Sunday, January 19, 2025
Home Blog Page 372

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್

ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ. ಅದು ಹೃದಯ ಶ್ರೀಮಂತಿಕೆಯನ್ನು ಕೊಡುತ್ತದೆ. ಆರ್ಥಿಕ ದುರ್ಬಲರಾದವರ ಮಟ್ಟಕ್ಕೆ ಇಳಿದು ಅವರನ್ನು ಮೇಲೆತ್ತಿ ಸಬಲರನ್ನಾಗಿಸುವುದು ಹೃದಯಕ್ಕೆ ಒಂದು ಒಳ್ಳೆಯ ವ್ಯಾಯಾಮವಿದ್ದ ಹಾಗೆ. ಮನುಷ್ಯ ಮನೆ ಮನೆಯಲ್ಲೂ ಜನಿಸುತ್ತಾನೆ. ಆದರೆ ಮನುಷ್ಯತ್ವ ಎಂಬುದು ಎಲ್ಲರಲ್ಲಿಯೂ ಇರಬೇಕೆಂದೇನೂ ಇಲ್ಲ. ಆದರೆ ಹೃದಯ ಶ್ರೀಮಂತಿಕೆಯನ್ನು ಹೊಂದಿದ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಇದಕ್ಕೆಲ್ಲಾ ಜೀವಂತ ನಿದರ್ಶನರಾಗಿ ದುರ್ಬಲ ಕಲಾವಿದರ ಭವಿಷ್ಯದ ಆಶಾಕಿರಣವಾಗಿ ಗೋಚರಿಸುತ್ತಾರೆ. ಯಕ್ಷಗಾನ ಕಲೆಯನ್ನು ದೇವರಂತೆ ಪೂಜಿಸುವವರು, ಕಲೋಪಾಸಕರು, ಕಲಾಪೋಷಕರು, ದಾನಿಗಳು, ಕಲಾವಿದರೆಂದರೆ ಜೀವಬಿಡುವ ಅಭಿಮಾನಿಗಳು, ಸಹಾಯಹಸ್ತ ನೀಡುವ ಮಹನೀಯರು ನಮ್ಮ ನಡುವೆ ಹಲವಾರು ಮಂದಿ ಇರಬಹುದು. ಆದರೆ ಓರ್ವ ಕಲಾವಿದರಾಗಿ, ಅಶಕ್ತ ಕಲಾವಿದರನ್ನು ಆಧರಿಸುವ ಕೆಲಸ ಮಾಡಿದವರು ಅಪರೂಪ. ಅದೂ ಅಗಾಧ ಸಂಖ್ಯೆಯಲ್ಲಿ ಹಾಗೂ ದೊಡ್ಡ ದೊಡ್ಡ ಮೊತ್ತದಲ್ಲಿ ಹಲವು ಕೊಡುಗೆಗಳನ್ನು ನೀಡುವ ಮೂಲಕ.
ಹೌದು. ನಾವೀಗ ಯಕ್ಷಗಾನದ ಕಲಾ ಪ್ರಪಂಚದ ಏಳುಬೀಳುಗಳನ್ನು ದಾಟಿ ಒಂದು ಸುಸ್ಥಿರ ಕಲಾಪಯಣದ ಕಾಲಘಟ್ಟದಲ್ಲಿ ವಿಹರಿಸುತ್ತಿದ್ದೇವೆ. ಹಿಂದಿನ ಕಲಾವಿದರ ಬದುಕು, ಬವಣೆಗಳು ಈಗಿನ ಕಲಾವಿದರಿಗೆ ಇಲ್ಲ. ಆದರೆ ಈ ಉನ್ನತಿಗೆ ಅಡಿಪಾಯವನ್ನು ಹಾಕಿಕೊಟ್ಟ ಹಿರಿಯ ಕಲಾವಿದರು ಹರಿಸಿದ ಬೆವರಿನ ಬವಣೆ ಇನ್ನೂ ಮಾಸಿಹೋಗಿಲ್ಲ. ಅವರು ಹಾಕಿಕೊಟ್ಟ ಭದ್ರ ಅಡಿಪಾಯದ ಭವನದಲ್ಲಿ ನಾವು ವಾಸ ಮಾಡುತ್ತಿದ್ದೇವೆ. ಅಂತಹಾ ಹಿರಿಯ ಬಡ, ಅಶಕ್ತ ಕಲಾವಿದರು ಮೇಳಗಳಲ್ಲಿ ಈಗಲೂ ದುಡಿಯುತ್ತಿದ್ದಾರೆ. ಅಂತಹಾ ಬಡ, ಅಶಕ್ತ ಕಲಾವಿದರಿಗೆ ಆಸರೆಯಾಗಿ ನಿಂತವರೇ ಪಟ್ಲ ಸತೀಶ್ ಶೆಟ್ಟಿ, ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು’ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಹಲವಾರು ಕಲಾವಿದರಿಗೆ ಬದುಕಿನ ಬೆಳಕಿನತ್ತ ನಡೆಯುವ ದಾರಿಯನ್ನು ತೋರಿಸಿ ಕೊಟ್ಟಿದ್ದಾರೆ. ಅಂಧಕಾರದ, ಕಷ್ಟದ ಜೀವನದಲ್ಲಿ ತುಸುವಾದರೂ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದಿನ ಮಾತು. ಆಗ ಪಟ್ಲ ಸತೀಶ್ ಶೆಟ್ಟಿ ಎಂದೊಡನೆ ನನಗೆ ನೆನಪಾಗುತ್ತಿದ್ದುದು ಯಕ್ಷಗಾನದ ಭಾಗವತಿಕೆಯ ವಿಶಿಷ್ಟ ಶೈಲಿಯ ಗಾಯನ, ಸ್ವರ ಏರಿಳಿತಗಳಿಂದ ತನ್ನದೇ ಆದ ಹೇರಳ ಅಭಿಮಾನಿಗಳ ಪ್ರಭಾವಲಯವನ್ನು ಸೃಷ್ಟಿಸಿಕೊಂಡ ಭಾಗವತಿಕೆಯ ಝಲಕ್. ಬರಬರುತ್ತಾ ಯಕ್ಷಪ್ರಿಯರನ್ನು ಹುಚ್ಚೆಬ್ಬಿಸಿದ ‘ಪಟ್ಲ’ ಭಾಗವತಿಕೆಯು ತನ್ನ ಸ್ವರದ ಆಳ, ಅಗಲಗಳನ್ನು ಮತ್ತೂ ವಿಸ್ತಾರಗೊಳಿಸಿತು. ತನ್ನ ಎಳೆಯ ವಯಸ್ಸಿನಲ್ಲೇ ಭಾಗವತಿಕೆಯ ಹಿಡಿತ ಮತ್ತು ಲಯವನ್ನು ಕಂಡುಕೊಂಡ ಪಟ್ಲರು ತನ್ನ ಸ್ವರಮಾಧುರ್ಯದಿಂದ ಬಹುಬೇಗ ಪ್ರಸಿದ್ಧಿಗೆ ಬಂದ ಭಾಗವತರಾಗಿದ್ದಾರೆ. ವರ್ತಮಾನ ಕಾಲ ಘಟ್ಟದಲ್ಲಿ ಯಕ್ಷಗಾನದ ಅತ್ಯಂತ ‘Busy man’ ಎಂದು ಕರೆಯಲ್ಪಡುವ ಸತೀಶ್ ಶೆಟ್ಟಿಯವರು ಜನಪ್ರಿಯರಾಗುತ್ತಿದ್ದಂತೆ ಮನಸ್ಸಿನಲ್ಲಿ ಹತ್ತು ಹಲವು ಆಲೋಚನೆಗಳು ಬಂದುಹೋಗ ತೊಡಗಿದುವು. ಬಹುಬೇಗ ಕೀರ್ತಿಶಿಖರದ ಉತ್ತುಂಗಕ್ಕೆ ಏರುತ್ತಿರುವ ಅವರಿಗೆ ಯಕ್ಷಗಾನ ರಂಗದಲ್ಲಿರುವ ಅಸಮತೋಲನ, ಕಲಾವಿದರ ಬವಣೆಯ ಬದುಕುಗಳ ಬಗ್ಗೆ ಅತೀವ ಕಾಳಜಿಯುಂಟಾಯಿತು. ಆ ದೂರದೃಷ್ಟಿ, ಚಿಂತನೆಯ ಫಲವೇ ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು’ ಎಂಬ ಸಂಸ್ಥೆಯ ಹುಟ್ಟಿಗೆ ಹೇತುವಾಯಿತು. ಈ ಸಂಸ್ಥೆಯ ಕಾರ್ಯ ವೈಖರಿಯನ್ನು ತಿಳಿಯುವ ಮೊದಲು ಪಟ್ಲ ಸತೀಶ್ ಶೆಟ್ಟಿಯವರು ಹೇಗೆ ಸದಾಕಾಲ ಕಾರ್ಯ ಚಟುವಟಿಕೆಯಲ್ಲಿರುವ ವ್ಯಕ್ತಿ ಎಂದು ತಿಳಿದುಕೊಳ್ಳೋಣ.


ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಾರ್ಯ ಬಾಹುಳ್ಯದ ಒತ್ತಡವಿದ್ದಾಗಲೂ ಪ್ರತಿನಿತ್ಯದ ಮೇಳದ ಭಾಗವತಿಕೆಯ ಕರ್ತವ್ಯವನ್ನು ನಿಭಾಯಿಸುತ್ತಾರೆ. ಟ್ರಸ್ಟ್ ಗೆ 35ಕ್ಕೂ ಮಿಕ್ಕಿ ಪ್ರಾದೇಶಿಕ ಘಟಕಗಳಿವೆ. ಅವುಗಳ ಕಾರ್ಯ ನಿರ್ವಹಣೆಯ ಮೇಲುಸ್ತುವಾರಿ ಮತ್ತು ನಿರ್ದೇಶನವನ್ನು ಮಾಡಬೇಕು.
ಪಟ್ಲ ಸತೀಶ್ ಶೆಟ್ಟಿಯವರು ಅತಿ ದೊಡ್ಡ ಸಂಘಟನಾ ಚತುರ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲದಿದ್ದರೆ ಇಷ್ಟು ಬೃಹತ್ ಅದರಲ್ಲೂ 35ಕ್ಕೂ ಮಿಕ್ಕಿ ಪ್ರಾದೇಶಿಕ ಘಟಕಗಳಿರುವ ಸಂಸ್ಥೆಯನ್ನು ಕಟ್ಟಿ ಬೆಳೆಸಿ ನಡೆಸುವುದಕ್ಕೆ ಸಾಧ್ಯವೇ? ಪಟ್ಲರ ಈ ಶ್ರಮದ ಹಿಂದೆ ಹಲವಾರು ಕಾಣದ ಕೈಗಳಿವೆ. ಹಲವಾರು ದಾನಿಗಳಿದ್ದಾರೆ. ಸಮಾಜದ ಪ್ರತಿಷ್ಠಿತ ಮಹಾನುಭಾವರ ಸಹಕಾರಗಳಿವೆ ಎಂದು ಪಟ್ಲರು ವಿನೀತರಾಗಿ ನುಡಿಯುತ್ತಾರೆ. ಎಲ್ಲಕ್ಕೂ ಹೆಚ್ಚು ಸೇವಾ ಮನೋಭಾವದ ಕಾರ್ಯಕರ್ತರ ತಂಡವೇ ಪಟ್ಲರ ಕಾರ್ಯಗಳಿಗೆ ಹೆಗಲುಕೊಟ್ಟು ಸಹಕರಿಸುತ್ತಾರೆ ಎಂಬುದನ್ನು ಪಟ್ಲರು ಕೃತಜ್ಞತೆಯಿಂದ ಹೇಳುತ್ತಾರೆ.
ಈ ಎಲ್ಲ ಕಾರಣಗಳಿಂದಲೂ ರಾತ್ರಿಯ ಮೇಳದ ಆಟಕ್ಕಿಂತಲೂ ಪಟ್ಲ ಸತೀಶ್ ಶೆಟ್ಟಿಯವರಿಗೆ ಹಗಲಿನ ಕಾರ್ಯಕ್ರಮಗಳಿಗೆ ಭಾರೀ ಬೇಡಿಕೆಯಿದೆ. ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ದಾನಿಗಳು, ಅಭಿಮಾನಿಗಳು ಕರೆದ ಕಾರ್ಯಕ್ರಮಗಳಲ್ಲಿ ತಪ್ಪದೆ ಸಂತೋಷದಿಂದಲೇ ಭಾಗವಹಿಸುವ ಇವರಿಗೆ ವಿಶ್ರಾಂತಿ ಬಹಳ ಕಡಿಮೆ. ಗಾನವೈಭವ, ನೃತ್ಯವೈಭವ, ಟ್ರಸ್ಟ್ ನ ವಾರ್ಷಿಕೋತ್ಸವ ಮತ್ತು ಉದ್ಘಾಟನೆಗಳು, ಅಭಿಮಾನೀ ಮತ್ತು ಸ್ನೇಹಿತರ ವಲಯದ ಖಾಸಗಿ ಸಮಾರಂಭಗಳು ಮತ್ತು ಇತರ ಯಕ್ಷಗಾನ ಕಾರ್ಯಕ್ರಮಗಳು, ವಿದೇಶ ಪ್ರವಾಸ ಮತ್ತು ದೂರದೂರುಗಳಿಗೆ ಪ್ರದರ್ಶನ ನಿಮಿತ್ತದ ಪ್ರವಾಸಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳಿಂದ ಸದಾ ಚಟುವಟಿಕೆಯಲ್ಲಿರುವ ಪಟ್ಲ ಸತೀಶ್ ಶೆಟ್ಟಿಯವರು ಒಂದಿಷ್ಟೂ ಒತ್ತಡವಿಲ್ಲದೆ ಎಲ್ಲವನ್ನೂ ನಗುಮುಖದಿಂದಲೇ ನಿಭಾಯಿಸುತ್ತಾರೆ. ಎಲ್ಲಕ್ಕಿಂತಲು ಹೆಚ್ಚಾಗಿ ರಾತ್ರಿಯ ಮೇಳದ ಭಾಗವತಿಕೆ ಮತ್ತು ಪ್ರಯಾಣದ ಅವಧಿಯಲ್ಲಿ ನಿದ್ರೆಗೆ ಅವಕಾಶ ಕಡಿಮೆ. ಹಗಲಿನಲ್ಲಿ ಸ್ವಲ್ಪ ನಿದ್ದೆ, ಕುಟುಂಬದ ಬಗ್ಗೆ ಕಾಳಜಿ, ಟ್ರಸ್ಟ್ ನ ಕೆಲಸಗಳು ಹಾಗೂ ಹಗಲಿನ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುವಿಕೆ ಇತ್ಯಾದಿಗಳನ್ನು ಪಟ್ಲರು ನಿಭಾಯಿಸಬೇಕು. ಆದ್ದರಿಂದಲೇ ಪಟ್ಲ ಸತೀಶ್ ಶೆಟ್ಟಿಯವರು ಒತ್ತಡಗಳ ನಡುವೆಯೂ ಸದಾ ಕ್ರಿಯಾಶೀಲರಾಗಿ  ಗೋಚರಿಸುತ್ತಾರೆ.

ಪಂಡಿತ ಪರಂಪರೆಯ ಡಾ. ಪಾದೇಕಲ್ಲು ವಿಷ್ಣು ಭಟ್ಟ 

ಸಾಹಿತ್ಯ ಕ್ಷೇತ್ರವೇ ಇರಲಿ, ಭಾಷಾ ತೊಡಕುಗಳೇ ಇರಲಿ, ವೇದ ಸಂಬಂಧಿ ಜಿಜ್ಞಾಸೆಗಳೇ ಇರಲಿ, ತುಳು, ಕನ್ನಡ, ಸಂಸ್ಕೃತ ಭಾಷೆಯ ಶಬ್ದಕೋಶಗಳ ಬಗ್ಗೆ ಬಂದ ಸಂಶಯ, ಜಿಜ್ಞಾಸೆಗಳೇ ಇರಲಿ, ನಮಗೆ ಮೊದಲು ನೆನಪಾಗುವುದು ಅವರೇ. ಇಂತಹಾ ಯಾವುದೇ ಸಮಸ್ಯೆಗಳಿಗೆ, ಪ್ರಶ್ನೆಗಳಿಗೆ ಕ್ಷಣಾರ್ಧದಲ್ಲಿ ಉತ್ತರ ಡಾ. ಪಾದೆಕಲ್ಲು ವಿಷ್ಣು ಭಟ್ಟರ ಬಳಿ ಇದೆ. ಜಿಜ್ಞಾಸುವಿನ ಪ್ರಶ್ನೆಗಳಿಗೆ ಪಂಡಿತನ ಬಳಿ ಉತ್ತರವಿದೆ. ಅಂತಹ ಪಂಡಿತ ಪರಂಪರೆಯ ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ಟರ ಕುರಿತಾಗಿ ಕನ್ನಡ ಸಂಘ ಕಾಂತವರದವರು ಪ್ರಕಟಿಸಿದ ಹಾಗೂ ಡಾ ಎಸ್. ಆರ್. ಅರುಣ ಕುಮಾರ್ ಬರೆದ ಪುಸ್ತಕವೇ ‘ಪಂಡಿತ ಪರಂಪರೆಯ ಡಾ. ಪಾದೇಕಲ್ಲು ವಿಷ್ಣು ಭಟ್ಟ’. 

ಪುಸ್ತಕದಲ್ಲಿ ಪಾದೇಕಲ್ಲು ವಿಷ್ಣು ಭಟ್ಟರ ಬಗ್ಗೆ ಸವಿವರವಾದ ಚಿತ್ರಣ ಇದೆ. ಅವರು ತಮ್ಮ ಕಾಲೇಜು ದಿನಗಳಿಂದಲೂ ಸದಾ ಅಧ್ಯನಯನಶೀಲತೆಯನ್ನು ಮೈಗೂಡಿಸಿಕೊಂಡದ್ದು, ಹೆಚ್ಚಾಗಿ ಬಿಳಿ ಪಂಚೆಯಲ್ಲಿ, ಬಿಳಿಯಂಗಿಯಲ್ಲಿ ಕಾಣಿಸಿಕೊಳ್ಳುವ ವಿಷ್ಣು ಭಟ್ಟರ ಸರಳತನ, ತಮ್ಮ ಮೂಲ ಮನೆ ಪಾದೇಕಲ್ಲಿನಿಂದ ಉಡುಪಿ ಜಿಲ್ಲೆಯ ಆತ್ರಾಡಿಯಲ್ಲಿ ನೆಲೆಸಿದ ಕಥೆ, ಬಾಲ್ಯದಿಂದಲೇ ಕನ್ನಡ, ತುಳು, ಸಂಸ್ಕೃತ ಭಾಷೆಗಳಲ್ಲಿ ಅವರಿಗೆ ಇದ್ದ ಆಸಕ್ತಿ ಮತ್ತು ಪ್ರಭುತ್ವ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಅವರ ಶಿಕ್ಷಣದ ದಿನಗಳು, ಪಿತೃವಾಕ್ಯ ಪರಿಪಾಲಕ ವಿಷ್ಣು ಭಟ್ಟರು, ಬಿಳಿ ಪಂಚೆ ಅಂಗಿಯುಡುಗೆಯಲ್ಲಿ  ಎಂ. ಎ. ಪದವಿ ಪ್ರಮಾಣ ಪಾತ್ರ ಸ್ವೀಕರಿಸಿದ ಕುತೂಹಲಕಾರಿ ಸಂದರ್ಭ, ಸರಕಾರೀ ಕಾಲೇಜಿನ ಉದ್ಯೋಗದ ನಂತರ ಆಡಳಿತಾತ್ಮಕ ಪ್ರಾಂಶುಪಾಲ ಹುದ್ದೆಯ ನಿರ್ವಹಣೆ, ಆಮೇಲೆ ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧವನ್ನು ಬರೆದು ಪಿ ಎಚ್ ಡಿ ಪದವಿಯನ್ನು ಪಡೆದದ್ದು ಮೊದಲಾದ ವಿಷ್ಣು ಭಟ್ಟರ ಹತ್ತು ಹಲವು ಹೋರಾಟದ ಸಾಧನೆಯ ಮುಖಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.  ಪಾದೆಕಲ್ಲು ವಿಷ್ಣು ಭಟ್ಟರು ಯಕ್ಷಗಾನದ  ಬಗ್ಗೆಯೇ ಮಹಾಪ್ರಬಂಧವನ್ನು ಬರೆದು ಡಾಕ್ಟರೇಟ್ ಪದವಿ  ಪಡೆದವರು.

ಹೀಗೆ ಪಾದೇಕಲ್ಲು ಅವರ ಸಾಧನೆಯ ಹಾಗೂ ಸದಾ ಸಂಶೋಧನೆಯ ಕಾಯಕವನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕಷ್ಟಗಳನ್ನು ಎದುರಿಸಿ ಸಾಧನೆಯನ್ನು ಮಾಡುವವರಿಗೆ ಭಟ್ಟರ ಜೀವನ ಚರಿತೆ ಒಂದು ಉತ್ತಮ ಮಾರ್ಗದಶಿ. ಡಾ. ಪಾದೆಕಲ್ಲು ವಿಷ್ಣು ಭಟ್ಟರು ಬರೆದ ಲೇಖನಗಳು, ಪ್ರಕಟವಾದ ಅವರ ಕೃತಿಗಳು, ಅವರ ಸಂಶೋಧನಾನುಭವ, ಸಂಪಾದಿತ ಕೃತಿಗಳು, ಸಹಸಂಪಾದಿತ ಕೃತಿಗಳು, ಅನುವಾದಿತ ಕೃತಿಗಳು, ಗೌರವ, ಪ್ರಶಸ್ತಿ, ಸನ್ಮಾನಗಳ ಬಗ್ಗೆ ವಿವರವಾದ ಮಾಹಿತಿಗಳು ಈ ಪುಸ್ತಕದಲ್ಲಿವೆ. ಯಕ್ಷಗಾನಕ್ಕೂ ವಿಷ್ಣು ಭಟ್ಟರಿಗೂ ಅವಿನಾಭಾವ ಸಂಬಂಧ. ಆ ಬಗ್ಗೆ ಪುಸ್ತಕದಲ್ಲಿ ಸವಿವರ ಕೊಡಲಾಗಿದ್ದು ಸಾಹಿತ್ಯ ಪ್ರಿಯರೆಲ್ಲರೂ ಓದಲೇ ಬೇಕಾದ ಪುಸ್ತಕ ಹಾಗೂ ಕನ್ನಡ ಸಾರಸ್ವತ ಲೋಕಕ್ಕೆ ಇದೊಂದು ಉತ್ತಮ ಕೊಡುಗೆ. 

ಮಧುಸೂದನ ಅಲೆವೂರಾಯ – ಕಲಾವಿದನ ಕಲಾಪ್ರಸರಣ  (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಶ್ – ಭಾಗ 2)

ಕಳೆದ ಬಾರಿ ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಶ್ – ಭಾಗ 1ರಲ್ಲಿ ಕೋಂಗೋಟ್ ದಂಪತಿಗಳ ಬಗ್ಗೆ ಬರೆದಿದ್ದೆ.  ಕಲೆಯನ್ನು ತಮ್ಮ ಕರ್ತೃತ್ವ ಶಕ್ತಿಯಿಂದ ಪ್ರಸಾರಣಗೊಳಿಸುವ ಹಲವಾರು ಮಂದಿಗಳು ನಮ್ಮ ನಡುವೆ ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಾ ಇದ್ದಾರೆ. ಅಂತಹಾ ಹಲವು ಮಹನೀಯರು ನಮ್ಮ ನಡುವೆ ಇದ್ದಾರೆ ಎಂದು ಹೇಳಿದ್ದೆ. ಅವರಲ್ಲಿ ಮಧುಸೂದನ ಅಲೆವೂರಾಯರ ಹೆಸರು ಅಗ್ರಪಂಕ್ತಿಯಲ್ಲಿದೆ. ಆದುದರಿಂದ  ಕಲೆ ಬೆಳಗಿಸಿದ ಕ್ಯಾಮೆರಾ  ಫ್ಲ್ಯಾಶ್ – ಭಾಗ 2 ರಲ್ಲಿ ಮಧುಸೂದನ ಅಲೆವೂರಾಯರ ಬಗ್ಗೆ ಹೇಳಲೇ ಬೇಕು.

