Tuesday, September 22, 2026
Home Blog Page 312

ಸಂಪ್ರದಾಯದ ಚೌಕಟ್ಟನ್ನು ಮೀರದ ಸ್ತ್ರೀ ಪಾತ್ರಧಾರಿ – ಶ್ರೀ ಅಂಬಾಪ್ರಸಾದ ಪಾತಾಳ

ಫೋಟೋ: ನವೀನ ಕೃಷ್ಣ ಭಟ್ 

ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಗಂಡುಕಲೆಯಲ್ಲಿ ಗಂಡಸರೇ ಸ್ತ್ರೀ ಪಾತ್ರಗಳನ್ನು ಮಾಡಿಕೊಂಡು ಬರುತ್ತಿದ್ದುದು ಮೊದಲಿನಿಂದಲೂ ನಡೆದುಬಂದ ರೀತಿ. ಇದಕ್ಕೆ ಕಾರಣಗಳು ಹಲವು ಇರಬಹುದು. ತಾನು ಧರಿಸಿದ ಪಾತ್ರವು ಹೆಣ್ಣು ಎಂಬ ಪ್ರಜ್ಞೆಯು ಕೊನೆಯ ತನಕವೂ ಕಲಾವಿದನಿಗೆ ಇರಲೇಬೇಕು. ಎಚ್ಚರ ತಪ್ಪಿದರೆ ಪಾತ್ರಕ್ಕೆ ಅಪಚಾರವಾಗುವುದಂತೂ ಖಂಡಿತ.

ಪೂರ್ವರಂಗದ ಮುಖ್ಯ ಸ್ತ್ರೀವೇಷವು ಸ್ತ್ರೀಸಹಜವಾದ ಹಾವಭಾವಗಳನ್ನೂ, ನಾಟ್ಯದಲ್ಲಿ ಲಯ ಸಾಮರ್ಥ್ಯವನ್ನೂ ಸಿದ್ಧಿಸಿಕೊಳ್ಳಲು ಅನುಕೂಲವಾಗುತ್ತದೆ. ಬಳಿಕ ಪ್ರಸಂಗಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಾ, ಕಲಿತು ಬೆಳೆಯುತ್ತಾ ಪ್ರತಿಭೆಯ ಆಧಾರದಲ್ಲೇ ಮುಖ್ಯ ಸ್ತ್ರೀಪಾತ್ರಗಳನ್ನು ಮಾಡಿದಾಗ ಆ ಪಾತ್ರವು ಗೆಲ್ಲುತ್ತದೆ. ಪ್ರದರ್ಶನವೂ ರಂಜಿಸುತ್ತದೆ. ಹಿತಮಿತವಾದ ನಾಟ್ಯ, ಮಾತುಗಾರಿಕೆ ಯಕ್ಷಗಾನದ ಸ್ತ್ರೀ ಪಾತ್ರಗಳಿಗೆ ಸಾಕಾಗುತ್ತದೆ. ಆದರೆ ಭಾವನಾತ್ಮಕವಾಗಿ ಅಭಿನಯಿಸುವ ಕಲೆಯು ಕರಗತವಾಗಿರಲೇಬೇಕು. ಕೆಲವೊಂದು ಪದ್ಯಗಳಿಗೆ ಮಾತನಾಡಬೇಕೆಂದಿಲ್ಲ. ಭಾಗವತರ ಹಾಡನ್ನು ಅನುಸರಿಸುತ್ತಾ ಅಭಿನಯಿಸಿದರೆ ಸಾಕಾಗುತ್ತದೆ.

ಶೃಂಗಾರ, ಕರುಣ, ಭಕ್ತಿ ರಸಗಳಲ್ಲಿ ಅಭಿನಯಿಸಿ ತನ್ನ ಪ್ರತಿಭಾ ಪ್ರಕಟೀಕರಣಕ್ಕೆ ಸ್ತ್ರೀ ವೇಷಧಾರಿಗೆ ಯಕ್ಷಗಾನದಲ್ಲಿ ಹೆಚ್ಚು ಅವಕಾಶಗಳು ಇರುತ್ತವೆ. ಕಸೆ ಸ್ತ್ರೀ ವೇಷಗಳು ವೀರರಸ ಪ್ರಧಾನವಾಗಿರುತ್ತದೆ. (ಮೀನಾಕ್ಷಿ, ಶಶಿಪ್ರಭೆ, ಪ್ರಮೀಳೆ, ಸ್ವಯಂಪ್ರಭೆ ಮೊದಲಾದುವು).  ಶೃಂಗಾರಕ್ಕೆ ಸಂಬಂಧಪಟ್ಟ ಪಾತ್ರಗಳಲ್ಲದೆ ಚಂದ್ರಮತಿ, ದಮಯಂತಿ, ದಾಕ್ಷಾಯಣಿ, ಅಕ್ಷಯಾಂಬರ ವಿಲಾಸದ ದ್ರೌಪದಿ ಮೊದಲಾದ ಪಾತ್ರಗಳನ್ನು ಪ್ರಬುದ್ಧ ಕಲಾವಿದರಿಂದ ಮಾತ್ರ ಮಾಡಲು ಸಾಧ್ಯ. ಕುಣಿತಕ್ಕೇ ಅವಕಾಶ ಇಲ್ಲದ ದಮಯಂತಿ ಪುನಃ ಸ್ವಯಂವರ ಪ್ರಸಂಗದ ದಮಯಂತಿ, ಚೈದ್ಯರಾಣಿ, ಸೌದಾಸ ಚರಿತ್ರೆಯ ಮದಯಂತಿ, ಕರ್ಣಬೇಧನದ ಕುಂತಿ, ಶ್ರೀಕೃಷ್ಣಲೀಲೆ ಕಂಸ ವಧೆ ಪ್ರಸಂಗದ ದೇವಕಿ, ಯಶೋದೆ, ಶಕುಂತಲಾ ಪರಿಣಯದ ಎರಡನೇ ಭಾಗದ ಶಕುಂತಲೆ ಮೊದಲಾದ ಪಾತ್ರಗಳನ್ನು ನಿರ್ವಹಿಸಿದಾಗ ಸ್ತ್ರೀ ಪಾತ್ರಧಾರಿಯೂ ಎಷ್ಟು ಪಕ್ವವಾಗಿದ್ದಾನೆ ಎಂದು ನೋಡುಗರಿಗೆ ತಿಳಿದುಕೊಳ್ಳಲು ಸಾಧ್ಯ.

ತೆಂಕುತಿಟ್ಟಿನಲ್ಲಿ ನಮಗೆ ತಿಳಿದಂತೆ ಕೋಳ್ಯೂರು ಶ್ರೀ ರಾಮಚಂದ್ರ ರಾವ್, ಪಾತಾಳ ವೆಂಕಟ್ರಮಣ ಭಟ್, ಮಂಕುಡೆ ಸಂಜೀವ ಶೆಟ್ರು, ಕೊಕ್ಕಡ ಈಶ್ವರ ಭಟ್, ಎಂ.ಕೆ. ರಮೇಶಾಚಾರ್ಯ, ಕುಂಬಳೆ ಶ್ರೀಧರ ರಾವ್, ಸಂಜಯ ಕುಮಾರ್ ಗೋಣಿಬೀಡು ಮೊದಲಾದವರು ತೆಂಕುತಿಟ್ಟಿನ ಸಂಪ್ರದಾಯದ ಚೌಕಟ್ಟಿನೊಳಗೇ ಅಭಿನಯಿಸಿ ಪ್ರಸಿದ್ಧರಾದವರು. ಹೊಸ ತಲೆಮಾರಿನ ಉದಯೋನ್ಮುಖರಿಗೆ ಇವರುಗಳು ಹಾಕಿ ಕೊಟ್ಟ ದಾರಿಯೇ ಸೂಕ್ತವಾದುದು. ಸಾಗಿದರೆ ಖಂಡಿತಾ ಅವರಂತೆಯೇ ಹೆಸರು ಗಳಿಸುತ್ತಾರೆ ಎಂಬುದು ನಿಸ್ಸಂಶಯ. ಹೀಗೆ ಪರಂಪರೆಯ ಚೌಕಟ್ಟನ್ನು ಮೀರದೆ ಪ್ರಸ್ತುತ ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಒಬ್ಬರು ಶ್ರೀ ಅಂಬಾಪ್ರಸಾದ್ ಪಾತಾಳ.  

ಶ್ರೀ ಅಂಬಾಪ್ರಸಾದ್ ಪಾತಾಳ ಅವರು ತೆಂಕುತಿಟ್ಟಿನ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮೆರೆದು ಪ್ರಸ್ತುತ ವಿಶ್ರಾಂತಿ ಜೀವನವನ್ನು ನಡೆಸುತ್ತಿರುವ ಪಾತಾಳ ಶ್ರೀ ವೆಂಕಟ್ರಮಣ ಭಟ್ಟರ ಪುತ್ರ. ಪಾತಾಳ ವೆಂಕಟ್ರಮಣ ಭಟ್ ಮತ್ತು ಶ್ರೀಮತಿ ಪರಮೇಶ್ವರೀ ಅಮ್ಮ ದಂಪತಿಗಳ ಮಗನಾಗಿ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಪಾತಾಳ ಎಂಬಲ್ಲಿ 1963 ಫೆಬ್ರವರಿ 21ರಂದು ಜನನ. ಇವರ ಮೂಲ ಮನೆ ಪುತ್ತೂರು ತಾಲೂಕು ಕಬಕ ಗ್ರಾಮದ ಬೆರಿಪದವು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಶ್ರೀ ಮಂಜಯ್ಯ ಹೆಗ್ಗಡೆಯವರು ಅಂಬಾ ಪ್ರಸಾದರ ಹಿರಿಯರಿಗೆ (ಅಜ್ಜ ಮತ್ತು ತಂದೆಯವರಿಗೆ) ಕೊಡಿಸಿದ ಸ್ಥಳವೇ ಪ್ರಸ್ತುತ ವಾಸಮಾಡುತ್ತಿರುವ ಪಾತಾಳ.

ಅಂಬಾ ಪ್ರಸಾದರು 3ನೇ ತರಗತಿ ವರೆಗೆ ಓದಿದ್ದು ಸಂಪಾಜೆ ಶಾಲೆಯಲ್ಲಿ. (ಅಜ್ಜನ ಮನೆಯಲ್ಲಿದ್ದು ಶಾಲೆಗೆ ಹೋಗಿದ್ದರು. ಅಂಬಾಪ್ರಸಾದರ ಅಜ್ಜ ತಾಳಮದ್ದಳೆಯ ಅರ್ಥಧಾರಿಯಾಗಿದ್ದರು). 4ರಿಂದ 7ನೇ ಕ್ಲಾಸಿನ ವರೆಗೆ ಉಪ್ಪಿನಂಗಡಿ ಸಂತ ಫಿಲೋಮಿನಾ ಶಾಲೆಯಲ್ಲಿ, ಹತ್ತನೇ ತರಗತಿ ವರೆಗೆ ಉಪ್ಪಿನಂಗಡಿ ಸರಕಾರಿ ಶಾಲೆಯಲ್ಲಿ ಓದಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಶಾಲೆಯ ಅಧ್ಯಾಪಕರು ‘ನೀನು ಪಾತಾಳ ವೆಂಕಟ್ರಮಣ ಭಟ್ಟರ ಮಗ. ವೇಷ ಮಾಡು’ ಎಂದು ಹೇಳುತ್ತಿದ್ದರಂತೆ. ಅವರ ಪ್ರೋತ್ಸಾಹದ ನುಡಿಗಳು ನಾಟ್ಯ ಕಲಿಯುವಂತೆ ಪ್ರೇರೇಪಿಸಿತ್ತು. ನಾಟ್ಯ ಕಲಿಯದೆ ವೇಷ ಮಾಡಿ ತೀರ್ಥರೂಪರ ಹೆಸರಿಗೆ ಕೊರತೆಯಾಗಬಾರದು ಎಂಬ ಎಚ್ಚರವೂ ಅಂಬಾಪ್ರಸಾದರಿಗಿತ್ತು. ರಜಾದಿನಗಳಲ್ಲಿ ಉಪಾನ್ಯಾಸಕರೂ, ಕಲಾವಿದರೂ ಆಗಿದ್ದ ಆಳಿಕೆಯ ಕೆ.ವಿ.ಸುಬ್ರಾಯ ಅವರ ಮನೆಗೆ ತೆರಳಿ ಅವರಿಂದ ನಾಟ್ಯ ಕಲಿತರು.

ಶಾಲಾ ವಾರ್ಷಿಕೋತ್ಸವದ ಪ್ರದರ್ಶನಕ್ಕೆ ಗಿರಿಜಾ ಕಲ್ಯಾಣ ಪ್ರಸಂಗದ ಗಿರಿಜೆಯಾಗಿ ರಂಗವೇರಿದ್ದರು. ಬಳಿಕ ಅತಿಕಾಯ ಮೋಕ್ಷ ಪ್ರಸಂಗದ ಅತಿಕಾಯನಾಗಿಯೂ ವೇಷ ಮಾಡಿದ್ದರು. ವೃತ್ತಿ ಕಲಾವಿದನಾಗಿ ಮೇಳದ ತಿರುಗಾಟವನ್ನು ಮಾಡುವ ಬಯಕೆಯಾಗಿತ್ತು.  ತಂದೆ ಬೇಡ ಎಂದು ಹೇಳಿದರೂ ಕೇಳದಷ್ಟು ತೀವ್ರವಾಗಿತ್ತು ಯಕ್ಷಗಾನದ ಸೆಳೆತ! ತನ್ನ ಕಷ್ಟ ಮಗನಿಗೆ ಬೇಡ ಎಂಬುದು ವೆಂಕಟರಮಣ ಭಟ್ಟರ ಆಕ್ಷೇಪಕ್ಕೆ ಕಾರಣವಿದ್ದಿರಬಹುದು. ಶಾಲಾ ದಿನಗಳಲ್ಲಿ ತಂದೆಯವರ ಜತೆ ಧರ್ಮಸ್ಥಳ ಮೇಳದ ಆಟಕ್ಕೆ ಹೋಗುತ್ತಿದ್ದರು. ಕಲಾವಿದರೆಲ್ಲಾ ಅಂಬಾಪ್ರಸಾದರನ್ನು ಪಾತಾಳ ವೆಂಕಟ್ರಮಣ ಭಟ್ಟರ ಮಗನೆಂಬ ಮಮತೆಯಿಂದ ಮಾತನಾಡಿಸುತ್ತಿದ್ದರು. ಶ್ರೀ ಕುಂಬಳೆ ಶ್ರೀಧರ ರಾಯರಿಂದ ಬಣ್ಣ ಕೇಳಿ ಮನೆಗೆ ತಂದು ಮೇಕಪ್ ಅಭ್ಯಾಸ ಮಾಡುತ್ತಿದ್ದರು.

