Tuesday, September 22, 2026
Home Blog Page 322

ಯಕ್ಷರಂಗದ ಋತುಪರ್ಣ – ಪುತ್ತೂರು ನಾರಾಯಣ ಹೆಗ್ಡೆ  (Puttur Narayana Hegde)

ಪುತ್ತೂರು ನಾರಾಯಣ ಹೆಗ್ಡೆಯವರು ಉಪ್ಪಳಿಗೆ ಮನೆತನದ ಸುಬ್ರಾಯ ಹೆಗಡೆಯವರ ಪುತ್ರ. ಹಿರಿಯ ಅಣ್ಣ ದಾಸಪ್ಪ ಹೆಗಡೆ, ಆಮೇಲೆ ಶೇಷಮ್ಮ ಅಂತ ಇವರ ಅಕ್ಕ.ಇವರ ತಾಯಿ ಗರ್ಭಿಣಿಯಾಗಿರುವಾಗಲೇ ತಂದೆ ಸುಬ್ರಾಯ ಹೆಗಡೆಯವರು ತೀರಿ ಹೋಗಿದ್ದರು. ಇವರನ್ನು ಪ್ರಸವಿಸಿದ ನಂತರ ಮೂರೇ ತಿಂಗಳಲ್ಲಿ ತಾಯಿ ಕೂಡಾ ತೀರಿ ಹೋದರು. ಆಮೇಲೆ ಅಕ್ಕನ ಆರೈಕೆಯಲ್ಲೇ ಬೆಳೆದರು. ರಾಗಿಕುಮೇರಿ ಶಾಲೆಯಲ್ಲಿ ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ. ಬಿದಿರಿನ ಕೋಲು ಮಾಡಿ ಹೊೈಗೆಯಲ್ಲಿ ಗೆರೆಹಾಕಿ ಬರೆಯುವ ಪದ್ಧತಿಯಿತ್ತಂತೆ ಆಗ. ದನಗಳನ್ನು ಮೇಯಿಸುವ ಕೆಲಸ ಕೂಡಾ ಇತ್ತು. ಹಟ್ಟಿಯಲ್ಲೇ ಮಲಗಿಕೊಳ್ಳುವುದು. ಯಾಕೆಂದರೆ ಆಟಕ್ಕೆ ಹೋಗುವ ಚಪಲ. ಆಟ ನೋಡಿ ಬೆಳಿಗ್ಗೆ ಬೇಗನೇ ಬಂದು ಪುನಃ ಹಟ್ಟಿಯಲ್ಲೇ ಮಲಗಿಕೊಳ್ಳುವುದು. ಆಟಕ್ಕೆ ಹೋದದ್ದು ಮನೆಯವರಿಗೆ ತಿಳಿಯಬಾರದೆನ್ನುವ ಹೆದರಿಕೆಯಿಂದ.
ಯಾಕೋ ಏನೋ 13ನೇ ವಯಸ್ಸಿನಲ್ಲಿ ಮನೆಯವರೊಂದಿಗೆ ಮುನಿಸಿಕೊಂಡು ಮನೆಬಿಟ್ಟು ಮಂಗಳೂರಿಗೆ ಹೋಗಿ ಅಲ್ಲಿ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಸೈಕಲಿನಲ್ಲಿ ಬ್ರೆಡ್ ತೆಗೆದುಕೊಂಡು ಹೋಗುವ ಕೆಲಸ. ಅಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು. ಪುನಃ ಅಲ್ಲಿಂದ ಬಂದು Forest Guard ಆಗಿ ಕೆಲಸ ಮಾಡಿದರು. ಶಿರಾಡಿ, ನಾರಾವಿ ಇತ್ಯಾದಿ ಕಡೆಗಳಲ್ಲಿ ಕೆಲಸ ಮಾಡಿದರು. ಆಟದ ಆಸಕ್ತಿಯಿಂದ ಆಟ-ಕೂಟಗಳನ್ನು ಬಿಡದೆ ನೋಡುತ್ತಿದ್ದರು.


         ಈ ಯಕ್ಷಗಾನದ ಆಸಕ್ತಿಯಿಂದಾಗಿ ಮೇಳವೊಂದಕ್ಕೆ ಸೇರುವ ಸಂದರ್ಭವೊದಗಿತು. ಚಿಕ್ಕಪ್ಪ ದೇವಪ್ಪ ಹೆಗಡೆಯವರು ಇವರನ್ನು ಮೇಳಕ್ಕೆ ಸೇರಿಸಿದರು. ಪೆರ್ಣಂಕಿಲ ಮೇಳದಲ್ಲಿ ಪೆಟ್ಟಿಗೆ ಹೊರುವ ಕೆಲಸ. ಮೇಳದ ತಿರುಗಾಟದ ನಂತರ ಪುನಃ Guard  ಆಗಿ ಕೆಲಸಕ್ಕೆ  ಸೇರಿದರು. ಅರಣ್ಯ ರಕ್ಷಕರಾಗಿದ್ದಾಗ ಮರ ಕದ್ದು ಸಾಗಿಸುವವರ ಲಾರಿಯನ್ನು ಒಮ್ಮೆ ಹಿಡಿದರು. ಆಗ ಇವರಿಂದ ತಪ್ಪಿಸಿಕೊಳ್ಳಲೋಸುಗ ಮರಗಳ್ಳರು ಇವರ ತಲೆಗೆ ಮರದ ತುಂಡೊಂದರಿಂದ ಹೊಡೆದು ಓಡಿದರು. ಒಸರುವ ರಕ್ತಕ್ಕೆ ಬಟ್ಟೆಯ ತುಂಡೊಂದನ್ನು ಕಟ್ಟಿಕೊಂಡು ಮರಗಳ್ಳರ ಲಾರಿಯನ್ನು ತಾನೇ ಚಲಾಯಿಸಿಕೊಂಡು ಉಪ್ಪಿನಂಗಡಿಯ ಗೇಟ್ ಬಳಿ ನಿಲ್ಲಿಸಿದ ಅಪೂರ್ವ ಸಾಹಸಿ. ಅವರಿಗೆ Driving ಗೊತ್ತಿತ್ತು. ಆದರೆ ಆಮೇಲೆ ಮಾತ್ರ ಅವರು ಅರಣ್ಯ ರಕ್ಷಕರ ಕೆಲಸ ಮಾಡಲಿಲ್ಲ.


                  ಆ ನಂತರ ಮೂಲ್ಕಿ ಮೇಳಕ್ಕೆ ಸೇರಿದರು. ಆ ಮೊದಲು ಸಣ್ಣ ಸಣ್ಣ ಮೇಳಗಳಲ್ಲಿ ಕಿರು ಅವಧಿಯಲ್ಲಿ ಕೆಲಸ ಮಾಡಿದ ಅನುಭವ ಅವರಿಗಿತ್ತು. ಯಕ್ಷಗಾನದಲ್ಲಿ ಸಣ್ಣ ತಿಮ್ಮಪ್ಪು ಎಂಬವರ ಮಾರ್ಗದರ್ಶನ ಅವರಿಗಾಗಿತ್ತು. ಅವರ ವೇಷಗಳಲ್ಲಿ ಸಣ್ಣ ತಿಮ್ಮಪ್ಪು ಅವರ ಛಾಯೆಯಿತ್ತಂತೆ. ಆದರೆ ಕ್ರಮೇಣ ಮುಂದುವರಿಯುತ್ತಾ ಹೋದಂತೆ ಪುತ್ತೂರು ನಾರಾಯಣ ಹೆಗ್ಡೆಯವರು ತನ್ನದೇ ಸ್ವಂತ ಶೈಲಿಯನ್ನು ರೂಢಿಸಿಕೊಂಡು ಪ್ರಸಿದ್ಧಿ ಯನ್ನು ಪಡೆದರು. ಮೂಲ್ಕಿ ಮೇಳದಲ್ಲಿ ಸುಮಾರು ಏಳೆಂಟು ವರ್ಷಗಳಷ್ಟು ಕಾಲ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಕೆಲವು ಆಂತರಿಕ ಸಮಸ್ಯೆಗಳಿಂದಾಗಿ ಮೂಲ್ಕಿ ಮೇಳವನ್ನು ತ್ಯಜಿಸಬೇಕಾಗಿ ಬಂತು.


                ಕಸ್ತೂರಿ ಪೈಗಳ ಕರೆಯಂತೆ ಸುರತ್ಕಲ್ ಮೇಳವನ್ನು ಸೇರಿದರು. ಆಮೇಲೆ ಸುರತ್ಕಲ್ ಮೇಳದಲ್ಲಿ ನಾರಾಯಣ ಹೆಗ್ಡೆಯವರು ನಿರ್ವಹಿಸಿದ ಪಾತ್ರದಿಂದ ಪೂಜ್ಯ ಶ್ರೀ ಹೆಗ್ಗಡೆಯವರು ಪ್ರಭಾವಿತರಾಗಿ ಅವರನ್ನು  ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿಸಿದರು.    ಅಲ್ಲಿಂದ ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಧರ್ಮಸ್ಥಳ ಮೇಳವೊಂದರಲ್ಲಿ ಕೊನೆಯ ತನಕ ತಿರುಗಾಟ ನಡೆಸಿದರು.
                    ಮರುವರ್ಷ, ಒಬ್ಬೊಬ್ಬರಾಗಿ ಧರ್ಮಸ್ಥಳ ಮೇಳಕ್ಕೆ ಸೇರಿದರು. ಪಾತಾಳ ವೆಂಕಟ್ರಮಣ ಭಟ್, ಕುಂಬಳೆ ಸುಂದರ ರಾಯರು, ಗೋವಿಂದ ಭಟ್, ಎಂಪೆಕಟ್ಟೆ ರಾಮಯ್ಯ ರೈಗಳು ಮೊದಲಾದವರೆಲ್ಲಾ ಧರ್ಮಸ್ಥಳ ಮೇಳವನ್ನು ಸೇರಿದರು. ಕಲಾವಿದರಲ್ಲಿ ಧರ್ಮಸ್ಥಳ ಮೇಳದ ಧಣಿಗಳಾದ ಪೂಜ್ಯ ಹೆಗಡೆಯವರಿಗೆ ಬಹಳ ಪ್ರೀತಿ. ಈಗಲೂ ಅಷ್ಟೇ ಪ್ರೀತಿ-ವಿಶ್ವಾಸ ಇದೆ. ಅದನ್ನು ಕಲಾವಿದರು ಉಳಿಸಿಕೊಳ್ಳಬೇಕು. ಅರ್ಥಮಾಡಿಕೊಳ್ಳಬೇಕು. ಕಲಾವಿದರ ಬಗ್ಗೆ ಅತೀವ ಕಾಳಜಿ. ಮೇಳವನ್ನು ಕಾಲಮಿತಿ ಯಕ್ಷಗಾನಕ್ಕೊಳಪಡಿಸುವ ಮೊದಲು ಸುದೀರ್ಘವಾಗಿ ಚಿಂತಿಸಿದ್ದರು ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಹರ್ಷೇಂದ್ರ ಕುಮಾರ್. ಮಧ್ಯರಾತ್ರಿ ಕಲಾವಿದರನ್ನು ಎಲ್ಲಿಗೆ ಕಳುಹಿಸುವುದು ಎನ್ನುವ ಚಿಂತೆ ಹಾಗೂ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅವರು ಬಹಳ ಚಿಂತಿಸಿದ್ದರು.


                    ಪಾತ್ರಚಿತ್ರಣ ಮತ್ತು ಶೈಲಿಯಲ್ಲಿ ಪುತ್ತೂರು ನಾರಾಯಣ ಹೆಗ್ಡೆಯವರ ಕ್ರಮವೇ ಬೇರೆಯಂತೆ ಕಾಣುತ್ತದೆ. ಪಾತ್ರೋಚಿತ ನಾಟ್ಯ ಮತ್ತು ಮಿತವಾದ ಮಾತುಗಳು. ನಾಟಕೀಯ ವೇಷಗಳಿಗೆ ಒಂದು ಚಿತ್ರಣ ಮತ್ತು ಜೀವ ಕೊಟ್ಟವರು ಎಂದು ಅವರನ್ನು ಜನರು ಗುರುತಿಸುತ್ತಾರೆ. ಅವರಿಗೋಸ್ಕರವೇ ನಾಟಕೀಯ ವೇಷ ಭೂಷಣಗಳು ತಯಾರಾಗಿ ಬರುತ್ತಿದ್ದುವು. ಇತ್ತೀಚಿನ ವರೆಗೂ ಅವರು ಉಪಯೋಗಿಸುತ್ತಿದ್ದ ವೇಷಭೂಷಣಗಳು ಇದ್ದುವಂತೆ.

                    ವಂಶವಾಹಿನಿ ಪ್ರಸಂಗದಲ್ಲಿ ಪೀಠಿಕೆ ವೇಷವಾದ ‘ಧ್ರುವಸಂಧಿ’ ಪಾತ್ರವನ್ನು ಅವರು ಮಾಡುತ್ತಿದ್ದರು. ಬೆಳಿಗ್ಗಿನ ವರೆಗೆ ಆ ಪಾತ್ರವನ್ನು ಅವರೊಬ್ಬರೇ ನಿಭಾಯಿಸುತ್ತಿದ್ದ ರೀತಿ ಅದ್ಭುತ. ಧ್ರುವಸಂಧಿ ಮಹಾರಾಜನು ತನ್ನ ರಾಣಿಯರಿಗೆ ತನ್ನ ವಂಶವಾಹಿನಿಯನ್ನು ಅಂದರೆ ತನ್ನ ವಂಶಜರ ಹೆಸರನ್ನು ಹೇಳುವ ರೀತಿ ಬಹಳ ಮನೋಜ್ಞವಾಗಿತ್ತು.
                    ‘ವಜ್ರದಷ್ಟು ಕಠಿಣ, ಹೂವಿನಷ್ಟು ಕೋಮಲ’ ಎಂಬ ಮಾತು ನಾರಾಯಣ ಹೆಗ್ಡೆಯವರಂತಹಾ ವ್ಯಕ್ತಿಗಳನ್ನು ನೋಡಿಯೇ ಹೇಳಿರಬಹುದು ಎಂದು ತೋರುತ್ತದೆ. ತಾನು ನಿರ್ವಹಿಸುತ್ತಿದ್ದ ಖಳನಾಯಕನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಕಠೋರತೆಯ ಒಂದಂಶವನ್ನೂ ನಿಜಜೀವನದಲ್ಲಿ ತೋರಿಸದ ಮೃದುಹೃದಯಿ. ಅದೂ ಅಲ್ಲದೆ ಕಲಾವಿದನಾಗಿ ರಂಗದಲ್ಲಿ ತನ್ನನ್ನು ತಾನೇ ಶಿಸ್ತಿಗೆ ಒಳಪಡಿಸಿಕೊಂಡ ಅಪೂರ್ವ ನಟ. ತನ್ನ ಸಹಕಲಾವಿದರಿಂದಲೂ ಅದನ್ನೇ ಅಪೇಕ್ಷಿಸುತ್ತಿದ್ದರು. ಸಹಕಲಾವಿದರು, ಕಿರಿಯ ಕಲಾವಿದರು ರಂಗದಲ್ಲಿ ತಪ್ಪಿದರೆ ಸಹಿಸಿಕೊಳ್ಳುತ್ತಿರಲಿಲ್ಲ. ತಿದ್ದುತ್ತಿದ್ದರು. ಕೆಲವೊಮ್ಮೆ ಗದರುತ್ತಿದ್ದರು.


