Sunday, February 23, 2025
Home Blog Page 375

ಪಾರ್ತಿಸುಬ್ಬನ ಯಕ್ಷಗಾನಗಳು (ಸಂಪಾದಕರು – ಕುಕ್ಕಿಲ ಕೃಷ್ಣ ಭಟ್ )

‘ಪಾರ್ತಿಸುಬ್ಬನ ಯಕ್ಷಗಾನಗಳು’ ಈ ಕೃತಿಯು ಯಕ್ಷಗಾನದ ಜನಕ ಪಾರ್ತಿಸುಬ್ಬ ಅವರು ಬರೆದ ಪ್ರಸಂಗಗಳ ಒಂದು ಸಂಪುಟ. ಈ ಪುಸ್ತಕದ ಸಂಪಾದಕರು ಕುಕ್ಕಿಲ ಕೃಷ್ಣ ಭಟ್. ಕುಕ್ಕಿಲ ಕೃಷ್ಣ ಭಟ್ಟರ ಜೀವಿತಾವಧಿ 1911 – 1988. ಇದು ಮೂರನೆಯ ಮುದ್ರಣ. ಪ್ರಕಾಶಕರು ಡಾ. ಕೀಲಾರು ಗೋಪಾಲಕೃಷ್ಣಯ್ಯ (ರಿ ) ಸಂಪಾಜೆ. 1975ರಲ್ಲಿ ಮೊದಲ ಮುದ್ರಣವು ನಡೆದು 2009ರಲ್ಲಿ ಮರು ಮುದ್ರಿತವಾಗಿತ್ತು. ಆಗ ಈ ಪುಸ್ತಕವು ಹೊರಬರಲು ಕರ್ನಾಟಕ ಯಕ್ಷಗಾನ ಅಕಾಡೆಮಿಯು ನೆರವನ್ನು ನೀಡಿತ್ತು. ಶ್ರೀ ಹಾ.ಮಾ. ನಾಯಕ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದವರು. ವಿಭಾಗ ಸಂಪಾದಕರಾಗಿದ್ದ ಜೀ. ಶಂ. ಪರಮಶಿವಯ್ಯ ಅವರ ಲೇಖನವೂ ಇದೆ. ‘ಪೀಠಿಕೆ’ ಶೀರ್ಷಿಕೆಯಡಿ ಸಂಪಾದಕರಾದ ಕುಕ್ಕಿಲ ಕೃಷ್ಣ ಭಟ್ಟರು ಪಾರ್ತಿಸುಬ್ಬ ಮತ್ತು ಪಾರ್ತಿಸುಬ್ಬನು ರಚಿಸಿದ ಪ್ರಸಂಗಗಳ ಬಗೆಗೆ ವಿವರಣೆಯನ್ನು ನೀಡಿರುತ್ತಾರೆ. ಈ ಕೃತಿಯಲ್ಲಿ ಪುತ್ರಕಾಮೇಷ್ಟಿ-ಸೀತಾಕಲ್ಯಾಣ, ಪಟ್ಟಾಭಿಷೇಕ-ಪಂಚವಟಿ,ಪಂಚವಟಿ-ವಾಲಿಸಂಹಾರ, ಉಂಗುರ ಸಂಧಿ, ಸೇತುಬಂಧನ, ಅಂಗದಸಂಧಾನ, ಕುಂಭಕರ್ಣಾದಿ ಕಾಳಗ, ಕುಶಲವರ ಕಾಳಗ, ಕೃಷ್ಣ ಚರಿತೆ, ಐರಾವತ ಎಂಬ ಪ್ರಸಂಗಗಳಿವೆ. ಕಥಾಸಾರಾಂಶವನ್ನೂ ಪ್ರಸಂಗದಲ್ಲಿ ಬರುವ ಪಾತ್ರಗಳನ್ನೂ ನಮೂದಿಸಿದ್ದು ತುಂಬಾ ಅನುಕೂಲವಾಗಿದೆ. ಸಭಾಲಕ್ಷಣವನ್ನು ಸವಿವರವಾಗಿ ನೀಡಲಾಗಿದೆ. ಬಳಿಕ ಅನುಬಂಧ ವಿಭಾಗದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಕುಕ್ಕಿಲ ನಾರಾಯಣ ಭಟ್ಟ ಮತ್ತು ಮುಳಿಯ ತಿಮ್ಮಪ್ಪಯ್ಯನವರ ಲೇಖನಗಳಿವೆ. ಬಳಿಕ ‘ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಎರಡು ಮಾತುಗಳು’  ಎಂಬ ಲೇಖನವಿದೆ. ಅಲ್ಲದೆ  ‘ಮರುಮುದ್ರಣದ ಪೂರ್ವರಂಗ’ ಎಂಬ ಶೀರ್ಷಿಕೆಯಡಿ ಶ್ರೀ ಜಿ. ಎನ್. ಅನಂತವರ್ಧನ ಮತ್ತು ಶ್ರೀ ಧನಂಜಯ್ ಇವರುಗಳ ಲೇಖನವಿದೆ. ಈ ಪುಸ್ತಕದ ಹೊರ  ಆವರಣದಲ್ಲಿ ಶ್ರೀ ಕುಕ್ಕಿಲ ಕೃಷ್ಣ ಭಟ್ಟರ ಜೀವನ ವಿವರವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. 

ಸುಣ್ಣಂಬಳ ವಿಶ್ವೇಶ್ವರ ಭಟ್ – ಮಿತಭಾಷಿಯ ಸಹೃದಯತೆ (ಶೇಣಿ, ಸುಣ್ಣಂಬಳ ತಾಳಮದ್ದಳೆ ವೀಡಿಯೋ)  

ಪ್ರಾಮಾಣಿಕವಾಗಿ ಹೇಳುವುದಾದರೆ ರಂಗದ ಬಣ್ಣದ ಮಾತುಗಾರಿಕೆಯೇ ಬೇರೆ. ವಾಸ್ತವದ ಬದುಕೇ ಬೇರೆ. ಎರಡೂ ಕೆಲವೊಮ್ಮೆ ವಿರುದ್ಧ ಧ್ರುವಗಳು. ಎರಡರಲ್ಲೂ ವೈರುಧ್ಯವನ್ನು ಕಾಣಬಹುದು. ಬದುಕು ಎನ್ನುವದು ಹಾಗೆಯೇ. ಕೆಲವೊಮ್ಮೆ ನಾವು ನಮ್ಮ ಕರ್ತವ್ಯ ಪಾಲನೆಯಲ್ಲಿಯೋ ಅಥವಾ ಮಾಡುವ ಕೆಲಸದ  ಶ್ರದ್ಧೆಯಲ್ಲಿಯೋ ನಮ್ಮತನವನ್ನು ಮರೆಮಾಚಿ ಬೇರೊಂದು ಮುಖವಾಡವನ್ನು ಹಾಕಬೇಕಾಗುತ್ತದೆ. ಅದು ಕೆಲಸದ ಮೇಲಿನ ಶ್ರದ್ಧೆ ಎಂದೇ ಪರಗಣಿಸಲ್ಪಡುತ್ತದೆ. ಮಾರಾಟಗಾರನೊಬ್ಬ ತನ್ನ ಕೌಶಲವನ್ನು ತೋರ್ಪಡಿಸುತ್ತಾ ಮಾರುವ ವಸ್ತುವಿನಲ್ಲಿ ಉತ್ಪ್ರೇಕ್ಷೆಯ ಗುಣಗಳನ್ನು ಎತ್ತಿ ತೋರಿಸುತ್ತಾ ಗ್ರಾಹಕನ ಮನಸ್ಸನ್ನು ವಶೀಕರಿಸಬೇಕಾಗುತ್ತದೆ. ಇದು ಮಾರಾಟದ ಕೌಶಲ ಅಥವಾ Salesmanship ಎಂದೇ ಕರೆಯಲ್ಪಡುತ್ತದೆ ಮತ್ತು ಆತನ ಪ್ರಶಂಸೆ ಮತ್ತು ಉನ್ನತಿಗೂ ಕಾರಣವಾಗುತ್ತದೆ.

ಆದುದರಿಂದ ಎಷ್ಟೋ ಜನರು ಎಷ್ಟೋ ಬಾರಿ ಸಾಮಾಜಿಕ ಬದುಕಿನಲ್ಲಿ ವ್ಯವಹರಿಸುವಾಗ ಇರುವ ಅವರ ಸ್ವಭಾವಕ್ಕೂ ವೈಯುಕ್ತಿಕ ಬದುಕಿನ ನಿಜಸ್ಥಿತಿಗೂ ಗಾವುದಗಳ ಅಂತರವಿರುತ್ತದೆ. ಹೆಚ್ಚಿನ ಕಲಾವಿದರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಭರತನಾಟ್ಯ ಕಲಾವಿದೆಯ ಶೃಂಗಾರ ಮನೆಯಲ್ಲಿ ಮನಮೆಚ್ಚಿದವನ ಜೊತೆ ಕಾಣಸಿಗಬೇಕೆಂಬ ನಿಯಮವೇನೂ ಇಲ್ಲ. ರೌದ್ರ ರಸದಲ್ಲಿ ಪರಿಣತಮತಿಗಳಾದ ಪುರುಷರು ಮನೆಯಲ್ಲಿ ಶಾಂತರಸದಲ್ಲಿ ಇರಬಹುದು. ಕರುಣಾರಸದಲ್ಲಿ ಉತ್ತಮ ಅಭಿನಯ ನೀಡುವವರು ಇತರರ ಮುಂದೆ ಮಂದಹಾಸದಲ್ಲಿ ವರ್ತಿಸುತ್ತಿರಬಹುದು.  ಎಷ್ಟೋ ರೌದ್ರರಸದ ಖಳನಾಯಕರು ಮೃದು ಮನಸ್ಸಿನ ಸಂಭಾವಿತರು ಎಂದು ನಮಗೆ ಹಲವು ನಟರ ಉದಾಹರಣೆಗಳಿಂದ ತಿಳಿದುಬರುತ್ತದೆ.  

(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? 

ಇನ್ನು ಸುತ್ತು ಬಳಸಿ ಮಾತು ಬೇಡ. ನಾನೀಗ ಯಕ್ಷಗಾನದ ವಿಷಯದತ್ತಲೇ ಬರಬೇಕು. ಯಕ್ಷಗಾನ ರಂಗದಲ್ಲಿ ವಾಗ್ವೈಭವದಿಂದ ರಂಜಿಸುವ ಎಷ್ಟೋ ನಟರು ನಿಜ ಜೀವನದಲ್ಲಿ ಮೃದು ಹಾಗೂ ಮಿತಭಾಷಿಗಳಾಗಿರುತ್ತಾರೆ ಎಂಬುದು ಆಶ್ಚರ್ಯವಾದರೂ ಸತ್ಯ. ಇದಕ್ಕೆ ಕೆಲವು ಮಂದಿ ಕಲಾವಿದರು ನಮ್ಮ ಎದುರಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ. ನಾವೇನೂ ತುಂಬಾ ಹಿಂದಕ್ಕೆ ಹೋಗುವುದು ಬೇಡ. ವರ್ತಮಾನ ಕಾಲದಲ್ಲೇ ಒಂದು ಸುತ್ತು ಹಾಕಿದರೆ ನಮಗೆ ಮೊದಲು ಕಾಣಸಿಕ್ಕುವುದು ಕೆ.ಗೋವಿಂದ ಭಟ್. ರಂಗದಿಂದ ಹೊರಗೆ ಅವರಿಂದ ಅತಿಯಾದ ಮಾತನ್ನು ನಿರೀಕ್ಷಿಸುವುದೇ ಬೇಡ. ಗುರುವಿನಂತೆ ಶಿಷ್ಯ ಎಂಬ ಮಾತು ಈ ವಿಷಯದಲ್ಲಿ ಕೂಡಾ ನಿಜ. ಅವರಷ್ಟಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಅದೇ ಸಾಲಿನಲ್ಲಿ ನಿಲ್ಲುವವರು ಸುಣ್ಣಂಬಳ ವಿಶ್ವೇಶ್ವರ ಭಟ್.  

(ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)

ಹೌದು ನಾನೀಗ ಬರೆಯ ಹೊರಟದ್ದು ಅವರ ಕುರಿತೇ. ಆದರೆ ಅವರ ವೈಯುಕ್ತಿಕ ಸ್ವಭಾವದ ಕುರಿತು ಬರೆಯುವುದು ನನ್ನ ಉದ್ದೇಶವಲ್ಲ. ಆದರೆ ಅವರ ಸ್ವಭಾವದಲ್ಲಿರುವ ಧನಾತ್ಮಕ ಅಂಶಗಳನ್ನು ನಾನು ಕಂಡ ಹಾಗೆ ಹೇಳಿದರೆ ಅದರಲ್ಲಿ ಅವರು ಅನ್ಯಥಾ ಭಾವಿಸಲಾರರು ಎಂದೇ ಭಾವಿಸುತ್ತೇನೆ. ಸುಣ್ಣಂಬಳ ವಿಶ್ವೇಶ್ವರ ಭಟ್ ರಂಗದಲ್ಲಿ ಮಾತುಗಾರ. ಹಾಗೆಂದು ಅವರಿಗೆ ಒಂದು ಪದ್ಯಕ್ಕೆ ಇಷ್ಟೇ ಮಾತನಾಡಲೇ ಬೇಕೆಂಬ ಚಟವೂ ಇಲ್ಲ. ಆದರೆ ತಾಳಮದ್ದಳೆಯ ವೇದಿಕೆಯಲ್ಲಿ ಅವರು ಹರಿಸುವ ವಿದ್ವತ್ಪೂರ್ಣ ಮಾತಿನ ಹರಿವಿನ ಒಂದು ಪಾಲೂ ನಿಜಜೀವನದಲ್ಲಿ ನಮಗೆ ಕಾಣಲು ಸಿಗುವುದು ದುರ್ಲಭ. ಅಗತ್ಯಕ್ಕೆ ಬೇಕಾದಷ್ಟೇ ಮಾತು.

ಮಿತಭಾಷಿಯೇ ಇರಬಹುದೇನೋ ಎಂದು ಯಾರಿಗಾದರೂ ಅನಿಸುವಷ್ಟೇ ಅವರು ಮಾತನಾಡುತ್ತಾರೆ. ಆದರೆ ಇದು ಅವರ ಒಳ್ಳೆಯ ಸ್ವಭಾವ ಎಂದೇ ನಾನು ಭಾವಿಸುತ್ತೇನೆ. ರಂಗದ ಹೊರಗೆ ಮಿತಭಾಷಿಯಾದರೂ ಅವರು ತೂಕದ ಮಾತುಗಳನ್ನೇ ಆಡುತ್ತಾರೆ. ನನಗೆ ಸುಣ್ಣಂಬಳ ವಿಶ್ವೇಶ್ವರ ಭಟ್ ಆತ್ಮೀಯರು ಹೌದಾದರೂ ನಿರರ್ಗಳವಾಗಿ ವಿಷಯಗಳನ್ನು ಹಂಚಿಕೊಳ್ಳುವಷ್ಟೇನಲ್ಲ. ಆದರೂ ಅವರ ವಿಷಯಗಳನ್ನು ನಾನು ಕೇಳಿ ಬಲ್ಲೆ. ವೇಷಧಾರಿಯಾಗಿ ವೃತ್ತಿ ಬದುಕು ಆರಂಭಿಸಿದ ಸುಣ್ಣಂಬಳರು ವೃತ್ತಿ ಬದುಕಿನಲ್ಲಿ ಸ್ವಪ್ರಯತ್ನದಿಂದ ಕಂಡ ಉನ್ನತಿಯ ಕತೆ ಬಹಳ ರೋಚಕ. ತಾನೆಂದೂ ಪ್ರಸಿದ್ಧಿಗೆ ಬೀಗದೆ ಬಾಗುವ ಗುಣವನ್ನು ಹೊಂದಿದ ಅವರು ತನ್ನ ಈ ಗುಣದಿಂದಲೇ ಸರ್ವರ ಮೆಚ್ಚುಗೆಗೂ ಮಾತ್ರವಲ್ಲದೆ ತನ್ನದೇ ಏಳಿಗೆಗೂ ಕಾರಣವಾದರು

.

ಯಕ್ಷಗಾನ ವೇಷಧಾರಿಯಾಗಿಯೂ ತಾಳಮದ್ದಳೆ ಅರ್ಥಧಾರಿಯಾಗಿಯೂ ಎರಡೂ ವಿಭಾಗದಲ್ಲಿ ಈ ರೀತಿಯ ಸಾಧನೆ ಮಾಡಿದ ಕಲಾವಿದರು ಅಪರೂಪ. ನಾಟ್ಯದಲ್ಲಿ, ನಟನೆಯಲ್ಲಿ ಪರಿಪಕ್ವತೆಯನ್ನು ಹೊಂದಿದ ಯಕ್ಷಗಾನ ಕಲಾವಿದನೊಬ್ಬ ತಾಳಮದ್ದಳೆ ಕ್ಷೇತ್ರದಲ್ಲಿಯೂ ಪ್ರಸಿದ್ಧಿಯನ್ನು ಪಡೆದದ್ದು ಮುಂದಕ್ಕೆ ಇತಿಹಾಸವನ್ನು ಸೃಷ್ಟಿಸಿದರೆ ಅಚ್ಚರಿಯಿಲ್ಲ. ಕೆ. ಗೋವಿಂದ ಭಟ್, ವಾಸುದೇವ ಸಾಮಗ ಮೊದಲಾದವರು ಈ ಸಾಲಿನಲ್ಲಿ ಮೊದಲು ಗುರುತಿಸಲ್ಪಡುತ್ತಾರಾದರೂ ಸುಣ್ಣಂಬಳರು ಇನ್ನೂ ಹಲವು ವರ್ಷಗಳ ಕಾಲ ಕಲಾವ್ಯವಸಾಯವನ್ನು ಮಾಡುವ ಅವಕಾಶವನ್ನು ಹೊಂದಿರುವುದು ಅವರಿಗೆ ಒಂದು ಪ್ಲಸ್ ಪಾಯಿಂಟ್.    

ವಿಶ್ವೇಶ್ವರ ಭಟ್  ಸಾಧಾರಣವಾಗಿ ಸನ್ಮಾನ ಪ್ರಶಸ್ತಿಗಳನ್ನು ಸ್ವೀಕರಿಸಲು ಹಿಂದೇಟು ಹಾಕುವ ಸ್ವಭಾವದವರು. ಕೆಲವೊಮ್ಮೆ ಆತ್ಮೀಯರ ಒತ್ತಡಕ್ಕೆ, ಒತ್ತಾಯಕ್ಕೆ ಮಣಿದು ಸ್ವೀಕರಿಸಿದ್ದನ್ನು ಬಿಟ್ಟರೆ ಅವರು ಅದರಲ್ಲಿ ಆಸಕ್ತರಲ್ಲ. ಸ್ವ ಪ್ರತಿಷ್ಠೆಗಾಗಿ ಕೆಲವರು ಸನ್ಮಾನ ಮಾಡಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ  ಸುಣ್ಣಂಬಳ ವಿಶ್ವೇಶ್ವರ ಭಟ್ ನಮಗೆ ಇಷ್ಟವಾಗುವುದು ಇದೇ  ಕಾರಣಕ್ಕೆ. ತಾನು ವೇಷಧಾರಿಯಾಗಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿ ವೇದಿಕೆಯೇರಬೇಕೆಂಬ ಹಂಬಲ ಬಿಟ್ಟರೆ ಅವರಲ್ಲಿ ಬೇರೇನೂ ಇಲ್ಲ. ವೇದಿಕೆಯಲ್ಲಿ ತನಗೂ ಒಂದು ಕುರ್ಚಿ ಹಾಕುವುದನ್ನು ವಿಶ್ವಣ್ಣ ನಯವಾಗಿ ತಿರಸ್ಕರಿಸುತ್ತಾರೆ. 

