Friday, August 28, 2026
Home Blog Page 359

ಗತ್ತುಗಾರಿಕೆ, ಲಾಲಿತ್ಯ, ಭಾವಾಭಿನಯ, ಲಯಸಿದ್ಧಿ ಮೇಳೈಸಿದ ಅಭಿನಯ ಚತುರ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ

ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಬಡಗುತಿಟ್ಟಿನ ಶ್ರೇಷ್ಠ ಕಲಾವಿದ. ಪ್ರದರ್ಶನಗಳನ್ನು ನೋಡುತ್ತಾ ಅಭಿನಯಿಸುತ್ತಾ ತನ್ನ ಪರಿಶ್ರಮ ಮತ್ತು ಹಿರಿಯ ಕಲಾವಿದರ ಒಡನಾಟ, ನಿರ್ದೇಶನಗಳಿಂದ ಬೆಳೆದು ಪಕ್ವರಾದವರು. ತನ್ನ ಹನ್ನೆರಡನೆಯ ವರ್ಷದಿಂದ ಆರಂಭಿಸಿ, ಸತತ 40 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಾ ಕಲಾಭಿಮಾನಿಗಳ ಮನಸೂರೆಗೊಂಡಿದ್ದಾರೆ.

ಕೊಂಡದಕುಳಿಯವರು ಇದ್ದಾರಾ? ಅವರೇನು ವೇಷ ಮಾಡ್ತಾರೆ ಇಂದು? ಎಂದು ಕೇಳುವಷ್ಟು ಪ್ರೇಕ್ಷಕರ ಮನದಲ್ಲಿ ತುಂಬಿಕೊಂಡಿದ್ದಾರೆ. ಪ್ರಸಂಗ ಗೊತ್ತಾದರೆ ಸಾಕು, ಕೊಂಡದಕುಳಿಯವರು ಇಂತಹ ವೇಷವನ್ನೇ ಮಾಡುತ್ತಾರೆ ಎಂದು ಕಲಾಭಿಮಾನಿಗಳು ನಿರ್ಣಯಿಸುವಷ್ಟು ಪ್ರಸಿದ್ಧರಿವರು. ಗತ್ತುಗಾರಿಕೆ, ಲಾಲಿತ್ಯ, ಭಾವಾಭಿನಯ, ಲಯಸಿದ್ಧಿ ಎಲ್ಲವೂ ಇವರ ವೇಷಗಳಲ್ಲಿ ತುಂಬಿಕೊಂಡಿವೆ. ಲಯ ಮತ್ತು ಅಭಿನಯದಲ್ಲಿ ಖಚಿತತೆ ಇರುವ ಕಾರಣದಿಂದ ಕೊಂಡದಕುಳಿಯವರ ವೇಷಗಳಿಗೆ ಪದ್ಯ ಹೇಳುವುದು ಸುಲಭವೆಂದು ಭಾಗವತರುಗಳನೇಕರ ಅಭಿಪ್ರಾಯವೂ ಹೌದು.

‘‘ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ (ರಿ.) ಕುಂಭಾಶಿ’’ ಎಂಬ ಸಂಸ್ಥೆಯ ಸ್ಥಾಪಕರಾದ ಶ್ರೀಯುತರು ಯಕ್ಷಗಾನ ಕ್ಷೇತ್ರದಲ್ಲಿ ತೋರಿದ ಸಾಧನೆಯು ಪ್ರಶಂಸನೀಯವಾದುದು.ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕು ಬೇರಂಕಿ ಗ್ರಾಮದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಹುಟ್ಟೂರು. 1961ನೇ ಇಸವಿ ಜೂನ್ 26ರಂದು ಶ್ರೀ ಗಣೇಶರಾಮ ಹೆಗಡೆ ಮತ್ತು ಶ್ರೀ ಕಮಲಾ ದಂಪತಿಗಳ ಮಗನಾಗಿ ಜನಿಸಿದರು. ಓದಿದ್ದು ಎಸ್.ಎಸ್. ಎಲ್.ಸಿ. ವರೇಗೆ. 1ನೇ ತರಗತಿಯಿಂದ 7ರ ವರೇಗೆ ಬೇರಂಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು 10ನೇ ತರಗತಿ ವರೇಗೆ ಅನಿಲಗೋಡ ಜನತಾ ವಿದ್ಯಾಲಯದಲ್ಲಿ.

ಕೊಂಡದಕುಳಿಯವರ ತೀರ್ಥರೂಪರು ಗಣೇಶರಾಮ ಹೆಗಡೆಯವರು ಕೃಷಿಕರು. ಕಲಾವಿದರಲ್ಲದಿದ್ದರೂ ಕಲಾಸಕ್ತರೇ ಆಗಿದ್ದರು. ಅಜ್ಜ ಕೊಂಡದಕುಳಿ ಶ್ರೀ ರಾಮ ಹೆಗಡೆ ಮತ್ತು ಸಣ್ಣಜ್ಜ ಶ್ರೀ ಲಕ್ಷ್ಮಣ ಹೆಗಡೆಯವರು ಆ ಕಾಲದ ಪ್ರಸಿದ್ಧ ಕಲಾವಿದರಾಗಿದ್ದರು. (ನಾರಾಯಣ ಹೆಗಡೆಯವರ ಅವಳಿ ಮಕ್ಕಳು). ಇಬ್ಬರೂ ವಾಕ್ಚಾತುರ್ಯವನ್ನು ಹೊಂದಿ ವೇಷಧಾರಿಗಳೂ, ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದರು. ಕೃಷಿಕುಟುಂಬ. ಜತೆಗೆ ಯಕ್ಷಗಾನ ಕಲಾವಿದರಾಗಿಯೂ ಮೆರೆದಿದ್ದರು.

ಇವರು ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೊಂಡದಕುಳಿ ಈ ಮೇಳವನ್ನು ನಡೆಸುತ್ತಿದ್ದರು. ಖ್ಯಾತ ಕಲಾವಿದರಾಗಿದ್ದ ಜಲವಳ್ಳಿ ಶ್ರೀ ವೆಂಕಟೇಶ ರಾಯರು ಸದ್ರಿ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ತಿರುಗಾಟ ನಡೆಸಿದ್ದರಂತೆ. ಕೊಂಡದಕುಳಿ ರಾಮ ಹೆಗಡೆಯವರಿಗೆ ವಾಲಿ, ಕೌರವ ಮೊದಲಾದ ಪಾತ್ರಗಳು ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಲಕ್ಷ್ಮಣ ಹೆಗಡೆಯವರು ಹನೂಮಂತ ಅಲ್ಲದೆ ಹಲವಾರು ಒಡ್ಡೋಲಗ ಪಾತ್ರಗಳಲ್ಲಿ ಹೆಸರು ಗಳಿಸಿದ್ದರು. ಲಕ್ಷ್ಮಣ ಹೆಗಡೆಯವರು 68ನೇ ವಯಸ್ಸಿನಲ್ಲೂ ರಾಮ ಹೆಗಡೆಯವರು 78ನೇ ವಯಸ್ಸಿನಲ್ಲಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಕೊಂಡದಕುಳಿ ಶ್ರೀ ರಾಮ ಹೆಗಡೆಯವರು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರಾಗಿದ್ದರು.

ಕಲಾವಿದರ ಮನೆ. ತಂದೆ ಕಲಾವಿದರಲ್ಲದಿದ್ದರೂ ಅಜ್ಜಂದಿರಿಬ್ಬರಿಂದ ಕೊಂಡದಕುಳಿ ರಾಮಚಂದ್ರ ಹೆಗ್ಗಡೆಯವರಿಗೆ ಯಕ್ಷಗಾನವು ಬಳುವಳಿಯಾಗಿ ಬಂದಿತ್ತು. ಕಲೆಯು ರಕ್ತಗತವಾಗಿತ್ತು. ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಆಟಗಳನ್ನು ನೋಡುತ್ತಾ 20 ಪ್ರಸಂಗಗಳ ನಡೆ, ಪದ್ಯ ಕಂಠಪಾಠವಾಗಿತ್ತು! ಎಸ್.ಎಸ್.ಎಲ್.ಸಿ. ವಿದ್ಯಾರ್ಜನೆ ಪೂರೈಸಿದಾಗಲೇ ಶ್ರೀ ಮಹಾ ಗಣಪತಿ ಯಕ್ಷಗಾನ ತಾಳಮದ್ದಳೆ ಸಂಘವನ್ನೂ ಸ್ಥಾಪಿಸಿದ್ದರು. ಪ್ರತೀ ಭಾನುವಾರ ಬೇರಂಕಿ ಶಾಲೆಯಲ್ಲಿ ತಾಳಮದ್ದಳೆ ನಡೆಸುತ್ತಿದ್ದರು.

ಬಹುಷಃ ಇವರಿಗೆ ಸಂಘಟನಾ ಚಾತುರ್ಯವೂ ಅಜ್ಜಂದಿರಿಬ್ಬರಿಂದ ಒದಗಿ ಬಂದಿರಬೇಕು. ಮೇಳವನ್ನು ಕಟ್ಟಿ ನಡೆಸಿದವರು ತಾನೆ? ಬಾಲಕನಾಗಿದ್ದಾಗ ರಾತ್ರೆಯಿಡೀ ಆಟ ನೋಡಿ ರಾಮಚಂದ್ರ ಹೆಗಡೆಯವರು ಹಗಲು ಮುಖಕ್ಕೆ ಬಣ್ಣ ಹಾಕಿ ಗೇರುಬೆಟ್ಟದಲ್ಲಿ ಕುಣಿದು ಅಭಿನಯಿಸುತ್ತಿದ್ದರು. ಆಗಲೇ ಕಲಾವಿದನೊಬ್ಬ ಅವರೊಳಗೆ ಅಡಗಿ ಕುಳಿತಿದ್ದ. ಅಜ್ಜ ರಾಮ ಹೆಗಡೆಯವರು ಮೊಮ್ಮಗನ ಏಕಪಾತ್ರಾಭಿನಯವನ್ನು ದಿನವೂ ಇವರಿಗರಿಯದಂತೆ ನೋಡುತ್ತಿದ್ದರು.

ಒಂದು ದಿನ ಚಿಟ್ಟಾಣಿಯವರ ಭಸ್ಮಾಸುರನ ಪಾತ್ರವನ್ನು ನೋಡಿ ಗುಡ್ಡದಲ್ಲಿ ಕೊಂಡದಕುಳಿಯವರು ಕುಣಿಯುತ್ತಿರುವಾಗ ನೋಡಿದ ಅಜ್ಜ ಕರೆದು ಏ ಮಾಣೀ… ಯಕ್ಷಗಾನ ಕಲಿಯುತ್ತಿಯಾ? ಎಂದು ಕೇಳಿದ್ದರು. ಮುರ್ಡೇಶ್ವರದಿಂದ ಕೆಲಸ ನಿಮಿತ್ತ ಬೇರಂಕಿ ಗ್ರಾಮಕ್ಕೆ ಬಂದಿದ್ದ ಮಹನೀಯರೊಬ್ಬರು ತೋಟದಲ್ಲಿ ಇವರ ಕುಣಿತವನ್ನು ನೋಡಿ- ಏ… ರಾಮಚಂದ್ರಾ ಒಂದು ತಾಸಿನಿಂದ ಕುಣೀತಾ ಇದ್ದಿಯಾ. ಏನು ಕಲಾವಿದನಾಗೋ ಆಸೆಯಾ? ಎಂದಿದ್ದರಂತೆ. ಅಂದಿನ ದಿನದಿಂದಲೇ ಅಜ್ಜ ರಾಮ ಹೆಗಡೆಯವರಿಂದ ಮನೆಯಲ್ಲಿಯೇ ಪಾಠ ಆರಂಭ. ಇವರ ಜತೆ ತಮ್ಮ ಗಣಪತಿಯೂ ಸೇರಿಕೊಂಡ. ಮೊಮ್ಮಕ್ಕಳಿಬ್ಬರಿಗೆ ಅಜ್ಜನಿಂದ ಯಕ್ಷಗಾನ ಪಾಠ ಶುರುವಾಗಿತ್ತು. ನಾಟ್ಯ ಮತ್ತು ಮಾತುಗಾರಿಕೆಗೆ ಅಜ್ಜ ರಾಮ ಹೆಗಡೆಯವರೇ ಮೊದಲ ಗುರುಗಳು.

ರುಕ್ಮಾಂಗದ ಚರಿತ್ರೆ ಪ್ರಸಂಗದ ಧರ್ಮಾಂಗದನಾಗಿ ಕೊಂಡದಕುಳಿಯವರು ರಂಗವೇರಿದರು. (ಮೊದಲ ಭಾಗ ಭರತನ ಸನ್ನಿವೇಶದ ವರೇಗೆ). ಅಂದು ಅವರ ತಮ್ಮ ಗಣಪತಿ  ಹೆಗಡೆಯವರು ಭರತನ ಪಾತ್ರವನ್ನು ಮಾಡಿದ್ದರು. ಗಣಪತಿ  ಹೆಗಡೆಯವರು ಸ್ನಾತಕೋತ್ತರ ಪದವೀಧರರೂ, ಉತ್ತಮ ಸಾಹಿತ್ಯ ರಚನಾಕಾರರೂ ಆಗಿದ್ದಾರೆ. ಹೀಗೆ ಆರಂಭವಾದುದು ಕೊಂಡದಕುಳಿಯವರ ಯಕ್ಷಯಾತ್ರೆ. ಎಸ್.ಎಸ್.ಎಲ್.ಸಿ. ಆದ ನಂತರ ಮೂರು ವರ್ಷಗಳು ಮನೆಯಲ್ಲಿಯೇ ಇದ್ದು ಕೃಷಿ ಚಟುವಟಿಕೆ, ಮರ ಹತ್ತುವುದು, ಗೊನೆ ತೆಗೆಯುವುದು, ಸೊಪ್ಪು ಗೊಬ್ಬರ ಹಾಕುವುದು ಜತೆಗೆ ಆಟ ನೋಡುವುದು ಹೀಗೆ ಸಾಗಿತ್ತು ಜೀವನ. ಮತ್ತೆ ಮೇಳಕ್ಕೆ ಹೋಗಿ ಕಲಾವಿದನಾಗುವ ಬಯಕೆ ಚಿಗುರೊಡೆಯಿತು. ಅಜ್ಜನ ಬಳಿ ಪ್ರಸ್ತಾಪ. ಗುಂಡಬಾಳಾ ಮೇಳಕ್ಕೆ ಹೋಗು ಎಂದರಂತೆ.

ಕೊಂಡದಕುಳಿಯವರು ಅಮೃತೇಶ್ವರೀ ಮೇಳಕ್ಕೆ ಹೋಗುತ್ತೇನೆ ಎಂದರಂತೆ. ಕಾರಣ… ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿರುವ ಮೇಳ ಅದು. ಕೊಂಡದಕುಳಿಯವರು ಅವರ ಅಭಿಮಾನಿಯಾಗಿದ್ದರು. ಚಿಟ್ಟಾಣಿಯವರನ್ನು ವಿನೋದಕ್ಕಾಗಿ ಯಾರಾದರೂ ಬೈದರೂ ಸಿಟ್ಟಾಗುತ್ತಿದ್ದರಂತೆ. ಅವರಿಗೆ ಹೊಡೆಯಲು ಹೋಗುತ್ತಿದ್ದರಂತೆ ಕೊಂಡದಕುಳಿಯವರು. ಹಾಗೆ 1979 ನವೆಂಬರ್ ನಲ್ಲಿ  ಮೇಳದ ತಿರುಗಾಟ ಆರಂಭ. ಈಗಿನ ಪ್ರಸಿದ್ಧ ಭಾಗವತ ಹೆರಂಜಾಲು ಗೋಪಾಲ ಗಾಣಿಗರೂ ಇವರು ಬಾಲಗೋಪಾಲರಾಗಿ ತಿರುಗಾಟ ಶುರು ಆಗಿತ್ತು. ಆಗ ಉಪ್ಪೂರರೂ, ಕಡತೋಕ ಕೃಷ್ಣ ಭಾಗವತರೂ ಅಮೃತೇಶ್ವರೀ ಮೇಳದಲ್ಲಿ ಭಾಗವತರುಗಳಾಗಿದ್ದರು. ವೇಷ ಕಟ್ಟಲು, ಬಣ್ಣ ಹಾಕಲು ತಿಳಿಯದ ಕಾರಣ ಕುಣಿಯುವಾಗ ಕೊಂಡದಕುಳಿಯವರನ್ನು ನೋಡಿದವರೆಲ್ಲಾ ನಗಾಡುತ್ತಿದ್ದರಂತೆ.

ಭಾಗವತರಾದ ಶ್ರೀ ನಾರ್ಣಪ್ಪ ಉಪ್ಪೂರರು ಕರೆದು ಏ ಮಾಣೀ ವೇಷ ಸುಖ ಇಲ್ಲೆ ಅಂತ ಗದರಿಸಿದ್ದರು. ಕೋಲಿನ ಪೆಟ್ಟಿಗಿಂತಲೂ ಮಾತಿನ ಪೆಟ್ಟೇ ಪರಿಣಾಮ ಬೀರಿತು. 15 ದಿನಗಳಲ್ಲೇ ಮೇಳ ಬಿಟ್ಟು ಕೊಂಡದಕುಳಿಯವರು ಮನೆಗೆ ಹೋಗಿದ್ದರು. “ಆಟ ಸಾಕು. ತೋಟವೇ ಅಡ್ಡಿ ಇಲ್ಲೆ’’ ಎಂದು ಅಜ್ಜನಲ್ಲಿ ಹೇಳಿದ್ದರು. ತೋಟಕ್ಕೆ ಹೋದಾಗಲೂ ಚಿಂತೆ ಇದುವೆ. ಕೇದಗೆ ಮುಂದಲೆ ಕಟ್ಟಲು ನನಗೇಕೆ ಆಗುವುದಿಲ್ಲ? ಇದೇನು ಒಂದು ಬ್ರಹ್ಮವಿದ್ಯೆಯಾ? ಎಂದು ನಿರ್ಧರಿಸಿ ಅಭ್ಯಾಸಕ್ಕೆ ಪ್ರಾರಂಭಿಸಿದರು. ಜಾಣನಿಗೆ ಉಪ್ಪೂರರು ಮಾತಿನ ಹೊಡೆತವನ್ನೇ ನೀಡಿದ್ದರು. ಪರಿಣಾಮವೂ ಮೂಡಿತ್ತು. ಕನ್ನಡಿ ಮುಂದೆ ಕುಳಿತು ಬಣ್ಣ ಹಾಕಲು, ಕಿರೀಟ ಕಟ್ಟಲು ಅಭ್ಯಸಿಸಿದರು. ಆ ಕಲೆಯು ಕರಗತವೂ ಆಯಿತು. ಮತ್ತೆ ಅಜ್ಜನ ಬಳಿ ಮೇಳಕ್ಕೆ ಹೋಗುತ್ತೇನೆ ಎಂಬ ಹಠ. ಮೊದಲೇ ಗುಂಡಬಾಳಾ ಮೇಳಕ್ಕೆ ಹೋಗು ಎಂದಿದ್ದ ರಾಮ ಹೆಗಡೆಯವರು ಮೊಮ್ಮಗನಿಗೆ ಬೈದಿದ್ದರು. ಆದರೂ ಮೇಳಕ್ಕೆ ಸೇರಲು ಸಮ್ಮತಿ ಸೂಚಿಸಿದರು.

ಅದೇ ವರ್ಷ ಜನವರಿ 26ಕ್ಕೆ ಗುಂಡಬಾಳಾ ಮೇಳಕ್ಕೆ (1979). ಸದ್ರಿ ಮೇಳದಲ್ಲಿ ಹಿರಿಗದ್ದೆ ಶಂಕರ ಭಾಗವತ್ ಭಾಗವತರಾಗಿದ್ದರು. ಮೊದಲ ಬಾರಿಗೆ ಲಕ್ಷ್ಮಣನಾಗಿ ಗೆದ್ದರು. ಅಂದು ಬಳ್ಕೂರು ರಾಮಚಂದ್ರ ಯಾಜಿ (ಬಳ್ಕೂರು ಕೃಷ್ಣ ಯಾಜಿಯವರ ಅಣ್ಣ) ಶ್ರೀರಾಮನಾಗಿಯೂ, ಬಳ್ಕೂರು ವಿಷ್ಣು ಆಚಾರ್ ಅವರು ಮಾಯಾ ಶೂರ್ಪನಖಿಯಾಗಿಯೂ ಅಭಿನಯಿಸಿದ್ದರು.  ಸದ್ರಿ ಮೇಳದಲ್ಲಿ 3 ವರ್ಷಗಳ ತಿರುಗಾಟ. ಕೊಂಡದಕುಳಿಯವರು ಸುಧನ್ವ, ಶ್ರೀಕೃಷ್ಣ, ಹನೂಮಂತ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಂಡರು. ಮಾತುಗಾರಿಕೆಯ ಬಗೆಗಿನ ಎಚ್ಚರಿಕೆಯನ್ನು ಅಜ್ಜ ರಾಮ ಹೆಗಡೆಯವರು ಹೇಳಿದ್ದರು. ಅಲ್ಲದೆ ಶೇಣಿ, ಸಾಮಗ, ಕುಂಬಳೆಯವರ ಆಡಿಯೋ ಕ್ಯಾಸೆಟ್‍ಗಳನ್ನು ಕೇಳಿ ಪಾತ್ರಕ್ಕೆ ಸಂಭಾಷಣೆಗಳನ್ನು ಅಳವಡಿಸುತ್ತಿದ್ದರು. ಮೇಳದಲ್ಲಿ ಬಳ್ಕೂರು ರಾಮಚಂದ್ರ ಯಾಜಿಯವರೂ ಹೇಳಿಕೊಡುತ್ತಿದ್ದರು. ಚೆನ್ನಾಗಿ ಹೇಳಿಕೊಡುತ್ತಿದ್ದರು ಎಂದು ಹೇಳಿ ನೆನಪಿಸುವ ಮೂಲಕ ಕೊಂಡದಕುಳಿಯವರು ಅವರನ್ನು ಗೌರವಿಸುತ್ತಾರೆ.

ಗುಂಡಬಾಳಾ ಮೇಳದಲ್ಲಿ ಮೂರೂರು ವಿಷ್ಣು ಭಟ್, ಹಡಿನಬಾಳಾ ಶ್ರೀಪಾದ ಹೆಗಡೆ, ಗುಂಡಿಬೈಲು ಸುಬ್ರಾಯ ಭಟ್ ಮೊದಲಾದವರು ಸಹ ಕಲಾವಿದರಾಗಿದ್ದರು. ಮೇಳದ ಸಂಚಾಲಕರಾಗಿ, ಕಲಾವಿದರಾಗಿ ಹಡಿನಬಾಳ ಶ್ರೀ ಸತ್ಯ ಹೆಗಡೆಯವರ ಪ್ರೋತ್ಸಾಹವೂ ಇತ್ತು. 1982ರಲ್ಲಿ ಪಳ್ಳಿ ಸೋಮನಾಥ ಹೆಗ್ಡೆಯವರ ಸಾಲಿಗ್ರಾಮ ಮೇಳಕ್ಕೆ. 18 ವರ್ಷಗಳ ತಿರುಗಾಟ. ಕಾಳಿಂಗ ನಾವಡರ ಭಾಗವತಿಕೆಯಲ್ಲಿ 6 ವರ್ಷ. ನಂತರ ಶ್ರೀ ನಾರಾಯಣ ಶಬರಾಯ ಮತ್ತು ವಿದ್ವಾನ್ ಗಣಪತಿ ಭಟ್ಟರ ಭಾಗವತಿಕೆ. ಸದ್ರಿ ಮೇಳದಲ್ಲಿ ಮೊದಲ ಮೂರು ವರ್ಷ ಒಂದು ರಾತ್ರೆಯಲ್ಲಿ ನಾಲ್ಕೈದು ವೇಷಗಳ ನಿರ್ವಹಣೆ. ಬೆಳಗಿನ ವರೆಗೂ ವೇಷ. ಇದರಿಂದ ಬೆಳೆಯಲು, ಕಲಿಯಲು ಅನುಕೂಲವಾಯಿತು. ಪುಂಡುವೇಷ ಮತ್ತು ಒಡ್ಡೋಲಗ ವೇಷಗಳಲ್ಲಿ ರಂಜಿಸಿದರು.  

ಕಲಿತರು, ಬೆಳೆದರು. ಎಷ್ಟು ಬೆಳೆದರೆಂದರೆ ಜಲವಳ್ಳಿಯವರು ರಜೆಯಾದರೆ ಶನಿ, ಸಾಮಗರು ರಜೆಯಾದರೆ ವಿಕ್ರಮಾದಿತ್ಯ, ಬೆಳಿಯೂರು ರಜೆಯಾದರೆ ನಂದಿಶೆಟ್ಟಿ, ಮುಖ್ಯಪ್ರಾಣ ರಜೆಯಾದರೆ ಕುದುರೆ ವ್ಯಾಪಾರಿ ಮಾಡುವಷ್ಟು ಬೆಳೆದರು! ಮುಖ್ಯ ಕಲಾವಿದರ ಅನುಪಸ್ಥಿತಿಯಲ್ಲಿ ಅವರು ನಿರ್ವಹಿಸುತ್ತಿದ್ದ ಪಾತ್ರಗಳನ್ನು ಆಕಸ್ಮಿಕವಾಗಿ ಮಾಡಿ  ರಂಜಿಸಿದರು. ಕೆಲವು ಪ್ರಸಂಗಗಳಲ್ಲಿ ಅನಿವಾರ್ಯವಾಗಿ ಪಾತ್ರಗಳನ್ನು ನಿರ್ವಹಿಸಿ, ಆ ಪಾತ್ರಗಳು ಇವರಿಗೆ ಖಾಯಂ ಆಗಿತ್ತು. ಶ್ರೀ ಸಾಲಿಗ್ರಾಮ ಮೇಳದ ತಿರುಗಾಟದ ನಂತರ (18 ವರ್ಷ) ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಶ್ರೀ ಪಂಚಲಿಂಗೇಶ್ವರ ಮೇಳಕ್ಕೆ (ಶಿರಸಿ) ಸೇರಿದರು. ಪುರ್ಲೆ ಶ್ರೀ ರಾಮಚಂದ್ರ ಹೆಗಡೆಯವರ ಯಾಜಮಾನ್ಯ. ನೆಬ್ಬೂರು ಶ್ರೀ ನಾರಾಯಣ ಭಾಗವತ, ಕೆ. ಪಿ. ಹೆಗಡೆ, ವಿದ್ವಾನ್ ಗಣಪತಿ ಭಟ್, ಕೆಪ್ಪೆಕೆರೆ ಸುಬ್ರಾಯ ಭಾಗವತ, ಹೊಳೆಗೆದ್ದೆ ಗಜಾನನ ಭಂಡಾರಿ, ಶಂಕರ ಭಾಗವತ್ ಯಲ್ಲಾಪುರ ಅಲ್ಲದೆ ವೇಷಕ್ಕೆ ಕೆಪ್ಪೆಕೆರೆ ಮಹಾದೇವ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ ಮೊದಲಾದ ಶ್ರೇಷ್ಠರ ಜತೆ ತಿರುಗಾಟ.

ಸದ್ರಿ ಮೇಳದಲ್ಲಿ ಮಹಾಬಲ ಹೆಗಡೆಯವರ ಜಮದಗ್ನಿ, ಕೊಂಡದಕುಳಿ ಅವರ ಪರಶುರಾಮ, ಮಹಾಬಲ ಹೆಗಡೆಯವರ ಅರ್ಜುನನಿಗೆ ಕೃಷ್ಣ (ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ), ಬ್ರಹ್ಮಕಪಾಲ ಪ್ರಸಂಗದಲ್ಲಿ ಮನ್ಮಥ ಮಾಡಿ ಯಕ್ಷಿಣಿ ಭಾಗದಿಂದ ಈಶ್ವರ, ಪಟ್ಟಾಭಿಷೇಕ ಭರತಾಗಮನ ಪ್ರಸಂಗದಲ್ಲಿ ಶಂಭು ಹೆಗಡೆಯವರ ದಶರಥ ಕೊಂಡದಕುಳಿ ಅವರ ಭರತ- ಹೀಗೆ ಬೆಳೆಯುತ್ತಾ ಸಾಗಿದ ಕೊಂಡದಕುಳಿಯವರಿಗೆ ಮಳೆಗಾಲದಲ್ಲಿ ಚಿಟ್ಟಾಣಿಯವರ ಜತೆ ಅಭಿನಯಿಸುವ ಅವಕಾಶಗಳೂ ಸಿಕ್ಕಿತ್ತು. ಪುಂಡು ವೇಷದಲ್ಲಿ ರಂಜಿಸಿ ಬಹುಬೇಗನೇ ರಾಜವೇಷಗಳನ್ನು ನಿರ್ವಹಿಸುವ ಪ್ರಬುದ್ಧತೆಯು ಸಿದ್ಧಿಸಿತ್ತು. ತನ್ನ 25ನೇ ವಯಸ್ಸಿನಲ್ಲಿ ಗದಾಯುದ್ಧದ ಕೌರವ, 26ನೆಯ ವಯಸ್ಸಿಗೆ ಭೀಷ್ಮ, 30ನೆಯ ವಯಸ್ಸಿನಲ್ಲಿ ಪಟ್ಟಾಭಿಷೇಕ ಪ್ರಸಂಗದ ದಶರಥನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ರಂಪಾಟದ ಪ್ರಸಂಗಗಳಿಗಿಂತಲೂ ಭಾವನಾತ್ಮಕ ಪ್ರಸಂಗಗಳೇ ಇಷ್ಟ. ಮೈಮರೆತು ಅಭಿನಯಿಸಲು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತದೆ ಎನ್ನುವ ಕೊಂಡದಕುಳಿಯವರು ನಳ, ಹರಿಶ್ಚಂದ್ರ, ರಾಮ, ರಾವಣ, ಹನೂಮಂತ, ವಾಲಿ, ದಶರಥ, ಭರತ, ಕಾರ್ತವೀರ್ಯ, ಕೀಚಕ, ವಲಲ, ದಕ್ಷ, ಸುಗ್ರೀವ, ಭಸ್ಮಾಸುರ, ದುಷ್ಠಬುದ್ಧಿ, ಚಂದ್ರಹಾಸ, ಭೀಷ್ಮ, ದುಷ್ಯಂತ, ರುಕ್ಮಾಂಗದ, ಉಗ್ರಸೇನ, ವತ್ಸಾಖ್ಯ ಧರ್ಮಾಂಗದ, ವಿಕ್ರಮ ಮೊದಲಾದ ಪಾತ್ರಗಳಲ್ಲಿ ರಂಜಿಸಿದರು. ಋತುಪರ್ಣನನ್ನೂ ಮಾಡಬಲ್ಲರು. ಬಾಹುಕನಾಗಿಯೂ ಅಭಿನಯಿಸಬಲ್ಲರು. ಮೋಹಿನಿ, ಮೇನಕೆ, ಚಂದ್ರಾವಳೀ, ಚಿತ್ರಾಕ್ಷಿ, ಪ್ರಮೀಳೆ, ನಾರದ, ಅಕ್ರೂರ, ವಿದುರ ಮೊದಲಾದ ಪಾತ್ರಗಳನ್ನೂ ಜನ ಮೆಚ್ಚುವಂತೆ ನಿರ್ವಹಿಸಿದರು. ಹಾಸ್ಯ ಪಾತ್ರಗಳಲ್ಲೂ ಸೈ ಎನಿಸಿಕೊಂಡರು.

2000ನೇ ಇಸವಿ ನವಂಬರ್ 16ರಂದು ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ (ರಿ.) ಕುಂಭಾಶಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಸದ್ರಿ ಸಂಸ್ಥೆಯಡಿಯಲ್ಲಿ ಪ್ರದರ್ಶನಗಳನ್ನು ನೀಡುತ್ತಿರುವ ಹಿರಿಮೆ ಕೊಂಡದಕುಳಿ ರಾಮಚಂದ್ರ ಹೆಗಡೆಯವರದು. ಈ ತಂಡವು ಭಾರತ ದೇಶದ ನಾನಾ ಕಡೆ ಮತ್ತು ವಿದೇಶಗಳಲ್ಲಿ ಪ್ರದರ್ಶನಗಳನ್ನು ನೀಡಿದೆ (ಸಿಂಗಾಪುರ, ದುಬೈ, ಶಾರ್ಜಾ, ಅಬುದಾಭಿ ಮತ್ತು ಅಮೇರಿಕಾದಲ್ಲಿ). ಪ್ರಸ್ತುತ 22 ವರ್ಷಗಳಿಂದ ಕುಂಭಾಶಿಯಲ್ಲಿ ವಾಸ್ತವ್ಯ. ಇವರ ಬಾಳಸಂಗಾತಿಯಾಗಿ ಬಂದವರು ಪೂರ್ಣಿಮಾ. ಪತಿಯ ನೆರಳಾಗಿ ಬದುಕಿದವರು ಶ್ರೀಮತೀ ಪೂರ್ಣಿಮಾ ರಾಮಚಂದ್ರ ಹೆಗಡೆಯವರು. ಕಲಾಸಕ್ತೆಯೂ ಆಗಿದ್ದರು. 2010ರಲ್ಲಿ ಅವರು ಅಲೌಕಿಕ ಪ್ರಪಂಚವನ್ನು ಸೇರಿಕೊಂಡಿದ್ದರು.

ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆ ದಂಪತಿಗಳಿಗೆ ಮೂವರು ಮಕ್ಕಳು (ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ). ಹಿರಿಯ ಪುತ್ರಿ ಶ್ರೀಮತಿ ಅಶ್ವಿನಿ ಕೊಂಡದಕುಳಿ M.Sc. ಓದಿದವರು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಕಲಾವಿದೆಯಾಗಿ, ಸಂಘಟಕಿಯಾಗಿ ಪ್ರಸಿದ್ಧರು. ಇವರು ಬಡಗಿನ ಉದಯೋನ್ಮುಖ ಕಲಾವಿದ ಶ್ರೀ ಉದಯ ಕಡಬಾಳರ ಪತ್ನಿ. ಕಿರಿಯ ಪುತ್ರಿ ಅಕ್ಷತಾ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರ ಗುರುಗಣೇಶ ಪದವಿ ವಿದ್ಯಾರ್ಥಿ. ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಸಂಸ್ಥೆಯಡಿಯಲ್ಲಿ ತನ್ನ ಅಜ್ಜ ಕೊಂಡದಕುಳಿ ಶ್ರೀ ರಾಮ ಹೆಗಡೆಯವರ ಹೆಸರಿನ ಪ್ರಶಸ್ತಿಯನ್ನು ವಿವಿಧ ವಿಭಾಗಗಳಲ್ಲಿ ಸಾಧಕರಾಗಿ ಮೆರೆದವರಿಗೆ ನೀಡುತ್ತಾ ಬಂದಿದ್ದಾರೆ (31 ವರ್ಷಗಳಿಂದ) ಶ್ರೀಯುತರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿಯೂ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.

ಒಟ್ಟು 40 ವರ್ಷಗಳ ಕಲಾಸೇವೆ ಇವರದು. ಶ್ರೇಷ್ಠ ಕಲಾವಿದ, ತಾಳಮದ್ದಳೆ ಅರ್ಥಧಾರಿ, ಸಂಯಮಂ ತಂಡದ ರೂವಾರಿ ಶ್ರೀ ವಾಸುದೇವ ಸಾಮಗರು ನನ್ನ ಅಘೋಷಿತ ಗುರು ಎಂದೂ, ಸರಳವಾಗಿ ಸಂಭಾಷಣೆಗಳನ್ನು ಹೇಳಿಕೊಡುತ್ತಾರೆ, ಕೊಟ್ಟಿರುತ್ತಾರೆ, ಈಗಲೂ ಹೊಸ ಪಾತ್ರಗಳು ಬಂದಾಗ ಅವರಲ್ಲಿ ಕೇಳುತ್ತೇನೆ ಎಂದು ಹೇಳುವ ಮೂಲಕ ಅವರನ್ನು ಕೊಂಡದಕುಳಿಯವರು ಗೌರವಿಸುತ್ತಾರೆ. ಪ್ರಸ್ತುತ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರು ಪತ್ನಿ ಚೇತನಾ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (15.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (15.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳತೋಟತ್ತಾಡಿ ದೇವಸ್ಯ, ಕಕ್ಕಿಂಜೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳದೇವುಕುದ್ರು ಹೌಸ್, ಕೊಂಪದವು, ಕುಕ್ಕುದಕಟ್ಟೆ, ಅಣ್ಣಪ್ಪನಗರ 
ಕಟೀಲು ಎರಡನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಮೂರನೇ ಮೇಳಮೂಡುಬೆಟ್ಟುಮನೆ, ವಡ್ಡರ್ಸೆ, ಉಡುಪಿ 
ಕಟೀಲು ನಾಲ್ಕನೇ ಮೇಳ ಕಳಂಜ, ಬೆಳ್ಳಾರೆ 
ಕಟೀಲು ಐದನೇ ಮೇಳ ಕನ್ನಿಕಾ ನಿಲಯ, ಪೆರ್ಮುದೆ, ಬಜಪೆ 
ಕಟೀಲು ಆರನೇ ಮೇಳಕೆ.ಸಿ ಫಾರ್ಮ್ ಬಳಿ, ಕೊಯಿಲ ವಯಾ ಉಪ್ಪಿನಂಗಡಿ 
ಮಂದಾರ್ತಿ ಒಂದನೇ ಮೇಳ ಹೇರಾಡಿ ಬಾರ್ಕೂರು 
ಮಂದಾರ್ತಿ ಎರಡನೇ ಮೇಳ ಕುಣಿಗದ್ದೆಮನೆ, ಅಂಪಾರು 
ಮಂದಾರ್ತಿ ಮೂರನೇ ಮೇಳ ಕೆರೆಬೈಲು, ಹೊಸಗದ್ದೆ, ತೀರ್ಥಹಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಐರೋಡಿ, ಪಡುಮನೆ, ಸಾಸ್ತಾನ 
ಮಂದಾರ್ತಿ ಐದನೇ ಮೇಳ ರಾಘವೇಂದ್ರ ನಗರ, ಬಿದನೂರು ಕ್ಯಾಶ್ಯೂ ಇಂಡಸ್ಟ್ರೀಸ್, ಚಿಕ್ಕಪೇಟೆ ನಗರ 
ಶ್ರೀ ಹನುಮಗಿರಿ ಮೇಳ ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರ – ನಳದಮಯಂತಿ, ಗದಾಯುದ್ಧ, ರಕ್ತರಾತ್ರಿ 
ಶ್ರೀ ಸಾಲಿಗ್ರಾಮ ಮೇಳನಾಗೂರು ಶಿಂಗಾರ ಗರಡಿ – ಧರ್ಮ ಸಂಕ್ರಾಂತಿ 
ಶ್ರೀ ಪೆರ್ಡೂರು ಮೇಳಶ್ರೀ ಕಾಳಿಕಾಂಬಾ ದೇವಸ್ಥಾನ, ದೊಂಬೆ ಶಿರೂರು – ಶಪ್ತ ಭಾಮಿನಿ 
ಶ್ರೀ ಮಾರಣಕಟ್ಟೆ ಮೇಳ ‘ಎ’ಇಡೂರು, ಕುಂಜ್ಞಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ನಾರ್ಕಳಿ ನಡುಬೆಟ್ಟು ದೈವದ ಮನೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಸಂಜನಾ ಮನೆ, ಮಣೂರು, ಪಡುಕೆರೆ 
ಶ್ರೀ ಪಾವಂಜೆ ಮೇಳ ಶ್ರೀ ಕ್ಷೇತ್ರದಲ್ಲಿ – ಪ್ರಚಂಡ ಭಾರ್ಗವ
ಶ್ರೀ ಹಟ್ಟಿಯಂಗಡಿ ಮೇಳಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ, ಕಳವಾಡಿ  – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’ಕಮಲಶಿಲೆ 
ಕಮಲಶಿಲೆ ಮೇಳ ‘ಬಿ’ಕಡ್ರಿ, ಸಿದ್ಧಾಪುರ 
ಶ್ರೀ ಬಪ್ಪನಾಡು ಮೇಳಶ್ರೀ ವೀರ ಹನುಮಾನ್ ಮಂದಿರ, ಸುಜೀರು, ದತ್ತನಗರ – ಬಂಗಾರ್ ಬಾಲೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ಶಿರಸಿ ಅಮ್ಮನವರ ದೇವಸ್ಥಾನ ಕೋಟತಟ್ಟು, ಪಡುಕರೆ 
ಶ್ರೀ ಬೋಳಂಬಳ್ಳಿ ಮೇಳ ಮೆಟ್ಟಿನಹೊಳೆ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಸೌಕೂರು ನಂದಿಕೇಶ್ವರ ಸಪರಿವಾರ ದೇವಸ್ಥಾನ – ರಕ್ತಸಂಬಂಧ
ಶ್ರೀ ಹಾಲಾಡಿ ಮೇಳಶೇಡ್ ಬರಿ ಶ್ರೀ ಜಟ್ಟಿಗೇಶ್ವರ ಮಹಾಸತಿ ದೇವಸ್ಥಾನ, ಹೆಬಲೆ, ಭಟ್ಕಳ 
ಶ್ರೀ ಬೆಂಕಿನಾಥೇಶ್ವರ ಮೇಳ  ಶಿರ್ತಾಡಿ ಜಂಕ್ಷನ್ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಮುಳ್ಳಿಕಟ್ಟೆ ಹೊಸಾಡು ಗಾನದಮಕ್ಕಿ ಚಿಕ್ಕು ಅಮ್ಮ ದೈವಸ್ಥಾನ ಜಾತ್ರೆ – ರಾಜವಂಶ ಗುಳಿಗ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೋಲೂರು ಜಾರಂದಾಡಿ, ಹಕ್ಲಾಡಿ – ಪ್ರಚಂಡ ಪಂಜುರ್ಲಿ 
ಶ್ರೀ ಹಿರಿಯಡಕ ಮೇಳಕಂಬದಕೋಣೆ ಜಟ್ಟಿಗೇಶ್ವರ ದೇವಸ್ಥಾನ – ಶ್ರೀಕೃಷ್ಣ ಲೀಲೆ, ಕಂಸವಧೆ 
ಶ್ರೀ ಶನೀಶ್ವರ ಮೇಳ ಹುಣಸೆಮಕ್ಕಿ ಬನಶಂಕರಿ ಕಾಂಪ್ಲೆಕ್ಸ್ ಎದುರು  
ಶ್ರೀ ಸಿಗಂದೂರು ಮೇಳನಾಯಕವಾಡಿ ಶೃತಿ ಕಾಂಪ್ಲೆಕ್ಸ್ ವಠಾರ 
ಶ್ರೀ ನೀಲಾವರ ಮೇಳ ಶ್ರೀರಾಮ ಭಜನಾ ಮಂದಿರ, ಗಂಗೆಬೈಲು, ಕೊಡೇರಿ 
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ಮೃಗವಧೆ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಮೂಗುಡ್ತಿ 

ಮೇಳಗಳ ಇಂದಿನ (14.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (14.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಬದ್ಯಾರು ಹಿಬರೋಡಿ ಅನುಗ್ರಹ ನಿಲಯದ ವಠಾರ – ಬ್ರಹ್ಮ ಕಪಾಲ, ಗಿರಿಜಾ ಕಲ್ಯಾಣ 
ಕಟೀಲು ಒಂದನೇ ಮೇಳಬೋಳ್ಳಾರು ಮನೆ ಸೂರಿಂಜೆ,  ಬೋಳ್ಳಾರು ಶಾಲಾ ಹಿಂಬದಿ 
ಕಟೀಲು ಎರಡನೇ ಮೇಳ ಶ್ರೀ ಸೀತಾರಾಮ ಭಜನಾ ಮಂದಿರದ ಬಳಿ, ಫರಂಗಿಪೇಟೆ 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ನಾಲ್ಕನೇ ಮೇಳ ಮಾಡಾವು ಕಟ್ಟೆ, ವಯಾ ಕುಂಬ್ರ, ಪುತ್ತೂರು 
ಕಟೀಲು ಐದನೇ ಮೇಳ ಚೆರ್ಕಳ ಮನೆ, ಪೂಂಜಾಲಕಟ್ಟೆ, ಬಂಟ್ವಾಳ 
ಕಟೀಲು ಆರನೇ ಮೇಳಶ್ರೀ ರಾಮ ಮಂದಿರ, ಕಲ್ಲಡ್ಕ, ಬಂಟ್ವಾಳ
ಮಂದಾರ್ತಿ ಒಂದನೇ ಮೇಳ ಸಬ್ಬಾಗಿಲು, ಕಾಸಾಡಿ, ಹೈಕಾಡಿ – ಕೂಡಾಟ 
ಮಂದಾರ್ತಿ ಎರಡನೇ ಮೇಳ ನಂದಿಕೇಶ್ವರ ದೇವಸ್ಥಾನ ಮೂರೂರು 
ಮಂದಾರ್ತಿ ಮೂರನೇ ಮೇಳ ಚೌಕ, ಮೇಗರವಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಸಬ್ಬಾಗಿಲು, ಕಾಸಾಡಿ, ಹೈಕಾಡಿ – ಕೂಡಾಟ  
ಮಂದಾರ್ತಿ ಐದನೇ ಮೇಳ ಹೊಳೆಗದ್ದೆ, ಯಡೂರು 
ಶ್ರೀ ಹನುಮಗಿರಿ ಮೇಳ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉದಯಗಿರಿ, ಮುಂಡೂರು(ಪುತ್ತೂರು) – ಶ್ರೀ ಶಬರಿಮಲೆ ಅಯ್ಯಪ್ಪ
ಶ್ರೀ ಸಾಲಿಗ್ರಾಮ ಮೇಳಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ ಆಟ
ಶ್ರೀ ಪೆರ್ಡೂರು ಮೇಳಶ್ರೀ ಕ್ಷೇತ್ರದಲ್ಲಿ – ದೇವರ ಸೇವೆ ಆಟ – ಪಾಂಡವಾಶ್ವಮೇಧ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರ ತಳಕಲದಲ್ಲಿ – ಉಳ್ಳಾಲ ಮೇಳ ಮತ್ತು ತಳಕಲ ಮೇಳ ಜೋಡಾಟ – ಮಹಿಷಮರ್ದಿನಿ 
ಶ್ರೀ ಸುಂಕದಕಟ್ಟೆ ಮೇಳ ಬೋಳಾರ ಮಾರಿಗುಡಿ – ಶ್ರೀ ದೇವಿಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಜಾತ್ರೆ ಸೇವೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಜಾತ್ರೆ ಸೇವೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಜಾತ್ರೆ ಸೇವೆ 
ಶ್ರೀ ಪಾವಂಜೆ ಮೇಳ ಮಾರಣಕಟ್ಟೆ ದೇವಸ್ಥಾನ – ಗಜೇಂದ್ರ ಮೋಕ್ಷ, ಮಾನಿಷಾದ, ಅಗ್ರಪೂಜೆ 
ಶ್ರೀ ಹಟ್ಟಿಯಂಗಡಿ ಮೇಳಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಗುಡ್ದಮ್ಮಾಡಿ  – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’ಕಮಲಶಿಲೆ 
ಕಮಲಶಿಲೆ ಮೇಳ ‘ಬಿ’ಕಡ್ರಿ, ಸಿದ್ಧಾಪುರ 
ಶ್ರೀ ಬಪ್ಪನಾಡು ಮೇಳಕಜೆಪದವು – ಬಂಗಾರ್ ಬಾಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ನೇರಳಕಟ್ಟೆ (ಮಾಣಿ) ಗಣೇಶನಗರ ಶ್ರೀ ಅಯ್ಯಪ್ಪಮಂದಿರದ ಬಳಿ – ಶ್ರೀ ಭಗವತೀ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ಚಿಕ್ಕು ಹಾಗೂ ಪರಿವಾರ ದೇವಸ್ಥಾನ ಮೂಡುಗಿಳಿಯಾರು  
ಶ್ರೀ ಬೋಳಂಬಳ್ಳಿ ಮೇಳ ನಾವುಂದ ಬಡಾಕರೆ ಲಕ್ಷ್ಮೀ ಜನಾರ್ದನ ದೇವಸ್ಥಾನ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಕೋಣ್ಕಿ ಸಿರಿಬೆಟ್ಟು ಹಳೆಯಮ್ಮ ಸಪರಿವಾರ ದೇವಸ್ಥಾನ
ಶ್ರೀ ಹಾಲಾಡಿ ಮೇಳಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಾರಿಕಾನ – ಕಂಸ ದಿಗ್ವಿಜಯ, ಕಂಸ ವಧೆ 
ಶ್ರೀ ಬೆಂಕಿನಾಥೇಶ್ವರ ಮೇಳ  ಬೊಳಿಯಾರ್ ಲಕ್ಷ್ಮೀನರಸಿಂಹ ದೇವಸ್ಥಾನ ಜಾತ್ರೆ – ಮಹಿಮೆದ ಮಂತ್ರದೇವತೆ 
ಶ್ರೀ ಮಡಾಮಕ್ಕಿ ಮೇಳಕುಂದಾಪುರ ವಿಠಲವಾಡಿ – ಶ್ರೀ ಮಡಾಮಕ್ಕಿ ಕ್ಷೇತ್ರ ಮಹಾತ್ಮೆ  
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬೈಂದೂರು ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ 
ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ ಶ್ರೀ ಕ್ಷೇತ್ರ ತಳಕಲದಲ್ಲಿ – ಉಳ್ಳಾಲ ಮೇಳ ಮತ್ತು ತಳಕಲ ಮೇಳ ಜೋಡಾಟ – ಮಹಿಷಮರ್ದಿನಿ 
ಶ್ರೀ ಹಿರಿಯಡಕ ಮೇಳನಾಗರತಿ ದೇವಸ್ಥಾನ, ಚೋರಾಡಿ – ನಾಗನಿಧಿ 
ಶ್ರೀ ಶನೀಶ್ವರ ಮೇಳ ಪಂಜುರ್ಲಿ ದೇವಸ್ಥಾನ ವಠಾರ, ಮುಂಬಾರು  – ತಾಟಕ ಮೋಕ್ಷ 
ಶ್ರೀ ಸಿಗಂದೂರು ಮೇಳಜಾತ್ರಾ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಸೇವೆ
ಶ್ರೀ ನೀಲಾವರ ಮೇಳ ನಾಗೂರು ಹಳೆಗೆರೆ 

ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಕು| ರೂಪಾ ಕನಕಪಾಡಿಯವರಿಗೆ ಪ್ರಥಮ ಶ್ರೇಣಿ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯ ವಿದ್ವತ್ ಅಂತಿಮ ದರ್ಜೆ ಪರೀಕ್ಷೆಯಲ್ಲಿ ಕು| ರೂಪಾ ಕನಕಪಾಡಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ರೂಪಾ ಕನಕಪಾಡಿಯವರು ಭರತನಾಟ್ಯ ಕಲಾವಿದೆಯೂ ಭರತನಾಟ್ಯ ಗುರುಗಳೂ ಆದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಶಿಷ್ಯೆ. ಹಾಗೂ ಶ್ರೀ ಉದಯಶಂಕರ್ ಕನಕಪಾಡಿ ಮತ್ತು ಶ್ರೀಮತಿ ಸುಗುಣಾ ಉದಯಶಂಕರ್ ಅವರ ಪುತ್ರಿ.

ಯಕ್ಷಕಲಾ ಅಕಾಡೆಮಿಯವರಿಂದ ಯಕ್ಷಗಾನ ಉತ್ಸವ

ಬೆಂಗಳೂರಿನ ಹೆಸರಾಂತ ತಂಡವಾದ ಯಕ್ಷಕಲಾ ಅಕಾಡೆಮಿಯು ಇದೀಗ  ಯಕ್ಷಗಾನ ಉತ್ಸವವನ್ನು ಹಮ್ಮಿಕೊಂಡಿದೆ. ಇದೇ ತಿಂಗಳ 15 ರ ಸಂಜೆ  6.30 ಕ್ಕೆ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. 

ಅಂದು  ಮುಖ್ಯ ಅಭ್ಯಾಗತರಾಗಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ನಟ ಗೋಪಾಲಕೃಷ್ಣ ನಾಯರಿ ಹಾಗೂ ವೃತ್ತಿಯಲ್ಲಿ ವೈದ್ಯರಾದರೂ ಕೂಡಾ, ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿ, ಕಲಾಕ್ಷೇತ್ರದಲ್ಲಿ ಸಾಕಷ್ಟು ಪಳಗಿರುವ ಬೆಂಗಳೂರಿನ ಶೇಖರ್ ಹಾಸ್ಪಿಟಲಿನ ಸಂಸ್ಥಾಪಕ ನಿರ್ದೇಶಕರಾಗಿರುವ ಡಾ. ಪಿ.ವಿ.ಐತಾಳರು, ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಸಕ್ರಿಯ ಕಾರ್ಯದರ್ಶಿಯೂ , ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರೂ ಆದ ಶ್ರೀ ರಾಜಶೇಖರ್ ಹೆಬ್ಬಾರ್ ಅವರು ಪಾಲುಗೊಳ್ಳಲಿದ್ದಾರೆ.

ತದನಂತರ ತಂಡದ  ಕಲಾವಿದರಿಂದ ‘ಭೀಷ್ಮ ಪ್ರತಿಜ್ಞೆ’ ಎನ್ನುವ ಕಥಾನಕವು ಪ್ರದರ್ಶನಗೊಳ್ಳಲಿದೆ ಎಂದು  ಯಕ್ಷಗಾನ ಗುರುಗಳಾದ ಶ್ರೀ ಕೃಷ್ಣಮೂರ್ತಿ ತುಂಗರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಳಗಳ ಇಂದಿನ (13.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (13.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಮಿಜಾರು ದಡ್ಡಿ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಶ್ರೀ ಸೋಮನಾಥ ಧಾಮ, ಪೆರ್ಮುದೆ, ಬಜಪೆ 
ಕಟೀಲು ಎರಡನೇ ಮೇಳ ಕಟೀಲು ಸಾನಿಧ್ಯ ಹಾಲ್ 
ಕಟೀಲು ಮೂರನೇ ಮೇಳಎಕ್ಕಾರು ಶ್ರೀ ಕೊಡಮಣಿತ್ತಾಯ ದೇವಸ್ಥಾನದ ಬಳಿ 
ಕಟೀಲು ನಾಲ್ಕನೇ ಮೇಳ ವಿಷ್ಣುನಗರ, ಕೇನ್ಯ, ,ಪಂಜ, ಸುಳ್ಯ 
ಕಟೀಲು ಐದನೇ ಮೇಳ ಕಟೀಲು ಸೌಂದರ್ಯ ಪ್ಯಾಲೇಸ್ 
ಕಟೀಲು ಆರನೇ ಮೇಳಕಟೀಲು ಕ್ಷೇತ್ರದಲ್ಲಿ 
ಮಂದಾರ್ತಿ ಒಂದನೇ ಮೇಳ ಬಿಲ್ಲಾಡಿ, ಜಾನುವಾರುಕಟ್ಟೆ 
ಮಂದಾರ್ತಿ ಎರಡನೇ ಮೇಳ ಶಾನಾಡಿ ಕೆದೂರು 
ಮಂದಾರ್ತಿ ಮೂರನೇ ಮೇಳ ಕಾರೂರುಮನೆ ಹೊಸಂಗಡಿ – ಕೂಡಾಟ 
ಮಂದಾರ್ತಿ ನಾಲ್ಕನೇ ಮೇಳ ಕೊಂಜಾಡಿಗುಡ್ಡಿಮನೆ, ಆರ್ಡಿ, ಅಲ್ಬಾಡಿ 
ಮಂದಾರ್ತಿ ಐದನೇ ಮೇಳ ಕಾರೂರುಮನೆ ಹೊಸಂಗಡಿ – ಕೂಡಾಟ  
ಶ್ರೀ ಹನುಮಗಿರಿ ಮೇಳ ನಿರುಡೆ – ಶುಕ್ರನಂದನೆ  
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಮೇದಿನಿ ನಿರ್ಮಾಣ 
ಶ್ರೀ ಸುಂಕದಕಟ್ಟೆ ಮೇಳ ಕುಕ್ಕುಜೊಟ್ಟು ಪೆರ್ಮುಡ (ವೇಣೂರು) – ಅಮರಶಿಲ್ಪಿ ವೀರ ಶಂಭು ಕಲ್ಕುಡ
ಶ್ರೀ ಮಾರಣಕಟ್ಟೆ ಮೇಳ ‘ಎ’ಕೊರಾಡಿಮನೆ,ವಂಡ್ಸೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಏಳುಮುಡಿ, ಹೊಸೂರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ನರ್ಲಿಗುಳಿ, ಆಲೂರು 
ಶ್ರೀ ಪಾವಂಜೆ ಮೇಳ ಮರವೂರು – ಶ್ರೀಹರಿ, ಶ್ರೀರಾಮ, ಶ್ರೀಕೃಷ್ಣ 
ಶ್ರೀ ಹಟ್ಟಿಯಂಗಡಿ ಮೇಳಹೊಸೂರು – ದಿವ್ಯ ಸನ್ನಿಧಿ
ಕಮಲಶಿಲೆ ಮೇಳ ‘ಎ’ಮೂಡುಗಲ್ಲು 
ಕಮಲಶಿಲೆ ಮೇಳ ‘ಬಿ’ಗುಬ್ಬಕೋಡು 
ಶ್ರೀ ಸಸಿಹಿತ್ಲು ಭಗವತೀ ಮೇಳ ಮೂಡುಪೆರಾರ ಮಿತ್ತಕೊಳಪಿಲ ರಾಘವೇಂದ್ರ ಭಜನಾ ಮಂದಿರದ ಬಳಿ – ರಂಗಸ್ಥಳ 
ಶ್ರೀ ಅಮೃತೇಶ್ವರೀ ಮೇಳಸಾಸ್ತಾನ ಮೆಲ್ಪೇಟೆ 
ಶ್ರೀ ಬೋಳಂಬಳ್ಳಿ ಮೇಳ ತಾರಿಬೇರು   – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಕೊಡಪಾಡಿ – ರಕ್ತ ಸಂಬಂಧ 
ಶ್ರೀ ಹಾಲಾಡಿ ಮೇಳಶ್ರೀ ಜೈನ ಜಟ್ಟಿಗೇಶ್ವರ ದೇವಸ್ಥಾನ, ಮಧುಕೂಡ್ಲು 
ಶ್ರೀ ಬೆಂಕಿನಾಥೇಶ್ವರ ಮೇಳ  ಮಣಿಪಾಲ ಹುಡ್ಕೋ ಕಾಲನಿ  – ಸತ್ಯೊದ  ಸ್ವಾಮಿ ಕೊರಗಜ್ಜ  
ಶ್ರೀ ಮಡಾಮಕ್ಕಿ ಮೇಳಚಾತ್ರಮಕ್ಕಿ – ಮಹಾಶಕ್ತಿ ಮಂತ್ರದೇವತೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಶ್ರೀ ಕ್ಷೇತ್ರ ಪೆರ್ಡೂರು, ಬುಕ್ಕಿಗುಡ್ಡೆ ಕುಲಾಲ ಸಭಾಭವನದ ವಠಾರ – ಚಂದ್ರಾವಳಿ, ಕನಕಾಂಗಿ 
ಶ್ರೀ ಹಿರಿಯಡಕ ಮೇಳಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಫ್ರೆಂಡ್ಸ್ ಸರ್ಕಲ್ ಜನ್ನಾಡಿ – ತಾಟಕ ಮೋಕ್ಷ 
ಶ್ರೀ ಸಿಗಂದೂರು ಮೇಳಹುಲಿದೇವರಬನ ಜಾತ್ರೆ 
ಶ್ರೀ ನೀಲಾವರ ಮೇಳ ಬೇಡರ ಕೊಟ್ಟಿಗೆ ಬೊಬ್ಬರ್ಯ ದೇವಸ್ಥಾನ ವಠಾರ 

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ  ಭವನ ಸಮಿತಿ ಅವಲೋಕನಾ ಸಭೆ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ಕಾರ್ಯ ಪ್ರಗತಿಯಲ್ಲಿದ್ದು ಆಬಗೆಗೆ ಅವಲೋಕನಾ ಸಭೆ ಇತ್ತೀಚೆಗೆ ಸಿರಿಬಾಗಿಲಿನಲ್ಲಿ ಜರಗಿತು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ  ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅಧ್ಯಕ್ಷತೆ ವಹಿಸಿ ಸಭೆಗೆ ಭವನ ನಿರ್ಮಾಣ ಕಾಮಗಾರಿಯ ಪ್ರಗತಿ ಮಾಹಿತಿ ನೀಡಿದರು. ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ಮಂದಿರ ನಿರ್ಮಾಣ ಕಾರ್ಯದಲ್ಲಿ ಆರ್ಥಿಕವಾಗಿ ನಾಡಿನ ದೇಶವಿದೇಶಗಳ ಯಕ್ಷಗಾನ ಅಭಿಮಾನಿಗಳು ಕಲಾಸೇವಕರು ಕೈ ಜೋಡಿಸಬೇಕು ಎಂದು ವಿನಂತಿಸಿಕೊಂಡರು.


ಸಭೆಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣ ಯೋಜನೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳಾಗಿರುವ ಲಕ್ಷ್ಮೀನಾರಾಯಣ ಕಾವು ಮಠ, ಯೋಗೀಶ ರಾವ್ ಚಿಗುರುಪಾದೆ, ರಾಜಾರಾಮ ರಾವ್ ಮೀಯಪದವು, ಸತೀಶ ಅಡಪ ಸಂಕಬೈಲು, ಶಿವರಾಮ ಕಾಸರಗೋಡು, ಜಗದೀಶ್ ಕೂಡ್ಲು, ಜಯರಾಮ ಕಾರಂತ ದೇಶಮಂಗಲ, ತಿಮ್ಮಪ್ಪ ಮಜಲು, ವಿಷ್ಣು ಶ್ಯಾನುಭೋಗ್ ಕೂಡ್ಲು, ಚಂದ್ರಶೇಖರ ಹೊಳ್ಳ ಕುದ್ರೆಪ್ಪಾಡಿ, ಜಯರಾಮ ರೈ ಸಿರಿಬಾಗಿಲು, ಸುಮನ್ ರಾಜ್ ನೀಲಂಗಳ, ರಾಧಾಕೃಷ್ಣ ಭಟ್ ಕೊಂಗೊಟ್ಟು, ಸುಮಿತ್ರಾ ಆರ್ ಮಯ್ಯ, ಯಸ್ ಯನ್ ರಾಮ ಶೆಟ್ಟಿ ನಿವೃತ್ತ ಅಧ್ಯಾಪಕ, ಸದಾಶಿವ ಭಟ್ ಎದ್ರುಕಳ, ವೆಂಕಟರಮಣ ಹೊಳ್ಳ ಸಿರಿಬಾಗಿಲು, ಶ್ರೀಮತಿ ಉಮಾ ಭಟ್ ಕೋಂಗೋಟ್ಟು ಮೊದಲಾದ ಗಣ್ಯರು ಭಾಗವಹಿಸಿದ್ದರು.

ಮೇಳಗಳ ಇಂದಿನ (12.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (12.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಬಾರ್ಕೂರು ಹೊಸಾಳ    – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ಎರಡನೇ ಮೇಳ ಪದ್ಮನೂರು ವಯಾ ಕಿನ್ನಿಗೋಳಿ 
ಕಟೀಲು ಮೂರನೇ ಮೇಳಕೊಂಕಣಪದಮ, ಪೆರಾಜೆ ಬುಡೋಳಿ ವಯಾ ಮಾಣಿ 
ಕಟೀಲು ನಾಲ್ಕನೇ ಮೇಳ ಗುಂಡಾಳ, ಬಡಗಬೆಳ್ಳೂರು, ಬಂಟ್ವಾಳ 
ಕಟೀಲು ಐದನೇ ಮೇಳ ಗುಂರ್ಪೆ, ಕತ್ತಲ್ ಸಾರ್ , ಪಡುಪೆರಾರ 
ಕಟೀಲು ಆರನೇ ಮೇಳಕಟೀಲು ಸೌಂದರ್ಯ ಪ್ಯಾಲೇಸ್ 
ಮಂದಾರ್ತಿ ಒಂದನೇ ಮೇಳ ಮಂಡಳ್ಳಿ, ಕೆಳಮನೆ, ಬಿದ್ಕಲ್ ಕಟ್ಟೆ 
ಮಂದಾರ್ತಿ ಎರಡನೇ ಮೇಳ ಕೊತ್ತಾಡಿ, ವಡ್ಡರ್ಸೆ 
ಮಂದಾರ್ತಿ ಮೂರನೇ ಮೇಳ ಕೊಡಪಾಡಿ ಗುಜ್ಜಾಡಿ 
ಮಂದಾರ್ತಿ ನಾಲ್ಕನೇ ಮೇಳ ಹೆಬ್ಬಾಗಿಲುಮನೆ ಹೆಸ್ಕುಂದ, ನಂಚಾರು 
ಮಂದಾರ್ತಿ ಐದನೇ ಮೇಳ ಆಬ್ಯಾಡಿ ದೇವಸ್ಥಾನದ ಹತ್ತಿರ, ಕುಳ್ಳುಂಜೆ, ಶಂಕರನಾರಾಯಣ 
ಶ್ರೀ ಹನುಮಗಿರಿ ಮೇಳ ಹನುಮಾನ್ ನಗರ ಮಲ್ಪೆ ವಿಠೋಭ ಭಜನಾ ಮಂದಿರದ ವಠಾರ – ಮೊಗವೀರಪೇಟೆ ಕ್ಷೇತ್ರ ಮಹಾತ್ಮೆ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಗುಡ್ಡೆದ ಗುಳಿಗೆ
ಶ್ರೀ ಮಾರಣಕಟ್ಟೆ ಮೇಳ ‘ಎ’ಕುದ್ರುಮನೆಬೆಟ್ಟು, ಜಡ್ಡಿಮನೆ, ಬನ್ನಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕಾಡ್ನಾಡಿಮನೆ, ನಾರ್ಕಳಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶಿವನಗರ, ಬೆಳ್ಳಾಡಿ, ಬಂಟ್ವಾಡಿ 
ಶ್ರೀ ಪಾವಂಜೆ ಮೇಳ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಬೆಳ್ಳಾಡಿ ಮಲೆಯಾಳಿ ಬೊಬ್ಬರ್ಯ ದೇವಸ್ಥಾನ 
ಕಮಲಶಿಲೆ ಮೇಳ ‘ಎ’ನಾಯಕವಾಡಿ 
ಕಮಲಶಿಲೆ ಮೇಳ ‘ಬಿ’ಕೆರಾಡಿ 
ಶ್ರೀ ಬಪ್ಪನಾಡು ಮೇಳವೆಂಕಟರಮಣ ದೇವಸ್ಥಾನದ ವಠಾರ, ಮೂಲ್ಕಿ  – ಬಪ್ಪನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಹೆಜಮಾಡಿ ಉಲ್ಲಾಸ್ ನಗರ – ರಂಗಸ್ಥಳ 
ಶ್ರೀ ಅಮೃತೇಶ್ವರೀ ಮೇಳಹರಾಡಿಮನೆ, ಮೂಡುಗಿಳಿಯಾರು 
ಶ್ರೀ ಬೋಳಂಬಳ್ಳಿ ಮೇಳ ಮೂಡುಬೆಟ್ಟು  – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಕೊಂಡಳ್ಳಿ   – ಹಳನಾಡು ಕ್ಷೇತ್ರ ಮಹಾತ್ಮೆ  
ಶ್ರೀ ಹಾಲಾಡಿ ಮೇಳಜಟ್ಟಿಗೇಶ್ವರ ದೇವಸ್ಥಾನ, ಮಲ್ಲರಬೆಟ್ಟು, ಗಂಗೊಳ್ಳಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಕೆಲ್ಲಪುತ್ತಿಗೆ ಮಾರ್ನಾಡ್ ವೀರಮಾರುತಿ ಕ್ರೀಡಾಂಗಣದಲ್ಲಿ – ಸತ್ಯೊದ  ಸ್ವಾಮಿ ಕೊರಗಜ್ಜ  
ಶ್ರೀ ಮಡಾಮಕ್ಕಿ ಮೇಳಕೋಟೇಶ್ವರ ಗಂಧರ್ವ ಬಳಿ – ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕುಂದಾಪುರ ಕೋಡಿ ಶ್ರೀ ನಾಗಜಟ್ಟಿಲಿಂಗೇಶ್ವರ ಸ್ವಾಮಿಯ ಜಾತ್ರೆ – ಚೆಲುವೆ ಚಿತ್ರಾವತಿ 
ಶ್ರೀ ಹಿರಿಯಡಕ ಮೇಳಹಿರಿಯಡಕ ಬಜೆ ಬಬ್ಬುಸ್ವಾಮಿ ದೈವಸ್ಥಾನ ಎದುರು – ಮಾಯೊದ ಅಜ್ಜೆ 
ಶ್ರೀ ಶನೀಶ್ವರ ಮೇಳ ಕುದ್ರಬೇರು ಕಟ್ಟೆ, ಆಜ್ರಿ – ತಾಟಕ ಮೋಕ್ಷ 
ಶ್ರೀ ಸಿಗಂದೂರು ಮೇಳಕೋಣ್ಕಿ, ಕೂಡ್ಗಿಹಿತ್ಲು, ಬಳ್ಳಿಹಿತ್ಲುಮನೆ 
ಶ್ರೀ ನೀಲಾವರ ಮೇಳ ಮಾಬುಕಳ ಸಿದ್ಧಿವಿನಾಯಕ ದೇವಸ್ಥಾನ ವಠಾರ 

ದಕ್ಷಯಜ್ಞ ಯಕ್ಷಗಾನ

ಕೋವಿಡ್ ನ ಉಪಟಳದಿಂದ ನಿಂತ ನೀರಾಗಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕಲಾವಿದರ ಬದುಕು ಮತ್ತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ವಾತಾವರಣ ರೂಪುಗೊಳ್ಳುತ್ತಿರುವುದರ ಮೂಲಕ ನಿಧಾನವಾಗಿ ಚೇತರಿಕೊಳ್ಳುತ್ತಾ ಸಾಗಿದೆ. ಕಲಾಕದಂಬ ಆರ್ಟ್ ಸೆಂಟರ್ ನಿರಂತರ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆ. ಕೋವಿಡ್ ನ ಪ್ರಭಾವ ಕಡಿಮೆಯಾಗುತ್ತಿರುವ ಈ ಸಂಧರ್ಭದಲ್ಲಿ ಮತ್ತೆ ಸಾಂಸ್ಕೃತಿಕ ಲೋಕದತ್ತ ಪಯಣ ಬೆಳೆಸುತ್ತಿದೆ.

ಪ್ರಸಿದ್ದ ಯಕ್ಷಗಾನ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಡಾ. ರಾಧಾಕೃಷ್ಣ ಉರಾಳರ ನಿರ್ದೇಶಕತ್ವದ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಕೊಮ್ಮಘಟ್ಟದ ಓಂ ಯೋಗಧಾಮ ಟ್ರಸ್ಟ್ ನ ಸಹಯೋಗದೊಂದಿಗೆ ಸಮತ್ವಂ ಯೋಗ ಮತ್ತು ಕಲಾಶಾಲೆಯ ಸಭಾಂಗಣದಲ್ಲಿ ದಿನಾಂಕ 17-01-2021 ರ ಸಂಜೆ 5 ಘಂಟೆಗೆ ನಡೆಯಲಿರುವ ಸಂಕ್ರಾಂತಿ ಕಲೋತ್ಸವದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನ ಕಲಾ ವಿದ್ಯಾರ್ಥಿಗಳಿಂದ ದಕ್ಷ ಯಜ್ಞ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಿದೆ.

ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಮೋಹಳ್ಳಿಯ ಶ್ರೀ ಸಿದ್ಧಾ ಆರೂಢ ಮಿಷನ್ ಆಶ್ರಮದ ಡಾ.ಶ್ರೀ ಆರೂಢಭಾರತೀ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ನೀಲಮ್ಮ, ಕರಬ ಪ್ರತಿಷ್ಟಾನದ ದೇವರಾಜ ಕರಬ ಹಾಗೂ ಓಂ ಯೋಗಧಾಮ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಸ್ವಪ್ನ ಪ್ರದೀಪ್ ಆಗಮಿಸಲಿದ್ದಾರೆ.

ಕಾರ್ಯಕ್ರಮದ ನಿರ್ವಹಣೆಯನ್ನು ಮುರಳೀಧರ ನಾವಡ, ನಿತ್ಯಾನಂದ ನಾಯಕ್ ಹಾಗೂ ವಿಶ್ವನಾಥ ಉರಾಳ ನಿಭಾಯಿಸಲಿದ್ದಾರೆ. ಸರಕಾರದ ಕೋವಿಡ್ ಕುರಿತಾಗಿನ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದರ ಮೂಲಕ ಕಾರ್ಯಕ್ರಮಗಳನ್ನು ನಡೆಸಲಿದ್ದು ಸೀಮಿತ ಜನರಿಗೆ ಮಾತ್ರ ಪ್ರವೇಶವಿರುತ್ತದೆ.

ಈ ಒಂದು ಯಕ್ಷಗಾನ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9886066732, 9448510582

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆ

ಜಾಗತಿಕ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ವಾರ್ಷಿಕ ಪ್ರಶಸ್ತಿಗೆ 2020 – 21 ನೇ ಸಾಲಿನಲ್ಲಿ ಬಡಗು ತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ ರಾಜೀವ ಶೆಟ್ಟಿ ಹೊಸಂಗಡಿ ಆಯ್ಕೆಯಾಗಿದ್ದಾರೆ. 

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ , ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಮತ್ತು ವಿಶ್ರಾಂತ ಪ್ರಾಚಾರ್ಯ ಪ್ರೊ. ಜಿ.ಆರ್. ರೈ ಅವರನ್ನೊಳಗೊಂಡ ಆಯ್ಕೆ ಸಮಿತಿ ರಾಜೀವ ಶೆಟ್ಟರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಿದೆ. ಬಡಗುತಿಟ್ಟಿನ ಹೆಸರಾಂತ ಕಮಲಶಿಲೆ, ಪೆರ್ಡೂರು, ಅಮೃತೇಶ್ವರಿ, ಸೌಕೂರು, ಬಚ್ಚಗಾರು, ಸಾಲಿಗ್ರಾಮ ಮತ್ತು ಮಂದರ್ತಿ ಮೇಳಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ 60ರ ಹರೆಯದ ರಾಜೀವ ಶೆಟ್ಟಿ ಕುಂದಾಪುರ ತಾಲೂಕಿನ ಹೊಸಂಗಡಿ ಕೆಳಬಾಗಿ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ.

ದಿ. ಎಂ.ಎಂ.ಹೆಗಡೆ, ಭಾಗವತ ನಾರಣಪ್ಪ ಉಪ್ಪೂರು, ಜಿ.ಆರ್. ಕಾಳಿಂಗ ನಾವಡ, ಚಿಟ್ಟಾಣಿ ರಾಮಚಂದ್ರ ಹೆಗಡೆ , ಎಂ.ಎ.ನಾಯ್ಕ, ಕೋಟ ವೈಕುಂಠ, ವಾಸುದೇವ ಸಾಮಗ, ರಾಮ ನಾಯಿರಿ, ಅರಾಟೆ ಮಂಜುನಾಥ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಮುಖ್ಯಪ್ರಾಣ ಕಿನ್ನಿಗೋಳಿ ಮುಂತಾದ ಹಿರಿಯರ ಒಡನಾಟದಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಯಕ್ಷಗಾನ ರಂಗಾನುಭವ ಅವರದು.

ಪ್ರಮೀಳೆ, ಚಿತ್ರಾಂಗದೆ, ಪ್ರಭಾವತಿ, ದ್ರೌಪದಿ, ಸುಭದ್ರೆ, ದಾಕ್ಷಾಯಿಣಿ, ಮೀನಾಕ್ಷಿ, ಸತ್ಯಭಾಮೆ, ಮೇನಕೆ, ಶಶಿಪ್ರಭೆ, ಅಂಬೆ, ಯೋಜನಗಂಧಿ ಇತ್ಯಾದಿ ಪೌರಾಣಿಕ ಪಾತ್ರಗಳಲ್ಲದೆ ಹೊಸ ಪ್ರಸಂಗಗಳ ನಾಗಶ್ರೀ, ಚಿತ್ರಾವತಿ, ರತಿ ರೇಖಾ, ಕಾಮಿನಿ, ಶುಭದ ಮುಂತಾದ ಪ್ರಧಾನ ಸ್ತ್ರೀಪಾತ್ರಗಳಲ್ಲಿ ಅವರು ಖ್ಯಾತಿ ಪಡೆದಿದ್ದಾರೆ. ರಾಮ, ಕೃಷ್ಣ , ಶಿವ, ಮನ್ಮಥ ಮೊದಲಾದ ಪುರುಷ ಪಾತ್ರಗಳಲ್ಲೂ ಹೆಸರು ಗಳಿಸಿದ್ದಾರೆ.


ಜ. 23 ಪ್ರಶಸ್ತಿ ಪ್ರದಾನ: ಡಿ.ಕೆ. ಚೌಟ ದತ್ತಿನಿಧಿ ಪ್ರಶಸ್ತಿಯು ರೂ 20,000 ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಜನವರಿ 23, 2021 ರಂದು ಮಂಗಳೂರಿನ ಮೋತಿಮಹಲ್ ಸಭಾಂಗಣದಲ್ಲಿ ಜರಗುವ ಜಾಗತಿಕ ಬಂಟ ಫೌಂಡೇಶನ್ ಟ್ರಸ್ಟ್ ನ 24 ನೇ ವಾರ್ಷಿಕ ಸಮಾವೇಶದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡುವರೆಂದು ಪ್ರತಿಷ್ಠಾನದ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.