ಸುಪ್ರಸಿದ್ಧ ಶ್ರದ್ಧಾಕೇಂದ್ರ, ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿ ಕಟೀಲಿಗೆ ಸಮೀಪವಿರುವ ಮಚ್ಚಾರು ಶ್ರೀದೇವಿ ನಿಲಯದಲ್ಲಿ ನೆಲೆಸಿದ್ದ ಶ್ರೀಮತಿ ಶ್ಯಾಮಲಾ ಪೂಜಾರಿಯವರು ಸೆಪ್ಟೆಂಬರ್ 18ರಂದು ದೈವಾಧೀನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತ ಶ್ಯಾಮಲಾ ಪೂಜಾರಿಯವರು ತನ್ನ ಪತಿ ಹಾಗೂ ಮೂವರು ಪುತ್ರರನ್ನು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ. ಯಕ್ಷಗಾನ ಸಂಘಟಕ ಹಾಗೂ ದುಬೈಯಲ್ಲಿ ಉದ್ಯಮಿಯಾಗಿರುವ ಪದ್ಮನಾಭ ಕಟೀಲ್ ಅವರು ಶ್ಯಾಮಲಾ ಪೂಜಾರಿಯವರ ಪುತ್ರ. ಈ ಮನೆ ಮೊದಲಿನಿಂದಲೂ ತಮ್ಮ ದೈವಭಕ್ತಿ ಮತ್ತು ಕಲಾಸೇವೆಗಳಿಗೆ ಹೆಸರಾಗಿದ್ದು ಶ್ಯಾಮಲಾ ಪೂಜಾರಿಯವರು ಕಟೀಲು ಶ್ರೀ ದೇವಿಯ ಭಕ್ತರಾಗಿದ್ದುದು ಮಾತ್ರವಲ್ಲದೆ ಪ್ರತಿ ವರ್ಷಗಳಲ್ಲಿಯೂ ಸೇವಾರೂಪವಾಗಿ ಕಟೀಲು ಹಾಗೂ ಧರ್ಮಸ್ಥಳ ಮೇಳಗಳ ಯಕ್ಷಗಾನವನ್ನು ಆಡಿಸುತ್ತಾ ಬರುತ್ತಿದ್ದರು. ಅಲ್ಲದೆ ಯಕ್ಷಗಾನ ಕಲಾವಿದರಿಗೆ ಗೌರವಧನ ಸಹಿತ ಸನ್ಮಾನಕಾರ್ಯಗಳನ್ನು ನಡೆಸುತ್ತ ಬರುತ್ತಿದ್ದರು. ಶ್ಯಾಮಲಾ ಪೂಜಾರಿ ಅವರ ಪುತ್ರ ಪದ್ಮನಾಭ ಕಟೀಲ್ ಅವರು ದುಬೈಯಲ್ಲಿ ಉದ್ಯಮಿಯಾಗಿರುವುದು ಮಾತ್ರವಲ್ಲದೆ ಉತ್ತಮ ಯಕ್ಷಗಾನ ಸಂಘಟಕರೆಂದು ಹೆಸರುವಾಸಿಯಾಗಿದ್ದಾರೆ. ನಿರಂತರ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪದ್ಮನಾಭ ಕಟೀಲ್ ಅವರು ಕಲೆಗೆ ಅಪರಿಮಿತ ಪ್ರೋತ್ಸಾಹವನ್ನು ನೀಡುವ ಕಲಾಪ್ರೇಮಿ.
ಕಟೀಲು ಮೇಳದ ಅರ್ಚಕ ಕಾಂತಾವರ ಅನಂತರಾಮ ಭಟ್ ನಿಧನ
ಕಟೀಲು ಮೇಳದ ಹಿರಿಯ ಅರ್ಚಕರಾದ ಶ್ರೀ ಅನಂತರಾಮ ಭಟ್ಟರು ಸೆಪ್ಟೆಂಬರ್ 21ರಂದು ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಾಂತಾವರದ ಭಟ್ರು ಎಂದೇ ಪ್ರಸಿದ್ಧಿ ಪಡೆದಿದ್ದ ಅವರು ತನ್ನ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ದೇವರ ಹೂವಿನ ಅಲಂಕಾರವನ್ನು ಮಾಡುವಲ್ಲಿ ಅದ್ಭುತ ಕೌಶಲ್ಯವನ್ನು ಹೊಂದಿದ್ದ ಅವರು ಹಲವಾರು ಕಡೆಯಲ್ಲಿ ಸನ್ಮಾನ ಗೌರವಕ್ಕೆ ಪಾತ್ರರಾಗಿದ್ದರು.
ಕಾಂತಾವರ ಶ್ರೀ ಅನಂತರಾಮ ಭಟ್ಟರು ಕಟೀಲು ಮೇಳದ ಹಿರಿಯ ಅರ್ಚಕರು. ಕಳೆದ 55 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಗೌರವಯುತವಾದ ಸ್ಥಾನದಲ್ಲಿದ್ದುಕೊಂಡು ವ್ಯವಹರಿಸುವುದು ಅಷ್ಟು ಸುಲಭವಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಸಹನೆ, ಪೂಜಾಕ್ರಮಗಳಿಗೆ ಕೊರೆತೆಯಾಗದಂತಿರುವ ಹೊಂದಾಣಿಕೆ, ನಗುಮೊಗ, ಯಾರಿಗೂ ನೋವಾಗದಂತೆ, ವ್ಯವಹರಿಸುವ ಜಾಣ್ಮೆ, ದೇವರನ್ನು ಅಲಂಕರಿಸುವ ಕುಶಲತೆ ಮೊದಲಾದ ಗುಣಗಳನ್ನು ಅವರು ಹೊಂದಿರಬೇಕು. ಈ ರೀತಿಯಿದ್ದಾಗ ಚೌಕಿಗೆ (ಬಣ್ಣದ ಮನೆ) ಬಂದ ಕಲಾಭಿಮಾನಿಗಳಿಗೆ ನಾವು ಬಂದುದು ದೇವಾಲಯಕ್ಕೆ ಎಂದು ಅನಿಸುವುದು ಸಹಜವೇ ಆಗಿದೆ. ಹೀಗೆ ವಿವಿಧ ಮೇಳಗಳಲ್ಲಿ ಅರ್ಚಕರಾಗಿ ಕಲಾಸೇವೆಯನ್ನು ಮಾಡುವವರು ಅನೇಕರು. ಅನಂತರಾಮ ಭಟ್ಟರೂ ಅವರಲ್ಲೊಬ್ಬರು. ಶ್ರೀ ಅನಂತರಾಮ ಭಟ್ಟರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ 1948 ನವೆಂಬರ್ 22 ರಂದು ಕಾಂತಾವರ ಶ್ರೀ ಸುಬ್ಬಣ್ಣ ಭಟ್ ಮತ್ತು ಶ್ರೀಮತಿ ಕಮಲಮ್ಮ ದಂಪತಿಗಳಿಗೆ ಪುತ್ರನಾಗಿ ಜನಿಸಿದರು. ಇವರದು ಕೃಷಿ ಕುಟುಂಬ. ಅಲ್ಲದೆ ಶ್ರೀ ಸುಬ್ಬಣ್ಣ ಭಟ್ಟರು ದೇವಳಗಳ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವರನ್ನು ಹೊರುವ ಸೇವೆಯನ್ನು ಮಾಡುತ್ತಿದ್ದರು. ಕಟೀಲು ಮೇಳದಲ್ಲಿ 1945ರಿಂದ ತೊಡಗಿ 20 ವರ್ಷಗಳ ಕಾಲ ಅರ್ಚಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಆಗ ಕಟೀಲು 1 ಮೇಳ ಮಾತ್ರ ಇದ್ದುದು. ಕಲ್ಲಾಡಿ ಶ್ರೀ ಕೊರಗ ಶೆಟ್ಟರ ಯಾಜಮಾನ್ಯ. ಇರಾ ಶ್ರೀ ಗೋಪಾಲಕೃಷ್ಣರು ಭಾಗವತರಾಗಿದ್ದರು. ಶ್ರೀ ಅನಂತರಾಮ ಭಟ್ಟರು ಓದಿದ್ದು 7ನೆಯ ತರಗತಿಯ ವರೆಗೆ ಬೇಲಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಂತರ ತಂದೆಯವರಿಗೆ ಸಹಾಯಕರಾಗಿ ಮೇಳದ ತಿರುಗಾಟ ನಡೆಸುತ್ತಾ ಪೂಜಾಕ್ರಮಗಳನ್ನೂ ಮೇಳದ ನಿಯಮಗಳನ್ನೂ ತಿಳಿದುಕೊಂಡರು. 1965 ರಲ್ಲಿ ತೀರ್ಥರೂಪರು ವಿಧಿವಶರಾದಾಗ ಅನಂತರಾಮ ಭಟ್ಟರು ಮೇಳದ ತಿರುಗಾಟ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಮೇಳದ ಪೂಜಾ ಕೈಂಕರ್ಯಕ್ಕೆ ಖಾಯಂ ಆಗಿ ಅರ್ಚಕರು ಇರದ ಸಂದರ್ಭ, ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣರು ಅನಂತರಾಮ ಭಟ್ಟರನ್ನು ಕರೆದು ನಿನ್ನ ಪೂಜೆ ಕಲಾಮಾತೆ ಸ್ವೀಕರಿಸುತ್ತಾಳೆ. ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳಿ ಪ್ರಸಾದ ನೀಡಿ ಮೇಳಕ್ಕೆ ಕಳುಹಿಸಿದ್ದರು. ಕಲ್ಲಾಡಿ ಶ್ರೀ ಕೊರಗ ಶೆಟ್ಟಿಯವರ ಯಜಮಾನಿಕೆಯ ಕಟೀಲು ಮೇಳಕ್ಕೆ 1966 ಮಾರ್ಚ್ 8ರಂದು ಅರ್ಚಕರಾಗಿ ಸೇರ್ಪಡೆಗೊಂಡಿದ್ದರು. ಕಲ್ಲಾಡಿ ಶ್ರೀ ಕೊರಗ ಶೆಟ್ಟಿ, ಕಲ್ಲಾಡಿ ಶ್ರೀ ವಿಠಲ ಶೆಟ್ಟಿ ಮತ್ತು ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟಿ (ಪ್ರಸ್ತುತ ಕಟೀಲು ಆರೂ ಮೇಳಗಳ ಸಂಚಾಲಕರು) ಮೂವರು ಯಜಮಾನರುಗಳ ಸಂಚಾಲಕತ್ವದಡಿ ಅನಂತರಾಮ ಭಟ್ಟರು ಸೇವೆಯನ್ನು ಸಲ್ಲಿಸಿದ್ದಾರೆ. ತಿರುಗಾಟದ 50ನೇ ವರ್ಷದ ಸಂದರ್ಭದಲ್ಲಿ ನೂತನ ಗೃಹಪ್ರವೇಶದ ಸುದಿನದಂದು ಕಟೀಲು ಮೇಳದ ಆಟವನ್ನು ಆಡಿಸಿ ಧನ್ಯರಾಗಿದ್ದಾರೆ,(ದೇವಿ ಮಹಾತ್ಮೆ ಪ್ರಸಂಗ) 2008ರಲ್ಲಿ ಮನೆಯಲ್ಲಿ ಷಷ್ಠ್ಯಬ್ದಿ (60ನೇ ವರ್ಷ) ಕಾರ್ಯಕ್ರಮವೂ ನಡೆದಿದೆ. ರಸ್ತೆ, ವಾಹನ ಸೌಕರ್ಯಗಳಿಲ್ಲದ ಹಿಂದಿನ ಕಾಲ. ಬಿಡಾರಕ್ಕೆ ನಡೆದೇ ಸಾಗಬೇಕಾಗಿತ್ತು. ಮೈಲುಗಳ ದೂರಕ್ಕೆ ಪೆಟ್ಟಿಗೆ, ಪೂಜಾ ಪರಿಕರಗಳನ್ನು ಹೊತ್ತುಕೊಂಡೇ ಸಾಗಿಸಬೇಕಾಗಿತ್ತು.
ಹೀಗೆ ನಿರಂತರ 55 ವರ್ಷಗಳ ಕಾಲ ಅರ್ಚಕರಾಗಿ ಕಲಾಸೇವೆಯನ್ನು ಮಾಡುತ್ತಾ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ ಅನಂತರಾಮ ಭಟ್ಟರು. ತಮ್ಮ ಸಂಕಲ್ಪ ಸಿದ್ಧಿಗಾಗಿ ಇವರಲ್ಲಿ ಪ್ರಾರ್ಥಿಸಿ ಪ್ರಸಾದ ಸ್ವೀಕರಿಸುವ ಕಲಾಭಿಮಾನಿಗಳನ್ನೂ ನಾವು ಕಾಣಬಹುದು. ಅದು ಮನಸಿಗೆ, ಭಕ್ತಿಗೆ, ಗೌರವ, ಪ್ರೀತಿಗೆ ಸಂಬಂಧಿಸಿದ ವಿಚಾರವೇ ಹೌದು. ಅನೇಕ ಸಂಘ ಸಂಸ್ಥೆಗಳವರೂ ಸೇವಾಕರ್ತರೂ ಶ್ರೀ ಅನಂತರಾಮ ಭಟ್ಟರ ಸೇವೆಯನ್ನು ಗುರುತಿಸಿ ಶ್ರೀಯುತರನ್ನು ಸನ್ಮಾನಿಸಿದ್ದಾರೆ. ಸಮಯದ ಪರಿಪಾಲನೆ ಮತ್ತು ಪೂಜಾಕ್ರಮಗಳಲ್ಲಿ ಏನೂ ಕೊರತೆಯಾಗಬಾರದೆಂದು ಹೇಳುತ್ತಿದ್ದ ಶ್ರೀ ಅನಂತರಾಮ ಭಟ್ಟರು ತಮ್ಮ ವೃತ್ತಿಯನ್ನು ಸೇವೆಯೆಂದು ನಿರ್ವಹಿಸಿದವರು.
ಲೇಖಕ:ಶ್ರೀ ರವಿಶಂಕರ್ ವಳಕ್ಕುಂಜ
ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ಪೂರ್ಣೇಶ ಆಚಾರ್ಯ ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 25ನೇ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 22ರಂದು ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ಪೂರ್ಣೇಶ ಆಚಾರ್ಯ ಅವರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 2020ನೇ ಸೆಪ್ಟೆಂಬರ್ 22 ಮಂಗಳವಾರ ಸಂಜೆ ಘಂಟೆ 6.30ರಿಂದ 7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ. ಮಾತಿನ ಮಂಟಪ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ.