Tuesday, September 22, 2026
Home Blog Page 315

ಪುರುಷೋತ್ತಮ ಪೂಂಜರು ಯಕ್ಷರಂಗದ ಸವ್ಯಸಾಚಿ: ಪ್ರೊ. ಯಡಪಡಿತ್ತಾಯ

 ‘ಯಕ್ಷಗಾನ ಕಲಾವಿದ ಪುರುಷೋತ್ತಮ ಪೂಂಜರು ಯಕ್ಷಗಾನ ರಂಗದ ಸವ್ಯಸಾಚಿಯಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬಳಿಕ ಹಿಮ್ಮೇಳ, ಮುಮ್ಮೇಳ ಹಾಗೂ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯೊಂದಿಗೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಯಕ್ಷಗಾನ ರಂಗಕ್ಕೆ ಇಂತಹ ಮಹಾನ್ ಕಲಾವಿದರ ಸೇವೆ ಇನ್ನಷ್ಟು ಅಗತ್ಯವಾಗಿದ್ದು, ಆದಷ್ಟು ಶೀಘ್ರದಲ್ಲಿ ಅವರು ಗುಣಮುಖರಾಗಿ ಯಕ್ಷಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.       

ಅವರು ಶನಿವಾರ ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಚಿಕಿತ್ಸೆಗಾಗಿ 25 ಸಾವಿರ ರೂ ಚೆಕ್ಕು  ವಿತರಿಸಿ ಮಾತನಾಡಿದರು. ‘ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಪುರುಷೋತ್ತಮ ಪೂಂಜ ಅವರ ನಡುವೆ ಅವಿನಾಭಾವ ಸಂಬಂಧ ಇದೆ. ಯಕ್ಷಮಂಗಳ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದು ಯಕ್ಷಗಾನ ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ ‘ ಎಂದರು.


ಶ್ರೇಷ್ಠ ಪ್ರಸಂಗಕರ್ತ: ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ ‘ಪುರುಷೋತ್ತಮ ಪೂಂಜರು ಯಕ್ಷಗಾನದ ಹಿರಿಯ ಭಾಗವತರು ಮತ್ತು ಶ್ರೇಷ್ಠ ಪ್ರಸಂಗಕರ್ತರು. ಜೊತೆಗೆ ಯಕ್ಷಗಾನ ರಂಗದ ಸರ್ವಾಂಗಗಳನ್ನು ಬಲ್ಲ ಮಹಾನ್ ಕಲಾವಿದರಾಗಿದ್ದಾರೆ. ತನ್ನ ಮನೆಯನ್ನೇ ಗುರುಕುಲವಾಗಿಸಿ ನೂರಾರು ಶಿಷ್ಯರನ್ನು ರೂಪಿಸಿದ ಅಪೂರ್ವ ವಿದ್ವಾಂಸರು. ಅವರು ಶೀಘ್ರ ಗುಣಮುಖರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ’ ಎಂದು ಹಾರೈಸಿದರು. 

ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಶ್ರೀಪತಿ ಕಲ್ಲೂರಾಯ ಸ್ವಾಗತಿಸಿ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಶೋಭಾ ಪುರುಷೋತ್ತಮ ಪೂಂಜ, ದೀವಿತ್ ಎಸ್.ಕೋಟ್ಯಾನ್, ಸತೀಶ್ ಕೊಣಾಜೆ, ಸ್ವಾತಿ ಎಸ್.ರಾವ್ ಮಯೂರ್ ನಾಯ್ಗ, ಕೀರ್ತನ್ ನಾಯ್ಗ ಉಪಸ್ಥಿತರಿದ್ದರು.

ಉಡುಪಿ ಯಕ್ಷಗಾನ ಕಲಾರಂಗದ ವಿಶ್ವಾಸಾರ್ಹತೆ ಪ್ರಶ್ನಾತೀತ – ಕೆ. ರಘುಪತಿ ಭಟ್

ಯಕ್ಷಗಾನ ಕಲಾರಂಗದಿಂದ ಆಯ್ದ ಮೇಳಗಳ 409 ಕಲಾವಿದರಿಗೆ ರೂ.1022500/-ವಿತರಣಾ ಕಾರ್ಯಕ್ರಮ ಸಂಸ್ಥೆಯ ಕಛೇರಿಯಲ್ಲಿ ಜರಗಿತು. ಶಾಸಕರಾದ ಕೆ.ರಘುಪತಿ ಭಟ್‍ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಲಾರಂಗವು ಸಮಾಜದ ವಿಶ್ವಾಸಾರ್ಹತೆಯನ್ನು ಸಂಪಾದಿಸಿದ್ದು ಸಂಸ್ಥೆಯ ಚಟುವಟಿಕೆಯೊಂದಿಗೆ ತಾನು ಸದಾ ಕೈ ಜೋಡಿಸುತ್ತೇನೆ ಎಂದು ನುಡಿದರು.

ಸಮಾರಂಭದ ಅಭ್ಯಾಗತರಾಗಿ ಭಾಗವಹಿಸಿದ್ದ ಪಣಂಬೂರು ವಾಸುದೇವ ಐತಾಳರು ಸಂಸ್ಥೆ ಬಹುಮುಖಿಯಾಗಿ ಕೆಲಸ ಮಾಡುತ್ತಿದೆ. ಕಳೆದ 20 ವರ್ಷಗಳಿಂದ ಈ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ನೋಡಿ ಬೆರಗಾಗಿದ್ದೇನೆ ಎಂದರು. ಸಿ.ಎ. ಗಣೆಶ್‍ ಕಾಂಚನ್‍ ಅವರು ಅಭ್ಯಾಗತರಾಗಿ ಉಪಸ್ಥಿತರಿದ್ದರು.

ಸಾಂಕೇತಿಕವಾಗಿ ಸಾಲಿಗ್ರಾಮ ಮೇಳದ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿ, ಬಪ್ಪನಾಡು ಮೇಳದ ಭಾಗವತ ಗಣೇಶ್‍ಕುಮಾರ್ ಹೆಬ್ರಿ, ಯಕ್ಷಶಿಕ್ಷಣದ ಗುರುಕೃಷ್ಣಮೂರ್ತಿ ಭಟ್ ಬಗ್ವಾಡಿಯವರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ಚೆಕ್ ಸ್ವೀಕರಿಸಿದ ಕಲಾವಿದರು ಸಂಸ್ಥೆ ಕಲಾವಿದರ ಕುರಿತು ನಿರಂತರ ಮಾಡುತ್ತಾ ಬಂದ ಹಲವು ಕಾರ್ಯಕ್ರಮಗಳನ್ನು ಸ್ಮರಿಸಿಕೊಂಡರು. ಉಳಿದ ಕಲಾವಿದರಿಗೆ ನೆಫ್ಟ್ ಮೂಲಕ ಅವರ ಖಾತೆಗೆ ತಲಾ ರೂ.2500/- ರಂತೆ ವರ್ಗಾಯಿಸಲಾಯಿತು.

ಅಧ್ಯಕ್ಷ ಎಂ. ಗಂಗಾಧರರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿ.ಭಟ್, ವಿ.ಜಿ. ಶೆಟ್ಟಿ ಕೋಶಾಧಿಕಾರಿ ಮನೋಹರ್ ಕೆ. ಅಭ್ಯಾಗತರಿಗೆ ಶಾಲು ಹೊದೆಸಿ ಗೌರವಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಗೆ ದಾನಿಗಳ ನಿರಂತರ ಪ್ರೋತ್ಸಾಹವನ್ನು ಮತ್ತು ಈ ಯೋಜನೆಗೆ ನೆರವು ನೀಡಿ ಸಹಕರಿಸಿದವರನ್ನು ಸ್ಮರಿಸಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.

ಯಕ್ಷಗಾನ ಕಲಾವಿದರಿಗೆ ಸಹಾಯಧನ ವಿತರಣೆ

ಕೊರೊನಾ ಕಾರಣದಿಂದ 2020-21ನೇ ಸಾಲಿನ ತಿರುಗಾಟದಲ್ಲಿ ಭಾಗಶಃ ಸಂಭಾವನೆ ಪಡೆದ 20 ಮೇಳಗಳ 410 ಕಲಾವಿದರಿಗೆ ಮತ್ತು ಯಕ್ಷಶಿಕ್ಷಣದ ಗುರುಗಳ ಖಾತೆಗೆತಲಾ 2,500/- ಮೊತ್ತದ ವಿತರಣಾ ಸಭೆ ದಿನಾಂಕ 16-07-2021 ಶುಕ್ರವಾರ ಪೂರ್ವಾಹ್ನ 11.00 ಗಂಟೆಗೆ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಜರಗಲಿದೆ. ಉಡುಪಿ ಶಾಸಕರಾದ ಶ್ರೀ ಕೆ.ರಘುಪತಿ ಭಟ್ ಸಭೆಯ ಅಧ್ಯಕ್ಷರಾಗಿ ಮತ್ತು ಅಭ್ಯಾಗತರಾಗಿ ಶ್ರೀ ಪಣಂಬೂರು ವಾಸುದೇವ ಐತಾಳ್, ಶ್ರೀಮತಿ ಮೀನಾ ವಿ. ಐತಾಳ್ ಹಾಗೂ ಸಿ.ಎ. ಗಣೇಶ್‍ ಕಾಂಚನ್‍ ಉಪಸ್ಥಿತರಿರುವರು ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಲಿಪ ನಾರಾಯಣ ಭಾಗವತರೊಂದಿಗೆ ಒಂದು ಆತ್ಮೀಯ ಮಾತುಕತೆ

ಬಲಿಪ ನಾರಾಯಣ ಭಾಗವತರ ಬಗ್ಗೆ ಹೇಳಲು ಏನಿಲ್ಲ…? ಜೀವನವನ್ನೇ ಯಕ್ಷಗಾನಕ್ಕೆ ಮುಡುಪಾಗಿಟ್ಟವರು ಅವರು. ಅವರು ಉಸಿರಾಡುವ ಗಾಳಿ, ಸೇವಿಸುವ ನೀರು, ನಡೆದಾಡುವ ಮಣ್ಣು ಎಲ್ಲವೂ ಯಕ್ಷಗಾನವೆಂಬ ಅಪೂರ್ವ ಕಲೆಯ ಒಂದೊಂದು ಕಥೆಯನ್ನು ನಮಗೆ ಹೇಳಬಲ್ಲವು. ಹದವಾದ ಗಾಳಿಗೆ ಹಿತವಾಗಿ ತೂಗುತ್ತಿದ್ದ ಅವರ ಮನೆಯ ತೋಟದ ತೆಂಗಿನ ಗರಿಗಳು ಯಕ್ಷಗಾನದ ನಾಟ್ಯವಾಡುವಂತೆ ಭಾಸವಾಗುತ್ತಿದ್ದುವು. ಹತ್ತಿರದಲ್ಲೇ ಕೇಳುತ್ತಿದ್ದ ನೀರಿನ ಜುಳುಜುಳು ನಾದದಲ್ಲಿ ಬಲಿಪರ ಅಪೂರ್ವ ಮೋಹನ ರಾಗ ಲೀನವಾದಂತೆ ಕೇಳಿಸಿತು.
ಸಮೀಪದಲ್ಲಿಯೇ ಇದ್ದ ಮನೆಗೆ ತಲುಪಿದಾಗ ಸ್ವತಃ ನಾನು ಯಾರನ್ನು ಮಾತನಾಡಿಸಲೆಂದು ಹೋಗಿದ್ದೆನೋ ಅವರದೇ ಅತ್ಮೀಯ ಸ್ವಾಗತ. ಅಂತಹಾ ಪ್ರಖ್ಯಾತರ, ವಿದ್ವಾಂಸರ, ಹಿರಿಯರ ಆದರದ ಬರಮಾಡಿಕೊಳ್ಳುವಿಕೆಗೆ ಶರಣಾದೆ. ಸರಳತೆ, ಮುಗ್ಧತೆಗೆ ಮನ ಮಾರುಹೋದೆ.

ನಾನು ಬರುವ ವಿಚಾರವನ್ನು ಅವರ ಕಿರಿಯ ಸುಪುತ್ರ ಶ್ರೀ ಬಲಿಪ ಪ್ರಸಾದರ ಮುಖಾಂತರ ಮೊದಲೇ ಅರಿತಿದ್ದುದರಿಂದ ನಿರೀಕ್ಷೆಯಲ್ಲೇ ಇದ್ದ ಹಾಗೆ ಮುಖಭಾವ ಹೇಳಿತು. ಉಭಯ ಕುಶಲೋಪರಿಯ ನಂತರ ಚಹಾ ತಿಂಡಿಯೂ ಆಯಿತು. ಪ್ರಥಮ ಭೇಟಿಯಾದರೂ ಬಹಳ ಬೇಗ ಅವರೊಡನೆ ಆತ್ಮೀಯರಾಗಲು ಸಾಧ್ಯವಾಯಿತು. ಅವರ ವ್ಯಕ್ತಿತ್ವದ ವಿಶೇಷತೆಯದು ಎಂದು ಅರಿತುಕೊಂಡೆ. ಅವರು ತಮ್ಮ “ಬಲಿಪ ನಾರಾಯಣ ಭಾಗವತ ಅಮೃತ ಭವನ”ಕ್ಕೆ ಕರೆದುಕೊಂಡು ಹೋದರು. ಆ ಹಾಲ್‍ನ ತುಂಬೆಲ್ಲಾ ಅವರ ಪ್ರಶಸ್ತಿಗಳು, ಸನ್ಮಾನಪತ್ರಗಳೇ ತುಂಬಿ ತುಳುಕುತ್ತಿದ್ದುವು. ಅಷ್ಟೊಂದು ಪ್ರಶಸ್ತಿಗಳು ಹಾಗೂ ಸನ್ಮಾನಪತ್ರಗಳು ಇದ್ದರೂ ಅದನ್ನು ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ, ಅಂದವಾಗಿ ಜೋಡಿಸಿಡಲಾಗಿತ್ತು. ಅವುಗಳನ್ನೆಲ್ಲಾ ನೋಡುತ್ತಾ ನೋಡುತ್ತಾ ನಾನು ಮೂಕವಿಸ್ಮಿತನಾಗಿ ಬಂದ ಕೆಲಸವನ್ನೇ ಮರೆತೆ. “ಇಲ್ಲಿ ಕುಳಿತುಕೊಂಡು ಆರಂಭಿಸೋಣವೆ?” ಎಂಬ ಅವರ ಮಾತು ನನ್ನನ್ನು ವಾಸ್ತವಲೋಕದತ್ತ ಎಳೆದು ತಂದಿತು. ಅವರಿಗೆ ವಿಧೇಯನಾಗಿ ಅಲ್ಲಿ ಕುಳಿತರೂ ಒಂದೊಂದೇ ಪ್ರಶ್ನೆಗಳನ್ನು ಅವರ ಮುಂದಿಟ್ಟೆ. ಅವರೂ ಅಷ್ಟೇ ಲೀಲಾಜಾಲವಾಗಿ ಉತ್ತರಿಸತೊಡಗಿದರು.

ಬಲಿಪ ನಾರಾಯಣ ಭಾಗವತರು ಫೋಟೋ: ಶ್ರೀ ಮಧುಸೂದನ ಅಲೆವೂರಾಯ

                               
ಪ್ರಶ್ನೆ: ಬಲಿಪ ಎನ್ನುವುದು ನಿಮ್ಮ ಮನೆತನದ ಹೆಸರೋ ? ಹಾಗಿದ್ದರೆ ಆ ಹೆಸರು ನಿಮ್ಮ ಮನೆತನಕ್ಕೆ ಹೇಗೆ ಅಂಟಿಕೊಂಡಿತು ?

ಉತ್ತರ: ‘ಬಲಿಪ’ ಎನ್ನುವುದು ನಮ್ಮ ಮನೆತನಕ್ಕೆ ಬಂದ ಬಿರುದು ಅಥವಾ ಹೆಸರು. ನಿರ್ದಿಷ್ಟವಾಗಿ ಯಾವ ಕಾಲದಲ್ಲಿ ಆ ಹೆಸರು ಬಂತು ಎಂಬುದು ನನಗೆ ಗೊತ್ತಿಲ್ಲ. ಆ ಕಾಲದಲ್ಲಿ ತೀರ್ವೆ(ತೆರಿಗೆ) ಪಾವತಿಸಲಿಕ್ಕೆ ಹೋಗುವ ದಾರಿಯಲ್ಲಿ ಹುಲಿಯೊಂದು (ಬಲಿಪ್ಪ)ಎದುರಾದಾಗ ಅದನ್ನು ಕೊಂದು ಸಾಹಸ ಮೆರೆದು ಆ ಹುಲಿಯನ್ನು ಮಡಿಕೇರಿಯ ಅರಸರಿಗೆ ತೋರಿಸಿದಾಗ ಅವರು ಮೆಚ್ಚಿಕೊಂಡು ಇನ್ನು ನೀವು ತೀರ್ವೆ(ತೆರಿಗೆ) ಕಟ್ಟುವುದು ಬೇಡ ಎಂದು ತೀರ್ವೆಯನ್ನು ಮನ್ನಾ ಮಾಡಿದರಂತೆ. ಅಲ್ಲಿಂದ ನಮ್ಮ ಮನೆತನಕ್ಕೆ ಆ ಹೆಸರು ಬಂತು.

ಪ್ರಶ್ನೆ: ನಿಮ್ಮ ಬಾಲ್ಯದಲ್ಲಿ ನೀವು ಯಕ್ಷಗಾನಾಸಕ್ತಿಯನ್ನು ಗಳಿಸಿಕೊಂಡ ಬಗೆ ಹೇಗೆ ?

ಉತ್ತರ: ನಮ್ಮ ವಂಶದ ಒಂದು ಕವಲಿನಲ್ಲಿ ಕೃಷ್ಣ ಭಟ್ಟರು ಅಂತ ಇದ್ದರು. ಕೃಷ್ಣ ಭಟ್ಟರೆಂದರೆ ನನ್ನ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರ ಅಜ್ಜ. ಅವರ ನಂತರ ಅವರ ಮಗನಾದ ಮಾಧವ ಭಟ್ಟರು ಯಕ್ಷಗಾನ ಎಂಬ ಕಲೆಯನ್ನು ನಮ್ಮ ಕುಟುಂಬದಲ್ಲಿ ಮುಂದುವರಿಸಿಕೊಂಡು ಹೋಗುವುದಕ್ಕೋಸ್ಕರ ತಮ್ಮ ಮಗನಾದ ಹಿರಿಯ ಬಲಿಪ ನಾರಾಯಣ ಭಾಗವತರಿಗೆ ಅಂದರೆ ನನ್ನ ಅಜ್ಜನಿಗೆ ಭಾಗವತಿಕೆಯನ್ನು ಕಲಿಸಿದರು. ಅಮೇಲೆ ಅಜ್ಜನಿಂದ ತಂದೆಯವರಿಗೆ, ತಂದೆಯವರಿಂದ ನನಗೆ, ನನ್ನಿಂದ ನನ್ನ ಮಕ್ಕಳಿಗೆ ಹೀಗೆ ಮುಂದುವರಿಯುತ್ತಾ ಹೋಯಿತು ಕಲೆಯ ಸಂಬಂಧ.

ಪ್ರಶ್ನೆ: ಹಿರಿಯ ಬಲಿಪ ನಾರಾಯಣ ಭಾಗವತರ ಬಗ್ಗೆ ಪರಿಚಯಾತ್ಮಕವಾಗಿ ಒಂದೆರಡು ವಿವರಗಳನ್ನು ನೀಡಬಹುದೆ ?

ಉತ್ತರ: ನನ್ನ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರು. ಅವರ ಹೆಸರೇ ನನಗೆ ಇಟ್ಟದ್ದು. ಹಿರಿಯ ಬಲಿಪರು ಮೊದಲಿಗೆ ಬಣ್ಣದ ಮಾಲಿಂಗರ ಅಜ್ಜ, ಪಡ್ರೆ ಮೇಳ ನಡೆಸಿಕೊಂಡು ಬರುತ್ತಿದ್ದ ಮಾಲಿಂಗ ಪಾಟಾಳಿಯವರಲ್ಲಿ ಕಲಿತರು. ಮಾಲಿಂಗ ಪಾಟಾಳಿಯವರು ಪಡ್ರೆ ಮೇಳದ ಯಜಮಾನರು ಮಾತ್ರವಲ್ಲದೆ ಕಲಾವಿದರು ಕೂಡಾ ಆಗಿದ್ದರು. ಚೆಂಡೆ ಮದ್ದಳೆ, ನಾಟ್ಯಗಳಲ್ಲದೆ ವೇಷಭೂಷಣ ತಯಾರಿಸುವ ಕಲೆ ಕೂಡಾ ಮಾಲಿಂಗ ಪಾಟಾಳಿಯವರಿಗೆ ಕರಗತವಾಗಿತ್ತು. ಅಮೇಲೆ ಸರ್ವ ವಿದ್ಯಾ ವಿಶಾರದರಾಗಿದ್ದ ಕೂಡ್ಲು ಸುಬ್ರಾಯ ಶ್ಯಾನುಭಾಗರಲ್ಲಿ ಕಲಿತರು. ಭಾಗವತಿಕೆಯಲ್ಲದೆ ಅಜ್ಜ ನಾರಾಯಣ ಭಾಗವತರು ನಾಟ್ಯ, ಚೆಂಡೆ, ಹರಿಕಥೆ ಎಲ್ಲವನ್ನೂ ಮಾಡುತ್ತಿದ್ದರಂತೆ. ಜೀವನ ನಿರ್ವಹಣೆ ತುಂಬಾ ಕಷ್ಟ ಆಗ. ಸಂಸಾರ ನಿರ್ವಹಣೆಗಾಗಿ ವಿವಿಧ ಬಗೆಯ ವೃತ್ತಿಗಳನ್ನು ಮಾಡಬೇಕಾಗಿತ್ತು. ಅದರಲ್ಲೂ ನಮ್ಮಜ್ಜ ತುಂಬಾ ಗರ್ವಿಷ್ಠರು. ಅನ್ನಾಹಾರ, ನಿದ್ರೆ ಎಲ್ಲವನ್ನೂ ಬಿಟ್ಟು ಸತತವಾಗಿ ಯಕ್ಷಗಾನಾಭ್ಯಾಸವನ್ನೇ ಸಾಧನೆಯಿಂದ ಮಾಡಿದವರು.

ಪ್ರಶ್ನೆ: ಅಜ್ಜನೇ ನಿಮಗೆ ಯಕ್ಷಗಾನದ ಮೂಲ ಪಾಠದ ಗುರುಗಳೇ ? ಅಥವಾ ಬೇರೆಯವರಿಂದಲೂ ನಿಮಗೆ ಪಾಠ ಆಗಿದೆಯೇ ?

ಉತ್ತರ: ನನಗೆ ಯಕ್ಷಗಾನದ ಬಾಲಪಾಠ ತಂದೆಯವರಾದ ಮಾಧವ ಭಟ್ಟರದ್ದು. ಭಾಗವತಿಕೆ ಅಥವಾ ಹಾಡುಗಾರಿಕೆಗೆ ಅಜ್ಜ ಮತ್ತು ತಂದೆಯವರಿಂದ ಪಾಠ ಆಯಿತು. ಯಕ್ಷಗಾನದ ರಂಗತಂತ್ರ,ರಂಗಮಾಹಿತಿಗಳನ್ನು ಕುದ್ರೆಕೋಡ್ಲು ರಾಮ ಭಟ್ಟರಿಂದ, ಅವರ ಒಡನಾಟದಿಂಡ ಕಲಿತೆ. ಅಮೇಲೆ ರಂಗಸ್ಥಳದ ಕ್ರಮಗಳು ಹಾಗೂ ಮಾಹಿತಿಗಳು ಮೊದಲಾದುವುಗಳ ಮಾಹಿತಿ ಅಗಲ್ಪಾಡಿ ಕುಂಞಿ ಕೃಷ್ಣ ಮಣಿಯಾಣಿಯವರಿಂದ ತಿಳಿಯಿತು. ರಂಗದ ನಡೆಗಳನ್ನು ಮತ್ತು ಕೆಲವು ಮಾಹಿತಿಗಳನ್ನು ಕುಂಬಳೆ ತಿಮ್ಮಪ್ಪು ಇವರಿಂದ ಕಲಿತೆ. ಇವರಿಗೆಲ್ಲಾ ಆರಂಭದ ನಡೆಯಿಂದ ಕೊನೆಯ ವರೆಗೂ ಎಲ್ಲಾ ಅಂದರೆ ಪ್ರತಿಯೊಂದು ಭಾಗಗಳೂ ಗೊತ್ತಿತ್ತು. ತಪ್ಪಿದ್ದಲ್ಲಿ ಮಾರನೆಯ ದಿನ ಹೇಳಿಕೊಡುತ್ತಿದ್ದರು. ಅಮೇಲೆ ಇನ್ನೂ ಹಲವು ಹಿರಿಯ ಕಲಾವಿದರ ಒಡನಾಟದಿಂದ ಕಲಿತಿದ್ದೇನೆ.

ಪ್ರಶ್ನೆ: ನೀವು ಭಾಗವತರಾದ ಹೊಸತರಲ್ಲಿ ರಂಗದಲ್ಲಿ ಮೂಲ ವ್ಯವಸ್ಥೆಗಳಾದ ವಿದ್ಯುಚ್ಛಕ್ತಿ, ಮೈಕ್‍ಗಳ ವ್ಯವಸ್ಥೆ ಇತ್ತೇ? ಅದಿಲ್ಲದೆಯೇ ನೀವು ಪದ್ಯ ಹೇಳಿದ್ದುಂಟೋ?

ಉತ್ತರ: ನಾನು ಮೇಳಕ್ಕೆ ಸೇರಿದ ಹೊಸತರಲ್ಲಿ ಮೈಕ್ ಇರಲಿಲ್ಲ. ಆದರೆ ಟೆಂಟ್ ಮೇಳಗಳಿಗೆ ಕರೆಂಟ್, ಮೈಕ್‍ನ ವ್ಯವಸ್ಥೆ ಆಗಿತ್ತು. ಏರು ಶೃತಿಯಲ್ಲಿ ಪದ್ಯ ಹೇಳುತ್ತಿದ್ದ ಕಾರಣ ಸಭೆಯ ಹಿಂದಿನ ವರೆಗೂ ಕೇಳುವುದಕ್ಕೇನೂ ಅಡ್ಡಿಯಿರಲಿಲ್ಲ. ಆಗ ವಿದ್ಯುಚ್ಛಕ್ತಿ ಇರಲಿಲ್ಲ. ಬದಲಿಗೆ ಪೆಟ್ರೋಮ್ಯಾಕ್ಸ್ ಇತ್ತು. ಅಗೆಲ್ಲಾ ಇಡೀ ಪ್ರಸಂಗದ ಪದ್ಯಗಳು ಬಾಯಿಪಾಠ ಬರಬೇಕಿತ್ತು. ಯಾಕೆಂದರೆ ವೇಷಗಳು ಅಂದರೆ ಪಾತ್ರಧಾರಿಗಳು
ಪೆಟ್ರೋಮ್ಯಾಕ್ಸ್ ಬೆಳಕಿಗೆ ಅಡ್ಡವಾಗಿ ನಿಂತಾಗ ಓದಲು ಕಾಣುತ್ತಿರಲಿಲ್ಲ. ಆದ ಕಾರಣ ಪದ್ಯ ಬಾಯಿಪಾಠ ಅನಿವಾರ್ಯವಾಗಿತ್ತು. ಬರುತ್ತಿತ್ತು ಕೂಡಾ. ರಾತ್ರಿ ಹೇಳಬೇಕಾದ ಪದ್ಯಗಳನ್ನು ಹಗಲು ಉರು ಹೊಡೆಯುತ್ತಿದ್ದೆ. ಈಗ ತುಂಬಾ ಪದ್ಯಗಳು ಮರೆತುಹೋಗಿದೆ.

ಪ್ರಶ್ನೆ: ದೊಂದಿ ಬೆಳಕಿನ ಆಟದ ಬಗ್ಗೆ ತಿಳಿಸುತ್ತೀರಾ ? ಪ್ರಸ್ತುತ ದೊಂದಿ ಬೆಳಕಿನ ಆಟದ ಸಂಪೂರ್ಣ ಮಾಹಿತಿಯಿರುವವರಲ್ಲಿ ನೀವು ಕೂಡಾ ಒಬ್ಬರು ಎಂದು ಹೇಳುತ್ತಾರೆ….

ಉತ್ತರ: ನಾನು ರಂಗಕ್ಕೆ ಬರುವಾಗ ದೊಂದಿ ಬೆಳಕಿನ ಆಟಗಳು ಮರೆಯಾಗಿತ್ತು. ದೊಂದಿ ಬೆಳಕು ಹೋಗಿ ಪೆಟ್ರೋಮ್ಯಾಕ್ಸ್ ಬಂದಿತ್ತು. ಆ ಕಾಲಕ್ಕೆ ಬೇರೆ ವ್ಯವಸ್ಥೆಗಳು ಆಗಿಲ್ಲದ ಕಾರಣ ದೊಂದಿ ಬೆಳಕನ್ನು ಉಪಯೋಗಿಸುತ್ತಿದ್ದರೇ ವಿನಃ ಅದು ಉತ್ತಮವಾದದ್ದು, ಶ್ರೇಷ್ಟವಾದದ್ದು ಅಂತ ಅಲ್ಲ. ಕಾಲಕ್ಕನುಗುಣವಾಗಿ ಬದಲಾಗುತ್ತಾ ಹಾಗೂ ಸುಧಾರಣೆಯಾಗುತ್ತಾ ಇರುತ್ತವೆ ವ್ಯವಸ್ಥೆಗಳು. ದೊಂದಿಬೆಳಕು ಹೋಗಿ ಪೆಟ್ರೋಮ್ಯಕ್ಸ್ ಬಂತು. ಅಮೇಲೆ ವಿದ್ಯುಚ್ಛಕ್ತಿ ಬಂತು. ಇನ್ನೂ ಮುಂದಕ್ಕೆ ಇದಕ್ಕಿಂತ ಹೆಚ್ಚಿನದು ಏನಾದರೂ ಬರಬಹುದು.

ಪ್ರಶ್ನೆ: ಹಿರಿಯ ಬಲಿಪರು ಮೈಕ್ ಇಲ್ಲದೆಯೇ ಪದ್ಯ ಹೇಳುತ್ತಿದ್ದರಂತೆ. ಅದು ಎಲ್ಲರಿಗೂ ಕೇಳುವಂತಾಗಲು, ಆಗಿನ ಪ್ರೇಕ್ಷಕರಲ್ಲಿ ಮೌನವಾಗಿ ಆಲಿಸುವ, ಕೇಳುವ ಒಂದು ಶಿಸ್ತು ಇತ್ತು ಅಲ್ಲವೇ?

ಉತ್ತರ: ನನ್ನ ಅಜ್ಜನ ಯಕ್ಷಗಾನ ಕಲಾಸೇವೆಯ ಕೊನೆಯ ಹಂತದಲ್ಲಿ ಧ್ವನಿವರ್ಧಕದ ವ್ಯವಸ್ಥೆ ಆಗಿತ್ತು. ಆದರೆ ಅವರು ಮೈಕ್ ಬೇಡ ಎಂದು ನಿರಾಕರಿಸುತ್ತಾ ಅಸಮಾಧಾನ ತೋರುತ್ತಿದ್ದರು. ದ್ವನಿವರ್ಧಾಕಗಳು ಆಗಾಗ ಸ್ವಲ್ಪ ಸ್ವಲ್ಪ ಗೊರಗೊರನೆ ಶಬ್ದ ಬರುವುದು ಇತ್ಯಾದಿಗಳಿಂದ ಅವರಿಗೆ ಅದು ಸಹನೀಯವಾಗಿರಲಿಲ್ಲ ಎಂದು ತೋರುತ್ತದೆ. ಆ ಕಾಲದಲ್ಲಿ ಪದ್ಯ, ವೇಷ, ಕಥಾನುಸಾರ ನಿಶ್ಶಬ್ದವಾಗಿ ಕೇಳುವ ಆಸಕ್ತಿ ಸಭಿಕರಲ್ಲಿತ್ತು. ಮತ್ತೆ, ಮಕ್ಕಳು ಗಲಾಟೆ ಮಾಡುವುದು ಇದ್ದದ್ದೆ. ಅವರನ್ನು ಎದುರು ಕುಳಿತ ಹಿರಿಯರಾದ ಕೆಲವರು ಕೋಲು ಹಿಡಿದು ಹೆದರಿಸಿ ನಿಯಂತ್ರಿಸುತ್ತಿದ್ದರು. ಉಳಿದವರಲ್ಲಿ ಮೌನವಾಗಿ ಕೇಳುವ ಆಸಕ್ತಿ ಹೆಚ್ಚಾಗಿತ್ತು.

ಪ್ರಶ್ನೆ: ಯಕ್ಷಗಾನದಲ್ಲಿ ಇರುವ ‘ಚೌ’ ತಾಳದ ಬಗ್ಗೆ ಹೇಳಬಹುದೇ ?

ಉತ್ತರ: ಯಕ್ಷಗಾನದಲ್ಲಿ ತಾಳಗಳು ಧ್ರುವ, ಆದಿ, ಚೌ, ರೂಪಕ, ಅಷ್ಟ, ಏಕ, ಝಂಪೆ, ತ್ರಿವುಡೆ, ಕೋರೆ ತಾಳ ಅಥವಾ ತಿತ್ತಿತ್ತೈ ಹಾಗೂ ಮಟ್ಟೆ ತಾಳ. ಅಮೇಲೆ ಕೆಲವು ಉಪತಾಳಗಳೂ ಬಂದುವು. ಅಲ್ಲದೆ ಅಷ್ಟ, ಏಕ, ಝಂಪೆ, ತ್ರಿವುಡೆ ತಾಳಗಳ ತ್ವರಿತ ರೂಪಗಳೂ ಇವೆ. ಒಂದು ತಾಳದಿಂದ ಇನ್ನೊಂದು ತಾಳಕ್ಕೆ ರಂಗದ ಅನುಕೂಲಕ್ಕೆ ತಕ್ಕಂತೆ ಹೋಗುವ ಕ್ರಮವಿದೆ. ಚೌ ತಾಳವೊಂದನ್ನು ಬಿಟ್ಟು ಈಗ ಎಲ್ಲಾ ತಾಳಗಳೂ ಈಗ ಇವೆ. ಧ್ರುವ ತಾಳ ಈಗಲೂ ಇದೆ. ಆಟದ ಕೊನೆಯ ಭಾಗದಲ್ಲಿ ಆರತಿ ಮಾಡುವಾಗಿನ ಪದ್ಯವನ್ನು ಆ ತಾಳದಲ್ಲಿಯೇ ಹಾಡುವುದು. ಆದರೆ ಅದಕ್ಕೆ ಬಾರಿಸುವುದು ಮಾತ್ರ ತ್ರಿವುಡೆ ತಾಳದಲ್ಲಿ. ಆಗೆಲ್ಲಾ ತಾಳಕ್ಕೆ ಮಾತ್ರ ಒಂದು ವೇಗವಿತ್ತು. ತಾಳಕ್ಕೆ ಒಂದನೇ ಕಾಲ, ಎರಡನೇ ಕಾಲ, ಮೂರನೇ ಕಾಲ, ನಾಲ್ಕನೇ ಕಾಲ ಹೀಗೆ ಇತ್ತೇ ಹೊರತು ಮಾತ್ರಾಗಣಗಳಿಗೆ, ಮಾತ್ರಾಕಾಲದ ವೇಗ ಇಲ್ಲ.

“ಚೌ ತಾಳವೆಂಬುದು ನಿರ್ಲಕ್ಷ್ಯದಿಂದಾಗಿ ಕ್ರಮೇಣ ರಂಗದಿಂದ ಮರೆಯಾಗಿ ಹೋಯ್ತು. ಅಗರಿ ಶ್ರೀನಿವಾಸ ಭಾಗವತರು ಇರುವಾಗ ಚೌ ತಾಳದಲ್ಲಿ ಪದ್ಯ ಹೇಳುತ್ತಾ ಇದ್ದರು. ಅಳಿಕೆ ರಾಮಯ್ಯ ರೈಗಳೇ ಮೊದಲಾದವರು ಚೌ ತಾಳದ ಹೆಜ್ಜೆಗಾರಿಕೆಯನ್ನು ಅರಿತಿದ್ದರು ಮಾತ್ರವಲ್ಲ ನೃತ್ಯ ಮಾಡುತ್ತಿದ್ದರು ಕೂಡಾ. ಆ ನಂತರ ಮರೆಯಾಗಿ ಹೋಯಿತು.”

“ಚೌ ತಾಳದ ಬಾಯಿತಾಳ .. “ ತತ್ತಾ ದಿಂದತ್ತಾಂ ದಿಂದತ್ತಾಂ ತತ್ತಾ ದಿಂದತ್ತಾಂ” ಪದ ತೆಗೆಯುವಾಗ ಎರಡನೇ ಪೆಟ್ಟಿಗೆ ಪದ ತೆಗೆಯಬೇಕು. ಇನ್ನೊಂದು ರೀತಿಯಲ್ಲಿ ಕೂಡಾ ಹೇಳುತ್ತಾರೆ. “ತೋಂ ದಿಂದತ್ತಾಂ ದಿಂದತ್ತಾ ದಿಂದತ್ತಾ ದಿಂದತ್ತಾಂ” ಅಥವಾ ಮತ್ತೊಂದು ರೀತಿಯಲ್ಲಿ “ತತ್ತಾ ದಿಂದತ್ತಾಂ ದಿಂದತ್ತಾ ದಿಂದತ್ತಾ ದಿಂದತ್ತಾಂ” ಎಂದು ಕೂಡಾ ಹೇಳುತ್ತಾರೆ.

ಪ್ರಶ್ನೆ: ನೀವು ಸುಮಾರು ಮೂರು ತಲೆಮಾರಿನ ಕಲಾವಿದರಿಗೆ ಭಾಗವತಿಕೆ ಮಾಡಿದವರು. ಹಿಂದಿನ ತಲೆಮಾರಿನ ಕಲಾವಿದರಲ್ಲಿ ನೀವು ಕಾಣುವ ವಿಶೇಷತೆಗಳೇನು ?

ಉತ್ತರ: ನಾನು ಹಳೆಯ ವೇಷಧಾರಿಗಳನ್ನೆಲ್ಲಾ ಕುಣಿಸಿದ್ದೇನೆ. ಅವರಿಗೆಲ್ಲಾ ವೇಷದ ಬಗ್ಗೆ ಒಂದು ಭಕ್ತಿ ಇತ್ತು. ಶ್ರದ್ಧಾಭಕ್ತಿಗಳು ಇದ್ದುವು. ವೇಷದಲ್ಲಿ ಸ್ವಲ್ಪ ಏನಾದರೂ ತಪ್ಪಿದರೆ ಮರೆಯಲಾಗದ ಬೇಸರವಾಗುತ್ತಿತ್ತು ಅವರಿಗೆ. ಲೆಕ್ಕಾಚಾರದ ಮಾತುಗಾರಿಕೆಯಾಗಿದ್ದರೂ ಕಲೆಯ ಬಗ್ಗೆ ಅಪಾರ ಗೌರವವಿತ್ತು. ಮಾಡಿದ ತಪ್ಪನ್ನು ಕೇಳಿ ತಿಳಿದುಕೊಂಡು ಮರುದಿನಕ್ಕೆ ತಿದ್ದಿಕೊಳ್ಳುತ್ತಿದ್ದರು. ಮುಮ್ಮೇಳದವರಿಗೆ ಮಾತ್ರವಲ್ಲ, ಹಿಮ್ಮೇಳದವರಿಗೂ ಅಷ್ಟೇ. ಸಹಾಯಕರಿಗೂ ಹಾಗೆಯೇ, ತೆರೆ ಹಿಡಿಯುವಲ್ಲಿ ಏನಾದರೂ ವ್ಯತ್ಯಾಸ ಬಂದರೆ ಅವರಿಗೆಲ್ಲಾ ಅತೀವ ಪಶ್ಚಾತ್ತಾಪವಾಗುತ್ತಿತ್ತು. ನನ್ನಿಂದ ಹೀಗಾಯಿತಲ್ಲಾ ಎಂದು ಅತಿಯಾಗಿ ಬೇಸರಿಸಿಕೊಳ್ಳುತ್ತಿದ್ದರು.

ಪ್ರಶ್ನೆ: ನಿಮ್ಮ ವೃತ್ತಿಜೀವನದ ಆರಂಭದಲ್ಲಿ ಇದ್ದ “ಪೂರ್ವರಂಗ”ದ ಅವಧಿಯ ಬಗ್ಗೆ ತಿಳಿಸುತ್ತೀರಾ? ಪೂರ್ವರಂಗದಲ್ಲಿ ಯಾವೆಲ್ಲಾ ವಿಭಾಗಗಳಿದ್ದುವು ?

ಉತ್ತರ: ನನ್ನ ಯಕ್ಷಗಾನದ ವೃತ್ತಿಜೀವನದಲ್ಲಿ ಹೇಳುವುದಾದರೆ ‘ಪೂರ್ವರಂಗ’ ಈಗ ಬಹಳ ಕಡಿಮೆಯಾಗಿದೆ. ಯಾಕೆ ಅಂತ ಹೇಳಿದರೆ ಆ ದಿನಗಳಲ್ಲಿ ಆಟ ಆಡಿಸುವವರು ಯಾರಾದರೂ ದಾನಿಗಳ ಸಹಾಯದಿಂದ ಆಟ ಆಡಿಸುತ್ತಿದ್ದರು. ಯಕ್ಷನ ಸಂಚಾರ ಮಧ್ಯರಾತ್ರಿ ಸುಮಾರು ಒಂದು ಘಂಟೆಗೆ ಅಂತ ಹಿಂದಿನವರ ನಂಬಿಕೆ. ಆದ್ದರಿಂದ ಪೀಠಿಕೆ ಬಡಿಯುವಾಗಲೇ 12.30 ಆಗುತ್ತಿತ್ತು. ಆದುದರಿಂದ ಹೆಚ್ಚಾಗಿ ನೋಡುವ ಪೂರ್ವರಂಗವೇ ಮಧ್ಯರಾತ್ರಿಯ ವರೆಗೆ ಆಗುವಾಗ ಅವರಿಗೆ ಬೇಸರವಾಗುತ್ತಿತ್ತು. ಆದುದರಿಂದ ಆಟ ಆಡಿಸುವವರ ಸಂಖ್ಯೆ ಕಡಿಮೆಯಾಗಬಹುದೆಂಬ ಭಯದಿಂದ ಪೂರ್ವರಂಗವನ್ನು ಕಡಿತಗೊಳಿಸುತ್ತಾ ಬಂದು, ನಾನು ಈ ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶಿಸುವಾಗ 10.30 ಘಂಟೆಗೆ ಪೀಠಿಕೆ ಆಗಲು ಸುರುವಾಯಿತು.
ಆಗ ಪ್ರಾರಂಭದ ಸಭಾಲಕ್ಷಣದ ಪದ್ಯಗಳೆಲ್ಲಾ ಇದ್ದುವು. ಅಮೇಲೆ ಶ್ಲೋಕಗಳನ್ನೆಲ್ಲಾ ಹೇಳಲಿಕ್ಕಿತ್ತು. ನಾನು ಕೂಡಾ ಹೇಳಿದವ. ಶ್ಲೋಕಗಳನ್ನು ಹೇಳಲು ಸುಮಾರು ಮುಕ್ಕಾಲರಿಂದ ಒಂದು ಘಂಟೆಯ ಅವಧಿ ಬೇಕಾಗುತ್ತಿತ್ತು. ಅಮೇಲೆ ನಿತ್ಯವೇಷ ಪ್ರವೇಶ, ದೇವರ ಪೂಜೆ, ಅದರ ನಂತರ ‘ಕಟ್ಟುಹಾಸ್ಯ’ ಅಂತ ಇತ್ತು. ಅದನ್ನು ಹಾಸ್ಯಗಾರರೇ ಮಾಡುವುದು. ಆಗ ವಿಟ್ಲ ಜೋಷಿಯವರು ಹೇಮರೆಡ್ಡಿ ಮಲ್ಲಮ್ಮ ಅಂತ ವೇಷ ಮಾಡುತ್ತಿದ್ದರು. ಇನ್ನು ಕೆಲವು ಹಾಸ್ಯಗಳಾದ ರಂಗಾರಂಗಿ, ಈರೋಡು ಸ್ವಾಮಿ, ಮಡಿವಾಳ ಮಡಿವಾಳ್ತಿ ಮೊದಲಾದ ಕಟ್ಟುಹಾಸ್ಯಗಳಿದ್ದುವು. ಅಮೇಲೆ ಮುಖ್ಯ ಸ್ತ್ರೀವೇಷ. ಅದು ಬಿಟ್ಟು ಮುಖ್ಯ ಸ್ತ್ರೀವೇಷ ನಿಜವಾಗಿ ಒಂದೇ ಆಗಬೇಕಾದ್ದು. ಈಗ ಎರಡು ಮಾಡ್ತಾರೆ. ಮೊದಲು ಒಂದೇ ಇತ್ತು. ಅಮೇಲೆ ಪೀಠಿಕೆ. ಪೀಠಿಕೆ ಸ್ತ್ರೀವೇಷಗಳು ನಾನು ಈ ರಂಗಕ್ಕೆ ಬರುವಾಗ ಇರಲಿಲ್ಲ. ಬರಿಯ ಪದ್ಯಗಳನ್ನು ಮಾತ್ರ ಹೇಳುತ್ತಿದ್ದರು. ಏಳೆಂಟು ಪದ್ಯಗಳನ್ನು ಮಾತ್ರ ಹೇಳುತ್ತಿದ್ದರು. ಅದರ ಮಧ್ಯದಲ್ಲಿ ‘ಅರ್ಧನಾರಿ’ ಅನ್ನುವ ವೇಷ ಇತ್ತು. ಅದು ಈಗ ಇಲ್ಲ. ಅಮೇಲೆ ‘ಷಣ್ಮುಖ ಸುಬ್ರಾಯ’ ಅಂತ ಇತ್ತು. ಅದು ಕೂಡಾ ಈಗ ಇಲ್ಲ. ಕೋಲಾಟ ಇತ್ತು. ಒಂದೆರಡು ಸಲ ನಾನು ಕೂಡ ಮಾಡಿಸಿದ್ದೇನೆ. ಕೆಲವು ವೇಷಗಳನ್ನು ಹೊತ್ತು ಕಳೆಯಲಿಕ್ಕಾಗಿ ಅಂದರೆ ಸಮಯದ ಹೊಂದಾಣಿಕೆಗಾಗಿ ಮಾಡುತ್ತಿದ್ದರು. ಕೆಲವರು ಮುಖ್ಯ ಪಾತ್ರಧಾರಿಗಳು ಮನೆಯಿಂದ ನಡೆದುಕೊಂಡೇ ಬರಬೇಕಾದ ಪರಿಸ್ಥಿತಿ ಬಂದಾಗ  ಅಂತಹಾ ಸಂದರ್ಭಗಳಲ್ಲಿ ತಡವಾಗುವುದರಿಂದ ಕೆಲವು ವೇಷಗಳನ್ನೆಲ್ಲಾ ಸಂದರ್ಭೋಚಿತವಾಗಿ ಕೂಡಾ ಮಾಡುತ್ತಿದ್ದರು.

ಪ್ರಶ್ನೆ: ಮುಂದಿನ ಪೀಳಿಗೆಗೆ ಪೂರ್ವರಂಗ ಮರೆತುಹೋಗದಂತೆ ಮಾಡುವುದು ಹೇಗೆ ?

ಉತ್ತರ: ಮುಂದಿನ ಪೀಳಿಗೆಗೆ ‘ಪೂರ್ವರಂಗ’ದ ವಿಭಾಗವನ್ನು ರಂಗದಲ್ಲಿ ಪುನಃ ಪ್ರದರ್ಶನ ಮಾಡುವುದು ಕಷ್ಟ. ಆದ ಕಾರಣ ಮೊದಲು ಮಾಡುತ್ತಿದ್ದ ಹಾಗೆ ಪೂರ್ವರಂಗವನ್ನೇ ಮೊದಲು ಮಕ್ಕಳಿಗೆ ಅಥವಾ ಇತರ ಅಭ್ಯಾಸಿಗಳಿಗೆ ಕಲಿಸುವುದು ಉತ್ತಮ. ಅ ರೀತಿ ಮಾಡಿ ಉಳಿಸಿಕೊಳ್ಳಲು ಪ್ರಯತ್ನಿಸಬಹುದು. ರಂಗದಲ್ಲಿ ಇನ್ನು ಕಷ್ಟ. ಕಾಲಮಿತಿಯ ಆಟವನ್ನು ಪ್ರದರ್ಶಿಸುವಾಗ ಒಂದೊಂದು ದಿನ ಪೂರ್ವರಂಗವನ್ನು ಮಾತ್ರವೇ ಪ್ರದರ್ಶಿಸಿ ಅದರ ಪರಿಚಯ ಜನರಿಗಾಗುವಂತೆ ಮಾಡಬಹುದು.

ಪ್ರಶ್ನೆ: ಈಗ ಯಕ್ಷಗಾನ ರಂಗದಲ್ಲಿ ಮಾತ್ರವಲ್ಲ, ಎಲ್ಲಾ ರಂಗಗಳಲ್ಲಿಯೂ ಹೊಸತನದ ಸೃಷ್ಟಿಯಾಗುತ್ತಿದೆ. ಆದರೆ ಯಕ್ಷಗಾನದಲ್ಲಿ ಸ್ವಲ್ಪ ಹೆಚ್ಚೇ ಅನ್ನುವಷ್ಟು ಆಗಿದೆ. ಈ ಪರಂಪರೆಯನ್ನು ಉಳಿಸಲು ಮುಂದಿನ ಪೀಳಿಗೆಗೆ ನೀವು ಕೊಡುವ ಸಲಹೆಗಳೇನು?

ಉತ್ತರ: ಯಕ್ಷಗಾನದಲ್ಲಿ ಈಗ ಹೊಸತನ ಕಾಣುವುದು ನಿಜ. ಮೊದಲಿನ ಕಾಲದಲ್ಲಿ ಒಂದು ಶಿಸ್ತು ಇತ್ತು. ತನ್ನದೂ ಒಂದು ಸ್ವಂತ ಸೃಷ್ಟಿ ಮಾಡಹೊರಟು ಅದರಲ್ಲಿ ಯಶಸ್ವಿಯಾದರೂ ಅದು ಮತ್ತೊಬ್ಬನಿಗೂ ಬರೋದಿಲ್ಲ. ಪರಂಪರೆಯನ್ನು ಪ್ರೇಕ್ಷಕ ಯವತ್ತೂ ತಿರಸ್ಕರಿಸಲಿಲ್ಲ. ಹೊಸತನವೆಂಬುದು ಒಮ್ಮೆಗೆ ಯಶಸ್ಸು ಕಂಡರೂ ಸ್ಥಿರವಾಗಿ ಉಳಿಯುವುದಿಲ್ಲ.

ಪ್ರಶ್ನೆ: ಪರಂಪರೆಯ ಮೂಲ ಕಲೆಗೆ ಕಸಿ ಕಟ್ಟುವ ಕೆಲಸ ಮಾಡುವುದನ್ನು ಕಂಡಾಗ ಅಪಾರವಾದ ನೋವು ನಿಮ್ಮನ್ನು ಬಾಧಿಸುತ್ತಿರಬಹುದಲ್ಲವೇ?  

ಉತ್ತರ: ಹೌದು. ಹಾಗೆ ಮಾಡುವುದು ಕಂಡಾಗ ಬೇಸರವಾಗುತ್ತದೆ. ಆದರೆ ನಾವು ಯಾರಲ್ಲಿ ಹೇಳುವುದು ? ಕೂಡಿದಷ್ಟು ನೋಡುವುದು, ಬರುವುದು ಅಷ್ಟೆ. ನಮ್ಮ ಬೇಸರ ನಮ್ಮಲ್ಲೇ ಇಟ್ಟುಕೊಳ್ಳುವುದು.

ಪ್ರಶ್ನೆ: ನಿಮ್ಮ ಹಿಂದಿನ ಭಾಗವತರಲ್ಲಿ ನೀವು ಯಾರನ್ನು ಇಷ್ಟಪಡುತ್ತೀರಿ?

ಉತ್ತರ: ಹಿಂದಿನವರಲ್ಲಿ ನನ್ನ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರು, ಪುತ್ತಿಗೆ ರಾಮಕೃಷ್ಣ ಜೋಯಿಸರು, ಅಗರಿ ಶ್ರೀನಿವಾಸ ಭಾಗವತರು.

ಪ್ರಶ್ನೆ: ಹಿಮ್ಮೇಳದಲ್ಲಿ ನಿಮ್ಮ ದೀರ್ಘಾವದಿಯ ಜೊತೆಗಾರರಾಗಿದ್ದವರು ಯಾರೆಲ್ಲಾ?

ಉತ್ತರ: ಕುದ್ರೆಕೋಡ್ಲು ರಾಮ ಭಟ್ಟರು, ನಿಡ್ಲೆ ನರಸಿಂಹ ಭಟ್ಟರು, ಕಾಸರಗೋಡು ವೆಂಕಟ್ರಮಣ, ಅಡೂರು ಶಿವ ಮದ್ದಳೆಗಾರರು, ರಾಮಕೃಷ್ಣ ಮದ್ದಳೆಗಾರರು ಹಾಗೂ ಇನ್ನೂ ಅನೇಕ ಕಲಾವಿದರು.
ಸಂದರ್ಶನ ಮುಗಿಸಿದಾಗ ಏನೋ ಒಂದು ಆತ್ಮತೃಪ್ತಿ, ಸಮಾಧಾನ. ಕೆಲವೊಂದು ಅನಿರೀಕ್ಷಿತವಾಗಿ ಕೇಳಿದ ಪ್ರಶ್ನೆಗಳಿಗೆ ಅವರು ನಯವಾಗಿಯೇ “ಅದೆಲ್ಲಾ ಯಾಕೆ… ಬೇಡ” ಎಂದು ಹೇಳುತ್ತಾ ತಮ್ಮ ದೂರದೃಷ್ಟಿತ್ವಕ್ಕೆ ಸಾಕ್ಷಿಯಾದರು. ನನಗೂ ಅದು ಸರಿಯೆಂದು ಕಂಡಿತು.


ಹಿರಿಯ ಬಲಿಪ ನಾರಾಯಣ  ಭಾಗವತರ ತಮ್ಮ ಶಂಕರ ಭಟ್ಟರ ಮಗ ಮಾಧವ ಭಟ್ಟ- ಸರಸ್ವತೀ ಅಮ್ಮ ದಂಪತಿಯ ಎಂಟು ಜನ ಮಕ್ಕಳಲ್ಲಿ ಮೊದಲನೆಯವರಾಗಿ 19-03-1938ರಲ್ಲಿ ಬಲಿಪ ನಾರಾಯಣ ಭಾಗವತರ ಜನನ. ದೊಡ್ಡಜ್ಜನಿಗೆ ಮಕ್ಕಳಿಲ್ಲದ ಕಾರಣ ಅವರ ಹೆಸರನ್ನೇ ಇವರಿಗೆ ನಾಮಕರಣ ಮಾಡಲಾಯಿತು. ಪೆರ್ಲ ಸತ್ಯನಾರಾಯಣ ಶಾಲೆಯಲ್ಲಿ ಶಿಕ್ಷಣವನ್ನು ಪಡೆದ ಬಲಿಪ ನಾರಾಯಣ ಭಾಗವತರು ಕಲಿತದ್ದು 7ನೇ ತರಗತಿಯ ವರೆಗಾದರೂ ಅವರ ಜೀವನಾನುಭವ ಅಪಾರವಾದದ್ದು. ಲೋಕಾನುಭವದ ಜೊತೆಗೆ ಮುಗ್ಧತೆಯೂ ಮೇಳೈಸಿ ಅವರೊಬ್ಬ ಆಕರ್ಷಕ ಗೌರವಾನ್ವಿತ ವಕ್ತಿಯಂತೆ ಕಾಣಿಸುತ್ತಾರೆ.

ಬಲಿಪ ನಾರಾಯಣ ಭಾಗವತರಿಗೆ ಸಿಕ್ಕಿದ ಸನ್ಮಾನ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅಂದರೆ ಅದು ಅವರಿಗೇ ಲೆಕ್ಕಕ್ಕೆ ಸಿಗದಷ್ಟು…! ಯಾಕೆಂದರೆ ಅದನ್ನು ಜೋಪಾನವಾಗಿ ಇಟ್ಟುಕೊಳ್ಳಲು ಸೂಕ್ತ ಜಾಗದ ಕೊರತೆಯಿಂದ ಎಷ್ಟೋ ಸನ್ಮಾನಪತ್ರಗಳು ಗೆದ್ದಲು ತಿಂದು ನಾಶವಾಗಿವೆ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಆದರೆ ಉಳಿದ ಇಷ್ಟೇ ಅವರ ಅನನ್ಯ ಕಲಾಜೀವನದ ಸಾಕ್ಷಿಯಾಗಿ ನಿಂತಿರುವಾಗ ಅಳಿದುದನ್ನೂ ಸೇರಿಸಿದರೆ ಎಷ್ಟಾಗಬಹುದು? ಊಹಿಸಿ. ಅದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಬಹುದು. ಅದ್ಭುತ, ಅಮೋಘ ಎಂಬ ಪದಗಳೆಲ್ಲಾ ಯಕ್ಷಲೋಕದ ಸಾಧನೆಯ ಮೇರುಶಿಖರದ ಈ ವ್ಯಕ್ತಿತ್ವಕ್ಕೆ ಸಾಕ್ಷೀಭೂತವಾಗಿ ಅನ್ವರ್ಥನಾಮವಾಗಿ ನಿಲ್ಲುವುದು.


ಬಲಿಪರಿಗೆ ಸಿಕ್ಕ ಪ್ರಶಸ್ತಿಗಳು ಮತ್ತು ಸನ್ಮಾನಗಳು: ಸುಮಾರು ಇನ್ನೂರಕ್ಕೂ ಹೆಚ್ಚು(ನಾಶವಾದದ್ದು ಸೇರಿಸಿದರೆ ಇನ್ನೂ ಹೆಚ್ಚಾಗಬಹುದು)
ಬಲಿಪರು ಬರೆದ ಪ್ರಸಂಗಗಳು: ನಾಗವಿಜಯ(ನಾಗ ಸಿರಿಕನ್ನೆ), ನಟಚರಿತ್ರೆ ಅಥವಾ ಆಟದೊಳಗಣ ಆಟ, ಭಸ್ಮಾಸುರ ಮೋಹಿನಿ, ಗಾಯತ್ರಿ ಮಹಾತ್ಮೆ, ಶಿವಪ್ರಭಾ ಪರಿಣಯ, ಗಜೇಂದ್ರ ಮೋಕ್ಷ, ಅಂಗತಾಪಹರ (ಗರುದೋದ್ಭವ), ಕಂತುಕಾವತಿ ಕಲ್ಯಾಣ, ನವಗ್ರಹ ಮಹಾತ್ಮೆ, ದೇವಾಂಗ ಮದನಿಕೆ(ಕಾಳಿಂದಿ ವಿವಾಹ), ಮತ್ಸ್ಯಾವತಾರ, ಯಶೋಮತಿ ಏಕಾವಳಿ, ಶಕಟಾಸುರಾದಿಗಳ ವಧೆ, ಅಜಾಮಿಳ ಚರಿತ್ರೆ, ಶ್ರೀಕೃಷ್ಣ ಕಾರುಣ್ಯ, ಮೂರೂವರೆ ರತ್ನ, ಮಹಾದಾನಿ ಶಿಬಿ ಚಕ್ರವರ್ತಿ, ಕಾಲನೇಮಿ ಕಾಳಗ, ರಂತಿ ದೇವೋಪಖ್ಯಾನ, ದಂಭೋದ್ಭವ, ಗುರುದಕ್ಷಿಣೆ, ಶ್ರೀಕೃಷ್ಣ ಗಾರುಡಿ, ಶ್ರವಣಕುಮಾರ ಚರಿತ್ರೆ, ಐದು ದಿನದ ಶ್ರೀದೇವಿ ಮಹಾತ್ಮೆ ಮತ್ತು ಶ್ರೀಕೃಷ್ಣ ತುಲಾಭಾರ
ಪ್ರಕಟವಾಗದಿರುವ ಕೃತಿಗಳು: ಚಂದ್ರಕಲಾ ಪರಿಣಯ, ಧ್ರುವ ಚರಿತ್ರೆ, ಅಷ್ಮಾಂಗನೆಯರ ವಿವಾಹ, ಹಿರಣ್ಯಮಣಿ, ಪ್ರತಾಪನ ಪ್ರತಾಪ, ಗರುಡ ಗರ್ವಭಂಗ, ಚಿತ್ರವಿಚಿತ್ರ ಕಾಳಗ, ದಶರಥೋದ್ಭವ, ಚಂದ್ರಸೇನ ಚರಿತೆ, ಸೀಮಂತಮಣಿ ಸೀತಾರಮಣಿ, ತುಳಸಿ ಮಾಲತಿ ಧಾತ್ರಿ, ಹೀಗೆ ಹತ್ತು ಹಲವಾರು.

ಕುಟುಂಬ ವಿವರ:
ಹೆಸರು: ಬಲಿಪ ನಾರಾಯಣ ಭಾಗವತರು
ಪತ್ನಿ: ದಿ| ಜಯಲಕ್ಷ್ಮಿ
ಜನನ: 19.03.1938
ಜನನ ಸ್ಥಳ: ಕಾಸರಗೋಡು ಜಿಲ್ಲೆಯ ಎಣ್ಮಕಜೆ ಗ್ರಾಮದ ಪಡ್ರೆ ಎಂಬಲ್ಲಿ
ತಂದೆ ತಾಯಿ: ಶ್ರೀ ಬಲಿಪ ಮಾಧವ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ
ಯಕ್ಷಗಾನ ಗುರುಗಳು: ಅಜ್ಜ ಹಿರಿಯ ಬಲಿಪ ನಾರಾಯಣ ಭಟ್ಟ ಮತ್ತು ತಂದೆ ಬಲಿಪ ಮಾಧವ ಭಟ್ಟ
ರಂಗಮಾಹಿತಿ: ಆ ಕಾಲದ ಪ್ರಸಿಧ್ಧ ಮದ್ದಳೆಗಾರರಾದ ದಿ| ಕುದ್ರೆಕೋಡ್ಲು ರಾಮ ಭಟ್ಟ, ವೇಷಧಾರಿಗಳಾದ ದಿ| ಕುಂಬಳೆ ತಿಮ್ಮಪ್ಪ ಮತ್ತು ದಿ| ಅಗಲ್ಪಾಡಿ ಕುಂಞಿ ಕೃಷ್ಣ ಮಣಿಯಾಣಿ.
ಅನುಭವ: 50 ವರ್ಷಕ್ಕೂ ಮೇಲ್ಪಟ್ಟು (ಕೂಡ್ಲು, ಕುಂಡಾವು, ರೆಂಜಾಳ, ಮೂಲ್ಕಿ, ಭಗವತಿ ಮೇಳಗಳಲ್ಲಿ ಅಲ್ಲದೆ ಕಟೀಲು ಮೇಳವೊಂದರಲ್ಲೇ 25 ವರ್ಷಕ್ಕೂ ಮೇಲ್ಪಟ್ಟು ತಿರುಗಾಟ ನಡೆಸಿದ್ದಾರೆ.
ಮಕ್ಕಳು: ನಾಲ್ಕು ಜನ ಗಂಡುಮಕ್ಕಳು ( ಬಲಿಪ ಮಾಧವ ಭಟ್ಟ, ಹವ್ಯಾಸೀ ಭಾಗವತರಾದ ಬಲಿಪ ಶಿವಶಂಕರ ಭಟ್ಟ, ಬಲಿಪ ಶಶಿಧರ ಭಟ್ಟ, ಹಾಗೂ ಪ್ರಖ್ಯಾತ ಭಾಗವತರಾಗಿ ಪ್ರಸ್ತುತ ಕಟೀಲು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿರುವ ಬಲಿಪ ಪ್ರಸಾದ ಭಟ್ಟ)

ಲೇಖನ: ಮನಮೋಹನ್. ವಿ. ಎಸ್.

ಮದ್ದಲೆಯ ನಾದ ಶಂಕರ

ರಂಗಸ್ಥಳಕ್ಕೆ ಪ್ರಮುಖ ಸ್ತ್ರೀ ವೇಷದ ಆಗಮನ ಆಗಷ್ಟೇ ಆಗಿದೆ. ಸುಲಲಿತವಾಗಿ ಹಾವಭಾವಕ್ಕೆ ತಕ್ಕಂತೆ ವೇಷಧಾರಿ ನರ್ತಿಸುತ್ತಿದ್ದಾರೆ. ಸುಂದರ ವಾದ ಪದ್ಯಕ್ಕೆ ತಕ್ಕುದಾದ ನರ್ತನ. ಕುಳಿತ ಜನಸ್ತೋಮ ಅದರೊಳಗೇ ತಲ್ಲೀನವಾಗಿ ಅದರ ಸವಿ ಆಸ್ವಾದಿಸುತ್ತಿದ್ದಾರೆ. ಭಾಗವತರ ಗಾಯನ. ವೇಷಧಾರಿಯ ನೃತ್ಯ. ಮತ್ತು ಅದಕ್ಕಿಂತ ಹೆಚ್ಚಾಗಿ ತಾಳಗಳ ಬೋಲ್‍ಗಳು ಸ್ಪಷ್ಟವಾಗಿ ಮತ್ತು ಅತ್ಯಂತ ಮಧುರವಾಗಿ ಮೂಡಿ ಬರುತ್ತಿರುವ ಮದ್ದಲೆಯ ನಾದವನ್ನು ಜನ ಕಿವಿದುಂಬಿಕೊಂಡು ವಾಹ್ ವಾಹ್ ಎನ್ನುತ್ತ ತಮ್ಮ ಹೃತ್ಕರ್ಣಗಳನ್ನೂ ತೆರೆದುಕೊಳ್ಳುತ್ತ ಕರತಾಡನ ಮಾಡುತ್ತಿದ್ದಾರೆ.


ಅದೆಲ್ಲದರ ಪರಿವೆಗೆ ಹೋಗದೆ ತನ್ನಷ್ಟಕ್ಕೆ ತಾನು ಮದ್ದಲೆಯ ಝೇಂಕಾರದಲಿ, ವಾದನದ ನಿರಂತರತೆ ಮತ್ತು ನೃತ್ಯದ ಹೆಜ್ಜೆ, ಶೈಲಿ, ನರ್ತನಕ್ಕೆ ಬೇಕಾಗುವ ಗತ್ತುಗಳನ್ನು ಗಮನಿಸುತ್ತ ತಲ್ಲೀನತೆಯಲಿ ಆ ಹಿರಿಯರು ಬೆರೆತಿದ್ದಾರೆ. ಅವರ ಆ ಶಿಸ್ತು ಯಾರಿಗಾದರೂ ಒಂದು ಬಗೆಯ ಉತ್ಸಾಹ ಮೂಡಿಸುವಂತಿದೆ. ಅವರೇ ಶಿಸ್ತು ಮುಡಿಯ `ನಾದ ಶಂಕರ’ ಶಂಕರ ಭಾಗವತರು. ಭಾಗವತರೆಂದರೆ ಹಾಡುವವರಲ್ಲ ಇವರದು ಮದ್ದಲೆಯ ಜೊತೆಗಿನ ಯಾನ…


ಶಂಕರ ಭಾಗವತರ ಹೆಸರು ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿತ. ತಮ್ಮ ಅದ್ಭುತ ಮದ್ದಲೆ ವಾದನದ ಮೂಲಕವೇ ತಮ್ಮನ್ನು ತಾವು ಗುರುತಿಸಿ ಕೊಂಡವರು. ಯಲ್ಲಾಪುರ ತಾಲೂಕಿನ ಶಿಸ್ತುಮುಡಿ ಗ್ರಾಮದಲ್ಲಿ ರಾಮಚಂದ್ರ ಭಾಗವತ ಹಾಗೂ ಕಮಲಾ ಭಾಗವತರ ಹಿರಿಯ ಮಗನಾಗಿ 1955ರಲ್ಲಿ ಜನಿಸಿದವರು ಶಂಕರ ಭಾಗವತರು. 7ನೇ ತರಗತಿಯ ವರೆಗೆ ಪ್ರಾಥಮಿಕ ಶಿಕ್ಷಣ ಪೂರೈಸುತ್ತಿರುವಂತೆಯೇ ಯಕ್ಷಗಾನದತ್ತ ಆಕರ್ಷಿತರಾದರು. ದುರ್ಗಪ್ಪ ಗುಡಿಗಾರ ಹಾಗೂ ತಿಮ್ಮಪ್ಪ ನಾಯ್ಕರಲ್ಲಿ ಉಡುಪಿಯ ಹಂಗಾರಕಟ್ಟೆ ಯಕ್ಷಗಾನ ಶಾಲೆಯಲ್ಲಿ ಮದ್ದಲೆ ಅಭ್ಯಾಸ ಮಾಡಿದರು. ಸಾಲಿಗ್ರಾಮ, ಅಮೃತೇಶ್ವರಿ ಮೇಳಗಳಲ್ಲಿ ಹೆಸರಾಂತ ಭಾಗವತರಾದ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರಿಗೆ, ಕಾಳಿಂಗ ನಾವುಡರಿಗೆ ಬಹಳಷ್ಟು ವರ್ಷ ಮದ್ದಲೆ ವಾದನದ ಸಾಥ್ ನೀಡಿದ ಅಪಾರ ಅನುಭವ ಉಳ್ಳವರು.


ಮರವಂತೆ ನರಸಿಂಹ ದಾಸರು, ಕಡತೋಕಾ ಮಂಜುನಾಥ ಭಾಗವತರು, ನೆಬ್ಬೂರು ನಾರಾಯಣ ಭಾಗವತರು, ಸುಬ್ರಹ್ಮಣ್ಯ ಧಾರೇಶ್ವರ ಭಾಗವತರು, ವಿದ್ವಾನ್ ಗಣಪತಿ ಭಟ್ಟರು, ಕೊಳಗಿ ಕೇಶವ ಹೆಗಡೆ ಭಾಗವತರು, ಅಲ್ಲದೇ ಇಂದು ಪ್ರಚಲಿತರಾಗಿರುವ ಬಹುತೇಕ ಎಲ್ಲಾ ಭಾಗವತರೊಂದಿಗೆ ತಮ್ಮ ವಾದನ ಸಹಕಾರವನ್ನು ನೀಡುತ್ತಿರುವ ಕಲಾವಿದರಿವರು. 40ಕ್ಕೂ ಮಿಕ್ಕಿದ ವರ್ಷಗಳ ಅನುಭವ ಈ ಯಕ್ಷ ರಂಗದಲ್ಲಿ ಇದೆ. ಜಿ.ಆರ್. ಹೆಗಡೆಯವರಲ್ಲಿ ತಬಲಾ ವಾದನವನ್ನೂ ಅಭ್ಯಾಸ ಮಾಡಿ ಅದರಲ್ಲಿಯೂ ಅನುಭವ ಗಳಿಸಿದ್ದಾರೆ.


ಯಕ್ಷಗಾನ ರಂಗದ ಹೆಸರಾಂತ ಕಲಾವಿದರಾದ ಕೆರೆಮನೆ ಶಿವರಾಮ ಹೆಗಡೆ, ಮೂರೂರು ದೇವರು ಹೆಗಡೆ, ಗುರು ವೀರಭದ್ರ ನಾಯಕ, ಪಿ. ವಿ. ಹಾಸ್ಯಗಾರ, ಶಂಭು ಹೆಗಡೆ ಕೆರೆಮನೆ, ಅನಂತ ಹೆಗಡೆ ಕೊಳಗಿ, ವೆಂಕಟೇಶ ರಾವ್ ಜಲವಳ್ಳಿ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಶ್ರೀಪಾದ ಹೆಗಡೆ ಹಡಿನಬಾಳ, ರಾಮಚಂದ್ರ ಹೆಗಡೆ ಕೊಂಡದಕುಳಿ, ಕೃಷ್ಣ ಯಾಜಿ ಬಳ್ಕೂರು, ಒಬ್ಬರೆ ಇಬ್ಬರೆ ಇಂದು ಯಕ್ಷಗಾನ ರಂಗದಲ್ಲಿ ಮಿಂಚು ತ್ತಿರುವ ಹಿರಿ ಕಿರಿಯ ಕಲಾವಿದರೆಲ್ಲರಿಗೆ ಮದ್ದಲೆ ನುಡಿಸಿದ್ದಾರೆ, ಕುಣಿಸಿದ್ದಾರೆ ಕುಣಿಸುತ್ತಿದ್ದಾರೆ.


ಇದೀಗ ವೃತ್ತಿ ಮೇಳದಿಂದ ನಿವೃತ್ತಿ ಪಡೆದಿದ್ದರೂ ಯಕ್ಷಗಾನದಲ್ಲಿ ಮದ್ದಲೆಯ ವಾದನ ನಿರಂತರವಾಗಿ ಸಾಗಿದೆ. ಶಿರಸಿಯಲ್ಲಿ ‘ನಾದ ಶಂಕರ’ ಎಂಬ ಸಂಸ್ಥೆಯನ್ನು ಸ್ಥಾಪಿಸಿರುವ ಇವರು ಅದರ ಮೂಲಕ ಮದ್ದಲೆ ಹಾಗೂ ಚಂಡೆವಾದನ ಕಲಿಕಾ ವರ್ಗ ನಡೆಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ. ನಾಡಿನ ಅನೇಕ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ. ಹಲವು ಬಾರಿ ವಿದೇಶ ಪ್ರವಾಸ ಮಾಡಿ ಅಲ್ಲಿಯೂ ತಮ್ಮ ಮದ್ದಲೆಯ ಸದ್ದನ್ನು ಮೊಳಗಿಸಿ ಬಂದಿದ್ದಾರೆ. ಸಂಗೀತ ಜೊತೆ ಮದ್ದಲೆಯ ನಾದವನ್ನೂ ಹೊರಡಿಸಿದ್ದಾರೆ. ಕೊಳಲು, ತಬಲಾ, ಮದ್ದಲೆ, ಭಾಗವತಿಕೆ, ಸಂಗೀತದ ಹಾಡುಗಳ ಒಳಗೊಂದ ಯಕ್ಷಗಾನ ಗಾಯನ ವಾದನ ವೈಭವ ನೂರಕ್ಕೂ ಅಧಿಕ ಕಾರ್ಯಕ್ರಮ ನಡೆದಿದೆ. ಈ ಮೂಲಕ ಹಿಂದುಸ್ತಾನಿ ಜೊತೆಗೂ ರಸಪಾಕ ಮಾಡಿದ್ದಾರೆ.


ಇವರ ಮದ್ದಲೆಯ ವಾದನದ ಯಕ್ಷಗಾನಗಳ ಸಾವಿರಕ್ಕೂ ಹೆಚ್ಚು ಸಿ.ಡಿ.ಗಳು ಪ್ರಕಟ ಗೊಂಡಿವೆ. ಸಿಂಗಾಪುರದಲ್ಲಿ ಸಿಂಗರ ಕಲಾರತ್ನ, ಹೈದರಾಬಾದಿನಲ್ಲಿ ಯಕ್ಷ ಚೂಡಾಮಣಿ, ಉಡುಪಿ ಯಕ್ಷಕಲಾ ರಂಗದ ಪ್ರಶಸ್ತಿ, ಶಿರಸಿಯ ಮದ್ದಲೆಯ ಮದನ ಸೇರಿದಂತೆ ನೂರಾರು ಬಿರುದು ನೀಡಿ ಸನ್ಮಾನಿಸಲಾಗಿದೆ.


ರಾಜ್ಯ, ಹೊರ ರಾಜ್ಯಗಳಲ್ಲದೇ ಅಮೇರಿಕಾ, ಸಿಂಗಾಪುರ, ದುಬೈ ಸೇರಿದಂತೆ ಅನೇಕ ಹೊರ ದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ಪತ್ನಿ ವಿನೋದಾ, ಮಗ ದರ್ಶನ ಹಾಗೂ ಮಗಳು ಪೂಜಾ ಇವರೊಂದಿಗಿನ ಸುಖಮಯ ಸಂಸಾರ ಇವರದು.
ಇವರು ಯಕ್ಷಗಾನದ ಹಿಮ್ಮೇಳದಲ್ಲಿ ಕುಳಿತು ಮದ್ದಲೆ ನುಡಿಸಿದರೆ ಆ ನಾದದ ಸೊಗಸೇ ಬೇರೆ.


ಲೇಖಕಿ: ಗಾಯತ್ರೀ ರಾಘವೇಂದ್ರ, ಶಿರಸಿ
ಹುಲೇಮಳಗಿ ಕಟ್ಟಡ, ಚೌಕಿಮಠ, ಶಿರಸಿ ಉ.ಕ.

ಯಕ್ಷಗಾನ ಪರಂಪರೆಯ ಪ್ರತಿನಿಧಿ ಸಂಪಾಜೆ ಶೀನಪ್ಪ ರೈ ನಿಧನ

ಯಕ್ಷಗಾನ ಪರಂಪರೆಯ ಪ್ರತಿನಿಧಿ ಎಂದೇ ನೆಗಳ್ತೆಯನ್ನು ಪಡೆದ ಖ್ಯಾತ ಯಕ್ಷಗಾನ ವೇಷಧಾರಿ ಸಂಪಾಜೆ ಶೀನಪ್ಪ ರೈ ನಿಧನ ಹೊಂದಿದ್ದಾರೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಕೋರುತ್ತಾ ‘ಯಕ್ಷದೀಪ ಪತ್ರಿಕೆಯಲ್ಲಿ 2018ರಲ್ಲಿ ಪ್ರಕಟವಾದ ಲೇಖನವನ್ನು ಯಥಾವತ್ತಾಗಿ ಕೆಳಗೆ ಕೊಡುತ್ತಿದ್ದೇವೆ. 

ರಾಜ್ಯ ಪ್ರಶಸ್ತಿ ವಿಜೇತ ಸಂಪಾಜೆ ಶೀನಪ್ಪ ರೈಗಳು
                                2014, ನವಂಬರ್ ತಿಂಗಳ 1ನೇ ತಾರೀಕು ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ವತಿಯಿಂದ ಕಲ್ಲುಗುಂಡಿಯಲ್ಲಿ ‘ಸಂಪಾಜೆ ಯಕ್ಷೋತ್ಸವ’ ನಡೆಯುತ್ತಿತ್ತು. ಸಂಪಾಜೆಯವರೇ ಆದ ಶ್ರೀ ಶೀನಪ್ಪ ರೈಗಳು ಅಂದು ಬೆಂಗಳೂರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಕಲ್ಲುಗುಂಡಿಗೆ ಪ್ರದರ್ಶನದಲ್ಲಿ ಪಾಲುಗೊಳ್ಳಲೇ ಬೇಕೆಂಬ ನಿರ್ಧಾರದಿಂದ ಬಂದಿದ್ದರು. ಕಾರ್ಯಕ್ರಮದ ಪ್ರಾಯೋಜಕರು ಎಡನೀರು ಶ್ರೀಗಳ ಉಪಸ್ಥಿತಿಯಲ್ಲಿ, ಕಲಾಭಿಮಾನಿಗಳೆಲ್ಲರ ಸಮ್ಮುಖದಲ್ಲಿ ಶೀನಪ್ಪ ರೈಗಳನ್ನು ಗೌರವಿಸಿದರು. ಪ್ರೇಕ್ಷಕರು ಕರತಾಡನದಿಂದ ರೈಗಳನ್ನು ಅಭಿನಂದಿಸಿದರು. ಆನಂದಭಾಷ್ಪವನ್ನು ಸುರಿಸುತ್ತಾ, ಧನ್ಯತಾಭಾವದಿಂದ ಪ್ರೇಕ್ಷಕರಿಗೆ ತಲೆಬಾಗಿ ಶೀನಪ್ಪ ರೈಗಳು ನಮಸ್ಕರಿಸಿದ ದೃಶ್ಯವನ್ನು ನಾವೆಲ್ಲರೂ ನೋಡಿ ಆನಂದಿಸಿದವರು. 62ನೇ ವರುಷದ ತಿರುಗಾಟದ ಸಿದ್ಧತೆಯಲ್ಲಿರುವ ಈ ದಣಿವರಿಯದ ಕಲಾವಿದ ಅಭಿನಂದನೀಯರು. ರಂಗದಲ್ಲಿ ಈಗಲೂ ತರುಣನಂತೆ ಮಿಂಚುತ್ತಿದ್ದಾರೆ. ತಾನು ಸಾಗಿ  ಬಂದ ದಾರಿಯನ್ನೂ, ಸಹಕರಿಸಿ ಪ್ರೋತ್ಸಾಹಿಸಿದ ಮಹನೀಯರನ್ನೂ, ತನ್ನ ಏಳ್ಗೆಗೆ ಕಾರಣರಾದವರನ್ನೂ ಮರೆಯದೆ, ಕೃತಜ್ಞತಾಭಾವದಿಂದ ಸ್ಮರಿಸುವ ವಿನಯವಂತ ಕಲಾವಿದ ಇವರು.
1943ನೇ ಇಸವಿ, ಜೂನ್ 7ರಂದು (07-06-1943) ಸುಳ್ಯ ತಾಲೂಕು ಸಂಪಾಜೆ ಕೀಲಾರು ಸಮೀಪದ ಮಾದೇಪಾಲು ಎಂಬಲ್ಲಿ ರಾಮಣ್ಣ ರೈ ಕಾವೇರಿ ರೈ ದಂಪತಿಗಳಿಗೆ ಮಗನಾಗಿ ಶೀನಪ್ಪ ರೈಗಳು ಜನಿಸಿದರು. ಕಲ್ಲುಗುಂಡಿ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಓದಿದವರು. ಇವರ ತಂದೆಯವರು ಕಲಾವಿದರಾಗಿದ್ದರು. ಮಗನು ಯಕ್ಷಗಾನ ಕಲಾವಿದನಾಗಬೇಕೆಂದು ಬಯಸಿದರು. ನಾನು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಲು ಅವರೇ ಕಾರಣರು. ಇದಕ್ಕೆ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಿದವರು ಊರಿನ ಯಜಮಾನರಾದ ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ಎಂದು ಶೀನಪ್ಪ ರೈಗಳು ಸಂತೋಷದಿಂದ ಹೇಳುತ್ತಾರೆ. ರೈಗಳಿಗೆ ಅರ್ಥಗಾರಿಕೆಗೆ ಅವರ ತಂದೆಯವರೇ ಗುರುಗಳು. ನಾಟ್ಯಾಭ್ಯಾಸವನ್ನು ಮಾಡಿದ್ದು       ಶ್ರೀ ಕುಂಬಳೆ ಕಣ್ಣನ್ ಅವರಿಂದ (ಕಾವು ಕಣ್ಣನ್). ನಾಟ್ಯಾಚಾರ್ಯ ಶ್ರೀ ಕೇಶವ ಮಾಸ್ತರರಿಂದ ಭರತನಾಟ್ಯದ ಹೆಜ್ಜೆಗಳನ್ನು ಶೀನಪ್ಪ ರೈಗಳು ಅಭ್ಯಸಿಸಿದ್ದರು. ಬಣ್ಣಗಾರಿಕೆ ಕಲಿತುದು ಶ್ರೀ ಬಣ್ಣದ ಕುಟ್ಯಪ್ಪು ಅವರಿಂದ. ಯಕ್ಷಗಾನಕ್ಕೆ ಪೂರಕವಾದ ವಿದ್ಯೆಗಳನ್ನು ಇವರೆಲ್ಲರಿಂದ ಕಲಿತು ಸಂಪಾಜೆ ಶೀನಪ್ಪ ರೈಗಳು ಹಂತ ಹಂತವಾಗಿ ಬೆಳೆಯುತ್ತಾ ಸಾಗಿಬಂದು ಶ್ರೇಷ್ಠ ಕಲಾವಿದರಾದವರು.

 ಶ್ರೀ  ಸಂಪಾಜೆ ಶೀನಪ್ಪ ರೈ
ತನ್ನ 13ನೇ ವಯಸ್ಸಿನಲ್ಲಿ ಇರಾ ಶ್ರೀ ಸೋಮ ನಾಥೇಶ್ವರ ಮೇಳದಲ್ಲಿ (ಕಲ್ಲಾಡಿ ಶ್ರೀ ಕೊರಗ ಶೆಟ್ಟರ ವ್ಯವಸ್ಥಾಪಕತ್ವ) ರಂಗಪ್ರವೇಶ ಮಾಡಿದ ರೈಗಳು ಸದ್ರಿ ಮೇಳದಲ್ಲಿ 4 ವರ್ಷ ತಿರುಗಾಟ ನಡೆಸಿದರು. ಆಗ ದಾಮೋದರ ಮಂಡೆಚ್ಚರು, ಕಾಸರಗೋಡು ವೆಂಕಟ್ರಮಣ, ಕಲ್ಲಡ್ಕ ಮಾಧವ ಶೆಟ್ರು, ಬಣ್ಣದ ಕುಟ್ಯಪ್ಪು ಮೊದಲಾದ ಪ್ರಸಿದ್ಧ ಕಲಾವಿದರ ಒಡನಾಟ ಸಿಕ್ಕಿತ್ತು. ನಂತರ 3 ವರ್ಷಗಳ ಕಾಲ ವೇಣೂರು ಮೇಳದಲ್ಲಿ ವ್ಯವಸಾಯ ಮಾಡಿದರು. ಅಲ್ಲಿ ಶ್ರೀ ಪುತ್ತಿಗೆ ತಿಮ್ಮಪ್ಪ ರೈಗಳು, ಕಾಂಚನ ಸಂಜೀವ ರೈ, ಪಾಂಡೇಶ್ವರ ಪದ್ಮನಾಭ ಕಾಮತ್, ಶ್ರೀಕಂಠ ಭಟ್ ಮೊದಲಾದವರೊಂದಿಗೆ ತಿರುಗಾಟ ನಡೆಸುವ ಭಾಗ್ಯ ರೈಗಳಿಗೆ ಸಿಕ್ಕಿತ್ತು. ಬಳಿಕ 2 ವರ್ಷಗಳ ತಿರುಗಾಟ ಇರುವೈಲು ಮೇಳದಲ್ಲಿ. ಮತ್ತೆ ತಿರುಗಾಟ ಸೌಕೂರು ಮೇಳದಲ್ಲಿ. ಆಗ ಸೌಕೂರು ಮೇಳ (ಬಡಗು) ಪುತ್ತಿಗೆ ತಿಮ್ಮಪ್ಪ ರೈಗಳ ವ್ಯವಸ್ಥಾಪಕತ್ವದಲ್ಲಿ ತಿರುಗಾಟ ನಡೆಸುತ್ತಿತ್ತು. ತೆಂಕಿನ ಪ್ರದರ್ಶನ. ಚೇವಾರು ಕಾಮತ್‍ರು, ಕಾಟುಕುಕ್ಕೆ ಕುಂಞರಾಮ ಮಣಿಯಾಣಿ, ತೊಕ್ಕೊಟ್ಟು ಲೋಕಯ್ಯ, ವಿಟ್ಲ ರಾಮಯ್ಯ ಶೆಟ್ರು ಮೊದಲಾದವರೊಂದಿಗೆ ರೈಗಳು ಕಲಾಮಾತೆಯ ಸೇವೆಯನ್ನು ಮಾಡಿದವರು. ನಂತರ ಚೌಡೇಶ್ವರೀ ಮೇಳದಲ್ಲಿ 2 ವರ್ಷ. ಅಲ್ಲಿ ದಾಸರಬೈಲು ಚನಿಯಪ್ಪ ನಾೈಕ, ಈಗ ಖ್ಯಾತ ಭಾಗವತರಾಗಿರುವ ಪದ್ಯಾಣ ಗಣಪತಿ ಭಟ್ಟರು ಜತೆಗಿದ್ದರು. ನಂತರ ನಿರಂತರ 33 ವರ್ಷಗಳ ತಿರುಗಾಟ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ. ಕೇದಗಡಿ ಗುಡ್ಡಪ್ಪ ಗೌಡರಿಂದ ರಂಗನಡೆಯನ್ನು ಅಭ್ಯಸಿಸಿ, ಕಲ್ಲಾಡಿ ವಿಠಲ ಶೆಟ್ಟರ ಸಹಕಾರ, ಪ್ರೋತ್ಸಾಹ ದಿಂದ, ಇರಾ ಗೋಪಾಲಕೃಷ್ಣ ಭಾಗವತರು, ಬಲಿಪರು, ಕುಬಣೂರು, ಪೂಂಜರಂತಹ ಶ್ರೇಷ್ಠ ಭಾಗವತರ ಜತೆ ಕಲಾವಿದನಾಗಿ ವ್ಯವಸಾಯ ನಡೆಸಿದವರು ಶ್ರೀ ಶೀನಪ್ಪ ರೈಗಳು. ಎಳವೆಯಿಂದಲೇ ಇವರಿಗೆ ಕಿರೀಟ ವೇಷದಲ್ಲೇ ಆಸಕ್ತಿ. ಹಾಗೆಂದು ಪುಂಡುವೇಷಗಳನ್ನು ಮಾಡದವರೇನೂ ಅಲ್ಲ. ಬ್ರಹ್ಮಕಪಾಲ ಪ್ರಸಂಗದಲ್ಲಿ ಬ್ರಹ್ಮನಾಗಿ (ಪಕಡಿ), ವಿರಾಟಪರ್ವದ ಕೀಚಕನಾಗಿಯೂ ಅಭಿನಯಿಸಿದ್ದನ್ನೂ ರೈಗಳು ನೆನಪಿಸುತ್ತಾರೆ. ಚೌಡೇಶ್ವರೀ ಮೇಳದಲ್ಲಿದ್ದಾಗ ಮೇನಕೆಯಾಗಿಯೂ ಅಭಿನಯಿಸಿದ್ದರಂತೆ. ಆದರೂ ರೈಗಳು ಕಲಾವಿದನಾಗಿ ಕಾಣಿಸಿಕೊಂಡದ್ದು ಕಟೀಲು ಮೇಳದಲ್ಲಿ ಎಂಬುದರಲ್ಲಿ ಎಲ್ಲರ ಸಹಮತವಿದೆ. ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು, ರಕ್ತಬೀಜ, ಭಾನುಕೋಪ, ಕಾರ್ತವೀರ್ಯ, ಕೌಂಡ್ಲಿಕ, ಶಿಶುಪಾಲ, ಮಕರಾಕ್ಷ, ಅರುಣಾಸುರ- ಮೊದಲಾದ ಪಾತ್ರಗಳಲ್ಲಿ ಸಂಪಾಜೆ ಶೀನಪ್ಪ ರೈಗಳು ವಿಜೃಂಭಿಸಿದರು.
ಪ್ರಸ್ತುತ 15 ವರ್ಷಗಳಿಂದ ಹೊಸನಗರ,ಎಡನೀರು,ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.
ಯಕ್ಷಗಾನ ಕಲಾವಿದನಾಗಿ ನೀವು ತೃಪ್ತರೇ? ಎಂಬ ಪ್ರಶ್ನೆಗೆ- ಕಲಾವಿದರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಯಜಮಾನರುಗಳ ಕೈಕೆಳಗೆ, ಉತ್ತಮ ಕಲಾವಿದರ ಒಡನಾಟದಲ್ಲಿ ದುಡಿಯುವ ಕಲಾವಿದನಿಗೆ ಅತೃಪ್ತಿ ಎಂಬುದು ಮೂಡಲಾರದು. ನನಗೆ ಆ ಭಾಗ್ಯ ಸಿದ್ಧಿಸಿದೆ. ಹಾಗಾಗಿ ನಾನು ಅತ್ಯಂತ ತೃಪ್ತನು ಎಂದು ರೈಗಳು ಉತ್ತರಿಸುತ್ತಾರೆ.
ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಏನೆನಿಸಿತು? ಎಂಬ ಪ್ರಶ್ನೆಗೆ- ಇದು ಕಲಾಮಾತೆಯ ಅನುಗ್ರಹ. ಇಷ್ಟು ವರ್ಷಗಳ ಕಾಲ ಮಾಡಿದ ಸೇವೆಗೆ ಪ್ರತಿಫಲ ಸಿಕ್ಕಾಗ ಸಂತೋಷವಾಯಿತು. ನಾನು ಕಲಾಸೇವೆಯನ್ನು ಮಾಡುವಲ್ಲಿ ಸಹಕರಿಸಿ, ಪ್ರೋತ್ಸಾಹಿಸಿದವರೆಲ್ಲರೂ ಇದಕ್ಕೆ ಕಾರಣರು. ತಿರುಗಾಟದ ಆರಂಭಕ್ಕೆ ಮೊದಲು ಮತ್ತು ಕೊನೆಯಲ್ಲಿ ಈಗಲೂ ಕಟೀಲು ಕ್ಷೇತ್ರಕ್ಕೆ ಹೋಗುತ್ತೇನೆ. ನನ್ನ ಕಲಾಜೀವನದ 60ನೇ ವರ್ಷ ಕಟೀಲು ಮೇಳದ ಬಯಲಾಟವನ್ನು ನಡೆಸಿ (ಕಾಟಿಪಳ್ಳ ಮಹಾಗಣಪತಿ ದೇವಸ್ಥಾನದ ಬಳಿ) ಬಹು ಕಾಲದ ಕನಸನ್ನು ನನಸಾಗಿಸಿದ್ದೇನೆ.
ಹಿಂದಿನ ದಿನಗಳ ತಿರುಗಾಟಕ್ಕೂ, ಈಗಿನ ತಿರುಗಾಟಕ್ಕೂ ಅಂತರವೇನು? ಎಂಬ ಪ್ರಶ್ನೆಗೆ-
ಪರಿವರ್ತನೆ ಸಹಜ. ಮೊದಲು ನಡೆದೇ ತಿರುಗಾಟ. ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಹೇರುತ್ತಿದ್ದರು. ವೇಣೂರು ಮೇಳದಲ್ಲಿ ಎರಡು ಎತ್ತಿನಗಾಡಿ ಇದ್ದ ನೆನಪು. ಅದರ ಹಿಂದೆಯೋ ಮುಂದೆಯೋ ಕಲಾವಿದರು ನಡೆದೇ ಸಾಗುತ್ತಿದ್ದರು. ಸರಿಯಾದ ಹೊತ್ತಿಗೆ ಸ್ನಾನ, ನಿದ್ರೆ, ಆಹಾರ ಸಿಗದೆ ಕಲಾವಿದರು ನಿಜವಾಗಿಯೂ ಬೇಕಾಗಿರುವ ಅವಶ್ಯಕತೆಗಳಿಂದ ವಂಚಿತರಾಗುತ್ತಿದ್ದರು. 1980ರ ಸುಮಾರಿಗೆ ಕಟೀಲು ಮೇಳಗಳಿಗೆ ಲಾರಿಯ ವ್ಯವಸ್ಥೆ ಬಂತು. ಈಗ ಹಾಗಲ್ಲ. ಪ್ರಾಯೋಜಕರು ಉತ್ತಮ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಕಲಾವಿದರು ವ್ಯಕ್ತಿತ್ವವನ್ನು ಉಳಿಸಿಕೊಂಡರೆ ಪ್ರತಿಫಲವೂ ಇದೆ. ಉತ್ತಮ ಜೀವನವೂ ಇದೆ.
ಕಿರಿಯ ಕಲಾವಿದರಿಗೆ ಸಂದೇಶವೇನು? : ಶಿಸ್ತಿನ ಜೀವನ ಅವಶ್ಯ. ಆರೋಗ್ಯವನ್ನು ನಿರಂತರ ಕಾಪಾಡಿಕೊಳ್ಳಬೇಕು. ಸತತ ಅಭ್ಯಾಸಿಯಾಗಿರಬೇಕು. ಮೊದಲು ಬಯಲಾಟ ಹಳ್ಳಿ ಪ್ರದೇಶದಲ್ಲಿ ಮಾತ್ರ ನಡೆಯುತ್ತಿತ್ತು. ಈಗ ಯಕ್ಷಗಾನದ ವ್ಯಾಪ್ತಿ ವಿಸ್ತರಣೆಯಾಗಿದೆ. ನಗರಗಳಲ್ಲೂ ಪ್ರದರ್ಶನಗಳು ನಡೆಯುತ್ತವೆ. ವಿದ್ಯಾವಂತ ಪ್ರೇಕ್ಷಕರು ಯಕ್ಷಗಾನದತ್ತ ಒಲವನ್ನು ಹರಿಸುತ್ತಿದ್ದಾರೆ. ಕಲಾವಿದನು ಕೇವಲ ಕುಣಿತ ಕಲಿತರೆ ಸಾಲದು. ವೇಷಕ್ಕೆ ಸರಿಯಾಗಿ ಮಾತುಗಾರಿಕೆ ಬೇಕು. ಪುರಾಣಜ್ಞಾನ, ಪ್ರಸಂಗದ ನಡೆಗಳನ್ನು ತಿಳಿಯಲೇಬೇಕು. ಆಲಸಿಯಾಗದೆ ಸತತ ಅಭ್ಯಾಸ ಮಾಡಿದರೆ ಮಾತ್ರ ಉತ್ತಮ ಕಲಾವಿದನಾಗಬಹುದು.
ಕಲಾಜೀವನದ ಯಶಸ್ಸಿಗೆ ಕಾರಣರಾದವರು ಹಲವರು. ಊರಿನ ಯಜಮಾನರಾದ ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ಮತ್ತು ಶ್ರೀ ಟಿ. ಶ್ಯಾಮ ಭಟ್ಟರು. ಕಲ್ಲಾಡಿ ಶ್ರೀ ವಿಠಲ ಶೆಟ್ಟರು, ಅಲ್ಲದೆ ಅಗರಿ ಶ್ರೀನಿವಾಸ ಭಾಗವತರು, ಇರಾ ಗೋಪಾಲಕೃಷ್ಣ ಭಾಗವತರು, ಬಲಿಪ ನಾರಾಯಣ ಭಾಗವತರು, ನಿಡ್ಲೆ ನರಸಿಂಹ ಭಟ್ಟರು, ಕಾಸರಗೋಡು ವೆಂಕಟ್ರಮಣರವರು, ಬಣ್ಣದ ಕುಟ್ಯಪ್ಪು, ಕೇದಗಡಿ ಗುಡ್ಡಪ್ಪ ಗೌಡರು, ಕೆ. ಗೋವಿಂದ ಭಟ್ಟರು, ಕಲ್ಲಡ್ಕ ಮಾಧವ ಶೆಟ್ಟಿಯವರು ಮೊದಲಾದವರ ಸಹಕಾರವನ್ನು ಒಪ್ಪುವ ಸಹಕಲಾವಿದರೆಲ್ಲರ ಸಹಕಾರವನ್ನು ನೆನಪಿಸುವ, ಸಂಪಾಜೆ ಶೀನಪ್ಪ ರೈಗಳ ಸಹೋದರರಲ್ಲಿ ಚಂದ್ರಶೇಖರ ರೈಗಳು ಹವ್ಯಾಸೀ ಉತ್ತಮ ಕಲಾವಿದರು. ಗಂಗಾಧರ ರೈಗಳು ಹವ್ಯಾಸೀ ಮದ್ದಳೆಗಾರರು. ಇವರ ಸಹಕಾರವನ್ನೂ ಶೀನಪ್ಪ ರೈಗಳು ನೆನಪಿಸುತ್ತಾರೆ.
ಕುಟುಂಬ : ಪತ್ನಿ : ಗಿರಿಜಾವತಿ ರೈ. ಮಕ್ಕಳು : ಜಯರಾಮ, ರೇವತಿ, ರಜನಿ. ಪುತ್ರ ಜಯರಾಮ ಉದ್ಯೋಗಿ, ಉತ್ತಮ ಹವ್ಯಾಸೀ ಕಲಾವಿದ. ಶೀನಪ್ಪ ರೈಗಳ ಹೆಜ್ಜೆಗಾರಿಕೆಯ ಛಾಪನ್ನು ಇವರ ಹೆಜ್ಜೆಗಾರಿಕೆಯಲ್ಲೂ ನಮಗೆ ಕಾಣಬಹುದು.ು

ಲೇಖನ: ರವಿಶಂಕರ್ ವಳಕ್ಕುಂಜ 

ರಾಮ, ಕೃಷ್ಣ (ಕುಷ್ಟ) ನಾರಾಯಣ

ನನ್ನ ಬಾಲ್ಯದ ದಿನಗಳ ನೆನಪು ಇದು. ಊರಿಂದ ಊರಿಗೆ ಕಾಲ್ನಡಿಗೆಯಲ್ಲಿ ಮೇಳದ ಪೆಟ್ಟಿಗೆಯನ್ನು ಹೊತ್ತ ಹೊರೆಯಾಳುಗಳ ಶ್ರಮ, ಕಲಾವಿದನೂ ನಿರ್ದೇಶಕನೂ, ವ್ಯವಸ್ಥಾಪಕನೂ ಒಬ್ಬನೇ ಆಗಿರುವ ಮೇಳದ ಯಜಮಾನನ ತಾಳ್ಮೆ! ಇಂದು ಸ್ಮೃತಿಪಟಲದಲ್ಲಿ ಮರುಕಳಿಸಿದೆ.
ಶ್ರೀ ಮಂದಾರ್ತಿ ಮೇಳ ಒಂದೇ ಆಗಿದ್ದು, ಕೋಟ ಹದಿನಾಲ್ಕು ಗ್ರಾಮಗಳ ಸಂಚಾರವೂ ವಿರಳ. ಹರಕೆ, ಕಟ್ಟುಕಟ್ಟಳೆ, ಹತ್ತು ಸಮಸ್ತರ ಸ್ಥಳವಂದಿಗರ ಬಯಲಾಟದ ಕಾಲವದು. ಶ್ರೀ ಮಂದಾರ್ತಿ ಮೇಳದಲ್ಲಿ ಹಾರಾಡಿ ರಾಮ, ಕುಷ್ಟ, ನಾರಾಯಣರ ತ್ರಿಮೂರ್ತಿಗಳ ಜೋಡಣೆಯ ಅಚ್ಚುಕಟ್ಟು, ಹೊಂದಾಣಿಕೆ ಮರೆಯಬಾರದ ಘಟನಾವಳಿಗಳ ಗತವೈಭವವೇ.


ಸಾಲಿಗ್ರಾಮ-ಕಾರ್ಕಡ ಗ್ರಾಮದ ಮಣೆಗಾರರ ಮನೆ ಗಣಪಯ್ಯ ಉಪಾಧ್ಯರಿಗೆ ಶ್ರೀ ಮಂದಾರ್ತಿ ಮೇಳದ ಆಟ ಆಡಿಸುವ ಖಯಾಲಿ. ಅಂದು ಮುಂಜಾನೆಯೇ ಹಾರಾಡಿ ರಾಮ, ಕುಷ್ಟ, ನಾರಾಯಣ ಹಾಗೂ ಅರಾಟೆ ಮಂಜು ಮೊದಲಾದ ಕಲಾವಿದರು ಹೆಬ್ಬಾಗಿಲಿನಲ್ಲಿ ಹಾಜರ್! ಶ್ರೀಮತಿ ಮನೋರಮ ಉಪಾಧ್ಯರಿಗಂತೂ ಕಲಾವಿದರ ಆರೈಕೆ, ಉಪಚಾರ ಮಾಡುವ ಸಂಭ್ರಮ. ಬೆಳಿಗ್ಗಿನ ಇಡ್ಲಿ ಚಹದೊಡನೆ ನಿದ್ದೆಗೆಟ್ಟ ಕಲಾವಿದರನ್ನು ವಿಶ್ರಾಂತಿಗೆ ಈ ದಂಪತಿಗಳು ಬಿಡಲಾರರು. ಹಲವು ಊರುಗಳ ಆಟದ ಅನುಭವ, ಪಾತ್ರಪರಿಚಯ, ಪ್ರಸಂಗ ಹಂಚಿಕೆ ವಿಚಾರಗಳ ಸೋದಾಹರಣ ಚರ್ಚೆಯಲ್ಲಿಯೇ ನಿರತರಾಗುತ್ತ ಮಧ್ಯಾಹ್ನದ ಆರೋಗಣೆಯ ತಯಾರಿ ನಡೆಸುತ್ತಿದ್ದರು.


ರಾತ್ರಿ ಆಟಕ್ಕೆ ಪ್ರಸಂಗ ನಿಶ್ಚಯ ಮಾಡಲು ಕಲಾವಿದರೂ, ಮನೆಯವರೂ, ಪಕ್ಕದ ಅಭಿಮಾನಿಗಳೂ ಜಮಾಯಿಸುತ್ತಿದ್ದರು. ಹಾರಾಡಿ ರಾಮ, ಕುಷ್ಟ, ನಾರಾಯಣರು ಕ್ರಮವಾಗಿ ಮೂರೂ ಪ್ರಸಂಗಗಳಲ್ಲಿಯೂ ಎರಡನೆಯ ವೇಷ, ಪುರುಷವೇಷ, ಸ್ತ್ರೀವೇಷ ಮಾಡಿಯೇ ಮಣೆಗಾರ ಉಪಾಧ್ಯರ ಮನ ತಣಿಸಬೇಕಾಗಿತ್ತು. ಕಲಾವಿದರಿಗೆ ಹೆಬ್ಬಾಗಿಲು ಪ್ರವೇಶವನ್ನೂ ಪ್ರಧಾನ ವೇಷಗಳ ನಿರ್ವಹಣೆಯ ಹೊಣೆಯನ್ನೂ ಅಂದೇ ನಮ್ಮವರು ನೆರವೇರಿಸಿದ್ದರು!


ದೇವರ ಮುಡಿಗೆ ಹೂ ತಪ್ಪಿದರೂ ತಪ್ಪಬಹುದು! ಆದರೆ ಯಕ್ಷಗಾನ ಚೌಕಿಯಲ್ಲಿ ಮಲ್ಲಿಗೆ ಹೂ ತಪ್ಪುತ್ತಿರಲಿಲ್ಲ. ಗಣಪತಿ ಪೂಜೆಗೆ, ಶ್ರೀ ಅಮ್ಮನವರಿಗೆ ಏರಿಸಿದ ಹೂವನ್ನು ಅಂದು ಸ್ತ್ರೀಪಾತ್ರಧಾರಿಗಳು ಮುಡಿಯಲೇಬೇಕು. ಅಂದೇ ಇಲ್‍ಕಲ್ ಅಂಚಿನ ಹೊಸ ಸೀರೆ ‘ಬಾಲ ಗೋಪಾಲ’, ‘ಸ್ತ್ರೀಭೂಮಿಕೆ’ ನಿರ್ವಹಿಸುವವರಿಗೆ ನೀಡಬೇಕು. ಇಂಥಹ ವಿಷಯಗಳಲ್ಲಿ ತಮ್ಮ ಪ್ರೀತಿ, ಅಭಿಮಾನವನ್ನು ಮೌನವಾಗಿ ಮಂದಹಾಸದಿಂದಲೇ ಅನುಭವಿಸುತ್ತಿದ್ದರು. ಮಣೆಗಾರರ ಮನೆ, ಆಟಕ್ಕೆ ಹಾಗಾಗಿಯೇ ಮಣೆ! ಮನ್ನಣೆ!!


ಸಾಧಾರಣ ಪ್ರಧಾನ ಭಾಗವತರು ಮಧ್ಯರಾತ್ರಿ ಕಳೆದು ರಂಗಸ್ಥಳಕ್ಕೆ ಬರುವ ವಾಡಿಕೆ. ಆದರಣೀಯರೆಂತ ತಿಳಿದ ಕಲಾವಿದರು, ಭಾಗವತರು, ಹಿಮ್ಮೇಳದವರೂ ಜಾಗೃತರಾಗಿ ಉಪಾಧ್ಯರ ಮನೆ ಆಟವೆಂತಲೇ ‘ನಿಗಾ’ ತೆಗೆದುಕೊಂಡು ಕುಟುಂಬದ ಅಂತಃಕರಣಕ್ಕೆ ಮಿಡಿದು ನಗದೀಕರಿಸಿಕೊಳ್ಳುತ್ತಿದ್ದರು. ಸಮಯಕ್ಕಿಂತ ಮೊದಲೇ ಸನ್ನದ್ಧರಾಗಿ ಇಡೀ ಬಯಲಾಟದ ಇಪ್ಪತ್ತನಾಲ್ಕು ಗಂಟೆಗಳನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದರು.


ರಾಮ-ಕೃಷ್ಣ-ನಾರಾಯಣರ ಹೆಸರು ಇಂದಿಗೂ ಜನರ ಬಾಯಲ್ಲಿ ದೇವರನಾಮದಂತೆ ಪ್ರತಿದಿನವೂ ನಲಿದಾಡುತ್ತಿದೆ. ಶಿರಿಯಾರ ಮಂಜು, ಚಂಡೆ ಕಿಟ್ಟು, ಶೇಷಗಿರಿ ಭಾಗವತರು, ಹಾಸ್ಯದ ಕೊರ್ಗು, ಉಡುಪಿ ಬಸವ, ಕೆಮ್ಮಣ್ಣು ಆನಂದ ಮುಂತಾದ ಅಸಂಖ್ಯ ಕಲಾತಪಸ್ವಿಗಳನ್ನು ಮರೆಯಲಾಗದು. ಅವರೆಲ್ಲರೂ ಪರಸ್ಪರ ರಂಗನಿರ್ದೇಶಕ ರಾಗಿಯೂ ಕೆಲಸ ಮಾಡಿದ್ದರು. ಮರುದಿನದ ಆಟ ನಿಶ್ಚಿತವಿಲ್ಲ! ನಾಳೆಯ ಚಿಂತೆ ನಾರಾಯಣ ಬಲ್ಲ. ಎಲ್ಲವನ್ನೂ ಮರೆತು ಯಕ್ಷಗಾನ ಕಲಾ ಸಂಪತ್ತನ್ನು ಮೆರೆಯಿಸಿದರು. ‘‘ಸಹೃದಯ ವೀಕ್ಷಕರು ರಂಗಸ್ಥಳದ ಮುಂಭಾಗದ ಚಪ್ಪರದಡಿ ಕುಳಿತರೆ ಕಲಾವಿದರಿಗೂ ಹುಮ್ಮಸ್ಸು ಬರುತ್ತದೆ. ನೀವು ತಿದ್ದಿ ತೀಡುವುದು ನಾವು ಬಯಸುವ ವಿಚಾರವೇ ಆಗಿದೆ. ನಾಳೆಯೂ ಹತ್ತಿರದಲ್ಲಿ ನಡೆಯುವ ಬಯಲಾಟಕ್ಕೆ ಕೂಡ ಬನ್ನಿ’’ ಅಂತ ಸಜ್ಜನ ಕಲಾವಿದರು ಕರೆಕೊಡುತ್ತಾರೆ.


ಮೇಳ, ಮೇಳಾವ, ಮೇಲ ಮುಂತಾದ ಶಬ್ದಗಳಿಗೆ ಸಂತೆ, ಜಾತ್ರೆ, ಉತ್ಸವಗಳೆಂಬ ಅರ್ಥವ್ಯಾಖ್ಯಾನಿಸಿದ್ದಾರಂತೆ. ಹತ್ತಿಪ್ಪತ್ತು ಜನರ ಸಂಗವೂ, ಅವರಾಡಿ ತೋರುವ ‘ಪ್ರಸಂಗ’ವೂ ಸರ್ವಸಂಗ ಪರಿತ್ಯಾಗಿಗಳಿಂದಲು ಮೆಚ್ಚುಗೆ ಪಡೆದಿವೆ! ಸಂಚಾರಿ ಮೇಳಗಳಿಂದ ಸದಾ ಕಲಾವೈಭವ ‘ಮೇಳ’ವಿಸಲಿ. ು

ಹೆಚ್. ಜನಾರ್ದನ ಹಂದೆ ಕೋಟ
ಅಧ್ಯಕ್ಷರು, ಕರ್ಣಾಟಕ ಯಕ್ಷಧಾಮ
‘ಸಿಯಾರಾ ವಿಸ್ಟಾ’, ಪ್ಲಾಟ್ ಎ-1
ಕೊಡಿಯಾಲಗುತ್ತು ಪಶ್ಚಿಮ
ಮಂಗಳೂರು-3,

ಭಾವದಲೆಯಲಿ ತೇಲಾಡಿಸಿದ ಭಾಗವತ ಕುಬಣೂರು ಶ್ರೀಧರ ರಾವ್

ಒಂದು ಪ್ರಸಿದ್ಧ ಭಾಗವತರುಗಳು ಮೇಳೈಸಿದ ಗಾನಸುಧೆಯ ರಸಧಾರೆ. ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಲ್ಲಿ ಕೆಲವರು ಭಾಗವಹಿಸಿದ್ದ ಅಪೂರ್ವವಾದ ಕಾರ್ಯಕ್ರಮ. ಭಾಗವತರೊಬ್ಬರು ತಮ್ಮ ಸರದಿಯಲ್ಲಿ ದ್ರೌಪದಿ ವಸ್ತ್ರಾಪಹಾರದ “ಕರುಣದಿ ಕಾಯೋ ಗೋವಿಂದಾ…” ಹಾಡಲು ಪ್ರಾರಂಭಿಸಿದರು. ಪ್ರಥಮ ಚರಣದಲ್ಲಿಯೇ ಸಭೆಯನ್ನು ನಿಶ್ಶಬ್ದವಾಗಿಸಿ ಸಭಿಕರೆಲ್ಲರ ಚಿತ್ತವನ್ನು ತನ್ನ ವಶದಲ್ಲಿರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇವರು ಬೇರೆ ಯಾರೂ ಅಲ್ಲ. ತನ್ನ ಸಂಗೀತದ ಅನುಭವಗಳಿಂದ ದಿ| ದಾಮೋದರ ಮಂಡೆಚ್ಚರ ನಂತರ ಯಕ್ಷಗಾನದ ಹಾಡುಗಳ ಪರಂಪರೆಯ ಶೈಲಿಗೆ ಸಂಗೀತದ ಹೊಳಪನ್ನು ಕೊಟ್ಟ ದಿ| ಕುಬಣೂರು ಶ್ರೀಧರ ರಾವ್.


ಕುಬಣೂರು ಶ್ರೀಧರ ರಾವ್ ಇಂದು ನಮ್ಮೊಡನಿಲ್ಲ. ಯಾಕೋ ಈ ಸತ್ಯವನ್ನು ಮಾತ್ರ ಅರಗಿಸಿಕೊಳ್ಳಲಾಗುತ್ತಿಲ್ಲ. ದಿನಾಂಕ 17.09.2017ರ ರಾತ್ರಿ ತೀವ್ರ ಜ್ವರದಿಂದಾಗಿ ಅವರು ಬೆಂಗಳೂರಿನಲ್ಲಿ ನಿಧನ ಹೊಂದಿದರು.
ವರ್ಷಗಳ ಹಿಂದೆ ಇವರನ್ನು ಮಾತನಾಡಿಸಬೇಕೆಂದು ಬಹಳಷ್ಟು ಬಾರಿ ಅಂದುಕೊಂಡಿದ್ದೆ. ಆದರೆ ಅವರು ಸದಾ ಬಿಡುವಿಲ್ಲದ ಕಾರ್ಯಕ್ರಮ ಗಳು, ಅವರೇ ನಡೆಸುತ್ತಿದ್ದ ಮಾಸಪತ್ರಿಕೆಯ ಕೆಲಸ, ಮೇಳದ ಉದ್ಯೋಗಗಳಲ್ಲಿ ವ್ಯಸ್ತರಾಗಿರುತ್ತಿದ್ದುದರಿಂದ ಅವಕಾಶವಾಗಿರಲಿಲ್ಲ. ಆದರೆ ಒಂದು ದಿನ ಮೊದಲೇ ದಿನ ನಿಶ್ಚೈಸಿ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿತು. ಸಣ್ಣದೊಂದು ಸಂದರ್ಶನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದಾಗ ಸಂತೋಷದಿಂದ ಒಪ್ಪಿಕೊಂಡಿದ್ದರು.


1956ರಲ್ಲಿ ಜನಿಸಿದ ಕುಬಣೂರು ಶ್ರೀಧರ ರಾವ್ ಮೂಲತಃ ಕೊಡಗು ಜಿಲ್ಲೆಯ ಭಾಗಮಂಡಲದವರು. ಒಂದೂವರೆ ವರ್ಷ ಇರುವಾಗಲೇ ತಾಯಿ ತೀರಿಹೋದ ಕಾರಣ ಕುಬಣೂರಿನ ಮಾವನ ಮನೆಯಲ್ಲಿ ಬೆಳೆಯಬೇಕಾಯಿತು. ಆದ ಕಾರಣ ಕುಬಣೂರು ಶ್ರೀಧರ ರಾವ್ ಅಂತ ಹೆಸರು ಬಂತು. ತಂದೆಯ ಹೆಸರು ಶ್ರೀ ಕೃಷ್ಣಯ್ಯ ಹಾಗೂ ತಾಯಿ ಶ್ರೀಮತಿ ರುಕ್ಮಿಣಿ. ಪ್ರಾಥಮಿಕ ವಿದ್ಯಾಭ್ಯಾಸ ಅಂದರೆ 7ನೇ ತರಗತಿಯ ವರೆಗೆ ಕುಬಣೂರು ಶಾಲೆಯಲ್ಲಿ ಆಯಿತು. ನಂತರ ಪ್ರೌಢಶಿಕ್ಷಣ ಮಂಗಲ್ಪಾಡಿ ಪ್ರೌಢಶಾಲೆಯಲ್ಲಿ ಹಾಗೂ ನಂತರ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದರು.


ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಕುಬಣೂರಿನಲ್ಲಿ ಯಕ್ಷಗಾನದ ಪರಿಸರವಿದ್ದ ಕಾರಣ ಆ ವಯಸ್ಸಿನಲ್ಲೆ ಶಾಲಾ ವಾರ್ಷಿಕೋತ್ಸವವೇ ಮೊದಲಾದ ಸಂದರ್ಭಗಳಲ್ಲೆಲ್ಲಾ ಯಕ್ಷಗಾನದಲ್ಲಿ ವೇಷಗಳನ್ನು ಮಾಡುತ್ತಿದ್ದರು. ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಆ ಕಾಲದ ಮೇಳದ ಕಲಾವಿದರಾದ ಬೇಕೂರು ಕೇಶವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದ್ದರು. ಶಾಲಾ ದಿನಗಳಲ್ಲಿಯೇ ಐ. ರಘು ಮಾಸ್ತರ್‍ರಿಂದ ಐದಾರು ವರ್ಷ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ ಟಿ. ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಲ್ಲಿ ಭಾಗವತಿಕೆಯನ್ನು ಅಭ್ಯಸಿಸಿದರು.


ಪ್ರಾರಂಭದಲ್ಲಿ ವಿಶ್ವಭಾರತಿ ಕಲಾಸಂಘದಿಂದ ಹಲವು ಕಡೆ ಪ್ರದರ್ಶನಗಳನ್ನು ನಡೆಸುತ್ತಿದ್ದುದು ಮಾತ್ರವಲ್ಲದೆ ಯಕ್ಷಗಾನದ ವೇಷಭೂಷಣಗಳನ್ನು ಕೂಡಾ ಯಕ್ಷಗಾನ ಸಂಘ ಸಂಸ್ಥೆಗಳಿಗೆ ಹಾಗೂ ಪ್ರದರ್ಶನಗಳಿಗೆ ಬಾಡಿಗೆಗೆ ಒದಗಿಸುತ್ತಾ ಇದ್ದರು. ಆಗ ಅವರ ಭಾಗಮಂಡಲದ ಆಸ್ತಿ ಪಾಲಾಗಿ ಸಿಕ್ಕಿತು ಹಾಗೂ ಇವರ ತಂದೆಯವರು ವಿಧಿವಶರಾದುದರಿಂದ ಮಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗವನ್ನು ಬಿಟ್ಟು ತೋಟ ನೋಡಿಕೊಳ್ಳಲು ಭಾಗಮಂಡಲದಲ್ಲಿ ನೆಲೆಸಬೇಕಾಗಿ ಬಂತು. ಏಲಕ್ಕಿ ತೋಟವಾದುದರಿಂದ ಮಳೆಗಾಲದಲ್ಲಿ ಮಾತ್ರ ಕೆಲಸವಿರುತ್ತಿತ್ತು.

ಮೊದಲು ಕೆಲಸದಲ್ಲಿದ್ದಾಗಲೂ ಕರ್ನೂರು ಕೊರಗಪ್ಪ ರೈಗಳ ಗೋಪಾಲಕೃಷ್ಣ ಕಲಾ ಸಂಪದ, ಪಡೀಲ್ ಇದರಲ್ಲಿ ಭಾಗವತನಾಗಿ ಹೋಗುತ್ತಿದ್ದರು. ಆಮೇಲೆ ಕುಂಬಳೆ ಶೇಷಪ್ಪನವರ ಅನಂತಾಡಿ ಮೇಳ ಹಾಗೂ ಉಪ್ಪಳ ಮೇಳಗಳಿಗೂ ಹವ್ಯಾಸೀ ಭಾಗವತನಾಗಿ ಹಾಡುತ್ತಿದ್ದರು. ಕುಬಣೂರು ಮನೆಯಲ್ಲಿ ಚೆಂಡೆ, ಮದ್ದಳೆಗಳು ಇದ್ದು ಅವುಗಳನ್ನು ಆಟಗಳಿಗೂ ಒದಗಿಸುತ್ತಿದ್ದರು. ಅಲ್ಲದೆ ಕುಬಣೂರು ಶ್ರೀಧರ ರಾವ್ ಹಲವಾರು ಹವ್ಯಾಸೀ ಸಂಸ್ಥೆಗಳಿಗೆ ಭಾಗವತಿಕೆಯನ್ನೂ ಮಾಡುತ್ತಿದ್ದರು.

ಅದೂ ಅಲ್ಲದೆ ಆ ಕಾಲದಲ್ಲಿ “ಜುಗಲ್ ಬಂದಿ” ಪ್ರಯೋಗವನ್ನು ಪ್ರಥಮ ಬಾರಿಗೆ ಪರಿಚಯಿಸಿದ ಶ್ರೇಯಸ್ಸು ಕುಬಣೂರು ಶ್ರೀಧರ ರಾವ್ ಅವರಿಗೆ ಸಲ್ಲುತ್ತದೆ. ಅದರಲ್ಲಿ ಪದ್ಯಾಣ ಶಂಕರನಾರಾಯಣ ಭಟ್ಟರು, ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಚೆಂಡೆಗೆ ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಮದ್ದಳೆಗೆ ಇದ್ದು “ಬ್ರಹ್ಮಕಪಾಲ” ಎಂಬ ಪ್ರಸಂಗದಲ್ಲಿ ಇದನ್ನು ಪ್ರಪ್ರಥಮವಾಗಿ ಪ್ರಯೋಗ ಮಾಡಲಾಯಿತು. ಬಳಿಕ 1979ರಲ್ಲಿ ಕೂಡ್ಲು ಮೇಳವನ್ನು ಸಂಘಟಿಸಿದ್ದ ಕುಬಣೂರು ಅವರು ಅದರಲ್ಲಿ ದೊಡ್ಡ ಅಗರಿ ಭಾಗವತರು, ಕುದ್ರೆಕೋಡ್ಲು ರಾಮ ಭಟ್ಟರು, ಮಾಂಬಾಡಿಯವರು, ಶಂಕರನಾರಾಯಣ ಸಾಮಗರು, ಹೊಸಹಿತ್ಲು ಮಹಾಲಿಂಗ ಭಟ್ಟರು, ಪೆರುವೋಡಿ ನಾರಾಯಣ ಭಟ್ಟರು, ಕೋಡ್ಳ ಗಣಪತಿ ಭಟ್ಟರು, ಶಂಭು ಶರ್ಮ ಮೊದಲಾದ ಕಲಾವಿದರನ್ನು ಒಟ್ಟು ಸೇರಿಸಿದ್ದರು. ಕೇವಲ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಸಂಯೋಜಿಸಿದ ಕಾರಣವೋ ಏನೋ, ಅದರಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಯಿತು.


ಆ ಸಮಯದಲ್ಲಿ ಅಂದರೆ 1981ರಲ್ಲಿ ಕರ್ನೂರು ಕೊರಗಪ್ಪ ರೈಗಳು ಕದ್ರಿ ಮೇಳವನ್ನು ಆರಂಭಿಸಿದರು. ಆಗ ಅವರ ಕೋರಿಕೆಯಂತೆ ಕದ್ರಿ ಮೇಳಕ್ಕೆ ಸೇರಿದರು. ಮರುವರ್ಷ ಗಣಪತಿ ಭಟ್ಟರ ನಂದಾವರ ಮೇಳ, ಅದರ ಮರುವರ್ಷ ಅರುವ ಮೇಳ, ಮತ್ತೆ ನಾಲ್ಕು ವರ್ಷ ಬಪ್ಪನಾಡು ಮೇಳಗಳ ತಿರುಗಾಟ. ನಂತರ ಪುನಃ ಕದ್ರಿ ಮೇಳಕ್ಕೆ ಕರೆಬಂದಾಗ ಅಲ್ಲಿ ದೊಡ್ಡ ಕಲಾವಿದರ ಗಡಣವೇ ಇತ್ತು. ರಾಮದಾಸ ಸಾಮಗರು, ಕೋಳ್ಯೂರು ರಾಮಚಂದ್ರ ರಾಯರು, ಚೆನ್ನಪ್ಪ ಶೆಟ್ಟರು, ವಿಶ್ವನಾಥ ಶೆಟ್ಟರು, ಸೀತಾರಾಮ ಕುಮಾರ್, ಬಂಟ್ವಾಳ ಜಯರಾಮ ಆಚಾರ್ಯ, ಮೊದಲಾದವರಿದ್ದರು. ನಂತರ ಕಾಂತಾವರ ಮೇಳಕ್ಕೆ, ಆಮೇಲೆ ಕಲ್ಲಾಡಿ ವಿಠಲ ಶೆಟ್ಟರು ಕಟೀಲು ಮೇಳಕ್ಕೆ ಆಹ್ವಾನಿಸಿದರು. ಹಾಗೆ ಕೊನೆಯ 27 ವರ್ಷಗಳಲ್ಲಿ ಕಟೀಲು ಮೇಳದಲ್ಲೇ ಪ್ರಧಾನ ಭಾಗವತರಾಗಿದ್ದರು.


ಬಪ್ಪನಾಡು ಮೇಳದಲ್ಲಿರುವಾಗ ದೇವೇಂದ್ರನ ಬಗ್ಗೆ ನೃತ್ಯರೂಪಕವೊಂದನ್ನು ಸಂಯೋಜಿಸಿದ್ದರು. ಆ ದೃಶ್ಯದಲ್ಲಿ ಮಾತುಗಳಿಲ್ಲ, ಬರಿಯ ನೃತ್ಯರೂಪಕ. ಕಟೀಲು ಮೇಳಕ್ಕೆ ಸೇರಿದ ನಂತರ ನಾಲ್ಕು ಕನ್ನಡ ಪ್ರಸಂಗಗಳನ್ನು ಬರೆದಿದ್ದ ಶ್ರೀಯುತರು (ದಾಶರಥಿ ದರ್ಶನ, ಮನುವಂಶವಾಹಿನಿ, ಸಾರ್ವಭೌಮ ಸಂಕರ್ಷಣ, ಮಹಾಸತಿ ಮಂದಾಕಿನಿ) ತುಳುವಿನಲ್ಲಿ ಪಟ್ಟದ ಮಣೆ ಎಂಬ ಒಂದು ಪ್ರಸಂಗವನ್ನೂ ಬರೆದಿದ್ದರು. ಅದಲ್ಲದೆ ಕೆಲವು ಸಣ್ಣ ಸಣ್ಣ ಪ್ರಸಂಗಗಳನ್ನೂ ಬರೆದಿದ್ದರು.


1995ರಲ್ಲಿ ‘ಯಕ್ಷಪ್ರಭಾ’ ಮಾಸಪತ್ರಿಕೆಯನ್ನು ಆರಂಭಿಸಿದ್ದರು. ಪತ್ರಿಕೆ ನಡೆಸಲು ಆರಂಭದಲ್ಲಿ ಬಹಳಷ್ಟು ಕಷ್ಟಪಟ್ಟಿದ್ದರು. ಈಗ ಅಲ್ಲಿಂದಲ್ಲಿಗೆ ನಡೆಯುತ್ತಾ ಉಂಟು ಅಂತ ಹೇಳುತ್ತಿದ್ದರು.


“ಪತ್ರಿಕೆಯನ್ನು ಲಾಭಕ್ಕೋಸ್ಕರ ಮಾಡಿದ್ದಲ್ಲ. 8 ವರ್ಷಗಳಿಂದ ದಿ| ದಾಮೋದರ ಮಂಡೆಚ್ಚ ಪ್ರಶಸ್ತಿ ಸಮಿತಿಯ ಸಂಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಗರಿ ಪ್ರಶಸ್ತಿ ಹಾಗೂ ಇತರ ಹಲವಾರು ಪ್ರಶಸ್ತಿ, ಸನ್ಮಾನಗಳು ಬಂದಿವೆ. ಆಮೇಲೆ ಕಲ್ಲಾಡಿ ವಿಠಲ ಶೆಟ್ಟರ ಜೀವನಚರಿತ್ರೆಯ ಬಗ್ಗೆ ಪ್ರಕಟವಾದ ಪುಸ್ತಕ “ಯಕ್ಷ ವಿಜಯ ವಿಠಲ”ದ ಸಂಪಾದಕನಾಗಿದ್ದೆ. ಮದುವೆಯಾದ ಬಳಿಕ ಭಾಗಮಂಡಲದ ಆಸ್ತಿಯನ್ನು ಮಾರಿ ಉಜಿರೆಯಲ್ಲಿ ಆಸ್ತಿ ಖರೀದಿಸಿ ಅಲ್ಲೇ ವಾಸ್ತವ್ಯ ಹೂಡಿದ್ದೇನೆ. ಇಬ್ಬರು ಮಕ್ಕಳಲ್ಲಿ ಮಗಳು ಶ್ರೀವಿದ್ಯಾ ಪತ್ರಿಕೋದ್ಯಮ ಪದವಿ ಪಡೆದು ಟಿವಿ9, ಈಟಿವಿಯಲ್ಲಿ ಕೆಲಸ ಮಾಡಿದ್ದಳು. ಅಳಿಯ ಸಿಂಗಾಪುರದಲ್ಲಿ ಸಾಫ್ಟ್‍ವೇರ್ ಉದ್ಯೋಗಿ. ಮಗ ಶ್ರೀಕಾಂತ ಕರ್ಣಾಟಕ ಬ್ಯಾಂಕ್ ನಲ್ಲಿ ಸಹಾಯಕ ಪ್ರಬಂಧಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಶ್ರೀ ಭೀಮ ಭಟ್ಟರ ಮುಂಬೈ, ಮಹಾರಾಷ್ಟ್ರದ ಮಳೆಗಾಲದ ತಿರುಗಾಟಗಳು ಹಾಗೂ ಶ್ರೀ ನಿಡ್ಲೆ ಗೋವಿಂದ ಭಟ್ಟರ ಮಳೆಗಾಲದ ತಿರುಗಾಟದ ಪ್ರಾರಂಭದ ವರ್ಷಗಳಲ್ಲಿ ಭಾಗವಹಿಸಿದ್ದೆ. ಆಮೇಲೆ ಪತ್ರಿಕೆಯ ಸಂಪಾದಕನಾಗಿ ಜವಾಬ್ದಾರಿ ಹೆಚ್ಚಿದುದರಿಂದ ಅನಿವಾರ್ಯವಾಗಿ ಹೋಗಲಾಗಲಿಲ್ಲ. ಅಗರಿ ಶ್ರೀನಿವಾಸ ಭಾಗವತರ ಸಂಪುಟ ಹೊತ್ತಗೆಯನ್ನು ಸಂಸ್ಕರಿಸಿ ಮುದ್ರಿಸುವಲ್ಲಿ ಸಹಕರಿಸಿದ್ದೇನೆ. ತೆಂಕುತಿಟ್ಟಿನ ಯಕ್ಷಗಾನದ ಕಟೀಲು ಮೇಳದ ಪ್ರಸ್ತುತ ಕಲಾವಿದರಲ್ಲಿ ಅತೀ ಹಿರಿಯನೂ, ತೆಂಕುತಿಟ್ಟಿನ ವೃತ್ತಿಪರ ಹಿರಿಯ ಕಲಾವಿದರಲ್ಲಿ ನಾನೂ ಒಬ್ಬನೂ ಎಂದು ಹೇಳಲು ಸಂತೋಷಿಸುತ್ತೇನೆ… ‘‘ಕೌಟುಂಬಿಕ ಕಾರಣಗಳಿಂದ ಒಮ್ಮೆ ಬಿಟ್ಟುಹೋದ ಯಕ್ಷಗಾನ ರಂಗಕ್ಕೆ ಮರಳಿದುದರಲ್ಲಿ ನನಗೆ ಬೇಸರವಿಲ್ಲ. ನಾನು ಅದರಿಂದಾಗಿ ಹಾಳಾಗಲಿಲ್ಲ. ಆರ್ಥಿಕವಾಗಿ ಕೆಲವೊಂದು ಬಾರಿ ಸಂಕಷ್ಟ ಎದುರಿಸಿದ್ದರೂ ಬೇರೇನೂ ಇಲ್ಲ. ಈಗ ಆಸ್ತಿ ಮನೆ ಎಲ್ಲ ಮಾಡಿದ್ದೇನೆ. ಕಲಾಸೇವೆಯ ಆತ್ಮತೃಪ್ತಿ ಇದೆ. ಮಕ್ಕಳೆಲ್ಲಾ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಕಲೆಯಿಂದಾಗಿ ಸನ್ಮಾನ. ಪ್ರಶಸ್ತಿ, ಗೌರವ ಎಲ್ಲವೂ ಬಂದಿದೆ. ಎಲ್ಲವುಗಳಿಂದ ಮುಖ್ಯ ವಾಗಿ ಜನರ ಅಭಿಮಾನ ಪ್ರೀತಿಯನ್ನು ಸಂಪಾದಿಸಿದ್ದೇನೆ…” ಎಂದು ಅಂದು ಮನಬಿಚ್ಚಿ ಮಾತನಾಡಿದ್ದರು.


ಮುಂದೆ ಭಾಗವತರಾಗ ಬಯಸುವವರಿಗೆ ನನ್ನ ಸಂದೇಶ “ಹಾಡುವುದಕ್ಕಾಗಿ ಯಕ್ಷಗಾನವನ್ನು ಆರಿಸಿಕೊಳ್ಳಬೇಡಿ, ಯಕ್ಷಗಾನಕ್ಕಾಗಿ ಹಾಡಿ” ಎಂಬುದಾಗಿ ಅಂದು ಹೇಳಿದ್ದ ಅವರು ಯಕ್ಷಗಾನಕ್ಕಾಗಿಯೇ ಹಾಡಿದರು. ಯಕ್ಷಗಾನದಲ್ಲಿಯೇ ತಮ್ಮ ಸಾರ್ಥಕ ಬದುಕನ್ನು ಕಂಡವರು.

ಬರಹ: ಮನಮೋಹನ್. ವಿ.ಎಸ್   

ಕಂಚಿನ ಕಂಠದ ಹಿರಿಯ ಬಾಗವತ ಮತ್ಯಾಡಿ ನರಸಿಂಹ ಶೆಟ್ಟಿ

(ಬಡಗುತಿಟ್ಟಿನ ಕಂಚಿನ ಕಂಠದ ಹಿರಿಯ ಬಾಗವತ ಮತ್ಯಾಡಿ ನರಸಿಂಹ ಶೆಟ್ಟಿ (95 ವರ್ಷ) ನಿನ್ನೆ (10-07-2021) ಕುಂದಾಪುರದ ಮತ್ಯಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರ ಕುರಿತು  ಪ್ರೊ| ಎಸ್.ವಿ.ಉದಯಕುಮಾರ ಶೆಟ್ಟಿ, ಮಣಿಪಾಲ ಅವರು 2018ರಲ್ಲಿ ಯಕ್ಷದೀಪ ಪತ್ರಿಕೆಯಲ್ಲಿ ಬರೆದ ಲೇಖನ)
ಶ್ರೀ ಮಂದಾರ್ತಿದಶಾವತಾರಯಕ್ಷಗಾನ ಮೇಳದಲ್ಲಿ ಸುಮಾರು 50 ವರ್ಷ ಕಲಾಸೇವೆ ಮಾಡಿದ 92ರ ಇಳಿವಯಸ್ಸಿನ ಹಿರಿಯ ಬಾಗವತರು ಬಡಗುತಿಟ್ಟಿನ ರಂಗಸ್ಥಳವನ್ನು ತಮ್ಮಕಂಚಿನ ಕಂಠದಿಂದ ಆಡಿಸಿದ ಹಿರಿಯ ಬಾಗವತ ಮತ್ಯಾಡಿ ನರಸಿಂಹ ಶೆಟ್ಟರು


ಇದು ಸುಮಾರು ಆರು ದಶಕಗಳ ಹಿಂದಿನ ಮಾತು. ಹಂಗಾರಕಟ್ಟೆಯಲ್ಲಿ ಮಂದರ್ತಿ ಮತ್ತು ಅಮ್ರತೇಶ್ವರೀ ಮೇಳಗಳ ಜೋಡಾಟ ತೀವ್ರ ಪೈಪೋಟಿಯಿಂದ ನೆಡೆದಿತ್ತು. ಸೈಂದವ ವದೆ ಪ್ರಸಂಗದಲ್ಲಿ ಸಮಸಪ್ತಕರನ್ನು ಸದೆ ಬಡಿದ ಅರ್ಜುನನಾಗಿ ಬಡಗುತಿಟ್ತಿನ ದಂತಕಥೆ ಹಾರಾಡಿ ದಿ.ಕುಷ್ಟ ಗಾಣಿಗರು ತನ್ನ ಪಾಳಯಕ್ಕಾಗಿ ಹಿಂದಿರುಗುವಾಗ ಮಂಗಳಾಂಗಿನಿಯರು ಆರತಿಯೆತ್ತಿ ಸ್ವಾಗತಿಸುತ್ತಾರೆ. ಬಾಗವತರು ‘ರತುನದಾರತಿಯೆತ್ತಿ…………”ಪದವನ್ನು ಏರುದ್ವನಿಯಲ್ಲಿ ಹಾಡುತಿದ್ದಂತೆ. ಅಪಶಕುನದ ಛಾಯೆ ಗುರುತಿಸಿದ ಅರ್ಜುನ ಆರತಿ ತಟ್ಟೆಯನ್ನು ಬಲಗೈಯಿಂದ ಎತ್ತಿ ಹಾರಿಸಿದಾಗ ಬಾಗವತರ ಸನಿಹದಲ್ಲೇ ತಟ್ಟೆ ಬಿತ್ತಾದರೂ ಅದೇ ತಾದಾತ್ಮ್ಯ ಹೊಂದಿ ಬಾಗವತರು ಹಾಡುತಿದ್ದರು. ಇಂದೆಲ್ಲಾ ಇದು ಗತ ವೈಭವವಾಗಿ ಕಂಡರೂ ಅಂದಿನ ಇಂತಹ ರಸ ರೋಮಾಂಚನಗೊಳಿಸುವ ಘಟನೆಗಳ ಸರಮಾಲೆಯನ್ನೇ ನಮ್ಮೆದುರು ತೆರೆದಿಡುವ ಹಿರಿಯ ಸಂಪ್ರದಾಯದ ಶೈಲಿಯ ಬಾಗವತರು ನಮ್ಮ ನಡುವೆ ಇದ್ದ ಬಡಗಿನ ಅತ್ಯಂತ ಹಿರಿಯ ವಯಸ್ಸಿನ ಮತ್ಯಾಡಿ ನರಸಿಂಹ ಶೆಟ್ಟರು.


ಕುಂದಾಪುರ ತಾಲೂಕಿನ ಯಕ್ಷಗಾನದ ಆಡೊಂಬಲವಾದ ಹಳ್ಳಾಡಿ ಸಮೀಪ ಯಡಾಡಿ-ಮತ್ಯಾಡಿ ಗ್ರಾಮದಲ್ಲಿ 1927ರಲ್ಲಿ ರಾಮಣ್ಣ ಶೆಟ್ಟಿ ಮುತ್ತಕ್ಕ ಶೆಡ್ತಿ ದಂಪತಿಗಳ ಪುತ್ರನಾಗಿ ಮದ್ಯಮ ವರ್ಗದ ಬಂಟ ಕುಟುಂಬದಲ್ಲಿ ಜನಿಸಿದ ಇವರ ಒಲವು ಯಕ್ಷಗಾನದತ್ತ ತಿರುಗಿದ್ದು ಅನೀರೀಕ್ಷಿತ. ಯಕ್ಷಗಾನ ರಂಗದ ಮಹಾನ್‍ ಕಲಾವಿದರ ಹಾಗೆ ಇವರ ವಿದ್ಯಾಬ್ಯಾಸ ಅರ್ಧಕ್ಕೆ ನಿಂತರೂ ಬಡಗುತಿಟ್ಟಿನ ಯಕ್ಷ ಸಾಮ್ರಾಜ್ಯಕ್ಕೆ ಇವರು ಸೂತ್ರದಾರಿಯಾದರು. ಗುರು ನಾರ್ಣಪ್ಪ ಉಪ್ಪೂರರಲ್ಲಿ ಶುದ್ದ ಸಾಂಪ್ರದಾಯದ ರಾಗ-ತಾಳ. ಮಟ್ಟು-ದಸ್ತುಗಳ ಪರಿಚಯ ಮಾಡಿಕೊಂಡ ಇವರು ಪ್ರಥಮವಾಗಿ ಮಲ್ಪೆ ಸಮೀಪದ ಕೊಡವೂರು ಮೇಳದಲ್ಲಿ ತಾಳ ಹಿಡಿದರು.

ಮುಂದೆ ಬಯಲಾಟ ಮೇಳವಾಗಿದ್ದ ಪೆರ್ಡೂರು ಮೇಳ ಸೇರಿದ ಇವರು ಅಲ್ಲಿ ಬಾಗವತರಾಗಿದ್ದ ಗುಂಡ್ಮಿ ರಾಮಚಂದ್ರ ನಾವಡರಿಂದ ಕುಂಜಾಲು ಶೈಲಿಯ ಬಾಗವತಿಕೆ ಅಬ್ಯಾಸ ಮಾಡಿದರು. ಅವರಿಂದ ರಂಗತಂತ್ರ, ಆಟವಾಡಿಸುವ ಕಲೆ ಕರಗತ ಮಾಡಿಕೊಂಡ ಇವರು ಪುನಹ ತನ್ನ ಗುರುಗಳಿದ್ದ ಅಮೃತೇಶ್ವರೀ ಮೇಳಕ್ಕೆ ಸೇರಿದರು.ಇಲ್ಲಿ ಅವರ ಬಾಗವತಿಕೆಯ ಮಟ್ಟುಗಳು ಗಟ್ಟಿಗೊಂಡವು. ಬಳಿಕ ನೇರವಾಗಿ ಪ್ರಸಿದ್ದ ಬಯಲಾಟ ಮೇಳವಾದ ಮಂದಾರ್ತಿ ಮೇಳದಲ್ಲಿ ನಾಲ್ಕು ದಶಕಗಳಷ್ಟು ಕಾಲ ಸೇವೆ ಸಲ್ಲಿಸಿದ ಶೆಟ್ಟರು ಅಲ್ಲಿನ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಬಡಗುತಿಟ್ಟಿನ ಅವಿಸ್ಮರಣೀಯ ಕಲಾವಿದರಾದ ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ನಾರಾಯಣ ಗಾಣಿಗ ಕೊಕ್ಕರ್ಣೆ ನರಸಿಂಹ ಕಾಮತ್, ಕೊರ್ಗು ಹಾಸ್ಯಗಾರ ಉಡುಪಿ ಬಸವ ವೀರಭದ್ರ ನಾಯಕ್ ಹೀಗೆ ನಾವು ಕಾಣದ ಕೇಳದ ಮಹಾನ್‍ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಇವರಿಗಿದೆ. ಮೂರು ತಲೆಮಾರಿನ ಕಲಾವಿದರನ್ನು ರಂಗದಲ್ಲಿ ದೀಗಣ ಹಾಕಿಸಿದ ಇವರು ಅಂದಿನ ಹಾರಾಡಿ ತಿಟ್ಟಿನ ಜಾಪು-ಛಾಪು, ಮಟ್ಪಾಡಿ ತಿಟ್ಟಿನ ನರ್ತನ ಆಂಗಿಕ ಚಲನೆ ಈಗಿನವರಲ್ಲಿಲ್ಲ ಎಂದು ವ್ಯಥೆ ಪಡುತ್ತಾರೆ. ಇದು ಇಂದು ಆದುನೀಕರಣಗೊಂಡ ಯಕ್ಷಗಾನದ ಬಗ್ಗೆ ಬೇಸರದ ಬಾವವನ್ನು ಸೂಚಿಸುತ್ತದೆ.


ಹಲವಾರು ತಿರುಗಾಟವನ್ನು ರಾಮ ಗಾಣಿಗರ ಯಜಮಾನಿಕೆಯಲ್ಲಿ ನೆಡೆಸಿದ ಶೆಟ್ಟರು ತಮ್ಮ ಬಹುತೇಕ ತಿರುಗಾಟವನ್ನು ವಿದ್ಯುದ್ದೀಪವಿಲ್ಲದೆ ದೊಂದಿ ಬೆಳಕಿನಲ್ಲಿ, ದ್ವನಿವರ್ದಕವಿಲ್ಲದೆ ಕಳೆದವರು. ಇದೊಂದು ಕೊರತೆಯೋ ಲೋಪವೋ ಎಂದು ಆಗ ಅವರಿಗೆ ಅನಿಸಿದ್ದಿಲ್ಲ. ಸುಮಾರು 50 ಪೌರಾಣಿಕ ಪ್ರಸಂಗಗಳು ಕಂಠ ಪಾಠವಿರುವ ಇವರಿಗೆ ಸುದನ್ವಾರ್ಜುನ, ಮೈರಾವಣ ಕಾಳಗ, ಅತಿಕಾಯ, ಕರ್ಣಾರ್ಜುನ ಪ್ರಸಂಗವೆಂದರೆ ಅಚ್ಚುಮೆಚ್ಚು. ವೀರಭದ್ರ ನಾಯಕರ ಅತಿಕಾಯ, ಶಿರಿಯಾರ ಮಂಜು ನಾಯ್ಕರ ದೇವವ್ರತ, ಕೊರ್ಗು ಹಾಸ್ಯಗಾರರ ಬಾಹುಕ, ಹಳ್ಳಾಡಿ ಮಂಜಯ್ಯ ಶೆಟ್ಟರ ಋತುಪರ್ಣ, ಉಡುಪಿ ಬಸವನವರ ಚಿತ್ರಸೇನ, ಕೊಕ್ಕರ್ಣೆ ನರಸಿಂಹನವರ ಶಶಿಪ್ರಭೆ, ಹಾರಾಡಿ ರಾಮನವರ ಹಿರಣ್ಯಕಶ್ಯಪು, ಕರ್ಣ, ಜಾಂಬವ, ಕುಷ್ಟ ಗಾಣಿಗರ ಪುಷ್ಕಳ ಅರ್ಜುನ ನಾರಾಯಣ ಗಾಣಿಗರ ಕಯಾದು, ಕೃಷ್ಣ ಮುಂತಾದ ಪಾತ್ರಗಳನ್ನು ರಂಗದಲ್ಲಿ ಕುಣಿಸಿದ ತೃಪ್ತಿ ಇವರಿಗಿದೆ.


ಜೋಡಾಟದಲ್ಲಿಯೂ ನಿಷ್ಣಾತರಾದ ಇವರು ವಿಪರ್ಯಾಸವೆಂಬಂತೆ ತಮ್ಮಗುರು ಉಪ್ಪೂರರ ಎದುರಿಗೆ ಪದ್ಯ ಹೇಳಬೇಕಾಗಿ ಬಂದಿದ್ದು ವಿಶೇಷ ಅಲ್ಲಿಯೂ ಸಹ ಗುರುವಿನಿಂದ ಸೈ ಎಣಿಸಿಕೊಂಡ ಇವರು ಇಂದಿಗೂ ಸಹ ಎಲೆಮರೆಯ ಕಾಯಿಯಂತೆ ತಮ್ಮ ಕಂಠಸಿರಿಯನ್ನು  ವಿಕೃತಗೊಳಿಸದೆ ಲಯಬದ್ದವಾಗಿ ಹಾಡಬಲ್ಲರು. ಸರಿ ಸುಮಾರು ಅರ್ದ ಶತಮಾನಗಳ ಕಾಲ ಬಯಲುಗದ್ದೆಯ ನಾಲ್ಕು ಕಂಬದ ನಡುವೆ ಬಡಗುತಿಟ್ಟನ್ನು ಶ್ರೀಮಂತಗೊಳಿಸಿದ ಶೆಟ್ಟರ ಖಾಸಗಿ ಬದುಕು ಮಾತ್ರ ಶ್ರಿಮಂತವಾಗಲಿಲ್ಲ ಎನ್ನುವುದೆ ದೌರ್ಬಾಗ್ಯ.


ನರಸಿಂಹ ಶೆಟ್ಟರನ್ನು ಹುಡುಕಿಕೊಂಡು ಬಂದ ಸನ್ಮಾನ ಪ್ರಶಸ್ತಿಗಳು ಹಲವಾರು.ಉಡುಪಿ ಯಕ್ಷಗಾನಕಲಾರಂಗದಲ್ಲಿ ದಿ.ಉಪ್ಪೂರರ ಬಂದುಗಳು ಸ್ಥಾಪಿಸಿದ ಪ್ರಥಮ ವರ್ಷದ ಪ್ರಶಸ್ತಿ ಇವರಿಗೆ ಸಂದಿದೆ. ಸೀತಾನದಿ ಪ್ರಶಸ್ತಿ. ಕುಂದಾಪುರದ ಎಂ.ಎಂ.ಹೆಗ್ಡೆ ಪ್ರಶಸ್ತಿ. ಬಣ್ಣದ ಸಕ್ಕಟ್ಟು ಪ್ರತಿಷ್ಟಾನದ ಪ್ರಶಸ್ತಿ ಅಲ್ಲದೆ ಕಳೆದ ಸಾಲಿನ ಕರ್ನಾಟಕ ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ದಯಾನಂದ ಪೈ ಸತೀಶ ಪೈ ಅದ್ಯಯನ ಪೀಠದ ವತಿಯಿಂದ ನೀಡಲ್ಪಡುವ ಪ್ರತಿಷ್ಟಿತ ಯಕ್ಷ ಮಂಗಳ ಪ್ರಶಸ್ತಿ ಇವರಿಗೆ ಸಂದಿದೆ.

ಲೇಖಕ: ಪ್ರೊ| ಎಸ್.ವಿ.ಉದಯಕುಮಾರ ಶೆಟ್ಟಿ,
ಮಣಿಪಾಲ, ಪೋನ್ 9449367729

ಅಪರೂಪದ ಪ್ರತಿಭಾ ಸಂಪನ್ನ ದಾಸರಬೈಲು ಚನಿಯ ಭಾಗವತರು

(ದಾಸರಬೈಲು ಚನಿಯ ಭಾಗವತರು ವಿಧಿವಶರಾದ ಸಂದರ್ಭದಲ್ಲಿ ಬರೆದ ಲೇಖನವಿದು)

ಯಕ್ಷಗಾನ ರಂಗದಲ್ಲಿ ಭಾಗವತನೇ ಸೂತ್ರಧಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವನು “ಭಾಗವತ”ನಾಗಿರಬೇಕೆಂಬುದು ಮುಖ್ಯ. ಯಕ್ಷಗಾನ ಕಲೆಗೆ ಆಧಾರಸ್ಥಂಭವಾಗಿರುವ “ಸಭಾಲಕ್ಷಣ”ದಲ್ಲಿ ಹೇಳಿರುವ “ಭಾಗವತ” ಪದಲಕ್ಷಣಗಳನ್ನೊಳಗೊಂಡು ಆಶುಕವಿತ್ವ, ಹಿಮ್ಮೇಳ ಮುಮ್ಮೇಳಗಳ ನಿಖರವಾದ ಜ್ಞಾನವಿದ್ದು ಬಿಳಿನಾಲ್ಕು, ಕಪ್ಪು ಮೂರರ ಶೃತಿಯಲ್ಲಿ ಹಾಡಬಲ್ಲ ಭಾಗವತನು ಸುಖಕರವಾದ ಕಂಠತ್ರಾಣವನ್ನೂ ಹೊಂದಿರಬೇಕು.

ಹೀಗೆ ಹಲವು ಅರ್ಹತೆಗಳಿಂದ ಕೂಡಿರಬೇಕಾದ “ನಿಜಭಾಗವತ”ರ ಸಂಖ್ಯೆ ಇಂದು ಇಳಿಮುಖವಾಗಿ ಪಾತ್ರಧಾರಿಗಳು ಮಾತ್ರವಲ್ಲ ವ್ಯವಸ್ಥಾಪಕರು ಕೂಡಾ ರಂಗ ನಿಯಂತ್ರಣದಲ್ಲಿ ಕಾಣಿಸಿಕೊಳ್ಳುವಂತಾಗಿದೆ. ಅರ್ಥಧಾರಿಗಳು, ವೇಷಧಾರಿಗಳು, ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಆ ಪದ್ಯವನ್ನು ಬಿಡಿ, ಈ ಪದ್ಯವನ್ನು ಹೇಳಿ, ಅಲ್ಲಿ ಮೂರು ಮುಕ್ತಾಯ ಕೊಡಿ, ಅದಕ್ಕೆ ಬಿಡಿತ ಬೇಡ, ಇತ್ಯಾದಿ ಕಟ್ಟಪ್ಪಣೆಯೊಂದಿಗೆ “ಭಾಗವತ” ನನ್ನು ನಿಯಂತ್ರಿಸುವುದಕ್ಕೆ ತೊಡಗುತ್ತಿರುವುದು ಇತ್ತೀಚೆಗೆ ಅಧಿಕವಾಗಿ ಕಂಡುಬರುತ್ತಿರುವುದೂ ಒಂದು ಕಾರಣವಾಗಿ ಪ್ರಾಯಶಃ ಅದು ಹೊಸ ತಲೆಮಾರಿನ ಕೆಲವು ಭಾಗವತರ ಜವಾಬ್ದಾರಿಯುತ ಬೆಳವಣಿಗೆಗೆ ತೊಡಕಾಗುತ್ತಿದೆಯೆ? ಇದು ಗಮನಿಸಬೇಕಾದ ವಿಚಾರ.


ಇವೆಲ್ಲದರ ನಡುವೆಯೂ ಮೆರೆದ ಸಮರ್ಥ ಭಾಗವತರಲ್ಲೊಬ್ಬರಾದ ದಿ| ದಾಸರಬೈಲು ಚನಿಯ ನಾಯ್ಕರು ಅಲ್ಲಿ ಮತ್ತೆ ತನ್ನದೇ ಆದ ಒಂದು ಪ್ರತ್ಯೇಕ ಸ್ಥಾನದಲ್ಲಿ ವಿಜೃಂಭಿಸುತ್ತಾರೆ. ನಾನು ತಿಳಿದಂತೆ ಹಾಗಿತ್ತು ಅವರ ಭಾಗವತ ಪ್ರತಿಭೆ. ಪ್ರತಿಭೆಗಿಂತ ಹೆಚ್ಚಿನ ಪ್ರಕಾಶಕ್ಕೆ ಒದ್ದಾಡುವ, ಚಡಪಡಿಸುವ, ಕಲಾವಿದರ ಸಂಖ್ಯೆಯೇ ಅಧಿಕವಾಗಿರುವ ಈ ಕಾಲಘಟ್ಟದಲ್ಲಿ ಚನಿಯ ಭಾಗವತರ ಹೆಸರು ಹಿಂದೆ ಬಿದ್ದುದರಲ್ಲಿ ಆಶ್ಚರ್ಯವಿಲ್ಲ. “ಎಲೆಮರೆಯ ಹಣ್ಣು” “ನಿರಾಡಂಬರ” “ಸರಳ” “ಸಜ್ಜನ” ಇತ್ಯಾದಿ ಶಬ್ದಗಳಿಗೆ ಯಕ್ಷಗಾನ ಕಲಾ ಭೂಮಿಕೆಯಲ್ಲಿ ಪರ್ಯಾಯವಾಗಿ ಚನಿಯ ನಾಯ್ಕರ ಹೆಸರನ್ನು ಬೆಟ್ಟುಮಾಡಿ ತೋರಿಸಬಹುದು.


ಮೋಹಕವಾದ ಚನಿಯ ಭಾಗವತರ ಹಾಡುಗಾರಿಕೆ ಭಾವತನ್ಮಯತೆಯಿಂದ ಕೂಡಿರುತಿತ್ತು. ಪಾತ್ರಧಾರಿಯಲ್ಲಿ ಅಡಗಿದ್ದ ಅಂತಃಸತ್ವವನ್ನು ಹೊರಗೆಳೆಯುವ ವಿಶೇಷವಾದ ಶಕ್ತಿ ಅವರ ಭಾಗವತಿಕೆಯಲ್ಲಿತ್ತು. ಅವರ ಹಾಡುಗಾರಿಕೆಯಲ್ಲಿ ಪ್ರೇಕ್ಷಕನಿಗೆ ಸಿಗುವ ಸುಖಾನುಭವವೇ ಬೇರೆ. “ಭಾಗವತ” ಸ್ಥಾನವನ್ನುಳಿಸಿಕೊಂಡು ಮೇಳಗಳಲ್ಲಿಯೂ ಹವ್ಯಾಸಿಯಾಗಿಯೂ ಸಂಚರಿಸಿದ ಚನಿಯ ಭಾಗವತರ ಕಲಾ ಸಂಸ್ಕಾರದ ಹರಹು ಸಣ್ಣದಲ್ಲ. ನ್ಯಾಯವಾಗಿ ಸಿಗಬೇಕಾಗಿದ್ದ ಸ್ಥಾನ ಗೌರವ ಅವಕಾಶಗಳಿಂದ ಅವರು ವಂಚಿತರಾಗಿದ್ದರೂ ನಿಜ ಕಲಾವಿದನಾಗಿದ್ದ ಅವರಿಗೆ ಅದರ ಗೊಡವೆಯೇ ಇರಲಿಲ್ಲ. ಇದು ಯಕ್ಷಗಾನ ರಂಗದ ದುರ್ವಿಧಿ ಎನ್ನದೆ ವಿಧಿಯಿಲ್ಲ. ಆ ಕಾರಣವೇ ಇಂದು ಅವರು ನಮ್ಮಿಂದ ಭೌತಿಕವಾಗಿ ದೂರವಾದರೂ ಅವರ ನೆನಪೆಂಬ ಸಾಮೀಪ್ಯಭಾವ ನಮ್ಮ ಚಿತ್ತದಲ್ಲಿ ಸದಾ ಉಳಿಯುವಂತಾಗಿದೆ.


ಭೀಷ್ಮಾರ್ಜುನ ಪ್ರಸಂಗದಲ್ಲಿ ಶ್ರೀಕೃಷ್ಣನು ಚಕ್ರಧಾರಿಯಾಗುವ ಸಂದರ್ಭದಲ್ಲಿ ಭೀಷ್ಮನಿಗೆ “ಅಕ್ಷಯಾತ್ಮಕ ಕೇಶವ” ಎಂಬ ಒಂದು ಪದ್ಯವಿದೆ. ಹೆಚ್ಚಾಗಿ ತಾಳಮದ್ದಳೆ ಕೂಟದ ಈ ಪ್ರಸಂಗದ ಈ ಪದ್ಯವನ್ನು ಹಲವಾರು ಭಾಗವತರು ಹಾಡುವುದನ್ನು ನಾನು ಕೇಳಿದ್ದೆ. ದಾಸರಬೈಲು ಚನಿಯ ಭಾಗವತರ ಪರಿಚಯವಾದಂದು ಪ್ರಥಮತಃ ಆ ಪದ್ಯವನ್ನು ಅವರ ಕಂಠಶ್ರೀಯಲ್ಲಿ ಕೇಳಿದಾಗ ಆರಂಭದಲ್ಲಿ ಒಂದೆರಡು ಪದ್ಯಗಳನ್ನು ಹೇಳಿ ಪ್ರೇಕ್ಷಕನಾಗಿ ಕುಳಿತಿದ್ದ ನನಗೆ ರೋಮಾಂಚನವಾಯಿತು. ಭಾವಸ್ಪಂದಿಯಾದ ಆ ಹಾಡಿನಲ್ಲಿ ಅಂತಹಾ ಒಂದು ಸೆಳೆತವಿತ್ತು. ಆ ಮೊದಲು ಮತ್ತು ಆ ಮತ್ತೆ ನಾನು ಕೇಳಿದ ಯಾವ ಭಾಗವತರ “ಅಕ್ಷಯಾತ್ಮಕ ಕೇಶವ”ವೂ ಚನಿಯ ಭಾಗವತರ ಆ ಪದ್ಯದ ಸ್ಥಾನಕ್ಕೆ ಮುಟ್ಟಲಿಲ್ಲ ಎಂಬುದು ಈಗಲೂ ನನ್ನ ಅನಿಸಿಕೆ.

“ಸಾಮ” ರಾಗದಲ್ಲಿ ಆ ಪದ್ಯವನ್ನು ಅವರು ಹಾಡುತ್ತಿದ್ದರು. ಮತ್ತೆ ಹಲವು ಬಾರಿ ಕೇಳಿದ್ದೇನೆ ಅವರ ಅಕ್ಷಯಾತ್ಮಕ. ಅದೇ ರಾಗ, ಅದೇ ಸಂಚಾರ, ಅದೇ ರೀತಿ. ಚನಿಯ ನಾಯ್ಕರ ವಿಶೇಷತೆ ಇರುವುದು ಅಲ್ಲೆ. ಅವರು ಒಂದು ಪ್ರಸಂಗದ ಆಟಕೂಟಗಳ ಭಾಗವತನಾಗಿ ಭಾಗವಹಿಸಬೇಕಿದ್ದರೆ ಪ್ರಸಂಗವನ್ನು ತನ್ನ ಹಸ್ತಪ್ರತಿಯಲ್ಲಿ ಸಿದ್ಧಗೊಳಿಸಿ, ರಾಗ, ತಾಳ, ಲಯವನ್ನು ನಿರ್ಣೈಸಿ ಗಟ್ಟಿಯದಾದ ಸಿದ್ಧತೆಯೊಂದಿಗೆ ರಂಗವನ್ನು ಏರುತ್ತಿದ್ದರು. ಅವರು ಹಾಗೆ ಒಂದು ಪ್ರಸಂಗವನ್ನು ‘ಸೆಟ್’ ಮಾಡಿ ಇಟ್ಟುಕೊಂಡರೆ ಮತ್ತೆ ಅದು ‘ಪರ್ಮನೆಂಟ್’. ಕಾಲಗತಿಗೆ ಹೊಂದಿ ನಾಯ್ಕರು ತಾಳ, ಲಯ ವ್ಯತ್ಯಾಸ ಮಾಡಿದರೂ ರಾಗವನ್ನು ವ್ಯತ್ಯಾಸ ಮಾಡುತ್ತಿರಲಿಲ್ಲ.

ಹೀಗೆ ನಿಯತ್ತಿನ ರಂಗ ಮರ್ಯಾದೆಗೆ ಬದ್ಧರಾಗಿದ್ದ ಚನಿಯ ಭಾಗವತರ ನೆನಪು ಎಂದೆಂದೂ ಮರೆಯಲಾರದ್ದು ಮತ್ತು ಮರೆಯಬಾರದ್ದು. ಅವರಿಗೆ ಚೆಂಡೆ ಮದ್ದಳೆಗೆ ಯಾರೂ ಆದೀತು. ಅಭ್ಯಾಸಿಗಳಾದರೂ ಸುಧಾರಿಸಿಯಾರು. ದೊಡ್ಡ ಮದ್ದಳೆಗಾರರು, ತಾಳ ಕಸರತ್ತು ಪ್ರವೀಣರು ಯಾರೇ ಆದರೂ ಅವರು ಅಧೀರರಾಗರು. ಕಾರಣ ಅವರ ತಾಳ, ಲಯ ಅಷ್ಟು ಗಟ್ಟಿ. ಹಿಂದೆ ಮುಂದೆ ಓಡುವ ಚೆಂಡೆಮದ್ದಳೆಯವರನ್ನು ಎಳೆದು ಸರಿದಾರಿಗೆ ಕೊಂಡು ಹೋಗುವ ಶ್ರಮ ಅವರ ಕ್ರಮ, ಹಿರಿಯ ಕಲಾವಿದರಿಗೆ ಕೊಡುವ ಗೌರವ ಇತ್ಯಾದಿ ಅನುಸರಣೀಯ ಗುಣಗಳ ಗಣಿಯಾಗಿದ್ದ ನಾಯ್ಕರ ನೆನಪು ತೆರೆಯುತ್ತಾ ಹೋದಂತೆ ಮೆರೆಯುತ್ತಾ ಹೋಗುತ್ತದೆ.

ನಮ್ಮ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ನಿಕಟವರ್ತಿಯಾಗಿ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲಿ ನಮ್ಮ ತಂದೆಯವರ ಕಾಲದಿಂದಲೇ (ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್) ಭಾಗವಹಿಸುತ್ತಿದ್ದ ಅವರು ತಂದೆಯವರ ಹೆಚ್ಚಿನ ಪ್ರಸಂಗಗಳನ್ನು ರಂಗದಲ್ಲಿ ಆಡಿಸಿದವರು ಮತ್ತು ಅವರನ್ನು ಗುರುಭಾವದಿಂದ ಗೌರವಿಸುತ್ತಿದ್ದವರು. ನಮ್ಮ ಮನೆಯಲ್ಲಿ, ಕಲಾಮಂದಿರದಲ್ಲಿ ನಿತ್ಯ ಚೆಂಡೆಮದ್ದಳೆ ನಾದ ಮೊಳಗುತ್ತಿದ್ದ ಕಾಲವದು. ಭಾಗವತ ಚನಿಯ ನಾಯ್ಕರೂ ಒಂದೆರಡು ದಿನ ನಮ್ಮಲ್ಲಿ ಉಳಿದದ್ದಿದೆ. ಹಾಗಿತ್ತು ಅವರ ಕಲಾ-ಜೀವನ-ಕಲಾಪ್ರೇಮ. ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ವಿಶೇಷ ಪ್ರಶಂಸೆಗೆ ಪಾತ್ರರಾದ ಕೆಲವೇ ಮಂದಿ ಕಲಾವಿದರಲ್ಲಿ ಒಬ್ಬರಾದ ಚನಿಯ ನಾಯ್ಕರು ದಿ| ಕೀರಿಕ್ಕಾಡು ಸಂಸ್ಮರಣಾ ಸನ್ಮಾನದಲ್ಲಿ ಸನ್ಮಾನಿತರಾಗಿರುವುದು ನಮ್ಮ ಬನಾರಿ ಯಕ್ಷಗಾನ ಕಲಾಸಂಘಕ್ಕೆ ಸಂತೃಪ್ತಿಯನ್ನು ಕೊಟ್ಟಿದೆ.

ನನ್ನ ಅನುಭವದಂತೆ ಹೆಸರಾಂತ ಅರ್ಥಧಾರಿಗಳ ಮಡಿವಂತಿಕೆ, ಭಾಗವತರ ಜಾತಿ, ಬಾಹ್ಯ ಸೌಂದರ್ಯ, ತೀವ್ರ ಬಡತನ ಇತ್ಯಾದಿಗಳೆಲ್ಲ ಕಾರಣವಾಗಿಯೋ ಏನೋ ಚನಿಯ ಭಾಗವತರಲ್ಲಿ ಒಂದು ರೀತಿಯ ಹಿಂಜರಿಕೆ ಕಾಣುತ್ತಿತ್ತು. ದೊಡ್ಡಸೆಟ್ಟಿನ ಒಂದು ತಾಳಮದ್ದಳೆಯಲ್ಲಿ ಅವರು ಭಾಗವತರಾಗಿ ಭಾಗವಹಿಸಿದ್ದರು. ಸುಧನ್ವ ಕಾಳಗ ಪ್ರಸಂಗದ ಅಂದಿನ ಅವರ ಹಾಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಆ ಮತ್ತೆ ನಾವೊಮ್ಮೆ ಭೇಟಿಯಾದಾಗ ಅವರು (ನಮ್ಮ ಹವ್ಯಕ ಭಾಷೆ ಅವರಿಗೆ ಚೆನ್ನಾಗಿ ಬರುತ್ತಿತ್ತು) “ಅಣ್ಣಾ ಇನ್ನು ಎನ್ನ ಅಂದ್ರಾಣ ಹಾಂಗಿಪ್ಪ ದೊಡ್ಡ ಸೆಟ್ಟಿನ ತಾಳಮದ್ದಳೆಗೆ ಹೇಳೆಡಿ. ಸಣ್ಣ ಸೆಟ್ ಹೇಂಗಿಪ್ಪದೂ ಅಕ್ಕು ಬತ್ತೆ” ಎಂದಿದ್ದರು. ಆಗ ನನ್ನ ಮನಸ್ಸು ಆ ದೊಡ್ಡ ಸೆಟ್ಟಿನ! ಸುಧನ್ವ ಕಾಳಗವನ್ನು ಮೆಲುಕು ಹಾಕಿತು. ಅವರು ಹೇಳಿದ ಮಾತಿನ ಮರ್ಮವೂ ಅರ್ಥವಾಯಿತು.

ಹೌದು. ಅಂದು ಪೂರ್ವನಿಶ್ಚಯದಂತೆ ವೇದಿಕೆಯಲ್ಲಿ ನಡೆಯಬೇಕಾಗಿದ್ದ (ಕರಪತ್ರದಲ್ಲಿ ಮಾತ್ರವಲ್ಲ ಕಾರ್ಯಕ್ರಮದ ಅಂದಿನ ಪಾತ್ರವಿವರಣೆಯಲ್ಲಿ ಕೂಡ) ಸುಧನ್ವಕಾಳಗ ಮತ್ತು ರಾವಣ ವಧೆ ಪ್ರಸಂಗದಲ್ಲಿ ದೊಡ್ಡ ಅರ್ಥಧಾರಿಗಳ ಕೈಯ್ಯಾಡಿಸುವಿಕೆಯಿಂದ ಸುಧನ್ವ ಕಾಳಗ ಮಾತ್ರ ಬೆಳಗಾದ ಮೇಲೆ ಹೇಗೋ ಮುಕ್ತಾಯವಾಗಿತ್ತು. ಚನಿಯ ನಾಯ್ಕರ ಭಾಗವತಿಕೆಗೆ ಮತ್ತು ಒಂದಿಬ್ಬರು ಉದಯೋನ್ಮುಖ ಪ್ರತಿಭಾವಂತ ಅರ್ಥಧಾರಿಗಳ ಉತ್ಸಾಹಕ್ಕೆ ತಣ್ಣೀರೆರಚಿದ ಹಿರಿಯ ಅರ್ಥಧಾರಿಗಳೇ ಅದಕ್ಕೆ ಹೊಣೆಗಾರರೆಂಬ ಸತ್ಯತೆಯ ನೆನಪಾಯಿತು. ಇಂತಹಾ ಕಾರಣಗಳೇ ಕಾರಣವಾಗಿ ಚನಿಯ ಭಾಗವತರು ಮತ್ತೆ ಹೆಸರಾಂತ ದೊಡ್ಡ ಸೆಟ್ ನ ತಾಳಮದ್ದಳೆಯಲ್ಲಿ ಭಾಗವಹಿಸಲೇ ಇಲ್ಲ ಎಂಬುದು ನನ್ನ ನೆನಪು. ಆಮಂತ್ರಿಸಿದರೂ ನಯವಾಗಿ ತಿರಸ್ಕರಿಸಿ ಬಿಡುತ್ತಿದ್ದರು.

ಧರ್ಮಸ್ಥಳ ಮೇಳದಲ್ಲಿ ಆರಂಭದ ಸಂಗೀತಗಾರನಾಗಿಯೂ ಮತ್ತೆ ಮೊದಲ ಭಾಗದ ಭಾಗವತನಾಗಿಯೂ ಕಡತೋಕ ಭಾಗವತರೊಂದಿಗೆ ತಿರುಗಾಟ ಮಾಡಿದ ಚನಿಯ ನಾಯ್ಕರು ಚೌಡೇಶ್ವರಿ ಮೇಳದ ಭಾಗವತರಾಗಿ ಕೆಲವು ವರ್ಷ ವ್ಯವಸಾಯ ಮಾಡಿದವರು. ಹೆಚ್ಚಿನ ಕಾಲ ಹವ್ಯಾಸಿ ರಂಗದಲ್ಲಿಯೇ ಕಾಣಿಸಿಕೊಂಡ ದಾಸರಬೈಲು ಚನಿಯ ಭಾಗವತರು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಬಹಳ ದೊಡ್ಡದು. ಕೆಲವು ಮಂದಿ ಶಿಷ್ಯರನ್ನು ತಯಾರು ಮಾಡಿದ ಇವರಿಂದ ಪ್ರಭಾವಿತರಾದ ಕಲಾಗಡಣ ಸಣ್ಣದಲ್ಲ. ಅನಾರೋಗ್ಯದಿಂದ ಕಷ್ಟದಲ್ಲಿದ್ದ ತನ್ನ ಮಧ್ಯಪ್ರಾಯದಲ್ಲೇ ವಿಧಿವಶರಾದ ದಾಸರಬೈಲು ಚನಿಯ ನಾಯ್ಕರು ಬಾಳಿನಲ್ಲಿ ಸಾಕಷ್ಟು ಕಹಿಯನ್ನುಂಡು ಕಲಾರಂಗಕ್ಕೂ, ಪ್ರೇಕ್ಷಕರಿಗೂ ಸಿಹಿಯೂಟವನ್ನುಣಿಸಿದ ಅಪರೂಪದ ಪ್ರತಿಭಾಸಂಪನ್ನ ಕಲಾವಿದ.

ಲೇಖಕ: ಕೆ.ವಿಶ್ವವಿನೋದ ಬನಾರಿ
‘ಬನಸಿರಿ’ ದೇಲಂಪಾಡಿ
ಅಂಚೆ: ಪಂಜಿಕಲ್ಲು 671543
ಕಾಸರಗೋಡು ಜಿಲ್ಲೆ.