ಪುತ್ತೂರು ನಾರಾಯಣ ಹೆಗ್ಡೆಯವರು ಯಕ್ಷಗಾನಕ್ಕೆಂದೇ ಹುಟ್ಟಿದವರು. ಕರುಣರಸದಲ್ಲಿ, ಆಳಂಗದಲ್ಲಿ, ವೇಷಕಟ್ಟುವುದರಲ್ಲಿ ಕೂಡಾ ಅತಿ ನಿಪುಣತೆ, ಶ್ರದ್ಧೆ ಅವರಲ್ಲಿ ಎದ್ದು ಕಾಣುತ್ತದೆ. ಎಷ್ಟು ಬೇಕೋ ಅಷ್ಟೇ ಪಾತ್ರೋಚಿತವಾದ ಮಾತು ಅವರದು. ‘ಕೆತ್ತಲಿಕ್ಕಿಲ್ಲ, ಮೆತ್ತಲಿಕ್ಕಿಲ್ಲ’ ಎಂಬ ಮಾತು ಹೆಗ್ಡೆಯವರ ವೇಷಗಾರಿಕೆಯ ಬಗ್ಗೆ ಪ್ರಚಲಿತದಲ್ಲಿದೆ.


                            ಕಲಾಜೀವನದಲ್ಲಿ ನಿರ್ವಿವಾದದ ಪಾತ್ರಗಳು, ವೇಷಗಳು ಅವರ ವೈಶಿಷ್ಟ್ಯ. ಅವರು ರಂಗದಲ್ಲಿರುವ ವರೆಗೆ ಹಲವು ಪಾತ್ರಗಳು ಅವರಿಗೆ ಮೀಸಲಿಟ್ಟಂತಹವುಗಳು. ರಂಗದಲ್ಲಿ ನಿಷ್ಠುರತೆ ಇಲ್ಲ. ಒಂದೆರಡು ಪ್ರಸಂಗಗಳನ್ನು ಹೊರತುಪಡಿಸಿ ರಂಗದ ಹೊರಗೆ ಕೂಡಾ ನಿಷ್ಠುರತೆ, ವಿವಾದಗಳಿಲ್ಲ. ಚೌಕಿಯಲ್ಲೂ ಶಿಸ್ತು, ರಂಗದಲ್ಲೂ ಶಿಸ್ತು. ಅವರ ಪಾತ್ರ ಬೆಳಿಗ್ಗಿನ ಝಾವ 4 ಗಂಟೆಗೆ ಆದರೂ ಅವರು ರಾತ್ರಿ 8 ಗಂಟೆಗೆ ಮೊದಲೇ ಚೌಕಿಯಲ್ಲಿ ಹಾಜರಿರು ತ್ತಿದ್ದರು. ಹಾಗೆಂದು ಚೌಕಿಯಲ್ಲಿ ನಿದ್ರೆ ಮಾಡುವ ಅಭ್ಯಾಸವೂ ಇರಲಿಲ್ಲ.
                            ಸಭೆಯನ್ನು ನೋಡಿ ವೇಷ ಮಾಡುವ ಕ್ರಮ ಇಲ್ಲ. ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದರೂ ತನ್ನ ಪಾತ್ರದಲ್ಲಿ ಎಳ್ಳಿನಿತೂ ಕೊರತೆ ಬಾರದಂತೆ ನಿರ್ವಹಿಸುತ್ತಿದ್ದರು. ರಂಗದಲ್ಲಿ ಅವರ ಯಾವ ಪಾತ್ರವೂ ಅನುತ್ತೀರ್ಣತೆಯನ್ನು ಹೊಂದಲಿಲ್ಲ. ಕಟ್ಟಿದ ವೇಷಭೂಷಣಗಳು ಜಾರುವುದೋ, ಬೀಳುವುದೋ ಅತಿ ವಿರಳ. ಅವರ ಖಳಪಾತ್ರದ ಕಠೋರತೆಯಷ್ಟೇ ಕರುಣರಸದ ಪಾತ್ರಗಳೂ ಪ್ರಖ್ಯಾತ. ವೀರರಸದಂತೆ ಕರುಣರಸದಲ್ಲಿ  ಕೂಡಾ ಆರ್ತತೆಯಿರುತ್ತಿತ್ತು. ಋತುಪರ್ಣನ ಹತಾಶಭಾವ, ಕರ್ಣನ ರಥದ ಗಾಲಿಗಳು ಹೂತುಹೋದ ಸಂದರ್ಭದ ಚಿತ್ರಣ. ಅಂತಹಾ ಸಂದರ್ಭಗಳಲ್ಲೆಲ್ಲಾ ಅವರೇ ಪಾತ್ರವಾಗುತ್ತಿದ್ದರು. ಪಾತ್ರದಲ್ಲಿ ಅವರ Involvement ಅಷ್ಟಿತ್ತು.


                            ಎಷ್ಟು ಬರೆದರೂ ಮುಗಿಯದಷ್ಟು ಇರುವ ಅವರ ವಿಶೇಷತೆಗಳಲ್ಲೊಂದನ್ನು ಪ್ರಸ್ತಾಪ ಮಾಡದಿದ್ದರೆ ಈ ಲೇಖನ ಅಪೂರ್ಣವಾಗುತ್ತದೆ. ಶ್ರುತಿಯ ಗುಂಗಿನಲ್ಲಿ ಅರ್ಥ ಮುಗಿಸುವುದು ಇವರ ಇನ್ನೊಂದು ವೈಶಿಷ್ಟ್ಯ. ಸಾಧಾರಣವಾಗಿ ಭಾಗವತರು ಪದ್ಯ ಹೇಳಿದ ಸ್ವಲ್ಪ ಹೊತ್ತಿನ ವರೆಗೆ ಆ ಶ್ರುತಿಯ ಗುಂಗು ಗುಯ್‍ಗುಡುತ್ತಿರುತ್ತದೆ. ಆ ಶ್ರುತಿಯ ಗುಂಗಿನೊಳಗೇ ಆ ಪದ್ಯದ     ಅರ್ಥವನ್ನೆಲ್ಲಾ ಹೇಳಿ ಮುಗಿಸುವ ಅಪೂರ್ವ ಕಲೆ ಅವರಿಗೆ ಸಿದ್ಧಿಸಿತ್ತು. ಅವರ ಈ ವೈಶಿಷ್ಟ್ಯತೆಯನ್ನು ಸಮಯದ ಅಭಾವವಿರುವ ಸಂದರ್ಭಗಳಲ್ಲೆಲ್ಲಾ ಕಾಣಬಹುದಿತ್ತು.
                             ಪಾತ್ರದ ಸನ್ನಿವೇಶವನ್ನು ರಂಗದಲ್ಲಿ ನಿರ್ಮಾಣ ಮಾಡುವ ಮಹಾನ್ ನಟ. ಅಂದರೆ ತಾನೇ ಪಾತ್ರವಾಗಿ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಸಾಂಸಾರಿಕ ಹಾಗೂ ಇತರ ಒತ್ತಡಗಳು, ಕಷ್ಟಗಳು ಎಷ್ಟೇ ಎದುರಾದರೂ ಅದರ ಪ್ರತಿಫಲನ ರಂಗದಲ್ಲಿ ಇರುತ್ತಿರಲಿಲ್ಲ.

