ಶೀರ್ಷಿಕೆಯೇ ಸೂಚಿಸುವಂತೆ ಇದು ಲೇಖಕ ಶ್ರೀ ಅಂಬಾತನಯ ಮುದ್ರಾಡಿ ಅವರ ಕುರಿತಾದ ಹೊತ್ತಗೆಯು. ಲೇಖಕರು ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರು. ಪ್ರಧಾನ ಸಂಪಾದಕರು ಡಾ. ನಾ.ಮೊಗಸಾಲೆ ಅವರು. ಸಂಪಾದಕರು ಡಾ. ಬಿ.ಜನಾರ್ದನ ಭಟ್ ಅವರು. ಪ್ರಕಾಶಕರು ಕನ್ನಡ ಸಂಘ ಕಾಂತಾವರ.
ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ ಈ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು. ಇದು ಒಟ್ಟು ನಲುವತ್ತನಾಲ್ಕು ಪುಟಗಳಿಂದ ಕೂಡಿದೆ. ಅಂಬಾತನಯ ಮುದ್ರಾಡಿ ಎಂಬುದು ಲೇಖಕ ಶ್ರೀ ಕೇಶವ ಶೆಟ್ಟಿಗಾರರ ಕಾವ್ಯನಾಮ. ಊರ ಪರಿಸರದಲ್ಲಿ ಶ್ರೀಯುತರು ಕೇಶವ ಶೆಟ್ಟಿಗಾರರೆಂದೂ ಕೇಶವ ಮಾಸ್ಟರರೆಂದೂ ಗುರುತಿಸಲ್ಪಟ್ಟರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅಂಬಾತನಯ ಮುದ್ರಾಡಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು.
ಕಾರ್ಕಳ ತಾಲೂಕಿನ ಮುದ್ರಾಡಿ ಎಂಬಲ್ಲಿ 1935ರಂದು ಶ್ರೀ ಬೂಬ ಶೆಟ್ಟಿಗಾರ್ ಮತ್ತು ಪುಟ್ಟಮ್ಮ ದಂಪತಿಗಳ ಮಗನಾಗಿ ಜನನ. ಶ್ರೀಯುತರು ಯಕ್ಷಗಾನಾಸಕ್ತರಾಗಿ ವೇಷಧಾರಿಯೂ ತಾಳಮದ್ದಳೆ ಅರ್ಥಧಾರಿಯಾಗಿಯೂ ಗುರುತಿಸಿಕೊಂಡವರು. ಅಂಬಾತನಯ ಮುದ್ರಾಡಿ ಅವರ ಹುಟ್ಟು, ಬಾಲ್ಯ, ಕಲಾವಿದನಾಗಿ ಸೇವೆ, ಲೇಖಕನಾಗಿ ಅವರು ಬೆಳೆದು ಬಂದ ರೀತಿ ಇತ್ಯಾದಿ ವಿಚಾರಗಳ ಬಗೆಗೆ ಈ ಪುಸ್ತಕದಲ್ಲಿ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಮಾಹಿತಿಗಳನ್ನು ನೀಡಿರುತ್ತಾರೆ.
ಮಾರ್ಗದಲ್ಲಿ ಹುಲಿ, ಕಾವ್ಯನಾಮದ ಕಾರಣ, ದನ ಕಾಯುವಲ್ಲಿಂದ ಶಾಲೆಗೆ, ಗುರುವೃಂದ, ಜೂನಿಯರ್ ಬೇಸಿಕ್ ಅಧ್ಯಾಪಕ, ಕವಿಯ ಸೆಳೆತ-ಹಿರಿಯ ಕವಿಗಳ ಸೆಳೆತ, ಯಕ್ಷಗಾನಾಸಕ್ತಿ-ಅರ್ಥಗಾರಿಕೆ, ಪ್ರಸಂಗ ಸಾಹಿತ್ಯ, ನಾಟಕಗಳು, ವಿಡಂಬನ ಸಾಹಿತ್ಯ, ಚಿಂತನ-ಅಮೃತವಚನ, ಭಜನೆಯ ಕವಿ, ಹರಿಕಥೆ-ಜಿನಕಥೆಗಳ ಕಡೆಗೆ, ಶಿಕ್ಷಕ ಸಂಘಟನೆ-ಸಂಪನ್ಮೂಲ ವ್ಯಕ್ತಿ, ತಾಯ್ನುಡಿ ತುಳು, ರವೀಂದ್ರ ಹೆಗ್ಗಡೆಯವರ ಆಪ್ತ,
ಸಾಹಿತ್ಯ ಪರಿಷತ್ತು-ಸಾಹಿತ್ಯ ಅಕಾಡೆಮಿ ಸಂಪರ್ಕ, ಸಮ್ಮೇಳನಾಧ್ಯಕ್ಷತೆ, ಸನ್ಮಾನ-ಪ್ರಶಸ್ತಿ, ಶಿಷ್ಯವೃಂದ, ಸಂಸಾರ, ಬ್ರಹ್ಮರಥ ಎಂಬ ವಿಚಾರಗಳಡಿ ವಿವರಗಳನ್ನು ಡಾ. ಪಾದೇಕಲ್ಲು ವಿಷ್ಣು ಭಟ್ಟರು ನೀಡಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಸಂಪಾದಕ ಡಾ. ಬಿ. ಜನಾರ್ದನ ಭಟ್ಟರು ಡಾ. ಪಾದೆಕಲ್ಲು ವಿಷ್ಣು ಭಟ್ಟರ ಬಗೆಗೆ ಬರೆದ ಲೇಖನವನ್ನು ನೀಡಲಾಗಿದೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಹಿರಿಯ ಕಲಾವಿದರಿಗೆ ನೀಡಲಾಗುವ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಗೆ 2019 – 20ನೇ ಸಾಲಿನಲ್ಲಿ ಕನ್ನಡ – ತುಳು ಪ್ರಸಂಗಗಳ ಪ್ರಸಿದ್ದ ವೇಷಧಾರಿ, ಮೇಳದ ಸಂಚಾಲಕ ಕೆ.ಎಚ್. ದಾಸಪ್ಪ ರೈ ಆಯ್ಕೆಯಾಗಿದ್ದಾರೆ. ಯಕ್ಷಾಂಗಣ ಮಂಗಳೂರು ಹಾಗೂ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನಗಳನ್ನೊಳಗೊಂಡ ಜಂಟಿ ಸಮಿತಿಯು ದಾಸಪ್ಪ ರೈಯವರನ್ನು ಈ ಪ್ರಶಸ್ತಿಗೆ ಪರಿಗಣಿಸಿದೆ.
ಕೆ.ಎಚ್. ದಾಸಪ್ಪ ರೈ ಪುತ್ತೂರು: ಕುತ್ಯಾಳ ಹೊಸಮನೆ ದಿ. ಬೈಂಕಿ ರೈ ಮತ್ತು ಕುಂಞಕ್ಕೆ ದಂಪತಿಗೆ ಮೇ 10, 1950 ರಲ್ಲಿ ಜನಿಸಿದ ಕೆ.ಎಚ್.ದಾಸಪ್ಪ ರೈ ತಮ್ಮ 15ನೇ ವಯಸ್ಸಿನಲ್ಲಿ ಕರ್ನಾಟಕ ಯಕ್ಷಗಾನ ಸಭಾದ ಮೂಲಕ ವೇಷಧಾರಿಯಾಗಿ ರಂಗಪ್ರವೇಶ ಮಾಡಿದರು. ಗುರು ದಿ.ಕೆ.ಯನ್.ಬಾಬು ರೈಯವರು ಅವರಿಗೆ ಯಕ್ಷಗಾನದ ಹೆಜ್ಜೆಗಾರಿಕೆ ಮಾತು, ಮುಖವರ್ಣಿಕೆಗಳನ್ನು ಕಲಿಸಿದರು.
ಕರ್ನಾಟಕ, ಕದ್ರಿ, ಕುಂಬಳೆ, ಮಂಗಳಾದೇವಿ, ಸರಪಾಡಿ, ಬಾಚಕೆರೆ ಮೇಳಗಳಲ್ಲಿ ಸುಮಾರು ನಾಲ್ಕೂವರೆ ದಶಕಗಳ ತಿರುಗಾಟ ಮಾಡಿರುವ ಅವರು ಕಣಿಪುರ ಶ್ರೀ ಗೋಪಾಲಕೃಷ್ಣ ಪ್ರಸಾದಿತ ಯಕ್ಷಗಾನ ಮಂಡಳಿ ಕುಂಬಳೆ ಮೇಳವನ್ನು ಕಟ್ಟಿ ಆರು ವರ್ಷ ನಡೆಸಿದರು. ಪೌರಾಣಿಕ ಪ್ರಸಂಗಗಳಲ್ಲಿ ರಾವಣ, ಕಂಸ, ಮಹಿಷಾಸುರ, ಯಮಧರ್ಮ, ಹಿರಣ್ಯಕಶಿಪು, ಭೀಮ, ಕೌರವ, ಕೀಚಕ, ವಾಲಿ, ಇಂದ್ರಜಿತು, ಜರಾಸಂಧ ಇತ್ಯಾದಿ ಪಾತ್ರಗಳಲ್ಲಿ ದಾಸಪ್ಪ ರೈ ಹೆಚ್ಚು ಜನಪ್ರಿಯರು.
ಕೋಟಿ, ಕೋಡ್ದಬ್ಬು, ಕೊಡ್ಸರಾಳ್ವ, ದೇವುಪೂಂಜ, ಕಾಂತಬಾರೆ, ಮೈಂದ ಗುರಿಕಾರ, ಶಾಂತ ಕುಮಾರ ಮುಂತಾದ ಪಾತ್ರಗಳು ಅವರಿಗೆ ಕೀರ್ತಿ ತಂದುಕೊಟ್ಟಿವೆ. ಮುಂಬೈ, ಚೆನ್ನೈ ದೆಹಲಿ, ಬೆಹರಿನ್, ಕತಾರ್, ದುಬೈ, ಮಸ್ಕತ್ ಹೀಗೆ ದೇಶ-ವಿದೇಶಗಳಲ್ಲಿ ಕಾರ್ಯಕ್ರಮ ನೀಡಿರುವ ಅವರು ನೂರಾರು ಸನ್ಮಾನಗಳನ್ನು ಪಡೆದಿದ್ದಾರೆ.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಳಿಕೆ – ಬೋಳಾರ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವುದಲ್ಲದೆ ತುಳುನಾಡ ತುಳುಶ್ರೀ, ಯಕ್ಷರಂಗ ನಟನಾ ಚತುರ, ಯಕ್ಷ ಭಾರ್ಗವ, ರಂಗಸ್ಥಳದ ಗುರಿಕಾರ ಇತ್ಯಾದಿ ಬಿರುದುಗಳಿಂದ ಸಮ್ಮಾನಿತರಾಗಿದ್ದಾರೆ.
ಪತ್ನಿ ಚಿತ್ರವತಿ , ಮಗ ದೇವಿ ಪ್ರಸಾದ್ ಮತ್ತು ಮೊಮ್ಮಕ್ಕಳೊಂದಿಗೆ ಪುತ್ತೂರಿನ ಬಪ್ಪಳಿಗೆ ‘ಯಕ್ಷಧಾ’ ನಿವಾಸದಲ್ಲಿ ನಿವೃತ್ತ ಜೀವನ ಸಾಗಿಸುತ್ತಿರುವ ಕೆ.ಎಚ್.ದಾಸಪ್ಪ ರೈ ತಮ್ಮ ವೃತ್ತಿ ಮತ್ತು ಬದುಕಿನಲ್ಲಿ ಸಾಕಷ್ಟು ಕಷ್ಟ, ನಷ್ಟ ಕಂಡವರು. ಪ್ರಸ್ತುತ 70 ರ ಇಳಿ ವಯಸ್ಸಿನಲ್ಲೂ ಆಗೊಮ್ಮೆ ಈಗೊಮ್ಮೆ ಬಣ್ಣ ಹಚ್ಚಿ ರಂಗವೇರುವುದನ್ನು ಅವರು ನಿಲ್ಲಿಸದಿರುವುದು ವಿಶೇಷ.
ನವೆಂಬರ್ 29, 2020 ರಂದು ಭಾನುವಾರ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ‘ಪಾರಿಜಾತ’ ಸಭಾಗೃಹದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ಆಯೋಜಿಸಿರುವ 8ನೇ ವರ್ಷದ ಕನ್ನಡ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಪರ್ವ’ದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗುವುದೆಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಿಸಿದ್ದಾರೆ.
ಜನರ ಶ್ರದ್ಧೆ, ನಂಬಿಕೆಗಳೇ ಹಾಗೆ. ಭಾರತ ದೇಶದ ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳು ಪರಿಸರ ಪ್ರದೇಶಗಳಿಗೆ ಹೊಂದಿಕೊಂಡು ಭಿನ್ನವಾಗಿದ್ದರೂ ಜನರ ಆಚರಣೆ, ನಂಬಿಕೆ, ಶ್ರದ್ಧೆಗಳ ವಿಚಾರಕ್ಕೆ ಬಂದಾಗ ಮತ್ತು ದೇಶದಲ್ಲಿ ಧರ್ಮ, ಸಂಸ್ಕೃತಿ, ಕಲೆಗಳಿಗೆ ಧಕ್ಕೆ ಉಂಟಾದಾಗ ಒಂದೇ ರೀತಿಯ ಅನುಸರಣೆ ಎದ್ದು ಕಾಣುವುದು ಈ ದೇಶದ ವಿಶೇಷತೆ ಹಾಗೂ ಹೆಮ್ಮೆ ಎಂದೇ ಹೇಳಬಹುದು.
ಅದರಲ್ಲೂ ಯಕ್ಷಗಾನ ಎಂಬುದು ನಮ್ಮ ಕರ್ನಾಟಕದ ಹಲವು ಪ್ರದೇಶಗಳ ಜನರ ಉಸಿರಿನಲ್ಲಿಯೂ ಪ್ರಾಣವಾಯುವಿನಂತೆ ಸಂಚರಿಸುವ ಜೀವಗುಟುಕು. ಯಕ್ಷಗಾನ ಇಲ್ಲಿಯ ಜನರ ಜೀವನದ ಅವಿಭಾಜ್ಯ ಅಂಗ. ಯಕ್ಷಗಾನ ಇಲ್ಲದೆ ನಮ್ಮ ದಿನದ ದೈನಂದಿನ ಚಟುವಟಿಕೆ ಅಪೂರ್ಣ. ಜನರು ಯಕ್ಷಗಾನವನ್ನು ಅಷ್ಟು ಹೆಚ್ಚಾಗಿ ಪ್ರೀತಿಸುವಾಗ ಅಂತಹಾ ಜಾಹೀರಾತುಗಳನ್ನು ನಿರ್ಮಿಸುವಾಗ ಅವರಾದರೂ ಸ್ವಲ್ಪ ಯೋಚಿಸಬೇಕೇ ಬೇಡವೇ? ಜನರ ನಂಬಿಕೆಗಳಿಗೆ, ಭಾವನೆಗಳಿಗೆ ನೋವನ್ನುಂಟುಮಾಡುವುದು ಸರಿಯಲ್ಲ.
ಇತ್ತೀಚಿಗೆ ಫೆವಿಕಾಲ್ ಜಾಹೀರಾತನ್ನು ಎಲ್ಲರೂ ನೋಡಿರಬಹುದು. ಈ ಜಾಹೀರಾತು ಈಗ ಎಲ್ಲ ಯಕ್ಷಗಾನಪ್ರಿಯರ ಚರ್ಚೆಯ ವಸ್ತುವಾಗಿದೆ. ಆ ಜಾಹೀರಾತಿನಲ್ಲಿ ಯಕ್ಷಗಾನವನ್ನು ಹಾಸ್ಯದ ದೃಷ್ಟಿಯಿಂದ ಚಿತ್ರಿಸಲಾಗಿದೆ ಎಂದು ಜನರು ಹೇಳುತ್ತಿದ್ದಾರೆ.
“ಅಲ್ಲದಿದ್ದರೆ ಫೆವಿಕಾಲ್ ಇಲ್ಲದೆ ಸಿಂಹಾಸನ ಬೀಳುವುದೆಂದರೇನು? ಇಡೀ ರಂಗಸ್ಥಳವೇ ಫೆವಿಕಾಲ್ ಇಲ್ಲದೆ ಕುಸಿದು ಬೀಳುವ ದೃಶ್ಯ, ವೇಷಧಾರಿ ರಂಗಸ್ಥಳದಲ್ಲಿಯೇ ಓಡಾಡುತ್ತಾ ಎಲ್ಲರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುವುದು ಮೊದಲಾದ ದೃಶ್ಯಗಳೆಲ್ಲಾ ಕಲೆಗೆ ಅಭಾಸ ಮತ್ತು ಅಪಚಾರ ಎಂದು ಜನರು ಭಾವಿಸುವುದರಲ್ಲಿ ತಪ್ಪೇನೂ ಇಲ್ಲ. ಫೆವಿಕಾಲ್ ಹಾಕದಿದ್ದರೆ ಸಿಂಹಾಸನ ಕುಸಿದು ಬೀಳುವುದು ಎಲ್ಲಿಯಾದರೂ ಉಂಟೆ? ಫೆವಿಕಾಲ್ ಹಾಕದಿದ್ದರೆ ರಂಗಸ್ಥಳವೇ ಭೂಕಂಪ ಬಂದಂತೆ ಅಡಿ ಮೇಲಾಗುವುದು ಸಾಧ್ಯವೇ? ಇದನ್ನೆಲ್ಲಾ ಕಂಡು ಜನರಿಗೆ ಸಿಟ್ಟು ಬಂದದ್ದರಲ್ಲಿ ತಪ್ಪೇನೂ ಕಾಣುವುದಿಲ್ಲ” ಎಂದು ಹಲವಾರು ಆಡಿಕೊಳುತ್ತಿರುವ ಮಾತು.
ಮೊದಲೇ ಹೇಳಿದಂತೆ ಯಕ್ಷಗಾನ ಇಲ್ಲಿಯ ಜನರಿಗೆ ಆರಾಧನಾ ಕಲೆ. ಜನರು ಯಕ್ಷಗಾನವನ್ನು ಪೂಜ್ಯ ಭಾವದಿಂದ ನೋಡುತ್ತಾರೆ. ಅಂತಹಾ ಪೂಜನೀಯವಾದ ಕಲೆಯ ಬಗ್ಗೆ ಶ್ರದ್ಧಾಭಕ್ತಿಯನ್ನು ಇರಿಸಿಕೊಂಡವರ ಮನಸ್ಸಿಗೆ ಸಹಜವಾಗಿಯೇ ಇದರಿಂದ ನೋವಾಗಿದೆ. ಆದುದರಿಂದ ಇಂತಹಾ ಜಾಹೀರಾತುಗಳನ್ನು ನಿರ್ಮಿಸುವ ಮೊದಲು ಸಾವಿರ ಬಾರಿ ಯೋಚಿಸಬೇಕು.
ಇನ್ನು ಕೆಲವರು “ಇಲ್ಲಿಯೂ ಪರ ವಿರೋಧ ಅಭಿಪ್ರಾಯಗಳಿರಬಹುದು. ಆದರೆ ಇದು ನಮ್ಮೊಳಗೆಯೇ ಚರ್ಚೆ ಮಾಡುವ ವಿಷಯವಲ್ಲ. ಯಕ್ಷಗಾನದವರಾದ ನಮ್ಮಲ್ಲೇ ಕೆಲವರು ಕಲೆಯನ್ನು ವಿರೂಪಗೊಳಿಸುತ್ತಾರೆ. ಆದುದರಿಂದ ಇನ್ನೊಬ್ಬರೂ ಮಾಡಲಿ ಎಂಬ ವಾದವು ಸರಿಯಲ್ಲ. ನಾವು ತಪ್ಪು ಮಾಡಿದರೆ ಆಗಲೂ ಆಕ್ಷೇಪಿಸೋಣ. ಇನ್ನೊಬ್ಬರು ತಪ್ಪಿದರೆ ಆಗಲೂ ಎಚ್ಚರಿಸೋಣ. ಇಂತಹದಕ್ಕೆಲ್ಲಾ ಕಡಿವಾಣ ಬೇಕು. ಇಲ್ಲದಿದ್ದರೆ ಆನೆ ನಡೆದದ್ದೇ ಹಾದಿ ಎಂಬಂತೆ ಆಗುತ್ತದೆ”. ಎಂದು ಅಭಿಪ್ರಾಯ ಪಡುತ್ತಾರೆ.
ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಪ್ರದರ್ಶನವೂ ನಡೆಯಲಿದೆ. ಸಂಸ್ಥೆಯ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಡುವ ಈ ಯಕ್ಷಗಾನದಲ್ಲಿ ‘ಪೂರ್ವರಂಗ-ಕುಶಲವ-ಮಾಯಾಪೂತನಿ-ರತಿಕಲ್ಯಾಣ’ ಎಂಬ ಪ್ರಸಂಗಗಳು ಪ್ರದರ್ಶಿತವಾಗಲಿದೆ. (ಇದನ್ನೂ ಓದಿ: ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯಲಿದ್ದಾರೆಯೇ ತ್ರಿಮೂರ್ತಿಗಳು?)
ಯಕ್ಷಗಾನ ಮತ್ತೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸರಕಾರದಿಂದ ಕೆಲವೊಂದು ನೀತಿ ಸಂಹಿತೆ, ನಿಯಮಾವಳಿಗಳ ಷರತ್ತು ಬದ್ಧ ಅನುಮತಿಯೂ ದೊರಕಿದೆ. ಆದರೆ ಕೆಲವೊಂದು ಮೂಲಗಳ ಪ್ರಕಾರ 60 ವರ್ಷ ಮೇಲ್ಪಟ್ಟ ಕಲಾವಿದರಿಗೆ ಈ ಬಾರಿ ತಿರುಗಾಟ ನಡೆಸಲು ಕೆಲವೊಂದು ತೊಡಕುಗಳಿವೆ ಎಂದು ಹೇಳಲಾಗುತ್ತಿತ್ತು.
ನೀತಿ ನಿಯಮಾವಳಿಗಳ ಹೊರತಾಗಿಯೂ ಕೆಲವು ಹಿರಿಯ ಕಲಾವಿದರು ತಿರುಗಾಟಕ್ಕೆ ಸ್ವಯಂ ನಿರ್ಬಂಧ ವಿಧಿಸಿಕೊಂಡ ಬಗ್ಗೆ ಮಾಹಿತಿಗಳು ಬರುತ್ತಿವೆ. ಅದರಲ್ಲೂ ಒಂದು ಕಾಲದಲ್ಲಿ ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆಯಲ್ಲಿ ವಿಜೃಂಬಿಸುತ್ತಿದ್ದ ಹಾಡುಗಾರಿಕೆಯ ತ್ರಿಮೂರ್ತಿಗಳೆಂದೇ ಪ್ರಸಿದ್ಧರಾಗಿದ್ದ ಭಾಗವತರುಗಳಾದ ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯ ಮತ್ತು ಪುತ್ತಿಗೆ ರಘುರಾಮ ಹೊಳ್ಳರು ಈ ಬಾರಿಯ ತಿರುಗಾಟಕ್ಕೆ ಲಭ್ಯರಾಗುವುದು ಸಂಶಯ ಎಂದೇ ಭಾವಿಸಲಾಗಿದೆ.
ಎಡನೀರು ಮೇಳವು ತನ್ನ ತಿರುಗಾಟವನ್ನು ಕಳೆದ ವರ್ಷವೇ ಕೆಲವೊಂದು ಕಾರಣಗಳಿಂದ ನಿಲ್ಲಿಸಿತ್ತು. ಈ ಕಾರಣದಿಂದ ದಿನೇಶ ಅಮ್ಮಣ್ಣಾಯರು ಮೇಳದ ಖಾಯಂ ಭಾಗವತರಾಗಿ ಮತ್ತೆ ಕಾಣಿಸಿಕೊಳ್ಳುವುದು ಅಸಂಭವ. ಅದೂ ಅಲ್ಲದೆ ಕೃಷಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡ ಅಮ್ಮಣ್ಣಾಯರು ಒಂದೆರಡು ವರ್ಷಗಳ ಮೊದಲೇ ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯುವ ಸೂಚನೆಯನ್ನು ನೀಡಿದ್ದರು.
ಪದ್ಯಾಣ ಗಣಪತಿ ಭಟ್ಟರೂ ವಯಸ್ಸಿನ ಕಾರಣದಿಂದ ಈ ಬಾರಿಯ ತಿರುಗಾಟದಿಂದ ಹಿಂದೆ ಉಳಿಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳ ಬೇಡಿಕೆಯ ಮೇರೆಗೆ ಕೆಲವೊಂದು ಪ್ರದರ್ಶನಗಳಲ್ಲಿ ಮೇಳದ ಭಾಗವತರಾಗಿ ಕಾಣಿಸಿಕೊಂಡರೂ ಪ್ರತಿಯೊಂದು ಪ್ರದರ್ಶನಗಳಲ್ಲಿ ಅವರ ಲಭ್ಯತೆ ಇರಲಾರದು.
ಪುತ್ತಿಗೆ ರಘುರಾಮ ಹೊಳ್ಳರಿಗೂ ಅದೇ ವಯಸ್ಸಿನ ತೊಡಕು. ಆದರೆ ಅವರಿಗೆ ತಿರುಗಾಟಕ್ಕೆ ವಿದಾಯ ಹೇಳಲು ಬೇರೇನೂ ಅನಾನುಕೂಲತೆಗಳಿಲ್ಲ ಎಂದು ತೋರುತ್ತದೆ. ಆದರೂ ಅವರು ಮೇಳದ ತಿರುಗಾಟಕ್ಕೆ ಈಗಾಗಲೇ ವಿದಾಯ ಹೇಳಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಅದು ಅಧಿಕೃತ ಸುದ್ದಿಯೋ ಅಥವಾ ಅನಧಿಕೃತವೋ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಏನೇ ಆದರೂ ಒಂದು ಕಾಲದಲ್ಲಿ ಈ ತ್ರಿಮೂರ್ತಿಗಳು ಯಕ್ಷಗಾನ ಪ್ರಿಯರಲ್ಲಿ ಯಕ್ಷಗಾನದ ಕಿಚ್ಚು ಹಬ್ಬಿಸಿದ್ದಂತೂ ಸುಳ್ಳಲ್ಲ. ನಿಜವಾಗಿ ಆ ಕಾಲದಲ್ಲಿ ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಮಂದಿಯನ್ನು ತಮ್ಮ ಗಾನ ಸುಧೆಯಿಂದ ಸನ್ಮೋಹಗೊಳಿಸಿ ಯಕ್ಷಗಾನದತ್ತ ಮತ್ತೆ ಕೊರಳು ತಿರುಗಿಸುವಂತೆ ಮಾಡಿದುದರಲ್ಲಿ ಈ ಮೂವರ ಕೊಡುಗೆ ಬಹಳಷ್ಟಿದೆ. ಆದ್ದರಿಂದ ಈ ಮೂವರು ಭಾಗವತರ ನಿವೃತ್ತಿಯು ಯಕ್ಷಗಾನದ ಹಲವಾರು ಹಿರಿಯ ಪ್ರೇಕ್ಷಕರನ್ನು ಮತ್ತೆ ಪ್ರದರ್ಶನಗಳಿಂದ ವಿಮುಖರಾಗುವಂತೆ ಮಾಡಿದರೆ ಅದರಲ್ಲಿ ಆಶ್ಚರ್ಯವೇನಿಲ್ಲ.
ತೀರ್ಥಹಳ್ಳಿ ಗೋಪಾಲ ಆಚಾರ್ಯರು ಬಡಗುತಿಟ್ಟು ಯಕ್ಷಗಾನ ರಂಗ ಕಂಡ ಪ್ರಖ್ಯಾತ ಪುಂಡುವೇಷಧಾರಿಗಳಲ್ಲಿ ಒಬ್ಬರು. ಒಂದು ಕಾಲದಲ್ಲಿ ಅಂದರೆ ಸುಮಾರು 20 ವರ್ಷಗಳ ಕಾಲದಷ್ಟು ಹಿಂದಕ್ಕೆ ಹೋದರೆ ಆ ಕಾಲದಲ್ಲಿ ಬಡಗು ತಿಟ್ಟಿನಲ್ಲಿ ಅಭಿಮನ್ಯು ಮತ್ತು ಬಬ್ರುವಾಹನ, ಸುಧನ್ವ, ಚಂದ್ರಹಾಸ, ದೇವವ್ರತ ಮೊದಲಾದ ಪುಂಡುವೇಷಗಳಲ್ಲಿ ಯಕ್ಷಗಾನ ವೇದಿಕೆಗಳಲ್ಲಿ ತನ್ನ ಪ್ರದರ್ಶನದಿಂದಲೇ ದೂಳೆಬ್ಬಿಸಿದವರು.
ಈಚೆಗೆ ನಾಲ್ಕೈದು ವರ್ಷಗಳ ಹಿಂದೆ ಅವರಿಗೆ 60 ವರ್ಷಗಳು ತುಂಬಿತ್ತು. ಆಗ ಅವರ 60ರ ಸಂಭ್ರಮವನ್ನೂ ಆಚರಿಸಲಾಗಿತ್ತು. ಅಂತಹಾ 60ರ ವಯಸ್ಸಿನಲ್ಲಿಯೂ ಪುಂಡುವೇಷಗಳನ್ನು ವಯಸ್ಸಿನ ತೊಡಕುಗಳಿಲ್ಲದೆ ಸುಲಲಿತವಾಗಿ ನಿರ್ವಹಿಸುತ್ತಿದ್ದ ಅವರಿಗೆ ಅರುವತ್ತರ ಅಭಿಮನ್ಯು ಎಂಬ ಹೆಸರು ಸಾರ್ಥಕವಾಗಿ ಒಪ್ಪುತ್ತದೆ. ತನ್ನ 60ನೆಯ ವಯಸ್ಸಿನಲ್ಲಿಯೂ 30ರ ಯುವಕನಷ್ಟು ರಂಗದಲ್ಲಿ ಕ್ರಿಯಾಶೀಲರಾಗಿದ್ದ ಬೆರಳೆಣಿಕೆಯ ಕಲಾವಿದರಲ್ಲಿ ಗೋಪಾಲ ಆಚಾರ್ಯರೂ ಒಬ್ಬರು.
60 ವರ್ಷ ಎನ್ನುವುದು ಕಲಾವಿದರಿಗೆ ಪ್ರಾಯವೇನಲ್ಲ ಹೆಚ್ಚಿನ ಕಲಾವಿದರು ತಮ್ಮ ಕಲಾಜೀವನದ ಉತ್ತುಂಗದ ಸ್ಥಿತಿಯಲ್ಲಿ ವಿರಾಜಮಾನರಾಗುವುದು ಈ ವಯಸ್ಸಿನಲ್ಲಿಯೇ ಆಗಿರುತ್ತದೆ. ಆದರೆ ಬೇಡಿಕೆಯಲ್ಲಿರುವಾಗಲೇ ವೃತ್ತಿ ಬದುಕಿಗೆ ವಿದಾಯ ಹೇಳಬೇಕೆಂಬ ಬಯಕೆ ತೀರ್ಥಹಳ್ಳಿ ಗೋಪಾಲ ಆಚಾರ್ಯರದ್ದಾಗಿತ್ತು. ಅದರಂತೆ ತಮ್ಮ ಕಲಾಬದುಕಿನ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗಲೇ ಯಕ್ಷಗಾನ ವೃತ್ತಿಗೆ ನಿವೃತ್ತಿ ಘೋಷಿಸಿದರು.
ತೀರ್ಥಹಳ್ಳಿ ಗೋಪಾಲ ಆಚಾರ್ಯರು ಹುಟ್ಟಿದ್ದು ಮಲೆನಾಡಿನ ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ. ವಾಸುದೇವ ಆಚಾರ್ಯ ಮತ್ತು ಸುಲೋಚನಾ ದಂಪತಿಯ ಎರಡನೇ ಮಗನಾಗಿ 1955ರಲ್ಲಿ ಜನಿಸಿದರು. ಹಿರಿಯರ ಮೂಲ ಕುಲಕಸುಬನ್ನು ಬಿಟ್ಟು ಯಕ್ಷಗಾನವನ್ನು ವೃತ್ತಿ ಮತ್ತು ಆಸಕ್ತಿಯ ಕ್ಷೇತ್ರವನ್ನಾಗಿ ಆರಿಸಿಕೊಂಡರು. ಅವರ ಆಯ್ಕೆ ತಪ್ಪಾಗಲೇ ಇಲ್ಲ. ಅವರ ಈ ನಿರ್ಧಾರವು ಮುಂದೊಂದು ದಿನ ಯಕ್ಷಗಾನಕ್ಕೊಂದು ಅಮೂಲ್ಯ ರತ್ನವನ್ನು ಸಂಪಾದಿಸಿಕೊಟ್ಟಿತು.
ತೀರ್ಥಹಳ್ಳಿ ಗೋಪಾಲ ಆಚಾರ್ಯ ಎನ್ನುವ ಯಕ್ಷಗಾನ ಕಲಾವಿದ ಇಂದು ಜನಮಾನಸದಲ್ಲಿ ಅಮೂಲ್ಯ ಸ್ಥಾನವನ್ನು ಪಡೆದಿದ್ದಾರೆ. ಬಡಗುತಿಟ್ಟು ಯಕ್ಷಗಾನ ರಂಗದ ಈ ಕಲಾವಿದ ಸುಮಾರು ನಾಲ್ಕು ದಶಕಗಳಿಗೂ ಅಧಿಕ ಕಾಲ ರಂಗದ ಅನಭಿಷಿಕ್ತ ದೊರೆಯಾಗಿ ಮೆರೆದರು. ಮಲೆನಾಡಿನ ತೀರ್ಥಹಳ್ಳಿಯಿಂದ ಬಂದು ಯಕ್ಷಗಾನದ ಆಡು ಅಂಗಳವಾದ ಕುಂದಾಪುರ ತಾಲೂಕಿನ ಸಮೀಪದ ನಾಯಕನಕಟ್ಟೆಯಲ್ಲಿ ನೆಲೆಸಿದರು. ಓದಿದ್ದು ಮೂರನೆಯ ತರಗತಿಯ ವರೆಗೆ. ಆದರೆ ಯಕ್ಷಗಾನದಿಂದ ಗಳಿಸಿಕೊಂಡ ಜ್ಞಾನ ವಿದ್ವಾಂಸರಿಗಿಂತ ಕಡಿಮೆಯೇನಲ್ಲ.
ಯಕ್ಷಗಾನದ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಕೃಷ್ಣೋಜಿರಾಯರಿಂದ ಪೂರೈಸಿದರು. ಆಮೇಲೆ ಮೇಳದ ತಿರುಗಾಟಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ತಾನು ಸ್ವತಃ ಕಂಡು, ಅನುಭವಗಳಿಂದ ಕಲಿತರು. ಆಚಾರ್ಯರ ಈ ತೆರನಾದ ಪ್ರಸಿದ್ಧಿಯು ಅವರಿಗೆ ದಿಢೀರ್ ಉಂಟಾದುದಲ್ಲ. ತನ್ನ 14ನೇ ವಯಸ್ಸಿನಲ್ಲಿ ಮಲೆನಾಡಿನ ರಂಜದಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆಕಟ್ಟಿದ ಆಚಾರ್ಯರು ಬಾಲಗೋಪಾಲ, ಪೀಠೀಕಾ ಸ್ತ್ರೀವೇಷ, ಒಡ್ಡೋಲಗ ಪುಂಡುವೇಷ, ಪುರುಷವೇಷಗಳನ್ನೂ ಮಾಡಿ ಎರಡನೇ ವೇಷದ ಸ್ಥಾನಕ್ಕೇರಿದರು.
1970ರಲ್ಲಿ ತನ್ನ ತಿರುಗಾಟವನ್ನು ಆರಂಭಿಸಿದ ತೀರ್ಥಹಳ್ಳಿಯವರು ನಾಗರಕೊಡುಗೆ, ಶಿರಸಿಯ ಪಂಚಲಿಂಗೇಶ್ವರ, ಗೋಳಿಗರಡಿ ಮತ್ತು ಸಾಲಿಗ್ರಾಮ ಮೇಳಗಳಲ್ಲಿ ಸೇವೆ ಸಲ್ಲಿಸಿದ ನಂತರ ಪೆರ್ಡೂರು ಮೇಳದಲ್ಲಿ 31 ವರ್ಷಗಳ ಸುದೀರ್ಘಾವಧಿಯ ಕಲಾಸೇವೆ ಸಲ್ಲಿಸಿದ್ದಾರೆ. ಯಕ್ಷರಂಗದ ಸಿಡಿಲಮರಿ, ಅರುವತ್ತರ ಅಭಿಮನ್ಯು ಹೀಗೆ ಬಹು ಬಿರುದಾಂಕಿತ ತೀರ್ಥಹಳ್ಳಿಯವರ ನಿವೃತ್ತಿಯ ನಿರ್ಧಾರದಿಂದ ಸ್ವತಃ ಅವರ ಅಭಿಮಾನಿಗಳೂ ಮತ್ತು ಯಕ್ಷಗಾನ ಕಲಾಭಿಮಾನಿಗಳೂ ಅತೀವ ಬೇಸರಗೊಂಡಿದ್ದರು.
ಅವರಿಂದ ಇನ್ನೂ ಹೆಚ್ಚಿನ ಕಲಾಸೇವೆಯನ್ನು ನಿರೀಕ್ಷಿಸಿದ್ದರೂ ತೀರ್ಥಹಳ್ಳಿಯವರು ತನ್ನ ನಿವೃತ್ತಿಗೆ ಇದೇ ಸಕಾಲ ಎಂದು ನಿರ್ಧರಿಸಿದಂತಿತ್ತು. ಶ್ರುತಿಬದ್ದ ಮಾತುಗಳು ಮತ್ತು ಪಾತ್ರಕ್ಕೆ ನ್ಯಾಯ ಒದಗಿಸುವಿಕೆ ಮತ್ತು ಪಾತ್ರ ನಿರ್ವಹಣೆಯಲ್ಲಿ ಶಿಸ್ತು ಮತ್ತು ಅಚ್ಚುಕಟ್ಟುತನ ಇವುಗಳು ಗೋಪಾಲ ಆಚಾರ್ಯರ ವಿಶೇಷತೆಗಳು. ರಂಜದಕಟ್ಟೆ ಮೇಳದ ಪ್ರಥಮ ತಿರುಗಾಟದ ನಂತರ ನಾಗರಕೊಡಗೆ ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿದ್ದ ಗೋಪಾಲ ಆಚಾರ್ಯರು ಆಮೇಲೆ ಗೋಳಿಗರಡಿ ಮೇಳದಲ್ಲಿ ತಿರುಗಾಟ ನಡೆಸಿದ್ದರು.
ಆಮೇಲೆ ಸಾಲಿಗ್ರಾಮ ಮೇಳಕ್ಕೆ ಸೇರಿದರು. ಸಾಲಿಗ್ರಾಮ ಮೇಳದ ತಿರುಗಾಟವು ಕಲಾಜೀವನಕ್ಕೆ ದೊಡ್ಡ ತಿರುವು ಎಂದೇ ಹೇಳಬಹುದು. ಪ್ರಸಿದ್ಧ ಕಲಾವಿದರ ಒಡನಾಟದಿಂದ ಬಹಳಷ್ಟು ಕಲಿಯುವುದಕ್ಕೆ ಅವಕಾಶವಾಯಿತು. ಗುಂಡ್ಮಿ ಕಾಳಿಂಗ ನಾವಡ, ಅರಾಟೆ ಮಂಜುನಾಥ, ಮುಖ್ಯಪ್ರಾಣ ಕಿನ್ನಿಗೋಳಿ, ರಾಮನಾಯರಿ, ಭಾಸ್ಕರ ಜೋಶಿ, ಬಳ್ಕೂರು ಕೃಷ್ಣಯಾಜಿ, ಐರೋಡಿ ಗೋವಿಂದಪ್ಪ, ನೆಲ್ಲೂರು ಮರಿಯಪ್ಪಾಚಾರ್, ಜಲವಳ್ಳಿ ವೆಂಕಟೇಶ ರಾವ್, ಶಿರಿಯಾರ್ ಮಂಜುನಾಯ್ಕ್, ಅರಾಟೆ ಮಂಜುನಾಥ, ಮೊದಲಾದ ದಿಗ್ಗಜರ ಒಡನಾಟವೂ ದೊರೆಯಿತು.
ಬಹು ಬೇಗನೆ ಪುಂಡುವೇಷದ ಪಟ್ಟ ಅರಸಿಕೊಂಡು ಬಂತು. ಕಾಳಿಂಗ ನಾವಡರ ನಾಗಶ್ರೀ ಪ್ರಸಂಗದ ಶೈಥಿಲ್ಯನಾಗಿ ಜನಮನ್ನಣೆ ಗಳಿಸಿದರು. ಕಾಲ್ಪನಿಕ ಮತ್ತು ಸಾಮಾಜಿಕ ಪ್ರಸಂಗಗಳಲ್ಲಿ ಅಲ್ಲದೆ ಪೌರಾಣಿಕ ಪ್ರಸಂಗಗಳ ಪಾತ್ರಗಳಾದ ಅಭಿಮನ್ಯು, ಧರ್ಮಂಗದ, ರುಕ್ಮಾಂಗ, ಶುಭಾಂಗ, ಬಬ್ರುವಾಹನ, ಚಿತ್ರಕೇತ, ಕುಶ, ಲವ ಮೊದಲಾದ ಪಾತ್ರಗಳಲ್ಲಿ ಅಭೂತಪೂರ್ವ ಜನಮನ್ನಣೆಯನ್ನು ಗಳಿಸಿದರು. ಸಾಲಿಗ್ರಾಮ ಮೇಳದಲ್ಲಿ ಹತ್ತು ವರ್ಷ ತಿರುಗಾಟ ಮಾಡಿದ್ದರು. ಆಮೇಲೆ ಶಿರಸಿಯ ಪಂಚಲಿಂಗೇಶ್ವರ ಮೇಳದಲ್ಲಿ ಸೇವೆ ಸಲ್ಲಿಸಿದರು.
1986ರಲ್ಲಿ ಡೇರೆ ಪುನರಾರಂಭಗೊಂಡ ಪೆರ್ಡೂರು ಮೇಳಕ್ಕೆ ತೀರ್ಥಹಳ್ಳಿ ಗೋಪಾಲ ಆಚಾರ್ಯರು ಸೇರ್ಪಡೆಗೊಂಡರು. ಆಮೇಲೆ ನಿರಂತರ 31 ವರ್ಷಗಳ ಕಾಲ ಪೆರ್ಡೂರು ಮೇಳದ ಅವಿಭಾಜ್ಯ ಅಂಗವಾದರು. ಪೆರ್ಡೂರು ಮೇಳದಲ್ಲಿ ಅವರಿಗೆ ಸುಬ್ರಮಣ್ಯ ಧಾರೇಶ್ವರ, ಸುರೇಶ ಶೆಟ್ಟಿ, ದುರ್ಗಪ್ಪ ಗುಡಿಗಾರ್, ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆ, ಆರ್ಗೋಡು ಮೋಹನದಾಸ ಶೆಣೈ ಮೊದಲಾದ ಪ್ರಸಿದ್ಧ ಕಲಾವಿದರ ಒಡನಾಟ ಸಿಕ್ಕಿತು. ಅಲ್ಲಿ ಆಚಾರ್ಯರು ಖ್ಯಾತಿಯ ಉತ್ತುಂಗಕ್ಕೇರತೊಡಗಿದರು.
ಅವರಿಗೆ ಅಪಾರ ಪ್ರಸಿದ್ಧಿ ತಂದುಕೊಟ್ಟ ಪಾತ್ರ ಅಭಿಮನ್ಯು. ಆ ಪಾತ್ರ ಎಷ್ಟು ಪ್ರಸಿದ್ಧಿ ತಂದು ಕೊಟ್ಟಿತು ಎಂದರೆ ಅಭಿಮನ್ಯುವಿನ ಹೆಸರು ಗೋಪಾಲ ಆಚಾರ್ಯರ ಹೆಸರಿನೊಂದಿಗೆ ಜೋಡಿಸಲ್ಪಟ್ಟಿತು. ಅದೇ ರೀತಿ ಕೃಷ್ಣನ ಪಾತ್ರವೂ ಇವರನ್ನೇ ಅರಸಿ ಬರುತ್ತಿತ್ತು. ಯಾವುದೇ ಪ್ರಸಂಗದಲ್ಲಿ ಕೃಷ್ಣನ ಪಾತ್ರವು ಇವರಿಗೆ ಮೀಸಲಾಗಿರುತ್ತಿತ್ತು.
ಬಡಗು ಮತ್ತು ಬಡಾ ಬಡಗು ಈ ಎರಡೂ ಶೈಲಿಗಳ ನೃತ್ಯವನ್ನು ಕರಗತ ಮಾಡಿಕೊಂಡಿದ್ದ ಗೋಪಾಲ ಆಚಾರ್ಯರು ಈ ಎರಡೂ ನೃತ್ಯ ಶೈಲಿಗಳನ್ನು ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶಿಸುತ್ತಿದ್ದರು. ಇವರ ವೇಷಗಾರಿಕೆಯಲ್ಲಿ ನಗರ ಜಗನ್ನಾಥ ಶೆಟ್ಟಿ ಮತ್ತು ಶಿರಿಯಾರ ಮಂಜು ನಾಯ್ಕರ ಪ್ರಭಾವವಿದೆ ಎಂದು ಹೇಳಲಾಗುತ್ತದೆ. ಹೀಗೆ 1970ರಿಂದ ತೊಡಗಿ ಒಟ್ಟು 46 ವರ್ಷಗಳ ಕಾಲ ತೀರ್ಥಹಳ್ಳಿ ಗೋಪಾಲ ಆಚಾರ್ಯರು ಬಡಗುತಿಟ್ಟು ಯಕ್ಷಗಾನದಲ್ಲಿ ಬೆಳೆದು ಬಂದು ಪ್ರಸಿದ್ಧಿಯ ಪಥದಲ್ಲಿ ಹೆಜ್ಜೆ ಹಾಕಿದ್ದು ಈಗ ಇತಿಹಾಸ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಕಳೆದ ಎಂಟು ವರ್ಷಗಳಿಂದ ಆಯೋಜಿಸುತ್ತಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ವನ್ನು ಕೋವಿಡ್ – 19 ಹಿನ್ನೆಲೆಯಲ್ಲಿ ರದ್ದುಪಡಿಸಿದ್ದು, ಈ ಬಾರಿ ಸರಕಾರದ ನಿಯಮಾವಳಿಗೊಳಪಟ್ಟು ಒಂದು ದಿನದ ‘ಯಕ್ಷಗಾನ ತಾಳಮದ್ದಳೆ ಪರ್ವ’ವನ್ನು ನಡೆಸಲು ತೀರ್ಮಾನಿಸಲಾಗಿದೆ.
ಇದೇ 2020 ನವೆಂಬರ್ 29 ರಂದು ಆದಿತ್ಯವಾರ ಅಪರಾಹ್ನ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ‘ಪಾರಿಜಾತ’ ಸಭಾಂಗಣದಲ್ಲಿ ‘ರಾಜ್ಯೋತ್ಸವ ಕಲಾ ಸಂಭ್ರಮ – 2020’ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರ ಸಂಸ್ಮರಣೆ, ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಮತ್ತು ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ.
ಈ ಸಂದರ್ಭದಲ್ಲಿ ಕನ್ನಡ ನುಡಿ ಹಬ್ಬವಾಗಿ ನಡೆಯುವ ಯಕ್ಷಗಾನ ತಾಳಮದ್ದಳೆ ಪರ್ವದಲ್ಲಿ ಜಿಲ್ಲೆಯ ಹೆಸರಾಂತ ಕಲಾವಿದರಿಂದ ‘ಶ್ರೀಕೃಷ್ಣ ತಂತ್ರ – ಮಾರುತಿ ಪ್ರತಾಪ’ ತಾಳಮದ್ದಳೆ ಕೂಟವನ್ನು ಏರ್ಪಡಿಸಲಾಗಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಕ್ಷಗಾನವಾಗಲೀ, ನಾಟಕವಾಗಲೀ ಯುವುದೇ ಒಂದು ಕಲೆಯ ರಂಗಪ್ರದರ್ಶನಕ್ಕೆ ಬೇಕಾದ ವೇಷಭೂಷಣಗಳನ್ನು ತಯಾರಿಸಿ, ಅದನ್ನು ನಿರ್ವಹಿಸುತ್ತಾ ಮುನ್ನೆಡೆಯುವುದು ಅಷ್ಟು ಸುಲಭವಲ್ಲ. ಅದೊಂದು ಕಲೆಯೇ ಹೌದು. ಆಸಕ್ತಿ, ಅರ್ಪಣಾ ಭಾವ, ಸಹನೆ, ಎಚ್ಚರಗಳೆಂಬ ಗುಣಗಳಿದ್ದವರಿಗೆ ಮಾತ್ರ ಇದು ಸಾಧ್ಯ.
ರಂಗದಲ್ಲಿ ಪ್ರದರ್ಶನಗಳು ಯಶಸ್ವಿಯಾಗಿ ರಂಜಿಸಲು ಇವರೂ ಕಾರಣರಾಗುತ್ತಾರೆ. ಅನೇಕ ಪ್ರಸಾಧನ ತಜ್ಞರು ಇಂದು ಯಕ್ಷಗಾನ ಪ್ರದರ್ಶನಗಳಿಗೆ ವೇಷ ಭೂಷಣಗಳನ್ನು ತಯಾರಿಸಿ ಒದಗಿಸುತ್ತಿದ್ದಾರೆ. ಅಂತಹಾ ಪ್ರಸಾಧನ ತಜ್ಞರಲ್ಲಿ ಶ್ರೀ ಮಹಾಬಲ ಕಲ್ಮಡ್ಕ ಅವರೂ ಒಬ್ಬರು. ಬಹುಮುಖ ಪ್ರತಿಭೆಯ ಕಲಾವಿದರಿವರು. ಯಕ್ಷಗಾನ, ನಾಟಕ ಕಲಾವಿದರಾಗಿ, ವೇಷಭೂಷಣ ತಯಾರಕರಾಗಿ ಪ್ರಸಾಧನ ತಂಡದ ನಾಯಕನಾಗಿ, ಕಲಾ ಪ್ರದರ್ಶನಗಳ ಸಂಘಟಕರಾಗಿ, ನಿರ್ದೇಶಕರಾಗಿ, ಕಾಷ್ಠಶಿಲ್ಪ ತಯಾರಕರಾಗಿ ಗುರುತಿಸಿಕೊಂಡಿದ್ದಾರೆ.
ಶ್ರೀಯುತರು ಕಲ್ಮಡ್ಕದ ‘ರಂಗ ಸುರಭಿ’ ಪ್ರಸಾಧನ ಸಂಸ್ಥೆಯ ರೂವಾರಿಗಳು. ಶ್ರೀ ಮಹಾಬಲ ಭಟ್ ಅವರು ಸುಳ್ಯ ತಾಲೂಕು ಕಲ್ಮಡ್ಕದ ಕೆರೆಕೋಡಿ ಎಂಬಲ್ಲಿ 1962 ಜನವರಿ 6ರಂದು ಕೆರೆಕೋಡಿ ಪಂಡಿತ ಗಣಪತಿ ಭಟ್ ಮತ್ತು ಪಾರ್ವತೀ ಅಮ್ಮ ದಂಪತಿಗಳ ಪುತ್ರನಾಗಿ ಈ ಲೋಕದ ಬೆಳಕನ್ನು ಕಂಡವರು. ಕೆರೆಕೋಡಿ ಗಣಪತಿ ಭಟ್ಟರು ಆಯುರ್ವೇದ ವೈದ್ಯರಾಗಿ ಕಲಾವಿದರಾಗಿ, ಸಂಘಟಕರಾಗಿ ಪ್ರಸಿದ್ಧರು. ಕಲ್ಮಡ್ಕದ ‘ಸಂಗಮ ಕಲಾ ಸಂಘ’ ಎಂಬ ಸಂಸ್ಥೆಯನ್ನು ಊರ ಮಿತ್ರರ ಸಹಕಾರದಿಂದ ಹುಟ್ಟಿ ಹಾಕಿ ನಿರಂತರ ಕಲಾ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇವರ ಮೂಲ ಮನೆ ಕಾಸರಗೋಡು ತಾಲೂಕಿನ ಪಳ್ಳತ್ತಡ್ಕ ಎಂಬಲ್ಲಿ. ಇವರು ಸಮಾಜ ಸೇವಕರೂ ಆಗಿದ್ದರು.
ಮಹಾಬಲ ಕಲ್ಮಡ್ಕ ಅವರಿಗೆ ಕಲಾಸಕ್ತಿ ಹಿರಿಯರಿಂದಲೇ ಬಂದ ಬಳುವಳಿ. ಇವರು ಪದವೀಧರರು. ಓದಿದ್ದು ಕಲ್ಮಡ್ಕ ಶಾಲೆ, ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ, ಬೆಳ್ಳಾರೆ ಪದವಿ ಪೂರ್ವ ಕಾಲೇಜು, ಪುತ್ತೂರು ವಿವೇಕಾನಂದ ಕಾಲೇಜುಗಳಲ್ಲಿ. ಬಾಲ್ಯದಲ್ಲೇ ಯಕ್ಷಗಾನ, ನಾಟಕ, ತಾಳಮದ್ದಲೆಗಳನ್ನು ನೋಡುತ್ತಾ ಬೆಳೆದವರು. ಕುಡ್ಪ ಶ್ರೀ ರಾಮಚಂದ್ರ ಹೆಗಡೆ ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತು 7ನೇ ಕ್ಲಾಸಿನಲ್ಲಿರುವಾಗ ರಂಗ ಪ್ರವೇಶ ಮಾಡಿದ್ದರು.
ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಶಾಲಾ ವಾರ್ಷಿಕೋತ್ಸವದ ಪ್ರದರ್ಶನಗಳಲ್ಲಿ ಮತ್ತು ಕಲ್ಮಡ್ಕ ಸಂಗಮ ಕಲಾ ಸಂಘದ ಪ್ರದರ್ಶನಗಳಲ್ಲಿ ವೇಷ ಮಾಡಿದ್ದರು. ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ಸಂಗಮ ಕಲಾ ಸಂಘದ ಆಶ್ರಯದಲ್ಲಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿರುವಾಗ ಪ್ರಸಂಗಕರ್ತ, ವಿದ್ವಾಂಸ, ಉಪನ್ಯಾಸಕ, ಶ್ರೀ ಅಮೃತ ಸೋಮೇಶ್ವರರ ಪ್ರೋತ್ಸಾಹವೂ ದೊರಕಿತ್ತು. ಅವರೊಂದಿಗೆ ಯಕ್ಷಗಾನದ ಅನೇಕ ಶಿಬಿರ, ಕಮ್ಮಟಗಳಿಗೆ ತೆರಳಿ ಮುಖವರ್ಣಿಕೆ, ವೇಷ ಧರಿಸುವ ಕ್ರಮವನ್ನು ಅಭ್ಯಸಿಸಿದ್ದರು.
ಕಲಾಗಂಗೋತ್ರಿ ಕೋಟೆಕಾರು, ಕಟೀಲು, ಉಡುಪಿ ಯಕ್ಷಗಾನ ಅಧ್ಯಯನ ಕೇಂದ್ರ, ಸುಳ್ಯ ತೆಂಕುತಿಟ್ಟು ಹಿತರಕ್ಷಣಾ ವೇದಿಕೆ, ಮೊದಲಾದೆಡೆ ನಡೆದ ಶಿಬಿರಗಳಲ್ಲಿ ಭಾಗಿಯಾಗಿ ಅಧ್ಯಯನ ನಡೆಸಿದ್ದರು. ಕೇರಳದಲ್ಲಿ ಕಥಕ್ಕಳಿ ಎಂಬ ಕಲಾ ಪ್ರಕಾರದ ಶಿಬಿರಗಳಲ್ಲೂ ಪಾಲುಗೊಂಡಿದ್ದರು. ಈ ಅನುಭವದ ಆಧಾರದಿಂದಲೇ ಸಂಗಮ ಕಲಾ ಸಂಘದಲ್ಲಿ ಸಕ್ರಿಯರಾಗಿ ಅದರ ಬೆಳವಣಿಗೆಗೆ ಕಾರಣರಾಗಿದ್ದರು. ಪದವಿ ಶಿಕ್ಷಣದ ನಂತರ ತಂದೆ ಕೆರೆಕೋಡಿ ಗಣಪತಿ ಭಟ್ಟರಿಂದಲೂ ಯಕ್ಷಗಾನ ವೇಷಭೂಷಣ ತಯಾರಿಕೆಯನ್ನು ಕಲಿತಿದ್ದರು.
ಹೀಗೆ ಯಕ್ಷಗಾನದ ಪ್ರತಿಯೊಂದು ವೇಷ- ಭೂಷಣಗಳ ಆಯ, ಆಕಾರ, ಬಣ್ಣದ ಹೊಂದಾಣಿಕೆ ಮೊದಲಾದ ವಿಚಾರಗಳ ಜ್ಞಾನವನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸಾಗರ ಹೆಗ್ಗೋಡಿನ ‘ನೀನಾಸಂ’ ತಂಡದ ಶಿಬಿರವು ಬಾಳಿಲದಲ್ಲಿ ನಡೆದಿತ್ತು. ಶಿಬಿರದ ಕೊನೆಯಲ್ಲಿ ರಂಗಪ್ರದರ್ಶನವೂ ನಡೆದಿತ್ತು. ಇದರಿಂದ ಪ್ರಭಾವಿತರಾಗಿ ಮಹಾಬಲ ಕಲ್ಮಡ್ಕ ಅವರು ಹೆಗ್ಗೋಡಿಗೆ ತೆರಳಿ ‘ನೀನಾಸಂ’ ಸಂಸ್ಥೆಯಲ್ಲಿ ತರಬೇತಿ ಪಡೆದರು.(1988ರಲ್ಲಿ, ಒಂದು ವರ್ಷದ ಡಿಪ್ಲೊಮಾ).’ನೀನಾಸಂ’ನಲ್ಲಿ ತರಬೇತಿ ಪಡೆದು ಮರಳಿದ ಬಳಿಕ ಊರಿನಲ್ಲಿ ಮಹಾಬಲ ಕಲ್ಮಡ್ಕ ಅವರು ಕಲಿಕಾಸಕ್ತರಿಗೆ ವೇಷಭೂಷಣ ತಯಾರಿಕೆ, ಮುಖವರ್ಣಿಕೆಯ ಬಗೆಗೆ ತರಬೇತಿಯನ್ನು ನೀಡಿದರು.
ಅಲ್ಲದೆ ಸಂಗಮ ಕಲಾಸಂಘದ ಪ್ರದರ್ಶನಗಳ ಮತ್ತು ವೇಷಭೂಷಣಗಳ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ಸದ್ರಿ ಸಂಘವು ವೇಷಭೂಷಣಗಳ ನಿರ್ವಹಣೆಯನ್ನು ನಿಲ್ಲಿಸಿದಾಗ ಮಹಾಬಲ ಕಲ್ಮಡ್ಕ ಅವರು ಅದನ್ನು ಮುಂದುವರಿಸುವ ಯೋಚನೆಯನ್ನು ಮಾಡಿ ‘ರಂಗ ಸುರಭಿ’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು.(2001ರಲ್ಲಿ). ಈ ಸಂಸ್ಥೆಯಡಿಯಲ್ಲಿ ವೇಷಭೂಷಣಗಳ ತಯಾರಿಕೆ,ನಿರ್ವಹಣೆ, ಪ್ರದರ್ಶನಗಳಿಗೆ ಅದನ್ನು ಒದಗಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾ ಈ ವರೆಗೂ ಮುನ್ನಡೆದು ಸಾಗಿ ಬಂದಿದ್ದಾರೆ. ಅನೇಕ ಶಿಬಿರಗಳನ್ನು ನಡೆಸಿ ತರಬೇತಿಯನ್ನೂ ನೀಡಿರುತ್ತಾರೆ.
ರಂಗಸುರಭಿ ಮಕ್ಕಳ ತಂಡವನ್ನು ಸ್ಥಾಪಿಸಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ತರಬೇತಿ ಕೊಡಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ವರ್ಷಕ್ಕೆ ಸುಮಾರು ನೂರು ಪ್ರದರ್ಶನಗಳಿಗೆ ಇವರು ರಂಗ ಸುರಭಿ ತಂಡದ ವೇಷಭೂಷಣಗಳನ್ನು ಒದಗಿಸುತ್ತಾರೆ. ಸುಮಾರು ಐವತ್ತಕ್ಕೂ ಹೆಚ್ಚು ಶಿಬಿರ, ಕಮ್ಮಟಗಳಿಗೆ ಇವರು ವೇಷ ಭೂಷಣಗಳನ್ನು ಒದಗಿಸಿರುತ್ತಾರೆ. ಇವರು ಉತ್ತಮ ಕಾಷ್ಠ ಶಿಲ್ಪಕಾರರೂ ಹೌದು. ಡಾ. ಪುರುಷೋತ್ತಮ ಬಿಳಿಮಲೆ ಅವರ ಅಪೇಕ್ಷೆಯಂತೆ ಹಂಪಿ ವಿಶ್ವವಿದ್ಯಾನಿಲಯಕ್ಕೆ ಮರದಿಂದ ಕೆತ್ತಿ ನಿರ್ಮಿಸಿದ ರಾಜವೇಷದ ಪ್ರತಿಕೃತಿಯನ್ನು ನೀಡಿದ್ದಾರೆ.
ಜಪಾನಿನ ವಿದ್ವಾಂಸರಾದ ಶ್ರೀ ಸುಮಿಯೋ ಮೊರಿಜೆರಿ ಅವರ ಅಪೇಕ್ಷೆಯಂತೆ ಜಪಾನಿನ ವಸೇಡಾ ವಿಶ್ವವಿದ್ಯಾನಿಲಯದ ಜಾಗತಿಕ ರಂಗಭೂಮಿ ಪ್ರದರ್ಶನಾಂಗಣಕ್ಕೆ ಯಕ್ಷಗಾನದ ವಿವಿಧ ವೇಷಗಳ ಐದು ಪ್ರತಿಕೃತಿಗಳನ್ನು ಮತ್ತು ಇತರ ವೇಷ ಭೂಷಣಗಳನ್ನು ನೀಡಿರುತ್ತಾರೆ. ಪ್ರಾಂಶುಪಾಲ ಪ್ರೊ| ಶ್ರೀ ಪದ್ಮನಾಭ ಗೌಡರ ಸಲಹೆಯಂತೆ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರದರ್ಶನಾಂಗಣಕ್ಕೆ ತೆಂಕುತಿಟ್ಟಿನ ವಿವಿಧ ವೇಷಗಳ ಪ್ರತಿಕೃತಿಗಳನ್ನು ನೀಡಿದ್ದಾರೆ. ಅಲ್ಲದೆ ಮಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನಾಗಾರಕ್ಕೆ ಆಡಳಿತ ಮಂಡಳಿಯ ಅಪೇಕ್ಷೆಯಂತೆ ವಿವಿಧ ಪ್ರತಿಕೃತಿಗಳನ್ನು ನೀಡಿರುತ್ತಾರೆ.
ಹಲವಾರು ಮೇಳಗಳಿಗೂ ಸಂಘ ಸಂಸ್ಥೆಗಳಿಗೂ, ಕಲಾವಿದರಿಗೂ ವೇಷಭೂಷಣಗಳನ್ನು ತಯಾರಿಸಿ ನೀಡಿದವರು ಶ್ರೀ ಮಹಾಬಲ ಕಲ್ಮಡ್ಕ ಅವರು. ಪ್ರಸಾಧನ ಕಲೆಗಾರಿಕೆಯಲ್ಲಿ ಇವರಿಗೆ, ಗುರು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಮಾರ್ಗದರ್ಶನವೂ ದೊರಕಿತ್ತು. 1985ರಲ್ಲಿ ಶ್ರೀ ದಿವಾಣ ಭೀಮ ಭಟ್ಟರಿಂದ ಹಿಮ್ಮೇಳ ವಿದ್ಯೆಯನ್ನೂ ಕಲಿತಿದ್ದ ಶ್ರೀ ಮಹಾಬಲ ಕಲ್ಮಡ್ಕ ಅವರು ಹಲವಾರು ಪ್ರದರ್ಶನಗಳಲ್ಲಿ ಭಾಗವತರಾಗಿಯೂ, ಚೆಂಡೆ ಮದ್ದಳೆ ವಾದಕರಾಗಿಯೂ ಸಹಕರಿಸಿರುತ್ತಾರೆ.
1991ರಲ್ಲಿ ಸುಭಾಷಿನಿ ಅವರ ಜತೆ ವಿವಾಹ. ಶ್ರೀ ಮಹಾಬಲ ಕಲ್ಮಡ್ಕ ಮತ್ತು ಶ್ರೀಮತಿ ಸುಭಾಷಿನಿ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಕು| ಶಿಲ್ಪ. ಎಂ. ಫಾರ್ಮ ಓದಿರುತ್ತಾಳೆ. ಯಕ್ಷಗಾನ ಕಲಾವಿದೆ. ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯ ಕಲಿತು ಸುಮಾರು 75ಕ್ಕೂ ಮಿಕ್ಕಿದ ಪ್ರದರ್ಶನಗಳಲ್ಲಿ ಭಾಗಿಯಾಗಿರುತ್ತಾಳೆ. ಅನೇಕ ಪ್ರತಿಭಾ ಪುರಸ್ಕಾರಗಳನ್ನೂ ಪಡೆದ ಈಕೆ ಸಂಗೀತ, ಭರತನಾಟ್ಯ ಕಲಾವಿದೆಯೂ ಹೌದು. ಪ್ರಸ್ತುತ ಬೆಂಗಳೂರಿನ ಬಯೋ- ಕಾನ್ ಲಿಮಿಟೆಡ್ ಸಂಸ್ಥೆಯಲ್ಲಿ ಉದ್ಯೋಗಸ್ಥೆ.
ಕಿರಿಯ ಪುತ್ರಿ ಕು|ಶ್ರದ್ಧಾ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಜೋಗಿಬೆಟ್ಟು ಶ್ರೀನಿವಾಸ ಭಟ್ಟರಿಂದ ನಾಟ್ಯ ಕಲಿತು ಶಾಲಾ ಕಾಲೇಜಿನ ಯಕ್ಷಗಾನ ಪ್ರದರ್ಶನಗಳಲ್ಲಿ ವೇಷ ಮಾಡಿರುತ್ತಾಳೆ. ಬಹುಮುಖ ಪ್ರತಿಭೆಯ ಶ್ರೀ ಮಹಾಬಲ ಕಲ್ಮಡ್ಕ ಅವರ ಕಲಾ ಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು.