Friday, March 13, 2026
Home Blog Page 80

ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ನಿಧನ

ಒಂದು ಶತಮಾನದ ಯಕ್ಷಗಾನ ಚರಿತ್ರೆಯ ಸಾಕ್ಷಿಯಂತೆ ಬದುಕಿದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟರು ಇಂದು (31.10.2023) ನಿಧನರಾಗಿದ್ದಾರೆ.


ಬಾಲ್ಯದಲ್ಲಿ ಶಾಲಾ ವಿದ್ಯಾಭ್ಯಾಸದೊಂದಿಗೆ ಸಂಸ್ಕೃತ ಪಾಠವನ್ನು ಕಲಿತಿದ್ದರು. ಧರ್ಮಸ್ಥಳ ಮೇಳದಲ್ಲಿ ಕುರಿಯ ವಿಠಲ ಶಾಸ್ತ್ರಿಗಳು, ಅಗರಿ ಶ್ರೀನಿವಾಸ ಭಾಗವತರು ಮೊದಲಾದ ದಿಗ್ಗಜಗಳೊಂದಿಗೆ ಒಡನಾಟ ಲಭ್ಯವಾಯಿತು. ದೇರಾಜೆ ಸೀತಾರಾಮಯ್ಯರಿಂದ ಪ್ರಭಾವಿತರಾದರು.

ಪೆರುವಡಿ ನಾರಾಯಣ ಭಟ್ಟರ ಯಕ್ಷಗಾನದ ಮಾತು ಕೇವಲ ಅರ್ಥವಾಗದೆ ‘ವಾಗರ್ಥ’ ವೆನಿಸಿಕೊಳ್ಳುತ್ತಿತ್ತು. ಹಾಸ್ಯಪಾತ್ರದಲ್ಲಿ ಅವರಂತೆ ಭಾಷೆಯನ್ನು ಸೊಗಸಾಗಿ ಬಳಸಿದವರಿಲ್ಲ. ಹಾಸ್ಯಗಾರರೆಂದು ಪ್ರಸಿದ್ಧರಾದರೂ ಗಂಭೀರ ಪೋಷಕ ಪಾತ್ರಗಳ ಪ್ರಸ್ತುತಿಗೆ ಹೆಸರಾಗಿದ್ದರು.

ಅವರು ಯಜಮಾನ ನಾರಾಯಣ ಭಟ್ಟರೂ ಹೌದು! ತಮ್ಮ ಸೋದರ ಬಂಧುಗಳೊAದಿಗೆ ಒಂದು ದಶಕಕ್ಕಿಂತಲೂ ಅಧಿಕ ಕಾಲ ಮುಲ್ಕಿ ಮೇಳವನ್ನು ನಡೆಸಿದ್ದರು. ಕಾರವಾರದವರೆಗೆ ತೆಂಕುತಿಟ್ಟಿನ ದಿಗ್ವಿಜಯ ನಡೆಸಿದ್ದರು. ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು, ಕಿರಿಯ ಬಲಿಪ ನಾರಾಯಣ ಭಾಗವತರನ್ನು ಮುಲ್ಕಿ ಮೇಳಕ್ಕೆ ಸೇರಿಸಿದ್ದರು.

ಕಡತೋಕಾ ಮಂಜುನಾಥ ಭಾಗವತರನ್ನು ಮೊದಲ ಬಾರಿಗೆ ತೆಂಕುತಿಟ್ಟಿಗೆ ಪರಿಚಯಿಸಿದ ಕೀರ್ತಿ ಅವರದಾಗಿತ್ತು. ಪುತ್ತೂರು ನಾರಾಯಣ ಹೆಗಡೆ, ಎಂಪೆಕಟ್ಟೆ ರಾಮಯ್ಯ ರೈಯಂಥವರು ಮುಲ್ಕಿ ಮೇಳದಿಂದ ತಮ್ಮ ಯಶಸ್ವಿ ವೃತ್ತಿಬದುಕನ್ನು ಆರಂಭಿಸಿದ್ದರು. ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಜರಗಿದ, ಹಾರಾಡಿ ರಾಮ ಗಾಣಿಗ, ಕೊಕ್ಕರ್ಣೆ ನರಸಿಂಹ ಕಮ್ತಿ, ಕುರಿಯ ವಿಠಲ ಶಾಸ್ತ್ರಿ, ಅಳಿಕೆ ರಾಮಯ್ಯ ರೈ, ಕಡಂದೇಲು ಪುರುಷೋತ್ತಮ ಭಟ್ಟ, ಕೋಳ್ಯೂರು ರಾಮಚಂದ್ರ ರಾವ್ ಮೊದಲಾದವರ ಕೂಡುವಿಕೆಯಲ್ಲಿ ಜರಗಿದ ತೆಂಕು-ಬಡಗಿನ ಪ್ರತ್ಯೇಕ ಸ್ಪರ್ಧಾತ್ಮಕ ಪ್ರದರ್ಶನಗಳಲ್ಲಿ ಪೆರುವಡಿಯವರ ನಾರದನ ಪಾತ್ರ ಮೆಚ್ಚುಗೆಗೆ ಪಾತ್ರವಾಗಿತ್ತು.

ಬಡಗಿನ ಸಾಲಿಗ್ರಾಮ ಮೇಳದಲ್ಲಿ ಗುಂಡ್ಮಿ ಕಾಳಿಂಗ ನಾವಡ, ಚಿಟ್ಟಾಣ ರಾಮಚಂದ್ರ ಹೆಗಡೆ ಮೊದಲಾದವರೊಂದಿಗೆ ತಿರುಗಾಟ ನಡೆಸಿದ್ದರು. ಸುರತ್ಕಲ್ ಮೇಳದ ‘ಪಾಪಣ್ಣ ವಿಜಯ’ದ ಪಾಪಣ್ಣನ ಪಾತ್ರದಲ್ಲಿ ಇವರನ್ನು ಮೀರಿಸಿದವರು ಇವತ್ತಿನವರೆಗೂ ಇಲ್ಲ. ಬಾಹುಕನ ಪಾತ್ರಕ್ಕೆ ಹೊಸ ಭಾವನಾತ್ಮಕ ಆಯಾಮವನ್ನು ಕೊಟ್ಟಿದ್ದರು.

