ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ 2019 ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಗಳನ್ನು ಘೋಷಣೆ ಮಾಡಲಾಗಿದೆ. ಅದರಂತೆ ಪಾರ್ತಿಸುಬ್ಬ ಪ್ರಶಸ್ತಿಗೆ ಶ್ರೀ ಅಂಬಾತನಯ ಮುದ್ರಾಡಿ ಆಯ್ಕೆಯಾಗಿದ್ದಾರೆ. 2019 ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಡಾ. ಚಂದ್ರಶೇಖರ ದಾಮ್ಲೆ, ಡಾ. ಆನಂದರಾಮ ಉಪಾಧ್ಯ, ಡಾ. ರಾಮಕೃಷ್ಣ ಗುಂದಿ, ಶ್ರೀ ಕೆ.ಸಿ. ನಾರಾಯಣ, ಡಾ. ಚಂದ್ರು ಕಾಳೇನಹಳ್ಳಿ ಸೇರಿದ್ದಾರೆ. ಯಕ್ಷಸಿರಿ ಪ್ರಶಸ್ತಿಗೆ ಭಾಜನರಾದವರೆಂದರೆ ಶ್ರೀ ನಲ್ಲೂರು ಜನಾರ್ದನ ಆಚಾರ್ ಎನ್. ಜಿ., ಶ್ರೀ ಉಬರಡ್ಕ ಉಮೇಶ ಶೆಟ್ಟಿ, ಶ್ರೀ ಕುರಿಯ ಗಣಪತಿ ಶಾಸ್ತ್ರಿ, ಶ್ರೀ ಆರ್ಗೋಡು ಮೋಹನದಾಸ ಶೆಣೈ, ಶ್ರೀ ಮಹಮ್ಮದ್ ಗೌಸ್, ಶ್ರೀ ಮೂರೂರು ರಾಮಚಂದ್ರ ಹೆಗಡೆ, ಶ್ರೀ ಎಂ. ಎನ್. ಹೆಗಡೆ ಹಳವಳ್ಳಿ, ಶ್ರೀ ಹಾರಾಡಿ ಸರ್ವೋತ್ತಮ ಗಾಣಿಗ, ಶ್ರೀ ಬಿ. ರಾಜಣ್ಣ, ಶ್ರೀ ಎ. ಜಿ. ಅಶ್ವತ್ಥನಾರಾಯಣ ಒಳಗೊಂಡಿದ್ದಾರೆ. ಇನ್ನು 2019 ನೇ ಸಾಲಿನ ಪುಸ್ತಕ ಬಹುಮಾನವನ್ನು ಶ್ರೀ ಹೊಸ್ತೋಟ ಮಂಜುನಾಥ ಭಾಗವತರು, ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯ ಮತ್ತು ಡಾ. ಚಿಕ್ಕಣ್ಣ ಯಣ್ಣೆಕಟ್ಟೆಯವರು ಪಡೆದಿದ್ದಾರೆ. ಹೊಸ್ತೋಟ ಮಂಜುನಾಥ ಭಾಗವತರ ಪರವಾಗಿ ಶ್ರೀ ಗುರುದೇವ ಪ್ರಕಾಶನ ಒಡಿಯೂರು ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಯಕ್ಷಗಾನ ವೇಷಧಾರಿಗಳಾದ ಶ್ರೀ ವಸಂತ ಗೌಡ ಕಾಯರ್ತಡ್ಕ ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 7ನೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 4ರಂದು ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ವಸಂತ ಗೌಡ ಕಾಯರ್ತಡ್ಕ ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 04 ಶುಕ್ರವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಮಾತಿನ ಮಂಟಪ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ.
ಚಂದನ್ ಶೆಟ್ಟಿ, ಹೊಸ ಪ್ರಯೋಗ ಮತ್ತು ಯಕ್ಷಗಾನ
ಇತ್ತೀಚಿಗೆ ಅಂದರೆ ಒಂದೆರಡು ದಿನಗಳ ಹಿಂದೆ ಹೊಸ ಪ್ರಯೋಗಕ್ಕೆ ಮೊದಲು ಎಚ್ಚರ ಎಂದು ಬರೆದಿದ್ದೆ. ಈಗ ಮತ್ತೊಮ್ಮೆ ಅದೇ ವಿಷಯದ ಬಗ್ಗೆ ಬರೆಯಬೇಕಾಗಿದೆ. ಈಗಾಗಲೇ ‘ಕೋಲು ಮಂಡೆ’ ಹಾಡಿನ ವಿವಾದ ಇನ್ನೂ ತಣ್ಣಗಾಗಿಲ್ಲ. ಧಾರ್ಮಿಕ ಪುರುಷರ, ನಮ್ಮ ನಾಡಿನ ಶ್ರೀಮಂತ ಜಾನಪದ ಪುಣ್ಯ ಪುರುಷರ ಹಾಡುಗಳನ್ನು ಕೂಡ ರಿಮಿಕ್ಸ್ ಮಾಡಿ ರಾಪ್ ಹಾಡುಗಳನ್ನಾಗಿ ಪರಿವರ್ತಿಸಿ ಆ ಮೂಲಕ ಜನಪ್ರಿಯತೆ ಪಡೆಯುವ ಹುಚ್ಚು ಕೆಲವರಿಗಿದೆ. ಚಂದನ್ ಶೆಟ್ಟಿಯವರ ಪ್ರಕರಣವು ರಾಜ್ಯಾದ್ಯಂತ ಮಾತ್ರವಲ್ಲ ಪ್ರಪಂಚದಾದ್ಯಂತ ವಿವಾದದ ಅಲೆಯನ್ನೇ ಎಬ್ಬಿಸಿತು. ನಮ್ಮ ಪುರಾಣದ ಅಥವಾ ಪೂರ್ವ ಪರಂಪರೆಯ ವ್ಯಕ್ತಿತ್ವವನ್ನು ಚಿತ್ರಿಸುವಾಗ ಅವರ ಘನತೆಗೆ ಕುಂದುಂಟಾದರೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಸತ್ಯವನ್ನು ಈ ಪ್ರಕರಣದಿಂದ ನಾವು ತಿಳಿಯಬೇಕು. ಆ ಹಾಡಿನ ಪಾತ್ರಗಳ ವೇಷಭೂಷಣಗಳು ಹೇಗಿರಬೇಕು ಎಂಬುದರ ಯೋಚನೆಯನ್ನೂ ಮಾಡದೇ ಒಟ್ಟಾರೆ ಈಗಿನ ಯುವಜನಾಂಗವನ್ನು ಆಕರ್ಷಿಸಲು ಈ ರೀತಿಯ ಪ್ರಯೋಗಕ್ಕೆ ಮುಂದಾದದ್ದು ವಿಪರ್ಯಾಸ. ಅಷ್ಟು ಒಳ್ಳೆಯ ಸುಮಧುರವಾದ ಜಾನಪದ ಹಾಡಿಗೆ ಕೋಲು ಮಂಡೆ ರಾಪ್ ಎಂಬ ಹೆಸರು ಕೊಟ್ಟು ಹಾಡಿನ ಮೂಲ ಸೌಂದರ್ಯವನ್ನೇ ಕೆಡಿಸಿಬಿಟ್ಟರೆ ಏನಾದೀತು? ಇದರಿಂದ ಜಾನಪದ ಅಭಿಮಾನಿಗಳು ಕೆರಳಿದರು. ಪ್ರತಿಭಟನೆಯ ವಾಸನೆ ಸಿಕ್ಕಿದಾಗ ಆ ಹಾಡನ್ನು ಚಂದನ್ ಶೆಟ್ಟಿ ಯು ಟ್ಯೂಬ್ ನಿಂದ ಅಳಿಸಿ ಹಾಕಬೇಕಾಯಿತು. ಮಾತ್ರವಲ್ಲ ಜಾನಪದ ಅಭಿಮಾನಿಗಳ ಕ್ಷಮೆಯನ್ನೂ ಕೇಳಬೇಕಾಯಿತು. ಈ ರೀತಿಯ ಹೊಸ ದೃಷ್ಟಿಕೋನದ ಪ್ರಯೋಗ ಎಲ್ಲಾ ರಂಗದಲ್ಲೂ ಇದೆ. ಸಾಹಿತ್ಯ ಕ್ಷೇತ್ರ ಈ ಚಾಳಿಯಲ್ಲಿ ಮುಂಚೂಣಿಯಲ್ಲಿದೆ. ಸಿನಿಮಾ, ಸಂಗೀತ, ನಾಟ್ಯಕ್ಷೇತ್ರ, ಎಲ್ಲಾ ರಂಗಕಲೆಗಳು ಹೀಗೆ ಎಲ್ಲದರಲ್ಲೂ ಕೆಲವು ಅಸಂಬದ್ಧ ಪ್ರಯೋಗಗಳೇ ನಡೆಯುತ್ತವೆ. ಯಕ್ಷಗಾನ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.
ಯಕ್ಷಗಾನದಲ್ಲಿ ಏನು ಬೇಕಾದರೂ ತುರುಕಿ, ಯಾವ ಪ್ರಸಂಗ ಆಡಿದರೂ ಆಕ್ಷೇಪವಿಲ್ಲ. ಯಾಕೆಂದರೆ ಈಗಾಗಲೇ ಹಲವಾರು ಕಾಲ್ಪನಿಕ ಪ್ರಸಂಗಗಳ ಪ್ರದರ್ಶನ ನಡೆದಿದೆ. ಪುರಾಣ ಪ್ರಸಂಗಗಳನ್ನು ಮಾತ್ರ ಆಡಬೇಕೆಂದು ಎಲ್ಲಿಯೂ ನಿಯಮವಿಲ್ಲ. ಆದರೆ ಪುರಾಣ ಪ್ರಸಂಗಗಳನ್ನು ಆಡುವಾಗ ಮಾತ್ರ ಸರಿಯಾಗಿ ಪ್ರದರ್ಶಿಸಿ. ಆ ಕತೆಯೊಳಗೆ ಏನೇನನ್ನೋ ತುರುಕಲು ಹೋಗುವುದು ಅಕ್ಷಮ್ಯ. ಕತೆಯೊಳಗೆ ಇಲ್ಲದ ಪಾತ್ರದ ಚಿಂತನೆಗಳನ್ನು ಕಲಾವಿದನ ಸ್ವ ಚಿಂತನೆಯೊಂದಿಗೆ ಕಿಸೆಯಿಂದ ತೆಗೆದ ಮಾತಿನ ಮುತ್ತುಗಳನ್ನು ರಂಗದಲ್ಲಿ ಉದುರಿಸುವುದು ನಮ್ಮ ಪುರಾಣಗಳಿಗೆ ಮಾಡುವ ಅವಮಾನ. ಕೆಲವರಿಗೆ ಯೋಚನೆಗಳ ನಾಗಾಲೋಟವೇ ಉಂಟಾಗುತ್ತದೆ. ಹೊಸತು ಏನಾದರೂ ಕೊಡಬೇಕೆಂಬ ತುಡಿತ. ಇರಲಿ. ಅದು ಒಳ್ಳೆಯದೇ. ಆದರೆ ನವನಾವೀನ್ಯ ಪ್ರಯೋಗಗಳ ಆತುರದಲ್ಲಿ ಅಬದ್ಧಗಳನ್ನು ಸೃಷ್ಟಿಸಿದರೆ ಅದು ಆಕ್ಷೇಪ ಮತ್ತು ಪ್ರತಿಭಟನೆಗಳಿಗೆ ಕಾರಣವಾದೀತು. ಈಗ ಎಲ್ಲವೂ ಹಾಳಾಗಿದೆ ಎಂದು ವಿಮರ್ಶಕರು ಬೊಬ್ಬೆ ಹೊಡೆಯುವುದರಲ್ಲಿ ಏನೂ ಆಶ್ಚರ್ಯವಿಲ್ಲ. ನಿಜವಾಗಿಯೂ ಅವರ ಕಾಳಜಿ ಮೆಚ್ಚಬೇಕಾದ್ದೇ. ಈಗ ಎಲ್ಲರಿಗೂ ಹೇಗಾದರೂ ಸರಿ. ತಾನು ಎಲ್ಲರಿಗಿಂತ ಭಿನ್ನ ಎಂದು ಗುರುತಿಸಿಕೊಳ್ಳುವ ಚಪಲ. ಇದು ಎಲ್ಲ ರಂಗವನ್ನೂ ಕಾಡುವ ಭೂತ. ಸಿನಿಮಾ ರಂಗ ಇಂತಹಾ ಹಲವಾರು ಪ್ರಯೋಗಗಳನ್ನು ಕಂಡಿದೆ. ಹಾಗೆಯೆ ಪ್ರತಿಭಟನೆ ವಿರೋಧಗಳನ್ನೂ ಎದುರಿಸಬೇಕಾಗಿ ಬಂದಿದೆ. ನ್ಯಾಯಾಲಯದ ಮೆಟ್ಟಿಲು ಹತ್ತಿ ಇಳಿಯಬೇಕಾದ ಪರಿಸ್ಥಿತಿ ಬರುವ ಮುನ್ನವೇ ಯೋಚನೆ ಮಾಡಬೇಕಾದ್ದು