ಪ್ರಸಾಧನ ತಜ್ಞ, ವೇಷಧಾರಿ ಮತ್ತು ಜನಪ್ರಿಯ ಅಧ್ಯಾಪಕ ದಿ| ದೇವಕಾನ ಕೃಷ್ಣ ಭಟ್ಟರ ಜೀವನ ಪಯಣದ ವಿವರಗಳನ್ನೊಳಗೊಂಡ ಅವರ ಸಂಸ್ಮರಣ ಗ್ರಂಥದ ಬಿಡುಗಡೆ ಸಮಾರಂಭವು ದಿನಾಂಕ 12-09-2021ರ ಆದಿತ್ಯವಾರದಂದು ಸಂಜೆ 4 ಘಂಟೆಗೆ ಸರಿಯಾಗಿ ಶ್ರೀ ಎಡನೀರು ಮಠದಲ್ಲಿ ನಡೆಯಲಿದೆ. ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪುಣ್ಯಸ್ಮರಣೆಯೊಂದಿಗೆ ನೆರವೇರುವ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಆಶೀರ್ವಚನ ನೀಡಲಿರುವರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರು ‘ದೇವಕಾನ’ ಗ್ರಂಥ ಲೋಕಾರ್ಪಣೆ ಮಾಡಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಟಿ. ಶ್ಯಾಮ ಭಟ್ ವಹಿಸಲಿದ್ದಾರೆ. ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿಯವರು ಸಂಸ್ಮರಣ ನುಡಿಯನ್ನು ಆಡಲಿದ್ದಾರೆ. ಶ್ರೀ ಕೆ ಗೋವಿಂದ ಭಟ್ ಮತ್ತು ಶ್ರೀ ಎ. ಚನಿಯಪ್ಪ ನಾಯ್ಕ ಸನ್ಮಾನಿತರಾಗುವ ಮಹನೀಯರು.ಸಭಾ ಕಾರ್ಯಕ್ರಮದ ಬಳಿಕ ಹನುಮಗಿರಿ ಮೇಳದವರಿಂದ ‘ಅಶೋಕಸುಂದರಿ- ಊರ್ವಶಿ ಶಾಪ-ಮಕರಾಕ್ಷ ಕಾಳಗ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ‘ಯಕ್ಷಾನುಗ್ರಹ’ ವಾಟ್ಸಾಪ್ ಬಳಗದ ‘ಮರೆಯಲಾಗದ ಮಹಾನುಭಾವರು’ ಅಂಕಣದ ಶತದಿನೋತ್ಸವ ಕಾರ್ಯಕ್ರಮ ಶ್ರೀ ಎಡನೀರು ಮಠದಲ್ಲಿ ಇತ್ತೀಚಿಗೆ ನೆರವೇರಿತು. ಇದರ ಅಂಗವಾಗಿ ಶ್ರೀ ಎಡನೀರು ಮಠದಲ್ಲಿ ಪೂಜ್ಯ ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಸ್ಮೃತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 9.30 ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಸತ್ತ್ವ ಶೈಥಿಲ್ಯ’ ಎಂಬ ತಾಳಮದ್ದಳೆಯೂ ಆ ಬಳಿಕ ಸಭಾ ಕಾರ್ಯಕ್ರಮವೂ ನೆರವೇರಿತು.
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ‘ ತೊಟ್ಲಕಲ್ಲ್’ ನ ಶ್ರೀಮತಿ ಶ್ರೀದೇವಿ ಮತ್ತು ಶ್ರೀ ಶ್ರೀನಿವಾಸ ಐತಾಳ ದಂಪತಿಗಳ ಏಕ ಮಾತ್ರ ಪುತ್ರ ಶ್ರೀ ಮಂಜುನಾಥ ಐತಾಳರು ದಿನಾಂಕ. 27-10-1952 ರಲ್ಲಿ ತೊಟ್ಲಕಲ್ಲಿನಲ್ಲಿ ಜನಿಸಿದರು. ಎಳವೆಯಿಂದಲೇ ಯಕ್ಷಗಾನವೆಂದರೆ ಒಂತರಾ ಚಟ, ಒಂತರಾ ಹುಚ್ಚು . ಕಲಿತದ್ದು ಒಂದನೇ ತರಗತಿಯಾದರೂ ಯಕ್ಷಗಾನದ 30ಕ್ಕೂ ಹೆಚ್ಚು ಪ್ರಸಂಗಗಳು ಕಂಠಸ್ಥವಾಗಿತ್ತು. ಜೊತೆಗೆ ಜೈಮಿನಿ ಭಾರತ & ಕುಮಾರವ್ಯಾಸ ಭಾರತವೂ ಬಹುತೇಕ ಬಾಯಿಪಾಠ ಬರುತ್ತಿತ್ತು.
ಸಹೋದರ ವೇಂಕಟರಮಣ ಐತಾಳ್ ಬೈಲೂರು – ಶಂಕರನಾರಾಯಣ (ನೀನಾಸಂ ಹೆಗ್ಗೋಡಿನ ನಿವೃತ್ತ ಪ್ರಿನ್ಸಿಪಾಲ್) ಅವರ ಇನ್ನೊಬ್ಬ ಸಹೋದರ ಭಾಗವತರಾದ ಬೈಲೂರು ಸುಬ್ರಹ್ಮಣ್ಯ ಐತಾಳರು . (ಇವರಿಬ್ಬರೂ ಚಿಕ್ಕಪ್ಪನ ಮಕ್ಕಳು) ಇವರಿಂದ ಛಂದಸ್ಸು – ಮಟ್ಟುಗಳನ್ನು ಕಲಿತು ಸತೀ ಶೊಭಾವಳಿ – ಮಾಣಿಕ್ಯ ಪ್ರಭ – ರಾಜಾ ಸೂರ್ಯದತ್ತ – ….. ಮೊದಲಾದ 7 ಯಕ್ಷಗಾನ ಪ್ರಸಂಗಗಳನ್ನು ಬರೆವಷ್ಟು ಸ್ವಾಧ್ಯಾಯ ನಿಷ್ಠರು..
ಇವರ ಎಲ್ಲಾ ಪ್ರಸಂಗಗಳು ರಾಘವೇಂದ್ರ ಮಯ್ಯ ಹಾಲಾಡಿ ಇವರ ಭಾಗವತಿಕೆಯಲ್ಲಿ ಸೌಕೂರು ಮೇಳದಲ್ಲಿ ಹೆಚ್ಚು ಪ್ರದರ್ಶನಗಳನ್ನು ಕಂಡಿರುತ್ತವೆ. ನಮ್ಮ ಈ ಪರಿಸರದಲ್ಲಿ ಮಂಜುನಾಥ ಐತಾಳರನ್ನು ಕಂಡು ಮಾತಾಡದೇ ಇರುವ ಯಕ್ಷಗಾನ ಕಲಾವಿದರು ಇಲ್ಲವೆನ್ನಬಹುದು. ಎಂ ಎ ಹೆಗಡೆ – ಕೆ. ಗೋವಿಂದ ಭಟ್ , ವಾಸುದೇವ ಸಾಮಗ , ಆರ್ಗೋಡು ಮೋಹನದಾಸ ಶೆಣೈ, ಕಟೀಲು ವೇಂಕಟೇಶ್ವರ ಉಪಾಧ್ಯಾಯ ಮೊದಲಾದ ಅನುಭವಿಗಳೊಂದಿಗೆ ತಾಳಮದ್ದಳೆಯಲ್ಲಿಯೂ ಭಾಗವಹಿಸಿದ್ದರು. ನಮ್ಮ ಸಂಸ್ಥೆಯಲ್ಲಿ ಅವರಿಲ್ಲದೆ ತಾಳಮದ್ದಳೆ ಮಾಡಿದ್ದೇ ಇಲ್ಲ. ಜೀವನಕ್ಕಾಗಿ ಕೃಷಿ ಮತ್ತು ವೈದಿಕ ವೃತ್ತಿ ಮಾಡುತಿದ್ದರು. ಮೂವರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು.
ಸ್ವಲ್ಪ ಕಾಲದ ಅಸೌಖ್ಯದಿಂದ (ಒಂದು ವರ್ಷ ಮೂರು ತಿಂಗಳು – ಪಾರ್ಶ್ವವಾಯು ಆಗಿತ್ತು.). ದಿನಾಂಕ 15-08-2019 ರಂದು ಅವರ ಧರ್ಮಪತ್ನಿ ಶ್ರೀಮತಿ ಶಾರದಾ ಐತಾಳ ಸ್ವರ್ಗಸ್ಥರಾದರು. ಮನಸ್ಸಿಗೆ ದು:ಖವಿದ್ದರೂ ‘ಸಾಕ್ ಅವ್ಳ್ ಅನುಭವಿಸಿದ್ದು’ ಅನ್ನುವ ಸಮಾಧಾನಕ್ಕೆ ಬಂದಿದ್ದರು. ಅವಳ ಅಪರಕ್ರಿಯೆ ಎಲ್ಲ ಚೆನ್ನಾಗಿ ಆಗಬೇಕು ಎಂದು ಓಡಾಡಿಕೊಂಡೆ ಇದ್ದರು. ಕಾಲನ ಪಾಶ ಯಾರ ಕೊರಳಿಗೆ ಎಷ್ಟೊತ್ತಿಗೆ ಅಂತ ಯಾರು ಬಲ್ಲರು. ಅದಾದ 8 ಎಂಟನೇ ದಿನ ಮಧ್ಯಾಹ್ನ ಐತಾಳರು ಊಟ ಮಾಡುವಾಗ ‘ಸ್ವಲ್ಪ ಎದೆ ನೊವಾದ್ಹಾಂಗಿತ್ತ್ , ಬೌಶ ಗ್ಯಾಸ್ಟಿಕ್ಕೇನೊ’ ಅಂದಿದ್ದರು. ಚಾವಡಿಗೆ ಹೋಗಿ ಮಾತ್ರೆ ತೆಗೆದು ಬಾಯಿಗೆ ಹಾಕಿದ್ದರು ಅಷ್ಟೆ. ಒಳಗೆ ಹೋಗಲಿಲ್ಲ, ಅಲ್ಲೇ ಬಿದ್ದುಬಿಟ್ಟರು. ದಿನಾಂಕ 22-08-2019 ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಒಟ್ಟಿಗೆ ಬದುಕಿ ಒಟ್ಟಿಗೆ ಹೋಬಗಿಬಿಟ್ಟರು . ಅನಾಯಾಸೇನ ಮರಣಂ ಹೌದು. ಆದರೆ ಅವರಿಬ್ಬರಿಲ್ಲದೆ ಬಣಬಣಿಸುವ ಆ ಮನೆ ಅಬ್ಬಾ. !!
ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ (ರಿ.), ಮೋರ್ಟು – ಬೆಳ್ಳಾಲ.’ ಐತಾಳರು ಈ ಯಕ್ಷಕಲಾ ಸಮಿತಿಯಲ್ಲಿ 20 ವರ್ಷಗಳಿಂದ ತೊಡಗಿಸಿಕೊಂಡವರು. ನಮಗೆ ಎಲ್ಲಾ ರೀತಿಯ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುತ್ತಿದ್ದರು. ನಮ್ಮ ಈ ಹವ್ಯಾಸಿ ತಂಡಕ್ಕೆ ಆಟ – ಕೂಟಗಳಿಗೆ ಯಾವುದೇ ಪ್ರಸಂಗಕ್ಕಾದರೂ ಪದ್ಯ- ನಡೆ- ಅರ್ಥಗಾರಿಕೆಗೆ ಆಧಾರವಾಗಿದ್ದರು. ಗಟ್ಟಿಮುಟ್ಟಗಿಯೇ ಇದ್ದ ಇವರ ಆಕಸ್ಮಿಕ ಮರಣ ನಮ್ಮನ್ನೆಲ್ಲ ನಿಜಕ್ಕೂ ದುರ್ಬಲರನ್ನಾಗಿಸಿದೆ. ಆಗ ಮಳೆಗಾಲವಾದ್ದರಿಂದ ವ್ಯವಸ್ಥೆಗಳ ಅಡಚಣೆಯಿಂದಾಗಿ (ದು:ಖದ ಭಾರದಿಂದಲೂ) ಸಂಸ್ಮರಣೆ ಕಾರ್ಯಕ್ರಮ ಮಾಡಲಾಗಲಿಲ್ಲ . ದಿನಾಂಕ 08-02-2020 ರಂದು ಅವರ ಒಡನಾಡಿಗಳು ಹಿತೈಷಿಗಳು ಬಂಧುಗಳನ್ನೂ ಸೇರಿಸಿ ಸಂಸ್ಮರಣಾ ಕಾರ್ಯಕ್ರಮ ಮಾಡಿದೆವು ಎಂಬ ಸಮಾಧಾನದ ನಿಟ್ಟುಸಿರು.
ಬರಹ :- ಮೋರ್ಟು ರಾಘವೇಂದ್ರ ಸೋಮಯಾಜಿ ಕಾರ್ಯದರ್ಶಿ. ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ (ರಿ.) ಮೋರ್ಟು – ಬೆಳ್ಳಾಲ ಕುಂದಾಪುರ ತಾಲೂಕು – ಉಡುಪಿ ಜಿಲ್ಲೆ
‘ಯಕ್ಷಪಥ’ (ಬೆಂಗಳೂರಿನಲ್ಲಿ ಯಕ್ಷಗಾನದ ಹೆಜ್ಜೆಗುರುತುಗಳು) ಎಂಬ ಈ ಕೃತಿಯು ಇತ್ತೀಚಿಗೆ ಪ್ರಕಟಗೊಂಡಿತು(2021). ಈ ಕೃತಿಯ ಸಂಪಾದಕರು ಡಾ. ಆನಂದರಾಮ ಉಪಾಧ್ಯ ಅವರು. ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ರಚಿಸಿದ ಕೃತಿಯಿದು. ನಾಡಿನ ಅನೇಕ ಯಕ್ಷಗಾನ ಕಲಾವಿದರ ಲೇಖನಗಳನ್ನೂ, ಸಂದರ್ಶನ ಲೇಖನಗಳನ್ನೂ ಒಳಗೊಂಡಿದೆ. ಬೆಂಗಳೂರು ನಗರದ ಯಕ್ಷಗಾನದ ಬಗೆಗೆ ಸಮಗ್ರ ಚಿತ್ರಣವನ್ನು ನೀಡಲು ಸಂಪಾದಕರು ಶ್ರಮಿಸಿದ ರೀತಿಯು ಪ್ರಶಂಸನೀಯವಾದುದು.
ಲೇಖಕ ಶ್ರೀ ಡಾ. ಆನಂದರಾಮ ಉಪಾಧ್ಯ ಅವರು ಅರಿಕೆ ಎಂಬ ಬರಹದಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಪ್ರಕಾಶಕರಾದ ಶ್ರೀ ಕೆ. ರವಿಚಂದ್ರ ರಾವ್, ಸಾಧನಾ ಪ್ರಕಾಶನ ಬೆಂಗಳೂರು ಅವರು ‘ಪ್ರಕಾಶಕರ ಮಾತು’ ಎಂಬ ಶೀರ್ಷಿಕೆಯಡಿ ಈ ಕೃತಿಯ ಬಗೆಗೆ ವಿವರಣೆಗಳನ್ನು ನೀಡಿರುತ್ತಾರೆ. ಯಕ್ಷಪಥ ಎಂಬ ಹೊತ್ತಗೆಯನ್ನು ಮುದ್ರಿಸಿ ಹೊರತಂದವರು ‘ಭರತ್ ಪಬ್ಲಿಕೇಷನ್, ದತ್ತಾತ್ರೇಯ ನಗರ, ಬೆಂಗಳೂರು ಎಂಬ ಸಂಸ್ಥೆ.
ಡಾ. ರಾಧಾಕೃಷ್ಣ ಉರಾಳ, ಎ. ಪಿ. ಕಾರಂತ್, ಕೆ.ಮೋಹನ್, ಎಚ್. ಶ್ರೀಧರ ಹಂದೆ, ಕುಂಬಳೆ ಸುಂದರ ರಾವ್, ಮಲ್ಲವ್ವ ಮೇಗೇರಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೊಳಗಿ ಕೇಶವ ಹೆಗಡೆ, ಅಜಿತೇಶ ಹೆಗಡೆ ಸಾಗರ, ಮಂಟಪ ಪ್ರಭಾಕರ ಉಪಾಧ್ಯ, ತಾರಾನಾಥ ವರ್ಕಾಡಿ, ಕಲ್ಮನೆ ಎ.ಎಸ್. ನಂಜಪ್ಪ, ಕಾ.ನ.ದಾಸಾಚಾರ್, ಕೆರೆಮನೆ ಶಿವಾನಂದ ಹೆಗಡೆ, ಕಡತೋಕಾ ಗೋಪಾಲಕೃಷ್ಣ ಭಾಗವತ, ಪ್ರೊ| ಎಂ. ಎಲ್. ಸಾಮಗ, ವೈ. ಕರುಣಾಕರ ಶೆಟ್ಟಿ, ಸೇರಾಜೆ ಸೀತಾರಾಮ ಭಟ್, ಕೆ.ಎನ್. ಅಡಿಗ ಅಡೂರು, ಡಾ. ಬೇಗಾರು ಶಿವಕುಮಾರ್, ಡಾ. ಆನಂದರಾಮ ಉಪಾಧ್ಯ, ರಾಜಗೋಪಾಲ ಕನ್ಯಾನ, ಟಿ.ಎಸ್. ಮಹಾಬಲೇಶ್ವರ, ರವಿ ಮಡೋಡಿ, ಅಶ್ವಿನಿ ಹೊದಲ ಇವರುಗಳು ತಮ್ಮ ಅನಿಸಿಕೆ, ಅನುಭವಗಳನ್ನು ಬರಹ ರೂಪದಲ್ಲಿ ನೀಡಿರುತ್ತಾರೆ. ಈ ಕೃತಿಯ ಪ್ರಕಟಣೆಗೆ ಕಾರಣರಾದವರೆಲ್ಲರಿಗೂ ಅಭಿನಂದನೆಗಳು.
ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಗಂಡುಕಲೆಯಲ್ಲಿ ಗಂಡಸರೇ ಸ್ತ್ರೀ ಪಾತ್ರಗಳನ್ನು ಮಾಡಿಕೊಂಡು ಬರುತ್ತಿದ್ದುದು ಮೊದಲಿನಿಂದಲೂ ನಡೆದುಬಂದ ರೀತಿ. ಇದಕ್ಕೆ ಕಾರಣಗಳು ಹಲವು ಇರಬಹುದು. ತಾನು ಧರಿಸಿದ ಪಾತ್ರವು ಹೆಣ್ಣು ಎಂಬ ಪ್ರಜ್ಞೆಯು ಕೊನೆಯ ತನಕವೂ ಕಲಾವಿದನಿಗೆ ಇರಲೇಬೇಕು. ಎಚ್ಚರ ತಪ್ಪಿದರೆ ಪಾತ್ರಕ್ಕೆ ಅಪಚಾರವಾಗುವುದಂತೂ ಖಂಡಿತ.
ಪೂರ್ವರಂಗದ ಮುಖ್ಯ ಸ್ತ್ರೀವೇಷವು ಸ್ತ್ರೀಸಹಜವಾದ ಹಾವಭಾವಗಳನ್ನೂ, ನಾಟ್ಯದಲ್ಲಿ ಲಯ ಸಾಮರ್ಥ್ಯವನ್ನೂ ಸಿದ್ಧಿಸಿಕೊಳ್ಳಲು ಅನುಕೂಲವಾಗುತ್ತದೆ. ಬಳಿಕ ಪ್ರಸಂಗಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಾ, ಕಲಿತು ಬೆಳೆಯುತ್ತಾ ಪ್ರತಿಭೆಯ ಆಧಾರದಲ್ಲೇ ಮುಖ್ಯ ಸ್ತ್ರೀಪಾತ್ರಗಳನ್ನು ಮಾಡಿದಾಗ ಆ ಪಾತ್ರವು ಗೆಲ್ಲುತ್ತದೆ. ಪ್ರದರ್ಶನವೂ ರಂಜಿಸುತ್ತದೆ. ಹಿತಮಿತವಾದ ನಾಟ್ಯ, ಮಾತುಗಾರಿಕೆ ಯಕ್ಷಗಾನದ ಸ್ತ್ರೀ ಪಾತ್ರಗಳಿಗೆ ಸಾಕಾಗುತ್ತದೆ. ಆದರೆ ಭಾವನಾತ್ಮಕವಾಗಿ ಅಭಿನಯಿಸುವ ಕಲೆಯು ಕರಗತವಾಗಿರಲೇಬೇಕು. ಕೆಲವೊಂದು ಪದ್ಯಗಳಿಗೆ ಮಾತನಾಡಬೇಕೆಂದಿಲ್ಲ. ಭಾಗವತರ ಹಾಡನ್ನು ಅನುಸರಿಸುತ್ತಾ ಅಭಿನಯಿಸಿದರೆ ಸಾಕಾಗುತ್ತದೆ.
ಶೃಂಗಾರ, ಕರುಣ, ಭಕ್ತಿ ರಸಗಳಲ್ಲಿ ಅಭಿನಯಿಸಿ ತನ್ನ ಪ್ರತಿಭಾ ಪ್ರಕಟೀಕರಣಕ್ಕೆ ಸ್ತ್ರೀ ವೇಷಧಾರಿಗೆ ಯಕ್ಷಗಾನದಲ್ಲಿ ಹೆಚ್ಚು ಅವಕಾಶಗಳು ಇರುತ್ತವೆ. ಕಸೆ ಸ್ತ್ರೀ ವೇಷಗಳು ವೀರರಸ ಪ್ರಧಾನವಾಗಿರುತ್ತದೆ. (ಮೀನಾಕ್ಷಿ, ಶಶಿಪ್ರಭೆ, ಪ್ರಮೀಳೆ, ಸ್ವಯಂಪ್ರಭೆ ಮೊದಲಾದುವು). ಶೃಂಗಾರಕ್ಕೆ ಸಂಬಂಧಪಟ್ಟ ಪಾತ್ರಗಳಲ್ಲದೆ ಚಂದ್ರಮತಿ, ದಮಯಂತಿ, ದಾಕ್ಷಾಯಣಿ, ಅಕ್ಷಯಾಂಬರ ವಿಲಾಸದ ದ್ರೌಪದಿ ಮೊದಲಾದ ಪಾತ್ರಗಳನ್ನು ಪ್ರಬುದ್ಧ ಕಲಾವಿದರಿಂದ ಮಾತ್ರ ಮಾಡಲು ಸಾಧ್ಯ. ಕುಣಿತಕ್ಕೇ ಅವಕಾಶ ಇಲ್ಲದ ದಮಯಂತಿ ಪುನಃ ಸ್ವಯಂವರ ಪ್ರಸಂಗದ ದಮಯಂತಿ, ಚೈದ್ಯರಾಣಿ, ಸೌದಾಸ ಚರಿತ್ರೆಯ ಮದಯಂತಿ, ಕರ್ಣಬೇಧನದ ಕುಂತಿ, ಶ್ರೀಕೃಷ್ಣಲೀಲೆ ಕಂಸ ವಧೆ ಪ್ರಸಂಗದ ದೇವಕಿ, ಯಶೋದೆ, ಶಕುಂತಲಾ ಪರಿಣಯದ ಎರಡನೇ ಭಾಗದ ಶಕುಂತಲೆ ಮೊದಲಾದ ಪಾತ್ರಗಳನ್ನು ನಿರ್ವಹಿಸಿದಾಗ ಸ್ತ್ರೀ ಪಾತ್ರಧಾರಿಯೂ ಎಷ್ಟು ಪಕ್ವವಾಗಿದ್ದಾನೆ ಎಂದು ನೋಡುಗರಿಗೆ ತಿಳಿದುಕೊಳ್ಳಲು ಸಾಧ್ಯ.
ತೆಂಕುತಿಟ್ಟಿನಲ್ಲಿ ನಮಗೆ ತಿಳಿದಂತೆ ಕೋಳ್ಯೂರು ಶ್ರೀ ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ಮಂಕುಡೆ ಸಂಜೀವ ಶೆಟ್ರು, ಕೊಕ್ಕಡ ಈಶ್ವರ ಭಟ್, ಎಂ.ಕೆ. ರಮೇಶಾಚಾರ್ಯ, ಕುಂಬಳೆ ಶ್ರೀಧರ ರಾವ್, ಸಂಜಯ ಕುಮಾರ್ ಗೋಣಿಬೀಡು ಮೊದಲಾದವರು ತೆಂಕುತಿಟ್ಟಿನ ಸಂಪ್ರದಾಯದ ಚೌಕಟ್ಟಿನೊಳಗೇ ಅಭಿನಯಿಸಿ ಪ್ರಸಿದ್ಧರಾದವರು. ಹೊಸ ತಲೆಮಾರಿನ ಉದಯೋನ್ಮುಖರಿಗೆ ಇವರುಗಳು ಹಾಕಿ ಕೊಟ್ಟ ದಾರಿಯೇ ಸೂಕ್ತವಾದುದು. ಸಾಗಿದರೆ ಖಂಡಿತಾ ಅವರಂತೆಯೇ ಹೆಸರು ಗಳಿಸುತ್ತಾರೆ ಎಂಬುದು ನಿಸ್ಸಂಶಯ. ಹೀಗೆ ಪರಂಪರೆಯ ಚೌಕಟ್ಟನ್ನು ಮೀರದೆ ಪ್ರಸ್ತುತ ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಒಬ್ಬರು ಶ್ರೀ ಅಂಬಾಪ್ರಸಾದ್ ಪಾತಾಳ.
ಶ್ರೀ ಅಂಬಾಪ್ರಸಾದ್ ಪಾತಾಳ ಅವರು ತೆಂಕುತಿಟ್ಟಿನ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮೆರೆದು ಪ್ರಸ್ತುತ ವಿಶ್ರಾಂತಿ ಜೀವನವನ್ನು ನಡೆಸುತ್ತಿರುವ ಪಾತಾಳ ಶ್ರೀ ವೆಂಕಟ್ರಮಣ ಭಟ್ಟರ ಪುತ್ರ. ಪಾತಾಳ ವೆಂಕಟ್ರಮಣ ಭಟ್ ಮತ್ತು ಶ್ರೀಮತಿ ಪರಮೇಶ್ವರೀ ಅಮ್ಮ ದಂಪತಿಗಳ ಮಗನಾಗಿ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪಾತಾಳ ಎಂಬಲ್ಲಿ 1963 ಫೆಬ್ರವರಿ 21ರಂದು ಜನನ. ಇವರ ಮೂಲ ಮನೆ ಪುತ್ತೂರು ತಾಲೂಕು ಕಬಕ ಗ್ರಾಮದ ಬೆರಿಪದವು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಶ್ರೀ ಮಂಜಯ್ಯ ಹೆಗ್ಗಡೆಯವರು ಅಂಬಾ ಪ್ರಸಾದರ ಹಿರಿಯರಿಗೆ (ಅಜ್ಜ ಮತ್ತು ತಂದೆಯವರಿಗೆ) ಕೊಡಿಸಿದ ಸ್ಥಳವೇ ಪ್ರಸ್ತುತ ವಾಸಮಾಡುತ್ತಿರುವ ಪಾತಾಳ.
ಅಂಬಾ ಪ್ರಸಾದರು 3ನೇ ತರಗತಿ ವರೆಗೆ ಓದಿದ್ದು ಸಂಪಾಜೆ ಶಾಲೆಯಲ್ಲಿ. (ಅಜ್ಜನ ಮನೆಯಲ್ಲಿದ್ದು ಶಾಲೆಗೆ ಹೋಗಿದ್ದರು. ಅಂಬಾಪ್ರಸಾದರ ಅಜ್ಜ ತಾಳಮದ್ದಳೆಯ ಅರ್ಥಧಾರಿಯಾಗಿದ್ದರು). 4ರಿಂದ 7ನೇ ಕ್ಲಾಸಿನ ವರೆಗೆ ಉಪ್ಪಿನಂಗಡಿ ಸಂತ ಫಿಲೋಮಿನಾ ಶಾಲೆಯಲ್ಲಿ, ಹತ್ತನೇ ತರಗತಿ ವರೆಗೆ ಉಪ್ಪಿನಂಗಡಿ ಸರಕಾರಿ ಶಾಲೆಯಲ್ಲಿ ಓದಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಶಾಲೆಯ ಅಧ್ಯಾಪಕರು ‘ನೀನು ಪಾತಾಳ ವೆಂಕಟ್ರಮಣ ಭಟ್ಟರ ಮಗ. ವೇಷ ಮಾಡು’ ಎಂದು ಹೇಳುತ್ತಿದ್ದರಂತೆ. ಅವರ ಪ್ರೋತ್ಸಾಹದ ನುಡಿಗಳು ನಾಟ್ಯ ಕಲಿಯುವಂತೆ ಪ್ರೇರೇಪಿಸಿತ್ತು. ನಾಟ್ಯ ಕಲಿಯದೆ ವೇಷ ಮಾಡಿ ತೀರ್ಥರೂಪರ ಹೆಸರಿಗೆ ಕೊರತೆಯಾಗಬಾರದು ಎಂಬ ಎಚ್ಚರವೂ ಅಂಬಾಪ್ರಸಾದರಿಗಿತ್ತು. ರಜಾದಿನಗಳಲ್ಲಿ ಉಪಾನ್ಯಾಸಕರೂ, ಕಲಾವಿದರೂ ಆಗಿದ್ದ ಆಳಿಕೆಯ ಕೆ.ವಿ.ಸುಬ್ರಾಯ ಅವರ ಮನೆಗೆ ತೆರಳಿ ಅವರಿಂದ ನಾಟ್ಯ ಕಲಿತರು.
ಶಾಲಾ ವಾರ್ಷಿಕೋತ್ಸವದ ಪ್ರದರ್ಶನಕ್ಕೆ ಗಿರಿಜಾ ಕಲ್ಯಾಣ ಪ್ರಸಂಗದ ಗಿರಿಜೆಯಾಗಿ ರಂಗವೇರಿದ್ದರು. ಬಳಿಕ ಅತಿಕಾಯ ಮೋಕ್ಷ ಪ್ರಸಂಗದ ಅತಿಕಾಯನಾಗಿಯೂ ವೇಷ ಮಾಡಿದ್ದರು. ವೃತ್ತಿ ಕಲಾವಿದನಾಗಿ ಮೇಳದ ತಿರುಗಾಟವನ್ನು ಮಾಡುವ ಬಯಕೆಯಾಗಿತ್ತು. ತಂದೆ ಬೇಡ ಎಂದು ಹೇಳಿದರೂ ಕೇಳದಷ್ಟು ತೀವ್ರವಾಗಿತ್ತು ಯಕ್ಷಗಾನದ ಸೆಳೆತ! ತನ್ನ ಕಷ್ಟ ಮಗನಿಗೆ ಬೇಡ ಎಂಬುದು ವೆಂಕಟರಮಣ ಭಟ್ಟರ ಆಕ್ಷೇಪಕ್ಕೆ ಕಾರಣವಿದ್ದಿರಬಹುದು. ಶಾಲಾ ದಿನಗಳಲ್ಲಿ ತಂದೆಯವರ ಜತೆ ಧರ್ಮಸ್ಥಳ ಮೇಳದ ಆಟಕ್ಕೆ ಹೋಗುತ್ತಿದ್ದರು. ಕಲಾವಿದರೆಲ್ಲಾ ಅಂಬಾಪ್ರಸಾದರನ್ನು ಪಾತಾಳ ವೆಂಕಟ್ರಮಣ ಭಟ್ಟರ ಮಗನೆಂಬ ಮಮತೆಯಿಂದ ಮಾತನಾಡಿಸುತ್ತಿದ್ದರು. ಶ್ರೀ ಕುಂಬಳೆ ಶ್ರೀಧರ ರಾಯರಿಂದ ಬಣ್ಣ ಕೇಳಿ ಮನೆಗೆ ತಂದು ಮೇಕಪ್ ಅಭ್ಯಾಸ ಮಾಡುತ್ತಿದ್ದರು.
ಕುಂದಾಪುರದ ಅಂಪಾರು ಶಾಲೆಯಲ್ಲಿ ಧರ್ಮಸ್ಥಳ ಮೇಳದ ಪ್ರದರ್ಶನ. ದ್ರೌಪದಿ ಸ್ವಯಂವರ ಪ್ರಸಂಗ. ಮೇಳದ ಕಲಾವಿದರೆಲ್ಲಾ ವೇಷ ಮಾಡಲು ಪ್ರೋತ್ಸಾಹ ನೀಡಿದ್ದರು. ಕುಂಬಳೆ ಶ್ರೀಧರ ರಾಯರೇ ಮೇಕಪ್ ಮಾಡಿ ವೇಷ ಮಾಡಿಸಿದ್ದರು. ಇವರು ದ್ರೌಪದಿಯಾಗಿ ಅಂಪಾರು ಶಾಲಾ ಮೈದಾನದಲ್ಲಿ ಧರ್ಮಸ್ಥಳ ಮೇಳದಲ್ಲಿ ಅಭಿನಯಿಸಲು ಅವಕಾಶವಾದುದನ್ನು ಈಗಲೂ ನೆನಪಿಸುತ್ತಾರೆ. ಆ ವರ್ಷವೇ ಶಾಸ್ತ್ರೀಯವಾಗಿ ನಾಟ್ಯ ಕಲಿಯಲು ನಿರ್ಧಾರವನ್ನೂ ಮಾಡಿದ್ದರು. 1978-79 ರಲ್ಲಿ ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯ ಕಲಿಯುವ ಸದವಕಾಶ ಸಿಕ್ಕಿತ್ತು. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳಕ್ಕೆ ಗುರುಗಳಾಗಿದ್ದವರು. ಕೇಂದ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ. ತಾರಾನಾಥ ಬಲ್ಯಾಯ ವರ್ಕಾಡಿ, ಸರಪಾಡಿ ವಿಠಲ, ಮೇಗರವಳ್ಳಿ ಕೃಷ್ಣಮೂರ್ತಿ ಮೊದಲಾದವರು ಇವರ ಸಹಪಾಠಿಗಳಾಗಿದ್ದರು. ಕೇಂದ್ರದ ಪ್ರದರ್ಶನಗಳಲ್ಲಿ ದಕ್ಷಯಜ್ಞದ ಈಶ್ವರ, ಇಂದ್ರಕೀಲಕ ಪ್ರಸಂಗದ ಈಶ್ವರ, ಪಟ್ಟಾಭಿಷೇಕ ಪ್ರಸಂಗದ ಕೈಕೇಯಿ, ಪಂಚವಟಿ ಪ್ರಸಂಗದ ಸೀತೆಯಾಗಿ ಅಭಿನಯಿಸಿದ್ದರು.
ಅಂಬಾ ಪ್ರಸಾದರ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ. ತಂದೆ ಪಾತಾಳ ವೆಂಕಟ್ರಮಣ ಭಟ್ಟರ ಜತೆ ತಿರುಗಾಟ (1978-79- ಕೆ.ಎಂ. ರಾಘವ ನಂಬಿಯಾರರು ಬರೆದ ‘ವಜ್ರಧರ ವಿಲಾಸ’ ಪ್ರಸಂಗ ವಿಜೃಂಭಿಸಿದ ವರ್ಷ) ಬಳಿಕ 4 ವರ್ಷ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ. ಪುತ್ತಿಗೆ ತಿಮ್ಮಪ್ಪ ರೈ ಭಾಗವತರು, ಕಟೀಲು ಶ್ರೀನಿವಾಸ ರಾವ್, ಮುಳಿಯಾಲ ಭೀಮ ಭಟ್, ತ್ರಿವಿಕ್ರಮ ಶೆಣೈ, ಬೇತ ಕುಂಞ ಕುಲಾಲ್, ಕರುವೊಳು ದೇರಣ್ಣ ಮೊದಲಾದವರ ಒಡನಾಟವೂ ಸಿಕ್ಕಿತ್ತು. ಅವಕಾಶಗಳೂ ಸಿಕ್ಕಿತ್ತು. ಭೂತರಾಜ ಕುಂಡಲೇಶ ವಿಜಯದಲ್ಲಿ ರಂಭೆ ಮತ್ತು ವಿಷ್ಣುವಿನ ಪಾತ್ರಗಳು ಒಳ್ಳೆಯ ಹೆಸರನ್ನು ನೀಡಿತ್ತು. ಗಂಧರ್ವ ಮೋಕ್ಷ ಪ್ರಸಂಗದ ವಿಮಲೆ, ಪ್ರತಾಪ ಜಯಂತಿ ಪ್ರಸಂಗದಲ್ಲಿ ಜಯಂತಿ ಪಾತ್ರದಲ್ಲೂ ಅಭಿನಯಿಸಿದರು. ಪ್ರತಾಪ ಜಯಂತಿ ಪ್ರಸಂಗವನ್ನು ತುಳುವಿನಲ್ಲಿ ಸ್ವರ್ಗದ ಪೊಣ್ಣು ಎಂಬ ಹೆಸರಿನಿಂದಲೂ ಆಡುತಿದ್ದರಂತೆ.
ಕೆ.ಗೋವಿಂದ ಭಟ್ ವಿರಚಿತ ಮೇಣಿಮೇಖಲಾ ರತ್ನಕಂಕಣ ಪ್ರಸಂಗದಲ್ಲಿ ಮಣಿಮೇಖಲೆಯಾಗಿ (ಕಸೆ ಸ್ತ್ರೀ ವೇಷ) ಅವಕಾಶವೂ ಸಿಕ್ಕಿತ್ತು. ದೇವಿಮಹಾತ್ಮೆ ಪ್ರಸಂಗದಲ್ಲಿ ಆದಿಮಾಯೆ, ಮಾಲಿನಿ,ಬ್ರಹ್ಮ, ಚಂಡಮುಂಡರು ಮೊದಲಾದ ಪಾತ್ರಗಳನ್ನು ಮಾಡುವ ಅವಕಾಶವೂ ಸಿಕ್ಕಿತ್ತು. ಪುತ್ತಿಗೆ ಶ್ರೀ ತಿಮ್ಮಪ್ಪ ರೈಗಳು, ಮುಳಿಯಾಲ ಭೀಮ ಭಟ್ಟರ ನಿರ್ದೇಶನದಲ್ಲಿ ಬೆಳೆಯುತ್ತಾ ಸಾಗಿದರು. ಸುಂಕದಕಟ್ಟೆ ಮೇಳಕ್ಕೆ ಅಗರಿ ಶ್ರೀನಿವಾಸ ಭಾಗವತರು ಆಗ ಅತಿಥಿ ಕಲಾವಿದರಾಗಿ ಬರುತ್ತಿದ್ದರು. ಕುಮಾರ ವಿಜಯ ಪ್ರಸಂಗ. ಅಗರಿಯವರು ಹೇಳಿಕೊಟ್ಟು ಅಂಬಾ ಪ್ರಸಾದರಿಂದ ಮಾಯಾ ಅಜಮುಖಿ ಪಾತ್ರವನ್ನು ಮಾಡಿಸಿದ್ದರಂತೆ.
ನಂತರ ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವದ ಕದ್ರಿ ಮೇಳದಲ್ಲಿ ವ್ಯವಸಾಯ. ಈ ಸಂದರ್ಭದಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪುತ್ತಿಗೆ ರಘುರಾಮ ಹೊಳ್ಳರು, ಪೆರುವಡಿ ನಾರಾಯಣ ಭಟ್, ಪುಂಡಿಕಾಯಿ ಕೃಷ್ಣ ಭಟ್, ಮಂಕುಡೆ ಸಂಜೀವ ಶೆಟ್ರು, ಮೂಡಬಿದಿರೆ ಮಾಧವ ಶೆಟ್ರು, ಸಿದ್ದಕಟ್ಟೆ ಚೆನ್ನಪ್ಪ ಶೆಟ್ರು, ಡಿ. ಮನೋಹರ ಕುಮಾರ್, ಪೆರುವಡಿ ಶ್ಯಾಮ ಭಟ್ ಸಹಕಲಾವಿದರಾಗಿದ್ದರು. ಅಪರೂಪಕ್ಕೆ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರೂ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಗೆಜ್ಜೆದ ಪೂಜೆ ಪ್ರಸಂಗದಲ್ಲಿ ಹೊಳ್ಳರ ಹಾಡು, ಡಿ. ಮನೋಹರ ಕುಮಾರರ ನಾಗ ಎಂಬ ಪಾತ್ರ, ಅಂಬಾಪ್ರಸಾದರ ತುಳಸಿ ಪಾತ್ರಗಳನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಅಲ್ಲದೆ ಜಾಲತುಳಸಿ (ಈ ಪ್ರಸಂಗದಲ್ಲಿ ಅಂಬಾ ಪ್ರಸಾದರದ್ದು ಈಶ್ವರ- ಶಿವತಾಂಡವ ನೃತ್ಯದೊಂದಿಗೆ), ಕಾಡಕಾಳಿಂಗ, ಕುಜುಂಬ ಕಾಂಜವೆ, ದಳವಾಯಿ ಮುದ್ದಣ್ಣೆ (ಈ ಪ್ರಸಂಗದಲ್ಲಿ ಅಂಬಾ ಪ್ರಸಾದರದ್ದು ಶಾಂತಲೆ ಪಾತ್ರ) ಮೊದಲಾದ ಪ್ರಸಂಗಗಳಲ್ಲಿ ವೇಷ ಮಾಡುವ ಅವಕಾಶ ಸಿಕ್ಕಿತ್ತು.
ನಂತರ ಕಸ್ತೂರಿ ಶ್ರೀ ವರದರಾಯ ಪೈಗಳ ಸುರತ್ಕಲ್ಲು ಮೇಳದಲ್ಲಿ ತಿರುಗಾಟ. ಪೂಕಳ ಲಕ್ಷ್ಮೀನಾರಾಯಣ ಭಟ್, ವೇಣೂರು ಸುಂದರ ಆಚಾರ್ಯ, ಎಂ.ಕೆ ರಮೇಶಾಚಾರ್ಯ, ಶಿವರಾಮ ಜೋಗಿ ಬಿ.ಸಿ.ರೋಡು ಸಹಕಲಾವಿದರಾಗಿದ್ದರು. ಅಗರಿ ಶ್ರೀ ರಘುರಾಮ ಭಾಗವತರು, ಪದ್ಯಾಣ ಗಣಪತಿ ಭಟ್ ಮತ್ತು ಕಡಬ ನಾರಾಯಣ ಆಚಾರ್ಯ ಮೊದಲಾದವರ ಸಮರ್ಥ ಹಿಮ್ಮೇಳವೂ ಸಿಕ್ಕಿತ್ತು. ಬಳಿಕ ಮಧೂರು ಶ್ರೀ ರಾಧಾಕೃಷ್ಣ ನಾವಡ, ಶ್ರೀ ಡಿ. ಮನೋಹರ ಕುಮಾರ್ ಮತ್ತು ಕುಂಬಳೆ ಗೋಪಾಲರ ನೇತೃತ್ವದ ಮಧೂರು ಮೇಳದಲ್ಲಿ 3 ವರ್ಷಗಳ ತಿರುಗಾಟ. ಪೂತ ಪೂಜೆ, ಮಣ್ಣುದ ಮಾಣಿಕ್ಯ ಮೊದಲಾದ ಪ್ರಸಂಗಗಳಲ್ಲಿ ಅಭಿನಯ. ಕಾಂಚನ ಸಂಜೀವ ರೈ, ಬೆಳ್ಳಾರೆ ವಿಶ್ವನಾಥ ರೈ, ಡಿ. ಸಂತೋಷಕುಮಾರ್, ಕೆದಿಲ ಜಯರಾಮ ಭಟ್ ಮೊದಲಾದ ಕಲಾವಿದರ ಜತೆ ತಿರುಗಾಟ.
ಬಳಿಕ ಬಡಗು ತಿಟ್ಟಿನ ಶಿರಸಿ ಮೇಳದಲ್ಲಿ 2 ವರ್ಷ ಕಲಾಸೇವೆ. ಬಡಗು ನಾಟ್ಯ ಕಲಿತದ್ದು ತಿರುಗಾಟದ ಸಂದರ್ಭ ಹಗಲು ಹೊತ್ತು. ಅದೂ ಸಹಕಲಾವಿದರಿಂದ. ಹಗಲು ಮಧ್ಯಾಹ್ನದ ವರೆಗೆ ನಾಟ್ಯಾಭ್ಯಾಸ. ಬಳಿಕ ವಿಶ್ರಾಂತಿ. ಕಪ್ಪೆಕೆರೆ ಮಹಾದೇವ ಹೆಗಡೆ, ಶಂಕರ ಭಾಗವತ ಯಲ್ಲಾಪುರ, ಹೆರಂಜಾಲು ಗೋಪಾಲ ಗಾಣಿಗ, ಎಂ. ಎ. ನಾಯ್ಕ, ಸದಾಶಿವ ಅಮೀನ್, ಉಪ್ಪುಂದ ನಾಗೇಂದ್ರ ಮೊದಲಾದ ಕಲಾವಿದರ ಒಡನಾಟ. ಪುರಾಣ ಪ್ರಸಂಗಗಳು. ಈ 2 ವರ್ಷಗಳ ತಿರುಗಾಟ ಮರೆಯಲಾಗದ ಅನುಭವ ಎಂದು ಅಂಬಾಪ್ರಸಾದರ ಅಭಿಪ್ರಾಯ.
ಬಳಿಕ ಶ್ರೀ ಡಿ. ಮನೋಹರ ಕುಮಾರರ ಕದ್ರಿ ಮೇಳದಲ್ಲಿ 3 ವರ್ಷ ತಿರುಗಾಟ. ಕದಿರೆದ ಬೊಳ್ಳಿ ಮೊದಲಾದ ಪ್ರಸಂಗಗಳಲ್ಲಿ ಮನೋಹರ ಕುಮಾರರ ಜತೆ ಜೋಡಿ ಪಾತ್ರಗಳಲ್ಲಿ ಅಂಬಾಪ್ರಸಾದರು ರಂಜಿಸಿದ್ದರು. ಬಳಿಕ ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ 6 ವರ್ಷ. ಆಗ ಶಬರಾಯರು ಮತ್ತು ರವಿಚಂದ್ರ ಕನ್ನಡಿಕಟ್ಟೆ ಭಾಗವತರಾಗಿದ್ದರು. ಬಳಿಕ ವರ್ಕಾಡಿ ಐತಪ್ಪ, ಸರಪಾಡಿ ಅಶೋಕ ಶೆಟ್ರು, ಸೀತಾರಾಮ್ ಕುಮಾರ್ ಅವರ ಪುತ್ತೂರು ಮೇಳದಲ್ಲಿ 2 ವರ್ಷ. ಆಗ ಕೊಳ್ತಿಗೆ ನಾರಾಯಣ ಗೌಡರೂ ಸದ್ರಿ ಮೇಳದಲ್ಲಿ ಸಹಕಲಾವಿದರಾಗಿದ್ದರು.
ಬಳಿಕ ಕಿಶನ್ ಹೆಗ್ಡೆಯವರ ಕರ್ನಾಟಕ ಮೇಳದಲ್ಲಿ 3 ವರ್ಷ. ಬಳಿಕ 1 ವರ್ಷ ಎಡನೀರು ಮೇಳದಲ್ಲಿ. ಪದ್ಯಾಣ, ದಿನೇಶ್ ಅಮ್ಮಣ್ಣಾಯರು, ಶಬರಾಯರು ಭಾಗವತರಾಗಿದ್ದು, ಪ್ರಸಿದ್ಧ ಕಲಾವಿದರನ್ನೊಳಗೊಂಡ ತಂಡವಾಗಿತ್ತು. ಆ ವರ್ಷ ತಾರಾನಾಥ ಬಲ್ಯಾಯ ವಿರಚಿತ ‘ಗೋಕರ್ಣ’ ಎಂಬ ಪ್ರಸಂಗವು ರಂಜಿಸಿತ್ತು. ಬಳಿಕ ಹೊಸನಗರ ಮೇಳದಲ್ಲಿ 10 ವರ್ಷಗಳ ಕಲಾಸೇವೆ. ಕನ್ಯಾಂತರಂಗ, ಪುಣ್ಯಕೋಟಿ, ಶ್ರೀರಾಮ ಸೇತು, ಶಬರಿ ಪ್ರಸಂಗಗಳಲ್ಲಿ ಕ್ರಮವಾಗಿ ಅಹಲ್ಯೆ, ಪುಣ್ಯಕೋಟಿ, ಸೀತೆ ಮತ್ತು ಬಕುಳೆ ಪಾತ್ರಗಳನ್ನು ನಿರ್ವಹಿಸಿದ್ದರು. ಉಜಿರೆ ಅಶೋಕ ಭಟ್ಟರು ಗೌತಮನಾಗಿ, ಅಂಬಾ ಪ್ರಸಾದರು ಅಹಲ್ಯೆಯಾಗಿ, ಸಹಕಲಾವಿದರೆಲ್ಲರ ಸಹಕಾರಗಳಿಂದ ಕನ್ಯಾಂತರಂಗ ಎಂಬ ಪ್ರಸಂಗವು ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸಿತ್ತು. ಬಳಿಕ 1 ವರ್ಷ ಸರಪಾಡಿ ಅಶೋಕ ಶೆಟ್ರ ಬಾಚಕೆರೆ ಮೇಳದಲ್ಲಿ ವ್ಯವಸಾಯ.
ಪ್ರಸ್ತುತ 3 ವರ್ಷಗಳಿಂದ ಅಂಬಾಪ್ರಸಾದ್ ಪಾತಾಳ ಅವರು ದೇಂತಡ್ಕ ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಪ್ರಸಂಗದಲ್ಲಿ ಇವರು ನಿರ್ವಹಿಸಿದ ಜೀಜಾಬಾಯಿ ಪಾತ್ರವನ್ನು ಪ್ರೇಕ್ಷಕರನ್ನು ಮೆಚ್ಚಿಕೊಂಡಿದ್ದಾರೆ. ಶೃಂಗಾರ ರಸದ ಪಾತ್ರಗಳಿಗಿಂತಲೂ ಕರುಣರಸದ ಭಾವನಾತ್ಮಕ ಪಾತ್ರಗಳಲ್ಲಿ ಅಂಬಾಪ್ರಸಾದರಿಗೆ ಒಲವು ಹೆಚ್ಚು. ಬಾಚಕೆರೆ ಮೇಳದಲ್ಲಿ ಕಥಾನಾಯಕನೇ ಖಳನಾಯಕನಾಗಿ ಪರಿವರ್ತನೆ ಹೊಂದುವ ನೀಲಕಂಠ ಶಾಸ್ತ್ರಿ, ಬೇಡರ ಕಣ್ಣಪ್ಪದ ಕೈಲಾಸ ಶಾಸ್ತ್ರಿ, ರಾಣಿ ಮತ್ತು ಲೀಲಾ, ಶಬರಿಮಲೆ ಅಯ್ಯಪ್ಪ ಪ್ರಸಂಗದ ಕೇಳುಪಂಡಿತ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಸಖಿ ಪಾತ್ರ ಸಣ್ಣದೆಂಬ ತಾತ್ಸಾರ ಸಲ್ಲದು. ಪೋಷಕ ಪಾತ್ರಗಳನ್ನು ಮಾಡಿಯೇ ಅನುಭವದಿಂದ ಬೆಳೆಯಬೇಕು. ರಂಗದಲ್ಲಿ ನಡೆಯಬೇಕಾದುದು ಭಾವಪ್ರಯೋಗ. ಮಾನ ಪ್ರಯೋಗ ಅಲ್ಲ ಎನ್ನುವ ಇವರು, ಧರಿಸುವ ಉಡುಪುಗಳು ಮಾನಮುಚ್ಚುವಂತಿರಬೇಕು ಎಂಬ ನಿಲುಮೆಯನ್ನು ಹೊಂದಿರುತ್ತಾರೆ.
ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಅಂಬಾಪ್ರಸಾದರು ಕಲಾಪೋಷಕರಾದ ಡಾ. ಟಿ.ಶ್ಯಾಮ ಭಟ್ಟರು ನೀಡಿದ ಪ್ರೋತ್ಸಾಹ ಮತ್ತು ಸಹಕಾರಗಳನ್ನು ನೆನಪಿಸಿ ಅವರಿಗೆ ಗೌರವವನ್ನು ಸಲ್ಲಿಸುತ್ತಾರೆ. ಶ್ರೀ ಅಂಬಾಪ್ರಸಾದರದು ಒತ್ತಿ ನಾಲ್ಕು ದಶಕಗಳಿಗೂ ಮಿಕ್ಕಿದ ತಿರುಗಾಟ (43 ವರ್ಷ). ಹೊಸ ನಮೂನೆಗೆ ಅಂಟಿಕೊಳ್ಳದೆ ಪರಂಪರೆಯ ರೀತಿಯಲ್ಲೇ ಪಾತ್ರ ನಿರ್ವಹಣೆಯಿರಬೇಕು ಎನ್ನುವವರು. ತೀರ್ಥರೂಪರಾದ ಪಾತಾಳ ವೆಂಕಟ್ರಮಣ ಭಟ್ಟರ ರೀತಿಯಲ್ಲೇ ವೇಷಭೂಷಣಗಳನ್ನು ಉಪಯೋಗಿಸುತ್ತಾರೆ. ಯಕ್ಷಗಾನದಲ್ಲಿ ಕುಣಿತವೂ, ಅಭಿನಯವೂ ಜತೆಯಾಗಿ ಸಾಗಬೇಕಾದರೆ ಭರತನಾಟ್ಯವು ಪೂರಕವಾಗಿರುತ್ತದೆ ಎಂಬುದು ಇವರ ಅನುಭವದ ಮಾತುಗಳು. ಸುಂಕದಕಟ್ಟೆ ಮೇಳದಲ್ಲಿರುವಾಗ ಹಗಲು ಮಂಗಳೂರಿನ ಶ್ರೀ ವಿಠಲ ಮಾಸ್ತರ್ ಅವರಿಂದ ಭರತನಾಟ್ಯ ಕಲಿತು ಯಕ್ಷಗಾನಕ್ಕೆ ಅಳವಡಿಸಿದ್ದರು.
ಹೊಸನಗರ ಮಠಾಧೀಶರಾದ ರಾಘವೇಶ್ವರ ಸ್ವಾಮಿಗಳ ನೇತೃತ್ವದ ರಾಮಕಥೆ, ಗೋಕಥೆ, ಶಿವಕಥೆ, ಅಂಬಾಕಥೆ ಮೊದಲಾದ ರೂಪಕ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಪೂರ್ವರಂಗದ ಅರ್ಧನಾರೀಶ್ವರ, ಚಪ್ಪರಮಂಚ ಮೊದಲಾದ ಪಾತ್ರಗಳಲ್ಲಿ ಪರಿಣತರು. ಉಪ್ಪನಂಗಡಿ ಶ್ರೀರಾಮ ಶಾಲೆ, ಸರಕಾರೀ ಶಾಲೆಗಳಲ್ಲಿ ಮನೆಯಲ್ಲಿ ಕಲಿಕಾಸಕ್ತರಿಗೆ ಉಚಿತವಾಗಿ ನಾಟ್ಯ ತರಬೇತಿಯನ್ನೂ ನೀಡುತ್ತಿದ್ದಾರೆ. ಅಂಬಾಪ್ರಸಾದರು ಚಂದ್ರಮತಿ, ದಮಯಂತಿ, ಸುಭದ್ರೆ, ಚಿತ್ರಣಗದೆ, ಚೈದ್ಯರಾಣಿ ಮೊದಲಾದ ಪಾತ್ರಗಳನ್ನು ಅತೀವವಾಗಿ ಪ್ರೀತಿಸುತ್ತಾರೆ.
ಶ್ರೀಯುತರ ಮೊದಲ ಪತ್ನಿ ಶ್ರೀಮತಿ ಶಾಲಿನಿ ಅವರು ಇಬ್ಬರು ಪುತ್ರರಿಗೆ ತಾಯಿಯಾದ ಬಳಿಕ ಅನಾರೋಗ್ಯದ ಕಾರಣದಿಂದ ಮರಣಿಸಿದ್ದರು. ಬಳಿಕ ಜಯಂತಿ ಅವರು ಅಂಬಾಪ್ರಸಾದರ ಪತ್ನಿಯಾಗಿ ಈ ಇಬ್ಬರು ಮಕ್ಕಳಿಗೆ ತಾಯಿಯಾಗಿ ಒದಗಿದ್ದರು. ಅಲ್ಲದೆ ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತು ಅಂಬಾಪ್ರಸಾದರ ಬಾಳಿಗೆ ಬೆಳಕಾಗಿದ್ದರು. ಅಂಪಾಪ್ರಸಾದ ಪಾತಾಳ ಮತ್ತು ಜಯಂತಿ ದಂಪತಿಗಳ ಬದುಕಿಗೆ ಹೀಗೆ ಬೆಳಕಾದವರು ನಾಲ್ಕು ಮಕ್ಕಳು. ಹಿರಿಯ ಪುತ್ರ ವೆಂಕಟೇಶ ಪ್ರಣವ ಪ್ರಸನ್ನ ಉದ್ಯೋಗಿ. ವಿವಾಹಿತ. ಇವರ ಪತ್ನಿ ಶ್ರೀಮತಿ ಶುಭಶ್ರೀ. ವೆಂಕಟೇಶ ಪ್ರಣವ ಪ್ರಸನ್ನರು ನಾಟ್ಯ ಕಲಿತು ವೇಷ ಮಾಡಿ ಅನುಭವವುಳ್ಳವರು. ದ್ವಿತೀಯ ಪುತ್ರ ತಿರುಮಲ ಪ್ರದೀಪ ಉದ್ಯೋಗಿ. ಜ್ಯೇಷ್ಠ ಪುತ್ರಿ ಪೌಷ ವಿವಾಹಿತೆ. ಗೃಹಣಿ. ಅಳಿಯ ಶ್ರೀ ಮಧುಕೇಶ್ವರ. ಕಿರಿಯ ಪುತ್ರಿ ಕು| ಪೂರ್ಣಶ್ರೀ. ೭ನೇ ತರಗತಿ ವಿದ್ಯಾರ್ಥಿನಿ. ಈಕೆ ಭರತನಾಟ್ಯ, ಸಂಗೀತ, ಯಕ್ಷಗಾನ ನಾಟ್ಯ ಕಲಿಯುತ್ತಿದ್ದಾಳೆ. ಜ್ಯೇಷ್ಠ ಪುತ್ರಿ ಪೌಷಳೂ ಯಕ್ಷಗಾನ ಅಭ್ಯಸಿಸಿದ್ದಳು.
ಅಂಬಾಪ್ರಸಾದರ ನಾಲ್ಕು ಮಂದಿ ಮಕ್ಕಳೂ ವೇಷಮಾಡಿ ಅನುಭವವುಳ್ಳವರು. ಶ್ರೀ ಅಂಬಾಪ್ರಸಾದರು ಸಂಪ್ರದಾಯದ ಚೌಕಟ್ಟನ್ನು ಮೀರದ ಸ್ತ್ರೀ ಪಾತ್ರಧಾರಿ. ಮಳೆಗಾಲದಲ್ಲಿ ಕುಂಬಳೆ ಚಂದು, ಮುಳಿಯಾಲ ಭೀಮ ಭಟ್, ಕುಂಬಳೆ ಸುಂದರ ರಾವ್, ನಯನಕುಮಾರ್, ಡಿ.ಮನೋಹರ ಕುಮಾರ್, ಪುತ್ತೂರು ಶ್ರೀಧರ ಭಂಡಾರಿ, ನಿಡ್ಲೆ ಗೋವಿಂದ ಭಟ್ಟರ ಪ್ರವಾಸೀ ತಂಡಗಳ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಹೊಂದಾಣಿಕೆಯ ಸ್ವಭಾವವನ್ನು ಮೈಗೂಡಿಸಿಕೊಂಡಿರುವ ಇವರು ಯಾವ ಪಾತ್ರಗಳನ್ನೂ ಮಾಡಬಲ್ಲರು. ಸವ್ಯಸಾಚೀ ಆಪದ್ಬಾಂಧವ ಕಲಾವಿದ ಎಂದೂ ಹೇಳಬಹುದು. ಅನಿವಾರ್ಯಕ್ಕೆ ಮೇಳದ ತಿರುಗಾಟದಲ್ಲಿ ಪೂಜೆ, ಅಡುಗೆ ಕೆಲಸಗಳನ್ನು ನಿರ್ವಹಿಸಿ ಆಡಳಿತಕ್ಕೆ ನೆರವಾದ ಕಲಾವಿದರಿವರು. ಶ್ರೀ ಅಂಬಾಪ್ರಾಸಾದ ಪಾತಾಳ ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಸಕಲಭಾಗ್ಯಗಳನ್ನೂ ಅನುಗ್ರಹಿಸಲಿ. ಬದುಕು ನೆಮ್ಮದಿಯಿಂದ ಕೂಡಿದ್ದು, ಸುಂದರವಾಗಿರಲಿ. ಕಲಾಭಿಮಾನಿಗಳ ಪರವಾಗಿ ಶುಭಹಾರೈಕೆಗಳು.
‘ಸಂಗಮ ಕಲಾ ಸಂಘ’ ಎಂಬುದು ಸುಳ್ಯ ತಾಲೂಕಿನ ಕಲ್ಮಡ್ಕ ಪರಿಸರದಲ್ಲಿ ಕಲೆಯ ಕಂಪನ್ನು ಪಸರಿಸಿದ ಸಂಸ್ಥೆ. ಯಕ್ಷಗಾನ, ನಾಟಕ, ಸಂಗೀತ, ಭರತನಾಟ್ಯ, ತಾಳಮದ್ದಳೆ, ಸಂಗೀತ ರೂಪಕ ಮೊದಲಾದ ಕಲಾ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿ ಕಲ್ಮಡ್ಕವನ್ನು ಒಂದು ಸಾಂಸ್ಕೃತಿಕ, ಕಲಾ ಕೇಂದ್ರವನ್ನಾಗಿ ಎಲ್ಲರೂ ಗುರುತಿಸುವಂತೆ ಮಾಡಿದ ಕೀರ್ತಿಯು ಈ ಸಂಸ್ಥೆಗೆ ಸಲ್ಲುತ್ತದೆ.
ಅನೇಕ ಮಂದಿ ಕಲಾವಿದರ ಪ್ರತಿಭಾ ಪ್ರಕಟೀಕರಣಕ್ಕೆ ಈ ‘ಸಂಗಮ ಕಲಾ ಸಂಘ’ವು ವೇದಿಕೆಯಾಗಿ ಒದಗಿ ಬಂದಿತ್ತು. ಬೆಳೆಯುತ್ತಾ ಸಾಗಿ ಜನಪ್ರಿಯವಾದ ಕಲ್ಮಡ್ಕದ ‘ಸಂಗಮ ಕಲಾ ಸಂಘ’ದ ರೂವಾರಿಗಳು ಕಲಾವಿದ. ಸಮಾಜಸೇವಕ. ವೈದ್ಯ ದಿ| ಕೆರೆಕೋಡಿ ಪಂಡಿತ ಗಣಪತಿ ಭಟ್ಟರು. ಕೆರೆಕೋಡಿ ಪಂಡಿತ ಗಣಪತಿ ಭಟ್ಟರ ಹುಟ್ಟೂರು ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಪಳ್ಳತ್ತಡ್ಕ. 1921 ಜನವರಿ 6ರಂದು ಶ್ರೀ ಶಂಭಯ್ಯ ಭಟ್ ಮತ್ತು ಶ್ರೀಮತಿ ಶಂಕರಿ ಅಮ್ಮನವರ ಪುತ್ರನಾಗಿ ಜನನ. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಓದು. ಸಂಸ್ಕೃತ ಭಾಷೆಯ ಜತೆಗೆ ಆಯುರ್ವೇದ ವೈದ್ಯ ಶಾಸ್ತ್ರವನ್ನು ಕಲಿತು ಪರಿಣತಿಯನ್ನು ಹೊಂದಿದರು.
1944ನೇ ಇಸವಿಯಲ್ಲಿ ಕಲ್ಮಡ್ಕದ ಕೆರೆಕೋಡಿ ಎಂಬಲ್ಲಿ ಬಂದು ನೆಲೆಸಿದರು. ಉತ್ತಮ ಕೃಷಿಕರಾಗಿ, ಸಮಾಜ ಸೇವಕರಾಗಿ, ಕಲಾಸಂಘಟಕರಾಗಿ, ಸಾಹಿತಿಯಾಗಿ ತಮ್ಮ ಬಹುಮುಖೀ ಪ್ರತಿಭೆಯಿಂದ ಕಲ್ಮಡ್ಕ ಎಂಬ ಊರಿನ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದ ಸಾಹಸಿ ಇವರು. ಎಳವೆಯಲ್ಲೇ ಕಲಾಸಕ್ತರಾಗಿದ್ದ ಇವರು ಕಲ್ಮಡ್ಕಕ್ಕೆ ಬಂದು ನೆಲೆಸಿದ ಮೇಲೆ ಮಿತ್ರರೂ, ಸಮಾನಮನಸ್ಕರೂ ಆಗಿದ್ದ ಶ್ರೀ ಟಿ.ಜಿ. ಮೂಡೂರು, ಶ್ರೀ ಕೆ. ಸಚ್ಚಿದಾನಂದ ಶರ್ಮ, ಮತ್ತು ಕುಂಞಿಹಿತ್ತಿಲು ರಾಮಚಂದ್ರ ಅವರ ಜತೆ ಸೇರಿ ‘ಸಂಗಮ ಕಲಾ ಸಂಘ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು(1951).
ಕಲಾಚಟುವಟಿಕೆಗಳನ್ನು ನಡೆಸುತ್ತಾ ಕಲ್ಮಡ್ಕವನ್ನು ಕಲಾ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಬೇಕಾದರೆ ಇಂತಹಾ ಒಂದು ಕಲಾಸಂಸ್ಥೆಯ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ಕೆರೆಕೋಡಿ ಪಂಡಿತ ಗಣಪತಿ ಭಟ್ಟರು ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಈ ಸಂಸ್ಥೆಯ ಸರ್ವತೋಮುಖ ಏಳಿಗೆಗೆ ಕಾರಣರಾಗಿದ್ದರು. ಬಳಿಕ ‘ಸಂಗಮ ಕಲಾ ಸಂಘ’ದ ಅಧ್ಯಕ್ಷರಾಗಿ ಬದುಕಿನ ಕೊನೆ ತನಕವೂ ಸೇವೆ ಸಲ್ಲಿಸಿದ್ದರು. ಯಕ್ಷಗಾನ ನಾಟಕ, ತಾಳಮದ್ದಳೆ ಕಾರ್ಯಗಳನ್ನು ಈ ಸಂಘದ ಮೂಲಕ ನಡೆಸುತ್ತಾ ಕಲ್ಮಡ್ಕ ಪರಿಸರದ ಜನರಲ್ಲಿ ಕಲಾಸಕ್ತಿಯು ಕೆರಳಲು ಕಾರಣರಾದರು. ಬಣ್ಣಗಾರಿಕೆ, ವೇಷಗಾರಿಕೆ, ಮಾತುಗಾರಿಕೆ ಈ ಎಲ್ಲಾ ವಿಭಾಗಗಳಲ್ಲೂ ಕಲಿಕಾಸಕ್ತರಿಗೆ ಇವರು ಗುರುವೇ ಆಗಿದ್ದರು.
ಅನೇಕರಿಗೆ ತರಬೇತಿಯನ್ನು ನೀಡಿ ಕಲಾವಿದರಾಗಿ ಸಿದ್ಧಗೊಳಿಸಿದ್ದರು. ಮೊದಲೆಲ್ಲಾ ಪ್ರದರ್ಶನಗಳಿಗೆ ಬೇಕಾದ ವೇಷಭೂಷಣಗಳನ್ನು ಮಂಗಳೂರಿನ ಗುಲ್ವಾಡಿ ಆರ್ಟ್ಸ್ ನಿಂದ ತರಿಸಲಾಗುತ್ತಿತ್ತು. ಸಾಗಾಣಿಕೆಯ ಕಷ್ಟವನ್ನು ಸ್ವಯಂ ಅನುಭವಿಸಿದ ಇವರು, ಸಂಘವು ತನ್ನದೇ ಆದ ವೇಷಭೂಷಣಗಳನ್ನು ಹೊಂದಬೇಕೆಂದು ನಿರ್ಧರಿಸಿದ್ದರು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಯಶಸ್ವಿಯೂ ಆದರು. ಹೀಗೆ ಯಕ್ಷಗಾನ, ನಾಟಕ ವೇಷಭೂಷಣಗಳ ತಯಾರಿಕೆಯಲ್ಲೂ ಕೆರೆಕೋಡಿ ಪಂಡಿತ ಗಣಪತಿ ಭಟ್ಟರು ಪರಿಣತಿಯನ್ನು ಹೊಂದಿದ್ದರು. ಸಂಗಮ ಕಲಾ ಸಂಘವು ತನ್ನದೇ ಆದ ವೇಷಭೂಷಣಗಳನ್ನು ಹೊಂದಿದಾಗ ಅದರ ಹೊಣೆ ಹೊತ್ತು ತೊಡಗಿಸಿಕೊಂಡಿದ್ದರು.
ಕಲ್ಮಡ್ಕ ಅಲ್ಲದೆ ಊರ ಪರವೂರ ಕಾರ್ಯಕ್ರಮಗಳಿಗೂ ವೇಷಭೂಷಣಗಳನ್ನು ಪ್ರೀತಿಯಿಂದ ಒದಗಿಸಿ ಕಲಾಪ್ರೀತಿಯನ್ನು ಮೆರೆದರು. ರಂಗಪ್ರದರ್ಶನಗಳಲ್ಲಿ, ಪ್ರಸಾಧನದಲ್ಲಿ ತಾವೂ ಭಾಗಿಯಾಗಿ ಕಲಾಚಟುವಟಿಕೆಗಳು ನಿರಂತರವಾಗಿ ನಡೆಯಲು ಕಾರಣರಾದರು. ಮುಂದೆ ಯಕ್ಷಗಾನ ಪ್ರದರ್ಶನಗಳಿಗೆ ಕಲ್ಮಡ್ಕ ಸಂಗಮ ಕಲಾ ಸಂಘದ ವೇಷಭೂಷಣಗಳು ಅನಿವಾರ್ಯ ಎನ್ನುವಷ್ಟು ಜನಪ್ರಿಯವಾಗಲು ಕಾರಣರಾಗಿದ್ದರು ಕೆರೆಕೋಡಿ ಪಂಡಿತ ಗಣಪತಿ ಭಟ್ಟರು. ಯಕ್ಷಗಾನದ ಒಬ್ಬ ನಿರ್ದೇಶಕರಾಗಿಯೂ ಇವರು ಪ್ರಸಿದ್ಧರಾಗಿದ್ದರು.
ಬಳಿಕ ‘ಸಂಗಮ ಸಾಹಿತ್ಯಮಾಲೆ’ ಮತ್ತು ‘ಸಂಗಮ ರಂಗಭೂಮಿ’ಯನ್ನೂ ಹುಟ್ಟುಹಾಕಿದ್ದರು. ಸಾಹಿತ್ಯ ಕೃತಿಗಳ ಪ್ರಕಾಶನ, ಯಕ್ಷಗಾನ ತರಬೇತಿ ಶಿಬಿರ. ವೇಷಭೂಷಣಗಳ ತಯಾರಿ ಕುರಿತಾದ ಕಾರ್ಯಾಗಾರ, ತರಬೇತಿ, ಸಂಗೀತ ಶಿಕ್ಷಣ, ಭರತನಾಟ್ಯ ತರಬೇತಿ, ಯಕ್ಷಗಾನ, ನಾಟಕ, ಸಂಗೀತ ರೂಪಕಗಳ ಪ್ರದರ್ಶನ ಇತ್ಯಾದಿ ಚಟುವಟಿಕೆಗಳನ್ನು ಸಂಗಮ ಕಲಾ ಸಂಘದ ಆಶ್ರಯದಲ್ಲಿ ಸದಾ ನಡೆಸುತ್ತಾ ಬಂದವರು. ಪರಿಸರದ ಜನರಿಗೆ ಕಲಾ ರಸದೌತಣವನ್ನು ಬಡಿಸುತ್ತಾ ಕಲ್ಮಡ್ಕವನ್ನು ಸದಾ ಕ್ರಿಯಾಶೀಲವನ್ನಾಗಿರಿಸಿದ ಕೀರ್ತಿಯು ಕೆರೆಕೋಡಿ ಪಂಡಿತ ಗಣಪತಿ ಭಟ್ಟರಿಗೆ ಸಲ್ಲುತ್ತದೆ.
ಶ್ರೀಯುತರ ಪುತ್ರ ಶ್ರೀ ಮಹಾಬಲ ಕಲ್ಮಡ್ಕ ಅವರೂ ತೀರ್ಥರೂಪರಂತೇ ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಖ್ಯಾತರಾಗಿರುವುದು ಸಂತೋಷದ ವಿಚಾರ. ಇವರು ಕೃಷಿಕರಾಗಿ, ಕಲಾವಿದರಾಗಿ, ಸಂಘಟಕರಾಗಿ ಎಲ್ಲರಿಗೂ ಪರಿಚಿತರು. ‘ರಂಗ ಸುರಭಿ’ ಕಲ್ಮಡ್ಕ ಎಂಬ ಸಂಸ್ಥೆಯ ರೂವಾರಿಗಳು. ದಿ| ಕೆರೆಕೋಡಿ ಪಂಡಿತ ಗಣಪತಿ ಭಟ್ಟರಿಂದ ಆರಂಭಗೊಂಡ ‘ಸಂಗಮ ಕಲಾ ಸಂಘ’ ಕಲ್ಮಡ್ಕ ಎಂಬ ಸಂಸ್ಥೆಯು ಸದಾ ಸಕ್ರಿಯವಾಗಿರಲಿ. ಕಲಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಲಿ.
ಪ್ರಚಾರವನ್ನು ಬಯಸದೆ, ಇದು ನನಗೆ ಕರ್ತವ್ಯ ಎಂಬಂತೆ ಕಲಾಸೇವೆಯನ್ನು ಮಾಡಿ ತನ್ನಲ್ಲಿರುವ ವಿದ್ಯೆಯನ್ನು ಮುಂದಿನ ಪೀಳಿಗೆಗೆ ನೀಡಿ ಮರೆಯಾದ ಅನೇಕ ಕಲಾವಿದರಲ್ಲಿ ಅರಸಿನಮಕ್ಕಿ ಪರಮೇಶ್ವರ ಆಚಾರ್ಯರೂ ಒಬ್ಬರು. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲ ಕಲಾವಿದರಾಗಿದ್ದರು. ತಾನು ಕಲಿತ ಯಕ್ಷಗಾನ ವಿದ್ಯೆಯನ್ನು ಸುಲಭ, ಸರಳ ರೀತಿಯಲ್ಲಿ ಕಲಿಕಾಸಕ್ತರಿಗೆ ಹೇಳಿ ಕೊಡುವ ವಿದ್ಯೆಯೂ ಇವರಿಗೆ ಕರಗತವಾಗಿತ್ತು. ಹೇಳಿಕೊಡುವವರೆಲ್ಲಾ ಚೆನ್ನಾಗಿ ಮಾಡಲಾರರು. ಚೆನ್ನಾಗಿ ಮಾಡಬಲ್ಲವರಿಗೆಲ್ಲರಿಗೂ ಕಲಿಸುವ ಕಲೆಯು ಸಿದ್ಧಿಸದು. ಇವರು ಚೆನ್ನಾಗಿ ಮಾಡಬಲ್ಲವರೂ. ಹೇಳಿಕೊಡಬಲ್ಲವರೂ ಆಗಿದ್ದರು.
ದಿ| ಶ್ರೀ ಪರಮೇಶ್ವರ ಆಚಾರ್ಯರು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಸಮೀಪದ ಇರ್ನಾಡಿ ಎಂಬಲ್ಲಿ ಶ್ರೀ ಗಿರಿಯಪ್ಪ ಆಚಾರ್ಯ ಮತ್ತು ಶ್ರೀಮತಿ ರಾಜೀವಿ ದಂಪತಿಗಳಿಗೆ ಮಗನಾಗಿ 1963ನೇ ಇಸವಿಯಲ್ಲಿ ಜನಿಸಿದರು. ಓದಿದ್ದು ಸಿದ್ಧಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಮನೆ ಧರ್ಮಸ್ಥಳ ಕ್ಷೇತ್ರ ಬಳಿ ಎಂದರೆ ಕೇಳಬೇಕೆ? ಪ್ರದರ್ಶನಗಳನ್ನು ನೋಡುವ ಅವಕಾಶಗಳು ಕಲಾಭಿಮಾನಿಗಳಿಗೆ ಧಾರಾಳವಾಗಿ ಸಿಗುತ್ತಿತ್ತು. ನಾಟ್ಯ ಕಲಿತು ತಾನೂ ಕಲಾವಿದನಾಗಬೇಕೆಂಬ ಛಲದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ವಿದ್ಯಾರ್ಥಿಯಾಗಿ ಸೇರಿದರು. ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು. ಬಳಿಕ ಕಟೀಲು ಮೇಳದಲ್ಲಿ ಕಲಾ ಸೇವೆ ಆರಂಭಿಸಿದ್ದರು. ಬಳಿಕ ಬೆಳ್ಮಣ್ಣು, ಅರುವ, ಬಂಡೀಹೊಳೆ ಮೇಳಗಳಲ್ಲೂ ಕಲಾಸೇವೆಯನ್ನು ಮಾಡಿದರು.
ಪುಂಡುವೇಷ, ಸ್ತ್ರೀ ವೇಷದ ನಿರ್ವಹಣೆಯಲ್ಲಿ ಒಳ್ಳೆಯ ಹೆಸರು ಗಳಿಸಿದರು. ಅಲ್ಲದೆ ಅನಿವಾರ್ಯವಾದರೆ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುವ ಸಾಮರ್ಥ್ಯ ಹೊಂದಿ ತಂಡಕ್ಕೆ ಆಪದ್ಬಾಂಧವ ಎನಿಸಿಕೊಂಡಿದ್ದರು. “ಇವರ ವೇಷ ಅತ್ಯಂತ ಚಂದ. ಬಣ್ಣಗಾರಿಕೆ, ವೇಷಗಾರಿಕೆ, ನಾಟ್ಯ, ಮಾತುಗಾರಿಕೆ ಎಲ್ಲವೂ ಪಾತ್ರಕ್ಕೆ ತಕ್ಕಂತೆ ಇರುತ್ತಿತ್ತು. ಕೊರತೆಯಿಲ್ಲದ ವೇಷಗಾರಿಕೆ ಪರಮೇಶ್ವರ ಆಚಾರ್ಯರದ್ದು” ಇದು ಅವರ ವೇಷಗಳನ್ನು ನೋಡಿದ ಪ್ರೇಕ್ಷಕರ ಅಭಿಪ್ರಾಯ. ಕಲಾವಿದನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿಯು ಇನ್ನೊಂದಿಲ್ಲ. ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಡಬೇಕು ಎಂಬ ಸದುದ್ದೇಶದಿಂದ ಪರಮೇಶ್ವರ ಆಚಾರ್ಯರು ಯಕ್ಷಗಾನ ತರಬೇತಿಯನ್ನು ಆರಂಭಿಸಿದರು.
ಧರ್ಮಸ್ಥಳ, ಕುಂಟಾಲು ಪಳಿಕೆ, ಅರಸಿನಮಕ್ಕಿ, ಕೊಕ್ಕಡ, ಅನ್ನಾರು, ಪಟ್ರಮೆ, ಗೇರುಕಟ್ಟೆ, ಮುಂಡೂರು ಪಳಿಕೆ, ಉರುವಾಲು,ಕಲ್ಲುಗುಂಡಿ, ಕೊರಿಂಜ ಎಂಬ ಸ್ಥಳದಲ್ಲಿ ನಾಟ್ಯ, ತರಬೇತಿಯನ್ನು ನೀಡಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ್ದರು. ಜಯಾನಂದ ಸಂಪಾಜೆ, ರಾಧಾಕೃಷ್ಣ ಕಲ್ಲುಗುಂಡಿ, ಜನಾರ್ದನ ಕೊಕ್ಕಡ, ಆನಂದ ಕೊಕ್ಕಡ, ರಮೇಶ ಪಟ್ರಮೆ, ಬನಾರಿ ಚಂದ್ರಶೇಖರ ಮೊದಲಾದವರು ಪರಮೇಶ್ವರ ಆಚಾರ್ಯರಿಂದ ನಾಟ್ಯ ಕಲಿತಿದ್ದರು. ತನ್ನದೇ ಖರ್ಚಿನಲ್ಲಿ ಅರಸಿನಮಕ್ಕಿಯಿಂದ ಸಂಪಾಜೆ ಕಲ್ಲುಗುಂಡಿಗೆ ಬಂದು ತರಬೇತಿಯನ್ನು ನೀಡಿ ಹೋಗುತ್ತಿದ್ದರಂತೆ. ಪ್ರತಿಫಲಾಪೇಕ್ಷೆ ಇಲ್ಲದೆ ತರಬೇತಿಯನ್ನು ನೀಡಿದವರು.
2008ನೇ ಇಸವಿಯಲ್ಲಿ ತನ್ನ ಅಣ್ಣ ಶ್ರೀ ಜನಾರ್ದನ ಆಚಾರ್ಯರ ಮನೆಯಲ್ಲಿರುವಾಗ ಶ್ರೀ ಪರಮೇಶ್ವರ ಆಚಾರ್ಯರು ನಿಧನ ಹೊಂದಿದ್ದರು. ಎಳೆಯ ಪ್ರಾಯದಲ್ಲಿ ಉತ್ತಮ ಕಲಾವಿದ ಮತ್ತು ತರಬೇತುದಾರರನ್ನು ಕಳೆದುಕೊಂಡು ಕಲಾಭಿಮಾನಿಗಳು ನೋವನ್ನು ಅನುಭವಿಸಿದ್ದರು. ಇಂತಹ ಕಲಾವಿದರುಗಳನ್ನು ನೆನಪಿಸಿ ಗೌರವಿಸಬೇಕಾದುದು ಕಲಾಭಿಮಾನಿಗಳಿಗೆ ಕರ್ತವ್ಯ. ಎರಡು ವರ್ಷಗಳ ಹಿಂದೆ ಅರಸಿನಮಕ್ಕಿ ಸಮೀಪದ ನೆಕ್ಕರಡ್ಕಪಳಿಕೆ ಎಂಬಲ್ಲಿ ದಿ| ಪರಮೇಶ್ವರ ಆಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿತ್ತು. ಶ್ರೀ ಹನುಮಗಿರಿ ಮೇಳದ ಪ್ರದರ್ಶನದ ಸಂದರ್ಭ. ಸದ್ರಿ ಮೇಳದ ವೇದಿಕೆಯಲ್ಲಿ ಈ ಕಾರ್ಯಕ್ರಮವು ನಡೆದಿತ್ತು. ಈ ಪ್ರಶಸ್ತಿಯನ್ನು ಹುಟ್ಟು ಹಾಕಿದವರು ಪರಮೇಶ್ವರ ಆಚಾರ್ಯರ ಶಿಷ್ಯರಾದ ಶ್ರೀ ಜಯಾನಂದ ಸಂಪಾಜೆ ಅವರು. ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಸೆಯು ಅವರಿಗೆ. ಈ ಸತ್ಕಾರ್ಯಕ್ಕೆ ಕಲಾಮಾತೆಯ ಅನುಗ್ರಹವಿರಲಿ. ಕೀರ್ತಿಶೇಷ ಕಲಾವಿದರಾದ ಅರಸಿನಮಕ್ಕಿ ಶ್ರೀ ಪರಮೇಶ್ವರ ಆಚಾರ್ಯರಿಗೆ ನುಡಿನಮನಗಳು.
ಬೆಂಗಳೂರಿನ ರೋಟರಿ ಕ್ಲಬ್ ನವರು ಆಯೋಜಿಸಿದ್ದ ೨೦೨೦-೨೧ ರ ಸಾಲಿನ ಗುರುದಕ್ಷಿಣೆ ಪ್ರಶಸ್ತಿಯನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯ ಕಲಾಗುಡಿಯಲ್ಲಿ ಈ ಒಂದು ಪ್ರಶಸ್ತಿಗೆ ಭಾಜನರಾದ ಯಕ್ಷಗಾನ, ರಂಗಭೂಮಿ,ಹಿರಿ ಹಾಗೂ ಕಿರುತೆರೆ ಕಲಾವಿದರಾದ ಡಾ.ರಾಧಾಕೃಷ್ಣ ಉರಾಳರಿಗೆ ಪ್ರದಾನ ಮಾಡಲಾಯಿತು. ರೋಟರಿ ಕ್ಲಬ್ ನ ಸದಸ್ಯ್ರರಾದ ಶಂಕರನಾರಾಯಣರವರು ಈ ಒಂದು ಪ್ರಶಸ್ತಿಯನ್ನು ಡಾ.ರಾಧಾಕೃಷ್ಣ ಉರಾಳರಿಗೆ ಪ್ರದಾನ ಮಾಡಿದರು. ಕಲಾಕದಂಬ ಆರ್ಟ್ ಸೆಂಟರ್ ಎಂಬ ಸಂಸ್ಥೆಯ ಮೂಲಕ ಡಾ.ರಾಧಾಕೃಷ್ಣ ಉರಾಳರವರು ಯಕ್ಷಗಾನ ಹೆಜ್ಜೆಗಳ ಕಲಿಸುವ ಹಾಗೂ ರಂಗಭೂಮಿ ಚಟುವಟಿಕಗಳನ್ನು ಕಲಿಸುವ ಗುರುವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು ಹಲವಾರು ಮಂದಿ ಶಿಷ್ಯ್ರರಿಗೆ ಮಾರ್ಗದರ್ಶಕರಾಗಿ ನಮ್ಮ ಪರಂಪರೆಯ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪಯತ್ನ ಮಾಡುತ್ತಿದ್ದಾರೆ.ಅಲ್ಲದೆ ವಿದೇಶದಲ್ಲು ತಮ್ಮ ಈ ಕಲೆಯ ಪ್ರಸರಣವನ್ನು ಮಾಡಿದ ಕೀರ್ತಿ ಇವರಿಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಯುಎಸ್ ಮೂಲದ ಔಷಧೀಯ ಸಂಸ್ಥೆ ಜಾನ್ಸನ್ ಮತ್ತು ಜಾನ್ಸನ್ ಸಿಡಿಎಸ್‌ಸಿಒಗೆ (Central Drugs Standard Control Organisation) ತನ್ನ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಮಕ್ಕಳ ಮೇಲೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ನಿರ್ಣಾಯಕ ಬೆಳವಣಿಗೆಯಲ್ಲಿ, ಯುಎಸ್ ಮೂಲದ ಔಷಧೀಯ ಸಂಸ್ಥೆ ಜಾನ್ಸನ್ ಮತ್ತು ಜಾನ್ಸನ್ ಮಕ್ಕಳ ಮೇಲೆ ತನ್ನ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ಕೋರಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದಾರೆ. 12-17 ವರ್ಷ ವಯಸ್ಸಿನ ಹದಿಹರೆಯದವರಿಂದ ಅಧ್ಯಯನ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ, ಭಾರತ್ ಬಯೋಟೆಕ್ ಮತ್ತು ಜೈಡಸ್ ಕ್ಯಾಡಿಲಾ ಮಕ್ಕಳಿಗಾಗಿ ತಮ್ಮ ಹೊಸ ಕರೋನವೈರಸ್ ಲಸಿಕೆಗಳನ್ನು ಪರೀಕ್ಷಿಸುತ್ತಿದ್ದಾರೆ.
Johnson & Johnson has submitted an application to the Central Drugs Standard Control Organisation (CDSCO) to conduct a study of its COVID-19 vaccine in India in adolescents aged 12-17 years.
ಭಾರತದಲ್ಲಿ ಕೋವಿಡ್ -19 ಲಸಿಕೆ:
ಜುಲೈನಲ್ಲಿ 13.45 ಕೋಟಿ ದಾಟುವುದರೊಂದಿಗೆ ಲಸಿಕೆ ಹಾಕುವಿಕೆಯು ವೇಗವನ್ನು ಪಡೆಯುತ್ತಿದೆ- ಜೂನ್ 11.96 ಮತ್ತು ಮೂಲಗಳ ಪ್ರಕಾರ, ಅಕ್ಟೋಬರ್ ವೇಳೆಗೆ ತಿಂಗಳಿಗೆ 40 ಕೋಟಿ ಡೋಸ್ ಕೋವಿಡ್ -19 ಲಸಿಕೆಗಳು ಲಭ್ಯವಿರುತ್ತವೆ. ಅಕ್ಟೋಬರ್ ವೇಳೆಗೆ ಒಟ್ಟು 7 ಲಸಿಕೆಗಳು ಲಭ್ಯವಿರುವುದರಿಂದ ಇದು ಸಾಧ್ಯ. ಒಟ್ಟು 44,49,37,560 ಜನರಿಗೆ ಲಸಿಕೆ ಹಾಕಲಾಗಿದೆ ಆದರೆ ಅವರಲ್ಲಿ 12,66,57,103 ಜನರು ಲಸಿಕೆಯ ಎರಡನೇ ಡೋಸ್ ಕೂಡ ಪಡೆದಿದ್ದಾರೆ.
ಸರಯೂ ಬಾಲ ಯಕ್ಷ ವೃಂದ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರು ಆಯೋಜಿಸಿದ 16-08-2021ರಂದು ಸರಯೂ ತುಳು ಯಕ್ಷಗಾನ ಸಪ್ತಾಹದ ಆರನೆಯ ದಿನದ ಸಭಾ ಕಾರ್ಯಕ್ರಮ ಸಮಾರಂಭದಲ್ಲಿ ಯಕ್ಷಗಾನ ಕಲಾವಿದರಾದ ಶ್ರೀ ರವಿ ಭಟ್ ನೆಲ್ಯಾಡಿ ಮತ್ತು ಶ್ರೀ ಸ್ಕಂದ ಕೊನ್ನಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ.