Saturday, March 14, 2026
Home Blog Page 298

ಚಕ್ರೇಶ್ವರ ಪರೀಕ್ಷಿತ Live – ಇಂದು ಕುಡುಪುವಿನಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಆಟ

ಸಾಂದರ್ಭಿಕ ಚಿತ್ರ 

ಇಂದು 17.11.2021ರ ಬುಧವಾರ ರಾತ್ರಿ 7.30ಕ್ಕೆ ಸರಿಯಾಗಿ ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಚಕ್ರೇಶ್ವರ ಪರೀಕ್ಷಿತ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಹಿಮ್ಮೇಳ: ಪುತ್ತಿಗೆ ರಘುರಾಮ ಹೊಳ್ಳ, ರವಿಚಂದ್ರ ಕನ್ನಡಿಕಟ್ಟೆ, ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ, ಪದ್ಮನಾಭ ,ಉಪಾಧ್ಯಾಯ, ಮುರಾರಿ ಕಡಂಬಳಿತ್ತಾಯ, ಮುರಾರಿ ಸುಬ್ರಹ್ಮಣ್ಯ ಭಟ್ ಪಂಜಿಗದ್ದೆ

ಹಾಸ್ಯ: ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮ್ ಕುಮಾರ್ ಕಟೀಲು. 

ಮುಮ್ಮೇಳ: ಪರೀಕ್ಷಿತ: ಸುಬ್ರಾಯ ಹೊಳ್ಳ  ಕಾಸರಗೋಡು,ಜನಮೇಜಯ: ಸುಣ್ಣಂಬಳ ವಿಶ್ವೇಶ್ವರ ಭಟ್, ಶಮೀಕ ಋಷಿ: ವಾಟೆಪಡ್ಪು ವಿಷ್ಣು ಶರ್ಮ, ಕಲಿಪುರುಷ: ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಇರಾವತಿ : ರವಿ ಅಲೆವೂರಾಯ ವರ್ಕಾಡಿ, ರಕ್ತಾಕ್ಷ: ಹರಿನಾರಾಯಣ ಭಟ್ ಎಡನೀರು, ಮಂತ್ರಿ: ಉಮೇಶ ಕುಪ್ಪೆಪದವು, ಸೇನಾಧಿಪತಿ: ಅಕ್ಷಯ ಸುವರ್ಣ,

ಜನಮೇಜಯನ ತಮ್ಮಂದಿರು: ರವಿ ಭಟ್ ನೆಲ್ಯಾಡಿ, ವೃಷಭ್ ಶೆಟ್ಟಿ, ದೇವೇಂದ್ರ: ಅರಳ ಗಣೇಶ್ ಶೆಟ್ಟಿ, ಶೃಂಗಿ: ಪ್ರೇಮರಾಜ್ ಕೊಯಿಲ, ತಕ್ಷಕ: ಲಕ್ಷ್ಮಣ ಕುಮಾರ್ ಮರಕಡ, ವನಪಾಲಕರು: ಚಿಂತನ್ ಆರ್.ಕೆ, ಚಿರಾಗ್ ಆರ್.ಕೆ, ಆಸ್ತೀಕ: ಮುಕ್ಕ ರಾಮಚಂದ್ರ, ಗುರುವಾಯಾರಪ್ಪ: ಶ್ರೀ ಸಂದೀಪ್ ಶೆಟ್ಟಿ ದೋಟ. 

ವೇಷಭೂಷಣ: ಶ್ರೀ ಗಣೇಶ ಕಲಾವೃಂದ, ಪೈವಳಿಕೆ. ಸಂಯೋಜನೆ: ಶ್ರೀಕೃಷ್ಣ ಯಕ್ಷಸಭಾ ಮಲ್ಲಿಕಟ್ಟೆ, ಕದ್ರಿ

live link

ಮೂಡಬಿದ್ರೆಯ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಈ ಬಾರಿಯ ಯಕ್ಷಗಾನ ಕಲಾರಂಗದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ

ಸಾಂದರ್ಭಿಕ ಚಿತ್ರ 

ಶಿಕ್ಷಣದೊಂದಿಗೆ ಯಕ್ಷಗಾನ ಕಲಿಕೆ ಹಾಗೂ ಪ್ರದರ್ಶನಗಳಿಗೆ ಕಳೆದ 12 ವರ್ಷಗಳಿಂದ ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದ ಮೂಡಬಿದ್ರೆಯ ಡಾ. ಎಂ. ಮೋಹನ್ ಆಳ್ವರ ನೇತೃತ್ವದ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಉಡುಪಿಯ ಯಕ್ಷಗಾನ ಕಲಾರಂಗ ನೀಡುವ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಆಯ್ಕೆಯಾಗಿದೆ. ಉಭಯ ತಿಟ್ಟುಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಹಿಮ್ಮೇಳ ಹಾಗೂ ಮುಮ್ಮೇಳದ ಶಿಕ್ಷಣವನ್ನು ಮಾಸಿಕ ಶಿಷ್ಯವೇತನದೊಂದಿಗೆ ಕಲಿಸುತ್ತಾ, 2 ವರ್ಷಗಳ ಯಕ್ಷಗಾನ ಡಿಪ್ಲೊಮಾ ಕೋರ್ಸ್ ಅಳವಡಿಸಿದ ಏಕೈಕ ಶಿಕ್ಷಣ ಸಂಸ್ಥೆಯಾಗಿದೆ.

ಪ್ರಶಸ್ತಿಯು 50000/- ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 28, 2021 ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಶ್ರೀಗಳ ಹಾಗೂ ಪೇಜಾವರ ಶ್ರೀಗಳ ಉಪಸ್ಥಿತಿಯಲ್ಲಿ ಜರಗಲಿದೆ ಎಂಬುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಸುಭದ್ರಾ ಕಲ್ಯಾಣ – ತಾಳಮದ್ದಳೆ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಆವಳ ಮಠ, ಸಂಜಂಕಿಲ ಎಂಬಲ್ಲಿ ದಿನಾಂಕ 19.11.2021ನೇ ಶುಕ್ರವಾರ ರಾತ್ರಿ 7.30ರಿಂದ  ಸುಭದ್ರಾ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ವಿವರ ಲಗತ್ತಿಸಲಾಗಿದೆ. 

ಕೋಳ್ಯೂರು ವೈಭವದ ಕೃತಜ್ಞತಾ ಸಭೆ

ಒಂದು ತಿಂಗಳ ಪರ್ಯಂತ ಜರುಗಿದ ಕೋಳ್ಯೂರು ವೈಭವ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಅರ್ಥಪೂರ್ಣವಾಗಿ ಸಂಯೋಜಿಸಿದ ಬಗ್ಗೆ ಕೋಳ್ಯೂರು ರಾಮಚಂದ್ರ ರಾಯರ ಮಕ್ಕಳು ನವೆಂಬರ್ 15ರಂದು ಯಕ್ಷಗಾನ ಕಲಾರಂಗದ ಕಚೇರಿಗೆ ಆಗಮಿಸಿ ಪದಾಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದರು.


ಕೋಳ್ಯೂರರ ಪುತ್ರ ಕೆ. ಶ್ರೀಧರ ರಾವ್ ಹಾಗೂ ಪುತ್ರಿ ಶ್ರೀಮತಿ ಮೀರಾರವರು ಮಾತನಾಡಿ ತಮ್ಮ ತಂದೆಯವರ ನವತ್ಯಬ್ದ ಕಾರ್ಯಕ್ರಮವು ಯಕ್ಷಗಾನ ಚರಿತ್ರೆಯ ಪುಟಗಳಲ್ಲಿ ದಾಖಲಾಗುವಂತೆ ರೂಪಿಸಿ ಕಾರ್ಯಗತಗೊಳಿಸಿದ ಯಕ್ಷಗಾನ ಕಲಾರಂಗಕ್ಕೆ ನಮ್ಮ ಕುಟುಂಬ ಸದಾ ಋಣಿಯಾಗಿದೆ ಎಂದು ಹೃದಯತುಂಬಿ ಕೃತಜ್ಞತೆಯ ಮಾತುಗಳನ್ನಾಡಿದರು. ಕೋಳ್ಯೂರು ಕುಟುಂಬದ ಪರವಾಗಿ ಸಂಸ್ಥೆಗೆ ಸಮ್ಮಾನಪತ್ರ ನೀಡಿ ಅಭಿನಂದಿಸಿದರು.

ವೀಡಿಯೋ ಎಡಿಟಿಂಗ್ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿದ ಮೋಹನ್ ದಾಸ್ ಪೈ ಇವರನ್ನು ಗೌರವಿಸಲಾಯಿತು. ಕೋಳ್ಯೂರರವರ ಮೊಮ್ಮಗ ನಟರಾಜ್ ಅವರು ಯಕ್ಷಗಾನ ಕಲಾರಂಗದ ವೆಬ್ಸೈಟ್ ವಿನ್ಯಾಸ ಮಾಡುವ ಹೊಣೆ ತನ್ನದೆಂದು ಭರವಸೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಎಲ್ಲರಿಗೂ ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಚಟುವಟಿಕೆಯ ಬಗ್ಗೆ ವಿಶೇಷ ಆಸ್ಥೆಯನ್ನು ಹೊಂದಿದ ಮಹಾನ್ ಕಲಾವಿದ ಕೋಳ್ಯೂರರ ತೊಂಭತ್ತರ ಸಂಭ್ರಮದ ಕಾರ್ಯಕ್ರಮದ ಸಂಯೋಜನೆಯಿಂದ ಸಂಸ್ಥೆಯ ಘನತೆ ವೃದ್ಧಿಯಾಗಿದೆ ಎಂದು ಕಾರ್ಯದರ್ಶಿ ಮುರಳಿ ಕಡೆಕಾರ್ ತನ್ನ ಪ್ರಾಸ್ತಾವಿಕ ಮಾತುಗಳಲ್ಲಿ ನುಡಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು.

ಮಂಜುಳಾ ಸುಬ್ರಹ್ಮಣ್ಯ ತಂಡದಿಂದ ವಿಶಿಷ್ಟ ನೃತ್ಯ ಪ್ರಯೋಗ

ಯಾವುದೇ‌ ವಿದ್ಯುದೀಪದ ಬೆಳಕು ಬಣ್ಣಬಣ್ಣದ ಬಲ್ಬುಗಳ ಝಗಮಗಿಸುವಿಕೆಯನ್ನು ಬಳಸದೆ ಹಣತೆಯ ಬೆಳಕಲ್ಲಿ ನೃತ್ಯ ಮಾಡುವ ವಿಭಿನ್ನ ಪ್ರಯೋಗವನ್ನು ಸದಾ ನೃತ್ಯದಲ್ಲಿ ಹೊಸತನ್ನು ಅನ್ವೇಷಿಸುವ ಮಂಜುಳಾ ಸುಬ್ರಹ್ಮಣ್ಯ ಮಾಡಿ ತೋರಿಸಿದರು. ಅವರು ಮತ್ತು ನಾಟ್ಯರಂಗದ ಕಲಾವಿದರು ಈ ನೃತ್ಯವನ್ನು ದೀಪಾವಳಿ ಹಬ್ಬದ ಸಂಭ್ರಮದೊಡನೆ ಹಣತೆಯ ಬೆಳಕಲ್ಲಿ ಪ್ರದರ್ಶಿಸಿದರು. ಹ್ಯಾಟ್ಸ್ ಆಫ್ ಮಂಜುಳಾ ಮತ್ತು ತಂಡ. ನೃತ್ಯದ ಲಿಂಕ್ ಕೆಳಗಡೆ ಇದೆ.

ಪಾವಂಜೆ ಮೇಳದ ತಿರುಗಾಟ ನವೆಂಬರ್ 16ಕ್ಕೆ ಆರಂಭ

ಈ ಬಾರಿಯ ಪಾವಂಜೆ ಮೇಳದ ತಿರುಗಾಟ ನವೆಂಬರ್ 16ಕ್ಕೆ ಆರಂಭವಾಗಲಿದೆ.  16.11.2021ರ ಮಂಗಳವಾರ ಸಂಜೆ 6 ಘಂಟೆಗೆ ಪಾವಂಜೆ ಕ್ಷೇತ್ರದಲ್ಲಿ ‘ಪಾಂಡವಾಶ್ವಮೇಧ’ ಎಂಬ ಪ್ರಸಂಗದ ಮೊದಲ ಸೇವೆಯಾಟ ಜರಗಲಿದೆ ಎಂದು ಮೇಳದ ಪ್ರಕಟಣೆ ತಿಳಿಸಿದೆ. 

ಶ್ರೀ ಪಾವಂಜೆ ಕ್ಷೇತ್ರದ ಯೂಟ್ಯೂಬ್ ಚಾನೆಲಿನ ಒಂದು ವೀಡಿಯೊ ಲಿಂಕ್ 

ಅರುವ, ಪೇತ್ರಿ, ಕುರಿಯ, ಆರ್ಗೋಡು ಸೇರಿ 15 ಮಂದಿಗೆ ದಶಮಾನೋತ್ಸವ ಪ್ರಶಸ್ತಿ, ಇಬ್ಬರು ಸಾಧಕರಿಗೆ ಕೃತಿ ಪ್ರಶಸ್ತಿ – ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ‘ದಶಮ ಸಂಭ್ರಮ’

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ  ಕೇಂದ್ರವು  ದಶಮ ಸಂಭ್ರಮದಲ್ಲಿದೆ. ಈ ದಶಮಾನೋತ್ಸವ ಸಮಾರಂಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ದಶಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತೆಂಕು ಬಡಗು ತಿಟ್ಟಿನ ಹಿಮ್ಮೇಳ ಹಾಗೂ ಮುಮ್ಮೇಳ ಸೇರಿದಂತೆ ಹದಿನೈದು ಮಂದಿ ‘ದಶಮಾನೋತ್ಸವ ಪ್ರಶಸ್ತಿ’ಗೆ  ಹಾಗೂ ಯಕ್ಷಗಾನ ಸಾಹಿತ್ಯ ಕ್ಷೇತ್ರದ  ಇಬ್ಬರು ಸಾಧಕರು ‘ಕೃತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.


ಮುಮ್ಮೇಳದ ಸಾಧಕರಾದ ಹಿರಿಯ ಯಕ್ಚಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ಪೇತ್ರಿ ಮಾಧವ ನಾಯ್ಕ್, ಮುಖ್ಯಪ್ರಾಣ ಕಿನ್ನಿಗೋಳಿ, ಕೃಷ್ಣ ಯಾಜಿ ಬಳ್ಕೂರು, ಆರ್ಗೋಡು ಮೋಹನ್ ದಾಸ್ ಶೆಣೈ,  ಶಿವರಾಮ ಜೋಗಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ಕುಂಬ್ಳೆ ಶ್ರೀಧರ ರಾವ್, ಹಿಮ್ಮೇಳ ಕ್ಷೇತ್ರದ ಸಾಧಕರಾದ  ಸುಬ್ರಹ್ಮಣ್ಯ ಧಾರೇಶ್ವರ, ಕುರಿಯ ಗಣಪತಿ ಭಟ್ ,  ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ,  ಪದ್ಯಾಣ ಶಂಕರನಾರಾಯಣ ಭಟ್, ಹರಿನಾರಾಯಣ ಬೈಪಾಡಿತ್ತಾಯ,
ಹಾಗೂ ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲಿ  ಕೃತಿಗಳನ್ನು ರಚಿಸಿರುವ ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಹಾಗೂ ಡಾ.ಚಂದ್ರಶೇಖರ್ ದಾಮ್ಲೆ ಅವರು ದಶಮಾನೋತ್ಸವದ ‘ಕೃತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ‌.