ಬುದ್ಧಿವಂತನ ಲಕ್ಷಣ. ಈಗ ನೀವು ಯಾವುದೇ ಪುರಾಣಗಳನ್ನೂ ನಿಮಗೆ ಬೇಕಾದಂತೆ ಬದಲಿಸಿ ರಂಗ ಪ್ರಯೋಗ ಮಾಡಬಹುದು ಎಂದು ಭಾವಿಸಿದರೆ ಅದು ನಿಮ್ಮ ಮೂರ್ಖತನವಲ್ಲದೆ ಮತ್ತೇನು? ಇತ್ತೀಚೆಗಿನ ಚಂದನ್ ಶೆಟ್ಟಿಯ ಉದಾಹರಣೆ ನಮ್ಮ ಕಣ್ಣ ಮುಂದಿದೆ. ನಮ್ಮದೇ ಧರ್ಮ ನಾವು ಏನು ಬೇಕಾದರೂ ಮಾಡಬಹುದು. ಪುರಾಣ ಪುಣ್ಯ ಕತೆಗಳನ್ನು ತಿರುಚಿ ನಮಗೆ ಬೇಕಾದಂತೆ ಬರೆಯಬಹುದು ಎಂದು ಲೇಖಕರೂ ತಿಳಿದುಕೊಂಡಂತಿದೆ. ಬರಹಗಾರರು ಸ್ವಾತಂತ್ರ್ಯದ ಎಲ್ಲೆಮೀರಿ ಏನು ಬೇಕಾದರೂ ಬರೆಯಬಹುದು ಎಂದು ತಿಳಿದುಕೊಂಡಂತಿದೆ. ಹಲವಾರು ಎಡಚ ಬರಹಗಾರರು ಏನೇನೆಲ್ಲಾ ತಮಗೆ ತೋಚಿದಂತೆ ಬರೆದು ಹಾಕುತ್ತಿದ್ದಾರೆ. ಅದನ್ನು, ಅಂತಹ ಪಾತ್ರಚಿತ್ರಣಗಳನ್ನು ನಾವು ರಂಗದಲ್ಲಿ ಪ್ರದರ್ಶನ ನೀಡಲು ಕಾತರಿಸುತ್ತಿದ್ದೇವೆ. ಆದರೆ ಇತರ ಯಾವುದೇ ಧರ್ಮಗಳು ಹಾಗೆ ಪುರಾಣ ಗ್ರಂಥಗಳನ್ನು ತಿರುಚಲು ಯಾರಿಗೂ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ಧರ್ಮಗಳನ್ನು, ಧರ್ಮಗ್ರಂಥಗಳಿಗೆ ಚ್ಯುತಿ ತರುವಂತಹ ಬರಹಗಳಿಗೆ ಅಲ್ಲಿ ನಿಷೇಧವಿದೆ. ಧರ್ಮಗ್ರಂಥಗಳ ವಿರುದ್ಧ ಏನೂ ಬರೆಯುವ ಹಾಗಿಲ್ಲ. ಆ ಧರ್ಮಗಳಿಗೆ ಹೊರಗಿನವರು ಬರೆಯುವ ಮಾತನ್ನು ಬಿಡೋಣ. ಆಯಾಯಾ ಧರ್ಮಕ್ಕೆ ಒಳಪಟ್ಟವರೇ ಆ ಸಾಹಸಕ್ಕೆ ಮುಂದಾಗುವುದಿಲ್ಲ. ಅವರಿಗೆ ಧರ್ಮಶ್ರದ್ಧೆಯೂ ಇದೆ ಅದರ ಜೊತೆಗೆ ಮತಾಂಧತೆಯೂ ಇರಬಹುದೇನೋ. ಯಾಕೆಂದರೆ ಅವೆರಡೂ ಬೇರೆ ಬೇರೆಯಾದ ಸಂಗತಿಗಳು. ಮೊನ್ನೆಯ ಬೆಂಗಳೂರು ಘಟನೆಯು ಇದಕ್ಕೆ ಒಂದು ಉದಾಹರಣೆ.