ಸದಾ ಅಧ್ಯಯನಶೀಲರಾಗಿ ಇತ್ತೀಚೆಗಿನವರೆಗೂ ‘ನಳದಮಯಂತಿ’ ಕಥನದ ಬೇರೆ ಬೇರೆ ಪಾಠಾಂತರಗಳನ್ನು ಓದುತ್ತ ಪಾತ್ರವನ್ನು ಬಾಹುಕನನ್ನು ಹೇಗೆ ಹೊಸರೀತಿಯಲ್ಲಿ ಮಾಡಬಹುದೆಂದು ಯೋಚನೆ ಮಾಡುತ್ತಿದ್ದರು. ಕದ್ರಿ ಮೇಳದಲ್ಲಿ ‘ಗೆಜ್ಜೆದ ಪೂಜೆ’ ಪ್ರಸಂಗದ ಬೇಚನ ಪಾತ್ರಚಿತ್ರಣ ಇವತ್ತಿಗೂ ಸ್ಮರಣೀಯ.

ಬಪ್ಪನಾಡು ಮೇಳದಲ್ಲಿ ರಾಮದಾಸ ಸಾಮಗರ ಕೈಲಾಸ ಶಾಸ್ತ್ರಿ ಪಾತ್ರಕ್ಕೆ ಮಾಣಿಯಾಗಿ ಜನಪ್ರಿಯರಾಗಿದ್ದರು. ಪೆರುವಡಿ ನಾರಾಯಣ ಭಟ್ಟರ ಆತ್ಮಕಥನವನ್ನು ನಾ. ಕಾರಂತ ಪೆರಾಜೆಯವರು ನಿರೂಪಿಸಿದ್ದು ಅದು ಪ್ರಕಟವಾಗಿದೆ.


ಪೆರುವಡಿ ನಾರಾಯಣ ಭಟ್ಟರು ಉಡುಪಿ ಯಕ್ಷಗಾನ ಕಲಾರಂಗದ ಆಹ್ವಾನದ ಮೇರೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ‘ಯಕ್ಷಗಾನ ಕಲಾರಂಗ’ ಪ್ರಶಸ್ತಿಗೆ ಭಾಜನರಾಗಿದ್ದರು. ಎರಡು ವರ್ಷಗಳ ಹಿಂದೆ ಮಾಸಪೂರ್ತಿ ಆಯೋಜನೆಗೊಂಡ ‘ಕೋಳ್ಯೂರು ವೈಭವ’ ಸಮಾರೋಪದ ಉದ್ಘಾಟಕರಾಗಿ ಭಾಗವಹಿಸಿ ಅರ್ಥಪೂರ್ಣವಾಗಿ ಮಾತನಾಡಿದ್ದರು.

ಪೆರುವಡಿ ನಾರಾಯಣ ಭಟ್ಟರ ನಿಧನದೊಂದಿಗೆ ಯಕ್ಷಗಾನದಲ್ಲಿ ‘ಹಾಸ್ಯರಸ’ದ ಘನತೆಯ ಅಭಿವ್ಯಕ್ತಿಯ ಮಾದರಿಯೊಂದು ಮರೆಗೆ ಸರಿದಂತಾಗಿದೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಕಲಾ ಸಾಹಿತ್ಯ ಸಾಧಕ ಯು. ಬಿ. ಗೋವಿಂದಯ್ಯ



ಕಲಾರಾಧನೆ ಮತ್ತು ಕಲೋಪಾಸನೆ ಎಂಬೆರಡು ಪದಗಳು ಕೂಡ ಸಮಾನಾರ್ಥಕವಾಗಿ ಬಳಕೆಯಲ್ಲಿರುವುದನ್ನು ನಾವು ಸರ್ವೇ ಸಾಮಾನ್ಯವಾಗಿ ಕಾಣುತ್ತೇವೆ .ಒಂದು ಕಲಾ ಪ್ರಕಾರದಲ್ಲಿ ವ್ಯಸ್ತನಾದ ಸಾಧಕನೋರ್ವ ಸಾಹಿತ್ಯದ ಮತ್ತೊಂದು ಮಗ್ಗುಲಲ್ಲಿ ಸಹ ತನ್ನ ಛಾಪು ಬೀರಿದರೆ ಅದೊಂದು ಅಸಾಧಾರಣ ಸಂಗತಿಯಾಗುತ್ತದೆ.

ಕಲಾವಿದನಾಗಿ ಸಾಹಿತ್ಯಕ ಒಲವುಗಳನ್ನು, ಜೊತೆಗೆ ಆಡಳಿತಾತ್ಮಕ ನೆಲೆಯಲ್ಲಿ ತನ್ನ ವಿಶಿಷ್ಟತೆಯನ್ನು ತೋರಿದ ಮಹನೀಯರ ಬಗ್ಗೆ ಬೆಳಕು ಚೆಲ್ಲುವ ಒಂದು ಪ್ರಯತ್ನವಿದು.


ಯು ಬಿ ಗೋವಿಂದಯ್ಯ ಅಥವಾ ಯು ಬಿ ಗೋವಿಂದ ಭಟ್ಟ ಓರ್ವ ಅಪ್ರತಿಮ ಕಲಾವಿದ, ಸಂಘಟಕ. ಇವರು ಜನಿಸಿದ್ದು ಕಾಸರಗೋಡು ಜಿಲ್ಲೆಯ ದೇಲಂಪಾಡಿ ಯಲ್ಲಿ. ದಿನಾಂಕ 29.07 1928ರಂದು. ಅಜ್ಜನವರಾದ ಲಕ್ಷ್ಮೀನಾರಾಯಣ ಕಾಟೂರಾಯ ಅವರ ಮನೆಯಲ್ಲಿ. ಇವರ ತಂದೆ ಉಬರಡ್ಕ ಭೀಮಯ್ಯ, ತಾಯಿ ವೆಂಕಟಲಕ್ಷ್ಮಿ. ಇವರು ಪ್ರಾಥಮಿಕ ಶಿಕ್ಷಣವನ್ನು ಉಬರಡ್ಕ ಮತ್ತು ದೇಲಂಪಾಡಿಗಳಲ್ಲಿ ಪಡೆದರು.

ಯಕ್ಷಗಾನ ಕಲೆಯ ಕುರಿತು ಇವರಿಗೆ ಅತೀವವಾದ ಅಭಿಮಾನವಿತ್ತು .ಯಕ್ಷಗಾನ ಆಚಾರ್ಯ ಪುರುಷರಾದ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಶಿಷ್ಯರಾಗಿ ಬೆಳಕಿಗೆ ಬರುತ್ತಾರೆ. 15ರ ಎಳೆ ಹರೆಯದಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆಯನ್ನು ಮಾಡುತ್ತಾರೆ. ಶ್ರೀಯುತರು ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥ ಧಾರಿಯಾಗಿ ಯಕ್ಷಗಾನ ನಾಟಕಗಳಲ್ಲಿ ವೇಷಧಾರಿಯಾಗಿ ನೆಗಳ್ತೆಯನ್ನು ಪಡೆದವರು . ತಾಳಮದ್ದಳೆಯಲ್ಲಿ ಖ್ಯಾತನಾಮ ಕಲಾವಿದರಾದ ಕೀರಿಕ್ಕಾಡುಮಾಸ್ಟರ್ ವಿಷ್ಣು ಭಟ್ ,ದೇರಾಜೆ ಸೀತಾರಾಮಯ್ಯ ,ಶೇಣಿ ಗೋಪಾಲಕೃಷ್ಣ ಭಟ್, ಕೊಳಂಬೆ ಪುಟ್ಟಣ್ಣಗೌಡ ಗೋಪಣ್ಣ ಪುಣಿಚತ್ತಾಯ, ಕೋಟೆ ಕುಂಜ ನಾರಾಯಣಶೆಟ್ಟಿ ಮುಂತಾದ ಅಗ್ರಮಾನ್ಯ ಕಲಾವಿದರೊಂದಿಗೆ ಕಾಣಿಸಿಕೊಂಡವರು,

ಪ್ರಭುದ್ಧ ಅರ್ಥ ದಾರಿಯಾಗಿ ಪಾತ್ರ ಗೌರವಕ್ಕೆ ಇಂಬು ನೀಡಿದವರು. ಶ್ರೀಯುತರ ಅರ್ಥಗಾರಿಕೆ ಶ್ರೋತೃಗಳ ಅಭಿಮಾನಕ್ಕೆ ಪಾತ್ರವಾದದ್ದು ಮಾತ್ರವಲ್ಲ ಪಾತ್ರೋಚಿತವಾದ ವಾದ ವಿವಾದಗಳ ಸಂದರ್ಭದಲ್ಲಿ ಓರ್ವ ಅಪ್ರತಿಮ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ.ಶ್ರೀಯುತರ ಕಾರ್ಯ ವ್ಯಾಪ್ತಿ ವಿಸ್ತೃತವಾಗಿದೆ.

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿಯಾಗಿ 1945ನೇ ಇಸವಿಯಿಂದ 1973ರ ತನಕ ಕಾರ್ಯ ನಿರ್ವಹಿಸಿದ್ದಾರೆ. ಯಕ್ಷಗಾನ ಅರ್ಥಧಾರಿಯಾಗಿ ಮಾತ್ರವಲ್ಲ ,ಸಾಹಿತ್ಯಕ ನೆಲೆಯಲ್ಲೂ ಕೂಡ ಇವರ ಕೊಡುಗೆ ಗಣನೀಯವಾಗಿದೆ ಎಂಬುದು ಇಲ್ಲಿ ಗಮನಿಸತಕ್ಕ ಅಂಶ. ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನ ಪ್ರಸಂಗ ಮತ್ತಿತರ ಸಾಹಿತ್ಯ ಪ್ರಕಾರಗಳು ಮುಖ್ಯವಾಗುತ್ತವೆ.

‘ಪರಿಮಳಾ ಪರಿಣಯ’ ಎಂಬುದು ಇವರ ಲೇಖನಿಯಿಂದ ಹೊರಹೊಮ್ಮಿದ ಐತಿಹಾಸಿಕ ಯಕ್ಷಗಾನ ಪ್ರಸಂಗ . ಮರುತಾಶ್ವಮೇಧ ಪ್ರಕಟಿತ ಯಕ್ಷಗಾನ ಪ್ರಸಂಗ ಯಕ್ಷಗಾನ ರಾತ್ರಿ ಶಾಲೆ (ಯಕ್ಷಗಾನ ಸಾಮಾಜಿಕ ಪ್ರಸಂಗ) ಪ್ರಕಟಿತ. ಬನಾರಿ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕುರಿತಾಗಿ 24 ಕಂದಪದ್ಯಗಳ ರಚನೆ ಒಂದು ವಿಶಿಷ್ಟ ಸಾಹಿತ್ಯ ಕೈಂಕರ್ಯ. ಇದರೊಂದಿಗೆ ವಿಶಿಷ್ಟ ಪ್ರಯತ್ನವಾಗಿ ವಾರ್ಧಿಕ ಮತ್ತು ಭಾಮಿನಿ ಷಟ್ಪದಿಯಲ್ಲಿ ಭಗವದ್ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ.