ಇದನ್ನೂ ಓದಿ: ಆರ್.ಕೆ.ಭಟ್ ಕೊಂಗೋಟ್ ಮತ್ತು ಉಮಾ ಆರ್.ಕೆ.ಭಟ್ ದಂಪತಿಗಳ ನಿಸ್ವಾರ್ಥ ಕಲಾಸೇವೆ (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಷ್ – ಭಾಗ 1)

ನಾನೊಮ್ಮೆ ಅವರ ಬಗ್ಗೆ ಲೇಖನ ಬರೆಯುವ ಉದ್ದೇಶದಿಂದ ಸಂಪರ್ಕಿಸಿದ್ದೆ. ಆಗಲೂ ಅವರು ನಯವಾಗಿ ತಿರಸ್ಕರಿಸಿದ್ದರು. ನನಗಿಂತ ಹೆಚ್ಚಿನ ಸಾಧನೆ ಮಾಡಿದವರು ಈ ರಂಗದಲ್ಲಿದ್ದಾರೆ. ಅವರ ಬಗ್ಗೆ ಮೊದಲು ಬರೆಯುವುದು ಉತ್ತಮ ಎಂದು ನನಗೆ ಸಲಹೆಯನ್ನೂ ಕೊಟ್ಟಿದ್ದರು. ಅವರ ಸಲಹೆ ಸರಿ ಎಂದು ಕಂಡಿತ್ತು.  ಆದರೂ ನಾನೀಗ ಅವರ ಒಪ್ಪಿಗೆ ಇಲ್ಲದಿದ್ದರೂ ಲೇಖಕನ ಹಕ್ಕಿನ ನೆಲೆಯಲ್ಲಿ ಅವರ ಬಗ್ಗೆ ಬರೆಯುತ್ತಿದ್ದೇನೆ. ಸುಣ್ಣಂಬಳರು ತಮ್ಮ ಪ್ರಾಮಾಣಿಕತೆಗೂ ಹೆಸರುವಾಸಿ. ಇಲ್ಲದಿದ್ದರೆ 6ರ ಸಂಖ್ಯೆಯಲ್ಲಿರುವ ಕಟೀಲು ಮೇಳಗಳ ಜವಾಬ್ದಾರಿಯುತ ಸ್ಥಾನದಲ್ಲಿ ಇಂದು ದೀರ್ಘ ಸಮಯದಿಂದ ಕಾರ್ಯನಿರ್ವಹಿಸುತ್ತಿರಲು ಸಾಧ್ಯವಾಗುತ್ತಿರಲಿಲ್ಲ. ಯಾವತ್ತೂ ತನ್ನ ಸ್ಥಾನವನ್ನು ಅವರು ದುರುಪಯೋಗ ಮಾಡಿಕೊಂಡದ್ದಿಲ್ಲ ಎಂಬ ಮಾತನ್ನು ತಿಳಿದಿದ್ದೇನೆ. ತನ್ನ ಪ್ರಭಾವವನ್ನು ಉಪಯೋಗಿಸಿ ಅವರು ಯಾವುದೇ ಸ್ವಜನಪಕ್ಷಪಾತದಂತಹಾ ಕಾರ್ಯಗಳಿಗೆ ಮನಮಾಡಿದ್ದಿಲ್ಲ. ಅಧಿಕಾರದ ದುರುಪಯೋಗ ಮಾಡದೆ ತನ್ನ ಹುದ್ದೆಗೆ ಗೌರವ ಘನತೆಯನ್ನು ತಂದುಕೊಟ್ಟಿದ್ದಾರೆ.

ಎಷ್ಟೇ ಪ್ರಾಮಾಣಿಕರಾಗಿದ್ದರೂ ಉನ್ನತ ಸ್ಥಾನದಲ್ಲಿದ್ದವರಿಗೆ ವಿವಾದ ಸುತ್ತಿಕೊಳ್ಳುವುದು ಮತ್ತು ಕಾಲೆಳೆಯುವವರು ಹೆಚ್ಚು. ಆದರೆ  ಸುಣ್ಣಂಬಳ ವಿಶ್ವೇಶ್ವರ ಭಟ್ ವಿವಾದಗಳಿಂದ ದೂರ ಇರಲು ಪ್ರಯತ್ನಿಸುವುದೇ ಅವರ ಮೃದು ಮತ್ತು ಮಿತಭಾಷಿತ್ವಕ್ಕೆ ಕಾರಣವಾಗಿರಬಹುದು. ಇಂದು ತಾಳಮದ್ದಳೆ ರಂಗದಲ್ಲಿಯೂ, ವೇಷಧಾರಿಯಾಗಿಯೂ ಅಪ್ರತಿಮ ಸಾಧನೆಯನ್ನು ಮಾಡಿದ  ಸುಣ್ಣಂಬಳ ವಿಶ್ವೇಶ್ವರ ಭಟ್ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳನ್ನು ಹುಟ್ಟುಹಾಕುವ ಮಂದಿಯ ನಡುವೆ ಅವರದೇ ಅಭಿಮಾನೀ ವರ್ಗ ತನ್ನಿಂತಾನೇ ಹುಟ್ಟಿಕೊಂಡಿದೆ. ಅವರ ಈ ಯಕ್ಷಲೋಕದ ಪಯಣ ಇನ್ನೂ ನಿರಂತರವಾಗಿ ಮುಂದುವರಿಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಚೆಗೆ ನಾನು ಹೆಚ್ಚು ಇಷ್ಟಪಡುವ ಶೇಣಿ ಗೋಪಾಲಕೃಷ್ಣ  ಭಟ್ಟರ ಭೀಮನ ಪಾತ್ರಧಾರಿಯ ಎದುರು ಹಿಡಿಂಬೆಯಾಗಿ  ಸುಣ್ಣಂಬಳ ವಿಶ್ವೇಶ್ವರ ಭಟ್ ಅರ್ಥ ಹೇಳಿದ ವೀಡಿಯೋ ಒಂದು ಯು ಟ್ಯೂಬ್ ಚಾನೆಲ್ ನಲ್ಲಿ ನೋಡಲು ಸಿಕ್ಕಿತು. ಯಕ್ಷಗಾನದ ದಂತಕತೆಯ ಎದುರು ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥಧಾರಿ. ಬಹಳ ಸೊಗಸಾಗಿದೆ.  ಸುಕೇಶ್ ಭಟ್ ಎನ್ನುವವರ ಯು ಟ್ಯೂಬ್ ಚಾನೆಲ್ ಅದು. ಅದರ ಲಿಂಕ್ ಕೆಳಗಡೆ ಇದೆ. ಆಸಕ್ತರು ನೋಡಿ. 

‘ಯಕ್ಷಭೃಂಗ’ – ಕುಬಣೂರು ಶ್ರೀಧರ ರಾವ್ ಅಭಿನಂದನಾ ಸಮಿತಿ

ಶ್ರೀ ಕುಬಣೂರು ಶ್ರೀಧರ ರಾಯರು ಕಟೀಲು ಮೇಳದ ಹಿರಿಯ ಭಾಗವತರಾಗಿದ್ದವರು. ಭಾಗವತರಾಗಿ ಮಾತ್ರವಲ್ಲ, ಪ್ರಸಂಗಕರ್ತರಾಗಿಯೂ ಪತ್ರಿಕೋದ್ಯಮಿಯಾಗಿಯೂ ಸರಳ ಸಜ್ಜನರಾಗಿಯೂ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಮನುವಂಶವಾಹಿನಿ, ದಾಶರಥಿದರ್ಶನ, ಸಾರ್ವಭೌಮ ಸಂಕರ್ಷಣ ಮೊದಲಾದ ಪ್ರಸಂಗಗಳನ್ನು ರಚಿಸಿ ಕಲಾಮಾತೆಯ ಸೇವೆಯನ್ನು ಮಾಡಿದ್ದರು. ಯಕ್ಷಪ್ರಭಾ ಎಂಬ ಯಕ್ಷಗಾನ ಪತ್ರಿಕೆಯನ್ನು ಅನೇಕ ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದ್ದರು. ಅವರೊಂದಿಗೆ ಹದಿನಾರು ವರ್ಷಗಳ ತಿರುಗಾಟವು ಮರೆಯಲಾಗದ ಅನುಭವ. ‘ಸಾಮೀಪ್ಯದ ಸವಿಯುಂಡ ಹದಿನಾರು ವರ್ಷಗಳು’ ಎಂಬ ಲೇಖನವನ್ನು ಬರೆದಿದ್ದೆ. ಶ್ರೀಯುತರು ಈ ಹಿಂದೆ ಕಟೀಲು ಮೇಳದ ಯಜಮಾನರಾಗಿದ್ದ ಕಟೀಲು ಶ್ರೀ ವಿಠಲ ಶೆಟ್ಟಿಯವರ ಬಗೆಗೂ ಪುಸ್ತಕವೊಂದನ್ನು ಬರೆದಿದ್ದರು. ಇವರನ್ನು ಗೌರವಿಸಿ ಅಭಿನಂದಿಸಬೇಕೆಂಬ ಉದ್ದೇಶದಿಂದ 2016ರಲ್ಲಿ ಶ್ರೀ ಕಟೀಲು ಕ್ಷೇತ್ರದಲ್ಲಿ ಕುಬಣೂರು ಅಭಿನಂದನಾ ಸಮಿತಿಯು ರೂಪೀಕರಣಗೊಂಡಿತ್ತು. ಅಲ್ಲದೆ ‘ಶ್ರೀಧರಾಯಣ’ ಎಂಬ ಕಾರ್ಯಕ್ರಮದಡಿಯಲ್ಲಿ ಕುಬಣೂರು ಭಾಗವತರನ್ನು ಅಭಿನಂದಿಸಿ ಗೌರವಿಸಲಾಗಿತ್ತು. ಯಕ್ಷಗಾನ ಭಾಗವತ ಕುಬಣೂರು ಶ್ರೀಧರ ರಾವ್ ಇವರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ಯಕ್ಷಗಾನೋಚಿತ ಮೌಲಿಕ ವಿದ್ವಾಂಸರ ಲೇಖನಗಳನ್ನು ಒಳಗೊಂಡ ‘ಯಕ್ಷಭೃಂಗ’ ಎಂಬ ಪುಸ್ತಕವು ಪ್ರಕಟವಾದದ್ದು ಸಂತೋಷದ ವಿಚಾರ. ಇದು ನೂರಾ ಎಪ್ಪತ್ತಕ್ಕಿಂತ ಅಧಿಕ ಪುಟಗಳನ್ನೂ ಹೊಂದಿದೆ. ಇದರ ಪ್ರಕಾಶಕರು ‘ಕುಬಣೂರು ಅಭಿನಂದನ ಸಮಿತಿ’. ಪ್ರಕಟಣಾ ಪ್ರಾಯೋಜಕತ್ವವನ್ನು ವಹಿಸಿದವರು ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ) ಸಂಪಾಜೆ.

ಈ ಪುಸ್ತಕದಲ್ಲಿ ಕುಬಣೂರು ಅಭಿನಂದನಾ ಸಮಿತಿಯ ಅಧ್ಯಕ್ಷರಾದ ವಿದ್ವಾನ್ ಶ್ರೀಹರಿನಾರಾಯಣದಾಸ ಅಸ್ರಣ್ಣರು ತಮ್ಮ ಪ್ರಾಸ್ತಾವಿಕ ಮಾತುಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ‘ಜೀವನ ಚರಿತ್ರೆ’ ಶೀರ್ಷಿಕೆಯಡಿಯಲ್ಲಿ ಕುಬಣೂರು ಶ್ರೀಧರ ರಾಯರು ತಮ್ಮ ಬದುಕಿನ ವಿವಿಧ ಹಂತಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಲೇಖನದ ಕೊನೆಯಲ್ಲಿ ಭಾಗವತರು ‘ಅನಾಯಾಸೇನ ಮರಣಂ ವಿನಾದೈನ್ಯೇನ ಜೀವನಂ’ ಎಂಬ ಸೊಲ್ಲನ್ನು ನಮೂದಿಸಿದ್ದರು. ಬಳಿಕ ಕುಬಣೂರು ಭಾಗವತರಿಗೆ ಸಂದ ಗೌರವ ಸನ್ಮಾನಗಳ ವಿವರಗಳನ್ನು ನೀಡಲಾಗಿದೆ. ಬಳಿಕ ಡಾ. ಎಂ. ಪ್ರಭಾಕರ ಜೋಶಿ, ಎಂ. ವಿ. ಹೆಗಡೆ ಶಿರಸಿ, ಕೆ. ಗೋವಿಂದ ಭಟ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ, ಪ್ರೊ| ಎಸ್. ವಿ. ಉದಯಕುಮಾರ್ ಶೆಟ್ಟಿ, ಮಧೂರು ವೆಂಕಟಕೃಷ್ಣ, ಡಾ. ಕೊಳ್ಯೂರು ರಾಮಚಂದ್ರ ರಾವ್, ಶ್ರೀಧರ ಡಿ. ಎಸ್., ಕಮಲಾದೇವಿ ಪ್ರಸಾದ ಅಸ್ರಣ್ಣ, ರವೀಂದ್ರ ಅತ್ತೂರು, ಕೃಷ್ಣಪ್ರಕಾಶ ಉಳಿತ್ತಾಯ, ಸುಣ್ಣಂಬಳ ವಿಶ್ವೇಶ್ವರ ಭಟ್,ಕಾಸರಗೋಡು ಸುಬ್ರಾಯ ಹೊಳ್ಳ, ತಾರಾನಾಥ ವರ್ಕಾಡಿ, ವಿಷ್ಣು ಶರ್ಮ ಪಣಕಜೆ, ರವಿಶಂಕರ ವಳಕ್ಕುಂಜ, ಅಂಡಾಲ ದೇವಿಪ್ರಸಾದ ಶೆಟ್ಟಿ, ರಾಧಾಕೃಷ್ಣ ಕಲ್ಚಾರ್, ಗಣರಾಜ ಕುಂಬ್ಳೆ, ಡಾ. ಶ್ರುತಕೀರ್ತಿ ರಾಜ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಇವರುಗಳ ಲೇಖನಗಳಿವೆ. ಅಲ್ಲದೆ ಕುಬಣೂರು ಅಭಿನಂದನಾ ಸಮಿತಿಯ ಪದಾಧಿಕಾರಿಗಳನ್ನೂ ಪರಿಚಯಿಸಲಾಗಿದೆ. ಭಾಗವತ ಕುಬಣೂರು ಶ್ರೀಧರ ರಾಯರ ಕಾಯ ಅಳಿದರೂ ಕೀರ್ತಿಯು ಉಳಿದಿದೆ. ಅವರ ನೆನಪು ಮತ್ತು ಅವರು ನಮ್ಮ ಜತೆಯಾಗಿ ಇಲ್ಲ ಎಂಬ ನೋವು ಸದಾ ಇರುತ್ತದೆ. ಹಿರಿಯರಾದ ಶ್ರೀ ಕುಬಣೂರು ಶ್ರೀಧರ ರಾಯರಿಗೆ ನಮನಗಳು. 

ಯಕ್ಷಭೀಮನ ನೂರು ಹೆಜ್ಜೆಗಳು – ಪುತ್ತೂರು ಕೃಷ್ಣ ಭಟ್ಟರ (ಮಾಣಂಗಾಯಿ) ಸಂಸ್ಮರಣಾ ಗ್ರಂಥ 

ಶ್ರೀ ಪುತ್ತೂರು ಕೃಷ್ಣ ಭಟ್ಟರು (ಮಾಣಂಗಾಯಿ) ತೆಂಕುತಿಟ್ಟಿನ ಗತಕಾಲದ ಪ್ರಸಿದ್ಧ ವೇಷಧಾರಿಗಳಲ್ಲೊಬ್ಬರು. ಎಲ್ಲಾ ರೀತಿಯ ಪಾತ್ರಗಳನ್ನೂ ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವ ಪ್ರತಿಭಾವಂತರಾಗಿದ್ದರೆಂದು ಹಿರಿಯ ಕಲಾಭಿಮಾನಿಗಳು ಹೇಳುತ್ತಾರೆ. ಶ್ರೀಯುತರ ಜೀವಿತಾವಧಿ ೧೯೦೪ – ೧೯೭೯. ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಭೀಮಗುಳಿ ಇವರ ಹುಟ್ಟೂರು. ಭೀಮಗುಳಿ ವೆಂಕಟರಮಣಯ್ಯ ಮತ್ತು ಶ್ರೀಮತಿ ದೇವಮ್ಮ ದಂಪತಿಗಳ ಏಕಮಾತ್ರ ಪುತ್ರನಾಗಿ ಜನನ. ಹಾಗಾಗಿ ದಾಖಲೆಗಳಲ್ಲಿ ಪುತ್ತೂರು ಕೃಷ್ಣ ಭಟ್ಟರ ಹೆಸರು ಭೀಮಗುಳಿ ಕೃಷ್ಣಯ್ಯ ಎಂದು. ಜನಿಸಿದ್ದು ಅಜ್ಜನ ಮನೆ ಕಾಸರಗೋಡಿನ ಬೋವಿಕ್ಕಾನದ ಸಮೀಪ ಮಾಣಂಗಾಯಿ  ಎಂಬಲ್ಲಿ. ಹಾಗಾಗಿ ಮಾಣಂಗಾಯಿ ಕೃಷ್ಣ ಭಟ್ಟರೆಂದೇ ಕರೆಸಿಕೊಂಡಿದ್ದರು. ಈ ಊರನ್ನು ಮಾಡಂಗಾಯಿ ಅಥವಾ ಮಾಳಂಗಾಯಿ ಎಂದೂ ಹೇಳುವುದು ರೂಡಿಯಲ್ಲಿದೆ. ಪುತ್ತೂರು ಕೃಷ್ಣ ಭಟ್ಟರಿಗೆ ತಂದೆ ತಾಯಿಯರ ಕಡೆಯಿಂದ ಯಕ್ಷಗಾನವು ಬಳುವಳಿಯಾಗಿಯೇ ಬಂದಿತ್ತು. ಓದಿದ್ದು ೩ನೇ ತರಗತಿ ವರೆಗೆ ಮಾತ್ರ. ೧೯೧೮ರಲ್ಲಿ ಅಂದರೆ ತನ್ನ ೧೫ನೇ ವಯಸ್ಸಿನಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ರಂಗಪ್ರವೇಶ ಮಾಡಿದ್ದರು. ಕಾಟುಕುಕ್ಕೆ ಮಾಲಿಂಗ ರೈಗಳಿಂದ ನಾಟ್ಯ ಕಲಿತಿದ್ದರೆಂಬ ಹೇಳಿಕೆಯಿದೆ. ನಂತರ ಪ್ರದರ್ಶನಗಳನ್ನು ನೋಡಿ ಕಲಿತುದೇ ಹೆಚ್ಚು. ಕಲಾ ಕ್ಷೇತ್ರದಲ್ಲಿ ಸದಾ ಅಧ್ಯಯನಶೀಲರಾಗಿ ಕ್ಷಿಪ್ರ ಬೆಳವಣಿಗೆಯನ್ನು ಕಂಡವರು. ಜೋಡಾಟಗಳಲ್ಲೂ ಭಾಗವಹಿಸಿ ಪ್ರಶಂಸೆಗೊಳಗಾಗಿದ್ದರು. ಕಟೀಲು, ಕೂಡ್ಲು, ಕುಂಡಾವು ಸುರತ್ಕಲ್, ಮೂಲ್ಕಿ, ಕದ್ರಿ, ಮೂಡಬಿದ್ರೆ, ಕಾಪು, ತಲಪಾಡಿ ಅಲ್ಲದೆ ತಾನೇ ಕಟ್ಟಿ ಬೆಳೆಸಿದ ಕಾಂಚನ ಮೇಳದಲ್ಲೂ ತಿರುಗಾಟ ನಡೆಸಿದ್ದರು. ಕಣ್ಣುಗಳ ಮೂಲಕವೇ ವಿವಿಧ ರೀತಿಯ ಭಾವಗಳನ್ನು ಪ್ರಕಟಿಸುತ್ತಿದ್ದರೆಂದು ಅವರ ವೇಷಗಳನ್ನು ನೋಡಿದ ಕಲಾಭಿಮಾನೀ ಹಿರಿಯರು ಹೇಳುತ್ತಾರೆ. ಕಂಸ, ಇಂದ್ರಜಿತು, ತಾಮ್ರಧ್ವಜ, ಕಾರ್ತವೀರ್ಯ,ಮಾಗಧ, ಭಸ್ಮಾಸುರ, ವಲಲ, ಅಕ್ರೂರ, ದುಷ್ಟಬುದ್ಧಿ, ಹನುಮಂತ,ಶಕುನಿ, ಭಾರತ, ಕರ್ಣ ಮೊದಲಾದುವುಗಳು ಪುತ್ತೂರು ಕೃಷ್ಣ ಭಟ್ಟರಿಗೆ ಪ್ರೀತಿಯ ಪಾತ್ರಗಳು. ನಾಟ್ಯದ ಮುಕ್ತಾಯಕ್ಕೆ ತಿರುಗಿ ನೋಡದೆ ಚಂಗನೆ ನೆಗೆದು ಸಿಂಹಾಸನವೇರುತ್ತಿದ್ದುದು ಪುತ್ತೂರು ಕೃಷ್ಣ ಭಟ್ಟರ ವಿಶೇಷತೆ. ಯಾರಿಗೂ ಸಿದ್ಧಿಸದ ಕಲೆ ಇದು. ಪ್ರಸಂಗಕರ್ತರಾಗಿ, ಹರಿದಾಸರಾಗಿ,ನಾಟ್ಯಗುರುವಾಗಿಯೂ ಕಲಾ ಸೇವೆಯನ್ನು ಮಾಡಿದ್ದರು. ವೇಷಭೂಷಣಗಳ ಚಿತ್ರವನ್ನೂ ಮುಖವರ್ಣಿಕೆಯನ್ನೂ ಬರೆದಿರಿಸಿ ಮುಂದಿನ ಜನಾಂಗಕ್ಕೆ ಉಳಿಸಿಹೋದ ಮಹನೀಯರಿವರು. ಎಳವೆಯಲ್ಲಿಯೇ ಪುತ್ತೂರಿನಲ್ಲಿ ನೆಲೆಸಿದ್ದರು. ಹಾಗಾಗಿ ಭೀಮಗುಳಿ ಕೃಷ್ಣಯ್ಯನವರು ಮಾಡಂಗಾಯಿ ಕೃಷ್ಣ ಭಟ್ಟರಾಗಿ ಪುತ್ತೂರು ಕೃಷ್ಣ ಭಟ್ಟರೆಂದೇ ಪ್ರಸಿದ್ಧರಾಗಿ ತನ್ನ ಪ್ರತಿಭಾ ವ್ಯವಹಾರದಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದರು. ಪುತ್ತೂರು ಶ್ರೀ ಕೃಷ್ಣ ಭಟ್ಟರ (ಮಾಣಂಗಾಯಿ) ಸಂಸ್ಮರಣಾ ಗ್ರಂಥ ‘ಯಕ್ಷಭೀಮನ ನೂರು ಹೆಜ್ಜೆಗಳು’ ಪ್ರಕಟಗೊಂಡದ್ದು ೨೦೦೪ರಲ್ಲಿ . ಡಾ. ಶ್ರೀ ಪಾದೆಕಲ್ಲು ವಿಷ್ಣು ಭಟ್ಟ ಮತ್ತು ಶ್ರೀ ಕೆ. ಪಿ. ರಾಜಗೋಪಾಲ ಇದರ ಸಂಪಾದಕರು. ಪ್ರಕಾಶಕರು ಡಾ. ಕೃಷ್ಣಮೂರ್ತಿ ಪಂಜ. ಇವರು ಪುತ್ತೂರು ಕೃಷ್ಣ ಭಟ್ಟರ ಮೊಮ್ಮಗ. ಈ ಪುಸ್ತಕದ ಮುದ್ರಣದ ಬಗೆಗೆ ಆಸಕ್ತಿ ಉಂಟಾದ ಸನ್ನಿವೇಶವನ್ನು ವಿವರಿಸುತ್ತಾ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಸಂಪಾದರು ಈ ಗ್ರಂಥದ ಮಹತ್ವ ಮತ್ತು ಉದ್ದೇಶಗಳನ್ನು ವಿವರಿಸಿದ್ದಾರೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಮತ್ತು ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಚನ ಸಂದೇಶಗಳೂ ಇವೆ. ಬಳಿಕ ಸ್ಮರಣ ಎಂಬ ಶೀರ್ಷಿಕೆಯಡಿಯಲ್ಲಿ ಅರುವತ್ತಾರು ಮಂದಿ ಮಹನೀಯರುಗಳ ಲೇಖನಗಳಿವೆ. ಈ ಲೇಖನಗಳನ್ನು ಓದುವಾಗ ಮಾಣಂಗಾಯಿ ಕೃಷ್ಣ ಭಟ್ಟರ ಬದುಕು ಮತ್ತು ಸಾಧನೆಗಳನ್ನು ತಿಳಿಯಬಹುದು. ಬಳಿಕ ಚಿಂತನ ಎಂಬ ತಲೆಬರಹದಡಿಯಲ್ಲಿ ಹನ್ನೆರಡು ಅತ್ಯುತ್ತಮ ಬರಹಗಳಿವೆ. ಬಳಿಕ ಪ್ರಯೋಗ ಎಂಬ ವಿಭಾಗದಡಿ ನಲುವತ್ತಕ್ಕೂ ಹೆಚ್ಚು ಮುಖವರ್ಣಿಕೆ ಚಿತ್ರಗಳಿವೆ. ಹಳೆಯ ಚಿತ್ರಗಳನ್ನು ಹೊಸತಾಗಿ ಮೂರ್ತೀಕರಿಸಿದವರು ಡಾ. ಕೆ. ಎಂ. ರಾಘವ ನಂಬಿಯಾರ್.  ಆ ಬಗೆಗೆ ನಂಬಿಯಾರರು ಲೇಖನದ ರೂಪದಲ್ಲಿ ವಿವರಣೆಯನ್ನೂ ನೀಡಿರುತ್ತಾರೆ. ಬಳಿಕ ಪರಾಮರ್ಶನ ಎಂಬ ಶೀರ್ಷಿಕೆಯಡಿ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಯಕ್ಷಗಾನದ ಬಗ್ಗೆ ಪ್ರಕಟಗೊಂಡ ಅನೇಕ ಪುಸ್ತಕಗಳ ಬಗ್ಗೆ ವಿವರಣೆಯನ್ನು ನೀಡಿರುತ್ತಾರೆ. ಪುಸ್ತಕದ ಕೊನೆಯ ಭಾಗ ಅನುಬಂಧಗಳು ಎಂಬ ಶೀರ್ಷಿಕೆಯಡಿಯಲ್ಲಿ ಪುತ್ತೂರು ಕೃಷ್ಣ ಭಟ್ಟರ ಲೇಖನ, ಸನ್ಮಾನ ಪತ್ರ, ಜನ್ಮ ಪತ್ರಿಕೆ, ಭೀಮಗುಳಿ ವಂಶವೃಕ್ಷ ಮೊದಲಾದ  ಹದಿಮೂರು ವಿಚಾರಗಳಿವೆ. ಮಾಣಂಗಾಯಿಯವರ ಬಗೆಗೆ ಅಲ್ಲದೆ ಯಕ್ಷಗಾನ ಕಲೆಯ ಬಗೆಗೂ ತಿಳಿಯಲು ಇದು ಒಂದು ಉತ್ತಮ ಪುಸ್ತಕ. 

ಕೊರ್ಗಿ ಸ್ಮೃತಿ ಪ್ರಸಂಗ ಸಂಪುಟ – ಹತ್ತು  ಯಕ್ಷಗಾನ ಪ್ರಸಂಗಗಳ ಗುಚ್ಛ  

‘ಕೊರ್ಗಿ ಸ್ಮೃತಿ ಪ್ರಸಂಗ ಸಂಪುಟ – ಹತ್ತು  ಯಕ್ಷಗಾನ ಪ್ರಸಂಗಗಳ ಗುಚ್ಛ ‘ ಎಂಬ ಹೊತ್ತಗೆಯು ವಿದ್ವಾಂಸರೂ ಪ್ರಸಂಗಕರ್ತರೂ ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ  ಆಗಿದ್ದ ಕೊರ್ಗಿ ಶ್ರೀ ವೆಂಕಟೇಶ್ವರ ಉಪಾಧ್ಯಾಯರ ನೆನಪಿನ ಕಾಣಿಕೆಯಾಗಿ ಓದುಗರ ಕೈ ಸೇರಿತ್ತು. ಈ ಪುಸ್ತಕದ ಪ್ರಕಾಶಕರು ಕಟೀಲು ಶ್ರೀ ಸದಾನಂದ ಅಸ್ರಣ್ಣ ಪ್ರಕಾಶನ. ಮುನ್ನುಡಿಯನ್ನು ಬರೆದವರು ಕಟೀಲು ದೇವಳದ ಅರ್ಚಕರಾದ ವಿದ್ವಾನ್ ಕಮಲಾದೇವಿ ಪ್ರಸಾದ ಅಸ್ರಣ್ಣರು. ‘ಕೊರ್ಗಿ ಸಂಸ್ಮರಣೆ’  ಎಂಬ ಶೀರ್ಷಿಕೆಯಡಿ, ದ್ವಿವೇದೀ ವಿದ್ವಾನ್ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯರನ್ನು ನೆನಪಿಸಿ ಶ್ರೀ ಹರಿನಾರಾಯಣದಾಸ ಅಸ್ರಣ್ಣರು  ಬರೆದಿರುತ್ತಾರೆ. ಈ ಪುಸ್ತಕವನ್ನು ಕೀರ್ತಿಶೇಷ ದಿ। ಸದಾನಂದ ಅಸ್ರಣ್ಣರು, ಕಟೀಲು ಇವರಿಗೆ ಅರ್ಪಿಸಲಾಗಿದ್ದು ಶ್ರೀಯುತರ ಪರಿಚಯವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ತ್ರಯಂಬಕರುದ್ರ ಮಾಹಾತ್ಮ್ಯಮ್, ಅಷ್ಟಾಕ್ಷರೀ ಮಾಹಾತ್ಮ್ಯಮ್, ಭೀಷ್ಮವಸಾನ, ಚಂದ್ರಕಾಂತಿ, ನಿಮಿಯಜ್ಞ, ಗಯಯಜ್ಞ, ಪೃಥುಯಜ್ಞ, ನೈಮಿಷಾರಣ್ಯ, ಮರುತ್ ಜನ್ಮ, ಗೋವರ್ಧನೋದ್ಧರಣ ಎಂಬ ಹತ್ತು ಪ್ರಸಂಗಗಳು ಇದರೊಳಗಿವೆ. ಕಥಾ ಸಾರಾಂಶವನ್ನು ಮತ್ತು ಪ್ರಸಂಗದಲ್ಲಿ ಬರುವ ಪಾತ್ರಗಳನ್ನು ನಮೂದಿಸಿದ್ದು ಅನುಕೂಲವೇ ಆಗಿದೆ.  ಶ್ರೀ ಗಣೇಶ ಕೊಲೆಕಾಡಿಯವರು ತ್ರಯಂಬಕರುದ್ರ ಮಾಹಾತ್ಮ್ಯಮ್, ಅಷ್ಟಾಕ್ಷರೀ ಮಾಹಾತ್ಮ್ಯಮ್, ಭೀಷ್ಮವಸಾನ ಎಂಬ ಪ್ರಸಂಗಗಳನ್ನು ರಚಿಸಿದವರು. ಚಂದ್ರಕಾಂತಿ ಎಂಬ ಪ್ರಸಂಗವನ್ನು ಬರೆದವರು ಶ್ರೀ ಮಧೂರು ವೆಂಕಟಕೃಷ್ಣ. ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ನಿಮಿಯಜ್ಞ ಪ್ರಸಂಗಕರ್ತರು. ಪ್ರೊ| ಎಂ. ಎ. ಹೆಗಡೆ ಅವರು ಗಯಯಜ್ಞ ಮತ್ತು ಮರುತ್ ಜನ್ಮ ಎಂಬ ಪ್ರಸಂಗಗಳನ್ನು ರಚಿಸಿದ್ದರು. ಪೃಥುಯಜ್ಞ ಮತ್ತು ನೈಮಿಷಾರಣ್ಯ ಪ್ರಸಂಗಗಳನ್ನು ರಚಿಸಿದವರು ಶ್ರೀಧರ ಡಿ. ಎಸ್. ಕಿನ್ನಿಗೋಳಿ.  ಗೋವರ್ಧನೋದ್ಧರಣ ಪ್ರಸಂಗವನ್ನು ರಚಿಸಿದವರು ವಿದ್ವಾನ್ ಕೆ. ಕೃಷ್ಣಕುಮಾರ್ ಮೈಸೂರು. ಬಳಿಕ ಹದಿಮೂರು ವರ್ಷಗಳಲ್ಲಿ ನಡೆದ (2004 – 2017) ತಾಳಮದ್ದಳೆ ಸಪ್ತಾಹದ ಶೀರ್ಷಿಕೆಗಳನ್ನೂ ಆಮಂತ್ರಣ ಪತ್ರಿಕೆಯನ್ನೂ ನೀಡಿರುತ್ತಾರೆ. ಯಕ್ಷಗಾನ ಮತ್ತು ಶ್ರೀ ಕ್ಷೇತ್ರ ಕಟೀಲಿನ ಸಂಬಂಧವಿರಿಸಿಕೊಂಡೇ ಬದುಕಿದ್ದ ಶ್ರೀ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯರ ನೆನಪಿನ ಹೊತ್ತಗೆಯಾಗಿ ಪ್ರಸಂಗ ಸಂಪುಟವು ಪ್ರಕಟವಾದುದು ಅರ್ಥಪೂರ್ಣವೂ ಸಂತಸವನ್ನು ತರುವ ವಿಚಾರವೂ ಆಗಿದೆ. 

‘ಅಡ್ಡಿಗೆ’ – ನಾ. ಕಾರಂತರ ಬರಹಗಳ ಅಟ್ಟಣೆ

ಸಂಪಾದಕ, ಪತ್ರಕರ್ತ, ಕಲಾವಿದ, ಅಂಕಣಕಾರ- ಹೀಗೆ ಹತ್ತು ಹಲವು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು ಶ್ರೀ ನಾ. ಕಾರಂತ ಪೆರಾಜೆ. ಅವರ ಹಲವಾರು ಕೃತಿಗಳು ಪ್ರಕಟವಾಗಿವೆ. ಅವರ ಪ್ರಕಟಿತ ಕೃತಿಗಳ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿವೆ. ಅದುವೇ ‘ಅಡ್ಡಿಗೆ’. ಯಕ್ಷಗಾನ ಲೇಖನಗಳ ಸಂಪುಟ. ಹೆಸರೇ ಸೂಚಿಸುವಂತೆ ಯಕ್ಷಗಾನ ವೇಷಭೂಷಣಗಳಲ್ಲೊಂದಾದ ಕೊರಳಿನ ಆಭರಣಕ್ಕೆ ‘ಅಡ್ಡಿಗೆ’ ಎಂದು ಹೆಸರು. ಕಾರಂತರ ಕೃತಿಗಳಾಭರಣಕ್ಕೆ ಮತ್ತೊಂದು ಆಭರಣದ ಸೇರ್ಪಡೆ.

ಸದಾ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡ ನಾ. ಕಾರಂತರೆಂಬ ಅಚ್ಚರಿ ಇಷ್ಟೆಲ್ಲಾ ಕೆಲಸಗಳನ್ನು ಹೇಗೆ ಮಾಡುತ್ತಾರೆಂಬ ವಿಸ್ಮಯತೆ ಹಲವಾರು ಬಾರಿ ಕಾಡಬಹುದು. ಸುಮಾರು 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಜೊತೆಗೆ ಅಡಿಕೆ ಪತ್ರಿಕೆಯ ಉಪ ಸಂಪಾದಕತ್ವ, ಪ್ರತಿ ವಾರ ಮೂರ್ನಾಲ್ಕು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯಬೇಕು. ಕಲಾವಿದನಾಗಿ ತಾಳಮದ್ದಳೆ ಅರ್ಥಧಾರಿಯಾಗಿ ಹಾಗೂ ವೇಷಧಾರಿಯಾಗಿಯೂ ಭಾಗವಹಿಸಬೇಕು. ಬಹುಶಃ ಇದು ನಾ. ಕಾರಂತರಿಗೆ ಮಾತ್ರ ಸಾಧ್ಯ. ಸದಾ ಕ್ರಿಯಾಶೀಲ ವ್ಯಕ್ತಿತ್ವ. ಜೊತೆಗೆ ಹಸನ್ಮುಖಿ. ಅವರ ಈ ಪುಸ್ತಕದ ಹೆಸರೇ ಸೂಚಿಸುವಂತೆ ಸಾರಸ್ವತ ಲೋಕಕ್ಕೊಂದು ಅಡ್ಡಿಗೆಯೇ ಆಗಲಿ
ಪ್ರತಿ ವಾರ ಪ್ರಜಾವಾಣಿಯಲ್ಲಿ ಬರೆದ ಅಂಕಣ ಬರಹಗಳನ್ನು ಈ ‘ಅಡ್ಡಿಗೆ’ಯಲ್ಲಿ ಮುತ್ತುಗಳಂತೆ ಪೋಣಿಸಿದ್ದಾರೆ.
ಈ ಕೊರಳಹಾರದಲ್ಲಿದ್ದ ಅಷ್ಟೂ ಮುತ್ತುಗಳು ಸೌಂದರ್ಯದಲ್ಲಿ ಒಂದಕ್ಕಿಂತ ಒಂದು ಮಿಗಿಲೆನಿಸುವಂತಿದೆ.
ಒಮ್ಮೆ ಓದಲೇ ಬೇಕಾದ ಪುಸ್ತಕ ಮತ್ತೆ ಮತ್ತೆ ಓದಿಸುವಂತಿದೆ.

ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆಯವರ ಬಗ್ಗೆ ವೀಡಿಯೋ 

ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸ್ತುತ ಶ್ರೀ ಜಯಾನಂದ ಸಂಪಾಜೆಯವರ ಯಕ್ಷಜೀವನದ ಯಶೋಗಾಥೆಯ ಬಗ್ಗೆ  ಯಕ್ಷ ಮಂದಾರ ‘ಯು ಟ್ಯೂಬ್’ ಚಾನೆಲ್ ನಲ್ಲಿ ವೀಡಿಯೋ  ಮಾಡಲಾಗಿದೆ. ಬರಹರೂಪದಲ್ಲಿಯೂ ದೃಶ್ಯರೂಪದಲ್ಲಿಯೂ ಅವರ ಬಗ್ಗೆ ಸವಿವರವಾದ ವಿವರಗಳನ್ನು ನೀಡಲಾಗಿದೆ. ನೋಡಿ ಆನಂದಿಸಿ 

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಶ್ರೀ ಎಂ. ದಾಮೋದರ ಶೆಟ್ಟಿ ಮಜಿಬೈಲ್ ಆಯ್ಕೆ

ಕಾಸರಗೋಡು ಜಿಲ್ಲಾ ಬಂಟರ ಸಂಘದ ಗೌರವ ಕಾರ್ಯದರ್ಶಿಯಾಗಿ,ಬಂಟ್ಸ್ ಮಜಿಬೈಲ್ ನ ಸಲಹೆಗಾರರಾಗಿ ಗೌರವ ಮಾರ್ಗದರ್ಶಕರಾಗಿ,ಮಂಜೇಶ್ವರ ಜಯ-ವಿಜಯ ಜೋಡುಕರೆ ಕಂಬಳದ ಮಾಜಿ ಅಧ್ಯಕ್ಷರಾಗಿ,ಬಲ್ಲಂಗುಡೇಲ್ ಶ್ರೀ ಪಾಡಂಗರೇ ಭಗವತಿ ಕ್ಷೇತ್ರದ ಕಳಿಯಾಟ ಸಂದರ್ಭದಲ್ಲಿ ಸತತ ನಲ್ವತೈದು ವರ್ಷದಿಂದ ಸ್ವಂತ ವೆಚ್ಚದಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜನೆ ಹಾಗು ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ನ್ಯಾ. ಎಂ ದಾಮೋದರ ಶೆಟ್ಟಿಯವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಇವರನ್ನು ಹಾಗು ಆಯ್ಕೆ ಮಾಡಿದ ಕರ್ನಾಟಕ ಸರಕಾರದ ಸಚಿವರಾದ ಸಿಟಿ ರವಿ ಯವರನ್ನು ಬಂಟ್ಸ್ ಮಜಿಬೈಲ್ ಸಂಸ್ಥೆ ಅಭಿನಂದನೆ ಸಲ್ಲಿಸಿದೆ. ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಅವರಿಗೆ ಹುಟ್ಟೂರಲ್ಲಿ ವಿಶೇಷವಾಗಿ ಗೌರವ ಅಭಿನಂದನೆಗಳನ್ನು ಸಲ್ಲಿಸಲಾಯಿತು. 

ಪದಯಾನ – ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಕಲಾಯಾನ 

ಶ್ರೀ ಪದ್ಯಾಣ ಗಣಪತಿ ಭಟ್ಟರು ತೆಂಕುತಿಟ್ಟಿನ ಪ್ರಸಿದ್ಧ ಭಾಗವತರುಗಳಲ್ಲೊಬ್ಬರು. ಶ್ರೀ ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು. ಗಾನಗಂಧರ್ವ ಖ್ಯಾತಿಯ ಶ್ರೀಯುತರು ಸುರತ್ಕಲ್ ಮೇಳದಲ್ಲಿ ಅನೇಕ ವರ್ಷಗಳ ವ್ಯವಸಾಯವನ್ನು ಮಾಡಿದವರು. ಪ್ರಸ್ತುತ ಹನುಮಗಿರಿ ಮೇಳದ ಭಾಗವತರು. ಇವರ 60ನೇ ವರ್ಷದ ಸಂದರ್ಭದಲ್ಲಿ ಮಂಗಳೂರು ಪುರಭವನದಲ್ಲಿ ಪದ್ಯಾಣ 60ರ ಸಂಭ್ರಮ ಕಾರ್ಯಕ್ರಮವು ನಡೆದಿತ್ತು. 2016ರಲ್ಲಿ ನಡೆದ ಈ ಕಾರ್ಯಕ್ರಮದ ಶುಭವಸರದಲ್ಲಿ ‘ಪದಯಾನ – ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರ ಯಕ್ಷಯಾನ’ ಎಂಬ ಈ ಕೃತಿಯು ಪ್ರಕಟಗೊಂಡಿತ್ತು. ಇದರ ಪ್ರಕಾಶಕರು ಪದಯಾನ ಅಭಿನಂದನಾ ಸಮಿತಿ. ಲೇಖಕರೂ ಕಲಾವಿದರೂ ಅಡಿಕೆ ಪತ್ರಿಕೆಯ ಸಂಪಾದಕರೂ ಆಗಿರುವ ಶ್ರೀ ನ. ಕಾರಂತ ಪೆರಾಜೆಯವರು ಈ ಪುಸ್ತಕದ ಸಂಪಾದಕರು. ವಾಸುದೇವ ರಂಗಾ ಭಟ್, ರಾಮ ಜೋಯಿಸ ಬೆಳ್ಳಾರೆ, ಶೇಣಿ ಮುರಳಿ ಇವರನ್ನೊಳಗೊಂಡ ಸಂಪಾದಕೀಯ ಸಮಿತಿಯೂ ರೂಪೀಕರಣಗೊಂಡಿತ್ತು.

ಇದು ಒಟ್ಟು ಇನ್ನೂರ ಎಂಬತ್ತನಾಲ್ಕು ಪುಟಗಳ ಪುಸ್ತಕ. ಪದಯಾನ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಕಟೀಲು ದೇವಳದ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಅಸ್ರಣ್ಣರು ‘ಪದಯಾನಕ್ಕೊಂದು ಉಪಕ್ರಮ’ ಎಂಬ ಶೀರ್ಷಿಕೆಯಡಿ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭ ಹಾರೈಸಿರುತ್ತಾರೆ. ಶ್ರೀ ನಾ. ಕಾರಂತ ಪೆರಾಜೆಯವರು ಸಂಪಾದಕೀಯ ಲೇಖನವನ್ನು ಬರೆದಿರುತ್ತಾರೆ. ಕಾರ್ಯದರ್ಶಿ ರಾಮಾ ಜೋಯಿಸರ ಅನಿಸಿಕೆಗಳನ್ನು ‘ನಮನಗಳು’ ಎಂಬ ಶೀರ್ಷಿಕೆಯಡಿ ಓದಬಹುದು. ಎಡನೀರು ಶ್ರೀಗಳ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಅನುಗ್ರಹ ಸಂದೇಶಗಳಿವೆ. ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ನಿತ್ಯಾನಂದ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನ ಶ್ರೀ ಯು. ಗಂಗಾಧರ ಭಟ್ಟರ ಶುಭಾಶಯ ಸಂದೇಶಗಳಿವೆ. ಪದಯಾನ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ಟರು ‘ಬದುಕು ಅರೋಗ್ಯ ಭಾಗ್ಯವಾಗಿರಲಿ’ ಎಂಬ ಲೇಖನದ ಮೂಲಕ ಶುಭ ಹಾರೈಸಿರುತ್ತಾರೆ. ಪದಯಾನ  ಸಮಿತಿಯ ಪದಾಧಿಕಾರಿಗಳ ಬಣ್ಣದ ಚಿತ್ರಗಳಿದ್ದು ಬಳಿಕ ಸಂಪಾದಕ ನಾ. ಕಾರಂತರು ಪದ್ಯಾಣರ ಸಂದರ್ಶನದ ವಿವರಗಳನ್ನು ಅಕ್ಷರ ರೂಪದಲ್ಲಿ ನಿರೂಪಿಸಿ ಓದುಗರಿಗೆ ನೀಡಿರುತ್ತಾರೆ. (ಕ್ರಮ ಸಂಖ್ಯೆ ೧) ಕ್ರಮ ಸಂಖ್ಯೆ ಎರಡರಲ್ಲಿ ಪದ್ಯಾಣ ನಾರಾಯಣ ಭಟ್, ಶೀಲಾ ಗಣಪತಿ ಭಟ್, ಕಾರ್ತಿಕೇಯ ಪದ್ಯಾಣ, ಸ್ವಸ್ತಿಕ್ ಪದ್ಯಾಣ, ಬಿ. ಗೋಪಾಲಕೃಷ್ಣ ಭಟ್ಟ ಇವರುಗಳ ಮನದ ಮಾತುಗಳನ್ನು ನೀಡಲಾಗಿದೆ. ಮೂರನೇ ಕ್ರಮಸಂಖ್ಯೆಯಡಿ ಯು. ಗಂಗಾಧರ ಭಟ್ಟ , ವಿದ್ವಾನ್ ಶ್ರೀ ಹರಿನಾರಾಯಣದಾಸ ಅಸ್ರಣ್ಣ ಡಾ. ಎಂ. ಪ್ರಭಾಕರ ಜೋಶಿ, ಹಿರಣ್ಯ ವೆಂಕಟೇಶ್ವರ ಭಟ್, ವೆಂಕಟ್ರಾಮ ಭಟ್ ಸುಳ್ಯ, ಡಾ. ಚಂದ್ರಶೇಖರ ದಾಮ್ಲೆ, ಪದ್ಯಾಣ ಶಂಕರನಾರಾಯಣ ಭಟ್, ಕೃಷ್ಣಪ್ರಕಾಶ ಉಳಿತ್ತಾಯ, ವಾಸುದೇವ ರಂಗಾ ಭಟ್ಟ, ಉದಯಕುಮಾರ್ ಬೆಟ್ಟ, ಕೆ. ರಾಮ ಜೋಯಿಸ, ಎಂ. ಶಾಂತಾರಾಮ ಕುಡ್ವ, ಪೂಕಳ ಲಕ್ಷ್ಮೀನಾರಾಯಣ ಭಟ್, ಡಾ. ಶ್ರೀಧರ ಭಂಡಾರಿ ಪುತ್ತೂರು, ಎಂ. ಕೆ ರಮೇಶ್ ಆಚಾರ್ಯ, ಶ್ರೀಧರ ಡಿ. ಎಸ್., ಶೇಣಿ ಮುರಳಿ, ಜಬ್ಬಾರ್ ಸಮೋ, ರವಿಚಂದ್ರ ಕನ್ನಡಿಕಟ್ಟೆ, ಕೆ. ಶಿವರಾಮ ಜೋಗಿ, ರಮೇಶ್ ಭಟ್ ಪುತ್ತೂರು, ಸುಬ್ಬನ್ ಕಲ್ಮಡ್ಕ ಎಂಬವರ ಲೇಖನಗಳಿವೆ. ಕ್ರಮ ಸಂಖ್ಯೆ 4ರಡಿಯಲ್ಲಿ ಡಾ. ವಿಶ್ವವಿನೋದ ಬನಾರಿ, ಬಿ. ಪುರುಷೋತ್ತಮ ಪೂಂಜ, ಉಡುವೆಕೋಡಿ ಸುಬ್ಬಪ್ಪಯ್ಯ, ಕೆ. ಗೋವಿಂದ ಭಟ್, ಡಾ. ರಮಾನಂದ ಬನಾರಿ, ಕೊಳ್ಯೂರು ರಾಮಚಂದ್ರ ರಾವ್, ಸೇರಾಜೆ ಸೀತಾರಾಮ ಭಟ್, ಭುಜಬಲಿ ಧರ್ಮಸ್ಥಳ, ದಿವಾಕರ ರೈ ಸಂಪಾಜೆ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರೀ, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ ಸುಣ್ಣಂಬಳ ವಿಶ್ವೇಶ್ವರ ಭಟ್, ಪ್ರಫುಲ್ಲಚಂದ್ರ ನೆಲ್ಯಾಡಿ, ತಾರಾನಾಥ ವರ್ಕಾಡಿ, ಕವಿತಾ ಕಾಮತ್, ಕೃಷ್ಣಪ್ರಕಾಶ ಬಳ್ಳಂಬೆಟ್ಟು, ಡಿ. ಮನೋಹರ ಕುಮಾರ್, ಸುಜಯಾ ಶ್ರೀಕಾಂತ್ ಸೋಮಯಾಜಿ, ಪಾವಂಜೆ ಶಿವರಾಮ ಭಟ್, ಜಿ.ಕೆ. ಭಟ್ ಸೇರಾಜೆ, ಬಿ. ಸೀತಾರಾಮ ತೋಳ್ಪಡಿತ್ತಾಯ, ಎಸ. ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಶಾಂತಾರಾಮ ಕುಡ್ವ, ಕೆ. ವರದರಾಯ ಪೈ, ಸತ್ಯನ್ ದೇರಾಜೆ, ಮಹಾಬಲ ಕಲ್ಮಡ್ಕ, ಕೊಳ್ಯೂರು ನಾರಾಯಣ ಭಟ್, ಕೆ. ಕೃಷ್ಣ ಮಧ್ಯಸ್ಥ, ಎಂ. ಎಲ್. ಭಟ್, ಪ್ರಭಾಕರ ಭಟ್ ಅಮೇರಿಕಾ, ತೋಡುಗುಳಿ ಮಹಾಬಲೇಶ್ವರ ಭಟ್, ಪ್ರೊ| ಅಮೃತ ಸೋಮೇಶ್ವರ, ಕಟೀಲು ಸಿತ್ಲ ರಂಗನಾಥ ರಾವ್, ಸದಾಶಿವ ರಾವ್ ನೆಲ್ಲಿಮಾರು, ರಾಜಕುಮಾರ್ ಪೈವಳಿಕೆ, ಡಾ. ಪಾದೆಕಲ್ಲು ವಿಷ್ಣು ಭಟ್ಟರ ಲೇಖನಗಳಿವೆ. ಶ್ರೀ ಅನಂತ ಆರ್. ಪೈ ವಿರಚಿತ ರಾಜಾಯಯಾತಿ ಪ್ರಸಂಗವನ್ನು ಕಥಾ ಸಾರಾಂಶ ಮತ್ತು ಪಾತ್ರ ಪರಿಚಯದೊಂದಿಗೆ ನೀಡಲಾಗಿದೆ. ಕೊನೆಯಲ್ಲಿ ಪದ್ಯಾಣ ಸಂಮಾನ ಸಮಿತಿಯ ಮಹನೀಯರುಗಳ ಹೆಸರನ್ನೂ ನೀಡಲಾಗಿದೆ. ಅಲ್ಲದೆ ಅನೇಕ ಸುಂದರವಾದ ಬಣ್ಣದ ಮತ್ತು ಕಪ್ಪು ಬಿಳುಪಿನ ಚಿತ್ರಗಳನ್ನು ಒಳಗೊಂಡ ಪುಸ್ತಕ ಇದು. 

ಎಡನೀರು ಶ್ರೀಗಳವರಿಗೆ ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ

ಪರಮಾತ್ಮನಲ್ಲಿ ಐಕ್ಯರಾದ ಎಡನೀರು ಮಠಾಧೀಶರಾದ ಶ್ರೀಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರಿಗೆ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ ಸಮರ್ಪಿಸಿ ಅವರ ದಿವ್ಯಾತ್ಮಕ್ಕೆ ಚಿರ ಶಾಂತಿ ದೊರೆಯುವಂತೆ ಪ್ರಾರ್ಥಿಸಲಾಯಿತು.ಕೋವಿದ್ 19 ರ ಮಾನದಂಡಗಳನ್ನು ಪಾಲಿಸಿಕೊಂಡು ಸಭೆ ಜರಗಿಸಲಾಯಿತು. ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಹಿರಿಯ ಯಕ್ಷಗಾನ ಭಾಗವತ ಶ್ರೀ ಹೊಸಮೂಲೆ ಗಣೇಶ ಭಟ್  ಅವರು ಪಾಲ್ಗೊಂಡರು. ಶ್ರೀ ಸ್ವಾಮೀಜಿಯವರ ಪೂರ್ವಾಶ್ರಮದಿಂದಲೇ ಅವರ ಒಡನಾಡಿಯಾಗಿದ್ದು ಶ್ರೀ ಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿದ್ದ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ಟರು ಗುರುಗಳ ಒಡನಾಟವನ್ನು ನೆನಪಿಸುತ್ತಾ, ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ನುಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ, ಉಪಾಧ್ಯಕ್ಷ ರಾಘವೇಂದ್ರ ಭಟ್ ಉಡುಪುಮೂಲೆ, ಸಹಕಾರ್ಯದರ್ಶಿ ಡಾ. ಶಿವಕುಮಾರ್ ಅಡ್ಕ, ಅನುಪಮಾ ರಾಘವೇಂದ್ರ ಉಡುಪುಮೂಲೆ ನುಡಿನಮನಗಳನ್ನು ಅರ್ಪಿಸಿದರು.ಕೋಶಾಧಿಕಾರಿ ಕೃಷ್ಣ ಭಟ್ ಅಡ್ಕ ಸ್ವಾಗತಿಸಿ ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಸುಮತಿ ಗೋಪಾಲಕೃಷ್ಣ ಭಟ್ ಅಡ್ಕ, ಪ್ರೇಮಲತಾ ಕೃಷ್ಣ ಭಟ್ ಅಡ್ಕ, ಅನಿರುದ್ಧ ವಾಸಿಷ್ಠ ಶರ್ಮಾ ಉಡುಪುಮೂಲೆ, ಶ್ರೀರಾಮ ಅಡ್ಕ, ಕೃಷ್ಣಕುಮಾರ ಅಡ್ಕ ಉಪಸ್ಥಿತರಿದ್ದರು

  • ಯಕ್ಷತೂಣೀರ ಸಂಪ್ರತಿಷ್ಠಾನ