Sunday, August 30, 2026
Home Blog Page 347

ಒತ್ತಡ ಅಥವಾ Stress ಕಡಿಮೆ ಮಾಡಿಕೊಳ್ಳುವುದು ಹೇಗೆ? ಮಾನಸಿಕ ತಜ್ಞೆ ಡಾ. ಸ್ನೇಹಾ ಮಾತುಗಳನ್ನು ಈ ವೀಡಿಯೋದಲ್ಲಿ ಕೇಳಿ 

ಒತ್ತಡವು ಒಂದು ನೈಸರ್ಗಿಕ ಕ್ರಿಯೆ. ‘ತಲೆ ಇರುವವರಿಗೆಲ್ಲಾ ತಲೆನೋವು ತಪ್ಪಿದ್ದಲ್ಲ’ ಎಂಬ ಮಾತಿನಂತೆ  ಮನಸ್ಸು ಎಂಬುದು ಇರುವವರೆಗೆ ಒತ್ತಡವೂ ಇದ್ದೇ ಇರುತ್ತದೆ. 

ನಿಮ್ಮ ಕಾರ್ಯಕ್ಷೇತ್ರದಲ್ಲಿ ಆರಂಭದಲ್ಲಿ ನಿಮ್ಮ ಮೇಲೆ ಒತ್ತಡವು ಹೆಚ್ಚಾದಂತೆ ನಿಮ್ಮ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ.

ಆದರೆ ಆ ಕಾರ್ಯಕ್ಷಮತೆಯ ಉತ್ತಮ ಫಲಿತಾಂಶವನ್ನು ಕೊಟ್ಟು ಸಾಧನೆಯ ನಿರೀಕ್ಷೆ ಮತ್ತು ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದಾಗ. ಒತ್ತಡವು ದೇಹ ಮತ್ತು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಹಾಗಾದರೆ ಈ ಒತ್ತಡ ಅಥವಾ Stress ನ ಲಕ್ಷಣಗಳೇನು? ದೈನಂದಿನ ಜೀವನದಲ್ಲಿ ಎದುರಾಗುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಅದರಿಂದ ಮನುಷ್ಯನ ದೇಹದಲ್ಲಿ ಉಂಟಾಗುವ ಬದಲಾವಣೆಗಳೇನು ಎಂಬುದನ್ನು ತಿಳಿದುಕೊಳ್ಳಬೇಕೇ?

ಈ ವೀಡಿಯೋ ನೋಡಿ. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಮಾನಸಿಕ ತಜ್ಞೆ ಡಾ. ಸ್ನೇಹಾ ವಿ.ಜಿ  ಮನಮುಟ್ಟುವಂತೆ ಒತ್ತಡ ಅಥವಾ  Stress ಬಗ್ಗೆ ವಿವರಿಸಿದ್ದಾರೆ. 

ಪುತ್ತೂರು ಶ್ರೀಧರ ಭಂಡಾರಿಯವರ ದಿವ್ಯಾತ್ಮಕ್ಕೆ, ವಿಶ್ವವಿನೋದ ಬನಾರಿಯವರಿಂದ ಶ್ರದ್ಧಾಂಜಲಿ ಗೀತೆ

ಶ್ರದ್ಧಾಂಜಲಿ ಗೀತೆ ದಿ| ಪುತ್ತೂರು ಶ್ರೀಧರ ಭಂಡಾರಿಯವರ ದಿವ್ಯಾತ್ಮಕ್ಕೆ

ಪುಂಡು ವೇಷದಿ ಪ್ರಮುಖ | ಪಂಡಿತನೆ ಕೋಲ್ಮಿಂಚು | ಗಂಡುಗಲಿ ಘನರಂಗ ರಾಜನಾಗಿ || ಚೆಂಡಿನಂತೆಸೆದ ಸಿರಿ | ಮಂಡಲದ ಸಿಡಿಲ ಮರಿ | ಕೊಂಡಿ ಕಳಚಿತು ಯಕ್ಷ ಭಂಡಾರದಿಂದ || ೧ ||

ಹರಿಯ ಪದದೊಳಗೈಕ್ಯ | ನಿರತ ಪೆಸರಾದಿತ್ಯ | ವರ ಕಿರಣದಂತೆ ಸು | ಸ್ಥಿರವು ಜನಮನದಿ || ಪರಮ ಮಂಗಲಮೂರ್ತಿ | ಕರುಣಮಯ ಸತ್ಕೀರ್ತಿ | ಕರುಣಿಸಲಿ ಸದ್ಗತಿಯ ಮುನಿಪುರದ ಕೃಷ್ಣ || ೨ ||

ಓಂ ಶಾಂತಿ

ಲೇಖಕ: ವಿಶ್ವವಿನೋದ ಬನಾರಿ 

ವಿಶ್ವವಿನೋದ ಬನಾರಿ, ‘ಬನಸಿರಿ’

‘ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ’ಯ ಸಮಾಜಮುಖಿ ಕಾರ್ಯಕ್ರಮಗಳು 

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು 2004 ನವಂಬರ್ ತಿಂಗಳಿನಲ್ಲಿ ಆರಂಭವಾಯಿತು. ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ತಮ್ಮ ಜೀವನ ಶೈಲಿಯಿಂದ, ಸಾಮಾಜಿಕ ಚಿಂತನೆಗಳಿಂದ, ಸಮಕಾಲೀನ ವ್ಯಾವಹಾರಿಕ, ಧಾರ್ಮಿಕ,ಸಾಂಸ್ಕೃತಿಕ ಮತ್ತು ಆರ್ಥಿಕ  ಪ್ರಜ್ಞೆಗಳನ್ನು ಇರಿಸಿಕೊಂಡು ಬಾಳಿ ಬದುಕಿದವರು.

ಕೀಲಾರು ಮನೆತನದ ಶ್ರೀ ರಾಮಚಂದ್ರಯ್ಯ ಗಂಗಮ್ಮ ದಂಪತಿಗಳಿಗೆ ಪುತ್ರನಾಗಿ ಫೆಬ್ರವರಿ 24, 1934ರಲ್ಲಿ ಈ  ಲೋಕದ ಬೆಳಕನ್ನು ಕಂಡ ಶ್ರೀಯುತರು ವೈದ್ಯಕೀಯ ವಿದ್ಯೆಯನ್ನು ಅಭ್ಯಸಿಸಿ, ಅದನ್ನು ವೃತ್ತಿಯಾಗಿ  ಸ್ವೀಕರಿಸದೆ ಸಮಾಜ  ಸೇವೆಯನ್ನೇ ಗುರಿಯಾಗಿ  ಸ್ವೀಕರಿಸಿ ನಿಶ್ಯುಲ್ಕವಾಗಿ ಔಷಧೋಪಚಾರಗಳನ್ನು ಮಾಡುತ್ತಿದ್ದರು. ತಮ್ಮ ಭೂಮಿಯ ಹಲವು ಭಾಗಗಳನ್ನು ಅಲ್ಲಿಯೇ ವಾಸಿಸುತ್ತಿದ್ದವರಿಗೆ ಕರುಣಾ ದೃಷ್ಟಿಯಿಂದ ಕಾಯಿದೆಯನ್ನೂ, ಸರಕಾರವನ್ನೂ ಗೌರವಿಸಿ ಬಿಟ್ಟುಕೊಟ್ಟರು.