ಗೋವಿಂದಯ್ಯನವರ ಸಾಹಿತ್ಯಕ ಕೊಡುಗೆಗಳನ್ನು ಈ ಕೆಳಗಿನಂತೆ ಕಾಣುವುದು ವಿಹಿತ. ನವ ಯುಗ—ಕವನ ಸಂಗ್ರಹ, ಆನಂದವೆಲ್ಲಿ ವಿನೋದಾತ್ಮಕ ನಾಟಕ, ಸುಗಮದ ಹಾದಿಯಲ್ಲಿ ಹಾಸ್ಯ ಕಥೆ, ಮಾನಿನಿ ರತ್ನ ಶೋಬಾನೆ ಹಾಡುಗಳು, ಪರಮಾತ್ಮ ಭಜನಾ ಗೀತೆಗಳು, ಪಯಣವೆತ್ತ ಭಾವಗೀತೆಗಳು, ವಿನೋದ ವಿಹಾರ ಲೇಖನ ಮಾಲೆಗಳು, ಬೇಕೇ ?ಆಧ್ಯಾತ್ಮಿಕ ಶಾರ್ದೂಲ ವಿಕ್ರೀಡಿತ ವೃತ್ತದೊಳಗೆ

ಶ್ರೀಯುತರು ದೇಲಂಪಾಡಿ ಸಹಕಾರಿ ಸಂಸ್ಥೆಯನ್ನು ಹುಟ್ಟು ಹಾಕಿದವರು. ಕಾಸರಗೋಡು ಕರ್ನಾಟಕ ಏಕೀಕರಣ ಸಮಿತಿಯಲ್ಲಿ ಮುತುವರ್ಜಿ ವಹಿಸಿ ಶ್ರಮಪಟ್ಟು ಭಾಗವಹಿಸಿದವರು. ಆ ಸಮಿತಿಯ ಉನ್ನತ ಪದಾಧಿಕಾರಿಗಳೊಂದಿಗೆ ಇವರು ಒಬ್ಬರಾಗಿ ಗುರುತಿಸಿಕೊಂಡಿದ್ದರು ಎಂಬುದು ಅಭಿಮಾನದ ಸಂಗತಿ. ಈ ಬಗ್ಗೆ ಹಲವು ಪ್ರತಿಭಟನಾ ಸಭೆಗಳನ್ನು ಸಂಘಟಿಸಿದ ಹಿರಿಮೆ ಇವರದ್ದಾಗಿದೆ.

ಶ್ರೀಯುತರು ಶ್ರೀನಿಲಯ, ಸಾಹಿತ್ಯ ನಿಲಯ ಪ್ರಕಾಶನಾಲಯವನ್ನು ಸ್ಥಾಪಿಸಿ ಆ ಮೂಲಕ ಹಲವಾರು ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದವರು.


ಯಕ್ಷಗಾನ ಮತ್ತು ಸಾಹಿತ್ಯ ಎಂಬ ಸಶಕ್ತ ಮಾಧ್ಯಮವನ್ನು ಅತ್ಯಂತ ಆಪ್ತವಾಗಿ ಕಂಡುಂಡು ಸಾಧನಾ ಪಥದಲ್ಲಿ ಮುನ್ನಡೆದ ಶ್ರೀಯುತರು ತನ್ನ ಅಲ್ಪಾವಧಿಯ ಜೀವನ ಪಯಣದಲ್ಲಿ ಸಮಾಜಮುಖಿಯಾದ ಕಾರ್ಯ ಶೈಲಿಯನ್ನು ರೂಢಿಸಿಕೊಂಡಿದ್ದರು.ಆಮೂಲಕ ಸಾರಸ್ವತ ಲೋಕಕ್ಕೆವಿಶಿಷ್ಟ ಕೊಡುಗೆಯನ್ನು ನೀಡಿದ ಪ್ರತಿಭಾನ್ವಿತರಾಗಿ ಸಾಧಕರಿಗೆ ಸ್ಪೂರ್ತಿದಾಯಕ ರಾಗಿದ್ದಾರೆ.

ಇದೇ ತಿಂಗಳ 28 ನೇ ತಾರೀಖಿನಂದು ಬನಾರಿಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದಲ್ಲಿ ಶ್ರೀಯುತರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ.ಶ್ರೀಯುತರ ಸಂಸ್ಮರಣೆಯನ್ನು ಪ್ರಸಿದ್ದ ವೈದ್ಯ ಸಾಹಿತಿಗಳೂ ಯಕ್ಷಗಾನ ಅರ್ಥಧಾರಿಗಳಾದ ಶ್ರೀ ರಮಾನಂದ ಬನಾರಿಯವರು ನೆರವೇರಿಸಿ ಕೊಡಲಿದ್ದಾರೆ .ಸಾಹಿತಿ, ಯಕ್ಷಗಾನ ಅರ್ಥ ಧಾರಿ ಶ್ರೀ ವೆಂಕಟರಾಮ್ ಭಟ್ ಸುಳ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಗೋವಿಂದಯ್ಯನವರ ಬಂಧುಗಳು ನಿಕಟವರ್ತಿಗಳು ಕಾರ್ಯಕ್ರಮದಲ್ಲಿ ಪಾಲು ಪಡೆಯಲಿದ್ದಾರೆ.ನಂತರ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ನುರಿತ ಕಲಾವಿದರ ಕೂಡುವಿಕೆಯಿಂದ ನಡೆಯಲಿದೆ.

ಲೇಖಕ

ಲೇಖಕ: ನಾರಾಯಣ ತೋರಣಗಂಡಿ ಸಪ್ತಸ್ವರ ಪೈಲೂರು. ಕುಕ್ಕು ಜಡ್ಕ.

ಪ್ರೊ. ಎಂ. ಎಲ್. ಸಾಮಗರಿಗೆ ಚಿಟ್ಟಾಣಿ ಪ್ರಶಸ್ತಿ ಹಾಗೂ ಶ್ರೀಮತಿ ಬಿ. ಕೆ. ಸುಮತಿ ರಾವ್ ಅವರಿಗೆ ಟಿ. ವಿ. ರಾವ್ ಪ್ರಶಸ್ತಿ


ಉಡುಪಿಯ ಚಿಟ್ಟಾಣಿ ಅಭಿಮಾನಿ ಬಳಗ ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ ಸಂದರ್ಭದಲ್ಲಿ ಪದ್ಮಶ್ರೀ ರಾಮಚಂದ್ರ ಹೆಗಡೆ ಪ್ರಶಸ್ತಿ ಮತ್ತು ಟಿ.ವಿ. ರಾವ್ ಪ್ರಶಸ್ತಿಯನ್ನು ನೀಡುತ್ತಿದ್ದು

ಈ ವರ್ಷದ ಚಿಟ್ಟಾಣಿ ಪ್ರಶಸ್ತಿಗೆ ಹಿರಿಯ ಹವ್ಯಾಸಿ ಕಲಾವಿದ ಪ್ರೊ. ಎಂ. ಎಲ್. ಸಾಮಗ ಮತ್ತು ಟಿ.ವಿ. ರಾವ್ ಪ್ರಶಸ್ತಿಗೆ ಹವ್ಯಾಸಿ ಕಲಾವಿದೆ ಶ್ರೀಮತಿ ಬಿ. ಕೆ. ಸುಮತಿ ರಾವ್ ಆಯ್ಕೆಯಾಗಿದ್ದಾರೆ.

ನವಂಬರ್ 5ರಿಂದ ನವಂಬರ್ 11ರ ವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಪ್ತಾಹ ನಡೆಯಲಿದ್ದು,

ನವಂಬರ್ 11ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಮ್. ಗೋಪಿಕೃಷ್ಣ ರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ತೆಂಕುತಿಟ್ಟು ಯಕ್ಷ ಮಾರ್ಗ- 2 ಉದ್ಘಾಟನೆ ಹಾಗೂ ತೆಂಕುತಿಟ್ಟು ಹಿಮ್ಮೇಳ ತರಗತಿ


ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಇದೇ ಬರುವ 16 ನೇ ತಾರೀಕು ಸೋಮವಾರ ನವರಾತ್ರಿ ಶುಭ ಸಂದರ್ಭದಲ್ಲಿ ಸಂಜೆ 4 ಗಂಟೆಗೆ ತೆಂಕುತಿಟ್ಟು ಯಕ್ಷ ಮಾರ್ಗ- 2 ಉದ್ಘಾಟನೆ ಹಾಗೂ ತೆಂಕುತಿಟ್ಟು ಹಿಮ್ಮೇಳ ತರಗತಿ ಆರಂಭವಾಗಲಿದೆ.

ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ತೆಂಕುತಿಟ್ಟು ಯಕ್ಷಮಾರ್ಗ ಒಂದು ಕಾರ್ಯಕ್ರಮ ಕಳೆದ ತಿಂಗಳು ನಡೆದಿರುತ್ತದೆ. ತೆಂಕುತಿಟ್ಟು ಶಾಸ್ತ್ರಿಯ ನಾಟ್ಯದ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ -ಸಂವಾದಗಳು ನಡೆಯಲಿದೆ. ದಾಖಲೀಕರಣಗಳು ಸಂಪೂರ್ಣ ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಯನ ಕೇಂದ್ರದಲ್ಲಿ ಶಾಶ್ವತವಾಗಿರುತ್ತದೆ.

ಮುಂದಿನ ದಿನಗಳಲ್ಲಿ ನಾಟ್ಯ ಅಭ್ಯಾಸದ ಕುರಿತು ಅಧ್ಯಯನ ನಡೆಸುವಲ್ಲಿ ಈ ದಾಖಲಿಕರಣಗಳು ಉಪಯುಕ್ತವಾಗಲಿದೆ. ಅದೇ ದಿನ ಮಾಂಬಾಡಿ ಗುರುಗಳ ಸಲಹೆಯಂತೆ ಕುದುರೆ ಕೂಡ್ಲು ರಾಮಮೂರ್ತಿ ಇವರಿಂದ ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ತರಗತಿಯು ಆರಂಭವಾಗಲಿದೆ.

ಈ ಕಾರ್ಯಕ್ರಮವನ್ನು ನಾಡಿನ ಗೌರವಾನ್ವಿತ ಉದ್ಯಮಿಗಳಾದ, ಕಲಾಪೋಷಕರು,ಧಾರ್ಮಿಕ ಮುಖಂಡರಾದ ಶ್ರೀ ಕೆ. ಕೆ. ಶೆಟ್ಟಿ ಅಹಮದ್ ನಗರ, ಮಹಾರಾಷ್ಟ್ರ ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಾದ ಶ್ರೀ ಶಿವರಾಮ ಭಟ್ ಕಾರಿಂಜೆ ಹಳೆಮನೆ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸರ್ಪಂಗಳ ಯಕ್ಷೋತ್ಸವ – ಅಂಬಾಪ್ರಸಾದ್‌ ಪಾತಾಳ ಅವರಿಗೆ ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಯಕ್ಷಗಾನ ಕಲಾಸಾಧಕ ಪ್ರಶಸ್ತಿ

