Saturday, March 14, 2026
Home Blog Page 99

ವಾಸುದೇವ ನಾಡಿಗ್ ಮತ್ತು ರತ್ನಾಕರ ಕುನಗೋಡು ಅವರಿಗೆ ಸು. ರಂ. ಎಕ್ಕುಂಡಿ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ: ಏಪ್ರಿಲ್ 16ರಂದು ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ

ಕನ್ನಡ ಶ್ರೇಷ್ಠ ಕವಿಗಳಲ್ಲೊಬ್ಬರಾದ ದಿ. ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಧಾರವಾಡದ ಸಾಹಿತ್ಯ ಗಂಗಾ ಮತ್ತು ಹಂಸಭಾವಿಯ ವಾರಂಬಳ್ಳಿ ಪ್ರತಿಷ್ಠಾನದ ಸಹಯೋಗದಲ್ಲಿ ನೀಡಲಾಗುತ್ತಿರುವ ‘ಸು. ರಂ. ಎಕ್ಕುಂಡಿ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ – 2023’ಕ್ಕೆ ಶ್ರೀ ವಾಸುದೇವ ನಾಡಿಗರ ‘ಬಂದರಿಗೆ ಬಂದ ಹಡಗು’ ಮತ್ತು ಡಾ. ರತ್ನಾಕರ ಕುನಗೋಡು ಅವರ ‘ಎದೆನೆಲದ ಕಾವು’ ಕವನ ಸಂಕಲನಗಳು ಆಯ್ಕೆಯಾಗಿವೆ.

ತೀರ್ಪುಗಾರರಾದ ಡಾ. ಸಂಕೇತ ಪಾಟೀಲ, ಡಾ. ಸುಭಾಷ್ ಪಟ್ಟಾಜೆ ಮತ್ತು ಡಾ. ರವಿಶಂಕರ ಜಿ. ಕೆ. ಈ ಎರಡು ಕೃತಿಗಳನ್ನು ಆಯ್ಕೆ ಮಾಡಿದ್ದಾರೆ.

ಇದೇ ಏಪ್ರಿಲ್ 16ರಂದು ಧಾರವಾಡದ ರಂಗಾಯಣದಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಪ್ರಶಸ್ತಿ 5000 ರೂಪಾಯಿಗಳ ನಗದು, ಸನ್ಮಾನ ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ ಎಂದು ಸಾಹಿತ್ಯ ಗಂಗಾ ಪ್ರತಿಷ್ಠಾನದ ಮುಖ್ಯಸ್ಥರಾದ ವಿಕಾಸ ಹೊಸಮನಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಥಕ ಥೈ ತೋಂ ಎಂದು ಕಲಿಸಿ ಕುಣಿಸುವ ಮಹಾನುಭಾವರು – ಯಕ್ಷಗಾನದ  ಗುರುಗಳು

ಯಾವುದೇ ಒಂದು ಕ್ಷೇತ್ರದಲ್ಲಿ ತನ್ನ ಸಾಧನೆಯನ್ನು  ಪ್ರದರ್ಶಿಸುವುದಕ್ಕೆ ಪ್ರತಿಯೊಬ್ಬ ವ್ಯಕ್ತಿಗೂ ತರಬೇತಿ ಎನ್ನುವುದು ಅತ್ಯವಶ್ಯಕ. ಅದು ಉದ್ಯೋಗ ಕ್ಷೇತ್ರವಿರಲಿ ಅಥವಾ ಬೇರೆ ಯಾವುದೇ ಸಾಧನೆಯನ್ನು ಪ್ರದರ್ಶಿಸಲು ಅವಕಾಶವಿರುವ ಇನ್ನಿತರ ಕ್ಷೇತ್ರಗಳಿರಲಿ, ಅಲ್ಲಿ ತರಬೇತಿಯೆಂಬುದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೊಸಬನೊಬ್ಬ ಉದ್ಯೋಗ ರಂಗವನ್ನು ಪ್ರವೇಶಿಸುವಾಗ “ಪ್ರೊಬೇಷನರಿ ಪಿರೇಡ್” ಎನ್ನುವುದು ಕಡ್ಡಾಯ. ಇಲ್ಲದಿದ್ದರೆ ಆ ಕೆಲಸಕ್ಕೆ ಅಥವಾ ಉದ್ಯೋಗಕ್ಕೆ ಆತನಿಂದ ನ್ಯಾಯ ಸಲ್ಲಿಸಲು ಸಾಧ್ಯವಾಗದು. 

ಭಾರತೀಯ ರಂಗಕಲೆಗಳೆಂಬುದು ಅತ್ಯದ್ಭುತ, ಸೋಜಿಗಗಳ ವರ್ತುಲವಾಗಿದೆ. ಭಾರತೀಯ ರಂಗ ಸಂಸ್ಕೃತಿಗಳ ಅಧ್ಯಯನದ ಪ್ರಕಾರ ನಮ್ಮ ದೇಶದಲ್ಲಿರುವ ಸಾವಿರಾರು ರಂಗಕಲೆಗಳಲ್ಲಿ ಭರತನಾಟ್ಯ, ಕಥಕ್, ಕೂಚುಪುಡಿ, ಮಣಿಪುರಿ, ಒಡಿಸ್ಸಿ, ಭಾಂಗ್ರಾ, ಮೋಹಿನಿಯಾಟ್ಟಂ, ರಾಜಸ್ತಾನಿ ಕಲ್ಬೇಲಿಯನ್ ನೃತ್ಯವೇ ಮೊದಲಾದ ಕಲೆಗಳಲ್ಲಿರುವ ಸೋಜಿಗದ ವಿಚಾರಗಳು ನಮ್ಮನ್ನು ಅಚ್ಚರಿಯ ಲೋಕದಲ್ಲಿ ವಿಹರಿಸುವಂತೆ ಮಾಡುತ್ತವೆ. 

ಹೌದು. ಹಲವಾರು ನೃತ್ಯ ಪ್ರಕಾರದ ಕಲೆಗಳು ಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿರಬಹುದು. ಆದರೆ ಸಾಧಕರಿಗೆ ಅದು ಸುಲಭವಾಗಿ ಗಂಟಲಲ್ಲಿಳಿಯುವ ತುತ್ತು. ಕಠಿಣ ಪರಿಶ್ರಮ, ಆಸಕ್ತಿ ಮತ್ತು ಸರಿಯಾದ ತರಬೇತಿಯಿದ್ದರೆ ಯಾವುದೇ ಕಲಾಪ್ರಕಾರಗಳಲ್ಲಿ ಕೂಡಾ ಯಶಸ್ಸು ಸಾಧಿಸಿ ಜನಪ್ರಿಯರಾಗಬಹುದು ಎಂಬುದು, ಅಳಿದರೂ ಅಚ್ಚಳಿಯದೆ ಜನರ ಮನಸ್ಸಿನಲ್ಲಿ ಉಳಿದ ಮಹಾನ್ ಕಲಾವಿದರ ಜೀವನಗಾಥೆಗಳಿಂದ ತಿಳಿಯಬಹುದಾದ ಸತ್ಯ. 

ಆದುದರಿಂದ ತರಬೇತಿ ಎನ್ನುವುದು ಇಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ ಎಂದಾಯಿತು. ಕಲೆಯನ್ನು ಕರತಲಾಮಲಕ ಮಾಡಿಕೊಳ್ಳುವವರಿಗೆ ಬರಿಯ ಆಸಕ್ತಿ, ಅವಕಾಶಗಳಿದ್ದರೆ ಸಾಲದು. ಸೂಕ್ತ ಗುರುವಿನ ಮಾರ್ಗದರ್ಶನ, ತರಬೇತಿಗಳು ಒಬ್ಬ ಕಲಾವಿದನ ಕಲಾಜೀವನದಲ್ಲಿ ಮಹತ್ತರ ಪಾತ್ರ ಮತ್ತು ಪರಿಣಾಮಗಳನ್ನು ಬೀರುತ್ತವೆ ಎನ್ನುವುದು ಜೀವಂತ ಸತ್ಯ. 

ಭರತನಾಟ್ಯ ಮೊದಲಾದ ನಾಟ್ಯಕಲಾ ಪ್ರಾಕಾರಗಳಲ್ಲಿ ಪರಿಣತಿ ಹೊಂದಿದ ಹೊಸ ಕಲಾವಿದರು ಅಥವಾ ವಿದ್ಯಾರ್ಥಿಗಳು ಕೊಡುವ ಪ್ರಥಮ ರಂಗಪ್ರವೇಶ ‘ಅರಂಗೇಟ್ರಮ್’ ಎಂದು ಕರೆಯಲ್ಪಡುತ್ತದೆ. ಪ್ರಥಮ ಪ್ರದರ್ಶನವನ್ನು ಕೊಡಬೇಕಾದರೆ ಆ ಭರತನಾಟ್ಯ ಕಲಾವಿದ/ಕಲಾವಿದೆ ಕೆಲವು ವರ್ಷಗಳ ಕಾಲ ಸಂಬಂಧಿತ ಕಲೆಯನ್ನು  ಅಭ್ಯಸಿಸಿ ಅದರಲ್ಲಿ ಸ್ವಲ್ಪ ಮಟ್ಟಿಗಾದರೂ ಪಳಗಿ ಪರಿಣತಿಯನ್ನು ಸಾಧಿಸಬೇಕಾಗುತ್ತದೆ. 

ಆದರೆ ಕರ್ನಾಟಕದ ಹೆಮ್ಮೆಯ ಗಂಡುಕಲೆ ಎಂದು ಕರೆಯಲ್ಪಟ್ಟ ಯಕ್ಷಗಾನವು ಈ ನಿಟ್ಟಿನಲ್ಲಿ ತುಸು ವ್ಯತಿರಿಕ್ತವಾದ ಹಾದಿಯನ್ನು ತುಳಿದು ಸಾಗಿಬಂದಂತೆ ತೋರುತ್ತದೆ. ಯಾಕೆಂದರೆ ಸುಮಾರು ಹನ್ನೆರಡು ಅಥವಾ ಹದಿಮೂರನೇ ಶತಮಾನದಲ್ಲಿ ಆವಿರ್ಭವಿಸಿ ಬೆಳೆದು ಬಂದ ಈ ಕಲೆಗೆ ಒಂದು ಶಾಸ್ತ್ರೀಯವಾದ ಲಿಖಿತ ನಿರ್ದೇಶನಗಳು ಇಲ್ಲದಿದ್ದುದು ಕಲಿಕೆಗೆ ಒಂದು ತೊಡಕಾಗಿತ್ತು. ಕೇವಲ ಅಲಿಖಿತವಾದ ಮತ್ತು ಬಾಯ್ದೆರೆಯ ಟಿಪ್ಪಣಿಗಳು ಮತ್ತು ನಿರ್ದೇಶನಗಳಿಂದ ಈ ಕಲಾಪ್ರಾಕಾರ ಬೆಳೆದುಬಂದಿತ್ತು. ಯಕ್ಷಗಾನದ ಹುಟ್ಟಿಗೆ ಕಾರಣರಾದ ಅಂದಿನ ಮೂಲಪುರುಷರು ಯಕ್ಷಗಾನದ ಸರ್ವಾಂಗಗಳ ಮಾಹಿತಿಗಳನ್ನು ತಾಳೆಗರಿಗಳ ಬರಹದಲ್ಲಿ ಬರೆದಿಟ್ಟಿರಬಹುದಾದರೂ ತಾಳೆಗರಿಗಳ ಕಾಲದಿಂದ ನಾವು ಪತ್ರ, ಲೇಖನಿಗಳ ಹಂತಕ್ಕೆ ಮೇಲ್ದರ್ಜೆಗೇರಿದಾಗ ಅಪರೂಪದ ತಾಳೆಗರಿಯ ಮಾಹಿತಿಗಳು ನಾಶವಾದದ್ದೇ ಈ ಕ್ಷೇತ್ರಕ್ಕಾದ ದೊಡ್ಡ ನಷ್ಟ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಆದರಿಂದಲೇ ತಾಳೆಗರಿಯಲ್ಲಿ ಶೇಖರವಾಗಿದ್ದ ಅಮೂಲ್ಯ ಮಾಹಿತಿಗಳು ಆ ನಂತರ ಬಾಯ್ದೆರೆಯಾಗಿಯೇ ಮುಂದಿನ ಪೀಳಿಗೆಗೆ ದಾಟಿಸಲ್ಪಟ್ಟಿದೆ. ಹೀಗೆಯೇ ಇದು ಮುಂದುವರಿದು ಯಕ್ಷಗಾನಕ್ಕೊಂದು ಶಾಸ್ತ್ರೀಯ ಶಿಕ್ಷಣ ಅಥವಾ ತರಬೇತಿಗೆ ತೊಡಕಾಯಿತು. ಇಪ್ಪತ್ತನೇ ಶತಮಾನದ ಅಂತ್ಯದ ಕಾಲಘಟ್ಟಕ್ಕೆ ಬರುವ ಮೊದಲು ಅಥವಾ ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಮಳೆಗಾಲದಲ್ಲಿ ಪ್ರದರ್ಶನವು ಇರುತ್ತಿರಲಿಲ್ಲವಾದ್ದರಿಂದ ಯಕ್ಷಗಾನ ಕಲಿಕೆಗಾಗಿ ಅದೇ ಪ್ರಶಸ್ತವಾದ ಕಾಲವಾಗಿತ್ತು. ಸಾಧಾರಣವಾಗಿ ಹಿರಿಯ ಕಲಾವಿದರ ಮನೆಯಲ್ಲಿದ್ದುಕೊಂಡು ಅವರ ಮನೆ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಸೇವೆ ಸಲ್ಲಿಸಿ ಅವರ ಮೆಚ್ಚುಗೆ ಗಳಿಸಿ ಅವರಿಂದ ಕಲೆಯ ಬಗ್ಗೆ ಪೂರ್ಣ ಪಾಠವನ್ನು ಹೇಳಿಸಿಕೊಳ್ಳಬೇಕಾಗುತ್ತಿತ್ತು.