ಆದರೆ ಮಹಾಭಾರತ, ರಾಮಾಯಣಗಳನ್ನು ಯಾರು ಬೇಕಾದರೂ ತಿರುಚಿ ಬರೆಯಬಹುದು. ಇಲ್ಲಿ ಸ್ವಲ್ಪ ಹೆಚ್ಚಿನ ಸ್ವಾತಂತ್ರ್ಯ ಕಂಡುಬರುತ್ತದೆ. ಅದು ಹೃದಯವೈಶಾಲ್ಯತೆಯೋ ಅಥವಾ ಧರ್ಮದ ಬಗೆಗಿನ ಅಸಡ್ಡೆಯೋ ಎಂದು ಅರ್ಥ ಆಗುವುದಿಲ್ಲ. ನಮ್ಮಲ್ಲಿ ಕೆಲವು ಬರಹಗಾರರಿಗೆ ಅಥವಾ ಕಲಾವಿದರಿಗೆ ಪುರಾಣ ಪಾತ್ರಗಳ ಬಗ್ಗೆ ವಿಪರೀತ ಮೋಹ ಬಂದುಬಿಡುತ್ತದೆ!!! ಅದಕ್ಕೆ ನೋಡಿ ವಿಪರೀತ ಪಾತ್ರಚಿತ್ರಣಗಳಿಗೆ ಮನಮಾಡುತ್ತಿದ್ದಾರೆ.ಪುರಾಣಗಳಲ್ಲಿ ಇಲ್ಲ ಸಲ್ಲದ್ದನ್ನೆಲ್ಲಾ ತಮ್ಮದೇ ದೃಷ್ಟಿಕೋನದಿಂದ ಚಿತ್ರಿಸಿ ಬರೆಯುತ್ತಿದ್ದಾರೆ. ದ್ರೌಪದಿಯ ಬಗ್ಗೆ ಯಾರೋ ಏನನ್ನೂ ಬರೆದ ಹಾಗೆ ಓದಿದ ನೆನಪಾಗುತ್ತದೆ. ದ್ರೌಪದಿಗೆ ಮನದ ಅಂತರಾಳದಲ್ಲಿ ಯಾರದೋ ಮೇಲೆ ಪ್ರೇಮವಿತ್ತು ಎನ್ನುವುದನ್ನು ಆತ ತನ್ನದೇ ಆದ ದೃಷ್ಟಿಕೋನದಲ್ಲಿ ಊಹಿಸಿ ಬರೆದಿದ್ದ. ಕುಂತಿಯ ಮನದ ಅಂತರಾಳವನ್ನು ಬರೆದರು. ಸೀತೆ ಯೋಚಿಸದ್ದನ್ನೆಲ್ಲಾ ಕತೆಯಾಗಿ ಬರೆದರು. ಕರ್ಣನ ಯೋಚನೆಗಳ ಬಗ್ಗೆ, ಭಾನುಮತಿಯ ಗುಪ್ತ ಆಲೋಚನೆಗಳ ಬಗ್ಗೆ ಹೀಗೆ ಹೊಸ ಹೊಸ ಭಾವಗಳನ್ನು ಚಿತ್ರಿಸಿದರು. ಅಂಬೆಯ ಹೊಸ ಹೊಸ ಯೋಚನೆಗಳು, ತುಮುಲಗಳನ್ನೆಲ್ಲಾ ಪ್ರಕಟಪಡಿಸಿದರು.
ಇದು ಇಂದು ನಿನ್ನೆಯ ವಿಷಯವಾಯಿತು. ಪುರಾಣ ಕಾಲದಿಂದ ಮೊದಲ್ಗೊಂಡು ಈ ಭಿನ್ನತೆ ಬದಲಾವಣೆಗಳು ಆಗುತ್ತಲೇ ಇವೆ ಎಂಬುದನ್ನೂ ಒಪ್ಪಿಕೊಳ್ಳಬೇಕು. ಆದರೆ ಆಗಿನ ಬದಲಾವಣೆಗಳು ಧರ್ಮಕ್ಕೆ ಚ್ಯುತಿಯಾಗುವಂತೆ ಅವಹೇಳನಕಾರಿಯಾಗಿ ಇರಲಿಲ್ಲ ಎಂಬುದೂ ಸತ್ಯ, ವಾಲ್ಮೀಕಿ ರಾಮಾಯಣಕ್ಕೂ ತೊರವೆ ರಾಮಾಯಣಕ್ಕೂ ಅಲ್ಪಸ್ವಲ್ಪ ವ್ಯತ್ಯಾಸಗಳು. ಇನ್ನೂ ಕೆಲವು ಕವಿಗಳು ಬರೆದ ರಾಮಾಯಣಕ್ಕೂ ಮೂಲ ರಾಮಾಯಣಕ್ಕೂ ಏನೋ ವ್ಯತ್ಯಾಸ, ಭಿನ್ನತೆಗಳು. ವ್ಯಾಸ ಭಾರತ, ಕುಮಾರವ್ಯಾಸ ಭಾರತದಲ್ಲೂ ಕಾಣುವ ವ್ಯತ್ಯಾಸಗಳಿವೆ. ಪಂಪನಂತೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತನಗೆ ಆಶ್ರಯ ಕೊಟ್ಟ ದೊರೆಯನ್ನೇ ಅರ್ಜುನನಿಗೆ ಹೋಲಿಸಿ ಬರೆದಿದ್ದಾನೆ. ಮಾತ್ರವಲ್ಲದೆ ತನ್ನ ಕಾವ್ಯಕ್ಕೆ ವಿಕ್ರಮಾರ್ಜುನ ವಿಜಯವೆಂದೇ ಹೆಸರಿಸಿದ್ದಾನೆ. ಆದರೆ ಒಂದಂತೂ ಸತ್ಯ. ಧರ್ಮಶ್ರದ್ದೆಯವರು ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಬದಲಾವಣೆ ಹೊಸತನ ಎಂದು ಪುರಾಣ ಪಾತ್ರಗಳನ್ನು ಅವಹೇಳಕಾರಿಯಾಗಿ ಚಿತ್ರಿಸುತ್ತಿರುವವರು ಸಾವಿರ ಬಾರಿ ಯೋಚಿಸಿ ಮುಂದಡಿಯಿಡಬೇಕಾದುದು ಇಂದಿನ ಅನಿವಾರ್ಯತೆ. ಅದನ್ನು ಬಿಟ್ಟು ಆನೆ ನಡೆದದ್ದೇ ದಾರಿ ಎಂಬಂತೆ ಮುಂದೆ ಸಾಗಿದರೆ ದೊಡ್ಡ ಕಂದಕಕ್ಕೆ ಬಿದ್ದ ಆನೆಯ ಗತಿಯಾದೀತು.