ಶ್ರೀಯುತರು ಮಂಗಳೂರು ಹೋಬಳಿಯ ಪಂಜ ಸೀಮೆಯ  ಹವ್ಯಕ ಮುಖಂಡರೂ, ಧಾರ್ಮಿಕ ಮುಂದಾಳುವೂ ಆಗಿದ್ದರು. ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಪರಮ ಭಕ್ತರಾಗಿದ್ದ ಡಾ| ಕೀಲಾರು ಗೋಪಾಲ ಕೃಷ್ಣಯ್ಯನವರು ದೇವಳದ ಜೀರ್ಣೋದ್ಧಾರಾದಿ  ಸಕಲಕಾರ್ಯಗಳಲ್ಲೂ  ಸಕ್ರಿಯರಾಗಿದ್ದರು. ಶ್ರೀ

ಕ್ಷೇತ್ರದಲ್ಲಿ “ಕೀಲಾರು ಉಗ್ರಾಣ” ಎಂಬ ಉಗ್ರಾಣವೇ ಇದಕ್ಕೆ ಸಾಕ್ಷಿ. ಕಲ್ಲುಗುಂಡಿ ಮತ್ತು ಸಂಪಾಜೆ ಗ್ರಾಮಗಳ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದ  ಶ್ರೀಯುತರು ಸಮಾಜಮುಖಿಯಾಗಿಯೇ ಚಿಂತಿಸುತ್ತಾ ಸಮಾಜಮುಖಿಯಾಗಿಯೇ ಬಾಳುತ್ತಿದ್ದರು. ತೋಡಿಕಾನ ಕಲ್ಲುಗುಂಡಿ ಪರಿಸರದಲ್ಲಿ ಇರುವ ದೇವಾಲಯ, ಶಾಲೆಗಳಲ್ಲಿ ವಿವಿಧ ಉದ್ದೇಶಗಳನ್ನಿರಿಸಿ ಕೊಂಡು ವಾರ್ಷಿಕ ವಿನಿಯೋಗಕ್ಕಾಗಿ ಅನೇಕ ಶಾಶ್ವತ ನಿಧಿಗಳನ್ನು ಸ್ಥಾಪಿಸಿದರು.

ಸಾಂಸಾರಿಕವಾಗಿಯೂ ಸಂತೃಪ್ತ ಜೀವನ ನಡೆಸಿ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಇವರೊಂದಿಗೆ ಆದರ್ಶ ಗೃಹಸ್ಥ ಜೀವನವನ್ನು ನಡೆಸಿ, ಶ್ರೀ ರಾಜಾರಾಮ ಮತ್ತು ಸುಮನಾ ಗೌರಿ ಎಂಬ ಇಬ್ಬರು ಮಕ್ಕಳನ್ನು ಪಡೆದರು. ಜುಲೈ  3, 2004ರಂದು ಜೀವನವನ್ನು ಪರಿಸಮಾಪ್ತಿಗೊಳಿಸಿ ಅನಂತದಲ್ಲಿ ಲೀನವಾದರು. ಡಾ. ಕೀಲಾರು ಗೋಪಾಲಕೃಷ್ಣಯ್ಯನವರು ಅವರಿಗಾಗಿ ಬದುಕದೆ ಪರರಿಗಾಗಿ ಬದುಕಿದರು.

ಡಾ. ಕೀಲಾರು ಗೋಪಾಲ ಕೃಷ್ಣಯ್ಯನವರ ಜೀವನಾದರ್ಶಗಳನ್ನು, ಸಮಾಜಸೇವೆಯನ್ನು  ಮುಖ್ಯ ಉದ್ದೇಶವಾಗಿರಿಸಿಕೊಂಡು ಶ್ರೀಯುತರ ಉತ್ತರಾಧಿಕಾರಿಗಳು, ಬಂಧುಗಳು, ಅಭಿಮಾನಿಗಳು ಸೇರಿ ಚಿಂತನೆಯನ್ನು ನಡೆಸಿ  ರೂಪಿಸಿದ  ಸಂಸ್ಥೆಯೇ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ. ಜಾತಿ, ಪಂಥ, ಮತರಹಿತವಾಗಿ ಸಮಾಜಸೇವೆಯನ್ನು ಮಾಡುವುದೇ ಈ ಪ್ರತಿಷ್ಠಾನದ ಮುಖ್ಯ ಉದ್ದೇಶವಾಗಿದೆ. 

ಸಮಾಜದ ಸ್ವಾಸ್ಥ್ಯವನ್ನು ಕಾಪಿಡುವಲ್ಲಿ ಆರೋಗ್ಯವು ಪ್ರಮುಖ ಪಾತ್ರವನ್ನು ವಹಿಸುವುದರಿಂದ ಈ ಪ್ರತಿಷ್ಟಿತ ಪ್ರತಿಷ್ಠಾನವು ಅಶಕ್ತರಿಗೆ ನೆರವನ್ನೀಯುವುದರ   ಜೊತೆಗೆ ಸಾಧಕರನ್ನೂ  ವಿದ್ಯಾರ್ಥಿಗಳನ್ನೂ ಕಲಾವಿದರನ್ನೂ ಪ್ರೋತ್ಸಾಹಿಸುತ್ತಿರುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಸಂಪಾಜೆ ಯಕ್ಷೋತ್ಸವ, ವೈದಿಕರಿಗೆ ಅಭಿನಂದನೆ, ಕಲಾವಿದರಿಗೆ ಸನ್ಮಾನ, ಶೇಣಿ ಪ್ರಶಸ್ತಿ ಪ್ರಧಾನ, ಡಾ. ಕೀಲಾರು ಗೋಪಾಲಕೃಷ್ಣಯ್ಯ ಮತ್ತು ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮಗಳನ್ನು 2004ರಿಂದ ಈ ಸಂಸ್ಥೆಯು ಪ್ರತಿ ವರುಷ ನಡೆಸಿಕೊಂಡು ಬರುತ್ತಿದೆ.

ಯಕ್ಷಗಾನ  ಸಂಬಂಧೀ  ಕೃತಿ ಗಳಾದ ‘ಪಾರ್ತಿಸುಬ್ಬನ ಯಕ್ಷಗಾನ ಕೃತಿಗಳು’ (ಎರಡನೆಯ ಮುದ್ರಣ), ಯಕ್ಷೋಪಾಸನೆ (ಶ್ರೀ ಕೆ. ಗೋವಿಂದ ಭಟ್ಟರ ಆತ್ಮವೃತ್ತಾಂತ), ಯಕ್ಷಪಾತ್ರ ದೀಪಿಕಾ ಮೊದಲಾದ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಹಿರಿಮೆ ಈ ಪ್ರತಿಷ್ಠಾನಕ್ಕೆ ಸಲ್ಲುತ್ತದೆ. ಡಾ| ಕೀಲಾರು ಗೋಪಾಲಕೃಷ್ಣಯ್ಯನವರ ಸಮಾಜ ಸೇವೆಯನ್ನು ಪ್ರತಿಷ್ಠಾನವು ಮುಂದುವರಿಸಿಕೊಂಡು ಹೋಗುತ್ತಿರುವುದು ಅಭಿನಂದನಾರ್ಹವಾದುದು.

ಕಳೆದ ವರ್ಷ ಸಂಪಾಜೆ ಯಕ್ಷೋತ್ಸವ ತನ್ನ ರಜತ ಸಂಭ್ರಮವನ್ನು ವೈಭವದಿಂದ ಆಚರಿಸಿತು. ಮೂರು ರಂಗಸ್ಥಳಗಳು  ಏಕಕಾಲಕ್ಕೆ ‘ದೇವೀಮಹಾತ್ಮೆ’ ಯಕ್ಷಗಾನ ಪ್ರದರ್ಶನ, ಕೃತಿಗಳ ಬಿಡುಗಡೆ,  ಸಾಧಕರಿಗೆ ಸನ್ಮಾನ, ಕಲಾವಿದರಿಗೆ ಸನ್ಮಾನ  ನಡೆಯಿತು. ಯಕ್ಷೋತ್ಸವವನ್ನು ಆಸ್ವಾದಿಸಲು ಬಂದ ಜನರಿಗೂ ಉಚಿತ ಊಟ ಉಪಚಾರಗಳ ವ್ಯವಸ್ಥೆ ಅಭಿನಂದನಾರ್ಹ.

ಶ್ರೀ ಟಿ. ಶ್ಯಾಮ ಭಟ್


ಈ ಸಂಪಾಜೆ ಯಕ್ಷೋತ್ಸವದ ರೂವಾರಿ ಯಕ್ಷಗಾನವನ್ನೂ, ಕಲಾವಿದರನ್ನೂ ಅತಿಯಾಗಿ ಪ್ರೀತಿಸಿ ಗೌರವಿಸುವ ಶ್ರೀ ಟಿ. ಶ್ಯಾಮ ಭಟ್ಟರು. ಇಂತಹಾ ಅದ್ದೂರಿಯ ಗೊಂದಲಗಳಿಲ್ಲದ, ಯಾರ ಮನಸ್ಸಿಗೂ ನೋವನ್ನುಂಟುಮಾಡದೆ, ಶಿಸ್ತುಬದ್ಧವಾದ, ಒಮ್ಮೆ ನೊಡಿದರೆ ಮತ್ತೆ ಬಂದು ನೋಡಬೇಕೆನಿಸುವ ಮಹಾನ್ ಪ್ರದರ್ಶನವನ್ನು(ಸಂಪಾಜೆ ಯಕ್ಷೋತ್ಸವ) ನಡೆಸುವುದು ಸುಲಭದ ಕೆಲಸವಲ್ಲ. ಯಕ್ಷಗಾನ ಕಲೆಯ ಮೇಲೆ ಅಭಿಮಾನ ಪ್ರೀತಿ ಆಳವಾಗಿರಬೇಕು.

ಸಾಹಸ ಬೇರೆ, ಸಾಮರ್ಥ್ಯ ಬೇರೆ. ಸಾಹಸಕ್ಕೂ ಸಾಮರ್ಥ್ಯಕ್ಕೂ ಅಂತರವಿದೆ. ಸಾಹಸವು ಸಾಮರ್ಥ್ಯವನ್ನು ಹೊರಗೆಡಹುವುದಕ್ಕೆ  ಸಾಧನ. ಶ್ರೀ ಟಿ. ಶ್ಯಾಮ ಭಟ್ಟರು ಸಾಹಸಿಗರು. ಅವರು ಸಾಹಸ ಪಟ್ಟಷ್ಟೂ ಸಾಮರ್ಥ್ಯವನ್ನು ಹೊರಗೆಡಹಬಲ್ಲರು. ಲೌಕಿಕವಾಗಿ ಒಬ್ಬನೇ ಆಗಿ ಕಂಡರೂ ಅವರ ಮನದೊಳಗೆ ಅನೇಕ ಯೋಚನೆ ಹಾಗೂ ಯೋಜನೆಗಳಿವೆ. ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲೆಯನ್ನೂ ಕಲಾವಿದರನ್ನೂ, ಪ್ರೇಕ್ಷಕರನ್ನೂ ಪ್ರೀತಿಸಿ ಗೌರವಿಸುವ ಶ್ರೀ ಟಿ. ಶ್ಯಾಮ ಭಟ್ ಅವರು ಅಭಿನಂದನಾರ್ಹರು

ಲೇಖಕ: ರವಿಶಂಕರ್ ವಳಕ್ಕುಂಜ

ಬಣ್ಣದ ವೇಷಗಳೊಂದಿಗೆ ಎದುರು ವೇಷಗಳಲ್ಲೂ ಪ್ರಾವೀಣ್ಯತೆ – ಜಗದಾಭಿರಾಮ ಸ್ವಾಮಿ ಪಡುಬಿದ್ರಿ 

ಇವರು ಸ್ತ್ರೀವೇಷ, ಪುಂಡುವೇಷ, ರಾಜವೇಷ, ಬಣ್ಣದ ವೇಷ ಹೀಗೆ ಯಾವ ವೇಷಗಳನ್ನಾದರೂ ಮಾಡಬಲ್ಲ ಸಮರ್ಥರು. ಕಲಾಭಿಮಾನಿಗಳಿಂದ, ಸಹಕಲಾವಿದರಿಂದ, ಮಿತ್ರರಿಂದ ಜಗತ್, ಜಗದಾಭಿ, ಹಿರಿಯ ಕಲಾವಿದರಿಂದ ‘ಮಾಣಿ’ ಎಂದೇ ಕರೆಸಿಕೊಳ್ಳುತ್ತಿದ್ದ ಇವರ ಪೂರ್ಣ ಹೆಸರು ಜಗದಾಭಿರಾಮಸ್ವಾಮಿ ಪಡುಬಿದ್ರೆ.

ಹುಟ್ಟೂರು ಪಡುಬಿದ್ರೆ ಉದಯಾದ್ರಿ ಮಠ. 11-11-1973 ರಂದು ಜನನ. ಜ್ಯೋತಿಷಿಯೂ, ಪಡುಬಿದಿರೆ ಬಾಲಗಣಪತಿ, ಪ್ರಸನ್ನ ಪಾರ್ವತೀ ದೇವಸ್ಥಾನದ ಅರ್ಚಕರೂ ಆಗಿದ್ದ ಶ್ರೀ ಪಟ್ಟಾಭಿರಾಮ ಸ್ವಾಮಿ, ವಸಂತಿ ದಂಪತಿಗಳ ನಾಲ್ಕು ಮಂದಿ ಮಕ್ಕಳಲ್ಲಿ ಹಿರಿಯವರೇ ಜಗದಾಭಿರಾಮಸ್ವಾಮಿ.

ಪ್ರಾಥಮಿಕ ವಿದ್ಯಾಭ್ಯಾಸ ಪಡುಬಿದಿರೆಯಲ್ಲಿ ಪೂರೈಸಿ (7ನೇ ತರಗತಿ) ಮನೆಯಲ್ಲಿ ತಂದೆಗೆ ಸಹಾಯಕನಾಗಿ ದೇವಸ್ಥಾನದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. 1986ರಲ್ಲಿ ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯವನ್ನು ಅಭ್ಯಸಿಸಿದರು.

ಅದೇ ವರುಷವೇ ಜಗದಾಭಿ ಶ್ರೀ ಧರ್ಮಸ್ಥಳ ಮೇಳಕ್ಕೆ ಆಯ್ಕೆಯಾಗಿದ್ದರು. ಮೇಳಕ್ಕೆ ಆಯ್ಕೆಯಾಗುವೆ, ಸೇರುವೆ ಎಂಬ ಕಲ್ಪನೆಯೂ ಮೊದಲು ಅವರಿಗಿರಲಿಲ್ಲವಂತೆ. ಅಯೋಚಿತವಾಗಿ ಅನಿರೀಕ್ಷಿತವಾಗಿ ಅವಕಾಶ ಒದಗಿ ಬಂತು. ಹಿರಿಯ, ಶ್ರೇಷ್ಠ ಕಲಾವಿದರುಗಳಿರುವ ಶ್ರೀ ಧರ್ಮಸ್ಥಳ ಮೇಳಕ್ಕೆ ಆಯ್ಕೆಯಾದುದು ಜಗದಾಭಿಯವರಿಗೂ, ಮನೆಯವರಿಗೂ, ಓರಗೆಯವರಿಗೂ ಸಂತೋಷವನ್ನೇ ತಂದು ಕೊಟ್ಟಿತಂತೆ.

ಫೋಟೋ ಕೃಪೆ: ರಾಮ್ ನರೇಶ್ ಮಂಚಿ 

ಶ್ರೀ ಧರ್ಮಸ್ಥಳ ಮೇಳದಲ್ಲಿ ಸತತ 7 ವರ್ಷ ಕಲಾಸೇವೆಯನ್ನು ಮಾಡಿ ನಂತರ ಒಂದು ವರ್ಷ ಬಪ್ಪನಾಡು ಮೇಳದಲ್ಲಿ ತಿರುಗಾಟ ನಡೆಸಿದರು ಜಗದಾಭಿ. ನಂತರ ಮಧೂರು ಮೇಳದಲ್ಲಿ ರಾಮಕೃಷ್ಣ ಮಯ್ಯ, ನಾವಡರು, ಹೊಳ್ಳರ ಒಡನಾಟ ನಾನು ಕಲಾವಿದನಾಗಿ ಕಾಣಿಸಿಕೊಳ್ಳಲು ಸಹಕಾರಿಯಾಯಿತು ಎಂದು ಜಗದಾಭಿಯವರು ಹೇಳುತ್ತಾರೆ.

ನಂತರ ಕಟೀಲು ಮೇಳದಲ್ಲಿ 6 ವರ್ಷಗಳ ಕಾಲ ತಿರುಗಾಟ. ಕುರಿಯ ಗಣಪತಿ ಶಾಸ್ತ್ರಿಗಳು, ಪದ್ಯಾಣ ಶಂಕರನಾರಾಯಣ ಭಟ್ಟರು, ಗುಡ್ಡಪ್ಪ ಗೌಡ, ಗೇರುಕಟ್ಟೆ ಇವರ ಒಡನಾಟ ಸಿಕ್ಕಿದ್ದು ಭಾಗ್ಯ. ನನ್ನನ್ನು ತಿದ್ದಿತೀಡಿದರು, ಪ್ರೋತ್ಸಾಹಿಸಿದರು. ಗುಂಡಿಮಜಲು ಮತ್ತು ಮಂಜುನಾಥ ಭಟ್ಟರ ಒಡನಾಟವೂ ಸಿಕ್ಕಿತು. ಹಾಗಾಗಿಯೇ ನಾನು ಕಲಾವಿದನಾಗಿ ರೂಪುಗೊಂಡೆ ಎಂದು ವಿನೀತರಾಗಿ, ಕೃತಜ್ಞತಾಪೂರ್ವಕ ಅಂದಿನ ದಿನಗಳನ್ನು ನೆನಪಿಸುತ್ತಾರೆ ಶ್ರೀ ಜಗದಾಭಿಯವರು.

ಗೇರುಕಟ್ಟೆಯವರ ಎಲ್ಲಾ ವೇಷಗಳನ್ನೂ, ಕುರಿಯ ಭಾಗವತರು ಪ್ರಸಂಗಗಳನ್ನು ನಿರ್ದೇಶಿಸುವ ರೀತಿಯನ್ನೂ ನೋಡುತ್ತಾ ಬೆಳೆದ ಕಲಾವಿದ ಜಗದಾಭಿ. ಗೇರುಕಟ್ಟೆ ಗಂಗಯ್ಯ ಶೆಟ್ಟರು ಮಹಿಷಾಸುರನಾಗಿ ವಿಜೃಂಭಿಸುತ್ತಿದ್ದ ಕಾಲವದು. ಅನಿವಾರ್ಯವಾಗಿ ಮಹಿಷಾಸುರ ಪಾತ್ರವನ್ನು ಮಾಡುವ ಅನಿವಾರ್ಯತೆ ಬಂದಾಗ ಕುರಿಯ ಗಣಪತಿ ಶಾಸ್ತ್ರಿಗಳ ನಿರ್ದೇಶನದಲ್ಲಿ ಜಗದಾಭಿಯವರು ಮಹಿಷಾಸುರನಾಗಿ ಯಶಸ್ವಿಯಾದುದು ಇತಿಹಾಸ. ಕುರಿಯ ಮತ್ತು ಪದ್ಯಾಣರ, ಸಹಕಲಾವಿದರ ಸಹಾಯದಿಂದ ಆಗ ಎಲ್ಲಾ ವೇಷಗಳನ್ನೂ ಮಾಡುವಂತಾಯಿತು.
                         

ಯಕ್ಷಗಾನ ಕಲಾವಿದನಾಗಿ ನಾನು ಅತ್ಯಂತ ತೃಪ್ತ. ಮಹಿಷಾಸುರ ಮತ್ತು ಪುರಾಣ ಪ್ರಸಂಗದ ಅನೇಕ ಬಣ್ಣದ ವೇಷಗಳು ನನಗೆ ಪ್ರಸಿದ್ಧಿಯನ್ನು ನೀಡಿದವು. ಪ್ರೇಕ್ಷಕರು ಮೆಚ್ಚುವಂತಾಯಿತು ಎಂದು ಹೇಳುವ ಜಗದಾಭಿಯವರು 1999ರಲ್ಲಿ ತೀರ್ಥರೂಪರನ್ನು ಕಳೆದುಕೊಂಡು ಮೇಳ ಬಿಡುವ ಅನಿವಾರ್ಯತೆಗೆ ಸಿಲುಕಿದರು.

ಮತ್ತೆ ಐದು ವರ್ಷಗಳ ಕಾಲ ದೇವಳದ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅತಿಥಿ ಕಲಾವಿದನಾಗಿ ಕಾಣಿಸಿಕೊಂಡ ಶ್ರೀ ಜಗದಾಭಿರಾಮಸ್ವಾಮಿ ಪಡುಬಿದ್ರಿ ಪ್ರಸ್ತುತ ಎರಡು ವರ್ಷಗಳಿಂದ ಎಡನೀರು ಮೇಳ(2) ದಲ್ಲಿ, ಈಗ ಹನುಮಗಿರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಗದಾಭಿರಾಮಸ್ವಾಮಿಯವರ ಮಡದಿ ನಾಗರತ್ನ ಮತ್ತು ಅವರಿಗೆ ಮೂರು ಮಂದಿ ಮಕ್ಕಳು (ಅಮರಾಭಿರಾಮಸ್ವಾಮಿ, ಅಪರ್ಣಾ, ಅಮೃತ). ಸಹೋದರನಾದ ನಯನಾಭಿರಾಮಸ್ವಾಮಿ ಸ್ವಂತ ವ್ಯವಹಾರವನ್ನು ನಡೆಸುತ್ತಿದ್ದಾರೆ. (Catering and Sweet)

ಜಗದಾಭಿಯವರು ‘ಯಕ್ಷಮಂಜೂಷ’ ಕುಳಾಯಿ ತಂಡದ ಸದಸ್ಯನಾಗಿ ದೇಶದ ವಿವಿಧೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಅಲ್ಲದೆ ನಿಟ್ಟೆ ಕಾಲೇಜಿನಲ್ಲಿ ನಾಟ್ಯ ತರಗತಿಯನ್ನೂ, ಕಾಲೇಜು ಮಕ್ಕಳ ಯಕ್ಷಗಾನ ಸ್ಪರ್ಧೆಗೆ ತರಬೇತಿ ಮತ್ತು ನಿರ್ದೇಶನವನ್ನೂ ನೀಡಿರುತ್ತಾರೆ.

ಲೇಖಕ: ರವಿಶಂಕರ್ ವಳಕ್ಕುಂಜ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ  6 ನೇ ಎನ್ಐಟಿಐ ಆಯೋಗ ಸಭೆ (ನೀತಿ ಆಯೋಗ) – ಕ್ಯಾಪ್ಟನ್ ಅಮರಿಂದರ್ ಸಿಂಗ್, ಮಮತಾ ಬ್ಯಾನರ್ಜಿ ಗೈರು? 

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಎನ್‌ಐಟಿಐ ಆಯೋಗ್‌ನ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಇದರಲ್ಲಿ ಕೃಷಿ, ಮೂಲಸೌಕರ್ಯ, ಉತ್ಪಾದನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ತಳಮಟ್ಟದಲ್ಲಿ ಸೇವೆ ವಿತರಣೆ, ಮತ್ತು ಆರೋಗ್ಯ ಮತ್ತು ಪೋಷಣೆ ಕುರಿತು ಚರ್ಚೆಗಳು ನಡೆಯಲಿವೆ.  

ಈ ಸಭೆಯು  ಲಡಾಖ್ ನ  ಪ್ರಥಮ ಬಾರಿಯ ಭಾಗವಹಿಸುವಿಕೆಗೂ ಸಾಕ್ಷಿಯಾಗಲಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರ  ಕೇಂದ್ರಾಡಳಿತ ಪ್ರದೇಶವಾಗಿ ಭಾಗವಹಿಸುತ್ತಿದೆ. ಇದು  ಸರ್ಕಾರದ ನೀತಿ ಆಯೋಗ ಅಥವಾ ಭಾರತದ ಬದಲಾವಣೆಗಾಗಿನ ರಾಷ್ಟ್ರೀಯ ಸಂಸ್ಥೆ (NITI=National Institution for Transforming India)ಯ ಆರನೇ ಸಭೆ.

ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಮಮತಾ ಬ್ಯಾನರ್ಜಿ ಈ ಸಭೆಯಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.  ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರ ಪ್ರಾಂತ್ಯಗಳ ಮುಖ್ಯಮಂತ್ರಿಗಳು ( ಕೇಂದ್ರಾಡಳಿತ ಪ್ರದೇಶಗಳು), ಶಾಸಕರು ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳೂ ಸೇರಿದ್ದಾರೆ.

ಆದರೆ, ಈ ವರ್ಷ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರೊಂದಿಗಿನ ಸಭೆಯನ್ನು ಬಹಿಷ್ಕರಿಸುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.  ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪರವಾಗಿ ಈ ಸಭೆಯಲ್ಲಿ ಪಂಜಾಬ್ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಭಾಗವಹಿಸಲಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಟಿಎಂಸಿ ಮುಖ್ಯಸ್ಥರು ಈ ಹಿಂದೆ ಎನ್‌ಐಟಿಐ ಆಯೋಗ್ ಸಭೆಗಳನ್ನು ಬಹಿಷ್ಕರಿಸಿದ್ದರು. ಇದನ್ನು “ಫಲಪ್ರದವಲ್ಲದ ವ್ಯಾಯಾಮ” ಎಂದು ಹೇಳಿದ್ದರು, ದೇಶಕ್ಕೆ ಆರ್ಥಿಕ ಶಕ್ತಿ ಇಲ್ಲ ಆದುದರಿಂದ ಇದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಟಿಎಂಸಿ ಆರೋಪಿಸಿತ್ತು. 

ಮೇಳಗಳ ಇಂದಿನ ( 20.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 20.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬಾಳೆಹೊಳೆ, ರಥಬೀದಿ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ = ಶ್ರೀ ರಾಘವೇಂದ್ರ ನಿಲಯ ನೆಕ್ಕಿಲ ದೇರೆಬೈಲು ಅಶೋಕನಗರ ಮಂಗಳೂರು 

ಕಟೀಲು ಎರಡನೇ ಮೇಳ ==   ನಾಗನವಳಚ್ಚಿಲ್, ಮಾರ್ನಬೈಲು, ಸಜಿಪ ಮುನ್ನೂರು, ಬಂಟ್ವಾಳ 

ಕಟೀಲು ಮೂರನೇ ಮೇಳ= ಧರ್ಮಕ್ಕಿ, ಕೈರಂಗಳ ವಯಾ ಕುರ್ನಾಡು 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಭಜನಾ ಮಂಡಳಿ ಮೂಡುಶೆಡ್ಡೆ , ವಯಾ ವಾಮಂಜೂರು ಮಂಗಳೂರು 

ಕಟೀಲು ಐದನೇ ಮೇಳ == ಮಲ್ಲಿಗೆ ಅಂಗಡಿ ಕಟೀಲು 

ಕಟೀಲು ಆರನೇ ಮೇಳ == ಹೊಸಂಗಡಿ ವಯಾ ಮೂಡಬಿದ್ರಿ 

ಮಂದಾರ್ತಿ ಒಂದನೇ ಮೇಳ  ==  ಶ್ರೀ ಗಜಾನನ ಭವನ ಬಿಲ್ಡಿಂಗ್, ಬಸ್ಸ್ಟ್ಯಾಂಡ್, ಕೊಪ್ಪ 

ಮಂದಾರ್ತಿ ಎರಡನೇ ಮೇಳ   ==   ಶ್ರೀ ದುರ್ಗಾ, ಅಲೆಯ, ನಡೂರು 

ಮಂದಾರ್ತಿ ಮೂರನೇ ಮೇಳ  ==   ಕೋಣಿಮನೆ ಕೊರ್ಗಿ 

ಮಂದಾರ್ತಿ ನಾಲ್ಕನೇ ಮೇಳ   ==  ದಬ್ಬೆಕಟ್ಟೆ, ಸುಳ್ವಾಡಿ ಕಾಳಾವರ 

ಮಂದಾರ್ತಿ    ಐದನೇ ಮೇಳ  ==  ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ಮಂಗಳೂರು 

ಶ್ರೀ ಹನುಮಗಿರಿ ಮೇಳ  ==  ಶ್ರೀ ಮಹಾಗಣಪತಿ ದೇವಸ್ಥಾನ ಮೊಗರ್ನಾಡು, ನರಿಕೊಂಬು, ಪಾಣೆಮಂಗಳೂರು – ಶ್ರೀ ದೇವಿ ಲಲಿತೋಪಾಖ್ಯಾನ 

ಶ್ರೀ ಸಾಲಿಗ್ರಾಮ ಮೇಳ == ಉಪ್ಪುಂದ ಮಡಿಕಲ್ ಆರಮಕೋಡಿ ಈಶ್ವರ ದೇವಸ್ಥಾನ – ದಕ್ಷಯಜ್ಞ, ವೀರಮಣಿ, ಮೀನಾಕ್ಷಿ ಕಲ್ಯಾಣ  

ಶ್ರೀ ಪೆರ್ಡೂರು ಮೇಳ == ಹೇರಂಜೆ “ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್” ಆವರಣ – ವೀರ ಬರ್ಬರಿಕ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹನೇಡಿಮನೆ, ಹಯ್ಯಂಗಾರ್, ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ‘ಸುಚಿತ್ರಾ’ ಚಿತ್ತೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ‘ಮಂಜುನಾಥ ನಿಲಯ’ ಶಂಕರನಾರಾಯಣ 

ಶ್ರೀ ಪಾವಂಜೆ ಮೇಳ  ==  ಶ್ರೀ ಭಗವತಿ ದೇವಸ್ಥಾನ ವಿಟ್ಲ – ಶ್ರೀ ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಚೌಕುಳಮಕ್ಕಿ, ಆಜ್ರಿ 

ಕಮಲಶಿಲೆ ಮೇಳ ‘ಬಿ‘ == ಮತ್ತಿಕೈ ಸಂಪಿಕಟ್ಟೆ 

ಶ್ರೀ ಬಪ್ಪನಾಡು ಮೇಳ ==ಬೃಂಡೇಲ್ ಪದವು – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಡುಂಬೂರು ಮೈದಾನ (ಬೈಕಂಪಾಡಿ) – ಮುಕುಂದ ಮುರಾರಿ 

ಶ್ರೀ ಅಮೃತೇಶ್ವರೀ ಮೇಳ == ಕಳ್ಳಿಗುಡ್ಡೆ ಬಳ್ಕೂರು 

ಶ್ರೀ ಸೌಕೂರು ಮೇಳ == ಸೌಕೂರು ಬೋಳುಕಟ್ಟೆ ದುರ್ಗಾನಗರ – ವೀರಮಣಿ, ರತ್ನಾವತಿ ಕಲ್ಯಾಣ 

ಶ್ರೀ ಹಾಲಾಡಿ ಮೇಳ == ಚಿಕ್ಕಬಿಳಗುಂಜಿ ಭೂತೇಶ್ವರ ದೇವರ ಸನ್ನಿಧಿ – ಚಕ್ರ ಚಂಡಿಕಾ, ಕನಕಾಂಗಿ  

ಶ್ರೀ ಬೆಂಕಿನಾಥೇಶ್ವರ ಮೇಳ  == ಸಾಣೂರು ಶುಂಠಿಗುಡ್ಡೆ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಚೆಗ್ರಿಬೆಟ್ಟು ನ್ಯೂ ಸ್ಟಾರ್ ಫ್ರೆಂಡ್ಸ್ ದೂಮದಹಾಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಾಳ್ಕುದ್ರು ಐರೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಶ್ರೀ ಮೂಡುತಾರಿಬೇರು ಆದಿಶಕ್ತಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಕಾರ್ಕಳ ಸಾಂತ್ರಬೆಟ್ಟು ನಾಗಬ್ರಹ್ಮ ಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ  

ಶ್ರೀ ಶನೀಶ್ವರ ಮೇಳ == ಮೇಲ್ ಹೊಸೂರು 

ಶ್ರೀ ಸಿಗಂದೂರು ಮೇಳ == ಸೂರ್ಯಕೊಪ್ಪ ಸೂರ್ಯ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಚೇರ್ಕಾಡಿ ಗದ್ದುಗೆಮನೆ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಬಾಚಕೆರೆ ಮೇಳ == ಪಡ್ದಂದಡ್ಕ – ಅಮರಶಿಲ್ಪಿ ವೀರ ಶಂಭು ಕಲ್ಕುಡ  

ಶ್ರೀ ಮಂಗಳಾದೇವಿ ಮೇಳ == ಮೂಡುಶೆಡ್ಡೆ – ತುಳು ಪ್ರಸಂಗ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ತೀರ್ಥಹಳ್ಳಿ ಬೆಟ್ಟಮಕ್ಕಿ 

ಶ್ರೀ ಮೇಗರವಳ್ಳಿ ಮೇಳ ==  ಹುಣಸೆಮಕ್ಕಿ- ಕುಲದೈವ ಪಂಜುರ್ಲಿ 

ಕೊನೆಗೂ ಗಾಲ್ವಾನ್ ವ್ಯಾಲಿ ಘರ್ಷಣೆಯಲ್ಲಿ ಸಾವು ನೋವುಗಳನ್ನು ಒಪ್ಪಿಕೊಂಡ ಚೀನಾ –  ಕೊಲ್ಲಲ್ಪಟ್ಟ 4  ಸೈನಿಕರ ವಿವರ ಬಹಿರಂಗ 

ಕಳೆದ ವರ್ಷ ಭಾರತದೊಂದಿಗೆ ನಡೆದ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತನ್ನ ನಾಲ್ಕು ಸೈನಿಕರನ್ನು ಕಳೆದುಕೊಂಡಿರುವುದನ್ನು ಚೀನಾ ಶುಕ್ರವಾರ ಮೊದಲ ಬಾರಿಗೆ ಒಪ್ಪಿಕೊಂಡಿದೆ.

ರಾಜ್ಯ ನಿಯಂತ್ರಣಕ್ಕೊಳಪಟ್ಟ ಮಾಧ್ಯಮವಾದ ಪೀಪಲ್ಸ್ ಡೈಲಿಯ ವರದಿಯ ಪ್ರಕಾರ, “ಕಳೆದ ಜೂನ್‌ನ ಗಡಿ ಸಂಘರ್ಷದಲ್ಲಿ ತ್ಯಾಗಕ್ಕೊಳಗಾದ ನಾಲ್ಕು ಚೀನೀ ಸೈನಿಕರಿಗೆ ಮರಣೋತ್ತರವಾಗಿ ಗೌರವ ಪ್ರಶಸ್ತಿಗಳು ಮತ್ತು ಪ್ರಥಮ ದರ್ಜೆ ಅರ್ಹತಾ ಉಲ್ಲೇಖಗಳನ್ನು ನೀಡಲಾಯಿತು ಎಂದು ಕೇಂದ್ರ ಮಿಲಿಟರಿ ಆಯೋಗ ಶುಕ್ರವಾರ ಪ್ರಕಟಿಸಿದೆ.

ಅವರನ್ನು ಮುನ್ನಡೆಸಿದ ಕರ್ನಲ್ ಗೆ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ಗೌರವ ಪ್ರಶಸ್ತಿಯನ್ನು ನೀಡಲಾಯಿತು. ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಕಳೆದ ವರ್ಷ ಗಾಲ್ವಾನ್ ವ್ಯಾಲಿ ಘರ್ಷಣೆಯಲ್ಲಿ ಬೀಜಿಂಗ್ 45 ಸೈನಿಕರನ್ನು ಕಳೆದುಕೊಂಡಿದೆ ಎಂದು ಹೇಳಿಕೊಂಡಿತ್ತು.

ಟಾಸ್ ವರದಿಯ ಪ್ರಕಾರ, “2020 ರ ಮೇ ಮತ್ತು ಜೂನ್ ತಿಂಗಳಲ್ಲಿ ಈ ಪ್ರದೇಶದಲ್ಲಿ ಚೀನೀ ಮತ್ತು ಭಾರತೀಯ ಪಡೆಗಳು ಘರ್ಷಣೆ ನಡೆಸಿದವು, ಇದರ ಪರಿಣಾಮವಾಗಿ ಕನಿಷ್ಠ 20 ಭಾರತೀಯ ಮತ್ತು 45 ಚೀನೀ ಸೈನಿಕರು ಸಾವನ್ನಪ್ಪಿದರು.

ಈ ಘಟನೆಗಳ ನಂತರ, ನವದೆಹಲಿ ಮತ್ತು ಬೀಜಿಂಗ್ ಈ ಪ್ರದೇಶದಲ್ಲಿನ ಪಡೆಗಳ ಸಾಂದ್ರತೆಯನ್ನು  ತಲಾ 50,000 ಸೈನಿಕರಷ್ಟು ಹೆಚ್ಚಿಸಿದೆ. ” ಅಮೆರಿಕದ ಗುಪ್ತಚರ ವರದಿಯ ಪ್ರಕಾರ, ಚೀನಾದ ಕಡೆಯಿಂದ ಸಾವನ್ನಪ್ಪಿದವರ ಸಂಖ್ಯೆ 35 ಆಗಿತ್ತು. 

ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಸೇನೆಯ ಕಾರ್ಯಾಚರಣೆಯನ್ನು ನಿಷ್ಕ್ರಿಯಗೊಳಿಸುವ ಒಪ್ಪಂದದಿಂದ ಎರಡೂ ಕಡೆಯವರು ತಮ್ಮ ಹಂತ ಹಂತದ ನಿಯೋಜನೆಯನ್ನು “ಹಂತ ಹಂತವಾಗಿ, ಸಂಘಟಿತ ಮತ್ತು ಪರಿಶೀಲಿಸಿದ ರೀತಿಯಲ್ಲಿ” ನಿಲ್ಲಿಸಲಿದೆ ಎಂದು ಊಹಿಸಲಾಗಿತ್ತು.

ಉಭಯ ದೇಶಗಳು ಕಳೆದ ವರ್ಷ ಏಪ್ರಿಲ್-ಮೇ ತಿಂಗಳಿನಿಂದ ಪೂರ್ವ ಲಡಾಕ್‌ನ ಎಲ್‌ಎಸಿ ಉದ್ದಕ್ಕೂ ನಿಂತುಹೋಗಿರುವ ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿವೆ.

ಪುತ್ತೂರು ಶ್ರೀಧರ ಭಂಡಾರಿ ನಿಧನ – ಯಕ್ಷಗಾನ ಕಲಾರಂಗ ಸಂತಾಪ

ತೆಂಕುತಿಟ್ಟಿನ ಪುಂಡುವೇಷಕ್ಕೆತನ್ನಅಚ್ಚರಿಯ ಪ್ರತಿಭೆಯ ಮೂಲಕ ಛಾಪನ್ನು ಮೂಡಿಸಿದ, ಪುತ್ತೂರು ಶ್ರೀಧರ ಭಂಡಾರಿ (76ವರ್ಷ) ಇಂದು (19-02-2021) ದೈವಾಧೀನರಾದರು.

10ನೇ ವರ್ಷಕ್ಕೆ ವೃತ್ತಿಮೇಳ ಸೇರಿ ನಿರಂತರ 6 ದಶಕಗಳ ಕಾಲ ವೃತ್ತಿಕಲಾವಿದರಾಗಿ ಯಕ್ಷಲೋಕದಲ್ಲಿ ತನ್ನ ಚುರುಕಾದ ನೃತ್ಯದಿಂದ ಅಭಿಮನ್ಯು, ಬಭ್ರುವಾಹನ, ಶ್ರೀಕೃಷ್ಣ, ಅಶ್ವತ್ಥಾಮ ಮುಂತಾದ ಪಾತ್ರಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟ ಕಲಾವಿದರಾಗಿದ್ದರು.

ಧರ್ಮಸ್ಥಳ ಮೇಳವೊಂದರಲ್ಲೇ 4 ದಶಕಗಳಿಗಿಂತಲೂ ಹೆಚ್ಚುಕಾಲ ವೇಷಧಾರಿಯಾಗಿ ಕಲಾ ಸೇವೆಗೈದ ಇವರು ಈ ಬಾರಿಯ ಧರ್ಮಸ್ಥಳದ ಸೇವೆಯಾಟದಲ್ಲಿ ಕೊನೆಯದಾಗಿ ಕೃಷ್ಣನ ವೇಷವನ್ನು ಸೊಗಸಾಗಿ ನಿರ್ವಹಿಸಿದ್ದರು.

ಪುತ್ತೂರು ಹಾಗೂ ಕಾಂತಾವರ ಮೇಳಗಳನ್ನು ಆರಂಭಿಸಿ ತಲಾ 3 ವರ್ಷಗಳ ಕಾಲ ಮೇಳವನ್ನು ಮುನ್ನಡೆಸಿದರು. ಮಳೆಗಾಲದಲ್ಲಿ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಮೂಲಕ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಪ್ರದರ್ಶನ ನಡೆಸುತ್ತಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹೆಚ್ಚಿನ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಶ್ರೀಧರ ಭಂಡಾರಿಯವರಿಗೆ ಸಂಸ್ಥೆಯು ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಪ್ರಾರ್ಥಿಸಿ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗು ಕಾರ್ಯದರ್ಶಿ ಮುರಲಿ ಕಡೆಕಾರ್ ಇವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಆಟಗಾರರ ಹರಾಜು 2021 – ದಾಖಲೆ ಮೊತ್ತಕ್ಕೆ ಕ್ರಿಸ್ ಮೋರಿಸ್ ಹರಾಜು, ಕೃಷ್ಣಪ್ಪ ಗೌತಮ್ ಭಾರತೀಯ ದುಬಾರಿ ಆಟಗಾರ 

ಐಪಿಎಲ್ ಹರಾಜಿನಲ್ಲಿ ಕ್ರಿಸ್ ಮೋರಿಸ್ (ರಾಜಸ್ತಾನ್ ರಾಯಲ್ಸ್) ಇದುವರೆಗಿನ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  ಆದರೆ ಐಪಿಎಲ್ 2021 ರ ಹರಾಜಿನಲ್ಲಿ ಕೃಷ್ಣಪ್ಪ ಗೌತಮ್ (ಚೆನ್ನೈ ಸುಪರ್ ಕಿಂಗ್ಸ್) ಭಾರತದ ಅತ್ಯಂತ ದುಬಾರಿ ಆಟಗಾರನಾದರು.

ಚೆನ್ನೈ ಸೂಪರ್ ಕಿಂಗ್ಸ್ ಚೇತೇಶ್ವರ ಪೂಜಾರ ಅವರನ್ನು ಐವತ್ತು ಲಕ್ಷ ರೂಪಾಯಿಗಳಿಗೆ ಖರೀದಿಸಿದೆ. ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಇಪ್ಪತ್ತು ಲಕ್ಷಕ್ಕೆ ಖರೀದಿಸಿದೆ,   

ಈ ವರೆಗಿನ ಒಟ್ಟು ಹರಾಜಿನಲ್ಲಿ ಒಟ್ಟು 292 ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ ಅವರಲ್ಲಿ 164 ಭಾರತೀಯ ಕ್ರಿಕೆಟ್ ಆಟಗಾರರು ಮತ್ತು 128 ವಿದೇಶೀ ಆಟಗಾರರು. 


ಕ್ರಿಸ್ ಮೋರಿಸ್ 16. 25 ಕೋಟಿ ರೂಪಾಯಿಗಳಿಗೆ ಹರಾಜಾದರು. ಅವರನ್ನು ರಾಜಸ್ತಾನ್ ರಾಯಲ್ಸ್ ಕೊಂಡುಕೊಂಡಿತು.  ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ ಪಡೆಯಲು ಆರ್.ಸಿ.ಬಿ   14.25 ಕೋಟಿ ರೂಪಾಯಿಗಳನ್ನು ವೆಚ್ಚಮಾಡಿತ್ತು.

ಜ್ಯೇ ರಿಚರ್ಡ್ ಸನ್ 14 ಕೋಟಿ ರೂಪಾಯಿಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬಿನ ಪಾಲಾದರು. ಕೃಷ್ಣಪ್ಪ ಗೌತಮ್ ಅವರನ್ನು9.25 ಕೋಟಿ ಕೊಟ್ಟು ಚೆನ್ನೈ ಸೂಪರ್ ಕಿಂಗ್ಸ್ ಕೊಂಡುಕೊಂಡಿತು. 

ಹರಾಜಿನಲ್ಲಿ ಮಾರಾಟವಾದ ಟಾಪ್ ಫೈವ್ ಆಟಗಾರರು 

1. ಕ್ರಿಸ್ ಮೋರಿಸ್ – ರೂ. 16.25 ಕೋಟಿ (ರಾಯಲ್ಸ್)
2. ಕೈಲ್ ಜಮಿಸನ್ – ರೂ. 15 ಕೋಟಿ (ಆರ್‌ಸಿಬಿ)
3. ಗ್ಲೆನ್ ಮ್ಯಾಕ್ಸ್ ವೆಲ್ – ರೂ. 14.25 ಕೋಟಿ (ಆರ್‌ಸಿಬಿ)
4. ಜ್ಯೆ ರಿಚರ್ಡ್ಸನ್ – ರೂ. 14 ಕೋಟಿ (ಕಿಂಗ್ಸ್ ಇಲೆವೆನ್ ಪಂಜಾಬ್ )
5. ಕೆ.ಗೌತಮ್ – ರೂ. 9.25 ಕೋಟಿ (ಸಿಎಸ್‌ಕೆ)

ಪುತ್ತೂರು ಶ್ರೀಧರ ಭಂಡಾರಿ ನಿಧನಕ್ಕೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ.,)ದೇಲಂಪಾಡಿ ಇದರ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಸಂತಾಪ ಸೂಚನೆ 

ಪ್ರಖ್ಯಾತ ಯಕ್ಷಗಾನ ವೇಷದಾರಿ ಯಕ್ಷಗಾನ ರಂಗಸ್ಥಳದ ಅಭಿಮನ್ಯು ಎಂದೇ ಖ್ಯಾತರಾಗಿದ್ದ ಪುತ್ತೂರು ಶ್ರೀಧರ ಭಂಡಾರಿಯವರ ನಿಧನಕ್ಕೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ.,) ದೇಲಂಪಾಡಿ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಸಂತಾಪ ಸೂಚನೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಮತ್ತು ಸಾಹಿತಿ, ವಿದ್ವಾಂಸ ಡಾ. ರಮಾನಂದ ಬನಾರಿ ಮತ್ತು  ಹಾಗೂ ಸಂಘದ ಸರ್ವಸದಸ್ಯರು

ಯಕ್ಷಗಾನದ ಅಗ್ರಮಾನ್ಯ ವೇಷಧಾರಿ ವಿದ್ಯಾವಿನಯ ಸಂಪನ್ನ ಕಲಾವಿದ ಶ್ರೀಧರ ಭಂಡಾರಿಯವರು ರಂಗಸ್ಥಳದಿಂದ ಶಾಶ್ವತವಾಗಿ ನಿರ್ಗಮಿಸಿದ ವಾರ್ತೆ ಅತ್ಯಂತ ವಿಷಾದವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ. ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲೆಂದು ಪ್ರಾರ್ಥಿಸುತ್ತೇವೆ. ಅವರ ಕೀರ್ತಿ ಚಿರಕಾಲ ಉಳಿಯಲಿ.” ಎಂದು ಪ್ರಾರ್ಥಿಸಿದ್ದಾರೆ.