ಕಲೆಯ ಬೆಳವಣಿಗೆಯಲ್ಲಿ ಕಲಾವಿದರಷ್ಟೇ ಪ್ರೇಕ್ಷಕರೂ ಮುಖ್ಯ’
ಸೋದೆ ಶ್ರೀಗಳು

‘ಯಕ್ಷಗಾನ ಕೇವಲ ಮನೋರಂಜನೆಗಾಗಿ ಇರುವ ಕಲೆಯಲ್ಲ. ಅದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ, ನಾವು ಆರಾಧಿಸುವ ದೇವರ ಕಥನಗಳನ್ನು ಅರಿಯುವ ಅವಕಾಶವಾಗುತ್ತದೆ, ಯಕ್ಷಗಾನ ವೀಕ್ಷಿಸುವ ಸಾಮಾಜಿಕರಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆ. ಇಂಥ ಯಕ್ಷಗಾನಗಳನ್ನು ಸಂಘಟಿಸಿ, ಯಕ್ಷಗಾನ ಕಲಾವಿದರನ್ನು ಸಂಮಾನಿಸುವುದು ಪುಣ್ಯಪ್ರದವಾದ ಕಾರ್ಯವಾಗಿದೆ.

ಯಕ್ಷಗಾನದ ಬೆಳವಣಿಗೆಯಲ್ಲಿ ಪ್ರೇಕ್ಷಕರು ಕಲಾವಿದರಷ್ಟೇ ಮುಖ್ಯ’ ಎಂದು ಶ್ರೀಸೋದೆ ವಾದಿರಾಜ ಮಠಾಧೀಶ ಶ್ರೀಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು, 7 ಅಕ್ಟೋಬರ್‌ 2023 ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜರಗಿದ ‘ಸರ್ಪಂಗಳ ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.

ಹಿರಿಯ ಸ್ತ್ರೀವೇಷಧಾರಿ ಅಂಬಾಪ್ರಸಾದ್‌ ಪಾತಾಳ ಅವರಿಗೆ ಸರ್ಪಂಗಳ ಸುಬ್ರಹ್ಮಣ್ಯ ಭಟ್‌ ಯಕ್ಷಗಾನ ಕಲಾಸಾಧಕ ಪ್ರಶಸ್ತಿಯನ್ನು ಮತ್ತು ಚತುರ ಚಕ್ರತಾಳ ವಾದಕ ಬೆಳ್ತಂಗಡಿ ಕೃಷ್ಣ ಶೆಟ್ಟಿ ಅವರಿಗೆ ಸರ್ಪಂಗಳ ಯಕ್ಷಗಾನ ಕಲಾಸೇವಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಸಂಮಾನ ಸ್ವೀಕರಿಸಿ ಮಾತನಾಡಿದ ಅಂಬಾಪ್ರಸಾದ ಪಾತಾಳ ಅವರು ಪ್ರಶಸ್ತಿಯನ್ನು ನೀಡಿದ ಸರ್ಪಂಗಳ ಕುಟುಂಬಕ್ಕೆ ಮತ್ತು ಯಕ್ಷಗಾನ ಕಲಾರಂಗ ಸಂಸ್ಥೆಗೆ ಕೃತಜ್ಞತೆ ಹೇಳಿದರು.

ಕೀರ್ತಿಶೇಷರಾಗಿರುವ ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರನ್ನು ನೆನಪಿಸಿಕೊಂಡ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್‌ ಅವರು, ‘ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರು ಯಕ್ಷಗಾನವೂ ಸೇರಿದಂತೆ ಎಲ್ಲ ಕಲೆಗಳನ್ನು ಸದ್ದಿಲ್ಲದೆ ಪ್ರೋತ್ಸಾಹಿಸುತ್ತ ಬಂದವರು.

ಅವರು ಮಾಡಿದ ಸತ್ಕಾರ್ಯಗಳಿಂದಾಗಿ ಅವರ ನೆನಪು ಈಗಲೂ ನಮ್ಮ ನಡುವೆ ಜೀವಂತವಾಗಿದೆ. ಅವರ ಪತ್ನಿ ಮತ್ತು ಮಕ್ಕಳು ಕಳೆದ ಹನ್ನೆರಡು ವರ್ಷಗಳಿಂದ ಆಯೋಜಿಸುತ್ತ ಬಂದಿರುವ ಸರ್ಪಂಗಳ ಯಕ್ಷೋತ್ಸವ-2023ವು ಅವರ ನಿಜವಾಗಿ ಆತ್ಮಸಂತೃಪ್ತಿ ಉಂಟುಮಾಡುತ್ತಿರಬೇಕು’ ಎಂದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌, ಸರ್ಪಂಗಳ ಯಕ್ಷೋತ್ಸವದ ಆಯೋಜಕರಾದ ನಳಿನಿ ಸುಬ್ರಹ್ಮಣ್ಯ ಭಟ್‌, ಡಾ. ಶೈಲಜಾ ಎಸ್‌., ಡಾ. ನರೇಂದ್ರ ಶೆಣೈ, ಅನಿರುದ್ಧ, ಆವಂತಿಕಾ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ “ಸಹಸ್ರಕರ” ಯಕ್ಷಗಾನ ಸೊಗಸಾಗಿ ಪ್ರಸ್ತುತಗೊಂಡಿತು.

ಖ್ಯಾತ ಸ್ತ್ರೀವೇಷಧಾರಿ ಮೂರೂರು ವಿಷ್ಣುಭಟ್ ನಿಧನ

ಬಡಗು ನಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಮೂರೂರು ವಿಷ್ಣುಭಟ್ (65) ಇಂದು ಉತ್ತರ ಕನ್ನಡದ ಸಿದ್ಧಾಪುರದಲ್ಲಿ ನಿಧನ ಹೊಂದಿದರು.

