Friday, August 28, 2026
Home Blog Page 361

ಅಂಬಲಪಾಡಿ ಯಕ್ಷಗಾನ ಮಂಡಳಿಯ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷದ ದೇಣಿಗೆ

63 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯು ನಿರ್ಮಿಸುತ್ತಿರುವ ನೂತನ ರಂಗಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೆಂದ್ರ ಹೆಗ್ಗೆಡೆಯವರು ಪ್ರಸಾದ ರೂಪವಾಗಿ 5 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿ ಹರಸಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕರಾದ ಶ್ರೀ ಬಿ. ಗಣೇಶ್‍ರವರು ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಅವರಿಗೆ ಡಿ.ಡಿ.ಯನ್ನು ದಿನಾಂಕ 06-01-2021ರಂದು ಹಸ್ತಾಂತರಿಸಿದರು.

ಈ ಸಮಯದಲ್ಲಿ ಗ್ರಾಮಾಭಿವೃದ್ಧಿಯೋಜನೆಯ ಅಂಬಲಪಾಡಿ ಒಕ್ಕೂಟದ ಅಧ್ಯಕ್ಷ ಪ್ರಕಾಶ್‍ ಆಚಾರ್, ಮೇಲ್ವಿಚಾರಕರಾದ ಜಯಕರ್, ಸಹಾಯಕಿ ಗೀತಾ ಪಾಲನ್, ಪಂಚಾಯತ್ ಸದಸ್ಯರಾದ ಹರೀಶ ಪಾಲನ್, ಯುವಕ ಮಂಡಲದ ಗೌರವ ಅಧ್ಯಕ್ಷ ಕೀರ್ತಿ ಶೆಟ್ಟಿ, ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ನಾರಾಯಣ ಎಮ್. ಹೆಗಡೆ, ಕೆ. ಜೆ. ಗಣೇಶ, ಕೆ. ಅಜಿತ್‍ಕುಮಾರ್, ನಟರಾಜ ಉಪಾಧ್ಯ, ಪ್ರವೀಣ ಉಪಾಧ್ಯ, ಜಯ ಕೆ., ಪ್ರಣಿತ್ ಉಪಸ್ಥಿತರಿದ್ದರು. ಮಂಡಳಿ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿ, ಕಾರ್ಯದರ್ಶಿ ಕೆ.ಜೆ. ಕೃಷ್ಣ ಧನ್ಯವಾದ ಸಮರ್ಪಿಸಿದರು.

ಯಕ್ಷಗಾನದ ಚೆಲುವ ರಾಜಕುಮಾರ – ರಂಗಸ್ಥಳದ ಯುವರಾಜ ತೋಟಿಮನೆಯ ಗುರುತಿನ ಹೆಜ್ಜೆಗಳು

ಯಶಸ್ವೀ ವ್ಯಕ್ತಿಗಳ ಸಾಧನೆಯೇನೂ ಅದ್ಭುತಗಳಿಂದ ಸಿದ್ಧಿಸಿದ್ದಲ್ಲ. ಪವಾಡ ನಡೆಸಿ ಜೀವನದಲ್ಲಿ ಯಶಸ್ಸು ಸಂಪಾದಿಸಲು ಸಾಧ್ಯವಿಲ್ಲ. ಜನಪ್ರಿಯತೆಯ ಹಿಂದಿನ ಶ್ರಮದ ಮಹತ್ವ ಅರಿಯಬೇಕಾದರೆ ದೀರ್ಘ ಯಶೋಗಾಥೆಗಳನ್ನು ತಿಳಿಯಬೇಕು. ಅಲ್ಲಿ ಪವಾಡಗಳಿರುವುದಿಲ್ಲ. ಕೇವಲ ಅದೃಷ್ಟವನ್ನೇ ನಂಬಿ ಕುಳಿತ ಕಾಯಕ ವಿರುವುದಿಲ್ಲ. ಪ್ರತಿಯೊಂದು ಯಶಸ್ಸಿನ ಕಣಕಣಗಳಲ್ಲಿಯೂ ಶ್ರಮದ ಬೆವರಿನ ವಾಸನೆಯಿರುತ್ತದೆ. ಕಷ್ಟಗಳ ಕಣ್ಣೀರಿನ ಬಿಂದುಗಳ ಚಿತ್ರಗಳಿರುತ್ತವೆ.


ಜನರು ಆರಾಧಿಸುವ, ಇಂದು ಉನ್ನತ ಸ್ಥಾನದಲ್ಲಿ ರಾರಾಜಿಸುತ್ತಿರುವವರೆಲ್ಲರೂ ನಿರಾಯಾಸವಾಗಿ ಆ ಸಾಧನೆಗಳನ್ನು ಸಿದ್ಧಿಸಿಕೊಂಡವರಲ್ಲ. ಕನಸುಗಳನ್ನು ನನಸಾಗಿಸುವಲ್ಲಿ ಅವರ ಆ ಛಲದ ಪಯಣ ಹಾಗೂ ಶ್ರಮ ಅವರನ್ನು ಅಷ್ಟು ಎತ್ತರಕ್ಕೇರಿಸಿದೆ.ಕೆಲವರಂತೂ ಬದುಕಿನುದ್ದಕ್ಕೂ ನಿರಂತರ ಹೋರಾಟಗಳನ್ನು ನಡೆಸಿದವರು. ಆ ಪಯಣದಲ್ಲಿ ಅನೇಕ ಎಡರುತೊಡರುಗಳನ್ನು, ಅವಹೇಳನ, ಟೀಕೆಗಳನ್ನು ಎದುರಿಸಿ ಮನಸ್ಸನ್ನು ಕಲ್ಲುಬಂಡೆಯನ್ನಾಗಿಸಿ ನಿರಂತರವಾಗಿ ಮಳೆ ಬಿಸಿಲುಗಳಿಗೆ ಮೈಯೊಡ್ಡಿ ನಿಂತರು, ಅವೆಲ್ಲವುಗಳನ್ನೂ ಮೀರಿ ನಿಂತು ಸಾಧನೆಯೇ ತಪಸ್ಸೆಂದು ಮುನ್ನುಗ್ಗಿ ನಡೆದವರ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅವರಲ್ಲೊಬ್ಬರು ತೋಟಿಮನೆ ಗಣಪತಿ ಹೆಗಡೆ.


ಸಂಘಟಕರ ಕಲಾವಿದ : ಸಾಧಾರಣವಾಗಿ ಯಕ್ಷಗಾನ ಕಲಾವಿದರು ಎದುರಿಸುವ ಮುಖ್ಯ ಆರೋಪವೊಂದಿದೆ. ಸಮಯಕ್ಕೆ ಕೈಕೊಡುವುದು ಹಲವರ ಅಭ್ಯಾಸವಾಗಿ ಬಿಟ್ಟಿದೆ ಎಂಬ ಮಾತು ಕಲಾವಲಯದಲ್ಲಿ ಪ್ರಚಲಿತವಿರುವ ಮಾತು. ಹಾಗೆಂದ ಮಾತ್ರಕ್ಕೆ ಎಲ್ಲರೂ ಆ ರೀತಿ ಎಂದು ತಿಳಿದುಕೊಳ್ಳಬಾರದು. ಆದರೆ ತೋಟಿಮನೆ ಗಣಪತಿ ಹೆಗಡೆಯವರದ್ದು ವಿಭಿನ್ನ ವ್ಯಕ್ತಿತ್ವ. ಕೊನೆಯ ಘಳಿಗೆಯಲ್ಲಿ ಯಾವುದೇ ಪ್ರದರ್ಶನಗಳಿಗೆ ಗೈರು ಹಾಜರಾದವರಲ್ಲ. ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದವರಲ್ಲ. ಸಂಘಟಕರಿಗೂ ನೋವು ತಂದವರಲ್ಲ. ಯಾವುದೇ ಪಾತ್ರವಿರಲಿ ಅದನ್ನು ಸಮರ್ಥವಾಗಿ ನಿಭಾಯಿಸಿ ಪಾತ್ರಕ್ಕೆ ನ್ಯಾಯ ಒದಗಿಸುವ ಸಂಭಾವಿತ.


ಹೋರಾಟದ ಬಾಲ್ಯ : ತೋಟಿಮನೆ ಗಣಪತಿ ಹೆಗಡೆಯವರ ಬಾಲ್ಯವು ಹಸನಾದ ಬದುಕಾಗಿರಲಿಲ್ಲ. ಕಡು ಬಡತನದ ಕಹಿಯನ್ನುಂಡ ಅವರು ಅದಕ್ಕಾಗಿ ವ್ಯಥೆಪಡಲಿಲ್ಲ. ಎಲ್ಲವೂ ವಿಧಿಲಿಖಿತ ನಿಯಮವೆಂದುಕೊಂಡು ಅದನ್ನು ಅನುಭವಿಸಿ ಸಾಧಿಸಿ ತೋರಿಸಿದವರು.
ತೋಟಿಮನೆಯವರ ತಂದೆ ದಿ| ಗೋವಿಂದ ಹೆಗಡೆ ಮತ್ತು ತಾಯಿ ದಿ| ಮಹಾದೇವಿಯವರ ಆಸ್ತಿ, ಶ್ರೀಮಂತಿಕೆಗಳು ಕೈಬಿಟ್ಟು ಹೋಗಿದ್ದರೂ ಮನೆತನದ ಸಂಸ್ಕಾರ, ಹೃದಯವಂತಿಕೆಗಳು ಹಾಗೆಯೇ ಉಳಿದುಕೊಂಡಿದ್ದುವು. ಧನವಿಲ್ಲದೊಡೇನು? ಅತಿಥಿ ಸತ್ಕಾರದ ಮನವಿದ್ದೊಡೆ… ಎಂಬಂತೆ ಮನೆಗೆ ಬಂದವರಿಗೆ ಹೊಟ್ಟೆ ತುಂಬಾ ಬಡಿಸುವ ಔದಾರ್ಯವಿತ್ತು. ಇಂತಹಾ ಸುಮನಸರಾದ ಗೋವಿಂದ ಹೆಗಡೆ, ಮಹಾದೇವಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ತೋಟಿಮನೆ ಗಣಪತಿ ಎರಡನೆಯವರು. 14-07-1964ರಲ್ಲಿ ಹೊನ್ನಾವರ ತಾಲೂಕಿನ ನಗರೆ ಗ್ರಾಮದ ತೋಟಿಮನೆಯಲ್ಲಿ ಜನಿಸಿದ ಗಣಪತಿ ಹೆಗಡೆಯ ಅಣ್ಣ ಸತ್ಯನಾರಾಯಣ ಹೆಗಡೆ (ಹವ್ಯಾಸಿ ಕಲಾವಿದರು) ಮತ್ತು ಇಬ್ಬರು ತಂಗಿಯಂದಿರು.

(ಫೋಟೋ ಕೃಪೆ: ಷಣ್ಮುಖ ಕವಲಕ್ಕಿ)

ಅಣ್ಣ ಸತ್ಯನಾರಾಯಣ ಹೆಗಡೆಯವರು ವಿದ್ಯಾಭ್ಯಾಸದಲ್ಲಿ ಮುಂದಿದ್ದು ಪದವಿ ಶಿಕ್ಷಣವನ್ನು ಪೂರೈಸಿದ್ದರೂ ಗಣಪತಿ ಹೆಗಡೆಯವರಿಗೆ ಮಾತ್ರ ಓದು ಅಷ್ಟಾಗಿ ತಲೆಗೆ ಹತ್ತಲಿಲ್ಲ. ಶಾಲೆಯಲ್ಲಿ ಪುಂಡಾಟದ ಹುಡುಗನಾಗಿದ್ದ ಹಾಗೂ ನೋಡಲು ತಕ್ಕಮಟ್ಟಿಗೆ ಗಟ್ಟಿಮುಟ್ಟಾಗಿದ್ದ ತೋಟಿಮನೆಯ ಹುಡುಗನಿಗೆ ಓದಿನಲ್ಲಿ ಆಸಕ್ತಿಯಿರಲಿಲ್ಲ. ಅನ್ಯಾಯ, ತಪ್ಪುಗಳನ್ನು ವಿರೋಧಿಸುವ ಗುಣಗಳನ್ನು ಚಿಕ್ಕಂದಿನಲ್ಲಿಯೇ ಮೈಗೂಡಿಸಿದ್ದ ಗಣಪತಿ ಹೆಗಡೆ ಹಲವಾರು ಕೀಟಲೆ ಹುಡುಗರಿಗೆ ಪೆಟ್ಟಿನ ರುಚಿ ತೋರಿಸಿದ್ದರು. ಇದರಿಂದ ತನ್ನ ಶಾಲಾವಧಿಯುದ್ದಕ್ಕೂ ಪುಂಡಾಟದ ಹುಡುಗನೆಂದು ಗುರುತಿಸಲ್ಪಟ್ಟಿದ್ದರು. ಸಿನಿಮಾ ನಟ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದ ಅವರು ವಿಷ್ಣು ಅಭಿನಯದ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಿದ್ದರಂತೆ. ಅಂತೂ ಬಡತನದ ನಡುವೆಯೂ ತೋಟಿಮನೆ ಗಣಪತಿ ಹೆಗಡೆ ಯವರು ಕವಲಕ್ಕಿಯ ಸಂಯುಕ್ತ ಪದವಿಪೂರ್ವ ವಿದ್ಯಾಲಯದಲ್ಲಿ ಹತ್ತನೆ ತರಗತಿಯವರೆಗೆ ಓದಿದ್ದರು.


ಬಾಲ್ಯದಲ್ಲಿಯೇ ಮನೆಗೆಲಸವನ್ನೂ ಮಾಡಿ ಅನುಭವವಿದ್ದ ಇವರು ಅಡಿಕೆ ಮರದ ತುತ್ತತುದಿಯನ್ನೇರಿ ‘ಚೆಂಡೆ ಎಲೆ’ಯನ್ನು ಕೊೈದು ಅದರಿಂದ ಸಿಕ್ಕ ಅಲ್ಪ ಸ್ವಲ್ಪ ಹಣದಿಂದ ತನ್ನ ಶಾಲೆಯ ಫೀಸನ್ನು ಭರಿಸುತ್ತಿದ್ದರು.
ಹೀಗೆ ಶ್ರಮಜೀವಿಯಾಗಿದ್ದ ಹುಡುಗ ಶಾಲೆಯ ವಿದ್ಯಾಭ್ಯಾಸವನ್ನು ಬಿಟ್ಟ ನಂತರವೂ ಮನೆಕೆಲಸ, ಕೃಷಿ ಕೆಲಸ, ಹಟ್ಟಿ, ತೋಟಗಳ ಗೊಬ್ಬರದ ಕೆಲಸಗಳೇ ಮೊದಲಾದ ಶ್ರಮದ ದುಡಿಮೆಯನ್ನು ಮೈಗೂಡಿಸಿಕೊಂಡ ತೋಟಿಮನೆಯವರಿಗೆ ಚಿಕ್ಕಂದಿನಲ್ಲಿಯೇ ಯಕ್ಷಗಾನದತ್ತ ಅತೀವ ಆಸಕ್ತಿಯಿತ್ತು.
ಚಿಕ್ಕಂದಿನಲ್ಲಿಯೇ ಮನೆಯಿಂದ ನಾಲ್ಕು ಕಿಲೋಮೀಟರ್ ದೂರವಿರುವ ಗುಂಡಬಾಳಕ್ಕೆ ನಡೆದುಕೊಂಡೇ ಹೋಗಿ ಯಕ್ಷಗಾನ ನೋಡಿ ಬರುತ್ತಿದ್ದರು. ಹೀಗೆ ಯಕ್ಷಗಾನ ಪ್ರದರ್ಶನಗಳನ್ನು ನೋಡಿ ತಾವೂ ಕಲಾವಿದರಾಗಬೇಕೆಂಬ ಆಕಾಂಕ್ಷೆ ಚಿಗುರೊಡೆದಿತ್ತು.

ಮನೆಯವರ ಹಿನ್ನೆಲೆ ಯಕ್ಷಗಾನದ ಪರಂಪರೆಯದ್ದೇ ಆದರೂ ತೋಟಿಮನೆಯ ಹುಡುಗ ಗಣಪತಿ ಯಕ್ಷಗಾನದತ್ತ ಆಕರ್ಷಿತರಾಗುವುದು ಮನೆಯವರಿಗೆ ಇಷ್ಟವಿರಲಿಲ್ಲ. ತೋಟಿಮನೆಯವರ ತಂದೆ ಗೋವಿಂದ ಹೆಗಡೆ ಮತ್ತು ದೊಡ್ಡಪ್ಪ ಸುಬ್ರಾಯ ಹೆಗಡೆ ಹವ್ಯಾಸೀ ಕಲಾವಿದರಾಗಿದ್ದರು. ತಾಯಿಯ ತಂದೆ ಅಂದರೆ ಅಜ್ಜ ಗಣಪತಿ ಹೆಗಡೆ ಗೋಪಿಯವರು ಆ ಕಾಲದಲ್ಲಿ ಭಾಗವತಿಕೆಯಲ್ಲಿ ಹೆಸರು ಮಾಡಿದ್ದರು. ಹೀಗೆ ಕಲಾವಿದರ ಕುಟುಂಬದಲ್ಲಿ ಬೆಳೆದ ತೋಟಿಮನೆ ಗಣಪತಿಗೆ ಸಹಜವಾಗಿಯೇ ಯಕ್ಷಗಾನದ ನಂಟು, ಆಸಕ್ತಿ ಬೆಳೆಯಿತು. ಆದಕಾರಣ ಮನೆಯವರ ವಿರೋಧದ ನಡುವೆಯೂ ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ತೋಟಿಮನೆಯವರ ತುಡಿತ ಯಕ್ಷಗಾನ ಕಲಿಯುವಂತೆ ಪ್ರೇರೇಪಿಸಿತು.

ಆ ಕಾಲದ ಸುಪ್ರಸಿದ್ಧ ಭಾಗವತರಾಗಿದ್ದ ಕಪ್ಪೆಕೆರೆ ಸುಬ್ರಾಯ ಹೆಗಡೆಯವರು ಕವಲಕ್ಕಿಯಲ್ಲಿ ಯಕ್ಷಗಾನ ತರಗತಿಯನ್ನು ನಡೆಸುತ್ತಿದ್ದರು. ಕಪ್ಪೆಕೆರೆಯವರು ತೋಟಿಮನೆಯವರ ಸಮೀಪದ ಬಂಧುವಾಗಿದ್ದರು. ಭಾಗವತರು ಇತರ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದುದನ್ನು ಆಸೆ ಹಾಗೂ ಆಸಕ್ತಿಯಿಂದ ಗಮನಿಸುತ್ತಿದ್ದ ತೋಟಿಮನೆ ಗಣಪತಿ ಹೆಗಡೆಯವರ ಕಣ್ಣುಗಳಿಗೆ ಏನೋ ಒಂದು ಆಶಾಕಿರಣದ ಮಿಂಚು ಗೋಚರಿಸಿತು.
ಹುಡುಗನ ಕಣ್ಣಂಚಿನ ಮಿಂಚನ್ನು ಕಪ್ಪೆಕೆರೆ ಸುಬ್ರಾಯ ಹೆಗಡೆಯವರು ಗುರುತಿಸಿದರು. ಇವರ ಆಸಕ್ತಿಯನ್ನು ಕಂಡ ಅವರು ಶಿಷ್ಯನಾಗಿ ಸ್ವೀಕರಿಸಿದರು. ಒಂದೆರಡು ತಿಂಗಳುಗಳಲ್ಲಿ ತರಗತಿ ನಿಂತುಹೋದರೂ ಸುಬ್ರಾಯ ಹೆಗಡೆಯವರು ತೋಟಿಮನೆಯವರನ್ನು ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಕಲಿಸತೊಡಗಿದರು.

ನೀಲ್ಕೋಡು ಶಂಕರ ಹೆಗಡೆ ಮತ್ತು ತೋಟಿಮನೆ ಗಣಪತಿ ಹೆಗಡೆ ಪ್ರಣಯ ದೃಶ್ಯವೊಂದರಲ್ಲಿ

ಪ್ರಾರಂಭದಲ್ಲಿ ನಾಟ್ಯಗಾರಿಕೆಯ ಲಯ, ಹಿಡಿತವನ್ನು ಕಂಡುಕೊಳ್ಳಲು ಪ್ರಯತ್ನಪಟ್ಟ ತೋಟಿಮನೆಯ ಗಣಪತಿಯ ಕುಣಿತದ ಅಭ್ಯಾಸ ಆರಂಭವಾಯಿತು. ಆದರೆ ಇವರ ಕುಣಿತವನ್ನು ಅಭ್ಯಾಸ ವೀಕ್ಷಿಸಲು ಬರುತ್ತಿದ್ದ ಅಕ್ಕಪಕ್ಕದವರು ತಮಾಷೆ ಮಾಡುತ್ತಿದ್ದರು. ಇದರಿಂದ ಅವಮಾನಗೊಂಡ ಇವರು ನಾಟ್ಯ ಮಾಡುವುದನ್ನೇ ಬಿಟ್ಟರೂ ಆಗಲೇ ಒಂದು ವರ್ಷದ ಕಲಿಕೆಯನ್ನು ಪೂರೈಸಿದ್ದರು!
ಆಮೇಲೆ ಚಿಟ್ಟಾಣಿ ನರಸಿಂಹ ಹೆಗಡೆಯವರ ಸಹಾಯದಿಂದ ಗುಂಡಬಾಳ ಮೇಳಕ್ಕೆ ಸೇರಿದರು. ಆಗ ಮೇಳಕ್ಕೆ ಸೇರಲು ಗೆಜ್ಜೆ ಮತ್ತು ವೇಷದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕಾಗಿತ್ತು. ಅಜ್ಜನ ಗೆಜ್ಜೆಗಳು ಹಾಗೂ ಹಳೆಯ ಕಲಾವಿದರ ಹಾಗೂ ಕಪ್ಪೆಕೇರಿ ಮಹಾದೇವ ಹೆಗಡೆಯವರ ಹಳೆಯ ವೇಷಭೂಷಣಗಳನ್ನು ಒಟ್ಟುಗೂಡಿಸಿಕೊಂಡು ಗುಂಡಬಾಳ ಮೇಳಕ್ಕೆ ಸೇರಿದರು.


ಆಗ ಕಪ್ಪೆಕೇರಿ ಸುಬ್ರಾಯ ಭಾಗವತರಿದ್ದ ಪಂಚಲಿಂಗೇಶ್ವರ ಮೇಳಕ್ಕೆ ಕರೆಬಂದು ಅಲ್ಲಿಗೆ ಸೇರಿದರು. ಪಂಚಲಿಂಗೇಶ್ವರ ಮೇಳದಲ್ಲಿ ಚಿಕ್ಕಪುಟ್ಟ ಪಾತ್ರಗಳು ಯಾವುದೇ ಇದ್ದರೂ ಎಲ್ಲವನ್ನೂ ನಿರ್ವಹಿಸಿದರು. ಉಳಿದ ಸಮಯದಲ್ಲಿ ಪ್ರಸಿದ್ಧ ಕಲಾವಿದರ ವೇಷಗಳನ್ನು ನೋಡಿ ಕಲಿಯುತ್ತಿದ್ದರೇ ವಿನಃ ವಿಶ್ರಾಂತಿ ಪಡೆಯುತ್ತಿರಲಿಲ್ಲ.
ಆದರೂ ‘ನಾಟ್ಯಗಾರಿಕೆ ಚೆನ್ನಾಗಿಲ್ಲ’ ಎಂಬ ಹಿರಿಯ ಕಲಾವಿದರ ಮಾತಿಗೆ ಕಟ್ಟುಬಿದ್ದು ಪಂಚಲಿಂಗೇಶ್ವರ ಮೇಳದ ಆಡಳಿತ ವರ್ಗ ಮುಂದಿನ ವರ್ಷಕ್ಕೆ ತೋಟಿಮನೆಯವರನ್ನು ಉಳಿಸಿಕೊಳ್ಳಲಿಲ್ಲ.


ಆ ಕಾಲದಲ್ಲಿ ‘short temper’ ಎಂದು ಗುರುತಿಸಿಕೊಂಡಿದ್ದ ತೋಟಿಮನೆಯವರು ಇದರಿಂದ ಖಿನ್ನರಾದರು. ಛಲದಿಂದ ಮತ್ತೆ ಗುಂಡಬಾಳ ಮೇಳಕ್ಕೆ ಸೇರಿದರು. ಆ ವರ್ಷ ಕಪ್ಪೆಕೇರಿ ಸುಬ್ರಾಯ ಭಾಗವತರೂ ಗುಂಡಬಾಳ ಮೇಳಕ್ಕೆ ಸೇರಿದುದು ತೋಟಿಮನೆಯವರ ಪುಣ್ಯವೆಂದೇ ಹೇಳಬೇಕು. ರಾತ್ರಿ ಕುಣಿತ, ದುಡಿತ ಹಗಲು ಕಪ್ಪೆಕೇರಿ ಭಾಗವತರಿಂದ ಕಲಿಕೆ. ಹೀಗೆ ಪಳಗಿದ ತೋಟಿಮನೆಯವರು ನಾಟ್ಯದಲ್ಲಿ ಪ್ರಾವೀಣ್ಯತೆಯನ್ನು ಗಳಿಸಿಕೊಂಡರು.
ಕಪ್ಪೆಕೇರಿ ಭಾಗವತರು ನೀಡುತ್ತಿದ್ದ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸಿ ತೋಟಿಮನೆ ಗಣಪತಿ ಹೆಗಡೆಯವರು ಯಾವುದೇ ಪಾತ್ರಗಳನ್ನೂ ಲೀಲಾಜಾಲವಾಗಿ ನಿರ್ವಹಿಸುವಷ್ಟು ಪ್ರಬುದ್ಧತೆಯನ್ನು ಹೊಂದಿದರು. ಆ ಕಾಲದಲ್ಲಿ ಅವರ ಕೃಷ್ಣ, ಸುಧನ್ವ, ಸಾಲ್ವನೇ ಮೊದಲಾದ ನಾಯಕ, ಪ್ರತಿನಾಯಕ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ ಕಲೆಯನ್ನು ಸಿದ್ಧಿಸಿದರು. ‘‘ಯಾವುದೇ ಪಾತ್ರವನ್ನು ಒಂದಿನಿತೂ ಕೊರತೆ ಯಾಗದಂತೆ ನಿರ್ವಹಿಸಲು ಹಾಗೂ ಆ ಸಾಮರ್ಥ್ಯವನ್ನು ನನ್ನಲ್ಲಿ ತುಂಬಿದವರು ಕಪ್ಪೆಕೇರಿ ಸುಬ್ರಾಯ ಭಾಗವತರು’’ ಎಂದು ತೋಟಿಮನೆ ಗಣಪತಿ ಹೆಗಡೆಯವರು ಕಪ್ಪೆಕೇರಿ ಸುಬ್ರಾಯ ಭಾಗವತರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ತೋಟಿಮನೆಯವರನ್ನು ಈ ಕಾಲದಲ್ಲಿ ಅವರ ನಾಯಕ ಪಾತ್ರದ ನಿರ್ವಹಣೆಗಾಗಿ ‘‘ಯಕ್ಷರಂಗದ ರಾಜಕುಮಾರ’’ ಎಂದೂ ಹಾಗೂ ನಾಯಕ, ಪ್ರತಿನಾಯಕ ಸೇರಿದಂತೆ ಎಲ್ಲಾ ಪಾತ್ರದ ನಿರ್ವಹಣೆಗಾಗಿ ‘‘ಯಕ್ಷರಂಗದ ಸವ್ಯಸಾಚಿ’’ ಎಂದು ಕಲಾಭಿಮಾನಿಗಳು ಕರೆಯುತ್ತಿದ್ದಾರೆ. ತೋಟಿಮನೆಯವರ ವೇಷಗಳನ್ನು ಹತ್ತಿರದಿಂದ ಗಮನಿಸುವವರಿಗೆ ಈ ಮಾತುಗಳಲ್ಲಿ ಉತ್ಪ್ರೇಕ್ಷೆಯಿಲ್ಲ ಎಂದು ಖಂಡಿತವಾಗಿಯೂ ಅನಿಸುತ್ತದೆ.
ಹೀಗೆ ಬಾಲ್ಯದಿಂದ ತೊಡಗಿ ಒಂದು ಹೋರಾಟದ ಜೀವನವನ್ನೇ ರೂಢಿಯಾಗಿ ಹೋಗಿದ್ದ ತೋಟಿಮನೆಯವರು ಬಹುಬೇಗನೆ ತನ್ನ ಸಾಮರ್ಥ್ಯದಿಂದ ಯಕ್ಷರಂಗದಲ್ಲಿ ತನ್ನ ಛಾಪನ್ನು ಮೂಡಿಸುವತ್ತ ದಾಪುಗಾಲು ಹಾಕ ತೊಡಗಿದರು.

ಆತ್ಮೀಯ ಕೊಂಡದಕುಳಿ ರಾಮಚಂದ್ರ ಹೆಗಡೆಯವರೊಂದಿಗೆ

ಹಲವು ಮೇಳಗಳಲ್ಲಿ ಅನುಭವ : ತೋಟಿಮನೆ ಯವರು ಒಂದೇ ಮೇಳವನ್ನು ನೆಚ್ಚಿಕೊಳ್ಳದೆ ಹಲವು ಮೇಳಗಳಲ್ಲಿ ಪಾತ್ರ ನಿರ್ವಹಿಸಿದವರು. ಇದಕ್ಕೆ ಒಟ್ಟಾರೆ ವ್ಯವಸ್ಥೆಯಲ್ಲಿ ಇದ್ದ ಅನಿಶ್ಚಿತತೆ, ಹಾಗೂ ತೋಟಿಮನೆಯವರು ಎದುರಿಸಿ ಅನುಭವಿಸಿದ ಕಷ್ಟ-ಕಾರ್ಪಣ್ಯಗಳು, ಅವಮಾನಗಳು ಕಾರಣವೇ ಹೊರತು ಬೇರಾವ ಕಾರಣಗಳಲ್ಲ. ಗುಂಡಬಾಳ ಮೇಳದಿಂದ ಆರಂಭಗೊಂಡ ತೋಟಿಮನೆಯವರ ಕಲಾಸೇವೆ ಶ್ರೀ ಪಂಚಲಿಂಗೇಶ್ವರ ಮೇಳ, ನಂತರ ಪುನಃ ಗುಂಡಬಾಳ ಮೇಳ, ಆಮೇಲೆ ಶಿರಸಿಯ ಶ್ರೀ ಮಾರಿಕಾಂಬಾ ಮೇಳ, ಆಮೇಲೆ ಶ್ರೀ ಮಂದಾರ್ತಿ ಮೇಳ, ನಂತರ ಸಾಲಿಗ್ರಾಮ ಮೇಳ ಹಾಗೂ ಪ್ರಸ್ತುತ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಪೂರ್ಣಚಂದ್ರ ಮೇಳದಲ್ಲಿ ಹಾಗೂ ಇತರ ಮೇಳಗಳಲ್ಲಿಯೂ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ.


ನಾಯಕ, ಪ್ರತಿನಾಯಕ ಪಾತ್ರಗಳು : ಈ ಮೊದಲೇ ಹೇಳಿದಂತೆ ತೋಟಿಮನೆ ಗಣಪತಿ ಹೆಗಡೆಯವರು ಎಂದೂ ಬಡಗುತಿಟ್ಟು ಯಕ್ಷಗಾನದ ಪರಂಪರೆಗೆ ಅನುಗುಣವಾಗಿ ಪಾತ್ರನಿರ್ವಹಿಸಿದವರು. ಅನಿವಾರ್ಯವಾಗಿ ಪೌರಾಣಿಕೇತರ ಪ್ರಸಂಗಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಯಶಸ್ವಿಯಾದರೂ ಅವರ ಒಲವು ಇದ್ದದ್ದು ಪೌರಾಣಿಕ ಪ್ರಸಂಗಗಳ ಕಡೆಗೆ. ಟೆಂಟ್ ಮೇಳಗಳಲ್ಲಿ ಹಲವು ಕಾಲ್ಪನಿಕ ಪ್ರಸಂಗಗಳನ್ನು ಕಲೆಕ್ಷನ್ ದೃಷ್ಟಿಯಿಂದ ಆಡಬೇಕಾದ ಅನಿವಾರ್ಯತೆ ಬಂದಾಗ ಆ ರೀತಿಯ ವ್ಯವಸ್ಥೆಯಿಂದ ವಿಮುಖರಾದದ್ದು ಅವರ ಬದ್ಧತೆಗೆ ಸಾಕ್ಷಿ. ಪೌರಾಣಿಕ ಪಾತ್ರಗಳಲ್ಲಿ ಹೆಚ್ಚಾಗಿ ಕೃಷ್ಣ, ವಿಷ್ಣು, ಸುಧನ್ವ ಮೊದಲಾದ ವೇಷಗಳು ಪ್ರಸಿದ್ಧಿಯನ್ನು ಪಡೆದುವು. ಸುಧನ್ವನ ವೇಷವಂತೂ ಅಗ್ರಪಂಕ್ತಿಯಲ್ಲಿ ನಿಲ್ಲುವ ಪಾತ್ರ. ಅಲ್ಲದೆ ರಾಮ, ಲಕ್ಷ್ಮಣ, ಹನುಮಂತ, ವಲಲ, ಭೀಮ, ಹರಿಶ್ಚಂದ್ರ ಪಾತ್ರಗಳಲ್ಲದೆ ರಾವಣ, ಶೃಂಗಾರ ರಾವಣ, ಕೌರವ, ಭಸ್ಮಾಸುರ, ಮಾಗಧ, ಬಲರಾಮ, ಸಾಲ್ವ, ಅಂಬೆ ಮೊದಲಾದ ಪಾತ್ರಗಳಲ್ಲಿ ವೈವಿಧ್ಯಮಯ ಅಭಿನಯ ನೀಡಿದವರು.


ಆಂಜನೇಯನ ವೇಷಧಾರಿಯಾಗಿ ಅತ್ಯುತ್ತಮ ಮುಖವರ್ಣಿಕೆಯಲ್ಲೂ ಶೋಭಿಸಿದವರು. ತೋಟಿಮನೆಯವರು ರೂಪಿಸಿದ ಪರಂಪರೆಯಲ್ಲಿ ಒಂದು ನವೀನ ಶೈಲಿಯು ಇಂದು ಬಹಳ ಜನಪ್ರಿಯತೆಯನ್ನು ಪಡೆದಿದೆ. ಒಂದು ಕಾಲದಲ್ಲಿ ತೋಟಿಯವರ ಸುಧನ್ವ ಪಾತ್ರಕ್ಕೆ ಬಹಳ ಬೇಡಿಕೆಯಿತ್ತು. ಇವರ ಕಲ್ಪನೆಯಲ್ಲಿ ಮೂಡಿದ ‘ತೋಟಿಮನೆ’ ಶೈಲಿಯನ್ನು ಇಂದು ಹಲವು ಯುವ ಕಲಾವಿದರು ಅನುಸರಿಸುತ್ತಿರುವುದು ಇವರು ಈ ರಂಗದಲ್ಲಿ ಸಾಧಿಸಿದ ಜನಪ್ರಿಯತೆಗೆ ಸಾಕ್ಷಿ. ಲಂಕಾದಹನದ ಹನುಮಂತ, ಪಟ್ಟಾಭಿಷೇಕದ ರಾಮ, ಚಂದ್ರಾವಳಿ ವಿಲಾಸದ ಕೃಷ್ಣ… ಹೀಗೆ ಎಲ್ಲ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನು, ವಿಶಿಷ್ಟತೆಯನ್ನು ಒಡಮೂಡಿಸಿದ್ದಾರೆ.


ಹಲವರು ಹಿರಿಯ ಕಲಾವಿದರ ಜೊತೆ ರಂಗದಲ್ಲಿ ನಿರ್ವಹಿಸಿದವರು ತೋಟಿಮನೆಯವರು. ರಾಮದಾಸ ಸಾಮಗ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಕೊಂಡದಕುಳಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ- ಹೀಗೆ ಇನ್ನೂ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಜೀವನವೆಂಬುದು ಹೂವಿನ ಹಾಸಿಗೆಯಲ್ಲ. ಮುಳ್ಳುಗಳು ತುಂಬಿದ ಕಡಿದಾದ ದಾರಿಯೂ ಆಗಿರಬಹುದು. ಕಲಾವಿದರ ಪಾಲಿಗಂತೂ ಈ ಮಾತು ಅಕ್ಷರಶಃ ಸತ್ಯ ಎಂಬ ಮಾತಿದೆ. ಅದರಲ್ಲೂ ತನ್ನ ಬಾಳ ಪಯಣದ ಪ್ರಾರಂಭದ ಹಂತದಲ್ಲಿ ಬಹಳಷ್ಟು ಎಡರು-ತೊಡರುಗಳನ್ನು ಎದುರಿಸಿದ ತೋಟಿಮನೆ ಗಣಪತಿ ಹೆಗಡೆ ಎಂಬ ಸಂಭಾವಿತ ಕಲಾವಿದ ತನ್ನ ಜೀವನದಲ್ಲಿ ಆಸರೆಯಾದ, ಪ್ರೇರಕರಾದ ಹಲವು ಮುಖಗಳನ್ನು ಮರೆಯುವುದಿಲ್ಲ. ತನ್ನನ್ನು ಕಲಾವಿದನಾಗಿ ರೂಪುಗೊಳಿಸುವಲ್ಲಿ ಅವಿರತ ಶ್ರಮಿಸಿದ ಕಪ್ಪೆಕೇರಿ ಸುಬ್ರಾಯ ಹೆಗಡೆ, ಗುಂಡಬಾಳ ಮೇಳಕ್ಕೆ ಸೇರಲು ಕಾರಣಕರ್ತರಾದ ನರಸಿಂಹ ಚಿಟ್ಟಾಣಿ ಹಾಗೂ ಆತ್ಮೀಯ ಅಣ್ಣನಂತಿರುವ ಕೊಂಡದಕುಳಿ ರಾಮಚಂದ್ರ ಹೆಗಡೆ- ಹೀಗೆ ತನ್ನ ಕಲಾಯಾನದಲ್ಲಿ ತನ್ನ ಉನ್ನತಿಯನ್ನು ಬಯಸಿದ ಎಲ್ಲರಿಗೂ ಕೃತಜ್ಞರಾಗಿದ್ದಾರೆ.

ಜಾಹೀರಾತು  


ತಾನಿನ್ನೂ ಈ ರಂಗದಲ್ಲಿ ಸಾಧಿಸುವುದಕ್ಕೆ ಬಹಳವಿದೆ ಎಂಬ ವಿನೀತಭಾವ ತೋಟಿಯವರನ್ನು ಪಕ್ವವಾಗಿಸಿದೆ. ಈಗಲೂ ತನಗೆ ಯಾವುದೇ ಪಾತ್ರ ಸಿಕ್ಕಿದರೂ ಅದಕ್ಕೆ ನ್ಯಾಯ ಸಲ್ಲಿಸುವ ಕೆಲವೇ ಕಲಾವಿದರಲ್ಲಿ ಇವರೂ ಒಬ್ಬರು. ಅದಕ್ಕೆ ಅವರು ಈಗಲೂ ಕಲಾವಿದ ದಿಗ್ಗಜರ ನಡುವೆ ಪೋಷಕ ಪಾತ್ರ ನೀಡಿದರೂ ಒಪ್ಪಿಕೊಳ್ಳಲು ಹಿಂದೇಟು ಹಾಕದಿರುವುದೇ ಸಾಕ್ಷಿ.
ತೋಟಿಮನೆ ಗಣಪತಿ ಹೆಗಡೆಯವರು ದೇಶಾದ್ಯಂತ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಹೊರನಾಡಿನ ಕನ್ನಡ ಸಂಘ ಹಾಗೂ ಯಕ್ಷಗಾನ ಕಲಾಸಂಘಗಳ ಆಹ್ವಾನದ ಮೇರೆಗೆ ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಹೈದರಾಬಾದ್, ಉಜ್ಜೈನಿ, ದೆಹಲಿ, ಮುಂಬೈ ಮೊದಲಾದ ನಗರಗಳಲ್ಲಿ ಪ್ರದರ್ಶನಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ.


ಕೆಲವಾರು ವಿದೇಶ ಪ್ರವಾಸಗಳಲ್ಲೂ ಯಶಸ್ವಿಯಾಗಿ ಪಾತ್ರನಿರ್ವಹಿಸಿ ಅವರು ವಿದೇಶದಲ್ಲಿ ಉದ್ಯೋಗದಲ್ಲಿರುವ ಯಕ್ಷಗಾನ ಅಭಿಮಾನಿಗಳ ಮನಸ್ಸನ್ನು ಸಂತೋಷ ಗೊಳಿಸಿದ್ದಾರೆ. ದುಬೈ, ಅಬುಧಾಬಿ, ಸಿಂಗಾಪುರ ಪ್ರವಾಸಗಳಲ್ಲಿ ಭಾಗವಹಿಸಿದ ತೋಟಿಯವರು ಕೆನಡಾ ಪ್ರವಾಸ ಕೂಡಾ ಮಾಡಿದ್ದಾರೆ. 
ರೂಪದಲ್ಲೂ ಚೆಲುವಾಂಗ ಸುಂದರ ನಾಗಿರುವ ತೋಟಿಯವರಿಗೆ ಸಹಜವಾಗಿಯೇ ಅಭಿಮಾನಿಗಳು ಹಲವಾರು ಬಿರುದುಗಳನ್ನಿತ್ತು ಸನ್ಮಾನಿಸಿದ್ದಾರೆ. ಸವ್ಯಸಾಚಿ, ಯಕ್ಷಸುಂದರ, ರಂಗಸ್ಥಳದ ಯುವರಾಜ, ನಟನಾಚೆಲುವ, ನಟಪದ್ಮನೇಸರ- ಹೀಗೆ ಕೆಲವು ಬಿರುದುಗಳನ್ನು ಪಡೆದಿದ್ದಾರೆ.


ಪಡೆದ ಸನ್ಮಾನ ಪ್ರಶಸ್ತಿಗಳು ಹಲವಾರು. 2002ರಲ್ಲಿ ಬೆಂಗಳೂರಿನ ಕುವೆಂಪು ಕಲಾಕ್ಷೇತ್ರ ದಲ್ಲಿ ಸನ್ಮಾನ, 2002ರಲ್ಲಿ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸನ್ಮಾನ ಹಾಗೂ ಅದೇ ವರ್ಷ ಶಿವಮೊಗ್ಗದಲ್ಲಿ ಸನ್ಮಾನ, 2003ರಲ್ಲಿ ಶಿವಮೊಗ್ಗ ಕುವೆಂಪು ಕಲಾಕ್ಷೇತ್ರದಲ್ಲಿ ಕಲ್ಯಾಣೋತ್ಸವ ಪ್ರಯುಕ್ತ ಸನ್ಮಾನ. ಅದೇ ವರ್ಷ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಮತ್ತು ಪ್ರತಿಷ್ಠಾನ ವತಿಯಿಂದ ‘ಕೊಂಡದಕುಳಿ ರಾಮ ಹೆಗಡೆ’ ಪ್ರಶಸ್ತಿ 2003ರಲ್ಲಿ ಹೊನ್ನಾವರ ತಾಲೂಕು ಕನ್ನಡ ಪರಿಷತ್ತಿನವರಿಂದ ಸನ್ಮಾನ, 2004ರಲ್ಲಿ ಶ್ರೀ ರಾಮಚಂದ್ರಾಪುರ ಮಠ ಇವರಿಂದ ಸನ್ಮಾನ, 2008ರಲ್ಲಿ ತೋಟಿಮನೆ ಅಭಿಮಾನಿ ಬಳಗ, ಬೆಂಗಳೂರು ಇವರಿಂದ ಸನ್ಮಾನ. 2014ರಲ್ಲಿ ಆರ್. ಜಿ. ಭಟ್ಟ ಮಿತ್ರರಿಂದ ಹುಬ್ಬಳ್ಳಿಯಲ್ಲಿ ಸನ್ಮಾನ, ಅದೇ ವರ್ಷ ಶಿರಸಿಯಲ್ಲಿ ಯಕ್ಷಕಲ್ಯಾಣ ನಿಧಿ ಅವರಿಂದ ಸನ್ಮಾನ, 2016ರಲ್ಲಿ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವ ಮುನ್ವಾ ಇವರ ಸೇವಾ ಸಮಿತಿಯಿಂದ ಸನ್ಮಾನ- ಹೀಗೆ ಹಲವಾರು ಸನ್ಮಾನ, ಪ್ರಶಸ್ತಿ, ಬಿರುದುಗಳನ್ನು ತೋಟಿಮನೆ ಗಣಪತಿ ಹೆಗಡೆಯವರು ಪಡೆದಿದ್ದಾರೆ.
ತೋಟಿಮನೆಯವರು ತಮ್ಮ ಯಕ್ಷಜೀವನ ಕಲಾಯಾನದ 25 ವಸಂತಗಳನ್ನು ಪೂರೈಸಿದ ಸಂದರ್ಭದಲ್ಲಿ ತೋಟಿಮನೆ ಎಂಬ ಊರಿನ ಜನರು ಹಾಗೂ ಅವರ ಅಸಂಖ್ಯ ಅಭಿಮಾನಿಗಳು ಸೇರಿ 2017ರಲ್ಲಿ ‘ತೋಟಿ ರಜತರಂಗ’ ಎಂಬ ವಿಶಿಷ್ಟ ಹಾಗೂ ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ತೋಟಿಮನೆ ಅಂದು-ಇಂದು : ಹೌದು. ತೋಟಿಮನೆ ಗಣಪತಿ ಹೆಗಡೆ ಬದಲಾಗಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಆದರೆ ಬದಲಾಗಿದ್ದಾರೆ ಎನ್ನುವ ಬದಲು ಬಲಿತು ಪರಿಪಕ್ವವಾಗಿದ್ದಾರೆ ಎಂಬ ಮಾತು ಸಮಂಜಸವಾಗಬಹುದು. ಕಬ್ಬಿಣವೊಂದು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಕೆಂಪಾಗಿ ಹಲವಾರು ಪೆಟ್ಟುಗಳನ್ನು ತಿಂದು ಹೇಗೆ ಸುಂದರವಾದ ಉಪಯೋಗೀ ಸಾಧನವಾಗಬಹುದೋ ಹಾಗೆಯೇ ತೋಟಿಯವರು ಬದಲಾಗಿದ್ದಾರೆ. ಎಳವೆಯಲ್ಲಿ ಸಹಿಸಿದ ಕಷ್ಟ, ಬಡತನ, ಅವಮಾನಗಳು ಅವರನ್ನು ತ್ಯಾಗಮಯಿ ಮತ್ತು ವಿನೀತರನ್ನಾಗಿಸಿದೆ. ತನ್ನ ಕುಟುಂಬದ ಬಗ್ಗೆ ಅತೀವ ಕಾಳಜಿಯಿರುವ ತೋಟಿ ಒಬ್ಬ ತ್ಯಾಗಮಯಿ ಜೀವಿ ಎಂದರೆ ತಪ್ಪಾಗಲಾರದು. ಅವಿವಾಹಿತನಾಗಿರುವ ತೋಟಿಯವರು ಕುಟುಂಬದ ಕಷ್ಟದ ದಿನಗಳಲ್ಲಿ ತನ್ನ ತಂದೆ, ತಾಯಿ, ಸಹೋದರಿಯರ ಏಳ್ಗೆಗಾಗಿಯೇ ಸದಾ ಯೋಚಿಸಿದರು.


ಬಾಲ್ಯದ ತೋಟಿಮನೆ ನಿಮಗೆ ಈಗ ಕಾಣಸಿಗಲಾರರು. ಯಶಸ್ಸು, ಜನಪ್ರಿಯತೆ ಅವರನ್ನು ವಿನೀತರನ್ನಾಗಿಸಿದೆ. ಪರಿಪಕ್ವವಾಗಿಸಿದೆ. ಹಿರಿಯರು ಮೂಗಿನ ಮೇಲೆ ಬೆರಳಿಡುವಷ್ಟು ‘‘ಅಂದಿನ ತೋಟಿ ಮಾಣಿ ಇವನೇನಾ…?’’ ಎಂದು ಉದ್ಗಾರ ಜೀವನದ ಮುಸ್ಸಂಜೆಯನ್ನು ಕಾಣುತ್ತಿರುವವರ ಬಾಯಿಯಿಂದ ಬಂದರೆ ಆಶ್ಚರ್ಯವೇನಿಲ್ಲ.

ಲೇಖನ: ಮನಮೋಹನ್ ವಿ.ಎಸ್ 

ಮೇಳಗಳ ಇಂದಿನ (07.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (07.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕ್ರೋಡಬೈಲೂರು ಹೊಸೂರು ಗರಡಿ ಮನೆ ವಠಾರ (ಶಂಕರನಾರಾಯಣ) – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಗೋಪಾಲಕೃಷ್ಣ ಅಸ್ರಣ್ಣ, ಸಭಾಭವನ, ಕಟೀಲು 
ಕಟೀಲು ಎರಡನೇ ಮೇಳ ನೈಯ ಹೌಸ್, ಸಂಪಿಗೆ ಮೂಡಬಿದ್ರೆ 
ಕಟೀಲು ಮೂರನೇ ಮೇಳಚೇತನಹಳ್ಳಿ,ಅತ್ತೂರು, ಕಾರ್ಕಳ 
ಕಟೀಲು ನಾಲ್ಕನೇ ಮೇಳ ಕಿನ್ನಿಗೋಳಿ, ಬಟ್ರಕೋಡಿ 
ಕಟೀಲು ಐದನೇ ಮೇಳ ಅರಸಿನಮಕ್ಕಿ, ಕೊಕ್ಕಡ, ಶಿಶಿಲ 
ಕಟೀಲು ಆರನೇ ಮೇಳಮಾಳಿಗೆಮನೆ, ನೀರ್ಕೆರೆ, ಅಶ್ವತ್ಥಪುರ 
ಮಂದಾರ್ತಿ ಒಂದನೇ ಮೇಳ ಮುಲ್ಲಿಮನೆ ಮೊಳಹಳ್ಳಿ 
ಮಂದಾರ್ತಿ ಎರಡನೇ ಮೇಳ ಗುಳಿಬೆಟ್ಟು, ಪಡುತೋನ್ಸೆ ಕೆಮ್ಮಣ್ಣು 
ಮಂದಾರ್ತಿ ಮೂರನೇ ಮೇಳ ತೋಟದಮನೆ, ಕುದ್ರುಬೆಟ್ಟು ವಡ್ಡರ್ಸೆ 
ಮಂದಾರ್ತಿ ನಾಲ್ಕನೇ ಮೇಳ ಶಿರಿಯಾರ, ಸಾಯ್ಬರಕಟ್ಟೆ 
ಮಂದಾರ್ತಿ ಐದನೇ ಮೇಳ ಕಂಪಕೋಡು, ಅಂಪಾರು 
ಶ್ರೀ ಹನುಮಗಿರಿ ಮೇಳ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಶುಕ್ರನಂದನೆ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಕಂಸವಧೆ 
ಶ್ರೀ ಸುಂಕದಕಟ್ಟೆ ಮೇಳ ಶ್ರೀ ಕ್ಷೇತ್ರದಲ್ಲಿ – ‘ಓಂ’ ಉಂದು ಸತ್ಯ  
ಶ್ರೀ ಮಾರಣಕಟ್ಟೆ ಮೇಳ ‘ಎ’ಮೊವಾಡಿ ತ್ರಾಸಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಉಪ್ರಳ್ಳಿ, 11ನೇ ಉಳ್ಳೂರು 
ಶ್ರೀ ಪಾವಂಜೆ ಮೇಳ ಪೆರ್ಮುದೆ ಬಜಪೆ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಮುದ್ದೂರು   – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’ಬೆದ್ರಾಳಿ ಶಾಲಾ ವಠಾರ 
ಕಮಲಶಿಲೆ ಮೇಳ ‘ಬಿ’ಮೇಲ್ ಸಂಕ, ಆಜ್ರಿ 
ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರದಲ್ಲಿ – ಶ್ರೀ ದೇವಿ ಮಹಾತ್ಮೆ
ಶ್ರೀ ಅಮೃತೇಶ್ವರೀ ಮೇಳಬೊಬ್ಬರ್ಯಕಟ್ಟೆ ಫ್ರೆಂಡ್ಸ್, ಕೋಟ – ಜ್ವಾಲಾಮುಖಿ 
ಶ್ರೀ ಬೋಳಂಬಳ್ಳಿ ಮೇಳ ಹೊಸೂರು – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಶಂಕರಪ್ಪನಕೊಡ್ಲು – ಪುಷ್ಪಚಂದನ
ಶ್ರೀ ಬೆಂಕಿನಾಥೇಶ್ವರ ಮೇಳ  ತುಂಬೆ ರಾಮಲ್ ಕಟ್ಟೆ – ಶ್ರೀಮಂತ ಶ್ರೀ ರಾಜಗುಳಿಗ 
ಶ್ರೀ ಮಡಾಮಕ್ಕಿ ಮೇಳಬಾರ್ಕೂರು ಹನೇಹಳ್ಳಿ ತೆಂಕುಮಕ್ಕಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ ಗೋಳಿಗರಡಿ ಕ್ಷೇತ್ರ ಮಹಾತ್ಮೆ (ಗೋಳಿಗರಡಿ-ಮಡಾಮಕ್ಕಿ ಮೇಳಗಳ ಕೂಡಾಟ) 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬಾರ್ಕೂರು ಹನೇಹಳ್ಳಿ ತೆಂಕುಮಕ್ಕಿ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ ಗೋಳಿಗರಡಿ ಕ್ಷೇತ್ರ ಮಹಾತ್ಮೆ (ಗೋಳಿಗರಡಿ-ಮಡಾಮಕ್ಕಿ ಮೇಳಗಳ ಕೂಡಾಟ) 
ಶ್ರೀ ಹಿರಿಯಡಕ ಮೇಳಕೊಡಿಬೆಟ್ಟು ಶಾಲಾ ವಠಾರ – ದೇವು ಪೂಂಜ ಪ್ರತಾಪ 
ಶ್ರೀ ಸಿಗಂದೂರು ಮೇಳಚಿತ್ತೂರು ಹಾರ್ಮಣ್ಣು ಮಹಾಗಣಪತಿ ದೇವಸ್ಥಾನ ವಠಾರ 
ಶ್ರೀ ನೀಲಾವರ ಮೇಳ ಶ್ರೀ ಕ್ಷೇತ್ರದಲ್ಲಿ – ಪ್ರಥಮ ಸೇವೆ ಆಟ
ಶ್ರೀ ಬಾಚಕೆರೆ ಮೇಳನೆತ್ತರ ಶಾಲಾ ಬಳಿ, ವಯಾ ಮಡಂತ್ಯಾರು – ದೇವು ಪೂಂಜ 

ಛಾಯಾಚಿತ್ರಗಾರಿಕೆಯ ಜತೆ ಕಲಾಸೇವೆ – ಶ್ರೀ ಉದಯ ಕಂಬಾರ್

 ಬೇರೆ ಬೇರೆ ಕ್ಷೇತ್ರಗಳಲ್ಲಿ ವ್ಯವಸಾಯವನ್ನು ಮಾಡುತ್ತಿದ್ದರೂ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿ, ಅದನ್ನು ಹವ್ಯಾಸವಾಗಿ ಸ್ವೀಕರಿಸಿದ ಅನೇಕ ಕಲಾವಿದರನ್ನು ನಾವಿಂದು ಕಾಣಬಹುದು. ಹವ್ಯಾಸೀ ಕಲಾವಿದರು ತಮಗೂ ಈ ಶ್ರೇಷ್ಠ ಕಲೆಯ ಒಂದು ಅಂಗವಾಗುವ ಭಾಗ್ಯ ಒದಗಿತೆಂದು ಸಂತೋಷಪಡುತ್ತಾರೆ. ಕೃಷಿಯನ್ನೇ ವೃತ್ತಿಯಾಗಿ ಸ್ವೀಕರಿಸಿದವರೂ ಯಕ್ಷಗಾನ ಕಲಾವಿದರಾಗಿದ್ದಾರೆ. ವೈದ್ಯರೂ ಇಂಜಿನಿಯರುಗಳೂ, ಸರಕಾರೀ ಉದ್ಯೋಗಿಗಳೂ ಹಿಮ್ಮೇಳ, ಮುಮ್ಮೇಳ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳೂ ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದಾರೆ.

ಈ ನಾಡಿನ ಜನರಿಗೆ ಯಕ್ಷಗಾನವನ್ನು ದೂರವಿರಿಸಿ ಬದುಕಲು ಸಾಧ್ಯವಿಲ್ಲ. ಅಷ್ಟೊಂದು ಕರ್ಷಕ ಶಕ್ತಿಯುಳ್ಳ ಕಲೆ ಇದು. ಇಂದು ವೃತ್ತಿ ಕಲಾವಿದರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹವ್ಯಾಸೀ ಕಲಾವಿದರಿದ್ದಾರೆ. ವೃತ್ತಿ ಕಲಾವಿದರಷ್ಟೇ ಪ್ರಬುದ್ಧರಾದ ಹವ್ಯಾಸೀ ಕಲಾವಿದರೂ ಇದ್ದಾರೆ. ಅಂತಹವರ ಪ್ರದರ್ಶನವನ್ನು ನೋಡುವಾಗ ಇವರು ಮೇಳದಲ್ಲಿ ತಿರುಗಾಟ ಮಾಡಬೇಕಿತ್ತು ಎಂದು ಅನಿಸುವುದು ಸಹಜ. ಬದುಕಿಗೆ ಬೇರೊಂದು ವೃತ್ತಿ ಇದ್ದರೂ ತಾನೂ ಕಲಾಮಾತೆಯ ಸೇವೆಯನ್ನು ಮಾಡಬೇಕೆಂಬ ಸದಭಿಲಾಷೆಯಿಂದಲೇ ಅವರು ತೊಡಗಿಸಿಕೊಳ್ಳುತ್ತಾರೆ.

ಶ್ರೀ ಉದಯ ಕಂಬಾರ್ ಅವರು ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದವರು. ತೆಂಕುತಿಟ್ಟಿನ ಒಳ್ಳೆಯ ಮದ್ದಳೆಗಾರರು. ಅನಿವಾರ್ಯ ಸಂದರ್ಭದಲ್ಲಿ ಆಪದ್ಬಾಂಧವನಾಗಿ ಮೇಳಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ವೃತ್ತಿಯಲ್ಲಿ ಫೋಟೋಗ್ರಾಫರ್. ನೀರ್ಚಾಲು ಮತ್ತು ಬದಿಯಡ್ಕದ ‘ವರ್ಣಾ ಸ್ಟುಡಿಯೋ’ದ ಮಾಲಕರು. ಉದಯ ಕಂಬಾರ್ ಅವರು ಶ್ರೀ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀಮತಿ ಸುಮತಿ ದಂಪತಿಗಳ ಮೂವರು ಪುತ್ರರಲ್ಲಿ ಹಿರಿಯರು. ಕಾಸರಗೋಡಿನ ಪಟ್ಟಾಜೆ ಎಂಬಲ್ಲಿ (ಅಜ್ಜನಮನೆ) 1970 ಮೇ 25ರಂದು ಜನನ.

ಸುಬ್ರಹ್ಮಣ್ಯ ಭಟ್ ಅವರ ಮೂಲ ಮನೆ ಬಂಟ್ವಾಳ ತಾಲೂಕಿನ ಜಲ್ಲಿ ಎಂಬಲ್ಲಿ. ಎಳವೆಯಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಕಾರಣ ಕಂಬಾರಿನ ಅಜ್ಜನ ಮನೆಯಲ್ಲಿ ಸೋದರ ಮಾವಂದಿರ ಆಶ್ರಯದಲ್ಲೇ ಬೆಳೆದವರು. ಹಾಗಾಗಿ ಕಂಬಾರು ಸುಬ್ರಹ್ಮಣ್ಯ ಭಟ್ ಎಂದೇ ಕರೆಸಿಕೊಂಡರು. ಅವರ ಸೋದರ ಮಾವ ಶ್ರೀ ಬಾಲಕೃಷ್ಣ ಭಟ್ಟರು ಅಧ್ಯಾಪಕರು ಮತ್ತು ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರು. ಸೋದರ ಮಾವನಿಗೆ ಪೂಜಾ ಕಾರ್ಯದಲ್ಲಿ ಸಹಾಯಕರಾಗಿ ದುಡಿಯುತ್ತಾ ಸುಬ್ರಹ್ಮಣ್ಯ ಭಟ್ಟರು ಅಲ್ಲೇ ವಾಸವಾಗಿದ್ದರು.

ಉದಯ ಅವರು ಐದನೆಯ ವಯಸ್ಸಿನ ವರೆಗೆ ಕಂಬಾರಿನಲ್ಲೇ ಇದ್ದು ಒಂದನೇ ತರಗತಿಯನ್ನು ಅಂಗಡಿಮೊಗರು ಶಾಲೆಯಲ್ಲಿ ಪೂರೈಸಿದ್ದರು. ನಂತರ ಕಂಬಾರು ಸುಬ್ರಹ್ಮಣ್ಯ ಭಟ್ಟರು ನೀರ್ಚಾಲು ಸಮೀಪದ ಪಟ್ಟಾಜೆಗೆ ವಾಸ್ತವ್ಯವನ್ನು ಬದಲಿಸಿದ್ದರು. ಜೀವನ ನಿರ್ವಹಣೆಗಾಗಿ ಹೋಟೆಲನ್ನು ನಡೆಸುತ್ತಿದ್ದರು. ಕಷ್ಟದ ಜೀವನವಾದರೂ ಮಕ್ಕಳಿಗೆಲ್ಲಾ ವಿದ್ಯೆ ಕೊಡಿಸಿದ್ದರು. ಇವರು ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿ ಕಲಾವಿದರೂ ಆಗಿದ್ದರು. ಧರ್ಮತ್ತಡ್ಕ, ಎಡಕ್ಕಾನ, ಚೇವಾರು ಪರಿಸರದಲ್ಲಿ ನಡೆಯುತ್ತಿದ್ದ ಆಟ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಸಾತ್ವಿಕ ಪಾತ್ರಗಳನ್ನು ಚೆನ್ನಾಗಿ ಮಾಡುತ್ತಿದ್ದರು.

ಮಕ್ಕಳನ್ನೂ ಪ್ರದರ್ಶನಕ್ಕೆ ಕರೆದೊಯ್ಯುತ್ತಿದ್ದರು. ಮಗನಾದ ಉದಯನನ್ನು ಹೆಗಲಲ್ಲಿ ಕುಳ್ಳಿರಿಸಿ ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದರಂತೆ ಸುಬ್ರಹ್ಮಣ್ಯ ಭಟ್ಟರು. ಹಾಗಾಗಿ ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯು ಉದಯ ಅವರಿಗೆ ಮೂಡಿತ್ತು. 2ನೇ ತರಗತಿಯ ವರೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಓದು. ಪಿಯುಸಿ ಯಿಂದ ಸ್ನಾತಕೋತ್ತರ ಪದವಿಯ ವರೆಗೆ ಕಾಸರಗೋಡು ಸರಕಾರೀ ಕಾಲೇಜಿನಲ್ಲಿ ವಿದ್ಯಾರ್ಜನೆ. (ಕನ್ನಡ ಎಂ.ಎ). 2ನೇ ಕ್ಲಾಸಿನಿಂದ ತೊಡಗಿ ನೀರ್ಚಾಲು ಪರಿಸರದಲ್ಲಿ ನಡೆಯುತ್ತಿದ್ದ ಕರ್ನಾಟಕ, ಸುರತ್ಕಲ್, ಧರ್ಮಸ್ಥಳ ಮೇಳಗಳ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದರು.

ಪುಂಡು ವೇಷಧಾರಿಗಳು ಗಿರಕಿ ಹೊಡೆಯುವುದನ್ನು ನೋಡುವುದೆಂದರೆ ಬಲು ಇಷ್ಟವಾಗಿತ್ತು. ಆಟ ನೋಡಿ ಮನೆಗೆ ಬಂದು ಛಾಯಾಪ್ರದರ್ಶನ. ದೀಂಗಿಣ, ಗಿರಾಕಿ ಹೊಡೆಯುವುದು ಮಾಡುತ್ತಿದ್ದರು. ಚೆಂಡೆ ಮದ್ದಳೆ ಬಾರಿಸುವುದನ್ನೂ ಗಮನವಿಟ್ಟು ನೋಡುತ್ತಿದ್ದರು. ಕನ್ನಡ ಸಿನಿಮಾದ ಡಾ. ರಾಜಕುಮಾರ್ ಅವರು ಹಾಡಿದ ‘ಆರಾಧಿಸುವೆ ಮದನಾರಿ, ಆದರಿಸು ನೀ ದಯೆತೋರಿ’ ಹಾಡಿನ ಕೊನೆಗೆ ಬರುವ ಬಾಯಿತಾಳಗಳನ್ನು ಬಾಯಿಪಾಠ ಮಾಡಿ ಪ್ಲಾಸ್ಟಿಕ್ ಕೊಡಪಾನಕ್ಕೆ ಬಾರಿಸುತ್ತಿದ್ದರು. ಯಕ್ಷಗಾನ ಹಾಡುಗಳ ಬಾಯಿತಾಳಗಳನ್ನೂ ಬಾರಿಸುತ್ತಿದ್ದರು. ಆಗಲೇ ಉದಯ ಕಂಬಾರ್ ಅವರೊಳಗೆ ಮದ್ದಳೆಗಾರನೊಬ್ಬ ಅವ್ಯಕ್ತವಾಗಿದ್ದ.

ಅಧ್ಯಾಪಕ, ಕಲಾವಿದರಾದ ಸುಬ್ಬಯ್ಯ ಮಣಿಯಾಣಿ ಅವರ ನೇತೃತ್ವದಲ್ಲಿ ಖ್ಯಾತ ಭಾಗವತರಾದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಆಗ ಮಾನ್ಯದಲ್ಲಿ ಹಿಮ್ಮೇಳ ತರಬೇತಿಯನ್ನು ನೀಡುತ್ತಿದ್ದರು. ಉದಯ ಕಂಬಾರ್ ಅವರು ಶ್ರೇಷ್ಠ ಗುರುಗಳಿಂದಲೇ ಚೆಂಡೆ ಮದ್ದಳೆ ವಾದನವನ್ನು ಅಭ್ಯಸಿಸಿದರು. ತರಬೇತಿ ಮುಗಿಸಿ ಶಾಸ್ತ್ರಿಗಳನ್ನು ಕರೆದುಕೊಂಡು ಪಟ್ಟಾಜೆ ಸಮೀಪದ ಚುಕ್ಕಿನಡ್ಕದ ತಮ್ಮ ಮನೆಗೆ ಬರುತ್ತಿದ್ದರು. ಉದಯ್ ಅವರ ತಮ್ಮ ಶ್ರೀ ಸುರೇಶ ಕಂಬಾರ್ ಅವರು ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ನಾಟ್ಯ ಕಲಿತು ಮನೆಯಲ್ಲಿ ಅಭ್ಯಾಸ ಮಾಡುವಾಗ ಅವರ ಜತೆಯೂ ಕುಣಿದು ನಾಟ್ಯವನ್ನೂ ಕಲಿತುಕೊಂಡಿದ್ದರು.

ಉದಯ ಕಂಬಾರ್ (ಫೋಟೋ: ಮಧುಸೂದನ ಅಲೆವೂರಾಯ)

ಮಾನ್ಯದಲ್ಲಿ ಶ್ರೀ ರಾಘವೇಂದ್ರ ಕಲಾಸಂಘದ ಪ್ರದರ್ಶನದಲ್ಲಿ ಮೊತ್ತ ಮೊದಲು ಮದ್ದಳೆ ಬಾರಿಸುವ ಮೂಲಕ ರಂಗವೇರಿದ್ದರು. ಅಂದು ಅಡೂರು ಸುಬ್ರಾಯ ಅವರು ಚೆಂಡೆ ಬಾರಿಸಿದ್ದರು. ಗುರುಗಳಾದ ಶಾಸ್ತ್ರಿಗಳು ಭಾಗವತರಾಗಿ ಇದ್ದುದು ಅನುಕೂಲವೇ ಆಗಿತ್ತು. ಮತ್ತೆ ಶಾಲಾ ವಿದ್ಯಾರ್ಥಿಯಾಗಿ ನಿರಂತರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಬೆಳೆದರು. ಅಲ್ಲದೆ ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರಿಂದಲೂ ಹಿಮ್ಮೇಳ ಅಭ್ಯಾಸ ಮಾಡಿದರು. ಪಿಯುಸಿ ವಿದ್ಯಾರ್ಥಿಯಾಗಿರುವಾಗ ಪುಂಡೂರು ಶ್ರೀ ಕೃಷ್ಣರಾಜ ಪುಣಿಂಚತ್ತಾಯರಿಂದ ಶಾಸ್ತ್ರೀಯ ಸಂಗೀತ ಮೃದಂಗವನ್ನೂ ಅಭ್ಯಸಿಸಿದರು. ನಿರಂತರ ನಾಲ್ಕು ವರ್ಷಗಳ ಕಲಿಕೆ. ಅದು ಯಕ್ಷಗಾನಕ್ಕೆ ಅನುಕೂಲವೇ ಆಗಿತ್ತು.

ಪದವಿ ಪ್ರಥಮ ವರ್ಷದಿಂದ ಹವ್ಯಾಸೀ ಕಲಾವಿದನಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಗುರುಗಳಾದ ತೆಂಕಬೈಲು ಶಾಸ್ತ್ರಿಗಳು, ದಾಸರಬೈಲು ಚನಿಯ ನಾಯ್ಕ ಮೊದಲಾದ ಭಾಗವತರೊಂದಿಗೆ ಕಲಾಸೇವೆ ಮಾಡುವ  ಆಗಲೇ ದೊರೆತಿತ್ತು. ಮೇಳದ ಆಟದಲ್ಲಿಯೂ ವೃತ್ತಿ  ಕಲಾವಿದರು ಕರೆದು ಚೆಂಡೆ ಮದ್ದಳೆ ಬಾರಿಸಲು ಅವಕಾಶ ಕೊಡುತ್ತಿದ್ದರು. ಇದು ಬೆಳವಣಿಗೆಗೆ ಸಹಕಾರಿಯೂ ಆಗಿತ್ತು. ವೃತ್ತಿ ಕಲಾವಿದರಾದ ಕೂಡ್ಲು ನಾರಾಯಣ ಬಲ್ಯಾಯ, ಕೂಡ್ಲು ಆನಂದ, ರಾಧಾಕೃಷ್ಣ ನಾವಡ, ಸುಬ್ರಾಯ ಹೊಳ್ಳ, ಉದಯ ನಾವಡರ ವೇಷಗಳಿಗೆ ಮಳೆಗಾಲದಲ್ಲಿ ಬಾರಿಸುವ ಅವಕಾಶ ಹೆಚ್ಚಾಗಿ ದೊರಕಿತ್ತು. ಮದ್ದಳೆಗಾರ ಶ್ರೀ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಉದಯ ಕಂಬಾರು ಅವರು ಜತೆಯಾಗಿ ಆಟ ಕೂಟಗಳಲ್ಲಿ ಚೆಡೆ ಮದ್ದಳೆ ನುಡಿಸುತ್ತಿದ್ದರು.

ವಿದ್ಯಾರ್ಥಿಯಾಗಿರುವಾಗ ಕಲ್ಲಕಟ್ಟ ಶಾಲೆಯಲ್ಲಿ ಸುಬ್ರಹ್ಮಣ್ಯೇಶ್ವರ ಕಲಾಸಂಘದ ಪ್ರದರ್ಶನ ವೀರವರ್ಮ ಕಾಳಗದ ಹನುಮಂತನಾಗಿ ರಂಗಪ್ರವೇಶ. ನಂತರ ಅನೇಕ ಬಾರಿ ವೇಷ ಮಾಡಿದ್ದರು. ಅಲ್ಲದೆ ಮಲ್ಲ ಮತ್ತು ಉಪ್ಪಳ ಮೇಳಗಳಲ್ಲಿ ವ್ಯವಸಾಯ ಮಾಡಿದ್ದರು. ಮನೆಯಲ್ಲಿ ಬಡತನವಿತ್ತು. ಯಕ್ಷಗಾನದ ಸಂಪಾದನೆಯಿಂದಲೇ ಉದಯ ಕಂಬಾರು ಅವರು ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದರು! ಯಕ್ಷಗಾನದ ಸಂಪಾದನೆಯಿಂದ ಬದುಕಲು ಸಾಧ್ಯವಿಲ್ಲ ಎನ್ನುವವರಿಗೆ ಉದಯ ಅವರ ಸಾಧನೆಯೇ ಉತ್ತರವಾಗಲಿ. ಪ್ರತಿಭಾವಂತರಿಗೆ, ನಿಷ್ಠಾವಂತರಿಗೆ, ನೈತಿಕವಾಗಿ ಬಲಿಷ್ಠರಾದವರಿಗೆ ಯಾವತ್ತೂ ಅವಕಾಶವಿರುತ್ತದೆ. ಪ್ರತಿಫಲವೂ ಇರುತ್ತದೆ.

ಉದಯ ಕಂಬಾರು ಚಿಪ್ಪಾರು ಶ್ರೀ ಕೃಷ್ಣಯ್ಯ ಬಲ್ಲಾಳರ ಅಭಿಮಾನಿ. ರಘುರಾಮ ಹೊಳ್ಳರು, ದಿನೇಶ ಅಮ್ಮಣ್ಣಾಯರು, ಪದ್ಯಾಣ ಗಣಪತಿ ಭಟ್ಟರು, ರಾಮಕೃಷ್ಣ ಮಯ್ಯರು, ಚಿಪ್ಪಾರು, ದೇಲಂತಮಜಲು, ಅಡೂರು ಗಣೇಶ ರಾಯರೇ ಮೊದಲಾದ ಕಲಾವಿದರು ಮೇಳದ ಪ್ರದರ್ಶನಗಳಲ್ಲೂ ಭಾಗವಹಿಸುವ ಅವಕಾಶವನ್ನಿತ್ತು ಪ್ರೋತ್ಸಾಹಿಸಿದ್ದರು. ಎಂ. ಎ. ಪೂರೈಸಿದ ಮೇಲೆ ಬಿ. ಎಡ್. ಮಾಡಬೇಕೆಂಬ ಆಸೆ ಇದ್ದರೂ ಅವಕಾಶ ಸಿಕ್ಕಿರಲಿಲ್ಲ. (1992ರಲ್ಲಿ). ಮುಂದೇನು ಎಂದು ಯೋಚಿಸುತ್ತಿದ್ದರು. ಆಗ ಬದಿಯಡ್ಕದಲ್ಲಿ ಇವರ ದೊಡ್ಡಮ್ಮನ ಮಗ ಶ್ರೀ ಬಾಲಸುಬ್ರಹ್ಮಣ್ಯ ಬೊಳುಂಬು ಅವರು ಸ್ಟುಡಿಯೋ ನಡೆಸುತ್ತಿದ್ದರು. (ಶಿಲ್ಪಾ ಸ್ಟುಡಿಯೋ). ಛಾಯಾಚಿತ್ರಗಾರಿಕೆಯಲ್ಲಿ ಒಳ್ಳೆಯ ಹೆಸರನ್ನು ಪಡೆದವರು. ನನ್ನ ಜತೆ ಸಹಾಯಕನಾಗಿ ಬಾ ಎಂದಾಗ ಉದಯ ಅವರು ಒಪ್ಪಿದ್ದರು. ಆಸಕ್ತಿ ಇದ್ದು ಹೋದದ್ದಲ್ಲ. ಆದರೆ ಹೋದ ಮೇಲೆ ಆಸಕ್ತಿಯಿಂದ ಕೆಲಸ ಮಾಡಿದ್ದರು. ಇದುವೇ ಅವರ ಬದುಕಿನ ಮಹತ್ತರ ತಿರುವು.

ಉದಯ ಕಂಬಾರ್ (ಫೋಟೋ: ಮಧುಸೂದನ ಅಲೆವೂರಾಯ)

ಬದಿಯಡ್ಕದ ಶಿಲ್ಪಾ ಸ್ಟುಡಿಯೋದಲ್ಲಿ ಅಣ್ಣನ ಜತೆ ದುಡಿಮೆ. ಅಣ್ಣನ ಸಹಕಾರದಿಂದ ಬಹುಬೇಗನೆ ಕಲಿತಿದ್ದರು. ಐದು ವರ್ಷದ ಅನುಭವವನ್ನು ಆರು ತಿಂಗಳಿನಲ್ಲೇ ಗಳಿಸಿದ್ದರು. ಸರಕಾರೀ ಉದ್ಯೋಗದ ಗೋಜಿಗೆ ಹೋಗದೆ ಫೋಟೋಗ್ರಫಿಯನ್ನು ವೃತ್ತಿಯಾಗಿಯೂ ಯಕ್ಷಗಾನವನ್ನು ಹವ್ಯಾಸವಾಗಿಯೂ ಸ್ವೀಕರಿಸಿದರು. ಅಣ್ಣ ಶ್ರೀ ಬಾಲಸುಬ್ರಹ್ಮಣ್ಯ ಭಟ್ಟರ ಸಲಹೆಯಂತೆ ಪೆರ್ಲ ಅನುಪಮಾ ಸ್ಟುಡಿಯೋದ ಶ್ರೀಕೃಷ್ಣ ಅವರ ಜತೆ ಎಂಟು  ತಿಂಗಳ ಕಾಲ ದುಡಿಮೆ. ಅವರ ಸಾಕಾರ ಪ್ರೋತ್ಸಾಹವೂ ಸಿಕ್ಕಿತ್ತು. ಬಳಿಕ ಕಾಸರಗೋಡಿನ ಲಾವಣ್ಯ ಸ್ಟುಡಿಯೋದಲ್ಲಿ ದುಡಿಯುತ್ತಿರುವಾಗ ಕಣ್ಣೂರು ವಿಶ್ವವಿದ್ಯಾನಿಲಯದ ಬಿ.ಎಡ್ ಕೋರ್ಸ್ ಗೆ ಪ್ರವೇಶ ಸಿಕ್ಕಿದರೂ ಹೋಗದೆ ಫೋಟೋಗ್ರಫಿಯಲ್ಲೇ ಮುಂದುವರಿಯುವ ನಿರ್ಣಯವನ್ನು ಮಾಡಿದ್ದರು.

1994ರಲ್ಲಿ ಉದಯ ಕಂಬಾರು ಅವರು ಸ್ಟುಡಿಯೋ ಒಂದರ ಮಾಲಕರಾಗಿದ್ದರು. ನೀರ್ಚಾಲಿನಲ್ಲಿ ವರ್ಣಾ ಸ್ಟುಡಿಯೋ ತೆರೆದು ಫೋಟೋಗ್ರಫಿ ಉದ್ಯಮವನ್ನು ಆರಂಭಿಸಿದ್ದರು. ಸುಮಾರು ಒಂದು ಲಕ್ಷ ರೂಪಾಯಿಗಳ ಬಂಡವಾಳ. ಅಷ್ಟು ಹಣ ಇವರ ಕೈಯಲ್ಲಿ ಇರಲಿಲ್ಲ. ಮಗನ ತಳಮಳವನ್ನು ಗಮನಿಸಿದ  ಸುಮತಿ ಅಮ್ಮ ತನ್ನಲ್ಲಿದ್ದ ಚಿನ್ನದ ಆಭರಣವನ್ನು ನೀಡಿ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದರು. ಮತ್ತೊಂದೇ ವರ್ಷದಲ್ಲಿ ಪಡೆದುಕೊಂಡ ಆಭರಣವನ್ನಲ್ಲದೆ ಅಮ್ಮನ ಬೇಕು ಬೇಡಗಳನ್ನೆಲ್ಲಾ ಪೂರೈಸಿ ಕಾಲಿಗೆರಗಿದ್ದರು. 2001ರಲ್ಲಿ ಬದಿಯಡ್ಕದಲ್ಲಿ ವರ್ಣಾ ಸ್ಟುಡಿಯೋದ ಬ್ರಾಂಚ್ ತೆರೆದಿದ್ದರು. ಈಗ ಉದಯ ಕಂಬಾರ್ ಎಂಬ ಮದ್ದಳೆಗಾರ ಎರಡು ಸ್ಟುಡಿಯೋದ ಮಾಲಕರು.

ಕಳೆದ 25 ವರ್ಷಗಳಿಂದ ಛಾಯಾಚಿತ್ರಗ್ರಾಹಕರಾಗಿ, ಸಮಾರಂಭಗಳ ವೀಡಿಯೋಗ್ರಾಫರ್ ಆಗಿ, ಮದ್ದಳೆಗಾರರಾಗಿ ಎಲ್ಲರಿಗೂ ಬೇಕಾದವರಾಗಿ ಪ್ರಸಿದ್ಧರಾಗಿದ್ದಾರೆ. 2010ರಿಂದ ತೊಡಗಿ ಎಡನೀರು ಮಠಾಧೀಶರು ಎಡನೀರು ಮೇಳದ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶ ನೀಡಿ ಹರಸಿದ್ದರು. ಎಡನೀರು ಶ್ರೀಗಳವರ ಭಾಗವತಿಕೆಗೆ ಚೆಂಡೆ ಮದ್ದಳೆ ಬಾರಿಸುವ ಅವಕಾಶವೂ ಸಿಕ್ಕಿತ್ತು. ಭಾಗವತರಾದ ದಿನೇಶ ಅಮ್ಮಣ್ಣಾಯ, ದೇಲಂತಮಜಲು ಮತ್ತು ಮೇಳದ ಸರ್ವ ಕಲಾವಿದರೂ ಪ್ರೋತ್ಸಾಹಿಸಿದ್ದರು. ತಾನು ಸಂಪಾದಿಸುತ್ತಾ ಸಹೋದರರಿಗೂ ಸಹಕರಿಸಿ ಅವರಿಬ್ಬರಿಂದಲೂ ಪ್ರೀತಿಯನ್ನೂ ಗೌರವವನ್ನೂ ಪಡೆದುಕೊಂಡಿದ್ದಾರೆ.

ಹಿರಿಯ ತಮ್ಮ ಶ್ರೀಪತಿ ಕಂಬಾರ್ ಟೆಕ್ಸ್ ಟೈಲ್ಸ್ ವ್ಯವಹಾರ ಮತ್ತು ಟೈಲರಿಂಗ್ ನಡೆಸುತ್ತಿದ್ದಾರೆ. (ಶೃತಿನ್ ಟೆಕ್ಸ್ ಟೈಲ್ಸ್ ನೀರ್ಚಾಲು). ಕಿರಿಯ ತಮ್ಮ ಶ್ರೀ ಸುರೇಶ್ ಕಂಬಾರ್ ಕಲಾಸಕ್ತ. ಯಕ್ಷಗಾನ ಕಲಾವಿದ. ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ. ಒಳ್ಳೆಯ ಹಾಡುಗಾರ. ಬೆಂಗಳೂರಿನಲ್ಲಿ ಉದ್ಯೋಗಿ. ಸಾಫ್ಟ್ ವೆರ್ ಇಂಜಿನಿಯರ್. 1998ರಲ್ಲಿ ಉದಯ್ ಕಂಬಾರ್ ಅವರು ಮಧುಮತಿ ಅವರನ್ನು ವಿವಾಹವಾದರು. ವಿವಾಹದ ಬಳಿಕ ಮಡದಿಯನ್ನು ಮಾಯಿಪ್ಪಾಡಿಯ ಶಿಕ್ಷಕರ ತರಬೇತಿ ಕೇಂದ್ರಕ್ಕೆ ಕಳಿಸಿ ವಿದ್ಯೆ ಕೊಡಿಸಿದ್ದರು. (ಟಿಟಿಸಿ) ಮಧುಮತಿ ಅವರು ಈಗ ಕಿಳಿಂಗಾರು ಪ್ರಾಥಮಿಕ ಶಾಲೆಯ ಅಧ್ಯಾಪಿಕೆ. ಉದಯ್ ಕಂಬಾರ್ ಮತ್ತು ಮಧುಮತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಚಿಂತನ್ ಕಂಬಾರು. ಬೆಂಗಳೂರು ಜೈನ್  ಯೂನಿವರ್ಸಿಟಿಯಲ್ಲಿ ಬಿ.ಟೆಕ್ ಓದುತ್ತಿದ್ದು ಪುತ್ರಿ ಚಿನ್ಮಯಿ ಕಂಬಾರ್ ನೀರ್ಚಾಲ್ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ.

ಎಲ್ಲಾ ಹಿರಿಯ, ಕಿರಿಯ ಕಲಾವಿದರ ಪ್ರೀತಿಗೆ ಪಾತ್ರರಾದ ಕಂಬಾರು ಉದಯಣ್ಣ ಹೆಚ್ಚಿನ ಎಲ್ಲಾ ಭಾಗವತರ ಹಾಡುಗಳಿಗೆ ಮದ್ದಳೆ ಬಾರಿಸುವ ಅವಕಾಶವನ್ನು ಹೊಂದಿದ ಅನುಭವಿಯಾಗಿದ್ದಾರೆ. ಕಳೆದ ವರ್ಷ ಕಟೀಲು 2ನೇ ಮೇಳದಲ್ಲಿ ಪ್ರಸಾದ್ ಬಲಿಪ ಮತ್ತು ಪ್ರಫುಲ್ಲಚಂದ್ರ ನೆಲ್ಯಾಡಿ ಅವರ ಜತೆ ತಿರುಗಾಟವನ್ನೂ ಮಾಡಿರುತ್ತಾರೆ. ಪ್ರಸ್ತುತ ಕೇರಳ ಛಾಯಾಚಿತ್ರಗಾರರ ಸಂಘ, ಕಾಸರಗೋಡು ಜಿಲ್ಲೆಯ ಬದಿಯಡ್ಕ ಯೂನಿಟ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚಿಗೆ ಮಾನ್ಯ ಸಮೀಪ ಹೊಸ ಮನೆಯನ್ನೂ ಹೊಂದಿ ಅಲ್ಲಿ ವಾಸಿಸುತ್ತಿದ್ದಾರೆ.

ಬದುಕಿನುದ್ದಕ್ಕೂ ಹೋರಾಟ, ಬಡತನ. ಅನುಭವ, ಅವಿರತವಾದ ಪರಿಶ್ರಮ, ಜತೆಗೆ ಯಕ್ಷಗಾನವು ಉದಯ ಕಂಬಾರು ಅವರನ್ನು ಸಮಾಜದಲ್ಲಿ ವ್ಯಕ್ತಿಯಾಗಿ ರೂಪಿಸಿತ್ತು. ಕಷ್ಟದ ಬದುಕನ್ನು ನಡೆಸಿದರೂ ದೇಹಕ್ಕೆ ಆಯಾಸವಿದ್ದಾಗಲೂ ಯಕ್ಷಗಾನವನ್ನು ದೂರ ಮಾಡದೆ ಆ ಕಲೆಯ ಒಂದು ಅಂಗವಾಗಿಯೇ ಬೆಳೆದು ಬಂದಿದ್ದಾರೆ. ಶ್ರಮಜೀವಿಯಾಗಿ, ಸಾಧನೆಯನ್ನು ಮಾಡಿದ ದೆಸೆಯಿಂದಲೇ ವೃತ್ತಿಯಲ್ಲೂ, ಹವ್ಯಾಸವಾಗಿ ಸ್ವೀಕರಿಸಿದ ಯಕ್ಷಗಾನದಲ್ಲೂ ಎಲ್ಲರ ಮನ್ನಣೆಗೆ ಪಾತ್ರರಾಗಿದ್ದಾರೆ. ಮದ್ದಳೆಗಾರ ಶ್ರೀ ಉದಯ ಕಂಬಾರು ಅವರಿಂದ ಯಕ್ಷಗಾನ ಕಲಾಮಾತೆಯ ಸೇವೆಯು ನಿರಂತರವಾಗಿರಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ. ಮನದ ಬಯಕೆಗಳನ್ನೆಲ್ಲಾ ಶ್ರೀದೇವರ ಅನುಗ್ರಹದಿಂದ ಹೊಂದುವಂತಾಗಲಿ. 

ಲೇಖಕ: ರವಿಶಂಕರ್ ವಳಕ್ಕುಂಜ 

ಅತಿರೇಕಗಳಿಲ್ಲದೆ ಯಕ್ಷಗಾನೀಯ ಸ್ವರಮಾಧುರ್ಯ ಪಸರಿಸುವ ಹಿರಿಯ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ 

ಯಕ್ಷಗಾನ ರಂಗಕ್ಕೋಸ್ಕರ ಹಾಗೂ ಅದರ ಏಳಿಗೆಗೋಸ್ಕರ ದುಡಿದವರು ಹಲವರಿದ್ದಾರೆ. ಆ ರಂಗದಿಂದ ತಾನು ಗಳಿಸಿದ ಒಂದಂಶವನ್ನು ಅದೇ ಕಲೆಯ ಅಭಿವೃದ್ಧಿಗೋಸ್ಕರ ವಿನಿಯೋಗಿಸುವವರೂ ಇದ್ದಾರೆ. ಅಂತಹವರಲ್ಲಿ ಒಬ್ಬರು ಭಾಗವತರಾದ ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯ. ತನ್ನನ್ನು ಪೋಷಿಸಿದ ಯಕ್ಷಗಾನವನ್ನು ಉಳಿಸಿ ಬೆಳೆಸುವುದಕ್ಕೋಸ್ಕರ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುಂದಿನ ಪೀಳಿಗೆಗೋಸ್ಕರ ಯಕ್ಷಗಾನ ಕಲೆಯ ಸೊಗಸು-ಸೊಗಡುಗಳನ್ನು ಸ್ಥಿರವಾಗಿ ಉಳಿಸುವಂತೆ ಮಾಡುವ ಮಹತ್ಕಾರ್ಯ, ಮಹಾ ಪ್ರಯತ್ನಗಳನ್ನು ಹಲವಾರು ಮಹನೀಯರ ಸಹಕಾರದಿಂದ ಮಾಡುತ್ತಿರುವ ಮಹಾನುಭಾವ.


ಒಕ್ಟೋಬರ್ 25, 1967ರಲ್ಲಿ ಕಾಸರಗೋಡು ಜಿಲ್ಲೆಯ ಮಾಯಿಪ್ಪಾಡಿ ಸಮೀಪದ ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ಪಾರ್ವತಿ ಅಮ್ಮ ದಂಪತಿಗಳಿಗೆ ಪುತ್ರರಾಗಿ ಜನಿಸಿದ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಪರಂಪರೆಯಿಂದಲೇ ಯಕ್ಷಗಾನದ ಗಂಧವನ್ನು ಆಸ್ವಾದಿಸುತ್ತಾ ಬಂದವರು.


ತಂದೆ ಶ್ರೀ ಸಿರಿಬಾಗಿಲು ವೆಂಕಪ್ಪಯ್ಯನವರು ಆ ಕಾಲದಲ್ಲಿ ಉತ್ತಮ ಸಾಹಿತ್ಯಾತ್ಮಕ ಚಟುವಟಿಕೆಗಳಿಂದ ಗುರುತಿಸಿಕೊಂಡವರು ಆದರೆ ದುರದೃಷ್ಟವಶಾತ್ ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡರು. ರಾಮಕೃಷ್ಣ ಮಯ್ಯರ ತಂದೆ ಹಾಗೂ ತಾಯಿಯ ವಂಶಸ್ಥರು ಯಕ್ಷಗಾನದಲ್ಲಿ ಖ್ಯಾತನಾಮರೇ ಆಗಿದ್ದರು. ಅದರಲ್ಲೂ ಇವರ ಅಜ್ಜ (ತಾಯಿಯ ತಂದೆ) ಪುತ್ತಿಗೆ ಜೋಯಿಸರೆಂದೇ ಪ್ರಖ್ಯಾತರಾದ ಪುತ್ತಿಗೆ ರಾಮಕೃಷ್ಣ ಜೋಯಿಸರು, ಸೋದರಮಾವನಾದ ಖ್ಯಾತ ಭಾಗವತರಾದ ‘ಭಾಗವತಹಂಸ’ ಬಿರುದಾಂಕಿತ ಪುತ್ತಿಗೆ ರಘುರಾಮ ಹೊಳ್ಳರು ತೆಂಕುತಿಟ್ಟಿನ ಮೇರುಕಲಾವಿದರು. ಪದವಿಪೂರ್ವ ಶಿಕ್ಷಣವನ್ನು ಪೂರ್ತಿಗೊಳಿಸಿದ ಬಳಿಕ ತನ್ನ ಸೋದರಮಾವ ಪುತ್ತಿಗೆ ರಘುರಾಮ ಹೊಳ್ಳರ ಸೂಚನೆಯಂತೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿದರು.

                                             
ಪ್ರಾರಂಭದಲ್ಲಿ ಮೂರು ವರ್ಷಗಳ ಕಾಲ ಕಟೀಲು ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ನಂತರ ಬಪ್ಪನಾಡು ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದರು. ಆ ನಂತರ ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ನಿರಂತರವಾಗಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೋದರಮಾವ ಪುತ್ತಿಗೆ ರಘುರಾಮ ಹೊಳ್ಳರ ನೆರಳಿನಲ್ಲೇ ಭಾಗವತರಾಗಿದ್ದು ಅವರದೇ ಶೈಲಿಯಲ್ಲಿ ಪಳಗಿದರೂ ಪ್ರತ್ಯೇಕವಾಗಿ ಗುರುತಿಸುವ ಶಾರೀರ ಮತ್ತು ಶೈಲಿಯನ್ನು ಕರಗತ ಮಾಡಿಕೊಂಡವರು. ಮಾಧುರ್ಯದಿಂದ ಕೂಡಿದ ಸ್ವರ ಇವರ ವಿಶೇಷತೆಗಳಲ್ಲೊಂದು. ಹಲವಾರು ಪ್ರಸಂಗಗಳನ್ನು ಪ್ರಸಂಗ ಪುಸ್ತಕಗಳಿಲ್ಲದೆ ಆಡಿಸಬಲ್ಲ ಸಾಮರ್ಥ್ಯವಿರುವ ಶ್ರೀ ಮಯ್ಯರಿಗೆ ಹೆಚ್ಚಿನ ಪದ್ಯಗಳು ಕಂಠಪಾಠ.

ಯಾವುದೇ ಪೌರಾಣಿಕ ಪ್ರಸಂಗವನ್ನು ಆಡಿಸುವ ಸಾಮರ್ಥ್ಯ, ಪರಂಪರೆಯನ್ನು ನಿರ್ಲಕ್ಷಿಸದ ಕಲೆಯ ಮೇಲಿನ ಕಾಳಜಿ ಹಾಗೂ ಅತಿರೇಕ, ಸರ್ಕಸ್‍ಗಳಿಲ್ಲದ ಎಲ್ಲರಿಗೂ ಸಹ್ಯವಾಗುವ ಭಾಗವತಿಕೆಗಳಿಂದ ಹಿರಿಯ ತಲೆಮಾರಿನಿಂದ ಹಿಡಿದು ಯುವ ಪ್ರೇಕ್ಷಕರೆಲ್ಲರ ಅಭಿಮಾನವನ್ನು  ಗಳಿಸಿಕೊಂಡ ಕೆಲವೇ ಕಲಾವಿದರಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮುಂಚೂಣಿಯಲ್ಲಿ ನಿಲ್ಲುವವರ ಸಾಲಿಗೆ ಸೇರುತ್ತಾರೆ. ಈ ಎಲ್ಲ ಕಾರಣಗಳಿಂದ ಮಯ್ಯರು ಇಷ್ಟವಾಗುತ್ತಾರೆ.
ಕುಟುಂಬವು ಕಲಾಸೇವೆಯೊಂದಿಗೆ ಸಾಮಾಜಿಕ ಸೇವೆಗಳಲ್ಲಿಯೂ ತೊಡಗಿಕೊಂಡಿದೆ ಎಂಬುದಕ್ಕೆ ರಾಮಕೃಷ್ಣ ಮಯ್ಯರ ಧರ್ಮಪತ್ನಿ ಶ್ರೀಮತಿ ಸುಮಿತ್ರಾ ಮಯ್ಯರೇ ಸಾಕ್ಷಿ. ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ಶ್ರೀಮತಿ ಸುಮಿತ್ರಾ ಆರ್. ಮಯ್ಯ ತಾನು ಸ್ವತಃ ಯಕ್ಷಗಾನ ಕಲಾವಿದೆಯಾಗಿರುವುದರ ಜೊತೆಗೆ ಜನಪರ ಕಾಳಜಿಯುಳ್ಳ ಮಹಿಳೆಯಾಗಿ ಅನೇಕ ಅಭಿವೃದ್ಧಿಪರ ಕೆಲಸಗಳನ್ನು ಮಾಡಿದ್ದಾರೆ. ಗಂಡನ ಕಲಾಸೇವೆಯನ್ನು ಪ್ರೋತ್ಸಾಹಿಸುತ್ತಾ, ಕುಟುಂಬ ನಿರ್ವಹಣೆಯ ಜೊತೆಗೆ, ಸಮಾಜಸೇವೆಯ ಕಾರ್ಯವನ್ನು ಕೈಗೊಂಡು ಮುನ್ನಡೆಸುವ ಸದ್ಗೃಹಿಣಿ. ಮಕ್ಕಳಾದ ಶ್ರೀಮುಖ ಮತ್ತು ಶ್ರೀರಾಜ್ ವಿದ್ಯಾಭ್ಯಾಸದ ನಡುವೆಯೂ ಈಗಾಗಲೇ ಯಕ್ಷಗಾನದ ವೇಷಧಾರಿಗಳಾಗಿ ತಮ್ಮ ಕಲಾಸಕ್ತಿ, ಹುಮ್ಮಸ್ಸನ್ನು ತೋರಿಸುತ್ತಿದ್ದಾರೆ.


ರಾಮಕೃಷ್ಣ ಮಯ್ಯರು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ನಿಡ್ಲೆ ಇದರಲ್ಲಿ ಸುಮಾರು 25ಕ್ಕಿಂತಲೂ ಹೆಚ್ಚು ಮಳೆಗಾಲದ ತಿರುಗಾಟವನ್ನೂ ಮಾಡಿದ್ದಾರೆ.
ಸದಾ ಹಸನ್ಮುಖಿ, ವಿವಾದಗಳಿಂದ ಮಾರು ದೂರವೇ ಉಳಿಯುವ ಕಲಾವಿದರಲ್ಲಿ ಒಬ್ಬರು, ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಸುಮಧುರ ಕಂಠಸಿರಿಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಮಯ್ಯರು ತಮ್ಮ ಕಲಾಜೀವನದ ಉನ್ನತಿಗೆ ಮೂಲಕಾರಣರಾದವರನ್ನು ನೆನಪಿಸಿಕೊಳ್ಳುತ್ತಾರೆ. ‘‘ಧರ್ಮಸ್ಥಳದ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾಗಿರುವ ಶ್ರೀ ವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀ ಹರ್ಷೇಂದ್ರ ಕುಮಾರ್ ಅವರ ಆಶೀರ್ವಾದವೇ ನನಗೆ ಹಾಗೂ ಶ್ರೀ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನಕ್ಕೆ ಶ್ರೀರಕ್ಷೆ’’ ಎಂದು ವಿನೀತರಾಗಿ ನುಡಿಯುತ್ತಾರೆ.


ರಾಮಕೃಷ್ಣ ಮಯ್ಯರ ಸಾಧನೆಗೆ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ. ದಾವಣಗೆರೆಯ ಶ್ರೀ ಭಾಗವತ ಪ್ರತಿಷ್ಠಾನ, ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ವಿದ್ಯಾಲಯವು ‘ಯಕ್ಷಲೋಕ ಗಾನವಿಹಾರಿ’ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಹೈದರಾಬಾದ್‍ನ ಕರ್ನಾಟಕ ಕರಾವಳಿ ಮೈತ್ರಿ ಸಂಘವು ‘ಗಾನಗಂಧರ್ವ’ ಬಿರುದು ಹಾಗೂ ಮೈಸೂರು ಚಾಮುಂಡಿಪುರದ ಚೆಂಡೆ ಕಲಾಸಂಘವು ‘ಕರ್ನಾಟಕ ಭಾಗವತ ಸಿರಿ’ ಬಿರುದುಗಳನ್ನು ನೀಡಿ ಸನ್ಮಾನಿಸಿವೆ. ಬಹರೈನ್ ಕನ್ನಡ ಸಂಘ, ಕೇರಳ, ಕರ್ನಾಟಕ ಮೊದಲಾದ ರಾಜ್ಯಗಳ ಕಲಾಸಂಘ ಸಂಸ್ಥೆಗಳು ಪ್ರಶಸ್ತಿ, ಸನ್ಮಾನಗಳನ್ನು ನೀಡಿ ಗೌರವಿಸಿವೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಂಗಪ್ರಸಂಗ:
ಗಡಿನಾಡಿನ ಸಾಹಿತಿ, ಸಂಶೋಧಕರಲ್ಲಿ ಓರ್ವರಾದ ಸಿರಿಬಾಗಿಲು ವೆಂಕಪ್ಪಯ್ಯನವರ ಸ್ಮರಣಾರ್ಥ ತನ್ನ ತೀರ್ಥರೂಪರ ಹೆಸರಿನಲ್ಲಿಯೇ ‘‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’’ವನ್ನು ರಾಮಕೃಷ್ಣ ಮಯ್ಯರು ಸ್ಥಾಪಿಸಿದರು. ಈ ಪ್ರತಿಷ್ಠಾನದ ಮೂಲಕ ಸಾಹಿತ್ಯ ಲೋಕಕ್ಕೆ ಮತ್ತು ಯಕ್ಷಗಾನ ಕಲೆಗೆ ಸಂಬಂಧಪಟ್ಟಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಸಾಹಿತಿ ಸಿರಿಬಾಗಿಲು ವೆಂಕಪ್ಪಯ್ಯನವರ ಸಮಗ್ರ ಬರಹಗಳ ಪುಸ್ತಕ ‘ಸಿರಿಬಾಗಿಲು’ ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರತಿವರ್ಷವೂ ‘ಸಿರಿಬಾಗಿಲು’ ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಲ್ಲದೆ ಪ್ರತಿಷ್ಠಾನವು ಹಿರಿಯ ಕಲಾವಿದ ಹಾಗೂ ಸಂಶೋಧಕ ದೇಶಮಂಗಲ ಕೃಷ್ಣ ಕಾರಂತರ ಜನ್ಮಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದೆ. ಆ ತಾಳಮದ್ದಳೆ ಸರಣಿ ಕಾರ್ಯಕ್ರಮವನ್ನು ನಡೆಸಿದೆ. ಅದೂ ಅಲ್ಲದೆ ‘ಯಕ್ಷ ಶ್ರೀಕರ’ ಎಂಬ ತಾಳಮದ್ದಳೆ ಸರಣಿಯನ್ನು ಕಾಸರಗೋಡು ಶ್ರೀ ವೆಂಕಟ್ರಮಣ ದೇವಳದಲ್ಲಿ ವರ್ಷವಿಡಿ ನಡೆಸಿದೆ.
‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’ದ ವತಿಯಿಂದ ನಡೆಯುತ್ತಿರುವ ಅಪೂರ್ವವೂ ಅಪರೂಪವೂ ಆದ ವಿಶಿಷ್ಟವಾದ ಕಾರ್ಯಕ್ರಮವೇ ‘ರಂಗಪ್ರಸಂಗ’. ಈ ಕಾರ್ಯಕ್ರಮದ ರೂವಾರಿಗಳಾದ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಮಯ್ಯರು ತನ್ನ ಹಲವಾರು ವರ್ಷಗಳ ಚಿಂತನೆಗೆ ಕಾರ್ಯರೂಪ ನೀಡಿದ್ದಾರೆ.

ರಂಗಪ್ರಸಂಗದ ವಿವಿಧ ಪ್ರದರ್ಶನಗಳು


ರಂಗಪ್ರಸಂಗದಲ್ಲಿ, ಮಾಯವಾಗುತ್ತಿರುವ ಯಕ್ಷಗಾನ ಕಲೆಯ ಸಾಂಪ್ರದಾಯಕತೆಗೆ ಮರುಜೀವ ನೀಡಿ ರಂಗದಲ್ಲಿ ಪ್ರದರ್ಶಿಸುವುದು ಮತ್ತು ಅದರ ದಾಖಲೀಕರಣವೂ ಒಳಗೊಂಡಿದೆ. ಪೂರ್ವರಂಗ, ರಂಗ ಮಾಹಿತಿ, ಬಣ್ಣಗಾರಿಕೆ, ಒಡ್ಡೋಲಗ ಕ್ರಮಗಳು, ಹಿಮ್ಮೇಳ ಇತ್ಯಾದಿ ಯಕ್ಷಗಾನದ ಹಲವಾರು ಅಂಗಗಳ ಪರಂಪರೆಯನ್ನು ಅಭ್ಯಾಸಿಗಳಿಗೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಅದರ ಪ್ರದರ್ಶನ ಮತ್ತು ದಾಖಲೀಕರಣವನ್ನು ‘ರಂಗಪ್ರಸಂಗ’ ಎಂಬ ಕಾರ್ಯಕ್ರಮದಡಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ವಿವಿಧೆಡೆಗಳಲ್ಲಿ ಈಗಾಗಲೇ ರಂಗಪ್ರಸಂಗದ ಐದು ಭಾಗಗಳು ಅಥವಾ ಪ್ರದರ್ಶನಗಳು ಆಗಿವೆ. ರಂಗಪ್ರಸಂಗದ ಆರನೇ ಭಾಗದ ಪ್ರದರ್ಶನದ ತಯಾರಿಯಲ್ಲಿದ್ದಾರೆ. ಸಿರಿಬಾಗಿಲು ರಾಮಕೃಷ್ಣ ಮಯ್ಯರ ಅದ್ಭುತ ಕಲ್ಪನೆ ಹಾಗೂ ಯಕ್ಷರಂಗಕ್ಕೆ ಮುಂದೊಂದು ದಿನ ಅಮೂಲ್ಯವಾದ ಕೊಡುಗೆಯಾಗುವುದರಲ್ಲಿ ಎಳ್ಳಿನಿತೂ ಸಂಶಯವಿಲ್ಲ.


                        ರಂಗಪ್ರಸಂಗದ ಯಶಸ್ಸಿನಿಂದ ಪ್ರೇರಿತವೋ ಎಂಬಂತೆ  ತಾಳಮದ್ದಳೆಗೆ ಸಂಬಂಧಪಟ್ಟಂತೆ ಅರ್ಥಾಂತರಂಗ ಎಂಬ ಕಾರ್ಯಕ್ರಮವನ್ನು ‘ಪ್ರತಿಷ್ಠಾನ’ ಆಯೋಜಿಸಿತು. ತಾಳಮದ್ದಳೆಯ ಮೂಲಸ್ವರೂಪ, ಪಾತ್ರೋಚಿತ ಅರ್ಥಗಾರಿಕೆ ಹೇಗಿರಬೇಕು ಎಂಬ ಕಲ್ಪನೆ, ಅರ್ಥಗಾರಿಕೆಯ ಸಮಯಾವಕಾಶ, ಪೋಷಕ ಪಾತ್ರದ ಅರ್ಥಗಾರಿಕೆ, ಮುಖ್ಯ ಪಾತ್ರಗಳ ಅರ್ಥಗಾರಿಕೆ ಮುಂತಾದುವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅರ್ಥಾಂತ ರಂಗವನ್ನು ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ನಿರ್ದೇಶನದಲ್ಲಿ ಆರಂಭ ಮಾಡಿದರು.  ರಂಗಪ್ರಸಂಗ ಮತ್ತು ಅರ್ಥಾಂತರಂಗ ಯಕ್ಷಗಾನಾಧ್ಯಯನ ಮತ್ತು Ph.D ಮಾಡುವವರಿಗೆ ತುಂಬಾ ಸಹಕಾರಿಯಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.


ಸಿರಿಬಾಗಿಲು ರಾಮಕೃಷ್ಣ ಮಯ್ಯ-50 ಮತ್ತು ಸುವರ್ಣ ಯಕ್ಷಗಾನಾರ್ಚನೆ:
ಅಕ್ಟೋಬರ್ 25, 2017ರಂದು ಸಿರಿಬಾಗಿಲು ಶ್ರೀ ರಾಮಕೃಷ್ಣ ಮಯ್ಯರ 50ನೇ ಜನ್ಮದಿನ. ಈ ದಿನವನ್ನು ಅವರು ಅತಿ ವಿಶಿಷ್ಠವಾಗಿ ಆಚರಿಸಿದ್ದರು. ಬಹುಶಃ ಮಯ್ಯರಿಗೆ ಹಾಗೂ ಯಕ್ಷಾಭಿಮಾನಿಗಳಿಗೆ ಈ ದಿನ ಮರೆಯಲಾರದ ದಿನ.
ಆ ದಿನವನ್ನು ಅವರು ಕೂಡ್ಲು ಎಂಬಲ್ಲಿರುವ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವರಿಗೆ ‘ಸುವರ್ಣ ಯಕ್ಷಗಾನಾರ್ಚನೆ’ ನಡೆಸುವುದರ ಮೂಲಕ ಸ್ಮರಣೀಯವಾಗಿಸಿದ್ದರು. ಮಯ್ಯರ ಗುರುಗಳಾದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದ್ದ ಈ ಕಾರ್ಯಕ್ರಮದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಒಟ್ಟು 50 ಕವಿಗಳ ಪರಿಚಯ ವಿವರಗಳ   ಸಹಿತ 50 ಮಟ್ಟುಗಳ ಯಕ್ಷಗಾನ ಪದ್ಯಗಳನ್ನು ಹಾಡಿ ‘‘ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ’’ದಲ್ಲಿ ಸುವರ್ಣ ಯಕ್ಷಗಾನಾರ್ಚನೆ ನಡೆಸಿದ್ದರು.
ಈ ಸುವರ್ಣ ಯಕ್ಷಗಾನಾರ್ಚನೆಯ ಸಮಗ್ರ ನಿರ್ದೇಶನ ಮತ್ತು ನಿರೂಪಣೆಯನ್ನು ಯಕ್ಷಗಾನ ವಿದ್ವಾಂಸ ಮತ್ತು ಸಾಹಿತಿ ಶ್ರೀಧರ್ ಡಿ.ಎಸ್. ನಿರ್ವಹಿಸಿದ್ದರು.

ಸಿರಿಬಾಗಿಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ’ ಭಾಗವತ ರಾಮಕೃಷ್ಣ ಮಯ್ಯರ ಕನಸಿನ ಕೂಸು. ಹಲವಾರು ಸಂಘ, ಸಂಸ್ಥೆಗಳ ಮಹನೀಯರ, ಕಲಾಪೋಷಕರ ಸಹಕಾರದಿಂದ ಈ ಮಹತ್ತರವಾದ ಕಾರ್ಯವನ್ನು ಮಯ್ಯರು ಕೈಗೆತ್ತಿಕೊಂಡಿದ್ದಾರೆ. ಈ ಬೃಹತ್ ಕಟ್ಟಡದ ಕಾಮಗಾರಿಯು ಭರದಿಂದ ನಡೆಯುತ್ತಿದೆ. ಇನ್ನೂ ಹೆಚ್ಚಿನ ಮೂಲಗಳಿಂದ ಹಲವಿಧದ ಸಹಕಾರ ಮತ್ತು ನೆರವು ದೊರೆಯುವುದರ ಜೊತೆಗೆ ಸರಕಾರದ ಸಹಾಯಧನವೂ ಹರಿದುಬರುವ ನಿರೀಕ್ಷೆಯಿದೆ. 

ಮೇಳಗಳ ಇಂದಿನ (06.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (06.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳ06.01.2021ಅಂಪಾರು ಹಡಾಳಿ ಶ್ರೀ ನಂದಿಕೇಶ್ವರ ದೇವಸ್ಥಾನದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳ06.01.2021ಕುಬೆವೂರು,ಕೆಂಚನಕೆರೆ, ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ಬಳಿ 
ಕಟೀಲು ಎರಡನೇ ಮೇಳ 06.01.2021ರಾಯಿ, ಕೊಯಿಲ, ಬಂಟ್ವಾಳ 
ಕಟೀಲು ಮೂರನೇ ಮೇಳ06.01.2021ಶ್ರೀ ಸೋಮನಾಥ ಧಾಮ, ಪೆರ್ಮುದೆ ವಯಾ ಬಜಪೆ 
ಕಟೀಲು ನಾಲ್ಕನೇ ಮೇಳ 06.01.2021ಉಳ್ಳಾಲ ನರ್ಸಿಂಗ್ ಹೋಮ್ ಬಳಿ, ಬರ್ಕೆ, ಮಂಗಳೂರು 
ಕಟೀಲು ಐದನೇ ಮೇಳ 06.01.2021ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವಯಾ ಕೊಕ್ಕಡ 
ಕಟೀಲು ಆರನೇ ಮೇಳ06.01.2021ಕಟೀಲು ಕ್ಷೇತ್ರದಲ್ಲಿ 
ಮಂದಾರ್ತಿ ಒಂದನೇ ಮೇಳ 06.01.2021ಬೇಳೂರು ದೊಡ್ಮನೆ, ಅಮೃತೇಶ್ವರೀ ಮೇಳದೊಂದಿಗೆ ಕೂಡಾಟ
ಮಂದಾರ್ತಿ ಎರಡನೇ ಮೇಳ 06.01.2021ನರಾಡಿಮನೆ, ಕಕ್ಕುಂಜೆ 
ಮಂದಾರ್ತಿ ಮೂರನೇ ಮೇಳ 06.01.2021ಸೋರ್ಗೋಳಿ, ಗುಡ್ಡಿ ಅಂಗಡಿ, ಬೆಳ್ವೆ 
ಮಂದಾರ್ತಿ ನಾಲ್ಕನೇ ಮೇಳ 06.01.2021ಶ್ರೀ ಕ್ಷೇತ್ರದಲ್ಲಿ 
ಮಂದಾರ್ತಿ ಐದನೇ ಮೇಳ 06.01.2021ಶ್ರೀ ಕ್ಷೇತ್ರದಲ್ಲಿ 
ಶ್ರೀ ಹನುಮಗಿರಿ ಮೇಳ 06.01.2021ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಪಾವಂಜೆ – ದಮಯಂತಿ ಪುನಃ ಸ್ವಯಂವರ-ಗದಾಯುದ್ಧ – ರಕ್ತರಾತ್ರಿ 
ಶ್ರೀ ತಳಕಲ ಮೇಳ06.01.2021ಶ್ರೀ ಕ್ಷೇತ್ರದಲ್ಲಿ – ಸುದರ್ಶನ ವಿಜಯ
ಶ್ರೀ ಸುಂಕದಕಟ್ಟೆ ಮೇಳ 06.01.2021ಬೋಳಿಯಾರು ಧರ್ಮನಗರ – ಕಾಂತಾಬಾರೆ ಬೂಧಬಾರೆ 
ಶ್ರೀ ಮಾರಣಕಟ್ಟೆ ಮೇಳ ‘ಎ’06.01.2021ಹೊಸಹೊಕ್ಲು ಮನೆ, ಹರ್ಕೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’06.01.2021ಸಂಸಾಡಿ, ನಾಡ 
ಶ್ರೀ ಮಾರಣಕಟ್ಟೆ ಮೇಳ ‘ಸಿ’06.01.2021ತೆಂಕಬೆಟ್ಟು,ಖಂಬದಕೋಣೆ 
ಶ್ರೀ ಪಾವಂಜೆ ಮೇಳ 06.01.2021ಶ್ರೀ ಮೂಕಾಂಬಿಕಾ ಭಜನಾ ಮಂಡಳಿ, ಬ್ರಹ್ಮರಕೊಟ್ಲು – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ06.01.2021ಹನೆಹಳ್ಳಿ – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’06.01.2021ಗರೋಡಿ ವಠಾರ, ಉಳ್ಳೂರು – ೭೪ 
ಕಮಲಶಿಲೆ ಮೇಳ ‘ಬಿ’06.01.2021ಅಯ್ಯಪ್ಪಸ್ವಾಮಿ ದೇವಸ್ಥಾನ ಜಾಜಿವನ, ತಟ್ಟಿಗುಳಿ, ಕಮಲಶಿಲೆ 
ಶ್ರೀ ಸಸಿಹಿತ್ಲು ಭಗವತೀ ಮೇಳ 06.01.2021ಕೊಯಿಕುಡೆ ಬಾಳಿಕೆ ಬೆಟ್ಟು ಶ್ರೀ ಭಗವತೀ ಮನೆಯ ಮುಂಭಾಗದಲ್ಲಿ – ಶ್ರೀ ಭಗವತೀ ಮಹಾತ್ಮೆ
ಶ್ರೀ ಅಮೃತೇಶ್ವರೀ ಮೇಳ06.01.2021ಬೇಳೂರು ದೊಡ್ಮನೆ
ಶ್ರೀ ಬೋಳಂಬಳ್ಳಿ ಮೇಳ 06.01.2021ಕೆರಾಡಿ – ಮಹಿಷಮರ್ದಿನಿ 
ಶ್ರೀ ಸೌಕೂರು ಮೇಳ06.01.2021ಸೌಕೂರು ಸೇರ್ವೆಗಾರರ ಮನೆ – ಪಾಪಣ್ಣ ವಿಜಯ ಗುಣಸುಂದರಿ 
ಶ್ರೀ ಹಾಲಾಡಿ ಮೇಳ06.01.2021ಸಿದ್ಧಾಪುರ ಮೇಲ್ ಜಡ್ಡು 
ಶ್ರೀ ಬೆಂಕಿನಾಥೇಶ್ವರ ಮೇಳ  06.01.2021ಮರವಂತೆ, ಬ್ರೇಕ್ ವಾಟರ್ (ಬಂದರು) – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳ06.01.2021ಹೆಬ್ರಿ ವಿಜಯಾ ಬ್ಯಾಂಕ್ ಬಳಿ – ದೇವಿ ಶ್ರೀದೇವಿ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ06.01.2021ಉಪ್ಪೂರು ಅಂಮುಂಜೆ ಗುಡ್ಡೆ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಿರಿಯಡಕ ಮೇಳ06.01.2021ಬಸ್ರೂರು ಕೊಳ್ಕೆರೆಜೆಟ್ಟುಮಕ್ಕಿ – ಹಿರಿಯಡಕ ಕ್ಷೇತ್ರ ಮಹಾತ್ಮೆ 
ಶ್ರೀ ಶನೀಶ್ವರ ಮೇಳ 06.01.2021ವಂಡ್ಸೆ 
ಶ್ರೀ ಸಿಗಂದೂರು ಮೇಳ06.01.2021ಪ್ರಥಮ ಸೇವೆ ಆಟ  

ತೆಂಕುತಿಟ್ಟಿನ ಹಿರಿಯ ಪುಂಡುವೇಷಧಾರಿ ಮಾಡಾವು ಶ್ರೀ ಕೊರಗಪ್ಪ ರೈ 

ಮಾಡಾವು ಶ್ರೀ ಕೊರಗಪ್ಪ ರೈಗಳು ತೆಂಕುತಿಟ್ಟಿನ ಹಿರಿಯ ಅನುಭವಿ ಪುಂಡುವೇಷಧಾರಿಗಳಲ್ಲೊಬ್ಬರು. ವಿವಿಧ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿ ಅನುಭವವನ್ನು ಹೊಂದಿದವರು. ಈ ವಾಮನ ಮೂರ್ತಿ ಕಲಾಬದುಕಿನ 38 ವಸಂತಗಳನ್ನು ಕಂಡವರು. 2021-21ನೇ ಸಾಲಿನದು ಪ್ರಾಯಶಃ ಇವರ 39ನೇ ತಿರುಗಾಟ. ಯಕ್ಷಗಾನದ ಪುಂಡುವೇಷಧಾರಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ.

ಇವರು ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.    ಶ್ರೀ ಕೊರಗಪ್ಪ ರೈಯವರು ಪುತ್ತೂರು ತಾಲೂಕು ಕೈಯ್ಯೂರು ಗ್ರಾಮದ ಸನಂಗಳ ಎಂಬಲ್ಲಿ 1955ನೇ ಇಸವಿ ಡಿಸೆಂಬರ್ 26ರಂದು ಜನಿಸಿದರು.  ತಂದೆ ಮಹಾಬಲ ರೈ. ತಾಯಿ ಶ್ರೀಮತಿ ಕಮಲಾ. ಇವರದು ಕೃಷಿಕ ಕುಟುಂಬ.  ಕೈಯ್ಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದ್ದರು ಹೆಚ್ಚಿನ ವಿದ್ಯಾರ್ಜನೆಗೆ ಅವಕಾಶವಿರಲಿಲ್ಲ. ಇವರ ಮನೆಯ ಹಿರಿಯರೆಲ್ಲಾ ಯಕ್ಷಗಾನಾಸಕ್ತರಾಗಿದ್ದರು.  ಕೈಯ್ಯೂರು ಶಾಲಾ ಮೈದಾನದಲ್ಲಿ ಕರ್ನಾಟಕ ಮೇಳ ಮತ್ತು ಸುರತ್ಕಲ್ ಮೇಳದ ಆಟಗಳು ನಡೆಯುತ್ತಿತ್ತು. ಮನೆಯವರ ಜತೆ ಸಾಗಿ ಆಟ  ನೋಡುತ್ತಿದ್ದರು.

ವಾಹನದಲ್ಲಿ ಆಟದ ಪ್ರಚಾರವನ್ನು ಕೇಳುವುದು, ಅವರು ಕರಪತ್ರ ವಾಹನದಿಂದ ಹೊರಕ್ಕೆಸೆದಾಗ ಅದನ್ನು ಹೆಕ್ಕಿ ಸಂಗ್ರಹಿಸಿ ಇಟ್ಟುಕೊಳ್ಳುವುದು, ಆಟ ನೋಡಿ ಬಂದ ಮೇಲೆ ಮನೆಯಲ್ಲಿ ಕಲಾವಿದರ ಸಂಭಾಷಣೆಗಳನ್ನು ಹೇಳುವುದು, ಕುಣಿಯುವುದು ಹೀಗೆ ಸಾಗಿತ್ತು ಬಾಲ್ಯದ ಬದುಕು. ಅಡಿಕೆ ಮರದ ಹಾಳೆಯನ್ನು ಕತ್ತರಿಸಿ ಕಿರೀಟದಂತೆ ಮಾಡಿ ಅದನ್ನು ಧರಿಸಿ ಗೆಳೆಯರ ಜತೆ ಕುಣಿಯುತ್ತಿದ್ದರು. ಕಂಬ ಹಾಕಿ, ಹಗ್ಗ ಕಟ್ಟಿ, ಸೊಪ್ಪುಗಳಿಂದ ಅಲಂಕರಿಸಿ ಅಣಕು ಪ್ರದರ್ಶನಕ್ಕೆ ರಂಗಸ್ಥಳವನ್ನು ನಿರ್ಮಿಸುತ್ತಿದ್ದರು. ಇವರ ಯಕ್ಷಗಾನಾಸಕ್ತಿ ಅಷ್ಟು ತೀವ್ರವಾಗಿತ್ತು. ನಾಟ್ಯ ಕಲಿತು ಕಲಾವಿದನಾಗಬೇಕೆಂಬ ಬಯಕೆಯೂ ಮೂಡಿತ್ತು. ಧರ್ಮಸ್ಥಳದಲ್ಲಿ ಲಲಿತ ಕಲಾ ಕೇಂದ್ರ ಆರಂಭವಾಗಿದೆ ಎಂಬ ವಿಚಾರ ತಿಳಿದು ಕಲಿಯುವ ಆಸೆಯನ್ನು ಹೊತ್ತು ತೆರಳಿದ್ದರು.(1972ರಲ್ಲಿ)

ಪೂಜ್ಯ ಖಾವಂದರೂ ಸಂದರ್ಶನ ನಡೆಯುವ ಸ್ಥಳದಲ್ಲಿ ಉಪಸ್ಥಿತರಿದ್ದರು. ಮಾಂಬಾಡಿ ನಾರಾಯಣ ಭಾಗವತರು, ಪಡ್ರೆ ಚಂದು ಅವರು ಸಂದರ್ಶಕರಾಗಿದ್ದರು.(ಲಲಿತ ಕಲಾ ಕೇಂದ್ರದ ಗುರುಗಳು) ಯಕ್ಷಗಾನದಿಂದ ಆಗ ನಿವೃತ್ತರಾಗಿದ್ದ ಕುರಿಯ ವಿಠಲ ಶಾಸ್ತ್ರಿಗಳೂ ಅಂದಿನ ದಿನ ಅಲ್ಲಿ ಉಪಸ್ಥಿತರಿದ್ದರಂತೆ. ಮಾಡಾವು ಕೊರಗಪ್ಪ ರೈಗಳು ಸಂದರ್ಶನದಲ್ಲಿ ಉತ್ತೀರ್ಣರಾಗಿ ತರಬೇತಿಗೆ ಆಯ್ಕೆಯಾಗಿದ್ದರು. ಪದ್ಯಾಣ ಗಣಪತಿ ಭಟ್, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ನಿಡ್ಲೆ ಗೋವಿಂದ ಭಟ್, ಉಬರಡ್ಕ ಉಮೇಶ್ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಮುಂಡಾಜೆ ಬಾಲಕೃಷ್ಣ ಶೆಟ್ಟಿ, ಮುಂಡಾಜೆ ಸದಾಶಿವ ಶೆಟ್ಟಿ, ಉದ್ಯಾವರ ಜಯಕುಮಾರ ಮೊದಲಾದವರು ಲಲಿತಕಲಾ ಕೇಂದ್ರದ ಮೊದಲ ತಂಡದ ವಿದ್ಯಾರ್ಥಿಗಳಾಗಿ ಮಾಡಾವು ಕೊರಗಪ್ಪ ರೈಗಳ ಸಹಪಾಠಿಗಳಾಗಿದ್ದರು. 

ಮೊದಲ ತಿರುಗಾಟ 1972ರಿಂದ. ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. ಪೂರ್ವರಂಗದಲ್ಲಿ ಬಾಲಗೋಪಾಲ ಮತ್ತು ಪ್ರಸಂಗದಲ್ಲಿ ಸಣ್ಣ ಪುಟ್ಟ ಪಾತ್ರಗಳು. ಬೆಳಗಿನ ವರೆಗೂ ವೇಷ ಮಾಡಬೇಕಾಗಿತ್ತು. ಮುಂಡಾಜೆ ಬಾಲಕೃಷ್ಣ ಶೆಟ್ಟರು ಬಾಲಗೋಪಾಲ ಮತ್ತು ಇನ್ನಿತರ ವೇಷಗಳಿಗೆ ಇವರಿಗೆ ಜತೆಯಾಗಿದ್ದರು. ಕರ್ನಾಟಕ ಮೇಳದಲ್ಲಿ ಐದು ವರ್ಷಗಳ ತಿರುಗಾಟ. ‘ಶೀಲಪಾರಮ್ಯ’ ಎಂಬ ಪ್ರಸಂಗದಲ್ಲಿ ವಾಮನ ಪಾತ್ರವು ಕೊರಗಪ್ಪ ರೈಗಳಿಗೆ ತನ್ನ ಪ್ರತಿಭೆಯನ್ನು ಪ್ರಕಟಿಸುವುದಕ್ಕೆ ಅವಕಾಶವಾಗಿ ಹೆಸರನ್ನು ತಂದುಕೊಟ್ಟಿತು. ಈ ಪ್ರಸಂಗದಲ್ಲಿ ಬೋಳಾರ ನಾರಾಯಣ ಶೆಟ್ಟರು ‘ಬಲಿ’ ಪಾತ್ರದಲ್ಲಿ ಪ್ರಸಿದ್ಧರಾಗಿದ್ದರು. ಮುಂಡಾಜೆ ಬಾಲಕೃಷ್ಣ ಶೆಟ್ಟರು ಲೋಹಿತಾಶ್ವನಾಗಿ ಅಭಿನಯಿಸಿದ್ದರು.

ಶಕುಂತಲಾ ಪರಿಣಯದ ‘ಬಾಲ ಸರ್ವದಮನ’, ಸತ್ಯ ಹರಿಶ್ಚಂದ್ರ ಪ್ರಸಂಗದ ಲೋಹಿತಾಶ್ವ, ಶ್ರೀರಾಮ ಲೀಲೆ ಪ್ರಸಂಗದ ಕುಶಲವರು ಮೊದಲಾದ ವೇಷಗಳನ್ನು ನಿರ್ವಹಿಸುವ ಅವಕಾಶಗಳು ಸಿಕ್ಕಿತ್ತು. ವೇಷಗಳಿಲ್ಲದ ಸಮಯದಲ್ಲಿ ನಿದ್ದೆಗೆ ಅವಕಾಶವಿರಲಿಲ್ಲ. ಆಟ ನೋಡಲೇ ಬೇಕಾಗಿತ್ತು. ‘ವಿದ್ಯಾತುರಾಣಾಮ್ ನ ಸುಖಂ ನ ನಿದ್ರಾ’ ಎಂಬಂತೆ ಕೊರಗಪ್ಪ ರೈಗಳಿಗೆ ಅದು ಅನುಕೂಲವೇ ಆಗಿತ್ತು. ನೋಡುತ್ತಾ, ಕೇಳುತ್ತಾ ಕಲಿಯುತ್ತಾ ಬೆಳೆದರು. ಕರ್ನಾಟಕ ಮೇಳದವರ ಮಳೆಗಾಲದ ಮುಂಬಯಿ ಪ್ರದರ್ಶನಗಳಲ್ಲೂ ಬಾಲ ಕಲಾವಿದನಾಗಿ ಭಾಗವಹಿಸಿದರು. 1978ನೇ ಇಸವಿ ಇರಬೇಕು. ಮಳೆಗಾಲದ ಪ್ರದರ್ಶನದ ಸಂದರ್ಭ, ಶೇಖರ್ ಶೆಟ್ಟಿ ಬೆಳ್ಮಣ್ ಅವರ ಪರಿಚಯವಾಗಿತ್ತು. ಮುಂಬಯಿಯಲ್ಲಿ ಸಿಎ ವಿದ್ಯಾರ್ಥಿಯಾಗಿದ್ದ ಅವರು ಸಾಕಿನಾಕ ಯಕ್ಷಗಾನ ಮಂಡಳಿಯ ಕಾರ್ಯದರ್ಶಿಯಾಗಿದ್ದರು. ಮುಂಬಯಿಯಲ್ಲಿ ಉದ್ಯೋಗಿಯಾಗಿದ್ದುಕೊಂಡು ಮಂಡಳಿಯಲ್ಲಿ ವೇಷ ಮಾಡಬಹುದೆಂಬ ಸಲಹೆಯನ್ನು ನೀಡಿದ್ದರು.

ಕೊರಗಪ್ಪ ರೈಗಳು ಅವರ ಸಲಹೆಯನ್ನು ಸ್ವೀಕರಿಸಿದ್ದರು. ಯಜಮಾನ್ರಲ್ಲಿ ಹೇಳದೆ, ಊರಿಗೆ ಬಾರದೆ, ಮುಂಬಯಿಯಲ್ಲೇ ಉಳಿದರು. ಆಗ ಹುಡುಗಾಟಿಕೆಯೂ ಇತ್ತು ಅನ್ನೋಣ. ಮುಂಬಯಿಯಲ್ಲಿ ಪರಿಚಯಸ್ಥರು ವಿಜಯ ಬ್ಯಾಂಕಿನಲ್ಲಿ ಅಟೆಂಡರ್ ಕೆಲಸವನ್ನೂ ಕೊಡಿಸಿದ್ದರು. ಒಂದು ವರ್ಷ ಅಟೆಂಡರ್ ಆಗಿ ದುಡಿದಿದ್ದರು. ಆದರೆ ಸ್ಥಳೀಯರಿಗೆ ಆ ಕೆಲಸಗಳನ್ನು ಕೊಡಬೇಕೆಂಬ ಬೇಡಿಕೆಯು ಪ್ರಬಲವಾಗಿತ್ತು. ಇದ್ದ ಕೆಲಸವೂ ಹೋಗಿ ಸ್ಥಳೀಯರ ಪಾಲಾಗಿತ್ತು. ಬಳಿಕ ಅಂಗಡಿಗಳಲ್ಲಿ, ಹೋಟೆಲ್ಲುಗಳಲ್ಲಿ ದುಡಿಮೆ. ಅವಕಾಶ ಸಿಕ್ಕಾಗಲೆಲ್ಲಾ ವಿವಿದೆಡೆ ವೇಷ ಮಾಡುತ್ತಿದ್ದರು. ಮುಂಬಯಿಯಲ್ಲಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ರು, ಶೇಖರ ಶೆಟ್ರು ಬೆಳ್ಮಣ್, ರಘುನಾಥ ಶೆಟ್ರು, ಸದಾನಂದ ಶೆಟ್ರು, ಶ್ರೀನಿವಾಸ ಪೈಗಳು ಮೊದಲದವರೊಂದಿಗೆ ಕಲಾ ಸೇವೆಯನ್ನು ಮಾಡಿದರು.

ಮಾಡಾವು ಕೊರಗಪ್ಪ ರೈಗಳು 1984ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಹೇಮಾವತಿ ಜತೆ ವಿವಾಹ. ವಿವಾಹದ ಬಳಿಕ ಮುಂಬಯಿಗೆ ಗುಡ್ ಬೈ ಹೇಳಿ ಊರಿಗೆ ಮರಳಿದ್ದರು. ಆ ಹೊತ್ತಿಗೆ ಶೇಖರ ಶೆಟ್ರು ಮುಂಬಯಿಯಿಂದ ಊರಿಗೆ ಮರಳಿದ್ದರು. ಅವರ ಸಂಚಾಲಕತ್ವದ ಬಪ್ಪನಾಡು ಮೇಳದಲ್ಲಿ 2 ವರ್ಷ ತಿರುಗಾಟ, ನಂತರ ಶೇಖರ ಶೆಟ್ರು  ಬೆಳ್ಮಣ್ ಮೇಳ ಆರಂಭಿಸಿದ್ದರು. ತಿರುಗಾಟ ಚೆನ್ನಾಗಿಯೇ ನಡೆದಿತ್ತು. ಪತ್ತನಾಜೆಗೆ 9 ದಿನಗಳು ಮಾತ್ರ ಉಳಿದಿತ್ತು. ಮೇ 16ರಂದು ಅನಿರೀಕ್ಷಿತ, ನಡೆಯಬಾರದ ಘಟನೆಯೊಂದು ನಡೆದಿತ್ತು.  ಬೆಳ್ಮಣ್ ಮೇಳದ ವಾಹನ (ಮೆಟಡೋರ್ ವ್ಯಾನ್) ಮಂಗಳೂರು ಆಕಾಶವಾಣಿಯ ಬಳಿ ಅಫಘಾತಕ್ಕೀಡಾಗಿತ್ತು.

ಶೇಖರ ಶೆಟ್ರು, ಭಾಗವತ ಶ್ರೀ ಮೋಹನ ಬೈಪಾಡಿತ್ತಾಯ ಇನ್ನೂ ಕೆಲವು ಕಲಾವಿದರಿಗೆ ತೀವ್ರ ಗಾಯಗಳಾಗಿತ್ತು. ತಾಳಮದ್ದಳೆಯ ಖ್ಯಾತ ಅರ್ಥಧಾರಿ ಶ್ರೀ ಶಂಭು ಶರ್ಮರೂ ಮಾಡಾವು ಕೊರಗಪ್ಪ ರೈಗಳೂ ಆ ವಾಹನದಲ್ಲಿದ್ದರು. ಈಗಲೂ ಆ ಘಟನೆಯನ್ನು ಎಣಿಸುವಾಗ ಭಯವಾಗುತ್ತದೆ ಎನ್ನುವ ಮೂಲಕ ಕೊರಗಪ್ಪ ರೈಗಳು ಅಂದಿನ ದಿನವನ್ನು ನೆನಪಿಸುತ್ತಾರೆ. 1987-88ರಲ್ಲಿ ಕದ್ರಿ ಮೇಳದಲ್ಲಿ ತಿರುಗಾಟ. ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವ, ಕದ್ರಿ ಮೇಳದಲ್ಲಿ ಎರಡು ತಿರುಗಾಟ. ಬಳಿಕ ಒಂದು ವರ್ಷ ಪುತ್ತೂರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ ತಿರುಗಾಟ. ಬಳಿಕ ಮೇಳದ ತಿರುಗಾಟ ನಿಲ್ಲಿಸಿ ಒಂದು ವರ್ಷ ಮನೆಯಲ್ಲಿಯೇ ಇದ್ದರು. 1993ರಲ್ಲಿ ಭಾಗವತರಾದ ಕುಬಣೂರು ಶ್ರೀಧರ ರಾಯರ ಬೇಡಿಕೆಯಂತೆ ಕೊರಗಪ್ಪ ರೈಗಳು ಕಟೀಲು ಮೇಳಕ್ಕೆ ಸೇರಿದ್ದರು.  

ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವ. ಒಂದನೇ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ಪೌರಾಣಿಕ ಪ್ರಸಂಗದ ಅನುಭವ ಗಳಿಸಿ ಎಲ್ಲಾ ವೇಷಗಳಲ್ಲೂ ಕೊರಗಪ್ಪ ರೈಗಳು ಹೆಸರು ಗಳಿಸಿದರು. ಕಟೀಲು ನಾಲ್ಕನೇ ಮೇಳ ಆರಂಭವಾದಾಗ ಆ ಮೇಳಕ್ಕೆ. ನಿರಂತರ 27 ವರ್ಷಗಳಿಂದ ಅದೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರು ಹಂತ ಹಂತವಾಗಿ ಮೇಲೇರಿಯೇ ಕಲಾವಿದನಾಗಿ ಗಟ್ಟಿಗರಾದವರು. ಪೂರ್ವರಂಗದಲ್ಲಿ ಬಾಲಗೋಪಾಲನಿಂದ ತೊಡಗಿ ನಿಧಾನವಾಗಿ, ದೃಢವಾಗಿ ಬೆಳೆದೇ ಈ ಎತ್ತರವನ್ನು ಏರಿದವರು. ಬಾಲಲೀಲೆಯ ಶ್ರೀಕೃಷ್ಣ, ಮಾರ್ಕಂಡೇಯ, ಸರ್ವದಮನ, ಧ್ರುವ,ಪ್ರಹ್ಲಾದ, ಲಕ್ಷ್ಮಣ, ಸಿತಕೇತ, ಸುದರ್ಶನ, ಬಬ್ರುವಾಹನ, ಪರಶುರಾಮ, ಅಭಿಮನ್ಯು ಹೀಗೆ ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನು ಮಾಡಿದ್ದಾರೆ.

ಪ್ರಸ್ತುತ ಅನೇಕ ವರ್ಷಗಳ ಕಾಲ ದೇವಿ ಮಹಾತ್ಮೆಯ ಬ್ರಹ್ಮ, ಚಂಡ ಮುಂಡರಾಗಿ ಅಭಿನಯಿಸಿದ್ದರು. ಈಗ ಶ್ರೀಕೃಷ್ಣ, ವಿಷ್ಣು ಮೊದಲಾದ ಮಾತುಗಾರಿಕೆ ಪ್ರಧಾನವಾದ ವೇಷಗಳನ್ನು ಮಾಡುತ್ತಾರೆ. ಕೊರಗಪ್ಪ ರೈಗಳು ಹಾಸ್ಯರಸಕ್ಕೆ ಸಂಬಂಧಿಸಿ ಕೆಲವು ಪಾತ್ರಗಳನ್ನೂ ಚೆನ್ನಾಗಿ ಮಾಡುತ್ತಾರೆ. ಶಿವಪ್ರಭ ಪರಿಣಯದ ಚಂದ್ರದ್ಯುಮ್ನ, ಯಶೋಮತಿ ಏಕಾವಳೀ ಪ್ರಸಂಗದ ವೀರಕೀರ್ತಿ, ಚಂದ್ರಹಾಸ ಪ್ರಸಂಗದ ಮದನ ಮೊದಲಾದ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಕಲ್ಪನೆಯಿಂದ ಜೀವ ತುಂಬಿದ್ದಾರೆ. ಅಂಬರೀಷ ಪ್ರಸಂಗದ ದೂರ್ವಾಸ, ಹರಿಶ್ಚಂದ್ರ ಪ್ರಸಂಗದ ನಕ್ಷತ್ರಿಕ ಮೊದಲಾದ ಪಾತ್ರಗಳು ಕೊರಗಪ್ಪಣ್ಣ ಮೇಳಕ್ಕೆ ರಜೆಯಾದರೆ ಮಾತ್ರ ಬೇರೆ ಕಲಾವಿದರು ನಿರ್ವಹಿಸುತ್ತಾರೆ. 

ಕರ್ನಾಟಕ, ಬಪ್ಪನಾಡು, ಬೆಳ್ಮಣ್, ಕಾಂತಾವರ, ಕದ್ರಿ, ಕಟೀಲು ಮೇಳಗಳಲ್ಲೆಲ್ಲಾ ಶ್ರೇಷ್ಠ ಕಲಾವಿದರ ಒಡನಾಟಕ್ಕೆ ಅವಕಾಶ ಸಿಕ್ಕಿತ್ತು. ಹಿರಿಯರಿಂದ ಕಲಿತಿದ್ದೇನೆ. ಕಿರಿಯರು ಪ್ರೀತಿಸಿದ್ದಾರೆ. ಸಹಕಲಾವಿದರ ಸಹಕಾರದಿಂದಲೇ ನಾನು ಕಲಾ ಸೇವೆ ಮಾಡಿದೆ. ವೃತ್ತಿಜೀವನದಲ್ಲಿ ಸಂತಸವನ್ನು ಅನುಭವಿಸಿದ್ದೇನೆ ಎನ್ನುವ ಮಾಡಾವು ಕೊರಗಪ್ಪ ರೈಗಳನ್ನು ಅನೇಕ ಸಂಸ್ಥೆಗಳು ಸನ್ಮಾನಿಸಿವೆ. ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಒಟ್ಟು ಮೇಳದ ತಿರುಗಾಟ 38. ಆದರೂ ಯಕ್ಷಗಾನ ಕ್ಷೇತ್ರದಲ್ಲಿ 48 ವರ್ಷಗಳ ಅನುಭವಿ ಇವರು. ಅಳಿಕೆ ಪ್ರಶಸ್ತಿ, ಕದ್ರಿ ವಿಷ್ಣು ಪ್ರಶಸ್ತಿಯನ್ನು ಪಡೆದುದಲ್ಲದೆ ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣೆಯ ರಜತ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನಿತರಾಗಿದ್ದಾರೆ. ಕಳೆದ ವರ್ಷ ಮುಂಬಯಿಯಲ್ಲಿ ಸ್ವರ್ಗೀಯ ಶ್ರೀ ಶೇಖರ್ ಶೆಟ್ಟಿ  ಬೆಳ್ಮಣ್ ಸಂಸ್ಮರಣಾ ಸಮಿತಿಯವರೂ ಸನ್ಮಾನಿಸಿರುತ್ತಾರೆ.

ಕೊರಗಪ್ಪ ರೈಗಳು ಸಾಂಸಾರಿಕವಾಗಿಯೂ ತೃಪ್ತರು. ಪತ್ನಿ ಹೇಮಾವತಿ, ಪುತ್ರ ಭಾನುಪ್ರಕಾಶ್, ಸೊಸೆ ಸುರೇಖಾ ಮತ್ತು ಮೊಮ್ಮಗ ಅಹನ್ ಇವರೊಂದಿಗೆ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಸನಂಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಾಡಾವು ಶ್ರೀ ಕೊರಗಪ್ಪ ರೈಗಳಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶವಿರಲಿ. ಕಲಾಮಾತೆಯು ಸಕಲ ಸೌಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಮಂದಾರ್ತಿ ಮೇಳದ ಯಕ್ಷಗಾನ ಕಲಾವಿದ ಸಿ. ಸಾಧು ಕೊಠಾರಿ ಮೇಳದ  ತಿರುಗಾಟದಲ್ಲಿರುವಾಗಲೇ ನಿಧನ

ಮಂದಾರ್ತಿ 3 ನೇ ಮೇಳದ ಒತ್ತು ಎರಡನೇ ವೇಷಧಾರಿ ಸಿ. ಸಾಧುಕೊಠಾರಿ (58 ವರ್ಷ) ಇಂದು (05-01-2021) ಮುಂಜಾನೆ 5 ಗಂಟೆಗೆ ದೈವಾಧೀನರಾದರು. ಸಾೈಬರಕಟ್ಟೆ ಬಳಿ ಕಾಜ್ರಳ್ಳಿಯಲ್ಲಿ ಜರಗಿದ ಮಧುರಾ ಮಹೀಂದ್ರ ಪ್ರಸಂಗದಲ್ಲಿ ಮಾಗಧನ ಪಾತ್ರವನ್ನು ಸೊಗಸಾಗಿ ನಿರ್ವಹಿಸಿ ಚೌಕಿಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ ಎದೆನೋವು ಬಂದುದರಿಂದ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಹ ಕಲಾವಿದರು ವಾಹನದಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಹೃದಯ ಸ್ಥಂಭನಕ್ಕೊಳಗಾಗಿ ಕಲಾಭಿಮಾನಿಗಳನ್ನು ಶೋಕ ಸಾಗರಕ್ಕೊಳಗು ಮಾಡಿದರು. 15ನೇ ವರ್ಷಕ್ಕೆ ಮೇಳ ಸೇರಿದ ಇವರು ಗೋಳಿಗರಡಿ, ಕಮಲಶಿಲೆ, ಅಮೃತೇಶ್ವರೀ, ಸಾಲಿಗ್ರಾಮ, ಸೌಕೂರು, ಹಾಲಾಡಿ ಮತ್ತು ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ವೈವಿಧ್ಯಮಯ ವೇಷಗಳನ್ನು ಮಾಡಿ ಕಲಾ ಸೇವೆ ಗೈದಿರುತ್ತಾರೆ.ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನುಅಗಲಿದ್ದು, ಅಂತ್ಯಕ್ರಿಯೆಯನ್ನುಇಂದು ಸಂಜೆ ಬಾರ್ಕೂರಿನ ಬಳಿ ಹೇರಾಡಿಯಲ್ಲಿ ನೆರೆವೇರಿಸಲಾಗುವುದು.


ಯಕ್ಷಗಾನ ಕಲಾರಂಗದಲ್ಲಿ ರೂ1 ಲಕ್ಷ ಜೀವನ ಆನಂದ ವಿಮಾ ಯೋಜನೆಯನ್ನು ಮಾಡಿಕೊಂಡಿದ್ದು, ಯಕ್ಷನಿಧಿಯ ಎಲ್ಲಾ ಯೋಜನೆಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡ ಸರಳ ಸಜ್ಜನಿಕೆಯ ಕಲಾವಿದರಾಗಿದ್ದ ಇವರ ನಿಧನಕ್ಕೆ ಕಲಾರಂಗದ ಅಧ್ಯಕ್ಷ ಎಮ್.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್‍ ತೀವ್ರ  ಸಂತಾಪ ವ್ಯಕ್ತ ಪಡಿಸಿದ್ದಾರೆ.

ಜಾಹೀರಾತು 

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದಿಂದ ಯಕ್ಷಗಾನ ತಾಳಮದ್ದಳೆ ಸಪ್ತಾಹ 

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ನೇತೃತ್ವದಲ್ಲಿ ಕುಂದಾಪುರದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ನಡೆಯಲಿದೆ. ಕಲಾಕ್ಷೇತ್ರ ಕುಂದಾಪುರ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಈ ತಾಳಮದ್ದಳೆ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 24.012021ರಿಂದ ದಿನಾಂಕ 30.01.2021ರ ವರೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಕಲಾಮಂದಿರದಲ್ಲಿ ನಡೆಯಲಿರುವ ಈ ತಾಳಮದ್ದಳೆ ಸಪ್ತಾಹದಲ್ಲಿ ತೆಂಕು ಬಡಗಿನ ಘಟಾನುಘಟಿ ಕಲಾವಿದರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ವಿವರವನ್ನು ಲಗತ್ತಿಸಲಾಗಿದೆ. 

ಜಾಹೀರಾತು 

ಮೇಳಗಳ ಇಂದಿನ (05.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (05.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಇಂದು/ದಿನಾಂಕಸ್ಥಳ
ಶ್ರೀ ಧರ್ಮಸ್ಥಳ ಮೇಳ05.01.2021ದಬ್ಬೇಕಟ್ಟೆ ಮೇಲ್ಮನೆ ವಠಾರ – ಸುದರ್ಶನ ವಿಜಯ, ಗಿರಿಜಾ ಕಲ್ಯಾಣ 
ಕಟೀಲು ಒಂದನೇ ಮೇಳ05.01.2021ರಾಜರತ್ನಪುರ, ಕಿನ್ನಿಗೋಳಿ 
ಕಟೀಲು ಎರಡನೇ ಮೇಳ 05.01.2021ಕಟೀಲು ಕ್ಷೇತ್ರದಲ್ಲಿ 
ಕಟೀಲು ಮೂರನೇ ಮೇಳ05.01.2021ಸಂಗಯ್ಯಬೆಟ್ಟು ಮನೆ, ತೋಡಾರು, ಮಿಜಾರು 
ಕಟೀಲು ನಾಲ್ಕನೇ ಮೇಳ 05.01.2021ಪುತ್ತಿಗೆ ಪದವು ಯುವಕ ಮಂಡಲ, ಪುತ್ತಿಗೆ, ಮೂಡಬಿದ್ರೆ 
ಕಟೀಲು ಐದನೇ ಮೇಳ 05.01.2021ಜಿಂಜರ್ ಹೋಟೆಲ್ ಬಳಿ, ಕೊಟ್ಟಾರಚೌಕಿ, ಮಂಗಳೂರು 
ಕಟೀಲು ಆರನೇ ಮೇಳ05.01.2021ಬನ್ನಡ್ಕ, ಬೆಳುವಾಯಿ 
ಮಂದಾರ್ತಿ ಒಂದನೇ ಮೇಳ 05.01.2021ಮಣಿಬಚ್ಚಲು,ಚಾರ, ಹೆಬ್ರಿ 
ಮಂದಾರ್ತಿ ಎರಡನೇ ಮೇಳ 05.01.2021ಹೊಸಾಳ ಬಾರ್ಕೂರು 
ಮಂದಾರ್ತಿ ಮೂರನೇ ಮೇಳ 05.01.2021ಗೌರಿಬೆಟ್ಟು ಪೆಜಮಂಗೂರು, ಕೊಕ್ಕರ್ಣೆ 
ಮಂದಾರ್ತಿ ನಾಲ್ಕನೇ ಮೇಳ 05.01.2021ಮಡಿವಾಳಬೆಟ್ಟು, ಗೋಪಾಡಿ, ಕೋಟೇಶ್ವರ 
ಮಂದಾರ್ತಿ ಐದನೇ ಮೇಳ 05.01.2021ಕಲ್ಲುಕುಟ್ಟಿಗ, ಹದ್ದೂರು, ಶಂಕರನಾರಾಯಣ 
ಶ್ರೀ ಹನುಮಗಿರಿ ಮೇಳ 05.01.2021ನಾರಾವಿ ಸೂರ್ಯನಾರಾಯಣ ದೇವಸ್ಥಾನದ ವಠಾರ – ಓಂ ನಮಃ ಶಿವಾಯ – ಶ್ರೀನಿವಾಸ ಕಲ್ಯಾಣ
ಶ್ರೀ ತಳಕಲ ಮೇಳ05.01.2021ಶ್ರೀ ಕ್ಷೇತ್ರದಲ್ಲಿ – ಭಸ್ಮಾಸುರ ಮೋಹಿನಿ  
ಶ್ರೀ ಮಾರಣಕಟ್ಟೆ ಮೇಳ ‘ಎ’05.01.2021ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’05.01.2021ಕಂಬಳಗದ್ದೆ, ನಂದ್ರೊಳ್ಳಿ 
ಶ್ರೀ ಮಾರಣಕಟ್ಟೆ ಮೇಳ ‘ಸಿ’05.01.2021ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ 05.01.2021ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನದ ದ್ವಾರದ ಬಳಿ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳ05.01.2021ಹಾವಂಜೆ ಸರ್ಕಲ್ – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’05.01.2021ವಾಟೇಬಚ್ಚಲು 
ಕಮಲಶಿಲೆ ಮೇಳ ‘ಬಿ’05.01.2021ಕೊಳಲುಮಕ್ಕಿ 
ಶ್ರೀ ಬಪ್ಪನಾಡು ಮೇಳ05.01.2021ಶ್ರೀ ಕ್ಷೇತ್ರ ಬಪ್ಪನಾಡಿನಲ್ಲಿ – ಬನತ ಬಂಗಾರ್
ಶ್ರೀ ಅಮೃತೇಶ್ವರೀ ಮೇಳ05.01.2021ಕಲ್ಮಾಡಿ ರಸ್ತೆ, ಕೋಟ ತಟ್ಟು 
ಶ್ರೀ ಬೋಳಂಬಳ್ಳಿ ಮೇಳ 05.01.2021ಖಂಬದಕೋಣೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿ – ಬೋಳಂಬಳ್ಳಿ ಕ್ಷೇತ್ರ ಮಹಾತ್ಮೆ  
ಶ್ರೀ ಸೌಕೂರು ಮೇಳ05.01.2021ದೇವಲ್ಕುಂದ ಮೇಲ್ಮನೆ – ಪುಷ್ಪಚಂದನ 
ಶ್ರೀ ಹಾಲಾಡಿ ಮೇಳ05.01.2021ನಂದಿಕೇಶ್ವರ ಸಹಪಾರಿವಾರ ದೇವಸ್ಥಾನ, ಕಲಾಗಾರ, ಮಂಗಲಪಾಡ್ಯ ರಸ್ತೆ, ಕುಂದಾಪುರ
ಶ್ರೀ ಬೆಂಕಿನಾಥೇಶ್ವರ ಮೇಳ  05.01.2021ಸಿದ್ಧಾಪುರ ವಾರಾಹಿ ರೋಡ್ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳ05.01.2021ಕುಚ್ಚೂರು, ಹಾಲಿಕೊಡ್ಲು – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳ05.01.2021ಶ್ರೀ ಕ್ಷೇತ್ರದಲ್ಲಿ – ಸರ್ಪ ಶಪಥ
ಶ್ರೀ ಉಳ್ಳಾಲ ಚೀರುಂಭ ಭಗವತೀ ಮೇಳ 05.01.2021 
ಶ್ರೀ ಹಿರಿಯಡಕ ಮೇಳ05.01.2021ಶ್ರೀ ಕ್ಷೇತ್ರ ಪೆರ್ಡೂರು – ಪ್ರಮೀಳಾರ್ಜುನ, ಸ್ವಯಂಪ್ರಭಾ  
ಶ್ರೀ ಶನೀಶ್ವರ ಮೇಳ 05.01.2021ಶ್ರೀರಾಮ ಭಜನಾ ಮಂದಿರ ಆಲೂರು – ತಾಟಕ ಮೋಕ್ಷ