ಕುಂದಾಪುರದ ಅಂಪಾರು ಶಾಲೆಯಲ್ಲಿ ಧರ್ಮಸ್ಥಳ ಮೇಳದ ಪ್ರದರ್ಶನ. ದ್ರೌಪದಿ ಸ್ವಯಂವರ ಪ್ರಸಂಗ. ಮೇಳದ ಕಲಾವಿದರೆಲ್ಲಾ ವೇಷ ಮಾಡಲು ಪ್ರೋತ್ಸಾಹ ನೀಡಿದ್ದರು. ಕುಂಬಳೆ ಶ್ರೀಧರ ರಾಯರೇ ಮೇಕಪ್ ಮಾಡಿ ವೇಷ ಮಾಡಿಸಿದ್ದರು. ಇವರು ದ್ರೌಪದಿಯಾಗಿ ಅಂಪಾರು ಶಾಲಾ ಮೈದಾನದಲ್ಲಿ ಧರ್ಮಸ್ಥಳ ಮೇಳದಲ್ಲಿ ಅಭಿನಯಿಸಲು ಅವಕಾಶವಾದುದನ್ನು ಈಗಲೂ ನೆನಪಿಸುತ್ತಾರೆ. ಆ ವರ್ಷವೇ ಶಾಸ್ತ್ರೀಯವಾಗಿ ನಾಟ್ಯ ಕಲಿಯಲು ನಿರ್ಧಾರವನ್ನೂ ಮಾಡಿದ್ದರು. 1978-79 ರಲ್ಲಿ ಧರ್ಮಸ್ಥಳ ಲಲಿತ ಕಲಾ ಕೇಂದ್ರಕ್ಕೆ ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯ ಕಲಿಯುವ ಸದವಕಾಶ ಸಿಕ್ಕಿತ್ತು. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳಕ್ಕೆ ಗುರುಗಳಾಗಿದ್ದವರು. ಕೇಂದ್ರದಲ್ಲಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ. ತಾರಾನಾಥ ಬಲ್ಯಾಯ ವರ್ಕಾಡಿ, ಸರಪಾಡಿ ವಿಠಲ, ಮೇಗರವಳ್ಳಿ ಕೃಷ್ಣಮೂರ್ತಿ ಮೊದಲಾದವರು ಇವರ ಸಹಪಾಠಿಗಳಾಗಿದ್ದರು. ಕೇಂದ್ರದ ಪ್ರದರ್ಶನಗಳಲ್ಲಿ ದಕ್ಷಯಜ್ಞದ ಈಶ್ವರ, ಇಂದ್ರಕೀಲಕ ಪ್ರಸಂಗದ ಈಶ್ವರ, ಪಟ್ಟಾಭಿಷೇಕ ಪ್ರಸಂಗದ ಕೈಕೇಯಿ, ಪಂಚವಟಿ ಪ್ರಸಂಗದ ಸೀತೆಯಾಗಿ ಅಭಿನಯಿಸಿದ್ದರು.

ಅಂಬಾ ಪ್ರಸಾದರ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ. ತಂದೆ ಪಾತಾಳ ವೆಂಕಟ್ರಮಣ ಭಟ್ಟರ ಜತೆ ತಿರುಗಾಟ (1978-79- ಕೆ.ಎಂ. ರಾಘವ ನಂಬಿಯಾರರು ಬರೆದ ‘ವಜ್ರಧರ ವಿಲಾಸ’ ಪ್ರಸಂಗ ವಿಜೃಂಭಿಸಿದ ವರ್ಷ) ಬಳಿಕ 4 ವರ್ಷ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ. ಪುತ್ತಿಗೆ ತಿಮ್ಮಪ್ಪ ರೈ ಭಾಗವತರು,  ಕಟೀಲು ಶ್ರೀನಿವಾಸ ರಾವ್, ಮುಳಿಯಾಲ ಭೀಮ ಭಟ್, ತ್ರಿವಿಕ್ರಮ ಶೆಣೈ, ಬೇತ ಕುಂಞ ಕುಲಾಲ್, ಕರುವೊಳು ದೇರಣ್ಣ ಮೊದಲಾದವರ ಒಡನಾಟವೂ ಸಿಕ್ಕಿತ್ತು. ಅವಕಾಶಗಳೂ ಸಿಕ್ಕಿತ್ತು. ಭೂತರಾಜ ಕುಂಡಲೇಶ ವಿಜಯದಲ್ಲಿ ರಂಭೆ ಮತ್ತು ವಿಷ್ಣುವಿನ ಪಾತ್ರಗಳು ಒಳ್ಳೆಯ ಹೆಸರನ್ನು ನೀಡಿತ್ತು. ಗಂಧರ್ವ ಮೋಕ್ಷ ಪ್ರಸಂಗದ ವಿಮಲೆ, ಪ್ರತಾಪ ಜಯಂತಿ ಪ್ರಸಂಗದಲ್ಲಿ ಜಯಂತಿ ಪಾತ್ರದಲ್ಲೂ ಅಭಿನಯಿಸಿದರು. ಪ್ರತಾಪ ಜಯಂತಿ ಪ್ರಸಂಗವನ್ನು ತುಳುವಿನಲ್ಲಿ ಸ್ವರ್ಗದ ಪೊಣ್ಣು ಎಂಬ ಹೆಸರಿನಿಂದಲೂ ಆಡುತಿದ್ದರಂತೆ.

ಕೆ.ಗೋವಿಂದ ಭಟ್ ವಿರಚಿತ ಮೇಣಿಮೇಖಲಾ ರತ್ನಕಂಕಣ ಪ್ರಸಂಗದಲ್ಲಿ ಮಣಿಮೇಖಲೆಯಾಗಿ (ಕಸೆ ಸ್ತ್ರೀ ವೇಷ)  ಅವಕಾಶವೂ ಸಿಕ್ಕಿತ್ತು. ದೇವಿಮಹಾತ್ಮೆ ಪ್ರಸಂಗದಲ್ಲಿ ಆದಿಮಾಯೆ,  ಮಾಲಿನಿ,ಬ್ರಹ್ಮ, ಚಂಡಮುಂಡರು ಮೊದಲಾದ ಪಾತ್ರಗಳನ್ನು ಮಾಡುವ ಅವಕಾಶವೂ ಸಿಕ್ಕಿತ್ತು. ಪುತ್ತಿಗೆ ಶ್ರೀ ತಿಮ್ಮಪ್ಪ ರೈಗಳು, ಮುಳಿಯಾಲ ಭೀಮ  ಭಟ್ಟರ ನಿರ್ದೇಶನದಲ್ಲಿ ಬೆಳೆಯುತ್ತಾ ಸಾಗಿದರು. ಸುಂಕದಕಟ್ಟೆ ಮೇಳಕ್ಕೆ ಅಗರಿ ಶ್ರೀನಿವಾಸ ಭಾಗವತರು ಆಗ ಅತಿಥಿ ಕಲಾವಿದರಾಗಿ ಬರುತ್ತಿದ್ದರು. ಕುಮಾರ ವಿಜಯ ಪ್ರಸಂಗ. ಅಗರಿಯವರು ಹೇಳಿಕೊಟ್ಟು ಅಂಬಾ ಪ್ರಸಾದರಿಂದ ಮಾಯಾ ಅಜಮುಖಿ ಪಾತ್ರವನ್ನು ಮಾಡಿಸಿದ್ದರಂತೆ.

ನಂತರ ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವದ ಕದ್ರಿ ಮೇಳದಲ್ಲಿ ವ್ಯವಸಾಯ. ಈ ಸಂದರ್ಭದಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪುತ್ತಿಗೆ ರಘುರಾಮ ಹೊಳ್ಳರು, ಪೆರುವಡಿ ನಾರಾಯಣ ಭಟ್, ಪುಂಡಿಕಾಯಿ ಕೃಷ್ಣ ಭಟ್, ಮಂಕುಡೆ ಸಂಜೀವ ಶೆಟ್ರು, ಮೂಡಬಿದಿರೆ ಮಾಧವ ಶೆಟ್ರು, ಸಿದ್ದಕಟ್ಟೆ ಚೆನ್ನಪ್ಪ ಶೆಟ್ರು, ಡಿ. ಮನೋಹರ ಕುಮಾರ್, ಪೆರುವಡಿ ಶ್ಯಾಮ ಭಟ್ ಸಹಕಲಾವಿದರಾಗಿದ್ದರು. ಅಪರೂಪಕ್ಕೆ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರೂ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಗೆಜ್ಜೆದ ಪೂಜೆ ಪ್ರಸಂಗದಲ್ಲಿ ಹೊಳ್ಳರ ಹಾಡು, ಡಿ. ಮನೋಹರ ಕುಮಾರರ ನಾಗ ಎಂಬ ಪಾತ್ರ, ಅಂಬಾಪ್ರಸಾದರ ತುಳಸಿ ಪಾತ್ರಗಳನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಅಲ್ಲದೆ ಜಾಲತುಳಸಿ (ಈ ಪ್ರಸಂಗದಲ್ಲಿ ಅಂಬಾ ಪ್ರಸಾದರದ್ದು ಈಶ್ವರ- ಶಿವತಾಂಡವ ನೃತ್ಯದೊಂದಿಗೆ), ಕಾಡಕಾಳಿಂಗ, ಕುಜುಂಬ ಕಾಂಜವೆ, ದಳವಾಯಿ ಮುದ್ದಣ್ಣೆ (ಈ ಪ್ರಸಂಗದಲ್ಲಿ ಅಂಬಾ ಪ್ರಸಾದರದ್ದು ಶಾಂತಲೆ ಪಾತ್ರ) ಮೊದಲಾದ ಪ್ರಸಂಗಗಳಲ್ಲಿ ವೇಷ ಮಾಡುವ ಅವಕಾಶ ಸಿಕ್ಕಿತ್ತು.

ನಂತರ ಕಸ್ತೂರಿ ಶ್ರೀ ವರದರಾಯ ಪೈಗಳ ಸುರತ್ಕಲ್ಲು ಮೇಳದಲ್ಲಿ ತಿರುಗಾಟ. ಪೂಕಳ ಲಕ್ಷ್ಮೀನಾರಾಯಣ ಭಟ್, ವೇಣೂರು ಸುಂದರ ಆಚಾರ್ಯ, ಎಂ.ಕೆ ರಮೇಶಾಚಾರ್ಯ, ಶಿವರಾಮ ಜೋಗಿ ಬಿ.ಸಿ.ರೋಡು ಸಹಕಲಾವಿದರಾಗಿದ್ದರು. ಅಗರಿ ಶ್ರೀ ರಘುರಾಮ ಭಾಗವತರು, ಪದ್ಯಾಣ ಗಣಪತಿ ಭಟ್ ಮತ್ತು ಕಡಬ ನಾರಾಯಣ ಆಚಾರ್ಯ ಮೊದಲಾದವರ ಸಮರ್ಥ ಹಿಮ್ಮೇಳವೂ ಸಿಕ್ಕಿತ್ತು. ಬಳಿಕ ಮಧೂರು ಶ್ರೀ ರಾಧಾಕೃಷ್ಣ ನಾವಡ, ಶ್ರೀ ಡಿ. ಮನೋಹರ ಕುಮಾರ್ ಮತ್ತು ಕುಂಬಳೆ ಗೋಪಾಲರ ನೇತೃತ್ವದ ಮಧೂರು ಮೇಳದಲ್ಲಿ 3 ವರ್ಷಗಳ ತಿರುಗಾಟ. ಪೂತ ಪೂಜೆ, ಮಣ್ಣುದ ಮಾಣಿಕ್ಯ ಮೊದಲಾದ ಪ್ರಸಂಗಗಳಲ್ಲಿ ಅಭಿನಯ. ಕಾಂಚನ ಸಂಜೀವ ರೈ, ಬೆಳ್ಳಾರೆ ವಿಶ್ವನಾಥ ರೈ, ಡಿ. ಸಂತೋಷಕುಮಾರ್, ಕೆದಿಲ ಜಯರಾಮ ಭಟ್ ಮೊದಲಾದ ಕಲಾವಿದರ ಜತೆ ತಿರುಗಾಟ.

ಬಳಿಕ ಬಡಗು ತಿಟ್ಟಿನ ಶಿರಸಿ ಮೇಳದಲ್ಲಿ 2 ವರ್ಷ ಕಲಾಸೇವೆ. ಬಡಗು ನಾಟ್ಯ ಕಲಿತದ್ದು ತಿರುಗಾಟದ ಸಂದರ್ಭ ಹಗಲು ಹೊತ್ತು. ಅದೂ ಸಹಕಲಾವಿದರಿಂದ. ಹಗಲು ಮಧ್ಯಾಹ್ನದ ವರೆಗೆ ನಾಟ್ಯಾಭ್ಯಾಸ. ಬಳಿಕ ವಿಶ್ರಾಂತಿ. ಕಪ್ಪೆಕೆರೆ ಮಹಾದೇವ ಹೆಗಡೆ, ಶಂಕರ ಭಾಗವತ ಯಲ್ಲಾಪುರ, ಹೆರಂಜಾಲು ಗೋಪಾಲ ಗಾಣಿಗ, ಎಂ. ಎ. ನಾಯ್ಕ, ಸದಾಶಿವ ಅಮೀನ್, ಉಪ್ಪುಂದ ನಾಗೇಂದ್ರ ಮೊದಲಾದ ಕಲಾವಿದರ ಒಡನಾಟ. ಪುರಾಣ ಪ್ರಸಂಗಗಳು. ಈ 2 ವರ್ಷಗಳ ತಿರುಗಾಟ ಮರೆಯಲಾಗದ ಅನುಭವ ಎಂದು ಅಂಬಾಪ್ರಸಾದರ ಅಭಿಪ್ರಾಯ.

ಬಳಿಕ ಶ್ರೀ ಡಿ. ಮನೋಹರ ಕುಮಾರರ ಕದ್ರಿ ಮೇಳದಲ್ಲಿ 3 ವರ್ಷ ತಿರುಗಾಟ. ಕದಿರೆದ ಬೊಳ್ಳಿ ಮೊದಲಾದ ಪ್ರಸಂಗಗಳಲ್ಲಿ ಮನೋಹರ ಕುಮಾರರ ಜತೆ ಜೋಡಿ ಪಾತ್ರಗಳಲ್ಲಿ ಅಂಬಾಪ್ರಸಾದರು ರಂಜಿಸಿದ್ದರು. ಬಳಿಕ ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ 6 ವರ್ಷ. ಆಗ ಶಬರಾಯರು ಮತ್ತು ರವಿಚಂದ್ರ ಕನ್ನಡಿಕಟ್ಟೆ ಭಾಗವತರಾಗಿದ್ದರು. ಬಳಿಕ ವರ್ಕಾಡಿ ಐತಪ್ಪ, ಸರಪಾಡಿ ಅಶೋಕ ಶೆಟ್ರು, ಸೀತಾರಾಮ್ ಕುಮಾರ್ ಅವರ ಪುತ್ತೂರು ಮೇಳದಲ್ಲಿ 2 ವರ್ಷ. ಆಗ ಕೊಳ್ತಿಗೆ ನಾರಾಯಣ ಗೌಡರೂ ಸದ್ರಿ ಮೇಳದಲ್ಲಿ ಸಹಕಲಾವಿದರಾಗಿದ್ದರು.

ಬಳಿಕ ಕಿಶನ್ ಹೆಗ್ಡೆಯವರ ಕರ್ನಾಟಕ ಮೇಳದಲ್ಲಿ 3 ವರ್ಷ. ಬಳಿಕ 1 ವರ್ಷ ಎಡನೀರು ಮೇಳದಲ್ಲಿ. ಪದ್ಯಾಣ, ದಿನೇಶ್ ಅಮ್ಮಣ್ಣಾಯರು, ಶಬರಾಯರು ಭಾಗವತರಾಗಿದ್ದು, ಪ್ರಸಿದ್ಧ ಕಲಾವಿದರನ್ನೊಳಗೊಂಡ ತಂಡವಾಗಿತ್ತು. ಆ ವರ್ಷ ತಾರಾನಾಥ ಬಲ್ಯಾಯ ವಿರಚಿತ ‘ಗೋಕರ್ಣ’ ಎಂಬ ಪ್ರಸಂಗವು ರಂಜಿಸಿತ್ತು. ಬಳಿಕ ಹೊಸನಗರ ಮೇಳದಲ್ಲಿ 10 ವರ್ಷಗಳ ಕಲಾಸೇವೆ. ಕನ್ಯಾಂತರಂಗ, ಪುಣ್ಯಕೋಟಿ, ಶ್ರೀರಾಮ ಸೇತು, ಶಬರಿ ಪ್ರಸಂಗಗಳಲ್ಲಿ ಕ್ರಮವಾಗಿ ಅಹಲ್ಯೆ, ಪುಣ್ಯಕೋಟಿ, ಸೀತೆ ಮತ್ತು ಬಕುಳೆ ಪಾತ್ರಗಳನ್ನು ನಿರ್ವಹಿಸಿದ್ದರು. ಉಜಿರೆ ಅಶೋಕ ಭಟ್ಟರು ಗೌತಮನಾಗಿ, ಅಂಬಾ ಪ್ರಸಾದರು ಅಹಲ್ಯೆಯಾಗಿ, ಸಹಕಲಾವಿದರೆಲ್ಲರ ಸಹಕಾರಗಳಿಂದ ಕನ್ಯಾಂತರಂಗ ಎಂಬ ಪ್ರಸಂಗವು ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸಿತ್ತು. ಬಳಿಕ 1 ವರ್ಷ ಸರಪಾಡಿ ಅಶೋಕ ಶೆಟ್ರ ಬಾಚಕೆರೆ ಮೇಳದಲ್ಲಿ ವ್ಯವಸಾಯ.

ಪ್ರಸ್ತುತ 3 ವರ್ಷಗಳಿಂದ ಅಂಬಾಪ್ರಸಾದ್ ಪಾತಾಳ ಅವರು ದೇಂತಡ್ಕ ಮೇಳದಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಪ್ರಸಂಗದಲ್ಲಿ ಇವರು ನಿರ್ವಹಿಸಿದ ಜೀಜಾಬಾಯಿ ಪಾತ್ರವನ್ನು ಪ್ರೇಕ್ಷಕರನ್ನು ಮೆಚ್ಚಿಕೊಂಡಿದ್ದಾರೆ. ಶೃಂಗಾರ ರಸದ ಪಾತ್ರಗಳಿಗಿಂತಲೂ ಕರುಣರಸದ ಭಾವನಾತ್ಮಕ ಪಾತ್ರಗಳಲ್ಲಿ ಅಂಬಾಪ್ರಸಾದರಿಗೆ ಒಲವು ಹೆಚ್ಚು. ಬಾಚಕೆರೆ ಮೇಳದಲ್ಲಿ ಕಥಾನಾಯಕನೇ ಖಳನಾಯಕನಾಗಿ ಪರಿವರ್ತನೆ ಹೊಂದುವ ನೀಲಕಂಠ ಶಾಸ್ತ್ರಿ, ಬೇಡರ ಕಣ್ಣಪ್ಪದ ಕೈಲಾಸ ಶಾಸ್ತ್ರಿ, ರಾಣಿ ಮತ್ತು ಲೀಲಾ, ಶಬರಿಮಲೆ ಅಯ್ಯಪ್ಪ ಪ್ರಸಂಗದ ಕೇಳುಪಂಡಿತ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಸಖಿ ಪಾತ್ರ ಸಣ್ಣದೆಂಬ ತಾತ್ಸಾರ ಸಲ್ಲದು. ಪೋಷಕ ಪಾತ್ರಗಳನ್ನು ಮಾಡಿಯೇ ಅನುಭವದಿಂದ ಬೆಳೆಯಬೇಕು. ರಂಗದಲ್ಲಿ ನಡೆಯಬೇಕಾದುದು ಭಾವಪ್ರಯೋಗ. ಮಾನ ಪ್ರಯೋಗ ಅಲ್ಲ ಎನ್ನುವ ಇವರು, ಧರಿಸುವ ಉಡುಪುಗಳು ಮಾನಮುಚ್ಚುವಂತಿರಬೇಕು ಎಂಬ ನಿಲುಮೆಯನ್ನು ಹೊಂದಿರುತ್ತಾರೆ.

ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಅಂಬಾಪ್ರಸಾದರು ಕಲಾಪೋಷಕರಾದ ಡಾ. ಟಿ.ಶ್ಯಾಮ ಭಟ್ಟರು ನೀಡಿದ ಪ್ರೋತ್ಸಾಹ ಮತ್ತು ಸಹಕಾರಗಳನ್ನು ನೆನಪಿಸಿ ಅವರಿಗೆ ಗೌರವವನ್ನು ಸಲ್ಲಿಸುತ್ತಾರೆ. ಶ್ರೀ ಅಂಬಾಪ್ರಸಾದರದು ಒತ್ತಿ ನಾಲ್ಕು ದಶಕಗಳಿಗೂ ಮಿಕ್ಕಿದ ತಿರುಗಾಟ (43 ವರ್ಷ). ಹೊಸ ನಮೂನೆಗೆ ಅಂಟಿಕೊಳ್ಳದೆ ಪರಂಪರೆಯ ರೀತಿಯಲ್ಲೇ ಪಾತ್ರ ನಿರ್ವಹಣೆಯಿರಬೇಕು ಎನ್ನುವವರು. ತೀರ್ಥರೂಪರಾದ  ಪಾತಾಳ ವೆಂಕಟ್ರಮಣ ಭಟ್ಟರ ರೀತಿಯಲ್ಲೇ ವೇಷಭೂಷಣಗಳನ್ನು ಉಪಯೋಗಿಸುತ್ತಾರೆ. ಯಕ್ಷಗಾನದಲ್ಲಿ ಕುಣಿತವೂ, ಅಭಿನಯವೂ ಜತೆಯಾಗಿ ಸಾಗಬೇಕಾದರೆ ಭರತನಾಟ್ಯವು ಪೂರಕವಾಗಿರುತ್ತದೆ ಎಂಬುದು ಇವರ ಅನುಭವದ ಮಾತುಗಳು. ಸುಂಕದಕಟ್ಟೆ ಮೇಳದಲ್ಲಿರುವಾಗ ಹಗಲು ಮಂಗಳೂರಿನ ಶ್ರೀ ವಿಠಲ ಮಾಸ್ತರ್ ಅವರಿಂದ ಭರತನಾಟ್ಯ ಕಲಿತು ಯಕ್ಷಗಾನಕ್ಕೆ ಅಳವಡಿಸಿದ್ದರು.

ಹೊಸನಗರ ಮಠಾಧೀಶರಾದ ರಾಘವೇಶ್ವರ ಸ್ವಾಮಿಗಳ ನೇತೃತ್ವದ ರಾಮಕಥೆ, ಗೋಕಥೆ, ಶಿವಕಥೆ, ಅಂಬಾಕಥೆ ಮೊದಲಾದ ರೂಪಕ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಪೂರ್ವರಂಗದ ಅರ್ಧನಾರೀಶ್ವರ, ಚಪ್ಪರಮಂಚ ಮೊದಲಾದ ಪಾತ್ರಗಳಲ್ಲಿ ಪರಿಣತರು. ಉಪ್ಪನಂಗಡಿ ಶ್ರೀರಾಮ ಶಾಲೆ, ಸರಕಾರೀ ಶಾಲೆಗಳಲ್ಲಿ ಮನೆಯಲ್ಲಿ ಕಲಿಕಾಸಕ್ತರಿಗೆ ಉಚಿತವಾಗಿ ನಾಟ್ಯ ತರಬೇತಿಯನ್ನೂ ನೀಡುತ್ತಿದ್ದಾರೆ. ಅಂಬಾಪ್ರಸಾದರು ಚಂದ್ರಮತಿ, ದಮಯಂತಿ, ಸುಭದ್ರೆ, ಚಿತ್ರಣಗದೆ, ಚೈದ್ಯರಾಣಿ ಮೊದಲಾದ ಪಾತ್ರಗಳನ್ನು ಅತೀವವಾಗಿ ಪ್ರೀತಿಸುತ್ತಾರೆ. 

ಶ್ರೀಯುತರ ಮೊದಲ ಪತ್ನಿ ಶ್ರೀಮತಿ ಶಾಲಿನಿ ಅವರು ಇಬ್ಬರು ಪುತ್ರರಿಗೆ ತಾಯಿಯಾದ ಬಳಿಕ ಅನಾರೋಗ್ಯದ ಕಾರಣದಿಂದ ಮರಣಿಸಿದ್ದರು. ಬಳಿಕ ಜಯಂತಿ ಅವರು ಅಂಬಾಪ್ರಸಾದರ ಪತ್ನಿಯಾಗಿ ಈ ಇಬ್ಬರು ಮಕ್ಕಳಿಗೆ ತಾಯಿಯಾಗಿ ಒದಗಿದ್ದರು. ಅಲ್ಲದೆ ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತು ಅಂಬಾಪ್ರಸಾದರ ಬಾಳಿಗೆ ಬೆಳಕಾಗಿದ್ದರು. ಅಂಪಾಪ್ರಸಾದ ಪಾತಾಳ ಮತ್ತು ಜಯಂತಿ ದಂಪತಿಗಳ ಬದುಕಿಗೆ ಹೀಗೆ ಬೆಳಕಾದವರು ನಾಲ್ಕು ಮಕ್ಕಳು. ಹಿರಿಯ ಪುತ್ರ ವೆಂಕಟೇಶ ಪ್ರಣವ ಪ್ರಸನ್ನ ಉದ್ಯೋಗಿ. ವಿವಾಹಿತ. ಇವರ ಪತ್ನಿ ಶ್ರೀಮತಿ ಶುಭಶ್ರೀ. ವೆಂಕಟೇಶ ಪ್ರಣವ ಪ್ರಸನ್ನರು ನಾಟ್ಯ ಕಲಿತು ವೇಷ ಮಾಡಿ ಅನುಭವವುಳ್ಳವರು. ದ್ವಿತೀಯ ಪುತ್ರ ತಿರುಮಲ ಪ್ರದೀಪ ಉದ್ಯೋಗಿ. ಜ್ಯೇಷ್ಠ ಪುತ್ರಿ ಪೌಷ ವಿವಾಹಿತೆ. ಗೃಹಣಿ. ಅಳಿಯ ಶ್ರೀ ಮಧುಕೇಶ್ವರ. ಕಿರಿಯ ಪುತ್ರಿ ಕು| ಪೂರ್ಣಶ್ರೀ. ೭ನೇ ತರಗತಿ ವಿದ್ಯಾರ್ಥಿನಿ. ಈಕೆ ಭರತನಾಟ್ಯ, ಸಂಗೀತ, ಯಕ್ಷಗಾನ ನಾಟ್ಯ ಕಲಿಯುತ್ತಿದ್ದಾಳೆ. ಜ್ಯೇಷ್ಠ ಪುತ್ರಿ ಪೌಷಳೂ ಯಕ್ಷಗಾನ ಅಭ್ಯಸಿಸಿದ್ದಳು.

ಅಂಬಾಪ್ರಸಾದರ ನಾಲ್ಕು ಮಂದಿ ಮಕ್ಕಳೂ ವೇಷಮಾಡಿ ಅನುಭವವುಳ್ಳವರು. ಶ್ರೀ ಅಂಬಾಪ್ರಸಾದರು ಸಂಪ್ರದಾಯದ ಚೌಕಟ್ಟನ್ನು ಮೀರದ ಸ್ತ್ರೀ ಪಾತ್ರಧಾರಿ. ಮಳೆಗಾಲದಲ್ಲಿ ಕುಂಬಳೆ ಚಂದು, ಮುಳಿಯಾಲ ಭೀಮ ಭಟ್, ಕುಂಬಳೆ ಸುಂದರ ರಾವ್, ನಯನಕುಮಾರ್, ಡಿ.ಮನೋಹರ ಕುಮಾರ್, ಪುತ್ತೂರು ಶ್ರೀಧರ ಭಂಡಾರಿ, ನಿಡ್ಲೆ ಗೋವಿಂದ ಭಟ್ಟರ ಪ್ರವಾಸೀ ತಂಡಗಳ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಹೊಂದಾಣಿಕೆಯ ಸ್ವಭಾವವನ್ನು ಮೈಗೂಡಿಸಿಕೊಂಡಿರುವ ಇವರು ಯಾವ ಪಾತ್ರಗಳನ್ನೂ ಮಾಡಬಲ್ಲರು. ಸವ್ಯಸಾಚೀ ಆಪದ್ಬಾಂಧವ ಕಲಾವಿದ ಎಂದೂ ಹೇಳಬಹುದು. ಅನಿವಾರ್ಯಕ್ಕೆ ಮೇಳದ ತಿರುಗಾಟದಲ್ಲಿ ಪೂಜೆ, ಅಡುಗೆ ಕೆಲಸಗಳನ್ನು ನಿರ್ವಹಿಸಿ ಆಡಳಿತಕ್ಕೆ ನೆರವಾದ ಕಲಾವಿದರಿವರು. ಶ್ರೀ ಅಂಬಾಪ್ರಾಸಾದ ಪಾತಾಳ ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಸಕಲಭಾಗ್ಯಗಳನ್ನೂ ಅನುಗ್ರಹಿಸಲಿ. ಬದುಕು ನೆಮ್ಮದಿಯಿಂದ ಕೂಡಿದ್ದು, ಸುಂದರವಾಗಿರಲಿ. ಕಲಾಭಿಮಾನಿಗಳ ಪರವಾಗಿ ಶುಭಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಕಲ್ಮಡ್ಕ ‘ಸಂಗಮ ಕಲಾ ಸಂಘ’ದ ರೂವಾರಿ – ದಿ| ಕೆರೆಕೋಡಿ ಪಿ. ಗಣಪತಿ ಭಟ್ಟರು

‘ಸಂಗಮ ಕಲಾ ಸಂಘ’ ಎಂಬುದು ಸುಳ್ಯ ತಾಲೂಕಿನ ಕಲ್ಮಡ್ಕ ಪರಿಸರದಲ್ಲಿ ಕಲೆಯ ಕಂಪನ್ನು ಪಸರಿಸಿದ ಸಂಸ್ಥೆ. ಯಕ್ಷಗಾನ, ನಾಟಕ, ಸಂಗೀತ, ಭರತನಾಟ್ಯ, ತಾಳಮದ್ದಳೆ, ಸಂಗೀತ ರೂಪಕ ಮೊದಲಾದ ಕಲಾ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿ ಕಲ್ಮಡ್ಕವನ್ನು ಒಂದು ಸಾಂಸ್ಕೃತಿಕ, ಕಲಾ ಕೇಂದ್ರವನ್ನಾಗಿ ಎಲ್ಲರೂ ಗುರುತಿಸುವಂತೆ ಮಾಡಿದ ಕೀರ್ತಿಯು ಈ ಸಂಸ್ಥೆಗೆ ಸಲ್ಲುತ್ತದೆ.

ಅನೇಕ ಮಂದಿ ಕಲಾವಿದರ ಪ್ರತಿಭಾ ಪ್ರಕಟೀಕರಣಕ್ಕೆ ಈ ‘ಸಂಗಮ ಕಲಾ ಸಂಘ’ವು ವೇದಿಕೆಯಾಗಿ ಒದಗಿ ಬಂದಿತ್ತು. ಬೆಳೆಯುತ್ತಾ ಸಾಗಿ ಜನಪ್ರಿಯವಾದ ಕಲ್ಮಡ್ಕದ ‘ಸಂಗಮ ಕಲಾ ಸಂಘ’ದ ರೂವಾರಿಗಳು ಕಲಾವಿದ. ಸಮಾಜಸೇವಕ. ವೈದ್ಯ ದಿ| ಕೆರೆಕೋಡಿ ಪಂಡಿತ ಗಣಪತಿ ಭಟ್ಟರು. ಕೆರೆಕೋಡಿ ಪಂಡಿತ ಗಣಪತಿ ಭಟ್ಟರ ಹುಟ್ಟೂರು ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದ ಪಳ್ಳತ್ತಡ್ಕ. 1921 ಜನವರಿ 6ರಂದು ಶ್ರೀ ಶಂಭಯ್ಯ ಭಟ್ ಮತ್ತು ಶ್ರೀಮತಿ ಶಂಕರಿ ಅಮ್ಮನವರ ಪುತ್ರನಾಗಿ ಜನನ. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಓದು. ಸಂಸ್ಕೃತ ಭಾಷೆಯ ಜತೆಗೆ ಆಯುರ್ವೇದ ವೈದ್ಯ ಶಾಸ್ತ್ರವನ್ನು ಕಲಿತು ಪರಿಣತಿಯನ್ನು ಹೊಂದಿದರು.

1944ನೇ ಇಸವಿಯಲ್ಲಿ ಕಲ್ಮಡ್ಕದ ಕೆರೆಕೋಡಿ ಎಂಬಲ್ಲಿ ಬಂದು ನೆಲೆಸಿದರು. ಉತ್ತಮ ಕೃಷಿಕರಾಗಿ, ಸಮಾಜ ಸೇವಕರಾಗಿ, ಕಲಾಸಂಘಟಕರಾಗಿ, ಸಾಹಿತಿಯಾಗಿ ತಮ್ಮ ಬಹುಮುಖೀ ಪ್ರತಿಭೆಯಿಂದ ಕಲ್ಮಡ್ಕ ಎಂಬ ಊರಿನ ಕೀರ್ತಿಯನ್ನು ಎತ್ತರಕ್ಕೆ ಕೊಂಡೊಯ್ದ ಸಾಹಸಿ ಇವರು. ಎಳವೆಯಲ್ಲೇ ಕಲಾಸಕ್ತರಾಗಿದ್ದ ಇವರು ಕಲ್ಮಡ್ಕಕ್ಕೆ ಬಂದು ನೆಲೆಸಿದ ಮೇಲೆ ಮಿತ್ರರೂ, ಸಮಾನಮನಸ್ಕರೂ ಆಗಿದ್ದ ಶ್ರೀ ಟಿ.ಜಿ. ಮೂಡೂರು, ಶ್ರೀ ಕೆ. ಸಚ್ಚಿದಾನಂದ ಶರ್ಮ, ಮತ್ತು ಕುಂಞಿಹಿತ್ತಿಲು ರಾಮಚಂದ್ರ ಅವರ ಜತೆ ಸೇರಿ ‘ಸಂಗಮ ಕಲಾ ಸಂಘ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು(1951).

ಕಲಾಚಟುವಟಿಕೆಗಳನ್ನು ನಡೆಸುತ್ತಾ ಕಲ್ಮಡ್ಕವನ್ನು ಕಲಾ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಬೇಕಾದರೆ ಇಂತಹಾ ಒಂದು ಕಲಾಸಂಸ್ಥೆಯ ಅವಶ್ಯಕತೆಯನ್ನು ಅವರು ಮನಗಂಡಿದ್ದರು.  ಕೆರೆಕೋಡಿ ಪಂಡಿತ ಗಣಪತಿ ಭಟ್ಟರು ಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಈ ಸಂಸ್ಥೆಯ ಸರ್ವತೋಮುಖ ಏಳಿಗೆಗೆ ಕಾರಣರಾಗಿದ್ದರು. ಬಳಿಕ ‘ಸಂಗಮ ಕಲಾ ಸಂಘ’ದ ಅಧ್ಯಕ್ಷರಾಗಿ ಬದುಕಿನ ಕೊನೆ ತನಕವೂ ಸೇವೆ ಸಲ್ಲಿಸಿದ್ದರು. ಯಕ್ಷಗಾನ ನಾಟಕ, ತಾಳಮದ್ದಳೆ ಕಾರ್ಯಗಳನ್ನು ಈ ಸಂಘದ ಮೂಲಕ ನಡೆಸುತ್ತಾ ಕಲ್ಮಡ್ಕ ಪರಿಸರದ ಜನರಲ್ಲಿ ಕಲಾಸಕ್ತಿಯು ಕೆರಳಲು ಕಾರಣರಾದರು. ಬಣ್ಣಗಾರಿಕೆ, ವೇಷಗಾರಿಕೆ, ಮಾತುಗಾರಿಕೆ ಈ ಎಲ್ಲಾ ವಿಭಾಗಗಳಲ್ಲೂ ಕಲಿಕಾಸಕ್ತರಿಗೆ ಇವರು ಗುರುವೇ ಆಗಿದ್ದರು.

ಅನೇಕರಿಗೆ ತರಬೇತಿಯನ್ನು ನೀಡಿ ಕಲಾವಿದರಾಗಿ ಸಿದ್ಧಗೊಳಿಸಿದ್ದರು. ಮೊದಲೆಲ್ಲಾ ಪ್ರದರ್ಶನಗಳಿಗೆ ಬೇಕಾದ ವೇಷಭೂಷಣಗಳನ್ನು ಮಂಗಳೂರಿನ ಗುಲ್ವಾಡಿ ಆರ್ಟ್ಸ್ ನಿಂದ ತರಿಸಲಾಗುತ್ತಿತ್ತು. ಸಾಗಾಣಿಕೆಯ ಕಷ್ಟವನ್ನು ಸ್ವಯಂ ಅನುಭವಿಸಿದ ಇವರು, ಸಂಘವು ತನ್ನದೇ ಆದ ವೇಷಭೂಷಣಗಳನ್ನು ಹೊಂದಬೇಕೆಂದು ನಿರ್ಧರಿಸಿದ್ದರು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಯಶಸ್ವಿಯೂ ಆದರು. ಹೀಗೆ ಯಕ್ಷಗಾನ, ನಾಟಕ ವೇಷಭೂಷಣಗಳ ತಯಾರಿಕೆಯಲ್ಲೂ  ಕೆರೆಕೋಡಿ ಪಂಡಿತ ಗಣಪತಿ ಭಟ್ಟರು ಪರಿಣತಿಯನ್ನು ಹೊಂದಿದ್ದರು. ಸಂಗಮ ಕಲಾ ಸಂಘವು ತನ್ನದೇ ಆದ ವೇಷಭೂಷಣಗಳನ್ನು ಹೊಂದಿದಾಗ ಅದರ ಹೊಣೆ ಹೊತ್ತು ತೊಡಗಿಸಿಕೊಂಡಿದ್ದರು.

ಕಲ್ಮಡ್ಕ ಅಲ್ಲದೆ ಊರ ಪರವೂರ ಕಾರ್ಯಕ್ರಮಗಳಿಗೂ ವೇಷಭೂಷಣಗಳನ್ನು ಪ್ರೀತಿಯಿಂದ ಒದಗಿಸಿ ಕಲಾಪ್ರೀತಿಯನ್ನು ಮೆರೆದರು. ರಂಗಪ್ರದರ್ಶನಗಳಲ್ಲಿ, ಪ್ರಸಾಧನದಲ್ಲಿ ತಾವೂ ಭಾಗಿಯಾಗಿ ಕಲಾಚಟುವಟಿಕೆಗಳು ನಿರಂತರವಾಗಿ ನಡೆಯಲು ಕಾರಣರಾದರು. ಮುಂದೆ ಯಕ್ಷಗಾನ ಪ್ರದರ್ಶನಗಳಿಗೆ ಕಲ್ಮಡ್ಕ ಸಂಗಮ ಕಲಾ ಸಂಘದ ವೇಷಭೂಷಣಗಳು ಅನಿವಾರ್ಯ ಎನ್ನುವಷ್ಟು ಜನಪ್ರಿಯವಾಗಲು ಕಾರಣರಾಗಿದ್ದರು  ಕೆರೆಕೋಡಿ ಪಂಡಿತ ಗಣಪತಿ ಭಟ್ಟರು. ಯಕ್ಷಗಾನದ ಒಬ್ಬ ನಿರ್ದೇಶಕರಾಗಿಯೂ ಇವರು ಪ್ರಸಿದ್ಧರಾಗಿದ್ದರು.

ಬಳಿಕ ‘ಸಂಗಮ ಸಾಹಿತ್ಯಮಾಲೆ’ ಮತ್ತು ‘ಸಂಗಮ ರಂಗಭೂಮಿ’ಯನ್ನೂ ಹುಟ್ಟುಹಾಕಿದ್ದರು. ಸಾಹಿತ್ಯ ಕೃತಿಗಳ ಪ್ರಕಾಶನ, ಯಕ್ಷಗಾನ ತರಬೇತಿ ಶಿಬಿರ. ವೇಷಭೂಷಣಗಳ ತಯಾರಿ ಕುರಿತಾದ ಕಾರ್ಯಾಗಾರ, ತರಬೇತಿ, ಸಂಗೀತ ಶಿಕ್ಷಣ, ಭರತನಾಟ್ಯ ತರಬೇತಿ, ಯಕ್ಷಗಾನ, ನಾಟಕ, ಸಂಗೀತ ರೂಪಕಗಳ ಪ್ರದರ್ಶನ ಇತ್ಯಾದಿ ಚಟುವಟಿಕೆಗಳನ್ನು ಸಂಗಮ ಕಲಾ ಸಂಘದ ಆಶ್ರಯದಲ್ಲಿ ಸದಾ ನಡೆಸುತ್ತಾ  ಬಂದವರು. ಪರಿಸರದ ಜನರಿಗೆ ಕಲಾ ರಸದೌತಣವನ್ನು ಬಡಿಸುತ್ತಾ ಕಲ್ಮಡ್ಕವನ್ನು ಸದಾ ಕ್ರಿಯಾಶೀಲವನ್ನಾಗಿರಿಸಿದ ಕೀರ್ತಿಯು  ಕೆರೆಕೋಡಿ ಪಂಡಿತ ಗಣಪತಿ ಭಟ್ಟರಿಗೆ ಸಲ್ಲುತ್ತದೆ.

ಶ್ರೀಯುತರ ಪುತ್ರ ಶ್ರೀ ಮಹಾಬಲ ಕಲ್ಮಡ್ಕ ಅವರೂ ತೀರ್ಥರೂಪರಂತೇ ರಂಗ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಖ್ಯಾತರಾಗಿರುವುದು ಸಂತೋಷದ ವಿಚಾರ. ಇವರು ಕೃಷಿಕರಾಗಿ, ಕಲಾವಿದರಾಗಿ, ಸಂಘಟಕರಾಗಿ ಎಲ್ಲರಿಗೂ ಪರಿಚಿತರು. ‘ರಂಗ ಸುರಭಿ’ ಕಲ್ಮಡ್ಕ ಎಂಬ ಸಂಸ್ಥೆಯ ರೂವಾರಿಗಳು. ದಿ|  ಕೆರೆಕೋಡಿ ಪಂಡಿತ ಗಣಪತಿ ಭಟ್ಟರಿಂದ ಆರಂಭಗೊಂಡ ‘ಸಂಗಮ ಕಲಾ ಸಂಘ’ ಕಲ್ಮಡ್ಕ ಎಂಬ ಸಂಸ್ಥೆಯು ಸದಾ ಸಕ್ರಿಯವಾಗಿರಲಿ. ಕಲಾ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಲಿ. 

ಲೇಖಕ: ರವಿಶಂಕರ್ ವಳಕ್ಕುಂಜ

ಫಲಾಪೇಕ್ಷೆ ಇಲ್ಲದೆ ಕಲಾಸೇವೆ ಮಾಡಿ ಮರೆಯಾದ ಕಲಾವಿದ ದಿ| ಪರಮೇಶ್ವರ ಆಚಾರ್ಯ ಅರಸಿನಮಕ್ಕಿ

ಪ್ರಚಾರವನ್ನು ಬಯಸದೆ, ಇದು ನನಗೆ ಕರ್ತವ್ಯ ಎಂಬಂತೆ ಕಲಾಸೇವೆಯನ್ನು ಮಾಡಿ ತನ್ನಲ್ಲಿರುವ ವಿದ್ಯೆಯನ್ನು ಮುಂದಿನ ಪೀಳಿಗೆಗೆ ನೀಡಿ ಮರೆಯಾದ ಅನೇಕ ಕಲಾವಿದರಲ್ಲಿ ಅರಸಿನಮಕ್ಕಿ ಪರಮೇಶ್ವರ ಆಚಾರ್ಯರೂ ಒಬ್ಬರು. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬಲ್ಲ ಕಲಾವಿದರಾಗಿದ್ದರು. ತಾನು ಕಲಿತ ಯಕ್ಷಗಾನ ವಿದ್ಯೆಯನ್ನು ಸುಲಭ, ಸರಳ ರೀತಿಯಲ್ಲಿ ಕಲಿಕಾಸಕ್ತರಿಗೆ ಹೇಳಿ ಕೊಡುವ ವಿದ್ಯೆಯೂ ಇವರಿಗೆ ಕರಗತವಾಗಿತ್ತು. ಹೇಳಿಕೊಡುವವರೆಲ್ಲಾ ಚೆನ್ನಾಗಿ ಮಾಡಲಾರರು. ಚೆನ್ನಾಗಿ ಮಾಡಬಲ್ಲವರಿಗೆಲ್ಲರಿಗೂ ಕಲಿಸುವ ಕಲೆಯು ಸಿದ್ಧಿಸದು. ಇವರು ಚೆನ್ನಾಗಿ ಮಾಡಬಲ್ಲವರೂ. ಹೇಳಿಕೊಡಬಲ್ಲವರೂ ಆಗಿದ್ದರು. 

ದಿ| ಶ್ರೀ ಪರಮೇಶ್ವರ ಆಚಾರ್ಯರು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಸಮೀಪದ ಇರ್ನಾಡಿ ಎಂಬಲ್ಲಿ ಶ್ರೀ ಗಿರಿಯಪ್ಪ ಆಚಾರ್ಯ ಮತ್ತು ಶ್ರೀಮತಿ ರಾಜೀವಿ ದಂಪತಿಗಳಿಗೆ ಮಗನಾಗಿ 1963ನೇ ಇಸವಿಯಲ್ಲಿ ಜನಿಸಿದರು. ಓದಿದ್ದು ಸಿದ್ಧಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಮನೆ ಧರ್ಮಸ್ಥಳ ಕ್ಷೇತ್ರ ಬಳಿ ಎಂದರೆ ಕೇಳಬೇಕೆ? ಪ್ರದರ್ಶನಗಳನ್ನು ನೋಡುವ ಅವಕಾಶಗಳು ಕಲಾಭಿಮಾನಿಗಳಿಗೆ ಧಾರಾಳವಾಗಿ ಸಿಗುತ್ತಿತ್ತು. ನಾಟ್ಯ ಕಲಿತು ತಾನೂ ಕಲಾವಿದನಾಗಬೇಕೆಂಬ ಛಲದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ವಿದ್ಯಾರ್ಥಿಯಾಗಿ ಸೇರಿದರು. ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು. ಬಳಿಕ ಕಟೀಲು ಮೇಳದಲ್ಲಿ ಕಲಾ ಸೇವೆ ಆರಂಭಿಸಿದ್ದರು. ಬಳಿಕ ಬೆಳ್ಮಣ್ಣು, ಅರುವ, ಬಂಡೀಹೊಳೆ ಮೇಳಗಳಲ್ಲೂ ಕಲಾಸೇವೆಯನ್ನು ಮಾಡಿದರು.

ಪುಂಡುವೇಷ, ಸ್ತ್ರೀ ವೇಷದ ನಿರ್ವಹಣೆಯಲ್ಲಿ ಒಳ್ಳೆಯ ಹೆಸರು ಗಳಿಸಿದರು. ಅಲ್ಲದೆ ಅನಿವಾರ್ಯವಾದರೆ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡುವ ಸಾಮರ್ಥ್ಯ ಹೊಂದಿ ತಂಡಕ್ಕೆ ಆಪದ್ಬಾಂಧವ ಎನಿಸಿಕೊಂಡಿದ್ದರು. “ಇವರ ವೇಷ ಅತ್ಯಂತ ಚಂದ. ಬಣ್ಣಗಾರಿಕೆ, ವೇಷಗಾರಿಕೆ, ನಾಟ್ಯ, ಮಾತುಗಾರಿಕೆ ಎಲ್ಲವೂ ಪಾತ್ರಕ್ಕೆ ತಕ್ಕಂತೆ ಇರುತ್ತಿತ್ತು. ಕೊರತೆಯಿಲ್ಲದ ವೇಷಗಾರಿಕೆ ಪರಮೇಶ್ವರ ಆಚಾರ್ಯರದ್ದು” ಇದು ಅವರ ವೇಷಗಳನ್ನು ನೋಡಿದ ಪ್ರೇಕ್ಷಕರ ಅಭಿಪ್ರಾಯ. ಕಲಾವಿದನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿಯು ಇನ್ನೊಂದಿಲ್ಲ. ತಾನು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಡಬೇಕು ಎಂಬ ಸದುದ್ದೇಶದಿಂದ ಪರಮೇಶ್ವರ ಆಚಾರ್ಯರು ಯಕ್ಷಗಾನ ತರಬೇತಿಯನ್ನು ಆರಂಭಿಸಿದರು.

