ನಿರಾತಂಕವಾಗಿ ಎಗ್ಗಿಲ್ಲದೆ ಸಾಗುತ್ತಿದ್ದ ಬದುಕಿನಲ್ಲಿ ದಿಢೀರನೆ ಕಷ್ಟ ಕಾರ್ಪಣ್ಯಗಳು ಬಂದೆರಗಿ ದಾರಿ ಅಸ್ಪಷ್ಟವಾಗಿ, ಜೀವನವು ಸಂಜೆಯ ಪಥದತ್ತ ಸಾಗುತ್ತಿರುವಾಗ ಎಲ್ಲಿಂದಲೋ ಬಂದ ನೇಸರನ ಸಂಜೆಯ ಕಿರಣಗಳು ಪಥವನ್ನು ತೋರಿ ಮುನ್ನುಗ್ಗಲು ಪ್ರೇರಣೆಯಾಗುತ್ತವೆ. ಲೇಖಕ, ಕಲಾವಿದ ನಾ. ಕಾರಂತ ಪೆರಾಜೆಯವರ ‘ಮುಸ್ಸಂಜೆಯ ಹೊಂಗಿರಣ’ ಎಂಬ ಕೃತಿಯೂ ಕೂಡಾ ಅದೇ ರೀತಿಯ ಸಂದೇಶವನ್ನು ಸಾರುತ್ತದೆ. ಕೃತಿಯ ಹೆಸರಿನಂತೆ ಸಂಜೆಯ ಹೊತ್ತಿನಲ್ಲಿಯೂ ನಮಗೆ ಬದುಕುವ ದಾರಿ ತೋರುವ ಹಲವಾಲು ಕಿರಣ ಸದೃಶ ಸಂಗತಿಗಳು ಇವೆ. ಆದರೆ ನೋಡುವ ಒಳಗಣ್ಣಿನ ಶಕ್ತಿ ಬೇಕು. ಕಾರಂತರ ಒಳಗಣ್ಣಿನ ನೋಟಕ್ಕೆ ಅಂತಹಾ ಹಲವಾರು ಸಂಗತಿಗಳು ಗೋಚರಿಸಿವೆ. ಅದನ್ನೇ ಅವರು ಒಂದು ಸುಂದರ ಕೃತಿಯ ರೂಪದಲ್ಲಿ ಹೊರತಂದಿದ್ದಾರೆ.
ಆ ಪುಸ್ತಕಕ್ಕೆ ‘ಮುಸ್ಸಂಜೆಯ ಹೊಂಗಿರಣ’ ಎಂಬ ಸುಂದರವಾದ ಅನ್ವರ್ಥನಾಮವನ್ನೇ ಇರಿಸಿದ್ದಾರೆ. ಕೊರೋನಾ ಭಯದಿಂದ ಲೋಕವೇ ಭಯದಿಂದ ಮುದುಡಿ ಮನೆಯ ಕೋಣೆ ಸೇರಿದ ಸಂದರ್ಭದಲ್ಲಿ ಹಲವು ಮನಸ್ಸುಗಳು ಧನಾತ್ಮಕವಾಗಿ ಚಿಂತಿಸಿದ್ದು ಮಾತ್ರವಲ್ಲದೆ ಆ ಯೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಿದುವು. ಅಂತಹಾ ಹಲವಾರು ನೈಜ ಘಟನೆಗಳ ಗೊಂಚಲಾಗಿ ಈ ಕೃತಿ ಮೂಡಿಬಂದಿದೆ. ಕೊರೋನಾ ಪಾಸಿಟಿವ್ ಭಯದಲ್ಲಿಯೂ ಧನಾತ್ಮಕ ಯೋಚನೆ (Positive thinking) ಹೇಗೆ ಮಾಡಹುದೆಂಬುದನ್ನು ಈ ಪುಸ್ತಕ ತಿಳಿಸಿಕೊಡುತ್ತದೆ. ಈ ಗ್ರಂಥ ನಾ. ಕಾರಂತರ ಒಂದು ಉತ್ತಮ ಪ್ರಯತ್ನದ ಫಲ. ಋಣಾತ್ಮಕ ವಿಚಾರಗಳ ನಡುವೆಯೂ ಧನಾತ್ಮಕವಾಗಿ ಹೇಗೆ ಕೆಲಸ ಮಾಡಬಹುದೆಂಬ ನಿರ್ದೇಶನವನ್ನು ನೀಡುತ್ತದೆ.
ಪುಸ್ತಕದ ಲೇಖಕರ ವಿಳಾಸ: ನಾ ಕಾರಂತ ಪೆರಾಜೆ, ಉಪಸಂಪಾದಕರು, ಅಡಿಕೆ ಪತ್ರಿಕೆ, ಭಟ್ಸ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು (ಫೋನ್: 9448625794)
ಸಮಾಜದಲ್ಲಿ ಸೂಕ್ತ ವ್ಯಕ್ತಿಗಳನ್ನು ನಾವು ಕೆಲವೊಮ್ಮೆ ಗುರುತಿಸಬೇಕಾದ ಸಮಯದಲ್ಲಿ ಗುರುತಿಸದೆ ಇರುತ್ತೇವೆ. ಆದರೆ ಅವರು ನಮ್ಮನ್ನು ಅಗಲಿದಾಗ ಅವರ ಇರುವಿಕೆಯ ನಿಜವಾದ ಬೆಲೆ ನಮಗೆ ಅರಿವಾಗುತ್ತದೆ. ಇದು ನಮ್ಮ ಸಮಾಜದ ಮತ್ತು ಬದುಕಿನ ವಿಚಿತ್ರ ಸತ್ಯ. ಇತ್ತೀಚೆಗೆ ನಮ್ಮನ್ನು ಅಗಲಿದ ಬದುಕಿನ ನಿಜವಾದ ಶ್ರಮಜೀವಿ ಸರಸ್ವತಿ ಭಟ್ ಅವರ ನೆನಪಾದಾಗಲೆಲ್ಲಾ ಈ ವಿಚಾರ ಖಂಡಿತವಾಗಿ ಮನಸ್ಸನ್ನು ಕಾಡದೆ ಇರಲಾರದು. ಅವರ ಸಾವು ಆಕಸ್ಮಿಕ ಘಟನೆ. ಆದರೆ ಸಾಯಬೇಕಾದ ವಯಸ್ಸು ಖಂಡಿತಾ ಅಲ್ಲ.
ನೀವು ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಎಲ್ಲಾ ಸಾಂಸ್ಕೃತಿಕ ಮತ್ತು ಕಲಾ ಪ್ರದರ್ಶನಗಳ ಸಮಾರಂಭಗಳಿಗೆ ಭೇಟಿ ನೀಡುವ ಅಭ್ಯಾಸವನ್ನು ಇಟ್ಟಿಕೊಂಡಿರುವವರಾಗಿದ್ದರೆ ಸರಸ್ವತಿ ಭಟ್ ಅವರ ಮುಖ ಪರಿಚಯ ನಿಮಗೆ ಇರಲೇಬೇಕು. ಪ್ರವೇಶ ದ್ವಾರದಲ್ಲಿ ಅಥವಾ ಅನತಿ ದೂರದಲ್ಲಿಯೋ ನಿಮಗೆ ಸರಸ್ವತಿಯವರ ಪುಸ್ತಕ ಮತ್ತು ವಿವಿಧ ಯಕ್ಷಗಾನವೇ ಮೊದಲಾದ ಕಾರ್ಯಕ್ರಮಗಳ ಧ್ವನಿಮುದ್ರಿಕೆಗಳ (ಸಿ.ಡಿ) ಸ್ಟಾಲ್ ಒಂದು ಕಾಣಸಿಗುತ್ತದೆ. ಆ ಸ್ಟಾಲ್ ಒಡತಿಯೇ ಸರಸ್ವತಿ ಭಟ್. ನಾವು ಅಂತಹ ಕಾರ್ಯಕ್ರಮಗಳಿಗೆ ಹೋದಾಗಲೆಲ್ಲಾ ನಮ್ಮನ್ನು ಸ್ವಾಗತಿಸುವುದು ಆಯೋಜಕರಲ್ಲ. ಬದಲಾಗಿ ತನ್ನ ಪುಸ್ತಕ ಮಳಿಗೆಯಲ್ಲಿ ಕುಳಿತ ಸರಸ್ವತಿ ಭಟ್ ಅವರ ಮುಗುಳುನಗು.
ಇವರ ಪತಿ ಕೃಷ್ಣ ಭಟ್ಟರು ‘ಪಂಕಜ್ ಮ್ಯೂಸಿಕ್ಸ್’ ಎಂಬ ಹೆಸರಿನಲ್ಲಿ ಮೊದಲು ಕ್ಯಾಸೆಟ್ ನಿರ್ಮಾಣ ಮತ್ತು ಮಾರಾಟ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಸತಿಪತಿಯರಿಬ್ಬರೂ ಇದರ ಸಮಗ್ರ ನಿರ್ವಹಣೆಯನ್ನು ಹೊತ್ತಿದ್ದರು. ಆಮೇಲೆ ಸಿ.ಡಿ. ಯುಗ ಬಂದಾಗ ಹಲವಾರು ಪ್ರಸಿದ್ಧ ಯಕ್ಷಗಾನ ಕಲಾವಿದರನ್ನುಒಟ್ಟುಗೂಡಿಸಿ ಸಿ.ಡಿ. ನಿರ್ಮಾಣದ ಸಾಹಸಕ್ಕೂ ಕೈ ಹಾಕಿದ್ದರು. ನೀವು ಅವರ ಮಳಿಗೆಯಿಂದ ಸಿ.ಡಿ ಅಥವಾ ಪುಸ್ತಕಗಳನ್ನು ಕೊಂಡುಕೊಳ್ಳುತ್ತೀರೋ ಅಥವಾ ಇಲ್ಲವೋ ಎನ್ನುವುದು ಆಮೇಲಿನ ವಿಚಾರ. ಆದರೆ ತನ್ನ ಮುಖದತ್ತ ದೃಷ್ಟಿ ಹಾಯಿಸಿದವರ ಮೇಲೆ ಒಂದು ಪರಿಚಯದ, ಸ್ನೇಹದ ಮುಗುಳ್ನಗೆ ಬೀರುವುದರಲ್ಲಿ ಸರಸ್ವತಿಯವರು ಎಂದೂ ಜಿಪುಣತನವನ್ನು ತೋರಿಸಿದವರಲ್ಲ. ಅವರದು ಬಹಳ ಕಷ್ಟಕರವಾದ ಕಾಯಕ ಎಂದು ನನಗೆ ಅವರನ್ನು ನೋಡಿದಾಗಲೆಲ್ಲಾ ಅನಿಸುತ್ತಿತ್ತು. ಪುಸ್ತಕ, ಸಿ.ಡಿ. ಗಳ ಕಟ್ಟುಗಳನ್ನು ಸ್ವತಃ ತಾವೇ ಸಾಗಿಸುತ್ತಿದ್ದ ಶ್ರಮಜೀವಿ ಅವರು. ಯಕ್ಷಗಾನ ಸಹಿತ ಕಲಾಸೇವೆ ಮಾಡಿದವರನ್ನು ಗುರುತಿಸುವಾಗ ನಾವು ಕಲಾವಿದರು, ನೇಪಥ್ಯ ಕಲಾವಿದರು, ಕಲಾಪೋಷಕರು, ಕಲಾಭಿಮಾನಿಗಳು, ಆಯೋಜಕರು, ಸಂಘಟಕರು ಎಂದೆಲ್ಲಾ ಹೆಸರಿಸುತ್ತೇವೆ. ಆದರೆ ಸದ್ದಿಲ್ಲದೇ ಕಲಾಸೇವೆ ಮಾಡುವ ಸರಸ್ವತಿಯಂತಹವರು ಯಾಕೋ ಹಿಂದೆಯೇ ಉಳಿದುಬಿಡುತ್ತಾರೆ.
ಅವರದೂ ಒಂದು ರೀತಿಯ ಕಲಾಸೇವೆಯೇ. ಆದರೆ ಗುರುತಿಸುವ ಕಣ್ಣುಗಳಿಲ್ಲ. ಮುನ್ನೆಲೆಗೆ ಬಾರದೆ ಕತ್ತಲೆಯಲ್ಲಿಯೇ ಉಳಿದುಬಿಡುತ್ತಾರೆ. ಒಂದೆರಡು ಬಾರಿ ಅವರಿಂದ ಸಿ.ಡಿ ಖರೀದಿಸಿದ್ದೆ. ಆಮೇಲೆ ಖರೀದಿಸದೆ ಇದ್ದರೂ ನಗು, ಮಾತುಗಳ ವಿನಿಮಯಕ್ಕೇನೂ ಕೊರತೆಯಿರಲಿಲ್ಲ. ಕೆಲವೊಂದು ಖಾಲಿಯಾದ ಸ್ಥಾನಗಳು ಶೂನ್ಯವಾಗಿಯೇ ಉಳಿದುಬಿಡುತ್ತದೆ. ಸರಸ್ವತಿ ಭಟ್ ಅಕಾಲಿಕ ಅಗಲುವಿಕೆಯು ನೋವನ್ನು ತರುವ ವಿಚಾರ. ಪ್ರತಿಯೊಂದು ಪ್ರದರ್ಶನಗಳಿಗೆ ಹೋದಾಗಲೆಲ್ಲಾ ಅವರ ಮಳಿಗೆಯಿರುವ ಸ್ಥಾನಕ್ಕೊಮ್ಮೆ ಕಣ್ಣು ಹಾಯಿಸದೇ ಇರಲಾರೆವು. ನಿನ್ನೆ ನಡೆದ ಯಕ್ಷಗಾನದ ಪ್ರದರ್ಶನವೊಂದಕ್ಕೆ ಹೋಗಿದ್ದೆ. ಯಥಾಪ್ರಕಾರ ಕಣ್ಣುಗಳು ಸರಸ್ವತಿ ಭಟ್ ಅವರ ಪುಸ್ತಕದ ಸ್ಟಾಲ್ ಹುಡುಕಿತು. ಆದರೆ ಅದು ಮತ್ತೆ ಕಾಣಸಿಗಲಿಲ್ಲ. ಮಾತ್ರವಲ್ಲ ಇನ್ನೆಂದೂ ಕಾಣಲಾರೆವು ಎಂಬ ಕಟುಸತ್ಯ ಅರಿವಿಗೆ ಬಂದು ಮನಸ್ಸು ವಿಷಾದದಿಂದ ಮುದುಡಿತು.
ಯಕ್ಷಗಾನ ಕಲಾರಂಗ 16 ವರ್ಷಗಳ ಹಿಂದೆ ಕಲಾವಿದರಿಗಾಗಿ ಆರಂಬಿಸಿದ ‘ಜೀವನ ಆನಂದ’ ವಿಮೆಯ ಪಾಲಸಿದಾರರಾದ ಮಂದಾರ್ತಿ ಮೇಳದ ಕಲಾವಿದರಾದ ಸಾಧು ಕೊಠಾರಿಯವರು ಇತ್ತೀಚೆಗೆ ಮೇಳದ ಚೌಕಿಯಲ್ಲಿ ನಿಧನಹೊಂದಿದ್ದು, ಅವರ ವಿಮಾ ಮೊತ್ತ 1 ಲಕ್ಷರೂ, ಜತೆಗೆ ಬೋನಸ್ 65 ಸಾವಿರ ರೂಪಾಯಿಯನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸಾಧು ಕೊಠಾರಿಯವರ ಪತ್ನಿ ಶಕುಂತಲಾ ಕೊಠಾರಿಯವರಿಗೆ ಹಸ್ತಾಂತರಿಸಿದರು.
ವಾರ್ಷಿಕ ಪ್ರೀಮಿಯಮ್‍ನ ಭಾಗಶಃ ಹಣವನ್ನು ಸಂಸ್ಥೆ ನೀಡುತ್ತಾ ಬಂದಿದ್ದು, 53 ಕಲಾವಿದರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ನೆರವಿನ ರೂಪದಲ್ಲಿ ಸಂಸ್ಥೆಯ ವತಿಯಿಂದ 20 ಸಾವಿರ ರೂಪಾಯಿಯನ್ನು ಫೆಬ್ರವರಿ 08, 2021ರಂದು ಕಲಾರಂಗದ ಕಛೇರಿಯಲ್ಲಿ ನೀಡಿ ನೊಂದ ಕುಟುಂಬವನ್ನು ಸಂತೈಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ., ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಹಾಗೂ ಸಾಧು ಕೊಠಾರಿಯವರ ಪುತ್ರಿ ಮಾಧುರಿ ಉಪಸ್ಥಿತರಿದ್ದರು.
24ನೆಯ ‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷರಾಗಿ ನಮ್ಮೆಲ್ಲರ ನೆಚ್ಚಿನ ಡಾ. ಎಂ. ಪ್ರಭಾಕರ ಜೋಶಿಯವರು ಆಯ್ಕೆಯಾಗಿದ್ದಾರೆ. 24ನೆಯ ‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ’ವು ಫೆಬ್ರವರಿ 12,13,14 ಈ ಮೂರು ದಿನಗಳಲ್ಲಿ ಮಂಗಳೂರು ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ನಡೆಯಲಿದೆ.
ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಡಾ. ಪ್ರಭಾಕರ ಜೋಶಿಯವರು ಕಲಾವಿದನಾಗಿ ಪ್ರಸಿದ್ಧರಾದುದು ಮಾತ್ರವಲ್ಲದೆ ಸಾಹಿತ್ಯಲೋಕದ ಒಂದು ವಿಸ್ಮಯವಾಗಿ ಗೋಚರಿಸುತ್ತಾರೆ. ಯಕ್ಷಗಾನ ಲೋಕ ಈವರೆಗೆ ಕಂಡ ವಿದ್ವಾಂಸರಲ್ಲಿ ಡಾ. ಪ್ರಭಾಕರ ಜೋಶಿಯವರು ಅತಿ ವಿಶಿಷ್ಟ ಸ್ಥಾನದಲ್ಲಿ ನಿಲ್ಲುತ್ತಾರೆ. ಯಕ್ಷಗಾನ ಮಾತ್ರವಲ್ಲ. ವೇದ, ಪುರಾಣ, ಆಧುನಿಕ ಪ್ರಪಂಚದ ಆಗುಹೋಗುಗಳು, ತತ್ವಶಾಸ್ತ್ರ ಹೀಗೆ ಯಾವುದನ್ನೂ ಕೇಳಿದರೂ ಅದು ಹೀಗೆಯೇ ಎಂದು ಅವರು ಹೇಳಬಲ್ಲರು.
ತಾನು ಭೋದಿಸುತ್ತಿದ್ದ ವಾಣಿಜ್ಯಶಾಸ್ತ್ರದ ಉಪನ್ಯಾಸಕನಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಯಕ್ಷಗಾನ ವಿದ್ವಾಂಸನಾಗಿ, ಕಾಲೇಜಿನ ಆಡಳಿತಾತ್ಮಕ ಹುದ್ದೆಯ ಪ್ರಾಂಶುಪಾಲನಾಗಿ, ಪ್ರಬುದ್ಧ ಲೇಖಕನಾಗಿ, ವಿಮರ್ಶಕನಾಗಿ, ಶೋಧನೆಯ ದೃಷ್ಟಿಯುಳ್ಳ ಸಂಶೋಧಕನಾಗಿ, ಅಂಕಣಕಾರನಾಗಿ, ಕಲಾವಿದನಾಗಿ, ಭಾಷಣಕಾರನಾಗಿ, ಅಪ್ರತಿಮ ವಾಕ್ಪಟುವಾಗಿ, ತತ್ವಶಾಸ್ತ್ರಜ್ಞನಾಗಿ, ಕವಿಯಾಗಿ, ನೂರಾರು ಕೃತಿಗಳು ಪ್ರಕಟಗೊಳ್ಳಲು ಕಾರಣರಾದ ಸಂಪಾದಕನಾಗಿ ಹೀಗೆ ಜೋಶಿಯವರು ಕೈ ಆಡಿಸದ ಕ್ಷೇತ್ರವಿಲ್ಲ.ಸಮ್ಮೇಳಾನಧ್ಯಕ್ಷರಾಗಿ ಜೋಶಿಯವರ ಆಯ್ಕೆಯಾದುದು ಸರ್ವರ ಮೆಚ್ಚುಗೆಯನ್ನು ಗಳಿಸಿದೆ ಮತ್ತು ಇದೊಂದು ಅರ್ಹವಾದ ಆಯ್ಕೆ. ಮಾತ್ರವಲ್ಲದೆ ಯಕ್ಷಗಾನ ಕ್ಷೇತ್ರಕ್ಕೂ ಹೆಮ್ಮೆಯನ್ನು ತಂದಿದೆ.
ಶ್ರೀ ಶಿವರಾಮ ಜೋಗಿ ಬಿ. ಸಿ. ರೋಡು ಅವರು ಯಾರನ್ನೂ ಅನುಕರಿಸದೆ ತನ್ನದೇ ಆದ ಶೈಲಿಯನ್ನು ರೂಢಿಸಿಕೊಂಡು ಮೆರೆದವರು. ಕುಡಾಣ ಶ್ರೀ ಗೋಪಾಲಕೃಷ್ಣ ಭಟ್ಟರ ಶಿಷ್ಯನಾಗಿ, ಅಗರಿ, ಶೇಣಿ, ತೆಕ್ಕಟ್ಟೆಯವರಲ್ಲದೆ ಇನ್ನೂ ಅನೇಕ ಹಿರಿಯ ಕಲಾವಿದರ ಗರಡಿಯಲ್ಲಿ ಪಳಗಿ 60ಕ್ಕೂ ಮಿಕ್ಕಿ ವರ್ಷಗಳ ತಿರುಗಾಟ ನಡೆಸುತ್ತಿರುವ ಇವರಿಗೆ ಈಗ ವಯಸ್ಸು 79. ಪುತ್ತೂರು ತಾಲೂಕಿನ ಕಾಂಚನ ಎಂಬಲ್ಲಿ 7-6-1941ರಂದು ಶ್ರೀ ಗುರುವಪ್ಪ ಜೋಗಿ, ಸೀತಮ್ಮ ದಂಪತಿಗಳಿಗೆ ಮಗನಾಗಿ ಶಿವರಾಮ ಜೋಗಿಯವರು ಜನಿಸಿದರು.
ಪ್ರಾಥಮಿಕ ವಿದ್ಯಾಭ್ಯಾಸ ಕಾಂಚನ ಶಾಲೆಯಲ್ಲಿ. ಖ್ಯಾತ ಕಲಾವಿದ ಕಾಂಚನ ಸಂಜೀವ ರೈಗಳು ಶಾಲೆಯಲ್ಲಿ ಇವರ ಸಹಪಾಠಿಯಾಗಿದ್ದರಂತೆ. ನಂತರ ಶ್ರೀ ಜೋಗಿಯವರು ಒಂದು ವರ್ಷ ಟೈಲರಿಂಗ್ ಕೆಲಸವನ್ನೂ ಮಾಡಿದ್ದರು. ಆಗ ಶೇಣಿ ಗೋಪಾಲಕೃಷ್ಣ ಭಟ್ಟರ ವ್ಯವಸ್ಥಾಪಕತ್ವದಲ್ಲಿ ಕೂಡ್ಲು ಮೇಳ ತಿರುಗಾಟ ನಡೆಸುತ್ತಿತ್ತು. ಕೂಡ್ಲು ಮೇಳದಲ್ಲಿ ಹಾಸ್ಯಗಾರರಾಗಿದ್ದವರು ರಸಿಕರತ್ನ ಗೋಪಾಲಕೃಷ್ಣ ಜೋಷಿಯವರು. ಇವರು ಕಾಂಚನದಲ್ಲಿ ವಾಸ್ತವ್ಯವಿದ್ದರಂತೆ. ಬಾಲಕನಲ್ಲಿ (ಶಿವರಾಮ ಜೋಗಿ) ಅವ್ಯಕ್ತವಾಗಿರುವ ಪ್ರತಿಭೆಯನ್ನು ಚತುರಮತಿಗಳಾದ ಜೋಷಿಯವರು ಗುರುತಿಸಿದರೋ? ಅಲ್ಲ, ಶ್ರೇಷ್ಠ ಕಲಾವಿದನಾಗುವ ಭಾಗ್ಯವನ್ನು ದೇವರು ಕರುಣಿ ಸಿದರೋ? ರಸಿಕರತ್ನ ಜೋಷಿಯವರು ಶಿವರಾಮ ಜೋಗಿಯವರನ್ನು ಮೇಳಕ್ಕೆ ಕರೆದುಕೊಂಡು ಹೋದದ್ದಂತೂ ಸತ್ಯ. ಆಗ ಯಕ್ಷಗಾನದಲ್ಲಿ ಪಾತ್ರ ಮಾಡಿಯೇ ಗೊತ್ತಿರಲಿಲ್ಲವಂತೆ ಜೋಗಿಯವರಿಗೆ. ಶಾಲಾ ದಿನಗಳಲ್ಲಿ ಕಾಂಚನ ಸಂಜೀವ ರೈಗಳ ಜತೆ ನಾಟಕದಲ್ಲಿ ಅಭಿನಯಿಸಿದ್ದರಂತೆ. ಕಾಂಚನ ಸಂಜೀವ ರೈಗಳು ಕರ್ಣನಾಗಿಯೂ, ಜೋಗಿಯವರು ಅಶ್ವತ್ಥಾಮನಾಗಿಯೂ ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರಂತೆ.
ಕೂಡ್ಲು ಮೇಳದಲ್ಲಿ ಆಗ ಹೆಚ್ಚಾಗಿ ಸತ್ಯಹರಿಶ್ಚಂದ್ರ, ಭಕ್ತ ಪ್ರಹ್ಲಾದ ಮೊದಲಾದ ಪೌರಾಣಿಕ ಪ್ರಸಂಗಗಳು ಪ್ರದರ್ಶಿಸಲ್ಪಡುತ್ತಿತ್ತು. ಪ್ರಾರಂಭದಲ್ಲಿ ಸಹಜವಾಗಿ ಶಿವರಾಮ ಜೋಗಿಯವರು ಅಳುಕಿದರೂ ಶ್ರೀ ಶೇಣಿಯವರು ಧೈರ್ಯ ತುಂಬಿದರು. ಸಂಭಾಷಣೆಗಳನ್ನು ಹೇಳಿಕೊಡುವ ಮೊದಲೇ ಪಾತ್ರದ ಸ್ವಭಾವ, ರಂಗದಲ್ಲಿ ವ್ಯವಹರಿಸುವ ರೀತಿ, ತಾನು ಯಾರ ಜತೆ ಮಾತನಾಡುತ್ತಿದ್ದೇನೆ, ಭಾವನೆಗಳನ್ನು ವ್ಯಕ್ತಪಡಿಸುವ ಕ್ರಮಗಳನ್ನು ಹೇಳಿಕೊಡುತ್ತಿದ್ದರಂತೆ. ಹಾಗಾಗಿಯೇ ಶೇಣಿಯವರ (ಹಿರಣ್ಯಕಶ್ಯಪ-ಪ್ರಹ್ಲಾದ, ಹರಿಶ್ಚಂದ್ರ-ಲೋಹಿತಾಶ್ವ) ಜತೆ ವೇಷ ಮಾಡಿದೆ. ಶೇಣಿಯವರು ಪ್ರೀತಿಸಿದರು, ಆಶೀರ್ವದಿಸಿದರು ಎಂದು ಜೋಗಿಯವರು ಬಾಲಕಲಾವಿದನಾಗಿ ಕಳೆದ ದಿನಗಳನ್ನು ನೆನಪಿಸುತ್ತಾರೆ.
ಆಗ ಕೂಡ್ಲು ಮೇಳದಲ್ಲಿ ಬಲಿಪರು, ಕುದ್ರೆಕೋಡ್ಲು, ಶೇಣಿ, ರಸಿಕರತ್ನ ಜೋಷಿ, ವೇಣೂರು ವೆಂಕಟ್ರಮಣ, ಮಾಣಂಗಾಯಿ ಕೃಷ್ಣ ಭಟ್ಟ ಮೊದಲಾದವರ ಒಡನಾಟವೂ ಇವರಿಗೆ ದೊರಕಿತು. ತಿರುಗಾಟ ಆರಂಭಿಸಿದ್ದು ಕೂಡ್ಲು ಗೋಪಾಲಕೃಷ್ಣ ದೇವರ ಮೇಳದಲ್ಲಿ. ಮೇಳಕ್ಕೆ ಕರೆದುಕೊಂಡು ಹೋದವರು ಗೋಪಾಲಕೃಷ್ಣ ಜೋಷಿಯವರು. ಮಾತುಗಾರಿಕೆ ಕಲಿಸಿದವರು ಶೇಣಿ ಗೋಪಾಲಕೃಷ್ಣ ಭಟ್ಟರು. ನಾಟ್ಯ ಕಲಿಸಿ ಆಶೀರ್ವದಿಸಿದವರು ಕುಡಾಣ ಗೋಪಾಲಕೃಷ್ಣ ಭಟ್ಟರು. ಹೀಗೆ ಗೋಪಾಲಕೃಷ್ಣ ಎಂಬ ಹೆಸರು ಶಿವರಾಮ ಜೋಗಿಯವರ ಜೀವನದುದ್ದಕ್ಕೂ ಬೆಸೆದುಕೊಂಡಿದೆ. ಮುಂದಿನ ವರುಷ ತಿರುಗಾಟ ಮುಲ್ಕಿ ಮೇಳದಲ್ಲಿ. ಆಗ ಖ್ಯಾತ ಹಾಸ್ಯಗಾರರಾದ ನಾರಾಯಣ ಭಟ್ಟ ಪೆರುವೊಡಿ ಇವರ ಸಂಚಾಲಕತ್ವ. ಮುಲ್ಕಿ ಮೇಳಕ್ಕೆ ಸೇರುವ ಮೊದಲೇ ಮಳೆಗಾಲದಲ್ಲಿ ಶ್ರೀ ಕುಡಾಣ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿದ್ದು ಜೋಗಿಯವರು ನಾಟ್ಯ ಕಲಿತರು.
ಮರೆಯಲಾಗದ ದಿನ : ‘‘ನಾನು ಬಾಲಕಲಾವಿದ. ಮುಲ್ಕಿ ಮೇಳದ ತಿರುಗಾಟ. ಪುತ್ತೂರು ನಾರಾಯಣ ಹೆಗ್ಡೆಯವರ ಹಿರಣ್ಯಕಶ್ಯಪ. ನಾನು ಪ್ರಹ್ಲಾದ. ಅವರ ಜತೆ ವೇಷ ಮಾಡುವುದೇ ಭಾಗ್ಯ. ಅವರು ರಂಗಪ್ರವೇಶ ಮಾಡಿದ ಮೇಲೆ ಪಾತ್ರವೇ ಆಗಿಬಿಡುತ್ತಿದ್ದರು. ಅವರದು ಪರಕಾಯ ಪ್ರವೇಶ. ಅಷ್ಟೂ ತನ್ಮಯರಾಗಿ ಅಭಿನಯಿಸುತ್ತಿದ್ದರು. ಆಗ ಮೇಳಗಳಲ್ಲಿ ಟೋಪನ್ ವ್ಯವಸ್ಥೆ ಇರುತ್ತಿರಲಿಲ್ಲ. ಎಲ್ಲಾ ಕಲಾವಿದರೂ ತಲೆಕೂದಲು ಬೆಳೆಸುತ್ತಿದ್ದರು. ಸ್ತ್ರೀವೇಷದವರೂ ಕೂಡಾ. ಕೊನೆಯ ದೃಶ್ಯ ಹರಿ ಎಲ್ಲಿದ್ದಾನೆ ಎಂದು ಹಿರಣ್ಯಕಶ್ಯಪನಾಗಿ ಹೆಗ್ಡೆಯವರು ಪ್ರಹ್ಲಾದನಾಗಿ ಅಭಿನಯಿಸುತ್ತಿದ್ದ ನನ್ನಲ್ಲಿ ಕೇಳಿದರು. ಎರಡು ಬಾರಿ ಕಂಬದಲ್ಲಿದ್ದಾನೆ ಎಂದು ಹೇಳಿದೆ. ಮೂರನೆ ಬಾರಿ ಕೇಳಿದಾಗ ಮಾಳಿಗೆಯಲ್ಲಿದ್ದಾನೆ ಎಂದು ಹೇಳಿದೆ. ಅವರು ಸಹಜವಾಗಿ, ತನ್ಮಯರಾಗಿ ನನ್ನ ತಲೆಮೇಲೆ ಕೈಯಿಟ್ಟು ಕೂದಲನ್ನು ಅಮುಕಿ ಎತ್ತಿ ಎಸೆಯುವಂತೆ ಅಭಿನಯಿಸಿದ್ದರು. ಶಿಕ್ಷೆ ಕೊಡುವ ದೃಶ್ಯಗಳಲ್ಲಿ, ಎದುರು ಪಾತ್ರಧಾರಿ ತಲೆಯ ಮೇಲೆ ಕೈಯಿಕ್ಕಿದಾಗ ನೋವಾಗದೇ ಇರಬೇಕಾದರೆ ನಾವೂ ಅವರ ಕೈಗಳನ್ನು ಹಿಡಿದು ಅಭಿನಯಿಸಬೇಕು. ನಾನು ಎಚ್ಚರ ವಹಿಸಿದ್ದು ಕಡಿಮೆಯಾಯಿತು. ರಂಗದಿಂದ ಹೊರಗೆ ಎಸೆಯಲ್ಪಟ್ಟೆ. ಆಗ ಎತ್ತರದ ರಂಗಸ್ಥಳ ಇರಲಿಲ್ಲ. ನೆಲದಲ್ಲೇ ಪ್ರದರ್ಶನ. ಆಗ ಹುಡುಗಾಟಿಕೆ. ಪ್ರದರ್ಶನ ಮುಗಿದ ಮೇಲೆ ನೋವಾಯಿತೆ? ಎಂದು ಕೇಳಿ ಹೆಗ್ಡೆಯವರು ಸಮಾಧಾನದಿಂದ ನೀತಿಯನ್ನೂ ಹೇಳಿದರು. ಗದರಿಸಲಿಲ್ಲ’’ ಎಂದು ಶಿವರಾಮ ಜೋಗಿಯವರು ನೆನಪಿಸಿಕೊಳ್ಳುತ್ತಾರೆ.
ಯಕ್ಷಗಾನವಲ್ಲದೆ ಭರತನಾಟ್ಯ, ಕೂಚುಪುಡಿ, ಕಥಕ್ಕಳಿ ಮೊದಲಾದ ಕಲಾಪ್ರಕಾರಗಳ ಹೆಜ್ಜೆಗಾರಿಕೆಯ ಜ್ಞಾನ ಹೊಂದಿದ್ದ ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯ ಕಲಿತ ಶಿವರಾಮ ಜೋಗಿಯವರು ಮುಂದೆ ಸತತ 40 ವರ್ಷಗಳ ಕಾಲ ಶ್ರೀ ಕೆ. ವಿ. ಪೈ ಸಂಚಾಲಕತ್ವದ ಸುರತ್ಕಲ್ಲು ಮೇಳದಲ್ಲಿ ಕಲಾಸೇವೆ ಮಾಡಿದರು. (ಶ್ರೀ ಮಹಮ್ಮಾಯಿ ಯಕ್ಷಗಾನ ನಾಟಕ ಸಭಾ, ಸುರತ್ಕಲ್) ಮೇಳದ ಆರಂಭವಾದಾಗಿನಿಂದ ಕೊನೆಯ ತನಕವೂ (40 ವರ್ಷ) ತಿರುಗಾಟ ನಡೆಸಿದವರು ವೇಣೂರು ಸುಂದರ ಆಚಾರ್ಯರು ಮತ್ತು ಇವರು ಮಾತ್ರ. ಅಗರಿ ಶ್ರೀನಿವಾಸ ಭಾಗವತರು, ಅಗರಿ ರಘುರಾಮ ಭಾಗವತರು, ಪದ್ಯಾಣ ಗಣಪತಿ ಭಟ್, ಕುದ್ರೆಕ್ಕೋಡ್ಲು, ತಲೆಂಗಳ ಗೋಪಾಲಕೃಷ್ಣ ಭಟ್ಟ, ಕಡಬ ನಾರಾಯಣ ಆಚಾರ್ಯ, ಶೇಣಿ, ತೆಕ್ಕಟ್ಟೆ, ಪಾತಾಳ, ಕುಂಬಳೆ ಸುಂದರ ರಾವ್, ಪುತ್ತೂರು ನಾರಾಯಣ ಹೆಗ್ಡೆ, ರಾ. ಸಾಮಗ, ಕೊಕ್ಕಡ, ಎಂ.ಕೆ. ರಮೇಶಾಚಾರ್ಯ, ಕೆ. ಗೋವಿಂದ ಭಟ್ಟರಂತಹ ಶ್ರೇಷ್ಠ ಕಲಾವಿದರ ಒಡನಾಟ ಸಿಕ್ಕಿತ್ತು. ಕಡಬ ಸಾಂತಪ್ಪ, ಉಜಿರೆ ರಾಜ ಮೊದಲಾದವರೂ ಇದ್ದರು. (ಡಿ. ಮನೋಹರ ಕುಮಾರ್, ಸದಾಶಿವ ಕುಲಾಲ್, ಸದಾಶಿವ ಆಚಾರ್ಯ, ವೇಣೂರು, ಅಶೋಕ ಆಚಾರ್ಯ ಮೊದಲಾದವರು. ಆಗ ಬಾಲ ಕಲಾವಿದರಾಗಿ ಕಾಣಿಸಿಕೊಳ್ಳುತ್ತಿದ್ದರು.) ಇಂತಹ ಪ್ರಬುದ್ಧ ಕಲಾವಿದರ ಒಡನಾಟದಿಂದಲೇ ನಾನು ಸುರತ್ಕಲ್ ಮೇಳದಲ್ಲಿ ಕಲಾವಿದನಾಗಿ ಕಾಣಿಸಿಕೊಂಡೆ ಎಂದು ಶಿವರಾಮ ಜೋಗಿಯವರು ಹೇಳುತ್ತಾರೆ
ಸುರತ್ಕಲ್ಲು ಮೇಳದಲ್ಲಿ, ಕಡುಗಲಿ ಕುಮಾರ ರಾಮ ಪ್ರಸಂಗದಲ್ಲಿ ಮೊಗಲರ ದಬ್ಬಾಳಿಕೆಯ ವಿರುದ್ಧ ಹೋರಾಡುವ ಕುಮಾರರಾಮನ ಪಾತ್ರ ಜೋಗಿಯವರಿಗೆ ಪ್ರಸಿದ್ಧಿಯನ್ನು ಕೊಟ್ಟಿತು. ಆಗ ಶೇಣಿಯವರು ಮಹಮ್ಮದ್ ಬಿನ್ ತುಘಲಕ್ ಪಾತ್ರವನ್ನು ನಿರ್ವಹಿಸುತ್ತಿದ್ದರು. ರಾಜಾ ಯಯಾತಿ ಪ್ರಸಂಗದ ಯಯಾತಿ, ಕೋಟಿ, ಚೆನ್ನಯ, ಕಾಂತಾಬಾರೆ ಬೂದಾಬಾರೆ, ಪಾತ್ರಗಳಲ್ಲಿ ರಂಜಿಸಿದರು. ಅಭಿಮನ್ಯು, ಬಬ್ರುವಾಹನ, ಚಂಡಮುಂಡರು, ಭಾರ್ಗವ- ಮೊದಲಾದ ವೇಷಗಳನ್ನೂ ಮಾಡುತ್ತಿದ್ದರು. ಪುಂಡುವೇಷಗಳಲ್ಲಿ ಇವರ ಜತೆಗಾರನಾಗಿದ್ದವರು ಖ್ಯಾತ ಕಲಾವಿದ ಕ್ರಿಶ್ಚನ್ ಬಾಬು. ಸುರತ್ಕಲ್ಲು ಮೇಳದಲ್ಲಿ ಅಗರಿ ಮತ್ತು ಪದ್ಯಾಣರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಪ್ರಸಂಗಗಳು ಮತ್ತು ಯಾರ್ಯಾರಿಗೆ ಯಾವ ಪಾತ್ರಗಳು ಪ್ರಸಿದ್ಧಿಯನ್ನು ಕೊಟ್ಟವು ಎಂಬುದನ್ನು ಜೋಗಿಯವರು ಈಗಲೂ ನೆನಪಿಸುತ್ತಾರೆ.
ನಾಟ್ಯರಾಣಿ ಶಾಂತಲಾ – ಶೇಣಿಯವರದ್ದು ವಿಷ್ಣುವರ್ಧನನಾಗಿ ಅಮೋಘ ಪಾತ್ರ ನಿರ್ವಹಣೆ. ಕುವರ ವಿಷ್ಣುವಾಗಿ (ದತ್ತಪುತ್ರ) ಜೋಗಿಯವರು. ಶೇಣಿಯವರು ಕುಣಿಯದೇ, ಹೆಚ್ಚು ಮಾತನಾಡದೇ ಪ್ರೇಕ್ಷಕರನ್ನು ಹಿಡಿದಿಡುತ್ತಿದ್ದರು. ಮನಸೂರೆಗೊಳ್ಳುತ್ತಿದ್ದರು. ಅವರ ಮಾತು, ಭಾವಾಭಿವ್ಯಕ್ತಿಗೆ ಪ್ರೇಕ್ಷಕರು ತಲೆತೂಗುತ್ತಲಿದ್ದರು. ಶ್ರೀನಿವಾಸ ಕಲ್ಯಾಣ – ಜೋಗಿಯವರ ಶ್ರೀನಿವಾಸ, ಎಂ. ಕೆ.ಯವರ ಪದ್ಮಾವತಿ, ವೇಣೂರು ಸುಂದರ ಆಚಾರ್ಯರ ಸಖ. ಈ ಪ್ರಸಂಗವನ್ನು ನೋಡಲು ಸಾಗರ ಮೊದಲಾದ ಮಲೆನಾಡ ಪ್ರದೇಶದಲ್ಲಿ ಜನಸಾಗರವೇ ಹರಿದು ಬರುತಿತ್ತಂತೆ. ಶಿವರಾಮ ಜೋಗಿಯವರ ಪ್ರಾಮಾಣಿಕ ಅಭಿಪ್ರಾಯದಂತೆ ಇಲ್ಲೊಂದು ಗಮನಿಸಬೇಕಾದ ಅಂಶವಿದೆ- ಇದು ನಮ್ಮ ಕಲ್ಪನೆ ಅಲ್ಲ. ನಮಗೆ ಹಿರಿಯ ಕಲಾವಿದರ ಕೊಡುಗೆ ಈ ಪ್ರಸಂಗ. ನಾವು ಅದನ್ನು ಅನುಸರಿಸಿದೆವು. ಅಗರಿಯವರ ನಿರ್ದೇಶನದಲ್ಲಿ ಶೇಣಿಯವರು ಶ್ರೀನಿವಾಸನಾಗಿ, ಕೋಳ್ಯೂರು ರಾಮಚಂದ್ರ ರಾಯರು ಪದ್ಮಾವತಿಯಾಗಿ, ವಿಟ್ಲ ಜೋಷಿಯವರು ಸಖನಾಗಿ, ಕಡಬ ಸಾಂತಪ್ಪನವರು ಸಖಿಯಾಗಿ ಪ್ರಸಂಗವನ್ನು ರಂಜಿಸಿದರು. ಶ್ರೇಯಸ್ಸು ಅವರಿಗೆ.
ಹೀಗೆ ಕಲಾವಿದನಾಗಿ ಬೆಳೆದ ಜೋಗಿಯವರಿಗೆ ಮೇಳದಲ್ಲಿ ವಾಹನ ಚಾಲಕನಾಗಿ 20 ವರುಷ ದುಡಿದ ಅನುಭವವೂ ಇದೆ. ಕೆ. ವಿ. ಪೈಯವರು ಒಳ್ಳೆಯ ಯಜಮಾನರು. ಶ್ರೇಷ್ಠ ಕಲಾವಿದ ಒಡನಾಟ. ಇನ್ನೇನು ಬೇಕು? ತಿರುಗಾಟ ಇನ್ನೂ ಬೇಕೆನಿಸಿದಾಗ ಅನಿವಾರ್ಯ ಕಾರಣಗಳಿಂದ ಸುರತ್ಕಲ್ಲು ಮೇಳ ತಿರುಗಾಟ ನಿಲ್ಲಿಸಿತು. ನಂತರ ಕಿಶನ್ ಹೆಗ್ಡೆಯವರ ಕರ್ನಾಟಕ ಮೇಳ (ಕಾಲಮಿತಿ) ಮತ್ತು ಕುಂಟಾರು ಮೇಳದಲ್ಲಿ ವ್ಯವಸಾಯ ಮಾಡಿದೆ. 12 ವರ್ಷ ಹೊಸನಗರ, ಎಡನೀರು , ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸಿದೆ. ಶ್ರೀ ಟಿ. ಶ್ಯಾಮ ಭಟ್ಟರು ಯಕ್ಷಗಾನವನ್ನೂ, ಕಲಾವಿದರನ್ನೂ ಗೌರವಿಸುತ್ತಾರೆ, ಪ್ರೀತಿಸುತ್ತಾರೆ. ಕಿರಿಯ ಕಲಾವಿದನಾದರೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಅದು ಅವರ ಶ್ರೇಷ್ಠ ಗುಣ. ಯಕ್ಷಗಾನದಿಂದಲೇ ಬದುಕಿದೆ. ಕಲಾವಿದನಾಗಿ ನಾನು ಅತ್ಯಂತ ತೃಪ್ತ ಎಂಬುದು ಜೋಗಿಯವರ ಮನತುಂಬಿದ ಮಾತುಗಳು. ಶಿವರಾಮ ಜೋಗಿಯವರು ಪಡೆದ ಪ್ರಶಸ್ತಿಗಳ ವಿವರ : ಪೇಜಾವರ ವಿಜಯವಿಠಲ ಪ್ರಶಸ್ತಿ, ಎಡನೀರು ಪ್ರಶಸ್ತಿ, ಕೀಲಾರು ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಮೊದಲಾದವುಗಳು. ಕಾಂಚನದಲ್ಲಿ ಜನಿಸಿದರೂ 50 ವರುಷಗಳಿಂದ ಬಿ. ಸಿ. ರೋಡಿನಲ್ಲಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಕುಟುಂಬದ ಬಗ್ಗೆ : ಪತ್ನಿ ಲತಾ. ಮಗಳು ಸೌಮ್ಯ-ವಿವಾಹಿತೆ. ಮಗ ಸುಮಂತ್‍ರಾಜ್-ಪದವೀಧರ. IDBI ಉದ್ಯೋಗಿ. ವಿವಾಹಿತ. ಇವರು ಹವ್ಯಾಸೀ ಯಕ್ಷಗಾನ ಕಲಾವಿದ.