ಸಂಸ್ಕೃತದಲ್ಲಿ ‘ಸವ್ಯ’ (ನಾ) ಎಂದರೆ ಎಡಭಾಗ. ಅಪಸವ್ಯ (ನಾ) ಎಂದರೆ ದಕ್ಷಿಣ, ಬಲಭಾಗ ಎಂದರ್ಥ. ವ್ಯಾಸಭಾರತದ ವಿರಾಟಪರ್ವದ 42,43,44ನೆಯ ಅಧ್ಯಾಯಗಳಲ್ಲಿ ಉತ್ತರ ಗೋಗ್ರಹಣ ವೃತ್ತಾಂತದ ಸಂದರ್ಭ ಇತ್ಯಾದಿ ವಿವರಗಳಿವೆ. ಉತ್ತರಕುಮಾರನು ಬೃಹನ್ನಳೆಯಲ್ಲಿ ಪಾಂಡವರ ಅಸ್ತ್ರ-ಶಸ್ತ್ರ ಕುರಿತಾದ,ಅವರ ಪರಿಚಯದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾನೆ. ಅಂತೆಯೇ ಪಾರ್ಥನ ದಶನಾಮಗಳನ್ನು ಮತ್ತು ಆ ಹೆಸರುಗಳು ಬಂದ ಬಗೆಯನ್ನೂ ಪ್ರಶ್ನಿಸುತ್ತಾನೆ.
ಧರ್ಮರಾಯ – ಇಂದ್ರಸೇನ. ಭೀಮಸೇನ- ವಿಶೋಕ. ಪಾರ್ಥ-ರುಗ್ಮ. ನಕುಲ-ಸಮೀರ. ಸಹದೇವ- ಪತಾಕಸೇನ. ಈ ಇಂದ್ರಸೇನನೇ ರಾಜಸೂಯಯಾಗದ ಕುರಿತು ಸಮಾಲೋಚಿಸಲು ಕೃಷ್ಣನನ್ನು ಕರೆದುಕೊಂಡು ಬರಲು ದ್ವಾರಕೆಗೆ ಹೋದವನು.
ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣಭವನ
ಸ್ಥಳದ ಹೊರಬಾಹೆಯಲಿ ಚಾಚಿತು ಚಪಳಗಮನದಲಿ (ಸ.ಪ. 2-6, ಪೂರ್ವಾರ್ಧ)
ಎಂದು ವಸುದೇವಾದಿ ಯಾದವ
ವೃಂದವನು ಬಲಭದ್ರರಾಮನ
ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ
ಬಂದನಿದ್ರಪ್ರಸ್ಥ ಪಟ್ಟಣ
ಕಂದು ವೊಸಗೆಯ ಗುಡಿಯ ತೋರಣ
ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ (ಸ.ಪ. 2-8) ಭೀಮಸೇನನು ಬಿಲ್ಲನ್ನು ಹಿಡಿದು (ಸುಪಾರ್ಶ್ವ) ಕಾಳಗ ಮಾಡಿದಾಗ ಸಾರಥಿಯಾದ ವಿಶೋಕನು ಮಹತ್ತರ ಪಾತ್ರವನ್ನು ವಹಿಸಿದ ಮಾಹಿತಿ ಕುಮಾರವ್ಯಾಸ ಭಾರತದಲ್ಲೇ ಬರುತ್ತದೆ. ನೋಡಿ ದ್ರೋಣಪರ್ವ 12-5; 13-32 ಮತ್ತು ಈ ಮಧ್ಯೆ ಅಲ್ಲಲ್ಲಿ ಬರುತ್ತದೆ. ಅಂತೆಯೇ ಕರ್ಣಪರ್ವದ 12-23, 13-8, 18-19ರಲ್ಲೂ ಬಂದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಆಲ್ಮನೆ ಗ್ರಾಮದ ಮಂಗಳಗಾರಿನಲ್ಲಿ ಕೃಷ್ಣಾಚಾರ್ ಮತ್ತು ರುಕ್ಮಿಣಿಯಮ್ಮ ದಂಪತಿಗಳ ಪುತ್ರನಾಗಿ 30-10-1949ರಲ್ಲಿ ಜನಿಸಿದ ಎಂ ಕೆ ರಮೇಶಾಚಾರ್ಯ ಯಕ್ಷಕಲಾದ್ರಿಯ ಸಾಧನಾಶಿಖರವನ್ನು ಏರಿ ವಿನಯಧ್ವಜವನ್ನು ಜೊತೆಗೇ ಹೊತ್ತೋಯ್ದು ತನಗಿಂತಲೂ ಎತ್ತರಕ್ಕೆ ಹಾರಿಸಿದ ಸುಜನ. ಎಂ ಕೆ ಯವರ ಯಕ್ಷಬಾಲ್ಯ: ತಂದೆ ಕೃಷ್ಣಾಚಾರ್ ಯಕ್ಷಗಾನ ಕಲಾವಿದ ಹಾಗು ಮೇಳವೊಂದರ ವ್ಯವಸ್ಥಾಪಕ. ತಂದೆಯ ಸೋದರ ನಾಗಪ್ಪಾಚಾರ್ ಉತ್ತಮ ಮದ್ದಲೆಗಾರ, ಅಣ್ಣ ನರಸಿಂಹಾಚಾರ್ (ನಾಗಪ್ಪಾಚಾರ್ ಅವರ ಮಗ)ಭಾಗವತರು ಮತ್ತು ಮದ್ದಲೆವಾದಕರು. ಎಳವೆಯಲ್ಲಿಯೇ ಸಹಜವಾಗಿಯೇ ಇವರಿಗೆ ಯಕ್ಷಗಾನದ ಒಲವು ಮೂಡಿತು. ಮನೆಯ ಹಿರಿಯರಿಂದ ಒಂದಷ್ಟು ಕಲಿತು ಮಹಿಷಿ ಮೇಳದಲ್ಲಿ ಕೋಡಂಗಿ ವೇಷದಿಂದಲೇ ರಂಗಪ್ರವೇಶವಾಯಿತು. ಅಲ್ಲಿಂದ ಹಂತ ಹಂತವಾಗಿ ಬೆಳೆಯುತ್ತಾ ಬಂದರು. ಅನಂತರ ಶೃಂಗೇರಿ ಸಮೀಪದ ಕಿಗ್ಗ ಮೇಳ ಸೇರಿದರು. ಅಲ್ಲಿ ಗುಂಡುಮನೆ ರಾಮಯ್ಯ, ಹಳ್ಳದಾಚೆ ಪುಟ್ಟಶಾಮಯ್ಯ ಮತ್ತು ವೆಂಕಟರಮಣಯ್ಯ, ಕಿಗ್ಗ ಚಂದ್ರಶೇಖರ ಭಟ್ರು ಮೊದಲಾದವರಿಂದ ಸೂಕ್ತ ಮಾರ್ಗದರ್ಶನ ದೊರಕಿತು. ಅತಿ ಶೀಘ್ರಕಾಲದಲ್ಲಿಯೇ ವೇಷದ ಸ್ಥಾನದಲ್ಲಿ ಔನ್ನತ್ಯವನ್ನು ಸಾಧಿಸಿದರು. ಬಳಿಕ ಮಂದರ್ತಿ ಮೇಳ ಸೇರಿದರು. ಅಲ್ಲಿ ಗುರು ವೀರಭದ್ರನಾಯ್ಕರೇ ಗುರುಗಳಾಗಿ ದೊರಕಿದರು. ಪುಂಡು ವೇಷಗಳಾದ ಕುಶ-ಲವ-ಬಬ್ರುವಾಹನ ಮೊದಲಾದ ಪಾತ್ರಗಳನ್ನು ಮಾಡಿ ಹಿರಿಯ ಕಲಾವಿದರಿಂದಲೂ ಪ್ರೇಕ್ಷಕರಿಂದಲೂ ಮೆಚ್ಚುಗೆಗೆ ಪಾತ್ರರಾದರು. ಪೀಠಿಕೆ ಸ್ತ್ರೀವೇಷ, ರತಿ, ಕನಕಾಂಗಿ ಮೊದಲಾದ ಪಾತ್ರಮಾಡುತ್ತಾ ಸ್ತ್ರೀಪಾತ್ರದಲ್ಲಿಯೂ ಪರಿಣತಿಯನ್ನು ಪಡೆದರು. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬೇಕೆಂಬ ವೀರಭದ್ರನಾಯ್ಕರ ಮಾತನ್ನು ಈಗಲೂ ಸ್ಮರಿಸುತ್ತಾರೆ ಎಂ ಕೆ ಯವರು.