ಧೀಮಂತ ವ್ಯಕ್ತಿತ್ವ : ಆಗಿನ ಕಾಲದಲ್ಲಿ ಸಾಧಾರಣವಾಗಿ ಮದುವೆ ಮುಂತಾದ ಸಂದರ್ಭಗಳಲ್ಲೆಲ್ಲಾ ಸಣ್ಣ ಸಣ್ಣ ಅಸಮಾಧಾನಗಳು, ಗಲಾಟೆ ಜಗಳಗಳು ಆಗುತ್ತಿದ್ದುದು ಮಾಮೂಲಿ. ತನಗೆ ಗೌರವ, ಮರ್ಯಾದೆ ಕೊಡಲಿಲ್ಲವೆಂದೋ ಅಥವಾ ಇನ್ಯಾವುದೋ ಕ್ಷುಲ್ಲಕ ಕಾರಣಗಳನ್ನು ಹಿಡಿದು ತಗಾದೆ ತೆಗೆಯುವವರು ಜಾಸ್ತಿ. ಗಂಡಿನ ಕಡೆಯವರಿಗಂತೂ ಹೆಣ್ಣಿನ ಕಡೆಯವರನ್ನು ಗೋಳಾಡಿಸಲು ಇದು ಒಂದು ಅಸ್ತ್ರವಾಗಿರುತ್ತಿತ್ತು. ಆದರೆ ಯಾವ ಸಮಾರಂಭಗಳಲ್ಲೆಲ್ಲಾ ಪುತ್ತೂರು ನಾರಾಯಣ ಹೆಗ್ಡೆಯವರ ಉಪಸ್ಥಿತಿಯಿರುತ್ತಿತ್ತೋ ಅಂತಹಾ ಸಮಾರಂಭಗಳಲ್ಲಿ, ಸ್ಥಳಗಳಲ್ಲಿ ಅಂತಹಾ ತಕರಾರುಗಳಿಗೆ ಆಸ್ಪದವಿರುತ್ತಿರಲಿಲ್ಲ. ಯಾರಾದರೂ ಅಂತಹಾ ಬಾಲಿಶ ವರ್ತನೆಗಳನ್ನು ತೋರಿದರೆ ‘ಏನೋ… ನಿಂದು…’ ಅಂತ ಇವರು ಸ್ವರ ತೆಗೆದರೆ ಸಾಕು ಗಲಾಟೆ ಮಾಡುವವರು ಹೆದರಿ ತಣ್ಣಗಾಗುತ್ತಿದ್ದರು. ಅಂತಹಾ ಧೀಮಂತ ಹಾಗೂ ಅಧಿಕಾರವಾಣಿಯಿಂದ ಮಾತನಾಡಬಲ್ಲವರಾಗಿದ್ದರು ಪುತ್ತೂರು ನಾರಾಯಣ ಹೆಗ್ಡೆಯವರು. ಅಂತಹಾ ಯಕ್ಷರಂಗ ಕಂಡ ಅಪೂರ್ವ ಸಂಪತ್ತು ಶ್ರೀ ಪುತ್ತೂರು ನಾರಾಯಣ ಹೆಗ್ಡೆಯವರು 1992ರಲ್ಲಿ ನಿಧನರಾದರು.

ಲೇಖನ: ಮನಮೋಹನ್. ವಿ. ಎಸ್.

ಛಾಯಾಚಿತ್ರ: ಗಿರೀಶ್ ಹೆಗ್ಡೆಯವರ ಸಂಗ್ರಹದಿಂದ

                                                                   

ಜಾಗ ಇದ್ದಲ್ಲಿ ತಮ್ಮ ವಾಹನಗಳನ್ನು ನುಗ್ಗಿಸುವವರು ಈ ವೀಡಿಯೋವನ್ನು  ನೋಡಲೇಬೇಕು 

ಯಾಕೋ ಈಗ ವೀಡಿಯೋ ತುಂಬಾ ಇಷ್ಟ ಆಯಿತು. ಸ್ವಲ್ಪ ಎಡೆ ಸಿಕ್ಕಿದರೂ ಸಾಕು. ತಮ್ಮ ವಾಹನವನ್ನು ನುಗ್ಗಿಸಿ ಟ್ರಾಫಿಕ್ ಜಾಮ್ ಉಂಟುಮಾಡುವವರಿಗೆ ಈ ದೃಶ್ಯ ಒಂದು ಪಾಠದಂತಿದೆ. ಇಲ್ಲಿ ರೈಲ್ವೆ ಕ್ರಾಸಿಂಗ್ ನಲ್ಲಿ ಅರ್ಧದಷ್ಟು ಭಾಗಕ್ಕೆ ಮಾತ್ರ ಗೇಟ್ ಹಾಕಿದ್ದರೂ ಶಿಸ್ತಿನ ಸಿಪಾಯಿಗಳಂತಿರುವ ನೆದರ್ಲ್ಯಾಂಡ್ ದೇಶದ ವಾಹನ ಚಾಲಕರು ಮೆಚ್ಚುಗೆಯಾಗುತ್ತಾರೆ.   ಈ ರೀತಿಯ ಶಿಸ್ತಿನ ಮನೋಭಾವವನ್ನು ಬೆಳೆಸಿಕೊಂಡರೆ ಸಂಭಾವ್ಯ ಅಫಘಾತಗಳನ್ನೂ ತಪ್ಪಿಸಬಹುದು.

ಸುಮವೆ ಓ ಸುಮವೆ .. ನಂದಿನಿ ರಾವ್ ಗುಜಾರ್ ಅವರ ಸುಂದರ ಹಾಡಿನ ದೃಶ್ಯ ಈ ವೀಡಿಯೋದಲ್ಲಿ ನೋಡಿ 

ಈ ವೀಡಿಯೋದಲ್ಲಿ ನಂದಿನಿ ರಾವ್ ಗುಜಾರ್ ಅವರು ‘ ಸುಮವೆ ಓ ಸುಮವೆ’ ಎನ್ನುವ ಹಾಡನ್ನು ಭಾವಪೂರ್ಣವಾಗಿ ಹಾಡಿದ್ದಾರೆ. ಈ ವೀಡಿಯೋ ನೋಡಿ. 