ಆ ಕಾಲದಲ್ಲಿ ಮೇಳಗಳಲ್ಲಿ ಕಲಾವಿದನಾಗಿ ಮೇಳಕ್ಕೆ ಸೇರ್ಪಡೆಯಾಗುವುದು ಕಡಿಮೆ. ಅದರ ಬದಲು ಚೌಕಿಯ ಸಹಾಯಕರಾಗಿ ಅಥವಾ ಪರಿಚಾರಕರಾಗಿ ಸೇರಿ ಆಮೇಲೆ ಹಿರಿಯ ಕಲಾವಿದರ ಒಡನಾಟದಿಂದ ಅವರಿಂದ ಕೇಳಿ ಅಥವಾ ಅವರ ಪ್ರದರ್ಶನಗಳನ್ನು ನೋಡಿ ಕಲಿಯುತ್ತಿದ್ದುದೇ ಹೆಚ್ಚು. ಚೌಕಿ, ಬಿಡಾರಗಳಲ್ಲಿ ಸಂದರ್ಭ ಸಿಕ್ಕಾಗ ಅಭ್ಯಾಸಿಗಳಿಗೆ ಹಿರಿಯ ಕಲಾವಿದರಿಂದ ಮತ್ತು ಭಾಗವತರಿಂದ ಪಾಠವಾಗುತ್ತಿತ್ತು. ರಾತ್ರಿಯ ಪ್ರದರ್ಶನಗಳಿಂದ ನಿದ್ರಾಹೀನತೆಯ ದೆಸೆಯಿಂದ ಸಿಟ್ಟು, ಕೋಪ, ತಾಪಗಳನ್ನೆಲ್ಲಾ ಅನುಭವಿಸುವುದರ ಜೊತೆಗೆ ಹೊಡೆತವನ್ನೂ ಕಿರಿಯ ಕಲಾವಿದರು ಕಲಿಯುವ ಸಂದರ್ಭದಲ್ಲಿ ತಿನ್ನಬೇಕಾಗುತ್ತಿತ್ತು. ಹೀಗೆ ಅಂದು ರಂಗಸ್ಥಳವೇ ಕಲಿಯುವವರಿಗೆ ಪಾಠಶಾಲೆಯಾಗಿತ್ತು. 

          ಕಲಿಕಾ ಶಾಲೆಗಳಿಲ್ಲದೆ ಇದ್ದುದು ಯಕ್ಷಗಾನದ ಮಟ್ಟಿಗೆ ದೊಡ್ಡ ಕೊರತೆಯಾಗಿ ತೋರುತ್ತಿತ್ತು. ಕರ್ನಾಟಕದ ಜನಪ್ರಿಯ  ರಂಗಕಲೆಯಾದ ಯಕ್ಷಗಾನವು ಕಣ್ಮನ ಸೆಳೆಯುವ ವೇಷಭೂಷಣಗಳು, ,ನೃತ್ಯಶೈಲಿ, ಸಂಗೀತ ಹಾಗೂ ಉತ್ಕೃಷ್ಟ ಪೌರಾಣಿಕ ಸಂಭಾಷಣೆಗಳು ಅಂದರೆ ವಾದನ, ಗಾಯನ,ನರ್ತನ, ವಾಚಿಕವೇ ಮೊದಲಾದ ನಾಲ್ಕಂಗಗಳಿಂದ ಕೂಡಿದ್ದರೂ ಒಂದು ಕೊರತೆಯಿತ್ತು. ಅದುವೇ ಸೂಕ್ತ ತರಬೇತಿಯ ಕೊರತೆ. ಇಂತಹ ಒಂದು ಋಣಾತ್ಮಕ ಅಂಶವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೆಲವು ತರಬೇತಿ ಕೇಂದ್ರಗಳು ತಲೆಯೆತ್ತಿದುವು.  ಇದಕ್ಕೊಂದು ಶಾಶ್ವತ ಪರಿಹಾರವನ್ನು ರೂಪಿಸುವ ನಿಟ್ಟಿನಲ್ಲಿ ವ್ಯಾಪಕವಾದ ಚರ್ಚೆಗಳಾದುವು. ವಿದ್ವಾಂಸರು ಕುಳಿತು ಮಾತನಾಡಿದರು.

ಇದರ ಫಲರೂಪವೇ ಎಂಬಂತೆ ಯಕ್ಷಗಾನ ಕಲಿಕಾ ಕೇಂದ್ರಗಳು ಅಥವಾ ತರಬೇತಿ ಕೇಂದ್ರಗಳು ಜನ್ಮ ತಳೆದುವು. ಈ ನಿಟ್ಟಿನಲ್ಲಿ ಡಾ.ಶಿವರಾಮ ಕಾರಂತ ಮತ್ತು ಕೆ.ಎಸ್. ಹರಿದಾಸ ಭಟ್ಟರ ಆಸಕ್ತಿಯಲ್ಲಿ ಹಾಗೂ ಇನ್ನಿತರ ಮಹನೀಯರ ಸಹಕಾರದಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಬಡಗುತಿಟ್ಟು ಯಕ್ಷಗಾನದ ಕಲಿಕಾ ಕೇಂದ್ರವಾದ ‘ಯಕ್ಷಗಾನ ಕೇಂದ್ರ, ಉಡುಪಿ’. ಈ  ಸಂಸ್ಥೆ 1971ರಲ್ಲಿ ಜನ್ಮ ತಾಳಿತು. ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ| ಹರಿದಾಸ ಭಟ್ಟರ ಪ್ರಯತ್ನದಿಂದ ಕಾಲೇಜಿನ ಹೊರಗಿನ ಕಟ್ಟಡದಲ್ಲಿ ‘ಯಕ್ಷಗಾನ ಕೇಂದ್ರ ಉಡುಪಿ’ ತಲೆಯೆತ್ತಿತು. 

ಯಕ್ಷಗಾನ ಕೇಂದ್ರ ಉಡುಪಿ: ಈ ಕೇಂದ್ರದ ಮೊದಲ ಗುರು ಮತ್ತು ಕೇಂದ್ರದ ಮುಖ್ಯಸ್ಥರಾಗಿದ್ದವರು ಬಡಗುತಿಟ್ಟು ಯಕ್ಷಗಾನದ ಖ್ಯಾತ ಕಲಾವಿದರಾಗಿದ್ದ ವೀರಭದ್ರ ನಾಯಕ್ . ಕಲಾವಿದರಾಗಿ ನಲುವತ್ತಕ್ಕೂ ಹೆಚ್ಚು ತಿರುಗಾಟಗಳನ್ನು ನಡೆಸಿ ಯಕ್ಷಗಾನದಿಂದ ನಿವೃತ್ತರಾಗಿದ್ದವರು. ಹಿಮ್ಮೇಳ ಗುರುಗಳಾಗಿದ್ದವರು ಭಾಗವತರಾದ ನೀಲಾವರ ರಾಮಕೃಷ್ಣಯ್ಯ ಮತ್ತು ಮದ್ದಳೆಗಾರರಾದ ಹಿರಿಯಡಕ ಗೋಪಾಲ ರಾವ್. ಭಾರತ ಸರಕಾರದ ಸಂಸ್ಕೃತಿ ಇಲಾಖೆಯಿಂದ  ಐನೂರು ರೂಪಾಯಿಯಂತೆ ಮುಖ್ಯಸ್ಥರಾದ ವೀರಭದ್ರ ನಾಯಕರಿಗೆ ಗೌರವಧನ ಲಭಿಸುತ್ತಿತ್ತು. ಹಿಮ್ಮೇಳ ಗುರುಗಳ ವೇತನವನ್ನು ಎಂ.ಜಿ.ಎಂ ಕಾಲೇಜು ಟ್ರಸ್ಟ್ ಪಾವತಿಸುತ್ತಿತ್ತು. ಪ್ರಾರಂಭದ ವರ್ಷದಲ್ಲಿ ಹತ್ತು ವಿದ್ಯಾರ್ಥಿಗಳಿರುವ ಒಂದು ತಂಡವನ್ನು (ಬ್ಯಾಚ್) ತರಬೇತಿಗಾಗಿ ಆಯ್ಕೆ ಮಾಡಲಾಯಿತು. ಅವರಿಗೆ ಉಡುಪಿ ಶ್ರೀಕೃಷ್ಣ ಮಠದಿಂದ ಉಚಿತ ಆಹಾರ, ವಸತಿ ವ್ಯವಸ್ಥೆಯನ್ನು ಮಾಡಲಾಯಿತು.

ಕರ್ನಾಟಕ ಸರಕಾರದ ವತಿಯಿಂದ ಹತ್ತು ವಿದ್ಯಾರ್ಥಿಗಳಿಗೂ ವಿದ್ಯಾರ್ಥಿವೇತನ ಮಂಜೂರು ಮಾಡಲಾಯಿತು. ಶಿವರಾಮ ಕಾರಂತರೂ ಯಕ್ಷಗಾನ ಗುರುಗಳೂ ಸೇರಿ ರಚಿಸಿದ ಪಠ್ಯದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ಶಿಕ್ಷಣ ಆರಂಭವಾಯಿತು. ವರ್ಷದಿಂದ ವರ್ಷಕ್ಕೆ ಈ ಪಠ್ಯವು ತೀವ್ರ ವೇಗದಲ್ಲಿ ಸುಧಾರಣೆಗೊಂಡು ಈಗ ತುಂಬಾ ಸುಧಾರಿತ ಪಠ್ಯಕ್ರಮವನ್ನು ಅನುಸರಿಸಲಾಗುತ್ತಿದೆ. ಇದುವರೆಗೂ ಸುಮಾರು 400 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿತು ಕಲಾವಿದರಾಗಿ ಪ್ರದರ್ಶನ ನೀಡಿದ್ದಾರೆ. ಈ ಕೇಂದ್ರವು ವಿದೇಶಿಗರನ್ನು ಕೂಡ ಆಕರ್ಷಿಸಿದೆ. ಹಲವಾರು ವಿದೇಶಿ ಪ್ರಜೆಗಳೂ ಇಲ್ಲಿ ಯಕ್ಷಗಾನವನ್ನು ಕಲಿತಿದ್ದಾರೆ.  ಇವರಲ್ಲಿ ಜರ್ಮನಿಯ ರಾಮಾ, ಆಸ್ಟ್ರೇಲಿಯಾದ ಜಾನ್ ಅಲೀ, ಅಮೆರಿಕಾದ ಶ್ರೀಮತಿ ಮಾರ್ಥಾ ಆಷ್ಟನ್, ಇಟಲಿಯ ಬ್ರೂನಾ ಸಿರಬೆಲ್ಲಾ ಮುಂತಾದವರು ಸೇರಿದ್ದಾರೆ. 

ಯಕ್ಷಗಾನ ಕೇಂದ್ರ ಉಡುಪಿಯು ಕೆಲವು ಪುಸ್ತಕಗಳನ್ನು ಪ್ರಕಟಿಸಿದೆ. ಇವುಗಳಲ್ಲಿ ,ಒಡ್ಡೋಲಗ, ಯಕ್ಷಗಾನದ ವಿವಿಧ ಅಂಶಗಳ ,ಲೇಖನ ಮಾಲೆಗಳು, ಯಕ್ಷಗಾನ ಸಂಗೀತ ಮತ್ತು ಯಕ್ಷಗಾನ ಪಥಗಳು ಸೇರಿವೆ.  ಅದೂ ಅಲ್ಲದೆ ಈ ಕೇಂದ್ರವು ‘ಯಕ್ಷರಂಗ’ ಎಂಬ ಯಕ್ಷಗಾನದ ಸಮೂಹ ನೃತ್ಯವನ್ನು ಸಂಯೋಜಿಸಿದೆ. ಶಿವರಾಮ ಕಾರಂತರ ನಿರ್ದೇಶನದಲ್ಲಿ ಈ ತಂಡವು ಪ್ರಸ್ತುತಪಡಿಸಿದ ‘ಯಕ್ಷಗಾನ ಬ್ಯಾಲೆ’ಯು ದೇಶದಾದ್ಯಂತ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿತ್ತು. ಭಾರತಾದ್ಯಂತ ‘ಯಕ್ಷರಂಗ’ ತಂಡವು ನೂರಾ ಐವತ್ತಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ನೀಡಿದುದು ಮಾತ್ರವಲ್ಲದೆ ವಿದೇಶಿ ಪ್ರವಾಸಗಳನ್ನು ಕೈಗೊಂಡು ವಿದೇಶದಲ್ಲಿಯೂ ಹಲವಾರು ಪ್ರದರ್ಶನಗಳನ್ನು ನೀಡಿ ಮೆಚ್ಚುಗೆ ಗಳಿಸಿದೆ. ಯಕ್ಷಗಾನ ಕೇಂದ್ರದ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳಲು ಕಾರ್ಯಕಾರಿ ಸಮಿತಿ ಇದೆ. ಈ ಕೇಂದ್ರಕ್ಕೆ ಕಾರ್ಯನಿರ್ವಹಣೆಗೆ ಹೆಚ್ಚಿನ ಕೊಡುಗೆಗಳನ್ನು ಕೊಟ್ಟವರು ಡಾ. ಶಿವರಾಮ ಕಾರಂತ ಮತ್ತು ಪ್ರೊ| ಕೆ.ಎಸ್ ಹರಿದಾಸ ಭಟ್. 

ಈ ಕೇಂದ್ರದ ಯಶಸ್ಸಿಗೆ ಕಾರಣರಾದವರಲ್ಲಿ ಇಲ್ಲಿ ಗುರುಗಳಾಗಿ ವಿದ್ಯಾಧಾರೆಯೆರೆದ ವೀರಭದ್ರ ನಾಯಕ್, ನೀಲಾವರ ರಾಮಕೃಷ್ಣಯ್ಯ,ಮಹಾಬಲ ಕಾರಂತ್, ನೀಲಾವರ ಲಕ್ಷ್ಮೀನಾರಾಯಣಯ್ಯ , ಗೋರ್ಪಾಡಿ ವಿಠ್ಠಲ ಪಾಟೀಲ್, ಸಂಜೀವ ಸುವರ್ಣ ಮೊದಲಾದವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಪ್ರಸ್ತುತ ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಹಲವಾರು ಕಲಾವಿದರಲ್ಲಿ ಹೆಚ್ಚಿನವರು ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳೇ ಆಗಿದ್ದಾರೆ ಎಂಬುದು ಗಮನಾರ್ಹವಾದ ವಿಚಾರ. 

ಧರ್ಮಸ್ಥಳ ಯಕ್ಷಗಾನ ಕಲಾ ಸಂಘ (ಲಲಿತಕಲಾ ಕೇಂದ್ರ): ಅದೇ ಸಮಯಕ್ಕೆ ತೆಂಕುತಿಟ್ಟು ಯಕ್ಷಗಾನದಲ್ಲಿ ಕಲಿಕೆಗಾಗಿ ಸೂಕ್ತ ವ್ಯವಸ್ಥೆಗಳಿಲ್ಲದ ಕಾರಣವನ್ನು ಮನಗಂಡ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ತಮ್ಮ ತೀರ್ಥರೂಪರಾದ ಶ್ರೀ ರತ್ನವರ್ಮ ಹೆಗ್ಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನಕ್ಕೊಂದು ಶಾಸ್ತ್ರೀಯ ಕಲಿಕಾ ಕೇಂದ್ರವನ್ನು ಒದಗಿಸುವ ದೃಷ್ಟಿಯಿಂದ ‘ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ಕೇಂದ್ರ’ವನ್ನು ಸ್ಥಾಪಿಸಿದರು. ಅದು ಮುಂದಕ್ಕೆ ‘ಲಲಿತ ಕಲಾ ಕೇಂದ್ರ’ವೆಂದೇ ಪ್ರಸಿದ್ಧಿಯನ್ನು ಪಡೆಯಿತು. ಮೊದಲು ಮೇಳಕ್ಕೆ ಸೇರಿ, ಮೇಳದ ಸಹಾಯಕನಾಗಿ,ಕೋಡಂಗಿ ವೇಷಗಳನ್ನು ಮಾಡಿ ಹೆಜ್ಜೆಹೆಜ್ಜೆಗೂ ನಾಟ್ಯ ಕಲಿಯುತ್ತಾ ಔನ್ನತ್ಯವನ್ನು ಸಾಧಿಸುವುದು ಆಗಿನ ರಂಗ ಪದ್ಧತಿಯಾಗಿತ್ತು. ಈ ಪದ್ಧತಿಯನ್ನು ಸರಳೀಕರಿಸಲು ಪೂಜ್ಯ ಹೆಗ್ಗಡೆಯವರು ‘ಲಲಿತ ಕಲಾ ಕೇಂದ್ರ’ವನ್ನು ಆರಂಭಿಸುವ ನಿರ್ಧಾರ  ಮಾಡಿದರು. ಮಳೆಗಾಲದ ಆರು ತಿಂಗಳುಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಕಲಿಸುವ ಯೋಜನೆ ಸಿದ್ಧವಾಯಿತು.

ಅದರಂತೆ ಮೊದಲ ವರ್ಷವೇ ಮುಮ್ಮೇಳದ ಗುರುಗಳಾಗಿ ಕುರಿಯ ವಿಠಲ ಶಾಸ್ತ್ರಿಗಳೂ ಹಿಮ್ಮೇಳಕ್ಕೆ ಮಾಂಬಾಡಿ ನಾರಾಯಣ ಭಾಗವತರೂ ಸಿದ್ಧರಾದರು. ಹೀಗೆ ಆರಂಭವಾದ ತೆಂಕುತಿಟ್ಟಿನ ಲಲಿತಕಲಾ ಕೇಂದ್ರವು ಯಶಸ್ವೀ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗತೊಡಗಿತು. ನಂತರದ ದಿನಗಳಲ್ಲಿ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳನೇಕರು ಖ್ಯಾತ ಕಲಾವಿದರಾಗಿ ಯಶಸ್ವಿಯಾಗಿ ರಂಗದಲ್ಲಿ ಮಿಂಚತೊಡಗಿದರು. ತೆಂಕುತಿಟ್ಟಿನ ಈಗಿನ ಪ್ರಮುಖ ಕಲಾವಿದರಲ್ಲಿ ಹೆಚ್ಚಿನವರು ನಾಟ್ಯ ಕಲಿತುದು ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ. ಇಂದು ತೆಂಕುತಿಟ್ಟು ಯಕ್ಷಗಾನ ರಂಗಸ್ಥಳದಲ್ಲಿ ಅಗ್ರಗಣ್ಯರಾಗಿ ಮೆರೆಯುತ್ತಿರುವ ಹಿಮ್ಮೇಳ ಮುಮ್ಮೇಳ ಕಲಾವಿದರಲ್ಲಿ ಅನೇಕರು ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಕಲಿತವರೇ ಆಗಿದ್ದಾರೆ. ಆದ್ದರಿಂದ ಲಲಿತಕಲಾ ಕೇಂದ್ರವೆಂಬುದು ಯಕ್ಷ ವಿದ್ಯಾರ್ಜನೆಗೆ ಆಶ್ರಯ ತಾಣವಾಯಿತು. ಕಲಾವಿದರನ್ನು ಪ್ರದರ್ಶನಕ್ಕೆ ಸಿದ್ಧಗೊಳಿಸುವ ಒಂದೊಳ್ಳೆಯ ಶಿಕ್ಷಣ ಸಂಸ್ಥೆಯಾಯಿತು. 

ಇದರ ಯಶಸ್ಸಿನ ಬಹುಪಾಲು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮತ್ತು ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಮತ್ತು ಯಕ್ಷಗಾನದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವ ಶ್ರೀ ಡಿ. ಹರ್ಷೇ೦ದ್ರ ಕುಮಾರ್ ಮತ್ತು ಗುರುಗಳಾಗಿ ವಿದ್ಯಾದಾನ ಮಾಡಿದ ಹಿರಿಯ ಕಲಾವಿದರಿಗೆ ಸಲ್ಲಬೇಕು. ಇಲ್ಲಿ ಗುರುಗಳಾಗಿದ್ದ ಪ್ರಸಿದ್ಧ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿ, ಮಾಂಬಾಡಿ ನಾರಾಯಣ ಭಾಗವತರು, ಮಾಣಂಗಾಯಿ ಕೃಷ್ಣ ಭಟ್, ಕುಂಡಂಕುಳಿ ರಾಮಕೃಷ್ಣ ಮದ್ದಳೆಗಾರ, ಪಡ್ರೆ ಚಂದು, ಕೆ.ಗೋವಿಂದ ಭಟ್, ನೆಡ್ಲೆ ನರಸಿಂಹ ಭಟ್, ಅಳಿಕೆ ರಾಮಯ್ಯ ರೈ, ಕರ್ಗಲ್ಲು ವಿಶ್ವೇಶ್ವರ ಭಟ್, ಗೋಪಾಲಕೃಷ್ಣ ಕುರುಪ್, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಪದ್ಮನಾಭ ಉಪಾಧ್ಯಾಯ, ಶಿವರಾಮ ಶಿಶಿಲ, ಬೆಳಾಲು ಲಕ್ಷ್ಮಣ ಗೌಡ, ತಾರಾನಾಥ ಬಲ್ಯಾಯ ವರ್ಕಾಡಿ, ದಿವಾಣ ಶಿವಶಂಕರ ಭಟ್ ಮೊದಲಾದವರು ತಮ್ಮ ಶ್ರಮವನ್ನು ಧಾರೆಯೆರೆದು ಅನೇಕ ಕಲಾವಿದರನ್ನು ರೂಪುಗೊಳಿಸಿದ್ದರು. 

ಅದರಲ್ಲೂ ನೆಡ್ಲೆ ನರಸಿಂಹ ಭಟ್, ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರು ಜೊತೆಯಾಗಿ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಹೊಸ ಹೊಸ ಆವಿಷ್ಕಾರಗಳ ಜೊತೆಗೆ ಸಂಪ್ರದಾಯಬದ್ಧವಾಗಿ ಕಲಿಸಿ ತೆಂಕುತಿಟ್ಟಿನ ನೃತ್ಯ ವಿಭಾಗದಲ್ಲಿ ವೈವಿಧ್ಯತೆಯನ್ನು ತಂದರು. 

ಹೀಗೆ ಒಂದು ಹಂತದಲ್ಲಿ ಏರುಗತಿಯಲ್ಲಿ ಮೇರುಸದೃಶವಾಗಿ ಸಾಗುತ್ತಿದ್ದ ಲಲಿತಾಕಲಾಕೇಂದ್ರಕ್ಕೆ ವಿದ್ಯಾರ್ಥಿಗಳ ಕೊರತೆಯುಂಟಾಯಿತು. ಯಕ್ಷಗಾನದಿಂದ ಬರುವ ಆದಾಯ ಮತ್ತು ಜೀವನ ನಿರ್ವಹಣೆಯ ಮಟ್ಟವನ್ನು ಅರಿತು ಹೆತ್ತವರು ತಮ್ಮ ಮಕ್ಕಳನ್ನು ಯಕ್ಷಗಾನ ಕಲಿಯುವತ್ತ ಪ್ರೇರೇಪಿಸದೆ ಇದ್ದುದೇ ಒಂದು ಕಾರಣವಿರಬಹುದು ಎಂದು ಹಲವರು ಅಭಿಪ್ರಾಯಪಡುತ್ತಾರೆ. ಆದ್ದರಿಂದ ಕಲಿಕಾಸಕ್ತರ ಕೊರತೆಯಿಂದ ಲಲಿತಕಲಾ ಕೇಂದ್ರದಲ್ಲಿ ಯಕ್ಷಗಾನ ಶಿಕ್ಷಣ ಮುಂದುವರಿಯದೆ ಇದ್ದುದು ಕಲಾಪ್ರಪಂಚಕ್ಕಾದ ಅದರಲ್ಲೂ ತೆಂಕುತಿಟ್ಟು ಯಕ್ಷಗಾನಕ್ಕೆ ಆದ ದೊಡ್ಡ ನಷ್ಟವೆಂದೇ ಹೇಳಬೇಕು. 

ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ: ತೆಂಕುತಿಟ್ಟು ಮತ್ತು ಬಡಗುತಿಟ್ಟಿನ ಈ ಎರಡು ತರಬೇತಿ ಕೇಂದ್ರಗಳಲ್ಲದೆ ಗಡಿನಾಡು ಕನ್ನಡನಾಡು ಕಾಸರಗೋಡಿನ ಪೆರ್ಲದಲ್ಲಿರುವ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ) 2005ನೇ ಇಸವಿಯಲ್ಲಿ ಪ್ರಾರಂಭವಾಯಿತು. ಯಕ್ಷಗಾನ ಕಲಾವಿದರಾದ ಸಬ್ಬಣಕೋಡಿ ರಾಮ ಭಟ್ಟರು ಈ ತರಬೇತಿ ಕೇಂದ್ರದ ರೂವಾರಿ ಹಾಗೂ ಸ್ಥಾಪಕರು. ತನ್ನ ಗುರುಗಳಾದ ಪಡ್ರೆ ಚಂದು ಅವರ ನೆನಪಿಗಾಗಿ ಅವರ ಹೆಸರಿನಲ್ಲಿಯೇ ಈ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸಿದರು.

ಕಳೆದ ಹದಿನೇಳು ವರ್ಷಗಳಿಂದ ನಿರಂತರವಾಗಿ ಕಾರ್ಯಾಚರಿಸಿಕೊಂಡು ಬರುತ್ತಿರುವ ಶ್ರೀ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರವು ತನ್ನದೇ ಸ್ವಂತ  ಕಟ್ಟಡದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಶಿಕ್ಷಣವನ್ನು ನೀಡಿದೆ. ಇಲ್ಲಿ ದೂರದೂರಿನಿಂದ ಬಂದು ಯಕ್ಷಗಾನ ಕಲಿಯುವ ವಿದ್ಯಾರ್ಥಿಗಳಿಗೆ ವಸತಿಯ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಈ ಕೇಂದ್ರದಲ್ಲಿ ಕಲಿತ ಹಲವಾರು ಮಂದಿ ಕಲಾವಿದರು ಇಂದು ವೃತ್ತಿಪರರಾಗಿ ಹಲವಾರು ಮೇಳಗಳಲ್ಲಿ ಪ್ರಬುದ್ಧ, ಪ್ರಸಿದ್ಧ ಕಲಾವಿದರಾಗಿ ಮಿಂಚುತ್ತಿದ್ದಾರೆ. ಕೇಂದ್ರಕ್ಕೆ ಬೇಕಾದ ಸಂಪನ್ಮೂಲಗಳನ್ನು ಕ್ರೂಢೀಕರಿಸಲು ಶ್ರಮಪಟ್ಟು ಸಬ್ಬಣಕೋಡಿ ರಾಮ ಭಟ್ಟರು ಈ ಕೇಂದ್ರವನ್ನು ಬೆಳೆಸಿದ್ದಾರೆ. 

ಮಾಂಬಾಡಿ ಸುಬ್ರಹ್ಮಣ್ಯ ಭಟ್:  ಯಕ್ಷಗಾನ ತರಬೇತಿ ಕೇಂದ್ರಗಳು ಮಾಡುವ ತರಬೇತಿ ಕಾರ್ಯಕ್ರಮವನ್ನು ಓರ್ವ ವ್ಯಕ್ತಿಯಾಗಿ ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತಿರುವ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರನ್ನು ಇಲ್ಲಿ ಉಲ್ಲೇಖಿಸಲೇ ಬೇಕು. ಸುಮಾರು ಇಪ್ಪತ್ತು ವರ್ಷಗಳಷ್ಟು ವಿವಿಧ ಮೇಳಗಳಲ್ಲಿ ವೃತ್ತಿಪರ ಹಿಮ್ಮೇಳ ಕಲಾವಿದರಾಗಿ ತಿರುಗಾಟ ಮಾಡಿದ್ದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಆ ನಂತರ ಯಾಕೋ ತನ್ನ ಮೇಳದ ಕಲಾ ವ್ಯವಸಾಯವನ್ನು ಮುಂದುವರಿಸುವ ಮನಸ್ಸು ಮಾಡಲಿಲ್ಲ. ಆದರೆ ತನ್ನ ಕಲಾಸೇವೆಯ ಕೈಂಕರ್ಯದಿಂದ ದೂರ ಸರಿಯಲಿಲ್ಲ.

ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಯಕ್ಷಗಾನದ ಹಿಮ್ಮೇಳ ತರಗತಿಗಳನ್ನು ನಡೆಸುತ್ತಾ ಬಹಳಷ್ಟು ಮಂದಿ ಭಾಗವತರು, ಚೆಂಡೆ ಮದ್ದಳೆ ವಾದಕರನ್ನು ರೂಪುಗೊಳಿಸಿದ್ದಾರೆ. ಇಂದು ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮಿಂಚುವ ಪ್ರಸಿದ್ಧ ಭಾಗವತ, ಮದ್ದಳೆಗಾರರಲ್ಲಿ ಹೆಚ್ಚಿನವರು ಶ್ರೀ ಮಾಂಬಾಡಿಯವರ ಶಿಷ್ಯರು. ಇಂದು ತೆಂಕುತಿಟ್ಟಿನ ಹಿಮ್ಮೇಳದಲ್ಲಿರುವ ಬಹುಪಾಲು ಕಲಾವಿದರು ಮಾಂಬಾಡಿಯವರ ನಿರ್ದೇಶನದಲ್ಲಿ ಪಳಗಿದವರೇ ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಮೂಕವಿಸ್ಮಿತರಾಗುವಂತಹ ಅಪೂರ್ವ ಶಿಷ್ಯ ಸಂಕುಲವನ್ನು ಹೊಂದಿದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಗುರು-ಶಿಷ್ಯ ಪರಂಪರೆಯ ಓರ್ವ ಸಮರ್ಥ ಗುರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಇರುವ ಸರಳೀಕೃತವಾದ ಪಾಠವೇ ಇದಕ್ಕೆ ಕಾರಣವಿರಬಹುದು. ಯಾವ ರೀತಿಯ ವಿದ್ಯಾರ್ಥಿಗೆ ಯಾವ ರೀತಿಯಿಂದ ಹೇಳಿಕೊಡಬೇಕೆಂಬುದು ಇವರಿಗೆ ಚೆನ್ನಾಗಿ ತಿಳಿದಿದೆ. ಅದರಂತೆ ಮುಂದುವರಿದು ಯಶಸ್ಸು ಸಾಧಿಸಿದ ಇವರಿಗೆ ಶಿಷ್ಯಂದಿರೆಲ್ಲಾ ಸೇರಿ ಮಾಡಿದ ಸನ್ಮಾನ ಕಾರ್ಯಕ್ರಮ ಅಭೂತಪೂರ್ವವಾಗಿತ್ತು. ಅಂದು ಸೇರಿದ ಶಿಷ್ಯಗಡಣವನ್ನು ನೋಡಿಯೇ ಅಲ್ಲಿ ಸೇರಿದ ಜನರು ಬೆರಗಾಗಿದ್ದರು. 

ವೈಯುಕ್ತಿಕ ನೆಲೆಯಲ್ಲಿ ನೋಡುವುದಾದರೆ ನಮಗೆ ಯಕ್ಷಗಾನದಲ್ಲಿ ಹಲವಾರು ಮಂದಿ ಗುರುಗಳು ಅಥವಾ ತರಬೇತುದಾರರು ಕಾಣಸಿಗುತ್ತಾರೆ. ಇವರಿಂದೆಲ್ಲಾ ಯಕ್ಷಗಾನ ರಂಗಕ್ಕೆ ಅದೆಷ್ಟೋ ಪ್ರಯೋಜನಗಳಾಗಿವೆ. 

ಮೋಹನ ಬೈಪಾಡಿತ್ತಾಯ: ಉಜಿರೆಯಲ್ಲಿ ಖ್ಯಾತ ಹಿಮ್ಮೇಳ ಕಲಾವಿದರಾದ ಮೋಹನ ಬೈಪಾಡಿತ್ತಾಯರು ನಡೆಸಿಕೊಂಡು ಬರುತ್ತಿರುವ ‘ಶ್ರೀ ಜನಾರ್ದನ ಸ್ವಾಮಿ ಯಕ್ಷ ಕಲಿಕಾ ಹಿಮ್ಮೇಳ ಕೇಂದ್ರ’ ಎಂಬ ತರಬೇತಿ ಕೇಂದ್ರ ಕಾರ್ಯಾಚರಿಸುತ್ತಿದೆ. 2014ರ ಆಗಸ್ಟ್ ತಿಂಗಳಲ್ಲಿ ಆರಂಭವಾದ ಈ ಕೇಂದ್ರದ ಗುರುಗಳು ಪ್ರಸಿದ್ಧ ಭಾಗವತರೂ ಮದ್ದಳೆಗಾರರೂ ಆದ ಮೋಹನ ಬೈಪಾಡಿತ್ತಾಯರು. ಇಲ್ಲಿಯ ವರೆಗೆ ಸುಮಾರು ಐವತ್ತಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಹೊಂದಿ ಮೇಳದಲ್ಲಿ ಮತ್ತು ಹವ್ಯಾಸಿ ಕಲಾವಿದರಾಗಿ ಪ್ರದರ್ಶನ ನೀಡುತ್ತಿದ್ದಾರೆ. 

ಪುತ್ತೂರು ಶ್ರೀಧರ ಭಂಡಾರಿ: ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಕಲಾವಿದ ಪುತ್ತೂರು ಶ್ರೀಧರ ಭಂಡಾರಿಯವರದು ಒಂದು ಪ್ರಮುಖ ಹೆಸರು. ಒಂದು ಕಾಲದಲ್ಲಿ ಪ್ರಚಂಡ ಪುಂಡುವೇಷಧಾರಿಯಾಗಿ ಯಕ್ಷರಾತ್ರಿಗಳಲ್ಲಿ ರಂಗಸ್ಥಳದಲ್ಲಿ ಹುಡಿಹಾರಿಸಿದ ಶ್ರೀಧರ ಭಂಡಾರಿಯವರು ನಾಟ್ಯ ಕಲಿಸುವುದರಲ್ಲಿಯೂ ಸೈ ಎನಿಸಿಕೊಂಡವರು. ತನ್ನ ಹುಟ್ಟೂರಾದ ಪುತ್ತೂರಿನಲ್ಲಿ ಕೆಲವು ಕಡೆಗಳಲ್ಲಿ ನಾಟ್ಯ ತರಗತಿಗಳನ್ನು ನಡೆಸಿದ್ದಾರೆ. ದೂರದ ಮುಂಬಯಿಯಲ್ಲಿಯೂ ನಾಟ್ಯ ತರಗತಿ, ನಿರ್ದೇಶನಗಳನ್ನು ಮಾಡಿದ್ದಾರೆ. ಹಲವು ಯಕ್ಷಗಾನಾಕಾಂಕ್ಷಿ ವಿದ್ಯಾರ್ಥಿಗಳು ಅವರ ಮನೆಗೆ ಬಂದು ಕಲಿತಿದ್ದಾರೆ. ಪುತ್ತೂರಿನಲ್ಲಿ ಅವರ ಶಿಷ್ಯಂದಿರಿಂದ ‘ಯಕ್ಷಕೂಟ’ ಎಂಬ ಯಕ್ಷಗಾನ ತಂಡವೂ ಕಾರ್ಯಾಚರಿಸುತ್ತಿದೆ. 

ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ: ಖ್ಯಾತ ಭಾಗವತ ದಿ। ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಯಕ್ಷಗಾನ ಶಿಕ್ಷಕರಾಗಿಯೂ ಗುರುತಿಸಿಕೊಂಡವರು. ಹಲವಾರು ಮಂದಿ ಕಲಿಕಾಸಕ್ತರಿಗೆ ಪಾಠ ಮಾಡಿದ್ದಾರೆ. ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ವಿವಿಧ ಸಂಘ ಸಂಸ್ಥೆಗಳು ನಡೆಸುವ ತರಗತಿಗಳಲ್ಲಿಯೂ ಹಿಮ್ಮೇಳ ಶಿಕ್ಷಣ ನೀಡಿದ್ದಾರೆ. ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿಯೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 

ಕರ್ಗಲ್ಲು ವಿಶ್ವೇಶ್ವರ ಭಟ್: ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ಪ್ರಮುಖ ಶಿಕ್ಷಕರಾಗಿದ್ದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ ಅಲ್ಲಲ್ಲಿ ತರಬೇತಿಗಳನ್ನು ನಡೆಸಿ ಮುಂದಿನ ಪೀಳಿಗೆಗೆ ಯಕ್ಷಗಾನದ ಅಭಿರುಚಿಯನ್ನು ನಿರಂತರವಾಗಿ ದಾಟಿಸಿ ಬೆಳೆಸುತ್ತಿದ್ದಾರೆ. ತೆಂಕುತಿಟ್ಟು ಯಕ್ಷಗಾನವನ್ನಲ್ಲದೆ, ಮೂಡಲಪಾಯ ಯಕ್ಷಗಾನ ಹಾಗೂ ಬಡಗುತಿಟ್ಟು ಯಕ್ಷಗಾನವನ್ನು ಕೂಡ ಅಭ್ಯಾಸ ಮಾಡಿದ್ದ ಇವರು ಪರಿಣಾಮಕಾರಿಯಾಗಿ ಹೇಳಿಕೊಡಬಲ್ಲ ಓರ್ವ ಯಕ್ಷಗಾನ ಶಿಕ್ಷಕರು. ಯಕ್ಷಗಾನ ಪಠ್ಯವನ್ನು ರೂಪಿಸುವ ಸಮಿತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ. 

ದಿವಾಣ ಶಿವಶಂಕರ ಭಟ್: ಧರ್ಮಸ್ಥಳ ಯಕ್ಷಗಾನ ಕಲಾ ಸಂಘ (ಲಲಿತಕಲಾ ಕೇಂದ್ರ)ದಲ್ಲಿ ಹಿಂದೆ ತರಬೇತುದಾರ ಹಾಗೂ ಮುಖ್ಯ ಶಿಕ್ಷಕರಾಗಿದ್ದ ದಿವಾಣ ಶಿವಶಂಕರ ಭಟ್ಟರು ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಯಕ್ಷಗಾನ ತರಬೇತಿಗಳನ್ನು ನಡೆಸುತ್ತಿದ್ದಾರೆ. 1982ನೇ ಇಸವಿಯಿಂದಲೇ ಯಕ್ಷಗಾನ ತರಗತಿಗಳನ್ನು ನಡೆಸುತ್ತಿರುವುದು ಮಾತ್ರವಲ್ಲ, ವಿವಿಧೆಡೆ ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡಿದ್ದಾರೆ. ಅಲ್ಲಲ್ಲಿ ಸುಮಾರು 750ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ ಯಕ್ಷಗಾನದ ಯಕ್ಷಗಾನದ ಪಾಠ ಮಾಡಿದ್ದಾರೆ. ಅದರಲ್ಲಿ ಹಲವಾರು ಮಂದಿ ಮೇಳದ ಕಲಾವಿದರೂ ಹವ್ಯಾಸಿ ಕಲಾವಿದರೂ ಸೇರಿದ್ದಾರೆ. 

ಬೇಗಾರು ಶಿವಕುಮಾರ್: ಬೆಂಗಳೂರಿನಲ್ಲಿ ಇದ್ದುಕೊಂಡು ಯಕ್ಷಗಾನ ಶಾಲೆಯೊಂದನ್ನು ಪ್ರಾರಂಭಿಸಿ ನಡೆಸುತ್ತಿರುವವರು ತೆಂಕು ಮತ್ತು ಬಡಗಿನ ಪ್ರಸಿದ್ಧ ಸ್ತ್ರೀ ವೇಷಧಾರಿಯಾಗಿರುವ ಬೇಗಾರು ಶಿವಕುಮಾರ್. ಬಡಗುತಿಟ್ಟಿನ ಮೂಲಕ ತನ್ನ ಯಕ್ಷಪಯಣವನ್ನು ಆರಂಭಿಸಿದ ಬೇಗಾರು ಶಿವಕುಮಾರರು ಸುಮಾರು ಎಂಟು ವರ್ಷಗಳ ಬಡಗುತಿಟ್ಟಿನ ತಿರುಗಾಟದ ನಂತರ ತೆಂಕುತಿಟ್ಟಿಗೆ ಮುಖಮಾಡಿದವರು. ಆಮೇಲೆ ಸುಮಾರು ಹನ್ನೆರಡು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿ ತಿರುಗಾಟ ನಡೆಸಿದರು. ಆ ನಂತರ 2013ರಲ್ಲಿ ಬೆಂಗಳೂರಿನಲ್ಲಿ ‘ಗಾನಸೌರಭ ಯಕ್ಷಗಾನ ಶಾಲೆ’ ಎಂಬ ಹೆಸರಿನಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು ಆರಂಭಿಸಿ ಇಲ್ಲಿ ನೂರಾರು ಆಸಕ್ತ ಹಿರಿ-ಕಿರಿಯ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಾ ಬಂದಿದ್ದಾರೆ. 

ಉಂಡೆಮನೆ ಶ್ರೀಕೃಷ್ಣ ಭಟ್: ಯಕ್ಷಗಾನ ಶಿಕ್ಷಣ ಕ್ಷೇತ್ರದಲ್ಲಿ ನಮಗೆ ಕಾಣಸಿಗುವ ಇನ್ನೊಂದು ಹೆಸರು ಉಂಡೆಮನೆ ಶ್ರೀಕೃಷ್ಣ ಭಟ್. ಕೆಲವು ವರ್ಷಗಳ ಹಿಂದೆ ಅಂದರೆ ತನ್ನ ಯಕ್ಷಗಾನ ವೃತ್ತಿ ಜೀವನದ ಆರಂಭದಲ್ಲಿ ಕಟೀಲು ಮೇಳದಲ್ಲಿ ಪುಂಡುವೇಷಧಾರಿಯಾಗಿಯೂ ಭಾಗವತರಾಗಿಯೂ ಸೇವೆ ಸಲ್ಲಿಸಿದ್ದ ಉಂಡೆಮನೆ ಶ್ರೀಕೃಷ್ಣ ಭಟ್ಟರು ಈಗ ದೇಂತಡ್ಕ ವನದುರ್ಗಾ ದೇವಿ ಪ್ರಸಾದಿತ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿದ್ದಾರೆ. ಹಿಮ್ಮೇಳ, ಮುಮ್ಮೇಳಗಳೆರಡನ್ನೂ ಸಮರ್ಥವಾಗಿ ನಿಭಾಯಿಸುವ ಇವರು ತರಬೇತಿ ಕ್ಷೇತ್ರದಲ್ಲಿ ನಾಟ್ಯ ಶಿಕ್ಷಕರಾಗಿ ಹೆಚ್ಚು ಪರಿಚಿತರು. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಲವಾರು ಯಕ್ಷಗಾನ ತರಗತಿಗಳನ್ನು ನಡೆಸಿದ್ದಾರೆ. ಸುಮಾರು ಐನೂರಕ್ಕೂ ಹೆಚ್ಚು ಮಂದಿಗೆ ಹೇಳಿಕೊಟ್ಟಿದ್ದಾರೆ. ಇಷ್ಟು ಮಾತ್ರವಲ್ಲದೆ ಹಲವಾರು ಹವ್ಯಾಸಿ ತಂಡಗಳನ್ನು ತರಬೇತಿ ನೀಡಿ ಸಿದ್ಧಗೊಳಿಸಿದ್ದಾರೆ. 

ಗೋವಿಂದ ನಾಯಕ್ ಪಾಲೆಚ್ಚಾರು: ತರಬೇತಿ ಕೇಂದ್ರಗಳನ್ನು ಹೊರತುಪಡಿಸಿ ಅಲ್ಲಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸುವ ಯಕ್ಷಗಾನ ಶಿಕ್ಷಕರು ನಮ್ಮ ನಡುವೆ ಹಲವಾರು ಮಂದಿ ಇದ್ದಾರೆ. ಅವರಲ್ಲಿ ಗೋವಿಂದ ನಾಯಕ್ ಪಾಲೆಚ್ಚಾರು ಕೂಡಾ ಒಬ್ಬರು. ಇವರು ಹಿಮ್ಮೇಳದ ಎಲ್ಲಾ ಅಂಗಗಳಲ್ಲಿಯೂ ತರಬೇತಿಯನ್ನು ನೀಡುತ್ತಿದ್ದಾರೆ. ಪ್ರಾರಂಭದಲ್ಲಿ ತಮ್ಮ ಮನೆಯಲ್ಲಿಯೇ ಹಲವಾರು ವಿದ್ಯಾಕಾಂಕ್ಷಿಗಳಿಗೆ ಯಕ್ಷಗಾನ ಹಿಮ್ಮೇಳವನ್ನು ಕಲಿಸುತ್ತಿದ್ದರು. ಆಮೇಲೆ ಅರ್ಲಪದವು, ಪಾಣಾಜೆ, ಪುತ್ತೂರು ಮೊದಲಾದ ಪ್ರದೇಶಗಳಲ್ಲಿ ಯಕ್ಷಗಾನ ತರಬೇತಿ ಮತ್ತು ಶಿಕ್ಷಣವನ್ನು ನೀಡುತ್ತಿದ್ದರು. ಪುತ್ತೂರಿನಲ್ಲಿ ಹಲವು ವರ್ಷಗಳಿಂದ ಭಾಗವತಿಕೆ, ಚೆಂಡೆ, ಮೃದಂಗದ ತರಗತಿಯನ್ನು ನಡೆಸುತ್ತಾ ಬಂದಿರುತ್ತಾರೆ.  ಇದುವರೆಗೆ ಸುಮಾರು ಇನ್ನೂರಕ್ಕೂ ಹೆಚ್ಚು ಆಸಕ್ತರಿಗೆ ಪಾಠ ಮಾಡಿದ ಗೋವಿಂದ ನಾಯಕ್ ಪಾಲೆಚ್ಚಾರರಲ್ಲಿ ಕಲಿತ ಹಲವರು ಇಂದು ಹವ್ಯಾಸಿ ಮತ್ತು ವೃತ್ತಿಪರರಾಗಿ ರಂಗದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಅವರಲ್ಲಿ ಮುರಾರಿ ಕಡಂಬಳಿತ್ತಾಯ, ಅಮೃತಾ ಅಡಿಗ ಮೊದಲಾದವರು ಪ್ರಮುಖರು. 

(ಲೇಖನ ಭಾಗ-2ರಲ್ಲಿ ಮುಂದುವರಿಯುವುದು. ಮುಂದಿನ ಭಾಗದಲ್ಲಿ ‘ಶ್ರೀಮಯ ಯಕ್ಷಗಾನ ರಂಗ ಶಿಕ್ಷಣ ಕೇಂದ್ರ ಗುಣವಂತೆ, ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರ ಮತ್ತು ಇನ್ನುಳಿದ ಯಕ್ಷಗಾನ ಶಿಕ್ಷಕರ ಬಗ್ಗೆ ನಿರೀಕ್ಷಿಸಿ)

(ಹೆಚ್ಚಿನ ಕಲಾವಿದರೂ ಒಂದು ಕೋನದಲ್ಲಿ ನೋಡಿದರೆ ಗುರುಗಳೇ ಆಗಿರುತ್ತಾರೆ. ಯಾರಾದರೂ ಒಬ್ಬರಿಗಾದರೂ ಹೇಳಿಕೊಟ್ಟಿರುತ್ತಾರೆ ಅಥವಾ ಪಾಠ ಮಾಡಿರುತ್ತಾರೆ. ಅಂತಹಾ ಎಲ್ಲರನ್ನೂ ಇಲ್ಲಿ ಉಲ್ಲೇಖಿಸುತ್ತಿಲ್ಲ. ಕೆಲವು ಮಂದಿ ಶಿಷ್ಯಂದಿರನ್ನು ಸಿದ್ಧಗೊಳಿಸಿದ ಯಕ್ಷಗಾನದ ಗುರುಗಳನ್ನು ಉಲ್ಲೇಖಿಸುವ  ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ನಿಮಗೆ ತಿಳಿದ ಯಕ್ಷಗಾನದ ಶಿಕ್ಷಕರ ಬಗ್ಗೆ ಮಾಹಿತಿಯಿದ್ದವರು ನಮಗೆ ಕಳುಹಿಸಿಕೊಡಬಹುದು. ನಮ್ಮ ಇಮೇಲ್ [email protected] Whatsapp: 9164828688)

ಲೇಖಕ: ಮನಮೋಹನ್ ವಿ.ಎಸ್ 

ಧರ್ಮಸ್ಥಳ ಮತ್ತು ಕಟೀಲು ಮೇಳಗಳ ಆಟ ಇಂದು ಎಲ್ಲೆಲ್ಲಿ? (22.03.2023, ಬುಧವಾರ)

ಶ್ರೀ ಧರ್ಮಸ್ಥಳ ಮೇಳ ==  ಮೇಲ್ಪಾಲ್ ಕ್ರೀಡಾಂಗಣದಲ್ಲಿ – ಶ್ರೀ ಧರ್ಮಸ್ಥಳ  ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಉಜಿರೆ –  ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಕಲ್ಲಬೆಟ್ಟು ನೈನಾಡು –  ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ದಡಸ್ ಅಸೈಗೋಳಿ – ಶ್ರೀ ದೇವಿ ಮಹಾತ್ಮೆ  

ಕಟೀಲು ನಾಲ್ಕನೇ ಮೇಳ  == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಶ್ರೀ ಗಾಯತ್ರಿ ಮಹಾತ್ಮೆ 

ಕಟೀಲು ಐದನೇ ಮೇಳ == ಕೆಮ್ಮಿಂಜೆ ಪುತ್ತೂರು – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಕಟ್ಟಿಂಗೇರಿ ಮೂಡುಬೆಳ್ಳೆ – ಶ್ರೀ ದೇವಿ ಮಹಾತ್ಮೆ 

ಹಾಸಿಗೆಯ ಕೆಳಗೆ ಹೊದಿಕೆ ಹೊದಿಸಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಶಂಕೆ, ಪತಿ ನಾಪತ್ತೆ, ಯುವತಿಯ ಪೋಷಕರಿಗೆ ಕಾಣಿಸಿದ ಅಡಗಿಸಿಟ್ಟ ಮಗಳ ಮೃತದೇಹ

ಯುವತಿಯ ಶವ ಮನೆಯ ಹಾಸಿಗೆಯ ಕೆಳಗೆ ಉಣ್ಣೆಯ ಹೊದಿಕೆ ಹೊದಿಸಿ ಪತ್ತೆಯಾಗಿದೆ. ಬಿಜೇಶ್ ಅವರ ಪತ್ನಿ ಪಿಜೆ ವಲ್ಸಮ್ಮ ಅಲಿಯಾಸ್ ಅನುಮೋಳೆ ಮೃತ ದುರ್ದೈವಿ. ಮಹಿಳೆಯ ಪತಿ ಪಜುಮ್ಕಂಡಂ ಕಂಚಿಯಾರ್‌ನ ಬಿಜೇಶ್ ನಾಪತ್ತೆಯಾಗಿದ್ದಾನೆ.

ಘಟನೆ ಕೊಲೆ ಎಂಬುದು ಪೊಲೀಸರ ಪ್ರಾಥಮಿಕ ತೀರ್ಮಾನಿಸಲಾಗಿದೆ. ಕೆಲ ದಿನಗಳಿಂದ ವಲ್ಸಮ್ಮ ಕಾಣೆಯಾಗಿದ್ದರು. ಪತ್ನಿ ನಾಪತ್ತೆಯಾದ ನಂತರ ಬಿಜೇಶ್ ದೂರು ದಾಖಲಿಸಿದ್ದರು.

ಮೃತ ಯುವತಿ ವಲ್ಸಮ್ಮ ಅವರು ಕಂಚಿಯಾರ್‌ನ ಜ್ಯೋತಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದರು. ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ಮಾಹಿತಿ ಲಭಿಸಿದೆ. ಬಿಜೇಶ್ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಶುಕ್ರವಾರ ಶಾಲೆಯಲ್ಲಿದ್ದ ಆಕೆ ಮರುದಿನ ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಎಲ್ಲಾ ವ್ಯವಸ್ಥೆಗಳನ್ನು ಮುಗಿಸಿ ಹಿಂದಿರುಗಿದ್ದಳು. ಆಗ ಅವಳ ಕಾಣೆಯಾದ ಸುದ್ದಿ ಬಂದಿತ್ತು. ಬಿಜೇಶ್ ಆಕೆಯ ಪೋಷಕರಿಗೆ ಕರೆ ಮಾಡಿ ಮಗಳು ಮನೆ ಬಿಟ್ಟು ಹೋಗಿದ್ದಾಳೆ ಎಂದು ಹೇಳಿದ್ದರು. ಅವರು ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು.

ಆಕೆಯ ಪೋಷಕರು ಮನೆಗೆ ಬಂದರೂ, ಬಿಜೇಶ್ ಅವರನ್ನು ಮಲಗುವ ಕೋಣೆಗೆ ಪ್ರವೇಶಿಸಲು ಬಿಡಲಿಲ್ಲ. ಬಳಿಕ ನಾಪತ್ತೆ ದೂರು ದಾಖಲಾಗಿತ್ತು. ಅವರು ಸೋಮವಾರ ಕರೆ ಮಾಡಿದಾಗ, ಆಕೆಯ ಫೋನ್ ಸ್ವಲ್ಪ ಸಮಯ ರಿಂಗಾಯಿತು ಮತ್ತು ನಂತರ ಸಂಪರ್ಕ ಕಡಿತಗೊಂಡಿತು.

ಆಕೆಯ ಪೋಷಕರು ಮತ್ತು ಸಹೋದರ ನಿನ್ನೆ ಠಾಣೆಗೆ ಬಂದು ತನಿಖೆಯ ಪ್ರಗತಿಯನ್ನು ವಿಚಾರಿಸಿದ್ದಾರೆ. ನಂತರ ಸಂಜೆ 6 ಗಂಟೆಗೆ ಆಕೆಯ ಮನೆಗೆ ಭೇಟಿ ನೀಡಿದ್ದರು. ಮನೆಗೆ ಬೀಗ ಹಾಕಿರುವುದನ್ನು ನೋಡಿ ಬಾಗಿಲು ಒಡೆದು ಒಳ ನುಗ್ಗಿ ದುರ್ವಾಸನೆ ಬರುತ್ತಿತ್ತು.

ಅದರ ನಂತರ, ಹುಡುಕಾಟ ನಡೆಸಲಾಯಿತು ಮತ್ತು ಹೊದಿಕೆಯನ್ನು ತೆಗೆದಾಗ, ಅವಳ ಒಂದು ಕೈ ಹೊರಗೆ ಕಾಣಿಸಿಕೊಂಡಿತು. ಆಗ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು.

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತರಬೇತಿ – ಪುತ್ತೂರಿನಲ್ಲಿ ಮೊಟ್ಟಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ವಿನೂತನ ಪರಿಕಲ್ಪನೆ

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಸಿಬಿಎಸ್‌ಇ ಶಿಕ್ಷಣ ಸಂಸ್ಥೆಯಾದ ಅಂಬಿಕಾ ವಿದ್ಯಾಲಯ ಹೊಸತನ ಹಾಗೂ ವಿನೂತನ ಕಲ್ಪನೆಗಳ ಸಾಕಾರಕೇಂದ್ರವೆನಿಸಿದೆ. ಪುತ್ತೂರಿನ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಈ ಸಂಸ್ಥೆ ಹುಟ್ಟುಹಾಕಿದೆ. ಪುತ್ತೂರು ತಾಲೂಕಿನಲ್ಲಿನ ಶಿಕ್ಷಣ ಸಂಸ್ಥೆಗಳ ಪೈಕಿ ಈಜು ಕೊಳ ಹೊಂದಿರುವ ಏಕೈಕ ಶಿಕ್ಷಣ ಸಂಸ್ಥೆ ಅಂಬಿಕಾ ವಿದ್ಯಾಲಯ. ಅಂತೆಯೇ ನಿಗದಿತ ಪಠ್ಯದೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ಕೊಡುವ, ಬದುಕಿನ ಅನುಭವ ಕಟ್ಟಿಕೊಡುವ ಕಾರ್ಯದಲ್ಲೂ ಅಂಬಿಕಾ ಸಂಸ್ಥೆ ತೊಡಗಿಕೊಂಡಿದೆ. ಹಾಗಾಗಿ ಇಲ್ಲಿ ಎಲ್.ಕೆ.ಜಿ ತರಗತಿಗೆ ದಾಖಲಾತಿ ಹೊಂದುವ ವಿದ್ಯಾರ್ಥಿಯೊಬ್ಬ ಆ ವರ್ಷದಿಂದಲೇ ಜೀವನ ಶಿಕ್ಷಣವನ್ನೂ ಕರಗತ ಮಾಡಿಕೊಳ್ಳುತ್ತಾನೆ ಎಂಬುದು ವಿಶೇಷ.


ಧಾರ್ಮಿಕ ಚಿಂತನೆ, ಶೈಕ್ಷಣಿಕ ಸಾಧನೆ ಮತ್ತು ರಾಷ್ಟçಭಕ್ತಿ ಉದ್ದೀಪನಗೊಳಿಸುವ ಸಮಗ್ರ ಶಿಕ್ಷಣವನ್ನು ದಶಕದ ಹಿಂದಿನಿ0ದಲೇ ಜಾರಿಗೊಳಿಸಿರುವ ಅಂಬಿಕಾ ವಿದ್ಯಾಲಯ ಮುಂದಿನ ದಿನಗಳಲ್ಲಿ ವಿಜ್ಞಾನ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡುವ, ತನ್ಮೂಲಕ ವೈಜ್ಞಾನಿಕ ರಂಗದಲ್ಲಿ ತನ್ನ ಛಾಪನ್ನೊತ್ತುವ ನೆಲೆಯಲ್ಲಿ ನೂತನ ಕಾರ್ಯಯೋಜನೆ ಹಮ್ಮಿಕೊಂಡಿದೆ.

ಆ ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಸಂಸ್ಥೆಯಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ನಿರ್ಣಯ ಕೈಗೊಳ್ಳಲಾಗಿದೆ. ಪುತ್ತೂರಿನಲ್ಲಿ ಮೊತ್ತಮೊದಲ ಬಾರಿಗೆ ವಿದ್ಯಾಲಯವೊಂದರಲ್ಲಿ ಇಂತಹದ್ದೊ0ದು ಕಲಿಕೆ ಆರಂಭಗೊಳ್ಳುತ್ತಿದೆ.


ವಿದ್ಯಾರ್ಥಿಗಳಿಗೆ ಏನು ಲಾಭ? :
ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈಗ ಸಾಕಷ್ಟು ಪ್ರವರ್ಧಮಾನಕ್ಕೆ ಬರುತ್ತಿದ್ದು ವೈಜ್ಞಾನಿಕ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ಮುಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರ ಈ ಎರಡು ಸಂಗತಿಗಳ ನೆಲೆಯಲ್ಲಿಯೇ ಬೆಳೆದುಬರಲಿದೆ. ಈಗಾಗಲೇ ಇಂಜಿನಿಯರಿ0ಗ್‌ ನ0ತಹ ಕಾಲೇಜುಗಳಲ್ಲಿ ಈ ವಿಷಯದಲ್ಲೇ ಪದವಿ ಶಿಕ್ಷಣ ಕೈಗೆತ್ತಿಕೊಳ್ಳಲಾಗಿದ್ದು ಅನೇಕ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಅಪಾರ ಬೇಡಿಕೆ ಈ ಕ್ಷೇತ್ರಕ್ಕಿದೆ.


ಜತೆಗೆ, ಇದು ವಿದ್ಯಾರ್ಥಿಗಳಲ್ಲಿ ಎಳವೆಯಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪೂರಕವಾಗಲಿದೆ. ಕಂಪ್ಯೂಟರ್ ಚಿಪ್ಸ್ ತಯಾರಿ, ರೋಬೋಟ್ ನಿರ್ಮಾಣದಂತಹ ಕಾರ್ಯಗಳನ್ನು ಈವರೆಗೆ ಇಂಜಿನಿಯರಿ0ಗ್ ಓದುತ್ತಿರುವ ಅಥವ ಓದಿದ ವಿದ್ಯಾರ್ಥಿಗಳು ಕೈಗೆತ್ತಿಕೊಳ್ಳುವ ಸಂದರ್ಭವಿದ್ದರೆ ಇನ್ನು ಮುಂದೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಂತಹ ಮಾರ್ಗದರ್ಶನ, ಪ್ರೇರಣೆ ದೊರಕಲಿದೆ. ಮನೆಯಲ್ಲಿಯೇ ವಿವಿಧ ಬಗೆಯ ನ್ಯಾನೋ ತಂತ್ರಜ್ಞಾನ ಹಾಗೂ ರೋಬೋಟಿಕ್ ತಂತ್ರಜ್ಞಾನವನ್ನು ರೂಪಿಸುವ ಕಲೆ ವಿದ್ಯಾರ್ಥಿಗಳಿಗೆ ಸಿದ್ಧಿಸಲಿದೆ. ಇದರಿಂದಾಗಿ ವಿಜ್ಞಾನ ಕ್ಷೇತ್ರಕ್ಕೆ ಅಂಬಿಕಾ ವಿದ್ಯಾಲಯ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುವುದಲ್ಲದೆ ವಿದ್ಯಾರ್ಥಿಗಳನ್ನು ವಿಜ್ಞಾನಿಗಳನ್ನಾಗಿ ಪರಿವರ್ತಿಸುವ ಕಾರ್ಯ ಈ ತರಬೇತಿಯಿಂದ ನಡೆಯಲಿದೆ.


ಇದಲ್ಲದೆ ತಮ್ಮ ಮುಂದಿನ ಶಿಕ್ಷಣದ ಸಂದರ್ಭದಲ್ಲಿ ರೋಬೋಟಿಕ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿಷಯಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಆ ಅಧ್ಯಯನ ಸುಲಭ ಸಾಧ್ಯವಾಗಲಿದೆ. ಅಂಬಿಕಾ ವಿದ್ಯಾಲಯದಲ್ಲಿ ಈ ತರಬೇತಿಯನ್ನು ಪಡೆದಿರುವುದು ಅವರ ಭವಿಷ್ಯಕ್ಕೆ ಬಹುದೊಡ್ಡ ಪ್ರಯೋಜನವನ್ನೊದಗಿಸಲಿದೆ.


ದೇಶಕ್ಕೂ ಇದೆ ಪ್ರಯೋಜನ:
ಇಂದು ನ್ಯಾನೋ ತಂತ್ರಜ್ಞಾನದಲ್ಲಿ ಚೀನಾ ಇಡಿಯ ಪ್ರಪಂಚದಲ್ಲೇ ಪ್ರಭುತ್ವವನ್ನು ಸಾಧಿಸಲು ಹೊರಟಿದೆ. ಯಾವುದೇ ವಸ್ತುಗಳ ತಯಾರಿಕೆ, ಅದರ ನ್ಯಾನೋ ಭಾಗಗಳ ಸಿದ್ಧಪಡಿಸುವಿಕೆಯಲ್ಲಿ ಚೀನಾ ಮೇಲುಗೈ ಎನಿಸುತ್ತಿದೆ. ಈ ವಿಚಾರವನ್ನು ನಾವು ಲಘುವಾಗಿ ಪರಿಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಚೀನಾದ ತಾಂತ್ರಿಕ ದಾಸ್ಯಕ್ಕೆ ಪ್ರಪಂಚವೇ ಒಳಗಾಗಬೇಕಾದ ಅಪಾಯವಿದೆ.

ಇಂತಹ ಸಂದರ್ಭದಲ್ಲಿ ಚೀನಾಕ್ಕೆ ಸಡ್ಡು ಹೊಡೆಯುವ ಬುದ್ಧಿಮತ್ತೆ ಮತ್ತು ಸಾಧ್ಯತೆ ಭಾರತಕ್ಕಷ್ಟೇ ಇದೆ ಎಂಬುದು ಜಗತ್ತಿಗೇ ತಿಳಿದಿದೆ ಹಾಗೂ ಭಾರತದಿಂದ ನಿರೀಕ್ಷೆ ಸಾಕಷ್ಟಿದೆ. ಹಾಗಾಗಿ ನಮ್ಮ ಮಕ್ಕಳನ್ನು ಎಳವೆಯಿಂದಲೇ ರೂಪಿಸಲು ಅಂಬಿಕಾ ವಿದ್ಯಾಲಯ ಸಜ್ಜಾಗಿದೆ. ದೇಶ ಮೊದಲು ಎಂಬ ಕಲ್ಪನೆಯಡಿ ಶಿಕ್ಷಣದ ಪ್ರಸರಣದಲ್ಲಿ ತೊಡಗಿರುವ ಅಂಬಿಕಾ ವಿದ್ಯಾಲಯ ಇದೀಗ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣದೊಂದಿಗೆ ಅದಕ್ಕೆ ಪೂರಕವಾದ ಮತ್ತೊಂದು ಮಹತ್ತರ ಹೆಜ್ಜೆಯನ್ನಿರಿಸಿದೆ.


ಇಂಟರಾಕ್ಟಿವ್ ಸ್ಮಾರ್ಟ್ ಬೋರ್ಡ್:
ವಿದ್ಯಾರ್ಥಿಗಳ ಅಧ್ಯಯನ ಸಾಧ್ಯತೆಯನ್ನು ವಿಸ್ತರಿಸುವುದಕ್ಕಾಗಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಇಂರ‍್ಯಾಕ್ಟಿವ್ ಸ್ಮಾರ್ಟ್ ಬೋಡ್‌ಗಳನ್ನು ಅಳವಡಿಸಲಾಗುತ್ತಿದೆ. ಇಂತಹ ಒಂದು ಸ್ಮಾಟ್ ಬೋರ್ಡ್ಗೆ ಸುಮಾರು 1 ಲಕ್ಷದ 75 ಸಾವಿರ ರೂಪಾಯಿಗಿಂತಲೂ ಅಧಿಕ ಬೆಲೆಯಿದೆ. ಈ ಬೋರ್ಡ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, 3 ಡಿ ತಂತ್ರಜ್ಞಾನ, 4 ಕೆ ರೆಸಲ್ಯೂಶನ್ ಜತೆಗೆ ಅತ್ಯಂತ ಆಧುನಿಕ ಇಂರ‍್ಯಾಕ್ಟಿವ್ ತಂತ್ರಜ್ಞಾನ ಹೊಂದಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕಾ ಮತ್ತು ಗ್ರಹಿಕಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಲಿದ್ದು, ಪಠ್ಯವನ್ನು ಸುಲಲಿತವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಈ ಬೋರ್ಡ್ ಉಪಯುಕ್ತವೆನಿಸಲಿದೆ.

‘ಸುದರ್ಶನ ವಿಜಯ’ ತಾಳಮದ್ದಳೆ

ಪುತ್ತೂರು ನಗರದ ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ಆಶ್ರಯದಲ್ಲಿ  ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ತಿಂಗಳ ಸರಣಿ ತಾಳಮದ್ದಳೆ ” ಸುದರ್ಶನ ವಿಜಯ” ದಿನಾಂಕ 20.3.2023 ರಂದು ಸಂಜೆ ನಡೆಯಿತು.

ಹಿಮ್ಮೇಳದಲ್ಲಿ ಆನಂದ ಸವಣೂರು , ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ , ಚಂದ್ರಶೇಖರ್ ಹೆಗ್ಡೆ ನೆಲ್ಯಾಡಿ , ಶ್ರೀಪತಿ ಭಟ್ ಉಪ್ಪಿನಂಗಡಿ , ಅಚ್ಯುತ ಪಾಂಗಣ್ಣಾಯ ಸಹಕರಿಸಿದರು.

ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ ಮತ್ತು ದುಗ್ಗಪ್ಪ ಯನ್ (ವಿಷ್ಣು) ಸಂಜೀವ ಪಾರೆಂಕಿ (ಲಕ್ಷ್ಮೀ) ಗುಂಡ್ಯಡ್ಕ ಈಶ್ವರ ಭಟ್ (ಶತ್ರುಪ್ರಸೂದನ) ದಿವಾಕರ ಆಚಾರ್ಯ ಗೇರುಕಟ್ಟೆ (ಸುದರ್ಶನ) ಚಂದ್ರಶೇಖರ್ ಭಟ್ ಬಡೆಕ್ಕಿಲ‌ (ದೇವೇಂದ್ರ) ಭಾಗವಹಿಸಿದ್ದರು.

 ಟಿ. ರಂಗನಾಥ ರಾವ್ ಸ್ವಾಗತಿಸಿ ರಾಜಗೋಪಾಲ್ ಭಟ್ ಬನ್ನೂರು ವಂದಿಸಿದರು. ಮಂದಿರದ ಅಧ್ಯಕ್ಷ  ವಿಶ್ವನಾಥ ಗೌಡ, ಮೋಹನ್ ಜೈನ್, ಚಂದ್ರಶೇಖರ್ ಮೊದಲಾದವರು ಸಹಕರಿಸಿದರು. ಶೇಖರ್ ಬಿರ್ವ ಬನ್ನೂರು ತಾಳಮದ್ದಳೆ ಪ್ರಾಯೋಜಿಸಿದ್ದರು.

ಯಕ್ಷ ಕಲಾ ಅಕಾಡೆಮಿಯ ಯಕ್ಷಗಾನ ಉತ್ಸವ – ಕರ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ


ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಕೈಗೊಂಡು ಜನ ಮನ್ನಣೆಗಳಿಸಿದ ಬೆಂಗಳೂರಿನ ಯಕ್ಷಕಲಾ ಅಕಾಡೆಮಿ, ರಾಜ್ಯದ ಹಲವು ಭಾಗಗಳಲ್ಲಿ ಯಕ್ಷಗಾನ ಉತ್ಸವವನ್ನು ಕೈಗೊಂಡಿದೆ.

ಅಂತೆಯೇ ಇದೀಗ ಮಾರ್ಚ್ ತಿಂಗಳ ಯಕ್ಷಗಾನ ಉತ್ಸವವು ಸಾಸ್ತನ ಯಡಬೆಟ್ಟಿನ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ , ದಿನಾಂಕ 19-03-2022ರ ಸಂಜೆ 6.00ಕ್ಕೆ ಕರ್ಣಾರ್ಜುನ ಕಾಳಗ ಎಂಬ ಯಕ್ಷಗಾನದ ಮೂಲಕ ಸಂಪನ್ನಗೊಳ್ಳಲಿದೆ.

ಕೋಟ ವಿವೇಕ ಆಂಗ್ಲ ಮಾಧ್ಯಮದ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಾಮದೇವ ಐತಾಳ, ಉಪನ್ಯಾಸಕ ಶ್ರೀ ಸುಜಯೀಂದ್ರ ಹಂದೆ, ಯಕ್ಷಗಾನ ಪ್ರೋತ್ಸಾಹಕರಾದ ವೇದಮೂರ್ತಿ ಶ್ರೀ ವೆಂಕಪ್ಪಯ್ಯ ಭಟ್ಟ, ಯಕ್ಷಗಾನ ಕಲಾವಿದರಾದ ಡಾ| ವೈಕುಂಠ ಹೇರ್ಳೆಯವರು ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಕೃಷ್ಣಮೂರ್ತಿ ತುಂಗ, ಚಿತ್ಕಲಾ ಕೆ. ತುಂಗಾ, ಉದಯ ಹೊಸಾಳ, ರಾಘವೇಂದ್ರ ಹೆಗಡೆ, ರಾಮಕೃಷ್ಣ ಮಂದರ್ತಿ, ಸುಜಯೀಂದ್ರ ಹಂದೆ, ವಾಗ್ವಿಲಾಸ ಭಟ್ಟ, ಶಶಾಂಕ, ಶಶಿರಾಜ ಸೋಮಯಾಜಿ, ಸುಹಾಸ ಕರಬ, ಆದಿತ್ಯ ಹೊಳ್ಳ, ಸದಾಶಿವ ತುಂಗ, ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಕೆ. ಅನುಸೂಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಅತಿಕಾಯ ಮೋಕ್ಷ’ ಯಕ್ಷಗಾನ ಪ್ರದರ್ಶನ

ಅಮೃತ ಭಾರತಿಗೆ ಕನ್ನಡದಾರತಿಯ ಅಂಗವಾಗಿ ಈಗಾಗಲೇ ಬಹಳಷ್ಟು ಯಕ್ಷಗಾನಗಳನ್ನು ಕಲಾಪೀಠ ಕೋಟ (ರಿ) ಸಂಸ್ಥೆಯು ಆಯೋಜಿಸಿದೆ.