ಯಕ್ಷಕನ್ನಿಕೆ ರಮೇಶಾಚಾರ್ಯ: 1969ರಲ್ಲಿ ಧರ್ಮಸ್ಥಳ ಮೇಳಕ್ಕೆ ಸೇರಲು ಹೋದರು. ರತ್ನವರ್ಮ ಹೆಗ್ಗಡೆಯವರಿಗೆ ಇವರ ತೆಂಕಿನ ನಾಟ್ಯ ಇನ್ನಷ್ಟು ಪಳಗಬೇಕೆಂದು ಅನ್ನಿಸಿತು. ಆಗ ಕುರಿಯ ವಿಠಲಶಾಸ್ತ್ರಿಗಳು ಇವನನ್ನು ನಾನು ಸ್ತ್ರೀವೇಷಕ್ಕೆ ಸಿದ್ದಪಡಿಸುತ್ತೇನೆಂದು ಹೇಳಿ ಮೇ 28, 1969ರಲ್ಲಿ ತನ್ನ ಮನೆಗೆ ಕರೆದುಕೊಂಡು ಹೋದರು. ಯಕ್ಷಗಾನ ಗುರುಕುಲವೆನಿಸಿದ ಕುರಿಯದಲ್ಲಿ ಮಳೆಗಾಲದಲ್ಲಿ ಅಭ್ಯಾಸ. ಕುರಿಯ ಶಾಸ್ತ್ರಿಗಳು ಊಟ ಬಟ್ಟೆ ಕೊಟ್ಟು ಮುಂದಿನ ತಿರುಗಾಟಕ್ಕೆ ಧರ್ಮಸ್ಥಳ ಮೇಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಮಹಾರಥಿ ಕರ್ಣದ ಕುಂತಿ, ಕ್ಷೇತ್ರ ಮಹಾತ್ಮೆಯ ಮಾಲತಿ, ನೇತ್ರಾವತಿ ಮೊದಲಾದ ಪಾತ್ರ ಮಾಡಿದರು. ಅಲ್ಲಿ ಕಡತೋಕ ಚಿಪ್ಪಾರು, ನಿಡ್ಲೆ, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ, ಕಡಬ ಶಾಂತಪ್ಪ, ಪಾತಾಳ ವೆಂಕಟರಮಣ ಭಟ್ರು, ಕುಂಬ್ಳೆ, ಗೋವಿಂದ ಭಟ್ಟರಂತಹ ಕಲಾವಿದರ ಒಡನಾಟ ಇವರನ್ನು ಮತ್ತಷ್ಟು ಪಳಗಿಸಿತು. ಮೂರು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನೆಡೆಸಿದರು.
ಅನಂತರ ವರದರಾಜ ಪೈಗಳ ಸುರತ್ಕಲ್ ಮೇಳ ಸೇರಿದರು. ಶೇಣಿ, ದೊಡ್ಡಸಾಮಗ, ತೆಕ್ಕಟ್ಟೆ, ಕೊಕ್ಕಡ ಮೊದಲಾದ ಯಕ್ಷದಿಗ್ಗಜರ ಸಂಗಮದ ಗಜಮೇಳವದು. ಅಲ್ಲಿ ಒಮ್ಮೆ ಪಾರಿಜಾತದ ಸತ್ಯಭಾಮೆ ಮಾಡಬೇಕಾದ ಕಲಾವಿದ ಬಾರದೆ ಇದ್ದಾಗ ಸಖಿ ಮಾಡುವ ಇವರಲ್ಲಿ ಆ ಪಾತ್ರ ಮಾಡಿಸಿದರು ಅಗರಿಯವರು. ಅದು ಒಳ್ಳೆಯ ಕೀರ್ತಿಯನ್ನು ತಂದುಕೊಟ್ಟಿತು. ಅವರ ನಿಜವಾದ ಪ್ರತಿಭೆಯ ಅನಾವರಣವೂ ಆಯಿತು. ಇವರ ಲಾಲಿತ್ಯಪೂರ್ಣ ನಾಟ್ಯ, ಶ್ರುತಿಬದ್ಧ-ಕಾವ್ಯಾತ್ಮಕ-ಪಾತ್ರೋಚಿತ-ಪ್ರಸಂಗ,ಪುರಾಣಾಧಾರಿತ- ಅಸ್ಖಲಿತವಾದ ವಾಗ್ವೈಖರಿ, ಪಾತ್ರನಿರ್ವಹಣಾ ಕೌಶಲ ಮೊದಲಾದ ಗುಣಗಳಿಂದ ಶೇಣಿಯವರೊಟ್ಟಿಗೆ ಪಾತ್ರಮಾಡುವ ಯೋಗ ಲಭಿಸಿತು. ಅವರ ರಾವಣ-ಹರಿಶ್ಚಂದ್ರ-ವಾಲಿ-ನಳ-ವಿಷ್ಣುವರ್ಧನ-ಉದಯನ ಪಾತ್ರಗಳಿಗೆ ಮಂಡೋದರಿ-ಚಂದ್ರಮತಿ- ತಾರೆ- ದಮಯಂತಿ- ಶಾಂತಲೆ – ವಾಸವದತ್ತೆ ಮೊದಲಾದ ಪಾತ್ರಗಳನ್ನು ಮಾಡಿ ಶೇಣಿಯವರ ಮೆಚ್ಚುಗೆಗೂ ಪಾತ್ರರಾದರು. ತೆಕ್ಕಟ್ಟೆಯವರ ನಂದಿಶೆಟ್ಟಿ ಇವರ ಆಲೋಲಿಕೆ ಬಹಳ ಪ್ರಸಿದ್ಧಿ ಪಡೆದಿತ್ತು. ಶೇಣಿಯವರು ರಜೆಯಲ್ಲಿದ್ದಾಗ ಶನೀಶ್ವರ ಮಹಾತ್ಮೆಯಾದರೆ ಇವರದ್ದೇ ವಿಕ್ರಮಾದಿತ್ಯನ ಪಾತ್ರ. ಆಗ ಸತತ ಸ್ತ್ರೀವೇಷ ಮಾಡುತ್ತಿದ್ದರೂ ವಿಕ್ರಮನ ಪಾತ್ರ ಮಾಡುತ್ತಿದ್ದುದು ಇವರ ಪರಿಪೂರ್ಣತೆಗೊಂದು ಸಾಕ್ಷಿ. ಅಗರಿ,ಪದ್ಯಾಣ, ಅಡೂರು,ಕಡಬ ನಾರಾಯಣಾಚಾರ್ಯರ ಹಿಮ್ಮೇಳ ಮತ್ತು ಸಮರ್ಥ ಮುಮ್ಮೇಳ ಇವರ ಪಾತ್ರಪೋಷಣೆಗೆ ಮತ್ತಷ್ಟು ಸಹಕಾರಿಯಾಯಿತು. ಹೀಗೆ ಮೊದಲು 19ವರ್ಷ ಮತ್ತೆ 5 ವರ್ಷ ಒಟ್ಟು 24ವರ್ಷ ಸುರತ್ಕಲ್ ಮೇಳದ ತಿರುಗಾಟದಲ್ಲಿ ಯಕ್ಷಕನ್ನಿಕೆಯಾಗಿ ಕಲಾಭಿಮಾನಿಗಳ ಹೃದಯ ಸಿಂಹಾಸನ ಏರಿದರು.
ಉಭಯ ತಿಟ್ಟುಗಳ ಪ್ರವೀಣ: 19ವರ್ಷಗಳ ದೀರ್ಘಕಾಲದ ಸುರತ್ಕಲ್ ಮೇಳದ ತಿರುಗಾಟದ ಬಳಿಕ ಬಡಗಿನತ್ತ ಮತ್ತೆ ಮುಖಮಾಡಿದರು ಎಂ ಕೆ ಯವರು. ಮುಂದಿನ ತಿರುಗಾಟಕ್ಕೆ ಸಾಲಿಗ್ರಾಮ ಮೇಳಕ್ಕೆ ಎಂದು ಕಾಳಿಂಗ ನಾವಡರು ಇದ್ದೇ ಮಾತಾಯಿತು. ಆದರೆ ಮೇಳ ತಿರುಗಾಟ ಆರಂಭವಾಗುವಾಗ ನಾವಡರೇ ಇರಲಿಲ್ಲ. ಆ ವರ್ಷ ಜಯಭೇರಿ ಪ್ರದರ್ಶನ ಮೇಳಕ್ಕೇ ಒಂದು ಚಾಲೆಂಜ್ ಆಗಿತ್ತು. ನಾವಡರು ದಿವಂಗತರಾದ ಬಳಿಕ ಅನೇಕರು ಮೇಳದ ಟೆಂಟ್ ಕಡೆಗೆ ತಲೆಹಾಕುವುದನ್ನೇ ಬಿಟ್ಟಿದ್ದರು. ಶಬರಾಯ,ಯಾಜಿ, ಕೊಂಡದಕುಳಿ ಮೊದಲಾದ ಪ್ರಸಿದ್ಧ ಕಲಾವಿದರಿದ್ದರು. ಮೇಘಮಯೂರಿ, ಶೃಂಗ ಸಾರಂಗ ಎಂಬ ಪ್ರಸಂಗಗಳು ಯಶಸ್ವೀ ಪ್ರದರ್ಶನ ಕಾಣುವಲ್ಲಿ ಸ್ವಾರಸ್ಯಕರವಾದ ಸಂಭಾಷಣೆಯ ಮಾರ್ಗದರ್ಶನ ನೀಡುತ್ತ ಪಾತ್ರಧಾರಿಯಾಗಿಯೂ ಯಶಸ್ವಿಯಾದ ಎಂಕೆಯವರ ಕೊಡುಗೆ ಉಲ್ಲೇಖನೀಯ. ಪ್ರೇಮಪಲ್ಲವಿ ಎಂಬ ಪ್ರಸಂಗ ರಚಿಸಿ ಅದೂ ಉತ್ತಮ ಪ್ರದರ್ಶನ ಕಂಡಿತು. ಮತ್ತೆ ಐದು ವರ್ಷ ಸುರತ್ಕಲ್ ಮೇಳದ ತಿರುಗಾಟ. ಅನಂತರ ಪೆರ್ಡೂರು ಮೇಳದ ತಿರುಗಾಟದಲ್ಲಿ ಸಿದ್ದಕಟ್ಟೆ ಚೆನ್ನಪ್ಪ ಶೆಟ್ರು ಮತ್ತು ಇವರ ಜೋಡಿ ಸಾಮಾಜಿಕ ಪ್ರಸಂಗಗಳಲ್ಲಿಯೂ ಒಂದು ಪೌರಾಣಿಕ ಚೌಕಟ್ಟನ್ನು ಹಾಕಿಕೊಡುತ್ತಿತ್ತು. ಅನಂತರ ನೀಲಾವರ, ಸೀತೂರು, ತಳಕಲ, ಸುಂಕದಕಟ್ಟೆ ಮೊದಲಾದ ಮೇಳಗಳಲ್ಲಿ ತಿರುಗಾಟ. ಅತಿಥಿ ಕಲಾವಿದರಾಗಿ ಬಾಳೆಹೊಳೆ ಮೇಳ, ಹೊನ್ನವಳ್ಳಿ ಮೊದಲಾದ ಅನೇಕ ಸಂಘ ಸಂಸ್ಥೆಗಳಲ್ಲಿ ಪಾತ್ರಧಾರಿಯಾಗಿ, ಮಾರ್ಗದರ್ಶಕರಾಗಿ, ಪ್ರಾಚಾರ್ಯರಾಗಿ ಕಲಾಸೇವೆ ಮಾಡಿದರು.
ಎಂ ಕೆ ಯವರು ಮಾಡದ ಸ್ತ್ರೀವೇಷಗಳಿಲ್ಲ. ಪಾಪಣ್ಣವಿಜಯದ ಗುಣಸುಂದರಿಯ ಪಾತ್ರಕ್ಕೆ ಒಂದು ಅದ್ಭುತ ಮೆರಗು ನೀಡಿದವರು ಇವರು. ಭಿನ್ನ ಸ್ವಭಾವದ ಪಾತ್ರಗಳನ್ನು ಒಂದೇ ರಾತ್ರಿಯಲ್ಲಿ ಮಾಡಿ ಮೊದಲ ಪಾತ್ರ ಮಾಡಿದ್ದು ಇವರೆಯಾ? ಎನ್ನುವಷ್ಟರ ಮಟ್ಟಿಗೆ ಆ ವ್ಯತ್ಯಾಸ ಕಾಣುಸುತ್ತಿದ್ದರು. ಬ್ರಹ್ಮಕಪಾಲದ ಶಾರದೆ ಮಾಡಿ ಬೆಳಗಿನ ಜಾವ ಶಶಿಪ್ರಭೆ, ಯೋಜನಗಂಧಿ ಮಾಡಿ ಮೀನಾಕ್ಷಿ ಹೀಗೆ ಪಾತ್ರ ಭಾವವೈವಿಧ್ಯ ವೇಧ್ಯವಾಗುತ್ತದೆ ಅವರ ವೇಷಗಳಲ್ಲಿ. ಬೇಡರ ಕಣ್ಣಪ್ಪದ ರಾಣಿಯನ್ನು, ಪಂಚವಟಿಯ ಮಾಯಾಶೂರ್ಪಣಕಿಯನ್ನು ಎಷ್ಟು ಚೆನ್ನಾಗಿ ಮಾಡಬಲ್ಲರೋ ಅಷ್ಟೆ ಚೆನ್ನಾಗಿ ಚಂದ್ರಮತಿಯಾಗಿ, ಸುಭದ್ರೆಯಾಗಿ ಕರುಣಾರಸಾಮೃತವನ್ನು ಉಣ್ಣಿಸಬಲ್ಲರು. ಮಂಡೋದರಿ, ತಾರೆ, ಕೈಕಸೆಯಾಗಿ ನೀತಿಯ ತರಂಗಿಣಿಯನ್ನೇ ಹರಿಸಬಲ್ಲರು. ಶೇಣಿ, ತೆಕ್ಕಟ್ಟೆ, ರಾ.ಸಾಮಗ, ವಾ. ಸಾಮಗ, ಎಂ ಎಲ್ ಸಾಮಗ, ಕುಂಬ್ಳೆ, ಗೋವಿಂದಭಟ್ಟ, ಸಿದ್ದಕಟ್ಟೆ ದ್ವಯರು, ಯಾಜಿ, ಕೊಂಡದಕುಳಿ, ಜೋಗಿ, ಪೂಕಳ, ಉರಡ್ಕ, ಆರ್ಗೋಡು, ಜಲವಳ್ಳಿ ಮೊದಲಾದವರೊಂದಿಗೆ ಅವರ ಸಹಪಾತ್ರಗಳು ಅಮೋಘವಾದುದೆಂದು ಅನೇಕ ಕಲಾಭಿಮಾನಿಗಳ ಅಭಿಮತ. ಅವರ ಅನುಭವ ಅನುಪಮ. ಪೌರಾಣಿಕ ಪ್ರಸಂಗದ ಪಾತ್ರಗಳ ಮಾಹಿತಿಗಾಗಿ ಪೋನ್ ಮಾಡಿದವರಿಗೆ ತಾನು ಬ್ಯುಸಿ ಇದ್ದರೂ ಸಂತೋಷದಿಂದಲೇ ಅನುಭವವನ್ನು ದಾರೆ ಎರೆಯುತ್ತಾರೆ.
ಶೇಣಿಯವರೊಂದಿಗಿನ ನಂಟು: “ರಮೇಶನ ಸ್ತ್ರೀವೇಷದೊಂದಿಗೆ ವೇಷಮಾಡಿದಾಗ ಸದ್ಗೃಹಿಣಿಯೊಂದಿಗಿರುವ ಅನುಭವ ರಂಗದಲ್ಲಿ ಆಗುತ್ತದೆ” ಎಂದು ಒಂದು ಭಾಷಣದಲ್ಲಿ ಶೇಣಿಯವರೇ ಹೇಳುತ್ತಾರೆ. ಅದನ್ನು ಕೇಳಿ ನನಗೆ ಇನ್ಯಾವ ಪ್ರಶಸ್ತಿಯೂ ಬೇಡ. ಇದೇ ದೊಡ್ಡ ಪ್ರಶಸ್ತಿ ಎಂದು ಭಾವಿಸಿದ ಎಂಕೆ ಈಗಲೂ ಆ ಮಾತನ್ನು ಸ್ಮರಿಸುತ್ತಾರೆ. ಮಂಗಳೂರಿನ ಒಂದು ಆಟದಲ್ಲಿ ಶೇಣಿಯವರೊಂದಿಗೆ ಇವರಿಗೂ ಸನ್ಮಾನ ಮಾಡುತ್ತೇವೆಂದು ಸಂಘಟಕರು ಬಂದು ಕೇಳಿದಾಗ “ಅವರೊಂದಿಗೆ ಕುಳಿತು ಸನ್ಮಾನ ಸ್ವೀಕರಿಸಲು ನಾನು ಅರ್ಹನಲ್ಲ” ಎಂದು ನಿರಾಕರಿಸುತ್ತಾರೆ. ಸಂಘಟಕರು ಈ ವಿಷಯವನ್ನು ಶೇಣಿಯವರಲ್ಲಿ ತಿಳಿಸಿದಾಗ ಇವರನ್ನು ಕರೆದು “ವೇಷಮಾಡಿ ರಂಗದಲ್ಲಿ ನನ್ನ ಜೊತೆ ಕುಳಿತುಕೊಳ್ಳಲು ಆಗುತ್ತದೆ. ಸನ್ಮಾನಕ್ಕೆ ಯಾಕೆ ಆಗುವುದಿಲ್ಲ ” ಎಂದು ಹೇಳಿ ಅವರೊಂದಿಗೆ ಸನ್ಮಾನಕ್ಕೆ ಒಪ್ಪಿಸುತ್ತಾರೆ. ಸುರತ್ಕಲ್ ಮೇಳದಲ್ಲಿ ಇದ್ದಾಗ ಇವರು ಒಂದುದಿನ ರಜೆ ಹಾಕಿ ಊರಿಗೆ ಹೊರಟರು. ಆದರೆ ಶೇಣಿಯವರು ಇವರು ರಜೆ ಹಾಕುವುದು ಬೇಡ ಎಂದರು. ಇವರು ಹೋಗಲೇ ಬೇಕೆಂದು ಹಠ ಹಿಡಿದರೂ ಶೇಣಿಯವರು ಒಪ್ಪಲಿಲ್ಲ. ಅದಕ್ಕೆ ಕಾರಣ ಅಂದಿನ ಅವರ ವಾಲಿಗೆ ಇವರ ತಾರೆಯೇ ಆಗಬೇಕೆಂಬ ಅಭಿಲಾಷೆಯಿಂದ. ಒಮ್ಮೆ ರಮೇಶಾಚಾರ್ಯರ ಸನ್ಮಾನ ಸಮಾರಂಭದ ಅಧ್ಯಕ್ಷರಾಗಿ ಆಗಮಿಸಿದ ಶೇಣಿಯವರು ತನಗೆ ನೀಡಿದ ಹಣವನ್ನೂ ಸಂಘಟಕರಿಗೆ ಹಿಂದಿರುಗಿಸಿದ್ದರು. ಅದು ರಮೇಶಾಚಾರ್ಯರ ಮೇಲಿನ ಪ್ರೀತಿಯಿಂದ. ಹೀಗೆ ಶೇಣಿಯವರೊಂದಿಗೆ ಮಾಡಿದ ಪಾತ್ರಗಳನ್ನು ಸದಾ ಸ್ಮರಿಸುತ್ತಾರೆ ಎಂಕೆ. ಇತ್ತೀಚೆಗಂತು ಶೇಣಿಯವರ ಸಂಸ್ಮರಣಾ ಭಾಷಣಕ್ಕೆ ಇವರಿಗೇ ಬೇಡಿಕೆ.
ಅರ್ಥಧಾರಿಯಾಗಿ ರಮೇಶಾಚಾರ್ಯ: ಎಲ್ಲಾ ಪ್ರಸಿದ್ಧ ಅರ್ಥಧಾರಿಗಳೊಂದಿಗೆ ಅರ್ಥಹೇಳಿದ ಇವರು ಸ್ತ್ರೀಪಾತ್ರದ ಅರ್ಥಗಾರಿಕೆಗೆ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರಲ್ಲಿ ಪ್ರಮುಖರು. ಇವರ ಅರ್ಥಗಾರಿಕೆಯಲ್ಲಿ ಪಾತ್ರನೆಡೆ, ಸಾಹಿತ್ಯ, ಪಾತ್ರವರಿತು ಖಂಡನೆ-ಮಂಡನೆಯ ವಿವೇಚನೆ, ಕನ್ನಡ ಸಂಸ್ಕೃತ ಕಾವ್ಯಗಳ ಸೊಲ್ಲುಗಳು, ರಸವತ್ತಾದ ನಿರೂಪಣೆ, ಮಡದಿಯ ಪಾತ್ರವಾದರೆ ಪತಿಯ ಪಾತ್ರಧಾರಿಯನ್ನು ಮೀರದ ಔಚಿತ್ಯಪ್ರಜ್ಞೆ ಮೊದಲಾದ ಅಂಶಗಳು ಉಲ್ಲೇಖನೀಯ. ಹವ್ಯಾಸಿ ಅರ್ಥಧಾರಿಗಳೊಂದಿಗೆ ಅರ್ಥ ಹೇಳುವಾಗಲೂ ಅವರು ಧೈರ್ಯದಿಂದ ಮಾತನಾಡುವಂತೆ ಮಾಡುವ ಇವರ ಚಾಕಚಕ್ಯತೆ ಅದ್ಬುತವಾದುದು. ಕ್ಯಾಸೆಟ್ಗಳಲ್ಲಂತೂ ಇವರ ಪಾತ್ರವಿಲ್ಲದೇ ಇರುತ್ತಿದ್ದುದು ತುಂಬಾ ವಿರಳ.
ಪ್ರಸಂಗಕರ್ತ ರಮೇಶಾಚಾರ್ಯ: 60-65ಪ್ರಸಂಗಗಳ ಪದ್ಯರಚನೆ. ಬಿಡಿಪದ್ಯಗಳನ್ನು ಬರೆದು ಕೊಟ್ಟದ್ದು ಲೆಕ್ಕವೇ ಇಲ್ಲ ಬಿಡಿ. ಅನೇಕ ಕ್ಷೇತ್ರಮಹಾತ್ಮೆಗಳ ಪದ್ಯಗಳೆಲ್ಲ ಇವರಿಂದಲೇ ರಚಿತವಾದವು. ಇವರ ಪದ್ಯರಚನೆಯ ಶೈಲಿ ಸರಳ ಮತ್ತು ಸುಂದರ. ಕ್ಲಿಷ್ಟವಲ್ಲದ ಅರ್ಥಪೂರ್ಣ ಧ್ವನಿಯುಕ್ತವಾದ ಪದಬಳಕೆ. ನಡುಗನ್ನಡ- ಹೊಸಗನ್ನಡದ ಸೊಗಸಾದ ಸಮ್ಮಿಲನ. *ಸಮಗ್ರ ವಿಶ್ವಾಮಿತ್ರ, ಮಹಾಮಾತೆ ಕುಂತಿ, ಅನಸೂಯೋಪಖ್ಯಾನ, ಶ್ರೀಕೃಷ್ಣತುಲಾಭಾರ, ಶುಭೋದಯ(ವಾಮನಪುರಾಣಾಧಾರಿತ) ಮೊದಲಾದವು ಇವರ ಪೌರಾಣಿಕ ಪ್ರಸಂಗಗಳು.
ಪ್ರಶಸ್ತಿ -ಸನ್ಮಾನಗಳು: ಬಯಲಾಟ ಅಕಾಡೆಮಿ ಪ್ರಶಸ್ತಿ, ಬಂಗಾರಮಕ್ಕಿ ಜಾನಪದಶ್ರೀ ಪ್ರಶಸ್ತಿ, ಪಾತಾಳ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ, ಅಜಾತಶತ್ರು ಪ್ರಶಸ್ತಿ, ಕಲ್ಕೂರು ಶೇಣಿ ಕಲೋತ್ಸವ ಪ್ರಶಸ್ತಿ, ಅಗರಿ ಪ್ರಶಸ್ತಿ ಹೀಗೆ ದೊರೆತ ಪ್ರಶಸ್ತಿಗಳು ಹತ್ತು ಹಲವು. ಇನ್ನು ಸನ್ಮಾನಗಳು ಅಗಣಿತ. ಮನೆಯ ಒಂದು ಗೋಡೆಯ ತುಂಬಾ ಸನ್ಮಾನಪತ್ರಗಳೇ ತುಂಬಿವೆ. ಇವೆಲ್ಲ ಎಂ ಕೆ ಯವರ ಸಾಧನೆಗೆ ಸಾಕ್ಷಿಯಾಗಿವೆ.
ಕುಟುಂಬ: ಇವರ ಪತ್ನಿ ಶ್ರೀಮತಿ ವಿಶಾಲಾಕ್ಷಿ. ಎಂ ಕೆ ಯವರ ಸಾಧನೆಗೆ ಬೆನ್ನೆಲುಬಾಗಿ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಪತಿಯ ಪ್ರತಿಭಾ ದೀಪಕ್ಕೆ ತೈಲವಾದ ಸದ್ಗೃಹಿಣಿ. ಆಶಾಲತ ಮತ್ತು ಸರೋಜ ಎಂಬ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಒಳ್ಳೆಯ ಮನೆಸೇರಿ ಸಂತೃಪ್ತಿಯಿಂದ ಜೀವನ ನೆಡೆಸುತ್ತಿದ್ದಾರೆ. ಮಗ ಮನೋಜ್ ಯಕ್ಷಗಾನ ಕಲಾವಿದರಾಗದೇ ಇದ್ದರು ತಂದೆಯ ಸಾಧನೆಯ ಬಗ್ಗೆ ಹೆಮ್ಮೆ ಉಳ್ಳವರು. ಮಗಳಾಗಿ ಮಾವನನ್ನು ನೋಡಿಕೊಳ್ಳುತ್ತಿರುವ ಸೊಸೆ ಸರಿತಾ. ಈಶ್ವರಿ ಮತ್ತು ಪನ್ನಗ ಮೊಮ್ಮಕ್ಕಳು. ತಾಯಿ ರುಕ್ಮಿಣಮ್ಮ ಇತ್ತೀಚೆಗೆ ದಿವಂಗತರಾದರು. ಎಂ ಕೆ ಯವರ ತಮ್ಮ ಸತೀಶ್ ಮಂಗಳಗಾರು ಉತ್ತಮ ಯಕ್ಷಗಾನ ಕಲಾವಿದರಾಗಿದ್ದರು. ಎರಡು ದಶಕಗಳ ಹಿಂದೆಯೇ ವಿಧಿವಶರಾದ ನೋವು ಅಣ್ಣನಲ್ಲಿ ಇನ್ನೂ ಮಾಸಲಿಲ್ಲ.
ಇದೊಂದು ಅವರ ಕಿರು ಪರಿಚಯವಷ್ಟೆ. ಅವರ ಪ್ರತಿಭೆಯ ಪೂರ್ಣಪರಿಚಯಕ್ಕೆ ಪುಸ್ತಕವೇ ಬೇಕು. ಅಂತಹ ಒಂದು ಹೊತ್ತಗೆ ಸರಿ ಹೊತ್ತಿಗೆ ಬರಲಿ ಎಂದು ಆಶಿಸುತ್ತೇನೆ.
ಇತ್ತೀಚೆಗೆ ಕರ್ನಾಟಕ ಸರಕಾರ ಕೊರೋನಾ ಸಂಕಷ್ಟದ ನಿಮಿತ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನ ನೀಡುವ ಭರವಸೆ ನೀಡಿ ಆ ಸಲುವಾಗಿ ಕಲಾವಿದರು ಅರ್ಜಿ ಸಲ್ಲಿಸುವಂತೆ ತಿಳಿಸಿತ್ತು. ಅರ್ಜಿ ಸಲ್ಲಿಸುವ ಹಾಗೂ ಅದರ ಮುಂದಿನ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದೆ. ಈ ನಡುವೆ ಗಡಿನಾಡು ಕಾಸರಗೋಡಿನ ಕಲಾವಿದರು ತಮ್ಮನ್ನೂ ಕರ್ನಾಟಕದ ಈ ಸವಲತ್ತಿನ ವ್ಯಾಪ್ತಿಯೊಳಗೆ ತರಬೇಕೆಂಬ ಮನವಿ ಸಲ್ಲಿಸಿದ್ದಾರೆ. ಯಾಕೆಂದರೆ ಹೆಚ್ಚಿನ ಗಡಿನಾಡಿನ ಯಕ್ಷಗಾನ ಕಲಾವಿದರೂ ಕಲಾಸೇವೆ ಮಾಡುತ್ತಿರುವುದು ಕರ್ನಾಟಕದ ಪ್ರದೇಶಗಳಲ್ಲಿ ಮತ್ತು ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟ ಮೇಳಗಳಲ್ಲಿ. ಆದುದರಿಂದ ಅವರ ಈ ಕೇಳಿಕೆ ಸಾಧುವಾದುದೇ ಆಗಿರುತ್ತದೆ.
1. ಹೆಚ್ಚಿನ ಕಲಾವಿದರು ಕಲಾಸೇವೆ ಮಾಡುತ್ತಿರುವುದು ಕರ್ನಾಟಕದಲ್ಲಿ.
2. ಬಹುತೇಕ ಕಲಾವಿದರು ದುಡಿಯುತ್ತಿರುವ ಮೇಳಗಳು ಕರ್ನಾಟಕ ರಾಜ್ಯಕ್ಕೆ ಸೇರಿದವುಗಳು.
3. ಅಂತಹಾ ಮೇಳಗಳ ಮಾಲಕತ್ವವೂ ಕರ್ನಾಟಕ ರಾಜ್ಯದ ಮಹನೀಯರಿಗೆ ಸೇರಿದುದಾಗಿದೆ.
ಆದುದರಿಂದ ಕಾಸರಗೋಡಿನ ಕಲಾವಿದರು ಈ ಸಹಾಯಧನವನ್ನು ಅಪೇಕ್ಷೆಪಟ್ಟರೆ ಅದು ಅನುಚಿತವಾಗಲಾರದು. ಬದಲಾಗಿ ಈ ಸಂಕಷ್ಟ ಸಮಯದಲ್ಲಿ ಉಚಿತವೂ ಸಾಧುವೂ ಆಗಿರುತ್ತದೆ ಎಂದು ಕಲಾವಿದರ ಹಾಗೂ ಯಕ್ಷಾಭಿಮಾನಿಗಳ ಅಭಿಪ್ರಾಯವಾಗಿದೆ.
ಕಪ್ಪೆಕೆರೆ ಸುಬ್ರಾಯ ಹೆಗಡೆ(ಕಪ್ಪೆಕೆರೆ ಸುಬ್ರಾಯ ಭಾಗವತ) – ಸಂಕ್ಷಿಪ್ತ ಮಾಹಿತಿ
ಹೆಸರು: ಕಪ್ಪೆಕೆರೆ ಸುಬ್ರಾಯ ಹೆಗಡೆ ಜನನ: 1947
ಜನನ ಸ್ಥಳ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಡಿನಬಾಳ
ತಂದೆ ತಾಯಿ: ತಂದೆ ಶ್ರೀ ಈಶ್ವರ ಹೆಗಡೆ. ತಾಯಿ ಶ್ರೀಮತಿ ಗೋಪಿ ಹೆಗಡೆ
ವಿದ್ಯಾಭ್ಯಾಸ: ಹತ್ತನೇ ತರಗತಿ
ಯಕ್ಷಗಾನ ಗುರುಗಳು: ಕೆರೆಮನೆ ಮಹಾಬಲ ಹೆಗಡೆ, ಗಣಪತಿ ಹೆಗಡೆ. ಕಪ್ಪೆಕೆರೆ ಸುಬ್ರಾಯ ಭಾಗವತರದು ಮೂಲತಃ ಯಕ್ಷಗಾನ ಕುಟುಂಬ. ಹಿರಿಯ ಸಹೋದರ ಕಪ್ಪೆಕೆರೆ ಮಹಾದೇವ ಹೆಗಡೆಯವರು ಪ್ರಸಿದ್ಧ ವೇಷಧಾರಿ.
ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಕೆರೆಮನೆ ಶಿವರಾಮ ಹೆಗಡೆ, ಮರವಂತೆ ನರಸಿಂಹ ದಾಸ, ನಾರ್ಣಪ್ಪ ಉಪ್ಪೂರರಿಂದ ಅನುಭವ: ಇಡಗುಂಜಿ, ಗುಂಡಬಾಳ, ಸಾಲಿಗ್ರಾಮ ಬಚ್ಚಗಾರು ಮತ್ತು ಅಮೃತೇಶ್ವರಿ ಮೇಳಗಳಲ್ಲಿ ಸುಮಾರು 45 ವರ್ಷ ಕಲಾಸೇವೆ ಮಾಡಿದ್ದಾರೆ. ಇವರೊಬ್ಬ ಶ್ರೇಷ್ಟ ಬಾಗವತ ಮಾತ್ರವಲ್ಲದೆ ಸಮರ್ಥ ಗುರುಗಳಾಗಿ ನೂರಾರು ಶಿಷ್ಯರನ್ನು ತಯಾರಿಸಿದ್ದಾರೆ.ಚಂಡೆ ಮದ್ದಳೆ ವಾದನ ವೇಷಗಾರಿಕೆಯಲ್ಲೂ ಪರಿಣತಿ ಪಡೆದು ಯಕ್ಷಗಾನದ ದಶಾವತಾರಿ ಎನಿಸಿಕೊಂಡಿದ್ದಾರೆ. ವೇಷದಾರಿಯಾಗಿ ಅರ್ಜುನ, ಬಲರಾಮ, ನಾರದ ಮುಂತಾದ ಪಾತ್ರಗಳನ್ನು ನಿರ್ವಹಿಸಿ ಮುಮ್ಮೇಳ ಕಲಾವಿದನಾಗಿ ತನ್ನ ಸಾಮರ್ಥ್ಯವನ್ನು ಪ್ರಕಟಿಸಿದ್ದಾರೆ.
ಗುರುಗಳಾಗಿ : ಸಮರ್ಥ ಗುರುಗಳಾಗಿ ನೂರಾರು ಶಿಷ್ಯರನ್ನು ತಯಾರು ಮಾಡಿದ್ದಾರೆ.
ವಿಶೇಷತೆ: ಸುಬ್ರಾಯ ಬಾಗವತರ ತಾಳಗತಿಯಲ್ಲಿನ ಪರಿಶುದ್ದತೆ, ಲಯಬದ್ದತೆ.ಪ್ರಸಂಗದ ನೆಡೆ,ನಿರ್ದೇಶನ ಮುಂತಾದವುಗಳಿಂದ ಅವರ ಪ್ರತಿಭೆಯನ್ನು ಅಳೆಯಬಹುದು. ತಾನೊಬ್ಬ ಸಮರ್ಥ ಭಾಗವತ ಮಾತ್ರವಲ್ಲದೆ ರಂಗನಿರ್ದೇಶಕನೆಂದು ತನ್ನ ಪ್ರದರ್ಶನಗಳಿಂದ ತೋರಿಸಿಕೊಟ್ಟಿದ್ದಾರೆ. ಅಪಾರ ಪೌರಾಣಿಕ ಜ್ಞಾನವನ್ನು ಹೊಂದಿದ ಭಾಗವತ.
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಇವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ,ಯಕ್ಷ ದೇಗುಲ ಪ್ರಶಸ್ತಿ, ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಗಳಲ್ಲದೆ ಇನ್ನಿತರ ಹಲವಾರು ಸನ್ಮಾನ ಪ್ರಶಸ್ತಿಗಳು ದೊರೆತಿವೆ.
ಸದಾ ಏನಾದರೊಂದು ಸದ್ವಿಚಾರಗಳ ಚಟುವಟಿಕೆಯಲ್ಲಿ ಸುದ್ದಿ ಮಾಡುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ತನ್ನ ಕಲಾಪರ ಕಾರ್ಯಕ್ರಮಗಳನ್ನು ಮುಂದುವರಿಸುತ್ತಲೇ ಇದೆ. ಈ ಬಾರಿ ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಯಕ್ಷಗಾನ ಪ್ರದರ್ಶನಗಳು ಬೇಗನೆ ನಿಂತಿರಬಹುದು. ಆದರೆ ಪ್ರತಿಷ್ಠಾನ ಕಲೆಯ ಹೊರತು ಬೇರೇನನ್ನೂ ಯೋಚಿಸುವುದಿಲ್ಲ. ಈಗಾಗಲೇ ಸಿರಿಬಾಗಿಲು ಪ್ರತಿಷ್ಠಾನ ಹಲವಾರು ಕಲಾಸಂಬಂಧಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಾ ಇದೆ.
ಇಂತಹಾ ಕಾರ್ಯಕ್ರಮಗಳಿಗೆ ಇದೀಗ ಇನ್ನೊಂದು ಸೇರ್ಪಡೆಯಾಗಿದೆ. ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯರು ನಿರ್ವಾಹಕರಾಗಿರುವ ‘ಯಕ್ಷಾನುಗ್ರಹ’ ಎಂಬ ವಾಟ್ಸಾಪ್ ಗ್ರೂಪ್ ಇದೀಗ ಇಂತಹುದೇ ಒಂದು ಚಟುವಟಿಕೆಯಲ್ಲಿ ತೊಡಗಿದೆ. ಪ್ರತಿದಿನವೂ ತಿಟ್ಟುಗಳ ಭೇದವಿಲ್ಲದೆ, ಅಳಿದುಹೋದರೂ ಜನಮಾನಸದಲ್ಲಿ ಕೀರ್ತಿವಂತರಾಗಿ ನೆಲೆಸಿದ ಕಲಾವಿದರನ್ನು ದಿನಕ್ಕೊಬ್ಬರಂತೆ ಲೇಖನಗಳ ಮೂಲಕ ನೆನೆಯುವ ಸತ್ಕಾರ್ಯವನ್ನು ಈ ವಾಟ್ಸಾಪ್ ಗುಂಪು ಮಾಡುತ್ತಿದೆ. ಈಗಾಗಲೇ 11 ದಿನಗಳಲ್ಲಿ ಹನ್ನೊಂದು ಪ್ರಸಿದ್ಧ ಕಲಾವಿದರ ಲೇಖನಗಳು ಬಂದಿವೆ. ಎಲ್ಲಾ ಲೇಖನಗಳು ಉತ್ತಮ ವಿಚಾರಗಳನ್ನೊಳಗೊಂಡಿದ್ದುವು.
ಇಲ್ಲಿ ಮತ್ತೊಂದು ವಿಚಾರವನ್ನು ಗಮನಿಸಬೇಕು. ಈ ಗ್ರೂಪಿನ ಸದಸ್ಯರ ಹೆಸರುಗಳನ್ನೂ ಗಮನಿಸಿದಾಗ ಆಶ್ಚರ್ಯವಾಗುತ್ತದೆ. ಕಲಾವಿದರು, ಪ್ರಸಂಗಕರ್ತರು, ವಿದ್ವಾಂಸರು ತುಂಬಿರುವ ಈ ಗುಂಪು ಸದ್ವಿಚಾರಗಳ ಚರ್ಚೆಯನ್ನೇ ನಡೆಸುತ್ತದೆ. ಈ ವರೆಗೆ ಪ್ರಸ್ತುತಗೊಂಡ ಲೇಖನಗಳು ವಾಸ್ತವತೆಯನ್ನು ಪ್ರತಿಬಿಂಬಿಸಿವೆ. ಆದರೆ ಲೇಖನಕ್ಕಿಂತಲೂ ಆಮೇಲೆ ನಡೆಯುವ ಅದರ ಮೇಲಿನ ಅನಿಸಿಕೆಗಳು ಮತ್ತು ಚರ್ಚೆಗಳು ಇನ್ನೂ ಹೆಚ್ಚಿನ ಕುತೂಹಲಕರವಾದ ಮಾಹಿತಿಗಳನ್ನೊಳಗೊಂಡಿರುತ್ತವೆ. ಇದುವರೆಗೆ ಅಗರಿ, ದಾಸರಬೈಲು, ಅರಾಟೆ, ಪಕಳಕುಂಜ, ಚಿಪ್ಪಾರು, ಹೊಸ್ತೋಟ, ಹಿರಿಯ ಬಲಿಪ, ಕಡತೋಕ, ಕುರಿಯ, ಹೆರಿಯ ನಾಯ್ಕ್, ವೀರಭದ್ರ ನಾಯಕ್ ಮೊದಲಾದ ಗತಿಸಿಹೋದ ಪ್ರಸಿದ್ಧ ಕಲಾವಿದರ ಲೇಖನಗಳು ಬಂದಿರುತ್ತವೆ.
ಈಗಾಗಲೇ 11 ದಿನಗಳಲ್ಲಿ 11 ಕಲಾವಿದರ ಸ್ವಾರಸ್ಯಕರ ವಿಚಾರಗಳನ್ನು ಆಸ್ವಾದಿಸಿದ ಗುಂಪಿನ ಸದಸ್ಯರು ಇಂದು ಹನ್ನೆರಡನೆಯ ಲೇಖನದ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಇದೊಂದು ಅತ್ಯುತ್ತಮ ವಾಟ್ಸಾಪ್ ಗ್ರೂಪ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೂ ಹೆಚ್ಚಿನ ಚಟುವಟಿಕೆಗಳಿಂದ ಈ ಗುಂಪು ಕಾರ್ಯನಿರ್ವಹಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಇಂದು ಯಕ್ಷಗಾನ ರಂಗದ ಧ್ರುವತಾರೆ ಎಂದು ಕಲಾರಸಿಕರ ಮನದಲ್ಲಿ ಸ್ಥಾಯಿಯಾಗಿ ನೆಲೆಯೂರಿರುವ ರಸ ರಾಗ ಚಕ್ರವರ್ತಿ ಜಿ.ಆರ್.ಕಾಳಿಂಗ ನಾವುಡರು ಜನ್ಮ ತಳೆದ ದಿನ .ನಾವುಡರ ಬಗ್ಗೆ ಹಲವು ವಿದ್ವಾಂಸರು ವಿಭಿನ್ನ ದೃಷ್ಟಿಕೋನದಲ್ಲಿ ಬರೆದಿದ್ದಾರೆ ಎಂಬುದು ಸತ್ಯ. ತುಂಬಿದ ಶರಧಿಯಿಂದ ಎಷ್ಟು ಜಲವನ್ನು ನಮಗೆ ದಕ್ಕಿಸಿಕೊಳ್ಳಬಹುದೋ ಅದು ನಮ್ಮ ಪ್ರಾಪ್ತಿ. ಹಾಗೆಯೇ ಅವರ ಅಪ್ಪಟ ಅಭಿಮಾನಿಯಾಗಿ ನಾನು ಸಹ ನನ್ನ ಬೊಗಸೆಗೆ ದಕ್ಕುವಷ್ಟನ್ನು ಪಡೆಯುವ ಪ್ರಾಮಾಣಿಕ ಯತ್ನಕ್ಕೆ ಕೈ ಇಕ್ಕುತ್ತೇನೆ ಎಂಬ ನಿಲುವಿನೊಂದಿಗೆ ನಾವುಡರೆಂಬ ತೇಜೋಪುಂಜ ವ್ಯಕ್ತಿತ್ವವನ್ನು ಬಿಂಬಿಸಲು ಯತ್ನಿಸುತ್ತೇನೆ.
ಇತಿಹಾಸವನ್ನು ಎಲ್ಲರಿಂದಲೂ ಸೃಜಿಸಲು ಸಾಧ್ಯವಿಲ್ಲ, ಅದು ತನ್ನಷ್ಟಕ್ಕೆ ಪ್ರಕಾಶಕ್ಕೆ ಬರುತ್ತದೆಯಾದರೂ , ಕೆಲವೊಂದು ಅಸಾಮಾನ್ಯ ಸಾಧಕರು ಸಾಧನೆಯ ಬಲುಮೆಯಿಂದ ಇತಿಹಾಸವನ್ನು ಸೃಷ್ಟಿ ಮಾಡಬಲ್ಲರು.ಅದು ಕ್ರೀಡೆ, ಸಾಹಿತ್ಯ , ಕಲೆ ಎಂಬೀ ವಿಭಿನ್ನ ಪ್ರಕಾರವನ್ನು ಹೊಂದಿರಬಹುದು. ಮನುಷ್ಯರ ಗುಣಸ್ವಭಾವಗಳು ಸರ್ವೇ ಸಾಧಾರಣವಾಗಿ ಸಾಮ್ಯತೆಯನ್ನು ಹೊಂದಿರುತ್ತದೆ ಎಂಬುದು ಶತಸಿದ್ಧ. ಕೆಲವರು ಮಾತ್ರ ನಮ್ಮ ಊಹೆಗೂ ಮೀರಿದ ಅಸಾಮಾನ್ಯ ಸಾಧನೆಯನ್ನು ಈ ನೆಲದಲ್ಲಿ ಸ್ಥಾಯಿಯಾಗಿ ಸ್ಥಾಪಿಸಿ ಬಿಡುತ್ತಾರೆ. ಸಾಧಕರು ಮತ್ತು ನೋಟಕರು ಇವೆರಡರ ನಡುವೆ ತೀರಾ ಕಿರಿದಾದ ಅಂತರವಿರಬಹುದು, ಆದರೆ ಸಾಧಕರ ಬಲುಮೆ ಎಂಬುದು ಅನೂಹ್ಯ ಅನುಭೂತಿಯನ್ನು ನೀಡುತ್ತದೆ . ಗಮನಿಸಬೇಕಾದ ವಿಚಾರವಿರುವುದು ಈ ನೆಲದಲ್ಲಿ ಅಳಿಸಲಾಗದ ಅಸದೃಶ ಪ್ರಭಾವವನ್ನು ಬೀರಿ ಇತಿಹಾಸ ನಿರ್ಮಿಸಿದ ಮಹಾನ್ ಸಾಧಕರ ಸಾಧನೆಯ ಕುರಿತಾಗಿ.
ಸಂವತ್ಸರಗಳು ಉರುಳಿದಂತೆ ಮತ್ತಷ್ಟು ಪ್ರಖರತೆಯನ್ನು ಪಡೆದು ಜನಮಾನಸಕ್ಕೆ ಆಪ್ತವಾಗುವ ಒಂದು ವಿಶಿಷ್ಟ ಸಂದರ್ಭ ಇಲ್ಲಿರುವ ಧನಾತ್ಮಕ ಅಂಶ. ಈ ದಿಸೆಯಲ್ಲಿ ನನ್ನ ಯೋಚನಾಲಹರಿಯನ್ನು ಹರಿಯಬಿಟ್ಟಾಗ ನನಗೆ ದೃಗ್ಗೋಚರವಾಗುವುದು ಒಂದು ವಿಶಿಷ್ಟ, ಅಸಾಮಾನ್ಯ , ಅನುಪಮ ವ್ಯಕ್ತಿತ್ವ. ವ್ಯಕ್ತಿತ್ವ ಎಂಬುದಕ್ಕಿಂತಲೂ ಒಂದು Phenomenon ಆಗಿ ದಟ್ಟ ಪ್ರಭಾವವನ್ನು ಬೀರಿದ ಮಹಾನ್ ಚೇತನ ರಸ ರಾಗ ಚಕ್ರವರ್ತಿ ಯಕ್ಷರಂಗದ ಧ್ರುವತಾರೆ ಭಾಗವತ ಗುಂಡ್ಮಿ ಕಾಳಿಂಗ ನಾವುಡರು. ಕಾಳಿಂಗ ನಾವುಡರ ಬಗ್ಗೆ ಹಲವು ವಿದ್ವಾಂಸರು ವಿವಿಧ ಮಾಧ್ಯಮಗಳಲ್ಲಿ ತಮ್ಮ ಗ್ರಹಿಕೆಯ ಆಳಕ್ಕಿಳಿದು ವಿಚಾರವನ್ನು ಮಂಡಿಸಿದ್ದಾರೆ ಎಂಬುದು ದಿಟವೇ. ಮತ್ತನೇಕರ ಅಭಿಪ್ರಾಯದಲ್ಲಿ ನಾವುಡರ ವಿಷಯವನ್ನು ಹೊರತುಪಡಿಸಿ ಬೇರೆ ಏನಾದರೂ ಬರೆಯಬಹುದು ಎಂಬುದು. ಇದೂ ಒಂದು ವಾದವೇ. ಆದರೆ ನಾವು ಮನಗಾಣಬೇಕಾದ ವಿಷಯವೆಂದರೆ, ಕೆಲವೊಂದು ಘಟನೆ, ವಿದ್ಯಮಾನಗಳು ಚಿರಂತನವಾದ ಪ್ರಭಾವವನ್ನು ಜನಮಾನಸದಲ್ಲಿ ಬೀರುತ್ತವೆ. ಈ ಕಡೆಗೆ ಗಮನ ಹರಿಸಿದರೆ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ , ಪಾಪ್ ತಾರೆ ಮೈಕಲ್ ಜಾಕ್ಸನ್, ಡಿಗೋ ಮರಡೋನಾ , ವೀರಯೋಧ ನೆಪೋಲಿಯನ್ ಬೋನಪಾರ್ಟೆ . ಈ ಎಲ್ಲರೂ ಇತಿಹಾಸ ಪುರುಷರು. ಇತಿಹಾಸಕ್ಕೊಂದು ವ್ಯಾಖ್ಯಾನ ನೀಡಿದವರು . ಭಾಗವತ ಕಾಳಿಂಗ ನಾವುಡರನ್ನು ಅಭಿಮಾನದ ನೆಲೆಯಲ್ಲಿ ಇದೇ ರೀತಿಯಾಗಿ ಬಿಂಬಿಸುವುದು ಸೂಕ್ತವೆನಿಸುತ್ತದೆ . ಹಾಗಾಗಿ ಅವರು ಎಂದಿಗೂ ಪ್ರಸ್ತುತ.
ನಾವೆಲ್ಲ ತಿಳಿದಂತೆ ಯಕ್ಷಗಾನದಲ್ಲಿ ರಂಗದ ಸೂತ್ರಧಾರ (ನಿರ್ದೇಶಕ ) ನೆಂದರೆ ಭಾಗವತ. ಅದನ್ನವರು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂಬುದು ಸರ್ವವಿದಿತ . ಸಾಧಾರಣ 13 -14 ಈ ವಯೋಮಾನದ ಬಾಲಕನಾಗಿರುವಾಗಲೇ ಭಾಗವತಿಕೆಯಲ್ಲಿ ಅಸಾಧಾರಣ ಪ್ರೌಢಿಮೆ ಕರಗತ ಮಾಡಿದ್ದರು ಎಂಬುದು ಆಶ್ಚರ್ಯಕರ ವಿಚಾರ. ಅತ್ಯಂತ ಉನ್ನತ ಕಂಠಶ್ರೀಯ ಭಾಗವತಿಕೆ, ಕರ್ಣಾನಂದಕರವಾಗಿ ಹೃದ್ಯವಾಗಿರುತ್ತಿತ್ತು. ಸಾಧಾರಣವಾಗಿ ಉನ್ನತ ಸ್ಥಾಯಿಯಲ್ಲಿ ಹಾಡುವ ಗಾಯಕನ ಗಾಯನ ಮಾಧುರ್ಯದಲ್ಲಿ ನಿರಂತರತೆ ಹೊಂದಿರುತ್ತದೆ ಎನ್ನಲು ಬರುವುದಿಲ್ಲ . ಆದರೆ ನಾವುಡರ ವಿಚಾರದಲ್ಲಿ ಹಾಗಲ್ಲ . ಅದೊಂದು ರಸಲೋಕದ ಸೃಷ್ಠಿ. ಗುಂಯ್ಗುಡುವ ಸ್ವರದ ಸಂಚಾರ . ಯಾವುದೇ ರಾಗವಿರಲಿ, ಅದರ ರಸಸ್ಯಂದಿಯಾದ ಸಂಚಾರ ನಾವುಡರ ವಿಶಿಷ್ಟತೆ . ಸಾಹಿತ್ಯ ಸ್ಪಷ್ಟತೆ , ಅಸಾಧಾರಣ ತಾಳಲಯಗಳ ಸಮ್ಮಿಲನ. ಎತ್ತರದ ಪೀಠದಲ್ಲಿ ಕುಳಿತು ತಲೆತಗ್ಗಿಸಿ ಹಾಡಿದರೆ ಯಕ್ಷಲೋಕದ ಅನಾವರಣ. ಬಹುಶಃ ಯಾವ ಭಾಗವತನಿಗೂ ಸಿದ್ಧಿಸದ ಅಸಾಧಾರಣ ವಿಶಿಷ್ಟ ಪ್ರಾಪ್ತಿ . ಏನದು ಕರ್ಣ ಮಧುರ ಘಂಟಾರವ ಅಹಹ ಅಲ್ಲಲ್ಲ ಇನಿದನಿಯ ಕಲರವ ಎನ್ನಬಹುದಾದ, ವಿಮರ್ಶೆಯ ಮಜಲನ್ನು ಮೀರಿನಿಂತ ಮಹಾನ್ ಚೇತನ ಕಾಳಿಂಗ ನಾವುಡರು. ನಾನು ಎಲ್ಲಾ ಯಕ್ಷಗಾನ ಭಾಗವತಿಕೆಗಳನ್ನು ಆಲಿಸುತ್ತೇನೆ. ಆದರೆ ಕಾಳಿಂಗ ನಾವಡರ ವಿಚಾರದಲ್ಲಿ ಹಾಗಲ್ಲ , ಪ್ರತಿಸಲ ಅವರ ಹಾಡುಗಳನ್ನು ಆಲಿಸುವಾಗಲೂ ಹೊಸದಾದ ಅನುಭವ . ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯನ್ನು ಆಲಿಸಿದಂತೆ . ಅವರೆಂತಹ ದೈತ್ಯಪ್ರತಿಭೆ ಯೆಂದರೆ ಕಲಾರಸಿಕರು ನಾವುಡರನ್ನು , ಅವರ ಕಂಠಸಿರಿಯನ್ನು ಒಪ್ಪಿಕೊಳ್ಳುವಲ್ಲಿ ತೆಂಕು-ಬಡಗು ಎಂಬ ತಿಟ್ಟುಗಳನ್ನೇ ಮರೆತರು .ಇದು ಒಂದು ಚರಿತ್ರಾರ್ಹ ಸಂಗತಿ. ಕಾಳಿಂಗ ನಾವುಡರ ಮಹತ್ವ ಅರಿಯಲು ನನ್ನದೇ ನಿದರ್ಶನವೊಂದಿದೆ.
ನಾವುಡರು ಸಾವಿರದ ಒಂಬೈನೂರ ತೊಂಬತ್ತನೇ ವರ್ಷದ ಮೇ ತಿಂಗಳ 27 ನೇ ತಾರೀಖಿನಂದು ಉಡುಪಿಯ ಸಮೀಪ ನಡೆದ ವಾಹನ ಅಪಘಾತದಲ್ಲಿ ಅಕಾಲ ಮರಣವನ್ನೆಯ್ದಿದರು. ಆಗೆಲ್ಲ ದಿನಪತ್ರಿಕೆಗಳನ್ನು ಬಿಟ್ಟರೆ ಈಗಿನಂತೆ ಮಾಧ್ಯಮಲೋಕ ಉಛ್ರಾಯ ಸ್ಥಿತಿಯಲ್ಲಿರಲಿಲ್ಲ . ಉದಯವಾಣಿ ದಿನಪತ್ರಿಕೆ ಮುಖಪುಟವನ್ನು ನಾನು ನೋಡುತ್ತೇನೆ , ನಾನು ಸ್ತಂಭೀಭೂತನಾಗಿ ಹೋದೆ . ನನ್ನ ಆರಾಧ್ಯ ದೇವರು ಎಂದು ನಿತ್ಯವೂ ಗುನುಗುನಿಸುತ್ತಿದ್ದ ಕಾಳಿಂಗ ನಾವುಡರು ಇನ್ನಿಲ್ಲ ಎಂಬ ವಾರ್ತೆ ಅಲ್ಲಿ ಕಂಡಿತು . ನನಗೆ ಏನು ಮಾಡಲೂ ತೋಚಲಿಲ್ಲ ಅಳುವುದನ್ನು ಬಿಟ್ಟು . ನನ್ನಲ್ಲಿ ಪರ್ಯಾಯ ವ್ಯವಸ್ಥೆ ಇರಲಿಲ್ಲ, ನಿರಂತರವಾಗಿ ದುಃಖಿಸುತ್ತಿದ್ದ ನನ್ನನ್ನು ಕಂಡು ನನ್ನ ಅಮ್ಮ ಹೇಳಿದರು ‘ಅಳಬೇಡ ಸಮಾಧಾನ ಮಾಡಿಕೋ ನಿನ್ನ ತಂದೆ ತೀರಿಹೋದಾಗಲೂ ನೀನು ಇಷ್ಟು ಅತ್ತಿರಲಿಲ್ಲ’. ಆ ಮಾತು ಇಂದು ಕೂಡ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ. ನಾವುಡರು ರಂಗದಲ್ಲಿ ತಾನೇ ವೇಷದಾರಿಯಾಗಿಯೂ ಕಾಣಿಸುತ್ತಿದ್ದರು ಎಂಬುದು ಗಮನಾರ್ಹ . ಉತ್ಕೃಷ್ಟ ಕಲಾವಿದನ ನೈಪುಣ್ಯವನ್ನು ರಂಗದಲ್ಲಿ ಎತ್ತಿ ತೋರಿಸುವಲ್ಲಿ ಅವರು ಹಾಡನ್ನು ಹಲವು ಬಾರಿ ಹಾಡಿ ಪಾತ್ರಧಾರಿಯ ಅಭಿನಯವನ್ನು ಮೇಲ್ಮೈಗೆ ತರುತ್ತಿದ್ದರು . ಇಂತಹ ವಿಶೇಷಣ ಹೊಂದಿದ ನಾವುಡರು ಇಂದು ಜನ್ಮತಳೆದ ದಿನ. ಇಂದು ಅವರು ಬದುಕಿರುತ್ತಿದ್ದರೆ ಅವರಿಗೆ 62 ವರ್ಷ ತುಂಬಿರುತ್ತಿತ್ತು. ಇಂದಿಗೂ ಮುಂದೆಯೂ ಅವರೊಬ್ಬ ಅಸಾಧಾರಣ ಕಲಾವಿದರಾಗಿ ಕಂಡುಬರುತ್ತಿದ್ದರು ಎಂಬುದನ್ನು ನೆನೆಯುವಾಗ ಕೈ ನಡುಗಿ ಮಾತು ಮೂಕವಾಗುತ್ತದೆ. ಭಾಗವತಿಕೆಗೆ ತಾರಾಮೌಲ್ಯ (Star value)ತಂದುಕೊಟ್ಟ ಕಾಳಿಂಗ ನಾವುಡರಂತಹ ಕಲಾವಿದ ಯಕ್ಷಲೋಕಕ್ಕೆ ಬಹುಕಾಲ ದುರ್ಲಭ.