ಅಲ್ಲದೆ ಈ ದಶಮಾನೋತ್ಸವದ ಸಂದರ್ಭದಲ್ಲಿ ಯಕ್ಷಗಾನಕ್ಕೆ ಹಾಗೂ ಯಕ್ಷಗಾನ ಕೇಂದ್ರದ ಬೆಳವಣಿಗೆಗೆ ಸಹಕಾರ ನೀಡಿದಂತಹ ಮಹನೀಯರನ್ನು ಕೇಂದ್ರದ ವತಿಯಿಂದ ಗೌರವ ಸನ್ಮಾನದೊಂದಿಗೆ ಗೌರವಿಸಲಾಗುವುದು. ನವೆಂಬರ್ ಕೊನೆಯ ವಾರದಲ್ಲಿ ನಡೆಯುವ ದಶಮಾನೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಸಾಧಕರಿಗೆ ದಶಮಾನೋತ್ಸವ ಪ್ರಶಸ್ತಿ , ಹಾಗೂ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದಶಮ ಸಂಭ್ರಮ
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಪರಿಪೂರ್ಣ ರಂಗಭೂಮಿಯಾದ ಯಕ್ಷಗಾನ ಅಧ್ಯಯನ, ಪ್ರಕಟಣೆ, ಸಂವರ್ಧನೆ ಮತ್ತು ಸಂರಕ್ಷಣೆಗಾಗಿ ಮಂಗಳೂರು ವಿವಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಯಕ್ಷಗಾನದ ಕುರಿತಂತೆ ಅಧ್ಯಯನ ಮತ್ತು ಸಂಗ್ರಹ, ವಿಚಾರಸಂಕಿರಣ, ಪ್ರಚಾರೋಪನ್ಯಾಸ, ದಾಖಲಾತಿ,  ಯಕ್ಷ ತರಬೇತಿ, ಪ್ರಾತ್ಯಕ್ಷಿಕೆ, ಯಕ್ಷಮಂಗಳ ಪ್ರಶಸ್ತಿ , ಪ್ರಚಾರೋಪನ್ಯಾಸ, ಕಲಾವಿದನಿಗೆ ಸಂಶೋಧಕರಿಗೆ , ವಿದ್ಯಾರ್ಥಿಗಳಿಗೆ ಮುಖ್ಯ ಆಕರವಾಗಬಲ್ಲ ಸುಸಜ್ಜಿತ ಗ್ರಂಥಾಲಯ, ಅನನ್ಯವಾದ ವಸ್ತುಸಂಗ್ರಹಾಲಯ ನಿರ್ಮಾಣ,  ಸಹಯೋಗದ ಕಾರ್ಯಕ್ರಮಗಳು ಇಂತಹ ಬಹುಮುಖಿ ಉದ್ದೇಶ, ಕಾರ್ಯ ಯೋಜನೆಗಳೊಂದಿಗೆ ಕಳೆದ ಹತ್ತು ವರ್ಷಗಳಿಂದ ಮುನ್ನಡೆಯುತ್ತಿದ್ದು, ಈ ಬಾರಿ ದಶಮ ಸಂಭ್ರಮವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ.

ಕೊಂಗೋಟ್ ರಾಧಾಕೃಷ್ಣ ಭಟ್ಟರ ಯೂಟ್ಯೂಬ್ ಚಾನೆಲಿನ ವೀಡಿಯೋ 

ಶಾರದಾಕೃಷ್ಣ ಯಕ್ಷಗಾನ ಸಂಘದ ವಾರ್ಷಿಕೋತ್ಸವ

ಶಾರದಾಕೃಷ್ಣ ಯಕ್ಷಗಾನ ಸಂಘದ ವಾರ್ಷಿಕೋತ್ಸವವು ದಿನಾಂಕ 20.11.2021ರ ಶನಿವಾರದಂದು ನಡೆಯಲಿದೆ.  ಪ್ರಯುಕ್ತ ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ, ಪ್ರಶಸ್ತಿ ಪ್ರದಾನ, ಅನ್ನಸಂತರ್ಪಣೆ ನಡೆಯಲಿದೆ. 

ಯಕ್ಷಗಾನ ‘ಮಾನಸಚರಿತ್ರೆ’ ಬಿಡುಗಡೆ

ಮಾನಸಚರಿತ್ರೆ:
ಮೂಲಿಕೆ ವೆಂಕಣ್ಣ ಕವಿಯು (1750-1830) ರಚಿಸಿದ ಯಕ್ಷಗಾನ ‘ಮಾನಸಚರಿತ್ರೆ’ ಎಂಬ ಪ್ರಸಂಗದ ಬಗೆಗೆ ಡಾ. ಶಿವರಾಮ ಕಾರಂತರೇ ಮೊದಲಾಗಿ ಹಲವಾರು ವಿದ್ವಾಂಸರು ಉಲ್ಲೇಖಿಸಿದ್ದರೂ ಇದುವರೆಗೆ ಅದರ ಹಸ್ತಪ್ರತಿ ಲಭ್ಯವಾಗಿರಲಿಲ್ಲ. ಇತ್ತೀಚೆಗೆ ಉಡುಪಿ ತಾಲೂಕಿನ ದಿ|| ಶಿರೂರು ಫಣಿಯಪ್ಪಯ್ಯನವರ ಸಂಗ್ರಹದಲ್ಲಿ ಅದರ ತಾಳೆಗರಿ ಮತ್ತು ಶಿರೂರು ಫಣಿಯಪ್ಪಯ್ಯನವರೇ ಬರೆದುಕೊಂಡಿದ್ದ ಸ್ವಹಸ್ತಪ್ರತಿ ದೊರಕಿದ್ದು ಯಕ್ಷಗಾನ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಇದನ್ನು ಸಂಪಾದಿಸಿದ್ದಾರೆ.

ಮನುಷ್ಯನ ಮನಸ್ಸಿನ ಸಂಘರ್ಷವನ್ನು ಚಿತ್ರಿಸುವ ಈ ಪ್ರಸಂಗವು ಯಕ್ಷಗಾನ ಸಾಹಿತ್ಯದ ಇತಿಹಾಸದಲ್ಲೇ ಅನನ್ಯವಾಗಿದ್ದು ಆಟ ಮತ್ತು ಕೂಟಗಳೆರಡಕ್ಕೂ ಚೆನ್ನಾಗಿ ಒಪ್ಪುವಂತಿದೆ. ಇದು ಪುರಾಣದ ಕಥೆಯಲ್ಲವಾದರೂ ಉಪನಿಷತ್ತುಗಳ ಚಿಂತನೆಯನ್ನು ಬಹಳ ಅರ್ಥಗರ್ಭಿತವಾಗಿ ಚಿತ್ರಿಸಿದೆ.


ಮೂಲಿಕೆ ವೆಂಕಣ್ಣಕವಿಯು ಮೂಲತಃ ಉತ್ತರಕರ್ನಾಟಕದ ಬಂಕಾಪುರದವನಾಗಿದ್ದು ಹರಿದಾಸನಾಗಿ ಮೂಲ್ಕಿಗೆ ಬಂದು ನೆಲೆಸಿದವನು. ಅವನು ಯಕ್ಷಗಾನ ಕೃತಿಗಳಲ್ಲದೆ ಭಕ್ತಿಭಾವದ ಕೀರ್ತನೆಗಳನ್ನು ರಚಿಸಿದ್ದು, ಇವುಗಳನ್ನು ಈಗಲೂ ಭಜನಾತಂಡದವರು ಹಾಡುತ್ತಾರೆ. ಇವನು ಹಲವಾರು ಶಿಷ್ಯರಿಗೆ ಹರಿದಾಸದೀಕ್ಷೆಯನ್ನು ನೀಡಿದನೆಂದೂ ಹೇಳಲಾಗುತ್ತದೆ.


ವಾಜಿಗ್ರಹಣ ಅಥವಾ ಯೌವನಾಶ್ವನ ಕಾಳಗ:
ಈ ಪ್ರಸಂಗವನ್ನು ರಚಿಸಿದವರು ಪ್ರಸಿದ್ಧ ಯಕ್ಷಗಾನಕವಿ ದಿ|| ಶಿರೂರು ಫಣಿಯಪ್ಪಯ್ಯನವರು. ಇವರು ಹದಿನೈದು ಪ್ರಸಂಗಗಳನ್ನು ರಚಿಸಿದ್ದು ಯಕ್ಷಗಾನದ ನೂರಾರು ಹಸ್ತಪ್ರತಿ ಮತ್ತು ತಾಡವಾಲೆಗಳನ್ನು ಸಂರಕ್ಷಿಸಿಕೊಂಡು ಬಂದವರು. ‘ವಾಜಿಗ್ರಹಣ’ ಪ್ರಸಂಗವು ಪಾಂಡವರ ಅಶ್ವಮೇಧದ ಕಥೆಯನ್ನು ಒಳಗೊಂಡಿದ್ದು ರಂಗದಲ್ಲಿ ಜನಮನವನ್ನು ರಂಜಿಸುವ ಹಾಗೆ ರಚನೆಗೊಂಡಿದೆ. ಇವರು ರಚಿಸಿದ ‘ಶ್ರೀಕೃಷ್ಣ ಗಾರುಡಿ’ ಉಡುಪಿಯ ಪಾವಂಜೆಯವರಿಂದ 1963ರಲ್ಲಿಯೇ ಪ್ರಕಟವಾಗಿದ್ದು, ಈಗ ಅವರ ಎರಡನೆಯ ಈ ಪ್ರಸಂಗ ಲೋಕಾರ್ಪಣೆಗೊಳ್ಳುತ್ತಿದೆ.


ಫಣಿಗಿರಿ ಪ್ರತಿಷ್ಠಾನ:
ದಿ|| ಶಿರೂರು ಫಣಿಯಪ್ಪಯ್ಯನವರ ಸುಪುತ್ರರಾದ ಶ್ರೀ ಉಮೇಶ ಶಿರೂರು ಅವರು ಟೆಲಿಕಾಂ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸಿ ಈಗ ನಿವೃತ್ತರು. ‘ಫಣಿಗಿರಿ ಪ್ರತಿಷ್ಠಾನ ’ವನ್ನು ಆರಂಭಿಸಿ ತೀರ್ಥರೂಪರ ಎಲ್ಲಾ ಯಕ್ಷಗಾನ ಪ್ರಸಂಗಗಳನ್ನು ಪ್ರಕಟಿಸುವ ಹಂಬಲವನ್ನು ಹೊಂದಿದ್ದಾರೆ. ತಾಳೆಗರಿ ಸಂರಕ್ಷಣೆ ಮತ್ತು ಹಸ್ತಪ್ರತಿಗಳಲ್ಲಿರುವ ಕೃತಿಗಳ ಮುದ್ರಣದ ಸಂಕಲ್ಪದಿಂದ ಈ ‘ಫಣಿಗಿರಿ ಪ್ರತಿಷ್ಠಾನ ’ವು ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಉದ್ಘಾಟನೆಗೊಳ್ಳುತ್ತಿದೆ.

ಕೋಳ್ಯೂರು ವೈಭವ ಸಮಾಪನ ಸಮಾರಂಭ

ಯಕ್ಷಗಾನದ ಶ್ರೇಷ್ಠ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾಯರಿಗೆ ನವತ್ಯಬ್ದ ಸಮಾರಂಭ ಅಕ್ಟೋಬರ್ 14, 2021ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಉದ್ಘಾಟನೆಗೊಂಡಿದ್ದು ಸಮಾಪನ ಸಮಾರಂಭವು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ನವೆಂಬರ್ 14, 2021 ಭಾನುವಾರದಂದು ಸಂಪನ್ನಗೊಳ್ಳಲಿದೆ.


ಅಂದು ಪೂರ್ವಾಹ್ನ 9 ಗಂಟೆಗೆ ಐಶ್ವರ್ಯಾ ಮಣಿಕರ್ಣಿಕಾ ಇವರಿಂದ ವೀಣಾವಾದನ. ಬೆಳಗ್ಗೆ 10 ಗಂಟೆಗೆ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ. ಅಭ್ಯಾಗತರಾಗಿ ಪೆರವೋಡಿ ನಾರಾಯಣ ಹಾಸ್ಯಗಾರ, ಡಾ. ಪಿ. ಎಸ್. ಎಡಪಡಿತ್ತಾಯ, ಡಾ. ಎಚ್. ಎಸ್. ಬಲ್ಲಾಳ್ ಪಾಲ್ಗೊಳ್ಳಲಿರುವರು.

11 ಗಂಟೆಗೆ ಆಚಾರ್ಯ ಡಾ. ಪಪ್ಪು ವೇಣುಗೋಪಾಲ ರಾವ್ ಅವರಿಂದ ವಿದ್ವತ್ ಗೋಷ್ಠಿ. 12ಗಂಟೆಗೆ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸೂರ್ಯನಾರಾಯಣ ಭಟ್ ಪಿ. ಎಸ್., ಭೋಜರಾಜ ವಾಮಂಜೂರು, ಕೃಷ್ಣಪ್ರಕಾಶ ಉಳಿತ್ತಾಯ, ಶಶಿಕಾಂತ ಶೆಟ್ಟಿ, ಅಮ್ಮುಂಜೆ ಮೋಹನ ಕುಮಾರ್ ಮತ್ತು ಪಟ್ಲ ಸತೀಶ್ ಶೆಟ್ಟಿ ಇವರಿಂದ ಕೋಳ್ಯೂರರಿಗೆ ನುಡಿ ಗೌರವ.

ಕೋಳ್ಯೂರು ರಾಮಚಂದ್ರ ರಾಯರ ಅಭಿನಯದ ಯೂಟ್ಯೂಬ್ ವೀಡಿಯೊ ಡ್ರೀಮ್ಸ್ ಮಂಗಳೂರು ಅವರ ಯೂಟ್ಯೂಬ್ ಚಾನೆಲಿನಲ್ಲಿ ನೋಡಿ

ಅಪರಾಹ್ನ 2 ಗಂಟೆಗೆ ರಾಜೇಂದ್ರ ಕಾರಂತ ಹಾಗೂ ಮಂಜುಳಾ ಸುಬ್ರಹ್ಮಣ್ಯ ಇವರಿಂದ ಆತ್ಮಕಥನ ವಾಚನ. 2.30 ರಿಂದ ಉಭಯ ತಿಟ್ಟುಗಳ 90 ಕ್ಕೂ ಮೇಲ್ಪಟ್ಟು ಸ್ತ್ರೀ ವೇಷಧಾರಿಗಳಿಗೆ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ಸಂಮಾನ. ಅಪರಾಹ್ನ 4 ಗಂಟೆಗೆ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಡಾ. ಕೋಳ್ಯೂರು ರಾಮಚಂದ್ರ ರಾಯರಿಗೆ ಅಭಿನಂದನೆ.

ಡಾ. ಪದ್ಮಾ ಸುಬ್ರಹ್ಮಣ್ಯಮ್ ಮತ್ತು ಡಾ. ಕಲಾಮಂಡಲಂ ಗೋಪಿ ಇವರು ಆನ್‌ಲೈನ್ ನಲ್ಲಿ ಶುಭಾಶಂಸನೆ ಗೈಯ್ಯಲಿರುವರು. ಎ. ಪಿ. ಮಾಲತಿ, ಅರುವ ಕೊರಗಪ್ಪ ಶೆಟ್ಟಿ, ಮಂಟಪ ಪ್ರಭಾಕರ ಉಪಾಧ್ಯ, ಲಕ್ಷ್ಮೀಶ ತೋಳ್ಪಾಡಿಯವರು ಅಭಿನಂದನಾ ಮಾತುಗಳನ್ನಾಡಲಿರುವರು. ಸಂಜೆ 6.30 ರಿಂದ ಕೇರಳದ ಕಲಾಮಂಡಲಮ್ ತಂಡದಿಂದ ಕಥಕಳಿ ಕಲಾ ಪ್ರದರ್ಶನ ಗೌರವ ಆಖ್ಯಾನ : ಕೃಷ್ಣ ಕುಚೇಲ ವೃತ್ತಮ್.

ಈ ಎಲ್ಲಾ ಕಾರ್ಯಕ್ರಮಗಳಿಗೆ, ಕಲಾಸಕ್ತರಿಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಕೋಳ್ಯೂರು ಕುಟುಂಬದ ಪರವಾಗಿ ಅವರ ಪುತ್ರ ಕೆ. ಶ್ರೀಧರ ರಾವ್ ಆದರದ ಸ್ವಾಗತ ಕೋರಿದ್ದಾರೆ.