ಅಲೆವೂರಾಯರ ಹೆಸರನ್ನು ಕೇಳದವರಾರು? ಸಾಧಾರಣವಾಗಿ ಯಕ್ಷಪ್ರೇಮಿಗಳೆಲ್ಲರೂ ಕೇಳಿಯೇ ಇರುತ್ತೀರಿ. ಅವರ ಯಕ್ಷಗಾನದ ನಂಟು ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದಲೂ ಛಾಯಾಗ್ರಾಹಕರಾಗಿದ್ದುಕೊಂಡು ಕಲಾವಿದರೂ ಆಗಿ ಯಕ್ಷ ಕೈಂಕರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮಂಗಳೂರಿನಂತಹಾ ಸಾಂಸ್ಕೃತಿಕ ಲೋಕ ಅನಾವರಣಗೊಳ್ಳುವ ನಗರವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ತಾನು ಸ್ವತಃ ಹಿಮ್ಮೇಳ ಕಲಾವಿದನಾಗಿ ಕಲಾಪ್ರದರ್ಶನಗಳಲ್ಲಿ ಭಾಗವಹಿಸುತ್ತಿರುವುದರ ಜೊತೆಯಲ್ಲಿಯೇ ಯಕ್ಷಗಾನ ಪ್ರದರ್ಶನಗಳ ಛಾಯಾಗ್ರಹಣವನ್ನೂ, ದಾಖಲೀಕರಣದ ಕಾರ್ಯವನ್ನೂ ಒಂದು ಉತ್ತಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.

ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದ ಮಧುಸೂದನ ಅಲೆವೂರಾಯರ ಮಡದಿ ಜಯಲಕ್ಷ್ಮಿ ಗೃಹಿಣಿ.  ಮಕ್ಕಳಾದ ಆದಿತ್ಯ ಮತ್ತು ಅಪೂರ್ವ ಇಬ್ಬರೂ ಇಂಜಿನೀರಿಂಗ್ ಓದುತ್ತಿದ್ದಾರೆ.  ಇಬ್ಬರು ಮಕ್ಕಳೂ 10 ವರ್ಷಗಳ ಕಾಲ ವೇಷಧಾರಿಗಳಾಗಿ ಕಲಾಸೇವೆಗೈದಿದ್ದಾರೆ.  ಈಗ ಉನ್ನತ ವ್ಯಾಸಾಂಗ ಮಾಡುತ್ತಿರುವ ಕಾರಣದಿಂದ ಯಕ್ಷಗಾನದಿಂದ ಸ್ವಲ್ಪ ಸಮಯದ ವರೆಗೆ ದೂರ ಉಳಿದಿದ್ದಾರೆ. ಅಲೆವೂರಾಯರ ತಂದೆ ಲಕ್ಷ್ಮೀನಾರಾಯಣ ಅಲೆವೂರಾಯರು ಯಕ್ಷಗಾನ ವೇಷಧಾರಿ. ಕುತೂಹಲಕಾರಿ ಸಂಗತಿಯೆಂದರೆ ಕೈ ಬರಹದ ಮತ್ತು ತಾಳೆಗರಿಯ ಅನೇಕ ಪ್ರಸಂಗಗಳು ಅವರ ಸಂಗ್ರಹದಲ್ಲಿ ಇದ್ದವು. “ಆಗ ನಮಗೆ ಅದರ ಮಹತ್ವ ತಿಳಿಯದ ಕಾರಣ ಅವರ ನಿಧನಾ ನಂತರ ಅವುಗಳೆಲ್ಲಾ ನಾಶವಾದುವು.1994ರಲ್ಲಿ ಅವರು ನಿಧನರಾದರು. ಅವರ ನೆನಪಿನಲ್ಲಿ  ಪ್ರತಿ ವರ್ಷ ಒಬ್ಬರು ಕಲಾವಿದರನ್ನು ಸನ್ಮಾನಿಸುತ್ತೇವೆ ಈ ವರ್ಷ  ಭಾಗವತ ಹರೀಶ್ ಶೆಟ್ಟಿ ಸೂಡರನ್ನು ಸನ್ಮಾನಿಸಿದ್ದೇವೆ.” ಎಂದು ಮಧುಸೂದನ ಅಲೆವೂರಾಯರು ಹೇಳುತ್ತಾರೆ.  ಇವರು ಅಧ್ಯಕ್ಷನಾಗಿರುವ ಸರಯೂ ಬಾಲ ಯಕ್ಷ ವೃಂದವು ಸುಮಾರು 9 ವರ್ಷಗಳಿಂದ ವೃತ್ತಿ ಕಲಾವಿದರನ್ನು ಒಟ್ಟುಗೂಡಿಸಿ ಪ್ರತಿ ವರ್ಷ ಬಯಲಾಟ ಸಪ್ತಾಹವನ್ನುನಡೆಸಿಕೊಂಡು ಬರುತ್ತಿದೆ ಮತ್ತು ಅದರಲ್ಲಿ ನೂರಾರು ಕಲಾವಿದರನ್ನು ಸನ್ಮಾನಿಸಿದ್ದಾರೆ. ಯಕ್ಷಗಾನ ಭರತನಾಟ್ಯ, ಪ್ರಸಾಧನದವರು, ಸಂಘಟಕರು, ಅಂಧ ಕಲಾವಿದರು ಹೀಗೆ  ಒಂದು ಸಪ್ತಾಹದಲ್ಲಿ 10 ರಿಂದ 12 ಕಲಾವಿದರನ್ನು ಸನ್ಮಾನಿಸುತ್ತಾರೆ. ಈ ಸಾಲಿನಲ್ಲಿ ಕೋರೋನಾ ಬಾಧೆಯಿಂದ ಇರುವ ನೀತಿ ನಿಯಮಾವಳಿಗಳಿಂದಾಗಿ ಸಪ್ತಾಹ ಸಾಧ್ಯವಾಗಲಿಲ್ಲ. ಆದರೂ ಅವಕಾಶ ಸಿಕ್ಕಿದಂತೆ ಕಾರ್ಯಕ್ರಮ ಸಂಯೋಜಿಸಿ ಈ ತಿಂಗಳಿನಲ್ಲಿ 5 ಜನ ಹವ್ಯಾಸಿ ಕಲಾವಿದರನ್ನು ಅಲೆವೂರಾಯರ ಸಾರಥ್ಯದ ಸರಯೂ ಯಕ್ಷ ಬಾಲವೃಂದ ಸನ್ಮಾನಿಸಿದೆ.   

ಅವರ ಛಾಯಾಗ್ರಹಣದಲ್ಲಿ ಅರಳಿದ ಹಲವಾರು ಚಿತ್ರಕುಸುಮಗಳು ಇಂದು ಸಾಮಾಜಿಕ ಜಾಲತಾಣದಲ್ಲಿಯೂ ವಿವಿಧ ಪತ್ರಿಕೆಗಳು, ಕೃತಿ, ಪುಸ್ತಕಗಳಲ್ಲಿಯೂ ಬೆಳಕು ಕಂಡಿದೆ. ಅವರು ಚಿತ್ರೀಕರಿಸಿದ ಹಲವಾರು ಯಕ್ಷಗಾನ ದೃಶ್ಯಗಳು ಇಂದು ಸಾಮಾಜಿಕ ಜಾಲತಾಣಗಳಾದ ಯು ಟ್ಯೂಬ್, ಫೇಸುಬುಕ್ ಮೊದಲಾದವುಗಳಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿವೆ. ಇವರ ಯು ಟ್ಯೂಬ್ ಚಾನೆಲ್  ದೇಶ ವಿದೇಶಗಳಲ್ಲಿ ನೆಲೆಸಿದ ಲಕ್ಷಾಂತರ ಮಂದಿ ವೀಕ್ಷಕರನ್ನು ಹೊಂದಿದೆ. ಯು ಟ್ಯೂಬ್ ನಲ್ಲಿ Madhusudana Alewooraya ಎಂಬ ಹೆಸರಿನಲ್ಲಿರುವ ಈ ಚಾನೆಲ್ ಈ ವರೆಗೆ ಸುಮಾರು 27400ಕ್ಕೂ ಹೆಚ್ಚು Subscribers ನ್ನು ಹೊಂದಿದೆ. ಇದರಲ್ಲಿ ಸುಮಾರು 5459 ವೀಡಿಯೋಗಳಿವೆ. ಮಧುಸೂದನ ಅಲೆವೂರಾಯರ ವಿಶಷ್ಟತೆಯೊಂದನ್ನು ಇಲ್ಲಿ ಹೇಳಲೇ ಬೇಕು. ಅವರ ಸಂಗ್ರಹದಲ್ಲಿ ಬಹಳಷ್ಟು ಅಪರೂಪ ಸಂಗ್ರಹಗಳಿವೆ. ಕೆಲವೊಂದು ಯಕ್ಷಗಾನದ Antique ಪ್ರದರ್ಶನಗಳ ದೃಶ್ಯಾವಳಿಗಳು ಅವರ ಸಂಗ್ರಹದಲ್ಲಿ ಇವೆ. ಅದರಲ್ಲಿ ಹೆಚ್ಚಿನದನ್ನು ಅಪ್ಲೋಡ್ ಮಾಡಿದ್ದಾರೆ. ಅಪ್ಲೋಡ್ ಮಾಡದೇ ಇರುವ ಇನ್ನೂ ಕೆಲವು ಅವರ ಸಂಗ್ರಹದಲ್ಲಿ ಇರಬಹುದೆಂದು ನನ್ನ ಊಹೆ.

ಕೆಲವೊಂದು ಈಗ ದೊರಕಲು ದುರ್ಲಭವಿರುವ, ಕಷ್ಟಸಾಧ್ಯವಾದ ವೀಡಿಯೊಗಳು ಮತ್ತು ಕೆಲವೊಂದು ವೈಶಿಷ್ಟ್ಯಪೂರ್ಣವಾದ ವೀಡಿಯೊಗಳು ಅವರ ಚಾನೆಲ್ ನಲ್ಲಿವೆ. ಕಲಾವಿದ ದಂಪತಿಗಳ ವೀಡಿಯೊ, ಅಳಿದುಹೋದ ಕಲಾವಿದರ ಯಕ್ಷಗಾನದ ವೀಡಿಯೊ ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಮಧುಸೂದನ ಅಲೆವೂರಾಯರು ತಾನು ಸ್ವತಃ ಕಲಾವಿದರು. ಆಟಕೂಟಗಳಲ್ಲಿ ಪ್ರದರ್ಶನ ನೀಡುವ ಉತ್ತಮ ಮದ್ದಳೆಗಾರರು. ತಾನು ಕಲಾವಿದರಾಗಿದ್ದುದು ಮಾತ್ರವಲ್ಲ ಯಕ್ಷಗಾನ ಪ್ರಸಾರಕರಾಗಿದ್ದುಕೊಂಡೂ ಕಲಾಸೇವೆಗೈಯುವ ಮಧುಸೂದನ ಅಲೆವೂರಾಯರ ಯು ಟ್ಯೂಬ್ ವೀಡಿಯೋ ಲಿಂಕ್ ಒಂದನ್ನು ಕೆಳಗೆ ಕೊಡಲಾಗಿದೆ. ನೋಡಲೇಬೇಕಾದ ವೀಡಿಯೋ ಇದು. 

