Friday, March 13, 2026
Home Blog Page 316

ಪುಣೆ ಯಕ್ಷವೃಕ್ಷದ ತಾಯಿಬೇರು – ಶ್ರೀ ಆನಂದ ಭಟ್ ಮದಂಗಲ್ಲು

ಮೇಲ್ನೋಟಕ್ಕೆ ಯಕ್ಷಗಾನವು ಎಲ್ಲಾ ಕಲೆಗಳಂತೆ ಒಂದು ಕಲೆ. ಆದರೆ ಯಕ್ಷಗಾನ ಕಲಾವಿದನಿಗೆ ಮತ್ತು ಯಕ್ಷಗಾನವನ್ನು ಅತಿಯಾಗಿ ಪ್ರೀತಿಸುವ ಒಬ್ಬ ಕಲಾಭಿಮಾನಿಗೆ ಅದು ಕೇವಲ ಕಲೆಯಾಗಿರುವುದಿಲ್ಲ. ಬದಲಾಗಿ ತಮ್ಮ ಸರ್ವಸ್ವವೂ ಯಕ್ಷಗಾನವೇ ಆಗಿರುತ್ತದೆ. ಯಕ್ಷಗಾನವಿಲ್ಲದೆ ತಾನಿಲ್ಲ ಎಂಬಷ್ಟು ಮಟ್ಟಕ್ಕೆ ಅದರ ಸೆಳೆತಕ್ಕೆ ಒಳಗಾದವರು ಅನೇಕರಿದ್ದಾರೆ. ಗ್ರಾಮ್ಯ ಭಾಷೆಯಲ್ಲಿ ‘ಆಟದ ಚಟ’ ಎಂದು ಹೇಳುವುದೂ ಇದೆ. ಅನೇಕ ವರ್ಷಗಳ ಕಾಲ ಮೇಳ ತಿರುಗಾಟ ಮಾಡಿ, ಕೊನೆಗೆ ಅನಾರೋಗ್ಯದಿಂದ ಹಾಸಿಗೆ ಹಿಡಿದು, ಇನ್ನು ಮುಂದೆ ವೇಷ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ವಿಷಯವನ್ನು ಅರಿತುಕೊಂಡು, ದುಃಖದಿಂದ ಕೊರಗಿ, ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆಯೂ ನಾವು ಕೇಳಿದ್ದೇವೆ. ಆರ್ಥಿಕವಾಗಿ ತಮಗೆ ಹಾಗೂ ತಮ್ಮ ಕುಟುಂಬಕ್ಕಾಗಿ ಹೆಚ್ಚೇನೂ ಸಂಗ್ರಹಿಸದೆ ಇದ್ದರೂ, ಯಕ್ಷಗಾನ ಕಲಾಸೇವೆಯಲ್ಲಿ ಅದೇನೋ ರೀತಿಯ ಆತ್ಮಾನಂದವನ್ನು ಹೊಂದುವವರು ಬಹಳಷ್ಟು ಮಂದಿ ಇದ್ದಾರೆ.


ಇನ್ನು ಉದ್ಯೋಗದಿಂದಾಗಿ ಪರವೂರಿನಲ್ಲಿ ನೆಲೆಸಿರುವ ಯಕ್ಷಗಾನ ಕಲಾವಿದನೋ ಅಥವಾ ಕಲಾಸಕ್ತನೋ, ಆ ಊರಿನಲ್ಲಿಯೂ ಯಕ್ಷಗಾನ ಪ್ರದರ್ಶನಗಳು ಏರ್ಪಟ್ಟರೆ, ಎಂಥಹ ಬಿಡುವಿಲ್ಲದ ಸಂದರ್ಭದಲ್ಲಿಯೂ ಕಲಾಪ್ರದರ್ಶನದಲ್ಲಿ ಭಾಗಿಯಾಗುತ್ತಾನೆ. ಹಾಗೆಂದು ತಾವು ನೆಲೆಸಿರುವ ಯಾವುದೋ ರಾಜ್ಯದ ಅಥವಾ ಯಾವುದೋ ದೇಶದ ಒಂದು ಊರಿನಲ್ಲಿ ಯಕ್ಷಗಾನವನ್ನು ಬಿತ್ತಿ ಬೆಳೆಸುವವರು ಬಹಳ ಕಡಿಮೆ. ಯಾಕೆಂದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಆ ಊರಿನಲ್ಲಿ ಯಕ್ಷಗಾನದ ಕುರಿತಾದಂತಹ ಸಮಾನಮನಸ್ಕರನ್ನು ಒಟ್ಟುಗೂಡಿಸುವುದಕ್ಕೆ ಬಹಳ ಶ್ರಮವಹಿಸ ಬೇಕಾದ ಅಗತ್ಯವಿದೆ. ಅಂತಹ ಒಂದು ಸಾಧನೆಯನ್ನು ಮಾಡಿದವರಲ್ಲಿ ಒಬ್ಬರು ಶ್ರೀಯುತ ಮದಂಗಲ್ಲು ಆನಂದ ಭಟ್ಟರು.

ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮದಂಗಲ್ಲಿನವರಾದ ಶ್ರೀಯುತರು ಕಳೆದ ಮೂವತ್ತು ವರ್ಷಗಳಿಂದ ಉದ್ಯೋಗನಿಮಿತ್ತ ಮಹಾರಾಷ್ಟ್ರದ ಸಾಂಸ್ಕೃತಿಕ ನಗರಿ ಪುಣೆಯಲ್ಲಿ ನೆಲೆಸಿರುತ್ತಾರೆ. ತಂದೆ ಮದಂಗಲ್ಲು ದಿ| ಕೃಷ್ಣ ಭಟ್, ತಾಯಿ ದಿ| ಸಾವಿತ್ರಮ್ಮ. 1949ರಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೀಯಪದವಿನಲ್ಲಿ ನಂತರ ಪದವಿ ಶಿಕ್ಷಣವನ್ನು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪೂರೈಸಿದರು. ಖ್ಯಾತ ಯಕ್ಷಗಾನ ಕಲಾವಿದ ದಿ| ಕುರಿಯ ವಿಠಲ ಶಾಸ್ತ್ರಿಯವರು ಆನಂದ ಭಟ್ಟರಿಗೆ ಸೋದರಮಾವ. ಹೀಗಾಗಿ ಎಳವೆ ಯಿಂದಲೇ ಯಕ್ಷಗಾನದ ಆಸಕ್ತಿ ಭಟ್ಟರಲ್ಲಿ ಬೆಳೆದಿತ್ತು.

ಪುಂಡುವೇಷ, ರಾಜವೇಷ, ಬಣ್ಣದ ವೇಷ ಮುಂತಾದವುಗಳನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ಉತ್ತಮ ಅರ್ಥಧಾರಿ ಯಾಗಿಯೂ ಪ್ರಸಿದ್ಧಿಯನ್ನು ಪಡೆದರು. ಅನೇಕರಿಗೆ ನಾಟ್ಯಾಭ್ಯಾಸವನ್ನು ಹೇಳಿಕೊಟ್ಟು ಉತ್ತಮ ಗುರುವಾಗಿಯೂ ಗುರುತಿಸಿಕೊಂಡವರು. 1980ರಲ್ಲಿ ತನ್ನ ಅಣ್ಣ ಸದಾಶಿವ ಭಟ್ಟರ ಸಲಹೆಯಂತೆ ಉದ್ಯೋಗ ನಿಮಿತ್ತ ಪುಣೆಗೆ ಆಗಮಿಸಿ, ಪುಣೆಯಲ್ಲಿಯೂ ಉದ್ಯೋಗದ ಜೊತೆಗೆ ಯಕ್ಷಗಾನವನ್ನೂ ಪಸರಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡರು. ಹೋಟೆಲು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದ ಅನೇಕ ಯಕ್ಷಗಾನ ಆಸಕ್ತರನ್ನು ಒಟ್ಟು ಸೇರಿಸಿ, ಅವರಿಗೆ ನಾಟ್ಯಾಭ್ಯಾಸವನ್ನು ಹೇಳಿಕೊಟ್ಟು ಪುಣೆಯಲ್ಲಿಯೂ ಉತ್ತಮ ಕಲಾವಿದ ಮತ್ತು ಗುರುವಾಗಿ ಅನೇಕ ಅಭಿಮಾನಿ ಹಾಗೂ ಶಿಷ್ಯವರ್ಗವನ್ನು ಸಂಪಾದಿಸಿದರು.