ಹಿಮ್ಮೇಳ ಲೋಕದ ದಂತಕಥೆ- ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್

ಯಕ್ಷಗಾನ ಹಿಮ್ಮೇಳ ಲೋಕದ ದಂತಕಥೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಹೆಸರು ಯಕ್ಷಗಾನದ ಆಸಕ್ತರ ಹೃದಯದಲ್ಲಿ ನವಿರಾದ ಭಾವನೆಗಳನ್ನು ಎಬ್ಬಿಸುತ್ತದೆ. ಚೆಂಡೆಯ ಮಾಂತ್ರಿಕನೆಂದೇ ಖ್ಯಾತಿ ಗಳಿಸಿದ್ದ ಬಲ್ಲಾಳರು ಚೆಂಡೆ ಮದ್ದಲೆಗಳೆರಡರಲ್ಲಿಯೂ ಸಮಾನವಾದ ಪ್ರಭುತ್ವವನ್ನು ಗಳಿಸಿಕೊಂಡವರು. ಒಂದು ಕಾಲದಲ್ಲಿ ತೆಂಕುತಿಟ್ಟು ಹಿಮ್ಮೇಳವಾದನದ ಅಗ್ರಗಣ್ಯರಾಗಿ ಮೆರೆದ ಚಿಪ್ಪಾರು ಅವರದು ಹಿಮ್ಮೇಳವಾದನದಲ್ಲಿ ಅವಿಶ್ರಾಂತ ಮತ್ತು ಪ್ರಾಮಾಣಿಕ ದುಡಿಮೆ. ಅವರು ಈ ಕ್ಷೇತ್ರದಿಂದ ಗಳಿಸಿದ್ದು ಕಡಿಮೆಯಾದರೂ ತನ್ನ ಅಪಾರ ಜ್ಞಾನ,ಶ್ರಮ ಮತ್ತು ವಿದ್ಯೆಗಳನ್ನು ಈ ಕಲಾಕ್ಷೇತ್ರಕ್ಕೆ ಧಾರೆಯೆರೆದಿದ್ದಾರೆ. 

ಒಬ್ಬ ಹಿಮ್ಮೇಳವಾದಕನಿಗೆ ಏನೆಲ್ಲಾ ತಿಳಿದಿರಬೇಕು ಎಂಬ ಪ್ರಶ್ನೆಗೆ ಈ ಕಾಲಮಿತಿಯ ಪ್ರದರ್ಶನದ ಯುಗದಲ್ಲಿ ಉತ್ತರಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಕೀರ್ತಿಶೇಷರಾದ ಹಲವಾರು ಹಿಮ್ಮೇಳವಾದಕರು ಈ ಪ್ರಶ್ನೆಗೆ ಉತ್ತರವಾಗಿ ನಮ್ಮ ನೆನಪಿನಲ್ಲಿ ಉಳಿದುಬಿಡುತ್ತಾರೆ. ಆ ಕಾಲದಲ್ಲಿ ಕೇಳಿ ಬಾರಿಸುವುದರಿಂದ ತೊಡಗಿ ಮಂಗಳ ಪದ್ಯದ ವರೆಗೆ ಚೆಂಡೆ ಮದ್ದಳೆಗಳನ್ನು ಸರದಿಯಲ್ಲಿ ಅವಿಶ್ರಾಂತವಾಗಿ ಬಾರಿಸಿದ ಹಲವಾರು  ಮಹಾನುಭಾವರುಗಳ ಉದಾಹರಣೆಯೂ ಇದೆ. ಈ ರೀತಿಯ ತಮ್ಮ ವಿಶೇಷತೆಗಳಿಂದ ಕೆಲವು ಹಿರಿಯ ಕಲಾವಿದರನ್ನು ನಾವು ಇಂದಿಗೂ ಮರೆಯಲು ಸಾಧ್ಯವಿಲ್ಲ. ಇಂತಹಾ ಮರೆಯಲಾಗದ ಮಹಾನುಭಾವರಲ್ಲಿ ಖ್ಯಾತ ಹಿಮ್ಮೇಳ ಕಲಾವಿದ ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರೂ ಒಬ್ಬರು. 

ಚೆಂಡೆಯ ಮಾಂತ್ರಿಕನೆಂದೇ ಬಿರುದಾಂಕಿತ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಬಹಳಷ್ಟು ಕಲಾವಿದರು, ಯಕ್ಷಗಾನಾಭಿಗಳಲ್ಲಿ ತಮ್ಮ ಪ್ರಭಾವವನ್ನು ಬೀರಿದವರು. ಮೊದಲೇ ಹೇಳಿದಂತೆ ‘ಹಿಮ್ಮೇಳವಾದಕನಿಗೆ ಏನೆಲ್ಲಾ ತಿಳಿದಿರಬೇಕು’ ಎಂಬ ಪ್ರಶ್ನೆಗೆ ಉತ್ತರವೋ ಎಂಬಂತೆ ಅದಕ್ಕಿಂತಲೂ ಮಿಗಿಲೆನಿಸುವಷ್ಟು ಸಾಧಿಸಿ ತೋರಿಸಿ ಮಾದರಿಯಾದವರು. ಈ ಮಾತನ್ನು ಯಾಕೆ ಹೇಳಿದೆನೆಂದರೆ ಬಲ್ಲಾಳರಿಗಿದ್ದ ಪ್ರಸಂಗ ಮಾಹಿತಿ ಮತ್ತು ನಡೆಯ ತಿಳುವಳಿಕೆ ಹಿಮ್ಮೇಳ ಕಲಾವಿದರಲ್ಲಿ ಕಾಣಸಿಗುವುದು ಅಪರೂಪ. ಕೆಲವೇ ಕೆಲವು ಹಿಮ್ಮೇಳ ಕಲಾವಿದರು ಆ ಸಾಲಿನಲ್ಲಿ ನಿಲ್ಲುತ್ತಾರೆ. 

ಚಿಪ್ಪಾರು ವಿಶೇಷತೆ: ಪ್ರಸಂಗ ನಡೆಯ ಬಗ್ಗೆ ಕೃಷ್ಣಯ್ಯ ಬಲ್ಲಾಳರಿಗೆ ಅಪಾರ ತಿಳುವಳಿಕೆಯಿತ್ತು. ಮುಖ್ಯ ಭಾಗವತರ ಅನುಪಸ್ಥಿತಿಯಲ್ಲಿ, ತಾವು ಚೆಂಡೆವಾದಕರಾಗಿದ್ದುಕೊಂಡು ಕಿರಿಯ ಭಾಗವತರಿಗೆ ಮಾರ್ಗದರ್ಶಕರಾಗಿ ಬಲ್ಲಾಳರು ಬೆಳಗ್ಗಿನ ವರೆಗೆ ಪ್ರಸಂಗವನ್ನು ಮುನ್ನಡೆಸಿದ ಹಲವಾರು ಉದಾಹರಣೆಗಳಿವೆ! ಚಿಪ್ಪಾರು ಅವರು ಜತೆಗಿದ್ದರೆ ಭಾಗವತರಿಗೂ ಆನೆಬಲ ಬಂದಂತೆ ಆಗುತ್ತಿತ್ತಂತೆ. ಆದುದರಿಂದ ಅವರು ಯಕ್ಷಗಾನಕ್ಕೆ ಮಾತ್ರವಲ್ಲದೆ ಕಲಾವಿದರಿಗೂ ಸಂಪನ್ಮೂಲ ವ್ಯಕ್ತಿಯಾಗಿದ್ದರು. 