ರಸಲೋಕ ದ್ರಷ್ಟಾರ ದೇರಾಜೆ ಸೀತಾರಾಮಯ್ಯ 

‘ರಸಲೋಕ ದ್ರಷ್ಟಾರ’ ಯಕ್ಷಗಾನ ಪ್ರಪಂಚದ ‘ರಸಋಷಿ’ ಎಂದೇ ಖ್ಯಾತರಾದ ಶ್ರೀ ದೇರಾಜೆ ಸೀತಾರಾಮಯ್ಯ ಅವರ ಕುರಿತಾದ ಹೊತ್ತಗೆಯಿದು. ಈ ಪುಸ್ತಕವು ಹಿರಿಯರಾದ ದೇರಾಜೆಯವರ ಬಗೆಗೆ ಸಾಕಷ್ಟು ಮಾಹಿತಿಗಳನ್ನು ಹೊಂದಿ ಅತ್ಯುತ್ತಮವಾಗಿ ಮೂಡಿಬಂದಿದೆ. ಯಕ್ಷಗಾನ ಕಲೆಗೆ, ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಶ್ರೀಯುತರ ಕೊಡುಗೆಗಳು ಅನುಪಮವಾದುದು. ಇವರಿಂದ ರಚಿಸಲ್ಪಟ್ಟ ಶ್ರೀರಾಮಚರಿತಾಮೃತಂ ಮತ್ತು ಶ್ರೀಮನ್ಮಹಾಭಾರತ ಕಥಾಮೃತಂ ಎಂಬ ಎರಡು ಕೃತಿಗಳಂತೂ ಮಹಾನ್ ಕೊಡುಗೆಗಳಾಗಿ ಖ್ಯಾತವಾಗಿವೆ. ಕಲಾವಿದರು, ಅಧ್ಯಯನಶೀಲರು, ಸಾಹಿತ್ಯಾಸಕ್ತರು ಮಾಹಿತಿಗಾಗಿ ಈ ಕೃತಿಗಳನ್ನು ಅವಲಂಬಿಸುವುದು ತಿಳಿದಿರುವ ವಿಚಾರ. ಉಪಯೋಗದ ನೆಲೆಯಿಂದಲೇ ಕೃತಿಯ ಮೌಲ್ಯವನ್ನು ತಿಳಿಯಬಹುದು. ಅಲ್ಲದೆ ಕುರುಕ್ಷೇತ್ರಕ್ಕೊಂದು ಆಯೋಗ, ರಾಮರಾಜ್ಯದ ರೂವಾರಿ, ರಾಮರಾಜ್ಯ ಪೂರ್ವರಂಗ, ಯಕ್ಷಗಾನ ವಿವೇಚನ, ಪ್ರಿಯದರ್ಶನಂ, ಧರ್ಮದಾಸಿ, ವಿಚಾರವಲ್ಲರಿ, ಧರ್ಮದರ್ಶನ, ಶೂರ್ಪನಖಿಯ ಸ್ವರಾಜ್ಯ ಮೊದಲಾದ ಕೃತಿಗಳನ್ನು ಶ್ರೀ ದೇರಾಜೆಯವರು ರಚಿಸಿರುತ್ತಾರೆ. ಶ್ರೀಯುತರ ಬಗೆಗೆ ಈ ಹಿಂದೆ ಲೇಖನವೊಂದನ್ನು ಬರೆದಿದ್ದೆ ಎಂಬ ಸಂತೋಷವಿದೆ. ಅವರ ಕುರಿತಾದ ಈ ಹೊತ್ತಗೆಯನ್ನು ಪರಿಚಯಿಸುವುದು ಭಾಗ್ಯವೆಂದು ಭಾವಿಸುತ್ತೇನೆ. 

‘ರಸಲೋಕ ದ್ರಷ್ಟಾರ’ ಎಂಬ ಈ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು. ಇದರ ಪ್ರಧಾನ ಸಂಪಾದಕರು ಶ್ರೀ ಜಿ. ಎಸ್. ಭಟ್ಟ. ಲೇಖಕರು ಶ್ರೀ ಕೆ. ಶ್ರೀಕರ ಭಟ್ ಮುಂಡಾಜೆ. ನೂರಾ ಇಪ್ಪತ್ತನಾಲ್ಕು ಪುಟಗಳಿಂದ ಕೂಡಿದ ಉತ್ತಮವಾದ ಪುಸ್ತಕ. ಪ್ರಕಾಶಕರು ಚೇತನ್ ಬುಕ್ ಹೌಸ್, ಮೈಸೂರು. ಚೇತನ ಸಾಹಿತ್ಯ ಕಲಾಸಾಧಕರು ಮಾಲಿಕೆಯಡಿ ಈ ಹೊತ್ತಗೆಯು ಮುದ್ರಿಸಲ್ಪಟ್ಟಿದೆ. ಈ ಪುಸ್ತಕದಲ್ಲಿ ದೇರಾಜೆಯವರ ವ್ಯಕ್ತಿತ್ವ, ಸಾಧನೆಗಳನ್ನು ತಿಳಿಸುವ ದೇರಾಜೆ ಸೀತಾರಾಮಯ್ಯ ಸೂಕ್ಷ್ಮ ಪರಿಚಯ, ದೇರಾಜೆ ಎನ್ನುವ ವಿದ್ಯಮಾನ, ಶಿವರಾಮ ಕಾರಂತರ ಮೆಚ್ಚಿನ ‘ಯಕ್ಷಗಾನ ರಾಕ್ಷಸ’, ಮಾತು ಕಾವ್ಯವಾಗುವ ಬಗೆ, ಲಕ್ಷ್ಮೀಶ ತೋಳ್ಪಾಡಿ ಕಂಡಂತೆ ದೇರಾಜೆ, ದೇರಾಜೆಯವರ ಪೂರ್ವರಂಗ, ದೇರಾಜೆಯವರನ್ನು ಮೆಚ್ಚಿಕೊಂಡ ಮಹನೀಯರು, ಅಪ್ಪಯ್ಯನೆಂಬ ಬೆರಗು- ದೇರಾಜೆಯವರ ಮಕ್ಕಳು, ದೇರಾಜೆ ಕೃತಿಗಳ ಕುರಿತು, ನಿತ್ಯ ಜೀವನದಲ್ಲೂ ದೇರಾಜೆ ಮಾತಿನ ಸಿಹಿ, ದೇರಾಜೆ ಸಂದರ್ಶನ, ದೇರಾಜೆ ಬಗ್ಗೆ ಮತ್ತಷ್ಟು ಎಂಬ ಲೇಖನಗಳಿವೆ. ಬಳಿಕ ದೇರಾಜೆ ಕೃತಿಗಳ ಸೂಚಿ, ದೇರಾಜೆ ಲೇಖನಗಳ ಸೂಚಿ, ದೇರಾಜೆಯವರ ಕುರಿತು ಕೃತಿಗಳ ಸೂಚಿ, ದೇರಾಜೆ ಜೀವನದ ಪ್ರಮುಖ ಘಟನೆಗಳ ಸೂಚಿ, ದೇರಾಜೆ ಸ್ಮೃತಿಗೌರವ ಪುರಸ್ಕೃತರ ಸೂಚಿ ಎಂಬ ಶೀರ್ಷಿಕೆಯಡಿ ಮಾಹಿತಿಗಳನ್ನು ನೀಡಲಾಗಿದೆ. ಬಳಿಕ ಪ್ರಧಾನ ಸಂಪಾದಕ ಜಿ.ಎಸ್. ಭಟ್ಟರ ಮತ್ತು ಲೇಖಕ ಕೆ. ಶ್ರೀಕರ ಭಟ್ಟರ ವ್ಯಕ್ತಿ ಪರಿಚಯವನ್ನು ನೀಡಲಾಗಿದ್ದು ಹೊತ್ತಗೆಯ ಹೊರ ಆವರಣದಲ್ಲಿ ಪ್ರಧಾನ ಸಂಪಾದಕ ಜಿ.ಎಸ್. ಭಟ್ಟರ ಶುಭ ಹಾರೈಕೆಯ ನುಡಿಗಳನ್ನು ನೀಡಲಾಗಿದೆ. ಹಿರಿಯ ಚೇತನ ದಿ| ದೇರಾಜೆ ಸೀತಾರಾಮಯ್ಯನವರಿಗೆ ಗೌರವಪೂರ್ವಕ ಪ್ರಣಾಮಗಳು. ಈ ಹೊತ್ತಗೆಗೆ ಕಾರಣರಾದ ಎಲ್ಲಾ ಬಂಧುಗಳಿಗೂ ಅಭಿನಂದನೆಗಳು. 

ಒಂದೊಂದು ನದಿಗೂ ಒಂದೊಂದು ಕಥೆ – ತಾರಾನಾಥ ವರ್ಕಾಡಿ

ಶ್ರೀ ತಾರಾನಾಥ ವರ್ಕಾಡಿ ಅವರು ತೆಂಕುತಿಟ್ಟಿನ ಹಿರಿಯ ಕಲಾವಿದರು. ಶ್ರೀ ಧರ್ಮಸ್ಥಳ ಮೇಳದಲ್ಲಿ ಪುಂಡುವೇಷಧಾರಿಯಾಗಿ ಅನೇಕ ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿದ ಇವರು ಕನ್ನಡ ಎಂ. ಎ. ಪದವೀಧರರು. ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ನಾಟ್ಯವನ್ನು ಕಲಿತು ಸುಂಕದಕಟ್ಟೆ, ಕದ್ರಿ, ನಂದಾವರ, ಅರುವ, ಬಪ್ಪನಾಡು ಮೇಳಗಳಲ್ಲಿ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ಕಲಾಸೇವೆಯನ್ನು ಮಾಡಿ ತಿರುಗಾಟಕ್ಕೆ ಸ್ವಯಂ ನಿವೃತ್ತಿ ಘೋಷಿಸಿದ್ದರು. ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿದ ಇವರಿಗೆ ಬಳಿಕ ಅದೇ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವ ಭಾಗ್ಯವೂ ಒದಗಿ ಬಂದಿತ್ತು. ಶ್ರೀ ತಾರಾನಾಥ ವರ್ಕಾಡಿಯವರ ಅನೇಕ ಶಿಷ್ಯಂದಿರು ಇಂದು ವಿವಿಧ ಮೇಳಗಳಲ್ಲಿ ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಕಲಾವಿದನಾಗಿದ್ದುಕೊಂಡೇ ಸಾಹಿತ್ಯ ಕ್ಷೇತ್ರದತ್ತ ಒಲವನ್ನು ಹರಿಸಿದ್ದರು. ಬರೆಯುವ ಕಲೆಯು ಸಿದ್ಧಿಸಿತ್ತು. ಪ್ರಬುದ್ಧ ಲೇಖಕನಾಗಿಯೂ ಗುರುತಿಸಿಕೊಂಡರು. ಸರಸ್ವತಿ ದೇವಿಯ ಅನುಗ್ರಹದಿಂದ ಪ್ರಸಂಗ ರಚನೆ ಮತ್ತು ಕೃತಿ ರಚನಾ ಕಾಯಕಗಳಲ್ಲೂ ತೊಡಗಿಸಿಕೊಂಡರು. ಡಾ. ಶಿಮಂತೂರು ನಾರಾಯಣ ಶೆಟ್ಟಯವರಿಂದ ಪ್ರಸಂಗ ರಚನಾ ಕ್ರಮವನ್ನೂ ಶ್ರೀ ಕೊರ್ಗಿ ವೆಂಕಟೇಶ ಉಪಾಧ್ಯಾಯರಿಂದ ಅರ್ಥಗಾರಿಕೆಯನ್ನೂ ಶ್ರೀ ತಾರಾನಾಥರು ಅಭ್ಯಸಿಸಿದ್ದರು. ಪ್ರಸ್ತುತ ಅನೇಕ ವರ್ಷಗಳಿಂದ ‘ಬಲ್ಲಿರೇನಯ್ಯ’ ಮಾಸಪತ್ರಿಕೆಯ ಸಂಪಾದಕರಾಗಿಯೂ ಕಲಾಭಿಮಾನಿಗಳಿಗೆ ಇವರು ಪರಿಚಿತರು. ವಿದ್ವಾಂಸರಾದ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರ ಬದುಕು ಬರಹ ಕುರಿತಾದ ಬರೆದ ಅಭಿನವ ನಾಗವರ್ಮ ಮತ್ತು ಪುರಾಣ ಲೋಕದ ಬಾಲಕರು ಎಂಬ ಪುಸ್ತಕಗಳು ಪ್ರಕಟವಾಗಿ ಓದುಗುರ ಕೈ ಸೇರಿದ ವಿಚಾರ ಎಲ್ಲರಿಗೂ ತಿಳಿದಿದೆ. ಕನ್ನಡ ಪೌರಾಣಿಕ, ಕಾಲ್ಪನಿಕ ಪ್ರಸಂಗಗಳನ್ನೂ ರಚಿಸಿದ್ದಾರೆ.

