Tuesday, March 10, 2026
Home Blog Page 367

ಅಹುದೇ ಎನ್ನಯ ರಮಣ….

ಸಾಂದರ್ಭಿಕ ಚಿತ್ರ

ಅವನು ಮತ್ತು ಇವನು ಒಳ್ಳೆಯ ವಯೋವೃದ್ಧ ಸ್ನೇಹಿತರು.
ಆಗಾಗ ಭೇಟಿಯಾಗುವುದಿತ್ತು.ಇಬ್ಬರೂ ಚರ್ಚಿಸದ ವಿಷಯಗಳಿಲ್ಲ. ಸಾಮಾನ್ಯ ವಿಷಯಗಳಿಂದ ಹಿಡಿದು ಸಾಹಿತ್ಯ, ಕಲೆ, ರಾಜಕೀಯ, ಕ್ರೀಡೆ ಹೀಗೆ ಎಷ್ಟೆಷ್ಟೋ ವಿಷಯಗಳು ಮಾತಿನ ನಡುವೆ ಬಂದು ಹೋಗುತ್ತಿತ್ತು, ನಿರರ್ಗಳ ಚರ್ಚೆ ಎಂದೂ ದಾರಿ ತಪ್ಪಿರಲಿಲ್ಲ. ಆದರೆ ಇಂದೇಕೋ ಇಬ್ಬರ ನಡುವೆ ಎಂದಿನ ಮಾತುಕತೆ ಇನ್ನೂ ಪ್ರಾರಂಭ ವಾಗಿರಲಿಲ್ಲ. ನಡುವೆ ಮೌನದ ಗೋಡೆ ಮನೆಮಾಡಿತ್ತು. ಎಷ್ಟು ಹೊತ್ತು ಅಂತ ಹೀಗೆ ಕುಳಿತಿರಬಲ್ಲರು… ಮೊದಲು ಅವನೇ ಮಾತಿಗೆ ತೊಡಗಿದ.


“ಏನಿವತ್ತು ಮೋಡ ಕವಿದ ಹಾಗಿದೆಯಲ್ಲಾ…” ಎಂದ ಅವನು ನಗುತ್ತಾ.  ಇವನು ಕೂಡಾ ಹಾರ್ದಿಕವಾಗಿ ನಗುತ್ತಾ “ಇದು ಚದುರುವ ಮೋಡಗಳು” ಎಂದ
“ಮಳೆ ಬಂದರೆ  ಕಷ್ಟ “ ಅವನೆಂದ.
“ಯಾರಿಗೆ ಕಷ್ಟ? ನನಗಂತೂ ಈ ಸೆಖೆಗೆ ಸಾಕಾಗಿದೆ ಮಾರಾಯ, ಒಮ್ಮೆಮಳೆ ಬಂದರೆ ಸಾಕು ಅಂತ
ಅನಿಸಿಬಿಟ್ಟಿದೆ”
“ನಿನಗೆ ಸಾಕಾಗಿದೆ ಎನ್ನುವುದು ನಿಜವಿರಬಹುದು. ಆದರೆ ಇಂದು ಮಳೆ ಬಂದರೆ ಬೇಸರಿಸುವವರು ತುಂಬಾ ಜನರಿರಬಹುದು”
“ಅದು ಯಾಕೆ ಹಾಗೆ?”
“ಇಷ್ಟೆಲ್ಲಾ ಖರ್ಚು ಮಾಡಿ ಯಕ್ಷಗಾನ ಬಯಲಾಟ ಕಾರ್ಯಕ್ರಮ ಇಟ್ಟುಕೊಂಡಿದ್ದಾರಲ್ಲಾ, ಕಲಾಭಿಮಾನಿಗಳಿಗೆ ಭ್ರಮ ನಿರಸನವಾದೀತು.”


“ಅದೂ ಹೌದಲ್ಲಾ.. ನಾನು ಆ ಬಗ್ಗೆ ಯೋಚಿಸಿರಲಿಲ್ಲ.”
“ನೀನು  ಯೋಚಿಸುವುದು ನಿನ್ನ ಸಾಹಿತ್ಯ ಮತ್ತು ನಿನ್ನ ಕಥಾಪಾತ್ರಗಳ ಬಗ್ಗೆ ಮಾತ್ರ ಬಿಡು..” ಅವನು ಛೇಡಿಸಿದ.
“ಹಾಗೇನಿಲ್ಲ ಮಾರಾಯ, ನನಗೂ ಯಕ್ಷಗಾನ ಎಂದರೆ ಇಷ್ಟ ಎಂದು ನಿನಗೆ ತಿಳಿದಿದೆಯಲ್ಲವೇ?” ಇವನೆಂದ
“ಯಕ್ಷಗಾನದ ವಿಷಯ ಬಂದುದು ಒಳ್ಳೆಯದಾಯಿತು ನೋಡು, ಇದಕ್ಕೆ ಸಂಬಂಧಪಟ್ಟದ್ದು. ಯಕ್ಷಗಾನಕ್ಕೆ ಸಂಬಂಧಿಸಿದ್ದು. ನಿನಗೆ ಒಂದು ಕುತೂಹಲಕರ  ಘಟನೆಯನ್ನು ಹೇಳಬೇಕೆಂದಿದ್ದೆ.  ಅದು ಈಗ ನೆನಪಾಯಿತು ನೋಡು”
ಇವನ  ಕುತೂಹಲ  ಹೆಚ್ಚಾಯಿತು.
“ನೀನು ಕೂಡಾ ಹಿಂದೆ ಖ್ಯಾತ ಯಕ್ಷಗಾನ ಕಲಾವಿದನಾಗಿದ್ದವನು ಅಲ್ವಾ… ಅದೇನು ಸತ್ಯ ಕಥೆಯೋ? ಅಲ್ಲ ಕಾಲ್ಪನಿಕವೋ?” ಎಂದ.
“ನಾನೇನು  ಪ್ರಸಂಗಕರ್ತನಲ್ಲ.. ಸತ್ಯವೋ, ಕಾಲ್ಪನಿಕವೋ ಎಂದು ಹೇಳಲಿಕ್ಕೆ ವಿಮರ್ಶಕನೂ ಅಲ್ಲ, ಯಾರೋ ಹೇಳಿದ್ರು, ನಿನಗೆ ಹೇಳೋಣ ಅನ್ನಿಸಿತು. ನೀನು ಎಷ್ಟಾದರೂ ಕತೆಗಾರ ಅಲ್ವಾ? ಸದ್ಯಕ್ಕೆ ಕೇವಲ ಕಥೆ ಅಂತ ತಿಳಿದುಕೋ” ಎಂದ ಅವನು.
ಇವನು “ಆಯ್ತು ಮಾರಾಯ ಮುದದಿಂದ ಹೇಳು” ಎಂದ ಆಸಕ್ತಿಯಿಂದ.
ಅವನು ಹೇಳತೊಡಗಿದ. ಇವನು ಕೇಳತೊಡಗಿದ.


*********************

‘ತಾದಿ ನದ್ದ ನಕ್ಕತ್ತಾಂ ಕತ್ತಾಂ ತ ತರಿಕಿಟ ಕಿಟತಕ’ ಏಕತಾಳದ ನಡೆಯನ್ನು ಕಲಿಸುತ್ತಿದ್ದ ಚರಣ್ ಆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ.
ಕಾಲೇಜಿನ ವಾರ್ಷಿಕೋತ್ಸವಕ್ಕೆ ಇನ್ನೇನೂ ಕೆಲವೇ ದಿನಗಳು ಉಳಿದಿತ್ತು. ಅಷ್ಟರಲ್ಲಿ ಕಾರ್ಯಕ್ರಮಗಳಲ್ಲಿ ಯಕ್ಷಗಾನವನ್ನು ದಿಢೀರ್ ಸೇರ್ಪಡೆಗೊಳಿಸಲಾಗಿತ್ತು. ಆದರೆ ಯಕ್ಷಗಾನದ ನೃತ್ಯಾಭ್ಯಾಸ ಮಾಡಿದ ಒಂದೆರಡು ವಿದ್ಯಾರ್ಥಿಗಳು ಮಾತ್ರ ಅಲ್ಲಿದ್ದರು. ಅದೂ ಪ್ರಾಥಮಿಕ ಪಾಠ ಮಾತ್ರ ಆಗಿತ್ತು ಅವರಿಗೆ. ಮಿಕ್ಕುಳಿದವರಿಗೆ ಅಭ್ಯಾಸ ಮಾಡಿಸಬೇಕಲ್ಲ ಎಂದು ತಲೆ ಕೆರೆದುಕೊಂಡ ಸ್ವತಃ ಹವ್ಯಾಸೀ ಕಲಾವಿದರಾಗಿದ್ದ ಕನ್ನಡ ಉಪಾನ್ಯಾಸಕರು ಅದಕ್ಕೊಂದು ಸೂಕ್ತ ಕಲಾವಿದನ ಹುಡುಕಾಟವನ್ನು ನಡೆಸಿದರು. ಆಗ ಮೇಳದ ತಿರುಗಾಟದ ಸಮಯವಾದ್ದರಿಂದ ಜನ ಹೊಂದಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅದೂ ಅಲ್ಲದೆ  ಮೇಳದ ಕಾರ್ಯಕ್ರಮಗಳು ದೂರ ದೂರದ ಊರುಗಳಿಗೆ ಬದಲಾವಣೆಯಾಗುತ್ತಾ ಇರುವಾಗ ಸಮಯದ ಹೊಂದಾಣಿಕೆಯೂ ಆಗಬೇಕಿತ್ತು. ಹಗಲು ಕಲಾವಿದರಿಗೆ ನಿದ್ರೆಯ ಸಮಯ, ರಾತ್ರಿ ಪ್ರದರ್ಶನದ ಸಮಯ. ಹಾಗಾಗಿ ಮುಸ್ಸಂಜೆಯ ಹೊತ್ತನ್ನು ನಿಗದಿಪಡಿಸಿದರೂ  ಅದರಲ್ಲಿ ಭಾಗವಹಿಸುವ ವಿದ್ಯಾರ್ಥಿನಿಯರನ್ನು ಹೊತ್ತು ಮೀರುವ ಮೊದಲೇ ಮನೆಗೆ ಕಳುಹಿಸಬೇಕಾದ ಅನಿವಾರ್ಯತೆಯೂ ಇತ್ತು.


ಅಂತೂ ಇಂತೂ ಈ ಸಂದಿಗ್ಧತೆಯ ಸಂಕಟದಲ್ಲಿರುವಾಗಲೇ   ಕನ್ನಡ ಉಪಾನ್ಯಾಸಕರಿಗೆ ಚರಣ್ ನೆನಪಿಗೆ ಬಂದುದು. ಈ ಕಾಲೇಜಿನಲ್ಲೇ ಕಲಿತವನಾದ್ದರಿಂದ ಅವನ ಪರಿಚಯ ಅವರಿಗೆ ಧಾರಾಳವಾಗಿತ್ತು. ತರಗತಿಯಲ್ಲಿ ಸ್ವಲ್ಪ ಕೀಟಲೆಯ ಸ್ವಭಾವದ ಹುಡುಗನಾಗಿದ್ದುದರಿಂದ ಎಲ್ಲಾ ಉಪಾನ್ಯಾಸಕರ ಒಂದು ಕಣ್ಣು ಅವನ ಮೇಲೆಯೇ ಇರುತ್ತಿತ್ತು. ಅದೂ ಅಲ್ಲದೆ ಅವನಿದ್ದ ಮೇಳಗಳ ಪ್ರದರ್ಶನಗಳಿಗೆ ಕೆಲವೊಮ್ಮೆ ಈ ಉಪಾನ್ಯಾಸಕರು ಹೋಗುವುದಿತ್ತು. ಆಗೆಲ್ಲಾ ಚರಣ್ ಧಾವಿಸಿ ಬಂದು ತನ್ನ ಗುರುಗಳಿಗೆ ಮುಂದಿನ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಿಸುವಲ್ಲಿ ನೆರವಾಗುತ್ತಿದ್ದ.
ಆಪತ್ಕಾಲಕ್ಕೆ ಸಿಕ್ಕಿದವನೇ ನಿಜವಾದ ಬಂಧು ಎಂಬಂತೆ ಚರಣ್ ಈ ಹೊತ್ತು ನೆನಪಾದದ್ದು ಒಳ್ಳೆಯದಾಯಿತು ಎಂದುಕೊಂಡರು ಉಪಾನ್ಯಾಸಕರು. ಕೂಡಲೇ ಅವನಿಗೆ ಕರೆ ಮಾಡಿ ತನ್ನ ಅಸಹಾಕತೆಯನ್ನು ತಿಳಿಸಿ ಈ ಕಡಿಮೆ ಸಮಯದಲ್ಲಿ ಆತನಿಂದ ಸಹಾಯವನ್ನು ಅಪೇಕ್ಷಿಸಿದರು. ಚರಣ್ ಸಂತೋಷದಿಂದ ಒಪ್ಪಿಕೊಂಡರೂ ದೂರದೂರಲ್ಲಿ ಪ್ರದರ್ಶನಗಳಿದ್ದರೆ ಬರಲು ಕಷ್ಟವಾಗಬಹುದೆಂದೂ ಅದರ ಬದಲು ಕಾಲೇಜಿಗೆ ದೂರವಿಲ್ಲದ ಸ್ಥಳಗಳಲ್ಲಿನ ಪ್ರದರ್ಶನದ ದಿನ ಅರ್ಧ ದಿನವಿಡೀ ನೃತ್ಯವನ್ನು ಕಲಿಸುವುದಾಗಿ  ಒಪ್ಪಿಕೊಂಡ. ಅದರಂತೆಯೇ ಮೊದಲೇ ದಿನಗಳನ್ನು ನಿಶ್ಚೈಸಿಕೊಂಡು ಚರಣ್ ಕಾಲೇಜಿಗೆ ಬಂದು ಹೋಗುತ್ತಿದ್ದ.


ಅಂದು ಆ ಸಣ್ಣ ಹಂತದ ಯಕ್ಷಗಾನ ತರಗತಿಯ ಮೊದಲ ದಿನ. ಕೆಲವು ಮಂದಿ ಹುಡುಗಿಯರೂ ಇದ್ದರು. ಚರಣ್‍ಗೆ ಸಂಕೋಚವಾಯ್ತು. ‘ಈ ಹುಡುಗಿಯರಿಗೆ ಹೇಗೆ ಕಲಿಸುವುದು’ ಎಂದುಕೊಂಡ ಮನಸ್ಸಿನಲ್ಲೇ.. ಅದೂ ಅಲ್ಲದೆ ಕೆಲವು ಹುಡುಗಿಯರ ತಮಾಶೆ ಮಾಡುವುದು ಮತ್ತು ಹಿಂದಿನಿಂದ ನಗುವ ಸ್ವಭಾವ ಆತನಿಗೆ ಹೊಸತಲ್ಲ. ತನ್ನ ಕಾಲೇಜಿನ ದಿನಗಳಲ್ಲಿಯೂ ಇದೇ ಸಂದರ್ಭಗಳನ್ನು ಎದುರಿಸಿದ್ದಾನಾದುದರಿಂದ ಹೇಗಪ್ಪಾ ಇವರನ್ನು ಸಂಭಾಳಿಸುವುದು ಎಂದುಕೊಂಡ. ‘ಇರಲಿ, ಹಾಗೇನಾದರೂ ತಂಟೆ, ತಕರಾರುಗಳಿದ್ದರೆ ಉಪಾನ್ಯಾಸಕರಲ್ಲೇ ಹೇಳಿಬಿಡುವುದು, ಇದು ನನ್ನಿಂದಾಗದ ಕೆಲಸ’ ಎಂದು ನಿಶ್ಚೈಸಿದ.

ಸಣ್ಣ ಪ್ರಸಂಗವಾದ್ದರಿಂದ ಅದರಲ್ಲಿ ಬರುವ ತಾಳಗಳನ್ನು ಮಾತ್ರ ಕಲಿಸಿದರೆ ಸಾಕು ಎಂದುಕೊಂಡ.  ಸಮಯದ ಅಭಾವವಿರುವುದರಿಂದ ನಾಟ್ಯ ವೈವಿಧ್ಯತೆಗಳು ಮತ್ತು ಚಾಲೂ ಕುಣಿತಗಳನ್ನು ಉಪಯೋಗಿಸದೆ ಬರಿಯ ಹಾಡಿನ ಭಾವಸಹಿತ ನಡೆ, ಬಿಡಿತ, ಮುಕ್ತಾಯಗಳನ್ನು ಕಲಿಸಿದರೆ ಸಾಕಲ್ಲವೆ ಎಂದು ಉಪಾನ್ಯಾಸಕರಲ್ಲಿ ಕೇಳಿದ. ಅವರು “ಧಾರಾಳ ಸಾಕು, ಎಲ್ಲಾ ತಾಳಗಳನ್ನು ಅಗತ್ಯ ಇಲ್ಲದಿದ್ದರೆ ಕಲಿಸುವುದು ಬೇಡ, ಅದು ಸಾಧ್ಯವೂ ಇಲ್ಲ ಈ ಕೆಲವು ದಿನಗಳಲ್ಲಿ. ಕೆಲವು ಸುಲಭದ ತಾಳಗಳಲ್ಲಿ ಮಾತ್ರ ಪದ್ಯ ಹೇಳಲು ಭಾಗವತರನ್ನು ಒಪ್ಪಿಸುವ” ಎಂದರು. ಚರಣ್‍ಗೆ ನಗು ಬಂತು. ಉಪಾನ್ಯಾಸಕರೂ ನಕ್ಕು “ಮತ್ತೇನು ಮಾಡುವುದು ಮಾರಾಯ” ಎಂದರು.
ಅಂದು ಮೊದಲ ದಿನ ಚರಣ್ ಪ್ರಾರಂಭದ ನಿರ್ದೇಶನಗಳನ್ನು ಹಾಗೂ ಕೆಲ ಮಾಹಿತಿಗಳನ್ನು ನೀಡಿ ಏಕತಾಳದ ನಡೆಯನ್ನು ಕಲಿಸತೊಡಗಿದ. ಸುಧನ್ವಾರ್ಜುನ  ಪ್ರಸಂಗವನ್ನು ಆಯ್ದು ಕೊಂಡಿದ್ದರಿಂದ ಅದರಲ್ಲಿ ಬರುವ ಪಾತ್ರಗಳನ್ನು ಹಾಗೂ ಪದ್ಯಗಳನ್ನು ಆ ಮೊದಲೇ ಭಾಗವತರೊಂದಿಗೆ ಕುಳಿತು ಚರ್ಚಿಸಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಡ್ಡೋಲಗದ ಪ್ರವೇಶವನ್ನೂ ಅದಕ್ಕೆ ಮೊದಲು ಹೇಳಿಕೊಡಬೇಕಾಗಿತ್ತು. ಅದಕ್ಕೂ ಮೊದಲು  ಏಕತಾಳದ ನಡೆ ಮತ್ತು ಬಿಡಿತದ ಬಗ್ಗೆ ವಿವರಿಸಿದ. ಹಾಗೂ ಬಾಯಿ ತಾಳದೊಂದಿಗೆ ಹೆಜ್ಜೆ ಹಾಕಿ ಅನುಸರಿಸಲು ಹೇಳಿದ. ಸುಧನ್ವ ಮತ್ತು ಪ್ರಭಾವತಿ ಪಾತ್ರ ಮಾಡುವವರು ಇಬ್ಬರೂ ಹುಡುಗಿಯರೇ ಆದ್ದರಿಂದ ಪಾತ್ರೋಚಿತ ಪ್ರಣಯ ದೃಶ್ಯಗಳಲ್ಲಿ ಅಭಿನಯಿಸಲು ಮುಜುಗರ ಪಡಬೇಕಿಲ್ಲ ಎಂದು ಚರಣ್ ಯೋಚಿಸಿದ.

ಎಲ್ಲರೂ ಏಕತಾಳದ ಬಾಯಿತಾಳವನ್ನು ಹೇಳುತ್ತಾ ಹೆಜ್ಜೆ ಹಾಕುತ್ತಿದ್ದರು. ಪ್ರಭಾವತಿಯ ಪಾತ್ರ
ಮಾಡಬೇಕಾದ ಹುಡುಗಿ ಕಿರಣ ಮಾತ್ರ ಮೊಬೈಲ್  ನೋಡುತ್ತಾ  ಅದರಲ್ಲೇ ತಲ್ಲೀನಳಾಗಿದ್ದಳು. ಚರಣ್‍ಗೆ  ಇದು ಸರಿಯೆನಿಸಲಿಲ್ಲ.  “ಕಿರಣ, ಇಲ್ಲಿ ಬನ್ನಿ” ಎಂದು ಕೂಗಿ ಕರೆದ. ಕೂಡಲೇ ಏನು ಎನ್ನುವಂತೆ ಹತ್ತಿರ ಬಂದಳು.
“ನೀವು ಕೂಡಾ ಕಲಿಯಿರಿ. ಇಲ್ಲದಿದ್ದರೆ  ಸಮಯಕ್ಕಾಗುವಾಗ ಗೊತ್ತಾಗುವುದಿಲ್ಲ” ಎಂದ.
“ಆದರೆ ನನಗೆ ಪ್ರಭಾವತಿಯ ಪಾತ್ರದ ಪದ್ಯಕ್ಕೆ ಮಾತ್ರ ಕಲಿಸಿ, ಇದೆಲ್ಲಾ ಯಾಕೆ?” ಎಂದಳು ಕಿರಣ
“ಇಲ್ಲ ಇದು ಏಕತಾಳದ ನಡೆ, ಎಲ್ಲಾ ಪಾತ್ರಕ್ಕೂ ಬೇಕಾಗುತ್ತದೆ. ಪ್ರಭಾವತಿಯ ಒಂದೆರಡು ಪದ್ಯಗಳು ಕೂಡಾ ಏಕತಾಳದಲ್ಲಿದೆ. ಅಲ್ಲದೆ ಎಲ್ಲವನ್ನೂ ನೋಡಿ ಕೊಂಡರೆ  ಒಳ್ಳೆಯದು, ಸಮಯ, ಸಂದರ್ಭ ಬಂದರೆ ಯಾವ ಪಾತ್ರವನ್ನು ಮಾಡಲು ಕೂಡಾ ತಯಾರಾಗಿರಬೇಕು. ಅಕಸ್ಮಾತ್ ಯಾರಾದರೂ ಅನಿವಾರ್ಯ
ಕಾರಣಗಳಿಂದಾಗಿ ಬರಲಾಗದಿದ್ದರೆ ಆಗ ಇನ್ನೊಬ್ಬರು ಮಾಡಲೇ ಬೇಕಾಗುತ್ತದೆ ಎಂದ”
“ಸರಿ” ಎಂದು ಅವರನ್ನು ಕೂಡಿಕೊಂಡಳು ಕಿರಣ. ಯಾಕೋ ಅವನ ಮಾತು ಇಷ್ಟವಾಯಿತು ಅವಳಿಗೆ.

ಏನೋ ಆಕರ್ಷಣೆಯಿದೆ ಅವನ ಮಾತುಗಳಲ್ಲಿ. ಮತ್ತೆ ತಿರುಗಿ ನೋಡಿದಳು ಅವನನ್ನು. ಅವನು ಮಾತ್ರ ಹೆಜ್ಜೆ ಹಾಕಿ ತೋರಿಸುವುದರಲ್ಲಿ ಮಗ್ನನಾಗಿದ್ದ.
ಚರಣ್ ಆ ದಿನ ಕೆಲವು ತಾಳಗಳ ಒಂದೊಂದು ನಡೆ, ಬಿಡಿತ, ಮುಕ್ತಾಯಗಳ ಹೆಜ್ಜೆಗಾರಿಕೆಯನ್ನು ಹೇಳಿ ಕೊಟ್ಟು, ಅವುಗಳ ಬಾಯಿತಾಳವನ್ನು ಬರೆಸಿ ಮರುದಿನ ಸರಿಯಾಗಿ ಅಭ್ಯಾಸ ಮಾಡಿ ಬರುವಂತೆ ತಿಳಿಸಿದ. ಹಾಗೂ ಮರುದಿನ ತಾನು ಅವರವರ ಪದ್ಯಗಳಿಗೆ ನಾಟ್ಯವನ್ನು ಕಲಿಸಲು ಆರಂಭಿಸುವುದಾಗಿ ಹೇಳಿ ತನ್ನ ಆ ದಿನದ ಆಟದ ಕ್ಯಾಂಪ್‍ಗೆ ತೆರಳಿದ.
ಅವನು ಹೋದ ನಂತರವೂ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದರಲ್ಲಿ ತಲ್ಲೀನರಾಗಿದ್ದರು. ಸ್ವಲ್ಪ ಮಟ್ಟಿಗೆ ಕನ್ನಡ ಉಪಾನ್ಯಾಸಕರೂ ಯಕ್ಷಗಾನದ ನಾಟ್ಯಾದಿ ಅಂಗಗಳನ್ನು ಬಲ್ಲವರಾಗಿದ್ದರಿಂದ ಅವರ ಮೇಲುಸ್ತುವಾರಿಯಲ್ಲಿ ಅಭ್ಯಾಸ ನಡೆಸಿದರು. ಕಿರಣಳಿಗೂ ನಾಟ್ಯದ ಸಣ್ಣ ಪಾಠ ಆಗಿತ್ತು. ಶಾಲೆಯಲ್ಲಿ ಕಲಿಯುತ್ತಿರುವಾಗ ಇದೇ ರೀತಿಯ ಸಂದರ್ಭದಲ್ಲಿ ಒಂದೆರಡು ತಾಳಗಳ ಪರಿಚಯ ಆಗಿತ್ತು. ಅದ್ದರಿಂದ ಒಮ್ಮೆ ಹೇಳಿದ್ದನ್ನು ಬಹಳ ಬೇಗ ಕಲಿತಿದ್ದಳು. ಅಲ್ಲದೆ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದುದರಿಂದ ನಾಟ್ಯದ ಲಯ ಕಂಡುಕೊಂಡಿದ್ದಳು.

ಕಿರಣ ಯಾಕೋ ಅವನ ಬಗ್ಗೆಯೇ ಅಲೋಚಿಸುತ್ತಿದ್ದಳು, ರಂಗದಲ್ಲಿ  ಅವನ  ವೇಷವನ್ನು ನೋಡಿದ್ದಳು.  ಉತ್ತಮ  ಪುಂಡುವೇಷಧಾರಿಯಾಗಿದ್ದ ಅವನಿಗೆ ಅಭಿಮಾನಿಗಳ ಸಂಖ್ಯೆ ಸ್ವಲ್ಪ ಹೆಚ್ಚೇ ಇದ್ದಿತು. ಅವಳಿಗೂ ಅವನ ವೇಷ ಇಷ್ಟವಾಗಿತ್ತು. ಆದರೆ ವೇಷ ಕಳಚಿದ ಮೇಲೆ ಇದೇ ಮೊದಲ ಸಾರಿ  ಮಾತನಾಡಿದ್ದಳು. ವೇಷದಲ್ಲಿ ಮಾತ್ರವಲ್ಲ, ಮಾಮೂಲಿ ಉಡುಪಿನಲ್ಲಿಯೂ ರೂಪವಂತ ಎಂದು ಕೊಂಡಳಾಕೆ. ಅಂತೂ ಅನ್ಯಮನಸ್ಕಳಾಗಿಯೇ ಆಕೆ ಆ ದಿನ ಮನೆಗೆ ತೆರಳಿದಳು.

ಮರುದಿನ ಹಿಂದಿನ ದಿನದ ಪಾಠದ ಅಭ್ಯಾಸವನ್ನು ಪರೀಕ್ಷಿಸಿ ತೃಪ್ತಿಪಟ್ಟು ಚರಣ್  ಮುಂದಿನ  ಅಭ್ಯಾಸಗಳನ್ನು ಮಾಡಿಸುತ್ತಾ  ಹೋದ. ಅರ್ಜುನನ ಒಡ್ಡೋಲಗದ ಸನ್ನಿವೇಶಗಳನ್ನು ಮೊಟಕುಗೊಳಿಸಿ  ಹಂಸದ್ವಜನ  “ಮಂತ್ರಿಗಳಿರ ಕೇಳಿರೀಗ…”  ಪದ್ಯವನ್ನು ಪಾತ್ರಧಾರಿಗೆ ಹೇಗೆ ಅಭಿನಯಿಸುವುದೆಂದು ತೋರಿಸಿದ. ಕಿರಣ ಮಾತ್ರ ಅವನ ನಾಟ್ಯದ ವೈಖರಿ, ಬೋಧನಾ ಸಾಮರ್ಥ್ಯಕ್ಕೆ ಬೆರಗಾಗಿದ್ದಳು. ಮುಂದೆ ಸುಧನ್ವನ ಪ್ರವೇಶ ಪದ್ಯಗಳಿಗೆ ಒಂದಷ್ಟು ಅಭ್ಯಾಸ ನಡೆಯಿತು. ಅಮೇಲೆ ಕಿರಣಳ ಸರದಿ. “ಸತಿಶಿರೋಮಣಿ ಪ್ರಭಾವತಿ ಸೊಬಗಿನಲಿ, ರತಿಯ ಸೋಲಿಪ ರೂಪಿನ..” ಕಿರಣ  ತನ್ನ  ಅವಕಾಶಕ್ಕಾಗಿ ಕಾಯುತ್ತಿದ್ದಳು. 

ಲಗುಬಗನೆ ಬಂದವಳನ್ನು ಚರಣ್ ನೋಡಿ ‘ಇವಳು ಥೇಟ್ ರತಿಯೆ’ ಎಂದುಕೊಂಡ. ಸುಧನ್ವ ಮತ್ತು ಪ್ರಭಾವತಿಯ ಸ್ವಲ್ಪ ಪದ್ಯಗಳಿಗೆ ಕತ್ತರಿ ಹಾಕಿದ ಚರಣ್ “ಕಳವಳಿಸಬೇಡ ಮನದಿ ಕುಂತಿಸುತಗಳುಕುವವನಲ್ಲ ರಣದಿ” ಪದ್ಯಕ್ಕೆ ತಾನೆ ನರ್ತಿಸಿ ತೋರಿಸಿದ. ರಂಗದಲ್ಲಿ ಆತನಿಗೆ ಎಷ್ಟೋ ಬಾರಿ ಸುದನ್ವನ ಪಾತ್ರ ಮಾಡಿದ ಅನುಭವ ಇತ್ತು. ಅವನ ಈ ಪರಿಯ ನೃತ್ಯದ ಸೊಬಗನ್ನು ನೋಡಿ ಕಿರಣ ತಾನು ಪ್ರಭಾವತಿಯಾದದ್ದಕ್ಕೆ ಬಹಳಷ್ಟು ಹಿಗ್ಗಿದಳು. ನಿಧಾನವಾಗಿ ತಾನು ಆತನಿಗೆ ಮನಸೋಲುತ್ತಿರುವೆನೆಂದಾಕೆ ಭಾವಿಸಿದಳು. ಆದರೆ ಇದ್ಯಾವುದರ ಅರಿವಿಲ್ಲದ ಚರಣ್ ಅವಳನ್ನು ಎಚ್ಚರಿಸಿ ಸುದನ್ವನ ಅಭಿನಯಕ್ಕೆ ಪ್ರಭಾವತಿಯ ಭಾವಪೂರ್ಣ ಪ್ರತಿಕ್ರಿಯೆ ಹೇಗಿರಬೇಕೆಂದು ಹೇಳಿಕೊಟ್ಟ. ಆದರೆ ಕಿರಣ ಮಾತ್ರ ಆತನೇ ಸುದನ್ವ ತಾನೇ ಪ್ರಭಾವತಿ ಎಂಬಂತೆ ಭಾವಿಸಿದಳು.


