Friday, August 28, 2026
Home Blog Page 368

ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ (04-12-2020)

ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ (04-12-2020)
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ04-12-2020ಶ್ರೀ ಕ್ಷೇತ್ರದಲ್ಲಿಚಕ್ರವ್ಯೂಹ – ಗಿರಿಜಾ ಕಲ್ಯಾಣ 
ಶ್ರೀ ಪಾವಂಜೆ ಮೇಳ 04-12-2020ಕಟೀಲು, ಎಕ್ಕಾರುಮಾನಿಷಾದ 
ಶ್ರೀ ಬಪ್ಪನಾಡು ಮೇಳ04-12-2020ಪಂಜಗುತ್ತು ಬಂಗಾರ್ ಬಾಲೆ 
ಶ್ರೀ ತಳಕಲ ಮೇಳ04-12-2020ಶ್ರೀ ಕ್ಷೇತ್ರ ತಳಕಲದಲ್ಲಿತಾಮ್ರಧ್ವಜ ಕಾಳಗ
ಶ್ರೀ ಸುಂಕದಕಟ್ಟೆ ಮೇಳ 04-12-2020ಶ್ರೀ ಕ್ಷೇತ್ರದಲ್ಲಿಅಶ್ವಮೇಧ 
ಶ್ರೀ ದೇಂತಡ್ಕ ಮೇಳ04-12-2020ಶ್ರೀ ಕ್ಷೇತ್ರದಲ್ಲಿಶ್ರೀರಾಮಾಶ್ವಮೇಧ  
 ನಾಳೆ/ದಿನಾಂಕ  
ಶ್ರೀ ಧರ್ಮಸ್ಥಳ ಮೇಳ05-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 05-12-2020ತಂಟೆಪ್ಪಾಡಿ ಬೆಳ್ಳಾರೆಮಾನಿಷಾದ 
ಶ್ರೀ ಸುಂಕದಕಟ್ಟೆ ಮೇಳ 05-12-2020ಆದ್ಯಪಾಡಿ 
ಶ್ರೀ ತಳಕಲ ಮೇಳ05-12-2020ಶ್ರೀ ಕ್ಷೇತ್ರ ತಳಕಲದಲ್ಲಿಯಕ್ಷಗಾನ ಬಯಲಾಟ
ಶ್ರೀ ದೇಂತಡ್ಕ ಮೇಳ05-12-2020ಶ್ರೀ ಕ್ಷೇತ್ರದಲ್ಲಿಕಪಿಲ ಕಾತ್ಯಾಯಿನಿ

ಜಾಹೀರಾತು  

ಯಕ್ಷಗಾನಕ್ಕೆ ನೇರ ಪ್ರಸಾರದ ಸುಗ್ಗಿ – ಭವಿಷ್ಯದಲ್ಲಿ ಪ್ರೇಕ್ಷಕರ ನೇರ ಹಾಜರಾತಿಯ ಕೊರತೆ ಕಾಣಬಹುದೆ?

ಕೋವಿಡ್-19ರ ಸರಕಾರದ ನಿಯಮಾವಳಿಗಳಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಅನಿವಾರ್ಯತೆಗೆ ನಾವಿಂದು ಸಿಲುಕಿದ್ದೇವೆ. ನಾವು ಮಾತ್ರವಲ್ಲ. ಇಡೀ ಪ್ರಪಂಚವೇ ಅಂತಹದೊಂದು ಸಂದಿಗ್ಧ ಪರಿಸ್ಥಿತಿಯ ಒತ್ತಡದ ಕೈಗೊಂಬೆಯಾಗಿದೆ. ಪ್ರಪಂಚವೇ ಈ ಕಾಲಘಟ್ಟದ ಬದಲಾಗುತ್ತಿರುವ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿರುವುದು ಮಾತ್ರವಲ್ಲ, ಅದಕ್ಕೆ ಹೊಂದಿಕೊಳ್ಳುತ್ತಾ ಇದೆ. ಜನರು ನಿಧಾನವಾಗಿ ಕೋವಿಡ್ ಜೊತೆಗೆ ಬದುಕುವುದು ಹೇಗೆ ಎಂಬುವುದನ್ನು ಕಲಿತುಕೊಳ್ಳುತ್ತಾ ಇದ್ದಾರೆ. 

ಮದುವೆ, ಸಭೆ, ಸಮಾರಂಭಗಳನ್ನು ನೀತಿ ನಿಯಮಗಳನ್ನು ಅನುಸರಿಸಿ ನಡೆಸಬೇಕಾದ ಪರಿಸ್ಥಿತಿಯಿದೆ. ಸಾಂಸ್ಕೃತಿಕ ಸಮಾರಂಭಗಳು ಪ್ರೇಕ್ಷಕರಿಲ್ಲದೆ ಸೊರಗಿವೆ. ಆದರೆ ಯಾವುದೇ ಸಮಸ್ಯೆಗಳಿಗೆ ಪರಿಹಾರಗಳು ಇದ್ದೆ ಇರುತ್ತವೆ. ಅದರಂತೆ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು ಈಗ ಹೊಸದೊಂದು ಉಪಾಯವನ್ನು ಕಂಡುಕೊಂಡಿದ್ದಾರೆ. ಕೊರೋನಾ ಹರಡುವಿಕೆಯ ಆರಂಭದ ತೀವ್ರತೆಯ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು  ಮುಖ್ಯಮಂತ್ರಿಗಳ, ಕೇಂದ್ರ ಸಚಿವರ, ಅಧಿಕಾರಿಗಳ ಜೊತೆಗೆಲ್ಲಾ ನಡೆಸಿದ ಆನ್ಲೈನ್ ಸಂವಾದಗಳ ಪ್ರೇರಣೆಯೋ ಎಂಬಂತೆ ಪ್ರತಿಯೊಂದು ಕಾರ್ಯಕ್ರಮಗಳು ನೇರ ಪ್ರಸಾರದ ರೂಪದಲ್ಲಿ ಕಾಣಿಸಿಕೊಳ್ಳತೊಡಗಿದುವು.

ಅದರಂತೆ ಮುಂದಿನ ದಿನಗಳಲ್ಲಿ ವಿವಾಹ ಸಮಾರಂಭ, ಸಭೆ ಸಮಾರಂಭಗಳನ್ನೆಲ್ಲಾ ನೇರ ಪ್ರಸಾರದ ರೂಪದಲ್ಲಿ ನೋಡುವ ಅವಕಾಶಗಳು ಆಸಕ್ತರಿಗೆ ಒದಗಿ ಬಂತು. ನಿಧಾನವಾಗಿ ಈ ನೇರ ಪ್ರಸಾರದ ಸೌಲಭ್ಯ, ಸೌಭಾಗ್ಯಗಳು ಕಲಾ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿಸ್ತರಣೆಯಾಗತೊಡಗಿತು.

ಯಕ್ಷಗಾನವೂ ಹಿಂದೆ ಬೀಳಲಿಲ್ಲ. ಅಲ್ಲಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ, ಗಾನ ವೈಭವ, ಯಕ್ಷಗಾನ ಪ್ರದರ್ಶನಗಳು  ನೇರ ಪ್ರಸಾರದಲ್ಲಿ ಕಾಣಿಸಿಕೊಂಡು ಕಲಾಪ್ರೇಮಿಗಳು ಮನೆಯಲ್ಲಿಯೇ ಕುಳಿತು ನೋಡುವಂತಾಯಿತು. ಫೇಸ್ಬುಕ್, ಯೂಟ್ಯೂಬ್, ಕೆಲವು ಸ್ಥಳೀಯ ಟಿವಿ ವಾಹಿನಿಗಳು ಯಕ್ಷಗಾನ ಕಾರ್ಯಕ್ರಮ, ಪ್ರದರ್ಶನಗಳನ್ನು ನೇರ ಪ್ರಸಾರ ಮಾಡುವಲ್ಲಿ ಸಂಘಟಕರ ಜೊತೆ ಕೈ ಜೋಡಿಸಿದುವು. 

ಈಗ ಹೆಚ್ಚಿನೆಲ್ಲಾ ಯಕ್ಷಗಾನ ಪ್ರದರ್ಶನಗಳು ನೇರಪ್ರಸಾರದಲ್ಲಿ ಪ್ರೇಕ್ಷಕರಿಗೆ ನೋಡಲು ಲಭ್ಯವಾಗುತ್ತಿವೆ. ಯಕ್ಷಗಾನ ಆರಂಭವಾಗುತ್ತಿದ್ದಂತೆ ಈ ನೇರಪ್ರಸಾರದ ಅನುಕೂಲತೆಗಳೂ ಆರಂಭವಾಗಿವೆ. ಯಕ್ಷಗಾನವನ್ನು ಆರಂಭಿಸುವ ಮುನ್ನ ಅಂದರೆ ಮೇಳಗಳು ತಿರುಗಾಟಕ್ಕೆ ಹೋರಡಬೇಕಾದರೆ ಸರಕಾರವು ಕೆಲವು ಕಠಿಣ ನಿಯಮಗಳನ್ನು ನಿರ್ದೇಶಿಸಿತ್ತು. ಅದರಂತೆ ಈಗ ಮೇಳಗಳು ಕೂಡಾ ನೇರ ಪ್ರಸಾರವನ್ನು ಮಾಡುವ ಕಾಯಕವನ್ನು ಆರಂಭಿಸಿದೆ.

ಇದರಿಂದ ಮೇಳದ ಸಂಚಾಲಕರು ಹಾಗೂ ಸಂಘಟಕರು ಯಕ್ಷಗಾನದ ಅಭಿಮಾನಿಗಳಿಗೆ ಮನೆಯಲ್ಲಿಯೇ ಉತ್ಕೃಷ್ಟ ಪ್ರದರ್ಶನವನ್ನು ಆಸ್ವಾದಿಸುವ ಅವಕಾಶ ಮತ್ತು ಸೌಭಾಗ್ಯವನ್ನು ಒದಗಿಸಿ ಕೊಟ್ಟಿದ್ದಾರೆ. ಒಂದೆರಡು ತಿಂಗಳುಗಳ ಹಿಂದೆ ನಡೆದ ಯಕ್ಷಗಾನ ಕಾರ್ಯಕ್ರಮಗಳ ನೇರ ಪ್ರಸಾರಗಳಿಂದ ಆರಂಭವಾದ ಈ ನೇರ ಪ್ರಸಾರದ ಅನುಕೂಲತೆಯು ಈಗ ಮೇಳಗಳಿಗೂ ವಿಸ್ತರಿಸಿದೆ.

ಶ್ರೀ ಧರ್ಮಸ್ಥಳ ಮೇಳದಿಂದ ಆರಂಭವಾದ ಈ ನೇರ ಪ್ರಸಾರದ ಯಕ್ಷಗಾನಗಳನ್ನು ಪಾವಂಜೆ ಹಾಗೂ ಇತರ ಮೇಳಗಳೂ ಅನುಸರಿಸುತ್ತಿವೆ. ಈ ತಿಂಗಳಿನಲ್ಲಿ ಅಂದರೆ ಡಿಸೆಂಬರಿನಲ್ಲಿ ಆರಂಭವಾಗಲಿರುವ ಕಟೀಲು ಮೇಳದ ಆಟಗಳಲ್ಲಿಯೂ ಈ ನೇರ ಪ್ರಸಾರದ ಸೌಲಭ್ಯ ಇದೆಯೋ ಎಂದು ಕಾದು ನೋಡಬೇಕಷ್ಟೆ. ಆದರೆ ಈ ನೇರಪ್ರಸಾರದ ಜನಪ್ರಿಯತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನಗಳೇ ಸಾಕ್ಷಿ. 

ಕೆಲವೊಂದು ಪ್ರದರ್ಶನಗಳನ್ನು ಲಕ್ಷ ಸಂಖ್ಯೆಯಲ್ಲಿ ಜನರು ವೀಕ್ಷಣೆ ಮಾಡಿದ್ದಾರೆ. ಪಾವಂಜೆ ಮೇಳವೂ ಹೆಚ್ಚಿನ ವೀಕ್ಷಕರನ್ನು ಹೊಂದಿದೆ. ಇಂತಹಾ ನೇರಪ್ರಸಾರದ ಸೌಲಭ್ಯವು ಜನರಿಗೆ ಮನೆಯಲ್ಲಿಯೇ ಕುಳಿತು ಯಕ್ಷಗಾನವನ್ನು ಆಸ್ವಾದಿಸುವ ಅನುಕೂಲವನ್ನು ಸೃಷ್ಟಿಸಿದೆ. ಆದರೆ ಮೊದಲು ಆರಂಭವಾದ ಮೇಳಗಳ ವೀಕ್ಷಣೆಯ ಸಂಖ್ಯೆ ಇದೇ ರೀತಿ ಮುಂದುವರಿಯಬಹುದು ಎಂದು ಹೇಳಲು ಅಸಾಧ್ಯ.

ಯಾಕೆಂದರೆ ಇನ್ನು ಆರಂಭವಾಗಲಿರುವ ಹಲವಾರು ಮೇಳಗಳ ಯಕ್ಷಗಾನ ಪ್ರದರ್ಶನಗಳಲ್ಲಿಯೂ ನೇರ ಪ್ರಸಾರದ ತಂತ್ರಗಾರಿಕೆಯನ್ನು ಅನುಸರಿಸಿದರೆ ಆಗ ವೀಕ್ಷಕರು ಪ್ರಸಂಗದ ಆಯ್ಕೆ ಮಾಡಿ ತಮ್ಮ ಮೆಚ್ಚಿನ ಪ್ರಸಂಗದ ಪ್ರದರ್ಶನಗಳನ್ನೋ ಅಥವಾ ತಮ್ಮ ಮೆಚ್ಚಿನ ಕಲಾವಿದರಿರುವ ಪ್ರದರ್ಶನಗಳನ್ನೋ ವೀಕ್ಷಿಸುವ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎಲ್ಲವನ್ನೂ ಸ್ವಲ್ಪ ಸ್ವಲ್ಪ ನೋಡಬಹುದು. ಆದರೆ ನೇರ ಪ್ರಸಾರದ ವೀಕ್ಷಣೆಯಲ್ಲಿ ರಂಗಸ್ಥಳದ ಎದುರು ಕುಳಿತು ನೋಡಿದ ರಸಾಸ್ವಾದನೆ, ಅನುಭೂತಿಗಳು ಉಂಟಾಗುವುದಿಲ್ಲ ಎಂದು ಹಲವಾರು ಯಕ್ಷಗಾನ ಪ್ರೇಮಿಗಳು ಹೇಳುತ್ತಾರೆ.

ಅದೇನೇ ಇರಲಿ, ಈ ನೇರ ಪ್ರಸಾರದ ಸೌಲಭ್ಯವನ್ನು ನೀಡುವ ತಂತ್ರಗಾರಿಕೆಯನ್ನು ಈ ತಿರುಗಾಟದಲ್ಲಿ ಮುಂದುವರಿಸಿಕೊಂಡು ಹೋಗಬಹುದು. ಅಥವಾ ಇದು ಜನಪ್ರಿಯತೆಯನ್ನು ಪಡೆದರೆ ಇನ್ನು ಮುಂದಿನ ತಿರುಗಾಟಗಳಲ್ಲಿಯೂ ಅದನ್ನು ಅಳವಡಿಸಿಕೊಳ್ಳಬಹುದು. ಆದರೆ ಇದರಿಂದ ಯಕ್ಷಗಾನ ಪ್ರದರ್ಶನಗಳಿಗೆ ಭವಿಷ್ಯದಲ್ಲಿ ಪ್ರೇಕ್ಷಕರ ನೇರ ಹಾಜರಾತಿಯ ಕೊರತೆ ಕಾಣಬಹುದೆ ಎಂಬ ಪ್ರಶ್ನೆಯು ಕಾಡುತ್ತಿದೆ. ಈ ಪ್ರಶ್ನೆಗೆ ಕಾಲವೇ ಉತ್ತರ ಹೇಳಲಿದೆ. 

ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ (03-12.2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ 
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ03-12-2020ಶ್ರೀ ಕ್ಷೇತ್ರದಲ್ಲಿ ಹನುಮೋದ್ಭವ – ಚೂಡಾಮಣಿ – ಲಂಕಾದಹನ 
ಶ್ರೀ ಪಾವಂಜೆ ಮೇಳ 03-12-2020ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರತ್ರಿಜನ್ಮ ಮೋಕ್ಷ 
ಶ್ರೀ ಬಪ್ಪನಾಡು ಮೇಳ03-12-2020ಪಡುಪಣಂಬೂರು ಅರಮನೆ ಮುಂಭಾಗದಲ್ಲಿ ಬಂಗಾರ್ ಬಾಲೆ 
ಶ್ರೀ ತಳಕಲ ಮೇಳ03-12-2020ಶ್ರೀ ಕ್ಷೇತ್ರ ತಳಕಲದಲ್ಲಿಬಬ್ರುವಾಹನ
 ನಾಳೆ/ದಿನಾಂಕ  
ಶ್ರೀ ಧರ್ಮಸ್ಥಳ ಮೇಳ04-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 04-12-2020ಕಟೀಲು, ಎಕ್ಕಾರುಮಾನಿಷಾದ 
ಶ್ರೀ ಬಪ್ಪನಾಡು ಮೇಳ04-12-2020ಪಂಜಗುತ್ತು ಯಕ್ಷಗಾನ ಬಯಲಾಟ(ಕಾಲಮಿತಿ )
ಶ್ರೀ ತಳಕಲ ಮೇಳ04-12-2020ಶ್ರೀ ಕ್ಷೇತ್ರ ತಳಕಲದಲ್ಲಿಯಕ್ಷಗಾನ ಬಯಲಾಟ


ಜಾಹೀರಾತು

ಸರ್ಪಂಗಳ ಪ್ರಶಸ್ತಿ ವಿಜೇತ ಕಲಾವಿದ – ಶ್ರೀ ಸಂಜೀವ ಬಳೆಗಾರ, ಶಂಕರನಾರಾಯಣ 

ಮೊದಲೆಲ್ಲಾ ಯಕ್ಷಗಾನ ಪ್ರದರ್ಶನಗಳು ಕಾಸರಗೋಡು, ದ.ಕ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ನಡೆಯುತ್ತಿತ್ತು. ಈಗ ಹಾಗಲ್ಲ. ದೇಶ-ವಿದೇಶಗಳಲ್ಲಿರುವ ಜನರು ಈ ಗಂಡು ಕಲೆಯತ್ತ ಆಕರ್ಷಿತರಾಗಿದ್ದಾರೆ. ಮಾತ್ರವಲ್ಲ, ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದಾರೆ. ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನ ಪ್ರದರ್ಶನಗಳ ವ್ಯಾಪ್ತಿ ವಿಸ್ತರಣೆಯಾದುದು ಅಭಿಮಾನ ಪಡಬೇಕಾದ ವಿಚಾರ.

ಸಂಘಟಕರು ಪ್ರದರ್ಶನಗಳನ್ನು ಏರ್ಪಡಿಸುವುದರ ಜತೆಗೆ ಹಿರಿಯ, ಅರ್ಹ ಕಲಾವಿದರುಗಳನ್ನು ಗುರುತಿಸಿ ಗೌರವಿಸುವ ಸತ್ಕಾರ್ಯವನ್ನು ಮಾಡುತ್ತಿದ್ದಾರೆ. ಹೊರರಾಜ್ಯಗಳಲ್ಲೂ ವಿದೇಶಗಳಲ್ಲೂ ಈ ಪ್ರಕ್ರಿಯೆಯು ನಡೆಯುತ್ತಾ ಇರುವುದನ್ನು ನಾವು ಗಮನಿಸಬಹುದು. ಕಲಾಸೇವೆಯ ಜತೆ ಕಲಾವಿದರನ್ನು ಸನ್ಮಾನಿಸುವ ನಿರ್ಣಯ. ಯಕ್ಷಗಾನ ಸಂಘಟಕರ ಈ ಸತ್ಕಾರ್ಯವನ್ನು ನಾವು ಪ್ರೋತ್ಸಾಹಿಸೋಣ. ಅವರನ್ನು ಅಭಿನಂದಿಸೋಣ.

ಅನೇಕ ವರ್ಷಗಳ ಕಾಲ ಯಕ್ಷಗಾನಕ್ಕಾಗಿ ಬದುಕನ್ನು ಸವೆಸಿ ಪ್ರಾಮಾಣಿಕವಾಗಿ ಕಲಾ ಸೇವೆಯನ್ನು ಮಾಡಿದ ಕಲಾವಿದರುಗಳಿಗೆ ತಾವು ಸನ್ಮಾನಕ್ಕೆ, ಪ್ರಶಸ್ತಿಗೆ ಆಯ್ಕೆಯಾದಾಗ ಆನಂದವಾಗುವುದು ಸಹಜ. ಈ ಸನ್ಮಾನ ಪ್ರಶಸ್ತಿಗಳು ಕಲಾವಿದರ ಹೊಣೆಗಾರಿಕೆಯನ್ನು ಹೆಚ್ಚಿಸಿ ಇನ್ನಷ್ಟು ಕಲಾಸೇವೆಯನ್ನು ಮಾಡಲು ಉತ್ತೇಜನವನ್ನು ಕೊಡಲಿ ಎಂದು ಆಶಿಸೋಣ. ಕಲಾಪೋಷಕರಾಗಿ ಕಾಣಿಸಿಕೊಂಡವರು ಸರ್ಪಂಗಳ ಶ್ರೀ ಸುಬ್ರಹ್ಮಣ್ಯ ಭಟ್ಟರು. ಉಡುಪಿಯಲ್ಲಿ ಭಾರತೀಯ ಜೀವ ವಿಮಾ ಉದ್ಯೋಗಿಯಾಗಿದ್ದ ಇವರು ಕಲಾಪೋಷಕರೆಂದು ಖ್ಯಾತರಾದರು. ಉಡುಪಿಯಲ್ಲಿ ತೆಂಕುತಿಟ್ಟಿನ ಪ್ರದರ್ಶನಗಳಿಗೆ ಕಾರಣರಾದುದಲ್ಲದೆ ಯಕ್ಷಗಾನ ಕಲಾರಂಗ (ರಿ) ಉಡುಪಿ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು.

ಶ್ರೀಯುತರು ಅವ್ಯಕ್ತ ಲೋಕವನ್ನು ಸೇರಿಕೊಂಡ ಮೇಲೆ ಇವರ ಪತ್ನಿ ಶ್ರೀಮತಿ ನಳಿನಿ ಸುಬ್ರಹ್ಮಣ್ಯ ಭಟ್ ನತ್ತು ಮಕ್ಕಳು ‘ಸರ್ಪಂಗಳ ಯಕ್ಷೋತ್ಸವ’ ಕಾರ್ಯಕ್ರಮದಡಿ  ಸರ್ಪಂಗಳ ಪ್ರಶಸ್ತಿಯನ್ನು ಕಳೆದ ಏಳು ವರ್ಷಗಳಿಂದ ಹಿರಿಯ ಕಲಾವಿದರಿಗೆ ನೀಡಿ ಗೌರವಿಸುತ್ತಾ ಬಂದಿರುತ್ತಾರೆ. ಕಳೆದ ವರುಷ (2019)  ಸರ್ಪಂಗಳ ಪ್ರಶಸ್ತಿಗೆ  ಭಾಜನರಾದವರು ಕಟೀಲು ಮೇಳದ ಹಿರಿಯ ಸ್ತ್ರೀ ವೇಷಧಾರಿ ಶ್ರೀ ಸಂಜೀವ ಬಳೆಗಾರ, ಶಂಕರನಾರಾಯಣ.

ಬಡಗಿನವರಾದ (ಕುಂದಾಪುರ) ಇವರು ತೆಂಕಿನ ಕಟೀಲು ಮೇಳದ ಕಲಾವಿದರಾಗಿ ಮಿಂಚಿದವರು. ಕಲೆಗಿರುವ ಆಕರ್ಷಣೆಯೆಂದರೆ ಹಾಗೆ. ಪ್ರದೇಶ, ಜಾತಿ, ಭಾಷೆ ಕಲಾವಿದನಾಗಲು ತೊಡಕಾಗುವುದಿಲ್ಲ. ಸಾಧನೆಯೊಂದೇ ಬೇಕಾದುದು. ಹೊರರಾಜ್ಯದವರೂ, ವಿದೇಶಿಗರೂ ಈ ಸರ್ವಾಂಗ ಸುಂದರ ಕಲೆಯತ್ತ ಆಕರ್ಷಿತರಾಗಿ ಅಧ್ಯಯನವನ್ನು ನಡೆಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಚಾರ. ಸರ್ಪಂಗಳ  ಪ್ರಶಸ್ತಿ ವಿಜೇತರಾದ ಶ್ರೀ ಸಂಜೀವ ಬಳೆಗಾರರನ್ನು ನಾವೆಲ್ಲಾ ಅಭಿನಂದಿಸೋಣ. 

ಶ್ರೀ ಸಂಜೀವ ಬಳೆಗಾರರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕುಳ್ಳಂಜೆಯಲ್ಲಿ 1948ನೇ ಇಸವಿಯಲ್ಲಿ ಜನಿಸಿದರು. ತಂದೆ ಶ್ರೀ ಗೋವಿಂದ ಬಳೆಗಾರ. ತಾಯಿ ಸೀತಮ್ಮ. ಓದಿದ್ದು 8ನೇ ತರಗತಿ ವರೆಗೆ. ಶಂಕರನಾರಾಯಣ ಶಾಲೆಯಲ್ಲಿ. ಮನೆಯಲ್ಲಿ ಯಾರೂ ಯಕ್ಷಗಾನ ಕಲಾವಿದರಲ್ಲದಿದ್ದರೂ ಕಲಾಸಕ್ತರಾಗಿದ್ದರು. ಸಂಜೀವ ಬಳೆಗಾರರ ಅಣ್ಣ ಗೋಪಾಲಕೃಷ್ಣ ಎಂಬವರು (ದೊಡ್ಡಮ್ಮನ ಮಗ) ಪೆರ್ಡೂರು ಮೇಳದ ಕಲಾವಿದರಾಗಿದ್ದರು. ಸ್ತ್ರೀ ವೇಷಗಳನ್ನು ನಿರ್ವಹಿಸುತ್ತಿದ್ದರು. ಸಂಜೀವ ಬಳೆಗಾರರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿ ಇತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಆಟ ನೋಡುತ್ತಾ ಬೆಳೆದವರು.