ಶ್ರೀ ತಾರಾನಾಥ ವರ್ಕಾಡಿ ಅವರು ಬರೆದ ಈ ಕೃತಿಯ ಹೆಸರು ‘ಒಂದೊಂದು ನದಿಗೂ ಒಂದೊಂದು ಕಥೆ’. ಈ ಹೊತ್ತಗೆಯು 2012ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಪ್ರಕಾಶಕರು ಆಜ್ಞಾಸೋಹಮ್ ಪ್ರಕಾಶನ ಬೆಳ್ಮಣ್ಣು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗಡೆಯವರು ಶುಭ ಹಾರೈಸಿ ಆಶೀರ್ವದಿಸಿರುತ್ತಾರೆ. ಬಳಿಕ ‘ನಾಲ್ಕು ಮಾತುಗಳು’ ಎಂಬ ಶೀರ್ಷಿಕೆಯಡಿ ಶ್ರೀ ಕೆ.ಎಸ್. ನಾರಾಯಣಾಚಾರ್ಯ ಅವರ ಲೇಖನವಿದೆ. ಲೇಖಕ ಶ್ರೀ ತಾರಾನಾಥ ವರ್ಕಾಡಿಯವರು ‘ಮನದೊಳಗಿನ ಮಂದಾಕಿನಿ’ ಶೀರ್ಷಿಕೆಯಡಿ ಸಹಕರಿಸಿದ ಮಹನೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಸುಮಾರು ಇನ್ನೂರ ಮೂವತ್ತು ಪುಟಗಳಿಗೆ ಚಾಚಿದ ಈ ಕೃತಿಯಲ್ಲಿ ಒಟ್ಟು ನೂರಾ ಹನ್ನೊಂದು ನದಿಗಳ ಉಗಮ ಮತ್ತು ಅವುಗಳ ವಿಶೇಷತೆಗಳನ್ನು ಶ್ರೀ ತಾರಾನಾಥ ವರ್ಕಾಡಿ ಅವರು ವಿವರವಾಗಿ ನೀಡಿರುತ್ತಾರೆ. ಬಳಿಕ ‘ಒಂದು ಹರಕೆ’ ಶೀರ್ಷಿಕೆಯಡಿ ಡಾ| ಬನ್ನಂಜೆ ಗೋವಿಂದಾಚಾರ್ಯ ಅವರ ಲೇಖನವಿದೆ. ಲೇಖಕ ಶ್ರೀ ತಾರಾನಾಥರ ಬದುಕಿನ ವಿವರವನ್ನೂ ಸಂಕ್ಷಿಪ್ತವಾಗಿ ನೀಡಲಾಗಿದೆ.

ಲೇಖಕ:ರವಿಶಂಕರ್ ವಳಕ್ಕುಂಜ 

ರಾಘವಾಯಣ

‘ರಾಘವಾಯಣ’ ಎಂಬ ಕೃತಿಯು ಓದುಗರ ಕೈ ಸೇರಿದ್ದು 2016ನೇ ಇಸವಿಯಲ್ಲಿ. ಇದು ಬಹುಮುಖ ಚಿತ್ರ ಕಲಾವಿದರಾಗಿ, ಕಲಾಕ್ಷೇತ್ರಕ್ಕೆ ಶ್ರೇಷ್ಠ ಕೊಡುಗೆಗಳನ್ನು ನೀಡಿದ ಪಣಂಬೂರು ಶ್ರೀ ರಾಘವ ರಾವ್ ಅವರ ಸಂಸ್ಮರಣಾ ಗ್ರಂಥ. 1923ನೇ ಇಸವಿಯಲ್ಲಿ ಪಣಂಬೂರಿನಲ್ಲಿ ಇವರ ಜನನ. ಇವರ ಮೂಲ ಮನೆ ಆದ್ಯಪಾಡಿ. ತೀರ್ಥರೂಪರು, ಅಜ್ಜ, ಮುತ್ತಜ್ಜಂದಿರು ಯಕ್ಷಗಾನ ಭಾಗವತರುಗಳಾಗಿ ಕಲಾಸೇವೆಯನ್ನು ಮಾಡಿದವರೇ ಆಗಿದ್ದರು. ಚಿಕ್ಕಪ್ಪ ಉತ್ತಮ ಸ್ತ್ರೀ ವೇಷಧಾರಿಯಾಗಿ ಹಿಮ್ಮೇಳದ ಸರ್ವಾಂಗಗಳನ್ನೂ ತಿಳಿದವರಾಗಿದ್ದರು. ರಾಘವ ರಾಯರು ಕಲಿತದ್ದು ಏಳನೆಯ ತರಗತಿಯ ವರೆಗೆ. ಬಳಿಕ ಮೈಸೂರಿಗೆ ತೆರಳಿ ಚಿತ್ರ ರಚನೆಯ ಕೌಶಲವನ್ನು ಸಿದ್ಧಿಸಿಕೊಂಡಿದ್ದರು. ಮುಂಬೈಯಲ್ಲಿ ಕೆಲ ಸಮಯ ಇದ್ದು ಊರಿಗೆ ಮರಳಿದ್ದರು. ಎಲ್ಲೇ ಇದ್ದರೂ ಇವರ ಕಲೆಯ ಕುರಿತಾದ ಕಲಿಕೆಯು ನಿರಂತರವಾಗಿ ಸಾಗಿತ್ತು. ಕಲಾವಿದರೂ ಸಂಘಟಕರೂ ಉತ್ತಮ ರಂಗತಜ್ಞರೂ ಬಹುಮುಖೀ ಚಿತ್ರಕಲಾವಿದರೂ ಆಗಿ ಶ್ರೀ ರಾಘವ ರಾಯರು ಪ್ರಸಿದ್ಧರಾಗಿದ್ದರು. ಮಣ್ಣಿನ ಮೂರ್ತಿಗಳನ್ನು ಸಿದ್ಧಗೊಳಿಸುವ ಕಲೆಯೂ ಎಳವೆಯಲ್ಲಿಯೇ ಕರಗತವಾಗಿದ್ದು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೂ ತಮ್ಮ ಕೊಡುಗೆಯನ್ನು ನೀಡಿದ್ದರು. ಮುಖವರ್ಣಿಕೆ, ವೇಷಭೂಷಣಗಳನ್ನು ತಯಾರಿಸುವ ಕಾಯಕದಲ್ಲೂ ಶ್ರೀಯುತರು ಪಕ್ವರಾಗಿದ್ದರು. ಎರಡು ದಶಕಗಳ ಕಾಲ ‘ಸುವರ್ಣ ಆರ್ಟ್ಸ್ ಮುಲ್ಕಿ’ ಎಂಬ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರಸಾಧನಕಾರರಾಗಿ ಅನುಭವಗಳನ್ನು ಗಳಿಸಿದ್ದರು. ಊರ ಪರವೂರ ಅನೇಕ ಯಕ್ಷಗಾನ ಸಂಘ ಸಂಸ್ಥೆಗಳಿಗೆ ವೇಷಭೂಷಣಗಳನ್ನು ಸಿದ್ಧಗೊಳಿಸಿ ಕೊಟ್ಟ ಮಹನೀಯರಿವರು. ಈ ಕೃತಿಯಲ್ಲಿ ಮುದ್ರಿಸಲ್ಪಟ್ಟ ಲೇಖನಗಳನ್ನು ಓದಿದರೆ ಶ್ರೀ ರಾಘವರಾಯರ ಪ್ರತಿಭೆ, ಸಾಮರ್ಥ್ಯ ಮತ್ತು ಅವರ ಬದುಕಿನ ವಿಚಾರಗಳನ್ನು ತಿಳಿಯಬಹುದಾಗಿದೆ. ಶ್ರೀಯುತರ ಪುತ್ರರಾದ ಶ್ರೀ ಮಧುಕರ ಭಾಗವತ್ ಅವರೂ ಕಲಾಪ್ರೇಮಿಯೇ ಆಗಿದ್ದಾರೆ. ಇವರು  ನಮ್ಮ ದೇಶದ ಹೆಮ್ಮೆಯ ವಾಯು ಸೇನೆಯಲ್ಲಿ ಉದ್ಯೋಗಿಯಾಗಿ ನಿವೃತ್ತರಾದವರು. ಪ್ರಸ್ತುತ ಜ್ಯೋತಿಷಿಯಾಗಿ, ಕಲಾಸಂಘಟಕರಾಗಿ ಯಕ್ಷಗಾನ ಕಲಾಮಾತೆಯ ಸೇವೆಯನ್ನು ಮಾಡುತ್ತಿರುವುದು ಸಂತೋಷವನ್ನು ತರುವ ವಿಚಾರ. ಇವರು ಉತ್ತಮ ಬರಹಗಾರರೂ ಹೌದು. 

‘ರಾಘವಾಯಣ’   ಪಣಂಬೂರು ಶ್ರೀ ರಾಘವ ರಾವ್ ಅವರ ಸಂಸ್ಮರಣಾ ಗ್ರಂಥದ ಪ್ರಕಾಶಕರು ಬಹುಮುಖೀ ಚಿತ್ರ ಕಲಾವಿದ ಪಣಂಬೂರು  ಶ್ರೀ ರಾಘವ ರಾವ್ ಸಂಸ್ಮರಣಾ ಯೋಜನೆ ಕುಳಾಯಿ ಮಂಗಳೂರು. ಇದರ ಸಂಪಾದಕರು ಶ್ರೀ ಸೇರಾಜೆ ಸೀತಾರಾಮ ಭಟ್  ಮತ್ತು ಶ್ರೀ ಪಿ. ವಿ. ಪರಮೇಶ್. ಇದು ಒಟ್ಟು ನಾನ್ನೂರ ಐವತ್ತು ಪುಟಗಳುಳ್ಳ ಪುಸ್ತಕ. ಶ್ರೀ ರಾಘವ ರಾವ್ ಸಂಸ್ಮರಣಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ವಿದ್ವಾಂಸರಾದ ಡಾ. ಪ್ರಭಾಕರ ಜೋಶಿಯವರೂ ಕಾರ್ಯನಿರ್ವಹಿಸಿದ್ದರು. ಈ ಕೃತಿಯ ಆರಂಭದಲ್ಲಿ ಪಣಂಬೂರು ಶ್ರೀ ನಂದನೇಶ್ವರ ದೇವರ ವರ್ಣಚಿತ್ರವನ್ನೂ, ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರು ಮತ್ತು ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣರ ಅನುಗ್ರಹ ರೂಪದ ಸಂದೇಶಗಳನ್ನೂ ನೀಡಲಾಗಿದೆ. ಬಳಿಕ ಯೋಜನಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ ಮಹನೀಯರುಗಳ ಪರಿಚಯವನ್ನು ವರ್ಣಚಿತ್ರಗಳ ಸಹಿತ ಕೊಡಲಾಗಿದೆ. ಬಳಿಕ ‘ವರ್ಣ ಒಂದು – ನೇಪಥ್ಯದ ಬೆಳಕಿನಲ್ಲಿ’ ‘ವರ್ಣ ಎರಡು – ಅಂತರಾಳದ ನುಡಿಗಳು’ ‘ವರ್ಣ ಮೂರು – ಯಕ್ಷಗಾನ ಮತ್ತಿತರ ವೈಚಾರಿಕ ಲೇಖನಗಳು’ ಎಂಬ ವಿಭಾಗಗಳಲ್ಲಿ ಖ್ಯಾತ ಬರಹಗಾರರ ಲೇಖನಗಳೂ, ರಾಘವರಾಯರು ಪಡೆದ ಸನ್ಮಾನ ಪತ್ರಗಳೂ, ವರ್ಣಚಿತ್ರಗಳೂ, ಕಪ್ಪುಬಿಳುಪಿನ ಛಾಯಾಚಿತ್ರಗಳೂ ಇವೆ. ಬಳಿಕ ‘ಸ್ತಬ್ಧ ಚಿತ್ರಗಳ ಸಾಕ್ಷಿ’ ಎಂಬ ವಿಭಾಗವನ್ನು ಕಾಣಬಹುದು. ‘ವರ್ಣ ಐದು – ತ್ರಿಭಾಷಾ ಪ್ರಸಂಗ ಸಾಹಿತ್ಯ’ ಎಂಬ ವಿಭಾಗದಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಒಂಭತ್ತು ಪ್ರಸಂಗಗಳನ್ನು ಕವಿ ಪರಿಚಯದ ಸಹಿತ ನೀಡಲಾಗಿದೆ. ತನ್ನ ಬಹುಮುಖೀ ಪ್ರತಿಭೆಗಳಿಂದ ಜನಾನುರಾಗಿಯಾಗಿ ಯಕ್ಷಗಾನ ಕಲೆಯ ಮತ್ತು ಪಣಂಬೂರು ಶ್ರೀ ನಂದನೇಶ್ವರ ಯಕ್ಷಗಾನ ಮಂಡಳಿಯ ಸಂಬಂಧವಿರಿಸಿಕೊಂಡೇ ಬದುಕನ್ನು ಸಾಗಿಸಿದ ಪಣಂಬೂರು ಶ್ರೀ ರಾಘವ ರಾಯರೆಂಬ ಹಿರಿಯ ಚೇತನಕ್ಕೆ ಗೌರವ ಪೂರ್ವಕ ಪ್ರಣಾಮಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಸ್ತ್ರೀ ಪಾತ್ರಧಾರಿಗಳು ಹೆಚ್ಚು ಎತ್ತರಕ್ಕೆಕಾಲೆತ್ತಿ ನೃತ್ಯ ಮಾಡುವುದು ಸೂಕ್ತವಲ್ಲ – ಪಾತಾಳ ವೆಂಕಟ್ರಮಣ ಭಟ್ 

ಪಾತಾಳ ವೆಂಕಟ್ರಮಣ ಭಟ್ ಈ ಹೆಸರೇ ಯಕ್ಷಗಾನದ ಸ್ತ್ರೀ ಪಾತ್ರಧಾರಿಗಳ ಬಗ್ಗೆ ಮಾತನಾಡುವಾಗ ಸಂಚಲನ ಉಂಟುಮಾಡುವ ಹೆಸರು. ಅವರ ವೇಷವನ್ನು ಸ್ವತಃ ನೋಡದಿದ್ದರೂ ಅವರ ಬಗ್ಗೆ ಬಹಳಷ್ಟು ಹೇಳುವುದನ್ನು ಕೇಳಿದ್ದೇನೆ. ಮತ್ತು ಬರೆದದ್ದನ್ನು ಓದಿದ್ದೇನೆ. ಅದಕ್ಕೆ ಅವರ ಅಪೂರ್ವ ಕೆಲವು ಛಾಯಾಚಿತ್ರಗಳೂ ಸಾಕ್ಷಿಯಾಗಿವೆ. ಬಾಲ್ಯದಲ್ಲಿ ಹಿರಿಯರ ಜೊತೆಗೆ ಆಟಗಳಿಗೆ (ಯಕ್ಷಗಾನ ಪ್ರದರ್ಶನ) ಹೋಗುತ್ತಿದ್ದೆವು.

ಸ್ತ್ರೀ ವೇಷದ ರಂಗ ಪ್ರವೇಶದ ಹೊತ್ತಿಗೆಲ್ಲಾ ನಮ್ಮ ಚಿಕ್ಕಪ್ಪರೊಬ್ಬರು  “ಸ್ತ್ರೀ ವೇಷವೆಂದರೆ ಪಾತಾಳ ವೆಂಕಟ್ರಮಣ ಭಟ್ಟರದ್ದು. ಅಂತಹ ಸ್ತ್ರೀ ಪಾತ್ರಧಾರಿಗಳು ಈಗಿಲ್ಲ. ಉದ್ದವಾದ ಜಡೆಯನ್ನು ಹಿಂದಕ್ಕೆ ತಳ್ಳಿ ಅವರು ನೃತ್ಯ ಮಾಡುವ ಚಂದವೇ ಬೇರೆ ” ಎಂದು ಎಲ್ಲರೆದುರು ಪ್ರದರ್ಶನ ನೋಡುತ್ತಿರುವಾಗಲೇ ಹೇಳುತ್ತಿದ್ದರು.

ಅವರ ಮಾತಿಗೆ ಅಕ್ಕ ಪಕ್ಕದಲ್ಲಿ ಕುಳಿತು ಆಟ ನೋಡುತ್ತಿದ್ದವರೆಲ್ಲಾ ತಲೆಯಾಡಿಸುತ್ತಾ ಸಹಮತ ವ್ಯಕ್ತಪಡಿಸುತ್ತಿದ್ದರು. ಬೆಳೆದು ದೊಡ್ಡವನಾಗುತ್ತಿರುವಂತೆ ಬಹಳಷ್ಟು ಬಾರಿ ಪಾತಾಳದವರ ಹೆಸರನ್ನು ಹಲವರ ಬಾಯಿಯಿಂದ ಕೇಳಿದ್ದೆ. ಕೇವಲ ಹೆಸರು ಮಾತ್ರ ಕೇಳಿದ್ದೆನಾದ್ದರಿಂದ ಅವರನ್ನು ಮುಖತಃ ಕಂಡು ಮಾತನಾಡಿಸುವ ಅವಕಾಶಗಳಿರಲಿಲ್ಲ.

ಕೆಲವೊಮ್ಮೆ ಅವರು ಯಕ್ಷಗಾನ ಪ್ರದರ್ಶನಗಳಿಗೆ ಬರುತ್ತಿದ್ದುದನ್ನೂ ಬಂದು ಮುಂದಿನ ಸಾಲಿನಲ್ಲೇ ಆಸೀನರಾಗುತ್ತಿದ್ದುದನ್ನೂ ದೂರದಿಂದಲೇ ಗಮನಿಸುತ್ತಿದ್ದೆ. ಆಗೆಲ್ಲ ಹತ್ತಿರ ಹೋಗಿ ಮಾತನಾಡಿಸುವ ಹಾಗಿರಲಿಲ್ಲ. ಧೈರ್ಯವೂ ಇರಲಿಲ್ಲ. ನಮ್ಮದೇನಿದ್ದರೂ ಲಾಸ್ಟ್ ಬೆಂಚ್. ಮುಂದಿನ ಸಾಲುಗಳಲ್ಲಿ ಕುಳಿತುಕೊಳ್ಳುವ ಅರ್ಹತೆ ನಮಗಿಲ್ಲವೆಂದು ನನ್ನ ಮಾತಿನ ಅರ್ಥವಲ್ಲ.

ಆದರೆ ಯಾಕೋ ಒಂದು ಹಿಂಜರಿತ ನಮ್ಮನ್ನು ಮುಂದಕ್ಕೆ ಹೋಗದಂತೆ ತಡೆಯುತ್ತಿತ್ತು ಮತ್ತು ನಮ್ಮಂತಹವರು ಸ್ವಲ್ಪ ಹಿಂದುಗಡೆಯ ಆಸನವನ್ನೇ ಹೆಚ್ಚು ಇಷ್ಟಪಡುತ್ತಿದ್ದೆವು. ಅದಿರಲಿ. ಕೊನೆಗೂ ಪಾತಾಳ ವೆಂಕಟ್ರಮಣ ಭಟ್ಟರ ಮನೆಗೆ ಹೋಗಿ ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು.

ಅವರ ಸುಪುತ್ರರಾದ ಪಾತಾಳ ಅಂಬಾಪ್ರಸಾದರ ಪರಿಚಯ ಕೆಲವು ವರ್ಷಗಳ ಹಿಂದೆ ಆಯಿತು. ಅವರು ಆತ್ಮೀಯರಾದುದರಿಂದ ಅವರ ಮುಖಾಂತರ ಪಾತಾಳ ವೆಂಕಟ್ರಮಣ ಭಟ್ಟರ ಮನೆಗೆ ಹೋಗುವ ಸಂದರ್ಭ ಬಂತು. ಹಾಗೆ ಹೋದವನಿಗೆ ಅವರ ಯಕ್ಷಗಾನ ಜೀವನದ ಬಗ್ಗೆ ತಿಳಿಯುವ ಅವಕಾಶ ಒದಗಿ ಬಂತು. ಪಾತಾಳರು ಮಾತಿಗೆ ಕುಳಿತರೆ ನಿರರ್ಗಳವಾಗಿ ಮಾತನಾಡುತ್ತಾರೆ. ಅವರ ಯಕ್ಷಗಾನ ಜೀವನದ ಪಯಣ ಸಾಗಿ ಬಂದ ಬಗೆಯನ್ನು ವಿವರಿಸಿದ್ದರು.

ಅದನ್ನು ಈ ಲೇಖನದಲ್ಲಿ ಉಲ್ಲೇಖಿಸುವುದಿಲ್ಲ. ಅವರ ಜೀವನ ಚರಿತ್ರೆಯ ಬಗ್ಗೆ ವಿವರವಾಗಿ ಪಾತಾಳ ವೆಂಕಟ್ರಮಣ ಭಟ್ಟರ ಅಭಿನಂದನಾ ಗ್ರಂಥವಾದ ‘ಯಕ್ಷ ಶಾಂತಲಾ ಪಾತಾಳ’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಓದಿ ನೋಡಿದರೆ ಪಾತಾಳದವರ ಕಲಾ ಜೀವನದ ವರ್ಣರಂಜಿತ ಅಧ್ಯಾಯಗಳನ್ನು ಅರಿಯಬಹುದು.

ಆ ಪುಸ್ತಕದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಅಂದ ಹಾಗೆ ಮತ್ತೆ ವಿಷಯಕ್ಕೆ ಬರೋಣ. ಪಾತಾಳರು ಅಂದು ಕೆಲವು ಪ್ರಮುಖವಾದ ವಿಚಾರಗಳನ್ನು ತಿಳಿಸಿದರು. ಮುಖ್ಯವಾಗಿ ಸ್ತ್ರೀ ವೇಷಗಳ ಲಾಲಿತ್ಯವು ಹೇಗಿರಬೇಕೆಂಬ ವಿಚಾರವೂ ಮಾತಿನ ನಡುವೆ ಬಂತು. ಸ್ತ್ರೀ ವೇಷದ ಲಾಲಿತ್ಯವೂ ಶೃಂಗಾರವೂ ಪಾತ್ರದಿಂದ ಪಾತ್ರಕ್ಕೆ ಹೇಗೆ ಭಿನ್ನವಾಗಿರಬೇಕೆಂದು ವೆಂಕಟ್ರಮಣ ಭಟ್ಟರು ಮಾಡಿ ತೋರಿಸಿದರು.

ಶೃಂಗಾರಗಳಲ್ಲಿಯೂ ಹಲವು ವಿಧಗಳಿರುವುದರಿಂದ ಪ್ರತಿಯೊಂದು ಪಾತ್ರದ ಶೃಂಗಾರವೂ ಬೇರೆಯೇ ಎಂದು ಕಲಾವಿದರು ಅರಿತುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ರಂಗದಲ್ಲಿ ಅಭಾಸಗಳುಂಟಾಗಬಹುದು ಎಂದು ಅವರು ಎಚ್ಚರಿಸುತ್ತಾರೆ. ಪಾತಾಳ ವೆಂಕಟ್ರಮಣ ಭಟ್ಟರು ತನಗೆ 50 ವರ್ಷಗಳು ತುಂಬುವ ಕಾಲಕ್ಕೆ ರಂಗದಿಂದ ಸ್ವಯಂ ನಿವೃತ್ತಿಯನ್ನು ಬಯಸಿ ಪಡೆದವರು.

ಅವರ ಈ ನಡೆ ನನಗೆ ಬಹಳಷ್ಟು ಆಶ್ಚರ್ಯವನ್ನುಂಟುಮಾಡಿತ್ತು. ಅದನ್ನು ಅವರಲ್ಲಿ ಕೇಳಿದ್ದೆ. ಅವರು ಮುಗುಳು ನಗುತ್ತಾ ವಯೋಸಹಜವಾಗಿ ಮುಖದಲ್ಲಿ ಕಾಣುವ ಪ್ರಾಯದ ಕುರುಹುಗಳಿಂದ ಸ್ತ್ರೀ ಪಾತ್ರವನ್ನು ಮಾಡಲು ತೊಡಕಾಗುತ್ತಿತ್ತು. ವಯಸ್ಸಾದ ಮೇಲೆ ಹರೆಯದ ಸ್ತ್ರೀ ಪಾತ್ರ ಮಾಡುವುದು ಅಷ್ಟು ಸಮಂಜಸವಾಗಿ ಕಾಣುವುದಿಲ್ಲ. ಇದರಿಂದ ಪಾತ್ರದ ಸಹಜ ಸೌಂದರ್ಯಕ್ಕೆ ರಂಗದಲ್ಲಿ ಧಕ್ಕೆ ಒದಗಬಹುದಾದ ಸಾಧ್ಯತೆಯಿದೆ. ಆಮೇಲೆ ನಾನು ಪುರುಷಪಾತ್ರಗಳನ್ನು ಮಾಡಲು ಆಸಕ್ತಿ ತೋರಿಸದೆ ಇದ್ದುದರಿಂದ ಸಹಜವಾಗಿ ನಿವೃತ್ತಿಯನ್ನು ಬಯಸಿದೆ ಎಂದು ಅವರು ಹೇಳುತ್ತಾರೆ. 

ಪಾತಾಳ ವೆಂಕಟ್ರಮಣ ಭಟ್ಟರು ಸುಮಾರು 30 ವರ್ಷಗಳ ಕಾಲ ಸ್ತ್ರೀ ಸಾಮ್ರಾಜ್ಯದ ಪ್ರಮೀಳೆಯಾಗಿ ರಂಗದಲ್ಲಿ ಮೆರೆದರು. ಯಕ್ಷಗಾನದಲ್ಲಿ ಸ್ತ್ರೀ ವೇಷದ ಹಳೆಯ ವೇಷಭೂಷಣಗಳು, ಪರಿಕರಗಳಿಂದ ಬೇಸತ್ತು ಸ್ತ್ರೀ ವೇಷದ ವಿನ್ಯಾಸ ಮತ್ತು ಆಕರ್ಷಣೆಗಳ ಬಗ್ಗೆ ಸ್ವಯಂ ಸಂಶೋಧನೆ ನಡೆಸಿ ಅದನ್ನು ರಂಗದಲ್ಲಿ ಪ್ರಯೋಗಿಸಬೇಕೆಂಬ ಆಲೋಚನೆಯೊಂದು ಅವರಿಗೆ ಬಂತು. ಅದರಂತೆ ಬೇಲೂರಿನ ಶಿಲಾಬಾಲಿಕೆಗಳ ಅಂಗಾಂಗ ಭಂಗಿಗಳು, ನಿಲ್ಲುವ ಭಂಗಿ, ಶೃಂಗಾರ, ಲಾಲಿತ್ಯಗಳಿಗೆ ಮಾರುಹೋಗಿ ಅದರಂತೆ ತಮ್ಮ ಸ್ತ್ರೀವೇಷದ ವೇಷಭೂಷಣಗಳು ಮತ್ತು ಅಂಗಭಂಗಿಗಳನ್ನು ಬದಲಾಯಿಸಿದರು.

ಇದು ಒಂದು ಹೊಸ ಸಂಶೋಧನೆ. ಯಕ್ಷಗಾನಕ್ಕೆ ಪಾತಾಳ ವೆಂಕಟ್ರಮಣ ಭಟ್ಟರ ಕೊಡುಗೆ. ಹೀಗೆ ಮೋಹಿನಿ, ಮೇನಕೆ, ಊರ್ವಶಿ ಮೊದಲಾದ ಹಲವಾರು ಪಾತ್ರಗಳ ಮರುಸೃಷ್ಟಿ ಮಾಡಿದರು. ಇದರಿಂದ ಯಕ್ಷಗಾನದ ಸ್ತ್ರೀವೇಷಗಳ ವಿಚಾರದಲ್ಲಿ ಹೊಸ ಅವಿಷ್ಕಾರವೇ ಆಯಿತು. ಬೇಲೂರಿನ ಯವನಿಕೆಗಳ ಆಭರಣಗಳ ರೀತಿಯಲ್ಲಿ ಡಾಬು, ತೋಳುಕಟ್ಟು, ಕೊರಳ ಆಭರಣಗಳು, ಶಿರೋಭೂಷಣಗಳನ್ನು ವಿನ್ಯಾಸಗೊಳಿಸಿದ್ದು ಮಾತ್ರವಲ್ಲ ಶಿಲಾಬಾಲಿಕೆಗಳ ಅಂಗಭಂಗಿಗಳು, ಕಣ್ಣಿನ ದೃಷ್ಟಿ, ಬಾಗುವಿಕೆ ಎಲ್ಲವನ್ನೂ ಯಕ್ಷಗಾನದ ಸ್ತ್ರೀಪಾತ್ರಗಳ ಮೂಲಕ ಅಭಿವ್ಯಕ್ತಿಗೊಳಿಸಿದರು. 

ಆದರೆ ಇಂತಹಾ ಹೊಸ ಪ್ರಯೋಗಗಳನ್ನು ಮಾಡುವಾಗ ಯಕ್ಷಗಾನದ ಮೂಲ ಆಶಯಕ್ಕೆ ಧಕ್ಕೆಯಾಗಬಾರದು ಎಂದು ಪಾತಾಳರು ಎಚ್ಚರಿಸುತ್ತಾರೆ, ಯಾವುದೇ ಆವಿಷ್ಕಾರಗಳನ್ನು ನಡೆಸುವಾಗ ಸಾಧ್ಯಾಸಾಧ್ಯತೆಗಳ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಹೊಂದಿ ಪ್ರಯೋಗ ಮಾಡಬೇಕೆಂಬ ಸೂಕ್ಷ್ಮ ವಿಷಯವನ್ನು ಅವರು ತಿಳಿಹೇಳುತ್ತಾರೆ. ಸ್ತ್ರೀ ವೇಷಗಳ ಕುಣಿತದ ವಿಚಾರ ಬಂದಾಗಲೂ ಹೇಗೆ ಕುಣಿಯಬೇಕೆಂದೂ ಅವರು ತೋರಿಸಿಕೊಟ್ಟರು. ಹಾಗೂ ಹೇಗೆ ಕುಣಿಯಬಾರದೆಂದೂ ಅವರು ತೋರಿಸಿದರು.

ಮುಖ್ಯವಾಗಿ ನಾಟ್ಯ ಮಾಡುವಾಗ ಉತ್ಸಾಹದ ಭರದಲ್ಲಿ ಒಂದಂಗುಲಕ್ಕಿಂತ ಹೆಚ್ಚಿನ ಎತ್ತರಕ್ಕೆ ಕಾಲುಗಳನ್ನು ಎತ್ತಿ ನೃತ್ಯ ಮಾಡುವುದು ಸಮಂಜಸವಲ್ಲ. ಸೌಮ್ಯ ರಸದಲ್ಲಿ ಸ್ತ್ರೀಪಾತ್ರವು ಹೇಗೆ ರಂಗದಲ್ಲಿ ನಿಲ್ಲಬೇಕೆಂದೂ ವೀರರಸದ ಯಾವ ಭಂಗಿ ಸ್ತ್ರೀ ಪಾತ್ರಕ್ಕೆ ಒಪ್ಪುತ್ತದೆ ಎಂಬುದನ್ನೂ ಮಾಡಿ ತೋರಿಸಿದರು.

ಇಂತಹಾ ಹಲವಾರು ಸೂಕ್ಷ್ಮ ವಿಷಯಗಳನ್ನು ಪಾತಾಳ ವೆಂಕಟ್ರಮಣ ಭಟ್ಟರು ಹೇಳುತ್ತಾರೆ. ಹಲವಾರು ಸ್ತ್ರೀ ಪಾತ್ರಧಾರೀ ಕಲಾವಿದರು ಅವರಿಂದ ಸಲಹೆ ಸೂಚನೆಗಳನ್ನು ಪಡೆಯಲು ಬಂದಿದ್ದರು ಎಂದೂ ಅವರು ಆ ಸಂಧರ್ಭದಲ್ಲಿ ಹೇಳಿದ್ದರು. ಏನೇ ಆಗಲಿ, ಯಕ್ಷಗಾನದ ಅನೇಕ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಸ್ತ್ರೀ ಪಾತ್ರದ ಸೂಕ್ಷ್ಮತೆಯ ಬಗ್ಗೆಯೂ ಪಾತಾಳ ವೆಂಕಟ್ರಮಣ ಭಟ್ಟರಿಂದ ಮುಂದಿನ ಪೀಳಿಗೆಯು ಕಲಿಯಬೇಕಾದುದು ತುಂಬಾ ಇದೆ. 

ಈ ತೆರದೊಳಸುರಾರಿ – ಪುತ್ತಿಗೆ ರಘುರಾಮ ಹೊಳ್ಳ 

ಪುತ್ತಿಗೆ ರಘುರಾಮ ಹೊಳ್ಳರ ಹಾಡುಗಳನ್ನು ಕೇಳುವುದೆಂದರೆ ಅದು ಒಂದು ಮಹದಾನಂದದ ವಿಚಾರ.  ಮನಸ್ಸಿಗೆ ಮುದ ಕೊಡುವ ಕಂಠ. ಜೊತೆಗೆ ತಾಳ, ಲಯಗಳ ಅಪೂರ್ವ ಸಿದ್ಧಿಯ ಸಮ್ಮಿಲನ. ಅವರ ‘ ಈ ತೆರದೊಳಸುರಾರಿ’ ಎಂಬ ಹಾಡಿನ ದೃಶ್ಯದ ಚಿತ್ರೀಕರಣ ಕೊಂಗೋಟ್ ರಾಧಾಕೃಷ್ಣ ಭಟ್ಟರ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಜೊತೆಗೆ ಚೈತನ್ಯ ಕೃಷ್ಣ ಪದ್ಯಾಣರ ಮದ್ದಳೆಯ ಸಾಥ್.

ಯಕ್ಷಗಾನದ ಯಕ್ಷರು – ಕೆ.ಪಿ. ರಾಜಗೋಪಾಲ್ ಕನ್ಯಾನ 

ಶ್ರೀ ಕೆ.ಪಿ. ರಾಜಗೋಪಾಲ್ ಅವರು ಬಂಟ್ವಾಳ ತಾಲೂಕಿನ ಕನ್ಯಾನ ನಿವಾಸಿಗಳು. ಶ್ರೀಯುತರ ಸಾಹಿತ್ಯಾಸಕ್ತಿ, ಕಲಾಸಕ್ತಿ, ಸಂಗ್ರಹಾಸಕ್ತಿಗಳು ಅಭಿನಂದನೀಯವಾದುದು. ಬೆಂಗಳೂರು ನಗರದಲ್ಲಿ ಉದ್ಯೋಗಿಯಾಗಿದ್ದುಕೊಂಡು ಕಲಾವಿದರಾಗಿ, ಲೇಖಕರಾಗಿ ಯಕ್ಷಗಾನ ಕಲಾ ಸಂಘಟಕರಾಗಿ ಕಲಾಮಾತೆಯ ಮತ್ತು ಸಾಹಿತ್ಯ ಸೇವೆಯನ್ನು ಮಾಡಿದವರು. ಪುಸ್ತಕಗಳ ಮೇಲೆ ಇವರಿಗಿರುವ ಪ್ರೀತಿ, ಗೌರವ, ಅದನ್ನು ಸಂಗ್ರಹಿಸುವ ಆಸಕ್ತಿ, ಅವುಗಳನ್ನು ಕೆಡದಂತೆ ಕಾಪಿಡುವಲ್ಲಿ ಇವರಿಗಿರುವ ಶ್ರದ್ಧೆಗೆ ಯಾರಾದರೂ ಮೆಚ್ಚಲೇ ಬೇಕು. ಪ್ರಬುದ್ಧ ಬರಹಗಾರರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮಿಂದಾದ  ಪರಮಾವಧಿ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರ ಕೆಲವು ಅಪೂರ್ವ ಸಂಗ್ರಹಗಳು ಮುಂದಿನ ತಲೆಮಾರಿಗೆ ಖಂಡಿತಾ ಅನುಕೂಲವಾದೀತು ಎಂಬುದರಲ್ಲಿ ಸಂಶಯವಿಲ್ಲ. ಶ್ರೀಯುತರ ಸಹೋದರರಾದ ಪೆರ್ನಡ್ಕ ಶ್ರೀ ಶ್ಯಾಮ ಭಟ್ಟರೂ ಕಲಾವಿದರಾಗಿ, ಲೇಖಕರಾಗಿ, ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.

‘ಯಕ್ಷಗಾನದ ಯಕ್ಷರು’ ಎಂಬ ಪುಸ್ತಕವು ಶ್ರೀ ರಾಜಗೋಪಾಲ ಕನ್ಯಾನ ಇವರ ಸಂಪಾದಕತ್ವದಲ್ಲಿ 2007ನೇ ಇಸವಿಯಲ್ಲಿ ಪ್ರಕಟವಾಗಿತ್ತು. ಇದರ ಪ್ರಕಾಶಕರು ಹರೀಶ ಎಂಟರ್ಪ್ರೈಸಸ್, ವಿ.ವಿ. ಪುರಂ, ಬೆಂಗಳೂರು. ಈ ಹೊತ್ತಗೆಯಲ್ಲಿ ಸ್ವರಚಿತ, ಸಂಪಾದಿತ, ಸ್ವಕಥಾ ಸಂಗ್ರಹಿತ ಪ್ರಸಂಗಗಳ ಪರಿಚಯ, ಪತ್ರಿಕಾ ವರದಿಗಳು, ಸ್ವಕಥಾ ಸಂಯೋಜನೆಯ ಪ್ರಸಂಗ ಎಂಬ ಐದು ವಿಭಾಗಗಳಿವೆ. ಸ್ವರಚಿತ ಎಂಬ ವಿಭಾಗದಲ್ಲಿ ವಿದ್ವಾನ್ ಟಿ. ಕೇಶವ ಭಟ್ಟ, ಕೆರೆಮನೆ ಗಜಾನನ ಹೆಗಡೆ, ಪಾತಾಳ ವೆಂಕಟ್ರಮಣ ಭಟ್, ಪುಂಡಿಕಾಯ್ ಕೃಷ್ಣ ಭಟ್, ಅಡೂರು ಶ್ರೀಧರ ರಾವ್,ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘ ಕಾಸರಗೋಡು, ಪ್ರೊ| ಕಾಳೇಗೌಡ ನಾಗವಾರ ಸಂದರ್ಶನ, ಮಾಸ್ಟರ್ ಕೇಶವ ಕನ್ಯಾನ, ಮಾಸ್ಟರ್ ಭೀಮ ಭಾರದ್ವಾಜ್ ಕನ್ಯಾನ, ವಿದ್ವಾನ್ ತಾಳ್ತಜೆ ಕೃಷ್ಣ ಭಟ್, ಇವರುಗಳ ಬಗೆಗೆ ಶ್ರೀ ರಾಜಗೋಪಾಲರು ಬರೆದ ಲೇಖನಗಳಿವೆ. ಸಂಪಾದಿತ  ಎಂಬ ವಿಭಾಗದಡಿಯಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕುರಿಯ ವಿಠಲ ಶಾಸ್ತ್ರಿ, ಪೊಳ್ಳಕಜೆ ಗೋಪಾಲಕೃಷ್ಣ ಭಟ್, ದೇಲಂತಬೆಟ್ಟು ಕೃಷ್ಣ ಭಟ್, ಇವರುಗಳ ಬಗೆಗೆ ಬರೆದ ಲೇಖನಗಳಿವೆ. ಸ್ವಕಥಾ ಸಂಗ್ರಹಿತ ಪ್ರಸಂಗಗಳ ಪರಿಚಯ ಎಂಬ ವಿಭಾಗದಲ್ಲಿ ಮೂರು ಪ್ರಸಂಗಗಳ ವಿವರಗಳನ್ನೂ ರಚಿಸಿದ ಕವಿಗಳ ಹೆಸರುಗಳನ್ನೂ ನೀಡಿರುತ್ತಾರೆ. ಪತ್ರಿಕಾ ವರದಿಗಳು ಎಂಬ ವಿಭಾಗದಲ್ಲಿ ಒಟ್ಟು ಏಳು ಲೇಖನ ರೂಪದ ವರದಿಗಳಿವೆ. ಕೊನೆಯ ವಿಭಾಗ ಸ್ವಕಥಾ ಸಂಯೋಜನೆಯ ಪ್ರಸಂಗ. ಜಲಜಸಖ ಕಾವ್ಯನಾಮದ ಬೆಳ್ಳಾರೆ ಶ್ರೀ ಸೂರ್ಯನಾರಾಯಣ ಭಟ್ಟರು ರಚಿಸಿದ ಸೂರ್ಯೋದಯ ಎಂಬ ಯಕ್ಷಗಾನ ಪ್ರಸಂಗವನ್ನು ಕಥಾಸಾರಾಂಶ ಮತ್ತು ಪಾತ್ರ ಪರಿಚಯದೊಂದಿಗೆ ನೀಡಿರುತ್ತಾರೆ. ಇದು ಒಟ್ಟು ನೂರಾ ಮೂವತ್ತಾರು ಪುಟಗಳುಳ್ಳ ಪುಸ್ತಕ. ಯಕ್ಷಗಾನ ಕ್ಷೇತ್ರದ ಹಲವು ಸಾಧಕರ ಕುರಿತಾಗಿ ಮಾಹಿತಿಯುಳ್ಳ ಹೊತ್ತಗೆಯಾದುದರಿಂದ ‘ಯಕ್ಷಗಾನದ ಯಕ್ಷರು’ ಎಂಬ ಶೀರ್ಷಿಕೆಯು ಅರ್ಥಪೂರ್ಣವಾಗಿದೆ. ವಿದ್ವಾಂಸರಾದ ಶ್ರೀ ರಾಜಗೋಪಾಲ್ ಕನ್ಯಾನ ಅವರಿಂದ ಇನ್ನಷ್ಟು ಕಲಾ, ಸಾಹಿತ್ಯ ಸೇವೆಗಳು ನಡೆಯಲಿ ಎಂಬ ಶುಭ ಹಾರೈಕೆಗಳು. 

ರಾಜಶ್ರೀ ಟಿ. ರೈಯವರ ‘ಚೌಕಿ’ – ತುಳು ಕಾದಂಬರಿ 

 ‘ಚೌಕಿ’ ಎಂದರೆ ಯಕ್ಷಗಾನದ ಬಣ್ಣದ ಮನೆ. ಗ್ರೀನ್ ರೂಮ್ ಎಂದು ಹೇಳಿದರೆ ಕೆಲವರಿಗೆ ಬೇಗ ಅರ್ಥವಾದೀತು! ಯಕ್ಷಗಾನದ ರಂಗಸ್ಥಳದ ಬಣ್ಣ ಬಣ್ಣದ ವೇಷಗಳ ಪಾತ್ರಧಾರಿಗಳನ್ನು ನೋಡಿ ಪುರಾಣ ಲೋಕದ ಅದ್ಭುತ ಪಾತ್ರಗಳನ್ನು ನೋಡಿ ಭ್ರಮಾಧೀನರಾದವರಿಗೆ ಆ ಪಾತ್ರಧಾರಿಗಳ ನೈಜ ಬದುಕು ರಂಗದ ಹೊರಗೆ ಹೇಗಿರಬಹುದು ಎಂದು ತಿಳಿದಿರಬೇಕೆಂದೇನೂ ಇಲ್ಲ. ಕಲಾವಿದರ ಬದುಕೂ ಆ ಪಾತ್ರಗಳಂತೆ ವರ್ಣಮಯವಾಗಿರಬಹುದೆ ಎಂದು ಯೋಚಿಸುವವರು ರಾಜಶ್ರೀ ಟಿ. ರೈಯವರ ತುಳು ಕಾದಂಬರಿ ‘ಚೌಕಿ’ಯನ್ನೊಮ್ಮೆ ಓದಿ ನೋಡಬೇಕು. 

ತುಳು ಭಾಷೆಯಲ್ಲಿ ಯಕ್ಷಗಾನ ಸಂಬಂಧಿತ ಕಾದಂಬರಿಯೊಂದು ಪ್ರಕಟವಾದುದು ಇದೇ ಮೊದಲು ಎಂದು ಕಾಣುತ್ತದೆ. ಕನ್ನಡದಲ್ಲಿ ಯಕ್ಷಗಾನದ ಕೆಲವು ಕಾದಂಬರಿಗಳು ಈ ಹಿಂದೆ ಪ್ರಕಟವಾಗಿವೆ.  ಆದರೆ ತುಳು ಭಾಷೆಯಲ್ಲಿ ಇದೇ ಮೊದಲ ಬಾರಿಗೆ  ರಾಜಶ್ರೀ ಟಿ. ರೈಯವರು ಯಕ್ಷಗಾನದ ಕಾದಂಬರಿ ರಚಿಸುವ ಸಾಹಸಕ್ಕೆ ಮುಂದಾಗಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಕಾದಂಬರಿಯುದ್ದಕ್ಕೂ ಯಕ್ಷಗಾನದ ಹಿಂದಿನ ಸ್ಥಿತಿಗತಿಗಳ ಬಗ್ಗೆ ಲೇಖಕಿ ಬೆಳಕು ಚೆಲ್ಲುವುದರ ಜೊತೆಗೆ ಕಲಾವಿದರ ನಿಜ ಬದುಕಿನ ಬವಣೆಗಳು, ಕಷ್ಟದ ಜೀವನ ಮೊದಲಾದುವುಗಳ ಬಗ್ಗೆ ಮನೋಜ್ಞವಾಗಿ ಚಿತ್ರಿಸಿದ್ದಾರೆ. ತುಳು ಭಾಷೆಯ ಸೌಂದರ್ಯ, ಸೊಬಗುಗಳು ಈ ಕೃತಿಯಲ್ಲಿ ಎದ್ದು ಕಾಣುವ ಇನ್ನೊಂದು ಅಂಶ. ರಂಗದ ಪ್ರದರ್ಶನ ಹಿಂದೆ ಚೌಕಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅದರಂತೆಯೇ ಕಲಾವಿದನ ಕಲಾಜೀವನದ ಹಿಂದಿನ ನಿಜಜೀವನದ ಕತೆಗೆ ‘ಚೌಕಿ’ ಎಂಬ ಹೆಸರು ನಿಜವಾಗಿಯೂ ಒಪ್ಪುತ್ತದೆ. ಇವರ ಈ  ‘ಚೌಕಿ’ ಕಾದಂಬರಿಗೆ ಈ ಬಾರಿಯ ಪಣಿಯಾಡಿ ಪ್ರಶಸ್ತಿಯ ಪುರಸ್ಕಾರ ದೊರಕಿದೆ. ಬಜಿಲಜ್ಜೆ, ಕೊಂಬು ಮತ್ತು  ಪನಿಯಾರ ಇವುಗಳು ರಾಜಶ್ರೀಯವರ ಇತರ ಕೃತಿಗಳು. ಇವರ ಕೊಂಬು ಕೃತಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.