Tuesday, January 21, 2025
Home Blog Page 360

ಪಾವಂಜೆ ಮೇಳದಲ್ಲಿ ಪ್ರಸಿದ್ಧ ಕಲಾವಿದರ ದಂಡು 

ನವೆಂಬರ್ ತಿಂಗಳು 27ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ಹೆಸರಿನಿಂದ ತಿರುಗಾಟ ಮಾಡಲಿರುವ ಪಾವಂಜೆ ಮೇಳದ ಸಂಪೂರ್ಣ ಆಡಳಿತ ಶ್ರೀ ಕ್ಷೇತ್ರ ಪಾವಂಜೆಯದ್ದೆ ಆಗಿರುತ್ತದೆ ಮತ್ತು ಯಕ್ಷಗಾನ ಪ್ರದರ್ಶನ, ಕಲಾವಿದರ ಆಯ್ಕೆ, ರಂಗ ಪ್ರಸ್ತುತಿ ಮುಂತಾದ ಪ್ರದರ್ಶನಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳಲ್ಲಿ ಮೇಳದ ಪ್ರಧಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತದೆ ಎಂದು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಪಾವಂಜೆಯ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್ ಅವರು ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ಮತ್ತು ಪಾವಂಜೆ ದೇವಳದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ನೂತನ ಮೇಳದ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ಮೇಳದ ಕಲಾವಿದರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ನೂತನ ಪಾವಂಜೆ ಮೇಳದಲ್ಲಿ ಪ್ರಸಿದ್ಧ ಕಲಾವಿದರ ದಂಡೇ ಇದೆ. ಹಾಗಾದರೆ ಅವರ್ಯಾರೆಲ್ಲಾ ಅಂತ ನೋಡೋಣ. 

ಭಾಗವತರು:  ಪಟ್ಲ ಸತೀಶ್ ಶೆಟ್ಟಿ,  ಪ್ರಫುಲ್ಲಚಂದ್ರ ನೆಲ್ಯಾಡಿ ಹಿಮ್ಮೇಳ:  ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳ್ಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ
ವಿಧೂಷಕರು: ಉಜಿರೆ ನಾರಾಯಣ, ಸಂದೇಶ್ ಮಂದಾರ.   ಸ್ತ್ರೀ ಪಾತ್ರದಲ್ಲಿ: ಅಕ್ಷಯ್ ಕುಮಾರ್, ರಾಜೇಶ್ ನಿಟ್ಟೆ, ಯೋಗೀಶ್ ಕಡಬ, ವಿಶ್ವಾಸ್ ಕಾವೂರು  
ಪುರುಷ ಪಾತ್ರಗಳಲ್ಲಿ:  ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್, ಸಂತೋಷ್ ಕುಮಾರ್ ಮಾನ್ಯ, ಅಡ್ಕ ರಾಕೇಶ್ ರೈ, ಸತೀಶ್ ನೈನಾಡು, ಮಾಧವ ಕೊಳ್ತಮಜಲು, ಮೋಹನ್ ಬೆಳ್ಳಿಪ್ಪಾಡಿ, ಮನೀಷ್ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷಣ, ಮಧುರಾಜ್, ಭುವನ್ ಮೊದಲಾದವರು.

ಬಡಗು ತಿಟ್ಟಿನ ಕಲಾ ತಪಸ್ವಿ ಕೊಳಗಿ ಅನಂತ ಹೆಗಡೆ (Kolagi Anantha Hegade)

ಬಡಗು ತಿಟ್ಟಿನ ಹಿರಿಯ ಕಲಾಭಿಮಾನೀ ಪ್ರೇಕ್ಷಕರಿಂದ ಪ್ರೀತಿ ಗೌರವಗಳ ಸಂಕೇತವಾಗಿ ‘ಅನಂತಣ್ಣಾ’ ಎಂದೇ ಕರೆಸಿಕೊಂಡವರು ಕೊಳಗಿ ಅನಂತ ಹೆಗಡೆಯವರು. ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಕ್ಷೇತ್ರದ ಶ್ರೇಷ್ಠ ಕಲಾವಿದರಾಗಿ ಮೆರೆದವರಿವರು. ಮಾಧ್ಯಮಗಳೂ ವಾಹನಗಳೂ ಇಲ್ಲದ ಕಾಲ ಅದು. ಯಕ್ಷಗಾನ ಪ್ರದರ್ಶನಗಳಿಗೆ  ನಡೆದೇ ಸಾಗಬೇಕಾಗಿತ್ತು. ಆದರೂ ಅನೇಕ ಕಲಾವಿದರು ರಂಗದಲ್ಲಿ ಚೆನ್ನಾಗಿ ಅಭಿನಯಿಸಿ, ರಂಗವನ್ನೇ ಮಾಧ್ಯಮವಾಗಿ ತಮ್ಮ ಪ್ರತಿಭೆಯನ್ನು ಮೆರೆಸಿ ಪ್ರೇಕ್ಷಕರ ಮನವನ್ನು ಗೆದ್ದಿದ್ದರು.

ಅಂತಹಾ ಶ್ರೇಷ್ಠ ಕಲಾವಿದರಲ್ಲೊಬ್ಬರು ಕೊಳಗಿ ಅನಂತ ಹೆಗಡೆಯವರು. ಯಾವ ಪಾತ್ರಗಳನ್ನೂ ಮಾಡಬಲ್ಲ ಸಾಹಸಿಯಾಗಿದ್ದರು. ಆದರೂ ಪೋಷಕ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಯಕ್ಷಗಾನದಲ್ಲಿ ಅನಗತ್ಯ ಎನಿಸುವಷ್ಟು ಸಪ್ಪೆ ಆಗಿರುತ್ತಿದ್ದ ಪೋಷಕ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದು ಇವರ ಹೆಚ್ಚುಗಾರಿಕೆ. ಸಾಧನೆಯೂ ಹೌದು. ಅನಂತಣ್ಣ ಮಾಡುವುದಾದರೆ ಆ ಪಾತ್ರ ಬೇಕೇ ಬೇಕು ಎಂದು ಮುಖ್ಯ ಪಾತ್ರವನ್ನು ನಿರ್ವಹಿಸುವ ಕಲಾವಿದರು ಹೇಳುತ್ತಿದ್ದರು ಎಂದಾದರೆ ಕೊಳಗಿ ಅವರ ಪ್ರತಿಭೆ ಅದೆಷ್ಟು ಅಗಾಧವಾದುದು ಎಂಬುದನ್ನು ನಾವು ಊಹಿಸಬಹುದು. ಕೊಳಗಿ ಅನಂತ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊಳಗಿ ಎಂಬಲ್ಲಿ ಪರಮೇಶ್ವರ ಹೆಗಡೆ ಮತ್ತು ಜಾನಕಿ ದಂಪತಿಗಳಿಗೆ ಮಗನಾಗಿ 1938 ಜುಲೈ 7ರಂದು ಜನಿಸಿದರು. ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬಸವಳಿದರು. ವಿದ್ಯಾರ್ಜನೆಗೂ ಹೆಚ್ಚಿನ ಅವಕಾಶ ಇರಲಿಲ್ಲ. ವಿಶ್ವವಿದ್ಯಾನಿಲಯದಲ್ಲಿ ಓದದಿದ್ದರೂ ಕೊಳಗಿ ಅನಂತ ಹೆಗಡೆಯವರು ವಿಶ್ವವೆಂಬ ವಿದ್ಯಾನಿಲಯದಲ್ಲಿ ಚೆನ್ನಾಗಿಯೇ ಓದಿ ಅತ್ಯುನ್ನತ ಪದವಿಯನ್ನು ಪಡೆದಿದ್ದರು. ಇವರಿಗೆ ದಿ| ಕೊಳಗಿ ಸೀತಾರಾಮ ಭಾಗವತರೇ ಗುರುಗಳಾಗಿ ಒದಗಿ ಬಂದಿದ್ದರು. ಅವರಿಂದ ನಾಟ್ಯ ಮಾತುಗಾರಿಕೆ ಕಲಿತು ತನ್ನ 16ನೆಯ ವಯಸ್ಸಿನಲ್ಲಿ 1954ನೇ ಇಸವಿಯಲ್ಲಿ ರಂಗ ಪ್ರವೇಶ ಮಾಡಿದರು.

1958ರಲ್ಲಿ ಬಾಲ್ಯ ಸ್ನೇಹಿತ, ಒಡನಾಡಿ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರ ಜತೆ ಸೇರಿ ಕೊಳಗಿ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಕಲಾ ಸಂಘ, ಶಿರಳಗಿ ಎಂಬ ತಂಡವನ್ನೇ ಕಟ್ಟಿದ್ದರು. ಎಳವೆಯಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡರೂ ಧೈರ್ಯಗುಂದದೆ, ಮಾನಸಿಕ ದೃಢತೆಯನ್ನು ಹೊಂದಿ ಕಲಾಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಕೊಳಗಿ ಅನಂತ ಹೆಗಡೆಯವರು ಯಕ್ಷಗಾನ ಕ್ಷೇತ್ರದಲ್ಲಿ ಬಹಳಷ್ಟು ಸಾಧಿಸಿ ಮೆರೆದವರು. ಪಾತ್ರದ ಚೌಕಟ್ಟು, ಔಚಿತ್ಯಗಳನ್ನು ಮೀರಿ ವ್ಯವಹರಿಸಿದವರಲ್ಲ. ಎಂತಹ ಶ್ರೇಷ್ಠ ಕಲಾವಿದನಾದರೂ ಒಮ್ಮೊಮ್ಮೆ ಮೇರೆ ಮೀರಿ ವ್ಯವಹರಿಸಿದ್ದುಂಟು. ಅದಕ್ಕೆ ಕಾರಣಗಳು ಹಲವಿರಬಹುದು. ಉತ್ಸಾಹದಲ್ಲಿ ನಟಿಸುವ ಭರದಲ್ಲಿ  ತಮಗೆ ಅರಿಯದೇ ಪಾತ್ರದ ಮೇರೆ ಮೀರಿ ಅಭಿನಯಿಸುವುದೂ ಇದೆ. ಮತ್ತೆ ಅದು ಅವರ ಅರಿವಿಗೆ ಬಂದು ಎಚ್ಚರ ವಹಿಸುತ್ತಾರೆ. ಕೆಲವೊಮ್ಮೆ ಪ್ರೇಕ್ಷಕರನ್ನು ಸೆಳೆಯುವ ಕಾರಣದಿಂದಲೂ ಹೀಗಾಗುತ್ತದೆ. ಬಹುಬೇಗನೆ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೂ ಪಾತ್ರದ ಸ್ವಭಾವವನ್ನು ಮೀರಿ ಅಭಿನಯಿಸುವ ಕಲಾವಿದರಿರುತ್ತಾರೆ. ಆದರೆ ಕೊಳಗಿ ಅನಂತ ಹೆಗಡೆಯವರು ಅಪ್ಪಿತಪ್ಪಿ ಒಂದು ಬಾರಿಯೂ ಪಾತ್ರದ ಔಚಿತ್ಯವನ್ನು ಮೀರಿ ಅಭಿನಯಿಸಿದವರಲ್ಲ ಎಂಬುದು ಅವರ ವೇಷಗಳನ್ನು ನೋಡಿದ ಹಿರಿಯ ಪ್ರೇಕ್ಷಕರ ಅನುಭವದ ಮಾತುಗಳು.

ಸಂದರ್ಭಕ್ಕೆ ತಕ್ಕ ಮಾತುಗಳನ್ನು ಆಡುವ ತನ್ನ ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರ ಮನಸ್ಸನ್ನು ಬಹುಬೇಗನೆ ಗೆದ್ದಿದ್ದರು. ಗದಾಯುದ್ಧದಲ್ಲಿ ಕೌರವ ಮತ್ತು ಭೀಮನ ಪಾತ್ರಗಳೇ ರಂಜಿಸುವುದು. ಕೊಳಗಿ ಅನಂತ ಹೆಗಡೆಯವರು ಧರ್ಮರಾಯನ ಪಾತ್ರವೂ ಹೊಳೆದು ಕಾಣಿಸಿಕೊಳ್ಳುವುದಕ್ಕಾಗುತ್ತದೆ ಎಂದು ತೋರಿಸಿಕೊಟ್ಟವರು. ಗದಾಯುದ್ಧ ಪ್ರಸಂಗದ ಸಂಜಯ, ಕಂಸವಧೆ ಪ್ರಸಂಗದ ಅಕ್ರೂರ ಮೊದಲಾದ ಪಾತ್ರಗಳಿಗೆ ಜೀವ ತುಂಬಿದ್ದರು. ಕೊಳಗಿ ಅನಂತ ಹೆಗಡೆಯವರು ಇದ್ದಷ್ಟು ಸಮಯ ಆ ಪಾತ್ರ ಬೇರೆ ಕಲಾವಿದರ ಪಾಲಾಗುತ್ತಿರಲಿಲ್ಲ. ಅಂದರೆ ಆ ಪಾತ್ರಗಳನ್ನೂ ಅವರೆಷ್ಟು ಸೊಗಸಾಗಿ ನಿರ್ವಹಿಸುತ್ತಿದ್ದಿರಬಹುದು?! ಕೃಶವಾದ ಶರೀರ, ನಿರಾಡಂಬರ ಬದುಕು, ಶುಭ್ರವಾದ ಉಡುಗೆ, ಸರಳ  ಜೀವನ, ಸೌಜನ್ಯಶೀಲ ಗುಣಗಳಿಂದ ಅವರು ಎಲ್ಲರಿಗೂ ಬೇಕಾದವರಾಗಿದ್ದರು. ಕೊಳಗಿ ಅನಂತ ಹೆಗಡೆಯವರು ಗುಂಡಬಾಳಾ ಮೇಳದಲ್ಲಿ ಮೊದಲು ತಿರುಗಾಟ ನಡೆಸಿದ್ದು. ಬಳಿಕ ಇಡಗುಂಜಿ, ಅಮೃತೇಶ್ವರೀ, ಮುಲ್ಕಿ, ಪೆರ್ಡೂರು, ಸಾಲಿಗ್ರಾಮ, ಬಚ್ಚಗಾರು, ಶಿರಸಿ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು. ಒಟ್ಟು 24 ವರ್ಷಗಳ ಕಾಲ ತಿರುಗಾಟ. ಬಳಿಕ ತಾವೇ ಸ್ಥಾಪಿಸಿದ ಕೊಳಗಿ ಶಿರಳಗಿ ಮೇಳದಲ್ಲಿ ಅಭಿನಯಿಸುತ್ತಿದ್ದರು. ಶ್ರೀರಾಮ, ಸಂಜಯ, ವಿದುರ, ಅಕ್ರೂರ, ಕನಕಾಂಗಿ ಕಲ್ಯಾಣದ ಬಲರಾಮ, ಋತುಪರ್ಣ, ನಾರದ, ಧರ್ಮರಾಯ, ಶಲ್ಯ, ಯೌಗಂಧರಾಯಣ ಮೊದಲಾದ ಪಾತ್ರಗಳು ಇವರಿಗೆ ಅಪಾರ ಖ್ಯಾತಿಯನ್ನು ತಂದು ಕೊಟ್ಟಿತ್ತು.