ಒಂದು ದಿನ ಖ್ಯಾತ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯರು ಮಾತಿನ ಮಧ್ಯೆ ಹೀಗೆ ಹೇಳಿದ್ದರು. “ಒಂದು ಪದ್ಯವನ್ನು ಒಂದು ರಾಗದಲ್ಲಿ ಅಷ್ಟತಾಳದಲ್ಲಿ ಹಾಡಿದರೆ ಪುನಃ ಎರಡನೇ ಪದ್ಯ ರೂಪಕತಾಳದಲ್ಲಿ- ಹೀಗೆ ಮೂರು, ನಾಲ್ಕು ಪದ್ಯಗಳನ್ನು ಅದೇ ರಾಗದಲ್ಲಿ ಅಂದರೆ ರಾಗವನ್ನು ಬದಲಾಯಿಸದೆ ಒಮ್ಮೆ ಅಷ್ಟ, ಒಮ್ಮೆ ತ್ರಿವುಡೆ, ಒಮ್ಮೆ ರೂಪಕ- ಹೀಗೆ ತಾಳಗಳನ್ನು ಬದಲಾಯಿಸಿ ಹಾಡುವ ಕ್ರಮ/ಪದ್ಧತಿ ಉಂಟು ಅಂತ ಒಮ್ಮೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ನನ್ನಲ್ಲಿ ಹೇಳಿದ್ದರು. ಬಲ್ಲಾಳರು ತುಂಬಾ ತಿಳಿದವರು. ಅವರಲ್ಲಿ ಸಂಶಯಗಳನ್ನು ಕೇಳಿದರೆ ಅದರ ಬಗ್ಗೆ ಮಾಹಿತಿ ಕೊಡುತ್ತಿದ್ದರು. ತುಂಬಾ ಹೇಳುತ್ತಿದ್ದರು. ಆದರೆ ಈಗಿನವರಲ್ಲಿ ಯಾರಲ್ಲಿಯೂ ಕೇಳಿ ತಿಳಿಯುವ ಕ್ರಮ ಇಲ್ಲ ಎಂಬ ಖೇದವನ್ನು ಕೂಡಾ ಶ್ರೀ ಬಲ್ಲಾಳರು ವ್ಯಕ್ತಪಡಿಸಿದ್ದರು” ಎಂದು ದಿನೇಶ ಅಮ್ಮಣ್ಣಾಯರು ಆ ದಿನ ನನ್ನೊಡನೆ ಹೇಳಿದ್ದುದು ಈ ಲೇಖನವನ್ನು ಬರೆಯುವ ಸಂದರ್ಭದಲ್ಲಿ ನೆನಪಾಗುತ್ತಾ ಇದೆ. 

ಬಲ್ಲಾಳರ ವಿಶಿಷ್ಟ ಉರುಳಿಕೆ: ಬಲ್ಲಾಳರು ತಮ್ಮ ಅತ್ಯಾಕರ್ಷಕ ಉರುಳಿಕೆಗೆ ಹೆಸರುವಾಸಿ. ಆ ಉರಳಿಕೆಯಲ್ಲೂ ಒಂದು ವೈಶಿಷ್ಟ್ಯತೆಯಿತ್ತು. ತನ್ನ ಎರಡೂ  ಕೈಗಳ ಮಾಣಿಕಟ್ಟಿನಿಂದ ಕೆಳಗೆ ಮಾತ್ರ ಚಲಿನೆಯಿರುತ್ತಿದ್ದ ಅವರ ಚೆಂಡೆಯ ಉರುಳಿಕೆಗಳು ಅತ್ಯಪೂರ್ವ. ಒಟ್ಟಾರೆ ಅವರ ಚೆಂಡೆವಾದನದಲ್ಲಿಯೂ ಕೈಗಳ ಅನಗತ್ಯ ಚಲನೆ ಇರುತ್ತಿರಲಿಲ್ಲ. ನಾನು ಅವರ ಹಲವಾರು ಪ್ರದರ್ಶನಗಳನ್ನು ನೋಡಿದ್ದೇನೆ. ಎಂತಹಾ ಏರುಪದ್ಯಗಳಾದರೂ ಎದೆಯ ಮಟ್ಟದಿಂದ ಅವರ ಕೈ ಮೇಲೆ ಹೋದದ್ದನ್ನು ಕಾಣಲಿಲ್ಲ. ವೃಥಾ ಶ್ರಮವನ್ನು ಉಪಯೋಗಿಸದೆ ಚೆಂಡೆಯಂತಹಾ ವಾದ್ಯದಿಂದ ಏರು ನಾದವನ್ನು ಹೊರಡಿಸುವುದು ಹೇಗೆ ಎಂಬುದು ಚಿಪ್ಪಾರು ಅವರನ್ನು ನೋಡಿ ಕಲಿಯಬೇಕು. ಆದರೆ ಚಿಪ್ಪಾರು ಅವರೇ ಹೇಳುವಂತೆ ಈಗಿನವರಲ್ಲಿ ಕೇಳಿ ತಿಳಿಯುವ ಕ್ರಮ ಇಲ್ಲದ ಕಾರಣ ಕೆಲವೊಂದು ವೈಶಿಷ್ಟ್ಯತೆಗಳು ಅವರ ಜೊತೆಗೆ ಮರೆಯಾದುವೇನೋ ಎಂದೆನಿಸುತ್ತದೆ. 

ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಸಂಕ್ಷಿಪ್ತ ಪರಿಚಯ: ಬಲ್ಲಾಳರು ಜನಿಸಿದ್ದು 1928 ಏಪ್ರಿಲ್ 24ರಂದು. ಗಡಿನಾಡು ಕಾಸರಗೋಡು ಜಿಲ್ಲೆಯ ಬಾಯಾರು ಸಮೀಪದ ಚಿಪ್ಪಾರು ಇವರ ಹುಟ್ಟೂರು. ತಂದೆ ಮರಿಯಯ್ಯ ಬಲ್ಲಾಳ್. ತಂದೆಯ ಹೆಸರನ್ನೇ ಕೃಷ್ಣಯ್ಯ ಬಲ್ಲಾಳರು ತಮ್ಮ ಮಗನಿಗೆ ಇರಿಸಿದ್ದಾರೆ. 6ನೆಯ ತರಗತಿಗೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿತ್ತು ವಿದ್ವಾನ್ ಕೇಶವ ಭಟ್ಟರಲ್ಲಿ ಮೃದಂಗ ಕಲಿಯಲು ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಮಾಂಬಾಡಿ ನಾರಾಯಣ ಭಾಗವತರಲ್ಲಿ ಅಭ್ಯಾಸ ಮಾಡಿದರು. ವಿದ್ವಾನ್ ಬಾಬು ರೈಗಳಿಂದ ಶಾಸ್ತ್ರೀಯ ಸಂಗೀತದ ಮೃದಂಗವಾದನವನ್ನೂ ಕಲಿತ ಬಲ್ಲಾಳರು ಕುದ್ರೆಕೊಡ್ಲು ರಾಮ ಭಟ್ಟರಿಂದ ಮೃದಂಗವಾದನದ ಬಗ್ಗೆ ಕಲಿತರು. ನಿಡ್ಲೆ ನರಸಿಂಹ ಭಟ್ಟರಿಂದ ಅಭ್ಯಾಸ ಮಾಡಿದ್ದು ಮಾತ್ರವಲ್ಲದೆ ಅವರ ಜೊತೆ ಕಲಾವಿದರಾಗಿ ಅನೇಕ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಧರ್ಮಸ್ಥಳ ಮೇಳಕ್ಕೆ ಮದ್ದಳೆವಾದಕರಾಗಿ ಸೇರಿದ ಮೇಲೆ ಚಿಪ್ಪಾರು ಅವರು ಹಿಂತುರುಗಿ ನೋಡಲೇ ಇಲ್ಲ. ಸುಮಾರು 40 ವರ್ಷಗಳಿಗೂ ಮಿಕ್ಕಿ ಧರ್ಮಸ್ಥಳ ಮೇಳದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರೊಂದಿಗೆ ಸೇವೆ ಸಲ್ಲಿಸಿದ್ದಾರೆ. ಅಗರಿ, ಮಂಡೆಚ್ಚ, ಬಲಿಪ, ಕಡತೋಕ, ಇರಾ, ಪುತ್ತಿಗೆ, ಪದ್ಯಾಣ, ಅಮ್ಮಣ್ಣಾಯ, ಸಿರಿಬಾಗಿಲು ಮೊದಲಾದ ಭಾಗವತರೊಂದಿಗೆ ಹಿಮ್ಮೇಳವಾದಕರಾಗಿ ವೇದಿಕೆ ಹಂಚಿಕೊಂಡ ಸಾತ್ವಿಕ ಗುಣದ ಕಲಾವಿದರಾಗಿದ್ದ ಚಿಪ್ಪಾರು ಅವರ ಚೆಂಡೆವಾದನಕ್ಕೆ ಮನಸೋಲದ ಪ್ರೇಕ್ಷಕರಿಲ್ಲ. 80ರ ಇಳಿವಯಸ್ಸಿನಲ್ಲಿಯೂ ಚೆಂಡೆ ಬಾರಿಸುತ್ತಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ಅಕಾಡೆಮಿ ಪ್ರಶಸ್ತಿ, ಶೇಣಿ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳನ್ನು ಪಡೆದ ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಏಪ್ರಿಲ್ 27, 2009ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿಯೇ ಹೃದಯಾಘಾತದಿಂದ ನಿಧನರಾದರು. 
(ಲೇಖನ: ಮನಮೋಹನ್ ವಿ.ಎಸ್) (ಮರೆಯಲಾಗದ ಮಹಾನುಭಾವರು-ಯಕ್ಷಾನುಗ್ರಹ ವಾಟ್ಸಾಪ್ ಬಳಗಕ್ಕೆ ಬರೆದ ಲೇಖನ)

‘ಅರರೆ.. ಯಾರಿವಳು ಮೋಹಿನಿ’ – ಸುಂದೋಪಸುಂದರಾಗಿ ಸೂರಿಕುಮೇರಿ ಮತ್ತು ಸುಣ್ಣಂಬಳರ ಅಮೋಘ ನೃತ್ಯಾಭಿನಯ

‘ಅರರೆ.. ಯಾರಿವಳು ಮೋಹಿನಿ’ – ಸುಂದೋಪಸುಂದರಾಗಿ ಸೂರಿಕುಮೇರಿ ಮತ್ತು ಸುಣ್ಣಂಬಳರ ಅಮೋಘ ನೃತ್ಯಾಭಿನಯ. ವೀಡಿಯೋ ನೋಡಿ 

ಕಲಾವಿದ ಮಂಗಲ್ಪಾಡಿ ಮಹಾಬಲ ಶೆಟ್ಟಿ ನಿಧನ

ತೆಂಕು ತಿಟ್ಟಿನ ಹಿರಿಯ ವೇಷಧಾರಿ ಮಂಗಲ್ಪಾಡಿ ಮಹಾಬಲ ಶೆಟ್ಟಿ(76 ವರ್ಷ) 30-05-2021ರಂದು‌ ನಿಧನ ಹೊಂದಿದರು. ಕಾಸರಗೋಡಿನ ಮಂಗಲ್ಪಾಡಿಯವರಾದ ಇವರು ಯಕ್ಷಗಾನ ಕೃಷಿಯೊಂದಿಗೆ ಕೃಷಿಯಲ್ಲು ಆಸಕ್ತರಾಗಿದ್ದರು. ಭಗವತಿ, ಮಲ್ಲ, ಮಧೂರು, ಬೆಳ್ಮಣ್ಣು, ಕಟೀಲು, ಸುಂಕದಕಟ್ಟೆ ಮೇಳಗಳಲ್ಲಿ ಮೂರುವರೆ ದಶಕಗಳ ಕಲಾಸೇವೆ ಮಾಡಿದ್ದರು. ಕನ್ನಡ -ತುಳು ಎರಡೂ ಭಾಷೆಗಳಲ್ಲಿ ಹಾಗೇ ಪೌರಾಣಿಕ -ಐತಿಹಾಸಿಕ ಪ್ರಸಂಗಗಳಲ್ಲಿ ಸಮರ್ಥವಾಗಿ ಪಾತ್ರ ನಿರ್ವಹಿಸುತ್ತಿದ್ದರು. ಮಂಗಲ್ಪಾಡಿ ಯಕ್ಷಭಾರತಿ ಸಂಘಟನೆಯಲ್ಲಿ ತೊಡಗಿಸಿ ಕೊಂಡಿದ್ದರು.

ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಕೆ.ವಿಶ್ವಜ್ಞ ಶೆಟ್ಟಿ ನೆನಪಿನ ಪ್ರಶಸ್ತಿ‌ನೀಡಿ ಗೌರವಿಸಿತ್ತು.‌ ಪಟ್ಲ ಫೌಂಡೇಶನ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಬಂಜಾರ ಪ್ರಕಾಶ್ ಶೆಟ್ಟಿ ಪ್ರತಿಷ್ಠಾನದ ಪ್ರಶಸ್ತಿ ಸೇರಿದಂತೆ ಹಲಾವರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ ಗಂಗಾಧರ‌ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಂಜುಳಾ ಸುಬ್ರಹ್ಮಣ್ಯ –  ಹಸ್ತ, ಬೆರಳುಗಳಿಂದ ಅಭಿನಯದ ವಿಶಿಷ್ಟ ವಿನೂತನ ಪ್ರಯೋಗ 

ಭರತನಾಟ್ಯ, ಆಕಾಶವಾಣಿ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಒಂದು ವಿಶಿಷ್ಟ ವಿನೂತನ ಪ್ರಯೋಗ ಮಾಡಿದ್ದಾರೆ. ಸುಮಧುರ ವಿರಹ ಪ್ರೇಮ ಗೀತೆಯೊಂದಕ್ಕೆ ತನ್ನ ಹಸ್ತ ಹಾಗೂ ಬೆರಳುಗಳ ಚಲನೆಯಿಂದಲೇ ಭಾವ (ನೃತ್ಯ) ಪ್ರಕಟಣೆ ಮಾಡಿದ್ದಾರೆ. ಬಹಳ ಸುಂದರವಾಗಿ ಹೃದಯವನ್ನು ತಟ್ಟುವ ಪ್ರಯತ್ನ. ಇದನ್ನು ಶಬ್ದಗಳಲ್ಲಿ ವಿವರಿಸುವುದು ಕಷ್ಟ. ನೀವೇ ಈ ವೀಡಿಯೊ ನೋಡಿ. 

ಯಕ್ಷಗಾನ ಕಲಾವಿದರಿಗೆ ಆರ್ಥಿಕ ನೆರವು ನೀಡುವಾಗ ವಯೋಮಿತಿಯನ್ನು 25 ವರ್ಷಕ್ಕೆ ಇಳಿಸುವರೇ ವಿನಂತಿ.

