ಪ್ರಸಿದ್ಧ ಹಿಮ್ಮೇಳ ಕಲಾವಿದ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರ ‘ ಅಗರಿ ಮಾರ್ಗ’ ಕೃತಿಗೆ 2019 ನೇ ಸಾಲಿನ ಯಕ್ಷಗಾನ ಅಕಾಡೆಮಿ ಪುಸ್ತಕ ಬಹುಮಾನ ಪ್ರಶಸ್ತಿ ಬಂದಿದೆ. ಬ್ಯಾಂಕ್ ಅಧಿಕಾರಿಯಾಗಿ, ಯಕ್ಷಗಾನ ಕಲಾವಿದರಾಗಿ ಮತ್ತು ಸಾಹಿತಿಯಾಗಿ ಮೂರರಲ್ಲೂ ಯಶಸ್ಸನ್ನು ಸಾಧಿಸಿದ ಕೆಲವೇ ಕೆಲವು ಮಹಾನುಭಾವರ ಸಾಲಿಗೆ ಉಳಿತ್ತಾಯರೂ ಸೇರ್ಪಡೆಯಾಗಿದ್ದಾರೆ. ಬ್ಯಾಂಕ್ ಉದ್ಯೋಗಸ್ಥರಾಗಿ ಅವರ ಜವಾಬ್ದಾರಿಯೂ ಬಹಳ ದೊಡ್ಡದೇ. ಕಲಾವಿದನಾಗಿ ಯಶಸ್ಸನ್ನು ಸಾಧಿಸಲೂ ಅದಕ್ಕಾಗಿ ಬಹಳಷ್ಟು ಸಮಯವನ್ನು ಮೀಸಲಿಡಬೇಕಾಗುತ್ತದೆ. ಸಾಹಿತಿಗೆ ಅಧ್ಯಯನದ ಜೊತೆಗೆ ಕವಿಹೃದಯವೂ ಇರಬೇಕಾಗುತ್ತದೆ. ಈ ಮೂರನ್ನೂ ಅವರು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂದು ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಉಳಿತ್ತಾಯರು ಹೆಚ್ಚಿನ ಭಾಗವತರ ಆಯ್ಕೆಯ ಮದ್ದಳೆಗಾರ ಎಂಬುದು ನನಗೆ ತಿಳಿದಿದೆ. ಯಾಕೆಂದರೆ ಭಾಗವತರ ಹಾಡಿಗೆ ಒದಗುವ ವಾದನದ ಶೈಲಿ ಅವರದ್ದು. ಇದಕ್ಕೆ ಭಾಗವತರ ಹಾಡಿನ ಶೈಲಿಯನ್ನು ಸಂಪೂರ್ಣ ತಿಳಿದಿರುವುದರ ಜೊತೆಗೆ ಆ ಕ್ಷಣದಲ್ಲಿ ಭಾಗವತರು ಅನುಸರಿಸುವ ದಾರಿ ಅಥವಾ ಹೋಗುವ ದಾರಿಯನ್ನು ತಿಳಿದಿರಬೇಕಾಗುತ್ತದೆ. ಆ ವಿಶೇಷ ಗುಣವನ್ನು ಉಳಿತ್ತಾಯರಲ್ಲಿ ಗುರುತಿಸಬಹುದು.

ಭಾಗವತರುಗಳಲ್ಲಿ ಹೆಚ್ಚಿನವರು ಕೃಷ್ಣಪ್ರಕಾಶ ಉಳಿತ್ತಾಯರನ್ನು ಇಷ್ಟಪಡುವುದು ಇದಕ್ಕಾಗಿಯೇ. ಅವರು ತಮ್ಮ ವಾದನದಲ್ಲಿ ಭಾಗವತರನ್ನು ಅನುಸರಿಸಿಕೊಂಡು ಹೋಗುವ ತಮ್ಮ ಅಪೂರ್ವ ಲಯ ಸಿದ್ಧಿಯಿಂದಾಗಿ ಪ್ರೇಕ್ಷಕರಾದ ನಮಗೂ ಇಷ್ಟವಾಗುತ್ತಾರೆ.
ಒಂದೊಮ್ಮೆ ನನ್ನಲ್ಲಿ ದೂರವಾಣಿಯಲ್ಲಿ ಮಾತನಾಡುವಾಗ ಒಂದು ಲೇಖನವನ್ನು ಬರೆಯಲು ಬಹಳಷ್ಟು ಅಧ್ಯಯನ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದರು. ಆ ಅನುಭವ ನನಗೂ ಇತ್ತು. ಕೆಲವೊಂದು ವಿಷಯಗಳ ಬಗ್ಗೆ ಬರೆಯಲು ಹೊರಟರೆ ಸಾಕಷ್ಟು ಪೂರ್ವತಯಾರಿ ಬೇಕಾಗುತ್ತದೆ ಎಂಬ ಅವರ ಮಾತಿನ ಸತ್ಯ ನನ್ನ ಅನುಭವಕ್ಕೂ ಬಂದಿತ್ತು. ಅಗರಿ ಭಾಗವತರ ಪ್ರಸಂಗಗಳ ಬಗ್ಗೆ ನಮ್ಮ ಯಕ್ಷದೀಪ ಪತ್ರಿಕೆಯಲ್ಲಿಯೂ ಅವರು ಕೆಲವು ಲೇಖನಗಳನ್ನು ಬರೆದಿದ್ದರು.

ಅಗರಿ ಮಾರ್ಗದ ಬಗ್ಗೆ ಹೇಳುವುದಾದರೆ ಈ ಗ್ರಂಥ ರಚನೆ ಬಹಳ ಕ್ಲಿಷ್ಟಕರವಾಗಿದ್ದಿರಬಹುದೆಂದು ನಾನು ಖಂಡಿತಾ ಊಹಿಸಬಲ್ಲೆ. ಈ ಗ್ರಂಥರಚನೆಯ ಹಿಂದೆ ಅವರ ಅಪಾರ ಶ್ರಮ ಅಡಗಿರಬಹುದೆಂಬುದು ನಿರ್ವಿವಾದ. ಯಾಕೆಂದರೆ ಸಾಧಾರಣವಾಗಿ ಅಗರಿಯವರ ಬಗ್ಗೆ ಬರೆಯುವುದೆಂದರೆ ಅದು ಅತ್ಯಂತ ಸಾಹಸದ ಕಾರ್ಯ. ಅಗರಿಯವರ ಪ್ರಪಂಚದಲ್ಲಿ ಎಲ್ಲವೂ ಜೊಳ್ಳುಗಳಿಲ್ಲದ ಕಾಳುಗಳೇ ತುಂಬಿವೆ. ನಿಮಗೆ ಸಿಗುವ ಎಲ್ಲಾ ಕಾಳುಗಳಲ್ಲಿ ಯಾವುದನ್ನು ಆರಿಸಬೇಕು ಯಾವುದನ್ನು ಬಿಡಬೇಕು ಎಂಬ ಉಭಯಸಂಕಟ ಕಾಡದೆ ಬಿಡದು. ಆದುದರಿಂದ ಕೃಷ್ಣಪ್ರಕಾಶ ಉಳಿತ್ತಾಯರು ‘ಅಗರಿ ಮಾರ್ಗ’ಎಂಬ ಕೃತಿಯನ್ನು ಸಿದ್ಧಪಡಿಸುವ ಮೊದಲು ಬಹಳಷ್ಟು ಅಧ್ಯಯನದ ಪೂರ್ವ ತಯಾರಿಯನ್ನು ಮಾಡಿರಬಹುದು. ಉಳಿತ್ತಾಯರ ಅಗರಿ ಮಾರ್ಗವು ಯಕ್ಷಗಾನ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗಿ ನಿಲ್ಲಲಿದೆ ಎಂಬುದು ಖಂಡಿತ.