ಊರ ಪರವೂರ ತಾಳಮದ್ದಳೆಗಳಲ್ಲಿ ಭಾಗವಹಿಸಿದರು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಲಾವಿದರೊಂದಿಗೆ ಆ ಕಾಲದಲ್ಲಿ ಅರ್ಥ ಹೇಳಿದ್ದರು. ಇವರು ನಿರ್ವಹಿಸಿದ ಪಾತ್ರಗಳು ಇನ್ನೂ ಪ್ರೇಕ್ಷಕರ ಮನಸ್ಸಿನಲ್ಲಿ ಮಾಸದೆ ಉಳಿದಿದೆ. ಕೆರೆಮನೆ ಮೇಳದಲ್ಲಿ ಶಂಭು ಹೆಗಡೆಯವರ ಎಲ್ಲಾ ಪಾತ್ರಗಳಿಗೂ ಪೋಷಕ ಪಾತ್ರಧಾರಿಯಾಗಿ ಅಭಿನಯಿಸಿ ಪ್ರದರ್ಶನದ ಗೆಲುವಿಗೆ ಕಾರಣರಾಗಿದ್ದರು. ಶಂಭು ಹೆಗಡೆ ಅವರ ಕರ್ಣ, ಕೊಳಗಿ ಅನಂತ ಹೆಗಡೆ ಅವರ ಶಲ್ಯ. ಈ ಜೋಡಿಯನ್ನು ಕಲಾಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡಿದ್ದರು. ಇನ್ನೂ ಅನೇಕ ಪ್ರಸಂಗಗಳಲ್ಲಿ ಇವರೀರ್ವರೂ ಜತೆಯಾಗಿ ಅಭಿನಯಿಸಿ ಪ್ರದರ್ಶನದ ಗೆಲುವಿಗೆ ಕಾರಣರಾಗಿದ್ದರು. ಕೆರೆಮನೆ ಮೇಳದ ಪ್ರದರ್ಶನದ ಸಂದರ್ಭ ಬಹುಶಃ ಸಿದ್ಧಾಪುರದಲ್ಲೇ ಆಗಿರಬೇಕು. ಕೊಳಗಿ ಅನಂತ ಹೆಗಡೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭದಲ್ಲಿ ಮಾತನಾಡುತ್ತಾ ಕೆರೆಮನೆ ಶಂಭು ಹೆಗಡೆಯವರು “ಓರ್ವ ನಟನಾಗಿ ಕೆರೆಮನೆ ಮೇಳದಲ್ಲಿ ದುಡಿದ ಅನಂತ ಹೆಗಡೆ ನನ್ನ ಕಷ್ಟ ಕಾಲದಲ್ಲಿ, ಅಣ್ಣ ಮರಣ ಹೊಂದಿದ ದುಃಖದ ಸಮಯದಲ್ಲಿ ಮಾನಸಿಕ ಬಲ ಕೊಟ್ಟವರು. ಕೇವಲ ಕಲಾವಿದನಾಗಿರದೆ ಕುಟುಂಬ ಮಿತ್ರನಂತಿದ್ದರು. ಚಾರಿತ್ರ್ಯ ಶುದ್ಧತೆ ಇವರ ಪ್ರಮುಖ ಅಂಶ. ನಮ್ಮ ಮೇಳದ ಕಲಾವಿದ ಕೊಳಗಿ ಅನಂತ ಹೆಗಡೆಯವರಿಗೆ ಇಂದು ಸನ್ಮಾನ ನಡೆಯುತ್ತಿರುವುದಕ್ಕೆ ಹೃದಯ ತುಂಬಿದೆ. ನನ್ನ ಜೊತೆ ಪಾತ್ರಗಳಲ್ಲಿ ಕರ್ಣನ ಪಾತ್ರಕ್ಕೆ ಅನಂತ ಹೆಗಡೆಯವರಷ್ಟು ಒಳ್ಳೆಯ ಪಾತ್ರಧಾರಿ ಬೇರಾರೂ ಸಿಕ್ಕಿಲ್ಲ” ಎಂದು ಹೇಳಿದ್ದರು.

ಹಿತಮಿತ ಮಾತುಗಾರಿಕೆ, ಅತ್ಯುತ್ತಮ ವೇಷಗಾರಿಕೆ, ಉತ್ತಮ ನಾಟ್ಯ ಅಭಿನಯಗಳಿಂದಲೇ ಕಲಾರಸಿಕರ ಮನಗೆದ್ದವರು ಕೊಳಗಿ ಅನಂತ ಹೆಗಡೆಯವರು. ಇವರು ಅಭಿನಯಿಸಿದ ದಕ್ಷಯಜ್ಞ, ಸುಧನ್ವಾರ್ಜುನ ಪ್ರಸಂಗಗಳು ಹೈದರಾಬಾದ್ ಮತ್ತು ಬೆಂಗಳೂರು ದೂರದರ್ಶನಗಳಲ್ಲಿ ಅನೇಕ ಬಾರಿ ಪ್ರಸಾರಗೊಂಡಿವೆ. ಸುಮಾರು ಹದಿನೈದಕ್ಕೂ ಅಧಿಕ ಧ್ವನಿಸುರುಳಿಗಳಲ್ಲೂ ಇವರ ಅರ್ಥಗಾರಿಕೆ ಮುದ್ರಿಸಲ್ಪಟ್ಟಿತ್ತು. ಸಂಗ್ರಹಕಾರರಲ್ಲಿ ಇದು ಈಗಲೂ ಇರಲೂ ಬಹುದು. ಕೊಳಗಿ ಅನಂತ ಹೆಗಡೆ ಅವರು ಈಗ ನಮ್ಮೊಡನೆ ಇಲ್ಲದಿದ್ದರೂ ಅವರ ನೆನಪುಗಳು ಶಾಶ್ವತ. ಅವರ ಪುತ್ರ ಕೊಳಗಿ ಕೇಶವ ಹೆಗಡೆ ಅವರು ಬಡಗು ತಿಟ್ಟಿನ ಖ್ಯಾತ ಭಾಗವತರಾಗಿ ಜನಪ್ರಿಯರಾಗಿರುವುದು ನಮಗೆಲ್ಲಾ ಸಂತಸ ತರುವ ವಿಚಾರ. ಬಡಗು ತಿಟ್ಟಿನ ಕಲಾತಪಸ್ವಿ ಕೊಳಗಿ ಅನಂತ ಹೆಗಡೆ ಅವರಿಗೆ ನುಡಿ ನಮನಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

ಕಾರಂತ ಕಿರಣ – ರಜತೋತ್ಸವ ಗ್ರಂಥಮಾಲೆ 

‘ಕಾರಂತ ಕಿರಣ’ ಎಂಬ ಈ ಕೃತಿಯು ಕೋಟ ಶಿವರಾಮ ಕಾರಂತರ ಕುರಿತಾದ ವಿಚಾರಗಳನ್ನು ತುಂಬಿಕೊಂಡಿರುವ ಪುಸ್ತಕವು. ಈ ಹೊತ್ತಗೆಯು ಪ್ರಕಟವಾದುದು 2004ರಲ್ಲಿ. ಪ್ರಕಾಶಕರು ಬಿ.ಎಂ. ಶ್ರೀಕಂಠಯ್ಯ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು. ಈ ಪ್ರತಿಷ್ಠಿತ ಪ್ರತಿಷ್ಠಾನವನ್ನು ಎಂ.ವಿ ಸೀತಾರಾಮಯ್ಯನವರು ತಮ್ಮ ಆಪ್ತರ ಸಹಕಾರದಿಂದ ಸ್ಥಾಪಿಸಿದರೆಂದೂ, 1979ರಲ್ಲಿ ಬಿ.ಎಂ.ಶ್ರೀ ಅವರ ಶಿಷ್ಯರಾದ ರಾಷ್ಟ್ರಕವಿ ಕುವೆಂಪು ಅವರು ಉದ್ಘಾಟಿಸಿದರೆಂದೂ ಪ್ರಧಾನ ಸಂಪಾದಕೀಯ ಬರಹದಲ್ಲಿ ಶ್ರೀ ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ತಿಳಿಸಿರುತ್ತಾರೆ.

ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ರಜತೋತ್ಸವ ಗ್ರಂಥಮಾಲೆಯಾಗಿ ‘ಕಾರಂತ ಕಿರಣ’ ಎಂಬ ಈ ಕೃತಿಯು ಓದುಗರ ಕೈ ಸೇರಿತ್ತು. ಈ ಗ್ರಂಥಮಾಲೆಯ ಸಂಪಾದಕರು ಚಿ ಶ್ರೀನಿವಾಸ ರಾಜು, ನಾ. ಗೀತಾಚಾರ್ಯ, ಎಸ್. ಶಿವಲಿಂಗಯ್ಯ ಅವರುಗಳು. ನಾ. ಗೀತಾಚಾರ್ಯರು ಸಂಪಾದಕರ ಪರವಾಗಿ ಸಂಪಾದಕೀಯ ಲೇಖನವನ್ನು ಬರೆದಿರುತ್ತಾರೆ. ಅಲ್ಲದೆ ಕಾರಂತರ ಬಗೆಗೆ ‘ಕಡಲ ತೀರದ ಭಾರ್ಗವ’ ಎಂಬ ಕವನವನ್ನೂ ಬರೆದಿರುತ್ತಾರೆ.

ಗ್ರಂಥಮಾಲೆಯು ಆರು ಲೇಖನಗಳನ್ನು ಹೊಂದಿದ್ದು ಅವುಗಳು ಕೋಟ ಶಿವರಾಮ ಕಾರಂತ (ಜೀವನ ಪಥ), ಡಾ. ಕಾರಂತರು ಮತ್ತು ಯಕ್ಷಗಾನ, ಕಾರಂತರ ವಿಜ್ಞಾನ ಪ್ರಪಂಚ, ಪತ್ರಿಕೋದ್ಯಮ ರಾಜಕಾರಣ ಸಾಮಾಜಿಕ ಚಟುವಟಿಕೆಗಳಲ್ಲಿ ಶಿವರಾಮ ಕಾರಂತರು, ಕಾರಂತರ ಸಿರಿಗನ್ನಡ ಅರ್ಥಕೋಶ, ಕಾರಂತರು ಮತ್ತು ಸಿನಿಮಾ.

ಲೇಖನಗಳನ್ನು ಬರೆದವರು ಕ್ರಮವಾಗಿ ಎಸ್. ವಿ. ಶ್ರೀನಿವಾಸ ರಾವ್, ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್, ಟಿ.ಆರ್. ಅನಂತರಾಮು, ಈಶ್ವರ ದೈತೋಟ, ಪ್ರೊ| ಜಿ. ಅಶ್ವತ್ಥನಾರಾಯಣ, ಗಿರೀಶ್ ಕಾಸರವಳ್ಳಿ, ಬಳಿಕ ಅನುಬಂಧ ಎಂಬ ವಿಭಾಗದಲ್ಲಿ ‘ಕಾರಂತರ ಕಿರಣ’ – ಕಾರ್ಯಕ್ರಮ ವಿವರ, ನಿಧನಾ ನಂತರ ಲೇಖನ ಸೂಚಿ ಮತ್ತು ಲೇಖಕರ ವಿಳಾಸಗಳನ್ನು ನೀಡಲಾಗಿದೆ.

ಬರಹ: ರವಿಶಂಕರ್ ವಳಕ್ಕುಂಜ 

ಕೃಷ್ಣ ಸ್ಮರಣ – ದಿ| ಕೆರೇಕೈ ಕೃಷ್ಣ ಭಟ್ಟರ ಸಂಸ್ಮರಣ ಗೌರವ ಗ್ರಂಥ

‘ಕೃಷ್ಣ ಸ್ಮರಣ’ ಎಂಬ ಈ ಕೃತಿಯು  ದಿ| ಕೆರೇಕೈ ಕೃಷ್ಣ ಭಟ್ಟರ ಸಂಸ್ಮರಣ ಗೌರವ ಗ್ರಂಥವು. ಈ ಗ್ರಂಥವು 2009ರಲ್ಲಿ ಪ್ರಕಟವಾಗಿತ್ತು. ಪ್ರಕಾಶಕರು  ದಿ| ಕೆರೇಕೈ ಕೃಷ್ಣ ಭಟ್ಟ ಸಂಸ್ಮರಣ ಸಮಿತಿ, ಶಿರಸಿ. ಸಂಪಾದಕರು ಶ್ರೀ ಎಸ್. ಪಿ. ಶೆಟ್ಟಿ.  ದಿ| ಕೆರೇಕೈ ಕೃಷ್ಣ ಭಟ್ಟರು ಹಿರಿಯ ಖ್ಯಾತ ತಾಳಮದ್ದಳೆ ಅರ್ಥಧಾರಿಗಳು. ಅಲ್ಲದೆ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು. ಶ್ರೀಯುತರ ಕುರಿತಾಗಿ ಹೀಗೊಂದು ಸಂಸ್ಮರಣಾ ಗೌರವ ಗ್ರಂಥವು ಪ್ರಕಟವಾದುದು ಅತ್ಯಂತ ಸಂತೋಷದ ವಿಚಾರವು.