ಯಕ್ಷಗಾನಕ್ಕೆ ಸಂಬಂಧಪಟ್ಟ ಸಂಘ-ಸಂಸ್ಥೆಗಳೇ ಇಲ್ಲದ ಪುಣೆಯಲ್ಲಿ ಮೊದಲಾಗಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ. ಆ ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಗಳು ಸ್ಥಾಪನೆಗೊಂಡಿರುವುದು ಆನಂದ ಭಟ್ಟರ ಪರಿಶ್ರಮದ ಫಲ ಹಾಗೂ ಅವರ ಮೇಲೆ ಪುಣೆಯ ಯಕ್ಷಾಭಿಮಾನಿಗಳು ಇಟ್ಟಿರುವ ಅಭಿಮಾನದ ದ್ಯೋತಕ. ಕೇವಲ ಊರಿನ ಕಲಾವಿದರನ್ನು ಕರೆಸಿ ಯಕ್ಷಗಾನ ಪ್ರದರ್ಶನ ನಡೆಸುವುದಕ್ಕಿಂತ ಪುಣೆಯಲ್ಲಿಯೇ ಅನೇಕ ಕಲಾವಿದರನ್ನು ತಯಾರುಗೊಳಿಸಬೇಕೆಂಬ ಸದುದ್ದೇಶವನ್ನು ಹೊಂದಿ, ಈ ಕುರಿತಾಗಿ ಬಹಳ ಶ್ರಮವಹಿಸುತ್ತಿದ್ದಾರೆ. ಪುಣೆಯಲ್ಲಿ ಕೇವಲ ತುಳು-ಕನ್ನಡಿಗರಿಗೆ ಮಾತ್ರವಲ್ಲದೆ, ಅನ್ಯ ರಾಜ್ಯದ ಮಕ್ಕಳಿಗೆ ಹಾಗೂ ಮಹಿಳೆಯರಿಗೂ ನಾಟ್ಯಾಭ್ಯಾಸವನ್ನು ಹೇಳಿಕೊಟ್ಟು ಅವರಿಂದಲೂ ಗೌರವವನ್ನು ಪಡೆಯುತ್ತಿದ್ದಾರೆ. ಪುಣೆಯ ಅನೇಕ ಯಕ್ಷಗಾನಾಸಕ್ತ ದಾನಿಗಳ ಸಹಕಾರದಿಂದ ಯಕ್ಷಗಾನಕ್ಕೆ ಬೇಕಾದ ವೇಷಭೂಷಣವನ್ನು ತರಿಸಿ ಸ್ವತಃ ತಮ್ಮ ಮನೆಯ ಒಂದು ಮಹಡಿಯಲ್ಲಿ ಅದನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಿ, ಪುಣೆಯಲ್ಲಿ ಯಕ್ಷಗಾನದ ಆರಾಧಕನೆನಿಸಿಕೊಂಡಿದ್ದಾರೆ.

ಶ್ರೀಯುತರ ಈ ಅನನ್ಯ ಸಾಧನೆಯನ್ನು ಗುರುತಿಸಿ ಈಗಾಗಲೇ ಅನೇಕ ಸಂಘ-ಸಂಸ್ಥೆಗಳು ಇವರಿಗೆ ಗೌರವ ಸನ್ಮಾನಗಳನ್ನು ನೀಡಿವೆ. 70ರ ಇಳಿವಯಸ್ಸಿನಲ್ಲಿಯೂ ಯಕ್ಷಗಾನದ ಬಗ್ಗೆ ಇವರಲ್ಲಿರುವ ಅತೀವವಾದಂತಹ ತುಡಿತವನ್ನು ಕಂಡು, ಪುಣೆಯ ಖ್ಯಾತ ಕವಿ, ಸಾಹಿತಿಗಳಲ್ಲಿ ಓರ್ವರಾದ ಶ್ರೀ ಮಹೇಶ್ ಹೆಗ್ಡೆ ಪೊಳಲಿ ಇವರು ಆನಂದ ಭಟ್ಟರ ಕುರಿತಾಗಿ ‘ಯಕ್ಷಲೋಕದ ಸವ್ಯಸಾಚಿ ಮದಂಗಲ್ಲು ಆನಂದ ಭಟ್’ ಎಂಬ ಪುಸ್ತಕವನ್ನು ಬರೆದು ‘ಸಾಹಿತ್ಯ ಬಳಗ ಮುಂಬಯಿ’ ಇದರ ಪ್ರಧಾನ ಸಂಪಾದಕರಾದ ಎಚ್. ಬಿ. ಎಲ್. ರಾವ್ ಅವರ ಮೂಲಕ ಬಿಡುಗಡೆ ಮಾಡಿರುತ್ತಾರೆ. ಪುಣೆಯ ಯಕ್ಷಾಭಿಮಾನಿಗಳಿಗೆಲ್ಲರಿಗೂ ಇದು ಬಹಳ ಸಂತೋಷ ಹಾಗೂ ಹೆಮ್ಮೆಯ ವಿಚಾರ. ಬನ್ನಿ ಅವರ ಜೀವನಾನುಭವವನ್ನು ಅವರ ಮಾತುಗಳಲ್ಲೇ ಕೇಳೋಣ

  • ತಾವು ಯಕ್ಷಗಾನದ ಕುರಿತಾಗಿ ಆಸಕ್ತಿ ಹೊಂದುವುದಕ್ಕೆ ಕುರಿಯ ಮನೆತನದಲ್ಲಿ ಹುಟ್ಟಿದ್ದೇ ಕಾರಣವಾಯಿತೇ?
  • ಹೌದು ಖಂಡಿತ. ನಾವು ಎಳವೆಯಿಂದಲೇ ಯಕ್ಷಗಾನವನ್ನು ನೋಡಿ ಬೆಳೆದವರು. ನಮ್ಮ ಮನೆ, ಕುಟುಂಬ, ಊರು ಎಲ್ಲಾ ಕಡೆಗಳಲ್ಲಿ ಯಕ್ಷಗಾನದ ವಾತಾವರಣವಿತ್ತು. ಹಾಗೆಂದು ಮಾವ, ಕುರಿಯ ವಿಠಲ ಶಾಸ್ತ್ರಿಯವರು ನಮ್ಮನ್ನು ಕುಣಿಯುವುದಕ್ಕೆ ಬಿಡುತ್ತಿರಲಿಲ್ಲ. “ನಾನೊಬ್ಬ ಯಕ್ಷಗಾನದಲ್ಲಿ ಇದ್ದರೆ ಸಾಕು, ಇನ್ನು ನೀವೆಲ್ಲ ಅದರಲ್ಲಿ ನರಕ ಬರುವುದು ಬೇಡ’’ ಎಂದು ಗದರಿಸುತ್ತಿದ್ದರು. ಹಾಗಾಗಿ ನಾವು ಅವರಿಗೆ ತಿಳಿಯದ ಹಾಗೆ, ಅವರು ಬೇರೆಯವರಿಗೆ ಹೇಳಿಕೊಡುವುದನ್ನು ಕದ್ದುಮುಚ್ಚಿ ನೋಡಿ ನಮ್ಮಷ್ಟಕ್ಕೆ ಅಭ್ಯಾಸ ಮಾಡುತ್ತಿದ್ದೆವು. ನಾವು ಮಕ್ಕಳೇ ಎಲ್ಲಾ ಸೇರಿ ಪ್ರದರ್ಶನವೂ ಕೊಡುತ್ತಿದ್ದೆವು. ಹಾಗೆಂದು ನಾನು ಆಗ ಅಷ್ಟು ಚುರುಕು ಇರಲಿಲ್ಲ. ದೊಂದಿ, ಪರದೆ ಹಿಡಿಯುವ ಕೆಲಸ ಮಾಡುತ್ತಿದ್ದೆ. ಸೇರಾಜೆ ಸೀತಾರಾಂ ಭಟ್, ಕುರಿಯ ಗಣಪ, ನಾರಾಯಣ, ಬಾಯಾರು ಪ್ರಕಾಶ್ಚಂದ್ರ ಇವರೆಲ್ಲ ಸೇರಿ ನಮ್ಮದೊಂದು ತಂಡ ಇತ್ತು.

  • ಆಗಿನ ಕಾಲದ ಯಕ್ಷಗಾನ ಶಿಕ್ಷಣ, ಮೇಳ ತಿರುಗಾಟ ಮತ್ತು ಸ್ಥಿತಿಗತಿ ಹೇಗಿತ್ತು?
  • ನಾನು ಒಂದೆರಡು ವರ್ಷವಷ್ಟೆ ಬೇರೆ ಬೇರೆ ಮೇಳಗಳಲ್ಲಿ ತಿರುಗಾಟ ಮಾಡಿದ್ದೇನೆ. ಈಗಿನ ಹಾಗೆ ಮೇಳಕ್ಕೆ ಸ್ವಂತ ವಾಹನಗಳು ಇರಲಿಲ್ಲ. ಹತ್ತು-ಹದಿನೈದು ರೂಪಾಯಿ ಸಂಭಾವನೆ ದೊರೆಯುತ್ತಿತ್ತು. ಆಟ ನಡೆಯುವ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಸ್ಸಿಗೆ ಕಾದು ಅಥವಾ ಸಿಕ್ಕಿದ ವಾಹನಗಳಲ್ಲಿ ಹೋಗುತ್ತಿದ್ದೆವು. ಎಲ್ಲಾ ಕಡೆ ಸರಿಯಾದ ರಂಗಸ್ಥಳ ಅಥವಾ ಚೌಕಿ ಸಿಗುತ್ತಿರಲಿಲ್ಲ. ಹೆಚ್ಚಾಗಿ ಮರದ ನೆರಳಿನಲ್ಲಿ ಹಗಲು ಹೊತ್ತು ನಮ್ಮ ನಿದ್ರೆ. ರಜಾದಿನಗಳಲ್ಲಿ ಶಾಲೆಯ ಜಗಲಿ ಹತ್ತಿರ ಇದ್ದರೆ ಹುಡುಕಿಕೊಂಡು ಹೋಗುತ್ತಿದ್ದೆವು. ಮತ್ತೆ ಆ ಕಾಲದಲ್ಲಿ ಜನರಿಗೇನೂ ಯಕ್ಷಗಾನ ಕಲಾವಿದರ ಬಗ್ಗೆ ಅಷ್ಟೇನೂ ಗೌರವ ಇರಲಿಲ್ಲ. `ಏಸದಾಯೆ’ ಎಂದು ಕರೆಯುತ್ತಿದ್ದರು. ನಾನು ಒಂದು ರಾತ್ರಿಯ ಆಟದಲ್ಲಿ ಕನಿಷ್ಟ ಎರಡರಿಂದ-ಮೂರು ವೇಷ ಮಾಡುತ್ತಿದ್ದೆ. ಅಗರಿ ಭಾಗವತರು ಒಂದಿಷ್ಟೂ ಅಹಂ ಇಲ್ಲದೆ ಬೆಳೆಯುವ ಯುವ ಕಲಾವಿದರಿಗೆ ಚೆನ್ನಾಗಿ ಪ್ರೋತ್ಸಾಹಿಸುತ್ತಿದ್ದರು. ಹೀಗೆ ಆ ಕಾಲದ ತಿರುಗಾಟದಲ್ಲಿ ಅದೇನೋ ಆನಂದವಿತ್ತು.

  • ಪುಣೆಯಲ್ಲಿ ಯಕ್ಷಗಾನವನ್ನು ಬೆಳೆಸುವುದಕ್ಕೆ ನಿಮ್ಮ ವೃತ್ತಿಯ ಜೊತೆ ಹೇಗೆ ಸಾಧ್ಯವಾಯಿತು ಮತ್ತು ಆರಂಭದ ವಾತಾವರಣ ಹೇಗಿತ್ತು?
  • ಉದ್ಯೋಗ ನಿಮಿತ್ತ ನಾನು ಪುಣೆಗೆ ಬಂದಾಗ ನನಗಿಲ್ಲಿ ಯಾವುದೇ ಕಲಾವಿದರ ಪರಿಚಯವಿರಲಿಲ್ಲ. ಕನ್ನಡ ಸಂಘ ಪುಣೆಯವರು ಇಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಯಾವಾಗಾದರೂ ಒಮ್ಮೊಮ್ಮೆ ಊರಿನಿಂದ ಬಂದ ಕಲಾವಿದರ ಯಕ್ಷಗಾನ ಪ್ರದರ್ಶನ ನಡೆಯುತ್ತಿತ್ತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಪ್ರೇಕ್ಷಕನಾಗಿ ಭಾಗವಹಿಸುತ್ತಿದ್ದೆ. ಆ ಸಂದರ್ಭದಲ್ಲಿ ಶ್ರೀಯುತ ಗುಂಡು ಶೆಟ್ಟಿ, ರಾಮಣ್ಣ ರೈ ಪುತ್ತೂರು ಮೊದಲಾದ ಹವ್ಯಾಸಿ ಯಕ್ಷಗಾನ ಕಲಾವಿದರ ಹಾಗೂ ಕಲಾಸಕ್ತರ ಪರಿಚಯವಾಯಿತು. ಪುಣೆಯ ಶ್ಯಾಮ ರಾವ್ ಕಲ್ಮಾಡಿಯವರು ಸಹ ಒಳ್ಳೆಯ ಪ್ರೋತ್ಸಾಹವನ್ನು ನೀಡಿದರು. ಆ ಬಳಿಕ ಪುಣೆಯ ವಿವಿಧ ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದ ಊರಿನ ಹವ್ಯಾಸಿ ಕಲಾವಿದರ ಪರಿಚಯವಾಗಿ, ಅವರನ್ನೆಲ್ಲ ಒಟ್ಟು ಸೇರಿಸಿ, ನನ್ನ ನಿರ್ದೇಶನದಲ್ಲಿ ಕೆಲವು ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸಿದ್ದೆವು. ಅವರೆಲ್ಲ ಬಹಳ ಆಸಕ್ತಿಯಿಂದ ರಾತ್ರಿ 11 ಗಂಟೆಯ ನಂತರ ತಮ್ಮ ಕೆಲಸ ಮುಗಿಸಿ ನಾಟ್ಯ ತರಬೇತಿಗಾಗಿ ಒಟ್ಟಾಗುತ್ತಿದ್ದರು. ನಾನು ಕೂಡ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದುಕೊಂಡು ರಾತ್ರಿ ಹೊತ್ತು ಅವರಿಗಾಗಿ ಬಹಳ ದೂರ ಸೈಕಲ್ ತುಳಿಯುತ್ತಾ ತರಬೇತಿ ಕೊಡುವುದಕ್ಕಾಗಿ ಹೋಗುತ್ತಿದ್ದೆ. ಆಗ ನಡೆಯುತ್ತಿದ್ದ ಪ್ರತಿಯೊಂದು ಪ್ರದರ್ಶನಗಳು ಕೂಡ ಅತ್ಯಂತ ಯಶಸ್ವಿಯಾಗಿ ಜನಮೆಚ್ಚುಗೆಗೆ ಪಾತ್ರವಾಗುತ್ತಿತ್ತು. ಹೀಗಾಗಿ ಅನೇಕ ಕನ್ನಡ ಮತ್ತೆ ಮರಾಠಿ ಮಹಿಳೆಯರೂ ಕೂಡ ನಾಟ್ಯಾಭ್ಯಾಸಕ್ಕಾಗಿ ನನ್ನಲ್ಲಿಗೆ ಬರುತ್ತಿದ್ದರು. ಅದರಲ್ಲಿ ಹೆಚ್ಚಿನವರು ಉನ್ನತ ಹುದ್ದೆಯಲ್ಲಿದ್ದವರಾಗಿದ್ದರು. ಕನ್ನಡ ಬರದಿದ್ದರೂ, ಆಂಗ್ಲ ಭಾಷೆಯಲ್ಲಿ ಬರೆದು ಬಾಯಿಪಾಠ ಮಾಡಿ ಸಂಭಾಷಣೆಯನ್ನು ಮಾಡುತ್ತಿದ್ದರು. ಹೀಗಾಗಿ ಎಲ್ಲರಿಂದಲೂ ಉತ್ತಮ ಗೌರವವನ್ನು ಸಂಪಾದಿಸಿದ್ದೇನೆ ಎಂಬ ಹೆಮ್ಮೆ ಇದೆ. ಕನ್ನಡ ಸಂಘ ಪುಣೆ ಹಾಗೂ ಗುರುದೇವ ಬಳಗ, ಅದೇ ರೀತಿ ಪುಣೆಯ ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು ಇವರೂ ಕೂಡ ಯಕ್ಷಗಾನಕ್ಕಾಗಿ ಬಹಳ ಸಹಕಾರವನ್ನು ಕೊಟ್ಟಿದ್ದಾರೆ. ಆ ಬಳಿಕ ಹವ್ಯಾಸಿ ಕಲಾವಿದರಾದ ವಾಸು ಕುಲಾಲ್ ವಿಟ್ಲ, ಸುಖೇಶ್ ಶೆಟ್ಟಿ ಎಣ್ಣೆಹೊಳೆ ಮುಂತಾದವರು ನನ್ನೊಂದಿಗೆ ಸೇರಿ ಯಕ್ಷಗಾನ ಚಟುವಟಿಕೆಗಳಿಗೆ ಉತ್ತಮ ಪ್ರೋತ್ಸಾಹವನ್ನು ಕೊಡುತ್ತಿದ್ದರು, ಈಗಲೂ ಕೊಡುತ್ತಿದ್ದಾರೆ. ಈ ನಡುವೆ ಅನೇಕ ಕಹಿ ಘಟನೆ, ನೋವು ಇತ್ಯಾದಿಗಳನ್ನು ಕೂಡ ಅನುಭವಿಸಿದ್ದೇನೆ.
  • ಈಗ ಪುಣೆಯಲ್ಲಿ ಯಕ್ಷಗಾನದ ಸ್ಥಿತಿಗತಿ ಹೇಗಿದೆ?
  • ಇಲ್ಲಿನ ಎಲ್ಲಾ ಕಲಾವಿದರು ಕಲಾಸೇವೆಗಾಗಿ ಬಹಳ ಆಸಕ್ತಿವಹಿಸಿ, ಯಾವುದೇ ಆರ್ಥಿಕ ಅಪೇಕ್ಷೆ ಇಲ್ಲದೆ ಶ್ರಮವಹಿಸುತ್ತಾರೆ. ಹಾಗೆಂದು ಅವರಿಗೆ ಸರಿಯಾದ ಪ್ರೋತ್ಸಾಹ ಜೊತೆಗೆ ಆರ್ಥಿಕ ಬೆಂಬಲವನ್ನು ಕೊಟ್ಟದ್ದೇ ಆದಲ್ಲಿ ಯಕ್ಷಗಾನವು ಪುಣೆಯಲ್ಲಿ ಬೆಳೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಪ್ರತಿ ಕಾರ್ಯಕ್ರಮಕ್ಕೂ ಪದೇ ಪದೇ ಒಬ್ಬ ವ್ಯಕ್ತಿಯ ಬಳಿ ಹೋಗಿ ಧನಸಹಾಯ ಕೇಳುವುದು ಅಷ್ಟು ಸರಿಯಲ್ಲ. ಆ ನಿಟ್ಟಿನಲ್ಲಿ ಇಲ್ಲಿನ ಉದ್ಯಮಿ ಶ್ರೀಯುತ ಜಗನ್ನಾಥ ಶೆಟ್ಟಿಯವರು ಉತ್ತಮ ರೀತಿಯ ಸಹಕಾರವನ್ನು ಕೊಡುತ್ತಿದ್ದಾರೆ. ಸರ್ಕಾರದ ಇಲಾಖೆಗಳನ್ನು ಸಂಪರ್ಕಿಸಿ, ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾದ ಅಗತ್ಯವಿದೆ.

  • ಯಕ್ಷಗಾನದ ನಿಮ್ಮ ಪ್ರವೃತ್ತಿಗೆ ನಿಮ್ಮ ಮನೆ ಯವರ ಸಹಕಾರ ಹೇಗಿದೆ?
  • ನನ್ನ ಶ್ರೀಮತಿ ಹೇಮಾ ನನಗೆ ನೆರಳಿನ ಹಾಗೆ ಇದ್ದಾಳೆ. ಯಕ್ಷಗಾನಕ್ಕೆ ಒಳ್ಳೆಯ ಪ್ರೋತ್ಸಾಹ ಹಾಗೂ ಸಹಕಾರವನ್ನು ಕೊಡುತ್ತಿದ್ದಾಳೆ. ಎಲ್ಲಿಯವರೆಗೆ ಅಂದರೆ ನನ್ನ ಮನೆಯಲ್ಲಿರುವ ಯಕ್ಷಗಾನದ ಎಲ್ಲಾ ವೇಷಭೂಷಣಗಳನ್ನು ಪ್ರತಿ ಕಾರ್ಯಕ್ರಮ ಮುಗಿದ ನಂತರ ಚೆನ್ನಾಗಿ ಒಣಗಿಸಿ, ಬೇಕಾದ ಹಾಗೆ ವ್ಯವಸ್ಥೆಗೊಳಿಸುವಲ್ಲೂ ಉತ್ತಮ ಮುತುವರ್ಜಿ ವಹಿಸುತ್ತಿದ್ದಾರೆ. ಬಿ.ಎಸ್ಸಿ. ಪದವೀಧರೆ, ಶ್ರೀಮಂತ ಮತೆನತನದಿಂದ ಬಂದವಳು, ಕವಯತ್ರಿಯೂ ಹೌದು. ನನ್ನೆಲ್ಲಾ ಆಗುಹೋಗುಗಳಿಗೆ ಅವಳೇ ಬೆನ್ನೆಲುಬು.
  • ಇದು ತನಕದ ಬದುಕು ಹಾಗೂ ಕಲಾಬದುಕು ನಿಮಗೆ ತೃಪ್ತಿ ತಂದಿದೆಯೇ?
  • ಬದುಕಿನಲ್ಲಿ ನನಗೆ ತುಂಬಾ ತೃಪ್ತಿ ಇದೆ. ಉದ್ಯೋಗಕ್ಕಾಗಿ ಪುಣೆಗೆ ಬಂದ ನಾನು ಆರ್ಥಿಕವಾಗಿ ಹೆಚ್ಚೇನೂ ಅಲ್ಲದಿದ್ದರೂ, ತಕ್ಕಮಟ್ಟಿಗೆ ಸಂಪಾದಿಸಿ, ಯಾರದ್ದೇ ಹಂಗಿಲ್ಲದೆ ತೃಪ್ತಿ ಹಾಗೂ ಸುಖಕರವಾದ ಜೀವನವನ್ನು ಅನುಭವಿಸುತ್ತಿದ್ದೇನೆ. ಪ್ರವೃತ್ತಿಯ ಮೂಲಕ ಅನೇಕ ಮಂದಿಗಳ ಪ್ರೀತಿ, ಸ್ನೇಹ, ಗೌರವವನ್ನು ಸಂಪಾದಿಸಿದ್ದೇನೆ. ಹುಟ್ಟೂರು, ಪುಣೆ ಹೀಗೆ ಎಲ್ಲಾ ಕಡೆಗಳಲ್ಲಿ ನನ್ನನ್ನು ಯಕ್ಷಗಾನ ಕಲಾವಿದನೆಂದೇ ಗುರುತಿಸುವಾಗ ಸಂತೋಷವಾಗುತ್ತದೆ. ನನ್ನ ಮೇಲೆ ಅಭಿಮಾನವಿಟ್ಟೇ ಮುಂಬೈಯ ಎಚ್.ಬಿ.ಎಲ್. ರಾವ್ ಅವರು ಪೊಳಲಿ ಮಹೇಶ್ ಹೆಗಡೆಯವರ ಮೂಲಕ ನನ್ನ ಕುರಿತಾದ ಪುಸ್ತಕವನ್ನು ಬರೆದು ಬಿಡುಗಡೆ ಮಾಡಿದ್ದಾರೆ.

  • ಯಕ್ಷಗಾನದ ಮುಂದಿನ ಪೀಳಿಗೆಗೆ ನಿಮ್ಮ ಮಾತು…?
  • ಯಕ್ಷಗಾನ ಉಳಿಯಬೇಕು, ಬೆಳೆಯಬೇಕು, ಪರವೂರಿನಲ್ಲಿಯೂ ಬೆಳೆಯಬೇಕು. ಕಲಾವಿದರೂ ಬೆಳೆಯಬೇಕು. ನಿಮ್ಮಂಥ ಯುವ ಕಲಾವಿದರು ಈ ಕುರಿತಾಗಿ ಶ್ರಮಿಸಬೇಕು. ಯಕ್ಷಗಾನದ ಮೂಲ ಸೊಗಡಿಗೆ ತೊಂದರೆ ಬರದ ರೀತಿಯಲ್ಲಿ ಬೆಳೆಸಬೇಕು. ಕಲಾವಿದರು ಒಬ್ಬರಿಗೊಬ್ಬರು ಅನ್ಯೋನ್ಯತೆಯಿಂದ ಇದ್ದು, ಒಬ್ಬರಿಗೊಬ್ಬರು ಸಹಕರಿಸಬೇಕು. ರಂಗಸ್ಥಳದಲ್ಲಿ ಹಿತಮಿತವಾಗಿ ಪಾತ್ರಾಪಾತ್ರದ ವಿವೇಚನೆಯನ್ನು ಅರಿತು ಶಿಸ್ತಿನಿಂದ ಕೆಲಸ ಮಾಡಬೇಕು.
ಲೇಖಕ: ವಿಕೇಶ್ ರೈ ಶೇಣಿ, ಪುಣೆ



ದುಷ್ಟಬುದ್ಧಿ ಅಲ್ಲ – ಧೃಷ್ಟಬುದ್ಧಿ

0

ತೆಂಕಣ ಮತ್ತು ಬಡಗಣ ಶೈಲಿಯ ಯಕ್ಷಗಾನ ಪ್ರಸಂಗಕರ್ತರು ಚಂದ್ರಹಾಸ ಚರಿತೆಯನ್ನು ಆಧರಿಸಿ ಬರೆದ ಪ್ರಸಂಗ – ಮಹಾಮಂತ್ರಿ ದುಷ್ಟಬುದ್ಧಿ, ವಿಷಯಾ ಕಲ್ಯಾಣವು; ಭಕ್ತ ಚಂದ್ರಹಾಸ ಎಂಬಿತ್ಯಾದಿ ಹೆಸರಿನವು. ಈ ಪ್ರಸಂಗಕ್ಕೆ ಮೂಲ ಆಕರ ಲಕ್ಷ್ಮೀಶ ಕವಿಯು (ಕಾಲ ಸು. ಕ್ರಿ. ಶ. 1550) ಬರೆದ ಕನ್ನಡ ಜೈಮಿನಿಭಾರತ. ಈ ಕೃತಿಯ ಇಪ್ಪತ್ತೆಂಟನೆಯ ಸಂಧಿಯಲ್ಲಿ ಕಥಾ ಸೂಚನೆಯಾಗಿ ‘ನಾರದಂ ದೃಷ್ಟಿಗೋಚರಕ್ಕೈದಿ ವಿಸ್ತರಿಸಿದಂ ಚಂದ್ರಹಾಸ ಕಥಾ ವಿಶೇಷಮಂ ಕರ್ಣ ಪೀಯೂಷಮಂ ಪ್ರೀತಿಯಿಂದೆ’ ಎಂದಿದೆ. ಈ ಕತೆಯು ಮೂವತ್ತೆರಡನೆಯ ಸಂಧಿಯವರೆಗೆ ಒಟ್ಟು 301 ವಾರ್ಧಕ ಷಟ್ಪದಿಗಳಲ್ಲಿ ಹರಡಿಕೊಂಡಿದೆ.


ಕನ್ನಡ ಜೈಮಿನಿಭಾರತವು 1912; 1913, 1931ನೆಯ ಇಸವಿಗಳಲ್ಲಿ ಸಂಪಾದಿತವಾಗಿ ಪ್ರಕಟಗೊಂಡಿರುವುದು ಕಾವ್ಯದ ಜನಪ್ರಿಯತೆಗೆ ಸಾಕ್ಷಿ. ಅನಂತರವೂ ಈ ಕೃತಿ ಸಂಪಾದಿತವಾಗಿ ಪ್ರಕಟಿಸಲ್ಪಟ್ಟಿದೆ. ಮೂಲತಃ ಲಿಪಿಕಾರರ ಸ್ಖಾಲಿತ್ಯದಿಂದಲೊ, ಪ್ರತಿಕಾರರ ಅನವಧಾನದಿಂದಲೊ, ತಾನೇ ನಿಷ್ಕರ್ಷಿಸಿದ ಪಾಠಾಂತರದಿಂದಲೊ ಈ ಕೃತಿಯಲ್ಲಿ ಇನ್ನೂ ಕೆಲವು ಪ್ರಮಾದಗಳು ಉಳಿದುಕೊಂಡಿರುವಂತೆ ಕಾಣುತ್ತದೆ. ಲಕ್ಷ್ಮೀಶನ ಕೃತಿಗೆ ಸಂಸ್ಕೃತ ಜೈಮಿನಿಭಾರತವು ಮೂಲ ಆಕರವಾದ್ದರಿಂದ ಅದನ್ನಿರಿಸಿಕೊಂಡು ಕೃತಿ ಸಂಪಾದನೆಗೊಂಡಿದ್ದರೆ ಕೆಲವೊಂದು ತಪ್ಪುಗಳನ್ನು ಸರಿಪಡಿಸಬಹುದಿತ್ತು; ಸಂಪಾದಕರು ಹಾಗೆ ನೋಡದಿರುವುದಕ್ಕೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಈ ಕೃತಿಯ ಶುದ್ಧಪ್ರತಿಯು ಇನ್ನು ಸಿದ್ಧವಾಗಬೇಕಾದ ಅಗತ್ಯವಿದೆಯೆಂದು ತೋರುತ್ತದೆ. ಈಗಿರುವ ಕೃತಿಯಲ್ಲಿ-


ಕುಂತೀಕುಮಾರ ಕೇಳಾ ಮಹಾಪಟ್ಟಣದೊ
ಳಿಂತರ್ಭಕರೊಳಾಡುತಿಹ ಪಸುಳೆಗೈದು ಬರಿ
ಸಂ ತುಂಬಿತಾ ಸಮಯದೊಳ್ಪ್ರಬಲದಿಂ ಪ್ರವರ್ತಿಪ ದುಷ್ಟಬುದ್ಧಿಯೆಂಬ
ಕುಂತಳೇಂದ್ರನ ಮಂತ್ರಿ… (28-25)
ಎಂಬುದಾಗಿ ಮಂತ್ರಿಯ ಹೆಸರು ‘ದುಷ್ಟಬುದ್ಧಿ’ಯೆಂದೇ ಹೇಳಿದೆ.


ಬೆನಗಲ್ ರಾಮರಾಯರ ‘ಪುರಾಣನಾಮ ಚೂಡಾಮಣಿ’ (ಮೂರನೆಯ ಮುದ್ರಣ, 1968) ಕೃತಿಯ ಪುಟ 319ರಲ್ಲಿ ದುಷ್ಟಬುದ್ಧಿ ಕುಂತಲರಾಜನ ಮಂತ್ರಿಃ ವಿಷಯೆಯ ತಂದೆ ಎಂದೇ ಹೇಳಿದೆ. ಕತೆಯ ದೃಷ್ಟಿಯಿಂದ ಮಂತ್ರಿಯ ಜನನ, ಬಾಲ್ಯ, ನಾಮಕರಣಗಳ ವಿಚಾರ ಅಗತ್ಯವಿಲ್ಲವಾದರೂ; ಯಾವ ತಾಯ್ತಂದೆಯೂ ತಮ್ಮ ಮಗನಿಗೆ ‘ದುಷ್ಟಬುದ್ಧಿ’ಯೆಂದು ಹೆಸರಿಡಲಾರರೆಂದೇ ತೋರುತ್ತದೆ. ‘‘ಕ್ಷಿತಿಯೊಳೆ ರೂಢಾನ್ವರ್ಥಾಂಕಿತಮೆಂದಾ ನಾಮಮರಿಗೆ ಮೂಡೆರನಂ’’ (ಕೇಶಿರಾಜ, ಶ.ದ. 2-26) ಎಂದಿರು ವುದರಿಂದ ‘ದುಷ್ಟಬುದ್ಧಿ’ ಎಂಬುದು ಅಂಕಿತನಾಮವಾಗಿರಲಾರದು; ಚಂದ್ರಹಾಸ ಕತೆಯ ಬೆಳವಣಿಗೆಯನ್ನು ಗಮನಿಸಿದಾಗ; ಮಂತ್ರಿಯ ಕೃತ್ಯಗಳನ್ನು ಓದಿದಾಗ ಅವನಿಗದು ‘‘ಅನ್ವರ್ಥನಾಮ’’.


ಲಕ್ಷ್ಮೀಶನ ಕನ್ನಡ ಜೈಮಿನಿಭಾರತಕ್ಕೆ ಸಂಸ್ಕೃತದ ಜೈಮಿನಿಭಾರತ ಆಕರ ಗ್ರಂಥ. ಜೈಮಿನಿಯು ವ್ಯಾಸಮಹರ್ಷಿಗಳ ನಾಲ್ವರು ಪ್ರಧಾನ ಶಿಷ್ಯರಲ್ಲೊಬ್ಬ. (ಪೈಲ, ವೈಶಂಪಾಯನ, ಸುಮಂತು ಇತರ ಶಿಷ್ಯರು) ಈತನೂ ಒಂದು ಭಾರತವನ್ನು ರಚಿಸಿದ್ದನಂತೆ. ಆದರೆ ನಮಗಿಂದು ಆತನ ‘‘ಅಶ್ವಮೇಧಿಕ ಪರ್ವ’’ವೊಂದು ಮಾತ್ರ ದೊರೆಯುತ್ತದೆ. ಈ ಕೃತಿಯಲ್ಲಿ ಒಟ್ಟು 68 ಅಧ್ಯಾಯಗಳಿದ್ದು; 5194 ಶ್ಲೋಕ ಛಂದಸ್ಸಿನ ರಚನೆಗಳಲ್ಲಿ ಕತೆಯು ಹರಡಿಕೊಂಡಿದೆ. ಈ ಕೃತಿಯ 50ನೆಯ ಅಧ್ಯಾಯದಿಂದ 59ನೆಯ ಅಧ್ಯಾಯದವರೆಗೆ ‘‘ಚಂದ್ರಹಾಸೋಪಾಖ್ಯಾನ’’ವಿದೆ.
50ನೆಯ ಅಧ್ಯಾಯದ ಕೊನೆಗೆ ‘‘ಇತ್ಯಾಶ್ವಮೇಧಿಕೇ ಪರ್ವಾಣಿ ಜೈಮಿನೀಯೇ ಚಂದ್ರಹಾಸೋಪಾಖ್ಯಾನೇ ಪಂಚಾಶತ್ತಮೋ„ಧ್ಯಾಯಃ’’ ಎಂದಿದೆ. ಇದರಲ್ಲಿ-
ನಾರದಸ್ತ್ವಬ್ರವೀದಶ್ವೌಗತೌ ಕೌಂತಲಕಂ ಪುರಮ್ |
ಯತ್ರ ರಾಜಾ ಚಂದ್ರಹಾಸೋ ವೈಷ್ಣವಃ ಪಾಲಿತಾಂಪುರೀಂ (50-10)
ಯಸ್ಮೈ ಕುಂತಲಕೋ ರಾಜಾ ರಾಜ್ಯಂ ದತ್ತ್ವಾ ವನಂ ಯಯೌ |
ಧೃಷ್ಟಬುದ್ಧೇಃ ಪ್ರಧಾನಸ್ಯ ಕನ್ಯಾಂ ಯಃ ಪರಿಣೀತವಾನ್ || (50-11)
ಕೇರಲಾಧಿಪತೇಃ ಪುತ್ರಃ ಕುಲಿಂದೇನಾನು ಪಾಲಿತಃ
ಲಕ್ಷ್ಮೀಪತೇಃ ಪ್ರಸಾದಾಸ್ಸಪ್ರಾಪ್ಯ ಕೌಂತಲಕಾಂ ಪುರೀಂ || (50-12)
ಚಂದ್ರಹಾಸೋ ಮಹಾಬಾಹುರ್ಯೋದ್ಧತಾ ದ್ವಙನ ವಿದ್ಯತೇ |
ಅಮೀನೃತತಯಸ್ತಸ್ಯ ಕಲಾಂ ನಾರ್ಹತಿ ಷೋಡಶೀಮ್ || (50-13)
ಹೀಗೆ ಎಲ್ಲ ಕಡೆಗಳಲ್ಲೂ ‘ಧೃಷ್ಟಬುದ್ಧಿ’ ಎಂದೇ ಉಲ್ಲೇಖವಿದೆ.


ಕಾವ್ಯದುದ್ದಕ್ಕೂ ಓದುತ್ತಾ ಹೋಗುವಾಗ ನಮಗೆಲ್ಲಿಯೂ ‘ದುಷ್ಟಬುದ್ಧಿ’ ಎಂಬ ಪ್ರಯೋಗ ಕಾಣಸಿಕ್ಕುವುದೇ ಇಲ್ಲ. ಆದುದರಿಂದ ‘ಧೃಷ್ಟಬುದ್ಧಿ’ ಎಂಬುದು ಸಾಧುರೂಪವೇ ಹೊರತು ‘ದುಷ್ಟಬುದ್ಧಿ’ಯೆಂಬುದಲ್ಲ.
ಧೃತರಾಷ್ಟ್ರ, ಧೃಷ್ಟದ್ಯುಮ್ನ (ದ್ರುಪದ ಪುತ್ರ), ಧೃಷ್ಟಕೇತು (ಶಿಶುಪಾಲನ ಮಗ) ಧೃಷ್ಟಿ (ದಶರಥನ ಮಂತ್ರಿ) ಧೃತರಾಷ್ಟ್ರೀ (ಕಶ್ಯಪತಾಮ್ರೆಯರ ಮಗಳು) ಧೃತದೇವಾ (ವಸುದೇವನ ಪತ್ನಿ) ಮುಂತಾದ ಕಡೆಗಳ ಹೆಸರಿನ ಆದಿಗೆ ಕಾಣಿಸುವ ‘ಧೃ’ವೇ ಚಂದ್ರಹಾಸಚರಿತೆಯಲ್ಲಿ ಬರುವ ‘ಧೃ’ವೇ ಪ್ರಧಾನನ ಹೆಸರಿನ ಆದಿಗೆ ಬರುವುದಾಗಿದ್ದು ಅದು ‘ಧೃಷ್ಟಬುದ್ಧಿ’ ‘ಧೃ’ ಅಥವಾ ‘ಧೃತ’ ಎಂದರೆ ‘ಧರಿಸಿದ’; ‘ಹಿಡಿಯಲ್ಪಟ್ಟ’; ‘ನಿಶ್ಚಲವಾದ’ ಎಂಬರ್ಥ ಬರುತ್ತದೆ. ‘ಧೃಷ್ಟ’ ಎಂದರೆ ‘ಅಶಿಶಯಸಮರ್ಥ’; ಪ್ರೌಢಿಯನ್ನು ಮೆರೆಸುವ ನಾಯಕ ಎಂಬರ್ಥ ಬರುತ್ತದೆ. ಆದುದರಿಂದ ‘ಧೃಷ್ಟಬುದ್ಧಿ’ಯೆಂದರೆ ಅತಿಶಯಬುದ್ಧಿಯುಳ್ಳವನೆಂದೂ; ಚಲವನ್ನು ಸಾಧಿಸುವ ಬುದ್ಧಿಯವನೆಂದೂ ಅರ್ಥ. ಚಂದ್ರಹಾಸಚರಿತೆಯಲ್ಲಿ ಬರುವ ಮಹಾಪ್ರಧಾನನ ಕಾರ್ಯವೈಖರಿಯನ್ನು ಓದಿದರೆ ಅದು ಸ್ಪಷ್ಟವಾಗುತ್ತದೆ.
ಪ್ರಾಜ್ಞರಾದವರು; ಅಧ್ಯಾಪಕರು; ಯಕ್ಷಗಾನ ಕಲಾವಿದರು ತಥ್ಯಮಿಥ್ಯ ಗಳನ್ನು ಮನಗಾಣುವರೆಂದು ನಂಬಿದ್ದೇನೆ.

ಗ್ರಂಥಋಣ :

  1. ಜೈಮಿನಿಯ ಅಶ್ವಮೇದಪರ್ವ, 1989, ಲಕ್ಷ್ಮೀವೆಂಕಟೇಶ್ವರ ಪ್ರೆಸ್, ಕಲ್ಯಾಣ, ಮುಂಬಯಿ. ಸಂ. ಖೇಮರಾಜ ಶ್ರೀಕೃಷ್ಣದಾಸ.
  2. ಮಹಾಕವಿ ಲಕ್ಷ್ಮೀಶನ ಕನ್ನಡ ಜೈಮಿನಿಭಾರತ, ಸಂ. ಡಾ| ಪಾಂಡುರಂಗ.
  3. ಪುರಾಣನಾಮಚೂಡಾಮಣಿ, ಬೆನಗಲ್ ರಾಮರಾವ್, ಮೃ.ವಿವಿ. 1969.
ಡಾ| ಉಪ್ಪಂಗಳ ಶಂಕರನಾರಾಯಣ ಭಟ್
ಚಿನ್ಮಯಾ ಮಿಶನ್ ಕಾಲನಿ, ಅಂಚೆ : ವಿದ್ಯಾನಗರ – 631 123
ಕಾಸರಗೋಡು

ನಿವಾತ ಕವಚರು 

0

‘ನಿವಾತ’ ಎಂದರೆ ವಾಯು; ಗಾಳಿ. ವಾಯುವೇ ಕವಚವಾಗಿ ಉಳ್ಳವರು ನಿವಾತ ಕವಚರು; ದಾನವರು. ಇವರು ಪ್ರಹ್ಲಾದನ ತಮ್ಮನಾದ ಸಂಹ್ಲಾದನ ಸುತರು. ಹಿರಣ್ಯನಗರಿಯವರು. ಪಾತಾಳವಾಸಿಗಳು. ಪಾರ್ಥನು ಇಂದ್ರಕೀಲ ಪರ್ವತಾಗ್ರದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ ಪಾಶುಪತಾಸ್ತ್ರವನ್ನು ಪಡೆದ ಮೇಲೆ ಇಂದ್ರನ ಆಹ್ವಾನದ ಮೇರೆಗೆ ದೇವಲೋಕಕ್ಕೆ ಹೋಗುತ್ತಾನೆ. 

ಅರಸ ಕೇಳೈ ಪಾರ್ಥನಿದ್ದನು 

ವರುಷವೈದರೊಳಿಂದ್ರ ಭವನದ 

ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ (ಕು.ವ್ಯಾ ಅ.ಪ 9-1 ಪೂರ್ವಾರ್ಧ)

ಆಗೊಮ್ಮೆ ಇಂದ್ರನು, 

ಅರಿಗಳೆವಗೆ ನಿವಾತಕವಚರು ಸುರಪದವಿಸೋಪದ್ರವದ ನಿ ಷ್ಠುರವಿದೆಂದು ರಹಸ್ಯದಲಿ ನನಗೆಂದನಮರೇಂದ್ರ (12-2 ಪೂರ್ವಾರ್ಧ)ಎಂಬುದಾಗಿ ಹಿಂದಣ ಘಟನೆಯನ್ನು ಪಾರ್ಥ ಧರ್ಮರಾಯನಿಗೆ ಹೇಳಿದನು. 

‘ದಾನವರ ಮರ್ದಿಸಿ ದೇವಲೋಕವನೆವಗೆ ನಿರುಪದ್ರವದಲೆಡೆ ಮಾಡೆಂದನಮರೇಂದ್ರ’ (12-8) ದೇವತೆಗಳೊಂದಿಗೆ ಸೇರಿಕೊಂಡು ಅರ್ಜುನ ನಿವಾತಕವಚರೊಂದಿಗೆ ಯುದ್ಧ ಮಾಡುತ್ತಾನೆ. ಕೊನೆಗೆ, 

ತೊಡಚಿದನು ಬೊಮ್ಮಾಸ್ತ್ರವನು ಹುರಿ 

ಯೊಡೆದುದಸುರರು ಮರೆತವರನಿ 

ಕ್ಕಡಿಯ ಮಾಡಿತು ಬಂದುದಳಿವು ನಿವಾತಕವಚರಿಗೆ (ಅರಣ್ಯ ಪರ್ವ – 12-46)

(ನಿವಾತ ಕವಚರ ಉಪಾಖ್ಯಾನ ಗದುಗು ಭಾರತದ ಅರಣ್ಯ ಪರ್ವದ ಹನ್ನೆರಡನೆಯ ಸಂಧಿಯಲ್ಲಿ ವಿಸ್ತಾರವಾಗಿ ಬಂದಿದೆ. ಪೂರ್ವಭಾವಿಯಾಗಿ ಒಂಭತ್ತನೆಯ ಸಂಧಿಯನ್ನು ಓದಿದರೆ ಒಳ್ಳೆಯದು. ವ್ಯಾಸಭಾರತದ ವನಪರ್ವದ ಸಂಧಿ 168-86, 169-24, 170-39, 171-40, 172-35, ಇಲ್ಲಿ ವಿವರವಾಗಿ ಇವೆ)

ಲೇಖಕರು: ಡಾ। ಉಪ್ಪಂಗಳ ಶಂಕರನಾರಾಯಣ ಭಟ್, ಚಿನ್ಮಯಾ ಮಿಷನ್ ಕಾಲನಿ, ಅಂಚೆ ವಿದ್ಯಾನಗರ, ಕಾಸರಗೋಡು – 671123

ಯಕ್ಷಗಾನ ಪ್ರಸಂಗಕರ್ತರ ಮೇಲೆ ಕುಮಾರವ್ಯಾಸನ ಪ್ರಭಾವ (ಭಾಗ – 1)

0

ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ
ರಾವಣಾಸುರ ಮಥನ ಶ್ರವಣ ಸು
ಧಾವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ

ಕುಮಾರವ್ಯಾಸ ಭಾರತದ ಈ ಪದ್ಯವನ್ನು ಪ್ರಸಂಗದ ಆರಂಭದಲ್ಲಿ ಭಾಗವತರಲ್ಲಿ ಕೆಲವರು ಅಪರೂಪವಾಗಿ ಹಾಡಿರಬಹುದು. ಕವಿ ಕುಮಾರವ್ಯಾಸ ಬರೆದ ಕರ್ಣಾಟ ಭಾರತ ಕಥಾಮಂಜರಿ ಅಥವಾ ಕುಮಾರವ್ಯಾಸ ಭಾರತವು ಈ ಪದ್ಯದಿಂದಲೇ ಆರಂಭವಾಗುತ್ತದೆ. ಕುಮಾರವ್ಯಾಸನ ಭಾಮಿನಿಗಳಿಗೂ ಯಕ್ಷಗಾನ ಪ್ರಸಂಗಗಳ ಭಾಮಿನಿಗಳಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಯಕ್ಷಗಾನ ಕವಿಗಳು ಕುಮಾರವ್ಯಾಸನಿಂದ ಪ್ರೇರಣೆ ಹೊಂದಿದಂತೆ ತೋರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಯಕ್ಷಗಾನ ಪ್ರಸಂಗಗಳಲ್ಲಿ ಕುಮಾರವ್ಯಾಸ ಭಾರತದ ಭಾಮಿನಿ ಪದ್ಯಗಳನ್ನು ಬಹುತೇಕ ಮೂಲ ಸ್ವರೂಪದಲ್ಲಿಯೇ ಬಳಸಿಕೊಂಡಿರುವುದೂ ಉಂಟು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಕಥೆಯ ದಾರಿ ಒಂದೇ ರೀತಿಯದಾದರೂ ನಿರ್ದಿಷ್ಟ ಕವಿಗಳ ಸಾಹಿತ್ಯವು ಕೃತಿ ರಚನೆಯ ಸಂದರ್ಭದಲ್ಲಿ ಪ್ರಭಾವ ಬೀರುವುದನ್ನು ಅಲ್ಲಗಳೆಯಲಾಗದು. ನವರಸಗಳ ಮತ್ತು ಅವುಗಳ ಅಂಗಗಳಾದ ಭಾವಗಳ ನಿರೂಪಣೆಯಲ್ಲಿ ಕುಮಾರವ್ಯಾಸನು ಅಸಾಧಾರಣ ಶಕ್ತಿಯನ್ನು ಹೊಂದಿದ್ದರೂ ಅವನ ಕಾವ್ಯವು ಅತಿ ಸುಂದರ, ಸರಳ ಹಾಗೂ ಸಾಮಾನ್ಯರಿಗೂ ಅರ್ಥ ಮಾಡಿಕೊಳ್ಳಲು ಕಷ್ಟವಲ್ಲದ ನಿರೂಪಣಾ ಶೈಲಿಯಾದದ್ದರಿಂದ ಅವನ ಕಾವ್ಯವು ಇತರ ಕವಿಗಳ ಸಾಹಿತ್ಯದ ಮೇಲೆ ಪ್ರಭಾವವನ್ನು ಬೀರಿದುವು ಎಂದರೆ ಅತಿಶಯೋಕ್ತಿಯಾಗಲಾರದು. ಇನ್ನು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಯಕ್ಷಗಾನ ಪ್ರಸಂಗ ಸಾಹಿತ್ಯದ  ರಚನೆಯಲ್ಲಿಯೂ ಕೂಡಾ ಕುಮಾರವ್ಯಾಸ ಭಾರತ ಪ್ರಭಾವ ಬೀರಿರುವುದನ್ನು ಕಾಣಬಹುದು.

ಮಹಾಭಾರತ ಕಥೆಯ ಅನೇಕ ಯಕ್ಷಗಾನ ಪ್ರಸಂಗಗಳನ್ನು ಅದರಲ್ಲೂ ವಿಶೇಷವಾಗಿ ಭಾಮಿನೀ ಪದ್ಯಗಳನ್ನು ಅವಲೋಕಿಸಿದಾಗ ನಮಗೆ ಈ ಅಂಶ ಮನದಟ್ಟಾಗುತ್ತದೆ. ಉದಾಹರಣೆಗೆ ಕುಮಾರವ್ಯಾಸ ಭಾರತದ ಕರ್ಣ ಪರ್ವದಲ್ಲಿ ಬರುವ ಪದ್ಯವನ್ನು ಗಮನಿಸಿ.
ಏನು ಸಾರಥಿ ಸರಳು ಪಾಂಡವ
ಸೇನೆಯನು ಗೆಲಲಹುದೆ ಪಾರ್ಥನ
ಮಾನಿನಿಗೆ ವೈಧವ್ಯ ದೀಕ್ಷಾ ವಿಧಿಯ ಕೊಡಲಹುದೆ
ಆನಲಮ್ಮುವರುಂಟೆ ನಿನಗಿದು
ಸಾನುರಾಗವೆ ಹೇಳೆನಲು ರವಿ
ಸೂನುವಿನ ರೌದ್ರಾಸ್ತ್ರವನು ಹೊಗಳಿದನು ಮಾದ್ರೇಶ
ಇದೇ ಸಂದರ್ಭ, ಯಕ್ಷಗಾನದಲ್ಲಿ ಕರ್ಣಾರ್ಜುನ ಪ್ರಸಂಗದಲ್ಲಿ ಕರ್ಣನು ಶಲ್ಯನಿಗೆ ಹೀಗೆ ಹೇಳುತ್ತಾನೆ.
ಏನು ಸಾರಥಿ ಸರಳು ಪಾಂಡವ | ಸೇನೆಯನು  ಗೆಲಲಹುದೆ ಪಾರ್ಥನ | ಮಾನಿನಿಗೆ ವೈಧವ್ಯ ದೀಕ್ಷಾ ವಿಧಿಯ ಕೊಡಬಹುದೆ || ಆನಲಮ್ಮುವರುಂಟೆ ನಿನಗಿದು | ಸಾನುರಾಗವೆ ಪೇಳೆನಲು ರವಿ| ಸೂನುವಿನ ಮೊಗನೋಡಿ ಮಾದ್ರಾಧೀಶ ನಿಂತೆಂದ ||
ಇಲ್ಲಿ ಹೆಚ್ಚು ಕಡಿಮೆ ಒಂದೇ ರೀತಿ ಇದೆ. ಕೆಲವೇ ಶಬ್ದಗಳ ಅಂತರ ಅಷ್ಟೇ.

(ಮುಂದುವರಿಯುವುದು) 

ಕುರಿಯ ಪ್ರತಿಷ್ಠಾನದಿಂದ ಇಂದು ತಾಳಮದ್ದಳೆ – ಶಾಪಾನುಗ್ರಹ 

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರು ಆಯೋಜಿಸುತ್ತಿರುವ ತಾಳಮದ್ದಳೆ ಸಪ್ತಾಹದ ನಾಲ್ಕನೆಯ ತಾಳಮದ್ದಳೆ ಇಂದು ಮಂಗಳವಾರ, 15.06.2021ರಂದು ರಾತ್ರಿ 7ರಿಂದ 9.30ರ ವರೆಗೆ ನಡೆಯಲಿದೆ. ನೇರಪ್ರಸಾರ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ವಿವರ ಕೆಳಗಡೆ ಇದೆ. 

‘ಸವ್ಯಸಾಚಿ’ ಎಂದರೇನು: ಮತ್ತು ಯಾರು?

0

ಸಂಸ್ಕೃತದಲ್ಲಿ ‘ಸವ್ಯ’ (ನಾ) ಎಂದರೆ ಎಡಭಾಗ. ಅಪಸವ್ಯ (ನಾ) ಎಂದರೆ ದಕ್ಷಿಣ, ಬಲಭಾಗ ಎಂದರ್ಥ. ವ್ಯಾಸಭಾರತದ ವಿರಾಟಪರ್ವದ 42,43,44ನೆಯ ಅಧ್ಯಾಯಗಳಲ್ಲಿ ಉತ್ತರ ಗೋಗ್ರಹಣ ವೃತ್ತಾಂತದ ಸಂದರ್ಭ ಇತ್ಯಾದಿ ವಿವರಗಳಿವೆ. ಉತ್ತರಕುಮಾರನು ಬೃಹನ್ನಳೆಯಲ್ಲಿ ಪಾಂಡವರ ಅಸ್ತ್ರ-ಶಸ್ತ್ರ ಕುರಿತಾದ,ಅವರ ಪರಿಚಯದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾನೆ. ಅಂತೆಯೇ ಪಾರ್ಥನ ದಶನಾಮಗಳನ್ನು ಮತ್ತು ಆ ಹೆಸರುಗಳು ಬಂದ ಬಗೆಯನ್ನೂ ಪ್ರಶ್ನಿಸುತ್ತಾನೆ. 

ಉ – ಕಿರೀಟೀ ನಾಮ ಕೇನಾಸಿ ಸವ್ಯಸಾಚೀ ಕಥಮ್ ಭವಾನ್ (44-20) 

ಪಾ – ಉಭೌ ಮೇ ದಕ್ಷಿಣೌ ಪಾಣೀ ಗಾಂಡೀವಸ್ಯ ವಿಕರ್ಷಣೇ । ತೇನ ದೇವ ಮನುಷ್ಯೇಷು  ಸವ್ಯಸಾಚೀತಿ ಮಾ ವಿದುಃ 

“ಎರಡು ಕೈಗಳಲ್ಲಿ ಗಾಂಡೀವ ಧನುಸ್ಸನ್ನು ನಾನು ಕರ್ಷಿಸುವುದರಿಂದ, ದೇವತೆಗಳ ಮತ್ತು ಮನುಷ್ಯರ ಮಧ್ಯೆ ನಾನು ಸವ್ಯಸಾಚೀ ಎಂದು ತಿಳಿದಿದ್ದಾರೆ” 

ಗೀತೆಯಲ್ಲಿ ‘ವಿಶ್ವರೂಪದರ್ಶನ’ವೆಂಬ ಹನ್ನೊಂದನೆಯ ಅಧ್ಯಾಯದಲ್ಲಿ ಕೃಷ್ಣನು, ‘ಮಯೈವತೇ ನಿಹತಾಃ ಪೂರ್ವಮೇವ, ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್ (11-33) ಎಂದಿದೆ.

ಕುಮಾರವ್ಯಾಸನ ;ಕರ್ಣಾಟ ಭಾರತ ಕಥಾ ಮಂಜರಿ’ಯ ವಿರಾಟಪರ್ವದಲ್ಲಿ ಉತ್ತರಕುಮಾರನ ಪ್ರಶ್ನೆ – ನಿಮ್ಮ ದಶ ನಾ । ಮಾಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ – (6-45) 

ಎನಲು ನಸುನಗುತರ್ಜುನನು ಫಲು 

ಗುಣ ಧನಂಜಯ ಜಿಷ್ಣು ಸಿತ ವಾ 

ಹನ ವಿಜಯ ಭೀಭತ್ಸು ಪಾರ್ಥ ಕಿರೀಟಿ ಮೊದಲಾದ 

ವಿನುತ ಕೃಷ್ಣನು ಸವ್ಯಸಾಚಿಗ 

ಳೆನಿಪ ಪೆಸರನು ತಿಳುಹಿ ಪುನರಪಿ 

ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ (6-46)

ಪಾರ್ಥನು ಎಡಗೈಯಿಂದ ಬಾಣವನ್ನು ಸೆಳೆದು ಬಿಡುವಾಗ ಬಲಗೈಯಲ್ಲಿ ಧನುಸ್ಸನ್ನೂ, ಬಲಗೈಯಿಂದ ಬಾಣವನ್ನು ಆಕರ್ಣಾಂತ ಸೆಳೆಯುವಾಗ ಎಡಗೈಯಲ್ಲಿ ಧನುಸ್ಸನ್ನು ಹಿಡಿದು ಅವಿಶ್ರಾಂತ ದುಡಿಯಬಲ್ಲ ಅತಿರಥ. (ವ್ಯಾಸರ ಪ್ರಕಾರ ಒಬ್ಬನೇ ವೀರ ಅಸಂಖ್ಯಾತ ಸೈನಿಕರನ್ನು ಎದುರಿಸಿ ಹೋರಾಡಬಲ್ಲವನು) ಪಾರ್ಥ ಎಡಚ; ಬಲಚ. 

ಯಕ್ಷಗಾನ ಕಲಾವಿದರು ಸವ್ಯಸಾಚಿಗಳಲ್ಲ! 

ಲೇಖಕರು: ಡಾ। ಉಪ್ಪಂಗಳ ಶಂಕರನಾರಾಯಣ ಭಟ್, ಚಿನ್ಮಯಾ ಮಿಷನ್ ಕಾಲನಿ, ಅಂಚೆ ವಿದ್ಯಾನಗರ, ಕಾಸರಗೋಡು – 671123

ಪಾಂಡವರ ಸೂತರು ಯಾರ್ಯಾರು?

0

ಪಾಂಡವರ ಸೂತರ ಕುರಿತು ಕುಮಾರವ್ಯಾಸ ಭಾರತದ ಸಭಾಪರ್ವದಲ್ಲಿ ಮಾಹಿತಿ ಸಿಗುತ್ತದೆ. ರಾಜಸೂಯ ಯಾಗದ ಸಂದರ್ಭದಲ್ಲಿ ಅವರು ಮಹತ್ತರ ಪಾತ್ರವನ್ನು ವಹಿಸಿದ್ದಾರೆ. 

ಧರಣಿಪತಿ ಕೇಳ್ ಶೂದ್ರ ಮೊದಲಾ 

ಗಿರೆ ಸಮಸ್ತ ಪ್ರಜೆ ವಿಧಾವಂ 

ತರಿಗೆ ಭೋಜನ ಗಂಧ ಮಾಲ್ಯಾಂಬರ  ವಿಲೇಪನದ 

ಉರು ನಿಯೋಗಿಗಳಿಂದ್ರಸೇನನು 

ವರ ವಿಶೋಕನು ರುಗ್ಮನತಿ ಬಂ 

ಧುರ ಸಮೀರ ಪತಾಕಸೇನನು ಸೂತರೈವರಿಗೆ (ಕು,ವ್ಯಾ. ಸ,ಪ. 7-19)

ಧರ್ಮರಾಯ – ಇಂದ್ರಸೇನ. ಭೀಮಸೇನ- ವಿಶೋಕ. ಪಾರ್ಥ-ರುಗ್ಮ. ನಕುಲ-ಸಮೀರ. ಸಹದೇವ- ಪತಾಕಸೇನ. ಈ ಇಂದ್ರಸೇನನೇ ರಾಜಸೂಯಯಾಗದ ಕುರಿತು ಸಮಾಲೋಚಿಸಲು ಕೃಷ್ಣನನ್ನು ಕರೆದುಕೊಂಡು ಬರಲು ದ್ವಾರಕೆಗೆ ಹೋದವನು. 

ಕಳುಹಿದನು ಸಾರಥಿಯನಾ ರಥ 

ಕೆಲವು ದಿವಸಕೆ ಕೃಷ್ಣಭವನ 

ಸ್ಥಳದ ಹೊರಬಾಹೆಯಲಿ ಚಾಚಿತು ಚಪಳಗಮನದಲಿ (ಸ.ಪ. 2-6, ಪೂರ್ವಾರ್ಧ)


ಎಂದು ವಸುದೇವಾದಿ ಯಾದವ 

ವೃಂದವನು ಬಲಭದ್ರರಾಮನ 

ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ 

ಬಂದನಿದ್ರಪ್ರಸ್ಥ ಪಟ್ಟಣ 

ಕಂದು ವೊಸಗೆಯ ಗುಡಿಯ ತೋರಣ 

ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ (ಸ.ಪ. 2-8)
ಭೀಮಸೇನನು ಬಿಲ್ಲನ್ನು ಹಿಡಿದು (ಸುಪಾರ್ಶ್ವ) ಕಾಳಗ ಮಾಡಿದಾಗ ಸಾರಥಿಯಾದ ವಿಶೋಕನು ಮಹತ್ತರ ಪಾತ್ರವನ್ನು ವಹಿಸಿದ ಮಾಹಿತಿ ಕುಮಾರವ್ಯಾಸ ಭಾರತದಲ್ಲೇ ಬರುತ್ತದೆ. ನೋಡಿ ದ್ರೋಣಪರ್ವ 12-5; 13-32 ಮತ್ತು ಈ ಮಧ್ಯೆ ಅಲ್ಲಲ್ಲಿ ಬರುತ್ತದೆ. ಅಂತೆಯೇ ಕರ್ಣಪರ್ವದ 12-23, 13-8, 18-19ರಲ್ಲೂ ಬಂದಿದೆ. 

ಲೇಖಕರು: ಡಾ। ಉಪ್ಪಂಗಳ ಶಂಕರನಾರಾಯಣ ಭಟ್, ಚಿನ್ಮಯಾ ಮಿಷನ್ ಕಾಲನಿ, ಅಂಚೆ ವಿದ್ಯಾನಗರ, ಕಾಸರಗೋಡು – 671123