ಹಾಗೆಯೇ ಇದೀಗ ಮಾರ್ಚ್ ತಿಂಗಳ ಯಕ್ಷಗಾನ ಉತ್ಸವವನ್ನು ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ದಿನಾಂಕ 18-03-2023 ರ ಶನಿವಾರ ಸಂಜೆ 6.30ಕ್ಕೆ ಅತಿಕಾಯ ಮೋಕ್ಷ ಎಂಬ ಯಕ್ಷಗಾನವನ್ನು ಪ್ರದರ್ಶಿಸಲಿದೆ.

ಮುಖ್ಯ ಅಭ್ಯಾಗತರಾಗಿ, ಆಕಾಶವಾಣಿ ಮಂಗಳೂರಿನ ನಿವೃತ್ತ ಅಧಿಕಾರಿಗಳಾದ ಶ್ರೀಯುತ ಸದಾನಂದ ಹೊಳ್ಳ, ಸಾಕೇತ ಸಂಸ್ಥೆಯ ಹಿರಿಯ ಭಾಗವತರಾದ ಶ್ರೀಯುತ ಕೆ.ಜಿ. ರಾಮರಾವ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀಯುತ ಕೃಷ್ಣಮೂರ್ತಿ ತುಂಗರವರು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಶ್ರೀಯುತ ರಾಜಶೇಖರ ಹೆಬ್ಬಾರರವರು ಉಪಸ್ಥಿತಿಯಲ್ಲಿರುವರು.

ಶಶಿಧರ ಸೋಮಯಾಜಿ, ರವಿ ಮಡೋಡಿ, ಶಶಾಂಕ ಕಾಶಿ, ಆದಿತ್ಯ ಹೊಳ್ಳ, ಅನುಷ ಉರಾಳ, ಚಿತ್ಕಲಾ ಕೆ. ತುಂಗ, ಸುಹಾಸ ಕರಬ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕಲಾಪೀಠ ಸಂಸ್ಥೆಯ ಕಾರ್ಯದರ್ಶಿ ಶ್ರೀ. ಕೆ. ನರಸಿಂಹ ತುಂಗರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

‘ಶ್ರೀ ಕೃಷ್ಣ ದೇವರೆ ಲೀಲೆ’ ಯಕ್ಷಗಾನ ಬಯಲಾಟ – ಕಲಾವಿದ ಡಿ. ಮನೋಹರ್ ಕುಮಾರ್ ಅವರಿಗೆ ಸನ್ಮಾನ

0

ಮಂಗಳೂರು: ‘ಸಮಾಜದ ವಿವಿಧ ಬಗೆಯ ಸೇವಾ ಸಂಸ್ಥೆಗಳು ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಎಲ್ಲರೂ ಹೆಮ್ಮೆಪಡುವ ಸಂಗತಿ. ಇದರೊಂದಿಗೆ ನೃತ್ಯ,ನಾಟಕ, ಯಕ್ಷಗಾನ ಮುಂತಾದ ರಂಗಕಲೆಗಳಿಗೂ ಅವು ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ಯರ್ಹ. ಏಕೆಂದರೆ ಕಲೆ ಮತ್ತು ಕಲಾವಿದರ ಪೋಷಣೆ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವೇ ಆಗಿದೆ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. 

        ಪದವು ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಶಕ್ತಿನಗರ ಸರಕಾರಿ ಶಾಲಾ ಮೈದಾನದಲ್ಲಿ ಜರಗಿದ ಕಳವಾರು ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರ ಯಕ್ಷಗಾನ ಬಯಲಾಟ ಸಂದರ್ಭ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ಇಂದು ಯಕ್ಷಗಾನ ಈ ಮಟ್ಟಕ್ಕೆ ಬೆಳೆಯಲು ಅನೇಕ ಹಿರಿಯ ಕಲಾವಿದರ ಕೊಡುಗೆ ಕಾರಣ. ಅಂಥವರನ್ನು ಕರೆದು ಪುರಸ್ಕರಿಸುವುದು ಕಲಾ ಸೇವೆಯ ಶೇಷ್ಠ ಮಾದರಿ’ ಎಂದವರು ನುಡಿದರು.

ಡಿ.ಮನೋಹರ್ ಅವರಿಗೆ ಸನ್ಮಾನ:

      ಕಾರ್ಯಕ್ರಮದಲ್ಲಿ ಬಯಲಾಟ ಮೇಳದ ಹಿರಿಯ ಕಲಾವಿದ ತುಳು ಕನ್ನಡ ಪ್ರಸಂಗಗಳ ಪ್ರಬುದ್ಧ ವೇಷಧಾರಿ ಡಿ.ಮನೋಹರ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಅವರು ‘ಯಕ್ಷಗಾನ ಸೇವೆಯೊಂದಿಗೆ ಎಲೆಮರೆಯ ಕಲಾವಿದರ ಬದುಕಿಗೆ ಆಸರೆಯಾಗಿರುವ ಕೆಲವು ಬಯಲಾಟದ ಮೇಳಗಳು ಹಣವಂತರ ಬೆಂಬಲವಿಲ್ಲದೆ ತುಂಬಾ ಪ್ರಯಾಸದಿಂದ ತಿರುಗಾಟ ನಡೆಸುತ್ತಿವೆ. ಸೇವಾದಾರರು ಮತ್ತು ಸಂಘ ಸಂಸ್ಥೆಗಳು ಅವುಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಬೇಕು’ ಎಂದರು.

         ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಲ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಕೆ.ಶಕ್ತಿನಗರ ಉಪಸ್ಥಿತರಿದ್ದರು. ಸದಸ್ಯರಾದ ರವೀಂದ್ರ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಹರೀಶ್ ಜೋಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಳಿಕ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ, ಕಳವಾರು ಇವರಿಂದ ಗುರುಪುರ ಸುರೇಂದ್ರ ಮಲ್ಲಿ ನೇತೃತ್ವದಲ್ಲಿ ‘ಶ್ರೀ ಕೃಷ್ಣ ದೇವರೆ ಲೀಲೆ’ ತುಳು ಪೌರಾಣಿಕ ಯಕ್ಷಗಾನ ಬಯಲಾಟ ಜರಗಿತು.

‘ಶ್ರೀರಾಮ ಪರಂಧಾಮ’ ತಾಳಮದ್ದಳೆ ಮತ್ತು ದಿ| ವಿಜಯರಾಘವ ಪಡುವೆಟ್ನಾಯ ಮತ್ತು ದಿ| ಬಲಿಪ ನಾರಾಯಣ ಭಾಗವತರಿಗೆ ನುಡಿ ನಮನ

ಕರಾಡ ಬ್ರಾಹ್ಮಣ ಸಮಾಜ(ರಿ)ಬೆಳ್ತಂಗಡಿ ವತಿಯಿಂದ ಸೋಮಂತಡ್ಕದ ಸಮೃದ್ಧಿ ಕರಾಡ ಭವನದಲ್ಲಿ ದಿ. ವಿಜಯ ರಾಘವ ಪಡುವೆಟ್ನಾಯ ಮತ್ತು ದಿ. ಬಲಿಪ ನಾರಾಯಣ ಭಾಗವತರಿಗೆ ನುಡಿ ನಮನ ಕಾರ್ಯಕ್ರಮ ಜರಗಿತು.

ಸಾಮಾಜಿಕ ,ಧಾರ್ಮಿಕ ಸಾಂಸ್ಕೃತಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಡುವೆಟ್ನಾಯರು ಮತ್ತು ತೆಂಕುತಿಟ್ಟು ಯಕ್ಷಗಾನದಲ್ಲಿ ಆರು ದಶಕಗಳ ಕಾಲ ಕಲಾ ಸೇವೆ ಮಾಡಿ ಭಾಗವತ ಭೀಷ್ಮರಂದೇ ಖ್ಯಾತರಾದ ನಾರಾಯಣ ಭಾಗವತರ ಬಗ್ಗೆ ಧರ್ಮಸ್ಥಳದ ಜಮಾ ಉಗ್ರಾಣದ ನಿವೃತ್ತ  ಮುತ್ಸದ್ದಿ ಮತ್ತು ಕಲಾಸಂಘಟಕ ಭುಜಬಲಿ ಧರ್ಮಸ್ಥಳ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಅವರ ಸಾಧನೆಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.

ಪದ್ವೆಟ್ನಾಯರು ಸರಳತೆ ಮತ್ತು ಕಾರ್ಯ ಶೈಲಿಯಿಂದ ಗಳಿಸಿದ ಗೌರವವನ್ನು ಉಳಿಸಿ ಮುಂದುವರಿಸಲು ಪ್ರಯತ್ನಿಸುವುದಾಗಿ  ಅವರ ಪುತ್ರ ಉಜಿರೆ  ಜನಾರ್ದನ ದೇವಳದ ಅನುವಂಶಿಕ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ತಿಳಿಸಿ ಮೊದಲ  ಯಕ್ಷಜನ ಪ್ರಶಸ್ತಿಯನ್ನು ಬಲಿಪ ಭಾಗವತರಿಗೆ ಅವರ ಗೃಹದಲ್ಲಿಯೆ ಪ್ರದಾನಿಸಿ  ಕ್ಷೇತ್ರದ ವತಿಯಿಂದ ಗೌರವಿಸಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಪ್ರದೀಪ್ ಕುಮಾರ್ ನಾವೂರು ಸಮಾಜ ಮತ್ತು ಕಲಾಸೇವೆಯಲ್ಲಿ ಮಹಾನ್ ಸಾಧನೆ ಮಾಡಿದ ಮಹನೀಯರಿಬ್ಬರ ಆದರ್ಶಗಳು ನಮಗೆ ದಾರಿದೀಪವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಲಿಪ ನಾರಾಯಣ ಭಾಗವತರ ಸಹೋದರಿ ವಿದ್ಯಾಭಟ್ ,ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ರಾವ್, ಯಕ್ಷಭಾರತಿ  ಅಧ್ಯಕ್ಷ ರಾಘವೇಂದ್ರ ಭೈಪಾಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕಿ ಕಾವ್ಯ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಳಿಕ ವಿಷ್ಣು ಭಟ್ ಧರ್ಮಸ್ಥಳ ಇವರ ಪ್ರಾಯೋಜಕತ್ವದಲ್ಲಿ ಯಕ್ಷಭಾರತಿ ಕನ್ಯಾಡಿ ಸದಸ್ಯರಿಂದ ಶ್ರೀರಾಮ ಪರಂಧಾಮ ತಾಳಮದ್ದಳೆ ಜರಗಿತು.

ಭಾಗವತರಾಗಿ ಮಹೇಶ್ ಕನ್ಯಾಡಿ ಹಿಮ್ಮೇಳದಲ್ಲಿ ಶ್ರೇಯಸ್ ಪಾಳ೦ದೆ, ಸುಂದರ ದೇವಾಡಿಗ ಧರ್ಮಸ್ಥಳ ಅರ್ಥದಾರಿಗಳಾಗಿ ಸುರೇಶ್ ಕುದ್ರೆಂತ್ತಾಯ ಉಜಿರೆ, ಹರಿದಾಸ್ ಗಾಂಭೀರ್ ಧರ್ಮಸ್ಥಳ, ದಿವಾಕರ ಆಚಾರ್ಯ ಗೇರುಕಟ್ಟೆ, ಸದಾನಂದ ಮುಂಡಾಜೆ, ಶಶಿಧರ ಕನ್ಯಾಡಿ, ಭವ್ಯ ಹೊಳ್ಳ ಉಜಿರೆ ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಮಮತಾ ವಿಷ್ಣು ಭಟ್ ಧರ್ಮಸ್ಥಳ ಮತ್ತು ಡಾ.ಪ್ರದೀಪ್ ಕುಮಾರ್ ನಾವೂರು ಇವರನ್ನು ಯಕ್ಷ ಭಾರತಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.