ಅಣ್ಣ ಗೋಪಾಲಕೃಷ್ಣ ಅವರ ಪ್ರೋತ್ಸಾಹದಿಂದಲೇ ಆಸಕ್ತಿ ಹೆಚ್ಚಿತು. ಯಕ್ಷಗಾನ ಸೇರುವಂತಾಯಿತು ಎಂಬುದು ಸಂಜೀವ ಬಳೆಗಾರರ ಅಭಿಪ್ರಾಯ. ಶಾಲೆ ಬಿಟ್ಟ ನಂತರ ತೀರ್ಥಹಳ್ಳಿಯ ಶ್ರೀನಿವಾಸ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಉದ್ಯೋಗಕ್ಕೆ ಸೇರಿದ್ದರು. ಅಲ್ಲಿ ಕಂಪೋಸಿಂಗ್ ಕೆಲಸವನ್ನು 2 ವರ್ಷ ಮಾಡಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದನಾಗುವ ಸಂಜೀವ ಬಳೆಗಾರರ ಆಸೆಯೂ ಕೈಗೂಡುವ ಅವಕಾಶ ಬಂದಿತ್ತು. ತೀರ್ಥಹಳ್ಳಿಯ ಮಂಗಳಗಾರ್ ಎಂಬಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಶ್ರೀ ಎಂ.ಕೆ ರಮೇಶ ಆಚಾರ್ಯರು ವಾಸ್ತವ್ಯವಿದ್ದರು. ಅವರಿಂದಲೇ ನಾಟ್ಯವನ್ನು ಅಭ್ಯಸಿಸಿ ಮೇಳದ ತಿರುಗಾಟ ನಡೆಸುವ ಮನ ಮಾಡಿದರು.

ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆಯ ಸಂದರ್ಭ ಗೌರವಿಸಲ್ಪಟ್ಟ ಸಂಜೀವ ಬಳೆಗಾರ. (ಫೋಟೋ: ರಾಮ್ ನರೇಶ್ ಮಂಚಿ)

ಮೊದಲ ತಿರುಗಾಟ ಕೊಲ್ಲೂರು ಮೇಳದಲ್ಲಿ 1 ವರ್ಷ. ಮುಂದಿನ ತಿರುಗಾಟ ಪ್ರಸಿದ್ಧ ಕೆರೆಮನೆ ಇಡಗುಂಜಿ ಮೇಳದಲ್ಲಿ. ಆಗ ಖ್ಯಾತ ಕಲಾವಿದ ಕೆರೆಮನೆ ಶಿವರಾಮ ಹೆಗಡೆಯವರು ಮೇಳವನ್ನು ನಡೆಸುತ್ತಿದ್ದರು. 2 ವರ್ಷಗಳ ಕಾಲ ತಿರುಗಾಟ.  ಶಿವರಾಮ ಹೆಗಡೆಯವರ ಜತೆ ವೇಷ ಮಾಡುವ ಭಾಗ್ಯವೂ ಒದಗಿತ್ತು ಸಂಜೀವ ಬಳೆಗಾರರಿಗೆ. ನಂತರ 6 ವರ್ಷಗಳ ಕಾಲ ತೆಂಕಿನ ಸುರತ್ಕಲ್ ಮೇಳದಲ್ಲಿ ವ್ಯವಸಾಯ. ಅಗರಿ ರಘುರಾಮ ಭಾಗವತರು, ಶೇಣಿ, ತೆಕ್ಕಟ್ಟೆ ಎಂ.ಕೆ ಮೊದಲಾದ ಶ್ರೇಷ್ಠರ ಒಡನಾಟ ಸಿಕ್ಕಿದ ಪರಿಣಾಮ ನೆಲೆಯಲು ಅನುಕೂಲವಾಗಿತ್ತು. ಕಳೆದ 31 ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದಾರೆ.

ಜಾಹೀರಾತು

ಕುರಿಯ ಗಣಪತಿ ಶಾಸ್ತ್ರಿ, ಪದ್ಯಾಣ ಶಂಕರನಾರಾಯಣ ಭಟ್, ಗುಡ್ಡಪ್ಪ ಗೌಡ ಮೊದಲಾದವರ ಜತೆ ತಿರುಗಾಟ. ಎಲ್ಲಾ ತರದ ಸ್ತ್ರೀ ವೇಷಗಳನ್ನೂ ನಿರ್ವಹಿಸಿದವರು ಸಂಜೀವ ಬಳೆಗಾರರು. ಚಂದ್ರಮತಿ, ದಮಯಂತಿ, ದಾಕ್ಷಾಯಣಿ ಅಲ್ಲದೆ ಶೃಂಗಾರಕ್ಕೆ ಸಂಬಂಧಿಸಿದ ವೇಷಗಳು, ಕಸೆ ಸ್ತ್ರೀ ವೇಷಗಳನ್ನೂ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ ದೇವಿ ಮಹಾತ್ಮೆ ಪ್ರಸಂಗದ ‘ಶ್ರೀದೇವಿ’ಯಾಗಿ 2 ವರ್ಷ ಅಭಿನಯಿಸಿದ್ದರು. ಭಾವನಾತ್ಮಕ ಪಾತ್ರಗಳೆಂದರೆ ಸಂಜೀವಣ್ಣನಿಗೆ ಬಲು ಪ್ರೀತಿ. ಮೈಮರೆತು ಅಭಿನಯಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಲು ಭಾವನಾತ್ಮಕ ಸಾತ್ವಿಕ ಪಾತ್ರಗಳಲ್ಲಿ ಅನುಕೂಲತೆಗಳಿವೆ ಎಂಬುದು ಸಂಜೀವ ಬಳೆಗಾರರ ಅನುಭವದ ಮಾತುಗಳು.

ಕಟೀಲು ಮೇಳದಲ್ಲಿ ಗುಡ್ಡಪ್ಪ ಗೌಡ ಮತ್ತು ಸಂಜೀವ ಬಳೆಗಾರರದ್ದು ಅಪೂರ್ವ, ಖ್ಯಾತ ಜೋಡಿ. ಜತೆ ವೇಷಗಳಲ್ಲಿ ಇವರಿಬ್ಬರೂ ಮೆರೆದಿದ್ದರು. ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಗುಡ್ಡಪ್ಪ ಗೌಡರ ಅರುಣಾಸುರನಿಗೆ ಯಶೋಮತಿಯಾಗಿ ಸಂಜೀವ ಬಳೆಗಾರರು ಎಲ್ಲರೂ ಮೆಚ್ಚುವಂತೆ ಅಭಿನಯಿಸಿದ್ದರು. ಅದನ್ನು ಪ್ರೇಕ್ಷಕರು ಈಗಲೂ ಹೇಳಿ ನೆನಪಿಸುತ್ತಾರೆ. ಆ ಪಾತ್ರದಿಂದಾಗಿ ಸಂಜೀವ ಬಳೆಗಾರರು ‘ಯಶೋಮತಿ ಸಂಜೀವಣ್ಣ’ ಎಂದೇ ಖ್ಯಾತರಾದರು. ಹೀಗೆ ಸಂಜೀವ ಬಳೆಗಾರರು ಯಕ್ಷಗಾನ ವೃತ್ತಿ ಕಲಾವಿದನಾಗಿ 45ಕ್ಕೂ ಮಿಕ್ಕಿದ ವಸಂತಗಳನ್ನು ಕಂಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು, ಕಲಾಪೋಷಕರು ಇವರನ್ನು ಗುರುತಿಸಿ ಗೌರವಿಸಿದ್ದಾರೆ. ಶ್ರೀಯುತರು ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಪಡೆದುದಲ್ಲದೆ ಯಕ್ಷಗಾನ ಕಲಾರಂಗ (ರಿ) ಉಡುಪಿ ಸಂಸ್ಥೆಯಿಂದಲೂ ಸನ್ಮಾನಿತರಾಗಿರುತ್ತಾರೆ. 

ಸಂಸಾರಿಕವಾಗಿಯೂ ತೃಪ್ತರಿವರು. ಪತ್ನಿ ಸೀತಾ ಅವರು ಪತಿಯ ಕಲಾಸೇವೆಗೆ ಸದಾ ಸಹಕರಿಸಿ ಪ್ರೋತ್ಸಾಹಿಸಿದವರು. ಸಂಜೀವ ಬಳೆಗಾರ ಮತ್ತು ಸೀತಾ ದಂಪತಿಗಳಿಗೆ ಮೂವರು ಮಕ್ಕಳು. (2 ಹೆಣ್ಣು ಮತ್ತು 1 ಗಂಡು) ಜ್ಯೇಷ್ಠ ಪುತ್ರಿ ಶಾಂತಾ ವಿವಾಹಿತೆ. ಪುತ್ರ ಸುರೇಶ ಉದ್ಯಮಿ. ಫ್ಯಾನ್ಸಿ ಸ್ಟೋರ್ಸ್ ನಡೆಸುತ್ತಿದ್ದಾರೆ. ಕಿರಿಯ ಪುತ್ರಿ ಮಮತಾ ವಿವಾಹಿತೆ. ಶಂಕರಣರಾಯಣದಲ್ಲಿ ಫ್ಯಾನ್ಸಿ ಸ್ಟೋರ್ಸ್ ನಡೆಸುತ್ತಿದ್ದಾರೆ.  ಸರ್ಪಂಗಳ ಪ್ರಶಸ್ತಿ ವಿಜೇತರಾದ ಶ್ರೀ ಸಂಜೀವ ಬಳೆಗಾರರಿಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ. ಇನ್ನಷ್ಟು ಕಲಾಸೇವೆಯನ್ನು ಮಾಡುವಲ್ಲಿ ಅವರಿಗೆ ಶ್ರೀ ದೇವರ ಅನುಗ್ರಹವಿರಲಿ ಎಂಬ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ  


ಬೊಟ್ಟಿಕೆರೆ ಪುರುಷೋತ್ತಮ ಪೂಂಜ – ಗುರುತು ಮಾಡಿದ ಟಿಪ್ಪಣಿಗಳು (Bottikere Purushothama Poonja – A short note)

ಮಂಗಳೂರು  ತಾಲೂಕಿನ ಮಂಜನಾಡಿ ಎಂಬ ಪುಟ್ಟ ಗ್ರಾಮ.  ಆ ಊರಿನ ಯುವಕನೊಬ್ಬ ಕಣ್ಣುಗಳ ತುಂಬ ಕನಸುಗಳನ್ನು ಹೊತ್ತು ಮುಂಬೈ ಮಹಾನಗರದತ್ತ ಪ್ರಯಾಣ ಬೆಳೆಸಿದ.  ತನ್ನ  ಕಲ್ಪನೆಯ  ಮಹಾನಗರದಲ್ಲಿ ಕೊನೆಗೂ ಕೆಲಸವನ್ನು ಗಿಟ್ಟಿಸಿದ. ಉದ್ಯೋಗದೊಂದಿಗೇ ತನ್ನ ವಿದ್ಯಾರ್ಥಿ ದೆಸೆಯಿಂದಲೇ ಅಂಟಿಸಿಕೊಂಡಿದ್ದ ಗೀಳು ಯಕ್ಷಗಾನವನ್ನು ಮರೆಯಲಿಲ್ಲ.  ಕೆಲಸದ  ಜೊತೆಗೆ  ಹವ್ಯಾಸೀ ಕಲಾಸೇವೆಯ ನಂಟು ಬೆಳೆಯುತ್ತಾ ಹೋಯಿತು.


ಕೆಲಸ ಮಾಡುತ್ತಿರುವ ಸಂಸ್ಥೆಯ ಮುಖ್ಯಸ್ಥರೊಂದಿಗಿನ ವೈಯಕ್ತಿಕ ಭಿನ್ನಾಭಿಪ್ರಾಯವು ಅವನನ್ನು  ಉದ್ಯೋಗಕ್ಕೆ ರಾಜೀನಾಮೆ ನೀಡುವಂತೆ ಮಾಡಿತು. ಮುಂಬೈಯಿಂದ ಹಿಂದುರುಗಿದ ಯುವಕ ಬಂದು ಪುತ್ತೂರು ಮೇಳವನ್ನು ಸೇರಿದ ನಂತರ ಇಂದಿನವರೆಗೆ ಯಕ್ಷ ಕಲಾಮಾತೆಯ ಸೇವೆಯನ್ನು ಗೈಯುತ್ತಾ ಬಂದಿದ್ದಾರೆ. ಅವರೇ ಬೊಟ್ಟಿಕೆರೆ ಪುರುಷೋತ್ತಮ ಪೂಂಜ.   

ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಬೊಟ್ಟಿಕೆರೆ ಎಂಬಲ್ಲಿ ಶ್ರೀ ತ್ಯಾಂಪಣ್ಣ ಪೂಂಜ. ಶ್ರೀಮತಿ ಜಲಜಾ ದಂಪತಿಗಳ ಸುಪುತ್ರನಾಗಿ ಜನಿಸಿದ ಪುರುಷೋತ್ತಮ ಪೂಂಜರ ಯಕ್ಷಗುರುಗಳು ಆನೆಗುಂಡಿ ಗಣಪತಿ ಭಟ್ಟರು.  ಪೂಂಜರು ಐದನೇ ತರಗತಿಯ ವರೆಗೆ ಅಸೈಗೋಳಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಾಲೆಯ  ಶಿಕ್ಷಕರಿಗೆ ಯಕ್ಷಗಾನದ ಬಗ್ಗೆ ವಿಶೇಷ ಒಲವಿತ್ತು. ಪೂಜರಿಗೂ ಅದರ ಬಗ್ಗೆ ಕುತೂಹಲವಿತ್ತು. ನಂತರ ಕೈರಂಗಳ ಸಮೀಪದ ಶಾಲೆಯಲ್ಲಿ ಕಲಿಯುತ್ತಿರುವಾಗ ಅಲ್ಲಿ ಯಕ್ಷಗಾನ ಸಂಘವೇ ಇತ್ತು. ಇವರ ಅಣ್ಣ ಶ್ರೀ ಸೀತಾರಾಮ ಪೂಂಜರು ಅಲ್ಲೇ ಶಿಕ್ಷಕರಾಗಿದ್ದರು. ಅವರು ಯಕ್ಷಗಾನದ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದರು. ಬಾಲ್ಯ ಸಹಜ ಕುತೂಹಲದಿಂದ ಪುರುಷೋತ್ತಮ ಪೂಂಜರು ಅವರು ಅಭ್ಯಾಸ ಮಾಡುತ್ತಿದ್ದ ಪುಸ್ತಕಗಳನ್ನು ಬಿಡಿಸಿ ನೋಡುತ್ತಿದ್ದರು.  

ಶಾಲೆಯ ವಾರ್ಷಿಕೋತ್ಸವದ ದಿನ ಪೆರ್ಲ ಕೃಷ್ಣ ಭಟ್ಟರು ಬರೆದ “ತಾಳ ಮದ್ದಳೆ” ಎಂಬ ಪ್ರಹಸನವನ್ನು  ಶಿಕ್ಷಕರಿಗೋಸ್ಕರ ಏರ್ಪಡಿಸಿದರು. ಅದರಲ್ಲಿ ಭಾಗವತರ ಪಾತ್ರವನ್ನು ಮಾಡಲು ಶಿಕ್ಷಕರಲ್ಲಿ ಯಾರೂ ಸಿಕ್ಕದ ಕಾರಣ ಭಜನೆ ಹಾಡಿ ಅಭ್ಯಾಸವಿದ್ದ  ಬೊಟ್ಟಿಕೆರೆಯವರನ್ನು ಆಯ್ಕೆ ಮಾಡಿದರು. ಆ ಪಾತ್ರವು ಮೂರು ನಾಲ್ಕು ಪದ್ಯ ಹಾಡಬೇಕಾಗಿತ್ತು. ಅದಕ್ಕೆ ಬೇಕಾದ ತಾಳ, ಮಟ್ಟುಗಳನ್ನು ಅವರಿಗೆ ಕಲಿಸಲಾಯಿತು. ಅವರು ಆ ಪಾತ್ರವನ್ನು ನಿರ್ವಹಿಸಿದೆ. ಹಾಗೆ  ಹುಟ್ಟಿದ ಯಕ್ಷಗಾನದ ನಂಟು ಇಂದಿನ ವರೆಗೆ ಬಿಡಲಿಲ್ಲ. 

ಮುಮ್ಮೇಳದಲ್ಲಿ ಕಲಾವಿದನಾಗಿ ಕೂಡಾ ನಿರ್ವಹಿಸುತ್ತಿದ್ದ ಪೂಂಜರು ಹೆಚ್ಚಾಗಿ ಕೃಷ್ಣ, ರಾಮ ಹಾಗೂ ಇದೇ ತರಹದ ಪಾತ್ರಗಳನ್ನು ಮಾಡುತ್ತಿದ್ದರು. ಕೀರೀಟ ವೇಷಗಳಾದ ಕರ್ಣ, ಕೌರವ, ಅತಿಕಾಯ ಇತ್ಯಾದಿಗಳನ್ನು ಕೂಡಾ ನಿರ್ವಹಿಸಿದ್ದರು. ಯಕ್ಷಗಾನದಲ್ಲಿ ಚಿಕ್ಕಂದಿನಲ್ಲೇ ಆಸಕ್ತಿ ಇದ್ದುದರಿಂದ ಅವಕಾಶ ಸಿಕ್ಕಾಗಲೆಲ್ಲಾ ಆ ಕಲೆಯ ಒಂದೊಂದೇ ಅಂಗಗಳನ್ನೇ ಕಲಿಯುತ್ತಾ ಬಂದರು. ಸಿಕ್ಕ ಅವಕಾಶಗಳನ್ನೆಲ್ಲಾ ಉಪಯೋಗಿಸಿಕೊಂಡರು. ಯಕ್ಷಗಾನದ ಎಲ್ಲಾ ಅಂಗಗಳಲ್ಲೂ ಪರಿಪೂರ್ಣ ಅಲ್ಲದಿದ್ದರೂ ಒಂದಷ್ಟು ತಿಳುವಳಿಕೆ ಪಡೆಯುತ್ತಾ ಬಂದರು.  ಆ ನಂತರ ಯಕ್ಷಗಾನದ ಆಕರ್ಷಣೆ ದೂರವಾಗಲಿಲ್ಲ.

ಜಾಹೀರಾತು

ಕಾಲೇಜು ಕಲಿಯುವ ದಿನಗಳಲ್ಲಿ ಹವ್ಯಾಸಿ ಕಲಾವಿದನಾಗಿ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕಾರ್ಯಕ್ರಮದಲ್ಲಿ ಪಾಲುಗೊಳ್ಳುತ್ತಿದ್ದರು. ಈ ಸಂಘದ ವೇಷ ಭೂಷಣಗಳನ್ನು ಯಕ್ಷಗಾನ ನಡೆಯುವಲ್ಲಿಗೆ ಕೊಂಡು ಹೋಗಬೇಕಿತ್ತು. ಜೊತೆಗೆ ಪೂಂಜರೂ ಹೋಗುತ್ತಿದ್ದರು. ಮೇಕಪ್ ಕೂಡಾ ಮಾಡುತ್ತಿದ್ದರು. ಅಲ್ಲಿ ಹೋದ ನಂತರ ಅವಕಾಶ ಸಿಕ್ಕಿದಾಗ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದರು. ಹಿಮ್ಮೇಳ ಅಥವಾ  ವೇಷಧಾರಿಯಾಗಿ ಪರಿ ಪೂರ್ಣ ಅಲ್ಲದಿದ್ದರೂ ಯಕ್ಷಗಾನದ ಎಲ್ಲ ಅಂಗಗಳಲ್ಲಿಯೂ ಕೈಯಾಡಿಸುವ ಅವಕಾಶ ಲಭ್ಯವಾಯಿತು.

ಪದವಿ ಶಿಕ್ಷಣ ಪಡೆಯುತ್ತಿರುವಾಗ ಕಾಲೇಜಿನ ಯಕ್ಷಗಾನ  ಕಾರ್ಯಕ್ರಮಗಳಲ್ಲಿ ಹಾಗೂ ಹವ್ಯಾಸಿ ಸಂಘಗಳಲ್ಲಿ ಒಬ್ಬ  ಕಲಾವಿದನಾಗಿ ರೂಪುಗೊಂಡ ಪೂಂಜರು ಆಗ ಹೆಚ್ಚಾಗಿ ವೇಷಧಾರಿಯಾಗಿದ್ದರೂ ಪರಿಸ್ಥಿತಿ ಬಂದೊದಗಿದಾಗ ಭಾಗವತಿಕೆ, ಹಾಗೂ ಹಿಮ್ಮೇಳವಾದನ ಕೂಡಾ ಮಾಡುತ್ತಿದ್ದರು. ಕೆಲವೊಮ್ಮೆ ಪ್ರಧಾನ ಭಾಗವತರು ಏರುಸ್ತಾಯಿಯಲ್ಲಿ ಹಾಡುತ್ತಿರುವಾಗ ಸ್ವರ ಬಿದ್ದು ಹೋಗುವ ಸಂದರ್ಭದಲೆಲ್ಲಾ ಪೂಂಜರು ವೇಷ ಕಳಚಿ ಭಾಗವತಿಕೆ ಮಾಡಿದ್ದುಂಟು.

ಮುಂದೆ ಉದ್ಯೋಗದ ನಿಮಿತ್ತ ಮುಂಬೈಗೆ ತೆರಳಿದರು. ಅಲ್ಲಿ ಕೂಡಾ ಯಕ್ಷಗಾನದ ನಂಟು ಮುಂದುವರೆಯಿತು. ಹಲವು ಯಕ್ಷಗಾನ ಮಂಡಳಿಗಳಿರುವ ಮುಂಬೈಯಲ್ಲಿ ಗೀತಾಂಬಿಕಾ ಮಂಡಳಿಯಲ್ಲಿ 7 ವರ್ಷ ಸದಸ್ಯನಾಗಿ, ವೇಷಧಾರಿಯಾಗಿ, ಭಾಗವತನಾಗಿ ಕೆಲಸ ಮಾಡಿದರು. ಈ ಎಲ್ಲಾ ಅನುಭವಗಳು ಮೇಳದ ಕಲಾವಿದನಾಗಲು ಮಾರ್ಗಸೂಚಿಯಾಯಿತು. ಅದೇ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿ ಭಡ್ತಿ ವಿಷಯದಲ್ಲಿ ವ್ಯವಸ್ಥಾಪಕರೊಡನೆ ವಾಗ್ವಾದವಾಯಿತು. ಅದರಿಂದ ಬೇಸರಿಸಿ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಮರಳಿದರು. ಆ ಮೇಲೆ ಪುತ್ತೂರು ಮೇಳದಲ್ಲಿ ಭಾಗವತನಾಗಿ ಸೇರಿದ ಆ ವರ್ಷವೇ ಅವರು ಬರೆದ ‘ಪಟ್ಟದ ಕತ್ತಿ’ ಎಂಬ ಪ್ರಸಂಗವನ್ನು ಮೇಳಕ್ಕೆ ಕೊಟ್ಟರು.  ಹಾಗೆ ಪ್ರಾರಂಭವಾದ ಮೇಳದ ಬದುಕು ಇಂದಿನವರೆಗೂ ಮುಂದುವರೆಸಿಕೊಂಡು ಬಂದಿದ್ದಾರೆ.  

“ತುಂಬಾ ಚೆನ್ನಾಗಿ ಹಾಡುವವರಿದ್ದಾರೆ. ಬೇರೇನೂ ವಿಷಯ ಗೊತ್ತಿಲ್ಲದವರೂ ಇದ್ದಾರೆ. ಭಾಗವತರಿಗೆ ಯಕ್ಷಗಾನದ ಸಮಗ್ರವಾದ ವಿಷಯ ಗೊತ್ತಿರಬೇಕು. ಮೂಲಭೂತ ವಿಷಯಗಳಾದ ರಾಗ, ತಾಳ, ಲಯ ಮಾತ್ರ ಗೊತ್ತಿದ್ದರೆ ಸಾಲದು. ಸಾಹಿತ್ಯ ಯಕ್ಷಗಾನಕ್ಕೆ ಸಂಬಂಧಿಸಿದ ಸಮಗ್ರ ವಿಷಯಗಳನ್ನು   ತಿಳಿದಿರಬೇಕು. ಹೆಜ್ಜೆಗಾರಿಕೆ, ಹಿಮ್ಮೇಳದ ಚೆಂಡೆ, ಮದ್ದಳೆ ಬಗ್ಗೆಯೂ ಗೊತ್ತಿರಬೇಕು. ಮಾತ್ರವಲ್ಲ ವೇಷಧಾರಿಯ ಬಣ್ಣಗಾರಿಕೆಯ ಬಗ್ಗೆಯೂ ಜ್ಞಾನ ಮತ್ತು ಕಾಳಜಿಯನ್ನು ತೋರಿಸುವವರಾಗಿರಬೇಕು. ಇಂತಹಾ ಯಕ್ಷಗಾನದ ಸಮಗ್ರ ವಿಷಯಗಳ ಬಗ್ಗೆಯೂ  ಅಧ್ಯಯನ ಕೈಗೊಂಡು ಅದರಲ್ಲಿ ಪರಿಪೂರ್ಣತೆಯನ್ನು ಸಾಧಿಸುವವರೇ ಪರಿಪೂರ್ಣ ಭಾಗವತ ಎಂದು ಕರೆಸಿಕೊಳ್ಳುತ್ತಾರೆ. ಸ್ವರ ಚೆನ್ನಾಗಿದ್ದು, ತಾಳ, ಲಯ ಹಿಡಿತ ಸಿಕ್ಕಿದಾಗ ನಾನು ಭಾಗವತನಾದೆ ಎಂದು ತಿಳಿದುಕೊಳ್ಳಬಾರದು” ಎನ್ನುತ್ತಾರೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜ. 

“ಮೇಳದ ಬಿಡಾರದಲ್ಲ್ಲಿ ಉಳಿದುಕೊಳ್ಳುವಾಗ ಕೆಲವು ಸಮಸ್ಯೆಗಳು ಬರುತ್ತಿರುತ್ತವೆ. ಕುಡಿಯುವ ನೀರು ಬದಲಾಗುತ್ತಲೇ ಇರುವಾಗ ಕೆಲವೊಮ್ಮೆ ಸ್ವರಗಳು ಬೀಳುತ್ತಿತ್ತು. ಇದರಿಂದ ನಾನು ಪ್ರತಿದಿನವೂ ಮನೆಯಿಂದ ಕ್ಯಾಂಪ್, ಕ್ಯಾಂಪ್‍ನಿಂದ ಮನೆ  ಹೀಗೆ  ಪ್ರಯಾಣಿಸುತ್ತಿದ್ದೆ. ಸಮಯದ ಅಭಾವವಿದ್ದರೂ ಹಾಗೂ ಪ್ರಯಾಣ ಕಷ್ಟವಿದ್ದರೂ ನೆಮ್ಮದಿ ಇರುತ್ತಿತ್ತು. ಹೆಚ್ಚಾಗಿ ನನ್ನ ಬರವಣಿಗೆ ಎಲ್ಲಾ ಮೇಳದ ತಿರುಗಾಟದ ಅವಧಿಯಲ್ಲಿ ಇರಲಿಲ್ಲ. ಕೊನೆಯ ಸೇವೆಯಾಟದ ನಂತರ ನನ್ನ ಬರವಣಿಗೆ ಸಾಗುತಿತ್ತು. ಅನಿವಾರ್ಯ ಸಂದರ್ಭಗಳಲ್ಲಿ ಮೇಳದ ತಿರುಗಾಟದಲ್ಲಿ ಬರೆದದ್ದೂ ಉಂಟು. ‘ಮನ್ಮಥೋಪಖ್ಯಾನ’ ಹಾಗೂ ‘ಸತಿ ಉಲೂಪಿ’ ಎಂಬ ಪ್ರಸಂಗಗಳನ್ನು ತಿರುಗಾಟದ ಸಮಯದಲ್ಲಿ ಬರೆದಿದ್ದೆ. ನಿದ್ರೆಯ ಅಭಾವದಿಂದ ಅವುಗಳನ್ನು ಬರೆಯಲು ಸ್ವಲ್ಪ ಕಷ್ಟವಾಗಿತ್ತು. ಸ್ವಲ್ಪ ಬಿಡುವೇನಾದರೂ ಸಿಕ್ಕಿದರೆ, ಓದುವ ಹವ್ಯಾಸವಿದೆ. ವರ್ತಮಾನ ಪತ್ರಿಕೆಗಳನ್ನೋದುವುದು, ಬರೆಯುವ ಹವ್ಯಾಸ, ಕ್ರಿಕೆಟ್ ಮ್ಯಾಚ್ ನೋಡುವುದು,ಸಂಗೀತ ಕೇಳುವುದು ಮೊದಾದ ಹವ್ಯಾಸಗಳು ಕೂಡಾ ಇವೆ. ನನ್ನ ಕಾಲೇಜಿನ ದಿನಗಳಲ್ಲಿ ಕ್ರೀಡಾ ಪಟುವಾಗಿದ್ದೆ, ಕಾಲೇಜಿನ ವಾಲಿಬಾಲ್ ತಂಡದ ನಾಯಕನಾಗಿದ್ದೆ” ಎಂದು ಬೊಟ್ಟಿಕೆರೆಯವರು ನುಡಿಯುತ್ತಾರೆ. 

ಯಕ್ಷಗಾನ ಕ್ಷೇತ್ರದಲ್ಲಿ ಅವರ ಅನುಭವ ಈ ರೀತಿ ಇದೆ.
ಉಪ್ಪಳ ಭಗವತಿ ಮೇಳ-ಒಂದು ವರ್ಷ
ಮುಂಬಯಿ ಗೀತಾಂಬಿಕಾ ಮಂಡಳಿ-ಏಳು ವರ್ಷ, ಪುತ್ತೂರು ಮೇಳ – ಎರಡು ವರ್ಷ, ಕರ್ನಾಟಕ ಮೇಳ –
ಐದು ವರ್ಷ, ಕಟೀಲು ಮೇಳ – ಇಪ್ಪತ್ತೆಂಟು ವರ್ಷಗಳಿಂದ.
ಬರೆದ ಪೌರಾಣಿಕ ಯಕ್ಷಗಾನ ಪ್ರಸಂಗಗಳು:
ಕನ್ನಡ ಪೌರಾಣಿಕ: ವಧುವೈಶಾಲಿನಿ, ಉಭಯಕುಲ ಬಿಲ್ಲೋಜ, ನಳಿನಾಕ್ಷನಂದಿನಿ, ಮಾನಿಷಾದ ಕ್ಷಾತ್ರ ಮೇಧ, ರಾಜಾದ್ರುಪದ, ಮಾತಂಗಕನ್ಯೆ,   ಮನ್ಮಥೋಪಖ್ಯಾನ, ಗಂಡುಗಲಿ ಘಟೋತ್ಕಚ,  ಪಾಂಚಜನ್ಯ, ಕಾರ್ತಿಕೇಯ  ಕಲ್ಯಾಣ,  ಗಾಂಗೇಯ, ಕಲಿಕೀಚಕ, ರುದ್ರಪಾದ, ಸತಿ ವಿಲೂಪಿ, ಬೋಪದೇವೋಪಾಖ್ಯಾನ, ದತ್ತಸಂಭವ  ಇತ್ಯಾದಿ.
ಕನ್ನಡ ಕಾಲ್ಪನಿಕ ಪ್ರಸಂಗಗಳು :  ಮೇಘ ಮಯೂರಿ, ಸ್ವರ್ಣನೂಪುರ, ಅಮೃತವರ್ಷಣಿ, ಮೇಘ ಮಾಣಿಕ್ಯ.
ತುಳು ಕಾಲ್ಪನಿಕ ಪ್ರಸಂಗಗಳು : ಪಟ್ಟದಕತ್ತಿ, ಬಂಗಾರ್ದಗೆಜ್ಜೆ, ದಳವಾಯಿ ಮುದ್ದಣ್ಣೆ, ನಲಿಕೆದ ನಾಗಿ, ಸ್ವರ್ಣ ಕೇದಗೆ, ಗರುಡ ಕೇಂಜವೆ.
ನೃತ್ಯ ರೂಪಕಗಳು : ಅಂಧಕ ನಿದಾನ, ಭುವನಾಭಿರಾಮ (ಕನ್ನಡ), ಜೇವು ಕೇದಗೆ (ತುಳು).
ಮಕ್ಕಳ ನಾಟಕ : ಹಿತ್ತಾಳೆ ಕಿವಿ. ಇತ್ತೀಚಿಗೆ ಪ್ರಕಟವಾದ ಪ್ರಸಂಗ ಪುಸ್ತಕಗಳು: ‘ಅಂಬುರುಹ ಲವ’ ಮತ್ತು ‘ಅಂಬುರುಹ ಕುಶ’
ತಾಳ  ಲಯ  ಪರಿಪಕ್ವತೆಗೆ ಇನ್ನೊಂದು ಹೆಸರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಪತ್ನಿ ಶೋಭಾ, ಮಕ್ಕಳು ಜೀವಿತೇಶ ಮತ್ತು ಪರೀಕ್ಷಿತ. 

ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ (02-12-2020)

ಮೇಳಗಳ ಇಂದಿನ ಯಕ್ಷಗಾನ ಪ್ರದರ್ಶನಗಳ ವಿವರ 
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ02-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 02-12-2020ಪಾವಂಜೆ, ಹಳೆಯಂಗಡಿಮಾನಿಷಾದ 
ಶ್ರೀ ಬಪ್ಪನಾಡು ಮೇಳ02-12-2020ಮುಲ್ಕಿ ವೆಂಕಟರಮಣ ದೇವಸ್ಥಾನದಲ್ಲಿಯಕ್ಷಗಾನ ಬಯಲಾಟ
ಶ್ರೀ ತಳಕಲ ಮೇಳ02-12-2020ಶ್ರೀ ಕ್ಷೇತ್ರ ತಳಕಲದಲ್ಲಿಯಕ್ಷಗಾನ ಬಯಲಾಟ
 ನಾಳೆ/ದಿನಾಂಕ  
ಶ್ರೀ ಧರ್ಮಸ್ಥಳ ಮೇಳ03-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 03-12-2020ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರತ್ರಿಜನ್ಮ ಮೋಕ್ಷ 
ಶ್ರೀ ಬಪ್ಪನಾಡು ಮೇಳ03-12-2020ಪಡುಪಣಂಬೂರು ಅರಮನೆ ಮುಂಭಾಗದಲ್ಲಿ ಯಕ್ಷಗಾನ ಬಯಲಾಟ
ಶ್ರೀ ತಳಕಲ ಮೇಳ03-12-2020ಶ್ರೀ ಕ್ಷೇತ್ರ ತಳಕಲದಲ್ಲಿಯಕ್ಷಗಾನ ಬಯಲಾಟ

ಯಕ್ಷಾಂಗಣದಿಂದ ರಾಜ್ಯೋತ್ಸವ ಕಲಾ ಸಂಭ್ರಮ – ತಾಳಮದ್ದಳೆ ಪರ್ವ- 2020

 ‘ಯಕ್ಷಗಾನ ನಮ್ಮ ನಾಡಿನ ಶ್ರೀಮಂತ ಕಲೆ; ಅದರ ಒಂದು ಪ್ರಕಾರವಾದ ತಾಳಮದ್ದಳೆ ಕನ್ನಡ ಭಾಷೆಯ ಪ್ರಬುದ್ಧತೆಯನ್ನು ಸಾರುತ್ತದೆ. ಇಂದು ಕನ್ನಡ ಸಾಹಿತ್ಯ – ಸಂಸ್ಕೃತಿ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ಈ ಭಾಗದ ಸಾಹಿತಿ ಕಲಾವಿದರಿಗೆ ಮೂಲ ಪ್ರೇರಣೆಯೇ ಯಕ್ಷಗಾನ.  ಕರಾವಳಿಯಲ್ಲಿ ಕನ್ನಡದ ನಿಜವಾದ ಅಸ್ಮಿತೆ ಇರುವುದು ಯಕ್ಷಗಾನದಿಂದ’  ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.   ‌

ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಆಶ್ರಯದಲ್ಲಿ ನವೆಂಬರ್ 29ರಂದು ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪಾರಿಜಾತ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ಜರಗಿದ ‘ಯಕ್ಷಗಾನ ತಾಳಮದ್ದಳೆ ಪರ್ವ – 2020’ ಎಂಟನೇ ವರ್ಷದ ನುಡಿಹಬ್ಬದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ಸಿ.ನಾಯ್ಕ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.       

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಭಾಷಣಮಾಡಿ ‘ವೇದಿಕೆಯ ಮೇಲೆ ಪರಿಶುದ್ಧ ಕನ್ನಡ ಭಾಷೆಯಲ್ಲಿ ಮಾತನಾಡುವ ಏಕೈಕ ಕಲಾಮಾಧ್ಯಮ ಇದ್ದರೆ ಅದು ಯಕ್ಷಗಾನ ಮಾತ್ರ. ಆದ್ದರಿಂದ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಯಕ್ಷಾಂಗಣ ಕಳೆದ ಏಳು ವರ್ಷಗಳಿಂದ ಕನ್ನಡ ನುಡಿಹಬ್ಬದ ರೂಪದಲ್ಲಿ ತಾಳಮದ್ದಳೆ ಸಪ್ತಾಹವನ್ನು ನವಂಬರ್ ತಿಂಗಳಲ್ಲಿ ನಡೆಸುತ್ತಾ ಬಂದಿದೆ. ಈ ವರ್ಷ ಕೋವಿಡ್ – 19 ಸಂಕಷ್ಟದಿಂದಾಗಿ ಅದನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ತಾಳಮದ್ದಳೆ ಪರ್ವವನ್ನು ನಡೆಸಲಾಗುತ್ತಿದೆ’ ಎಂದರು. 

ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಜೀವಮಾನ ಸಾಧನೆಗಾಗಿ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಮತ್ತು ಹಿರಿಯ ಯಕ್ಷಗಾನ ವೇಷದಾರಿ ಮತ್ತು ಮೇಳದ ಸಂಚಾಲಕ ಕೆ.ಎಚ್.ದಾಸಪ್ಪ ರೈ ಪುತ್ತೂರು ಅವರಿಗೆ 2019-20 ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮಹಾಪ್ರಬಂಧಕಿ ಸುಜಯ ಯು. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. 

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೊರನಾಡ ಕನ್ನಡಿಗ, ಉದ್ಯಮಿ ಮತ್ತು ಸಮಾಜಸೇವಕ ಕೆ.ಡಿ.ಶೆಟ್ಟಿ ಮುಂಬೈ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಕೆ. ರವೀಂದ್ರ ರೈ ಕಲ್ಲಿಮಾರು, ನಿವೇದಿತಾ ಎನ್.ಶೆಟ್ಟಿ ಮತ್ತು ಸುಮಾ ಪ್ರಸಾದ್ ಸಮ್ಮಾನ ಫಲಕ ವಾಚಿಸಿದರು. ಸುಧಾಕರ ರಾವ್ ಪೇಜಾವರ ಅಭಿನಂದನಾ ನುಡಿ ಹೇಳಿದರು. ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರತಿಷ್ಠಾನದ ವತಿಯಿಂದ ದಾಸಪ್ಪ ರೈ ಅವರಿಗೆ ಕಲಾ ಗೌರವ ನೀಡಿದರು.

ಹಿರಿಯರ ಸಂಸ್ಮರಣೆ :  ಯಕ್ಷಗಾನ ರಂಗದ ಹಿರಿಯ ಚೇತನಗಳಾದ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣೆಯೊಂದಿಗೆ ನುಡಿ ನಮನ ಸಲ್ಲಿಸಲಾಯಿತು.        ಮಹೇಶ್ ಮೋಟಾರ್ಸ್ ಮಾಲಕ ಎ.ಕೆ. ಜಯರಾಮ ಶೇಖ, ದ.ಕ.ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲ್,  ಪುಳಿಂಚ ಸೇವಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಲೀಲಾಕ್ಷ ಬಿ. ಕರ್ಕೇರ ಮತ್ತು ಕಲಾಸಂಘಟಕ ಕರ್ನೂರು ಮೋಹನ ರೈ ಮುಖ್ಯ ಅತಿಥಿಗಳಾಗಿದ್ದರು.           

ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು.  ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು. ತುಳುವರ್ಲ್ಡ್ ಅಧ್ಯಕ್ಷ ರಾಜೇಶ್ ಕೃಷ್ಣ ಆಳ್ವ ವಂದಿಸಿದರು. ಯಕ್ಷಾಂಗಣದ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಿದ್ಧಾರ್ಥ ಅಜ್ರಿ,  ಕೃಷ್ಣಪ್ಪಗೌಡ ಪಡ್ಡಂಬೈಲ್ ಹಾಗೂ ದೇವಳದ ಆಡಳಿತಾಧಿಕಾರಿ ಕೃಷ್ಣಕುಮಾರ್ ಉಪಸ್ಥಿತರಿದ್ದರು.

ತಾಳಮದ್ದಳೆ – ‘ಶ್ರೀಕೃಷ್ಣ ತಂತ್ರ – ಮಾರುತಿ ಪ್ರತಾಪ’ : ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ‘ಶ್ರೀ ಕೃಷ್ಣ ತಂತ್ರ – ಮಾರುತಿ ಪ್ರತಾಪ’ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ.ಎಂ.ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಅಶೋಕ ಭಟ್ಟ ಉಜಿರೆ, ಕದ್ರಿ ನವನೀತ ಶೆಟ್ಟಿ, ರವಿ ಅಲೆವೂರಾಯ, ಉಮೇಶ ಆಚಾರ್ಯ ಗೇರುಕಟ್ಟೆ, ಹರೀಶ್ಚಂದ್ರ ನಾಯಗ ಅರ್ಥದಾರಿಗಳಾಗಿದ್ದರು. ಹರೀಶ್ ಶೆಟ್ಟಿ ಸೂಡಾ ಮತ್ತು ಪ್ರಶಾಂತ ರೈ ಪುತ್ತೂರು ಅವರ ಭಾಗವತಿಕೆಗೆ ರೋಹಿತ್ ಉಚ್ಚಿಲ್ ಹಾಗೂ ಮಯೂರ್ ನಾಯಗ ಹಿಮ್ಮೇಳದಲ್ಲಿ ಸಹಕರಿಸಿದರು.

ಹಿರಿಯ ಪೋಷಕ ಪಾತ್ರಧಾರಿ ಶ್ರೀ ಬಾಬು ಕುಲಾಲರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ 

ಹಿರಿಯ ಪೋಷಕ ಪಾತ್ರಧಾರಿ ಶ್ರೀ ಬಾಬು ಕುಲಾಲರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಯಕ್ಷಗಾನ ಕಲಾರಂಗ ಸಂಸ್ಥೆಯು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವ ಪ್ರಶಸ್ತಿಗೆ ತೆಂಕು ಬಡಗಿನ ಈ ಹಿರಿಯ ಕಲಾವಿದ ಶ್ರೀ ಬಾಬು ಕುಲಾಲ್ ಆಯ್ಕೆಯಾಗಿದ್ದಾರೆ.

ಯಕ್ಷಗಾನವು ಒಂದು ಸಮಷ್ಟಿ ಕಲೆ. ಪ್ರದರ್ಶನವು ವಿಜಯಿಯಾಗಬೇಕಾದರೆ ಪ್ರಸಂಗದೊಳಗಣ ಎಲ್ಲಾ ಪಾತ್ರಗಳೂ ಬೇಕು ಮತ್ತು ಸರಿಯಾಗಿಯೇ ಇರಬೇಕು. ಒಂದು ಪಾತ್ರವನ್ನು ನಿರ್ವಹಿಸುವ ಕಲಾವಿದ ಅಪ್ರಬುದ್ಧನಾಗಿದ್ದರೆ ಆ ಭಾಗ ಪೇಲವವಾಗಿ ಪ್ರದರ್ಶನ ಕೆಟ್ಟು ಹೋಗುವುದನ್ನು ನಾವು ಗಮನಿಸಬಹುದು. ಹಾಗಾಗಿ ಯಕ್ಷಗಾನ ಕಲೆಯಲ್ಲಿ ದೊಡ್ಡ ಪಾತ್ರ, ಸಣ್ಣ ಪಾತ್ರ ಎಂಬ ವಿಂಗಡಣೆ ಇಲ್ಲ. ಮುಖ್ಯ ಪಾತ್ರಗಳು, ಪೋಷಕ ಪಾತ್ರಗಳು…. ಹೀಗೆ ಗುರುತಿಸುತ್ತಾರೆ.

ಹೆಸರೇ ಸೂಚಿಸುವಂತೆ ಮುಖ್ಯ ಪಾತ್ರಗಳನ್ನು ಈ ಪಾತ್ರಗಳು ಪೋಷಿಸುತ್ತವೆ. ಮುಖ್ಯ ಪಾತ್ರಗಳು ರಂಜಿಸುವುದು ಪೋಷಕ ಪಾತ್ರಗಳು ಸರಿಯಿದ್ದಾಗ ಮಾತ್ರ. ಮುಖ್ಯ ಪಾತ್ರಗಳು ರಂಗದಲ್ಲಿ ವಿಜೃಂಭಿಸಲು ಪೋಷಕ ಪಾತ್ರಗಳು ಕೊಂಡಿಯಾಗಿ ಸಹಕರಿಸುತ್ತವೆ. ಪೋಷಕ ಪಾತ್ರಧಾರಿಯೂ ಪ್ರಬುದ್ಧನಾಗಿದ್ದರೆ ಪ್ರದರ್ಶನವು ಕಳೆಯೇರಿ ರಂಜಿಸುವುದನ್ನೂ ಅಪ್ರಬುದ್ಧನಾಗಿದ್ದರೆ ಪ್ರದರ್ಶನವು ಕಳೆಗುಂದುವುದನ್ನೂ ಪೇಕ್ಷಕರು ಅನುಭವಿಸುತ್ತಾರೆ. ಹಾಗಾಗಿ ಯಕ್ಷಗಾನದ ಎಲ್ಲಾ ಪಾತ್ರಗಳೂ ಮುಖ್ಯವೇ ಹೌದು.

ಮುಖ್ಯ ಪಾತ್ರಗಳನ್ನು ನಿರ್ವಹಿಸುವ ಕಲಾವಿದರು ತನ್ನ ಜತೆ ಪಾತ್ರಕ್ಕೆ ಇಂತಹಾ ಕಲಾವಿದನೇ ಬೇಕು ಎಂದು ಬೇಡಿಕೆ ಇಡುವುದನ್ನು ನಾವೆಲ್ಲಾ ಗಮನಿಸುತ್ತೇವೆ. ತನ್ನ ಪಾತ್ರ ಮತ್ತು ಒಟ್ಟು ಪ್ರದರ್ಶನ ಹಾಳಾಗಬಾರದೆಂಬ ಉದ್ದೇಶದಿಂದಲೇ ಹೀಗೆ ಹೇಳುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಇಂತಹಾ ಕೇಳಿಕೆಗಳಲ್ಲಿ ರಾಜಕೀಯವೂ ಅಡಗಿರಬಹುದು. ತನ್ನ ಆತ್ಮೀಯನಿಗೆ ಅವಕಾಶ ಕೊಡಿಸುವುದಕ್ಕಾಗಿ ಹೀಗೆ ಹೇಳಿದರೂ ಹೇಳಬಹುದು. ಅದು ನಮಗೆ ಇಲ್ಲಿ ಅಪ್ರಸ್ತುತ. ಇರಲಿ. ಯಕ್ಷಗಾನ ಪ್ರದರ್ಶನವು ಗೆಲ್ಲುವಲ್ಲಿ ಪೋಷಕ ಪಾತ್ರಗಳ, ಪಾತ್ರಧಾರಿಗಳ ಕೊಡುಗೆ ಹಿರಿದಾದುದು. ಅಂತ ಪೋಷಕ ಪಾತ್ರಧಾರಿಗಳಲ್ಲಿ ಶ್ರೀ ಬಾಬು ಕುಲಾಲರೂ ಒಬ್ಬರು.

ಪ್ರಸ್ತುತ ಕಟೀಲು 2ನೇ ಮೇಳದಲ್ಲಿ ಕಲಾಸವೆಯನ್ನು ಮಾಡುತ್ತಿದ್ದಾರೆ. ಶ್ರೀ ಬಾಬು ಕುಲಾಲ್ (ಬಸವ ಕುಲಾಲ್) ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹರ್ಕಾಡಿ ಗ್ರಾಮದ ಗಾವಳಿ ಎಂಬಲ್ಲಿ ವೆಂಕಟ ಕುಲಾಲ್ ಮತ್ತು ಸೂರಮ್ಮ ದಂಪತಿಗಳ ಮಗನಾಗಿ 1951 ಫೆಬ್ರವರಿ 8ರಂದು ಜನಿಸಿದರು. ಓದಿದ್ದು 5ನೇ ತರಗತಿ ವರೆಗೆ. ಹಳ್ಳಾಡಿ ಪ್ರಾಥಮಿಕ ಶಾಲೆಯಲ್ಲಿ.(ಗಾವಳಿ) ಯಕ್ಷಗಾನದ ಹಿನ್ನೆಲೆ ಇಲ್ಲದ ಕುಟುಂಬ ಇವರದು. ಹಿರಿಯರು ಕುಲ ಕಸುಬಿನಲ್ಲಿ ಆಸಕ್ತರಾಗಿದ್ದರು. (ಮಡಕೆ ತಯಾರಿಕೆ). ಆಟ ನೋಡುವ ಹವ್ಯಾಸ ಇತ್ತು. ಬಾಬು ಕುಲಾಲರಿಗೆ ಆಟ ನೋಡುವ ಆಸೆ. ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಆಸೆ ಹುಟ್ಟಿಕೊಂಡಿತ್ತು.

ಆ ಕಾಲದ ಪ್ರಸಿದ್ಧ ಪುರುಷ ವೇಷಧಾರಿ ವಂಡಾರು ಬಸವರು ಇವರನ್ನು ನವರಾತ್ರಿ ಸಮಯದಲ್ಲಿ ನಡೆಯುವ ಕಲಾರಾಧನೆ ‘ಹೂವಿನ ಕೊಲು’ ಆಟಕ್ಕೆ ಕರೆದೊಯ್ದರು. ಇದು ಕಲಿಕಾಸಕ್ತರಿಗೆ ಅನುಕೂಲವಾಗಿತ್ತು. ಯಕ್ಷಗಾನದ ಸಣ್ಣ ಸಣ್ಣ ತುಣುಕುಗಳನ್ನು ಹೂವಿನ ಕೋಲು ಸೇವೆಯೊಳಗೆ ಪ್ರದರ್ಶಿಸುತ್ತಿದ್ದರು. ಒಂದು ರೀತಿ ಚಿಕ್ಕ ಮೇಳ ಇದ್ದಂತೆ. ವಂಡಾರು ಬಸವ ಅವರು ಖ್ಯಾತ ಸ್ತ್ರೀ ಪಾತ್ರಧಾರಿ ರಾಮ ನಾಯಿರಿ ಅವರ ಬಂಧುವಾಗಿದ್ದರು. ಹೂವಿನಕೋಲು ಪ್ರದರ್ಶನಗಳಲ್ಲಿ ಭಾಗವಹಿಸಿ ಬಾಬು ಕುಲಾಲರಿಗೆ ಯಕ್ಷಗಾನಾಸಕ್ತಿ ಹೆಚ್ಚಿತು. ಕಲಿತು ಕಲಾವಿದನಾಗಬೇಕೆಂಬ ಛಲವೂ ಹುಟ್ಟಿಕೊಂಡಿತು. ಹೂವಿನ ಕೋಲು ಕಾರ್ಯಕ್ರಮದ ನಡುವೆ ಬಿಡುವಿದ್ದಾಗ ನಾಟ್ಯಾಭ್ಯಾಸವನ್ನು ಮಾಡುತ್ತಿದ್ದರು.

1966ರಲ್ಲಿ ವಂಡಾರು ಬಸವ ಅವರು ಅಮೃತೇಶ್ವರೀ ಮೇಳಕ್ಕೆ ಕರೆದುಕೊಂಡು ಹೋಗಿದ್ದರು. ಬಾಲಗೋಪಾಲರ ವೇಷದಿಂದ ಆರಂಭ. ಅದು ಮೇಳದಲ್ಲಿ ಮೊದಲ ತಿರುಗಾಟ ಬಾಬು ಕುಲಾಲರದ್ದು. ಆಗ ಪ್ರಾಚಾರ್ಯ ಶ್ರೀ ನಾರ್ಣಪ್ಪ ಉಪ್ಪೂರರು ಭಾಗವತರಾಗಿದ್ದರು. ತಿಮ್ಮಪ್ಪ ಮದ್ದಳೆಗಾರರು, ಕೆಮ್ಮಣ್ಣು ಆನಂದ, ಮಾರ್ಗೋಳಿ ಗೋವಿಂದ ಸೇರಿಗಾರ್, ವಂಡಾರು ಬಸವ, ಪೆರ್ಡೂರು ರಾಮ, ನಾವುಂದ ಮಹಾಬಲ ಗಾಣಿಗ ಮೊದಲಾದ ಕಲಾವಿದರ ಒಡನಾಟವು ದೊರಕಿತ್ತು. ಆಗ ಅಮೃತೇಶ್ವರೀ ಮೇಳವು ಬಯಲಾಟಗಳನ್ನು ಮಾತ್ರ ನಡೆಸುತ್ತಿತ್ತು. 2 ವರ್ಷಗಳ ತಿರುಗಾಟದ ನಂತರ ಶ್ರೀ ನಾರ್ಣಪ್ಪ ಉಪ್ಪೂರರ ಮನೆಗೆ ತೆರಳಿ ಅವರ ಪುತ್ರ ಶ್ರೀ ದಾಮೋದರ ಉಪ್ಪೂರರಿಂದ ನಾಟ್ಯ ಕಲಿತರು. ಅವರು ಚೆನ್ನಾಗಿ ನಾಟ್ಯ ಹೇಳಿ ಕೊಡುತ್ತಿದ್ದರೆಂದು ಬಾಬು ಕುಲಾಲರು ಹೇಳುತ್ತಾರೆ.

ಹೀಗೆ ಅಮೃತೇಶ್ವರೀ ಮೇಳದಲ್ಲಿ 5 ವರ್ಷಗಳ ತಿರುಗಾಟ ನಡೆಸಿದರು. ಸಣ್ಣ ಪುಟ್ಟ ವೇಷಗಳನ್ನು ಮಾಡುತ್ತಾ ಪೋಷಕ ಪಾತ್ರಧಾರಿಯಾಗಿಯೇ ಬೆಳೆದರು. ಬಳಿಕ 2 ವರ್ಷ ಮಂದಾರ್ತಿ ಮೇಳದಲ್ಲಿ ತಿರುಗಾಟ( ಮಂದಾರ್ತಿ 1 ಮೇಳ ಇದ್ದ ಸಂದರ್ಭ). ಮತ್ತೆ 2 ವರ್ಷ ಮಾರಣಕಟ್ಟೆ ಮೇಳದಲ್ಲಿ. ಬಳಿಕ ಪುನಃ ಅಮೃತೇಶ್ವರೀ ಟೆಂಟಿನ ಮೇಳದಲ್ಲಿ 2 ವರ್ಷಗಳ ತಿರುಗಾಟ. ಈ ಸಂದರ್ಭದಲ್ಲಿ ಚಿಟ್ಟಾಣಿ, ಗೋಡೆ, ಕೋಟ ವೈಕುಂಠ, ವಾಸುದೇವ ಸಾಮಗ, ಕುಂಜಾಲು, ಕೊಳ್ತಿಗೆ ನಿರಾಯಣ ಗೌಡ, ಹೊಸಂಗಡಿ ರಾಜೀವ ಶೆಟ್ಟಿ ಮೊದಲಾದವರ ಒಡನಾಟವೂ ದೊರಕಿತ್ತು. ಬಳಿಕ ಸಾಲಿಗ್ರಾಮ ಮೇಳದಲ್ಲಿ 1 ವರ್ಷ, ಕಮಲಶಿಲೆ ಮೇಳದಲ್ಲಿ 2 ವರ್ಷ, ಹಾಲಾಡಿ ಮೇಳದಲ್ಲಿ 2 ವರ್ಷ, ಸೌಕೂರು ಮೇಳದಲ್ಲಿ 2 ವರ್ಷ ತಿರುಗಾಟ ನಡೆಸಿದ್ದರು.

ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಿಕೊಂಡರೂ ಪುರುಷ ಪಾತ್ರಗಳಲ್ಲೂ ಎಲ್ಲರೂ ಮೆಚ್ಚುವಂತೆ ಅಭಿನಯಿಸುತ್ತಾರೆ ಬಾಬು ಕುಲಾಲರು. ಕುವಲೆ, ಸುಗರ್ಭೆ, ಮಾಯಾ ಪೂತನಿ, ಯಶೋದೆ, ಮಾಯಾ ಶೂರ್ಪನಖಿ, ಮಾಯಾ ಹಿಡಿಂಬೆ, ಪ್ರಭಾವತಿ, ಮೀನಾಕ್ಷಿ, ಸುದೇಷ್ಣೆ, ಶಚಿ, ದಿತಿ, ಧರ್ಮರಾಯ, ಈಶ್ವರ, ಬ್ರಹ್ಮ, ಪಾರ್ವತಿ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಯಾವ ಸಾತ್ವಿಕ ಪಾತ್ರಗಳನ್ನು ನೀಡಿದರೂ ಮಾಡಬಲ್ಲರು. ಸಹನೆ, ಸರಳತೆಯಿಂದ ಎಲ್ಲರಲ್ಲೂ ನಗುಮುಖದಿಂದಲೇ ವ್ಯವಹರಿಸುತ್ತಾರೆ. ಸಹಕಲಾವಿದರ ಮನವನ್ನು ಗೆದ್ದು ಎಲ್ಲರಿಗೂ ಬೇಕಾದವರಾಗಿ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಳೆದ 33 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಕಟೀಲು 3ನೇ ಮೇಳ ಆರಂಭವಾದ ವರ್ಷ ಬಾಬು ಕುಲಾಲರು 2ನೇ ಮೇಳಕ್ಕೆ ಸೇರಿದ್ದರು. ನಿರಂತರ 33 ವರ್ಷಗಳ ಕಾಲ ಕಟೀಲು 2ನೇ ಮೇಳದಲ್ಲಿ ತಿರುಗಾಟ.

ಅತ್ಯುತ್ತಮ ಪೋಷಕ ಪಾತ್ರಧಾರಿ ಎಂದು ಗುರುತಿಸಿಕೊಂಡರೂ ಅಗತ್ಯ ಬಿದ್ದರೆ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಕಲಾವಿದ ಶ್ರೀ ಬಾಬು ಕುಲಾಲರು. ವೈವಾಹಿಕ ಬದುಕಿನಲ್ಲೂ ತೃಪ್ತರಿವರು. ಇಚ್ಛೆಯನ್ನರಿತು ನಡೆಯುವ ಸತಿ ಲಕ್ಷ್ಮಿ. ಬಾಬು ಕುಲಾಲ್, ಲಕ್ಷ್ಮಿ ದಂಪತಿಗಳಿಗೆ ಮೂವರು ಮಕ್ಕಳು. ಪುತ್ರಿ ಸುಶೀಲ ವಿವಾಹಿತೆ. ಹಿರಿಯ ಪುತ್ರ ಚಂದ್ರ ಉದ್ಯೋಗಿ, ವಿವಾಹಿತ. ಕಿರಿಯ ಪುತ್ರ ರಾಘವೇಂದ್ರ ಉದ್ಯೋಗಿ. ಶ್ರೀ ಬಾಬು ಕುಲಾಲರಿಂದ ಕಲಾಮಾತೆಯ ಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಅವರಿಗೆ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ

ಪದ್ಯಾಣ ಜಯರಾಮ ಭಟ್ – ನಾದೋಪಾಸನೆಯ ಗುಂಗಿನಲ್ಲಿ 

0

ಪದ್ಯಾಣ ಜಯರಾಮ ಭಟ್ (ಫೋಟೋ: ರಾಧಾಕೃಷ್ಣ ರಾವ್. ಯು)

ಯಕ್ಷಗಾನ ಜಯರಾಮ ಭಟ್ಟರಿಗೆ ರಕ್ತಗತವಾಗಿ ಬಂದದ್ದು. ಕಲೆಯ ಬೀಡಾದ ಮನೆಯಲ್ಲಿ ಯಕ್ಷಗಾನ ತಾಳ ನಿನಾದಗಳು ಹುಟ್ಟಿನಿಂದಲೇ ಕಿವಿಗೆ ಕೇಳಿಸುತ್ತಿದ್ದುವು. ಹುಟ್ಟಿನಿಂದಲೇ ಮದ್ದಳೆಯ ಮತ್ತು ಚೆಂಡೆಯ ಪೆಟ್ಟುಗಳನ್ನು ಕೇಳಿಯೇ ಬೆಳೆದದ್ದು. ಸಹೋದರರಲ್ಲಿ ಭಾಗವತರಾದ ಪದ್ಯಾಣ ಗಣಪತಿ ಭಟ್ ಮಾತ್ರ ಶಾಸ್ತ್ರೀಯವಾಗಿ ಯಕ್ಷಗಾನ ಕಲಿತವರು. ಪದ್ಯಾಣ ಜಯರಾಮ ಭಟ್ಟರು ನೋಡಿ, ಕೇಳಿ, ಬಾರಿಸಿ ಕಲಿತವರು.

ಅಜ್ಜ ಪುಟ್ಟು ನಾರಾಯಣ ಭಾಗವತರು ದೊಡ್ಡ ಭಾಗವತರು. ತಂದೆ ಪದ್ಯಾಣ ತಿರುಮಲೇಶ್ವರ ಭಟ್ಟರು ಕೂಡಾ ಕಲಾವಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಜಯರಾಮ ಭಟ್ಟರು ಗಾಯಕನಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆಗ ಭಾವಗೀತೆಗಳನ್ನು ಹಾಡುತ್ತಿದ್ದರು. ಪದವಿ ಶಿಕ್ಷಣವನ್ನು ಮುಗಿಸಿದ ಮೇಲೆ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲಿ ಹೆಚ್ಚಿನ ಕಲಿಕೆಯನ್ನು ಹೊಂದಲು ಅವರಿಗೆ ಅನುಕೂಲವಾಯಿತು.

ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಗಾತ್ರದಲ್ಲಿ ತನಗಿಂತಲೂ ದೊಡ್ಡದಾಗಿದ್ದ ಮದ್ದಳೆ ಯನ್ನು ಸರಾಗವಾಗಿ ಬಾರಿಸಲು ಪ್ರಾರಂಭಿಸಿದರು. ತಂದೆಯವರು ಇತರರಿಗೆ ಕಲಿಸುವುದನ್ನು ನೋಡಿ, ಅವರು ಬಾರಿಸುವುದನ್ನು ನೋಡಿ ಕಲಿಯಲು ಸುರುಮಾಡಿದ್ದ ಜಯರಾಮ ಭಟ್ಟರು ಕಾಲೇಜಿಗೆ ಬಂದಾಗ ಮದ್ದಳೆಯಲ್ಲಿ ಪಳಗಿದ್ದರು. ಕಾಲೇಜಿಗೆ ಹೋಗುತ್ತಿರುವಾಗಲೇ ಪ್ರಮುಖ ಭಾಗವತರ ಜತೆ ಮದ್ದಳೆಯ ಸಾಥ್ ನೀಡಿದ ಅನುಭವವಾಗಿತ್ತು. (ಮಂಡೆಚ್ಚರು ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಅವರು ಮತ್ತು ಪದ್ಯಾಣ ಶಂಕರ ನಾರಾಯಣ ಭಟ್ಟರ ಜೊತೆಗೆ ಜಯರಾಮ ಭಟ್ಟರ ಮದ್ದಳೆವಾದನವನ್ನೂ ಮೆಚ್ಚಿಕೊಂಡಿದ್ದರು.)


‘‘ಅಗರಿ ದೊಡ್ಡ ಭಾಗವತರಿಗೆ, ಕಡತೋಕ, ಮಂಡೆಚ್ಚರು, ಅಗರಿ ರಘುರಾಮ ಭಾಗವತರೇ ಮೊದಲಾದವರ ಜೊತೆಗೂ ಮೃದಂಗ ವಾದನದಲ್ಲಿ ಸಹಕರಿಸಿದ್ದೇನೆ’’ ಎಂದು ಪದ್ಯಾಣ ಜಯರಾಮ ಭಟ್ಟರು ನೆನಪಿಸಿಕೊಳ್ಳುತ್ತಾರೆ.  ಇವರು ಪೂರ್ಣಾವಧಿ ಭಾಗವತನಾಗಿಯೇ ಕಲಾಸೇವೆ ಮಾಡುತ್ತಿದ್ದಾಗ ಎಂಟು ವರ್ಷಗಳ ಹಿಂದೆ ಆರೋಗ್ಯದ ತೊಂದರೆಯಿಂದಾಗಿ ವೈದ್ಯರ ಕಟು ನಿರ್ದೇಶನದಂತೆ ಭಾಗವತಿಕೆಯನ್ನು  ಬಿಟ್ಟರು. ಎರಡು ವರ್ಷ ಹಾಡಬಾರದು ಎಂಬುದಾಗಿ ವೈದ್ಯರು ತಾಕೀತು ಮಾಡಿದ್ದರು. ಆದರೆ ಮೃದಂಗ ಬಾರಿಸಲು ಅನುಮತಿಯೂ ಸಿಕ್ಕಿತು. ಹಾಗೆ ಎರಡು ವರ್ಷಕ್ಕೆ ಬಿಟ್ಟ ಭಾಗವತಿಕೆಯನ್ನು ಜಯರಾಮ ಭಟ್ಟರು ಮತ್ತೆಂದೂ ಮಾಡಲಿಲ್ಲ. ಹಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಈಗ ಸಾ.ಪಾ.ಸಾ. ಹೇಳಲು ಕಷ್ಟವಾಗುತ್ತದೆ ಎನ್ನುತ್ತಾರೆ.

ಕದ್ರಿ ಮೇಳದಲ್ಲಿ 2 ವರ್ಷ, ಕುಂಟಾರು ಮೇಳದಲ್ಲಿ 2 ವರ್ಷ, ಕರ್ನಾಟಕ ಮೇಳದಲ್ಲಿ ಒಂದು ವರ್ಷ, ಹೀಗೆ ಐದು ವರ್ಷಗಳ ಕಾಲ ಭಾಗವತನಾಗಿಯೇ ಕಲಾಸೇವೆ ಮಾಡಿದ್ದರು. ಆಮೇಲೆ ಅನಿವಾರ್ಯ ವಾಗಿ ಮೃದಂಗವಾದಕನಾಗಿ ಮುಂದುವರಿದರು. ಚೆಂಡೆ ಬಾರಿಸುವುದು ಅಪರೂಪ. ಭಾಗವತಿಕೆಯಲ್ಲಿ ಸುಮಾರು ಒಂದು ವರ್ಷ ಪೂಜ್ಯ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳವರಿಂದ ಅನುಗ್ರಹವಾಯಿತು.  ಅವರ ಮಾರ್ಗದರ್ಶನದಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿದ್ದರು.

ಕಾಲೇಜಲ್ಲಿರುವಾಗ ಹಾಡುಗಾರನಾಗಿದ್ದುದು ಮತ್ತು ಸಂಗೀತದ ಬಗ್ಗೆ ಆಸಕ್ತಿಯಿದ್ದುದು ಮುಂದೆ ಇವರಿಗೆ ಭಾಗವತಿಕೆ ಕಲಿಯಲು ಪ್ರೇರಣೆಯಾಯಿತು. ಕೆಲವು ತಿಂಗಳುಗಳ ಕಾಲ ಶಾಸ್ತ್ರೀಯ ಸಂಗೀತವನ್ನೂ ಕಲಿತರು. ಅಂದು ಕಲಿತ ಸಂಗೀತದ ಜ್ಞಾನ ಕೆಲವೊಮ್ಮೆ ಇಂದಿಗೂ ಪ್ರಯೋಜನಕ್ಕೆ ಬರುತ್ತದೆಯಂತೆ. ಈಗಲೂ ಮೇಳಗಳಲ್ಲಿ ಭಾಗವತರು, ಕಲಾವಿದರು ರಾಗ, ತಾಳಗಳ ಬಗ್ಗೆ ಪದ್ಯಾಣ ಜಯರಾಮ ಭಟ್ಟರಲ್ಲಿ ಸಲಹೆಯನ್ನು ಕೇಳುವುದು, ಸಂಶಯವನ್ನು ನಿವಾರಿಸಿಕೊಳ್ಳುವುದು ಎಷ್ಟೋ ಬಾರಿ ನಡೆಯುತ್ತದೆ.

ಪದ್ಯಾಣ ಜಯರಾಮ ಭಟ್ – ಮಗಳು ಸುಜಯಾ – ಪತ್ನಿ ಸುಮಂಗಲಾ

                                       
19-11-1957ರಲ್ಲಿ ಜನಿಸಿದ ಶ್ರೀ ಪದ್ಯಾಣ ಜಯರಾಮ ಭಟ್ಟರು ಪಡೆದದ್ದು B.Com. ಪದವಿ. ತಂದೆ ಪದ್ಯಾಣ ತಿರುಮಲೇಶ್ವರ ಭಟ್, ತಾಯಿ ಸಾವಿತ್ರಮ್ಮ, ವಿವೇಕಾನಂದ ಕಾಲೇಜಿನಲ್ಲಿ B.Com. ಪದವಿ. ಪ್ರಾಥಮಿಕ ವಿದ್ಯಾಭ್ಯಾಸ ಕಲ್ಮಡ್ಕ ಶಾಲೆ ಮತ್ತೆ ಹೈಸ್ಕೂಲ್ ಬಾಳಿಲ ಶಾಲೆಗಳಲ್ಲಿ, ಮೃದಂಗವಾದನದ ಕಲಿಕೆ ಸ್ವಯಂ ನೋಡಿ, ಕೇಳಿ ಮತ್ತು ತಂದೆಯಿಂದ ಹಾಗೂ ಮುಂದೆ ಭಾಗವತಿಕೆ ಕಲಿಕೆ ಎಡನೀರು ಶ್ರೀಗಳಿಂದ ಒಂದು ವರ್ಷಗಳ ಕಾಲ. (ಪದ್ಯಾಣ ಶಂಕರನಾರಾಯಣ ಭಟ್ಟರು ಇವರ ಸಣ್ಣಜ್ಜನ ಮಗ. ಇವರಿಗೆ ಚಿಕ್ಕಪ್ಪನಾಗಬೇಕು.)
ಪತ್ನಿ : ಶ್ರೀಮತಿ ಸುಮಂಗಲಾ. ಮಗಳು : ಸುಜಯಾ – M.B.A. ಪದವೀಧರೆ. ಮಗಳು ಸುಜಯಾ ಯಕ್ಷಗಾನ ಕಲಾವಿದೆ, ಪುತ್ತೂರು ಶ್ರೀಧರ ಭಂಡಾರಿಯವರ ಶಿಷ್ಯೆ.‘ಯಕ್ಷಕೂಟ’ ಪುತ್ತೂರು ಮಕ್ಕಳ ತಂಡದಲ್ಲಿ ಸಕ್ರಿಯ ಸದಸ್ಯೆಯಾಗಿದ್ದರು. ಹಲವಾರು ವೇಷಗಳನ್ನು ನಿರ್ವಹಿಸಿದ್ದರು.


ಅನುಭವ : ಕರ್ನಾಟಕ ಮೇಳ ಒಂದು ವರ್ಷ, ಕದ್ರಿ ಮೇಳ 2 ವರ್ಷ, ಕುಂಟಾರು ಮೇಳ ಎರಡು ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಅನುಭವ. ಹೀಗೆ ಐದು ವರ್ಷ ಭಾಗವತರಾಗಿ ತಿರುಗಾಟ. ಆಮೇಲೆ ಮಂಗಳಾದೇವಿ ಮೇಳದಲ್ಲಿ ಎರಡು ವರ್ಷಗಳ ಕಾಲ ಭಾಗವತ ಮತ್ತು ಮದ್ದಳೆಗಾರರಾಗಿ ತಿರುಗಾಟ. ಆಮೇಲೆ ಎಡನೀರು ಮೇಳ ಮತ್ತು ಹೊಸನಗರ ಮೇಳಗಳಲ್ಲಿ ಸುಮಾರು 12 ವರ್ಷಗಳಿಗೂ ಹೆಚ್ಚಿನ ತಿರುಗಾಟದ ಅನುಭವ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ಮುಖ್ಯ ಮದ್ದಳೆಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದೇಶ ಪ್ರವಾಸ : ಕುವೈಟ್, ಸತತ ಎರಡು ವರ್ಷಗಳಲ್ಲಿ ಅಮೇರಿಕಾ ಪ್ರವಾಸ.
ಉದ್ಯಮಿಯಾಗಿ : ಹೋಟೆಲ್ ಉದ್ಯಮಿಯಾಗಿ ಮೂರು ವರ್ಷಗಳ ಅನುಭವ. ಬೆಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಹೋಟೆಲ್ ನಡೆಸುತ್ತಿದ್ದರು. ಇದಕ್ಕೂ ಮೊದಲು 1985ರಿಂದ 1987ರ ವರೆಗೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದರು. ಅದಕ್ಕೂ ಮೊದಲು ಎಡನೀರು ಮಠದಲ್ಲಿ ಸ್ವಾಮೀಜಿಯವರ ಆಪ್ತನಾಗಿ ಕೆಲಸ ಮಾಡಿದ್ದರು.


ಬೆಳ್ಳಾರೆಯಲ್ಲಿ ಜರಗಿದ ಭಾರೀ ಜನಸ್ತೋಮ ಸೇರಿದ ಕರ್ನಾಟಕ ಮೇಳದ ಆಟವೊಂದರಲ್ಲಿ ಕುತೂಹಲಕಾರಿ ಪ್ರಸಂಗವೊಂದು ನಡೆಯಿತು. ಆ ದಿನದ ಆಟಕ್ಕೆ ಅನಿವಾರ್ಯ ಕಾರಣದಿಂದಾಗಿ ಶ್ರೀ ದಾಮೋದರ ಮಂಡೆಚ್ಚರು ರಜೆಯಲ್ಲಿದ್ದರು. ಯುವ ಭಾಗವತರಾಗಿದ್ದ ದಿನೇಶ ಅಮ್ಮಣ್ಣಾಯರು ಅಸೌಖ್ಯದಿಂದ ಬಳಲುತ್ತಿದ್ದರು. ಆ ದಿನ ಪದ್ಯಾಣ ಜಯರಾಮ ಭಟ್ಟರು ಆಟವೊಂದನ್ನು ಮುಗಿಸಿ ಹಗಲು ನಿದ್ರಿಸಿದ್ದರು. ಬೆಳ್ಳಾರೆ ಆಟದ ಸಂಘಟಕರು ಆ ದಿನ ಕಾರಲ್ಲಿ ಕಲ್ಮಡ್ಕದ ಪದ್ಯಾಣರ ಮನೆಗೆ ಹಾಜರ್. ಹೊಸ ಪ್ರಸಂಗ, ತುಳು ಪ್ರಸಂಗ ಬೇರೆ. ಪ್ರಾರಂಭದಲ್ಲಿ ಅಸಮ್ಮತಿ ಸೂಚಿಸಿದರೂ ಸಂಘಟಕರು ಅಸಹಾಯಕತೆ ತೋಡಿಕೊಂಡಾಗ ವಿಧಿಯಿಲ್ಲದೆ ಹೊರಟರು.

ಆಟ ನಡೆಯುವ ಸ್ಥಳ ತಲುಪಿದಾಗ ಶ್ರೀ ದಿನೇಶ ಅಮ್ಮಣ್ಣಾಯರು ಅನಾರೋಗ್ಯದಲ್ಲಿದ್ದರೂ ಪದ್ಯ ಹೇಳುತ್ತಿದ್ದುದು ಕಂಡುಬಂತು. ದಿನೇಶ ಅಮ್ಮಣ್ಣಾಯರಿಗೆ ವಿಶ್ರಾಂತಿಯ ಅವಶ್ಯಕತೆ ಖಂಡಿತಾ ಇತ್ತು ಎಂದು ಮನಗಂಡ ಪದ್ಯಾಣ ಜಯರಾಮ ಭಟ್ಟರು ಆ ರಾತ್ರಿಯ ಆಟದಲ್ಲಿ ಭಾಗವತಿಕೆ ಮಾಡಿ ಆಟಕ್ಕೆ ಮತ್ತು ಪ್ರೇಕ್ಷಕರಿಗೆ ರಸಭಂಗವಾಗದಂತೆ ನೋಡಿಕೊಂಡರು. ಇದು ಒಂದು ಅಪೂರ್ವ ಅನುಭವ ಎಂದ ಜಯರಾಮ ಭಟ್ಟರು ನೆನಪಿಸಿಕೊಳ್ಳುತ್ತಾರೆ.


ಒಂದೆರಡು ದಿನಗಳ ನಂತರ ಜಯರಾಮ ಭಟ್ಟರನ್ನು ಭಾಗವತಿಕೆಗೆ ಕರೆಯಲು ಕರ್ನಾಟಕ ಮೇಳದ ಯಜಮಾನರು ಮನೆಗೆ ಜನ  ಕಳಿಸಿದರು. ಭಾಗವತ ದಿನೇಶ ಅಮ್ಮಣ್ಣಾಯರಿಗೆ ಅನಾರೋಗ್ಯದ ಕಾರಣದಿಂದ ಕೆಲವಾರು   ದಿನಗಳ ರಜೆ ಮಾಡಬೇಕಾಗಿ ಬಂತು. ಅದಕ್ಕಾಗಿ ಸುಮಾರು 15 ದಿನಗಳ ಕಾಲ ಪದ್ಯಾಣ ಜಯರಾಮ ಭಟ್ಟರು ಕರ್ನಾಟಕ ಮೇಳದಲ್ಲಿ ಪುನಃ ತಿರುಗಾಟ ಮಾಡಬೇಕಾಯಿತು.
‘‘ಆ 15 ದಿನಗಳ ಕಾಲ ಶ್ರೀ ದಾಮೋದರ ಮಂಡೆಚ್ಚರ ಜೊತೆಗೆ ಭಾಗವಹಿಸಿದ್ದು ಮತ್ತು ತಿರುಗಾಟ ಮಾಡಿದ್ದು ನನಗೆ ದೊಡ್ಡ ಲಾಭದ ಹಾಗೂ ಹೆಮ್ಮೆಯ ವಿಷಯ’’ ಎಂದು ಪದ್ಯಾಣ ಜಯರಾಮ ಭಟ್ಟರು ವಿನೀತಭಾವದಿಂದ ನುಡಿಯುತ್ತಾರೆ.

ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ (01-12-2020)

ಮೇಳಗಳ ಇಂದು/ನಾಳೆಯ ಯಕ್ಷಗಾನ ಪ್ರದರ್ಶನಗಳ ವಿವರ 
ಮೇಳಇಂದು/ದಿನಾಂಕಸ್ಥಳಪ್ರಸಂಗ
ಶ್ರೀ ಧರ್ಮಸ್ಥಳ ಮೇಳ01-12-2020ಶ್ರೀ ಕ್ಷೇತ್ರದಲ್ಲಿ ಶ್ರೀ ಶನೀಶ್ವರ ಮಹಾತ್ಮೆ 
ಶ್ರೀ ಪಾವಂಜೆ ಮೇಳ 01-12-2020ಪಚ್ಚಿನಡ್ಕ, ಕಳ್ಳಿಗೆಶ್ರೀ ದೇವಿ ಮಹಾತ್ಮೆ
ಶ್ರೀ ಬಪ್ಪನಾಡು ಮೇಳ01-12-2020ಶ್ರೀ ಕ್ಷೇತ್ರದಲ್ಲಿಪಾಂಡವಾಶ್ವಮೇಧ
 ನಾಳೆ/ದಿನಾಂಕ  
ಶ್ರೀ ಧರ್ಮಸ್ಥಳ ಮೇಳ02-12-2020ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 02-12-2020ಪಾವಂಜೆ, ಹಳೆಯಂಗಡಿಮಾನಿಷಾದ 
ಶ್ರೀ ಬಪ್ಪನಾಡು ಮೇಳ02-12-2020ಮುಲ್ಕಿ ವೆಂಕಟರಮಣ ದೇವಸ್ಥಾನದಲ್ಲಿ