Tuesday, January 21, 2025
Home Blog Page 361

ಯಕ್ಷಗಾನ ತಾಳಮದ್ದಳೆ ನೇರಪ್ರಸಾರದಲ್ಲಿ – ಶಾಂಭವಿ ವಿಜಯ 

ದಿನಾಂಕ 18.10.2020, ಆದಿತ್ಯವಾರ ಸಂಜೆ 6ರಿಂದ ರಾತ್ರಿ 9ರ ವರೆಗೆ ‘ಶಾಂಭವಿ ವಿಜಯ’ ಎಂಬ ಯಕ್ಷಗಾನ ತಾಳಮದ್ದಳೆ ರಾಜೇಂದ್ರ ಕೃಷ್ಣ ಅವರ ಸಂಯೋಜನೆಯಲ್ಲಿ ಕಹಳೆ ನ್ಯೂಸ್ ಚಾನೆಲ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 

ಯಕ್ಷಗಾನ ಕಲಾವಿದರಿಗೆ ಕೊರೋನಾ ಪರೀಕ್ಷೆ ಕಡ್ಡಾಯ – ಕೋಟ ಶ್ರೀನಿವಾಸ ಪೂಜಾರಿ

ಇನ್ನು ಯಕ್ಷಗಾನ ಕಲಾವಿದರಿಗೆ ಕೊರೋನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದ್ದಾರೆ. ಮೇಳಗಳು ತಿರುಗಾಟಕ್ಕೆ ಹೊರಡುವ ಮೊದಲು ಪ್ರತಿಯೊಬ್ಬ ಕಲಾವಿದನೂ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಮೇಳಗಳು ತಿರುಗಾಟಕ್ಕೆ ಹೊರಟ ನಂತರವೂ ಪ್ರತಿ ವಾರವೂ ಈ ಪರೀಕ್ಷೆ ಉಚಿತವಾಗಿ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಈ ಜಿಲ್ಲೆಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಕಲಾವಿದರಿದ್ದಾರೆ. ಕೆಲವು ಮೇಳಗಳು ಈ ಬಾರಿ ತಿರುಗಾಟ ನಡೆಸುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದ ಕಾರಣ ಧಾರ್ಮಿಕ ಕ್ಷೇತ್ರಗಳ ಮೂಲಕ ಮೇಳಗಳನ್ನು ಹೊರಡಿಸಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆದುದರಿಂದ ಎಲ್ಲೆಲ್ಲಿ ಹೊಸ ಮೇಳಗಳನ್ನು ಹೊರಡಿಸಬಹುದು ಎಂಬುದನ್ನು ಪರಿಶೀಲಿಸಲಾಗುವುದು. ಯಾವ ಕಲಾವಿದರೂ ನಿರುದ್ಯೋಗಿಯಾಗಬಾರದು. ಪ್ರತಿಯೊಬ್ಬ ಕಲಾವಿದರಿಗೂ ಅವಕಾಶ ದೊರೆಯುವಂತಹ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ. 

ಸಾಂಧರ್ಭಿಕ ಚಿತ್ರ 

ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರು ತಮ್ಮ ಕೆಲಸವನ್ನು ಕಳೆದುಕೊಂಡು ಜೀವನ ನಡೆಸಲು ಕಷ್ಟಪಡಬಾರದು. ಆದುದರಿಂದ ಎಲ್ಲಾ ರೀತಿಯ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಯಕ್ಷಗಾನ ಪ್ರಾರಂಭಿಸಲು ಅನುಮತಿ ನೀಡಲಾಗುವುದು’ ಎಂದು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು. ಇಡೀ ರಾತ್ರಿ ಪ್ರದರ್ಶನ ನಡೆಸಬೇಕೇ ಎಂಬ ಬಗ್ಗೆ ಅಥವಾ ಯಕ್ಷಗಾನ ಪ್ರದರ್ಶನಕ್ಕೆ ಬೇರೆಯದೇ ಸ್ವರೂಪ ನೀಡಬೇಕೆ ಎಂಬ ಬಗೆಗೆ ಹಾಗೂ ಯಕ್ಷಗಾನ ಕಲಾವಿದರಿಗೆ ಪಿಂಚಣಿ ನೀಡಬೇಕು ಎಂಬ ಪ್ರಸ್ತಾಪಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಶಾಂಭವಿ ವಿಜಯ – ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ 