ಮಾನಸಿ ಸುಧೀರ್ – ಮನಸೆಳೆಯುವ ಅಭಿನಯದ ಜೊತೆ ಭಾವಗಾನ
ಮಾನಸಿ ಸುಧೀರ್ .. ಹೌದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೀಕ್ಷಣೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿರುವ ವಿಡಿಯೋಗಳಲ್ಲಿ ಮಾನಸಿ ಸುಧೀರ್ ಅವರ ಹಾಡುಗಳು ಕೂಡಾ ಒಂದು. ಅವರ ಏನೀ ಅದ್ಭುತವೇ ಎಂಬ ಹಾಡು ಭಾರೀ ಮೆಚ್ಚುಗೆಯನ್ನು ಪಡೆಯುವುದರ ಜೊತೆಗೆ ವೀಕ್ಷಕರ ಸಂಖ್ಯೆಯಲ್ಲಿಯೂ ಕೂಡಾ ಜನಪ್ರಿಯತೆಯನ್ನು ಸಾಧಿಸಿತು.
ಈ ಏನೀ ಅದ್ಭುತವೇ ಎಂಬ ಹಾಡನ್ನು ಬರೆದವರು ಪ್ರಸಿದ್ಧ ಕವಿ ಬಿ. ಆರ್ . ಲಕ್ಷ್ಮಣ ರಾವ್. ಸಂಗೀತ ಸಂಯೋಜಿಸಿದವರು ಶ್ರೀ ಗುರುರಾಜ ಮಾರ್ಪಳ್ಳಿ. ಇಲ್ಲಿ ಮಾನಸಿ ಸುಧೀರ್ ಅವರ ಕಂಠದ ಇಂಪಿಗಿಂತಲೂ ಅಭಿನಯವೂ ಮುಖದ ಭಾವನೆಗಳೂ ಹೆಚ್ಚು ಇಷ್ಟವಾಗುತ್ತವೆ. ಆ ಮೂಲಕ ಅವರು ತಾನೊಬ್ಬ ಉತ್ತಮ ನಟಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲಾ ಹಾಡುಗಳಲ್ಲಿಯೂ ಅವರ ಅಭಿನಯವೇ ಗಮನ ಸೆಳೆಯುತ್ತದೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಭರತನಾಟ್ಯ ಪ್ರದರ್ಶನ ಮತ್ತು ಅವರು ತಮ್ಮ ಪತಿ ಸುಧೀರ್ ರಾವ್ ಕೊಡವೂರು ಅವರೊಂದಿಗೆ ನೃತ್ಯನಿಕೇತನ ಎಂಬ ಭರತನಾಟ್ಯ ಶಾಲೆಯನ್ನು ನಡೆಸುವ ನಿಬಿಡ ಕಾರ್ಯಗಳ ನಡುವೆ ಅವರ ಉಪನ್ಯಾಸಕ ವೃತ್ತಿಯೂ ಅವರು ಮೊದಲು ಕಲಿತಿದ್ದ ಸಂಗೀತವನ್ನು ಮರೆಮಾಡಿತು. ಆದರೆ ಕೊರೋನಾ ಲಾಕ್ ಡೌನ್ ಅವರ ಭರತನಾಟ್ಯ ಶಾಲೆಯ ತರಗತಿಗಳಿಗೆ ತಡೆಯುಂಟುಮಾಡಿದ್ದರಿಂದ ಅವರೊಳಗಿದ್ದ ಸಂಗೀತ ಜಾಗೃತಗೊಂಡಿತು.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಒಂದೊಂದೇ ಅದ್ಭುತವಾದ ವೀಡಿಯೋಗಳು ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆಗತೊಡಗಿದವು. ಲಕ್ಷ ಸಂಖ್ಯೆಯ ವೀಕ್ಷಕರನ್ನೂ ತಲುಪಿತು. ಮಾನಸಿ ಸುಧೀರ್ ಕಿರುತೆರೆ ನಟಿಯೂ ಹೌದು. ಕೆಲವು ಪೌರಾಣಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ಒಂದು ಹಾಡು ಅವರದೇ ಚಾನೆಲ್ ನಲ್ಲಿ ನೋಡಿ.