ಧರ್ಮಸ್ಥಳ, ಕುಂಟಾಲು ಪಳಿಕೆ, ಅರಸಿನಮಕ್ಕಿ, ಕೊಕ್ಕಡ, ಅನ್ನಾರು, ಪಟ್ರಮೆ, ಗೇರುಕಟ್ಟೆ, ಮುಂಡೂರು ಪಳಿಕೆ, ಉರುವಾಲು,ಕಲ್ಲುಗುಂಡಿ, ಕೊರಿಂಜ ಎಂಬ ಸ್ಥಳದಲ್ಲಿ ನಾಟ್ಯ, ತರಬೇತಿಯನ್ನು ನೀಡಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ್ದರು. ಜಯಾನಂದ ಸಂಪಾಜೆ, ರಾಧಾಕೃಷ್ಣ ಕಲ್ಲುಗುಂಡಿ, ಜನಾರ್ದನ ಕೊಕ್ಕಡ, ಆನಂದ ಕೊಕ್ಕಡ, ರಮೇಶ ಪಟ್ರಮೆ, ಬನಾರಿ ಚಂದ್ರಶೇಖರ ಮೊದಲಾದವರು ಪರಮೇಶ್ವರ ಆಚಾರ್ಯರಿಂದ ನಾಟ್ಯ ಕಲಿತಿದ್ದರು. ತನ್ನದೇ ಖರ್ಚಿನಲ್ಲಿ ಅರಸಿನಮಕ್ಕಿಯಿಂದ ಸಂಪಾಜೆ ಕಲ್ಲುಗುಂಡಿಗೆ ಬಂದು ತರಬೇತಿಯನ್ನು ನೀಡಿ ಹೋಗುತ್ತಿದ್ದರಂತೆ. ಪ್ರತಿಫಲಾಪೇಕ್ಷೆ ಇಲ್ಲದೆ ತರಬೇತಿಯನ್ನು ನೀಡಿದವರು.

2008ನೇ ಇಸವಿಯಲ್ಲಿ ತನ್ನ ಅಣ್ಣ ಶ್ರೀ ಜನಾರ್ದನ ಆಚಾರ್ಯರ ಮನೆಯಲ್ಲಿರುವಾಗ ಶ್ರೀ ಪರಮೇಶ್ವರ ಆಚಾರ್ಯರು ನಿಧನ ಹೊಂದಿದ್ದರು. ಎಳೆಯ ಪ್ರಾಯದಲ್ಲಿ ಉತ್ತಮ ಕಲಾವಿದ ಮತ್ತು ತರಬೇತುದಾರರನ್ನು ಕಳೆದುಕೊಂಡು ಕಲಾಭಿಮಾನಿಗಳು ನೋವನ್ನು ಅನುಭವಿಸಿದ್ದರು. ಇಂತಹ ಕಲಾವಿದರುಗಳನ್ನು ನೆನಪಿಸಿ ಗೌರವಿಸಬೇಕಾದುದು ಕಲಾಭಿಮಾನಿಗಳಿಗೆ ಕರ್ತವ್ಯ. ಎರಡು ವರ್ಷಗಳ ಹಿಂದೆ ಅರಸಿನಮಕ್ಕಿ ಸಮೀಪದ ನೆಕ್ಕರಡ್ಕಪಳಿಕೆ ಎಂಬಲ್ಲಿ ದಿ| ಪರಮೇಶ್ವರ ಆಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭವು ನಡೆದಿತ್ತು. ಶ್ರೀ ಹನುಮಗಿರಿ ಮೇಳದ ಪ್ರದರ್ಶನದ ಸಂದರ್ಭ. ಸದ್ರಿ ಮೇಳದ ವೇದಿಕೆಯಲ್ಲಿ ಈ ಕಾರ್ಯಕ್ರಮವು ನಡೆದಿತ್ತು. ಈ ಪ್ರಶಸ್ತಿಯನ್ನು ಹುಟ್ಟು ಹಾಕಿದವರು ಪರಮೇಶ್ವರ ಆಚಾರ್ಯರ ಶಿಷ್ಯರಾದ ಶ್ರೀ ಜಯಾನಂದ ಸಂಪಾಜೆ ಅವರು. ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಸೆಯು ಅವರಿಗೆ. ಈ ಸತ್ಕಾರ್ಯಕ್ಕೆ ಕಲಾಮಾತೆಯ ಅನುಗ್ರಹವಿರಲಿ. ಕೀರ್ತಿಶೇಷ ಕಲಾವಿದರಾದ ಅರಸಿನಮಕ್ಕಿ ಶ್ರೀ ಪರಮೇಶ್ವರ ಆಚಾರ್ಯರಿಗೆ ನುಡಿನಮನಗಳು. 

ಲೇಖನ: ರವಿಶಂಕರ ವಳಕ್ಕುಂಜ 

 

ಗುರುದಕ್ಷಿಣೆ ಪ್ರಶಸ್ತಿ

ಬೆಂಗಳೂರಿನ ರೋಟರಿ ಕ್ಲಬ್ ನವರು ಆಯೋಜಿಸಿದ್ದ ೨೦೨೦-೨೧ ರ ಸಾಲಿನ ಗುರುದಕ್ಷಿಣೆ ಪ್ರಶಸ್ತಿಯನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯ ಕಲಾಗುಡಿಯಲ್ಲಿ ಈ ಒಂದು ಪ್ರಶಸ್ತಿಗೆ ಭಾಜನರಾದ ಯಕ್ಷಗಾನ, ರಂಗಭೂಮಿ,ಹಿರಿ ಹಾಗೂ ಕಿರುತೆರೆ ಕಲಾವಿದರಾದ ಡಾ.ರಾಧಾಕೃಷ್ಣ ಉರಾಳರಿಗೆ ಪ್ರದಾನ ಮಾಡಲಾಯಿತು. ರೋಟರಿ ಕ್ಲಬ್ ನ ಸದಸ್ಯ್ರರಾದ ಶಂಕರನಾರಾಯಣರವರು ಈ ಒಂದು ಪ್ರಶಸ್ತಿಯನ್ನು ಡಾ.ರಾಧಾಕೃಷ್ಣ ಉರಾಳರಿಗೆ ಪ್ರದಾನ ಮಾಡಿದರು. ಕಲಾಕದಂಬ ಆರ್ಟ್ ಸೆಂಟರ್ ಎಂಬ ಸಂಸ್ಥೆಯ ಮೂಲಕ ಡಾ.ರಾಧಾಕೃಷ್ಣ ಉರಾಳರವರು ಯಕ್ಷಗಾನ ಹೆಜ್ಜೆಗಳ ಕಲಿಸುವ ಹಾಗೂ  ರಂಗಭೂಮಿ ಚಟುವಟಿಕಗಳನ್ನು ಕಲಿಸುವ ಗುರುವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು ಹಲವಾರು ಮಂದಿ ಶಿಷ್ಯ್ರರಿಗೆ ಮಾರ್ಗದರ್ಶಕರಾಗಿ ನಮ್ಮ ಪರಂಪರೆಯ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪಯತ್ನ ಮಾಡುತ್ತಿದ್ದಾರೆ.ಅಲ್ಲದೆ ವಿದೇಶದಲ್ಲು ತಮ್ಮ ಈ ಕಲೆಯ ಪ್ರಸರಣವನ್ನು ಮಾಡಿದ ಕೀರ್ತಿ ಇವರಿಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

12-17 ವಯಸ್ಸಿನ ಮಕ್ಕಳಿಗೆ ಲಸಿಕೆಯ ಪ್ರಯೋಗದ ಅನುಮತಿಗೆ ಅರ್ಜಿ ?

ಯುಎಸ್ ಮೂಲದ ಔಷಧೀಯ ಸಂಸ್ಥೆ ಜಾನ್ಸನ್ ಮತ್ತು ಜಾನ್ಸನ್ ಸಿಡಿಎಸ್‌ಸಿಒಗೆ (Central Drugs Standard Control Organisation) ತನ್ನ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಮಕ್ಕಳ ಮೇಲೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ನಿರ್ಣಾಯಕ ಬೆಳವಣಿಗೆಯಲ್ಲಿ, ಯುಎಸ್ ಮೂಲದ ಔಷಧೀಯ ಸಂಸ್ಥೆ ಜಾನ್ಸನ್ ಮತ್ತು ಜಾನ್ಸನ್ ಮಕ್ಕಳ ಮೇಲೆ ತನ್ನ ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ಕೋರಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದಾರೆ. 12-17 ವರ್ಷ ವಯಸ್ಸಿನ ಹದಿಹರೆಯದವರಿಂದ ಅಧ್ಯಯನ ಭಾಗವಹಿಸುವವರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ, ಭಾರತ್ ಬಯೋಟೆಕ್ ಮತ್ತು ಜೈಡಸ್ ಕ್ಯಾಡಿಲಾ ಮಕ್ಕಳಿಗಾಗಿ ತಮ್ಮ ಹೊಸ ಕರೋನವೈರಸ್ ಲಸಿಕೆಗಳನ್ನು ಪರೀಕ್ಷಿಸುತ್ತಿದ್ದಾರೆ.

ಭಾರತದಲ್ಲಿ ಕೋವಿಡ್ -19 ಲಸಿಕೆ: ಜುಲೈನಲ್ಲಿ 13.45 ಕೋಟಿ ದಾಟುವುದರೊಂದಿಗೆ ಲಸಿಕೆ ಹಾಕುವಿಕೆಯು ವೇಗವನ್ನು ಪಡೆಯುತ್ತಿದೆ- ಜೂನ್ 11.96 ಮತ್ತು ಮೂಲಗಳ ಪ್ರಕಾರ, ಅಕ್ಟೋಬರ್ ವೇಳೆಗೆ ತಿಂಗಳಿಗೆ 40 ಕೋಟಿ ಡೋಸ್ ಕೋವಿಡ್ -19 ಲಸಿಕೆಗಳು ಲಭ್ಯವಿರುತ್ತವೆ. ಅಕ್ಟೋಬರ್ ವೇಳೆಗೆ ಒಟ್ಟು 7 ಲಸಿಕೆಗಳು ಲಭ್ಯವಿರುವುದರಿಂದ ಇದು ಸಾಧ್ಯ. ಒಟ್ಟು 44,49,37,560 ಜನರಿಗೆ ಲಸಿಕೆ ಹಾಕಲಾಗಿದೆ ಆದರೆ ಅವರಲ್ಲಿ 12,66,57,103 ಜನರು ಲಸಿಕೆಯ ಎರಡನೇ ಡೋಸ್ ಕೂಡ ಪಡೆದಿದ್ದಾರೆ.

ತುಳು ಸಾಹಿತ್ಯ ಅಕಾಡೆಮಿ, ಸರಯೂ ಬಾಲ ಯಕ್ಷ ವೃಂದದಿಂದ ರವಿ ಭಟ್ ನೆಲ್ಯಾಡಿಗೆ ಗೌರವ

ಸರಯೂ ಬಾಲ ಯಕ್ಷ ವೃಂದ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರು ಆಯೋಜಿಸಿದ 16-08-2021ರಂದು ಸರಯೂ ತುಳು ಯಕ್ಷಗಾನ ಸಪ್ತಾಹದ ಆರನೆಯ ದಿನದ ಸಭಾ ಕಾರ್ಯಕ್ರಮ ಸಮಾರಂಭದಲ್ಲಿ ಯಕ್ಷಗಾನ ಕಲಾವಿದರಾದ ಶ್ರೀ ರವಿ ಭಟ್ ನೆಲ್ಯಾಡಿ ಮತ್ತು ಶ್ರೀ ಸ್ಕಂದ ಕೊನ್ನಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ. 

(ಫೋಟೋ: ಮಧುಸೂದನ ಅಲೆವೂರಾಯ) 

ಮಹಾನ್ ಬಣ್ಣದ ವೇಷಧಾರಿ ಕುಂಬಳೆ ಕುಟ್ಯಪ್ಪು (ಬಣ್ಣದ ಕುಟ್ಯಪ್ಪು)

ಬದುಕಿಗಾಗಿ ನೌಕರಿಯನ್ನು ಪಡೆದುಕೊಳ್ಳಬೇಕಾದರೆ ವಿದ್ಯಾರ್ಹತೆಯನ್ನು ಹೊಂದಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ನಡೆಯುವ ಸಹಜವಾದ ಕ್ರಿಯೆ ಇದು. ಆಮೇಲೆ ಪರೀಕ್ಷೆ, ಸಂದರ್ಶನಗಳು ಇದ್ದೇ ಇರುತ್ತವೆ. ಆದರೆ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯಲು ಈ ಅನಿವಾರ್ಯತೆಗಳು ಬೇಕಾಗಿಲ್ಲ. ಆಸಕ್ತಿಯಿದ್ದವರಿಗೆ ಪ್ರಯತ್ನಿಸಬಹುದು. ಪ್ರವೇಶಿಸಿದ ನಂತರ ಸದಾ ಅಧ್ಯಯನಶೀಲರಾಗಿ ಬೆಳೆಯುತ್ತಾ ಕಲಾವಿದನಾಗಿ ಕಾಣಿಸಿಕೊಳ್ಳಬೇಕಾದುದು ಕರ್ತವ್ಯವೂ ಹೌದು. ಹಿಂದಿನ ಕಾಲದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಯಕ್ಷಗಾನವನ್ನೇ ಬದುಕಿಗಾಗಿ ಆಯ್ಕೆ ಮಾಡಿದವರನೇಕರು. ವಿದ್ಯಾರ್ಜನೆಗೂ ಹೆಚ್ಚು ಅವಕಾಶವಿಲ್ಲದ ಕಾರಣ ಮೇಳಕ್ಕೆ ಸೇರಿ (ನೇಪಥ್ಯ ಕೆಲಸಕ್ಕೆ) ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ, ಆಟಗಳನ್ನು ನೋಡುತ್ತಾ ಮತ್ತೆ ಕಲಾವಿದನಾಗಿ ಅಭಿನಯಿಸಿ ಸತತ ಪರಿಶ್ರಮದಿಂದ ಖ್ಯಾತರಾದರು.

ಉದ್ಯೋಗವಿಲ್ಲದೆ ಮನೆಯಲ್ಲೇ ಕುಳಿತವವನನ್ನು ಹಿರಿಯರು ಹೀಗೆ ಆಕ್ಷೇಪಿಸುವ ಕ್ರಮವೂ ಇತ್ತು. ‘ನೀನು ಆಟದ ಪೆಟ್ಟಿಗೆ ಹೊರಲು ಆದೀತು’ಎಂದು. ಇದು ತಾತ್ಸಾರದಿಂದ ಆಡಿದ ಮಾತುಗಳಂತೂ ಖಂಡಿತಾ ಅಲ್ಲ. ಮೊದಲಿನ ಕಾಲದಲ್ಲಿ ವಾಹನ, ರಸ್ತೆ ಸೌಕರ್ಯಗಳು ಇದ್ದಿರಲಿಲ್ಲ. ಪ್ರದರ್ಶನಗಳು ನಡೆಯುವ ಜಾಗಕ್ಕೆ ಸರಂಜಾಮುಗಳನ್ನು ಹೊತ್ತೇ ಸಾಗಬೇಕಾಗಿತ್ತು. ನಡೆಯುವ ದಾರಿಯೂ ದುರ್ಗಮವಾಗಿತ್ತು. ಉತ್ತಮ ಆರೋಗ್ಯವನ್ನು ಹೊಂದಿದ ತರುಣರಿಂದ ಮಾತ್ರ ಈ ಕೆಲಸ ಸಾಧ್ಯ. ಹೀಗೆ ಮೇಳದ ಕೆಲಸಕ್ಕೆ ಸೇರಿದ ಅನೇಕರು ತಿರುಗಾಟದ  ಏನನ್ನು ಮನೆಗೆ ಕೊಂಡುಹೋದರು? ಎಷ್ಟು ಕೊಂಡು ಹೋದರು?ಎಂಬ ಪ್ರಶ್ನೆ ಹುಟ್ಟಿಕೊಂಡರೆ ಅದಕ್ಕೆ ಉತ್ತರವಿದೆ.

ಅವರು ಬೆಲೆಕಟ್ಟಲಾಗದ ವಿಚಾರವನ್ನು ತಮ್ಮ ಜತೆ ಮನೆಗೆ ಕೊಂಡೊಯ್ದಿದ್ದರು. ಅದುವೇ ಯಕ್ಷಗಾನದ ಹುಚ್ಚು. ಯಕ್ಷಗಾನ ಕಲೆಯ ಆಸಕ್ತಿ. ತಾನೂ ಕಲಾವಿದನಾಗಬೇಕೆಂಬ ಆಸೆ. ಆ ನಿಟ್ಟಿನಲ್ಲಿ ಪ್ರಯತ್ನಿಸಿಯೂ ಇದ್ದರು. ಹಿಂದಿನ ಕಾಲದಲ್ಲಿ ಹೆಚ್ಚಿನ ಕಲಾವಿದರೂ ಇದೇ ತೆರನಾಗಿಯೇ ಸಾಗಿ ಬಂದವರು. ನೇಪಥ್ಯದ ಕೆಲಸಕ್ಕೆಂದು ಮೇಳಕ್ಕೆ ಸೇರಿದ ಬಳಿಕ ಕಲಾವಿದರಾದ ಅನೇಕ ವ್ಯಕ್ತಿಗಳು ಇಂದೂ ನಮ್ಮ ಜತೆ ಇದ್ದಾರೆ. ಎಳವೆಯಲ್ಲೇ ಬದುಕಿಗಾಗಿ ಯಕ್ಷಗಾನವನ್ನೇ ಆಶ್ರಯಿಸಿ ಸತತ ಪರಿಶ್ರಮದಿಂದ ಖ್ಯಾತ ಕಲಾವಿದರಾಗಿ ಯಕ್ಷಗಾನ ರಂಗದಲ್ಲಿ ಮೆರೆದ ಅನೇಕ ಹಿರಿಯರನ್ನು ಗಮನಿಸಬಹುದು. ಬೆರಗು ಹುಟ್ಟಿಸುವಂತಹ ಸಾಧನೆಯಿದು. ಅಂತಹ ಕಲಾವಿದರಲ್ಲೊಬ್ಬರು ಶ್ರೀ ಕುಂಬಳೆ ಕುಟ್ಯಪ್ಪು (ಬಣ್ಣದ ಕುಟ್ಯಪ್ಪು). 

1914ರಲ್ಲಿ ಕಣ್ಣನ್, ಚೋಯಿಚ್ಚಿ ದಂಪತಿಗಳಿಗೆ ಮಗನಾಗಿ ಕೂಡ್ಲಿನಲ್ಲಿ ಜನನ. (ಅಜ್ಜನ ಮನೆ). ಕುಟ್ಯಪ್ಪು ಅವರ ಮೂಲಮನೆ ಕುಂಬಳೆ ಸಮೀಪದ ಬಳ್ಳಂಬಾಡಿ. ಹಾಗಾಗಿ ಕುಂಬಳೆ ಕುಟ್ಯಪ್ಪು ಎಂದೇ ಕರೆಸಿಕೊಂಡಿದ್ದರು. ಮಹಿಷಾಸುರ ವೇಷದ ಖ್ಯಾತಿಯ ಬಣ್ಣದ ಕುಟ್ಯಪ್ಪು ಅವರ ಹುಟ್ಟೂರು ಕಾಸರಗೋಡಿನ ಕುಂಬಳೆ. ಬಣ್ಣದ ವೇಷಗಳನ್ನೂ ಮಾಡುತ್ತಾ ಖ್ಯಾತರಾದ ಕಾರಣ ಕುಂಬಳೆ ಕುಟ್ಯಪ್ಪು ಅವರನ್ನು ಬಣ್ಣದ ಕುಟ್ಯಪ್ಪು ಎಂದೇ ಕಲಾಭಿಮಾನಿಗಳು ಕರೆಯುತ್ತಿದ್ದರು. ಶ್ರೀಯುತರು ಬಣ್ಣದ ಮಾಲಿಂಗ, ಚಂದ್ರಗಿರಿ ಅಂಬು ಮೊದಲಾದವರ ಸಮಕಾಲೀನರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡಿದವರು. ಇವರು ಓದಿದ್ದು 4ನೇ ತರಗತಿಯ ವರೆಗೆ ಮಾತ್ರ. ಎಳವೆಯಲ್ಲೇ ಯಕ್ಷಗಾನ ಬಯಲಾಟಗಳನ್ನು ನೋಡುತ್ತಾ ಬೆಳೆದವರು. ಬಣ್ಣದ ವೇಷಧಾರಿಗಳ ಅಭಿನಯವನ್ನು ನೋಡುತ್ತಾ ಆಕರ್ಷಿತರಾಗಿದ್ದರು.

ಇವರು ಮೊದಲು ಕಾಣಿಸಿಕೊಂಡದ್ದು ಪುಂಡುವೇಷಗಳಲ್ಲಿ. ಬಳಿಕ ಬಣ್ಣದ ವೇಷಗಳನ್ನು ಮಾಡಲು ತೊಡಗಿದ್ದರು. ಮಹಿಷಾಸುರನ ವೇಷವು ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ರುದ್ರಭೀಮ, ವೀರಭದ್ರ, ಕುಂಭಕರ್ಣ, ಅಜಮುಖಿ, ಪೂತನಿ, ರಾವಣ, ಶೂರಪದ್ಮ, ತಾರಕಾಸುರ ಮೊದಲಾದ ಪಾತ್ರಗಳಲ್ಲೂ ಮಿಂಚಿ ಹೆಸರನ್ನು ಗಳಿಸಿದರು. ವೀರರಸದ ಪದ್ಯಗಳಿಗೆ ಇವರದು ಅಮೋಘ ಅಭಿನಯವೆಂದು ಹಿರಿಯ ಕಲಾಭಿಮಾನಿಗಳು ಹೇಳುತ್ತಾರೆ. ಬಣ್ಣದ ಕುಟ್ಯಪ್ಪು ಅವರು ತೆಂಕುತಿಟ್ಟಿನ ಅಪ್ರತಿಮ ಬಣ್ಣದ ವೇಷಧಾರಿಯಾಗಿ ಮೆರೆದವರೆಂದು ಹಿರಿಯ ಕಲಾಭಿಮಾನಿಗಳೆಲ್ಲರೂ ಹೇಳುವುದನ್ನು ನಾವು ಕೇಳಿರುತ್ತೇವೆ. ತೆಂಕುತಿಟ್ಟಿನ ಹೆಚ್ಚಿನ ಎಲ್ಲಾ ಮೇಳಗಳಲ್ಲೂ ವ್ಯವಸಾಯ ಮಾಡಿದ್ದರು. ಕೊನೆಗೆ ಕಟೀಲು ಮೇಳದಲ್ಲಿ ಹಲವು ವರ್ಷಗಳ ತಿರುಗಾಟ ನಡೆಸಿ ನಿವೃತ್ತರಾಗಿದ್ದರು.

1982ರಲ್ಲಿ ದೆಹಲಿಯಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ನಿರ್ವಹಿಸಿದ ರಾವಣ ಮತ್ತು ತಾರಕಾಸುರ ಪಾತ್ರಗಳನ್ನು ಪ್ರೇಕ್ಷಕರು ಮೆಚ್ಚಿ ಪ್ರಶಂಸಿದ್ದರು. ಸುಮಾರು ಐವತ್ತು ವರ್ಷಗಳ ಕಲಾಸೇವೆ ಇವರದು. ಸುಮಾರು ನಲುವತ್ತು ವರ್ಷಗಳ ಕಾಲ ಕಾಸರಗೋಡಿನ ಕೋಟೆಕಣಿ ಎಂಬಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದರು. ಇವರ ಪತ್ನಿ ಶ್ರೀಮತಿ ಪಾಟೀ ಅಮ್ಮ. ಕುಟ್ಯಪ್ಪು ಪಾಟೀ ಅಮ್ಮ ದಂಪತಿಗಳಿಗೆ ಏಳು ಮಂದಿ ಮಕ್ಕಳು. (ಆರು ಗಂಡು ಮಕ್ಕಳು ಮತ್ತು  ಒಬ್ಬಳು ಪುತ್ರಿ) ಪ್ರಥಮ ಪುತ್ರ ಶ್ರೀ ರಾಮಚಂದ್ರ. ಇವರು ದಿವಂಗತರು. ಕಾಸರಗೋಡು ನುಳ್ಳಿಪ್ಪಾಡಿಯ ಗಜಾನನ ಗ್ಯಾರೇಜ್ ಮಾಲೀಕರಾಗಿದ್ದರು. ದ್ವಿತೀಯ ಪುತ್ರ ಶ್ರೀ ಸುಂದರ. ಟೈಲರ್ ಉದ್ಯೋಗಿ. ಕಾಸರಗೋಡು ಎಂ.ಜಿ ರೋಡಿನ ಕೊಹಿನೂರ್ ಟೈಲರ್ಸ್ ನ ಮಾಲೀಕರು. ತೃತೀಯ ಪುತ್ರ ಶ್ರೀ ಮಾಧವ. ಇವರು ದಿವಂಗತರು. ಟ್ಯಾಕ್ಸಿ ಡ್ರೈವರ್ ಆಗಿದ್ದರು. ನಾಲ್ಕನೆಯ ಪುತ್ರ ಶ್ರೀ ಭಾಸ್ಕರ. ಕೆ.ಎಸ್.ಆರ್.ಟಿ.ಸಿ ಡ್ರೈವರ್ ಆಗಿ ನಿವೃತ್ತರು. ಐದನೆಯ ಪುತ್ರ ಶ್ರೀ ಪ್ರಭಾಕರ. ಉಪಜಿಲ್ಲಾಧಿಕಾರಿಯಾಗಿ ನಿವೃತ್ತರು. ಕೊನೆಯ ಪುತ್ರ ಶ್ರೀ ರವೀಂದ್ರ ಕೋಟೆಕಣಿ. ಮಂಜೇಶ್ವರ ಕುಂಜತ್ತೂರಿನ ಕೆನರಾ ಮೋಟರ್ಸ್ ಗ್ಯಾರೇಜಿನ ಮಾಲೀಕರು. ಇವರು ಹಲವು ಧಾರ್ಮಿಕ ಸಂಸ್ಥೆಗಳಲ್ಲಿ ಮುಂದಾಳುಗಳಾಗಿ ಸೇವೆ ಮಾಡುತ್ತಿದ್ದಾರೆ. ಇವರ ಪುತ್ರ ಅಕ್ಷಯ ಕುಮಾರ್ ಸಿಎ ಪರೀಕ್ಷೆಯಲ್ಲಿ ಕೇರಳ ರಾಜ್ಯಕ್ಕೆ ಪ್ರಥಮ ಮತ್ತು ದೇಶಕ್ಕೆ ಆರನೆಯ ರಾಂಕ್ ಗಳಿಸಿರುತ್ತಾರೆ. ಬಣ್ಣದ ಕುಟ್ಯಪ್ಪು ಅವರ ಪುತ್ರಿ ಶ್ರೀಮತಿ ಬೇಬಿ ದಾಮೋದರ್. ಇವರ ಪತಿ ಶ್ರೀ ದಾಮೋದರ್ ಕೇರಳ ಸರಕಾರೀ ಉದ್ಯೋಗಿಯಾಗಿ ನಿವೃತ್ತರು. (ನೀರಾವರಿ ಇಲಾಖೆ).

ಪ್ರಾಮಾಣಿಕ ಕಲಾಸೇವೆಯನ್ನು ಮಾಡಿದ ಕಾರಣ ಕಲಾಮಾತೆಯು ಪ್ರಸನ್ನಳಾಗಿ ಬಣ್ಣದ ಕುಟ್ಯಪ್ಪು ಅವರ ಮನೆಯವರನ್ನು ಅನುಗ್ರಹಿಸಿ ರಕ್ಷಿಸಿದ್ದಾಳೆ. ಮಕ್ಕೆಳೆಲ್ಲರೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಮೊಮ್ಮಕ್ಕಳೂ ವಿದ್ಯಾವಂತರಾಗಿ ಹಿರಿಯರಿಗೆ ಸಂತಸವನ್ನು ಉಣಿಸುತ್ತಿದ್ದಾರೆ. ಶ್ರೀ ಬಣ್ಣದ ಕುಟ್ಯಪ್ಪು ಅವರ ಬದುಕಿನ ಅವಧಿ 1914-1985.  ಅನಾರೋಗ್ಯದ ನಿಮಿತ್ತ ಯಕ್ಷಗಾನದಿಂದ ದೂರವಾಗಿ ಮೂರು ವರ್ಷಗಳ ಕಾಲ ನಿವೃತ್ತ ಜೀವನವನ್ನು ನಡೆಸಿದ್ದರು. ಕಾಸರಗೋಡಿನ ಸಮೀಪ ಹಳಿ ದಾಟುವಾಗ ರೈಲು ಢಿಕ್ಕಿ ಹೊಡೆದು ಗಾಯಗೊಂಡಿದ್ದ ಪ್ರಸಿದ್ಧ ಬಣ್ಣದ ವೇಷಧಾರಿ ಶ್ರೀ ಕುಂಬಳೆ ಕುಟ್ಯಪ್ಪು ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದ ಬಣ್ಣದ ಕುಟ್ಯಪ್ಪು ಅವರು ಸರಳ, ಸಜ್ಜನ ಸಾತ್ವಿಕ ವ್ಯಕ್ತಿಯಾಗಿದ್ದರು. ನಿಜಬದುಕಿನಲ್ಲಿ ಸಜ್ಜನ, ಸಾತ್ವಿಕರಾದರೂ, ರಂಗದಲ್ಲಿ ರಾಕ್ಷಸರಾಗಿ ಕಲಾವಿದರು ಅಭಿನಯಿಸುವುದನ್ನು ಕಂಡಾಗ ಯೋಚಿಸಿದಾಗ ಬೆರಗು ಹುಟ್ಟದೆ ಇರದು. ಇದುವೇ ಯಕ್ಷಗಾನವೆಂಬ ಗಂಡು ಕಲೆಯ ವಿಶೇಷತೆಯು. ಇದುವೇ ಕಲಾವಿದರ ಸಾಮರ್ಥ್ಯ. ಇದುವೇ ಪಾತ್ರೋಚಿತವಾಗಿ ಅಭಿನಯಿಸುವ ಕಲೆ. ಇದುವೇ ಪರಕಾಯ ಪ್ರವೇಶ. ಪಾತ್ರವನ್ನು ತನಗೆ ಬೇಕಾದಂತೆ ಬಾಗಿಸದೆ ತಾನು ಪಾತ್ರಕ್ಕೆ ಬೇಕಾದಂತೆ ಬಾಗುವ ಕ್ರಿಯೆಯು. 

ಲೇಖಕ: ರವಿಶಂಕರ್ ವಳಕ್ಕುಂಜ 

 

ಯಕ್ಷಗಾನ ಕಲಾವಿದ ಚಿತ್ತೂರು ನಾರಾಯಣ ದೇವಾಡಿಗ ನಿಧನ

ಹಿರಿಯ ಯಕ್ಷಗಾನ ಕಲಾವಿದರಾದ ಚಿತ್ತೂರು ನಾರಾಯಣ ದೇವಾಡಿಗ(70) 15-8-20201ರಂದು ಬೈಂದೂರಿನ ಪುತ್ರಿಯ ಮನೆಯಲ್ಲಿ ನಿಧನರಾದರು.
ಕುಂದಾಪುರ ತಾಲೂಕಿನ ಹಳ್ನಾಡಿನ ದೇವಾಡಿಗರು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ, ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕ, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲರಾಯರ ಗರಡಿಯಲ್ಲಿ ಪಳಗಿ ಸ್ತ್ರೀವೇಷಧಾರಿಯಾಗಿ ಮೇಳ ಸೇರಿದರು.
ಕಮಲಶಿಲೆ, ಸಾಲಿಗ್ರಾಮ, ಹಳವಾಡಿ, ಗೋಳಿಗರಡಿ, ಮಾರಣಕಟ್ಟೆ, ಸೌಕೂರು, ಮಡಾಮಕ್ಕಿ, ಪೆರ್ಡೂರು ಹಾಗು ಹಾಲಾಡಿ ಮೇಳಗಳಲ್ಲಿ ಸುದೀರ್ಘ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ. ಕಳೆದೆರಡು ವರ್ಷಗಳಲ್ಲಿ ಅಸೌಖ್ಯದಿಂದಾಗಿ ಮನೆಯಲ್ಲಿದ್ದು ಅದರ ಪೂರ್ವದಲ್ಲಿ ಮಂದಾರ್ತಿ ಮೇಳದಲ್ಲಿ ಕಲಾಸೇವೆ ಮಾಡಿದ್ದರು. ಅಂಬೆ, ಮೀನಾಕ್ಷಿ, ದ್ರೌಪದಿ, ದಮಯಂತಿ, ಚಿತ್ರಾಂಗದೆ ಮೊದಲಾದ ಪೌರಾಣಿಕ ಸ್ತ್ರೀಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದಾರೆ. ಕೃಷ್ಣ, ಭೀಷ್ಮ, ರಾಮ, ರಾವಣ, ಈಶ್ವರ, ಅರ್ಜುನ ಮೊದಲಾದ ಪುರುಷ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕಲಾಸಾಧನೆಗೆ ದ್ಯೋತಕವಾಗಿ ಹಲವು ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ನಾಲ್ಕು ವರ್ಷಗಳ ಹಿಂದೆ ಸಂಸ್ಥೆಯು ಶಿರಿಯಾರ ಮಂಜು ನಾಯ್ಕ ನೆನಪಿನಲ್ಲಿ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಇವರು ಪತ್ನಿ ,ಈರ್ವರು ಪುತ್ರರು,ಓರ್ವ ಪುತ್ರಿಯನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ .ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದರು.

ಬೊಟ್ಟಿಕೆರೆ ಪುರುಷೋತ್ತಮ ಪೂಂಜ‌ ನಿಧನ – ಯಕ್ಷಗಾನ ಕಲಾರಂಗ ಗಾಢ ಸಂತಾಪ

ಯಕ್ಷಗಾನ ಭಾಗವತ, ಪ್ರಸಂಗಕರ್ತ ಪುರುಷೋತ್ತಮ ಪೂಂಜರು ಅಸೌಖ್ಯದಿಂದ 14-8-2021 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು. ಅವರಿಗೆ 68ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.


ಬಿ.ಎಸ್ಸಿ ಪದವಿ ಮುಗಿಸಿ ಮುಂಬಯಿಯಲ್ಲಿ ಉದ್ಯೋಗಿಯಾಗಿ ಅಲ್ಲಿರುವಾಗಲೇ ವೇಷಗಳನ್ನು ಮಾಡುತ್ತಾ ಮುಂದೆ ಯಕ್ಷಗಾನದ ಮೇಲಿನ ಸೆಳೆತದಿಂದ ಊರಿಗೆ ಬಂದು‌ ಭಾಗವತರಾಗಿ ಪುತ್ತೂರು, ಕರ್ನಾಟಕ ಮೇಳಗಳಲ್ಲಿ‌ ಏಳು ವರ್ಷ ತಿರುಗಾಟ ಮಾಡಿ ಕಳೆದ ಮೂರು ದಶಕದಿಂದ ಕಟೀಲು  ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು. ತುಳು ಮತ್ತು ಕನ್ನಡದಲ್ಲಿ ಹತ್ತಾರು ಶ್ರೇಷ್ಠ ಪ್ರಸಂಗಗಳನ್ನು ರಚಿಸಿದ್ದಾರೆ. ಮಾನಿಷಾದವಂತೂ‌ ಆಟಕೂಟಳಲ್ಲಿ ಸಾವಿರಾರು ಪ್ರದರ್ಶನ ಕಂಡಿದೆ. ಯಕ್ಷಗಾನ ಗುರುಗಳಾಗಿ‌ ಅತ್ಯುತ್ತಮ ನಿರ್ದೇಶಕರಾಗಿ‌ ಮಾನಿತರಾಗಿದ್ದಾರೆ.‌ ಹಲವು ಪುರಸ್ಕಾರಗಳಿಗೆ ಭಾಜನರಾದ ಅವರಿಗೆ ಉಡುಪಿಯ ಯಕ್ಷಗಾನ ಕಲಾರಂಗ ಎರಡು ವರ್ಷದ ಹಿಂದೆ ಯಕ್ಷಗಾನ ವಿದ್ವಾಂಸರಿಗಾಗಿರುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್‌, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಹುಮುಖ ಪ್ರತಿಭೆಯ ಸಾಧಕ – ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್ (ಜಲಜ ಸಖ)

ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್ಟರು ಬಹುಮುಖ ಪ್ರತಿಭೆಯ ಸಾಧಕರು. ಯಕ್ಷಗಾನ ಸಂಘಟಕರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಒಳ್ಳೆಯ ಬರಹಗಾರರಾಗಿ. ಸಜ್ಜನ ವ್ಯಕ್ತಿಯಾಗಿ ಎಲ್ಲರಿಗೂ ಪರಿಚಿತರು. ಕಲಾಸೇವೆಯ ಜತೆ ಸಾಹಿತ್ಯಸೇವೆಯನ್ನೂ ಮಾಡಿ ಹೆಸರು ಗಳಿಸಿದ್ದಾರೆ. ಅನೇಕ ಪುಸ್ತಕಗಳನ್ನೂ ರಚಿಸಿರುತ್ತಾರೆ. ‘ಜಲಜ ಸಖ’ ಎಂಬುದು ಇವರ ಕಾವ್ಯನಾಮ. ಕಲಾವಿದರು, ಕಲಾಭಿಮಾನಿಗಳಿಗೆ ಶ್ರೀಯುತರು ಪ್ರೀತಿಯ ಬೆಳ್ಳಾರೆ ಸೂರ್ಯಣ್ಣ. ತೆರೆದು ಕಾಣಿಸಿಕೊಳ್ಳದೆ ಸದಾ ಮುಚ್ಚಿಕೊಳ್ಳುವ ಸ್ವಭಾವ ಇವರದು. ಆದರೂ ಎಲೆಮರೆಯ ಕಾಯಿಯಂತೆ ಕಲಾಸೇವೆಯನ್ನು ಮಾಡಿಕೊಂಡು ಬಂದವರು. 


ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್ಟರ ಮೂಲಮನೆ ಕುಂಞಿಹಿತ್ತಿಲು ಎಂಬಲ್ಲಿ. 1938ನೇ ಇಸವಿ ಜುಲೈ 14ರಂದು ಕುಂಞಿಹಿತ್ತಿಲು ಶ್ರೀ ಗೋವಿಂದ ಭಟ್ ಮತ್ತು ಸರಸ್ವತಿ ಅಮ್ಮ ದಂಪತಿಗಳ ಮಗನಾಗಿ ಈ ಲೋಕದ ಬೆಳಕನ್ನು ಕಂಡವರು. ಅಜ್ಜನ ಮನೆ ಕುತ್ಯಾಡಿಯಲ್ಲಿ ಜನನ. ಕುಂಞಿಹಿತ್ತಿಲು ಗೋವಿಂದ ಭಟ್ ದಂಪತಿಗಳಿಗೆ ಎಂಟು ಮಂದಿ ಮಕ್ಕಳು. (ಐವರು ಪುತ್ರಿಯರು ಮತ್ತು ಮೂವರು ಪುತ್ರರು). ಗೋವಿಂದ ಭಟ್ಟರು ತಾಳಮದ್ದಳೆ ಅರ್ಥಧಾರಿಯೂ ಕೃಷಿಕರೂ ಆಗಿದ್ದರು. ಆ ಕಾಲದಲ್ಲಿ ಯಕ್ಷಗಾನ ಹಿಮ್ಮೇಳಕ್ಕೆ ಶ್ರುತಿ ಪೆಟ್ಟಿಗೆ ಇರಲಿಲ್ಲ. ಸೋರೆ ಕಾಯಿಯ ಬುರುಡೆಯಿಂದ ಶ್ರುತಿ ಪೆಟ್ಟಿಗೆ ತಯಾರಿಸುತ್ತಿದ್ದರಂತೆ.

ಶ್ರೀ ಗೋವಿಂದ ಭಟ್ಟರು ಬೆಳ್ಳಾರೆಯಲ್ಲಿ ವಾಸವಾಗಿದ್ದರು. ಸೂರ್ಯನಾರಾಯಣ ಭಟ್ಟರು ಓದಿದ್ದು, ಬೆಳೆದದ್ದು ಬೆಳ್ಳಾರೆಯಲ್ಲಿ. ಆದ ಕಾರಣ ಕುಂಞಿಹಿತ್ತಿಲು ಮನೆಯವರಾದರೂ ಬೆಳ್ಳಾರೆ ಸೂರ್ಯನಾರಾಯಣ ಭಟ್ ಎಂದೇ ಕರೆಸಿಕೊಂಡರು. ಓದಿದ್ದು ಬೆಳ್ಳಾರೆ ಮತ್ತು ಕಲ್ಮಡ್ಕ ಶಾಲೆಗಳಲ್ಲಿ. 9ನೇ ಕ್ಲಾಸಿನ ವರೆಗೆ(4th Form). ಆಗ ಹನ್ನೊಂದನೇ ಇಯತ್ತೆಗೆ ಎಸ್.ಎಸ್.ಎಲ್.ಸಿ ಎಂದು ಹೇಳುತ್ತಿದ್ದರಂತೆ  10ನೇ ತರಗತಿಯನ್ನು 5th Form ಎಂದು ಹೇಳುತ್ತಿದ್ದರು.

ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಬೆಳ್ಳಾರೆ ಶಾಲೆಯಲ್ಲಿ ಓದುತ್ತಿರುವಾಗ ಕಾವೇರಿಕಾನ ಶ್ರೀ ಮಹಾಲಿಂಗ ಭಟ್ಟರು ಅಧ್ಯಾಪಕರಾಗಿದ್ದರು. ವಾರದಲ್ಲಿ ಎರಡು ಪೀರಿಯಡ್ ಸಿಟಿಜನ್ ಶಿಪ್ ಟ್ರೈನಿಂಗ್’ ಎಂಬ ಕಾರ್ಯಕ್ರಮವು ಅಭ್ಯಾಸ ರೂಪದಲ್ಲಿ ನಡೆಯುತ್ತಿತ್ತು. ಈ ಅಭ್ಯಾಸ ತರಗತಿಯಲ್ಲಿ ತಾಳಮದ್ದಳೆ ನಡೆಸೋಣ ಎಂದು ಸೂರ್ಯನಾರಾಯಣ ಭಟ್ಟರು ಕೇಳಿಕೊಂಡಿದ್ದರು. ಪುರಾಣ ಜ್ಞಾನವನ್ನು ನೀಡಿ ಮಕ್ಕಳ ಪ್ರತಿಭೆಯನ್ನು ಬೆಳಗಿಸಲು ಅವಕಾಶ ಇರುವ ಕಾರಣ ಅಧ್ಯಾಪಕರ ಅನುಮತಿಯೂ ದೊರೆತಿತ್ತು. ಖ್ಯಾತ ತಾಳಮದ್ದಳೆ ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯನವರು ಶಾಲೆಯಲ್ಲಿ ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ಸಹಪಾಠಿಯಾಗಿದ್ದರು.

ಶ್ರೀ ಚಿನ್ನಪ್ಪ ಗೌಡರು ಭಾಗವತಿಕೆಗೆ. ಕಾವಿನಮೂಲೆ ಕೃಷ್ಣಕುಮಾರರು ಮದ್ದಳೆಗೆ. ಎಲ್ಲರೂ ಶಾಲಾ ವಿದ್ಯಾರ್ಥಿಗಳು. ಗ್ಲುಕೋಸ್ ಕರಡಿಗೆಗಳನ್ನು ಬೇಕಾದಂತೆ ಜೋಡಿಸಿ ಮದ್ದಳೆಯನ್ನು ತಯಾರಿಸಿದ್ದರಂತೆ. ಅರ್ಥಗಾರಿಕೆಗೆ ಇವರಿಗೆಲ್ಲಾ ರಸಋಷಿ ದೇರಾಜೆ ಶ್ರೀ ಸೀತಾರಾಮಯ್ಯನವರು ನಿರ್ದೇಶಕರು. ಅಂದವಾಗಿ ಅರ್ಥವಾಗುವಂತೆ ಅರ್ಥ ಬರೆದು ಕೊಡುತ್ತಿದ್ದರಂತೆ. ದೇರಾಜೆಯವರು ಆಗ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು.

ಬೆಳ್ಳಾರೆ ಬೋರ್ಡಿಂಗ್ ನಲ್ಲಿ ಪ್ರತಿವಾರ ತಾಳಮದ್ದಳೆ ನಡೆಯುತ್ತಿತ್ತು. ದೇರಾಜೆ, ಭೀಮಗುಳಿ ಗೋಪಾಲಕೃಷ್ಣಯ್ಯ. ಗಟ್ಟಿಗಾರು ನಾರಾಯಣ ಭಟ್ ಮೊದಲಾದವರು ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ರಾತ್ರಿ ಒಂಬತ್ತು ಘಂಟೆಯಿಂದ ಎರಡು ಘಂಟೆಯ ವರೆಗೆ ತಾಳಮದ್ದಳೆ. ಆರನೇ ತರಗತಿಯಲ್ಲಿರುವಾಗ ಮೊದಲ ಬಾರಿ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದರು. ಕಲ್ಮಡ್ಕದಲ್ಲಿ ವಾರಣಾಸಿ ಶ್ರೀ ಸೀತಾರಾಮಯ್ಯನವರು ಆಯೋಜಿಸುತ್ತಿದ್ದ ತಾಳ ಮದ್ದಳೆ. ಬಳಿಕ ಅಲ್ಲಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಅರ್ಥ ಹೇಳಿ ಅನುಭವಗಳನ್ನು ಗಳಿಸಿಕೊಂಡರು. ಬಡತನ, ಆರ್ಥಿಕ ಸಮಸ್ಯೆಯಿಂದಾಗಿ ಓದು ಮುಂದುವರಿಸಲಾಗಲಿಲ್ಲ. ಆದರೂ ಬದುಕು ಎಂಬ ಪಾಠ ಶಾಲೆಯಲ್ಲಿ ಕಲಿಯುತ್ತಾ ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಬಹಳಷ್ಟು ಕಲಿತಿದ್ದರು. 

ಬದುಕಿಗಾಗಿ ಉದ್ಯೋಗವನ್ನು ಅರಸಲೇ ಬೇಕಾಗಿತ್ತು. ಮೈಸೂರಿಗೆ ತೆರಳಿ ಶ್ರೀ ದಾಸ ಪ್ರಕಾಶ್ ಮತ್ತು ನಿಯೋ ಮೈಸೂರ್ ಎಂಬ ಹೊಟೇಲುಗಳಲ್ಲಿ ದುಡಿದಿದ್ದರು. ಈ ಹೋಟೆಲ್ ಮಾಲೀಕರು ದಕ್ಷಿಣ ಕನ್ನಡದವರು. ಯಕ್ಷಗಾನ ಪ್ರಿಯರೂ ಆಗಿದ್ದರು. ಕುಬಣೂರು ಶ್ರೀ ಬಾಲಕೃಷ್ಣ ರಾಯರು ಯಕ್ಷಗಾನದ ಖ್ಯಾತ ಅರ್ಥಧಾರಿಗಳು ಮತ್ತು ಸಂಘಟಕರು. ಅವರ ನೇತೃತ್ವದ ತಂಡವು ಮೈಸೂರಿಗೆ ಬಂದಾಗ ಆಟಕೂಟಗಳನ್ನು ತಪ್ಪದೆ ನೋಡುತ್ತಿದ್ದರು. ಐದು ವರ್ಷಗಳ ಕಾಲ ಮೈಸೂರಿನಲ್ಲಿ ಹೋಟೆಲ್ ಕೆಲಸ. ಬಳಿಕ ಎರಡು ವರ್ಷ ಮದ್ರಾಸಿನಲ್ಲಿ. ಮತ್ತೆ ಅನಿವಾರ್ಯವಾಗಿ ಊರಿಗೆ ಮರಳಬೇಕಾಗಿ ಬಂತು.

ಕೈಂತಜೆ ಡಾ. ಕೃಷ್ಣ ಭಟ್ಟರ ಆಸ್ಪತ್ರೆಯಲ್ಲಿ ಕಂಪೌಂಡರ್ ಆಗಿ ಐದು ವರ್ಷಗಳ ಕಾಲ ಕೆಲಸ ಮಾಡಿದರು. ಬಳಿಕ ಬೆಂಗಳೂರು ಹೈಕೋರ್ಟ್ ವಕೀಲರೂ, ಜಡ್ಜರೂ ಆಗಿದ್ದ ಶ್ರೀ ಜಿ.ಕೆ ಗೋವಿಂದ ಭಟ್ಟರ ಬಳಿ ಮೂರು ವರ್ಷಗಳ ಕಾಲ ದುಡಿದಿದ್ದರು. ಬಳಿಕ ಬೆಳ್ಳಾರೆ ಜಾಗದಲ್ಲಿ ವಾಸ್ತವ್ಯ. ಬದುಕಿಗಾಗಿ ವ್ಯಾಪಾರವನ್ನು ಆರಂಭಿಸಿದ್ದರು. ಮುಳಿ ಮಾಡಿನ, ಮಣ್ಣಿನ ಗೋಡೆಯ ಕಟ್ಟಡ. ಒಮ್ಮೆ ಮನೆ, ಅಂಗಡಿಯು ಬೆಂಕಿಗೆ ಆಹುತಿಯಾಗಿತ್ತು. ಮತ್ತೆ ಹಂಚು ಮತ್ತು ಶೀಟ್ ಹಾಕಿ ಕಟ್ಟಿಸಿದ್ದರು. ಈ ಕಾರ್ಯಕ್ಕೆ ಊರ ಮಹನೀಯರು ಸಹಕರಿಸಿದ್ದರು. ಈ ಸಂದರ್ಭಗಳಲ್ಲೂ ಸೂರ್ಯನಾರಾಯಣ ಭಟ್ಟರು ಯಕ್ಷಗಾನದಿಂದ ದೂರ ಉಳಿದವರಲ್ಲ.

ಶ್ರೀ ವಾಣೀ ಗಣೇಶ ಪ್ರಸಾದಿತ ಕಲಾ ವೃಂದ, ಬೆಳ್ಳಾರೆ ಎಂಬ ಸಂಸ್ಥೆಯಡಿ ಕಲಾಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದರು. ತಿಂಗಳಿನ ಪ್ರಥಮ ಶನಿವಾರದಂದು ರಾತ್ರಿಯಿಂದ ಬೆಳಗಿನ ವರೆಗೆ ವಾರಕ್ಕೊಂದು ಮತ್ತು ವಿಶೇಷ ದಿನಗಳಲ್ಲಿ ತಾಳಮದ್ದಲೆಗಳನ್ನು ನಡೆಸುತ್ತಿದ್ದರು. ಯಕ್ಷಗಾನ ಹಿಮ್ಮೇಳದ ಎಲ್ಲಾ ವಾದ್ಯೋಪಕರಣಗಳೂ ಈ ಸಂಸ್ಥೆಯಲ್ಲಿ ಇತ್ತು. ಇದು ಪ್ರಾರಂಭವಾದುದು 1976ರಲ್ಲಿ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ಸಂಘಟನೆಯ ಈ ತಾಳಮದ್ದಳೆಗಳಲ್ಲಿ ಶೇಣಿ, ಶಾಸ್ತ್ರಿಗಳು, ಪೆರ್ಲ ಕೃಷ್ಣ ಭಟ್, ಉಡುವೆಕೋಡಿ ಸುಬ್ಬಪ್ಪಯ್ಯನವರು, ಡಾ. ಎಂ. ಪ್ರಭಾಕರ ಜೋಶಿ ಮೊದಲಾದ ಹಿರಿಯ ವಿದ್ವಾಂಸರೆಲ್ಲರೂ ಭಾಗವಹಿಸಿದ್ದರು.

ಸಾಹಿತ್ಯಾಸಕ್ತಿಯನ್ನು ಹೊಂದಿದ್ದ ಇವರು ಬರೆಯುವಲ್ಲಿಯೂ ತೊಡಗಿಸಿಕೊಂಡಿದ್ದರು. 1986ರಲ್ಲಿ ಶ್ರೀ ವಾಣೀ ಗಣೇಶ ಪ್ರಸಾದಿತ ಕಲಾ ವೃಂದದ ದಶಮಾನೋತ್ಸವ ಕಾರ್ಯಕ್ರಮವನ್ನು ನಡೆಸಿದ್ದರು. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸಾಧನೆ’ ಎಂಬ ಪುಸ್ತಕವೂ ಪ್ರಕಟಗೊಂಡಿತ್ತು. ಕಲಾಸೇವೆಯ ಜತೆ ಸಾಹಿತ್ಯಸೇವೆಯೂ ನಿರಂತರವಾಗಿ ಸಾಗಿತ್ತು.

1970ರಲ್ಲಿ ವಿವಾಹ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರ ಪತ್ನಿ ಶ್ರೀಮತಿ ಸರಸ್ವತಿ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಸಾತ್ವಿಕ ಪಾತ್ರಗಳಲ್ಲಿ ಹೆಚ್ಚಾಗಿ ಅರ್ಥ ಹೇಳುತ್ತಿದ್ದರು. ಸ್ತ್ರೀ ಪಾತ್ರಗಳ, ಭಾವನಾತ್ಮಕ ಸನ್ನಿವೇಶಗಳನ್ನು ಉತ್ತಮವಾಗಿ ಚಿತ್ರಿಸುತ್ತಿದ್ದರು. ಹೆಚ್ಚಿನ ಎಲ್ಲಾ ಹಿರಿಯ ಕಲಾವಿದರ ಒಡನಾಟವೂ ಇವರಿಗೆ ದೊರಕಿದೆ. ಶೇಣಿಯವರ ವಾಲಿಗೆ ತಾರೆ, ರಾವಣನಿಗೆ ಮಂಡೋದರಿ (ಮೈಸೂರು ಅರಮನೆಯಲ್ಲಿ), ಭೀಮನಿಗೆ ದ್ರೌಪದಿ ಮೊದಲಾದ ಪಾತ್ರಗಳಲ್ಲಿ ಅರ್ಥ ಹೇಳುವ ಅವಕಾಶವೂ ಸಿಕ್ಕಿತ್ತು.

ಬೆಳ್ಳಾರೆ ಪರಿಸರದಲ್ಲಿ ತೆಂಕು ಬಡಗಿನ ಪ್ರದರ್ಶನಗಳು ನಡೆದರೆ ಹಿರಿಯ ಕಲಾವಿದರು ಇವರ ಮನೆಗೆ ಬಂದೇ ಬರುತ್ತಿದ್ದರು. ಉಪಾಹಾರ ವಿಶ್ರಾಂತಿಗೆ ಇವರದೇ ವ್ಯವಸ್ಥೆ. ಬೆಳ್ಳಾರೆಯಲ್ಲಿ ಸುಮಾರು ಮೂವತ್ತೈದು ವರ್ಷಗಳ ಕಾಲ ಯಕ್ಷಗಾನ ಕಲೆಯೊಂದಿಗೆ ಬಾಂಧವ್ಯ ಇರಿಸಿಕೊಂಡೇ ಬದುಕಿದ್ದರು. 1999ರಲ್ಲಿ ಉಜಿರೆಯ ಸಮೀಪದ ಬೆಳಾಲು ಎಂಬಲ್ಲಿಗೆ ಬಂದು ವಾಸವಾಗಿದ್ದರು.

ಕಳೆದ ಹತ್ತು ವರ್ಷಗಳಿಂದ ಮಚ್ಚಿನ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿ ವಾಸವಾಗಿದ್ದಾರೆ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಸುಮಾರು ನಲುವತ್ತಕ್ಕೂ ಮಿಕ್ಕಿ ಪುಸ್ತಕಗಳನ್ನು ರಚಿಸಿರುತ್ತಾರೆ. ಇವುಗಳಲ್ಲಿ ಹೆಚ್ಚಿನವು ಯಕ್ಷಗಾನ ಪ್ರಸಂಗಗಳು. ಅಲ್ಲದೆ ಚುಟುಕು, ಕವನ, ನಾಟಕ, ಕಾದಂಬರಿ, ಮಕ್ಕಳ ಕಥೆ, ಅನುಭವ ಕಥನ, ಭಜನೆ, ಸಣ್ಣ ಕಥೆಗಳು, ಸುಪ್ರಭಾತ ಮೊದಲಾದ ಪುಸ್ತಕಗಳನ್ನೂ ರಚಿಸಿರುತ್ತಾರೆ. 

ಇವರು ರಚಿಸಿದ ಪುಸ್ತಕಗಳು: ಕೀರ್ತನಮಾಲಾ, ಅಕ್ಷರಮಾಲಾ, ಶ್ರೀಹರಿ ಸ್ತೋತ್ರಂ, ಶ್ರೀ ಗಣೇಶ ಮಹಾತ್ಮೆ, ಭಕ್ತ ವಿಜಯ, ಕುಶಲವ ವಿಜಯ, ದೇವಶಕ್ತಿ, ಕನಪಡಿತ್ತಾಯ ಚರಿತ್ರೆ, ಚಂದ್ರಾವತೀ ಕಲ್ಯಾಣ, ಅನಾರ್ಕಲಿ, ಸತಿ ವೈಶಾಲಿನಿ, ಶಿವಲೀಲಾ, ಗೌತಮ ಬುದ್ಧ, ಯಜ್ಞಫಲ, ಅಂಗುಲಿಮಾಲಾ, ಸೂರ್ಯೋದಯ, ಹವ್ಯಕ ಗೀತಂ, ಇಂಚಾಂಡ ಎಂಚ?, ಸುಗ್ರೀವ ಸಖ್ಯ-ವಾಲಿ ಮೋಕ್ಷ, ಜನಕಕಲ್ಯಾಣ-ಮಿತಸಂತಾನ, ಶ್ರೀರಾಮ ಪಟ್ಟಾಭಿಷೇಕ, ಶ್ರೀ ಅಜಪಿಲ ಮಹಾಲಿಂಗೇಶ್ವರ ಸುಪ್ರಭಾತ, ಶ್ರೀ ಕೊಡ್ಯಡ್ಕ ಅನ್ನಪೂರ್ಣೇಶ್ವರಿ ಸುಪ್ರಭಾತ, ಶ್ರೀ ಭಗವತೀ ಚೌಡೇಶ್ವರೀ ಸುಪ್ರಭಾತ, ತೋಚಿದ್ದು-ಗೀಚಿದ್ದು, ಕನ್ನಡ ತುಳು ಹವ್ಯಕ ಮಲೆಯಾಳ ತೆಲುಗು ಭಾಷೆಗಳ ಚುಟುಕುಗಳು, ಬನದ ಕುಸುಮ, ಮರ್ಮಜ್ಞ ವಚನಂ, ಚಾವಟಿ, ಪ್ರವಾಸ, ಜಾನಪದ ನೀತಿ ಸಾರ, ಭಕ್ತ ಸುಧನ್ವ, ಶಿವಲೀಲೆ, ಸ್ವಾತಂತ್ರ್ಯ, ವಿಶ್ವಪ್ರಭಾ, ವಿಧಿಲಿಪಿ, ಚಿಕ್ಕಮ್ಮ, ಶಾಂತಿಸದನ, ಬಾಳ ಗೋಳು, ಪುಟ್ಟು ಕಂದ, ಕಂದನ ನಂದನ, ತಾಟಕಾ, ಶ್ರೀ ಸತ್ಯನಾರಾಯಣ ವ್ರತ ಮಹಾತ್ಮೆ, ಇವುಗಳಲ್ಲಿ ಕೆಲವು ಪ್ರಕಟಿತ. ಕೆಲವು ಅಪ್ರಕಟಿತ.

ಬೆಳ್ಳಾರೆ ಸೂರ್ಯನಾರಾಯಣ ಭಟ್ಟರು ಪುಸ್ತಕ ಸಂಗ್ರಹಕಾರರೂ ಹೌದು. ಇವರ ಸಂಗ್ರಹದಲ್ಲಿ ಅನೇಕ ಪುಸ್ತಕಗಳಿವೆ. ಸುಮಾರು ಇನ್ನೂರಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗ ಪುಸ್ತಕಗಳೂ ಇದರಲ್ಲಿ ಸೇರಿವೆ. ಇವರ ಈ ಹವ್ಯಾಸವನ್ನು ಕಲಾಪೋಷಕರಾದ ಶ್ರೀ ಟಿ. ಶ್ಯಾಮ ಭಟ್ಟರೂ ಮೆಚ್ಚಿಕೊಂಡಿದ್ದರು. ಪುಸ್ತಕಗಳು ಕೆಡದಂತೆ ಸಂರಕ್ಷಿಸಲು ಒಂದು ಒಳ್ಳೆಯ ಕಪಾಟನ್ನೂ ಕೊಡುಗೆಯ ರೂಪದಲ್ಲಿ ನೀಡಿದ್ದರು.

ಬೆಳ್ಳಾರೆ ಕೆ. ಸೂರ್ಯನಾರಾಯಣ ಭಟ್, ಸರಸ್ವತಿ ದಂಪತಿಗಳಿಗೆ ನಾಲ್ಕು ಮಂದಿ ಮಕ್ಕಳು. ಹಿರಿಯ ಪುತ್ರ ಶ್ರೀನಿವಾಸ ಸ್ವ ಉದ್ಯೋಗಿ. ಪುತ್ರಿಯರಾದ ಭಾರತಿ ಮತ್ತು ಲಲಿತಾ ಅವರು ವಿವಾಹಿತೆಯರು. ಗೃಹಣಿಯರು. ಕಿರಿಯ ಪುತ್ರ ಗಣೇಶ ಕಟೀಲು ಮೇಳದ ಹಿಮ್ಮೇಳ ಕಲಾವಿದ, ಮದ್ದಳೆಗಾರ. ತೆಂಕುತಿಟ್ಟಿನ ಹಿರಿಯ ಖ್ಯಾತ ಕಲಾವಿದ ಬೆಳ್ಳಾರೆ ಶ್ರೀ ಮಂಜುನಾಥ ಭಟ್ಟರು ಸೂರ್ಯನಾರಾಯಣ ಭಟ್ಟರ ತಮ್ಮ. ಬೆಳ್ಳಾರೆ ಸೂರ್ಯನಾರಾಯಣ ಭಟ್ಟರಿಗೆ ಶ್ರೀ ದೇವರು ಆರೋಗ್ಯ, ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖನ: ರವಿಶಂಕರ್ ವಳಕ್ಕುಂಜ