ಕೋವಿಡ್-19, ರಿಂದಾಗಿ ಕಲಾವಿದರ ಸಂಕಷ್ಟವನ್ನರಿತು ಕರ್ನಾಟಕ ಘನ ಸರಕಾರ ಆರ್ಥಿಕ ನೆರವನ್ನು ಘೋಷಿಸಿದ್ದು ಸಮಸ್ತ ಯಕ್ಷಗಾನ ಕಲಾವಿದರ ಪರವಾಗಿ ಸರಕಾರವನ್ನು ಅಭಿನಂದಿಸುತ್ತಿದ್ದೇವೆ.
ಯಕ್ಷಗಾನ ಕರಾವಳಿ ಕರ್ನಾಟಕದ ಒಂದು ಅಪೂರ್ವ ಕಲಾ ಪ್ರಕಾರ. ವಿಶ್ವದಾದ್ಯಂತ ಕಲಾವಿವಿಮರ್ಶಕರು ಇದರ ಶ್ರೇಷ್ಠತೆಗೆ ಬೆರಗಾಗಿ ತಲೆಬಾಗಿರುತ್ತಾರೆ. ಇಂತಹ ಕಲೆಯನ್ನು ಉಳಿಸಿ ಬೆಳೆಸಿದವರು ಕಲಾವಿದರು. ಹೆಚ್ಚಿನ ಕಲಾವಿದರು 15ರ ಹರೆಯದಲ್ಲಿ ಮೇಳವನ್ನು ಸೇರಿ ಬಾಲಗೋಪಾಲದಿಂದ ಯಕ್ಷ ಶಿಕ್ಷಣವನ್ನು ಮೇಳದಲ್ಲಿ ಪಡೆಯುತ್ತಾ ಬೆಳೆದವರು. ಸರಕಾರದ ಈಗಿನ ನಿಬಂಧನೆ ಪ್ರಕಾರ ಕೋವಿಡ್-19 ನೆರವು ಪಡೆಯಲು 35 ವರ್ಷ ಕನಿಷ್ಠ ವಯಸ್ಸಾಗಿರಬೇಕಾಗಿದೆ. ಇದರಿಂದ 10 ರಿಂದ 20 ವರ್ಷ ಸೇವೆಗೈದ 40 ವೃತ್ತಿ ಮೇಳಗಳ ಸುಮಾರು 200 ಕಲಾವಿದರು ನೆರವಿನಿಂದ ವಂಚಿತರಾಗುತ್ತಾರೆ. ಇವರೆಲ್ಲಾ ನಿರಂತರ 6-7 ತಿಂಗಳು ರಾತ್ರಿಯಿಡೀ ವೇಷಮಾಡಿ ಕಲಾಸೇವೆ ಗೈದ ಪ್ರತಿಭಾನ್ವಿತ ಯುವ ಕಲಾವಿದರು.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಇವರಲ್ಲಿ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಯವರ ಮೂಲಕ ವಿನಂತಿ.
ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ತಾವು ಈ ಸಹಾಯ ಪಡೆಯುವಲ್ಲಿರುವ ನಿಬಂಧನೆಯನ್ನು 35 ವರ್ಷದಿಂದ 25 ವರ್ಷಕ್ಕೆ ಇಳಿಸಿ ಪ್ರತಿಭಾವಂತ ಯುವ ಕಲಾವಿದರಿಗೂ (ಕನಿಷ್ಟ ಕರಾವಳಿ ಕರ್ನಾಟಕದ ವೃತ್ತಿ ಮೇಳದಲ್ಲಿ ಕಲಾಸೇವೆಗೈಯುತ್ತಿರುವ ಯಕ್ಷಗಾನ ಕಲಾವಿದರಿಗೆ) ಇದರ ಪ್ರಯೋಜನ ಸಿಗುವಂತೆ ಸಮಸ್ತ ಕಲಾಭಿಮಾನಿಗಳ ಪರವಾಗಿ ನಾವು ವಿನಂತಿಸಿಕೊಳ್ಳುತ್ತಿದ್ದೇವೆ.


ಈಗಾಗಲೇ ಈ ಮನವಿಯನ್ನು ಮಾನ್ಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಇವರಲ್ಲಿ ನೀಡಲಾಗಿದೆ ಎಂಬುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿರಿಯ ಅರ್ಥಧಾರಿ, ಶಿಕ್ಷಕ ಕುಕ್ಕಾಜೆ ಬಿ. ಚಂದ್ರಶೇಖರ ರಾವ್ ನಿಧನ

ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಕುಕ್ಕಾಜೆ ಬೈಲು ನಿವಾಸಿ ನಿವೃತ್ತ ಅಧ್ಯಾಪಕ ಬಿ. ಚಂದ್ರಶೇಖರ ರಾವ್ (88 ವರ್ಷ) ಮೇ 27, 2021ರಂದು ನಿಧನ ಹೊಂದಿದರು. ಅವರು ಸಿದ್ಧಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ, ಬಳಿಕ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. 

ಯಕ್ಷಗಾನದ ಹಿರಿಯ ಅರ್ಥಧಾರಿಯಾಗಿದ್ದ ಅವರು ಯಕ್ಷಗಾನ ಕಲಾ ವಿಕಾಸ ಸಂಘ ಮಂಚಿ ಇದರ ಸ್ಥಾಪಕರಾಗಿ 30 ವರ್ಷ ತಾಳಮದ್ದಳೆಗಳನ್ನು ನಡೆಸಿಕೊಟ್ಟಿದ್ದಾರೆ. ಮಂಚಿ ಇರಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸುದೀರ್ಘ 25 ವರ್ಷ ದುಡಿದಿದ್ದಾರೆ. ಇರಾ ಕುಂಡಾವು ಶ್ರೀ ಸೋಮನಾಥೇಶ್ವರ ದೇವಾಲಯ ಆಡಳಿತ ಮಂಡಳಿಯ ಸಲಹೆಗಾರರಾಗಿಯೂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.     

ಮಂಗಳೂರಿನ ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯು ನಾಲ್ಕು ವರ್ಷಗಳ ಹಿಂದೆ ‘ಪೊಳಲಿ ಶಂಕರ ನಾರಾಯಣ ಶಾಸ್ತ್ರಿ ಪ್ರಶಸ್ತಿ’ ನೀಡಿ ಅವರನ್ನು ಗೌರವಿಸಿದೆ. ಉಡುಪಿಯ ಯಕ್ಷಗಾನ  ಕಲಾರಂಗವು 2018ನೇ ಸಾಲಿನ ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಸನ್ಮಾನಿಸಿದೆ.‌ 
ಸಂತಾಪ:   ಚಂದ್ರಶೇಖರ ರಾಯರ ನಿಧನಕ್ಕೆ ಐದು ದಶಕಗಳ ಅವರ ನಿಕಟವರ್ತಿ ಹಾಗೂ ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿಯ ಗೌರವ ಸಲಹೆಗಾರ ಡಾ.ಎಂ.ಪ್ರಭಾಕರ ಜೋಶಿ, ಕಾರ್ಯದರ್ಶಿ ನಿತ್ಯಾನಂದ ಕಾರಂತ ಪೊಳಲಿ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ್ ಕಲ್ಕೂರ, ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಶ್ರೀಕೃಷ್ಣ ಯಕ್ಷ ಸಭಾದ ಸುಧಾಕರ ರಾವ್ ಪೇಜಾವರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.