ನಿಜವಲ್ಲದ ಅವ್ಯವಹಾರದ ಆರೋಪ – ಯಕ್ಷಗಾನ ಕಲಾವಿದರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ
ಕೊರೋನಾ ಬಾಧಿಸುವಿಕೆಯಿಂದ ಉಂಟಾದ ಲಾಕ್ ಡೌನ್ ಸಮಯದಲ್ಲಿ ಆದಾಯವಿಲ್ಲದೆ ಸಂಕಷ್ಟಕ್ಕೀಡಾಗಿದ್ದ ಯಕ್ಷಗಾನ ಕಲಾವಿದರಿಗೆ ಸರಕಾರ ಬಿಡುಗಡೆ ಮಾಡಿದ ಪರಿಹಾರ ಧನದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ನಿಜವಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ಹೇಳಿದ್ದಾರೆ. ನಿಗದಿಪಡಿಸಿದ ಅರ್ಹತೆಯ ಆಧಾರದ ಮೇಲೆ ಪರಿಹಾರದ ಸಹಾಯಧನ ಬಿಡುಗಡೆ ಆಗಿದೆ. ಆದರೆ ಸೂಕ್ತ ಮಾಹಿತಿಯ ಕೊರತೆಯಿಂದಾಗಿ ಕೆಲವು ಕಲಾವಿದರು ಈ ಸೌಲಭ್ಯದಿಂದ ವಂಚಿತರಾಗಿರುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಿಗದಿಪಡಿಸಿದ ಅರ್ಹತೆಯ ಆಧಾರದ ಮೇಲೆ ಸಹಾಯಧನ ಸ್ವೀಕರಿಸಿದ ಕಲಾವಿದರಲ್ಲಿ ಆರ್ಥಿಕವಾಗಿ ಸಬಲರಾದವರೂ ಇರಬಹುದು. ಆದರೆ ಅವರಿಗೂ ಅರ್ಹತೆಯಿಂದಲೇ ಸಹಾಯಧನ ನೀಡಲಾಗಿದೆ. ಸಹಾಯಧನದಿಂದ ವಂಚಿತರಾದ ಕಲಾವಿದರು ಸೂಕ್ತ ಧಾಖಲೆ ಸಲ್ಲಿಸಿದರೆ ಅವರಿಗೂ ಪರಿಹಾರ ಧನ ನೀಡಲಾಗುವುದು ಎಂದು ಅವರು ಹೇಳಿದರು. ಯಕ್ಷಗಾನ ಕಲಾವಿದರ ವಲಯದಲ್ಲಿ ಎಲ್ಲಾ ಜಿಲ್ಲೆಗಳ ಕಲಾವಿದರಿಗೂ ಪರಿಹಾರ ಧನ ನೀಡಲಾಗಿದೆ. ಜಿಲ್ಲೆಗಳ ಆಧಾರದಲ್ಲಿ ತಾರತಮ್ಯ ಮಾಡಿಲ್ಲ. ಈಗಾಗಲೇ ಒಟ್ಟು 2000 ಕ್ಕೂ ಹೆಚ್ಚು ಕಲಾವಿದರು ಅರ್ಜಿ ಸಲ್ಲಿಸಿದ್ದರೂ ಸೂಕ್ತ ಧಾಖಲೆ ಮಾಹಿತಿಗಳ ಆಧಾರದ ಮೇಲೆ 1507 ಜನರಿಗೆ 30 ಲಕ್ಷಕ್ಕೂ ಹೆಚ್ಚು ಮೊತ್ತದ ಪರಿಹಾರಧನ ವಿತರಿಸಲಾಗಿದೆ. ಇನ್ನೂ ಹಲವಾರು ಮಂದಿಗೆ ಅರ್ಜಿಯಲ್ಲಿ ಉಂಟಾದ ದೋಷದಿಂದ ಮತ್ತು ಮಾಹಿತಿಯ ಕೊರತೆಯಿಂದ ಪರಿಹಾರ ಧನ ದೊರಕಿಲ್ಲ ಎಂಬ ದೂರುಗಳು ಗಮನಕ್ಕೆ ಬಂದಿವೆ. ಅಂತಹ ಕಲಾವಿದರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಅವಕಾಶ ಸೆಪ್ಟೆಂಬರ್ 15 ರ ವರೆಗೆ ಇರುವುದೆಂದು ಶ್ರೀ ಹೆಗಡೆ ತಿಳಿಸಿದರು. ವಂಚಿತ ಕಲಾವಿದರು ಈ ದಿನಾಂಕದೊಳಗೆ ಸೂಕ್ತ ದಾಖಲೆಗಳೊಂದಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಸಹಾಯಧನ ಕೊಡಿಸಲು ನೆರವಾಗುತ್ತೇವೆ ಎಂದು ಶ್ರೀ ಎಂ.ಎ. ಹೆಗಡೆ ತಿಳಿಸಿದರು.
ಹಿಮ್ಮೇಳ ಕಲಾವಿದರಾದ ಶ್ರೀ ಎ. ಪಿ. ಪಾಠಕ್ ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 5ನೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 2 ರಂದು ಪ್ರಸಿದ್ಧ ಯಕ್ಷಗಾನ ಹಿಮ್ಮೇಳ ಕಲಾವಿದರಾದ ಶ್ರೀ ಎ. ಪಿ. ಪಾಠಕ್ ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 02 ಬುಧವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಮಾತಿನ ಮಂಟಪ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ.
ಮುರಾರಿ ಕಡಂಬಳಿತ್ತಾಯರ ಮದುವೆಯ ದಿನ ಗಾನವೈಭವ – ಮಧುಸೂದನ ಅಲೆವೂರಾಯರ ವೀಡಿಯೊ ನೋಡಿ
ಕಟೀಲು ಮೇಳದ ಖ್ಯಾತ ಮದ್ದಳೆಗಾರರಾದ ಶ್ರೀ ಮುರಾರಿ ಕಡಂಬಳಿತ್ತಾಯರ ವಿವಾಹ ಸಮಾರಂಭ ಇತ್ತೀಚಿಗೆ ನಡೆಯಿತು. ಅವರ ಮದುವೆಯ ದಿನ ಸಹಜವಾಗಿಯೇ ಯಕ್ಷಗಾನ ಕಲಾವಿದರಲ್ಲಿ ಹಲವರು ಆಗಮಿಸಿದ್ದರು. ಇಷ್ಟು ಜನ ಕಲಾವಿದರೆಲ್ಲಾ ಒಂದೆಡೆಯಲ್ಲಿ ಸೇರಿದರೆ ಮತ್ತೆ ಕೇಳುವುದೇನು? ಕೂಡಲೇ ಅಲ್ಲಿ ದಿಢೀರ್ ಗಾನವೈಭವದ ರಸಪಾಕದ ಔತಣ ಸಿದ್ಧವಾಯಿತು. ಈ ಗಾನವೈಭವದ ವೀಡಿಯೋ ಚಿತ್ರೀಕರಣ ಮಾಡಿದ ಮಧುಸೂದನ ಅಲೆವೂರಾಯರು ಯು ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿಯೇ ಬಿಟ್ಟರು. ಅಲೆವೂರಾಯರ ಈ ವಿಡಿಯೋದ ಲಿಂಕ್ ಕೆಳಗೆ ಕೊಡಲಾಗಿದೆ. ನೋಡಿ ಆನಂದಿಸಿ.
ಶ್ರೀ ಚಂದ್ರಶೇಖರ ಧರ್ಮಸ್ಥಳರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 4ನೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 1 ರಂದು ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಚಂದ್ರಶೇಖರ ಧರ್ಮಸ್ಥಳರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 01 ಮಂಗಳವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಈ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ.