Wednesday, January 22, 2025
Home Blog Page 355

ವಾಲಿಮೋಕ್ಷ – ಪಾಲ್ತಾಡಿಯಲ್ಲಿ ಯಕ್ಷಗಾನ ತಾಳಮದ್ದಳೆ

ಪುತ್ತೂರು ತಾಲೂಕು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್, ಪಾಲ್ತಾಡಿ ಇವರ ಪ್ರಾಯೋಜಕತ್ವದಲ್ಲಿ ‘ವಾಲಿಮೋಕ್ಷ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಪಾಲ್ತಾಡಿಯಲ್ಲಿ ಈ ತಾಳಮದ್ದಳೆ ನಡೆಯಲಿದೆ ಎಂದು ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಗುರುಕಿರಣ್ ಬೊಳಿಯಾಲ ಮತ್ತು ಕಾರ್ಯದರ್ಶಿಗಳಾದ ಪ್ರದೀಪ್ ಶೆಟ್ಟಿ ಪಾಲ್ತಾಡಿ ತಿಳಿಸಿದ್ದಾರೆ.

ಜಾಹೀರಾತು

ದಿನಾಂಕ 16. 11. 2020 ಸೋಮವಾರ ಅಪರಾಹ್ನ 2 ಘಂಟೆಗೆ ಸರಿಯಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಆರಂಭವಾಗಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಲಾಗಿದೆ. 

ಕುಂಬಳೆಯ ರಸ್ತೆಗೆ ಪಾರ್ತಿಸುಬ್ಬನ ಹೆಸರು

‘ಪಾರ್ತಿಸುಬ್ಬ’ ಎಂಬ  ಹೆಸರು ಯಕ್ಷಗಾನದ ತಿಳುವಳಿಕೆಯುಳ್ಳ ಮಂದಿಯ ಹೃದಯದಲ್ಲಿ ಪುಳಕವನ್ನೆಬ್ಬಿಸಬಹುದು. ಯಕ್ಷಗಾನದ ಜನಕ ಎಂದೇ ಕರೆಯಲ್ಪಡುವ ಪಾರ್ತಿಸುಬ್ಬನ ಊರಾದ ಕಾಸರಗೋಡು ಜಿಲ್ಲೆಯ ಕುಂಬಳೆಯು ಪಾರ್ತಿಸುಬ್ಬನ ಹೆಸರಿನಿಂದ ಗುರುತಿಸಲ್ಪಟ್ಟಿದೆ.

ಯಕ್ಷಗಾನ ಕವಿ, ಕಲಾವಿದನೂ ಆದ ಪಾರ್ತಿಸುಬ್ಬನ ಸ್ಮರಣಾರ್ಥ ಕುಂಬಳೆಯ ರಸ್ತೆಯೊಂದಕ್ಕೆ ಅವರ ಹೆಸರನ್ನು ಇಡಲಾಗಿದೆ. ಕುಂಬಳೆಯ ಪೊಲೀಸ್ ಠಾಣೆಯ ಸಮೀಪದ ರಸ್ತೆಯೊಂದಕ್ಕೆ ಪಾರ್ತಿಸುಬ್ಬನ ಹೆಸರನ್ನು ಇಡಲಾಗಿದೆ. ಈ ರಸ್ತೆಯನ್ನು ‘ಯಕ್ಷಕವಿ ಪಾರ್ತಿಸುಬ್ಬ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ.

ಈ ರಸ್ತೆಯ ನಾಮಫಲಕವನ್ನು ಕುಂಬಳೆಯಲ್ಲಿ ಅನಾವರಣಗೊಳಿಸಲಾಯಿತು. ಕುಂಬಳೆ ಗ್ರಾಮಪಂಚಾಯತ್ ಈ ರಸ್ತೆಗೆ ಯಕ್ಷಕವಿ ಪಾರ್ತಿಸುಬ್ಬ ರಸ್ತೆ ಎಂದು ನಾಮಕರಣ ಮಾಡಲು ಅಧಿಕೃತವಾಗಿ ಒಪ್ಪಿಗೆ ನೀಡಿತ್ತು.

ಈ ರಸ್ತೆಯ ನಾಮಫಲಕದ ಅನಾವರಣವನ್ನು ಕುಂಬಳೆ ಪಂಚಾಯತ್ ಅಧ್ಯಕ್ಷ ಶ್ರೀ ಪುಂಡರೀಕಾಕ್ಷ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಇನ್ನಿತರ ಪಂಚಾಯತ್ ಸದಸ್ಯರು, ಪಟ್ಲ ಸತೀಶ್ ಶೆಟ್ಟಿ, ಜಗನ್ನಾಥ ಶೆಟ್ಟಿ, ರಾಘವೇಂದ್ರ ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು. 

ಮೊತ್ತಮೊದಲ ಬಾರಿಗೆ ಮಹಿಷಾಸುರನ ವೇಷ ಮಾಡಿದ್ದು ಯಾರು? ಇಲ್ಲಿದೆ ಕುತೂಹಲಕರ ಮಾಹಿತಿ  (Who  played the role of Mahishasura in Yakshagana for the first time? Here is the interesting information)

ಶ್ರೀ ದೇವಿ ಮಹಾತ್ಮೆ ಪ್ರಸಂಗ ಯಕ್ಷಗಾನ ಪ್ರಸಂಗಗಳಲ್ಲೇ ಅತಿ ಜನಪ್ರಿಯವಾದ ಪ್ರಸಂಗ. ಮಾತ್ರವಲ್ಲದೆ ಇದುವರೆಗೆ ಯಕ್ಷಗಾನದ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಪ್ರದರ್ಶಿತವಾದ ಪ್ರಸಂಗ. ಅಸಂಖ್ಯಾತ ಜನರು ಶ್ರೀದೇವಿಯ ಈ ಕಥೆಯ ಯಕ್ಷಗಾನ ಪ್ರದರ್ಶನವನ್ನು ನೋಡಿ, ಕೇಳಿ ಭಕ್ತಿ ಭಾವದಲ್ಲಿ ಮಿಂದು ಪುನೀತರಾಗಿದ್ದಾರೆ.

ಅದರಲ್ಲೂ ಈ ಪ್ರಸಂಗದಲ್ಲೂ ಬರುವ ಕೆಲವು ಪಾತ್ರಗಳನ್ನೂ ನೋಡಲೆಂದೇ ಜನರು ಕಾದು ಕುಳಿತಿರುತ್ತಾರೆ. ಅಂತಹಾ ಪಾತ್ರಗಳಲ್ಲಿ ಮಹಿಷಾಸುರನ ಪಾತ್ರವೂ ಒಂದು. ಕೋಣನ ಪ್ರತಿರೂಪದಿಂದ ಈ ಪಾತ್ರವು ಸಭೆಯಲ್ಲಿ ಬೆಂಕಿಯ ದೊಂದಿಯೊಂದಿಗೆ ಅಬ್ಬರದ ಪ್ರವೇಶದಿಂದ ಬರುವಾಗ ಜನರು ರೋಮಾಂಚನಗೊಳ್ಳುತ್ತಾರೆ.

ಇಂತಹಾ ಅಪೂರ್ವವೂ, ಅವರ್ಣನೀಯವೂ ಆದ ಪಾತ್ರವೊಂದರ ಪ್ರತಿಸೃಷ್ಟಿ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುವುದು ಸಹಜ. ಮಾತ್ರವಲ್ಲದೆ ಈ ಪಾತ್ರವನ್ನು ಮೊದಲು ಮಾಡಿದವರು ಯಾರು ಎಂಬ ಕುತೂಹಲವೂ ಇರಬಹುದು. ಎಷ್ಟೋ ವರ್ಷಗಳ ಮೊದಲು ಹಿರಣ್ಯಕಶಿಪು, ರಾವಣ, ಮಾಗಧ ಮೊದಲಾದ ಪಾತ್ರಗಳನ್ನೂ ಬಣ್ಣದ ವೇಷದವರೇ ಮಾಡುವ ಕ್ರಮ ಯಕ್ಷಗಾನದಲ್ಲಿ ಇತ್ತು.

ಆದರೆ ಮಹಿಷಾಸುರ ಪಾತ್ರವನ್ನು ಕೊಂಬಿನ ಕಿರೀಟದೊಂದಿಗೆ ಮೊದಲು ಚಿತ್ರಿಸಿದವರು ಯಾರು  ಎಂಬ ಕುತೂಹಲಕಾರಿ ಅಂಶವನ್ನು  ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ತಮ್ಮ ಆತ್ಮಕಥೆ ‘ಯಕ್ಷಗಾನ ಮತ್ತು ನಾನು‘ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.

“ನನಗೆ ಬಯಲಾಟದ ದರ್ಶನ ಮೊದಲಿಗಾದುದು ಇಚ್ಲಂಪಾಡಿ ಮೇಳದ ಮೂಲಕವಾದರೂ ಆಮೇಲೆ ಕೂಡ್ಲು, ಅಡೂರು, ಕೊರಕ್ಕೋಡು, ಹಂಪನಕಟ್ಟೆಯೇ ಮುಂತಾದ ಮೇಳಗಳ ಪ್ರದರ್ಶನಗಳನ್ನೂ ನೋಡುವ ಅವಕಾಶಗಳು ಧಾರಾಳ ದೊರೆತಿದ್ದುವು. ಈ ಆಟಗಳನ್ನು ನೋಡುವುದರೊಂದಿಗೆ ವೇಷಗಾರಿಕೆಯಲ್ಲಿಯೂ,ಪ್ರಯೋಗ ಕ್ರಮದಲ್ಲಿಯೂ ಆಗುತ್ತಿದ್ದ ಕೆಲವು ಬದಲಾವಣೆಗಳನ್ನೂ ಹೊಸತನಗಳನ್ನೂ ಗುರುತಿಸಿಕೊಂಡು ಬಂದಿದ್ದೇನೆ.

ಅದುವರೆಗೆ ರಂಗದಲ್ಲಿ ಪ್ರಯೋಗವಾಗದೆ ಇದ್ದ ‘ದೇವಿ ಮಹಾತ್ಮ್ಯೆ’ (ದೇವಿ ಮಹಾತ್ಮೆ) ಪ್ರಸಂಗವನ್ನು ಕೊರಕ್ಕೋಡು ಮೇಳದವರು ಸ್ಥಳೀಯ ದೇವೀ ಸನ್ನಿಧಿಯಲ್ಲಿ ಪ್ರಪ್ರಥಮವಾಗಿ ಆಡುವವರಿದ್ದಾರೆಂಬ ಸುದ್ದಿ ಹಬ್ಬಿತು. ಮೂರು ದಿನಗಳ ದೇವೀ ಮಹಾತ್ಮೆ ಪ್ರಸಂಗದ ಪ್ರದರ್ಶನದಲ್ಲಿ ಎರಡನೆಯ ದಿನದ ಮಹಿಷಾಸುರ ವಧೆಯ ಪ್ರದರ್ಶನಕ್ಕೆ ನಾನೂ ನೋಟಕನಾಗಿದ್ದೆ. ಬಣ್ಣದ ವೇಷದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿದ್ದ ಉದಯೋನ್ಮುಖ ಕಲಾವಿದ ಪಟ್ಟಾಜೆ ಕುಂಞ ಎಂಬವರು ಮಹಿಷಾಸುರನ ವೇಷಧಾರಿಯಾಗಿದ್ದರು. ಅಂದಿನವರೆಗೆ ರಾವಣ, ಕಂಸ, ಜರಾಸಂಧ ಮುಂತಾದ ಪಾತ್ರ ವ್ಯತ್ಯಾಸಗಳಿದ್ದರೂ ಅವೆಲ್ಲಾ ಖಳ ಪಾತ್ರಗಳೆಂಬ ಕಾರಣಕ್ಕಾಗಿ, ವೇಷ ವ್ಯತ್ಯಾಸವಿಲ್ಲದೆ ಒಂದೇ ಕ್ರಮದ ರಾಕ್ಷಸ ವೇಷದಿಂದ ರಂಗದಲ್ಲಿ ಕಾಣಿಸುತ್ತಿದ್ದುದು ರೂಢಿಯಾಗಿತ್ತು.

ಆದರೆ ಮಹಿಷಾಸುರನ ವೇಷವು ರೂಢಿಯ ರಾಕ್ಷಸ ವೇಷದ ಕಿರೀಟದ ಬದಲಿಗೆ ನೀಳವಾದ ಕೋಡುಗಳನ್ನು ಧರಿಸಿ, ಕಪ್ಪು ಬಟ್ಟೆಯನ್ನು ತಲೆಗೆ ಮುಂಡಾಸಿನಂತೆ ಸುತ್ತಿ ಮುಂದಲೆಗೆ ಎದೆಪದಕವನ್ನು ಕಟ್ಟಿ ಮಾಡಿಕೊಂಡ ಆವಿಷ್ಕಾರದಿಂದ ಕೋಣನ ತಲೆಯನ್ನೇ ಹೊತ್ತು ಬಂದ ಮಾನವ ದೇಹದಂತೆ ತೋರುತ್ತಿತ್ತು. ಮುಖವರ್ಣಿಕೆಯಲ್ಲಿಯೂ ವೇಷಧಾರಣೆಯಲ್ಲಿಯೂ, ಆಟ ನೋಟಗಳಲ್ಲಿಯೂ ವಾಸ್ತವಿಕತೆಯು ಎದ್ದು ಕಾಣುತ್ತಿದ್ದ ಆ ಭೀಕರ ದೃಶ್ಯವು ಕುಂಞನವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಆಮೇಲೆ ಎಲ್ಲ ಮೇಳದವರೂ ಇಂದಿನ ವರೆಗೆ ಶತಸಂಖ್ಯೆಯಲ್ಲಿ ದೇವಿ ಮಹಾತ್ಮೆ ಪ್ರಸಂಗವನ್ನು ಆಡಿದ್ದಾರಾದರೂ ಇದರ ಕೊಡುಗೆಯ ಕೀರ್ತಿ ಕೊರಕ್ಕೋಡು ಮೇಳಕ್ಕೂ, ಮಹಿಷಾಸುರನ ವೇಷದ ನೂತನ ಪದ್ಧತಿಯ ಕೊಡುಗೆಯ ಋಣ ಕುಂಞನವರಿಗೂ ಸಲ್ಲಬೇಕು” (ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು – ತಮ್ಮ ಆತ್ಮಕಥೆ’ ಯಕ್ಷಗಾನ ಮತ್ತು ನಾನು ಎಂಬ ಪುಸ್ತಕದಲ್ಲಿ)

ಸುಬ್ರಹ್ಮಣ್ಯ ಧಾರೇಶ್ವರ –  ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ ಕಾರ್ಯಕ್ರಮದಲ್ಲಿ ಇಂದು ಅಂದರೆ 

ಅಕ್ಟೋಬರ್ 30ರಂದು ಶುಕ್ರವಾರ  ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ಸ್ಯಬ್ರಹ್ಮಣ್ಯ ಧಾರೇಶ್ವರ  ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ  ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಅಕ್ಟೋಬರ್ 30  ಶುಕ್ರವಾರ  ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. 

ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. ಲಿಂಕ್ ಕೆಳಗಡೆ ಇದೆ. 

ದೇರಾಜೆಯವರ ಮಹತ್ತರ ಕೃತಿ ‘ಕುರುಕ್ಷೇತ್ರಕ್ಕೊಂದು ಆಯೋಗ’ ಪುಸ್ತಕ ಧರ್ಮಸ್ಥಳದಲ್ಲಿ ತೃತೀಯ ಮುದ್ರಣ 

ದೇರಾಜೆ ಸೀತಾರಾಮಯ್ಯನವರ ವಿಶಿಷ್ಟ ಕೃತಿ ‘ಕುರುಕ್ಷೇತ್ರಕ್ಕೊಂದು ಆಯೋಗ’ ಪುಸ್ತಕವು ತನ್ನ ತೃತೀಯ ಮುದ್ರಣದ ಸೌಭಾಗ್ಯವನ್ನು ಕಂಡಿದೆ.

ಖ್ಯಾತ ಸಾಹಿತಿಯೂ, ವಿದ್ವಾಂಸರೂ, ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದ ದಿ| ದೇರಾಜೆ ಸೀತಾರಾಮಯ್ಯನವರ ಈ ಕೃತಿಯು ಕನ್ನಡ ಸಾರಸ್ವತ ಲೋಕಕ್ಕೊಂದು ಅಮೂಲ್ಯ ಕೊಡುಗೆಯಾಗಿತ್ತು. ಮಹಾಭಾರತ ಪುರಾಣ ಕಥೆಯ ಪಾತ್ರಗಳ ಒಳಹೊಕ್ಕು ನೋಡಿ ಅದನ್ನು ಅತಿ ವಿಶಿಷ್ಟವಾಗಿ ಅಭಿವ್ಯಕ್ತಿಗೊಳಿಸಿದ ಹಾಗೂ ಪುರಾಣ ಘಟನೆಗಳನ್ನು ವಿಮರ್ಶಾತ್ಮಕವಾಗಿ ಅದರ ಮೇಲೆ ಹೊಸತನದ ಬೆಳಕನ್ನು ಚಿತ್ರಿಸಿದ ದೇರಾಜೆ ಸೀತಾರಾಮಯ್ಯನವರ ಕೃತಿಯೇ ‘ಕುರುಕ್ಷೇತ್ರಕ್ಕೊಂದು ಆಯೋಗ’.

ಮೂರನೇ ಮುದ್ರಣವನ್ನು ಬಿಡುಗಡೆಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಇಂತಹಾ ಗ್ರಂಥಗಳಿಂದ ಧಾರ್ಮಿಕ ಜಾಗೃತಿಯು ಪ್ರಚೋದಿಸಲ್ಪಡುತ್ತದೆ ಎಂದು ಶುಭ ಹಾರೈಸಿದರು.

ಈ ಪುಸ್ತಕವು ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ ನಲ್ಲಿ ಇದೀಗ ಮುದ್ರಣಗೊಡಿದೆ. ಮುಂಬೈಯ ಉದ್ಯಮಿ ಕೊಳಚೂರುಗುತ್ತು ಜಗನ್ನಾಥ ಎನ್. ಶಟ್ಟಿ ಹಾಗೂ ಅವರ ಪತ್ನಿ, ಮಗ, ಸೊಸೆ ಹಾಗೂ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಡಾ. ಶ್ರೀನಾಥ್ ಎಂ.ಪಿ ಕಾರ್ಯಕ್ರಮದಲ್ಲಿ ಹಾಜರಿದ್ದರು. 

ಯಕ್ಷಗಾನ ಪ್ರಸಂಗಕರ್ತ, ಕಲಾವಿದ ಹಾಗೂ ವೈದ್ಯ ಡಾ. ಪಟ್ಟಾಜೆ ಗಣೇಶ ಭಟ್ ನಿಧನ

ಯಕ್ಷಗಾನ ಪ್ರಸಂಗಕರ್ತ, ಕಲಾವಿದ ಹಾಗೂ ವೈದ್ಯ ಡಾ. ಪಟ್ಟಾಜೆ ಗಣೇಶ ಭಟ್ ಇಂದು ನಿಧನರಾಗಿದ್ದಾರೆ. ಅವರು ಕಾವು ಸಮೀಪದ ಪಟ್ಟಾಜೆಯ ತಮ್ಮ ಸ್ವಗೃಹದಲ್ಲಿ ಇಂದು ಅಸ್ತಂಗತರಾದರು.

 
 ಹವ್ಯಾಸಿ ವೇಷಧಾರಿಯಾಗಿಯೂ ತಾಳಮದ್ದಳೆ ಅರ್ಥಧಾರಿಯಾಗಿಯೂ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಯಕ್ಷಗಾನ ಪ್ರಸಂಗಗಳನ್ನು ಬರೆಯುವಲ್ಲಿ ತೊಡಗಿಸಿಕೊಂಡಿದ್ದ ಡಾ. ಪಟ್ಟಾಜೆ ಗಣೇಶ ಭಟ್ಟರು ಹಲವಾರು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದರು.

ಅವರು ರಚಿಸಿದ್ದ  ಹನ್ನೆರಡು ಪ್ರಸಂಗಗಳನ್ನು ಒಳಗೊಂಡ ಸಂಪುಟವೇ ‘ ಯಕ್ಷ ದ್ವಾದಶಾಮೃತಮ್ ಪ್ರಸಂಗಮಾಲಿಕಾ’ ಎಂಬ ಪುಸ್ತಕವು ಕಳೆದ ವರ್ಷ  ಬಿಡುಗಡೆಗೊಂಡಿದ್ದುದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. 

ಒಳ್ಳೆಯ ವೈದ್ಯರಾಗಿಯೂ ಹೆಸರು ಗಳಿಸಿದ್ದ  ಶ್ರೀಯುತರು  ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.  ಜನಾನುರಾಗಿಯಾಗಿದ್ದ ಶ್ರೀ ಪಟ್ಟಾಜೆ ಗಣೇಶ ಭಟ್ಟರು ತಮ್ಮ ಪತ್ನಿ, ಮಕ್ಕಳು, ಅಪಾರ ಸ್ನೇಹಿತ, ಬಂಧುವರ್ಗದವರನ್ನೂ ಕಲಾಭಿಮಾನಿಗಳನ್ನೂ ಅಗಲಿದ್ದಾರೆ.

‘ಶ್ರೀ ತಲೆಂಗಳ’ – ವಿದ್ವಾನ್ ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ

 ವಿದ್ವಾನ್ ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಗ್ರಂಥ ‘ಶ್ರೀ ತಲೆಂಗಳ’ ಪ್ರಕಟವಾಗಿ ಓದುಗರ ಕೈ ಸೇರಿದ್ದು 2006ರಲ್ಲಿ. ಶ್ರೀಯುತರು ಬಹುಮುಖ ಪ್ರತಿಭೆಯ ವಿದ್ವಾಂಸರಾಗಿದ್ದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.

ಜತೆಗೆ ಲೇಖಕರಾಗಿ, ಪ್ರಸಂಗಕರ್ತರಾಗಿ ಕನ್ನಡ ಸಾಹಿತ್ಯ ಪ್ರಪಂಚಕ್ಕೆ, ಯಕ್ಷಗಾನ ಕ್ಷೇತ್ರಕ್ಕೆ ಇವರ ಕೊಡುಗೆಯು ಅಭಿನಂದನೀಯವಾದುದು. ಯಕ್ಷಗಾನ ಪ್ರಸಂಗ, ಕಾದಂಬರಿ, ಕವನ, ಖಂಡಕಾವ್ಯ, ನಾಟಕ, ಲೇಖನ ಇತ್ಯಾದಿ ವಿಭಾಗಗಳಲ್ಲಿ ಕೃತಿಗಳನ್ನು ರಚಿಸಿರುತ್ತಾರೆ. ಇವರು ರಚಿಸಿದ ಪ್ರಸಂಗಗಳಲ್ಲಿ ವಾಸವದತ್ತಾ-ರತ್ನಾವಳಿ, ಚಂದ್ರಾಭ್ಯುದಯ, ಶ್ರೀದೇವೀ ಶಾಕಂಬರೀ ವಿಲಾಸ, ಛಲದಂಕ ಅಂಬೆ ಪ್ರಮುಖವಾದುವುಗಳು.

ಶ್ರೀಯುತರು ರಚಿಸಿದ ಎಲ್ಲಾ ಕೃತಿಗಳ ವಿವರಗಳನ್ನು ಈ ಸಂಸ್ಮರಣ ಗ್ರಂಥದಲ್ಲಿ ನೀಡಲಾಗಿದೆ. ಶ್ರೀಯುತರ ಪುತ್ರ ಶ್ರೀ ಅನಂತಕೃಷ್ಣ ಅವರ ಆಶಯದಂತೆ ಈ ಗ್ರಂಥವನ್ನು ಹೊರ ತರುವರೇ ನಿರ್ಣಯಿಸಲಾಗಿತ್ತು. ಸಂಪಾದಕರು ಶ್ರೀ ಉದಯಶಂಕರ್ ನೀರ್ಪಾಜೆ. ಸಹಸಂಪಾದಕರು ಕೆ.ವಿ. ರಾಜಗೋಪಾಲ ಕನ್ಯಾನ. ಸಂಚಾಲಕರು ಅನಂತಕೃಷ್ಣ ಟಿ.

ಪ್ರಕಾಶಕರು ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸಂಸ್ಮರಣ ಸಮಿತಿ. ಶ್ರೀ ಉದಯಶಂಕರ ನೀರ್ಪಾಜೆ ಅವರು ಸಂಪಾದಕೀಯ ಲೇಖನದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ. ಈ ಸಂಸ್ಮರಣ ಗ್ರಂಥವು ವಿದ್ವಾನ್ ರಾಮಕೃಷ್ಣ ಭಟ್ಟರ ಕೃತಿ ದರ್ಶನ-ಖ್ಯಾತ ಸಾಹಿತಿಗಳಿಂದ, ಪ್ರತ್ಯೇಕ ಲೇಖನ, ವಿದ್ವಾನ್  ಶ್ರೀ ತಲೆಂಗಳ ರಾಮಕೃಷ್ಣ ಭಟ್ಟರ ಸ್ನೇಹಿತರು, ಬಂದುಗಳು, ಅಪ್ರಕಟಿತ ಲೇಖನಗಳು, ಎಂಬ ಐದು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

ಒಟ್ಟು ಇಪ್ಪತ್ತಾರು ಲೇಖನಗಳಿಂದ ಕೂಡಿದೆ. ಲೇಖನಗಳನ್ನು ಬರೆದವರು ಕ್ರಮವಾಗಿ ಶ್ರೀ ಅಮೃತ ಸೋಮೇಶ್ವರ, ಸುಬ್ರಾಯ ಚೊಕ್ಕಾಡಿ, ಡಾ. ನಾ. ದಾಮೋದರ ಶೆಟ್ಟಿ, ಶ್ರೀಮತಿ ಗಂಗಾ ಪಾದೇಕಲ್, ಡಾ. ಎಂ. ಪ್ರಭಾಕರ ಜೋಷಿ, ಪ್ರೊ| ಟಿ ಕೇಶವ ಭಟ್ಟ, ಶಂ.ನಾ. ಖಂಡಿಗೆ, ಡಾ.ಸರಸ್ವತಿ.ಕೆ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ವಿ.ಬಿ. ಹೊಸಮನೆ, ಯು. ಗಂಗಾಧರ ಭಟ್, ಕೆ.ಪಿ. ರಾಜಗೋಪಾಲ ಕನ್ಯಾನ,

ಬಿ.ಎಸ್.ಆರ್. ಪದಕಣ್ಣಾಯ, ಶಂಕರಿ ಎಂ.ಭಟ್, ಮು. ಕೃಷ್ಣಪ್ಪ, ಕಳಂದೂರು ರಾಮ ಶರ್ಮ, ಸಾವಿತ್ರಿ ರಾಮ ಶರ್ಮ, ಸುಭಾಷಿಣಿ ಹಿರಣ್ಯ, ತಿರುಮಲೇಶ್ವರಿ ಆರ್.ಕೆ.ಭಟ್, ಅನಂತಕೃಷ್ಣ ಟಿ. ಇವರುಗಳು. ಕೊನೆಯಲ್ಲಿ ಅವರು ಬರೆದ ಲೇಖನಗಳ, ಪ್ರಸಂಗಗಳ, ಇವರ ಕೃತಿಗಳ, ಪಡೆದ ಸನ್ಮಾನಗಳ ವಿವರಗಳನ್ನು ನೀಡಲಾಗಿದೆ.

2006 ಅಕ್ಟೋಬರ್ 10 ರಂದು ಶ್ರೀಯುತರ ಪ್ರಥಮಾಬ್ಧಿಕ ಶ್ರಾದ್ಧದ ದಿನದಂದು ನಡೆದ ಸಂಸ್ಮರಣಾ ಸಮಾರಂಭದಲ್ಲಿ ಈ ಸಂಸ್ಮರಣ ಗ್ರಂಥವು ಬಿಡುಗಡೆಗೊಂಡಿತ್ತು.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಜನ್ನತ್ ಮಿರ್ಜಾಗಾಗಿ ಟಿಕ್ ಟಾಕ್ ನಿಷೇಧವನ್ನು ಪಾಕಿಸ್ತಾನ ಹಿಂತೆಗೆದುಕೊಂಡಿತೇ? (Pakistan Tik Tok star Jannath Mirza)

ಪಾಕಿಸ್ತಾನದ ಟಿಕ್ ಟಾಕ್ ತಾರೆ ಜನ್ನತ್ ಮಿರ್ಜಾ ಬಗೆಗೆ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ. ಟಿಕ್ ಟಾಕ್ ಕಾರಣದಿಂದ ಪಾಕಿಸ್ತಾನದಲ್ಲಿ ಅಶ್ಲೀಲತೆ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದುವು.

ಹಾಗೆ ನೋಡಿದರೆ ಪಾಕಿಸ್ತಾನವೇ ಒಂದು ಅಪರಾಧೀ ರಾಷ್ಟ್ರ.  ಪಾಕಿಸ್ತಾನಕ್ಕೂ ಅಪರಾಧಿಗಳಿಗೂ ಒಂದು ರೀತಿಯ ಅಕ್ಕರೆಯ ನಂಟು ಮೊದಲಿನಿಂದಲೂ ಉಂಟು.  ಆದರೂ ಟಿಕ್ ಟಾಕ್ ನಿಷೇಧಿಸುವ ನಿರ್ಣಯವನ್ನು ಪಾಕಿಸ್ತಾನ ಕೈಗೊಂಡಿತು.

ಇದರಿಂದ ಹೆಚ್ಚು ಬೇಸರವಾದುದು ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್ ಆದ ಜನ್ನತ್ ಮಿರ್ಜಾ ಎಂಬ ರೂಪಸಿಗೆ. ಮೂಲತಃ ಮಾಡೆಲ್ ಆಗಿದ್ದ ಜನ್ನತ್ ಮಿರ್ಜಾ ಟಿಕ್ ಟಾಕ್ ನ ಜನಪ್ರಿಯ ತಾರೆ. 

ಪಾಕಿಸ್ತಾನದಲ್ಲಿ ನಂಬರ್ ಓನ್ ಟಿಕ್‍ ಟಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದಳು. ಟಿಕ್‍ಟಾಕ್ ಮೂಲಕವೇ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದ್ದ ಜನ್ನತ್ ಮಿರ್ಜಾ, ತನ್ನ ಮುದ್ದು ಮುದ್ದಾದ ವಿಡಿಯೋಗಳ ಮೂಲಕ ಟಿಕ್ ಟಾಕ್ ಅಪ್ಲಿಕೇಶನ್ ನಲ್ಲಿ  ಒಂದು ಕೋಟಿಗೂ ಅಧಿಕವಾದ ಅಭಿಮಾನಿಗಳು ಮತ್ತು ಹಿಂಬಾಲಕರನ್ನು ಹೊಂದಿದ್ದಳು.

ಟಿಕ್ ಟಾಕ್ ಪಾಕಿಸ್ತಾನದಲ್ಲಿ ಬ್ಯಾನ್ ಆದ ಸುದ್ದಿ  ಕೇಳಿ  ಟಿಕ್‍ ಟಾಕ್ ಸ್ಟಾರ್ ಜನ್ನತ್ ಮಿರ್ಜಾ ದೇಶವನ್ನೆ ತೊರೆಯುವ ನಿರ್ಧಾರ ಮಾಡಿದ್ದಳು ಎಂಬ ಕುತೂಹಲಕಾರಿ ಅಂಶ ಹೊರಬಿದ್ದಿದೆ. ಟಿಕ್ ಟಾಕ್ ಮೂಲಕ ಕೋಟಿಗಟ್ಟಲೆ ಆದಾಯ ಗಳಿಸಿದ್ದ ಆಕೆಗೆ ಟಿಕ್ ಟಾಕ್ ನಿಷೇಧ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಜನ್ನತ್ ಮಿರ್ಜಾ ದೇಶ ಬಿಡುವ ಸುದ್ದಿ ಮಾತನಾಡುತ್ತಿದ್ದಂತೆ ಪಾಕಿಸ್ತಾನ ಟೆಲಿಕಮ್ಯುನಿಕೇಷನ್ ವಕ್ತಾರ ಕೆಲವೊಂದು ನಿಯಮಗಳಿಗೆ ಮತ್ತು ಷರತ್ತುಗಳಿಗೆ ಬದ್ಧವಾಗಿ ಟಿಕ್ ಟಾಕ್ ಪಾಕಿಸ್ತಾನ ದೇಶದಲ್ಲಿ ಮುಂದುವರಿಯುವುದಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.

ಇದರಿಂದ ಜನ್ನತ್ ಮಿರ್ಜಾ ದೇಶ ಬಿಡುವ ಭಯದಿಂದ ಪಾಕಿಸ್ತಾನ ಟಿಕ್ ಟಾಕ್ ನಿಷೇಧವನ್ನು ರದ್ದುಗೊಳಿಸಿತೇ ಎಂದು ಅಲ್ಲಿಯ ಜನರು ವ್ಯಂಗ್ಯದಿಂದ ಪ್ರಶ್ನಿಸುತ್ತಿದ್ದಾರೆ. 

ಕೊರೋನಾ ಮತ್ತೆ ದಾಳಿ ಸಾಧ್ಯತೆ – ಜರ್ಮನಿ, ಫ್ರಾನ್ಸ್ ಮತ್ತೆ ಲಾಕ್ ಡೌನ್ ನತ್ತ… (Corona Second Wave, Lock down in Germany and France)

ಈ ಚಳಿಗಾಲದಲ್ಲಿ ಕೊರೋನಾ ವೈರಲ್ ಹೆಚ್ಚಾಗಲಿದೆಯೇ? ಕೊರೋನಾ ಎರಡನೆಯ ಅಲೆ ಇಡೀ ವಿಶ್ವವನ್ನೇ ಭಾದಿಸಲಿದೆಯೇ?  ಎಂಬ ಪ್ರಶ್ನೆಗಳು ಈಗ ಎಲ್ಲಾ ದೇಶಗಳನ್ನು ಕಾಡಲಾರಂಭಿಸಿದೆ.

ಕೊರೋನಾ ಎರಡನೆಯ ಅಲೆಯು ಇಡೀ ವಿಶ್ವವನ್ನೇ ಭಾದಿಸದಿದ್ದರೂ ಚಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಇರುವ ರಾಷ್ಟ್ರಗಳಲ್ಲಿ ಕೊರೋನಾ ಮತ್ತೆ ಹೆಚ್ಚಾಗುವ ಸಾಧ್ಯತೆಗಳಿವೆಯೆಂದು ಅಂದಾಜಿಸಲಾಗಿದೆ. ಅಂತಹಾ ಶೀತೋಷ್ಣ ಪ್ರದೇಶಗಳಲ್ಲಿರುವ ದೇಶಗಳು ಕೊರೋನಾ ಇನ್ನೊಮ್ಮೆ ಮಾಡುವ ದಾಳಿಯನ್ನು ಎದುರಿಸಲು ಈಗಾಗಲೇ ಸಮರ ಸನ್ನದ್ಧವಾಗಿವೆ.

ಈಗಾಗಲೇ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ. ಜರ್ಮನಿ ಮತ್ತು ಫ್ರಾನ್ಸ್ ದೇಶದಲ್ಲಿ ಮತ್ತೆ ಲಾಕ್ ಡೌನ್ ಘೋಷಿಸಲಾಗಿದೆ.  ಜರ್ಮನ್ ಚಾನ್ಸಲರ್ ಏಂಜೆಲಾ ಮೆರ್ಕೆಲ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ತಮ್ಮ ತಮ್ಮ ದೇಶಗಳಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡುವಂತೆ ಬುಧವಾರ ಆದೇಶ ಹೊರಡಿಸಿದ್ದಾರೆ.

ಚಳಿಗಾಲದಲ್ಲಿ ಕೊರೊನಾ ವೈರಸ್ ಅಥವಾ ಸೋಂಕು ಹರಡುವಿಕೆ ಅತಿ ಹೆಚ್ಚಿನ ವೇಗವನ್ನು ಪಡೆದುಕೊಳ್ಳುವ ಆತಂಕದಿಂದ ಜರ್ಮನಿ ಮತ್ತು ಫ್ರಾನ್ಸ್ ಸರ್ಕಾರಗಳು ಈ ಒಂದು ನಿರ್ಧಾರವನ್ನು ಕೈಗೊಂಡಿವೆ. ಫ್ರಾನ್ಸ್ ಇಡೀ ದೇಶವೇ ಲಾಕ್ ಆಗಲಿದೆ. ಆದರೆ ಜರ್ಮನಿ ನಾಲ್ಕು ವಾರದ ಅವಧಿಗೆ ಲಾಕ್‍ಡೌನ್ ಘೋಷಿಸಿದೆ. 

ಒಂದು ವಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಅನಿರೀಕ್ಷಿತವಾಗಿ  ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ರಾಷ್ಟ್ರಗಳು ಈ ನಿರ್ಧಾರಕ್ಕೆ ಬಂದಿವೆ ಎನ್ನಲಾಗುತ್ತಿದೆ.

ಯುರೋಪ್ ರಾಷ್ಟ್ರಗಳು, ಬ್ರಿಟನ್, ನಾರ್ವೆ, ಸ್ವಿಟ್ಜರ್‍ಲ್ಯಾಂಡ್ ದೇಶಗಳಲ್ಲಿ ಏಳು ದಿನಗಳಲ್ಲಿ ಸುಮಾರು 10 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನವೆಂಬರ್ ಅಂತ್ಯದ ವರೆಗೂ ಜರ್ಮನಿಯಲ್ಲಿ ಲಾಕ್ ಡೌನ್ ಇರಲಿದೆ.

ಯಕ್ಷ ಸ್ತ್ರೀ – ಸ್ತ್ರೀ ವೇಷ,ಸ್ತ್ರೀ ಪಾತ್ರ ಮತ್ತು ಮಹಿಳಾ ಯಕ್ಷಗಾನ ವಿವೇಚನೆ

‘ಯಕ್ಷ ಸ್ತ್ರೀ’ ಇದು ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳು, ಸ್ತ್ರೀ ಪಾತ್ರಧಾರಿಗಳು, ಮಹಿಳಾ ಯಕ್ಷಗಾನ ಈ ವಿಚಾರಗಳ ಬಗೆಗಿನ ಸಂಶೋಧನಾ ಕೃತಿಯಾಗಿ ಪ್ರಕಟವಾಗಿತ್ತು. ಲೇಖಕಿ, ಪ್ರಾಧ್ಯಾಪಿಕೆ ಡಾ. ನಾಗವೇಣಿ ಎನ್. ಅವರ  ಕೊಡುಗೆ ಇದು.

ಈ ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 2012ರಲ್ಲಿ. ಪ್ರಕಾಶಕರು ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ. ಪ್ರಧಾನ ಸಂಪಾದಕರು ಡಾ. ಕೆ. ಚಿನ್ನಪ್ಪ ಗೌಡ ಅವರು. ಮೊದಲಾಗಿ ಮಂಗಳೂರು ವಿ.ವಿ. ಕುಲಪತಿ ಪ್ರೊ| ಟಿ.ಸಿ. ಶಿವಶಂಕರಮೂರ್ತಿ ಅವರು ಬರೆದ ‘ಯಕ್ಷ ವಾಙ್ಮಯಕ್ಕೆ ಅಪೂರ್ವ ಕೊಡುಗೆ’ ಎಂಬ ಲೇಖನವನ್ನು ನೀಡಲಾಗಿದೆ.

ಬಳಿಕ ಪ್ರೊ| ಕೆ. ಚಿನ್ನಪ್ಪ ಗೌಡ ಅವರು ‘ಚಂದಭಾಮೆಯಿಂದ ಸತ್ಯನಾಪುರದ ಸಿರಿಯ ವರೆಗೆ’ ಎಂಬ ಶೀರ್ಷಿಕೆಯಡಿ ಬರೆದ ಲೇಖನವಿದೆ. ಬಳಿಕ ‘ಮಾರ್ಗದರ್ಶಕರ ಮಾತು’ ಎಂಬ ಶೀರ್ಷಿಕೆಯಡಿ ಡಾ. ಸಬಿಹಾ, ಡಾ. ಕೇಶವ ಶರ್ಮಾ, ಡಾ. ಮಹೇಶ್ವರಿ. ಯು. ಅವರುಗಳ ಲೇಖನಗಳನ್ನು ನೀಡಲಾಗಿದೆ. ಅಲ್ಲದೆ ಪ್ರೊ| ತಾಳ್ತಜೆ ವಸಂತಕುಮಾರ ಮತ್ತು ಪ್ರೊ| ಎಂ.ಎಲ್.ಸಾಮಗ ಅವರ ಅನಿಸಿಕೆಗಳನ್ನೂ ನೀಡಲಾಗಿದೆ. ‘ಕೃತಜ್ಞತೆ’ ಎಂಬ ಶೀರ್ಷಿಕೆಯಡಿ ಲೇಖಕಿ ಸಂಶೋಧಕಿ ಡಾ. ನಾಗವೇಣಿ ಎನ್. ಅವರು ತಮ್ಮ ಮನದ ಮಾತುಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ.

ಜಾಹೀರಾತು 

ಈ ಕೃತಿಯಲ್ಲಿ ಒಟ್ಟು ಒಂಬತ್ತು ಅಧ್ಯಾಯಗಳಿವೆ. ಅಧ್ಯಾಯ ಒಂದರಲ್ಲಿ ಪ್ರಸ್ತಾವನೆ, ಅಧ್ಯಯನದ ಉದ್ದೇಶ, ಸ್ವರೂಪ, ವ್ಯಾಪ್ತಿ, ಈ ವರೆಗಿನ ಅಧ್ಯಯನ ಸಮೀಕ್ಷೆ ಎಂಬ ವಿಚಾರಗಳಿವೆ. ಅಧ್ಯಾಯ ಎರಡರಲ್ಲಿ ‘ಪೂರ್ವರಂಗದ ಸ್ತ್ರೀ ವೇಷಗಳು’, ಅಧ್ಯಾಯ ಮೂರರಲ್ಲಿ ‘ಸ್ತ್ರೀ ವೇಷಗಳು’, ಅಧ್ಯಾಯ ನಾಲ್ಕರಡಿ ‘ಸ್ತ್ರೀವೇಷ ಮತ್ತು ವೇಷಧಾರಿ’, ‘ಚೌಕಿಯ ಒಳಗೆ ಮತ್ತು ಹೊರಗೆ’, ಅಧ್ಯಾಯ ಐದರಲ್ಲಿ ‘ಸ್ತ್ರೀ ಪಾತ್ರಗಳು’,

ಅಧ್ಯಾಯ ಆರರಲ್ಲಿ ‘ಹೆಣ್ಣು ಬಣ್ಣ’, ಅಧ್ಯಾಯ ಏಳರಲ್ಲಿ ‘ಸ್ತ್ರೀ ಪಾತ್ರಧಾರಿಗಳ ಇತಿಹಾಸ ಮತ್ತು ಕೊಡುಗೆ’, ಅಧ್ಯಾಯ ಎಂಟರಲ್ಲಿ ‘ಮಹಿಳಾ ಯಕ್ಷಗಾನ’ ಈ ವಿಚಾರಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ. ಅಧ್ಯಾಯ ಒಂಭತ್ತು ‘ಉಪಸಂಹಾರ ಎಂಬ ವಿಭಾಗವು.

ಪುಸ್ತಕ ಪರಿಚಯ: ರವಿಶಂಕರ್  ವಳಕ್ಕುಂಜ