‘ಕೊರ್ಗಿ ಸ್ಮೃತಿ ಪ್ರಸಂಗ ಸಂಪುಟ – ಹತ್ತು ಯಕ್ಷಗಾನ ಪ್ರಸಂಗಗಳ ಗುಚ್ಛ ‘ ಎಂಬ ಹೊತ್ತಗೆಯು ವಿದ್ವಾಂಸರೂ ಪ್ರಸಂಗಕರ್ತರೂ ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದ ಕೊರ್ಗಿ ಶ್ರೀ ವೆಂಕಟೇಶ್ವರ ಉಪಾಧ್ಯಾಯರ ನೆನಪಿನ ಕಾಣಿಕೆಯಾಗಿ ಓದುಗರ ಕೈ ಸೇರಿತ್ತು. ಈ ಪುಸ್ತಕದ ಪ್ರಕಾಶಕರು ಕಟೀಲು ಶ್ರೀ ಸದಾನಂದ ಅಸ್ರಣ್ಣ ಪ್ರಕಾಶನ. ಮುನ್ನುಡಿಯನ್ನು ಬರೆದವರು ಕಟೀಲು ದೇವಳದ ಅರ್ಚಕರಾದ ವಿದ್ವಾನ್ ಕಮಲಾದೇವಿ ಪ್ರಸಾದ ಅಸ್ರಣ್ಣರು. ‘ಕೊರ್ಗಿ ಸಂಸ್ಮರಣೆ’ ಎಂಬ ಶೀರ್ಷಿಕೆಯಡಿ, ದ್ವಿವೇದೀ ವಿದ್ವಾನ್ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯರನ್ನು ನೆನಪಿಸಿ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ಬರೆದಿರುತ್ತಾರೆ. ಈ ಪುಸ್ತಕವನ್ನು ಕೀರ್ತಿಶೇಷ ದಿ। ಸದಾನಂದ ಅಸ್ರಣ್ಣರು, ಕಟೀಲು ಇವರಿಗೆ ಅರ್ಪಿಸಲಾಗಿದ್ದು ಶ್ರೀಯುತರ ಪರಿಚಯವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ತ್ರಯಂಬಕರುದ್ರ ಮಾಹಾತ್ಮ್ಯಮ್, ಅಷ್ಟಾಕ್ಷರೀ ಮಾಹಾತ್ಮ್ಯಮ್, ಭೀಷ್ಮವಸಾನ, ಚಂದ್ರಕಾಂತಿ, ನಿಮಿಯಜ್ಞ, ಗಯಯಜ್ಞ, ಪೃಥುಯಜ್ಞ, ನೈಮಿಷಾರಣ್ಯ, ಮರುತ್ ಜನ್ಮ, ಗೋವರ್ಧನೋದ್ಧರಣ ಎಂಬ ಹತ್ತು ಪ್ರಸಂಗಗಳು ಇದರೊಳಗಿವೆ. ಕಥಾ ಸಾರಾಂಶವನ್ನು ಮತ್ತು ಪ್ರಸಂಗದಲ್ಲಿ ಬರುವ ಪಾತ್ರಗಳನ್ನು ನಮೂದಿಸಿದ್ದು ಅನುಕೂಲವೇ ಆಗಿದೆ. ಶ್ರೀ ಗಣೇಶ ಕೊಲೆಕಾಡಿಯವರು ತ್ರಯಂಬಕರುದ್ರ ಮಾಹಾತ್ಮ್ಯಮ್, ಅಷ್ಟಾಕ್ಷರೀ ಮಾಹಾತ್ಮ್ಯಮ್, ಭೀಷ್ಮವಸಾನ ಎಂಬ ಪ್ರಸಂಗಗಳನ್ನು ರಚಿಸಿದವರು. ಚಂದ್ರಕಾಂತಿ ಎಂಬ ಪ್ರಸಂಗವನ್ನು ಬರೆದವರು ಶ್ರೀ ಮಧೂರು ವೆಂಕಟಕೃಷ್ಣ. ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ನಿಮಿಯಜ್ಞ ಪ್ರಸಂಗಕರ್ತರು. ಪ್ರೊ| ಎಂ. ಎ. ಹೆಗಡೆ ಅವರು ಗಯಯಜ್ಞ ಮತ್ತು ಮರುತ್ ಜನ್ಮ ಎಂಬ ಪ್ರಸಂಗಗಳನ್ನು ರಚಿಸಿದ್ದರು. ಪೃಥುಯಜ್ಞ ಮತ್ತು ನೈಮಿಷಾರಣ್ಯ ಪ್ರಸಂಗಗಳನ್ನು ರಚಿಸಿದವರು ಶ್ರೀಧರ ಡಿ. ಎಸ್. ಕಿನ್ನಿಗೋಳಿ. ಗೋವರ್ಧನೋದ್ಧರಣ ಪ್ರಸಂಗವನ್ನು ರಚಿಸಿದವರು ವಿದ್ವಾನ್ ಕೆ. ಕೃಷ್ಣಕುಮಾರ್ ಮೈಸೂರು. ಬಳಿಕ ಹದಿಮೂರು ವರ್ಷಗಳಲ್ಲಿ ನಡೆದ (2004 – 2017) ತಾಳಮದ್ದಳೆ ಸಪ್ತಾಹದ ಶೀರ್ಷಿಕೆಗಳನ್ನೂ ಆಮಂತ್ರಣ ಪತ್ರಿಕೆಯನ್ನೂ ನೀಡಿರುತ್ತಾರೆ. ಯಕ್ಷಗಾನ ಮತ್ತು ಶ್ರೀ ಕ್ಷೇತ್ರ ಕಟೀಲಿನ ಸಂಬಂಧವಿರಿಸಿಕೊಂಡೇ ಬದುಕಿದ್ದ ಶ್ರೀ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯರ ನೆನಪಿನ ಹೊತ್ತಗೆಯಾಗಿ ಪ್ರಸಂಗ ಸಂಪುಟವು ಪ್ರಕಟವಾದುದು ಅರ್ಥಪೂರ್ಣವೂ ಸಂತಸವನ್ನು ತರುವ ವಿಚಾರವೂ ಆಗಿದೆ.
ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆಯವರ ಬಗ್ಗೆ ವೀಡಿಯೋ
ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸ್ತುತ ಶ್ರೀ ಜಯಾನಂದ ಸಂಪಾಜೆಯವರ ಯಕ್ಷಜೀವನದ ಯಶೋಗಾಥೆಯ ಬಗ್ಗೆ ಯಕ್ಷ ಮಂದಾರ ‘ಯು ಟ್ಯೂಬ್’ ಚಾನೆಲ್ ನಲ್ಲಿ ವೀಡಿಯೋ ಮಾಡಲಾಗಿದೆ. ಬರಹರೂಪದಲ್ಲಿಯೂ ದೃಶ್ಯರೂಪದಲ್ಲಿಯೂ ಅವರ ಬಗ್ಗೆ ಸವಿವರವಾದ ವಿವರಗಳನ್ನು ನೀಡಲಾಗಿದೆ. ನೋಡಿ ಆನಂದಿಸಿ
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಶ್ರೀ ಎಂ. ದಾಮೋದರ ಶೆಟ್ಟಿ ಮಜಿಬೈಲ್ ಆಯ್ಕೆ
ಕಾಸರಗೋಡು ಜಿಲ್ಲಾ ಬಂಟರ ಸಂಘದ ಗೌರವ ಕಾರ್ಯದರ್ಶಿಯಾಗಿ,ಬಂಟ್ಸ್ ಮಜಿಬೈಲ್ ನ ಸಲಹೆಗಾರರಾಗಿ ಗೌರವ ಮಾರ್ಗದರ್ಶಕರಾಗಿ,ಮಂಜೇಶ್ವರ ಜಯ-ವಿಜಯ ಜೋಡುಕರೆ ಕಂಬಳದ ಮಾಜಿ ಅಧ್ಯಕ್ಷರಾಗಿ,ಬಲ್ಲಂಗುಡೇಲ್ ಶ್ರೀ ಪಾಡಂಗರೇ ಭಗವತಿ ಕ್ಷೇತ್ರದ ಕಳಿಯಾಟ ಸಂದರ್ಭದಲ್ಲಿ ಸತತ ನಲ್ವತೈದು ವರ್ಷದಿಂದ ಸ್ವಂತ ವೆಚ್ಚದಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜನೆ ಹಾಗು ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ನ್ಯಾ. ಎಂ ದಾಮೋದರ ಶೆಟ್ಟಿಯವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಇವರನ್ನು ಹಾಗು ಆಯ್ಕೆ ಮಾಡಿದ ಕರ್ನಾಟಕ ಸರಕಾರದ ಸಚಿವರಾದ ಸಿಟಿ ರವಿ ಯವರನ್ನು ಬಂಟ್ಸ್ ಮಜಿಬೈಲ್ ಸಂಸ್ಥೆ ಅಭಿನಂದನೆ ಸಲ್ಲಿಸಿದೆ. ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಅವರಿಗೆ ಹುಟ್ಟೂರಲ್ಲಿ ವಿಶೇಷವಾಗಿ ಗೌರವ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಎಡನೀರು ಶ್ರೀಗಳವರಿಗೆ ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ
ಪರಮಾತ್ಮನಲ್ಲಿ ಐಕ್ಯರಾದ ಎಡನೀರು ಮಠಾಧೀಶರಾದ ಶ್ರೀಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರಿಗೆ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ ಸಮರ್ಪಿಸಿ ಅವರ ದಿವ್ಯಾತ್ಮಕ್ಕೆ ಚಿರ ಶಾಂತಿ ದೊರೆಯುವಂತೆ ಪ್ರಾರ್ಥಿಸಲಾಯಿತು.ಕೋವಿದ್ 19 ರ ಮಾನದಂಡಗಳನ್ನು ಪಾಲಿಸಿಕೊಂಡು ಸಭೆ ಜರಗಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಹಿರಿಯ ಯಕ್ಷಗಾನ ಭಾಗವತ ಶ್ರೀ ಹೊಸಮೂಲೆ ಗಣೇಶ ಭಟ್ ಅವರು ಪಾಲ್ಗೊಂಡರು. ಶ್ರೀ ಸ್ವಾಮೀಜಿಯವರ ಪೂರ್ವಾಶ್ರಮದಿಂದಲೇ ಅವರ ಒಡನಾಡಿಯಾಗಿದ್ದು ಶ್ರೀ ಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿದ್ದ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರು ಗುರುಗಳ ಒಡನಾಟವನ್ನು ನೆನಪಿಸುತ್ತಾ, ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ನುಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ, ಉಪಾಧ್ಯಕ್ಷ ರಾಘವೇಂದ್ರ ಭಟ್ ಉಡುಪುಮೂಲೆ, ಸಹಕಾರ್ಯದರ್ಶಿ ಡಾ. ಶಿವಕುಮಾರ್ ಅಡ್ಕ, ಅನುಪಮಾ ರಾಘವೇಂದ್ರ ಉಡುಪುಮೂಲೆ ನುಡಿನಮನಗಳನ್ನು ಅರ್ಪಿಸಿದರು.ಕೋಶಾಧಿಕಾರಿ ಕೃಷ್ಣ ಭಟ್ ಅಡ್ಕ ಸ್ವಾಗತಿಸಿ ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಸುಮತಿ ಗೋಪಾಲಕೃಷ್ಣ ಭಟ್ ಅಡ್ಕ, ಪ್ರೇಮಲತಾ ಕೃಷ್ಣ ಭಟ್ ಅಡ್ಕ, ಅನಿರುದ್ಧ ವಾಸಿಷ್ಠ ಶರ್ಮಾ ಉಡುಪುಮೂಲೆ, ಶ್ರೀರಾಮ ಅಡ್ಕ, ಕೃಷ್ಣಕುಮಾರ ಅಡ್ಕ ಉಪಸ್ಥಿತರಿದ್ದರು
- ಯಕ್ಷತೂಣೀರ ಸಂಪ್ರತಿಷ್ಠಾನ
ಯಕ್ಷಗಾನ ಪ್ರದರ್ಶನ – ಕರ್ಮಣ್ಯೇವಾಧಿಕಾರಸ್ತೇ
ಸದಾ ಕ್ರಿಯಾಶೀಲ ವ್ಯಕ್ತಿತ್ವದ ಶ್ರೀ ರಾಮಕೃಷ್ಣ ಮಯ್ಯ ಸಾರಥ್ಯದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರು ಯಕ್ಷಕಲಾ ಪೋಷಕರ ಸಹಕಾರದೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ದಿನಾಂಕ 10.09.2020 ರ ಗುರುವಾರ ರಾತ್ರಿ ಘಂಟೆ 9ರಿಂದ ದೇವಿದಾಸ ಕವಿಯ ಕೃಷ್ಣಸಂಧಾನ ಪ್ರಸಂಗದ ಒಂದು ಭಾಗವನ್ನು ಸಂಯೋಜಿಸಿದ ‘ ಕರ್ಮಣ್ಯೇವಾಧಿಕಾರಸ್ತೇ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನವನ್ನು ನೀಡಲಿದ್ದಾರೆ.

ಏನಾದರೂ ಮಾಡುತ್ತಲೇ ಇರಬೇಕೆಂಬ ತುಡಿತವನ್ನು ಹೊಂದಿದ ಖ್ಯಾತ ಭಾಗವತರಾದ ರಾಮಕೃಷ್ಣ ಮಯ್ಯರ ನೇತೃತ್ವದ ಈ ಕಲಾವಿದರು ಈ ಪ್ರದರ್ಶನವನ್ನು ನೀಡಲಿದ್ದಾರೆ. ಈ ಪ್ರದರ್ಶನ sv vision ಯು ಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.
ಮಾಗದ ವಧೆ, ಕೌಶಿಕ ಪ್ರತಿಜ್ಞೆ, ಜಾಬಾಲಿ ನಂದಿನಿ – ಮೂರು ತಾಳಮದ್ದಳೆಗಳು
ರೋಟರಿ ಕ್ಲಬ್ ಮಡಂತ್ಯಾರು ಇವರ ಪ್ರಾಯೋಜಕತ್ವದಲ್ಲಿ ಮತ್ತು ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘ ಪಾರೆಂಕಿ, ರೊ। ಪ್ರಕಾಶ್ ಕಾರಂತ್ , ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ , ರೋಟರಿ ಕ್ಲಬ್ ಬಂಟ್ವಾಳ ಇವರುಗಳ ಸಹ ಪ್ರಾಯೋಜಕತ್ವದಲ್ಲಿ ಮೂರು ದಿನದ ಯಕ್ಷ ಸಂವಾದ ತಾಳಮದ್ದಳೆ ಕೂಟ ಜರಗಲಿದೆ. ದಿನಾಂಕ 11.09.2020 ರಂದು ಮಾಗದ ವಧೆ ಎಂಬ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಕಾವ್ಯಶ್ರೀ ಅಜೇರು,ಗುರುಪ್ರಸಾದ್ ಬೊಳಿಂಜಡ್ಕ, ಚಂದ್ರಶೇಖರ ಆಚಾರ್ಯ ಹಾಗೂ ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ವಾಸುದೇವ ರಂಗಾ ಭಟ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಲಿರುವರು.
ದಿನಾಂಕ 12.09.2020 ರಂದು ಕೌಶಿಕ ಪ್ರತಿಜ್ಞೆ ಎಂಬ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಚೈತನ್ಯ ಕೃಷ್ಣ ಪದ್ಯಾಣ,ಚಂದ್ರಶೇಖರ ಆಚಾರ್ಯ ಮತ್ತು ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಉಜಿರೆ ಅಶೋಕ ಭಟ್ ಭಾಗವಹಿಸಲಿರುವರು. ದಿನಾಂಕ 13.09.2020 ರಂದು ಜಾಬಾಲಿ ನಂದಿನಿ ಎಂಬ ಪ್ರಸಂಗ ತಾಳಮದ್ದಳೆ ರೂಪದಲ್ಲಿ ನಿಮ್ಮ ಮುಂದಿರಲಿದೆ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಶ್ರೀನಿವಾಸ ಬಳ್ಳಮಂಜ, ಪದ್ಮನಾಭ ಉಪಾಧ್ಯಾಯ, ಚಂದ್ರಶೇಖರ ಆಚಾರ್ಯ ಮತ್ತು ಮುಮ್ಮೇಳದಲ್ಲಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ದಿನೇಶ ಶೆಟ್ಟಿ ಕಾವಳಕಟ್ಟೆ, ರಾಜೇಶ ಕೃಷ್ಣ ಮಚ್ಚಿನ ಭಾಗವಹಿಸರುವರು. ಸಮಯ ಪ್ರತಿದಿನ ಸಂಜೆ 6 ರಿಂದ ರಾತ್ರಿ 8.30. ಈ ಕಾರ್ಯಕ್ರಮ ಯೂ ಪ್ಲಸ್ ಟಿವಿ ಯಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಯು ಟ್ಯೂಬ್ ಮತ್ತು ಫೇಸ್ ಬುಕ್ ಗಳಲ್ಲೂ ನೇರಪ್ರಸಾರಗೊಳ್ಳಲಿದೆ.





