕ್ಷಗಾನ, ಭರತನಾಟ್ಯ, ಶಿವತಾಂಡವಗಳನ್ನು ಕಲಿತು ರಂಗದಲ್ಲಿ ಪುಂಡುವೇಷಧಾರಿಯಾಗಿ ಮಿಂಚಿದ ಪ್ರತಿಭಾವಂತರು ಕುಡಾನ ಗೋಪಿಯಣ್ಣ. ಕಾಯರ್‍ಕಟ್ಟೆ, ಬೆರಿಪದವು, ಮಿತ್ತನಡ್ಕ, ಸುಳ್ಯ, ತೊಡಿಕಾನ, ಬಿಳಿನೆಲೆ, ಮುಳಿಗದ್ದೆ ಮೊದಲಾದೆಡೆ ಯಕ್ಷಗಾನ ನಾಟ್ಯ ತರಗತಿಗಳನ್ನು ನಡೆಸಿ ತರಬೇತಿ ನೀಡಿರುತ್ತಾರೆ. ಸುಂಕದಕಟ್ಟೆ ಮೇಳದ ತಿರುಗಾಟ ನಂತರ ನಿರಂತರ 7 ವರ್ಷಗಳ ಕಾಲ ಕಟೀಲು ಮೇಳದಲ್ಲಿ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ಕಟೀಲು 3ನೇ ಮೇಳದಲ್ಲಿ ವ್ಯವಸಾಯ. 1995ನೇ ಇಸವಿ ಅನಿವಾರ್ಯವಾಗಿ ರಂಗದಿಂದ ನಿವೃತ್ತರಾದರು.

ತಿರುಗಾಟದ ಸಂದರ್ಭ ಶಿಸ್ತಿನ ಬದುಕನ್ನು ರೂಢಿಸಿಕೊಂಡಿದ್ದ ಇವರು ಆರೋಗ್ಯವಂತರಾಗಿದ್ದರು. ಅನೇಕ ಸಂಘ-ಸಂಸ್ಥೆಗಳು ಕುಡಾಣ ಗೋಪಾಲಕೃಷ್ಣ ಭಟ್ ಎಂಬ ಮೇರುಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ್ದಾರೆ. ಅಲ್ಲದೆ ಅವರ ಕಷ್ಟಗಳಿಗೆ ಸ್ಪಂದಿಸಿಯೂ ಇದ್ದಾರೆ. ತನ್ನ ಯಕ್ಷಕಲಾ ಬದುಕಿನಲ್ಲಿ ದಿಗ್ಗಜ ಕಲಾವಿದರನೇಕರ ಒಡನಾಡಿಯಾಗಿ ಸಹಕಲಾವಿದರಾಗಿ ಮೆರೆದರು. ಆದರೂ ಗರ್ವಪಟ್ಟವರಲ್ಲ ಕುಡಾನ ಗೋಪಿ ಅಣ್ಣ. ಯಕ್ಷಗಾನ ಕಲೆಯಿಂದಾಗಿ ನಾನು ಗುರುತಿಸಲ್ಪಟ್ಟೆ. ಅದು ನನಗೆ ಎಲ್ಲವನ್ನೂ ನೀಡಿತು. ಶ್ರೇಷ್ಠ ಕಲೆಯ ಒಂದು ಅಂಗವಾಗಿ ಕಾಣಿಸಿಕೊಳ್ಳಲು ಅವಕಾಶವಾದುದಕ್ಕೆ ಸಂತೋಷವಿದೆ ಎನ್ನುತ್ತಿದ್ದರಂತೆ.

ಕುಡಾನ ಗೋಪಾಲಕೃಷ್ಣ ಭಟ್ಟರ ಧರ್ಮಪತ್ನಿ ಶ್ರೀಮತಿ ಸಾವಿತ್ರಿ ಅಮ್ಮ. ಕುಡಾನ ದಂಪತಿಗಳಿಗೆ 4 ಮಂದಿ ಮಕ್ಕಳು (2 ಹೆಣ್ಣು ಮತ್ತು 2 ಗಂಡು) ಹಿರಿಯ ಪುತ್ರಿ ಶ್ರೀಮತೀ ಸರಸ್ವತೀ ಗೃಹಿಣಿ. ಕಿರಿಯ ಪುತ್ರಿ ಶ್ರೀಮತೀ ಶ್ರೀದೇವಿ ಗೃಹಿಣಿ. ಪ್ರಥಮ ಪುತ್ರ ಶ್ರೀ ಗಣೇಶ ಕುಡಾನ ಕೃಷಿ ಮತ್ತು ಪಾಕತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ದ್ವಿತೀಯ ಪುತ್ರ ಶ್ರೀ ಚಂದ್ರಶೇಖರ ಕುಡಾನ ಪೌರೋಹಿತ್ಯ ಮತ್ತು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರುಗಳೆಲ್ಲಾ ಯಕ್ಷಗಾನಾಸಕ್ತರು. ಶ್ರೀ ಗಣೇಶ ಕುಡಾನ ಇವರ ಮಕ್ಕಳಾದ ಕು| ಗೀತಾಂಜಲೀ, ಕು| ಮೇಘನಾ ಮತ್ತು ಕು| ಸ್ವಾತಿ ಯಕ್ಷಗಾನ ಬಾಲಕಲಾವಿದೆಯರು. ಬಾಯಾರು ರಮೇಶ ಶೆಟ್ಟಿಯವರಿಂದ ನಾಟ್ಯಾಭ್ಯಾಸ ಮಾಡಿರುತ್ತಾರೆ. ಇವರು ಮೂವರೂ ಬಾಯಾರು ಮುಳಿಗದ್ದೆಯ ಹೆದ್ದಾರಿ ಶಾಲೆಯ ವಿದ್ಯಾರ್ಥಿನಿಯರು.

ಎಳವೆಯಲ್ಲೇ ಯಕ್ಷಗಾನವನ್ನು ಕಲಿತು ಗ್ರಾಮೀಣ ಪ್ರದೇಶವಾದ ಹುಟ್ಟೂರು ಕುಡಾನಕ್ಕೆ ಕೀರ್ತಿಯನ್ನು ತಂದಿತ್ತವರು ಶ್ರೀ ಗೋಪಾಲಕೃಷ್ಣ ಭಟ್ಟರು. ಶಾಸ್ತ್ರೀಯವಾಗಿ ಕಲಿತು ಬಾಲಗೋಪಾಲ ವೇಷದಿಂದ ತೊಡಗಿ ಹಂತ ಹಂತವಾಗಿ ಬೆಳೆದು ಪಕ್ವರಾದವರು. ಪಾದರಸದಂತೆ ಚುರುಕಾದ ನಡೆ, ಶಾಸ್ತ್ರೀಯ, ಸುಂದರವಾದ ನಾಟ್ಯ, ಅದ್ಭುತ ದಿಗಿಣ, ಹಿತಮಿತವಾದ ಮಾತುಗಳಿಂದ ತೆಂಕುತಿಟ್ಟಿನ ಶ್ರೇಷ್ಠ ಪುಂಡುವೇಷಧಾರಿಯಾಗಿ ಮೆರೆದರು. ಅವರೆಂದೂ ಪ್ರಚಾರಪ್ರಿಯರಾಗಿರಲಿಲ್ಲ. ಪ್ರತಿಷ್ಠೆಗಾಗಿ ಹಾತೊರೆದವರಲ್ಲ. ಯಾವುದೇ ಅತಿರೇಕಗಳಿಲ್ಲದ ದೆಸೆಯಿಂದ ಪ್ರಚಾರಗಳಿಂದ ದೂರ ಉಳಿದರೇನೋ? ಎಂದು ಅನಿಸಿದರೆ ತಪ್ಪಾಗಲಾರದು.

ತಾನೊಬ್ಬ ಖ್ಯಾತ ಕಲಾವಿದ ಎಂದು ಬೀಗದೆ ಬಾಗುತ್ತಾ ಬದುಕಿದ ಇವರು ನಿವೃತ್ತಿಯ ಅನಂತರ ಪತ್ನಿ ಮತ್ತು ಮಕ್ಕಳ ಜತೆ ಕುಡಾನ ಮೂಲಮನೆಯಲ್ಲಿ ವಾಸಿಸುತ್ತಿದ್ದರು. 2010ರ ನಂತರ ವಯೋಸಹಜವಾಗಿ ದೇಹದ ಆರೋಗ್ಯವೂ ಕ್ಷೀಣಿಸುತ್ತಾ ಹೋಗಿತ್ತು. 2019 ಜೂನ್ 13ರಂದು ತೆಂಕುತಿಟ್ಟಿನ ಅಪ್ರತಿಮ ಪುಂಡುವೇಷಧಾರಿಯಾಗಿ ಮೆರೆದ ಕುಡಾನ ಗೋಪಾಲಕೃಷ್ಣ ಭಟ್ ಬದುಕಿನ ಯಾತ್ರೆಯನ್ನು ಮುಗಿಸಿ ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದರು.

ಲೇಖಕ: ರವಿಶಂಕರ್ ವಳಕ್ಕುಂಜ

ಮೌನವನ್ನು ತುಂಬುವ ಪ್ರಯತ್ನ, ಈ ಪರಕಾಯ ಪ್ರವೇಶ!

‘ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಲೀ ಬಯಲಾಟದ ಪಾತ್ರಧಾರಿಯಾಗಲಿ ತನ್ನ ಕಲಾವಂತಿಕೆಯನ್ನು ಯಶಸ್ವಿಯಾಗಿ ರಂಜನೀಯವಾಗಿ ಪ್ರೇಕ್ಷಕರಿಗೆ ದಾಟಿಸಬೇಕಾದರೆ ಆತ ಆಯಾ ಪಾತ್ರಗಳನ್ನು ತನ್ನಲ್ಲಿ ಆವಾಹಿಸಿಕೊಂಡು ತಾನೇ ಆ ಪಾತ್ರವೆಂಬಂತೆ ಅದರಲ್ಲಿ ಏಕೀಭವಿಸಬೇಕಾಗುತ್ತದೆ’ ಎಂಬ ‘ಪರಕಾಯ ಪ್ರವೇಶ’ದ ಬೆನ್ನುಡಿ ಕಲಾವಿದರಿಗೆ ಬೇಕಾದ ಪರಕಾಯ ಪ್ರವೇಶದ ಸಾಮರ್ಥ್ಯದ ಕುರಿತು ಹೇಳುತ್ತದೆ.

ಹಾಗೆ ನೋಡಿದರೆ ನಮ್ಮ ಮನಸ್ಸನ್ನೇ ನಾವು ಮುಕ್ತವಾಗಿ ತೆರೆದಿಡುವುದು ಕಷ್ಟ. ಅಂಥಾದ್ದರಲ್ಲಿ ಇನ್ನೊಂದು ಪಾತ್ರವನ್ನು ನಮ್ಮಲ್ಲಿ ಆವಾಹಿಸಿಕೊಂಡು, ಆಯಾ ಕಾಲಘಟ್ಟದ ಧರ್ಮವನ್ನು ಮೀರದಂತೆ, ನಮ್ಮ ಜ್ಞಾನಪ್ರದರ್ಶನ ಮತ್ತು ವರ್ತಮಾನದ ಸಾಮಾಜಿಕ ವಿಡಂಬನೆಯೊಂದೇ ಆಯುಧವಾಗದಂತೆ ಅರ್ಥಧಾರಿಯಾಗುವುದು ಸುಲಭದ ಮಾತಲ್ಲ. ಇಪ್ಪತ್ತೊಂದನೆಯ ಶತಮಾನದಲ್ಲಿ ನಿಂತುಕೊಂಡು ಯುಗಗಳ ಹಿಂದಿನ ಪಾತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಆ ಪಾತ್ರಗಳಿಗೆ ದನಿಯಾಗಬೇಕಾದರೆ ಸಹಾನುಭೂತಿಯ ಪ್ರಜ್ಞೆ ನಮ್ಮಲ್ಲಿರಬೇಕು. ಅನುಕಂಪ ತೋರಿಸುವುದು ಸುಲಭ, ಸಹಾನುಭೂತಿ ಹೊಂದುವುದು ಕಷ್ಟ, ಹೌದಲ್ಲ!


ಈ ದೃಷ್ಟಿಯಿಂದ ನೋಡಿದರೆ ಶ್ರೀ ರಾಧಾಕೃಷ್ಣ ಕಲ್ಚಾರರ ‘ಪರಕಾಯ ಪ್ರವೇಶ’ ಒಂದೊಂದು ಪಾತ್ರಗಳ ಕುರಿತೂ ಲೇಖಕರು ಹೊಂದಿದ ಸಹಾನುಭೂತಿಯ ಸಂಕೇತ. ಪುರಾಣಗಳ ಲೋಕದಲ್ಲಿ ಅಷ್ಟೇನೂ ಪ್ರಾಮುಖ್ಯವೆನಿಸದ ಆದರೆ ಪ್ರಮುಖ ಘಟನೆಯೊಂದು ನಡೆಯುವಲ್ಲಿ ಕಾರಣೀಭೂತರಾದ ಪಾತ್ರಗಳ ಅಂತರಂಗವನ್ನು ತೆರೆಯುವ ಪ್ರಯತ್ನ. ಹೊರನೋಟಕ್ಕೆ ಕಾಣುವುದು ಮುದ್ದಾಗಿ ಹೊಲಿಯಲ್ಪಟ್ಟ ಅಂಗಿ ಹೊರತು ಹೊಲಿಯಲು ನೆರವಾದ ಸೂಜಿ ಅಲ್ಲವಲ್ಲ? ದಾರವಾದರೂ ಅಲ್ಪಮಟ್ಟಿಗೆ ಕಾಣಿಸೀತು. ಪುರಾಣಗಳಲ್ಲಿ ಇಂತಹ ಪಾತ್ರಗಳು ಅದೆಷ್ಟೋ ಇರಬಹುದು. ಆ ಮಹಾಕಾವ್ಯಗಳ ಕರ್ತೃಗಳ ದೃಷ್ಟಿಯಲ್ಲಿ ಅವು ಮುಖ್ಯವಾಗದೇ ಇರಬಹುದು. ಆದರೆ ಹೊಸ ತಲೆಮಾರಿನ ಓದುಗನಿಗೆ ಹಾಗೆ ಮೌನವಾಗಿ ನಿಂತ ಹಲವು ಪಾತ್ರಗಳು ಕಾಣಿಸಿಯಾವು. ಆದರೆ ರಾಧಾಕೃಷ್ಣ ಕಲ್ಚಾರರಿಗೆ ಆ ಪಾತ್ರಗಳ ಒಳಧ್ವನಿ ಕೇಳಿಸಿರಬೇಕು. ಹಾಗಾಗಿಯೇ ಈ ಪುಸ್ತಕದಲ್ಲಿರುವ ದಂಡಕ, ವಿಕರ್ಣ, ಸುದೇಷ್ಣಾ, ರಥಕಾರ, ಭದ್ರ, ಪ್ರಾತಿಕಾಮಿ, ಅಶ್ವಸೇನ, ಸಾರಥಿ, ರುಮಾ, ರುರು, ಸಾಲ್ವ, ಕೌರವ ಮತ್ತು ಪರೀಕ್ಷಿತನ ಸ್ವಗತಗಳು ಓದುಗರೆದುರು ತೆರೆದುಕೊಂಡಿವೆ.


ಮನು ಚಕ್ರವರ್ತಿಯ ಮೊಮ್ಮಗನಾದರೂ ರಾಜಮನೆತನದ ಘನತೆ ಗಾಂಭೀರ್ಯಗಳನ್ನು, ನಡತೆಯನ್ನೂ ಕಲಿಯಲಾಗದೇ ಹೋದ ದಂಡಕ, ಶಾಪಗ್ರಸ್ತನಾಗಿ ಸಾವಿಗಾಗಿ ಕಾಯುವ ಹೊತ್ತು ‘ಪ್ರಪಂಚ ಮೂಢರನ್ನು ಸಹಿಸುತ್ತದೆ, ಮೂರ್ಖರನ್ನಲ್ಲ’ ಎಂದು ಪರಿತಪಿಸುತ್ತಾನೆ. ಅವನ ಇಡಿಯ ಬಾಲ್ಯ, ಬದುಕು ನಮ್ಮೆದುರು ತೆರೆದುಕೊಳ್ಳುತ್ತದೆ. ಭೀಮನಿಂದ ಶರಹತಿಗೊಳಗಾದ ವಿಕರ್ಣ, ಕೌರವರು ಪಾಂಡವರಿಗೆ ಮಾಡಿದ ಒಂದೊಂದೂ ಅನ್ಯಾಯವನ್ನು ನೆನಪಿಸಿಕೊಂಡು ಪರಿತಪಿಸುತ್ತಾನೆ. ಪಾಂಚಾಲೆಯ ವಸ್ತ್ರಾಪಹಾರದ ಸಂದರ್ಭ ಅವಳ ಪರವಾಗಿ ದನಿಯೆತ್ತ ಹೊರಟ ಅವನು ‘ಈ ದಿನ, ಈ ಕ್ಷಣ ಮಾತಾಡದೇ ಇದ್ದರೆ ನನ್ನ ಇದುವರೆಗಿನ ಮೌನವೂ ಅರ್ಥ ಕಳೆದುಕೊಳ್ಳುತ್ತಿತ್ತು’ ಎನ್ನುವುದು ಮಾತಿಗಿರುವ ಮಹತ್ವವನ್ನು ತೋರುತ್ತದೆ. ಎಲ್ಲ ಮೌನವೂ ಸಹ್ಯವಲ್ಲ, ಸಾಧುವೂ ಅಲ್ಲವಲ್ಲ! ‘ಕಣ್ಣುಮುಚ್ಚುವ ಮೊದಲು ಕಾಣಿಸಿದ್ದು ಧರ್ಮರಾಯ, ಯಮಧರ್ಮನಲ್ಲ, ನನ್ನ ಅಣ್ಣ’ ಎಂಬ ವಿಕರ್ಣನ ಕೊನೆಯ ಮಾತನ್ನು ಗ್ರಹಿಸಿಯೂ ಹನಿಗಣ್ಣಾದೇ ಉಳಿದೇವೇ?

ಕೀಚಕನ ಸಾವಿನ ಬಳಿಕ ತೆರೆದುಕೊಳ್ಳುವ ಅವನಕ್ಕ ಸುದೇಷ್ಣಾಳ ಒಳಗು ತನ್ನ ಅಂತಃಪುರದ ಪರಿಚಾರಿಕೆಯರಿಗಿನ್ನು ನೆಮ್ಮದಿ ಎಂದು ಅಂದುಕೊಳ್ಳುವುದು, ಅದೆಷ್ಟೋ ಹೆಣ್ಣುಮಕ್ಕಳನ್ನು ನಿತ್ಯ ಕಾಡುತ್ತಿದ್ದ ದುಃಸ್ವಪ್ನ ದೂರವಾಯಿತಲ್ಲ ಅಂದುಕೊಳ್ಳುವುದು ಸುಲಭದ ಸ್ವಗತವಲ್ಲ. ಹಾಗೆಂದು ಇಲ್ಲಿನ ಯಾವ ಮಾತುಗಳೂ ಸ್ತ್ರೀವಾದದ ವಿರೋಧಾಭಾಸ ಎನಿಸುವುದಿಲ್ಲ. ರಾಣಿಯೇ ಆದರೂ ತಮ್ಮನನ್ನು ಶಿಕ್ಷಿಸುವ ಯಾವ ಅಧಿಕಾರವೂ ಇಲ್ಲದ ಅಬಲೆಯ ಸ್ವಗತವಿದು. ಮಹಾಭಾರತ ಯುದ್ಧಕ್ಕೆ ರಥ ಕಟ್ಟಬೇಕಾದ ರಥಕಾರನ ಸ್ವಗತ ಸಾಮಾನ್ಯ ಜನರ ಕಣ್ಣಿಗೆ ಕಾಣಿಸಬಹುದಾದ ಕೌರವ ಪಾಂಡವರ ಕಥನವನ್ನು ತೆರೆಯುತ್ತದೆ. ‘ಅನ್ಯಾಯವನ್ನು ಸಹಿಸುವುದು ಇನ್ನೊಂದು ಅನ್ಯಾಯವೆಸಗಿದಂತೆ’ ಎನ್ನುವುದು ಒಳ್ಳೆಯ ಸಂದೇಶವೇ.


ರಾಮನ ಸೇವಕನಾಗಿ ಜನಾಭಿಪ್ರಾಯವನ್ನು ಅವನಿಗೆ ಅರುಹಬೇಕಾದ ಭದ್ರ ಸೀತೆಯನ್ನು ರಾಮ ಪರಿತ್ಯಜಿಸಿದ ನಂತರದ ತನ್ನ ಅಳಲನ್ನು ನಮ್ಮೊಂದಿಗೆ ತೋಡಿಕೊಳ್ಳುತ್ತಾನೆ. ಕರ್ತವ್ಯಪ್ರಜ್ಞೆಯಿಂದ ನಡೆದುಕೊಂಡರೂ ಆ ಕಾರಣವಾಗಿ ಸೀತೆ ಅಯೋಧ್ಯೆಯಿಂದ ದೂರವಾಗಬೇಕಾಯಿತು ಎಂದುಕೊಳ್ಳುವ ಭದ್ರನ ‘ಆದರ್ಶಪ್ರಿಯತೆ ವಿಪರೀತಕ್ಕೆ ಹೋದರೆ ಹೀಗೇ ಆಗುವುದೇನೋ. ಸ್ವತಃ ಅವನಿಗಲ್ಲದಿದ್ದರೂ ಅವನನ್ನು ಅವಲಂಬಿಸಿದವರಿಗೆ ಸಂಕಟ ತಪ್ಪಿದ್ದಲ್ಲ. ತಪ್ಪಿರಲಿ, ಇಲ್ಲದಿರಲಿ ಶಿಕ್ಷೆಯನ್ನಂತೂ ಅನುಭವಿಸಲೇಬೇಕು, ಸೀತೆ ಯಂತೆ’ ಎಂಬ ನಿಟ್ಟುಸಿರು ಅದೆಷ್ಟು ಬಿಸಿ! ಅಬ್ಬಾ! ‘ಆಳುವಾತ ದುರ್ಬುದ್ಧಿಯವನಾದರೆ ಅವನ ಕೈಕೆಳಗಿರುವವರು ಒಳ್ಳೆಯವರಾಗುವುದು ಸಾಧ್ಯವೇ’ ಎಂದು ಪ್ರಶ್ನಿಸುವ ಪ್ರಾತಿಕಾಮಿ ದುಷ್ಟರ ನಾಯಕತ್ವದಲ್ಲಿ ಮುದುರಿ ಹೋಗುವ ಒಳ್ಳೆಯ ಮನಸ್ಸುಗಳ ಪ್ರತೀಕ.

‘ಮನುಷ್ಯರು ನಮ್ಮ ಹಾಗಲ್ಲ, ನಮಗೆ ಹಲ್ಲಿನಲ್ಲಿ ಮಾತ್ರ ವಿಷವಾದರೆ ಇವರಿಗೆ ಮೈ, ಬುದ್ಧಿಗಳಲ್ಲೂ ಅದೇ ತುಂಬಿದೆ. ಕಾರಣವೇ ಇಲ್ಲದೇ ಕೊಲ್ಲುವವರ ಪರಿಸರವನ್ನು ಬಿಟ್ಟು ದೂರಕ್ಕೆ ನಮ್ಮ ನಾಡಿಗೆ ಹೋಗಿಬಿಡೋಣ’ ಎನ್ನುವ ಅಶ್ವಸೇನನ ತಾಯಿ, ತಕ್ಷಕನ ಹೆಂಡತಿ, ‘ನನ್ನವರೆಂಬುವರಿಲ್ಲದೆ, ನಾಗನೆಂದು ಕಂಡವರೆಲ್ಲರೂ ಅಂಜುವ, ಅಲ್ಲವಾದರೆ ಅಸಹ್ಯದಿಂದ ಓಡಿಸುವವರ ಮಧ್ಯೆ ನಾನು ಬದುಕಬೇಕಿತ್ತು, ಅಲ್ಲ ಬದುಕಲೇ ಬೇಕಿತ್ತು’ ಎಂಬ ಅಶ್ವಸೇನ ಅರ್ಜುನನನ್ನು ಕೊಲ್ಲಬೇಕಿದ್ದ ತನ್ನ ಸೇಡನ್ನು ಅನಾವರಣಗೊಳಿಸುತ್ತಾನೆ.


ವಾಲಿಯ ಸಾವಿನ ಬಳಿಕ ಕಿಷ್ಕಿಂಧೆಯ ಅಧಿಕಾರ ಮಾತ್ರವಲ್ಲದೇ ತಾರೆಯನ್ನೂ ಒಪ್ಪಿಕೊಳ್ಳುವ ಸುಗ್ರೀವನ ಹೆಂಡತಿ ರುಮಾ ‘ತಾರೆಯನ್ನು ಪತ್ನಿಯಾಗಿಸಿಕೊಳ್ಳಬೇಕಾದ ಅಗತ್ಯವೋ ಅನಿವಾರ್ಯತೆಯೋ ಇತ್ತೇ’ ಎಂದು ಕೇಳುವುದು ನ್ಯಾಯಯುತವೇ ಅಲ್ಲವೇ? ‘ಯಾರೋ ಅಣ್ಣ ಸತ್ತರೆ ಅವನ ಹೆಂಡತಿಯನ್ನು ತಮ್ಮ ಕೈಹಿಡಿಯಬಹುದು ಎಂಬ ಸೂಚನೆ ಕೊಟ್ಟದ್ದೇ ತಡ, ತಾರೆಯ ಕೈಹಿಡಿದ. ಅವರಿಬ್ಬರ ನಡುವೆ ಮೊದಲೇ ಆಕರ್ಷಣೆ ಇದ್ದಿರಬಹುದೇ’ ಎಂಬ ಅನುಮಾನ ವ್ಯಕ್ತಪಡಿಸುವುದು ಅಪ್ಪಟ ಹೆಣ್ಣುಮನಸ್ಸಿನ ಅಳಲು! ಪ್ರಮತಿ ಮಹರ್ಷಿಗಳ ಮಗ ರುರು ಪ್ರಮದ್ವರಾಳಿಗಾಗಿ ತನ್ನ ಅರ್ಧ ಆಯಸ್ಸು ಕೊಟ್ಟು ಅವಳನ್ನು ಬದುಕಿಸಿಕೊಂಡ ಮೇಲೆ ಸರ್ಪಗಳನ್ನು ಕಂಡಲ್ಲಿ ಕೊಲ್ಲುತ್ತಾನೆ. ‘ಋಷಿಯೋಗ್ಯವಲ್ಲದ ಪ್ರತೀಕಾರ ಬುದ್ಧಿ ನನ್ನಲ್ಲಿ ಜಾಗೃತವಾಗಿತ್ತು’ ಎಂಬ ಸ್ವಪ್ರಜ್ಞೆಯೊಂದಿಗೆ ಕೊರಗುತ್ತಾನೆ. ಅವನ ಕೊನೆ ಹೇಗಾಯಿತು ಎಂಬುದು ಇನ್ನೊಂದು ಕಥೆ ಎಂದಿದ್ದಾರೆ ಲೇಖಕರು. ಆ ಕಥೆಗಾಗಿ ನಾವು ಕಾಯಬೇಕಿದೆ.


ಅಂಬೆ ತನ್ನ ಮೇಲೆ ವಿಶ್ವಾಸವಿಟ್ಟು ಬಂದರೂ ಅವಳನ್ನು ಒಪ್ಪಿಕೊಳ್ಳದೇ ತಿರಸ್ಕರಿಸಿ ಹೇಡಿಯೆನಿಸುವ ಸಾಲ್ವನ ಒಳಮನಸ್ಸು ಲೇಖಕರಿಗೆ ಬೇರೆಯದೇ ಆಗಿ ಕಂಡಿದೆ, ಅದು ಓದುಗರು ಒಪ್ಪುವಂತೆ! ಕುರುಕ್ಷೇತ್ರದ ರಣಕ್ಷೇತ್ರದಲ್ಲಿ ಊರುಭಂಗಕ್ಕೊಳಗಾಗಿ ಬಿದ್ದಿರುವ ಕೌರವನಿಗೆ ಕಿವಿಯಲ್ಲಿ ವಿದುರ ಮಾತಾಡಿಸಿದಂತೆನಿಸುತ್ತದೆ. ‘ಬದುಕಿದ್ದಷ್ಟೂ ಕಾಲ ಭೂಮಿ, ಭೂಮಿ ಅಂದೆಯಲ್ಲ, ಈಗ ಹೀಗೆ ಮಲಗುವುದಕ್ಕೆ ಎಷ್ಟು ಬೇಕಪ್ಪಾ?’ ಎಂಬ ಪ್ರಶ್ನೆಯ ಆಳ ದೊಡ್ಡದು. ‘ಸಾವು ದೂರವಾದಾಗ ನಿರಾಶೆ! ಅಂದರೆ ಮೃತ್ಯುಭಯವನ್ನು ನಾನು ಗೆದ್ದೆನೇ’ ಎಂದು ಪ್ರಶ್ನಿಸಿಕೊಳ್ಳುವ ಪರೀಕ್ಷಿತನ ಸ್ವಗತ ಒಂದು ಯುಗ ಅಂತ್ಯವಾಗುವಾಗಿನ ತಲ್ಲಣಗಳ ಚಿತ್ರಣ.


ಉತ್ಥಾನ ಮಾಸಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟಗೊಳ್ಳುತ್ತಿರುವ ‘ಪರಕಾಯ ಪ್ರವೇಶ’ವನ್ನು ಪುಸ್ತಕದ ರೂಪದಲ್ಲಿ ತಂದಿರುವುದು ಸಾಹಿತ್ಯ ಸಿಂಧು ಪ್ರಕಾಶನ ಬೆಂಗಳೂರು. ಯಕ್ಷಗಾನ ಅಭ್ಯಾಸಿಗಳಿಗೆ ನಿಜಾರ್ಥದಲ್ಲಿ ಸ್ವಗತಗಳಿಗೊಂದು ಮಾದರಿ. ನೋಡುವ ಕಣ್ಣುಗಳು ವರ್ತಮಾನದ್ದಾದರೂ ಪುರಾಣಗಳ ಆಳವಾದ ಅಧ್ಯಯನ ನಮ್ಮನ್ನು ಆ ಕಾಲಘಟ್ಟಕ್ಕೆ ಕೊಂಡೊಯ್ಯಲು ಸಾಧ್ಯ ಎಂಬುದಕ್ಕೆ ಉದಾಹರಣೆ ‘ಪರಕಾಯ ಪ್ರವೇಶ’. ಕಲ್ಚಾರರ ಮನಸ್ಸು ಈ ಸ್ವಗತಗಳನ್ನು ಬರೆದು ಹಗುರಾಗಿರಬೇಕು… ಓದಿ ಭಾರವಾಗುವ ಸರದಿಯೀಗ ನಮ್ಮದು. ಯಾಕೆಂದರೆ ಅನೇಕ ಸಂದರ್ಭ ಆ ಸ್ವಗತಗಳು ನಮ್ಮ ಆಂತರ್ಯದ ಪ್ರತಿಬಿಂಬವೂ ಆದೀತು. ಲೇಖಕರೇ ಹೇಳುವ ಹಾಗೆ ‘ಇದು ಪುರಾಣದ ಮೌನಗಳನ್ನು ತುಂಬುವ ಪ್ರಯತ್ನ’. ಮಾತಾದ ಸುದೀರ್ಘ ಮೌನವನ್ನು ಆಲಿಸಿದ ಬಳಿಕವೂ ಸಹಾನುಭೂತಿ ಹೊಂದದೇ ಉಳಿದೇವೆಯೇ? ು

ಲೇಖಕಿ: ಆರತಿ ಪಟ್ರಮೆ
(ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ)
ಉಪನ್ಯಾಸಕಿ, ವಿದ್ಯಾನಿಧಿ ಪದವಿಪೂರ್ವ ಕಾಲೇಜು
ಕೃಷ್ಣ ನಗರ, ತುಮಕೂರು – 03


ಹಿರಿಯ ಅನುಭವೀ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್

1

ಖ್ಯಾತ ಕಲಾವಿದ, ತಾಳಮದ್ದಳೆ ಅರ್ಥಧಾರಿ ಮಲ್ಪೆ ದಿ। ವಾಸುದೇವ ಸಾಮಗರು ಆಡಿದ ಮಾತುಗಳು ನೆನಪಾಗುತ್ತದೆ- “ಯಕ್ಷಗಾನದಲ್ಲಿ ಕಲಾವಿದರು ಕೌಟುಂಬಿಕ ನ್ಯಾಯೇಣ ತಂಡವಾಗಿ ಶ್ರಮಿಸಿದಾಗ ಮಾತ್ರ ಪ್ರದರ್ಶನವು ಗೆಲ್ಲುತ್ತದೆ.’’ ಹಿಂದಿನ ಕಾಲದಿಂದ ನಡೆದು ಬಂದ ರೀತಿಯನ್ನೇ ಅವರು ಉಲ್ಲೇಖಿಸಿದ್ದರು. ಹಿರಿಯ ಕಿರಿಯ ಕಲಾವಿದರೆಲ್ಲಾ ಒಂದೇ ಮನೆಯ ಸದಸ್ಯರಂತೆ ಹೊಂದಾಣಿಕೆಯಿಂದ ಬೆರೆತು ರಂಗದಲ್ಲಿ ಅಭಿನಯಿಸಿದಾಗ ಪರಿಣಾಮವನ್ನು ಪ್ರೇಕ್ಷಕರು ಅನುಭವಿಸುತ್ತಾರೆ. ನಿಜವಾದ ಯಕ್ಷಗಾನ ವೈಭವವನ್ನು ಅವರು ನೋಡಿ ಸಂತೋಷಪಡುತ್ತಾರೆ.

ಕಿರಿಯ ಅಭ್ಯಾಸಿಗಳಿಗೆ ಹಿರಿಯ ಅನುಭವೀ ಕಲಾವಿದರ ಮಾರ್ಗದರ್ಶನ ಅತ್ಯಗತ್ಯ. ಕಿರಿಯರು ಅವರನ್ನು ಗೌರವಿಸಿ ಅವರ ಅನುಭವಗಳನ್ನು ಪಡೆದುಕೊಳ್ಳಬೇಕು. ಹಿರಿಯರು ಕಿರಿಯರನ್ನು ವಂಚಿಸದೆ ತಾವು ಆರ್ಜಿಸಿದ ವಿದ್ಯೆಯನ್ನು ಅವರಿಗೆ ಧಾರೆಯೆರೆಯಬೇಕು. ಈ ಕ್ರಿಯೆಯು ನಿರಂತರವಾಗಿದ್ದಾಗ ಗೆಲ್ಲುವುದು ಯಕ್ಷಗಾನವೆಂಬ ಶ್ರೇಷ್ಠ ಕಲೆ. ಹಿಂದೆ ಹಿರಿಯ ಕಲಾವಿದರನೇಕರು ಇದೇ ತೆರನಾಗಿ ವ್ಯವಹರಿಸಿದ್ದಾರೆ. ಪ್ರಸಂಗಜ್ಞಾನ, ಪುರಾಣಜ್ಞಾನ, ರಂಗನಡೆ, ಪಾತ್ರದ ಸ್ವಭಾವ, ಸಂಭಾಷಣಾ ಕುಶಲತೆಗಳನ್ನು ತಿಳಿದು, ಸಂಪನ್ಮೂಲ ವ್ಯಕ್ತಿಗಳಾಗಿ ಕಿರಿಯರಿಗೆ ಮಾರ್ಗದರ್ಶನ ನೀಡಬಲ್ಲ ಅನುಭವಿಗಳು  ಅನೇಕರು ನಮ್ಮ ಜತೆಗಿದ್ದಾರೆ. ಹಿರಿಯ ಅನುಭವೀ ಕಲಾವಿದರಾದ ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಈ ಸಾಲಿಗೆ ಸೇರುತ್ತಾರೆ. ಪ್ರಸ್ತುತ ನಾಲ್ಕೈದು ವರ್ಷಗಳಿಂದ ಮೇಳದ ತಿರುಗಾಟದಿಂದ ನಿವೃತ್ತರಾದರೂ ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ.


ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಾಡೂರು ಗ್ರಾಮದ ಪೂಕಳ ಎಂಬಲ್ಲಿ ಶ್ರೀ ಕೃಷ್ಣ ಭಟ್ ಮತ್ತು ಶಂಕರಿ ಅಮ್ಮ ದಂಪತಿಗಳ ಮಗನಾಗಿ ಜನಿಸಿದರು. ಇವರು ಪದವೀಧರರು. 7ನೇ ತರಗತಿ ವರೇಗೆ ಧರ್ಮತ್ತಡ್ಕ ಶಾಲೆಯಲ್ಲೂ, ಎಸ್.ಎಸ್.ಎಲ್.ಸಿ. ವರೇಗೆ ಮಂಗಲ್ಪಾಡಿ ಸರಕಾರೀ ಶಾಲೆಯಲ್ಲೂ, ಪಿ.ಯು.ಸಿ. ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ಓದಿದ್ದರು. ಮಂಗಳೂರು ಸರಕಾರೀ ಕಾಲೇಜಿನಲ್ಲಿ ಪದವಿ (ಬಿ.ಕಾಂ.) ಶಿಕ್ಷಣವನ್ನು ಪೂರೈಸಿದ್ದರು.

ಇವರಿಗೆ ಯಕ್ಷಗಾನವು ಹಿರಿಯರಿಂದ ಬಂದ ಬಳುವಳಿ. ಅಜ್ಜ ಪೂಕಳ ವೆಂಕಟರಮಣ ಭಟ್ಟರು ಒಳ್ಳೆಯ ಅರ್ಥಧಾರಿಯಾಗಿದ್ದರು. ದೊಡ್ಡಪ್ಪ ವೆಂಕಟ್ರಮಣ ಭಟ್ಟರೂ (ಪೂಕಳ ಮಗು ಭಟ್ರು) ಕಲಾವಿದರಾಗಿದ್ದರು. ತಂದೆ ಪೂಕಳ ಕೃಷ್ಣ ಭಟ್ಟರು ಕಲಾವಿದರಲ್ಲದಿದ್ದರೂ, ಕಲಾಭಿಮಾನಿಯಾಗಿ ಅತ್ಯುತ್ತಮ ವಿಮರ್ಶಕರಾಗಿದ್ದರು. ದೊಡ್ಡಪ್ಪ ಪೂಕಳ ಮಗು ಭಟ್ಟರಿಗೆ 30 ಪ್ರಸಂಗಗಳ ಪದ್ಯಗಳು ಕಂಠಸ್ಥವಾಗಿತ್ತಂತೆ. ಇದಕ್ಕೆ ಕಾರಣವನ್ನೂ ಪೂಕಳ ಲಕ್ಷ್ಮೀನಾರಾಯಣ ಭಟ್ಟರು ಹೇಳುತ್ತಾರೆ- “ಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ಪ್ರಸಂಗಗಳ ಪದ್ಯಗಳು ಕಂಠಸ್ಥವಾಗಲು ಹಿಂದಿನ ಕಾಲದ ಭಾಗವತರುಗಳೇ ಕಾರಣರು. ಅವರ ಹಾಡಿನ ಶೈಲಿಯೇ ಕಾರಣ. ಆಲಾಪನೆ ದೀರ್ಘವಿಲ್ಲದೆ ಭಾವನಾತ್ಮಕವಾಗಿ ಹಾಡಿ ಫಕ್ಕನೆ ಮುಗಿಸುತ್ತಿದ್ದರು. ಹಾಗಾಗಿ ಹಾಡುಗಳನ್ನು ಪ್ರೇಕ್ಷಕರು ಮತ್ತು ಕಲಾವಿದರು ಬಹುಬೇಗನೇ ಗ್ರಹಿಸುತ್ತಿದ್ದರು. ಬಾಯಿಪಾಠ ಮಾಡಿಕೊಳ್ಳುತ್ತಿದ್ದರು.

ಅಗರಿ ಶ್ರೀನಿವಾಸ ಭಾಗವತರ ಪದ್ಯ ಕೇಳಿಯೇ ಹೊಸಹಿತ್ತಿಲು ಮಹಾಲಿಂಗ ಭಟ್ಟರಿಗೆ (ಲಿಂಗಣ್ಣ) 30 ಪ್ರಸಂಗಗಳ ಹಾಡುಗಳು ಕಂಠಸ್ಥವಾಗಿತ್ತು. ಪ್ರಸಂಗ ಪುಸ್ತಕಗಳನ್ನು ಓದಿ ಕಂಠಪಾಠ ಮಾಡಿದ್ದಲ್ಲ. ಯಾಕೆಂದರೆ ಅವರ ಪದ್ಯದ ಶೈಲಿಯೇ ಹಾಗಿತ್ತು. ಹೆಚ್ಚು ದೀರ್ಘ ಹೇಳದೆ, ಸ್ಪಷ್ಟವಾಗಿ, ಭಾವನಾತ್ಮಕವಾಗಿ ಹಾಡುವ ಹಳೆಯ ಭಾಗವತರುಗಳ ಹಾಡುಗಳನ್ನು ಕೇಳಿಯೇ ಕಲಾವಿದರೂ ಪ್ರೇಕ್ಷಕರೂ ಕಂಠಪಾಠ ಮಾಡಿಕೊಳ್ಳುತ್ತಿದ್ದರು.’’ ಇದು ಪೂಕಳ ಲಕ್ಷ್ಮೀನಾರಾಯಣ ಭಟ್ಟರ ಅನುಭವದ ಮಾತುಗಳು.


                      ಪೂಕಳದವರಿಗೆ ಬಾಲ್ಯದಲ್ಲೇ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು. ಯಾಕೆಂದು ಕೇಳಿದರೆ ಅದು ‘By birth’ ಎನ್ನುವ ಉತ್ತರ. ಯಕ್ಷಗಾನ ಕಲೆಯು ರಕ್ತಗತವಾಗಿತ್ತು. ಅಲ್ಲದೆ ಹುಟ್ಟೂರಲ್ಲೂ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿತ್ತು. ನೋಡುವ ಅವಕಾಶಗಳೂ ಸಿಕ್ಕಿತ್ತು. ಧರ್ಮತ್ತಡ್ಕ ಎಡಕ್ಕಾನ, ಪೆರ್ಮುದೆ (ಪೂಕಳದ ಸಮೀಪದ ಊರುಗಳು) ಪರಿಸರದಲ್ಲಿ ತಾಳಮದ್ದಳೆಯ ತಂಡವೊಂದು ಕಾರ್ಯಾಚರಿಸುತ್ತಿದ್ದ ಕಾಲ. ಕವಿಭೂಷಣ ಶ್ರೀ ವೆಂಕಪ್ಪ ಶೆಟ್ರ ಸಮಕಾಲೀನರಾಗಿದ್ದ ಎಡಕ್ಕಾನ ಕೇಶವ ಭಟ್ಟರು ಒಳ್ಳೆಯ ಅರ್ಥಧಾರಿಗಳಾಗಿದ್ದರು. ಅವರಿಂದಲೇ ಅರ್ಥಗಾರಿಕೆಯನ್ನು ಪೂಕಳದವರು ಅಭ್ಯಸಿಸಿದರು.

ಅಲ್ಲದೆ ಇವರ ಬಂಧುಗಳಾದ ಕೆಳಗಿನ ಬಾಳಿಕೆ ನಾರಾಯಣ ಭಟ್ಟರ ಸಹಕಾರವೂ ಸಿಕ್ಕಿತ್ತು. ಮೈರಾವಣ ಮೊದಲಾದ ಬಣ್ಣದ ವೇಷಗಳಲ್ಲಿ ಇವರು ಹೆಸರು ಗಳಿಸಿದ್ದರು. ಹಾಗಾಗಿ ಇವರನ್ನು ಮೈರಾವಣ ನಾರಾಯಣ ಭಟ್ಟರೆಂದು ಎಲ್ಲರೂ ಕರೆಯುತ್ತಿದ್ದರಂತೆ (ಕೆಲವೊಂದು ಪಾತ್ರಗಳಲ್ಲಿ ಹೆಸರು ಗಳಿಸಿ ಆ ಪಾತ್ರದ ಹೆಸರಿನಿಂದಲೇ ಕರೆಸಿಕೊಳ್ಳುತ್ತಿದ್ದ ಅನೇಕ ಹಿರಿಯ ಕಲಾವಿದರಿದ್ದರೆಂಬುದು ಹಿರಿಯ ಪ್ರೇಕ್ಷಕರು ಹೇಳುವುದನ್ನು ನಾವು ಗಮನಿಸ ಬಹುದು. ಉದಾ- ಹಂದಿ ತಿಮ್ಮಪ್ಪು, ಅತಿಕಾಯ ನಾರಾಯಣ ಭಟ್, ಬಣ್ಣದ ಮಹಾಲಿಂಗ, ಬಣ್ಣದ ಚಂದ್ರಗಿರಿ ಅಂಬು) ಹೀಗೆ ಊರಲ್ಲಿ ಆಗುತ್ತಿದ್ದ ತಾಳಮದ್ದಳೆಗಳಲ್ಲಿ ಅರ್ಥ ಹೇಳಲು ಆರಂಭಿಸಿದ್ದರು. ಪೂಕಳ.
                       

ಪೂಕಳ ಲಕ್ಷ್ಮೀನಾರಾಯಣ ಭಟ್ಟರು ನಾಟ್ಯ ಕಲಿತದ್ದು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ. ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ, ಕಲಾವಿದ ಉಪ್ಪಳ ಶ್ರೀಕೃಷ್ಣ ಮಾಸ್ತರ್ ಅವರಿಂದ. ಮಂಗಲ್ಪಾಡಿ ಶಾಲಾ ವಾರ್ಷಿಕೋತ್ಸವದ ಪ್ರದರ್ಶನಕ್ಕೆ ಅವರು ತಂಡವನ್ನು ಸಿದ್ಧಗೊಳಿಸಿದ್ದರು. ಮೇಳಕ್ಕೆ ಸೇರಿದ ಮೇಲೆ ನೋಡಿ ಕಲಿತುದೇ ಹೆಚ್ಚು. ಮಂಗಲ್ಪಾಡಿ ಶಾಲಾ ಪ್ರದರ್ಶನ, ಪಾಂಡವಾಶ್ವಮೇಧ ಪ್ರಸಂಗದ ತಾಮ್ರಧ್ವಜನಾಗಿ ರಂಗಪ್ರವೇಶ. ಊರ ಮತ್ತು ಶಾಲಾ ಪ್ರದರ್ಶನಗಳಲ್ಲಿ ವೇಷ ಮಾಡಲು ಇದುವೇ ವೇದಿಕೆಯಾಯಿತು. ಇದು ಕಾಲೇಜು ವಿದ್ಯಾರ್ಥಿಯಾಗಿರುವಾಗಲೂ ಮುಂದುವರಿಯಿತು. ಮಂಗಳೂರಿನಲ್ಲಿ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯ ಸಂದರ್ಭದಲ್ಲಿ ಭಾನುಕೋಪ ವಿಜಯ ಪ್ರಸಂಗದಲ್ಲಿ ಭಾನುಕೋಪನಾಗಿ ಅಭಿನಯಿಸಿ ದ್ವಿತೀಯ ಬಹುಮಾನವನ್ನು ಪಡೆದಿದ್ದರು.

ಪದವಿ ಶಿಕ್ಷಣವನ್ನು ಪೂರೈಸಿದ ನಂತರ ಮೂರು ವರ್ಷಗಳ ಕಾಲ ಮನೆಯಲ್ಲಿ ಕೃಷಿ ಚಟುವಟಿಕೆ. ಜತೆಗೆ  ಊರು ಪರವೂರುಗಳಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸುತ್ತಿದ್ದರು. 1980ನೇ ಇಸವಿಯಲ್ಲಿ ಪುತ್ತೂರು ಮೇಳದಲ್ಲಿ ಮೊದಲ ತಿರುಗಾಟ. ಪುತ್ತೂರು ಶ್ರೀಧರ ಭಂಡಾರಿಯವರ ನೇತೃತ್ವ ನಿರಂತರ 7 ವರ್ಷಗಳ ತಿರುಗಾಟ. ಎಳವೆಯಲ್ಲಿ ಪುರಾಣಪುಸ್ತಕಗಳನ್ನೂ, ಪ್ರಸಂಗ ಪುಸ್ತಕಗಳನ್ನೂ ಓದಿದ್ದು, ಊರಲ್ಲಿ ಆಟಕೂಟಗಳಲ್ಲಿ ಭಾಗವಹಿಸಿದ್ದು ಮೇಳದ ತಿರುಗಾಟಕ್ಕೆ ಅನುಕೂಲವೇ ಆಗಿತ್ತು. ಮತ್ತೆ ಒಂದು ವರ್ಷ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರು ಮೇಳದಿಂದ ನಿವೃತ್ತರಾದ ವರ್ಷ ಕಸ್ತೂರಿ ಪೈಗಳ ಸಂಚಾಲಕತ್ವದ ಸುರತ್ಕಲ್ ಮೇಳಕ್ಕೆ. ಶೇಣಿಯವರು ನಿರ್ವಹಿಸುತ್ತಿದ್ದ ಹೆಚ್ಚಿನ ಪಾತ್ರಗಳೂ ಪೂಕಳದವರೇ ನಿರ್ವಹಿಸಬೇಕಾಗಿತ್ತು.

ಸುರತ್ಕಲ್ ಮೇಳದಲ್ಲಿ ನಿರಂತರ 11 ವರ್ಷಗಳ ತಿರುಗಾಟ. ಬಪ್ಪಬ್ಯಾರಿ, ತುಘಲಕ್, ಯಯಾತಿ, ನಳ, ಹರಿಶ್ಚಂದ್ರ, ಕೋಟ ದೇವಪೂಂಜ, ಬಲಿಮೆದ ಭಟ್ರು, ತುಳುನಾಡ ಬಲಿಯೇಂದ್ರ ಪ್ರಸಂಗದ ಬಲಿಯೇಂದ್ರ ಮೊದಲಾದ ಪುರಾಣ, ತುಳು, ಸಾಮಾಜಿಕ ಪ್ರಸಂಗಗಳ ಪಾತ್ರಗಳು ಪೂಕಳದವರಿಗೆ ಹೆಸರನ್ನು ತಂದುಕೊಟ್ಟಿತು. ಪೌರಾಣಿಕ ಪ್ರಸಂಗಗಳಲ್ಲಿ ನಾಟಕೀಯ ಮತ್ತು ಎದುರು ವೇಷಗಳಿಗೆ ತನ್ನ ಪ್ರತಿಭಾ ವ್ಯಾಪಾರದಿಂದ ರೂಪ ಕೊಟ್ಟರು. ಸುರತ್ಕಲ್ ಮೇಳ ತಿರುಗಾಟ ನಿಲ್ಲಿಸಿದ ನಂತರ ಕಟೀಲು ಮೇಳದಲ್ಲಿ ವ್ಯವಸಾಯ.

ಕಟೀಲು 2ನೇ ಮೇಳ ಬಲಿಪ ಭಾಗವತರ ಜತೆ ತಿರುಗಾಟ. ತಿರುಗಾಟದುದ್ದಕ್ಕೂ ತಾನು ಆರ್ಜಿಸಿದ ವಿದ್ಯೆಯನ್ನು ಕಿರಿಯರಿಗೆ ಧಾರೆಯೆರೆಯುತ್ತಿದ್ದರು. ಪಾತ್ರದ ಸ್ವಭಾವ, ಪ್ರಸಂಗನಡೆ, ಮಾತುಗಾರಿಕೆಗಳ ಬಗ್ಗೆ ಮಾಹಿತಿಯನ್ನು ಕಿರಿಯ ಕಲಾವಿದರಿಗೆ ಪ್ರೀತಿಯಿಂದ ಹೇಳಿಕೊಡುತ್ತಿದ್ದರು. ಪೂಕಳ ಲಕ್ಷ್ಮೀನಾರಾಯಣ ಭಟ್ಟರಿದ್ದರೆ ಯಾವ ಪ್ರಸಂಗವನ್ನು ಬೇಕಾದರೂ ಮಾಡಬಹುದೆಂಬ ಧೈರ್ಯವು ಅವರಿದ್ದ ತಂಡಕ್ಕೆ ಇರುತ್ತಿತ್ತು. ಕಟೀಲು ಮೇಳದಲ್ಲಿ 7 ವರ್ಷಗಳ ಕಾಲ ತಿರುಗಾಟ. ನಂತರ ಎಡನೀರು ಮೇಳದಲ್ಲಿ ನಿರಂತರ 10 ವರ್ಷಗಳ ವ್ಯವಸಾಯ. ಜತೆಗೆ ಎಡನೀರು ಮಠದಲ್ಲಿ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಶ್ರೀಮದೆಡನೀರು ಮಠಾಧೀಶರ ನಿರ್ದೇಶನದಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲೂ ತಪ್ಪದೆ ಭಾಗವಹಿಸುತ್ತಿದ್ದರು.

ಪುರಾಣ ಪ್ರಸಂಗಗಳಲ್ಲಿ ಯಾವ ವೇಷವನ್ನಾದರೂ ಮಾಡಬಲ್ಲ ಸಾಮರ್ಥ್ಯ ಪೂಕಳದವರಿಗಿದೆ. ಹೀಗೆ ಎಂದು ಹೇಳುವ ಸಾಮರ್ಥ್ಯವೂ ಇದೆ. ಹಾಗಾಗಿ ಯಕ್ಷಗಾನಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಕಾಣಿಸಿಕೊಳ್ಳಬಲ್ಲವರಲ್ಲಿ ಇವರೂ ಒಬ್ಬರು. ಭಾರತ ದೇಶದ ನಾನಾ ಭಾಗಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಮಳೆಗಾಲದಲ್ಲಿ ಖ್ಯಾತ ಹಾಸ್ಯಗಾರರಾಗಿದ್ದ ಶ್ರೀ ನಯನ ಕುಮಾರರು ಸಂಘಟಿಸಿದ ಟೂರ್, ಶ್ರೀ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ, ಧರ್ಮಸ್ಥಳ ಈ ತಂಡಗಳ ಪ್ರದರ್ಶನಗಳಲ್ಲಿ ಅನೇಕ ವರ್ಷಗಳ ಕಾಲ ಕಲಾವಿದರಾಗಿ ಭಾಗವಹಿಸಿರುತ್ತಾರೆ.

ಪೂಕಳದವರು ಆಟಕೂಟಗಳೆಂಬ ಎರಡು ವಿಭಾಗಗಳಲ್ಲೂ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದ ಕಲಾವಿದರು. ಮಲ್ಪೆ ವಾಸುದೇವ ಸಾಮಗರ ನೇತೃತ್ವದ ಸಂಚಾರೀ ಯಕ್ಷಗಾನ ಮಂಡಳಿಯ (ಸಂಯಮಂ) ಸದಸ್ಯರಾಗಿ ತಾಳಮದ್ದಳೆ ಕ್ಷೇತ್ರದಲ್ಲೂ ವ್ಯವಸಾಯ ಮಾಡಿರುತ್ತಾರೆ. ವಾಸುದೇವ ಸಾಮಗರು ಮತ್ತು ಪೂಕಳದವರ ಸಂಭಾಷಣೆಗಳು ಸರಳವಾಗಿ ಪ್ರೇಕ್ಷಕರಿಗೆ ಮುಟ್ಟುವಂತಿರುತ್ತಿತ್ತು. ರಂಜನೀಯವೂ ಆಗಿರುತ್ತಿತ್ತು.
                                 ಪೂಕಳ ಶ್ರೀ ಲಕ್ಷ್ಮೀನಾರಾಯಣ ಭಟ್ಟರು ಆಟಕೂಟಗಳಲ್ಲಿ ಸಮರ್ಥರು. ಕೆಲವೊಂದು ಪಾತ್ರಗಳ ಅರ್ಥಗಾರಿಕೆಯು ಅವರದೇ ಆದ ಕಲ್ಪನೆಯಿಂದ ಕೂಡಿರುತ್ತದೆ. ಪದ್ಯದ ಆಶಯಗಳನ್ನು ಬಿಡದೆ ಹೇಳಿ, ಜತೆಗೆ ತನ್ನ ಕಲ್ಪನೆಯಲ್ಲಿ ಹುಟ್ಟಿಕೊಂಡ ವಿಚಾರಗಳನ್ನೂ ಸೇರಿಸಿ ಪಾತ್ರಗಳನ್ನು ಕಟ್ಟಬಲ್ಲರು. ಅವರ ಅರ್ಥಗಾರಿಕೆಯನ್ನು ಕೇಳಿದ ಕಲಾಭಿಮಾನಿಗಳಿಗೆ ಈ ವಿಚಾರವು ಗೋಚರವಾಗದೇ ಇರದು. ಉದಾಹರಣೆಗಾಗಿ- ಡಾ. ಕೆ. ಎಂ. ರಾಘವ ನಂಬಿಯಾರರು ಬರೆದ ಪ್ರಸಂಗ- ಚಕ್ರೇಶ್ವರ ಪರೀಕ್ಷಿತ. ಧರ್ಮಸ್ಥಳ ಮೇಳದಲ್ಲಿ ಈ ಪ್ರಸಂಗವು ಪ್ರದರ್ಶಿಸಲ್ಪಟ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಪೂಕಳದವರು ಶಮೀಕ ಋಷಿಯ ಪಾತ್ರವನ್ನು ನಿರ್ವಹಿಸುತ್ತಾ, ಅಭಿಮನ್ಯು ಪುತ್ರನಾದ ಪರೀಕ್ಷಿತನು ಬೇಟೆಯಾಡುತ್ತಾ ಬಳಲಿ ಆಶ್ರಮದ ಬಳಿ ಬರುತ್ತಾನೆ- ಧ್ಯಾನಾಸಕ್ತನಾದ ಮುನಿಯಲ್ಲಿ ನೀರು ಕೊಡು ಎಂದು ಕೇಳುತ್ತಾನೆ- (ಉದಕವ ಕೊಡು ಮುನಿಯೆ ಊರ್ವೀಶಗೆ ಉದಕವ ಕೊಡು ಮುನಿಯೇ ಎಂಬ ಪದ್ಯ ಇದೆ.) ನೀರು ಕೊಡಲು ಮುನಿಯು ಏಳದಿದ್ದಾಗ ಸತ್ತುಬಿದ್ದ ಹಾವೊಂದನ್ನು ಶಮೀಕ ಋಷಿಯ ಕೊರಳಿಗೆ ಹಾಕಿ ತೆರಳುತ್ತಾನೆ.

ಇದನ್ನರಿತ ಶಮೀಕ ಪುತ್ರ ಶೃಂಗಿಯು ಕೋಪಗೊಂಡು- ಇನ್ನೇಳು ದಿನಗಳಲ್ಲಿ ತಕ್ಷಕನು ಕಚ್ಚಿ ಪರೀಕ್ಷಿತನಿಗೆ ಮರಣವು ಬರಲಿ ಎಂದು ಶಪಿಸುತ್ತಾನೆ. ಧ್ಯಾನದಿಂದ ಮೇಲೆದ್ದ ಶಮೀಕನು ಈ ವಿಚಾರವನ್ನು ತಿಳಿದು ಪರೀಕ್ಷಿತನಿಗೆ ಶಾಪ ನೀಡಿದ ಮಗನನ್ನು ಆಕ್ಷೇಪಿಸುವ ಭಾವನಾತ್ಮಕ ಸನ್ನಿವೇಷದ ಪದ್ಯ- ನಂದಿಸಿದೆಯಾ ಭುವಿಯ ಬೆಳಕನೆ ಮತ್ತು ಹಸಿವು ಬಾಯಾರಿಕೆಯೊಳಾನೃಪ ಬಸವಳಿದು ತಾ ಗೈದ ಕೃತ್ಯಕೆ… ಎಂಬ ಎರಡು ಭಾವನಾತ್ಮಕ ಸನ್ನಿವೇಶದ ಪದ್ಯಗಳಿಗೆ ಹೀಗೆ ತಮ್ಮದೇ ಕಲ್ಪನೆಯ ಸಂಭಾಷಣೆಗಳನ್ನು ಹೇಳುತ್ತಾರೆ- “ಮಗೂ… ಹಸಿವು ಬಾಯಾರಿಕೆಗಳಿಂದ ತತ್ತರಿಸಿ ಬಂದ ಪರೀಕ್ಷಿತನಿಗೆ ಒಂದು ತುತ್ತು ಆಹಾರ, ಒಂದು ಗುಟುಕು ನೀರು ಆಶ್ರಮದಲ್ಲಿ ಸಿಗದೇ ಹೋಯಿತಲ್ಲ. ಬದಲಾಗಿ ಸಿಕ್ಕಿದ್ದು ಶಾಪ! ಇನ್ನು ಮುಂದೆ ನಮ್ಮ ಆಶ್ರಮಕ್ಕೆ ಯಾರಾದರೂ ಬಂದಾರೆ? ನೀನು ಶಾಪ ಏನೆಂದು ಕೊಟ್ಟದ್ದು? ತಕ್ಷಕನು ಕಚ್ಚಿ ಕೊಲ್ಲಲಿ ಎಂದು ಶಾಪ ಕೊಟ್ಟೆಯಾ? ತಕ್ಷಕ ಪರೀಕ್ಷಿತನಿಗೆ ಕಚ್ಚದೆ ಇರಲಾರ. ಆತನಿಗೆ ಪಾಂಡವರ ಮೇಲೆ ಮೊದಲೇ ಹಗೆ ಇದೆ. ಪುತ್ರ ಅಶ್ವಸೇನನನ್ನು ಕಳೆದುಕೊಂಡು ಪಾಂಡವರ ಮೇಲೆ ದ್ವೇಷಾಗ್ನಿಯನ್ನು ಕಾರುತ್ತಿದ್ದಾನೆ. ಆಗ ಪಾಂಡವರಿಗೆ ಶ್ರೀಕೃಷ್ಣನ ರಕ್ಷಣೆ ಇತ್ತು. ಈಗ ಶ್ರೀಕೃಷ್ಣನೂ ಇಲ್ಲ. ಹಾಗಾಗಿ ತಕ್ಷಕನು ಪರೀಕ್ಷಿತನಿಗೆ ಕಚ್ಚಿಯೇ ಕಚ್ಚುತ್ತಾನೆ.’’


ಇನ್ನೊಂದು ಕರ್ಣಾರ್ಜುನ ಪ್ರಸಂಗದಲ್ಲಿ (ಸರ್ಪಾಸ್ತ್ರ) ಅಶ್ವಸೇನನಾಗಿ- “ಕರ್ಣಾ… ನೀನು ನನ್ನನ್ನು ಮತ್ತೊಮ್ಮೆ ಪ್ರಯೋಗಿಸು. ಅರ್ಜುನನನ್ನು ನಾನು ಕೊಲ್ಲುತ್ತೇನೆ. ಅರ್ಜುನನನ್ನು ಕೊಂದುದಕ್ಕೆ ನಾನು ನಿನ್ನಲ್ಲಿ ಪ್ರತಿಫಲವೇನೂ ಕೇಳುವುದಿಲ್ಲ (ಸಂಬಳ). ನಿನ್ನ ಬತ್ತಳಿಕೆಯಲ್ಲಿ ಇಲ್ಲಿಯ ವರೇಗೆ ಕುಳಿತದ್ದಕ್ಕೆ ನೀನೂ ನನ್ನಿಂದ ಏನೂ ಕೇಳಬಾರದು (ಬಾಡಿಗೆ). ಲೆಕ್ಕಾಚಾರ ಸರಿಯಾಗಿ ಮುಗಿಸೋಣ’’-  ಇದು ಪೂಕಳದವರ ವಿಶಿಷ್ಠ ಕಲ್ಪನೆ- ಅನೇಕ ಪ್ರಸಂಗಗಳಲ್ಲಿ ಇಂತಹ ಹೊಳಹುಗಳನ್ನು ಅರ್ಥಗಾರಿಕೆಯಲ್ಲಿ ಪೂಕಳದವರು ನೀಡಿದ್ದಾರೆ.
                  ಶ್ರೀರಾಮ ನಿರ್ಯಾಣದ ಪ್ರಸಂಗದಲ್ಲಿ ಲಕ್ಷ್ಮಣನಿಗೆ ದೇಹಾಂತ್ಯ ಶಿಕ್ಷೆಯನ್ನು ಶ್ರೀರಾಮನು ನೀಡಿದ ನಂತರ ಲಕ್ಷ್ಮಣನಾಗಿ ಪೂಕಳದವರ ಮಾತುಗಳು…
                      “ಆತ್ಮೀಯರ ಅಗಲುವಿಕೆಯ ನೋವು ನನಗೆ ಈಗ ಅರ್ಥವಾಗುತ್ತಿದೆ. ಅಂದು ತೀರ್ಥರೂಪರ ಮನಸ್ಸಿನಲ್ಲಿ ಏನಿದ್ದಿರಬಹುದು? ರಾಮನಿಗಂತೂ ವನವಾಸ ಅನಿವಾರ್ಯ. ಲಕ್ಷ್ಮಣನಿಗೆ ಆ ನಿರ್ಬಂಧ ಇಲ್ಲ. ಹಣ್ಣು ಹಣ್ಣು ಮುದುಕ ತಂದೆಯ ಸೇವೆಗಿಂತಲೂ, ಯುವಕನಾಗಿರುವ ಅಣ್ಣನ ಸೇವೆಯೇ ಇವನಿಗೆ ಹೆಚ್ಚಾಯಿತು. ಇದು ಶಾಶ್ವತವಾಗಿ ಉಳಿದೀತೇ? ಎಂದು ಆಲೋಚಿಸಿದ್ದಾರೋ ಏನೊ? ಅದರ ಪರಿಣಾಮದಿಂದ ನನಗೆ ಈ ಸ್ಥಿತಿ ಉಂಟಾಗಿರಬೇಕು. ಈ ಸಂದರ್ಭದಲ್ಲಿ ಮಕ್ಕಳಿಗೊಂದು ನೀತಿಯ ಮಾತು. ಯಾವ ಕಾರಣಕ್ಕೂ ಜನ್ಮಕ್ಕೆ ಕಾರಣನಾದ ತಂದೆಯ ಮನಸ್ಸನ್ನು ನೋಯಿಸಬೇಡಿ. ನೋಯಿಸಿದರೆ ದುಷ್ಪರಿಣಾಮ ಉಂಟಾಗುತ್ತದೆ.’’ ಹೀಗೆ ಪೂಕಳದವರು ತಮ್ಮ ಅರ್ಥಗಾರಿಕೆಯಲ್ಲಿ ಉತ್ತಮ ಸಂದೇಶಗಳನ್ನೂ ನೀಡುತ್ತಾರೆ.


ಪೂಕಳದವರು ತ್ರಿಶಂಕು ಸ್ವರ್ಗ ಪ್ರಸಂಗದಲ್ಲಿ ದೇವೇಂದ್ರನಾಗಿ ಹೇಳುವ ಮಾತುಗಳು- “ತಂದೆಯ ಬದಲಿಗೆ ಮತ್ತೊಬ್ಬ ಸಾಕಿದರೆ ಸಾಕುತಂದೆ ಎನಿಸುತ್ತಾನೆ. ತಾಯಿಯಿಲ್ಲದೆ ತಬ್ಬಲಿಯಾದಾಗ ಮತ್ತೊಬ್ಬಳು ಸಾಕಿದರೆ ಸಾಕುತಾಯಿ ಎನಿಸುತ್ತಾಳೆ. ಆದರೆ `ಸಾಕುಗುರು’ ಎಂಬ ಪ್ರಯೋಗ ಇಲ್ಲ. ಯಾಕೆಂದರೆ ಗುರುಸ್ಥಾನಕ್ಕೆ ಯಾರೂ ಸಾಕಾಗುವುದಿಲ್ಲ. ಆ ಸ್ಥಾನಕ್ಕೆ ಗುರುವೇ ಆಗಬೇಕು. ಮತ್ತೊಬ್ಬರನ್ನು ನೇಮಿಸುವ ಹಾಗಿಲ್ಲ. (ಗುರುಶಾಪದಿಂದ ತ್ರಿಶಂಕುವು ಚಾಂಡಾಲತ್ವವನ್ನು ಧರಿಸಿದ ಸಂದರ್ಭದಲ್ಲಿ ಆಡುವ ಮಾತುಗಳು.)


                              ವಿನೋದಪ್ರಿಯರಾದ ಪೂಕಳ ಲಕ್ಷ್ಮೀನಾರಾಯಣ ಭಟ್ಟರು ಮೇಳದ ತಿರುಗಾಟ, ಮಳೆಗಾಲದ ಟೂರ್‍ಗಳಲ್ಲಿ ಕಲಾವಿದರ ಉತ್ತಮ ಒಡನಾಡಿಯಾಗಿದ್ದವರು. ಇವರಿದ್ದರೆ ಸಮಯ ಹೋದುದೇ ಕಲಾವಿದರಿಗೆ ಗೊತ್ತಾಗದು. ಬದುಕಿನುದ್ದಕ್ಕೂ ನಡೆದ ಘಟನೆಗಳನ್ನು, ಅನುಭವಗಳನ್ನು ರಸವತ್ತಾಗಿ ಹೇಳಬಲ್ಲರು. ಶ್ರೀಯುತರು ಹೇಳುವ ಜೋಕ್ಸ್‍ಗಳನ್ನು ಕೇಳಲು ಎಲ್ಲರೂ ಕಾತರಿಸುತ್ತಾರೆ. ಪ್ರಸ್ತುತ ಪುತ್ತೂರಿನ ಸಮೀಪ ಸಂಪ್ಯ ಎಂಬಲ್ಲಿ ಪತ್ನಿ ಶ್ರೀಮತಿ ಕುಸುಮಾ ಮತ್ತು ಪುತ್ರನೊಂದಿಗೆ ನೆಲೆಸಿದ್ದಾರೆ. ಪೂಕಳ ಲಕ್ಷ್ಮೀನಾರಾಯಣ ಭಟ್ ದಂಪತಿಗಳಿಗೆ ಮೂವರು ಮಕ್ಕಳು (2 ಹೆಣ್ಣು, 1 ಗಂಡು). ಹಿರಿಯ ಪುತ್ರಿ ಅನುರೂಪಾ ಮತ್ತು ಕಿರಿಯ ಪುತ್ರಿ ಶ್ರೀವಿದ್ಯಾ ವಿವಾಹಿತೆಯರು. ಪುತ್ರ ಹರಿಕೃಷ್ಣ ಕೊಣಾಜೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ. ವಿದ್ಯಾರ್ಥಿ.
                 

ಲೇಖಕ: ರವಿಶಂಕರ್ ವಳಕ್ಕುಂಜ