ಸಾಂಧರ್ಭಿಕ ಚಿತ್ರ

ಶ್ರೀ ಕಾಶೀ ಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರ ಬಾಳೆಕೋಡಿ, ಕನ್ಯಾನ(ದ. ಕ.)ದಿನಾಂಕ 17. 10. 2020 ಶನಿವಾರ ಮಧ್ಯಾಹ್ನ 2. 30ರಿಂದ ಪ್ರಸಂಗ – ಶಾಂಭವಿ ವಿಜಯ  ಭಾಗವತರು: ಶಿವಶಂಕರ ಭಟ್ ತಲ್ಪಣಾಜೆ ಸುರೇಶ ಆಚಾರ್ಯ ನೀರ್ಚಾಲು ಚೆಂಡೆ ಮದ್ದಳೆ: ತಾಳ್ತಜೆ ಶಂಕರನಾರಾಯಣ ಭಟ್, ಕುಮಾರ ಶುಭಶರಣ ತಾಳ್ತಜೆ. ಅರ್ಥಧಾರಿಗಳು: ಶ್ಯಾಮ ಭಟ್ ಪಕಳಕುಂಜ, ಬಾಲಕೃಷ್ಣ ಆಚಾರ್ಯ ನೀರ್ಚಾಲು, ಗಣೇಶ ಪಾಲೆಚ್ಚಾರು, ವಿಷ್ಣುಪ್ರಕಾಶ ಪೆರ್ವ, ಪೆರ್ನಡ್ಕ ರಾಜಗೋಪಾಲ್, ಕನ್ಯಾನ. ಸಂಯೋಜಕರು: ಜಯಪ್ರಸಾದ್ ಬಾಳೆಕೋಡಿ ಮೊಬೈಲ್: 9449334111 ಸಹಕಾರ: ನವೀನ್ ಕೋಟ್ಯಾನ್ ಕನ್ಯಾನ.  ಸೂಚನೆ: ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಂದು ಸಂಯೋಜಕರು ತಿಳಿಸಿದ್ದಾರೆ. 

ಪ್ರಸಿದ್ಧ ಯಕ್ಷಗಾನ ಕಲಾವಿದರಾದ ನಿಡ್ಲೆ ಗೋವಿಂದ ಭಟ್ಅವರೊಂದಿಗೆ ಮಾತುಕತೆ – ಮಾತಿನ ಮಂಟಪದಲ್ಲಿ

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ  ಕಾರ್ಯಕ್ರಮದಲ್ಲಿ ಇಂದು ನಿಡ್ಲೆ ಗೋವಿಂದ ಭಟ್ ಅವರೊಂದಿಗೆ ಮಾತುಕತೆ.  ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ  ಮಾತುಕತೆಯನ್ನು ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ.  ಸಂಜೆ ಘಂಟೆ 6.30ರಿಂದ  7.30ರ ವರೆಗೆ ಈ ಕಾರ್ಯಕ್ರಮ ಮೂಡಿಬರಲಿದೆ.  ಮಾತಿನ ಮಂಟಪ  ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. 

ಅಳಿಕೆ ರಾಮಯ್ಯ ರೈ – ಸಂಕ್ಷಿಪ್ತ ಮಾಹಿತಿ (Alike Ramayya Rai)

ಅಳಿಕೆ ರಾಮಯ್ಯ ರೈ – ಸಂಕ್ಷಿಪ್ತ ಮಾಹಿತಿ  ಹೆಸರು: ಅಳಿಕೆ ರಾಮಯ್ಯ ರೈ    ಜನನ:  1915ನೇ ಇಸವಿ ಮಾರ್ಚ್ 17ರಂದು  ಜನನ ಸ್ಥಳ:  ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಳಿಕೆ ಗ್ರಾಮ. ತಂದೆ ತಾಯಿ:  ತಂದೆ: ಅಳಿಕೆ ಮೋನಪ್ಪ ರೈ ತಾಯಿ: ಶ್ರೀಮತಿ  ಮಂಜಕ್ಕೆ  ವಿದ್ಯಾಭ್ಯಾಸ: 4ನೇ ತರಗತಿ ವರೆಗೆ

   ಯಕ್ಷಗಾನ ಗುರುಗಳು:   ತಂದೆ ಅಳಿಕೆ ಮೋನಪ್ಪ ರೈಯವರೇ ನಾಟ್ಯಮತ್ತು ಮಾತುಗಾರಿಕೆಗೆ ಮೊದಲ ಗುರುಗಳು.ಅಳಿಕೆ ರಾಮಯ್ಯ ರೈಗಳ ಅಜ್ಜ ಅಟ್ಟೆಪ್ಪಿಲ ರಾಮಣ್ಣ ರೈಗಳು ಆ ಕಾಲದ ಉತ್ತಮ ಭಾಗವತರಾಗಿದ್ದರು. ಹೀಗಾಗಿ ಯಕ್ಷಗಾನ ಕಲೆಯು ಅಳಿಕೆ ರಾಮಯ್ಯ ರೈಗಳಿಗೆ ರಕ್ತಗತ.  ಭಾಗವತಿಕೆಗೆ ಗುರುಗಳು: ಮವ್ವಾರು ಕಿಟ್ಟಣ್ಣ ಭಾಗವತರು  ರಂಗಪ್ರವೇಶ: 1927ನೇ ಇಸವಿ ಜನವರಿಯಲ್ಲಿ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಮಾಂಬಾಡಿ ನಾರಾಯಣ ಭಾಗವತರಿಂದ ಗೆಜ್ಜೆ ಪಡೆದು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯದಲ್ಲಿ ರಂಗಪ್ರವೇಶ ಮಾಡಿದ್ದರು. 

ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ:  ಕೊಡಿಯಾಲಗುತ್ತು ಶಂಭು ಹೆಗ್ಗಡೆ ಸಂಚಾಲಕತ್ವದ ಕದ್ರಿ ಮೇಳದಲ್ಲಿ ತಿರುಗಾಟ, ಕದ್ರಿ ಮೇಳದ ನಂತರ ರಾಮಯ್ಯ ರೈಗಳ ತಿರುಗಾಟ ಕಟೀಲು ಮೇಳದಲ್ಲಿ, ನಂತರ ಕರ್ನಾಟಕ ಮೇಳದಲ್ಲಿ. ಕರ್ನಾಟಕ ಮೇಳವು ತಿರುಗಾಟವನ್ನು ನಿಲ್ಲಿಸಿದಾಗ ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ. ಒಟ್ಟು ಕಲಾಸೇವೆ 1926ರಿಂದ ತೊಡಗಿ 1984ರ ವರೆಗೆ. ಒಟ್ಟು ೫೮ ವರ್ಷಗಳು. ಆಮೇಲೆ ಸ್ವಯಂ ನಿವೃತ್ತಿ.  ಮಕ್ಕಳು: ಇಬ್ಬರು ಗಂಡು ಮಕ್ಕಳು ಉದ್ಯೋಗಸ್ಥರಾಗಿ ಮತ್ತು ನಾಲ್ವರು ಹೆಣ್ಣು ಮಕ್ಕಳು ವಿವಾಹಿತೆಯರಾಗಿ ತಮ್ಮ ತಮ್ಮ ಕುಟುಂಬದೊಂದಿಗೆ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.  ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ತೆಂಕುತಿಟ್ಟಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದ ಮೊದಲ ಕಲಾವಿದ. ಕೇಂದ್ರ ಸಂಗೀತ – ನಾಟಕ ಅಕಾಡೆಮಿಯ ಪ್ರಶಸ್ತಿ, ಮತ್ತು ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. 

ಅಳಿಕೆ ರಾಮಯ್ಯ ರೈಗಳ ವಿಶೇಷತೆ:ಅಳಿಕೆಯವರು ಸಮರ್ಥ ಭಾಗವತರಾಗಿ ಪ್ರದರ್ಶನವನ್ನು ಮುನ್ನಡೆಸಬಲ್ಲವರಾಗಿದ್ದರು. ಆ ಸಾಮರ್ಥ್ಯವನ್ನು ಮಾಡಿ ತೋರಿಸಿದ್ದರು. ಪುಂಡುವೇಷ, ಸ್ತ್ರೀವೇಷ, ರಾಜವೇಷ ಅಥವಾ ಎದುರುವೇಷ ಹೀಗೆ ಎಲ್ಲದರಲ್ಲಿಯೂ ಅದ್ವಿತೀಯರಾಗಿ ಮೆರೆದವರು ಅಳಿಕೆ ರಾಮಯ್ಯ ರೈ. ರಾಜ್ಯಪ್ರಶಸ್ತಿ ಪಡೆದ ಮೊದಲ ತೆಂಕಿನ ಕಲಾವಿದನೆಂಬ ಹೆಗ್ಗಳಿಕೆ. ಜೋಡಾಟಗಳ ಪ್ರವೀಣ.  ಪ್ರಸಿದ್ಧಿ ತಂದುಕೊಟ್ಟ ಪಾತ್ರಗಳು: ದುಷ್ಯಂತ, ನಳ, ಅತಿಕಾಯ, ಹಿರಣ್ಯಾಕ್ಷ, ಇಂದ್ರಜಿತು, ಋತುಪರ್ಣ, ಕರ್ಣ, ಹನೂಮಂತ, ಕೌರವ, ರಕ್ತಬೀಜ, ಅರ್ಜುನ, ಕೀಚಕ, ಅಭಿಮನ್ಯು, ಬಭ್ರುವಾಹನ, ಶ್ವೇತಕುಮಾರ, ಚಂದ್ರಮತಿ, ದಮಯಂತಿ, ಶಕುಂತಲೆ, ಅಂಬೆ, ಮಂಡೋದರಿ  ನಿಧನ: ಆಗಸ್ಟ್ 21, 1989.

ಲೇಖನ: ಮನಮೋಹನ್ ವಿ. ಎಸ್

ಯಕ್ಷಗಾನ ಶಿಕ್ಷಣ – ಲಕ್ಷಣ (ಶ್ರೀ ಹೊಸ್ತೋಟ ಮಂಜುನಾಥ ಭಾಗವತರು) Hosthota Manjunatha Bhagavatha

ಯಕ್ಷಗಾನ ಕಲೆಗಾಗಿಯೇ  ತಮ್ಮ  ಜೀವನವನ್ನು ಮುಡಿಪಾಗಿಟ್ಟವರು ಶ್ರೀ ಹೊಸ್ತೋಟ ಮಂಜುನಾಥ ಭಾಗವತರು. ಬದುಕಿನುದ್ದಕ್ಕೂ ಪ್ರದರ್ಶನ, ಶಿಕ್ಷಣ, ಸಂಶೋಧನೆ, ಚಿಂತನೆಗಳಲ್ಲೇ ತೊಡಗಿಸಿಕೊಂಡು ಇನ್ನೂರಕ್ಕೂ ಮಿಕ್ಕಿದ ಪ್ರಸಂಗಗಳನ್ನು ರಚಿಸಿದ್ದರು. ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗೆ ಅರ್ಪಿಸಿದವರು. ಶ್ರೀಯುತರಿಂದ ರಚಿಸಲ್ಪಟ್ಟ ಕೃತಿಯಿದು. ‘ಯಕ್ಷಗಾನ ಶಿಕ್ಷಣ-ಲಕ್ಷಣ’ಇದು 2019ರಲ್ಲಿ ಮುದ್ರಣವಾಗಿ ಓದುಗರ ಕೈ ಸೇರಿತ್ತು.

