Wednesday, January 22, 2025
Home Blog Page 351

‘ಮಹಾಮಲ್ಲ ಕಂಸ’ – ಮಂಚಿಕೇರಿಯಲ್ಲಿ ಯಕ್ಷಗಾನ ಪ್ರದರ್ಶನ

 

ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಾಗೂ ಅಭಿನೇತ್ರಿ ಆರ್ಟ್ ಟ್ರಸ್ಟ್, ನೀಲ್ಕೋಡು ಇದರ ಸಹಯೋಗದಿಂದ ರಾಮಲಿಂಗೇಶ್ವರ ದೇವಾಲಯ ಕಂಚನಹಳ್ಳಿ, ಮಂಚಿಕೇರಿಯಲ್ಲಿ ನವೆಂಬರ್ 25, 2020ನೇ ಬುಧವಾರದಂದು ಸಂಜೆ ಘಂಟೆ  6ರಿಂದ ‘ಮಹಾಮಲ್ಲ ಕಂಸ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಡಗುತಿಟ್ಟಿನ ಹೆಸರಾಂತ ಕಲಾವಿದರು ಭಾಗವಹಿಸಲಿರುವರು. ಸರಕಾರದ ಕೋವಿಡ್-೧೯ ನಿಯಮಾನುಸಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ. 

ನೆಬ್ಬೂರು ನಾರಾಯಣ ಭಾಗವತ – ಪರಂಪರೆಯನ್ನು ಮುರಿಯದ ಬಡಗು ತಿಟ್ಟಿನ ಭಾಗವತ 

ಪ್ರಸಿದ್ಧಿಗಾಗಿ ಬಾಗದೆ ಪರಂಪರೆ ಸಂಪ್ರದಾಯವನ್ನು ಮುರಿಯದೆ ಭಾಗವತರಾಗಿ ಮೆರೆದ ನೆಬ್ಬೂರು ಶ್ರೀ ನಾರಾಯಣ ದೇವರು ಹೆಗಡೆಯವರ ಹಾಡುಗಾರಿಕೆಯು ಬಡಗುತಿಟ್ಟಿನ ಯಕ್ಷಗಾನಕ್ಕೆ ಒಂದು ವಿಶೇಷ ಕೊಡುಗೆ ಎಂದೇ ಗುರುತಿಸಲ್ಪಟ್ಟಿದೆ. ಕಲಾವಿದರ ಸಾಮರ್ಥ್ಯವನ್ನು ಹೊರಗೆಡಹುವಲ್ಲಿ ಮತ್ತು ಹೆಚ್ಚಿಸುವಲ್ಲಿ ಇವರ ಹಾಡುಗಾರಿಕೆಯು ಅತ್ಯಂತ ಸಹಕಾರಿಯಾಗಿರುತ್ತಿತ್ತು. 

ಘಟ್ಟದ ಮೇಲಿನಿಂದ ಭಾಗವತಿಕೆಯನ್ನು ಕಲಿಯಲೆಂದೇ ಕೆಳಗಿಳಿದು ಕೆರೆಮನೆಯತ್ತ ಸಾಗಿದವರು. ಪ್ರಸಿದ್ಧ ರಂಗನಟ ಶ್ರೀ ಇಡಗುಂಜಿ ಮೇಳದ ಸಂಸ್ಥಾಪಕ ಕೆರೆಮನೆ ಶ್ರೀ ಶಿವರಾಮ ಹೆಗಡೆಯವರಿಂದ ಅವರ ಮನೆಯಲ್ಲಿದ್ದುಕೊಂಡೇ ಕಲಿತರು.  ಭಾಗವತಿಕೆಯನ್ನು ಕಲಿಯಲು ಗುರುವಾಗಿ ರಂಗನಟರನ್ನು ಆಯ್ಕೆ ಮಾಡಿದ್ದು ಮತ್ತು ರಂಗನಟನೊಬ್ಬನು ಶ್ರೇಷ್ಠ ಭಾಗವತನನ್ನು ತಯಾರು ಮಾಡಿದ್ದು ನಿಜಕ್ಕೂ ಅಚ್ಚರಿಯನ್ನು ತರುವ ವಿಚಾರ.  

ಇಡಗುಂಜಿ ಮೇಳದ ಪ್ರದರ್ಶನಗಳನ್ನು ನೋಡಿದ ಹಳೆಯ ಪ್ರೇಕ್ಷಕರು ನೆಬ್ಬೂರರು ನಿಧಾನ ಲಯದಲ್ಲಿ ಹಾಡುವ ಪದ್ಯಗಳ ಸೊಗಸು ಅವರ್ಣನೀಯವಾದುದು ಎಂದು ಪ್ರಶಂಸಿಸುತ್ತಾರೆ.  “ನಾನು ವೇಗದ ಲಯದಲ್ಲೇ ಹಾಡಬಲ್ಲೆ ಮತ್ತು ಹಾಡಿದ್ದೇನೆ. ಆದರೆ ನಿಧಾನಲಯದಲ್ಲಿ ಯಕ್ಷಗಾನದ ನಿಜವಾದ ಸೌಂದರ್ಯವು ಸರಿಯಾಗಿ ಕಾಣಿಸಿಕೊಳ್ಳುತ್ತದೆ. ವೇಗದ ಹಾಡುಗಾರಿಕೆಯಲ್ಲಿ ಕತೆ ಓಡುತ್ತಿರುತ್ತದೆ ಆದರೆ ಸ್ಥಾಪನೆಯಾಗುವುದಿಲ್ಲ” ಎಂದು ನೆಬ್ಬೂರು ಭಾಗವತರು ಹೇಳುತ್ತಾರೆ. 

ಬಂಧುಗಳಾದ ಶ್ರೀ ಸುಬ್ಬು ಭಾವ ಮತ್ತು ಶ್ರೀ ರಮೇಶ ಹಳೇಕಾನಗೋಡ ಇವರ ಜೊತೆ ನೆಬ್ಬೂರರ ಮನೆಗೆ ಹೋಗಿದ್ದೆ. (ಶಿರಸಿಯ ಸಮೀಪದ ಹಣಗಾರು) ಹಳ್ಳಿಯ ಹಳೆಯ ಶೈಲಿಯ ಮನೆಯು ನಮ್ಮನ್ನು ಸ್ವಾಗತಿಸಿತ್ತು. ನೆಬ್ಬೂರು ದಂಪತಿಗಳು ನಮ್ಮನ್ನು ನಗುತ್ತಾ ಮಾತನಾಡಿಸಿ ಸತ್ಕರಿಸಿದ್ದರು. ಅವರ ಪ್ರೀತಿಯ ಮಾತುಗಳಿಂದಲೇ ಹಸಿವು ದೂರವಾಗಿತ್ತು. 

ನೆಬ್ಬೂರು ನಾರಾಯಣ ಭಾಗವತರು 1936ನೆಯ ಇಸವಿ ಡಿಸೆಂಬರ್ 16ರಂದು ನೆಬ್ಬೂರು ದೇವರು ಹೆಗಡೆ ಮತ್ತು ಗಣಪಿ ಅಮ್ಮ ದಂಪತಿಗಳಿಗೆ ಮಗನಾಗಿ ಹಣಗಾರು ಎಂಬಲ್ಲಿ ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಊರಿದು. ಇವರ ಮೂಲ ಮನೆ ನೆಬ್ಬೂರು. ನೆಬ್ಬೂರು ನಾರಾಯಣ ಭಾಗವತರ ತಂದೆ ದೇವರು ಹೆಗಡೆಯವರು ಮನೆ ಅಳಿಯನಾಗಿ ಹಣಗಾರಿನಲ್ಲಿ ವಾಸವಾಗಿದ್ದರು. ಹಣಗಾರು ನೆಬ್ಬೂರಿನ ಸಮೀಪದ ಊರು. ನಾರಾಯಣ ಹೆಗಡೆಯವರು ದೇವರು ಹೆಗಡೆ, ಗಣಪಿ ಅಮ್ಮ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಎರಡನೆಯವರು (ಮೂರು ಹೆಣ್ಣು ಮತ್ತು ಒಂದು ಗಂಡು). 

ನೆಬ್ಬೂರು ಭಾಗವತರು ಆಡಳ್ಳಿ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಓದಿದ್ದರು. ಆಡಳ್ಳಿಯು ಹಣಗಾರು ಮತ್ತು ನೆಬ್ಬೂರು ಮಧ್ಯೆ ಇರುವ ಹಳ್ಳಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕುಮಟಾ, ಶಿರಸಿ ಕಡೆಗೆ ಹೋಗಬೇಕಾಗಿತ್ತು. ಅದಕ್ಕೆ ಅನುಕೂಲಗಳಿರಲಿಲ್ಲ. ಸಾರಿಗೆ ಸಂಪರ್ಕವೂ ಇರಲಿಲ್ಲ. ಶಾಲಾ ವಿದ್ಯಾರ್ಥಿಯಾಗಿದ್ದಾಗಲೆ ನೆಬ್ಬೂರರಿಗೆ ಯಕ್ಷಗಾನ ಆಸಕ್ತಿ ಹುಟ್ಟಿತು. 

ಆಡಳ್ಳಿ ಜಿಲ್ಲಾ ಬೋರ್ಡ್ ಶಾಲೆಗೆ  ಸುಬ್ರಾಯ ಬಸ್ತೀಕರ್ ಎಂಬವರು ಗೋಕರ್ಣದಿಂದ ಅಧ್ಯಾಪಕರಾಗಿ ಬಂದರು. ನೆಬ್ಬೂರರಿಗೆ ಯಕ್ಷಗಾನಾಸಕ್ತಿ ಹುಟ್ಟಲು ಇವರೆ ಕಾರಣರು. ಮಕ್ಕಳ ತಂಡವನ್ನು ಕಟ್ಟಿ ಅವರಿಗೆ ನಾಟಕ, ಆಟ, ತಾಳಮದ್ದಳೆ ವಿಚಾರದಲ್ಲಿ ತರಬೇತಿ ನೀಡಿ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟವರು ಬಸ್ತೀಕರ್ ಮಾಸ್ತರರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ತಾಳಮದ್ದಳೆಯಲ್ಲಿ ಶ್ರೀಕೃಷ್ಣ ಸಂಧಾನದ ವಿದುರ, ಅತಿಕಾಯ ಕಾಳಗದ ಸುಗ್ರೀವ, ಭೀಷ್ಮಪರ್ವದ ಧರ್ಮರಾಯ ಮೊದಲಾದ ಪಾತ್ರಗಳನ್ನು ನೆಬ್ಬೂರರು ನಿರ್ವಹಿಸಿದರು. ನಾಟಕಗಳಲ್ಲೂ ಅಭಿನಯಿಸಿದ್ದರು. ಬಸ್ತೀಕರ್ ಮಾಸ್ತರರು ಸಂಭಾಷಣೆಗಳನ್ನು ಬರೆದುಕೊಡುತ್ತಿದ್ದರು. ನೆಬ್ಬೂರರ ಅರ್ಥಗಾರಿಕೆಯಲ್ಲಿ ಶ್ರುತಿ ಜ್ಞಾನವಿದ್ದುದನ್ನ ಅಧ್ಯಾಪಕರು ಗುರುತಿಸಿದ್ದರು. ನೀನು ಭಾಗವತಿಕೆ ಕಲಿ ಎಂಬ ನಿರ್ದೇಶನವನ್ನೂ ನೀಡಿದ್ದರು. 

ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ (ಕೆರೆಮನೆ ಮೇಳ) ಕೆರೆಮನೆ ಶಿವರಾಮ ಹೆಗಡೆಯವರಿಂದ 1934ರಲ್ಲಿ ಸ್ಥಾಪಿತವಾಗಿತ್ತು. ಶ್ರೀ ವೆಂಕಟ್ರಮಣ ಯಾಜಿಯವರು ಅದರ ಸ್ಥಾಪಕ ಭಾಗವತರಾಗಿದ್ದರು. ಅವರಿಗೆ ವಯಸ್ಸಾಗಿತ್ತು. ಕೆರೆಮನೆ ಶಿವರಾಮ ಹೆಗಡೆಯವರು ಭಾಗವತಿಕೆ ಕಲಿಕಾ ಆಸಕ್ತಿಯುಳ್ಳವರಿಗಾಗಿ ಅರಸುತ್ತಿದ್ದರು. ಕಲಿತು ಭಾಗವತನಾಗುವೆನೆಂಬ ಆಸೆಯನ್ನು ಹೊತ್ತು ನೆಬ್ಬೂರರು ಗಣೇಶ ಚೌತಿಯ ಮರುದಿನದಂದು ಹುಟ್ಟೂರಿನಿಂದ ಕೆರೆಮನೆಯತ್ತ ಹೊರಟರು. 

ತಲುಪಿದ ಮಾರನೆಯ ದಿನ ಸಂಜೆ ನೆಬ್ಬೂರರಿಗೆ ಪ್ರಥಮ ಪರೀಕ್ಷೆ. ಮದ್ದಳೆಗಾರರನ್ನು ಕರೆಸಿ ಪದ್ಯ ಹೇಳಿಸಿದರು. ಅಂದು ಗೇರುಸೊಪ್ಪ ಹೈಗುಂದದಲ್ಲಿ ಆಯುರ್ವೇದ ವೈದ್ಯರಾಗಿದ್ದ ಡಾ. ಪದ್ಮನಾಭಯ್ಯನವರು ಬಂದಿದ್ದರು. ಇವರು ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದರು. ಕೆರೆಮನೆ ಶಿವರಾಮ ಹೆಗಡೆಯವರ ಆತ್ಮೀಯರು. ನೆಬ್ಬೂರರು ಪದ್ಯ ಹೇಳಿದರು. ಸ್ವರ ಇಬ್ಬರಿಗೂ ಇಷ್ಟವಾಯಿತು. ಆಗ ನೆಬ್ಬೂರರಿಗೆ ವಯಸ್ಸು 18. ಶಿವರಾಮ ಹೆಗಡೆಯವರು ನೆಬ್ಬೂರರನ್ನು ಮಗನೆಂದೇ ಸ್ವೀಕರಿಸಿದ್ದರು.

ಮನೆಯ ಸದಸ್ಯನಂತೆಯೇ ಇದ್ದುಕೊಂಡು ನೆಬ್ಬೂರರು ಅಲ್ಲಿ ಕಲಿತು ಸಾಧಕರಾದರು. ನೆಬ್ಬೂರರು ಶಿವರಾಮ ಹೆಗಡೆ ದಂಪತಿಗಳನ್ನು ಅಪ್ಪಯ್ಯ, ಅಮ್ಮ ಎಂದೆ ಕರೆಯುತ್ತಿದ್ದರು. ಕೆರೆಮನೆ ಮಹಾಬಲ ಹೆಗಡೆಯವರು ಕೂಡಾ ನೆಬ್ಬೂರರ ಜತೆ ಪದ್ಯ ಹೇಳುತ್ತಾ ಕುಣಿಯುತ್ತಿದ್ದರು. ಅವರಿಂದಲೂ ನಾನು ಬಹಳಷ್ಟನ್ನು ಕಲಿತಿದ್ದೇನೆ ಎಂದು ಹೇಳುವ ಮೂಲಕ ನೆಬ್ಬೂರರು ಮಹಾಬಲ ಹೆಗಡೆಯವರನ್ನು ಗೌರವಿಸುತ್ತಾರೆ. ಕೆರೆಮನೆ ಶಂಭು ಹೆಗ್ಗಡೆಯವರು ಆತ್ಮೀಯರಾದರು. ಜತೆಯಾಗಿಯೇ ಕಲಿತು ಇಬ್ಬರು ಪ್ರಸಿದ್ಧರಾದರು. ಅಣ್ಣತಮ್ಮಂದಿರಂತೆ ಮನೆಯಲ್ಲೂ ಕಲಾ ಬದುಕಿನುದ್ದಕ್ಕೂ ಬಾಳಿಬೆಳಗಿದರು. 

1959 ಮತ್ತು 1960ರಲ್ಲಿ ಕೆರೆಮನೆ ಮೇಳದಲ್ಲಿ ಸಂಗೀತಗಾರನಾಗಿ ತಿರುಗಾಟ. ಆಗ ಮಾರ್ವಿ ನಾರಣಪ್ಪ ಉಪ್ಪೂರರು ಪ್ರಧಾನ ಭಾಗವತರಾಗಿದ್ದರು. ನೆಬ್ಬೂರರ ಸ್ವರ, ವಿನಯತೆಗೆ ಉಪ್ಪೂರರು ಮಾರುಹೋಗಿದ್ದರು. ವಾತ್ಸಲ್ಯವನ್ನು ತೋರಿ ಪ್ರೋತ್ಸಾಹಿಸಿದರು. ಎಚ್ಚರಿಸುತ್ತಲೂ ಇದ್ದರು. ತನ್ನ ಹಾಡುಗಾರಿಕೆ ಮುಗಿದ ಮೇಲೆ ಉಪ್ಪೂರರ ಭಾಗವತಿಕೆಗೆ ಹಾರ್ಮೋನಿಯಂ ಬಾರಿಸುತ್ತಿದ್ದರು. ಇದರಿಂದ ರಂಗಾನುಭವ, ಪ್ರಸಂಗದ ನಡೆಗಳನ್ನು ತಿಳಿದುಕೊಳ್ಳುವ ಅವಕಾಶವಾಗಿತ್ತು. “ಉಪ್ಪೂರರಲ್ಲಿ ಬಹಳಷ್ಟು ಕಲಿತೆ, ಎರಡು ವರ್ಷ ಮೇಳದಲ್ಲಿ ಅವರೊಂದಿಗೆ ಒಡನಾಡುವ ಭಾಗ್ಯ ಸಿದ್ಧಿಸಿತ್ತು. ಅವರ ಒಡನಾಟ ನನ್ನ ಕಲಾಬದುಕಿನ ಉತ್ಕರ್ಷಕ್ಕೆ ಕಾರಣವಾಯಿತು” ಎಂದು ನೆಬ್ಬೂರರು ಉಪ್ಪೂರರನ್ನು ಗೌರವಿಸುತ್ತಾರೆ. 

ನೆಬ್ಬೂರರ ಜೊತೆಯಲ್ಲಿ ಲೇಖಕರು ಮತ್ತು ಪತ್ರಕರ್ತ ರಮೇಶ್ ಕಾನಗೋಡ್

1961ರಲ್ಲಿ ಉಪ್ಪೂರರು ಅಮೃತೇಶ್ವರಿ ಮೇಳಕ್ಕೆ ಹೋದಾಗ ನೆಬ್ಬೂರರು ಕೆರೆಮನೆ ಮೇಳದ ಪ್ರಧಾನ ಭಾಗವತರಾಗಿ ಆಯ್ಕೆ ಯಾದರು. 1969ರಿಂದ ಮೂರು ವರ್ಷಗಳ ಕಾಲ ಸದ್ರಿ ಮೇಳವು ತಿರುಗಾಟ ನಡೆಸಿರಲಿಲ್ಲ. 1969ರಲ್ಲಿ ನೆಬ್ಬೂರರು ಅಮೃತೇಶ್ವರಿ ಮೇಳದಲ್ಲೂ ಮುಂದಿನ ಎರಡು ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲಿ ತಿರುಗಾಟ ನಡೆಸಿದ್ದರು. 1972ರಲ್ಲಿ ಕೆರೆಮನೆ ಮೇಳವನ್ನು ಶಂಭು ಹೆಗ್ಗಡೆಯವರು ಪುನರ್ ಸಂಘಟಿಸಿದ್ದರು. ಅಲ್ಲಿಂದ ತೊಡಗಿ 2009ರ ವರೆಗೆ ನೆಬ್ಬೂರರ ಭಾಗವತಿಕೆಯಲ್ಲಿ ಕೆರೆಮನೆ ಮೇಳದ ಪ್ರದರ್ಶನಗಳು ಎಲ್ಲೆಡೆ ರಂಜಿಸಿದವು. 

ಮೂಲ್ಕಿ, ಕೊಲ್ಲೂರು ಅಲ್ಲದೆ ಪುರ್ಲೆ ರಾಮಚಂದ್ರರಾಯರ ಶಿರಸಿ ಮೇಳ ದಲ್ಲೂ ಅಲ್ಪಕಾಲ ನೆಬ್ಬೂರರು ವ್ಯವಸಾಯ ಮಾಡಿದ್ದರು. ನೆಬ್ಬೂರರ ಭಾಗವತಿಕೆಯಲ್ಲಿ ಅನೇಕ ಪುರಾಣ ಪ್ರಸಂಗಗಳ ಪ್ರದರ್ಶನಗಳು ಪ್ರೇಕ್ಷಕರಿಗೆ ಮರೆಯಲಾಗದ ಅನುಭವವಾಗಿ ಉಳಿಯಿತು. ಶ್ರೀಕೃಷ್ಣ ಸಂಧಾನ, ಕೀಚಕವಧೆ, ಮಾಗಧವಧೆ, ಪಟ್ಟಾಭಿಷೇಕ, ಕರ್ಣಪರ್ವ, ಗದಾಯುದ್ಧ, ರತ್ನಾವತಿ ಕಲ್ಯಾಣ, ಚಂದ್ರಹಾಸ, ಸುಧನ್ವಾರ್ಜುನ, ಶ್ರೀರಾಮನಿರ್ಯಾಣ ಮೊದಲಾದ ಪ್ರಸಂಗಗಳ ಹಾಡುಗಳು ನೆಬ್ಬೂರರಿಗೆ ಜನಪ್ರಿಯತೆಯನ್ನು ನೀಡಿತು.

ದೂರದರ್ಶನ ಕಾರ್ಯಕ್ರಮಗಳಲ್ಲೂ ಹಲವು ಬಾರಿ ಕಾಣಿಸಿಕೊಂಡ ಮೊದಲಿಗರಿವರು. ಕೆರೆಮನೆ ತಂಡದೊಂದಿಗೆ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿದರು. 1984ರಲ್ಲಿ ಮೊದಲಿಗೆ ಬಹ್ರೈನ್‌ಗೆ, ಅಮೇರಿಕಾ ದೇಶಕ್ಕೆ ಎರಡು ಬಾರಿ ಹಾಗೂ ಅಲ್ಲಿನ ಹೆಚ್ಚಿನ ಎಲ್ಲಾ ನಗರಗಳಲ್ಲಿ ಪ್ರದರ್ಶನ ನೀಡಿದರು. ಲಂಡನ್, ನೇಪಾಳ, ಚೀನಾ, ಫ್ರಾನ್ಸ್, ಸ್ಪೇನ್, ಬಾಂಗ್ಲಾ, ಸಿಂಗಪೂರ್, ಬರ್ಮಾ, ಲಾವೋಸ್, ಮಲೇಶಿಯ, ಫಿಲಿಪ್ಪೀನ್ಸ್, (ಕೆರೆಮನೆ ಶಿವಾನಂದ ಹೆಗಡೆ ಅವರ ನೇತೃತ್ವದಲ್ಲಿ) ಮೊದಲಾದ ದೇಶಗಳ ಪ್ರೇಕ್ಷಕರನ್ನು ತಮ್ಮ ಗಾನಸುಧೆಯಲ್ಲಿ ತೇಲಾಡಿಸಿದರು.

1996ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿತ್ತು. 2002ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, 2006ರಲ್ಲಿ ಶೇಣಿ ಪ್ರಶಸ್ತಿ ಅಲ್ಲದೆ ನೆಬ್ಬೂರರಿಗೆ ರಾಜ್ಯ ಪ್ರಶಸ್ತಿಯೂ ಕರ್ನಾಟಕ ಸರಕಾರದಿಂದ ಕೊಡಲ್ಪಟ್ಟಿತ್ತು. ಭಾರತ ದೇಶದೆಲ್ಲೆಡೆ ಮತ್ತು ವಿದೇಶಗಳಲ್ಲೂ ಕಲಾಪ್ರಿಯರಿಗೆ ತಮ್ಮ ಗಾನಸುಧಾ ಅಮೃತವನ್ನು ಉಣಿಸಿದ ನೆಬ್ಬೂರು ನಾರಾಯಣ ಭಾಗವತರನ್ನು ಎಲ್ಲೆಡೆ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಯಕ್ಷಗಾನ ಪ್ರಪಂಚದಲ್ಲಿ ಖ್ಯಾತ ರಂಗನಟರಾಗಿ ರಂಜಿಸಿದ ಕೆರೆಮನೆ ಶಿವರಾಮ ಹೆಗಡೆಯವರ ಪ್ರಶಸ್ತಿ, ತಾಳಮದ್ದಳೆ ಕ್ಷೇತ್ರದಲ್ಲಿ ಬೆಳೆದು ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಶಸ್ತಿ ಇವೆರಡೂ ನನ್ನ ಬದುಕಿನ ಆಸ್ತಿಗಳು ಎಂದು ಹೇಳುವ ನೆಬ್ಬೂರರು ಕೆರೆಮನೆ ಕುಟುಂಬದ ನಾಲ್ವರು ಕಲಾವಿದರನ್ನು ರಂಗದಲ್ಲಿ ಕುಣಿಸಿದವರು. 

ಗುರು ಶಿವರಾಮ ಹೆಗಡೆಯವರನ್ನು ಭಯ ಮತ್ತು ಆತಂಕದಿಂದ ಕುಣಿಸಿದೆ. ಶಂಭು ಹೆಗಡೆಯವರನ್ನು ಪ್ರೀತಿ ವಿಶ್ವಾಸ ಆತ್ಮೀಯತೆಯಿಂದ ಕುಣಿಸಿದೆ. ಶಿವಾನಂದ ಹೆಗಡೆಯನ್ನು ವಾತ್ಸಲ್ಯಭಾವದಿಂದ ಕುಣಿಸಿದೆ. ಕೆರೆಮನೆ ಶಿವಾನಂದ ಹೆಗಡೆ ಅವರ ಪುತ್ರ ಶ್ರೀಧರನನ್ನು ಮೋಹದಿಂದ ಕುಣಿಸಿದ್ದೇನೆ. ಆದರೂ ಶಿವರಾಮ ಹೆಗಡೆಯವರ ನಿರೀಕ್ಷೆಯ ಮಟ್ಟವನ್ನು ಮುಟ್ಟಲು ಆಗಲಿಲ್ಲ ಎಂಬ ಬೇಸರವಿದೆ ಎಂಬ ನೆಬ್ಬೂರರ ಮಾತುಗಳಲ್ಲಿ ಯಕ್ಷಗಾನವೂ ಒಂದು ಮಹಾಸಿಂಧು, ಕಲಿತು ಮುಗಿಯುವಂಥದ್ದಲ್ಲ ಎಂಬ ಧ್ವನಿಯು ಅಡಗಿದೆ. 

ನೆಬ್ಬೂರು ನಾರಾಯಣ ಭಾಗವತರ ಆತ್ಮಕಥನವು ‘ನೆಬ್ಬೂರಿನ ನಿನಾದ’ ಎಂಬ ಶಿರೋನಾಮೆಯಡಿ 2007 ರಂದು ಪ್ರಕಟಿಸಲ್ಪಟ್ಟಿವೆ. ಬಡಗುತಿಟ್ಟು ಯಕ್ಷಗಾನ ಕಂಡ ಇಂತಹಾ ಮಹಾನ್ ಭಾಗವತರಾದ ಶ್ರೀ ನೆಬ್ಬೂರು ನಾರಾಯಣ ಭಾಗವತರು ಕಳೆದ ವರ್ಷ ಅಂದರೆ 2019ರ ಮೇ ತಿಂಗಳಿನಲ್ಲಿ ಅಸಂಖ್ಯ ಕಲಾಭಿಮಾನಿಗಳನ್ನು ಆಗಲಿ ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡರು.  

ಲೇಖಕ: ರವಿಶಂಕರ್ ವಳಕ್ಕುಂಜ

ಪುತ್ತೂರು ಶ್ರೀಧರ ಭಂಡಾರಿ – ಯಕ್ಷರಂಗದ ಅಭಿಮನ್ಯು (Putturu Sridhara Bhandari)

ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ ಭಂಡಾರಿಯವರ ಹೆಸರು ಕೇಳದವರಿಲ್ಲ.  ಓದಿದ್ದು ಕೇವಲ 5ನೇ ತರಗತಿ. ಆದರೆ ಯಾರೂ ಊಹಿಸದೆ ಇದ್ದ ಎತ್ತರಕ್ಕೆ ಏರಿ ಗೌರವ ಡಾಕ್ಟರೇಟ್ ಪದವಿಯನ್ನು ತನ್ನದಾಗಿಸಿಕೊಂಡ ಸಾಧಕ. 

ಯಕ್ಷಗಾನದ ಅಗ್ರಪಂಕ್ತಿಯ ಕಲಾವಿದರಲ್ಲೊಬ್ಬರಾದ ಶ್ರೀ ಬಳ್ಳಂಬೆಟ್ಟು ಶೀನಪ್ಪ ಭಂಡಾರಿ, ಶ್ರೀಮತಿ ಸುಂದರಿ ದಂಪತಿಗಳ ಪುತ್ರನಾಗಿ 1945ರಲ್ಲಿ ಜನನ. ಮನೆಯ ಪರಿಸರ ತುಂಬೆಲ್ಲಾ ಯಕ್ಷಗಾನ ಪರಂಪರೆಯ ಸುವಾಸನೆ ಘಮಘಮಿಸುತ್ತಿತ್ತು. ಈ ಕಲಾ ಸುಗಂಧದಿಂದ ಪ್ರೇರಿತನಾದ ಬಾಲಕ ಶ್ರೀಧರ ಭಂಡಾರಿ ಇಷ್ಟು ಎತ್ತರಕ್ಕೆ ಏರಿದ್ದು ಈಗ ಇತಿಹಾಸ.   ಶ್ರೀಧರ ಭಂಡಾರಿಯವರ ಪರಂಪರೆಯೇ ಯಕ್ಷಗಾನದ್ದು. ಅಜ್ಜ ಅಂದರೆ ತಂದೆಯವರ ಮಾವ ಬಳ್ಳಂಬಟ್ಟಿನ ಸಮೀಪದ ಜತ್ತಪ್ಪ ರೈಗಳು ಆ ಕಾಲದಲ್ಲಿ ದೊಡ್ಡ ಭಾಗವತರು.

ಭಾಗವತರಾದ ಮೈಂದಪ್ಪ ರೈಗಳು ಶ್ರೀಧರ ಭಂಡಾರಿಯವರ ತಂದೆಯವರಾದ ಶೀನಪ್ಪ ಭಂಡಾರಿಗಳ  ಭಾವ,  ಹೀಗೆ ಯಕ್ಷಗಾನದ ದೊಡ್ಡ ಸಂಬಂಧವೇ ಇತ್ತು. ತಂದೆಯವರಾದ ದಿ| ಶೀನಪ್ಪ ಭಂಡಾರಿಗಳು ಪುತ್ತೂರಿಗೆ ಬಂದು ನೆಲಸಿದರು. ಪುತ್ತೂರಿನಲ್ಲಿ ಮೊದಲಿಗೆ ಬಳ್ಳಂಬೆಟ್ಟು ಮೇಳ ಎಂಬ ಹೆಸರಿನಲ್ಲಿ ಮೇಳ ಮಾಡಿದ್ದರು. ಆ ನಂತರ ಆದಿ ಸುಬ್ರಹ್ಮಣ್ಯ ಮೇಳ ಎಂದು ಪ್ರಾರಂಭಿಸಿದರು.

ತುಂಬಾ ಕಲಾವಿದರು, ಶಿಷ್ಯಂದಿರು ಶೀನಪ್ಪ ಭಂಡಾರಿಯವರ ಗರಡಿಯಲ್ಲಿ ಕಲಿತು ಪಳಗಿದವರು. ಇವರ ಅಣ್ಣನನ್ನು ತಂದೆಯವರೇ ನಾಟ್ಯ ಕಲಿಸಿ ತಯಾರಿ ಮಾಡಿ ಯಕ್ಷಗಾನದಲ್ಲೇ ತೊಡಗುವಂತೆ ಮಾಡಿದ್ದರು. ಆದರೆ ಶ್ರೀಧರ ಭಂಡಾರಿಯವರನ್ನುಮಾತ್ರ ಯಕ್ಷಗಾನ ಬೇಡವೆಂದು ಶಾಲೆಗೆ ಕಳಿಸಿ ವಿದ್ಯಾವಂತನನ್ನಾಗಿ ಮಾಡಬೇಕೆಂಬ ಅಭಿಲಾಷೆ ಶೀನಪ್ಪ ಭಂಡಾರಿಯವರಿಗಿತ್ತು. ಆದರೆ ಆಟದ ವ್ಯಾಮೋಹ, ಯಕ್ಷಗಾನದ ಆಸಕ್ತಿಯಿಂದಾಗಿ ಬಾಲ್ಯದಲ್ಲಿರುವಾಗಲೇ ಯಕ್ಷಗಾನದ ಪ್ರಸಂಗ ಪುಸ್ತಕದ ಪದ್ಯಗಳನ್ನು ಬಾಯಿಪಾಠ ಮಾಡಿ ಹೇಳುತ್ತಿದ್ದ ಬಾಲಕ ಶ್ರೀಧರನಿಗೆ ಶಾಲೆಗೆ ಹೋಗುವಾಗಲೇ ಅಭಿಮನ್ಯು, ಕರ್ಣಪರ್ವ, ಗದಾಪರ್ವ, ಶೂರ್ಪನಖಾ ಮಾನಭಂಗ, ಇಂದ್ರಜಿತು ಕಾಳಗವೇ ಮೊದಲಾದ ಪ್ರಸಂಗದ ಪದ್ಯಗಳು ಬಾಯಿಪಾಠ ಬರುತ್ತಿತ್ತು.

ಆಟಕ್ಕೆ ಬರದಂತೆ ನಿರ್ಬಂಧಿಸಿದರೂ ಆಗಾಗ ಕದ್ದುಮುಚ್ಚಿ ಆಟ ನೋಡಲು ಹೋಗುತ್ತಿದ್ದರು. ಮುಚ್ಚೂರು ಮೇಳ ಎಂಬ ಮೇಳವಿತ್ತು. ಶೀನಪ್ಪ ಭಂಡಾರಿಯವರ ಬಳ್ಳಂಬೆಟ್ಟು ಮೇಳಕ್ಕೂ ಮುಚ್ಚೂರು ಮೇಳಕ್ಕೂ ಪುತ್ತೂರಿನಲ್ಲಿ ಒಂದು ಜೋಡಾಟ ನಡೆಯಿತು. ಆ ಸಮಯದಲ್ಲಿ ಮುಚ್ಚೂರು ಮೇಳದಲ್ಲಿ ಕ್ರಿಶ್ಚಿಯನ್ ಬಾಬು ಎಂಬ ಕಲಾವಿದರಿದ್ದರು. ಪಾಂಡವಾಶ್ವಮೇಧ ಪ್ರಸಂಗದಲ್ಲಿ ಬಭ್ರುವಾಹನ ಪಾತ್ರವನ್ನು ಕ್ರಿಶ್ಚಿಯನ್ ಬಾಬು ಮಾಡಿದ್ದರು. ಕ್ರಿಶ್ಚಿಯನ್ ಬಾಬು ಅವರ ಅದ್ಭುತ ನಾಟ್ಯವನ್ನು ನೋಡಿ ಜನರು ಬೆರಗಾಗಿ ‘ಏನು ನಾಟ್ಯ’ ಎಂದು ಉದ್ಘರಿಸಿದಾಗ ಬಾಲಕ ಶ್ರೀಧರ ಭಂಡಾರಿಯವರಿಗೆ ‘ನನಗೇಕೆ ಈ ಸಾಧನೆ ಸಿದ್ಧಿಸಲಾರದು, ಅವರಂತೆ  ನನಗೇಕೆ ಸಾಧ್ಯವಿಲ್ಲ’ ಎಂಬ ಹಠ ಮೂಡಿತು.

ಇದನ್ನೂ ಓದಿ: ದಿವಾಕರ ರೈ ಸಂಪಾಜೆ – ಯಕ್ಷಗಾನದ ಸಿಡಿಲಮರಿ

(ಇದನ್ನೂ ಓದಿ: ಮಹಿಷಾಸುರ ಪಾತ್ರ ಮೊದಲು ಮಾಡಿದ್ದು ಯಾರು ? (Mahishasura in Yakshagana))

ಆದಕಾರಣ ಮನಸ್ಸಿನಲ್ಲೇ ಕಲ್ಪಿಸಿಕೊಂಡರೂ ತಂದೆಯವರೊಡನೆ ಹೇಳುವ ಧೈರ್ಯವಿರಲಿಲ್ಲ. ಆದರೆ ಮಗನ ಯಕ್ಷಗಾನದ ಆಸಕ್ತಿ, ಚರ್ಯೆಗಳನ್ನು ಗಮನಿಸಿದ ತಂದೆಯವರಾದ ಶೀನಪ್ಪ ಭಂಡಾರಿಯವರು, ‘ಏನು ಮಾಡುವುದು’ ಎಂದು ಆಲೋಚಿಸಿ ಪುತ್ತೂರಿನ ಭರತನಾಟ್ಯದ ಕಲಾವಿದ, ಗುರುಗಳಾಗಿದ್ದ ಕುದ್ಕಾಡಿ ವಿಶ್ವನಾಥ ರೈ ಅವರಲ್ಲಿ ಪ್ರಸ್ತಾಪಿಸಿದಾಗ ಅವರು ತಮ್ಮ ಮನೆಗೆ ಕಳುಹಿಸಿ ಕೊಡುವಂತೆ ಹೇಳಿದ್ದರು. 1960ರ ಸುಮಾರಿಗೆ ಆಗ ಪರ್ಲಡ್ಕದಲ್ಲಿದ್ದ ಕುದ್ಕಾಡಿ ವಿಶ್ವನಾಥ ರೈಗಳ ಮನೆಗೆ ಪ್ರತಿದಿನ ಬೆಳಿಗ್ಗೆ ಭರತನಾಟ್ಯ ಕಲಿಯಲು ಹೋಗುತ್ತಿದ್ದರು.

ಪ್ರತಿನಿತ್ಯವೂ ಪಾಠ ಆಗುತ್ತಿತ್ತು. ಭರತನಾಟ್ಯದ ತರಗತಿಗಳು ಮುಗಿದ ನಂತರ ಗುರುಗಳ ಜೊತೆಗೆ ಭರತನಾಟ್ಯ ಪ್ರದರ್ಶನ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಕಾಳಿಂಗಮರ್ದನದ ಕೃಷ್ಣನೇ ಮೊದಲಾದ ಹಲವಾರು ಪಾತ್ರಗಳ ಭರತನಾಟ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಮ್ಮೆ ಕೇರಳದ ಎರ್ನಾಕುಲಂನಲ್ಲಿ ಒಂದು ಯಕ್ಷಗಾನ ಕಾರ್ಯಕ್ರಮ ನಿಗದಿಯಾಗಿತ್ತು. ಆ ದಿನ ಭಂಡಾರಿಯವರು ತಮ್ಮ ತಂದೆಯವರ ಜೊತೆ ಎರ್ನಾಕುಲಂಗೆ ಹೋಗಿದ್ದರು. ಪ್ರಥಮವಾಗಿ ಅಲ್ಲಿ ಕೃಷ್ಣನ ಪಾತ್ರಮಾಡಿದರು. ಗೆಜ್ಜೆ ಕಟ್ಟಿದ ದಿನ ಎರ್ನಾಕುಲಂನಲ್ಲಿ ಆಗಿತ್ತು.

ಸುಮಾರು ಒಂದೆರಡು ವರ್ಷಗಳ ವರೆಗೆ ತಂದೆಯವರ ಜೊತೆಯೇ ವೇಷಗಳನ್ನು ಮಾಡುತ್ತಿದ್ದರು . ಹೀಗೆ ಯಕ್ಷಗಾನ ವೇಷಗಳನ್ನು ಮಾಡಿ ಅನುಭವವಾಗಿತ್ತು. ತುಂಬಾ ತಿಳುವಳಿಕೆ ಬೇಕಾದ ಪಾತ್ರಗಳಲ್ಲದಿದ್ದರೂ ಬಾಲ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ‘ತ್ರಿಜನ್ಮ ಮೋಕ್ಷ’ ಪ್ರಸಂಗದಲ್ಲಿ ಪ್ರಹ್ಲಾದನ ಪಾತ್ರಕ್ಕೆ ಸೂಕ್ತ ಹುಡುಕಾಟದಲ್ಲಿದ್ದ ಧರ್ಮಸ್ಥಳ ಮೇಳದ ಶೇಣಿ ಗೋಪಾಲಕೃಷ್ಣ ಭಟ್ಟರು, ವಿಟ್ಲ ಗೋಪಾಲಕೃಷ್ಣ ಜೋಷಿ, ಪಾತಾಳ ವೆಂಕಟ್ರಮಣ ಭಟ್ಟರೇ ಮೊದಲಾದವರು ಇವರ  ತಂದೆಯವರನ್ನು ಸಂಪರ್ಕಿಸಿ ಧರ್ಮಸ್ಥಳ ಮೇಳದ ಸುಳ್ಯದ ಜಾತ್ರೆಯ ಆಟಕ್ಕೆ ಶ್ರೀಧರ ಭಂಡಾರಿಯವರು ಆ ಮೇಳವನ್ನು ಸೇರಿಕೊಳ್ಳುವಂತೆ ಮಾಡಿದರು.

ಇದನ್ನೂ ಓದಿ: ಸುಣ್ಣಂಬಳ ವಿಶ್ವೇಶ್ವರ ಭಟ್ – ಮಿತಭಾಷಿಯ ಸಹೃದಯತೆ (ಶೇಣಿ, ಸುಣ್ಣಂಬಳ ತಾಳಮದ್ದಳೆ ವೀಡಿಯೋ)  

ಹೀಗೆ 1963ರಲ್ಲಿ ಧರ್ಮಸ್ಥಳ ಮೇಳ ಸೇರಿದರು. ಅಲ್ಲಿಂದ ಮೊದಲ್ಗೊಂಡು ದಿಗ್ಗಜರ ಜೊತೆ ಶ್ರೀಧರ ಭಂಡಾರಿಯವರ ತಿರುಗಾಟ ಪ್ರಾರಂಭವಾಯಿತು. ಶೇಣಿ, ಪಾತಾಳ, ವಿಟ್ಲ ಜೋಷಿ, ಹೊಸಹಿತ್ಲು ಮಹಾಲಿಂಗ ಭಟ್, ಕುಡಾನ ಗೋಪಾಲಕೃಷ್ಣ ಭಟ್ ಮೊದಲಾದವರ ಮಾರ್ಗದರ್ಶನದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಹೋದರು.  ಅದೇ ಸಮಯದಲ್ಲಿ ಭಂಡಾರಿಯವರ ತಂದೆಯವರ ಗುರುಗಳೂ ಆದ ಕುರಿಯ ವಿಠಲ ಶಾಸ್ತ್ರಿಗಳಲ್ಲಿಗೆ ಹೋಗಿ ಸುಮಾರು ಆರು ತಿಂಗಳುಗಳ ಕಾಲ ಅಲ್ಲಿದ್ದು ಅವರಿಂದ ಯಕ್ಷಗಾನದ ಹೆಚ್ಚಿನ ತರಬೇತಿಯನ್ನು ಪಡೆದರು.

ಭರತನಾಟ್ಯವನ್ನು ಕಲಿತವನಾಗಿದ್ದರೂ ಅದನ್ನು ಪ್ರದರ್ಶಿಸುವ ಹಾಗೂ ಪ್ರಯೋಗ ಮಾಡುವ ಅವಕಾಶ ಅಷ್ಟಾಗಿ ಆಗದಿದ್ದರೂ ಭರತನಾಟ್ಯದ ಕಲಿಕೆಯಿಂದ ಅನುಕೂಲ ತುಂಬಾ ಆಗಿತ್ತು. ಅಭಿನಯಕ್ಕೆ ಹಾಗೂ ಸಣ್ಣ ಸಣ್ಣ ಹೆಜ್ಜೆಗಾರಿಕೆಯನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಭಾರತನಾಟ್ಯದ ಕಲಿಕೆ ಶ್ರೀಧರ ಭಂಡಾರಿಯವರಿಗೆ ಸಹಾಯವಾಯಿತು.

ಶ್ರೀಧರ ಭಂಡಾರಿಯವರ ಮಳೆಗಾಲದ ತಿರುಗಾಟದ ಮೇಳವಾದ  ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯು  ಕರ್ನಾಟಕದಾದ್ಯಂತ ಹೆಚ್ಚಿನ ಎಲ್ಲಾ ಕಡೆಗಳಿಗೆ ಮಳೆಗಾಲದ ತಿರುಗಾಟವನ್ನು ವಿಸ್ತರಿಸಿದೆ. ಈ ಪ್ರವಾಸೀ ಮಂಡಳಿಯ ತಿರುಗಾಟ ಈಗ ತನ್ನ 29 ವರ್ಷವನ್ನು ಪೂರೈಸಿದೆ. ಅನುಭವೀ ಹಾಗೂ ಪ್ರಖ್ಯಾತ ಕಲಾವಿದರ ತಂಡ. ಸುದೃಢವಾದ, ಸುಲಲಿತವಾದ ತಂಡ. ಆರ್ಥಿಕವಾಗಿಯೂ ಸುದೃಢವಾಗಿದೆ. 

1980ರಲ್ಲಿ ಪುತ್ತೂರು ಮೇಳ ಮಾಡಿದ್ದರು. ಮೊದಲ ಎರಡು ಮೂರು ವರ್ಷಗಳು ಆರ್ಥಿಕವಾಗಿ ಮೇಳ ಮುನ್ನಡೆಯ ಹಾದಿಯಲ್ಲಿತ್ತು. ಆದರೆ ಕ್ರಮೇಣ ಕಲೆಕ್ಷನ್ ಕಡಿಮೆಯಾಗಿ ಆರ್ಥಿಕವಾಗಿ ಕೈಸುಟ್ಟುಕೊಂಡರು. ಕಲಾವಿದರ ಸಂಘಟನೆ ಒಳ್ಳೆಯದಿತ್ತು. ಒಳ್ಳೆಯ ಹೆಸರೂ ಇತ್ತು. ಆದರೆ ನಿರ್ವಹಣೆಗೆ ಆರ್ಥಿಕ ಬಲ ಇರಲಿಲ್ಲ. ಆಮೇಲೆ 1987ರಲ್ಲಿ ಕಾಂತಾವರ ಮೇಳ ಮಾಡಿದರು.

1990ರಲ್ಲಿ ಮೇಳದ ನಿರ್ವಹಣೆಯಿಂದ ನಷ್ಟವನ್ನನುಭವಿಸಿ ಬೇಸತ್ತು ಸ್ವಂತ ಮೇಳವನ್ನು ಕೈಬಿಟ್ಟು ಪುನಃ ಧರ್ಮಸ್ಥಳ ಮೇಳಕ್ಕೆ ಸೇರಿದರು. ಅಲ್ಲಲ್ಲಿ ನಾಟ್ಯ ತರಗತಿಗಳು, ಮಳೆಗಾಲದ ಪ್ರದರ್ಶನಗಳು ಮೊದಲಾದುವುಗಳು ಭಂಡಾರಿಯವರಿಗೆ ಹೆಸರು ತಂದುಕೊಟ್ಟಿತು. ಆರ್ಥಿಕವಾಗಿಯೂ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಂಡರು. ಈಗಂತೂ ಮಳೆಗಾಲದಲ್ಲಿ ಇವರ ಯಕ್ಷಗಾನ ತಂಡವನ್ನು ನೋಡಿಯೇ ಅನೇಕ ಕಾರ್ಯಕ್ರಮಗಳು ಸಿಗುತ್ತವೆ. ಸಮಯಾವಕಾಶವಿಲ್ಲದಷ್ಟು ಆಟಗಳು ಸಿಗುತ್ತವೆ. ಸಮಯ, ದಿನಗಳ ಹೊಂದಿಸುವಿಕೆ ಕಷ್ಟಸಾಧ್ಯವಾಗಿ ಕೆಲವನ್ನು ಬಿಟ್ಟದ್ದೂ ಉಂಟು ಎಂದು ಶ್ರೀಧರ ಭಂಡಾರಿಯವರು ಹೇಳುತ್ತಾರೆ. 

“ನನ್ನನ್ನು  ರಂಗದಲ್ಲಿ ಬೆಳೆಸಿದ್ದು ಹೊಸಹಿತ್ಲು ಮಹಾಲಿಂಗ ಭಟ್ಟರು” ಎಂದು ಅವರನ್ನು ನೆನಪಿಸಿಕೊಳ್ಳುವ ಶ್ರೀಧರ ಭಂಡಾರಿಯವರು ಪುತ್ತೂರಿನಲ್ಲಿ ಎರಡು ಮೂರು ಕಡೆ ನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾರೆ. ಮುಂಬಯಿಯಲ್ಲಿ ಹಲವಾರು ಕಡೆ ನಾಟ್ಯ ನಿರ್ದೇಶನ, ತರಗತಿಗಳನ್ನು ಮಾಡಿದ್ದಾರೆ. ನೆಚ್ಚಿನ ಮಡದಿ, ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಸಂತೃಪ್ತಿಯ ಜೀವನವನ್ನು ನಡೆಸುತ್ತಿರುವ  ಡಾ| ಶ್ರೀಧರ ಭಂಡಾರಿಯವರು ಪುತ್ತೂರಿನ ಬನ್ನೂರು ಎಂಬಲ್ಲಿರುವ ತಮ್ಮ ಮನೆ ‘ಯಕ್ಷದೇಗುಲ’ದಲ್ಲಿ ಪತ್ನಿ ಶ್ರೀಮತಿ ಉಷಾ ಅವರೊಂದಿಗೆ ವಾಸಿಸುತ್ತಿದ್ದಾರೆ. 

‘ರಾಜಾ ರುದ್ರಕೋಪ’ – ‘ಕಲ್ಲೇಶ್ವರ ದೇವಾಲಯ ಬಡಗಿ’ಯಲ್ಲಿ ಯಕ್ಷಗಾನ ಪ್ರದರ್ಶನ 

ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಾಗೂ ಅಭಿನೇತ್ರಿ ಆರ್ಟ್ ಟ್ರಸ್ಟ್, ನೀಲ್ಕೋಡು ಇದರ ಸಹಯೋಗದಿಂದ ಹೆರೂರು ಎಂಬಲ್ಲಿ ನವೆಂಬರ್ 20, 2020ನೇ ಶುಕ್ರವಾರದಂದು ಸಂಜೆ ಘಂಟೆ  7ರಿಂದ ‘ರಾಜಾ ರುದ್ರಕೋಪ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಡಗುತಿಟ್ಟಿನ ಹೆಸರಾಂತ ಕಲಾವಿದರು ಭಾಗವಹಿಸಲಿರುವರು. ಸರಕಾರದ ಕೋವಿಡ್-19 ನಿಯಮಾನುಸಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ. 

‘ಭಾಸವತಿ’ – ಹೆರೂರಿನಲ್ಲಿ ಯಕ್ಷಗಾನ ಪ್ರದರ್ಶನ 

ವೀರಾಂಜನೇಯ ಯಕ್ಷಮಿತ್ರ ಮಂಡಳಿ ಹಾಗೂ ಅಭಿನೇತ್ರಿ ಆರ್ಟ್ ಟ್ರಸ್ಟ್, ನೀಲ್ಕೋಡು ಇದರ ಸಹಯೋಗದಿಂದ ಹೆರೂರು ಎಂಬಲ್ಲಿ ನವೆಂಬರ್ 21, 2020ನೇ ಶನಿವಾರದಂದು ಸಂಜೆ ಘಂಟೆ 6.30ರಿಂದ ‘ಭಾಸವತಿ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಡಗುತಿಟ್ಟಿನ ಹೆಸರಾಂತ ಕಲಾವಿದರು ಭಾಗವಹಿಸಲಿರುವರು. ಸರಕಾರದ ಕೋವಿಡ್-19 ನಿಯಮಾನುಸಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದ ವಿವರ ಲಗತ್ತೀಕರಿಸಲಾಗಿದೆ. 

ಬಪ್ಪನಾಡು ಮೇಳ ಮತ್ತು ಅತಿಥಿ ಕಲಾವಿದರಿಂದ ‘ಬನತ ಬಂಗಾರ್’ – ತುಳು ಹಾಸ್ಯ ಯಕ್ಷಗಾನ

ದೀಪಾವಳಿ ಹಬ್ಬದ ಪ್ರಯುಕ್ತ ಬಪ್ಪನಾಡು ಮೇಳದವರಿಂದ ಕಾವೂರು ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ದಿನಾಂಕ 14. 11. 2020ನೇ ಶನಿವಾರದಂದು ಸಂಜೆ ಘಂಟೆ 4ರಿಂದ ರಾತ್ರಿ ಘಂಟೆ 9ರ ವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಪ್ಪನಾಡು ಮೇಳದಲ್ಲಿ ಯಶಸ್ವಿಯಾದ  ‘ಬನತ ಬಂಗಾರ್’ ಎಂಬ ತುಳು ಹಾಸ್ಯ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ವಿವರ ಲಗತ್ತಿಸಲಾಗಿದೆ. 

‘ಅಂಬರೀಶ – ಪಾರಿಜಾತ – ನರಕಾಸುರ’ ಯಕ್ಷಗಾನ ಪ್ರದರ್ಶನ

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ  ದೀಪಾವಳಿ ಹಬ್ಬದ ಪ್ರಯುಕ್ತ ದಿನಾಂಕ 15.11.2020 ಆದಿತ್ಯವಾರ ಸಂಜೆ 6.00 ಗಂಟೆಗೆ ಸರಿಯಾಗಿ ‘ಅಂಬರೀಶ – ಪಾರಿಜಾತ – ನರಕಾಸುರ’ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿರುವುದು.

ಈ ಯಕ್ಷಗಾನ ಪ್ರದರ್ಶನದ ನೇರ ಪ್ರಸಾರ ಯೂಟ್ಯೂಬ್ ನಲ್ಲಿ ಲಭ್ಯವಿದೆ.

ದಿವಾಕರ ರೈ ಸಂಪಾಜೆ – ಯಕ್ಷಗಾನದ ಸಿಡಿಲಮರಿ 

ಪೂರ್ವ ರಂಗದಲ್ಲಿ ವೇಷಗಳನ್ನು ಮಾಡಿ, ನಾಟ್ಯದಲ್ಲಿ ಲಯಸಿದ್ಧಿಯನ್ನು ಪಡೆದು, ಬಳಿಕ ಪ್ರಹ್ಲಾದ, ಲೀಲೆಯ ಕೃಷ್ಣ ಮೊದಲಾದ ಬಾಲಪುಂಡುವೇಷಗಳನ್ನು ಮಾಡಿ ಮಾತುಗಾರಿಕೆಯಲ್ಲೂ ಬೆಳೆದರೆ ಮತ್ತೆ  ಅಭಿಮನ್ಯು, ಬಭ್ರುವಾಹನ, ಭಾರ್ಗವ, ಅಶ್ವತ್ಥಾಮ, ಲಕ್ಷ್ಮಣ, ಚಂಡ-ಮುಂಡರು, ಷಣ್ಮುಖ ಇಂತಹ ಪಾತ್ರಗಳನ್ನು ಮಾಡುವುದಕ್ಕೆ ಅನುಕೂಲವಾಗುತ್ತದೆ.

ಕಲಾವಿದರು ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರೆ ಪಾತ್ರಗಳನ್ನು ನಿರ್ವಹಿಸುವಾಗ ಎಲ್ಲೂ ಸೋಲದೆ ಪ್ರೌಢತೆಯು ಪ್ರಕಟವಾಗುತ್ತದೆ. ಕುಡಾಣ ಗೋಪಾಲಕೃಷ್ಣ ಭಟ್ (ಗೋಪಿ ಅಣ್ಣ) ಕ್ರಿಶ್ಚನ್ ಬಾಬು ಮೊದಲಾದವರು ಇಂದು ನಮ್ಮ ಜತೆ ಇಲ್ಲವಾದರೂ ಪುಂಡುವೇಷಧಾರಿಗಳಿಗೆ ಅವರು ಆದರ್ಶರು. ದೈಹಿಕ ಬಲವೊಂದಿದ್ದರೆ ಸಾಲದು. ಮಾನಸಿಕವಾಗಿಯೂ ಬಲಿಷ್ಠನಾಗಿರಬೇಕು. ಇವೆರಡೂ ಇಲ್ಲದೆ ಬರಿದೆ ಸಾಹಸವನ್ನು ತೋರಿದರೆ ಕಲಾವಿದರು ಗೆಲ್ಲಲಾರರು. ಪ್ರದರ್ಶನವೂ ಗೆಲ್ಲಲಾರದು.

ಯಕ್ಷಗಾನದಲ್ಲಿ ಪ್ರಸ್ತುತ ಪುಂಡುವೇಷಧಾರಿಗಳಾಗಿ ಅಭಿನಯಿಸುತ್ತಾ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿರುವ ಕಲಾವಿದರನೇಕರು. ಅವರಲ್ಲೊಬ್ಬರು ಶ್ರೀ ದಿವಾಕರ ರೈ ಸಂಪಾಜೆ. ಪೂರ್ವರಂಗದಿಂದ ತೊಡಗಿ ಎಲ್ಲಾ ಹಂತಗಳನ್ನೂ ದಾಟಿ ಬೆಳೆದವರು.  ಹನುಮಗಿರಿ ಮೇಳದ ಕಲಾವಿದನಾದರೂ ಧರ್ಮಸ್ಥಳ, ಎಡನೀರು ಮೇಳಗಳಲ್ಲೂ ತಿರುಗಾಟ ಮಾಡಿದವರು.

(ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು? )

ಇವರು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕಲ್ಲುಗುಂಡಿ ಎಂಬಲ್ಲಿ 1977ನೇ ಇಸವಿ ಎಪ್ರಿಲ್ 15ರಂದು ಶ್ರೀ ಕೆ. ವಾಸು ರೈ ಮತ್ತು ಶ್ರೀಮತಿ ಇಂದಿರಾ ರೈ ದಂಪತಿಗಳಿಗೆ ಮಗನಾಗಿ ಜನಿಸಿದವರು.  ದಿವಾಕರ ರೈಗಳು ಓದಿದ್ದು ಕಲ್ಲುಗುಂಡಿ ಸರಕಾರೀ ಶಾಲೆಯಲ್ಲಿ. 7ನೇ ತರಗತಿಯ ವರೆಗೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ಕಲ್ಲುಗುಂಡಿ ಪರಿಸರದಲ್ಲಿ ಧರ್ಮಸ್ಥಳ, ಸುರತ್ಕಲ್, ಕರ್ನಾಟಕ, ಕದ್ರಿ ಮೇಳಗಳ ಪ್ರದರ್ಶನಗಳು ನಡೆಯುತ್ತಿತ್ತು. ಆಟ ನೋಡುವ ಅವಕಾಶಗಳು ಸಿಕ್ಕಿತ್ತು. 

(ಇದನ್ನೂ ಓದಿ: ಮಹಿಷಾಸುರ ಪಾತ್ರ ಮೊದಲು ಮಾಡಿದ್ದು ಯಾರು ? (Mahishasura in Yakshagana))

ಪ್ರದರ್ಶನಗಳನ್ನು ನೋಡುತ್ತಿದ್ದಂತೆಯೇ ದಿವಾಕರ ರೈಗಳಿಗೆ ತಾನೂ ಕಲಾವಿದನಾಗಬೇಕೆಂಬ ಬಯಕೆಯಾಗಿತ್ತು. ಹವ್ಯಾಸೀ ವೇಷಧಾರಿ ಶ್ರೀ ಲೋಕೇಶ್ ರಿಂದ ನಾಟ್ಯ ಕಲಿತರು.  ಗಜಾನನ ಯಕ್ಷಗಾನ ಸಂಘದ ಆಶ್ರಯದಲ್ಲಿ ನಾಟ್ಯ ತರಬೇತಿ ಮತ್ತು ಬಣ್ಣಗಾರಿಕಾ ಶಿಬಿರಗಳೂ ನಡೆಯುತ್ತಿತ್ತು. ಉತ್ತಮ ವೇಷಧಾರಿಯಾಗಿದ್ದ ಶ್ರೀ ಪರಮೇಶ್ವರ ಆಚಾರ್ಯರಿಂದಲೂ ನಾಟ್ಯ ಕಲಿತರು. ಹೆಚ್ಚಿನ ಕಲಿಕೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ತೆರಳಿದರು. ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಸ್ತ್ರೀಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ನಾಟ್ಯಾಭ್ಯಾಸ. 

ದಿವಾಕರ ರೈಗಳ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ (1991-92). ನಿರಂತರ 10 ವರ್ಷ ಸದ್ರಿ ಮೇಳದಲ್ಲಿ ಕಲಾಸೇವೆ. ಪೂರ್ವರಂಗದಲ್ಲಿ ಬಾಲಗೋಪಾಲರು, ಮುಖ್ಯ ಸ್ತ್ರೀವೇಷ ನಂತರ ಪ್ರಸಂಗದಲ್ಲಿ ದೇವೇಂದ್ರ ಬಲ ಮೊದಲಾದ ಸಣ್ಣಪುಟ್ಟ ಪಾತ್ರಗಳು. ಹೆಚ್ಚು ಸ್ತ್ರೀಪಾತ್ರಗಳನ್ನೇ ಮಾಡಬೇಕಾಗಿತ್ತು.  ಕಡತೋಕಾ ಮಂಜುನಾಥ ಭಾಗವತರು  ‘ನೀನು ಸ್ತ್ರೀವೇಷ ಮಾಡುವುದು ಬೇಡ. ಪುಂಡುವೇಷವನ್ನೇ ಮಾಡು’ ಎಂಬ ಸಲಹೆಯನ್ನೂ ನೀಡಿದ್ದರು. ಪುಂಡುವೇಷಧಾರಿಯಾಗಿ ಭಡ್ತಿ ಸಿಕ್ಕಿತ್ತು.  ಕಲಾವಿದನಾಗಿ ಬೆಳೆಯಲು ಧರ್ಮಸ್ಥಳ ಮೇಳದ ಹತ್ತು ತಿರುಗಾಟಗಳೇ ಭದ್ರ ಅಡಿಪಾಯವಾಗಿತ್ತು. 

ಧರ್ಮಸ್ಥಳ ಮೇಳದಲ್ಲಿ 10 ವರ್ಷಗಳ ಕಲಾಸೇವೆಯನ್ನು ಮಾಡಿ ತಿರುಗಾಟ ನಿಲ್ಲಿಸಿದ್ದರು.  ಮನೆಯಲ್ಲೇ ಕೃಷಿಕಾರ್ಯಗಳಲ್ಲಿ ನಿರತನಾಗಿದ್ದಾಗ ಕಲಾಪೋಷಕ ಡಾ. ಟಿ. ಶ್ಯಾಮ ಭಟ್ಟರ  ಸಲಹೆಯಂತೆ ಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದ ಕುಂಟಾರು ಮೇಳಕ್ಕೆ ಸೇರಿದರು.ಮುಖ್ಯ ಪುಂಡುವೇಷಧಾರಿಯಾಗಿ ಕುಂಟಾರು ಮೇಳದಲ್ಲಿ 2 ವರ್ಷ ತಿರುಗಾಟ. ಮತ್ತೆ 2 ವರ್ಷ ಎಡನೀರು ಮೇಳದಲ್ಲಿ ಕಲಾಸೇವೆ. ಎಡನೀರು ಮೇಳದಲ್ಲಿ ಎರಡು ವರ್ಷ ತಿರುಗಾಟ. ನಂತರ ಹೊಸನಗರ ಮೇಳದಲ್ಲಿ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ವ್ಯವಸಾಯ.

 (ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…)

“ಧರ್ಮಸ್ಥಳ ಮೇಳದ ತಿರುಗಾಟದ ಸಂದರ್ಭದಲ್ಲಿ ಅನಿವಾರ್ಯಕ್ಕೆ ಅಭಿಮನ್ಯು ಪಾತ್ರವನ್ನು ನಿರ್ವಹಿಸಬೇಕಾಗಿತ್ತು. ನಾನು ಹೆದರಿಕೊಂಡಿದ್ದೆ. ಆದರೆ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರು ಧೈರ್ಯ ತುಂಬಿದರು. ಅವರೇ ಮೊದಲು ಪದ್ಯ ಹೇಳಿ ಪ್ರೋತ್ಸಾಹಿಸಿದ್ದರು.

ಇದನ್ನೂ ಓದಿ: ಆರ್.ಕೆ.ಭಟ್ ಕೊಂಗೋಟ್ ಮತ್ತು ಉಮಾ ಆರ್.ಕೆ.ಭಟ್ ದಂಪತಿಗಳ ನಿಸ್ವಾರ್ಥ ಕಲಾಸೇವೆ (ಕಲೆ ಬೆಳಗಿಸಿದ ಕ್ಯಾಮೆರಾ ಫ್ಲ್ಯಾಷ್ – ಭಾಗ 1)

ನಾನು ಅಭಿಮನ್ಯು ಮಾಡಿದೆ ಎನ್ನುವುದಕ್ಕಿಂತ ಅವರು ನನ್ನಿಂದ ಮಾಡಿಸಿದರು ಎಂದು ಹೇಳುವುದೇ ಸರಿ. ಅಂದು ಉದ್ಯಾವರ ಜಯಕುಮಾರರು ಸುಭದ್ರೆಯಾಗಿ ಅಭಿನಯಿಸಿದ್ದರು.’’ ಹೀಗೆ ಅಂದಿನ ದಿನವನ್ನು ದಿವಾಕರ ರೈಗಳು ನೆನಪಿಸುತ್ತಾರೆ.  

“ಯಕ್ಷಗಾನವು ಏಕಪಾತ್ರಾಭಿನಯ ಅಲ್ಲ. ಸಹಕಲಾವಿದರ ಸಹಕಾರವಿಲ್ಲದೆ ಯಾವ ಕಲಾವಿದನೂ ಮೆರೆಯಲಾರ. ಕಲಾಭಿಮಾನೀ ಬಂಧುಗಳೂ ಪ್ರೋತ್ಸಾಹಿಸಿದ್ದಾರೆ. ಸರ್ವರ ಸಹಕಾರದಿಂದ ಇನ್ನಷ್ಟು ಕಲಾಸೇವೆ ಮಾಡುವ ಆಸೆಯಿದೆ’’ ಎನ್ನುವ ಶ್ರೀ ದಿವಾಕರ ರೈಗಳು  ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಮತ್ತು ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುತ್ತೂರು ಈ ತಂಡಗಳ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. 

ಇದನ್ನೂ ಓದಿ: ಸುಣ್ಣಂಬಳ ವಿಶ್ವೇಶ್ವರ ಭಟ್ – ಮಿತಭಾಷಿಯ ಸಹೃದಯತೆ (ಶೇಣಿ, ಸುಣ್ಣಂಬಳ ತಾಳಮದ್ದಳೆ ವೀಡಿಯೋ)  

2011ನೇ ಇಸವಿ ದಶಂಬರ 28ರಂದು ಆರತಿ ಕೆ. ರೈ ಜತೆ ವಿವಾಹ. ಆರತಿ ರೈ ಅವರು ಕಾಸರಗೋಡು ಕೂಡ್ಲು ಶ್ರೀ ವಿಠಲ ಶೆಟ್ಟಿ ಮತ್ತು ಶ್ರೀಮತಿ ಚಂದ್ರಾವತಿ ದಂಪತಿಗಳ ಪುತ್ರಿ. ಶ್ರೀ ದಿವಾಕರ ರೈ ಮತ್ತು ಶ್ರೀಮತಿ ಆರತಿ ದಿವಾಕರ ರೈ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಮಾ| ಸಮೃದ್ಧ ಡಿ. ರೈ 2ನೇ ತರಗತಿಯ ವಿದ್ಯಾರ್ಥಿ. ಪುತ್ರಿ ಕು| ವಿಭಾ ಡಿ. ರೈ (5 ವರ್ಷ ಪ್ರಾಯ).   

(ಇದನ್ನೂ ಓದಿ: ಮಹಿಷಾಸುರ ಪಾತ್ರ ಮೊದಲು ಮಾಡಿದ್ದು ಯಾರು ? (Mahishasura in Yakshagana))

ಲೇಖಕ: ರವಿಶಂಕರ್ ವಳಕ್ಕುಂಜ                  

ರಂಗವಿಚಿಕಿತ್ಸೆ – ಡಾ.ಕೆ.ಎಂ.ರಾಘವ ನಂಬಿಯಾರ್

‘ರಂಗವಿಚಿಕಿತ್ಸೆ’ ಎಂಬ ಈ ಕೃತಿಯು ವಿದ್ವಾಂಸರಾದ ಡಾ. ಕೆ.ಎಂ. ರಾಘವ ನಂಬಿಯಾರರು ಯಕ್ಷಗಾನ ಸಾಹಿತ್ಯ ಲೋಕಕ್ಕೆ ನೀಡಿದ ಒಂದು ಅಪೂರ್ವ ಕೊಡುಗೆ. ಈ ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 2018ರಲ್ಲಿ. ಪ್ರಕಾಶಕರು ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ) ಉಡುಪಿ, ಬೆಂಗಳೂರು.

ಶ್ರೀ ರಾಘವ ನಂಬಿಯಾರರನ್ನು ಸಂದರ್ಶಿಸಿ ಅವರ ರಂಗವಿಚಾರಗಳನ್ನು ನಿರೂಪಿಸಿದವರು ಕಟೀಲು ಶ್ರೀ ಸಿತ್ಲ ರಂಗನಾಥ ರಾವ್ ಅವರು. ಈ ಕೃತಿಯ ಬಗೆಗೆ ಹಿಂದೆ ಮದ್ದಳೆಗಾರರಾದ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರು ಲೇಖನವನ್ನು ಬರೆದಿರುತ್ತಾರೆ. ಇದು ಒಟ್ಟು ತೊಂಭತ್ತು ಪುಟಗಳುಳ್ಳ ಹೊತ್ತಗೆಯು.

ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…

ಶುಭಾಕಾಂಕ್ಷೆ ಎಂಬ ಬರಹದಡಿ ಶ್ರೀ ಸಿತ್ಲ ರಂಗನಾಥ ರಾಯರೂ ‘ಅರಿಕೆ’ ಎಂಬ ಬರಹದಡಿ ಡಾ. ಕೆ.ಎಂ.ರಾಘವ ನಂಬಿಯಾರರೂ ತಮ್ಮ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ಮುನ್ನುಡಿ ಲೇಖನವನ್ನು ಬರೆದವರು ಖ್ಯಾತ ಹಿರಿಯ ಸ್ತ್ರೀ ಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು.

ಜಾಹೀರಾತು

‘ರಂಗವಿಚಿಕಿತ್ಸೆ’ ಎಂಬ ಕೃತಿಯು ಎರಡು ವಿಭಾಗಗಳಿಂದ ಕೂಡಿದ್ದು ಈ ಉಭಯ ವಿಭಾಗಗಳಲ್ಲಿ ಡಾ.ಕೆ.ಎಂ.ರಾಘವ ನಂಬಿಯಾರರ ರಂಗವಿಚಾರಗಳನ್ನು ನಿರೂಪಿಸಿ ಸಿತ್ಲ ರಂಗನಾಥ ರಾವ್ ಅವರು ಓದುಗರಿಗೆ ನೀಡಿರುತ್ತಾರೆ. ಬಳಿಕ ಅನುಬಂಧ ಒಂದರ ಅಡಿ ಸಿತ್ಲ ರಂಗನಾಥ ರಾವ್ ಅವರು ಬರೆದ “ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ಮಾಡುವುದೇಕೆ?” ಎಂಬ ಲೇಖನವಿದೆ.

ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು?

ಅನುಬಂಧ ಎರಡರಲ್ಲಿ ಶ್ರೀ ಶ್ರೀಧರ ಡಿ.ಎಸ್, ಶ್ರೀ ರಾಜಕುಮಾರ ಪೈವಳಿಕೆ, ಶ್ರೀ ಧನಂಜಯ ನೆಲ್ಯಾಡಿ, ಶ್ರೀ ಸಮೀರ್ ದಾಮ್ಲೆ ಸುಳ್ಯ, ಇವರುಗಳು ಬರೆದ ಲೇಖನಗಳನ್ನು ನೀಡಲಾಗಿದೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಎಂ. ಆರ್. ವಾಸುದೇವ ಸಾಮಗರಿಗೆ ಶ್ರದ್ಧಾಂಜಲಿ – ಯಕ್ಷಗಾನ ಕಲಾರಂಗದಿಂದ

ನವೆಂಬರ್ 7, 2020 ರಂದು ನಮ್ಮನ್ನಗಲಿದ ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ, ಸಂಘಟಕ ಮಲ್ಪೆ ವಾಸುದೇವ ಸಾಮಗರಿಗೆ ಶ್ರದ್ಧಾಂಜಲಿ ಸಭೆ ಉಡುಪಿಯ ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ನಡೆಯಿತು.

ಸಾಮಗರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಸರಳ ಉದಾರ ವ್ಯಕ್ತಿತ್ವ ಮತ್ತು ಕಲಾ ಶ್ರೀಮಂತಿಕೆಯ ಕುರಿತು ಎಸ್. ವಿ. ಭಟ್, ಪಿ.ಕಿಶನ್ ಹೆಗ್ಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ರಂಗಾ ಭಟ್, ನಾರಾಯಣ ಎಂ. ಹೆಗಡೆ ತಮ್ಮ ಅನುಭವ ಹಂಚಿಕೊಂಡರು.

ಇದನ್ನೂ ಓದಿ: ಚೌಕಿಗೆ ಬಂದವಳು ರಂಗಸ್ಥಳದಲ್ಲೂ ಕಾಡಿದಳು…

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಸ್ತಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯೊಂದಿಗೆ ಅವರಿಗಿದ್ದ ಗಾಢ ಸಂಬಂಧವನ್ನು ನೆನಪಿಸಿಕೊಂಡರು ಕಾರ್ಯಕ್ರಮ ನಿರೂಪಿಸಿದರು

ಇದನ್ನೂ ಓದಿ: ಮತ್ತೆ ಮರುಕಳಿಸೀತೇ ಮೂರಾಟದ ವೈಭವಗಳು?