ಗುಂಡುಬಾಳ, ಅಮೃತೇಶ್ವರೀ, ಹಿರೇಮಹಾಲಿಂಗೆಶ್ವರ, ಶಿರಸಿ, ಪೆರ್ಡೂರು, ಮಂದಾರ್ತಿ, ಸಾಲಿಗ್ರಾಮ, ಪೂರ್ಣಚಂದ್ರ ಮೇಳಗಳಲ್ಲಿ ನಾಲ್ಕು ದಶಕಗಳ ಕಲಾ ಸೇವೆ ಗೈದಿದ್ದರು. ದಾಕ್ಷಯಿಣಿ, ಸೀತೆ, ಅಂಬೆ, ಚಂದ್ರಮತಿ, ದಮಯಂತಿ ಮೊದಲಾದ ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದರು.

ತಮ್ಮ ಭಾವಪೂರ್ಣ ಅಭಿನಯ, ಮಾತುಗಾರಿಕೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು. ಯಕ್ಷಗಾನ ಕಲಾರಂಗ ಪ್ರಶಸ್ತಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕರಗಳಿಗೆ ಭಾಜನರಾಗಿದ್ದರು.

ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.ಅವರ ನಿಧಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಕಾಡೆಮಿ ಮಾಡಬೇಕಿರುವ ಕೆಲಸ ಸಿರಿಬಾಗಿಲು ಪ್ರ-ತಿಷ್ಠಾನದಿಂದಾಗುತ್ತಿದೆ: ಶ್ರೀಕರ ಭಟ್ – ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಯಕ್ಷಮಾರ್ಗ-1 ಯಕ್ಷಗಾನ ನೃತ್ಯ ಪ್ರಾತ್ಯಕ್ಷಿಕೆ

0

ಕಾಸರಗೋಡು: ಯಕ್ಷಗಾನ ಕಲಾವಿದರಿಗೆ ಸಮಗ್ರ ಮಾಹಿತಿ ಇರುವ ತೆಂಕು ತಿಟ್ಟು ಯಕ್ಷಮಾರ್ಗ ಸರಣಿಯ ಮೊದಲ ಪ್ರಾತ್ಯಕ್ಷಿಕೆಯನ್ನು ಹಿರಿಯ ಯಕ್ಷಗಾನ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಗುರುವಾರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಸಿಕೊಟ್ಟರು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಕಲಾಪೋಷಕ ಶ್ರೀಕರ ಭಟ್ ಮುಂಡಾಜೆ, ‘ಈಗಿನ ಯಕ್ಷಗಾನ ಹಾದಿ ತಪ್ಪುತ್ತಿದೆ. ಯಕ್ಷಗಾನ ಪ್ರದರ್ಶನಕ್ಕೂ ನಿಯಂತ್ರಕ ಶಕ್ತಿ ಬೇಕು. ಭಾಗವತರು ನಿರ್ದೇಶಕರು, ಆದರೆ ಅವರಿಗೆ ಹೇಳಲು ದಾಕ್ಷಿಣ್ಯ. ಈ ಕಾರಣದಿಂದಾಗಿ ಯಕ್ಷಗಾನದ ಸತ್ವ ಕ್ಷೀಣಿಸುತ್ತಿದೆ. ಜೊತೆಗೆ, ಯಕ್ಷಗಾನ ಆಡಿಸುವವರು ಕೂಡ “ಬಹುಜನರ ಅಪೇಕ್ಷೆ ಮೇರೆಗೆ” ಎಂದು ಪ್ರೇಕ್ಷಕರ ಮೇಲೆಯೇ ಎಲ್ಲವನ್ನೂ ಹಾಕಿ ನುಣುಚಿಕೊಳ್ಳುತ್ತಾರೆ’ ಎಂದು ವಿಷಾದಿಸಿದರು.

‘ಅಕಾಡೆಮಿಯೊಂದು ಮಾಡಬೇಕಿರುವ ಕಾರ್ಯಕ್ರಮವನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮಾಡುತ್ತಿದ್ದಾರೆ. ಈಗ ಸಮಯವಿದ್ದರೂ ವ್ಯವಧಾನವಿಲ್ಲದ ಈ ಕಾಲದಲ್ಲಿ, ಸಿರಿಬಾಗಿಲು ಪ್ರತಿಷ್ಠಾನವು ಮಾಡುತ್ತಿರುವ ದಾಖಲೀಕರಣಗಳು ಕಲಾವಿದರಿಗೆ ಸದಾ ಕಾಲಕ್ಕೂ ಪ್ರಯೋಜನಕರ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಮಾತನಾಡಿ, ‘ಯಕ್ಷಗಾನವೊಂದು ಚೌಕಟ್ಟಿನ ಆಧಾರದಲ್ಲಿರುವ ಕಲೆಯಾಗಿದ್ದು, ಆ ಚೌಕಟ್ಟು ಮೀರಿ ಹೋಗಬಾರದು, ಇದು ಗುರು ಪರಂಪರೆಯನ್ನು ಬೆಳೆಸಿದ ಕಲೆ’ ಎಂದರಲ್ಲದೆ, ‘ಈಗಿನ ಗಾನವೈಭವ ಅಥವಾ ನಾಟ್ಯವೈಭವಗಳು ಒಂದು ಕಮ್ಮಟವಾಗಿ ಬದಲಾಗಬೇಕು. ಅದರಿಂದಲೇ ಹೊಸ ಕಲಾವಿದರು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಏನನ್ನಾದರೂ ಕಲಿಯುವಂತಿರಬೇಕು’ ಎಂದು ಅಭಿಪ್ರಾಯಪಟ್ಟರು.

ಯಕ್ಷಗಾನ ಹೇಗಿತ್ತು, ಅದರಲ್ಲಿ ಏನೆಲ್ಲ ಮಾರ್ಪಾಟು ಮಾಡಬಹುದು ಎಂಬುದನ್ನೆಲ್ಲ ಮನದಟ್ಟು ಮಾಡಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಸಿರಿಬಾಗಿಲು ಪ್ರತಿಷ್ಠಾನದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅಮ್ಮಣ್ಣಾಯರು ಹೇಳಿದರು.

ಅತಿಥಿಗಳಾಗಿ ಕಲಾಪೋಷಕ, ಅಮೆರಿಕದ ನಿವಾಸಿ ವಾಸುದೇವ ಐತಾಳ್ ಪಣಂಬೂರು, ಕಲಾವಿದ, ದುಬೈ ನಿವಾಸಿ ಶೇಖರ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ಅವರು ಶುಭ ಹಾರೈಸಿದರು. ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರನ್ನು ಕಾರ್ಯಕ್ರಮದ ಸಂಯೋಜಕರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಪ್ರತಿಷ್ಠಾನದ ಪರವಾಗಿ ಗೌರವಿಸಿದರು. ಕಲಾವಿದ, ನಾಟ್ಯಗುರು ಲಕ್ಷ್ಮಣ ಕುಮಾರ್ ಮರಕಡ ಅವರು ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ, ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಶಾಸ್ತ್ರೀಯ ಚೌಕಟ್ಟಿನಲ್ಲಿ ಯಕ್ಷಗಾನದ ನಾಟ್ಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪ್ರಾತ್ಯಕ್ಷಿಕೆಯನ್ನು ಹಿರಿಯ ಕಲಾವಿದ ಶಂಭಯ್ಯ ಕಂಜರ್ಪಣೆ ನಿರ್ವಹಿಸಿದರು. ಆರಾಧನಾ ಕಲೆಯಾದ ಯಕ್ಷಗಾನವು ಜನಪದವಾಗಿ, ಜಾನಪದೀಯವಾಗಿ ಮತ್ತು ಶಾಸ್ತ್ರೀಯತೆಯ ಚೌಕಟ್ಟು ಸೃಷ್ಟಿಸಿಕೊಂಡು ವಿಕಾಸಗೊಂಡ ಬಗೆಯನ್ನು ಅವರು ವಿವರಿಸಿದರು.

ಯಕ್ಷಗಾನದಲ್ಲಿ ವಂದನೆ, 6 ವಿಧದ ಪಾದ-ಘಾತಗಳು, ಗತಿಗಳು, ತಿತ್ತಿತೈ ಹೆಜ್ಜೆಗಳ ವಿವರಣೆ, ನೃತ್ತ, ನೃತ್ಯ, ನಾಟ್ಯದ ವ್ಯತ್ಯಾಸಗಳು, 7 ವಿಧದ ಮೂಲಭೂತ ಹೆಜ್ಜೆಗಳ ವಿವರಣೆ, ಚಲನೆ-ಸ್ಥಿತಿಗಳನ್ನು ಪ್ರಸ್ತುತಪಡಿಸಿದರು. ದೇಸೀ ಕಲೆಯಾದ ಯಕ್ಷಗಾನವನ್ನು ಶಾಸ್ತ್ರೀಯವಾಗಿ ವಿಕಾಸವಾಗಿಲು ಅವಕಾಶಗಳ, ಸಾಧ್ಯತೆಗಳ ಅಗಾಧತೆಯನ್ನು ಅವರು ತೆರೆದಿಟ್ಟರು. ಜೊತೆಗೆ, ಪೂರ್ವರಂಗದ ಮಹತ್ವವೇನೆಂಬುದನ್ನು ಖಚಿತವಾಗಿ ವಿವರಿಸಿದರು. ಬಳಿಕ ಪ್ರೇಕ್ಷಕರೊಂದಿಗೆ ಸಂವಾದ ಜರುಗಿತು.

ಕಡಬದ್ವಯ ಸಂಸ್ಮರಣ ಯಕ್ಷಗಾನ ಪ್ರಶಸ್ತಿ, ಯಕ್ಷ ಗಾನ ನಾಟ್ಯ ವೈಭವ, ತಾಳಮದ್ದಳೆ – ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರಿಗೆ ಕಡಬದ್ವಯ ಪ್ರಶಸ್ತಿ

0

ಈ ಬಾರಿಯ ಕಡಬದ್ವಯ ಸಂಸ್ಮರಣ ಯಕ್ಷಗಾನ ಪ್ರಶಸ್ತಿ ಪ್ರದಾನ ಸಮಾರಂಭ 29-10-2023ನೇ ಆದಿತ್ಯವಾರ ಮುಂಬಯಿಯ ಗೋರೆಗಾಂವ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ ಯಕ್ಷ ಗಾನ ನಾಟ್ಯ ವೈಭವ, ತಾಳಮದ್ದಳೆ ಕಾರ್ಯಕ್ರಮಗಳ ರಸದೌತಣ ಸಿಗಲಿದೆ.

ಈ ಬಾರಿಯ ಕಡಬದ್ವಯ ಸಂಸ್ಮರಣ ಪ್ರಶಸ್ತಿಯನ್ನು ತೆಂಕುತಿಟ್ಟಿನ ಖ್ಯಾತ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರಿಗೆ ನೀಡಿ ಗೌರವಿಸಲಾಗುವುದು.

ವಿವರಗಳಿಗೆ ಕರಪತ್ರದ ಚಿತ್ರಗಳನ್ನು ನೋಡಿ.