ಪ್ರಕಾಶಕರು ಕೆನೆಡಾದ ಟೊರಾಂಟೊ ಎಂಬಲ್ಲಿರುವ ಯಕ್ಷಮಿತ್ರ ಯಕ್ಷಗಾನ ಮೇಳ ಎಂಬ ಸಂಸ್ಥೆಯು. ಸಂಪಾದಕರು ಶ್ರೀ ರಘು ಕಟ್ಟಿನಕೆರೆ. ಪ್ರಕಾಶಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಬಳಿಕ ‘ಬಿನ್ನಹಕೆ ಬಾಯಿಲ್ಲವಯ್ಯ’ ಎಂಬ ಶೀರ್ಷಿಕೆಯಡಿಯಲ್ಲಿ ಹೊಸ್ತೋಟ ಮಂಜುನಾಥ ಭಾಗವತರ ಮನದ ಮಾತುಗಳನ್ನು ನೀಡಲಾಗಿದೆ. ವಿದ್ವಾಂಸ, ವಿಮರ್ಶಕ, ಹಿರಿಯ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ ಅವರು ‘ಶಿಕ್ಷಣ ಲಕ್ಷಣಕ್ಕೆ ಅಕ್ಕರೆಯ ನಲ್ನುಡಿ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಹೊಸ್ತೋಟದವರು ಬರೆದ ‘ಯಕ್ಷಗಾನ ಶಿಕ್ಷಣ ಲಕ್ಷಣ’ ಎಂಬ ಈ ಹೊತ್ತಗೆಯು ಎಂಟು ವಿಭಾಗಗಳನ್ನು ಹೊಂದಿದೆ.

ಲಯ, ತಾಳಗಳು, ಮದ್ದಳೆ, ಯಕ್ಷಗಾನ ಕುಣಿತ, ಸ್ವರ, ರಾಗಗಳು, ಯಕ್ಷಗಾನ ಸಾಹಿತ್ಯ, ಅರ್ಥಗಾರಿಕೆ, ಅಭಿನಯಾವಲೋಕನ, ಚೆಂಡೆ-ಹಿನ್ನೆಲೆಯ ವಾದ್ಯ ಎಂಬ ಎಂಟು ವಿಭಾಗಗಳು. ಮೊದಲಿಗೆ ‘ಯಕ್ಷಗಾನ ಸಂಕ್ಷಿಪ್ತ ಪರಿಚಯ’ ಎಂಬ ಬರಹವನ್ನೂ ನೀಡಿರುತ್ತಾರೆ. ಯಕ್ಷಗಾನ ಕ್ಷೇತ್ರಕ್ಕೆ ಹೊಸ್ತೋಟದವರ ಅನುಪಮವಾದ ಕೊಡುಗೆ ಇದು. ಹಿಮ್ಮೇಳ ಮುಮ್ಮೇಳ ಕಲಿಕಾಸಕ್ತರಿಗೆ ಅತ್ಯಂತ ಸಹಕಾರಿಯಾಗಿ ಪರಿಣಮಿಸಲಿದೆ. ಇದು ಸುಮಾರು ಇನ್ನೂರ ಎಂಬತ್ತು ಪುಟಗಳುಳ್ಳ ಕೃತಿ. ಪುಸ್ತಕದ ಹೊರ ಆವರಣದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಪ್ರೊ| ಎಂ.ಎ. ಹೆಗಡೆ, ಡಾ. ಕೆ.ಎಂ. ರಾಘವ ನಂಬಿಯಾರ್ ಇವರುಗಳ ನಲ್ನುಡಿಗಳನ್ನು ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ  

ಹಾಸ್ಯರತ್ನ ನಯನ ಕುಮಾರ್ – ಸಂಕ್ಷಿಪ್ತ ಮಾಹಿತಿ (Hasyaratna Nayanakumar)

ಹಾಸ್ಯರತ್ನ ನಯನ ಕುಮಾರ್ – ಸಂಕ್ಷಿಪ್ತ ಮಾಹಿತಿ  ಹೆಸರು: ನಯನ ಕುಮಾರ್ ( ಬಾಲ್ಯದ ಹೆಸರು ನಾರಾಯಣ ಭಟ್) ಜನನ: 1948ನೇ ಇಸವಿಯಲ್ಲಿ    ಜನನ ಸ್ಥಳ:  ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಡಾಲುಮೇರ್ಕಳ ಗ್ರಾಮದ ಎಡಕ್ಕಾನ ಎಂಬಲ್ಲಿ    ತಂದೆ ತಾಯಿ:  ತಂದೆ ಶ್ರೀ  ವೆಂಕಟ್ರಮಣ ಭಟ್  . ತಾಯಿ ಶ್ರೀಮತಿ  ಪರಮೇಶ್ವರೀ ಅಮ್ಮ   ಪತ್ನಿ: ಶ್ರೀಮತಿ ಸೀತಾ


ಯಕ್ಷಗಾನ ಗುರುಗಳು:   ಪ್ರಸಿದ್ಧ ಮದ್ದಳೆಗಾರರಾಗಿದ್ದ ನೆಡ್ಲೆ ನರಸಿಂಹ ಭಟ್ಟರಿಂದ ಮದ್ದಳೆವಾದನ ಕಲಿಕೆ, ಕಟೀಲು ಮೇಳದ ಒಂದು ವರ್ಷದ ತಿರುಗಾಟದ ನಂತರ ಅಧ್ಯಾಪಕರಾದ ವಿಟ್ಲ ವಿಠಲ ಶೆಟ್ಟರಿಂದ ಶಾಸ್ತ್ರೀಯ ನಾಟ್ಯವನ್ನು ಕಲಿತು ಇದನ್ನೇ ಯಕ್ಷಗಾನಕ್ಕೆ ಅಳವಡಿಸಿಕೊಂಡರು. ನಯನ ಕುಮಾರರ ಅಜ್ಜ ಅಂಗ್ರಿ ನಾರಾಯಣ ಭಾಗವತರು. (ಅಣ್ಣಯ್ಯ ಭಾಗವತರು). ಬಂಧುಗಳೂ, ಮನೆಯವರೂ ಕಲಾವಿದರಾಗಿದ್ದರು. ನಯನ ಕುಮಾರರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿತ್ತು. ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : 1977ರಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿ ರಸಿಕರತ್ನ ಜೋಷಿಯವರ ಶಿಷ್ಯನಾಗಿ ಕಲಿಕೆ ಮತ್ತು ಪೆರುವಡಿ ನಾರಾಯಣ ಭಟ್ಟರಿಂದಲೂ ಮಾರ್ಗದರ್ಶನ. ಹಾಗೂ ಇತರ ಹಿರಿಯ ಕಲಾವಿದರಿಂದ ಮಾರ್ಗದರ್ಶನ. 
ಅನುಭವ:   ಕಟೀಲು ಮೇಳದಲ್ಲಿ ಒಂದು ವರ್ಷ ತಿರುಗಾಟ. ಬಳಿಕ ಸುಂಕದಕಟ್ಟೆ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ. ನಿತ್ಯವೇಷದ ತನಕ ಮದ್ದಳೆ ಬಾರಿಸಿ ನಂತರ ಹಾಸ್ಯದ ಎಲ್ಲಾ ಪಾತ್ರ ನಿರ್ವಹಣೆ. 1977ರಿಂದ ಸತತ 27 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. 
ಇಷ್ಟಪಡುತ್ತಿದ್ದ ಪಾತ್ರಗಳು: ಬಾಹುಕ, ಗುಹ, ಬೇಹಿನಚರ, ನಾರದ, ಸಂಜಯ ಮುಂತಾದ ಹಾಸ್ಯ ಹಾಗೂ ಗಂಭೀರ ಪಾತ್ರಗಳು. 

ಮಕ್ಕಳು:   ಹಿರಿಯ ಪುತ್ರಿ ರೇಖಾ ವಿವಾಹಿತೆ. ಪುತ್ರ ಉದಯ ವೆಂಕಟೇಶ ಪುತ್ತೂರಿನಲ್ಲಿ ವಾಸ (ಹಣಕಾಸು ಸಂಸ್ಥೆ ಉದ್ಯೋಗಿ). ಕಿರಿಯ ಪುತ್ರಿ ಕವಿತಾ ವಿವಾಹಿತೆ. ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: 2004ರಲ್ಲಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಮಹೋತ್ಸವದ ಸನ್ಮಾನ, ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಸನ್ಮಾನ, ಮುಂಬಯಿ ಕನ್ನಡ ಸಂಘದ ಮರಣೋತ್ತರ ಪ್ರಶಸ್ತಿ ಅಲ್ಲದೆ ಅನೇಕ ಸಂಘ ಸಂಸ್ಥೆಗಳ ಸನ್ಮಾನ, ದೆಹಲಿಯ ಕನ್ನಡ ಸಂಘದ ‘ರಸಿಕರತ್ನ’ ಎಂಬ ಬಿರುದು, 1994ರಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಧರ್ಮಸ್ಥಳ ಮೇಳದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ನರಕಾಸುರ ಮೋಕ್ಷ’ ಪ್ರದರ್ಶನದಲ್ಲಿ ರಾಷ್ಟ್ರಪತಿಗಳಿಂದ ಸಹಕಲಾವಿದರೊಂದಿಗೆ ಸನ್ಮಾನ. 

ಹೊರನಾಡಿನಲ್ಲಿ ನಯನ ಕುಮಾರ್: ಅಬುದಾಭಿ, ಸೌದಿ, ಕುವೈಟ್, ದುಬಾಯಿ, ಜರ್ಮನಿ ಅಲ್ಲದೆ ಭಾರತದ ದೆಹಲಿ, ಮುಂಬಯಿ, ಬೆಂಗಳೂರು ಮೊದಲಾದ ನಗರಗಳಲ್ಲಿ ಯಕ್ಷಗಾನ ಪ್ರದಶನಗಳಲ್ಲಿ ಭಾಗವಹಿಸಿದ ಖ್ಯಾತಿ, ಅಲ್ಲಗೆ ಆಕಾಶವಾಣಿ ಮತ್ತು ದೂರದರ್ಶನದ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಯಕ್ಷಗಾನದಲ್ಲಿ ತಿರುಗಾಟ ಮಾಡುವ ಮೊದಲು ಬೆಂಗಳೂರಿನ ಮಾ| ಹಿರಣ್ಣಯ್ಯ ಅವರ ನಾಟಕ ತಂಡದಲ್ಲಿ ನಟನಾಗಿ ಅವರ ಮೆಚ್ಚುಗೆ ಗಳಿಸಿದ್ದರು.  ನಿರ್ವಹಿಸಿದ ಪಾತ್ರಗಳು: ಎಲ್ಲಾ ಹಾಸ್ಯ ಪಾತ್ರಗಳು ಮತ್ತು ಬಾಹುಕ, ನಾರದ, ಸಂಜಯ ಇತ್ಯಾದಿ ಹಾಸ್ಯಗಾರರು ನಿರ್ವಹಿಸುವ ಪಾತ್ರಗಳು. 

ವಿಶೇಷತೆಗಳು: ಇವರ ಪಾತ್ರ ಗಳಿರುವ 200ಕ್ಕೂ ಮಿಕ್ಕಿ ಧ್ವನಿಸುರುಳಿಗಳು ಬಿಡುಗಡೆಗೊಂಡಿವೆ. ಹೆಚ್ಚಿನ ಪ್ರಸಂಗಗಳಲ್ಲಿ ಒಂದು ರಾತ್ರಿಯಲ್ಲಿ ಎಂಟು, ಹತ್ತರಷ್ಟು ಪಾತ್ರಗಳನ್ನು ನಿರ್ವಹಿಸಿದ್ದೂ ಇದೆ. ಅದು ಹಲವಾರು ಬಾರಿ. ಅತಿ ವೇಗವಾಗಿ ಬಣ್ಣಗಾರಿಕೆ ಮಾಡಿ, ವೇಷಭೂಷಣ ಧರಿಸಿ ರಂಗ ಪ್ರವೇಶ ಮಾಡುವುದರಲ್ಲಿ ಎತ್ತಿದ ಕೈ. 

ನಿಧನ: ನವಂಬರ್ 8, 2005ರಂದು ನಿಧನರಾದರು. ತಮ್ಮ ಕಲಾ ಜೀವನದ ಕೊನೆಯ ದಿನಗಳಲ್ಲಿ ಅನಾರೋಗ್ಯ ಪೀಡಿತರಾಗಿದ್ದ ಅವರು ಯಕ್ಷಗಾನದಿಂದ ಅನಿವಾರ್ಯ ನಿವೃತ್ತಿ ಪಡೆದಿದ್ದರು. ಎಲ್ಲರನ್ನೂ ನಗಿಸಿದ ನಯನ ಕುಮಾರ್ ತನ್ನ 58ನೆಯ ವಯಸ್ಸಿನಲ್ಲಿಯೇ ವಿಧಿವಶರಾದದ್ದು ಯಕ್ಷಗಾನ ರಂಗದ ಒಂದು ದೊಡ್ಡ ದುರಂತ. 

ಲೇಖನ: ಮನಮೋಹನ್ ವಿ.ಎಸ್.

ಇರಾ ಗೋಪಾಲಕೃಷ್ಣ ಭಾಗವತರು – ಸಂಕ್ಷಿಪ್ತ ಮಾಹಿತಿ (Ira Gopalakrishna Bhagavatha)

ಇರಾ ಗೋಪಾಲಕೃಷ್ಣ ಭಾಗವತರು – ಸಂಕ್ಷಿಪ್ತ ಮಾಹಿತಿ  ಹೆಸರು: ಇರಾ ಗೋಪಾಲಕೃಷ್ಣ ಭಾಗವತರು    
ಪತ್ನಿ:  ಶ್ರೀಮತಿ ಶಾರದಾ  ವಿವಾಹ:  1950ರಲ್ಲಿ ಬೆಳ್ಳಾರೆ ಶ್ರೀ ವಾಸುದೇವ ರಾಯರ ಪುತ್ರಿ ಶಾರದಾ ಅವರ ಜತೆ ವಿವಾಹ.  ಜನನ:   1922ರಲ್ಲಿ   ಜನನ ಸ್ಥಳ: ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ    ತಂದೆ ತಾಯಿ:   ತಂದೆ: ಶ್ರೀ ಈಶ್ವರಯ್ಯ. ತಾಯಿ: ಕಾವೇರಿ .  ಶ್ರೀ ಈಶ್ವರಯ್ಯ ಅವರು ಆ ಕಾಲದ ಪ್ರಸಿದ್ಧ ಭಾಗವತರಾಗಿದ್ದರು. ಇವರಿಗೆ ಕುಂಡಚ್ಚ ಭಾಗವತರೆಂದು ಹೆಸರಿತ್ತು.   ವಿದ್ಯಾಭ್ಯಾಸ:  ಇರಾ ಗ್ರಾಮದ ಮರಿಗುಳ್ಳ ಶಾಲೆಯಲ್ಲಿ. ಪ್ರಾಥಮಿಕ ಶಿಕ್ಷಣ ಮಾತ್ರ ಅಂದರೆ ಐದನೆಯ ತರಗತಿಯ ವರೆಗೆ. 


ಯಕ್ಷಗಾನ ಗುರುಗಳು:   ತಂದೆ ಈಶ್ವರಯ್ಯನವರಿಂದಲೇ ಮೂಲ ಪಾಠವನ್ನು ಅಭ್ಯಸಿಸಿ ಆಮೇಲೆ ತನ್ನ 14ನೇ ವಯಸ್ಸಿನಲ್ಲಿ ಮಾಂಬಾಡಿ ನಾರಾಯಣ ಭಾಗವತರಿಂದ ಹಾಡುಗಾರಿಕೆಯನ್ನೂ ಮದ್ದಳೆವಾದನವನ್ನೂ ಕಲಿತಿದ್ದರು. ಅನುಭವ:  ಮೊದಲ ತಿರುಗಾಟ ಗೋಕರ್ಣನಾಥೇಶ್ವರ ಮೇಳದಲ್ಲಿ. ನಂತರ ಕದ್ರಿ, ಕೂಡ್ಲು, ಕುಂಡಾವು, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿ ಭಾಗವತನಾಗಿ ಕಲಾಸೇವೆ, 1958 ರಿಂದ ಕಟೀಲು ಮೇಳದಲ್ಲಿ ತಿರುಗಾಟ.  ಒಟ್ಟು 60 ವರ್ಷ ಭಾಗವತರಾಗಿ ಕಲಾಸೇವೆ.  

ಮಕ್ಕಳು:   6 ಮಂದಿ ಮಕ್ಕಳು (3 ಗಂಡು, 3 ಹೆಣ್ಣು) ಶ್ರೀ ಜಯರಾಮ, ಶ್ರೀಪತಿ ಮತ್ತು ಶಿವರಾಮ ಗಂಡು ಮಕ್ಕಳು. ಪರಮೇಶ್ವರೀ, ಸರೋಜಿನಿ, ಯಶೋದಾ ಹೆಣ್ಣು ಮಕ್ಕಳು. ಮಕ್ಕಳು ಕಲಾವಿದರಲ್ಲ. ಆದರೂ ಯಕ್ಷಗಾನದ ಮೇಲೆ ತುಂಬಾ ಆಸಕ್ತಿ ಗೌರವಗಳಿವೆ. ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಶ್ರೀ ಮಂಗಳಾದೇವಿ ಯಕ್ಷನ ಸಂಘ ಮತ್ತು ಕಟೀಲು ಭ್ರಾಮರಿ ಯಕ್ಷಗಾನ ಸಂಘದಿಂದ ಸನ್ಮಾನ. ಅಲ್ಲದೆ ಅನೇಕ ಸಂಸ್ಥೆಗಳ ಗೌರವಕ್ಕೂ ಪಾತ್ರರಾಗಿದ್ದರು. 

ಇರಾ ಗೋಪಾಲಕೃಷ್ಣ ಭಾಗವತರ ವಿಶೇಷತೆ: ಪುರಾಣ ಪ್ರಸಂಗಗಳಲ್ಲಿ ಒಳ್ಳೆಯ ಹಿಡಿತ, ಸಂಪ್ರದಾಯಬದ್ಧವಾದ ಹಾಡುಗಾರಿಕೆ, 40ಕ್ಕಿಂತಲೂ ಹೆಚ್ಚು ಪ್ರಸಂಗಗಳು ಇವರಿಗೆ ಬಾಯಿಪಾಠ, ಧ್ವನಿವರ್ಧಕಗಳಿಲ್ಲದ ಕಾಲದಲ್ಲೂ ಬೆಳಗಿನ ವರೆಗೆ ಒಬ್ಬರೇ  ಹಾಡಿದವರು. ತಂದೆಯಂತೆ ಕುಂಡಚ್ಚ ಭಾಗವತರೆಂದೇ ಪ್ರಸಿದ್ದಿ ಹೊಂದಿದರು. ನಿಧನ: 1999ರಲ್ಲಿ

ಎಸ್.ಪಿ ಮತ್ತು ಎಸ್.ಜಾನಕಿ – ನಿಲುಕೆಗೂ ಮೀರಿದ ಬಂಧ (S.P.B and S. Janaki)

ಇಬ್ಬರೂ ಗಾಯನ ಸಾಮ್ರಾಜ್ಯದ ನೇತಾರರೇ. ಒಬ್ಬರನ್ನು ಮತ್ತೊಬ್ಬರು ಮೀರಿಸುವ ಗಾಯಕರು. ಇಬ್ಬರೂ ಜೊತೆಯಾಗಿ ಅದೆಷ್ಟೋ ಅಕ್ಷರಗಳಿಗೆ ಜೀವತುಂಬಿದ್ದಾರೆ. ಸಹಗಾಯಕರಾಗಿ ಅವರಿಬ್ಬರ ಪಯಣ ಸುಧೀರ್ಘ ಅವಧಿಯದು. ಆದರೆ ನಮಗೆ ಅವರು ಕೇವಲ ಸಹಗಾಯಕರು ಮಾತ್ರ. ಆದರೆ ಅವರಿಬ್ಬರ ನಡುವಿನ ಭಾವನಾತ್ಮಕ ಸಂಬಂಧ ಹೆಚ್ಚಿನವರಿಗೆ ತಿಳಿದಿರಲಾರದು.

ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಕೇವಲ ಸಹಗಾಯಕರಾಗಿರಲಿಲ್ಲ. ಅವರ ನಡುವೆ ಭಾವನಾತ್ಮಕ ಬೆಸುಗೆ, ಸಂಬಂಧಗಳಿತ್ತು. ಸಹೋದರಿ ಸಹೋದರನ ನಡುವಿನ ವಾತ್ಸಲ್ಯವಿತ್ತು.ಅಮ್ಮ ಮಗನ ಪ್ರೀತಿಯ ಮಮತೆಯಿತ್ತು. ಜಗಳ ಮಾಡಿ ಮತ್ತೆ ಒಂದಾಗುವ ಸ್ನೇಹಿತರ ಹುಸಿಕೋಪವಿತ್ತು. ಇಬ್ಬರ ಕುಟುಂಬ ಸದಸ್ಯರೂ ಪರಸ್ಪರರ ಮನೆಗೆ ಆಗಾಗ ಹೋಗಿ ಬರುವ ಆತ್ಮೀಯತೆಯೂ ಇತ್ತು. ಮಾನವೀಯತೆ ಮತ್ತು ವಾತ್ಸಲ್ಯ ಸಂಬಂಧಗಳಲ್ಲಿ ಅವರಿಬ್ಬರೂ ನಮ್ಮೆಲ್ಲರ ಊಹೆಗೂ ನಿಲುಕದಷ್ಟು ಎತ್ತರಕ್ಕೆ ಏರಿದ್ದರು.

ಯಕ್ಷಗಾನ ಮತ್ತು ನಾನು – ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮ ಚರಿತ್ರೆ (Sheni Gopalakrishna Bhat)

ಯಕ್ಷಗಾನದ ಭೀಷ್ಮರೆಂದೇ ಖ್ಯಾತರಾದ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮ ಚರಿತ್ರೆ ‘ಯಕ್ಷಗಾನ ಮತ್ತು ನಾನು’ ಮೊತ್ತ ಮೊದಲು ಪ್ರಕಟವಾಗಿ ಓದುಗರ ಕೈ ಸೇರಿದ್ದು 1981ರಲ್ಲಿ. ಇದು ದ್ವಿತೀಯ ಮುದ್ರಣ. 2006ರಲ್ಲಿ. ಈ ಆತ್ಮಚರಿತ್ರೆಯ ಪ್ರಕಾಶಕರು ಕಲ್ಕೂರ ಪ್ರಕಾಶನ ಮಂಗಳೂರು. 1981ರಲ್ಲಿ ನಡೆದ ಮೊದಲ ಮುದ್ರಣದ ಪ್ರಕಾಶಕರು ಪುತ್ತೂರಿನ ಕನ್ನಡ ಸಂಘ. ಈ ವಿಚಾರವನ್ನು ಪ್ರಕಾಶಕರಾದ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಅವರು ತಮ್ಮ ‘ಪ್ರಕಾಶಕರ ಮಾತು’ ಎಂಬ ಲೇಖನದಲ್ಲಿ ತಿಳಿಸಿರುತ್ತಾರೆ. ಅಲ್ಲದೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಮಹನೀಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.

ಈ ಕೃತಿಯು ಒಟ್ಟು ಇನ್ನೂರ ನಲುವತ್ತೆರಡು ಪುಟಗಳಿಂದ ಕೂಡಿದೆ. ಶ್ರೀ ಶೇಣಿಯವರು ಬರೆದ ‘ಮೊದಲ ಮಾತು’ ಎಂಬ ಶೀರ್ಷಿಕೆಯಡಿಯ ಲೇಖನದಿಂದ ಆರಂಭಗೊಳ್ಳುವ ಆತ್ಮಚರಿತ್ರೆಯು ಪರಿಸರ, ಹೊಸ ಬಯಕೆಯ ಒಕ್ಕಲು, ಯಕ್ಷಲೋಕದ ಹಾದಿಯಲ್ಲಿ, ಸಂಚಾಲಕ ಮತ್ತು ನಟನಾಗಿ, ವಿವೇಚನೆ-ನಿವೇದನೆ ಎಂಬ ವಿಭಾಗಗಳಿಂದ ಕೂಡಿದೆ. ಬಳಿಕ ಶ್ರೀ ಈಶ್ವರಯ್ಯ, ಶ್ರೀ ಹಾ.ಮಾ. ನಾಯಕ,ಇವರುಗಳ ಪ್ರಕಟಿತ ಲೇಖನಗಳನ್ನು ನೀಡಲಾಗಿದೆ. ಬಳಿಕ ಶ್ರೀ ಶೇಣಿಯವರ ಮೊಮ್ಮಗ ಶೇಣಿ ಬಾಲಮುರಳಿಕೃಷ್ಣ ಅವರ ‘ಬರೆಯುವ ಮುನ್ನ’ ಎಂಬ ಲೇಖನವಿದೆ. ಬಳಿಕ ಸುಮಾರು ನಲುವತ್ತೈದು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ.

ಬಳಿಕ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಬರೆದ ಆತ್ಮಚರಿತ್ರೆ’ ಮತ್ತು ‘ನನ್ನವರೇ’ ಎಂಬ ಲೇಖನಗಳನ್ನು ನೀಡಿರುತ್ತಾರೆ. ಬಳಿಕ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರರು ಬರೆದ ‘ವಿದ್ವಾನ್ ಸರ್ವತ್ರ ಪೂಜ್ಯತೇ.. ಪರ್ಯಾಯ ಪದ ಶೇಣಿ’ ಎಂಬ ಲೇಖನವನ್ನೂ ಶೇಣಿ ಬಾಲಮುರಳಿಕೃಷ್ಣ ಅವರು ಬರೆದ ‘ಬರೆದ ಅನಂತರ’ ಎಂಬ ಬರಹಗಳನ್ನೂ ನೀಡಲಾಗಿದೆ. ಅಲ್ಲದೆ ಶೇಣಿಯವರು ನಿರ್ವಹಿಸಿದ ಹಲವಾರು ಪಾತ್ರಗಳ ಕಪ್ಪು ಬಿಳುಪಿನ ಚಿತ್ರಗಳನ್ನೂ ಹಿರಿಯ ಒಡನಾಡಿ ಕಲಾವಿದರ ಚಿತ್ರಗಳನ್ನೂ ಕೊಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