ಸಂಪಾದಕ ಶ್ರೀ ಎಸ್.ಪಿ. ಶೆಟ್ಟರು  ಬರಹದಲ್ಲಿ ಕೆರೇಕೈ ಅವರು ಕಲಾ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಫಲಾಪೇಕ್ಷೆಯಿಲ್ಲದೆ ಸೇವೆ ಮಾಡಿದ ಮಹನೀಯರೆಂಬುದನ್ನು ತಿಳಿಸಿರುತ್ತಾರೆ. ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ರಾಮಚಂದ್ರಾಪುರ ಮಠ, ಶ್ರೀ ಮದೆಡನೀರು ಮಠ, ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗಡೆ, ಶ್ರೀ ಕ್ಷೇತ್ರ ಹೊರನಾಡಿನ ಜಿ. ಭೀಮೇಶ್ವರ ಜೋಶಿ, ಇವರುಗಳ ಅನುಗ್ರಹ ಸಂದೇಶಗಳನ್ನು ನೀಡಲಾಗಿದ್ದು ಬಳಿಕ ಇಪ್ಪತ್ಮೂರು ಛಾಯಾಚಿತ್ರಗಳನ್ನು ನೀಡಿರುತ್ತಾರೆ.

ಈ ಸಂಸ್ಮರಣಾ ಗೌರವ ಗ್ರಂಥವು ಮೂರು ಭಾಗಗಳಿಂದ ಕೂಡಿದೆ. ಭಾಗ ಒಂದು – ಒಲವು. ಅರ್ಥಗಾರಿಕೆ ಅಂದು-ಇಂದು. ಇಲ್ಲಿ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ, ಕಬ್ಬಿನಾಲೆ ವಸಂತ ಭಾರದ್ವಾಜ, ಕೆ.ಎಂ.ರಾಘವ ನಂಬಿಯಾರ್, ಲಕ್ಷ್ಮೀಶ ತೋಳ್ಪಾಡಿ, ಎಂ. ಪ್ರಭಾಕರ ಜೋಶಿ, ಕಾಶ್ಯಪ ಪರ್ಣಕುಟಿ, ತೆಕ್ಕಟ್ಟೆ ಆನಂದ ಮಾಸ್ತರ್, ಕೃಷ್ಣ ಗಣಪತಿ ಭಟ್ಟ ಇವರುಗಳ ಲೇಖನಗಳಿವೆ. ಭಾಗ ಎರಡು – ಬದುಕು. ಇಲ್ಲಿ ಕೆರೇಕೈ ಉಮಾಕಾಂತ ಭಟ್ಟ, ಮತ್ತು ಎಂ.ಎ. ಹೆಗಡೆ ಸಿದ್ದಾಪುರ ಇವರ ಲೇಖನಗಳಿವೆ.

ಭಾಗ ಮೂರು – ನೆನಪು – ಇಲ್ಲಿ ಅಂಬಾತನಯ ಮುದ್ರಾಡಿ, ಮಹಾಬಲ ಹೆಗಡೆ ಕೆರೆಮನೆ, ಹರಿದಾಸ ರಾಮದಾಸ ಸಾಮಗ, ಕೆರೆಮನೆ ಶಂಭು ಹೆಗಡೆ, ಹೊಸಬಾಳೆ ಸೀತಾರಾಮ ರಾವ್, ವಿ. ತಿ. ಶೀಗೇಹಳ್ಳಿ, ಹೊಸ್ತೋಟ ಮಂಜುನಾಥ ಭಾಗವತ, ರಾಮಕೃಷ್ಣ ಜೋಶಿ ಮೈಸೂರು, ಅನಂತ ಶಿವರಾಮ ಹೆಗಡೆ ಕಾಗೇರಿ, ಮೊಣಕಾಲ್ಮೂರು ಶ್ರೀನಿವಾಸ ಮೂರ್ತಿ, ಶಾ. ಮಂ. ಕೃಷ್ಣರಾಯ, ಲಕ್ಷ್ಮೀನಾರಾಯಣ ಹೆಗಡೆ, ,ಜಯರಾಮ ಹೆಗಡೆ, ಎನ್. ಪಿ. ಗಾಂವಕರ, ಎಸ್.ಆರ್.ದೇಸಾಯಿ, ಎಸ್.ಪಿ.ಶೆಟ್ಟಿ, ಸವಿತಾ ಭಟ್ಟ  ಉಡುಪಿ, ಶೈಲಜಾ ಹೆಗಡೆ, ಹರಿದಾಸ ನಿವಣೆ ಗಣೇಶ ಭಟ್ಟ, ರಮಾನಂದ ಬನಾರಿ, ಅನಂತ ಶರ್ಮ ಭುವನಗಿರಿ, ಕಡತೋಕ ಮಂಜುನಾಥ ಭಾಗವತ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ  ನೆಬ್ಬೂರು ನಾರಾಯಣ ಭಾಗವತ, ಗೋಪಾಲಕೃಷ್ಣ ನಾಯಕ ಹುಬ್ಬಳ್ಳಿ, ದಿವಾಕರ ಹೆಗಡೆ, ಎ. ಜಿ. ಗೋಪಾಲಕೃಷ್ಣ, ಮೋಹನ ಭಾಸ್ಕರ ಹೆಗಡೆ, ಟಿ.ಎಂ. ಸುಬ್ಬರಾಯ, ಜಬ್ಬಾರ್ ಸಮೋ, ನಾರಾಯಣ ಯಾಜಿ ಸಾಲೇಬೈಲು, ಕದ್ರಿ ನವನೀತ ಶೆಟ್ಟಿ, ಎಂ. ಎನ್. ಹೆಗಡೆ ಹಳವಳ್ಳಿ, ಕೆ.ಜಿ. ಭಟ್ಟ ದಮನಬೈಲ್, ಎಚ್.ಬಿ.ಎಲ್.ರಾವ್ ಮುಂಬಯಿ ಇವರುಗಳ ಲೇಖನಗಳನ್ನು ನೀಡಲಾಗಿದೆ. 

ದಿ| ಕೆರೇಕೈ ಕೃಷ್ಣ ಭಟ್ಟರ ಸುಪುತ್ರ ವಿದ್ವಾನ್ ಶ್ರೀ ಕೆರೇಕೈ ಉಮಾಕಾಂತ ಭಟ್ಟರು ವಾಗ್ಮಿಗಳಾಗಿ, ಸಂಸ್ಕೃತ ಭಾಷಾ ಕೋವಿದರಾಗಿ, ಲೇಖಕರಾಗಿ, ಶ್ರೇಷ್ಠ ಅರ್ಥಧಾರಿಯಾಗಿ, ಸರಳ ಸಜ್ಜನರಾಗಿ ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ನಮಗೆಲ್ಲಾ ಸಂತಸವನ್ನು ಕೊಡುವ ವಿಚಾರವು.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ  

ಉಡುವೆಕೋಡಿ ಸುಬ್ಬಪ್ಪಯ್ಯ – ತಾಳಮದ್ದಳೆಯ ನಿಜ ಅರ್ಥಧಾರಿ (Uduvekodi Subbappayya)

ಅದು ಕರ್ಣಾವಸಾನ ಪ್ರಸಂಗದ ತಾಳಮದ್ದಳೆ.  ಕರ್ಣನಾಗಿ ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯನವರು ಅರ್ಥ ಹೇಳುತ್ತಿದ್ದರು. ಶಿವ ಶಿವಾ ಸಮರದೊಳು ಪದ್ಯಕ್ಕೆ ಕರ್ಣನಾಗಿ ಉಡುವೆಕೋಡಿಯವರು ಅರ್ಥ ಹೇಳಿದ ನಂತರ “ಎನ್ನ ಕುಲವನು ಕೃಷ್ಣನು ಎಚ್ಚರಿಸುತ…. ” ಎಂಬ ಪದ್ಯಕ್ಕೆ ಭಾಗವತರು ಬಾಯಿ ತಾಳಗಳನ್ನು ಹಾಕುತ್ತಾ ಹಿಮ್ಮೇಳದವರು ತುಂಬಾ ಹೊತ್ತು ಬಾರಿಸಿದರು. ಆ ಪದ್ಯಕ್ಕೆ ಉಡುವೆಕೋಡಿಯವರು ಅರ್ಥ ಹೇಳಲಿಲ್ಲ. ಆ ದಿನ ಪ್ರೇಕ್ಷಕರಿಗೂ ಬೇಸರವಾಗಿತ್ತು. ಆ ಪದ್ಯಕ್ಕೆ ಅಷ್ಟು ಸಮಯ ತೆಗೆದುಕೊಂಡದ್ದು ಸಂಧರ್ಬೋಚಿತವಲ್ಲ ಎಂದು ನಿರ್ಣಯಿಸಿ ಅವರು ಮುಂದಿನ ಪದ್ಯಕ್ಕೆ ಅರ್ಥ ಹೇಳಿದ್ದರು. ಈ ವಿಷಯವನ್ನು ಕೆಲವರು ಈಗಲೂ ಆಡಿಕೊಳ್ಳುತ್ತಿರುವುದನ್ನು ಕೇಳಿದ್ದೇನೆ. 


ಇನ್ನೊಂದು ಪ್ರಸಿದ್ಧ ಕಲಾವಿದರ ಕೂಟ. ಮೊದಲ ಪ್ರಸಂಗ ‘ಕೃಷ್ಣ ಸಂಧಾನ’ ಉಡುವೆಕೋಡಿಯವರಿಗೆ ಎರಡನೇ ಪ್ರಸಂಗದಲ್ಲಿ ಅರ್ಥವಿದ್ದುದರಿಂದ ಅವರು ಸಭೆಯಲ್ಲಿ ಆಸೀನರಾಗಿದ್ದರು. ಮೊದಲ ಪ್ರಸಂಗದಲ್ಲಿ ಕೌರವನ ಪಾತ್ರಧಾರಿಯಾದ ಪ್ರಸಿದ್ಧ ಕಲಾವಿದರೊಬ್ಬರು ಯಾವ ಯಾವ ಪದ ಹೇಳಬೇಕೆಂಬುದನ್ನು  ತಾಳಮದ್ದಳೆ ಆರಂಭವಾಗುವ ಮುಂಚಿತವಾಗಿಯೇ ಭಾಗವತರಿಗೆ ಟಿಕ್ ಮಾಡಿ ಕೊಟ್ಟಿದ್ದರು. ಅದರ ಪ್ರಕಾರ ಭಾಗವತರು ಪದ್ಯ ಹೇಳಿದಾಗ ಕೌರವನ ಪಾತ್ರಧಾರಿ ವೇದಿಕೆಯಲ್ಲಿ ಕುಳಿತುಕೊಂಡೇ ”ಆ ಪದ್ಯ ಯಾಕೆ ಹೇಳಿದ್ದು? ಈ ಪದ್ಯ ಹೇಳು” ಎಂದು ಇನ್ನೊಂದು ಪದ್ಯವನ್ನು ಸೂಚಿಸಿದರು. ಭಾಗವತರು ಪ್ರಸಿದ್ಧ ಅರ್ಥಧಾರಿಯ ಈ ವರಸೆಗೆ ಹೆದರಿ ನಡುಗತೊಡಗಿದರು. ಆಗ ಸಭೆಯಲ್ಲಿದ್ದ ಉಡುವೆಕೋಡಿಯವರು ಮಧ್ಯೆ ಪ್ರವೇಶಿಸಿ ಕೌರವ ಅರ್ಥಧಾರಿಯ ಈ ನಡೆಯನ್ನು ನಯವಾಗಿ ಆಕ್ಷೇಪಿಸಿದರು. “ನೀವು ಮೊದಲೇ ಟಿಕ್ ಮಾಡಿ ಕೊಟ್ಟ ಪದ್ಯವನ್ನೇ ಭಾಗವತರು ಹೇಳಿದ್ದಾರೆ. ಈಗ ವೇದಿಕೆಯಲ್ಲಿ ಈ ರೀತಿ ಹೇಳುವುದು ಸರಿಯಲ್ಲ. ಅದೂ ಅಲ್ಲದೆ ಯಕ್ಷಗಾನಕ್ಕೆ ಭಾಗವತನೇ ನಿರ್ದೇಶಕ. ಅವರು ಹೇಳಿದ ಪದ್ಯಕ್ಕೆ ನಾವು ಅರ್ಥ ಹೇಳಬೇಕು” ಎಂದು ಒಳ್ಳೆಯ ಮಾತುಗಳಿಂದ ತಿಳಿ ಹೇಳಿದರು. ಆಗ ಇಡೀ ಸಭೆಯೇ ಚಪ್ಪಾಳೆಯ ಮೂಲಕ ಉಡುವೆಕೋಡಿಯವರ ಮಾತುಗಳನ್ನು ಅನುಮೋದಿಸಿತ್ತು. 

ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಉಡುವೆಕೋಡಿ ಸುಬ್ಬಪ್ಪಯ್ಯನವರದು ಮೇಲ್ಪಂಕ್ತಿಯಲ್ಲಿ ನಿಲ್ಲುವ ಹೆಸರುಗಳಲ್ಲಿ ಒಂದು. ತನ್ನ ನೇರವಾದ ವ್ಯಕ್ತಿತ್ವಕ್ಕೆ ಹೆಸರಾದವರು. ಧರಿಸುವ ಬಟ್ಟೆಯಂತೆಯೇ ಮನಸ್ಸು ವ್ಯಕ್ತಿತ್ವಗಳೂ ಸ್ವಚ್ಛ, ಶುಭ್ರ. ತಾಳಮದ್ದಳೆ ಅರ್ಥಧಾರಿಯಾಗಿಯೂ ಕಲಾರಂಗದಲ್ಲಿಯೂ ನಿಜಜೀವನದ ಸ್ವಚ್ಚತೆ, ಶುಭ್ರತೆಗಳನ್ನು ಅನುಸರಿಸಿ ಕಾಪಾಡಿಕೊಂಡು ಬಂದವರು. ಎಂದೂ ತನ್ನ ಜೀವನದ ಆದರ್ಶ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿರುವ, ತನ್ನತನದ ಪ್ರದರ್ಶನಕ್ಕಾಗಿ ಯಾವತ್ತೂ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳದ ಉಡುವೆಕೋಡಿ ಸುಬ್ಬಪ್ಪಯ್ಯನಂತಹವರು ಇಂದಿನ ಕಲಾಜಗತ್ತಿನಲ್ಲಿ ಪ್ರತ್ಯೇಕವಾಗಿಯೇ ನಿಲ್ಲುತ್ತಾರೆ. ಈ ಅಪರೂಪದ ಗುಣಗಳಿಂದಲೇ ನಮಗೆ ಅವರು ಇಷ್ಟವಾಗುತ್ತಾರೆ.   ಉಡುವೆಕೋಡಿಯವರು ಹುಟ್ಟಿದ್ದು 1941ರ ಜನವರಿ 19ರಂದು. ಅಂದರೆ ಈಗವರಿಗೆ ವಯಸ್ಸು 79. ತನ್ನ ಈ 80ನೆಯ ವಯಸ್ಸಿನಲ್ಲಿಯೂ ಕ್ರಿಯಾಶೀಲ ವ್ಯಕ್ತಿತ್ವದಿಂದ ಇರುವವರು. ಉಡುವೆಕೋಡಿ ನಾರಾಯಣಯ್ಯ ಮತ್ತು ವೆಂಕಟಲಕ್ಷ್ಮಿ ದಂಪತಿಯರ ಪುತ್ರನಾಗಿ ಜನಿಸಿದ ಉಡುವೆಕೋಡಿಯವರು ಆ ಕಾಲದಲ್ಲಿಯೂ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ಪೂರ್ತಿಗೊಳಿಸಿದ ವಿದ್ಯಾವಂತ. ಖಳ ಪಾತ್ರಗಳಾದ ರಾವಣ, ಕೌರವ ಮೊದಲಾದ ಪಾತ್ರಗಳನ್ನು ಇವರು ಪ್ರಸ್ತುತಪಡಿಸುವ ಕ್ರಮ ಅನನ್ಯವಾದುದು. ಸಾತ್ವಿಕ ಪಾತ್ರಗಳಲ್ಲೂ ಅಷ್ಟೇ ಪ್ರಭುತ್ವ ಇವರಿಗುಂಟು. ಭರತ, ಹನುಮಂತ, ವಿದುರ, ಕರ್ಣ ಮೊದಲಾದ ಪಾತ್ರಗಳನ್ನೂ ಮನಮುಟ್ಟುವಂತೆ ಚಿತ್ರಿಸಬಲ್ಲರು. ಹಾಸ್ಯ ರಸದ ಉತ್ತರ ಕುಮಾರನ ಅರ್ಥವನ್ನೂ ಅಷ್ಟೇ ಪರಿಣಾಮಕಾರಿಯಾಗಿ ಹೇಳಬಲ್ಲರು. 

ದೇರಾಜೆ ಸೀತಾರಾಮಯ್ಯನವರ ಶಿಷ್ಯನಾಗಿ ತಾಳಮದ್ದಳೆ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡುವ ದಿಸೆಯಲ್ಲಿ ದಾಪುಗಾಲು ಹಾಕುತ್ತಿರುವಾಗಲೇ ಅನಿರೀಕ್ಷಿತವಾಗಿ ಆ ಕ್ಷೇತ್ರದಿಂದ ಕೆಲವು ವರ್ಷಗಳ ಕಾಲ ಹಿಂದೆ ಸರಿದು ಅಜ್ಞಾತವಾಗಿದ್ದರು. ಕೆಲವೊಮ್ಮೆ ಸರಿಪಡಿಸಲಾಗದ ನ್ಯೂನತೆಗಳನ್ನು ಹೊಂದಿದ ವ್ಯವಸ್ಥೆಯನ್ನು ಅನುಸರಿಸಿಕೊಂಡು ಹೋಗಲು ಮನಸ್ಸಾಕ್ಷಿ ಒಪ್ಪದೇ ಹಾಗೆ ಮಾಡಿದ್ದಾರೇನೋ ಎಂಬ ಸಂಶಯ ನಮಗೆ ಮೂಡುತ್ತದೆ. ಆದರೆ ಅದರ ಬಗ್ಗೆ ಅವರೇನೂ ಹೇಳಲಾರರು. ಆ ಪ್ರಶ್ನೆಗೆ ನಗುವೇ ಅವರ ಉತ್ತರ. ಆದರೂ ಕೆಲವು ಪ್ರಶ್ನೆಗಳಿಗೆ ಮನಸ್ಸು ಬಿಚ್ಚಿ ಉತ್ತರಿಸುತ್ತಾರೆ. ಅಂತಹ ಕೆಲವು ಪ್ರಶ್ನೋತ್ತರಗಳ ಮಾದರಿ ಇಲ್ಲಿದೆ. 

ಪ್ರಶ್ನೆ: ತಾಳಮದ್ದಳೆಯ ಅರ್ಥಗಾರಿಕೆಗೆ ಮೊದಲ ಆಸಕ್ತಿ ಹೇಗೆ ಮೂಡಿತು?

ಉಡುವೆಕೋಡಿ: ಹುಟ್ಟಿದ ಊರು, ಪರಿಸರಗಳೇ ಮೊದಲ ಪ್ರೇರಣೆ. ಕಲ್ಮಡ್ಕ, ಚೊಕ್ಕಾಡಿಯ ಪರಿಸರ ಯಕ್ಷಗಾನದ ಆಡೊಂಬೊಲವೇ ಆಗಿತ್ತು. ಯಕ್ಷಗಾನಕ್ಕೆ ಗಂಡುಮೆಟ್ಟಿನ ನೆಲವಾಗಿತ್ತದು. ಸಾಂಸ್ಕೃತಿಕ ಕೇಂದ್ರವಾಗಿದ್ದ ಆ ನೆಲದಲ್ಲಿ ದೇರಾಜೆ ಸೀತಾರಾಮಯ್ಯ, ಕೊಳಂಬೆ ಪುಟ್ಟಣ್ಣ ಗೌಡರೇ ಮೊದಲಾದ ಪ್ರಸಿದ್ಧ ಅರ್ಥಧಾರಿಗಳಿದ್ದರು. ಊರಲ್ಲಿ ಯಕ್ಷಗಾನದ ಸಂಘಗಳಲ್ಲಿ ವಾರಕ್ಕೊಂದು ಅಭ್ಯಾಸ ಕೂಟಗಳು ನಡೆಯುತ್ತಿದ್ದುವು. ಇಂತಹಾ ಅಭ್ಯಾಸ ಕೂಟಗಳು ತಾಳಮದ್ದಳೆ ಅರ್ಥಧಾರಿಗಳಿಗೆ ಬಹಳ ಪ್ರಯೋಜನಕಾರಿಯಾಗುತ್ತಿತ್ತು. ನನ್ನ ತೀರ್ಥರೂಪರಾದ ಉಡುವೆಕೋಡಿ ನಾರಾಯಣಯ್ಯನವರೂ ಅರ್ಥಧಾರಿಗಳಾಗಿದ್ದರು. ಆದುದರಿಂದ ಆಸಕ್ತಿ ಬೆಳೆದು ಬಂತು. ಸಂಬಂಧಿಕರೂ ಆದ ದೇರಾಜೆ ಸೀತಾರಾಮಯ್ಯನವರು ನನಗೆ ತಾಳಮದ್ದಳೆ ಕ್ಷೇತ್ರದಲ್ಲಿ ಗುರುಗಳು. ಅವರ ಮಾರ್ಗದರ್ಶನಗಳಿಂದ ಅರ್ಥಧಾರಿಯಾಗಿ ಬೆಳೆಯಲು ಸಾಧ್ಯವಾಯಿತು. 

ಪ್ರಶ್ನೆ: ಶೇಣಿ, ಸಾಮಗ, ದೇರಾಜೆಯವರ ಕೂಟಗಳಲ್ಲೂ ತಾಳಮದ್ದಳೆಯ ವೇದಿಕೆ ಹಂಚಿಕೊಂಡ ನೀವು ಆ ಕಾಲಕ್ಕೂ ಈ ಕಾಲಕ್ಕೂ ಕೊಂಡಿಯಂತಿರುವವರು. ಈ ಕಾಲಕ್ಕೆ ಆಗುವಾಗ ಈ ಕ್ಷೇತ್ರದಲ್ಲಿ ಬದಲಾವಣೆಗಳಾಗಿವೆಯೇ? ಉಡುವೆಕೋಡಿ: ಆಗಿದೆ. ಕೆಲವು ಅಪೇಕ್ಷಿತ ಬದಲಾವಣೆಗಳು ಮತ್ತು ಇನ್ನು ಕೆಲವು ಅನಪೇಕ್ಷಿತ ಬದಲಾವಣೆಗಳು. ನಾವು ತುಂಬಾ ಹಿಂದಕ್ಕೆ ಹೋದರೆ ಆ ಕಾಲದಲ್ಲಿ ಪದ್ಯದಷ್ಟೇ ಚುಟುಕಾಗಿ ಅರ್ಥಗಾರಿಕೆಯಿತ್ತು. ಆದರೆ ಅಭಿನಯರಹಿತ ತಾಳಮದ್ದಳೆಯಲ್ಲಿ ಮಾತಿನ ಮಹತ್ವವನ್ನು ಅರಿತ ವಿದ್ವಾಂಸರು ಮಾತಿನ ಮಂಟಪದಲ್ಲಿ ದೃಶ್ಯ ನಿರ್ಮಾಣ ಮಾಡಬೇಕಾದ ಅನಿವಾರ್ಯತೆಯನ್ನು ಮನಗಂಡರು.  ಆದುದರಿಂದ ಮಾತುಗಾರಿಕೆ ಎನ್ನುವುದು ಬೆಳೆದು ಬಂತು. ಅದು ಬೆಳೆಯುತ್ತಾ ಬೆಳೆಯುತ್ತಾ ಅಪೇಕ್ಷಿತ ಬದಲಾವಣೆಗಳನ್ನು ಕಾಣುತ್ತಲೇ ಇದೆ. 


ಪ್ರಶ್ನೆ: ತಾಳಮದ್ದಳೆ ಅರ್ಥಧಾರಿಯಾಗಿ ನೀವು ಆರಂಭದಲ್ಲಿ ಆಕ್ರಮಣ ಶೈಲಿಯನ್ನು ರೂಡಿಸಿಕೊಂಡಿದ್ದಿರಿ ಎಂದು ಹೇಳುವುದನ್ನು ಕೇಳಿದ್ದೇವೆ. ನಿಜವೇ?

ಉಡುವೆಕೋಡಿ: ಮೊದ ಮೊದಲು ಆ ಶೈಲಿ ಇತ್ತು. ಒಂದು ಕಾಲದಲ್ಲಿ ಮಾತುಗಾರಿಕೆಯಲ್ಲಿಯೇ ಗೆಲ್ಲಬೇಕೆಂಬ ಹುರುಪೂ ಇತ್ತು. ಇದನ್ನು ಗಮನಿಸಿದ ಗುರುಗಳಾದ ದೇರಾಜೆ ಸೀತಾರಾಮಯ್ಯನವರು ಒಂದು ದಿನ ಈ ಬಗ್ಗೆ ತಿಳಿ ಹೇಳಿದರು. “ಅರ್ಥ ಹೇಳಲು ಕುಳಿತವರು ಅಗತ್ಯಕ್ಕಿಂತ ಹೆಚ್ಚು ತರ್ಕ ಮಾಡಬಾರದು. ಹೆಚ್ಚು ತರ್ಕ ಮಾಡಲು ಇರುವ ವೇದಿಕೆಯಲ್ಲ ಇದು. ತಂಡವಾಗಿ ಹೋದರೆ ತಾಳಮದ್ದಳೆ ಯಶಸ್ವಿಯಾಗುತ್ತದೆ. ಯಕ್ಷಗಾನ ತಾಳಮದ್ದಳೆಯೆಂದರೆ ಇನ್ನೊಬ್ಬರನ್ನು ಸೋಲಿಸಲು ಮಾತ್ರವೇ ಇರುವಂತದ್ದಲ್ಲ.  ಗೆಲ್ಲುವ ಪಾತ್ರ ಗೆಲ್ಲಬೇಕು. ಸೋಲುವ ಪಾತ್ರ ಸೋಲಬೇಕು. ಸೋಲುವ ಪಾತ್ರ ಮಾತುಗಾರಿಕೆಯಲ್ಲಿ ಗೆದ್ದರೆ ಪಾತ್ರವೂ ಸೋಲುತ್ತದೆ. ತಾಳಮದ್ದಲೆಯೂ ಸೋಲುತ್ತದೆ”  ಎಂದು ದೇರಾಜೆಯವರು ರಂಗದ ಸೂಕ್ಷ್ಮತೆಯನ್ನು ಹೇಳಿದ್ದರು. ಆಮೇಲೆ ನಾನು ನನ್ನ ಆಕ್ರಮಣ ಶೈಲಿಯನ್ನು ಬಿಟ್ಟುಬಿಟ್ಟೆ. 

ಪ್ರಶ್ನೆ: ಕೀರಿಕ್ಕಾಡು, ವೆಂಕಪ್ಪ ಶೆಟ್ಟಿ, ಶೇಣಿ,  ಸಾಮಗರ ತಾಳಮದ್ದಳೆಯ ವೈಭವದ ಯುಗ ಈಗ ಇಲ್ಲ ಎಂದು ಹೇಳುತ್ತಿರುವುದು ನಿಜವೇ? ಉಡುವೆಕೋಡಿ: ಈಗ ತಾಳಮದ್ದಳೆಗಳು ಸಂಖ್ಯೆಯಲ್ಲಿ ಹೆಚ್ಚಳಗೊಂಡಿವೆ. ಮೊದಲು ಕಡಿಮೆ ತಾಳಮದ್ದಳೆಗಳು ನಡೆಯುತ್ತಿದ್ದುವು. ಯಾಕೆಂದರೆ ಆಗ ವಾಹನ ಸೌಕರ್ಯಗಳಿರಲಿಲ್ಲ. ಎಷ್ಟೋ ದೂರ ಹೋಗಿ ತಾಳಮದ್ದಳೆಗಳಲ್ಲಿ ಭಾಗವಹಿಸಿ ಬರಬೇಕಾಗಿತ್ತು. ಈಗ ಸ್ವಂತ ವಾಹನ ಸೌಕರ್ಯಗಳಿರುವುದರಿಂದ ಒಂದೇ ದಿನದಲ್ಲಿ ಮೂರು ತಾಳಮದ್ದಳೆಗಳಲ್ಲಿ ಭಾಗವಹಿಸುವವರೂ ಇದ್ದಾರೆ. ಆದುದರಿಂದ ತಾಳಮದ್ದಳೆಗಳು ಎಷ್ಟೋ ಹೆಚ್ಚಾಗಿವೆ. ಆದರೆ ಗುಣಮಟ್ಟದ ಬಗ್ಗೆ ಏನೂ ಹೇಳಲಾರೆ.  

ಪ್ರಶ್ನೆ: ನೀವು ಸನ್ಮಾನ ಮತ್ತು ವೇದಿಕೆಗಳಿಂದ ದೂರ ಇರಲು ಬಯಸುವವರು. ಅದು ಯಾಕೆ?

ಉಡುವೆಕೋಡಿ: ಮೊದಲಿನಿಂದಲೂ ನನ್ನ ಸ್ವಭಾವವೇ ಹಾಗೆ. ಸನ್ಮಾನ ಮಾಡಿಸಿಕೊಳ್ಳುವುದು ನನಗೆ ಇಷ್ಟ ಇರಲಿಲ್ಲ. ಆದರೆ ಅನಿರೀಕ್ಷಿತವಾಗಿ ನನಗೆ ತಿಳಿಯದೆ ಆ ಕ್ಷಣದಲ್ಲಿ ಒಂದೆರಡು ಸನ್ಮಾನಗಳನ್ನು ಮಾಡಿದ್ದಾರೆ. ಆದುದರಿಂದ ಸನ್ಮಾನ ಸ್ವೀಕರಿಸಿದ್ದೇ ಇಲ್ಲ ಎಂದು ಹೇಳುವ ಹಾಗಿಲ್ಲ. ಆದರೆ ನಾನು ಅವುಗಳಿಂದ ದೂರ ಎನ್ನುವುದು ನಿಜ.

ಉಡುವೆಕೋಡಿಯವರು ಮೊದಲೆಲ್ಲಾ ಸಂಭಾವನೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಆದರೆ ಬಹಳಷ್ಟು ಒತ್ತಾಯಪೂರ್ವಕವಾಗಿ ಸ್ವೀಕರಿಸಲು ಮನವಿ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ಸಂಭಾವನೆ ತೆಗೆದುಕೊಂಡರೂ ಅದನ್ನು ಯಕ್ಷಗಾನಕ್ಕಾಗಿಯೇ ವಿನಿಯೋಗಿಸುತ್ತಾರೆ. ತಾಳಮದ್ದಳೆಯ ಭಾಗವಹಿಸುವಿಕೆಯಿಂದ ಕೊಡಲ್ಪಟ್ಟ ಸಂಭಾವನೆಯ ಮೊತ್ತವನ್ನು ಯಕ್ಷಗಾನಕ್ಕಾಗಿ ದುಡಿಯುವ ಸಂಸ್ಥೆಗಳಿಗೆ ಮತ್ತು ಯಕ್ಷಗಾನದ ಇತರ ಸಂಘ ಸಂಸ್ಥೆಗಳಿಗೆ ದಾನವಾಗಿ ನೀಡುತ್ತಿದ್ದಾರೆ. ಉಡುವೆಕೋಡಿ ಸುಬ್ಬಪ್ಪಯ್ಯನವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಮುಂದಾಳುಗಳಾಗಿದ್ದು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸುಳ್ಯ ತಾಲೂಕಿನ ಕಲ್ಮಡ್ಕ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ನಿರ್ದೇಶಕರಾಗಿಯೂ, ದ.ಕ ಕೃಷಿಕರ ಸಹಕಾರಿ ಮಾರಾಟ ಸಂಘದ ನಿರ್ದೇಶಕರಾಗಿಯೂ, ರೆಗ್ಯುಲೇಟೆಡ್ ಮಾರ್ಕೆಟಿಂಗ್ ಸೊಸೈಟಿಯ ಸರಕಾರದ ನಾಮನಿರ್ದೇಶನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗೂ ನಾಡಿನ ಹಲವು ದೇವಸ್ಥಾನ ಹಾಗೂ ಇತರ ಧಾರ್ಮಿಕ, ಸಾಂಸ್ಕೃತಿಕ ಸಂಸ್ಥೆಗಳ ನೇತೃತ್ವವನ್ನು ವಹಿಸಿ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉಡುವೆಕೋಡಿ ಸುಬ್ಬಪ್ಪಯ್ಯ – ಸಂಕ್ಷಿಪ್ತ ಮಾಹಿತಿ 

ಹೆಸರು: ಉಡುವೆಕೋಡಿ ಸುಬ್ಬಪ್ಪಯ್ಯ
ಪತ್ನಿ: ಶ್ರೀಮತಿ ಸುಲೋಚನಾ   ಜನನ: ಜನವರಿ 19, 1941

ಜನನ ಸ್ಥಳ:   ಸುಳ್ಯ ತಾಲೂಕಿನ ಕಲ್ಮಡ್ಕ    ತಂದೆ ತಾಯಿ:  ತಂದೆ ಶ್ರೀ ಉಡುವೆಕೋಡಿ ನಾರಾಯಣಯ್ಯ . ತಾಯಿ ಶ್ರೀಮತಿ ವೆಂಕಟಲಕ್ಷ್ಮಿ  ವಿದ್ಯಾಭ್ಯಾಸ: ಬಿ. ಎ. ಪದವಿ (ಸಂತ ಅಲೋಶಿಯಸ್ ಕಾಲೇಜು, ಮಂಗಳೂರು)

ಯಕ್ಷಗಾನ ಗುರುಗಳು:  ದೇರಾಜೆ ಸೀತಾರಾಮಯ್ಯ ಅನುಭವ: ಹಲವಾರು ಪ್ರಸಿದ್ಧ  ತಾಳೆಮದ್ದಳೆ ಕೂಟಗಳಲ್ಲಿ ಸುಮಾರು ೪೫ ವರ್ಷಗಳಿಂದ ತಾಳಮದ್ದಳೆ ಕೂಟಗಳಲ್ಲಿ ಕಲಾಭಿಮಾನಿಗಳ ಬೇಡಿಕೆಯ ಅರ್ಥಧಾರಿಯಾಗಿ ಅನುಭವ. 
 ಮಕ್ಕಳು:  ಪುತ್ರ ಸತೀಶ. ಬೆಂಗಳೂರಿನಲ್ಲಿ ಸ್ವ ಉದ್ಯೋಗಿ. ಹಿರಿಯ ಪುತ್ರಿ ಸುನೀತಾ ವಿವಾಹಿತೆ, ಪ್ರಸ್ತುತ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಕಿರಿಯ ಪುತ್ರಿ ಸಂಧ್ಯಾ ಕಜೆ ವಿವಾಹಿತೆ. ಉಡುವೆಕೋಡಿಯವರಿಗೆ ಐದು ಮಂದಿ ಮೊಮ್ಮಕ್ಕಳು.  ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಪ್ರಶಸ್ತಿ ಸನ್ಮಾನಗಳನ್ನು ಸ್ವೀಕರಿಸಲು ಒಪ್ಪುವುದಿಲ್ಲ. ಆದರೆ ಅನಿರೀಕ್ಷಿತವಾಗಿ ಆ ಕ್ಷಣದಲ್ಲಿ ವೇದಿಕೆಗೆ ಕರೆದು ಸನ್ಮಾನಿಸಿದವರು ಇದ್ದಾರೆ. ಆದುದರಿಂದ ಅನಿವಾರ್ಯ ಸಂದರ್ಭಗಳನ್ನು ಹೊರತು ಪಡಿಸಿದರೆ ಅವರು ಪ್ರಶಸ್ತಿ ಸನ್ಮಾನ, ವೇದಿಕೆಗಳಿಂದ ಸದಾ ದೂರ.

ಲೇಖನ: ಮನಮೋಹನ್ ವಿ.ಎಸ್. 

ಯಕ್ಷಗಾನ ವಿಚಕ್ಷಣ –  ಕುರಿಯ ಶ್ರೀ ವಿಠಲ ಶಾಸ್ತ್ರಿಗಳ ಕುರಿತಾದ ಲೇಖನಗಳ ಸಂಗ್ರಹ 

ಯಕ್ಷಗಾನ ವಿಚಕ್ಷಣ’ ಎಂಬ ಈ ಪುಸ್ತಕವು ಯಕ್ಷಗಾನ ನಾಟ್ಯಾಚಾರ್ಯ, ಖ್ಯಾತ ಕಲಾವಿದ ಶ್ರೀ ಕುರಿಯ ವಿಠಲ ಶಾಸ್ತ್ರಿಗಳ ಕುರಿತಾದ ಲೇಖನಗಳ ಸಂಗ್ರಹವು. ಸಂಪಾದಕರು ಕಲಾವಿದರೂ, ಲೇಖಕರೂ, ಸಂಘಟಕರೂ ಆಗಿರುವ ಶ್ರೀ ರಾಜಗೋಪಾಲ್ ಕನ್ಯಾನ. ಪ್ರಕಾಶಕರು ವರ್ಷ ಎಂಟರ್ಪ್ರೈಸಸ್ ಬೆಂಗಳೂರು. ಈ ಪುಸ್ತಕವು 2005ರಲ್ಲಿ ಮುದ್ರಣಗೊಂಡು ಪ್ರಕಟವಾಗಿತ್ತು.

ಯಕ್ಷಗಾನ ವಿಚಕ್ಷಣ ಎಂಬ ಈ ಹೊತ್ತಗೆಯಲ್ಲಿ ಕುರಿಯ ಶ್ರೀ ವಿಠಲ ಶಾಸ್ತ್ರಿಗಳ ಕುರಿತಾಗಿ ಬರೆದ ಒಟ್ಟು ಇಪ್ಪತ್ತನಾಲ್ಕು ಲೇಖನಗಳನ್ನು ನೀಡಲಾಗಿದೆ. ಲೇಖನಗಳನ್ನು ಬರೆದವರು ರಸಿಕ ಪುತ್ತಿಗೆ, ಮೂರ್ತಿ ದೇರಾಜೆ, ಸೇರಾಜೆ ಸೀತಾರಾಮ ಭಟ್, ಕೊಳ್ಯೂರು ರಾಮಚಂದ್ರ ರಾವ್, ಪಿ.ವಿ.ಹಾಸ್ಯಗಾರ, ಕುಂಬಳೆ ಸುಂದರ ರಾವ್, ಹೊಸಹಿತ್ತಿಲು ಮಹಾಲಿಂಗ ಭಟ್, ಕೆ ಗೋವಿಂದ ಭಟ್, ಚಿನ್ಮಯ ಉಜಿರೆ, ಜಿ.ಟಿ. ನಾರಾಯಣ ರಾವ್ ಮೈಸೂರು, ಕೊಡವೂರು ಕೃಷ್ಣಮೂರ್ತಿ ಉಪಾಧ್ಯ, ದೇರಾಜೆ ಎಂ.ಸೀತಾರಾಮಯ್ಯ, ಶೇಣಿ ಗೋಪಾಲಕೃಷ್ಣ ಭಟ್ಟ, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ಏರ್ಯ ಲಕ್ಷ್ಮೀನಾರಾಯಣ ಆಳ್ವ, ನೀರ್ಪಾಜೆ ಭೀಮ ಭಟ್ಟ, ಬಾ. ಸಾಮಗ ಮಲ್ಪೆ, ನೆಡ್ಲೆ ನರಸಿಂಹ ಭಟ್ಟ, ಕುಂಬಳೆ ಸುಂದರ ರಾವ್, ಪ.ಗೋಪಾಲಕೃಷ್ಣ, ಶಿವಪ್ಪ ಶೆಟ್ಟಿಗಾರ್, ಬಿ. ಗೋಪಾಲಕೃಷ್ಣ ಕುರುಪ್, ಡಾ. ಎಂ. ಬಿ. ಮರಕಿಣಿ, ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟ ಇವರುಗಳು.

ಅಲ್ಲದೆ ಸುಮಾರು ಮೂವತ್ತರಷ್ಟು ಕಪ್ಪು ಬಿಳುಪಿನ ಚಿತ್ರಗಳನ್ನೂ ನೀಡಿರುತ್ತಾರೆ. ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನವನ್ನು ಹುಟ್ಟುಹಾಕಿ ತನ್ಮೂಲಕ ವರ್ಷವೂ ಯಕ್ಷಗಾನ ಪ್ರದರ್ಶನ, ಸನ್ಮಾನ ಕಾರ್ಯಕ್ರಮಗಳನ್ನು ನಡೆಸುತ್ತಾ ಶ್ರೀ ಕುರಿಯ ಶಾಸ್ತ್ರಿಗಳ ನೆನಪುಗಳನ್ನು ಸದಾ ಹಸಿರಾಗಿಡುವಲ್ಲಿ ಶ್ರಮಿಸುತ್ತಿರುವ ಖ್ಯಾತ ಅರ್ಥಧಾರಿ, ಸಂಘಟಕ ಶ್ರೀ ಉಜಿರೆ ಅಶೋಕ ಭಟ್ಟರಿಗೆ ಈ ಪುಸ್ತಕವನ್ನು ಪ್ರೀತಿಪೂರ್ವಕ ಅರ್ಪಿಸಲಾಗಿದೆ.

ಶ್ರೀ ರಾಜಗೋಪಾಲ್ ಕನ್ಯಾನ

ಲೇಖಕ ಶ್ರೀ ರಾಜಗೋಪಾಲ ಕನ್ಯಾನ ಅವರ ಸಂಗ್ರಹ ಸಾಹಸಕ್ಕೆ ಅಭಿನಂದನೆಗಳು. ಬರಹ, ಸಂಗ್ರಹ ಕಾರ್ಯಗಳು ನಿರಂತರವಾಗಿ ಸಾಗುತ್ತಿರಲಿ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಮದ್ದಳೆಯ ಮಾಂತ್ರಿಕ ಶತಾಯುಷಿ ಹಿರಿಯಡಕ ಗೋಪಾಲ ರಾವ್ ಇನ್ನಿಲ್ಲ (Hiriyadaka Gopala Rao)

ಯಕ್ಷಗಾನ ರಂಗದ ಅತ್ಯಂತ ಹಿರಿಯರಾದ ಬಡಗುತಿಟ್ಟಿನ ಖ್ಯಾತ ಮದ್ದಳೆಗಾರರಾದ ಯಕ್ಷಗಾನದ ದಂತಕತೆ, ಶತಾಯುಷಿ ಹಿರಿಯಡಕ ಗೋಪಾಲ ರಾವ್ ನಿಧನರಾಗಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರಿಗೆ 101 ವರ್ಷ ವಯಸ್ಸಾಗಿತ್ತು. 1919 ರಲ್ಲಿ ಜನಿಸಿದ್ದ ಹಿರಿಯಡಕ ಗೋಪಾಲ ರಾವ್ ಅವರು ಬಡಗುತಿಟ್ಟಿನಲ್ಲಿ ಏರು ಶ್ರುತಿಯ ಮದ್ದಳೆಯನ್ನು ಮೊದಲಾಗಿ ಪರಿಚಯಿಸಿದವರು ಮತ್ತು ಅದನ್ನು ನುಡಿಸುವುದರಲ್ಲಿ ನಿಷ್ಣಾತರಾಗಿದ್ದರು.

ಯಕ್ಷಗಾನದ ಹಲವು ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ನಿರತರಾಗಿದ್ದ ಡಾ. ಶಿವರಾಮ ಕಾರಂತರ ಜೊತೆ ಒಡನಾಡಿಯೂ ಆಗಿದ್ದರು. ಜಾನಪದ ಅಕಾಡೆಮಿ ಪ್ರಶಸ್ತಿ ಮಾತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದರು. ಮೃತರ ಅಂತ್ಯಕ್ರಿಯೆ ಇಂದು ಹಿರಿಯಡಕದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 

ಚಪ್ಪರಮನೆ ಶ್ರೀಧರ ಹೆಗಡೆ – ಬಡಗುತಿಟ್ಟಿನ ಬಹುಬೇಡಿಕೆಯ ಹಾಸ್ಯಗಾರರು

ರೂಢಿಯ ಮಾತುಗಳು ಕೆಲವೊಂದು ಬಾರಿ ಶಾಸ್ತ್ರಕ್ಕಿಂತಲೂ ಬಲಿಷ್ಠವಾಗಿರುತ್ತವೆ. ವಿಚಾರವನ್ನು ಮನಮುಟ್ಟುವಂತೆ ತಿಳಿಸಲು ಇಂತಹ ಮಾತುಗಳು ಅತ್ಯಂತ ಸಹಕಾರಿಯಾಗುತ್ತವೆ. ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಮಾತು ರೂಡಿಯಲ್ಲಿದೆ. ವೇದವು ಸುಳ್ಳೆಂದು ಇದರ ಅರ್ಥವಲ್ಲ. ಗಾದೆಯ ಮಾತುಗಳು ಅರ್ಥಪೂರ್ಣವಾಗಿರುತ್ತವೆ ಎಂದು ತೋರಿಕೊಡಲು ಈ ಸೊಲ್ಲನ್ನು ಬಳಸುತ್ತಾರೆ. ಒಂದು ವಿಚಾರವಾಗಿ ಅಗತ್ಯಕ್ಕಿಂತ ಹೆಚ್ಚು ಏನೇನೋ ಮಾತಾಡುವವರನ್ನು ‘ಊಟದಲ್ಲಿ ಅಗತ್ಯಕ್ಕಿಂತ ಹೆಚ್ಚು ಉಪ್ಪು ತಿನ್ನುವವರು’ ಎಂದು ನಾವು ಆಕ್ಷೇಪಿಸುತ್ತೇವೆ. ವಿಷಯಕ್ಕೆ ಸಂಬಂಧವಿಲ್ಲದೆ ಏನೇನೋ ಮಾತನಾಡಿದ ಎಂಬುದು ಇದರ ಧ್ವನಿ. ‘ಆಷಾಢ ಮಾಸದ ಬಿಸಿಲಿಗೆ ಆನೆಯ ಬೆನ್ನೂ ಒಡೆದು ಹೋದೀತು’ ಎಂಬ ಮಾತಿದೆ. ಬಿಸಿಲಿಗೆ ಆನೆಯ ಬೆನ್ನು ಒಡೆಯುವುದುಂಟೆ? ಆಷಾಡ ಮಾಸದ ಬಿಸಿಲು ಎಷ್ಟು ಪ್ರಕರವಾಗಿರುತ್ತದೆ ಎಂಬುದನ್ನು ಈ ಮಾತು ತಿಳಿಸುತ್ತದೆ.

ಯಕ್ಷಗಾನದ ಕುರಿತಾಗಿ ಬರೆಯುವಾಗ ಇಂತಹ ಮಾತುಗಳೇಕೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳಲಾರದು. ಸನ್ನಿವೇಶಕ್ಕೆ, ಪಾತ್ರಕ್ಕೆ ಧಕ್ಕೆಯಾಗದಂತೆ ರಂಗದಲ್ಲಿ ಇಂತಹ ರೂಢಿಯ ಮಾತುಗಳನ್ನು ಕಲಾವಿದರೂ ಉಪಯೋಗಿಸುವುದುಂಟು. ಹಾಸ್ಯಗಾರರಿಗಂತೂ ರೂಢಿಯ ಮಾತುಗಳನ್ನು ಸಂಭಾಷಣೆಗಳಲ್ಲಿ ಬಳಸಿಕೊಳ್ಳುವ ಸಂದರ್ಭಗಳು ಹೆಚ್ಚಾಗಿ ಸಿಗುತ್ತವೆ. ಯಕ್ಷಗಾನದಲ್ಲಿ ಹಾಸ್ಯವು ಹೇಗಿರಬೇಕು ಎಂಬ ಪ್ರಶ್ನೆಗೆ ‘ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ’ ಇರಬೇಕು ಎಂದು ಹಿರಿಯರು ಹೇಳುವುದನ್ನು ನಾವು ಕೇಳಿದ್ದೇವೆ. ಹಿತಮಿತವಾಗಿರಬೇಕು, ಶುಚಿರುಚಿಯಾಗಿರಬೇಕು ಎಂಬುದೇ ಇದರ ಧ್ವನಿ. ಈ ದಿಸೆಯಲ್ಲೇ ಸಾಗಿ ಹಿರಿಯ ಹಾಸ್ಯಗಾರರನೇಕರು ಪ್ರಸಿದ್ಧರಾದರು. ಪ್ರಸ್ತುತ ಇದೆ ತೆರನಾಗಿ ಅಭಿನಯಿಸಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ಹಾಸ್ಯಗಾರರು ನಮ್ಮ ಜತೆಗೆ ಇದ್ದಾರೆ ಎಂಬುದು ಸಂತೋಷದ ವಿಚಾರ. ಹೀಗೆ ಪಾತ್ರೋಚಿತವಾಗಿ, ಕಲೆಗೆ ಕೊರತೆಯಾಗದಂತೆ ಅಭಿನಯಿಸುತ್ತಿರುವ ಹಾಸ್ಯಗಾರರಲ್ಲಿ ಚಪ್ಪರಮನೆ ಶ್ರೀಧರ ಹೆಗಡೆಯವರೂ ಒಬ್ಬರು.

ಇವರು ಬಡಗುತಿಟ್ಟಿನ ಬಹುಬೇಡಿಕೆಯ ಹಾಸ್ಯಗಾರರು. ಅನುಭವಿಗಳು. ಬಡಗುತಿಟ್ಟಿನ ಹಾಸ್ಯಗಾರರಾದ  ಚಪ್ಪರಮನೆ ಶ್ರೀಧರ ಹೆಗಡೆಯವರು ಈ ಲೋಕದ ಬೆಳಕನ್ನು ಕಂಡದ್ದು 1965ನೇ ಇಸವಿ ನವೆಂಬರ್ 14ರಂದು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ  ಚಪ್ಪರಮನೆ ಎಂಬ ಹಳ್ಳಿ. ತಂದೆ ಶ್ರೀ ನಾರಾಯಣ ವೆಂಕಪ್ಪ ಹೆಗಡೆ. ತಾಯಿ ಶ್ರೀಮತಿ ಸೀತಮ್ಮ. ಮಕ್ಕಳ ದಿನಾಚರಣೆಯ ದಿನದಂದೇ ಶ್ರೀಮತಿ ಸೀತಮ್ಮ ಪುತ್ರನಿಗೆ ಜನ್ಮವಿತ್ತಿದ್ದರು. ತಂದೆ ನಾರಾಯಣ ವೆಂಕಪ್ಪ ಹೆಗಡೆಯವರು ವೇಷಧಾರಿಯಾಗಿದ್ದರು. ಚಿಕ್ಕಪ್ಪ ಕೃಷ್ಣ ಹೆಗಡೆಯವರು ಭಾಗವತಿಕೆಯನ್ನು ಮಾಡುತ್ತಿದ್ದರು.  ಚಪ್ಪರಮನೆ ಶ್ರೀಧರ ಹೆಗಡೆಯವರ ಸೋದರ ಮಾವ ಮಂಚಿಕೇರಿ ಕಲಾವನ ಮನೆಯ ಶ್ರೀ ರಾಮಚಂದ್ರ ಹೆಗಡೆಯವರು ಕಲಾವಿದರಾಗಿದ್ದು, ಯಕ್ಷಗಾನ ಸಂಘವೊಂದರ ನಾಯಕರು. ಹಾಗಾಗಿ ಯಕ್ಷಗಾನದ ನಂಟು ರಕ್ತಗತವಾಗಿಯೇ ಬಂದಿತ್ತು. ಸೋದರ ಮಾವನಿಗೆ ಅಳಿಯನನ್ನು ತುಂಬಾ ಓದಿಸಬೇಕೆಂಬ ಆಸೆಯಿತ್ತು. ಅವಕಾಶಗಳು ಕೂಡಿ ಬರಲಿಲ್ಲವಾದರೂ ಯಕ್ಷಗಾನ ಕಲಾವಿದನಾಗಲು ಪ್ರೋತ್ಸಾಹಿಸಿದ್ದರು.

ಚಪ್ಪರಮನೆ ಹಾಸ್ಯಗಾರರು ಓದಿದ್ದು ಎಂಟನೆಯ ತರಗತಿ ವರೆಗೆ. 2ನೆಯ ತರಗತಿ ವರೆಗೆ ಕಡ್ ಕೇರಿ ಶಾಲೆಯಲ್ಲಿ (ಅಜ್ಜನ ಮನೆಯವರ ಆಶ್ರಯದಲ್ಲಿ). 5ನೇ ಕ್ಲಾಸಿನ ವರೆಗೆ ಚಪ್ಪರಮನೆ ಹಳ್ಳೀಬೈಲು ಶಾಲೆಯಲ್ಲಿ. 8ನೇ ತರಗತಿ ವರೆಗೆ ಬಿಳಗಿ ಹೈಸ್ಕೂಲಿನಲ್ಲಿ. ಚಪ್ಪರಮನೆಯವರನ್ನು ಹೆತ್ತ ಅಬ್ಬೆ ಶ್ರೀಮತಿ ಸೀತಮ್ಮ ಅವರ ತವರು ಮನೆಯವರು ಕಲಾವಿದರೂ, ಕಲಾಭಿಮಾನಿಗಳೂ ಆಗಿದ್ದರು. ಮಲೆನಾಡಿನ ಗ್ರಾಮೀಣ ಪ್ರದೇಶ. ಹಳ್ಳಿಗರಿಗೆ ಮನೋರಂಜನೆಗಾಗಿ ಇದ್ದ ಮಾಧ್ಯಮ ಯಕ್ಷಗಾನ ಮಾತ್ರ. ಯಕ್ಷಗಾನ ಪ್ರದರ್ಶನಗಳನ್ನು ನೋಡಿಯೇ ಬೆಳೆದರು. ಮಧ್ಯಾಹ್ನ ಮೇಲೆ ಶಾಲೆಗೆ ಚಕ್ಕರ್ ಹಾಕಿ ಗೆಳೆಯರ ಜತೆ ಗುಡ್ಡದ ಮೇಲೆ ಯಕ್ಷಗಾನ ಕುಣಿಯುತ್ತಿದ್ದರು. ಯಕ್ಷಗಾನಾಸಕ್ತ ಮಕ್ಕಳಿಗೆ ಮಲೆನಾಡಿನ ಗುಡ್ಡಗಳೇ ರಂಗಸ್ಥಳವಾಗುತ್ತಿತ್ತು. ಹೀಗೆ ಶಾಲೆಗೆ ಹಾಜರಾಗದೆ ಗುಡ್ಡದಲ್ಲಿ ಕುಣಿದ ಗೆಳೆಯರ ತಂಡದಲ್ಲಿ ಯಕ್ಷಗಾನ ಕಲಾವಿದನಾದುದು ಚಪ್ಪರಮನೆಯವರು ಮಾತ್ರ. ಕೃಷಿ ಕುಟುಂಬವಾದ ಕಾರಣ ತೋಟದ ಕೆಲಸ ಮಾಡಲೇ ಬೇಕಾಗಿತ್ತು. ಬಡತನವೂ ಇತ್ತು. ಅಡಕೆ ತೋಟದಲ್ಲಿ ಮದ್ದು ಹೊಡೆಯುವುದು, ಗೊನೆ ಕೊಯ್ಯುವುದು, ಮುಂತಾದ ಕೆಲಸಗಳನ್ನು ಎಂಟು ವರ್ಷಗಳ ಕಾಲ ಮಾಡಿದ್ದರು.  

ಚಪ್ಪರಮನೆ ಶ್ರೀಧರ ಹೆಗಡೆಯವರು ಅಧಿಕೃತವಾಗಿ ಶಾಸ್ತ್ರೀಯವಾಗಿ ನಾಟ್ಯ  ಕಲಿತವರಲ್ಲ.  ಆದರೂ ಸರಿಯಾಗಿ ಕುಣಿಯುತ್ತಾರೆ. ಆಟ ನೋಡಿಯೇ ಕುಣಿಯುವ ಕಲೆಯು ಕರಗತವಾಗಿತ್ತು. ಟೆಂಟ್ ಮೇಳದ ಆಟ ಊರಿಗೆ ಬಂದಾಗ ನೋಡುವ ಆಸೆಯಾಗುತ್ತಿತ್ತು.  ಆದರೆ ಕೈಯಲ್ಲಿ ಹಣವಿರಲಿಲ್ಲ. ದೂರದ ಮರದಡಿಯ ಕತ್ತಲಿನಲ್ಲಿ ನಿಂತು ಚೆಂಡೆ ಪೆಟ್ಟಿಗೆ ಸರಿಯಾಗಿ ಒಬ್ಬರೇ ಕುಣಿಯುತ್ತಿದ್ದರು. ಮಧ್ಯರಾತ್ರಿ ಟೆಂಟ್ ಸರಿಸಿದಾಗ ಹತ್ತಿರ ಬಂದು ಆಟ ನೋಡುತ್ತಿದ್ದರು. ಹೀಗೆ ಸಾಗಿತ್ತು, ಹೆಚ್ಚಾಗಿತ್ತು ಆಟ  ನೋಡುವ ಹುಚ್ಚು. ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಕೆರೆಮನೆ ವೆಂಕಟಾಚಲ ಭಟ್ಟರ ಅರ್ಥಗಾರಿಕೆಯನ್ನು ಕೇಳುವುದೆಂದರೆ ಇವರಿಗೆ ಬಲು ಪ್ರೀತಿ. ತಾಳಮದ್ದಲೆಯತ್ತಲೂ ಆಕರ್ಷಿತರಾಗಿ ಕೇಳಲು ಸಾಗುತ್ತಿದ್ದರು. ಕಲಾವಿದನಾಗಲು ಚಪ್ಪರಮನೆ ಹಾಸ್ಯಗಾರರಿಗೆ ಕೊಳಗಿ ಶ್ರೀ ಅನಂತ ಹೆಗಡೆಯವರ ಪ್ರೋತ್ಸಾಹವೂ ಇತ್ತು.

“ಪ್ರಮಾಣಪತ್ರವೂ ಇಲ್ಲದೆ ತೊಡಗಿಸಿಕೊಳ್ಳಬಹುದಾದ ಕ್ಷೇತ್ರವು ಯಕ್ಷಗಾನ. ವಿದ್ಯಾರ್ಹತೆಯ ನಿಬಂಧನೆಯೂ ಇಲ್ಲ. ಆದುದರಿಂದಲೇ ಶಾಲೆಯ ಮೆಟ್ಟಿಲುಗಳನ್ನು ನೋಡದವರೂ ಯಕ್ಷಗಾನ ಕಲಾವಿದರಾಗಿದ್ದಾರೆ. ಮಾತ್ರವಲ್ಲ, ಪ್ರಸಿದ್ಧರೂ ಆದರೂ. ಚೌಕಿಗೆ ಹೋಗಿ ನೋಡಿದವನೂ ಆಟ ನೋಡಿದವನೂ ಆಸಕ್ತಿಯಿದ್ದರೆ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಬಹುದು. ಇದು ಕಲಾವಿದನಾಗುವ ಆಸೆ ಹೊತ್ತವನಿಗೆ ವರದಾನವೇ ಆಗಿ ಪರಿಣಮಿಸಿತು. ಆದರೆ ಇದರಿಂದ ತೊಡಕುಗಳೂ ಆಗುವುದಿದೆ. ಆದದ್ದಿದೆ. ಕಲಿಯದೇ ರಂಗವೇರಿದರೂ, ರಂಗವೇರಿದ ಮೇಲೆ ಕಲಿಯುತ್ತಾ ಕಾಣಿಸಿಕೊಳ್ಳಬೇಕಾದುದು ಕಲಾವಿದರಿಗೆ ಕರ್ತವ್ಯ. ರಂಗವೇರಲು ಅರ್ಹತೆಯ ಅನಿವಾರ್ಯತೆ ಎಂಬ ನಿಯಮವಿಲ್ಲದ ದಿಸೆಯಿಂದ ನನಗೂ ಕಲಾವಿದನಾಗಲು ಅವಕಾಶವು ದೊರೆತಿತ್ತು” ಇದು ಚಪ್ಪರಮನೆಯವರು ತನ್ನ ಯಕ್ಷಗಾನ ಬದುಕಿನ ಆರಂಭದ ದಿನಗಳನ್ನು ನೆನಪಿಸಿ ಆಡುವ ಮಾತುಗಳು.

ಶಾಸ್ತ್ರೀಯವಾಗಿ ಅಭ್ಯಾಸ ಮಾಡದೇ ಚಪ್ಪರಮನೆಯವರು ರಂಗವೇರುವ ಸನಿವೇಶವು ನಿರ್ಮಾಣವಾಗಿತ್ತು. ಆದರೆ ರಂಗಪ್ರವೇಶ ಮಾಡಿದ ಮೇಲೆ ಹಿಂತಿರುಗಿ ನೋಡಿದವರಲ್ಲ. ಬೆಳೆದರು, ಬೆಳೆದರು, ಬೆಳೆಯುತ್ತಾ ಸಾಗಿದರು. ಬಡಗುತಿಟ್ಟಿನ ಬಹು ಬೇಡಿಕೆಯ ಹಾಸ್ಯಗಾರರಾಗುವಷ್ಟು ಎತ್ತರಕ್ಕೆ ಬೆಳೆದರು.  ಚಪ್ಪರಮನೆ ಹಾಸ್ಯಗಾರರು ಮೊತ್ತ ಮೊದಲು ರಂಗವೇರಿದ್ದು ದಾವಣಗೆರೆಯಲ್ಲಿ. ಸಾಲಿಗ್ರಾಮ ಮೇಳದ ವ್ಯವಸ್ಥಾಪಕರಾಗಿದ್ದ ಶ್ರೀ ಎನ್. ಜಿ. ಹೆಗಡೆಯವರ ನೇತೃತ್ವದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಎಂಟು ಪ್ರದರ್ಶನಗಳು ನಡೆದಿತ್ತು. ತಂಡದ ಜತೆ ಆಟ ನೋಡಲು ಇವರು ತೆರಳಿದ್ದರು. ಅನಿವಾರ್ಯಕ್ಕೆ ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಬ್ರಾಹ್ಮಣನಾಗಿ ರಂಗವೇರಬೇಕಾಯಿತು. ಹಾಸ್ಯಗಾರನಿಲ್ಲದ ಕೊರತೆಯನ್ನು ನೀಗಿದ್ದರು. ನಂತರ ನಡೆದ ಏಳು ಪ್ರದರ್ಶನಗಳಲ್ಲೂ ಇವರೇ ಹಾಸ್ಯ ಪಾತ್ರದಲ್ಲಿ ಅಭಿನಯಿಸಿ ಪ್ರದರ್ಶನಗಳ ಗೆಲುವಿಗೆ ಸಹಕರಿಸಿದ್ದರು. ಇದು ಕಲಾಬದುಕಿನ ಆರಂಭವೂ ಹೌದು. ನಿಜ ಬದುಕಿನ ತಿರುವೂ ಹೌದು. ಬಳಿಕ ಊರ ಪ್ರದರ್ಶನಗಳಲ್ಲಿ ಅವಕಾಶಗಳು ಅರಸಿ ಬರತೊಡಗಿದುವು. ನಾಟ್ಯ ಸರಿಯಾಗಿ ಕಲಿಯದಿದ್ದರೂ ಸರಿಯಾಗಿಯೇ ಕುಣಿಯುತ್ತಿದ್ದರು! ಹಾಸ್ಯದ ಜತೆಗೆ ಸ್ತ್ರೀ ಪಾತ್ರಗಳನ್ನೂ ಮಾಡಲಾರಂಭಿಸಿದ್ದರು.

1991-92ರಲ್ಲಿ ಕಲಾವಿದ ಅಶೋಕ್ ಭಟ್ ಸಿದ್ಧಾಪುರ ಅವರ ಕೇಳಿಕೆಯಂತೆ ಸಾಲಿಗ್ರಾಮ ಮೇಳದಲ್ಲಿ ಮೊದಲ ತಿರುಗಾಟ. ಆಗ ವಿದ್ವಾನ್ ಗಣಪತಿ ಭಟ್ ಮತ್ತು ಶಬರಾಯರ ಭಾಗವತಿಕೆ. ಮುಂದಿನ ವರ್ಷ ಶಿರಸಿ ಮೇಳಕ್ಕೆ. 4 ವರ್ಷಗಳ ತಿರುಗಾಟ. ಕುಂಜಾಲು ರಾಮಕೃಷ್ಣನವರು ಮುಖ್ಯ ಹಾಸ್ಯಗಾರರಾಗಿದ್ದರು. ಅವರ ಒಡನಾಟ, ಕಲಿಕೆಯಿಂದ ಚಪ್ಪರಮನೆಯವರು ಹಾಸ್ಯಗಾರರಾಗಿ ಪಕ್ವತೆಯನ್ನು ಸಾಧಿಸಿದರು. ಅವರನ್ನು ಗುರುವೆಂದು ಗೌರವಿಸುತ್ತಾರೆ. ಪಾತ್ರದ ಸ್ವಭಾವ, ನಿರ್ವಹಣೆಯ ರೀತಿಗಳನ್ನು ಮನಮುಟ್ಟುವಂತೆ ಹೇಳಿಕೊಟ್ಟಿದ್ದರಂತೆ. ಕಾಲ್ಪನಿಕ ಪ್ರಸಂಗಗಳಲ್ಲಿ ವೇಷ ಮಾಡಿದರೂ ಚಪ್ಪರಮನೆಯವರಿಗೆ ಪುರಾಣ ಪ್ರಸಂಗಗಳ ಹಾಸ್ಯ ಪಾತ್ರಗಳಲ್ಲಿಯೇ ಆಸಕ್ತಿ ಹೆಚ್ಚು. ಶಿರಸಿ ಮೇಳದಲ್ಲಿ ಗೋಡೆ, ಕುಮಟಾ ಗೋವಿಂದ ನಾಯಕ್, ಶಿರಳಗಿ ಭಾಸ್ಕರ ಜೋಶಿ, ಬೇಗಾರು ಪದ್ಮನಾಭ ಮೊದಲಾದವರ ಒಡನಾಟವೂ ಸಿಕ್ಕಿತ್ತು. ಪೌರಾಣಿಕ ಪ್ರಸಂಗಗಳ ಎಲ್ಲಾ ಹಾಸ್ಯ ಪಾತ್ರಗಳೂ ಇವರಿಗೆ ಪ್ರಿಯ. ಮಂಥರೆ, ಭೀಷ್ಮ ವಿಜಯದ ವೃದ್ಧ ಬ್ರಾಹ್ಮಣ, ಬೇಹಿನ ಚರ, ಕಾಶೀಮಾಣಿ, ಚಂದ್ರಾವಳೀ ವಿಲಾಸದ ಅತ್ತೆ ಮತ್ತು ಚಂದಗೋಪ ಮೊದಲಾದ ಪಾತ್ರಗಳು ಚಪ್ಪರಮನೆಯವರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟಿತು. ಶಿರಸಿ ಮೇಳದ ನಾಲ್ಕು ವರ್ಷಗಳ ತಿರುಗಾಟದ ಬಳಿಕ ನಾಗರಕೊಡಿಗೆ ಬಯಲಾಟ ಮೇಳದಲ್ಲಿ 2 ವರ್ಷ, 2001-2002ರಲ್ಲಿ ಮತ್ತೆ ಒಂದು ವರ್ಷ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ.

ಲೇಖಕ ರವಿಶಂಕರ್ ವಳಕ್ಕುಂಜ ಅವರೊಂದಿಗೆ ಚಪ್ಪರಮನೆ ಶ್ರೀಧರ ಹೆಗಡೆ 

ಮೇಳದ ತಿರುಗಾಟ ನಿಲ್ಲಿಸಿ 2002ರಿಂದ ಕೊಂಡದಕುಳಿಯವರ ಪೂರ್ಣಚಂದ್ರ ತಂಡದಲ್ಲಿ ಖಾಯಂ ಕಲಾವಿದರಾಗಿದ್ದಾರೆ. ಈ ತಂಡದ ಸದಸ್ಯನಾಗಿ ಸಿಂಗಾಪುರ, ಅಬುದಾಭಿ, ಶಾರ್ಜಾ, ದುಬಾಯಿಯಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಅಶೋಕ್ ಭಟ್ ಸಿದ್ಧಾಪುರ ಅವರ ಜತೆಯಾಗಿ ಸ್ನೇಹ ಬಳಗ ಶಿರಸಿ ಎಂಬ ತಂಡವನ್ನು ಸ್ಥಾಪಿಸಿ ಪ್ರದರ್ಶನಗಳನ್ನು ನೀಡಿದ್ದರು. ಮಂಟಪ ಶ್ರೀ ಪ್ರಭಾಕರ ಉಪಾಧ್ಯಾಯರ ಜತೆ ಒಂದು ಘಂಟೆ ಅವಧಿಯ ಯುಗಳ ಯಕ್ಷಗಾನ ಪ್ರದರ್ಶನಗಳಲ್ಲೂ ಅಭಿನಯಿಸಿದ್ದರು. ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ಕೈಕೇಯಿ-ಮಂಥರೆ ಸಂಭಾಷಣೆಯ ಈ ಪ್ರದರ್ಶನವು ಅರುವತ್ತಕ್ಕಿಂತಲೂ ಅಧಿಕ ಪ್ರಯೋಗಗಳನ್ನು ಕಂಡಿತ್ತು.

1999ರಲ್ಲಿ ಸಾವಿತ್ರಿ ಅವರು ಚಪ್ಪರಮನೆ ಹಾಸ್ಯಗಾರರ ಬಾಳ ಸಂಗಾತಿಯಾಗಿ ಮನೆಯನ್ನು ತುಂಬಿದ್ದರು.  ಕಲಾಬದುಕಿಗೆ ಮನೆಯಾಕೆಯ ತುಂಬು ಸಹಕಾರವಿದೆಯೆಂಬ ಸಂತೋಷ ಚಪ್ಪರಮನೆ ಹಾಸ್ಯಗಾರರಿಗಿದೆ. ಅನೇಕ ಸಂಘ-ಸಂಸ್ಥೆಗಳು ಇವರ ಕಲಾಸೇವೆಯನ್ನು ಗುರುತಿಸಿ ಗೌರವಿಸಿದೆ. ಮೇಳದ ತಿರುಗಾಟವನ್ನು ನಿಲ್ಲಿಸಿದರೂ ಬದುಕಿಗೆ ಯಕ್ಷಗಾನವನ್ನೇ ಅವಲಂಬಿಸಿದ್ದಾರೆ. ತಾಳಮದ್ದಳೆ ಕ್ಷೇತ್ರದತ್ತ ಆಕರ್ಷಿತರಾಗಿ ಭಾಗವಹಿಸುತ್ತಿದ್ದಾರೆ. ಭಾವನಾತ್ಮಕ, ಸಾತ್ವಿಕ, ಪುರುಷ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದಾರೆ. ಸಂಜಯ, ವಿದುರ, ಹಂಸಧ್ವಜ, ಧರ್ಮರಾಯ, ಅಕ್ರೂರ, ಭೀಷ್ಮ ಪರ್ವದ ಕೌರವ ಮೊದಲಾದ ವೇಷಗಳನ್ನು ಮಾಡಿ ಕಲಾಭಿಮಾನಿಗಳಿಂದ ಹೊಗಳಿಸಿಕೊಂಡಿದ್ದಾರೆ. 

ಅಶೋಕ್ ಭಟ್ ಸಿದ್ಧಾಪುರ, ಲೇಖಕ ರವಿಶಂಕರ್ ವಳಕ್ಕುಂಜ, ಚಪ್ಪರಮನೆ ಶ್ರೀಧರ ಹೆಗಡೆ 

ಚಪ್ಪರಮನೆ ಶ್ರೀಧರ ಹೆಗಡೆ, ಸಾವಿತ್ರಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀಪಾದ ಪಶುವೈದ್ಯಕೀಯ ಕಲಿಯುತ್ತಿದ್ದಾರೆ. ಹಾಡುವ ಆಸಕ್ತಿಯಿದ್ದು ಸಂಗೀತ ಜೂನಿಯರ್ ಕಲಿತಿದ್ದಾರೆ. ದೇಶಮಟ್ಟದ ಚಿತ್ರಕಲೆಯಲ್ಲಿ ಕಾಲೇಜು ವತಿಯಿಂದ ಭಾಗವಹಿಸಿ ಮೂರನೆಯ ಸ್ಥಾನವನ್ನು ಪಡೆದಿದ್ದು, ಯಕ್ಷಗಾನ ವೇಷ ಮಾಡಿಯೂ ಅನುಭವವಿದೆ. ಕಿರಿಯ ಪುತ್ರ ಚಿ| ಸಂದೇಶ ಪ್ರಥಮ ಪಿಯುಸಿ ವಿದ್ಯಾರ್ಥಿ. ಆಟ ಕೂಟಗಳಲ್ಲಿ ಭಾಗವಹಿಸುತ್ತಿದ್ದು ತಬಲಾ ಜೂನಿಯರ್ ಪೂರೈಸಿ, ಸೀನಿಯರ್ ಅಭ್ಯಸಿಸುತ್ತಿದ್ದಾರೆ. ಬಡಗು ತಿಟ್ಟಿನ ಬಹು ಬೇಡಿಕೆಯ ಹಾಸ್ಯಗಾರರಾದ ಚಪ್ಪರಮನೆ ಶ್ರೀಧರ ಹೆಗಡೆಯವರಿಂದ ಕಲಾಮಾತೆಯ ಸೇವೆಯು ನಿರಂತರವಾಗಿ ನಡೆಯಲಿ. ಕಲಾಭಿಮಾನಿಗಳ ಪರವಾಗಿ ಶುಭ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ವೀರಾಂಜನೇಯ ವೈಭವ – ಶ್ರೀ ಹೊಸ್ತೋಟ ಮಂಜುನಾಥ ಭಾಗವತ (Veeranjaneya Vaibhava – Sri Hosthota Manjunatha Bhagavatha)

‘ವೀರಾಂಜನೇಯ ವೈಭವ’ ಎಂಬ ಈ ಕೃತಿಯು ಶ್ರೀ ಹೊಸ್ತೋಟ ಮಂಜುನಾಥ ಭಾಗವತ ಅವರಿಂದ ರಚಿಸಲ್ಪಟ್ಟದ್ದು. ಈ ಕೃತಿಯಲ್ಲಿ ಒಟ್ಟು ಇಪ್ಪತ್ತೇಳು ಪ್ರಸಂಗಗಳಿವೆ. ಎಲ್ಲವೂ ಆಂಜನೆಯ ಸುತನಾದ ಶ್ರೀರಾಮ ಕಿಂಕರ ಹನುಮಂತನಿಗೆ ಸಂಬಂಧಿಸಿದ ಪ್ರಸಂಗಗಳು. ಆದುದರಿಂದ ಈ ಕೃತಿಗೆ ‘ಸಮಗ್ರ ಹನುಮಾಯನ’ ಎಂಬ ಹೆಸರನ್ನು ನೀಡಲಾಗಿದೆ. ಈ ಕೃತಿಯ ಪ್ರಕಾಶಕರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ನೇತೃತ್ವದ ಶ್ರೀ ಗುರುದೇವ ಪ್ರಕಾಶನ ಎಂಬ ಸಂಸ್ಥೆಯು. ಇದು ಪ್ರಕಟವಾದುದು 2019ರಲ್ಲಿ.

ಮೊದಲಿಗೆ ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಅನುಗ್ರಹ ಸಂದೇಶವನ್ನು ನೀಡಲಾಗಿದೆ. ಮುನ್ನುಡಿಯನ್ನು ಬರೆದವರು ಡಾ| ಪಾದೇಕಲ್ಲು ವಿಷ್ಣು ಭಟ್ಟರು. ಲೇಖಕ ಹೊಸ್ತೋಟ ಮಂಜುನಾಥ ಭಾಗವತರು ‘ಹೀಗೊಂದು ಪ್ರೇರಣೆ’ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಮನದ ಮಾತುಗಳನ್ನು ತಿಳಿಸಿರುತ್ತಾರೆ. ಪ್ರೊ| ಎಂ. ಎ. ಹೆಗಡೆ ಶಿರಸಿ, ಕೆ. ಗೋವಿಂದ ಭಟ್ಟ, ರಾಜಗೋಪಾಲ್ ಕನ್ಯಾನ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಜಿ. ಮೃತ್ಯಂಜಯ, ಶ್ರೀಧರ ಡಿ.ಎಸ್, ಡಾ. ಮಮತಾ ಜಿ., ಇವರುಗಳ ಲೇಖನಗಳನ್ನೂ ನೀಡಲಾಗಿದೆ. ಬಳಿಕ ಕಥಾ ಸಾರಾಂಶ ಮತ್ತು ಆಧಾರ ಗ್ರಂಥಗಳ ಪಟ್ಟಿಯನ್ನು ನೀಡಲಾಗಿದೆ.

ಈ ಕೃತಿಯಲ್ಲಿ ರಂಗವಲ್ಲಿ ವೃಕ್ಷಮಹಿಮೆ, ಅಂಜನಾ ವಿವಾಹ, ಆಂಜನೇಯಾವಿರ್ಭಾವ, ವಾನರ ಕಿಶೋರ, ಕಿಷ್ಕಿಂಧಾ ಸಾಮ್ರಾಜ್ಯ, ಶ್ರೀರಾಮ ದರ್ಶನ, ಸುಗ್ರೀವ ಸಖ್ಯ, ಋಕ್ಷರಾಜ ವಿಲಾಸ, ವಾಲಿ ಸಂಹಾರ, ಸೀತಾನ್ವೇಷಣ, ಸಮುದ್ರೋಲ್ಲಂಘನ-ಲಂಕಾದಹನ, ವಿಭೀಷಣ ಲಂಕಾತ್ಯಾಗ, ಮಹಾ ಸೇತುಬಂಧ, ದೂಮ್ರಾಕ್ಷ ವಧೆ-ಮೇಘನಾದ ಪ್ರತಾಪ, ಸಸ್ಯ ಸಂಜೀವಿನಿ, ಅಹಿತಕ್ಕೊಬ್ಬ ಅಹಿರಾವಣ, ವೀರಾಂಜನೇಯ ವಿಜಯ, ಸೀತಾ ಪರೀಕ್ಷೆ, ಭರತ ಮಿಲನ, ಅಶ್ವಮೇಧ ಯಾಗ-ಸುಬಾಹು ಕಾಳಗ, ವೀರಮಣಿ ಕಾಳಗ, ಸುರಧಾಂಜನೇಯ, ರಾಮಾಂಜನೇಯ, ಗರುಡಾಂಜನೇಯ, ಅರ್ಜುನಾಂಜನೇಯ, ಭೀಮಾಂಜನೇಯ, ಶನೀಶ್ವರಾಂಜನೇಯ, ಶ್ರೀ ಒಡಿಯೂರ ದತ್ತಾಂಜನೇಯ ಎಂಬ ಇಪ್ಪತ್ತೇಳು ಪ್ರಸಂಗಗಳಿವೆ. ಅಲ್ಲದೆ ಹೊಸ್ತೋಟ ಮಂಜುನಾಥ ಭಾಗವತ ಮತ್ತು ಶಿರಂಕಲ್ಲು ಈಶ್ವರ ಭಟ್ಟರ ಪರಿಚಯ ಲೇಖನಗಳನ್ನೂ ನೀಡಲಾಗಿದೆ. ಶಿರಂಕಲ್ಲು ಈಶ್ವರ ಭಟ್ಟರಿಂದ ಸಿದ್ಧಗೊಂಡ ‘ವೀರಾಂಜನೇಯ ವೈಭವಂ’ ಎಂಬ ಗದ್ಯಕಾವ್ಯದ ಆಧಾರದಲ್ಲಿ ಈ ಎಲ್ಲಾ ಪ್ರಸಂಗಗಳನ್ನು ರಚಿಸಲಾಗಿದೆ. ಹೊಸ್ತೋಟ ಮಂಜುನಾಥ ಭಾಗವತರ ಯಕ್ಷಗಾನ ಪ್ರಸಂಗಗಳ ಗುಚ್ಛ ವೀರಾಂಜನೇಯ ವೈಭವಕ್ಕೆ(ಸಮಗ್ರ ಹನುಮಾಯನ ) 2019ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ದೊರಕಿದೆ.  

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