ಅಂತೂ ಇಂತೂ ಆ ಪ್ರಸಂಗ ಅಭ್ಯಾಸ ಪೂರ್ತಿ ಮುಗಿಯಿತು. ಆ ಅಭ್ಯಾಸದ ದಿನಗಳಲ್ಲಿ ಕಿರಣ ಮಾತ್ರ ಎಲ್ಲರಿಗಿಂತ ಮೊದಲೇ ಹಾಜರಾಗುತ್ತಿದ್ದಳು. ಅಲ್ಲದೆ ಅವನು ಹೇಳಿಕೊಟ್ಟ ನಡೆಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಅವನ ಮೆಚ್ಚುಗೆಗೆ ಪಾತ್ರಳಾದಳು. ಕೆಲವೊಮ್ಮೆ ಬೇಕೆಂದೇ ಸಂಶಯಗಳನ್ನು  ವ್ಯಕ್ತಪಡಿಸಿ ಅವನ ಸಲಹೆಗಳನ್ನು ಕೇಳುತ್ತಿದ್ದಳು. ತನಗೆ ಅದರ ಬಗ್ಗೆ ಸಂಶಯವಿಲ್ಲದಿದ್ದರೂ ಅವನ ಸಾನ್ನಿಧ್ಯ  ಅವಳಿಗೆ ತೃಪ್ತಿ ತರುತ್ತಿದ್ದುದರಿಂದ ಹಾಗೆ ಮಾಡುತ್ತಿದ್ದಳು. ಆದರೆ ಇದರ ಬಗ್ಗೆ ಆತನೇನೂ ತಲೆ ಕೆಡಿಸಿಕೊಂಡಿರಲಿಲ್ಲ.


ವಾರ್ಷಿಕೋತ್ಸವದ ದಿನ ಬಂತು. ಕಾಲೇಜಿನಲ್ಲಿ ಸಂಭ್ರಮದ ವಾತಾವರಣ. ಕಿರಣ ಆ ದಿನ ಸಂಭ್ರಮದ ಸಡಗರದ ಶೃಂಗಾರದೊಂದಿಗೆ ಕಾಲೇಜಿಗೆ ಬಂದಳು. ಕಾರಣ ಆ ದಿನದ ಅವರ ಪ್ರದರ್ಶನಕ್ಕೆ ಚರಣ್ ಕೂಡಾ ಬರುತ್ತೇನೆಂದು ಹೇಳಿದ್ದ. ಕಾಲೇಜಿಗೆ ಬಂದವಳಿಗೆ ಮೊದಲು ಎದುರಾದದ್ದು ಹಂಸಧ್ವಜ ಪಾತ್ರಧಾರಿ ವಿನಯ್. ಇವಳನ್ನು ಕಂಡ ಕೂಡಲೇ
ವಿನಯ್ ಕರೆದ. “ಏನು?” ಎನ್ನುತ್ತ ಸಮೀಪಕ್ಕೆ ಬಂದಳು.
“ಇವತ್ತು ಸ್ವಾತಿ ಬರುವುದಿಲ್ಲ, ಅವಳಿಗೆ ಟೈಫಾಯಿಡ್ ಅಂತೆ, ಅಶೋಕ್ ಸರ್‍ಗೆ ಸುಧನ್ವ ಪಾತ್ರ ಯಾರು ಮಾಡುವುದು ಅಂತ ಚಿಂತೆ ಆಗಿತ್ತು. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿತು” ಅಂದ.
“ಹೋ, ಹೌದಾ.. ಛೇ.. ಹಾಗಾದರೆ ಸುದನ್ವ ಯಾರು ಮಾಡ್ತಾರೆ? ಅಶೋಕ್ ಸರ್ ಮಾಡ್ತಾರ?”


“ ಅವರು ಸುದನ್ವ ಮಾಡಿದ್ರೆ ಪ್ರಭಾವತಿಗೆ ಕನ್ನಡ ಪಾಠ ಮಾಡ್ತಾರೆ ರಂಗಸ್ಥಳದಲ್ಲಿ.. ಅವರಲ್ಲ. ಅವರು ಚರಣ್ ಸರ್ ಗೆ  ಫೋನ್ ಮಾಡಿ ಅವರನ್ನು ಒಪ್ಪಿಸಿದ್ರು, ಚರಣ್ ಸರ್ ಒಪ್ಪಿದಾರಂತೆ. ಸುದನ್ವ ಮಾಡಿ ಅಮೇಲೆ ಮೇಳದ ಆಟಕ್ಕೆ ಹೋಗ್ತಾರಂತೆ”
ಕಿರಣಳ ಎದೆ ಢವ ಢವ ಹೊಡೆಯಲು ಆರಂಭಿಸಿತು. ಚರಣ್ ಮತ್ತು ತಾನು ಜೋಡಿಯಾಗಿ ರಂಗದಲ್ಲಿ ಆಡುವುದು… ನಿಜವಾಗಿಯೂ ತಾವಿಬ್ಬರೂ ಜೋಡಿಹಕ್ಕಿಗಳಾಗಿ ಜೀವನವೆಂಬ ರಂಗದಲ್ಲಿ ಹಾರಾಡುವುದು.. ಈ ಕಲ್ಪನೆಯೇ ಅವಳಿಗೆ ಅತೀವ ಸುಖವನ್ನು ಕೊಟ್ಟಿತು.
‘‘ಏನಾಯ್ತು?” ಅಂದ ವಿನಯ್.
“ಏನಿಲ್ಲ.. ಪಾಪ ಸ್ವಾತಿ ಹೇಗಿದ್ದಾಳೋ” ಎಂದು ಭಾವ ಮರೆಮಾಚಿದಳು
“ಹಾಗೇನೂ ತೊಂದರೆಯಿಲ್ಲವಂತೆ, ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದಾರಂತೆ”
“ಆಯ್ತು, ಹೋಗೋಣ, ತಯಾರಿ ಆಗ್ಬೇಕಲ್ವ”

ಅಂದು ಕಿರಣ ತಾನು ತಾನಾಗಿರಲಿಲ್ಲ. ಬಣ್ಣ ಹಚ್ಚುತ್ತಿರುವಾಗಲೂ ಏನೇನೋ ಮಧುರ ಪುಳಕಗಳು ಮೈ ತುಂಬಾ.. ನಡುವೆ ಚರಣ್ ಆಗಾಗ ಬಂದು ಕೆಲವು ಸೂಚನೆಗಳನ್ನು ಕೊಡುತ್ತಿದ್ದ. ವೇಷ ತಯಾರಾಗಿ ಪ್ರವೇಶದ ಮೊದಲು ರಂಗದಲ್ಲಿ ಯಾವ ರೀತಿ ಹೋಗಬೇಕು, ಹೇಗೆ ಹೆಜ್ಜೆ ಹಾಕಬೇಕು ಎಂಬುದರ ಬಗ್ಗೆ ವಿವರಿಸಿದ.
“ಜೀವನದಲ್ಲಿ ಕೂಡಾ ನಾವಿಬ್ಬರು ಜೊತೆಯಾಗಿ ಹೇಗೆ ಹೆಜ್ಜೆ ಹಾಕಬೇಕು ಎಂಬುದನ್ನು ಹೇಳು ರಮಣಾ” ಎಂದಳು ಆಕೆ ಮನಸ್ಸಿನಲ್ಲಿಯೇ.


   ಅಂದು ರಂಗದಲ್ಲಿ ಕಿರಣ ತಾನು ತಾನಾಗಿರಲಿಲ್ಲ. ಯಾವುದೋ ಭ್ರಮಾಧೀನ ಮಾದಕತೆಯ ಪ್ರಪಂಚದಲ್ಲಿ ತಾನಿರುವಂತೆ ಆಕೆಗೆ ಭಾಸವಾಗುತ್ತಿತ್ತು. ಚರಣ್ ಕೂಡಾ ಅವಳ ಸ್ಥಿತಿಯಲ್ಲಿನ ಬದಲಾವಣೆಯನ್ನು ಗಮನಿಸಿದ. ಅವನಿಗೂ ಅವಳ ಈ ನಡೆ ಅರ್ಥವಾಗಿತ್ತು. ಅವನ ಮನದಲ್ಲಿಯೂ ಸಂತಸ ಮಿಶ್ರಿತ ಅಚ್ಚರಿ. ಸುಧನ್ವನ ಜೊತೆಗಿನ ಸಂಭಾಷಣೆಯನ್ನು ಮುಗಿಸಿ ಜೊತೆಯಾಗಿ ರಂಗದಿಂದ ಜೊತೆಯಾಗಿ ನಿರ್ಗಮಿಸುವಾಗ
“ಅಹುದು.. ನೀನೇ ಎನ್ನಯ ರಮಣ” ಎಂದು ಅವನ ಕಿವಿಯಲ್ಲಿ ಉಸುರಿದಳು.


         ಬಬ್ರುವಾಹನ ಪ್ರಸಂಗದ ‘ಅಹುದೇ ಎನ್ನಯ ರಮಣ’ ಪದ್ಯವನ್ನು ಕಿವಿಯಲ್ಲಿ ಗುಟ್ಟಾಗಿ ಯಾಕೆ ಹೇಳಿದಳು ಎಂದು ಅವನಿಗೆ ಅರ್ಥವಾಗಿತ್ತು! ದಿಗ್ಭ್ರಮೆಯಿಂದ ಚೇತರಿಸಿಕೊಂಡ ಚರಣ್ ಸುದನ್ವನ ಮುಂದಿನ ಭಾಗದ ಅಭಿನಯಕ್ಕೆ ಪುನಃ ರಂಗಕ್ಕೆ ಪ್ರವೇಶಿಸಿದ. ಯುದ್ದದ ನಂತರ ಪ್ರಸಂಗ ಮುಕ್ತಾಯವಾಗಿ ಚೌಕಿಗೆ ಬಂದು ಸುತ್ತಲೂ ಕಣ್ಣು ಹಾಯಿಸಿದಾಗ ಕಿರಣ ಕಾಣಸಿಗಲಿಲ್ಲ. ತನ್ನ ಮುಖಾಮುಖಿ ಯಾಗುವುದನ್ನು ತಪ್ಪಿಸಿಕೊಂಡಿದ್ದಾಳೆ ಅಂದುಕೊಂಡ. ವಿನಯ್ ನನ್ನು ಕರೆದು ಅವಳ ಬಗ್ಗೆ ವಿಚಾರಿಸಿದ. “ಅವಳು ಮೈಗೆ ಹುಶಾರಿಲ್ಲ ಎಂದು ತಂದೆಯ ಜೊತೆಗೆ ಮನೆಗೆ ತೆರಳಿದ್ದಾಳೆ” ಎಂದವನು ಹೇಳಿದ.
ಚರಣ್‍ಗೆ ಏನೋ ಕಳೆದುಕೊಂಡ ಅನುಭವ. ಆದರೂ ಕರ್ತವ್ಯ ಎಚ್ಚರಿಸಿತು. ಮೇಳದ ಆಟಕ್ಕೆ ತಡವಾಗುತ್ತದೆ ಎಂದು ಕನ್ನಡ ಉಪಾನ್ಯಾಸಕರಾದ ಅಶೋಕ್‍ರ ಅನುಮತಿಯನ್ನು ಪಡೆದು ಮೇಳದ ಆಟಕ್ಕೆ ತೆರಳಿದ.
ಇದಾದ ನಂತರ ಹಲವು ಬಾರಿ ಚರಣ್ ಕಿರಣಳನ್ನು ಕಾಣಲೋಸುಗ ಏನಾದರೂ ನೆಪ ಮಾಡಿ ಕಾಲೇಜಿಗೆ ಬರುತ್ತಿದ್ದ.
ಒಂದೆರಡು ಬಾರಿ “ಅವಳಿಲ್ಲ, ರಜೆ” ಎಂಬ ಉತ್ತರ ಕೇಳಿ  ಕಂಗಾಲಾದ. ‘ಎಲ್ಲಿಗೆ ಹೋದಳು ಇವಳು. ನನ್ನಲ್ಲಿ ಬರಡಾಗಿ ಬತ್ತಿ ಹೋಗಿದ್ದ ಪ್ರೀತಿಯ ಸೆಲೆಯನ್ನು ಉಕ್ಕಿಸಿ ಅದು ಭೋರ್ಗೆರೆಯಲು ಪ್ರಾರಂಭವಾದಾಗ ತಾನು ಕಾಣದಾದಳಲ್ಲ, ಛೇ’ ಎಂದುಕೊಂಡ. ಮತ್ತೊಮ್ಮೆ ಪ್ರಯತ್ನಿಸೋಣ ಎಂದು ಅವಳಿದ್ದ ಕಾಲೇಜಿಗೆ ಬಂದಾಗ ಸಿಕ್ಕಿದ ಉತ್ತರ ಕೇಳಿ ಅವನಿಗೆ ದಿಕ್ಕೇ ತೋಚ ದಂತಾಗಿತ್ತು.
                   “ಅವಳ ಅಪ್ಪನಿಗೆ ಎಲ್ಲಿಗೋ ದೂರದೂರಿಗೆ ವರ್ಗವಾದ ಕಾರಣ ಅವಳು ಕಾಲೇಜಿನಿಂದ ವರ್ಗಾವಣಾ ಪತ್ರ ತೆಗೆದುಕೊಂಡು ಹೋಗಿದ್ದಾಳೆ” ಹುಚ್ಚನಂತಾದ ಅವನು ಈ ಯಕ್ಷಗಾನದಿಂದ ಅವಳು ಹತ್ತಿರವಾದಳು. ಇದರಲ್ಲಿದ್ದರೆ ನನಗೆ ಸದಾ ಅವಳು ನೆನಪಾಗುತ್ತಾಳೆ ಎಂದು ಮೇಳಕ್ಕೆ  ರಾಜೀನಾಮೆ ನೀಡಿ ಬೇರೊಂದು ಊರಿಗೆ ಉದ್ಯೋಗ ನಿಮಿತ್ತ ತೆರಳಿದ.

*   *   *******

ಇಷ್ಟು ಹೇಳಿ ಅವನು ನಿಲ್ಲಿಸಿದ.  ಇವನಿಗೆ  ರಸಭಂಗವಾದಂತೆನಿಸಿತು.
“ಇದೇನು ಅಪೂರ್ಣ ಕಥೆ?” ಎಂದ ಇವನು
“ಪೂರ್ಣವಾಯ್ತಲ್ಲ, ಇನ್ನೇನು ಬೇಕು?” ಎಂದ ಅವನು
“ಅಲ್ಲ ಕಿರಣ ಏನಾದಳು? ಚರಣ್ ಎಲ್ಲಿ ಹೋದ?” ಇವನು ಕೇಳಿದ.
“ಹೋ ಅದಾ.. ಅವಳು ಒಮ್ಮೆ ಚರಣ್ ಗೆ ಕಾಣಸಿಕ್ಕಿದ್ದಳು, ಪರಿಸ್ಥಿತಿಯ ಒತ್ತಡದಿಂದ ಅವಳು ಹಾಗೆ ಮಾಡಿದ್ದಂತೆ, ಚರಣ್ ಅವಳನ್ನು ಕ್ಷಮಿಸಿದ್ದಾನೆ. ಅವಳು ಈಗ ಅಜ್ಜಿಯಾಗಿದ್ದಾಳೆ, ಮೊಮ್ಮಕ್ಕಳೂ ಇದ್ದಾರೆ ಅವಳಿಗೆ” ಎಂದ ಅವನು.
“ಅದು ಸರಿ, ಅಂದು ಮೇಳ ಬಿಟ್ಟ ಚರಣ್ ಈಗೆಲ್ಲಿ?” ಎಂದ ಇವನು
“ ಇಲ್ಲಿಯೇ ಇದ್ದಾನೆ ನಿನ್ನೆದುರು… ಚರಣ್ ನಾನೇ ಕಣೋ” ಅವನೆಂದ ನಗುತ್ತಾ…
 ಇವನು ಬೆಚ್ಚಿಬಿದ್ದ.. ಮೌನ.. ಅಲ್ಲಿ ನೀರವ ಮೌನ ಅವರಿಸಿತ್ತು.

ಬಣ್ಣದ ಬದುಕಿನಿಂದ ಸ್ವಯಂ ನಿವೃತ್ತರಾದ ಬಣ್ಣದ ವೇಷಧಾರಿ ಕಲ್ಮಡ್ಕ ಸುಬ್ಬಣ್ಣ ಭಟ್ (ಅಮೈ)

ಯಕ್ಷಗಾನ ಕಲಾವಿದರಾಗಬೇಕೆಂದು ಬಯಸಿದವರೆಲ್ಲರಿಗೂ ಕಲಾವಿದರಾಗುವ ಭಾಗ್ಯವು ಸಿದ್ಧಿಸುವುದಿಲ್ಲ. ಕಲಾವಿದರಾಗುವ ಅವಕಾಶ ಸಿಕ್ಕಿದರೂ ಅವರೆಲ್ಲರೂ ರಂಗದಲ್ಲಿ ಹೊಳೆದು ಕಾಣಿಸಿಕೊಳ್ಳರಾರರು. ಪ್ರತಿಭೆಯ ಜತೆ ಅವಕಾಶಗಳು, ಯೋಗ ಭಾಗ್ಯಗಳು ಕೂಡಿಕೊಂಡಾಗ ಮಾತ್ರ ಆತ ಕಲಾವಿದನಾಗಿ ಪ್ರಸಿದ್ಧಿಯನ್ನು ಹೊಂದುತ್ತಾನೆ. ಎಲ್ಲವೂ ತನಗನುಕೂಲವಾಗಿ ಒದಗಿ, ಉತ್ತಮ ಕಲಾವಿದನಾಗಿ ರಂದಲ್ಲಿ ಮೆರೆದು, ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದ ಅನೇಕ ಕಲಾವಿದರು ಅನಿವಾರ್ಯ ಕಾರಣಗಳಿಂದ ಕಲಾ ಬದುಕಿಗೆ ವಿದಾಯ ಹೇಳಿ ಮನೆಯ ಹೊಣೆಗಾರಿಕೆಯನ್ನು ಹೊತ್ತದ್ದೂ ಇದೆ.

ಅಂತಹಾ ಕಲಾವಿದರ ವೇಷಗಳನ್ನು ನೋಡಿದ ಪ್ರೇಕ್ಷಕರು “ಛೇ , ಅವರು ಮೇಳ ಬಿಡಬಾರದಿತ್ತು. ಯಕ್ಷಗಾನ ಕಲಾವಿದನಾಗಿಯೇ ಮುಂದುವರಿಯಬೇಕಿತ್ತು. ಕಲಾಬದುಕಿಗೆ ವಿದಾಯ ಹೇಳಿ ಮನೆಯಲ್ಲಿ ಉಳಿಯಬಾರದಿತ್ತು. ಇದು ಯಕ್ಷಗಾನಕ್ಕೂ, ಪ್ರೇಕ್ಷಕರಾದ ನಮಗೂ ಬಲು ದೊಡ್ಡ ನಷ್ಟ” ಹೀಗೆ ಹೇಳಿರುವುದನ್ನೂ ನಾವು ಕೇಳಿರುತ್ತೇವೆ.

ಆದರೆ ಇದು ಅನಿವಾರ್ಯ. ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಬಿಡಬೇಕಾದ ಅನಿವಾರ್ಯತೆಗೆ ಕಲಾವಿದನು ಸಿಲುಕಿರುತ್ತಾನೆ. ಕಲಾವಿದನಾಗಿಯೇ ಮುಂದುವರಿದರೆ ಮನೆಯ ಸುವ್ಯವಸ್ಥೆಗೆ ಕೊರತೆಯಾದರೆ? ಮನೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡರೆ ಯಕ್ಷಗಾನವು ಒಬ್ಬ ಉತ್ತಮ ಕಲಾವಿದನನ್ನು ಕಳೆದುಕೊಂಡಾಗುತ್ತದೆ. ಇಂತಹ ಗೊಂದಲದ ಸಂದಿಗ್ಧ ಸ್ಥಿತಿಯಲ್ಲಿ ಚೆನ್ನಾಗಿ ಯೋಚಿಸಿಯೇ ಕಲಾವಿದರು ನಿರ್ಣಯಕ್ಕೆ ಬರುತ್ತಾರೆ. ಕಲಾವಿದರಿಗೆಂದಲ್ಲ, ಎಲ್ಲರಿಗೂ ಮನೆ ಮತ್ತು ಮನೆಯವರು ಮುಖ್ಯ ತಾನೇ? ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲೇ ಬೇಕು. ಹೀಗೆ ಕಲಾ ಬದುಕಿಗೆ ಅನಿವಾರ್ಯವಾಗಿ ವಿದಾಯ ಹೇಳಿ ಉತ್ತಮ ಕಲಾವಿದರನೇಕರು ಮೇಳ ಬಿಟ್ಟು ಮನೆ ವಾರ್ತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡದ್ದಿದೆ. ಅಂತಹ ಕಲಾವಿದರಲ್ಲೊಬ್ಬರು ಶ್ರೀ ಕಲ್ಮಡ್ಕ ಸುಬ್ಬಣ್ಣ ಭಟ್. 

ಶ್ರೀ ಸುಬ್ಬಣ್ಣ ಭಟ್ಟರ ಹುಟ್ಟೂರು ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಅಮೈ. ಶ್ರೀ ಕೆ. ನಾರಾಯಣ ಭಟ್ ಮತ್ತು ಶ್ರೀಮತಿ ಶಂಕರಿ ಅಮ್ಮ ದಂಪತಿಗಳ ಪುತ್ರನಾಗಿ ಜನನ. (1955 ನವೆಂಬರ್ 5ರಂದು ಜನನ) ಇವರ ಮೂಲ ಮನೆ ಕಾಸರಗೋಡು ತಾಲೂಕಿನ ಪೆರಡಾಲ ಸಮೀಪದ ಕೊಡ್ವಕೆರೆ ಎಂಬಲ್ಲಿ. ದಾಖಲೆಗಳಲ್ಲಿ ಇವರ ಹೆಸರು ಸುಬ್ರಾಯ ಭಟ್ ಎಂದು. ಆದರೆ ಕಲಾವಿದರೆಲ್ಲರೂ ಸುಬ್ಬಣ್ಣ ಭಟ್ ಎಂದೇ ಕರೆಯುತ್ತಿದ್ದರು. ಓದಿದ್ದು ಹತ್ತನೇ ತರಗತಿಯ ವರೆಗೆ. ಕಲ್ಮಡ್ಕ ಶಾಲೆ ಮತ್ತು ಬಾಳಿಲ ವಿದ್ಯಾ ಬೋಧಿನೀ ಪ್ರೌಢ ಶಾಲೆಯಲ್ಲಿ. ಆಗ ಕಲ್ಮಡ್ಕದ ಸಂಗಮ ಕಲಾ ಸಂಘವು ಕಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿತ್ತು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಅಮೈ ಸುಬ್ಬಣ್ಣ ಭಟ್ಟರು ಸಂಗಮ ಕಲಾ ಸಂಘದ ರೂವಾರಿ ಕೆರೆಕೋಡಿ ಪಂಡಿತ ಗಣಪತಿ ಭಟ್ಟರಿಂದ ಯಕ್ಷಗಾನ ಅಭ್ಯಸಿಸಿದ್ದರು. ಕಲ್ಮಡ್ಕ ಸಂಗಮ ಕಲಾ ಸಂಘದ ಪ್ರದರ್ಶನದಲ್ಲಿ ರಂಗ ಪ್ರವೇಶ. ಹೆಚ್ಚಿನ ನಾಟ್ಯ ಕಲಿಯಲು ಕೆರೆಕೋಡಿ ಗಣಪತಿ ಭಟ್ಟರ ಸಲಹೆ.

ಅದೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಲಿತ ಕಲಾ ಕೇಂದ್ರ ಆರಂಭವಾಗಿತ್ತು. ಸದ್ರಿ ಕೇಂದ್ರದ ಮೊದಲ ತಂಡದ ವಿದ್ಯಾರ್ಥಿಯಾಗಿ ಸೇರ್ಪಡೆ. ಶ್ರೀ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ. ಆಗ ಹಿಮ್ಮೇಳ ಗುರುಗಳಾಗಿದ್ದವರು ಮಾಂಬಾಡಿ ನಾರಾಯಣ ಭಾಗವತರು. ತರಬೇತಿ ಕೇಂದ್ರದಲ್ಲಿ ಪದ್ಯಾಣ ಗಣಪತಿ ಭಟ್, ಚೆನ್ನಪ್ಪ ಶೆಟ್ಟಿ, ಡಿ.ಮನೋಹರ ಕುಮಾರ್, ಉಬರಡ್ಕ ಉಮೇಶ ಶೆಟ್ಟಿ, ಮುಂಡಾಜೆ ಸದಾಶಿವ, ಮುಂಡಾಜೆ ಬಾಲಕೃಷ್ಣ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಮಾಡಾವು ಕೊರಗಪ್ಪ ರೈ ಮೊದಲಾದವರು ಸುಬ್ಬಣ್ಣ ಭಟ್ಟರ ಸಹಪಾಠಿಗಳಾಗಿದ್ದರು. ಲಲಿತ ಕಲಾ ಕೇಂದ್ರದಲ್ಲಿ ತರಬೇತಿಯನ್ನು ಹೊಂದಿ ಸಂಗಮ ಕಲಾ ಕೇಂದ್ರದ ಪ್ರದರ್ಶನಗಳಲ್ಲಿ ಸಕ್ರಿಯರಾಗಿದ್ದರು. ವೇಷಗಾರಿಕೆ, ಮೇಕಪ್, ವೇಷಭೂಷಣಗಳ ನಿರ್ವಹಣೆ, ಕಲಿಕಾಸಕ್ತರಿಗೆ ತರಬೇತಿ ಈ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಎಲ್ಲಾ ವಿಚಾರಗಳಿಗೆ ಪಟ್ಟಾಜೆ ವೈದ್ಯ ಗಣೇಶ ಭಟ್ಟರ ನಿರ್ದೇಶನ, ಪ್ರೋತ್ಸಾಹವು ದೊರಕಿತ್ತು. ಸುಮಾರು ಎಂಟು ವರ್ಷಗಳ ಕಾಲ ಊರ, ಪರವೂರ ಮತ್ತು ಕಲ್ಮಡ್ಕ ಸಂಘದ ಪ್ರದರ್ಶನಗಳಲ್ಲಿ ಕಲಾಸೇವೆಯನ್ನು ಮಾಡಿದ್ದರು.

1981ರಲ್ಲಿ ಕಟೀಲು ಎರಡನೇ ಮೇಳಕ್ಕೆ ಪುಂಡುವೇಷಧಾರಿಯಾಗಿ ಸೇರ್ಪಡೆ. ನಾಲ್ಕು ವರ್ಷಗಳ ಬಳಿಕ ಬಣ್ಣದ ವೇಷಧಾರಿಯಾಗಿ ಭಡ್ತಿ. ಆಗ ಒಂದನೇ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಮಹಾಲಿಂಗ ಅವರ ನಿರ್ದೇಶನ, ಸಹಕಾರವು ದೊರಕಿತ್ತು. ಬಳಿಕ ಕಟೀಲು 3ನೇ ಮೇಳಕ್ಕೆ 2ನೇ ಬಣ್ಣದ ವೇಷಧಾರಿಯಾಗಿ ಸೇರ್ಪಡೆ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆ. ಮೂರನೇ ಮೇಳದಲ್ಲಿ ಐದು ತಿರುಗಾಟ. ಎಲ್ಲಾ ತರದ ವೇಷಗಳನ್ನೂ ಮಾಡಬೇಕಾಗಿ ಬಂದಿತ್ತು. ಬಳಿಕ ಕಟೀಲು ಒಂದನೇ ಮೇಳಕ್ಕೆ. ಕುಬಣೂರು ಶ್ರೀಧರ ರಾಯರ ಭಾಗವತಿಕೆಯಡಿ ಎರಡು ತಿರುಗಾಟ. ಬಳಿಕ ವೈಯುಕ್ತಿಕ ಸಮಸ್ಯೆಗಳಿಂದಾಗಿ ಕಲಾ ಬದುಕಿಗೆ ನಿವೃತ್ತಿಯನ್ನು ಘೋಷಿಸಿ ಮನೆಗೆ ಮರಳಿದ್ದರು. ಆದರೂ ಹಲವು ವರ್ಷಗಳ ಕಾಲ ವೇಷ ಮಾಡಿದ್ದರು. 

ಪ್ರಸ್ತುತ ಇವರು ಕೃಷಿಕರು. ಅತ್ಯುತ್ತಮ ಕೃಷಿಕರೆಂದು ಹೆಸರು ಗಳಿಸಿದ್ದಾರೆ. ಕಟೀಲು ಮೇಳದ ತಮ್ಮ ಹದಿಮೂರು ತಿರುಗಾಟಗಳಲ್ಲಿ ಪುಂಡು, ಕಿರೀಟ, ಬಣ್ಣದ ವೇಷಗಳಲ್ಲಿ ಕಲ್ಮಡ್ಕ ಸುಬ್ಬಣ್ಣ ಭಟ್ಟರು ಕಾಣಿಸಿಕೊಂಡಿದ್ದರು. ಕಿರೀಟ ವೇಷಗಳಲ್ಲಿ ದೇವೇಂದ್ರ, ಅರ್ಜುನ, ಹಿರಣ್ಯಾಕ್ಷ, ಇಂದ್ರಜಿತು ಹೆಸರು ನೀಡಿದ ಪಾತ್ರಗಳು. ಹೆಚ್ಚಿನ ಎಲ್ಲಾ ಬಣ್ಣದ ವೇಷಗಳನ್ನೂ ನಿರ್ವಹಿಸಿರುತ್ತಾರೆ. ಕಲ್ಮಡ್ಕ ಸುಬ್ಬಣ್ಣ ಭಟ್ಟರು ಹೆಣ್ಣು ಬಣ್ಣದ ವೇಷಗಳನ್ನು ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದರೆಂದು ಪ್ರೇಕ್ಷಕರು ಹೇಳುತ್ತಾರೆ. ಕೇಶಾವರೀ ಕಿರೀಟದ ವೇಷಗಳೂ ಇವರಿಗೆ ಒಳ್ಳೆಯ ಹೆಸರನ್ನು ಗಳಿಸಿ ಕೊಟ್ಟಿತ್ತು.

1994ರಲ್ಲಿ ಗಂಗಮ್ಮ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕಲ್ಮಡ್ಕ ಸುಬ್ಬಣ್ಣ ಭಟ್, ಗಂಗಮ್ಮ ದಂಪತಿಗಳಿಗೆ ಏಕಮಾತ್ರ ಪುತ್ರಿ ಕು| ಅಪರ್ಣಾ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿನಿ. ಸರಳ, ಸಜ್ಜನ, ವಿನಯವಂತರಾದ ಶ್ರೀಯುತರು ತೆರೆದುಕೊಳ್ಳುವ ಸ್ವಭಾವದವರಲ್ಲ. ಸಹೃದಯೀ ಹಿರಿಯ ಕಲಾವಿದರಾದ ಕಲ್ಮಡ್ಕ ಶ್ರೀ ಸುಬ್ಬಣ್ಣ ಭಟ್ ಮತ್ತು ಮನೆಯವರಿಗೆ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಶುಭ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

ರಾಜರ್ಷಿ ಡಾ. ಶ್ರೀ ವೀರೇಂದ್ರ ಹೆಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

ಕಲಾಪೋಷಕರೂ ಅಸಂಖ್ಯಾತ ಜನರಿಗೆ ಅನ್ನದಾತರೂ, ಆಶ್ರಯದಾತರೂ, ಜನರನ್ನು ಸ್ವ ಉದ್ಯೋಗಿಗಳನ್ನಾಗಿ ಮಾಡುವಲ್ಲಿ ಪ್ರೇರೇಪಿಸಿ ಸಹಾಯಹಸ್ತ ನೀಡುವ ಮಹನೀಯರೂ, ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವುದೇ ಮೊದಲಾದ ಹಲವಾರು ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ  ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಶ್ರೀ ವೀರೇಂದ್ರ ಹೆಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಕರ್ನಾಟಕದ ಕಲೆಯಾದ ಯಕ್ಷಗಾನವನ್ನು ಬೆಳೆಸುವಲ್ಲಿ ತಮ್ಮ ಕೊಡುಗೆ ಅಪಾರ.  

ಇದನ್ನೂ ಓದಿ: ಯಕ್ಷಗಾನ ಶಿಕ್ಷಣ ಶಾಲೆಗಳು ಮತ್ತು ಗುರುಗಳು (ಭಾಗ – 3) ಧರ್ಮಸ್ಥಳ ಲಲಿತ ಕಲಾ ಕೇಂದ್ರ Dharmasthala Lalitha kala kendra

ಯಕ್ಷಾಂಗಣದಿಂದ 8ನೇ ವರ್ಷದ ನುಡಿಹಬ್ಬ – ಹರಿಕೃಷ್ಣ ಪುನರೂರು ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ

ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ನವೆಂಬರ್ ತಿಂಗಳಲ್ಲಿ 8ನೇ ಕನ್ನಡ ನುಡಿ ಹಬ್ಬದ ಪ್ರಯುಕ್ತ ಏರ್ಪಡಿಸಿರುವ ‘ಯಕ್ಷಗಾನ ತಾಳಮದ್ದಳೆ ಪರ್ವ’ ಸಂದರ್ಭ ಶ್ರೇಷ್ಠ ಸಾಧಕರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಲು ನಿರ್ಧರಿಸಿದೆ. 2019-2020ರ ಸಾಲಿಗೆ ಅವಿಭಜಿತ ದ.ಕ. ಜಿಲ್ಲೆಯ ಧಾರ್ಮಿಕ, ಸಾಮಾಜಿಕ ನೇತಾರ, ಉದ್ಯಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಈ ಪುರಸ್ಕಾರ ಸ್ವೀಕರಿಸಲಿದ್ದಾರೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

ಪುನರೂರು ವ್ಯಕ್ತಿ-ವಿಶೇಷ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪ ಪುನರೂರಿನಲ್ಲಿ ಪಟೇಲ್ ವಾಸುದೇವ ರಾವ್ ಮತ್ತು ಲಕ್ಷ್ಮೀ ಅಮ್ಮ ದಂಪತಿಗೆ 1943 ಜೂನ್ 5 ರಂದು ಜನಿಸಿದ ಹರಿಕೃಷ್ಣ ಪುನರೂರು ಅವರು ಮೆಟ್ರಿಕ್ಯುಲೇಶನ್ ಮುಗಿಸಿ ಹೊಟೇಲ್ ಉದ್ಯಮದಲ್ಲಿ ಭದ್ರ ನೆಲೆ ಕಂಡವರು. ಬಳಿಕ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡ ಅವರು ಮೂಲ್ಕಿ ಎಜ್ಯುಕೇಶನ್ ಸೊಸೈಟಿ, ಶಾರದಾ ವಿದ್ಯಾ ಸಂಸ್ಥೆ, ಪಟೇಲ್ ವಾಸುದೇವ ಸ್ಮಾರಕ ಟ್ರಸ್ಟ್ – ಇವುಗಳನ್ನು ಹುಟ್ಟು ಹಾಕಿ ಶಿಕ್ಷಣ ರಂಗದಲ್ಲಿ ಸೇವೆಗೈದರು. ಮೂಲ್ಕಿ, ಕಿನ್ನಿಗೋಳಿ, ಮಂಗಳೂರಿನ ಸಹಕಾರಿ ಸಂಘಗಳಲ್ಲಿ ನಿರ್ದೇಶಕರಾದರು. ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಲ್ಲಿ ಜಿಲ್ಲಾ ಗವರ್ನರ್ ಹುದ್ದೆಗೇರಿ ಅಂಧತ್ವ ನಿವಾರಣೆಗಾಗಿ ತನು-ಮನ-ಧನ ವ್ಯಯಿಸಿ ಪ್ರತಿಷ್ಠಿತ ‘ನೈಟ್ ಆಫ್ ದಿ ಬ್ಲೈಂಡ್’ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರೆಸಿದರು. ಮೂಲ್ಕಿಯ ಸ್ವಂತ ಜಾಗದಲ್ಲಿ 101 ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿ ಬಡವರಿಗೆ ಉಚಿತವಾಗಿ ವಿತರಿಸಿದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳೂರಿನ ಕಾರಣೀಕ ಹನುಮಂತ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿತ್ವ. ಮಂಗಳೂರು ಮಂಗಳಾದೇವಿ ದೇವಸ್ಥಾನ, ಪುನರೂರು ವಿಶ್ವನಾಥ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಹಾಗೂ ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನಗಳಲ್ಲಿ ಸಕ್ರಿಯ ದುಡಿಮೆ, ವಿಶ್ವ ಹಿಂದೂ ಪರಿಷತ್, ಹೊಟೇಲ್ ಮಾಲಕರ ಸಂಘ, ಭಾರತ ಸೇವಾದಳ ಮುಂತಾದ ಸಂಘಟನೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಹರಿಕೃಷ್ಣರ ಸೇವೆ ಗಣನೀಯ.

ಕರ್ನಾಟಕ ಬ್ಯಾಂಕಿನ ನಿರ್ದೇಶಕರಾಗಿ, ವರ್ಧಮಾನ ಪ್ರಶಸ್ತಿ ಪೀಠದ ಉಪಾಧ್ಯಕ್ಷರಾಗಿ, ಪಾಜಕ ಪ್ರತಿಷ್ಠಾನ, ಮಕ್ಕಳ ಸಾಹಿತ್ಯ ಸಂಗಮ, ರಾಗ-ತರಂಗ ಮೊದಲಾದ ಸಂಸ್ಥೆಗಳನ್ನು ಮುನ್ನಡೆಸಿದ ಕೀರ್ತಿ ಅವರದು. ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಜಿಲ್ಲೆ, ತಾಲೂಕು, ಹೋಬಳಿಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದಲ್ಲದೆ, ಸ್ವತಃ ಸಾಹಿತಿಯಲ್ಲದಿದ್ದರೂ ಸಾಹಿತ್ಯ ಪರಿಚಾರಕರಾಗಿ ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹುದ್ದೆಗೇರಿ ಹೊಸ ಇತಿಹಾಸ ನಿರ್ಮಿಸಿದವರು ಪುನರೂರು.


ಲಯನ್ಸ್ ಸಂಸ್ಥೆಯ ಉತ್ತಮ ಸೇವೆಗೆ 10 ಬಾರಿ ಅಂತಾರಾಷ್ಟ್ರೀಯ ಮನ್ನಣೆ, 63 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಡಾ. ಶಿವರಾಮ ಕಾರಂತರಿಂದ `ಪರಿಸರ ಪ್ರೇಮಿ’ ಪುರಸ್ಕಾರ, ಡಾ. ರಾಜಕುಮಾರ್ ಅವರಿಂದ ‘ಕನ್ನಡ ಕಣ್ಮಣಿ’ ಬಿರುದು, ಪೇಜಾವರ ಶ್ರೀ ವಿಶ್ವೇಶ ತೀರ್ಥರಿಂದ ‘ಧರ್ಮದರ್ಶಿ’ ಉಪಾಧಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಲ್ಲದೆ ಈಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶತಮಾನೋತ್ಸವ ಪ್ರಶಸ್ತಿ – ಇತ್ಯಾದಿ ಗೌರವಗಳಿಗೆ ಪಾತ್ರರಾದ ಹರಿಕೃಷ್ಣ ಪುನರೂರು ಅವರದು ಅಗಾಧ ಸಾಧನೆಯ ಮೇರು ವ್ಯಕ್ತಿತ್ವ.

ಇದೇ 2020 ನವೆಂಬರ 29ರಂದು ಮಂಗಳೂರಿನ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ‘ಪಾರಿಜಾತ’ ಸಭಾಂಗಣದಲ್ಲಿ ಜರಗುವ ಯಕ್ಷಾಂಗಣದ ಎಂಟನೆಯ ನುಡಿಹಬ್ಬದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಶಾಸಕ ವೇದವ್ಯಾಸ ಕಾಮತ್ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಪ್ರದಾನ ಮಾಡುವರು. ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಕೆ.ಸಿ. ನಾಯ್ಕ್ ಸಮಾರಂಭವನ್ನು ಉದ್ಘಾಟಿಸುವರು. ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಮೇಯರ್ ದಿವಾಕರ ಪಾಂಡೇಶ್ವರ, ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮಹಾಪ್ರಬಂಧಕರಾದ ಸುಜಯ ಯು. ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ.

ರವಿಚಂದ್ರ ಕನ್ನಡಿಕಟ್ಟೆ – ವೇಷಧಾರಿ ಭಾಗವತನಾದ ವಿಸ್ಮಯ

 ತೆಂಕುತಿಟ್ಟಿನ ಯುವ ಭಾಗವತ, ಹನುಮಗಿರಿ ಮೇಳದ ಕಲಾವಿದ- ಶ್ರೀ ರವಿಚಂದ್ರ ಕನ್ನಡಿಕಟ್ಟೆಯವರು  ವೇಷಧಾರಿಯಾಗಿ ಯಕ್ಷಗಾನ ರಂಗವನ್ನು ಪ್ರವೇಶಿಸಿದರೂ ಖ್ಯಾತ ಭಾಗವತನಾದುದು ಒಂದು ಅಚ್ಚರಿ! ಎರಡು ಘಟನೆಗಳೇ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳನ್ನು ನೀಡಿ ವೇಷಧಾರಿಯಾಗಿದ್ದ ರವಿಚಂದ್ರರು ಭಾಗವತರಾದರು.  

ಶ್ರೀ ರವಿಚಂದ್ರ ಕನ್ನಡಿಕಟ್ಟೆ ಇವರು 1980ನೇ ಇಸವಿ ಒಕ್ಟೋಬರ್ 4ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಕನ್ನಡಿಕಟ್ಟೆ ಸಮೀಪದ ಪಜೆಮಾರು ಎಂಬಲ್ಲಿ ಧರ್ಮಣ ಪೂಜಾರಿ ಮತ್ತು ಸುಶೀಲ ದಂಪತಿಗಳಿಗೆ ಮಗನಾಗಿ ಜನಿಸಿದರು. ಕೃಷಿ ಕುಟುಂಬ. ಪಡಂಗಡಿ ಸರಕಾರಿ ಶಾಲೆಯಲ್ಲಿ ಓದು. ಎಸ್.ಎಸ್.ಎಲ್.ಸಿ.ವರೇಗೆ. ಇವರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿ ಹುಟ್ಟಿಕೊಂಡಿತ್ತು.

ಕನ್ನಡಿಕಟ್ಟೆ ಆಸುಪಾಸಿನಲ್ಲಿ ಸುರತ್ಕಲ್ಲು ಮತ್ತು ಕರ್ನಾಟಕ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಯಾವ ಪ್ರದರ್ಶನಗಳನ್ನೂ ಬಿಟ್ಟವರಲ್ಲ. ಬೆಳಗಿನವರೇಗೂ ನೋಡುತ್ತಿದ್ದರು. ಖ್ಯಾತ ಭಾಗವತ ಶ್ರೀ ದಿನೇಶ ಅಮ್ಮಣ್ಣಾಯರ ಹಾಡುಗಾರಿಕೆಗೆ ರವಿಚಂದ್ರರು ಮನಸೋತಿದ್ದರು. ಅವರ ಹಾಡಿನ ಮೋಡಿಗೆ ಒಳಗಾಗಿದ್ದರು. ಆಗ ಆಡಿಯೋ ಕ್ಯಾಸೆಟ್‍ಗಳ ಯುಗ. ಅಮ್ಮಣ್ಣಾಯರ ಹಾಡುಗಳಿದ್ದ ಕ್ಯಾಸೆಟ್‍ಗಳನ್ನು ಕೇಳುವುದು. ಮನೆಯ ಉಳಿದ ಕ್ಯಾಸೆಟ್‍ಗಳ ಹಾಡುಗಳನ್ನು ಡಿಲೀಟ್ ಮಾಡಿಸಿ ಅಮ್ಮಣ್ಣಾಯರ ಹಾಡುಗಳನ್ನು ತುಂಬಿಸಿ ತಂದು ಕೇಳುವುದು, ಬಿಡುವಿನಲ್ಲಿ ರವಿಚಂದ್ರರು ಮಾಡುತ್ತಿದ್ದ ಕೆಲಸ ಇದು. ಹೀಗೆ ಶ್ರೀ ದಿನೇಶ ಅಮ್ಮಣ್ಣಾಯರು ತನ್ನ ಗಾನಾಮೃತ ಸಿಂಚನದಿಂದ ರವಿಚಂದ್ರ ಎಂಬ ಬಾಲಕನ ಮನಸೂರೆಗೊಂಡಿದ್ದರು.

ಹಿಮ್ಮೇಳವಾಗಲೀ, ಮುಮ್ಮೇಳವಾಗಲೀ ಕಲಾವಿದರು ಅರ್ಪಣಾ ಭಾವದಿಂದ ತೊಡಗಿಸಿಕೊಂಡಾಗ, ಎಳೆಯರಿಗೆ ನಾನೂ ಅವರಂತಾಗಬೇಕೆಂಬ ಆಸೆ ಹುಟ್ಟುವುದು ಸಹಜ. 6ನೆಯ ತರಗತಿಯಲ್ಲಿರುವಾಗ ಗೆಜ್ಜೆಪೂಜೆ ಮತ್ತು ಸಿರಿಕೃಷ್ಣಚಂದಪಾಲಿ ತುಳು ಪ್ರಸಂಗಗಳ ಹಾಡುಗಳುಳ್ಳ ಧ್ವನಿಸುರುಳಿಯನ್ನು ತಂದಿದ್ದರು. ಪುತ್ತಿಗೆ ರಘುರಾಮ ಹೊಳ್ಳರ ಹಾಡುಗಳಿಗೆ ಮನಸೋತು ಅವರ ಅಭಿಮಾನಿಯೂ ಆದರು. ಹೀಗೆ ಅಮ್ಮಣ್ಣಾಯರ ಮತ್ತು ಹೊಳ್ಳರ ಅಭಿಮಾನಿಯಾಗಿ ಅವರಿಬ್ಬರ ಹಾಡುಗಳನ್ನು ದಿನಾ ಕೇಳುತ್ತಿದ್ದರು. ಕೇಳಿ ಕೇಳಿ ಪದ್ಯಗಳೆಲ್ಲಾ ಬಾಯಿಪಾಠ!

ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಆಯಿತು. 6ನೇ ತರಗತಿಯಲ್ಲಿರುವಾಗ ಶಾಲಾ ಅಧ್ಯಾಪಕರಾದ ಶ್ರೀ ಅನಂತ ಪದ್ಮನಾಭ ಹೊಳ್ಳರಿಂದ ನಾಟ್ಯ ಕಲಿಕೆ. ಅವರು ಹವ್ಯಾಸೀ ಅತ್ಯುತ್ತಮ ವೇಷಧಾರಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಅವರು ಕಟ್ಟಿ ಬೆಳೆಸಿದ ಪಡಂಗಡಿ ಶಾಲಾ ತಂಡವು ಅತ್ಯುತ್ತಮ ತಂಡವಾಗಿತ್ತು. ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಎಲ್ಲಾ ಶಾಲೆಗಳವರೂ ಈ ತಂಡವನ್ನು ಕರೆಸಿ ಪ್ರದರ್ಶನವನ್ನು ಏರ್ಪಡಿಸಿದ್ದರು. ಶ್ರೀ ರವಿಚಂದ್ರರು ಮೊದಲು ಗೆಜ್ಜೆ ಕಟ್ಟಿದ್ದು ಪಡಂಗಡಿ ಶಾಲೆಯಲ್ಲಿ. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ. ಕೃಷ್ಣಾರ್ಜುನ ಕಾಳಗ ಪ್ರಸಂಗದ ‘ಗಯ’ನ ಪಾತ್ರದಲ್ಲಿ. ಪ್ರವೇಶ ಮಾಡುವಾಗಲೇ ಕಟ್ಟಿದ ತುರಾಯಿ ಕೆಳಗೆ ಜಾರಿತ್ತು. ಹೇಗೋ ಸರಿಪಡಿಸಿಕೊಂಡು ಪಾತ್ರವನ್ನು ನಿರ್ವಹಿಸಿದ್ದರು.

ಸುರತ್ಕಲ್ಲು ಮೇಳದಲ್ಲಿ ಆಗ ಕಲಾವಿದನಾಗಿದ್ದ ಖ್ಯಾತ ಪುಂಡುವೇಷಧಾರ ಶ್ರೀ ವೇಣೂರು ಸದಾಶಿವ ಕುಲಾಲರು ನಾಟ್ಯ ಕಲಿಸಲು ಪಡಂಗಡಿ ಶಾಲೆಗೆ ಬರುತ್ತಿದ್ದರು. ಅವರಿಂದಲೂ ರವಿಚಂದ್ರ ಅವರು ನಾಟ್ಯ ಕಲಿತರು. ಅಧ್ಯಾಪಕ ಶ್ರೀ ಅನಂತಪದ್ಮನಾಭ ಹೊಳ್ಳರ ಸಲಹೆಯಂತೆ ಸುರತ್ಕಲ್ ಮೇಳದ ಪ್ರದರ್ಶನಗಳಿಗೂ ಹೋಗುತ್ತಿದ್ದರು. ಧರ್ಮಸ್ಥಳ ಮೇಳದ ಕಲಾವಿದ ಶ್ರೀ ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ ಶಾಲೆಯಲ್ಲಿ ರವಿಚಂದ್ರರಿಗಿಂತ ಒಂದು ವರ್ಷ ಸೀನಿಯರ್ ವಿದ್ಯಾರ್ಥಿ. ಅವರು ಎಸ್.ಎಸ್.ಎಲ್.ಸಿ. ಆಗಿ ಧರ್ಮಸ್ಥಳದ ಶ್ರೀ ಲಲಿತ ಕಲಾಕೇಂದ್ರಕ್ಕೆ ಸೇರಿದ್ದರು. ರವಿಚಂದ್ರರನ್ನು ಎಸ್.ಎಸ್.ಎಲ್.ಸಿ. ಆದ ನಂತರ ಅವರೇ ಲಲಿತ ಕಲಾಕೇಂದ್ರಕ್ಕೆ ಕರೆದೊಯ್ದಿದ್ದರು. ಮೊದಲೇ ರವಿಚಂದ್ರರು ನಾಟ್ಯ ಕಲಿತ ಕಾರಣ ಉಳಿದವರಿಗೆ ಹೇಳಿಕೊಡುವ ಹೊಣೆಯೂ ಸಿಕ್ಕಿತ್ತು.

ಕೇಂದ್ರದಲ್ಲಿ ಇವರ ಸಹಪಾಠಿಗಳಾಗಿದ್ದವರು ಈಗ ವೃತ್ತಿ ಕಲಾವಿದರಾಗಿರುವ ಕೊಂಕಣಾಜೆ ಚಂದ್ರಶೇಖರ ಭಟ್ (ಮದ್ದಳೆಗಾರರು) ಬಾಲಕೃಷ್ಣ ಮಿಜಾರು, ಶ್ರೀನಿವಾಸ ಕುರಿಯಾಳ, ಬೆಳಾಲು ರಮೇಶ ಗೌಡ, ದಿನೇಶ್ ಕೋಡಪದವು ಮೊದಲಾದವರು. ಲಲಿತ ಕಲಾಕೇಂದ್ರದ ಪ್ರದರ್ಶನಗಳಲ್ಲಿ ಪಂಚವಟಿಯ ಶ್ರೀರಾಮ, ಗಿರಿಜಾ ಕಲ್ಯಾಣದ ಮನ್ಮಥ, ವೀರಮಣಿ ಕಾಳಗದ ಹನೂಮಂತ, ಭಾರ್ಗವ ವಿಜಯದ ಭಾರ್ಗವ ಮೊದಲಾದ ವೇಷಗಳನ್ನು ಮಾಡಿದ್ದರು. 

ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿರುವಾಗ ನಡೆದ ಒಂದು ಘಟನೆ- ತರಬೇತಿ ಆರಂಭವಾಗಿ 15 ದಿನಗಳಾಗಿತ್ತು. ರಾತ್ರೆ ಕೊಂಕಣಾಜೆ ಚಂದ್ರಶೇಖರ ಭಟ್ಟರು ಚೆಂಡೆಮದ್ದಳೆ ಅಭ್ಯಾಸ ಮಾಡುತ್ತಿದ್ದರು. ಅವರ ಚೆಂಡೆಗೆ ರವಿಚಂದ್ರರ ಹಾಡು. ‘ಗೆಜ್ಜೆಯ ಪೂಜೆ’ ಮೊದಲಾದ ಪ್ರಸಂಗಗಳ ಹಾಡುಗಳು. ಹೊಳ್ಳರು, ಅಮ್ಮಣ್ಣಾಯರು ಹಾಡಿದ ಪದ್ಯಗಳನ್ನು ಕೇಳಿ ಕಂಠಪಾಠವಾಗಿತ್ತು. ಗುರುಗಳಿಲ್ಲದ ವೇಳೆ ಇದು ನಿರಂತರವಾಗಿ ನಡೆಯುತ್ತಿತ್ತು. ಇದನ್ನು ಮರೆಯಲ್ಲಿ ಬೈಪಾಡಿತ್ತಾಯ ದಂಪತಿಗಳು ಗಮನಿಸಿದ್ದರು. (ಕೇಂದ್ರದ ಹಿಮ್ಮೇಳ ಗುರುಗಳು). ಮರುದಿನ ನಾಟ್ಯ ಬೇಡ. ನೀನು ಪದ್ಯ ಕಲಿ ಎಂದರಂತೆ. ಅಲ್ಲದೆ ರವಿಚಂದ್ರರಲ್ಲಿ ಪದ್ಯಗಳನ್ನೂ ಹೇಳಿಸಿದರಂತೆ.’’ ಕಟ್ಟಿದ ಗೆಜ್ಜೆಯ ನಾದಕೆ ಮರುಗುತ ಇಟ್ಟಳು ಹೆಜ್ಜೆಯ ಬಾರದಲಿ… ಎಂಬ ಹಾಡನ್ನು ಹೇಳಿದರು. ಅಲ್ಲದೆ ಇನ್ನೂ ಕೆಲವು ಪದ್ಯಗಳನ್ನು ಬೈಪಾಡಿತ್ತಾಯ ದಂಪತಿಗಳು ರವಿಚಂದ್ರರಿಂದ ಹೇಳಿಸಿದರು. ಕೊಂಕಣಾಜೆಯವರು ಇವರಿಗೆ ಸಾಥ್ ನೀಡಿದ್ದರು.

ಬೈಪಾಡಿತ್ತಾಯ ದಂಪತಿಗಳಿಂದ ಹಾಡುಗಾರಿಕೆ ಕಲಿಯೆಂಬ ಸೂಚನೆ ಸಿಕ್ಕಿತ್ತು. ಮರುದಿನ ಸಬ್ಬಣಕೋಡಿ ಕೃಷ್ಣ ಭಟ್ಟರು ಬಂದಿದ್ದರು. ವಿಮರ್ಶೆ ನಡೆದು ರವಿಚಂದ್ರರು ಮತ್ತೆ ನಾಟ್ಯ ಕಲಿಯುವ ಮನಮಾಡಿದರು. ‘‘ಅವನು ನಾಟ್ಯ ಕಲಿಯಲಿ. ಆದರೆ ರವಿಚಂದ್ರನು ಮುಂದಕ್ಕೆ ಭಾಗವತನೇ ಆಗುತ್ತಾನೆ’’ ಎಂದಿದ್ದರಂತೆ ಬೈಪಾಡಿತ್ತಾಯ ದಂಪತಿಗಳು. ಅವರು ಪ್ರತಿಭೆಯನ್ನು ಗುರುತಿಸಿದ್ದರು. ಅವರ ಭವಿಷ್ಯವಾಣಿಯು ಇಂದಿಗೆ ನಿಜವಾಗಿದೆ. ರವಿಚಂದ್ರರು ಕೇಂದ್ರದ ವಿದ್ಯಾರ್ಥಿಗಳಲ್ಲಿ ಮೊದಲಿಗನೆಂಬ ಖಾವಂದರ ಪ್ರಶಂಸೆಗೂ ಪಾತ್ರರಾದರು. ಧರ್ಮಸ್ಥಳದ ಲಲಿತ ಕಲಾಕೇಂದ್ರದಲ್ಲಿ ತರಬೇತಿ ಪಡೆದು ಬಂದ ಬಳಿಕ ವೇಣೂರು ಸದಾಶಿವ ಕುಲಾಲರ ಜತೆ ಸುರತ್ಕಲ್ಲು ಮೇಳಕ್ಕೆ ಸೇರಿದ್ದರು. ಮೊದಲು ಬಾಲಗೋಪಾಲರ ವೇಷ. ಎರಡನೆಯ ವರ್ಷ ಮುಖ್ಯ ಸ್ತ್ರೀವೇಷ, ಇನ್ನುಳಿದ ಸಣ್ಣ ಸಣ್ಣ ಪಾತ್ರಗಳನ್ನು ಮಾಡುತ್ತಿರು.

ಹಗಲು ಬಿಡಾರದಲ್ಲಿ ಸಂಗೀತಗಾರ ರಾಧಾಕೃಷ್ಣ ಕಲ್ಲುಗುಂಡಿ ಅವರಿಗೆ ಪಾಠ ಮಾಡುತ್ತಿದ್ದರು. ಆಗ ಮಲಗಿರುತ್ತಿದ್ದ ರವಿಚಂದ್ರರು ಎದೆಗೆ ಕೈಯಿಂದ ಬಡಿಯುತ್ತಾ ತಾಳ ಹಾಕುತ್ತಿದ್ದರಂತೆ. ಇದನ್ನು ಗಮನಿಸಿದ ಪದ್ಯಾಣ ಗಣಪತಿ ಭಟ್ಟರು ಪದ್ಯ ಕಲಿಯುತ್ತಿಯಾ? ಎಂದು ಕೇಳಿದರಂತೆ. ರವಿಚಂದ್ರರಿಗೆ ಸಂತೋಷವಾಗಿತ್ತು. ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲ ಅಂದೇ ಪಾಠ ಆರಂಭವಾಗಿತ್ತು. ಪದ್ಯಾಣರು ಇವರನ್ನು ಶಿಷ್ಯನಾಗಿ ಸ್ವೀಕರಿಸಿದ್ದರು. ಸಂಗೀತಗಾರನು ರಜೆಯಲ್ಲಿರುವಾಗ ಆ ಕರ್ತವ್ಯವನ್ನು ಮಾಡಿ, ಬೆಳಗಿನವರೆಗೂ ಚಕ್ರತಾಳ ಬಾರಿಸುತ್ತಿದ್ದರು. ಸಂಗೀತ ಮಾಡಿದ ದಿನ ವೇಷ ಇರುತ್ತಿರಲಿಲ್ಲ.

1999-2000ನೇ ಸಾಲಿನ ತಿರುಗಾಟ ಮಂಗಳಾದೇವಿ ಮೇಳದಲ್ಲಿ. ಸಂಗೀತಗಾರನಾಗಿ ಸೇರ್ಪಡೆ. ಮುಂದಿನ ವರ್ಷ ಕಿಶನ್ ಹೆಗ್ಡೆಯವರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ತಿರುಗಾಟ. ಮರುವರ್ಷ ಮತ್ತೆ ಮಂಗಳಾದೇವಿ ಮೇಳಕ್ಕೆ. ಪದ್ಯಾಣ ಗಣಪತಿ ಭಟ್ಟರ ಜತೆ ಭಾಗವತಿಕೆ. 3ನೇ ವರ್ಷದಲ್ಲೇ ರವಿಚಂದ್ರರು 2ನೇ ಭಾಗವತರಾಗಿ ಬೆಳೆದಿದ್ದರು. ಪದ್ಯಾಣರು ಜತೆಯಲ್ಲಿದ್ದು ಹೇಳಿಕೊಡುತ್ತಿದ್ದರು. ಒಂಬತ್ತು ವರ್ಷಗಳ ಕಾಲ ಮಂಗಳಾದೇವಿ ಮೇಳದಲ್ಲಿ 2ನೇ ಭಾಗವತನಾಗಿ ತಿರುಗಾಟ. ಪದ್ಯಾಣರ ಜತೆಗೆ ಬೆಳಗಿನ ವರೆಗೂ ಪ್ರಸಂಗವನ್ನು ಮುನ್ನಡೆಸುವ ಅವಕಾಶಗಳೂ ಸಿಕ್ಕಿತ್ತು.

ಸುರತ್ಕಲ್ ಮೇಳ ನಿಂತ ಬಳಿಕ ಪದ್ಯಾಣರ ಪುತ್ತೂರಿನ ಮನೆಗೆ ಮಳೆಗಾಲ ತೆರಳಿ ಅವರಿಂದ ಕಲಿತಿದ್ದರು. ಸಂಗೀತ ಮತ್ತು ಭಾಗವತಿಕೆಯನ್ನು ತಿಳಿದಿದ್ದ ಪದ್ಯಾಣರ ಪತ್ನಿ ಶ್ರೀಮತಿ ಶೀಲಾ ಗಣಪತಿ ಭಟ್ ಪದ್ಯಾಣ ಅವರೂ ಹೇಳಿಕೊಟ್ಟಿದ್ದರು. ‘‘ನಾನು ಅಲ್ಲಿ ಮನೆಯ ಸದಸ್ಯನಂತೆಯೇ ಇದ್ದೆ. ಅವರು ಊಟ ಮಾಡುವ ಮೊದಲೇ ಶೀಲಕ್ಕ ನನಗೆ ಬಡಿಸುತ್ತಿದ್ದರು. ನನ್ನನ್ನು ಮಗನಂತೆಯೇ ನೋಡಿಕೊಂಡರು’’. ಇದು ರವಿಚಂದ್ರ ಅವರು ಗುರುಪತ್ನಿಯ ಬಗೆಗೆ ಆಡುವ ಗೌರವದ ನುಡಿಗಳು. ಹತ್ತು ತಿರುಗಾಟಗಳಾದ ಮೇಲೆ ಪದ್ಯಾಣ ಗಣಪತಿ ಭಟ್ಟರು ಮಂಗಳಾದೇವಿ ಮೇಳದಿಂದ ಎಡನೀರು ಮೇಳಕ್ಕೆ ಸೇರಿದ್ದರು. ಮತ್ತೆ  5 ವರ್ಷಗಳ ಕಾಲ ಪ್ರಧಾನ ಭಾಗವತನಾಗಿ ಮಂಗಳಾದೇವಿಯಲ್ಲಿ ತಿರುಗಾಟ. ಸಂಗೀತದಿಂದ ತೊಡಗಿ ಬೆಳಗಿನ ವರೇಗೂ ಹಾಡಿದ ದಿನಗಳಿವೆ!

ಈ ಸಂದರ್ಭದಲ್ಲಿಯೂ ಗುರು ಪದ್ಯಾಣರ ಕಲ್ಮಡ್ಕದಲ್ಲಿರುವ ಮನೆಗೆ ಹೋಗಿ ಕಲಿಯುತ್ತಿದ್ದರು. ಸಲಹೆಗಳನ್ನು ಪಡೆಯುತ್ತಿದ್ದರು. ಮಂಗಳಾದೇವಿ ಮೇಳದಲ್ಲಿ ತುಳು ಮತ್ತು ಪುರಾಣ ಪ್ರಸಂಗಗಳ ಹಾಡುಗಾರಿಕೆಯಲ್ಲಿ ಕನ್ನಡಿಕಟ್ಟೆ ಅವರು ಅನುಭವವನ್ನು ಗಳಿಸಿದ್ದರು. ಬಳಿಕ ಶ್ಯಾಂ ಭಟ್ಟರ ಕೇಳಿಕೆಯಂತೆ ಹೊಸನಗರ ಮೇಳಕ್ಕೆ.‘‘ಹೊಸನಗರ ಮೇಳ ಮತ್ತು ಪ್ರಸ್ತುತ ಹನುಮಗಿರಿ ಮೇಳದಲ್ಲಿ ಕಳೆದ ಹತ್ತು ವರುಷಗಳಿಂದಲೂ ಗುರುಗಳಾದ ಪದ್ಯಾಣ ಶ್ರೀ ಗಣಪತಿ ಭಟ್ಟರ ಜತೆ ವ್ಯವಸಾಯ (ತನ್ಮಧ್ಯೆ ಒಂದು ವರ್ಷ ಎಡನೀರು ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ಹೆಸರಿನಿಂದಲೂ ಕಾರ್ಯಾಚರಿಸಿತ್ತು). 

2009ರಲ್ಲಿ ವಿವಾಹ. ಪತ್ನಿ ಶುಭ (ಸೋದರಮಾವ ಶ್ರೀ ಅಮ್ಮು ಪೂಜಾರಿ ಮತ್ತು ಶ್ರೀಮತಿ ರಜನಿ ದಂಪತಿಗಳ ಪುತ್ರಿ). ಶ್ರೀ ರವಿಚಂದ್ರ ಶ್ರೀಮತಿ ಶುಭ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಭವಿಷ್ 4ನೇ ತರಗತಿ ವಿದ್ಯಾರ್ಥಿ. ಪುತ್ರಿ ಕು| ಖುಷಿ 1ನೇ ತರಗತಿ ವಿದ್ಯಾರ್ಥಿನಿ. ಪ್ರಸ್ತುತ ಬೆಳ್ತಂಗಡಿಯಲ್ಲಿ ವಾಸವಾಗಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ

ಲಾಸ್ ಏಂಜೆಲೀಸ್ ನಲ್ಲಿ ಮೂರು ವಾರಗಳ ಕಾಲ ರೆಸ್ಟೋರೆಂಟ್ ಗಳು ಬಂದ್ 

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ  ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಮಾಣವು  ಬುಧವಾರ ರಾತ್ರಿಯಿಂದ ಮೂರು ವಾರಗಳವರೆಗೆ ರೆಸ್ಟೋರೆಂಟ್ ಗಳನ್ನು ಸ್ಥಗಿತಗೊಳಿಸುವ ಆದೇಶವನ್ನು ಹೊರಡಿಸುವಂತೆ ಮಾಡಿದೆ. 

ಇದು ವೈರಸ್‌ನಿಂದ ತತ್ತರಿಸುತ್ತಿರುವ ಅಮೆರಿಕಾದ ಹೋಟೆಲ್ ಉದ್ಯಮವನ್ನು ಮತ್ತಷ್ಟು ಕುಂಠಿತಗೊಳಿಸಿದೆ. ಬದಲಾಗುತ್ತಿರುವ ನಿಯಮಗಳಿಗೆ ಹೊಂದಿಕೊಳ್ಳಬೇಕಾದ ಲಾಸ್ ಏಂಜಲೀಸ್‌ನ ರೆಸ್ಟೋರೆಂಟ್ ಮಾಲೀಕರು ತಮ್ಮ ವ್ಯವಹಾರಗಳನ್ನು ಮತ್ತೊಮ್ಮೆ ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದರು ಎಂದು ‘ಕೆಫೆ ಒಫ್ ಲೆಮೆನ್’ ರೆಸ್ಟೋರೆಂಟಿನ ಮಾಲೀಕರು ಹೇಳಿದ್ದಾರೆ.

“ಹೊರಾಂಗಣ, ಒಳಾಂಗಣವನ್ನು ನಿರ್ಮಿಸಲು $ 5,000 ಡಾಲರ್ ಖರ್ಚು ಮಾಡಿದ್ದೇವೆ, ಆದ್ದರಿಂದ ಈಗ ಅಲ್ಲಿ  ಜನರಿಗೆ ತಿನ್ನಲು ಸ್ಥಳವಿದೆ, ಮತ್ತು ಈ ಇತ್ತೀಚಿನ ವ್ಯವಹಾರಗಳ ಸ್ಥಗಿತದಿಂದ ನಮ್ಮ ಉದ್ಯೋಗಿಗಳು ಹೇಗೆ ಜೀವಿಸುತ್ತಾರೆ ಎಂದೇ ತಿಳಿಯುತ್ತಿಲ್ಲ. 

ಈಗ ನಾವು ಹೊರಭಾಗವನ್ನು ಮುಚ್ಚಲು ಹೊರಟಿದ್ದೇವೆ, ನಮ್ಮ 11 ಉದ್ಯೋಗಿಗಳು ಮನೆಗೆ ಹೋಗಬೇಕೆಂದು ನಾವು ಹೇಳಬೇಕಾಗಿದೆ”  ಎಂದು ಹೋಟೆಲ್ ಮಾಲೀಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. 

ಕೋವಿಡ್ ಲಸಿಕೆಯ ಆಗಮನವನ್ನು ವಿಜ್ಞಾನಿಗಳು ನಿರ್ಧರಿಸಬಹುದೇ ಹೊರತು ರಾಜಕಾರಣಿಗಳಲ್ಲ – ಮೋದಿ

ಕೋವಿಡ್- 19 ಲಸಿಕೆಯ ಆಗಮನವು ಕೇವಲ ವಿಜ್ಞಾನಿಗಳ ಕೈಯಲ್ಲಿದೆ ಎಂದು ಪಿಎಂ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ಈ ವಿಷಯವನ್ನು ರಾಜಕೀಯಗೊಳಿಸುತ್ತಿದ್ದ ರಾಜಕೀಯ  ನೇತಾರರಿಗೆ ಪರೋಕ್ಷವಾಗಿ ಮಾತಿನಲ್ಲಿಯೇ ಎದಿರೇಟು ನೀಡಿದರು. 

ವಿಡಿಯೋಕಾನ್ಫರೆನ್ಸಿಂಗ್ ಮೂಲಕ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕೆಲವು ರಾಜಕಾರಣಿಗಳು ಕೋವಿಡ್-19 ಲಸಿಕೆ ಮತ್ತು ಅದರ ವಿತರಣೆಯ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆ. ಆದರೆ ಅಂತಹವರ ಈ ರೀತಿಯ ವರ್ತನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದೂ ಶ್ರೀ ನರೇಂದ್ರ ಮೋದಿಯವರು ಈ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. 

8 ಕೋವಿಡ್ ಬಾಧಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನ ಮಂತ್ರಿ ಮೋದಿ ಕೋವಿಡ್ ವಿಡಿಯೋ ಕಾನ್ಫರೆನ್ಸ್ ಸಭೆ 

ಕೋವಿಡ್-19 ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ್ದಾರೆ   ಕೋವಿಡ್-19  
 ವೈರಸ್‌ನಿಂದ ಹೆಚ್ಚು ಹಾನಿಗೊಳಗಾದ ಎಂಟು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

ಗೃಹ ಸಚಿವ ಅಮಿತ್ ಶಾ, ಎನ್‌ಐಟಿಐ ಆಯೋಗ್‌ನ ಡಾ.ವಿ.ಕೆ.ಪಾಲ್, ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ಇತರ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಾಂಕ್ರಾಮಿಕ ರೋಗದ ಬಗ್ಗೆ ಕಳೆದ ಆರು ತಿಂಗಳಲ್ಲಿ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದರು. 

ಲಸಿಕೆ ವಿತರಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಪ್ರಧಾನಿ ಮಧ್ಯಾಹ್ನ 12 ರ ಸುಮಾರಿಗೆ ರಾಜ್ಯಗಳು ಮತ್ತು ಯುಟಿಗಳೊಂದಿಗೆ ಮತ್ತೊಂದು ಸಭೆ ನಡೆಸಲಿದ್ದಾರೆ. ಮೊದಲ ಸಭೆಯಲ್ಲಿ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ಛತ್ತೀಸ್ ಗಡ ಮುಖ್ಯಮಂತ್ರಿಗಳು ಭಾಗವಹಿಸಿದ್ದರು.  

ಗೋಡೆ ಶ್ರೀ ನಾರಾಯಣ ಹೆಗಡೆ- ಪಾತ್ರೋಚಿತ ಅಭಿನಯಕ್ಕೆ ಇನ್ನೊಂದು ಹೆಸರು

ಪ್ರಚಾರಕ್ಕಾಗಿ, ಪ್ರಸಿದ್ಧಿಗಾಗಿ ಬಾಗದೆ, ಪಾತ್ರಕ್ಕೆ ಬೇಕಾದಂತೆ ಬಾಗಿ ಅಭಿನಯಿಸಿದ ಹಿರಿಯ ಶ್ರೇಷ್ಠ ಕಲಾವಿದರು  ಗೋಡೆ ಶ್ರೀ ನಾರಾಯಣ ಹೆಗಡೆಯವರು.  ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊರ್ಲಕೈ ಎಂಬ ಹಳ್ಳಿ ಗೋಡೆ ನಾರಾಯಣ ಹೆಗಡೆಯವರ ಹುಟ್ಟೂರು. 1940 ಫೆಬ್ರವರಿ ಹದಿನೈದನೇ ತಾರೀಕಿನಂದು ಶ್ರೀ ತಿಮ್ಮಯ್ಯ ಹೆಗಡೆ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳ ಪುತ್ರನಾಗಿ ಜನನ.

ಇವರ ಹಿರಿಯರು ನಿರ್ಮಿಸಿದ ಹಳೇಕಾಲದ ಮನೆ. ಉದ್ದಗಲವನ್ನು ಹೊಂದಿ, ಬಹಳ ಗಟ್ಟಿಯಾದ ಗೋಡೆಯನ್ನು ಹೊಂದಿದ ಮನೆ ಅದು. ಅಂತಹ ಗೋಡೆಯನ್ನು ಹೊಂದಿದ ಮನೆಯು ಆ ಕಾಲದಲ್ಲಿ ಬೇರೆ ಇರಲಿಲ್ಲ. ಆದಕಾರಣ ಬಹಳ ಹಿಂದೆಯೇ ಗೋಡೆ ಮನೆ ಎಂದೇ ಎಲ್ಲರೂ ಕರೆಯುತ್ತಿದ್ದರಂತೆ. ಹಿರಿಯರು ಮಾಡಿಟ್ಟ ಜಮೀನು ಇರಲಿಲ್ಲ. ಕಡುಬಡತನ. ಬದುಕಿಗಾಗಿ ಹಿರಿಯರು ಹಲವಾರು ಕಡೆ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು. ಹಾಗಾಗಿ ಗೋಡೆಯವರು ಕೆಲವು ಶಾಲೆಗಳಲ್ಲಿ 4ನೇ ತರಗತಿ ವರೆಗೆ ಮಾತ್ರ ಓದಿದ್ದರು.

ಮುತ್ತಜ್ಜನಾದ ಮರಿಯಪ್ಪ ಹೆಗಡೆಯವರು ಕಲಾವಿದರಾಗಿದ್ದರು. ತಂದೆಯೂ ವೇಷ ಮಾಡಿ ಅನುಭವ ಉಳ್ಳವರು. ಸೋದರಮಾವ ನಾರಾಯಣ ಹೆಗಡೆಯವರೂ ಯಕ್ಷಗಾನ ಕಲಾವಿದರಾಗಿದ್ದರು. ಹಾಗಾಗಿ ಯಕ್ಷಗಾನವು ರಕ್ತಗತವಾಗಿ ಬಂದಿತ್ತು. ಶಾಲೆ ಬೇಡ ಅನಿಸಿ ಯಕ್ಷಗಾನ ಕಲಿಯಲು ಮನಮಾಡಿದ್ದರು. ಇವರ ಅಜ್ಜನ ಮನೆ ಶಿರಳಗಿಯಲ್ಲಿ. ಸಮೀಪದ ಊರು ಕೊಳಗಿ. ಕೊಳಗಿ ಸೀತಾರಾಮ ಭಾಗವತರು ಯಕ್ಷಗಾನದ ಎಲ್ಲಾ ವಿಭಾಗಗಳಲ್ಲೂ ಪರಿಣತರಾಗಿ ನಾಟ್ಯ ಹೇಳಿಕೊಡುತ್ತಿದ್ದರು.

ಕುಣಿತ ಹೇಳಿಕೊಡುವುದನ್ನು ನೋಡಲೆಂದು ಗೋಡೆಯವರು ಅಲ್ಲಿಗೆ ಹೋಗಿದ್ದರು. ಅದನ್ನು ಗಮನಿಸಿದ ಸೀತಾರಾಮ ಭಾಗವತರು ಗೋಡೆಯವರನ್ನು ಕರೆದು, ನಿನ್ನ ದೇಹವು ಯಕ್ಷಗಾನಕ್ಕೆ ಬೇಕಾದಂತೆ ಇದೆ. ಕಲಿಯುವುದಿದ್ದರೆ ಹೇಳಿಕೊಡುತ್ತೇನೆ ಎಂದಿದ್ದರು. ಅವರಿಂದಲೇ ಆರು ತಿಂಗಳ ಕಾಲ ನಾಟ್ಯಾಭ್ಯಾಸ. 1955ರಲ್ಲಿ ಹಣಜೀಬೈಲು ಸೀತಾರಾಮ ಯಕ್ಷಗಾನ ಮಂಡಳಿಯ ಆಟ. ಪ್ರಸಂಗ ವಾಲಿಮೋಕ್ಷ. ಶಿರಳಗಿಯಲ್ಲಿ ನಡೆದ ಈ ಆಟದಲ್ಲಿ ತಾರೆಯಾಗಿ ರಂಗಪ್ರವೇಶ. ವ್ಯವಸ್ಥಾಪಕರಾದ ಅಣ್ಣಪ್ಪ ಹೆಗಡೆಯವರು ತಂಡದ ಖಾಯಂ ಕಲಾವಿದನಾಗಲು ಅವಕಾಶವಿತ್ತು ಪ್ರೋತ್ಸಾಹಿಸಿದ್ದರು.

ಹಾರ್ಸಿಕಟ್ಟಾ ಎಂಬಲ್ಲಿ ಹದಿನೈದು ದಿನಗಳಿಗೊಮ್ಮೆ ತಾಳಮದ್ದಳೆಯೂ ನಡೆಯುತ್ತಿತ್ತು. ಸುಧನ್ವಮೋಕ್ಷ ಪ್ರಸಂಗದಲ್ಲಿ ಪ್ರಭಾವತಿಯಾಗಿ ಮೊತ್ತಮೊದಲು ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದರು. ಕೊಳಗಿ ಅನಂತ ಹೆಗಡೆಯವರಿಂದ ಪ್ರೋತ್ಸಾಹವೂ ಸಿಕ್ಕಿತ್ತು. ನಿರಂತರವಾಗಿ ಆಟ-ಕೂಟಗಳಲ್ಲಿ ಭಾಗವಹಿಸಲು ಆರಂಭಿಸಿದರು. ಆ ಕಾಲಕ್ಕೆ ಸ್ತ್ರೀಪಾತ್ರಧಾರಿಗಳ ಕೊರತೆಯಿದ್ದುದರಿಂದ ಗೋಡೆಯವರು ಸ್ತ್ರೀಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಕರಾವಳೀ ಪ್ರದೇಶಕ್ಕೂ ಹೋಗಿ ವೇಷ ಮಾಡಲಾರಂಭಿಸಿದ್ದರು.

ಹದಿನೈದು ಕಲಾವಿದರಿದ್ದ ಕೊಳಗಿಯ ಹೊಸತಂಡ ಮೂರು ಗಂಟೆಯ ಪ್ರದರ್ಶನಗಳನ್ನು ನೀಡುತ್ತಿತ್ತು. ವರ್ಷಕ್ಕೆ ನಲುವತ್ತು ಪ್ರದರ್ಶನಗಳು ನಡೆದರೂ ಸರಿಯಾಗಿ ವೀಳ್ಯ ಸಿಗುತ್ತಿರಲಿಲ್ಲ. ಕೊಟ್ಟ ಸಂಭಾವನೆಯನ್ನು ತೆಗೆದುಕೊಳ್ಳಬೇಕಾಗಿತ್ತು. ಒಂದು ಕಡೆ ಹದಿನೈದು ರೂಪಾಯಿ ವೀಳ್ಯ ಸಿಕ್ಕಿದಾಗ ಉತ್ಸಾಹಿತರಾಗಿ ದೊಡ್ಡ ಮೇಳ ಕಟ್ಟುವ ನಿರ್ಧಾರವನ್ನೂ ಮಾಡಿದ್ದರು. ಗೋಡೆಯವರು ಸ್ತ್ರೀಪಾತ್ರಧಾರಿಯಾಗಿ ಆಗ ಮಿಂಚತೊಡಗಿದ್ದರು. 1955ನೇ ಇಸವಿ, ತನ್ನ ಹದಿನೈದನೇ ವಯಸ್ಸಿನಲ್ಲಿ ಯಕ್ಷಗಾನ ಕಲಾವಿದನಾಗಿ ರಂಗಪ್ರವೇಶ ಮಾಡಿದ ಗೋಡೆಯವರು ಈ ಕ್ಷೇತ್ರದಲ್ಲಿ ಅರುವತ್ತಮೂರು ವರ್ಷಗಳ ಅನುಭವಿಗಳು. 

ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ಮೊದಲಾದವರ ಸಮಕಾಲೀನರಾಗಿ ವ್ಯವಸಾಯವನ್ನು ಮಾಡಿದವರು.  ಹೊಸತನಗಳ ಆವಿಷ್ಕಾರಗಳಿಂದ ದೂರ ಉಳಿದು, ಪರಂಪರೆಯ ಹಾದಿಯನ್ನೇ ಕ್ರಮಿಸಿ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾದರು.   ಇವರು ಕೆರೆಮನೆ ಶಿವರಾಮ ಹೆಗಡೆಯವರ ಜತೆಯಲ್ಲೂ ಪಾತ್ರಗಳನ್ನು ನಿರ್ವಹಿಸಿದ್ದರು.  ಶಂಭುಹೆಗಡೆ ಮತ್ತು ಚಿಟ್ಟಾಣಿಯವರ ಜತೆ, ಸಮಾನವಾಗಿ ಅತ್ಯಧಿಕ ವೇಷಗಳನ್ನು ಮಾಡಿದ ಹಿರಿಮೆ ಇವರಿಗಿದೆ. ಹಳೆಯ ಮತ್ತು ಹೊಸ ಪೀಳಿಗೆಯ ಹೆಚ್ಚಿನ ಕಲಾವಿದರೊಂದಿಗೂ ಪಾತ್ರಗಳನ್ನು ನಿರ್ವಹಿಸಿದ ಒಬ್ಬ ಅನುಭವೀ ಕಲಾವಿದ.

ಕೆರೆಮನೆ ಶಿವರಾಮ ಹೆಗಡೆಯವರ ನೇತೃತ್ವದ ಮೇಳವು ಪ್ರದರ್ಶನ ನೀಡುವುದಕ್ಕಾಗಿ ಸಿದ್ಧಾಪುರಕ್ಕೆ ಬಂದಿತ್ತು. ಪ್ರಸಂಗ ಮೀನಾಕ್ಷಿ ಕಲ್ಯಾಣ. ಗೋಡೆಯವರಿಗೆ ವೇಷ ಮಾಡಲು ಅವಕಾಶವಿತ್ತಿದ್ದರು. ಇವರ ಪಾತ್ರನಿರ್ವಹಣೆಯನ್ನು ನೋಡಿ ಮೆಚ್ಚಿದ ಶಿವರಾಮ ಹೆಗಡೆಯವರು ಮೇಳಕ್ಕೆ ಸೇರಲು ಆಹ್ವಾನ ನೀಡಿದ್ದರು. ಮರುದಿನ ಶಿರಸಿಯಲ್ಲಿ ಸದ್ರಿ ಮೇಳದ ಪ್ರದರ್ಶನ. ಪ್ರಸಂಗ ಕೀಚಕ ವಧೆ. ಸೈರಂಧ್ರಿಯಾಗಿ ಗೋಡೆಯವರ ಅಭಿನಯವನ್ನು ಶಿವರಾಮ ಹೆಗಡೆಯವರು ಮೆಚ್ಚಿ, ಚೆನ್ನಾಗಿ ಆಯ್ತು ಎಂದಿದ್ದರಂತೆ. ಊರಲ್ಲಿಯೂ ಆಟಗಳನ್ನು ನಡೆಸಿ ಗೋಡೆಯವರು ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿಯೂ ಆಗಿತ್ತು.

ಶಂಭು ಹೆಗಡೆಯವರು ಮೇಳವನ್ನು ನಡೆಸಲು ನಿರ್ಧರಿಸಿದಾಗ ಕೆರೆಮನೆ ಗಜಾನನ ಹೆಗಡೆಯವರು ಗೋಡೆಯವರನ್ನು ಸಂಪರ್ಕಿಸಿದ್ದರು. ಮೇಳಕ್ಕೆ ಬರಲು ಹೇಳಿದಾಗ ನಿರಾಕರಿಸಿದ್ದರೂ, ಕೊನೆಗೆ ಒಪ್ಪಿದ್ದರು. ಹೀಗೆ 1973ರಲ್ಲಿ ಟೆಂಟಿನ ಮೇಳದ ಕಲಾಬದುಕು ಆರಂಭವಾಗಿತ್ತು. ಆ ಹೊತ್ತಿಗೆ ಗೋಡೆಯವರು ಪುರುಷ ಪಾತ್ರಗಳನ್ನು ಮಾಡಲು ಆರಂಭಿಸಿಯಾಗಿತ್ತು. ಚಂದ್ರಹಾಸ, ಶ್ರೀಕೃಷ್ಣ ಮೊದಲಾದ ಪಾತ್ರಗಳನ್ನು ಮಾಡಿದ್ದರು. ಎರಡು ವರ್ಷ ಶಂಭು ಹೆಗಡೆಯವರ ಜತೆ ತಿರುಗಾಟ. ನೆಬ್ಬೂರು ಭಾಗವತರು, ಕೆರೆಮನೆಯ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆಯವರ ಒಡನಾಟವು ಸಿಕ್ಕಿತ್ತು.

1975ರಲ್ಲಿ ಅಮೃತೇಶ್ವರೀ ಮೇಳಕ್ಕೆ ಉಪ್ಪೂರರ ಭಾಗವತಿಕೆ. 1979ರಲ್ಲಿ ಶಂಭು ಹೆಗಡೆಯವರ ಕೋರಿಕೆಯಂತೆ ಇಡಗುಂಜಿ ಮೇಳಕ್ಕೆ. ಆಗ ಶಿವರಾಮ ಹೆಗಡೆಯವರು ನಿವೃತ್ತರಾಗಿದ್ದರು. ಆರು ವರ್ಷಗಳ ವ್ಯವಸಾಯ ಇಡಗುಂಜಿ ಮೇಳದಲ್ಲಿ. ಬಳಿಕ ಒಂದು ವರ್ಷ ಪೆರ್ಡೂರು ಮೇಳದಲ್ಲಿ. ಮತ್ತೆ ಒಂದು ವರ್ಷ ಮುಲ್ಕಿ ಮೇಳದಲ್ಲಿ (ಬಡಗು ಮೇಳ). ಬಳಿಕ ಮೂರು ವರ್ಷ ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ವ್ಯವಸಾಯ. ಮತ್ತೆ ನಾಲ್ಕು ವರ್ಷ ಶಿರಿಯಾರ ಮುದ್ದಣ್ಣ ಶೆಟ್ರ ನೇತೃತ್ವದ ಶಿರಸಿ ಮಾರಿಕಾಂಬಾ ತಂಡದಲ್ಲಿ ಕಲಾಸೇವೆ.

ಶಂಭು ಹೆಗಡೆ ಮತ್ತು ಚಿಟ್ಟಾಣಿಯವರ ಜತೆ ಗೋಡೆ ಅವರ ವೇಷಗಳನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು. ಸುಮಾರು ಇಪ್ಪತ್ತೈದು ಪ್ರಶಸ್ತಿಗಳನ್ನು ಪಡೆದ ಗೋಡೆ ನಾರಾಯಣ ಹೆಗಡೆಯವರು ಮುನ್ನೂರಕ್ಕೂ ಮಿಕ್ಕಿದ ಸನ್ಮಾನಗಳನ್ನೂ ಸ್ವೀಕರಿಸಿರುತ್ತಾರೆ. 2012ರಲ್ಲಿ ರಾಜ್ಯ ಪ್ರಶಸ್ತಿಯೂ ಒಲಿದು ಬಂದಿದೆ. ಕಲಾಬದುಕಿನ ಸಂದರ್ಭ ಸುಮಾರು ಐವತ್ತು ಮಂದಿಗೆ ತರಬೇತಿಯನ್ನೂ ನೀಡಿದ್ದಾರೆ. ಡಿ.ಜಿ. ಹೆಗಡೆ, ಶಿರಳಗಿ ಭಾಸ್ಕರ ಜೋಷಿ, ಶಿರಳಗಿ ತಿಮ್ಮಪ್ಪ ಹೆಗಡೆ ಇವರಲ್ಲಿ ಪ್ರಮುಖರು.

ದೀರ್ಘಕಾಲದ ತನ್ನ ಯಕ್ಷಗಾನದ ಬದುಕಿನಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಕೌರವ, ಋತುಪರ್ಣ, ಬ್ರಹ್ಮಕಪಾಲ ಪ್ರಸಂಗದ ಬ್ರಹ್ಮ, ಕಾರ್ತವೀರ್ಯಾರ್ಜುನ ಕಾಳಗ ಪ್ರಸಂಗದ ರಾವಣ, ಶ್ರೀರಾಮ ನಿರ್ಯಾಣ ಪ್ರಸಂಗದ ಲಕ್ಷ್ಮಣ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ಧಿಯನ್ನು ನೀಡಿತ್ತು. ಈ ಪಾತ್ರಗಳನ್ನು ತನ್ನದೇ ಶೈಲಿಯಲ್ಲಿ ಅಭಿನಯಿಸುತ್ತಾ ಅವುಗಳಿಗೊಂದು ನೂತನ ಚಿತ್ರಣವನ್ನೇ ಒದಗಿಸಿದ್ದರು. ಪರಂಪರೆಯನ್ನು ಇಷ್ಟಪಡುವ ಉದಯೋನ್ಮುಖ ಕಲಾವಿದರಿಗೆ ಗೋಡೆಯವರು ಆದರ್ಶರು.

ಅವರ ಪಾತ್ರಗಳನ್ನು ನೋಡಿದ ಹೊಸ ಕಲಾವಿದರು ‘ಗೋಡೆ ಶೈಲಿ’ಯನ್ನು ಅನುಸರಿಸಿದ್ದೂ ಇದೆ. ಬ್ರಹ್ಮಕಪಾಲ ಪ್ರಸಂಗದ ಬ್ರಹ್ಮನಾಗಿ ಗೋಡೆಯವರದ್ದು ಅಮೋಘ ಅಭಿನಯ. ತೆಂಕಣ ಯಕ್ಷಗಾನ ಕಲಾವಿದರಾದ ಶೇಣಿ, ಕೆ. ಗೋವಿಂದ ಭಟ್, ಕುಂಬಳೆ ಸುಂದರ ರಾವ್ ಮೊದಲಾದವರ ಜತೆಯೂ ವೇಷ ಮಾಡಿದ್ದಿದೆ. 1984ನೇ ಇಸವಿ ಶೇಣಿ ಗೋಪಾಲಕೃಷ್ಣ ಭಟ್ಟರ ಭೀಷ್ಮನಿಗೆ ಅರ್ಜುನನಾಗಿ ಅಭಿನಯಿಸಿದ್ದರು.

ಲೇಖಕ: ರವಿಶಂಕರ್ ವಳಕ್ಕುಂಜ 

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ನಿಧನ

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಇಂದು ಸಂಜೆ ನಿಧನರಾದರು. ಅವರಿಗೆ 84 ವರ್ಷ 8 ತಿಂಗಳು ವಯಸ್ಸಾಗಿತ್ತು.  ಅವರನ್ನು ಈ ಮೊದಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಸೋಮವಾರ ಸಂಜೆ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಕೊನೆಯುಸಿರೆಳೆದರು. ಅವರ ಪರಿಸ್ಥಿತಿ ಈಗಾಗಲೇ ದುರ್ಬಲವಾಗುತ್ತಿದೆ ಎಂದು ತಿಳಿದ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಪ್ರವಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿ ಗುವಾಹಟಿಗೆ ಮರಳಿದರು. ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಜಿಎಂಸಿಎಚ್ ತಲುಪಿದ್ದಾರೆ.

 ಅಸ್ಸಾಂನ ಮಾಜಿ ಸಿಎಂ ಅವರ ನಿಧನದ ಬಗ್ಗೆ ದೇಶದ ಎಲ್ಲ ರಾಜಕಾರಣಿಗಳು ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.  ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ತರುಣ್ ಗೊಗೊಯ್ ಜಿ ಅವರು ಅಸ್ಸಾಂ ಮತ್ತು ಕೇಂದ್ರದಲ್ಲಿ ರಾಜಕೀಯ ಅನುಭವ ಹೊಂದಿದ್ದ ಜನಪ್ರಿಯ ನಾಯಕ ಮತ್ತು ಅನುಭವಿ ಆಡಳಿತಗಾರರಾಗಿದ್ದರು. ಅವರ ನಿಧನಕ್ಕೆ ನಾನು ದುಃಖಿತನಾಗಿದ್ದೇನೆ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.